ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, August 15, 2010

ಅರ್ಥವಾಗದ ಆಗಸ !


ಅರ್ಥವಾಗದ ಆಗಸ !

ನೀಲಾಗಸದ ಆಚೆ ಯಾವೂರು ಯಾರಿಹರು ?
ಕಾಲದಲಿ ಕಂಡಿಹರು ಬದುಕಿಹರೆ ಕೇಳೆ ?
ಏನಿದಾನಂತದಲಿ ಅಂತ್ಯವೇ ಇಲ್ಲದಿರೆ ?
ನಾನದನ ನೆನೆಯುತಿರೆ ನೂರು ಕನಸಿಹುದು

ನಕ್ಷತ್ರಗಳ ರಾಶಿ ನಡುವೆ ಚಂದ್ರನ ಕಾಶಿ
ಅಕ್ಷತೆಯ ಕಾಳ ಚೆಲ್ಲಿರುವ ನೋಟ
ವಕ್ಷಸ್ಥಳವೆಲ್ಲಿ ಆಧಾರವದಕೆಲ್ಲಿ
ಭಕ್ಷೀಸು ನೀಡಿದಗೆ ನೂರೆಂಟು ನಮನ

ಕಂಬಗಳ ನೋಡಿಲ್ಲ ಬಿಂಬಗಳು ಕಾಣುತಿವೆ
ಅಂಬರದಿ ಗುರುತ್ವ ಪೊಳ್ಳುಗಳೆಂಬ ಸೆಳವು
ನಂಬಿ ಹೋದವ ಬಾರ ಏನಲ್ಲಿ ದರಬಾರ ?
ತುಂಬುಗಣ್ಣಲಿ ಹುಡುಕು ಸಾವಿರದ ಸರಕು !

ಬಾಗಿಲುಗಳೇ ಇಲ್ಲ ಕಿಟಕಿಗಳು ಮೊದಲಿಲ್ಲ
ತೂಗಿ ಬಿಟ್ಟಿಹರೆನ್ನೆ ಸರಪಳಿಯು ಇಲ್ಲ
ಭಾಗವತ ಜನರಿಲ್ಲ ಸಾಗಿ ಹಾಡುವುದಕ್ಕೆ
ಆಗಾಗ ತೋರುವುದು ಬಣ್ಣದೋಕುಳಿಯು !

ಒಮ್ಮೆ ಯೋಚಿಸೆ ಸೋತೆ ಆಯಗಲ ವಿಸ್ತೀರ್ಣ
ಸುಮ್ಮನಾಗುತ್ತೇನೆ ಫಲಸಿಗದ ಅಳತೆ !
ದಮ್ಮು ಇದ್ದರೆ ಬನ್ನಿ ಅಳೆದುಕೊಡಿ ಅದರಳತೆ
ಹಮ್ಮು ಮುರಿವುದು ಕ್ಷಣದಿ ಆಗಸದ ಗಾಥೆ !

12 comments:

  1. ನಕ್ಷತ್ರಗಳ ರಾಶಿ ನಡುವೆ ಚಂದ್ರನ ಕಾಶಿ
    ಅಕ್ಷತೆಯ ಕಾಳ ಚೆಲ್ಲಿರುವ ನೋಟ
    ವಕ್ಷಸ್ಥಳವೆಲ್ಲಿ ಆಧಾರವದಕೆಲ್ಲಿ
    ಭಕ್ಷೀಸು ನೀಡಿದಗೆ ನೂರೆಂಟು ನಮನ
    very nice lines sir , chennagi bandide

    ReplyDelete
  2. shoonyada bagge ellarigoo kutoohala... adra bagge kavana bareyuvudu tumbaa kashTa... neevu eshTu sulabhavaagi , saraLavaagi barediddeeraa sir... khushi needitu.....

    Dhanyavaada.....
    Aug 22 kke sigutteeraa Sir..?

    ReplyDelete
  3. ನೀಲಾಕಾಶವನ್ನು ನೋಡಿ ಇ೦ತಹ ಬೆರಗು ಹುಟ್ಟಿಸುವ ಕವನ ರಚಿಸುವ ನಿಮ್ಮ ಕಲ್ಪನಾಶಕ್ತಿಗೆ ನಮೋನ್ನಮಃ

    ReplyDelete
  4. wow super.... kavana nimma kalpanege naanu sharaNu...

