ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, August 29, 2012

ಅನನ್ಯ ಶರಣಾಗತಿ ಮತ್ತು ಅತ್ಯಂತ ಆಸಕ್ತ ವಿಷಯ ನಿಮ್ಮ ಆಯ್ಕೆಯಾಗಿರಲಿ

ಅಂತರ್ಜಾಲದ್ವಾರಾ ಲಭಿತ ಚಿತ್ರಋಣ: ಫೇಸ್ ಬುಕ್
ಅನನ್ಯ ಶರಣಾಗತಿ ಮತ್ತು ಅತ್ಯಂತ ಆಸಕ್ತ ವಿಷಯ ನಿಮ್ಮ ಆಯ್ಕೆಯಾಗಿರಲಿ

ರಾಮನಗರದ ಹತ್ತಿರವಿರುವ ದಿ| ನಾಗೇಗೌಡರ ಜಾನಪದ ಲೋಕದಲ್ಲಿ ಒಮ್ಮೆ ವಿಹರಿಸುತ್ತಿದ್ದೆ. ಜೀವನದಲ್ಲಿ ಅದುವರೆಗೆ ತಿಗರಿಯನ್ನಾಗಲೀ ಕುಂಬಾರನ ಕಲೆಯನ್ನಾಗಲೀ ನೇರವಾಗಿ ನೋಡಿರಲಿಲ್ಲ. ಹದವಾಗಿ ಕಲಸಿದ ಮಣ್ಣಿನ ಮುದ್ದೆಯನ್ನು ತಿರುಗುವ ತಿಗರಿಯಮೇಲಿಟ್ಟು, ಅದನ್ನು ವಿವಿಧ ಆಕಾರಗಳಿಗೆ ಮಾರ್ಪಾಟುಗೊಳಿಸುವುದು ಒಂದು ಕುಶಲಕಲೆ; ಕುಲಕಸುಬು. ಮಣ್ಣಿನ ಪಾತ್ರೆಗಳು, ಸಾಮಾನುಗಳು ಬಹುತೇಕ ಮರೆಯಾದ ಈ ಕಾಲದಲ್ಲಿ ಕುಂಬಾರರ ಜೀವನಪಥ ಕಷ್ಟದಲ್ಲಿ ಸಾಗಿದೆ ಎಂಬುದು ಸ್ಪಷ್ಟ. ನಮ್ಮ ಎಳವೆಯಲ್ಲಿ ಊರ ಜಾತ್ರೆಗಳಲ್ಲಿ ಮಣ್ಣಿನ ಪಾತ್ರೆಗಳನ್ನು ಕೊಂಬ ಸೊಬಗು ಆಕರ್ಷಣೆ ಬಹಳವಾಗಿತ್ತು; ಯಾಕೆಂದರೆ ಅದು ಅಜ್ಜಿಯ ಕಾಲ, ಅಜ್ಜಿಗೆ ಅವೇ ಬಹಳ ಇಷ್ಟದ ಸಂಗಾತಿಗಳಾಗಿದ್ದವು. ಮಣ್ಣಿನ ಪಾತ್ರೆಯಲ್ಲಿನ ಅಡಿಗೆ ಬಹಳ ರುಚಿಕಟ್ಟು ಎಂಬುದು ಇವತ್ತಿನ ಯುವ ಪೀಳಿಗೆಗೆ ತಿಳಿಹೇಳುವವರು ಯಾರೂ ಇಲ್ಲ. ಮಣ್ಣಿನ ಪಾತ್ರೆಗಳು ರಾಸಾಯನಿಕ ಕ್ರಿಯೆಗಳಿಗೆ ಸ್ಪಂದಿಸದಿರುವುದರಿಂದ ಮಾನವನ ಆರೋಗ್ಯಕ್ಕೆ ಅವು ಪೂರಕ ಎಂಬುದು ಅನೇಕರಿಗೆ ತಿಳಿದಿಲ್ಲ! ಇರಲಿ ನಾವು ಮುಖ್ಯ ಕಥಾನಕದತ್ತ ಸಾಗೋಣ: ಮಣ್ಣಿನಲ್ಲಿ ಮೂಡುವ ಈ ಕಲೆಯಲ್ಲಿ ಪರಿಣತಿ ಎಲ್ಲರಿಗೂ ಇರುವುದಿಲ್ಲ. ಅಂಬಿಗನೊಬ್ಬ ದೋಣಿ ನಡೆಸಿದಷ್ಟು ಸಲೀಸಾಗಿ, ಬಡಿಗ[ಆಚಾರಿ] ಒಬ್ಬ ಮರಗೆಲಸ ಮಾಡಿದಷ್ಟು ಉತ್ತಮವಾಗಿ, ಕಂಚುಗಾರನೊಬ್ಬ ಕಂಚು-ತಾಮ್ರದ ಪಾತ್ರೆಗಳನ್ನು ತಯಾರಿಸುವಷ್ಟು ನೈಪುಣ್ಯದಿಂದ, ಅಕ್ಕಸಾಲಿಗನೊಬ್ಬ ಬಂಗಾರದ ಆಭರಣಗಳನ್ನು ರೂಪಿಸಿದ ನಾಜೂಕುತನದಿಂದ, ಗುಡಿಗಾರನೊಬ್ಬ ಗೃಹಶೃಂಗಾರದ ಮರದ ಸಾಮಗ್ರಿಗಳನ್ನು  ತಯಾರಿಸುವ ಕುಶಲಕರ್ಮದಿಂದ ಆ ಯಾ ಕೆಲಸಗಳನ್ನು ಬೇರೇ ಯಾರೋ ಕಲಿತು ಮಾಡುವುದು ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ.

ಯಾವುದೇ ಕೆಲಸವನ್ನು ವೃತ್ತಿ ಎಂದು ಆಯ್ದುಕೊಳ್ಳುವ ಸುಲಭ ಸೂತ್ರವನ್ನು ಹೇಳುತ್ತಿದ್ದೇನೆ: ಪ್ರತೀ ವ್ಯಕ್ತಿಗೂ  ಐಚ್ಛಿಕ ವಿಷಯಗಳು ಹಲವು. ಇಷ್ಟದ ಎಲ್ಲಾ ವಿಷಯಗಳನ್ನೂ ಪಟ್ಟಿಮಾಡಬೇಕು. ಅಂತಹ ಇಷ್ಟದ ವಿಷಯಗಳಲ್ಲಿ ಒಂದು ಮಾತ್ರ ಅತ್ಯಂತ ಹೆಚ್ಚಿಗೆ ಇಷ್ಟವಾಗುವುದು ಇದ್ದೇ ಇರುತ್ತದೆ. ಆ ವಿಷಯಕ್ಕಾಗಿ ನಮ್ಮ ಮನ ಮಿಡಿಯುತ್ತದೆ. ಮನಸ್ಸು ಆ ಕೆಲಸಮಾಡುವುದಾದರೆ ಅದರಲ್ಲಿ ತಲ್ಲೀನವಾಗುತ್ತದೆ; ಆ ಕೆಲಸದಲ್ಲಿ ವ್ಯಕ್ತಿಗೆ ತಾದಾತ್ಮ್ಯತೆ ಇರುತ್ತದೆ. ಆ ಕೆಲಸವನ್ನು ಮಾಡುವಾಗ ಯಾವುದೇ ಬೇಸರ ಇರುವುದಿಲ್ಲ. ಅಲ್ಲಿ ಉಪಜೀವಿತಕ್ಕೆ ಸಾಕಾಗುವಷ್ಟು ಆದಾಯ ಬಂದರೆ ಸಾಕು ಎಂಬ ಭಾವನೆ ಇರುತ್ತದೆ. ಆ ಕೆಲಸ ಮಾಡುವುದರಿಂದ ಪ್ರತಿದಿನ ಮನಸ್ಸು ನಿರುಮ್ಮಳವೂ ಉಲ್ಲಸಭರಿತವೂ ಆಗಿರುತ್ತದೆ. ಯಾವ ವ್ಯಕ್ತಿ ತನಗೆ ಅತಿ ಇಷ್ಟವಾದ ಅಂತಹ ಕೆಲಸವನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲವೋ ಜೀವನಪರ್ಯಂತ ಆತ ಕೊರಗುತ್ತಲೇ ಇರುತ್ತಾನೆ; ತನ್ನಿಷ್ಟದ ಕೆಲಸದಲ್ಲಿ ತೊಡಗಿಕೊಂಡವನಿಗೆ ಸಂತೃಪ್ತ ಭಾವ ಸಿಗುತ್ತದೆ ಮತ್ತು ಆತ ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸುತ್ತಾನೆ!  ಅಧುನಿಕ ಯುಗದಲ್ಲಿ ಜನಿಸಿದ ನಾವು, ಮಾತಾ-ಪಿತೃಗಳ ಒತ್ತಾಸೆಗಾಗಿಯೋ ಸುತ್ತಲ ಬಂಧುಮಿತ್ರರ ಇಚ್ಛೆಯಂತೆಯೋ,  ಎಂಜಿನೀಯರಿಂಗ್ ಮತ್ತು ವೈದ್ಯಕೀಯ ರಂಗಗಳನ್ನು ಮಾತ್ರ ಬೆರಗುಗಣ್ಣುಗಳಿಂದ ನೋಡುತ್ತೇವೆ. ಅವೆರಡನ್ನು ಕಲಿತರೆ ಮಾತ್ರ ಜೀವನದಲ್ಲಿ ಹೇರಳವಾಗಿ ಗಳಿಸಿ ಹಾಯಾಗಿ ಬದುಕಬಹುದು ಎಂದುಕೊಳ್ಳುತ್ತೇವೆ. ವೈದ್ಯಕೀಯ ಶಿಕ್ಷಣ ಮುಗಿದಾವೇಳೆ ಸಮಾಜದ ಆರ್ತರ ಸೇವೆಗಾಗಿ ವಿದ್ಯೆಯನ್ನು ಬಳಸುತ್ತೇನೆ ಎಂದು ಔಪಚಾರಿಕವಾಗಿ/ಕೃತ್ರಿಮವಾಗಿ ದೀಪದಾಣೆಯಾಗಿ [ಅಗ್ನಿ ಸಾಕ್ಷಿಯಾಗಿ] ಪ್ರತಿಜ್ಞೆಗೈಯ್ಯುತ್ತೇವೆ; ಹೊರಗೆ ಬಂದಮೇಲೆ ಎಲ್ಲವನ್ನೂ ಮರೆತು ರೋಗಿಗಳ ಜೇಬಿಗೆ ಕತ್ತರಿ-ಕರ್ಮಣಿ ಪ್ರಯೋಗ ಮಾಡಲು ಆರಂಭಿಸಿಬಿಡುತ್ತೇವೆ; ದೊಡ್ಡ ದೊಡ್ಡ ಆಸ್ಪತ್ರೆ ತೆರೆಯುತ್ತೇವೆ-ಹೆಚ್ಚಿನ ಮೊತ್ತವನ್ನು ಪಾವತಿಸುವಂತೇ ರೋಗಿಗಳಲ್ಲಿ ಅವರ ವಾರಸುದಾರರಲ್ಲಿ ಕೇಳುತ್ತೇವೆ. ಹಾಗೆ ಮಾಡಬೇಕಾದುದು ನಮಗೆ ಅನಿವಾರ್ಯ ಯಾಕೆಂದರೆ ನಮ್ಮ ಓದಿನ ಸಲುವಾಗಿ ನಾವು ಸಾಲಮಾಡಿ ತೆತ್ತ ಹಣವನ್ನು ಮರಳಿ ಸಂಪಾದಿಸಬೇಕಲ್ಲಾ? 

ಒಲ್ಲದ ಮನಸ್ಸಿನಿಂದಲೇ ಅನೇಕ ಕೆಲಸಗಳನ್ನು ಮಾಡುವ ನಮಗೆ ಅಂತಹ ಕೆಲಸಗಳು ಯಶಸ್ಸು ನೀಡುವುದಿಲ್ಲ ಎಂಬ ಬಗ್ಗೆ ಚಿಂತೆಯೇ ಇರುವುದಿಲ್ಲ! ಓದಿಗಾಗಿ ಪಡೆದ ಸಾಲವನ್ನು ಮರಳಿಸುವ ಸಲುವಾಗಿ ಮೂಲಭೂತ ಸೇವಾಕ್ಷೇತ್ರದಲ್ಲಿ ತೊಡಗಿಕೊಳ್ಳುವುದು ಸಮಂಜಸವೇ? ನಾವು ಆ ಬಗ್ಗೆ ತೆಲೆಕೆಡಿಸಿಕೊಳ್ಳುವುದಿಲ್ಲ. ಆರ್ತರಿಗೆ ಆಪತ್ತಿನ ಕ್ಷಣದಲ್ಲಿ ಹಣಪಾವತಿ ಮಾಡದೇ ಇದ್ದಾಗಲೂ ಶುಶ್ರೂಷೆ ಮಾಡುವ ಯಾವುದಾದರೂ ಅಸ್ಪತ್ರೆ ಇದೆಯೇ? ಬಹಳ ಅಪರೂಪ. ದುಃಖಿಗಳ ಕಣ್ಣೀರಿನ್ನು ಒರೆಸಲಾಗದ ಸದ್ವಿದ್ಯೆ ಇದ್ದಾದರೂ ಪ್ರಯೋಜನವೇಕೆ? ಹುಟ್ಟಿದ ಪ್ರತೀ ವ್ಯಕ್ತಿಯೂ ತಂತ್ರಜ್ಞನೋ ವೈದ್ಯನೋ ಆಗಲು ಸಾಧ್ಯವಿಲ್ಲ. ಹೇಗೆ ಮಾನವ ರೂಪ ಮತ್ತು ಚಹರೆಗಳಲ್ಲಿ ವ್ಯತ್ಯಾಸಗಳಿವೆಯೋ ಹಾಗೆಯೇ ವೃತ್ತಿ ಸಂಬಂಧೀ ನೈಪುಣ್ಯದಲ್ಲೂ ವ್ಯತ್ಯಾಸಗಳಿವೆ. ಯಾರಿಗೆ ಯಾವುದು ಅತ್ಯಂತ ಇಷ್ಟವೋ ಅವರು ಅದನ್ನೇ ಮಾಡುವುದರಿಂದ ಅದರಲ್ಲಿ ಅವರಿಗೆ ಸಿದ್ಧಿ ದೊರೆಯುತ್ತದೆ; ಅವರ ಜೀವನ ಸುಗಮವಾಗಿ ನಡೆಯುತ್ತದೆ.

ನನ್ನನ್ನೇ ತೆಗೆದುಕೊಳ್ಳಿ: ಬರಹದಿಂದ ನಿಮ್ಮನ್ನು ಕರೆಯಬಲ್ಲೆ, ಕ್ಷಣಕಾಲ ನಿಮ್ಮನ್ನು ಓದಿನಲ್ಲಿ ಬಂಧಿಸಬಲ್ಲೆನೆಂಬ ಆತ್ಮವಿಶ್ವಾಸ ನನ್ನಲ್ಲಿದೆ. ಈ ವಿಷಯಕವಾಗಿ ಹಲವರು ದೂರವಾಣಿಯಲ್ಲಿ ಸಂಭಾಷಿಸಿದ್ದಾರೆ, ಮೌಖಿಕವಾಗಿ ಹೇಳಿಕೆ ನೀಡಿದ್ದಾರೆ. "ನಿಮ್ಮ ಬರಹಗಳಲ್ಲಿ ಒಂಥರಾ ಮ್ಯಾಗ್ನೆಟಿಸಮ್ ಇದೆ " ಎಂದವರೂ ಇದ್ದಾರೆ. ಪದಗಳೆಂಬ ಹೂಗಳನ್ನು ಶ್ರದ್ಧೆಯಿಂದ ಆಯ್ದು ಮನವೆಂಬ ದಾರ-ಬುದ್ಧಿಯೆಂಬ ಸೂಜಿ ಬಳಸಿ ಪೋಣಿಸಿದ ಬರಹಗಳೆಂಬ ಹಾರಗಳನ್ನು ನಿಮ್ಮೆಲ್ಲರಲ್ಲೂ ಇರುವ ಭಗವಂತನ ಪ್ರತಿಮೆಗಳಿಗೆ ಅರ್ಪಿಸುವುದೇ ನನ್ನ ತಾದಾತ್ಮ್ಯತೆ ಇರುವ ಕೆಲಸವಾಗಿದೆ; ನನಗಿದೇ ವೃತ್ತಿಯಾಗಿದೆ. ಬರಹಗಳು ಚೆನ್ನಾಗಿವೆ ಎಂದಾಕ್ಷಣ ನಾನು ಹಿಗ್ಗುವುದಿಲ್ಲ, ಚೆನಾಗಿಲ್ಲವೆಂದರೆ ಕುಗ್ಗುವುದೂ ಇಲ್ಲ. ಚೆನ್ನಾಗಿಯೇ ಬರೆಯಬೇಕೆಂಬುದು ನನ್ನ ನಿತ್ಯದ ಅಪೇಕ್ಷೆ. ಅದಕ್ಕಾಗಿ ಜಗವನ್ನೇ ನಿತ್ಯನೂತನವನ್ನಾಗಿ ಕಾಣುತ್ತಾ ಬರೆಯುವುದು ನನ್ನ ಅಭ್ಯಾಸ. ಬರೆಯುತ್ತಿದ್ದರೆ ನನಗೆ ಇನ್ನೇನೂ ಬೇಡ, ನನ್ನ ಬರಹಗಳು ನಾಕು ಜನರಿಗೆ ತಲ್ಪಿ ಅದರಿಂದ ಕೆಲವರಿಗಾದರೂ ಏನಾದರೂ ಪ್ರಯೋಜನವಾದರೆ ಅಲ್ಲಿಗೆ ನನ್ನ ಕಾರ್ಯಸಿದ್ಧಿಯಾದಂತೆನಿಸುತ್ತದೆ. ಬರವಣಿಗೆ ಓಘವನ್ನು ನೋಡಿ ಕೆಲವರು " ನೀವೇ ಎದುರುನಿಂತು ಮಾತನಾಡಿದ ಹಾಗೇ ಇರುತ್ತದೆ" ಎನ್ನುತ್ತಾರೆ. ಅದು ನನಗೂ ಗೊತ್ತು. ಅದು ಭಗವಂತ ನನಗಿತ್ತ ವರ! ನನ್ನ ಮಾತಿಗಾಗಿ ಕಾದವರಿದ್ದಾರೆ; ನನ್ನನ್ನು ಭಾಷಣಕ್ಕೆ ಆಹ್ವಾನಿಸಿದವರಿದ್ದಾರೆ. ವೃತ್ತಿನಿರತ ಮಾನವ ಸಂಪನ್ಮೂಲ ತರಬೇತುದಾರ ನಾನಾದುದರಿಂದ ನನ್ನ ಸಮಯಮಿತಿಯನ್ನು ಅರಿತುಕೊಂಡು ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ. ಜನರ ಮತ್ತು ಮಾಧ್ಯಮಗಳ ನಡುವಿನ, ಜನರ ಮತ್ತು ಅನೇಕ ಸಂಘ-ಸಂಸ್ಥೆಗಳ ನಡುವಿನ, ಜನರ ಮತ್ತು ವಾಣಿಜ್ಯ ವ್ಯವಹಾರ ನಿರತ ಉದ್ದಿಮೆದಾರರ ನಡುವಿನ ಕೊಂಡಿಯಾಗಿ ನಾನು ಕೆಲಸಮಾಡುತ್ತಿದ್ದೇನೆ. ವಿದ್ಯೆಯಲ್ಲೂ  ಭಾಗಶಃ ವೃತ್ತಿಯಲ್ಲೂ ಗಣಕತಂತ್ರಜ್ಞ ಕೂಡಾ ಆಗಿದ್ದೇನೆ. ನನ್ನ ಬಗ್ಗೆ ನೀವು ಕೇಳಿದರೆ ನಾನು ಹೇಳುವುದಿಷ್ಟೇ:

ವಿಶ್ವಾಮಿತ್ರ ದೇವರಾತ ಔದಲೇತಿ ತ್ರಯಾ ಋಷಯಃ ಪ್ರವರಾನ್ವಿತ
ವಿಶ್ವಾಮಿತ್ರ ಗೋತ್ರೋತ್ಫನ್ನ ವಿಷ್ಣುಶರ್ಮಣಃ 
ಅಹಂ ಅಸ್ಮಿ ಅಹಂ ಭೋ ಅಭಿವಾದಯೇ |

ಆರ್ಷೇಯ ಋಷಿ ಸಂಸ್ಕೃತಿಯನ್ನು ಆರಾಧಿಸುವ ನನಗೆ ನನ್ನ ಹಿರಿಯರು ಸರಿಯಾದ ಮಾರ್ಗವನ್ನು ತೋರಿಸಿದ್ದಾರೆ. ಬಾಲ್ಯದಿಂದಲೇ ನನ್ನನ್ನು ಉತ್ತಮ ಸಂಸ್ಕಾರಗಳನ್ನಿತ್ತು ಬೆಳೆಸಿದರು. ಆ ಸಂಸ್ಕಾರಗಳೇ ನನಗೆ ಹಲವು ಬಗೆಯ ಉತ್ತಮ ಹೊತ್ತಗೆಗಳನ್ನು ಓದಲು ಕಾರಣಗಳಾದವು. ನಾನೇನೂ ಮಾಡಲಾಗದಿದ್ದರೂ ನನ್ನ ಬರಹಗಳಿಂದ ಅನೇಕ ಜಡಜೀವಗಳಲ್ಲಿ ಚೈತನ್ಯ ಉಕ್ಕಿ ಹರಿವಂತೇ ಮಾಡಬಲ್ಲೆನೆಂಬ ವಿಶ್ವಾಸ ನನ್ನಲ್ಲಿದೆ. ಇದು ಅಹಂಕಾರವಲ್ಲ, ಇದು ದುರಭಿಮಾನವಲ್ಲ, ಇದು ಭಗವಂತನಲ್ಲಿ ನಾನಿಟ್ಟ ಶ್ರದ್ಧೆಯ ರೂಪ. ಭಗವಂತ ನನ್ನನ್ನೆಂದೂ ವಿಚಲಿತನಾಗುವಂತೇ ಮಾಡಲಿಲ್ಲ. ನನ್ನ ಕಾರ್ಯಗಳಲ್ಲಿ ನಾನು ಹೆಜ್ಜೆ ಹಿಂದಿಟ್ಟ ದಿನಗಳಿಲ್ಲ. ಹಣದ ಹಿಂಬಾಲಕನಾಗಿ ನಾನು ಹೊರಡಲಿಲ್ಲ. ವೃತ್ತಿ ಮತ್ತು ಪ್ರವೃತ್ತಿಗಳೊಂದಾಗಿ, ದೇಹದಲ್ಲಿ ದೇವನ ಅನುಸಂಧಾನ ನಿರಂತರವಾಗಿ, ಜೀವ ಬರವಣಿಗೆ-ಭಾಷಣಗಳಿಗೆ ಮುಂದಾಗಿ ಅದರಿಂದ ಪಡೆಯುವ ಪ್ರಯೋಜನವನ್ನು ಕಂಡ ಜನ ತಾವಾಗೇ ಹಣ ನೀಡಿದ್ದಾರೆ. ಅವರಿಷ್ಟದ ರೀತಿಯಲ್ಲಿ ಅವರ ಪ್ರೀತಿಯಲ್ಲಿ ಅವರು ಕೊಟ್ಟಿದ್ದನ್ನು ಸ್ವೀಕರಿಸಿದ್ದೇನೆ. ಬರಹಗಳು ಪುಸ್ತಕಗಳ ರೂಪಧರಿಸಿ ಬರುವ ಕಾಲ ಹತ್ತಿರವಾಗುತ್ತಿದೆ. ಜನಮಾನಸದಲ್ಲಿ ಬರಹಗಳಿಗೆ ಮೆಚ್ಚುಗೆ ದೊರೆತರೆ ಅದು ನನ್ನ ಸೌಭಾಗ್ಯವೆನಿಸುತ್ತದೆ.

ಪತ್ರಿಕೆಗಳಲ್ಲಿ, ಮಾಧ್ಯಮ ವಾಹಿನಿಗಳಲ್ಲಿ, ಯೂಟ್ಯೂಬ್ ನಲ್ಲಿ ನಿಕೋಲಾಸ್ ವುಜಿಸಿಕ್ [Nick Vujicic]ಬಗ್ಗೆ ನೀವು ತಿಳಿದಿದ್ದೀರಿ. ನಿಕ್ ಗೆ ಕೈ-ಕಾಲ್ಗಳಿಲ್ಲ. ಕೇವಲ ಮಧ್ಯ ಶರೀರ ಮತ್ತು ತಲೆ ಮಾತ್ರ. ಮೆದುಳು ಅದ್ಭುತವಾಗಿದೆ!  ನಿಕೋಲಾಸ್ ಎಂಬ ಅಂಗಹೀನ ಮಗು ಹುಟ್ಟಿದಾಗ ಆತನ ತಂದೆ-ತಾಯಿಗಳಿಗೆ ಆದ ನೋವು ನಮಗೆ ವಿದಿತವಲ್ಲ. ಎಳವೆಯಿಂದಲೇ ನಿಕೋಲಾಸ್ ಆ ಬಗ್ಗೆ ಪರಿತಾಪ ಪಡದಂತೇ ಬೆಳೆಸಿದವರು ಅವರ ತಂದೆ-ತಾಯಿಗಳು. ಆದರೂ ಒಳಗೊಳಗೇ ಅವರಿಗೆ ಅಳುಕು. ಭಾರತದಲ್ಲಿ ಅಂತಹ ಮಗು ಜನಿಸಿದರೆ ಇಂದಿನ ತಂದೆ-ತಾಯಿಗಳು ಅಂತಹ ಮಗುವಿಗೆ ದಯಾಮರಣ ಕೊಡಿಸಲೂ ಬಹುದು! ನಿಕ್ ಕೂಡ ಎಲ್ಲರಂತೇ ಸಹಜವಾಗಿ ಬೆಳೆಯಬೇಕೆಂಬ ಹಂಬಲ ಅವನ ಮಾತಾ-ಪಿತೃಗಳದ್ದು. ಬಾಲ್ಯದಲ್ಲಿ ಕೃತಕವಾಗಿ ಜೋಡಿಸಿದ ಬಹುಭಾರದ ಕೈಗಳನ್ನು ನಿಕ್ ಕಿತ್ತೆಸೆದ, ನಂತರ ಲಯನ್ಸ್ ಕ್ಲಬ್ ದೊರಕಿಸಿಕೊಟ್ಟ ಇಲೆಕ್ಟ್ರಾನಿಕ್ ತಂತ್ರಾಂಶ ಮಿಳಿತವಾದ ಹಗುರವಾದ ಕೃತಕ ಕೈಗಳೂ ಆತನಿಗೆ ಹಿಡಿಸಲಿಲ್ಲ! ಅಂಗವೈಕಲ್ಯದ ಮಕ್ಕಳು ಓದುವ ಶಾಲೆಗೆ ಸೇರಿಸಿದರೆ ನಿಕ್ ಅಲ್ಲಿಂದ ವಾಪಸು ಬಂದುಬಿಟ್ಟ; ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ಓದುವ ಶಾಲೆಯಲ್ಲೇ ಓದು ಮುಗಿಸಿದ. ನಿಕ್ ಡಬಲ್ ಗ್ರಾಜುಏಟ್ ಆದ.[ಎರಡು ಪದವಿಗಳಧರನಾದ]. ನಿಕ್ ನ ಶೋಚನೀಯ ದೈಹಿಕ ಸ್ಥಿತಿ ಹಲವರನ್ನು ಕಂಗೆಡಿಸಿತ್ತು; ಆದರೆ ನಿಕ್ ಕಂಗೆಡುವಂಥಾ ಸಣ್ಣ ಮನುಷ್ಯನಾಗಿರಲಿಲ್ಲ. ಬದುಕುವ, ಬೆಳೆಯುವ ಮತ್ತು ತನ್ನಲ್ಲಿರುವ ವೈಕಲ್ಯವನ್ನು ಮೀರಿ ಅಸಾಧ್ಯವಾದುದನ್ನು ಸಾಧಿಸುವ ಛಲ ನಿಕ್ ನಲ್ಲಿತ್ತು! ಹಾಗಂತ ನಿಶ್ಚೇಷ್ಟಿತನಾದ ದಿನಗಳು ಇರಲಿಲ್ಲವೆಂದಲ್ಲ; ಆದರೆ ಆ ನಿಶ್ಚೇಷ್ಟಿತ ಮನದ ಮಜಲು ಬಹಳಕಾಲ ಆತನನ್ನು ಅಲ್ಲೇ ಬಂಧಿಸಲಿಲ್ಲ. ಈ ಲೋಕದಲ್ಲಿ ನಿರ್ದಿಷ್ಟ ಕರ್ತವ್ಯಕ್ಕಾಗಿ ತನ್ನನ್ನು ದೇವರು ಕಳಿಸಿದ್ದಾನೆ ಎಂಬ ಧೋರಣೆ ನಿಕ್ ನಲ್ಲಿದೆ.  

ನಿಕ್ ತನಗೆ ಅಂಗವಿಕಲರಿಗೆ ನೀಡುವ ಸಕಲ ಸೌಲಭ್ಯಗಳನ್ನಾಗಲೀ ಸೌಕರ್ಯಗಳನ್ನಾಗಲೀ ಕೊಡಿ ಎಂದು ಸರಕಾರದಲ್ಲಿ ಕೇಳಲಿಲ್ಲ. ತಾನು ಅಂಗವಿಕಲ ಎಂದು ಹೇಳಿಕೊಳ್ಳುವುದೇ ಇಲ್ಲ. ತನ್ನಲ್ಲೇನೋ ಅದ್ಭುತ ಚೈತನ್ಯವಿದೆ ಎಂಬುದನ್ನು ನಿಕ್ ಅರಿತಿದ್ದ. ಮೇಲಾಗಿ ಸೃಷ್ಟಿಕರ್ತನ ಮೇಲೆ ದೋಷಾರೋಪಣೆ ಮಾಡುವ ಬದಲು ಬದುಕೇ ವಿಶಿಷ್ಟ ಎಂದು ಸ್ವೀಕರಿಸಿಬಿಟ್ಟ!  ಭೋರ್ಗರೆಯುವ ಸಮುದ್ರದಲ್ಲಿ ಸರ್ವಾಂಗ ಸುಂದರ ಈಜುಗಾರರೂ ಸಾಹಸನಡೆಸಲು ಹಿಮ್ಮೆಟ್ಟುವ ಕೆಲಸ ’ಸರ್ಫಿಂಗ್’. ಕೈಕಾಲುಗಳೇ ಅಲ್ಲಿ ಬ್ಯಾಲೆನ್ಸಿಂಗ್ ನಡೆಸಬೇಕಾಗುತ್ತದೆ. ಅಂತಹ ಅಂಗಗಳೇ ಇಲ್ಲದ ನಿಕ್ ಸರ್ಫಿಂಗ್ ಮಾಡಿದ್ದು ಈಗ ದಾಖಲೆಯಾಗಿದೆ. ಸರ್ಫಿಂಗ್ ಬೋರ್ಡಿಗೆ ಕಟ್ಟಿದ ಬಟ್ಟೆಯಮೇಲೆ ತನ್ನ ತಲೆಯನ್ನೊತ್ತಿ ಎದ್ದುನಿಂತ ನಿಕ್ ೬ ಸರ್ತಿ ಮಗುಚಿ ಬಿದ್ದರೂ ತನ್ನ ಛಲ ಬಿಡಲಿಲ್ಲ; ೭ನೇ ಸರ್ತಿ ಗೆದ್ದೇಗೆದ್ದ, ಆ ನಂತರ ಅನೇಕಬಾರಿ ಸರ್ಫಿಂಗ್ ನಡೆಸಿದ. ಸುತ್ತನಿಂತ ಜನ ವೀಡಿಯೋ ತೆಗೆದು ನಿಕ್ ಬಿದ್ದುಬಿಟ್ಟ ಎಂದಷ್ಟೇ ಯೂಟ್ಯೂಬ್ ನಲ್ಲಿ ತೋರಿಸಬಾರದು, ನಿಕ್ ಸರ್ಫಿಂಗ್ ಮಾಡಿ ಗೆದ್ದ ಎಂಬುದನ್ನು ತೋರಿಸಲೇ ಬೇಕು ಎಂಬುದು ಆತನ ಮನದಿಚ್ಛೆಯಾಗಿತ್ತು; ಅಂತೂ ನಿಕ್ ಗೆದ್ದುಬಿಟ್ಟ!     

ಅತಿಯಾದ ಪರಾವಲಂಬನೆ ಆತನಿಗೆ ಹಿಡಿಸುವುದಿಲ್ಲ. ಯಾರೋ ತನಗಾಗಿ ಬಾಗಿಲು ತೆರೆದರೆ, ತನಗೆ ಗ್ಲಾಸಿನಲ್ಲಿ ನೀರು ಕುಡಿಸಿದರೆ, ತನ್ನನ್ನೆತ್ತಿ ವಾಹನಗಳಲ್ಲಿ ಕರೆದೊಯ್ದರೆ ಆತ ಕೃತಜ್ಞನಾಗುತ್ತಾನೆ. ಎಡ ಪಾದದ ರೀತಿಯ ಒಂದೇ ಅಂಗ ಸಶಕ್ತವಾಗಿದೆ ಎನ್ನುವ ನಿಕ್ ಅದನ್ನೇ ಪ್ರೊಪೆಲರ್ ಥರ ಬಳಸಿ ಈಜುವುದೇ ಮೋಜು ಎನ್ನುತ್ತಾನೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ತನ್ನ ಬದುಕುವಿಕೆಯ ಧನಾತ್ಮಕ ಸಂದೇಶವನ್ನು ಸಾರುತ್ತಾ ನಡೆಯುತ್ತಿರುವ ಆತ, ’ಲಿವಿಂಗ್ ವಿದೌಟ್ ಲಿಮಿಟ್ಸ್’ ಎಂಬ ಪುಸ್ತಕವನ್ನು ಬರೆದಿದ್ದಾನೆ. ಅಂಗವಿಕಲನಾದ ತನಗೆ ಜೀವನಸಂಗಾತಿ ದೊರೆಯುವುದು ಕಷ್ಟವಾದರೂ ಮನಸ್ಸಿನಿಂದ ಹುಡುಗಿಯೊಬ್ಬಳನ್ನು ಸಂಗಾತಿಯಾಗಿ ಪಡೆಯುತ್ತೇನೆಂಬ ಅನಿಸಿಕೆ ಆತನಿಗಿತ್ತು; ಅದು ಸಾರ್ಥಕವಾಗಿದೆ, ನಿಕ್ ಮದುವೆಯಾಗಿದ್ದಾನೆ. ತನ್ನ ವಂಶಾವಳಿ ಮುಂದುವರಿಯುವ ಬಗ್ಗೆ ಆತನಿಗೆ ಸಂದೇಹವಿಲ್ಲ. ನಿಕ್ ಹೆಂಡತಿ ಈಗ ಗರ್ಭವತಿಯಾಗಿದ್ದಾಳೆ. ನಿಕ್ ತನ್ನ ಮಗಳ ಮದುವೆಯ ಸಮಯ ಮತ್ತು ಅದರಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ನೆನೆದು ಹರ್ಷಪಡುತ್ತಾನೆ.

ಸರ್ವಾಂಗ ಸುಂದರರೇ ಹಿನ್ನಡೆ ಅನುಭವಿಸುವ ಈ ದಿನಗಳಲ್ಲಿ ಕೈಕಾಲುಗಳೇ ಇಲ್ಲದ ವ್ಯಕ್ತಿ ಜಗತ್ತಿನಾದ್ಯಂತ ತನ್ನ ಸಾಧನೆ ತೋರಿಸುತ್ತಿರುವುದು ಪದಗಳಲ್ಲಿ ಹೇಳಲಾಗದ ಮಹಿಮೆ! ಬಂದವರು ಮರಳಲೇ ಬೇಕು, ಬಂದುಹೋಗುವ ನಡುವಿನ ಕಾಲದ ಅಂತರವೇ ಜೀವನ. ಈ ಜೀವನದಲ್ಲಿ ಇಲ್ಲಿಗೆ ಬಂದುದಕ್ಕೆ ಏನನ್ನಾದರೂ ಸಾಧಿಸುತ್ತೇನೆ ಎಂಬ ಛಲವಿರಲೇಬೇಕು, ಅಚಲ ನಿರ್ಧಾರವಿರಬೇಕು ಮತ್ತು ನಮ್ಮ ನಿರ್ಧಾರಗಳನ್ನು ಸಾಧಾರಗೊಳಿಸಿಕೊಳ್ಳುವಲ್ಲಿ, ಸಾಫಲ್ಯತೆ ಪಡೆಯುವಲ್ಲಿ ಭಗವಂತನ ಅನುಗ್ರಹ ಬೇಕು.  ಜಗನ್ನಿಯಾಮಕ ಶಕ್ತಿಯಲ್ಲಿ ನಂಬಿಕೆ ಇದ್ದರೆ, ಅನನ್ಯ ಶರಣತೆ ಇದ್ದರೆ ಆ ಶಕ್ತಿ ನಮ್ಮ ಕೈಬಿಡುವುದಿಲ್ಲ.      

ಒಡಲ ಜಾಗಟೆ ಮಾಡಿ
ತುಡಿವ ನಾಲಿಗೆ ಪಿಡಿದು
ಬಿಡದೆ ಢಣ ಢಣರೆಂದು
ಬಡಿದು ಚಪ್ಪsರಿಸುತ

ಡಂಗುರವ ಸಾರಿ ಹರಿಯ
ಡಿಂಗರಿಗರೆಲ್ಲ ಕೂಡಿ ಭೂ
ಮಂಡಲಕೆ ಪಾಂಡುರಂಗ ವಿಠಲ ಪರದೈವವೆಂದು

--ಹೀಗೆ ದಾಸರು ಹೇಳಿದ್ದಾರೆ. ಹೊಟ್ಟೆಯನ್ನೇ ಜಾಗಟೆಮಾಡಿಕೊಂಡು, ನಾಲಿಗೆಯನ್ನು ಕೋಲುಮಾಡಿಕೊಂಡು, ಸದಾ ಢಣ ಢಣ ಢಣ ಎಂದು ಬಡಿದು ಇಡೀ ಈ ಭೂಮಂಡಲಕ್ಕೆ ಪಾಂಡುರಂಗನೇ ಪರದೈವ ಎಂದು ಡಂಗುರ ಹೊಡೆಯಿರಿ ಎನ್ನುತ್ತಾರೆ. ಇದರರ್ಥ ಪರಮಾತ್ಮ ಶಿವನೋ, ಕೇಶವನೋ, ಬುದ್ಧನೋ, ಕ್ರಿಸ್ತನೋ ಯಾವುದೇ ರೂಪದಲ್ಲೂ ಇರಬಹುದು-ಆತನನ್ನು ಮರೆಯಬೇಡಿ, ಆತನಿಂದಲೇ ಈ ಜಗತ್ತು ವಿನಃ  ಬೇರಾವುದೇ ಮಾನುಷ ಶಕ್ತಿ ಈ ಜಗತ್ತನ್ನು ಆಳುತ್ತಿಲ್ಲ. ತುಂಬಿದ ಸಭೆಯಲ್ಲಿ ದ್ರೌಪದಿಗೆ ಅಕ್ಷಯಾಂಬರ ನೀಡಿದವ, ಪಾಪಿ ಅಜಮಿಳಗೆ ಸ್ವರ್ಗವನ್ನು ಕರುಣಿಸಿದವ, ನೊಂದ ಗಜೇಂದ್ರನಿಗೆ ಮೋಕ್ಷವನ್ನು ಕರುಣಿಸಿದವ, ತರಳ ಪ್ರಹ್ಲಾದನ ಸರಳ ಭಕ್ತಿಗೆ ಒಲಿದವ, ಅಕ್ರೂರನ ಭಕ್ತಿಗೆ ಅನಾಯಾಸವಾಗಿ ಆತುಕೊಂಡವ, ವಿದುರನ ಬಿಂದು ಹಾಲುಂಡು ಹಾಲಿನ ಸಿಂಧುವನ್ನೇ ಹರಿಸಿದವ, ದಾನಶೂರ ಕರ್ಣನಿಗೆ ನಿಜರೂಪ ದರ್ಶಿಸಿದವ,  ಹೆಚ್ಚೇಕೆ ಬಲಿಯ ಭಾಗ್ಯಕ್ಕೆ ಆತನ ಬಾಗಿಲ ಕಾವಲುಗಾರನಾಗಿ ವರ್ಷಂಪ್ರತಿ ಮೂರುದಿನ ನಿಲ್ಲುವವ ಬಂದೇಬರುತ್ತಾನೆ ಎಂಬುದರಲ್ಲಿ ಸಂದೇಹವಿಲ್ಲ. ಮನದಲ್ಲಿ ಯಾವುದೇ ಕಪಟವನ್ನಿಟ್ಟುಕೊಳ್ಳದೇ ಮಾಡುವ ಕೆಲಸವನ್ನು ದೈವಾರ್ಪಣ ಭಾವದಿಂದ ಮಾಡಿದರೆ, ಅಂತಹ ಶುದ್ಧ ಮನಸ್ಕರಾಗಿ ನಮ್ಮ ವೃತ್ತಿಯನ್ನು ನಡೆಸಿದರೆ ಯಶಸ್ಸು ಸಿಕ್ಕೇ-ಸಿಗುತ್ತದೆ: ಅದಕ್ಕೆ ನಿಕ್ ಕೂಡ ಒಂದು ಉದಾಹರಣೆ. ಅಂತಹ ಯಶಸ್ಸು ಜೀವನದಲ್ಲಿ ಎಲ್ಲರಿಗೂ ದೊರಕಲಿ ಎನ್ನುವುದರೊಂದಿಗೆ ಶುಭಾಶಂಸನೆಗಳನ್ನು ಸಲ್ಲಿಸುತ್ತಿದ್ದೇನೆ. 


Tuesday, August 28, 2012

ಮಂತ್ರಕ್ಕೆ ಮಾವಿನಕಾಯಿಯನ್ನು ಉದುರಿಸುವ ಮತ್ತು ಲೋಕವನ್ನೂ ಅದುರಿಸುವ ತಾಕತ್ತಿದೆ ಎಂಬುದು ಸಾಬೀತಾಗಿದೆ!

ಚಿತ್ರಋಣ: ಅಂತರ್ಜಾಲ
ಮಂತ್ರಕ್ಕೆ ಮಾವಿನಕಾಯಿಯನ್ನು ಉದುರಿಸುವ ಮತ್ತು ಲೋಕವನ್ನೂ ಅದುರಿಸುವ ತಾಕತ್ತಿದೆ ಎಂಬುದು ಸಾಬೀತಾಗಿದೆ!

