ಅಲಮೇಲಮ್ಮನ ಶಾಪವೇ ಅಷ್ಟೊಂದು ಪರಿಣಾಮಕಾರಿಯಾದರೆ ಬ್ರಹ್ಮಶಾಪದ ಪರಿಣಾಮ ಹೇಗಿರಬೇಡ!
ಅದೊಂದು ಸುದೀರ್ಘ ಐತಿಹಾಸಿಕ ಕಥೆ! ವಿಜಯನಗರ ಸಾಮ್ರಾಜ್ಯ ಪತನಗೊಳ್ಳುವ ಕಾಲದಲ್ಲಿ, ಅವರ ಪಾಳೇಗಾರರು, ಸಾಮಂತರು ಎಲ್ಲರೂ ಬೆಳೆಯುತ್ತ ಸಬಲರಾಗತೊಡಗಿದ್ದರು. ವಿಜಯನಗರ ವಂಶಸ್ಥನಾಗಿದ್ದ ಶ್ರೀರಂಗರಾಯ ವಿರೋಧಿಗಳಿಂದ ತಪ್ಪಿಸಿಕೊಳ್ಳಲು ಶ್ರೀರಂಗಪಟ್ಟಣಕ್ಕೆ ಬಂದು ನೆಲೆಸಿದ್ದ. ಬರುವಾಗ ಆತನ ರಾಣಿ ಅಲಮೇಲಮ್ಮ ಪಾರಂಪರಿಕವಾಗಿ ಪ್ರಾಪ್ತವಾದ ಬಂಗಾರ, ಮುತ್ತು-ರತ್ನ-ಒಡವೆ ವಸ್ತುಗಳನ್ನೆಲ್ಲ ಕಟ್ಟಿಕೊಂಡು ಬಂದಿದ್ದಳು. ಮೈಸೂರು ಪ್ರಾಂತದಲ್ಲಿ ಪ್ರಬಲಗೊಳ್ಳುತ್ತಿದ್ದ ಯದುವಂಶದ ಅರಸ ಶ್ರೀರಂಗ ಪಟ್ಟಣದಮೇಲೆ ದಂಡೆತ್ತಿಹೋದ. ನಡೆದ ಯುದ್ಧದಲ್ಲಿ ಶ್ರೀರಂಗರಾಯ ಮಡಿದ. ಗತಿಸಿದ ಶ್ರೀರಂಗರಾಯನ ಪತ್ನಿ ಅಲಮೇಲಮ್ಮನಲ್ಲಿ ಇರುವ ಅನರ್ಘ್ಯ ರತ್ನಗಳನ್ನು ಬಯಸಿದವರು ಮೈಸೂರು ಅರಸರು. ತನ್ನ ಮುಂದಿನ ಉಪಜೀವಿತಕ್ಕೆ ಆಪದ್ಧನವಾದ ಅದನ್ನು ಕೊಡೆನೆಂದ ಆಕೆಯನ್ನು ಅರಸನ ಸೈನಿಕರು ಅಟ್ಟಿಸಿಕೊಂಡು ಹೋದರು. ಓಡುತ್ತಾ ಓಡುತ್ತಾ ಆಕೆ ಕಾವೇರಿ ನದಿಯ ಮಾಲಂಗಿ ಎಂಬ ಪ್ರದೇಶಕ್ಕೆ ಬಂದಳು. ಅಲ್ಲಿಗೆ ಬಂದಾಗ ಅಟ್ಟಿಸಿ ಬಂದ ಸೈನಿಕರು ಆಕೆಯ ತಲೆಗೂದಲನ್ನು ಹಿಡಿದೆಳೆದರೂ ಸಹ, ಅವರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ರಾಣಿಯ ಕೂದಲುಗಳ ಒಂದಷ್ಟು ಭಾಗ ತುಂಡಾಗಿ, ಸೈನಿಕನೊಬ್ಬನ ಕೈಯ್ಯಲ್ಲಿ ಹಾಗೇ ಉಳಿಯಿತು. ಕೋಪೋದ್ರಿಕ್ತಳಾದ ಆ ತಾಯಿ, ತನ್ನ ಅಶಾಯಕತೆಯಲ್ಲಿ ಮೈಸೂರು ಅರಸರು ಕೊಟ್ಟ ಹಿಂಸೆಯನ್ನು ನೆನೆದು, "ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ಅರಸರಿಗೆ ಸಂತಾನ ಆಗದೇ ಹೋಗಲಿ" ಎಂದು ಶಪಿಸಿ ಕಾವೇರಿ ನದಿಯಾಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಳು.
ಆ ಕ್ಷಣದಲ್ಲಿ ಮೈಸೂರು ರಾಜರಿಗೆ ಏನೂ ಅನ್ನಿಸಲಿಲ್ಲ; ಶಾಪವೆಲ್ಲ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಕೂಡ ಅವರಲ್ಲಿರಲಿಲ್ಲ. ಆದರೆ ನಂತರ ನಡೆದುಬಂದ ಮೈಸೂರು ಯದುವಂಶದ ಇತಿಹಾಸವನ್ನು ಗಮನಿಸುವಾಗ, [ಪಾಂಡವರ ಯುಧಿಷ್ಠಿರ ಬಳಸಿದ್ದ ಸಿಂಹಾಸನವೆಂಬ ಪ್ರತೀತಿ ಇದೆ]ವಿಜಯನಗರದಿಂದಲೇ ಬಂದಿತೆನ್ನಲಾದ ಬಂಗಾರದ ಸಿಂಹಾಸನದಲ್ಲಿ ಪಟ್ಟಾಭಿಷಿಕ್ತನಾಗಿ ಅರಸನೆನಿಸಿಕೊಳ್ಳುವ ವ್ಯಕ್ತಿಗೆ ಮಕ್ಕಳು ಆಗಲೇ ಇಲ್ಲ! ದತ್ತು ತೆಗೆದುಕೊಂಡು ಪಟ್ಟಾಧಿಕಾರಕ್ಕೆ ಬರುವ ಅರಸರಿಗೆ ಒಂದು ಪೀಳಿಗೆಗೆ ಮಕ್ಕಳು ಇನೊಂದು ಪೀಳಿಗೆ ಬರುವಷ್ಟರಲ್ಲಿ ಮತ್ತೆ ಮಕ್ಕಳಿಲ್ಲ!
