ಚಿತ್ರಕೃಪೆ: ಹರೇರಾಮ.ಇನ್
"ನಮ್ಮನ್ನೆಲ್ಲಾ ನೋಡಿಕೊಳ್ಳಲಿಕ್ಕೆ ಜನ ಇದ್ದಾರೆ ನಿಮ್ಮನ್ಯಾರು ನೋಡಿಕೊಳ್ತಾರೆ?"
ಚಳಿಗಾಲದ ಒಣಹವೆಯಲ್ಲಿ ಭಗವದ್ಗೀತೆಯ ಪ್ರವಚನ ನಡೆಸುತ್ತಾ ತುಟಿಗಳು ಒಡೆದಿದ್ದವು. ಹೊರಟು ನಿಂತ ನಮ್ಮನ್ನು ಮುದುಕರೊಬ್ಬರು ತಡೆದರು. ಓಡೋಡಿ ಬಂದು, "ಗುರುಗಳೇ, ತುಟಿಯೆಲ್ಲಾ ಒಡೆದುಹೋಗಿದೆ, ಇಗೊಳಿ ಸ್ವಲ್ಪ ಎಣ್ಣೆ, ಸವರಿಕೊಳ್ಳಲಿಕ್ಕೆ. ನಮ್ಮನ್ನೆಲ್ಲಾ ನೋಡಿಕೊಳ್ಳಲಿಕ್ಕೆ ಜನ ಇದ್ದಾರೆ ನಿಮ್ಮನ್ಯಾರು ನೋಡಿಕೊಳ್ತಾರೆ?" ಎನ್ನುತ್ತಾ ಕೊಬ್ಬರಿಎಣ್ಣೆ ತುಂಬಿದ ಬಾಟಲಿಯನ್ನು ಕೈಗಿತ್ತರು. ಮುದುಕರ ಮುಖದಲ್ಲಿ ಇರುವ ಆ ಪ್ರೀತಿಗೆ ಮನಸೋತೆವು, ಆ ಘಟನೆ ಇಂದಿಗೂ ನಮ್ಮನ್ನು ಕೆಣಕುತ್ತದೆ-- ಹೀಗೆಂದವರು ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು.
ಸನ್ಯಾಸಿಗಳಿಗೆ ಸುತ್ತ ಹತ್ತಾರುಸಾವಿರ ಜನರಿದ್ದರೂ ಎಲ್ಲರೂ ಅವರವರ ಬೇಕು-ಬೇಡಗಳನ್ನಷ್ಟೇ ನೋಡಿಕೊಳ್ಳುತ್ತಾರೆ ವಿನಃ ಸನ್ಯಾಸಿಗಳ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ಅದರಲ್ಲಂತೂ ಯೋಗಸನ್ಯಾಸಿಗಳ ಜೀವನ ವೈಖರಿ ಬಹಳ ಕಠಿಣತಮ. ದುರ್ಗಮಪ್ರದೇಶಗಳಲ್ಲಿ, ಗಿರಿಶಿಖರಗಳಲ್ಲಿ ಸಂಚರಿಸುತ್ತಾ ’ಕರತಲ ಭಿಕ್ಷ ತರುತಲ ವಾಸ’ ರಾಗಿರುತ್ತಾ ಸಾಗುವ ಅವರ ತ್ಯಾಗ ಈ ದೇಶದ ಅನನ್ಯತೆಯನ್ನು ಎತ್ತಿ ತೋರಿಸುತ್ತದೆ. ತಮ್ಮ ಅಸಾಮಾನ್ಯ ತಪಸ್ಸಿನಿಂದ ಈ ದೇಶದ ಸ್ವಾಸ್ಥ್ಯಕ್ಕಾಗಿ ಪ್ರಾರ್ಥಿಸಿದವರೆಷ್ಟೋ ಮಂದಿ; ಈ ದೇಶವನ್ನು ಅನುಗ್ರಹಿಸಿದವರೆಷ್ಟೋ ಮಂದಿ. ಗಡಿಕಾಯುವಲ್ಲಿ ನಮ್ಮ ಸೈನಿಕರು ತಮ್ಮನ್ನು ತೊಡಗಿಸಿಕೊಂಡ ಹಾಗೇ ನಮ್ಮ ಉಚ್ಚಮಾನವ ಸಂಸ್ಕೃತಿಯನ್ನು ಕಾಪಾಡುವಲ್ಲಿ ಅದಕ್ಕೆ ಮಾರ್ಗದರ್ಶಕರಾದವರದೆಷ್ಟೋ ಮಂದಿ. ಹಾರಿ ಬಂದ ಹದ್ದಿನ ಹೊಟ್ಟೆಯ ಹಸಿವಿಗೆ ತೊಡೆಯ ಮಾಂಸವನ್ನೇ ಉಣಬಡಿಸಿದ ಚಕ್ರವರ್ತಿ ಶಿಬಿಯ ನಾಡು ನಮ್ಮದು!
