ಚಿತ್ರಋಣ: ಅಂತರ್ಜಾಲ
ತುಳಸಿಯ ಮಹತ್ವ
ತುಳಸಿಯ ಮಹತ್ವ
ಸನಾತನ ಜೀವನ ವಿಧಾನ-ಸಂವಿಧಾನದಲ್ಲಿ ಹಬ್ಬಗಳ ಆಚರಣೆಗೆ ವಿಶೇಷ ಮಹತ್ವವಿದೆ-ಕಾರಣಗಳಿವೆ. ಹಬ್ಬಗಳು ಹೇಗೆಂದರೆ ಹಾಗೆ ಜೋಡಣೆಯಾಗಿಲ್ಲ; ಆಯಾಯ ಋತುಮಾನಗಳನ್ನವಲಂಬಿಸಿ, ಯಾವ ಶ್ರಾಯದಲ್ಲಿ ಯಾವ ರೀತಿಯ ಆಚರಣೆಯಿಂದ ಮಾನವರಿಗೆ ವೈಜ್ಞಾನಿಕವಾಗಿ ಅನುಕೂಲವಾಗುವುದು ಎಂಬುದನ್ನು ನಮ್ಮ ಪೂರ್ವಜರು ಅರಿತು ಕೊಂಡಿದ್ದರು. ಸಂಕ್ರಾಂತ್ರಿಯ ವೇಳೆಯಲ್ಲಿ ಎಳ್ಳು-ಬೆಲ್ಲವೆಂದರೇಕೆಂದರೆ ಶರೀರದಲ್ಲಿ ಎಣ್ಣೆಯ ಕೊರತೆ ಕಂಡು ಬರುವ ಸಮಯ ಅದಾಗಿರುತ್ತದೆ; ಎಳ್ಳಿನ ಸೇವನೆಯಿಂದ ಶರೀರಕ್ಕೆ ಬೇಕಾದ ಪರಿಶುದ್ಧ ತೈಲ ತಕ್ಕಮಟ್ಟಿಗೆ ಲಭಿಸುತ್ತದೆ. ರಾಮನವಮಿಯಂದು ಸೌತೇಕಾಯಿ ಕೋಸಂಬರಿ, ಪಾನಕ ಬಳಸುವುದು ಬಿಸಿಲ ಬೇಗೆಯಿಂದ ಬಳಲುವ ದೇಹವನ್ನು ತಂಪಾಗಿಸಲಿಕ್ಕೆ. ದೀಪಾವಳಿಯಲ್ಲಿ ದೀಪಗಳನ್ನು ಹಚ್ಚುವುದು- ಆ ಸಮಯದಲ್ಲಿ ಬೇಗನೆ ಕತ್ತಲು ಆವರಿಸುವುದರಿಂದ ಕತ್ತಲನ್ನು ಕಳೆಯಲು ಬೆಳಕಿನ ಹಬ್ಬ ಸಹಕಾರಿಯಾಗಿದೆ. ಅದೇ ರೀತಿ ಚಳಿಯ ಒಣಹವೆಗೆ ಒಡೆಯುವ ಚರ್ಮಕ್ಕೆ ಅಭ್ಯಂಜನವನ್ನು ಹೇಳಲಾಗಿದೆ. ಹೀಗೆಯೇ, ಪ್ರತಿಯೊಂದು ಹಬ್ಬಕ್ಕೂ ಕಾರಣಗಳಿವೆ; ಹೊರನೋಟಕ್ಕೆ ಅವು ಕಾಣದಂತಿವೆ! ಇಂತಹ ಹಬ್ಬಗಳ ಸಾಲಿನಲ್ಲಿ ಕಾರ್ತಿಕ ಶುದ್ಧ[ಶುಕ್ಲ] ದ್ವಾದಶಿಯಂದು ಆಚರಿಸಲ್ಪಡುವ ತುಲಸೀ ವಿವಾಹವೂ ಒಂದು.