ಮೈಸೂರು ಅರಸರ ಮಹಾ ಸಂಸ್ಥಾನ ಕಳೆಗುಂದುವುದಕ್ಕೆ ಅಲಮೇಲಮ್ಮನ ಶಾಪ ಕೂಡ ಕಾರಣವಾಗಿದೆ ಎಂಬುದು ನಂಬಬಹುದಾದ ವಿಷಯ; ಅದನ್ನು ಸ್ವತಃ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರೇ ಒಪ್ಪಿಕೊಂಡಿದ್ದರು-ಅದು ಅವರ ತಪ್ಪಲ್ಲ, ಅವರ ವಂಶದ ಪೂರ್ವಜರ ತಪ್ಪು.
ನಿಕಟಪೂರ್ವ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರಿಗೆ ಮದುವೆಯಾಗಿ ಕೆಲವುಕಾಲ ಪುತ್ರಸಂತಾನವಾಗಲೇ ಇಲ್ಲ. ಜಯಚಾಮರಾಜೇಂದ್ರ ಒಡೆಯರ್ ಅವರು ಅವರ ದೊಡ್ಡಪ್ಪನಿಂದ ದತ್ತು ತೆಗೆದುಕೊಳ್ಳಲ್ಪಟ್ಟು ಸಿಂಹಾಸನವನ್ನೇರಿದ್ದರು. ಕಾಲಾನಂತರದಲ್ಲಿ ಮೈಸೂರಿಗೆ ಭಗವಾನ್ ಶ್ರೀಧರ ಸ್ವಾಮಿಗಳು ಬಂದಿದ್ದರು. ಮೈಸೂರಿನಲ್ಲಿ ಶಿಷ್ಯರಿಂದ ತನ್ನರಿವಿಗಿಲ್ಲದೇ ಗೊತ್ತುಪಡಿಸಲಾಗಿದ್ದ-[ಎರಡು ಕಡೆಗೂ] ಒಂದೇ ಸಮಯದಲ್ಲಿ ಜರುಗುತ್ತದೆಂದು ಘೋಷಿತವಾಗಿದ್ದ ಪ್ರವಚನ ವೇದಿಕೆಗಳಲ್ಲಿ ಏಕಕಾಲಕ್ಕೆ ಎರಡು ಶ್ರೀಧರರಾಗಿ ಪ್ರವಚನ ನಡೆಸಿದ ಸಂನ್ಯಾಸ ಶಿಖರ ಶ್ರೀಧರ ಸ್ವಾಮಿಗಳು! ಅಂತಹ ಮಹಾತ್ಮರು ಮೈಸೂರಿಗೆ ಬಂದಿದ್ದನ್ನು ತಿಳಿದು, ಜಯಚಾಮರಾಜೇಂದ್ರ ಒಡೆಯರ್ ಅವರ ಭಾವ ಸ್ವಾಮಿಗಳಿದ್ದೆಡೆ ಬಂದು, ನಮಸ್ಕರಿಸಿ ತನ್ನ ಸಹೋದರಿಗೆ ಪುತ್ರಸಂತಾನವಾಗಬೇಕೆಂದು ಪ್ರಾರ್ಥಿಸಿದ. ಎರಡು ನಿಮಿಷ ಮೇಲ್ಮುಖವಾಗಿ ಏನನ್ನೋ ಯೋಚಿಸಿದ ಶ್ರೀಧರರು ಸ್ವಲ್ಪ ನೀರನ್ನು ನೆಲಕ್ಕೆ ಬಿಟ್ಟರು. ಆಮೇಲೆ ತೆಂಗಿನಕಾಯೊಂದನ್ನು ಅಭಿಮಂತ್ರಿಸಿ ಅವರಿಗೆ ಕೊಟ್ಟು, ರಾಜ-ರಾಣಿಗೆ ಅದನ್ನು ಬಳಸಲು ಹೇಳುವಂತೆ ತಿಳಿಸಿದರು. ಇದರ ಪರಿಣಾಮವಾಗಿ ಹುಟ್ಟಿದ ಮಗುವಿನ ಹೆಸರಿನ ಮಧ್ಯೆ ’ದತ್ತ’ ಎಂಬ ಪದವನ್ನು ಕಾಣಬಹುದು. ಶ್ರೀಧರರು ಸಾಕ್ಷಾತ್ ದತ್ತಾವತಾರಿಯಾದುದರಿಂದ ಆ ಹೆಸರು ಬಳಸಲ್ಪಟ್ಟಿತು. ಶ್ರೀಧರಸ್ವಾಮಿಗಳ ಚರಿತ್ರೆಯಿಂದ ಈ ಮಾಹಿತಿಯನ್ನು ಸಂಗ್ರಹಿಸಿ ತಮಗೆ ಹೇಳಿದ್ದೇನೆ.
