ತುಂಬಿದಕೊಡ ತುಳುಕುವುದಿಲ್ಲ ಎಂಬುದನ್ನು ಕಳೆದವಾರವಷ್ಟೇ ಪರಾಂಬರಿಸಿದ್ದೆ; ಅದು ಕಳೆದವಾರ ಮಾತ್ರ ನೋಡಿದ್ದಲ್ಲ, ಹದಿನೈದು-ಹದಿನಾರು ವರ್ಷಗಳ ಒಡನಾಟದ ವ್ಯಕ್ತಿಯ ಸ್ವಭಾವದ ಮರುಪರಿಶೀಲನೆ, ಅಷ್ಟಕ್ಕೂ ಆ ಸ್ತರದಲ್ಲಿದ್ದರೆ ಯಾರೇ ಆದರೂ ಕೊಬ್ಬಿ ನೆಲದಮೇಲೇ ನಡೆಯುತ್ತಿರಲಿಲ್ಲ! ಅಂತಹ ಮೇರು ವ್ಯಕ್ತಿತ್ವ ಶತಾವಧಾನಿ ಡಾ| ರಾ.ಗಣೇಶರದ್ದು. ಹಿಮಾಲಯದ ಮೌಂಟ್ ಎವರೆಸ್ಟ್ ಆಗಿಯೂ ಹತ್ತಿರದ ನಂದಿಬೆಟ್ಟದ ಹಾಗೇ ತೋರುವ ಅವರ ಸೌಜನ್ಯ, ಪದಗಳ ವ್ಯಾಪ್ತಿಗೆ ಮೀರಿದ್ದು. ಅಲ್ಲಿ ಪ್ರಲೋಭನೆಯ ಹಪಾಹಪಿಯಿಲ್ಲ, ಅಧಿಕಾರದ ದಾಹವಿಲ್ಲ, ಯಾವುದೇ ಪೈಪೋಟಿಯಿಲ್ಲ, ಕ್ಷುಲ್ಲಕ ರಾಜಕೀಯವಿಲ್ಲ, ಅದು ಅದೃಷ್ಟದ ಬಲವೂ ಅಲ್ಲ; ಅದೊಂದು ಪ್ರಾಮಾಣಿಕನ ಸತತ ಪ್ರಾಮಾಣಿಕ ಪ್ರಯತ್ನಕ್ಕೆ ಸಿಕ್ಕ ಸಿದ್ಧಿ. ತುಂಬಿದ ಕೊಡದಂತೇ ಖಾಲೀಕೊಡ ಕೂಡ ತುಳುಕುವುದಿಲ್ಲ; ಅದರಲ್ಲಿ ತುಳುಕಲು ಏನೂ ಇರುವುದಿಲ್ಲವಲ್ಲಾ-ಹೀಗಾಗಿ. ಆದರೆ ಅರ್ಧ ಅಥವಾ ಭಾಗಶಃ ತುಂಬಿದ ಕೊಡ ಮಾತ್ರ ಹೊತ್ತು ನಡೆವಾಗ ಸದಾ ತುಳುಕಾಡುತ್ತಲೇ ಇರುತ್ತದೆ!! ’ಮಾಧ್ಯಮದ ಮಂದಿ’ ಎಂದುಕೊಳ್ಳುವ ಅನೇಕರಿಗೆ ಆ ಸ್ಥಿತಿ, ಆ ದರ್ಪ ಮತ್ತು ದುರಹಂಕಾರ. ನಾನೂ ಹಾಗೆ ನೋಡಿದರೆ ಮಾಧ್ಯಮದಲ್ಲಿಯೇ ಇದ್ದೇನೆ; ಆದರೆ ನಾನು ಹಾಗೆ ಅಂಥಾ ಕೊಳಕು ಅಹಂಕಾರವನ್ನು ಮೈಗೂಡಿಸಿಕೊಂಡಿಲ್ಲ. ನನ್ನ ಹೆಜ್ಜೆ ಬಹುಸಂಖ್ಯಾಕರಿಗೆ ಗೊತ್ತೇ ಇಲ್ಲ! ನಾನು ಗೋಸ್ಟ್ ರೈಟರ್ ಅಲ್ಲ; ಆದರೆ ಅಂಥಾ ಜನಗಳನ್ನು ಕಂಡವನು. ಗೋಸ್ಟ್ ರೈಟಿಂಗ್ ಎಂಬುದಕ್ಕೆ ಕನ್ನಡದಲ್ಲಿ ’ಪೈಶಾಚ ಬರಹಗಾರಿಕೆ’ ಎಂದರೆ ತಪ್ಪಾದೀತು ಅದು ’ನೆರಳುಬರಹಗಾರಿಕೆ’ ಎಂದರೇ ಸರಿಯೇನೋ ಎಂಬುದು ನನ್ನ ಅನಿಸಿಕೆ. ಕನ್ನಡದಲ್ಲಿ ’ಹೆಸರೊಬ್ಬರದು ಬಸಿರೊಬ್ಬರದು’ ಎಂಬ ನಾಣ್ನುಡಿಯೊಂದಿದೆ-ಅದೇ ರೀತಿ ಇನ್ನೊಬ್ಬರ ಪರವಾಗಿ ಅವರ ಹೆಸರಿನಲ್ಲಿ ಬರೆದುಕೊಡುವ ಸಂಸ್ಕೃತಿ ಕನ್ನಡದಲ್ಲಿ ಬಹಳ ಪ್ರಾಚೀನಕಾಲದಲ್ಲಿ ಇರಲಿಲ್ಲವೇನೋ; ಆದರೆ ಈಗೀಗ ಅದೇ ಜಾಸ್ತಿಯಾಗುತ್ತಿದೆ! ಬಿಡುವಿಲ್ಲದ ಪತ್ರಕರ್ತರಿಗೋ ವೈದ್ಯರಿಗೋ ಅಥವಾ ಇನ್ಯಾವುದೋ ವೃತ್ತಿಯವರಿಗೋ ’ಸಾಹಿತಿಗಳು’ ಎಂಬ ಮತ್ತೊಂದು ಫಲಕವನ್ನು ತಗುಲಿಸಿಟ್ಟುಕೊಳ್ಳುವಾಸೆ! ಅದಕ್ಕೇ ಅಂತಹ ಜನರಿಗೆ ಅನುಕೂಲಕರವಾಗಿ, ಹೊಟ್ಟೆಪಾಡಿಗಾಗಿ ಬರೆದುಕೊಡುವ ಮಂದಿ ಇದ್ದಾರೆ. ಅವರ ಹೆಸರು ಅಲ್ಲಲ್ಲಿ ಗೊತ್ತಿದ್ದರೂ ’ಅವರೇ ಇವರು’ ಎಂಬುದು ಅವರೇ ಬಿಡುವಿಲ್ಲದ ’ಅವರಿಗಾಗಿ’ಬರೆದ ಪುಸ್ತಕಗಳನ್ನು ಕೊಂಡಾಗ ತಿಳಿಯದು!
ಪ್ರತಿಯೊಬ್ಬ ಬರಹಗಾರನಿಗೂ ಅವನದ್ದೇ ಆದ ಶೈಲಿಯಿರುತ್ತದೆ. ಅದು ಅನೇಕರಿಗೆ ಹಿಡಿಸಲೂ ಬಹುದು, ಹಿಡಿಸದೆಯೂ ಇರಬಹುದು. ಜಾಗೃತಗೊಂಡ ಸಾಹಿತ್ಯಸರಸ್ವತಿಯ ಅಂಗಳದಲ್ಲಿ ಕಳಪೆ ಕಾಮಗಾರಿಯ ಅಡ್ಡಕಸುಬಿಗಳೂ ಇದ್ದಾರೆ; ಚೆನ್ನಾಗಿ ಕೃಷಿಮಾಡಿ ಫಸಲುಣುವ ಜನವೂ ಇದ್ದಾರೆ. ದಿನಕ್ಕೊಂದಷ್ಟು ಕೃತಿಗಳ ಬಿಡುಗಡೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆದೇ ಇರುತ್ತದೆ. ಪ್ರಕಟಣೆಗೊಂಡು ಬಿಡುಗಡೆಗೊಂಡ ಕೃತಿಗಳೆಷ್ಟು ಎಂಬುದಕ್ಕಿಂತಾ ಬಹುಸಂಖ್ಯಾಕ ಓದುಗರು ಸಹಜವಾಗಿ ಮೆಚ್ಚಿದ ಕೃತಿಗಳೆಷ್ಟು ಮತ್ತು ಬರಹಗಳ ಒಳಹೂರಣದ ಸಾರ್ವಕಾಲಿಕತೆ ಎಷ್ಟು ಎಂಬುದರ ಮೇಲೆ ಬರಹಗಾರರು ಯಾವ ಮಟ್ಟಿನವರು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಇಂದು ಒತ್ತಾಯಕ್ಕಾಗಿ ’ಚೆನ್ನಾಗಿದೆ’ ಎಂದು ಪ್ರತಿಕ್ರಿಯಿಸುವವರನ್ನೂ, ತಮ್ಮ ಬರಹಗಳಿಗೂ ತಮಗೊಂದು ಪ್ರತಿಕ್ರಿಯೆ ಈತನಿಂದ ಸಿಗಲಿ ಎಂಬ ಕಾರಣಕ್ಕಾಗಿ ಪ್ರತಿಕ್ರಿಯಿಸುವವರನ್ನೂ ಕಾಣುತ್ತೇವೆ; ಬರವಣಿಗೆಯ ರಂಗದಲ್ಲೂ ಪಕ್ಷ-ಪಂಗಡ-ಗುಂಪುಗಾರಿಕೆ ಇದೆ ಎಂದರೆ ನಂಬುವುದು ಕಷ್ಟವಾಗುತ್ತದೆ-ಆದರೆ ಹಾಗಿದೆ ಎಂಬುದನ್ನು ಅರಿತೂ ನಂಬದಿರುವುದು ಬುದ್ಧ್ಯಾ ಎಸಗುವ ಅಪರಾಧವಾಗುತ್ತದೆ. ಬರಹಗಾರರಲ್ಲಿ ಬಲ ಮತ್ತು ಎಡಪಂಥೀಯರು ಎಂಬ ಪ್ರಮುಖ ವಿಭಾಗಗಳಿವೆ: ಭಾರತೀಯ ಮೂಲ ಸಂಸ್ಕೃತಿ ಮತ್ತು ಸದಾಶಯಗಳನ್ನು ಅರ್ಥೈಸಿಕೊಂಡು ಒಪ್ಪಿ ನಡೆಯುವವರು ಬಲಪಂಥೀಯರೆನಿಸಿದರೆ ನಮ್ಮ ಸಂಸ್ಕೃತಿಯ ಮಹತ್ವವನ್ನೂ ಆದರ್ಶಗಳನ್ನೂ ಅರಿಯದೇ ಹಾರುವ ಮೊಲಕ್ಕೆ ಮೂರೇ ಕಾಲೆಂದು ಘೋಷಿಸಿ ತಮ್ಮ ಬೆನ್ನು ತಟ್ಟಿಕೊಳ್ಳುವವರು ಎಡಪಂಥೀಯ ಬರಹಗಾರರು. ಈ ಪಂಥಗಳಿಗೆ ತಕ್ಕಂತೇ ಅವರವರಿಗೆ ಅವರವರ ಓದುಗರೇ ವಾರಸುದಾರರು! ಸತ್ಯವನ್ನು ಸತ್ಯವೆಂದು ಹೇಳಲು ಹೆದರಿಕೊಳ್ಳುವ ಕಾಲ ಬಂದುಬಿಟ್ಟಿದೆ ಯಾಕೆಂದರೆ ಸುಳ್ಳನ್ನೇ ಸತ್ಯವೆಂದು ನಕಲುದಾಖಲೆಸಹಿತ ಶ್ರುತಪಡಿಸಿ ಬಹುಮತವನ್ನು ಕೀಳುವ ಮಂದಿ ತಯಾರಾಗಿದ್ದಾರೆ; ಸತ್ಯವನ್ನು ಹೇಳುವವರ ಸಂಖ್ಯಾಬಲದ ಕೊರತೆ ಮನಗಂಡು ಸತ್ಯವನ್ನು ಕಂಡರೂ ಕಾಣದಂತೇ ಸುಮ್ಮನಿದ್ದುಬಿಡುವ ’ಬದುಕಿಕೊಳ್ಳುವ ಉಪಾಯ’ವನ್ನು ಮೊರೆಹೊಕ್ಕವರು ಅನೇಕರಿದ್ದಾರೆ; ಕುಡುಕರಲ್ಲದವರ ಸಂಖ್ಯೆ ಕಮ್ಮಿ ಇರುವ ಜಾಗದಲ್ಲಿ ಕುಡುಕರು ಹಾಕಿದ ಸಂಸ್ಕೃತಿಯೇ ವಿಜೃಂಭಿಸುತ್ತಿದೆ, ಕುಡಿಯದವರು ಮರ್ಯಾದೆಗೆ ಅಂಜಿ ಮನೆಯಲ್ಲೇ ಉಳಿದುಹೋಗಿದ್ದಾರೆ!