ಕಾರ್ತಿಕ ಶುದ್ಧ ದ್ವಾದಶಿಯನ್ನು ಉತ್ಥಾನ ದ್ವಾದಶೀ ಎಂತಲೂ ಹೇಳುತ್ತೇವೆ. ಕೃಷ್ಣನಿಗೆ, ವಿಷ್ಣುವಿಗೆ ರೇವತಿ ನಕ್ಷತ್ರ ಪ್ರಿಯವಾಗಿರುವುದರಿಂದ ಅಂದಿನ ದಿನ ರೇವತಿ ನಕ್ಷತ್ರವಿದ್ದರೆ ಇನ್ನೂ ಶ್ರೇಷ್ಠ. ಉತ್ಥಾನವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ ಕೊಡುವನೆಂಬ ಅನಿಸಿಕೆ ಸನಾತನರದ್ದು. ಪರಮಾತ್ಮ ಮಹಾವಿಷ್ಣು ಪಾಲ್ಗಡಲಿನಲ್ಲಿ ಮಲಗಿದ್ದು, ಅವನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸುವುದರಿಂದ,ವೈಷ್ಣವ ಮತ್ತು ಶ್ರೀವೈಷ್ಣವ ಸಂಪ್ರದಾಯಸ್ಥರು ಈ ವ್ರತವನ್ನು ಕ್ಷೀರಾಬ್ಧಿವ್ರತವೆಂದೂ ಕರೆಯುತ್ತಾರೆ. ಇಲ್ಲೊಂದು ಚಿಕ್ಕ ವ್ರತ: ಕಾರ್ತಿಕ ಶುದ್ಧ ಏಕಾದಶಿಯಂದು ಪ್ರಾತಃಕಾಲದಲ್ಲಿ, ಪ್ರಾತರ್ವಿಧಿಗಳನ್ನು ತೀರಿಸಿಕೊಂಡು ಶುಚಿರ್ಭೂತರಾಗಿ, ಕುಂಭದಾನವನ್ನು ಮಾಡಿ ಉಪವಾಸ ವ್ರತವನ್ನಾಚರಿಸಬೇಕು. ಆ ದಿನ ಸೋಮವಾರವಾಗಿದ್ದು, ಉತ್ತರಾಷಾಢ ನಕ್ಷತ್ರವಾಗಿದ್ದರೆ ಬಹಳ ಪ್ರಾಶಸ್ತ್ಯ. ವ್ರತದ ರಾತ್ರಿಯಂದೇ ಮಹಾವಿಷ್ಣುವನ್ನು ಎಬ್ಬಿಸುವ ಕೈಂಕರ್ಯ ನಡೆಯುತ್ತದೆ. ವೈಷ್ಣವ ಪಂಥದಲ್ಲಿ ಗೃಹಸ್ಥರು ಕೆಲವರು ಆಚರಿಸುವ ಚಾತುರ್ಮಾಸ್ಯದ ಕೊನೆಯ ಹಂತದ ಏಕಾದಶಿಯಾದ ಈ ರಾತ್ರಿ, ಒಂದು ಕುಂಭದಲ್ಲಿ ಉದ್ದಿನಕಾಳಿನ ಪ್ರಮಾಣದ ಚಿನ್ನದ ಮೀನಿನ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಿ, ನಂತರ ಅದನ್ನು ಪೂಜಿಸಿ, ಜಾಗರಣೆಯನ್ನು ಮಾಡಿ, ದ್ವಾದಶಿಯ ಬೆಳಗ್ಗೆ ಮತ್ತೆ ಪೂಜಿಸಿ ಬ್ರಾಹ್ಮಣರಿಗೆ ದಕ್ಷಿಣೆ ಸಮೇತವಾಗಿ ದಾನ ಮಾಡಬೇಕು.
ತುಳಸಿಯ ಹುಟ್ಟಿಗೆ ಎರಡು ಕಥೆಗಳಿವೆ: ಒಂದು ಕಥೆ ಇನ್ನೊಂದಕ್ಕೆ ಪೂರಕವಾಗಿದೆ.
ಹಿಂದಕ್ಕೆ ಜಲಂಧರನೆಂಬ ರಕ್ಕಸನಿದ್ದನಂತೆ. ಆತನ ಅತಿರೂಪವತಿಯಾದ ಹೆಂಡತಿ ವೃಂದಾ. ರಕ್ಕಸರು ಮತ್ತು ದೇವತೆಗಳ ನಡುವೆ ಜಗಳಗಳು, ಯುದ್ಧಗಳು ಅನೂಚಾನಾಗಿ ನಡೆಯುತ್ತಲೇ ಇದ್ದ ಕಾಲವದು. ರಾಕ್ಷಸನಾದ ಜಲಂಧರನ ಕಿರುಕುಳ ತಾಳಲಾಗದೆ ದೇವತೆಗಳು ವಿಷ್ಣುವಿನ ಸಹಾಯಕ್ಕೆ ಮೊರೆ ಹೋದರಂತೆ. ಪತಿವ್ರತೆಯಾದ ವೃಂದಾಳ ತಪಶ್ಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾದನಂತೆ. ದೇವತೆಗಳ ಕಷ್ಟವನ್ನು ಕಂಡ ಮಹಾವಿಷ್ಣು, ಜಲಂಧರನ ವೇಷವನ್ನು ಧರಿಸಿ, ಜಲಂಧರನಿಲ್ಲದ ವೇಳೆಗೆ ಆ ಮನೆಗೆ ಬಂದು ವೃಂದಾಳೊಂದಿಗೆ ಮಿಲನಗೊಂಡು ಆಕೆಯ ಪಾತಿವ್ರತ್ಯ ಶಕ್ತಿಯನ್ನು ಭಂಗ ಮಾಡಿದನಂತೆ. ನಂತರ ನಡೆದ ದೇವತೆಗಳು ಮತ್ತು ಜಲಂಧರರ ನಡುವಣ ಯುದ್ಧದಲ್ಲಿ, ಜಲಂಧರ ರಣರಂಗದಲ್ಲಿ ಮಡಿದನಂತೆ. ತನ್ನ ಶೀಲಹರಣ ಮಾಡಿ ಪಾತಿವ್ರತ್ಯವನ್ನಳಿದಿದ್ದ ಮಹಾವಿಷ್ಣುವಿಗೆ ಶಾಪ ನೀಡಿದ ವೃಂದಾ, ತನ್ನ ಪತಿಯ ಶವದೊಂದಿಗೆ ಸಹಗಮನ ಮಾಡಿದಳಂತೆ. ಈ ವೃಂದಾಳೇ ತುಳಸಿಯಾಗಿ ಪಾರ್ವತೀದೇವಿ ತಯಾರಿಸಿದ ಸಸ್ಯಕುಂಡದಲ್ಲಿ ಹುಟ್ಟಿದಳಂತೆ. ಇವಳೇ ರುಕ್ಮಿಣಿಯಾಗಿ ಜನ್ಮ ಪಡೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾಗುತ್ತಾಳೆಂದು ಪ್ರತೀತಿ ಸಹ ಇದೆ.
ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂತು. ಅದನ್ನು ಕೈಗೆ ತೆಗೆದುಕೊಂಡ ಮಹಾವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ತುಲನೆ ಮಾಡಲಾಗದಷ್ಟು ಮಹತ್ವವಿರುವ ಆ ಗಿಡಕ್ಕೆ ತುಲಸಿ ಎಂದು ಹೆಸರಿಟ್ಟು, ಲಕ್ಷ್ಮಿಯೊಂದಿಗೆ ತುಲಸಿಯನ್ನೂ ವಿಷ್ಣುವು ಮದುವೆಯಾದನು ಎಂಬುದು ಗೊತ್ತಾಗುತ್ತದೆ. ಸನಾತನರಲ್ಲಿ ಪ್ರತಿ ಮನೆಯಲ್ಲೂ ಒಂದು ತುಳಸಿ ಗಿಡವಿರುವುದು ವಾಡಿಕೆ. ತುಳಸಿ ಗಿಡವು ಐಶ್ವರ್ಯವನ್ನೂ, ಸಂತಸವನ್ನೂ ತರುತ್ತದಲ್ಲದೆ ಅಕಾಲಿಕ ಮರಣವನ್ನು ತಡೆಯುತ್ತದೆಂದು ನಂಬಿಕೆಯಿದೆ.
ಇಲ್ಲಿ ಕಥೆಗಳೇನೇ ಇದ್ದರೂ ತುಳಸಿ ಒಂದು ವಿಶಿಷ್ಟವಾದ ಔಷಧೀಯ ಗುಣವುಳ್ಳ ಸಸ್ಯವೆಂಬುದನ್ನು ವಿಜ್ಞಾನವೂ ಒಪ್ಪಿಕೊಂಡಿದೆ. ಈ ಗಿಡದಿಂದ ಸುಮಾರು ಮೂವತ್ಮೂರಕ್ಕೂ ಅಧಿಕ ಕಾಯಿಲೆಗಳನ್ನು ಪರಿಹರಿಸಬಹುದು ಎಂದು ಆಯುರ್ವೇದ ಹೇಳುತ್ತದೆ. ಆಯುರ್ವೇದೀಯ ಔಷಧ ಕ್ರಮಗಳಲ್ಲಿ ತುಳಸಿಯ ಬಳಕೆ ಹಾಸುಹೊಕ್ಕಾಗಿದೆ; ತುಳಸಿಯ ಬಳಕೆಯಿಲ್ಲದಿದ್ದರೆ ಆಯುರ್ವೇದ ಅಪೂರ್ಣವಾಗುತ್ತದೆ.
ತುಳಸಿಯಷ್ಟೇ ಉತ್ತಮ ಅಂಶಗಳನ್ನು ಹೊಂದಿದ ಇನ್ನೊಂದು ಗಿಡ ನೆಲ್ಲಿ. ಬೆಟ್ಟದಲ್ಲಿ ಎತ್ತರದ ಮರವಾಗಿಯೂ ಬೆಳೆಯುವ ಇದನ್ನು ಬೆಟ್ಟನೆಲ್ಲಿ ಎಂದೂ ಹೇಳಲಾಗುತ್ತದೆ. ಮೋಸಗೊಂಡ ವೃಂದಾಳನ್ನು ಸಂಭಾಳಿಸುವ ಸಲುವಾಗಿ ಆಕೆ ತುಳಸಿಯಾಗಿ ಜನಿಸಿದ ಮೇಲೆ, ಕಾರ್ತಿಕದ ದಿನಗಳಲ್ಲಿ ನೆಲ್ಲಿಯ ಗಿಡದಲ್ಲಿ ತಾನಿದ್ದು ಆಕೆಯನ್ನು ಮಹಾವಿಷ್ಣು ರಮಿಸುವನೆಂಬುದೊಂದು ಐತಿಹ್ಯ. ಅದೇ ಕಾರಣದಿಂದ ಮತ್ತು ನಂಬಿಕೆಯಿಂದ, ಇಂದಿಗೂ ಸಹ ತುಳಸಿಯ ಜೊತೆಗೆ ನೆಲ್ಲಿಯ ಚಂಡೆಯನ್ನೂ ಇಟ್ಟು ಪೂಜಿಸುವ ಸಂಪ್ರದಾಯ ಬಹುತೇಕ ಕಡೆಗಳಲ್ಲಿ ಕಾಣುತ್ತದೆ. ನೆಲ್ಲಿಯಲ್ಲಿ ವಾತ ಪಿತ್ತಗಳನ್ನು ಶಮನ ಮಾಡುವ ಶಕ್ತಿಯಿದೆ. ರಕ್ತದೋಷವನ್ನೂ ನಿವಾರಿಸುವ ಶಕ್ತಿಯಿದೆ. ಸಾಮಾನ್ಯವಾಗಿ ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಿದರೆ, ಸಂಜೆಯ ಸಮಯದಲ್ಲಿ ತುಳಸೀ ವಿವಾಹವನ್ನು ಮಾಡುವರು. ಪುರಾಣ ಪುಣ್ಯಕಥೆಗಳಲ್ಲಿ ಉಲ್ಲೇಖಿಸಿದಂತೆ ನಾರಾಯಣನಿಗೆ ತುಳಸೀ ಮಾಲೆ ಅತ್ಯಂತ ಪ್ರೀತಿಪಾತ್ರವಾದುದು. ತುಳಸಿ ಒಬ್ಬ ಗೋಪಿಕೆಯಾಗಿಯೂ ಶ್ರೀಕೃಷ್ಣನ ಪ್ರೇಮಿಯಾಗಿಯೂ ಇದ್ದಳಂತೆ. ಕೃಷ್ಣನ ತುಲಾಭಾರದಲ್ಲಿ ತುಳಸಿಗಿರುವ ಮಹತ್ತನ್ನು ತೋರಿಸುವ ಸಲುವಾಗಿ ಕೃಷ್ಣ ಕೈಗೊಂಡ ನಿರ್ಧಾರದಂತೆ, ತುಳಸೀದಳವನ್ನು ಇಡಲು, ಆ ಕಡೆಗೇ ತಕ್ಕಡಿ ವಾಲಿತ್ತೆಂಬ ಪುರಾಣೋಕ್ತ ಕಥೆಯಿದೆ. ಕೆಲವರು ಕೃಷ್ಣಭಕ್ತೆಯಾದ ಮೀರಾಳನ್ನೂ ತುಳಸಿಯೆಂದು ಹೇಳುವುದುಂಟು.
ತುಳಸಿ ಹೇರಳವಾಗಿ ಆಮ್ಲಜನಕವನ್ನು ಹೊರಗೆಡಹುತ್ತಿರುವುದರಿಂದ ಇದು ವಾತಾವರಣದ ಶುದ್ಧೀಕರಿಸುತ್ತದೆ ಮತ್ತು ದೇಹದ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ ಎಂಬುದಾಗಿ ವಿಜ್ಞಾನ ತಿಳಿಸಿದೆ. ತುಳಸಿಯ ಎಲೆ ಹಾಗೂ ಬೇರುಗಳಲ್ಲಿ ಔಷಧೀಯ ಗುಣವನ್ನು ಹೊಂದಿರುವುದರಿಂದ ವೈದ್ಯಶಾಸ್ತ್ರವೂ ಇದಕ್ಕೆ ಪ್ರಾಧಾನ್ಯ ನೀಡಿದೆ. ಶಾಸ್ತ್ರರೀತ್ಯಾ ತುಳಸಿಯಲ್ಲಿ ಪ್ರತಿಶತ ಐವತ್ತರಷ್ಟು ವಿಷ್ಣುತತ್ತ್ವ ಮತ್ತು ಬಿಲ್ವದಲ್ಲಿ ಪ್ರತಿಶತ ಎಪ್ಪತ್ತರಷ್ಟು ಶಿವತತ್ತ್ವವಿರುತ್ತದೆ. ತುಳಸಿ ಮತ್ತು ಬಿಲ್ವಗಳನ್ನು ಪೂಜೆಯಲ್ಲಿ ಉಪಯೋಗಿಸುವುದರಿಂದ ಅವುಗಳಲ್ಲಿನ ದೇವತೆಗಳ ತತ್ತ್ವವು ಪ್ರತಿಶತ ಇಪ್ಪತ್ತರಷ್ಟು ಹೆಚ್ಚಾಗುತ್ತದೆ. ವಾತಾವರಣದಲ್ಲಿರುವ ರಜ-ತಮಗಳ ಪರಿಣಾಮವು ಪ್ರತಿಯೊಂದು ವಸ್ತುವಿನ ಮೇಲೆ ಆಗುತ್ತಿರುತ್ತದೆ. ತುಳಸಿ ಮತ್ತು ಬಿಲ್ವಗಳ ಮೇಲೆಯೂ ರಜ-ತಮಗಳ ಪರಿಣಾಮವಾಗುತ್ತದೆ. ರಜ-ತಮದೊಂದಿಗೆ ಹೋರಾಡಲು ದೇವತೆಯ ಪ್ರತಿಶತ ಇಪ್ಪತ್ತರಷ್ಟು ತತ್ತ್ವವು ವ್ಯಯವಾಗುತ್ತದೆ. ಇದರ ಪರಿಣಾಮವಾಗಿ ತುಳಸಿ ಮತ್ತು ಬಿಲ್ವಗಳು ಒಣಗುತ್ತವೆ. ಆದರೆ ಅವುಗಳಲ್ಲಿ ಮೂಲತಃ ಇರುವ ದೇವತೆಯ ತತ್ತ್ವಗಳು ಹಾಗೆಯೇ ಇರುತ್ತವೆ ಮತ್ತು ಅವು ಯಾವಾಗಲೂ ಅವುಗಳನ್ನು ಪ್ರಕ್ಷೇಪಿಸುತ್ತಿರುತ್ತವೆ. ಈ ಕಾರಣದಿಂದಲೇ ತುಳಸಿಯ ಎಲೆಗಳು ಮತ್ತು ಬಿಲ್ವಪತ್ರೆಯು ಯಾವಾಗಲೂ ಶುದ್ಧವಾಗಿರುತ್ತವೆ. ತುಳಸಿಯು ಯಾವಾಗಲೂ ದೇವತೆಯ ತತ್ತ್ವವನ್ನು ಪ್ರಕ್ಷೇಪಿಸುತ್ತಿರುವುದರಿಂದ ತನ್ನ ಸುತ್ತಲಿರುವ ವಾತಾವರಣವನ್ನು ಪವಿತ್ರಗೊಳಿಸುತ್ತದೆ. ಆದುದರಿಂದಲೇ ಯಾವ ಮನೆಯಲ್ಲಿ ತುಳಸಿ ವೃಂದಾವನ ಇರುತ್ತದೆಯೋ ಆ ಮನೆಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಪಂಚಭೂತಾತ್ಮಕವಾದ ಮಾನವ ಶರೀರದಲ್ಲಿ ಬೆಳಿಗ್ಗೆಯ ನಂತರದ ಘಳಿಗೆಗಳಲ್ಲಿ ರಜ-ತಮ ಗುಣಗಳು ಹೆಚ್ಚುತ್ತವೆ. ಮಧ್ಯಾಹ್ನದ ನಂತರ ಈ ಗುಣಗಳು ಅತಿಯಾಗಿ ಹೆಚ್ಚಿರುವುದರಿಂದ ಈ ಸಮಯದಲ್ಲಿ ತುಳಸಿಯನ್ನು ಮುಟ್ಟಬಾರದು ಎಂಬ ಸಂಪ್ರದಾಯವಿದೆ; ಯಾಕೆಂದರೆ ಶ್ರೀತುಳಸಿ ಸದಾ ಸಾತ್ವಿಕವಾಗಿರುತ್ತದೆ.
ತುಳಸಿಯ ಆಯುರ್ವೇದೀಯ ಗುಣಗಳಲ್ಲಿ ಕೆಲವು ಇಂತಿವೆ: ದೇಹದ ರಕ್ತ ಶುದ್ಧಿಗೆ ತುಳಸೀಗಿಡದ ಬೇರಿನ ಲೇಹ್ಯವು ಪರಿಣಾಮಕಾರಿ. ತುಳಸೀ ಎಲೆಗಳೊಂದಿಗೆ ಪುದೀನಾ ಎಲೆಗಳನ್ನು ಸೇರಿಸಿ ತಿಂದರೆ ಹೊಟ್ಟೆಯ ಜಂತು ಹುಳುಗಳು ನಾಶವಾಗುತ್ತವೆ. ಅಸ್ತಮಾದಿಂದ ಉಸಿರಾಟಕ್ಕೆ ತೊಂದರೆಯಾದಾಗ ತುಳಸೀರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಉಸಿರಾಟವು ಸರಾಗವಾಗುವುದು. ಕೆಮ್ಮು-ಶೀತ ನೆಗಡಿಯಾದಾಗ ತುಳಸಿಯ ಕಷಾಯವು ದಿವ್ಯೌಷಧ. ಕೆಲವು ಬಗೆಯ ಚರ್ಮರೋಗಗಳಿಗೆ ತುಳಸಿ ಎಲೆ ಮತ್ತು ಉಪ್ಪು ಸೇರಿಸಿ ಅರೆದು ಹಚ್ಚಿದರೆ ವಾಸಿಯಾಗುವುದೆಂದು ತಿಳಿದುಬಂದಿದೆ. ತುಳಸಿಯು ಕೀಟ ಪ್ರತಿರೋಧಕ ಸಸ್ಯವೂ ಹೌದು. ಮನೆಯ ಅಂಗಳದಲ್ಲಿ ಸಾಲಾಗಿ ತುಳಸಿ ಗಿಡಗಳನ್ನು ನೆಟ್ಟು