ವರ್ಣಭೇದ ಎಂಬುದನ್ನು ಗೀತೆಯಲ್ಲಿ ಕೃಷ್ಣ ಹೇಗೆಂದು ಹೇಳಿದ್ದಾನೆ:
ಚಾತುರ್ವಣ್ಯಂ ಮಾಯಸೃಷ್ಟಂ ಗುಣಕರ್ಮ ವಿಭಾಗಶಃ |
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ||
ಜಾತಿ ಪದ್ಧತಿ, ವರ್ಣ ಪದ್ಧತಿ ಇವೆರಡೂ ಒಂದೇ ಅಲ್ಲ! ಜಾತಿ ಹುಟ್ಟಿನಿಂದ ಬಂದದ್ದು; ವರ್ಣ ಮನುಷ್ಯನ ಸ್ವಭಾವಕ್ಕೆ ಸಂಬಂಧಪಟ್ಟದ್ದು. ಗೀತೆಯಲ್ಲಿ ಕೃಷ್ಣ ಹೇಳುವ "ಚಾತುರ್ವಣ್ಯಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ"[ಗೀತಾ 4.13] ಎಂಬುದು ಮನುಷ್ಯನ ಸ್ವಭಾವದ ವರ್ಗೀಕರಣವಷ್ಟೆ. ಮನುಷ್ಯನ ಮನಸ್ಸಿನ ಜಾಯಮಾನಗಳು ಜಾತಿಗೆ ಸಂಬಂಧ ಪಟ್ಟಿದ್ದಲ್ಲ. "ನ ವರ್ಣಾನಾಂ ಭೇದಃ ನಾಸ್ತಿ | ಸರ್ವಂ ಬ್ರಾಹ್ಮಂ ಇದಂ ಜಗತ್" [ಎಲ್ಲರನ್ನೂ ಒಂದೇ ಸಮನಾಗಿ ಕಾಣು ಏಕೆಂದರೆ ಎಲ್ಲವನ್ನೂ ಮತ್ತು ಎಲ್ಲ ವರ್ಣದವರನ್ನು ಸೃಷ್ಟಿಸಿದ್ದು ಭಗವಂತನೇ ಆಗಿದ್ದಾನೆ.]ಎನ್ನುವ ಮಹಾಭಾರತದ ಮಾತು ಭೀಷ್ಮ ಧರ್ಮರಾಯನಿಗೆ ತಿಳಿಸುವ ಬುದ್ಧಿ ಮಾತು. ’ವರ್ಣ’ಎಂಬ ಪದಕ್ಕೆ ದೇಹದ ಬಣ್ಣ ಎಂಬ ಅರ್ಥವನ್ನಂತೂ ಇಲ್ಲಿ ಹೇಳಿಲ್ಲ. "ಅವರ ಬಣ್ಣ ಬಯಲಾಯ್ತು" ಎಂದರೆ, ಅದು ನಾಮ ನಮೂದಿತರ ದೇಹದ ಬಣ್ಣದ ಬಗ್ಗೆ ಹೇಳುತ್ತಿರುವುದಲ್ಲ ಎಂಬುದು ಯಾರಿಗಾದರೂ ಗೊತ್ತಾಗುತ್ತದೆ. ಮನುಷ್ಯ ವಸಾಹತುಳ್ಳ ಪ್ರಪಂಚದ ಎಲ್ಲ ಭಾಗಗಳಲ್ಲೂ ವರ್ಣ ಪದ್ಧತಿ ಇದ್ದೇ ಇದೆ. ಆದರೆ ಅದಕ್ಕೆ ಒಂದು ರೂಪಕೊಟ್ಟು ಮನುಷ್ಯರನ್ನು ಅವರವರ ಸ್ವಭಾವಕ್ಕೆ ಅನುಗುಣವಾಗಿ ವರ್ಗೀಕರಿಸಿ ಹೆಸರು ಕೊಟ್ಟವರು ಪ್ರಾಚೀನ ಭಾರತದ ಬುದ್ಧಿ ಜೀವಿಗಳು. ಬುದ್ಧಿಯ ಬಲದಿಂದ ಬಾಳುವವರ ಗುಂಪು, ತೋಳ್ಬಲದಿಂದ ಆಳುವವರ ಗುಂಪು, ವ್ಯಾಪಾರ- ವ್ಯವಸಾಯದಲ್ಲಿ ನುರಿತು ನಾಡನ್ನು ಶ್ರೀಮಂತಗೊಳಿಸುವವರ ಗುಂಪು, ಮತ್ತು ಒಂದಲ್ಲ ಒಂದು ಕಸುಬಿನಲ್ಲಿ ಪರಿಣತಿ ಹೊಂದಿದ ಶ್ರಮಜೀವಿಗಳ ಗುಂಪು-ಈ ರೀತಿಯ ನಾಲ್ಕು ವರ್ಗವಿಲ್ಲದ ಸಮಾಜ ಎಲ್ಲಿದೆ? ದುರ್ದೈವದಿಂದ ಜಾತಿ ಮತ್ತು ವರ್ಣ ಎರಡೂ ಒಂದೇ ಎಂಬ ನಂಬಿಕೆ ಬಂದುಬಿಟ್ಟಿದೆ. ವಿಭಿನ್ನ ಆಚಾರ-ವಿಚಾರ-ವ್ಯವಹಾರಗಳನ್ನು ಹೊಂದಿದ ಒಟ್ಟಾರೆ ಸಮಾಜದಲ್ಲಿ, ಒಂದೇತೆರನಾದ ಆಚಾರ ವಿಚಾರಗಳನ್ನು ಹುಡುಕುತ್ತಾ ತಮ್ಮ ತಮ್ಮ ಗುಂಪುಗಳಲ್ಲೇ ಮದುವೆಯಾಗುವ ರೂಢಿ ಬಂದು ಸಮಾಜದಲ್ಲಿ ಜಾತಿಯ ಬಿಗಿತ ಬಂದು ಬಿಟ್ಟಿತು. ಇದರ ಪರಿಹಾರ ಕ್ರಮೇಣ ಸಮಾಜ ತನ್ನನು ತಾನೇ ತಿದ್ದಿಕೊಳ್ಳುವ ಮೂಲಕ ಆಗಬೇಕು. ಇನ್ನು ಹಿಂದೂ ಎನ್ನುವ ಶಬ್ದ ‘ಸಿಂಧೂ’[ನದಿಯ ಹೆಸರು] ಎಂಬ ಶಬ್ದದಿಂದ ಬಂದದ್ದು. ಈ ಶಬ್ದ ಧರ್ಮದ ಹೆಸರಿಗಿಂತ ಹೆಚ್ಚಾಗಿ ಒಂದು ಪ್ರದೇಶದ ಹೆಸರನ್ನು ಸೂಚಿಸುತ್ತದೆ. ಆ ದೃಷ್ಟಿಯಿಂದ ನೋಡಿದರೆ ಭಾರತವಾಸಿಗಳೆಲ್ಲ- ಅವರು ಯಾವ ಧರ್ಮಕ್ಕೆ ಸೇರಿದವರಾದರೂ- ಹಿಂದುಗಳೇ ಆಗಿದ್ದಾರೆ.
