ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, August 12, 2010

ಹೀಗೂ ಉಂಟೇ ?? !!!

ಚಿತ್ರ ಋಣ : ಅಂತರ್ಜಾಲ
ಹೀಗೂ ಉಂಟೇ ?? !!!

ಬಿಸಿಬಿಸಿ ಹೋಳಿಗೆ, ಬೂಂದಿ ಲಾಡು, ಕೇಸರೀಬಾತು ಯಾವ ಸಿಹಿತಿನಿಸು ಬೇಕು ಹೇಳಿ ಅದನ್ನು ಪುಕ್ಕಟೆಯಾಗಿ ಒದಗಿಸುವ ವ್ಯವಸ್ಥೆ ಅವರದಾಗಿತ್ತು. ಕಾಸು ಎರವಲು ಬೇಕಾದರೆ ಸಿಗುತ್ತಿತ್ತು, ಮರಳಿ ಸರಿಯಾದ ದಿನಕ್ಕೆ ತಲ್ಪಿಸಿದ ಕಾಸನ್ನು ಅವರು ಹೋಮಕ್ಕೆ ಹಾಕಿಬಿಟ್ಟರೆ ಅದು ಮಾಯ !

ನಾವೆಲ್ಲಾ ಚಿಕ್ಕವರಿದ್ದಾಗ ನಮಗಿನ್ನೇನು ಕೆಲಸ ಹೇಳಿ! ಯಾವಾಗಲೂ ಕಥೆ ಕೇಳುವುದೆಂದರೆ ಬಹಳ ಇಷ್ಟವಾಗಿರೋದ್ರಿಂದ ಅದಕ್ಕಾಗಿ ಎಲ್ಲಿ ಅನುಕೂಲವಾಗುತ್ತದೆ ಎಂದು ಕಾಯುವುದು. ಕಥೆ ಹೇಳುವಂತ ಯಾರಾದರೂ ಕಣ್ಣಿಗೆ ಬಿದ್ದರೆ ಅವರ ಮನವೋಲೈಸುವುದು. ಆಗ ತಂತಾನೆ ಅವರಿಂದ ನಮ್ಮ ಮುಗ್ಧ ಮುಖ ನೋಡಿ ಕಥೆಗಳು ಹೊರಬರುತ್ತಿದ್ದವು. ರಾಕ್ಷಸರ ಕಥೆ ಹೊರಬರುತ್ತಿದ್ದರೆ ನಮಗೆ ಒಳಗೋಳಗೇ ಪುಕುಪುಕು ! ಗಾಳಿ ಕಮ್ಮಿಯಾದ ಸೀಮೆ ಎಣ್ಣೆ ಗ್ಯಾಸ್ ಲೈಟ್ ಥರ ನಮ್ಮ ಹೃದಯಬಡಿತ ಮೇಲಕ್ಕೂ ಕೆಳಕ್ಕೂ ಆಗುತ್ತಿತ್ತು. ಕಥೆ ಕೇಳುತ್ತ ಆ ಕಥೆಗಳಲ್ಲೇ ತಲ್ಲೀನರಾಗಿಬಿಡುತ್ತಿದ್ದುದರಿಂದ ದೊಡ್ಡವರು ಪಕ್ಕದಲ್ಲೇ ಕಥೆ ಹೇಳುತ್ತಿದ್ದರೂ ನಮಗೆ ಚಡ್ಡಿಯಲ್ಲಿ ಉಚ್ಚೆಬರುವಷ್ಟೂ ಹೆದರಿಕೆ. ಆ ದಿನಗಳಲ್ಲಿ ರಾತ್ರಿ ಕತ್ತಲು ಇರುವಲ್ಲಿ ನಾವು ಹೋಗುತ್ತಲೇ ಇರಲಿಲ್ಲ. ಕತ್ತಲು ಎಂದರೆ ನಮಗೆ ಆಗಿನಿಂದಲೂ ವೈರ, ಆಗ ಸ್ವಲ್ಪ ಬೇರೆ ಅರ್ಥದಲ್ಲಿತ್ತು. ಹೀಗಾಗಿ ನಾವು ಯಾವಾಗಲೂ ಸೂರ್ಯನ ಪರಮ ಭಕ್ತರು! ಎಲ್ಲೆಡೆ ಬೆಳಕು ಚೆಲ್ಲುವ ಪರಮಾತ್ಮ ನಮ್ಮಂತ ಸಾವಿರ ಸಾವಿರ ಮಕ್ಕಳ ಹೆದರಿಕೆಯನ್ನು ಹಗಲಿನಲ್ಲಿ ಹೊಡೆದೋಡಿಸುತ್ತಿದ್ದ!

ಕಥೆಗಳನ್ನು ಪಟ್ಟಾಗಿ ಹೇಳುವುದರಲ್ಲಿ ನಮ್ಮಜ್ಜ ಮಾತ್ರ ನಿಸ್ಸೀಮರು, [ಈಗ ನೀವೇ ಹೇಳಿಬಿಡಬಹುದು-ನಿನ್ನನ್ನು ನೋಡಿದ್ರೇ ಗೊತ್ತಾಗುವುದಿಲ್ವೇ ಅಂತ, ಸ್ವಲ್ಪ ರಕ್ತಗತ ಹೌದೆನ್ನಿ!] ಆ ಕಾಲಕ್ಕೆ ಬಹಳ ಜ್ಞಾನದ ಆಗರವಾಗಿದ್ದ ಅವರಲ್ಲಿ ಇಲ್ಲದ ಮಾಹಿತಿಗಳೇ ಇರಲಿಲ್ಲ. ಮನಸ್ಸಿದ್ದರೆ ಆಗಾಗ ವಿಶ್ರಮಿಸಿಕೊಂಡಾಗ ಅವರು ಅದನ್ನೆಲ್ಲಾ ಹೇಳುತ್ತಿದ್ದರು. ಅನೇಕ ನೈಜ ಕಥೆಗಳೂ ಅವುಗಳಲ್ಲಿ ಇದ್ದವೆಂದರೆ ನೀವು ನಂಬಲಾರಿರೇನೋ ! ಅವರ ಸ್ವಾನುಭವ ಬಹಳ ಅದ್ಬುತ. ಅವರಿಗೆ ಲೋಕದ ಪರಿಜ್ಞಾನದ ಜೊತೆಗೆ ಸಾಮಾಜಿಕ ಕಳಕಳಿಯೂ ಇತ್ತು, ಬಡವರಬಗ್ಗೆ, ದೀನರಬಗ್ಗೆ, ಅಂಗವಿಕಲರಬಗ್ಗೆ ಅವರಿಗೆ ರಾಜಕೀಯ ರಹಿತ ಶುದ್ಧ ಅನುಕಂಪವಿತ್ತು. ಸುತ್ತ ಹತ್ತಾರು ಹಳ್ಳಿಗಳಿಗೆ ಗೊತ್ತಿರುವ ದೊಡ್ಡ ವ್ಯಕ್ತಿ ಅವರಾಗಿದ್ದರು ಎನ್ನಲು ನನಗೆ ಹೆಮ್ಮೆ. ಇಂತಹ ಪುಣ್ಯಾತ್ಮ ಮನೆಯಲ್ಲಿ ನಮ್ಮೊಟ್ಟಿಗೆ ಮಗುವಿನ ಹೃದಯ ಹೊಂದಿದವರು. ಯಾರೂ ಆಡಲು ಸಿಗದಿದ್ದರೆ, ಅಜ್ಜನವರಿಗೆ ಬಿಡುವು ಇದ್ದರೆ ಆ ದಿನ ಕಥೆ ಗ್ಯಾರಂಟಿ. ಪುರೋಹಿತರು ಸುಟ್ಟೇವು ತಿಂದ ಕಥೆ, ಬೀರ್ಬಲ್ ಅಕ್ಬರನ ಗಡ್ಡಹಿಡಿದ ಕಥೆ, ತೆನ್ನಾಲಿಯ " ಸರ್ ಡಬ್ ವಾಂಯ್ "--ತಿಲಕಾಷ್ಟ ಮಹಿಷಬಂಧನ ಕಥೆ ಹೀಗೇ ಹಲವು ಕಥೆಗಳ ಮೂಲಕ ನಮ್ಮನ್ನು ಅವರು ರಂಜಿಸುವುದರೊಟ್ಟಿಗೆ ನಮಗೆ ಅವರ ಜ್ಞಾನವನ್ನು ಧಾರೆ ಎರೆದರು, ಹೀಗಾಗಿ ಈ ಕಥೆಯ ಮಧ್ಯದಲ್ಲೇ ಕಥೆಯ ಕಥೆ ಹೇಳಿದ ಅವರಿಗೊಮ್ಮೆ ನಮನ.

