ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, January 29, 2013

ಮಣಿಸಿ ಎನ್ನೀಶಿರವ ಗದುಗಿನನಾರಣಪ್ಪನಿಗೆ


ಚಿತ್ರಋಣ : ಅಂತರ್ಜಾಲ  
ಮಣಿಸಿ ಎನ್ನೀಶಿರವ ಗದುಗಿನನಾರಣಪ್ಪನಿಗೆ  

ಪದಗಳಮೃತ ವಿಬುಧ ಜನರಿಗೆ
ಹದದೊಳೆತ್ತಿದ ಪಾಕ-ಪಕ್ವವು
ಮುದದಿ ಬರೆದನು ಗದುಗು-ಭಾರತ ಬಯಸಿ ಸುಕೃತವ |
ಚದುರನಾಕವಿ ಕುವರವ್ಯಾಸಗೆ
ಗದಗಿನೊಡೆಯಗೆ ಸಕಲಮುನಿಜನ
ಪದಗಳಿಗೆ ಪೊಡಮಟ್ಟು ಪೇಳುವೆ ಕವಿಕಥಾಮೃತವ ||

ಮಹಾಕವಿ ಮುಮಾರವ್ಯಾಸಗೆ ಸಾಷ್ಟಾಂಗ ನಮಸ್ಕಾರ. ನಾನು ಅನೇಕಾವರ್ತಿ ಹೇಳಿದ್ದಿದೆ: ಅಷ್ಟೆಲ್ಲಾ ಕೆಲಸಗಳ ನಡುವೆ ಹೇಗೆ ಬರೆಯುತ್ತೀರಿ ? ಎಂಬೀ ಪ್ರಶ್ನೆಗೆ ಉತ್ತರಿಸುವುದು ಕಷ್ಟ; ಅದು ಆದ್ಯತೆಯ ಐಚ್ಛಿಕ ವಿಷಯ. ಉತ್ತಮ ಕಾವ್ಯ-ಸಾಹಿತ್ಯಗಳ ಆರಾಧನೆಯೊಂದು ಸೇವೆ-ಅದು ಸಮಾಜಕ್ಕೆ ನಾವು ಸಲ್ಲಿಸಬಹುದಾದದ್ದು. ಹಿಂದಕ್ಕೆ ಕವಿಗಳಿಗೆ ರಾಜಾಶ್ರಯವಿತ್ತು, ಯಾಕೆಂದರೆ ಕವಿಗಳು ವೇದತುಲ್ಯ ಮೌಲ್ಯಗಳನ್ನು ಆಧರಿಸಿ ಕಾವ್ಯ-ಸಾಹಿತ್ಯಗಳನ್ನು ಭಗವಂತನೆ ಸೇವೆಯೆಂಬ ರೀತಿಯಲ್ಲಿ ರಚಿಸುತ್ತಿದ್ದರು. ಈಗಿನ ಕಾಲದಲ್ಲಿ ವಿಶ್ವವಿದ್ಯಾಲಯಗಳಲ್ಲಿ, ಮಹಾವಿದ್ಯಾಲಯಗಳಲ್ಲಿ ಹೆಚ್ಚಿನ ಅಧ್ಯಯನ/ಅಧ್ಯಾಪನ ವೃತ್ತಿಯಲ್ಲಿರುವ ಕೆಲವು ಜನ ಸಾಹಿತ್ಯದಲ್ಲಿ ತೊಡಗುತ್ತಾರೆ ಎಂಬುದೊಂದು ಅನಿಸಿಕೆ ಸಮಾಜದಲ್ಲಿ ನಿಂತಿದೆ; ಯಾಕೆಂದರೆ ಅವರ ಉಪಜೀವಿತಕ್ಕೆ ಬೇಕಾದ ಆರ್ಥಿಕ ಭದ್ರತೆಯೊಂದು ಅಲ್ಲಿ ಸಿಕ್ಕಿರುತ್ತದೆ ಮತ್ತು ಅಧ್ಯಾಪನಕ್ಕೆ ಮಿಕ್ಕಿ ಉಳಿದವೇಳೆಯಲ್ಲಿ, ರಜಾದಿನಗಳಲ್ಲಿ ಅವರು ಬರೆಯಲು ಸಾಧ್ಯ ಎಂಬುದು ಸಹಜ ಅನಿಸಿಕೆ. ಆದರೆ ಬರೆಯಲು ಅದೊಂದೇ ಅರ್ಹತೆ ಸಾಕಾಗದು, ಬರೆಯುವ ವ್ಯಕ್ತಿಗೆ ಬರೆಯುವುವ ಉತ್ಕಟೇಚ್ಛೆ ಇರಬೇಕಾದುದರ ಜೊತೆಗೆ ಬರವಣಿಗೆಯಲ್ಲಿ ತಾದಾತ್ಮ್ಯತೆ ಬೇಕು. ಓದುಗರು ಸ್ವೀಕರಿಸುತ್ತಾರೋ ಅಥವಾ ಪತ್ರಿಕೆಗಳು ಪ್ರಕಟಿಸಬಹುದೋ, ಪ್ರಶಸ್ತಿಗಳು ದೊರೆಯಬಹುದೋ ಎಂಬೆಲ್ಲಾ ಚಿಂತೆಗಳು ಕಾಡಬಾರದು. ಬರವಣಿಗೆಯಲ್ಲೇ ಅತೀವ ಆನಂದವನ್ನು ಅನುಭವಿಸುವ ವ್ಯಕ್ತಿ ಮಾತ್ರ ಬರೆಯಲು ಅರ್ಹನಾಗುತ್ತಾನೆ ಮತ್ತು ಹಾಗೆ ಬರೆಯುವಾತನಿಗೆ ಯಾವ ಅಡೆತಡೆಗಳೂ ಕಾಣಿಸುವುದಿಲ್ಲ. ಕನ್ನಡದ ಮಹಾಕವಿ ಕುಮಾರವ್ಯಾಸನ ಬಗೆಗೆ ಬರೆಯಬೇಕೆಂಬ ಬಹಳ ದಿನಗಳ ಅಪೇಕ್ಷೆಗೆ ಇಂದು ಅಕ್ಷರರೂಪ ಕೊಡುವಲ್ಲಿ ಮುಂದಾಗುತ್ತಿದ್ದೇನೆ. ಇದೊಂದು ಪುಟ್ಟ ಅವಲೋಕನವಷ್ಟೇ ಹೊರತು ವಿಮರ್ಶೆಯಲ್ಲ.