ಶಿರಸಿಯ ಒಂದು ಭಾಗಕ್ಕೆ ಕೊಡ್ಲಮನೆ ಭಟ್ಟರು ಹೋಗಿದ್ದರು. ಕರಾವಳಿಯ ಜನ ಉತ್ತರಕನ್ನಡದ ಶಿರಸಿ, ಸಿದ್ಧಾಪುರ,ಯಲ್ಲಾಪುರ ಮತ್ತು ಶಿವಮೊಗ್ಗದ ಸಾಗರ ಪ್ರಾಂತಗಳನ್ನು ’ಘಟ್ಟ’ ಎಂದೇ ಕರೆಯುತ್ತಾರೆ. ಶತಮಾನಕ್ಕೂ ಹಿಂದೆ ಇಲ್ಲಿಗೆ ಓಡಾಟವೇ ಒಂದು ಪ್ರಯಾಸ. ಹಳ್ಳಿಗಳಲ್ಲಿ ಟಾರು ರಸ್ತೆಗಳಿರಲಿಲ್ಲ; ದವಾಖಾನೆ, ಶಾಲೆಗಳೆಲ್ಲಾ ಬಹು ದೂರ.ನಿತ್ಯವೂ ಜನರು ನಡೆಯಲೇ ಬೇಕಿತ್ತು. ಅದು ಹತ್ತಾರು ಮೈಲಿಗಳ ನಡಿಗೆ. ಮನೆಯಲ್ಲಿ ಯಂತ್ರೋಪಕರಣಗಳು ಕಡಿಮೆ. ಹೆಂಗಸರಿಗೆ ಮನೆಗೆಲಸಗಳಲ್ಲಿ ಸಹಜವಾದ ಆಸಕ್ತಿ. ಅತಿಥಿ ಸತ್ಕಾರದಲ್ಲಿ ಮನೆಜನರೆಲ್ಲರಿಗೂ ಆಸಕ್ತಿ. ಜನ ತಮ್ಮಲ್ಲಿರುವುದರಲ್ಲೇ ತೃಪ್ತಭಾವವನ್ನು ಹೊಂದಿದ್ದರು. ಹೋಂಡಾ ಕಾರಿನ ಇಚ್ಛೆಗೆ ಬಲಿಯಾದವರಲ್ಲ, ಕೋಟಿಗಳಿಸುವ ಸನ್ನಾಹದಲ್ಲಿ ಧರ್ಮಮಾರ್ಗವನ್ನು ತೊರೆದವರಲ್ಲ. ಎಲ್ಲರಿಗೂ ಮಾಡುವ ಕೆಲಸಗಳಿಂದ ತಂತಾನೇ ವ್ಯಾಯಾಮ ಸಿಗುತ್ತಿತ್ತು; ಬೇರೇ ವ್ಯಾಯಾಮ ಬೇಕಾಗುತ್ತಿರಲಿಲ್ಲ. ಆಹಾರೋತ್ಫನ್ನಗಳಲ್ಲಿ ರಾಸಾಯನಿಕಗಳ ಸಮ್ಮಿಶ್ರಣವಿರಲಿಲ್ಲ, ಕಲಬೆರಕೆ ಇವತ್ತಿನ ಮಟ್ಟಕ್ಕೆ ಏರಿರಲಿಲ್ಲ. ಜನ ಅಕ್ಕಿ-ಬೇಳೆ ತರಕಾರಿಗಳನ್ನು ತಾವೇ ಬೆಳೆದುಕೊಳ್ಳುತ್ತಿದ್ದರು. ಇಂತಹ ಮುಗ್ಧ ಜನ ತುಂಬಿರುವ ಕಾಲದಲ್ಲೂ ಅಪರೂಪಕ್ಕೊಮ್ಮೆ ಮೈಲಿ, ಸಿಡುಬು, ಪ್ಲೇಗ್ ಮುಂತಾದ ರೋಗಗಳು ಬಂದುಬಿಡುತ್ತಿದ್ದವು. ಹಾಗೆ ಬಂದಾಗ ಊರಿನಲ್ಲಿ ಬಹುತೇಕ ಮಂದಿ ಹೋಗಿಬಿಡುವ ಸಾಧ್ಯತೆ ಕೂಡಾ ಇರುತ್ತಿತ್ತು. ಕೆಲವರು ತಮ್ಮ ವಿಶಿಷ್ಟ ಶಕ್ತಿಗಳಿಂದ ಕಾಯಿಲೆಗಳನ್ನು ಜೀರ್ಣಿಸಿಕೊಂಡು ಜಯಿಸುತ್ತಿದ್ದರು. ಅಂತಹ ಕೆಲವರಲ್ಲಿ ಹೊನ್ನಾವರ ತಾಲೂಕಿನ ಕೊಡ್ಲಮನೆ ಭಟ್ಟರೂ ಒಬ್ಬರು.  

ಪೌರೋಹಿತ್ಯಕ್ಕೋ ಸಂಭಾವನೆಗೋ[ನಮ್ಮಲ್ಲಿ ’ಸಂಭಾವನೆ’ ಎಂಬ ಪದ ದಾನಕ್ಕೆ ಬಳಸಲ್ಪಡುತ್ತದೆ.]ಘಟ್ಟಕ್ಕೆ ಕೆಲವರು ಹೋಗಿಬರುವ ವಾಡಿಕೆ ಇತ್ತು. ದೀಪಾವಳಿ ಮುಗಿಸಿ ತಮ್ಮ ಜೋಳಿಗೆ ಹಿಡಿದು ಹೊರಟರೆ ಮತ್ತೆ ಸ್ವಂತ ಊರಿಗೆ ಮರಳುವುದು ೨-೩ ತಿಂಗಳುಗಳ ನಂತರವೇ. ಒಮ್ಮೆ ಹೀಗೇ ಯಾವುದೋ ಪಾರಾಯಣಕ್ಕಾಗಿ ಘಟ್ಟಕ್ಕೆ ಹೋದ ಕೊಡ್ಲಮನೆ ಭಟ್ಟರು ಪರಿಚಿತರ ಮನೆಗಳಿಗೆ ಹೋಗುವ ತರಾತುರಿಯಲ್ಲಿ ನಡೆಯುತ್ತಾ ಮೊದಲಾಗಿ ಎದುರಾದ ಹೆಗಡೆಯವರ ಮೆನೆಗೆ ಹೋದರು. ಸಂಜೆಯ ಹೊತ್ತು. ಹೆಗಡೆಯವರ ಮನೆಯಲ್ಲಿ ಆದರಾತಿಥ್ಯಗಳು ಯಥಾಯೋಗ್ಯ ನಡೆದವು. ಉಭಯಕುಶಲೋಪರಿಗಳು ನಡೆದಮೇಲೆ ಸಾಯಂಕಾಲದ ಸಮಯವಾದ್ದರಿಂದ ನಡೆದು ದಣಿದಿದ್ದ ಭಟ್ಟರು ಸ್ವಲ್ಪ ವಿಶ್ರಮಿಸಿಕೊಳ್ಳುತ್ತಿದ್ದರು. ಹಾಗೆ ವಿಶ್ರಮಿಸುತ್ತಿರುವಾಗ ಭಟ್ಟರ ದೃಷ್ಟಿ ಮನೆಯವರ ಪಾದಗಳತ್ತ ಹರಿಯಿತು-ಭಟ್ಟರು ಕುಳಿತಲ್ಲೇ ಘಟ್ಟ ಇಳಿದುಹೋದಷ್ಟು ಬೆವತುಹೋದರು. ಎಲ್ಲರ ಪಾದಗಳೂ ತಿರುಗುಮುರುಗಾಗಿದ್ದು ಕಾಣಿಸುತ್ತಿತ್ತು! ಭಟ್ಟರಿಗೆ ಏನೋ ಸಂದೇಹ ಬಂದು ತಕ್ಷಣಕ್ಕೆ ಕಾಣುತ್ತಿದ್ದ ಆ ಜನರಿಗೇ ಹೇಳಿ ಕೈಕಾಲು ತೊಳೆದು, ಮಡಿಪಂಚೆ ತೊಟ್ಟು ಸಂಧ್ಯಾವಂದನೆಗೆ ಕುಳಿತುಬಿಟ್ಟರು. ಯಾವಾಗ ಭಟ್ಟರ ಮಂತ್ರೋಚ್ಚಾರಣೆ ಆರಂಭವಾಯ್ತೋ ಆಗ ಆ ಇಡೀ ಮನೆಯ ಬಳಗ ಭಟ್ಟರ ಸುತ್ತ ಸೇರಿ ಭಟ್ಟರಿಗೆ ಕಾಣದ ರೂಪದಲ್ಲಿ ಕಿರುಕುಳ ಆರಂಭಿಸಿತು.

ರಾತ್ರಿಯಾಗುತ್ತಾ ಬಂದಿತ್ತು. ಭಟ್ಟರು ಕುಳಿತಲ್ಲೇ ಗಡಗಡ ನಡುಗುತ್ತಿದ್ದರು. ವಿಶೇಷ ಮಂತ್ರಗಳ ಉಪಾಸನೆ ಗೊತ್ತಿದ್ದ ಭಟ್ಟರು ಇಷ್ಟದೈವವನ್ನು ಪ್ರಾರ್ಥಿಸಿ ’ಅಘೋರಾಸ್ತ್ರ  ಜಪ’ವನ್ನು ಆರಂಭಿಸಿಬಿಟ್ಟರು. ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಹೆಗಡೆಯವರ ಮನೆಯ ಅಷ್ಟೂ ಜನ ಅಳಲು ಪ್ರಾರಂಭಿಸಿದರು. ವಾಸ್ತವವಾಗಿ ಹೆಗಡೆಯವರ ಮನೆಯಲ್ಲಿ ಯಾರೂ ಜೀವಸಹಿತ ಉಳಿದಿರಲಿಲ್ಲ; ಎಲ್ಲರೂ ಮೈಲಿಗೆ ಬಲಿಯಾಗಿಬಿಟ್ಟಿದ್ದರು! ಬಲಿಯಾದ ಜನ ಅಂತ್ಯಸಂಸ್ಕಾರವಿಲ್ಲದೇ ಅಲೆದಾಡುವ ಪಿಶಾಚಿಗಳಾಗಿದ್ದರು. ಭಟ್ಟರ ಮಂತ್ರಶಕ್ತಿ ಅವರನ್ನೆಲ್ಲಾ ಈಗ ಬಂಧಿಸುತ್ತಿತ್ತು. ಭಟ್ಟರು ತಮ್ಮಲ್ಲಿದ್ದ ಚೊಂಬೊಂದರಲ್ಲಿ ಆ ಪಿಶಾಚಗಳನ್ನು ಸೆಳೆದು ತುಂಬಿದರು. ಪಿಶಾಚಗಳು ಅವರ ಮಾತುಕೇಳಹತ್ತಿದವು. ಅವುಗಳಿಗೆ ತಮ್ಮ ದಿವ್ಯ ಮಂತ್ರಗಳಿಂದಲೇ ಮುಕ್ತಿಕಾಣಿಸುವ ಸಲುವಾಗಿ ಭಟ್ಟರು ಅವುಗಳನ್ನು ಬಂಧಿಸಿದ ಚೊಂಬಿಗೆ ಮೇಲಿಂದ ಮುಚ್ಚಳ ಹಾಕಿ, ಬಟ್ಟೆಕಟ್ಟಿ ತಮ್ಮಜೊತೆಯಲ್ಲಿ ತೆಗೆದುಕೊಂಡು ಸೀದಾ ಊರಹಾದಿ ಹಿಡಿದುಬಿಟ್ಟರು. ಊರಿಗೆ ತಲುಪಿದ ಭಟ್ಟರು ಮನೆಯಿಂದ ಕಿಲೋಮೀಟರು ದೂರದಲ್ಲಿ ಗುಡ್ಡದಮೇಲೆ ಒಂದು ಗೋಳೀಮರವನ್ನು ಕಂಡರು. ಅದರ ಬುಡದಲ್ಲಿ ಆ ಅತೃಪ್ತ ಆತ್ಮಗಳ ಸಲುವಾಗಿ ವಿಶೇಷ ಕೈಂಕರ್ಯವನ್ನು ಕೈಗೊಂಡು ಅವುಗಳಿಗೆ ಸಂಸ್ಕಾರ ಸಲ್ಲಿಸಿ ಪಿಶಾಚ ಜನ್ಮದಿಂದ ಬಿಡುಗಡೆ ಕಲ್ಪಿಸಿದರು. ಅವುಗಳನ್ನು ಬಂಧಿಸಿ ತಂದಿದ್ದ ಚೊಂಬನ್ನು ಹಾಗೇ ಆ ನೆನಪಿನಲ್ಲಿ ಗೋಳೀಮರದ ಬುಡದಲ್ಲಿ ಹೂತರು.  

ಈ ಸುದ್ದಿ ಹೊನ್ನಾವರ ತಾಲೂಕಿನ ಎಲ್ಲೆಡೆಗೂ ಹರಡಿತು. ಜನ ಭಟ್ಟರ ಮಂತ್ರಶಕ್ತಿಯನ್ನು ಕಂಡು ಮೂಕವಿಸ್ಮಿತರಾಗಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಂತಹ ಯಾವುದೋ ಪೈಶಾಚಿಕ ಬಾಧೆ ತಗುಲಿಕೊಂಡರೆ ಜನ ಭಟ್ಟರನ್ನು ಹುಡುಕಿಕೊಂಡು ಬರುತ್ತಿದ್ದರು. ಭಟ್ಟರು ಮಂತ್ರಿಸಿಕೊಡುವ ವಿಭೂತಿಯಿಂದ ಸಮಸ್ಯೆಗಳು ಬಗೆಹರಿದ ಸತ್ಯಘಟನೆಗಳು ನಮಗೆಲ್ಲಾ ವಿದಿತವೇ! ವೈಜ್ಞಾನಿಕವಾಗಿ ಪುರಾವೆಗಳು ಸಿಗಲಿಲ್ಲಾ ಎಂಬ ಕಾರಣಕ್ಕೆ ಎಲ್ಲವನ್ನೂ ಅಲ್ಲಗಳೆಯಲಾಗುವುದಿಲ್ಲವಲ್ಲಾ? ಹಲವು ಅನುಭವ ಸಿದ್ಧ ವಿಷಯಗಳೇ ಇರುತ್ತವೆ ಅಲ್ಲವೇ? ಆದರೂ ಕೆಲವು ವಿಜ್ಞಾನಿಗಳು ಪಿಶಾಚಿಗಳು ಇರುವುದನ್ನು ಒಪ್ಪಿಕೊಂಡಿದ್ದಾರೆ ಮತ್ತು ಅವುಗಳ ಚಲನವಲನಗಳನ್ನು ರುಜುವಾತು ಪಡಿಸಲು ಸಾಕಷ್ಟು ಶ್ರಮಿಸಿದ್ದಾರಾದರೂ ಪೂರ್ಣವಾಗಿ ಅವರ ಆಸೆ ಈಡೇರಲಿಲ್ಲ. ಇವತ್ತಿಗೂ ನಮ್ಮ ಹಳ್ಳಿಗಳಲ್ಲಿ ಕೆಲವರು ಕೊಡ್ಲಮನೆ ಭಟ್ಟರ ಮನೆತನದವರಲ್ಲಿ ವಿಭೂತಿ ಪಡೆಯುವುದಿದೆ. ಚಿಕ್ಕಮಕ್ಕಳಿಗೆ ಬಾಧಿಸುವ ಬಾಲಗ್ರಹಾದಿ ಪೀಡನೆಗಳಿಗೂ ಕೂಡ ಅವರ ಮಂತ್ರಸಿದ್ಧಿ ಕೆಲಸಮಾಡುತ್ತದೆ.

ವಿಜ್ಞಾನ ಬೆಳೆದಂತೇ ನಾಗರು, ಚೌಡಿ ಮುಂತಾದವುಗಳಿಗೆ ಜಾಗವೇ ಇಲ್ಲವೆಂದಾಗಿದೆ. ನನಗೊಂದು ಆಶ್ಚರ್ಯವೇನೆಂದರೆ ನಗರಗಳಲ್ಲಿ ಮನುಷ್ಯರಿಗೆ ಇಂಚು ಜಾಗ ಸಿಗುವುದು ಕಷ್ಟ, ಹೀಗಿದ್ದಾಗ ಇಲ್ಲಿ ನಾಗರು. ಚೌಡಿ ಮೊದಲಾದ ದೇವಜಾಗಗಳು ಇಲ್ಲವೇ ಇಲ್ಲವಲ್ಲ ಯಾಕೆ? ಇರುವ ಅವುಗಳೇ ತಮ್ಮ ಜಾಗವನ್ನು ಬಿಟ್ಟವೇ? ಅಥವಾ ಅವುಗಳ ಆವಾಸಗಳ ಮೇಲೇ ಮನುಷ್ಯ ವಸಾಹತು ಬೆಳೆದು ನಿಂತಿದೆಯೇ ಅರ್ಥವಾಗುತ್ತಿಲ್ಲ. ಪ್ರಾಯಶಃ ಇಲ್ಲಿನ ಗಲೀಜು ವಾತಾವರಣಕ್ಕೆ ಬೇಸತ್ತು ಅವೇ ತಮ್ಮ ಜಾಗವನ್ನು ಬದಲಾಯಿಸಿಕೊಂಡಿರಲೂ ಬಹುದು. ಕೆಲವು ಶಕ್ತಿಗಳು ವಿಶಿಷ್ಟವೆನಿಸಿ ಅಲ್ಲಲ್ಲಿ ಹುಲಿಯೂರಮ್ಮ, ಕಬ್ಬಾಳಮ್ಮ, ಸರ್ಕಲ್ ಮಾರಮ್ಮ, ಅಣ್ಣಮ್ಮ ಇತ್ಯಾದಿ ಬೇರೇ ಬೇರೇ ರೂಪಗಳಲ್ಲಿ ನಿಂತು ಪೂಜೆಗಳನ್ನು ಪಡೆಯುತ್ತಿರುವುದು ಕಾಣಿಸುತ್ತದೆ. ದೇವಸ್ಥಾನಗಳ ಅಕ್ಕಪಕ್ಕಗಳಲ್ಲಿ ನಾಗರ ಕಲ್ಲುಗಳು ಕಾಣಿಸುತ್ತವೆ. ಇವುಗಳನ್ನೆಲ್ಲಾ ಅಧುನಿಕ ನಾಸ್ತಿಕರು ಅಲ್ಲಗಳೆದರೂ, ಗೂಗಲ್ ಸರ್ಚ್ ನಲ್ಲಿ ಹುಡುಕಿದರೆ ಪೈಶಾಚಿಕ ಶಕ್ತಿಗಳ ಬಗ್ಗೆ ಪಾಶ್ಚಾತ್ಯ ವಿಜ್ಞಾನಿಗಳು ಒಪ್ಪಿಕೊಂಡ ಮಾಹಿತಿಗಳು ದೊರೆಯುತ್ತವೆ-ಆಸಕ್ತರು ನನ್ನಲ್ಲಿ ಪ್ರಶ್ನಿಸದೇ ಹುಡುಕಿಕೊಳ್ಳಬಹುದು. ಮಾನವ ಲೋಕದಲ್ಲೇ ಮಾನವನಿಗೆ ಕಾಣದ ಇನ್ನೂ ಕೆಲವು ಸುಪ್ತಲೋಕಗಳಿವೆ! ಅವುಗಳಲ್ಲಿ ಪೈಶಾಚ ಲೋಕವೂ ಒಂದು. ಮಾನವ ಜನ್ಮದ ಕರ್ಮಬಂಧನದಿಂದ ಮತ್ತು ಐಹಿಕ ಆಸೆಗಳಿಂದ ಮುಕ್ತವಾಗದೇ ಅನಿರೀಕ್ಷಿತವಾಗಿ ಗತಿಸಿ, ಅಂತ್ಯಸಂಸ್ಕಾರಕಾಣದ ಆತ್ಮಗಳು  ವಾಯುವಿನಲ್ಲಿ ಅಲೆದಾಡುವ ಸುಪ್ತ ಶರೀರಗಳನ್ನು ಪಡೆಯುತ್ತವೆ! ಅದಕ್ಕೇ ಪೂರ್ವಜರು ಅವುಗಳನ್ನು ’ಗಾಳಿ’ ಎನ್ನುತ್ತಿದ್ದರು; ಆ ಹೇಳಿಕೆಯನ್ನು ಹಾಗೆ ಬಳಸುವುದು ಇತರರು ಹೆದರಬಾರದೆಂಬ ಉದ್ದೇಶದಿಂದ ಕೂಡಿತ್ತು ಎಂಬುದು ಗಮನಕ್ಕೆ ಬರುತ್ತದೆ. ಇಂತಹ ಆತ್ಮಗಳಿಗೆ ಪೈಶಾಚಲೋಕದಿಂದ ಮುಕ್ತಿಯನ್ನು ಕರುಣಿಸಲಾಗಿ ’ನಾರಾಯಣ ಬಲಿ’ ಮೊದಲಾದ ಸಾತ್ವಿಕ ಬಲಿಗಳನ್ನೂ ವಿಧಾನಗಳನ್ನೂ ಕರ್ನಾಟಕದಲ್ಲಿ ಗೋಕರ್ಣ, ತಿರುಮಕೊಡಲು ಪಶ್ಚಿಮವಾಹಿನಿ ಮೊದಲಾದ ಕಡೆ ನೆರವೇರಿಸುತ್ತಾರೆ.

ಬಗ್ಗೋಣ ಎಂಬುದು ಕುಮಟಾ ತಾಲ್ಲೂಕಿನ ಒಂದು ಊರು. ಇಲ್ಲಿನ ’ಬಗ್ಗೋಣ ಪಂಚಾಗ’ ಬಹಳ ಪ್ರಸಿದ್ಧವಾಗಿದೆ. ಹಿಂದಕ್ಕೆ ರಾಜರಕಾಲದಲ್ಲಿ ಬಗ್ಗೋಣದ ಪಂಡಿತರೊಬ್ಬರು ರಾಜನಿಗೆ ಪಂಚಾಂಗ ಶ್ರವಣ ಮಾಡಿಸುವ ಕೈಂಕರ್ಯದಲ್ಲಿದ್ದರಂತೆ. ಒಂದುದಿನ ಹೀಗೇ ಪಂಡಿತರ ಮಗ ಆಟವಾಡುತ್ತಾ ಅರಮನೆಯ ಅಂಗಳಕ್ಕೆ ಬಂದುಬಿಟ್ಟಿದ್ದಾನೆ-ಜೊತೆಗೆ ಅಪ್ಪ ಇರಲಿಲ್ಲ. ರಾಜನೂ ಅದ್ಯಾವುದೋ ಕಾರಣದಿಂದ ಅಲ್ಲಿಗೆ ಆಗಮಿಸಿದ್ದು ಆಟವಾಡುತ್ತಿದ್ದ ಬಾಲಕನನ್ನು ಕರೆದು "ಏನೋ ಮಗು ಪಂಡಿತನೇ ಸೂರ್ಯಗ್ರಹಣ  ಯಾವಾಗ ಅಂತ ಹೇಳ್ತೀಯಾ?" ಎಂದು ಕೇಳಿಬಿಟ್ಟ. ಪಂಡಿತರ ಮಗು ಬಾಯಿಗೆ ನೆನಪಿಗೆ ಬಂದ ಮಿತಿಯನ್ನು ಹೇಳಿಬಿಟ್ಟಿತು. ಅದು ಅಮಾವಾಸ್ಯೆಯಂತೂ ಆಗಿರಲಿಲ್ಲ! ಅಮಾವಾಸ್ಯೆಯ ಹೊರತು ಸೂರ್ಯ ಗ್ರಹಣ ಬೇರೇ ದಿನಗಳಲ್ಲಿ ನಡೆಯುವುದಿಲ್ಲವಲ್ಲವೇ? ರಾಜಸಭೆಯಲ್ಲಿ ರಾಜ ಪಂಡಿತರನ್ನು ಛೇಡಿಸಿದ. ಪಂಡಿತರ ಮಗ ಮಹಾಪಂಡಿತನೆಂದೂ ಗ್ರಹಣ ಇಂಥಾದಿನ ಆಗುತ್ತದೆಂದು ಹೇಳಿಬಿಟ್ಟನೆಂದೂ ಗಹಗಹಿಸಿ ನಕ್ಕ. ತುಂಬಿದ ಸಭೆಯಲ್ಲಿ ಪಂಡಿತರಿಗೆ ಅವಮಾನವಾಯ್ತು. ಮನೆಗೆ ನಡೆದ ಪಂಡಿತರು ಏಕನಿಷ್ಠೆಯಿಂದ ಧ್ಯಾನವನ್ನಾರಂಭಿಸಿದರು. ನಿತ್ಯ ಅರಮನೆಯ ಪಂಚಾಂಗ ಶ್ರವಣ ಕಾರ್ಯವೊಂದನ್ನುಳಿದು ಇನ್ನಾವುದೇ ಕೆಲಸಕ್ಕೂ ತೆರಳದೇ ಧ್ಯಾನಮಾಡುತ್ತಿದ್ದರು. ಮಗು ಹೇಳಿದ ಮಿತಿ ಬಂದೇಬಂತು. ಆ ಬೆಳಿಗ್ಗೆ ತನ್ನ ಮಾನವನ್ನೂ ಪ್ರಾಣವನ್ನೂ ಭಗವಂತನಲ್ಲೇ ಪಣಕ್ಕಿಟ್ಟು ಧ್ಯಾನಮಾಡುತ್ತಿದ್ದರಂತೆ. ಆ ದಿನ ನಡುಮಧ್ಯಾಹ್ನದಲ್ಲಿ ಕತ್ತಲು ಕವಿಯಿತು! ಸೂರ್ಯಗ್ರಹಣ ಸಂಭವಿಸಿದ್ದನ್ನು ರಾಜನೂ ರಾಜಪರಿವಾದವರೂ ಮತ್ತು ಇಡೀ ರಾಜ್ಯದ ಜನತೆಯೂ ಕಂಡಿತು!!! ಬಗ್ಗೋಣ ಪಂಚಾಂಗ ಕರ್ತರ ಮನೆಯಲ್ಲಿ ಇಂದಿಗೂ ರಾಜಸನ್ಮಾನಿಸಿ ಕೊಟ್ಟ ಪತ್ರಗಳೂ ದಾಖಲೆಗಳೂ ಇವೆ ಮತ್ತು ನಡೆದ ಘಟನೆಯ ಸಂಪೂರ್ಣ ವಿವರಗಳು ಲಭ್ಯ.

ನಂಜನಗೂಡಿನಲ್ಲಿ ಟಿಪ್ಪುವಿನ ಕುರುಡು ಆನೆಗೆ ಕಣ್ಣುಬಂದಿದ್ದರ ಬಗ್ಗೆ ನೀವೆಲ್ಲಾ ಕೇಳಿದ್ದೀರಿ. ಇತ್ತೀಚೆಗೆ ಟಿಪ್ಪುವಿನ ಅಮಲು ಇಳಿಸಿದ ಹಲವು ಹಿಂದೂ ದೇವ-ದೇವತೆಗಳ ಬಗ್ಗೆ ವರದಿಗಳನ್ನು ಪಡೆದಿದ್ದೀರಿ. ಕೂಲ್ಲೂರಿನಲ್ಲಿ ಸಲಾಂ ಮಂಗಳಾರತಿ ಅಂಥಾದ್ದರಲ್ಲಿ ಒಂದು. ಇಡಗುಂಜಿಯಲ್ಲಿ ಬ್ರಿಟಿಷ್ ಮಾಮಲೇದಾರ ದೇವರು ಪಂಚಕಜ್ಜಾಯ ತಿನ್ನುವುದನ್ನು ಪರೀಕ್ಷಿಸ ಹೋಗಿ ಪಕ್ಕಾಮಾಡಿಕೊಂಡು ತಪ್ಪುಒಪ್ಪಿಕೊಂಡಿದ್ದನ್ನೂ, ಮುರುಡೇಶ್ವರದಲ್ಲಿ ಲಿಂಗದಲ್ಲಿ ಕೂದಲು ಮೂಡಿ ಅಧಿಕಾರಿಗಳನ್ನು ದಂಗಾಗಿಸಿದ್ದನ್ನೂ ಹಿಂದೆ ಹೇಳಿದ್ದೆ! ಈ ಕ್ಷೇತ್ರಗಳಿಗೆಲ್ಲಾ ಮಹತೋಭಾರ ಅಥವಾ ಮಾತೋ ಭಾರ ಎಂದು ಸೇರಿಸುವ ಹಿನ್ನೆಲೆ ಇದೇನೆ. ಭಕ್ತನ ಮಹತಿ ಭಾರವನ್ನು ಹೊತ್ತು ಮಾತೆ ಮಗುವನ್ನು ಕಾಪಾಡಿದಂತೇ ಅರ್ಚಕರ ಮಾನ-ಮರ್ಯಾದೆ ಕಾಪಾಡಿ ಅವರ ಬದುಕಿಗೆ ಶ್ರೇಷ್ಠತೆಯನ್ನು ಅನುಗ್ರಹಿಸಿದ ದೇವರುಗಳನ್ನು ಮಾತ್ರ ಮಹತೋಭಾರ ಅಥವಾ ಮಾತೋಭಾರ ಎಂಬ ಪೂರ್ವಪದ ಸೇರಿಸಿ ನಂತರ ಆ ಯಾ ದೇವರುಗಳ ಹೆಸರುಗಳನ್ನು ಹೇಳಲಾಗುತ್ತದೆ. ಉದಾಹರಣೆಗೆ: ಮಾತೋಭಾರ ಶ್ರೀ ಸಿದ್ಧಿವಿನಾಯಕ ದೇವ, ಇಡಗುಂಜಿ. 

ಅನೇಕ ಮುಜರಾಯಿ ದೇವಸ್ಥಾನಗಳಲ್ಲಿ ಇಂದಿಗೂ ಜನ ಸಲ್ಲಿಸುವ ಕಾಣಿಕೆ ಗಣನೀಯವಾಗಿಯೇ ಇದೆ. ಸರಕಾರ ಅವುಗಳನ್ನೆಲ್ಲಾ ತನ್ನ ಬೊಕ್ಕಸಕ್ಕೆ ಸೇರಿಸಿಕೊಳ್ಳುತ್ತದೆಯೇ ವಿನಃ ಆ ಯಾ ದೇವಾಲಯಗಳ ನಿತ್ಯ ಪೂಜಾ ಪದ್ಧತಿಗೆ, ದೀಪಕ್ಕೆ, ದಾನಕ್ಕೆ, ಬಣ್ಣ-ಸುಣ್ಣ-ಬರಸಾತ್ ರಿಪೇರಿಗೆ, ಹೋಮನೇಮಗಳಿಗೆ ಯಾವುದಕ್ಕೂ ಖರ್ಚುಮಾಡುವುದಿಲ್ಲ. ದೇವಸ್ವವನ್ನು ಸಾಮಾನ್ಯ ಮನುಷ್ಯರಾಗಲೀ ರಾಜರೇ ಆಗಲೀ ಬಳಸುವ ಕಾಲ ಹಿಂದಕ್ಕೆ ಇರಲಿಲ್ಲ. ದೇವರಿಗಾಗಿ ಬಂದ ಹಣ ದೇವರ ಸೇವೆಗೂ ಸೇವೆಗೆನಿಂತ ಮಂದಿಗೂ ಖರ್ಚಾಗುತ್ತಿತ್ತು. ರಾಜ್ಯದ ಅನೇಕ ಮುಜರಾಯೀ ದೇವಸ್ಥಾನಗಳಲ್ಲಿ ಬಾವಲಿಗಳು ಸೇರಿಕೊಂಡು ಹೊಲಸು ವಾಸನೆ ಬರುತ್ತಿದೆ. ಗೋಪುರಗಳು ಕಳಾಹೀನವಾಗಿ ದುರ್ದೆಸೆಗೊಳಗಾಗಿವೆ-ಉದುರುವ ಗಾರೆಗಳಿಂದ, ಹಳೆಯ ಶಿಥಿಲಗೊಂಡ ಶಿಲೆಗಳಿಂದಲೂ ಕೂಡಿವೆ. ಅಲ್ಲಲ್ಲಿಯೇ ಬಂದ ಹಣವನ್ನು ಅಲ್ಲಲ್ಲಿಗೇ ವಿನಿಯೋಗಿಸಿದ್ದರೆ ದೇವಾಲಯಗಳು ಈ ಹಂತವನ್ನು ಕಾಣುವ ಪ್ರಮೇಯವಿರಲಿಲ್ಲ. ರಾಜರುಗಳ ಕುಲದೈವಗಳ ದೇವಸ್ಥಾನಗಳೂ ಸಹ ಇಂದು ಆಳುವ ದೊರೆಗಳ ಅವಗಣನೆಗೆ ಗುರಿಯಾಗಿರುವುದರಿಂದ ಸಕಾಲದಲ್ಲಿ ಮಳೆಬೆಳೆಗಳು ಆಗುತ್ತಿಲ್ಲ ಎಂಬುದನ್ನು ಒಪ್ಪಬೇಕಾಗುತ್ತದೆ.

ಏನನ್ನಿಸಿತೋ ನಮ್ಮ ಶ್ರೀನಿವಾಸ ಪೂಜಾರಿಯವರು ಬಂದವರೇ ದೇವರ ಪೂಜೆಗೆ ಅಪ್ಪಣೆಕೊಡಿಸಿದರು; ಪರ್ಜನ್ಯಜಪ-ಹೋಮಗಳಿಂದ ಕಾಣದ ದೈವಶಕ್ತಿ ಇಡೀ ಕರ್ನಾಟಕಕ್ಕೇ ತನ್ನ ಇರವನ್ನು ತೋರಿಸಿತು!  || ದೈವಾಧೀನಂ ಜಗತ್ಸರ್ವಂ ಮಂತ್ರಾಧೀನಂತು ದೈವತಂ || ದೇಹೀ ಎಂದು ಸಾಮೂಹಿಕವಾಗಿ ಅರ್ಚಕರು ಮುಜರಾಯೀ ದೇವಸ್ಥಾನಗಳಲ್ಲಿ ಸರಕಾರದ/ಸಾರ್ವಜನಿಕರ ಪರವಾಗಿ ಪೂಜೆ ನೆರವೇರಿಸಿದರು-ಮಂತ್ರಕ್ಕೆ ಮಳೆ ಬಂದೇ ಬಂತು! ಮೇ-ಜೂನ್-ಜುಲೈ ಕಳೆದರೂ ಬಾರದಿದ್ದ ಮಳೆ, ಪೂಜೆನಡೆಯುತ್ತಿದ್ದ ಸಮಯದಲ್ಲೇ ಆರಂಭವಾಗಿದ್ದು ಕಾಕತಾಳೀಯವೆಂದವರು ಅದೆಷ್ಟೋ ಮಂದಿ. ವಿಧಾನಸಭೆಯ ಮೊಗಸಾಲೆಯಲ್ಲಿ ದೇವರಿಗೆ ಸುಮ್ನೇ ೧೭ ಕೋಟಿ ಎಂದು ಲೇವಡಿಮಾಡಿದ ಕಾಂಗ್ರೆಸ್ಸಿಗರೂ ಇದ್ದಾರೆ! ಮುಂದಿನ ೫ ತಿಂಗಳಲ್ಲಿ ಚುನಾವಣೆ ಬಂದಾಗ ಮುಜರಾಯೀ ದೇವಸ್ಥಾನಗಳಿಗೆ ಮೊರೆ ಇಡುವವರೂ ಅವರೇ ಆಗಿದ್ದಾರೆ! ಸಂಕಟಬಂದಾಗ ಮಾತ್ರ ಬೇಕು ಮಿಕ್ಕಿದ ಸಮಯದಲ್ಲಿ

ನೀನೇಕೋ ನಿನ್ನ ಹಂಗೇಕೋ
ನಿನಗೇ ನಾಮ ಹಾಕುವ ಬಲವೊಂದಿದ್ದರೆ ಸಾಕೋ 

ಎಂದು ಅಧುನಿಕರಿಗಾಗಿ ತಿದ್ದುಪಡಿಗೊಂಡ ದಾಸರ ಪದವನ್ನು ಹಾಡುವ ಇಂತಹ ಕಜಡಾ ಮಂದಿಗೆ, ಬೆಂಗಳೂರಿನ ಗಲ್ಲಿಗಲ್ಲಿಗಳು ವಿನಾಕಾರಣ ಅಗೆತಕ್ಕೊಳಗಾಗುವುದು, ಬೇಡವಾದ ಕಡೆಗಳಲ್ಲೂ ರಸ್ತೆಬದಿಯಲ್ಲಿ ಮಳೆ ನೀರಿಗೆ ಕಾಂಕ್ರೀಟಿನ ಕಾಲುವೆ ನಿರ್ಮಿಸುವುದು, ವರ್ಷಪೂರ್ತಿ ಮುಗಿಯದ ಅಗೆತದ ಕೆಲಸಗಳು ಕಾರ್ಪೋರೇಟರ್ ಗಳ ತುಂಬದ ಹೊಟ್ಟೆಯನ್ನು ತುಂಬಿಸಲು ಪ್ರಯತ್ನಿಸುತ್ತಿರುವುದು ಕಾಣುವುದಿಲ್ಲವೇ? ಸರಕಾರವೇ ಮುಂದಾಗಿ ಮನೆಕಟ್ಟಿಕೊಡಲು ತೊಡಗಿದರೆ ಉತ್ತರಕರ್ನಾಟಕದ ನೆರೆನಿರಾಶ್ರಿತರು ಪರದಾಡಬೇಕಾದ ಪ್ರಮೇಯವಿತ್ತು! ದೇಶಪಾಂಡೆ ಥರದವರು ಸಾರ್ವಜನಿಕರಿಂದ ಸಂಗ್ರಹವಾದ ನೆರೆಪೀಡಿತರ ಹಣವನ್ನೂ ತಮ್ಮ ಅಕೌಂಟಿಗೆ ಬಸಿದುಕೊಂಡಿದ್ದು ನಮ್ಮ ಜನರಿಗೆ ಮರೆತೇಹೋಯ್ತೇ? ದೇವರಿಗಾಗಿ ಸಂಗ್ರಹವಾದ ದೇವಬೊಕ್ಕಸವನ್ನು ಮಟ್ಟಸವಾಗಿ ಉಂಡು ಮಗ್ಗಲು ಬದಲಾಯಿಸುವ ಕೆಲಸ ನಡೆದರೆ ಆಡಳಿತ ನಡೆಸುವ ಯಾರೇ ಆದರೂ ಎಷ್ಟುಕಾಲ ನಡೆಸಿಯಾರು? ಕಪ್ಪುಕನ್ನಡದ ಹಿಂದೆ ಕಣ್ಣಡಗಿಸಿ ನಗುವ ಕುಹಕ ರಾಜಕಾಣಿಗಳು ತಕ್ಕಶಾಸ್ತಿಯನ್ನು ಆ ಯಾ ಕಾಲಕ್ಕೆ ಅನುಭವಿಸುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ.

ಕಾಯ್ದೆ ಬದಲಾಗಬೇಕು. ಆ ಯಾ ಮುಜರಾಯೀ ದೇವಸ್ಥಾನಗಳ ಹುಂಡಿಯನ್ನು  ಅಲ್ಲಲ್ಲೇ ಒಡೆದು ಎಣಿಸಿ, ಅಲ್ಲಿಗೇ ವ್ಯಯಿಸಬೇಕು, ಸರಕಾರ ತನ್ನ ಬೊಕ್ಕಸಕ್ಕೆ ಬಂದ ಆದಾಯಮೂಲದಲ್ಲಿ ಅತಿಚಿಕ್ಕಮೊತ್ತವನ್ನಾದರೂ ಆದಾಯರಹಿತ ಮುಜರಾಯೀ ದೇವಸ್ಥಾನಗಳಿಗೆ ಕೊಡುವಂತಾಗಬೇಕು. ಸ್ಥಾನಿಕವಾಗಿ ಯಾವ ಯಾವ ವ್ಯವಸ್ಥೆಗಳು ಕಲ್ಪಿತವಾಗಬೇಕೋ ಅದನ್ನು ಪೊರೈಸಿಕೊಡಬೇಕು. ಈ ದೇಶ ಹಿಂದೂಸ್ಥಾನ. ಮುಜರಾಯೀ ದೇವಸ್ಥಾನಗಳಿಗೆ ಸಾವಿರಗಟ್ಟಲೆ ವರ್ಷಗಳ ಇತಿಹಾಸವಿದೆ. ಉಳಿದ ಮತಗಳು ಭಾರತವನ್ನು ಆಕ್ರಮಿಸುವ ಮೊದಲೇ ಇದ್ದ ದೇವಾಲಯಗಳೇ ಹಲವು. ಅಲ್ಲಲ್ಲಿನ ಕಲ್ಲುಗಳೆಲ್ಲಾ ಇತಿಹಾಸವನ್ನು ಕಥೆಗಳ ರೂಪದಲ್ಲಿ ಹೇಳಬಲ್ಲವು. ನನ್ನಂತಹ ಕೆಲವುಜನ ಮಂತ್ರಕ್ಕೆ ಮಾವಿನಕಾಯಿ ಉದುರಿದ್ದನ್ನೂ ಲೋಕವೇ ಅದುರಿದ್ದನ್ನೂ ತೋರಿಸಿಬಲ್ಲ ಪ್ರಾಗೈತಿಹಾಸಿಕ ಕಥಾನಕಗಳನ್ನು ಬೇಕಾದರೆ ಒದಗಿಸುತ್ತೇವೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದ ಮುಗ್ಧ ಜನರಿಗೆ ಅರಿವಿಲ್ಲ, ವೇದ ಸುಳ್ಳಾಗುವುದಿಲ್ಲ; ಅದು ಅಪೌರುಷೇಯ; ಅದು  ನಿತ್ಯ ಸನಾತನ! ಗಾದೆಯೇ ಸುಳ್ಳಾಗಬಹುದೇ ಹೊರತು ವೇದ ಸುಳ್ಳಾಗದು. 