ಆ ಕಾಲದಲ್ಲಿ ಅಷ್ಟಾಗಿ ಸಮಾಜದಲ್ಲಿ ಹಳ್ಳಿಗಳಲ್ಲಿ ಸಿರಿತನವೇನೂ ಇರಲಿಲ್ಲ. ಎಲ್ಲೋ ಅಪರೂಪಕ್ಕೆ ಒಂದೊಂದು ಮನೆ ಶ್ರೀಮಂತರದ್ದಾಗಿರುತ್ತಿತ್ತು. ಬಹುತೇಕರು ಜೀವನದಲ್ಲಿ ಬಹಳ ಏರಿಳಿತವಿಲ್ಲದೇ ಉಂಡುಟ್ಟು ಸುಖವಾಗಿದ್ದರು. ನಾನು ಹೇಳುತ್ತಲೇ ಬಂದಹಾಗೇ ಸಿಹಿತಿನಿಸುಗಳು ಮತ್ತು ಕರಿದ ಪದಾರ್ಥಗಳೆಲ್ಲ ವಿಶೇಷ ದಿನಗಳಲ್ಲಿ ಮಾತ್ರ. ಹಾಗೂ ಆ ದಿನಗಳಲ್ಲಿ ಏನಾದರೂ ತೊಂದರೆಯಾಗಿಬಿಟ್ಟರೆ ಅವುಗಳಿಗೆ ಮತ್ತೆ ಡಿಸ್ಕೌಂಟು. ನಾವೆಲ್ಲ ಇಂದಿನ ಮಕ್ಕಳ ಹಾಗೆ ಬೇಕರಿ ಎಂಬುದನ್ನೇ ಕಂಡಿರಲಿಲ್ಲ, ಇನ್ನು ಚಿಪ್ಸು, ಕುರ್ಕುರೆ ಇದೆಲ್ಲಾ ಇರಲಿಲ್ಲ-ಕೊಡಿಸಿ ಎಂದು ಕರ್ಕರೆ ಮಾಡಿದ ಮಕ್ಕಳೂ ನಾವಲ್ಲ. ಎಲ್ಲಾದರೂ ಹೊಸ ಬಟ್ಟೆ ಅಥವಾ ಚಪ್ಪಲಿಗಾಗಿ ಪೀಡಿಸಿದರೆ ಆಗ ಅವರಿಗೇನಾದರೂ ತೊಂದರೆ ಇದ್ದರೆ " ಸುಮ್ನೇ ಇರ್ರೋ, ಪೆಟ್ಟು ಕೊಡ್ತೆ ನೋಡು... ಮಕ್ಳು ಅಂದ್ರೆ ದೇವರ ಮರಿ ಇದ್ದಾಂಗಿರಬೇಕು " ಅನ್ನೋರು. ’ದೇವರ ಮರಿ’ ಅಂದ್ರೆ ಏನು ಎಂಬುದು ನಮಗೆ ಇನ್ನೂ ತಿಳಿದಿಲ್ಲ, ಆದರೆ ನಾವಂತೂ ತಕ್ಷಣ ೫:೩೦ ಕ್ಕೆ ಬ್ಯಾಂಕ್ ಬಾಗಿಲು ಹಾಕಿದ ಹಾಗೇ ಬಾಯಿಗೆ ಬೀಗಜಡಿದುಕೊಂಡು ಕೂರುತ್ತಿದ್ದೆವು. ಆದಾದ ಮೇಲೆ ಒಂದೆರಡು ದಿನ ಕಥೆಯೂ ಇಲ್ಲ ಕಾದಂಬರಿಯೂ ಇಲ್ಲ! ದೊಡ್ಡವರ ಎದುರುಗಡೆ ನಿಲ್ಲಲೇ ಒಂಥರಾ ಹೆದರಿಕೆ, ಕೈಕಾಲೆಲ್ಲ ಗಡಗಡಗಡ !

