ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, July 14, 2010

ಥೈ ಥೈ ತದ್ದಿನ ಧೇಂ ಧೇಂ........




ಥೈ ಥೈ ತದ್ದಿನ ಧೇಂ ಧೇಂ........


ಪ್ರತಿಭೆಗಳಲ್ಲಿ ದೈತ್ಯ ಪ್ರತಿಭೆಗಳದ್ದೇ ಒಂದು ವಿಭಾಗ. ಅವುಗಳನ್ನು ಪರಿಚಯಿಸಲು ಪ್ರಾರಂಭಿಸಿದರೆ [ವಾಸ್ತವವಾಗಿ ಅವರುಗಳ ಪರಿಚಯ ಎಲ್ಲರಿಗೂ ಇದೆ, ಆದರೆ ಅವ್ರನ್ನು ನನ್ನ ಶಬ್ಧಗಳಲ್ಲಿ ತಿಳಿಸಿಕೊಡುವುದಾದರೆ]ಎಲ್ಲಿ ಆದಿ ಮತ್ತು ಎಲ್ಲಿ ಅಂತ್ಯ ಎಂದು ಗೊತ್ತುಮಾಡಿಕೊಳ್ಳುವುದು ಕಷ್ಟ. ಒಂದೊಮ್ಮೆ ಕಮ್ಮಿ ಹೇಳಿಬಿಟ್ಟರೆ ಎನ್ನುವ ಆಭಾಸ ಬೇರೆ. ಆದರೂ ನನಗೆ ಗೊತ್ತಿರುವ ಮಟ್ಟಿಗೆ ಗೊತ್ತಿರುವುದನ್ನು ಇತರರಿಗೆ ಹಂಚಲು ಅಭ್ಯಂತರವೇನಿಲ್ಲವಲ್ಲ! ಹೀಗಾಗಿ ಬರೆಯಲು ಮುಂದಾಗುತ್ತಿದ್ದೇನೆ. ಇವತ್ತಿನ ನಮ್ಮ ಕಥಾನಕದ ನಾಯಕ ದಿ|ಶ್ರೀ ಕೋಟ ಶಿವರಾಮ ಕಾರಂತರು, ಪ್ರಾಯಶಃ ಕಾರಂತರೆಂದರೆ ಅದು ಇವರು ಎಂದೇ ಅರ್ಥ! ಅಷ್ಟರ ಮಟ್ಟಿಗೆ ಜನಪ್ರಿಯರಾದ ವ್ಯಕ್ತಿ ಈ ಕಾರಂತಜ್ಜ. ಮಕ್ಕಳಿಗಾಗಿ ’ತರಂಗ’ ವಾರಪತ್ರಿಕೆಯಲ್ಲಿ ’ಬಾಲವನ’ದ ಕಾರಂತಜ್ಜನಾದ ಶ್ರೀಯುತರು ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕೈಹಾಕದ ಕಣಗಳೇ ಇಲ್ಲ!

ಯಾರಿಗಾದರೂ ಏನಾದರೂ ಸಂದೇಹವಿದ್ದರೆ ಅದೊಂದು ಕಾಲವಿತ್ತು-ಸೀದಾ ಕಾರಂತರಲ್ಲಿ ಕೇಳುವುದು-ಆ ಮೂಲಕ ಸಂದೇಹ ಬಗೆಹರಿಸಿಕೊಳ್ಳುವುದು. ಸಾಹಿತ್ಯ, ಜರ್ನಲಿಸಂ, ಯಕ್ಷಗಾನ, ಸಿನಿಮಾ ನಿರ್ದೇಶನ, ಕೃಷಿ ಹೀಗೇ ಯಾವ ರಂಗದಲ್ಲೂ ಸಿಗಬಹುದಾದ ಕವಿ-ಸಾಹಿತಿಗಳ ಸಾಲಿನಲ್ಲಿ ಶ್ರೀಯುತರು ಅಗ್ರಗಣ್ಯರು. ಬದುಕಿನ ಕೊನೆಯ ಘಟ್ಟದ ವರೆಗೂ ಅತ್ಯಂತ ಕ್ರಿಯಾತ್ಮಕವಾಗಿ, ಕ್ರಿಯಾಶೀಲರಾಗಿ ದೀಪದಿಂದ ಹಲವು ದೀಪ ಬೆಳಗಿದಂತೆ ತನ್ನ ಇಚ್ಛಾಶಕ್ತಿಯಿಂದ ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದ ’ಕಡಲ ತೀರದ ಭಾರ್ಗವ’ನ ಬಗ್ಗೆ ಸ್ವಲ್ಪ ಹೆಳುತ್ತೇನೆ ಕೇಳಿ--

೧೯೦೨ ರ ಅಕ್ಟೋಬರ್ ೧೦ನೇ ದಿನಾಂಕದಂದು ಉಡುಪಿಗೆ ಹತ್ತಿರದ ’ಕೋಟ’ ಎಂಬ ಗ್ರಾಮದಲ್ಲಿ ಶೇಷ ಕಾರಂತ ಮತ್ತು ಲಕ್ಷ್ಮಮ್ಮ ದಂಪತಿಗೆ ಐದನೆಯ ಮಗುವಾಗಿ ಜನಿಸಿದ ಕಾರಂತರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕುಂದಾಪುರದಲ್ಲಿ ಪೂರೈಸಿ ನಂತರ ಮಂಗಳೂರಿನಲ್ಲಿ ಕಾಲೇಜು ವ್ಯಾಸಂಗವನ್ನು ಸ್ವಲ್ಪಕಾಲ ಮಾಡಿದರು. ಆಗೆಲ್ಲ ನಮ್ಮ ಗಾಂಧೀ ತಾತನ ಚಳುವಳಿಗಳು ಜೋರಾಗಿ ನಡೆಯುತ್ತಿದ್ದವು. ಗಾಂಧೀಜಿಯಿಂದ ಪ್ರಭಾವಿತರಾದ ಕಾರಂತರೌ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಇದೇ ಕಾರಣದಿಂದ ಅಸಹಕಾರ ಚಳುವಳಿಗಾಗಿ ಕಾಲೇಜು ಓದನ್ನು ಅರ್ಧಕ್ಕೇ ನಿಲ್ಲಿಸಿದರು. ಖಾದಿ ಮತ್ತು ಸ್ವದೇಶೀ ಚಳುವಳಿಗಳಲ್ಲಿ ಐದುವರ್ಷಗಳ ಕಾಲ ತೊಡಗಿಕೊಂಡ ಶ್ರೀಯುತರು ಪತ್ತೇದಾರಿ ಕಾದಂಬರಿಗಳನ್ನು ಬರೆಯಲು ಆರಂಭಿಸಿ ಮುನ್ನಡೆದರು. ಅಜಮಾಸು ಮೂವತ್ತು ವಯಸ್ಸಿನಲ್ಲಿ ಲೀಲಾ ರನ್ನು ಮದುವೆಯಾದರು.

ನನಗೆ ಸುಮಾರು ೮ವರ್ಷ ವಿರಬಹುದು. ಆಗ ನನ್ನ ಚಿಕ್ಕಪ್ಪನ ಮನೆಯಲ್ಲಿ [ರಜದಲ್ಲಿ] ಕಂಡ, ಕಾರಂತರು ಖಗೋಳದ ಬಗ್ಗೆ ’ಈ ಜಗತ್ತು’ ಎಂಬ ಪುಸ್ತಕಮಾಲೆಯನ್ನು ಓದಲು ಮನಸ್ಸುಮಾಡಿದೆ. ಅಲ್ಲಿನಿಂದ ನನಗೆ ಕಾರಂತರ ಮೇಲಿನ ಪ್ರೇಮ ಜಾಸ್ತಿಯಾಗುತ್ತಾ ಹೋಯಿತು. ಸಾಮಾನ್ಯವಾಗಿ ಯಾರೂ ಅಷ್ಟು ಸವಿಸ್ತಾರವಾಗಿ ಹೇಳದ ಖಗೋಳ ಶಾಸ್ತ್ರವನ್ನು ಬಹಳ ಪರಿಪೂರ್ಣವಾಗಿ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿಗೆ ಅಪ್ರತಿಮ ಕೊಡುಗೆಗಳನ್ನು ಕೊಟ್ಟ ಕಾರಂತರ ಕಾದಂಬರಿಗಳಂತೂ ಒಂದಕ್ಕಿಂತಾ ಒಂದು ಅದ್ಬುತ! ಓದಿದ ಯಾವನೂ ಮರೆಯಲಾಗದ ಅನನ್ಯ ಅನುಭವ ಆ ಕಾದಂಬರಿಗಳಲ್ಲಿ. ಮರಳಿ ಮಣ್ಣಿಗೆ, ಅಳಿದಮೇಲೆ, ಬೆಟ್ಟದ ಜೀವ, ಮೂಕಜ್ಜಿಯ ಕನಸುಗಳು, ಚೋಮನ ದುಡಿ ಇವೆಲ್ಲಾ ದಿನವೂ ಕೆಣಕುವ ಪಾತ್ರಗಳನ್ನೊಳಗೊಂಡ ಕಾದಂಬರಿಗಳು. ಅವುಗಳಿಂದ ಸಿಗುವ ಬದುಕಿನ ಅನುಭವ ಸಾರ ಅನುಭಾವಿಯಾಗಲು ಯಾರಿಗೆ ಇಷ್ಟವಾಗುವುದಿಲ್ಲ! ಮೈ ಮನಗಳ ಸುಳಿಯಲ್ಲಿ, ಅದೇ ಊರು ಅದೇ ಮರ, ಶನೀಶ್ವರನ ನೆರಳಿನಲ್ಲಿ, ಕುಡಿಯರ ಕೂಸು, ಸ್ವಪ್ನದ ಹೊಳೆ, ಸರ್ಸಮ್ಮನ ಸಮಾಧಿ--ಇವೂ ಕೂಡ ಅತ್ಯುತ್ತಮ ಕೃತಿಗಳೇ ಆಗಿವೆ. ’ಮರಳಿ ಮಣ್ಣಿಗೆ’ ಕಾದಂಬರಿ ಅವರ ಕೃತಿಗಳಲ್ಲೇ ಶ್ರೇಷ್ಠ ಎಂದರೆ ತಪ್ಪಾಗಲಾರದು. ವರುಷಕ್ಕೊಂದರಂತೆ ಸುಮಾರು ೪೭ ಕಾದಂಬರಿಗಳನ್ನು ಬರೆದ ಕಾರಂತರು ೧೯೫೭ ರಲ್ಲಿ ಸ್ವಲ್ಪ ಯಕ್ಷಗಾನ ಬಯಲಾಟದ ಕಡೆಗೆ ವಾಲಿದರು.

ಯಕ್ಷಗಾನದ ಗಂಡುಮೆಟ್ಟಿನ ಸ್ಥಳಗಳಲ್ಲಿ ಕುಂದಾಪುರವೂ ಒಂದು. ಇಲ್ಲಿಗೆ ಹತ್ತಿರದ ಸಾಲಿಗ್ರಾಮದಲ್ಲಿ ಬಹುಕಾಲ ವಾಸಿಸಿದ್ದ ಕಾರಂತರು ಯಕ್ಷಗಾನವನ್ನು ಬಹುವಾಗಿ ಪ್ರೀತಿಸಿದವರು. ಸಮಗ್ರ ಕಲೆಯಾದ ಅದನ್ನು ಸಮಾಜದ ಮುಂಚೂಣಿಗೆ ತರಲು ಬಹಳ ಶ್ರಮಿಸಿದವರಲ್ಲಿ ಶ್ರೀಯುತರೂ ಒಬ್ಬರು. ಯಕ್ಷಗಾನ ಬಯಲಾಟ ಮತ್ತು ಯಕ್ಷಗಾನ ಎಂಬುದಾಗಿ ಎರಡು ಹೊತ್ತಗೆಗಳನ್ನು ಯಕ್ಷಗಾನದ ಮೇಲೆ ಬರೆದರು. ಯಕ್ಷಗಾನದ ಕುರಿತು ಸಂಶೋಧನೆ ನಡೆಸಿದವರಲ್ಲಿ ಮೊಟ್ಟ ಮೊದಲನೆಯ ಮತ್ತು ಅತೀ ಪ್ರಮುಖರು ಎಂದರೆ ಅವರೇ ಶಿವರಾಮ ಕಾರಂತರು!ಯಕ್ಷಗಾನದ ಹಳೆಯ ಪ್ರಸಂಗಗಳನ್ನು ಹುಡುಕಿ,ಅವುಗಳ ಸಂಗೀತದ ತಾಯಿಬೇರನ್ನು ಹೊರತೆಗೆದು, ಯಕ್ಷಗಾನದ ಹುಟ್ಟು-ಬೆಳವಣಿಗೆ ಮುಂತಾದ ವಿಷಯಗಳನ್ನು ಬಹಳಕಾಲ ಅಭ್ಯಸಿಸಿದ ಕಾರಂತರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತ ಬ್ಯಾಲೆ ಮುಂತಾದ ಜಾನಪದ ಕುಣಿತಗಳನ್ನು ಯಕ್ಷಗಾನದಲ್ಲಿ ಪ್ರಯೋಗಿಸಿ ನೋಡಿದರು.ತನ್ನದೇ ಆದ ತಂಡವೊಂದನ್ನು ಕಟ್ಟಿಕೊಂಡು ಅದನ್ನು ಆ ಕಾಲದಲ್ಲೇ ಐರೋಪ್ಯ ದೇಶಗಳಿಗೆ ಕೊಂಡೊಯ್ದಿದ್ದರು.

೧೯೩೦-೪೦ ರಲ್ಲಿ ಪ್ರಿಂಟಿಂಗ್ ಪ್ರೆಸ್ ಆರಂಭಿಸಿ ತನ್ನ ಮೊದಲ ಕೆಲವು ಕಾದಂಬರಿಗಳನ್ನು ಅವರೇ ಪ್ರಕಟಿಸಿದರು ಮಾತ್ರವಲ್ಲ ಅದಕ್ಕೆ ಆವರಣ ಪುಟ[ಕವರ್ ಪೇಜ್] ಅವರೇ ರಚಿಸಿದ ಚಿತ್ರ ಮತ್ತು ವಿನ್ಯಾಸಗಳಿಂದ ಕೂಡಿತ್ತು. ಬಹುಶಃ ಕೃತಿಕಾರರು ತಮ್ಮ ಪುಸ್ತಕಗಳಿಗೆ ಆವರಣ ಪುಟದ ವಿನ್ಯಾಸವನ್ನೆಲ್ಲ ಮಾಡುವುದು ದುರ್ಲಭ. ಆದರೆ ಕಾರಂತರು ಅದನ್ನು ಮಾಡಿದ್ದರು. ನಂತರ ಪ್ರೆಸ್ ತುಂಬಾ ನಷ್ಟದಲ್ಲಿ ನಡೆದುದರಿಂದ ಅದನ್ನು ನಿಲ್ಲಿಸಿಬಿಟ್ಟರು.