ಸಂಪಾದಕರಾದೆವು ಎಂಬ ಮಾತ್ರಕ್ಕೆ ತಾವು ಹೇಳುವುದೆಲ್ಲಾ ಸತ್ಯ ಮತ್ತು ಅದನ್ನು ಜನ ಮೆಚ್ಚುತ್ತಾರೆ ಎಂದುಕೊಂಡು ತಮಗೆ ಸಿಕ್ಕಿದ ರಾಗದಲ್ಲೇ ಗರ್ಧಬಗಾಥೆಯನ್ನು ವಿಸ್ತರಿಸುತ್ತಾ ನಡೆದ ಮಂದಿಯೂ ನಮ್ಮಲ್ಲಿ ಇದ್ದಾರೆ. ಇಂದು ಪತ್ರಿಕಾ ಮಾಧ್ಯಮದ ಅಥವಾ ಸಮೂಹ ಮಾಧ್ಯಮದ ಬೆಳವಣಿಗೆಯಲ್ಲಿ ಗಣಕಯಂತ್ರದ ಜೋಡಣೆಯಿಂದ ಆದ ಕ್ಷಿಪ್ರಗತಿಯ ಬದಲಾವಣೆಗಳಿಂದ, ಬಹುತೇಕ ಪತ್ರಿಕೆಗಳು ಒಂದನ್ನೊಂದು ಅನುಕರಿಸುತ್ತಲೋ ಅಥವಾ ಸೃಜನಾತ್ಮಕ ವಿನ್ಯಾಸಗಾರರ, ಮುದ್ರಕರ ಕೈಚಳಕಗಳಿಂದಲೋ ಮೊದಲಿನ ಕಾಲಕ್ಕಿಂತಾ ಹೆಚ್ಚಿನ ಗುಣಮಟ್ಟವನ್ನು ಮುದ್ರಣ-ವಿನ್ಯಾಸ-ಮುದ್ರಣಕಾಗದಗಳಲ್ಲಿ ಪಡೆದಿವೆ; ಆದರೆ ಬರಹಗಳ ದೃಷ್ಟಿಯಿಂದ ಮೌಲ್ಯಯುತ ಬರಹಗಳ ಸಂಖ್ಯೆ ಕಮ್ಮಿಯಾಗಿದೆ ಎಂಬುದು ಸರ್ವವಿದಿತ. ಹಣತೆಗೆದುಕೊಂಡು ಪೂರ್ವಾಗ್ರಹ ಪೀಡಿತರಾಗಿ ಬರೆಯುವ ಮಂದಿ ಕೆಲವರಾದರೆ ತಲೆಯಲ್ಲಿ ಹೊಳವೇ ಇಲ್ಲದೇ ಸಿಕ್ಕಿದ್ದನ್ನೇ ಕಲಸುಮೇಲೋಗರ ಮಾಡಿ ಚಿತ್ರಾನ್ನ ಬಡಿಸುವ ಸಂಪ್ರದಾಯ ಕೆಲವರದು. ನವೆಂಬರ್ ನಲ್ಲಿ ಆರಂಭಗೊಳ್ಳುತ್ತದೆಂಬ ಹೊಸ ಪತ್ರಿಕೆಯೊಂದರ ಮಾಜಿ ಭಾವೀ ಸಂಪಾದಕರನ್ನು ಅನಿರೀಕ್ಷಿತವಾಗಿ ಭೇಟಿಯಾದೆ: ಆಹಹ ಏನು ಒನಪು ಒಯ್ಯಾರ, ಬೆಡಗು ಬಿನ್ನಾಣ ಅಂತೀರಿ !! ಇನ್ನೂ ಪತ್ರಿಕೆ ಹೊರಟೇ ಇಲ್ಲ ಆಗಲೇ ಮುಖ್ಯಮಂತ್ರಿಗಿಂತಲೂ ಬ್ಯೂಸಿ!! ಈಗ ಪತ್ರಿಕೆಯನ್ನು ಹೊರಡಿಸಬೇಕೆಂದಿದ್ದ ಯಜಮಾನರು ನಿರ್ಧಾರವನ್ನು ಕೈಬಿಟ್ಟಿದ್ದರಿಂದ ಅವರ ಪದವಿ-ಪಟ್ಟಕ್ಕೆ ಕುತ್ತುಬಂದು ಬ್ಯೂಸಿ ಎಂಬುದು ಠುಸ್ ಪಟಾಕಿಯಾಗಿಬಿಟ್ಟಿದೆ; ಪಾಪ ಮಾತನಾಡಿಸುವವರೂ ಇಲ್ಲ! ಸಿಕ್ಕಿದ ಪಟ್ಟವನ್ನು ದುರುಪಯೋಗ ಪಡಿಸಿಕೊಳ್ಳುವ ’ಪುಣ್ಯಾತ್ಮ’ರನ್ನೂ ಕಂಡಿದ್ದೇವೆ. ರಾಜಕೀಯದ ಖೂಳರಿಂದ ಒಂದಷ್ಟು ತೆಗೆದುಕೊಂಡು ಅವರನ್ನು ಹೊಗಳಿ ಬರೆಯುವುದೇನು, ಗಣಿಧಣಿಗಳಿಂದ ಪ್ರಸಾದ ಸ್ವೀಕರಿಸಿ ಅವರಕುರಿತು ಬಣ್ಣಿಸುವುದೇನು ಅಲ್ಲದೇ ಕಂಡವರ ಶೀಲ ಶಂಕಿಸುವಂತೇ ಇಲ್ಲದ ಆರೋಪಹೊರಿಸಿ ’ಇನ್ನೂ ಮುಂದೆ ಇನ್ನಷ್ಟು ಬರೆಯುತ್ತೇವೆ’ ಎಂದು ಅಮಾಯಕರನ್ನು ಹೆದರಿಸಿ ರೋಲ್ ಕಾಲ್ ಮಾಡುವ ಜನಗಳೂ ಇದ್ದಾರೆ.
ಹಿಂದಕ್ಕೆ ಗಾಂಧೀಜಿ, ಡಿವಿಜಿ ಇವರೆಲ್ಲಾ ಪತ್ರಕರ್ತರೋ ಸಂಪಾದಕರೋ ಆಗಿದ್ದ ಕಾಲಕ್ಕೆ ಪತ್ರಿಕೆಯೆಂದರೆ ಸಾರ್ವಜನಿಕರ ಕುಂದುಕೊರತೆಗಳನ್ನು ಸರಕಾರಕ್ಕೆ ತಿಳಿಸುವ ಮತ್ತು ಸರಕಾರದ/ಆಳರಸರ ಡೊಂಕುಗಳನ್ನು ತಿದ್ದುವ ಮಾಧ್ಯಮ ಅದಾಗಿತ್ತು. ಆದರೆ ಈಗ ಹಾಗಿಲ್ಲ; ಪತ್ರಿಕೆ ಎಂದರೆ ಉಳ್ಳವರ/ ಆಳರಸರ ಹೊಗಳಿಕೆಗಳನ್ನು ಪ್ರಕಟಿಸುವ ಪತ್ರಕರ್ತರ ಆಡುಂಬೊಲವಾಗಿವೆ. ಇತ್ತೀಚೆಗೆ ತಮ್ಮ ಸ್ವಾರ್ಥಕ್ಕಾಗಿ ಪರಸ್ಪರಲ್ಲಿನ ಕಿತ್ತಾಟಗಳ ಅಂತರಂಗವನ್ನು ಬಹಿರಂಗಗೊಳಿಸುವ ಮಾಧ್ಯಮಗಳಾಗಿವೆ. ಒಬ್ಬರಮೇಲೆ ಇನ್ನೊಬ್ಬರಿಗೆ ಯಾವುದೇ ಪ್ರೀತಿ, ವಿಶ್ವಾಸ, ವೃತ್ತಿಸೌಹಾರ್ದ ಇಲ್ಲ; ಹಾವು-ಕಪ್ಪೆ ವಿಶ್ವಾಸವಾಗಿಬಿಟ್ಟಿದೆ! ’ವಿಜಯಕರ್ನಾಟಕ’ದಲ್ಲಿ ಅಂಕಣಗಳು ಖುಲ್ಲಾಬಿದ್ದಾಗ ಉತ್ತಮ ಬರಹಗಾರರನ್ನು ಹುಡುಕುವ ಬೇಟೆ ನಡೆದಿತ್ತು ಎಂದು ಕೇಳಿದ್ದೇನೆ, ಆಗ ಕೆಲವರು ಅಂಕಣಕಾರರಾಗಿ ಬರೆಯತೊಡಗಿದರು, ಅಂಕಣ ಬರೆಯಲು ಅವಕಾಶಕೊಟ್ಟೆವು ಎನ್ನುತ್ತಾ ಅಂದಿನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಮತ್ತು ಅವರ ಪಟಾಲಮ್ಮು ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದೂ ಇದೆ; ಅವಕಾಶ ಕೊಟ್ಟಿದ್ದು ಬರಹಗಾರನಿಗೆ ನೀಡಿದ ಭಿಕ್ಷೆ ಎಂಬಂತೇ ನಡೆದುಕೊಂಡ ರೀತಿಗಳೂ ಇವೆ. ಉತ್ತಮ ಬರಹಗಾರರಿಲ್ಲದೇ ಪತ್ರಿಕೆ ನಡೆಯುವುದಿಲ್ಲ; ಪತ್ರಿಕೆಯ ಸಿಬ್ಬಂದಿ ಮಾತ್ರವೇ ಉತ್ತಮಬರಹಗಾರರೆನ್ನಲು ಬರುವುದೂ ಇಲ್ಲ! ಬರವಣಿಗೆ ಎಂಬುದುದೊಂದು ಅಭಿಜಾತ ಕಲೆ! ಅದು ವ್ಯಕ್ತಿಯಲ್ಲಿ ತಂತಾನೇ ಸ್ಫುರಿಸಿಬೇಕು; ತಾನು ಕೆತ್ತುವ ವಿಗ್ರಹದ ಅಂಗಸೌಷ್ಟವದ ಬಗ್ಗೆ ಶಿಲ್ಪಿಗೆ ಮೊದಲೇ ಹೇಗೆ ತಿಳಿದಿರುತ್ತದೋ ಹಾಗೇ ಬರಹಗಾರನಿಗೆ ತನ್ನ ಬರಹವೊಂದರ ಆಮೂಲಾಗ್ರ ಪರಿಕಲ್ಪನೆ ಮನದ ಅಡುಗೆ ಮನೆಯಲ್ಲಿ ಪಾಕಗೊಂಡುಬಿಡುತ್ತದೆ. ಆ ಪಾಕವನ್ನು ಸಮಯಕ್ಕೆ ಸರಿಯಾಗಿ ತಟ್ಟೆಗೆ ಇಳಿಸಿ ಹಾಲುಬಾಯಿಯನ್ನೋ ಮೈಸೂರುಪಾಕನ್ನೋ ಕತ್ತರಿಸಿ ಕೊಡುವುದು ಬಾಕಿ ಉಳಿಯುವ ಕೆಲಸವಾಗುತ್ತದೆ. ಅಂತಹ ಬರಹಗಳು ಓದುವುದಕ್ಕೂ, ಆಸ್ವಾದಿಸುವುದಕ್ಕೂ ಹಿತವಾಗಿರುತ್ತವೆ. ಕೇವಲ ಪದವಿಯಿಂದ ಮಾತ್ರ ’ಜರ್ನಲಿಸ್ಟ್’ ಆದವರಿಗೆ ಪಾಕದ ಸಿದ್ಧಿ ಸಾಧ್ಯವಿದೆ ಎನ್ನಲಾಗುವುದಿಲ್ಲ;ಅದು ಹೊಟ್ಟೆಪಾಡಿನ ವೃತ್ತಿಯಾಗುತ್ತದೆ.