ಹಿಂದಿನ ಕಾಲಕ್ಕೆ ಅಜ್ಜನ ಎಳವೆಯಲ್ಲಿ ನಮ್ಮಲ್ಲಿ ಬಹಳ ಬಡತನ. ಊಟಕ್ಕೆ ತೊಂದರೆಯಿಲ್ಲ ಆದರೆ ಆಟಕ್ಕೆ ಅನುಕೂಲವಿರಲಿಲ್ಲ. ಅಂತಹ ಸನ್ನಿವೇಶದಲ್ಲಿ ಅಜ್ಜ-ದೊಡ್ಡಜ್ಜ ಅವಿಭಕ್ತ ಕುಟುಂಬದಿಂದ ವಿಭಜಿತಗೊಂಡು ಬೇರೆ ಬೇರೆ ಮನೆಮಾಡಿದರು. ಮನೆಕಟ್ಟಲೂ ಕೈಲಿ ಹಣವಿಲ್ಲದೇ ಹಾಗೂ ಹೀಗೂ ಪರದಾಡಿ ಮಾಡಿದ ಕೆಲಸವದು. ಆದರೂ ಅಂದಿನ ಕಾಲಕ್ಕೆ ಅವರು ಮಾಡಿದ ಆ ಸಾಹಸ ಇಂದಿಗೂ ಹಳ್ಳಿಯಲ್ಲಿ ನಮ್ಮಿಂದ ಸಾಧ್ಯವಿಲ್ಲ. ಬೇರೇ ಮನೆಗಳ ತೋಟಗಳಲ್ಲಿ ದಿನಗೂಲಿ ಕೆಲಸ ಮಾಡಿ ಸಂಸಾರವನ್ನು ನಿಭಾಯಿಸಿದವರಂತೆ ನಮ್ಮಜ್ಜ. ಆಮೇಲೆ ಇಚ್ಛೆಯನಿರಿವ ಅನುರೂಪಮಡದಿಯಾದ್ದರಿಂದ ಬೇರೆ ವ್ಯಾಪಾರಗಳಲ್ಲಿ ತೊಡಗಿಸಿಕೊಂಡು ಗುರು ಸಮರ್ಥ ಶ್ರೀಧರರ ಕೃಪೆಯಿಂದ ಬಹಳ ಮೇಲೆ ಬಂದರು, ಅನುಕೂಲ ಪಡೆದರು, ಶ್ರೀಮಂತರಾದರು ಮತ್ತು ಅಂದಿನ ಕಾಲಕ್ಕೆ ’ಕೊಪ್ಪರಿಗೆಯಲ್ಲಿ ದುಡ್ಡು ಹೂತಿಟ್ಟರಂತೆ’ ಎಂಬ ದಂತಕಥೆಗೆ ವಿಷಯವಸ್ತುವಾದರು! ಕಷ್ಟ-ಸುಖಗಳ ಪರಿವೆಯಿದ್ದ ಅವರು ನಮಗೆಲ್ಲ ’ಸಂಸಾರ’ದಲ್ಲಿ ಸೊನ್ನೆ ಮಧ್ಯೆ ಸೇರಿಕೊಂಡಿದ್ದರಿಂದ ಅದು ’ಸಸಾರ’ವಲ್ಲ ಎಂದು ತಿಳುವಳಿಕೆ ಹೇಳುತ್ತಿದ್ದರು.

ಹಾಗೆ ಅವರ ಎಳವೆಯ ಕಾಲದಲ್ಲಿ ನಮ್ಮೂರಲ್ಲಿ ಕಣ್ಣೀಮನೆ ಶಾಸ್ತ್ರಿಗಳು ಬಹಳ ಜನಜನಿತ ವ್ಯಕ್ತಿತ್ವವಾಗಿತ್ತಂತೆ. ನೋಡಲು ಶುದ್ಧ ಚಾಣಕ್ಯನಂತೇ ಕಾಣುತ್ತಿದ್ದ ಅವರು ಬಿಳಿಯ ಪಂಚೆ ಉಟ್ಟು, ವಿಭೂತಿ ಧರಿಸಿ ಹೊರಟುಬಿಟ್ಟರೆ ಎಲ್ಲಿಗೆ ಎಂದು ಯಾರೂ ಕೇಳುವ ಹಾಗಿಲ್ಲ-ಅವರು ಹೇಳುವುದೇ ಇದ್ದಿಲ್ಲ. ಅಂತೂ ಸವಾರಿ ಹೊರಟುಬಿಡುತ್ತಿತ್ತಂತೆ. ಅವರಿಗೆ ಕಾಲಲ್ಲಿ ಚಕ್ರ ಇದೆ-ಅವರು ನಿಂತಲ್ಲಿ ನಿಲ್ಲುವುದೇ ಇಲ್ಲ ಎಂದೆಲ್ಲಾ ಜನ ಅಂದುಕೊಳ್ಳುತ್ತಿದ್ದರಂತೆ. ಸ್ವಾನುಷ್ಠಾನ ಬಲದಿಂದ ಅವರು ಕೆಲವು ಶಕ್ತಿಗಳನ್ನು ಪಡೆದಿದ್ದರಂತೆ. ಮಾಹಾಕೋಪಾವಿಷ್ಟರಾಗಿದ್ದರೂ ಬಹಳ ನಿಗರ್ವಿಯೂ ಅನೇಕಕಾಲ ಮುಗ್ಧರೂ ಆಗಿರುತ್ತಿದ್ದರಂತೆ. ಅವರ ಬರುವಿಕೆಗೆ ಹಲವು ಜನ ಕಾಯುತ್ತಿದ್ದರಂತೆ. ಅವರು ಅನೇಕರ ಕಷ್ಟಗಳಲ್ಲಿ ಸಹಕರಿಸಿದ ಆಧ್ಯಾತ್ಮ ಮನೋಭಾವದವರಂತೆ. ಅಂತಹ ಪುಣ್ಯಾತ್ಮನೊಬ್ಬನನ್ನು ಕಥೆಯ ಮೂಲಕ ನಮಗೆ ಸಮಗ್ರವಾಗಿ ದರ್ಶಿಸಿದವರು ನಮ್ಮಜ್ಜ ದಿ|ಶ್ರೀ ವಿಷ್ಣುಭಟ್ಟರು. ನಮ್ಮಲ್ಲಿನ ಸಾಂಪ್ರದಾಯಿಕ ಪದ್ಧತಿಯಂತೇ ಅವರ ಹೆಸರನ್ನೇ ನನಗೆ ಇಟ್ಟು ಕರೆದರು.

