ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, August 28, 2012

ಮಂತ್ರಕ್ಕೆ ಮಾವಿನಕಾಯಿಯನ್ನು ಉದುರಿಸುವ ಮತ್ತು ಲೋಕವನ್ನೂ ಅದುರಿಸುವ ತಾಕತ್ತಿದೆ ಎಂಬುದು ಸಾಬೀತಾಗಿದೆ!

ಚಿತ್ರಋಣ: ಅಂತರ್ಜಾಲ
ಮಂತ್ರಕ್ಕೆ ಮಾವಿನಕಾಯಿಯನ್ನು ಉದುರಿಸುವ ಮತ್ತು ಲೋಕವನ್ನೂ ಅದುರಿಸುವ ತಾಕತ್ತಿದೆ ಎಂಬುದು ಸಾಬೀತಾಗಿದೆ!

ಶಿರಸಿಯ ಒಂದು ಭಾಗಕ್ಕೆ ಕೊಡ್ಲಮನೆ ಭಟ್ಟರು ಹೋಗಿದ್ದರು. ಕರಾವಳಿಯ ಜನ ಉತ್ತರಕನ್ನಡದ ಶಿರಸಿ, ಸಿದ್ಧಾಪುರ,ಯಲ್ಲಾಪುರ ಮತ್ತು ಶಿವಮೊಗ್ಗದ ಸಾಗರ ಪ್ರಾಂತಗಳನ್ನು ’ಘಟ್ಟ’ ಎಂದೇ ಕರೆಯುತ್ತಾರೆ. ಶತಮಾನಕ್ಕೂ ಹಿಂದೆ ಇಲ್ಲಿಗೆ ಓಡಾಟವೇ ಒಂದು ಪ್ರಯಾಸ. ಹಳ್ಳಿಗಳಲ್ಲಿ ಟಾರು ರಸ್ತೆಗಳಿರಲಿಲ್ಲ; ದವಾಖಾನೆ, ಶಾಲೆಗಳೆಲ್ಲಾ ಬಹು ದೂರ.ನಿತ್ಯವೂ ಜನರು ನಡೆಯಲೇ ಬೇಕಿತ್ತು. ಅದು ಹತ್ತಾರು ಮೈಲಿಗಳ ನಡಿಗೆ. ಮನೆಯಲ್ಲಿ ಯಂತ್ರೋಪಕರಣಗಳು ಕಡಿಮೆ. ಹೆಂಗಸರಿಗೆ ಮನೆಗೆಲಸಗಳಲ್ಲಿ ಸಹಜವಾದ ಆಸಕ್ತಿ. ಅತಿಥಿ ಸತ್ಕಾರದಲ್ಲಿ ಮನೆಜನರೆಲ್ಲರಿಗೂ ಆಸಕ್ತಿ. ಜನ ತಮ್ಮಲ್ಲಿರುವುದರಲ್ಲೇ ತೃಪ್ತಭಾವವನ್ನು ಹೊಂದಿದ್ದರು. ಹೋಂಡಾ ಕಾರಿನ ಇಚ್ಛೆಗೆ ಬಲಿಯಾದವರಲ್ಲ, ಕೋಟಿಗಳಿಸುವ ಸನ್ನಾಹದಲ್ಲಿ ಧರ್ಮಮಾರ್ಗವನ್ನು ತೊರೆದವರಲ್ಲ. ಎಲ್ಲರಿಗೂ ಮಾಡುವ ಕೆಲಸಗಳಿಂದ ತಂತಾನೇ ವ್ಯಾಯಾಮ ಸಿಗುತ್ತಿತ್ತು; ಬೇರೇ ವ್ಯಾಯಾಮ ಬೇಕಾಗುತ್ತಿರಲಿಲ್ಲ. ಆಹಾರೋತ್ಫನ್ನಗಳಲ್ಲಿ ರಾಸಾಯನಿಕಗಳ ಸಮ್ಮಿಶ್ರಣವಿರಲಿಲ್ಲ, ಕಲಬೆರಕೆ ಇವತ್ತಿನ ಮಟ್ಟಕ್ಕೆ ಏರಿರಲಿಲ್ಲ. ಜನ ಅಕ್ಕಿ-ಬೇಳೆ ತರಕಾರಿಗಳನ್ನು ತಾವೇ ಬೆಳೆದುಕೊಳ್ಳುತ್ತಿದ್ದರು. ಇಂತಹ ಮುಗ್ಧ ಜನ ತುಂಬಿರುವ ಕಾಲದಲ್ಲೂ ಅಪರೂಪಕ್ಕೊಮ್ಮೆ ಮೈಲಿ, ಸಿಡುಬು, ಪ್ಲೇಗ್ ಮುಂತಾದ ರೋಗಗಳು ಬಂದುಬಿಡುತ್ತಿದ್ದವು. ಹಾಗೆ ಬಂದಾಗ ಊರಿನಲ್ಲಿ ಬಹುತೇಕ ಮಂದಿ ಹೋಗಿಬಿಡುವ ಸಾಧ್ಯತೆ ಕೂಡಾ ಇರುತ್ತಿತ್ತು. ಕೆಲವರು ತಮ್ಮ ವಿಶಿಷ್ಟ ಶಕ್ತಿಗಳಿಂದ ಕಾಯಿಲೆಗಳನ್ನು ಜೀರ್ಣಿಸಿಕೊಂಡು ಜಯಿಸುತ್ತಿದ್ದರು. ಅಂತಹ ಕೆಲವರಲ್ಲಿ ಹೊನ್ನಾವರ ತಾಲೂಕಿನ ಕೊಡ್ಲಮನೆ ಭಟ್ಟರೂ ಒಬ್ಬರು.  

