ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, August 24, 2010

ಮನದ ರಶ್ಮಿ

ಕಲ್ಪನಾ ಚಿತ್ರ : ರಾಜಾ ರವಿವರ್ಮ ವಿರಚಿತ , ಚಿತ್ರ ಕೃಪೆ : ಅಂತರ್ಜಾಲ

ಜೀವನದಲ್ಲಿ ಹಲವಾರು ಪಾತ್ರಗಳು ಬಂದು ಹೋಗುತ್ತವೆ. ಆದರೆ ನಮ್ಮ ಜೊತೆ ತಮ್ಮನ್ನು ಅರ್ಧಭಾಗವಾಗಿ ಹಂಚಿಕೊಳ್ಳುವ ಅರ್ಧಾಂಗಿಯನ್ನು ನಾವು ಕೃತಜ್ಞತೆಯಿಂದ ಕಂಡರಷ್ಟೇ ನಮ್ಮ ಪಾತ್ರ ತುಂಬಿಬರುತ್ತದೆ. ನಮಗಾಗಿ ಹುಟ್ಟಿದ ಮನೆಯನ್ನು ಬಿಟ್ಟು, ನಮ್ಮ ಬದುಕಿನ ಕಷ್ಟಕೋಟಲೆಗಳಲ್ಲಿ ನಮ್ಮನುವರ್ತಿಯಾಗಿ, ನಮ್ಮ ನೋವು-ನಲಿವನ್ನು ಹಂಚಿಕೊಂಡು, ನಮ್ಮ ಕೆಲಸಗಳನೇಕವನ್ನು ಮಾಡಿಕೊಟ್ಟು, ನಮಗೆ ಬೇಕುಬೇಕಾದ ತಿಂಡಿತಿನಿಸು ಮಾಡಿಬಡಿಸಿ, ನಮ್ಮ ಮುಂದಿನ ಕುಡಿಗಳಿಗೆ ಅಮ್ಮನಾಗಿ-ಹೊತ್ತು, ಹೆತ್ತು, ಸಲಹಿ, ಬೆಳೆಸಿ, ಅವರ ಬೇಕು-ಬೇಡಗಳನ್ನೂ ಗಣನೆಗೆ ತೆಗೆದುಕೊಂಡು ಹೀಗೇ ಹಲವು ಹತ್ತು ಕಾರ್ಯಗಳಲ್ಲಿ ಜೋಡಿ ಎತ್ತಿನಂತೇ ನಮಗೆ ಹೆಗಲುಗೊಡುವ ಹೆಂಡತಿಯ ಪಾತ್ರ ನಿಜಕ್ಕೂ ಬಹಳ ದೊಡ್ಡದು.


ಇಚ್ಛೆಯನರಿತು ನಡೆವ ಸತಿಯಾಗೆ
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ | ಸರ್ವಜ್ಞ

----ಇದು ಸರ್ವಜ್ಞ ಹೇಳಿದ್ದು. ಅದರಂತೇ ಈ ವಿಷಯದಲ್ಲಿ ನನಗೆ ನನ್ನ ಇಚ್ಛೆಯನ್ನರಿತು ನಡೆಯುವ ಸತಿ ಸಿಕ್ಕಿದ್ದಾಳೆ ಎಂದು ಹೆಮ್ಮೆಯಿಂದ ನಿಮ್ಮೆದುರಲ್ಲಿ ಬೀಗಲು ನಾಚಿಕೆಯೇನಿಲ್ಲ! ದಿನಾಲೂ ಓದುಗ ಮಿತ್ರರಿಗೆ ನಾನು ಉಣಬಡಿಸುವ ಬರಹಗಳ ಹಿಂದೆ ಅವಳ ತ್ಯಾಗ ಬಹಳವಿದೆ. ಅವಳಜೊತೆಗೆ ಕಳೆಯಬಹುದಾದ ಸಮಯವನ್ನು ಮೊಟಕುಗೊಳಿಸಿ ಸರಿರಾತ್ರಿ ೧ ಘಂಟೆಯವರೆಗೆ ಬರೆಯುತ್ತ ಕೂರುವ ನನಗೆ ಏನೊಂದೂ ಕಮಕ್ ಕಿಮಕ್ ಎನ್ನದೇ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾಳೆ ನನ್ನ ರಶ್ಮಿ. ಅವಳು ನನ್ನ ಬಾಳಿಗೆ, ನನ್ನ ಪಾಲಿಗೆ ’ರಶ್ಮಿ’ಯೇ ಸರಿ.

ಕರ್ನಾಟಕ ಸಂಗೀತವನ್ನು ಅಭ್ಯಸಿಸಿ ತನ್ನ ಇಂಪಾದ ಕಂಠದಿಂದ ಹಿರಿಯ ಕವಿಗಳಾದ ಬೇಂದ್ರೆ, ಪು.ತಿ.ನ.,ಲಕ್ಷ್ಮೀನಾರಾಯಣ ಭಟ್ಟ, ಎಚ್.ಎಸ್.ವಿ., ಕುವೆಂಪು, ನಿಸಾರ್ ಅಹಮ್ಮದ್ ಮೊದಲಾದವರ ಕವನಗಳ ಜೊತೆ ನನ್ನ ಹಲವು ಹಾಡುಗಳನ್ನೂ ನನಗಾಗಿ ನಾನು ಕೇಳಿದಾಗ ಹಾಡಿ ರಂಜಿಸುವ ಆಕೆಗೆ ಈ ದಿನ ಹುಟ್ಟಿದ ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಎಂಟುವರ್ಷಗಳಿಂದ ನನ್ನ ಬಿಡಿಸಲಾರದ ಭಾಗವಾದ ಆಕೆಯ ಹಾಗೂ ನನ್ನ ಮದುವೆಯ ಕಾಲದ ಕೆಲವು ನೆನಪಿನ ತುಣುಕುಗಳನ್ನು ಮತ್ತು ಮಗ ’ಶುಭಾಂಗ’ನ ಬಗೆಗೂ ಸೇರಿದಂತೆ ಇದೊಂದು ದಾಂಪತ್ಯ ಗೀತೆಯನ್ನು ಬರೆದಿದ್ದೇನೆ. ಇದನ್ನು ನನ್ನ ವಿಶಾಲ ಕುಟುಂಬದವರಾದ ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತದೆ. ಬನ್ನಿ ಅನುಭವಿಸಿ, ನಮ್ಮ ಜೀವನದ ಸವಿನೆನಪುಗಳನ್ನು--

ಮನದ ರಶ್ಮಿ

ನೆನಪಿನಂಗಳದಲ್ಲಿ ಮನವನ್ನು ಆಡಬಿಡೆ
ಬನಸಿರಿಯ ಸೊಬಗಂತೆ ಮೆರೆವ ಪುಟಗಳನು
ಅನಿತರೋಳ್ ಎನ್ನೊಡತಿ ಸೂರ್ಯ’ರಶ್ಮಿ’ಯ ತೆರದಿ
ಘನತರಂಗಗಳೆಬ್ಬಿ ನಗುವ ಚಿಮ್ಮಿದಳು

ಎಂಟುವರ್ಷಕು ಮುನ್ನ ನಾನ್ಯಾರೋ ಅವಳ್ಯಾರೋ
ಗಂಟುಬೀಳುವ ಕನಸು ನಮ್ಮಲಿರಲಿಲ್ಲ!
ನಂಟಾಯ್ತು ಆ ಜೀವ ನನ್ನೊಡನೆ ತಾ ನಡೆದು
ಕುಂಟು ನೆಪವದು ಸಾಕು ಒಮ್ಮೆ ಮುದ್ದಿಸಲು

" ಹೋಗಿ, ನಾ ಬರಲಾರೆ ಇದೇ ಮೊದಲು ಇದೇ ಕೊನೆಯು "
ಆಗ ನಾ ಗದರಿಸಿದೆ ನನ್ನ ಪಾಲಕರ
" ಬೇಗ ನೀ ಬಂದೊಮ್ಮೆ ನೋಡಿ ಹೋಗಿಬಿಡೆನುತ "
ರಾಗದಲಿ ಮೆದುಗೊಳಿಸಿ ನಡೆತಂದರೆನ್ನ !

ಸಾಗರದ ಈ ಹುಡುಗಿ ವೇಗದಲಿ ಮನಕದ್ದು
ಜಾಗರಣೆ ಕೂರಿಸಿದಳೆನ್ನ ಹಲವುದಿನ !
’ಜಾಗ’ ತುಂಬುವ ಮುಗುದೆ ಇವಳೇ ಸರಿಯೆಂದೆನಿಸಿ
ಬೀಗ ರವಾನಿಸಿದೆ ಹೃದಯದಿಂ ಸುದಿನ

ಬೀಗರೊಪ್ಪುತ ಹೊತ್ತಗೆಯ ತೆಗೆದು ದಿನಗುಣಿಸಿ
’ಮೇ’ಗಾಯ್ತು ತಿಥಿಮಿತಿಯ ತಾರಾನುಕೂಲ
ಸಾಗಾಟ ನಡೆದಿತ್ತು ನಡುವಲ್ಲಿ ನಮ್ಮೊಳಗೆ:
’ಮೇಘ ಸಂದೇಶ’ವಿಹ ಪ್ರೇಮ ಪತ್ರಗಳ !

ಪೆಪೆಪೆಪೆ ಮಂಗಳದ ವಾದ್ಯಗಳು ಮೊಳಗಿರಲು
ತಪಪಪಪ ಸಾವಿರದ ಚಪ್ಪಾಳೆ ತಟ್ಟಿ
ಹಿಪಿಪಿಪಿಪಿ ನಗೆಗಡಲ ಗದ್ದಲದ ಮಂಟಪದಿ
ಟಪಪಪಪ ಅಕ್ಷತೆಗಳುದುರಿ ಹರಸಿದವು

ಗಣಪ ಈಶ್ವರ ’ವಿಷ್ಣು’ ಎಲ್ಲ ದೈವಗಳನ್ನು
ಗಣನೆಯಲಿ ತಂದು ಶೋಧಿಸುತಿಟ್ಟ ಹೆಸರು
ಕೆಣಕುವನು ಆಗಾಗ ಕೈಕಾಲು ಮೈ ಹತ್ತಿ
ಅಣಕಿಸುತ ನಾಲ್ಕುವರೆ ವಯದ ’ಶುಭಾಂಗ’

Monday, August 23, 2010

ರಕ್ಷಾಬಂಧನ ಮತ್ತು ಉಪಾಕರ್ಮ



ಶ್ರೀ ಗಾಯತ್ರೀ ದೇವಿ

[ಚಿತ್ರಗಳ ಋಣ : ಅಂತರ್ಜಾಲ ]
ರಕ್ಷಾಬಂಧನ ಮತ್ತು ಉಪಾಕರ್ಮ

ಶ್ರಾವಣ ಶುದ್ಧ ಹುಣ್ಣಿಮೆ ನೂಲು ಹುಣ್ಣಿಮೆ ಎಂದೇ ಜನಜನಿತ. ಸಾಮಾನ್ಯವಾಗಿ ಇಲ್ಲಿಯವರೆಗೆ ಸುರಿವ ಮುಂಗಾರಿನ ಮುಸಲಾಧಾರೆಗೆ ಸಾಥ್ ಕೊಟ್ಟು ಹೆದರಿಸುವ ಸಮುದ್ರರಾಜ ವರುಣನಿಗೆ ಉಳ್ಳವರು ಬಂಗಾರದ ಜನಿವಾರ ಅರ್ಪಿಸಿ ತಮಗೆ ಇನ್ನು ಮುಂದೆ ಒಂದು ಹಂತಕ್ಕೆ ಕೆಲಸಮಾಡಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಸಹಕರಿಸು ಎಂದು ಪ್ರಾರ್ಥಿಸುವ ದಿನ. ನಮ್ಮ ಪಂಚಭೂತಗಳಲ್ಲಿ ಒಂದಾದ ನೀರಿಗೂ ನಮ್ಮ ವರುಣಮಹಾರಾಜರಿಗೂ ಮತ್ತು ಇಂದ್ರಾದಿ ದೇವತೆಗಳಿಗೂ ಒಳಗೊಳಗೆ ಇಂಟರ್ನೆಟ್ ಇದೆ! ಈ ಅತೀ ಬ್ರಾಡ್ಬ್ಯಾಂಡ ನೆಟ್ ಮೂಲಕ ಅವರು ಸದಾಕಾಲ ಸಂಪರ್ಕದಲ್ಲಿರುತ್ತಾರೆ!

ರಕ್ಷಾಬಂಧನ 'ತನ್ನ ಶೀಲವನ್ನು ರಕ್ಷಣೆ ಮಾಡುವ ಅಣ್ಣ ನೀನು' ಎಂದು ತಂಗಿಯಾದವಳು ಅಣ್ಣನಿಗೆ ರಕ್ಷಾದಾರವನ್ನು ಕಟ್ಟುವ ಒಂದುಕ್ರಮವಾದರೆ ಇನ್ನೊಂದೆಡೆ ಹೊಲದಲ್ಲಿ ಬೆಳೆಯುತ್ತಿರುವ ಪೈರಿಗೆ ಕಾಡಿನಿಂದ ಮೊಲ, ನರಿ, ಜಿಂಕೆ, ಕಡವೆ, ಹಂದಿ ಹೀಗೇ ಹಲವು ಹತ್ತು ಪ್ರಾಣಿಗಳು ನಾಡಿಗೆ ಅಥವಾ ಕೃಷಿಕರ ಹೊಲಗದ್ದೆಗಳಿಗೆ ನುಗ್ಗಿ ತಿಂದು ಹಾಳ್ಗೆಡವದಂತೆ ರಕ್ಷೆಗಾಗಿ ಬೆಚ್ಚು ಅಥವಾ ಬೆದರುಬೊಂಬೆಯನ್ನು ಹೊಲಗದ್ದೆಗಳಲ್ಲಿ ನಿಲ್ಲಿಸುವ ಕಾರ್ಯಕ್ರಮಕೂಡ ಈಗ ನಡೆಯುತ್ತದೆ. ಹಾಗೆ ನೆಟ್ಟ ಬೆದರು ಬೊಂಬೆಗೆ ರಾತ್ರಿ ಹೊತ್ತಿನಲ್ಲಿ ಹೆದರಿಕೊಂಡು ಆ ಪ್ರಾಣಿಗಳು ಬರುತ್ತಿರಲಿಲ್ಲವಂತೆ ಎಂಬುದು ಈಗ ಕಥೆ! ಈಗ ಪ್ರಾಣಿಗಳೂ ಇಲ್ಲ, ಇದ್ದ ಪ್ರಾಣಿಗಳಿಗೆ ಕಾಡಿಲ್ಲ ಹಾಗಾಗಿ ಹಗಲಿಡೀ ಸತ್ಯೋ ಇದ್ಯೋ ಎಂದು ಅಲ್ಲಿಲ್ಲಿ ಅಡಗಿ ಬದುಕುವ ಆ ಜೀವಿಗಳು ರಾತ್ರಿ ರೈತರ ಜಮೀನುಗಳಿಗೆ ನುಗ್ಗುತ್ತವೆ, ನುಗ್ಗಿ ನಿಲ್ಲಿಸಿದ ಬೆದರುಬೊಂಬೆಯನ್ನೇ ಕೆಡವುಹಾಕಿ ತಮ್ಮ ಮೇವನ್ನು ಹುಡುಕುತ್ತವೆ! ಇದು ಡಾರ್ವಿನ್ ವಿಕಾಸ ವಾದ.

ಬರುಬರುತ್ತ ಶಾಲೆ-ಕಾಲೇಜುಗಳಲ್ಲಿ ಕ್ಲಾಸ್ ಮೇಟ್ ಹುಡುಗ ಹುಡುಗಿಯರು ಈ ಹಬ್ಬವನ್ನು ಬಹಳ ಉತ್ಸುಕತೆಯಿಂದ ಆಚರಿಸುತ್ತಾರೆ, ಇದಕ್ಕೆ ಕಾರಣ ರಕ್ಷಾಬಂಧನದ ನೆಪದಲ್ಲಾದರೂ ಕೈಕೈ ಸೋಕಿಸಿಕೊಂಡು ಪುಲಕಿತರಾಗುವ ಬಯಕೆ ಎಂಬುದು ನನ್ನ ಅಭಿಪ್ರಾಯ; ಇದಕ್ಕೆ ಪುರಾವೆಯಾಗಿ ನನ್ನೆದುರೇ ಕೆಲವು ಜೋಡಿಗಳು ಹಾಗೆ ರಾಖಿ ಕಟ್ಟಿಕೊಂಡವರು ಈಗ ನಿಜಜೀವನದ ಜೋಡಿಗಳಾಗಿದ್ದಾರೆ, ಇನ್ನು ಕೆಲವರು ಉಪೇಂದ್ರನ ಕೆಟ್ಟ ಉಪದೇಶವನ್ನು ಸಿನಿಮಾದಿಂದ ಪಡೆದು ಪರಸ್ಪರ ದ್ವೇಷಿಕರಾಗಿ ಬದುಕುತ್ತಿದ್ದಾರೆ. ಇರಲಿ. ಇಲ್ಲಿ ರಾಖಿ ಕಟ್ಟುವುದು ಮುಖ್ಯವಲ್ಲ, ಅದರ ಹಿಂದಿನ ಮನೋಭೂಮಿಕೆ ಬಹಳ ಮುಖ್ಯ. ರಾಖಿ ಕಟ್ಟಿದ ತಕ್ಷಣ ಅವರು ಅಣ್ಣ-ತಂಗಿ ಆಗುತ್ತಾರೆಂಬ ಭಾವನೆ ಸುಳ್ಳು, ರಾಖಿ ಕಟ್ಟದಿದ್ದರೆ ಅವರು ಹಾಗೆ ನಡೆಯಲಾಗುವುದಿಲ್ಲ ಎಂಬ ಅನಿಸಿಕೆಯೂ ಅಷ್ಟೇ ಸುಳ್ಳು.


ಕಟ್ಟುವ ರಾಖಿ ಬಹಳ ಆಡಂಬರದ, ಬಹಳ ಅಲಂಕಾರವನ್ನು ಹೊಂದಿದ ಮತ್ತು ಬಹಳ ದುಬಾರಿಯ ದಾರವೇ ಆಗಬೇಕೆಂದೇನಿಲ್ಲ. ಕೇವಲ ಸಾದಾ ರೇಷ್ಮೆ ದಾರ ಕೂಡ ರಾಖಿಯಾಗಿ ಉಪಯೋಗಿಸಲು ಯೋಗ್ಯ. ಮಾರುಕಟ್ಟೆಯಲ್ಲಿ ಈಗ ಬಹಳ ವಿಧದ ರಾಖಿಗಳು ಸಿಗುತ್ತಿವೆ. ಸಂಗೀತ ಹಾಡುವ, ಪರಿಮಳ ಬೀರುವ, ಗಡಿಯಾರ ಹೊಂದಿರುವ, ಛಾಯಾಚಿತ್ರ ಹಚ್ಚಿರುವ ರಾಖಿಗಳೂ ನೋಡಸಿಗುತ್ತವೆ. ಇಲ್ಲಿ ಉದ್ದಿಮೆದಾರರು ತಮ್ಮ ಸೃಜನಶೀಲತೆ ಮೆರೆದು ಒಂದಷ್ಟು ಕಾಸು ಮಾಡಿಕೊಳ್ಳಲು ನೋಡುತ್ತಾರೆ. ಇವೆಲ್ಲದರ ಹಿಂದೆ ನಾವು ಭಾವಿಸಬೇಕಾದ್ದು ಒಂದೇ -ರಾಖಿ ಎಂಬುದು ರಕ್ಷಣೆಯ ದ್ಯೋತಕ.

ಉಪಾಕರ್ಮ ನಡೆಸುತ್ತಿರುವುದು

ಉಪಾಕರ್ಮಕ್ಕೆ ಬರೋಣ. ಇಂದಿನ ಜನಸಾಮಾನ್ಯರಲ್ಲಿ ಬಹಳ ಜನ ತಮಗೆಲ್ಲಾ ಜನಿವಾರ ಇರಲಿ ಎಂದು ಹಾಕಿಕೊಳ್ಳತೊಡಗಿದ್ದಾರೆ. ಇಲ್ಲೂ ಕೂಡ ಅದರ ಆಚರಣೆಗಿಂತ ಅದರ ತತ್ವಾನುಸರಣೆ ಮುಖ್ಯ. ಜನಿವಾರಕ್ಕೆ ಉಪವೀತ, ಯಜ್ಞೋಪವೀತ ಎಂದೂ ಕರೆಯುತ್ತೇವೆ. ಆಂಗ್ಲ ಭಾಷೆಯಲ್ಲಿ ಇದನ್ನು ಬೇರೆ ಹೆಸರು ಕಾಣದೆ ’ಸೇಕ್ರೆಡ್ ಥ್ರೆಡ್ ’ಎಂದು ಕರೆದುಕೊಂಡಿದ್ದೇವೆ --ನಾವೇ, ಯಾಕೆಂದರೆ ಆಂಗ್ಲರಲ್ಲಿ ಇದರ ಬಳಕೆಯಿಲ್ಲ ಅಲ್ಲವೇ ? ಶುದ್ಧ ಹತ್ತಿಯಿಂದ ಕೈಯ್ಯಲ್ಲಿ ತಕಲಿ ಎನ್ನುವ ವಸ್ತುವಿನಿಂದ ತಿರುಗಿಸಿ ದಾರಮಾಡಿ ಮೂರು ಮುಖ್ಯ ದಾರಗಳಲ್ಲಿ ಒಂದೊಂದರಲ್ಲೂ ಇನ್ನೂ ಮೂರು ಮೂರು ಸೇರಿಸಿ ಒಟ್ಟಿಗೆ ೨೭ ದೇವತೆಗಳನ್ನು ಆಹ್ವಾನಿಸಿ ಅದರಲ್ಲಿ ಅರ್ಘ್ಯಪಾದ್ಯಾದಿಗಳಿಂದ ಪೂಜಿಸಿ ಆಮೇಲೆ ಅದನ್ನು ಸೂರ್ಯನ ಅಪ್ಪಣೆ ಪಡೆದು, ಭೂಮಿತಾಯಿಮೇಲೆ ಇರಿಸಿ ನಮಸ್ಕರಿಸಿ, ತಾನು ತತ್ವಾವಲಂಬಿ ಎಂಬುದನ್ನು ಅಗ್ನಿ ಕಾರ್ಯದ ಮೂಲಕ ಅಗ್ನಿಗೆ ತಿಳಿಹೇಳಿ ಆಮೇಲೆ ಧರಿಸಬೇಕಾಗುತ್ತದೆ. ಹೀಗೆ ಧರಿಸಿದ ಮೇಲೆ ಅದಕ್ಕೆ ಪೂರಕವಾದ ಕೆಲವು ಆಚರಣೆಗಳು ಸದಾ ಇರುತ್ತವೆ. ನಾವು ಎಲ್ಲೇ ಇದ್ದರೂ ಅವುಗಳನ್ನು ಬಿಡುವಂತಿಲ್ಲ. ನಮ್ಮ ಮೈಮೇಲೆ ದೇವರನ್ನು ಧರಿಸಿದ್ದೇವೆ ಎಂದೇ ತಿಳಿದು ವರ್ತಿಸಬೇಕಾಗುತ್ತದೆ. ಅದರಲ್ಲಿರುವ ದೇವತೆಗಳು ನಮ್ಮ ಪ್ರತೀ ಕೆಲಸಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾರೆ! ಹೀಗಾಗಿ ಯಾರು ಯಾವಾಗ ಹೇಗೆ ಬೇಕೆಂದರೂ ಧರಿಸಿದ ದಾರ ಜನಿವಾರವಾಗುವುದಿಲ್ಲ. ಅದರಂತೇ ಧರಿಸಿದ ದಾರದ ಮಹತ್ವ ತಿಳಿಯದೇ ಬರೇ ಸುಮ್ಮನೆ ಎಲ್ಲರೂ ಧರಿಸುತ್ತಾರೆ ತನಗೂ ಇರಲಿ ಎಂದು ಧರಿಸಿದರೆ ಅದು ನ್ಯಾಷನಲ್ ವೇಸ್ಟು!

ಅರಿತರದು ಬಲು ಹಗುರ ಈ ದಾರ ಜನಿವಾರ
ಅರಿವಿರದೆ ಧರಿಸಿದರೆ ಅದು ಬಹಳ ಭಾರ
ಪರಹಿತದ ನೆಲೆಯಲ್ಲಿ ಸರಿಯಾಚರಣೆ ನಡೆಸಿ
ಪರಿಪಕ್ವತೆಯ ಪಡೆಯೋ | ಜಗದಮಿತ್ರ

ಜಗದಮಿತ್ರ ಸಾರಿದ- ನೀವು ನೋಡಿದಿರಿ, ಆಸ್ತಿಕನೊಬ್ಬ ದೇವರಲ್ಲಿ ಯಾವ ಭಕ್ತಿ ಶ್ರದ್ಧೆ ಹೊಂದಿರುತ್ತಾನೋ ಅಷ್ಟೇ ಆಸ್ಥೆಯನ್ನು ಈ ಯಜ್ಞೋಪವೀತದ ಮೇಲೂ ಇಡಬೇಕಾಗುತ್ತದೆ. ಯಜ್ಞದಲ್ಲಿ ಅಗ್ನಿಗೆ ನಾವು ವಚನವಿತ್ತು ಧರಿಸುವ ಅತಿ ವಿಶಿಷ್ಟ ದಾರ ಇದಾಗಿರುವುದರಿಂದ ನಾವು ಮಲ-ಮೂತ್ರಾದಿ ವಿಸರ್ಜನಾ ಕಾರ್ಯಗಳಿಗೆ ಹೋದಾಗ ಅದನ್ನು ’ ಸಸ್ಪೆಂಡ್ ಮೋಡ್ ’ ನಲ್ಲಿ ಇಟ್ಟುಕೊಳ್ಳುವ ಗೌರವದ ಕ್ರಮವೂ ಇದೆ! ಇಂತಹ ದಾರವನ್ನು ಧರಿಸಿದ ಮೇಲೆ ಎಂತೆಂತಹ ಆಹಾರವನ್ನು ತಿನ್ನಬೇಕು-ಯಾವ ಆಹಾರ ವರ್ಜ್ಯ ಎಂಬುದೂ ಕೂಡ ವೇದಮಂತ್ರಗಳಲ್ಲೇ ಹೇಳಲ್ಪಟ್ಟಿದೆ. ಇದೂ ಒಂದು ಹಂತದ ಸಾಧನೆಯಾದ್ದರಿಂದ ಎಲ್ಲರಿಗೂ ಇದು ರುಚಿಸುವುದಿಲ್ಲ. ಪ್ರಾಯಶಃ ’ ನೋ ಸ್ಟ್ರಿಂಗ್ಸ್ ಅಟ್ಯಾಚ್ಡ್ ’ ಎಂಬ ಮನೋವೃತ್ತಿಯ ಜನರಿಗೆ ಆ ಆಂಗ್ಲ ಗಾದೆ ಹಿಡಿಸುತ್ತದೆ ಮತ್ತು ಅಂಥವರಿಗೆ ಈ ಜನಿವಾರ ಯೋಗ್ಯವಲ್ಲ.

ಉಪನಯದ ಆದಿಭಾಗ -ಕಲಶ ಸ್ನಾನ

ಜನಿವಾರ ಧರಿಸಿದ ವ್ಯಕ್ತಿ ನಿತ್ಯವೂ ಸ್ನಾನ ಮಾಡಲೇ ಬೇಕು. ಮುಡಿಯಿಂದ-ಅಡಿಯವರೆಗೂ ಸ್ನಾನವಾದರೆ ಒಳ್ಳೆಯದು, ಅದಿಲ್ಲಾ ತಲೆಯೊಂದನ್ನುಳಿದು ಮಿಕ್ಕುಳಿದ ದೇಹವನ್ನು ನೀರಿನಿಂದ ತೊಳೆದುಕೊಳ್ಳಬೇಕು. ನಾವು ಸ್ನಾನಮಾಡುವಾಗ ೨೭ ದೇವತೆಗಳೂ ಸ್ನಾನಮಾಡುತ್ತಾರೆ ಎಂಬ ಕಲ್ಪನೆಯಿರಬೇಕು. ನಮ್ಮ ಪೂರ್ವಜರು ಇದನ್ನೆಲ್ಲಾ ಎಷ್ಟು ಚೆನ್ನಾಗಿ ನಮಗೆ ಹೇಳಿದರು ನೋಡಿ. ಹಲವು ಪವಿತ್ರನದಿಗಳ ನೀರನ್ನು ನಾವು ಸ್ನಾನಮಾಡಿದರೆ ಪುಣ್ಯ ಎಂದರು, ಆದರೆ ದಿನವೂ ಎಲ್ಲಾನದಿಗಳಿಗೂ ಭೇಟಿನೀಡಲು ಸಾಧ್ಯವೇ? ಇಲ್ಲವಲ್ಲ! ಹೀಗಾಗಿ ಅದಕ್ಕೆ ಪರ್ಯಾಯವಾಗಿ ಆ ಪುಣ್ಯನದಿಗಳನ್ನು ನಾವು ಸ್ನಾನಮಾಡುವ ನೀರಿಗೇ ಆಹ್ವಾನಿಸಿ ಅದರಿಂದ ಸ್ನಾತರಾಗಿ ಎಂದರು.

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು ||

-- ಇದು ಆ ಪುಣ್ಯನದಿಗಳಲ್ಲಿ ಪ್ರಾರ್ಥನೆ. ತಾಯಂದಿರಾದ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಕಾವೇರಿ ಇನ್ನೂ ಹಲವು ನದಿಗಳೇ ನೀವೆಲ್ಲ ಬಂದು ಈ ನೀರಿನಲ್ಲಿ ಸೇರಿರೆಂದು ನಿಮ್ಮಲ್ಲಿ ವಿಜ್ಞಾಪನೆ. ಎಂತಹ ಸುಮಧುರ ಅನುಭವ. ಬೆಳಗಿನ ಜಾವ ಎದ್ದು, ದೇವರನ್ನು ನೆನೆಸಿ, ಒಳ್ಳೆಯ ಮನಸ್ಸಿನಿಂದ ಈ ಪ್ರಾರ್ಥನೆಯೊಂದಿಗೆ ಶುದ್ಧನೀರಿನಲ್ಲಿ ಸ್ನಾನಮಾಡಿ ಮುಂದಿನ ನಮ್ಮ ನಿತ್ಯನೈಮಿತ್ತಿಕ ದೇವಪೂಜಾದಿ ಕಾರ್ಯಗಳಿಗೆ ಅನುವುಮಾಡಿಕೊಳ್ಳಬೇಕು. ಹೀಗೆ ನಾವು ದೇವ ಪೂಜೆ ಮಾಡಿದ ನಂತರ ಹತ್ತಿರದಲ್ಲಿ ನಮಗೆ ಲಭ್ಯವಿರುವ ಗೋವನ್ನು ಪೂಜಿಸಿ ಅದಕ್ಕೆ ತಿನ್ನಲು ಸ್ವಲ್ಪ ಅಕ್ಕಿಯನ್ನು ನೀಡಬೇಕು. ಇವತ್ತಿಗೆ ಹಲವರಿಗೆ ಅಗ್ನಿಕಾರ್ಯ ಸಾಧ್ಯವಿಲ್ಲವಾಗಿದೆ, ಆದರೆ ಪ್ರತೀ ವ್ಯಕ್ತಿಗೂ ಮಾನಸಪೊಜೆ ಎಂಬುದೊಂದಿದೆಯಲ್ಲ, ಅ ಕ್ರಮದಂತೇ ಅಗ್ನಿಗೆ ಮಾನಸ ಪೂಜೆ ನೇರವೇರಿಸಿ ನಾವು ಮಾಡಲೊಪ್ಪಿದ ಕಾರ್ಯದಲ್ಲಿ ಚ್ಯುತಿಯಾಗಿಲ್ಲದ ಭಾವವನ್ನು ಪಡೆಯಬೇಕಾಗುತ್ತದೆ. ಇಷ್ಟೆಲ್ಲಾ ಹಕ್ಕು-ಬಾಧ್ಯತೆಯಿರುವ ಈ ದಾರದ ನಿಜಸ್ವರೂಪವನ್ನು ಅರಿತ ನೀವೇ ಹೇಳಿ ನಮ್ಮಲ್ಲಿ ಈಗ ಎಷ್ಟು ಜನಸಾಮಾನ್ಯರು ಇದನ್ನು ಧರಿಸಲು ಯೋಗ್ಯರು?