ವೇದಮಂತ್ರಗಳ ಸಂತುಲಿತ ಉಚ್ಚಾರಣೆಗೆ ವಿಶಿಷ್ಟ ಶಕ್ತಿಯಿದೆ. ಅದರ ವ್ಯತ್ಯಾಸವನ್ನು ಹಿರೇಮಗಳೂರು ಕಣ್ಣನ್ ಸಾಹೇಬರು ನಡೆಸಿಕೊಡುವ ಕನ್ನಡ ಪೂಜೆಗೆ ತುಲನೆಮಾಡಿ ನೋಡಿ: ಸಾವಿರ ಸರ್ತಿ ಕನ್ನಡದಲ್ಲಿ ಪೂಜೆಮಾಡಿದರೂ ವೇದಮಂತ್ರಗಳಿಂದ ಪೂಜಿಸಿದ ತೃಪ್ತ ಮನೋಭಾವ ನಮ್ಮದಾಗುವುದಿಲ್ಲ. ರುದ್ರ ನಮಕ-ಚಮಕಗಳಿಂದಂತೂ ಮಾನಸಿಕವಾಗಿ ಯಾವುದೇ ವ್ಯಕ್ತಿಗಾದರೂ ಉತ್ತಮ ಪರಿಣಾಮ ಸಿಗುತ್ತದೆ.[ಆತ ಯವುದೇ ಮತದವನೂ ಆಗಬಹುದು] ಶಾಸ್ತ್ರೋಕ್ತವಾಗಿ ರುದ್ರ, ಶ್ರೀಸೂಕ್ತ, ಪುರುಷಸೂಕ್ತ, ನಾರಾಯಣ ಸೂಕ್ತ ಮೊದಲಾದ ಮಂತ್ರಗಳಿಂದ ಅಭಿಷೇಚಿಸಿ ಆ ತೀರ್ಥವನ್ನು ಎದುರಿಗೆ ಕುಳಿತು ಅವುಗಳನ್ನು ಕೇಳಿಸಿಕೊಂಡವರಿಗೆ ಪ್ರೋಕ್ಷಿಸಿದಾಗ, ಆ ದಿವ್ಯ ಮಂತ್ರಗಳ ಫಲಾನುಭವಗಳು ನಮ್ಮ ಮನಸ್ಸಿನ ಮೇಲೆ ಉಂಟಾಗುತ್ತವೆ. ಮನಸ್ಸು ಆಹ್ಲಾದಗೊಳ್ಳುತ್ತದೆ; ಪ್ರಪುಲ್ಲತೆ ಮನೆಮಾಡುತ್ತದೆ; ಯಾವುದೇ ಕಷ್ಟವಿದ್ದರೂ ತಮ್ಮನ್ನು ಅದರಿಂದ ಪಾರುಮಾಡಬಲ್ಲ ದಿವ್ಯಶಕ್ತಿಯ ಹೊರಗವಚವೊಂದು ತಮಗೆ ದಕ್ಕುತ್ತಿದೆ ಎಂಬ ಭಾವ ನಮ್ಮೊಳಗೇ ಉದ್ಭವವಾಗುತ್ತದೆ. ಇದು ರಾಜರುಗಳಿಗೆ, ಸಂಸ್ಥಾನಿಕರಿಗೆ ಗೊತ್ತಿತ್ತು. ಅದಕ್ಕೇ ಅವರು ದೇವಸ್ಥಾನಗಳನ್ನು ನಿರ್ಮಿಸಿದರು; ವೇದಗಳನ್ನು ಅನುಷ್ಠಾನದಲ್ಲಿಡಲು ಬ್ರಾಹ್ಮಣರಿಗೆ ಆಶ್ರಯ ಕೊಟ್ಟರು, ಉಂಬಳಿಕೊಟ್ಟರು. ಇವತ್ತಿಗೂ ಜನಮಾನಸದಲ್ಲಿ ಒಂದಂತೂ ಅಡಗಿದೆ, ಅದೇನೆಂದರೆ: ’ವೇದಗಳಿಗೆ ತಾಕತ್ತಿದೆ’ ಎಂಬುದು. ವೇದಗಳು ಅಳಿಯುವುದಿಲ್ಲ, ವೇದಗಳೇ ನಮ್ಮ ಸಂಸ್ಕೃತಿ, ಅವುಗಳಿಂದಲೇ ನಮ್ಮ ಪುನರುಜ್ಜೀವನ. 

Monday, August 27, 2012

ತೀರ್ಥರಾಜ ಪುರದ ಗಮ್ಮತ್ತೇ ಅಂಥದ್ದು !


ಚಿತ್ರಗಳ ಋಣ: ಅಂತರ್ಜಾಲ
ತೀರ್ಥರಾಜ ಪುರದ ಗಮ್ಮತ್ತೇ ಅಂಥದ್ದು !

ಮಳೆಗಾಲದಲ್ಲಿ ಗಡದ್ದಾಗಿ ಊಟ ಹೊಡೆದು, ಹೊದೆದು ಮಲಗಿಬಿಟ್ಟರೆ ಸೂರ್ಯನೆಂಬ ಸೂರ್ಯ ಕಾಣದೇ ಇದ್ದರೂ ಪರವಾಗಿಲ್ಲ-ಆತ ಮುಳುಗುವ ಹೊತ್ತಿಗೇ ಒಮ್ಮೆ ಏಳುವುದು! ವಾತಾವರಣದಲ್ಲಿನ ಆರ್ದ್ರತೆಯಿಂದ ಒಂಥರಾ ಚಳಿ. ಎಲ್ಲರಲ್ಲೂ ಹಾಗೇ...ಹೇಳಿಕೊಳ್ಳಬೇಕೆನಿಸಿದರೂ ಮನಸ್ಸಿಗೆ ಮುದನೀಡುವ ಪ್ರಕೃತಿ ಸಹಜ ವಾತಾವರಣ ಅದು. ಬಸ್ಸಿನಲ್ಲಿ ಪ್ರಯಾಣಿಸುವಾಗ ಯಾರೋ ಮುಡಿದ ಅಂಬರ ಮಲ್ಲಿಗೆಯ ಸುವಾಸನೆ ಗಾಳಿಯಲ್ಲಿ ತೇಲಿಬರುತ್ತದೆ. ಕಿವಿವರೆಗೆ ಮುಚ್ಚಿಕೊಂಡ ಟೋಪಿವಾಲಾ ಖಾಸಗೀ ಬಸ್ ಏಜೆಂಟರು ತಂತಮ್ಮದೇ ಆದ ಶೈಲಿಯಲ್ಲಿ ಊರುಗಳ ಹೆಸರನ್ನು ಕೂಗಿಕೊಂಡು ಸಾಗುತ್ತಿರುತ್ತಾರೆ. ದೂರದ ಹಳ್ಳಿಗಳಿಂದ ಶಾಲೆ/ಕಾಲೇಜಿಗಾಗಿ ಮಕ್ಕಳು ಓಡಾಡುತ್ತಾ ಇರುತ್ತಾರೆ. ಕೃಷಿ ಕೆಲಸದವರು ಅದೂ ಇದೂ ಮಾತನಾಡಿಕೊಂಡು ಎಲೆಯಡಿಕೆ ಹಾಕಿಕೊಂಡು ಓಡಾಡುತ್ತಾರೆ. ಬುರ್ರನೆ ಹಾದುಹೋಗುವ ಬಸ್ಸು ಹಾದಿಯ ತಗ್ಗುಗಳಲ್ಲಿ ನಿಂತ ಕೆಸರಿನ ನೀರನ್ನು ಬರ್ರನೆ ಅಷ್ಟೆತ್ತರಕ್ಕೆ ಹಾರಿಸಿದ್ದು ಗೊತ್ತಾಗುವಷ್ಟರಲ್ಲಿ ಪಕ್ಕದಲ್ಲಿ ನಿಂತ ಯಜಮಾನರ ಪಂಚೆಮೇಲೆ ಬಣ್ಣದ ರಂಗೋಲಿ; ಬರಲಿ ಆ ಡ್ರೈವರನಿಗೆ ಮಾಡಿಸ್ತೇನೆ ಎಂದು ಹಲ್ಲು ಕಡಿದಿದ್ದಾರೆ !  ಹಣ್ಣು ತರಕಾರಿ ವಗೈರೆ ವ್ಯಾಪಾರ ಸ್ವಲ್ಪ ಕಮ್ಮಿಯೇ. ಹಿತ್ತಲಲ್ಲಿ ಬೆಳೆಯುವ ಕಾಯಿಪಲ್ಲೆಗಳೇ ಸಾಕು ಈಗ ಎಂಬ ಧೋರಣೆ. ಕೆಂಡಸಂಪಿಗೆಯ ಕಡು ಪರಿಮಳ ಕೆಲವೆಡೆಗೆ. ಜಾಜಿಯೂ ಅಲ್ಲಲ್ಲಿ ಇದ್ದೇನೆ ಎನ್ನುತ್ತಿದ್ದರೆ ಅದು ತೀರ್ಥರಾಜಪುರ ಅರ್ಥಾತ್ ತೀರ್ಥಹಳ್ಳಿ.

ಫಣಿಯಮ್ಮ ಸಿನಿಮಾ ನೋಡಿದಾಗಿನಿಂದ ಎಳ್ಳಮವಾಸ್ಯೆ ಜಾತ್ರೆ ನಡೆದ ಜಾಗದ ಬಗ್ಗೆ ಬಹಳ ಕುತೂಹಲವಿತ್ತು. ೧೮ನೇ ಶತಮಾನದಲ್ಲಿ ನಡೆದ ಆ ಘಟನೆಯನ್ನು ಕನ್ನಡದ ಸಾಹಿತ್ಯಾಸಕ್ತರು ಎಂ ಕೆ.ಇಂದಿರಾ ಅವರ ಇದೇ ಹೆಸರಿನ ಕಾದಂಬರಿಯಲ್ಲಿ ಓದಿಯೇ ಇರುತ್ತಾರೆ. ರಥಬೀದಿಯಲ್ಲಿ ಫಣಿಯಮ್ಮ ಬಾಲ್ಯದಲ್ಲಿ ಓಡಾಡಿದ್ದು, ಹಿಡಿದ ಜಡೆಯನ್ನು ಬಿಡಿಸಿಕೊಳ್ಳಲು ತುದಿಯನ್ನೇ ಕತ್ತರಿಸಿದ್ದು, ಬಾಲ್ಯದಲ್ಲೇ ಫಣಿಯಮ್ಮನ ವಿವಾಹ, ಇನ್ನೂ ಹರೆಯದ ಸುಖವನ್ನು ಉಣ್ಣುವ ಮೊದಲೇ ವಿಧವೆ, ತಲೆಬೋಳಿಸಿಕೊಂಡು ನಂತರ ತನ್ನಿಡೀ ಜೀವಿತದಲ್ಲಿ ಮತ್ತೆಂದೂ ಕೂದಲು ಬೆಳೆಸದೇ ಮಡಿಯಮ್ಮನಾಗಿ ಕಳೆದ ಬ್ರಾಹ್ಮಣ ಬಾಲವಿಧವೆಯ ಕಥೆ ಅನಾಯಾಸವಾಗಿ ಉಕ್ಕಿಹರಿವ ಕಣ್ಣೀರಿಗೆ ಆಸ್ಪದ ಕೊಡುವಂಥದ್ದು. ಫಣಿಯಮ್ಮ ಎಂಬ ಹೆಸರನ್ನು ಕೇಳಿದಾಗಲೆಲ್ಲಾ ಅಥವಾ ಕೆಂಪು/ಬಿಳಿ ಸೀರೆಯುಟ್ಟ ಮಡಿ ಅಜ್ಜಿಯರನ್ನು ಕಂಡಾಗಲೆಲ್ಲಾ ಅಂತಹ ಕಥೆಯ ನೆನಪಾಗುತ್ತಿತ್ತು. ಪಾಪದ ಜೀವಗಳು ಆ ಕಾಲಘಟ್ಟದಲ್ಲಿ ಅದೆಷ್ಟು ನೊಂದುಕೊಂಡವೋ ಶಿವನೇ ಬಲ್ಲ. ಏನೇ ಆಗಲಿ ಎಳ್ಳಮವಾಸ್ಯೆ ಜಾತ್ರೆ ನಡೆಯುವ ಜಾಗವನ್ನು ಒಮ್ಮೆಯಾದರೂ ನೋಡಬೇಕೆನಿಸಿತ್ತು; ಒಮ್ಮೆಯಲ್ಲ ಹಲವಾರು ಬಾರಿ ನೋಡಿದ್ದಾಯ್ತು.    

’ಗಂಗಾಸ್ನಾನ ತುಂಗಾಪಾನ’ ಎಂಬುದೊಂದು ಗಾದೆ. ಈಗೀಗ ತುಂಗೆಯೂ ಮಲಿನವಾಗಿದ್ದಾಳೆ; ಕಾಲಾಯ ತಸ್ಮೈ ನಮಃ ! ತುಂಗೆಯ ದಡದಲ್ಲಿ ಇರುವ ಹಳ್ಳಿ ತೀರ್ಥಹಳ್ಳಿ. ಯಾಕೆ ಈ ಹೆಸರು ಎಂಬುದಕ್ಕೊಂದು ಕಥೆ! ಅದು ಕಥೆಯೋ ಕಾಲಘಟ್ಟದಲ್ಲಿ ಘಟಿಸಿದ ಘಟನೆಯೋ ಅರಿವಿಗಿಲ್ಲ. ನಂಬಿದವರಿಗೆ ಅದೊಂದು ಪ್ರಾಗೈತಿಹಾಸಿಕ ಘಟನೆ. ಮಹಾವಿಷ್ಣು ಜಮದಗ್ನಿಯ ಮಗ ಪರಶುರಾಮನಾಗಿ ಆರನೆಯ ಅವತಾರವೆತ್ತಿದ್ದನಲ್ಲಾ ತಂದೆಯ ಆಜ್ಞೆಗೆ ಮಣಿದು ಹೆತ್ತಮ್ಮ ರೇಣುಕೆಯ ಶಿರವನ್ನೇ ತರಿದನಲ್ಲಾ...ಹಾಗೆ ಅಲ್ಲಿ ಬಳಸಿದ ರಕ್ತಸಿಕ್ತ ಪರಶುವನ್ನು, ತುಂಗಾನದಿಯ ನಡುವಿನಲ್ಲಿ ಇಲ್ಲೊಂದುಕಡೆ ತೊಳೆದು ದೋಷಕಳೆದುಕೊಂಡ ಎಂಬುದು ಐತಿಹ್ಯ. ಆ ರಾಮನ ಪರಶುವಿಗೆ ಹಲವು ಕ್ಷತ್ರಿಯರೂ ಬಲಿಯಾಗಿದ್ದರು. ಅಂತಹ ಕ್ರೌರ್ಯದ ಕೊಡಲಿಯನ್ನು ತುಂಗೆಯ ನಡುವಿನ ಕೊಂಡವೊಂದರಲ್ಲಿ ನೆನೆಸಿದ ಎಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಪರಶುರಾಮನಿಂದ ಬಳಸಲ್ಪಟ್ಟ ಕೊಂಡದ ನೀರು ತೀರ್ಥವೆಂದು ಹೆಸರಿಸಲ್ಪಟ್ಟಿತು. ತೀರ್ಥದ ಕೊಂಡವಿರುವ ನದಿಯ ಈ ಪ್ರದೇಶದ ದಡದಲ್ಲಿ ಜನವಸತಿಯುಳ್ಳ ಹಳ್ಳಿ ತೀರ್ಥಹಳ್ಳಿಯಾಯ್ತು.


ಪ್ರಥಮವಾಗಿ ನೋಡುವಾಗ ಮೈಯ್ಯೆಲ್ಲಾ ಒಂದು ರೀತಿ ರೋಮಾಂಚನ. ನದಿಯ ದಡದಿಂದ ನಿಧಾನವಾಗಿ ಹೆಜ್ಜೆಯಿಟ್ಟು ಪರಶುರಾಮ ಕೊಂಡದೆಡೆಗೆ ಹೆಜ್ಜೆ ಹಾಕುವವರೆಗೆ ಒಂದು ರೀತಿಯ ತಡೆಯಲಾರದ ತವಕ. ಸಾಕ್ಷಾತ್ ಪರಶುರಾಮನೇ ಬಂದಿದ್ದ, ಕೂತಿದ್ದ, ನಿಂತಿದ್ದ ಜಾಗದಲ್ಲಿ ಇಂದಿಗೂ ಹಾಗೇ ಇದೆಯಲ್ಲಾ ಎಂಬ ಅನಿಸಿಕೆ. ನದೀಪಾತ್ರದಲ್ಲಿರುವ ಬಂಡೆಗಲ್ಲುಗಳ ನಡುವೆ ನದಿಯ ಪ್ರವಾಹಕ್ಕೆ ತಾನಾಗೇ ರೂಪುಗೊಂಡ ಕೊಂಡ ಅದು. ಪಕ್ಕದಲ್ಲೇ ಇರುವ ಗೋಡೆಯಂತಹ ಬಂಡೆಯಮೇಲೆ ಋಷಿಯೊಬ್ಬ ನಿಂತಿರುವ ಚಿತ್ರ. ಆ ಬಂಡೆಯ ಶಿರೋಭಾಗದಲ್ಲೊಂದು ಕಲ್ಲಿನ ಮಂಟಪ. ಅಲ್ಲೊಂದು ಲಿಂಗ. ನದೀಪಾತ್ರದ ನಡುವೆ ಮಾನವ ನಿರ್ಮಿತವೇ ಎನ್ನುವಷ್ಟು ಆಕಾರಬದ್ಧವಾದ ಈ ಕೊಂಡದಲ್ಲಿ ಸತತವೂ ನೀರು. ಎಳ್ಳಮಾವಾಸ್ಯೆಯ ಜಾತ್ರೆಯ ಸಮಯದಲ್ಲಿ ರಾಮೇಶ್ವರ ದೇವರನ್ನು ಪಲ್ಲಕ್ಕಿಯಲ್ಲಿ ಇಲ್ಲಿಗೆ ಕರೆತಂದು ಪೂಜಿಸುತ್ತಾರಂತೆ. ಪರಶುರಾಮನಿಂದ  ಪೂಜಿಸಲ್ಪಟ್ಟ ದೇವರು ಇಲ್ಲಿನ ರಾಮೇಶ್ವರ! ಇವತ್ತಿಗೂ ಒಂದು ಮಾತಿದೆ: ಸಾವಿರ ಜನ ವೈದಿಕರು ಒಂದೇಕಡೆ ಊಟಕ್ಕೆ ಕುಳಿತರೆ ಆ ಪಂಕ್ತಿಯಲ್ಲಿ ಪರಶುರಾಮನೂ ಇರುತ್ತಾನೆ ಎಂಬುದು.

ಅಶ್ವತ್ಥಾಮ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣಃ |
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ ||  

ಏಳು ಜನ ಚಿರಂಜೀವಿಗಳಲ್ಲಿ ಪರಶುರಾಮನೂ ಒಬ್ಬ. ಪರಶುರಾಮ ಒಮ್ಮೆ ದಾನಮಾಡುತ್ತಿದ್ದ. ದಾನ ಮಾಡಿ ಮಾಡಿ ಅವತಾರ ಸಮಾಪ್ತಿಯ ಸಮಯ ಬಂದಿತ್ತು. ಕೊನೆಯಲ್ಲಿ ಕೈಯ್ಯಲ್ಲಿ ಇದ್ದಿದ್ದು ಪರಶು ಮಾತ್ರ. ಆ ಕಾಲದಲ್ಲಿ ಒಂದಷ್ಟು ಬ್ರಾಹ್ಮಣರು ಪರಶುರಾಮನ ಪರೀಕ್ಷೆಗಾಗಿ ಬಂದರಂತೆ. ಬಂದವರೇ ರಾಮನಲ್ಲಿ ದಾನಪಡೆಯಲು ಬಂದಿದ್ದೇವೆ ಎಂದರು. ರಾಮನಲ್ಲಿ ಕೊಡುವುದಕ್ಕೆ ಏನೂ ಇರಲಿಲ್ಲ! ಖಾಲೀ ಕೈಲಿ ಕಳಿಸುವ ಹಾಗಿಲ್ಲ. ಬ್ರಾಹ್ಮಣರು ತನ್ನೆಡೆಗೆ ಬಂದಿದ್ದು ಶಂಕಿತ ಬುದ್ಧಿಯಿಂದ ಪರೀಕ್ಷೆಗಾಗಿ ಎಂಬುದು ಅಪರೋಕ್ಷ ಜ್ಞಾನಿಯಾದ ಪರಶುರಾಮನಿಗೆ ಪರೋಕ್ಷವಾಗಿ ತಿಳಿದುಹೋಯ್ತು. ಕುಪಿತನಾದ ಪರಶುರಾಮ "ನಿಮ್ಮಲ್ಲಿ ಒಗ್ಗಟ್ಟೇ ಇರದೇ ಹೋಗಲಿ" ಎಂದು ಶಾಪ ಕೊಟ್ಟುಬಿಟ್ಟ! ಅಪರಾಧವನ್ನರಿತು ಕ್ಷಮಾಪಣೆ ಕೋರಿ ದೀನರಾಗಿ ನಿಂತ ಬ್ರಾಹ್ಮಣರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು, ಸಹ್ಯಾದ್ರಿಯ ಮೇಲಿಂದಲೇ ಸಾಗರರಾಜ ವರುಣನೆಡೆ ಪರಶುವನ್ನು ಬೀಸಿ ಎಸೆದ. "ತೆಗೆದುಕೊಳ್ಳಿ ವರುಣ ನನ್ನಿಚ್ಛೆಯಮೇರೆಗೆ ಒಂದಷ್ಟು ಜಾಗವನ್ನು ಬಿಟ್ಟುಕೊಟ್ಟಿದ್ದಾನೆ. ಹೋಗಿ ನೀವೂ ನಿಮಗೆ ಸಂಬಂಧಪಟ್ಟವರೂ ಅಲ್ಲಿ ಜೀವಿಸಿ." ಎಂದುಬಿಟ್ಟ. ಇಂದಿನವರೆಗೂ ನಮ್ಮಲ್ಲಿಗೆ ಕನ್ನಡ ಕರಾವಳಿಯನ್ನು ಪರಶುರಾಮಕ್ಷೇತ್ರವೆಂದೇ ಕರೆಯುತ್ತಾರೆ. ಬ್ರಾಹ್ಮಣರು ನಿತ್ಯ ಸಂಕಲ್ಪದಲ್ಲಿ ’ರಾಮಕ್ಷೇತ್ರೇ’ ಎಂದು ಸಂಕಲ್ಪಿಸುತ್ತಾರೆ. ಜೀವಿತದಲ್ಲಿ ಕೋಪದಿಂದ ತಾನೆಸಗಿದ ಕೃತ್ಯಗಳಿಗೆ ತಡವಾಗಿ ತಾನೇ ನೊಂದುಕೊಂಡ ಪರಶುರಾಮ ಸತತ ತಪಸ್ಸನ್ನಾಚರಿಸುತ್ತಾ ಇವತ್ತಿಗೂ ಬದುಕಿದ್ದಾನೆ ಎಂಬುದು ಹಿಂದೂಗಳ ಪರಮಭಾವ. ಇಲ್ಲಿನವರೆಗೆ ಭೂಕಂಪ ರಹಿತ ಸುರಕ್ಷಿತ ಸ್ಥಳ ನಮ್ಮ ಕನ್ನಡ ಕರಾವಳಿ. ಹಿಂದಿನ ಸರ್ತಿ ಸುನಾಮಿ ಬಂದಾಗಲೂ ತಮಗೇನೂ ಆಗದೆಂದು ಕನ್ನಡ ಕರಾವಳಿಯ ಜನ ಹೇಳಿಕೊಳ್ಳುತ್ತಿದ್ದುದರ ಒಳಗುಟ್ಟು ಅದು ’ಪರಶುರಾಮ ಕ್ಷೇತ್ರ’ವೆಂಬ ಧೈರ್ಯವೇ ಆಗಿತ್ತು. 

ಅಂತಹ ಮುಂಗೋಪಿ ಪರಶುರಾಮ ಬ್ರಹ್ಮಕ್ಷತ್ರಿಯನೆನಿಸಿದ ಮಹಾನುಭಾವ. ಆತ ಓಡಾಡಿದ ಕುರುಹುಗಳಿರುವ ಜಾಗವನ್ನು  ನೋಡುವ ಕುತೂಹಲವನ್ನು ತಣಿಸಿಕೊಂಡ ಮೇಲೆ ಆಗಾಗ ನಾನು ಹೋಗಿಬರುತ್ತಿದ್ದ ಜಾಗ ಈ ತೀರ್ಥರಾಜಪುರ. ತೀರ್ಥಗಳಿಗೇ ರಾಜನೆಂಬ ಕಾರಣಕ್ಕೆ ಈ ತೀರ್ಥ ತೀರ್ಥರಾಜನೆನಿಸಿ ದಡದಲ್ಲಿನ  ಊರು ತೀರ್ಥರಾಜಪುರವೆಂದು ಪರಿಗಣಿತವಾಗಿದೆ. ಸಂಬಂಧಿಯೊಬ್ಬರು ಇಲ್ಲಿನ ರಥಬೀದಿಯಲ್ಲಿ ೫-೬ ವರ್ಷಗಳ ಕಾಲ ವಾಸವಿದ್ದರೂ ಒಮ್ಮೆಯೂ ಜಾತ್ರೆಗೆ ನನಗೆ ಹೋಗಲಾಗಲಿಲ್ಲ. ಅವರು ವಾಸವಿದ್ದ ಮನೆ ಬಹಳ ವಿಶಾಲವಾಗಿತ್ತು. ಮನೆಯ ಕೆಲವು ಭಾಗಗಳಲ್ಲಿ ನಾಗಸರ್ಪಗಳು ಆಗಾಗ ಬರುತ್ತಿದ್ದರೂ ಯಾರಿಗೂ ಕಚ್ಚಿದ ದಾಖಲೆಯಿಲ್ಲ! ತಂಪಾದ ಸಮಶೀತೋಷ್ಣ ಹವಾಮಾನ ಎಲ್ಲರನ್ನೂ ತೀರ್ಥಹಳ್ಳಿಗೆ ಸೆಳೆಯುತ್ತದೆ. ದಿ| ಕುವೆಂಪು ಅವರು ಇದೇ ತಾಲೂಕಿನ ಕುಪ್ಪಳಿಯಲ್ಲಿ ಜನಿಸಿದ್ದರು.


ತೀರ್ಥಹಳ್ಳಿಯವರು ಸಜ್ಜನರು; ಪರಶುರಾಮನ ಭಕ್ತರಾದರೂ ಆತನಂತೇ ಮುಂಗೋಪಿಗಳಲ್ಲ. ಇಲ್ಲಿನವರೆಗೆ ಎಲ್ಲೂ ಅಂತಹ ಧನದಾಹೀ ಪ್ರವೃತ್ತಿ ಕಂಡುಬರಲಿಲ್ಲ. ಮನೆಗಳೂ ಶತಮಾನಗಳಷ್ಟು ಹಳೆಯವು. ಜಾಗ ವಿಶಾಲ ವಿಶಾಲ. ಜನರ ಮನಸ್ಸೂ ಕೂಡ ಜಾಗದಂತೇ ವಿಶಾಲ. ಸುತ್ತಲಿನ ಹಳ್ಳಿಗಳಿಂದ ಖರೀದಿಗಾಗಿ ಬರುವ ರೈತಾಪಿ ಜನರಿಗೆ ಮಾರುಕಟ್ಟೆಯಲ್ಲಿ ನಿಂತು ಸಾಮಾನು ಒದಗಿಸುವವರು ಬಹುಸಂಖ್ಯಾಕರು ಮೂಲ ಕರಾವಳಿಯವರೇ! ಇದು ಪರಶುರಾಮನಿಗೂ ಕರಾವಳಿಗೂ ಇದ್ದ ಸಂಬಂಧದಿಂದ ಉಂಟಾದ ಪರಿಣಾಮವೇ? ಗೊತ್ತಿಲ್ಲ. ಬೇಸಿಗೆಯಲ್ಲಿ ತಂಗಾಳಿಯಲ್ಲಿ ತುಂಗಾತಟದಲ್ಲಿ ವಿಹರಿಸುತ್ತಾ ಪರಶುರಾಮ ಕೊಂಡಕ್ಕೆ ಭೇಟಿನೀಡುವುದೇ ಸಂತಸ. ಮಳೆಗಾಲದಲ್ಲಿ ನದಿ ನೀರಿನ ಸೆಳವಿನಿಂದ ಕೂಡಿರುವುದರಿಂದ ತೀರ್ಥಕ್ಕೆ ಹೋಗಲಾಗುವುದಿಲ್ಲ. ಆಗ ದಡದಿಂದಲೇ ಮಳೆನಿಂತಾಗ ದೂರದಿಂದ ಶಿಲೆಯ ಮಂಟಪವನ್ನು ಕಾಣುವುದರಲ್ಲೇ ತೃಪ್ತಿಪಡಬೇಕು. ಮನೆಗಳ ಹಾಗೆ ರಸ್ತೆಗಳು ವಿಶಾಲವಾಗಿಲ್ಲ. ಊರಕಡೆಯ ಹಳೆಯತಲೆಮಾರಿನ ರಸ್ತೆಗಳಂತೇ ತುಸು ಇಕ್ಕಟ್ಟಿಕ್ಕಟ್ಟೇ. ತೀರ್ಥಹಳ್ಳಿಯ ಇನ್ನೊಂದು ವಿಶೇಷವೆಂದರೆ ತುಂಗಾನದಿಗೆ ವಿಶ್ವೇಶ್ವರಯ್ಯನವರು ನಿರ್ಮಿಸಿದ್ದ ಕಮಾನುಳ್ಳ ಸೇತುವೆ! ಸೇತುವೆ ಇನ್ನೂ ಗಟ್ಟಿಮುಟ್ಟಾಗಿದ್ದು ವಾಹನಸಂಚಾರ ಈಗ ಇನ್ನೂ ಜಾಸ್ತಿಯಾಗಿದೆ! ಇಂದು ನಡೆಯುವ ಸರಕಾರೀ ಕೆಲಸಗಳಿಗೆ ಸವಾಲಾಗಿ ನಿಂತು ತನ್ನ ಗಟ್ಟಿತನವನ್ನು ಎತ್ತಿತೋರುತ್ತದೆ. ನದೀ ಪಾತ್ರದಲ್ಲಿರುವ ಕಲ್ಲುಗಳಲ್ಲಿ ನೀರಿನ ಸೆಳವಿನಿಂದಾದ ಪ್ರಕೃತಿ ನಿರ್ಮಿತ ಆಕೃತಿಗಳು ಗಮನಸೆಳೆಯುತ್ತವೆ. ಬೇಸಿಗೆಯ ದಿನಗಳಲ್ಲಿ ನೀವು ಹೋದರೆ ತೀರ್ಥಹಳ್ಳಿಯನ್ನು ಮರೆಯುವುದೇ ಇಲ್ಲ;  ಯಾಕೆಂದರೆ ಪರಶುರಾಮ, ತೀರ್ಥರಾಮೇಶ್ವರ, ಫಣಿಯಮ್ಮ, ಎಳ್ಳಮವಾಸ್ಯೆ ಜಾತ್ರೆ ನಿಮ್ಮ ಸುತ್ತ ಗಿರಕಿ ಹೊಡೆಯುತ್ತವಲ್ಲಾ! ಅಂದಹಾಗೆ ತೀರ್ಥಹಳ್ಳಿಯ ರಸ್ತೆ ನಿಮಗೆಲ್ಲಾ ಗೊತ್ತೇ ಇದೆಯಲ್ಲಾ ...ಅದಕ್ಕೇ ಅದರ ಬಗ್ಗೆ ಜಾಸ್ತಿ ಕೊರೆಯಲು ಮುಂದಾಗಲಿಲ್ಲ !!      

Thursday, August 23, 2012

ಶತಮಾನದ ಪ್ರಬುದ್ಧ ’ಜೀವಿ’

                              
ಚಿತ್ರಋಣ: ಭಾರತೀಯ ವಿದ್ಯಾಭವನದ ಆಹ್ವಾನ ಪತ್ರಿಕೆ 
ಶತಮಾನದ ಪ್ರಬುದ್ಧ ’ಜೀವಿ’

ವತ್ಸ ದೇಶದ ಕೌಶಾಂಬಿ ನಗರವನ್ನು ರಾಜಧಾನಿಯನ್ನಾಗಿಸಿಕೊಂಡು ಆಳುತ್ತಿದ್ದ ದೊರೆ ಶತಾನೀಕ. ಶತಾನೀಕ ಕೊಡುಗೈ ದೊರೆಯೆಂದೇ ಪ್ರಸಿದ್ಧ; ಸಮಕಾಲೀನ ದಾನಿಗಳಲ್ಲೇ ಮಹಾದಾನಿ. ಬ್ರಾಹ್ಮಣರನ್ನು ಕರೆಯುವುದು, ಗೌರವಿಸಿ ಸತ್ಕರಿಸಿ ಕೈತುಂಬಾ ನಗನಾಣ್ಯಗಳನ್ನು ಕೊಟ್ಟುಕಳಿಸುವುದು ಅವನ ವಾಡಿಕೆ. ಅದೆಷ್ಟೇ ಜನ ಬ್ರಾಹ್ಮಣರು ಬಂದರೂ ಕಿಂಚಿತ್ತೂ ಬೇಸರಪಡದೇ ದಾನಮಾಡಿದವ ಶತಾನೀಕ. ಆತನ ಮಗ ಆತನಿಗೆ ತದ್ವಿರುದ್ಧ; ಮಗ ಸಹಸ್ರಾನೀಕ ದಾನ ಮಾಡುವುದು ಅಲ್ಪ.[ಸಹಸ್ರಾನೀಕ ತನ್ನ ಸ್ವಂತ ಗೆಯ್ಮೆಯಿಂದ ಬಂದದ್ದನ್ನು ಮಾತ್ರ ದಾನಮಾಡುತ್ತಿದ್ದ ಎಂಬುದನ್ನು ಮರೆಯಬೇಡಿ] ಈ ಬಗ್ಗೆ ಅನೇಕ ಮಂದಿ ಬ್ರಾಹ್ಮಣರು ಅವನಲ್ಲಿಯೇ ಕೇಳಿದರು" ಅಯ್ಯಾ ರಾಜನ್, ತಾವು ಕೊಡಮಾಡುವ ದಾನ ನಮ್ಮಲ್ಲಿ ಹಲವರಿಗೆ ಸಿಗುತ್ತಿಲ್ಲದ ಕಾರಣ ನಾವು ದೇಶವನ್ನು ಬಿಟ್ಟುಹೊರಡುತ್ತಿದ್ದೇವೆ."--ಹಾಗೆ ಹೇಳುತ್ತಾ ಬಹಳಷ್ಟು ಬ್ರಾಹ್ಮಣರು ವತ್ಸದೇಶವನ್ನು ತೊರೆದರು. ಕೊನೆಗೊಮ್ಮೆ ಕೆಲವು ಬ್ರಾಹ್ಮಣರು ಸಹಸ್ರಾನೀಕನಲ್ಲಿ ಬಂದಾಗ ಸಹಸ್ರಾನೀಕ ಪ್ರಶ್ನಿಸಿದ" ಬ್ರಾಹ್ಮಣೋತ್ತಮರೇ, ನೀವು ನಿಮ್ಮ ತಪೋಬಲದಿಂದ ಸಕಲವನ್ನೂ ತಿಳಿಯಬಲ್ಲವರಾಗಿರುತ್ತೀರಿ. ನನ್ನ ತಂದೆ ಶತಾನೀಕ ನಿಮ್ಮಂಥಾ ಸಾವಿರಾರು ಬ್ರಾಹ್ಮಣರಿಗೆ ದಾನ ನೀಡಿದ. ಅದರ ಫಲವಾಗಿ ಆತನೀಗ ಸ್ವರ್ಗದಲ್ಲೇ ಇರಬೇಕು. ಹೇಳಿ ಆತನೀಗ ಎಲ್ಲಿದ್ದಾನೆ? ಆ ಬಗ್ಗೆ ಸರಿಯಾಗಿ ತಿಳಿಸಿದಲ್ಲಿ ನಿಮ್ಮಂತಹ ಅನೇಕರಿಗೆ ದಾನ ನೀಡಲು ನನ್ನ ಅಭ್ಯಂತರವಿಲ್ಲ." 

ಬ್ರಾಹ್ಮಣರು ಬೆವತುಹೋದರು. ಯಾಕೆಂದರೆ ಚಿಕ್ಕಪುಟ್ಟ ತಪಸ್ಸಿದ್ಧಿಯಿಂದ ಸ್ವರ್ಗ-ನರಕಗಳ ಮಾಹಿತಿ ದೊರೆಯುವುದು ಸಾಧ್ಯವಿಲ್ಲ; ರಾಜಾಜ್ಞೆಯನ್ನು ಶಿರಸಾವಹಿಸದಿದ್ದರೆ ರಾಜ ಕೋಪದಿಂದ ತಲೆತೆಗೆಸಲೂ ಬಹುದು. ಆತಂಕದ ಕ್ಷಣಗಳನ್ನು ಎದುರಿಸುತ್ತಾ ಮನದಲ್ಲಿ ದೇವರನ್ನು ನೆನೆಯುತ್ತಾ ಬ್ರಾಹ್ಮಣರು ಹೊರಹೊರಟರು. ಬಹುದೂರ ಸಾಗಿದಾಗ, ಕಾಡಿನದಾರಿಯಲ್ಲಿ ತರುವೊಂದರ ಬುಡದಲ್ಲಿ ಭಾರ್ಗವ ಮಹರ್ಷಿ ಕಾಣಿಸಿದ. ಸುದೀರ್ಘ ತಪಸ್ಸಿನಲ್ಲಿ ನಿರತನಾಗಿದ್ದ ಭಾರ್ಗವನಿಗೆ ವಂದಿಸಿಕೊಳ್ಳುತ್ತಾ ದಯೆತೋರಬೇಕೆಂದು ಬ್ರಾಹ್ಮಣರು ಪ್ರಾರ್ಥಿಸಿದರು. ಭಾರ್ಗವ ಒಮ್ಮೆಲೇ ಮನಸ್ಸು ಕೊಡಲಿಲ್ಲ. ಮತ್ತೆ ಮತ್ತೆ ಪ್ರಾರ್ಥನೆಗಳು ಸಂದಮೇಲೆ ಭಾರ್ಗವ ಕರಗಿದ. ಶತಾನೀಕನ ಬಗ್ಗೆ ತಿಳಿದು ಹೇಳಲು ಉದ್ಯುಕ್ತನಾದ ಭಾರ್ಗವ, ಸೂರ್ಯದೇವನ ಮುಂದಾಳತ್ವದಲ್ಲಿ ಸ್ವರ್ಗದ ಹಾದಿ ಹಿಡಿದ. ಹಾದಿಯಲ್ಲಿ ೨೮ ಕೋಟಿ ವಿವಿಧ ನರಕಗಳು ಎದುರಾದವು. ಒಂದೊಂದರಲ್ಲೂ ಯಮಭಟರು ಪಾಪಿಗಳಿಗೆ ಚಿತ್ರವಿಚಿತ್ರ ಹಿಂಸೆನೀಡುತ್ತಿದ್ದರು. ಮಾರ್ಗಮಧ್ಯೆ ಒಂದು ನರಕದಲ್ಲಿ ಬ್ರಾಹ್ಮಣನೊಬ್ಬ ಭಾರ್ಗವನಿಗೆ ಅಡ್ಡಲಾದ."ಎಲೈ ಭಾರ್ಗವ ಮುನಿಯೇ ನೀನು ನನಗೆ ಕೊಡಬೇಕಾದ ಒಂದು ನಾಣ್ಯವನ್ನು ಕೊಟ್ಟು ಮುಂದೆ ಚಲಿಸುವ ಅನುಮತಿಯನ್ನು ಪಡೆಯುವವನಾಗು" ಎಂದ! ಭಾರ್ಗವ ತಬ್ಬಿಬ್ಬಾದ! " ಬ್ರಾಹ್ಮಣನೇ ನನ್ನಲ್ಲಿ ಯಾವುದೇ ನಾಣ್ಯವಿಲ್ಲ, ನೀನೀಗ ನನ್ನನ್ನು ಬಿಟ್ಟರೆ ಹೋಗಿ ಶತಾನೀಕನ ಬಗ್ಗೆ ತಿಳಿದುಕೊಂಡಾನಂತರ ಭೂಲೋಕಕ್ಕೆ ತೆರಳಿ ನಾಣ್ಯದೊಂದಿಗೆ ಮತ್ತೆ ಮರಳಿ ನಿನಗದನ್ನು ತಲ್ಪಿಸಿ ಸ್ವಸ್ಥಾನಕ್ಕೆ ವಾಪಸ್ಸಾಗುತ್ತೇನೆ." ಬ್ರಾಹ್ಮಣನೆಂದ-"ಮುನಿಯೇ ಇಲ್ಲಿ ಏನಿದ್ದರೂ ನಗದು ವ್ಯವಹಾರ, ನಾಣ್ಯವಿಲ್ಲದಿದ್ದರೆ ಹೋಗಲಿ, ನಿನ್ನ ತಪಸ್ಸಿನ ೬ನೆಯ ಒಂದುಭಾಗವನ್ನು ನನಗೆ ಧಾರೆಯೆರೆ ಅಷ್ಟು ಸಾಕು." "ತಥಾಸ್ತು" ಎಂದ ಭಾರ್ಗವನಿಗೆ ಮುಂದಿನ ದಾರಿ ಕಾಣಿಸತೊಡಗಿತು.      

