ಚಿತ್ರಋಣ: ಭಾರತೀಯ ವಿದ್ಯಾಭವನದ ಆಹ್ವಾನ ಪತ್ರಿಕೆ
ಶತಮಾನದ ಪ್ರಬುದ್ಧ ’ಜೀವಿ’
ವತ್ಸ ದೇಶದ ಕೌಶಾಂಬಿ ನಗರವನ್ನು ರಾಜಧಾನಿಯನ್ನಾಗಿಸಿಕೊಂಡು ಆಳುತ್ತಿದ್ದ ದೊರೆ ಶತಾನೀಕ. ಶತಾನೀಕ ಕೊಡುಗೈ ದೊರೆಯೆಂದೇ ಪ್ರಸಿದ್ಧ; ಸಮಕಾಲೀನ ದಾನಿಗಳಲ್ಲೇ ಮಹಾದಾನಿ. ಬ್ರಾಹ್ಮಣರನ್ನು ಕರೆಯುವುದು, ಗೌರವಿಸಿ ಸತ್ಕರಿಸಿ ಕೈತುಂಬಾ ನಗನಾಣ್ಯಗಳನ್ನು ಕೊಟ್ಟುಕಳಿಸುವುದು ಅವನ ವಾಡಿಕೆ. ಅದೆಷ್ಟೇ ಜನ ಬ್ರಾಹ್ಮಣರು ಬಂದರೂ ಕಿಂಚಿತ್ತೂ ಬೇಸರಪಡದೇ ದಾನಮಾಡಿದವ ಶತಾನೀಕ. ಆತನ ಮಗ ಆತನಿಗೆ ತದ್ವಿರುದ್ಧ; ಮಗ ಸಹಸ್ರಾನೀಕ ದಾನ ಮಾಡುವುದು ಅಲ್ಪ.[ಸಹಸ್ರಾನೀಕ ತನ್ನ ಸ್ವಂತ ಗೆಯ್ಮೆಯಿಂದ ಬಂದದ್ದನ್ನು ಮಾತ್ರ ದಾನಮಾಡುತ್ತಿದ್ದ ಎಂಬುದನ್ನು ಮರೆಯಬೇಡಿ] ಈ ಬಗ್ಗೆ ಅನೇಕ ಮಂದಿ ಬ್ರಾಹ್ಮಣರು ಅವನಲ್ಲಿಯೇ ಕೇಳಿದರು" ಅಯ್ಯಾ ರಾಜನ್, ತಾವು ಕೊಡಮಾಡುವ ದಾನ ನಮ್ಮಲ್ಲಿ ಹಲವರಿಗೆ ಸಿಗುತ್ತಿಲ್ಲದ ಕಾರಣ ನಾವು ದೇಶವನ್ನು ಬಿಟ್ಟುಹೊರಡುತ್ತಿದ್ದೇವೆ."--ಹಾಗೆ ಹೇಳುತ್ತಾ ಬಹಳಷ್ಟು ಬ್ರಾಹ್ಮಣರು ವತ್ಸದೇಶವನ್ನು ತೊರೆದರು. ಕೊನೆಗೊಮ್ಮೆ ಕೆಲವು ಬ್ರಾಹ್ಮಣರು ಸಹಸ್ರಾನೀಕನಲ್ಲಿ ಬಂದಾಗ ಸಹಸ್ರಾನೀಕ ಪ್ರಶ್ನಿಸಿದ" ಬ್ರಾಹ್ಮಣೋತ್ತಮರೇ, ನೀವು ನಿಮ್ಮ ತಪೋಬಲದಿಂದ ಸಕಲವನ್ನೂ ತಿಳಿಯಬಲ್ಲವರಾಗಿರುತ್ತೀರಿ. ನನ್ನ ತಂದೆ ಶತಾನೀಕ ನಿಮ್ಮಂಥಾ ಸಾವಿರಾರು ಬ್ರಾಹ್ಮಣರಿಗೆ ದಾನ ನೀಡಿದ. ಅದರ ಫಲವಾಗಿ ಆತನೀಗ ಸ್ವರ್ಗದಲ್ಲೇ ಇರಬೇಕು. ಹೇಳಿ ಆತನೀಗ ಎಲ್ಲಿದ್ದಾನೆ? ಆ ಬಗ್ಗೆ ಸರಿಯಾಗಿ ತಿಳಿಸಿದಲ್ಲಿ ನಿಮ್ಮಂತಹ ಅನೇಕರಿಗೆ ದಾನ ನೀಡಲು ನನ್ನ ಅಭ್ಯಂತರವಿಲ್ಲ."