ಉಪನಯನದಲ್ಲಿ ಮೊದಲ ಬಾರಿಗೆ ಜನಿವಾರ ಧಾರಣೆ

ಜನಿವಾರವನ್ನು ಬಹುತೇಕ ೭ ವರ್ಷ ವಯಸ್ಸಿನ ಒಳಗೆ ಹಾಕುವುದಿಲ್ಲ. [ಧರಿಸುವ ಮಗುವಿಗೆ ಮಾತಿನಲ್ಲಿ ಸ್ಪಷ್ಟತೆ ಬರಬೇಕು, ಮಂತ್ರದ ಉಚ್ಚಾರಗಳಲ್ಲಿ ಲೋಪ/ದೋಷ ಉಂಟಾಗಬಾರದು ಎಂಬ ಕಾರಣಕ್ಕಾಗಿ.ವೇದ ಮಂತ್ರಗಳನ್ನು ಮತ್ತು ಯೋಗಾಸನಗಳನ್ನೂ ತಪ್ಪಾಗಿ ಬಳಸಿದರೆ ವ್ಯತಿರಿಕ್ತ ಪರಿಣಾಮ ಕಟ್ಟಿಟ್ಟ ಬುತ್ತಿ ! ] ಮೊದಲಾಗಿ ಅದನ್ನು ಹಾಕುವಾಗ ತಂದೆಯಿಂದ ಮಗನಿಗೆ ಅದು ಬ್ರಹ್ಮೋಪದೇಶ ಸಂಸ್ಕಾರದ ಮೂಲಕ ಲಭ್ಯವಾಗಬೇಕಾಗುತ್ತದೆ. ಆಗ ತಂದೆಯೇ ಮಗನಿಗೆ ಗುರುವಾಗುತ್ತಾನೆ. ಬ್ರಹ್ಮೋಪದೇಶ ಬೋಧಿಸುತ್ತಾನೆ. ಬ್ರಹ್ಮೋಪದೇಶದಲ್ಲಿ ಗಾಯತ್ರೀ ಮಂತ್ರ ಸೇರಿದಂತೆ ಅಷ್ಟಾಕ್ಷರೀ ಮತ್ತು ಪಂಚಾಕ್ಷರೀ ಮಹಾಮಂತ್ರಗಳೂ ಸೇರಿರುತ್ತವೆ. ಇಲ್ಲಿ ಒಂದನ್ನು ನೆನೆಪಿಡಿ- ಈ ಉಪದೇಷ ತಂದೆಯ ಹೊರತು ಬೇರಾರಿಂದಲೂ ಪಡೆಯಲು ಅರ್ಹವಾಗಿರುವುದಿಲ್ಲ. ಈ ಗೌರವವೇನಿದ್ದರೂ ತಂದೆಗೇ ಸಲ್ಲಬೇಕಾಗುತ್ತದೆ. ಒಳ್ಳೆಯ ತಂದೆಯಿಂದ, ಒಳ್ಳೆಯ ಮುಹೂರ್ತದಲ್ಲಿ, ಒಳ್ಳೆಯ ಮಗನಿಗೆ ಉಪದೇಶ-ಯಜ್ಞ ಸಹಿತ ಧರಿಸಲು ಅನುಮೋದಿಸುವ ದಾರವೇ ಜನಿವಾರ. ಮೊದಲಾಗಿ ಒಮ್ಮೆ ಇದರ ಧಾರಣೆಯಾದ ಮೇಲೆ ಜೀವನ ಪೂರ್ತಿ ಅದನ್ನೇ ಹಾಗೇ ಇಟ್ಟುಕೊಳ್ಳಲು ಸಾಧ್ಯವೇ ? ಅದು ಹತ್ತಿಯದಾದ್ದರಿಂದ ಹಳೆಯದಾಗುತ್ತದೆ, ಬಣ್ಣಗೆಡುತ್ತದೆ, ಅದರಲ್ಲಿ ಕೊಳೆಸೇರುತ್ತದೆ ಈ ಎಲ್ಲ ಅನಿವಾರ್ಯ ಸಹಜ ಪ್ರಕ್ರಿಯೆಗಳಿಂದ ಕಳೆಗುಂದುವ ಜನಿವಾರವನ್ನು ಬದಲಾಯಿಸಿ ಮತ್ತೆ ಅಗ್ನಿಕಾರ್ಯದ ಮುಖೇನ ಹೊಸದನ್ನು ಪಡೆಯುವ ಕ್ರಮವೇ ಉಪಾಕರ್ಮ! ಇದನ್ನು ಬಿಟ್ಟು ನಮ್ಮಲ್ಲಿ ನಮ್ಮ ಕುಟುಂಬವರ್ಗದಲ್ಲಿ ಯಾರಾದ್ರೂ ಹಡೆದರೆ ಅಥವಾ ಸತ್ತರೆ ಆಗ ತಗಲಬಹುದಾದ ಆಶೌಚವನ್ನು, ಸೂತಕವನ್ನು ಕಳೆದುಕೊಳ್ಳುವ ದಿನ ಜನಿವಾರವನ್ನು ಬದಲಿಸಬೇಕಾಗುತ್ತದೆ. ಹೀಗೇ ಜನಿವಾರಕ್ಕೆ ಇವೆಲ್ಲಾ ಕಟ್ಟು-ನಿಟ್ಟಿನ ನಿಬಂಧನೆಗಳು ಇರುತ್ತವೆ. ಇದ್ಯಾವುದೂ ಇರದ ದಾರವನ್ನು ಅಲಂಕಾರಕ್ಕಾಗಿ ಧರಿಸಿದರೆ ಆಗ ’ಆ ದಾರ ಜೀವನದಿ ಬಲು ಭಾರ’ ಎಂಬ ಸ್ಥಿತಿ ಉಂಟಾಗುತ್ತದೆ.

ಇವತ್ತಿನ ದಿನಮಾನ ಬದಲಿರುವುದರಿಂದ ಕೆಲವರು ಕೇಳಬಹುದು " ನಮಗೆ ಜನಿವಾರ ಧರಿಸುವ ಯೋಗ್ಯತೆಯಿಲ್ಲವೇ ? " ಇದೆಯಪ್ಪಾ ಎಲ್ಲರಿಗೂ ಇದೆ, ಆದರೆ ಮೇಲೆ ನಾನು ಸ್ವಲ್ಪದರಲ್ಲೇ ಹೇಳಿದೆನಲ್ಲ ಅದನ್ನು ಅನುಸರಿಸುತ್ತೀರಾದರೆ ನೀವು ಜನಿವಾರ ಧರಿಸಲು ಬಹಳಯೋಗ್ಯರಾಗಿರುತ್ತೀರಿ. ಅದಿಲ್ಲಾ ನೀವದನ್ನು ಧರಿಸಿದರೆ ಯಾವ ಪ್ರಯೋಜನಕ್ಕೂ ಬಾರದು. ಸರಿಯಾದ ಆಚರಣೆಯಲ್ಲಿದ್ದು ಉಪನೀತನಾದವನಿಗೆ ಅದು ಅಗೋಚರವಾದ ಶಕ್ತಿಯನ್ನು ಸ್ಪುರಿಸುತ್ತದೆ! ಶರೀರದಲ್ಲಿ ಕಾಸ್ಮಿಕ್ ರೇಡಿಯೇಶನ್ ಆಗುತ್ತದೆ!

ಹಿಂದಕ್ಕೆ ಗುರುಗೋವಿಂದ ಭಟ್ಟರು ಸಂತ ಶಿಶುನಾಳ ರೀಫ ಸಾಹೇಬರಿಗೆ ಉಪನಯನ ಮಾಡಿದ್ದರಂತೆ! ಆ ಕಾಲಕ್ಕೆ ರೀಫರ ಬಾಯಿಂದ ಬಂದ ಭಕ್ತಿಪೂರ್ವಕ ಹಾಡು --

ಹಾಕಿದ ಜನಿವಾರವಾ ಸದ್ಗುರುನಾಥ
ಹಾಕಿದ ಜನಿವಾರವಾ

ಹಾಕಿದ ಜನಿವಾರ ನೂಕಿದ ಭವಭಾರ
ಲೋಕದಿ ಬ್ರಹ್ಮಜ್ಞಾನ ನೀ ಪಡೆಯೆಂದೂ

ಹಾಕಿದ ಜನಿವಾರವಾ.......

---ರೀಫರಾದರೇನಾಯ್ತು ಅವರಿಗೆ ಆತ್ಮಾವಲೋಕನದ ಅನುಭವವಾಗಿತ್ತು. ಅವರಿಗೆ ಸಿಕ್ಕ ಗುರುವಿನ ಮಹತ್ತು ಹಾಗಿತ್ತು. ಸಮಾಜವನ್ನೇ ಎದುರುಹಾಕಿಕೊಂಡರೂ ತನ್ನನ್ನು ನಂಬಿದ ಶಿಷ್ಯನನ್ನು ಕೈಬಿಡಲಿಲ್ಲ ಆ ಸದ್ಗುರು! ರೀಫರ ಆತ್ಮಾನುಭೂತಿ ನೋಡಿದ ಗೋವಿಂದ ಭಟ್ಟರು ಅವರಿಗೆ ಉಪನಯನ ಸಂಸ್ಕಾರವನ್ನು ಕೊಡುತ್ತಾರೆ. ರೀಫರ ಬಗ್ಗೆ ತಮಗೆಲ್ಲಾ ಹೊಸದಾಗಿ ಹೇಳಬೇಕೇನು ? ಗೊತ್ತಿರುವ ವಿಷಯ ಅಲ್ಲವೇ? ಅದೇ ರೀತಿ ಇಂದಿಗೂ ಸಹಿತ ಇಂತಹ ಮಂಗಳ ಕಾರ್ಯಕ್ಕೆ ನಮ್ಮಲ್ಲಿ ಗುರುಮುಖಗಳಿವೆ.

ಜನಿವಾರ ಹಾಕಿಸಿಕೊಳ್ಳುವ ವರೆಗೆ ಒಳ್ಳೆಯ ಆಚರಣೆಯಲ್ಲಿದ್ದು ಆಮೇಲೆ ಅದನ್ನು ತೊರೆದರೆ ಜನಿವಾರ ಹಾಕಿದವರಿಗೆ ಅದರ ಲೋಪದೋಷ ತಟ್ಟುತ್ತದೆ. ಇದು ಜಾಮೀನು ವ್ಯವಹಾರದಂತಿರುತ್ತದೆ--ತಿಳಿದಿರಲಿ. ಯಾವ ಮಂತ್ರ-ತಂತ್ರ ಏನೇ ಇದ್ದರೂ ಉಪದೇಶಪಡೆದಾತ ಸರಿಯಾಗಿ ನಡೆಸದಿದ್ದಲ್ಲಿ ಉಪದೇಶ ಕೊಟ್ಟಾತನಿಗೆ ಗ್ರಹಚಾರ ಪ್ರಾರಂಭವಾಗುತ್ತದೆ! ಇದಕ್ಕಾಗಿ ಯಾರಿಗಾದರೂ ಜನ್ಮಪೂರ್ತಿ ತಾನು ಪೂರಕ ಆಚರಣೆಯಲ್ಲಿರುತ್ತೇನೆಂಬ ನಂಬಿಕೆ ’ಒಳಗಿನಿಂದ’ ಬರುತ್ತಿದ್ದರೆ, ಅದು ಅಷ್ಟು ಬಲವಾಗಿದ್ದರೆ ಅಂಥವರು ಜನಿವಾರ ಧರಿಸಿಬಹುದು. ಅದಕ್ಕಾಗಿ ನಮ್ಮ ’ವೇದಸುಧೆ’ ಬಳಗ ಕಾರ್ಯತತ್ಪರವಾಗಿದೆ. [ಇಲ್ಲಿ ಯಾವುದೇ ಜಾತಿ, ಜನಾಂಗ ಇವುಗಳ ವೈಷಮ್ಯ ಇರುವುದಿಲ್ಲ, ಆದರೆ ಮೇಲಿನ ಕೆಲವು ಕಟ್ಟುಪಾಡುಗಳು ನಮ್ಮ ಸಂವಿಧಾನದಂತೇ ನಡೆಸಲೇ ಬೇಕಾದವು!]

ಬ್ರಹ್ಮೋಪದೇಶಕ್ಕೆ ಇನ್ನೊಂದು ಹೆಸರು ಉಪನಯನ. ನಮಗೆ ಹುಟ್ಟುವಾಗ ದೇವರು ನಯನಗಳೆರಡನ್ನು ಕೊಟ್ಟಿಯೇ ಇರುತ್ತಾನೆ. ಜನಿವಾರ ಹಾಕಿದ ಮೇಲೆ ನಮಗೆ ನಮ್ಮ ಅರ್ಹತೆಯ ವ್ಯಾಪ್ತಿ ವೃದ್ಧಿಸುತ್ತದೆ, ಜ್ಞಾನಮಾರ್ಗದಲ್ಲಿ ನಮಗೆ ಕಣ್ಣು ದೊರೆತಂತೇ ಮುಂದಿನ ನಮ್ಮ ಅಧ್ಯಯನ ಅಧ್ಯಾಪನ ಮೊದಲಾದ ಕಾರ್ಯಗಳಿಗೆ, ನಮ್ಮ ಜ್ಞಾನಾರ್ಜನೆಗೆ ಇದು ಇನ್ನೊಂದು ನಯನ [ಚಕ್ಷು, ಕಣ್ಣು] ಎಂಬ ಅರ್ಥದಲ್ಲಿ ಹೊಸದಾಗಿ,ಮೊದಲಾಗಿ ಜನಿವಾರ ಧರಿಸುವ ಈ ಸಮಾರಂಭಕ್ಕೇ ಉಪನಯನ ಎಂದರು!

ಎಲ್ಲರೂ ಮಾಡುತ್ತಾರೆಂದು ತಾವೂ ಮಾಡ ಹೊರಟಿದ್ದಕ್ಕೆ ಒಂದು ಉತ್ತಮ ಉದಾಹರಣೆಯನ್ನು ’ಬಿಸಿಲು ಬೆಳದಿಂಗಳು’ ಅಂಕಣದಲ್ಲಿ ನಮ್ಮ ಆದ್ಯರೂ ಆರಾಧ್ಯರೂ ಆದ ಶ್ರೀ ಶ್ರೀ ತರಳಬಾಳು ಸ್ವಾಮಿಗಳವರು ದಯಪಾಲಿಸಿದ್ದನ್ನು ನಿಮ್ಮ ಮುಂದೆ ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ-

ಒಮ್ಮೆ ನಮ್ಮ ಸರಕಾರೀ ಸರ್ವೇ ಮತ್ತು ರೆವಿನ್ಯೂ ಡಿಪಾರ್ಟ್ಮೆಂಟಿನ ಜನ ಒಟ್ಟಾಗಿ ಸತ್ಯನಾರಾಯಣ ಪೂಜೆ ಮಾಡಿಸಿದರಂತೆ. ಪೂಜೆಯೆಲ್ಲಾ ಸಾಂಗವಾಗಿ ಇನ್ನೇನು ಮುಗಿಸುವಾಗ ಪುರೋಹಿತರು ಸಹಜವಾಗಿ ಮಂತ್ರ ಹೇಳಿದರು

" ಸರ್ವೇ ಜನಾಃ ಸುಖಿನೋ ಭವಂತು "

ತಕಳಿ ಸಮಸ್ಯೆ ಬಂದಿದ್ದೇ ಅಲ್ಲಿ! ಸಂಸ್ಕೃತದ ಗಂಧಗಾಳಿಯೂ ಇಲ್ಲದ ಅಲ್ಲಿರುವವರಿಗೆ ಅವರು ಏನು ಹೇಳುತ್ತಿದ್ದಾರೆಂಬುದರ ಅರ್ಥವಂತೂ ಆಗುತ್ತಿರಲಿಲ್ಲ, ಆದರೆ ’ ಸರ್ವೇ ಜನಾ ’ ಎಂದಿದ್ದರಲ್ಲ ಹೀಗಾಗಿ ರೆವಿನ್ಯೂ ಜನರ ತಕರಾರು ಪ್ರಾರಂಭವಾಯಿತು. ಅವರು ಪುರೋಹಿತರನ್ನು ಗದರಿಕೊಂಡರು.

" ಇಲ್ಲಿ ಸರ್ವೇ ಮತ್ತು ರೆವಿನ್ಯೂ ಎರಡೂ ಕಡೆಯ ಜನರಿದ್ದೇವೆ, ಆದರೆ ನೀವು ಸರ್ವೇ ಜನರಿಗೆ ಮಾತ್ರ ಅದು ಹೇಗೆ ಸುಖವಾಗಲಿ ಅಂದ್ರಿ "

ಪುರೋಹಿತರಿಗೆ ಒಂದು ಕಡೆ ನಗು ಮತ್ತು ಇನ್ನೊಂದು ಕಡೆ ಬೆವರು ಎರಡೂ ಬಂದವು. ಅಂತೂ ಕೊನೆಗೆ ಇಲ್ಲದ ಮಂತ್ರವನ್ನು ಕಟ್ಟಿ ಹೇಳಬೇಕಾದುದು ಅನಿವಾರ್ಯವಾಗಿ ಅವರು

" ರೆವಿನ್ಯೂ ಜನಾಃ ಸುಖಿನೋ ಭವಂತು " ಅಂತ ಹೇಳಿದರಂತೆ.

ಹೀಗೇ ನೋಡಿ ಎಲ್ಲರೂ ಮಾಡುತ್ತಾರೆಂದು ಅದರ ಮೌಲ್ಯ ತಿಳಿಯದೇ ನಾವೂ ಮಾಡಹೊರಟರೆ ಇಂತಹ ಹಲವಾರು ಹಾಸ್ಯಾಸ್ಪದ ಘಟನೆಗಳು ನಡೆಯುತ್ತಿರುತ್ತವೆ. ಗೊತ್ತಿಲ್ಲದ್ದನ್ನು ತಿಳಿಸಿಕೊಡಲು ಜ್ಞಾನ ದೀವಿಗೆಗಳಾದ ಹಲವು ಪುಸ್ತಕಗಳಿವೆ, ಪ್ರಾಜ್ಞರು ಅನೇಕರು ನಮ್ಮ ನಡುವೆಯೇ ಬದುಕುತ್ತಿರುತ್ತಾರೆ, ಅವರನ್ನು ಕೇಳಿ ತಿಳಿದರೆ ತಪ್ಪೇನಿಲ್ಲವಲ್ಲ ! ಋಜುಮಾರ್ಗದವರಾದ ನಾವು ಎಲ್ಲವನ್ನೂ ಆಚರಿಸುವ ಮೊದಲು ಸರಿಯಾಗಿ ಅರಿಯೋಣ, ಅರ್ಥೈಸೋಣ, ಆಮೇಲೆ ಆಚರಿಸೋಣ -ಸರಿಯಾಗಿ, ಸಮರ್ಪಕವಾಗಿ ಅಲ್ಲವೇ ?


ಎಲ್ಲರಿಗೂ ರಕ್ಷಾಬಂಧನದ ಶುಭಾಶಯಗಳು ಮತ್ತು ಈ ರಕ್ಷಾಬಂಧನ ಎಲ್ಲರಿಗೂ ಪರಸ್ಪರ ರಕ್ಷೆಯನ್ನೀಯಲಿ, ದಿವ್ಯ ಚಕ್ಷುವಿನಂತಹ ’ಉಪನಯನ’ ವನ್ನೀಯಲಿ ಎಂದು ಆಶಿಸುತ್ತೇನೆ. ಜ್ಞಾನಕ್ಕಾಗಿ ಎಲ್ಲರೂ ಓದೋಣ, ಬೆಳೆಯೋಣ- ಬೆಳಗೋಣ ನಮ್ಮ ಮುಂದಿನ ಸಮಾಜವನ್ನು,

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖವಾಗ್ಭವೇತ್ ||

|| ಸರ್ವೇ ಜನಾಃ ಸುಖಿನೋ ಭವಂತು | ಸಮಸ್ತ ಸನ್ ಮಂಗಲಾನಿ ಭವಂತು ||

Sunday, August 22, 2010

ಕಾವ್ಯನಯನ
[ಕಾವ್ಯದಲ್ಲಿ ಜಲನಯನ-ಗುಬ್ಬಿ ಎಂಜಲು ಕೃತಿಗಳ ಬಿಡುಗಡೆ ಸಮಾರಂಭದ ನೆನೆಪು ; ಇಲ್ಲಿ ಶ್ರೀ ಡುಂಢಿರಾಜ್ ಮತ್ತು ಹಾಲ್ದೊಡ್ಡೇರಿ ಸುಧೀಂಧ್ರರು ಪರಸ್ಪರ ಎರಡೂ ಕೃತಿಗಳ ಬಗ್ಗೆ ಹೇಳಿದ್ದನ್ನ ಬಿಂಬಿಸಿದ್ದೇನೆ !]

ದೀಪಿಕಾ ಹಾಡುತ ದೇವರ ನೆನೆದಿರೆ
ವ್ಯಾಪಿಸಿ ಕೊಂಡರು ಆಸನದಿ
ರೂಪವ ತೋರುವ ಮೊದಲಿಗೆ ಗಣ್ಯರು
ದೀಪವ ಬೆಳಗುತ ಸ್ಟೇಜಿನಲಿ

ಸುಗುಣ ಮಹೇಶರು ಮುಗುದಮನದಿಂದ
ನಗುನಗುತಲಿ ಮುನ್ನಡೆಸಿದರು
ಬಗೆಬಗೆ ಜನಗಳ ಪರಿಚಯ ಹೇಳುತ
ಲಗುಬಗೆಯಲಿ ಓಡಾಡಿದರು !

’ಗುಬ್ಬಿ ಎಂಜಲು’ ಬಿಡಿಸುತ ರಂಜಿಸಿ
ಅಬ್ಬರದುಕ್ಕಿಸಿ ಜೋಕುಗಳ
ತಬ್ಬಿಬ್ಬಾಗುವ ಹನಿಗವನಂಗಳ
ಹಬ್ಬಿಸಿ ನಲಿದರು ಡುಂಢಿಗಳು

ಹಾಲ್ದೊಡ್ಡೇರಿಯ ಸುಧೀಂಧ್ರ ನುಡಿದರು
ಜಾಲತಾಣಗಳು ಬಲು ವಿಹಿತ
ಸಾಲಂಕೃತ ವೇದಿಕೆಯಲಿ ಅರಳಿಸಿ
ಓಲೆಯತಿರುವುತ ’ಜಲನಯನ’

ಭೀಷಣವಲ್ಲದ ಮುಖ್ಯ ಭಾಷಣಗಳ್
ಆಶಯಗಳ ತಾವ್ ತೆರೆದಿಡುತ
ರಾಶಿ ಅನುಭವದ ಪಾಕವ ಇಳಿಸುತ
ಶೈಶವ ನೆನೆದರು ಶಾಸ್ತ್ರಿಗಳು

ಪಾಕುಮಾಮ ಸಹ ಮಿತ್ರರ ಸೇರಿಸಿ
ಚಾಕಚಕ್ಯತೆಯ ಮೆರೆದಿಹರು
ಬೇಕಾಗಿಲ್ಲದ ವಸ್ತುವ ನೀಡುತ
ಪೀಕಲಾಟದಲಿ ನಗಿಸಿಹರು !

ಜೋಗದ ಸಿರಿಯನು ತಂದು ಬಡಿಸಿದರು
ರಾಗದಿ ಹಾಡುತ ’ಕೊಳಲ’ಜನ !
ವೇಗದಿ ಈ ಕಥೆ ಬ್ಲಾಗಲಿ ಹಾಕುತ
ಭೋಗಿಸಲಿಟ್ಟರು ಪರಾಂಜಪೆ !

ಇಂತೀಪರಿಯಲಿ ನಡೆಯಿತು ಸಂಭ್ರಮ
’ತುಂತುರು’ ಹನಿಗಳ ಸೇಚಿಸುತ
ಕುಂತರು ನಿಂತರು ಮರೆಯಲಸಾಧ್ಯವು
ಎಂತಹ ಸ್ವರ್ಗವು ಬ್ಲಾಗಿನದು !

Saturday, August 21, 2010

ಮೋಡದ ದಿಬ್ಬಣ !




ಮೋಡದ ದಿಬ್ಬಣ
!

ಶುದ್ಧ ಶುಭ್ರ ತಿಳಿ ನೀಲಾಗಸದಲಿ
ಎದ್ದಿದೆ ಮೋಡದ ದಿಬ್ಬಣವು
ಮುದ್ದಿನ ಮದುಮಗನಂತಿಹ ಮೋಡವು
ಗೆದ್ದ ಸಾಹಸದಿ ಮುಂದಿಹುದು !

ತುಂಬಾ ಸಡಗರ ಆಹಾ ಅಬ್ಬರ
ಅಂಬರ ಮೋಡದ ಬಂಧುಗಳು
ರಂಭೆ ಊರ್ವಶಿ ತಿಲೋತ್ತಮೆಯ ಮುಖ
ಹಂಬಲಿಸುವ ಹೆಣ್ ತುಣುಕುಗಳು !

ನಡುನಡು ಮಕ್ಕಳು ನಡೆನಡೆದೋಡುತ
ಹುಡುಗಾಟವ ತಾವ್ ಬಿಂಬಿಸಿವೆ
ಗುಡುಗಿನ ಶಾಸ್ತ್ರವೇ ಮಂಗಳ ವಾದ್ಯವು
ಎಡಬಿಡದೆತ್ತಲೋ ಸಾಗುತಿವೆ !

ಬಣ್ಣದ ಸೀರೆಯ ಗರತಿಯರಿರುವರು
ನುಣ್ಣನೆ ಜಾರುತ ಮಧ್ಯದಲಿ
ಕಣ್ಣು ಹೊಡೆದು ಕೋಲ್ಮಿಂಚು ಹರಿಸುತಿಹ
ಸಣ್ಣ ಹೊಟ್ಟೆ ಹುಡುಗಿಯರಿಹರು !

ಸಾವಿರ ಸಂಖ್ಯೆಯ ಮೋಡಜನಂಗಳು
ಆವರಿಸುತ ಬಾನಂಗಳದಿ
ನಾವೆಲ್ಲರೂ ನೆಂಟರು ಈ ಮದುವೆಗೆ
ಜಾವದಲೇ ಬಂದಿಹೆವೆನುತ !

ತುಂತುರು ಹನಿಗಳ ಮಂಗಳ ಸೇಚನ
ನಿಂತಿಹ ಭೂಮಿಯ ಜನಗಳಿಗೆ
ಸಂತೆಯು ಸೇರಿದ ಸಂಭ್ರಮವಲ್ಲಿದೆ
ಅಂತರದಲಿ ತಾವ್ ನೋಡಿದಿರೇ ?

ಹದವೇರಿದ ತಂಗಾಳಿಯು ಬೀಸುತ
ಮುದಗೊಳಿಸುತ ದಿಬ್ಬಣಜನರ
ಚದುರಿದ ಹಲವನು ಒಂದೆಡೆ ಸೆಳೆಯುತ
ಒದಗುತ ಬಡಗಿನ ದಿಕ್ಕಿನಲಿ

ಬೀಗರ ಮುಖದಲಿ ಬೆಳ್ಳಿಯಹೂ ನಗೆ
ಆಗಾಗ ಅಲ್ಲಿ ಅನುರಳಿಸಿ
ಭೋಗಸುವುದಕಿದ ಮನವಿದ್ದರೆ ಸಾಕ್
ಬೇಗ ಬನ್ನಿ ನೀವ್ ಪರಿಜನರೆ

Friday, August 20, 2010

ಚಮ್ ಚಮ್!

ಚಿತ್ರ ಋಣ :ಅಂತರ್ಜಾಲ

ಚಮ್ ಚಮ್!

[ ಸುಖಕರ್ತಾ ದುಃಖ ಹರ್ತಾ ವಾರ್ತಾ ವಿಘ್ನಾಚಿ ಅನ್ನೋ
ಮರಾಠಿ ಹಾಡಿನ ದಾಟಿಯಲ್ಲಿ ಹಾಡ್ಕೊಳಿ !]

ಪದ್ಯಕ್ಕೂ ಗದ್ಯಕ್ಕೂ ಸಂಬಂಧವಿಲ್ಲ
ಗದ್ಯ ಮಿಕ್ಸಿಗೆ ಹಾಕಿ ಪದ್ಯವಾಯ್ತಲ್ಲ !
ಸದ್ಯಕ್ಕಂತೂ ನೀವು ಮೂಸ್ನೋಡುದಿಲ್ಲ
ವಾದ್ಯ ಊದಿ ಕರೆದ್ರು ನೀವ್ ಬರಲೇ ಇಲ್ಲ ! ಬರೆಯಯ್ಯ ಬರೆಯೋ

ಇಡ್ಲಿ-ಸಾಂಬಾರ್ ದೋಸೆ ಚೌಚೌ ಚೌ ಬಾತು
ಸಡ್ಲಿಸಿ ಹೊಟ್ಟೆಯ ತಿನ್ನಿರಿ ಕೂತು
ಮಡ್ಲೊಳಗೆ ಮಗುವನ್ನು ಹೊತ್ತ ತಾಯಂದ್ರೆ
ಕಡ್ಲೆ ಉಸ್ಲಿ ಸಾಕೆ ಖಾರಾನೇ ಬೇಕೇ ? ಬರೆಯಯ್ಯ ಬರೆಯೋ

ಆಚೆಮನೆ ಗೋವಿಂದ ಸಣ್ಣಕ್ ಕಣ್ಣೊಡ್ದ
ಪಾಚೋ ಪಾಪಾಪಂಡು ಬಂದಿದ್ದು ತೋರ್ದ
ಮಾಚಕ್ಕ್ನ ಮಗನಿಗೆ ಆ ಹೆಸ್ರು ಕಾಯಂ
ಸಾಚಾ ಆಗ್ಬುಟ್ರೆಲ್ಲ ಜನರ್ಬಾಯ್ಗೆ ಚಮ್ ಚಮ್! ಬರೆಯಯ್ಯ ಬರೆಯೋ

ನಿಮ್ಮಲ್ಲೇ ಇರ್ಲೆಂದು ಮಂಜಜ್ಜ ಹೇಳ್ದ
ಮೊಮ್ಮಗ್ಳು ಬಸುರೆಂದು ಕಣ್ಣೀರು ಮಿಡ್ದ
ಒಮ್ಮೆ ಮದ್ವೆಯಾದ್ರೆ ಚಿಂತಿರ್ಲಾ ಎನುತ
ಎಮ್ಮನೆ ಕೂಸಿಗೇ ಲವ್ವಾಗ್ ಸಾಯ್ಬೇಕಾ ? ಬರೆಯಯ್ಯ ಬರೆಯೋ

ಬಚ್ಚಣ್ಣ ಹಾಸ್ನದಲ್ಲಿ ಬಾವ್ಟ ಹಾರ್ಸ್ಬುಟ್ಟು
ಕೊಚ್ಚೆ ಇರದಾ ರಸ್ತೆ ಹಿಡಿದು ಹೊರಟಿದ್ದ
ಅಚ್ಚ ಸಂಸ್ಕೃತದಲ್ಲಿ ಮಂತ್ರವ ಹೇಳಿ
ಬಿಚ್ಚಿ ಕೈ ಎರಡಿಟ್ಟ ಭರತನೆಂಬವಗೇ ! ಬರೆಯಯ್ಯ ಬರೆಯೋ

ಸಿನೆಮಾದವರ ಕೇಳಿ ಹೇಳುವರಿದು ಬೇರೆ
ಎನಿಮಾ ಹಚ್ಚಿದ ಹಾಗೇ ಹಳೆ ಅನ್ನಸಾರೇ !
ಅನುಮಾನ ಬಂದರೆ ಖಂಡಿತ ಗೋತಾ
ಜನುಮಕ್ಕೂ ಗುಟ್ಟು ಬಿಡಲಾರರೋ ತಾತಾ! ಬರೆಯಯ್ಯ ಬರೆಯೋ

ಹುಡುಗೀರು ಲೋ ಜೀನ್ಸು ಮಿನಿ ಟಾಪು ಹಾಕಿ
ಬಡಪಾಯಿ ಪಡ್ಡೆಗಳ ಬುಡಮೇಲೆತ್ತಾಕಿ
ತಡಕಾಡಿ ಅಪ್ಪನ ಜೇಬಿಗೆ ಕೈಹಾಕಿ
ಕಡತಂದ ಹಣವನ್ನು ಕೊಟ್ಟ ಗಿರಾಕಿ ! ಬರೆಯಯ್ಯ ಬರೆಯೋ

ಎಡಬಿಡದೆ ಮಳಿಗೆಯ ಸುತ್ತುತ ಜನರು
ಗಡಬಡಿಸಿ ಅದುಇದು ತುಂಬಿ ತರುತಿಹರು
ಕಡೆಗಳಿಗೆಲಿ ಖಾಲಿ ಆದ್ರೆಂಬಾತಂಕ
ಬಿಡದಂತೆ ಊದಿದರು ಸ್ಕೀಮಿನ ಶಂಖ ! ಬರೆಯಯ್ಯ ಬರೆಯೋ


Thursday, August 19, 2010

ಬಾರಮ್ಮಾ ಸಿರಿ ಲಕುಮೀ

ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀಭೃಂಗಾಂಗನೇವ ಮುಕುಲಾಭರಣಂ ತಮಾಲಮ್ |ಅಂಗೀಕೃತಾಖಿಲವಿಭೂತಿರಪಾಂಗಲೀಲಾಮಾಂಗಲ್ಯದಾಸ್ತು ಮಮ ಮಂಗಲದೇವತಾಯಾಃ ||

-- ಶ್ರೀ ಆದಿಶಂಕರ ವಿರಚಿತ ' ಕನಕಧಾರಾ' ಸ್ತೋತ್ರದ ಮೊದಲನೇ ಶ್ಲೋಕ

ಬಾರಮ್ಮಾ ಸಿರಿ ಲಕುಮೀ

ಪುರಾಣಗಳಲ್ಲಿ ಸಿಗುವ ಉಲ್ಲೆಖದಂತೇ ಸಮುದ್ರ ಮಥನ ಕಾಲದಲ್ಲಿ ವಿಷ, ಅಮೃತ, ಬಹಳಷ್ಟು ವಿಶೇಷ ವಸ್ತುಗಳು ಒಡಮೂಡಿದವು. ಮೊದಲು ಬಂದ ಹಾಲಾಹಲವನ್ನು ಯಾರೂ ತಡೆಯಲು ಸಾಧ್ಯವಾಗಲಿಲ್ಲ; ಆಗ ಎಲ್ಲರೂ ಶಂಕರನ ಮೊರೆಹೊಕ್ಕರು. ಈಶ್ವರ ಎಲ್ಲರ ಒಳಿತಿಗಾಗಿ ಬಂದು ಬೊಗಸೆಯಲ್ಲಿ ಆ ಹಾಲಾಹಲವನ್ನು ಎತ್ತಿ ಕುಡಿದುಬಿಟ್ಟನಂತೆ! ಆಗ ಅದು ಪೂರ್ತಿ ಅವನ ಹೊಟ್ಟೆಯೊಳಕ್ಕೆ ಇಳಿದಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ, ಹಾಗಾಗದಂತೆ ಆತನ ಕಂಠವನ್ನು ಪಾರ್ವತೀದೇವಿ ಒತ್ತಿ ಹಿಡಿದು ಕೊರಳಿಗೆ ಒಂದು ನಾಗರ ಹಾವನ್ನು ಬಂಧಿಯಾಗಿ ಬಂಧಿಸಿದಳು. ವಿಷವನ್ನು ಕುಡಿದು ಜಗತ್ತನ್ನೇ ಕಾಪಾಡ ಹೊರಟ ಶಂಕರ ನಂಜುಂಡನಾದ, ವಿಷಕಂಠನಾದ, ಕಂಠ[ಕುತ್ತಿಗೆ] ನೀಲಿಗಟ್ಟಿದ್ದರಿಂದ ನೀಲಕಂಠನಾದ, ಕೊರಳಲ್ಲಿ ನಾಗರಹಾವನ್ನು ಧರಿಸಿ ನಾಗಭೂಷಣನಾದ.