ಸಹೃದಯರೊಬ್ಬರು ಜಂಗಮವಾಣಿಯಲ್ಲಿ ಮಾತನಾಡಿ, ಕಳೆದವಾರ ಪ್ರಜಾವಾಣಿಯಲ್ಲಿ ಬಂದ ಪ್ರಳಯದ ಬಗೆಗಿನ ವೈಜ್ಞಾನಿಕ ಲೇಖನವೊಂದರ ಬಗ್ಗೆ ತಿಳಿಸಿ, ಆ ಮುತ್ಸದ್ಧಿ ಬರಹಗಾರರು ಹೀಗೆ ಯಾಕೆ ಬರೆದರು ಎಂದು ಕೇಳಿದರು. ವಿಷಯವಿಷ್ಟೇ: ವಿಜ್ಞಾನಿಗಳು ಪ್ರಳಯ ಸದ್ಯಕ್ಕಿಲ್ಲ ಎಂಬುದಕ್ಕೆ ಭಾರತೀಯ ಜ್ಯೋತಿಷಿಗಳ ಸಹಮತ ಮತ್ತು ಜ್ಯೋತಿಷಿಗಳ ಪ್ರಕಾರ ನಲ್ವತ್ತು ಲಕ್ಷ ವರ್ಷಗಳವರೆಗೂ ಪ್ರಳಯವಿಲ್ಲವಂತೆ ಎಂಬುದು ಅವರು ಮಾಡಿದ ಉಡಾಫೆ. ಬಲಪಂಥೀಯರೂ ಕೆಲವೊಮ್ಮೆ ಬೆನ್ನುಮೂಳೆಯ ಡಿಸ್ಕ್ ಸ್ಲಿಪ್ ಆದಂತೇ ಆಗುವುದು ನೋಡಿ ನನಗೆ ನಗುಬಂತು. ಕಲಿಯುಗಕ್ಕೆ ೪,೩೨,೦೦೦ ಮಾನುಷವರ್ಷಗಳು ಎಂದು ವೇದಾಂಗ ಜ್ಯೋತಿಷ ನಿಖರವಾಗಿ ಹೇಳಿದೆ; ವೇದಾಂಗ ಜ್ಯೋತಿಷ್ಯ ಗಣಿತಾಧಾರಿತವಾಗಿದೆ. ವೇದಾಂಗ ಜ್ಯೋತಿಷ್ಯವೇ ಬೇರೆ ಮತ್ತು ಫಲಜ್ಯೋತಿಷ್ಯವೇ ಬೇರೆ. ಟಿವಿ ಜ್ಯೋತಿಷಿಗಳು ಫಲ ಹೇಳುವುದು ಫಲಜ್ಯೋತಿಷದ ಆಧಾರದ ಮೇಲೆಯೇ ಹೊರತು ವೇದಾಂಗ ಜ್ಯೋತಿಷ್ಯವನ್ನು ಅವರು ಬಳಸುವುದು ಅಷ್ಟಕ್ಕಷ್ಟೇ. ವೇದಾಂಗ ಜ್ಯೋತಿಷ್ಯ ಖಗೋಲ ಗಣಿತವನ್ನೂ ಒಳಗೊಂಡಿದ್ದು ಆ ವಿಷಯಕವಾಗಿ ನಮ್ಮ ಪ್ರಾಚೀನರಾದ ಇಬ್ಬರು ಆರ್ಯಭಟಂದಿರು, ಭಾಸ್ಕರಾಚಾರ್ಯ ಮೊದಲಾದವರು ಕೆಲಸ/ಸಂಶೋಧನೆ ಮಾಡಿದ್ದಾರೆ. ಫಲಜ್ಯೋತಿಷ್ಯಕ್ಕೆ ವೈಯಕ್ತಿಕ ತಪಸ್ಸಿನ ಫಲ ಮತ್ತು ದೂರದರ್ಶಿತ್ವ ಬೇಕಾಗುತ್ತದೆ. ಒಂದೇ ಕುಂಡಲಿಗೆ ಫಲಜ್ಯೋತಿಷ್ಯ ಹೇಳುವ ಬೇರೆ ಬೇರೇ ’ಗುರೂಜಿ’ಗಳಿಂದ ಫಲಗಳು ಬೇರೆ ಬೇರೇ ಹೇಳಲ್ಪಡುವುದು ಅದಕ್ಕೇ! ಏನೂ ಇರಲಿ ವಿಜ್ಞಾನಿಗಳೆನಿಸಿಕೊಂಡವರು ಪ್ರಳಯ ಸದ್ಯಕ್ಕಿಲ್ಲ ಎಂದು ಇಂದು-ನಿನ್ನೆ ಹೇಳುವ ಬಹುಕಾಲ ಮೊದಲೇ ವೇದಾಂಗ ಜ್ಯೋತಿಷ್ಯ ಕಲಿಯುಗದ ಅಂತ್ಯ ಯಾವಾಗ ಎಂಬುದನ್ನು ತಿಳಿಸಿದೆ. ಅದನ್ನಷ್ಟು ಬಳಸಿಕೊಂಡ ಫಲಜ್ಯೋತಿಷಿಗಳು ವಿಜ್ಞಾನಿಗಳ ಜೊತೆಗೆ ತಮ್ಮ ಸಹಮತವೆಂದು ಹೇಳಿದ್ದಾರೆ. ಬರೆಯುವಾಗ ಲೇಖಕರು ಇದನ್ನು ಸರಿಯಾಗಿ ಗ್ರಹಿಸದೇ ಉಡಾಫೆ ಮಾಡಿದ್ದು ಓದುಗ ಹಿತೈಷಿಗಳೊಬ್ಬರಿಗೆ ಹಿಡಿಸದಾಗಿದೆ. ಗೊತ್ತಿಲ್ಲದ ವಿಷಯವಾದರೆ ಉಡಾಫೆ ಮಾಡಬಾರದಲ್ಲವೇ? ಗೊತ್ತಿಲ್ಲದ ಶಿವನನ್ನು ಕಾಳಿಮಠದ ಮಹಾಸ್ವಾಮಿಯನ್ನಾಗಿಸಿದ್ದು ನಮ್ಮ ವಿಶ್ವೇಶ್ವರ ಭಟ್ಟರು ಸಂಪಾದಿಸುತ್ತಿರುವ ಸುವರ್ಣ ನ್ಯೂಸ್ ವಾಹಿನಿ, ಗೊತ್ತಲ್ಲವೇ? ಕಾವಿ ತೊಟ್ಟವರೆಲ್ಲಾ ಸನ್ಯಾಸಿಗಳಲ್ಲ ಎಂಬ ಕಾಮನ್ ಸೆನ್ಸ್ ಇಲ್ಲದೇ ಹಾದಿಹೋಕ ಮಟನ್ ಬಾಕನನ್ನು ’ಮಹಾಸ್ವಾಮಿ’ಯನ್ನಾಗಿ ಪರಿವರ್ತಿಸಿದ ’ಗರಿಮೆ’ ಆ ವಾಹಿನಿಗೆ ಸಲ್ಲುತ್ತದೆ, ಈ ಬಗ್ಗೆ ಜಾಸ್ತಿ ಬೇಡ ...ಗೊತ್ತು ನಿಮಗೆ ಅದನ್ನೇ ಕೇಳೀ ಕೇಳೀ ವಾಕರಿಕೆ ಬರುವಷ್ಟಾಗಿದೆ.
ಪತ್ರಿಕಾ ಸಂಪಾದಕರನ್ನೇ ಗಣ್ಯವ್ಯಕ್ತಿಗಳು ಎನ್ನಲು ಸಾಧ್ಯವಾಗುವುದಿಲ್ಲ! ಪತ್ರಿಕೆಗಳು ಜನರ ಧೋರಣೆಗಳನ್ನು ಪ್ರತಿನಿಧಿಸುವ ಕಾಲ ಮುಗಿದಮೇಲೆ ಅವು ಸಾರ್ವಜನಿಕರ ಹಿತಾಸಕ್ತಿಯನ್ನೇ ಎತ್ತಿಹಿಡಿಯುತ್ತವೆ ಎಂಬ ತಳಹದಿ ಬುಡಕಳಚಿದ ಮೇಲೆ, ಹಣಕ್ಕಾಗಿ ವರದಿಗಳನ್ನು ಪ್ರಕಟಿಸಲು ಸಿದ್ಧರಿರುವ ಅನೇಕ ಸಂಪಾದಕರು ಎದುರು ಕಾಣುತ್ತಿರುವಾಗ, ಕ್ರಯ-ವಿಕ್ರಯಗಳ ಆಗರವಾಗಿ ಮಾಧ್ಯಮಗಳು ಬೆಳೆಯುತ್ತಿರುವಾಗ, ಸಂಪಾದಕರು ಗಣ್ಯರಲ್ಲ; ಅವರೂ ನಮ್ಮೆಲ್ಲರಂತೆಯೇ ಒಬ್ಬರು, ಅವರು ಆ ನೌಕರಿ ಮಾಡುತ್ತಿದ್ದಾರೆ ಎಂಬುದು ಅರ್ಥವಾಗಬೇಕಾದ ಪ್ರಧಾನ ಅಂಶವಾಗಿದೆ. ದುಡ್ಡೇ ಎಲ್ಲವೂ ಎಂಬ ಧೋರಣೆ ತಳೆದ ಜನ ಸ್ವಹಿತವನ್ನು ಕಾಪಾಡಿಕೊಳ್ಳುತ್ತಾರೆಯೇ ವಿನಃ ಅಲ್ಲಿ ಸಾರ್ವಜನಿಕರ ಹಿತಾಸಕ್ತಿ ನಗಣ್ಯವಾಗುತ್ತದೆ. ತೀರ್ಥಹಳ್ಳಿಯ ಟಿ.ಎಸ್.ರಾಮಚಂದ್ರರಾಯರು, ಡಿವಿಜಿಯವರು ಇವರೆಲ್ಲಾ ಸಂಪಾದಕರಾಗಿದ್ದಾಗ ಅವರ ಮನೆಗಳಲ್ಲಿ ಬಂದ ಅತಿಥಿಗಳಿಗೆ ಕಾಫಿ ಕೊಡಲು ಕಷ್ಟಪಡಬೇಕಾದ ಆರ್ಥಿಕತೆ ಇತ್ತು! ಯಾಕೆಂದರೆ ಅವರು ಹಣಕ್ಕಾಗಿ ಸಂಪಾದಕೀಯವನ್ನೋ ಪತ್ರಿಕಾಧರ್ಮವನ್ನೋ ಮಾರಿಕೊಂಡವರಲ್ಲ; ಪತ್ರಿಕೆಗಳಿಂದ ಸಿಗುವ ಸಂಬಳವೋ ಆದಾಯವೋ ಅವುಗಳನ್ನು ನಡೆಸಲೇ ಸಾಲುತ್ತಿರಲಿಲ್ಲ ಎಂದಮೇಲೆ ಮನೆಗೆ ಹಣತೆಗೆದುಕೊಂಡು ಹೋಗುವುದೆಲ್ಲಿಬಂತು? ಇನ್ನು ಬರವಣಿಗೆಯ ಶೈಲಿ ಕೈ ಹಿಡಿದಿದ್ದನ್ನು ಮನಗತ ಮಾಡಿಕೊಂಡ ಒಂದಿಬ್ಬರು ಪೀತಪತ್ರಿಕೆಗಳನ್ನು ನಡೆಸುತ್ತಾರೆ; ರೋಲ್ ಕಾಲ್ ಮಾಡಿ ಕೋಟಿಗಟ್ಟಲೆ ಹಣಗಳಿಸಿ ಈಗ ಅವರಿಗೂ ನೆಮ್ಮದಿಯಿಲ್ಲ-ಸಮಾಜದ ಹಲವರ ಮನೆಗಳಲ್ಲಿ ಅಂಥಾ ಬರಹಗಾರರ ದುರ್ದೆಸೆಯಿಂದ, ಬಹಿರ್ದೆಶೆಯಿಂದ, ಬದುಕು ಮೂರಾಬಟ್ಟೆಯಾಗಿದೆ ಎಂಬುದೂ ಸುಳ್ಳಲ್ಲ; ಅಂಥಾ ಜನ ಶಾಲೆಗಳನ್ನು ನಡೆಸುತ್ತೇವೆ ಎನ್ನುತ್ತಾರೆ, ಅನಾಥರನ್ನು ಸಾಕುತ್ತೇವೆ ಎನ್ನುತ್ತಾರೆ ಎಲ್ಲಾ ಕಣ್ಣೊರೆಸುವ ಕುಚೋದ್ಯಗಳಾಗಿ ಕಾಡುತ್ತವೆ-ತಲೆಯಲ್ಲಿ ಸಾಮಾನುಳ್ಳವರಿಗೆ!