ಕುಮಾರವ್ಯಾಸನಂಥಾ ಕವಿ ನಮಗೆ ಸಿಕ್ಕಿದ್ದು ಕನ್ನಡಿಗರ ಅದೃಷ್ಟ, ಈ ಭುವನದ ಭಾಗ್ಯ. ಸಮೀಕ್ಷೆಯೊಂದರ ಪ್ರಕಾರ ಕ್ರಿ.ಶ. ೧೦ನೇ ಶತಮಾನಕ್ಕೂ ಮುನ್ನ ಕನ್ನಡದಲ್ಲಿ ಮಹಾಭಾರತ ಕಾವ್ಯ ಇರಲೇ ಇಲ್ಲ!! ನಂತರ ಬಂದ ಆದಿಕವಿ ಪಂಪ ಪಂಪ ಭಾರತವನ್ನು ಬರೆದ. ಪಂಪನ ಭಾರತ ಚೆನ್ನಾಗೇ ಇದ್ದರೂ ೧೪ನೇ ಶತಮಾನದಲ್ಲಿ ಇದ್ದನೆನ್ನಲಾದ ಕುಮಾರವ್ಯಾಸನ ’ಕರ್ಣಾಟ ಭಾರತ ಕಥಾಮಂಜರಿ’ಗೆ ಅದು ಸರಿಗಟ್ಟಲಿಲ್ಲ. ತನ್ನ ದೇಶ, ಊರು, ಕಾಲ, ವೃತ್ತಿ, ಮನೆತನ, ಕುಲ,ಗೋತ್ರ ಏನೊಂದನ್ನೂ ಎಲ್ಲಿಯೂ ಲಿಖಿತರೂಪದಲ್ಲಿ ದಾಖಲಿಸದ ಈ ಕವಿಯನ್ನು ಗದುಗಿನ ನಾರಣಪ್ಪ ಎಂದು ಸ್ಥಾನಿಕ ಹಿರಿಯರು ಗುರುತು ಹಿಡಿದಿದ್ದಾರೆ. ಗದುಗಿನ ಕೋಳಿವಾಡ ಗ್ರಾಮದಲ್ಲಿ ಈತ ೧೪೩೦ ರ ಸುಮಾರಿಗೆ ಇದ್ದನೆಂಬುದು ಒಂದು ಹೇಳಿಕೆ. ’ಕುಮಾರವ್ಯಾಸ’ ಎಂಬ ಕಾವ್ಯನಾಮವನ್ನು ಮಾತ್ರ ತನ್ನ ಭಾರತ ಕೃತಿಯಲ್ಲಿ ಬಳಸಿರುವುದು ಕಂಡುಬಂದಿದ್ದು ಅನೇಕರು ಆತನ ನಿಜನಾಮಧೇಯವೇ ಕುಮಾರವ್ಯಾಸ ಎನ್ನುತ್ತಾರೆ. ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಒದ್ದೆ ಪಂಚೆಯನ್ನುಟ್ಟು ಕುಳಿತು ಆಡುತ್ತಾ ಹಾಡುತ್ತಾ ಮೈಮರೆಯುತ್ತಿದ್ದನಂತೆ; ಕೆಲಕಾಲ ಈ ಪಯಣ ನಿತ್ಯವೂ ಒದ್ದೆ ಪಂಚೆ ಆರುವವರೆಗೆ ನಡೆಯುತ್ತಿದ್ದೆಂದು ಸಂಶೋಧಕರ ಅಭಿಪ್ರಾಯ. ವೀರನಾರಾಯಣನಲ್ಲಿ ಅನನ್ಯ ಶರಣತೆಯನ್ನು ಹೊಂದಿದ್ದ ಕುಮಾರವ್ಯಾಸ, ಭಕ್ತಿರಸವುಕ್ಕಿಹರಿದು ಹಾಡುವಾಗ, ಬರೆಯುವಾಗ ಜನ ಸುತ್ತಲೂ ಸೇರುತ್ತಿದ್ದರು ಎಂಬುದು ಪ್ರತೀತಿ. ಅಚ್ಚರಿಯಿಂದ ಬಾಯ್ದೆರೆದು ಕೇಳುತ್ತಿದ್ದ ಸುತ್ತಲ ಜನರಿಗೆ ಪಂಚೆ ಆರಿದಮೇಲೆ ಒಮ್ಮೆಲೇ ನಿರಾಸೆಯಾಗುತ್ತಿತ್ತು, ಮತ್ತೆ ರಸಗವಳಕ್ಕಾಗಿ ನಾಳೆಯವರೆಗೆ ಕಾಯಬೇಕಾಗುತ್ತಿತ್ತು. ಅಂತಹ ಅನೇಕ ನಾಳೆಗಳಿಗಾಗಿ ಅಂದಿನ, ಅಲ್ಲಿನ ಬುಧಜನ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಅವರೇಕೆ ನಾವೂ ಸಹಿತ ಅಂತಹ ಕಾವ್ಯವನ್ನು ಮರೆಯಲು ಸಾಧ್ಯವೇ?

ಕವಿಯೊಬ್ಬನ ಭಾವಪರವಶತೆ ಮತ್ತು ನಿಷ್ಕಳಂಕ ಚಿತ್ತವೃತ್ತಿ ಕಾವ್ಯದ ತೋರಣನಾಂದಿಯಲ್ಲೇ ಗೋಚರವಾಗಿಬಿಡುತ್ತದೆ!  ಇಲ್ಲೂ ಸಹ ಆದಿಪರ್ವದಲ್ಲಿ ಕಥಾಪ್ರವೇಶಕ್ಕೂ ಮುನ್ನ ಈ ಕವಿಯ ವಿನಮ್ರ ನಡೆ, ಆ ಭಕ್ತಿ, ಆ ಪ್ರಾರ್ಥನೆ, ಆ ತೋಡಿಕೊಳ್ಳುವಿಕೆ, ಆ ದಾರ್ಷ್ಟ್ಯಭಾವ, ಆ ನಿರಹಂಕಾರ ಎಲ್ಲವನ್ನೂ ಕಾಣಬಹುದಾಗಿದೆ.

ಮೊದಲಾಗಿ ಕವಿ, ಗಣಪನನ್ನು ಕುರಿತು ಪ್ರಾರ್ಥಿಸಿದ್ದನ್ನು ನೋಡಿ:

ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರ ಭಾಳದ ಕುಣಿವ ಕುಂತಳದ |
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿ
ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ||


ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತ ಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ |
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ||

ಕನ್ನಡದಲ್ಲಿ ಭಾಮಿನಿ ಷಟ್ಪದಿಕಾರನೆಂಬ ಗೌರವವೂ ಕುಮಾರವ್ಯಾಸನಿಗಿದೆ. ಗಜಮುಖನನ್ನು ಇನ್ನಾವ ರೀತಿಯಲ್ಲಿ ಹೊಗಳ ಬಹುದು?  ಸಿಹಿಯಾದ ಕಬ್ಬನ್ನು ಕಚ್ಚಿ ತಿನ್ನುವಾಗ ಜಗಿದಷ್ಟೂ ಅದರ ರಸ ಹೊರಹೊಮ್ಮುತ್ತದೆ ಹೇಗೋ ಹಾಗೇ ಈ ಕವಿಯ ಕಾವ್ಯದ ಪ್ರತೀ ಸಾಲುಗಳಲ್ಲಿ ಯಾ ಪಾದಗಳಲ್ಲಿ ಪದಮಾಂತ್ರಿಕತೆ ತುಂಬಿದೆ! ರಸಭರಿತ ರಸಪೂರಿ ಮಾವಿನ ಹಣ್ಣಿನಂತೇ ಒಂದನ್ನು ಓದಿದರೆ ಅದು ಇನ್ನೊಂದರೆಡೆಗೆ ನಮ್ಮನ್ನು ಸೆಳೆಯುತ್ತದೆ. ನವರಸಗಳನ್ನೂ ತುಂಬಿಕೊಳ್ಳುತ್ತಾ ಹೋಗುವ ಈ ಭಾರತ ಕಾವ್ಯ ಹೇಗಿದೆಯಪ್ಪಾ ಎಂದರೆ  ಮನವೆಂಬ ಹಸಿದ ಹೊಟ್ಟೆಗೆ ಮೃಷ್ಟಾನ್ನ ಭೋಜನವಿದ್ದಂತೇ ಇದ್ದು ಊಟದ ನಂತರ ತೇಗುಬರುವಂತೇ ಕಾವ್ಯವನ್ನು ಸಮಗ್ರವಾಗಿ ಓದಿಪೊರೈಸಿದಾಗ ಮನಸ್ಸು ತೃಪ್ತವಾಗುತ್ತದೆ.  


ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನನಿಕರ ದಾತಾರ |
ರಾವಣಾಸುರ ಮಥನಶ್ರವಣ ಸು
ಧಾವಿನೂತನ ಕಥನಕಾರಣ
ಕಾವುದಾನತ ಜನವ ಗದುಗಿನ ವೀರ ನಾರಯಣ ||


ವೀರನಾರಾಯಣನಲ್ಲಿ ಕವಿಯ ಭಕ್ತಿಯ ಗಮ್ಯ ಎದ್ದು ಕಾಣುತ್ತದೆ. ಹರಿಹರ ಭೇದವೆಣಿಸದ ಕವಿ ಹರನಲ್ಲಿ ಹೀಗೆ ಪ್ರಾರ್ಥಿಸಿದ್ದಾನೆ:


ಶರಣ ಸಂಗವ್ಯಸನ ಭುಜಗಾ
ಭರಣನಮರ ಕಿರೀಟ ಮಂಡಿತ
ಚರಣ ಚಾರು ಚರಿತ್ರ ನಿರುಪಮ ಭಾಳ ಶಿಖಿನೇತ್ರ |
ಕರಣ ನಿರ್ಮಲ ಭಜಕರಘ ಸಂ
ಹರಣ ದಂತಿ ಚಮೂರು ಚರ್ಮಾಂ
ಬರನೆ ಸಲಹುಗೆ ಭಕುತ ಜನರನು ಪಾರ್ವತೀ ರಮಣ ||


ವಾಗ್ದೇವಿಯಲ್ಲೇ ಅಮ್ಮನವರ ಎಲ್ಲಾ ರೂಪಗಳನ್ನೂ ಕಂಡು ನುತಿಸಿದ ಪರಿ ಇಂತಿದೆ :

ವಾರಿಜಾಸನೆ ಸಕಲ ಶಾಸ್ತ್ರ ವಿ
ಚಾರ ದುದ್ಭವೆ ವಚನರಚನೋ
ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ಧಿದಾಯಕಿಯೆ |
ಶೌರಿ ಸುರಪತಿ ಸಕಲ ಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ ||