ಪೌರೋಹಿತ್ಯಕ್ಕೋ ಸಂಭಾವನೆಗೋ[ನಮ್ಮಲ್ಲಿ ’ಸಂಭಾವನೆ’ ಎಂಬ ಪದ ದಾನಕ್ಕೆ ಬಳಸಲ್ಪಡುತ್ತದೆ.]ಘಟ್ಟಕ್ಕೆ ಕೆಲವರು ಹೋಗಿಬರುವ ವಾಡಿಕೆ ಇತ್ತು. ದೀಪಾವಳಿ ಮುಗಿಸಿ ತಮ್ಮ ಜೋಳಿಗೆ ಹಿಡಿದು ಹೊರಟರೆ ಮತ್ತೆ ಸ್ವಂತ ಊರಿಗೆ ಮರಳುವುದು ೨-೩ ತಿಂಗಳುಗಳ ನಂತರವೇ. ಒಮ್ಮೆ ಹೀಗೇ ಯಾವುದೋ ಪಾರಾಯಣಕ್ಕಾಗಿ ಘಟ್ಟಕ್ಕೆ ಹೋದ ಕೊಡ್ಲಮನೆ ಭಟ್ಟರು ಪರಿಚಿತರ ಮನೆಗಳಿಗೆ ಹೋಗುವ ತರಾತುರಿಯಲ್ಲಿ ನಡೆಯುತ್ತಾ ಮೊದಲಾಗಿ ಎದುರಾದ ಹೆಗಡೆಯವರ ಮೆನೆಗೆ ಹೋದರು. ಸಂಜೆಯ ಹೊತ್ತು. ಹೆಗಡೆಯವರ ಮನೆಯಲ್ಲಿ ಆದರಾತಿಥ್ಯಗಳು ಯಥಾಯೋಗ್ಯ ನಡೆದವು. ಉಭಯಕುಶಲೋಪರಿಗಳು ನಡೆದಮೇಲೆ ಸಾಯಂಕಾಲದ ಸಮಯವಾದ್ದರಿಂದ ನಡೆದು ದಣಿದಿದ್ದ ಭಟ್ಟರು ಸ್ವಲ್ಪ ವಿಶ್ರಮಿಸಿಕೊಳ್ಳುತ್ತಿದ್ದರು. ಹಾಗೆ ವಿಶ್ರಮಿಸುತ್ತಿರುವಾಗ ಭಟ್ಟರ ದೃಷ್ಟಿ ಮನೆಯವರ ಪಾದಗಳತ್ತ ಹರಿಯಿತು-ಭಟ್ಟರು ಕುಳಿತಲ್ಲೇ ಘಟ್ಟ ಇಳಿದುಹೋದಷ್ಟು ಬೆವತುಹೋದರು. ಎಲ್ಲರ ಪಾದಗಳೂ ತಿರುಗುಮುರುಗಾಗಿದ್ದು ಕಾಣಿಸುತ್ತಿತ್ತು! ಭಟ್ಟರಿಗೆ ಏನೋ ಸಂದೇಹ ಬಂದು ತಕ್ಷಣಕ್ಕೆ ಕಾಣುತ್ತಿದ್ದ ಆ ಜನರಿಗೇ ಹೇಳಿ ಕೈಕಾಲು ತೊಳೆದು, ಮಡಿಪಂಚೆ ತೊಟ್ಟು ಸಂಧ್ಯಾವಂದನೆಗೆ ಕುಳಿತುಬಿಟ್ಟರು. ಯಾವಾಗ ಭಟ್ಟರ ಮಂತ್ರೋಚ್ಚಾರಣೆ ಆರಂಭವಾಯ್ತೋ ಆಗ ಆ ಇಡೀ ಮನೆಯ ಬಳಗ ಭಟ್ಟರ ಸುತ್ತ ಸೇರಿ ಭಟ್ಟರಿಗೆ ಕಾಣದ ರೂಪದಲ್ಲಿ ಕಿರುಕುಳ ಆರಂಭಿಸಿತು.

ರಾತ್ರಿಯಾಗುತ್ತಾ ಬಂದಿತ್ತು. ಭಟ್ಟರು ಕುಳಿತಲ್ಲೇ ಗಡಗಡ ನಡುಗುತ್ತಿದ್ದರು. ವಿಶೇಷ ಮಂತ್ರಗಳ ಉಪಾಸನೆ ಗೊತ್ತಿದ್ದ ಭಟ್ಟರು ಇಷ್ಟದೈವವನ್ನು ಪ್ರಾರ್ಥಿಸಿ ’ಅಘೋರಾಸ್ತ್ರ  ಜಪ’ವನ್ನು ಆರಂಭಿಸಿಬಿಟ್ಟರು. ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಹೆಗಡೆಯವರ ಮನೆಯ ಅಷ್ಟೂ ಜನ ಅಳಲು ಪ್ರಾರಂಭಿಸಿದರು. ವಾಸ್ತವವಾಗಿ ಹೆಗಡೆಯವರ ಮನೆಯಲ್ಲಿ ಯಾರೂ ಜೀವಸಹಿತ ಉಳಿದಿರಲಿಲ್ಲ; ಎಲ್ಲರೂ ಮೈಲಿಗೆ ಬಲಿಯಾಗಿಬಿಟ್ಟಿದ್ದರು! ಬಲಿಯಾದ ಜನ ಅಂತ್ಯಸಂಸ್ಕಾರವಿಲ್ಲದೇ ಅಲೆದಾಡುವ ಪಿಶಾಚಿಗಳಾಗಿದ್ದರು. ಭಟ್ಟರ ಮಂತ್ರಶಕ್ತಿ ಅವರನ್ನೆಲ್ಲಾ ಈಗ ಬಂಧಿಸುತ್ತಿತ್ತು. ಭಟ್ಟರು ತಮ್ಮಲ್ಲಿದ್ದ ಚೊಂಬೊಂದರಲ್ಲಿ ಆ ಪಿಶಾಚಗಳನ್ನು ಸೆಳೆದು ತುಂಬಿದರು. ಪಿಶಾಚಗಳು ಅವರ ಮಾತುಕೇಳಹತ್ತಿದವು. ಅವುಗಳಿಗೆ ತಮ್ಮ ದಿವ್ಯ ಮಂತ್ರಗಳಿಂದಲೇ ಮುಕ್ತಿಕಾಣಿಸುವ ಸಲುವಾಗಿ ಭಟ್ಟರು ಅವುಗಳನ್ನು ಬಂಧಿಸಿದ ಚೊಂಬಿಗೆ ಮೇಲಿಂದ ಮುಚ್ಚಳ ಹಾಕಿ, ಬಟ್ಟೆಕಟ್ಟಿ ತಮ್ಮಜೊತೆಯಲ್ಲಿ ತೆಗೆದುಕೊಂಡು ಸೀದಾ ಊರಹಾದಿ ಹಿಡಿದುಬಿಟ್ಟರು. ಊರಿಗೆ ತಲುಪಿದ ಭಟ್ಟರು ಮನೆಯಿಂದ ಕಿಲೋಮೀಟರು ದೂರದಲ್ಲಿ ಗುಡ್ಡದಮೇಲೆ ಒಂದು ಗೋಳೀಮರವನ್ನು ಕಂಡರು. ಅದರ ಬುಡದಲ್ಲಿ ಆ ಅತೃಪ್ತ ಆತ್ಮಗಳ ಸಲುವಾಗಿ ವಿಶೇಷ ಕೈಂಕರ್ಯವನ್ನು ಕೈಗೊಂಡು ಅವುಗಳಿಗೆ ಸಂಸ್ಕಾರ ಸಲ್ಲಿಸಿ ಪಿಶಾಚ ಜನ್ಮದಿಂದ ಬಿಡುಗಡೆ ಕಲ್ಪಿಸಿದರು. ಅವುಗಳನ್ನು ಬಂಧಿಸಿ ತಂದಿದ್ದ ಚೊಂಬನ್ನು ಹಾಗೇ ಆ ನೆನಪಿನಲ್ಲಿ ಗೋಳೀಮರದ ಬುಡದಲ್ಲಿ ಹೂತರು.  