ಬ್ರಾಹ್ಮಣರು ಬೆವತುಹೋದರು. ಯಾಕೆಂದರೆ ಚಿಕ್ಕಪುಟ್ಟ ತಪಸ್ಸಿದ್ಧಿಯಿಂದ ಸ್ವರ್ಗ-ನರಕಗಳ ಮಾಹಿತಿ ದೊರೆಯುವುದು ಸಾಧ್ಯವಿಲ್ಲ; ರಾಜಾಜ್ಞೆಯನ್ನು ಶಿರಸಾವಹಿಸದಿದ್ದರೆ ರಾಜ ಕೋಪದಿಂದ ತಲೆತೆಗೆಸಲೂ ಬಹುದು. ಆತಂಕದ ಕ್ಷಣಗಳನ್ನು ಎದುರಿಸುತ್ತಾ ಮನದಲ್ಲಿ ದೇವರನ್ನು ನೆನೆಯುತ್ತಾ ಬ್ರಾಹ್ಮಣರು ಹೊರಹೊರಟರು. ಬಹುದೂರ ಸಾಗಿದಾಗ, ಕಾಡಿನದಾರಿಯಲ್ಲಿ ತರುವೊಂದರ ಬುಡದಲ್ಲಿ ಭಾರ್ಗವ ಮಹರ್ಷಿ ಕಾಣಿಸಿದ. ಸುದೀರ್ಘ ತಪಸ್ಸಿನಲ್ಲಿ ನಿರತನಾಗಿದ್ದ ಭಾರ್ಗವನಿಗೆ ವಂದಿಸಿಕೊಳ್ಳುತ್ತಾ ದಯೆತೋರಬೇಕೆಂದು ಬ್ರಾಹ್ಮಣರು ಪ್ರಾರ್ಥಿಸಿದರು. ಭಾರ್ಗವ ಒಮ್ಮೆಲೇ ಮನಸ್ಸು ಕೊಡಲಿಲ್ಲ. ಮತ್ತೆ ಮತ್ತೆ ಪ್ರಾರ್ಥನೆಗಳು ಸಂದಮೇಲೆ ಭಾರ್ಗವ ಕರಗಿದ. ಶತಾನೀಕನ ಬಗ್ಗೆ ತಿಳಿದು ಹೇಳಲು ಉದ್ಯುಕ್ತನಾದ ಭಾರ್ಗವ, ಸೂರ್ಯದೇವನ ಮುಂದಾಳತ್ವದಲ್ಲಿ ಸ್ವರ್ಗದ ಹಾದಿ ಹಿಡಿದ. ಹಾದಿಯಲ್ಲಿ ೨೮ ಕೋಟಿ ವಿವಿಧ ನರಕಗಳು ಎದುರಾದವು. ಒಂದೊಂದರಲ್ಲೂ ಯಮಭಟರು ಪಾಪಿಗಳಿಗೆ ಚಿತ್ರವಿಚಿತ್ರ ಹಿಂಸೆನೀಡುತ್ತಿದ್ದರು. ಮಾರ್ಗಮಧ್ಯೆ ಒಂದು ನರಕದಲ್ಲಿ ಬ್ರಾಹ್ಮಣನೊಬ್ಬ ಭಾರ್ಗವನಿಗೆ ಅಡ್ಡಲಾದ."ಎಲೈ ಭಾರ್ಗವ ಮುನಿಯೇ ನೀನು ನನಗೆ ಕೊಡಬೇಕಾದ ಒಂದು ನಾಣ್ಯವನ್ನು ಕೊಟ್ಟು ಮುಂದೆ ಚಲಿಸುವ ಅನುಮತಿಯನ್ನು ಪಡೆಯುವವನಾಗು" ಎಂದ! ಭಾರ್ಗವ ತಬ್ಬಿಬ್ಬಾದ! " ಬ್ರಾಹ್ಮಣನೇ ನನ್ನಲ್ಲಿ ಯಾವುದೇ ನಾಣ್ಯವಿಲ್ಲ, ನೀನೀಗ ನನ್ನನ್ನು ಬಿಟ್ಟರೆ ಹೋಗಿ ಶತಾನೀಕನ ಬಗ್ಗೆ ತಿಳಿದುಕೊಂಡಾನಂತರ ಭೂಲೋಕಕ್ಕೆ ತೆರಳಿ ನಾಣ್ಯದೊಂದಿಗೆ ಮತ್ತೆ ಮರಳಿ ನಿನಗದನ್ನು ತಲ್ಪಿಸಿ ಸ್ವಸ್ಥಾನಕ್ಕೆ ವಾಪಸ್ಸಾಗುತ್ತೇನೆ." ಬ್ರಾಹ್ಮಣನೆಂದ-"ಮುನಿಯೇ ಇಲ್ಲಿ ಏನಿದ್ದರೂ ನಗದು ವ್ಯವಹಾರ, ನಾಣ್ಯವಿಲ್ಲದಿದ್ದರೆ ಹೋಗಲಿ, ನಿನ್ನ ತಪಸ್ಸಿನ ೬ನೆಯ ಒಂದುಭಾಗವನ್ನು ನನಗೆ ಧಾರೆಯೆರೆ ಅಷ್ಟು ಸಾಕು." "ತಥಾಸ್ತು" ಎಂದ ಭಾರ್ಗವನಿಗೆ ಮುಂದಿನ ದಾರಿ ಕಾಣಿಸತೊಡಗಿತು.
