’ಅಹಂ ಬ್ರಹ್ಮಾಸ್ಮಿ’!!
[ ಅನೇಕ ಮಿತ್ರರು ಮೇಲ್ ಮಾಡಿ ಕೇಳಿದ್ದರಿಂದ ನನಗೆ ನವ್ಯಕಾವ್ಯ ಬರೆಯಲು ಇಷ್ಟವಿಲ್ಲದಿದ್ದರೂ ಬರೆಯಬೇಕಾಗಿ ಬರೆದೆ, ಓದಿನೋಡಿ, ಖುಷಿಕೊಡಲಿ ಬಿಡಲಿ ಓದುವುದು ನಿಮ್ಮ ಧರ್ಮ, ಬರೆಯುವುದು ನಮ್ಮ ನಿತ್ಯಕರ್ಮ ! ]
ಹದಿನಾರು ಸಲ ಬರೆದೆ
ಹದಿನಾರು ಅಪೂರ್ಣ ಕೃತಿಗಳು
ಎಲ್ಲವೂ ನನಗಂತೂ ಭಾವಪೂರ್ಣ
ಮಿಕ್ಕವರಿಗೆ ಅರ್ಥಹೀನ !
ಇದು ನನ್ನ ಪ್ರಾಮಾಣಿಕ ಪ್ರಯತ್ನ
ಹಲವುದಿನಗಳ ನಿದ್ದೆಗೆಟ್ಟ ಶ್ರಮ
ಶಬ್ದಗಳನ್ನೆಲ್ಲ ಕಲೆಹಾಕಿ
ಬೇಯಿಸಿ ಸೋಸಿ ಬಸಿದು ಕೊಟ್ಟ
ಹೊಚ್ಚಹೊಸ ಕವನಗಳು
ನೀವು ನಂಬಿ ಬಿಡಿ ಇದು ನನ್ನವೇ
ಸದ್ಯಕ್ಕೆ ನೀವು ನಂಬುತ್ತೀರಿ
ಯಾಕೆಂದರೆ ಇವೆಲ್ಲವೂ ಅಪೂರ್ಣ!
ಅವುಗಳಿಗೆ ಹಾಲು-ಮೊಸರನ್ನವುಣಿಸಿ
ನೀರೆರೆದು ಎಣ್ಣೆಹಚ್ಚಿ ತಲೆಬಾಚಿ
ಒಳ್ಳೆಯ ಬಟ್ಟೆ ತೊಡಿಸಿ ರಂಗಿಗೆ ಪೌಡರ್ ಹಾಕಿ
ಕಾಲಿಗೆ ಸಾಕ್ಸು ಶೂ ಹಾಕಿ
ನಿಮ್ಮ ಮುಂದೆ ನಡೆಯಬಿಟ್ಟಾಗಲೇ ನೀವೆನ್ನುತ್ತೀರಿ
ವಾ ವಾ ಎಂತಹ ಚೆಂದದ ಕವಿತೆಗಳಪ್ಪಾ!
ನನ್ನಗೋಳು ನನಗೇ ಗೊತ್ತು
ಮಲಬದ್ಧತೆಯಾದವರ ರೀತಿ
ಅವುಗಳ ಮುನ್ನಡೆಸುವಿಕೆ ಇನ್ನೂ ಹೊಳೆದಿಲ್ಲ
ನನ್ನೊಳಗೆ ಹಲವು ಕವಿ ಹುಟ್ಟಿ ಹುಟ್ಟಿ
ಮತ್ತೆ ಮತ್ತೆ ಸತ್ತುಹೋದ ಅನುಭವ
ಆದರೂ ಬಿಡಲಾರದ ತ್ರಿವಿಕ್ರಮ ನಂಟು !
ಹೊರಪ್ರಪಂಚಕೆ ಇದರ ಅರಿವುಂಟೇ ?
ನಿದ್ದೆ ಬಾರದೇಕೆ ಕನಸು ಬೀಳದೇಕೆ
ಕನಸಿನಲ್ಲಿ ಯಾರೋ ಬಂದು ಹೇಳಿಕೊಟ್ಟರೆ
ಮಾರನೇ ಬೆಳಿಗ್ಗೆಯೊಳಗೆ ಕವನಗಳನ್ನು
ಬರೆದು ಪ್ರಕಟಿಸಿಬಿಡುತ್ತಿದ್ದೆ
ಆಗ ಒತ್ತಟ್ಟಿಗೆ ಕೊಡುವ ಆ ಕೃತಿಗಳನ್ನು
ನೋಡಿ ಬೇಗ ಓದಿ ಅರ್ಥಮಾಡಿಕೊಳ್ಳಲಾರದ
ನಿಮ್ಮನ್ನು ಮರೆಯಲ್ಲಿ ನಿಂತು
ರಾಮ ವಾಲಿಗೆ ಬಾಣ ಬಿಟ್ಟಂತೇ
ಛೂಬಾಣ ಬಿಟ್ಟು ನಿಮ್ಮನ್ನು ಗೆದ್ದು ತೃಪ್ತನಾಗುತ್ತಿದ್ದೆ!
