ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, November 6, 2013

|| ಧರ್ಮೋ ರಕ್ಷತಿ ರಕ್ಷಿತಃ || -ಎಂಬುದರ ಅರ್ಥ

||ಧರ್ಮೋ ರಕ್ಷತಿ ರಕ್ಷಿತಃ||

ಭರತವರ್ಷದ ಋಷಿಮುನಿಗಳಿಗೆ ತಾವು ’ಧರ್ಮ’ಎಂದು ಬಣ್ಣಿಸಿದ ಜೀವನ ಸಂವಿಧಾನ, ಮಾನವ ಕುಲದ ಮೂಲಭೂತ ಜೀವನತತ್ತ್ವ ಒಳಗೊಂಡಿರುವ ಬಗ್ಗೆ ಸಂದೇಹವಿರಲಿಲ್ಲ. ಮಹಾಭಾರತವನ್ನು ಬರೆಯುವಾಗ ವೇದವ್ಯಾಸರೂ ಸಹ ಮೂಲವಾಗಿ ಇಟ್ಟುಕೊಂಡ ಅಂಶವೇ ಮಾನವ ಜೀವನ ಧರ್ಮ. ಧರ್ಮ ಎಂಬ ಪದ ಆಂಗ್ಲಭಾಷೆಗೆ ಸರಿಯಾಗಿ ತರ್ಜುಮೆಗೊಳ್ಳಲಿಲ್ಲ. ಸಹಸ್ರಾರು ವರ್ಷಗಳ ಕಾಲ ಜೀವನಕ್ಕೆ ಬೆಳಕಾಗಿ ಹಿಂದುಗಳನ್ನು ನಡೆಸಿದ ’ಧರ್ಮ’ ಎಂಬ ಪದದ ಬಗ್ಗೆ ಸ್ವಲ್ಪ ಚಿಂತಿಸೋಣ:

|| ಧರ್ಮೋ ರಕ್ಷತಿ ರಕ್ಷಿತಃ || -ಎಂಬ ಹೇಳಿಕೆಯಲ್ಲಿ ಧರ್ಮವು ರಕ್ಷಿಸುತ್ತದೆ ಎಂಬುದೇನೋ ಸರಿ. ಆದರೆ ಉಳಿದರ್ಧ ಭಾಗವನ್ನು ನಾವು ಅರ್ಥೈಸಬೇಕು. ಧರ್ಮದ ತಳಹದಿಯಲ್ಲಿ, ಧರ್ಮಮಾರ್ಗ ಹೇಳುವ ನೀತಿಸೂತ್ರಗಳನ್ನವಲಂಬಿಸಿ ಬದುಕುವ ಬದುಕನ್ನು ನಾವು ಆಯ್ದುಕೊಂಡರೆ ನಮಗೆ ರಕ್ಷಣೆ ಸಿಗುವುದು ಪ್ರಕೃತಿ ಸಹಜ. ಇದು ಹೇಗೆ ಸಾಧ್ಯ ಎಂಬುದನ್ನು ತಿಳಿದುಕೊಳ್ಳಬೇಕೆಂದು ಆಸಕ್ತರಾಗಿರುವವರೇ ಬಹಳ ಮಂದಿ; ತಿಳಿದುಕೊಂಡವರು ಕೆಲವೇ ಜನ. ಪಾಲಕರು ನೋಡಿಕೊಳ್ಳುತ್ತಾರೆ ಎಂದು ಮಕ್ಕಳ ವಿಷಯಕ್ಕೆ ನಾವು ಹೇಳುವಂತೇ ’ಧರ್ಮೋ ರಕ್ಷತಿ’ ಎಂದ ತಕ್ಷಣ ಧರ್ಮವು ನಮ್ಮನ್ನು ನೋಡಿಕೊಳ್ಳುತ್ತದೆ ಎಂಬ ಭಾವನೆ ಬರುತ್ತದೆ. ಇದು ಒಮ್ಮುಖ ಮಾತ್ರ, ವಿಷಯ ಅಷ್ಟು ಸರಳವಿಲ್ಲ, ಬಹಳ ಅರ್ಥಗರ್ಭಿತವಾಗಿದೆ!

ಧರ್ಮವನ್ನು ಯಾರು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎಂದು ಸ್ಥೂಲವಾಗಿ ನಾವು ಹೇಳಬಹುದು, ತನ್ನನ್ನು ರಕ್ಷಿಸಿದರೆ ತಾನು ನಿಮ್ಮನ್ನು ರಕ್ಷಿಸುತ್ತೇನೆ ಎಂಬ ಧರ್ಮಕ್ಕೆ ಅಂತಹ ಶಕ್ತಿ ನಿಜಕ್ಕೂ ಇದೆಯೇ? ಧರ್ಮ ತನ್ನನ್ನು ತಾನೇ ರಕ್ಷಿಸಿಕೊಳ್ಳುತ್ತದೆ ಎಂದು ನಂಬಿಕೊಳ್ಳುವುದು ಸರಿಯಲ್ಲ, ಅದಕ್ಕಾಗಿ ಅದಕ್ಕೆ ರಕ್ಷಣೆಯ ಅಗತ್ಯವಿದೆ. ಯಾರು ಧರ್ಮಕ್ಕೆ ರಕ್ಷಣೆ ಕೊಡಲು ಮುಂದಾಗುತ್ತಾರೋ ಅವರು ಧರ್ಮದಿಂದಲೇ ರಕ್ಷಣೆಗೊಳಪಡುತ್ತಾರೆ! ಯಾರು ರಕ್ಷಣೆಯನ್ನು ಬಯಸುತ್ತಾರೋ ಅವರು ಧರ್ಮಕ್ಕೆ ಕುತ್ತು-ಗಂಡಾಂತರ ಬಾರದಂತೇ ನೋಡಿಕೊಳ್ಳಬೇಕಾದುದು ಮೊದಲ ಆದ್ಯತೆ.