ಕಾರಂತರು ಒಟ್ಟೂ ೪೧೭ ಪುಸ್ತಕಗಳನ್ನು ಹೊರತಂದು ಭಾರತದಲ್ಲೇ ಬರಹಗಾರನೊಬ್ಬನಿಗೆ ಸಾರಾಸಗಾಟಾಗಿ ಸಾಧ್ಯವಾಗದ ಸಾಧನೆ ಮೆರೆದಿದ್ದರೂ ಇದು ಮೊದಲು ಪರಿಗಣಿತವಾಗಲಿಲ್ಲ. ಬರೇ ೪೭ ಕಾದಂಬರಿಗಳಷ್ಟೇ ಅಲ್ಲದೇ ಅವರು ೩೧ ಗೀತ ರೂಪಕಗಳು,೪ ಸಣ್ಣ ಕಥೆಗಳು, ವಿವಿಧ ಪ್ರಬಂಧಗಳ ೬ ಪುಸ್ತಕಗಳು ಮತ್ತು ರೇಖಾಚಿತ್ರಗಳು, ಜಾಗತಿಕ ಕಲೆಯ ಕನ್ನಡಾವತರಣಿಕೆಯೂ ಸೇರಿದಂತೇ ಕಲೆಯ ಮೇಲೆ ೧೩ ಪುಸ್ತಕಗಳು,ಚಾಳುಕ್ಯ ಶಿಲ್ಪಕಲೆ ಮತ್ತು ವಿನ್ಯಾಸದ ಬಗ್ಗೆ ಪುಸ್ತಕ, ಯಕ್ಷಗಾನದ ಮೇಲೆ ಎರಡು, ಮಕ್ಕಳಿಗಾಗಿ ಜ್ಞಾನಭಂಡಾರ ತುಂಬಿದ ಮೂರು ಸಂಚಿಕೆಗಳುಳ್ಳ ಪುಸ್ತಕ, ಬೆಳೆದ ಮಕ್ಕಳಿಗಾಗಿ ೪ ಸಂಚಿಕೆಗಳ ವಿಜ್ಞಾನದ ಎನ್ಸೈಕ್ಲೋಪೀಡಿಯಾ, ೨೪೦ ಮಕ್ಕಳ ಪುಸ್ತಕ, ಪ್ರವಾಸದ ಬಗ್ಗೆ ೬ ಪುಸ್ತಕಗಳು, ಪಕ್ಷಿಗಳ ಬಗ್ಗೆ ಎರಡು, ಮೂರು ಪ್ರವಾಸ ಕಥನಗಳು, ಒಂದು ಸ್ವಂತ ಜೀವನ ಚರಿತ್ರೆ ಹೀಗೇ ಈ ಯಾದಿ ಪೂರ್ಣಗೊಳ್ಳುವುದಿಲ್ಲ! ಮಕ್ಕಳಿಗಂತೂ ಅಮರಚಿತ್ರಕಥೆಯನ್ನುಅನುವಾದಿಸಿ ಕೊಟ್ಟ ಕಾರಂತಜ್ಜ ಪ್ರಾತಃಸ್ಮರಣೀಯರು.

ಅವರ 'ಮೂಕಜ್ಜಿಯ ಕನಸುಗಳು' ಕಾದಂಬರಿಗೆ ಶ್ರೀಯುತರಿಗೆ ಜ್ಞಾನಪೀಠಪ್ರಶಸ್ತಿ ಲಭಿಸಿತು. ಇಲ್ಲಿ ಮೂಕಿಯಾಗಿರುವ ಅಜ್ಜಿಯೊಬ್ಬಳು ತನ್ನ ಹತ್ತಿರದ ಬಂಧು ಸುಬ್ಬಣ್ಣನಿಗೆ ಹಲವು ಅರ್ಥವಗದ ಘಟನೆಗಳನ್ನು ಅರ್ಥವಾಗುವಂತೆ ತಿಳಿಸಿಕೊಡುವುದು, ಹಿಂದಿನ ಕುರುಡು ನಂಬಿಕೆಗಳು ಅವುಗಳ ಅಡ್ಡ ಪರಿಣಾಮಗಳು ಇವುಗಳ ಬಗ್ಗೆ ವಿಸ್ತ್ರತವಾಗಿ ವಿವರಿಸುವ ಈ ಕಾದಂಬರಿಯಲ್ಲಿ ಹಳೆಯ ಕಾಲದ ಕುರುಡು ಕಟ್ಟುಪಾಡುಗಳು, ಬದುಕಿನ ಹಲವು ಮಜಲುಗಳು, ಧಾರ್ಮಿಕ ಮತ್ತು ಸಾಮಾಜಿಕ ಸಂಬಂಧಗಳು, ಪರಿಕಲ್ಪನೆಗಳು ಇವುಗಳನ್ನೆಲ್ಲ ಮೂಕಜ್ಜಿಯ ಸನ್ನೆಗಳಲ್ಲಿ ಪ್ರಸ್ತುತ ಪಡಿಸುವ ಕಾರಂತರು ಅವಳಿಗೆ ಅತಿಮಾನುಷ ಶಕ್ತಿಯನ್ನು ಕೊಟ್ಟು ಭೂತ ಮತ್ತು ಭವಿಷ್ಯತ್ ಕಾಲದ ಆಗು ಹೋಗುಗಳು ಅವಳಿಗೆ ಗೋಚರಿಸುತ್ತಿರುವಂತೆ ಚಿತ್ರಿಸಿದ್ದಾರೆ. ಸುಬ್ಬಣ್ಣ ಅನೇಕ ಘಟನೆಗಳಿಗೆ ಹತ್ತಿರದ ಕಾಡಲ್ಲಿ ಕುರುಹು ಹುಡುಕುವುದು, ಅಲ್ಲಿನ ಗುಹೆಗಳಲ್ಲಿ ಆತನಿಗೆ ಕೂದಲು-ಮೂಳೆ ಮೊದಲಾದವು ಸಿಗುವುದು, ಆತ ಅವನ್ನು ತಂದು ಮೂಕಜ್ಜಿ ತೋರಿಸಿದಾಗ ಅವಳು ಅವುಗಳು ಹೇಗೆ ಅಲ್ಲಿ ಬಿದ್ದಿವೆ ಎಂಬುದರ ಬಗ್ಗೆ ಹಲವು ಆಶ್ಚರ್ಯಕರ ಸಂಗತಿಗಳನ್ನು ಹೊಅರಗೆಡಹುವುದು--ಹೀಗೇ ಕಾದಂಬರಿ ಅಂದಿನ ಕಾಲದ ಹಲವು ಮಜಲುಗಳನ್ನು ಮೆಲುಕುತ್ತದೆ ಮತ್ತು ರಸವತ್ತಾಗಿದೆ. ಒಬ್ಬನ ಜೀವನದ ಮೌಲ್ಯವನ್ನು ವಿಸ್ತರಿಸಿ ಹೇಳುವ ಈ ಕಾದಂಬರಿ ಕುರುಡು-ಮೂಢ ನಂಬಿಕೆಗಳು ಮಾಡುವ ದುಷ್ಪರಿಣಾಮಗಳನ್ನು ವಿಷದೀಕರಿಸು ಪರಿ ನಿಜಕ್ಕೂ ಪರಿಣಾಮಕಾರಿ! ಹೀಗೇ ಇದೂ ಅಲ್ಲದೇ ಸ್ವತಃ ವಿಜ್ಞಾನವನ್ನು ಓದದ ಕಾರಂತರು ಅತ್ಯಂತ ಮಹತ್ತರ ಮತ್ತು ಸ್ವಾರಸ್ಯಕರ ವಿಜ್ಞಾನದ ಪರಿಚಯವನ್ನು ಅಂದಿನ ಮಕ್ಕಳಿಗೆ ಮಾಡಿಕೊಟ್ಟಿರುವುದು ಪ್ರಶಂಸನೀಯ ಮತ್ತು ಆಶ್ಚರ್ಯಕರ!

ತನ್ನವರನ್ನು ಕಳೆದುಕೊಂಡು ಮರುಗುವ ಮನಸ್ಸಿನ್ನು ತಹಬಂದಿಯಲ್ಲಿಟ್ಟು ’ಹುಚ್ಚು ಮನಸ್ಸಿನ ಹತ್ತು ಮುಖಗಳು’ ಎಂಬ ಜೀವನಚರಿತ್ರೆಯ ಮೊದಲ ಭಾಗವನ್ನು ಬರೆದು ನಂತರ ಎರಡನೆಯ ಭಾಗವಾಗಿ"ಸ್ಮೃತಿ ಪಟಲದಿಂದ’ ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ತನ್ನ ನಾಡು-ನುಡಿಯ ಉಳಿವಿಗಾಗಿ ಪರಿಸರ ಹೋರಾಟಕ್ಕೆ ಧುಮುಕಿ ಶರಾವತಿ ಟೇಲರೇಸ್ ಮತ್ತು ಕೈಗಾ ಅಣುಸ್ಥಾವರದ ಪ್ರತಿಷ್ಠಾಪನೆಯ ವಿರುದ್ಧ ಪರಿಸರ ಆಂದೋಲನವನ್ನು ನಡೆಸಿದರು. ಅಂದಿನ ಅನಿವಾರ್ಯತೆಯಲ್ಲಿ ರಾಜಕೀಯವನ್ನು ಸೇರಿ ಸಮಾಜಕ್ಕೆ ಸೇವೆ ಮಾಡಲು ಮುನ್ನುಗ್ಗಿದ ಅವರಿಗೆ ಚುನಾವಣೆಯಲ್ಲಿ ನಮ್ಮ ಜನ ಗೆಲುವು ನೀಡಲಿಲ್ಲ, ಬಹುಶಃ ಅವರಿಗೆ ಅದು ಯೋಗ್ಯವಲ್ಲದ ರಂಗ ಎಂತಲೇ ಹಾಗೆ ಮಾಡಿದ್ದಿರಬಹುದು! ತನ್ನ ಮೊನಚಾದ ಮಾತುಗಳಿಂದ ಚಾಟಿ ಏಟು ಕೊಡುತ್ತಿದ್ದ ಕಾರಂತರು, ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಅಪಾರ ಜನಮನ್ನಣೆ ಗಳಿಸಿದ ನಡೆದ್ದಾಡುವ ವಿಶ್ವಕೋಶವೆಂದೇ ಖ್ಯಾತರದ ಕಾರಂತರು ಸಮಾಜದಿಂದ " ಕಡಲ ತೀರದ ಭಾರ್ಗವ" ಎಂದೇ ಗುರುತಿಸಲ್ಪಟ್ಟರು. ಹಂಪಿ ಉಳಿಸುವ ಬಗ್ಗೆ ಸೇರಿದಂತೆ ಹತ್ತು-ಹಲವು ವಿಷಯಗಳಲ್ಲಿ ಅವರು ಆಂದೋಲನಗೈದರು.

ಕೊಡಗಿನ ಕಾಫೀ ಎಸ್ಟೇಟ್ ಹಾಗೂ ಅಡಿಕೆತೋಟದ ಮಾಲೀಕರಾದ ದಿ|ಗುಂಡುಕುಟ್ಟಿ ಮಂಜುನಾಥಯ್ಯನವರ ಮನೆಯಲ್ಲಿ ಅವರ ಒತ್ತಾಯದ ಮೇರೆಗೆ ಸುಮಾರು ತಿಂಗಳುಗಳ ಕಾಲ ವಾಸವಿದ್ದ ಕಾರಂತರು " ಬೆಟ್ಟದ ಜೀವ " ಕಾದಂಬರಿ ಬರೆದರು. ಇದರಲ್ಲಿ ಅಡಿಕೆ ತೋಟದ ಕೃಷಿಕರಾದ ವೃದ್ಧ ದಂಪತಿಯನ್ನು ಚಿತ್ರಿಸಿದರು. ಶಹರದಿಂದ ಮಗನ ಹಿಂದಿರುಗುವಿಕೆಯ ನಿರೀಕ್ಷೆಯಲ್ಲಿರುವ ಈ ದಂಪತಿಯ ಕಥೆ ಅತ್ಯಂತ ಹೃದಯಂಗಮವಾಗಿದೆ. "ಸರಸಮ್ಮನ ಸಮಾಧಿ" ಸತಿ ಪದ್ಧತಿಯ ಬಗ್ಗೆ ವಿವೇಚಿಸಿದರೆ ’ಮರಳಿ ಮಣ್ಣಿಗೆ’ ಮೂರು ತಲೆಮಾರಿನ ಬಗ್ಗೆ ತಿಳಿಸಿಕೊಡುವಂತಾದ್ದು, ’ಮೈಮನಗಳ ಸುಳಿಯಲ್ಲಿ’ ಕಾದಂಬರಿ ಬಸ್ರೂರಿನ ನರ್ತಕಿಯೊಬ್ಬಳ ಸುತ್ತ ಹೆಣೆದದ್ದಾಗಿದ್ದು ಕೆಲವು ನಾಜೂಕು ವಿಷಯಗಳಿಂದ ಕೂಡಿತ್ತಾದ್ದರಿಂದ ಚೆನ್ನಾಗೇ ಇದ್ದರೂ ಜನ ಅದನ್ನು ಬಹಳವಾಗಿ ಪ್ರಚುರಪಡಿಸಲಿಲ್ಲ. 'ಅಪೂರ್ವಪಶ್ಚಿಮ' -ಪ್ರವಾಸ ಕಥನ ಓದುವುದೇ ಒಂದು ರೋಮಾಂಚನ. ಇದನ್ನು ಓದಿದವರು ಹಲವಾರು ಬಾರಿ ಮತ್ತೆ ಓದುವುದಿದೆ!