ದೇವಮುಡಿಯಲ್ಲಿ ಕೂತ ಹೂವು ತಾನು ಜಗವನ್ನಾಳುವ ದೇವನ ತಲೆಯನ್ನೇರ್ ಏರಿದ್ದೇನೆ ಹೇಗಿದೆ? ಎಂದು ಬೀಗುತ್ತಿತ್ತಂತೆ, ಮಾರನೇದಿನ ನಿರ್ಮಾಲ್ಯ ವಿಸರ್ಜನೆಯ ಪೂಜೆಯಲ್ಲಿ ಅರ್ಚಕರು ಅದನ್ನು ಪ್ರಸಾದವೆಂದು ತೆಗೆದು ಒಮ್ಮೆ ಆಘ್ರಾಣಿಸಿ ಮೂಲೆಗೆಸೆದರಂತೆ; ಆನಂತರ ಅದು ಯಾವುದೋ ಮರದಬುಡದಲ್ಲಿ ಹೋಗಿಬಿದ್ದಿತೋ ಕಸಕ್ಕೇ ಸೇರಿತೋ ತಿಳಿಯದು. ಹಾಗೆಯೇ ಆಯಕಟ್ಟಿನ ಸ್ಥಳವಾದ ಸಂಪಾದಕನೆಂಬ ಹುದ್ದೆಯಲ್ಲಿ ಕುಳಿತ ಹಲವರಿಗೆ ಅವರ ಅರ್ಹತೆಗಿಂತಾ ಬಿರುದು-ಬಾವಲಿಗಳೇ ಜಾಸ್ತಿಯಾಗಿವೆ; ಎಲ್ಲೆಲ್ಲೂ ಢಾಳಾಗಿ ಅವು ಸಾರ್ವಜನಿಕರ ಕಣ್ಣಿಗೆ ರಾಚುತ್ತವೆ ಮತ್ತು ಹಾಗೆ ರಾಚಲಿ ಎಂಬುವ ಉದ್ದೇಶವೇ ಅವರಿಗೂ ಇರುವುದರಿಂದ ಸಮೂಹಸನ್ನಿಯಾದಹಾಗೇ ಸಂಪಾದಕರೆಲ್ಲಾ ಗಣ್ಯರು ಎಂದು ನಮ್ಮ ಹಿರಿತಲೆಗಳು ತಿಳಿದುಕೊಂಡುಬಿಡುತ್ತವೆ; ಹೇಗೆ ನಮ್ಮಲ್ಲಿ ಆಳರಸರೂ ಶಾಸಕರೂ, ಮಂತ್ರಿಗಳೂ ಜನಪ್ರತಿನಿಧಿಗಳು-ಸಾರ್ವಜನಿಕರ ಕೆಲಸಗಾರರು ಎಂಬುದನ್ನು ಮರೆತು ಅವರಿಗೆಲ್ಲಾ ನಾವು ಡೊಗ್ಗು ಸಲಾಮು ಹೊಡೆಯುತ್ತೇವೋ ಹಾಗೆಯೇ. ಮಾಧ್ಯಮಗಳಲ್ಲಿ ಬರುವ ವರದಿಗಳ ಸತ್ಯಾಸತ್ಯತೆಯ ಬಗ್ಗೆ ಹೊಸದಾಗೇನೂ ಹೇಳುವುದೇ ಬೇಕಿಲ್ಲ; ಯಾಕೆಂದರೆ ಅದು ಯಾರಿಗೂ ಗೊತ್ತಿರದ ಗಮ್ಮತ್ತಿನ ವಿಷಯವೇ ಅಲ್ಲ; ಟಿ.ಆರ್.ಪಿ ಹೆಚ್ಚಿಸಿಕೊಂಡು ಹಲವುಕೋಟಿಗಳ ಜಾಹೀರಾತುಗಳನ್ನು ಸುಲಭವಾಗಿ ಪಡೆಯಬಹುದಲ್ಲಾ ಅಲ್ಲವೇ?
ಹೂವುಗಳು ಲಕ್ಷಾಂತರವಿದ್ದರೂ ದೇವಮುಡಿಗೆ ಏರುವ ಹೂವಿಗೆ ಯೋಗ ಇರಬೇಕು; ಹೂವು ಶವಗಳಿಗೂ ಹೋಗಬಹುದು, ರಾಜಕಾರಣಿಗಳ ಹಾರ-ತುರಾಯಿಗಳಿಗೂ ಹೋಗಬಹುದು, ಅಥವಾ ಇನ್ನಾವುದೋ ಅಲಂಕಾರಕ್ಕೂ ಬಳಸಲ್ಪಡಬಹುದು, ಯಾರಿಗೂ ಕಾಣದೇ ಬಾಡಿ ಹೋಗಲೂಬಹುದು. ಅದೇ ರೀತಿ ಯೋಗದಿಂದ ಅಥವಾ ಅದೃಷ್ಟದಿಂದ ಕೆಲವರು ಹುದ್ದೆಗಳನ್ನು ಅಲಂಕರಿಸುತ್ತಾರೆ; ಮಾಜಿಯಾಗಿರುವ ’ಮಣ್ಣಿನಮಗ’ ಇರುವ ಈ ನಾಡಿನಲ್ಲಿ ಅದೃಷ್ಟಕ್ಕೆ ಹೊಸ ಉದಾಹರಣೆ ಬೇಕೇ? ರೈತರೆಲ್ಲಾ ಮಣ್ಣಿನಮಕ್ಕಳೇ, ಆದರೆ ಮಣ್ಣಿನಮಗ ರೈತ ಎಂದು ಯಾರಾದರೂ ಒಪ್ಪಿಕೊಳ್ಳಲು ಸಾಧ್ಯವೇ? ಹೀಗಾಗಿ ಅದೃಷ್ಟದಿಂದ ಸಿಕ್ಕ ಹುದ್ದೆಯಲ್ಲೇ ನಾನಾ ಕಸರತ್ತುನಡೆಸಿ ಮತ್ತಷ್ಟು ಪ್ರಚಾರ, ಪ್ರಭಾವಳಿ ಗಿಟ್ಟಿಸಿಕೊಳ್ಳುವುದು ಕೆಲವರ ಜಾಯಮಾನ. ಅದೃಷ್ಟ ಇರುವವರೆಗೆ ಹೂವು ದೇವರ ಪಲ್ಲಕ್ಕಿಯಲ್ಲೇ ಇರುತ್ತದೆ! ಅದೇ ರೀತಿ ಅದೃಷ್ಟದಿಂದ ಪಡೆದ ಹುದ್ದೆಯಲ್ಲಿ ಮತ್ತದೇ ಅದೃಷ್ಟದಿಂದ ರಾಜಕೀಯ ನಡೆಸಿ ಇನ್ನಷ್ಟು ಸೌಲಭ್ಯಗಳನ್ನೂ ಸೌಕರ್ಯಗಳನ್ನೂ ಪಡೆದುಕೊಳ್ಳುವುದು ಕಂಡ ನಗ್ನಸತ್ಯ. ಅದೃಷ್ಟ ಖುಲಾಯಿಸಿದಾಗ ಪತ್ರಿಕಾ ಸಂಪಾದಕನೊಬ್ಬ ಝಡ್ ಕೆಟೆಗರಿ ಸೆಕ್ಯುರಿಟಿಯನ್ನೂ ಪಡೆಯಬಹುದು ಎಂದು ಓದಿತಿಳಿದ-ಅರ್ಥವಿಲ್ಲದ ಸಂಗತಿ. ಸಂಪಾದಕನೊಬ್ಬನಿಗೆ ಆ ಮಟ್ಟದ ಹೆದರಿಕೆ ಉಂಟಾಗುವಷ್ಟು, ಈ ಸಮಾಜ ಅಷ್ಟೊಂದು ಅಧಃಪತನಕ್ಕಿಳಿದಿದೆ ಎಂದರೆ ಹಾಗೆ ಸಮಾಜವನ್ನು ರೂಪುಗೊಳಿಸಿದ ಔದಾರ್ಯಕರ್ಮವನ್ನು ಮಾಧ್ಯಮವೇ ಹೊತ್ತುಕೊಳ್ಳಬೇಕಾಗುತ್ತದೆ; ಅಂತಹ ಸಮಾಜದ ಜಾತಃಕರ್ಮದಿಂದ ಅಂತ್ಯೇಷ್ಟಿಯವರೆಗಿನ ಸಕಲ ಸಂಸ್ಕಾರಗಳನ್ನೂ ಅದೇ ಮಾಧ್ಯಮ ನಡೆಸಿಕೊಡಬೇಕಾದ ಔಚಿತ್ಯವಿದೆ!
ಪತ್ರಿಕೆ/ಮಾಧ್ಯಮ ಎಂಬುದು ಸಾರ್ವಜನಿಕರ ಮುಖವಾಣಿ ಎಂಬುದನ್ನು ಮರೆತು, ಅಲ್ಲಿ ಕೇವಲ ಸ್ವಾರ್ಥಲಾಲಸೆಯಿಂದಲೂ ಪ್ರಚಾರಪ್ರಿಯತೆಯಿಂದಲೂ ಪತ್ರಿಕಾಕರ್ತರೇ ಪರಸ್ಪರ ಕಚ್ಚಾಡಿಕೊಳ್ಳುವುದು ಎಂಥಾ ಹಾಸ್ಯಾಸ್ಪದ ವಿಷಯವೆಂದರೆ ಇಂಥವರೂ ಸಮಾಜವನ್ನು ತಿದ್ದುವ ಸಂಪಾದಕರುಗಳಾಗುತ್ತಾರೆ! ಒಬ್ಬ ಎಲೆಯಡಿಕೆ ಉಗುಳಿನ ಬಗ್ಗೆ ಬರೆದರೆ ಮತ್ತೊಬ್ಬ ಚರಂಡಿಯ ನೀರನ್ನು ಎತ್ತಿ ಎರಚಿದ ಬಗ್ಗೆ ಬರೆಯುತ್ತಾನೆ. ಜಗತ್ತಿಗೆಲ್ಲಾ ಸೂರ್ಯನೇ ತಾನೆಂದೂ, ತಾನು ರಿವಾಜಿನಂತೇ ಜೇಬಿನಿಂದ ಹೊರತೆಗೆದದ್ದೇ ಬಂದೂಕೆಂದೂ, ಹಾರಿಸಿದ ಪೀತ ಬರಹಗಳೇ ಶಿಕಾರಿಯೆಂದೂ ಕೊಚ್ಚಿಕೊಳ್ಳುವ ವ್ಯಕ್ತಿಯೊಬ್ಬನ ಪತ್ರಿಕೆ ಪೂರ್ತಿ ಅವನ ವೈಭೋಗಗಳದೇ ರಾಡಿ! ತನ್ನ ಆ ಪುಸ್ತಕ ಇಷ್ಟು ಲಕ್ಷ ಖರ್ಚು ತನ್ನ ಈ ಪುಸ್ತಕ ಅಷ್ಟು ಸಾವಿರ ಪ್ರತಿ ಈಗಾಗಲೇ ಸೋಲ್ಡ್ ಔಟ್ ಎಂದು ಮೀಸೆತಿರುವುವ ಮೂರೂಬಿಟ್ಟ ಯಜಮಾನರಿಗೆ ನೈತಿಕತೆ ಮತ್ತು ಅನೈತಿಕತೆಗಳ ಅಂತರ ಮತ್ತು ಅರ್ಥ ಎರಡೂ ಗೊತ್ತಿಲ್ಲ! ಊದಿದ ಪುಂಗಿಯನ್ನೇ ಊದುತ್ತಿದ್ದರೂ, ಸದಾ ಆಲೈಸುವ ಹೆಡ್ಡ ನಾಗಗಳು ’ತುಸು ಬುಸುಗುಟ್ಟಿದರೂ ಎಲ್ಲಾದರೂ ಅದೇ ಪುಂಗಿಯಿಂದ ಆತ ಬಡಿದು ಸಾಯಿಸಬಹುದು’ ಎಂದು ಹೆದರಿಕೊಂಡು ಬಾಲಮಡಚಿಕೊಂಡಿವೆ ಎಂಬುದು ಅಷ್ಟೇ ಸತ್ಯ. ತಮ್ಮದೇ ಗಟಾರಗಳಲ್ಲಿ ಮುಳುಗಿ ನಾತ ಬೀರುತ್ತಿರುವ ಇಂಥವರೇ ಗಟಾರಭಾತ್ಮೆಗಳನ್ನು ಸೃಷ್ಟಿಸಿ ಬರೆಯುವ ಚಾಕಚಕ್ಯತೆ ಉಳ್ಳವರೆಂಬುದು ಸುಳ್ಳಲ್ಲ, ಆದರೆ ಅಂಥಾ ಪೀತಬರಹಗಳೇ ಜನರಿಗೆ ಬೇಕಾಯ್ತೇ ಎಂಬುದು ಬಹುದೊಡ್ಡ ಪ್ರಶ್ನೆ; ಉತ್ತರಿಸುವವರಿಲ್ಲ! ಕುಡಿದೂ ಕುಡಿದೂ ಕುಡಿದೂ ಮೈಗೊಂಡುಹೋದಹಾಗೇ ಪೀತಸಾಹಿತ್ಯವನ್ನೇ ಓದಿ ಮಜಾಪಡೆಯುವ ವರ್ಗವೇ ಜಾಸ್ತಿ ಆಗಿದೆಯೇನೋ ಎಂಬ ಭಾವನೆ ಬರುತ್ತಿದೆ. ಯಾಕೆಂದರೆ ಪ್ರತಿನಿತ್ಯ ವಾಹಿನಿಗಳಲ್ಲಿ ಬರುವ ಅನೈತಿಕ ಸಂಬಂಧಗಳ ಕುರಿತಾದ ಅತಿವಿಜೃಂಭಿತ ವರದಿಗಳು ಅದನ್ನು ಸಾಬೀತುಪಡಿಸುತ್ತವೆ!