ದೇವಾಸುರರ ಯುದ್ಧದಲ್ಲಿ ಹೆದರಿ ಕಂಗಾಲಾಗಿದ್ದ ದೇವತೆಗಳಿಗೆ ಮಹತ್ತರವಾದ ಆಯುಧಗಳು ಬೇಕಾಗಿದ್ದವು. ಇದ್ದನ್ನರಿತ ದಧೀಚಿ ತನ್ನ ಅಖಂಡ ತಪ್ಪಸ್ಸಿನಿಂದ ದೇಹವನ್ನೇ ತ್ಯಜಿಸುತ್ತಾ ತನ್ನ ಎಲುಬುಗಳನ್ನೇ ಆಯುಧಗಳನ್ನಾಗಿ ಬಳಸಲು ತಿಳಿಸಿದ. [ವಿಚಿತ್ರ ಹೆಸರಿಗೆ ಚಿಕ್ಕ ವಿವರಣೆ: ದಧಿ ಎಂದರೆ ಸಂಸ್ಕೃತದಲ್ಲಿ ಮೊಸರು. ಮೊಸರಿನಿಂದ ಮಾನವ ದೇಹದ ಅಂಗಗಳು ಸುಪುಷ್ಟವಾಗಿಯೂ ಶಕ್ತಿಯುತವಾಗಿಯೂ ಇರುತ್ತವೆ ಎಂದು ತಿಳಿದುಬರುತ್ತದೆ. ಪಾಣಿನಿ ತನ್ನ ಗ್ರಂಥದಲ್ಲಿ, 'ದಧೀಚಿ' ಎಂಬುದು ದಧ್ಯಾಂಚ ಅಥವಾ ದಧ್ಯಾಂಗ ಎನ್ನುವುದರ ಅಪಭ್ರಂಶ ಎಂದಿದ್ದಾನೆ.]ಎಂದಮೇಲೆ ಸಾತ್ವಿಕ ಮತ್ತು ತಾಮಸ ಶಕ್ತಿಗಳ ನಡುವೆ ಮೊದಲಿನಿಂದಲೂ ಮಾರಾಮಾರಿ ಇದ್ದಿದ್ದೇ ಎಂಬುದು ಸ್ಪಷ್ಟವಾಗುತ್ತದೆ. ಪ್ರಸಕ್ತ ನಾವು ನೋಡುತ್ತಿರುವ ಭಯೋತ್ಫಾದನೆ ಮತ್ತು ಮತಗಳ ಹೆಸರಿನಲ್ಲಿ ನಡೆಯುತ್ತಿರುವ ಆಕ್ರಮಣಗಳೆಲ್ಲಾ ತಾಮಸೀ ಪ್ರವೃತ್ತಿಯ ಜನರ ಕೈವಾಡಗಳೇ ಆಗಿವೆ. ರಕ್ಕಸರು ಬೇರೇ ಯಾರೂ ಅಲ್ಲ ಅವರೇ ಆಗಿದ್ದಾರೆ!