ಈ ಸುದ್ದಿ ಹೊನ್ನಾವರ ತಾಲೂಕಿನ ಎಲ್ಲೆಡೆಗೂ ಹರಡಿತು. ಜನ ಭಟ್ಟರ ಮಂತ್ರಶಕ್ತಿಯನ್ನು ಕಂಡು ಮೂಕವಿಸ್ಮಿತರಾಗಿದ್ದರು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಂತಹ ಯಾವುದೋ ಪೈಶಾಚಿಕ ಬಾಧೆ ತಗುಲಿಕೊಂಡರೆ ಜನ ಭಟ್ಟರನ್ನು ಹುಡುಕಿಕೊಂಡು ಬರುತ್ತಿದ್ದರು. ಭಟ್ಟರು ಮಂತ್ರಿಸಿಕೊಡುವ ವಿಭೂತಿಯಿಂದ ಸಮಸ್ಯೆಗಳು ಬಗೆಹರಿದ ಸತ್ಯಘಟನೆಗಳು ನಮಗೆಲ್ಲಾ ವಿದಿತವೇ! ವೈಜ್ಞಾನಿಕವಾಗಿ ಪುರಾವೆಗಳು ಸಿಗಲಿಲ್ಲಾ ಎಂಬ ಕಾರಣಕ್ಕೆ ಎಲ್ಲವನ್ನೂ ಅಲ್ಲಗಳೆಯಲಾಗುವುದಿಲ್ಲವಲ್ಲಾ? ಹಲವು ಅನುಭವ ಸಿದ್ಧ ವಿಷಯಗಳೇ ಇರುತ್ತವೆ ಅಲ್ಲವೇ? ಆದರೂ ಕೆಲವು ವಿಜ್ಞಾನಿಗಳು ಪಿಶಾಚಿಗಳು ಇರುವುದನ್ನು ಒಪ್ಪಿಕೊಂಡಿದ್ದಾರೆ ಮತ್ತು ಅವುಗಳ ಚಲನವಲನಗಳನ್ನು ರುಜುವಾತು ಪಡಿಸಲು ಸಾಕಷ್ಟು ಶ್ರಮಿಸಿದ್ದಾರಾದರೂ ಪೂರ್ಣವಾಗಿ ಅವರ ಆಸೆ ಈಡೇರಲಿಲ್ಲ. ಇವತ್ತಿಗೂ ನಮ್ಮ ಹಳ್ಳಿಗಳಲ್ಲಿ ಕೆಲವರು ಕೊಡ್ಲಮನೆ ಭಟ್ಟರ ಮನೆತನದವರಲ್ಲಿ ವಿಭೂತಿ ಪಡೆಯುವುದಿದೆ. ಚಿಕ್ಕಮಕ್ಕಳಿಗೆ ಬಾಧಿಸುವ ಬಾಲಗ್ರಹಾದಿ ಪೀಡನೆಗಳಿಗೂ ಕೂಡ ಅವರ ಮಂತ್ರಸಿದ್ಧಿ ಕೆಲಸಮಾಡುತ್ತದೆ.