ಇನ್ನು ಸಾಹಿತಿಗಳು ತಾವೆಂದುಕೊಳ್ಳುವ ಕೆಲವು ಪತ್ರಿಕಾಕರ್ತರ ಬಗ್ಗೆ, ಅವರು ಬರೆದ ಪುಸ್ತಕಗಳ ಬಗ್ಗೆ ಹೇಳುವುದಾದರೆ ರಟ್ಟೆಗಾತ್ರದ ಪುಸ್ತಕಗಳಲ್ಲಿ ಹೇಳಿಕೊಳ್ಳುವ ಅಂಥಾದ್ದೇನಿದೆ ಎಂಬುದು ಎಲ್ಲೂ ಕಾಣುತ್ತಿಲ್ಲ; ಪುಸ್ತಕಗಳನ್ನು ಬರೆದದ್ದು ಯಾರೋ ಹೆಸರು ಇನ್ಯಾರದೋ ಆದ ಕೆಲವು ಘಟನೆಗಳ ಬಗ್ಗೆಯೂ ಕೇಳಿ ತಿಳಿದಿದ್ದೇನೆ. ಮೂಲ ಕೃತಿಗಳ ಅನುವಾದಗಳಂತೂ ದೇವರಿಗೇ ಪ್ರೀತಿ; ತಲೆದಿಂಬಿಗೆ ಪರ್ಯಾಯವೆನಲೂ ಗಡಸುತನದಿಂದ ಕುತ್ತಿಗೆ ನೋವು ಆದರೆ ಕಷ್ಟ! ನಿದ್ರೆ ಬಾರದ ಯಾರಾದರೂ ಇದ್ದರೆ ನಾನು ಕೆಲವು ಪುಸ್ತಕಗಳನ್ನು ಓದಲು ಕೊಡಬಹುದು, ಮಾರು ದೂರ ಕಂಡರೂ ಸಾಕು ನಿದ್ದೆ ಆರಂಭವಾಗಿಬಿಡುತ್ತದೆ. ಎಲ್ಲಾ ಬೆಕ್ಕುಗಳು ಹಾಲನ್ನೇ ಇಷ್ಟಪಟ್ಟರೆ ತೆನ್ನಾಲಿಯ ಬೆಕ್ಕು ಹಾಲನ್ನು ಕಂಡು ಓಡುತ್ತಿತ್ತು ಎಂಬ ಕಥೆ ಕೇಳಿರುವಿರಲ್ಲ? ಸಾಹಿತ್ಯದಲ್ಲಿ ಅನಾಸಕ್ತಿ ಹುಟ್ಟಬೇಕೆಂದರೆ ಅಂಥಾ ನಾಕು ಪುಸ್ತಕಗಳೇ ಸಾಕು! ನಾಳಿನದಿನ ಅಂಥಾ ಕೃತಿಗಳಿಗೂ ’ಜ್ಞಾನಪೀಠ’ ಬಂದರೆ ಆಶ್ಚರ್ಯವಿಲ್ಲ. ಇಂಥಾ ಸಾಹಿತಿಗಳಲ್ಲಿ ಅನೇಕರು ತಮ್ಮ ಶಂಖಗಳಲ್ಲಿ ಏನನ್ನೋ ಹಾಕಿಕೊಂಡು ಇಗೋ ತೀರ್ಥ ಎಂದು ಎರಚಿದರೆ ಬೊಗಸೆಹಿಡಿದು ಕುಡಿಯುವ ದಡ್ಡಮಂದಿಗೆ ಅದರ ಪರಾಮರ್ಶೆಮಾಡುವ ಯೋಗ್ಯತೆ ಇಲ್ಲದ್ದು ತಿಳಿಯುತ್ತದೆ; ಹಿಮಾಲಯವನ್ನು ಅಳೆಯಲು ಮಾರುದ್ದದ ಮೀಟರ್ ಪಟ್ಟಿ ಸಾಕು ಎಂದು ಜ್ಞಾತಿಗಳೊಬ್ಬರು ಹೇಳಿದ್ದರು-ಅದರಂತೇ ಓದುಗರು ಅಳೆಯುವ ಪಟ್ಟಿಯಾಗದಷ್ಟು ದಡ್ಡರೇ? ಎಂಬುದು ಅರ್ಥವಾಗದ ರಹಸ್ಯ; ಅದು ವ್ಯಕ್ತಿಗತ ಅಂಧಾಭಿಮಾನವೂ ಇರಬಹುದು! ಏನನ್ನು ಓದಬೇಕು ಏನನ್ನು ಓದಬಾರದು ಅಥವಾ ಏನನ್ನು ಯಾವಾಗ ಎಷ್ಟರಮಟ್ಟಿಗೆ ಓದಬೇಕು ಎಂಬುದು ಓದುಗ ಮಹಾಶಯರಿಗೆ ಬಿಟ್ಟ ವಿಷಯವಾಗಿದೆ;ಅದು ಅವರವರ ಆಯ್ಕೆಯಾಗಿದೆ. ಸಾವಿರ ಸಾವಿರ ಪುಸ್ತಕಗಳ ರಾಶಿ ಹಾಕಿದರೂ ಗಂಟೆಗಳಲ್ಲಿ ಅವುಗಳನ್ನು ಅಳೆದು-ಸುರಿದು ಯಾವುದನ್ನು ಓದಲೇಬೇಕು, ಯಾವುದನ್ನು ಓದಬೇಕು, ಯಾವುದನ್ನು ಓದಬಹುದು, ಯಾವುದನ್ನು ಓದಿದರೆ ಪರವಾಯಿಲ್ಲ, ಯಾವುದನ್ನು ಓದಲೇಬಾರದು ಎಂಬ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಸದ್ಯ ನನಗೆ ದಕ್ಕಿದೆ, ಅದು ಸತತ ಓದಿನಿಂದ ಹಲವರಿಗೆ ದಕ್ಕಲೂ ಬಹುದು. ಯಾವುದೋ ಪುಸ್ತಕವನ್ನು ಓದುವುದಿಲ್ಲ ಎಂದರೆ ಅದು ನನ್ನ ಓದಿನ ವ್ಯಾಪ್ತಿಗೆ ಬರುವುದಿಲ್ಲ ಎಂಬರ್ಥವೇ ಹೊರತು ಅದು ಧಿಮಾಕಿನ ವಿಷಯವಾಗಿರುವುದಿಲ್ಲ. ಹೇಗೆ ಔತಣ ಕೂಟದ ಊಟದ ತಟ್ಟೆಯಲ್ಲಿರುವ ಎಲ್ಲಾ ಖಾದ್ಯಗಳನ್ನೂ ಎಲ್ಲರೂ ತಿನ್ನುತ್ತಾರೆ ಎಂಬ ನಿಗದಿಯಿಲ್ಲವೋ ಹಾಗೆಯೇ ಓದು ಕೂಡ ಐಚ್ಛಿಕ, ಅದು ಬಲವಂತದ ಮಾಘಸ್ನಾನವಲ್ಲ.
’ಕನ್ನಡಪ್ರಭ’ದ ವಿಶ್ವೇಶ್ವರಭಟ್ಟರು ದಿ| ಶಿವರಾಮ ಕಾರಂತರ ಉದಾಹರಣೆಯನ್ನು ’ಅಡಾಸಿಟಿ’ ಎಂಬ ಆಂಗ್ಲಪದವನ್ನು ಉದ್ದರಿಸುವುದಕ್ಕೆ ತಮ್ಮ ೬.೧೨.೨೦೧೨ರ ವ್ಯಾಖ್ಯಾನದಲ್ಲಿ ಮಂಡಿಸಿದ್ದರು, ಆ ಕುರಿತು ಕೆಲವು ಕಡೆ ಪ್ರಸ್ತಾಪಗಳು ಆಗುತ್ತಿರುವುದು ಕಂಡುಬಂದಿದೆ. ’ಭಾಷಾತಜ್ಞ’ ಭಟ್ಟರು ಸೊಕ್ಕು ಮತ್ತು ಧಿಮಾಕು ಎಂಬ ಪದಗಳಿಗೆ ಭಾಷ್ಯವನ್ನು ಬರೆಯಲು ಹವಣಿಸಿ, ಕಾರಂತರ ಜೀವನದ ಒಂದು ಘಟನೆಯನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು, ಕಾರಂತರಿಗಿದ್ದಿದ್ದು ಧಿಮಾಕೇ ಹೊರತು ಸೊಕ್ಕಲ್ಲ, ಸಾಕಷ್ಟು ವಿದ್ವತ್ತು ಮತ್ತು ವಿಷಯ ಪ್ರೌಢಿಮೆ ಇರುವ ವ್ಯಕ್ತಿಗೆ ಧಿಮಾಕು ಇದ್ದರೆ ತಪ್ಪಲ್ಲ ಎಂದು ಅಪ್ಪಣೆಕೊಡಿಸಿಬಿಟ್ಟಿದ್ದಾರೆ. ಇಲ್ಲಿ ಅವರಿಗೆ ಒಂದು ಮಾತನ್ನು ತಿಳಿಸಬಯಸುತ್ತೇನೆ ಏನೆಂದರೆ: ಕಾರಂತರಿಗೆ ಸೊಕ್ಕು, ಧಿಮಾಕು ಎರಡೂ ಇರಲಿಲ್ಲ; ಬದಲಾಗಿ ಅವರ ವ್ವಭಾವವೇ ವಿಶಿಷ್ಟವಾಗಿತ್ತು. ಕಾರಂತರು ಬದುಕಿನಲ್ಲಿ ಅನುಭವಕ್ಕಾಗಿ, ಮಾಹಿತಿಗಾಗಿ ಸ್ವಂತ ಆಸ್ತಿಯನ್ನು ಮಾರಿ ವಿದೇಶಕ್ಕೆ ತೆರಳಿದ್ದರು, [ಮೀಸಾಕಾಯ್ದೆಯಲ್ಲಿ ಹಲವು ದೇಶಭಕ್ತರನ್ನು ಇಂದಿರಾಗಾಂಧಿ ಬಂಧಿಸಿದ್ದ ಕಾಲದಲ್ಲಿ] ತಮಗೆ ಕೊಡಮಾಡಿದ ಪದ್ಮಪ್ರಶಸ್ತಿಯನ್ನು ಮರಳಿ ಬಿಸುಟಿದ್ದರು, ಓಡಾಡುವಾಗ ವಾಹನದಲ್ಲಿ ವಾಹನ ಚಲಿಸುವ ದಿಕ್ಕಿಗೆ ವಿರುದ್ಧ ಮುಖದಲ್ಲಿ ಎಂದೂ ಕೂರುತ್ತಿರಲಿಲ್ಲ, ಬೆಳಿಗ್ಗೆ ಸೂರ್ಯೋದಯದ ನಂತರವೇ ಆರಂಭವಾಗುವ ಅವರ ಯಾನ ಸೂರ್ಯಾಸ್ತದ ನಂತರ ಇರುವಲ್ಲೇ ನಿಂತುಬಿಡಬೇಕಿತ್ತು-ಇವೆಲ್ಲಾ ಅವರ ರಿವಾಜುಗಳು. ಅದರಂತೇ ಓದಿಗೂ ಕೂಡ ಅವರು ಅವರದ್ದೇ ಆದ ಚೌಕಟ್ಟನ್ನು ರೂಪಿಸಿಕೊಂಡಿದ್ದರು. ಬಹುಪಠಿತ್ವದ ಪಂಡಿತರಾದ ಕಾರಂತರಿಗೆ ಭಟ್ಟರು ಹೇಳಿದ ಕನ್ನಡದ ಹಿರಿಯ ಕವಿಯ ಕವನಗಳು ಹಿಡಿಸದಿದ್ದುದಕ್ಕೆ ಕಾರಣವಿರಬಹುದು. ಆ ಹಿನ್ನೆಲೆಯಲ್ಲಿ ಕಾರಂತರು "ನಿಮ್ಮ ಕಾವ್ಯಗಳನ್ನು ಓದುವುದು ನನಗೆ ಕಷ್ಟ, ನಿಮ್ಮ ಪುಸ್ತಕದ ಬಿಡುಗಡೆಗೆ ನಾನು ಬರಲಾರೆ" ಎಂದು ಹೇಳಿದ್ದಿರಬಹುದು; ಅದು ಅವರ ಸಹಜ ಪ್ರವೃತ್ತಿ. ಕಾರಂತರು ಒಳಗೊಂದು ಹೊರಗೊಂದು ಇಟ್ಟುಕೊಂಡ ಜನವಲ್ಲ; ಯಾವುದನ್ನು ಹೇಳುತ್ತಿದ್ದರೋ ಅದನ್ನೇ ಮಾಡುತ್ತಿದ್ದರು. ಕೇವಲ ಹೊರಜನರ ದೃಷ್ಟಿಕೋನದಿಂದ ಅದನ್ನು ಅಳೆದು ಅವರಿಗೆ ಧಿಮಾಕಿತ್ತು ’ಅಡಾಸಿಟಿ’ಗೆ ಅದು ಉದಾಹರಣೆ ಎಂಬುದು ಭಟ್ಟರ ಮಾಡಿದ ಅನರ್ಥವಾಗಿದೆ. ಮುಕ್ತವಾಗಿ ಹೇಳ್ಬೇಕೆಂದರೆ ಭಾಷೆ ಕರತಲಾಮಲಕವಾಗಿದೆ ಎಂಬ ಸೊಕ್ಕಿಗೆ ಉದಾಹರಣೆ ನಮ್ಮ ಭಟ್ಟರು ಎಂದರೆ ತಪ್ಪಾಗಲಾರದಲ್ಲ!
’ಅಂಡೆಪಿರ್ಕಿ’ ಎಂಬ ಪದವನ್ನು ತಿಂಗಳಾನು ಗಟ್ಟಲೆ ಧಾರಾವಾಹಿಯಂತೇ ವಿಜಯಕರ್ನಾಟಕದಲ್ಲಿ ಕೊರೆದಿದ್ದ ಭಟ್ಟರು ಅಲ್ಲಿಯೂ ಈಗಿರುವ ’ಕನ್ನಡಪ್ರಭ’ದಲ್ಲಿಯೂ ರಿಚರ್ಡ್ ಬ್ರಾನ್ಸನ್ ಮತ್ತು ಐಪಾಡ್ ಇಂತಹ ಕೆಲವು ವಿಷಯಗಳನ್ನು ಬಿಟ್ಟು ಬೇರೇ ಪ್ರಪಂಚದ ಪರಿಮಾರ್ಜನೆಗೆ ತೊಡಗಿಕೊಳ್ಳಲಿಲ್ಲ. ಹೆಚ್ಚೆಂದರೆ ಚೀನಾ ಗೋಡೆಯಮೇಲೆ ಅವರು ನಡೆದಿದ್ದು-ನಿಂತಿದ್ದು, ಪ್ರಧಾನಿಯ ಜೊತೆ ವಿಮಾನಯಾನದಲ್ಲಿ ಸಹಯಾತ್ರೆ ಮಾಡಿದ್ದು ಇಂಥಾ ಹೈಲೆವೆಲ್ ಪ್ರವಾಸಗಳ ಕುರಿತು ಕೆಲವು ದಿನ ಕೊರೆದಿದ್ದು-ಕೊಚ್ಚಿಕೊಂಡಿದ್ದು ಬಿಟ್ಟರೆ ಕನ್ನಡಸಾಹಿತ್ಯದ ಮಜಲುಗಳ ಮತ್ತು ಅದರ ಆಳಗಲಗಳ ಬಗೆಗಿನ ಘನಪಾಂಡಿತ್ಯ ಭಟ್ಟರಿಗೆ ಸಿದ್ಧಿಸಲಿಲ್ಲ ಎಂಬುದನ್ನು ಅನೌಪಚಾರಿಕವಾಗಿ ಒಪ್ಪಬೇಕಾದ ವಿಷಯವಾಗಿದೆ. ’ಕುಳಿತೋದದೆಯುಂ ಕಾವ್ಯ ಪರಿಣತಮತಿಗಳ್’ ಎಂದ ಕನ್ನಡಕವಿಯ ಒಕ್ಕಣೆಯಂತೇ, ಕುಳಿತಲ್ಲೇ ಏನನ್ನೂ ಓದದೇ ಕೆಲವರು ಪಂಡಿತರಾಗಲೂ ಬಹುದು ಎಂಬುದು ಅಂದೇ ಸಾಧ್ಯವಾಗಿತ್ತು ಎನಿಸುತ್ತದಲ್ಲಾ ಅಂತೆಯೇ ಭಟ್ಟರೂ ಕೂಡ ಹಾಗೇ ಪಂಡಿತವರ್ಗದಲ್ಲಿ ಸೇರಿರುವುದರ ಜೊತೆಗೆ ಮಹಾಪಂಡಿತ ಎಂಬ ಬಿರುದನ್ನೂ ಪಡೆಯಲು ಅವಿರತ ತೊಡಗಿಕೊಂಡಿರುವುದು ವೇದ್ಯವಾಗುತ್ತದೆ. ಹೀಗಾಗಿ ಅವರು ಆಗಾಗ ಹಿರಿಯ ಕವಿ-ಸಾಹಿತಿಗಳ ಸುತ್ತ ಮತ್ತು ಯಾವುದೋ ಕೆಲವೊಂದು ಪದಗಳ ಸುತ್ತ ಗಿರಕಿಹೊಡೆಯಲು ಆರಂಭಿಸಿ ತಲೆಸುತ್ತು ಬಂದು ಸುಸ್ತಾದವರಂತೇ ಕಾಣಿಸುತ್ತಾರೆ! ರಾಜಕೀಯದಲ್ಲಿ, ಪ್ರಭಾವಲಯ ಸೃಷ್ಟಿಸುವುದರಲ್ಲಿ ಮತ್ತು ತಾನು ’ಮಹಾಪಂಡಿತ’ ಎನಿಸಿಕೊಳ್ಳುವ ತಂತ್ರಗಾರಿಕೆಯಲ್ಲಿ ಅವರಿಗೆ ಪ್ರಾವೀಣ್ಯತೆ ಇದೆ ಎಂಬುದು ಸುಳ್ಳಲ್ಲ. ಹಾಗೆಂದೇ ಗಿಂಡಿ ಹಿಡಿದವರು, ಪ್ರಪಂಚ ಬೆತ್ತಲುಮಾಡುವವರು, ಬುಡಬುಡಿಕೆ ಬಾರಿಸುವವರು, ರೀಡರ್ಸ್ ಡೈಜೆಸ್ಟ್ ಲೇಖನಗಳನ್ನು ಕನ್ನಡಕ್ಕೆ ಭಟ್ಟಿ ಇಳಿಸುವವರು ಮೊದಲಾದವರೆಲ್ಲಾ ಸದಾ ಬೆತ್ತವನ್ನೋ ಕತ್ತಿಯನ್ನೋ ಹಿಡಿದ ’ಕರಗ’ದ ವ್ರತಧಾರಿಗಳಂತೇ ಅವರ ಸುತ್ತ ’ಸಭಾರತ್ನ’ಗಳಾಗಿ ಶೋಭಿಸುತ್ತಾರೆ! ಹೋಗಲಿ ಬಿಡಿ ಪತ್ರಕರ್ತರೆಲ್ಲಾ ಸಾಹಿತಿಗಳಾಗಬೇಕೆಂದೇನೂ ಇಲ್ಲ, ಅಥವಾ ಸಾಹಿತಿಗಳೆಲ್ಲಾ ಪತ್ರಕರ್ತರಾಗಬೇಕೆಂದೂ ಇಲ್ಲ, ಎರಡನ್ನೂ ಏಕಕಾಲಕ್ಕೆ ಸಾಧಿಸಿದ, ಸಾಮಾಜಿಕ ನಿಲುವನ್ನು ವಾದಿಸಿದ ಕೆಲ ಮಹಾತ್ಮರು ನಮ್ಮಲ್ಲಿ ಆಗಿಹೋಗಿದ್ದಾರೆ; ಸಾಹಿತಿ-ಪರ್ತಕರ್ತರೆಂದೆನಿಸಿಕೊಳ್ಳುವ ತುರಿಕೆಯುಳ್ಳವರು ಅಂಥಾ ಮಹಾತ್ಮರ ನಡೆಯನ್ನು ಗಮನಿಸಿ, ಅವರ ಹಾದಿಯಲ್ಲಿ ನಡೆದರೆ ಒಳಿತಾಗುತ್ತಿತ್ತು; ಆದರೆ ಅಂಥಾ ಪತ್ರಕರ್ತರಿಗೆ ಗಂಟಕೀಳಲು ಆಗುತ್ತಿರಲಿಲ್ಲ ಎಂಬುದೂ ಗಮನಿಸಬೇಕಾದ ತಾತ್ಪರ್ಯ. ಹಾಗೊಮ್ಮೆ ತಿರುತಿರುಗಿ ಅವಲೋಕಿಸಿದಾಗ ಭಟ್ಟರ ತುತ್ತೂರಿ ಬಣ್ಣದ ತಗಡಿನದ್ದೆನಿಸಿದರೆ ಕಾರಂತರಂಥಾ ಶಕ್ತಿ ಮೇರು ಪರ್ವತವಾಗಿ ಕಾಣುತ್ತಾರೆ; ಜಾತ್ರೆ ಮುಗಿದರೂ ಜನ ಮರೆಯದ ಕನ್ನಡದ ಕೆಲವು ವ್ಯಕ್ತಿತ್ವಗಳಲ್ಲಿ ಕಾರಂತರೂ ಒಬ್ಬರು-ಅವರು ಭಟ್ಟರ ನಿಮ್ನ ಪದಗಳಿಗೆ ನಿಲುಕುವ ಸಣ್ಣ ಜನ ಅಲ್ಲ ಬಿಡಿ!