ಆದಿನಾರಾಯಣಿ ಪರಾಯಣಿ
ನಾದಮಯೆ ಗಜಲಕ್ಷ್ಮಿ ಸತ್ವ ಗು
ಣಾಧಿ ದೇವತೆ ಅಮರ ವಂದಿತ ಪಾದಪಂಕರುಹೆ |
ವೇದಮಾತೆಯೆ ವಿಶ್ವತೋಮುಖೆ
ಯೈದು ಭೂತಾಧಾರಿಯೆನಿಪೀ
ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ ||


ವೀರನಾರಾಯಣನೇ ನಿಜವಾದ ಕವಿ, ತಾನು ಕೇವಲ ಲಿಪಿಕಾರ ಎಂಬ ಕವಿಯ ವಿನಮ್ರ ಭಾವಗಳನ್ನು ಮುಂದೆ ಕಾಣುತ್ತೇವೆ :

ವೀರ ನಾರಾಯಣನೆ ಕವಿ ಲಿಪಿ
ಕಾರ ಕುಮಾರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು |
ಚಾರು ಕವಿತೆಯ ಬಳಕೆಯಲ್ಲ ವಿ
ಚಾರೊಸುವ ಡಳವಲ್ಲ ಚಿತವ
ಧಾರುಹೋ ಸರ್ವಜ್ಞರಾದರು ಸಲುಗೆ ಬಿನ್ನಪವ ||


ಶ್ರೀರಾಮ ನನ್ನು ನೆನೆಯುತ್ತಾ :

ಶ್ರೀಮದಮರಾಧೀಶ ನತಪದ
ತಾಮರಸ ಘನವಿಪುಳ ನಿರ್ಮಲ
ರಾಮನನುಪಮ ಮಹಿಮ ಸನ್ಮುನಿ ವಿನುತ ಜಗಭರಿತ |
ಶ್ರೀಮದೂರ್ಜಿತ ಧಾಮ ಸುದಯಾ
ನಾಮನಾವಹ ಭೀಮ ರಘುಕುಲ
ರಾಮ ರಕ್ಷಿಸು ವೊಲಿದು ಗದುಗಿನ ವೀರನಾರಯಣ ||


ದೇವಿ ಲಕ್ಷ್ಮಿ-ಪಾರ್ವತಿಯರನ್ನು ನೆನೆದಿದ್ದು ಹೀಗೆ :


ಶರಧಿಸುತೆ ಸನಕಾದಿ ವಂದಿತೆ
ಸುರ ನರೋರಗ ಮಾತೆ ಸುಜನರ
ಪೊರೆವ ದಾತೆ ಸುರಾಗ್ರಗಣ್ಯ ಸುಮೌನಿ ವರಸ್ತುತ್ಯೆ |
ಪರಮ ಕರುಣಾ ಸಿಂಧು ಪಾವನ
ಚರಿತೆ ಪದ್ಮಜ ಮುಖ್ಯ ಸಕಲಾ
ಮರ ಸುಪೂಜಿತೆ ಲಕ್ಷ್ಮೀ ಕೊಡುಗೆಮಗಧಿಕ ಸಂಪದವ ||

ಗಜಮುಖನ ವರಮಾತೆ ಗೌರಿಯೆ
ತ್ರಿಜಗದರ್ಚಿತ ಚಾರು ಚರಣಾಂ
ಬುಜೆಯೆ ಪಾವನ ಮೂರ್ತಿ ಪದ್ಮಜ ಮುಖ್ಯ ಸುರಪೂಜ್ಯೆ |
ಭಜಕರಘ ಸಂಹರಣೆ ಸುಜನ
ವ್ರಜ ಸುಸೇವಿತೆ ಮಹಿಷಮರ್ಧಿನಿ
ಭುಜಗಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ ||


ವೇದವ್ಯಾಸರನ್ನು ಸ್ತುತಿಸಿದ ಪದ್ಯ ಇಲ್ಲಿದೆ:

ದುರಿತ ಕುಲಗಿರಿ ವಜ್ರದಂಡನು
ಧರೆಯ ಜಂಗಮ ಮೂರ್ತಿ ಕವಿ ನಾ
ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜವಂದಿತನು |
ತರಳನನು ತನ್ನವನೆನುನತ ಪತಿ
ಕರಿಸಿ ಮಗನೆಂದೊಲಿದು ಕರುಣದಿ
ವರವನಿತ್ತನು ದೇವ ವೇದವ್ಯಾಸ ಗುರರಾಯ ||

ವಂದಿತಾಮಳ ಚರಿತನಮರಾ
ನಂದ ಯದುಕುಲ ಚಕ್ರವರ್ತಿಯ
ಕಂದನತ ಸಂಸಾರ ಕಾನನ ಘನ ದವಾನಳನು |
ನಣ್ದನಣ್ದನ ಸನ್ನಿಭನು ಸಾ
ನಂದದಿಂದಲೆ ನಮ್ಮುವನು ಕೃಪೆ
ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ ||


ಸಜ್ಜನರಲ್ಲಿ, ಬುಧಜನರಲ್ಲಿ, ಪ್ರಾಜ್ಞರಲ್ಲಿ ಮಾಡಿದ ಮನವಿ ಇಂತಿದೆ :

ತಿಳಿಯ ಹೇಳುವ ಕೃಷ್ಣಕಥೆಯನು
ಇಳೆಯಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮಶ್ರುತಿಯನೊರೆವನು ಕೃಷ್ಣಮೆಚ್ಚಲಿಕೆ |
ಹಲವುಜನ್ಮದ ಪಾಪರಾಶಿಯ
ತೊಳೆವ ಜಲವಿದು ಶ್ರೀಮದಾಗಮ
ಕುಲಕೆ ನಾಯಕ ಭಾರತಾಕೃತಿ ಮಂಚಮ ಶ್ರುತಿಯ ||

ವೇದಗಳು ನಾಲ್ಕಾಗಿ ವಿಂಗಡಿತವಾದಮೇಲೆ, ವೇದವ್ಯಾಸರಿಗೆ ಸಮತೂಕದ ಇನ್ನೊಂದು ಕಥೆಯನ್ನು ಲೋಕದ ಹಿತಾರ್ಥ ಬರೆಯಬೇಕೆಂಬ ಇಚ್ಛೆ ಒಡಮೂಡಿತಂತೆ. ಹಾಗೆ ಸಂಕಲ್ಪವಾದಾಗ ಬಹುಕಾಲ ಬಾಯಿಗೆ ಬಂದದ್ದನ್ನು ಕೃತಿಗೆ ಇಳಿಸುವ ಲಿಪಿಕಾರನೊಬ್ಬನ ಅಗತ್ಯತೆ ಇತ್ತು. ನಾರದರ ಪ್ರವೇಶದಿಂದಾಗಿ ಗಣಪನ ಪರಿಚಯವಾಗಿ, ಭಾರತಕಥೆಯನ್ನು ಗಣಪ ಶುಂಡವನ್ನೊಲೆದು ಗೀರ್ವಾಣ ಲಿಪಿಯಲ್ಲಿ ಬರೆದ ಮತ್ತು ಅರ್ಥವಿಸಿಕೊಂಡು ಪಂಚಮವೇದವೆನಿಸಲಿ ಎಂದು ಹರಸಿದ ಎಂಬುದು ಐತಿಹ್ಯ. ಭರತವಂಶದ ಕುಲ ಹುಟ್ಟಿಬೆಳೆದ ಕಥೆಯನ್ನು ವಿಸ್ತರಿಸುವುದರಿಂದ ಕಥೆ ಭಾರತವೆಂದೂ ಮಹಾಭಾರತವೆಂದೂ ಕರೆಯಲ್ಪಟ್ಟಿತು. ಸ್ವತಃ ಗಮಕಿಯಾಗಿದ್ದ ಕುಮಾರವ್ಯಾಸ ಸಂಗೀತವನ್ನೂ ಬಲ್ಲವನಾಗಿದ್ದ. ಕರಣಿಕ ರ ಮನೆತನದಲ್ಲಿ ಹುಟ್ಟಿದ ಆತನ ಮನೆತನದವರು ಕೋಳಿವಾಡ ಗ್ರಾಮದಲ್ಲಿ ಶಾನುಭೋಗರಾಗಿದ್ದರು ಎಂಬುದು ತಿಳಿದುಬರುತ್ತದೆ. ಯಾವ ರಾಜನ ಮೆಚ್ಚುಗಾಗಿಯೂ ಬರೆಯದೇ ಕೇವಲ ವೀರನಾರಾಯಣನ ಸೇವೆ ಎಂಬರ್ಥದಲ್ಲಿ ತನ್ನೊಳಗೆ ತಂತಾನೇ ಹೊಮ್ಮಿದ ಪದ್ಯಗಳನ್ನು ಬರೆದ. ವಿಜಯನಗರದ ಕೃಷ್ಣದೇವರಾಯನ  ಕಾಲದಲ್ಲಿ ಇದ್ದಾತನೆಂದು ಕೆಲವರು ಹೇಳಿದರೂ ಅದಕ್ಕೂ ಮುನ್ನವೇ ಆತ ಬದುಕಿರುವ ಕುರುಹು ಸಿಗುತ್ತದೆ. ಕಾವ್ಯದಲ್ಲಿ ಒಂದೆಡೆ ಕೃಷ್ಣರಾಯನೆಂದು ನಮೂದಿಸಿದ್ದರೂ ಅದು ಭಾರತ ಕಥೆಯಲ್ಲಿನ ಶ್ರೀಕೃಷ್ಣನನ್ನು ಕುರಿತಾದ ಸಂಬೋಧನೆಯೇ ಹೊರತು ವಿಜಯನಗರಕ್ಕೆ ಸಂಬಂಧಿಸಿದ್ದಲ್ಲ.    