ಕಾಣಿಸತೊಡಗಿದ ದಾರಿಯಲ್ಲಿ ಮುನ್ನಡೆದಾಗ ಒಬ್ಬ ಗೋವಳ, ಒಬ್ಬ ದರ್ಜಿ, ಒಬ್ಬ ಮಡಿವಾಳ, ಒಬ್ಬ ಅರ್ಚಕ ಮತ್ತು ಒಬ್ಬ ಕಟ್ಟಡಕಟ್ಟುವವ ಹೀಗೇ ಈ ಐದು ಜನ ಎದುರಾಗುತ್ತಾ ಎಲ್ಲರೂ ಭಾರ್ಗವ ಗಳಿಸಿದ ಪುಣ್ಯದಲ್ಲಿ ೬ನೆಯ ಒಂದು ಭಾಗವನ್ನು ಪಡೆಯುತ್ತಾ ಹೋಗಿ ಕೊನೆಗೊಮ್ಮೆ ಭಾರ್ಗವನಲ್ಲಿ ಗಳಿಸಿದ ಪುಣ್ಯವೇ ಇಲ್ಲದಂತಾದರೂ, ಜನ್ಮಾಂತರಗಳಲ್ಲಿ ತಾನು ಸಲ್ಲಿಸದೇ ಬಾಕಿ ಉಳಿಸಿದ್ದ ಸಾಲದ ವ್ಯವಹಾರ ಚುಕ್ತಾ ಆಗಿ, ಅದರ ಫಲವಾಗಿ ಶತಾನೀಕನನ್ನು ಕಾಣುವಲ್ಲಿ ಭಾರ್ಗವ ಯಶಸ್ವಿಯಾದ. ನರಕವೊಂದರಲ್ಲಿ ಶತಾನೀಕನನ್ನು ತಲೆಕೆಳಗಾಗಿ ನೇತುಹಾಕಿ ಕುದಿಯುವ ಎಣ್ಣೆಯಲ್ಲಿ ಮುಳುಗಿಸಿ ಎಬ್ಬಿಸುವ ತಯಾರಿ ನಡೆಯುತ್ತಿತ್ತು. ತನ್ನನ್ನು ಕಾಣಲು ಅಲ್ಲಿಗೆ ಬಂದ ಭಾರ್ಗವನಿಂದ ವಿಷಯ ತಿಳಿದ ಶತಾನೀಕ ಭಾರ್ಗವನಲ್ಲಿ ಹೇಳಿದ " ಮಹಾಮುನಿಯೇ, ನಾನು ಮಹಾದಾನಿಯೆನಿಸಿ ಜೀವನಪೂರ್ತಿ ದಾನಗಳನ್ನು ನೀಡಿದ್ದರೂ ನರಕದ ಶಿಕ್ಷೆ ಏಕೆಂಬುದು ತಮ್ಮ ಪ್ರಶ್ನೆಯಾಗಿದೆ. ರಾಜನಾಗಿದ್ದ ನಾನು ಪ್ರಜೆಗಳಿಂದ ವಿವಿಧರೂಪದಲ್ಲಿ ಪಡೆದ ಕರ-ಕಂದಾಯಗಳಲ್ಲೇ ಕೆಲವು ಭಾಗವನ್ನು ಹಾಗೆ ದಾನಮಾಡಿರುತ್ತೇನೆ ವಿನಃ ದಾನದ ಸುವಸ್ತುಗಳೂ ನಗ-ನಾಣ್ಯಗಳೂ ನನ್ನ ಕಷ್ಟಾರ್ಜಿತದಿಂದ ಜನಿತವಲ್ಲ. ದೇಶದ ರಾಜನಾಗಿ ನನ್ನ ಸ್ವಂತಿಕೆಗೆ ನಾನೇ ನಾನು ದುಡಿಯಬೇಕೆಂದು ನನಗನ್ನಿಸಲೇ ಇಲ್ಲ. ಹಾಗೆ ಬಂದ ಹೇರಳ ಸಂಪತ್ತಿನಲ್ಲಿ ಕೆಲಭಾಗವನ್ನು ದಾನಮಾಡಿದಾಗ ಅದೇ ಬಹಳದೊಡ್ಡದಾಗಿ ’ದಾನಿ’ ಎಂದು ಜನರಿಂದ ಗೌರವಿಸಲ್ಪಟ್ಟೆ. ಪ್ರಜೆಗಳ ಹಿತರಕ್ಷಣೆಗಾಗಿ ಸಾರ್ವಜನಿಕ ಕೆಲಸಗಳಿಗೆ ವ್ಯಯವಾಗಬೇಕಾದ ಸಂಪತ್ತು ನನ್ನ ಸ್ವಂತದ ಪುಣ್ಯಗಳಿಕೆಗೆ ಬಳಸಲ್ಪಟ್ಟಿತು. ಅದರ ಫಲ ನಿಷ್ಫಲವಾಗಿ ನನಗೆ ಈ ರೀತಿಯ ನರಕಯಾತನೆ ಕೊಡಮಾಡಲ್ಪಡುತ್ತಿದೆ. ತಾವು ಈ ಕೂಡಲೇ ನನ್ನ ಮಗನಿಗೆ ಈ ವಾರ್ತೆಯನ್ನರುಹಿ, ದಾನಮಾಡುವಾಗ ತನ್ನ ಸ್ವಂತದ ಪ್ರಾಮಾಣಿಕ ದುಡಿಮೆಯ ಸಂಪತ್ತನ್ನು ದಾನಮಾಡಬೇಕಾಗಿ ತಿಳಿಸಿ. ಅದರಿಂದ ದಾನಮಾಡಿದವರಿಗೂ ಪಡೆದವರಿಗೂ ಶ್ರೇಯಸ್ಸು, ಹೊರತಾಗಿ ಯಾರದೋ ಸಂಪತ್ತನ್ನು ದಾನಮಾಡಿದರೆ ದಾನಿಯೂ ದಾನಪಡೆದವರೂ ಅಧಃಪತನಕ್ಕಿಳಿಯುತ್ತಾರೆ."