ಅದೇ ಕಾಲಕ್ಕೆ ಅಮೃತಕಲಶವನ್ನು ಹೊತ್ತು ಮಹಾವಿಷ್ಣು ಧನ್ವಂತರಿಯಾಗಿ ಬಂದ. ಆ ಅಮೃತವನ್ನು ಕುಡಿಯಲು ದೇವ-ದಾನವರಲ್ಲಿ ಸಮಸ್ಯೆ ಉದ್ಭವವಾಯಿತು. ಮಹಾವಿಷ್ಣು ಮತ್ತೆ ಮೋಹಿನೀ ರೂಪದಿಂದ ಬಂದು ಅಮೃತವನ್ನು ಪಾಲು ಹಂಚುವುದರಲ್ಲಿ ಯಶಸ್ಸು ಪಡೆದ. ಅದಾದ ಬಳಿಕ ಚಂದ್ರ ಜನಿಸಿದ, ಜೊತೆಗೆ ಲಕ್ಷ್ಮಿಯ ಜನನವಾಯಿತು! ಲಕ್ಷ್ಮಿಯನ್ನು ಯಾರಿಗೆ ಮಡದಿಯಾಗಿ ಧಾರೆ ಎರೆಯಲಿ ಎಂದು ಚಿಂತಿಸಿದ ಸಮುದ್ರರಾಜನಿಗೆ ಬ್ರಹ್ಮ ಇಷ್ಟವಾಗಲಿಲ್ಲ, ಶಿವ ಬೂದಿಬಡಕ ಮತ್ತು ಸ್ಮಶಾನವಾಸಿ ಎಂಬ ಕಾರಣಕ್ಕೆ ಆತನೂ ಬೇಡವಾದ, ನಂತರ ಕಂಡಿದ್ದು ಮಹಾವಿಷ್ಣು, ದಿವ್ಯ ಪೀತಾಂಬರ ಧಾರಿಯಾದ ಮಹಾವಿಷ್ಣುವಿಗೆ ಶ್ರೀಲಕ್ಷ್ಮಿಯನ್ನು ಧಾರೆಯೆರೆದ ಸಮುದ್ರರಾಜ. ಹೀಗೇ ಮಹಾವಿಷ್ಣುವಿನ ಮಡದಿಯಾಗಿ ವೈಕುಂಠ ಸೇರಿದ ಲಕ್ಷ್ಮಿ ಆದಿಶೇಷನ ಮೇಲೆ ಮಲಗಿರುವ ನಾರಾಯಣನ ಪಾದದ ಕಡೆ ಕುಳಿತು ಕಾಲನ್ನು ಒತ್ತುತ್ತಾ ಇದ್ದಾಳೆ.

ಲಕ್ಷ್ಮಿ ತನ್ನ ಸಹಜರೂಪದಲ್ಲಿ ಸುಂದರವಾದ ತಿಳಿಗೊಳದಲ್ಲಿ ಅರಳಿದ ಕಮಲದ ಹೂವಿನ ಮೇಲೆ ಕುಳಿತುಕೊಳ್ಳುತ್ತಾಳೆ. ಕಮಲ ಸಾಮಾನ್ಯವಾಗಿ ಬುಡದಲ್ಲಿ ಕೆಸರನ್ನೇ ಹೊಂದಿರುತ್ತದೆ. ಕೆಸರನಲ್ಲಿ ಹುಟ್ಟಿ ಬೆಳೆದಿದ್ದರೂ ಮೈಗೆ ಕೆಸರನ್ನು ಅಂಟಿಸಿಕೊಳ್ಳದೇ ಶುಭ್ರವಾಗಿರುವ ಕಮಲ ಸಮಾಜಕ್ಕೆ ನೀಡುವ ಸಂದೇಶ --ಸಮಾಜದಲ್ಲಿ ಎಷ್ಟೇ ಹೊಲಸು ತುಂಬಿದ್ದರೂ ನಾವು ಸಮಾಜದ ಕೊಳೆ ನಮಗೆ ತಾಗದಂತೆ ಬದುಕಬೇಕೆಂಬುದು! ಈ ತತ್ವವನ್ನು ಸಾರುವ ಕಮಲದ ಮೇಲೆ ಕುಳಿತು ಕೈಗಳೆರಡರಲ್ಲಿ ಕಮಲವನ್ನೇ ಹಿಡಿದು, ಇನ್ನೋಂದು ಕೈಯ್ಯಲ್ಲಿ ಕನಕಕಲಶದಿಂದ ಕನಕವೃಷ್ಟಿ ಗರೆಯುತ್ತಾ ಮತ್ತೊಂದು ಹಸ್ತದಲ್ಲಿ ವರದಮುದ್ರೆ ತೋರಿಸುತ್ತಾ ಕುಳಿತ ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿ.[ಸಂಪತ್ತನ್ನು ಕರುಣಿಸುವಲ್ಲಿ ಮಾತ್ರ ಲಕ್ಷ್ಮಿ ಒಂದೇ ತೆರನಾಗಿ ಮಾಡುತ್ತಿಲ್ಲ. ಅದಕ್ಕಾಗಿ ಶ್ರೀ ಶಂಕರರು ಕನಕಧಾರಾ ಸ್ತೋತ್ರದಲ್ಲಿ ಹೇಳಿದ್ದನ್ನು ಕೇವಲ ಆಧಾರವಾಗಿ ಬಳಸಿ ಒಂದು ಕವನ ರಚಿಸಲ್ಪಟ್ಟಿದೆ.] ಯಾವುದೇ ತಿಥಿಮಿತಿಯ ಗಣನೆ ಇಲ್ಲದೇ ಶ್ರಾವಣ ಮಾಸದ ಎರಡನೇ ಶುಕ್ರವಾರ ಅವಳನ್ನು ಸಂಪದ್ಭರಿತವಾಗುವಂತೇ ವರ ನೀಡು ಎಂದು ಪೂಜಿಸುವ ರೂಪವೇ ಶ್ರೀವರಮಹಾಲಕ್ಷ್ಮೀ ವೃತ. ಶ್ರೀ ವರಮಾಹಾಲಕ್ಷ್ಮಿ ತಮ್ಮೆಲ್ಲರ ಮನೆಗಳಲ್ಲಿ ಕನಕವೃಷ್ಟಿ ಹರಿಸಲಿ, ಎಲ್ಲರಿಗೂ ಶುಭವಾಗಲಿ ಎಂಬುದು ಇಂದಿನ ನಮ್ಮೆಲ್ಲರ ಪ್ರಾರ್ಥನೆ.

ಲಕ್ಷ್ಮೀಂ ಕ್ಷೀರಸಮುದ್ರರಾಜ ತನಯಾಂ ಶ್ರೀರಂಗಧಾಮೇಶ್ವರೀಂ
ದಾಸೀಭೂತಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಾಮ್ |
ಶ್ರೀಮನ್ಮಂದಕಟಾಕ್ಷಲಬ್ಧ ವಿಭವ ಬ್ರಹ್ಮೇಂದ್ರ ಗಂಗಾಧರಾಂ
ತ್ವಾಂ ತ್ರೈಲೋಕ್ಯಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಂ ||
----ಶ್ರೀ ಸೂಕ್ತದ ಒಂದು ಶ್ಲೋಕ

ಅಮ್ಮಾ ನಿನಗಿದು ತರವೇ ತಾಯೀ ?
ನಮ್ಮೆಲ್ಲರ ಪೊರೆಯುವ ಹೇ ಲಕುಮೀ
ಹೆಮ್ಮೆಯ ಸಾವಿರ ಥರ ಮಕ್ಕಳ ಜೊತೆ
ಒಮ್ಮೆ ಇಳಿದು ಬಾ ಸುತ್ತುತ ಜನತೆ

ಸಿರಿಯು ನಿನ್ನಲ್ಲಿ ಬೇಕಷ್ಟಿರಲು
ಬರವು ಕೆಲವರಿಗೆ ಸಿಗದು ಕೈಯೊಳು !
ಹರಸುವೆ ಕೆಲವರ ಹಲವನು ಇತ್ತು
ಮರೆಯುವೆ ಹಲವರ ಕೊಡೆ ತಾಕತ್ತು

ಘನ ಕಾರ್ಯವು ನೀನಿಲ್ಲದೆ ನಡೆಯದು
ಮನಕಾನಂದ ನೀನಿರದಿರೆ ಸಿಗದು
ಸನಕಸನಂದನ ಮುನಿಜನ ನೆನೆದರು
ಮನುಜರು ಬದುಕುವೆವ್ ನಿನ್ನನು ಕರೆದು

ಪಡೆದಿರಬೇಕು ನಿನ್ನನು ಪಡೆಯಲು
ಬಿಡೆಯಕೆ ನೀ ಬರಲಾರೆ ಹಡೆಯಲು
ಒಡನಾಡುತ ಭಕ್ತಿಯಲೀ ನುಡಿಯಲು
ಒಡಮೂಡಲು ನೀ ಮನಮಾಡೆಮ್ಮೊಳು

ಬೇಕಾದವರಿಗೆ ಕೈ ತಿರುಗಿಸುವೆ
ಸಾಕೆಂದವರಿಗೆ ಮೊಗೆದು ಬಡಿಸುವೆ
ನಾಕು ಎಂಟು ಹತ್ತಲವ ಎಣಿಸುವೆ
ಯಾಕಾದರು ನೀ ನಿಲ್ಲದೇ ಇರುವೆ ?

ಶಂಕರರು ಕನಕಧಾರಾ ಸ್ತೋತ್ರವನ್ನು ಬರೆದು ಪಠಿಸಿ ಭಕ್ತನನ್ನು ಉದ್ಧರಿಸಿದರು, ಅದೇ ಸ್ತೋತ್ರವನ್ನು ಭಕ್ತಿ ಶ್ರದ್ಧೆಯಿಂದ ತಾವೆಲ್ಲ ಆಸ್ತಿಕರು ಆದಷ್ಟೂ ಪಠಿಸಿ ಎಂಬ ವಿನಂತಿಯೊಂದಿಗೆ ಇವತ್ತಿನ ಕೃತಿ ಪೂರ್ಣಗೊಳ್ಳುತ್ತದೆ ಅದೇ ಸ್ತೋತ್ರದ ಇನ್ನೊಂದು ಶ್ಲೋಕದೊಂದಿಗೆ :

ಇಷ್ಟಾ ವಿಶಿಷ್ಟಮತಯೋಪಿ ಯಯಾ ದಯಾರ್ದ್ರ -
ದೃಷ್ಟ್ಯಾ ತ್ರಿವಿಷ್ಟಪ ಪದಂ ಸುಲಭಂ ಭಜಂತೇ |
ದೃಷ್ಟಿಃ ಪ್ರಹೃಷ್ಟಕಮಲೋದರದೀಪ್ತಿರಿಷ್ಟಾಂ
ಪುಷ್ಟಿಂ ಕೃಷೀಷ್ಟ ಮಮ ಪುಷ್ಕರ-ವಿಷ್ಟರಾಯಾಃ ||


[ಸ್ವರಯುಕ್ತ ಮಂತ್ರಗಳನ್ನು ಇಲ್ಲಿ ಬರೆಯುವುದು ಸಾಧ್ಯವಾಗುವ ಮಾತಲ್ಲ, ಅದನ್ನೇ ಸ್ವರರಹಿತವಾಗಿ ನಮೂದಿಸಿದ್ದಕ್ಕೆ ವಿದ್ವಾಂಸರ ಕ್ಷಮೆಯಿರಲಿ, ದೇವಿ ಮಹಾಲಕ್ಷ್ಮಿ ಎಲ್ಲರಿಗೂ ಎಲ್ಲವನ್ನೂ ಕೊಟ್ಟು ಸಲಹಲೀ ಎಂಬುದು ಹೃತ್ಪೂರ್ವಕ ಪ್ರಾರ್ಥನೆ ]

ಶ್ರೀವರ್ಚಸ್ವಮಾಯುಷ್ಯಮಾರೋಗ್ಯ ಮಾವಿಧಾತ್ಪವಮಾನಂ ಮಹೀಯತೇ |
ಧನಂ ಧಾನ್ಯಂ ಪಶುಂ ಬಹುಪುತ್ರಲಾಭಂ ಶತಸಂವಥ್ಸರಂ ದೀರ್ಘಮಾಯುಃ ||


Wednesday, August 18, 2010

ಮೊದಲ ದಿನ ಮೌನ...ಅಳುವೇ ತುಟಿಗೆ ಬಂದಂತೆ


[minister or goon ?]

ಮೊದಲ ದಿನ ಮೌನ...ಅಳುವೇ ತುಟಿಗೆ ಬಂದಂತೆ


ಕೆಲವು ಘಟನೆಗಳು ಮನುಷ್ಯನಿಗೆ ಪಾಠಕಲಿಸುತ್ತವೆ. ಪ್ರತೀ ವ್ಯಕ್ತಿಗೂ ಅವರವರ ಅನುಭವಗಳು ಬದಲು. ಹುಟ್ಟಿನಿಂದ ಮುಪ್ಪಿನವರೆಗೆ ಅವರೆಲ್ಲರ ಕಥೆಗಳನ್ನು ಕೇಳಿದರೆ ಒಂದೊಂದೂ ರೋಚಕ. ನನಗೊಬ್ಬರು ಮುದಿವಯಸ್ಸಿನ ನಿವೃತ್ತ ಪೋಲೀಸ್ ಎಸ್. ಐ. ಸಿಕ್ಕಿದ್ದರು. ಅವರಿಗೂ ಈಗೀಗ ಪುಸ್ತಕಗಳ ಗೀಳು! ಪರಸ್ಪರ ಪರಿಚಯವಿನಿಮಯ ವಾಗಿ ಕೆಲದಿನಗಳ ಮೇಲೆ

" ಮಿಸ್ಟರ್ ಭಟ್ ನಿಮ್ಮಲ್ಲಿ ಏನೆಲ್ಲಾ ತುಂಬಿದೆಯಲ್ರೀ, ನನಗೆ ನೀವು ಪರಿಚಯವಾದ್ದು ಬಾಳಾ ಸಂತೋಷವಾಯ್ತು. ಅದ್ರೂ ಒಂದು ಅನುಮಾನ ನಮ್ಮಂತಾ ಮುದುಕರ ಜೊತೆ ನೀವು ಬೆರೆಯಲು ಮನಸ್ಸು ಮಾಡಬೇಕಲ್ಲ. ನಾವೆಲ್ಲಾ ಹಳೆಯ ಕಥೆಗಳನ್ನೇ ಹೇಳಿಕೊಳ್ಳುತ್ತಿರುವವರು " ಎಂದರು.

ನಾನು ಹೇಳಿದೆ " ನೋಡಿ ಸ್ವಾಮೀ, ಮುದುಕರು, ಹುಡುಗರು, ಮಕ್ಕಳು ಎಂಬ ಭೇದಭಾವವಿಲ್ಲ, ಅವರವರ ವಯಸ್ಸಿಗೆ ಅನುಗುಣವಾಗಿ ಸ್ಪ್ರಿಂಗ್ ಥರ ಅಡ್ಜಸ್ಟ್ ಮಾಡಿಕೊಳ್ಳಲು ನಾನು ತಯಾರಾಗಿಬಿಟ್ಟಿದ್ದೇನೆ. ಹೀಗಾಗಿ ಯಾರೊಂದಿಗಾದ್ರೂ ಹೊಂದಿಕೊಳ್ಳಬಲ್ಲೆ "

" ನಿಮಗೆ ಕಾರಂತ್ರ ಬಗ್ಗೆ ಗೊತ್ತಾ ? " --ನನಗೆ ಪ್ರಶ್ನೆ ಹಾಕಿದರು.

" ಏನೋ ಅಲ್ಪಸ್ವಲ್ಪ, ಅವರ ಕೆಲವು ಕೃತಿಗಳನ್ನು ಓದಿದ್ದೇನೆ "

" ಅಲ್ಲಾರೀ ಆ ಪುಣ್ಯಾತ್ಮ ಬರ್ದಿರೋ ’ಅಪೂರ್ವ ಪಶ್ಚಿಮ’ ಓದ್ತಾ ಇದೀನಿ ಏನ್ ಬರೀತಾರ್ರೀ ಅಬ್ಬಬ್ಬ ನಮ್ಗೆ ಮೊದ್ಲೆಲ್ಲ ಇದು ಗೊತ್ತೇ ಇರ್ಲಿಲ್ಲ "--ಕಾರಂತರ ಪ್ರವಾಸ ಕಥನವೊಂದರ ಬಗ್ಗೆ ಹೇಳಿದರು.

ಹೀಗೇ ಮಾತು ಬೆಳೆಯುತ್ತ ಹೋದಂತೇ ಒಮ್ಮೆ ಜೀವನದ ಘಟನೆಗಳನ್ನು ಮೆಲುಕು ಹಾಕುತ್ತಾ ದುಃಖ ಉಮ್ಮಳಿಸಿ ಬಂದು ಕಣ್ಣಿಂದ ಎರಡು ಹನಿ ಉದುರಿದ್ದು ಕಾಣಿಸಿತು.

" ಏನ್ ಸರ್ ಇಷ್ಟೆಲ್ಲಾ ಇಮೋಶನಲ್ ಆಗಿಬಿಟ್ಟರೆ ಹೇಗೆ ? "

" ಇಲ್ಲಾ ಭಟ್ರೇ ನಮ್ಗೆ ಪ್ರಾಯ್ದಲ್ಲಿ ಅಧಿಕಾರ ಇರೋವಾಗ ನಾವು ಮಾಡೋ ತಪ್ಪುಗಳು ತಿಳೀತಾ ಇರ್ಲಿಲ್ಲ, ಆ ತಪುಗಳನ್ನೇ ಸರಿ ಎಂದು ವಾದಿಸೋ ಬಿಸಿ ರಕ್ತ ನಮ್ದಾಗಿತ್ತು. ಇವತ್ತು ಆ ದಿನಗಳೆಲ್ಲ ಕಳೆದುಹೋದವು. ಕಳೆದ ದಿನಗಳಲ್ಲಿ ಮಾಡಿದ ಪಾಪ-ಪುಣ್ಯಗಳ ಲೆಕ್ಕಾಚಾರವನ್ನು ನಡೆಸಿದರೆ ನಮ್ಮ ವೃತ್ತಿಯಲ್ಲಿ ಹಲವೊಮ್ಮೆ ನಾವು ಅನ್ಯಾಯವಾಗಿ ಏನೇನೋ ಮಾಡಿಬಿಡುತ್ತೇವೆ. ಎಷ್ಟೋ ಜನರ ಶಾಪಗಳನ್ನು ನಾವು ಪರೋಕ್ಷ ಪಡೀಬೇಕಾಗತ್ತೆ. ಇಂತಹ ಮೌಲ್ಯಯುತ ಪುಸ್ತಕಗಳು ಮೊದಲೇ ಸಿಕ್ಕಿದ್ದರೆ ನಾವು ಬೇರೇ ರೀತಿಯಲ್ಲೇ ಬದುಕುತ್ತಿದ್ದೆವು. ಈಗ ಅನ್ನಿಸ್ತಿದೆ ನಾವೆಲ್ಲಾ ತಿನ್ನಲಿಕ್ಕಾಗಿ ಬದುಕಿದೆವು ಬದುಕಲಿಕ್ಕಾಗಿ ತಿನ್ನಲಿಲ್ಲ "

ಭಗವದ್ಗೀತೆಯನ್ನು ಶ್ರೀಕೃಷ್ಣ ಅರ್ಜುನನಿಗೆ ಬೋಧಿಸುವಂತೇ ನನಗೆ ಅವರು ಹೇಳುತ್ತಲೇ ಇದ್ದರು. ಅವರು ಯಾರಲ್ಲೂ ಹೇಳಿಕೊಳ್ಳಲಾರದ ಮನದ ಎಲ್ಲಾ ತುಮುಲಗಳನ್ನೂ ಹೇಳಿಕೊಂಡು ಮನ ಬಹಳ ಹಗುರವಾಯಿತು ಎಂದು ಸಂತಸ ಪಟ್ಟರು! ನಾನು ಅವರಿಗೆ ಕೆಲವೊಂದು ಸಲಹೆಗಳನ್ನು ನೀಡಿದೆ. ಅದನ್ನು ಚಿಕ್ಕಮಕ್ಕಳಂತೇ ಮರುಕ್ಷಣವೇ ಇಂದಿನಿಂದಲೇ ಮಾಡುವುದಾಗಿ ಒಪ್ಪಿಕೊಂಡರು.

ಹೀಗೇ ಬದುಕಿನಲ್ಲಿ ಅಧಿಕಾರ, ಯೌವ್ವನ, ಹಣ ಇವೆಲ್ಲಾ ಇರುವಾಗ ಆಗಸದಲ್ಲಿ ಮೋಡಗಳು ಮುಸುಕಿದಂತೇ ನಮ್ಮ ಮನಸ್ಸಿಗೆ ದರ್ಪ, ಗತ್ತು, ಲೋಭ, ಕೋಪ ಇಷ್ಟೇ ಏಕೆ ಅರಿ ಷಡ್ವರ್ಗಗಳು ಮುಕುರಿಕೊಂಡುಬಿಡುತ್ತವೆ. ಈ ಮೋಡಗಳ ಮಬ್ಬಿನಲ್ಲಿ ನಮಗೆ ನಾವ್ಯಾರು ಎಂಬುದೇ ಮರೆತುಹೋಗುತ್ತದೆ. ನಾವು ನಡೆದದ್ದೇ ದಾರಿ, ನಾವು ಹೇಳಿದ್ದೇ ನೀತಿ, ನಾವು ಚಲಾಯಿಸಿದ್ದೇ ಹಕ್ಕು ಎಂಬ ಸರ್ವಾಧಿಕಾರೀ ಧೋರಣೆ ನಮ್ಮಲ್ಲಿ ಮನೆಮಾಡಿ ಕುಳಿತುಬಿಟ್ಟಿರುತ್ತದೆ. ಯಾರೇ ಹೇಳಿದರೂ ಅವರ ಮಾತನ್ನು ಚೂರೂ ಲಕ್ಷ್ಯಕ್ಕೆ ತೆಗೆದುಕೊಳ್ಳದವರು ನಾವಾಗಿರುತ್ತೇವೆ. " ಏ ಹೋಗೋ ಅವನ್ಯಾರೋ ವೇದಾಂತಿ ಅವನ್ಮಾತೆಲ್ಲಾ ಯಾರು ಕೇಳ್ತಾರೆ ? " ಎನ್ನುವ ಮಟ್ಟದಲ್ಲಿನಾವಿರುತ್ತೇವೆ. ಸರಿಯಾಗಿರುವ ಕೆಲವರ ನಡತೆಯಲ್ಲೂ ಸರಿಯಿಲ್ಲ ಎಂದು ಖಂಡಿಸುವ ಜನ ನಾವಾಗಿರುತ್ತೇವೆ. ಇದರಲ್ಲಿ ಗೆದ್ದಾಗ ನಮಗೊಂದು ರಕ್ಕಸನಗೆ ಬರುತ್ತದೆ. ಬೃಹದಾಕಾರಕ್ಕೆ ಬಾಯಗಲಿಸಿ ಗಹಗಹಿಸಿ ನಗುತ್ತೇವೆ. ಆ ನಗುವಿನ ಹಿಂದೇ ನಮ್ಮ ಅಧಃಪತನವೂ ನೆಲೆಸಿರುತ್ತದೆ! ಆದರೆ ನಮಗದರ ಅರಿವಿರುವುದಿಲ್ಲ ! ಯಾವ ಕಾರಣಕ್ಕೆ ನಾವು ಜೋರಾಗಿ ನಕ್ಕಿದ್ದೆವೋ ಅದೇ ಕಾರಣಕ್ಕೆ ನಾವು ಇನ್ನೂ ಜೋರಾಗಿ ಅಳುವ ಸಮಯ ಸನ್ನಿಹಿತವಾಗುತ್ತದೆ.

|| ಸುಖಸ್ಯಾ ನಂತರಂ ದುಃಖಂ || ಈ ಜೀವನದ ಪ್ರತೀ ಹಂತದಲ್ಲೂ ಏಳು ಬೀಳುಗಳು ಏರಿಳಿತದ ರಸ್ತೆಗಳಂತೆ ಸದಾ ಇರುತ್ತವೆ! ಆದರೆ ನಮಗೆ ಇದರ ಪರಿವೆಯೇ ಇಲ್ಲದೇ ನಾವು ಬರೇ ಸುಖವನ್ನೂ ಬರೇ ಆನಂದವನ್ನೂ ಬಯಸುತ್ತಿರುತ್ತೇವೆ. ಬರೇ ಸುಖವಿದ್ದರೆ ಕಷ್ಟವೇನೆಂದೂ ತಿಳಿಯುವುದಿಲ್ಲ, ಹಾಗಿರುವಾಗ ಅಲ್ಲಿ ಅನುಭವಿಸುವ ಸುಖ ವಿಶೇಷವಾಗೇನೂ ಕಾಣಿಸುವುದಿಲ್ಲ. ಕಾರು ಇಟ್ಟುಕೊಂಡವನು ಆರ್ಥಿಕವಾಗಿ ಸೋತು ಬೈಕ್ ನಲ್ಲಿ ಓಡಾಡುವಾಗ ಅವನಿಗೆ ಕಾರಲ್ಲಿ ತಿರುಗಿದ ನೆನಪಾಗಿ ಅಳುಬರುತ್ತದೆ. ರೇಮಂಡ್ಸ್ ಸೂಟ್ ನಲ್ಲಿ ಮೆರೆದವನು ಸಾದಾ ಪ್ಯಾಂಟು ಧರಿಸಬೇಕಾಗಿ ಬಂದಾಗ ಅವನಿಗೆ ವ್ಯಥೆಯಾಗುತ್ತದೆ. ಮಂತ್ರಿಯಾಗಿದ್ದು ಮೆರೆದು ನಂತರದ ಚುನಾವಣೆಯಲ್ಲಿ ಬಿದ್ದು ಮನೆಸೇರಿದಾಗ ಹಾವಿಗೆ ಹಲ್ಲುಕಿತ್ತ ಅನುಭವವಾಗುತ್ತದೆ! ಅತೀ ಬಡವನಿಗೆ ಪ್ಲೇವಿನ್ ಥರದ ಲಾಟರಿ ಹೊಡೆದಾದ ಆತ ತಿಂಗಳಬೆಳಕೂ ಮೈಗೆ ಶಾಖತರುತ್ತದೆ ಎಂದು ಕೊಡೆಹಿಡಿದು ಓಡಾಡುತ್ತಾನೆ! ತೀರಾ ನಿಕೃಷ್ಟ ಸ್ಥಿತಿಯಲ್ಲಿದ್ದವರ ಮಗನೋ ಮಗಳೋ ಎಲ್ಲೋ ಒಂದು ಸಾಫ್ಟ್ ವೇರ್ ನೌಕರಿಗೆ ಸೇರಿಬಿಟ್ಟರೆ ತಮ್ಮ ಮುಂದೆ ಯಾರೂ ಇಲ್ಲ ಅನ್ನುವ ರೀತಿಯಲ್ಲಿ ಬದುಕತೊಡಗುತ್ತಾರೆ! ಇವೆಲ್ಲಾ ನಾವು ನೋಡುವ ಹಲವು ಜೀವನಕ್ರಮಗಳು.

ಏನಿರಲಿ ಬಿಡಲಿ ಜೀವನ ತನಗೆ ದೈವೀದತ್ತವೆಂದು ತಿಳಿದು ಪ್ರಾಮಾಣಿಕವಾಗಿ ದುಡಿದು ಇದ್ದುದರಲ್ಲಿ ತೃಪ್ತಿ ಪಟ್ಟು ಜೀವಿಸಿದರೆ ಅಲ್ಲಿ ಏರಿಳಿತಗಳು ಕಮ್ಮಿ ಇರುತ್ತವೆ. ಹೀಗೆ ಮಾಡಲು ಮನಸ್ಸಿಗೆ ಸಂಸ್ಕಾರ ಬೇಕು. ಮನಸ್ಸಿಗೆ ಸದುದ್ದೇಶ ಬೇಕು. ಒಳ್ಳೆಯ ಸಂಸ್ಕಾರವಿಲ್ಲದ ಮನಸ್ಸು ಹುಳುಬಿದ್ದ ಹಣ್ಣಿನಂತಿರುತ್ತದೆ. ಸಂಸ್ಕಾರಗೊಂಡ ಮನಸ್ಸು ಪುಟಕೊಟ್ಟ ಬಂಗಾರದಂತೆ ಹೊಳೆಯುತ್ತಿರುತ್ತದೆ!

ಮೊನ್ನೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ---
ಕಾರ್ಮಿಕ ಸಚಿವ ಬಚ್ಚೇ ಗೌಡರು ಅದ್ಯಾವುದೋ ಉದ್ಯಮಿ ಭರತ್ ಗೆ ಕಪಾಳಮೋಕ್ಷ ಕರುಣಿಸಿದ್ದಾರೆ! ಆತ ಮಾಡಿದ ತಪ್ಪೇನು ಎಂದು ಕೇಳಿದರೆ ಆತ ಮಂತ್ರಿಯಾದ ತನ್ನ ವಾಹನವನ್ನು ಹಿಂದಕ್ಕೆ ಹಾಕಿದ ಅದಕ್ಕೇ ಹಾಗೆಮಾಡಿದೆ ಅಂದಿದ್ದಾರೆ. ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ ಎಂದೆಲ್ಲಾ ಪ್ರತ್ಯಕ್ಷದರ್ಶಿಗಳು ಹೇಳಿದ್ದನ್ನು ಮಾಧ್ಯಮಗಳು ವರದಿಮಾಡಿವೆ. ಅವರು ಎಲ್ಲಿಗೆ ಹೋಗಿದ್ದರು ? ಹಾಸನಜಿಲ್ಲೆಗೆ ಸ್ವಾತಂತ್ರ್ಯೋತ್ಸವಕ್ಕಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಭಾಗವಹಿಸಿದ್ದರು. ಅಲ್ಲಿ ಅಂದಿನ ಸಭೆಗಳಲ್ಲಿ ಹುತಾತ್ಮರ ಬಗ್ಗೆ, ಮಹಾತ್ಮ ಗಾಂಧೀಜಿ ಬಗ್ಗೆ ಬರೆದುಕೊಟ್ಟ ಭಾಷಣವನ್ನು ತಪ್ಪುತಪ್ಪಾಗಿ ಅಂತೂ ಮಾಡಿಮುಗಿಸುತ್ತಾರೆ! ಗಾಂಧೀಜಿ ಹೇಳಿದರು -ತನ್ನ ಒಂದು ಕೆನ್ನೆಗೆ ಹೊಡೆದೆಯಲ್ಲಪ್ಪಾ ಇನ್ನೊಂದು ಕೆನ್ನೆಗೂ ಹೊಡಿ ಎಂದು. ಸಚಿವರಿಗೆ ಅದು ಅರ್ಥವಾಗಿದ್ದು " ಒಂದೇ ಕೆನ್ನೆಗೆ ಹೊಡೆಯಬೇಡಪ್ಪಾ ಇನ್ನೊಂದು ಕೆನ್ನೆಗೂ ಹೊಡಿ" ಎಂದು! ಪಾಪ ಅವರೇನು ಮಾಡುತ್ತಾರೆ? ಬರುವಾಗ ಪ್ರಾಯೋಗಿಕವಾಗಿ ಅದನ್ನು ಅಳವಡಿಸಿಕೊಂಡಿದ್ದಾರೆ;ಮಹಾತ್ಮರನ್ನು ಅನುಸರಿಸುವ ದಿನವಲ್ಲವೇ ಅದಕ್ಕೆ!

ಈ ಕಥೆ ನಿಮಗೆ ಸಂಸ್ಕಾರವನ್ನು ತೋರಿಸುತ್ತದೆ. ನಮ್ಮ ಆಸ್ಥಾನದಲ್ಲಿ ಈಗ ನರ್ಸಕ್ಕನ ಪ್ರೀತಿಯ ರೇಣುಕಾಚಾರ್ಯರಿದ್ದಾರೆ, "ಇರ್ಲಿಬಿಡಿ" ಎಂದು ಲಂಚಪಡೆದು ಗೆದ್ದ ಸಂಪಂಗಿಯಿದ್ದಾರೆ, ಸ್ನೇಹಿತನ ಹೆಂಡತಿಯನ್ನು ಕಾಮಿಸಲು ಹೋದ ಹಾಲಪ್ಪ ಇದ್ದಾರೆ, ಇನ್ನೂ ಕೆಲವು ಕಾಳಪ್ಪ ಗೂಳಪ್ಪ ಎಲ್ಲಾ ಇದ್ದಾರೆ. ಎಲ್ಲೋ ಕಕ್ಕಸು -ಬಚ್ಚಲುಮನೆ ತೊಳ್ಕೊಂಡು ಇದ್ದ ಇವರನ್ನೆಲ್ಲಾ ಆರಿಸಿ ಕಳುಹಿಸಿದ ನಮಗೆ ಇರುವ ಸಂಸ್ಕಾರ ಎಂಥದು ? --ಇದನ್ನು ನಾವು ಆಲೋಚಿಸಬೇಕು! ಕಲ್ಚರ್ ಬಿಗಿನ್ಸ್ ಎಟ್ ದಿ ರೂಟ್ !

ಇನ್ನೊಂದು ಕಥೆ ನೋಡಿ---
ಇಪ್ಪತ್ತು ಕೋಟಿ ಹಣವನ್ನು ಮಾಯಾಜಾಲದಿಂದ ಕೊಟ್ಟು ರಾಜ್ ಕುಮಾರ್ ರನ್ನು ಬಿಡಿಸಿದ ನಮ್ಮ ಹಿಂದಿನ ಎಸ್.ಎಮ್.ಕೃಷ್ಣ ನಡೆಸಿದ ಸರಕಾರ ಪ್ರಾಮಾಣಿಕರೂ, ನಿಗರ್ವಿಯೂ, ಸಾತ್ವಿಕರೂ, ಸದಭಿರುಚಿಯ ಮಾಜಿಮಂತ್ರಿಯೂ, ನಿಷ್ಠಾವಂತ ರಾಜಕಾರಣಿಯೂ ಆದ ಎಚ್.ನಾಗಪ್ಪನವರನ್ನು ವೀರಪ್ಪನ್ ನಿಂದ ಬಿಡಿಸಲಿಲ್ಲ! ಇಲ್ಲಿ ಪಾರ್ವತಮ್ಮ ಗಲಾಟೆಮಾಡಿದರು, ಮುಖ್ಯಮಂತ್ರಿಯ ಮನೆಗೇ ನುಗ್ಗಿಬಿಟ್ಟರು, ಅಭಿಮಾನಿಗಳು ಎನಿಸಿದ ಜನ ದೊಂಬಿ ಶುರುಮಾಡಿದರು, ರಾಜಕುಮಾರ್ ಅದೃಷ್ಟವೂ ಚೆನ್ನಾಗಿತ್ತು-ಈ ಎಲ್ಲಾ ಫ್ಯಾಕ್ಟ್ಸ್ ಸೇರಿ ಅವರ ಬಿಡುಗಡೆಯಾಯಿತು. ಅಧಿಕಾರದಲ್ಲಿಲ್ಲದ ಮಾಜಿಮಂತ್ರಿಯೊಬ್ಬರ ಹೆಂಡತಿಯಾಗಿ, ಅಸಹಾಯಳಾಗಿ ಕಂಡ ಕಂಡ ಮಠಮಾನ್ಯಗಳ ಮೊರೆ ಹೊಕ್ಕು ಪ್ರಾರ್ಥಿಸಿ ತನ್ನ ಗಂಡನ ಬಿಡಿಸುವಿಕೆಗಾಗಿ ಹಂಬಲಿಸಿದವರು ಶ್ರೀಮತಿ ಪರಿಮಳಾ ನಾಗಪ್ಪ. ಆದರೆ ಇವರಿಗೆ ಸಪ್ಪೋರ್ಟ್ ಸಿಗಲಿಲ್ಲ!--ಮಂತ್ರಿಯಾಗಿದ್ದಾಗ ಮನೆಯಲ್ಲಿ ಗಂಟು ಕಟ್ಟಿರದಿದ್ದಕಾರಣ ಹಣವೇ ಇಲ್ಲದೇ ವೀರಪ್ಪನ್ ಗೆ ಎಲ್ಲಿಂದ ಕೊಡುವುದು? ಅಲ್ಲವೇ ? ಹತರಾದ ದಿ| ನಾಗಪ್ಪ ಪ್ರತೀ ದಿನ ಬಹಳ ಹೊತ್ತು ಶಿವಪಂಚಾಕ್ಷರೀ ಮಂತ್ರವನ್ನು ಬರೆಯುತ್ತಿದ್ದರಂತೆ! ಅನ್ಯಾಹಾರಿಗಳಲ್ಲದ ಅವರಿಗೆ ವೀರಪ್ಪನ್ ಬೇಯಿಸುವ ಮಾಂಸದಡುಗೆಗಳು ಬೇಡವಾಗಿದ್ದವು ಅದೂ ಅಲ್ಲದೇ ಬಹಳ ಸಂಸ್ಕಾರಯುತರಾಗಿದ್ದ ಅವರ ದಿನಚರಿಗೆ ತುಂಬಾ ಹೊಡೆತ ಬಿದ್ದಿತ್ತು. ಸಂಚಿತಕರ್ಮ ನೆಗೆಟಿವ್ ಜಾಸ್ತಿ ಆಗಿರುವಾಗ ಯಾರೂ ಏನೂ ಮಾಡಲೂ ಆಗಲಿಲ್ಲ, ಕಾಳಸಂತೆಯ ಹಣ ಒದಗಿ ಬರಲಿಲ್ಲ ಪರಿಣಾಮ ಕಾಣುತ್ತಾ ಕಾಣುತ್ತಾ ಮುತ್ಸದ್ಧಿಯೊಬ್ಬನನ್ನು ಈ ರಾಜ್ಯ ಕಳೆದುಕೊಂಡಿತು.
ಇದು ಕಲಿಯುಗ!