    ReplyDelete
  5. ನೀಲಾಕಾಶದ ಬೆರಗನ್ನು ವೈಭವನ್ನು ರಸವತ್ತಾಗಿ ಕವನದಲ್ಲಿ ಇಳಿಸಿದ್ದಿರಾ..ತಮ್ಮ ಶಬ್ದಗಳ ಲೀಲಾಜಾಲ ಉಪಯೋಗ ನಮ್ಮನ್ನು ವಿಸ್ಮಿತರನ್ನಾಗಿಸಿದೆ.

    ReplyDelete
  6. ಆಗಸದ ಬಗೆಗಿನ ನಿಮ್ಮ ಕಲ್ಪನಾ ಲೋಕ, ಬೆರಗಿನ ಪ್ರಶ್ನೆಗಳು ಬಹಳ ಚೆನ್ನಾಗಿವೆ.

    ReplyDelete
  7. ಕವನದ ಪ್ರತಿಯೊಂದು ಸಾಲೂ ಆಗಸದಷ್ಟೇ ಅಪಾರ ಅರ್ಥ ಪಡೆದಿದೆ. ಕವನವನ್ನು ಓದಿ
    ಮನಸ್ಸು ಮೂಕವಾಗುತ್ತದೆ.

    ReplyDelete
  8. ಆಕಾಶವನ್ನು ನಾವು ನೋಡುವುದೇ ಅಪರೂಪ, ಮೋಡ ಎಷ್ಟಾಗಿದೆ ಅಂತ, ಮಕ್ಕಳಿಗೆ ಚಂದ್ರನನ್ನು ತೋರಿಸಲು, ವಿಮಾನ ಕೆಳಕ್ಕೆ ಬಂದು ಸಡ್ಡು ಮಾಡಿದರೆ ಮಾತ್ರ ನಾವು ಮೇಲಕ್ಕೆ ನೋಡುತ್ತೇವೆ, ಮೇಲೆ ನೋಡುವ ಪ್ರವೃತ್ತಿ ಒಳ್ಳೆಯದಂತೆ, ಆದರೆ ಮೇಲೆರಿದಾಗ್ಲೂ ಚಿಕ್ಕವರಂತೇ ಇರಿ ಅಂತ ಪಂಜೆಯವರು ಹೇಳಿದರು! ಹೀಗಾಗಿ ಮೇಲೆ ನೋಡುವುದರಲ್ಲಿ ತಪ್ಪೇನಿದೆ. ಹಾಗಂತ ಗಾಡಿಯಲ್ಲಿ ಹೋಗುವಾಗ ರೈಲ್ವೇ ಮೇಲ್ಸೇತುವೆಯನ್ನು ಮೇಲೆ ತಿರುಗಿ ನೋಡಬೇಡಿ-ಮುಖದ ಮೇಲೇ 'ಪ್ರಸಾದ ' ಬಿದ್ದರೆ ಕಷ್ಟ!

    * ಶ್ರೀ ವೆಂಕಟೇಶ್ ನಿಮಗೆ ಈ ಕವನ ಭಾರೀ ಕಿಕ್ ಕೊಟ್ಟಿತೇ ? ಧನ್ಯವಾದಗಳು

    * ಶ್ರೀ ದಿನಕರ್, ಶೂನ್ಯವೇ ಹಾಗೆ ಮೊನ್ನೆ ಬರೆದಿದ್ದೆನಲ್ಲ 'ಸಂಸಾರದ' ಶೂನ್ಯ ಸಿಕ್ಕಿ ಹಾಕಿಕೊಂಡು ಅದು ಸಸಾರವಾಗಿಲ್ಲ, ಅದಲ್ಲದೇ ಏನೂ ಬೆಳೆಯಿರದಿರುವ ಶೂನ್ಯ ಯಾವುದಾದರೂ ಅಂಕೆಯ, ಪದದ ಜೊತೆಗೆ ಸೇರಿಕೊಂಡಾಗ ಸಾಕಿದ ನಾಯಿಗೆ ಕಾಂಪೌಂಡ್ ಒಳಗಿದ್ದಾಗ ಇರುವ ಗತ್ತಿನಷ್ಟೇ ಗಮ್ಮತ್ತು ಬರುತ್ತದೆ, ಅದೇ ಶೂನ್ಯದ ಮಹಿಮೆ ! ತಮಗೆ ನಮನಗಳು