ವಿಜ್ಞಾನ ಬೆಳೆದಂತೇ ನಾಗರು, ಚೌಡಿ ಮುಂತಾದವುಗಳಿಗೆ ಜಾಗವೇ ಇಲ್ಲವೆಂದಾಗಿದೆ. ನನಗೊಂದು ಆಶ್ಚರ್ಯವೇನೆಂದರೆ ನಗರಗಳಲ್ಲಿ ಮನುಷ್ಯರಿಗೆ ಇಂಚು ಜಾಗ ಸಿಗುವುದು ಕಷ್ಟ, ಹೀಗಿದ್ದಾಗ ಇಲ್ಲಿ ನಾಗರು. ಚೌಡಿ ಮೊದಲಾದ ದೇವಜಾಗಗಳು ಇಲ್ಲವೇ ಇಲ್ಲವಲ್ಲ ಯಾಕೆ? ಇರುವ ಅವುಗಳೇ ತಮ್ಮ ಜಾಗವನ್ನು ಬಿಟ್ಟವೇ? ಅಥವಾ ಅವುಗಳ ಆವಾಸಗಳ ಮೇಲೇ ಮನುಷ್ಯ ವಸಾಹತು ಬೆಳೆದು ನಿಂತಿದೆಯೇ ಅರ್ಥವಾಗುತ್ತಿಲ್ಲ. ಪ್ರಾಯಶಃ ಇಲ್ಲಿನ ಗಲೀಜು ವಾತಾವರಣಕ್ಕೆ ಬೇಸತ್ತು ಅವೇ ತಮ್ಮ ಜಾಗವನ್ನು ಬದಲಾಯಿಸಿಕೊಂಡಿರಲೂ ಬಹುದು. ಕೆಲವು ಶಕ್ತಿಗಳು ವಿಶಿಷ್ಟವೆನಿಸಿ ಅಲ್ಲಲ್ಲಿ ಹುಲಿಯೂರಮ್ಮ, ಕಬ್ಬಾಳಮ್ಮ, ಸರ್ಕಲ್ ಮಾರಮ್ಮ, ಅಣ್ಣಮ್ಮ ಇತ್ಯಾದಿ ಬೇರೇ ಬೇರೇ ರೂಪಗಳಲ್ಲಿ ನಿಂತು ಪೂಜೆಗಳನ್ನು ಪಡೆಯುತ್ತಿರುವುದು ಕಾಣಿಸುತ್ತದೆ. ದೇವಸ್ಥಾನಗಳ ಅಕ್ಕಪಕ್ಕಗಳಲ್ಲಿ ನಾಗರ ಕಲ್ಲುಗಳು ಕಾಣಿಸುತ್ತವೆ. ಇವುಗಳನ್ನೆಲ್ಲಾ ಅಧುನಿಕ ನಾಸ್ತಿಕರು ಅಲ್ಲಗಳೆದರೂ, ಗೂಗಲ್ ಸರ್ಚ್ ನಲ್ಲಿ ಹುಡುಕಿದರೆ ಪೈಶಾಚಿಕ ಶಕ್ತಿಗಳ ಬಗ್ಗೆ ಪಾಶ್ಚಾತ್ಯ ವಿಜ್ಞಾನಿಗಳು ಒಪ್ಪಿಕೊಂಡ ಮಾಹಿತಿಗಳು ದೊರೆಯುತ್ತವೆ-ಆಸಕ್ತರು ನನ್ನಲ್ಲಿ ಪ್ರಶ್ನಿಸದೇ ಹುಡುಕಿಕೊಳ್ಳಬಹುದು. ಮಾನವ ಲೋಕದಲ್ಲೇ ಮಾನವನಿಗೆ ಕಾಣದ ಇನ್ನೂ ಕೆಲವು ಸುಪ್ತಲೋಕಗಳಿವೆ! ಅವುಗಳಲ್ಲಿ ಪೈಶಾಚ ಲೋಕವೂ ಒಂದು. ಮಾನವ ಜನ್ಮದ ಕರ್ಮಬಂಧನದಿಂದ ಮತ್ತು ಐಹಿಕ ಆಸೆಗಳಿಂದ ಮುಕ್ತವಾಗದೇ ಅನಿರೀಕ್ಷಿತವಾಗಿ ಗತಿಸಿ, ಅಂತ್ಯಸಂಸ್ಕಾರಕಾಣದ ಆತ್ಮಗಳು  ವಾಯುವಿನಲ್ಲಿ ಅಲೆದಾಡುವ ಸುಪ್ತ ಶರೀರಗಳನ್ನು ಪಡೆಯುತ್ತವೆ! ಅದಕ್ಕೇ ಪೂರ್ವಜರು ಅವುಗಳನ್ನು ’ಗಾಳಿ’ ಎನ್ನುತ್ತಿದ್ದರು; ಆ ಹೇಳಿಕೆಯನ್ನು ಹಾಗೆ ಬಳಸುವುದು ಇತರರು ಹೆದರಬಾರದೆಂಬ ಉದ್ದೇಶದಿಂದ ಕೂಡಿತ್ತು ಎಂಬುದು ಗಮನಕ್ಕೆ ಬರುತ್ತದೆ. ಇಂತಹ ಆತ್ಮಗಳಿಗೆ ಪೈಶಾಚಲೋಕದಿಂದ ಮುಕ್ತಿಯನ್ನು ಕರುಣಿಸಲಾಗಿ ’ನಾರಾಯಣ ಬಲಿ’ ಮೊದಲಾದ ಸಾತ್ವಿಕ ಬಲಿಗಳನ್ನೂ ವಿಧಾನಗಳನ್ನೂ ಕರ್ನಾಟಕದಲ್ಲಿ ಗೋಕರ್ಣ, ತಿರುಮಕೊಡಲು ಪಶ್ಚಿಮವಾಹಿನಿ ಮೊದಲಾದ ಕಡೆ ನೆರವೇರಿಸುತ್ತಾರೆ.

ಬಗ್ಗೋಣ ಎಂಬುದು ಕುಮಟಾ ತಾಲ್ಲೂಕಿನ ಒಂದು ಊರು. ಇಲ್ಲಿನ ’ಬಗ್ಗೋಣ ಪಂಚಾಗ’ ಬಹಳ ಪ್ರಸಿದ್ಧವಾಗಿದೆ. ಹಿಂದಕ್ಕೆ ರಾಜರಕಾಲದಲ್ಲಿ ಬಗ್ಗೋಣದ ಪಂಡಿತರೊಬ್ಬರು ರಾಜನಿಗೆ ಪಂಚಾಂಗ ಶ್ರವಣ ಮಾಡಿಸುವ ಕೈಂಕರ್ಯದಲ್ಲಿದ್ದರಂತೆ. ಒಂದುದಿನ ಹೀಗೇ ಪಂಡಿತರ ಮಗ ಆಟವಾಡುತ್ತಾ ಅರಮನೆಯ ಅಂಗಳಕ್ಕೆ ಬಂದುಬಿಟ್ಟಿದ್ದಾನೆ-ಜೊತೆಗೆ ಅಪ್ಪ ಇರಲಿಲ್ಲ. ರಾಜನೂ ಅದ್ಯಾವುದೋ ಕಾರಣದಿಂದ ಅಲ್ಲಿಗೆ ಆಗಮಿಸಿದ್ದು ಆಟವಾಡುತ್ತಿದ್ದ ಬಾಲಕನನ್ನು ಕರೆದು "ಏನೋ ಮಗು ಪಂಡಿತನೇ ಸೂರ್ಯಗ್ರಹಣ  ಯಾವಾಗ ಅಂತ ಹೇಳ್ತೀಯಾ?" ಎಂದು ಕೇಳಿಬಿಟ್ಟ. ಪಂಡಿತರ ಮಗು ಬಾಯಿಗೆ ನೆನಪಿಗೆ ಬಂದ ಮಿತಿಯನ್ನು ಹೇಳಿಬಿಟ್ಟಿತು. ಅದು ಅಮಾವಾಸ್ಯೆಯಂತೂ ಆಗಿರಲಿಲ್ಲ! ಅಮಾವಾಸ್ಯೆಯ ಹೊರತು ಸೂರ್ಯ ಗ್ರಹಣ ಬೇರೇ ದಿನಗಳಲ್ಲಿ ನಡೆಯುವುದಿಲ್ಲವಲ್ಲವೇ? ರಾಜಸಭೆಯಲ್ಲಿ ರಾಜ ಪಂಡಿತರನ್ನು ಛೇಡಿಸಿದ. ಪಂಡಿತರ ಮಗ ಮಹಾಪಂಡಿತನೆಂದೂ ಗ್ರಹಣ ಇಂಥಾದಿನ ಆಗುತ್ತದೆಂದು ಹೇಳಿಬಿಟ್ಟನೆಂದೂ ಗಹಗಹಿಸಿ ನಕ್ಕ. ತುಂಬಿದ ಸಭೆಯಲ್ಲಿ ಪಂಡಿತರಿಗೆ ಅವಮಾನವಾಯ್ತು. ಮನೆಗೆ ನಡೆದ ಪಂಡಿತರು ಏಕನಿಷ್ಠೆಯಿಂದ ಧ್ಯಾನವನ್ನಾರಂಭಿಸಿದರು. ನಿತ್ಯ ಅರಮನೆಯ ಪಂಚಾಂಗ ಶ್ರವಣ ಕಾರ್ಯವೊಂದನ್ನುಳಿದು ಇನ್ನಾವುದೇ ಕೆಲಸಕ್ಕೂ ತೆರಳದೇ ಧ್ಯಾನಮಾಡುತ್ತಿದ್ದರು. ಮಗು ಹೇಳಿದ ಮಿತಿ ಬಂದೇಬಂತು. ಆ ಬೆಳಿಗ್ಗೆ ತನ್ನ ಮಾನವನ್ನೂ ಪ್ರಾಣವನ್ನೂ ಭಗವಂತನಲ್ಲೇ ಪಣಕ್ಕಿಟ್ಟು ಧ್ಯಾನಮಾಡುತ್ತಿದ್ದರಂತೆ. ಆ ದಿನ ನಡುಮಧ್ಯಾಹ್ನದಲ್ಲಿ ಕತ್ತಲು ಕವಿಯಿತು! ಸೂರ್ಯಗ್ರಹಣ ಸಂಭವಿಸಿದ್ದನ್ನು ರಾಜನೂ ರಾಜಪರಿವಾದವರೂ ಮತ್ತು ಇಡೀ ರಾಜ್ಯದ ಜನತೆಯೂ ಕಂಡಿತು!!! ಬಗ್ಗೋಣ ಪಂಚಾಂಗ ಕರ್ತರ ಮನೆಯಲ್ಲಿ ಇಂದಿಗೂ ರಾಜಸನ್ಮಾನಿಸಿ ಕೊಟ್ಟ ಪತ್ರಗಳೂ ದಾಖಲೆಗಳೂ ಇವೆ ಮತ್ತು ನಡೆದ ಘಟನೆಯ ಸಂಪೂರ್ಣ ವಿವರಗಳು ಲಭ್ಯ.