ಬೆಳೆಸಿದರೆ ಸೊಳ್ಳೆ-ಹಾವುಗಳ ಕಾಟವೂ ಇರುವುದಿಲ್ಲ. ಶ್ರೀ ತುಳಸಿ, ಕೃಷ್ಣ ತುಳಸಿ. ಈ ಎಲೆ, ಬೇರು, ಬೀಜ ಹಾಗೂ ಸಂಪೂರ್ಣ ಗಿಡವೇ ಉಪಯುಕ್ತ ಎನ್ನುವುದು ತುಳಸಿಯ ಇನ್ನೊಂದು ವಿಶೇಷ. ತುಳಸಿ ಎಲೆಗಳನ್ನು ಶುಚಿಗೊಳಿಸಿದ ತಾಮ್ರದ ಪಾತ್ರೆಗಳಲ್ಲಿ ಶೇಖರಿಸಿಟ್ಟ ನೀರಿನಲ್ಲಿ ಹಾಕಿಟ್ಟರೆ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತದೆ. ಪ್ರತಿದಿನ ಸೂರ್ಯೋದಯಕ್ಕೆ ಮುನ್ನ, ಅಂದರೆ ಬ್ರಾಹ್ಮೀ ಮಹೂರ್ತದಲ್ಲಿ ಇದನ್ನು ಉಷಾಪಾನ ಮಾಡಿದರೆ ಅರ್ಥಾತ್ ಕುಡಿದರೆ ಇದು ಫಲಕಾರಿಯಾಗಿರುತ್ತದೆ. ತುಳಸಿ ಭಾರತೀಯರ ಪಾಲಿಗೆ ಸಂಜೀವಿನಿ. ಯಾವುದೇ ಪೂಜಾ ಸಮಯದಲ್ಲಿ ನೈವೇದ್ಯಕ್ಕೆ ತುಳಸಿ ದಳಗಳನ್ನು ಸೇರಿಸುವುದು ಇದರ ಪಾವಿತ್ರ್ಯಕ್ಕೆ ಸಾಕ್ಷಿ.
‘ಓಸಿಯಂ’ ಉಪವರ್ಗದ ಲ್ಯಾಮಿಯೇಸಿ ಕುಟುಂಬಕ್ಕೆ ಸೇರಿದ ತುಳಸಿಯಲ್ಲಿ ಸುಮಾರು ೧೫೦ ಪ್ರಭೇದಗಳಿವೆ. ಓಸಿಯಂನ ಹೆಚ್ಚಿನ ಪ್ರಭೇದಗಳು ಆಫ್ರಿಕಾದ ಶೀತವಲಯದ ಮಳೆ ಬೀಳುವ ಅರಣ್ಯ ಪ್ರದೇಶದಿಂದ ಬಂದಿದ್ದೆಂದು ಹೇಳಲಾಗುತ್ತದೆ. ಇವು ಸಮುದ್ರಮಟ್ಟದಿಂದ ಸುಮಾರು ೧೮೦೦ ಮೀ ಎತ್ತರದವರೆಗಿನ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ತುಳಸಿಯನ್ನು ಇಂದು ವಿಶ್ವದಾದ್ಯಂತ ಕಾಣಬಹುದಾಗಿದ್ದರೂ, ಉಷ್ಣವಲಯದಲ್ಲಿ ಇದು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತದೆ. ಸಮಶೀತೋಷ್ಣ ಪ್ರದೇಶದಲ್ಲಿ ಸಾಮಾನ್ಯವಾಗಿ ಮತ್ತು ಶೀತವಲಯದಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆಯುತ್ತದೆ ಎಂಬುದು ಗಮನಾರ್ಹ ವಿಷಯ. ತುಳಸಿಯಲ್ಲಿ ಶ್ರೀ ತುಳಸಿ, ಕೃಷ್ಣ ತುಳಸಿ, ಸುಗಂಧ ತುಳಸಿ, ಕಾಮಕಸ್ತೂರಿ , ಕರ್ಪೂರತುಳಸಿ, ರಾಮ ತುಳಸಿ, ರಕ್ತತುಳಸಿ, ಕ್ಷುದ್ರಪತ್ರ ತುಳಸಿ ಇತ್ಯಾದಿಗಳಿದ್ದರೂ, ಇವುಗಳ ಪೈಕಿ ಕಾಮಕಸ್ತೂರಿ ಮತ್ತು ಕರ್ಪೂರ ತುಳಸಿಗಳಿಗೆ ವಾಣಿಜ್ಯ ದೃಷ್ಟಿಯಿಂದ ಹೆಚ್ಚಿನ ಪ್ರಾಮುಖ್ಯತೆಯಿದೆ. ಸಂಸ್ಕೃತದಲ್ಲಿ ತುಲಸಿಗೆ ಹಲವು ಹೆಸರುಗಳಿವೆ: ತುಲಸಿ, ಸುಲಭಾ, ಸುರನಾ, ಬಹುಮಂಜರಿ, ಶೂಲಘ್ನೀ, ದೇವ ದುಂದುಭಿ, ಪಾವನೀ ವಿಷ್ಣುಪ್ರಿಯಾ, ದಿವ್ಯಾ, ಭಾರತೀ ಹೆಸರುಗಳು ಪ್ರಮುಖವಾಗಿ ಕಾಣುತ್ತವೆ.
ಕರ್ಪೂರತುಳಸಿ: ಕರ್ಪೂರ ತುಳಸಿಯ ತವರು ಕೆನ್ಯಾ ದೇಶ. ಇದನ್ನು ಇಂಗ್ಲೀಷ್ನಲ್ಲಿ ‘ಕ್ಯಾಂಪರ್ ಬೆಸಿಲ್’ ಎನ್ನುತ್ತಾರೆ. ಸಸ್ಯಶಾಸ್ತ್ರದಲ್ಲಿ ಇದನ್ನು ’ಆಸಿಮಮ್ ಕಿಲಿಮಂಜಾರಿಕಮ್’ ಎನ್ನಲಾಗುತ್ತದೆ. ಈ ಸಸ್ಯದ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ-ಭಟ್ಟಿ ಇಳಿಸಿದಾಗ, ಸುವಾನಸೆಯುಳ್ಳ ತೈಲ ದೊರಕುತ್ತದೆ. ಇದರ ಬಹುಪಾಲು ಗಟ್ಟಿಯಾಗಿದ್ದು, ಇದನ್ನೆ ಕರ್ಪೂರವೆನ್ನುವುದು. ಇದರ ಬೇರ್ಪಡಿಸುವಿಕೆಯಿಂದಾಗಿ ದೊರಕುವ ಎಣ್ಣೆಯನ್ನು ‘ಕ್ಯಾಂಫರ್ ಅಯಿಲ್’ ಎನ್ನುತ್ತಾರೆ. ಈ ತೈಲವನ್ನು ಸಾಬೂನುಗಳ ತಯಾರಿಗೆ, ಕೀಟನಾಶಕವಾಗಿ, ಸೊಳ್ಳೆಗಳ ತಡೆಗಟ್ಟುವಿಕೆಗೆ ಉಪಯೋಗಿಸುತ್ತಾರೆ.
ತುಳಸೀ ಪೂಜೆಯ ಸಂದರ್ಭದಲ್ಲಿನ ಮಂತ್ರ:
ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ ||
ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿಕೇ ||
ತುಲಸ್ಯಾಂ ಸಕಲಾ ದೇವಾಃ ವಸಂತಿ ಸತತಂ ಯತಃ |
ಅತಸ್ತಾಮರ್ಚಯೇಲ್ಲೋಕೇ ಸರ್ವಾನ್ ದೇವಾನ್ ಸಮರ್ಚಯನ್ ||
ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಮ್ ||
ಪ್ರಸೀದ ತುಳಸೀದೇವಿ ಪ್ರಸೀದ ಹರಿವಲ್ಲಭೇ
ಕ್ಷೀರೋದ ಮಥನೋದ್ಭೂತೇ ತುಳಸೀ ತ್ವಾ೦ ನಮಾಮ್ಯಹಮ್
ಎ೦ಬ ಶ್ಲೋಕದಿ೦ದ ತುಳಸಿಯನ್ನು ಧ್ಯಾನಿಸುವುದು, ಪೂಜಿಸುವುದು ಭಾರತೀಯರ ಸಂಪ್ರದಾಯ. ಶ್ಲೋಕ ಗೊತ್ತಿರದ ಭಾರತೀಯರಿಗೂ ಸಹ ತುಳಸಿಯ ಮಹತ್ವ ತಿಳಿದಿದೆ. ದೇವರಿಗೆ ನೈವೇದ್ಯ ಮಾಡುವಾಗ, ಶ್ರಾದ್ಧದ ವೇಳೆಯಲ್ಲಿ ದಾನ ನೀಡುವ ಸಮಯದಲ್ಲಿ ತುಳಸಿ ಅತ್ಯವಶ್ಯಕ. ದೇವತಾ ಪೂಜೆಯ ನ೦ತರ ತುಳಸಿ ಹಾಕಿರುವ ತೀರ್ಥವನ್ನು ಸೇವಿಸುವುದರಿ೦ದ ನಮ್ಮ ಶರೀರವು ಶುದ್ಧವಾಗುತ್ತದೆ. ಸನಾತನರಲ್ಲಿ ಮೃತರ ಕಳೇಬರವನ್ನು ಒಂದು ವಿಧಾನವಾದ ದಹನಕ್ರಿಯೆಗೆ ಒಳಪಡಿಸುವುದಾದರೆ, ಮೇಲೆ ತುಳಸಿ ಕಾಷ್ಟವನ್ನು ಇಟ್ಟು ಸುಡುತ್ತಾರೆ. ಇದರಿ೦ದ ಮೃತನ ದೇಹಕ್ಕೆ ಸದ್ಗತಿ ಸಿಗುತ್ತದೆ ಎ೦ಬ ನ೦ಬಿಕೆಯಿದೆ. ಹೀಗೆ ಲಕ್ಷ್ಮೀನಾರಾಯಣನ ಸಾನ್ನಿಧ್ಯವನ್ನು ಹೊ೦ದಿರುವ ತುಳಸಿಯನ್ನು ಪ್ರತಿನಿತ್ಯವೂ ಮತ್ತು ಹಬ್ಬಗಳಲ್ಲಿ ವಿಶೇಷ ರೀತಿಯಲ್ಲೂ ಪೂಜಿಸುವುದು ಸನಾತನ ಧಾರ್ಮಿಕ ಸ೦ಪ್ರದಾಯದ ಒ೦ದು ಪ್ರಮುಖ ಅ೦ಗವಾಗಿದೆ.