ಆದರೂ ರಾಮ ಕನಿಕರಿಸಿದಂತೆ
ಆಮೇಲೆ ನಿಮಗೆಲ್ಲಾ ನಾನೇ ಹೇಳಿಬಿಡುತ್ತಿದ್ದೆ
"ಓದಿದ ಮಹನೀಯರೇ ನಿಮಗಿದೋ ನಮನ" ಎಂದು
ಒಮ್ಮೆ ಹೀಗೂ ಅನಿಸುತ್ತದೆ
ಇಷ್ಟೆಲ್ಲಾ ಮಾಡುವುದು ಯಾವ ಪುರುಷಾರ್ಥಕ್ಕೆ ?
ನಾಕು ಜನರಿಗೆ ಅನ್ನಹಾಕಲಾರೆ
ಬೇಕಾದಂತೆಲ್ಲಾ ಬದುಕಲಾರೆ
ಸಂಬಳವೂ ಇಲ್ಲ ಗಿಂಬಳವೂ ಇಲ್ಲ
ಅಂದಮೇಲೆ ಇಂತಹ ನನಗೆ ಅಪೂರ್ವವಾದ
ಕೃತಿಗಳನ್ನು ಸುಮ್ಮನೇ ತಲೆಕೆಡಿಸಿಕೊಂಡು ನಾ ಬರೆದರೆ
ಓದುವ ಜನರಿಗೆ ಅರ್ಧವಾದ ರೀತಿಯಲ್ಲಿ
ಅದು ರುಚಿಸದೇ ಇದ್ದಾಗ
ಯಾವೊಬ್ಬನೂ ಹೂತ ರಥದ ಚಕ್ರವನ್ನು
ಎತ್ತಲು ಕರ್ಣನಿಗೆ ಸಹಾಯಮಾಡದಾಗ
ಚಕ್ರವ್ಯೂಹದಿಂದ ಹೊರಬರುವ
ಪ್ಲಾನು ಹೇಳಿಕೊಡದಾದಾಗ
ಮರುಕ ಹುಟ್ಟುತ್ತದೆ ನನ್ನ ಬಗೆಗೇ ನನಗೆ
ಈ ಜಗತ್ತೇ ಹೀಗೆ--ಸ್ವಾರ್ಥವೇ ತುಂಬಿದೆ!
ಅದಾಗಿ ಮೂರುದಿನ ಮಂಚಬಿಟ್ಟೇಳದಷ್ಟು
ಚಳಿಜ್ವರ ಬಂದಾಗ ನಾನು ಹಲವತ್ತಿದ್ದೇನೆ
ಯಾಕಪ್ಪಾ ಇದೂ ಬದುಕೇ ?
ನಾನು ಭಂಡಾಯನಲ್ಲ ಭಕ್ತಿ ಭಂಡಾರಿಯೂ ಅಲ್ಲ
ವರಕವಿಯೂ ಆಗಲಿಲ್ಲವೆಂಬ ನರಕಯಾತನೆ!
ಬರೆದೂ ಬರೆದೂ ಬರೆದೂ ತೂರಿಬಿಡುತ್ತೇನೆ
ಓದುವರು ಓದಲಿ ಓದದೇ ಇದ್ದರೆ ಬಿದ್ದಿರಲಿ
ಇವತ್ತಲ್ಲಾ ನಾಳೆ ಹಳೇ ಪೇಪರ್ ಮಾರುವ ಹುಡುಗ
ಅವನ ಪೇಪರ್ ಗಂಟಿನಿಂದ ಹೊರಡುವ
ಅಸಾಧ್ಯ ದನಿಕೇಳಿ ಬಿಚ್ಚಿ ತೆಗೆದು ನೋಡುತ್ತಾನೆ
ಸರಿಯಾಗಿ ಅರ್ಥವಾಗದಾಗ
ಹಿರಿಯರಿಗೆ ಕೊಡುತ್ತಾನೆ ಆಗ
ಅಲ್ಲಿ ಘಟಿಸುತ್ತದೆ ಶುಭಮುಹೂರ್ತ
ಮತ್ತೆ ಚಿಗುರುತ್ತವೆ ನನ್ನ ಕೃತಿಗಳು
’ಮಂಕುತಿಮ್ಮನ ಕಗ್ಗ’ದಂತೆ
’ಮೈಸೂರು ಮಲ್ಲಿಗೆ’ಯಂತೆ
ಹೆಚ್ಚೇಕೆ ಬೇಂದ್ರೆಯರ ’ನಾಕು ತಂತಿ’ಯಂತೇ
ಹೀಗೆಂದುಕೊಂಡು ಮುಸುಕೆಳೆದು ಮಲಗುತ್ತೇನೆ
ತಪಸ್ಸು ಮಾಡುತ್ತೇನೆ ಮನಸಾರೆ
ಮುಂದೆಂದಾದರೂ ಮತ್ತೆ ಕವಿಯಾಗಿ ನಾ ಕಣ್ತೆರೆದರೆ
ಆಗ ನೀವೆನ್ನುತ್ತೀರಿ ’ಕಾವ್ಯ ಬ್ರಹ್ಮರ್ಷಿ’ !
