[ಚಳಿಗಾಲದ ಮುಂಜಾವಿನ ದೃಶ್ಯಕ್ಕೊಂದು ಕವನ]
ಕಾನನದ ಅಂಚಿನಲಿ ಭೂರಮೆಯ ಸಂಚಿಯಲಿ
ಬಾನಗಲ ಕೆಂಪಡರಿ ಬೆಳಕುs ಹರಿದೂ
ತಾನ ತಾನನವೆಂಬ ಹಕ್ಕಿಗಳು ಚುಂಚಿನಲಿ
ಯಾನವಾರಂಭಿಸೆ ಲಲ್ಲೆsಗರೆದೂ
ಭಾನು ರಥವೇರಿಬರೆ-ಮೇನೆಯಡರಿದ ತೆರದಿ
ಕೋನದಲಿ ಮರಗಳವು ಸಾಲು ನಿಂದು
ತಾನು ತಾನೆನ್ನುತ್ತ ಛಂಗನೋಡುವ ಭರದಿ
ದೀನಕಂಗಳ ಹರಿಣsಗಳವು ಸಂದು
ಧ್ಯಾನದಲಿ ಭಕ ಸಾಧು ಗಂಟೆಗಟ್ಟಲೆ ಹೊತ್ತು
ಮೀನುಗಳ ಹಂಬಲಿಸಿ ಮಡುವಿನಲ್ಲಿ
ಯೇನಕೇನದಿ ಕೆಲವು ಮತ್ಸ್ಯಗಳಿಗೆ ಕುತ್ತು
ಹೀನ ಸನ್ಯಾಸಿಯ ಗೊಡವೆಯಲ್ಲಿ !
ಮಾನ ಮುಚ್ಚಿಕೊಂಬ ಷೋಡಶಿ ಮೋಡಗಳು
ಊನವ ಮರೆಮಾಚಿ ವಿವಿಧಾಕಾರ !
ಧೇನು-ಕರುಗಳ ಕೂಗು ದೂರದ ಕಾಡುಗಳ
ಧೇನಿಸಿ ಹಸಿಹುಲ್ಲು ಹಸಿರಾಹಾರ
ಸಾನುರಾಗದಿ ಸಖನ ಸೇವಿಪ ಈ ಭೂಮಿ
ಕಾನೂನು ಇಹ ರೀತಿ ಮಾಘದಲ್ಲಿ
ಸೇನೆ ನುಗ್ಗಿದಂತೆ ಸುರಿದು ಮಂಜನು ಚಿಮ್ಮಿ
ಮೌನಿಯಾ ಕೆಳೆರಾಯ ರಾಗದಲ್ಲಿ !
ಜೇನುಗಳು ಗುಂಯ್ಯೆಂದು ಹೂಗಳ ಮಕರಂದ-
ಪಾನದ ಸಮಯಕ್ಕೆ ಸೋಬಾನೆಯು
ಸ್ನಾನದಿ ಶುಚಿಗೊಂಬ ಧರಣಿ ಮಂಜಲಿ ಮಿಂದು
ಮ್ಲಾನವದನೆಯಾಗಿ ಮಧುಬಾಲೆಯು
ರಾಗವಾಗಿ ಹಾಡಿಕೊಳ್ಳಬಹುದು ಸರ್... ಸಂಗೀತಗಾರ ಕೈಲಿ ಸಿಕ್ಕರೆ ಉತ್ತಮವಾಗಿ ರಾಗ ಹಾಕಬಹುದು..... ತುಂಬಾ ಚೆನ್ನಾಗಿದೆ ಸರ್...
ReplyDeleteಪ್ರೀತಿಯ ದಿನಕರ್ ಸಾಹೇಬರೇ, ತಮ್ಮ ಅನಿಸಿಕೆ ಹೊಮ್ಮಿಸಿದ್ದಕ್ಕೆ ಧನ್ಯವಾದಗಳು.
Deleteಕಲ್ಪನೆ ಹಾಗು ಕವನ ಅದ್ಭುತವಾಗಿವೆ.
ReplyDeleteಧನ್ಯವಾದಗಳು ಸರ್, ಅನಿಸಿಕೆ ಸಾರಿದ್ದಕ್ಕೆ ಸತತ ಆಭಾರಿ
Deleteವಾವ್ ಸರ್....ರಾಗಬದ್ಧವಾಗಿ ಹಾದಬಹುದಾದ ಸುಂದರ ಹಾಡು...ತುಂಬಾ ಇಷ್ಟ ಆಯಿತು...
ReplyDelete