ಮನೆಯ ಮುಂದೆ ಒಂದಕ್ಕಿಂತ ಹೆಚ್ಚಿಗೆ ತುಳಸೀ ಗಿಡಗಳಿದ್ದರೆ ಇರುವ ಎಲ್ಲಾ ತುಳಸೀ ಗಿಡಗಳಿಗೆ ಕಟ್ಟೆ ಇರಬೇಕೆಂದಿಲ್ಲ. ಕಟ್ಟೆ ಕಟ್ಟುವುದರಿಂದ ನೀರು ಅತ್ತಿತ್ತ ಹೋಗುವುದಿಲ್ಲ ಮತ್ತು ಗಿಡದಿಂದ ಉದುರುವ ಹಣ್ಣೆಲೆಗಳು ಗೊಬ್ಬರದಂತೆ ಅದರಲ್ಲಿಯೇ ಉಳಿದು ಗಿಡದ ಬೆಳವಣಿಗೆಗೆ ಅನುಕೂಲವಾಗುವುದು. ಉತ್ಥಾನ ದ್ವಾದಶಿಯಂದು ಮಹಾವಿಷ್ಣುವನ್ನು ಎಚ್ಚರಿಸಲು ತ್ರಿಮೂರ್ತಿ ಪತ್ನಿಯರು ಮೂರು ಬೀಜಗಳನ್ನು ಎರಚಿದ್ದರಂತೆ ಎಂಬುದು ಇನ್ನೊಂದು ಐತಿಹ್ಯ. ಮೊದಲನೆಯ ಬೀಜವನ್ನು ಧಾತ್ರಿ (ಸರಸ್ವತಿ) ಎರಚಿದ್ದರಿಂದ, ಆಗ ಜನಿಸಿದವಳು ಧರಿತ್ರಿಯೆನಿಸಿದಳು. ಲಕ್ಷ್ಮಿಯು ಎರಚಿದ ಬೀಜದಿಂದ ಜನಿಸಿದವಳು ಮಾಲತಿ ಮತ್ತು ಗೌರಿಯು ಎರಚಿದ ಬೀಜದಿಂದ ಜನಿಸಿದವಳು ತುಳಸೀ. ಮನೆಯ ಮುಂದೆ ತುಳಸಿಯೊಡನೆ ಮಾಲತೀ ಹೂವಿನ ಗಿಡಗಳನ್ನು ಕಟ್ಟೆಕಟ್ಟಿ ನೆಡುವ ಅಭ್ಯಾಸ ಕೂಡ ಕೆಲವೆಡೆ ಕಂಡುಬರುತ್ತದೆ. ’ತು’ ಎಂದರೆ ಮೃತ್ಯು, ’ಲಸಿ’ ಎಂದರೆ ಧಿಕ್ಕರಿಸುವುದು; ಇದು ತುಳಸಿಯ ಅರ್ಥ. ಕಾರ್ತಿಕ ಮಾಸದಲ್ಲಿ ಪ್ರತಿ ದಿನ ತುಳಸಿಯನ್ನು ಪೂಜಿಸಿ, ನಮಸ್ಕರಿಸಿದರೆ ಯುಗದಲ್ಲಿ ಮಾಡಿದ ಪಾಪ ನಶಿಸುತ್ತದೆ ಎಂಬ ನಂಬಿಕೆಯಿದೆ. ಇಂಥಾ ಪವಿತ್ರ ಹಾಗೂ ಔಷಧೀಯ ಗುಣಗಳನ್ನು ಹೊಂದಿದ ತುಳಸಿಯನ್ನು ಉತ್ಥಾನ ದ್ವಾದಶಿಯಂದು ವಿಶೇಷವಾಗಿ ಪೂಜೆ ಸಲ್ಲಿಸಿ ಧನ್ಯರಾಗಲು ಹಬ್ಬವೆಂಬುದೊಂದು ಅವಕಾಶ.
ಎಲ್ಲರ ಮನೆ ಮುಂದೆ ಇರುವ ತುಳಸಿಯ ಪ್ರಾಮುಕ್ಯತೆ ಮತ್ತು ಅದರ ಹಿನ್ನೆಲೆ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಅದನ್ನು ವಿವರವಾಗಿ ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗಳು...
ReplyDeleteಧನ್ಯವಾದಗಳು.
Delete