ಪದದ ಪ್ರೌಢಿಮೆ ನವರಸಂಗಳ
ವುದಿತವೆನುವಭಿಧಾನ ಭಾವವ
ಬೆದಕಲಾಗದು ಬಲ್ಲ ಪ್ರೌಢರು ಮೀ ಕಥಾಂತರಕೆ |
ಇದ ವಿಚಾರಿಸೆ ಬರಿಯ ತೊಳಸಿಯ
ವುದಕದಂತಿರೆಯಿಲ್ಲಿ ನೋಳ್ಪುದು
ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು ||

ಪೌಢಿಮೆಯುಳ್ಳ ಸಜ್ಜನರೇ, ಈ ಕಥೆಯನ್ನು ಬೆದಕಿ ಕೆದಕಿ ಪದಗಳ ಪ್ರೌಢಿಮೆಯ ಬಗ್ಗೆ ಚಿಂತಿಸದೇ ಇದೊಂದು ಕೃಷ್ಣಕಥೆಯಾಗಿದ್ದು, ಪದ್ಮನಾಭನ ಪಾದದಲ್ಲಿ ಎರೆದ ತುಳಸೀ ನೀರಿನಂತಿದೆ ಎಂದು ಭಾವಿಸಿರಿ ಎಂದಿದ್ದಾನೆ. ಪದಲಾಲಿತ್ಯವನ್ನು ಮುಂದೆ ನೋಡಿ :

ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ |
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ ||

ತನ್ನಲ್ಲೂ ಒಂದು ಬಲುಹು ಒಂದು ವೈಶಿಷ್ಟ್ಯವಿದೆಯೇನೆಂದರೆ: ಪದ್ಯಗಳನ್ನು ಬರೆಯುವ ಮುನ್ನ ಹಲಗೆ-ಬಳಪ ಬಳಸಲಿಲ್ಲ, ಒಮ್ಮೆ ಬರೆದ ಪದಗಳನ್ನು ಯಾವುದೇ ಕಾರಣಕ್ಕೂ ಅಳಿಸಿದವನಲ್ಲ! ಇನ್ನೊಬ್ಬರು ಬರೆದ ಕಾವ್ಯದ ಶೈಲಿಯನ್ನೋ ಪದಗಳನ್ನೋ ಆಯ್ದುಕೊಳ್ಳಲಿಲ್ಲ, ಬರೆದ ತಾಡವೋಲೆಗಳಲ್ಲಿ[ಕಂಠಪತ್ರ] ಚಿತ್ತುಗಳು-ಹೊಡೆದುಹಾಕಿ ಹೊಸದಾಗಿ ಬರೆದ ಅವಲಕ್ಷಣಗಳು ಇರುವುದಿಲ್ಲ ಎಂಬ ಅಗ್ಗಳಿಕೆ ತನ್ನದೆಂದು ಕವಿ ಹೇಳಿಕೊಂಡಿದ್ದಾನೆ. ಮಹಾಕಾವ್ಯವನ್ನು ಬರೆಯುವಾಗ ಕವಿಗಳಿಗೆ ತಿಂಗಳಾನುಗಟ್ಟಲೆ ಸಮಯ ಹಿಡಿಯುತ್ತದೆ; ಶಿಲ್ಪಿಯ ಮನದಭಿತ್ತಿಯಲ್ಲಿ ಮೂಡಿದ ಮೂರ್ತಿ ಎದುರಿನ ಶಿಲೆಯಲ್ಲಿ ಅರಳಿ ನಿಲ್ಲುವವರೆಗೆ ಅದಕ್ಕೆ ಸಾವಿರಾರು ಚೇಣುಗಳು ಬೇಕಾಗುತ್ತವೆ-ವರ್ಷಗಟ್ಟಲೆ ಯಾ ತಿಂಗಳಾನುಗಟ್ಟಲೆ ಕಾಲವ್ಯಯವಾಗುತ್ತದೆ ಹೇಗೋ ಹಾಗೇ. ಮಹಾಕಾವ್ಯದ ರಚನೆಯಲ್ಲಿ ಒಮ್ಮೆ ಬರೆದ ಪದಗಳನ್ನು ಅಳಿಸದ, ಯಾರನ್ನೂ ಅನುಕರಿಸದ, ಹಲಗೆ-ಬಳಪದಲ್ಲಿ ಬರೆದು ತಿದ್ದಿಕೊಳ್ಳುತ್ತಾ ಅದನ್ನು ಕಂಠಪತ್ರಕ್ಕಿಳಿಸದ, ಕಂಠಪತ್ರದಲ್ಲಿ ನಡುವೆಯೆಲ್ಲೂ ಕಾಟು, ಗೀಟು ಹಾಕಿ ನಂಜಾಗಿಸದ ಕವಿಯೊಬ್ಬನಿದ್ದರೆ ಆತ ಕುಮಾರವ್ಯಾಸ!!!    

ಕೃತಿಯನವಧರಿಸುವುದು ಸುಕವಿಯ
ಮತಿಗೆ ಮಂಗಳವೀವುದಧಿಕರು
ಮಥಿಸುವುದು ತಿದ್ದುವುದು ಮರೆವುದು ಲೇಸ ಸಂಚಿಪುದು |
ನುತಗುಣರು ಭಾವುಕರು ವರಪಂ
ಡಿತರು ಸುಜನರು ಸೂಕ್ತಿಕಾರರು
ಮತಿಯನೀವುದು ವೀರ ನಾರಾಯಣನ ಕಿಂಕರಗೆ ||

ಈ ಮಹಾಕವಿ ಅದೆಷ್ಟು ವಿನಯ ಗುಣ ಸಂಪನ್ನ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಕೃತಿಯನ್ನೋದಿದ ಪಂಡಿತರು, ಪದ ನಿಷ್ಣಾತರು, ಕವಿ-ಕಾವ್ಯ ಕೋವಿದರು, ಸೂಕ್ತಿಕಾರರು, ಭಾವುಕರು ಏನಾದರೂ ತಪ್ಪು ಕಂಡರೆ ತಿದ್ದಿ, ಕ್ಷಮಿಸಿ, ಈ ವೀರನಾರಾಯಣನ ಕಿಂಕರನಿಗೆ ಬುದ್ಧಿಹೇಳಿ ಎಂಬ ಕೋರಿಕೆಯಲ್ಲಿ ಅನನ್ಯಭಾವ ಕಾಣುತ್ತದೆ.

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ |
ಬಣಗುಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸ  ನುಳಿದವರ ||