ಶ್ರೀ ಕಣ್ಣೀಮನೆ ಶಾಸ್ತ್ರಿಗಳು ಒಮ್ಮೊಮ್ಮೆ ಕುಳಿತಲ್ಲಿಂದ ಧುತ್ತನೇ ಎದ್ದುಹೋಗಿಬಿಡುತ್ತಿದ್ದರಂತೆ, ಅವರ ಎದುರುಗಡೆ ಹತ್ತಲಾರದ ಎತ್ತರದ ಭೂ ಪ್ರದೇಶ[ನಮ್ಮಲ್ಲಿ ವಾಡಿಕೆಯಲ್ಲಿ ಇದಕ್ಕೆ ಧರೆ ಎನ್ನುತ್ತೇವೆ] ಇದ್ದರೂ ಅದನ್ನೇ ಹಾಗೇ ಹತ್ತಿಹೋಗುವ ಅಭೂತಪೂರ್ವ ಸಾಧಕರು ಅವರಾಗಿದ್ದರಂತೆ. ಊರಿಗೆ ಬಂದಾಗ ಮನೆಗಳಿಗೆ ಭೇಟಿ ನೀಡುವ ಅವರು ಏನಾದರೂ ಅಪರೂಪದ ಸಿಹಿತಿನಿಸು ಬೇಕು ಎನಿಸಿದರೆ ಒಂದು ಖಾಲಿ ಹರಿವಾಣವನ್ನೂ ಒಂದು ಶುಭ್ರ ಪಂಚೆಯನ್ನೂ ತರಲು ಹೇಳಿ, ತರಿಸಿಕೊಂಡ ಮೇಲೆ ಅದನ್ನು ಏನೋ ಮಂತ್ರಿಸಿ ಹರಿವಾಣವನ್ನು ನೆಲದ ಮೇಲಿಟ್ಟು ಅದಕ್ಕೆ ಆ ಪಂಚೆಯನ್ನು ಮುಸುಕುಹಾಕುತ್ತಿದ್ದರಂತೆ. ಕ್ಷಣಾರ್ಧದ ಬಳಿಕ ತೆಗೆಯಲು ಹೇಳುತ್ತಿದ್ದರಂತೆ " ಏಯ್ ಬಾರೋ ಇಲ್ಲಿ, ಹೋಳಿಗೆ ಬೇಕು ಅಂದ್ಯಲಾ ...ತಗೋ ಬಿಸಿಬಿಸಿ ಹೋಳಿಗೆ " ಎಂದು ಗಡಸು ದನಿಯಲ್ಲಿ ಆಜ್ಞೆಮಾಡಿ ತಿನ್ನಿಸುತ್ತಿದ್ದರಂತೆ. ಅಂತೆಯೇ ಯಾರಿಗಾದರೂ ಕಾಸಿನ ತೊಂದರೆ ಇದ್ದರೆ ಅದೇ ರೀತಿಯಲ್ಲಿ ಮುಸುಕು ಹಾಕಿಟ್ಟು ಮಂತ್ರಿಸಿದಾಗ ಹರಿವಾಣದಲ್ಲಿ ದುಡ್ಡಿನ ರಾಶಿ. ಆ ದುಡ್ಡನ್ನು ಬೇಕಾದವರಿಗೆ ನಿಬಡ್ಡಿಯ ಸಾಲವಾಗಿ ನೀಡಿ " ಯಾವಾಗ ನೀನು ಕೊಡೋದು ಅಂತ ಹೇಳ್ಬಿಡು " ಎನ್ನುತ್ತಿದ್ದರಂತೆ. ಆ ದಿನಕ್ಕೆ ಮರಳಿಸದಿದ್ದರೆ ಪರಿಣಾಮ ಏನಾಗುತ್ತಿತ್ತೋ ತಿಳಿಯದು-ಅದನ್ನು ಯಾರೂ ಪ್ರಯತ್ನಿಸಿ ನೋಡಿಲ್ಲವಂತೆ. ಹಾಗೆ ಆಮೇಲೆ ಮರಳಿ ಬರುವ ಹಣವನ್ನು ಹೋಮಮಾಡಿ ಹೋಮಕ್ಕೆ ಹಾಕಿಬಿಡುತ್ತಿದ್ದರಂತೆ. ಹಾಕಿದ ಕ್ಷಣದಲ್ಲಿ ಆ ದುಡ್ಡು ಅಲ್ಲಿಂದ ಮಾಯ! ಚೌಡಿಯ ಉಪಾಸಕರಾಗಿದ್ದ ಅವರು ಅದರ ಸಹಾಯದಿಂದ ಯಾರದೋ ಮನೆಯಲ್ಲಿ ಬಳಸದೇ ಹಾಗೇ ಇಟ್ಟ ಹಣವನ್ನು ತರಿಸಿ ಮತ್ತೆ ಮರಳಿ ಅದು ಸ್ವಸ್ಥಾನ ಸೇರುವವರೆಗೆ ದುಡ್ಡಿನ ಸಾಹುಕಾರರಿಗೆ ಅದು ಬಳಕೆಗೆ ಬೇಕಾಗದಂತೆಯೂ ನೋಡಿಕೊಳ್ಳುವ ಪರಿಕಲ್ಪನೆಯೊಂದಿಗೆ ಇದನ್ನು ನಡೆಸುತ್ತಿದ್ದರು ಎನ್ನುತ್ತಾರೆ.

ಎಲ್ಲೋ ಮದುವೆ-ಮುಂಜಿ ಇಂತಹ ಕಾರ್ಯದ ಮನೆಗಳಲ್ಲಿ ಅನಿರೀಕ್ಷಿತ ಸಂಖ್ಯೆಯ ಜನರು ಬರುವಲ್ಲಿ ಮಾಡಿದ ಸಿಹಿತಿನಿಸುಗಳನ್ನು ಅಲ್ಲಿಗೆ ಬರುವ ಜನರ ಸಂಖ್ಯೆಯನ್ನೂ ನೋಡಿಕೊಂಡು ಹೆಚ್ಚಾಗಿ ಉಳಿಯುವುದನ್ನು ತರಿಸುವುದೋ ಅಥವಾ ಬರುವ ಜನರ ಸಂಖ್ಯೆಯನ್ನೇ ಕಮ್ಮಿ ಮಾಡಿ, ಪದಾರ್ಥ ಹೆಚ್ಚುಳಿಸಿ ಅದನ್ನು ಹೀಗೆ ಬೇಕಾದವರಿಗೆ ತಿನಿಸುತ್ತಿದ್ದರಂತೆ!

ಇಂದು ನಂಬಲಾಗದ ಇಂತಹ ಘಟನೆ ಅಂದಿಗೆ ನಡೆದಿದ್ದನ್ನು ಸಾಕ್ಷೀಕರಿಸದವರು ನನ್ನಜ್ಜ. ಆಗ ಅವರಿನ್ನೂ ಸಣ್ಣ ವಯೋಮಾನದವರಾದ್ದರಿಂದ ಆ ಶಾಸ್ತ್ರಿಗಳ ಆರ್ಥಿಕ ಸಹಾಯ ಅಜ್ಜನವರಿಗೆ ಸಿಗಲಿಲ್ಲ[ಅಜ್ಜ ಸಂಸಾರವಂದಿಗನಾಗುವ ಹೊತ್ತಿಗೆ ಶಾಸ್ತ್ರಿಗಳು ದೈವಾಧೀನರಾಗಿದ್ದರಂತೆ] ಏನೂ ಇರಲಿ ನಮ್ಮ ನಡುವೆ ಇಲ್ಲದ ರಾಜಕೀಯ ಮಾಡಿಕೊಂಡು ಬದುಕುವ ಅನೇಕ ಶ್ರೀಮಂತರಿದ್ದಾರೆ-ಯಾರಿಗೂ ಸಹಾಯ ಮಾಡುವ ಮನೋಧರ್ಮದವರಲ್ಲ, ಪೈಸೆ ಪೈಸೆಗೆ ಹಲ್ಲು ಗಿಂಜುವ, ಅಲ್ಲೇ ಲೆಕ್ಕಹಾಕಿ ಗಂಟುಕಟ್ಟುವ ಕಡುಲೋಭಿಗಳಾಗಿರುತ್ತಾರೆ. ಅಂಥವರ ಮಧ್ಯೆ ದಿ| ಶ್ರೀ ಕಣ್ಣೀಮನೆ ಶಾಸ್ತ್ರಿಗಳು ನಡೆಸಿದ ’ಹೀಗೂ ಉಂಟೇ ’ ಕಾರ್ಯ ಶ್ಲಾಘನೀಯ. ಅಂತಹ ಸಾಮಾಜಿಕ ಕಳಕಳಿಯುಳ್ಳ ಆತ್ಮಗಳು ಮತ್ತೆ ಅಂಥದ್ದೇ ರೂಪದಲ್ಲಿ ಜನಿಸಿ ಬರಲಿ-ದೊಡ್ಡಮಟ್ಟದಲ್ಲಿ ಜನಸಮುದಾಯಕ್ಕೆ ಸಹಕರಿಸಲಿ ಎಂದು ಹಾರೈಸುತ್ತೇನೆ.