ಇಷ್ಟೆಲ್ಲಾ ಬರೆದದ್ದು ಕೇವಲ ನಮ್ಮ ಸಂಸ್ಕೃತಿ ಸರಿಯಿರಬೇಕೆಂಬ ಕಾರಣಕ್ಕೆ! ನಿನ್ನೆ ರಾತ್ರಿ ಕುಡುಕನೊಬ್ಬ ಸಿಕ್ಕ. ಆತ ಹಗಲಲ್ಲಿ ಯಾವುದೋ ಬಟ್ಟೆ ಕಾರ್ಖಾನೆಯಲ್ಲಿ ಕಾರ್ಮಿಕ. ಸಂಬಳ ಬಂದಿದ್ದರಲ್ಲಿ ಎಷ್ಟು ಕುಡಿತಕ್ಕೆ ಎಂದು ಗೊತ್ತಿಲ್ಲ. ನಾನು ಕುಡಿಯಲು ನೀರಿನ ಕ್ಯಾನ್ ಒಂದನ್ನು ತರಲು ಹೋಗಿದ್ದೆ. ಆತ ಬಹಳ ಮಾತಾಡಿಸಿದ, ಅನುಮಾನ ಬಂತು ನನಗೆ! ಆದ್ರೂ ಅನಿವಾರ್ಯವಾಗಿ ಮಾತನಾಡಿದೆ. ಪ್ರತೀ ಮಾತಿಗೆ "ಸರ್ ಒಂದೇಳ್ತೀನಿ ಬೇಜಾರ್ಮಾಡ್ಕೋಬೇಡಿ " ಎನ್ನುತ್ತಿದ್ದ. ನಾನು ಆದಷ್ಟೂ ಅಲ್ಲಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದೆ. " ಈ ರೀತಿ ಜಗತ್ತೆಲ್ಲಾ ಮಳೆ ಬೀಳ್ತೈತೆ ಇಲ್ಲಿ ಕರೆಂಟಿಲ್ಲಾ ಅಂದ್ರೆ ನನ್ಮಕ್ಳು ರಾಜ್ಕಾರ್ಣಿಗ್ಳು ಏನ್ಮಾಡ್ತವ್ರೆ ? " ಅಂತಿದ್ದ, ಬಾಯಿತಪ್ಪಿ "ಈ ಸಲ ಮಳೆ ಸರಿಯಾಗಿ ಆಗ್ತಾ ಇಲ್ಲಪ್ಪ " ಅಂದ್ಬಿಟ್ಟೆ ! ತಕಳಿ ಜೋರಾಗ್ಬಿಡ್ತು ! "ರೀ ನೀವೇನ್ರಿ ನೀವು ನಿಮಗ್ ಮಾತ್ರ ಮಳೆ ಇಲ್ವಾ ನೀವೇ ಫಸ್ಟು ಹಿಂಗೇಳ್ತಾಯಿರೋದು ಜಗತ್ತೆಲ್ಲಾ ಮಳೆ ಬೀಳ್ತೈತೆ " ಅಬ್ಬರಿಸುತ್ತಿದ್ದ! ನನಗೆ ಅಲ್ಲಿಗೆ ಸಾಕಾಯಿತು- ಇದು ಪಲಾಯನವಾದವಲ್ಲ. ಆತನ ಮನಸ್ಸಿಗೆ ಎಣ್ಣೆ ಮುಸುಕಿದೆ! ಆ ಘಳಿಗೆಯಲ್ಲಿ ಮೊದಲೇ ಸಂಸ್ಕಾರರಹಿತನಾದ ಆತ ಏನುಮಾಡಲೂ ಹೇಸುವವನಲ್ಲ! ಬರಿದೇ ನನ್ನ ಪೌರುಷವನ್ನು ತೋರಿಸುತ್ತೇನೆ ಎನ್ನುವ ಬದಲು ಅಂಥವರಿಂದ ದೂರವಿದ್ದರೇ ಒಳ್ಳೆಯದು. ಅಂಥವರನ್ನು ಸರಿಯಿದ್ದಾಗ [ಎಣ್ಣೆಹಾಕಿರದಿದ್ದಾಗ] ನಾನು ತಿದ್ದಬಲ್ಲೆ ಆದರೆ ಈ ಸನ್ನಿವೇಶದಲ್ಲಿ ಅಲ್ಲ. ಅದಕ್ಕೇ ಅಲ್ಲಿಂದ ತಕ್ಷಣಕ್ಕೆ ನಾನು ಹೊರಟೆ.

ಸಂಸ್ಕಾರ ರಹಿತ ಮನುಷ್ಯರು ಬದುಕಿದ್ದರೂ ಸತ್ತಂತೆಯೇ ! ರವಿಗೌಡನೆಂಬ ಸುಮಾರು ೨೬ ರ ವಯಸ್ಸಿನ ವ್ಯಕ್ತಿಯೊಬ್ಬ ಆಟೋ ಓಡಿಸುತ್ತಿದ್ದ. ಆತ ಆಗಾಗ ಮಿತ್ರರೊಬ್ಬರ ಕಾಂಡಿಮೆಂಟ್ಸ್ ಅಂಗಡಿಗೆ ಬರುತ್ತಿದ್ದ. ಒಂದಿನ ಸಿಗರೇಟು ಸಾಲವಾಗಿ ಕೊಡದಿದ್ದುದಕ್ಕೆ ಹೊಯ್ದ ಎಣ್ಣೆಯ ಅಮಲಿನಲ್ಲಿ ಅವರ ಶೋ ಕೇಸ್ ಎಲ್ಲಾ ಒಡೆದು ಪುಡಿಮಾಡಿದ. ಬಡವರಾಗಿದ್ದ ಅವರು ಬದುಕಿಗಾಗಿ ಸಾಲಮಾಡಿ ನಡೆಸುತ್ತಿದ್ದ ಆ ಅಂಗಡಿ ಮುಂಗಟ್ಟು ವಿನಾಕಾರಣ ಹಾಳಾಗಿದ್ದಕ್ಕೆ ಬಹಳೇ ಬೇಸತ್ತರು. ನಾನೊಂದು ಸಲಹೆ ನೀಡಿದೆ--ನೀವು ಇನ್ನುಮೇಲೆ ಅಂಗಡಿಯಲ್ಲಿ ಬೀಡಿ-ಸಿಗರೇಟು ಇಡಲೇಬೇಡಿ, ಅದಕ್ಕೆ ಬರುವುದೇ ಬೇರೆ ತರಗತಿಯ ಜನ! ಮತ್ತು ರವಿಗೌಡ ಬಹಳ ದಿನ ಬದುಕುವುದಿಲ್ಲ ಎಂತಲೂ ನನ್ನ ಬಾಯಲ್ಲಿ ಸಹಜವಾಗಿ ಉದ್ಗಾರವಾಗಿಬಿಟ್ಟಿತ್ತು. ಮುಂದೆ ಅವರು ಅದುಹೇಗೋ ಸರಿಪಡಿಸಿಕೊಂಡರು, ನನ್ನ ಸಲಹೆ ಅಳವಡಿಸಿಕೊಂಡರು. ವರ್ಷಪೂರ್ತಿಯಾಗಿತ್ತೋ ಇಲ್ಲವೋ ರವಿಗೌಡ ತಾನೂ ಪುಡಿರೌಡಿಯಾಗಿದ್ದು ರೌಡಿಗಳಿಂದ ಕೊಲ್ಲಲ್ಪಟ್ಟ. ಆತನ ಹೆಂಡತಿ-ಮಗುವಿನ ಸ್ಥಿತಿ ಗೋಳಾಗಿದೆ.

ಈಗ ಇನ್ನೊಂದು ಸಣ್ಣ ಮಾತು: ನಾವು ತಿನ್ನುವ ಆಹಾರಕ್ಕೂ ನಮ್ಮ ಮನಸ್ಸಿಗೂ ನೇರ ಹೊಂದಾಣಿಕೆಯಿದೆ. ಆಹಾರದಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸ ಈ ಮೂರು ಥರದ ಆಹಾರಗಳು ನಮಗೆ ಸಿಗುತ್ತವೆ. ಸಾತ್ವಿಕ ಆಹಾರ ತಿನ್ನುವವರು ಸಾತ್ವಿಕರಾಗಿಯೂ, ರಾಜಸ ಆಹಾರ ತಿನ್ನುವವರು ರಾಜಸಮನೋವೃತ್ತಿಯವರಾಗಿಯೂ ಮತ್ತು ತಾಮಸ ಆಹಾರ ತಿನ್ನುವವರು ತಾಮಸ ಅಥವಾ ನೀಚ ಮನೋವೃತ್ತಿಯವರಾಗಿಯೂ ಬೆಳೆಯುತ್ತಾರೆ! ಹಣ್ಣು-ಹಂಪಲು-ತರಕಾರಿಗಳನ್ನು ತೀರಾ ಅತಿಯಾದ ಉಪ್ಪು-ಖಾರ-ಸಿಹಿ-ಹುಳಿ ಬಳಸದೇ ತಿಂದರೆ ಅದು ಸಾತ್ವಿಕ, ಕೆಲವು ತರಕಾರಿಗಳಾದ ಈರುಳ್ಳಿ, ಬೆಳ್ಳುಳ್ಳಿ ಇವೆಲ್ಲಾ ಸೇರಿದಂತೆ ಶಾಖಾಹಾರ, ಮಾಂಸಾಹಾರ ಅಧಿಕ ಉಪ್ಪು-ಖಾರ-ಸಿಹಿ-ಹುಳಿ ಇವನ್ನು ಆಹಾರಕ್ರಮದಲ್ಲಿ ಅಳವಡಿಸಿಕೊಂಡವರು ರಾಜಸರಾಗುತ್ತಾರೆ. ಎರಡನೆಯ ಎಲ್ಲವನ್ನೂ ಅತೀ ತಂಪು, ಅತೀ ಬಿಸಿ ಅಥವಾ ಹಳಸಿದ್ದು, ಘಾಟು ಹೊಂದಿರುವಂಥದ್ದು, ತಯಾರಿಸಿ ದಿವಸಗಳೇ ಆಗಿರುವಂಥದ್ದು ಇವನ್ನೆಲ್ಲಾ ತಿನ್ನುವವರು ತಾಮಸಾಹಾರಿಗಳು. ಆಯಾಯ ಆಹಾರಗಳಂತೇ ನಮ್ಮ ಮನಸ್ಸೂ ಕೂಡ, ಉತ್ತಮ, ಮಧ್ಯಮ ಮತ್ತು ಅಧಮ ಗುಣ-ಸ್ವಭಾವ ಸಂಸ್ಕಾರಗಳನ್ನು ಪಡೆಯುತ್ತದೆ. ಈಗ ನೀವೇ ನಿರ್ಧರಿಸಿ ನೀವು ಯಾವ ಆಹಾರದವರೆಂದು.

ಒಮ್ಮೆ ಬೆಂಗಳೂರಲ್ಲಿ ನನಗಿನ್ನೂ ಸ್ಟಾರ್ ಹೋಟೆಲ್ ಗಳಲ್ಲಿ ಊಟಮಾಡಿ ಅಭ್ಯಾಸವಿರದ ಸಮಯ, ಆಗ ಒಂದು ಕಂಪನಿಯ ಸೆಮಿನಾರ್ ಇತ್ತು. ಸೆಮಿನಾರ್ ಮುಗಿದು ಎಲ್ಲರೂ ಡಿನ್ನರ್ ಗೆ ತೆರಳಿದೆವು. ಅಲ್ಲಿ ಅಂದಿಗೆ ಅವರು ರೆಡಿಮಾಡಿಸಿದ್ದು ಬರೇ ವೆಜಿಟೇರಿಯನ್ ಫುಡ್ ಮಾತ್ರ. ಎಲ್ಲರೂ ಬಫೆಗೆ ತೆರಳಿದೆವು. ನನ್ನ ಜೊತೆ ಕೆಲವು ವೃತ್ತಿನಿರತ ಗೆಳೆಯರಿದ್ದರು. ಅವರು ಅದೂ ಇದೂ ನನಗೆ ಬಡಿಸುತ್ತಾ ಪನ್ನೀರ್ ಮಸಾಲ ಬಡಿಸಿಬಿಟ್ಟರು! ನನಗೆ ಪನ್ನೀರ್ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಅದನ್ನು ಸ್ಪೂನ್ ನಿಂದ ಪ್ರೆಸ್ ಮಾಡಿದಾಗ ಮಾಂಸದ ಉಂಡೆಯ ಥರ ಮೆತ್ತಮೆತ್ತಗೆ ಮೆತ್ತಮೆತ್ತಗೆ! ನನಗೆ ಅಸಹ್ಯವಾದರೂ ಇನ್ನೊಮ್ಮೆ ಅದನ್ನು ಪರೀಕ್ಷಿಸಿ ನೋಡೋಣ ಅಂತ ಪ್ರೆಸ್ ಮಾಡಿದರೆ ಪಕ್ಕದಲ್ಲಿ ಮಜಾ ತೆಗೆದುಕೊಳ್ಳುತ್ತಿದ್ದ ನನ್ನ ಸ್ನೆಹಿತರು ನಕ್ಕೂ ನಕ್ಕೂ ನನ್ನನ್ನು ಮಾನಸಿಕವಾಗಿ ಎಲ್ಲರ ಎದುರಿಗೆ ಹೈರಾಣಾಗುವಂತೆ ಮಾಡಿದ್ದರು. ಮೊದಲೇ ಸಂಕೋಚ ಪ್ರವೃತ್ತಿಯವನಾದ ನನಗೆ ಎಲ್ಲವನ್ನೂ ಬಿಸಾಕಿ ಅಲ್ಲಿಂದ ಕಾಲ್ಕಿತ್ತರೆ ಸಾಕಾಗಿತ್ತು! ಒಂಚೂರೂ ಮಾತನಾಡಲು ಆಗದ ಮನೋಸ್ಥಿತಿ ನನ್ನದಾಗಿತ್ತು. ಅದು ಯಾವುದೋ ನಾನ್ ವೆಜ್ ಅಂತ ಮನಸ್ಸು ತಿಳಿದುಬಿಟ್ಟಿತ್ತು. ಪನ್ನೀರಿನ ಬಿಳಿಯ ಬಣ್ಣ ಮಧ್ಯೆ ಕಾಣಿಸಿಕೊಂಡಾಗಲಂತೂ ಚರ್ಮ ಕಿತ್ತಾಗ ನಮಗೆ ಎಲುಬು ಕಾಣಿಸಿದ ಹಾಗಾಗಿ " ಥೂ ಇದೇನೋ ಇಸ್ಸೀ ಬೇಡಪ್ಪಾ ಶಿವಾ " ಎಂದು ಸ್ವಗತ ಸಾರಿತ್ತು. ಅದು ಪನ್ನೀರ್ ಮಸಾಲ ಎಂಬುದು ಆಮೇಲೆ ತಿಳಿದಿದ್ದು. ಅಂದಿನ ನನ್ನ ಸ್ಥಿತಿ ಹೊಸದಾಗಿ ಗಂಡನ ಮನೆ ಸೇರಿದ ಹಳೆಯ ಕಾಲದ ಹೆಣ್ಣಿನ ಥರ ಇತ್ತು ಎಂದರೆ ತಪ್ಪಲ್ಲ! ಈ ಘಟನೆ ನೆನಪಾದಾಗ ನನಗೆ ನರಸಿಂಹ ಸ್ವಾಮಿಯವರ ’ ಮೊದಲ ದಿನ ಮೌನ ...ಅಳುವೇ ತುಟಿಗೆ ಬಂದಂತೆ ’ ಹಾಡು ಈ ಅರ್ಥದಲ್ಲಿ ಕಾಣಿಸುತ್ತದೆ!


ನೀವು ಯಾರೇ ಆಗಿರಿ, ನಿಮ್ಮಲ್ಲಿ ನನ್ನ ಪ್ರಾರ್ಥನೆ ಇಷ್ಟೆ-- ಸಹನೆ, ಸಹಿಷ್ಣುತೆ, ಸೌಜನ್ಯ, ಸೌಶೀಲ್ಯ ಇವನ್ನೆಲ್ಲಾ ಬೆಳೆಸಿಕೊಂಡು, ಕೆಟ್ಟಚಟಗಳಿಂದ ದೂರವಿದ್ದು, ಆದಷ್ಟೂ ಸಜ್ಜನರ ಸಹವಾಸದಲ್ಲಿರಿ. ಸತ್ ಸಂಸ್ಕಾರದಿಂದ ಸಿಗುವ ಫಲ ಬಹಳ ಉತ್ತಮವಾಗಿರುತ್ತದೆ.

Tuesday, August 17, 2010

ಸರ್ಜನರ ಹೃದಯದಿ ಸಜ್ಜನರ ಕಂಡೆನು.....


ಸರ್ಜನರ ಹೃದಯದಿ ಸಜ್ಜನರ ಕಂಡೆನು.....

ಹೀಗೊಬ್ಬ ಬ್ಲಾಗಿಗ ಸಿಗಬಹುದೆಂದು ಕನಸುಮನಸಲ್ಲೂ ಎಣಿಸಿರಲಿಲ್ಲ. ನನ್ನ ಬ್ಲಾಗ್ ಶುರುವಾದ ಕೆಲವು ದಿನಗಳಲ್ಲಿ ಬ್ಲಾಗಾಡಿಗರಾಗಿ ಒಬ್ಬರು " ದೇವನೂರು ತಿರುಮಲಾಚಾರ್ ಕೃಷ್ಣಮೂರ್ತಿ " ಎನ್ನುವ ಹೆಸರಿನವರು ಬಂದು ಸೇರಿದರು. ಚಿತ್ರವಿಲ್ಲದ ಬರೇ ಮನುಷ್ಯಾಕೃತಿಯ ಬಿಂಬರೂಪದಲ್ಲಿ ಸೇರಿದ್ದರು. ದೇವರ ಬಗ್ಗೆ ಬರೆದಿದ್ದನ್ನು ನೋಡಿ ಯಾರೋ ಹೊಸ ಪೀಳಿಗೆಯ ಲ್ಯಾಪ್ಟಾಪ್ ಹಿಡಿದ ಪುರೋಹಿತರು ಬಂದಿದ್ದಾರೆ ಎಂದುಕೊಂಡೆ. ಆದರೆ ಅದು ನಿಜವಾಗಿರಲಿಲ್ಲ ಬದಲಿಗೆ ಒಬ್ಬ ಗಣಕಯಂತ್ರವನ್ನು ಉಪಯೋಗಿಸುವ ತಜ್ಞವೈದ್ಯರು ಅವರು ಎಂಬುದು ಅವರ ಪ್ರತಿಕ್ರಿಯೆಯ ಕೊಂಡಿ ಹಿಡಿದು ಹುಡುಕಿದಾಗಲೇ ಗೊತ್ತಾಗಿದ್ದು! ಅನುಮಾನವೋ ಅನುಮಾನ! ತಾನು ಕಣ್ಣು-ಮೂಗು-ಗಂಟಲು ತಜ್ಞ ಡಾಕ್ಟರು ಅಂತಾರೆ ಪ್ರೊಫೈಲ್ ನಲ್ಲಿ, ಸಾಮಾನ್ಯವಾಗಿ ಡಾಕ್ಟರುಗಳು ಬರೆಯುವ ಜನವಲ್ಲ, ಅವರು ಬರೆದ ಚಿಕಿತ್ಸಾ ಚೀಟಿಯನ್ನು ಓದುವ ಔಷಧಗಳ ಅಂಗಡಿಯವರು ಬ್ರಹ್ಮಲಿಪಿಯನ್ನೂ ಓದುವವರಾಗಿರುತ್ತಾರೆ! ಯಾಕೆಂದರೆ ವೈದ್ಯರು ಸಾಮಾನ್ಯವಾಗಿ ಬರೆದ ಯಾವುದೇ ಅಕ್ಷರವನ್ನೂ ಬಹುತೇಕರು ಓದಲಾಗುವುದಿಲ್ಲ. ಈ ನಿಟ್ಟಿನಲ್ಲಿ ಔಷಧಗಳ ಅಂಗಡಿಯ ಮಾಲೀಕರಿಗೆ ವಿಶೇಷವಾದ ಅವಾರ್ಡ್ ಕೊಟ್ಟು ಸತ್ಕರಿಸಬೇಕು! ಇರಲಿ. ಇಲ್ಲಿ ಇದು ಕಥೆಯೇ ಬೇರೆ, ನಿಜ್ವಾಗಿಯೂ ಹೇಳುತ್ತೇನೆ ಕೇಳಿ- ಇವರೋ ಒಂದೇ ವೈದ್ಯರೇ ಅಲ್ಲ ಅಥವಾ ಇವರು ಅಡ್ಡಕಸುಬಿ ವೈದ್ಯರು ಎಂಬೆಲ್ಲಾ ಹುರುಳಿಲ್ಲದ ಆಲೋಚನೆಗಳು ಮನಸ್ಸಲ್ಲಿ ಬಿಂಬಿತವಾಗಿದ್ದವು! ನನ್ನೊಳಗೇ ಇಬ್ಬರು ವಿ.ಆರ್.ಭಟ್ ಹುಟ್ಟಿಕೊಂಡು ಪರಸ್ಪರ ವಾಗ್ವಾದ ಶುರುವಾಗಿಬಿಟ್ಟಿತ್ತು ! ಒಬ್ನು " ಏ ಅವರು ಒಳ್ಳೆ ಡಾಕ್ಟ್ರು " ಅಂತಾ ಇದ್ರೆ ಇನ್ನೊಬ್ಬ " ಹೋಗಲೇ ನಿಂಗೇನ್ ಗೊತ್ತು ಡಾಕ್ಟ್ರೆಲ್ಲಾ ಬ್ಲಾಗ್ ಬರ್ಯಲ್ಲ, ಅವ್ರ್ಯಾವ್ ಸೀಮೆ ಡಾಕ್ಟ್ರು ಬ್ಲಾಗ್ ಬರ್ಯೋರು " ಈ ಪೀಕಲಾಟದಲ್ಲಿ ಸೋತು ಸುಣ್ಣವಾಗಿದ್ದೆ!

ಕಾಲವೇ ಹಲವಕ್ಕೆ ಉತ್ತರಹೇಳುತ್ತದಲ್ಲವೇ ? ಹೀಗಾಗಿ ತಾಳ್ಮೆಯಿಂದ ನೋಡುತ್ತಲೇ ಇದ್ದೆ. ಹತ್ತಿರ ಹತ್ತಿರ ಹತ್ತಿರ ಸೆಳೆಯುವ ಅವರ ಬ್ಲಾಗ್ ಮಂತ್ರ ಜಾಸ್ತಿ ಆಗುತ್ತಲೇ ಹೋಯಿತು! ಅವರ ಸಾಹಿತ್ಯಿಕ ಕೃತಿಗಳಲ್ಲಿ ಅಡಗಿರುವ ಅಂತಃಸ್ಸತ್ವ ನನ್ನನ್ನು ಬಿಡುತ್ತಲೇ ಇರಲಿಲ್ಲ. ಬರುಬರುತ್ತ ಅವರ ಜಿಜ್ಞಾಸೆಯ ಪ್ರತಿಕ್ರಿಯೆಗಳು ಅವರು ಹೊಸೆದ ಹೊಸಹೊಸ ಕವನಗಳು ನನ್ನ ಮನವನ್ನು ನಾಟಿದವು. ನೋಡಿ, ನಂಗೆ ಅವರ ಮಿಂಚಂಚೆಯಾಗಲೀ ಅವರ ಜಂಗಮ ದೂರವಾಣಿಯಾಗಲೀ ಗೊತ್ತಿರಲಿಲ್ಲ. ಒಮ್ಮೆ ಹೇಗಾದರೂ ಸಂಪರ್ಕಿಸಬೇಕೆಂಬ ಅವ್ಯಕ್ತ ಇಚ್ಛೆ ಮನದಲ್ಲಿ ಹೆಡೆಯಾಡುತ್ತಿತ್ತು. ನಾಗರಪಂಚಮಿ ಬಂತಲ್ಲ ಅದಕ್ಕೇ ಬಹುಶಃ ಈ ಹೆಡೆಯಾಡುವ ಪ್ರಕ್ರಿಯೆಯೆಲ್ಲಾ ಜಾಸ್ತಿ ಎಂದು ಸುಮ್ಮನಾಗಿದ್ದೆ! ಆದರೂ ನಮ್ಮೊಳಗಿನ ಆತ್ಮಕ್ಕೆ ಇರುವ ಅವಿನಾಭಾವ ಸಂಪರ್ಕದ ಕೊಂಡಿ ನಮ್ಮನ್ನು ಯಾವುದೋ ಮಾರ್ಗದಿಂದ ಬೆಸೆಯುತ್ತದೆ ಎಂಬುದು ಸುಳ್ಳಲ್ಲ, ಇಲ್ಲೂ ಅದೇ ರೀತಿಯಲ್ಲಿ ಈ ವೈದ್ಯರು " ನಾನು ೩ ದಿನಗಳ ಮಟ್ಟಿಗೆ ಬೆಂಗಳೂರಿಗೆ ಬರುತ್ತಿದ್ದೇನೆ, ನನ್ನ ದೂರವಾಣಿ ಇಂಥದ್ದು " ಎಂದು ನೇರವಾಗಿ ನನ್ನ ಪ್ರತಿಕ್ರಿಯೆಗೆ ಉತ್ತರಹಾಕಿದ್ದನ್ನು ಕಂಡ ನನ್ನೊಳಗಿನ ಕಚ್ಚದ ನಾಗಪ್ಪ ಅವರ ’ಕೊಳಲಿ’ಗೆ ಮನಸೋತು ಹೊರಬಂದಿದ್ದ! ಅದನ್ನು ನೋಡಿದ ಮರುಕ್ಷಣವೇ ನಾನವರಿಗೆ ಕರೆಮಾಡಿದೆ. ಬಿ.ಎಸ್.ಎನ್.ಎಲ್. ಜಂಗಮದೂರವಾಣಿಯ ಸಮಸ್ಯೆ ಒಂದರ್ಥದಲ್ಲಿ ಅತ್ತೆ-ಸೊಸೆ ಜಗಳದ ರೀತಿಯೇ! ಇದನ್ನೆಲ್ಲಾ ನೀವು ಅನುಭವಿಸಿರುತ್ತೀರಿ. ಮೂರ್ನಾಲ್ಕು ಸಲ ಕರೆ ಮಧ್ಯದಲ್ಲೇ ನಿಂತುಹೋಯಿತು. ಆದರೂ ನಾವು ತ್ರಿವಿಕ್ರಮ ಪ್ರಯತ್ನದಿಂದ ಮತ್ತೆ ಸಂಪರ್ಕಕ್ಕೆ ಬಂದೆವು. ಮರುದಿನ ಸಪ್ನಾ ಬುಕ್ ಹೌಸ್ ನಲ್ಲಿ ಸಂಧಿಸುವುದು ಎಂದು ಅಂದುಕೊಂಡೆವು.

ಬೆಳಗಾಯಿತು, ಬಹಳ ಬೇಗ ಸಮಯ ಸರಿದು ಹೋಯಿತು. ನನಗೆ ಭಾನುವಾರ ಸೋಮವಾರ ಅಂತೆಲ್ಲಾ ಇಲ್ಲವೇ ಇಲ್ಲ. ನಾನಾಯಿತು ನನ್ನ ಕೆಲಸವಾಯಿತು ಎಂದುಕೊಂಡು ಅಹರ್ನಿಶಿ ಕೆಲಸದಲ್ಲಿರುವ ಪ್ರವೃತ್ತಿ ನನ್ನದು. ಯಾಕೆಂದರೆ ಬ್ಲಾಗಿಗೆ ಬರೆಯುವ ಚಟ ಇದೆಯಲ್ಲ-ಇದು ಸಣ್ಣಸಾಮಾನ್ಯ ಚಟವಲ್ಲ! ಆದರೆ ಒಳ್ಳೆಯ ಚಟವೆನ್ನಿ! ನಮ್ಮನೆಯಲ್ಲಿ ನನಗೆ ’ಗಣಕಋಷಿ’ ಎನ್ನುವುದೊಂದು ಬಾಕಿ ಇದೆ. ಅಷ್ಟರಮಟ್ಟಿಗೆ ಗಣಕಯಂತ್ರದ ಮುಂದೆ ಸ್ಥಾಪಿತರಾದ ಹಲವರಲ್ಲಿ ನಾನೂ ಒಬ್ಬ! ಶನಿವಾರ ರಾತ್ರಿ ಬಹಳ ಬರೆಯುತ್ತ ಆದ ಆಯಾಸದಿಂದ ಹತ್ತು ನಿಮಿಷ ಆಳಸಿಯಾಗಿದ್ದಕ್ಕೆ ವೈದ್ಯರನ್ನು ತಲ್ಪಲು ಹನ್ನೊಂದೂವರೆಯಾಯ್ತು. ನನಗೆ ಬೇರೆ ಯಾವ್ಯಾವುದೋ ಕರೆಗಳು ಬಂದವು--ಅವುಗಳಿಗೆಲ್ಲಾ ನಾನು ಹೇಳಿದ್ದು "ನನಗಿವತ್ತು ಡಾಕ್ಟರ್ ಅಪಾಯಿಂಟ್ ಮೆಂಟ್ ಇದೆಯಪ್ಪಾ " ಎಂದು! ಹಾಗಂದ ತಕ್ಷಣ " ಏನಾಗಿದೆ ಸರ್, ಸಾರಿ ಸರ್, " ಎಂಬೆಲ್ಲಾ ಮರುತ್ತರಗಳು ಕೇಳಿಬಂದವು. ನನಗೆ ಒಳಗೊಳಗೇ ನಗು. ಅಂತೂ ನಾವು ಸಪ್ನಾದಲ್ಲಿ ಸೇರುವ ಹೊತ್ತಿಗೆ ವೈದ್ಯರು ಕೆಲವು ಒಳ್ಳೆಯ ಪುಸ್ತಕಗಳನ್ನು ಖರೀದಿಸುತ್ತಿದ್ದರು. ನಾನು ಇನ್ನೇನು ಒಳಗೆ ಅಡಿಯಿಡುವ ಹೊತ್ತು-ಮತ್ತೆ ಕರೆಮಾಡಿ ಬಾಗಿಲ ಹತ್ತಿರದಲ್ಲೇ ಇರುತ್ತೇನೆ ಅಂದರು. ಒಳಗೆ ಹೋದೆ.ನನಗೆ ಅವರ ಚಾಯಾಚಿತ್ರವನ್ನು ಇತ್ತೀಚೆಗೆ ಅವರ ಬ್ಲಾಗಿನಲ್ಲಿ ನೋಡಿದ್ದರಿಂದ ಹೇಗೂ ಹೀಗಿರುತ್ತಾರೆಂಬ ಚಹರೆ ಗೊತ್ತಿತ್ತು. ಪ್ರಾಯಶಃ ಅವರಿಗೂ ಕೀಟಲೆ ಬುದ್ಧಿಯ ನನ್ನ ಮುಖವನ್ನು ಬ್ಲಾಗ್ ನಲ್ಲಿ ಆಗಾಗ ನೋಡಿ ನೆನಪಿತ್ತು ಅನಿಸುತ್ತದೆ. ಅಡಿಯಿಡುವಾಗಲೇ ಹಸ್ತಲಾಘವ, ಆಮೇಲೆ ಆತ್ಮೀಯ ಅಪ್ಪುಗೆ. ನಾನು ಹೊಸದೊಂದು ಲೋಕದಲ್ಲಿದ್ದೆ! ಅವರ ಆತ್ಮೀಯತೆಯ ಕೊಳಲು ನನ್ನಲ್ಲಿ ಹಲವು ತರಂಗಗಳನ್ನು ಸೃಷ್ಟಿಸಿತ್ತು!