ರಾಮಾಯಣದ ಭಾರವನ್ನು ಹೊರಲಾರದೇ ಆದಿಶೇಷ ತಿಣುಕಿದನಂತೆ. ಅಲ್ಲಿ ಕಾಲಿಡಲಾಗದಷ್ಟು ಜಾಗವಿಲ್ಲದ ಮಹಾಚರಿತೆ ಅದಾಗಿದೆ. [’ಕಾಲಿಡು’ ಎಂಬುದನ್ನು ಕೆಲವರು ವಿಚಿತ್ರವಾಗಿ ನೋಡುತ್ತಾರೆ. ನಾನು ಹಿಂದೊಮ್ಮೆ "ವೇದಗಳಿಗೆ ಕಾಲಿಡುವ ಮುನ್ನ" ಎಂದು ಬರೆದಿದ್ದನ್ನು ಯಾರೋ ಮಹಾನುಭಾವ ಆಕ್ಷೇಪಿಸಿದ್ದು ನೆನಪಿಗೆ ಬರುತ್ತಿದೆ. ಕಾಲಿಡು ಎಂದರೆ ನಮ್ಮ ಕಾಲುಹಾಕಿ ಅದನ್ನು ಮಲಿನಮಾಡುವುದು ಎಂಬರ್ಥವಲ್ಲ, ಕಾಲಿಡು ಬದಲಾಗಿ ಕೈಯಿಡು ಎಂದು ಹೇಳಬಹುದಿತ್ತಲ್ಲಾ ಎನ್ನುವವರೂ ಇರುತ್ತಾರೆ! ಕಾಲಿಡು, ಪಾದಾರ್ಪಣೆಮಾಡು ಎಂಬೆಲ್ಲಾ ಪರ್ಯಾಯ ಪದಗಳು ಕನ್ನಡದಲ್ಲಿ ಬಳಕೆಯಲ್ಲಿವೆ, ಆರಂಭಿಸುವುದಕ್ಕೆ ಕಾಲಿಡುವುದು ಎಂದು ಪರ್ಯಾಯವಾಗಿ ಹೇಳುತ್ತಾರೆ.] ರಾಮಾಯಣ ಬರೆದ ಕವಿಗಳಿಗೆ ಸುಸ್ತಾಗಿರಬಹುದು ಆದರೆ ಶುಕರೂಪನಾದ ತನಗೆ ಸಾಕೆಂದು ಯಾವಾಗಲೂ ಅನಿಸುವುದಿಲ್ಲ ಮತ್ತು ಸಾಕಾಗಿರಬೇಕೆಂದುಕೊಂಡವರನ್ನು ಕುಣಿಸಿ ನಗದಿರುತ್ತಾನೆಯೇ ಕುಮಾರವ್ಯಾಸ ? ಎಂಬುದು ಕವಿಯ ಪ್ರಶ್ನೆ.

ಹರಿಯ ಬಸಿರೊಳಗಖಿಳ ಲೋಕದ
ವಿರಡವಡಗಿಹವೋಲು ಭಾರತ
ಶರಧಿಯೊಳಡಗಿಹವನೇಕ ಪುರಾಣ ಶಾಸ್ತ್ರಗಳು |
ಪರಮ ಭಕ್ತಿಯಲೀ ಕೃತಿಯನವ
ಧರಿಸಿ ಕೇಳ್ದಾನರರ ದುರಿತಾಂ
ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ ||

ಸಕಲ ವೇದ, ಪುರಾಣ ಶಾಸ್ತ್ರಗಳನ್ನು ಸಮೀಕರಿಸಿ ಬರೆದ ಭಾರತ ಹರಿಯ ಬಸಿರಳೊಳಗೆ ಅಡಗಿದ ಬ್ರಹ್ಮಾಂಡವನ್ನು ಬಿಂಬಿಸುತ್ತದೆ. ಪರಮ ಭಕ್ತಿಯಿಂದ ಈ ಕೃತಿಯನ್ನು ಓದಿದ, ಉತ್ತಮ ಗುಣಗಳನ್ನು ನಡತೆಯನ್ನು ಅವಲಂಬಿಸಿಕೊಂಡ ಜನರಿಗೆ ದುರಿತದ ಅಂಕುರ ಬೇರನ್ನೇ ನೀಗಿಸುತ್ತದೆ ಎಂಬುದನ್ನು ವ್ಯಾಸಾರು ಹೇಳಿದ್ದಾರಾಗಿ ಕವಿ ಕುಮಾರವ್ಯಾಸ ಶ್ರುತಪಡಿಸಿದ್ದಾನೆ. ಮುಂದುವರಿಯುತ್ತಾ :

ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ |
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರ ವ್ಯಾಸ ಭಾರತವ ||


ರಾಜರುಗಳಿಗೆ/ಕ್ಷತ್ರಿಯರಿಗೆ  ಇದು ವೀರವೆನಿಸಿದರೆ, ಬ್ರಾಹ್ಮಣರಿಗೆ ಪರವೇದದ ಸಾರವಾಗಿ ತೋರುತ್ತದೆ, ಯೋಗಿಗಳಿಗೆ-ಮುನಿಜನರಿಗೆ ತತ್ವವಿಚಾರವಾಗಿ ತೋರುತ್ತದೆ ಮತ್ತು ಮಂತ್ರಿಗಳಿಗೆ ರಾಜನೀತಿಯ ಬುದ್ಧಿಯನ್ನು ಹೇಳುತ್ತದೆ. ಇದಲ್ಲದೇ ವಿರಹಿಗಳಿಗೆ ಶೃಂಗಾರಕಾವ್ಯವೆನಿಸಿದರೆ ಪಂಡಿತರಿಗೆ ಅಲಂಕಾರವಾಗಿ ಕಾಣುತ್ತದೆ, ಒಟ್ಟಿನಲ್ಲಿ ಕಾವ್ಯ ಪ್ರಧಾನಕಾವ್ಯವಾಗುತ್ತದೆ ಬರೆಯೆಂದು ವ್ಯಾಸರ/ವೀರನಾರಾಯಣರ ಅಪ್ಪಣೆ/ಪ್ರೇರಣೆ ದೊರತದ್ದರಿಂದ ಕುಮಾರವ್ಯಾಸ ಭಾರತವನ್ನು ಬರೆದನೆಂದು ತಿಳಿಸಿದ್ದಾನೆ. ಕಾವ್ಯದ ಫಲಶ್ರುತಿಯನ್ನು ನೋಡಿ :

ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನ ಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮ ಯಾಗ ಫಲ |
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ||


ವೇದಪಾರಾಯಣದ ಸುಕೃತ ಫಲ, ಗಂಗಾದಿ ಸಕಲ ಮಂಗಳತೀರ್ಥಸ್ನಾನ ಫಲ, ಬಂಗಾರದಿಂದ ಅಲಂಕರಿಸಿದ ಗೋದಾನಾದಿ ದಾನಗಳನ್ನು [ಕೃಚ್ಛ್ರ]ಮಾಡಿದ ಫಲ, ಯಾಗಗಳಲ್ಲೇ ಶ್ರೇಷ್ಠವೆನಿಸಿದ ಜ್ಯೋತಿಷ್ಟೋಮ ಯಾಗ ಮಾಡಿದ ಫಲ, ಭೂದಾನವನ್ನೂ-ವಸ್ತ್ರದಾನವನ್ನೂ-ಕನ್ಯಾದಾನವನ್ನೂ ಮಾಡಿದ ಫಲ ಈ ಭಾರತ ಕಥೆಯನ್ನಾದರಿಸಿ ಕೇವಲ ಒಂದೇ ಒಂದಕ್ಷರವನ್ನೋದಿದರೂ ಲಭಿಸುತ್ತದೆ ಎಂದು ಉಲ್ಲೇಖಿಸಿದ್ದಾನೆ; ಎಂದಮೇಲೆ ವೀರನಾರಾಯಣನಮೇಲೆ ಆತನಿಗೆ ಯಾವ ನಿಷ್ಠೆ ಇದ್ದೀತು ಎಂಬುದು ಗೊತ್ತಾಗುತ್ತದೆ.

ಚೋರನಿಂದಿಸಿ ಶಶಿಯ ಬೈದಡೆ
ಕ್ಷೀರವನು ಕ್ಷಯರೋಗಿ ಹಳಿದರೆ
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು |
ಭಾರತದ ಕಥನ ಪ್ರಸಂಗವ
ಕ್ರೂರ ಕರ್ಮಿಗಳೆತ್ತ ಬಲ್ಲರು
ಘೋರ ರೌರವವನ್ನು ಕೆಡಿಸುಗು ಕೇಳ ಸಜ್ಜನರ ||


ಕಳ್ಳರು ಚಂದ್ರನನ್ನು ನಿಂದಿಸಿದರೇನು, ಹಾಲನ್ನು ಕುಡಿಯಲಾರದ ಕ್ಷಯರೋಗಿ ಹಳಿದರೇನು, ನಡೆಯಲಾರದವ ವಾರಣಾಸಿಯನ್ನು ನೆನೆಸಿ ನಕ್ಕರೇನು? ಯಾವ ತೊಂದರೆಯೂ ಇರದು. ಭಾರತದ ಕಥಾ ಪ್ರಸಂಗವನ್ನು ಕ್ರೂರ ಕರ್ಮಿಗಳು ಎಲ್ಲಿ ತಿಳಿಯಬಲ್ಲರು? ಸಜ್ಜನರು ಇದನ್ನು ಶ್ರವಣಮಾಡಿದ ಮಾತ್ರಕ್ಕೆ ಘೋರ ನರಕ ತಪ್ಪುತ್ತದೆ ಎಂದು ಬಣ್ಣಿಸಿದ್ದಾನೆ. ಸಂಬಂಧಗಳ ರಹಸ್ಯ ಮತ್ತು ರಹದಾರಿಯನ್ನು ಈ ಕೆಳಗಿನ ಪದ್ಯದಲ್ಲಿ ಗಮನಿಸಿ :

ವೇದಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನ ನತುಳಭುಜಬಲದಿ |
ಕಾದಿಗೆಲಿದನನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿಮೂರುತಿ ಸಲಹೊ ಗದುಗಿನ ವೀರ ನಾರಯಣ ||


ಈ ಪದ್ಯ ಬಹಳ ಜನಪ್ರಿಯವೆನಿಸಿದ್ದರಿಂದ ಇದಕ್ಕೆ ಹೊಸದಾಗಿ ಅರ್ಥವಿವರಣೆ ಬೇಕಿಲ್ಲ.