ತಮಷೆಗಾಗಿ ಒಂದು ಮಾತು: ’ಗುಡ್ಡದಮೇಲಿನ ದನವನ್ನು ಗೋದಾನ ಮಾಡುವವರು’ ಎಂಬ ವಾಡಿಕೆಯ ಜಾಣ್ನುಡಿ ನಮ್ಮಲ್ಲಿದೆ. ಹಿಂದಕ್ಕೆ ಗುಡ್ಡಗಳಲ್ಲಿ ಗೋಮಾಳಗಳಿದ್ದವು; ಹಸು-ಕರುಗಳು ಹಸನಾದ ಹಸಿರು ಹುಲ್ಲು-ಸೊಪ್ಪುಗಳನ್ನು ಮೇಯುತ್ತಿದ್ದವು. ಅಂತಹ ಮೇವಿಗೆ ತೆರಳಿದ ಯಾರದೋ ಮಾಲೀಕತ್ವದ ಹಸುವನ್ನು ಯಾರೋ ಹಿಡಿದು ಇನ್ಯಾರಿಗೋ ದಾನಮಾಡಿದರೆ ಹೇಗೆ?---ಇದೇ ಆ ನಾಣ್ನುಡಿಯ ಅರ್ಥ. ಈ ದಿನಗಳಲ್ಲಿ ಸಾವಿರಾರು ತಲೆಗಳನ್ನು ವಂಚಿಸಿ ಹೊಡೆದ ಹಣದಿಂದ ರಾಜಕಾರಣಿಗಳೂ ಸಮಾಜಘಾತುಕ ಉದ್ಯಮಗಳ ಮಾಲೀಕರೂ ದೇವಾಲಯಗಳಿಗೆ ಚಿನ್ನದ/ಬೆಳ್ಳಿಯ ವಿಗ್ರಹ/ಬಾಗಿಲು/ಪಲ್ಲಕ್ಕಿ/ರಥ/ಪಾದ ಕವಚ ಇತ್ಯದಿಗಳನ್ನು ದಾನವಾಗಿ ನೀಡುವುದನ್ನು ಕಾಣುತ್ತೇವೆ. ಪ್ರಾಯಶಃ ದೇವರು ನೇರವಾಗಿ ಸಿಕ್ಕಿದ್ದರೆ ಕೊಂಡುಕೊಳ್ಳುವಷ್ಟು ಸಾಮರ್ಥ್ಯ ಪಡೆದಿರುವ ಗಣಿಧಣಿಗಳೂ ಜೈಲಿನಲ್ಲಿದ್ದೂ ಕಾರು-ಬಾರು ನಡೆಸುವ ಮಂದಿಯೂ ನಮ್ಮಲ್ಲಿದ್ದಾರೆ! ಅಡಿಗೆ ಬಿದ್ದರೂ ಮೂಗು ಮೇಲೇ ಇದೆ ಎಂದುಕೊಳ್ಳುವ ಮಹಾನುಭಾವಿ ಮದ್ಯದ ಹಂಡೆಗಳಿದ್ದಾರೆ! ವಯಸ್ಸು ಎಲ್ಲರಿಗೂ ಆಗುತ್ತಾ ಹೋಗುತ್ತದೆ; ಆದರೆ ಅವರ ಜೀವಿತದಲ್ಲಿ ಅವರ ಸ್ವಯಾರ್ಜಿತವೆಷ್ಟು? ಕುಲಕಸುಬಿನ ತಲೆಮಾರು ಅಳಿದುಹೋದ ನಂತರ ಕೆಲವು ಕಡೆ ಬ್ರಾಹ್ಮಣ ಕುಲದಲ್ಲಿ ಜನಿಸಿದ ಕೆಲವರು ಕೋಳಿ ಸಾಕಣೆ, ಮೊಲಸಾಕಣೆಗಳಲ್ಲಿ ತೊಡಗಿಕೊಂಡಿದ್ದನ್ನೂ ಕಾಣಬಹುದಾಗಿದೆ. ಯಕ್ಷರಂಗದ ದಿಗ್ಗಜ ದಿ| ಶೇಣಿ ಗೋಪಾಲಕೃಷ್ಣ ಭಟ್ಟರು ಒಮ್ಮೆ ಹೇಳುತ್ತಿದ್ದರು- "ದುಡ್ಡಾಗುತ್ತದೆ ಎಂದುಹೇಳಿ ಕಾಳರಾತ್ರಿಯ ಸ್ಮಗ್ಲಿಂಗ್ ದಂಧೆಗೆ ಹೋಗಲೂ ಕೆಲವರು ಸಿದ್ಧರಾಗುತ್ತಾರೆ, ದುಡ್ಡಿನ ಹಿಂದೆ ಬಿದ್ದವರಿಗೆ ಮಾನಾಪಮಾನಗಳ ಪ್ರಶ್ನೆಯಿಲ್ಲ-ಅಲ್ಲಿ ದುಡ್ಡು ಗಳಿಸುವುದೇ ಮುಖ್ಯ. ನಾವೆಲ್ಲಾ ದುಡ್ಡಿನ ಹಿಂದೆ ಬಿದ್ದವರಲ್ಲ. ದುಡ್ಡಿಗಾಗಿ ಮೌಲ್ಯಗಳನ್ನು ಮಾರಿಕೊಳ್ಳುವುದಿಲ್ಲ. ಹಣೆಯಲ್ಲಿ ಬರೆದ ಫಲವನ್ನು ಪಡೆಯುತ್ತೇವೆ ಹೊರತಾಗಿ ರೀತಿ-ನೀತಿ ಬಿಟ್ಟು ನಡೆಯುವುದಿಲ್ಲ." ಎಂಥಾ ಮಾತು ನೋಡಿ! ಹಣ ಹೇರಳವಾಗಿ ಬರುತ್ತದೆ ಎಂಬ ಏಕಮಾತ್ರ ಕಾರಣಕ್ಕೆ [ಬೆಳೆಸುವುದೇ ಈ ವರ್ಗಕ್ಕೆ ತರವಲ್ಲ] ಕೈಯ್ಯಾರೆ ಪ್ರೀತಿಯಿಂದ ಬೆಳೆಸುವ ಕೋಳೀ ಮರಿಗಳನ್ನೂ ಮುದ್ದುಮೊಲಗಳನ್ನೂ ಮಾರಿಕೊಳ್ಳುವ ಬ್ರಾಹ್ಮಣ ಜಾತಿಯ ಜನರಿಗೆ ಏನೆನ್ನಬೇಕು? ಇಂದು ಗಳಿಸಿದ ಹಣದ ಥೈಲಿ ಮುಂದೊಮ್ಮೆ ದೋಷಪರಿಹಾರಕ್ಕೆ ಖರ್ಚಾಗಬಹುದು ಎನ್ನಬೇಕಲ್ಲವೇ?