ಕಾಣಿಸತೊಡಗಿದ ದಾರಿಯಲ್ಲಿ ಮುನ್ನಡೆದಾಗ ಒಬ್ಬ ಗೋವಳ, ಒಬ್ಬ ದರ್ಜಿ, ಒಬ್ಬ ಮಡಿವಾಳ, ಒಬ್ಬ ಅರ್ಚಕ ಮತ್ತು ಒಬ್ಬ ಕಟ್ಟಡಕಟ್ಟುವವ ಹೀಗೇ ಈ ಐದು ಜನ ಎದುರಾಗುತ್ತಾ ಎಲ್ಲರೂ ಭಾರ್ಗವ ಗಳಿಸಿದ ಪುಣ್ಯದಲ್ಲಿ ೬ನೆಯ ಒಂದು ಭಾಗವನ್ನು ಪಡೆಯುತ್ತಾ ಹೋಗಿ ಕೊನೆಗೊಮ್ಮೆ ಭಾರ್ಗವನಲ್ಲಿ ಗಳಿಸಿದ ಪುಣ್ಯವೇ ಇಲ್ಲದಂತಾದರೂ, ಜನ್ಮಾಂತರಗಳಲ್ಲಿ ತಾನು ಸಲ್ಲಿಸದೇ ಬಾಕಿ ಉಳಿಸಿದ್ದ ಸಾಲದ ವ್ಯವಹಾರ ಚುಕ್ತಾ ಆಗಿ, ಅದರ ಫಲವಾಗಿ ಶತಾನೀಕನನ್ನು ಕಾಣುವಲ್ಲಿ ಭಾರ್ಗವ ಯಶಸ್ವಿಯಾದ. ನರಕವೊಂದರಲ್ಲಿ ಶತಾನೀಕನನ್ನು ತಲೆಕೆಳಗಾಗಿ ನೇತುಹಾಕಿ ಕುದಿಯುವ ಎಣ್ಣೆಯಲ್ಲಿ ಮುಳುಗಿಸಿ ಎಬ್ಬಿಸುವ ತಯಾರಿ ನಡೆಯುತ್ತಿತ್ತು. ತನ್ನನ್ನು ಕಾಣಲು ಅಲ್ಲಿಗೆ ಬಂದ ಭಾರ್ಗವನಿಂದ ವಿಷಯ ತಿಳಿದ ಶತಾನೀಕ ಭಾರ್ಗವನಲ್ಲಿ ಹೇಳಿದ " ಮಹಾಮುನಿಯೇ, ನಾನು ಮಹಾದಾನಿಯೆನಿಸಿ ಜೀವನಪೂರ್ತಿ ದಾನಗಳನ್ನು ನೀಡಿದ್ದರೂ ನರಕದ ಶಿಕ್ಷೆ ಏಕೆಂಬುದು ತಮ್ಮ ಪ್ರಶ್ನೆಯಾಗಿದೆ. ರಾಜನಾಗಿದ್ದ ನಾನು ಪ್ರಜೆಗಳಿಂದ ವಿವಿಧರೂಪದಲ್ಲಿ ಪಡೆದ ಕರ-ಕಂದಾಯಗಳಲ್ಲೇ ಕೆಲವು ಭಾಗವನ್ನು ಹಾಗೆ ದಾನಮಾಡಿರುತ್ತೇನೆ ವಿನಃ ದಾನದ ಸುವಸ್ತುಗಳೂ ನಗ-ನಾಣ್ಯಗಳೂ ನನ್ನ ಕಷ್ಟಾರ್ಜಿತದಿಂದ ಜನಿತವಲ್ಲ. ದೇಶದ ರಾಜನಾಗಿ ನನ್ನ ಸ್ವಂತಿಕೆಗೆ ನಾನೇ ನಾನು ದುಡಿಯಬೇಕೆಂದು ನನಗನ್ನಿಸಲೇ ಇಲ್ಲ. ಹಾಗೆ ಬಂದ ಹೇರಳ ಸಂಪತ್ತಿನಲ್ಲಿ ಕೆಲಭಾಗವನ್ನು ದಾನಮಾಡಿದಾಗ ಅದೇ ಬಹಳದೊಡ್ಡದಾಗಿ ’ದಾನಿ’ ಎಂದು ಜನರಿಂದ ಗೌರವಿಸಲ್ಪಟ್ಟೆ. ಪ್ರಜೆಗಳ ಹಿತರಕ್ಷಣೆಗಾಗಿ ಸಾರ್ವಜನಿಕ ಕೆಲಸಗಳಿಗೆ ವ್ಯಯವಾಗಬೇಕಾದ ಸಂಪತ್ತು ನನ್ನ ಸ್ವಂತದ ಪುಣ್ಯಗಳಿಕೆಗೆ ಬಳಸಲ್ಪಟ್ಟಿತು. ಅದರ ಫಲ ನಿಷ್ಫಲವಾಗಿ ನನಗೆ ಈ ರೀತಿಯ ನರಕಯಾತನೆ ಕೊಡಮಾಡಲ್ಪಡುತ್ತಿದೆ. ತಾವು ಈ ಕೂಡಲೇ ನನ್ನ ಮಗನಿಗೆ ಈ ವಾರ್ತೆಯನ್ನರುಹಿ, ದಾನಮಾಡುವಾಗ ತನ್ನ ಸ್ವಂತದ ಪ್ರಾಮಾಣಿಕ ದುಡಿಮೆಯ ಸಂಪತ್ತನ್ನು ದಾನಮಾಡಬೇಕಾಗಿ ತಿಳಿಸಿ. ಅದರಿಂದ ದಾನಮಾಡಿದವರಿಗೂ ಪಡೆದವರಿಗೂ ಶ್ರೇಯಸ್ಸು, ಹೊರತಾಗಿ ಯಾರದೋ ಸಂಪತ್ತನ್ನು ದಾನಮಾಡಿದರೆ ದಾನಿಯೂ ದಾನಪಡೆದವರೂ ಅಧಃಪತನಕ್ಕಿಳಿಯುತ್ತಾರೆ." 

ತಮಷೆಗಾಗಿ ಒಂದು ಮಾತು: ’ಗುಡ್ಡದಮೇಲಿನ ದನವನ್ನು ಗೋದಾನ ಮಾಡುವವರು’ ಎಂಬ ವಾಡಿಕೆಯ ಜಾಣ್ನುಡಿ ನಮ್ಮಲ್ಲಿದೆ. ಹಿಂದಕ್ಕೆ ಗುಡ್ಡಗಳಲ್ಲಿ ಗೋಮಾಳಗಳಿದ್ದವು; ಹಸು-ಕರುಗಳು ಹಸನಾದ ಹಸಿರು ಹುಲ್ಲು-ಸೊಪ್ಪುಗಳನ್ನು ಮೇಯುತ್ತಿದ್ದವು. ಅಂತಹ ಮೇವಿಗೆ ತೆರಳಿದ ಯಾರದೋ ಮಾಲೀಕತ್ವದ ಹಸುವನ್ನು ಯಾರೋ ಹಿಡಿದು ಇನ್ಯಾರಿಗೋ ದಾನಮಾಡಿದರೆ ಹೇಗೆ?---ಇದೇ ಆ ನಾಣ್ನುಡಿಯ ಅರ್ಥ. ಈ ದಿನಗಳಲ್ಲಿ ಸಾವಿರಾರು ತಲೆಗಳನ್ನು ವಂಚಿಸಿ ಹೊಡೆದ ಹಣದಿಂದ ರಾಜಕಾರಣಿಗಳೂ ಸಮಾಜಘಾತುಕ ಉದ್ಯಮಗಳ ಮಾಲೀಕರೂ ದೇವಾಲಯಗಳಿಗೆ ಚಿನ್ನದ/ಬೆಳ್ಳಿಯ ವಿಗ್ರಹ/ಬಾಗಿಲು/ಪಲ್ಲಕ್ಕಿ/ರಥ/ಪಾದ ಕವಚ ಇತ್ಯದಿಗಳನ್ನು ದಾನವಾಗಿ ನೀಡುವುದನ್ನು ಕಾಣುತ್ತೇವೆ. ಪ್ರಾಯಶಃ ದೇವರು ನೇರವಾಗಿ ಸಿಕ್ಕಿದ್ದರೆ ಕೊಂಡುಕೊಳ್ಳುವಷ್ಟು ಸಾಮರ್ಥ್ಯ ಪಡೆದಿರುವ ಗಣಿಧಣಿಗಳೂ ಜೈಲಿನಲ್ಲಿದ್ದೂ ಕಾರು-ಬಾರು ನಡೆಸುವ ಮಂದಿಯೂ ನಮ್ಮಲ್ಲಿದ್ದಾರೆ! ಅಡಿಗೆ ಬಿದ್ದರೂ ಮೂಗು ಮೇಲೇ ಇದೆ ಎಂದುಕೊಳ್ಳುವ ಮಹಾನುಭಾವಿ ಮದ್ಯದ ಹಂಡೆಗಳಿದ್ದಾರೆ! ವಯಸ್ಸು ಎಲ್ಲರಿಗೂ ಆಗುತ್ತಾ ಹೋಗುತ್ತದೆ; ಆದರೆ ಅವರ ಜೀವಿತದಲ್ಲಿ ಅವರ ಸ್ವಯಾರ್ಜಿತವೆಷ್ಟು? ಕುಲಕಸುಬಿನ ತಲೆಮಾರು ಅಳಿದುಹೋದ ನಂತರ ಕೆಲವು ಕಡೆ ಬ್ರಾಹ್ಮಣ ಕುಲದಲ್ಲಿ ಜನಿಸಿದ ಕೆಲವರು ಕೋಳಿ ಸಾಕಣೆ, ಮೊಲಸಾಕಣೆಗಳಲ್ಲಿ ತೊಡಗಿಕೊಂಡಿದ್ದನ್ನೂ ಕಾಣಬಹುದಾಗಿದೆ. ಯಕ್ಷರಂಗದ ದಿಗ್ಗಜ ದಿ| ಶೇಣಿ ಗೋಪಾಲಕೃಷ್ಣ ಭಟ್ಟರು ಒಮ್ಮೆ ಹೇಳುತ್ತಿದ್ದರು- "ದುಡ್ಡಾಗುತ್ತದೆ ಎಂದುಹೇಳಿ ಕಾಳರಾತ್ರಿಯ ಸ್ಮಗ್ಲಿಂಗ್ ದಂಧೆಗೆ ಹೋಗಲೂ ಕೆಲವರು ಸಿದ್ಧರಾಗುತ್ತಾರೆ, ದುಡ್ಡಿನ ಹಿಂದೆ ಬಿದ್ದವರಿಗೆ ಮಾನಾಪಮಾನಗಳ ಪ್ರಶ್ನೆಯಿಲ್ಲ-ಅಲ್ಲಿ ದುಡ್ಡು ಗಳಿಸುವುದೇ ಮುಖ್ಯ. ನಾವೆಲ್ಲಾ ದುಡ್ಡಿನ ಹಿಂದೆ ಬಿದ್ದವರಲ್ಲ. ದುಡ್ಡಿಗಾಗಿ ಮೌಲ್ಯಗಳನ್ನು ಮಾರಿಕೊಳ್ಳುವುದಿಲ್ಲ. ಹಣೆಯಲ್ಲಿ ಬರೆದ ಫಲವನ್ನು ಪಡೆಯುತ್ತೇವೆ ಹೊರತಾಗಿ ರೀತಿ-ನೀತಿ ಬಿಟ್ಟು ನಡೆಯುವುದಿಲ್ಲ."  ಎಂಥಾ ಮಾತು ನೋಡಿ! ಹಣ ಹೇರಳವಾಗಿ ಬರುತ್ತದೆ ಎಂಬ ಏಕಮಾತ್ರ ಕಾರಣಕ್ಕೆ [ಬೆಳೆಸುವುದೇ ಈ ವರ್ಗಕ್ಕೆ ತರವಲ್ಲ] ಕೈಯ್ಯಾರೆ ಪ್ರೀತಿಯಿಂದ ಬೆಳೆಸುವ ಕೋಳೀ ಮರಿಗಳನ್ನೂ ಮುದ್ದುಮೊಲಗಳನ್ನೂ ಮಾರಿಕೊಳ್ಳುವ ಬ್ರಾಹ್ಮಣ ಜಾತಿಯ ಜನರಿಗೆ ಏನೆನ್ನಬೇಕು? ಇಂದು ಗಳಿಸಿದ ಹಣದ ಥೈಲಿ ಮುಂದೊಮ್ಮೆ ದೋಷಪರಿಹಾರಕ್ಕೆ ಖರ್ಚಾಗಬಹುದು ಎನ್ನಬೇಕಲ್ಲವೇ? 

ಜೀವಿತದಲ್ಲಿ ಇಂಥಾ ಯಾವುದೇ ಅಡ್ಡಕಸುಬಿಗೆ ಇಳಿಯದೇ ಕಷ್ಟಾರ್ಜಿತದಲ್ಲೇ ೧೦೦ ವರ್ಷಗಳನ್ನು ಪೂರೈಸಿಬಂದವರು ನಮ್ಮ ಹೆಮ್ಮೆಯ ಜೀವಿ. ಅವರ ಕಾಲುಭಾಗದ ವಯಸ್ಸು ನನ್ನದಲ್ಲ. ಅವರು ನನ್ನಜ್ಜ[೨೦೦೪ರಲ್ಲೇ ದಿವಂಗತರು]ನಿಗಿಂತಲೂ ೧೪ ವರ್ಷ ಹಿರಿಯರು!! ನನ್ನಜ್ಜನೂ ನಮ್ಮ ’ಜೀವಿ’ಯ ಹಾಗೇ ಕೊನೆಯವರೆಗೂ ಗಟ್ಟಿಮುಟ್ಟಾಗೇ ಇದ್ದರು; ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಿದ್ದರು. ಯಾರೂ ತನ್ನನ್ನು ಸೇವೆ ಮಾಡುವ ಕಾಲ ಬರಬಾರದು ಎನ್ನುತ್ತಿದ್ದ ಅವರು ಹುಟ್ಟಿದ ಮಿತಿ ಮತ್ತು ಈ ಲೋಕ ಬಿಟ್ಟ ತಿಥಿ ಒಂದೇ ಆಗಿದೆ ! ಆಡಿದ ಮಾತಿನಂತೇ ಕೊನೆಯುಸಿರಿನವರೆಗೂ ಹಾಸಿಗೆ ಹಿಡಿದು ಮಲಗಿ ಇನ್ನೊಬ್ಬರಿಗೆ ಭಾರವಾಗಲಿಲ್ಲ; ಯಾರಿಗೂ ತನ್ನ ಸೇವೆಗೆ ಅವಕಾಶ ನೀಡಲಿಲ್ಲ; ಜೀವಿತದಲ್ಲಿ ಸಲ್ಲದ ಮಾರ್ಗಗಳಿಂದ ಸಂಪಾದನೆ ಮಾಡಲಿಲ್ಲ. ಶ್ರೀಯುತ ಗಂಜಾಮ್ ವೆಂಕಟಸುಬ್ಬಯ್ಯನವರೂ ಕೂಡ ಹಾಗೇ. ಒಂದೂವರೆ ವರ್ಷದ ಹಿಂದೆ ಒಮ್ಮೆ ಅವರ ಮನೆಗೆ ತೆರಳಿದ್ದೆ. ಹೋದಾಗ ಅಲ್ಲಿ ಅವರಿರಲಿಲ್ಲ; ಅವರ ಮಗ ಸಿಕ್ಕಿದ್ದರು. ನೋಡಬಂದ ಸಂತೋಷ ಹಂಚಿಕೊಂಡೆ. ಜೀವಿಯವರು ಯಾವುದೋ ಮೀಟಿಂಗಿಗೆ ತೆರಳಿದ್ದರು. ಬರುವುದು  ಬಹಳ ವಿಳಂಬವಾಗಬಹುದಾದ್ದರಿಂದ, ಯಾವುದೇ ಪೂರ್ವಸೂಚನೆಯಿಲ್ಲದೇ ಹೇಳದೇ-ಕೇಳದೇ ಅವರಲ್ಲಿಗೆ ತೆರಳಿದ್ದ ನಾನು ಪೆಚ್ಚುಮೋರೆಹಾಕಿಕೊಂಡು ಮರಳಿದೆ. ಮಾರನೇ ದಿನ ಬೆಳಿಗ್ಗೆ ಹತ್ತುಗಂಟೆಗೆ ನನ್ನ ಜಂಗಮವಾಣಿ ರಿಂಗಣಿಸಿತು. ಅತ್ತಕಡೆಯ ಧ್ವನಿಯನ್ನು ಆಲೈಸಿಯೇ ತಿಳಿಯಿತು-ಅವರು ಜೀವಿ ಆಗಿದ್ದರು; ಮತ್ತು ಸಹಜವಾಗಿ ತಾನು ಯಾರು ಎಂಬುದನ್ನೂ ಹೇಳಿಕೊಂಡು ಮಾತನಾಡಿದರು. ಜೀವಿಯವರ ಸರಳ ಮಾದರಿಯ ಜೀವನಕ್ಕೆ ಇದೊಂದು ಉದಾಹರಣೆ. 

ಸಂಸ್ಕೃತ ಪಂಡಿತರಾದ ದಿ| ಗಂಜಾಂ ತಿಮ್ಮಣ್ಣಯ್ಯ ಅವರ ಮಗನಾಗಿ 23-08-1913ರಲ್ಲಿ ಮೈಸೂರಿನಲ್ಲಿ ಜನಿಸಿದ ಜೀವಿಯವರು ಬಾಲ್ಯವನ್ನು ಕಳೆದಿದ್ದೂ ಓದಿದ್ದೂ ಬೆಳೆದದ್ದೂ ಅಲ್ಲೇ. ೧೯೩೨ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಎಂ.ಏ ಪೂರೈಸಿ ವಿಶ್ವವಿದ್ಯಾನಿಲಯಕ್ಕೇ ಅತ್ಯುತ್ತಮ ಪ್ರಥಮ ಶ್ರೇಯಾಂಕ ಪಡೆದರು. ನಂತರ ಕಲಿತ ಕಾಲೇಜಿನಲೇ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ಕಾಲಾನಂತರ ಬೆಂಗಳೂರಿಗೆ ಆಗಮಿಸಿ ಇಲ್ಲಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಮುಂದುವರಿಸಿದರು. ಅದೇ ವಿಜಯಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿಯೂ ದುಡಿದರು.

ಪ್ರವೃತ್ತಿಯಲ್ಲಿ ಕನ್ನಡ ಭಾಷಾ ಸಂರಕ್ಷಣೆ ಮತ್ತು ಬೆಳವಣಿಗೆ ಬಗ್ಗೆ ಬಹಳ ತೊಡಗಿಕೊಂಡರು. ಕನ್ನಡ ಸಾಹಿತ್ಯರಂಗದಲ್ಲಿ ಎಲ್ಲಿಲ್ಲದ ಆಸಕ್ತಿ. ತಾವೇ ಬರೆದದ್ದಕ್ಕಿಂತಾ ಇತರರು ಬರೆದಿದ್ದನ್ನು ಆಮೂಲಾಗ್ರ ಆಸ್ವಾದಿಸಿ ಆನಂದಿಸುವ ಕಾವ್ಯವಿನೋದಿ! ಹತ್ತು ನಿಘಂಟುಗಳನ್ನು ಸಂಪಾದಿಸಿದ ಶ್ರೀಯುತರು ಕನ್ನಡ ಭಾಷೆಯ ಎಂಟು ಸಂಪುಟಗಳುಳ್ಳ ನಿಘಂಟನ್ನು ತಯಾರಿಸಿದರು. ೧೯೬೪ರಿಂದ ೧೯೬೯ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಕೆಲಸಮಾಡಿದರು. ಕೆನರಾ ಬ್ಯಾಂಕ್ ಮುಂದಾಗಿ ಜೀವಿಯವರ ಕನ್ನಡನಿಘಂಟನ್ನು ಅಂಧರ ಬಳಕೆಗಾಗಿ ಬ್ರೈಲಿ ಲಿಪಿಗೆ ತರ್ಜುಮೆಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕನ್ನಡದ ಪ್ರಮುಖ ದೈನಿಕ ಪ್ರಜಾವಾಣಿಯಲ್ಲಿ ದಶಕಕ್ಕೂ ಅಧಿಕಕಾಲ ’ಇಗೋ ಕನ್ನಡ’ ವೆಂಬ ಅಂಕಣವನ್ನು ಬರೆದಿದ್ದಾರೆ. ಕರ್ನಾಟಕ ಏಕೀಕರಣದ ಸುವರ್ಣಮಹೋತ್ಸವ ಸಂದರ್ಭದಲ್ಲಿ ’ಕ್ಲಿಷ್ಟಪದಕೋಶ’ವೆಂಬ ಇನ್ನೊಂದು ಡಿಕ್ಶನರಿಯನ್ನು ಕನ್ನಡಿಗರಿಗೆ ಕೊಟ್ಟವರು ಜೀವಿ. ಕನ್ನಡದಲ್ಲಿ ಇದುವರೆಗೆ ಲಭ್ಯವಿರದ ರೀತಿಯದಾದ ಈ ನಿಘಂಟಿನಲ್ಲಿ ಕ್ಲಿಷ್ಟಪದಗಳ ಮೂಲ ಎಲ್ಲಿದೆ, ಯಾವ ಭಾಷೆಯಿಂದ ಶಬ್ದಗಳು ಒದಗಿಬಂದವು, ಅವುಗಳ ಗೂಢಾರ್ಥ-ಗುಹ್ಯಾರ್ಥಗಳೇನು, ಅವುಗಳ ಸ್ಥಾನಬಲ[ವರ್ಚ್ಯೂ ಆಫ್ ವರ್ಡ್ಸ್’ ಪೊಸಿಶನ್]ವೇನು ಮತ್ತು ಅವುಗಳ ಬಳಕೆಯ ಚಮತ್ಕಾರಗಳೇನು ಎಂಬುದರ ಬಗ್ಗೆ ಮಾಹಿತಿ ದೊರಕುತ್ತದೆ. ಭಾರತದ ಭಾಷಾಶಾಸ್ತ್ರಜ್ಞರ ಸಮಿತಿಯ ಉಪಾಧ್ಯಕ್ಷರಾಗಿ ೧೭ ಸುದೀರ್ಘ ವರ್ಷಗಳ ಸೇವೆ ಸಲ್ಲಿಸಿದವರು ನಮ್ಮ ಜೀವಿ. ೧೯೯೮ರಲ್ಲಿ ಕೇಂದ್ರ ಸರಕಾರ ಅವರನ್ನು [ ಇನ್ಸ್ ಟಿಟ್ಯೂಟ್ ಆಫ್ ಏಶಿಯನ್ ಸ್ಟಡೀಸ್,ಚೆನ್ನೈ ತಯಾರಿಸುತ್ತಿದ್ದ, ಕನ್ನಡ-ಇಂಗ್ಲೀಷ್-ಜಪನೀಸ್-ತಮಿಳು ಸೇರಿದ ] ಬಹುಭಾಷಾ ನಿಘಂಟಿನ ಸಲಹೆಗಾರರಾಗಿ ನೇಮಿಸಿತ್ತು. ಆಂಧ್ರಪ್ರದೇಶ ಸರಕಾರ ಅವರನ್ನು ತೆಲುಗು ಪದಕೋಶದ ಸಮಿತಿಗೆ ಸಲಹೆಗಾರನಾಗಿ ನೇಮಿಸಿತ್ತು. ೨೦೦೭ರಲ್ಲಿ ದಕ್ಷಿಣಕನ್ನಡದ ಉಜಿರೆಯಲ್ಲಿ ’ಆಳ್ವಾಸ್ ನುಡಿಸಿರಿ’ ಎಂಬ ಅಕ್ಷರಜಾತ್ರೆಗೆ ಅಧ್ಯಕ್ಷರಾಗಿದ್ದರು. ೨೦೧೧ ರಲ್ಲಿ ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯದ ೭೭ ನೇ ಸಮ್ಮೇಳನದ ಅಧ್ಯಕ್ಷರಾಗಿ ೯೮ರ ವಯದ ಯುವಕ ತಾನೆಂದು ತೋರಿಸಿದ ಕ್ರಿಯಾಶೀಲ ವ್ಯಕ್ತಿ ನಮ್ಮೆಲ್ಲರ ಹೆಮ್ಮೆಯ ಜೀವಿ.

ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ[ಡಿ.ಲಿಟ್ ತತ್ಸಮಾನ ಗೌರವ], ಮಾಸ್ತಿ ಪ್ರಶಸ್ತಿ ಮತ್ತು ಇಂದು ೨೩.೦೮.೨೦೧೨ ರಂದು ಬೆಳಿಗ್ಗೆ ಭಾರತೀಯ ವಿದ್ಯಾಭವನದಲ್ಲಿ ನಡೆದ ಅವರ ಶತಮಾನೋತ್ಸವದ ಸಂಭ್ರಮದ ಸಭೆಯಲ್ಲಿ ಅರ್ಪಿತವಾದ ’ಕುಲಪತಿ ಡಾ|ಕೆ.ಎಮ್.ಮುನ್ಶಿ ಸನ್ಮಾನ’ ಹೀಗೇ ಹಲವು ಪ್ರಶಸ್ತಿಗಳು ಅವರನ್ನರಸಿ ಬಂದಿವೆ. ಪದಸಂಪತ್ತಿಗೆ ಜೀವಿಯ ಕೊಡುಗೆಗೆ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯ ಅವರನ್ನು ಅಭಿನಂದಿಸಿದೆ.

ತನ್ನ ಜೀವಿತದ ಬಹುಪಾಲು ದಿನಗಳನ್ನು ಕನ್ನಡದ ಸೇವೆಗೆ ಮುಡಿಪಾಗಿಟ್ಟ ಮುಗ್ಧ, ನಿಸ್ಪೃಹ ಜೀವಿ ನಮ್ಮ ’ಜೀವಿ’ ಎನ್ನಲು ಮನ ತುಂಬಿಬರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವರು ನಿಘಂಟನ್ನು ಸಂಸ್ಕರಿಸುವ ವೇಳೆ ಸರಕಾರ ಯಾವ ಸಹಾಯಧನವನ್ನೂ ಕೊಡಮಾಡದಿರುವುದನ್ನೂ ಇಲ್ಲಿ ನೆನೆದುಕೊಳ್ಳಲೇಬೇಕಾಗುತ್ತದೆ. ಸಿಗುವ ಕನಿಷ್ಠ ವೇತನದ ಹೊರತಾಗಿ ಓಡಾಟದ ಖರ್ಚಿಗೂ ಕೈಯ್ಯಿಂದ ತೆತ್ತು ಕನ್ನಡ ನಿಘಂಟನ್ನು ಹೊರತರುವಲ್ಲಿ ಮೆರೆದ ಅವರ ನಿಸ್ವಾರ್ಥ ಸೇವೆ ಮನನೀಯ ಮತ್ತು ಅನುಕರಣೀಯ. ಇಂತಹ ಸಾಹಿತ್ಯಲೋಕದ ದಿಗ್ಗಜ ಶತಮಾನ ಪೂರೈಸಿ ನಮ್ಮ ಮಧ್ಯೆ ಓಡಾಡಿಕೊಂಡು ಇನ್ನೂ ಲವಲವಿಕೆಯಿಂದ, ಅತ್ಯಾಸಕ್ತಿಯಿಂದ ಕೆಲವು ಕನ್ನಡ ಕೃತಿಗಳನ್ನು ರಚಿಸುತ್ತಿರುವುದು ಅಭಿನಂದನೀಯ. ಇದು ಎಲ್ಲರಿಗೂ ಸಾಧ್ಯವಾಗುವ ಮಾತಲ್ಲ.

೭೦ ರ ನಂತರ
ಯಾರಾದರೂ
ಇದ್ದರೆ
ಕಣ್ಣು ಕಾಣಿಸದಿರಬಹುದು
ಕಿವಿ  ಕೇಳಿಸದಿರಬಹುದು
ಶರೀರ ದೊಣ್ಣೆಕೊಟ್ಟರೂ ನಿಲ್ಲದಂತಾಗಬಹುದು
ಚರ್ಮ ಸಂಪೂರ್ಣ ಸುಕ್ಕುಗಟ್ಟಿ ಹೋಗಬಹುದು
ಬುದ್ಧಿ ಭ್ರಮಣೆಯಾಗಬಹುದು
.
.
.
.
.
......ಹೀಗೇ ಆಗಬಹುದು ಎಂಬ ಅನಿಸಿಕೆಗಳೂ ಮುಪ್ಪಿನ ಇತರರನ್ನು ಕಂಡು ಅನುಭವಗಳೂ ಇವೆ. ಈ ಎಲ್ಲಾ ಅನಿಸಿಕೆ-ಅನುಭವಗಳ ನಡುವೆ ಕಂಚಿನ ಕಂಠದ ಸಾಧಾರಣ ಎತ್ತರದ ದಿವ್ಯ ತೇಜದ ವ್ಯಕ್ತಿ ಎದ್ದು ಸಭೆಯಲ್ಲಿ ಮಾತನಾಡುತ್ತಿರುವಾಗ ನಮ್ಮಜ್ಜ ದೊರೆತ ಅನುಭವವಾಗುತ್ತದೆ!  

ಜೀವಿಯವರ ಶತಮಾನೋತ್ಸವ ಸಮಿತಿಯೊಂದು ರಚಿತವಾಗಿದೆ. ಸಮಿತಿಯ ಸದಸ್ಯರೆಲ್ಲಾ ಸ್ವಯಂಪ್ರೇರಿತರು ಮತ್ತು ಜೀವಿಯನ್ನು ಅಷ್ಟಾಗಿ ಪ್ರೀತಿಸುವವರು. ಅಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲ; ಯಾವುದೇ ಪ್ರಲೋಭನೆಯಿಲ್ಲ; ಯಾವುದೇ ನಿರೀಕ್ಷಣೆ ಕೂಡ ಇಲ್ಲ; ಇರುವುದೊಂದೇ ಅದು ಕನ್ನಡಕ್ಕೆ ತನ್ನನ್ನು ತೊಡಗಿಸಿಕೊಂಡ ’ಜೀವಿ’ಯ ಮೇಲಿನ ಅಭಿಮಾನ. ವರ್ಷಪೂರ್ತಿ ಬೆಂಗಳೂರೂ ಸೇರಿದಂತೇ ಹಲವುಕಡೆ ಜೀವಿಯ ಶತಮಾನೋತ್ಸವ ಸಂಭ್ರಮ ನಡೆಯುತ್ತದೆ. ಈ ಸುಸಂದರ್ಭದಲ್ಲಿ ’ಜೀವಿ’ ಇನ್ನೂ ಬಹುಕಾಲ ಬಾಳಲಿ, ಇಂದಿನಂತೇ ಎಂದಿಗೂ ನಮ್ಮೊಡನೆ ಕ್ರಿಯಾಶೀಲರಾಗಿ ನಮ್ಮನ್ನೆಲ್ಲಾ ಕನ್ನಡಕ್ಕಾಗಿ ಉತ್ತೇಜಿಸಲಿ ಎಂಬುದು ಜಗನ್ನಿಯಾಮಕನಲ್ಲಿ ನನ್ನ ಪ್ರಾರ್ಥನೆ; ಇದು ಬಹುಶಃ ನಿಮ್ಮ ಪ್ರಾರ್ಥನೆಯೂ ಕೂಡ ಎಂದುಕೊಳ್ಳಲೇ?

Tuesday, August 21, 2012

ಶುಭಾಶಯಗಳು ನನ್ನೆಲ್ಲಾ ಮಿತ್ರರಿಗೆ: ಹುಟ್ಟುಹಬ್ಬ ಆಚರಿಸಿಕೊಂಡವರಿಗೆ, ಆಚರಿಸಿಕೊಳ್ಳಲಿರುವವರಿಗೆ!


ಚಿತ್ರಋಣ: ಅಂತರ್ಜಾಲ 

ಶುಭಾಶಯಗಳು ನನ್ನೆಲ್ಲಾ ಮಿತ್ರರಿಗೆ: ಹುಟ್ಟುಹಬ್ಬ ಆಚರಿಸಿಕೊಂಡವರಿಗೆ, ಆಚರಿಸಿಕೊಳ್ಳಲಿರುವವರಿಗೆ! 

ಅನೇಕಾವರ್ತಿ ನೀವು ನಿರೀಕ್ಷಿಸಿರುತ್ತೀರಿ:ಈ ಮುನುಷ್ಯನಿಂದ ಏನಾದರೂ ಪ್ರತಿಸ್ಪಂದನವಾಗಬಹುದೇ ಎಂದು! ಹಲವರಿಗೆ ನನ್ನಿಂದ ಯಾವುದೇ ಸ್ಪಂದನವೂ ನೇರವಾಗಿ ಸಿಗದೇ ಇದ್ದಿರಬಹುದು, ಕೆಲವರಿಗೆ ಸಿಕ್ಕಿರಲೂ ಬಹುದು. ಇಲ್ಲಿ ಹೆಚ್ಚು-ಕಮ್ಮಿಯ ಅಳತೆಗೋಲಿಲ್ಲ; ಮೇಲು-ಕೀಳೆಂಬ ಭಾವವಲ್ಲ; ಪೂರ್ವಾಗ್ರಹ ಪೀಡನೆ ಇಲ್ಲವೇ ಇಲ್ಲ. ಟಿವಿಯಲ್ಲಿ ಬರುವ ಜ್ಯೋತಿಷಿಗಳು ’ಆರೂಢ ಪ್ರಶ್ನೆ’ ಎಂಬ ಮಾರ್ಗವನ್ನು ಅನುಸರಿಸಿ ಉತ್ತರಿಸುವುದನ್ನು ನೀವು ನೋಡಿಯೇ ಇರುತ್ತೀರಿ. ಇದೂ ಅಂಥದ್ದೇ ಒಂದು, ದಿನಕ್ಕೊಮ್ಮೆಯೋ ಅಥವಾ ಎರಡುದಿನಕ್ಕೊಮ್ಮೆಯೋ ಫೇಸ್ ಬುಕ್ ತೆರೆದಾಗ ಸಮಯ ಸ್ವಲ್ಪಮಟ್ಟಿಗಾದರೂ ಅನುಮತಿಸಿದರೆ, ಕೆಲವನ್ನು ನೋಡಿ ಲೈಕ್ ಕ್ಲಿಕ್ಕಿಸ್ಸುವುದಿದೆ; ಕೆಲವಕ್ಕೆ ಅಲ್ಲಲ್ಲಿ ಕಾಮೆಂಟು ಹಾಕುವುದಿದೆ; ಕೆಲವನ್ನು ಜಾಸ್ತಿ ಓದಲು ಸಮಯಸಾಲದೇ ಬಿಟ್ಟಿರುವುದೂ ಇದೆ; ಇನ್ನೂ ಕೆಲವನ್ನು ಓದದೇ ಇರುವುದೇ ಲೇಸು ಎಂದು ಬಗೆದು ಮುಂದೆ ಸಾಗುವುದೂ ಇದೆ! ದಿನ ಬೆಳಗಾದರೆ, ರಾತ್ರಿಯಾದರೆ ಯಾರಾದರೂ ಈ ಪುಟವನ್ನು ಲೈಕ್ ಮಾಡಿ ಎಂದು ವಿನಂತಿಸುತ್ತೀರಿ, ಇನ್ಯಾರೋ ಮತ್ಯಾವುದೋ ಸಮಾರಂಭಕ್ಕೆ ಆಹ್ವಾನಿಸುತ್ತೀರಿ, ಒಂದಷ್ಟು ಜನ ಹಲವು ಅಪ್ಲಿಕೇಶನ್ಗಳನ್ನು ಮುಂದೆ ಇಡುತ್ತೀರಿ, ನಾವೂ ನೀವೂ ಒಟ್ಟಿಗೇ ಇಂಥಲ್ಲಿ ಕೆಲಸಮಾಡುವುದಾಗಿ ಘೋಷಿಸೋಣ ಎನ್ನುತ್ತೀರಿ, ಜನ್ಮದಿನ ಸೂಚಿಸುವ ಕ್ಯಾಲೆಂಡರಿಗೆ ಆಸ್ತು ಎನ್ನಿ ಎನ್ನುತ್ತೀರಿ, ಹಲವರು ಆಟವಾಡಲು ಕರೆಯುತ್ತಲೇ ಇರುತ್ತೀರಿ ! 

ದಯಮಾಡಿ ಆಟಕ್ಕೆ ಯಾವ ವಿನಂತಿಯನ್ನೂ ಕಳಿಸಬೇಡಿ, ನನಗೆ ಓದಲೇ ಸಮಯವಿಲ್ಲ ಹಾಗಿದ್ದಾಗ ಆಟವಾಡಲು ಸಮಯವೆಲ್ಲಿ? ಉತ್ತಮ ಪುಸ್ತಕಗಳೇ ನನ್ನ ಸಂಗಾತಿಗಳು ಮತ್ತು ಆಟಪಾಠ, ಮಿಕ್ಕಿದ ಆಟಗಳನ್ನು ಬಾಲ್ಯಕ್ಕೆ ಸೀಮಿತಗೊಳಿಸಿ ಈಗ ಜಗತ್ತನ್ನೇರ್ ಆಡಿಸುವ ಶಕ್ತಿಯ ಆಟಗಳನ್ನು ಅರಿಯಲು ಆ ಬಗ್ಗೆ ಜಾಸ್ತಿ ಆಳವಾಗಿ ಹುಡುಕಲು ಕಾತುರನಾಗಿ ಅದೇ ಆಟ; ಜೊತೆಗೆ ಸ್ವಲ್ಪ ಉದರಂಭರಣೆಯ ಆಟ-ಈ ಎರಡು ಆಟಗಳನ್ನೇ ನಾನು ಹೆಚ್ಚಾಗಿ ಆಡಲು ಬಯಸುತ್ತೇನೆ; ಇವು ನಿಮ್ಮಿಷ್ಟದ ಆಟಗಳಲ್ಲಾ ಎಂಬುದು ನನಗೆ ಗೊತ್ತು! ಎಲ್ಲೋ ಯಾರೋ ಕೆಲವರಿಗೆ ಇಷ್ಟವಾದರೆ ಅಂಥವರು ಇಂಥದ್ದರಲ್ಲಿ ತೊಡಗಿಕೊಳ್ಳಬಹುದು. ಪ್ರಪಂಚದ ಆವಿಷ್ಕಾರವಾಗಿ ೧೪ ಬಿಲಿಯನ್ ವರ್ಷಗಳೇ ಕಳೆದವು ಎನ್ನುತ್ತದೆ ಅಧುನಿಕ ವಿಜ್ಞಾನ,ಆದರೂ ಯಾರೂ ಅದರ ರಹಸ್ಯದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಲಿಲ್ಲ; ಕಂಡವರು ಮರಳಿ ಹೇಳಲಿಲ್ಲ, ಕಾಣದವರು ಕಾಣಲು ಪ್ರಯತ್ನಿಸುವ ಹೆಜ್ಜೆಯನ್ನೇ ಇಡಲಿಲ್ಲ ಎಂದರೂ ತಪ್ಪಲ್ಲ. ನೀವೀಗೆ ಕೇಳುತ್ತೀರಿ "ನೀವು ಕಂಡಿದ್ದೀರೇ?" ಎಂದು, ಇಲ್ಲ, ಹುಡುಕುವಿಕೆಯಲ್ಲೇ ಇದ್ದೇನೆ, ಸಿಗುವ ಹಲವು ಮಾಹಿತಿಗಳನ್ನು ಆಧಾರವಾಗಿರಿಸಿಕೊಂಡು ಕಾಣದ ಶಕ್ತಿಯ ಜಾಡುಹಿಡಿಯುವ ಜಾಡಿನಲ್ಲಿ ಬೀಡುಬಿಟ್ಟಿದ್ದೇನೆ; ಇದು ಈ ಜನ್ಮಕ್ಕಾದರೂ ಮುಗಿಯಬಹುದು ಅಥವಾ ಇನ್ನೆಷ್ಟೋ ಜನ್ಮಗಳನ್ನೂ ಉತ್ತರಿಸಿ ಬರಬೇಕಾಗಬಹುದು,ಆದರೂ ವಿಶ್ವನಿಯಾಮಕ ಶಕ್ತಿಯಲ್ಲಿ ನನ್ನ ಅರಿಕೆಯೊಂದೇ: ಒಂದಲ್ಲಾ ಒಂದು ಜನ್ಮದಲ್ಲಿ ಪ್ರಪಂಚದ ರಹಸ್ಯದ ಅರಿವು ನನ್ನೊಳಗಿನ ನನಗಾಗಲಿ, ಮತ್ತು ಮರುಜನ್ಮವಿದ್ದರೆ ಹಾಗಾಗಲು ಪ್ರಯತ್ನಿಸುವ ಮೆದುಳುಳ್ಳ ಜನ್ಮವನ್ನೇ ಅನುಗ್ರಹಿಸು ಎಂಬುದು.  

ಗಣಕಯಂತ್ರದ ಸಾಮೀಪ್ಯಕ್ಕೆ ಬಂದಾಗ ಅಂತರ್ಜಾಲಾರೂಢನಾಗಿ ಕುಳಿತಾಗ ಇದು ಆರೂಢ ಸ್ಥಿತಿಯೇ ಆಗುತ್ತದೆ! ಇಲ್ಲಿ ಘಳಿಗೆ,ಲಿಪ್ತಿ, ತಿಥಿ-ಮಿತಿಗಳನ್ನು ಹೊರತುಪಡಿಸಿ ಆರೂಢವಾದಾಗ ಎದುರಿಗೆ ಸಿಕ್ಕ ಕೆಲವರಿಗೆ ಕೆಲವೊಮ್ಮೆ ಸ್ಪಂದನ ಸಿಕ್ಕಿರಲೂ ಸಾಕು. ತುರ್ತಾಗಿ ಅನಾರೂಢವಾಗಬೇಕಾದ ಅಗತ್ಯತೆ ಬಿದ್ದರೆ ಸ್ಪಂದನವಿಲ್ಲದ ನೀರಸ ನಿರ್ಗಮನವಾದರೂ ಆಗಬಹುದು. ಈ ಜಗತ್ತಿನಲ್ಲಿ ನನ್ನ ಹುಟ್ಟೊಂದು ಸೋಜಿಗವಲ್ಲ; ಅದು ಅನಿವಾರ್ಯವೂ ಆಗಿರಲಿಲ್ಲ; ನನ್ನಿಂದ ಯಾರೂ ಉದ್ಧಾರವಾಗುತ್ತಾರೆಂಬ ಕಲ್ಪನೆ ನನ್ನದಲ್ಲ; ಪ್ರಪಂಚಕ್ಕೋ ದೇಶಕ್ಕೋ ನನ್ನಿಂದ ಸಂದಿದ್ದು,ಕೊಡಲ್ಪಟ್ಟಿದ್ದು ಏನೂ ಕಾಣುತ್ತಿಲ್ಲ ಎಂದಮೇಲೆ ನನ್ನ ಹುಟ್ಟಿದ ದಿನವನ್ನು ಆಚರಿಸಿಕೊಳ್ಳುವ ಪ್ರಮೇಯ ಇಟ್ಟುಕೊಂಡು ಬದುಕುವ ಅಪ್ರಮೇಯ ನಾನಾಗಲಿಲ್ಲ!ಹೀಗಾಗಿ ನಾನು ಹುಟ್ಟಿದ ದಿನಕ್ಕೆ ಅಷ್ಟೊಂದು ಪ್ರಾಮುಖ್ಯತೆ ನೀಡುತ್ತಿಲ್ಲ; ಯಾರಿಗೂ ಅದನ್ನು ಮತ್ತೆ ಮತ್ತೆ ಎತ್ತಿ ಹೇಳುತ್ತಿಲ್ಲ; ಅವರುಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಷ್ಟಾಗಿ ತೊಡಗಿಕೊಳ್ಳುತ್ತಿಲ್ಲ.    