ಪ್ರಾಯಶಃ ಸಂತಮಹಂತರ ಸತತ ಪರಿಶ್ರಮ ಇರದಿದ್ದರೆ ಈ ದೇಶದ ಮೂಲಧರ್ಮ ಇರುತ್ತಿತ್ತೋ ಇಲ್ಲವೋ ಕಾಣೆ. ನಿರ್ಗುಣರೂಪದ ಜಗನ್ನಿಯಾಮಕ ಶಕ್ತಿ ಸಗುಣರೂಪಗಳಲ್ಲಿ ತನ್ನನ್ನೇ ಸೃಜಿಸಿಕೊಂಡಿತು. ಸಗುಣರೂಪದ ಶಕ್ತಿಯ ವಿವಿಧ ರೂಪಗಳು ಹಲವು ಲೋಕಗಳ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣವಾದವು. ಅಂತಹ ನಾಟಕಗಳ ಪಾತ್ರಧಾರಿಗಳಾಗಿ ನಾವೆಲ್ಲಾ ಈ ಭುವಿಗೆ ಬಂದೆವು. ಇಲ್ಲಿಗೇ ಆಟ ಮುಗಿಯಲಿಲ್ಲ. ನಮ್ಮೊಳಗೇ ಅರಿತವರು-ಅರಿಯದವರು, ಶ್ರೀಮಂತರು-ಬಡವರು, ನಿರೋಗಿಗಳು-ರೋಗಿಗಳು, ಸುಸಂಸ್ಕೃತರು-ಕುಸಂಸ್ಕೃತರು ಹೀಗೆ ವಿಂಗಡಣೆ ಮಾಡುತ್ತಾ ಎಲ್ಲವನ್ನೂ ಹಾಗೇ ನಡೆಸುತ್ತದೆ. ಒಂದೇ ಮೂಲದಿಂದ ಬಂದರೂ ಒಂದೇ ಥರ ಇರದಿರುವುದು ಆಶ್ಚರ್ಯ. ತೆಂಗಿನಕಾಯಿಗಳ ಗೊಂಚಲು ಅದೇ-ಆದರೆ ಕಾಯಿಗಳು ಚಿಕ್ಕ-ದೊಡ್ಡಗಾತ್ರದವುಗಳು, ಬಾಳೆಯ ಹಣ್ಣಿನ ಗೊನೆ ಅದೇ ಆದರೆ ಬಾಳೆ ಹಣ್ಣುಗಳಲ್ಲೂ ಸಣ್ಣ-ದೊಡ್ಡ, ತಾಯಿ ಅವಳೇ ಆದರೆ ಮಕ್ಕಳ ಗುಣ-ರೂಪ-ಸ್ವಭಾವಗಳಲ್ಲಿ ಬಹಳ ಭಿನ್ನತೆ! ತಾಯಿಯಿರದ ಗಿಳಿಮರಿಗಳಲ್ಲಿ ಒಂದು ಸಂತನಲ್ಲೂ ಒಂದು ಕಟುಕನಲ್ಲೂ ಬದುಕಿ ಬೆಳೆದ ಕಥೆ ನಮಗೆ ತಿಳಿದೇ ಇದೆಯಲ್ಲಾ ಕಟುಕ ಗಿಳಿಮರಿಯನ್ನು ಅದು ಹೇಗೆ ಸಾಕಿದನೋ? ಪ್ರಾಯಶಃ ಕಟುಕನ ಹೃದಯದಲ್ಲೂ ಎಲ್ಲೋ ಒಂದುಕಡೆ ಸುಕೋಮಲ ಭಾವಗಳು ಒಮ್ಮೆ ಉದ್ಭವಿಸಿರಬೇಕು; ಹೀಗಾಗಿ ಹಕ್ಕಿ ಬಚಾವು! ಗಿಳಿಯ ಮರಿಗೆ ಸಂತ ಉಚ್ಚ ಸಂಸ್ಕಾರ ಕೊಟ್ಟನಲ್ಲವೇ? ಅಂತೆಯೇ ಜೀವಗಳಿಗೆ ಸಂತ ಜೀವಗಳ ಸಂತುಲನದಿಂದ ಒದಗುವ ಸಂಸ್ಕಾರಗಳೇ ಅತ್ಯಂತ ಉಚ್ಚಮಟ್ಟದವಾಗಿರುತ್ತವೆ.