ಆನೆ ಹೋದದ್ದೇ ದಾರಿ ಎಂಬ ಗಾದೆಯಂತೆ ಕಾರಂತರು ನಡೆದದ್ದೇ ಮಾರ್ಗ! ಮಕ್ಕಳಿಗಾಗಿ ಅತೀ ಮುತುವರ್ಜಿಯಿಂದ ಅವರು ನಿರ್ಮಿಸಿದ ಚಿಕ್ಕ ರೈಲು ಏಷಿಯಾದಲ್ಲಿಯೇ ಪ್ರಪ್ರಥಮವಾಗಿತ್ತು ಮಾತ್ರವಲ್ಲ ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಅದೇ ತೆರನಾದ ಮಕ್ಕಳ ರೈಲು ನಿರ್ಮಾಣಕ್ಕೆ ಪ್ರೇರಕವಾಯಿತು. ಕಾಡುಗಳ್ಳರಿಂದ ಎರಡು ಎಳೆಯ ಹುಲಿಮರಿಗಳನ್ನು ರಕ್ಷಿಸಿದ ಶ್ರೀಯುತರು ಮಗನನ್ನು ಆ ದಿಸೆಯಲ್ಲಿ-ಪರಿಸರ ಸಂರಕ್ಷಣೆಯಲ್ಲಿ ತೊಡಗುವಂತೆ ಪ್ರೇರೇಪಿಸಿದರು. ಮಗ ಉಲ್ಲಾಸ್ ಕಾರಂತ ಇನ್ನೂ ಆ ಹಾದಿಯಲ್ಲೇ ಮುನ್ನಡೆದಿದ್ದಾರೆ.

ಸನ್ಮಾನ ಮತ್ತು ಪುರಸ್ಕಾರಗಳು

ಜ್ಞಾನಪೀಠ ಪ್ರಶಸ್ತಿ-೧೯೭೮
ಪದ್ಮ ಭೂಷಣ - ಇಂದಿರಾಗಾಂಧಿಯಿಂದ ತರಲ್ಪಟ್ಟ ಎಮರ್ಜೆನ್ಸಿ[ಮೀಸಾ] ಕಾಯಿದೆಯ ವಿರುದ್ಧ ನಡೆದ ಶ್ರೀಯುತರು ಇದನ್ನು ಆ ನೆನಪಿನಲ್ಲಿ ತಿರಸ್ಕರಿಸಿದರು,
ಸಾಹಿತ್ಯ ಅಕಾಡೆಮೀ ಪ್ರಶಸ್ತಿ - ೧೯೫೮
ಪಂಪ ಪ್ರಶಸ್ತಿ
ತುಲ್ಸಿ ಸಮ್ಮಾನ್
ಸ್ವೆಡಿಶ್ ಅಕಾಡೆಮಿ ಪ್ರಶಸ್ತಿ
ಮಂಗಳೂರು ವಿಶ್ವವಿದ್ಯಾಲಯ ೧೯೯೦ ರಲ್ಲಿ ’ಸೆಂಟರ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್’ ಎಂಬ ಸಂಸ್ಥೆಯನ್ನು ಕಾರಂತರ ಗೌರವಾರ್ಥ ಸ್ಥಾಪಿಸಿತು.
ಭಾರತದ ಹಲವು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ


ಕೆಲವು ಪ್ರಮುಖ ಕೃತಿಗಳು

ಮೂಕಜ್ಜಿಯ ಕನಸುಗಳು
ಮರಳಿ ಮಣ್ಣಿಗೆ
ಚೋಮನ ದುಡಿ
ಅಪೂರ್ವ ಪಸ್ಚಿಮ-ಪ್ರವಾಸ ಕಥನ
ಅಬುವಿಂದ ಬರ್ಮಾಕ್ಕೆ - ಪ್ರವಾಸ ಕಥನ
ಅರಸಿಕರಲ್ಲ - ಪ್ರವಾಸ ಕಥನ
ಮೈ ಮನಗಳ ಸುಳಿಯಲ್ಲಿ
ಬೆಟ್ಟದ ಜೀವ
ಸರಸಮ್ಮನ ಸಮಾಧಿ
ಅಳಿದ ಮೇಲೆ
ಕುಡಿಯರ ಕೂಸು
ಜ್ಞಾನ
ಮೈಲಿಕಲ್ಲಿನೊಡನೆ ಮತುಕತೆ-ಸಣ್ಣ ಕಥೆ
ಅದ್ಭುತ ಜಗತ್ತು - ( ಸೈನ್ಸ್)
ವಿಜ್ಞಾನ ಪ್ರಪಂಚ -( ಸೈನ್ಸ್)
ಕಲದರ್ಶನ - ಕಲೆಯ ಬಗೆಗೆ ಸಚಿತ್ರ ಪುಸ್ತಕ.
ಯಕ್ಷಗಾನ
ಯಕ್ಷಗನ ಬಯಲಾಟ
ಭಾರತೀಯ ಚಿತ್ರಕಲೆ
ಹುಚ್ಚು ಮನಸ್ಸಿನ ಹತ್ತು ಮುಖಗಳು--ಜೀವನ ಚರಿತ್ರೆ
ಚಿಗುರಿಧ ಕನಸು
ಮುಗಿದ ಯುದ್ಧ
ಮೂಜನ್ಮ
ಧರ್ಮರಾಯನ ಸಂಸಾರ
ಕೇವಲ ಮನುಷ್ಯರು
ಇಲ್ಲೆಯಂಬ
ಇದ್ದರೂ ಚಿಂತೆ
ನಾವು ಕಟ್ಟಿದ ಸ್ವರ್ಗ
ಅಷ್ಟ ದಿಗ್ಗಜಗಳು
ಕಣ್ಣಿದ್ದೂ ಕುರುಡರು
ಗೆದ್ದ ದೊಡ್ಡಸ್ತಿಕೆ
ಕನ್ನಡಿಯಲ್ಲಿ ಕಂಡಾತ
ಅಂಟಿದ ಅಪರಂಜಿ
ಹಳ್ಳಿಯ ಹತ್ತು ಸಮಸ್ತರು
ಸಮೀಕ್ಷೆ
ಮೊಗ ಪಡೆದ ಮನ
ಶನೀಶ್ವರನ ನೆರಳಿನಲ್ಲಿ
ನಂಬಿದವರ ನಾಕ ನರಕ
ಕಂಬನಿಯ ಕುಯಿಲು
ಈ ಜಗತ್ತು (ಸೈನ್ಸ್)


ಸಿನಿಮಾ-ದೃಶ್ಯಮಾಧ್ಯಮ


ಚೋಮನ ದುಡಿ
ಚಿಗುರಿದ ಕನಸು
ಮಲೆಯ ಮಕ್ಕಳು

ತಮ್ಮ ೯೫ ನೆಯ ವಯಸ್ಸಿನಲ್ಲೂ ಪಕ್ಷಿಗಳ ಬಗ್ಗೆ ಕೃತಿಯೊಂದನ್ನು ಬರೆದರು, ಹೆಚ್ಚಿನ ಪಕ್ಷ ಇದು ಜಾಗತಿಕ ದಾಖಲೆ ಎನ್ನಬಹುದು!

ರಸಿಕತೆಯನ್ನೂ ಮೈಗೂಡಿಸಿಕೊಂಡಿದ್ದ ಕಾರಂತರು ತುಂಬಾ ಹಾಸ್ಯಪ್ರಜ್ಞೆಯುಳ್ಳವರೂ ಆಗಿದ್ದರು.ಮುಖದಲ್ಲಿ ಗಂಭೀರ ಕಳೆ ಎದ್ದು ಕಾಣುತ್ತಿದ್ದರೂ ಮಗುವಿನ ಮನಸ್ಸಿನ ಮುಗ್ಧತೆಯನ್ನೂ ಹೊಂದಿದ್ದರು. ಪ್ರಯಾಣಿಸುವಾಗ ವಾಹನದಲ್ಲಿ ಎಂದೂ ಪ್ರಯಾಣಿಸುವ ದಿಕ್ಕಿಗೆ ವಿರುದ್ಧವಾಗಿ ಕೂರುತ್ತಿರಲಿಲ್ಲ! ಹಾಗೆ ಕೂತರೆ ಅದು ನಮ್ಮ ದೇಹ ಚಕ್ರಕ್ಕೆ ವಿರುದ್ಧವಾಗುತ್ತದೆಂಬ ವೈಜ್ಞಾನಿಕ ಸತ್ಯವನ್ನು ಅವರ ಮನಸ್ಸು ಅರಿತಿತ್ತು! ರಾತ್ರಿ ಹೊತ್ತಿನಲ್ಲಿ ದೇಹಾಯಾಸದಿಂದಲೂ ಸರಿಯಾಗಿ ಕಾಣಿಸದಿರುವುದರಿಂದಲೂ ಅಪಘಾತಗಳು ನಡೆಯುತ್ತವೆ ಎಂಬ ಕಾರಣಕ್ಕಾಗಿಯೂ ಮತ್ತು ಹಗಲಿಡೀ ಸುತ್ತಿದ ದೇಹಕ್ಕೆ ವಿಶ್ರಾಂತಿಯನ್ನು ಕೊಡಬೇಕೆಂಬ ಅನಿಸಿಕೆಯಿಂದಲೂ ಆದಷ್ಟು ಹಗಲು ಹೊತ್ತಿನಲ್ಲಿ ಮಾತ್ರ ಪ್ರಯಾಣಿಸುತ್ತಿದ್ದರು. ವೈಯಕ್ತಿಕ ಬದುಕಿನಲ್ಲಿ ಅವರೊಬ್ಬ ಶಿಸ್ತಿನ ಸಿಪಾಯಿಯಾಗಿದ್ದರು. ಯಕ್ಷಗಾನ ಪ್ರಿಯರಾಗಿದ್ದ ಅವರ ನೆನಪಿನಲ್ಲಿ ಯಕ್ಷಗಾನದ ಹಾಡೊಂದನ್ನು ಕೇಳಿ ಡಾ| ಕಾರಂತರಿಗೆ ನಮಿಸೋಣ.

ಬಡಗು ತಿಟ್ಟಿನ ಪ್ರಸಿದ್ಧ ನಟ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಪಿಟ್ಸ್ ಬರ್ಗ್ ನಲ್ಲಿ ಅಭಿನಯಿಸಿದ ಹಾಡನ್ನು ಈ ಕೆಳಗಿನ ಲಿಂಕ್ ಕಾಪಿ-ಪೇಸ್ಟ್ ಮಾಡುವ ಮೂಲಕ ನೋಡಿ-ಅನುಭವಿಸಿ.
http://video.google.com/googleplayer.swf?docid=-3506364937259877306&hl=en&fs=true style=width:400px;height:326pxallowFullScreen=trueallowScriptAccess=alwaystype=application/x-shockwave-flash>

ಕಲಾವಿದ ಹೆಗಡೆಯವರಿಗೂ ಮತ್ತು ಹಿಮ್ಮೇಳದ ಎಲ್ಲಾ ಕಲಾವಿದರಿಗೂ ನಮನಗಳು.

ಇಷ್ಟೆಲ್ಲಾ ಬರೆದ ಕಾರಂತರು ಬದುಕಿನ ಕೊನೆಯ ಹಂತದವರೆಗೂ ಅತ್ಯಂತ ಸಕ್ರಿಯರಾಗಿ ಓಡಾಡಿಕೊಂಡಿದ್ದರು. ಬಹಳ ಲವಲವಿಕೆಯಿಂದಿದ್ದರು. ಬಹಳ ಸರಳ ಜೀವಿಯಾಗಿದ್ದ ಶ್ರೀಯುತರು ನಿಗರ್ವಿಯಾಗಿ ಬದುಕಿದ ಮಹಾಮೇರುವಾಗಿದ್ದರು. ಕನ್ನಡದ ಅಭೂತಪೂರ್ವ ಆಸ್ತಿ ಕಾರಂತರು ೯ ಡಿಸೆಂಬರ್ ೧೯೯೭ ರಂದು ತಮ್ಮ ಬದುಕಿಗೂ ಬರವಣಿಗೆಗೂ ವಿದಾಯಹೇಳಿದರು.

Tuesday, July 13, 2010



ಧುಮ್ಮಿಕ್ಕುತ ಬಂದಳು ಶರಾವತಿ

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ........

ಧುಮ್ ಧುಮ್ ಧುಮ್ಮಿಕ್ಕಿ ಹರಿದು
ರಿಮ್ ಜಿಮ್ ವಿದ್ಯುತ್ತ ನೀಡಿ
ಬಂ ಬಂ ಬಸೋಲ್ ಸದ್ದಿನಿಂದಾ
ಹರಿದುಬಂದಳು ಶರಾವತಿ
ಭರದಿ ಬೆಳಗುತ್ತ ನಾಡ
ವರದ ದೀಪವು ನೋಡ
ಹರುಷ ಹರಡುತ್ತ ಮನಕೆಲ್ಲಾ
ತೆರೆದುತಂದಳು ಪಂಚಾರತಿ !

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ.......

ರಾಜಾ ರಾಕೆಟ್ಟು ರಾಣಿ
ರೋರರ್ ಮತ್ತಲ್ಲೇ ತ್ರಿವೇಣಿ
ರಾಜಧಾನಿಯ ಜನವೆಲ್ಲ ಕುಣಿದೇಳುವಾ
ಆ ಅಬ್ಬರದ ಸೆಳಕು!
ಭೋಗ ವೈಭೋಗವಲ್ಲಿ
ಯೋಗ ಬೇಕೊಮ್ಮೆ ನೋಡೆ
ರಾಗ ಹಾಕುತ್ತ ತಾಳ ನಾವು
ಕುಣಿಯೋಣ ಏಕಳುಕು?

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ........

ಊರ ಪೋರಗಳೆಲ್ಲ
ನಾರಿಮಣಿಗಳು ತಾವೆಲ್ಲ
ಭಾರೀ ಆಸೆಯ ಹೊತಗೊಂಡು
ಸೇರಿ ಬಂದರು ನೋಡಲಿಕೆ
ಭೂರಿ ಭೋಜನ ಕಣ್ಗೆ
ಸೂರೆ ಹೊಡೆಯುವವರ್ಗೆ
ಜಾರಿ ಬಿದ್ದೀರಿ ಕೆಳಗೆ ಜೋಕೆ!
ಮುಂಗಾರುಮಳೆ ಜಾರ್ಕೆ

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ........

ಸಿನಿಮಾ ಮಂದಿಗಳಷ್ಟು
ಎನಿಮಾ ಹಚ್ಚಿ ಬಿಚ್ಚಿಟ್ಟು
ಹನುಮ ಬಲದಿಂದ ಮೆಟ್ಟಿಲಿಳಿದು
ಎಣಿಸಿ ಸಾವಿರ ಬೇಸಿಗೆಯಲಿ !
ಘನತೆಗೊಂದೇ ಜಲಪಾತ
ಬನತಾಯೀಯ ನಡುವೆ
ಅನತಿದೂರದಿ ಕರೆಯುತಿಹುದು
ಹೋಗೊಮ್ಮೆ ನೋಡಲ್ಲಿ !

ಹೇ... ಲಾಗಿಚಿಕ್ಕಿ ಹೇ ...ಲಾಗಿಚಿಕ್ಕಿ
ಲಾಗಿಚಿಕ್ಕಿ ಲಾಗಿಚಿಕ್ಕಿ ಲಾಗಿಚಿಕ್ಕಿ.....