ಪ್ರಕೃತಿಯಲ್ಲಿ ಎಲ್ಲವುದರಲ್ಲೂ ವೈವಿಧ್ಯಗಳಿವೆ. ಮಾನವ ಜನಾಂಗದಲ್ಲಿ 5,000 ವಿಭಿನ್ನ ವಂಶಾವಳಿಗಳಿವೆ ಎಂದು ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ. ಸಮಸ್ಯೆಯೊಂದರ ಕುರಿತ ಪರಿಹಾರಕ್ಕಾಗಿ ದೇಶದಾದ್ಯಂತ ತಿರುಗಿ ಈಗಾಗಲೇ 8,000 ವಿಭಿನ್ನ ಜನಾಂಗದ ಜನರ ಡಿ.ಎನ್.ಎ ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ! ಭತ್ತದಿಂದ ಭತ್ತ, ತೆಂಗಿನಿಂದ ತೆಂಗು, ಮಾವಿನಿಂದ ಮಾವು, ಬೇವಿನಿಂದ ಬೇವು ಹೀಗೇ ಫಲಗಳಲ್ಲಿ ವೈವಿಧ್ಯತೆಯಿದೆ. ಜಾಜಿ, ಜೂಜಿ, ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಕರವೀರ, ದಾಸವಾಳ, ನಾಗಲಿಂಗ, ಕದಳಿ ....ಹೀಗೇ ನೂರಾರು ವೈವಿಧ್ಯದ ಹೂವುಗಳನ್ನು ಕಾಣಬಹುದಾಗಿದೆ. ಸಸ್ಯಗಳಲ್ಲಿ ಪ್ರಭೇದ, ಜೀವಿಗಳಲ್ಲಿ ಪ್ರಭೇದ, ಕೀಟಗಳಲ್ಲಿ ಪ್ರಭೇದ, ಅದೆಲ್ಲಾ ಹಾಗಿರಲಿ ಪ್ರಾದೇಶಿಕವಾಗಿ ಒಂದೇ ಭೂಮಿಯ ಮಣ್ಣಿನಲ್ಲೇ ಪ್ರಭೇದಗಳಿವೆ! ಎಂದಾಗ, ಮನುಷ್ಯರ ನಡೆ-ನುಡಿ ವಂಶಾವಳಿಗಳಲ್ಲಿ ಪ್ರಭೇದಗಳು ಇರುವುದು ಸಹಜ ಮತ್ತು ಪ್ರಕೃತಿ ನಿರ್ಮಿತ! "ಮಾನವಕುಲ ತಾನೊಂದೆವಲಮ್" ಎಂಬ ಮಾತು ಸಾಮಾಜಿಕವಾಗಿ ಒಟ್ಟಾಗಿ ಬಾಳುವುದಕ್ಕಷ್ಟೇ ಬಿಟ್ಟರೆ ನಮ್ಮ ದಿನನಿತ್ಯದ ನಡತೆಯಲ್ಲಿ ಭಿನ್ನತೆಗಳು ಇದ್ದೇ ಇರುತ್ತವೆ. ಸಂಸ್ಕೃತಿ ಮತ್ತು ನಾಗರಿಕತೆಗಳ ಕುರಿತು ನಾನು ಈ ಹಿಂದೆ ಬರಿದಿದ್ದೆ. ನಾಗರಿಕತೆ ಮನುಷ್ಯರೆಲ್ಲಾ ಒಂದೇ ಎನ್ನುತ್ತದೆ-ಅದು ಸರಿ; ಒಂದೇ ಎಂಬ ಮನುಷ್ಯರು ಹೇಗಿರಬೇಕು ಎಂಬುದನ್ನು ಸಂಸ್ಕೃತಿ ಬೋಧಿಸುತ್ತದೆ-ಅದನ್ನು ಒಪ್ಪಿಕೊಳ್ಳಲು ’ಅಧುನಿಕ ಬುದ್ಧಿಜೀವಿಗಳು’ ಸಿದ್ಧರಿಲ್ಲ! ಮಾಂಸಾಹಾರ ತ್ಯಜಿಸಿ ಎಂದು ಬಿಟ್ಟರೆ ಮೈಮೇಲೆ ಬೀಳುವ ಮಂದಿ ಅದೆಷ್ಟಿಲ್ಲ? ಮಾಂಸಾಹಾರದಲ್ಲೂ ಹಿಂದೂಗಳಿಗೆ ಪೂಜ್ಯವಾದ ದನದಮಾಂಸವನ್ನು ತಿನ್ನುವ ಜನಾಂಗವನ್ನೂ ನೋಡುತ್ತೇವೆ. ಹೀಗೆಲ್ಲಾ ಇರುವಾಗ ’ಮಾನವಕುಲ ತಾನೊಂದೇವಲಮ್’ ಎಂಬುದು ಅಪ್ರಾಕೃತಿಕವಾಗುತ್ತದೆ-ಇದು ನನ್ನ ನೇರ, ಸ್ಪಷ್ಟ ದೃಷ್ಟಿಯ ನುಡಿ. ಯಾವಾಗ ಮನುಷ್ಯರೆಲ್ಲರ ಆಹಾರ-ವ್ಯವಹಾರ-ಆಚಾರ-ವಿಚಾರಗಳಲ್ಲಿ ಇಂಚಿಂಚೂ ಹೋಲಿಕೆಯಿರುತ್ತದೋ ಆಗ ಮಾತ್ರ ಮನುಷ್ಯರೆಲ್ಲರೂ ಒಂದೇ ಆಗಲು ಸಾಧ್ಯವಿದೆ-ಅಲ್ಲೀವರೆಗೂ ಗುಂಪುಗಳು ಹಾಗೇ ಇರುತ್ತವೆ, ಜಾತಿಗಳು ಹೋಗುವುದಿಲ್ಲ. ಈಗಿನ ಕಾಲದಲ್ಲಿ ಎಲ್ಲವೂ ಜಾತ್ಯಾತೀತ ಎಂದು ಚೀರಾಡಿಬಿಟ್ಟರೆ ಅದು ತಿಪ್ಪೆಸಾರಿಸಿದ ಕೆಲಸವಾಗಿ, ಒಳಗೆ ಹಾಗೇ ಕುಳಿತಿರುವ ತಿಪ್ಪೆಯ ಗಬ್ಬು ನಾತ ಹೊರಗಿರುವವರ ಮೂಗಿಗೆ ಹೊಡೆಯುತ್ತಲೇ ಇರುತ್ತದೆ! ಎಲ್ಲಿಯವರೆಗೆ ನಾನು ಹೇಳಿದ ಅಂಶಗಳಲ್ಲಿ ಸಾಮ್ಯತೆಯಿಲ್ಲವೋ ಅಲ್ಲೀವರೆಗೂ ಜಾತೀಯತೆ ಬದುಕುತ್ತದೆ ಮತ್ತು ಬಲಿಯುತ್ತದೆ. ಇದನ್ನು ಮನುಷ್ಯರಾಗಿ ನಾವು ಮೊದಲು ಮನಗಾಣಬೇಕು.