ಸರ್ ಉಳಿದದ್ದೆಲ್ಲಾ ನಂಗಿತ್ತಿಲ್ಲಾ,ಕಾರಂತರ ಜೀವನದ ಕೆಲ ನಿಯಮವನ್ನು ತಿಳಿಸಿಕೊಟ್ಟೀದ್ದಕ್ಕೆ ಧನ್ಯವಾದ :)
ReplyDeleteಬರೆಯುತ್ತಿರಿ :)
ಚಿನ್ಮಯ್, ನಾನು ಯಾವುದೇ ನನ್ನ ಹಿತಾಸಕ್ತಿಯಿಂದ ಬರೆದ ಲೇಖನ ಇದಲ್ಲ, ದುಡ್ಡು ತೆಗೆದುಕೊಂಡು ಬರೆದಿದ್ದೂ ಅಲ್ಲ, ಬರೆದಿದ್ದೆಲ್ಲಾ ನನಗೆ ಗೊತ್ತಿರುವ ಸತ್ಯ ಸಂಗತಿಗಳೇ, ಧನ್ಯವಾದ
Deleteಈಗಿನ ಪತ್ರಿಕಾಸಂಪಾದಕರ ಬಗೆಗೆ ಚೆನ್ನಾಗಿ ತಿಳಿಸಿದ್ದೀರಿ. ಭಟ್ಟರಂತೂ ಏಣಿ ಏರುವುದರಲ್ಲಿ ಪಂಡಿತರು. ಆದರೆ ಏಣಿಯಿಂದ ಜಾರಿ ಬಿದ್ದಾಗ, ಎಲ್ಲಿ ಬೀಳುತ್ತಾರೆ ಎನ್ನುವುದು ಅವರಿಗೆ ತಿಳಿದಿಲ್ಲ!
ReplyDeleteಅನಿಸಿಕೆ ತಿಳಿಸಿದ್ದಕ್ಕೆ ಸುನಾಥರೇ ತಮಗೆ ಕೃತಜ್ಞ, ನಿಮ್ಮ ಹೇಳಿಕೆ ನನ್ನನ್ನು ಎಚ್ಚರಿಸಿ ಬರೆಯುವಂತೆ ಮಾಡಿತು, ನೀವಲ್ಲದಿದ್ದರೆ ನಾನು ಬರೆಯಲೂ ಹೋಗುತ್ತಿರಲಿಲ್ಲ, ಯಾಕೆಂದರೆ ಎಷ್ಟೇ ಪೈಪು ಸಿಕ್ಕಿಸಿದರೂ ಹೊರತೆಗೆದಾಗ ನಾಯಿಬಾಲ ಡೊಂಕೇ.
Deleteಶ್ರೀ ವಿ.ಆರ್. ಭಟ್ಟರಿಗೆ ನಮಸ್ಕಾರ.
ReplyDeleteನಿಮ್ಮ ಅನಿಸಿಕೆ-ವಿಶ್ಲೇಷಣೆಗಳು ಸರಿಯಾಗಿಯೇ ಇವೆ. ನಮ್ಮ ಊರಲ್ಲಿ ಒಂದು ಮಾತಿದೆ "ಪರ್ನಗ ಒಂಜಿ,ಬಿರಿನಗ ಒಂಜಿ." - ಕುಡಿದ ಮತ್ತಿನಲ್ಲಿ ಒಂದು (ಮಾತು),ಮತ್ತು ಇಳಿದಾಗ ಇನ್ನೊಂದು ಎಂಬುದಾಗಿ. ವಿ. ಭಟ್ಟರ ಇಂತಹಾ ಬರಹಗಳನ್ನು ಓದುವಾಗ ನನಗೆ ಅದೇಕೊ ಈ ಮಾತು ಥಟ್ಟನೆ ನೆನಪಿಗೆ ಬರುವುದು.
ನಮಸ್ಕಾರ,
ತೆಕ್ಕುಂಜ ಕುಮಾರಸ್ವಾಮಿ
ಶ್ರೀಯುತ ತೆಕ್ಕುಂಜೆ ಕುಮಾರಸ್ವಾಮಿಗಳಿಗೆ ನಮಸ್ಕಾರ, ಏನು ಮಾಡೋಣ ? ತಿಳಿದವರಿಗೆ ಕಲಿಸುವುದು ಮೂರ್ಖತನ ಅಲ್ಲವೇ ? ಗೊತ್ತಿದ್ದೂ ಹೀಗೆಲ್ಲಾ ಪ್ರಲಾಪ ಮಾಡಿದರೆ ಅದು ಓದುಗರಿಗೆ ನೋವುಂಟುಮಾಡುತ್ತದೆ ಎಂಬುದನ್ನು ಭಟ್ಟರಂಥವರು ಅರಿಯಬೇಕು ಎಂಬುದು ನನ್ನ ವಿನಮ್ರ ವಿನಂತಿ, ತಮ್ಮ ಮನದಾಳದ ಮಾತನ್ನು ಅಭಿವ್ಯಕ್ತ ಗೊಳಿಸಿದ್ದಕ್ಕೆ ಧನ್ಯವಾದಗಳು.
Deleteತಾವು ಎಷ್ಟು ಕೀಳು ಮಟ್ಟದ ವರೆಂದು ಜಗತ್ತಿಗೆ ತಿಳಿಯಪಡಿಸಲು ಕೆಲವರು ಕಾರಂತ ರನ್ನು ಅವಹೇಳನ ಮಾಡುತ್ತಾರೆ . ತಾವು ನಿಜಕ್ಕೂ ಯಾರು ಎಂದು ಪರೋಕ್ಷ ವಾಗಿ ತಿಳಿಯಪಡಿಸಿದ ವಿಶ್ವೇಶ್ವರಭಟ್ಟರಿಗೆ ಧನ್ಯವಾದಗಳು !!!
ReplyDeleteಲೋಕೋ ಭಿನ್ನ ರುಚಿಃ ಎನ್ನುತ್ತಾರಲ್ಲ ಸರ್, ಹಾಗೇ ಊರಿದ್ದಲ್ಲಿ ಹೊಲಗೇಡು ತಪ್ಪಿದ್ದಲ್ಲ ಎಂಬುದನ್ನು ಭಟ್ಟರು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ, ಅನಿಸಿಕೆ ತಿಒಳಿಸಿದ್ದಕ್ಕೆ ತಮಗೆ ಧನ್ಯವಾದಗಳು
Deleteಕಾರಂತರು,ತಮ್ಮ ಉತ್ತುಂಗಕ್ಕೆ ಬರುವ ಎಷ್ಟೋ ಮೊದಲೇ ಪುತ್ತೂರಿನಲ್ಲಿ ಅಧ್ಯಾಪಕರಾಗಿ ಜೀವನ ನಡೆಸುತ್ತಿದ್ದರಂತೆ.ಹಿರಿ ಮಗ ಹರ್ಷನ ನಿಧನಾನಂತರ ಅವರ ಬದುಕಿನಲ್ಲಿ ಬದಲಾವಣೆಗಳಾಗಿದ್ದಂತೆ,ಅವರೆಷ್ಟು ನೇರ ಮಾತಿನವರೆಂದು ಅವರನ್ನು ಬಲ್ಲ ಪುತ್ತೂರು,ಕಾಸರಗೋಡಿನ ಕಡೆಯ ಹಿರಿಯರು(ಈಗ ಉಳಿದವರು ಕೆಲವೇ ಮಂದಿ) ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ.ಅವರ ಅಡ್ಡ ಹೆಸರು,(nick-name)(ಪ್ರೀತಿಯಿಂದ) ಆವಾಗ ಎನಂತೆ ಗೊತ್ತಾ.."ಮರ್ಳು-ಕಾರಂತ"(i.e mad karantha)
ReplyDeleteಕಾರಂತರ ಜಾಗದಲ್ಲಿ ಇನ್ಯಾರೋ ಇದ್ದರೆ ಒಂದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಅಥವಾ ನಿಜವಾಗಿಯೂ ಹುಚ್ಚುಹಿಡಿದು ಅಲೆಯುತ್ತಿದ್ದರು, ಮಗ ಹರ್ಷನ ನಿಧನಾನಂತರ ಹೆಂಡತಿಯ ಮನಸ್ಸೂ ಸರಿಯಿಲ್ಲದಾಗ 'ಹುಚ್ಚು ಮನ್ಬಸ್ಸಿನ ಹತ್ತು ಮುಖಗಳು' ಎಂಬುದನ್ನು ಬರೆದ ಸ್ತಿತಪ್ರಜ್ಞ ವ್ಯಕ್ತ್ಯಿತ್ವ ಕಾರಂತರದು, ತಮಗೆ ಧನ್ಯವಾದಗಳು
Deleteನಮಸ್ಕಾರಗಳು ಸರ್.
ReplyDeleteಸುಮಾರು ಏಳನೇ ಕ್ಲಾಸಿನಿಂದಲೇ ನಾನು ಕಾರಂತರ ಕಾದಂಬರಿಗಳನ್ನು ಓದಲು ಪ್ರಾರಂಭಿಸಿದವನು. ವರ್ಷಗಳ ನಂತರವೂ ಮರಳಿ ಓದುತ್ತಿರುತ್ತೇನೆ, ಪ್ರತಿಬಾರಿ ಓದಿದಾಗಲೂ ವಿವಿಧ ಅನುಭವಗಳನ್ನು ಕಟ್ಟಿಕೊಡುತ್ತವೆ ಅವರ ಅದ್ಭುತ ಕಾದಂಬರಿಗಳು. ಅವರ "ಮರಳಿ ಮಣ್ಣಿಗೆ"ಯನ್ನು ಮೀರಿಸುವ ಕಾದಂಬರಿ ಯಾವುದೇ ಭಾರತೀಯ ಭಾಷೆಯಲ್ಲಿಯೂ ಬಹುಶಃ ಬಂದಿಲ್ಲವೇನೋ. ಅವರ ಕುರಿತು ಯಾವುದೇ ಲೇಖನ/ಪುಸ್ತಕ ಕಂಡರೂ ಓದದೇ ಬಿಟ್ಟವನಲ್ಲ. ಅಷ್ಟು ಆರಾಧನಾ ಭಾವದಿಂದ ಅವರನ್ನು ಗೌರವಿಸುವವನು.
ಅವರ ಬಗೆಗೆ ಕೀಳು ಭಾವನೆಯನ್ನು ಬಿಂಬಿಸುವ ಲೇಖನ ಬರೆದ ಈ ಅಂಡೆಪಿರ್ಕಿ ವಿಭಟ್ಟನ ಬಗೆಗೆ ಹೇಳುವ ಅವಶ್ಯಕತೆಯಿಲ್ಲ. ಈತನ ಕುರಿತೂ ಹಾಗೂ ಈತನ ಸಮಕಾಲೀನ ಘನತೆವೆತ್ತ ಸಂಪಾದಕ ಮಹಾಶಯರುಗಳ ಕುರಿತೂ ಮುಟ್ಟಿನೋಡಿಕೊಳ್ಳುವಂತೆ ಬರೆದಿದ್ದೀರಿ. ಅಭಿನಂದನೆಗಳು!!
ಪತ್ರಿಕೆಯನ್ನು ತನ್ನ ಸ್ವಂತ ಪ್ರಭಾವ ಹೆಚ್ಚಿಸಿಕೊಳ್ಳುವ ಸಲುವಾಗಿ ಹೇಗೆ ಬಳಸಿಕೊಳ್ಳಬಹುದೆಂಬುದನ್ನು ವಿಭಟ್ಟನಿಂದ ಕಲಿಯಬೇಕು. ಕನ್ನಡಪ್ರಭ ಪತ್ರಿಕೆಯಲ್ಲಿ ಈಗ ಪತ್ರಿ ಸೋಮವಾರವೂ ಐಎಎಸ್ ಆಫೀಸರೊಬ್ಬರು ತಮ್ಮ "ಸಾಧನೆ"ಗಳ ಬಗ್ಗೆ ಲೇಖನ ಬರೆಯುತ್ತಿದ್ದಾರೆ. ಇದೇ ಅಧಿಕಾರಿಯ ಬಗ್ಗೆ ವಿ.ಕ.ದಲ್ಲಿಯೂ ಭಾರೀ ಕ್ಲೀನು ಎನಿಸುವಂತೆ ಲೇಖನ ಬಂದಿದ್ದು ನನಗೆ ನೆನಪಿದೆ. ಭ್ರಷ್ಟಾತಿಭ್ರಷ್ಟ ಎಂಬ "ಹೆಗ್ಗಳಿಕೆ"ಯಿರುವಂಥ ಜನಗಳಿಂದ ಲೇಖನಗಳನ್ನು ಬರೆಸಿ ತಾನು ಅವರೊಂದಿಗೆ ಚೆನ್ನಾಗಿರುವುದಲ್ಲದೇ, ಅವರಿಗೂ ಪುಕ್ಕಟೆ ಪ್ರಚಾರ ಕೊಡಿಸುವುದು ವಿಭಟ್ಟನ ತಂತ್ರಗಾರಿಕೆ.