Monday, July 12, 2010

ಛಲ



ಛಲ


ಇರಲೇಕೆ ಈ ಜಗದಿ ಛಲವಿಲ್ಲದಿರೆ ಮನದಿ
ಬರಲುಂಟೆ ಪರಲೋಕದಾ ಗಂಟು ನಮಗೆ ?
ಹರಿವಾಣದೆದೆಯಲ್ಲಿ ಸಾಧಿಪಗೆ ನೂರೆಂಟು
ನರನ ನಾಡಿಯ ಮಿಡಿತ | ಜಗದಮಿತ್ರ

ಬರುವ ಸಂಕಷ್ಟಗಳ ದುಃಖ-ದುಮ್ಮಾನಗಳ
ಇರುವೆಯಂದದಿ ಕಂಡು ತಿರುಗಿ ಮುನ್ನಡೆದು
ಅರಿವು ಕೊಡುವರ ಕೂಡ ಹದ ಸ್ನೇಹವಂ ಪಡೆದು
ಹಿರಿಯೋ ಛಲದಾ ಕತ್ತಿ | ಜಗದಮಿತ್ರ

ಅರೆಘಳಿಗೆ ಮರೆತಿರಲು ಜಗವು ಮರೆವುದು ನಿನ್ನ
ಹೊರಗೆ ಸಾಧಿಪ ಸಮಯ ಸೀಮಿತವು ಇಹದಿ
ಹರನಿಲ್ಲ-ಹರಿಯಿಲ್ಲ ಜನರು ಮೊದಲೇ ಇಲ್ಲ
ಗುರಿಯಿಲ್ಲದಿರೆ ನಿನಗೆ | ಜಗದಮಿತ್ರ

ಜಗಕಾಗಿ ಬದುಕಿದರು ಶ್ರೀರಾಮ ಶ್ರೀಕೃಷ್ಣ
ಬಗೆಬಗೆಯ ಕಷ್ಟಗಳ ನುಂಗಿ ನೀರ್ ಕುಡಿದು
ಲಘುಬಗೆಯ ಕಾರ್ಪಣ್ಯಕಿಟ್ಟು ಮನದಲಿ ಕಿಚ್ಚು
ಧಗ ಧಗನೆ ಉರಿಸುನೀ | ಜಗದಮಿತ್ರ

ಹೇಡಿಯೆಂಬರು ನಿನಗೆ ನಗೆಯಾಡಿ ಬೆರಳಿಟ್ಟು
ಆಡಿಕೊಂಬರು ನಿನ್ನ ಎಲ್ಲರೆದುರಿನಲಿ
ಬೀಡಾಡಿಗಳ ನಿನ್ನ ಛಲದಿಂದ ದಮನಿಸುತ
ರೂಢಿಗುತ್ತಮನಾಗು | ಜಗದಮಿತ್ರ

ಛಲದಿಂದ ಶಿವಧನುವ ಮುರಿದನಾ ಶ್ರೀರಾಮ
ಹಲವು ಯೋಜನದುದ್ದ ಹಾರಿದನು ಹನುಮ !
ಗೆಲುವ ಗಾಂಢೀವಿ ತಾ ಪಡೆದ ಪಾಶುಪತಾಸ್ತ್ರ
ನಿಲುವು ನಿನಗಿದು ತರವು | ಜಗದಮಿತ್ರ

ಬಲವು ಬಹುಥರವಿಹುದು ಚೆಲುವು ಕ್ಷಣಿಕದ್ದಿಹುದು
ಒಲವು ಸಾರ್ಥಕ್ಯಕ್ಕೆ ದಾರಿಯಲಿ ದೀಪ
ಹಲವು ಹದಿನೆಂಟು ಪದ-ಪಟ್ಟಗಳು ನಿನಗಿಹವು
ಛಲವ ಸಾಧಿಸಿ ಪಡೆಯೋ | ಜಗದಮಿತ್ರ

Sunday, July 11, 2010

ವಾಸ್ತುವಿನ ವಾಸ್ತವಾಂಶ



ವಾಸ್ತುವಿನ ವಾಸ್ತವಾಂಶ

ಇತ್ತೀಚೆಗೆ ಮಾಧ್ಯಮಗಳ ಅಬ್ಬರದ ಒಡ್ಡೋಲಗದಲ್ಲಿ ಠಾಕು ಠೀಕಾಗಿ ಬಂದು ಕುಳಿತು ಥರಾವರಿ ದಿರಿಸಿನಲ್ಲಿ ಕಾಣಿಸುತ್ತ ಲ್ಯಾಪ್ ಟಾಪ್ ಇಟ್ಟುಕೊಂಡು ಜನತೆಗೆ ವಾಸ್ತು-ಭವಿಷ್ಯ ನುಡಿಯುತ್ತೇವೆ ಎನ್ನುವವರ ಸಂಖ್ಯೆ ದಿನೇ ದಿನೇ ನಾಯಿಕೊಡೆಯಂತೇ ಬೆಳೆದುಕೊಂಡು ಹೋಗುತ್ತಲೇ ಇದೆ. 'ಗುರೂಜಿಗಳು' ತಯಾರಾಗುತ್ತಲೇ ಇದ್ದಾರೆ ! ಇದಕ್ಕೆ ಮೊದಲನೇ ಕಾರಣ ಮಾಧ್ಯಮದವರು ಅವರ ವಿಜೃಂಭಣೆಗೆ ಅವಕಾಶಕೊಡುವುದು, ಎರಡನೆಯ ಕಾರಣ ಎಂತಹ ನಾಸ್ತಿಕನಿಗೂ ಮನದ ಯಾವುದೋ ಮೂಲೆಯಲ್ಲಿ ತನಗೆ ವಾಸ್ತುವಿನಿಂದ ಅಥವಾ ಗ್ರಹಚಾರದಿಂದ ಏನೋ ತೊಂದರೆ ಇರಬಹುದೇ ಎಂಬ ಕುತೂಹಲ! ಹಳ್ಳಿಯ ಜನರಿಗಂತೂ ಈ ಜ್ಯೋತಿಷಿಗಳು ಚಿತ್ರ ತಾರೆಯರಂತೇ ಕಾಣಿಸತೊಡಗಿದ್ದಾರೆ. ಮೊದಲೆಲ್ಲ ಹಕ್ಕಿ ಶಕುನವನ್ನೋ ಕವಡೆಶಾಸ್ತ್ರವನ್ನೋ ಹೇಳಿಕೊಂಡು ಉದರಂಭರಣೆ ಮಾಡಿಕೊಳ್ಳುತ್ತಿದ್ದ ಜನ ಈಗ ಫೈವ್ ಸ್ಟಾರ್ ಆಫೀಸ್ ಮಾಡಿ ಕೂತು ದೂರವಾಣಿಯಲ್ಲಿ ಅಪಾಯಿಂಟಮೆಂಟ್ ಕೊಡುತ್ತಾರೆ! ಗಣಕಯಂತ್ರವನ್ನೇ ನೋಡದಿದ್ದ ಈ ಮಂದಿ ಗಣಕಯಂತ್ರ ತಜ್ಞರಿಗಿಂತ ಚೆನಾಗಿ ಅದನ್ನು ಬಳಸಿಕೊಳ್ಳಲು ತೊಡಗಿದ್ದಾರೆ!

ಮನುಜಜೀವನದಲ್ಲಿ ತೊಂದರೆ ಅನುವು ಆಪತ್ತುಗಳು ಅನಿವಾರ್ಯ-ಸಹಜ. ತೊಂದರೆ ಬಂದಾಗ ಅದಕ್ಕೆ ಪರಿಹಾರವಾಗಿ ಹಲವು ಮಾರ್ಗವನ್ನು ಹುಡುಕುತ್ತೇವೆ, ಹಾಗೇ ಅಂತಹ ನಮ್ಮ ಅನಿವಾರ್ಯತೆಯಲ್ಲಿ ಹಾಲು ಹಿಂಡಿಕೊಳ್ಳುವ ಗೋಮುಖವ್ಯಾಘ್ರಗಳು ಹಲವು ಕೂತಿವೆ! ಅವರೈಗೆ ಜನರ ಒಳಿತಿಗಿಂತ ತಮ್ಮ ಹುಂಡಿಗೆ ಎಷ್ಟು ಬಿತ್ತು ಎಂಬುದೇ ಲೆಕ್ಕ! ಇಂತಹ ಫೈವ್ ಸ್ಟಾರ್ ಜ್ಯೋತಿಷಿಗಳು ವಿದೇಶಗಳಿಗೂ ಹೋಗುತ್ತಿರುತ್ತಾರೆ, ರಾಜಕಾರಣಿಗಳಿಗೆ ತಾವು ಭವಿಷ್ಯ ಹೇಳಿದ್ದರಿಂದಲೇ ಅವರು ಬೆಳೆಯಲು ಸಾಧ್ಯವಾಯಿತು ಎನ್ನುತ್ತಾರೆ. ಅಕಸ್ಮಾತ್ ಭವಿಷ್ಯ ಸುಳ್ಳಾದರೆ "ನಿಮ್ಮ ಹುಟ್ಟಿದ ಘಳಿಗೆ ಸರಿಯಿಲ್ಲ ಅದು ಸರಿ ಇದ್ದರೆ ಭವಿಷ್ಯ ಸುಳ್ಳಾಗುವುದೇ ಇಲ್ಲ" ಎನ್ನುತ್ತಾರೆ ಅಥವಾ ಇದ್ದಕ್ಕಿದ್ದಲ್ಲೇ ಕೆಲವು ದಿನ ನಾಪತ್ತೆಯಾಗಿಬಿಡುತ್ತಾರೆ! [ಕಲ್ಲು ಬೀಳುವುದನ್ನು ತಪ್ಪಿಸಿಕೊಳ್ಳಬೇಕಲ್ಲ!]

ಹಾಗದ್ರೆ ವಾಸ್ತು-ಜ್ಯೋತಿಷ್ಯ ಇವೆಲ್ಲ ಊರ್ಜಿತವಿಲ್ಲವೇ ? ಅವು ಹೆಳುವುದು ಸತ್ಯವಲ್ಲವೇ ಎಂದರೆ- ಇವೆಲ್ಲ ಒಂದು ರೀತಿಯಲ್ಲಿ ಗೋಚಾರ ವಿಜ್ಞಾನಗಳು. ಆದರೆ ಇದನ್ನು ಸಮರ್ಪಕವಾಗಿ ಕಲಿತ, ಅಳವಡಿಸಿಕೊಂಡ ಜನ ಕೇವಲ ಬೆರಳೆಣಿಕೆಯಷ್ಟು. ಮತ್ತು ಈ ವಿದ್ಯೆಗಳಿಗೆ ಆಧ್ಯಾತ್ಮಿಕ ಅನುಸಂಧಾನ ಮತ್ತು ಜಪ--ತಪದ ಫಲ ಸೇರಿರಬೇಕಾಗಿರುವುದರಿಂದ ಪಟ್ಟಣ-ಶಹರಗಳಲ್ಲಿ ಜಪ-ತಪವನ್ನು ಮಾಡಲು ಸರಿಯಾದ ಜ್ಯೋತಿಷಿಗಳಿಗೆ ವ್ಯವಸ್ಥೆ ಕಮ್ಮಿ ಇರುವುದರಿಂದ ಅವರು ಹಳ್ಳಿಯ ಮೂಲೆಗಳಲ್ಲೇ ಇರುತ್ತಾರೆ ಮತ್ತು ಕಾಸಿಗಾಗಿ ಇದನ್ನೇ ವೃತ್ತಿಯಾಗಿ ಸ್ವೀಕರಿಸುವ ಜನ ಅಲ್ಲ ಅವರು! ಶಹರದಲ್ಲಿರುವ ಎಲ್ಲಾ ಜ್ಯೊತಿಷಿಗಳೂ ಒಂದಿಲ್ಲೊಂದು ರೀತಿಯಲ್ಲಿ ಹಾದಿ ತಪ್ಪಿಸುವವರೇ ಆಗಿರುತ್ತಾರೆ-ಎಚ್ಚರವಿರಲಿ!

ಬಂಗಲೆಗಳಲ್ಲಿ ಇದ್ದುಕೊಂಡು -ಕಾರುಗಳಲ್ಲಿ ಓಡಾಡಿಕೊಂಡು ತಮ್ಮ ವ್ಯವಹಾರ ಇಟ್ಟು ನಡೆಸುವ ಇಂಥವರಿಗೆ ಹಲವು ಸ್ವಯಂವರ ಎನ್ನುವ ಕಾರ್ಯಕ್ರಮಗಳು, ಬೆಳಗಿನ ಮಂಗಲಮುಹೂರ್ತದ ಸಮಯಗಳು ಮಾಧ್ಯಮಗಳಲ್ಲಿ ಸಿಕ್ಕು ಇವರಿಗೆಲ್ಲ ಒಳ್ಳೇ ಮಸಾಲೆ ದೋಸೆ ಸಿಕ್ಕಹಾಗಾಗಿದೆ! ಚೆನ್ನಾಗಿ ಮೇಯುತ್ತಲೇ ಇದ್ದಾರೆ! ಇದರಲ್ಲಿ ಸಂಖ್ಯಾಶಾಸ್ತ್ರ ಎಂಬುದೊಂದು ಹೊಸ ಗೋಳು. " ನಿಮ್ಮ ಹೆಸರಿಗೆ ಈ ನಂಬರು ಬರುತ್ತದೆ, ಸ್ವಲ್ಪ ಹೀಗೆ ಮಾಡಿಕೊಳ್ಳಿ ಅದರಿಂದ ನಿಮ್ಮ ಗತಿಯೇ ಬದಲಾಗುತ್ತದೆ" ಎನ್ನುವವರು, " ಗಂಡ-ಹೆಂಡತಿ ನೀವು ಮದುವೆಯಾದ ಸಮಯ ಸರಿ ಇರಲಿಲ್ಲ, ಕಾಸುಕೊಡಿ ತಿರುಪತಿಯಲ್ಲಿ ಮರುಮಾಂಗಲ್ಯಧಾರಣೆ ಮಾಡಿಸುತ್ತೇನೆ " ಎನ್ನುವ ಪಾತಕಿಗಳು ಸೇರಿದ್ದಾರೆ. ಕೆಲವರದು ದೊಡ್ಡ ಪರಿವಾರವೇ ಇದೆ! ಅವರು ಅಪ್ಪ-ಮಕ್ಕಳು ಎಲ್ಲಾ ಸೇರಿ ’ಮಿಕ’ವನ್ನು ಹಿಡಿಯುತ್ತವೆ. ಇನ್ನು ಕೆಲವರು ತಮಗೆ ಇನ್ನೂ ೩ ತಿಂಗಳು ಭೇಟಿಗೆ ಅವಕಾಶಕೊಡಲಾಗುವುದಿಲ್ಲ ಎನ್ನುವ ಬ್ಯೂಸಿನೆಸ್ಸು!