19 comments:

  1. ಅಂದಿನ ಕಾಲದಲ್ಲಿ ಇದ್ದಂತೆ ಜನರ ಒಳಿತಿಗಾಗಿ ಶ್ರಮಿಸುತ್ತಿದ್ದ ಪವಾಡ ಪುರುಷರುಗಳ ಸಂತತಿ ಈಗಿಲ್ಲ.. ಈಗ ಏನಿದ್ದರೂ ಕಪಟ, ಮೋಸ ಇವನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡು ಮುಗ್ದ ಜನರನ್ನು ವಂಚಿಸಿ ಆನಂದ ಹೊಂದುವ "ನಿತ್ಯಾನಂದರೆ" ತುಂಬಿ ಹೋಗಿದ್ದಾರೆ..ಮೊದಲು ಚಾಣಕ್ಯನ ಚಿತ್ರ ನೋಡಿ ಅವನ ಬಗ್ಗೆ ಏನೋ ಬರೆದಿರುತ್ತೀರಾ ಅಂದುಕೊಂಡೆ.. ಆಮೇಲೆ ಕಣ್ನೀಮನೆ ಶಾಸ್ತ್ರಿಗಳೆಂಬ ಮಹಾತ್ಮರ ಬಗ್ಗೆ ಓದಿ ಖುಷಿಯಾಯ್ತು..

    ReplyDelete
  2. ಭಟ್ಟರೇ ಚೆನ್ನಾಗಿತ್ತು ನಿಮ್ಮ ಸಣ್ಣ ಕತೆ..
    ಚಾಣಕ್ಯನ ಚಿತ್ರ ನೋಡಿ ಏನೋ ಬರೆದಿದ್ದಿರ ಅಂತ ಕುತೂಹಲದಿಂದ ಓದಿದೆ ..ಕಣ್ಣೇ ಮನೆ ಶಾಸ್ತ್ರಿಗಳು ನಡೆಸಿದ ಹೀಗೂ ಉಂಟೇ ಕಾರ್ಯ ನಿಜಕ್ಕೂ ಮೆಚ್ಚುವಂತದ್ದೆ..

    ReplyDelete
  3. ದಿ| ಶ್ರೀ ಕಣ್ಣೀಮನೆ ಶಾಸ್ತ್ರಿಗಳು ನಡೆಸಿದ ’ಹೀಗೂ ಉಂಟೇ ’ ಪ್ರಸ೦ಗವನ್ನು ಉತ್ತಮವಾಗಿ ನಿರೂಪಿಸಿದ್ದೀರಿ ಭಟ್ ಸರ್. ಎ೦ದರೋ ಮಹಾನುಭಾವುಲು..!

    ಶುಭಾಶಯಗಳು
    ಅನ೦ತ್

    ReplyDelete
  4. ಚಾಣಾಕ್ಯನ ಚಿತ್ರ ಹಾಕಿ ಪೂಜ್ಯ ದಿವ್ಯ ಚೇತನರಾದ ತಮ್ಮ ಅಜ್ಜ ಹಾಗೂ ಕಣ್ಣೆಮನೆ ಶಾಸ್ತ್ರೀಗಳ ಪರಿಚಯ ಮಾಡಿಸಿದಿರಿ. ತಮ್ಮ ಬತ್ತಳಿಕೆಯಲ್ಲಿ ಏನೆಲ್ಲಾ ಇವೆ. ತಾವು ಸಣ್ಣವರಿದ್ದಾಗ ಕಥೆ ಕೇಳಿದ ಪರಿ ಈಗ ನಮ್ಮದಾಗಿದೆ. ಕಥೆ ಹೇಳುವ ಸರದಿ ತಮ್ಮದಾಗಿದೆ.
    ಸಣ್ಣೇಮನೆ ಶಾಸ್ತ್ರೀಗಳು ಇದ್ದಿದ್ದರೆ ಎಲ್ಲ ಕಾಳಸಂತೆಕೋರರ ಕಳ್ಳ ಹಣ ತರಿಸಿ ಜನಕಲ್ಯಾಣಕ್ಕೆ ಉಪಯೋಗಿಸಬಹುದಿತ್ತು. ಸ್ವಿಸ್ ಬ್ಯಾಂಕ್-ನಲ್ಲಿನ ನಮ್ಮ ಕಪ್ಪು ಹಣ ವಾಪಸ್ ತರಿಸಬಹುದಿತ್ತು. ಎಷ್ಟೋ ಜನ ದುರಾಸೆ ಜಿಪುಣರು ಅಲ್ಲಿ ಹಣ ಇಟ್ಟು ಹೆಂಡತಿ ಮಕ್ಕಳಿಗೂ ಹೇಳದೆ ಸತ್ತಿದ್ದರಿಂದ ಅನಾಥವಾಗಿ ಕೊಳೆಯುತ್ತಿದೆಯಂತೆ. ಅವನ್ನೆಲ್ಲಾ ಪಡೆಯಬಹುದಿತ್ತು. ಈಗಿನ ಬಾಬಾಗಳೆಲ್ಲಾ ಫೋಟೋದಲ್ಲಿ ಜೇನು ಸುರಿಸುವ, ಸಪ್ರ್ಪ ನರ್ತನ, ಹಾಗೂ ಪುಂಗಿ ಉದೋ ನಿತ್ಯನಂದರೆ!

    ಚೆಂದದ ಲೇಖನ!

    ReplyDelete
  5. ತುಂಬಾ ಚೆನ್ನಾಗಿತ್ತು ವಿ ಆರ್ ಭಟ್ರೇ . ಒಂದು ಒಳ್ಳೆ ಕಾದಂಬರಿ ಓದಿದ ಅನುಭವ ಆಯಿತು . ಹಳೆಯ ಕಾಲದ ಸಂಗತಿಗಳನ್ನು ಚಾಚೂ ತಪ್ಪದೆ ಹೇಳುವುದೂ ಒಂದು ಕಲೆ ಕೆಲವರಿಗೆ(ನಿಮ್ಮಂತವರಿಗೆ ) ಮಾತ್ರ ಬರುತ್ತದೇನೋ . ಈಗೆಲ್ಲ ನಮ್ಮ ಬದುಕು praactical ಆಗಿಬಿಟ್ಟಿದೆ .ಹಳೆಯ ಕಾಲದ ಸಂಗತಿಗಳನ್ನೆಲ್ಲ ಹೇಳುವವರೂ ಯಾರೂ ಇಲ್ಲವೇನೋ . anyway ಅಜ್ಜ. ಅಜ್ಜಿಯರನ್ನೆಲ್ಲ ನೆನಪಿಸಿದ್ದಕ್ಕೆ ದನ್ಯವಾದಗಳು

    ReplyDelete
  6. ತುಂಬಾ ಚೆನ್ನಾಗಿದೆ ಭಟ್ ಸಾರ್. ಚಿಕ್ಕವರಿದ್ದಾಗ ಯಾರು ಹೆಚ್ಚು ಹೆಚ್ಚು ಕಥೆ ಕೇಳಿರುತ್ತಾರೋ, ಅವರಿಗೆ ಮಾತ್ರ ಗೊತ್ತಿರತ್ತೆ ಅದರ ರುಚಿ, ಮಹತ್ವ. ತಮ್ಮ ಅಜ್ಜ ಹಾಗೂ ಕಣ್ಣೇಮನೆ ಶಾಸ್ತ್ರಿಗಳವರ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.