ವರ್ಣವ್ಯವಸ್ಥೆಯನ್ನು ಭಗವಂತ ಸ್ವತಃ ತಾನೇ ನಿರ್ಮಿಸಿದೆ ಎಂದಿದ್ದಾನೆ. ಒಂದೊಮ್ಮೆ ಗೀತಾಚಾರ್ಯ ಶ್ರೀಕೃಷ್ಣ ಗೀತೆ ಮಹಾಭಾರತದ ನಡುವೆ ಬಂದಿರುವುದೆಂಬ ಕಾರಣಕ್ಕೆ ಅದು ’ಬ್ರಾಹ್ಮಣ’ನೇ ಬರೆದಿದ್ದು ಎಂಬುದಾದರೆ ವ್ಯಾಸರು ಜಾತಿಯಿಂದ ಶೂದ್ರ ತಾಯಿಯಲ್ಲಿ ಜನಿಸಿದವರು. ಹಾಗಾದರೆ ಅವರು ಹಡೆದ ಮಾತೆಗೆ ದ್ರೋಹ ಬಗೆದರೇ? ಖಂಡಿತಕ್ಕೂ ಇಲ್ಲ. ಜಾತಿ ಪದ್ಧತಿಗೆ ಬ್ರಾಹ್ಮಣರೇ ಕಾರಣ ಎಂಬ ಅಪನಂಬಿಕೆ ಹುಟ್ಟಲಿಕ್ಕೆ ಇನ್ನೊಂದು ಕಾರಣ: ರಾಜರು ಬ್ರಾಹ್ಮಣರಿಗೆ ಕೊಡುತ್ತಿದ್ದ ರಾಜಾಶ್ರಯ ಮತ್ತು ಮರ್ಯಾದೆ. ರಾಜರುಗಳಿಗೆ ಬ್ರಾಹ್ಮಣ್ಯವೆಂಬುದರ ಮಹತ್ವ ಗೊತ್ತಿತ್ತು-ಹಾಗಾಗಿ ಅವರು ಅದಕ್ಕೆ ಮಹತ್ವ ಕೊಡುತ್ತಿದ್ದರು! ಇಂದು ಪ್ರಜೆಗಳೇ ತಲೆಯಿಲ್ಲದ ಪ್ರಭುಗಳು, ರಾಜಕೀಯ ಅತಂತ್ರ ಸ್ಥಿತಿಗಳು, ಮಿತಿಮೀರಿದ ಭ್ರಷ್ಟಾಚಾರ, ದೇಶವನ್ನೇ ಅಡವಿಡುವ ಪರಿಸ್ಥಿತಿ ಬಂದಿರುವುದಕ್ಕೆ ಕಾರಣ ರಾಜರಲ್ಲಿದ್ದ ಆಡಳಿತ ವೈಖರಿ ಪ್ರಜಾರಾಜರಲ್ಲಿಲ್ಲ! ಗೂಂಡಾಗಳೇ ಹಣಬಲ, ಜನಬಲ, ತೋಳ್ಬಲಗಳಿಂದ ಗೆದ್ದು ರಾಜಕೀಯ ಮಾಡುವಾಗ ಆಡಳಿತದ ಅನುಭವ ಅವರಿಗೆ ಹೇಗೆ ಬರಲು ಸಾಧ್ಯ? ಅಥವಾ ಪ್ರಜೆಗಳ ಸಂಕಷ್ಟವನ್ನು ಅರಿಯುವ ಮನಸ್ಸು ಅವರಿಗಾದರೂ ಹೇಗೆ ಬಂದೀತು? ಪ್ರಜಾತಂತ್ರದ ಸಮಸ್ಯೆಗಳನ್ನು ಇಂದು ನಾವು ಕಾಣತೊಡಗಿದ್ದೇವೆ; ಇದು ಮುಂದುವರಿಯುತ್ತದೆ-ಮುಂದೊಂದು ದಿನ ಘನಘೋರ ಯುದ್ಧ ಸಂಭವಿಸುತ್ತದೆ-ಅದರಲ್ಲಿ ಸಂಶಯವೇ ಇಲ್ಲ!