ಹೀಗೊಮ್ಮೆ ಪ್ರಯೋಗಶೀಲರಾಗೋಣ: ಧರ್ಮ ಯಾವಾಗಲೂ ಗಂಡಾಂತರದಲ್ಲಿಲ್ಲ ಎಂದು ನಾವು ತಿಳಿದುಕೊಳ್ಳಬೇಕು. ಜಗತ್ತಿನ ಯಾವುದೇ ಇತಿಹಾಸ, ಪುರಾಣ, ಕಥೆಗಳು, ನಮ್ಮಲ್ಲಿನ ಪುರಾಣಗಳು, ಸಂಸ್ಕೃತದ ಕಥಾನಕಗಳು ತಮ್ಮ ಕಥಾನಕಗಳಲ್ಲಿ ಮುಖ್ಯವಾಗಿ ಬೊಟ್ಟುಮಾಡುವುದು ಧರ್ಮದಮೇಲೆ ನಡೆದ ಆಕ್ರಮಣಗಳಬಗ್ಗೆಯೇ ಆಗಿದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದು ಧರ್ಮದ ಹೆಚ್ಚುಗಾರಿಕೆಯೇನಲ್ಲ; ಅದು ಧರ್ಮ ಮತ್ತು ಅಧರ್ಮಗಳ ನಡುವಿನ ಸಮತೋಲನವೆಂಬುದು ನಮಗೆಲ್ಲ ಗೊತ್ತು. ಹಾಗಾದರೆ ಪ್ರಶ್ನೆ ಉದ್ಭವಿಸುವುದು ಧರ್ಮದಮೇಲಿನ ಸಂಪೂರ್ಣ ಅತಿಕ್ರಮಣದ ಬಗ್ಗಲ್ಲ, ಆದರೆ ಭಾಗಶಃ ನಡೆದ ಆಕ್ರಮಣಗಳ ಮೇಲೆ ಎನ್ನಬಹುದು. ಹಾಗೆ ಆತಿಕ್ರಮಣ ನಡೆಯದಂತೇ ಮಾಡಲು ಯಾವಾಗಲೂ ಧರ್ಮದ ಬಗ್ಗೆ ಕಾಳಜಿ ಮತ್ತು ಜಾಗೃತಿ ಇರಲೇ ಬೇಕಾಗುತ್ತದೆ. ಇದರರ್ಥ ಒಂದಷ್ಟು ಜನ ಪಹರೆಕಾದು, ಧರ್ಮವನ್ನು ಅಲಕ್ಷಿಸಿ ಅಧರ್ಮಮಾರ್ಗವನ್ನು ಹಿಡಿಯುವ ಮಂದಿಯನ್ನು ಮರಳಿ ಧರ್ಮದ ದಾರಿಗೆ ಕರೆತರಬೇಕೆಂಬುದಲ್ಲ. ಇತರರು ಧರ್ಮಾಚರಣೆಯಲ್ಲಿ ನಿರತರಾಗಿದ್ದಾರೋ ಎನ್ನುವುದನ್ನು ನೋಡುವ ಬದಲು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು: "ಧರ್ಮಮಾರ್ಗವನ್ನು ನಾವೆಷ್ಟು ಅನುಸರಿಸುತ್ತೇವೆ?"-ಎಂದು. ಪ್ರತಿನಿತ್ಯದ ನಮ್ಮ ಕೆಲಸಕಾರ್ಯಗಳಲ್ಲಿ, ಕರ್ತವ್ಯಗಳಲ್ಲಿ, ಕೌಟುಂಬಿಕ ಸೇವೆಗಳಲ್ಲಿ, ನೆರೆಹೊರೆಯವರೊಡನೆ ವ್ಯವಹರಿಸುವಲ್ಲಿ, ಪಟ್ಟಣ-ನಗರಗಳಿಗೆ ತೆರಳಿದಾಗ ನಡೆಸುವ ವ್ಯವಹಾರದಲ್ಲಿ, ನಮ್ಮ ರಾಜ್ಯ/ದೇಶಗಳಲ್ಲಿ, ಜಗತ್ತಿನಲ್ಲಿ ನಾವೆಷ್ಟು ಧರ್ಮದಿಂದ ನಡೆದುಕೊಳ್ಳುತ್ತೇವೆ ಎಂಬುದರ ಮೇಲೆ ನಾವೇ ನಿಗಾ ಇರಿಸಬೇಕು. ನಾವು ನಮ್ಮೊಳಗೇ ನಮ್ಮ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ನಮಗೆ ಧರ್ಮದ ಮೇಲಿರುವ ಕಾಳಜಿಯ ಬಗ್ಗೆ ನಾವೇ ದುರ್ಬೀನು ಹಿಡಿದು ನೋಡಿಕೊಳ್ಳಬೇಕು.

ಸಮಾಜದ ಬಹುಸಂಖ್ಯಾಕರು ಅಧರ್ಮದ ಹಾದಿ ಹಿಡಿದರೆ, ಆಗ ಸಮಾಜವೇ ಗಂಡಾಂತರವನ್ನು ಎದುರಿಸಬೇಕಾಗಬಹುದು. ಮಹಾಭಾರತ ನಡೆಯುವುದಕ್ಕೆ ಇದೇ ತೆರನಾದ ಸಂಗತಿ ಕಾರಣವಾಗಿತ್ತು. ಅಧರ್ಮದ ತಾಕತ್ತು ಎಷ್ಟಿರುತ್ತದೆಂದರೆ ಧರ್ಮಮಾರ್ಗಿಗಳನ್ನೂ ಸಹ ಕೆಲಸಮಯ ಕೈಚೆಲ್ಲಿ ಕುಳಿತುಕೊಳ್ಳುವಂತೇ ಮಾಡಿಬಿಡುತ್ತದೆ. ಹಾಗಾಗಿಯೇ, ಕುರುಕ್ಷೇತ್ರದಲ್ಲಿ ಅರ್ಜುನ ತನ್ನಿಂದ ಯುದ್ಧಮಾಡಲಾಗದೆಂದು ರಥವಿಳಿದು ಬಾಣ-ಬಿಲ್ಲು ಕೆಳಗಿರಿಸಿ ಕುಳಿತಿದ್ದ. ರಣರಂಗದಲ್ಲಿ ಕ್ಷಾತ್ರ ಧರ್ಮವೇನೆಂಬುದನ್ನು ಶ್ರೀಕೃಷ್ಣ ಅರ್ಜುನನಿಗೆ ನೆನಪುಮಾಡಿಕೊಡಬೇಕಾಯ್ತು. ಹಾಗಾಗಿ ನಮ್ಮ ಜಾಗೃತಿಯಲ್ಲಿ ನಾವಿದ್ದು, ನಾವು ಮಾಡುತ್ತಿರುವ ಕಾರ್ಯ ಧರ್ಮಮಾರ್ಗದಲ್ಲಿದೆಯೇ ಎಂದು ನೋಡಿಕೊಳ್ಳುವುದರ ಮೂಲಕ ಮುಂದಿನ ಪೀಳಿಗೆಗೆ ಅಧರ್ಮದಿಂದ ತಲೆದೋರಬಹುದಾದ ಸಮಸ್ಯೆಗಳನ್ನು ಆಹ್ವಾನಿಸದಂತೇ ತಡೆಯಬೇಕು.

ಧರ್ಮದ ತಳಹದಿ ಅಷ್ಟೆಲ್ಲಾ ವಿಸ್ತಾರವಾಗಿದೆ ಎಂದಾದರೆ ಅದನ್ನು ತಿಳಿದುಕೊಳ್ಳುವ ಬಗೆಗೊಂದಿಷ್ಟು ಗಮನಕೊಡಲೇಬೇಕು. ಸ್ವಲ್ಪ ಪ್ರಯಾಸಕರ ಕೆಲಸವೇ ಆದರೂ ಪ್ರಯತ್ನಿಸಲೇಬೇಕು. ಸಂಸ್ಕೃತದಲ್ಲಿ ವಿಪುಲವಾಗಿ ವಿಭಿನ್ನ ಪದಗಳಿಂದ ಧರ್ಮದ ನಡಾವಳಿಯನ್ನು ಬಣ್ಣಿಸಿದರಾದರೂ ಹೀಗೇ ಇದ್ದರೆ ಅದು ಧರ್ಮ, ಹೀಗಲ್ಲದಿದ್ದರೆ ಅಧರ್ಮ ಎಂಬುದನ್ನು ನಮ್ಮ ಪೂರ್ವಜ ಮುನಿಜನರು ಹೇಗೆ ಅರಿತುಕೊಂಡರು ಎಂಬುದು ಬಹಳ ಕುತೂಹಲಕರ ಸಂಗತಿಯೇ. ಕೆಲವು ವ್ಯಾಖ್ಯೆಗಳನ್ನು ನೋಡಿ:

|| ಅಹಿಂಸಾ ಪರಮೋ ಧರ್ಮಃ ||-- ಅಹಿಂಸೆಯೆಂಬುದೇ ನಿಜವಾದ ಧರ್ಮ. ಅಹಿಂಸೆ ಎಂಬುದು ಶಾರೀರಿಕ ಹಿಂಸೆಯನ್ನು ಮಾತ್ರ ಹೇಳುವುದಿಲ್ಲ; ಮಾನಸಿಕ ಕಿರುಕುಳ, ನಿಂದನೆ, ದಬ್ಬಾಳಿಕೆ, ಜೀತ, ಸುಲಿಗೆ, ಶೋಷಣೆ ಮೊದಲಾದ ಹತ್ತು ಹಲವು ಸಂಗತಿಗಳನ್ನು ’ಅಹಿಂಸೆ’ ಎಂಬ ಒಂದೇ ಪದದಲ್ಲಿ ಇಲ್ಲಿ ಹಿಡಿದಿಡಲಾಗಿದೆ. ತದನಂತರದಲ್ಲಿ ಪ್ರಾಣಿಗಳನ್ನು ನಾವು ಹಿಂಸಿಸುವುದೂ ಸಹ ಸೇರಿಕೊಳ್ಳುತ್ತದೆ. ಹಿಂಸೆಯನ್ನು ಮಾಡದೇ ಇರುವುದೇ ನಿಜವಾದ ಧರ್ಮ ಎನ್ನುವ ಈ ಉಕ್ತಿಯಲ್ಲಿ  ಮಾನವೀಯ ಮೂಲಭೂತ ಹಕ್ಕು ಎದ್ದುಕಾಣುತ್ತದೆ!  

|| ಧರ್ಮೆನ ಹೀನಃ ಪಶುಭಿಃ ಸಮಾನಃ || -ಧರ್ಮವನ್ನು ತೊರೆದವನು ಪಶುವಿಗೆ ಸಮಾನ. ಪಶುವಿಗೆ ಧರ್ಮ-ಅಧರ್ಮಗಳ ಭೇದಭಾವ ಗೊತ್ತಿಲ್ಲ. ಹೆಣ್ಣು-ಗಂಡೆಂಬ ಎರಡೇ ಭಿನ್ನತೆಯನ್ನು ಅವು ಋತುಮಾನಗಳಿಗನುಸಾರವಾಗಿ ಗ್ರಹಿಸಬಲ್ಲವಷ್ಟೆ. ಯಾವುದು ತಪ್ಪು-ಯಾವುದು ಸರಿ ಎಂದು ವಿವೇಚನೆ ಮಾಡುವಷ್ಟು ವಿಕಸಿತ ಮೆದುಳನ್ನು ಅವು ಹೊಂದಿಲ್ಲ. ಅದಕ್ಕೇ ಧರ್ಮವನ್ನು ಬಿಟ್ಟವರನ್ನು ಪಶುಸಮಾನವೆಂದು ಹೇಳಲಾಗಿದೆ. 

|| ಯಥೋ ಧರ್ಮಸ್ಥಥೋ ಜಯಃ || -ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ. ಮಹಾಭಾರತ ಯುದ್ಧಕ್ಕೂ ಮೊದಲು ಯುದ್ಧ ಘಟಿಸದಂತೇ ತಡೆಯಲು ಕೃಷ್ಣ ಮೂರು ಸಲ ಸಂಧಾನಕ್ಕೆ ಯತ್ನಿಸಿದ್ದ; ಸುಯೋಧನನ ಅಹಂಕಾರ ಸಂಧಾನಕ್ಕೆ ಅವಕಾಶ ಕೊಡಲಿಲ್ಲ. ರಾಮಾಯಣದಲ್ಲಿ, ಶ್ರೀರಾಮ ಜನನಕ್ಕೂ ಸಾವಿರಾರು ವರ್ಷಗಳ ಮೊದಲೇ ರಾವಣ ಜನಿಸಿದ್ದ. ಸ್ವತಃ ಅಣ್ಣನಾದ ಕುಬೇರನ ಶ್ರೀಲಂಕೆಯ ಸಂಪತ್ತನ್ನು ಕಂಡು ಅದು ತನ್ನದಾಗಬೇಕೆಂದು ಬಲವಂತದಿಂದ ಪಡೆದುಕೊಂಡ. ಕುಬೇರ ಉತ್ತರದ ಅಲಕಾಪುರಿಗೆ ತೆರಳಿ ಹೊಸದಾಗಿ ಸಾಮ್ರಾಜ್ಯ ಸ್ಥಾಪಿಸಿಕೊಂಡರೆ ಅಲ್ಲಿಗೂ ಹೋದ ರಾವಣ ಕುಬೇರನಲ್ಲಿದ್ದ ಪುಷ್ಪಕ ವಿಮಾನವನ್ನು ಅಪಹರಿಸಿದ. ಸಾವಿರಾರು ಸ್ತ್ರೀಯರ ಮಾನಭಂಗ, ಭೋಗ ಇವುಗಳಲ್ಲಿ ನಿರತನಾಗಿದ್ದ ರಾವಣ ಪದೇ ಪದೇ ಅನ್ಯರಿಂದ ಶಾಪಗ್ರಸ್ತನಾಗಿದ್ದ. ವನವಾಸಿಗಳಾಗಿದ್ದ ರಾಮ-ಲಕ್ಷ್ಮಣರಿಗೆ ತೊಂದರೆಕೊಟ್ಟ ಆತನ ತಂಗಿ ಶೂರ್ಪಣಖೆಯ ಮಾತು ಕೇಳಿ ಸೀತೆಯನ್ನು ಅಪಹರಿಸಿ ಲಂಕೆಗೆ ಎಳೆದೊಯ್ದ. ವಾಲಿಯ ಜೊತೆ ಸ್ನೇಹ ಸಂಪಾದಿಸಿ ಹೆಂಡಿರನ್ನು ಬದಲಾಯಿಸಿಕೊಳ್ಳುವ ಒಪ್ಪಂದಕ್ಕೆ ಅಣಿಯಾದ. ಮಾಡಿದ್ದೆಲ್ಲವೂ ಧರ್ಮಬಾಹಿರ ಕೆಲಸಗಳೇ. ಅವನಲ್ಲಿ ಸಾಮ್ರಾಜ್ಯದಲ್ಲಿ ನಾಗರಿಕತೆಯಿತ್ತು ಆದರೆ ಸಂಸ್ಕೃತಿ ಇರಲಿಲ್ಲ. ಅಧರ್ಮ ಆತನ ಅಳಿವಿಗೆ ಕಾರಣವಾಯ್ತು.