    ಶ್ಯಾಮಲ

    ReplyDelete
  7. tumba oLLe kathe tiLisidiri, odisikondu hoyitu bahaLa istavaaytu.......

    ReplyDelete
  8. ಕತೆ ತುಂಬಾ ಚೆನ್ನಾಗಿದೆ.ಬೆಳೆಗೆರೆ ಕೃಷ್ಣ ಶಾಸ್ತ್ರಿಯವರ 'ಯೇಗ್ದಾಗೆ ಎಲ್ಲಾ ಐತೆಯ'ಮುಕುಂದೂರು ಸ್ವಾಮಿಗಳು ನೆನಪಿಗೆ ಬಂದರು.ಧನ್ಯವಾದಗಳು.

    ReplyDelete
  9. ದಿ| ಕಣ್ಣೀಮನೆ ಶಾಸ್ತ್ರಿಗಳ ಯಾವುದೇ ಛಾಯಾಚಿತ್ರ ಇದುವರೆಗೆ ಸಿಗಲಿಲ್ಲ, ಹೀಗಾಗಿ ಕಥೆಗೆ ಪೂರಕವಾಗಿಯೂ, ಅವರ ಆಕಾರವನ್ನು ನೆನಪಿಸಿಕೊಳ್ಳಲೂ ಬೇಕಾಗಿ ಚಾಣಕ್ಯನ ಚಿತ್ರವನ್ನು ಬಳಸಿದೆನೇ ಹೊರತು ಇದರಲ್ಲಿ ಯಾರನ್ನೂ ಆಕರ್ಷಿಸುವ ತಂತ್ರವಲ್ಲ, ತಮಗೆಲ್ಲ ಹೇಳಬೇಕಾದ ಇನ್ನೊಂದು ವಿಷಯವೆಂದರೆ ನನ್ನಜ್ಜನವರ ವಿಷಯ ಅನಿವಾರ್ಯವಾಗಿ ನನ್ನಿಂದ ಬರೆಸಲ್ಪಟ್ಟಿತು--ಇದಕ್ಕೆ ಕಾರಣ ಆವರ ಋಣ, ಅವರು ಆ ಕಾಲಕ್ಕೆ ಕೊಟ್ಟ ಜ್ಞಾನ, ವಿದ್ಯೆ, ಪ್ರೋತ್ಸಾಹ. ಇವತ್ತಿಗೆ ನಾನು ಬರೆಯಲು ಸಾಧ್ಯವಾದರೆ ಅದು ಮೂಲ ಅವರ ಕೃಪೆ ಮಾತ್ರ. ಅವರು ೮೮ ವರ್ಷಗಳ ತುಂಬು ಜೀವನ ನಡೆಸಿ ಯಾರಿಂದಲೂ ತನ್ನ ಕೆಲಸವನ್ನು ಮಾಡಿಸಿಕೊಳ್ಳದೇ ಮೊನ್ನೆ ೨೦೦೪ ರಲ್ಲಿ ಪರಮಾತ್ಮನಲ್ಲಿ ಲೀನವಾದರು. ಬದುಕಿನಲ್ಲಿ ಒಬ್ಬ ಮನುಷ್ಯನಿಗೆ ಯಾವೆಲ್ಲಾ ಕಷ್ಟಗಳು ಸಿಗಬೇಕು ಅದನ್ನೆಲ್ಲಾ ಬಹುತೇಕ ಅನುಭವಿಸಿ ಅರಿತಿದ್ದ ಅವರು, ಬದುಕಿನಲ್ಲಿ ಹಲವು ಜನರಿಗೆ ಸಹಾಯ ಮಾಡಿದ್ದ ಅವರು ನನಗೆ ಸದಾ ಪ್ರಾತಃಸ್ಮರಣೀಯ. ಹೀಗಾಗಿ ಚಿತ್ರ ಹಾಗೂ ಲೇಖನದ ಬಗ್ಗೆ ಸಬಂಧ ಇಲ್ಲವೆಂದು ತಮಗೆಲ್ಲ ಏನಾದರೂ ಆಭಾಸವಾಗಿದ್ದರೆ ಕ್ಷಮೆಯಿರಲಿ.

    ಚಾಣಕ್ಯ ಕೂಡ ತನಗಾಗಿ ಗಂಟು ಕಟ್ಟಿ ಇಡಲಿಲ್ಲ. ಅವರು ರಾಜಗುರುವಾಗಿ ನಮ್ಮ ಭಾರತವೇನು ಇಡೀ ಜಗತ್ತೇ ನಿಬ್ಬೆರಗಾಗಿ ಬಳಸುವಂತಹ 'ಅರ್ಥ ಶಾಸ್ತ್ರ ' ಹಾಗೂ 'ನೀತಿಶಾಸ್ತ್ರ' ಗಳನ್ನು ಬರೆದರು. ಬದುಕಿನಲ್ಲಿ ಚಾಣಕ್ಯರಿಗೂ ಜಟಿಲ ಸಮಸ್ಯೆಗಳು ಎದುರಾದಾಗ ಅದನ್ನು ಎದುರಿಸಿ ಗೆಲ್ಲುವುದು ಹೇಗೆ ಎಂಬುದನ್ನು ತನ್ನ ಯೋಗಬಲದಿಂದಲೇ ನಿಭಾಯಿಸಿದವರೂ, ಮಾರ್ಗದರ್ಶಕ ಕೃತಿಗಳನ್ನು ಬರೆದವರೂ ಆಗಿದ್ದಾರೆ. ಹಲವು ರೀತಿಯಲ್ಲಿ ನನಗೆ ಈ ಕಥೆಗೂ ಚಾಣಕ್ಯರಿಗೂ ಸಾಮ್ಯತೆ ಕಂಡಿದ್ದರಿಂದ [ಇಲ್ಲಿ ನನ್ನಜನವರ ಕೆಲವು ವೈಯಕ್ತಿಕ ಸಾಧನೆಗಳನ್ನು,ಸಹಕಾರವನ್ನು ಹೇಳುವುದು ಬೇಡ-ಅದು 'ಸ್ವಜನ ಶ್ಲಾಘನೆ' ಅಂತ ತಿಳಿದರೆ ಕಷ್ಟ ಅನ್ನಿಸಿ ಹೇಳಿಲ್ಲ] ಹಾಗೆ ಚಿತ್ರ ಹಾಕಿದ್ದು. ಇಲ್ಲಿ ದಿ| ಶ್ರೀ ಕಣ್ಣೀಮನೆ ಶಾಸ್ತ್ರಿಗಳನ್ನು ತಮಗೆ ಪರಿಚಯಿಸಬೇಕೆಂಬುದೇ ಮೂಲ ಉದ್ದೇಶವೇ ಹೊರತು ನಮ್ಮನೆಯ ಕಥೆ ಹೇಳುವಿಕೆಯಲ್ಲ.
    ನಿಮ್ಮೆಲ್ಲರ ಓದಿಗೆ ಆಭಾರಿ.

    * ಶ್ರೀ ದಿಲೀಪ್ ಹೆಗಡೆ, ತಮಗೆ ಭ್ರಮನಿರಸನವಾಯಿತೇ ? ಏನೂ ಇರಲಿ ಶಾಸ್ತ್ರಿಗಳಂತವರು ಇದ್ದರೆಂದು ತಿಳಿಯಿತಲ್ಲ, ನಮನಗಳು

    * ಶಶಿ ಮೇಡಂ , ತಮಗೂ ಅಂತೆಯೇ ಧನ್ಯವಾದಗಳು

    * ಶ್ರೀ ಅನಂತರಾಜ್, ಶಾಸ್ತ್ರಿಗಳನ್ನು ಇಷ್ಟಪಟ್ಟಿರಿ, ನಮಸ್ಕಾರ

    * ಶ್ರೀ ಸೀತಾರಾಮ್, ಬತ್ತಳಿಕೆಯಲ್ಲಿ ಬತ್ತದ ಸೆಲೆಯನ್ನು ದೇವರು ಅನುಗ್ರಹಿಸಿದ್ದಾನೆ, ಬೇರೆ ಬೇರೆ ರೀತಿಯದನ್ನು ಕೊಡುತ್ತೇನೆ, ಹಲವು ನೆನಕೆಗಳು

    * ಶ್ರೀ ವೆಂಕಟೇಶ್ ಹೆಗಡೆ, ಕೆಲವು ವಿಷಯಗಳು ಕಾದಂಬರಿಗೇ ಆಧಾರವಾಗಬಹುದು, ತಮ್ಮ ಅನಿಸಿಕೆಗೆ ಆಭಾರಿ.

    * ಶ್ಯಾಮಲ ಮೇಡಂ, ಚಿಕ್ಕವರಿದ್ದಾಗ ಕಥೆ ಕೇಳಿದ್ದಕ್ಕಿಂತ ಹೆಚ್ಚಾಗಿ ಅಂದಿನ ಅತಿರಂಜಿತವಲ್ಲದ, ಸ್ವಾರ್ಥರಹಿತ ಬದುಕು ಕಥೆಗಳನ್ನು ಬರೆಯಲು ಪ್ರೇರೇಪಿಸುತ್ತದೆ, ಇಂದಿನ ನಮ್ಮ ಪೀಳಿಗೆಗೆ ಕಥೆಗಳನ್ನೇನೋ ಹೇಳುತ್ತೇವೆ-ಆದ್ರೆ ಹೇಳುವ ಕಥೆಗಳು, ಹಾಡುಗಳೇ ಬೇರೆ ರೀತಿಯವು-ಹಲವು ಅನುಪಯುಕ್ತ,ಬರೇ ರಂಜಕ ಅಷ್ಟೇ, ಅಂದು ನೀತಿಯುಕ್ತ, ಬದುಕಿನ ಸೂತ್ರ ಮಿಳಿತ ಅನುಭವಜನ್ಯ ಕಥೆಗಳಾಗಿದ್ದವು, ತಮ್ಮ ಅನಿಸಿಕೆಗೆ ಆಭಾರಿ.

    * ಸುಗುಣ ಮೇಡಂ, ಇಷ್ಟವೋ ಕಷ್ಟವೋ ಅಂತೂ ಓದಿದ್ದೀರಿ, ಓದಿಸಿಕೊಂಡು ಹೋಗಿದೆ-ಇಷ್ಟವಾಗಿದೆ ಎಂದಿರಿ, ಧನ್ಯವಾದಗಳು

    * ಶ್ರೀ ಕೃಷ್ಣಮೂರ್ತಿ, ತಮ್ಮ ಹೇಳಿಕೆ ಸರಿಯಾಗಿದೆ, ಅಲ್ಲಿಯೂ ಸ್ವಲ್ಪ ಕಥೆ ಹೀಗೇ ಇತ್ತು, ನಮಸ್ಕಾರಗಳು

    ReplyDelete
  10. ಅಯ್ಯೋ ಸರ್, ನನಗೂ ಯಾರಾದ್ರು ಹೀಗೆ ಕೇಳಿ ಕೇಳಿದ ಸಿಹಿ ತಿಂಡಿ ಕೊಡಿಸುವ ಹಾಗಿದ್ದಿದ್ದರೆ... :-)ಆಹಾ!! ...ಲೇಖನ ಇಷ್ಟ ಆಯ್ತು :-)

    ReplyDelete
  11. ನಿಮ್ಮಜ್ಜನವರು ಹೇಳಿದ ಕಣ್ಣಿಮನೆ ಶಾಸ್ತ್ರಿಗಳ ಕಥೆಯನ್ನು ಕಣ್ಣಿಗೆ ಕಟ್ಟುವ೦ತೆ ಬಣ್ಣಿಸಿದ್ದೀರಿ. ಅ೦ತಹ ಅವಧೂತರು ಈಗ ಇಲ್ಲ ಬಿಡಿ. ಬಹಳ ರೋಚಕ ವಾಗಿದೆ ಬರಹ.

    ReplyDelete
  12. ಭ್ರಮನಿರಸನ ಆಯಿತೆಂದು ಹೇಳಲಿಲ್ಲ ವಿ.ಆರ್. ಭಟ್ ಸರ್..
    ಲೇಖನ ಓದಿ ಖುಷಿಯಾಯ್ತು..

    ReplyDelete
  13. ಭಟ್ಟರೆ,
    ಓರ್ವ ಅದ್ಭುತ ಜೀವಿಯ ಬದುಕನ್ನು ತೋರಿಸಿದ್ದೀರಿ. ಧನ್ಯವಾದಗಳು.

    ReplyDelete
  14. * ದಿವ್ಯಾ ಮೇಡಂ, ಇವತ್ತು ಅವರೇನಾದರೂ ಇದ್ದರೆ ಕೋಪದಲ್ಲಿ ಎಲ್ಲ ಬಿಸಾಕಿ ಹಿಮಾಲಯಕ್ಕೆ ಹೋಗುತ್ತಿದ್ದರೇನೋ, ಅವರದ್ದು ನೇರ ನಡೆನುಡಿಯಾಗಿತ್ತಂತೆ, ಕಂಡಿದ್ದನ್ನು ಖಂಡ-ತುಂಡವಾಗಿ ಹೇಳುವುದು-ಮಾಡುವುದು, ಹೀಗಾಗಿ ಬಹಳ ಜನ [ ಹೀನ ಕೃತ್ಯಗಳಲ್ಲಿ, ಡಂಬಾಚಾರದಲ್ಲಿ ತೊಡಗಿರುವವರು ] ಅವರ ಮುಂದೆ ಬರುತ್ತಿರಲಿಲ್ಲವಂತೆ, ಕೇವಲ ಸತ್ಯನಿಷ್ಠ ಮತ್ತು ಶ್ರಮಜೀವಿಗಳನ್ನು ಅವರು ಇಷ್ಟಪಡುತ್ತಿದ್ದರಂತೆ, ತಮಗೆ ನಮನ.