ಅದಾದ ಕೆಲವೇ ನಿಮಿಷಗಳಲ್ಲಿ ಇನ್ನೂ ಕೆಲವರಿಗೆ ಕರೆಮಾಡಿದ್ದೇನೆ, ಅವರೆಲ್ಲ ಬರುವವರಿದ್ದಾರೆ-ಇನ್ನೇನು ಬರುತ್ತಾರೆ ಎಂದರು. ಬರಲಿ ಎಂದು ಅಲ್ಲೇ ಕೆಲನಿಮಿಷಗಳ ಕಾಲ ಮಾತಾಡುತ್ತಿದ್ದಂತೆ ಪರಾಂಜಪೆಯವರ ಪ್ರವೇಶವಾಯಿತು! ಇಲ್ಲೂ ಅಷ್ಟೇ ಕಥೆ, ಬ್ಲಾಗಿನಲ್ಲಿ ಬಾಲತಪಸ್ವಿಯ ಚಿತ್ರ ಹಾಕಿದ್ದರಿಂದ ಪರಾಂಜಪೆಯವರು ಎದುರೇ ಹಾದುಹೋದರೂ ತಿಳಿಯದ ಪರಿಸ್ಥಿತಿ! ಆದರೂ ನಮಗೆ ಐದೂ ಅಂಗಗಳು ಅಪ್ ಟು ಡೇಟ್ ಕೆಲಸಮಾಡುತ್ತಿರುವುದರಿಂದ ಸೂಕ್ಷ್ಮಗ್ರಾಹಿಯಾಗಿ ನಾವು ಅವರ ಪತ್ತೆ ಹಚ್ಚಿಬಿಟ್ಟೆವು! ನಂತರ ಪ್ರವೀಣ್ ಗೌಡ ಬಂದರು, ಅವರ ಜೊತೆ ನಾಗರಾಜ್[ಪೆನ್ನು ಪೇಪರ್ ಬ್ಲಾಗ್] ಬಂದರು.ಪ್ರವೀಣ್ ಹಿಂದಿನದಿನ ವೈದ್ಯರನ್ನು ಭೇಟಿಯಾಗಿದ್ದರಿಂದ ಗುರುತು ಹಿಡಿಯುವ ಪ್ರಮೇಯವಿರಲಿಲ್ಲ. ಆಮೇಲೆ ಎಲ್ಲಾಸೇರಿ ಗಾಂಧಿನಗರದ ಅಡಿಗಾಸ್ ನಲ್ಲಿ ಚಹಾಕ್ಕೆ ಕೂತೆವು. ಅಲ್ಲಿ ಎಲ್ಲಿಲ್ಲದ ಲೋಕವನ್ನೇ ಸೃಜಿಸಿಕೊಂಡೆವು. ಸುಮಾರು ಎರಡು ಗಂಟೆಗಳ ಕಾಲ ಅಲ್ಲಿ ನಮ್ಮ ಹರಟೆ ನಡೆಯಿತು. ಆಮೇಲೆ ಊಟವನ್ನು ಕಾಮತ್ ಯಾತ್ರಿನಿವಾಸದಲ್ಲಿ ಪೂರೈಸಿದೆವು. ಊಟದಲ್ಲಿ ಏನುತಿಂದೆವು ಎಂದು ನೀವೀಗ ಕೇಳಿದರೆ ಹೇಳಲಾಗದಷ್ಟು ಹರಟುತ್ತಿದ್ದೆವು. ನಿಜವಾಗಿಯೂ ಸಾಹಿತ್ಯದಲ್ಲಿ ಸಕ್ರಿಯರಾದ ಸ್ನೇಹಿತರು ಸಿಕ್ಕರೆ ಅಲ್ಲಿ ಕಾಲಹೋಗಿದ್ದೇ ತಿಳಿಯುವುದಿಲ್ಲ! ಇನ್ನೂ ಹಲವು ಹತ್ತು ವಿವರಣೆಯನ್ನು ಮಿತ್ರ ಪರಾಂಜಪೆ ತಮಗೆಲ್ಲ ಈಗಾಗಲೇ ’ ಜೀವನ್ಮುಖಿ’ಯಲ್ಲಿ ಉಣಬಡಿಸಿದ್ದಾರೆ.

ಈಗ ಹೇಳುತ್ತೇನೆ ಕೇಳಿ. ಸರ್ಜನರಲ್ಲಿ ಒಬ್ಬ ಸಜ್ಜನನಿದ್ದಾನೆ ಅಂತ ಎರಡು-ಮೂರು ತಿಂಗಳ ಹಿಂದೆ ಅನ್ನಿಸಿತ್ತು. ಆದರೆ ನೋಡಿದೆನಲ್ಲ ಸರ್ಜನರಲ್ಲಿ ಒಬ್ಬನಲ್ಲ ಹಲವು ಸಜ್ಜನರೇ ಅಡಗಿದ್ದಾರೆ! ನಿಮಗೆ ಯಾರು ಬೇಕು ಹೇಳಿ ಅವರನ್ನು ಕರೆದು ಹೊರತೆಗೆಯುವ ಅದ್ಬುತ ಶಕ್ತಿ ಸರ್ಜನರಿಗಿದೆ! ನನಗೆ ವೈದ್ಯರನ್ನು ನೋಡಿದಾಗ ನೆನಪಾಗಿದ್ದು ಕವಿ ದಿ| ಶ್ರೀ ಪುತಿನ ಬರೆದ ’ಹರಿಯ ಹೃದಯದಿ ಹರನ ಕಂಡೆನು ಹರನ ಹೃದಯದಿ ಹರಿಯನು ’ ಕವನ. ತಾವೆಲ್ಲಾ ಇದನ್ನು ಒಂದಾವರ್ತಿಯಾದರೂ ಕೇಳಿಯೇ ಇರುತ್ತೀರಿ. ಹಾಡನ್ನು ಸ್ವಲ್ಪ ಬದಲಾಯಿಸೋಣ--" ಸರ್ಜನರ ಹೃದಯದಿ ಸಜ್ಜನರ ಕಂಡೆನು ಸಜ್ಜನರು ತುಂಬಿದ ಈ ಸರ್ಜನರನು ". ಮುಖಸ್ತುತಿಗೆ ಬೇಕಾಗಿ ಹೇಳುವ ಮಾತಲ್ಲ ನೀವೆಲ್ಲಾ ಒಮ್ಮೆ ನೇರ ಸಂಪರ್ಕಕ್ಕೆ ಬಂದು ತಿಳಿದುಕೊಳ್ಳಬೇಕಾದ ಅಪರೂಪದ ಸಜ್ಜನ ಸರ್ಜನ್ ಡಾ| ಡಿ.ಟಿ.ಕೆ. ತಮ್ಮ ’ಕೊಳಲು’ ಬ್ಲಾಗಿನ ಮೂಲಕ ನಮ್ಮೆಲ್ಲರ ಮನಗಳಲ್ಲಿ ಸ್ಥಾನವನ್ನು ಸಹಜವಾಗಿ ಪಡೆದುಕೊಂಡ ನವ್ಯ ಕವಿಯೋರ್ವನನ್ನು ಕಂಡೆ. ನಗುವ ನಗಿಸುವ ಮನೋಭಾವದ ಹಾಸ್ಯಕಲಾವಿದನನ್ನು ಕಂಡೆ. ಪ್ರೀತಿಯನ್ನು ಹರಿಬಿಟ್ಟು ದಾಂಪತ್ಯದ ಅನ್ಯೋನ್ಯತೆಯನ್ನು ಮೆಲುಕುಹಾಕುವ ಯಜಮಾನನ್ನು ಕಂಡೆ. ಮಗಳು ಕೊಡಿಸಿದ್ದೆಂದು ಹೊಸ ಮೊಬೈಲ್ ಹಿಡಿದು ಅಭಿಮಾನದಿಂದ ಹೇಳಿಕೊಳ್ಳುವ ಅಪ್ಪನನ್ನು ಕಂಡೆ. ನೀವು ಕಾರ್ಗಲ್ಲಿಗೆ ಬಂದು ನಮ್ಮ ಆತಿಥ್ಯ ಸ್ವೀಕರಿಸಿ ಎಂದ ಸದ್ಗೃಹಸ್ಥನೊಬ್ಬನನ್ನು ಕಂಡೆ. ವೈದ್ಯನೆಂಬ ಹಮ್ಮಿಲ್ಲದೇ ಹಲವು ವೈದ್ಯಕೀಯ ಚಿಕಿತ್ಸಾ ಕ್ರಮಗಳನ್ನು ವಿಶ್ಲೇಷಿಸಿದ-ನಮೆಗೆಲ್ಲಾ ಅರ್ಥವಾಗುವ ಹಾಗೆ ತೆರೆದಿಟ್ಟ ’ನಮ್ಮನೆಯ ವೈದ್ಯ’ರನ್ನು ಕಂಡೆ. ಒಬ್ಬ ಅದ್ವಿತೀಯ ಆತ್ಮೀಯತೆ ತೋರುವ ಆಪ್ತ ಸ್ನೇಹಿತನನ್ನು ಕಂಡೆ. ಇನ್ನೂ ಹಲವು ಹತ್ತು ಮುಖಗಳುಳ್ಳ ಶ್ರೀಯುತರು ಹಲವು ಸಜ್ಜನರನ್ನು ಮೇಳೈಸಿದ ಏಕರೂಪ ಎಂದರೆ ತಪ್ಪೇ ?

ನನಗನಿಸಿದ್ದು ಇಂಥಾ ’ಮನುಷ್ಯ’ ವೈದ್ಯರೂ ಇದ್ದಾರ್ಯೇ ನಮ್ಮ ಇಂದಿನ ದಿನದಲ್ಲಿ! ಇರಬೇಕ್ರೀ ಇಂಥವರು. ಸೇವೆಯೆಂಬ ಸೋಗಿನಲ್ಲಿ ಹಣವನ್ನೇ ಪರಿಗಣಿಸಿ ಬಹುಮಹಡಿಗಳ ಹಾಸ್ಪಿಟಲ್ ಕಟ್ಟುವ ಹಾಗೂ ವೈದ್ಯ ವೃತ್ತಿಯನ್ನೇ ಕಂಪ್ಲೀಟ್ ಕಮರ್ಷಿಯಲೈಸ್ ಮಾಡಿರುವ ಅಸಂಖ್ಯಾತ ವೈದ್ಯರುಗಳ ನಡುವೆ ಕೇವಲ ಬೆರಳೆಣಿಕೆಯಷ್ಟು ವೈದ್ಯರು ಈ ರೀತಿ ಇರುತ್ತಾರೆ. ಅಪರೂಪಕ್ಕೆ ಪರಮಾತ್ಮ ಅವರನ್ನೂ ಹುಟ್ಟಿಸುತ್ತಾನೆ. ಯಾಕೆಂದರೆ ಯಾರಾದರೂ ಬಡವರು ಕಾಸಿಲ್ಲದವರು ಬಂದರೆ ಸರಕಾರೀ ಆಸ್ಪತ್ರೆಗಳಲ್ಲಿ ಕುಳಿತು ಸುಲಿಯುವ ಹಲವು ವೈದ್ಯರಿಲ್ಲವೇ ? ಅವರೆಲ್ಲರ ನಡುವೆ ಗೀತೆಯ ಬೋಧೆಯಂತೇ " ತದಾತ್ಮಾನಾಮ್ ಸೃಜಾಮ್ಯಹಮ್" --ತನ್ನ ಆತ್ಮವನ್ನೇ ಹಲವು ಹಂತಗಳಲ್ಲಿ, ಹಲವು ರೂಪಗಳಲ್ಲಿ, ಹಲವು ಪರಿಚ್ಛೇದಗಳಲ್ಲಿ ಸೃಷ್ಟಿಸುತ್ತೇನೆ ಎಂದು ಪರಮಾತ್ಮ ಹೇಳಿದ್ದಾನೆ. ಅವನ ಸೃಷ್ಟಿಯ ಒಂದು ರೂಪ ಇದೂ ಸಹಾ ಅಂದರೆ ತಪ್ಪಲ್ಲವಲ್ಲ. ’ಕೃಷ್ಣ’ನೆಂಬ ಹೆಸರನ್ನೇ ಹೊತ್ತಿದ್ದರೂ ಯಾವುದೇ ಕುಟಿಲ ಕಾರಸ್ಥಾನವಿಲ್ಲದ ’ರಾಮ’ನಾದ ಈ ವೈದ್ಯರಲ್ಲಿ ಸಿಗದ ಪರಿಹಾರವೇ ಇಲ್ಲ. ನಾನು ಆಯುರ್ವೇದವೆಂದೆ-ಅದರಬಗ್ಗೆ ಮಾತನಾಡಿದರು, ಯೋಗವೆಂದೆ-ಅದನ್ನೂ ಅಳವಡಿಸಿಕೊಂಡಿದ್ದಾಗಿ ತಿಳಿಸಿದರು, ಧ್ಯಾನವೆಂದೆ- ಅದು ಬೇಕೇಬೇಕು ಎಂದರು, ಪರಾತತ್ವದಲ್ಲಿ ನಂಬಿಕೆಯೆಂದೆ-ತಾನು ನಾಸ್ತಿಕನಾಗಿದ್ದಾಗಿನಿಂದ ಆಸ್ತಿಕತೆಗೆ ಬಂದ ಎಲ್ಲಾ ಹಂತಗಳನ್ನೂ ವಿವರಿಸಿದರು. ಕಾವ್ಯದಲ್ಲಿ ತನ್ನನ್ನೇ ತಾನು ಮರೆಯುವ ತಾಕತ್ತು ಇದೆಯೆಂಬ ನಿತ್ಯಸತ್ಯವನ್ನು ಉಸುರಿದ ಈ ವೈದ್ಯರು ತಮ್ಮ ಬಿಡುವಿನ ವೇಳೆಯಲ್ಲಿ ಸ್ವಸಂತೋಷಕ್ಕಾಗಿ ಹಾಗೂ ನಮಗೆಲ್ಲರಿಗಾಗಿ ಕಾವ್ಯ ರಚನೆಯಲ್ಲಿ ತೊಡಗುತ್ತಾರೆ! [ refer : http://dtkmurthy.blogspot.com] ಐ ಸೆಲ್ಯೂಟ್ ದಿ ಒನ್ ವ್ಹೂ ಸ್ಟ್ಯಾಂಡ್ಸ್ ಔಟ್ ಆಫ್ ದಿ ಕ್ರೌಡ್.

ಜಯತು ಕೊಳಲಿನ ಕೃಷ್ಣ ಮೂರುತಿ
ಹರಸಿ ಬನ್ನಿ ಅನುದಿನ
ನಮ್ಮ ಬ್ಲಾಗಲಿ ಹಾಡು ಬರೆಯಲು
ನೀಡಿ ನಮಗೆ ಚೇತನ

ನಮ್ಮೊಡನೆ ಅಂದು ಸ್ನೇಹ ಕೂಟದಲ್ಲಿ ಪಾಲ್ಗೊಂಡಿದ್ದ ಶ್ರೀ ಪರಾಂಜಪೆ, ಶ್ರೀ ಪ್ರವೀಣ್ ಆರ್. ಗೌಡ, ಶ್ರೀ ನಾಗರಾಜ್ ನಿಮಗೆಲ್ಲರಿಗೂ ಒಂದನೆಗಳು. ಎಲ್ಲರೂ ಬಹಳ ಉತ್ತಮ ಸಂಸ್ಕೃತಿಯನ್ನು ಹೊಂದಿದವರೇ, ಒಳ್ಳೆಯ ಬರಹಗಾರರೇ. ಆದರೂ ನಮ್ಮೆಲ್ಲಾ ಸಾಮಾನ್ಯರಲ್ಲಿ ಅವರೊಬ್ಬ ಸರ್ಜನ್ ನಡುವೆ ತೂರಿಕೊಂಡು ಅತ್ಯಂತ ವಿಶಿಷ್ಟವಾಗಿ ಕಾಣುತ್ತಾರೆ! ಹೀಗಾಗಿ ನಮ್ಮೆಲ್ಲರ ಬಗ್ಗೆ ಪರಾಂಜಪೆಯವರೇ ಬರೆದಿರುವುದರಿಂದ ಮತ್ತೆ ಹೊಸದಾಗಿ ಅದನ್ನೇ ಹಾಡಲಿಲ್ಲ. ಎಲ್ಲರ ಬಗ್ಗೆಯೂ ಕಳಕಳಿ, ಗೌರವ ಇದ್ದೇ ಇದೆ. ಎಲ್ಲರನ್ನೂ ಮೊದಲೇ ಹೃದಯದಲ್ಲಿ ಹುದುಗಿಸಿಕೊಳ್ಳುವಷ್ಟು ಜಾಗ ಮಾಡಿಕೊಂಡು ವೀ. ಆರ್. ಭಟ್ [we are bhat]ಆಗಿದ್ದೇನೆ, ನಿಮ್ಮೆಲ್ಲರ ಸ್ನೇಹದ ಕಾರಂಜಿ ಸದಾ ಚಿಮ್ಮುತ್ತಿರಲಿ, ಹಾಗೇ ಆ ಕಾರಂಜಿಯ ಹಾರುವ ತುಂತುರು ಹನಿಗಳು ಸಾವಿರ ಸಾವಿರ ಕವನಗಳಾಗಿ ಎಲ್ಲ ಬ್ಲಾಗಿಗರ ಅಂಗಳಗಳಲ್ಲಿ ರಾರಾಜಿಸಲಿ, ಹಿತವಾದ ’ಕೊಳಲ’ಗಾನ ಗಾಳಿಯಲ್ಲಿ ತೇಲಿ ತೇಲಿ ಬಂದು ಕರ್ಣಾನಂದಕರವಾಗಿ ಪರಿಣಮಿಸಲಿ ಎಂದು ಹಾರೈಸುತ್ತೇನೆ, ಎಲ್ಲರಿಗೂ ನಮಸ್ಕಾರ.

Monday, August 16, 2010

ದೈವದೊಡನೆ ವಾಗ್ವಾದ !


ರಾಜಾ ರವಿವರ್ಮ ರಚಿತ ಚಿತ್ರ ಕೃಪೆ : ಅಂತರ್ಜಾಲ

ದೈವದೊಡನೆ ವಾಗ್ವಾದ !


ನೀನು ಮೋಹಿನಿಯಾಗು ಮೋಹಿಸುವೆ ನಿನ್ನನ್ನೇ
ಜಗವನಾಳುವ ಶಕ್ತಿಯೇ
ನಾನು ಭಸ್ಮಾಸುರನೇ ಆದರೂ ನೋವಿಲ್ಲ
ಕಾಣಲು ನಿನ್ನನೊಮ್ಮೆ !

ಕಾಮ ಕ್ರೋಧ ಲೋಭ ಮದಮತ್ಸರಗಳಿಟ್ಟು
ಭುವಿಯ ಗೂಡಿಗೆ ದೂಡಿದೇ
ನಾಮಬಲದಿಂದಲೇ ನಿನ್ನನ್ನು ಸೋಲಿಸುವೆ
ರವಿಯಾಣೆ ತಡಮಾಡದೇ

ಕಾಮಿನಿಯು ನೀನಾಗು ಕಾಮಾಂಧ ನಾನಾಗಿ
ಕಾಮಿಸುತ ಮುಕ್ತಿ ಪಡೆವೆ
ನೇಮನಿಷ್ಠೆಗಳೆಲ್ಲ ಅನುಸರಿಸಲವು ಕಷ್ಟ
ಪ್ರೇಮಿಸುತ ಇದ್ದು ಬಿಡುವೆ !

ಲೋಭಿಯು ನೀನಾಗೆ ಮಗನಾಗಿ ನಾ ಜನಿಸಿ
ಮದವೇರಿ ಮದ್ದರೆಯುವೆ !
ಲಾಭನನಗದು ಖಾತ್ರಿ ನಿನಗೇಕೆ ಮತ್ಸರವು ?
ನಾಭಿಯಿಂದಲೆ ಕೋಪವೇ ?

ತಂಪು ಗಾಳಿಯು ನಿನ್ನ ಮೈಯ ಕಂಪನು ತಂತು
ಸೊಂಪಾಯ್ತು ಮನವು ಹಿಗ್ಗಿ
ಕೆಂಪಾಯ್ತು ಈ ಕಣ್ಣು ಭಾರವಾಗುತ ಎದೆಯು
ನೀ ಕಾಣದಿರಲು ಕುಗ್ಗಿ !

Sunday, August 15, 2010

ಅರ್ಥವಾಗದ ಆಗಸ !


ಅರ್ಥವಾಗದ ಆಗಸ !

ನೀಲಾಗಸದ ಆಚೆ ಯಾವೂರು ಯಾರಿಹರು ?
ಕಾಲದಲಿ ಕಂಡಿಹರು ಬದುಕಿಹರೆ ಕೇಳೆ ?
ಏನಿದಾನಂತದಲಿ ಅಂತ್ಯವೇ ಇಲ್ಲದಿರೆ ?
ನಾನದನ ನೆನೆಯುತಿರೆ ನೂರು ಕನಸಿಹುದು

ನಕ್ಷತ್ರಗಳ ರಾಶಿ ನಡುವೆ ಚಂದ್ರನ ಕಾಶಿ
ಅಕ್ಷತೆಯ ಕಾಳ ಚೆಲ್ಲಿರುವ ನೋಟ
ವಕ್ಷಸ್ಥಳವೆಲ್ಲಿ ಆಧಾರವದಕೆಲ್ಲಿ
ಭಕ್ಷೀಸು ನೀಡಿದಗೆ ನೂರೆಂಟು ನಮನ

ಕಂಬಗಳ ನೋಡಿಲ್ಲ ಬಿಂಬಗಳು ಕಾಣುತಿವೆ
ಅಂಬರದಿ ಗುರುತ್ವ ಪೊಳ್ಳುಗಳೆಂಬ ಸೆಳವು
ನಂಬಿ ಹೋದವ ಬಾರ ಏನಲ್ಲಿ ದರಬಾರ ?
ತುಂಬುಗಣ್ಣಲಿ ಹುಡುಕು ಸಾವಿರದ ಸರಕು !

ಬಾಗಿಲುಗಳೇ ಇಲ್ಲ ಕಿಟಕಿಗಳು ಮೊದಲಿಲ್ಲ
ತೂಗಿ ಬಿಟ್ಟಿಹರೆನ್ನೆ ಸರಪಳಿಯು ಇಲ್ಲ
ಭಾಗವತ ಜನರಿಲ್ಲ ಸಾಗಿ ಹಾಡುವುದಕ್ಕೆ
ಆಗಾಗ ತೋರುವುದು ಬಣ್ಣದೋಕುಳಿಯು !

ಒಮ್ಮೆ ಯೋಚಿಸೆ ಸೋತೆ ಆಯಗಲ ವಿಸ್ತೀರ್ಣ
ಸುಮ್ಮನಾಗುತ್ತೇನೆ ಫಲಸಿಗದ ಅಳತೆ !
ದಮ್ಮು ಇದ್ದರೆ ಬನ್ನಿ ಅಳೆದುಕೊಡಿ ಅದರಳತೆ
ಹಮ್ಮು ಮುರಿವುದು ಕ್ಷಣದಿ ಆಗಸದ ಗಾಥೆ !

Saturday, August 14, 2010

ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ !


ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ !

ನಮ್ಮಲ್ಲಿ ಇವತ್ತಿನ ಮಕ್ಕಳಿಗೆ ಇಂಡಿಯಾ ಅಂದರೆ ಗೊತ್ತಾಗಬಹುದೇ ವಿನಃ ಭಾರತ ಎಂದರೆ ತಿಳಿಯುವುದು ಕಷ್ಟ. ಯಾಕೆ ಭಾರತ ಎನ್ನುವ ಹೆಸರು ಬಂತು ಎಂದು ನಾವು ಚಿಂತಿಸುವುದೇ ಇಲ್ಲ. ನಮ ಪೂರ್ವಜರಲ್ಲಿ ದುಷ್ಯಂತ-ಶಕುಂತಲೆ ಕೂಡ ಇದ್ದರಲ್ಲ ? ಆ ದುಷ್ಯಂತ-ಶಕುಂತಲೆಗೆ ಭರತನೆಂಬೊಬ್ಬ ಮಗನಿದ್ದ ಎಂದು ಕೆಲವು ನನ್ನ ಓರಗೆಯ ಜನ ಅಥವಾ ಇದಕ್ಕೂ ದೊಡ್ಡ ವಯಸ್ಸಿಗರು ತಿಳಿದಿರುತ್ತಾರೆ. ಆದರೆ ಆ ಭರತನಿಗೂ ಈ ಭಾರತಕ್ಕೂ ಏನು ಸಂಬಂಧ ? ಇಮಮ್ ಸಾಬಿಗೂ ಗೋಕುಲಾಷ್ಟಮಿಗೂ ಇರುವ ಸಂಬಂಧವೇ ? ಖಂಡಿತ ಅಲ್ಲ! ಹಾಗಾದರೆ ಅದೇ ಭರತ ಜಡಭರತನಾಗದೇ ಬಹಳ ಕರ್ತೃತ್ವ ಶಕ್ತಿಯನ್ನು ಹೊಂದಿದ್ದ. ವಿಕ್ರಮಿಯೂ ಅತಿ ಪರಾಕ್ರಮಿಯೂ ಆಗಿದ್ದ. ಸಣ್ಣವನಿರುವಾಗಲೇ ಸಿಂಹಗಳ ಬಾಯಿಗೆ ಕೈಹಾಕುತ್ತಾ ಅವುಗಳ ಜೊತೆಗೆ ಆಟವಾಡಿದ್ದನೆಂದು ನಾವು ಕೇಳಿದ್ದೇವೆ ಅಲ್ಲವೇ ? ಆ ಭರತ ಬೆಳೆದು ಚಕ್ರವರ್ತಿಯಾದ. ಭರತೇಶನಾದ. ಅಂತಹ ಭರತ ತಮ್ಮ ಮೇಲೆ ಒಂದುಕಾಲಕ್ಕೆ ಇನ್ನೊಬ್ಬ ಚಕ್ರವರ್ತಿಯಾದ ರುಕ್ಮಾಂಗದನ ಮಗ ದಾಳಿಗೆ ಬಂದಾಗ ಆತನ ಚಹರೆಗಳನ್ನು ನೋಡಿ ಅವನಿಗೆ ಮನಸೋತ; ಇದ್ದರೆ ಇರಬೇಕು ಇಂತಹ ಪರಾಕ್ರಮಶಾಲಿ ಅಳಿಯ ಎಂದು ನಿರ್ಧರಿಸಿ ನೇರವಾಗಿ ಯುದ್ಧಕ್ಕೆ ಬಂದಿದ್ದ ಧರ್ಮಾಂಗದನಲ್ಲಿ ಪ್ರಸ್ತಾವಿಸಿದ. ಮಹಾವಿಷ್ಣುವಿನ ಪರಮ ಭಕ್ತನಾದ ಧರ್ಮಾಂಗದ ತನ್ನ ಒಪ್ಪಿಗೆಯಿತ್ತ ಪರಿಣಾಮ ಭರತ ಚಕ್ರವರ್ತಿ ರುಕ್ಮಾಂಗದ ಚಕ್ರವರ್ತಿಯ ಮಗನಿಗೆ ತನ್ನ ಹೆಣ್ಣು ಮಕ್ಕಳನ್ನು ಧಾರೆ ಎರೆದ. ಇದರಿಂದ ಅಖಂಡ ಹಿಂದೂಸ್ಥಾನದ ಬಹುಭಾಗ ಭರತ ಹಾಗೂ ಮತ್ತವನ ಅಳಿಯನ ಸಾಮ್ರಾಜ್ಯಕ್ಕೆ ಒಳಪಟ್ಟಿತು. ಆ ಕಾಲದಲ್ಲಿ ಪ್ರಜೆಗಳನ್ನು ಅತ್ಯಂತ ಗೌರವಯುತವಾಗಿ ಅತ್ಯಂತ ಕಾಳಜಿಯಿಂದ ನೋಡಿಕೊಂಡ ಭರತನ ನೆನಪಿಗಾಗಿ ಪ್ರಜೆಗಳೇ ಇಟ್ಟು ಪ್ರೀತಿಯಿಂದ ಕರೆದ ಹೆಸರು ಈ ’ ಭರತಖಂಡ’ ! ಒಂದುಕಾಲಕ್ಕೆ ಭರತನಾಳಿದ್ದ ಈ ಭೂ ಖಂಡ ಭೌಗೋಳಿಕವಾಗಿ ದೊಡ್ಡ ಖಂಡವಲ್ಲದೇ ಇದ್ದರೂ ಒಮ್ಮೆ ಅದನ್ನು ಜನ ಖಂಡವೆಂದೇ ಕರೆದರು. ಈ ಭರತಖಂಡವೆನ್ನುವ ಹೆಸರು ಕಾಲಕ್ರಮದಲ್ಲಿ ’ಭಾರತ’ ವಾಯಿತು. ಇವತ್ತಿಗೂ ಅಖಂಡ ಭಾರತವನ್ನು ಹಿಂದೂಗಳು ಪೂಜೆಯಲ್ಲಿ ಕೈಗೊಳ್ಳುವ ಸಂಕಲ್ಪದಲ್ಲಿ " ಭರತ ಖಂಡೇ ಭಾರತ ದೇಶೇ " ಅಂತ ಸಂಬೋಧಿಸುತ್ತಾರೆ. ಒಟ್ಟಾರೆ ಇದು ಜನಪ್ರಿಯ ಚಕ್ರವರ್ತಿಯ ನೆನಪಿಗೆ ಜನರೇ ಇಟ್ಟು ಕರೆದ ಹೆಸರು.


ಇವತ್ತು ನಮ್ಮ ರಾಜಕೀಯ ನಾಯಕರುಗಳಿದ್ದಾರಲ್ಲ, ಅವರು ಪ್ರಜೆಗಳ ಬಗ್ಗೆ ಮಾಡಿದ ಕೆಲಸ ಹಾಗಿರಲಿ, ಒಮ್ಮೆ ಗೆದ್ದು ಖುರ್ಚಿ ಸಿಕ್ಕಿಬಿಟ್ಟರೆ ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಶುರುಮಾಡುತ್ತಾರೆ. ನ್ಯಾಯವೋ ಅನ್ಯಾಯವೋ ಅವರಿಗೆ ದುಡ್ಡುಬೇಕು. ಈ ಸ್ಥಾನ ಭದ್ರತೆಗಾಗಿ ಇವರು ಮಾಡುವ ಹಲವು ಕೆಲಸಗಳಲ್ಲಿ ಒಂದು ತಮ್ಮ ಹೆಸರನ್ನು ಕಂಡ ಕಂಡಲ್ಲಿ ಅದಕ್ಕೆ ಇದಕ್ಕೆ ಅಂತ ಇಡುತ್ತ ಹೋಗುವುದು. ಉದಾಹರಣೆಗೆ : ದೇಶಪಾಂಡೆ ನಗರ. ನಮಗೆ ಈ ದೇಶಪಾಂಡೆ ಮಾಡಿದ ಘನಂದಾರಿ ಸಹಾಯವೇನು? ದೇಶಪಾಂಡೆ ಇದುವರೆಗಿನ ಸಕ್ರಿಯ ರಾಜಕೀಯದಲ್ಲಿ ಬೆಳೆದು ಬಂದ ಮಾರ್ಗ ಹೇಗೆ ? ಹಾಗೂ ಅವರ ನಡೆ-ನುಡಿ ಸ್ವಭಾವಗಳು ಹೇಗೆ? ಅವರು ಚುನಾವಣೆಯಲ್ಲಿ ಗೆಲ್ಲಲು ಬಳಸುವ ಸೀರೆ-ಪಂಚೆ-ಬಂಗಾರದ ನತ್ತು ಇವುಗಳ ಹಿಂದಿರುವ ಅವರ ತಾಕತ್ತು ಎಂಥದು?---ಎಲ್ಲವನ್ನೂ ಅವಲೋಕಿಸಿದರೆ ಪೆದ್ದನೂ ಅಳೆಯಬಲ್ಲ ರಾಜಕೀಯ ಆದಾಯದ ಒಳಹರಿವು ಹೊರಹರಿಯುತ್ತದೆ! ಹರುಕು ಪೈಜಾಮಿನಲ್ಲಿ ಬರುವ ರಾಜಕಾರಣಿಗಳು ವರ್ಷದಲ್ಲೇ ಬದಲಾವಣೆ ಕಂಡು ಕಾರು ಬಂಗಲೆ ಖರೀದಿಸುವುದು, ಎಸ್ಟೇಟ್ ಮತ್ತು ಫಾರ್ಮ ಲ್ಯಾಂಡ್ ಎಂದು ಸಾವಿರಗಟ್ಟಲೆ ಎಕರೆ ಜಮೀನು ಮಾಡುವುದು ಇದೆಲ್ಲಾ ಹೇಗೆ ಸಾಧ್ಯ ? ಬಿಕನಾಸಿಗಳಾಗಿದ್ದ ಅವರುಗಳನ್ನೆಲ್ಲ ಸುಕನಾಸಿಯ ಮೇಲೆ ಹತ್ತಿಸಿ ಥೈ ಥೈ ಎಂದು ಕುಣಿಯುವಂತೆ ನೋಡಿಕೊಂಡಿದ್ದರಿಂದಲೇ ಅವರು ಇದನ್ನೆಲ್ಲಾ ಮಾಡಲು ದಾರಿಸಿಕ್ಕಿತು ಎನ್ನೋಣವೇ ? ಲೋಕಾಯುಕ್ತರು ಸರಕಾರೀ ಅಧಿಕಾರಿಗಳನ್ನು ಪರಿಶೀಲಿಸಿದಂತೆ ರಾಜಕಾರಣಿಗಳ ಆಸ್ತಿಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಿ. ಮುಂದೆ ನುಸಿ ಹಾರಿದರೆ ಹಿಡಿಯಿರಿ ಎನ್ನುವ ಸರಕಾರ ಹಿಂದೆ ಆನೆ ಓಡುತ್ತಿರುವುದನ್ನು ಹಿಡಿಯಲು ಯಾಕೆ ಅನುಮತಿಸುವುದಿಲ್ಲ? ಇದು ಜಾಣ ಜಾರಿಕೆಯೇ ? ಲೋಕಾಯುಕ್ತರು ಮೊದಲು ಹಿಡಿಯಬೇಕಾದದ್ದು ರಾಜಕೀಯ ಹಲವು ಮುಖಂಡರನ್ನು. ಈ ಕುತ್ಸಿತ ರಾಜಕೀಯದವರ ಮನೆಗಳಲ್ಲಿ ಧಕ್ಕಿರುವ ಆಸ್ತಿಯ ಹಿಂದೆ ಹಲವು ರೋಚಕ ಮತ್ತು ರೋದಕ ಕಥೆಗಳಿವೆ. ಅವರ ಒಂದೊಂದು ಆಸ್ತಿಯ ಗಳಿಕೆಯೂ ಒಂದೊಂದು ಅಕ್ರಮ ವ್ಯವಹಾರವನ್ನು ಬಯಲಿಗೆಳೆಯುತ್ತದೆ, ಅದಕ್ಕೆಂದೇ ನಮ್ಮ 'ರಾಜಕಾರಣಿಗಳ ಮಹಾಒಕ್ಕೂಟ' ಲೋಕಾಯುಕ್ತರಿಗೆ ಯಾವುದೇ ಕಾರಣಕ್ಕೂ ಪೂರ್ಣಪ್ರಮಾಣದ ಅಧಿಕಾರ ಕೊಡುವುದಿಲ್ಲ! ಹೀಗಾಗಿ ಯಾವುದೇ ರಾಜಕೀಯ ಧುರೀಣನನ್ನು ಲೋಕಾಯುಕ್ತರು ಪ್ರಶ್ನಿಸುವಂತಿಲ್ಲ! ಇಲ್ಲಿ ಒಂದು ಮಜಾ ನೋಡಿ- ಶಹರ, ಪಟ್ಟಣಗಳ ಬಹುತೇಕ ಹೆಸರುಗಳೆಲ್ಲ ರಾಜಕೀಯ ಪ್ರೇರಿತವೇ ಹೊರತು ಅವು ಜನಪ್ರಿಯವಲ್ಲ! ಜನ ಪ್ರೀತಿಯಿಂದ ಆ ಹೆಸರನ್ನು ಇಟ್ಟಿದ್ದಲ್ಲ, ಬದಲಾಗಿ ಕಳ್ಳ ರಾಜಕಾರಣಿಗಳು ತಾವು ಸತ್ತರೂ ತಮ್ಮ ನೆನಪಿಗೆ ಇರಲಿ ಎಂದು ಅಂತಹ ಬೋರ್ಡು ಬರೆಸುತ್ತಾರೆ. ಪ್ರಜೆಗಳು ಇಷ್ಟವೋ ಕಷ್ಟವೋ ಅಂತೂ ಗುರುತಿಸಲಾಗಿ ಬೇಕಲ್ಲ ಎಂದು ಆ ಹೆಸರುಗಳನ್ನು ಅನಿವಾರ್ಯವಾಗಿ ಬಳಸುತ್ತಾರೆ.