ಭಾರತಕಥೆಯ ಅಂತ್ಯದಲ್ಲಿ ವ್ಯಾಸರು ಹೇಳುತ್ತಾರೆ: "ನಾನು ನನ್ನ ಕೈಗಳೆರಡನ್ನೂ ಮೇಲಕ್ಕೆತ್ತಿ ಕೂಗಿ, ಧರ್ಮಮಾರ್ಗದಿಂದ ಸಂಪತ್ತು ಮತ್ತು ಪ್ರೀತಿ ಬರಲಿ ಎಂದರೆ ಯಾಕೆ ಯಾರೂ ಕೇಳಿಸಿಕೊಳ್ಳುತ್ತಿಲ್ಲ?" ಇಷ್ಟೆಲ್ಲಾ ಇದ್ದರೂ ಧರ್ಮವೆಂದರೇನು ಎಂದು ಹೇಳುವಲ್ಲಿ ಇವಾವುದೂ ಕೆಲಸಮಾಡಲು ಸಮರ್ಥವಾಗಿಲ್ಲ! ಧರ್ಮವೇನೆಂಬುದನ್ನು ಅರಿಯಲು ವಿಭಿನ್ನ ನೋಟಗಳನ್ನೇ ಆಯ್ದುಕೊಳ್ಳಬೇಕಾಗುತ್ತದೆ. ವಿವಿಧ ಮುಖಗಳಲ್ಲಿ ವಿಭಿನ್ನವಾಗಿ ಹೊಳೆಯುವ ವಜ್ರದಂತೇ ಧರ್ಮದ ಮುಖಗಳು ಒಂದೊಂದು ಕಡೆ ಒಂದೊಂದು ರೀತಿ ಕಾಣುತ್ತವೆ; ಕೈಲಾಸ ಪರ್ವತವನ್ನು ನಾಲ್ಕು ದಿಕ್ಕಿನಿಂದ ನೋಡಿದವರೂ ವಿಭಿನ್ನ ರೂಪಗಳಿಗೆ ಅದನ್ನು ಹೋಲಿಸುತ್ತಾರಲ್ಲಾ ಇದೂ ಹಾಗೇ. ಎಲ್ಲಾ ಮುಖಗಳೂ ಸುಂದರವೇ ಆದರೆ ಸಮಗ್ರವಾಗಿ ಧರ್ಮವನ್ನು ವರ್ಣಿಸಲು ಯಾವುದೇ ಒಂದು ಮುಖದ ತೀರ್ಮಾನ ಮಾಪನವಾಗಲಾರದು. ಈಗ ಚಿಕ್ಕದೊಂದು ಉದಾಹರಣೆಯನ್ನು ನೋಡೋಣ:

ಒಂದೂರಿನಲ್ಲಿ ಒಬ್ಬಾತನಿದ್ದ, ಆತನಿಗೆ ನಾಲ್ಕು ಮಕ್ಕಳು. ತನ್ನ ಮಕ್ಕಳು ಶೀಘ್ರತೀರ್ಮಾನ ತೆಗೆದುಕೊಳ್ಳುವುದರ ಬದಲು ನಿಧಾನವಾಗಿ ತೆಗೆದುಕೊಳ್ಳುವುದನ್ನು ಕಲಿಯಲೆಂಬ ಆಸೆ ಆ ವ್ಯಕ್ತಿಗೆ. ನಾಲ್ವರಿಗೂ ಪ್ರಶ್ನೆಗಳನ್ನಿತ್ತು ಉತ್ತರಕ್ಕಾಗಿ ದೂರದಲ್ಲಿರುವ ಮರಸೇಬುವಿನ ಮರವನ್ನು ಕಂಡುಬರುವಂತೇ ಅವರನ್ನು ಕಳಿಸಿದ. ಮೊದಲನೇ ಮಗ ಚಳಿಗಾಲದಲ್ಲಿ ಅಲ್ಲಿಗೆ ತೆರಳಿದರೆ ಎರಡನೇ ಮಗ ವಸಂತಕಾಲದಲ್ಲಿ ತೆರಳಿದ, ಮೂರನೆಯಾತ ಬೇಸಿಗೆಯಲ್ಲಿ ತೆರಳಿದರೆ ನಾಲ್ಕನೆಯವ ಮಳೆಗಾಲದಲ್ಲಿ ಅಲ್ಲಿಗೆ ತೆರಳಿದ. ಎಲ್ಲರೂ ಅಲ್ಲಿಗೆ ಹೋಗಿಬಂದಾಯ್ತು ಎಂದಾದಮೇಲೆ ಅವರನ್ನೆಲ್ಲಾ ಒಟ್ಟಿಗೇ ಮಾತನಾಡಲು ಈ ವ್ಯಕ್ತಿ ಕರೆದ.

ಮೊದನೆಯ ಹೇಳಿದ "ಮರ ತುಂಬಾ ವಿಕೃಷ್ಟವಾಗಿದ್ದು ತಿರುವುಗಳಿಂದ ಕೂಡಿದೆ."

ಎರಡನೇ ಮಗ ಹೇಳಿದ-"ಮರ ಹಸಿರು ಮೊಗ್ಗುಗಳಿಂದ ಕೂಡಿದ್ದು ಫಲಭರಿತವಾಗಬಹುದೆಂಬ ಭರವಸೆಯಿಂದಿದೆ."

ಮೂರನೆಯ ಮಗ ಹೇಳಿದ-"ಮರ ಸುಂದರವಾದ ಹೂವುಗಳಿಂದ ಕೂಡಿದ್ದು ಆಹ್ಲಾದಕರ ಪರಿಮಳ ಬೀರುತ್ತಿದೆ. ಅಷ್ಟು ಚಂದದ ಮರವನ್ನು ನಾನು ಇದುವರೆಗೆ ಎಲ್ಲೂ ನೋಡಲಿಲ್ಲ."

ನಾಲ್ಕನೆಯವ ಹೇಳಿದ"ಮರ ಪ್ರಬುದ್ಧವಾಗಿದೆ, ಹಣ್ಣುಗಳು ಉದುರುತ್ತಿವೆ. ಸಮೃದ್ಧವಾಗಿದ್ದು ಜೀವನದಲ್ಲಿ ಸಂತೃಪ್ತವಾದ ಹಾಗೇ ಕಾಣುತ್ತಿದೆ.   

ಎಲ್ಲರ ಅಭಿಪ್ರಾಯಗಳನ್ನು ಕೇಳಿದ ತಂದೆ ಉತ್ತರಿಸಿದ: "ಎಲ್ಲರ ಹೇಳಿಕೆಗಳೂ ಸರಿಯೇ, ಆದರೆ ಒಬ್ಬೊಬ್ಬರು ಮರದ ಒಂದೊಂದು ಋತುವಿನ ಜೀವನಗತಿಯನ್ನು ಕಂಡಿದ್ದೀರಿ. ಒಂದೇ ಋತುವಿನಲ್ಲಿ ಮರದ ಜೀವನವನ್ನು ಅಳೆಯಲು ಹೇಗೆ ಅಸಾಧ್ಯವೋ ಹಾಗೇ ಮನುಷ್ಯನ ಜೀವನವನ್ನು ಅಷ್ಟು ಬೇಗ ಅಳೆಯಲು ಸಾಧ್ಯವಿಲ್ಲ. ಸಹಜವಾಗಿ ಮನುಷ್ಯ ಜೀವನದಲ್ಲಿ ಕಷ್ಟ, ನೆಮ್ಮದಿ, ಪ್ರೀತಿ, ಸಂತೋಷವೇ ಮೊದಲಾದ ಹಲವಾರು ಸನ್ನಿವೇಶಗಳಿರುತ್ತವೆ. ಎಲ್ಲಾ ಮುಖಗಳನ್ನೂ ನೋಡಿದಮೇಲೆ ಮಾತ್ರ ಒಬ್ಬ ಮನುಷ್ಯನ ಬಗ್ಗೆ ಹೇಳಲು ಸಾಧ್ಯ.  ಚಳಿಗಾಲದಲ್ಲಿ ಬೇಡವೆಂದು ಬಿಟ್ಟುಬಿಟ್ಟರೆ, ವಸಂತ ಋತುವಿನ ಭರವಸೆಯಿಂದ ನೀವು ವಂಚಿತರಾಗುತ್ತೀರಿ, ಬೇಸಿಗೆಯ ಸೌಂದರ್ಯವನ್ನು ಕಾಣಲು ಸಾಧ್ಯವಾಗುವುದಿಲ್ಲ, ಮಳೆಗಾಲದ ಸಮೃದ್ಧಿ-ಸಂತೃಪ್ತಿಯನ್ನು ಪಡೆಯಲಾಗುವುದಿಲ್ಲ."