ಈ ಜಗತ್ತು ಅದರಲ್ಲೂ ನಮ್ಮ ಭಾರತ ಅತಿಸಹಜವಾಗಿ ಒಪ್ಪಿಕೊಳ್ಳುವ ಕೆಲವರ ಜನ್ಮದಿನಗಳಿವೆ. ಉದಾಹರಣೆಗೆ ರಾಮನವಮಿ, ಗೋಕುಲಾಷ್ಟಮಿ[ಕೃಷ್ಣಾಷ್ಟಮಿ] ಇತ್ಯಾದಿಗಳು. ಅಂತಹ ದಿನಗಳನ್ನು ಹಬ್ಬವನ್ನಾಗಿ ದೇಶವಾಸಿ ಜನರೆಲ್ಲಾ ಆಚರಿಸಿದರು ಯಾಕೆಂದರೆ ಅವರ ಕೊಡುಗೆಗಳು ಈ ಲೋಕಕ್ಕೆ ಅಪಾರ. ರಾಜಕೀಯದ ಕಾರಣಗಳಿಂದ ದಾರ್ಶನಿಕ, ಕವಿ, ಮಾರ್ಗದರ್ಶಿ, ಮಹಾಮಹೋಪಾಧ್ಯಾಯ, ಶ್ರೇಷ್ಠ ಸಂತ ಆಚಾರ್ಯ ಶಂಕರರ ಜಯಂತಿಯನ್ನೇ ಅದೆಷ್ಟೋ ಜನ ಮರೆತಿದ್ದಾರೆ! ಅಂದಾಗ ಏನನ್ನೂ ಸಾಧಿಸದ ನಾವು ವರ್ಷಕ್ಕೊಮ್ಮೆ ಬರೇ ಕೇಕ್ ಕತ್ತರಿಸಿ ಪಾರ್ಟಿಮಾಡುವುದರಿಂದ ಯಾವ ಮಹತ್ತರವಾದುದನ್ನು ಸಾಧಿಸಿದ ಹಾಗಾಗುತ್ತದೆ ಎಂಬುದು ನನ್ನಲ್ಲಿನ ಪ್ರಶ್ನೆ. ಸತ್ತಮೇಲೂ ನಾಲ್ಕುಜನ ನೆನೆದುಕೊಳ್ಳುವ ಕೆಲಸಮಾಡಿ ಹೋದ ಮಹಾತ್ಮ ಡೀವೀಜಿಯವರನ್ನೇ ನೋಡಿ, ವರಕವಿ ಬೇಂದ್ರೆಯವರನ್ನು ನೋಡಿ, ಸರ್.ಎಂ. ವಿಶ್ವೇಶ್ವರಯ್ಯನವರನ್ನು ನೋಡಿ, ಇನ್ನೂ ಹಲವರನ್ನು ನೋಡಿ...ಅವರು ತಮ್ಮ ಹುಟ್ಟಿದ ದಿನವೆಂದು ಸಂಭ್ರಮಿಸಲೇ ಇಲ್ಲ! ನೈತಿಕವಾಗಿ ಸರಿಯಿಲ್ಲದಿದ್ದ ರಾಜಕಾರಣಿ ನೆಹರೂ ಹುಟ್ಟಿದ ದಿನವನ್ನು ಮಕ್ಕಳದಿನಾಚರಣೆ ಎಂದು ಕೆಲವರು ಆಚರಿಸುತ್ತಾರೆ-ಇರಬಹುದು ಬಿಡಿ ತಿವಾರಿಯ ಹಾಗೇ ನೆಹರೂ ಚಾಚಾನಿಗೆ ಅದೆಷ್ಟು ಮಕ್ಕಳಿದ್ದರೋ ಪರಮಾತ್ಮ ಮಾತ್ರ ಬಲ್ಲ! 

ಯಾರೋ ಹೇಳಿದರು ಅವರವರಿಗೆ ಅವರವರ ಹುಟ್ಟಿದ ಹಬ್ಬ ದೊಡ್ಡದು. ಹೌದೌದು ಅವರವರಿಗೆ ಅದು ದೊಡ್ಡದೇ ಆದರೆ ಅದರ ಆಚರಣೆಯ ಅಂಧಾನುಕರಣೆ ಮಾತ್ರ ಇನ್ನೂ ದೊಡ್ಡದು. ಮಗುವೊಂದಕ್ಕೆ ಪ್ರತೀವರ್ಷ ಹ್ಯಾಪಿ ಬರ್ತ್ ಡೇ ಆಚರಿಸುವ ನೆಪದಲ್ಲಿ ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿ ಹಚ್ಚಿದ ದೀಪಗಳನ್ನು ಆರಿಸುವ ಕೆಲಸ ನಡೆಯುತ್ತದೆ; ಕತ್ತರಿಸುವ ಕೇಕ್ ನ ಹಿಂದೆ ಇನ್ನೊಂದು ಪಕ್ಷಿಯ ಹುಟ್ಟಿಗೆ ಕಾರಣವಾಗುತ್ತಿದ್ದ ಅಂಡದ ಬಳಕೆಯಿರುತ್ತದೆ. ಪಕ್ಕದಲ್ಲಿ ನಿಂತು ಹ್ಯಾಪಿ ಬರ್ತ್ ಡೇ ಟೂ ಯೂ ಎನ್ನುವಾಗ ತೀರಾ ಕ್ರತ್ರಿಮ ಎನ್ನಿಸಿಬಿಡುತ್ತದೆ. ಕೆಲವರಿಗಂತೂ ಹಾಡಲೂ ನಾಚಿಕೆ, ಹಾಡದಿರಲೂ ಆಗದ ಪರಿಸ್ಥಿತಿ-ಅವೆಲ್ಲಾ ನಾವ್ನಾವೇ ಮಾಡಿಕೊಂಡ ರಿವಾಜುಗಳಲ್ಲವೇ?  ಇಂತಹ ಪಾರ್ಟಿಗಳಲ್ಲಿ ತಮ್ಮ ಅಂತಸ್ತನ್ನು ತೋರಿಸಿಕೊಳ್ಳುವವರೇ ಹಲವರು. ಹೊಟ್ಟೆ ತುಂಬದಿದ್ದರೂ ತಿನ್ನುವ ಪ್ಲೇಟಿನಲ್ಲಿ ಸುಮ್ಮನೇ ಒಂದಷ್ಟು ಉಳಿಸಿ ಅದನ್ನು ಬಿಸಾಡುವುದರ ಮೂಲಕ ತಿನ್ನುವ ಸಿದ್ಧಾಹಾರ ನಿಷ್ಪ್ರಯೋಜಕವಾಗುವಂತೇ ಮಾಡುವವರೂ ಅನೇಕರು. ಇಡೀ ದಿನ ದುಡಿದರೂ ತನ್ನ ಹಾಗೂ ತನ್ನ ಮಕ್ಕಳ ಹೊಟ್ಟೆಯನ್ನು ತುಂಬಿಸಿಕೊಳ್ಳಲಾಗದ ಕಾರ್ಮಿಕವರ್ಗದವರಿದ್ದಾರೆ, ಹಸಿದ ಹೊಟ್ಟೆಯಲ್ಲಿ ಅಳಲೂ ಆಗದ ಸ್ಥಿತಿಯಲ್ಲಿರುವ ಭಿಕ್ಷುಕರಿದ್ದಾರೆ, ಬಿತ್ತಿದ ಬೆಳೆ ಕೈಗೆಬರುವ ಮೊದಲೇ ಕಮರಿಹೋಗಿ ಹೊಟ್ಟೆಗೆ ತಣ್ಣೀರುಬಟ್ಟೆ ಹಾಕಿಕೊಳ್ಳುವ ರೈತಾಪಿ ವರ್ಗದವರಿದ್ದಾರೆ, ಹುಟ್ಟಿದಾರಭ್ಯ ಇಲ್ಲೀವರೆಗೆ ಯಾವುದೇ ಚಾಕೊಲೇಟ್, ಬಿಸ್ಕಿಟ್, ಹಣ್ಣು-ಹಂಪಲು ಕಂಡರಿಯದ ಕಂದಮ್ಮಗಳಿದ್ದಾವೆ, ಯಾರೋ ಕೊಟ್ಟರೆ ಉಂಟು-ಕೊಡದಿದ್ದರೆ ಇಲ್ಲಾ ಎಂಬ ಹೀನ ಸ್ಥಿತಿಯಲ್ಲಿರುವ ಅನಾಥರಿದ್ದಾರೆ----ಇಷ್ಟೆಲ್ಲಾ ಇದ್ದುಕೊಂಡೂ ನಮ್ಮ ಹುಟ್ಟಿದ ದಿನವನ್ನು ಬಹಳ ಶ್ರೇಷ್ಠದಿನವೆಂದು ಆಚರಿಸಿಕೊಳ್ಳುವುದಾದರೂ ಹೇಗೆ ಮತ್ತು ಯಾಕೆ?  

ಹಿಂದೂ ಸನಾತನ ಪದ್ಧತಿಯಲ್ಲೂ ಆಯುಷ್ಯವೃದ್ಧಿ ಹೋಮ ಎಂಬುದನ್ನು ಹುಟ್ಟಿದ ಮಿತಿಯಂದು ನಡೆಸುವ ಕ್ರಮವಿದೆ; ಅದನ್ನು ಎಲ್ಲರೂ ಆಚರಿಸುವುದಿಲ್ಲ, ಜಾತಕಫಲದಲ್ಲಿ ದೋಷಗಳೇನಾದರೂ ಕಂಡುಬಂದರೆ ಅಂತಹ ಮಂದಿ ಮಾತ್ರ ಆಚರಿಸುತ್ತಾರೆ. ಅದಾದರೂ ಸೃಷ್ಟಿಯ ಆರಾಧನೆ ಎಂದುಕೊಳ್ಳೋಣ; ಅಲ್ಲಿ-ಪೂಜೆಯಿದೆ, ಪ್ರಾರ್ಥನೆಯಿದೆ, ’ನಮಮ’[ನನ್ನದಲ್ಲ] ಎಂದು ಪರಿತ್ಯಜಿಸುವ ಅರ್ಪಣೆಯಿದೆ!  ಅದರಿಂದ ಶಕ್ತಿಯ ಒಂದು ರೂಪವನ್ನಾದರೂ ಸುಪ್ರೀತಗೊಳಿಸಬಹುದು, ತನ್ನ ಜೊತೆಗೆ ಸಮಸ್ತರ ಒಳಿತಿಗಾಗಿ ಪ್ರಾರ್ಥಿಸಬಹುದು. ಹಾಗೆ ಪ್ರಾರ್ಥಿಸುವಾಗ ಈ ಜಗದಲ್ಲಿ ಯಾರಿಗೂ ಹಸಿವನಿಂದ-ನೀರಡಿಕೆಯಿಂದ-ಬಡತನದಿಂದ-ರೋಗರುಜಿನಗಳಿಂದ-ಅಂಗವೈಕಲ್ಯತೆಗಳಿಂದ ಬೆಂದು ಬಳಲುವ ಜೀವಿಗಳನ್ನು ಹುಟ್ಟಿಸಲೇ ಬೇಡಾ ಎಂದೂ ಬೇಡಿಕೊಳ್ಳಬಹುದು. ಮಹಾತ್ಮರು ತನ್ನ ಜಯಂತಿಯನ್ನು ಆಚರಿಸಿ ಎಂದು ಎಲ್ಲೂ ಹೇಳಲಿಲ್ಲ! ಗಾಂಧೀಜಯಂತಿಯನ್ನು ನಾವು ಪ್ರೀತಿಯಿಂದ ಆಚರಿಸುತ್ತೇವೆ. ಅದೇ ರಾಜಕೀಯದ ಒತ್ತಾಯದಿಂದ ಇತ್ತೀಚೆಗೆ ಹೇರಲ್ಪಟ್ಟ ಜಯಂತಿಗಳನ್ನು ಸರಕಾರೀ ರಜೆ ಅನುಭವಿಸಲು ಕೆಲವರು ಆಚರಿಸುತ್ತಾರೆಯೇ ವಿನಃ ಅಲ್ಲಿ ಆ ಪ್ರೀತಿ ಇರುವುದಿಲ್ಲ. ಅಸಡ್ಡೆಮಾಡಿದರೆ ಸಾಮಾಜಿಕ ಮತ್ತು ರಾಜಕೀಯ ಆಘಾತಗಳನ್ನು ಎದುರಿಸಬೇಕಾದೀತು ಎಂದು ಒಪ್ಪಿಕೊಂಡವರೂ ಇದ್ದಾರೆ. ಜಯಂತಿ ಎಂಬ ನೆಪದಲ್ಲಿ ಆಡಳಿತ ಯಂತ್ರದ ಕಚೇರಿಗಳಿಗೆ ರಜಾಘೋಷಣೆಯಾದಾಗ ಕೆಲಸ ನಿಧಾನಗತಿಯಲ್ಲಿ ಸಾಗುತ್ತದೆ. ಹಾಗೆ ನೋಡಿದರೆ ೩೬೫ ದಿನಗಳೂ ಅನೇಕರ ಜಯಂತಿಗಳಿವೆ-ಎಲ್ಲದಕ್ಕೂ ರಜಾ ಘೋಷಿಸಲೂ ವಿಶಿಷ್ಟ ಆಚರಣೆ ಇರಿಸಲೂ ಸಾಧ್ಯವೇ? ಹೀಗಾಗಿ ಸರಕಾರ ಕೂಡ ಸಾರ್ವತ್ರಿಕವಾಗಿ ಒಂದೇ ದಿನ ಎಲ್ಲಾ ಮಹನೀಯರಿಗೂ ’ಗೌರವಾರ್ಪಣ ದಿನ’ ಎಂಬುದನ್ನು ನಮೂದಿಸಿ ಮಿಕ್ಕೆಲ್ಲಾ ಜಯಂತಿಗಳಿಗೂ ರಜಾ ಘೋಷಣೆಯನ್ನು ಕೈಬಿಡುವುದು ದೇಶೋದ್ಧಾರದ ಒಂದು ಹೆಜ್ಜೆಯಾಗುತ್ತದೆ.     

ಪುತ್ಥಳಿ ನಿರ್ಮಾಣ ಮತ್ತೊಂದು ಪಿಡುಗು; ನಿಲ್ಲಿಸಿದ ಪುತ್ಥಳಿಗಳ ನಿರ್ವಹಣೆಯೂ ಅಷ್ಟೇ ಶ್ರಮದಾಯಕ. ಈ ದೇಶದಲ್ಲಿ ಅದೆಷ್ಟೋ ಪುತ್ಥಳಿಗಳು ನಿರ್ಮಿಸಲ್ಪಟ್ಟಿವೆ-ಅವುಗಳಲ್ಲಿ ಯಾವುದು ನಿಜಕ್ಕೂ ಸಿಂಧುವೋ ಯಾವುದು ನಿಜಕ್ಕೂ ಬೇಡವೋ ಯಾರೂ ಕೇಳುವವರಿಲ್ಲ. ಕೆಲವರಿಗೆ ಇದೇ ದೊಡ್ಡದು ಇನ್ನು ಕೆಲವರಿಗೆ ಅವರ ಆ ಆದೇ ದೊಡ್ಡದು, ಮತ್ತೆ ಕೆಲವರಿಗೆ ಇಂಥಲ್ಲೆಲ್ಲಾ ತಾವು ಮೆಚ್ಚುವ, ಬಯಸುವ ಪುತ್ಥಳಿಗಳನ್ನು ನಿಲ್ಲಿಸಿ ಮೀಸೆ ತಿರುವುತ್ತ ನಡೆಯುವಾಸೆ! ಕಾಲಗರ್ಭದಲ್ಲಿ ಈ ರಾಷ್ಟ್ರ ಅದೆಷ್ಟೋ ದಾರ್ಶನಿಕರನ್ನೂ, ಚಕ್ರವರ್ತಿಗಳನ್ನೂ, ರಾಜ-ಮಹಾರಾಜರುಗಳನ್ನೂ, ದೇಶಭಕ್ತರನ್ನೂ ಹುದುಗಿಸಿಕೊಂಡಿದೆ-ಆ ಒಬ್ಬರಿಗೂ ಸರಿಯಾಗಿ ಒಂದೂ ಪ್ರತಿಮೆಗಳಿಲ್ಲ! ಅಜರಾಮರವಾದ ಅವರ ಕೊಡುಗೆಗಳೇ ಅವರ ಪ್ರತಿಮೆಗಳಾಗಿವೆ; ಅವರಿಗೆಲ್ಲಾ ಪ್ರತಿಮೆಗಳೂ ಬೇಡ; ಪ್ರತಿಮೆಗಳನ್ನು ನಿಲ್ಲಿಸಿ ಹಾರಹಾಕಿ ಹಾಲೆರೆಯುವುದೂ ಬೇಡ! ವರ್ಷಕ್ಕೊಮ್ಮೆ ಸ್ವಚ್ಛತೆ ಕಾಣುವ ಪ್ರತಿಮೆಗಳು ಮಿಕ್ಕಿದ ದಿನಗಳಲ್ಲಿ ಧೂಳುತಿನ್ನಬೇಕು, ಕಾಗೆ-ಪಾರಿವಾಳಗಳಂತಹ ಪಕ್ಷಿಗಳ ಹಿಕ್ಕೆಗಳ ಕೊಡುಗೆಯನ್ನು ಪಡೆಯಬೇಕು-ಅದರ ಬದಲು ಪ್ರತಿಮೆಗಳಿರದಿದ್ದರೇ ಒಳ್ಳೆಯದು ಎಂದು ಇತಿಹಾಸದ ಕಾಲಗರ್ಭದಲ್ಲಿ ಸೇರಿಹೋದ ಆ ಮಹಾನುಭಾವರುಗಳು ಅಂದುಕೊಂಡಿರಬೇಕು. ರಾಜಕೀಯ ಪ್ರೇರಿತವಾದ ಬೆಂಗಳೂರಿನಲ್ಲಿ ಮುಂಬರುವ ವರ್ಷಗಳಲ್ಲಿ ಪ್ರತಿಮೆಗಳೇ ಹೆಚ್ಚಿ ಕೊನೆಗೆ ಎಲ್ಲೂ ಜಾಗ ಸಿಗದೇ ಪ್ರತಿಮೆಗಳ ಉದ್ಯಾನವನ ಮಾಡಬೇಕಾಗಬಹುದು! ಒಂದರ್ಥದಲ್ಲಿ ಹಾಗೆ ಮಾಡುವುದೇ ಒಳ್ಳೆಯದು. 

ಮಿತ್ರರ ಯಾದಿಯಲ್ಲಿ ನನ್ನ ನಿಲುವುಗಳನ್ನು ಇಷ್ಟಪಟ್ಟವರೂ ಇರಬಹುದು, ಕೆಲವೊಂದನ್ನು ಕಷ್ಟಪಟ್ಟು ಸಹಿಸಿಕೊಂಡವರೂ ಇರಬಹುದು, ಇಷ್ಟಪಡದಿದ್ದರೂ ಇರಲಿ ಸಂಖ್ಯಾ ಭರ್ತಿಗೆ ಎಂದು ಸ್ನೇಹಿತನನ್ನಾಗಿ ಮಾಡಿಕೊಂಡವರೂ ಇರಬಹುದು. ಯಾದಿಯಲ್ಲಿ ಕೆಲವು ಹಿರಿಯರೂ, ಕವಿ-ಸಾಹಿತಿಗಳೂ, ಲೇಖಕರೂ ಇದ್ದಾರೆ ಅದರೆ ಅವರ ಸ್ಪಂದನ ತೀರಾ ಕಂಡುಬರುವುದಿಲ್ಲ! ತಮ್ಮದೂ ಅಕೌಂಟು ಇರಲಿ ಎಂದು ಆರಂಭಿಸಿದವರು ಅಮೇಲೆ ೬ ತಿಂಗಳಿಗೋ ವರ್ಷಕ್ಕೋ ಒಮ್ಮೆ ತೆರೆದು ನೋಡುತ್ತಾರೋ ಏನೋ. ಅನಾದಿಕಾಲದಲ್ಲಿ ಅಚ್ಚಿಸುವ ಮಾಧ್ಯಮವೊಂದೇ ಸಾಹಿತ್ಯವೆಂದು ಪರಿಗಣಿತವಾದಾಗ ಹುಟ್ಟಿದ ಕೆಲವರಿಗೆ ಬರಹಗಳನ್ನು ಪುಸ್ತಕಗಳ ರೂಪದಲ್ಲಿ ಮಾತ್ರ ಮೆಚ್ಚಿಕೊಳ್ಳುವ ಹಂಬಲ. ಅವರ ಬರಹಗಳು ಅಂತರ್ಜಾಲದ ಬ್ಲಾಗ್ ಗಳಲ್ಲಿ ಕಂಡುಬರುವುದೇ ಅಪರೂಪ; ಎಲ್ಲೋ ಸಾವಿರಕ್ಕೆ ಒಬ್ಬರು ಅಂತಹ ಬರಹಗಾರರು ಇರಬಹುದು. ಒಂದು ಪುಸ್ತಕ ರೂಪದಲ್ಲಿ ಬರೆದರೆ ಅದು ಕಳೆಕಟ್ಟುತ್ತದೆ ಎಂಬ ಇರಾದೆಯಾದರೆ ಬ್ಲಾಗ್ ರೂಪದಲ್ಲಿ ಬರೆದರೆ ಎಲ್ಲಿ ಸ್ಥಾನಮಾನಕ್ಕೆ ಬೆಲೆಯಿಲ್ಲದಾಗುತ್ತದೋ ಎಂಬ ಅನಿಸಿಕೆಯೂ ಕೆಲವರಿಗೆ ಇರಬಹುದು. ಬ್ಲಾಗ್ ಬರಹಗಾರ ಎಂದರೆ ಸಣ್ಣಮಟ್ಟದವ ಅಥವಾ ’ಎಲ್. ಬೋರ್ಡು’ ಎಂಬ ಕೀಳುಮನೋಭಾವವೂ ಇರಲುಸಾಕು.  

ಸಾಹಿತ್ಯಕ ಅಭಿರುಚಿಯನ್ನು ಹೊಸದಾಗಿ ಬೆಳೆಸಿಕೊಳ್ಳುತ್ತಿದ್ದೇನೆ ಎನ್ನುತ್ತಾ ಹುಡುಗಿಯರ ಬಗ್ಗೆ ಮಾತ್ರ ಅವರದ್ದೇ ಆದ ವಿಚಿತ್ರ ಛಂದಸ್ಸೋ ಮರ್ದೊಂದೋ ಕೆಲವು ಎಳಬರು ಬರೆಯುವ ರೀತಿ ನನ್ನಂತಹ ಓದುಗರಿಗೆ ಬಹಳ ಮುಜುಗರವನ್ನೂ ಉಂಟುಮಾಡುತ್ತದೆ. ಕೆಲವರ ಕವನಗಳು ಅದೇನನ್ನು ಹೇಳುತ್ತವೋ ಶಿವನೇ ಬಲ್ಲ! ಆದರೂ ಪುಸ್ತಕಗಳ ರೂಪದಲ್ಲಿ ಅವುಗಳನ್ನು ಪ್ರಕಟಿಸುವಲ್ಲಿ, ಪ್ರಕಟಿಸಿ ತಾವೂ ಬರಹಗಾರರು ಎಂಬುದನ್ನು ತೋರಿಸುವಲ್ಲಿ ಅವರು ಶರವೇಗದಲ್ಲಿ ನಡೆಯುತ್ತಿರುತ್ತಾರೆ. ಮಿತ್ರರೊಬ್ಬರಲ್ಲಿ ನಾನು ಹೇಳುತ್ತಿದ್ದೆ-"ಕೆಲಸಕ್ಕೆ ಬಾರದ ಅಸಂಖ್ಯಾತ ಪುಸ್ತಕಗಳನ್ನು ಕೊಳ್ಳುವುದಕ್ಕಿಂತಾ ಕೆಲಸಕ್ಕೆ ಬರುವ ಒಂದೇ ಪುಸ್ತಕ ಹೆಚ್ಚಿನ ಬೆಲೆಯದ್ದಾದರೂ ಕೊಂಡು ಓದುವುದು ಉತ್ತಮ" ಎಂದು, ಅದಕ್ಕೆ ಅವರು ಸಹಮತ ವ್ಯಕ್ತಪಡಿಸಿದರು. ಪುಸ್ತಕವೊಂದನ್ನು ಪ್ರಕಟಿಸುವಾಗ ನಾವು ನೆನಪಿಡಬೇಕಾದ ಪ್ರಮುಖ ಅಂಶ-ಈ ನೆಲದ ಅನೇಕ ಮರಗಳು ನಮ್ಮ ಪುಸ್ತಕಕ್ಕೆ ಬೇಕಾದ ಕಾಗದಗಳರೂಪಕ್ಕೆ ಬರುವಾಗ ಹತವಾಗುತ್ತವೆ! ನಾವು ಪ್ರಕಟಿಸುವ ಕೃತಿ ಕೇವಲ ನಮ್ಮೊಬ್ಬರಿಗಲ್ಲದೇ ಸಮಾಜಕ್ಕೆ ಕಿಂಚಿತ್ತಾದರೂ ಉಪಯೋಗಿ ಎನಿಸುವುದಾದರೆ ಮಾತ್ರ ಅಂತಹ ಪುಸ್ತಕಗಳ ಪ್ರಕಟಣೆಗೆ ಮುಂದಾಗಬೇಕು. ವರ್ಷಕ್ಕೊಂದೋ ಎರಡೋ ಪುಸ್ತಕ ಮಾಡಿ, ಮಾಡಿದ ಪುಸ್ತಕಗಳ ಬಗ್ಗೆ ತಾನೇ ಪ್ರಚಾರಮಾಡಿ ಎಷ್ಟೆಲ್ಲಾ ಪ್ರತಿ ಮಾರಾಟವಾಯ್ತೆಂದು ಕೊಚ್ಚಿಕೊಳ್ಳುವುದರ ಬದಲಿಗೆ ಪುಸ್ತಕಪ್ರಕಟಣೆಯ ಹಿಂದಿನ ವಸ್ತುನಿಷ್ಟ ಧ್ಯೇಯ-ಧೋರಣೆಗಳನ್ನು ನಾವೇ ನಮ್ಮಷ್ಟಕ್ಕೇ ಸಿಂಹಾವಲೋಕನ ಮಾಡಿಕೊಂಡರೆ ಆಗ ಅನೇಕ ಬರಹಗಾರರು ತಪ್ಪನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತು ಮರ್ಯಾದೆಬಿಟ್ಟು ಪ್ರಶಸ್ತಿಗಳನ್ನು ಖರೀದಿಸಲು ಒಳಗಿಂದೊಳಗೇ ಹೆಣಗಾಡುವುದೂ ತಪ್ಪಬಹುದು ಎಂಬುದು ನನ್ನ ಅನಿಸಿಕೆಯಾಗಿದೆ. ಸಾರ್ವಜನಿಕರು ಓದಿ-ಕೃತಿಗಳನ್ನು ಒಪ್ಪಿಕೊಂಡು ಬಹುಕಾಲ ಅಪ್ಪಿಕೊಳ್ಳುವುದೇ ನಿಜವಾದ ಬರಹಗಾರನಿಗೆ ಸಲ್ಲುವ ನಿಜವಾದ ಪ್ರಶಸ್ತಿಯಾಗಿರುತ್ತದೆ.  

ಇರಲಿ ಬಿಡಿ, ’ಊರಿದ್ದಲ್ಲಿ ಹೊಲಗೇಡು ಸಹಜ’ ಎಂಬ ಗಾದೆ ಇದೆಯಲ್ಲಾ? ಆಟಕ್ಕೆ ಕರೆಯುವ ಸ್ನೇಹಿತರೇ ದಯಮಾಡಿ ಹಾಗೆ ಮತ್ತೆ ಕರೆಯಬೇಡಿ, ಬೇರೇ ಬೇರೇ ವಿಷಯಗಳತ್ತ ನನ್ನ ಗಮನ ಸೆಳೆಯಲು ಪ್ರಯತ್ನಿಸಿದರೆ ನಿಮಗೆ ನನ್ನಿಂದ ಉತ್ತರ ಸಿಗಲಾರದು. ಫೇಸ್ ಬುಕ್ ಗುಂಪುಗಳ ನಿಬಂಧನೆಗಳನ್ನು ಅರಿಯದೇ ಗೊತ್ತಿಲ್ಲದ ಗುಂಪಿಗಳಿಗೆ ನನ್ನನ್ನು ಸೇರಿಸುವ ಮಿತ್ರರು ಅಮೇಲೆ ನನ್ನ ಪ್ರಕಟಣೆಯಿಂದ ಬರಬಹುದಾದ ಆಕ್ಷೇಪಣೆಗಳನ್ನೂ ಹೊತ್ತುಕೊಳ್ಳಬೇಕಾಗಬಹುದು. ನಾನು ಯಾವುದೇ ಒತ್ತಾಯಕ್ಕೋ ದಾಕ್ಷಿಣ್ಯಕ್ಕೋ ಬರೆಯುವವನಾಗಲೀ, ಅಳುಕಿ ಬರೆಯದೇ ಇರುವವನಾಗಲೀ ಅಲ್ಲ! ನನಗನ್ನಿಸಿದ್ದನ್ನು ನನ್ನ ಪದಗಳಲ್ಲಿ ನೇರವಾಗಿ ಹಾಗೂ ನಿಷ್ಠುರವಾಗಿ ಹೇಳಿಬಿಡುವುದೇ ನನ್ನ ಜಾಯಮಾನ. ಇದಕ್ಕಾಗಿ ನಾನು ಯಾರ ಮುಲಾಜನ್ನೂ ನೋಡುವುದಿಲ್ಲ. ಅಂತೂ ಲೇಖನದ ಅಂತಿಮ ಹಂತಕ್ಕೆ ಬಂದುಬಿಟ್ಟಿದ್ದೇನೆ. ಅನೇಕರಿಗೆ ನಾನು ಹುಟ್ಟಿದ ಹಬ್ಬಕ್ಕೆ ಶುಭಾಶಯಗಳನ್ನು ಹೇಳದಿರುವುದಕ್ಕೆ ಬೇಸರವಿರಬಹುದು. ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳುವ ದಿನಕ್ಕಾಗಿ ನಿರೀಕ್ಷಿಸುವ ಮಿತ್ರರುಗಳೂ ಇರಬಹುದು. ಎಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು. ಶ್ರೀಸೂಕ್ತದ ಈ ಪ್ರಾರ್ಥನೆಯುಕ್ತ ಹಾರೈಕೆಯೊಂದಿಗೆ ನನ್ನ ಸಕಲ ಸನ್ಮಿತ್ರರಿಗೂ ಈ ಮೂಲಕ ಸದಾ ಶುಭಹಾರೈಸುತ್ತಿದ್ದೇನೆ:

ಶ್ರೀವರ್ಚಸ್ಯಮಾರ್ಯುಷ್ಯಮಾರೋಗ್ಯಮಾವಿಧಾತ್ಪವಮಾನಂ ಮಹೀಯತೇ|
  ಧನಂ ಧಾನ್ಯಂ ಬಹುಪುತ್ರಲಾಭಂ ಶತಸಂವತ್ಸರಂ ದೀರ್ಘಮಾಯುಃ ||    

Tuesday, August 14, 2012

ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು.....

ಚಿತ್ರಕೃಪೆ : ಅಂತರ್ಜಾಲ
ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು.....

ಹಡೆದಮ್ಮ ಪುಣ್ಯಭೂಮಿ ಶ್ರೀಭಾರತಮಾತೆಗೆ ಸಾಷ್ಟಾಂಗ ನಮಸ್ಕಾರಗಳು. ದೇಶಕಾಯುತ್ತಿರುವ ಯೋಧರಿಗೆ ನನ್ನ ಹೃತ್ಪೂರ್ವಕ ನಮನಗಳು. ನನ್ನ ಮಾತುಗಳನ್ನು ಕುತೂಹಲಿಗಳಾಗಿ ನಿರೀಕ್ಷಿಸುತ್ತಿರುವ ನನ್ನ ಸಹಜಾತ ದೇಶಬಾಂಧವರಾದ ನಿಮಗೆಲ್ಲರಿಗೂ ವಂದನೆಗಳು ಮತ್ತು ಶುಭಾಶಂಸನೆಗಳು.

ತಾಯಿ ಭಾರತಿಗೆ ಸ್ವಾತಂತ್ರ್ಯ ಬಂದಾಗ ನಾನು ಹುಟ್ಟಿರಲಿಲ್ಲ! ನನ್ನ ಹುಟ್ಟಿನ ಸಂಕಲ್ಪ ಬಹುಶಃ ಆ ಬ್ರಹ್ಮನಿಗೂ ಇನ್ನೂ ಆಗಿರಲಿಲ್ಲ! ಸ್ವಾತಂತ್ರ್ಯ ಬಂದ ಅನೇಕ ವರ್ಷಗಳ ನಂತರದಲ್ಲಿ ನನ್ನಂತೆಯೇ ಹಲವರು ಜನಿಸಿದ್ದೀರಿ, ಸ್ವಾತಂತ್ರ್ಯದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡವರೂ ಅದನ್ನು ನೋಡಿದವರೂ ಕೆಲವರಿದ್ದೀರಿ. ಸ್ವಾತಂತ್ರ್ಯದ ಬಗ್ಗೆ ಪಠ್ಯದಲ್ಲಿ ನಾನು ಓದುತ್ತಿರುವಾಗ ಆ ವಯಸ್ಸಿಗೆ ನನಗೆ ಅದರ ಮಹತ್ವ ಗೊತ್ತಾಗುತ್ತಿರಲಿಲ್ಲ. ಅಂದೇನಿದ್ದರೂ ತ್ರಿವರ್ಣ ಬಾವುಟವನ್ನು ಧ್ವಜಕ್ಕೆ ಕಟ್ಟಿ ಹಾರಿಸಿ, ಅದರಿಂದ ಉದುರುವ ಹೂಪಕಳೆಗಳನ್ನು ವೀಕ್ಷಿಸುತ್ತಾ, ಬಲಗೈ ಹಣೆಗೆ ಹಚ್ಚಿ ಜನಗಣಮನ ಹಾಡುವುದಷ್ಟೇ ನಮಗೆ ಸಂತಸ ತರುವ ವಿಷಯವಾಗಿತ್ತು. ಆಮೇಲೆ ನಾವು ಕಾಯುತ್ತಿದ್ದುದು ಕೊನೆಯಲ್ಲಿ ಹಂಚುವ ಮಿಠಾಯಿಗೆ ಮಾತ್ರ! ಆ ಮಧ್ಯೆ ನಾನೂ ಸೇರಿದಂತೇ ಹಲವು ಮಕ್ಕಳ, ಶಿಕ್ಷಕರ, ಊರ ಹಿರಿಯರ ಭಾಷಣಗಳು ಮಂಡಿಸಲ್ಪಡುತ್ತಿದ್ದವಾದರೂ ಅಲ್ಲಿ ಪ್ರಸ್ತಾಪವಾಗುತಿದ್ದ ಗಾಂಧೀಜಿ, ಚಂದ್ರಶೇಖರ್ ಆಜಾದ್, ಮಂಗಲಪಾಂಡೆ, ಭಗತ್ ಸಿಂಗ್, ನೇತಾಜಿ ಸುಭಾಶ್ಚಂದ್ರ ಬೋಸ್,  ಲೋಕಮಾನ್ಯ ಬಾಲಗಂಗಾಧರ ತಿಲಕ್, ಸರ್ದಾರ್ ವಲ್ಲಭಭಾಯಿ ಪಟೇಲ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತಾತ್ಯಾಟೋಪಿ, ಲಾಲಾ ಲಜಪತರಾಯ್ ಮೊದಲಾದವರ ಜೀವನದ ಬಗ್ಗೆ ತೀರಾ ತಲೆಕೆಡಿಸಿಕೊಳ್ಳದ ವಯಸ್ಸು ಅದಾಗಿತ್ತು. ಬುದ್ಧಿ ತಿಳಿದಾಮೇಲೆ ಅನಿಸಿದ್ದು ನಮ್ಮ ಸ್ವಾತಂತ್ರ್ಯಕ್ಕಾಗಿ ಅದೆಷ್ಟು ಜನ ಸ್ವಾರ್ಥರಹಿತರಾಗಿ ಕೆಲಸಮಾಡಿ ಮಡಿದರು ಎಂಬುದು! ಅಂತಹ ಅಸಂಖ್ಯ ಅಮರವೀರರಿಗೆ ನನ್ನ ನಮಸ್ಕಾರಗಳು.

ಸ್ವಾತಂತ್ರ್ಯ ಎಂಬ ಪದದ ಸುತ್ತ ಹತ್ತಾರು ಸರ್ತಿ ಗಿರಕಿ ಹೊಡೆದರೆ ಯಾವುದು ಸ್ವಾತಂತ್ರ್ಯ ಮತ್ತು ಯಾವುದು ಸ್ವೇಚ್ಛಾಚಾರ ಎಂಬುದರ ಅರಿವು ಮೂಡಬಹುದು. ಯಾಕೆಂದರೆ ನಮ್ಮಲ್ಲಿನ ಸದ್ಯದ ರಾಜಕಾರಣಿಗಳ ಅರ್ಥದಲ್ಲಿ ಅವರಮಟ್ಟಿಗೆ ಸ್ವಾತಂತ್ರ್ಯ ಎಂದರೆ ಅದು ಅವರು ನಡೆಸಬಹುದಾದ ಸ್ವೇಚ್ಛಾಚಾರ! ಹಳ್ಳಿಮನೆಯಲ್ಲಿ ಕೂಲಿ ಕೆಲಸಮಾಡುತ್ತಿದ್ದ ವ್ಯಕ್ತಿಯನ್ನು ಮಾತನಾಡಿಸಿದಾಗ ಆತ ಹೇಳಿದ " ಅಯ್ಯೋ ಯಾರ್ ಬಂದ್ರೇನು ಸ್ವಾಮೀ ನಾವ್ ಕೆಲ್ಸ ಮಾಡೋದು ತಪ್ತದಾ ?" ಯಾರು ಬಂದರೂ ಅಷ್ಟೇ ಎಂಬ ಅನಿಸಿಕೆಯಿಂದ ಹೇಳಿದನೋ ಅಥವಾ ಯಾರೂ ತಮ್ಮಂಥವರಿಗೆ ಸಹಾಯ ಮಾಡಲಿಲ್ಲ ಎಂಬ ಕೋಪದಲ್ಲಿ ಹೇಳಿದನೋ ತಿಳಿಯಲಿಲ್ಲ. ಪ್ರಜಾತಂತ್ರ ಎಂಬ ಸೇವಾಕಾರ್ಯ ಏನಿದ್ದರೂ  ಹಣಗಳಿಸಲು ಇರುವಂಥದ್ದು ಎಂಬಂತೇ ಆಗಿಬಿಟ್ಟಿರುವ ಈ ದಿನಗಳಲ್ಲಿ ದೇಶಭಕ್ತರು ಎಂದರೆ ಕೈಲಾಗದವರೇನೋ ಎಂಬ ಭಾವನೆ ಬಂದುಬಿಡುತ್ತದೆ.

ಮಗುವಿಗೆ ಶಿಕ್ಷಣ ಮನೆಯಿಂದ ಆರಂಭ ಅಲ್ಲವೇ? ’ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು’ ಎಂದಿದ್ದಾರಲ್ಲಾ? ಮನೆಯಲ್ಲಿ ಅಮ್ಮ ಯಾವರೀತಿಯ ಸಂಸ್ಕಾರವನ್ನು ಬಾಲ್ಯದಲ್ಲಿ ಕೊಡುತ್ತಾಳೋ, ಸುತ್ತಲ ಪರಿಸರ ಯಾವ ರೀತಿಯ ಸಂಸ್ಕಾರವನ್ನು ಪರೋಕ್ಷವಾಗಿ ಬೋಧಿಸುತ್ತದೋ ಮಗು ಹಾಗೇ ಬೆಳೆಯುತ್ತದೆ! ಶಿವಾಜಿ ಮಹಾರಾಜರಿಗೆ ಅವರಮ್ಮ ಜೀಜಾಬಾಯಿ ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದಳಂತೆ. ಹಾಗೆ ಕಥೆಹೇಳುವಾಗ ಅವಳಿಗೆ ತನ್ನ ಮಗನೊಬ್ಬ ಮಹಾರಾಜನಾಗುವವ ಎಂಬುದು ತಿಳಿದಿರಲಿಲ್ಲ! ಸಮರ್ಥ ರಾಮದಾಸರಂತಹ ಶ್ರೇಷ್ಠ ಗುರುವಿನ ಪರಮಾನುಗ್ರಹದಿಂದಲೂ ಮಾರ್ಗದರ್ಶನದಿಂದಲೂ ಶಿವಾಜಿ ಪ್ರಬಲ ಸಾಮ್ರಾಜ್ಯವನ್ನು ಕಟ್ಟುವುದು ಸಾಧ್ಯವಾಗುತ್ತದೆ; ಮೊಘಲರನ್ನು ಹತ್ತಿಕ್ಕುವುದು ಸಾಧ್ಯವಾಗುತ್ತದೆ. ಪೂರ್ವೇತಿಹಾಸದಲ್ಲಿ ಈ ದೇಶದ ಅನೇಕ ರಾಜಮಹಾರಾಜರುಗಳೂ ಚಕ್ರವರ್ತಿಗಳೂ ಹಾಗೆ ಅವರವರ ಹುಟ್ಟಿನ ಪರಿಸರದ ಸತ್ವವನ್ನು ಹೀರಿ ಬೆಳೆದವರೇ ಆಗಿದ್ದಾರೆ. ಪ್ರಪಂಚಕ್ಕೆ ರಾಮಾಯಣ  ಮತ್ತು ಮಹಭಾರತ ಎಂಬ ದಿವ್ಯ ಜೀವನಗಾಥೆಗಳನ್ನು ಕೊಟ್ಟ ಶ್ರೇಷ್ಠ ದಾರ್ಶನಿಕರ, ಋಷಿಸಂಸ್ಕೃತಿಯ ಮನುಕುಲ ನಮ್ಮದಾಗಿದೆ.