ಥರಾವರಿ ಉಂಗುರಗಳು-ಮಣಿಗಳು-ಸರಗಳು,ತಾಯಿತಗಳು-ಯಂತ್ರಗಳು ಏನೆಲ್ಲವನ್ನೂ ಕೊಡುತ್ತಾರೆ ಎಂದರೆ ಸ್ವಲ್ಪ ವಿವೇಚಿಸಿದರೆ ಇವು ಅನಗತ್ಯ ಎನಿಸುತ್ತದೆ ಅಲ್ಲವೇ? ಇಲ್ಲದ ಕಾರಣಹೇಳಿ ಆ ಹೋಮ ಈ ಪೂಜೆ ಮಾಡಿಸಿ ಎನ್ನುವ ಕೆಲವರು ಪುರೋಹಿತರನ್ನು ತಮ್ಮಲ್ಲೇ ಸಂಬಳಕ್ಕೆ ಇಟ್ಟುಕೊಂಡು ಅದನ್ನೂ ನಡೆಸಿಕೊಡಲು ಮುಂದಾಗಿದ್ದಾರೆ. ಇದರಲ್ಲೇ ಮನೆ ಕಟ್ಟಿದ್ದಾರೆ, ವಾಹನ ಖರೀದಿಸಿದ್ದಾರೆ. ಇನ್ನೂ ಕೆಲವರು ಗಳಿಸಿದ ದುಡ್ಡನ್ನು ಅಬ್ಬರದ ಪ್ರಚಾರಕ್ಕಾಗಿ ನೆರೆಪೀಡಿತರಿಗೆ ಸಹಾಯಮಾಡುತ್ತೇವೆ ಎಂದು ಘೋಷಿಸಿದ್ದಾರೆ! [ಇದಕ್ಕೆ ಯಾವ ರಾಜಕಾರಣಿಯ ಕೃಪೆ ಇದೇಯೋ ಗೊತ್ತಿಲ್ಲ!] ಇನ್ನು ಟೆಲಿಮಾರ್ಕೆಟಿಂಗ್ ಮೂಲಕ ಹನುಮಾನ್ ಯಂತ್ರ, ಶನಿಯಂತ್ರ, ವಾಸ್ತುಲಕ್ಷ್ಮಿ ಯಂತ್ರ ಕೊಡುವವರು ಅಲ್ಲದೇ ಗಾಡಿಗೆ ಮಂತ್ರಿಸಿದ ಕಲ್ಲು-ಕಪ್ಪು ಮಸಿಬಳಿದ ಹಗ್ಗ,ಬಿಳಿಯ ಶಂಖ ಇವನ್ನೆಲ್ಲ ಸುರಿದು ಯಾವುದೇ ತೊಂದರೆ ಆಗದಂತೆ ಮಾಡುತ್ತೇವೆ ಎನ್ನುವವರಿದ್ದಾರೆ!

ಒಮ್ಮೆ ವಿಚಾರಮಾಡಿ-ನಮ್ಮ ಹಿಂದಿನ ತಲೆಮಾರಿನ ಜನರೆಲ್ಲ ಬದುಕಿರಲಿಲ್ಲವೇ ? ಮಾಧ್ಯಮಗಳು ಬೆಳೆಯುವ ಮೊದಲು ಅವರು ಇಷ್ಟೆಲ್ಲಾ ತಲೆಕೆಡಿಸಿಕೊಂಡಿದ್ದರೇ? ಅವರಿಗೂ ಕಾಯಿಲೆ-ಕಸಾಲೆ, ಅನುವು-ಆಪತ್ತು ಇತ್ತಲ್ಲವೇ? ಅವರೂ ಗೃಹ--ಗೋಷ್ಠ ಮೊದಲಾದ ಕಟ್ಟಡಗಳನ್ನು ಕಟ್ಟಿಕೊಂಡು ನಡೆದುಬಂದಿದ್ದರಲವೇ? ನಮ್ಮನ್ನೆಲ್ಲ ಬೆಳೆಸಿ ಬಂದಿದ್ದಾರಲ್ಲವೇ? ಹಾಗಾದರೆ ಇತ್ತೀಚೆಹೆಗೆ ಮಾತ್ರ ಇದಕ್ಕೆ ಇಷ್ಟೊಂದು ಪ್ರಾಮುಖ್ಯತೆ ಏಕೆ?

ಜ್ಯೋತಿಷ್ಯ ಕೇವಲ ಗಣಿತವೊಂದನ್ನೇ ಅವಲಂಬಿಸಿಲ್ಲ, ಅಲ್ಲಿ ಅತಿಮಾನುಷ ಶಕ್ತಿಗಳ ಅನುಗ್ರಹ ಬೇಕು. ಅವನ್ನು ಸಂಪಾದಿಸಲು ಒಳ್ಳೆಯ ಮಾರ್ಗದಲ್ಲಿ ಜಪ-ತಪಾದಿ ನಿತ್ಯ ನೈಮಿತ್ತಿಕ ವ್ಯವಹಾರ ಬೇಕು-ಅನುಷ್ಠಾನ ಬೇಕು. ಗಂಟೆಗಟ್ಟಲೇ ಅನುಷ್ಠಾನ ಪರರಾಗುವ ನಿಜ ಜ್ಯೋತಿಷಿಗಳಿಗೆ ಅವರು ಕಾಸಿಗಾಗಿ ಅದನ್ನು ಮಾಡಹೊರಟರೆ-ಮಾರಹೊರಟರೆ ಪಡೆದ ಮಂತ್ರ ಸಿದ್ಧಿ ತೊರೆದುಹೋಗುತ್ತದೆ. ಇದು ಕೇವಲ ಜನರ ಹಿತಾರ್ಥವಾಗಿ ನಮಗೆ ಅರಿವಿಲ್ಲದ ದೇವರೆಂಬ ಮಹಾಶಕ್ತಿ ನಡೆಸಿಕೊಡುವ ವಹಿವಾಟು! ಇಂತಹ ಜ್ಯೋತಿಷ್ಕರು ಬಂಗಲೆ ಕಟ್ಟುವುದಿಲ್ಲ, ಆಫೀಸು ತೆರೆಯುವುದಿಲ್ಲ, ಲ್ಯಾಪ್ ಟಾಪ್ ಇಡುವುದಿಲ್ಲ! ಅಷ್ಟೇ ಏಕೆ ಅವರು ಮಾಧ್ಯಮಗಳಿಗೆ ನೋಡಲೂ ಸಿಗುವುದಿಲ್ಲ. ಅವರು ಪ್ರಚಾರಪ್ರಿಯರಲ್ಲ, ಅವರೌ ಬೂಟಾಟಿಕೆಯ ಜನವಲ್ಲ. ಲೋಕೋಪಕಾರಾರ್ಥ, ಪರೋಪಕಾರಾರ್ಥ " ಸರ್ವೇಷಾಂ ಮಹಾಜನಾನಾಂ ಯೋಗಕ್ಷೇಮಾಭ್ಯುದಯ ಸಿದ್ಧ್ಯರ್ಥಂ " ಎಂಬ ಸಂಕಲ್ಪದೊಂದಿಗೆ ತಮ್ಮ ಗುರುಮುಖೇನ ಪಡೆದ ಆ ರಮಲ ಧಾರೆಯನ್ನು ಹರಿಸುತ್ತಾರೆಯೇ ವಿನಃ ಇರುವ ಇಪ್ಪತ್ತೂ ಬೆರಳಿಗೆ ವಜ್ರ ವೈಢೂರ್ಯಗಳ ಉಂಗುರ ಹಾಕಿಕೊಂಡು ಕುಳಿತುಕೊಳ್ಳುವವರಲ್ಲ! ಇಂಥವರು ವಾರದ ಕೆಲವೇ ತಿಥಿ-ಮಿತಿಯ ದಿನಗಳಲ್ಲಿ ತಮ್ಮ ನೈತಿಕ ನಿಷ್ಠೆಯಿಂದ ಗಳಿಸಿದ ಜಪಸಿದ್ಧಿಯಿಂದ ಪ್ರಸಾದಿಸುವ ನುಡಿ ಕೆಲಸಮಾಡುವುದು ನಿಜ. ಆದರೆ ಯಾರು ಆ ಜನ ಎಲ್ಲಿದ್ದಾರೆ ಎಂಬುದನ್ನು ಹುಡುಕುವುದಕ್ಕೂ ಬಹಳ ಸ್ಮಯವಿರುತ್ತದೆ.

ಹಳ್ಳಿಗಳಲ್ಲೂ ಪುಡಿ ಹಕ್ಕಿ ಶಕುನಿಗಳು ಮಣೆಮೇಲೆ ಅಕ್ಕಿ ಇಟ್ಟು ಭವಿಷ್ಯ ಹೇಳುತ್ತಿದ್ದವರು ಮಾಧ್ಯಮದಲ್ಲಿ ಜ್ಯೋತಿಷಕ್ಕೆ ಜಾಸ್ತಿ ಬೆಲೆಸಿಕ್ಕಮೇಲೆ ಚಿಕ್ಕ ಕೋಣೆ ಬಾಡಿಗೆಗೆ ಹಿಡಿದು ಅಬಿವೃದ್ಧಿ ಸಾಧಿಸಿದ್ದಾರೆ! ಅಪ್ಪಿ-ತಪ್ಪಿ ನಿಜ ಉಸುರುವ ಜ್ಯೋತಿಷಿ ಅಂತ ತಿಳಿದು ಇಂಥವರನ್ನು ಕಂಡಿರೋ ನುಣ್ಣಗೆ ಬೋಳಿಸಿಯೇ ಕಳಿಸುತ್ತಾರೆ!

ಇನ್ನು ವಾಸ್ತು ವಿಷಯಕ್ಕೆ ಬಂದರೆ ಯಾವುದನ್ನು ನಮ್ಮ ಕೈಯ್ಯಲ್ಲಿ ಸಸಾರಕ್ಕೆ ಮಾಡಲು ಆಗುವುದಿಲ್ಲವೋ ಅದನ್ನೇ ವಾಸ್ತುಪುರಾಣಿಕರು ಹೇಳುವುದು. ಮನೆಯಲ್ಲಿ ಅಗ್ನಿಮೂಲೆ-ವಾಯುಮೂಲೆ, ಆಮೂಲೆ ಈ ಮೂಲೆ ಎಲ್ಲಾ ಮೂಲೆಯೂ ಇರುತ್ತವೆ ಸ್ವಾಮೀ, ನಿಮ್ನಿಮ್ಮ ಅನುಕೂಲಕ್ಕೆ ತಕ್ಕಂತೇ ಅದನ್ನು ಅಳವಡಿಸಿಕೊಳ್ಳಿ- ಅದೇ ವಾಸ್ತು- ಅದೇ ಶುದ್ಧ ವಾಸ್ತು. ಚಪ್ಪಲಿ ಸ್ಟ್ಯಾಂಡ್ ಇಡುವಲ್ಲಿ ದೇವರನ್ನು ಇಡಿ ದೇವರನ್ನು ಇಟ್ಟಲ್ಲಿ ಚಪ್ಪಲಿ ಸ್ಟ್ಯಾಂಡ್ ಇಡಿ ಎನ್ನುವುದು ಈ ದುಡ್ಡಿನ ವಾಸ್ತು ಪುರಾಣಿಕರ ವಾಸ್ತು. ಆಫ್ಟರ್ ಆಲ್ ವಾಸ್ತು ಎನ್ನುವುದು ಒಂದು ಸಾಮಾನ್ಯ ಜ್ಞಾನ! ಕಾಮನ್ ಸೆನ್ಸ್- ದಿ ಸೆನ್ಸ್ ವ್ಹಿಚ್ ಈಸ್ ನಾಟ್ ಸೋ ಕಾಮನ್ ! ನಮಗೆ ಕಾಮನ್ ಸೆನ್ಸ್ ಎನ್ನುವುದಿದ್ದರೆ ವಾಸ್ತು ಪುರಾಣಿಕರ ಹಾರ ತುರಾಯಿಗಳು ಶೀಘ್ರ ಮಾಯವಾಗುತ್ತವೆ!

ಅದೆಲ್ಲಾ ಓಕೆ ಈಗ ಇಷ್ಟೆಲ್ಲಾ ಪುರಾಣ ಯಾಕೆ ಎಂದಿರೇ ತಡೆಯಿರಿ- ನಮಗೆ ಇವುಗಳೆಲ್ಲ ಇಲ್ಲದೇ ಬದುಕಲು ಸಾಧ್ಯವಿಲ್ಲವೇ? ಅವರು ನಮ್ಮ ಪರವಾಗಿ ಮಧ್ಯವರ್ತಿಗಳಾಗಿ ದೇವರನ್ನು ಕೂಗಿ ಕರೆಯುವ ಬದಲು ನಾವೇ ಕಯಾ ವಾಚಾ ಮನಸಾ ದಿನವೂ ಕೆಲಸಮಯ ಪ್ರಾರ್ಥಿಸಿ ಕರೆಯುವುದು-ಬೇಡಿಕೊಳ್ಳುವುದು ಸಾಧ್ಯವಾಗದ ಮಾತೇ? ನಮ್ಮ ಪೂರ್ವಿಕರು ಅನುಭವದಿಂದ ಅನುಗ್ರಹಿಸಿದ, ಪಂಚಾಂಗದಲ್ಲಿ ಎಂದಿಗೂ ಲಭ್ಯವಿರುವ ಧ್ವಜಾಯ, ಗಜಾಯ ಮುಂತಾದ ಆಯಗಳನ್ನು ಅವಲೋಕಿಸಿ ಅವೇ ವಾಸ್ತು! ಅಷ್ಟು ಸಾಕು ನಮ್ಮ ಬದುಕಿಗೆ. ಒಂದನ್ನು ಅರ್ಥಮಾಡಿಕೊಳ್ಳಿ- ನಮ್ಮ ಹಣೆಬರಹ ಅದು ಪೂರ್ವ ನಿರ್ಧರಿತ! ಯಾವ ಸರಸ್ವತೀ ಚಕ್ರವಾಗಲೀ ಸುದರ್ಶನ ಚಕ್ರವಾಗಲೀ ವಾಸ್ತು ಯಂತ್ರವಾಗಲೀ ಅದನ್ನು ಬದಲಯಿಸಲು ಸಾಧ್ಯವಿಲ್ಲ! ಅದು ಬದಲಾಗಬೇಕೆಂದು ಬರೆದಿದ್ದರೆ ಅದಕ್ಕೆ ಕಾಸುಕೊಟ್ಟು ಬದಲಾಯ್ಸಿಕೊಳ್ಳುವ ಅವಶ್ಯಕತೆಯಿಲ್ಲ. ಕೇವಲ ಪ್ರಾರ್ಥನೆಯಿಂದ ಸಾಧ್ಯ!