ಇಷ್ಟೆಲ್ಲಾ ಬರೆಯುವ ಕಾರಣವೆಂದರೆ ಇಂದಿಗೂ ಹಿಂದಿನ ರಾಜರ ಆಳ್ವಿಕೆಗೂ ಬಹಳ ವ್ಯತ್ಯಾಸವಿದೆ! ಅಂದಿನ ರಾಜರ ಆಳ್ವಿಕೆಯೇ ಬಹುಪಾಲು ಮೇಲಾಗಿತ್ತು. || ರಾಜಾ ಪ್ರತ್ಯಕ್ಷ ದೇವತಾ || ಎಂದು ಪ್ರಜೆಗಳು ನಂಬಿದ್ದರೆ || ಯಥಾರಾಜಾ ತಥಾ ಪ್ರಜಾ || ಎಂಬುದನ್ನು ಮನಗಂಡಿದ್ದ ರಾಜರುಗಳು ಪ್ರಜೆಗಳ ಪರಿಪಾಲನೆಯಲ್ಲಿ ಮಾನವಧರ್ಮ ಮಾರ್ಗವನ್ನು ಅನುಸರಿಸುತ್ತಿದ್ದರು. ಇವತ್ತು ಆಳುವ ಪಕ್ಷಗಳಲ್ಲೇ ಹಲವು ಅಪಸ್ವರಗಳು ಹೊರಡುತ್ತಿರುತ್ತವೆ. ಉದಾಹರಣೆಗೆ ನಿನ್ನೆಯ ಪತ್ರಿಕೆಯೊಂದರಲ್ಲಿ ಉತ್ತರಕರ್ನಾಟಕದ ಶಾಸಕರೊಬ್ಬರು ವೈದ್ಯಕೀಯ ಸೌಲಭ್ಯ ವಂಚಿತ ಬಡವನೊಬ್ಬನ ಬಗ್ಗೆ ಹೇಳುತ್ತ ತನ್ನದೇ ಪಕ್ಷದ ಸರಕಾರದಲ್ಲಿ ವೈದ್ಯಕೀಯ ಶಿಕ್ಷಣ ಮಂತ್ರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕಾಗಿ ಬಂದ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಆಳುವವರಿಗೆ ಏನಾಗಿದೆ ? ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಇದು ನಾವು ಮಾಡಿಕೊಂಡ ವ್ಯವಸ್ಥೆಯೋ ಅಥವಾ ದೇಶದ/ರಾಜ್ಯದ ಬೊಕ್ಕಸವನ್ನು ಬರಗಿ ತುಂಬಿಕೊಳ್ಳಲು ಜನರನ್ನು ನೇಮಕಮಾಡಿಕೊಳ್ಳುವ ವ್ಯವಸ್ಥೆಯೋ ಅರ್ಥವಾಗಿಲ್ಲ;ಅರ್ಥವಾಗೊಲ್ಲ ಎಲ್ಲೀವರೆಗೆ ಎಂದರೆ ನಮ್ಮ ಕಟ್ಟಕಡೆಯ ಅಂದಿನದಿನದ ಪುಡಿ ದುಡ್ಡಿಗಾಗಿ ಹಲ್ಲು ಗಿಂಜುತ್ತ ಕಂಡಲ್ಲಿ ಮತವೊತ್ತುವ ಹಲಕಟ್ಟು ಮತದಾರ ಇರುವವೆರೆಗೂ! ರಾಜಕಾರಣಿಗಳಿಗೂ ಇದೇ ಆಸ್ತಿ! ಎಲ್ಲಿ ಅನಕ್ಷರತೆ ಮತ್ತು ಬಡತನವಿದೆಯೋ ಅಲ್ಲಿ ಅವರ ಬೇಳೆ ಬೇಯುತ್ತದೆ!

ನೋಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಮ್ಮ ಹಳ್ಳಿಗಳಿಗೆ ರಸ್ತೆಗಳಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಓದಲು ಶಾಲೆಗಳಿಲ್ಲ, ಸರಿಯಾಗೆ ಕೆಲಸ ಮಾಡುವ ಆರೋಗ್ಯಕೇಂದ್ರಗಳಿಲ್ಲ, ತೀವ್ರ ಸ್ಥಿತಿಗೆ ಸಾಗಿಸಲು ವಾಹಕಗಳಿಲ್ಲ[ಆಂಬುಲೆನ್ಸ್]. ಆದರೆ ನಮ್ಮಲ್ಲಿ ಮತವೈಷಮ್ಯಗಳಿವೆ, ಮೀಸಲಾತಿಗಳಿವೆ, ಮೈನಾರಿಟಿ-ಮೆಜಾರಿಟಿ ಎಂಬ ಪ್ರಬೇಧ-ಕುಲಬೇಧಗಳಿವೆ--ಈ ವಿಷಯಗಳಲ್ಲಿ ನಾವು ಶ್ರೀಮಂತರು! ಜನಸಂಖ್ಯೆ ಈ ಗಾತ್ರಕ್ಕೆ ಬೆಳೆದು ಊಟಕ್ಕೆ ಪರದಾಡುವ ಸ್ಥಿತಿ ಬಂದರೂ ಇನ್ನೂ ಮೈನಾರಿಟಿಯೆಂಬ ವಿಷಬೀಜ ಬಿತ್ತಿ ಬೆಳೆಯುತ್ತಿರುವವರು ರಾಜಕಾರಣಿಗಳೇ ! ಓಬೀರಾಯನ ಕಾಲದ ಸಂವಿಧಾನದ ಕರಡು ಹಾಗೇ ಇದೆ. ಅಂದಿನ ಕಾಲಕ್ಕೆ ಅರ್ಜೆಂಟಿಗೆ ಮಾಡಿಕೊಂಡಿದ್ದನ್ನು ಮತ್ತೆ ಇವರು ತಿದ್ದಲು ಬಿಡುವುದಿಲ್ಲ ಯಾಕೆಂದರೆ ತಿದ್ದಿಬಿಟ್ಟರೆ ಹಲವು ರಾಜಕಾರಣಿಗಳು ಮೂಲೆಗುಂಪಾಗುತ್ತಾರೆ, ಮತ್ತೆ ಕೆಲವರು ಕಂಬಿಯ ಹಿಂದೆ ನಿಲ್ಲುತ್ತಾರೆ, ಇನ್ನೂ ಕೆಲವರು ದೇಶ ಬಹಿಷ್ಕಾರಕ್ಕೆ ಒಳಗಾಗುತ್ತಾರೆ! ಅದಕ್ಕೇ " ಅದೆಲ್ಲಾ ಈಗ ಬೇಕಾಗಿಲ್ಲ, ನಮಗೆ ಹೇಗೆ ಬೇಕೋ ಹಾಗೆ ಅಂಬೇಡ್ಕರ್ ಮಾಡಿಟ್ಟಿದ್ದಾರೆ " ಎಂದು ಅದನ್ನೇ ಆತುಕೊಂಡಿದ್ದಾರೆ. ಒಂದು ಉದಾಹರಣೆ ನೋಡಿ- ಬೆಂಗಳೂರಿಗೆ ಮೊದಲಾಗಿ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ದಿ| ಸರ್ ವಿಶ್ವೇಶ್ವರಯ್ಯ ಮಾಡಿದರು. ಇವತ್ತು ಜನಸಂಖ್ಯೆ ಬೆಳೆದಂತೆ ಹಲವು ನಗರಗಳು ಸಮರದೋಪಾದಿಯಲ್ಲಿ ಒಮ್ಮೆಲೇ ತಲೆ ಎತ್ತಿ ನಿಂತವು-- ಇವುಗಳಿಗೆಲ್ಲಾ ವಿಶ್ವೇಶ್ವರಯ್ಯನವರು ಮಾಡಿದ ಪ್ಲಾನು ಸಾಕಾಯಿತೇ ? ಇಲ್ಲವಲ್ಲ, ಅವರ ಪ್ಲಾನು ಬುನಾದಿ-ಈಗ ಮಾಡುವ ಪ್ಲಾನು ಅದರ ಮುಂದುವರಿದ ಭಾಗ ಅಲ್ಲವೇ? ಅಂತೆಯೇ ಸಂವಿಧಾನಕ್ಕೆ ಅಂದಿಗೆ ಅಂದಿನ ಜನಮಾನಸ ಬದಲಿದ್ದ ಕಾರಣ ಅದನ್ನು ಕೆಲವು ನ್ಯೂನತೆಗಳಿಂದಲೇ ನಾವು ಒಪ್ಪ್ಕೊಂಡಿದ್ದೇವೆ - ಈಗ ಅದರಲ್ಲಿ ಬದಲಾವಣೆ ಬೇಕಿದೆ. ಅದಿಲ್ಲದಿದ್ದರೆ ಅದೇ ಅಸ್ತ್ರ ಬಳಸಿ ಕೆಟ್ಟ ರಾಜಕಾರಣಿಗಳು ಯುದ್ಧ ಗೆಲ್ಲುತ್ತಲೇ ಇರುತ್ತಾರೆ.

ಇಂದಿಗೆ ಒಂದು ಮಾತು ನೆನಪಿಡಿ- ಸಮಾಜವನ್ನು ಉದ್ಧಾರಮಾಡುವ ರಾಜಕಾರಣಿ ಇಂದಿಗೆ ಯಾರೂ ಬದುಕಿಲ್ಲ! ಅಂಥವರು ಇದ್ದರೆ ಎದೆತಟ್ಟಿ ಮುಂದೆ ಬರಲಿ ನಾವವರಿಗೆ ಸನ್ಮಾನ ಮಾಡೋಣ-ನಿರ್ಭಿಡೆಯವಾಗಿ. ಇಂದಿರುವ ರಾಜಕಾರಣಿಗಳು ಬರೇ ಬಕಗಳು. ಅವರಲ್ಲಿ ಪರ್ಸಂಟೇಜು ವ್ಯತ್ಯಾಸ ಅಷ್ಟೇ! ಜೇನು ತೆಗೆದವರು ಕೈ ನೆಕ್ಕುತ್ತಾರಂತೆ ಅಂಬೋದೊಂದು ಗಾದೆ, ಇರಲಿ ಇಲ್ಲಿ ಜೇನು ಹುಟ್ಟನ್ನೇ ಗುಳುಂ ಸ್ವಾಹಾ ಮಾಡಿ ಬರೇ ಕೈಗೆ ತಾಗಿರುವುದನ್ನು ಸಮಾಜದ ಮೂತಿಗೆ ಒರೆಸಿಬಿಡುತ್ತಿದ್ದಾರಲ್ಲ ಯಾಕೆ ನಮಗೆ ಅರ್ಥವಾಗುತ್ತಿಲ್ಲ? ಇದರ ಬದಲಾವಣೆ ಸಾಧ್ಯವಿಲ್ಲವೇ ? ಅಮೇರಿಕಾದ ಥರ ಕೇವಲ ಎರಡೇ ರಾಷ್ಟ್ರೀಯ ಪಕ್ಷಗಳು ನಮ್ಮಲ್ಲಿ ಇದ್ದಿದ್ದರೆ ಪಕ್ಷಾಂತರ ಮತ್ತು ಕುದುರೆವ್ಯಾಪಾರ ಇಲ್ಲವಾಗುತ್ತಿತ್ತು. ಅಪವಿತ್ರ ಮೈತ್ರಿ ಎಂಬುದು ಅಧಿಕಾರಕ್ಕಾಗಿ ಹುಟ್ಟಿಕೊಳ್ಳುತ್ತಿರಲಿಲ್ಲ. ಹರಿದ ಲಡ್ಡಾದ ಬಟ್ಟೆಗೆ ಹಳೆಯ ದಾರದಿಂದ ತೇಪೆ ಹಾಕಿದಂತೆ ಸಮ್ಮಿಶ್ರ ಸರಕಾರಗಳ ಉಗಮವಾಗುತ್ತಿರಲಿಲ್ಲ. ಉಪಚುನಾವಣೆಗಳು, ಮರುಚುನಾವಣೆಗಳು, ಮತ್ತೆ ಚುನಾವಣೆಗಳು, ಮತ್ತಷ್ಟು ಚುನಾವಣೆಗಳು ಇವೆಲ್ಲದರ ಹೊರೆ ಮತದಾರನ ತಲೆಗೆ ಬರುತ್ತಿರಲಿಲ್ಲ, ಅತಂತ್ರ ರಾಜಕೀಯ ಹುಟ್ಟಿಕೊಳ್ಳುತ್ತಿರಲಿಲ್ಲ.

ಸಮಾಜದ ನೆಮ್ಮದಿಗೆ ಪರೋಕ್ಷವಾಗಿ ಮಾರಕರಾದ ಹೆಂಡದ ದೊರೆಗಳಿಗೆ ನಾವು ಗೌರವ ಡಾಕ್ಟರೇಟ್ ಕೊಡುತ್ತೇವೆ ಎನ್ನುವುದು ನಮ್ಮ ಸಂಸ್ಕೃತಿಯ ಅಧಃಪತನಕ್ಕೆ ಹಿಡಿದ ಬಹುದೊಡ್ಡ ಕನ್ನಡಿ! ನಮ್ಮ ಬಿಳಿಯ ಬಟ್ಟೆಯ ರಾಜಕಾರಣಿಗಳು ಜೀವಿತದಲ್ಲೇ ಕೇಳರಿಯದ ವಿದೇಶೀ ಡಾಕ್ಟರೇಟ್ ಖರೀದಿಸಿ ಕಪ್ಪು ಗೌನು ಹಾಕಿ ಚಿತ್ರ ತೆಗೆಸಿಕೊಳ್ಳುವುದು ನಮ್ಮ ಹಣೆಗೆ ಹಚ್ಚಿದ ಮಸಿಯ ನಾಮ! ವಿಶ್ವವಿದ್ಯಾಲಯಗಳ ಪದವಿಗಳು, ಹಲವು ಪ್ರಶಸ್ತಿಗಳು ಬೀದಿಯಲ್ಲಿ ಬೇಕಾಬಿಟ್ಟಿ ಬಿಕರಿಯಾಗುತ್ತಿರುವುದು ನಮ್ಮ ಚಿಂತಾಜನಕ ಸ್ಥಿತಿ, ತೆಲ್ಗಿ-ಹರ್ಷದ್ ರಂತಹ ಪ್ರಕರಣಗಳಲ್ಲಿ ಅವರನ್ನು ಶಿಕ್ಷಿಸಲಾಗದಿರುವುದು ಆ ಮೇಳಗಳಲ್ಲಿ ತಾವೂ ಶಾಮೀಲಾಗಿರುವ ನಮ್ಮ ರಾಜಕಾರಣಿಗಳು ನಮಗೆ ನಮ್ಮ ಆರ್ಥಿಕತೆಗೆ ಅಂಟಿಸಿದ ಏಡ್ಸ್ ರೋಗ ! ರಾಮನು ಹುಟ್ಟಿದ ದೇಶದಲ್ಲಿ ಅವನನ್ನೇ ರಾಜಕೀಯಕ್ಕೆ ಬಳಸಿಕೊಂಡಿದ್ದು ನಮ್ಮ ದುರ್ದೈವ! ನಾವಿನ್ನೂ ಇಂತಹ ಜೀವಿತವನ್ನೇ ಜೀವಿಸಬೇಕಾಗಿ ಬಂದಿರುವುದು ನಮ್ಮ ಹಣೆಬರಹ!

ಪ್ರತೀ ಸರ್ತಿ ನೋಡಿ ವೇದಿಕೆಯ ತುಂಬಾ ಅದೇ ಘರ್ಜನೆ: " ಮಹಾತ್ಮಾ ಗಾಂಧಿ ಏನಂದ್ರು, ಸರ್ದಾರ್ ಪಟೇಲ್ ಏನ್ಮಾಡದ್ರು, ಲೋಕಮಾನ್ಯ ತಿಲಕರು ಯಾವ ರೀತಿ ತಿದ್ದಿದರು " ಇಷ್ಟಿಷ್ಟೇ, ಇದಕ್ಕೂ ಜಾಸ್ತಿ ಆಳಕ್ಕೆ ಇಳಿದರೆ ಅವರೆಲ್ಲರ ಬಗ್ಗೆ ನಮ್ಮ ರಾಜಕೀಯಣ್ಣಗಳಿಗೆ ಏನುಗೊತ್ತು ? ಹಾಡಿದ್ದೇ ಹಾಡೋ ಕಿಸ್ಬಾಯಿದಾಸರಾಗುವ ಬದಲು ಸಮಾಜಕ್ಕೆ ನಾವಿದನ್ನು ಮಾಡಿದ್ದೇವೆ ಎಂದು ಬರಿದೇ ಕಾಲ್ನಡಿಗೆ,ಕೈನಡಿಗೆ, ಸರ್ಕಸ್ಸು, ಸಮಾವೇಶ ಇದನ್ನೆಲ್ಲಾ ಮಾಡದೇ ಕೃತಿಯಲ್ಲಿ ಜನಮೆಚ್ಚುವ ಕೆಲಸ ಮಾಡಿದ್ದರೆ ಇಂದಿಗೆ ನಮ್ಮ ಭಾರತ ಖಂಡಿತ ಉದ್ಧಾರವಾಗುತ್ತಿತ್ತು. ಎಂದಿಗೆ ನಮ್ಮ ಭಾರತ ಉದ್ಧಾರವಾಗುತ್ತಿತ್ತೋ ಅಂದಿಗೆ ಪಾಕಿಸ್ತಾನಿಗಳಾಗಲೀ ಬಾಂಗ್ಲಾದೇಶಿಗಳಾಗಲೀ ಅಥವಾ ಚೀನೀಯರೇ ಆಗಲಿ ನಮ್ಮ ಒಗ್ಗಟ್ಟನ್ನು ನಮ್ಮ ತಾಳ್ಮೆಯನ್ನು, ನಮ್ಮ ಸಾಧನೆಯನ್ನು ನೋಡಿ ತಂತಾನೇ ಹಿಮ್ಮೆಟ್ಟುತ್ತಿದ್ದರು. ಇವತ್ತಿಗೆ ಅವರೆಲ್ಲಾ ಮೂತಿ ತೂರಿಸುತ್ತಿದ್ದರೆ ಅದಕ್ಕೆ ಅವಕಾಶ ನಮ್ಮಲ್ಲಿರುವ ನಮ್ಮ ದೌರ್ಬಲ್ಯ. ಯಾರೇ ಬಾಂಬುಹಾಕುವವರು ಬಂದು ವರ್ಷಾನುಗಟ್ಟಲೆ ನಮ್ಮ ಪಕ್ಕದಲ್ಲೇ ಇದ್ದು, ಚೆನ್ನಾಗಿ ಬೇಕಾದ್ದನೆಲ್ಲ ಮೆದ್ದು, ಮೈಕೊಡವಿ ಎದ್ದು ಓಡಿಹೋಗಿ ಸರಿಯಾಗಿ ಮತ್ತೆ ಹಾಕುವಾಗ ಗುದ್ದು -ನಾವೆಲ್ಲಾ ಬುದ್ದು ನಾವೆಲ್ಲಾ ಬುದ್ದು! ನಾವಿನ್ನೂ ಮಲಗೇ ಇದ್ದೇವೆ-ದೇಶಕ್ಕೆ ಸ್ವಾತಂತ್ರ್ಯ ಬಂದು ೬೪ ವರ್ಷಗಳಾದವು ಎನ್ನುತ್ತಾ ಅಲ್ಲೇ ಹರಿದ ಕಂಬಳಿ ಹಾಸಿ ಕುಕ್ಕರುಬಡಿದಿದ್ದೇವೆ!

ಒಬ್ಬ ಚಂದ್ರಾಸ್ವಾಮಿ, ಒಬ್ಬ ನಿತ್ಯಾನಂದ, ಒಬ್ಬ ಎಮ್.ಎಫ್.ಹುಸೇನ್ ಹುಟ್ಟಿ ಮೆರೆಯುವುದು ನಮ್ಮ ಭಾರತದ ಇಂದಿನ ಹೆಮ್ಮೆ!!! ನಮ್ಮ ನಡುವೆ ಸ್ವಾರ್ಥಿಗಳೂ ವಿಷಯಲಂಪಟರೂ, ಮತಾಂಧರೂ ಆಗಿರುವ ಇಂಥವರನ್ನೆಲ್ಲ ನಾವು ಮೆಹರ್ಬಾನ್ ಮಾಡಿ ಸಾಕುತ್ತಿರುವುದು ನಮಗಿರುವ ನರದೌರ್ಬಲ್ಯ! ಆಗಾಗ ನಿಷ್ಕಾಳಜಿಯ ಅತಿ ಸಣ್ಣ ಕಾರಣಗಳೇ ದೊಡ್ಡದಾಗಿ ರೈಲು,ಬಸ್ಸು ಮುಂತಾದ ಅಪಘಾತಗಳಾಗುವುದು ನಮಗೆ ಬರುತ್ತಿರುವ ಫಿಟ್ಸ್ [ ಮಲರೋಗ] ! ಕಾಡು-ಗಣಿ-ಭೂಸಂಪತ್ತು ನಾಶಮಾಡುವ ಹೊಸ ರಕ್ಕಸರ ಮುಂದೆ ತಲೆಬಾಗಿ ಕೈಕಟ್ಟಿ ನಿಲ್ಲುವುದು ನಮ್ಮ ದೈನ್ಯ ಸ್ಥಿತಿ! ಸಾಮಾಜಿಕ ಕಾರ್ಯಗಳನ್ನು ಒಂಚೂರೂ ಸರಿಯಾಗಿ ಮಾಡದ ರಾಜಕೀಯದವರನ್ನು ಪರೋಕ್ಷವಾಗಿ ಸಾಕಬೇಕಾಗಿ ಬಂದಿರುವುದು ಸಾಕುತ್ತಿರುವುದು ನಮಗೆ ಬಂದ ಸ್ವಯಾರ್ಜಿತ ಆಸ್ತಿ! ಇವುಗಳನ್ನೆಲ್ಲಾ ಮೆಟ್ಟಿನಿಲ್ಲುವ ಎಲ್ಲಾ ಸಾಧ್ಯತೆಗಳ ಕುರಿತು ಚರ್ಚಿಸಲು, ಕ್ರಮಕೈಗೊಳ್ಳಲು ಯಾರಿಗೂ ಸಮಯವೂ ಇಲ್ಲ, ಬೇಕಾಗಿಯೂ ಇಲ್ಲ. ಏನಾದರೂ ನಡೆದರೆ ಅದಕ್ಕೊಂದು ಸಮಿತಿ ರಚಿಸಿ ಪರಿಶೀಲನೆ ಮಾಡಿ ಅಂತ ಕಳಿಸಿ ಹತ್ತಾರು ವರ್ಷಗಳ ನಂತರ ಸಮಾಜ ಅದನ್ನು ಮರೆತಮೇಲೆ ತಾವೂ ಮರೆತುಬಿಡುವುದು ನಮ್ಮ ರಾಜಕೀಯ ಮುತ್ಸದ್ಧಿತನ! ಪರಸ್ಪರರ ಮೇಲೆ ಗೂಬೆ ಕೂರಿಸುತ್ತಾ ಹಾಗೆ ಹೀಗೆ ಎನ್ನುತ್ತಾ ಬೇಳೆಬೇಯಿಸಿಕೊಳ್ಳುವ ರಾಜಕಾರಣಿಗಳ ದಾಳಕ್ಕೆ ಸಿಕ್ಕ ಮೀನುಗಳು ನಾವು ! ಅತಂತ್ರ ಪ್ರಜಾತಂತ್ರವೆಂಬ ನಾವೇ ಬೆಳೆಸಿದ ಹುಲಿಯಬಾಯಿಗೆ ಸಿಕ್ಕ ಹಸುಗಳು ನಾವು! ಬದುಕಿದ್ದೇವೆ, ಬದುಕುತ್ತಿದ್ದೇವೆ ಕ್ಯಾನ್ಸರ್ ಹಿಡಿದ ರೋಗಿಗಳಂತೆ, ಕುಷ್ಠ ಹಿಡಿದ ಪಾಪಣ್ಣನಂತೆ, ಕದಿರು ಬಂದು ಎಣ್ಣೆಯಾರುತ್ತಿರುವ ದೀಪದಂತೆ!

ಇನ್ನಾದರೂ ನಾವು ಅರಿತರೆ, ಬದಲಾದರೆ, ಓದಿಕೊಂಡರೆ, ರಾಜಕಾರಣಿಗಳ ರಟ್ಟೆಹಿಡಿದು ವಿಮಾನದಿಂದ/ ಕಾರಿಂದ ಕೆಳಗಿಳಿಸಿ ಮುಖಕ್ಕೆ ’ಮಂಗಲಾರತಿ’ ಮಾಡುವ ಮಟ್ಟಕ್ಕೆ ಬೆಳೆದರೆ ಆಗ ಬರುವುದು ನಿಜವಾದ ಸ್ವಾತಂತ್ರ್ಯ, ಕಾಡನ್ನು-ಭೂಗರ್ಭದ ಸಂಪತ್ತನ್ನು ಶಾಶ್ವತವಾಗಿ ಉಳಿಸಿಕೊಂಡರೆ ಆಗ ದೊರೆವುದು ನಿಜವಾದ ಸ್ವಾತಂತ್ರ್ಯ. ನಮಗೆಲ್ಲಾ ಬೇಕಾಗುವ ಮೂಲ ಸೌಲಭ್ಯಗಳು ಎಂದು ಸಿಗುತ್ತವೋ ಅಂದು ನಮಗೆ ಸಿಗುವುದು ಪರಿಪೂರ್ಣ ಸ್ವಾತಂತ್ರ್ಯ. ರಾಜಕೀಯದಲ್ಲಿರುವ ಪ್ರತೀ ವ್ಯಕ್ತಿ ತಾನೊಬ್ಬ ಸಮಾಜದ ಆಳು ಎಂಬ ತಿಳುವಳಿಕೆ ಹೊತ್ತು ನಡೆಯುವ ಕಾಲವನ್ನು ತರಿಸಿದರೆ ಅಂದು ನಮಗೆ ನಿಲುಕುವುದು ಪರಿಪಕ್ವ ಸ್ವಾತಂತ್ರ್ಯ. ಬಡವರು, ದೀನರು, ದಲಿತರು, ನಿರಕ್ಷರಕುಕ್ಷಿಗಳು, ಭಿಕ್ಷುಕರು ಎಂದಿಗೆ ನಮ್ಮಲ್ಲಿ ಸಹಜವಾಗಿ ಇರುವುದಿಲ್ಲವೋ ಅಂದೇ ನಮಗೆ ಉಂಟಾಗುವುದು ಸಬಲ, ಸಮರ್ಥ ಸ್ವಾತಂತ್ರ್ಯ.

ಆಗ ನಾವು ನಿಜವಾದ ಅರ್ಥದಲ್ಲಿ ಹಾಡಬೇಕಾದ ಹಾಡು ಭಾರತಾಂಬೆಯೇ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ ! ನಮಸ್ಕಾರ

ಜೈ ಹಿಂದ್ ಜೈ ಹಿಂದ್ ಜೈ ಹಿಂದ್

ಬೀಡಾಡಿಗಳ ಸ್ವಾತಂತ್ರ್ಯೋತ್ಸವ !!

[ಗಮನಿಸಿ : ನಾಳೆಯ ಸ್ವಾತಂತ್ರ್ಯೋತ್ಸವಕ್ಕೆ ಬೇರೆ ಕೃತಿ ಪ್ರಕಟವಾಗುತ್ತದೆ-ಇದು ಸದ್ಯಕ್ಕೆ ಟೈಂ ಪಾಸ್ ಕಡ್ಲೇಕಾಯಿ ]

ಬೀಡಾಡಿಗಳ ಸ್ವಾತಂತ್ರ್ಯೋತ್ಸವ !!

" ತಲೆಗೆ ರುಮಾಲು ಸುತ್ತದ್ರೆ ಜಾಸ್ತಿ ಬಟ್ಟೆ ಬೇಕಾತದೆ ಅಂತ ಮಾತ್ಮಾ ಗಾಂಧಿ ಟೋಪಿ ಹಾಕ್ಕೊಂಡ್ರು ಹಂಗೇಯ ನೀವೆಲ್ಲಾ ಅದ್ನೇ ಬಳಸಿ ಅಂತದ್ರು "

" ಅದ್ಕೇ ಕಣಪ್ಪಾ ದೇಸದ ಜನವೆಲ್ಲಾ ಸರ್ಯಾಗಿ ಬಟ್ಟೆ ಇಲ್ದೇ ಇರ್ವಾಗ ತಂಗ್ ಮಾತ್ರ ಯಾಕೆ ಎಂದು ಮಲ್ಲಿಕಾ ಸೇರಾವತ್ ಬಟ್ಟೇನೆ ಕಮ್ಮಿ ಮಾಡ್ಬುಟ್ಳು "

---------------

" ಅಲ್ಲಾಲೇ ಆಗಸ್ಟ್ ಹದ್ನೈದು ಯಾವ ಹಬ್ಬ ? "

" ಓ ಅದಾ ಅದೂ ಅದೂ ನಮ್ಮೂರ್ ಮೇಷ್ಟ್ರುಗೋಳೆಲ್ಲ ಬಾವುಟ ಹಾರ್ಸೋ ಹಬ್ಬ, ಯಾವಗ್ಲೂ ಹಾರ್ಸಾಕಿಲ್ಲ ನೋಡು ಅದ್ಕೇಯ ಇಂತಾ ದಿವ್ಸ ಅಂತ ಒಂದಷ್ಟ್ ದಿನ ಮಡೀಕಬುಟ್ಟವ್ರೆ "

---------------

" ರಾಜ್ಯದ ಖಜಾನ್ಯಾಗೆ ದುಡ್ಡೇ ಇಲ್ವಂತೆ ? "

" ಯಾರ್ಲಾ ಹೇಳಿದ್ದು ಹಾಂಗೆಲ್ಲಾ ಮಾಡಕಾಯ್ತದೇನಲೇ ಅದಕ್ಕೇ ಅಲ್ವಾ ಸಮಾವೇಸ ಮಾಡ್ಬುಟ್ಟು ದ್ರುಷ್ಟಿ ಬಳ್ದು ಮತ್ತೊಂದಿಷ್ಟು ಸದ್ಯಕ್ಕಿರ್ಲಿ ಅಂತ ಅಲ್ಲಿಂದಾ ಇಲ್ಲಿಂದಾ ಎಲ್ಲೆಲ್ಲಾತದೋ ಕಿತ್ತಾಂಕಬರ್ರಲೇ ಅಂತ ಓಯಾಸೀಸು ನ ಕಳ್ಸ್ಕತಾರೆ "

" ಅದ್ಯೇನಯ್ಯಾ ಹಂಗಂತೀಯಾ ಓಯಾಸಿಸು ಇರೋದು ಮರ್ಭೂಮಿಲಿ ಅಂತಾ ರಂಗಣ ಮೇಷ್ಟ್ರು ಹೇಳಿದ್ ಮರ್ತ್ಬುಟ್ಟಾ ? "

" ಅದಲ್ಲ ಕಣಲೇ ಗುಗ್ಗು ಓಯಾಸೀಸು ಅಂದ್ರೆ ಇಲ್ಲಿ ಇಂಥಿಂಥಾ ಮಂಕ್ರೀಗೆ ಇಂಥಿಂಥಾ ಸಕ್ಕರೆಟ್ರಿ ಅಂತ ಮಡೀಕತಾರಲ್ಲ ಅವ್ರು ಅವ್ರು "

" ಓ ಆಯ್ ಏ ಎಸ್ ಅನ್ನಪ್ಪಾ ಓಯಾಸೀಸಲ್ಲ ಕಣ್ಲಾ ಅದು "

" ಎರ್ಡೂ ಒಂದೇಯ ನಂಗ್ಯಾಕ್ ಹೇಳ್ತ್ಯಾ ಸುಮ್ಕೆ...ಅಲ್ಲಿ ನೀರಿರ್ದಿದ್ರೆ ಅದು ನೀರ್ ಕೊಡ್ತೈತೆ ಇಲ್ಲಿ ಕಾಸಿರ್ದಿದ್ರೆ ಅವರು ಕಾಸ್ ಮಾಡೋ ಪ್ಲಾನ್ ಕೊಡ್ತಾರಪ್ಪಾ ಅವರ್ನ ಕರ್ದು ’ ಕಾಸೆಲ್ಲಾ ಖಾಲಿ ಆಗೈತೆ ಇಸ್ಯ ನಿಮ್ತಾವನೇ ಇರ್ಲಿ ಬೇಗ ಹುಡಕ್ಕಂಬನ್ನಿ ’ ಅಂದ್ಬುಟ್ರೆ ಮುಗ್ದೇ ಹೋಯ್ತು ತಕ ಎಲ್ಲೆಲ್ಲಿ ಹೆಂಗೆಂಗೆ ಫಿಟಿಂಗ್ ಇಡ್ಬೈದು ಅನ್ನೋ ಐಡಿಯಾನ ತಕಂಬತ್ತವೆ ಕಾಸ್ ಮಾಡಕ್ಕೆ ಮತ್ತೆ ಸುಮ್ನೇನಾ ಅವರ್ನ ಮಡೀಕಳದು ? ನಂಗೇನ್ ಅಷ್ಟೂ ತಲೇ ಇಲ್ಲಾಂತ್ ತಿಳ್ದಾ ಮೂದೇವಿ ? "

--------------

" ಅಣೆಕಟ್ಟೆಲ್ಲಾ ಸೋರ್ತಾ ಅವೆ ಅಂತಾರಲ್ಲಯ್ಯ ? ಅದೇನ್ ಒಸಿ ರಿಪೇರಿ ಮಾಡಾಕಿಲ್ವ ? "

"ನೀ ಕೇಳ್ತಾಲೇ ಇರು ನಾಯೇಳ್ತಾಲೇ ಇರ್ತೀನಿ ರಿಪೇರಿಗೆಲ್ಲಾ ಬಗ್ಗೋ ಸ್ಟೇಜ್ ಪಾಸಾಗ್ಬುಟ್ಟೈತೆ ಮಗಾ ಒಂದೊಂದಕ್ಕೂ ಸ್ವಾತಂತ್ರ ಬಂದಷ್ಟ್ ವೈಸಾಗೈತೆ ಇನ್ನೇನಲ್ಲಿ ಹಣೇಬರ ಹೋದಮ್ಯಾಲೆ ಒಟ್ಗೇ ಹೊಸದಾಗೇ ಮಾಡ್ಬುಟ್ರೆ ಇಂತಿಷ್ಟ್ ಸಾವ್ರ ಕೋಟಿ ಅಂತ ಕೆಡೀಕೋಬೈದು ಎಲ್ಲಿಟ್ಟೆ ತಲೇನಾ ? "