ನಂಜನಗೂಡಿನಲ್ಲಿ ಟಿಪ್ಪುವಿನ ಕುರುಡು ಆನೆಗೆ ಕಣ್ಣುಬಂದಿದ್ದರ ಬಗ್ಗೆ ನೀವೆಲ್ಲಾ ಕೇಳಿದ್ದೀರಿ. ಇತ್ತೀಚೆಗೆ ಟಿಪ್ಪುವಿನ ಅಮಲು ಇಳಿಸಿದ ಹಲವು ಹಿಂದೂ ದೇವ-ದೇವತೆಗಳ ಬಗ್ಗೆ ವರದಿಗಳನ್ನು ಪಡೆದಿದ್ದೀರಿ. ಕೂಲ್ಲೂರಿನಲ್ಲಿ ಸಲಾಂ ಮಂಗಳಾರತಿ ಅಂಥಾದ್ದರಲ್ಲಿ ಒಂದು. ಇಡಗುಂಜಿಯಲ್ಲಿ ಬ್ರಿಟಿಷ್ ಮಾಮಲೇದಾರ ದೇವರು ಪಂಚಕಜ್ಜಾಯ ತಿನ್ನುವುದನ್ನು ಪರೀಕ್ಷಿಸ ಹೋಗಿ ಪಕ್ಕಾಮಾಡಿಕೊಂಡು ತಪ್ಪುಒಪ್ಪಿಕೊಂಡಿದ್ದನ್ನೂ, ಮುರುಡೇಶ್ವರದಲ್ಲಿ ಲಿಂಗದಲ್ಲಿ ಕೂದಲು ಮೂಡಿ ಅಧಿಕಾರಿಗಳನ್ನು ದಂಗಾಗಿಸಿದ್ದನ್ನೂ ಹಿಂದೆ ಹೇಳಿದ್ದೆ! ಈ ಕ್ಷೇತ್ರಗಳಿಗೆಲ್ಲಾ ಮಹತೋಭಾರ ಅಥವಾ ಮಾತೋ ಭಾರ ಎಂದು ಸೇರಿಸುವ ಹಿನ್ನೆಲೆ ಇದೇನೆ. ಭಕ್ತನ ಮಹತಿ ಭಾರವನ್ನು ಹೊತ್ತು ಮಾತೆ ಮಗುವನ್ನು ಕಾಪಾಡಿದಂತೇ ಅರ್ಚಕರ ಮಾನ-ಮರ್ಯಾದೆ ಕಾಪಾಡಿ ಅವರ ಬದುಕಿಗೆ ಶ್ರೇಷ್ಠತೆಯನ್ನು ಅನುಗ್ರಹಿಸಿದ ದೇವರುಗಳನ್ನು ಮಾತ್ರ ಮಹತೋಭಾರ ಅಥವಾ ಮಾತೋಭಾರ ಎಂಬ ಪೂರ್ವಪದ ಸೇರಿಸಿ ನಂತರ ಆ ಯಾ ದೇವರುಗಳ ಹೆಸರುಗಳನ್ನು ಹೇಳಲಾಗುತ್ತದೆ. ಉದಾಹರಣೆಗೆ: ಮಾತೋಭಾರ ಶ್ರೀ ಸಿದ್ಧಿವಿನಾಯಕ ದೇವ, ಇಡಗುಂಜಿ. 