ಮರ್ಕಟ ನ್ಯಾಯ ಮತ್ತು ಮಾರ್ಜಾಲ ನ್ಯಾಯ ಎಂಬಂತೆ ದೇವರು ಯಾರನ್ನೂ ಕೈಬಿಡುವುದಿಲ್ಲ. ಮಾರ್ಜಾಲ ನ್ಯಾಯದಲ್ಲಿ ದೇವರು ಹಲವರನ್ನು ಬೆಕ್ಕು ತನ್ನ ಎಳೆಯ ಮರಿಗಳನ್ನು ಬಾಯಲ್ಲಿ ನೋವಾಗದಂತೆ ಕಚ್ಚಿ ಬೇರೆಡೆ ಸಾಗಿಸುವಂತೆ ಕಷ್ಟದಿಂದ ಸುಖದೆಡೆಗೆ ಸಾಗಿಸಿದರೆ, ಸ್ವಲ್ಪ ನತದೃಷ್ಟರು ಜಾಸ್ತಿ ಪ್ರಾರ್ಥಿಸಿದಾಗ ನಾವೇ ದೇವರನ್ನು ಮಂಗನ ಮರಿ ತಾಯಿ ಮಂಗನನ್ನು ಅಪ್ಪಿಕೊಂಡಂತೆ ಅಪ್ಪಿಕೊಂಡಾಗ ಅಲ್ಲಿ ನಮ್ಮನೆಲ್ಲ ಕಷ್ಟದ ನೆರೆನೀರಿಂದ ಹೊರಗೆ ಸಾಗಿಸಿ ನಮಗೊಂದು ಸುಖದ ವಾಸ್ತವ್ಯ ಕಲ್ಪಿಸುತ್ತಾನೆ-ಇದು ಮರ್ಕಟನ್ಯಾಯ. ನಮ್ನಮ್ಮ ವೈಯಕ್ತಿಕ ನಂಬಿಕೆ ಮತ್ತು ವಿಶ್ವಾಸದ ಮೇಲೆ ನಮಗೆ ಫಲ ದೊರಕುತ್ತದೆ. ನಾವು ಸದಾಚಾರಿಗಳಾಗೋಣ. ದಿನವೂ ಪ್ರಾರ್ಥನೆ ಮಾಡೋಣ-ಕೇವಲ ನಿಷ್ಕಪಟ,ನಿಷ್ಕಳಂಕ ಮನಸ್ಸಿನ ಪ್ರಾರ್ಥನೆಯಿಂದ ಮಾತ್ರ ಪರಿವರ್ತನೆ ಸಾಧ್ಯ.

Saturday, July 10, 2010

ಧ್ರುವತಾರೆ



ಚಿತ್ರಕೃಪೆ-ಅಂತರ್ಜಾಲ

ಧ್ರುವತಾರೆ

ಕೆಲವರು ಅದಕ್ಕಾಗೇ ಹುಟ್ಟಿರುತ್ತಾರೆ! ಅವರ ಬದುಕೇ ಒಂದು ಹೋರಾಟ. ಅವರನ್ನು ನೋಡಿ ಉಳಿದವರು ತಿಳಿಯಬೇಕಾದ ನೀತಿ ಬಹಳ. ನಮ್ಮ ಇತಿಹಾಸ ಪುರಾಣಗಳಲ್ಲಿ ಹಲವಾರು ಪಾತ್ರಧಾರಿಗಳು ಬಂದು ಹೋಗುತವೆ, ಆದರೆ ಕೆಲವೊಂದು ನಮ್ಮ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಬಿಡುತ್ತವೆ. ಯಾಕೋ ಆ ಪಾತ್ರವನ್ನು ಮರೆಯಲು ನಮ್ಮಿಂದ ಸಾಧ್ಯವಾಗುವುದೇ ಇಲ್ಲ! ಎಲ್ಲೇ ಹೋಗಲಿ, ಏನೇ ಮಾಡಲಿ ಆಗಾಗ ಆಯಾ ಪಾತ್ರಗಳ ಮಗ್ಗಲು ಬದಲಾಗುತ್ತಿರುತ್ತದೆ! ಒಮ್ಮೆ ರಾಮ ಬಂದರೆ ಇನ್ನೊಮ್ಮೆ ಕೃಷ್ಣ ಬಂದಹಾಗೇ ಜನಾನುರಾಗೀ ಜೀವಗಳ ನೆನಪು ಸದಾ ಕಾಡುತ್ತದೆ. ಅವರು ನಮ್ಮವರೇ ಎಂಬ ಅವಿನಾಭಾವ ಸಂಬಂಧ ಬೆಸೆದುಕೊಳ್ಳುತ್ತದೆ. ಅವರನ್ನು ನಾವು ಸಾಕ್ಷಾತ್ ನೋಡಿದ್ದರೆ ಎಷ್ಟು ಚೆನ್ನಾಗಿತ್ತು ಅನಿಸುತ್ತದೆ. ’ಅವರ ಸಾಮೀಪ್ಯ ಇದ್ದಿದ್ದರೆ’ ಅನಿಸುತ್ತದೆ! ಅವರು ಹೇಗಿದ್ದಿರಬಹುದು ಎಂಬ ಕುತೂಹಲ ಕಾಡುತ್ತದೆ. ಅವರ ಕಾಲದ ಅವಶೇಷಗಳ ಹುಡುಕುವಿಕೆಗೆ ಮನ ಮುಂದಾಗುತ್ತದೆ. ಕೆಲವೊಮ್ಮೆ ಅವರೂ ಮನುಷ್ಯರೇ ಆಗಿದ್ದರು ಎಂಬುದನ್ನು ನಂಬಲಾಗದ ಅವರನ್ನು ದೇವರಸ್ಥಾನದಲ್ಲಿಟ್ಟು ಪೂಜಿಸುವ ಮನಸ್ಸು! ಹಾಗಾದರೆ ರಾಮ ಕೃಷ್ಣ ಇವರೆಲ್ಲ ಹೇಗೆ ಹಾಗೆ ನಾಯಕರಾದರು? ಅವರಲ್ಲಿರುವ ವಿಭಿನ್ನ ಮನೋದಾರ್ಷ್ಟ್ಯತೆ ಏನು? ಅವರ ಸ್ವಭಾವ ಎಂತಹದ್ದು? -ಇದನ್ನೆಲ್ಲ ನಾವು ತಿಳಿದು ಕೊಂಡರೆ ಅವರ ವ್ಯಕ್ತಿತ್ವ ವಿಶೇಷಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೆ ಆಗ ನಮ್ಮ ಬದುಕು ಮೇಲ್ಮಟ್ಟಕ್ಕೆ ಹೋಗುತ್ತದೆ, ನಮ್ಮಲ್ಲಿ ಒಳ್ಳೆಯತನ ಬೆಳೆಯುತ್ತದೆ, ನಮ್ಮ ಆತ್ಮವಿಶ್ವಾಸ ವೃದ್ಧಿಸುತ್ತದೆ, ನಮ್ಮ ಜೀವನದ ಗತಿಯೇ ಪೂರಕ ಕೆಲಸಗಳನ್ನು ಮಾಡಲು ಉದ್ಯುಕ್ತವಾಗುತ್ತದೆ! ಇಂತಹ ಅಪರೂಪದ ಪಾತ್ರಗಳ ಸಾಲಿನಲ್ಲಿ ಶ್ರೀ ವಿಷ್ಣುಪುರಾಣ ಮತ್ತು ಶ್ರೀಮದ್ಭಾಗವತದಲ್ಲಿ ಉಲ್ಲೇಖವಾಗಿರುವ ಧ್ರುವ ಚರಿತ್ರೆಯೂ ಒಂದು.

ಸ್ವಯಂಭೂ ಮನುವಿನ ಮಗನಾದ ಉತ್ತಾನಪಾದ ರಾಜನಿಗೆ ಸುನೀತಿ ಎಂಬ ಹೆಂಡತಿಯಲ್ಲಿ ಜನಿಸಿದ ಅದ್ಭುತ ಪ್ರತಿಭೆಯೇ ಧ್ರುವ. ಉತ್ತಾನಪಾದ ರಾಜನಿಗೆ ಇನ್ನೊಬ್ಬಳು ಹೆಂಡತಿಯಿದ್ದಳು-ಅವಳೇ ಸುರುಚಿ. ಸುರುಚಿಯಲ್ಲಿ ಪಡೆದ ಮಗನ ಹೆಸರು- ಉತ್ತಮ. ರಾಜಾ ಉತ್ತಾನಪಾದನಿಗೆ ಉತ್ತಮನೆಂದರೆ ಬಹಳ ಅಕ್ಕರೆ. ಅವನು ಯಾವಾಗಲೂ ತಂದೆಯ ತೊಡೆಯೇರಿ ಆಡುತ್ತಿರುತ್ತಿದ್ದ.

ಒಮ್ಮೆ ಧ್ರುವ ಮತ್ತು ಉತ್ತಮ ಈರ್ವರೂ ಆಡುತ್ತಿರುವಾಗ ಅವರಿಗೆ ತನ್ನ ತಂದೆಯ ತೊಡೆಯೇರುವ ಆಸೆಯಾಯಿತು. ಕಿರಿಯ ಹೆಂಡತಿಯ ಕಾರಣದಿಂದ ಉತ್ತಾನಪಾದನಿಂದ ಅಸಡ್ಡೆಗೊಳಗಾಗಿದ್ದ ಸುನೀತಿಗೆ ಪಟ್ಟದ ಸಿಂಹಾಸನದಲ್ಲಾಗಲೀ ರಾಣೀವಾಸದಲ್ಲಾಗಲೀ ಯಾವುದೇ ಆದ್ಯತೆ ಇರಲಿಲ್ಲ. ರಾಜ ಏನಿದ್ದರೂ ಸುರುಚಿಯನ್ನೇ ಕೇಳಿ ನಿರ್ಧಾರಕ್ಕೆ ಬರುತ್ತಿದ್ದ, ಅವಳನ್ನೇ ಕೂರಿಸಿಕೊಂಡು ವಿಷಯ ವಿವೇಚನೆ ಮಾಡುತ್ತಿದ್ದ. ಸುರುಚಿಯ ಧೂರ್ತತನದಿಂದ ಸುನೀತಿ ಬೇಸತ್ತಿದ್ದಳು. ದಿನವೂ ಕಣ್ಣೀರಲ್ಲೇ ಕೈತೊಳೆವ ಕರ್ಮ ಅವಳದಾಗಿತ್ತು. ಹೀಗಿರುತ್ತ ಆಡುತ್ತಿರುವ ಮಗ ಬಂದು ತನ್ನ ತಂದೆಯನ್ನು ತೋರಿಸೆಂದು ಕೇಳಿದಾಗ ಸುನೀತಿ ದೂರದಿಂದಲೇ ಕೈ ತೋರುತ್ತ ರಾಜ ಉತ್ತಾನಪಾದನ ಬಗ್ಗೆ ಹೇಳಿದಳು, ಮತ್ತು ತನ್ನನ್ನು ನಿನ್ನ ತಂದೆ ಹತ್ತಿರ ಹೋಗಗೊಡುವುದಿಲ್ಲವಾದ್ದರಿಂದ ತಾನು ಅಲ್ಲೆಲ್ಲೂ ಹೋಗುವುದಿಲ್ಲವೆಂಬುದಾಗಿ ತಿಳಿಸಿದಳು. ಆಡುವ ಹುಡುಗರೀರ್ವರೂ ಆಡುತ್ತ ನಾ ಮುಂದು ತಾ ಮುಂದು ಎಂದು ತಂದೆಯ ತೊಡೆಯನೇರಲು ಹೋದರು.

ಇದನ್ನು ಕಂಡ ಸುರುಚಿ ದ್ರುವನನ್ನು ಗದರಿದಳು ಮಾತ್ರವಲ್ಲ ಆತನನ್ನು ಆತನ ತಂದೆಯ ತೊಡೆಯಮೇಲಿಂದ ನೂಕಿಬಿಟ್ಟಳು. "ನಿನಗೇನಿದ್ದರೂ ವಿಷ್ಣು ಸಾನ್ನಿಧ್ಯವೇ ಗತಿ, ಜಪಿಸು ಹೋಗು" ಎಂದು ರಕ್ಕಸ ನಗೆ ನಕ್ಕಳು. ಹಸುಗೂಸು ಧ್ರುವನಿಗೆ ಬಹಳ ಬೇಸರವಾಯಿತು. ಮನಸ್ಸು ಬಹಳ ನೊಂದಿತು. ಆತ ನೇರವಾಗಿ ಅಳುತ್ತ ತನ್ನ ತಾಯಿ ಸುನೀತಿಯೆಡೆಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿದ. ತಾಯಿ ಅವನಿಗೆ ವಿಷ್ಣು ನಾಮ ಭಜಿಸುವುದನ್ನೇ ಛಲದಿಂದ ಮಾಡಲು ಹೇಳಿದಳು.

ಬಾಲಕ ಧ್ರುವ ಬಹುಬೇಗ ಅಮ್ಮನಿಂದ ಬೀಳ್ಕೊಂಡು ಏಕಾಂಗಿಯಾಗಿ ಘೋರ ಕಾನನವನ್ನು ಸೇರಿದ. ಅವನಿಗೆ ವಿಷ್ಣುಪದವೋಂದನ್ನು ಬಿಟ್ಟರೆ ಕಾಲಾಕಾಲ ಅಥವಾ ಕ್ರೂರ ಮೃಗಗಳು , ಕಳ್ಳ-ಕಾಕರು ಇವುಗಳ ಪರಿವೆಯೇ ಇರಲಿಲ್ಲ. ತನ್ನ ದೂರದೃಷ್ಟಿಯಿಂದ ಇದನ್ನು ಮನಗಂಡ ದೇವರ್ಷಿ ನಾರದರು ದಾರಿಯಲ್ಲಿ ಧ್ರುವನಿಗೆ ಸಿಕ್ಕರು. ಆತನ ಕಠಿಣ ಮನೋಗತವನ್ನು ತೊರೆಯುವಂತೆಯೂ ಅದು ಬಾಲಕರಿಗೆಲ್ಲ ಹೇಳಿಸಿದ್ದಲ್ಲವೆಂದೂ ಹೇಳಿದರು. ಧ್ರುವ ಕೇಳಬೇಕಲ್ಲ. ಧ್ರುವನಿಗೆ ತಾನು ಬಾಲಕ ಎಂಬುದೇ ಮರೆತು ಹೋಗಿತ್ತು! ಅವನಿಗೆ ವಿಷ್ಣು ಪಾದದ ಭಜನೆಯೊಂದೇ ಬೇಕಾಗಿತ್ತು. ಇದನ್ನೇ ನಾರದರಿಗೆ ಅರುಹಿದ ಆತ ತನ್ನ ಅಚಲ ನಿರ್ಧಾರವನು ಪ್ರಕಟಗೊಳಿಸಿದ. ಇದನ್ನು ತಿಳಿದ ನಾರದರು ತಪಸ್ಸಿನ ಮಾರ್ಗ ಮತ್ತು ಧರ್ಮವನ್ನೂ, ಗುರಿತಲುಪುವ ಬಗೆಯನ್ನೂ ಮತ್ತು ದಿವ್ಯ ಮಂತ್ರವನ್ನೂ ಉಪದೇಶಿಸಿ ಆತನನ್ನು ಹೃತ್ಪೂರ್ವಕ ಹರಸಿ ಅಲ್ಲಿಂದ ಅಂತರ್ಧಾನರಾದರು.