ದೇಶೋದ್ಧಾರದ ಹೆಸರಿನಲ್ಲಿ ಕೆಲಸಕ್ಕೆ ಬಾರದವರನ್ನು ಶಿಕ್ಷಕರನ್ನಾಗಿ ನೇಮಿಸಿದರೆ, ಪುಸ್ತಕ ತಲೆಕೆಳಗಾಗಿ ಹಿಡಿದು ಓದುವ ಮಂದಿ ಅದೇನು ಕಲಿಸಿಯಾರು? ಕೆಲಸ ಕೊಡಬಾರದು ಎಂಬರ್ಥವಲ್ಲ...ಯಾರಿಗೆ ಯಾವ ಕೆಲಸಕೊಟ್ಟರೆ ಯೋಗ್ಯ ಎಂಬುದನ್ನು ಆಡಳಿತದಲ್ಲಿರುವವರು ತಿಳಿದು ಕೊಡಬೇಕು. ದಾನಮಾಡುವಾಗಲೂ ಸತ್ಪಾತ್ರನಿಗೆ ದಾನ ಮಾಡು ಎಂಬ ಮಾತೊಂದಿದೆಯಲ್ಲಾ ಹಾಗೇ ಯೋಗ್ಯತೆಯನ್ನು ಗುರುತಿಸಿ ಜವಾಬ್ದಾರಿಯನ್ನು ಕೊಡುವ ಕೆಲಸ ನಡೆಯಬೇಕಿತ್ತು; ಆದರೆ ದಶಕಗಳಿಂದ ನಡೆದುಕೊಂಡು ಬಂದಿರುವುದು ಮೀಸಲಾತಿ! ಮೀಸಲಾತಿಯಲ್ಲಿ ವಿದ್ಯೆಕಲಿಸಲು ಬಾರದವ ಶಿಕ್ಷಕನಾಗಿ ಹುದ್ದೆ ಪಡೆದ-ಬೋಧಿಸಿದ!! ಆತನಿಂದ ಯಾವ ಮಟ್ಟದ ವಿದ್ಯೆಯನ್ನು ವಿದ್ಯಾರ್ಥಿಗಳು ಪಡೆಯಲು ಸಾಧ್ಯ? ಚಾಲಕನೊಬ್ಬ ಸರಿಯಾಗಿ ವಾಹನ ಚಲಿಸದಿದ್ದರೆ ಪ್ರಯಾಣಿಕರ ಕಥೆ ಏನು? ಅದೇ ರೀತಿ  ಶಾಲೆಯಲ್ಲಿ ತರಗತಿಯೆಂಬ ಬಸ್ಸಿನ ಚಾಲಕನಾಗುವ ಶಿಕ್ಷಕನಿಗೆ ಚಾಲನೆಯೇ ಬರದಿದ್ದರೆ ಅಥವಾ ಅಲ್ಪಸ್ವಲ್ಪ ಬರುತ್ತಿದ್ದರೆ ಅಪಘಾತ ಕಟ್ಟಿಟ್ಟದ್ದು!  ಶಿಕ್ಷಕ ಒಂದರ್ಥದಲ್ಲಿ ಗುರುವೇ ಆಗಿರುತ್ತಾನೆ. ಇವತ್ತಿನ ಶಾಲೆ-ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ನಾವು ದುಶ್ಶಾಸನನಂತಹ, ಕೀಚಕನಂತಹ ಶಿಕ್ಷಕರನ್ನು ಕಾಣುತ್ತಲೇ ಇರುತ್ತೇವೆ. 

ಇವತ್ತಿನ ಮಾಧ್ಯಮಗಳು ನೇರವಾಗಿ ತೋರಿಸುವ ಕಾಮಪ್ರಚೋದಕ ದೃಶ್ಯಗಳು ಸಹಜವಾಗಿ ಹಲವರಿಗೆ ತೊಂದರೆಯನ್ನುಂಟುಮಾಡುತ್ತವೆ. ವರದಿಗಳ ನೆಪದಲ್ಲಿ ಅಲ್ಲಿ ಬಿಂಬಿತವಾಗುವ ನೀತಿಬಾಹಿರವಾದ ವ್ಯವಹಾರಗಳ ಮಾಹಿತಿಗಳ ಮಹಾಪೂರ ಬೆಳೆಯುತ್ತಿರುವ ಮಕ್ಕಳ ಮನಸ್ಸಿನ ಮೇಲೆ ಅಧೋಗತಿಯಲ್ಲಿ ಅಗಾಧ ಪರಿಣಾಮ ಬೀರುತ್ತವೆ; ಇಂತಹ ಮಕ್ಕಳು ಹಲವರು ಮುಂದೆ ಶಿಕ್ಷಕರೋ, ರಾಜಕಾರಣಿಗಳೋ, ವೈದ್ಯರೋ, ತಂತ್ರಜ್ಞರೋ, ಕಲಾವಿದರೋ ಇನ್ನೇನೋ ಆದರೂ ಅವರ ಮನದಲ್ಲಿ ಕುಳಿತ ವಿಕೃತ ಛಾಯೆ ಹೋಗುವುದೇ ಇಲ್ಲ. ತುಂಬಿದ ಸಭೆಯಲ್ಲಿ ದುಶ್ಶಾಸನ ದ್ರೌಪದಿಯ ಸೀರೆಯನ್ನು ಸೆಳೆದ ಎಂಬುದನ್ನು ನಾವೆಲ್ಲಾ ಕೇಳಿದ್ದೆವು ಅಷ್ಟೇ ಹೊರತು ಕಂಡಿರಲಿಲ್ಲ; ಆದರೆ ತುಂಬಿದ ವಿಧಾನಸೌಧದಲ್ಲಿ ನೀಲಿಚಿತ್ರಗಳನ್ನು ನಿರಂತರ ನೋಡುವ ’ಜನನಾಯಕ’ರೆನಿಸಿದ ಮಂದಿ ಇಂದು ಎಲ್ಲೆಲ್ಲೂ ಇದ್ದಾರೆ! ಅಂಥವರಿಗೆ ಶಿಕ್ಷೆಗಿಂತಾ ರಕ್ಷಣೆ ಒದಗಿಸುವುದು ಅವ್ರದೇ ಪಕ್ಷದ ಕೆಲವು ಪ್ರಮುಖರ ಕೈವಾಡವಾಗುತ್ತದೆ. ಸಗರ ಚಕ್ರವರ್ತಿಯ ೬೦,೦೦೦ ಪುತ್ರರು ಹಿಂದಕ್ಕೆ ದೇಶದಲ್ಲಿ ಭೂಮಿಯನ್ನು ಬಗೆದು ನಿರ್ನಾಮವಾದರು ಎಂಬುದು ಅನೇಕರಿಗೆ ತಿಳಿದಿರಬಹುದು, ಆದರೆ ಅದೇ ಕೆಲಸವನ್ನು ಈ ನಮ್ಮ ಕರ್ನಾಟಕವೂ ಸೇರಿದಂತೇ ದೇಶದ ಅನೇಕಕಡೆ ಧೂರ್ತ ರಾಜಕಾರಣಿಗಳು ನಡೆಸಿಯೇ ಇದ್ದಾರೆ; ಭೂಮಿಯ ಒಡಲನ್ನೇ ಬಗೆದಿದ್ದಾರೆ. ಜನಸಂಖ್ಯೆ ಜಾಸ್ತಿಯಾಗುತ್ತಾ ಘನ/ದ್ರವತ್ಯಾಜ್ಯಗಳೂ ರಾಸಾಯನಿಕಗಳೂ ಪುಣ್ಯನದಿಗಳನ್ನು ಸೇರಿ ಅವುಗಳ ಪಾವಿತ್ರ್ಯತೆಯನ್ನು ದಿನೇ ದಿನೇ ಹಾಳುಗೆಡವುತ್ತಿವೆ; ಗಂಗೆ ಹರಿಯುತ್ತಾ ಮುಂದೆ ಮಲಿನವಾಗಿದ್ದಾಳೆ. ಹಣಕ್ಕಾಗಿ ಕೊಲೆ-ಸುಲಿಗೆ-ದರೋಡೆಗಳು ಹೆಚ್ಚುತ್ತಲೇ ಇವೆ. ದಿಢೀರ್ ಶ್ರೀಮಂತಿಕೆಗೆ ಅಡ್ಡದಾರಿಯಲ್ಲಿ ಪ್ರಯತ್ನಗಳೂ ಕೂಡ ಹಾಗೇ ಮುಂದುವರಿಯುತ್ತಲೇ ಇವೆ. ಶರವೇಗದಲ್ಲಿ ಓಡಾಡಲಿಕ್ಕಾಗಿ ಅಗಲಗಲದ ಪಥಗಳು ನಿರ್ಮಾಣಗೊಳ್ಳುವ ನೆಪದಲ್ಲಿ ಅಳಿದುಳಿದ ಕಾಡುಗಳೂ ಗಿಡಮರಗಳೂ ಕಡಿಯಲ್ಪಡುತ್ತಿವೆ. ಎಲ್ಲೆಲ್ಲೂ ಭೂಮಿ-ಸೈಟು ಕಬಳಿಕೆಯ ವ್ಯವಹಾರ ಜಾಸ್ತಿಯಾಗುತ್ತಿದೆ. ಬ್ರಷ್ಟಾಚಾರಿಯೇ ಈ ಕಡೆ ಬ್ರಷ್ಟಾಚಾರ ನಿರ್ಮೂಲನೆಯ ಆಂದೋಲನಕ್ಕೆ ಚಾಲನೆ ನೀಡುತ್ತಾನೆ ಮತ್ತು ತನ್ನ ಬ್ರಷ್ಟಾಚಾರ ಕಾರ್ಯವನ್ನು ಆ ಕಡೆಯಿಂದ ಮುಂದುವರಿಸುತ್ತಾನೆ! ನೀತಿ ಬೋಧೆಯನ್ನು ನೀಡುವ ಅನೇಕ ಜನ ನೀತಿ ತಪ್ಪಿ ನಡೆದ ಹೆಜ್ಜೆಗುರುತುಗಳು ಕಾಣುತ್ತವೆ.  

ಇದನ್ನೆಲ್ಲಾ ನೋಡುತ್ತಿರುವಾಗ ಕೆಲವೊಮ್ಮೆ ಅನಿಸುತ್ತದೆ: ಪೂರ್ವಜರು ಹಾಕಿಕೊಟ್ಟ ಆದರ್ಶಗಳು ಕೇವಲ ವೇದಿಕೆಯ ಭಾಷಣಗಳಿಗೆ ಸೀಮಿತವಾಗಿವೆ. ನಾವೆಲ್ಲಾ ಓದುವಾಗ ಪ್ರಾಥಮಿಕ ಶಾಲೆಯಲ್ಲಿ ’ಕಥಾರೂಪ ಇತಿಹಾಸ’ಎಂಬ ಪಠ್ಯವೊಂದಿತ್ತು. ಆ ಕಾಲದಲ್ಲೇ ಸಚಿತ್ರವಾಗಿ ಅಚ್ಚಿಸಲಾಗಿದ್ದ ಆ ಹೊತ್ತಗೆ ನನಗಂತೂ ಬಹಳ ಮುದನೀಡಿತ್ತು. ರಾಜಕಾರಣಿಗಳ ವಿಕೃತ ಧೋರಣೆಯಿಂದ, ವೋಟಿಗಾಗಿ ಒಡೆದಾಳುವ ನೀತಿಯಿಂದ ಇಂದು ಅಂತಹ ಪಠ್ಯಗಳು ಇಲ್ಲವೇ ಇಲ್ಲ. ಯಾವುದು ನಿಜವಾದ ನಮ್ಮ ಇತಿಹಾಸವೋ ಅದರ ಬದಲು ಕೇವಲ ಬ್ರಿಟಿಷರ ಬಗ್ಗೆ ಹೇಳುವುದೇ ಇತಿಹಾಸವಾಗಿ ಬಿಂಬಿತವಾಗುತ್ತದೆ. ರಾಮಾಯಣ ಮಹಾಭಾರತಗಳು ಈ ನೆಲದ ಮೂಲ ಇತಿಹಾಸಗಳೇ ಹೊರತು ಅವು ಕೇವಲ ಮಾಹಾಕಾವ್ಯಗಳಲ್ಲ! ಯಾರನ್ನೋ ಒಲಿಸಿಕೊಳ್ಳುವ ಸಲುವಾಗಿ ಹಿಂದೂಸ್ಥಾನದ ಮೂಲನಿವಾಸಿಗಳ ಆಶಯಗಳನ್ನೂ ಆದರ್ಶಗಳನ್ನೂ ಬಲಿಕೊಡಬೇಕಾಗಿಲ್ಲ. ಯಾರು ಇಲ್ಲಿಗೆ ಹೊರಗಿನಿಂದ ಬಂದರೋ ಅವರು ಇಲ್ಲಿನ ನಮ್ಮ ಸಂಸ್ಕೃತಿಯನ್ನು ಅಭ್ಯಸಿಸಿ ನಮಗೆ ತೊಂದರೆಯಾಗದಂತೇ ಬದುಕಬೇಕಾದ್ದು ಆಗಬೇಕಾದ ಕೆಲಸ; ವಿಪರ್ಯಾಸ ಎಂದರೆ ರಾಜಕೀಯದ ಹೊಲಗೇಡಿನಲ್ಲಿ ಎಲ್ಲದಕ್ಕೂ ಕೆಟ್ಟಬಣ್ಣಹಚ್ಚುವಲ್ಲಿ ಧೂರ್ತರು ನಿರತರಾಗಿದ್ದಾರೆ. ಭಗವದ್ಗೀತೆಯನ್ನು ಇಡೀ ಜಗತ್ತಿನ ಜನ ಮೆಚ್ಚಿದ್ದಾರೆ-ಆದರೆ ನಮ್ಮಲ್ಲಿನ ವೋಟಿನ ರಾಜಕಾರಣಿಗಳು ಮೆಚ್ಚುವುದಿಲ್ಲ! ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಪಾಠಗಳನ್ನು ಬೋಧಿಸುವ ಅಂತಹ ಮಾರ್ಗದರ್ಶಕ ಮ್ಯಾನೇಜ್ಮೆಂಟ್ ಗ್ರಂಥವನ್ನು ಈ ಜಗತ್ತಿನಲ್ಲಿ ಯಾರೇ ಕೊಂಡಾಡಿದರೂ ರಾಜಕಾರಣಿಗಳಿಗೆ ಅದರಲ್ಲಿ ಹಿಂದೂಮತ ಮಾತ್ರ ಕಾಣಿಸುತ್ತದೆ! ಗೀತೆಯ ಕೆಲವು ಮಾಹಿತಿಗಳನ್ನು ಪಠ್ಯದಲ್ಲಿ ಅಳವಡಿಸ ಹೊರಟರೆ ಅದಕ್ಕೆ ಅಡ್ಡಗಾಲು ಹಾಕುವಲ್ಲಿ ವೋಟ್ಬ್ಯಾಂಕ್ ರಾಜಕಾರಣಿಗಳು ಕುತಂತ್ರ ನಡೆಸುತ್ತಾರೆ.

ಸಂವಿಧಾನದಲ್ಲಿರುವ ಅಷ್ಟೂ ವಿಷಯಗಳಿಗೆ ಕಾನೂನು ರೀತಿಯಲ್ಲಿ ಕಳ್ಳಮಾರ್ಗಗಳನ್ನು ಹುಡುಕಿಕೊಂಡ ರಾಜಕಾರಣಿಗಳು ಸಂವಿಧಾನವನ್ನು ಪರಿಷ್ಕರಿಸಲು ಮುಂದಾಗುವುದಿಲ್ಲ. ಸ್ವಿಸ್ ಬ್ಯಾಂಕಿನಲ್ಲಿ ಠೇವಿರಿಸಿದ ಕಪ್ಪುಹಣವನ್ನು ತರುವುದಕ್ಕೆ ಯಾರಿಗೂ ಮನಸ್ಸಿಲ್ಲ; ಭಾರತ ಬಡರಾಷ್ಟ್ರವಲ್ಲ, ಆದರೆ ಬಡತನವೆಂಬ ಸೋಗುಹಾಕಿದ ಕೆಲವುಜನ ಹಾಗೆ ಹೇಳುತ್ತಿದ್ದಾರೆ. ಅಂಥವರು ವಿದೇಶಗಳಲ್ಲಿ ಠೇವು ಇಟ್ಟ, ಹೂಡಿಕೆಮಾಡಿದ ಹಣ ಹಾಗೇ ಹೋಗಿಬಿಟ್ಟಿದ್ದರೆ ಆಗ ಸರಿಯಾಗುತ್ತಿತ್ತು! ದೇಶದಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಮದುವೆ-ಮಂಗಲಕಾರ್ಯಗಳಲ್ಲಿ ತಿಂದು ಬಿಸಾಡಿದ ಎಂಜಲು ಎಲೆಗಳಲ್ಲಿ ಸಿಗುವ ಮಿಕ್ಕ ಕೂಳಿಗಾಗಿ ಬೀದಿನಾಯಿ-ಹಂದಿಗಳ ಜೊತೆ ಸೆಣಸಿ ಬದುಕುವ ಅನಾಥರಿದ್ದಾರೆ. ಬಿಸಿಲ ಬೇಗೆಯನ್ನು ಸಹಿಸಿ ಬಿಂದಿಗೆ ಹಿಡಿದು ಕಿಲೋಮೀಟರುಗಟ್ಟಲೆ ಸಾಗಿ ಕುಡಿಯುವ ನೀರಿಗಾಗಿ ನಿತ್ಯವೂ ಹವಣಿಸುವ ಜನ ಇದ್ದಾರೆ. ಯಾವುದೋ ನೆಪದಲ್ಲಿ ಮನೆ-ಮಠವನ್ನು ಕಳೆದುಕೊಂಡ ನಿರ್ಗತಿಕರಿದ್ದಾರೆ. ವಿದೇಶೀ ಸಂಸ್ಕೃತಿಯ ಮುನ್ನುಗ್ಗುವಿಕೆಯ ಪ್ರಲೋಭನೆಯಿಂದ ಮಕ್ಕಳಿಂದ ವೃದ್ಧಾಶ್ರಮಕ್ಕೆ ತಳ್ಳಲ್ಪಟ್ಟ ಮಾತಾಪಿತೃಗಳಿದ್ದಾರೆ. ಲಿವ್-ಇನ್/ಲಿವ್-ಔಟ್ ವ್ಯವಹಾರಗಳು ಬಂದು ನಮ್ಮ ಮೂಲ ಸಂಸ್ಕೃತಿ ಬಲಿಯಾಗಿ ಸಮಾಜ ನೈತಿಕವಾಗಿ ಹಡಾಲೆದ್ದು ಹೋಗುತ್ತಿದೆ. ’ಸ್ತ್ರೀಯೊಬ್ಬಳು ಕಲಿತರೆ ಶಾಲೆಯೊಂದನ್ನು ತೆರೆದಂತೇ’ ಎಂಬುದು ಹಿಂದಿನಮಾತು ಈಗ ಅದು ಬದಲಾಗಿದೆ: ’ಸ್ತ್ರೀ ಯೊಬ್ಬಳು ಕಲಿತು ಮುಂದೆ ಸಾಗಿದರೆ ಅಪ್ಪ-ಅಮ್ಮನಿಗೆ ನಾಮ ಬಳಿದಂತೇ’ ಎನ್ನಬೇಕಾದ ಕಾಲ ಬಂದಾಗಿದೆ. ಹೊತ್ತುಹೆತ್ತು ಕಷ್ಟಪಟ್ಟು ತಮ್ಮ ಹೊಟ್ಟೆ-ಬಟ್ಟೆ ಕಟ್ಟಿ ಓದಿಸಿದ ಹುಡುಗಿ ಲವ್-ಜಿಹಾದ್ ನಂತಹ ಮಾರಕ ಪಿಡುಗುಗಳಿಗೆ ತಮ್ಮೆದುರೇ ಬಲಿಯಾಗುವಾಗ, ಯಾರದೋ ಜೊತೆಯಲ್ಲಿ ಲಿವ್-ಇನ್ ನಡೆಸಲು ತೊಡಗಿದಾಗ ಹಡೆದಪ್ಪ-ಅಮ್ಮಂದಿರ ಸ್ಥಿತಿ ಏನಾಗಬೇಡ!  

ಹೇಳುತ್ತಾ ಹೋದರೆ ಒಂದೊಂದೂ ಒಂದೊಂದು ಕಥೆಯಾಗಿ ಧಾರಾವಾಹಿಯಾಗಿ ಪ್ರವಹಿಸುತ್ತದೆ. ಸ್ವಾತಂತ್ರ್ಯಬಂದ ನಂತರ ದೇಶ ನಮಗೇನು ಕೊಟ್ಟಿತು ಎಂಬ ಪ್ರಶ್ನೆಯನ್ನು ಕೇಳುವ ನಾವು ದೇಶಕ್ಕಾಗಿ ಪೂರ್ವಜರು ಕೊಟ್ಟುಹೋದದ್ದನ್ನಾದರೂ ಉಳಿಸಿದ್ದೇವೆಯೇ ಎಂಬುದನ್ನು ಅವಲೋಕಿಸಿದರೆ ಉತ್ತರ ಬಹುತೇಕ ನಕಾರಾತ್ಮಕವಾಗಿ ಸಿಗುವ ಕಾಲ ಬಹಳದೂರ ಇಲ್ಲ! ಆ ಕಾಲ ಬಾರದಿರಲಿ, ನಮ್ಮಲ್ಲಿನ ಉಚ್ಚ ಸಂಸ್ಕೃತಿ, ಪರಿಸರ, ನಿಸರ್ಗ ನಮ್ಮ ಮುಂದಿನ ಪೀಳಿಗೆಗಳಿಗೂ ಇರಲಿ, ಶ್ರೀರಾಮನಾಳಿದ್ದ ಭಾಗಶಃ ಭಾರತ ಸಂಪೂರ್ಣ ರಾಮರಾಜ್ಯವಾಗಲಿ ಎಂದು ಹಾರೈಸುತ್ತಿದ್ದೇನೆ.

ಸತ್ಪುರುಷರ, ಮಹಾಮಹಾ ಮನೀಷಿಗಳ ತಪೋಭೂಮಿಯಾದ ಈ ಭವ್ಯ ಭಾರತದಲ್ಲಿ ಎಲ್ಲಲ್ಲೂ ಪುಣ್ಯಪುರುಷರು ಉದಯಿಸಲಿ; ಅರ್ಷೇಯ ಉಚ್ಚ ಸಂಸ್ಕೃತಿ ಉಳಿದುಕೊಳ್ಳಲಿ ಎಂಬುದು ನನ್ನ ಆಶಯವಾಗಿದೆ.ಇನ್ನೂ ಬೇಕು ಬೇಕು ಎನ್ನುತ್ತಿರುವಂತೆಯೇ ಇನ್ನಿಲ್ಲವಾಗಿ ದಿವ್ಯ ಬೆಳಕಿನಲ್ಲಿ ಲೀನವಾಗುವ ಬಯಕೆ ಆಗಾಗ ಬರುತ್ತದೆ. ಪುಣ್ಯಪುರುಷರ ಯಶೋಗಾಥೆಗಳು ನಮ್ಮೆಲ್ಲರ ಜೀವನಕ್ರಮದಲ್ಲಿ ಅಳವಡಿತವಾಗಲಿ, ತಾಪಸಿಗಳ ತಪದ ಪುಣ್ಯಫಲ ಸದಾ ನಮಗೆ ದೊರಕುತ್ತಿರಲಿ ಎಂದು ಬಯಸುತ್ತೇನೆ. ಹಿಮಾಲಯದ ಉತ್ತುಂಗದಲ್ಲಿ ಈ ದೇಶದ ಉನ್ನತಿಗಾಗಿ ನಿಸ್ವಾರ್ಥರಾಗಿ, ನಿಸ್ಪೃಹರಾಗಿ, ತಮ್ಮ ಐಹಿಕ ಬದುಕನ್ನು ಕಡೆಗಣಿಸಿ ಇಂದಿಗೂ ತಪಗೈಯ್ಯುತ್ತಿರುವ ಅನೇಕ ಸಂತ-ಮಹಂತ-ಸನ್ಯಾಸಿಗಳ ಪದತಲಕ್ಕೆ ಈ ಸಂದರ್ಭದಲ್ಲಿ ನಮಿಸುವ ಬಯಕೆಯಾಗುತ್ತದೆ. ನಮ್ಮಷ್ಟಕ್ಕೇ ನಾವಂದುಕೊಂಡುಬಿಟ್ಟಿದ್ದೇವೆ--’ಓಹೋ ನಾವೇನೂ ಕಮ್ಮಿ ಇಲ್ಲಾ’ಅಂತ! ನಾವು ಅರಿತಿದ್ದು ಏನೂ ಇಲ್ಲಾ ಎಂಬುದು ಸ್ವಲ್ಪ ವಿವೇಚಿಸಿದರೆ ಗೊತ್ತಾಗುತ್ತದೆ. ಅರಿವಿನ ದಾಹ ಇಂಗದ ದಾಹವಾಗುತ್ತದೆ. ನಮ್ಮಲ್ಲಿನ ಕತ್ತಲನ್ನು ಕಳೆದು ಬೆಳಕು ನಮ್ಮೊಳಗೆ ಪ್ರವಹಿಸಲಿ, ಪ್ರಜ್ವಲಿಸಲಿ, ಕತ್ತಲಿನಿಂದ ಬೆಳಕಿನೆಡೆಗೆ ನಡೆಯುವಂತಾಗಲಿ ಎಂಬುದು ಉತ್ಕಟೇಚ್ಛೆ. ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯನವರ ಅದ್ಭುತ ಗೀತೆಯ ಗಾಯನವನ್ನು ಕೇಳುತ್ತಾ, ವಿರಮಿಸೋಣ, ಎಲ್ಲರಿಗೂ ಮತ್ತೊಮ್ಮೆ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು,

ಜೈ ಹಿಂದ್       ಜೈ ಹಿಂದ್


ಜೈ ಹಿಂದ್ 


Monday, August 13, 2012

"ನಮ್ಮನ್ನೆಲ್ಲಾ ನೋಡಿಕೊಳ್ಳಲಿಕ್ಕೆ ಜನ ಇದ್ದಾರೆ ನಿಮ್ಮನ್ಯಾರು ನೋಡಿಕೊಳ್ತಾರೆ?"

 ಚಿತ್ರಕೃಪೆ: ಹರೇರಾಮ.ಇನ್

"ನಮ್ಮನ್ನೆಲ್ಲಾ ನೋಡಿಕೊಳ್ಳಲಿಕ್ಕೆ ಜನ ಇದ್ದಾರೆ ನಿಮ್ಮನ್ಯಾರು ನೋಡಿಕೊಳ್ತಾರೆ?"

ಚಳಿಗಾಲದ ಒಣಹವೆಯಲ್ಲಿ ಭಗವದ್ಗೀತೆಯ ಪ್ರವಚನ ನಡೆಸುತ್ತಾ ತುಟಿಗಳು ಒಡೆದಿದ್ದವು. ಹೊರಟು ನಿಂತ ನಮ್ಮನ್ನು ಮುದುಕರೊಬ್ಬರು ತಡೆದರು. ಓಡೋಡಿ ಬಂದು, "ಗುರುಗಳೇ, ತುಟಿಯೆಲ್ಲಾ ಒಡೆದುಹೋಗಿದೆ, ಇಗೊಳಿ ಸ್ವಲ್ಪ ಎಣ್ಣೆ, ಸವರಿಕೊಳ್ಳಲಿಕ್ಕೆ. ನಮ್ಮನ್ನೆಲ್ಲಾ ನೋಡಿಕೊಳ್ಳಲಿಕ್ಕೆ ಜನ ಇದ್ದಾರೆ ನಿಮ್ಮನ್ಯಾರು ನೋಡಿಕೊಳ್ತಾರೆ?" ಎನ್ನುತ್ತಾ ಕೊಬ್ಬರಿಎಣ್ಣೆ ತುಂಬಿದ ಬಾಟಲಿಯನ್ನು ಕೈಗಿತ್ತರು. ಮುದುಕರ ಮುಖದಲ್ಲಿ ಇರುವ ಆ ಪ್ರೀತಿಗೆ ಮನಸೋತೆವು, ಆ ಘಟನೆ ಇಂದಿಗೂ ನಮ್ಮನ್ನು ಕೆಣಕುತ್ತದೆ-- ಹೀಗೆಂದವರು ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು.

ಸನ್ಯಾಸಿಗಳಿಗೆ ಸುತ್ತ ಹತ್ತಾರುಸಾವಿರ ಜನರಿದ್ದರೂ ಎಲ್ಲರೂ ಅವರವರ ಬೇಕು-ಬೇಡಗಳನ್ನಷ್ಟೇ ನೋಡಿಕೊಳ್ಳುತ್ತಾರೆ ವಿನಃ ಸನ್ಯಾಸಿಗಳ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ಅದರಲ್ಲಂತೂ ಯೋಗಸನ್ಯಾಸಿಗಳ ಜೀವನ ವೈಖರಿ ಬಹಳ ಕಠಿಣತಮ. ದುರ್ಗಮಪ್ರದೇಶಗಳಲ್ಲಿ, ಗಿರಿಶಿಖರಗಳಲ್ಲಿ ಸಂಚರಿಸುತ್ತಾ ’ಕರತಲ ಭಿಕ್ಷ ತರುತಲ ವಾಸ’ ರಾಗಿರುತ್ತಾ ಸಾಗುವ ಅವರ ತ್ಯಾಗ ಈ ದೇಶದ ಅನನ್ಯತೆಯನ್ನು ಎತ್ತಿ ತೋರಿಸುತ್ತದೆ. ತಮ್ಮ ಅಸಾಮಾನ್ಯ ತಪಸ್ಸಿನಿಂದ ಈ ದೇಶದ ಸ್ವಾಸ್ಥ್ಯಕ್ಕಾಗಿ ಪ್ರಾರ್ಥಿಸಿದವರೆಷ್ಟೋ ಮಂದಿ; ಈ ದೇಶವನ್ನು ಅನುಗ್ರಹಿಸಿದವರೆಷ್ಟೋ ಮಂದಿ. ಗಡಿಕಾಯುವಲ್ಲಿ ನಮ್ಮ ಸೈನಿಕರು ತಮ್ಮನ್ನು ತೊಡಗಿಸಿಕೊಂಡ ಹಾಗೇ ನಮ್ಮ ಉಚ್ಚಮಾನವ ಸಂಸ್ಕೃತಿಯನ್ನು ಕಾಪಾಡುವಲ್ಲಿ ಅದಕ್ಕೆ ಮಾರ್ಗದರ್ಶಕರಾದವರದೆಷ್ಟೋ ಮಂದಿ. ಹಾರಿ ಬಂದ ಹದ್ದಿನ ಹೊಟ್ಟೆಯ ಹಸಿವಿಗೆ ತೊಡೆಯ ಮಾಂಸವನ್ನೇ ಉಣಬಡಿಸಿದ ಚಕ್ರವರ್ತಿ ಶಿಬಿಯ ನಾಡು ನಮ್ಮದು!

ದೇವಾಸುರರ ಯುದ್ಧದಲ್ಲಿ ಹೆದರಿ ಕಂಗಾಲಾಗಿದ್ದ ದೇವತೆಗಳಿಗೆ ಮಹತ್ತರವಾದ ಆಯುಧಗಳು ಬೇಕಾಗಿದ್ದವು. ಇದ್ದನ್ನರಿತ ದಧೀಚಿ ತನ್ನ ಅಖಂಡ ತಪ್ಪಸ್ಸಿನಿಂದ ದೇಹವನ್ನೇ ತ್ಯಜಿಸುತ್ತಾ ತನ್ನ ಎಲುಬುಗಳನ್ನೇ ಆಯುಧಗಳನ್ನಾಗಿ ಬಳಸಲು ತಿಳಿಸಿದ. [ವಿಚಿತ್ರ ಹೆಸರಿಗೆ ಚಿಕ್ಕ ವಿವರಣೆ: ದಧಿ ಎಂದರೆ ಸಂಸ್ಕೃತದಲ್ಲಿ ಮೊಸರು. ಮೊಸರಿನಿಂದ ಮಾನವ ದೇಹದ ಅಂಗಗಳು ಸುಪುಷ್ಟವಾಗಿಯೂ ಶಕ್ತಿಯುತವಾಗಿಯೂ ಇರುತ್ತವೆ ಎಂದು ತಿಳಿದುಬರುತ್ತದೆ. ಪಾಣಿನಿ ತನ್ನ ಗ್ರಂಥದಲ್ಲಿ, 'ದಧೀಚಿ' ಎಂಬುದು ದಧ್ಯಾಂಚ ಅಥವಾ ದಧ್ಯಾಂಗ ಎನ್ನುವುದರ ಅಪಭ್ರಂಶ ಎಂದಿದ್ದಾನೆ.]ಎಂದಮೇಲೆ ಸಾತ್ವಿಕ ಮತ್ತು ತಾಮಸ ಶಕ್ತಿಗಳ ನಡುವೆ ಮೊದಲಿನಿಂದಲೂ ಮಾರಾಮಾರಿ ಇದ್ದಿದ್ದೇ ಎಂಬುದು ಸ್ಪಷ್ಟವಾಗುತ್ತದೆ. ಪ್ರಸಕ್ತ ನಾವು ನೋಡುತ್ತಿರುವ ಭಯೋತ್ಫಾದನೆ ಮತ್ತು ಮತಗಳ ಹೆಸರಿನಲ್ಲಿ ನಡೆಯುತ್ತಿರುವ ಆಕ್ರಮಣಗಳೆಲ್ಲಾ ತಾಮಸೀ ಪ್ರವೃತ್ತಿಯ ಜನರ ಕೈವಾಡಗಳೇ ಆಗಿವೆ. ರಕ್ಕಸರು ಬೇರೇ ಯಾರೂ ಅಲ್ಲ ಅವರೇ ಆಗಿದ್ದಾರೆ!

ಪ್ರಾಯಶಃ ಸಂತಮಹಂತರ ಸತತ ಪರಿಶ್ರಮ ಇರದಿದ್ದರೆ ಈ ದೇಶದ ಮೂಲಧರ್ಮ ಇರುತ್ತಿತ್ತೋ ಇಲ್ಲವೋ ಕಾಣೆ. ನಿರ್ಗುಣರೂಪದ ಜಗನ್ನಿಯಾಮಕ ಶಕ್ತಿ ಸಗುಣರೂಪಗಳಲ್ಲಿ ತನ್ನನ್ನೇ ಸೃಜಿಸಿಕೊಂಡಿತು. ಸಗುಣರೂಪದ ಶಕ್ತಿಯ ವಿವಿಧ ರೂಪಗಳು ಹಲವು ಲೋಕಗಳ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣವಾದವು. ಅಂತಹ ನಾಟಕಗಳ ಪಾತ್ರಧಾರಿಗಳಾಗಿ ನಾವೆಲ್ಲಾ ಈ ಭುವಿಗೆ ಬಂದೆವು. ಇಲ್ಲಿಗೇ ಆಟ ಮುಗಿಯಲಿಲ್ಲ. ನಮ್ಮೊಳಗೇ ಅರಿತವರು-ಅರಿಯದವರು, ಶ್ರೀಮಂತರು-ಬಡವರು, ನಿರೋಗಿಗಳು-ರೋಗಿಗಳು, ಸುಸಂಸ್ಕೃತರು-ಕುಸಂಸ್ಕೃತರು ಹೀಗೆ ವಿಂಗಡಣೆ ಮಾಡುತ್ತಾ ಎಲ್ಲವನ್ನೂ ಹಾಗೇ ನಡೆಸುತ್ತದೆ. ಒಂದೇ ಮೂಲದಿಂದ ಬಂದರೂ ಒಂದೇ ಥರ ಇರದಿರುವುದು ಆಶ್ಚರ್ಯ. ತೆಂಗಿನಕಾಯಿಗಳ ಗೊಂಚಲು ಅದೇ-ಆದರೆ ಕಾಯಿಗಳು ಚಿಕ್ಕ-ದೊಡ್ಡಗಾತ್ರದವುಗಳು, ಬಾಳೆಯ ಹಣ್ಣಿನ ಗೊನೆ ಅದೇ ಆದರೆ ಬಾಳೆ ಹಣ್ಣುಗಳಲ್ಲೂ ಸಣ್ಣ-ದೊಡ್ಡ, ತಾಯಿ ಅವಳೇ ಆದರೆ ಮಕ್ಕಳ ಗುಣ-ರೂಪ-ಸ್ವಭಾವಗಳಲ್ಲಿ ಬಹಳ ಭಿನ್ನತೆ! ತಾಯಿಯಿರದ ಗಿಳಿಮರಿಗಳಲ್ಲಿ ಒಂದು ಸಂತನಲ್ಲೂ ಒಂದು ಕಟುಕನಲ್ಲೂ ಬದುಕಿ ಬೆಳೆದ ಕಥೆ ನಮಗೆ ತಿಳಿದೇ ಇದೆಯಲ್ಲಾ ಕಟುಕ ಗಿಳಿಮರಿಯನ್ನು ಅದು ಹೇಗೆ ಸಾಕಿದನೋ? ಪ್ರಾಯಶಃ ಕಟುಕನ ಹೃದಯದಲ್ಲೂ ಎಲ್ಲೋ ಒಂದುಕಡೆ ಸುಕೋಮಲ ಭಾವಗಳು ಒಮ್ಮೆ ಉದ್ಭವಿಸಿರಬೇಕು; ಹೀಗಾಗಿ ಹಕ್ಕಿ ಬಚಾವು! ಗಿಳಿಯ ಮರಿಗೆ ಸಂತ ಉಚ್ಚ ಸಂಸ್ಕಾರ ಕೊಟ್ಟನಲ್ಲವೇ? ಅಂತೆಯೇ ಜೀವಗಳಿಗೆ ಸಂತ ಜೀವಗಳ ಸಂತುಲನದಿಂದ ಒದಗುವ ಸಂಸ್ಕಾರಗಳೇ ಅತ್ಯಂತ ಉಚ್ಚಮಟ್ಟದವಾಗಿರುತ್ತವೆ.      

ಅಂತಹ ಅದೆಷ್ಟು ಸಂತರು ದೇಶಭಕ್ತರು ನಮ್ಮಲ್ಲಿ ಆಗಿಹೋಗಿಲ್ಲ? ಲೆಕ್ಕ ಇಡಲೇ ಸಾಧ್ಯವಿಲ್ಲದಷ್ಟು! ಒಬ್ಬೊಬ್ಬರದೂ ಒಂದೊಂದು ಕಥೆ; ಒಂದೊಂದು ಬಗೆಯ ಯಶೋಗಾಥೆ. ಅಂತಹ ಋಷಿ ಸಂಸ್ಕೃತಿ ನಮ್ಮನ್ನು ಜಗದಲ್ಲಿಯೇ ಶ್ರೇಷ್ಠವಾಗಿಸಿತು. ಬಡತನವೇ ಹಾಸುಹೊಕ್ಕಾಗಿದ್ದರೂ ಆತಿಥ್ಯಕ್ಕೆ ಹೆಸರಾದವರು ನಮ್ಮ ಜನ; ಜಗತ್ತಿನಲ್ಲಿ ಸಿಗುವ ಯಾವುದೇ ಪ್ರಮುಖ ಅಧುನಿಕ ಸೌಲಭ್ಯಗಳು ಇರದಿದ್ದರೂ ಇದ್ದುದರಲ್ಲಿಯೇ ತೃಪ್ತಿಪಟ್ಟವರು ನಮ್ಮಜನ; ಕಗ್ಗಾಡಿನ ಕರಾಳರಾತ್ರಿಯಲ್ಲಿ ಕಂದೀಲಿನ ಬೆಳಕಿನಲ್ಲಿ ಅನ್ನ-ಆಸೆ ಮಾಡಿ  ಬಂದ ಜನರಿಗೆ ನೀಡಿ ಉಪಚರಿಸುವವರು ನಮ್ಮಜನ; ಯಾರಿಗೋ ಆಪತ್ತುಂಟಾದರೆ ಕೈಕೈ ಜೋಡಿಸಿ ಸಹಾಯ ಹಸ್ತ ಚಾಚುವವರು ನಮ್ಮಜನ; ಹೂವು ಕೊಡುವಲ್ಲಿ ಹೂವಿನ ಪಕಳೆಯನ್ನ ಕೊಟ್ಟು ಸಮಾಧಾನಿಸಿ ಅದನ್ನೇ ಹೂವೆಂದು ಪರಿಗಣಿಸಬೇಕೆಂಬ ಪ್ರಾರ್ಥನೆ ಸಲ್ಲಿಸುವವರು ನಮ್ಮಜನ;  ಹೆಚ್ಚೇಕೆ ಬೆಲ್ಲ ಕೊಡಲಾಗದಿದ್ದರೂ ಬೆಲ್ಲ ಎಲ್ಲಿ ಸಿಗುತ್ತದೆ ಎಂದು ದಾರಿ ತೋರುವ ಸೌಜನ್ಯವುಳ್ಳವರು ನಮ್ಮಲ್ಲಿನ ಜನ.

ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿಬರಲೂ ಪುಣ್ಯ ಪಡೆದಿರಬೇಕು. ನಮ್ಮ ಪ್ರಾಗೈತಿಹಾಸವೇ ನಮ್ಮ ರಾಮಾಯಣ ಮಹಾಭಾರತಗಳು; ಅವುಗಳನ್ನು ಮಹಾಕಾವ್ಯಗಳು ಎನ್ನುವುದಕ್ಕಿಂತಾ ಸಂದಕಾಲಘಟ್ಟವೊಂದರಲ್ಲಿ ನಡೆದ ಜೀವನಚರಿತ್ರೆಗಳು ಎಂದರೇ ಸರಿ. ಅಂತಹ ಜೀವನಗಾಥೆಗಳನ್ನು ಮತ್ತೆ ಮತ್ತೆ ಮೆಲುಕುಹಾಕುವುದರಿಂದ, ಆಳಕ್ಕೆ ಇಳಿದು ತಿಳಿದುಕೊಳ್ಳುವುದರಿಂದ ನಮ್ಮ ಜೀವನದಲ್ಲಿ ಸ್ವಾನುಭವವನ್ನು ಪಡೆದಷ್ಟೇ ಸಂತಸವಾಗುತ್ತದೆ; ಯಾವುದನ್ನು ಮಾಡಬೇಕು? ಯಾವುದನ್ನು ಮಾಡಬಾರದು? ಎಲ್ಲಿ ಏನು ಮಾಡಬೇಕು? ಏನು ಮಾಡಿದರೆ ತೊಂದರೆಯಾಗುತ್ತದೆ? ಏನು ಮಾಡುವುದರಿಂದ ತಪ್ಪಿತಸ್ಥರು ಎನಿಸಿಕೊಳ್ಳುತ್ತೇವೆ? ಇದೆಲ್ಲಾ ಸಿಗುವುದು ಇಡೀ ಜಗತ್ತಿನಲ್ಲಿಯೇ ಈ ನಮ್ಮ ಮಹಾಕಾವ್ಯಗಳಲ್ಲಿ ಮಾತ್ರ!! ಋಷಿಗಳು ತಮ್ಮ ಬರೆಯುವ ಚಾಪಲ್ಯ ತೀರಿಸಿಕೊಳ್ಳಲೋ ಕಾಲಹರಣ[ಟೈಂ ಪಾಸ್]ಕ್ಕೋ ಮಾಹಾಕಾವ್ಯಗಳನ್ನು ಬರೆದಿದ್ದಲ್ಲ; ಅವು ತಮ್ಮ ಮುಂದಿನ ಪೀಳಿಗೆ ಪೀಳಿಗೆ ಪೀಳಿಗೆಗಳಿಗೆ ತಲತಲಾಂತರಗಳವರೆಗೆ ಓದಲು ಸಿಕ್ಕು ಜೀವನಕ್ಕೊಂದು ನಿಶ್ಚಿತ ಗುರಿಯೂ ಕ್ರಮವೂ ಇರಲಿ ಎಂಬ ಸದಾಶಯದಿಂದಲೇ ಆಗಿದೆ. 