----------------

" ಜನ ಗಣ ಮನ ....ಅನ್ನೋ ಹಾಡೈತಲ್ಲಪ್ಪಾ ಅದೇ ನಾವು ಸ್ಕೂಲಾಗೆ ಹಾಡ್ಲೇ ಬೇಕು ಅಂತ ಬೆಂಚ್ ಮೇಲೆ ನಿಲ್ಸಿ ಮೇಷ್ಟ್ರು ಬಾಯ್ಪಾಠ ಮಾಡ್ಸಿದ್ದು "

" ಏನಾಯ್ತು ಹೇಳು "

" ಏನಿಲ್ಲಾ ನಮ್ ರಾಜ್ಕೀಯದ್ ಜನಕ್ಕೆ ಅದನ್ನ್ ಕೇಳ್ದ್ರೆ ಸಾಕು ಒಳ್ಳೇ ನಿದ್ದೆ ಬತ್ತದಂತೆ ಏನಾದ್ರೂ ತಲೆಬಿಸಿ ಆದ್ರೆ ಆ ಹಾಡ್ನ ಸೀಡಿ ಹಾಕ್ಕಂಡು ಮಲ್ಕಬುಟ್ರೆ ಆಗೋಯ್ತಂತೆ "

" ಅದ್ಕೇನಪ್ಪಾ ಈ ದೇಸ ಹೀಗಿರೋದು ಅವ್ರೂ ಅದ್ನ ಹಾಡಿದ್ದ್ರೆ ಅಮೇರಿಕಾದವ್ರು ತಮ್ಮನ್ನೆಲ್ಲ ಬಿಟ್ಟೋಯ್ತರೆ ಅಂತ ಅದೆಲ್ಲಾ ಏನಿದ್ದ್ರೂ ನೀವ್ಗೋಳು ಹಾಡಿ ನಾವು ಮೊಳಕೈಗೆ ಏನಾರೂ ಕೋಲು ಕೊಟ್ಗಂಡು ನಿಂತ್ಗೋಬುಡ್ತೀವಿ ಅಂತಾರೆ "

" ಅಲ್ಲಾ ನೀ ಹೇಳಿದ್ದು ಸರೀ ಅನ್ನು ಯಾವುದ್ರಾಗ್ ಒಕ್ಕಟ್ಟಿಲ್ದಿದ್ರು ಈ ಹಾಡು ಬರೋದಿಲ್ಲಾ ಅಂತ ಮೊದ್ಲೇ ಗೊತ್ತಿರೋದ್ರಿಂದ ಹಂಗೇ ಪಾಲ್ಟಿ-ಪಕ್ಸನೆಲ್ಲಾ ಮರ್ತು ಹಾಡ್ ಹಾಡುವತ್ಗೆ ಸುಮ್ನಾಯ್ಕಂತವೆ ನೋಡು "

----------------

" ಸೆಂಟ್ರಲ್ ನೋರು ಅದೇನೋ ಆಹಾರ ಹಾಳಮಾಡವ್ರಂತೆ "

" ಸೆಂಟ್ರಲ್ಲು ಅಂದ್ರೆ ಬಟ್ಟೆ ಬರೆ ಸಿಗೋ ದೊಡ್ಡ ಸಾವ್ಕಾರ್ರ ಜಾಗ ಕಣಪ್ಪಾ ಅಲ್ಲೇಲ್ಲಾ ಅವ್ರು ಯಾಪಾರ ಮಾಡಕೇ ಅಂತ್ಲೇ ಕೂತಿರಾದು ಅದೇನ್ ಹಾಳ್ಮಾಡ್ಕಂಡು ಲಾಸ್ ಮಾಡ್ಕಳಕಲ್ಲ ಅಷ್ಟೂ ಗೊತ್ತಾಯಾಕಿಲ್ವೆ ಗೂಬೆನ್ ತಂದು "

" ಅದಲ್ಲಲೇ ನಾ ಹೇಳಿದ್ದು ಕೇಂದ್ರ ಸರ್ಕಾರ ಆಹಾರ ಹಾಳಮಾಡದೆ ಅಂತಾವ "

" ಅದೆಲ್ಲಾ ಎಷ್ಟೋ ಆತದೆ ಬಿಡಪ್ಪಾ ಯಾಕ್ ಸುಮ್ನೇ ಉಚ್ಚೇಲ್ ಗಾಳ ಹಾಕ್ತೀಯ ದೊಡ್ ಮನ್ಸ ಆಗ್ಬೇಕು ಅಂದ್ರೆ ಇಂತಾ ಚಿಕ್ಪುಟ್ ಇಸ್ಯಾನೆಲ್ಲಾ ನಂತಾವ ಕೊರೀತಾ ಇರ್ಬಾರ್ದು ನಾ ನೋಡು ಹೇಂಗಿದ್ದೆ ಈಗೊಂದಾರ್ತಿಂಗ್ಳು ಅಲ್ಲೀ ಇಲ್ಲೀ ಒಸಿ ಅವ್ರಿವ್ರ ಜೊತೆ ಸಲ್ಪ ಓಡಾಡ್ದೆ ನೋಡು ಹೆಂಗಿವ್ನಿ ಈಗ....ನೀನು ಕಲ್ತ್ಕೊಳಲೇ ಇಲ್ಲಾಂದ್ರೆ ಇಲ್ಲೇ ಕುಂತಿರು ಅವ್ರಿವ್ರ ತಾವ ಅರ್ಧ ಬೀಡಿ ಕೇಳ್ಕೋತ "

-------------------

" ಬೆಂಗ್ಳೂರ್ ತುಂಬಾ ಒಂಟೆಗ್ಳು ಬಂದ್ಬುಟ್ಟವಂತೆ "

" ಹಾಂ ಇನ್ನೊಂದ್ ೨೫ ದಿನ ಇರ್ತವೆ ಅಷ್ಟೇಯ ಬ್ರಮ್ಮ ಬರ್ದ್ಬುಟವ್ನೆ ಅವುಗ್ಳ ಹಣೇಬರ ತೀರೋಗದೆ ಗೊತ್ತಿಲ್ದೇ ಬಬಲ್ ಗಮ್ ತಿನ್ನೋ ಹಂಗೆ ಮೂತಿ ತಿರ್ಗಿಸ್ಕೋತ ಅಡ್ಡಾಡ್ತವೆ ಪಾಪ ..... ಹೊಟ್ಟೆಗೂ ಸರಿ ಐತೋ ಇಲ್ವೋ "

-------------------

" ಅದೇನೋ ೬೪ನೇ ಸ್ವಾತಂತ್ರ ಅಂದ್ರು ಟೀವಿನಾಗೆ ? "

" ಅಷ್ಟೂ ಗೊತ್ತಾಯಕಿಲ್ವೇನೋ ನಿಂಗೇ ಚಮ್ಚಾ ತಗಂಡು ತಿನ್ನಸ್ಬೇಕು ಆದ್ರೆ ಚಮಚಾಗಿರಿ ಮಾತ್ರ ಮಾಡಕ್ ಬಲ್ನನ್ಮಗ ನೀನು ...ಅದೂ ನಮ್ ಗಾಂಧೀಜಿ ಇದ್ರಲ್ಲಾ ಆವಯ್ಯಾ ಹೋಗಿ ಅಷ್ಟ್ ವರ್ಸ ಆಯ್ತೂ ಅಂತ ಇನ್ನಾರು ತಿಳ್ಕೋ ಬರೇ ಬಿಟ್ಟಿಲ್ ತಿಂದಾಗಲ್ಲ... ನಾನೂ ಒಂದ್ಕಿತಾ ಅದೇನ್ ಮಾಡಾರು ಅಂತ ನೋಡಾಕೋಗಿದ್ನ ಒಂದ್ಕಿತಾ ಹೊರ್ಗಡೀಕೆ ಬಾವುಟ ಹಾರ್ಸ್ಬುಟ್ಟಿದ್ದೆ ಆಮೇಲೆ ಸುರು ಹಚ್ಕಬುಟ್ರು ಕಣ್ಲಾ..ಆವಯ್ಯನ್ ಬಗ್ಗೆ ಮಾತಾಡಿದ್ದೇ ಮಾತಾಡಿದ್ದು .. ಹಂಗಂತೆ ಹಿಂಗಂತೆ...ಆದ್ರೆ ಆವಯ್ಯನ್ ಥರ ಒಬ್ಬ್ರಾದ್ರೂ ಉಪ್ಪಿನ್ ಸತ್ಯಾಗ್ರಹ ಮಾಡದ್ರ ? "

" ಮಾಡ್ದ್ರಲ್ಲಪ್ಪಾ ನೀ ಎಲ್ಲಿದ್ದೆ ’ ಟಾಟಾ ಉಪ್ಪು ದೇಸದ ಉಪ್ಪು ’ ಅಂತ ಟೀವಿನಾಗೆ ಆ ಪಾಟಿ ಒದರ್ತಾಇದ್ರು ಅದೂ ಬಿಟ್ಟು ಮೊನ್ನೆ ನಮ್ ಕೈಯ್ಯೋರು ಕಾಲೆಳ್ಕೋತ ಬಳ್ಳಾರಿ ತಂಕ ಕ್ವಿಂಟಾಲ್ಗಟ್ಲೆ ಡ್ರೈಫ್ರೂಟ್ಸ್ ತಿಂದಿಲ್ವೆ...ನಂಗೇನು ತಿಳ್ಯಾಕಿಲ್ಲ ಅನ್ಬೇಡ ನೀನು ನಾನು ಒಸಿ ತಿಳ್ಕಂಡಿದೀನಿ ನೆಪ್ಪಿರ್ಲಿ "

------------

" ವರಮಾಲಕ್ಸ್ಮಿ ಹಬ್ಬ ಬಂತಲ್ವಾ ? "

" ಹೌದು ಯಾಕಪ್ಪಾ ಹೆಂಗುಸ್ರ ಹಬ್ಬ ನಿಂಗೆ ಯಾದಾರೂ ಮಾಲಕ್ಸ್ಮೀನ ಕಂಡ್ಕೊಂಡಿದೀಯೋ ಏನ್ಕತೆ ? "

" ಅಯ್ಯೋ ನಿನ್ ಮನೆಕಾಯೋಗ ನಾ ಹೇಳಿದ್ದು ಸುಸ್ಮಮ್ಮ ಬರ್ತಾರಲ್ಲ ಬಳ್ಳಾರಿಗೆ ಅಂತಾವ "

" ಬತ್ತಾರೆ ಬತ್ತಾರೆ ಮಕ್ಳವ್ರೆ ನೋಡು ಒಸಿ ನೋಡ್ಕಂಡು ತಲೆಮೇಲೆ ಕೈಯ್ಯಿಟ್ಟು ಆಮೇಲೆ ಮಾಲಕ್ಸ್ಮೀನ ಬಳ್ಳಾರೀಲೇ ಕೂರ್ಸಿ ಹೊಂಟೋಗ್ಬುಡ್ತರೆ ಆಕಡೀಕೆ ನಮ್ ರಾಮ್ಲು ಹೋದ್ರೆ ಅಮ್ಮಂಗೆ ಮನೆ ಖರ್ಚಿಗಿರ್ಲಿ ಅಂತ ಸಲ್ಪ ನಿಪ್ಪಟ್ಟು ಕೋಡ್ಬಳೆ ಜೊತೆ ಮಾಲಕ್ಸ್ಮೀ ಬಾಗಿನನೂ ಕೊಟ್ಬುಟ್ ಬತ್ತಾನೆ "

------------------

" ಇದ್ಯಾಕಣ್ಣಾ ನಿಮ್ಮನೇಲಿ ಬಣ್ ಬಣ್ದ ಬ್ರಸ್ಸು ಹಲ್ಲುಜ್ಜಾಕೆ ಬೋ ಸುಧಾರ್ಸ್ದೋರು ಬೆಳಿಗ್ಗೆಲೇ ಒಂದ್ ಬಣ್ಣದ್ದು ಇನ್ನು ಮದ್ಯಾನ್ಕೆ ಇನ್ನೊಂದ್ ಬಣ್ಣದ್ದು ಸೈಂಕಾಲ ಮತ್ತೊಂದು ಬಣ್ಣದ್ದು "

" ಇದಾ ಇಸ್ಯಾ ನೀ ಬಂದಾವಾಗ್ಲೇ ಅಂದ್ಕೊಂಡೆ ಏನಾರೂ ಮಾಡ್ತೀಯಾ ಅಂತ ಗಬ್ ನನ್ಮಗ್ನೆ ಅದ್ಕೇ ಎಲ್ಲಾ ಬ್ರಸ್ಸು ಬೀಡಿ ವಾಸ್ನೆ ಅಂತವೆ ಹೆಂಗುಸ್ರು "

----------------------

" ಏನ್ಲಾ ಹಿಂಗ್ಯಾಕ್ ನಿನ್ ಮುಖ ನಾಟ್ಕಕ್ಕೆ ಬಣ್ಣ ಹಚ್ದಂಗೈತೆ ? "

" ಅಷ್ಟೂ ಗೊತ್ತಾಯಾಕಿಲ್ವ ನೀವೆಲ್ಲಾ ಹಚ್ಕತೀರಲ್ಲ ಕಿರೀಮು ಅಂಥದ್ದೇ ಒಂದ್ನ ಕಂಡ್ಬುಟ್ನಾ ಬಿಡ್ದೇ ಸಲ್ಪ ಹಚ್ಚ್ಕೊಂಡಿವ್ನಿ ನೋಡು ಸಖತ್ತಾಗೈತಲ್ವಾ ? "

" ಯಾವ ಕಿರೀಮು ತೋರ್ಸು ನೋಡವಾ "

" ಅದು ಕಾಲ್ಗೇಟಲೇ ಅದು ಹಲ್ಲುಜ್ಜೋದು ಕಣ್ಲಾ ಮಕಕ್ಕಲ್ಲಾ ಅದು "


---------------------

" ಬಿಹಾರ್ದಗೆ ರಾಬರಿ ದೇವಿ ......"

" ರಾಬರಿ ಅಲ್ಲಪ್ಪಾ ರಾಬ್ಡಿ ದೇವಿ ಹನ್ನೋ "

" ಹಾಂ ರಾಬ್ಡಿ ದೆವೀನೂ ಆವಯ್ಯ ಮೇವುತಿಂದು ಕಿವೀಲಿ ಹುಲ್ ಬೆಳ್ಸವ್ನಲ್ಲಾ ಲಾಲೂ ಅವ್ನೂನೂ ಎಲ್ದೂ ಜನ ರಾಸ್ಥ್ರು ಗೀತೆ ಹಾಡುವಾಗ ಕುಂತೇ ಇದ್ರಂತೆ ? "

" ಗಣಿಯಂತೂ ಇಲ್ಲಾ ಅಲ್ಲಿ ಅದಕ್ಕೇ ಧಣಿಗಾರ್ಕೆ ತೋರ್ಸುವಾ ಅಂತ ಕುಂತಿದ್ರಂತೆ ಏನಾಯ್ತಪ್ಪ ಕುಂತ್ಕಂಡ್ರೇನು ಮಲೀಕಂಡ್ರೇನು ನಿಂಗೇನ್ ತೊಂದ್ರೆ ಬಿಡು "

----------------------

" ಇನ್ನೇನ್ಲಾ ಇಸ್ಯಾ ? "

" ಏನಿಲ್ಲಾ ಕಣಪ್ಪಾ ಎಲ್ಡೆಲ್ಡ್ ದಿನಕ್ಕೂ ನೀನು ಹಿಂಗೇ ಅಲೀತಾ ಬಾ ನಾನೂ ಬತ್ತೀನಿ ಅದೂ ಇದೂ ಅಂತ ಮಾತಾಡ್ಬುಟ್ಟು ಹಂಗೇ ಸಲ್ಪ ಸಂಕ್ರಣ್ಣನ್ ತಾವ ಸಲ್ಪ ಇಸ್ಗಂಡು ಒಳೀಕ್ಬಿಟ್ಟು ಹೊಂಟೋಗ್ವ "

" ಅಂದಂಗೆ ಮರ್ತೇ ಬಿಟ್ಟೆ ಕಣಪ್ಪಾ ನಮ್ ಹೆಮ್ಮೆಲ್ಲೇ ಬರಹೇಳವ್ರೆ ಬಾವುಟಹಾರ್ಸಕೆ, ಬಾವುಟ ಹಾರ್ಸೂತ್ಲೂವೆ ನಾವೆಲ್ಲಾ ಅಲ್ಲೇ ಪಕ್ಕಕ್ಕೆ ನಾವು ಕೂತ್ಗಂಬುದು ಕೊರೀವರ್ ಕೊರ್ಕತರೆ ಅದ್ಯೇನೇನೋ ಒದರ್ಕತರೆ ನಮ್ಗದೆಲ್ಲಾ ಯಾಕ್ಬೇಕಪ್ಪಾ ಹೋದವ್ರ್ ಹೋದ್ರು ಇದ್ದವ್ರು ಸುಮ್ಕಿರೋದು ಬಿಟ್ಟು ಅವ್ರಹಂಗೆ ಇವ್ರ ಹಿಂಗೆ ಅಂತಾನೇ ಇರಾದು ಪ್ರತೀ ಸಲಿ ಅದೇ ಪ್ಲೇಟು ಬದ್ಲಾಯಕೇ ಇಲ್ಲ ಹೋಗ್ಲಿ ಬಿಡು ಆದಾದ್ ಮ್ಯಾಲೆ ಪಾಲ್ಟಿ ಅದೆ ಅಂತ ನಮ್ ಹೆಮ್ಮೆಲ್ಲೆ ಕಣ್ಮಡದವ್ರೆ ....ಹೋಗ್ ಕೂತಿರೋತು ಕೈಗೊಂದ್ ನೂರ್ರುಪಾಯ್ ಮಡೀಕಾ ಅಂತ ಕೊಟ್ಟಾಗ ಇಸ್ಕಳದು ಸಲ್ಪ ತುಂಡ್ ತಿಂದು ಒಂದು ಕ್ವಾರ್ಟ್ರು ಏರಿಸ್ಗೊಂಬುಟ್ರೆ ಎಲ್ಲಾ ಫ್ರೀಡಮ್ಮು "

Friday, August 13, 2010

ನಾಗಣ್ಣಗೆ ನಮನ



ಧ್ಯಾಯೇತ್ ಷಣ್ಮುಖಮಿಂದು ಕೋಟಿ ಸದೃಶಂ ರತ್ನಪ್ರಭಾ ಶೋಭಿತಂ
ಬಾಲಾರ್ಕದ್ಯುತಿ ಷಟ್ಕಿರೀಟ ವಿಲಸತ್ಕೇಯೂರ ಹಾರಾನ್ವಿತಂ |
ಕರ್ಣಾಲಂಬಿತ ಕುಂಡಲ ಪ್ರವಿಲಸದ್ಗಂಡಸ್ಥಲಾ ಶೋಭಿತಂ
ಕಿಂಚಿತ್ಕಂಕಣ ಕಿಂಕಿಣೀರವಯುತಂ ಶೃಂಗಾರ ಸಾರೋದಯಂ ||






ನಾಗಣ್ಣಗೆ ನಮನ

ನಾಗರ ಪಂಚಮಿ ಬಂದೇ ಬಿಟ್ಟಿತು! ಬೆಳಿಗ್ಗೆ ಎದ್ದಾಗಲೇ ಬಹಳ ಊರುಗಳಲ್ಲಿ ಸಡಗರ. ಕೇವಲ ಹೆದರಿಕೆಯಿಂದ ಪೂಜಿಸುವ ಕಾರ್ಯ ಇದಲ್ಲ. ಇದಕ್ಕೊಂದು ನೆಲೆಗಟ್ಟಿದೆ-ಹಿನ್ನೆಲೆಯಿದೆ. ಪೂರ್ವದಲ್ಲಿ ಪ್ರಹ್ಲಾದನ ಮೊಮ್ಮಗನಾದ ರಾಜಾ ಪರೀಕ್ಷಿತನಿಗೆ ಒಂದು ಶಾಪವಿತ್ತು. ಆತ ಕಾಡಿನಲ್ಲಿ ತಪಸ್ಸನ್ನಾಚರಿಸುತ್ತಿದ್ದ ಮುನಿಯೋರ್ವರ ಕೊರಳಿಗೆ ಸತ್ತ ಸರ್ಪವೊಂದನ್ನು ತಂದು ತೊಡಿಸಿ ತನ್ನ ಕೋಪತೀರಿಸಿಕೊಂಡಿದ್ದ, ಸಮಾಧಿ ಸ್ಥಿತಿಯಿಂದ ಎಚ್ಚೆತ್ತ ಮುನಿಗೆ ತನ್ನ ದೇಹದ ಕುತ್ತಿಗೆಗೆ ಸತ್ತ ಸರ್ಪವಿರುವುದು ಕಾಣಿಸಿತು. ದಿವ್ಯದೃಷ್ಟಿಯಿಂದ ನೋಡಲಾಗಿ ಅದು ಪರೀಕ್ಷಿತನ ಕೃತ್ಯವೆಂದು ತಿಳಿದುಬಂತು. ಅದರಿಂದ ಕುಪಿತನಾದ ಮುನಿ ಪರೀಕ್ಷಿತನಿಗೆ ಹಾವಿನಿಂದಲೇ ಸಾವು ಎಂಬುದಾಗಿ ಶಾಪವಿತ್ತಿದ್ದ. ಅವನ ಶಾಪ ಕಾರ್ಯಗತಗೊಳ್ಳುವ ದಿನ ಹತ್ತಿರ ಬಂತು. ಇದನ್ನು ತಿಳಿದ ಪರೀಕ್ಷಿತ ಸಮುದ್ರದ ಮಧ್ಯೆ ದೊಡ್ಡ ಕಂಬವನ್ನೆಬ್ಬಿಸಿ, ಆ ಕಂಬದಮೇಲೆ ಅರಮನೆಯನ್ನು ನಿರ್ಮಿಸಿಕೊಂಡು ಜೀವಿಸಲು ಪ್ರಾರಂಭಿಸುತ್ತಾನೆ. ಆಗ ದೈವೀ ಶಾಪವನ್ನು ನಿಗ್ರಹಿಸಲು, ನಿವಾಳಿಸಿ ಎಸೆಯಲು ಅವನಿಂದ ಸಾಧ್ಯವೇ ? ಸರ್ಪರಾಜ ತಕ್ಷಕನಿಗೆ ಆಜ್ಞೆ ಬಂತು. ತಕ್ಷಕ ಮಂತ್ರಾಲೋಚಿಸಿ ನೋಡಿದ. ಪರೀಕ್ಷಿತನಿರುವಲ್ಲಿ ಹೋಗುವುದಾದರೂ ಹೇಗೆ. ಅಲ್ಲೆಲ್ಲಾ ಹಾವಿನ ರೂಪದಲ್ಲಿ ಹೋದರೆ ಪ್ರವೇಶ ಸಾಧ್ಯವೇ ? ಅದಿರಲಿ ಮನುಷ್ಯರೂಪದಲ್ಲಿಯೇ ಹೋಗೋಣವೆಂದರೂ ಪರಿಚಿತರಿಗಲ್ಲದೇ ಬೇರೆ ಯಾರಿಗೂ ಪ್ರವೇಶವಿರಲಿಲ್ಲ. ಅದಕ್ಕೇ ಚಿಂತಿಸಿ ಹೋಗುವ ದಾರಿ ಹುಡುಕಿದ ತಕ್ಷಕ ಹಣ್ಣೊಂದರೊಳಗೆ ಹುಳವಾಗಿ ಸೇರಿ ಹಣ್ಣಿನ ಬುಟ್ಟಿಯಲ್ಲಿ ತೂರಲ್ಪಟ್ಟು ರಾಜನ ಅರಮನೆಯನ್ನು ಪ್ರವೇಶಿಸುತ್ತಾನೆ. ಪ್ರವೇಶಿಸಿದ ಆತ, ಅದೇ ಹಣ್ಣನ್ನು ಅನಿರೀಕ್ಷಿತವಾಗಿ ಪರೀಕ್ಷಿತ ಕೈಗೆತ್ತಿಕೊಂಡಾಗ ದೊಡ್ಡ ಹಾವಿನ ರೂಪದಲ್ಲಿ ಹೊರಬಂದು ಪರೀಕ್ಷಿತನನ್ನು ಕಚ್ಚಿ ಕೊಂದು ಹೊರಟುಹೋಗುತ್ತಾನೆ.


ತನ್ನ ತಂದೆಗೆ ಸಾವು ಬಂದ ಕಾರಣವನ್ನು ಅರಿತ ಪರೀಕ್ಷಿತನ ಮಗ ಜನಮೇಜಯ ಪ್ರತೀಕಾರಕ್ಕಾಗಿ ಸರ್ಪಯಾಗವನ್ನೇ ಮಾಡಿದ! ಬ್ರಹ್ಮಾಂಡದಲ್ಲಿರುವ ಎಲ್ಲಾ ಹಾವುಗಳನ್ನೂ ಅಗ್ನಿಗೆ ಆಹುತಿ ಕೊಡಹತ್ತಿದ. ಆಗ ಇನ್ನೇನು ಸರ್ಪಕುಲಗಳೆಲ್ಲ ಬಹುತೇಕ ನಾಶವಾಗುತ್ತಿರಲು ಆಸ್ತಿಕನೆಂಬ ಸರ್ಪ ಬ್ರಾಹ್ಮಣ ವೇಷದಲ್ಲಿ ಬಂದು ಕೇವಲ ೭ ಮಹಾ ಸರ್ಪ ಕುಲಗಳನ್ನು ಉಳಿಸಲು ಮಂತ್ರಪ್ರಯೋಗಮಾಡಿದ. ಇದು ಭಗವದಿಚ್ಛೆಯೂ ಆಗಿತ್ತಾದ್ದರಿಂದ ಯಜ್ಞಕ್ಕೆ ಬರುತ್ತಿದ್ದ ಉಳಿದ ಸರ್ಪ ಕುಲಗಳ ಹಾವುಗಳು ತಡೆಯನ್ನು ಪಡೆದು ಮರಳಿ ಜೀವದಾನವನ್ನು ಪಡೆದವು. ಹೀಗಾಗಿ ಅಂದು ಆತ ಮಾಡಿದ ಆ ಯಾಗ ಪರೋಕ್ಷವಾಗಿ ಜನಮೇಜಯನ ವಂಶದ ನಾಶಕ್ಕೆ, ಸಂತತಿ ನಾಶಕ್ಕೆ ಕಾರಣವಾಯಿತು.

ಇವತ್ತಿಗೂ ಗೊತ್ತಿದ್ದೋ ಗೊತ್ತಿಲ್ಲದೇಯೋ, ಹಾವನ್ನು ನೇರವಾಗಿಯೋ ಪರೋಕ್ಷವಾಗಿಯೋ ಸಾಯಿಸಿದ್ದರೆ, ಹುತ್ತ ಅಗೆದಿದ್ದರೆ, ಹಾವುಗಳನ್ನು ಅವುಗಳ ಮೂಲವಾಸಸ್ಥಾನದಿಂದ ಬೇರೆಡೆಗೆ ತಳ್ಳಿದ್ದರೆ ಅದಕ್ಕೆಲ್ಲ ನಾವು ಜನ್ಮಾಂತರಗಳಲ್ಲೂ ಶಿಕ್ಷೆಯನ್ನು ಅನುಭವಿಸಲೇ ಬೇಕು. ಈ ಶಿಕ್ಷೆ ಹೇಗೆ ಎಂದರೆ ಇದು ವಂಶಪರಂಪರೆಗೂ ತಗುಲುವಂತಹುದ್ದಾಗಿರುತ್ತದೆ. ವಂಶ ನಾಶವಾಗಬಹುದು, ಸಂತಾನ ಇಲ್ಲದೇ ಹೋಗಬಹುದು, ಹಲವು ವಿಧದ ಚರ್ಮವ್ಯಾಧಿ ತಗಲಬಹುದು, ಮಾಡುವ ವ್ಯವಹಾರಗಳಲ್ಲಿ ನಷ್ಟ ಸಂಭವಿಸಬಹುದು ಹೀಗೇ ಒಟ್ಟಾರೆಯಾಗಿ ಇದನ್ನು ಅನುಭವಿಸಲೇ ಬೇಕು. ಕೆಲವೊಮ್ಮೆ ನಾವು ಈ ಜನ್ಮದಲ್ಲಿ ಹಾವನ್ನೇ ಸರಿಯಾಗಿ ನೋಡಿರದಿದ್ದರೂ ಇಂತಹ ಶಾಪ ಹಿಂದಿನ ನಮ್ಮ ಪೂರ್ವಜರಿಂದ ಅಥವಾ ನಮ್ಮ ಜನ್ಮಾಂತರದ ಸಂಚಿತ ಕರ್ಮಗಳಿಂದ ಬರಬಹುದು. ಇವುಗಳ ನಿವಾರಣೆಗಾಗಿ ನಾಗಪ್ರತಿಷ್ಠೆ, ನಾಗಪೂಜೆ, ನಾಗಮಂಡಲ ಪೂಜೆ, ಆಶ್ಲೇಷಾ ಬಲಿಯೇ ಮೊದಲಾದ ಆರಾಧನಾ ಕ್ರಮಗಳನ್ನು ಪ್ರಾಜ್ಞರು ತಿಳಿಸಿಕೊಟ್ಟಿದ್ದಾರೆ.

ಕೆಲವು ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಇವುಗಳನ್ನು ನಡೆಸಿದರೆ ಶೀಘ್ರ ಫಲಪ್ರಾಪ್ತಿ ಎಂಬುದು ಹಲವು ಜನರ ಅನುಭವದ ಮಾತು. ಕರ್ನಾಟಕದಲ್ಲಿ ಕುಕ್ಕೇ ಸುಬ್ರಹ್ಮಣ್ಯ[ದಕ್ಷಿಣ ಕನ್ನಡ], ಘಾಟೀ ಸುಬ್ರಹ್ಮಣ್ಯ[ಕೋಲಾರ], ಮುಗ್ವಾ ಸುಬ್ರಹ್ಮಣ್ಯ[ಉತ್ತರ ಕನ್ನಡ] ಹೀಗೆ ಈ ಮೂರು ಕ್ಷೇತ್ರಗಳು ನಾಗಾರಾಧನೆಗೆ ಹೆಸರುವಾಸಿ. ನಾಗ ಅಂದರೆ ಒಂದರ್ಥದಲ್ಲಿ ಸುಬ್ರಹ್ಮಣ್ಯನೇ ಆಗಿರುವುದರಿಂದ ನಾಗಾರಾಧನೆ ಸುಬ್ರಹ್ಮಣ್ಯನ ಆರಾಧನೆಯೇ ಸರಿ. ಇಂತಹ ಕಾರ್ತಿಕೇಯನನ್ನು ನಾಗನ ರೂಪದಲ್ಲಿ ಶ್ರಾವಣ ಶುದ್ಧ ಪಂಚಮಿಯಂದು ಪೂಜಿಸುವುದು, ಫಲಪುಷ್ಪ-ನೈವೇದ್ಯ-ಧೂಪ-ದೀಪಗಳನ್ನು ಅರ್ಪಿಸುವುದು ನಡೆದು ಬಂದ ಸಂಪ್ರದಾಯ. ಯಾವ ವಿಜ್ಞಾನದಲ್ಲಿ ಸಂತಾನ ಹೀನತೆಗೆ ವೈದ್ಯಕೀಯ ಪರೀಕ್ಷೆಗಳಲ್ಲಿ ಯಾವುದೇ ಸಮಸ್ಯೆ ಕಾಣದೇ ಇದ್ದೂ ಮಕ್ಕಳಾಗದೇ ಇರುವ ಸ್ಥಿತಿ ಕಾಣುತ್ತದೋ ಅಂಥವರು ಶ್ರದ್ಧಾ-ಭಕ್ತಿ ಪುರಸ್ಸರವಾಗಿ ಹೆಚ್ಚಿನ ರೀತಿಯಲ್ಲಿ ನಾಗಾರಾಧನೆ ಮಾಡಿದರೆ ಅವರಿಗೆ ಸಂತಾನಪ್ರಾಪ್ತಿ ಶತಸ್ಸಿದ್ಧ. ಹೀಗೇ ಮನುಜ ಕುಲದ ಹಲವು ದುಃಖ ದುಮ್ಮಾನಗಳಿಗೆ ಪರೋಕ್ಷವಾಗಿ ನಮ್ಮ ನಡವಳಿಕೆ ಕಾರಣವೂ ಆಗಿರಬಹುದು! ಪ್ರಕೃತಿದತ್ತ ಬದುಕಿನಲ್ಲಿ ಹಾವುಗಳಿಗೂ ಒಂದು ಸ್ಥಾನವಿರಲಿ ಎಂಬ ಕಾರಣದಿಂದ ಇದು ದೈವಸಂಕಲ್ಪದಿಂದಲೇ ಆದದ್ದಿರಬಹುದು. ಏನೇ ಇದ್ದರೂ ಹಾವುಗಳು ಸಹಜವಾಗಿ ಮನುಷ್ಯರ ತಂಟೆಗೆ ಬರುವುದಿಲ್ಲ, ಹಿಂದಿನ ಕರ್ಮದ ಫಲವನ್ನು ಅನುಭವಿಸಬೇಕೆಂದಿದ್ದರೆ ಕಚ್ಚದೆಯೂ ಬಿಡುವುದಿಲ್ಲ, ಕಚ್ಚಿದರೂ ಬದುಕುಳಿಯಲೆಂದು ವ್ಯಕ್ತಿಯ ಹಣೆಯಲ್ಲಿ ಬರೆದಿದ್ದರೆ ತಕ್ಷಣಕ್ಕೆ ಆ ವ್ಯಕ್ತಿಗೆ ತಕ್ಕ ಚಿಕಿತ್ಸೆ ಸಿಗುತ್ತದೆ, ಅದಿಲ್ಲಾ ವ್ಯಕ್ತಿ ಕೋಟಿತೆತ್ತರೂ ಆಯುಷ್ಯ ಮುಗಿದ ಹಾಗೇ.