ಅಂತಹ ಅದೆಷ್ಟು ಸಂತರು ದೇಶಭಕ್ತರು ನಮ್ಮಲ್ಲಿ ಆಗಿಹೋಗಿಲ್ಲ? ಲೆಕ್ಕ ಇಡಲೇ ಸಾಧ್ಯವಿಲ್ಲದಷ್ಟು! ಒಬ್ಬೊಬ್ಬರದೂ ಒಂದೊಂದು ಕಥೆ; ಒಂದೊಂದು ಬಗೆಯ ಯಶೋಗಾಥೆ. ಅಂತಹ ಋಷಿ ಸಂಸ್ಕೃತಿ ನಮ್ಮನ್ನು ಜಗದಲ್ಲಿಯೇ ಶ್ರೇಷ್ಠವಾಗಿಸಿತು. ಬಡತನವೇ ಹಾಸುಹೊಕ್ಕಾಗಿದ್ದರೂ ಆತಿಥ್ಯಕ್ಕೆ ಹೆಸರಾದವರು ನಮ್ಮ ಜನ; ಜಗತ್ತಿನಲ್ಲಿ ಸಿಗುವ ಯಾವುದೇ ಪ್ರಮುಖ ಅಧುನಿಕ ಸೌಲಭ್ಯಗಳು ಇರದಿದ್ದರೂ ಇದ್ದುದರಲ್ಲಿಯೇ ತೃಪ್ತಿಪಟ್ಟವರು ನಮ್ಮಜನ; ಕಗ್ಗಾಡಿನ ಕರಾಳರಾತ್ರಿಯಲ್ಲಿ ಕಂದೀಲಿನ ಬೆಳಕಿನಲ್ಲಿ ಅನ್ನ-ಆಸೆ ಮಾಡಿ ಬಂದ ಜನರಿಗೆ ನೀಡಿ ಉಪಚರಿಸುವವರು ನಮ್ಮಜನ; ಯಾರಿಗೋ ಆಪತ್ತುಂಟಾದರೆ ಕೈಕೈ ಜೋಡಿಸಿ ಸಹಾಯ ಹಸ್ತ ಚಾಚುವವರು ನಮ್ಮಜನ; ಹೂವು ಕೊಡುವಲ್ಲಿ ಹೂವಿನ ಪಕಳೆಯನ್ನ ಕೊಟ್ಟು ಸಮಾಧಾನಿಸಿ ಅದನ್ನೇ ಹೂವೆಂದು ಪರಿಗಣಿಸಬೇಕೆಂಬ ಪ್ರಾರ್ಥನೆ ಸಲ್ಲಿಸುವವರು ನಮ್ಮಜನ; ಹೆಚ್ಚೇಕೆ ಬೆಲ್ಲ ಕೊಡಲಾಗದಿದ್ದರೂ ಬೆಲ್ಲ ಎಲ್ಲಿ ಸಿಗುತ್ತದೆ ಎಂದು ದಾರಿ ತೋರುವ ಸೌಜನ್ಯವುಳ್ಳವರು ನಮ್ಮಲ್ಲಿನ ಜನ.
ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿಬರಲೂ ಪುಣ್ಯ ಪಡೆದಿರಬೇಕು. ನಮ್ಮ ಪ್ರಾಗೈತಿಹಾಸವೇ ನಮ್ಮ ರಾಮಾಯಣ ಮಹಾಭಾರತಗಳು; ಅವುಗಳನ್ನು ಮಹಾಕಾವ್ಯಗಳು ಎನ್ನುವುದಕ್ಕಿಂತಾ ಸಂದಕಾಲಘಟ್ಟವೊಂದರಲ್ಲಿ ನಡೆದ ಜೀವನಚರಿತ್ರೆಗಳು ಎಂದರೇ ಸರಿ. ಅಂತಹ ಜೀವನಗಾಥೆಗಳನ್ನು ಮತ್ತೆ ಮತ್ತೆ ಮೆಲುಕುಹಾಕುವುದರಿಂದ, ಆಳಕ್ಕೆ ಇಳಿದು ತಿಳಿದುಕೊಳ್ಳುವುದರಿಂದ ನಮ್ಮ ಜೀವನದಲ್ಲಿ ಸ್ವಾನುಭವವನ್ನು ಪಡೆದಷ್ಟೇ ಸಂತಸವಾಗುತ್ತದೆ; ಯಾವುದನ್ನು ಮಾಡಬೇಕು? ಯಾವುದನ್ನು ಮಾಡಬಾರದು? ಎಲ್ಲಿ ಏನು ಮಾಡಬೇಕು? ಏನು ಮಾಡಿದರೆ ತೊಂದರೆಯಾಗುತ್ತದೆ? ಏನು ಮಾಡುವುದರಿಂದ ತಪ್ಪಿತಸ್ಥರು ಎನಿಸಿಕೊಳ್ಳುತ್ತೇವೆ? ಇದೆಲ್ಲಾ ಸಿಗುವುದು ಇಡೀ ಜಗತ್ತಿನಲ್ಲಿಯೇ ಈ ನಮ್ಮ ಮಹಾಕಾವ್ಯಗಳಲ್ಲಿ ಮಾತ್ರ!! ಋಷಿಗಳು ತಮ್ಮ ಬರೆಯುವ ಚಾಪಲ್ಯ ತೀರಿಸಿಕೊಳ್ಳಲೋ ಕಾಲಹರಣ[ಟೈಂ ಪಾಸ್]ಕ್ಕೋ ಮಾಹಾಕಾವ್ಯಗಳನ್ನು ಬರೆದಿದ್ದಲ್ಲ; ಅವು ತಮ್ಮ ಮುಂದಿನ ಪೀಳಿಗೆ ಪೀಳಿಗೆ ಪೀಳಿಗೆಗಳಿಗೆ ತಲತಲಾಂತರಗಳವರೆಗೆ ಓದಲು ಸಿಕ್ಕು ಜೀವನಕ್ಕೊಂದು ನಿಶ್ಚಿತ ಗುರಿಯೂ ಕ್ರಮವೂ ಇರಲಿ ಎಂಬ ಸದಾಶಯದಿಂದಲೇ ಆಗಿದೆ.
ಕನ್ನಡನಾಡಿನ ನಮ್ಮ ಹೆಮ್ಮೆಯ ಗುರುಪೀಠಗಳು ಅಂತಹ ಮಹತ್ತರ ಕೆಲಸಗಳನ್ನು ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ, ಆಸ್ವಾದನೀಯ. ಜನಸಂದಣಿಯಲ್ಲಿ ಮೆರವಣಿಗೆಯಲ್ಲಿ ಸಾಗಿಬಂದು ರಜತ ಸಿಂಹಾಸನದಲ್ಲಿ ಕೂತು ಮೆರೆಯುವ ಸನ್ಯಾಸಿಗಳು ಅವರೊಳಗೇ ಅವರು ಏಕಾಂಗಿಗಳು! ಅಲ್ಲಿ ಎಲ್ಲವೂ ಇದ್ದು ಏನೂ ಇಲ್ಲ!! ನೂರಾರು ಕೋಟಿಗಳ ಆಸ್ತಿಗಳಿದ್ದರೂ ಅವು ಅವರಿಗಾಗಲ್ಲ. ನಮ್ಮಂತೆಯೇ ಇದ್ದ ಎಳೆಯಪ್ರಾಯದ ಹುಡುಗರು ಯಾವುದೇ ಸುಖೋಪಭೋಗಗಳು ಬೇಡಾ ಎಂದು ತ್ಯಜಿಸಿ ಸನ್ಯಾಸಿಗಳಾಗಿ ಮುನ್ನಡೆಯುವುದು ಇಲ್ಲಿನ ಆಶ್ಚರ್ಯ!! ಅಪ್ಪ-ಅಮ್ಮ-ಅಣ್ಣ-ತಮ್ಮ-ಅಕ್ಕ-ತಂಗಿ-ಬಂಧು-ಬಳಗ ಎಲ್ಲರನ್ನೂ ಎಲ್ಲವನ್ನೂ ಬಿಟ್ಟು ಎಲ್ಲರ ಬಂಧ-ಸಂಬಂಧಗಳನ್ನು ಹರಿದುಕೊಂಡು ನಡೆಸುವ ತ್ಯಾಗ ಕಮ್ಮಿಯದೇ?
