ಜಪಾನ್ ಬಂಧುಗಳಿಗೆ ಶುಭ ಹಾರೈಕೆಗಳು
ಮತ್ತೆ ಕಟ್ಟಿರಿ ನೀವು ಓ ನನ್ನ ಬಂಧುಗಳೇ
ಸುತ್ತ ನೂರಡಿ ಎತ್ತರದಾ ಕೋಟೆಯನು
ಹತ್ತಿ ಬಂದರೂ ನೀರು ಹೆದರದೇ ತಳ್ಳುತಿರಿ
ಎತ್ತ ಹೋದರೂ ಸಿಗದಂತೇ ಬೇಟೆಯನು
ಸತ್ತು ಹೋದವರೆಷ್ಟೋ ಅತ್ತು ಕರೆದವರೆಷ್ಟೋ
ಕತ್ತು ತಿರುಗಿಸಿ ನೋಡಲೆಲ್ಲ ಅವಶೇಷ
ಅತ್ತ ಭೂಕಂಪನವು ಅಣುಸ್ಥಾವರದ ಸ್ಫೋಟ
ತತ್ತರಿಸಿ ನಿಲುವಂತೆ ಮಾಡಿದಕೆ ಕ್ಲೇಶ
ಹೊತ್ತುಮುಳುಗದ ದೇಶ ಉತ್ತಮದ ಕಾರ್ಯಸಿರಿ
ತುತ್ತತುದಿಯಲಿ ಮೆರೆದ ಶ್ರಮಜೀವಿಗಳಿರಾ
ತುತ್ತಿಲ್ಲದಾ ಹೊತ್ತು ಆಯಾಸವನೇ ಮರೆತು
ಕಿತ್ತುಹೋದಾ ಬದುಕ ಕಟ್ಟಲೆಣಿಸುವಿರಾ ?
ಪತ್ತಿನಲಿ ಕೈಯ್ಯೊಡ್ಡಿ ಕೇಳದಂತಹ ಮನಸು
ನೆತ್ತಿಯಲಿ ಕತ್ತಿ ಕುಣಿದಾಡೆ ದಣಿವಿರದೇ !
ಪುತ್ಥಳಿಗಳಂತಿರುವ ನಿಮ್ಮ ನೋಡುತ ನಾವು
ತೆತ್ತು ಕಲಿತರೂ ಕಮ್ಮಿ ಅರಿವೆಮಗೆ ಬರದೇ !
ಹುತ್ತನಾಗೆದ್ದಲುಗಳ್ ಕಟ್ಟುತಲೆ ಇರುವಂತೇ
ಮೆತ್ತಗೆ ಓಡಾಡಿ ಎತ್ತಿ ದೇಶವನು
ಕುತ್ತು ಬಾರದೆ ಇರಲಿ ನಾವೆಲ್ಲ ಪ್ರಾರ್ಥಿಪೆವು
ನತ್ತು ಜಗಕದು ನಿಮ್ಮಾ ಚಿಕ್ಕ ಜಪಾನು
ಭಟ್ ಸರ್;ನೀವು ಹೇಳುವುದು ಸರಿ.ಜಪಾನ್ ಜಗನ್ಮಾತೆಯ ನತ್ತು.ಈ ಪುಟ್ಟ ಶ್ರಮಿಕ ದೇಶಕ್ಕೆ ಎಂತಹ ಆಪತ್ತು!ಬಂದ ಆಪತ್ತನ್ನು ಎದುರಿಸಿ ಮತ್ತೆ ತಲೆ ಎತ್ತುವ ಧೈರ್ಯ ಬರಲಿ ಈ ಅದ್ಭುತ ದೇಶಕ್ಕೆ.
ReplyDeleteolle suukta kavite sadyada paristige spuurti saantvana koduva... shakti illi muudide...
ReplyDeleteಸಕಾಲಿಕ. ಶುಭ ಹಾರೈಕೆ ಸಲ್ಲಿಕೆಯಲ್ಲಿ ನಿಮ್ಮ ಜೊತೆ ನಾನೂ ಕೈ ಜೋಡಿಸುತ್ತೇನೆ.
ReplyDeleteಭಟ್ಟರೆ,
ReplyDeleteಜಪಾನ ಬಂಧುಗಳಿಗೆ ನಿಮ್ಮೊಡನೆ ನನ್ನದೂ ಸಮಾಧಾನದ ಹಾರೈಕೆ.
ವಿಆರ್.ಬಿ ಸರ್..ಅವರ ಕಾರ್ಯ ತತ್ಪರತೆ ಮತ್ತು ದೇಶಪ್ರೇಮ ಎಂತಹ ವಿಪತ್ತಿನಿಂದಲೂ ಮೇಲೇಳುವ ಸಾಮರ್ಥ್ಯವನ್ನು ನೀಡಿದೆ...ಸರಳ ಪದಜೋಡಣೆಯ ಪರಿಣಾಮಕಾರಿ ಭಾವಮಂಥನ...ವಿಶೇಷವಾಗಿ ಈ ಸಾಲುಗಳು.....
ReplyDeleteಹೊತ್ತುಮುಳುಗದ ದೇಶ ಉತ್ತಮದ ಕಾರ್ಯಸಿರಿ
ತುತ್ತತುದಿಯಲಿ ಮೆರೆದ ಶ್ರಮಜೀವಿಗಳಿರಾ
ತುತ್ತಿಲ್ಲದಾ ಹೊತ್ತು ಆಯಾಸವನೇ ಮರೆತು
ಕಿತ್ತುಹೋದಾ ಬದುಕ ಕಟ್ಟಲೆಣಿಸುವಿರಾ ?
ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅತ್ಯಂತ ಆಭಾರಿಯಾಗಿದ್ದೇನೆ.
ReplyDelete