ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, April 2, 2012

ಜಗವದೊಂದು ತೊಟ್ಟಿಲು ಬದುಕುಬಳ್ಳಿ ಹುಟ್ಟಲು !

ಚಿತ್ರಋಣ : ಅಂತರ್ಜಾಲ
ಜಗವದೊಂದು ತೊಟ್ಟಿಲು ಬದುಕುಬಳ್ಳಿ ಹುಟ್ಟಲು !

ಜಗವದೊಂದು ತೊಟ್ಟಿಲು ಬದುಕುಬಳ್ಳಿ ಹುಟ್ಟಲು !
ನಗುವಳುವಿನ ಭಾವಗಳನು ದೇವನಿತ್ತ ಕಟ್ಟಲು

ಬಗೆಬಗೆಯಲಿ ಜೀವರಾಶಿ ಯಾವ ಜನ್ಮ ಎಂದಿಗೋ
ಅಗೆದುಮೊಗೆದು ಎಣಿಸಿಗುಣಿಸೆ ಕಾಣಲಿಲ್ಲ ಮಂದಿಗೂ !
ಸೊಗದ ಸಿರಿಯೊ ದುಃಖದ ಕರುಬೊ ಹೆಜ್ಜೆಹೆಜ್ಜೆ ಸಂದಿಗೂ
ಸಿಗದ ಸೂತ್ರ ಹುಡುಕಿ ಅಲೆದು ಸಣ್ಣವಾದೆವಿಂದಿಗೂ

ಹಗಲಿರುಳಿನ ಭೇದಮರೆತ ಜಗವೆನ್ನದು ಈ ದಿನ
ಬಿಗಡಾಯಿಸಿ ಒತ್ತಡಗಳು ಹುರಿದು ಮುಕ್ಕುತೀಮನ
ಒಗೆಯಲೇನು ಕಾಯವೆಂಬ ಬೇಗುದಿಯದು ಅನುದಿನ
ಅಗಲಲಾರೆ ಲೋಕವೆಂಬ ವ್ಯಾಮೋಹದ ಬಂಧನ !

ಚಿಗರೆ ಜಿಂಕೆ ಕಾಡುಗಳವು ನಾಶವಾಗಿ ಹೋದವು
ಸಗರ ಪುತ್ರ ತಂದ ಗಂಗೆ ತುಂಗೆ ಮಲಿನವಾದವು !
ನಗರಗಳಲಿ ನರಕರೂಪ ನರ್ತನವನೆ ಗೈದವು
ಹಗುರವೆಲ್ಲ ಮೌಲ್ಯವಿಲ್ಲ ಮುಗುದತನವನಳಿದವು !

ಮಗುಚಿಕೊಳ್ಳೆ ಭಯವ ತರುವ ರಕ್ಕಸರಾ ಮರ್ಮವು
ನೆಗಚುತಿರಲು ಗೂಢಚಾರ ಮತಾಂಧರ ಕರ್ಮವು
ನಿಗುಚುತಿರುವ ಲಂಚಕೋರ ಅಳುವರ ಅಧರ್ಮವು
ತುಗುಚುತಿರುವೆ ಹಲವನರಿಯೆ ನನ್ನದಿಲ್ಲಿ ತರ್ಮವು

4 comments:

  1. ಸೊಗಸಾಗಿದೆ ಭಟ್ಟರೇ.

    ReplyDelete
  2. ಈ ಕವನ ಸರಳ,ಸುಂದರ.ನನಗೆ ಇಂಥವು ಇಷ್ಟ.