ರಾವಣನನ್ನು ವಧಿಸಿ ಇಡೀ ಲಂಕೆಯನ್ನೇ ಗೆದ್ದ ನಂತರ ಲಂಕೆಯ ಸಿರಿ[ಶ್ರೀಲಂಕಾ ಎಂದೇ ಹೆಸರು!]ಯನ್ನು ಕಂಡು ಅಲ್ಲೇ ಉಳಿಯುವ ಮನಸ್ಸಿನಲ್ಲಿದ್ದ ಲಕ್ಷ್ಮಣನಿಗೆ ಶ್ರೀರಾಮ ಹೇಳಿದ :
अपि स्वर्णमयी लङ्का न मे लक्ष्मण रोचते ।
जननी जन्मभूमिश्च स्वर्गादपि गरीयसी ||
ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ|
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ||
ನಮಗೆ ನಮ್ಮ ತಾಯ್ನಾಡಾದ ಅಯೋಧ್ಯೆಯಿದೆ, ಕೋಸಲದೇಶವಿದೆ, ನಮ್ಮ ನಾಡಿನ ಮುಂದೆ ಇದು ಏನೇನೂ ಅಲ್ಲ. ಎಷ್ಟೇ ಸಿರಿ ಸಂಪತ್ತಿದ್ದರೂ ಲಕ್ಷ್ಮಣಾ, ಜನ್ಮಕೊಟ್ಟ ಭೂಮಿ ಮತ್ತು ಹೆತ್ತ ತಾಯಿ ಇವೆರಡಕ್ಕಿಂತಾ ಮಿಗಿಲಾದವು ಯಾವುದೂ ಇಲ್ಲ. ಹೀಗಾಗಿ ಲಂಕೆ ನಮಗೆ ಬೇಡ.
ಅದೇ ರೀತಿಯಲ್ಲಿ ಈ ಭರತಭೂಮಿಗಾಗಿ, ಈ ಸಮಾಜಕ್ಕಾಗಿ, ಹೊತ್ತು ಹೆತ್ತ ತಾಯಿಯ ಸಂಬಂಧವನ್ನೂ ಕಡಿದುಕೊಂಡು ತ್ಯಾಗಮಯಿಯಾಗಿ ಜೀವಿಸುವುದು ಅತ್ಯಂತ ಶ್ರೇಷ್ಠ ಕೆಲಸ. ಮಾತೊಂದು ಹೀಗಿದೆ ಹೊರಗೆ ದುಡಿಯಲು ಹೋದ ಮಗ ಮನೆಗೆ ಬಂದಾಗ ತಾಯಿ ನೋಡುವುದು ಮಗನ ಹೊಟ್ಟೆಯನ್ನಂತೆ! ಮಗ ಹಸಿದಿದ್ದಾನೋ ಹಸಿವನ್ನು ಹೇಗೆ ತಡೆದುಕೊಂಡನೋ ಎಂಬ ಆತಂಕ ಅವಳದ್ದು. ತನ್ನ ಹೊಟ್ಟೆಗೆ ಏನೂ ಸಿಗದಿದ್ದರೂ ಮಗುವಿನ ಹೊಟ್ಟೆ-ಬಟ್ಟೆಗೆ ಹೇಗಾದರೂ ಪೂರೈಸುವ ಉತ್ಕಟ ಸಹಜ ಮನೋಭಿಲಾಷೆ ಮಾತೆಯದ್ದು. ಅಂತಹ ತಾಯಿಯ ಮಮತೆಯ ಮಡಿಲಿನಿಂದ ದೂರವಾಗುವುದು ಸುಲಭದ ಸಂಬಂಧವಲ್ಲ! ಕಣ್ಣಿಗೆ ಕಾಣಿಸಿದರೂ ತಾಯಿಗೆ ತಾಯಿ ಎನ್ನುವ ಹಾಗಿಲ್ಲ, ತಾಯಿಯ ಬೇಕು-ಬೇಡಗಳ ಕಡೆಗೆ ಗಮನ ಕೊಡುವ ಹಾಗಿಲ್ಲ. ನ್ಯಾಸ ಧರ್ಮದಂತೇ ಎಲ್ಲಿಗೂ ಹಾಗೆಲ್ಲಾ ತೆರಳಲು ಸಾಧ್ಯವಿಲ್ಲ, ಬೇಕುಬೇಕಾದ್ದು ಮಾಡುವಹಾಗಿಲ್ಲ, ಮನಸೋ ಇಚ್ಛೆ ತಿನ್ನುವಹಾಗಿಲ್ಲ, ಮನೋರಂಜನೆಗೆ ತೆರಳುವ ಹಾಗಿಲ್ಲ, ಶರೀರದ ಬಯಕೆಗಳನ್ನು ನಿಗ್ರಹಿಸಬೇಕು, ಇಂದ್ರಿಯಗಳನ್ನು ಅಂತರ್ಮುಖಗೊಳಿಸಬೇಕು, ಸಮಯದಲ್ಲಿ ಒಂದೇ ಆಸನದಲ್ಲಿ ದಿನಗಟ್ಟಲೇ ಕೂತೇ ಇರಬೇಕು, ಬಹಿರ್ದೇಶೆಗೂ ಎದ್ದುಹೋಗಲು ಸಮಯ ಅನುಮತಿಸದಿದ್ದರೂ ಸಹಿಸಿಕೊಳ್ಳಬೇಕು! ಯಮ-ನಿಯಮಾದಿ ಅಷ್ಟಾಂಗಯೋಗದಿಂದ ಶರೀರ-ಬುದ್ಧಿಗಳನ್ನು ಸ್ಥಿಮಿತದಲ್ಲಿಡಲು ಸತತ ನಿರತರಾಗಿರಬೇಕು. ಬಹುಕಾಲ ಅಧ್ಯಯನಕ್ಕೆ, ಗ್ರಂಥ ರಚನೆಗೆ, ತಪಸ್ಸಿಗೆ, ಪೂಜೆ-ಪುನಸ್ಕಾರಗಳಿಗೆ, ಪ್ರವಚನವೇ ಮೊದಲಾದ ಅಧ್ಯಾಪನಕ್ಕೆ ಕಳೆದುಹೋಗುವ ದಿನದಲ್ಲಿ ತ್ರಿಕಾಲ ಸ್ನಾನನುಷ್ಠಾನ ಮಾಡಬೇಕು. "ದೇಹಿ" ಎನ್ನುವ ಆರ್ತರ ಅಳಲನ್ನು ಆಲಿಸಬೇಕು-ಅವರ ಅನಿವಾರ್ಯತೆಗೆ ಸ್ಪಂದಿಸಬೇಕು, ಲೌಕಿಕ-ಅಲೌಕಿಕ ಅಥವಾ ಅಧಿಭೌತಿಕ-ಅಧಿದೈವಿಕ-ಅಧ್ಯಾತ್ಮಿಕ [ತಾಪತ್ರಯಗಳನ್ನು]ಸಮಸ್ಯೆಗಳನ್ನು ಹೊತ್ತುಬರುವವರಿಗೆ ಪರಿಹಾರ ಅನುಗ್ರಹಿಸಬೇಕು!
ಇಷ್ಟೆಲ್ಲಾ ಒತ್ತಡಗಳ ನಡುವೆ ಸನ್ಯಾಸಿಗಳಿಗೆ ಅವರದ್ದೇ ಎಂಬ ಸಮಯವೆಲ್ಲಿ? ಆ ನಡುವೆಯೂ ಅವರು ಕೊಡಮಾಡುವ ದಿವ್ಯ ಪ್ರೀತಿ ಎಂಥಾದ್ದು ಎಂಬುದರ ಸಂಕೇತವಾಗಿ ಮೇಲಿನ ಚಿತ್ರವನ್ನು ತೋರಿಸಿದ್ದೇನೆ. ಅಂತಹ ಕಾರುಣ್ಯರೂಪಕ್ಕೆ ಮತ್ತೊಂದು ಹೆಸರೇ ’ಗುರು’. ಪೂರ್ಣದಿಂದ ಉದಯಿಸುವ ಇಂತಹ ಗುರುಗಳು ಅದೇ ಪೂರ್ಣದೆಡೆಗೆ ನಮ್ಮನ್ನೂ ಕರೆದರೆ ಹೋಗದ ನಾವೇ ರಣಹೇಡಿಗಳು!
ॐ पूर्णमदः पूर्णमिदम् पूर्णात् पूर्णमुदच्यते |
पूर्णस्य पूर्णमादाय पूर्णमेवावशिष्यते ||
ॐ शान्तिः शान्तिः शान्तिः || [1]
OM poorNamadaH poorNamidaM poorNaat poorNamudacyate|
poorNasya poorNamadaya poorNamEvaavashiShyate
OM shaaMtihi shaaMtihi shaaMtihi
Om ! That (Brahman) is infinite, and this (universe) is infinite.
The infinite proceeds from the infinite.
(Then) taking the infinitude of the infinite (universe),
It remains as the infinite (Brahman) alone.