ಜೀವಿತದಲ್ಲಿ ಇಂಥಾ ಯಾವುದೇ ಅಡ್ಡಕಸುಬಿಗೆ ಇಳಿಯದೇ ಕಷ್ಟಾರ್ಜಿತದಲ್ಲೇ ೧೦೦ ವರ್ಷಗಳನ್ನು ಪೂರೈಸಿಬಂದವರು ನಮ್ಮ ಹೆಮ್ಮೆಯ ಜೀವಿ. ಅವರ ಕಾಲುಭಾಗದ ವಯಸ್ಸು ನನ್ನದಲ್ಲ. ಅವರು ನನ್ನಜ್ಜ[೨೦೦೪ರಲ್ಲೇ ದಿವಂಗತರು]ನಿಗಿಂತಲೂ ೧೪ ವರ್ಷ ಹಿರಿಯರು!! ನನ್ನಜ್ಜನೂ ನಮ್ಮ ’ಜೀವಿ’ಯ ಹಾಗೇ ಕೊನೆಯವರೆಗೂ ಗಟ್ಟಿಮುಟ್ಟಾಗೇ ಇದ್ದರು; ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಿದ್ದರು. ಯಾರೂ ತನ್ನನ್ನು ಸೇವೆ ಮಾಡುವ ಕಾಲ ಬರಬಾರದು ಎನ್ನುತ್ತಿದ್ದ ಅವರು ಹುಟ್ಟಿದ ಮಿತಿ ಮತ್ತು ಈ ಲೋಕ ಬಿಟ್ಟ ತಿಥಿ ಒಂದೇ ಆಗಿದೆ ! ಆಡಿದ ಮಾತಿನಂತೇ ಕೊನೆಯುಸಿರಿನವರೆಗೂ ಹಾಸಿಗೆ ಹಿಡಿದು ಮಲಗಿ ಇನ್ನೊಬ್ಬರಿಗೆ ಭಾರವಾಗಲಿಲ್ಲ; ಯಾರಿಗೂ ತನ್ನ ಸೇವೆಗೆ ಅವಕಾಶ ನೀಡಲಿಲ್ಲ; ಜೀವಿತದಲ್ಲಿ ಸಲ್ಲದ ಮಾರ್ಗಗಳಿಂದ ಸಂಪಾದನೆ ಮಾಡಲಿಲ್ಲ. ಶ್ರೀಯುತ ಗಂಜಾಮ್ ವೆಂಕಟಸುಬ್ಬಯ್ಯನವರೂ ಕೂಡ ಹಾಗೇ. ಒಂದೂವರೆ ವರ್ಷದ ಹಿಂದೆ ಒಮ್ಮೆ ಅವರ ಮನೆಗೆ ತೆರಳಿದ್ದೆ. ಹೋದಾಗ ಅಲ್ಲಿ ಅವರಿರಲಿಲ್ಲ; ಅವರ ಮಗ ಸಿಕ್ಕಿದ್ದರು. ನೋಡಬಂದ ಸಂತೋಷ ಹಂಚಿಕೊಂಡೆ. ಜೀವಿಯವರು ಯಾವುದೋ ಮೀಟಿಂಗಿಗೆ ತೆರಳಿದ್ದರು. ಬರುವುದು ಬಹಳ ವಿಳಂಬವಾಗಬಹುದಾದ್ದರಿಂದ, ಯಾವುದೇ ಪೂರ್ವಸೂಚನೆಯಿಲ್ಲದೇ ಹೇಳದೇ-ಕೇಳದೇ ಅವರಲ್ಲಿಗೆ ತೆರಳಿದ್ದ ನಾನು ಪೆಚ್ಚುಮೋರೆಹಾಕಿಕೊಂಡು ಮರಳಿದೆ. ಮಾರನೇ ದಿನ ಬೆಳಿಗ್ಗೆ ಹತ್ತುಗಂಟೆಗೆ ನನ್ನ ಜಂಗಮವಾಣಿ ರಿಂಗಣಿಸಿತು. ಅತ್ತಕಡೆಯ ಧ್ವನಿಯನ್ನು ಆಲೈಸಿಯೇ ತಿಳಿಯಿತು-ಅವರು ಜೀವಿ ಆಗಿದ್ದರು; ಮತ್ತು ಸಹಜವಾಗಿ ತಾನು ಯಾರು ಎಂಬುದನ್ನೂ ಹೇಳಿಕೊಂಡು ಮಾತನಾಡಿದರು. ಜೀವಿಯವರ ಸರಳ ಮಾದರಿಯ ಜೀವನಕ್ಕೆ ಇದೊಂದು ಉದಾಹರಣೆ.