ಕನ್ನಡನಾಡಿನ ನಮ್ಮ ಹೆಮ್ಮೆಯ ಗುರುಪೀಠಗಳು ಅಂತಹ ಮಹತ್ತರ ಕೆಲಸಗಳನ್ನು ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ, ಆಸ್ವಾದನೀಯ. ಜನಸಂದಣಿಯಲ್ಲಿ ಮೆರವಣಿಗೆಯಲ್ಲಿ ಸಾಗಿಬಂದು ರಜತ ಸಿಂಹಾಸನದಲ್ಲಿ ಕೂತು ಮೆರೆಯುವ ಸನ್ಯಾಸಿಗಳು ಅವರೊಳಗೇ ಅವರು ಏಕಾಂಗಿಗಳು! ಅಲ್ಲಿ ಎಲ್ಲವೂ ಇದ್ದು ಏನೂ ಇಲ್ಲ!! ನೂರಾರು ಕೋಟಿಗಳ ಆಸ್ತಿಗಳಿದ್ದರೂ ಅವು ಅವರಿಗಾಗಲ್ಲ. ನಮ್ಮಂತೆಯೇ ಇದ್ದ ಎಳೆಯಪ್ರಾಯದ ಹುಡುಗರು ಯಾವುದೇ ಸುಖೋಪಭೋಗಗಳು ಬೇಡಾ ಎಂದು ತ್ಯಜಿಸಿ ಸನ್ಯಾಸಿಗಳಾಗಿ ಮುನ್ನಡೆಯುವುದು ಇಲ್ಲಿನ ಆಶ್ಚರ್ಯ!! ಅಪ್ಪ-ಅಮ್ಮ-ಅಣ್ಣ-ತಮ್ಮ-ಅಕ್ಕ-ತಂಗಿ-ಬಂಧು-ಬಳಗ ಎಲ್ಲರನ್ನೂ ಎಲ್ಲವನ್ನೂ ಬಿಟ್ಟು ಎಲ್ಲರ ಬಂಧ-ಸಂಬಂಧಗಳನ್ನು ಹರಿದುಕೊಂಡು ನಡೆಸುವ ತ್ಯಾಗ ಕಮ್ಮಿಯದೇ?

ರಾವಣನನ್ನು ವಧಿಸಿ ಇಡೀ ಲಂಕೆಯನ್ನೇ ಗೆದ್ದ ನಂತರ ಲಂಕೆಯ ಸಿರಿ[ಶ್ರೀಲಂಕಾ ಎಂದೇ ಹೆಸರು!]ಯನ್ನು ಕಂಡು ಅಲ್ಲೇ ಉಳಿಯುವ ಮನಸ್ಸಿನಲ್ಲಿದ್ದ ಲಕ್ಷ್ಮಣನಿಗೆ ಶ್ರೀರಾಮ ಹೇಳಿದ :

अपि स्वर्णमयी लङ्का न मे लक्ष्मण रोचते ।
जननी जन्मभूमिश्च स्वर्गादपि गरीयसी ||

ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ|
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ|| 

ನಮಗೆ ನಮ್ಮ ತಾಯ್ನಾಡಾದ ಅಯೋಧ್ಯೆಯಿದೆ, ಕೋಸಲದೇಶವಿದೆ, ನಮ್ಮ ನಾಡಿನ ಮುಂದೆ ಇದು ಏನೇನೂ ಅಲ್ಲ. ಎಷ್ಟೇ ಸಿರಿ ಸಂಪತ್ತಿದ್ದರೂ ಲಕ್ಷ್ಮಣಾ, ಜನ್ಮಕೊಟ್ಟ ಭೂಮಿ ಮತ್ತು ಹೆತ್ತ ತಾಯಿ ಇವೆರಡಕ್ಕಿಂತಾ ಮಿಗಿಲಾದವು ಯಾವುದೂ ಇಲ್ಲ. ಹೀಗಾಗಿ ಲಂಕೆ ನಮಗೆ ಬೇಡ.

ಅದೇ ರೀತಿಯಲ್ಲಿ ಈ ಭರತಭೂಮಿಗಾಗಿ, ಈ ಸಮಾಜಕ್ಕಾಗಿ,  ಹೊತ್ತು ಹೆತ್ತ ತಾಯಿಯ ಸಂಬಂಧವನ್ನೂ ಕಡಿದುಕೊಂಡು ತ್ಯಾಗಮಯಿಯಾಗಿ ಜೀವಿಸುವುದು ಅತ್ಯಂತ ಶ್ರೇಷ್ಠ ಕೆಲಸ. ಮಾತೊಂದು ಹೀಗಿದೆ ಹೊರಗೆ ದುಡಿಯಲು ಹೋದ ಮಗ ಮನೆಗೆ ಬಂದಾಗ ತಾಯಿ ನೋಡುವುದು ಮಗನ ಹೊಟ್ಟೆಯನ್ನಂತೆ! ಮಗ ಹಸಿದಿದ್ದಾನೋ ಹಸಿವನ್ನು ಹೇಗೆ ತಡೆದುಕೊಂಡನೋ ಎಂಬ ಆತಂಕ ಅವಳದ್ದು. ತನ್ನ ಹೊಟ್ಟೆಗೆ ಏನೂ ಸಿಗದಿದ್ದರೂ ಮಗುವಿನ ಹೊಟ್ಟೆ-ಬಟ್ಟೆಗೆ ಹೇಗಾದರೂ ಪೂರೈಸುವ ಉತ್ಕಟ ಸಹಜ ಮನೋಭಿಲಾಷೆ ಮಾತೆಯದ್ದು. ಅಂತಹ ತಾಯಿಯ ಮಮತೆಯ ಮಡಿಲಿನಿಂದ ದೂರವಾಗುವುದು ಸುಲಭದ ಸಂಬಂಧವಲ್ಲ! ಕಣ್ಣಿಗೆ ಕಾಣಿಸಿದರೂ ತಾಯಿಗೆ ತಾಯಿ ಎನ್ನುವ ಹಾಗಿಲ್ಲ, ತಾಯಿಯ ಬೇಕು-ಬೇಡಗಳ ಕಡೆಗೆ ಗಮನ ಕೊಡುವ ಹಾಗಿಲ್ಲ. ನ್ಯಾಸ ಧರ್ಮದಂತೇ ಎಲ್ಲಿಗೂ ಹಾಗೆಲ್ಲಾ ತೆರಳಲು ಸಾಧ್ಯವಿಲ್ಲ, ಬೇಕುಬೇಕಾದ್ದು ಮಾಡುವಹಾಗಿಲ್ಲ, ಮನಸೋ ಇಚ್ಛೆ ತಿನ್ನುವಹಾಗಿಲ್ಲ, ಮನೋರಂಜನೆಗೆ ತೆರಳುವ ಹಾಗಿಲ್ಲ, ಶರೀರದ ಬಯಕೆಗಳನ್ನು ನಿಗ್ರಹಿಸಬೇಕು, ಇಂದ್ರಿಯಗಳನ್ನು ಅಂತರ್ಮುಖಗೊಳಿಸಬೇಕು, ಸಮಯದಲ್ಲಿ ಒಂದೇ ಆಸನದಲ್ಲಿ ದಿನಗಟ್ಟಲೇ ಕೂತೇ ಇರಬೇಕು, ಬಹಿರ್ದೇಶೆಗೂ ಎದ್ದುಹೋಗಲು ಸಮಯ ಅನುಮತಿಸದಿದ್ದರೂ ಸಹಿಸಿಕೊಳ್ಳಬೇಕು! ಯಮ-ನಿಯಮಾದಿ ಅಷ್ಟಾಂಗಯೋಗದಿಂದ ಶರೀರ-ಬುದ್ಧಿಗಳನ್ನು ಸ್ಥಿಮಿತದಲ್ಲಿಡಲು ಸತತ ನಿರತರಾಗಿರಬೇಕು. ಬಹುಕಾಲ ಅಧ್ಯಯನಕ್ಕೆ, ಗ್ರಂಥ ರಚನೆಗೆ, ತಪಸ್ಸಿಗೆ, ಪೂಜೆ-ಪುನಸ್ಕಾರಗಳಿಗೆ, ಪ್ರವಚನವೇ ಮೊದಲಾದ ಅಧ್ಯಾಪನಕ್ಕೆ ಕಳೆದುಹೋಗುವ ದಿನದಲ್ಲಿ ತ್ರಿಕಾಲ ಸ್ನಾನನುಷ್ಠಾನ ಮಾಡಬೇಕು. "ದೇಹಿ" ಎನ್ನುವ ಆರ್ತರ ಅಳಲನ್ನು ಆಲಿಸಬೇಕು-ಅವರ ಅನಿವಾರ್ಯತೆಗೆ ಸ್ಪಂದಿಸಬೇಕು, ಲೌಕಿಕ-ಅಲೌಕಿಕ ಅಥವಾ ಅಧಿಭೌತಿಕ-ಅಧಿದೈವಿಕ-ಅಧ್ಯಾತ್ಮಿಕ [ತಾಪತ್ರಯಗಳನ್ನು]ಸಮಸ್ಯೆಗಳನ್ನು ಹೊತ್ತುಬರುವವರಿಗೆ ಪರಿಹಾರ ಅನುಗ್ರಹಿಸಬೇಕು!    

ಇಷ್ಟೆಲ್ಲಾ ಒತ್ತಡಗಳ ನಡುವೆ ಸನ್ಯಾಸಿಗಳಿಗೆ ಅವರದ್ದೇ ಎಂಬ ಸಮಯವೆಲ್ಲಿ? ಆ ನಡುವೆಯೂ ಅವರು ಕೊಡಮಾಡುವ ದಿವ್ಯ ಪ್ರೀತಿ ಎಂಥಾದ್ದು ಎಂಬುದರ ಸಂಕೇತವಾಗಿ ಮೇಲಿನ ಚಿತ್ರವನ್ನು ತೋರಿಸಿದ್ದೇನೆ. ಅಂತಹ ಕಾರುಣ್ಯರೂಪಕ್ಕೆ ಮತ್ತೊಂದು ಹೆಸರೇ ’ಗುರು’. ಪೂರ್ಣದಿಂದ ಉದಯಿಸುವ ಇಂತಹ ಗುರುಗಳು ಅದೇ ಪೂರ್ಣದೆಡೆಗೆ ನಮ್ಮನ್ನೂ ಕರೆದರೆ ಹೋಗದ ನಾವೇ ರಣಹೇಡಿಗಳು!

ॐ पूर्णमदः पूर्णमिदम् पूर्णात् पूर्णमुदच्यते |
पूर्णस्य पूर्णमादाय पूर्णमेवावशिष्यते ||
ॐ शान्तिः शान्तिः शान्तिः || [1]

OM poorNamadaH poorNamidaM poorNaat poorNamudacyate|
poorNasya poorNamadaya poorNamEvaavashiShyate
OM shaaMtihi shaaMtihi shaaMtihi

Om ! That (Brahman) is infinite, and this (universe) is infinite.
The infinite proceeds from the infinite.
(Then) taking the infinitude of the infinite (universe),
It remains as the infinite (Brahman) alone.
Om ! Peace ! Peace ! Peace

ವೀರಯೋಧರಂತೇ ಸನ್ಯಾಸಿಗಳೂ ವೀರರೇ! ಈ ಲೋಕದ ಮೋಹವನ್ನು ಕಡಿದುರುಳಿಸುವ ಅವರು ಯಾವ ವೀರರಿಗೂ ಕಮ್ಮಿಯಲ್ಲ. ಒಂದರ್ಥದಲ್ಲಿ ಅವರೇ ನಿಜವಾದ ವೀರರು. ಅಂತಹ ಹಲವು ವೀರರನ್ನು ಹೆತ್ತತಾಯಿ ಈ ನಮ್ಮ ಭಾರತ. ಅದೇ ತಾಯಿ ನನಗೂ ಜನ್ಮವಿತ್ತಳು. ಅವಳ ಸುಗಂಧಭರಿತ ಸುಸಂಕೃತ ನೆಲದಲ್ಲಿ ಹುಟ್ಟಲು ಅವಕಾಶ ಕೊಟ್ಟಿದ್ದಕ್ಕೆ, ನನ್ನ ಯಾವುದೋ ಜನ್ಮಗಳ ಪುಣ್ಯಫಲಗಳನ್ನು ಸೃಷ್ಟಿಕರ್ತನಿಗೆ ತೋರಿಸಿ ನನ್ನನ್ನಿಲ್ಲಿ ಸೆಳೆದಂತಹ ಆ ತಾಯಿಗೆ ನನ್ನ ನಮಸ್ಕಾರ ಈ ಭಾವರೂಪದ ಮೂಲಕ:   

ಯಾವನೆಲದ ಗಂಧಗಾಳಿ ನನ್ನನಿಲ್ಲಿ ಸೃಜಿಸಿತೋ
ಯಾವ ಪೂರ್ವಪುಣ್ಯ ಸೆಳೆದು ಭಾರತಕ್ಕೆ ತಂದಿತೋ
ಯಾವ ದೇವ ಹರಸಿ ಇಲ್ಲಿ ಬದುಕು-ಬಣ್ಣ ಗಳಿಸಿತೋ
ಭಾವಪೂರ್ಣ ನಮನವದಕೆ ಜೀವ ತೃಪ್ತವಾಯಿತೋ

ಸಾವಿನಲ್ಲು ಸುಖವಕಂಡ ದೇಶಭಕ್ತರೆಲ್ಲಿಯೋ
ನೋವುನುಂಗಿ ತ್ಯಾಗಮೆರೆದ ತಾಯಂದಿರು ಎಲ್ಲಿಯೋ
ಹೂವುಗಳವು ದೇವಮುಡಿಗೆ ನಿತ್ಯಸೇರ್ವುದೆಲ್ಲಿಯೋ
ಭಾವಪೂರ್ಣ ನಮನವದಕೆ ಜೀವ ತೃಪ್ತವಾಯಿತೋ

ನೋವಿನಲ್ಲು ನಲಿವಿನಲ್ಲು ಮನಸ ಸ್ಥಿಮಿತಗೊಳಿಸಿತೋ
ಬೇವಿನಲ್ಲು ಮಾವಿನಲ್ಲು ವರಗುಣಗಳ ತಿಳಿಸಿತೋ
ಜೀವ ಜೀವಗಳಲು ಒಳಗೆ ಪರಮಾತ್ಮನ ತೋರಿತೋ
ಭಾವಪೂರ್ಣ ನಮನವದಕೆ ಜೀವ ತೃಪ್ತವಾಯಿತೋ

ಯಾವ ನೆಲದ ಠಾವಿನಲ್ಲಿ ಸಂತರರಳಿ ಬರುವರೋ
ಯಾವ ದೇಶ ಸಹಿಷ್ಣುತೆಗೆ ತಾಯಿಯಾಗಿ ಇರುವುದೋ
ಯಾವ ಭೂಮಿ ಎನ್ನಾತ್ಮಕೆ ಸನ್ಮಾರ್ಗವ ತೋರಿತೋ
ಭಾವಪೂರ್ಣ ನಮನವದಕೆ ಜೀವ ತೃಪ್ತವಾಯಿತೋ

Thursday, August 9, 2012

ಮೂಲವನ್ನೆ ಮರೆತ ಜಾತ್ರೆ !

 ಚಿತ್ರಋಣ: ಅಂತರ್ಜಾಲ
ಮೂಲವನ್ನೆ ಮರೆತ ಜಾತ್ರೆ !

[ಸನ್ಮಿತ್ರರೇ, ಹೀಗೊಂದು ಪ್ರಯತ್ನ ಎಂಬ ಮಾಲಿಕೆಯಲ್ಲಿ  ಪ್ರಪಂಚದ ಸ್ವಾರಸ್ಯಗಳನ್ನು ಗಹನವಾಗಿ ಬಣ್ಣಿಸುವ ಪ್ರಯತ್ನ ಸತತ ನಡೆಸಿಯೇ ಇದ್ದೇನೆ. ಅಂತಹದೊಂದು ಹಾಡು ಇಂದಿನ ಕಥಾನಕ, ನಿಮ್ಮೆಲ್ಲರ ಓದಿಗಾಗಿ ಇದೋ ಇಲ್ಲಿದೆ:]


ದೇವನಿತ್ತ ದೇಹದಲ್ಲಿ ’ಬದುಕು’ ಕಥೆಯ ಪಾತ್ರವಾಗಿ 
ಭಾವಗಳನು ಮಿಳಿಸಿಕೊಂಡ ಅಂತರಾತ್ಮನೇ |
ಯಾವ ಭಾಗದಲ್ಲಿ ಅವಿತೆ ಪಂಚಭೂತ ಕಾಯದಲ್ಲಿ ?
ದೇವನೆಡೆಗೆ ತಿರುಗಿಸೆನ್ನ ನಿನಗೆ ವಂದನೆ || ಪ ||

ಜಾವಜಾವದಲ್ಲು ಮನದಿ ಲೋಗರಾಟ ಮಾಯೆ ಮುಸುಕಿ
ಜೀವ ಹಿಂಡಿ ಅಗಿದು ಜಗಿದು ಹಿಪ್ಪೆಮಾಡಿತು |
ನೋವನುಂಡಮೇಲು ಮತ್ತೆ ನಲಿವಿನಾಸೆ ಮೂಡುತಿಲ್ಲಿ
ಮಾವ ಅತ್ತೆ ಅಳಿಯ ಮಗಳು ಬಂಧ ಕಾಡಿತು! || ೧ ||

ವಾವೆ ಮುಗಿಯದಂಥ ಯಾತ್ರೆ ಮೂಲವನ್ನೆ ಮರೆತ ಜಾತ್ರೆ
ಸಾವು-ಹುಟ್ಟು-ಸಾವು-ಹುಟ್ಟು ತಿರುಗು ಚಕ್ರವು |
ಕಾವ ದೈವ ಕಾಣಲಾರ ತನ್ನ ಜಾಗ ತೋರಲಾರ
ಕಾವು ಹೆಚ್ಚೆ ಗಚ್ಚು ಮುರಿದು ಎಲ್ಲ ವಕ್ರವು ! || ೨ ||

ಮಾವು ತೆಂಗು ಕಂಗು ಹಲಸು ಹಲವು ವಿಧದ ಫಲಗಳಿಂದ
ಬೇವು-ಬೆಲ್ಲ ಸುಖ-ದುಃಖಗಳ ಸಖ್ಯಗಾಥೆಯು |
ಭಾವಪೂರ್ಣ ಸನ್ನಿವೇಶ ಋತು-ಮಾಸ-ಪಕ್ಷಗಳಲಿ
ಜೀವನಾಗಿ ಕಾಣುವಂತ ಇಹದ ಗೀತೆಯು || ೩ ||

ಗಾವುದದಾ ದೂರವಲ್ಲ ಯೋಜನಗಳ ಹಂಗದಿಲ್ಲ
ನಾವು ನಮ್ಮೊಳಲ್ಲೆ ಕಾಂಬ ಸತ್ಯಮಾರ್ಗವ |
ಕೇವಲಾತ್ಮನಾಗೆ ಹೊರಡು ಕೈವಲ್ಯದ ಬೆಳಕ ಹುಡುಕಿ
ಆವ ಬಂಧ ಬಿಗಿಯದಂಥ ತಥ್ಯಮಾರ್ಗವ  || ೪ ||

Wednesday, August 8, 2012

ಗೊಲ್ಲನಾಗಿ ಮೆಲ್ಲನಿಳಿದೆ

 ಚಿತ್ರಋಣ: ಅಂತರ್ಜಾಲ
ಗೊಲ್ಲನಾಗಿ ಮೆಲ್ಲನಿಳಿದೆ

[ಲೋಕದ ಸಮಸ್ತರಿಗೂ ಜಗದ್ಗುರು ಶ್ರೀಕೃಷ್ಣನ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ಶ್ರೀಕೃಷ್ಣ ಸಕಲರಿಗೂ ಸನ್ಮಂಗಳವನ್ನುಂಟುಮಾಡಲಿ.  ಕಳೆದ ವರ್ಷ ಬರೆದ  ಕೃಷ್ಣಕಥೆಯ [ವಿಠೋಬನ ಕಥೆಯ] ಮತ್ತು ಕೃಷ್ಣಗೀತೆಯ ಕೊಂಡಿಗಳ ಜೊತೆಗೆ ಇಂದು ಬರೆದ ಈ ಗೀತೆಯನ್ನು ತಮೆಗೆಲ್ಲಾ ಓದಿಸುವುದರ ಮೂಲಕ ಕೃಷ್ಣಾರ್ಪಣಗೈಯ್ಯುತ್ತಿದ್ದೇನೆ: ]


ಅಲ್ಲಿ ವಿಠೋಬನೆಂಬ ಒಬ್ಬ ಸಾಹುಕಾರ !

 ಎಂದೂ ಮುಗಿಯದು ಹರಿಕಥೆಯು ! 




ಗೊಲ್ಲನಾಗಿ ಮೆಲ್ಲನಿಳಿದೆ ಗೋಪಿಕೆಯರ ಎದೆಯೊಳು |
ನಿಲ್ಲುತಲ್ಲಿ ಅವರ ಸೆಳೆದೆ ಗೋಕುಲದಾ ಧರೆಯೊಳು ||

ಎಲ್ಲಿನೋಡಲಲ್ಲಿ ನೀನೆ ಎಲ್ಲರಲ್ಲು ಕಾಣಿಸಿ |
ಚೆಲ್ಲುಚೆಲ್ಲು ನಾಟ್ಯವಾಡಿ ಎಲ್ಲರನ್ನು ಸೋಲಿಸಿ || 

ಹುಲ್ಲು ಕಡ್ಡಿಯಲ್ಲು ನಿನ್ನ ಲೀಲೆಯನ್ನು ತೋರಿಸಿ |
ಕಲ್ಲುಬೆಟ್ಟ ಎತ್ತಿಹಿಡಿದು ಇಂದ್ರನನ್ನೆ ಮೀರಿಸಿ ||

ಬಲ್ಲ ವಿದುರ ಅಕ್ರೂರಗೆ ದಿವ್ಯತೆಯನು ಕರುಣಿಸಿ |
ಎಲ್ಲಕೊಟ್ಟೆ ಅವಲಕ್ಕಿಯ ಕುಚೇಲನಿಗೆ ಹವಣಿಸಿ || 

ಗೆಲ್ಲಿಸುತ್ತ ಧರ್ಮವನ್ನು ಕೌರವರನು ವಧಿಸುತ |
ಸಲ್ಲುವಂತ ಗೀತೆ ನೀಡಿ ಕರ್ಮಬಂಧ ಬಿಡಿಸುತ || 

Sunday, August 5, 2012

’ವೈದಿಕ ವೈರಸ್’ ಬರೆದು ವೈಷ್ಯಮ್ಯದ ವಿಷಕಾರಿದ ಅಗ್ನಿ ಶ್ರೀಧರ್ ಗೆ ಪ್ರತ್ಯುತ್ತರ

 ಚಿತ್ರಗಳ ಋಣ: ಅಂತರ್ಜಾಲ 
’ವೈದಿಕ ವೈರಸ್’ ಬರೆದು ವೈಷ್ಯಮ್ಯದ ವಿಷಕಾರಿದ ಅಗ್ನಿ ಶ್ರೀಧರ್ ಗೆ ಪ್ರತ್ಯುತ್ತರ 

ತಮ್ಮೊಳಗೇ ತಾವು ತತ್ವಜ್ಞಾನಿ ಎಂದುಕೊಂಡಿರುವ ’ಅಗ್ನಿ’ ಪತ್ರಿಕೆಯ ಶ್ರೀಧರರೇ,

ಬ್ರಹ್ಮಾಂಡದ ರಹಸ್ಯವನ್ನೇ ಅರೆದು ಕುಡಿದಿದ್ದೇನೆ ಎಂಬ ಆತುರದ ಅನಿಸಿಕೆಯಲ್ಲಿ ಜುಲೈ ೧೨ರ ನಿಮ್ಮ ಸಂಚಿಕೆಯಲ್ಲಿ ’ವೈದಿಕ ವೈರಸ್’ ಎಂಬ ಶಿರೋನಾಮೆಯನ್ನು ಇಟ್ಟು ಇಡೀ ಸಂಚಿಕೆಯಲ್ಲಿ ತಮ್ಮ ಹಾಗೂ ತಮ್ಮ ಸಮಾನ ಮನಸ್ಕರ ಒಳತೋಟಿಯನ್ನು ಬಹಿರಂಗಗೊಳಿಸಿದ್ದೀರಿ. ಅಷ್ಟಾಗಿ ಬ್ರಾಹ್ಮಣ್ಯ ಎಂಬ ಪದದ ಅರ್ಥವೇ ಗೊತ್ತಿಲ್ಲದ ನಿಮಗೆ, ಬೆಂಗಳೂರಿನ ಕನಕಪುರ ರಸ್ತೆಯ ’ಆರ್ಟ್ ಆಫ್ ಲಿವಿಂಗ್’ ನ ಶ್ರೀ ರವಿಶಂಕರ್ ಗುರೂಜಿಯವರನ್ನು ಕಂಡರೆ ಎಂತಹ ದ್ವೇಷ ಎಂಬುದು ನಮೆಗೆಲ್ಲಾ ಗೊತ್ತೇ ಇದೆ. ಅದರ ಹಿಂದಿನ ಸ್ವಾರಸ್ಯವೇನು ಎಂಬುದನ್ನೂ ಎಲ್ಲರೂ ಮನಗಂಡಿದ್ದಾರೆ. ಇತ್ತೀಚೆಗೆ ಆಧುನಿಕತೆಯ ಅನುಸರಣೆ ಎಂಬ ಸೋಗಿನಲ್ಲಿ ಎಡಪಂಥೀಯರು ಎನಿಸಿಕೊಳ್ಳುವವರ ಸಂಖ್ಯೆ ತೀವ್ರವಾಗಿ ಜಾತಿಯಾಗತೊಡಗಿದೆ. ಹೀಗೆ ಜಾಸ್ತಿಯಾಗುವುದಕ್ಕೆ ಹಲವರಿಗೆ ತಮ್ಮೊಳಗಿನ ಬ್ರಾಹ್ಮಣದ್ವೇಷವೇ ಕಾರಣ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲವಷ್ಟೇ? ತಮ್ಮ ತತ್ವಜ್ಞಾನಕ್ಕೆ ಇನ್ನೂ ಸೇರ್ಪಡೆಗೊಂಡಿರದ ಅಥವಾ ಉದ್ದೇಶ ಪೂರ್ವಕವಾಗಿ ಬಿಟ್ಟುಹೋದ : ಬ್ರಾಹ್ಮಣರು ಯಾರು? ಯಾಕಾಗಿ ಕೆಲವುಜನ ಬ್ರಾಹ್ಮಣರು ಎನಿಸಿಕೊಂಡರು?  ಮತ್ತು ಬ್ರಾಹ್ಮಣ್ಯ ಎಂದರೇನು?-- ಈ ಕೆಲವು ಅಂಶಗಳ ಬಗ್ಗೆ ಇಲ್ಲಿ ನಮೂದಿಸುವ ಸಲುವಾಗಿ ಹೀಗೆ ಬರೆಯುತ್ತಿದ್ದೇನೆ.

ಪೂರ್ವೈತಿಹಾಸಕಾರರು ಹೇಳಿದ್ದಕ್ಕೆಲ್ಲಾ ಆಧಾರಗಳು ಸಿಗುವುದಿಲ್ಲ. ಅದೊಂದು ಅಂದಾಜಿನ ಲೆಕ್ಕಾಚಾರವಾಗಿದೆ. ಹೀಗಾಗಿ ಪುಣ್ಯಭೂಮಿ ಭಾರತದ ಮೂಲ ನಿವಾಸಿಗಳು ಬರೇ ದ್ರಾವಿಡರು ಎಂಬುದನ್ನು ನಂಬಲು ಯಾವುದೇ ದಾಖಲುಪತ್ರಗಳು ದೊರೆಯುವುದಿಲ್ಲ. ಇಡೀ ಈ ಭೂಮಂಡಲವನ್ನೇ ಒಂದು ಕಾಲಕ್ಕೆ ನಾಗಕುಲದವರು ಆಳುತ್ತಿದ್ದರು ಎಂಬುದು ಪುರಾಣೋಕ್ತವಾಗಿದೆ-ಅದನ್ನು ನೀವು ಅಲ್ಲಗಳೆಯುತ್ತೀರಿ ಯಾಕೆಂದರೆ ವೇದ-ಶಾಸ್ತ್ರ-ಪುರಾಣಗಳು ಬ್ರಾಹ್ಮಣರ ಸೃಷ್ಟಿ ಎಂದು ಭಾವನೆಯುಳ್ಳ ಜನ ನೀವಾಗಿದ್ದೀರಿ. ನಾವೆಲ್ಲಾ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ’ಆರ್ಯರು ಭಾರತಕ್ಕೆ ಬಂದುದು’ ಎಂಬ ಅಧ್ಯಾಯವನ್ನು ಇತಿಹಾಸದ ವಿಷಯಕವಾಗಿ ಓದಿದ್ದೆವು. ಆರ್ಯಾವರ್ತ ಎಂಬ ಸಿಂಧೂನದಿಯ ಕಣಿವೆಯ ಜನಾಂಗ ಈ ಭವ್ಯ ಭಾರತಕ್ಕೆ ಅಲ್ಲಿಂದ ವಲಸೆ ಬಂತು ಎಂದುಕೊಂಡರೂ ಸಿಂಧೂ ನದಿ ಒಂದು ಕಾಲಕ್ಕೆ ಭಾರತದ ಅಂಗವೇ ಆಗಿತ್ತಲ್ಲಾ? ಇಡೀ ಈ ಜಗತ್ತಿನಲ್ಲಿ ಇವತ್ತು ಭಾರತ ಪುಣ್ಯಭೂಮಿ, ಶಾಂತ-ಪ್ರಶಾಂತ ಪ್ರದೇಶ ಎನಿಸಿಕೊಳ್ಳಲಿಕ್ಕೆ ಮೂಲಭೂತ ಕಾರಣವೇ ಇಲ್ಲಿನ ಸಂಸ್ಕೃತಿಯಾಗಿದೆ ಎಂಬುದನ್ನಾದರೂ ಒಪ್ಪುತ್ತೀರೇ?  

ಭಾರತೀಯ ಸಂಸ್ಕೃತಿಗೆ ಇಲ್ಲಿನ ಸುಲಲಿತ ಸಂಸ್ಕೃತವೇ ಕಾರಣ ಎಂಬುದು ಸ್ವಲ್ಪ ತಿಳುವಳಿಕೆಯುಳ್ಳ ಯಾವ ಮಗುವಿಗಾದರೂ ಗೊತ್ತು! ಮನುಷ್ಯರು ಎನಿಸಿಕೊಂಡವರಿಗೆ ಮೆದುಳು ಎಂಬ ತಲೆಯೊಳಗಿನ ಅಂಗ ಜಾಸ್ತಿ ವಿಕಸಿತವಾಗಿರುತ್ತದೆ ಎಂಬುದು ಇಂದಿನ ವಿಜ್ಞಾನವೂ ಒಪ್ಪಿಕೊಂಡ ವಿಷಯವಷ್ಟೇ? ಅಂತಹ ಮೆದುಳನ್ನು ಪಡೆದ ಮನುಷ್ಯ ಅದನ್ನು ಉನ್ನತಿಗೂ ಅವನತಿಗೂ ಯಾವರೀತಿಯಲ್ಲೇ ಬೇಕಾದರೂ ಬಳಸಿಕೊಳ್ಳಬಹುದು ಎಂಬುದೂ ಸತ್ಯ ಅಲ್ಲವೇ? ವಿಕಸಿತ ಮೆದುಳಿನ ವಿಕೃತ ನಿರ್ಧಾರಗಳಿಗೆ ಕಡಿವಾಣ ಹಾಕುವ ಸಲುವಾಗಿ, ಜಗತ್ತಿಗೇ ಆದರ್ಶಪ್ರಾಯವಾದ ’ವೇದಗಳು’ಎಂಬ ಜೀವನಸೂತ್ರಗಳನ್ನು ಅಪೌರುಷೇಯವಾಗಿ ಅನುಗ್ರಹರೂಪದಲ್ಲಿ ಪಡೆದು, ಅವುಗಳನ್ನು ಅನುಷ್ಠಾನದಲ್ಲಿ[ಅನುಷ್ಠಾನ ಎಂದರೆ ಜಪ ಎಂದುಕೊಳ್ಳಬೇಡಿ, ಅನುಷ್ಠಾನ ಎಂದರೆ ಕಾರ್ಯಗತ ಎಂದರ್ಥ]ಇಟ್ಟುಕೊಂಡಿರುವುದರಿಂದ  ಜಗತ್ತಿನಾದ್ಯಂತ ಭಾರತಕ್ಕೆ ಮಾನ್ಯತೆ ಇದೆ. ನಮ್ಮಲ್ಲಿನ ಇಂದಿನ ಬ್ರಾಹ್ಮಣ ಯುವಕರಲ್ಲಿ ಕೆಲವರೂ ಸೇರಿದಂತೇ ಎಡಪಂಥೀಯರು ಅಸಡ್ಡೆಯಿಂದ ಕಾಣುವ ವೇದಗಳನ್ನು ವಿದೇಶೀಯರು ಓದಿಕೊಳ್ಳತೊಡಗಿದ್ದಾರೆ; ಅನುಸರಿಸಲು ಮುಂದಾಗಿದ್ದಾರೆ!

ಚಂದ್ರಮಾ ಮನಸೋ ಜಾತಃ 
ಚಕ್ಷೋಸ್ಸೂರ್ಯೋ ಅಜಾಯತ

ದೇವರ ಮನಸ್ಸಿನಿಂದ ಚಂದ್ರನೂ ದೇವರ ಕಣ್ಣುಗಳಿಂದ ಸೂರ್ಯನೂ ಜನಿಸಿದರಂತೆ.

ಋಗ್ವೇದದ ಪವಮಾನ ಪಂಚಸೂಕ್ತಗಳಲ್ಲಿ ಒಂದಾದ ಪುರುಷಸೂಕ್ತದ

ಬಾಹ್ಮಣೋಸ್ಯ ಮುಖಮಾಸೀತ್
ಬಾಹೂರಾಜನ್ಯಃ ಕೃತಃ|
ಊರೂ ತದಸ್ಯ ಯದ್ವೈಶ್ಯಃ
ಪದ್ಭ್ಯಾಂ ಶೂದ್ರೋ ಅಜಾಯತ ||    

--ಈ ಭಾಗವನ್ನು ತಾವು ತಪ್ಪುತಪ್ಪಾಗಿ ’ಗರ್ದಭ ಗಾಥೆ’ಯಂತೇ ಒದರಿಕೊಂಡಿದ್ದೀರಿ; ಮತ್ತು ಯಾವ ಬ್ರಾಹ್ಮಣನೂ ಈ ಒಂದು ಮಂತ್ರಕ್ಕೆ ಅರ್ಥ ಹೇಳುವ ಸಮಯ ಬಂದಾಗ ಸೋಲುತ್ತಾನೆಂದೂ ಇದೊಂದೇ ಮಂತ್ರ ಇಡೀ ಬ್ರಾಹ್ಮಣ ಕುಲದ ಭಾವನೆಯನ್ನು ತಿಳಿಸಿಕೊಡುವುದರಿಂದ ವೇದದಲ್ಲಿ ಇದು ಅಡಕವಾಗಿರುವುದು ಇಂದಿನ ಬ್ರಾಹ್ಮಣರಿಗೆ ಅರಗಿಸಿಕೊಳ್ಳಲಾಗದ ಕಬ್ಬಿಣದ ಕಡಲೆ ಎಂದೂ ಅಪ್ಪಣೆ ಕೊಡಿಸಿದ್ದೀರಿ!! ಶ್ರೀಧರರೇ ಹೇಳುತ್ತೇನೆ ಕೇಳಿ: ಈ ಮಂತ್ರ ಭಾಗದ ಅರ್ಥವಿಷ್ಟೇ:

ಅಮೂರ್ತರೂಪದ ಜಗನ್ನಿಯಾಮಕ ಶಕ್ತಿಯನ್ನು ಪುರುಷರೂಪದಲ್ಲಿ ಇಲ್ಲಿ ವರ್ಣಿಸಲಾಗಿದೆ. ದೇವರ ಮುಖದ ಭಾಗ ಬ್ರಾಹ್ಮಣ ಎಂತಲೂ ತೋಳುಗಳ ಭಾಗ ಕ್ಷತ್ರಿಯ ಎಂತಲೂ, ತೊಡೆಗಳ ಭಾಗ ವೈಶ್ಯ ಎಂತಲೂ ಪಾದಗಳ ಭಾಗ ಶೂದ್ರ ಎಂತಲೂ ತಿಳಿಸಲಾಗಿದೆ. ದೈವ ಸಂಕಲ್ಪದಿಂದ ಆ ಯಾ ಭಾಗಗಳಿಂದ ಜನಿಸಿದ ಜನಾಂಗವೇ ಮುಂದೆ ಹೀಗೆ ವರ್ಣಾಶ್ರಮವಾಗಿ ಬೆಳೆಯಿತೇ ಹೊರತು ಇದು ಯಾರೋ ಬ್ರಾಹ್ಮಣರು ಮಾಡಿದ  ಗುಂಪುಗಾರಿಕೆಯಲ್ಲ. ನಿಮ್ಮ ಹಿಂದಿನ ಸಂಚಿಕೆಯೊಂದರಲ್ಲಿ, ಯಾರೋ ನಿಮ್ಮ ಬ್ರಾಹ್ಮಣ ಮಿತ್ರ, "ಸಾವಿರಾರು ವರ್ಷಗಳಿಂದ ನಮ್ಮನ್ನು ನಮ್ಮ ಹಿರಿಯರು ಇಂಥಾ ಆಹಾರಗಳಿಂದ ವಂಚಿತರಾಗುವಂತೇ ಮಾಡಿಬಿಟ್ಟಿದ್ದಾರೆ" ಎಂದು ಹೇಳಿ ಮಾಂಸಾಹಾರದ ಹೋಟೆಲ್ಲಿಗೆ ಕರೆದೊಯ್ದ ಎಂದೂ ಬರೆದಿದ್ದೀರಿ. ಬ್ರಾಹ್ಮಣ್ಯ ಎಂಬುದೊಂದು ಜೀವನಪರ್ಯಂತದ ವ್ರತ. ಹುಟ್ಟಿನಿಂದ ಸಾವಿನವರೆಗೆ ಅನುದಿನ ಜರುಗಬೇಕಾದ ಕಠಿಣ ನಿಯಮಗಳನ್ನು ಅನುಸರಿಸಿ ನಡೆಸುವ ಈ ವ್ರತಕ್ಕೆ ಎಲ್ಲರೂ ಒಗ್ಗುವುದಿಲ್ಲ. ಬ್ರಾಹ್ಮಣ ಎಂದರೆ ನೀವಂದುಕೊಂಡಂತೇ ಕುಳಿತು ಉಂಬವನಲ್ಲ; ನಿಜವಾದ ಬ್ರಾಹ್ಮಣ ಎಷ್ಟೋ ದಿನ ಊಟವನ್ನೇ ಮಾಡುವುದಿಲ್ಲ ಎಂಬುದೂ ತಮ್ಮ ಗಮನಕ್ಕಿರಲಿ! ಸಮಾಜದ ಇತರೇ ವರ್ಗಗಳನ್ನು ದುಡಿಸಿ ಅವರಮೂಲಕ ದಾನವಾಗಿಯೋ ಕಾಣಿಕೆಯಾಗಿಯೋ ಧನಕನಕ ಸುವಸ್ತು,ಧಾನ್ಯಾದಿಗಳನ್ನು ಸ್ವೀಕರಿಸುವ ಹುನ್ನಾರ ಬ್ರಾಹ್ಮಣರದ್ದು ಎಂಬುದು ತಮ್ಮ ಹೇಳಿಕೆಯಾಗಿದೆ; ದಾನವನ್ನು ಸ್ವೀಕರಿಸುವುದು ಇನ್ನೊಬ್ಬರ ಇಹಜೀವಿತದ ಪಾಪಕರ್ಮಗಳನ್ನು ಸ್ವೀಕರಿಸಿದಂತೇ ಎಂದು ವೇದ ಹೇಳುತ್ತದೆ, ಸ್ವೀಕರಿಸಿದ ದಾನದಿಂದ ಆರ್ಜಿತವಾದ ಪಾಪವನ್ನು ಕಳೆದುಕೊಳ್ಳುವುದಕ್ಕೆ ಕೆಲವು ಕಠಿಣ ನಿಯಮಗಳೂ ಹೇಳಲ್ಪಟ್ಟಿವೆ, ಅಂತಹ ನಿಯಮಗಳನ್ನು ಎಲ್ಲರೂ ಪಾಲಿಸಲು ಸಾಧ್ಯವಿಲ್ಲವಾದ್ದರಿಂದ ಬ್ರಾಹ್ಮಣರು ಗುರುವಿನ ಸ್ಥಾನದಲ್ಲಿ ನಿಂತು ಸನ್ಮಾರ್ಗವನ್ನು ಬೋಧಿಸುತ್ತಾ ದಾನಾದಿಗಳನ್ನು ಸ್ವೀಕರಿಸುತ್ತಾರೆಯೇ ವಿನಃ ಅದು ಇಷ್ಟಪಟ್ಟು ನಡೆಸುವ ಕೆಲಸವಲ್ಲ.

ಸಮಾಜದಲ್ಲಿ ಹಾಗೆ ಕುಳಿತಲ್ಲೇ ಗಂಟುಕಟ್ಟುವ ಕೆಲಸಮಾಡಿದ್ದರೆ, ಕಟ್ಟಿದ ಗಂಟುಗಳಿಂದ ಹಲವು ಮನೆಗಳನ್ನೋ ಆಸ್ತಿಪಾಸ್ತಿಗಳನ್ನೋ ಸಂಪಾದಿಸಿಕೊಂಡು ಎಲ್ಲರಿಗಿಂತಾ ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲಿ ಇರಬೇಕಾಗಿತ್ತು. ಬ್ರಾಹ್ಮಣರನ್ನು ಪರಿಗಣಿಸಿದರೆ ಇವತ್ತಿನ ಸ್ಥಿತಿ ತಮಗೆ ತಿಳಿಯುತ್ತದೆ: ಸಮಾಜದಲ್ಲಿ ಹಿಂದಕ್ಕೆ ರಾಜಾಶ್ರಯದ ಉಂಬಳಿ ವಗೈರೆಯಿಂದ ಸಹಜಪ್ರಾಪ್ತವಾದ ಜಮೀನುಗಳು ಇಂದು ಉಳಿದಿಲ್ಲ.  ಸರ್ಕಾರ ಸೇರಿದಂತೇ ಯಾರ ಕೃಪಾಪೋಷಣೆಯೂ ಬ್ರಾಹ್ಮಣರಿಗೆ ಈಗ ಲಭ್ಯವಿಲ್ಲ. ಬ್ರಾಹ್ಮಣ ಹೊರಗೆ ಬಂದು ಸಮಾಜದ ಎಲ್ಲರೊಡನೆ ಬೆರೆಯುವುದರಿಂದ ಬ್ರಾಹ್ಮಣ್ಯಕ್ಕೆ ತೊಂದರೆಯಾಗುತ್ತದೆ-ಮಲಿನ ಮನಸ್ಕ ಬ್ರಾಹ್ಮಣ ಬ್ರಾಹ್ಮಣ್ಯವನ್ನು ಕಾಪಿಡಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಬ್ರಾಹ್ಮಣರು ತಮ್ಮ ವ್ರತಭಂಗವಾಗದಂತೇ ನೋಡಿಕೊಳ್ಳಲು ಕೇವಲ ಆಧ್ಯಯನ, ಅಧ್ಯಾಪನ, ಪೂಜೆ-ಪುನಸ್ಕಾರ, ಪ್ರವಚನ, ಪಾರಾಯಣ ಇತ್ಯಾದಿಗಳಲ್ಲಷ್ಟೇ ತೊಡಗಿಸಿಕೊಂಡಿದ್ದರು. ವೇದಗಳ ಆಧಾರದಲ್ಲಿ ರಾಜರುಗಳಿಗೆ ಧರ್ಮಮಾರ್ಗವನ್ನು ಬೋಧಿಸುತ್ತಿದ್ದರು. ಅಂತಹ ಮಹಾನುಭಾವರುಗಳಿಂದ ಹಲವು ರಾಜ್ಯಗಳು ಅಭಿವೃದ್ಧಿಯಲ್ಲಿ ನಡೆದಿದ್ದವು.     