ಒಂದು ಗಾದೆಯಿದೆ:"ಎಲ್ಲಾ ಬಿಟ್ಟವರು ಊರಿಗೆ ದೊಡ್ಡವರು" ಎಂದು. ಇಂದಿನ ಕನ್ನಡ ಪತ್ರಿಕೋದ್ಯಮದಲ್ಲಿ ಇದು ದಿನೇದಿನೇ ಪ್ರಸ್ತುತವಾಗುತ್ತಾ ನಡೆದಿದೆ.
ನಮಸ್ಕಾರ, ತಮ್ಮ ಹೆಸರು ಗೊತ್ತಾಗಲಿಲ್ಲ, ಇರಲಿ, 'ಮರಳಿ ಮಣ್ಣಿಗೆ', 'ಮೂಕಜ್ಜಿಯ ಕನಸುಗಳು' , 'ಚೋಮನ ದುಡಿ' ಇವೆಲ್ಲಾ ಕಾರಂತರ ಮನೋಗತವನ್ನೂ ಮತ್ತು ಅವರ ಸ್ಥಿತಪ್ರಜ್ಞತೆಯನ್ನೂ ತೋರಿಸುತ್ತವೆ. ಕಾರಂತರು ಕವನಗಳನ್ನು ಬಹಳವಾಗಿ ಇಷ್ಟಪಡುತ್ತಿರಲಿಲ್ಲ ಎನ್ನಬಹುದೇನೋ-ಸಾಹಿತ್ಯ ಪ್ರಾಕಾರಗಳಲ್ಲಿ ಅದೊಂದೇ ಅವರು ಸ್ವಲ್ಪ ಬಿಟ್ಟಿದ್ದು ಎನ್ನಬಹುದು, ಜೊತೆಗೆ ಕಾರಂತರದು ಒಂದೇ ರಂಗವಲ್ಲ, ಅವರು ಸಾಹಿತಿಯಾದಷ್ಟೇ ಪರಿಸರ ಪ್ರೇಮಿಯೂ ಆಗಿದ್ದರು-ಶರಾವತಿ ಟೇಲ್ ರೇಸ್ ಪ್ರಾಜೆಕ್ಟ್ ವಿರುದ್ಧ ಆಂದೋಲನವನ್ನೇ ನಡೆಸಿದ್ದರು. ಯಕ್ಷಗಾನದಲ್ಲಿಯೂ ತನ್ನದೇ ನಡೆಯನ್ನು ರೂಪಿಸಿದ್ದರು. ಖಗೋಳದ ಬಗ್ಗೆ ಅವರಿಗಿರುವ ಅಪರಿಮಿತ ಆಸಕ್ತಿ ಮತ್ತು ಜ್ಞಾನ ನಮ್ಮನ್ನು ಮೂಕರನ್ನಾಗಿಸುತ್ತದೆ. ಹೀಗೇ ಅವರ ವ್ಯಕ್ತಿತ್ವ ವಿಭಿನ್ನವಾಗಿತ್ತು ಎನ್ನಬಹುದು. ಸಹಜ ಅನಿಸಿಕೆಯನ್ನು ಅದುಮಿದಲಾಗದೇ ಅಭಿವ್ಯಕ್ತಗೊಳಿಸಿದ್ದಕ್ಕೆ ತಮಗೆ ಧನ್ಯವಾದಗಳು.
Deleteಸರಿಯಾಗಿ ಬರೆದಿದ್ದೀರಿ. ನನಗೆ ಕುಮಾರಸ್ವಾಮಿ ತೆಕ್ಕುಂಜ ಅವರ ಕಾಮೆಂಟ್ ತುಂಬ ಇಷ್ಟವಾಯಿತು. :)
ReplyDeleteಸುಬ್ರಹ್ಮಣ್ಯರೇ, ಎರಡು ವರ್ಷಗಳ ಹಿಂದೆ ವಿ.ಭಟ್ಟರು ಪರಿಸರ ತಜ್ಞರೆಂಬುದನ್ನೂ ಸಾಬೀತುಪಡಿಸಿದ್ದರು: "ಬ್ಲಾಗ್ ಬರಹಗಾರರೆಂದರೆ ತಾವು ಕುಳಿತ ಕೋಣೆಯಲ್ಲಿ ತಾವೇ ಹೂಸು ಬಿಟ್ಟುಕೊಂಡು ಅದನ್ನೇ ಆಘ್ರಾಣಿಸುತ್ತಾ ಆನಂದಪಡುವವರು" ಎಂದು ಸರ್ಟಿಫೈ ಮಾಡಿಬಿಟ್ಟಿದ್ದರು. ಆ ಹಿನ್ನೆಲೆಯಲ್ಲಿ ಸದ್ರಿ ಭಟ್ಟರಿಗೆ ಇನ್ನೊಂದು 'ಗೌಡಾ' ಸಲ್ಲಬೇಕು! ನಿಮ್ಮ ಅನಿಸಿಕೆಗೆ ಧನ್ಯವಾದಗಳು.
Deleteಸರ್, ಕನ್ನಡಪ್ರಭದ ಭಟ್ಟ ಬಿಡಿ ಹೇಳಿದ್ರೆ ನಿಮಗೆ ಬೇಜಾರಗ್ಬೋದು. ತಮ್ಮ ಬ್ಲಾಗ್ ನಮಗೊಂದು ಪತ್ರಿಕೆ ಇದ್ದಹಾಗೇ ಯಾವುದೇ ಲೇಖನ ಇರಲಿ ಅದು ಸಮಗ್ರವಾಗಿರುತ್ತದೆ. ಕಾಸುಕೊಟ್ಟು ಪೇಪರು ಓದುವುದಕ್ಕಿಂತ ಹಲವು ಮಾಹಿತಿಯನ್ನು ನಿಮ್ಮ ಬ್ಲಾಗ್ ಮೂಲಕ ಪಡೆಯಬಹುದಾಗಿದೆ.ಹಲವರು ಬರೆಯಳಗದ್ದನ್ನು ನೀವು ಬರಇದ್ರುತ್ತೀರಿ. ಅದಕ್ಕೇ ನಿಮ್ಮ ಬರಹಗಳು ಬಹಳ ಇಷ್ಟ. ಧನ್ಯವಾದಗಳು.
ReplyDeleteಶೇಖರ್, ಸ್ವಲ್ಪ ಜೀರ್ಣವಾಗದ ಮಾತು ಹೇಳಿಬಿಟ್ಟಿದ್ದೀರಿ, ಇರಲಿ, ನಿಮ್ಮ ಹಾರೈಕೆಯಂತೇ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ, ಅನಿಸಿಕೆಗೆ ತಿಳಿಸಿದ್ದಕ್ಕೆ ಧನ್ಯವಾದಗಳು.
Deleteಈ ಕಾಲಘಟ್ಟದ ಸಾಹಿತ್ಯ-ಸಾಹಿತಿಗಳ ವಿಮರ್ಶಾತ್ಮಕ ರೂಪದ ಲೇಖನ ಇಷ್ಟವಾಯಿತು. ಕೇವನ ಅಧ್ಯಯನ ಶೀಲತೆ ಬರಹಗಾರನಿಗೆ ಮಾತ್ರವಲ್ಲದೇ, ಓದುಗನೂ ಕೂಡ ಅಷ್ಟೇ ಅಧ್ಯಯನ ಶೀಲನಾಗಿರಬೇಕೆಂದು ಸೂಕ್ಷ್ಮವಾಗಿ ತಿಳಿಸಿದ್ದೀರಿ.
ReplyDeleteಅಕ್ಕಿಯಲ್ಲಿನ ಕಲ್ಲನ್ನ ಆರಿಸಿ, ಬದಿಗಿಟ್ಟು ಉಣ್ಣುತ್ತಾನೆ ತಿಳಿದವ. ಮರುಳ(ತಾನೆಲ್ಲವನೂ ಬಲ್ಲವನೆಂದು, ತಾನು ಮಾತ್ರಾ ಗುರುತಿಸಿ ಕೊಳ್ಳುವವ!) ಮಾತ್ರಾ ಬಿಳಿಕಲ್ಲನ್ನೂ ಅಕ್ಕಿಯೆಂದೇ ಭಾವಿಸಿ, ಕೊನೇಗೆ ಊಟದಲ್ಲಿ ಕಲ್ಲನ್ನೇ ಜಗಿದು ಮುಖಕಿವುಚುತ್ತಾನೆ!
ಉತ್ತಮ ಲೇಖನವನ್ನ ಒದಗಿಸದ್ದಕ್ಕೆ ಧನ್ಯವಾದಗಳು.
ಗೋಪಾಲಕೃಷ್ಣರೇ, ಕಲ್ಲು ಇರದಂತೇ ಶುಚಿಗೊಳಿಸಿದ ಅಕ್ಕಿ ಸಿಗಲಿ ಎಂಬುದು ನಮ್ಮ ಬೇಡಿಕೆ. ಈ ಕಾಲದಲ್ಲಿ, ನಗರವಾಸಿಗಳಿಗೆ ಕಲ್ಲು ಇರದ, ಆರಿಸುವ ಕೆಲಸ ಇರದ ಅಕ್ಕಿ ಸಿಗುತ್ತದಲ್ಲಾ? ಆ ರೀತಿಯ ಸ್ವಚ್ಛ ಅಕ್ಕಿಯನ್ನು ಅರ್ಥಾತ್ ಉತ್ತಮ ದಿನಪತ್ರಿಕೆಯನ್ನೂ ಕಲ್ಮಷ ರಹಿತ, ಪೀತ ಸಾಹಿತ್ಯವಲ್ಲದ ಬರಹಗಳನ್ನೂ ಕೊಡಿ ಎಂಬುದು ನಮ್ಮ ಹೇಳಿಕೆ-ಕೇಳಿಕೆ, ನಿಮಗೆ ಧನ್ಯವಾದಗಳು.
Deletesir, read yours and Sunath kaka's blog. Yes, these days journalists treating themselves as Godmen and they poke noses where it is not required. shame on them
ReplyDeleteDesaiji, nowadays citizens/readers are confused because of these type of writers,being Indians they must have at least a respect about our ancient pure culture, but they don't, they simply criticise without knowing the very base of our culture, thank you.
Deleteಒಂದು ದೊಡ್ಡದಾದ ಓದು. ಬರೆಯುವ ನಿಮ್ಮ ಶಕ್ತಿಗೆ ಸಲಾಂ.
ReplyDeleteವಿ.ಭಟ್ಟರ ಭಟ್ಟಿ ಇಳಿಸುವಿಕೆ ನಿರಂತರವಾಗಿ ಸಾಗುತ್ತಾ ಈಗ ಹೀಗಾಗಿದ್ದಾರೆ. ತಾನೇ ಕಲ್ಪಿಸಿಕೊಂಡ ಸಿಂಹಾಸನದಲ್ಲಿ ಎಷ್ಟು ಸಮಯ ಇರುತ್ತಾರೋ?
ಕಾರಂತರೆಂದರೆ ಒಮ್ಮೆ ಇಂತಹಾ ಮನುಷ್ಯ ಇದ್ದರೇ ಎನ್ನುವಷ್ಟು ಅಭಿಮಾನ. ಅವರತನವನ್ನು ಪ್ರಶ್ನಿಸುವುದು ಅವರಿಲ್ಲದಾಗ ಸರಿಯೂ ಅಲ್ಲ. ಲೇಖನಕ್ಕೆ ಧನ್ಯವಾದ.
ಈಶ್ವರ ಕಿರಣರೇ ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ಆಭಾರಿ.
Delete