ಸಂಸ್ಕೃತ ಪಂಡಿತರಾದ ದಿ| ಗಂಜಾಂ ತಿಮ್ಮಣ್ಣಯ್ಯ ಅವರ ಮಗನಾಗಿ 23-08-1913ರಲ್ಲಿ ಮೈಸೂರಿನಲ್ಲಿ ಜನಿಸಿದ ಜೀವಿಯವರು ಬಾಲ್ಯವನ್ನು ಕಳೆದಿದ್ದೂ ಓದಿದ್ದೂ ಬೆಳೆದದ್ದೂ ಅಲ್ಲೇ. ೧೯೩೨ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಎಂ.ಏ ಪೂರೈಸಿ ವಿಶ್ವವಿದ್ಯಾನಿಲಯಕ್ಕೇ ಅತ್ಯುತ್ತಮ ಪ್ರಥಮ ಶ್ರೇಯಾಂಕ ಪಡೆದರು. ನಂತರ ಕಲಿತ ಕಾಲೇಜಿನಲೇ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ಕಾಲಾನಂತರ ಬೆಂಗಳೂರಿಗೆ ಆಗಮಿಸಿ ಇಲ್ಲಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಮುಂದುವರಿಸಿದರು. ಅದೇ ವಿಜಯಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿಯೂ ದುಡಿದರು.
ಪ್ರವೃತ್ತಿಯಲ್ಲಿ ಕನ್ನಡ ಭಾಷಾ ಸಂರಕ್ಷಣೆ ಮತ್ತು ಬೆಳವಣಿಗೆ ಬಗ್ಗೆ ಬಹಳ ತೊಡಗಿಕೊಂಡರು. ಕನ್ನಡ ಸಾಹಿತ್ಯರಂಗದಲ್ಲಿ ಎಲ್ಲಿಲ್ಲದ ಆಸಕ್ತಿ. ತಾವೇ ಬರೆದದ್ದಕ್ಕಿಂತಾ ಇತರರು ಬರೆದಿದ್ದನ್ನು ಆಮೂಲಾಗ್ರ ಆಸ್ವಾದಿಸಿ ಆನಂದಿಸುವ ಕಾವ್ಯವಿನೋದಿ! ಹತ್ತು ನಿಘಂಟುಗಳನ್ನು ಸಂಪಾದಿಸಿದ ಶ್ರೀಯುತರು ಕನ್ನಡ ಭಾಷೆಯ ಎಂಟು ಸಂಪುಟಗಳುಳ್ಳ ನಿಘಂಟನ್ನು ತಯಾರಿಸಿದರು. ೧೯೬೪ರಿಂದ ೧೯೬೯ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಕೆಲಸಮಾಡಿದರು. ಕೆನರಾ ಬ್ಯಾಂಕ್ ಮುಂದಾಗಿ ಜೀವಿಯವರ ಕನ್ನಡನಿಘಂಟನ್ನು ಅಂಧರ ಬಳಕೆಗಾಗಿ ಬ್ರೈಲಿ ಲಿಪಿಗೆ ತರ್ಜುಮೆಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕನ್ನಡದ ಪ್ರಮುಖ ದೈನಿಕ ಪ್ರಜಾವಾಣಿಯಲ್ಲಿ ದಶಕಕ್ಕೂ ಅಧಿಕಕಾಲ ’ಇಗೋ ಕನ್ನಡ’ ವೆಂಬ ಅಂಕಣವನ್ನು ಬರೆದಿದ್ದಾರೆ. ಕರ್ನಾಟಕ ಏಕೀಕರಣದ ಸುವರ್ಣಮಹೋತ್ಸವ ಸಂದರ್ಭದಲ್ಲಿ ’ಕ್ಲಿಷ್ಟಪದಕೋಶ’ವೆಂಬ ಇನ್ನೊಂದು ಡಿಕ್ಶನರಿಯನ್ನು ಕನ್ನಡಿಗರಿಗೆ ಕೊಟ್ಟವರು ಜೀವಿ. ಕನ್ನಡದಲ್ಲಿ ಇದುವರೆಗೆ ಲಭ್ಯವಿರದ ರೀತಿಯದಾದ ಈ ನಿಘಂಟಿನಲ್ಲಿ ಕ್ಲಿಷ್ಟಪದಗಳ ಮೂಲ ಎಲ್ಲಿದೆ, ಯಾವ ಭಾಷೆಯಿಂದ ಶಬ್ದಗಳು ಒದಗಿಬಂದವು, ಅವುಗಳ ಗೂಢಾರ್ಥ-ಗುಹ್ಯಾರ್ಥಗಳೇನು, ಅವುಗಳ ಸ್ಥಾನಬಲ[ವರ್ಚ್ಯೂ ಆಫ್ ವರ್ಡ್ಸ್’ ಪೊಸಿಶನ್]ವೇನು ಮತ್ತು ಅವುಗಳ ಬಳಕೆಯ ಚಮತ್ಕಾರಗಳೇನು ಎಂಬುದರ ಬಗ್ಗೆ ಮಾಹಿತಿ ದೊರಕುತ್ತದೆ. ಭಾರತದ ಭಾಷಾಶಾಸ್ತ್ರಜ್ಞರ ಸಮಿತಿಯ ಉಪಾಧ್ಯಕ್ಷರಾಗಿ ೧೭ ಸುದೀರ್ಘ ವರ್ಷಗಳ ಸೇವೆ ಸಲ್ಲಿಸಿದವರು ನಮ್ಮ ಜೀವಿ. ೧೯೯೮ರಲ್ಲಿ ಕೇಂದ್ರ ಸರಕಾರ ಅವರನ್ನು [ ಇನ್ಸ್ ಟಿಟ್ಯೂಟ್ ಆಫ್ ಏಶಿಯನ್ ಸ್ಟಡೀಸ್,ಚೆನ್ನೈ ತಯಾರಿಸುತ್ತಿದ್ದ, ಕನ್ನಡ-ಇಂಗ್ಲೀಷ್-ಜಪನೀಸ್-ತಮಿಳು ಸೇರಿದ ] ಬಹುಭಾಷಾ ನಿಘಂಟಿನ ಸಲಹೆಗಾರರಾಗಿ ನೇಮಿಸಿತ್ತು. ಆಂಧ್ರಪ್ರದೇಶ ಸರಕಾರ ಅವರನ್ನು ತೆಲುಗು ಪದಕೋಶದ ಸಮಿತಿಗೆ ಸಲಹೆಗಾರನಾಗಿ ನೇಮಿಸಿತ್ತು. ೨೦೦೭ರಲ್ಲಿ ದಕ್ಷಿಣಕನ್ನಡದ ಉಜಿರೆಯಲ್ಲಿ ’ಆಳ್ವಾಸ್ ನುಡಿಸಿರಿ’ ಎಂಬ ಅಕ್ಷರಜಾತ್ರೆಗೆ ಅಧ್ಯಕ್ಷರಾಗಿದ್ದರು. ೨೦೧೧ ರಲ್ಲಿ ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯದ ೭೭ ನೇ ಸಮ್ಮೇಳನದ ಅಧ್ಯಕ್ಷರಾಗಿ ೯೮ರ ವಯದ ಯುವಕ ತಾನೆಂದು ತೋರಿಸಿದ ಕ್ರಿಯಾಶೀಲ ವ್ಯಕ್ತಿ ನಮ್ಮೆಲ್ಲರ ಹೆಮ್ಮೆಯ ಜೀವಿ.
ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ[ಡಿ.ಲಿಟ್ ತತ್ಸಮಾನ ಗೌರವ], ಮಾಸ್ತಿ ಪ್ರಶಸ್ತಿ ಮತ್ತು ಇಂದು ೨೩.೦೮.೨೦೧೨ ರಂದು ಬೆಳಿಗ್ಗೆ ಭಾರತೀಯ ವಿದ್ಯಾಭವನದಲ್ಲಿ ನಡೆದ ಅವರ ಶತಮಾನೋತ್ಸವದ ಸಂಭ್ರಮದ ಸಭೆಯಲ್ಲಿ ಅರ್ಪಿತವಾದ ’ಕುಲಪತಿ ಡಾ|ಕೆ.ಎಮ್.ಮುನ್ಶಿ ಸನ್ಮಾನ’ ಹೀಗೇ ಹಲವು ಪ್ರಶಸ್ತಿಗಳು ಅವರನ್ನರಸಿ ಬಂದಿವೆ. ಪದಸಂಪತ್ತಿಗೆ ಜೀವಿಯ ಕೊಡುಗೆಗೆ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯ ಅವರನ್ನು ಅಭಿನಂದಿಸಿದೆ.
ತನ್ನ ಜೀವಿತದ ಬಹುಪಾಲು ದಿನಗಳನ್ನು ಕನ್ನಡದ ಸೇವೆಗೆ ಮುಡಿಪಾಗಿಟ್ಟ ಮುಗ್ಧ, ನಿಸ್ಪೃಹ ಜೀವಿ ನಮ್ಮ ’ಜೀವಿ’ ಎನ್ನಲು ಮನ ತುಂಬಿಬರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅವರು ನಿಘಂಟನ್ನು ಸಂಸ್ಕರಿಸುವ ವೇಳೆ ಸರಕಾರ ಯಾವ ಸಹಾಯಧನವನ್ನೂ ಕೊಡಮಾಡದಿರುವುದನ್ನೂ ಇಲ್ಲಿ ನೆನೆದುಕೊಳ್ಳಲೇಬೇಕಾಗುತ್ತದೆ. ಸಿಗುವ ಕನಿಷ್ಠ ವೇತನದ ಹೊರತಾಗಿ ಓಡಾಟದ ಖರ್ಚಿಗೂ ಕೈಯ್ಯಿಂದ ತೆತ್ತು ಕನ್ನಡ ನಿಘಂಟನ್ನು ಹೊರತರುವಲ್ಲಿ ಮೆರೆದ ಅವರ ನಿಸ್ವಾರ್ಥ ಸೇವೆ ಮನನೀಯ ಮತ್ತು ಅನುಕರಣೀಯ. ಇಂತಹ ಸಾಹಿತ್ಯಲೋಕದ ದಿಗ್ಗಜ ಶತಮಾನ ಪೂರೈಸಿ ನಮ್ಮ ಮಧ್ಯೆ ಓಡಾಡಿಕೊಂಡು ಇನ್ನೂ ಲವಲವಿಕೆಯಿಂದ, ಅತ್ಯಾಸಕ್ತಿಯಿಂದ ಕೆಲವು ಕನ್ನಡ ಕೃತಿಗಳನ್ನು ರಚಿಸುತ್ತಿರುವುದು ಅಭಿನಂದನೀಯ. ಇದು ಎಲ್ಲರಿಗೂ ಸಾಧ್ಯವಾಗುವ ಮಾತಲ್ಲ.
೭೦ ರ ನಂತರ
ಯಾರಾದರೂ
ಇದ್ದರೆ
ಕಣ್ಣು ಕಾಣಿಸದಿರಬಹುದು
ಕಿವಿ ಕೇಳಿಸದಿರಬಹುದು
ಶರೀರ ದೊಣ್ಣೆಕೊಟ್ಟರೂ ನಿಲ್ಲದಂತಾಗಬಹುದು
ಚರ್ಮ ಸಂಪೂರ್ಣ ಸುಕ್ಕುಗಟ್ಟಿ ಹೋಗಬಹುದು
ಬುದ್ಧಿ ಭ್ರಮಣೆಯಾಗಬಹುದು
.