ಅಂದಾದರೂ ಅನ್ನಿ ಬಿಟ್ಟಾದರೂ ಬಿಡಿ
ನಾನು ಬರೆದೇ ತೀರುತ್ತೇನೆ
ಇಂದಿಂಗೂ ಎಂದಿಗೂ ನಾನಿರುವವರೆಗೂ !
ಸೂಪರ್, ಗುರುಗಳೇ, ಇದೂ ಒ೦ಥರಾ ಚೆನ್ನಾಗಿದೆ.
ReplyDeleteಭಟ್ ಸರ್;ಇಂದಾದರೂ,ಎಂದಾದರೂ ನೀವು ಬರೆದೇ ಬರೆಯಿರಿ.ನಾವು ಓದಿಯೇ ಓದುತ್ತೇವೆ.ಇಂಥವು ಮತ್ತಷ್ಟು ಬರಲಿ ಸರ್.ಇಷ್ಟ ಆಯ್ತು.
ReplyDeleteಭಟ್ಟರೆ,
ReplyDeleteನಿಮ್ಮ ಕವನಗಳನ್ನು ಮೆಚ್ಚಿಕೊಳ್ಳವವರ ದೊಡ್ಡ ಸಂಖ್ಯೆಯೇ ಇಲ್ಲಿದೆ. ನೀವು ಬರೆಯುತ್ತಲೇ ಹೋಗಿ. ನಾವು enjoy ಮಾಡುತ್ತಲೇ ಇರುತ್ತೇವೆ.
ಕವನ ನವ್ಯ,ನವೋದಯ,ಬಂಡಾಯ ಯಾವುದಾದರೂ ಆಗಿರಲಿ..ಅದು ಕವನವಾಗಿದ್ದರೆ ಸಾಕು.
ReplyDeleteಕವನ ಚೆನ್ನಾಗಿದೆ.
ಗುರುಗಳೇ,
ReplyDeleteಬರೆಯುವುದು ನಿಮ್ಮ ಕರ್ಮ
ಓದುವುದು ನಮ್ಮ ಧರ್ಮ
ಅದರಲ್ಲೇನು ಮರ್ಮ..........
ನೀವು ಏನು ಬರೆದರೂ ಅದಕ್ಕೊಂದು ಅರ್ಥ ಇರುತ್ತದೆ, ಸಂದೆಶವಿರುತ್ತದೆ, ಅದನ್ನು ನಾವು ಓದುತ್ತೇವೆ, ಅರ್ಥೈಸಿಕೊಳ್ಳುತ್ತೇವೆ.
ಇದೂ ಚಂದವೇ,
ಅಂದವೇ,
ನಮ್ಮಂತ ದುಂಬಿಗಳಿಗೆ ಮಕರಂದವೇ.....! ಮುಂದುವರೆಯಲಿ............
ಇದು ನನ್ನ ಕವನ ಮಾತ್ರ, ಇರಲಿ, ಪ್ರತಿಕ್ರಿಯಿಸಿದ ಎಲಾ ಓದುಗರಿಗೆ, ಮಿತ್ರರಿಗೆ ಹಲವು ಧನ್ಯವಾದಗಳು
ReplyDeleteಚೆನ್ನಾಗಿತ್ತು ಭಟ್ರೇ ನೀವು ಬರೆದರೆ ಚೆಂದ ನಾವು ಓದಿದರೆ ಚೆಂದ ಅಲ್ವ!!!
ReplyDeleteThank you Shashi Madam
ReplyDeleteBhatre,
ReplyDeleteishta aitu....
thanks Ashokji
ReplyDeleteಒಂಥರಾ ಚೆನ್ನಾಗಿದೆ..
ReplyDelete:-))