ಉತ್ತರಭಾರತದಲ್ಲಿ ಬ್ರಾಹ್ಮಣರಿಗೆ, ರಾಜರಿಗೆ ಇನ್ನೂ ಮಾನ್ಯತೆಯಿದೆ. ವಿನಾಕಾರಣ ಯಾರೂ ಅವರನ್ನು ದೂಷಿಸುವುದಿಲ್ಲ. ನಮ್ಮ ಕರ್ನಾಟಕದ ತುಂಬೆಲ್ಲ ರಾಜದ್ವೇಷಿಗಳು, ಬ್ರಾಹ್ಮಣ ದ್ವೇಷಿಗಳು ಹುಟ್ಟಿಕೊಂಡಿದ್ದಾರೆ. ಬ್ರಾಹ್ಮಣರು ತಮ್ಮನ್ನು ತುಳಿದರು ಎಂಬ ತಪ್ಪು ಕಲ್ಪನೆಯಿಂದ ಪರಬ್ರಹ್ಮೋಪಾಸನೆಯನ್ನು ನಡೆಸುವ ಬ್ರಾಹ್ಮಣರನ್ನು ಬೈದು-ಜರಿದು-ಹೀಗಳೆದು ಪರೋಕ್ಷ ಬ್ರಹ್ಮನನ್ನೇ ದೂಷಿಸುತ್ತಿದ್ದಾರೆ. ಸಾಮಾನ್ಯ ರಾಜಸ್ತ್ರೀಯಾದ ಅಲಮೇಲಮ್ಮನ ಶಾಪವೇ ಇಷ್ಟೆಲ್ಲಾ ಕೆಲಸಮಾಡುತ್ತದೆ ಎಂದಾದಮೇಲೆ, ಆಚಾರವಂತ ಬ್ರಾಹ್ಮಣರ ಶಾಪ [ಬ್ರಾಹ್ಮಣರು ಶಾಪ ಹಾಕುತ್ತಿಲ್ಲ ಅದು ಬೇರೆ ಪ್ರಶ್ನೆ]ತಟ್ಟಿದರೆ ಏನಾಗಬಹುದೆಂದು ನೀವೇ ಊಹಿಸಿ!
ಒಂದೊಮ್ಮೆ ಬ್ರಾಹ್ಮಣರು ಎಂದುಕೊಂಡವರು ಏನನ್ನೂ ಹೇಳದೇ ಹೋಗಿದ್ದರೆ, ಕಲಿಸದೇ ಹೋಗಿದ್ದರೆ ಇಂದು ಮಾತನಾಡಲು ಬರುವ ಅದೆಷ್ಟೋ ಜನರಿಗೆ ಈ ಅರ್ಹತೆ ಕೂಡ ಇರುತ್ತಿರಲಿಲ್ಲ! ಇದು ಕೆಲವು ಓದುಗರ ಸ್ವಾಭಿಮಾನಕ್ಕೆ ವಿರೋಧವೆನಿಸಬಹುದು; ಆದರೆ ಸತ್ಯ ಎಂದೂ ಸುಳ್ಳಾಗಲು ಸಾಧ್ಯವಿಲ್ಲ. ಪಂಕ್ತಿ ಭೇದವನ್ನು ಮಾಡುವ ಬ್ರಾಹ್ಮಣರು ಯಾಕೆ ಹಾಗೆ ಮಾಡಿದರು ಎನ್ನುವ ಚಿಂತನೆ ಯಾರಿಗೂ ಇಲ್ಲ, ಬೇಕಾಗಿಯೂ ಇಲ್ಲ. ’ಬ್ರಾಹ್ಮಣ್ಯ’ ಎಂಬುದೊಂದು ಹುಟ್ಟಿದಾರಭ್ಯ-ಅಜೀವ ಪರ್ಯಂತ ನಡೆಯುವ ವ್ರತ ಎಂಬುದನ್ನು ಬಹಳ ಜನ ಅರಿತಿಲ್ಲ. ರಾಜಾಶ್ರಯ ಕಳೆದುಕೊಂಡ ಬ್ರಾಹ್ಮಣರು, ಪ್ರಜಾಪ್ರಭುತ್ವದಲ್ಲಿ, ಉದರನಿಮಿತ್ತವಾಗಿ ಅನ್ಯವೃತ್ತಿಗಳತ್ತ ಮುಖಮಾಡಬೇಕಾಗಿ ಬಂತು. ಇದರಿಂದ ಎಲ್ಲರ ಸಂಪರ್ಕ-ಸಂಸರ್ಗ ಆರಂಭವಾಯ್ತು. ಇದರ ಪರಿಣಾಮವಾಗಿ ಬ್ರಾಹ್ಮಣ ಜಾತಿಯಲ್ಲಿ ಜನಿಸಿದ ಕೆಲವರನ್ನು ಬಾರ್ ಅಂಡ್ ರೆಸ್ಟಾರೆಂಟುಗಳಲ್ಲೂ ನೋಡುತ್ತಿದ್ದೀರಿ! ಇದೆಲ್ಲಾ ಆಗಬಾರದು, ಬ್ರಾಹ್ಮಣರ ಪೂಜೆ, ಪೂಜೆಗೆ ಬಳಸುವ ಪರಿಕರಗಳು, ದೇವಸ್ಥಾನ/ಪೂಜಾ ಕೇಂದ್ರಗಳು ಇವೆಲ್ಲಾ ಪರಿಶುದ್ಧವಾಗಿರಬೇಕೆಂಬ ಸದುದ್ದೇಶದಿಂದ ಅವರು ಪ್ರತ್ಯೇಕತೆಯಲ್ಲಿರುತ್ತಿದ್ದರು. ಅವರ ಸಂಖ್ಯೆಯೂ ಕೂಡ ತೀರಾ ಕಡಿಮೆ.