ಋತುಮಾನಕ್ಕೆ ತಕ್ಕಂತೇ ಮರದ ಧರ್ಮ ಬದಲಾಗುತ್ತದೆ! ಹಾಗಾದರೆ ಮರದ ಸೊಬಗನ್ನು ಒಟ್ಟಾರೆಯಾಗಿ ತಿಳಿದುಕೊಳ್ಳಬೇಕಾದರೆ ನಾಲ್ಕೂ ಕಾಲಗಳಲ್ಲಿ ಅದನ್ನು ನೋಡಿ ಅರ್ಥೈಸಬೇಕಾಗುತ್ತದೆ. ಅದೇ ರೀತಿ ಧರ್ಮ ಎಂದರೇನು ಎಂಬುದನ್ನು ಅರಿಯಬೇಕಾದಾಗ ಹಲವು ಮುಖಗಳಿಂದ ಅದನ್ನು ಆಘ್ರಾಣಿಸಬೇಕು, ಆಸ್ವಾದಿಸಬೇಕು.

ಧರ್ಮದ ಬಗ್ಗೆ ತಿಳಿದುಕೊಳ್ಳಲು ಅನೇಕ ಉದಾಹರಣೆಗಳು ಸಿಗುತ್ತವಾದರೂ ಎಲ್ಲವೂ ನೇರವಾಗಿ ಅದನ್ನು ಪ್ರಸ್ತುತಗೊಳಿಸುವುದಿಲ್ಲ. ಮಹಾಭಾರತದ ’ಯಕ್ಷಪ್ರಶ್ನೆ’ಯ ಸನ್ನಿವೇಶವನ್ನು ನೋಡುವ ಮೂಲಕ ಧರ್ಮವನ್ನು ಅರಿಯಲು ಯತ್ನಿಸೋಣ:

ಗತಃಪ್ರಾಣರಾಗಿದ್ದ ತಮ್ಮಂದಿರ ಜೀವವನ್ನು ಮರಳಿಸುತ್ತಾ ಯುಧಿಷ್ಠಿರನಲ್ಲಿ ಯಕ್ಷ ಕೇಳಿದ:"ಒಬ್ಬನೇ ಸಹೋದರನಿಗೆ ಜೀವದಾನ ನೀಡುವೆ ಯಾರಾದರೂ ಒಬ್ಬನನ್ನು ಮಾತ್ರ ಆಯ್ದುಕೋ ಎಂದಾಗ ಯಾಕೆ ನಕುಲನನ್ನೇ ಆಯ್ದುಕೊಂಡೆ?"

ಯುಧಿಷ್ಠಿರ ಹೇಳಿದ : "ಧರ್ಮೊ ರಕ್ಷತಿ ರಕ್ಷಿತಃ" ಆತನ ಮಾತಿನ ಇಂಗಿತವೇನೆಂದರೆ ಯುಧಿಷ್ಠಿರ ಕುಂತಿಯ ಮಗ, ನಕುಲ ಮಾದ್ರಿಯ ಮಗ, ತನ್ನ ತಾಯಿ ಕುಂತಿಗೆ ತಾನೊಬ್ಬ ಮರಳಿ ಸಿಗುವಂತೆಯೇ ಮಲತಾಯಿ ಮಾದ್ರಿಗೆ ಒಬ್ಬ ಮಗನಾದರೂ ಮರಳಿ ಸಿಗಲಿ ಎಂಬುದಾಗಿತ್ತು.

ಸನಾತನತೆಯ ಪ್ರಮುಖ ಅಂಶವೇ ಧರ್ಮ. ಧರ್ಮದ ಸೆಲೆಯಿಂದಲೇ ಮಿಕ್ಕೆಲ್ಲ ನೀತಿಗಳು-ರೀತಿ-ರಿವಾಜುಗಳು ಹುಟ್ಟಿಕೊಂಡವು.  

ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ ಲೋಕೇ ಧರ್ಮಿಷ್ಠಂ ಪ್ರಜಾಉಪಸರ್ಪಂತಿ
ಧರ್ಮೇಣ ಪಾಪಮಪನುದತಿ ಧರ್ಮೋ ಸರ್ವಂ ಪ್ರತಿಷ್ಠಿತಂ |
ತಸ್ಮಾದ್ಧರ್ಮಂ ಪರಮಂ ವದಂತಿ ||

              --ತೈತ್ತಿರೀಯ ಅರಣ್ಯಕದ ಮಹಾನಾರಾಯಣೋಪನಿಷತ್ತು.

ಸಾರಾಂಶ: ಧರ್ಮವು ಎಲ್ಲಾ ಜಗತ್ತಿನ ಆಧಾರ. ಲೋಕದಲ್ಲಿ ಜನರು ಧರ್ಮಿಷ್ಠರನ್ನು ಆಶ್ರಯಿಸುತ್ತಾರೆ. ಧರ್ಮದಿಂದ ಪಾಪವು ದೂರವಾಗುತ್ತದೆ. ಧರ್ಮದಲ್ಲಿಯೇ ಎಲ್ಲವೂ ನೆಲೆನಿಂತಿದೆ. ಆದ್ದರಿಂದ ಪ್ರಾಜ್ಞರು ಧರ್ಮವನ್ನು ಶ್ರೇಷ್ಠವೆಂದು ಹೇಳುತ್ತಾರೆ.

ಭಾಗವತ ಪುರಾಣದಲ್ಲಿ ನಾರದರು ಧರ್ಮರಾಜನಿಗೆ ಉಪದೇಶಿಸಿದ ಸನ್ನಿವೇಶವೊಂದಿದೆ. ಅಲ್ಲಿ ಅವರು ಸತ್ಯ, ದಯೆ, ನಾಚಿಕೆ ಮೊದಲಾದ ಮೂವತ್ತು ಗುಣಗಳನ್ನು ಯಾದಿಮಾಡಿ ಹೇಳುತ್ತಾರೆ: "ನೃಣಾಮಯಂ ಪರೋ ಧರ್ಮಃ ಸರ್ವೇಷಾಂ ಸಮುದಾಹೃತಃ" [ಇದು ಎಲ್ಲ ಮಾನವರಿಗೂ ಶ್ರೇಷ್ಠಧರ್ಮ] ಎಲ್ಲಾ ಮಾನವರಿಗೂ ಎಂದಿದ್ದರಿಂದ ಜಾತಿ, ಮತ, ಪಂಥ, ದೇಶ, ಕಾಲ, ಕುಲ, ವೃತ್ತಿ ಯಾವುದೇ ಆಗಿದ್ದರೂ ಧರ್ಮ ಎಂಬುದು ಮಾತ್ರ ಎಲ್ಲಾ ಮಾನವರಿಗೂ ಒಂದೇ ಎಂಬ ವಿಶಾಲದೃಷ್ಟಿಕೋನ ಅವರ ಹೇಳಿಕೆಯಲ್ಲಿದೆ. ಯಾವ ಧರ್ಮ ಜಗತ್ತಿನಲ್ಲಿ [ಮಾನವ ಜೀವನದಲ್ಲಿ] ಆದರ್ಶಗಳನ್ನು ಎತ್ತಿಹಿಡಿಯುತ್ತದೆಯೋ ಅಂತಹ ಧರ್ಮವೇ ನಿಜವಾದ ಧರ್ಮ.