ಕುಮಾರವ್ಯಾಸನೊಬ್ಬ ಸ್ವತಂತ್ರ ಕವಿ. ಆತ ಯಾರನ್ನೂ ಆಶ್ರಯಿಸಲಿಲ್ಲ. ವ್ಯಾಸರ ಮೂಲ ಕಥೆಯೊಂದೇ ಆತನಿಗೆ ಆಧಾರ. ಪಂಪನಿಗೆ ಭಾರತ ಲೌಕಿಕ ಕಾವ್ಯವಾದರೆ ಕುಮಾರವ್ಯಾಸನಿಗೆ ಭಗದ್ವಿಲಾಸವಾಗಿ ಕಂಡಿತು! ಪಂಪನಿಗೆ ತನ್ನ ಕಾವ್ಯ ಪ್ರತಿಭೆಯ ಪ್ರಕಾಶನಕ್ಕೆ ಭಾರತಕಥೆ ಕಾರಣವಾದರೆ  ಕುಮಾರವ್ಯಾಸನಿಗೆ ಆತ್ಮ ಪ್ರಕಾಶನಕ್ಕೆ ಅಡಿಗಲ್ಲು ಹಾಕಿತು. ಪಂಪ ಲೌಕಿಕ ಮತ್ತು ಧಾರ್ಮಿಕಗಳೆಂಬ ಇಮ್ಮೊಗದ ದರ್ಶನ ಮಾಡಿಸಿದರೆ ಕುಮಾರವ್ಯಾಸನ ಪರಿಪೂರ್ಣ ವ್ಯಕ್ತಿತ್ವದ ಪ್ರತಿಮಾರೂಪವಾಗಿ ಆತನನ್ನು ಕಾವ್ಯಯೋಗಿಯೆನಿಸಿತು. ಕುಮರವ್ಯಾಸ ಕಾವ್ಯದ ಒಂದೊಂದು ಪ್ರಾಸಸ್ಥಾನವೂ ರೂಪಕವನ್ನು ಕವಿಮನದಲ್ಲಿ ಮೂಡಿಸುತ್ತದೆ. ಯಾವ ಪದ್ಯವೂ ಕಥಾಭಾಗವೂ ಎಲ್ಲೂ ಅತಂತ್ರವಾಗಿಲ್ಲ, ಕುತಂತ್ರ ಸೇರಿಲ್ಲ. ಹೊಸದಾಗಿ ಓದುವ ಕನ್ನಡಿಗರಿಗೆ ಕನ್ನಡದ ಸುವಿಶಾಲ ಪದಶ್ರೇಣಿಗಳ, ಸಂಧಿ-ಸಮಾಸಗಳ ಪರಿಚಯ, ಉಪಮೆ-ಅಲಂಕಾರಗಳ ಪರಿಚಯ ಇಲ್ಲಿ ಸಾಧ್ಯ; ಈ ದೃಷ್ಟಿಯಿಂದ ಹೊಸಬರಿಗೆ ಸ್ವಲ್ಪ ಕಬ್ಬಿಣದ ಕಡಲೆ ಎನಿಸಿದರೂ ಆ ಕಾಲಕ್ಕೆ ಕವಿ ಬಳಸಿದ ಎಲ್ಲಾ ಪದಗಳೂ ಸಹಜಗತಿಯಲ್ಲಿ ಭಾಷೆಯಲ್ಲಿ ಬಳಕೆಯಲ್ಲಿದ್ದವು ಎಂಬುದನ್ನು ಮರೆಯಬಾರದು.

ಸಂಧ್ಯಾಸಮಯದ ಪಶ್ಚಿಮ ದಿಕ್ಕಿನಲ್ಲಿನ ಬಣ್ಣಗಳ ಹರಹು, ಸಾಗರದ ನೀಲವರ್ಣದ, ವಸಂತಮಾಸದಲ್ಲಿ ತುಂಬಿನಿಂತ ಮರಗಳ ಹಸಿರು ಹೀಗೇ ಆಯಾಯ ಸಂದರ್ಭದಲ್ಲಿ ಬಳಸಿದ ಪದ್ಯಗಳಲ್ಲಿ ಪದಪುಂಜಗಳು ಬರಹಗಾರನ ಶಬ್ದದಾರಿದ್ರ್ಯವನ್ನು ದೂರಮಾಡುತ್ತವೆ. ಯುದ್ಧ, ಸಾಹಸ, ಶಪಥ, ಬೈಗುಳ, ಕಿಡಿನುಡಿ, ಕಟಕಿ, ಬಿರುನುಡಿ, ಕಿರಿನುಡಿ, ಹಾಸ್ಯ, ಸರಸ, ವ್ಯಂಗ್ಯ, ವಕ್ರೋಕ್ತಿ, ಜಾಣ್ನುಡಿ, ಪರಿಹಾಸ, ಕರುಣೆ ಎಲ್ಲದರಲ್ಲೂ ಕಾಳಿದಾಸನಂತೇ ಕುಮಾರವ್ಯಾಸ ತನ್ನದೇ ಆದ ಛಾಪನ್ನು ಮೂಡಿಸಿದ್ದಾನೆ. ಪಶುವಿನಿಂದ ಹಿಡಿದು ಯೋಗಿ ಮಹಾಯೋಗಿಗಳ ವರೆಗಿನ ಪಾತ್ರ ಚಿತ್ರಣ ಅತ್ಯದ್ಭುತ, ಅನವದ್ಯ, ಹೃದ್ಯ.

ಊಹೆದೆಗೆಹಿನ ಕಂಬನಿಯ ತನಿ
ಮೋಹರದ ಘನಶೋಕವಹ್ನಿಯ
ಮೇಹುಗಾಡಿನ ಮನದ ಕೌರವನಿತ್ತನೋಲಗವ |

--ಎಂಬಲ್ಲಿ ಕೌರವ ಎಂಥವ ಎಂಬುದನ್ನು ಚಿತ್ರಿಸಿದ್ದಾನೆ. ಸನ್ನಿವೇಶಗಳಲ್ಲಿ ಪದ್ಯದಲ್ಲಿನ ಲಾಲಿತ್ಯವನ್ನು ಗಮನಿಸುವುದಾದರೆ : ಮಾಹಾಭಾರತದಲ್ಲಿ ಅಗ್ನಿಕನೆಯಂತೇ ಜ್ವಲಿಸುವ ದ್ರೌಪದಿ ತನ್ನ ಸ್ವಯಂವರದ ಸಮಯದಲ್ಲಿ ಅಣ್ಣ ದೃಷ್ಟದ್ಯುಮ್ನನಿಂದ ಶ್ರೀಕೃಷ್ಣನ ಪರಿಚಯ ಪಡೆಯುತ್ತಾಳೆ, ಆಗ ಆಕೆಯ ಮನೋಗತವೇನಿತ್ತು ಎಂಬುದನ್ನು ಹೀಗೆ ಹೇಳುತ್ತಾನೆ:

ಎನಲು ಭಕುತಿಯ ಭಾವರಸದಲಿ
ನೆನೆದು ಹೊಂಪುಳಿಯೋಗಿ ರೋಮಾಂ
ಚನದ ಮೈಯ್ಯುಬ್ಬಿನಲಿ ತನುಪುಳುಕಾಂಬು ಪೂರದಲಿ |
ಮನದೊಳಗೆ ವಂದಿಸಿದಳೆನಗೀ
ತನಲಿ ಗುರುಭಾವನೆಯ ಮತಿ ಸಂ
ಜನಿಸಿತೇನೆಂದರಿಯೆನೆಂದಳು ಕಮಲಮುಖಿ ನಗುತ ||

ಇದೇ ಕುಸುಮಕೋಮಲ ವ್ಯಕ್ತಿತ್ವದ ದ್ರೌಪದಿ ಭಾರತ ಕಥೆಯಂತ್ಯದಲ್ಲಿ ಮಕ್ಕಳನ್ನು ಕಳೆದುಕೊಂಡು ಶೋಕ ವಿಹ್ವಲಳಾಗಿದ್ದಾಗ, ತನ್ನ ಮಕ್ಕಳನ್ನು ಕೊಂದ ಅಶ್ವತ್ಥಾಮನನ್ನು ಕೊಲ್ಲಲು ನುಗ್ಗುತ್ತಿರುವ ಅರ್ಜುನ ಮತ್ತು ಭೀಮರನ್ನು ತಡೆದು ಹೇಳುವುದನ್ನು ನೋಡಿ:

ಬಂದಳಾ ದ್ರೌಪದಿಯಹಹ  ಗುರು
ನಂದನನ ಕೊಲಬಾರದಕಟೀ
ನಂದನರ ಮರಣದ ಮಹಾವ್ಯಥೆಯೀತನಳಿವಿನಲಿ |
ಕೊಂದು ಕೂಗದೆ ಕೃಪೆಯನಬಲಾ
ವೃಂದ ಸಮಸುಖ ದುಃಖಿಗಳು ಸಾ
ರೆಂದು ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ ||  

ಹೀಗೇ ಭಾರತಕಥೆಯ ಪ್ರತೀ ಪಾತ್ರವೂ ವಿಶಿಷ್ಟ ಮತ್ತು ಪದ್ಯಗಳೂ ಕೂಡ. ನಾರಣಪ್ಪನ ಭೀಮ ಬಹಳ ಕೋಲಾಹಲದವನು. ಬಾಲ್ಯದಲ್ಲೇ ನೂರುಜನವೇರಿದ ಮರವನ್ನು ಗಡಗಡನೆ ಅಲುಗಾಡಿಸಿ ಕೌರವರು ದೂರಿಟ್ಟಾಗ ತನ್ನ ಮೈಯ್ಯನ್ನು ತಾನೇ ಪರಚಿಕೊಂಡು

ಗಾಯಮಾಡಿದರೆಂದು ತೋರಿಸಿ ತಪ್ಪಿಸಿಕೊಂಡವ. ಮೈಯ್ಯಲ್ಲಿ ಶಕ್ತಿ-ಸಾಮರ್ಥ್ಯವಿದ್ದೂ ಆತ ತೋರಿದ ಸಂಯಮ ಕಾವ್ಯದಲ್ಲಿ ಢಾಳಾಗಿ ಬಿಂಬಿತವಾಗಿದೆ. ಮಹಾಪರಾಕ್ರಮಿ, ಮಹಾಬಲಶಾಲಿ ಭೀಮ, ಅರಗಿನರಮನೆಯ ಉರಿಯಿಂದ ತಪ್ಪಿಸಿಕೊಂಡು ತನ್ನವರನ್ನು ಕಾಡಿಗೆ ಎತ್ತಿಕೊಂಡೊಯ್ದು ಮಲಗಿಸಿ, ನಿದ್ರಾಭಂಗವಾದಂತೇ ಅವರ ಕಾಲೊತ್ತುತ್ತಾ, ಅವರ ಸ್ಥಿತಿಯನ್ನು ನೆನೆದು ಬಿಕ್ಕಿಬಿಕ್ಕಿ ಅಳುತ್ತಾನೆ! ಇಡೀ ಭಾರತದಲ್ಲಿ ಅಳದೇ ಇರುವ ಪಾತ್ರಗಳು ಎರಡು: ಶ್ರೀಕೃಷ್ಣ ಮತ್ತು ಅಭಿಮನ್ಯು. ಯಾರೇ ಅತ್ತರೂ ಅಳದಿದ್ದರೂ ತೀರಾ ಏನೂ ಅನ್ನಿಸದ ನಮಗೆ ದಟ್ಟಡವಿಯಲ್ಲಿ ನಡುರಾತ್ರಿಯಲ್ಲಿ ತನ್ನವರ ಹೀನಾಯ ಸ್ಥಿತಿಯನ್ನು ಕಂಡು ಮರುಗಿದ, ನರಳಿದ ಭೀಮನನ್ನು ಕುಮಾರವ್ಯಾಸ ಬಣ್ಣಿಸುವಾಗ ಕರುಳು ಚುರಕ್ ಎನ್ನುತ್ತದೆ, ಕಣ್ಣೆವೆಗಳು ಒದ್ದೆಯಾಗದೇ ಇರುವುದಿಲ್ಲ!

ಭಾರತ ಕಥೆಯಲ್ಲಿ ವ್ಯಾಸರು ಖಳ ಚತುಷ್ಟಯರನ್ನು ಹೆಸರಿಸಿದ್ದು ಅವರಲ್ಲಿ ಕರ್ಣ ಮತ್ತು ಕೌರವರು ಇಬ್ಬರು ಪ್ರಧಾನರಾಗಿದ್ದಾರೆ. ಅತಿಯಾಗಿ ಪ್ರೀತಿಸದೇ ಅತಿಯಾಗಿ ದೂಷಿಸದೇ ಮಿತಿಯಲ್ಲಿ ಕಥೆಯನ್ನು ನಡೆಸಿದ ವ್ಯಾಸರಿಗಿಂತ ತುಸು ಭಿನ್ನ ರೀತಿಯಲ್ಲಿ ಕುಮಾರವ್ಯಾಸ ಬಣ್ಣಿಸಿದರೂ ಎಲ್ಲೂ ಧರ್ಮದ ಎಲ್ಲೆಯನ್ನು ಮೀರಿಲ್ಲ. ಹಾಗಂತ ಭಾಸ,ಅ ಪಂಪ, ರನ್ನ ಇವರೆಲ್ಲಾ ಈ ಖಳರನ್ನು ಉದತ್ತೀಕರಿಸಿದ್ದಾರೆ! ಮೂಲ ಕಥೆಯ ಕರ್ತೃವಾದ ವೇದವ್ಯಾಸರೇ ಇಂತಿಂಥವರು ಖಳರು ಎಂದರೆ ಅಲ್ಲೇನೋ ಬಲವಾದ ಕಾರಣವಿರಲೇಬೇಕಲ್ಲವೇ? ಅದನ್ನರಿಯದ ಅದೆಷ್ಟೋ ಜನ ಈ ಪಾತ್ರಗಳನ್ನೂ ಪುಣ್ಯೋಪೇತರು, ಆದರ್ಶಪ್ರಾಯರು, ಸ್ವಾಭಿಮಾನಿಗಳು ಎಂದು ಬಣ್ಣಿಸುವುದು ಖೇದಕರ. ಅನೇಕಾವರ್ತಿ ವಿವಿಧ ಮಾರ್ಗಗಳಲ್ಲಿ ಸಂಧಾನಕ್ಕೆ ಪ್ರಯತ್ನಿಸಿದರೂ ಫಲಪ್ರದವಾಗದ ಕಾರಣ ಯುದ್ಧ ಸನ್ನಾಹವನ್ನು ನಡೆಸಿದ ಕೃಷ್ಣನ ಕಾರಸ್ಥಾನವನ್ನು ಅರಿತುಕೊಂಡ ಕೌರವನನ್ನು ಕುಮಾರವ್ಯಾಸ ಹೀಗೆ ಚಿತ್ರಿಸುತ್ತಾನೆ:

ಎನ್ನ ಹೃದಯದೊಳಿರ್ದು ಮುರಿವನು
ಗನ್ನದಲಿ ಸಂಧಿಯನು ರಿಪುಗಳೊ
ಳಿನ್ನು ತನ್ನವರವರೊಳಿರ್ದಾ ಹದನನಾಡಿಸುವ |
ಭಿನ್ನನಂತಿರೆ ತೋರಿ ಭಿನ್ನಾ
ಭಿನ್ನನೆನಿಸಿಯೆ ಮೆರವ ತಿಳಿಯಲ
ಭಿನ್ನನೀ ಮುರವೈರಿ ನಾವಿನ್ನಂಜಲೇಕೆಂದ ||


ಮಣಿದು ಬದುಕುವನಲ್ಲ ಹಗೆಯಲಿ
ಸೆಣಸಿ ಬಿಡುವವನಲ್ಲ ದಿಟ ಧಾ
ರುಣಿಯ ಸಿರಿಗೆಳೆಸುವನಲ್ಲಳಾಕಿಲ್ಲ ಕಾಯದಲಿ |
ರಣ ಮಹೋತ್ಸವವೆನ್ನ ಮತ ಕೈ
ದಣಿಯೆ ಹೊಯ್ದಾಡುವೆನು ಕೃಷ್ಣನ
ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲೆಂದ ||