ಬಾಲಕ ಧ್ರುವ ಸಮತಟ್ಟಾದ ದಿಬ್ಬವೊಂದನ್ನು ಹುಡುಕಿ ಪದ್ಮಾಸನಹಾಕಿ ಕುಳಿತು ನಾರದರು ಉಪದೇಷಿಸಿದಂತೇ ಏಕೋಭಾವದಿಂದ " ಓ ನಮೋ ಭಗವತೇ ವಾಸುದೇವಾಯ " ಎಂಬ ಮಂತ್ರವನ್ನು ಜಪಿಸುತ್ತ ನಿರಾಹಾರಿಯಾಗಿ ಆರು ತಿಂಗಳುಗಳನ್ನೇ ಕಳೆದ. ಅವನ ಆ ಮನಸ್ಸಿನ ಸಮಾಧಿಸ್ಥಿತಿಯಲ್ಲಿ ಆತನಿಗೆ ಹೊರಜಗತ್ತಿನ ಯಾವುದೇ ಆಗುಹೋಗುಗಳಾಗಲೀ ಅನ್ನಾಹಾರದ ಗೊಡವೆಯಾಗಲೀ ಇರಲೇ ಇಲ್ಲ! ಆತನ ರಕ್ಷಣೆಗೆ ನಿಸರ್ಗವೇ ನಿಂತಿತ್ತೇ ಹೊರತು ಬೇರಾರೂ ಅಲ್ಲಿರಲಿಲ್ಲ. ಅಂತೂ ಆತನ ತಪದ ಬಿಸಿ ವೈಕುಂಠ ತಲುಪಿ ಶ್ರೀಮನ್ಮಹಾವಿಷ್ಣು ಧರೆಗಿಲೀಡೂ ಬಂದ. ಬಂದದ್ದು ಹೌದು ಆದರೆ ಬಾಲಕ ಸಮಾಧಿ ಸ್ಥಿತಿಯಿಂದ ಮೇಲೇಳಬೇಕಲ್ಲ. ಆತನಿನ್ನೂ ಎದುರಿಗೆ ಬಂದ ದೇವರನ್ನೇ ತಿಳಿಯದೇ ಕೇವಲ ಮನಸ್ಸಿನ ತುರ್ಯಾವಸ್ಥೆಯಲ್ಲಿ ಮಹಾವಿಷ್ಣುವನ್ನು ಕಾಣುತ್ತಲೇ ಇದ್ದ. ಇದನ್ನು ತಡೆದು ತಾನು ಬಂದಿದ್ದೇನೆನಲು ವಿಷ್ಣು ಧ್ರುವನ ಮನಸ್ಸಿನ ಸಾಂಗತ್ಯವನ್ನು ನಿಲ್ಲಿಸಿದ; ತನ್ಮೂಲಕ ಆತ ಕಣ್ಣುತೆರೆದು ನೋಡುವಂತೇ ಮಾಡಿದ. ಕಣ್ತೆರೆದ ಧ್ರುವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆತ ತನ್ನ ಕಣ್ಣು-ಕೈಕಾಲುಗಳನ್ನೇ ಮುಟ್ಟಿಕೊಳ್ಳುತ್ತ ಎದುರಿಗಿರುವುವ ಸತ್ಯವನ್ನು ಸತ್ಯವೇ ಹೌದೋ ಅಥವಾ ಬ್ರಮೆಯೋ ಎಂಬುದನ್ನು ತಿಳಿದು ತದನಂತರ ಎದುರಿಗಿರುವ ಶ್ರೀ ಮಹಾವಿಷ್ಣುವನ್ನು ನೋಡತೊಡಗಿದ. ಆತನಿಗೆ ಬಾಯಿಂದ ಮಾತೇ ಹೊರಡದ ಹಾಗಾಗಿತ್ತು. ತನ್ನ ಪಾಂಚಜನ್ಯದಿಂದ ಪೋರನ ಕೆನ್ನೆಯನ್ನು ಸವರಿದ ಮಹಾವಿಷ್ಣು. ತಕ್ಷಣ ಧ್ರುವನ ಬಾಯಿಂದ ೧೨ ಸರ್ಗಗಳ ಸ್ತುತಿಯೋಮ್ದು ಹರಿದುಬಂತು. ಅದೇ ಧ್ರುವ ಸ್ತುತಿ ಎಂದು ಹೆಸರುಪಡೆಯಿತು.

ಬಂದ ದೇವರು ತಾನು ಆತನ ತಪಸ್ಸಿಗೆ ಮೆಚ್ಚಿದ್ದಾಗಿಯೂ ಬೇಕಾದ ವರವನ್ನು ಕೇಳೆಂದೂ ಹೇಳಲಾಗಿ ಬಾಲಕ ತನಗೆ ವಿಷ್ಣುವಿನ ಧ್ಯಾನವಷ್ಟೇ ಸಾಕು ಇನ್ನೇನೂ ಬೇಡವೆಂದ. ಇನ್ನೂ ಏನಾದರೂ ಕೇಳು ಎಂದು ಭಗವಂತ ಒತ್ತಾಯಿಸಲಾಗಿ ಸಪ್ತರ್ಷಿಗಳೆಲ್ಲ ಸೇರಿ ಇಂತಹ ಎಳೆಯ ಸಾಧಕನಿಗೆ ಶಾಶ್ವತ ಧ್ರುವಪದವೇ ಪರಮಯೋಗ್ಯವೆಂದು ಪರೋಕ್ಷ ನಿರ್ಧರಿಸಿ ಬಾಲಕನ ಬಾಯಿಂದ ಅದನ್ನೇ ಬರುವಂತೆ ಮಾಡಿದರು. " ಎಂದಿಗೂ ಮಲತಾಯಿ ದೂಡದ ಒಂದು ರಾಜ್ಯವನಿತ್ತು ಕರುಣಿಸು" ಎಂದು ಧ್ರುವ ಕೇಳಿಕೊಂಡ. ಮಹಾವಿಷ್ಣು ತಥಾಸ್ತು ಎಂದು ಹರಸಿ ಅಂತರಿಕ್ಷದಲ್ಲಿ ಹಾರಿ ಕಣ್ಮರೆಯಾದ.

ತರುವಾಯ ಅರಮನೆಗೆ ಮರಳಿದ ಧ್ರುವನನ್ನು ಸುದ್ದಿತಿಳಿದ ಅರಮನೆಯ ಪುರಜನರು-ಪರಿಜನರು ಸಂಭ್ರಮದಿಂದ ಸ್ವಾಗತಿಸಿದರು. ಆರು ವರ್ಷದ ಹಸುಳೆ ರಾಜನ ಸ್ಥಾನದಲ್ಲಿ ಕೂತು ಕಿರೀಟ ಧರಿಸಿ ಬಹುಕಾಲ ನೀತಿಯುಕ್ತ ರಾಜ್ಯಭಾರಮಾಡಿದ. ನಂತರ ಪರಮಾತ್ಮ ಕರುಣಿಸಿದ, ಪ್ರಳಯಕಾಲದಲ್ಲೂ, ಕಲ್ಪಾಂತರದಲ್ಲೂ ಬದಲಾಗದ ಶಾಶ್ವತ ಮಿಂಚುವ ಮಿನುಗುತಾರೆ ಯಾಗಿ ಧ್ರುವತಾರೆಯಾಗಿ ಬಾನಂಗಳದಲ್ಲಿ ಸ್ಥಾನಪಡೆದ.

ಯಾವ ಮಗು ಹಂಸತೂಲಿಕಾತಲ್ಪದಲ್ಲಿ ಮಲಗಿ ಸುಖವಾಗಿ ಉಂಡುಟ್ಟು ಬೆಳೆಯಬೇಕಿತ್ತೋ ಅಂತಹ ಸಣ್ಣ ಹುಡುಗ ಕಾಡಿಗೆ ಹೋದ, ಕಠಿಣ ವೃತ ಪಾಲಿಸಿದ! ಅಪ್ಪನ ಪ್ರೀತ್ಯಾದರಗಳಿಲ್ಲದ ಆ ಮನ ಅದೆಷ್ಟು ನೋಂದಿತ್ತೋ ಆ ಕಾಲಕ್ಕೆ. ತನಗೆ ಪ್ರೀತಿ ಹಾಗಿರಲಿ ಕ್ಷಣಕಾಲ ಅಪ್ಪನ ತೊಡೆಯಮೇಲೆ ಕೂರಲೂಜಾಗಸಿಗದಾಗ, ತಾನು ನೂಕಲ್ಪಟ್ಟು ಕೆಳಗೆ ಬಿದ್ದಾಗ ಆದ ಅಸಹನೀಯ ಅವಮಾನ ಹೇಗಿರಬೇಡ ? ಇಲ್ಲಿ ಸುರುಚಿಯ ಹೊಟ್ಟೆಕಿಚ್ಚು-ರಾಜನ ಅನೀತಿ,ಅಸಡ್ಡೆಯ ಸ್ವಭಾವಗಳು, ಸುನೀತಿಯ ಅಸಹಾಯಕತೆ ಮತ್ತು ಬಾಲಕನ ಗುರಿತಲ್ಪುವ ಅಚಲ ನಿರ್ಧಾರ ಇವುಗಳನ್ನು ಕಾಣುತ್ತೇವೆ. ಹಿಂದೆ ಕಥಾರೂಪ ಇತಿಹಾಸವೆಂದು ಪರಿಗಣಿತವಾಗಿದ್ದ ಈ ಥರ ವಿಷಯಗಳು ಇಂದಿನ ನಮ್ಮ ಮಕ್ಕಳ ಪಠ್ಯಕ್ರಮದಿಂದ ಜಾರಿಹೋಗಿವೆ. ಗ್ರಾಮೀಣ ಪರಿಸರದಲ್ಲೂ ಕೇವಲ ಬೆರಳೆಣಿಕೆಯಷ್ಟು ಜನ ಈ ಥರದ ಕಥೆಗಳನ್ನು ಮಕ್ಕಳಿಗೆ ಹೇಳುತ್ತಾರೆ,ಮಿಕ್ಕುಳಿದವರು ಟಿ.ವಿ.ಮುಂದೆ ಕಾಲಹರಣ ಮಾಡುತ್ತಾರೆ. ವಿಪರ್ಯಾಸವೇ ಇದು. ನಮ್ಮ ಮಕ್ಕಳಿಗೆ ಮಹಾಭಾರತ-ರಾಮಾಯಣಗಳಂತ ಅದ್ಬುತ ಜೀವನಮೌಲ್ಯಸಾರುವ ಅನುಭವೀ ಕಥನಗಳು ಕೊಡಲ್ಪಡುತ್ತಿಲ್ಲ, ಅವರೆಲ್ಲ ಇಂಗ್ಲೀಷ್ ಓದುತ್ತ ಎಲ್ಟನ್ ಜಾನ್ ಮತ್ತು ಮೈಕೇಲ್ ಜಾಕ್ಸನ್ ಆಗುತ್ತಾರೆ! ಈ ಕಳಕಳಿಯಿಂದ ನಮ್ಮ ಭವ್ಯ ಭಾರತದಲ್ಲಿ ಹಲವು ಧ್ರುವತಾರೆಗಳು ಬೆಳಗಲೆಂದು ಹಾರೈಸಿ ಇಂದಿಗೆ ಈ ಕಥನ-ಕವನ:

ಛಲವಿರಲಿ ಮನದಿ ಗುರುವೇ
ಶ್ರೀ ಹರಿಯೇ ಬಲವಾಗಲೆನಗೆ ಅದುವೆ

ಕೋಪದಿ ತಂದೆಯು ನೀತಿಯ ನೂಕುತ
ಪಾಪದ ಅಮ್ಮನ ಮರೆತನು ವಿಧಿಯೇ
ಆಪದ್ಬಾಂಧವ ಅನಾಥರಕ್ಷಕ
ಕಾಪಾಡೆನುತಲಿ ಈ ಪರಿ ಬೇಡುವೆ

ಸುರುಚಿಕ್ಕಮ್ಮಗೆ ಗುರುಗುಟ್ಟುವ ಚಟ
ಸರಸರ ಬಂದು ತಾ ದರದರನೆಳೆದು
ಹರಹರ ಎನ್ನನು ದೂಡಿದಳಾಗಲೇ
ವರಮಹಾವಿಷ್ಣು ನಿನ್ನನೇ ಪಾಡುವೆ

ಎಂದಿಗೂ ಮಲತಾಯಮ್ಮನು ಕೇಳದ
ಒಂದೇ ರಾಜ್ಯವನಿತ್ತು ನೀ ಹರಸು
ನೊಂದಿದೆ ಈ ಮನ ಪ್ರೀತಿಯ ಕಾಣದೆ
ಬಂದಿನಿತೆನ್ನನು ಹರಸಲು ಕಾಡುವೆ

Friday, July 9, 2010

ಅಭಿನವ ಭಾರತ



ಚಿತ್ರ ಕೃಪೆ :ಅಂತರ್ಜಾಲ

ಅಭಿನವ ಭಾರತ

ನಮ್ಮದೀ ದೇಗುಲವು ಪುಣ್ಯ ಭಾರತದೇಶ
ಪಡೆದು ಬಾ ಹುಟ್ಟಲೊಮ್ಮೆ!
ಹೆಮ್ಮೆಯಲಿ ಬೀಗುವೆವು ಭರತ ಖಂಡವಿದೆಂದು
ದುಡಿದು ಬಾ ನೋಡಲೊಮ್ಮೆ!