[ಕುಕ್ಕೆಯಲ್ಲಿ ಕಾಣಿಸಿತ್ತೆನ್ನಲಾದ, ಇತ್ತೀಚೆಗೆ ಮೇಲ್ ಮೂಲಕ ದೊರೆತ ಐದು ತಲೆ ನಾಗರಹಾವಿನ ಚಿತ್ರಗಳು ]

ನಮ್ಮ ಕೆಲವು ಹಳ್ಳಿಗಳಲ್ಲಿ ನಾಗರಹಾವು ಕಚ್ಚಿದ್ದನ್ನು ಔಷಧವಿಲ್ಲದೇ ಬರೇ ಮಂತ್ರದಿಂದ ಗುಣಪಡಿಸುವ ವ್ಯಕ್ತಿಗಳು ಇಂದಿಗೂ ಇದ್ದಾರೆ! ಕಚ್ಚಿದ ತಕ್ಷಣಕ್ಕೆ ಅವರಿಗೆ ಸುದ್ದಿ ತಲ್ಪಿಸಿ ಬಿಟ್ಟರೆ ಅವರು ಒಂದು ಸಣ್ಣ ಬಟ್ಟೆಯನ್ನು ಸುರುಳಿ ಸುತ್ತಿ ಗಂಟು ಹಾಕಿಡುತ್ತಾರಂತೆ. ಆಮೇಲೆ ಕಚ್ಚಿದ ವ್ಯಕ್ತಿಯನ್ನು ಅವರ ಹತ್ತಿರ ಕರೆತರುವವರೆಗೂ ಆ ವ್ಯಕ್ತಿಗೆ ತೀರಾ ಸ್ಮೃತಿಯೇ ಇರದಿದ್ದರೂ ಅವರಲ್ಲಿಗೆ ಬಂದು ಅವರು ಮಂತ್ರಪಠಿಸುತ್ತ ಕಚ್ಚಿದ ವ್ಯಕ್ತಿಗಳನ್ನು ಮುಟ್ಟಿದರೆ ಅವರು ನಿಧಾನವಾಗಿ ಏನೂ ಅರಿಯದವರಂತೆ ಕಣ್ಣು ತೆರೆಯುತ್ತ ಮೇಲೇಳುತ್ತಾರೆ! ಇದು ಹಲವು ಮಾಧ್ಯಮ ವಾಹಿನಿಗಳಲ್ಲಿ ಕೂಡ ತೋರಿಸಲ್ಪಟ್ಟಿದೆ--ಅಂದಮೇಲೆ ಹಾವು ಎಂದರೆ ಕೇವಲ ಪ್ರಾಣಿಯಲ್ಲ, ಅದರಲ್ಲೂ ನಾಗರಹಾವಿಗೆ ವಿಶೇಷ ಸ್ಥಾನಮಾನವಿದೆ. ನಾಗರಹಾವು ಕಣ್ಣಿಗೆ ನಮಗೆ ಕೇವಲ ಹಾವಾಗಿಕಂಡರೂ ಅದು ನಾಗಲೋಕದ ತಕ್ಷಕನಿಗೆ ನಾವು ಸಲ್ಲಿಸತಕ್ಕ ಗೌರವವನ್ನು ಪಡೆಯಲು ಅರ್ಹವಾಗಿದೆ. ಅದಕ್ಕೆಂದೇ ಹಳ್ಳಿಗಳಲ್ಲಿ ಇತ್ತೀಚಿನ ದಿನಗಳವರೆಗೂ ಅನೇಕ ಹೃದಯವಂತ ಬ್ರಾಹ್ಮಣ ಕುಟುಂಬಗಳು ಅಲ್ಲದೇ ಹಲವು ವರ್ಗದವರು ಸತ್ತ ನಾಗರಹಾವನ್ನು ಕಂಡರೆ, ಒಬ್ಬ ಮನುಷ್ಯನ ಅಂತ್ಯೇಷ್ಟಿಗಳನ್ನು ಹೇಗೆ ಶಾಸ್ತ್ರೋಕ್ತವಾಗಿ ನಡೆಸುತ್ತಾರೋ ಅದೇ ರೀತಿಯಲ್ಲಿ ನಡೆಸುತ್ತಾರೆ, ಸಾವಿರಾರು/ನೂರಾರು ಜನರಿಗೆ ಅನ್ನಸಂತರ್ಪಣೆ ಮಾಡುತ್ತಾರೆ-ಇದು ’ಸರ್ಪಸಂಸ್ಕಾರ’ ಎಂದು ಕರೆಯಲ್ಪಟ್ಟಿದೆ. ನಮ್ಮ ದಕ್ಷಿಣೋತ್ತರ ಕನ್ನಡ,ಮಲೆನಾಡು, ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಎಲ್ಲಾ ವರ್ಗದವರೂ ಈ ಸರ್ಪಸಂಸ್ಕಾರ ನಡೆಸುವುದನ್ನು ಕಾಣಬಹುದಾಗಿದೆ.

ಇರಲಿ ದೇವತ್ವವನ್ನು ತಮಾಷೆಯಾಗಿಯಾದರೂ ಸ್ಮರಿಸಿದರೆ ಸಾಕಂತೆ, ಹಾಗಾಗಿ ನಾವು ನಮ್ಮ ನಾಗಣ್ಣನನ್ನು ಒಂದು ಸಣ್ಣ ಹಾಡಿನೊಂದಿಗೆ ನೆನೆಯೋಣ ಬನ್ನಿ-


ಬುಸ್ಸು ಬುಸ್ಸೆಂದು ಬಂದೆಯಲ್ಲ ಸುಬ್ಬರಾಯ
ತುಸು ತಡ್ಕೊಳೋ ನೀನು ಮಹರಾಯ || ಪ ||

ಊರಕೇರಿಯ ಜನರು ನಿನ್ನ ಈಗ ಕಂಡರೆ
ಭಾರೀ ಜೋರಾಗಿ ಗದ್ದಲ ನಿನಗೆ ತೊಂದರೆ !
ಹಾರಹಾಕುತ್ತ ನಿನ್ನ ಆ ಶಿಲೆಯ ಮೂರ್ತಿಗೆ
ನಾರೀಮಣಿಗಳು ಎರೆವರು ತನಿಯ ಹೊತ್ತಿಗೆ || ೧ ||

ಹುತ್ತ ಬಗೆವರು ನಿನ್ನನ್ನು ದೂರ ಓಡಿಸಿ
ಬೆತ್ತ ಕಡಿವರು ನಿನ್ನ ಮನೆಯ ಜಾಗ ಕದಲಿಸಿ
ಎತ್ತ ಕಂಡರು ಮಕ್ಕಳೆಲ್ಲ ಹೆದರಿಕೊಂಬರು
ಮತ್ತೆ ಹಾವಾಡಿಗರು ನಿನ್ನ ಹಿಡಿದುಕೊಂಬರು || ೨ ||

ನಾಗದೋಷವೆಂದು ಜ್ಯೋತಿಷರು ಎಣಿಸಿಕೊಂಡರು
ಬಾಗಿಲಾಚೆ ಸತ್ತ ಸರ್ಪ ಕೊಟ್ಟ ಶಾಪವೆಂದರು !
ರಾಗವೆಳೆಯುತ್ತ ಆಶ್ಲೇಷಾ ಬಲಿಯ ಬರೆದರು
ಬೇಗ ಪೂರೈಸಿ ನಿಮಗೆ ಒಳ್ಳೆಯದು ಎಂದರು || ೩ ||

ಹರಿಯು ಮಲಗಿಬಿಟ್ಟ ನಿನ್ನನ್ನೇ ಹಾಸಿಗೆಮಾಡಿ
ಹರನು ಕೊರಳಲ್ಲಿ ಧರಿಸಿದನು ಹಾರವಮಾಡಿ
ಹರನ ಸುತ ನಮ್ಮ ಗಣಪಣ್ಣ ಹೊಟ್ಟೆಗೆ ಹೂಡಿ
ಅರೆರೆ ಸುಬ್ರಹ್ಮಣ್ಯ ಮಾಡಿದೆ ಎಂಥಾ ಮೋಡಿ ! || ೪ ||

Thursday, August 12, 2010

ಹೀಗೂ ಉಂಟೇ ?? !!!

ಚಿತ್ರ ಋಣ : ಅಂತರ್ಜಾಲ
ಹೀಗೂ ಉಂಟೇ ?? !!!

ಬಿಸಿಬಿಸಿ ಹೋಳಿಗೆ, ಬೂಂದಿ ಲಾಡು, ಕೇಸರೀಬಾತು ಯಾವ ಸಿಹಿತಿನಿಸು ಬೇಕು ಹೇಳಿ ಅದನ್ನು ಪುಕ್ಕಟೆಯಾಗಿ ಒದಗಿಸುವ ವ್ಯವಸ್ಥೆ ಅವರದಾಗಿತ್ತು. ಕಾಸು ಎರವಲು ಬೇಕಾದರೆ ಸಿಗುತ್ತಿತ್ತು, ಮರಳಿ ಸರಿಯಾದ ದಿನಕ್ಕೆ ತಲ್ಪಿಸಿದ ಕಾಸನ್ನು ಅವರು ಹೋಮಕ್ಕೆ ಹಾಕಿಬಿಟ್ಟರೆ ಅದು ಮಾಯ !

ನಾವೆಲ್ಲಾ ಚಿಕ್ಕವರಿದ್ದಾಗ ನಮಗಿನ್ನೇನು ಕೆಲಸ ಹೇಳಿ! ಯಾವಾಗಲೂ ಕಥೆ ಕೇಳುವುದೆಂದರೆ ಬಹಳ ಇಷ್ಟವಾಗಿರೋದ್ರಿಂದ ಅದಕ್ಕಾಗಿ ಎಲ್ಲಿ ಅನುಕೂಲವಾಗುತ್ತದೆ ಎಂದು ಕಾಯುವುದು. ಕಥೆ ಹೇಳುವಂತ ಯಾರಾದರೂ ಕಣ್ಣಿಗೆ ಬಿದ್ದರೆ ಅವರ ಮನವೋಲೈಸುವುದು. ಆಗ ತಂತಾನೆ ಅವರಿಂದ ನಮ್ಮ ಮುಗ್ಧ ಮುಖ ನೋಡಿ ಕಥೆಗಳು ಹೊರಬರುತ್ತಿದ್ದವು. ರಾಕ್ಷಸರ ಕಥೆ ಹೊರಬರುತ್ತಿದ್ದರೆ ನಮಗೆ ಒಳಗೋಳಗೇ ಪುಕುಪುಕು ! ಗಾಳಿ ಕಮ್ಮಿಯಾದ ಸೀಮೆ ಎಣ್ಣೆ ಗ್ಯಾಸ್ ಲೈಟ್ ಥರ ನಮ್ಮ ಹೃದಯಬಡಿತ ಮೇಲಕ್ಕೂ ಕೆಳಕ್ಕೂ ಆಗುತ್ತಿತ್ತು. ಕಥೆ ಕೇಳುತ್ತ ಆ ಕಥೆಗಳಲ್ಲೇ ತಲ್ಲೀನರಾಗಿಬಿಡುತ್ತಿದ್ದುದರಿಂದ ದೊಡ್ಡವರು ಪಕ್ಕದಲ್ಲೇ ಕಥೆ ಹೇಳುತ್ತಿದ್ದರೂ ನಮಗೆ ಚಡ್ಡಿಯಲ್ಲಿ ಉಚ್ಚೆಬರುವಷ್ಟೂ ಹೆದರಿಕೆ. ಆ ದಿನಗಳಲ್ಲಿ ರಾತ್ರಿ ಕತ್ತಲು ಇರುವಲ್ಲಿ ನಾವು ಹೋಗುತ್ತಲೇ ಇರಲಿಲ್ಲ. ಕತ್ತಲು ಎಂದರೆ ನಮಗೆ ಆಗಿನಿಂದಲೂ ವೈರ, ಆಗ ಸ್ವಲ್ಪ ಬೇರೆ ಅರ್ಥದಲ್ಲಿತ್ತು. ಹೀಗಾಗಿ ನಾವು ಯಾವಾಗಲೂ ಸೂರ್ಯನ ಪರಮ ಭಕ್ತರು! ಎಲ್ಲೆಡೆ ಬೆಳಕು ಚೆಲ್ಲುವ ಪರಮಾತ್ಮ ನಮ್ಮಂತ ಸಾವಿರ ಸಾವಿರ ಮಕ್ಕಳ ಹೆದರಿಕೆಯನ್ನು ಹಗಲಿನಲ್ಲಿ ಹೊಡೆದೋಡಿಸುತ್ತಿದ್ದ!

ಕಥೆಗಳನ್ನು ಪಟ್ಟಾಗಿ ಹೇಳುವುದರಲ್ಲಿ ನಮ್ಮಜ್ಜ ಮಾತ್ರ ನಿಸ್ಸೀಮರು, [ಈಗ ನೀವೇ ಹೇಳಿಬಿಡಬಹುದು-ನಿನ್ನನ್ನು ನೋಡಿದ್ರೇ ಗೊತ್ತಾಗುವುದಿಲ್ವೇ ಅಂತ, ಸ್ವಲ್ಪ ರಕ್ತಗತ ಹೌದೆನ್ನಿ!] ಆ ಕಾಲಕ್ಕೆ ಬಹಳ ಜ್ಞಾನದ ಆಗರವಾಗಿದ್ದ ಅವರಲ್ಲಿ ಇಲ್ಲದ ಮಾಹಿತಿಗಳೇ ಇರಲಿಲ್ಲ. ಮನಸ್ಸಿದ್ದರೆ ಆಗಾಗ ವಿಶ್ರಮಿಸಿಕೊಂಡಾಗ ಅವರು ಅದನ್ನೆಲ್ಲಾ ಹೇಳುತ್ತಿದ್ದರು. ಅನೇಕ ನೈಜ ಕಥೆಗಳೂ ಅವುಗಳಲ್ಲಿ ಇದ್ದವೆಂದರೆ ನೀವು ನಂಬಲಾರಿರೇನೋ ! ಅವರ ಸ್ವಾನುಭವ ಬಹಳ ಅದ್ಬುತ. ಅವರಿಗೆ ಲೋಕದ ಪರಿಜ್ಞಾನದ ಜೊತೆಗೆ ಸಾಮಾಜಿಕ ಕಳಕಳಿಯೂ ಇತ್ತು, ಬಡವರಬಗ್ಗೆ, ದೀನರಬಗ್ಗೆ, ಅಂಗವಿಕಲರಬಗ್ಗೆ ಅವರಿಗೆ ರಾಜಕೀಯ ರಹಿತ ಶುದ್ಧ ಅನುಕಂಪವಿತ್ತು. ಸುತ್ತ ಹತ್ತಾರು ಹಳ್ಳಿಗಳಿಗೆ ಗೊತ್ತಿರುವ ದೊಡ್ಡ ವ್ಯಕ್ತಿ ಅವರಾಗಿದ್ದರು ಎನ್ನಲು ನನಗೆ ಹೆಮ್ಮೆ. ಇಂತಹ ಪುಣ್ಯಾತ್ಮ ಮನೆಯಲ್ಲಿ ನಮ್ಮೊಟ್ಟಿಗೆ ಮಗುವಿನ ಹೃದಯ ಹೊಂದಿದವರು. ಯಾರೂ ಆಡಲು ಸಿಗದಿದ್ದರೆ, ಅಜ್ಜನವರಿಗೆ ಬಿಡುವು ಇದ್ದರೆ ಆ ದಿನ ಕಥೆ ಗ್ಯಾರಂಟಿ. ಪುರೋಹಿತರು ಸುಟ್ಟೇವು ತಿಂದ ಕಥೆ, ಬೀರ್ಬಲ್ ಅಕ್ಬರನ ಗಡ್ಡಹಿಡಿದ ಕಥೆ, ತೆನ್ನಾಲಿಯ " ಸರ್ ಡಬ್ ವಾಂಯ್ "--ತಿಲಕಾಷ್ಟ ಮಹಿಷಬಂಧನ ಕಥೆ ಹೀಗೇ ಹಲವು ಕಥೆಗಳ ಮೂಲಕ ನಮ್ಮನ್ನು ಅವರು ರಂಜಿಸುವುದರೊಟ್ಟಿಗೆ ನಮಗೆ ಅವರ ಜ್ಞಾನವನ್ನು ಧಾರೆ ಎರೆದರು, ಹೀಗಾಗಿ ಈ ಕಥೆಯ ಮಧ್ಯದಲ್ಲೇ ಕಥೆಯ ಕಥೆ ಹೇಳಿದ ಅವರಿಗೊಮ್ಮೆ ನಮನ.

ಆ ಕಾಲದಲ್ಲಿ ಅಷ್ಟಾಗಿ ಸಮಾಜದಲ್ಲಿ ಹಳ್ಳಿಗಳಲ್ಲಿ ಸಿರಿತನವೇನೂ ಇರಲಿಲ್ಲ. ಎಲ್ಲೋ ಅಪರೂಪಕ್ಕೆ ಒಂದೊಂದು ಮನೆ ಶ್ರೀಮಂತರದ್ದಾಗಿರುತ್ತಿತ್ತು. ಬಹುತೇಕರು ಜೀವನದಲ್ಲಿ ಬಹಳ ಏರಿಳಿತವಿಲ್ಲದೇ ಉಂಡುಟ್ಟು ಸುಖವಾಗಿದ್ದರು. ನಾನು ಹೇಳುತ್ತಲೇ ಬಂದಹಾಗೇ ಸಿಹಿತಿನಿಸುಗಳು ಮತ್ತು ಕರಿದ ಪದಾರ್ಥಗಳೆಲ್ಲ ವಿಶೇಷ ದಿನಗಳಲ್ಲಿ ಮಾತ್ರ. ಹಾಗೂ ಆ ದಿನಗಳಲ್ಲಿ ಏನಾದರೂ ತೊಂದರೆಯಾಗಿಬಿಟ್ಟರೆ ಅವುಗಳಿಗೆ ಮತ್ತೆ ಡಿಸ್ಕೌಂಟು. ನಾವೆಲ್ಲ ಇಂದಿನ ಮಕ್ಕಳ ಹಾಗೆ ಬೇಕರಿ ಎಂಬುದನ್ನೇ ಕಂಡಿರಲಿಲ್ಲ, ಇನ್ನು ಚಿಪ್ಸು, ಕುರ್ಕುರೆ ಇದೆಲ್ಲಾ ಇರಲಿಲ್ಲ-ಕೊಡಿಸಿ ಎಂದು ಕರ್ಕರೆ ಮಾಡಿದ ಮಕ್ಕಳೂ ನಾವಲ್ಲ. ಎಲ್ಲಾದರೂ ಹೊಸ ಬಟ್ಟೆ ಅಥವಾ ಚಪ್ಪಲಿಗಾಗಿ ಪೀಡಿಸಿದರೆ ಆಗ ಅವರಿಗೇನಾದರೂ ತೊಂದರೆ ಇದ್ದರೆ " ಸುಮ್ನೇ ಇರ್ರೋ, ಪೆಟ್ಟು ಕೊಡ್ತೆ ನೋಡು... ಮಕ್ಳು ಅಂದ್ರೆ ದೇವರ ಮರಿ ಇದ್ದಾಂಗಿರಬೇಕು " ಅನ್ನೋರು. ’ದೇವರ ಮರಿ’ ಅಂದ್ರೆ ಏನು ಎಂಬುದು ನಮಗೆ ಇನ್ನೂ ತಿಳಿದಿಲ್ಲ, ಆದರೆ ನಾವಂತೂ ತಕ್ಷಣ ೫:೩೦ ಕ್ಕೆ ಬ್ಯಾಂಕ್ ಬಾಗಿಲು ಹಾಕಿದ ಹಾಗೇ ಬಾಯಿಗೆ ಬೀಗಜಡಿದುಕೊಂಡು ಕೂರುತ್ತಿದ್ದೆವು. ಆದಾದ ಮೇಲೆ ಒಂದೆರಡು ದಿನ ಕಥೆಯೂ ಇಲ್ಲ ಕಾದಂಬರಿಯೂ ಇಲ್ಲ! ದೊಡ್ಡವರ ಎದುರುಗಡೆ ನಿಲ್ಲಲೇ ಒಂಥರಾ ಹೆದರಿಕೆ, ಕೈಕಾಲೆಲ್ಲ ಗಡಗಡಗಡ !

ಹಿಂದಿನ ಕಾಲಕ್ಕೆ ಅಜ್ಜನ ಎಳವೆಯಲ್ಲಿ ನಮ್ಮಲ್ಲಿ ಬಹಳ ಬಡತನ. ಊಟಕ್ಕೆ ತೊಂದರೆಯಿಲ್ಲ ಆದರೆ ಆಟಕ್ಕೆ ಅನುಕೂಲವಿರಲಿಲ್ಲ. ಅಂತಹ ಸನ್ನಿವೇಶದಲ್ಲಿ ಅಜ್ಜ-ದೊಡ್ಡಜ್ಜ ಅವಿಭಕ್ತ ಕುಟುಂಬದಿಂದ ವಿಭಜಿತಗೊಂಡು ಬೇರೆ ಬೇರೆ ಮನೆಮಾಡಿದರು. ಮನೆಕಟ್ಟಲೂ ಕೈಲಿ ಹಣವಿಲ್ಲದೇ ಹಾಗೂ ಹೀಗೂ ಪರದಾಡಿ ಮಾಡಿದ ಕೆಲಸವದು. ಆದರೂ ಅಂದಿನ ಕಾಲಕ್ಕೆ ಅವರು ಮಾಡಿದ ಆ ಸಾಹಸ ಇಂದಿಗೂ ಹಳ್ಳಿಯಲ್ಲಿ ನಮ್ಮಿಂದ ಸಾಧ್ಯವಿಲ್ಲ. ಬೇರೇ ಮನೆಗಳ ತೋಟಗಳಲ್ಲಿ ದಿನಗೂಲಿ ಕೆಲಸ ಮಾಡಿ ಸಂಸಾರವನ್ನು ನಿಭಾಯಿಸಿದವರಂತೆ ನಮ್ಮಜ್ಜ. ಆಮೇಲೆ ಇಚ್ಛೆಯನಿರಿವ ಅನುರೂಪಮಡದಿಯಾದ್ದರಿಂದ ಬೇರೆ ವ್ಯಾಪಾರಗಳಲ್ಲಿ ತೊಡಗಿಸಿಕೊಂಡು ಗುರು ಸಮರ್ಥ ಶ್ರೀಧರರ ಕೃಪೆಯಿಂದ ಬಹಳ ಮೇಲೆ ಬಂದರು, ಅನುಕೂಲ ಪಡೆದರು, ಶ್ರೀಮಂತರಾದರು ಮತ್ತು ಅಂದಿನ ಕಾಲಕ್ಕೆ ’ಕೊಪ್ಪರಿಗೆಯಲ್ಲಿ ದುಡ್ಡು ಹೂತಿಟ್ಟರಂತೆ’ ಎಂಬ ದಂತಕಥೆಗೆ ವಿಷಯವಸ್ತುವಾದರು! ಕಷ್ಟ-ಸುಖಗಳ ಪರಿವೆಯಿದ್ದ ಅವರು ನಮಗೆಲ್ಲ ’ಸಂಸಾರ’ದಲ್ಲಿ ಸೊನ್ನೆ ಮಧ್ಯೆ ಸೇರಿಕೊಂಡಿದ್ದರಿಂದ ಅದು ’ಸಸಾರ’ವಲ್ಲ ಎಂದು ತಿಳುವಳಿಕೆ ಹೇಳುತ್ತಿದ್ದರು.

ಹಾಗೆ ಅವರ ಎಳವೆಯ ಕಾಲದಲ್ಲಿ ನಮ್ಮೂರಲ್ಲಿ ಕಣ್ಣೀಮನೆ ಶಾಸ್ತ್ರಿಗಳು ಬಹಳ ಜನಜನಿತ ವ್ಯಕ್ತಿತ್ವವಾಗಿತ್ತಂತೆ. ನೋಡಲು ಶುದ್ಧ ಚಾಣಕ್ಯನಂತೇ ಕಾಣುತ್ತಿದ್ದ ಅವರು ಬಿಳಿಯ ಪಂಚೆ ಉಟ್ಟು, ವಿಭೂತಿ ಧರಿಸಿ ಹೊರಟುಬಿಟ್ಟರೆ ಎಲ್ಲಿಗೆ ಎಂದು ಯಾರೂ ಕೇಳುವ ಹಾಗಿಲ್ಲ-ಅವರು ಹೇಳುವುದೇ ಇದ್ದಿಲ್ಲ. ಅಂತೂ ಸವಾರಿ ಹೊರಟುಬಿಡುತ್ತಿತ್ತಂತೆ. ಅವರಿಗೆ ಕಾಲಲ್ಲಿ ಚಕ್ರ ಇದೆ-ಅವರು ನಿಂತಲ್ಲಿ ನಿಲ್ಲುವುದೇ ಇಲ್ಲ ಎಂದೆಲ್ಲಾ ಜನ ಅಂದುಕೊಳ್ಳುತ್ತಿದ್ದರಂತೆ. ಸ್ವಾನುಷ್ಠಾನ ಬಲದಿಂದ ಅವರು ಕೆಲವು ಶಕ್ತಿಗಳನ್ನು ಪಡೆದಿದ್ದರಂತೆ. ಮಾಹಾಕೋಪಾವಿಷ್ಟರಾಗಿದ್ದರೂ ಬಹಳ ನಿಗರ್ವಿಯೂ ಅನೇಕಕಾಲ ಮುಗ್ಧರೂ ಆಗಿರುತ್ತಿದ್ದರಂತೆ. ಅವರ ಬರುವಿಕೆಗೆ ಹಲವು ಜನ ಕಾಯುತ್ತಿದ್ದರಂತೆ. ಅವರು ಅನೇಕರ ಕಷ್ಟಗಳಲ್ಲಿ ಸಹಕರಿಸಿದ ಆಧ್ಯಾತ್ಮ ಮನೋಭಾವದವರಂತೆ. ಅಂತಹ ಪುಣ್ಯಾತ್ಮನೊಬ್ಬನನ್ನು ಕಥೆಯ ಮೂಲಕ ನಮಗೆ ಸಮಗ್ರವಾಗಿ ದರ್ಶಿಸಿದವರು ನಮ್ಮಜ್ಜ ದಿ|ಶ್ರೀ ವಿಷ್ಣುಭಟ್ಟರು. ನಮ್ಮಲ್ಲಿನ ಸಾಂಪ್ರದಾಯಿಕ ಪದ್ಧತಿಯಂತೇ ಅವರ ಹೆಸರನ್ನೇ ನನಗೆ ಇಟ್ಟು ಕರೆದರು.

ಶ್ರೀ ಕಣ್ಣೀಮನೆ ಶಾಸ್ತ್ರಿಗಳು ಒಮ್ಮೊಮ್ಮೆ ಕುಳಿತಲ್ಲಿಂದ ಧುತ್ತನೇ ಎದ್ದುಹೋಗಿಬಿಡುತ್ತಿದ್ದರಂತೆ, ಅವರ ಎದುರುಗಡೆ ಹತ್ತಲಾರದ ಎತ್ತರದ ಭೂ ಪ್ರದೇಶ[ನಮ್ಮಲ್ಲಿ ವಾಡಿಕೆಯಲ್ಲಿ ಇದಕ್ಕೆ ಧರೆ ಎನ್ನುತ್ತೇವೆ] ಇದ್ದರೂ ಅದನ್ನೇ ಹಾಗೇ ಹತ್ತಿಹೋಗುವ ಅಭೂತಪೂರ್ವ ಸಾಧಕರು ಅವರಾಗಿದ್ದರಂತೆ. ಊರಿಗೆ ಬಂದಾಗ ಮನೆಗಳಿಗೆ ಭೇಟಿ ನೀಡುವ ಅವರು ಏನಾದರೂ ಅಪರೂಪದ ಸಿಹಿತಿನಿಸು ಬೇಕು ಎನಿಸಿದರೆ ಒಂದು ಖಾಲಿ ಹರಿವಾಣವನ್ನೂ ಒಂದು ಶುಭ್ರ ಪಂಚೆಯನ್ನೂ ತರಲು ಹೇಳಿ, ತರಿಸಿಕೊಂಡ ಮೇಲೆ ಅದನ್ನು ಏನೋ ಮಂತ್ರಿಸಿ ಹರಿವಾಣವನ್ನು ನೆಲದ ಮೇಲಿಟ್ಟು ಅದಕ್ಕೆ ಆ ಪಂಚೆಯನ್ನು ಮುಸುಕುಹಾಕುತ್ತಿದ್ದರಂತೆ. ಕ್ಷಣಾರ್ಧದ ಬಳಿಕ ತೆಗೆಯಲು ಹೇಳುತ್ತಿದ್ದರಂತೆ " ಏಯ್ ಬಾರೋ ಇಲ್ಲಿ, ಹೋಳಿಗೆ ಬೇಕು ಅಂದ್ಯಲಾ ...ತಗೋ ಬಿಸಿಬಿಸಿ ಹೋಳಿಗೆ " ಎಂದು ಗಡಸು ದನಿಯಲ್ಲಿ ಆಜ್ಞೆಮಾಡಿ ತಿನ್ನಿಸುತ್ತಿದ್ದರಂತೆ. ಅಂತೆಯೇ ಯಾರಿಗಾದರೂ ಕಾಸಿನ ತೊಂದರೆ ಇದ್ದರೆ ಅದೇ ರೀತಿಯಲ್ಲಿ ಮುಸುಕು ಹಾಕಿಟ್ಟು ಮಂತ್ರಿಸಿದಾಗ ಹರಿವಾಣದಲ್ಲಿ ದುಡ್ಡಿನ ರಾಶಿ. ಆ ದುಡ್ಡನ್ನು ಬೇಕಾದವರಿಗೆ ನಿಬಡ್ಡಿಯ ಸಾಲವಾಗಿ ನೀಡಿ " ಯಾವಾಗ ನೀನು ಕೊಡೋದು ಅಂತ ಹೇಳ್ಬಿಡು " ಎನ್ನುತ್ತಿದ್ದರಂತೆ. ಆ ದಿನಕ್ಕೆ ಮರಳಿಸದಿದ್ದರೆ ಪರಿಣಾಮ ಏನಾಗುತ್ತಿತ್ತೋ ತಿಳಿಯದು-ಅದನ್ನು ಯಾರೂ ಪ್ರಯತ್ನಿಸಿ ನೋಡಿಲ್ಲವಂತೆ. ಹಾಗೆ ಆಮೇಲೆ ಮರಳಿ ಬರುವ ಹಣವನ್ನು ಹೋಮಮಾಡಿ ಹೋಮಕ್ಕೆ ಹಾಕಿಬಿಡುತ್ತಿದ್ದರಂತೆ. ಹಾಕಿದ ಕ್ಷಣದಲ್ಲಿ ಆ ದುಡ್ಡು ಅಲ್ಲಿಂದ ಮಾಯ! ಚೌಡಿಯ ಉಪಾಸಕರಾಗಿದ್ದ ಅವರು ಅದರ ಸಹಾಯದಿಂದ ಯಾರದೋ ಮನೆಯಲ್ಲಿ ಬಳಸದೇ ಹಾಗೇ ಇಟ್ಟ ಹಣವನ್ನು ತರಿಸಿ ಮತ್ತೆ ಮರಳಿ ಅದು ಸ್ವಸ್ಥಾನ ಸೇರುವವರೆಗೆ ದುಡ್ಡಿನ ಸಾಹುಕಾರರಿಗೆ ಅದು ಬಳಕೆಗೆ ಬೇಕಾಗದಂತೆಯೂ ನೋಡಿಕೊಳ್ಳುವ ಪರಿಕಲ್ಪನೆಯೊಂದಿಗೆ ಇದನ್ನು ನಡೆಸುತ್ತಿದ್ದರು ಎನ್ನುತ್ತಾರೆ.

ಎಲ್ಲೋ ಮದುವೆ-ಮುಂಜಿ ಇಂತಹ ಕಾರ್ಯದ ಮನೆಗಳಲ್ಲಿ ಅನಿರೀಕ್ಷಿತ ಸಂಖ್ಯೆಯ ಜನರು ಬರುವಲ್ಲಿ ಮಾಡಿದ ಸಿಹಿತಿನಿಸುಗಳನ್ನು ಅಲ್ಲಿಗೆ ಬರುವ ಜನರ ಸಂಖ್ಯೆಯನ್ನೂ ನೋಡಿಕೊಂಡು ಹೆಚ್ಚಾಗಿ ಉಳಿಯುವುದನ್ನು ತರಿಸುವುದೋ ಅಥವಾ ಬರುವ ಜನರ ಸಂಖ್ಯೆಯನ್ನೇ ಕಮ್ಮಿ ಮಾಡಿ, ಪದಾರ್ಥ ಹೆಚ್ಚುಳಿಸಿ ಅದನ್ನು ಹೀಗೆ ಬೇಕಾದವರಿಗೆ ತಿನಿಸುತ್ತಿದ್ದರಂತೆ!

ಇಂದು ನಂಬಲಾಗದ ಇಂತಹ ಘಟನೆ ಅಂದಿಗೆ ನಡೆದಿದ್ದನ್ನು ಸಾಕ್ಷೀಕರಿಸದವರು ನನ್ನಜ್ಜ. ಆಗ ಅವರಿನ್ನೂ ಸಣ್ಣ ವಯೋಮಾನದವರಾದ್ದರಿಂದ ಆ ಶಾಸ್ತ್ರಿಗಳ ಆರ್ಥಿಕ ಸಹಾಯ ಅಜ್ಜನವರಿಗೆ ಸಿಗಲಿಲ್ಲ[ಅಜ್ಜ ಸಂಸಾರವಂದಿಗನಾಗುವ ಹೊತ್ತಿಗೆ ಶಾಸ್ತ್ರಿಗಳು ದೈವಾಧೀನರಾಗಿದ್ದರಂತೆ] ಏನೂ ಇರಲಿ ನಮ್ಮ ನಡುವೆ ಇಲ್ಲದ ರಾಜಕೀಯ ಮಾಡಿಕೊಂಡು ಬದುಕುವ ಅನೇಕ ಶ್ರೀಮಂತರಿದ್ದಾರೆ-ಯಾರಿಗೂ ಸಹಾಯ ಮಾಡುವ ಮನೋಧರ್ಮದವರಲ್ಲ, ಪೈಸೆ ಪೈಸೆಗೆ ಹಲ್ಲು ಗಿಂಜುವ, ಅಲ್ಲೇ ಲೆಕ್ಕಹಾಕಿ ಗಂಟುಕಟ್ಟುವ ಕಡುಲೋಭಿಗಳಾಗಿರುತ್ತಾರೆ. ಅಂಥವರ ಮಧ್ಯೆ ದಿ| ಶ್ರೀ ಕಣ್ಣೀಮನೆ ಶಾಸ್ತ್ರಿಗಳು ನಡೆಸಿದ ’ಹೀಗೂ ಉಂಟೇ ’ ಕಾರ್ಯ ಶ್ಲಾಘನೀಯ. ಅಂತಹ ಸಾಮಾಜಿಕ ಕಳಕಳಿಯುಳ್ಳ ಆತ್ಮಗಳು ಮತ್ತೆ ಅಂಥದ್ದೇ ರೂಪದಲ್ಲಿ ಜನಿಸಿ ಬರಲಿ-ದೊಡ್ಡಮಟ್ಟದಲ್ಲಿ ಜನಸಮುದಾಯಕ್ಕೆ ಸಹಕರಿಸಲಿ ಎಂದು ಹಾರೈಸುತ್ತೇನೆ.