ಇಂದು ಸಂಸರ್ಗ, ಮೊಬೈಲ್ ಫೋನು, ಗಾಡಿ, ವ್ಯವಹಾರ ಇದೆಲ್ಲಾ ಹೆಚ್ಚಿದ್ದರಿಂದ ನಿಜವಾದ ಬ್ರಾಹ್ಮಣರಿಗಿಂತ ಜೋರಾಗಿ ಮೆರೆಯುವ ಅರ್ಚಕ-ವ್ಯಭಿಚಾರಿಗಳು ಅಲ್ಲಲ್ಲಿ ಕಾಣುತ್ತಾರೆ-ಇದು ಕಾಲದ ಮಹಿಮೆ. ಊಟಕ್ಕೆ-ಕೂಟಕ್ಕೆ-ಚಟಕ್ಕೆ ಇಂಥಾದ್ದಕ್ಕೆಲ್ಲಾ ಸಾವಿರದೋಪಾದಿಯಲ್ಲಿ ಹಣ ಸುರಿಯುವ ಮಂದಿ ಆರತಿ ತಟ್ಟೆಗೆ ಕಾಸು ಹಾಕುವ ಸುದ್ದಿ ಬಂದಾಗ ಮಾತ್ರ ಕಣ್ಣು ಕೆಂಪಗೆ ಮಾಡಿಕೊಳ್ಳುವುದು ಆಶ್ಚರ್ಯವಾಗುತ್ತದೆ. ಅದು ವೃತ್ತಿಗೊಂದು ಗೌರವ, ಪುಣ್ಯಕ್ಕೆ ಸಾಧನವೆಂದು ತಿಳಿದೂ, ದಾನವೆಂಬುದನ್ನು ಅರಿತೂ ಹಿಂದಿಗಡೆಯಿಂದ ಈ ರೀತಿ ಆಡಿಕೊಳ್ಳುತ್ತ ದೇವಸ್ಥಾನಗಳಿಗೆ ಹೋದಾಗ ಹತ್ತೋ ಇಪ್ಪತ್ತೋ ರೂಪಾಯಿ ಹಾಕಿದರೆ ಅದರ ಫಲ ಹಾಕಿದವರಿಗೆ ಲಭಿಸುವುದಿಲ್ಲ. ಹಾಕುವ ಮನಸ್ಸುಳ್ಳವರು ಹಾಕಬಹುದು-ಅದರಿಂದ ಪಡೆದವ ಹೇಗೇ ಇದ್ದರೂ ಕೊಟ್ಟವನಿಗೆ ಫಲ ಲಭ್ಯ. ಚಂದದ ಹುಡುಗಿಯನ್ನು ನೋಡುತ್ತ ಮನಸ್ಸು ಕೆಡಿಸಿಕೊಂಡರೆ ಅಂತಹ ಅರ್ಚಕನ ಕರ್ಮಕ್ಕೆ ತಕ್ಕ ಫಲವನ್ನು ಆತ ಅನುಭವಿಸುತ್ತಾನೆ. ನೀವು ಹೇಳಿದ್ದಷ್ಟೇ ಸತ್ಯವೆಂದು ವಾದಿಸುವ ಮೊದಲು ನಾನು ಹೇಳುವ ಮುಖವನ್ನೂ ತಿಳಿದುಕೊಂಡರೆ ನಾನು ಏನು ಹೇಳುತ್ತಿದ್ದೇನೆ ಎಂಬ ಅರಿವುಂಟಾಗುತ್ತದೆ.
ಇವತ್ತು ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲ ಇವೆಲ್ಲಾ ಗೌರವದ ಹುದ್ದೆಗಳು. ಮಾನವರೆಲ್ಲರೂ ಒಂದೇ ಆದ್ದರಿಂದ ಅವರೂ ಎಲ್ಲರೊಂದಿಗೆ ಬೆರೆತುಬಿಡಲಿ ನೋಡೋಣ. ಅದು ಹಾಗಿರಲಿ, ಒಂದು ಸಣ್ಣ ತಾಲೂಕು ಮಟ್ಟದ ನ್ಯಾಯಾಧೀಶರು ಸಮಾಜದಲ್ಲಿ ಎಲ್ಲರೊಡನೆ ಬೆರೆಯುವುದಿಲ್ಲ; ಹಾಗೆ ಬೆರೆತರೆ ನ್ಯಾಯದಾನ ಸಾಧ್ಯವಿಲ್ಲ. ಇಂತಹ ಪ್ರತ್ಯೇಕತೆಗಳು ಯಾಕೆಂದರೆ ಉನ್ನತ ಮೌಲ್ಯಗಳನ್ನು ಆದರ್ಶಮಯವಾಗಿ ಎತ್ತಿ ಹಿಡಿಯುವುದಕ್ಕೆ. ವೇದ-ಶಾಸ್ತ್ರ-ಪುರಾಣ-ಮಹಾಕಾವ್ಯಗಳು ಅಷ್ಟು ಸುಲಭಕ್ಕೆ ಲಭ್ಯವಾಗುವ ಬದನೆಕಾಯಿಗಳಲ್ಲ! ಅವುಗಳನ್ನು ಅಭ್ಯಸಿಸಲು ಪೂರಕ ವಾತಾವರಣ ಬೇಕು, ಪೂರಕ ತಯಾರಿ ಬೇಕು, ಮನಸ್ಸು ನಿರುಮ್ಮಳವಾಗಿರಬೇಕು, ತ್ಯಾಗಜೀವನ ಬೇಕು, ಇದನ್ನೆಲ್ಲಾ ಹಿಂದಿನಿಂದ ನಡೆಸಿ ಬಂದವರು ಬ್ರಾಹ್ಮಣರು. ಬ್ರಹ್ಮಜ್ಞಾನವೇ ಅವರ ಪರಮೋಚ್ಚ ಆಸ್ತಿ. ಅವರ ಪ್ರವಚನ ಧಾರೆಗಳೇ ಉಳಿದ ಹಿಂದೂ ಜನರ ಕಲಿಕೆಗೆ ಆಧಾರವಾಗಿದ್ದು. ಇದನ್ನೆಲ್ಲಾ ಅರ್ಥಮಾಡಿಕೊಳ್ಳದೇ ಕೇವಲ ಒಂದೇ ನೇರಕ್ಕೆ ’ಮಾನವಕುಲ ತಾನೊಂದೆವಲಮ್’ ಎಂದುದನ್ನು ಅನುಮೋದಿಸಲು ಬ್ರಾಹ್ಮಣರು ಬ್ರಾಹ್ಮಣ್ಯವನ್ನು ಬಿಡಲು ಸಿದ್ಧರಿಲ್ಲ, ನಿಜ, ಅದೊಂದು ಪಾರಂಪರಿಕ ವ್ರತ, ಅದನ್ನು ಪರಿಪೂರ್ಣವಾಗಿ ಬಿಟ್ಟರೆ, ಬಿಡುವವರ ಕುಲ ನಶಿಸಿ ಹೋದೀತು!