ಧರ್ ಎಂಬ ಪದದಿಂದ ಧರ್ಮ ಹುಟ್ಟಿದೆ. ಧರ್ ಎಂದರೆ ಧರಿಸು, ಹಿಡಿದುಕೋ, ತಾಳಿಕೋ, ಇರುವ ಸ್ಥಿತಿಯಲ್ಲೇ ಹಾಗೇ ಕಾಪಾಡಿಕೋ ಎಂಬೆಲ್ಲಾ ಅರ್ಥಗಳಿವೆ. ಪೂರ್ವಾಗ್ರಹವಿಲ್ಲದೇ ಯಾವುದನ್ನು ಯಾವುದು ಇರುವ ಸ್ಥಿತಿಯಲ್ಲಿ ಹಾಗೇ ಇರಲಿಕ್ಕೆ ಬಿಡುವುದೋ ಮತ್ತು ಹಾಗೇ ಸುರಕ್ಷಿತವಾಗಿರುವುದನ್ನು ಅನುಮೋದಿಸುವುದೋ ಆ ನೀತಿಸೂತ್ರಗಳನ್ನೇ ಅಥವಾ ಜೀವನ ಸಂವಿಧಾನವನ್ನೇ ಧರ್ಮ ಎಂದು ನಾವು ಗುರುತಿಸಬಹುದಾಗಿದೆ. ಈ ಜಗತ್ತಿನಲ್ಲಿ ಹುಟ್ಟಿದ ಪ್ರತೀ ಮನುಷ್ಯ ತಾನು ಸುಲಲಿತವಾಗಿ ಜೀವನ ಸಾಗಿಸುವುದರ ಜೊತೆಗೆ ಲೋಕದ ಎಲ್ಲರಿಗೂ ಅದೇ ರೀತಿಯಲ್ಲಿ ಬದುಕಲು ಬಿಡುವುದು, ಅವರ ಹಕ್ಕುಗಳನ್ನು ಮೊಟಕುಗೊಳಿಸದಿರುವುದು, ತನ್ಮೂಲಕ ಎಲ್ಲರೂ ಪರಸ್ಪರ ಧರ್ಮಾಚರಣೆಯೆಂಬ ಜೀವನ ಸಂವಿಧಾನಕ್ಕೆ ಬದ್ಧರಾಗಿರುತ್ತಾ ಅಭಿವೃದ್ಧಿಹೊಂದುವುದು ಧರ್ಮದ ಉದ್ದೇಶ.

ಧರ್ಮದಂತೇ ನಡೆದರೆ ಯಾರೂ ಆತಂಕ, ಕಳವಳಗಳನ್ನು ಎದುರಿಸುವ ಅಗತ್ಯವಿಲ್ಲ. ಎಲ್ಲರೂ ಧರ್ಮದ ಪಾಲನೆಮಾಡಿದಾಗ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿ ಆಚರಿಸಲ್ಪಟ್ಟು ಜಾಗೃತವಾಗಿರುತ್ತದೆ. ಅಲ್ಲಿ ತಪ್ಪುಗಳಿಗೆ, ಜಗಳ-ದೊಂಬಿಗಳಿಗೆ ಅವಕಾಶವೇ ಇರುವುದಿಲ್ಲ. ಮಹಾಭಾರತದ ಸನ್ನಿವೇಶವೊಂದರಲ್ಲಿ ಹಠಹಿಡಿದು ಪ್ರಶ್ನೆ ಕೇಳುತ್ತಿರುವ ಯುಧಿಷ್ಠಿರನಿಗೆ ಭೀಷ್ಮರು ಕೊನೆಗೊಮ್ಮೆ ಉತ್ತರಿಸುತ್ತಾರೆ: ಧರ್ಮ ಸಕಲ ಜೀವಜಂತುಗಳ ಒಳಿತನ್ನು ಬಯಸುತ್ತದೆ; ಎಲ್ಲ ಜೀವಜಂತುಗಳ ಉನ್ನತಿ ಮತ್ತು ಅಭ್ಯುದಯವನ್ನು ಬಯಸುವ ಆಜ್ಞೆಯಾಗಿದೆ. ಹೀಗಾಗಿ ಯಾವುದು ಉನ್ನತಿ ಮತ್ತು ಅಭಿವೃದ್ಧಿಯೆಡೆಗೆ ಕರೆದೊಯ್ಯುತ್ತದೋ ಅದೇ ಧರ್ಮವೆಂದು ಪರಿಗಣಿಸಲ್ಪಡುತ್ತದೆ. ಎಲ್ಲಾ ಜೀವಜಂತುಗಳ ಅಸ್ಥಿತ್ವವನ್ನೂ, ಬದುಕನ್ನೂ ಎತ್ತಿಹಿಡಿಯುವುದರಿಂದ ಅದು ಧರ್ಮವೆನಿಸಿಕೊಳ್ಳುತ್ತದೆ. ಯಾವುದಕ್ಕೆ ಎಲ್ಲಾ ಜೀವಜಂತುಗಳ ಒಳಿತನ್ನು ನಿರ್ಧರಿಸಲು ಸಾಧ್ಯವೋ ಅದು ಧರ್ಮವೆನಿಸಿಕೊಳ್ಳುತ್ತದೆ.

ಧರ್ಮವೆಂಬುದಕ್ಕೆ ಇಂತಿಷ್ಟೇ ಜನ ಅದರ ಫಲಾನುಭವಿಗಳು ಎಂದಿಲ್ಲ, ಇಂಥಾದ್ದೇ ಗುಂಪು ತನ್ನನ್ನು ಅನುಮೋದಿಸುವವರು ಎಂಬುದಿಲ್ಲ, ಧರ್ಮವೆಂಬುದು ಯಾವುದೋ ಮತದ ಚರಾಸ್ತಿ, ಸ್ಥಿರಾಸ್ತಿ, ಅನುಯಾಯಿಗಳು, ಅನುಮೋದಕರು, ಪ್ರಚಾರಕರು, ಸಂಖ್ಯಾಬಲದಲ್ಲಿ ಹೆಚ್ಚಿಗೆ ಇರುವವರು ಇವ್ಯಾವುದೂ ಸಂಬಂಧವೇ ಇಲ್ಲ! ನೀತಿವಂತರಾಗಿ ಬದುಕುವುದು ಹೇಗೆ, ಯಾವುದು ನೀತಿ ಮತ್ತು ಯಾವುದು ಅನೀತಿ-ಇವಿಷ್ಟನ್ನು ವಿಧಿಸುವ ಕರ್ತೃತ್ವಶೀಲ ಮಾನವ ಜೀವನ ಸಂವಿಧಾನವೇ ಧರ್ಮ.    