ಅನೇಕ ಮುಜರಾಯಿ ದೇವಸ್ಥಾನಗಳಲ್ಲಿ ಇಂದಿಗೂ ಜನ ಸಲ್ಲಿಸುವ ಕಾಣಿಕೆ ಗಣನೀಯವಾಗಿಯೇ ಇದೆ. ಸರಕಾರ ಅವುಗಳನ್ನೆಲ್ಲಾ ತನ್ನ ಬೊಕ್ಕಸಕ್ಕೆ ಸೇರಿಸಿಕೊಳ್ಳುತ್ತದೆಯೇ ವಿನಃ ಆ ಯಾ ದೇವಾಲಯಗಳ ನಿತ್ಯ ಪೂಜಾ ಪದ್ಧತಿಗೆ, ದೀಪಕ್ಕೆ, ದಾನಕ್ಕೆ, ಬಣ್ಣ-ಸುಣ್ಣ-ಬರಸಾತ್ ರಿಪೇರಿಗೆ, ಹೋಮನೇಮಗಳಿಗೆ ಯಾವುದಕ್ಕೂ ಖರ್ಚುಮಾಡುವುದಿಲ್ಲ. ದೇವಸ್ವವನ್ನು ಸಾಮಾನ್ಯ ಮನುಷ್ಯರಾಗಲೀ ರಾಜರೇ ಆಗಲೀ ಬಳಸುವ ಕಾಲ ಹಿಂದಕ್ಕೆ ಇರಲಿಲ್ಲ. ದೇವರಿಗಾಗಿ ಬಂದ ಹಣ ದೇವರ ಸೇವೆಗೂ ಸೇವೆಗೆನಿಂತ ಮಂದಿಗೂ ಖರ್ಚಾಗುತ್ತಿತ್ತು. ರಾಜ್ಯದ ಅನೇಕ ಮುಜರಾಯೀ ದೇವಸ್ಥಾನಗಳಲ್ಲಿ ಬಾವಲಿಗಳು ಸೇರಿಕೊಂಡು ಹೊಲಸು ವಾಸನೆ ಬರುತ್ತಿದೆ. ಗೋಪುರಗಳು ಕಳಾಹೀನವಾಗಿ ದುರ್ದೆಸೆಗೊಳಗಾಗಿವೆ-ಉದುರುವ ಗಾರೆಗಳಿಂದ, ಹಳೆಯ ಶಿಥಿಲಗೊಂಡ ಶಿಲೆಗಳಿಂದಲೂ ಕೂಡಿವೆ. ಅಲ್ಲಲ್ಲಿಯೇ ಬಂದ ಹಣವನ್ನು ಅಲ್ಲಲ್ಲಿಗೇ ವಿನಿಯೋಗಿಸಿದ್ದರೆ ದೇವಾಲಯಗಳು ಈ ಹಂತವನ್ನು ಕಾಣುವ ಪ್ರಮೇಯವಿರಲಿಲ್ಲ. ರಾಜರುಗಳ ಕುಲದೈವಗಳ ದೇವಸ್ಥಾನಗಳೂ ಸಹ ಇಂದು ಆಳುವ ದೊರೆಗಳ ಅವಗಣನೆಗೆ ಗುರಿಯಾಗಿರುವುದರಿಂದ ಸಕಾಲದಲ್ಲಿ ಮಳೆಬೆಳೆಗಳು ಆಗುತ್ತಿಲ್ಲ ಎಂಬುದನ್ನು ಒಪ್ಪಬೇಕಾಗುತ್ತದೆ.

ಏನನ್ನಿಸಿತೋ ನಮ್ಮ ಶ್ರೀನಿವಾಸ ಪೂಜಾರಿಯವರು ಬಂದವರೇ ದೇವರ ಪೂಜೆಗೆ ಅಪ್ಪಣೆಕೊಡಿಸಿದರು; ಪರ್ಜನ್ಯಜಪ-ಹೋಮಗಳಿಂದ ಕಾಣದ ದೈವಶಕ್ತಿ ಇಡೀ ಕರ್ನಾಟಕಕ್ಕೇ ತನ್ನ ಇರವನ್ನು ತೋರಿಸಿತು!  || ದೈವಾಧೀನಂ ಜಗತ್ಸರ್ವಂ ಮಂತ್ರಾಧೀನಂತು ದೈವತಂ || ದೇಹೀ ಎಂದು ಸಾಮೂಹಿಕವಾಗಿ ಅರ್ಚಕರು ಮುಜರಾಯೀ ದೇವಸ್ಥಾನಗಳಲ್ಲಿ ಸರಕಾರದ/ಸಾರ್ವಜನಿಕರ ಪರವಾಗಿ ಪೂಜೆ ನೆರವೇರಿಸಿದರು-ಮಂತ್ರಕ್ಕೆ ಮಳೆ ಬಂದೇ ಬಂತು! ಮೇ-ಜೂನ್-ಜುಲೈ ಕಳೆದರೂ ಬಾರದಿದ್ದ ಮಳೆ, ಪೂಜೆನಡೆಯುತ್ತಿದ್ದ ಸಮಯದಲ್ಲೇ ಆರಂಭವಾಗಿದ್ದು ಕಾಕತಾಳೀಯವೆಂದವರು ಅದೆಷ್ಟೋ ಮಂದಿ. ವಿಧಾನಸಭೆಯ ಮೊಗಸಾಲೆಯಲ್ಲಿ ದೇವರಿಗೆ ಸುಮ್ನೇ ೧೭ ಕೋಟಿ ಎಂದು ಲೇವಡಿಮಾಡಿದ ಕಾಂಗ್ರೆಸ್ಸಿಗರೂ ಇದ್ದಾರೆ! ಮುಂದಿನ ೫ ತಿಂಗಳಲ್ಲಿ ಚುನಾವಣೆ ಬಂದಾಗ ಮುಜರಾಯೀ ದೇವಸ್ಥಾನಗಳಿಗೆ ಮೊರೆ ಇಡುವವರೂ ಅವರೇ ಆಗಿದ್ದಾರೆ! ಸಂಕಟಬಂದಾಗ ಮಾತ್ರ ಬೇಕು ಮಿಕ್ಕಿದ ಸಮಯದಲ್ಲಿ