ವೀರನಾದ, ವಿರಥನಾದ ಕರ್ಣನ ಅವಸಾನದ ಘಟ್ಟದಲ್ಲಿ ಮಾರಣಾಸ್ತ್ರವು ಆತನ ಎದೆಯನ್ನು ಭೇದಿಸಿದ್ದರೂ ಅಮೃತವಾಗಿಯೇ ಉಳಿದಿದ್ದ ಕರ್ಣನ ಬಳಿಗೆ ಬ್ರಾಹ್ಮಣ ವೇಷದಲ್ಲಿ ಬಂದು ಕರ್ಣಕುಂಡಲವನ್ನು ಎದೆಯೊಳಗಿನ ಅಮೃತೋದಕವನ್ನು ಪಡೆದುಕೊಳ್ಳುವಾಗ ಕರ್ಣನಿಗೆ ಬಂದಾತ ಶ್ರೀಕೃಷ್ಣನೆಂಬುದು ಸ್ಪಷ್ಟವಾಗುತ್ತದೆ. ಸಾವಿನ ಸನಿಹದಲ್ಲಿರುವ ಸಮಯದಲ್ಲೂ ಸಾವಿರ ದಾನಗಳೆಲ್ಲಕ್ಕಿಂತಲೂ ಶ್ರೇಷ್ಠವಾದ ತನ್ನ ಕರ್ಣಕುಂಡಲ ಮತ್ತು ಅಮೃತಕಲಶಗಳ ದಾನವನ್ನು ಕರ್ಣ ನೆರವೇರಿಸಿದ ಆ ಘಳಿಗೆಯಲ್ಲಿ ಕೃಷ್ಣ ಆತನಿಗೆ ಪರಮಪದವನ್ನು ಕರುಣಿಸುತ್ತಾನೆ:

ಪರಮ ಕರುಣಾಸಿಂಧು ಕರ್ಣಂ
ಗಿರದೆ ನಿಜಮೂರ್ತಿಯನು ತೋರಿದ
ನುರತರ ಪ್ರೇಮದಲಿ ಮುಕುತಿಯ ಪದವ ನೇಮಿಸಿದ |
ನರನನೆಚ್ಚರಿಸಿದನು ಕರುಣಿಗೆ
ಕರುಣದನುಸಂಧಾನ ಮಾಣದು
ಧರೆಯೊಳಚ್ಚರಿಯೆನುತ ಬೆರಗಿನೊಳಿದ್ದು ದಮರಗಣ ||

ವಿಸ್ತಾರವಾದ ಭಾರತಕಥೆಯ ಸೊಬಗನ್ನು ಒಂದೆರಡು ಪದ್ಯಗಳಲ್ಲಿ ತಿಳಿಸಲು ನಾನು ಶಕ್ತನಲ್ಲ. ಭಾರತಕಥೆಯನ್ನು ಪುರಾಣದ ರೂಪದಲ್ಲೇ ಆದರಿಸಿ, ಆಧರಿಸಿ ತಮ್ಮ ಜೀವಿತವನ್ನು ಕಳೆದವರು ನಮ್ಮೆಲ್ಲಾ ಪೂರ್ವಜರು. ಇಂದಿನ ನವನಾಗರಿಕತೆಯಲ್ಲಿ ಭಾರತವೇ ಅಪ್ರಸ್ತುತವೆಂತಲೂ ಗೀತೆಯೇ ಅಸಮರ್ಪಕವೆಂತಲೂ ಹೇಳತೊಡಗಿದ್ದೇವೆಂದರೆ ಅದರರ್ಥ ನೈತಿಕವಾಗಿ ನಡೆಯುವ ಜವಾಬ್ದಾರಿಯನ್ನು ನಾವು ನಿಧಾನವಾಗಿ ತೊರೆಯುತ್ತಾ ಸ್ವೇಚ್ಛಾಚಾರವನ್ನು ರೂಢಿಗೆ ತಂದುಕೊಳುತ್ತಾ ಶ್ರೇಷ್ಠ ಜೀವನಧರ್ಮವನ್ನು ಕಡೆಗಣಿಸಿ ಅಧಃಪತನಕ್ಕೆ ಇಳಿಯುತ್ತಿದ್ದೇವೆ ಎಂಬುದು ಸೂಚ್ಯ. ಇಂತಹ ಪ್ರಾಗೈತಿಹಾಸವನ್ನು ವಿಶದೀಕರಿಸುವ ಮಹಾಕಾವ್ಯಗಳನ್ನೂ ಸಹಿತ ಪೂರ್ವಜರು ವ್ಯಾಸಪೀಠದಮೇಲೆ ರೇಷ್ಮೆಬಟ್ಟೆಯಲ್ಲಿ ಸುತ್ತಿ ಇಡುತ್ತಿದ್ದರು; ಆಗಾಗ ಅದರ ಪ್ರವಚನಗಳು ನಡೆಯುವಾಗ ಪೂಜಿಸಿ ಬಳಸುವುದು ವಾಡಿಕೆಯಾಗಿತ್ತು. ಐದು ಸಹಸ್ರವರ್ಷಗಳನ್ನು ಕಲಿಯುಗದಲ್ಲಿ ಕಳೆದಿದ್ದೇವೆ ಎಂದರೆ ಅದಕ್ಕೂ ಹಿಂದಿನದೆನ್ನಲಾದ ವೇದಗಳನ್ನು ಕೇವಲ ಮೌಖಿಕವಾಗಿ ಉಚ್ಚರಿಸುತ್ತಾ ವರ್ಗಾಯಿಸಿಕೊಂಡು ಕಾಪಿಟ್ಟ ಜನರಿಗೆ, ಜ್ಞಾನ ಭಂಡಾರವನ್ನು ಹಾಗೆ ಸಲಹಿದ್ದಕ್ಕೆ ರಾಜರುಗಳು ಗೌರವವಾಗಿ ಅವರ ಉಪಜೀವಿತಕ್ಕೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದರು. ಮನದಮೂಸೆಯಲ್ಲಿ ಕಠಿಣ ಪರಿಶ್ರಮದಿಂದ ಜೋಪಾನಮಾಡಿದ ಶ್ರುತಿಗಳು ಅಥವಾ ವೇದಗಳು ಎಲ್ಲರಿಗೂ ಅರ್ಥವಾಗದ ಕಾರಣ ಅವುಗಳ ವ್ಯುತ್ಪತ್ತಿಯೆನಿಸಿದ ಭಾರತಕಥೆಯನ್ನು  ಧರ್ಮಸೂತ್ರದಂತೇ ಸುಲಭದಲ್ಲಿ ಅರಿಯಲು ಕರುಣಿಸಿದವರು ಭಗವಾನ್ ವೇದವ್ಯಾಸರು. ಕನ್ನಡಿಗರಿಗಾಗಿ ಕನ್ನಡದಲ್ಲಿ ಅದನ್ನು ಬರೆದದ್ದು ಮಹಾಕವಿ ಕುಮಾರವ್ಯಾಸ. ಪಂಪಭಾರತದಿಂದ ಇತ್ತೀಚೆಗೆ ಬಂದ ತುರಂಗಭಾರತದ ವರೆಗೆ ಇರುವ ಎಲ್ಲಾ ಭಾರತಕಥೆಗಳ ನಡುವೆ ಅಷ್ಟೇ ಅಲ್ಲ ಕನ್ನಡ ಕಾವ್ಯಪರಂಪರೆಗೇ ಅತ್ಯದ್ಭುತ ಮತ್ತು ಅತಿಶ್ರೇಷ್ಠ ಕೊಡುಗೆ ಗದುಗಿನ ನಾರಣಪ್ಪನ ಈ ’ಕರ್ಣಾಟ ಭಾರತ ಕಥಾಮಂಜರಿ.’ ಸ್ಥೂಲವಾಗಿ ಆತನ ಬಗ್ಗೆ ಹೇಳಿದೆನೆಂಬ ತೃಪ್ತಭಾವ ಮನದಲ್ಲಿ ಮೂಡುತ್ತಿದೆ. ಅದೇ ಭಾವದಲ್ಲಿ ಕವಿಗಿನ್ನೊಮ್ಮೆ ಉದ್ದಂಡ ಪ್ರಣಾಮ ಸಲ್ಲಿಸುತ್ತಿದ್ದೇನೆ:

ಎನಿಸು ಸೊಗಸಿದು ಕಾವ್ಯ ಭಾರತ
ಮಣಿಸುವುದು ಮಿಕ್ಕುಳಿದುದೆಲ್ಲವ
ತಿನಿಸು ಬಲು ಸಿಹಿ ನುತಗುಣರು ಭಾವುಕರು ಸುಜನರಿಗೆ |
ಕನಸು ಮನಸಲು ಕಂಡೆನದ್ಭುತ
ಎಣಿಕೆಯಿಲ್ಲದೆ ಮುಗಿವೆ ಕರಗಳ
ಮಣಿಸಿ ಎನ್ನೀಶಿರವ ಗದುಗಿನ ನಾರಣಪ್ಪನಿಗೆ ||

No comments:

Post a Comment