    ReplyDelete
  3. ಪ್ರಿಯ ಶ್ರೀ ಜೋಶಿಯವರೇ, ಕವನ ಬರೆಯಲು ಕುಳಿತ ಹತ್ತು ನಿಮಿಷಗಳ ನಡುವೆಯೇ ವಿಶ್ವವಿದ್ಯಾನಿಲಯದ ಡೀನ್ ಮದುವೆಗೆ ಕರೆಯಲು ಬಂದರು, ಎರಡು ಫೋನ್ ಕಾಲ್ ಗಳೂ ಬಂದವು! ಯಾವುದನ್ನೂ ಅಲ್ಲಗಳೆಯಲಾಗದ ಸಮಸ್ಯೆ ನನ್ನಂತಹ ಕೆಲವು ಬರಹಗಾರರಿಗೆ! ಕವಿಸಮಯ ಎಂಬುದನ್ನು ಜೀವನದ ಮಿಕ್ಕುಳಿದ ಸಮಯದಿಂದ ಪ್ರತ್ಯೇಕಿಸಿಕೊಳ್ಳಲು ಸಾಧ್ಯವಾಗದ ಅಡಚಣೆಗಳು ಎಡತಾಕುತ್ತಲೇ ಇರುವುದರಿಂದ ಹೊಮ್ಮುವ ಭಾವಗಳು ಅರೆಕ್ಷಣದಲ್ಲಿ ಮಿಂಚಿ ಮರೆಯಾಗುವ ಮುನ್ನ ಅವುಗಳಿಗೆ ಪದರೂಪಕೊಡುವುದು ಸಾಹಸದ ಕೆಲಸ ಎಂದು ನಾನು ಭಾವಿಸುತ್ತೇನೆ. ಒಮ್ಮೆ ಮನಸ್ಸಿಗೆ ಬಂದ ಭಾವ ಇನ್ನೊಮ್ಮೆ ಬರದೇ ಹೋಗಬಹುದು. ಉತ್ತಮ ಭಾವಗಳ ಅಭಾವ ಕೆಟ್ಟ ಕವನಕ್ಕೆ ನಾಂದಿಹಾಡಿಬಿಡಬಹುದು. ಸಾಹಿತ್ಯಾಸಕ್ತರಿಗೆ ಅರ್ಥವ್ಯಾಪ್ತಿಯ ಹೊಳಹು ಸುಲಭದಲ್ಲಿ ಸಿಗಲಿ ಎಂಬ ಅನಿಸಿಕೆಯಿಂದ ಆದಷ್ಟೂ ಸರಳ ಪದಗಳನ್ನೇ ಬಳಸುತ್ತಿದ್ದೇನೆ. ಕವನದ ಪ್ರತಿಮೆಯನ್ನು ಸರಳಗೊಳಿಸಿದಾಗ ಅಲ್ಲಿ ಬರಹಗಾರನಿಗೆ ರಸಭಂಗವಾಗುವ ಸನ್ನಿವೇಶಕೂಡ ಉದ್ಭವವಾಗುತ್ತದೆ. ಯಾವಾಗ ಪಾಕ ಹದಕ್ಕೆ ಬಂದಿಲ್ಲ ಎನಿಸುತ್ತದೋ ಆಗ ಮನಸ್ಸಿಗೆ ತೃಪ್ತಿ ಸಿಗುಗುವುದಿಲ್ಲ; ಆದರೂ ನನಗೆ ರಸಭಂಗವಾದರೂ ಪರವಾಗಿಲ್ಲ ಎನಿಸಿ ಕವನಗಳನ್ನು ಪ್ರಾಸಬದ್ಧವಾಗಿಯೂ ಆದಷ್ಟೂ ಛಂದೋಬದ್ಧವಾಗಿಯೂ ಬರೆಯುವುದು ನನ್ನ ಅಭ್ಯಾಸ. ಉತ್ತಮ ಕೃತಿಗಳನ್ನು ಬರೆಯುವ ಮನಸ್ಸಿಗೆ ನಿರ್ದಿಷ್ಟ ಕವಿಸಮಯ ಮೀಸಲಾಗುತ್ತಿಲ್ಲ ಎಂಬುದೇ ನನ್ನ ಕೊರತೆಯಾಗಿದೆ. ನಿಮ್ಮ ಅನಿಸಿಕೆಗೆ ಆಭಾರಿ.

    -----
    ಓದಿ ಪ್ರತಿಕ್ರಿಯಿಸಿದ ಸೀಮಾ ಬುರ್ಡೆ, ಹರಿಹರಪುರ ಶ್ರೀಧರ್ ಮತ್ತು ಶ್ರೀವತ್ಸ ಜೋಶಿ ಈ ಎಲ್ಲರಿಗೂ ಹೃತ್ಪೂರ್ವಕ ನಮನಗಳು. ಓದಿದ ಅನೇಕರಿಗೆ ನನ್ನ ನೆನಕೆಗಳು.

    ReplyDelete