    * ಶ್ರೀ ಪರಾಂಜಪೆ, ತಾವು ಹೇಳಿದ್ದು ಹೌದು, ಇವತ್ತು ಈ ಥರದ ಅವಧೂತರು ಬಹಳ ಅಪರೂಪ, ಧನ್ಯವಾದಗಳು.

    * ಶ್ರೀ ದಿಲೀಪ್ , ನನ್ನ ತಪ್ಪು ಗ್ರಹಿಕೆಯಿಂದ ತಮಗೆ ನೋವಾಗಿದ್ದರೆ ಕ್ಷಮಿಸಿ, ತಮಗೆ ಹಲವು ನೆನಕೆಗಳು

    * ಶ್ರೀ ಸುಧೀಂಧ್ರ ದೇಶಪಾಂಡೆ, ಮಹಾತ್ಮನೊಬ್ಬನ ಕಥೆ ತೀರಾ ಪರಿಪೂರ್ಣವಾಗಿಲ್ಲ, ಯಾಕೆಂದರೆ ಅವರ ಹುಟ್ಟು--ಅವರು ಬಳಸಿದ ಸಾಮಾನುಗಳು, ಬದುಕಿದ ಪ್ರದೇಶ ಇವೆಲ್ಲಾ ಮಾಹಿತಿ ಸಂಪೂರ್ಣ ಹೇಳಲು ನನ್ನ ಅಜ್ಜ ಇವತ್ತಿಲ್ಲ, ಬಹುಶಃ ಅವರ ಬಾಲ್ಯದ ಸಮಯವಾದ್ದರಿಂದ ಅವರಿಗೂ ಎಷ್ಟರಮಟ್ಟಿಗೆ ಗೊತ್ತಿತ್ತು ತಿಳಿದಿಲ್ಲ, ಅಜ್ಜ ಬದುಕಿದ್ದಾಗ ಪುರುಸೋತ್ತಾಗಲಿಲ್ಲ- ಈಗ ಬೇಕೆಂದರೆ ಅಜ್ಜ ಇಲ್ಲ, ಅಜ್ಜನ ಓರಗೆಯವ್ರೂ ಇಲ್ಲ, ಹೀಗಾಗಿ ಸಿಕ್ಕಷ್ಟು ಮಾಹಿತಿ ಕೊಟ್ಟೆ, ತಮ್ಮ ಅಭಿಪ್ರಾಯಕ್ಕೆ ಕೃತಜ್ಞನಾಗಿದ್ದೇನೆ.

    ReplyDelete
  15. ಭಟ್ಟರೇ,
    ನಮ್ಮ ದೊಡ್ದಪ್ಪನವರನ್ನು ನೆನಪುಮಾಡಿಬಿಟ್ಟಿರಿ. ಪುರಸೊತ್ತಾದಾಗ ಅವರಬಗ್ಗೆ ಬರೆಯುವೆ. ಅಬ್ಭಾ! ಹಿಂದಿನ ಜನರು ಅದ್ಭುತ!!

    ReplyDelete
  16. ಸ್ಪೂರ್ತಿ ತುಂಬುವಂತಹ ನಡೆ-ನುಡಿಗಳನ್ನು ಹಿಂದಿನವರಿಂದ ನಾವು ಕಲಿಯಲೇಬೇಕಿದೆ. ಹಿರಿಯರ ಬಗ್ಗೆ ಓದಿ ಬಹಳ ಆನಂದವಾಯಿತು.

    ReplyDelete
  17. Tumbaa sundara lekhana sir

    nimma blaag nalli haleya kathegalu odalu sikki hecchina jnaana needuttive

    ReplyDelete
  18. * ಶ್ರೀ ಶ್ರೀಧರ್, ತಮ್ಮ ಅನಿಸಿಕೆಗೆ ಆಭಾರಿ, ಇಂತಹ ಯಾವುದೇ ಮೌಲ್ಯಯುತ ಕಥೆಗಳನ್ನು ಮಾಲಿಕೆಗಳಲ್ಲಿ ಹಾಕಿ, ಧನ್ಯವಾದ

    * ಶ್ರೀ ಸುಬ್ರಹ್ಮಣ್ಯ, 'ಹಿರಿಯರು ಇಲ್ಲದ ಮನೆ ಗುರುವಿಲ್ಲದ ಮಠ' ಎನ್ನುವುದು ಗಾದೆ- ಈ ಗಾದೆಯ ಅನುಭವ ಸ್ವಲ್ಪ ವಿದ್ಯೆಯಿದ್ದರೂ ಅರಿವಿಗೆ ಬರುವಂಥದ್ದು ಅಲ್ಲವೇ ? ಹಿರಿಯರಿದ್ದರೆ ಅವರ ಪ್ರಭಾವ ಬೆಳೆಯುವ ಮಕ್ಕಳ ಮೇಲೆ ಸದಾ ಇರುತ್ತದೆ, ಜ್ಞಾನಿಗಳಾದ ಹಿರಿಯರಿದ್ದರೆ ಅದು ಬಲು ಸೊಗಸು, ತಮ್ಮ ಪ್ರತಿಕ್ರಿಯೆಗೆ ತುಂಬಾ ಆಭಾರಿ.

    * ಶ್ರೀ ಗುರುಮೂರ್ತಿ, ಹಳೆಯ ಕಥೆಗಳು ಇಂದಿಗೆ ಹಲವರಿಗೆ ರುಚಿಸುವುದಿಲ್ಲ, ಆದರೆ ನನ್ನ ಅಭಿಪ್ರಾಯ 'ಹಳೆಯ ಬೇರು ಹೊಸ ಚಿಗುರು ಕೂಡಿದರೆ ಬಲು ಸೊಗಸು' ಹಾಗಾಗಿ ಈ ಬ್ಲಾಗಿನಲ್ಲಿ ತಮಗೆ ಸಿಗುವ ಎಲ್ಲಾ ಕೃತಿಗಳ [ಅದು ಬೇಕಾದರೆ ಹಾಸ್ಯವೇ ಇರಲಿ, ಹರಟೆಯೇ ಇರಲಿ] ಹಿಂದೂ ಒಂದೊಂದು ಸಂದೇಶವಿದೆ! ತಮಗೆ ಅನಂತ ಅಭಿವಂದನೆಗಳು

    ReplyDelete
  19. ಚೆನ್ನಾಗಿದೆ..
    ಶಾಸ್ತ್ರಿಗಳು ಉತ್ತಮೋತ್ತಮರು ಎನಿಸುತ್ತದೆ..
    ಅಂತಹವರು ಮತ್ತೆ ಮತ್ತೆ ಹುಟ್ಟಲಿ..

    ReplyDelete