ಮಹಾಭಾರತದ ಮಹತ್ವದ ಒಂದು ಘಟ್ಟ: ದ್ರೌಪದಿ ವಸ್ತ್ರಾಪಹರಣ. ಧರ್ಮಾತ್ಮನೆನಿಸಿದ ಧರ್ಮರಾಯ  ಜೂಜಿನಲ್ಲಿ ತನ್ನನ್ನೇ ಕಳೆದುಕೊಂಡಿದ್ದೂ ಅಲ್ಲದೇ ಹೆಂಡತಿ ದ್ರೌಪದಿಯನ್ನು ಪಣವಾಗಿ ಇಟ್ಟನಲ್ಲಾ ಇದು ಸರಿಯೇ? ಯುಧಿಷ್ಠಿರನಿಗೆ ಆ ಅಧಿಕಾರವಿತ್ತೇ?- ಎಂಬುದು ಹಲವರ ಪ್ರಶ್ನೆ. ತನನ್ನು ಜೂಜಿಗೆ ಬಳಸಿಕೊಳ್ಳುವುದು ಸರಿಯೇ ಎಂದು ಸ್ವತಃ ದ್ರೌಪದಿ ತುಂಬಿದ ಸಭೆಯಲ್ಲಿ ಭೀಷ್ಮರಲ್ಲಿ ಕೇಳಿದಾಗ ಭೀಷ್ಮರಿಗೆ ಉತ್ತರಿಸುವುದು ಸಾಧ್ಯವಾಗಿರಲಿಲ್ಲ! "ನಿನ್ನ ಪ್ರಶ್ನೆಗೆ ಉತ್ತರಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ಯಾಕೆಂದರೆ ಇದು ಧರ್ಮಸೂಕ್ಷ್ಮ" ಎಂದು ಮಾತು ಮುಗಿಸಿದ್ದರು. ಯುಧಿಷ್ಠಿರನಿಗೆ ಜೂಜಾಟದ ಚಟವಿತ್ತು ಎಂಬುದು ಧರ್ಮದ ಮುಖದಿಂದ ನೋಡಿದಾಗ ಅದು ಅತಿಯಾಗಿತ್ತೆಂದು ತಿಳಿಯುತ್ತದೆ. ಜೂಜಿನಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಾ ಹೋದ ಆತನಿಗೆ ಕೊನೆಗೆ ತನ್ನನ್ನೂ ತನ್ನವರನ್ನೂ ಪಣವಾಗಿಡುವ ಹೊತ್ತು ಎದುರಾಯ್ತು. ಜೂಜಾಟವನ್ನೇ ಆಡದಿದ್ದರೆ ಕಥೆ ಬೇರೆಯಿರುತ್ತಿತ್ತು. ಧರ್ಮಾತ್ಮನೆನಿಸಿಕೊಂಡ ಯುಧಿಷ್ಠಿರನ ಕೆಲವು ತಪ್ಪುಗಳು ಧರ್ಮದ ದಾರಿಯಿಂದ ತುಸು ಭಿನ್ನವಾಗಿ ಕಾಣುತ್ತವೆ. ಇದರ ಪರಿಣಾಮವಾಗಿ ಪಾಂಡವರು ವನವಾಸ, ಅಜ್ಞಾತವಾಸ ಇತ್ಯಾದಿಗಳಲ್ಲಿ ಕಳೆಯಬೇಕಾಗಿ ಬಂತು. ನಮ್ಮ ಕವಿಜನರು ಇಂತಹ ಧರ್ಮಸೂಕ್ಷ್ಮಗಳ ಬಗ್ಗೆ ಬಹಳ ವಿವರಗಳನ್ನು ಒದಗಿಸಲು ಮುಂದಾಗುವುದಿಲ್ಲ. ’ಧರ್ಮಸ್ಯ ತತ್ತ್ವಮ್ ನಿಹಿತತ್ ಗುಹಾಯಾಮ್’ ಎಂಬಂತೇ ಧರ್ಮಸೂಕ್ಷಗಳ ಕಪ್ಪುಗುಹೆಗಳು ಅಲ್ಲಲ್ಲಿ ಕಾಣುತ್ತವೆ. ಪ್ರಾಯಶಃ ಜನ್ಮಾಂತರಗಳ ಕರ್ಮಬಂಧನಗಳ ಸೆರಗು ಅಲ್ಲಿರಬಹುದೇನೋ.  

ಇಂದಿನ ಮತ್ತು ಮುಂದಿನ ನಮ್ಮ ಪೀಳಿಗೆಗೆ ಇಂತಹ ಕಥೆಗಳನ್ನು ನಾವು ಹೇಳಬೇಕು. ಜೀವನದಲ್ಲಿ ಯಾವುದು ಧರ್ಮ ಮತ್ತು ಯಾವುದು ಅಧರ್ಮ ಎಂಬುದನ್ನು ತನ್ಮೂಲಕ ಅವರು ನಿರ್ಧರಿಸಲು ಸಮರ್ಥರಾಗಬೇಕು. ರಾಮಾಯಣ-ಮಹಾಭಾರತಗಳಂತಹ ಮಹಾಕಾವ್ಯಗಳನ್ನು ಓದುವುದರಿಂದ ರಂಜನೆಯ ಜೊತೆಗೆ ಅವರಿಗೆ ಅವರ ಜೀವನದಲ್ಲಿ ಜೀವನ ಸಂವಿಧಾನದ ನೀತಿ ಸೂತ್ರಗಳನ್ನು ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ. ಇಂತಹ ಕಾವ್ಯಗಳು ವ್ಯಕ್ತಿಯ ಸಾಕ್ಷಿಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ.

ಜೀವನದಲ್ಲಿ ಕೆಲವೊಮ್ಮೆ ಧಾರ್ಮಿಕ ಸಂವಿಧಾನಕ್ಕೂ ರಾಜಕೀಯ ಸಂವಿಧಾನಕ್ಕೂ ಸಂಬಂಧಿಸಿದಂತೇ ನಮ್ಮಲ್ಲಿ ತಿಕ್ಕಾಟ ಆರಂಭವಾಗಬಹುದು; ಯಾವಾಗ ಅವೆರಡೂ ಬೇರೆ ಬೇರೆಯಾಗಿರುತ್ತವೋ ಅಂತಹ ಸನ್ನಿವೇಶಗಳಲ್ಲಿ ಯಾವುದನ್ನು ಅನುಸರಿಸಬೇಕು ಎಂದು ನಿರ್ಧರಿಸುವುದು ಸುಲಭವಲ್ಲ. ಸುಸಂಸ್ಕೃತನಾದವ ಧಾರ್ಮಿಕ ಸಂವಿಧಾನವನ್ನೇ ಒಪ್ಪಿಕೊಳ್ಳುತ್ತಾನೆ, ನಾಗರಿಕನಾದವ ರಾಜಕೀಯದ ಸಂವಿಧಾನವನ್ನು ಒಪ್ಪಿಕೊಳ್ಳುತ್ತಾನೆ. ಮಾನವ-ಧಾರ್ಮಿಕ ನೀತಿಸೂತ್ರಗಳು ಜೀವನದ ಮೂಲಭೂತ ಅಂಶಗಳು, ಅವುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದರಿಂದ ಧರ್ಮದ ಉಲ್ಲಂಘನೆಯಾಗಬಹುದು. ಸಾಮಾಜಿಕ ಪರಿಣಾಮಗಳಿಗೆ ಅಂಜಿ ಧರ್ಮಕ್ಕೆ ವಿರೋಧವಾಗಿ ರಾಜಕೀಯ ಸಂವಿಧಾನವನ್ನು ಆಯ್ಕೆಮಾಡಿಕೊಳ್ಳುವ ಅನಿವಾರ್ಯತೆ ಕೆಲವರಿಗಿರಬಹುದು; ಆಯ್ಕೆ ಅವರವರ ಮನೋಧರ್ಮಕ್ಕೆ ಬಿಟ್ಟಿದ್ದು.