    * ಶ್ರೀ ಪರಾಂಜಪೆ, ಬೆರಗಾದೆ ಬರೆದೆ, ನಿಮ್ಮನ್ನು ಬೆರಗುಮಾಡಲು ಸಾಧ್ಯವಿಲ್ಲ ಬಿಡಿ, ಆದರೂ ಬೆರಗು ಹುಟ್ಟಿಸುವ ಎಂದುಬಿಟ್ಟಿರಿ, ಅಡ್ಡಬಿದ್ದೆ ನಿಮಗೆ

    * ಸುಗುಣ ಮೇಡಂ, ಕಲ್ಪನೆಯೇ ಎಲ್ಲದಕ್ಕೂ ಕಾರಣ, ಆಸೆಯಂತೇ! ಒಳ್ಳೆಯ ಅಥವಾ ಕೆಟ್ಟ ಕೆಲಸ ಮಾಡುವಾಗ ಮೊದಲು ಕಲ್ಪನೆ ಮಾಡಿಕೊಂಡೇ ಮಾಡುತ್ತರಲ್ಲವೇ? ಹಾಗಾಗಿ ನನಗೇನೋ ಕುಳಿತಲ್ಲಿ ಕಲ್ಪನೆ ಬಂತು, ನಿಮಗೆ ಹಿಡಿಸಿದ್ದಕ್ಕೆ ನಾನು ಜವಾಬ್ದಾರಾನಲ್ಲ !!! ಕೃತಜ್ಞತೆಗಳು

    * ಶ್ರೀ ಸೀತಾರಾಮ್ ಸರ್, ಅಂತಹ ವಿಶೇಷ ಪದಗಳನ್ನೇನೂ ಬಳಸಿಲ್ಲ, ತಮಗೆ ಆದರೂ ಹಿತವೆನಿಸಿತಲ್ಲ! ನಮನಗಳು

    * ಶ್ರೀ ಮಹೇಶ್ ಸಾಹೇಬರೇ, ಅಪರೂಪಕ್ಕೆ 'ಬಾಂಬು' ಕಂಡೆ ನಿಮ್ಮ ಬ್ಲಾಗ್ ನಲ್ಲಿ! ನನಗೆ ಆ ಥರದ ಬಾಂಬಿನ ಪ್ರಯೋಗ ತಿಳಿದಿಲ್ಲ, ನಮಸ್ಕಾರ

    * ಪ್ರಭಾಮಣಿ ಮೇಡಂ, ತಮಗೆ ನನ್ನ ಸ್ವಗತದ ಪ್ರಶ್ನೆಗಳು ಹಿಡಿಸಿದವು ಎಂದಿರಿ, ಹಲವು ನೆನಕೆಗಳು ತಮಗೆ

    * ಶ್ರೀ ಸುನಾಥರೇ, ನೀವು ಮೂಕರಾದರೆ ನಿಮ್ಮ ಜೊತೆಯಲ್ಲಿ ಶಿಷ್ಯವೃತ್ತಿಯಲ್ಲಿರುವ ನಮಗೆಲ್ಲ ತಡೆಯಲು ಸಾಧ್ಯವೇ ? ಅದಕ್ಕಾಗಿ ಆಗಸದ ಮೂಲೆಯಲ್ಲಿ ಔಷಧವೆಲ್ಲೋ ಸಿಗಬಹುದೇ ? ಬಹಳ ಅನುಭವಿಸಿ ಹೇಳಿದಿರಿ, ಅನಂತ ನಮನಗಳು

    ಓದಿದ ಎಲ್ಲಾ ಮಿತ್ರರಿಗೂ ನಮನಗಳು

    ReplyDelete
  9. ಮರೆತಿದ್ದೆ, ದಿನಕರ್ ಸರ್, ಭೇಟಿ ಆಗೋಣ ೨೨ ಕ್ಕೆ !

    ReplyDelete