ಕರ್ನಾಟಕದ ಮೊದಲ ರಾಜ್ಯವಾದ ಕದಂಬರ ಸ್ಥಾಪಕ ಮಯೂರ ವರ್ಮ ಎಂಬುದು ತಮಗೆ ತಿಳಿದಿರಲೂ ಬಹುದು. ಆತ ಮೂಲದಲ್ಲಿ ವೇದಪಾರಂಗತರಾದ ವೈದಿಕರೊಬ್ಬರ ಮಗನಾಗಿ ಮಯೂರಶರ್ಮನಾಗಿದ್ದ. ಚೋಳರ ದುರಾಡಳಿತಕ್ಕೆ ಬೇಸತ್ತ ಮಯೂರಶರ್ಮ ಕಾಲಾನಂತರದಲ್ಲಿ ಮಯೂರವರ್ಮನಾಗಿ ಕ್ಷತ್ರಿಯನಾಗಿ ಬದಲಾಗಿದ್ದು ಈಗ ಇತಿಹಾಸ. ಯಾವುದೋ ಕಾಲಘಟ್ಟದಲ್ಲಿ ಕದಂಬರು ಜೈನಧರ್ಮಕ್ಕೆ ಮತಾಂತರಗೊಂಡಿದ್ದೂ ಕೂಡ ಈಗ ಕಥೆ! ’ಕರ್ನಾಟಕ ಸಿಂಹಾಸನ’ವನ್ನು ಸ್ಥಾಪಿಸುವುದಕ್ಕೆ ಶೃಂಗೇರೀ ಪೀಠದ ಮಹರ್ಷಿ ವಿದ್ಯಾರಣ್ಯರು ಕಾರಣೀಭೂತರಾದರು; ಈ ಭೂಪ್ರದೇಶದ ಒಳಿತನ್ನು ಸಂಕಲ್ಪಿಸಿದ ಅವರ ಮನದಲ್ಲಿ ಹಕ್ಕ-ಬುಕ್ಕರು ಯೋಗ್ಯರು ಎನಿಸಿದಾಗ, ಅವರೀರ್ವರನ್ನೂ ಕರೆದು, ಹೇಗೆ ನಡೆಸಬೇಕೆಂದು ಮಾರ್ಗದರ್ಶಿಸಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು. ಮೌರ್ಯರ ಕಾಲಕ್ಕೆ ಚಾಣಕ್ಯನೆಂಬ ಮೇಧಾವಿ ಅವರ ಉನ್ನತಿಗೆ ಕಾರಣನಾದ. ಇಂತಹ ಅಪ್ರತಿಮ ಮೇಧಾವಿಗಳೆಲ್ಲಾ ವೇದಗಳನ್ನೇ ಅಧಾರವಾಗಿಟ್ಟುಕೊಂಡು ನಡೆದರು; ಲೋಕೋಪಕಾರಕವಾದ ಗ್ರಂಥಗಳನ್ನೂ ನೀತಿಪಾಠಗಳನ್ನೂ ಬರೆದರು. ಇಂತಹ ಮಹನೀಯರನ್ನೆಲ್ಲಾ ನೀವು ಸ್ವಾರ್ಥಿಗಳು, ಪ್ರಧಾನ ಮಂತ್ರಿಸ್ಥಾನಗಳಲ್ಲಿ ನಿಂತು ತಮಗೆ ಬೇಕಾದ ರೀತಿ ರಾಜ್ಯಭಾರ ಮಾಡಿಸಿದರು ಎಂದು ತುಚ್ಛವಾಗಿ ಬರೆದಿದ್ದೀರಿ. ಸ್ವಾರ್ಥವಿದ್ದರೆ ಅವರುಗಳೇ ಬೇಕಾದ್ದು ಮಾಡಬಲ್ಲ ಬ್ರಹ್ಮತೇಜವನ್ನು ಪಡೆದಿದ್ದರು ಎಂಬುದನ್ನು ಮರೆಯಬೇಡಿ.

ಸರ್ ಎಂ ವಿಶ್ವೇಶ್ವರಯ್ಯ ಇರದಿದ್ದರೆ ಅರ್ಧ ಕರ್ನಾಟಕಕ್ಕೆ ಇವತ್ತು ನೀರಿನ ಸೌಲಭ್ಯವಾಗಲೀ, ರಾಜ್ಯಕ್ಕೂ ದೇಶಕ್ಕೂ ಜಲವಿದ್ಯುತ್ ಸೌಲಭ್ಯವಾಗಲೀ ಇರುತ್ತಿರಲಿಲ್ಲ. ಅಂದಿನ ಬೆಂಗಳೂರಿಗೆ ಅಭೂತಪೂರ್ವ ಒಳಚರಂಡಿ ವ್ಯವಸ್ಥೆಯನ್ನು ರೂಪಿಸಿದ ಆ ಮಹಾತ್ಮ ತನ್ನ ಕಾರ್ಯವೈಖರಿಗೆ ಮನಸೋತು ಮೈಸೂರು ಮಹಾರಾಜರು ಕೊಟ್ಟ ಬಹುಮಾನಧನದಲ್ಲಿ ಎಸ್.ಜೆ.ಪಾಲಿಟೆಕ್ನಿಕ್ ಕಟ್ಟಿಸಿದರು. ಬದುಕಿನಲ್ಲಿ ಕೌಟುಂಬಿಕ ಸುಖವನ್ನೂ ಸ್ವಾರ್ಥವನ್ನೂ ಬದಿಗೊತ್ತಿದವರು ಸರ್.ಎಂ.ವಿ. ಇನ್ನು ಎಸ್.ಎಲ್ ಭೈರಪ್ಪನಂತಹ ಕಾದಂಬರಿಕಾರರು ಸರಕಾರ ಕೊಟ್ಟ ಸನ್ಮಾನಧನ ೫ ಲಕ್ಷವನ್ನು ಇಡಿಯಾಗಿ ಅದೇ ಸಭೆಯಲ್ಲಿ ಬಡಮಕ್ಕಳ ಉದ್ಧಾರಕ್ಕೆ ಸರಕಾರ ಕೈಗೊಂಡ ಯೋಜನೆಗೆ ನೀಡಿಬಿಟ್ಟರು. ಮೀಸಾ ಕಾಯ್ದೆಯಿಂದ ಸಮಾಜ ತತ್ತರಿಸಿರುವಾಗ ಬೇಸತ್ತಿದ್ದ ಶಿವರಾಮ ಕಾರಂತರು ತಮಗೆ ಘೋಷಿಸಿದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸದೇ ಮರಳಿಸಿ ಅಂದಿನ ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಿದರು. ಇದಲ್ಲದೇ ಸರಕಾರದಿಂದ ಖರ್ಚುಹಾಕಿಸದೇ,  ಪಿತ್ರಾರ್ಜಿತವಾಗಿ ತಮಗೆ ಬಂದಿದ್ದ ಜಮೀನಿನಲ್ಲಿ ಅರ್ಧವನ್ನು ಮಾರಿ-ಬಂದ ಹಣದಿಂದ ಹೆಚ್ಚಿನ ತಿಳುವಳಿಕೆಗಾಗಿ ವಿದೇಶಕ್ಕೆ ಹೋಗಿ ಬಂದರು. ಬದುಕಿನ ಕಡೆತನಕ ಬಡತನದಲ್ಲೇ ಬದುಕಿದ್ದ ಧೀಮಂತ ಡೀವಿಜಿ, ೧೯೭೫ನೇ ಇಸವಿಯಲ್ಲಿ ತನಗೆ ಸಮಾಜದಿಂದ ಸನ್ಮಾನಧನವಾಗಿ ಬಂದ ಹಣವನ್ನು[ ಇಂದಿಗೆ ಆ ಹಣ ಅಜಮಾಸು ಒಂದುಕೋಟಿ ೨೦ ಲಕ್ಷಗಳಷ್ಟು!] ಸಮಾಜದ ಒಳಿತಿಗಾಗಿ ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ನಿರ್ಮಿಸಲು ನೀಡಿಬಿಟ್ಟರು; ಸನ್ಮಾನ ಪಡೆದ ಮಾರನೇ ದಿನವೇ ಕಾಣಲು ಮನೆಗೆ ಬಂದ ಅತಿಥಿಗಳಿಗೆ ಕಾಫಿ ಕೊಡಲೂ ಸಾಮಗ್ರಿ ಇಲ್ಲದಾಗ ಹತ್ತಿರದ ಶೆಟ್ಟರ ಅಂಗಡಿಗೆ ಹುಡುಗನೊಬ್ಬನ ಮೂಲಕ ಚೀಟಿ ಕಳಿಸುತ್ತಾರೆ: "ಅತಿಥಿಗಳು ಬಂದಿದ್ದಾರೆ, ದಯವಿಟ್ಟು ಕಾಫಿಪುಡಿ ಸಕ್ಕರೆ ಕೊಟ್ಟು ಕಳಿಸಿ, ಒಂದೆರಡು ದಿನಗಳಲ್ಲಿ ಹಣ ತಲ್ಪಿಸುತ್ತೇನೆ." ಡೀವಿಜಿಯವರ ಬಗ್ಗೆ ತುಂಬಾ ಕಳಕಳಿಯಿದ್ದು ಆಡಿದ ಮಾತನ್ನು ತಪ್ಪದವರು ಎಂಬ ವಿಶ್ವಾಸವನ್ನು ಹೊಂದಿದ್ದ ಶೆಟ್ಟರು ಸಾಮಾನು ಕಳಿಸಿದರು, ಮಾರನೇ ದಿನ ತನ್ನ ಗಳಿಕೆಯ ಹಣದಿಂದಲೇ ಡೀವೀಜಿ ಸಾಲವನ್ನು ತೀರಿಸಿದರು.  ಇವರೆಲ್ಲಾ ಬ್ರಾಹ್ಮಣರಲ್ಲವೇ?

ಬ್ರಹ್ಮರ್ಷಿ ವಿಶ್ವಾಮಿತ್ರ ಒಂದಾನೊಂದು ಕಾಲಕ್ಕೆ ಕ್ಷತ್ರಿಯ ರಾಜನಾಗಿದ್ದನೆಂಬುದನ್ನು ನೀವು ಓದಿರಬಹುದೇ? ತನ್ನ ಸಮಸ್ತ ಕ್ಷತ್ರಿಯಬಲವನ್ನೇ ಉಪಯೋಗಿಸಿ ಮುನಿ ವಶಿಷ್ಠರ ಮೇಲೆ ದಾಳಿ ನಡೆಸಿದಾಗ ಪರಿಣಾಮ ಏನಾಯ್ತು ಎಂಬುದರ ಬಗ್ಗೆ ನೀವು ಕೇಳಿರಬಹುದೇ? "ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮತೇಜಂ ಬಲಂ ಬಲಂ" ಎಂಬ ಅನುಭವವನ್ನು ಪಡೆದ ಚಂಡ ಕೌಶಿಕ ವಶಿಷ್ಠರಿಂದಲೇ "ಬ್ರಹ್ಮರ್ಷಿಯಾದೆ" ಎನಿಸಿಕೊಳ್ಳುವಷ್ಟು ಎತ್ತರಕ್ಕೆ ಬೆಳೆದಿದ್ದು ಬ್ರಾಹ್ಮಣ್ಯವನ್ನು ಅನುಸರಿಸಿ ಘೋರವೂ ಕಠಿಣಾತಿಕಠಿಣವೂ ಆದ ಜಪತಪಾದಿಗಳನ್ನು ನಡೆಸಿದ್ದರಿಂದ ಅಲ್ಲವೇ? ಈ ಲೋಕದಲ್ಲಿ ದೇವರ ಅವತಾರಿಯಾಗಿ ಬ್ರಾಹ್ಮಣನಾಗಿ ಜನಿಸಿದ ಪರಶುರಾಮ, ತಂದೆಯ ಸಾವಿನ ದ್ವೇಷವನ್ನು ತೀರಿಸಿಕೊಳ್ಳುವ ಸಲುವಾಗಿ ಕ್ಷತ್ರಿಯ ಕುಲವನ್ನೇ ಬಹುಪಾಲು ಮುಗಿಸಿ ಬ್ರಹ್ಮಕ್ಷತ್ರಿಯನಾಗಿಬಿಟ್ಟ; ಕ್ಷತ್ರಿಯಕುಲದಲ್ಲಿ ಜನಿಸಿದ ಶ್ರೀರಾಮನನ್ನೂ ಯಾದವ ಕುಲದಲ್ಲಿ ಜನಿಸಿದ ಶ್ರೀಕೃಷ್ಣನನ್ನೂ ನಿತ್ಯ ಪೂಜಿಸುವ ಬ್ರಾಹ್ಮಣರು ಪರಶುರಾಮನನ್ನು ಪೂಜಿಸುವಗೊಡವೆಗೆ ಹೋಗಲಿಲ್ಲ!--ಇಲ್ಲಿ ಜಾತ್ಯಾತೀತ ಮನೋಸ್ಥಿತಿಯನ್ನು ತಾವು ಕಾಣಬಲ್ಲಿರೇ? ರಾಮಾಯಣವನ್ನು ಬರೆದ ವಾಲ್ಮೀಕಿ ಬೇಡನಾಗಿದ್ದ ಎಂದು ಎಂದೂ ಹಳಿಯಲಿಲ್ಲ, ವೇದಗಳನ್ನೇ ವಿಂಗಡಿಸಿದ ವೇದವ್ಯಾಸರ ಮೂಲವನ್ನು ದೂಷಿಸಲಿಲ್ಲ ಎಂಬುದನ್ನೂ ಗಮನಿಸಿದರೆ ಒಳಿತು. ಮೇಲಾಗಿ ತೀರಾ ಇತ್ತೀಚಿನವರೆಗೂ ಬದುಕಿದ್ದ ಮಹರ್ಷಿ ಮಹೇಶ್ ಯೋಗಿ ಎಂಬವರು ಈ ದೇಶಕ್ಕೆ ’ಭಾವಾತೀತ ಧ್ಯಾನ’ವನ್ನು ಸುಲಭರೀತಿಯಲ್ಲಿ ತೋರಿಸಿಕೊಟ್ಟರು; ಮಹೇಶ್ ಯೋಗಿ ಹುಟ್ಟಿನಿಂದ ಅಬ್ರಾಹ್ಮಣರಾಗಿದ್ದರೂ ಬ್ರಾಹ್ಮಣರನೇಕರು ಅವರನ್ನು ಗುರುವೆಂದೇ ಗೌರವಿಸಿದರು; ಉತ್ತಮ ಗುರುವಿನ ಸಲ್ಲಕ್ಷಣಗಳನ್ನು ಹೊಂದಿದ್ದ ಅವರು ವಿದೇಶಗಳಲ್ಲೂ ತಮ್ಮ ಧ್ಯಾನಕ್ರಮವನ್ನೂ ಆ ಮೂಲಕ ಲೋಕಹಿತವನ್ನು ಪ್ರಚುರಪಡಿಸಿದರು-ಇದನ್ನೂ ಸ್ವಾರ್ಥಕ್ಕಾಗಿ ಅಥವಾ ಹಣ-ಆಸ್ತಿ ಗಳಿಕೆಗಾಗಿ ಎನ್ನುತ್ತೀರೇನೋ ಅಲ್ಲವೇ? 


ಮಹರ್ಷಿ ಮಹೇಶ್ ಯೋಗಿ

ಭಾವಾತೀತ ಧ್ಯಾನ[Transcendental Meditation]

’ಭಾವಾತೀತ ಧ್ಯಾನ’ವೆನ್ನಿ, ’ಸುದರ್ಶನ ಕ್ರಿಯೆ’ ಅನ್ನಿ ಎಲ್ಲವೂ ನಮ್ಮಲ್ಲಿನ ಧ್ಯಾನಕ್ರಮದ ವಿಭಿನ್ನ ರೂಪಗಳಷ್ಟೇ. ಹಿಂದೂ ಯೋಗವಿಧಿಯ ಅಷ್ಟಾಂಗಯೋಗದಲ್ಲಿ ’ಧಾರಣ’ ಹಂತಕ್ಕೂ ಮೊದಲಿನ ಸ್ಥಿತಿ ಧ್ಯಾನ. ಧ್ಯಾನಸ್ಥ ಸ್ಥಿತಿಯಲ್ಲಿ ಮನುಷ್ಯ ದೈವತ್ವಕ್ಕೆ ಹತ್ತಿರವಾಗುತ್ತಾನೆ ಎಂಬುದಕ್ಕೆ ಸಾಕ್ಷಿಯಾಗಿ ಪದ್ಮಾಸನಹಾಕಿ ಧ್ಯಾನಕ್ಕೆ ಕುಳಿತ ಹಲವು ಯೋಗಿಗಳು ಗಾಳಿಯಲ್ಲಿ ಬಲೂನು ತೇಲಿದಂತೇ ತೇಲುವುದು ಅಲ್ಲಲ್ಲಿ ಕೇಳಿಬರುತ್ತದೆ; ವಿಜ್ಞಾನಿಗಳೂ ಸೇರಿದಂತೇ ಇದನ್ನು ಹಲವು ಜನ ನೋಡಿಯೂ ಇದ್ದಾರೆ! ಸದ್ಯಕ್ಕೆ ವಿಜ್ಞಾನದಲ್ಲಿ ಇದಕ್ಕೆ ಕಾರಣಗಳಿಲ್ಲ-ಜಾದೂ ಇಲ್ಲದೇ ಮಾನವ ಶರೀರ ಗಾಳಿಯಲ್ಲಿ ತೇಲುವಂತೇ ಮಾಡುವ ಯಾವುದೇ ಸೂತ್ರವೂ ಇಲ್ಲ; ಆದರೆ ಪರಿಪೂರ್ಣ ಧ್ಯಾನಕ್ಕೆ ಅಂತಹ ತೇಲಿಸುವ ತಾಕತ್ತು ಇದೆ ಎಂಬುದು ದಾಖಲೆಗಳ ಸಹಿತ ತಿಳಿದುಬರುತ್ತದೆ. ’ಭಾವಾತೀತ ಧ್ಯಾನ’ವನ್ನು ಕೈಗೊಂಡ ಮಹೇಶ್ ಯೋಗಿಗಳೂ ಮತ್ತು ಅವರ ಶಿಷ್ಯಂದಿರನೇಕರು ಹಾಗೆ ತೇಲುತ್ತಿದ್ದರು ಎಂಬುದನ್ನು ಚಿತ್ರಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ಸೆರೆಹಿಡಿಯಲಾಗಿದೆ. ಮೇಲಾಗಿ ಯಾವುದೇ ವೈಜ್ಞಾನಿಕ ಉಪಕರಣಗಳಿಲ್ಲದ ಕಾಲಘಟ್ಟದಲ್ಲಿ ಧ್ಯಾನದಿಂದ ತಪಸ್ಸಿದ್ಧಿಯಿಂದ ತನಗೆ ದೊರೆತ ಖಗೋಳದ ಬಗೆಗಿನ ಮಾಹಿತಿಯನ್ನು ಆರ್ಯಭಟ ಬರೆದಿಟ್ಟಿದ್ದಾನೆ! ವಿಜ್ಞಾನ ಹುಟ್ಟುವುದಕ್ಕಿಂತ ಮೊದಲೇ ನಮ್ಮ ಗಣಿತಜ್ಞರು ಪಂಚಾಂಗಶ್ರವಣ ಮಾಡಿಸುತ್ತಿದ್ದರು. ಅಶ್ವಘೋಷ, ಬಾಣ, ಭಾರವಿ, ಭಾಸ, ಕಾಳಿದಾಸ, ಪಾಣಿನಿ ಮೊದಲಾದ ಮಹಾನ್ ಕವಿಗಳು ದಾರ್ಶನಿಕರಂತೆನಿಸಿದ್ದು ಬ್ರಾಹ್ಮಣ್ಯವನ್ನು ಆಚರಿಸಿ ಬರೆದ ತಮ್ಮ ಮಹಾಕಾವ್ಯಗಳಿಂದ.    

ಬ್ರಾಹ್ಮಣರು ರಾತ್ರಿ ಊಟಮಾಡಬಾರದು ಎಂಬ ನಿಯಮವಿದೆ. ಯಾಕೆಂದರೆ ದೈಹಿಕವಾಗಿ ತೀರಾ ಕಠಿಣಕೆಲಸಗಳನ್ನು ನಿರ್ವಹಿಸಲಾಗದ, ನಿರ್ವಹಿಸದ ಅವರಿಗೆ ರಾತ್ರಿಯ ಊಟ ಜೀರ್ಣವಾಗುತ್ತಿರಲಿಲ್ಲ. ವೇದವನ್ನೇ ಆಚರಿಸುವ ಅವರು ಹೊರಗೆಲಸಗಳಲ್ಲಿ ತೊಡಗಿಕೊಳ್ಳುವುದರಿಂದ ವೇದಗಳ ಅಧ್ಯಯನ, ಅಧ್ಯಾಪನ ಮತ್ತು ಆಚರಣೆ ಕುಂಠಿತಗೊಳ್ಳುತ್ತದೆ. ವೇದ ಮಂತ್ರಗಳ ಸಂತುಲಿತ ಉಚ್ಚಾರಕ್ಕೆ ನಾಲಿಗೆ ತೆಳುವಾಗಿರಬೇಕಾಗುತ್ತದೆ, ನಿದ್ರೆಯನ್ನೂ ಅಪಾನವಾಯುವನ್ನೂ ನಿಯಂತ್ರಿಸಿಕೊಳ್ಳುವ ಶಕ್ತಿಯಿರಬೇಕಾಗುತ್ತದೆ, ಚಳಿ-ಮಳೆ-ಬಿಸಿಲಿನಲ್ಲೂ ಶಾಸ್ತ್ರೋಕ್ತ ಬಟ್ಟೆಗಳನ್ನಷ್ಟೇ ಧರಿಸಿ ಮಿಕ್ಕಿದ್ದನ್ನು ವರ್ಜಿಸಬೇಕಾಗುತ್ತದೆ. ಅಂತಹ ಕರ್ಮಠ ಬ್ರಾಹ್ಮಣರು ಇಂದಿಗೂ ಇದ್ದಾರೆ, ಅವರು ದಾನಪಡೆಯಲೂ ಪಡೆದ ದಾನವನ್ನು ಜೀರ್ಣಿಸಿಕೊಳ್ಳಲೂ ಅರ್ಹರು. ಇದಕ್ಕೆ ತಾಕತ್ತು ಬೇಕಾಗುತ್ತದೆ. ಅಯ್ಯಪ್ಪ ಭಕ್ತರ ಆಚರಣೆಗಳ ವಿರುದ್ಧ ಚಕಾರವೆತ್ತದ ಇತರೇ ಸಮಾಜ ಜಾತಿಯಿಂದ ಬ್ರಾಹ್ಮಣರು ಎಂಬ ಒಂದೇ ಕಾರಣಕ್ಕೆ ಯಾಕೆ ಬ್ರಾಹ್ಮಣರನ್ನು ವಿರೋಧಿಸುತ್ತಿದೆ ಎಂಬುದೇ ವಿಚಿತ್ರವೆನಿಸುತ್ತದೆ!

ಅನಾದಿ ಕಾಲದಿಂದ ಬ್ರಾಹ್ಮಣರು ಅಧ್ಯಾಪನ-ವಿದ್ಯೆ ಕಲಿಸುವಿಕೆ ನಡೆಸಿಯೇ ಬಂದಿದ್ದಾರೆ. ಬಹಳಷ್ಟು ವಿದ್ಯೆಗಳನ್ನು ಬಹಳಜನರಿಗೆ ಕಲಿಸಿಕೊಟ್ಟಿದ್ದಾರೆ. ಗುರು ದ್ರೋಣರು, ಪರಶುರಾಮರು ಇತ್ಯಾದಿಯಾಗಿ ಹಲವು ಮಹನೀಯರು ಋಷಿಮುನಿಗಳು ಬ್ರಾಹ್ಮಣರೇ ಆಗಿದ್ದರು; ಅವರ ತಪೋಬಲದಿಂದ ಬ್ರಾಹ್ಮಣರನ್ನು ಮೀರಿಸಿ ಇನ್ನೂ ಎತ್ತರಕ್ಕೆ ಬೆಳೆದಿದ್ದರು; ಇಹಪರಗಳೆರಡನ್ನೂ ಅರಿತವರಾಗಿದ್ದರು. ಕೇವಲ ತಮ್ಮ ಸ್ವಾರ್ಥಕ್ಕಾಗಿ ಯಾವುದನ್ನೂ ಮಾಡದೇ ಲೋಕದ ಹಿತಾರ್ಥ ಎಲ್ಲವನ್ನೂ ನಡೆಸಿದರು. ಅಲ್ಲಿ ತಮ್ಮ ತ್ಯಾಗವನ್ನೂ ತೋರಿದರು. ಕಾವಿಯನ್ನು ಧರಿಸಿದ್ದರು. ತ್ಯಾಗದ ಸಂಕೇತ ಕಾವಿಯನ್ನು ಇಂದು ಅದಕ್ಕೇ ನಮ್ಮ ಬಾವುಟದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮಿಕ್ಕೆಲ್ಲರೂ ಬಳಸಬಹುದಾದ ಸೌಲಭ್ಯಗಳನ್ನೂ ಆಹಾರಗಳನ್ನೂ ಬ್ರಾಹ್ಮಣರು ಬಳಸುವಂತಿಲ್ಲ! ಬಳಸಿದರೆ ದೇವರನ್ನು ಆಗಮೋಕ್ತ ರೀತ್ಯಾ ಪೂಜಿಸುವಂತಿಲ್ಲ! ಹಾಗೂ ಎಲ್ಲವನ್ನೂ ಮೀರಿ ಬೇಕುಬೇಕಾದ್ದು ಮಾಡುತ್ತಾ ಪೂಜಿಸಿದರೆ ಪರಿಣಾಮ ನೆಟ್ಟಗಿರಲಿಕ್ಕಿಲ್ಲ!

ಅಂಜನಶಾಸ್ತ್ರವೆಂಬುದು ಜ್ಯೋತಿಷವಿಜ್ಞಾನದ ಒಂದು ಭಾಗ. ಅದರಲ್ಲೂ ದರ್ಪಣಾಂಜನ ಎಂಬ ವಿಭಾಗವೊಂದಿದೆ. ಆಂಜನೇಯನನ್ನು ಉಪಾಸನೆಗೈದು, ಭಗವತಿಯನ್ನು ಸಂಪ್ರಾರ್ಥಿಸಿ ಅದನ್ನು ಬಳಸುವ ಪದ್ಧತಿ ಇಂದಿಗೂ ಇದೆ. ಇತ್ತೀಚಿನ ಮಾಧ್ಯಮ ವಾಹಿನಿಯೊಂದರಲ್ಲಿ ನಡೆಸಿದ " ಸ್ವಯಂವರ" ಧಾರಾವಾಹಿಗಳಲ್ಲಿ ವಧೂವರರ ಬಗ್ಗೆ ಅವರ ಇವತ್ತಿನ ಸ್ಥಿತಿಗತಿ,ಚಹರೆ, ಕುರುಹುಗಳ ಬಗ್ಗೆ ತಿಳಿಸಿಕೊಡಲು ಬಂದ ಒಬ್ಬ ಪಂಡಿತರು ಹುಡುಗಿಯೊಬ್ಬಳಿಗೆ ತೊಡೆಯಮೇಲ್ಭಾಗದಲ್ಲಿ ಮಚ್ಚೆ ಇರುವುದನ್ನು ತಿಳಿಸಿದಾಗ ಆಕೆಯೂ ಸೇರಿದಂತೇ ನೋಡುಗರೆಲ್ಲಾ ದಂಗಾಗಿದ್ದಾರೆ! ಇದು ದರ್ಪಣಾಂಜನ ಶಾಸ್ತ್ರ!! ಇಂತಹ ಅಲೌಕಿಕ ವಿದ್ಯೆಗಳ ಆಕರವಾದ ವೇದಗಳನ್ನು ಅನುಷ್ಠಾನವಾಗಿ ಆಚರಿಸುವ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾರ್ಥಿಸುವ, ಪೂಜಿಸುವ, ಆರಾಧಿಸುವ, ಹೋಮ-ಹವನಗಳ ಮೂಲಕ ದೇವರನ್ನು ಸಂಪ್ರಾರ್ಥಿಸುವ ಬಳಗವನ್ನು ಬ್ರಾಹ್ಮಣರೆಂದರು. ಬ್ರಾಹ್ಮಣ್ಯವೇ ಅವರಿಗೆ ಆಧಾರ, ಪೌರೋಹಿತ್ಯ ಮತ್ತು ಅಧ್ಯಾಪನ, ವೈದ್ಯಕೀಯ[ಆಯುರ್ವೇದ]ಚಿಕಿತ್ಸೆಗಳೇ ಅವರಿಗೆ ಮೂಲ ವೃತ್ತಿ. ದೇಶಕ್ಕೆ ಕ್ಷೇಮವಾಗಲೆಂದು ಇತಿಹಾಸಗಳಲ್ಲಿ ರಾಜರುಗಳು ಬ್ರಾಹ್ಮಣರನ್ನು ಹುಡುಕಿ ಎಲ್ಲೆಲ್ಲಿಂದಲೋ ಕರೆತಂದರು; ಉಂಬಳಿಯಾದಿಯಾಗಿ ಉಪಜೀವನಕ್ಕೆ ಅನುಕೂಲ ಕಲ್ಪಿಸಿದರು. ಇಂದು ರಾಜರುಗಳಿಲ್ಲ. ರಾಜಾಶ್ರಯವೂ ಇಲ್ಲ. ರಾಜಾಶ್ರಯವನ್ನೂ ಉಂಬಳಿಯಾಗಿ ದೊರೆತಿದ್ದ ಭೂಮಿಯನ್ನೂ ಕಳೆದುಕೊಂಡ ಬ್ರಾಹ್ಮಣರು ಉಪಜೀವನಕ್ಕಾಗಿ ಹಲವು ವೃತ್ತಿಗಳನ್ನು ಆಯ್ದುಕೊಂಡರು. ಸಾಮೂಹಿಕವಾಗಿ ಯಾರನ್ನೂ ಹೀಗಳೆಯಲಿಲ್ಲ, ಯಾರಿಗೂ ತಮ್ಮ ಕ್ಷೋಭೆ ತಟ್ಟಲಿ ಎಂದು ಬಯಸಲಿಲ್ಲ. || ವಸುಧೈವ ಕುಟುಂಬಕಮ್ || --ಎಂದು ವೇದಗಳ ಕಾಲದಲ್ಲೇ ಬ್ರಾಹ್ಮಣರು ತಿಳಿದರು. ಇಡೀ ವಸುಧೆಯೇ ಒಂದು ಕುಟುಂಬ, ಎಲ್ಲರೂ ಒಂದೇ ಕುಟುಂಬದ ಸದಸ್ಯರು! ಎಂತಹ ಆದರ್ಶವಲ್ಲವೇ? ಅದೇ ಬ್ರಾಹ್ಮಣರು.

 ಒಪಿಕೊಳ್ಳುತ್ತೇನೆ: ಕೆಲವು ಕಾಲಘಟ್ಟದಲ್ಲಿ ಅತಿರೇಕದ ಮಡಿಯೆಂಬ ಭೂತವೂ, ಬಾಲ್ಯವಿವಾಹ-ವಿಧವಾ ಘಟಶ್ರಾದ್ಧ ಇತ್ಯಾದಿ ದುರ್ವಿಧಿಗಳು ನಡೆದಿವೆ. ಅವು ಹಾಗೆ ನಡೆಯಲಿಕ್ಕೆ ಕಾರಣಗಳು ಹಲವು. ಬ್ರಾಹ್ಮಣರಲ್ಲೇ ಹಲವು ಕೂಪಮಂಡೂಕಗಳು ಇದ್ದವು-ಈಗಲೂ ಇವೆ! ಅಂತಹ ಮಂಡೂಕಗಳಿಂದ ರಚಿಸಲ್ಪಟ್ಟು ಮಧ್ಯೆ ತೂರಿಕೊಂಡ ಆಧಾರರಹಿತ ಚಾಳಿಗಳು ಮೂಢನಂಬಿಕೆಗಳಾಗಿವೆ. ಸಂವಹ ಮಾರ್ಗ ಇಷ್ಟೊಂದು ಸುರಳೀತ ನಡೆಯಲು ಆಸ್ಪದವಿಲ್ಲದ ಆ ಕಾಲಗಳಲ್ಲಿ ವಿಪರ್ಯಾಸಗಳೇ ಮಗ್ಗಲು ಬದಲಾಯಿಸಿ ಶಾಸ್ತ್ರಗಳ ಜೊತೆ ಸೇರಿಕೊಂಡು ಶಾಸ್ತ್ರವೇ ಮೂಢನಂಬಿಕೆಯೇನೋ ಎಂಬಂತಾಗಿಬಿಟ್ಟಿದೆ. ಇದಕ್ಕೆ ಚಿಕ್ಕದೊಂದು ಉದಾಹರಣೆ ಕೊಟ್ಟುಬಿಡುತ್ತೇನೆ: ದನದ ಸಗಣಿಯನ್ನು ನಾವು ಗೋಮಯ ಎನ್ನುತ್ತೇವೆ. ಗೋಮಯ ಹೇಗಿರಬೇಕು: ಕರುವನ್ನು ಹಡೆದ ದೇಶೀ ತಳಿಯ ಗೋವು ಬೆಳಗಿನಜಾವ ಎದ್ದಾಗ ಹೊರಹಾಕಿದ ತಾಜಾ ಸಗಣಿ ಮಾತ್ರ ಗೋಮಯವೆನಿಸುತ್ತದೆಯೇ ಹೊರತು ಇಡೀ ದಿನ ಎಲ್ಲೆಲ್ಲೋ ರಸ್ತೆಗಳಲ್ಲೋ ಇನ್ನೆಲ್ಲೋ ಹೆಕ್ಕಿತಂದ ಸಗಣಿ ಗೋಮಯ ಎನಿಸುವುದಿಲ್ಲ. ’ಗೋಮಯ’ ತಾಜಾ ಇದ್ದಾಗ ಅದು ಕ್ರಿಮಿನಾಶಕವಾಗಿರುತ್ತದೆ ಎಂಬುದು ವೈಜ್ಞಾನಿಕವಾಗಿ ಸಿದ್ಧಗೊಂಡ ವಿಷಯ. ಶುದ್ಧಾಚರಣೆಯಲ್ಲಿ ಗೋಮಯವನ್ನು ಬಳಸುವುದು ಪದ್ಧತಿ. ಆದರೆ ಅದನ್ನು ಹೇಗೆ ಬಳಸಬೇಕೆಂಬುದೇ ಗೊತ್ತಿಲ್ಲದೇ ಮನಸ್ಸಿಗೆ ಬಂದಹಾಗೇ ಬಳಸಿದರೆ ವಾತಾವರಣದಲ್ಲಿ ಕ್ರಿಮಿಗಳು ದೂರವಾಗುವ ಬದಲು ಹತ್ತಿರವಾಗುತ್ತವೆ; ಯಾಕೆಂದರೆ ಅದೇ ಸಗಣಿಯಲ್ಲಿ ಕಾಲಾನಂತರದಲ್ಲಿ ಸಗಣಿ ಹುಳಗಳು ಹುಟ್ಟಿ  ಸಗಣಿ ಭೂಮಿಯಲ್ಲಿ ಮಣ್ಣಾಗಿ ಸೇರಿಹೋಗುವುದು ಪ್ರಕೃತಿ ನಿಯಮ. ಇದೇ ರೀತಿ ನಮ್ಮೆಲ್ಲಾ ಆಚರಣೆಗಳ ಹಿಂದೆಯೂ ಸಮರ್ಪಕ ಕಾರಣಗಳಿವೆ ಎಂಬುದನ್ನು ನಿಮ್ಮ ಮುಂದೆ ಇಡಲು ಸಂತಸವಾಗುತ್ತದೆ.

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ ದುಃಖಭಾಗ್ ಭವೇತ್ ||

ಎಂದರಲ್ಲವೇ? ಶ್ರೀಧರರೇ, ಎಲ್ಲರೂ ಸುಖವಾಗಿರಲಿ, ಸರ್ವರ ಜೀವನವೂ ನಿರಾಮಯವಾಗಿರಲಿ-ನಿರುಂಬಳವಾಗಿರಲಿ, ಸಕಲರಿಗೂ ಭದ್ರತೆ ಸಿಗಲಿ, ಯಾರೂ ದುಃಖ ಪಡದೇ ಇರುವಂತಾಗಲೀ ಎಂದು ಹರಸಿದ, ಹಾರೈಸಿದ ಬ್ರಾಹ್ಮಣ್ಯಕ್ಕೆ-ಆ ಗುರುಸ್ಥಾನಕ್ಕೆ ನೀವು ’ವೈದಿಕ ವೈರಸ್’ ಎಂದು ಪರೋಕ್ಷವಾಗಿ ಹೀಯಾಳಿಸಿದ್ದೀರಿ, ಹೀಗಳೆದಿದ್ದೀರಿ. ಬದಲಾವಣೆ ಪ್ರಕೃತಿ ನಿಯಮ ಎಂದು ಗೀತೆಯಲ್ಲಿ ಭಗವಂತನೇ ಹೇಳಿದ್ದಾನೆ. [ತಮಾಷೆಗೆ ಹೀಗೊಂದು ಉದಾಹರಣೆ : ನಾಯಿಯ ಬಾಲಕ್ಕೆ ಮಾತ್ರ ಇಲ್ಲಿ ಡಿಸ್ಕೌಂಟು! ನಳಿಕೆಯಲ್ಲಿರುವವರೆಗೂ ಅದು ನೆಟ್ಟಗೇ ಆದಂತೆನಿಸುತ್ತದೆ, ನಳಿಕೆಯಿಂದ ಹೊರಗೆಳೆದಾಗ ಯಥಾಸ್ಥಿತಿ!! ಇದರರ್ಥ ಭಗವಂತನ ಹೇಳಿಕೆಯಲ್ಲಿ ನಮಗೆ ನಂಬಿಕೆಯಿಲ್ಲದೇ ಉಡಾಫೆ ಎಂದು ಗ್ರಹಿಸಬೇಡಿ, ಇಲ್ಲಿ ನಾಯಿ ಮತ್ತೊಂದು ಜನ್ಮವೆತ್ತುವುದೇ ಪರಿವರ್ತನೆಯೆನಿಸುತ್ತದೆ.] ಬೇಡನೊಬ್ಬ ತಪಸ್ಸಿಗೆ ಕುಳಿತು ಪರಿವರ್ತಿತವಾಗಿ, ಔನ್ನತ್ಯಕ್ಕೆ ನಡೆದ ಮನದಲ್ಲಿ ರಾಮಾಯಣವನ್ನೇ ಬರೆದು ಪೂಜ್ಯನಾದ, ಸರ್ವವಂದ್ಯನಾದ. ರೌಡಿಯೊಬ್ಬ ಮಾಜಿಯಾಗಿ ಪತ್ರಿಕೆಯನ್ನು ನಡೆಸುವಾಗ ಸಮಾಜದ ಎಲ್ಲಾ ಸ್ತರಗಳಲ್ಲೂ ಎಲ್ಲಾ ಜನಾಂಗಗಳಲ್ಲೂ ವೈಷ್ಯಮ್ಯಕ್ಕೆ ನಾಂದಿಹಾಡದೇ, ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಉತ್ತಮ ಸಂದೇಶಗಳನ್ನು ಹೊತ್ತುಬರುವ ಲೇಖನಗಳನ್ನು ಪ್ರಕಟಿಸಲಿ ಎಂಬುದು ಬ್ರಾಹ್ಮಣರಾದ ನಮ್ಮ ಆಸೆ; ಯಾಕೆಂದರೆ ಹಾಲಿಗೂ ಹಾಲಾಹಲಕ್ಕೂ ಭೇದವೆಣಿಸದ ಮುಗ್ಧಮನೋಸ್ಥಿತಿಯಿಂದ ನಾವು ಹಾಗೆ ಶತಶತಮಾನಗಳಿಂದ ಹಾರೈಸುತ್ತಲೇ ಬಂದಿದ್ದೇವೆ; ನೆಲೆನಿಂತ ಪುರದ ಹಿತವನ್ನು ಕಾಪಾಡುವವರಾಗಿ ’ಪುರೋಹಿತ’ರೆನಿಸಿದ್ದೇವೆ. ’ಅಗ್ನಿ’ ಎಂಬ ಜ್ವಲಿಸುವ ಹೆಸರನ್ನು ಬಳಸುವ [ಅಗ್ನಿ ಎಂಬುದು ಸಂಸ್ಕೃತ ಪದ. ಎಡಪಂಥೀಯರೂ ಸೇರಿದಂತೇ ಬ್ರಾಹ್ಮಣಕುಲದ ಯುವಪೀಳಿಗೆಯ ’ಸುಧಾರಿಸಿದ ಜನ’ ಎನಿಸಿಕೊಂಡವರು ಸಂಸ್ಕೃತವನ್ನು ಸತ್ತಭಾಷೆ ಎಂದಿದ್ದಾರೆ]  ಶ್ರೀಧರರೇ, ತಮ್ಮಿಂದ ನಾವು ಬಯಸಿದ ಬದಲಾವಣೆಯನ್ನು ಮುಂಬರುವ ದಿನಗಳಲ್ಲಿ ನಿರೀಕ್ಷಿಸಬಹುದೇ?