ಧಾರ್ಮಿಕ ಸಂವಿಧಾನ ಮತ್ತು ರಾಜಕೀಯ ಸಂವಿಧಾನಗಳ ತಿಕ್ಕಾಟವನ್ನು ಮಹಾತ್ಮಾಗಾಂಧಿ ಅನುಭವಿಸಿದ್ದರು; ದಕ್ಷಿಣ ಆಫ್ರಿಕಾದ ರೈಲಿನಲ್ಲಿ ಕುಳಿತಿದ್ದ ಅವರು ಕರಿಯನೆಂಬ ಕಾರಣಕ್ಕೆ ಸೀಟು ಬಿಟ್ಟುಕೊಡಬೇಕಾಯ್ತು. ಅಂಥಾದ್ದೇ ಘಟನೆಯಲ್ಲಿ ಕರಿಯಳೆಂಬ ಕಾರಣಕ್ಕೆ ರೋಸಾ ಪಾರ್ಕ್ಸ್ ಬಸ್ಸಿನಲ್ಲಿ ಸೀಟುಬಿಟ್ಟುಕೊಡಬೇಕಾಯ್ತು. ಒಕ್ಕೂಟವನ್ನುಳಿಸುವ ಸಲುವಾಗಿ ಇರುವ ಯುದ್ಧದ ಅಗತ್ಯತೆಯ ಕುರಿತಂತೇ ಅಬ್ರಹಾಂ ಲಿಂಕನ್ ರನ್ನು ಯಮಯಾತನೆಗೆ ಈಡುಮಾಡಿದ್ದು ಇಂಥಾದ್ದೇ ಕಾರಣಕ್ಕಾಗಿ. ಆದರೆ ಇವರೆಲ್ಲರೂ ಮಾನವ ಜೀವನ ಸಂವಿಧಾನವನ್ನೇ ಆತುಕೊಂಡರು; ಧರ್ಮವನ್ನು ಬಿಡಲಿಲ್ಲ.  

ಸನಾತನ ಜೀವನಧರ್ಮದಲ್ಲಿ ನಾಲ್ಕು ಪುರುಷಾರ್ಥಗಳನ್ನು ಹೇಳಿದ್ದಾರೆ: ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ. ಧರ್ಮವೆಂದರೆ ಮಾನವ ಜೀವನ ಸಂವಿಧಾನ, ಅರ್ಥವೆಂದರೆ ಧರ್ಮಮಾರ್ಗದಲ್ಲಿ ಗಳಿಸುವ ಸಿರಿಸಂಪತ್ತು, ಕಾಮವೆಂದರೆ ಧರ್ಮಮಾರ್ಗದಲ್ಲಿ ಅನುಭವಿಸುವ ಸುಖೋಪಭೋಗಗಳು, ಮೋಕ್ಷವೆಂದರೆ ಸಕಲವನ್ನೂ ಅನುಭವಿಸಿದ ತೃಪ್ತಿಯಿಂದ ದೇಹದಿಂದ ಮತ್ತು ಜರಾಮರಣ ಚಕ್ರದಿಂದ ಬಿಡುಗಡೆಗೊಳ್ಳುವುದು. ಸಂತೋಷ, ಸಮೃದ್ಧಿ ಮತ್ತು ಉತ್ತಮ ಜೀವನ ಎಲ್ಲರೂ ಬಯಸುವ ಮಾನವ ಜನ್ಮಸಿದ್ಧ ಹಕ್ಕು; ಎಲ್ಲಿಯವರೆಗೆ ಧರ್ಮದ ತಳಹದಿಯಮೇಲೆ ಅವುಗಳನ್ನು ಅನುಭವಿಸಲಾಗುತ್ತದೋ ಅಲ್ಲಿಯವರೆಗೂ ಅದು ಸರಿಯೇ. ಮೋಕ್ಷವೇ ನಮ್ಮ ಗುರಿಯಾದರೆ, ಸಂಸಾರಿಗಳಾಗಿ ಸಮಾಜದಲ್ಲಿ ತೊಡಗಿಕೊಳ್ಳಬೇಕು, ತನ್ನಿಂದಾದ ಮಟ್ಟಿಗೆ ಸಮಾಜಕ್ಕೆ ಸೇವೆಯನ್ನು ಸಲ್ಲಿಸಬೇಕು; ಆದರೆ ಎಲ್ಲವೂ ಧರ್ಮದ ನೆಲೆಗಟ್ಟಿನಲ್ಲೇ ನಡೆಯಬೇಕು.

4 comments:

  1. ಹರೇ🙏ಕೃ಼ಷ್ಣ

    ಯಾವ ರೀತಿ ನೀತಿ ತತ್ವಗಳನ್ನು ದರೆಯು ಧಾರಣೆ ಮಾಡಿಕೊಂಡು ಸಕಲ ಜೀವರಾಶಿಗಳನ್ನೂ ರಕ್ಷಿಸಿ ಪಾಲಿಸುತ್ತಿದೆಯೋ, ಅದೇ ನಿಜವಾದ ಧರ್ಮ ಮತ್ತು ಅದು ಸನಾತನ ಧರ್ಮ. ಅದನ್ನು ನಾವು ಸಹಾ ಅನುಸರಿಸಿ ನಡೆದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಭಗವಂತನ ಪರಮ ಶಾಂತಿಯ ಸಾಧುತ್ವದ ಜೀವನ ಮಾಡಬೇಕು ಮತ್ತು ಇದಕ್ಕಾಗಿ ನಮ್ಮ ದುಷ್ಟತ್ವದ ಸ್ವಹಿತ ಭಾವನೆಗಳನ್ನು ಸಂಪೂರ್ಣ ನಾಶ ಮಾಡಿಕೊಳ್ಳುಲು ಸದಾ ಪ್ರಯತ್ನಪಟ್ಟು ಕರ್ಮ ಮಾಡುತ್ತಿರಬೇಕು.... ಆಗ...ನಮ್ಮಿಂದ... ಭಗವಂತ ಭಗವತ್ ಗೀತೆಯಲ್ಲಿ ನುಡಿದಂತೆ...
    ಪರಿತ್ರಾಣಾಯ ಸಾಧೂನಾಂ
    ವಿನಾಶಾಯ ಚ ದುಷ್ಕೃತಾಂ|
    ಧರ್ಮ ಸಂಸ್ಥಾಪನರ್ಥಾಯ
    ಸಂಭಾವಾಮಿ ಯುಗೇ ಯುಗೇ||
    .......ಆಗುತ್ತದೆ.
    ಧರ್ಮದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ,
    ಭಗವಂತನ ಅಕ್ಷರದ ಅಧ್ಯಾತ್ಮ ಭಾವನೆಯನ್ನು ಅರ್ಥೈಸಿಕೊಂಡು, ಅದರ ಭಾವನೆಯಂತೆ ಶಾಂತಿ ಅನುಸರಿಸಿ ನಡೆಯುತ್ತಾ, ಅದನ್ನು ಸಮಾಜದಲ್ಲಿ ವಿಸ್ತರಿಸಲು ಸಮಾಜದ ಎಲ್ಲಾ ದುಷ್ಕೃತ ಶಕ್ತಿಗಳನ್ನು ನಾಶ ಮಾಡುವುದೇ ಧರ್ಮ ಸ್ಥಾಪನೆ.

    ReplyDelete
  2. ವೈ. ವೆಂಕಟಚಲಪತಿ,
    ಶ್ರೀ ಕೃಷ್ಣ ಭಕ್ತರು,
    ಶ್ರೀ ಕೃಷ್ಣಾನುಗ್ರಹ ಧಾಮ,
    ರೇಷ್ಮೆ ಮಾರುಕಟ್ಟೆ ಹಿಂಭಾಗ,
    ವಾಪಸಂದ್ರ,
    ಚಿಕ್ಕಬಳ್ಳಾಪುರ-೫೬೨೧೦೧

    ReplyDelete
  3. ದರ್ಮ ಸೂಕ್ಷ್ಮವನ್ನು ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು

    ReplyDelete