ನೀನೇಕೋ ನಿನ್ನ ಹಂಗೇಕೋ
ನಿನಗೇ ನಾಮ ಹಾಕುವ ಬಲವೊಂದಿದ್ದರೆ ಸಾಕೋ 

ಎಂದು ಅಧುನಿಕರಿಗಾಗಿ ತಿದ್ದುಪಡಿಗೊಂಡ ದಾಸರ ಪದವನ್ನು ಹಾಡುವ ಇಂತಹ ಕಜಡಾ ಮಂದಿಗೆ, ಬೆಂಗಳೂರಿನ ಗಲ್ಲಿಗಲ್ಲಿಗಳು ವಿನಾಕಾರಣ ಅಗೆತಕ್ಕೊಳಗಾಗುವುದು, ಬೇಡವಾದ ಕಡೆಗಳಲ್ಲೂ ರಸ್ತೆಬದಿಯಲ್ಲಿ ಮಳೆ ನೀರಿಗೆ ಕಾಂಕ್ರೀಟಿನ ಕಾಲುವೆ ನಿರ್ಮಿಸುವುದು, ವರ್ಷಪೂರ್ತಿ ಮುಗಿಯದ ಅಗೆತದ ಕೆಲಸಗಳು ಕಾರ್ಪೋರೇಟರ್ ಗಳ ತುಂಬದ ಹೊಟ್ಟೆಯನ್ನು ತುಂಬಿಸಲು ಪ್ರಯತ್ನಿಸುತ್ತಿರುವುದು ಕಾಣುವುದಿಲ್ಲವೇ? ಸರಕಾರವೇ ಮುಂದಾಗಿ ಮನೆಕಟ್ಟಿಕೊಡಲು ತೊಡಗಿದರೆ ಉತ್ತರಕರ್ನಾಟಕದ ನೆರೆನಿರಾಶ್ರಿತರು ಪರದಾಡಬೇಕಾದ ಪ್ರಮೇಯವಿತ್ತು! ದೇಶಪಾಂಡೆ ಥರದವರು ಸಾರ್ವಜನಿಕರಿಂದ ಸಂಗ್ರಹವಾದ ನೆರೆಪೀಡಿತರ ಹಣವನ್ನೂ ತಮ್ಮ ಅಕೌಂಟಿಗೆ ಬಸಿದುಕೊಂಡಿದ್ದು ನಮ್ಮ ಜನರಿಗೆ ಮರೆತೇಹೋಯ್ತೇ? ದೇವರಿಗಾಗಿ ಸಂಗ್ರಹವಾದ ದೇವಬೊಕ್ಕಸವನ್ನು ಮಟ್ಟಸವಾಗಿ ಉಂಡು ಮಗ್ಗಲು ಬದಲಾಯಿಸುವ ಕೆಲಸ ನಡೆದರೆ ಆಡಳಿತ ನಡೆಸುವ ಯಾರೇ ಆದರೂ ಎಷ್ಟುಕಾಲ ನಡೆಸಿಯಾರು? ಕಪ್ಪುಕನ್ನಡದ ಹಿಂದೆ ಕಣ್ಣಡಗಿಸಿ ನಗುವ ಕುಹಕ ರಾಜಕಾಣಿಗಳು ತಕ್ಕಶಾಸ್ತಿಯನ್ನು ಆ ಯಾ ಕಾಲಕ್ಕೆ ಅನುಭವಿಸುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ.

ಕಾಯ್ದೆ ಬದಲಾಗಬೇಕು. ಆ ಯಾ ಮುಜರಾಯೀ ದೇವಸ್ಥಾನಗಳ ಹುಂಡಿಯನ್ನು  ಅಲ್ಲಲ್ಲೇ ಒಡೆದು ಎಣಿಸಿ, ಅಲ್ಲಿಗೇ ವ್ಯಯಿಸಬೇಕು, ಸರಕಾರ ತನ್ನ ಬೊಕ್ಕಸಕ್ಕೆ ಬಂದ ಆದಾಯಮೂಲದಲ್ಲಿ ಅತಿಚಿಕ್ಕಮೊತ್ತವನ್ನಾದರೂ ಆದಾಯರಹಿತ ಮುಜರಾಯೀ ದೇವಸ್ಥಾನಗಳಿಗೆ ಕೊಡುವಂತಾಗಬೇಕು. ಸ್ಥಾನಿಕವಾಗಿ ಯಾವ ಯಾವ ವ್ಯವಸ್ಥೆಗಳು ಕಲ್ಪಿತವಾಗಬೇಕೋ ಅದನ್ನು ಪೊರೈಸಿಕೊಡಬೇಕು. ಈ ದೇಶ ಹಿಂದೂಸ್ಥಾನ. ಮುಜರಾಯೀ ದೇವಸ್ಥಾನಗಳಿಗೆ ಸಾವಿರಗಟ್ಟಲೆ ವರ್ಷಗಳ ಇತಿಹಾಸವಿದೆ. ಉಳಿದ ಮತಗಳು ಭಾರತವನ್ನು ಆಕ್ರಮಿಸುವ ಮೊದಲೇ ಇದ್ದ ದೇವಾಲಯಗಳೇ ಹಲವು. ಅಲ್ಲಲ್ಲಿನ ಕಲ್ಲುಗಳೆಲ್ಲಾ ಇತಿಹಾಸವನ್ನು ಕಥೆಗಳ ರೂಪದಲ್ಲಿ ಹೇಳಬಲ್ಲವು. ನನ್ನಂತಹ ಕೆಲವುಜನ ಮಂತ್ರಕ್ಕೆ ಮಾವಿನಕಾಯಿ ಉದುರಿದ್ದನ್ನೂ ಲೋಕವೇ ಅದುರಿದ್ದನ್ನೂ ತೋರಿಸಿಬಲ್ಲ ಪ್ರಾಗೈತಿಹಾಸಿಕ ಕಥಾನಕಗಳನ್ನು ಬೇಕಾದರೆ ಒದಗಿಸುತ್ತೇವೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದ ಮುಗ್ಧ ಜನರಿಗೆ ಅರಿವಿಲ್ಲ, ವೇದ ಸುಳ್ಳಾಗುವುದಿಲ್ಲ; ಅದು ಅಪೌರುಷೇಯ; ಅದು  ನಿತ್ಯ ಸನಾತನ! ಗಾದೆಯೇ ಸುಳ್ಳಾಗಬಹುದೇ ಹೊರತು ವೇದ ಸುಳ್ಳಾಗದು. 