.
.
.
.
......ಹೀಗೇ ಆಗಬಹುದು ಎಂಬ ಅನಿಸಿಕೆಗಳೂ ಮುಪ್ಪಿನ ಇತರರನ್ನು ಕಂಡು ಅನುಭವಗಳೂ ಇವೆ. ಈ ಎಲ್ಲಾ ಅನಿಸಿಕೆ-ಅನುಭವಗಳ ನಡುವೆ ಕಂಚಿನ ಕಂಠದ ಸಾಧಾರಣ ಎತ್ತರದ ದಿವ್ಯ ತೇಜದ ವ್ಯಕ್ತಿ ಎದ್ದು ಸಭೆಯಲ್ಲಿ ಮಾತನಾಡುತ್ತಿರುವಾಗ ನಮ್ಮಜ್ಜ ದೊರೆತ ಅನುಭವವಾಗುತ್ತದೆ!
ಜೀವಿಯವರ ಶತಮಾನೋತ್ಸವ ಸಮಿತಿಯೊಂದು ರಚಿತವಾಗಿದೆ. ಸಮಿತಿಯ ಸದಸ್ಯರೆಲ್ಲಾ ಸ್ವಯಂಪ್ರೇರಿತರು ಮತ್ತು ಜೀವಿಯನ್ನು ಅಷ್ಟಾಗಿ ಪ್ರೀತಿಸುವವರು. ಅಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲ; ಯಾವುದೇ ಪ್ರಲೋಭನೆಯಿಲ್ಲ; ಯಾವುದೇ ನಿರೀಕ್ಷಣೆ ಕೂಡ ಇಲ್ಲ; ಇರುವುದೊಂದೇ ಅದು ಕನ್ನಡಕ್ಕೆ ತನ್ನನ್ನು ತೊಡಗಿಸಿಕೊಂಡ ’ಜೀವಿ’ಯ ಮೇಲಿನ ಅಭಿಮಾನ. ವರ್ಷಪೂರ್ತಿ ಬೆಂಗಳೂರೂ ಸೇರಿದಂತೇ ಹಲವುಕಡೆ ಜೀವಿಯ ಶತಮಾನೋತ್ಸವ ಸಂಭ್ರಮ ನಡೆಯುತ್ತದೆ. ಈ ಸುಸಂದರ್ಭದಲ್ಲಿ ’ಜೀವಿ’ ಇನ್ನೂ ಬಹುಕಾಲ ಬಾಳಲಿ, ಇಂದಿನಂತೇ ಎಂದಿಗೂ ನಮ್ಮೊಡನೆ ಕ್ರಿಯಾಶೀಲರಾಗಿ ನಮ್ಮನ್ನೆಲ್ಲಾ ಕನ್ನಡಕ್ಕಾಗಿ ಉತ್ತೇಜಿಸಲಿ ಎಂಬುದು ಜಗನ್ನಿಯಾಮಕನಲ್ಲಿ ನನ್ನ ಪ್ರಾರ್ಥನೆ; ಇದು ಬಹುಶಃ ನಿಮ್ಮ ಪ್ರಾರ್ಥನೆಯೂ ಕೂಡ ಎಂದುಕೊಳ್ಳಲೇ?
Hare Krishna, thumbaa olleya vishayavannu thilisi, namma kannannu teresida nimage thumba dhanyavadagalu, Sri Hari thanna bhaktarannu aregaligu biduvudilla embuvudakke ide prathyaksha sakshi, Sri Hari ellarannu kapadali, Jai Sri Krishna
ReplyDeleteನಿಮ್ಮ ಪೀಠಿಕೆ ಅತ್ಯುತ್ತಮವಾಗಿದೆ. ಜೀವಿ ಯವರ ಬಗ್ಗೆ ನನಗರಿವಿಲ್ಲ. ಒಂದು ಚಿಕ್ಕ ತಪ್ಪು ಅವರ್ ಜನ್ಮದಿನದಲ್ಲಿ ನುಸುಳಿದೆ, ಸಾಧ್ಯವಾದರೆ ಸರಿಪಡಿಸಿಡಿ.
ReplyDeleteಕಣ್ತಪ್ಪಿನಿಂದ ಇಸವಿ ೨೦೧೩ ಆಗಿತ್ತು, ಸಮಯಕ್ಕೆ ಎಚ್ಚರಿಸಿ ಸರಿಪಡಿಸಲು ಸಲಹೆ ನೀಡಿದ ನಿಮಗೆ ವಿಶೇಷ ಕೃತಜ್ಞತೆಗಳು.
Delete'ಜೀವಿ ' ಯವರು ಕನ್ನಡದ ಆಸ್ತಿ . ಅವರ ಬಗ್ಗೆ ತಿಳಿಸಿ ಕೊಟ್ಟದಕ್ಕೆ ಧನ್ಯವಾದಗಳು ......ತುಂಬಾ ಕುತೂಹಲ ದಿಂದ ಓದಿದೆ.
ReplyDeleteತುಂಬಾ ಚೆನ್ನಾಗಿದೆ ..ಅಭಿನಂದನೆಗಳು .
Delete'Jeevi' yavra bagge tumba maahitigalannu odagisiddiri...uttama lekhana..dhanyavadagalu...
ReplyDelete