’ಬ್ರಾಹ್ಮಣ್ಯ’ ಎಂದರೇನು ಎಂದು ತಿಳಿಯಲಿ ಇಲ್ಲಿ ಓದಿ : ಆ ಮುಖ
’ಬ್ರಾಹ್ಮಣ್ಯ’ ಎಂದರೇನು ಎಂದು ತಿಳಿಯಲಿ ಇಲ್ಲಿ ಓದಿ : ಆ ಮುಖ
ಹಾಗಂತ ಎಲ್ಲರನ್ನೂ ನಾನು ದೂಷಿಸುವುದಿಲ್ಲ, ಹಳೇ ಮೈಸೂರು ಪ್ರಾಂತದ ಒಕ್ಕಲಿಗರ ಮನೆಗಳಲ್ಲಿ ಮಹಾರಾಜರ ಭಾವಚಿತ್ರಗಳು ಪೂಜೆಗೊಳುತ್ತವೆ. ಅವರಿಗೆ ರಾಜರು ಮತ್ತು ವಿಶ್ವೇಶ್ವರಯ್ಯನವರ ಭಾವಚಿತ್ರಗಳು ಮನೆಯಲ್ಲಿ ಇರಲೇಬೇಕು ಯಾಕೆಂದರೆ ಅವರು ಸಲ್ಲಿಸಿದ ಸಮಾಜ ಸೇವೆ ಬೆಲೆಕಟ್ಟಲಾಗದ್ದು. ಆದರೂ ರಾಜಕೀಯವಾಗಿ ರಾಜರನ್ನು ಸೋಲಿಸಲು ಮುಂದಾಗುವುದಕ್ಕೆ ಕಾರಣ ಅಲಮೇಲಮ್ಮನ ಶಾಪವೇ, ಆ ಶಾಪದ ಪರಿಹಾರಕ್ಕಾಗಿ ಶ್ರೀಕಂಠದತ್ತರು ಬಹಳ ಪ್ರಯತ್ನ ಮಾಡಿದರು, ಆದರೆ ಸಾಧ್ಯವಾಗಲಿಲ್ಲ! ವ್ಯಾವಹಾರಿಕ ಜಗತ್ತಿನಲ್ಲಿ ಏರಲೈನ್ಸ್, ರೇಷ್ಮೆ ಸೀರೆ ವ್ಯಾಪಾರ, ಪಂಚತಾರ ಹೋಟೆಲ್ ಮೊದಲಾದ ಉದ್ದಿಮೆಗಳನ್ನು ನಡೆಸಿದರು. ಎಲ್ಲಿಗೇ ಹೋದರು ವಿಧಿ ತನ್ನ ವಿರುದ್ಧ ನಡೆಯುವುದು ಅವರಿಗೆ ಅನುಭವಕ್ಕೆ ಬರುತ್ತಿತ್ತು! ಆದರೂ ಅವರ ಪ್ರಯತ್ನಕ್ಕೆ ಜಗನ್ನಿಯಾಮಕ ಶಕ್ತಿ ಅವರ ವೈಯ್ಯಕ್ತಿಕದಲ್ಲಿ ಅವರಿಗೊಂದು ದೊಡ್ಡ ಗೌರವ ಕಲ್ಪಿಸಿಕೊಟ್ಟಿದೆ; ಜನ್ಮಾಂತರಗಳಲ್ಲಿ ಮಹಾರಾಜರು ಬಹುದೊಡ್ಡ ಆಧ್ಯಾತ್ಮಿಕ ಎತ್ತರವನ್ನು ಏರಲಿದ್ದಾರೆ-ಅವರೊಬ್ಬ ಸಂನ್ಯಾಸಿಯಾಗಿ ಮರುಜನ್ಮ ತಾಳುವ ಲಕ್ಷಣಗಳು ನನಗೆ ಭಾಸವಾಗುತ್ತಿದೆ. ಯಾಕೆಂದರೆ ೮೦ನೇ ಇಸವಿಯಿಂದ ಆಧ್ಯಾತ್ಮಿಕವಾಗಿ ಅವರು ಬಹಳ ಮುನ್ನಡೆದಿದ್ದರು.
ಸಂವತ್ಸರವೊಂದರಲ್ಲಿ ಒಟ್ಟೂ ಐದು ನವರಾತ್ರಿಗಳು ಬರುತ್ತವೆ: ವಸಂತ ನವರಾತ್ರಿ, ಗುಪ್ತನವರಾತ್ರಿ, ಶರನ್ನವರಾತ್ರಿ, ಪೌಷ ನವರಾತ್ರಿ ಮತ್ತು ಮಾಘ ನವರಾತ್ರಿ. ಅವರು ವೈಭವೋಪೇತವಾಗಿ ಶಾಸ್ತ್ರೀಯವಾಗಿ ಆಚರಿಸುತ್ತಿದ್ದ ಶರನ್ನವರಾತ್ರಿಯನ್ನು ಮಾತ್ರ ನಾವೆಲ್ಲ ಮಾಧ್ಯಮಗಳ ಮೂಲಕ ಅಷ್ಟಿಷ್ಟು ಕಂಡಿದ್ದೇವೆ, ಆದರೆ ಅವರು ಆಚರಿಸುತ್ತಿದ್ದ ಇನ್ನುಳಿದ ಎರಡು ನವರಾತ್ರಿಗಳ ದೃಶ್ಯಗಳು ನಮಗೆ ಲಭ್ಯವಿಲ್ಲ. ದೇವರ ಪೂಜೆ ಅರಸರಲ್ಲಿ ಬಹಳ ರಕ್ತಗತವಾಗಿತ್ತು. ಇಷ್ಟೆಲ್ಲ ಇದ್ದೂ ಸಹ, ಅವರು ಮಾಡುವ ಕೆಲಸಗಳಲ್ಲಿ ಅವರಿಗೆ ಆಗಾಗ ಅಡ್ಡಿಯಾಗುತ್ತಿದ್ದುದು ಅಲಮೇಲಮ್ಮನ ಶಾಪ! ಇದು ವಿಷಾದದ ಸಂಗತಿ.
Thumba uttamavada baraha . Prasthuta padisiruva ella vishayagalu Kali yugada chinhegalu. Varnashrama nashisuvudu, kallaru padavi yeruvudu innu aneka vishayagalannu aneka rushi munigalu kaalajnanadalli nudidu hogiddare.
ReplyDeleteHa.. shaapada vicharavaagi......... Maadida karmagala phalagalannu anubhavisale beku . Idu paramaatmana niyama..... '' Naa bhuktam kseeyathe karma'' :)