Om ! Peace ! Peace ! Peace
ವೀರಯೋಧರಂತೇ ಸನ್ಯಾಸಿಗಳೂ ವೀರರೇ! ಈ ಲೋಕದ ಮೋಹವನ್ನು ಕಡಿದುರುಳಿಸುವ ಅವರು ಯಾವ ವೀರರಿಗೂ ಕಮ್ಮಿಯಲ್ಲ. ಒಂದರ್ಥದಲ್ಲಿ ಅವರೇ ನಿಜವಾದ ವೀರರು. ಅಂತಹ ಹಲವು ವೀರರನ್ನು ಹೆತ್ತತಾಯಿ ಈ ನಮ್ಮ ಭಾರತ. ಅದೇ ತಾಯಿ ನನಗೂ ಜನ್ಮವಿತ್ತಳು. ಅವಳ ಸುಗಂಧಭರಿತ ಸುಸಂಕೃತ ನೆಲದಲ್ಲಿ ಹುಟ್ಟಲು ಅವಕಾಶ ಕೊಟ್ಟಿದ್ದಕ್ಕೆ, ನನ್ನ ಯಾವುದೋ ಜನ್ಮಗಳ ಪುಣ್ಯಫಲಗಳನ್ನು ಸೃಷ್ಟಿಕರ್ತನಿಗೆ ತೋರಿಸಿ ನನ್ನನ್ನಿಲ್ಲಿ ಸೆಳೆದಂತಹ ಆ ತಾಯಿಗೆ ನನ್ನ ನಮಸ್ಕಾರ ಈ ಭಾವರೂಪದ ಮೂಲಕ:
ಯಾವನೆಲದ ಗಂಧಗಾಳಿ ನನ್ನನಿಲ್ಲಿ ಸೃಜಿಸಿತೋ
ಯಾವ ಪೂರ್ವಪುಣ್ಯ ಸೆಳೆದು ಭಾರತಕ್ಕೆ ತಂದಿತೋ
ಯಾವ ದೇವ ಹರಸಿ ಇಲ್ಲಿ ಬದುಕು-ಬಣ್ಣ ಗಳಿಸಿತೋ
ಭಾವಪೂರ್ಣ ನಮನವದಕೆ ಜೀವ ತೃಪ್ತವಾಯಿತೋ
ಸಾವಿನಲ್ಲು ಸುಖವಕಂಡ ದೇಶಭಕ್ತರೆಲ್ಲಿಯೋ
ನೋವುನುಂಗಿ ತ್ಯಾಗಮೆರೆದ ತಾಯಂದಿರು ಎಲ್ಲಿಯೋ
ಹೂವುಗಳವು ದೇವಮುಡಿಗೆ ನಿತ್ಯಸೇರ್ವುದೆಲ್ಲಿಯೋ
ಭಾವಪೂರ್ಣ ನಮನವದಕೆ ಜೀವ ತೃಪ್ತವಾಯಿತೋ
ನೋವಿನಲ್ಲು ನಲಿವಿನಲ್ಲು ಮನಸ ಸ್ಥಿಮಿತಗೊಳಿಸಿತೋ
ಬೇವಿನಲ್ಲು ಮಾವಿನಲ್ಲು ವರಗುಣಗಳ ತಿಳಿಸಿತೋ
ಜೀವ ಜೀವಗಳಲು ಒಳಗೆ ಪರಮಾತ್ಮನ ತೋರಿತೋ
ಭಾವಪೂರ್ಣ ನಮನವದಕೆ ಜೀವ ತೃಪ್ತವಾಯಿತೋ
ಯಾವ ನೆಲದ ಠಾವಿನಲ್ಲಿ ಸಂತರರಳಿ ಬರುವರೋ
ಯಾವ ದೇಶ ಸಹಿಷ್ಣುತೆಗೆ ತಾಯಿಯಾಗಿ ಇರುವುದೋ
ಯಾವ ಭೂಮಿ ಎನ್ನಾತ್ಮಕೆ ಸನ್ಮಾರ್ಗವ ತೋರಿತೋ
ಭಾವಪೂರ್ಣ ನಮನವದಕೆ ಜೀವ ತೃಪ್ತವಾಯಿತೋ
No comments:
Post a Comment