ವೇದಮಂತ್ರಗಳ ಸಂತುಲಿತ ಉಚ್ಚಾರಣೆಗೆ ವಿಶಿಷ್ಟ ಶಕ್ತಿಯಿದೆ. ಅದರ ವ್ಯತ್ಯಾಸವನ್ನು ಹಿರೇಮಗಳೂರು ಕಣ್ಣನ್ ಸಾಹೇಬರು ನಡೆಸಿಕೊಡುವ ಕನ್ನಡ ಪೂಜೆಗೆ ತುಲನೆಮಾಡಿ ನೋಡಿ: ಸಾವಿರ ಸರ್ತಿ ಕನ್ನಡದಲ್ಲಿ ಪೂಜೆಮಾಡಿದರೂ ವೇದಮಂತ್ರಗಳಿಂದ ಪೂಜಿಸಿದ ತೃಪ್ತ ಮನೋಭಾವ ನಮ್ಮದಾಗುವುದಿಲ್ಲ. ರುದ್ರ ನಮಕ-ಚಮಕಗಳಿಂದಂತೂ ಮಾನಸಿಕವಾಗಿ ಯಾವುದೇ ವ್ಯಕ್ತಿಗಾದರೂ ಉತ್ತಮ ಪರಿಣಾಮ ಸಿಗುತ್ತದೆ.[ಆತ ಯವುದೇ ಮತದವನೂ ಆಗಬಹುದು] ಶಾಸ್ತ್ರೋಕ್ತವಾಗಿ ರುದ್ರ, ಶ್ರೀಸೂಕ್ತ, ಪುರುಷಸೂಕ್ತ, ನಾರಾಯಣ ಸೂಕ್ತ ಮೊದಲಾದ ಮಂತ್ರಗಳಿಂದ ಅಭಿಷೇಚಿಸಿ ಆ ತೀರ್ಥವನ್ನು ಎದುರಿಗೆ ಕುಳಿತು ಅವುಗಳನ್ನು ಕೇಳಿಸಿಕೊಂಡವರಿಗೆ ಪ್ರೋಕ್ಷಿಸಿದಾಗ, ಆ ದಿವ್ಯ ಮಂತ್ರಗಳ ಫಲಾನುಭವಗಳು ನಮ್ಮ ಮನಸ್ಸಿನ ಮೇಲೆ ಉಂಟಾಗುತ್ತವೆ. ಮನಸ್ಸು ಆಹ್ಲಾದಗೊಳ್ಳುತ್ತದೆ; ಪ್ರಪುಲ್ಲತೆ ಮನೆಮಾಡುತ್ತದೆ; ಯಾವುದೇ ಕಷ್ಟವಿದ್ದರೂ ತಮ್ಮನ್ನು ಅದರಿಂದ ಪಾರುಮಾಡಬಲ್ಲ ದಿವ್ಯಶಕ್ತಿಯ ಹೊರಗವಚವೊಂದು ತಮಗೆ ದಕ್ಕುತ್ತಿದೆ ಎಂಬ ಭಾವ ನಮ್ಮೊಳಗೇ ಉದ್ಭವವಾಗುತ್ತದೆ. ಇದು ರಾಜರುಗಳಿಗೆ, ಸಂಸ್ಥಾನಿಕರಿಗೆ ಗೊತ್ತಿತ್ತು. ಅದಕ್ಕೇ ಅವರು ದೇವಸ್ಥಾನಗಳನ್ನು ನಿರ್ಮಿಸಿದರು; ವೇದಗಳನ್ನು ಅನುಷ್ಠಾನದಲ್ಲಿಡಲು ಬ್ರಾಹ್ಮಣರಿಗೆ ಆಶ್ರಯ ಕೊಟ್ಟರು, ಉಂಬಳಿಕೊಟ್ಟರು. ಇವತ್ತಿಗೂ ಜನಮಾನಸದಲ್ಲಿ ಒಂದಂತೂ ಅಡಗಿದೆ, ಅದೇನೆಂದರೆ: ’ವೇದಗಳಿಗೆ ತಾಕತ್ತಿದೆ’ ಎಂಬುದು. ವೇದಗಳು ಅಳಿಯುವುದಿಲ್ಲ, ವೇದಗಳೇ ನಮ್ಮ ಸಂಸ್ಕೃತಿ, ಅವುಗಳಿಂದಲೇ ನಮ್ಮ ಪುನರುಜ್ಜೀವನ. 

2 comments:

  1. ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ತರ್ಕಕ್ಕೆ ನಿಲುಕದ ಅದೆಸ್ಟೋ ಸತ್ಯಗಳು ನಮ್ಮ ನಡುವೆ ಗಟಿಸುತ್ತವೆ. ಇಲ್ಲಿ ತಾವು ಹೇಳಿದ ಕೆಲವು ಘಟನೆ ಗಳನ್ನೂ ನಮ್ಮ ಮನೆಯ ಹಿರಿಯವರ ಬಾಯಲ್ಲಿ ಕೇಳಿದ್ದೇನೆ. ಈಗ ಓದಿದಾಗ ತುಂಬಾ ಸಂತೋಷವಾಯಿತು.
    ಅಭಿನಂದನೆಗಳು...........

    ReplyDelete
  2. ನಿಜ, ಕೆಲವೊಂದು ವಿಚಾರಗಳು ಮನುಷ್ಯನ ಕಣ್ಣಿಗೆ ಕಾಣದೇ ಇದ್ದರೂ, ಅವನ ಮನಸ್ಸಿಗೆ ಅನುಭವವಾಗುವ ರೀತಿಯಲ್ಲಿ ನಮ್ಮ ಸುತ್ತ ಅನೇಕ ಘಟನೆಗಳು ನಡೆಯುತ್ತವೆ. ಜಾತಕ, ಗ್ರಹಚಾರ ಫಲಗಳಲ್ಲಿ ನಮ್ಮಲ್ಲಿ ಹೆಚ್ಚಿನ ಜನರಿಗೆ ನಂಬಿಕೆ ಇಲ್ಲದಿದ್ದರೂ ಕೆಲವೊಂದು ಬಾರಿ, ನಾನು ಅಂದುಕೊಂಡ ಎಷ್ಟೊ ಕೆಲಸಗಳು ಕೈಗೂಡುವುದೇ ಇಲ್ಲ. ಎಲ್ಲಾ ಸರಿಯಿದ್ದು ಏನೂ ಸರಿ ಇಲ್ಲ ಅನ್ನುವಂತಹ ಅನುಭವವೂ ಆಗುತ್ತದೆ. ಮಂತ್ರ ಪಠಣದ ಸಮಯದಲ್ಲಿ ಸ್ವರಗಳ ಉಚ್ಚಾರ, ಏರಿಳಿತಗಳು ಸುತ್ತಲಿನ ಪರಿಸರಕ್ಕೆ ಧನಾತ್ಮಕವಾದ ವಿದ್ಯುತ್ ಕಾಂತಿಯನ್ನ ಹೊಮ್ಮಿಸುತ್ತವೆ ಎಂದು ಕೇಳಿದ್ದೇನೆ. ಕೆಲವೊಂದು ವಿಷಯಗಳು ಮನುಷ್ಯನನ್ನ ಮೌಡ್ಯಕ್ಕೆ ತಳದ್ದೆ, ನನ್ಮಾರ್ಗಕ್ಕೆ ನಡೆಸುತ್ತವೇ ಅನ್ನುವುದಾದರೆ, ಅವುಗಳ ವೈಜ್ನಾನಿಕ ಹುಟ್ಟುಗಳನ್ನ ಹುಡುಕುತ್ತ ಹೋಗುವ ಬದಲು ಅದನ್ನ ನಂಬಿ ಮುನ್ನಡೆಯುವುದೇ ಲೇಸು ಅಲ್ಲವೆ?

    ReplyDelete