ಅಗಣಿತ ವಿದ್ಯೆಗಳ ಆಗರವು ಈ ನೆಲವು
ಸಗರಚಕ್ರವರ್ತಿ ಆಳ್ದ ಜಗವು
ಬಗೆಬಗೆಯ ವೇಷಭೂಷಣಗಳಲಿ ಶೋಭಿಸುವ
ನಗೆಹೊನಲು ಹರಿಸಿದ ಜನರಕಡಲು

ನವರತ್ನ ರಾಶಿಗಳ ಬಳ್ಳ ಬಳ್ಳದಿ ಅಳೆದು
ಉಳ್ಳವರು ಮಾರಿದರು ಯುಗಯುಗಾಂತರದಿ
ಕವಿರತ್ನ ಕಾಳಿದಾಸನು ಮತ್ತೆ ವಾಲ್ಮೀಕಿ
ಹಳ್ಳ-ಹೊಳೆ ಹರಿಸಿದರು ಕಾವ್ಯಗಳ ತೆರದಿ

ಕನ್ನಡಾಂಬೆಯು ಸೇರಿ ಹಲವು ಮಕ್ಕಳ ಬೀಡು
ಸನ್ನಡತೆ-ಸಂಸ್ಕೃತಿಯ ವಿಶ್ವದಾಲಯವು
ಪನ್ನೀರ ಕಾರಂಜಿ ಜನರಗುಣ ಅಪರಂಜಿ
ಮುನ್ನಡೆದ ರಾಷ್ಟ್ರಗಳ ರಾಣಿಯರಮನೆಯು.

ಧುಮ್ಮಿಕ್ಕಿ ಹರಿವಂತ ಹಲವು ನದಿಗಳ ನಾಡು
ಗೊಮ್ಮಟನು ನೆಲೆನಿಂತ ದಿವ್ಯ ಪರಿಸರವು
ಹೊಮ್ಮಿ ಹೊರಹರಿದ ಹಲ ಪ್ರತಿಭೆಗಳ ಸಾಗರವು
ಗಮ್ಮತ್ತು-ಗರದಿಯಾಟವು ನಡೆದ ಸ್ಥಳವು

Thursday, July 8, 2010

ದೇವರು ಕೊಟ್ಟ ’ಭಾಗ್ಯಜ್ಯೋತಿ’ ಕಣ್ಣು




ದೇವರು ಕೊಟ್ಟ ’ಭಾಗ್ಯಜ್ಯೋತಿ’ ಕಣ್ಣು


ದೇವರು ಕೊಟ್ಟ ಭಾಗ್ಯಗಳಲ್ಲಿ ಕಣ್ಣೂ ಕೂಡ ಒಂದು ಭಾಗ್ಯ. ಶರೀರದಲ್ಲಿ ಮುಖ್ಯ ಹಾಗೂ ವಿದ್ಯುದೀಕರಿಸುವ [ಇಲೆಕ್ಟ್ರಿಫಾಯಿಂಗ್ ಇಫೆಕ್ಟ್]ಗುಣ ಹೊಂದಿರುವ ಅಂಗ ಕಣ್ಣು. ಇಂತಹ ಕಣ್ಣಿನ ಬಗ್ಗೆ ಹಿಂದೆ ಬರೆದಿದ್ದೆ, ಮತ್ತೆ ಕೆಲವು ಸಂಗತಿಗಳನ್ನು ಬರೆಯುತ್ತಿದ್ದೇನೆ.

ಹಚ್ಚಿದ ದೀಪ ಕೋಣೆಗೆ ಬೆಳಕನ್ನು ನೀಡುವುದು ಹೇಗೋ ಹಾಗೇ ಸರಿಯಾದ ಕಣ್ಣು ಮನುಜ ಶರೀರಕ್ಕೆ ದೀಪ. ಕಣ್ಣಿದ್ದರೇ ಬಹುತೇಕ ಕೆಲಸಗಳು ಸಾಧ್ಯವೇ ವಿನಃ ಕಣ್ಣಿನ ಹಂಗಿಲ್ಲದೇ ಮಾಡುವ ಕೆಲಸಗಳು ಅತಿ ವಿರಳ. ಒಂದೊಮ್ಮೆ ಕಣ್ಣಿನ ಸಹಾಯವಿಲ್ಲದೇ ಕುರುಡನೊಬ್ಬ ಕೆಲಸಮಾಡುತ್ತಿದ್ದರೆ ಅದು ಆತನಿಗೆ ದೈವೀದತ್ತ ಹೆಚ್ಚುವರಿ ಸೂಕ್ಷ್ಮ ಸಂವೇದನೆಯ ಗುಣದಿಂದ ಮಾತ್ರ ಸಾಧ್ಯ. ಆದರೂ ಅಲ್ಲಿ ಕೆಲಸಕ್ಕೆ ತಗಲುವ ಸಮಯ ಸಾಮಾನ್ಯವಾಗಿ ಬೇಕಾಗುವ ಸಮಯದ ಎರಡು ಮೂರು ಪಟ್ಟು ಹೆಚ್ಚಾಗಿರಬಹುದು. ಹೇಗೆ ಉರಿಯುವ ದೀಪಕ್ಕೆ ಎಣ್ಣೆ ಸಾಲದಿದ್ದರೆ ದೀಪ ಆರಿಹೋಗುವುದೋ ಹಾಗೇ ಕೆಲವರಿಗೆ ಯಾವುದೋ ಪಡೆದ ದೌರ್ಭಾಗ್ಯದಿಂದ ಕಾಣುತ್ತಿದ್ದ ಕಣ್ಣು ಕಾಣದಂತಾಗಬಹುದು! ಉರಿಯುವಾಗ ಹೇಗೆ ಕಪ್ಪನೆಯ ಕದಿರು ಬಂದ ಬತ್ತಿಯಾದರೆ ದೀಪ ತಡವರಿಸಿ ಉರಿಯುವುದೋ ಹಾಗೆಯೇ ಕಣ್ಣ-ಹೂ ಬಂದರೆ ಕಣ್ಣು ಸರಿಯಾಗಿ ಕಾಣಿಸದೇ ಹೋಗಬಹುದು. ಜೋರಾಗಿ ಬೀಸುವ ಗಾಳಿಯಲ್ಲೂ ಮತ್ತು ಗಾಳಿ ಇಲ್ಲದ ನಿರ್ವಾತದಲ್ಲೂ ದೀಪ ಉರಿಯುವುದು ಕಷ್ಟ ಹೇಗೋ ಹಾಗೇ ಕಲುಷಿತ ವಾತಾವರಣದಲ್ಲಿ ಮತ್ತು ವಿಷಪೂರಿತ ಹೊಗೆಯಿರುವಲ್ಲಿ ಕಣ್ಣು ತನ್ನತನ ಕಳೆದುಕೊಳ್ಳಬಹುದು. ಸಿಡಿಮದ್ದು, ಗೊತ್ತಿಲ್ಲದೇ ಬಳಸುವ ಔಷಧಗಳು, ಮೂಢನಂಬಿಕೆಯಿಂದ ಸಮಯಪ್ರಜ್ಞೆ ಇಲ್ಲದೇ ಕಣ್ಣಿಗೆ ಏನನ್ನೋ ಬಿಟ್ಟುಕೊಂಡು ಕಾಲಕಳೆಯುವುದು, ಕಲುಷಿತ ನೀರಿನಲ್ಲಿ ಕಣ್ಣು ತೊಳೆಯುವುದು, ಕಣ್ಣನ್ನು ವಿನಾಕರಣ ಅಥವಾ ನವೆಯಾದಾಗ ಜೋರಾಗಿ ಮತ್ತು ಗಡುಸಾಗಿ ಉಜ್ಜುವುದು,ಫ್ಯಾನ್ಸಿಗಾಗಿ ಕಲರ್ ಕಲರ್ ಕಣ್ಣಿನ ಗ್ಲಾಸ್ ಗಳನ್ನು ಅವುಗಳ ಗುಣಮಟ್ಟ ತಿಳಿಯದೇ ಬಳಸುವುದು ಮುಂತಾದ ಹಲವು ಕಾರಣಗಳಿಂದ ಸರಿಯಾದ ಕಣ್ಣು ಹಾಳಾಗಬಹುದು. ಈ ಎಲ್ಲಾ ಸಂದರ್ಭಗಳ ಬಗ್ಗೆ ಎಚ್ಚರ ಎಂಬ ಸಂದೇಶವನ್ನು ಆರಂಭದಲ್ಲೇ ನೀಡುತ್ತ ಕಣ್ಣಿನ ಬಗ್ಗೆ ಹಿಂದೆ ಹೇಳಿದ್ದರ ಹೊರತಾಗಿ ಕೆಲವು ಮಾಹಿತಿಯನ್ನು ಕೊಡಲು ಉಪಕ್ರಮಿಸುತ್ತಿದ್ದೇನೆ.

ಈಗ ಸದ್ಯಕ್ಕೆ ನೀವು-ನಾವೆಲ್ಲ ಓದುತ್ತಿರುವುದು ನಮ್ನಮ್ಮ ಕಣ್ಣುಗಳಿಂದಲೇ ಅಲ್ಲವೇ? ಕಣ್ಣಿಂದ ಬರೇ ನೋಡುವುದರ ಹೊರತಾಗಿ ಹಲವು ಭಾವನೆಗಳನ್ನೂ ವ್ಯಕ್ತಪಡಿಸಬಹುದು ಎಂಬುದು ನಮೆಗೆಲ್ಲಾ ತಿಳಿದೇ ಇದ್ದರೂ ಯಾವ್ಯಾವ ಭಾವನೆಗಳು ಮತ್ತು ಹೇಗೇಗೆ ಎನ್ನುವುದನ್ನು ಸ್ವಲ್ಪ ಅವಲೋಕಿಸೋಣ.

ಕೋಪ ಬಂದಾಗ ಕಣ್ಣು ಕೆಂಡಕಾರುತ್ತದೆ ಎನ್ನುತ್ತಾರೆ. ಆದರೆ ನಿಜವಾಗಿ ನಮ್ಮ ಕಣ್ಣಲ್ಲಿ ಕೆಂಡ ಇದೆಯೇ ? ಇಲ್ಲ. ಆದರೆ ಒಂದು ಮತು ಸತ್ಯ- ನಮ್ಮ ಕಣ್ಣು ಕೆಲವು ಭಾವನೆಗಳ ಅಲೆಗಳನ್ನು ಹರಿಬಿಡುತ್ತದೆ. ಕಣ್ಣು ನಗುತ್ತದೆ ಎನ್ನುತ್ತಾರಲ್ಲ-ಆದರೆ ಕಣ್ಣಿಗೆ ಪ್ರತ್ಯೇಕ ಬಾಯಿದೆಯೇ ನಗಲಿಕ್ಕೆ? ಇದರರ್ಥ ಕಣ್ಣಿನಲ್ಲಿ ನಡೆವ ವಿವಿಧ ಮಾರ್ಪಾಡುಗಳವು! ಕಣ್ಣು ಸರಿ ಸುಮಾರು ೨೫೬ ಬೇರೆ ಬೇರೆ ಭಾವನೆಗಳನ್ನು ನೋಟಗಳ ರೂಪದಲ್ಲಿ ತೋರ್ಪಡಿಸುತ್ತದೆ. ಬಹಳ ಅಳುವಾಗಲೂ ಕಣ್ಣೀರು ಅತಿಯಾಗಿ ನಗುವಾಗಲೂ ಕಣ್ಣೀರು ಈರುಳ್ಳಿ ಹೆಚ್ಚಿದಾಗಲೂ ಕಣ್ಣೀರು...ಎಲ್ಲಿದೆ ಆ ನೀರಿನ ಸರೋವರ? ಒವರ್ ಹೆಡ್ ಟ್ಯಾಂಕ್ ಯಾವುದು? ಎಂತಹ ವಿಚಿತ್ರ ನೋಡಿ. ಆದರೆ ಸುರಿವ ಆ ನೀರಿನ ಪ್ರಮಾಣದಲ್ಲಿ ಭಿನ್ನತೆ!

ಕಣ್ಸನ್ನೆಯಲೇ ...... ಎಂದು ಕೆಲವು ಹಾಡುಗಳಲ್ಲಿ ಕೇಳುತ್ತೇವೆ. ಕಣ್ಣಿನ್ನಲ್ಲೇ ಸನ್ನೆ ಮಾಡಲು ಸಾಧ್ಯವೆಂದಾಯಿತಲ್ಲ. ಹೌದೌದು ಇದು ಕಾಲೇಜು ಹುಡುಗ-ಹುಡುಗಿಯರಿಗೆ ಗುರುವಿರದೇ ಬಂದ ವಿದ್ಯೆ! " ಆ ಸೂರ್ಯ ಕೂಡ ಕಣ್ಣ್ ಹೊಡೀತಾನ್ ಕಾಣಣ್ಣೋ ..." ಎನ್ನುವ ಸಿನಿಮಾ ಹಾಡನ್ನು ಗುನುಗುನಿಸದ ಹುಡುಗರು ದಶಕದ ಹಿಂದಿರಲಿಲ್ಲ! ಈಗ ಅದು ಹಳೆಯ ಹಾಡು. ಕಣ್ಣಿಂದ ಅನೇಕ ಸಂಕೇತಗಳನ್ನು ಸೃಜಿಸಬಹುದು. ಶೃಂಗಾರ, ಕಾರುಣ್ಯ, ದಯಾ, ಭೀಭತ್ಸ, ಉಗ್ರ, ಭಯಾನಕ,ಪ್ರೇಮ, ವಾತ್ಸಲ್ಯ, ಹಾಸ್ಯ, ಸಂತೋಷ ....ಹೀಗೇ ನವರಸಗಳನ್ನೂ ಬರೇ ಕಣ್ಣಲ್ಲೇ ಅಭಿವ್ಯಕ್ತಗೊಳಿಸಲು ಸಾಧ್ಯ ಮಾತ್ರವಲ್ಲ ಕಣ್ಣಿರದಿದ್ದರೆ ಅವುಗಳ ಅಭಿವ್ಯಕ್ತಿ ಧುಸ್ಸಾಧ್ಯ!

ಹತ್ತೊಂಬತ್ತು ವರ್ಷಗಳ ಹಿಂದೆ ಮೊದಲಗಿ ಬೆಂಗಳೂರಿಗೆ ನನು ಬಂದಾಗ ಸಿಗ್ನಾಲಿನಲ್ಲಿ ನಾಯಿಯೊಂದನ್ನು ನೋಡಿದೆ. ಅದು ಜನರಮಧ್ಯೆ ಹಾಗೆಯೇ ನಿಂತಿತ್ತು. ಕೆಂಪು ದೀಪ ಆರಿ ಹಸ್ರಿರು ದೀಪಬಂದ ತಕ್ಷಣ ಅದು ರಸ್ತೆಯ ಮತ್ತೊಂದು ಬದಿಗೆ ಓಡಿತು. ಅದಾದ ಹಲವು ಸರ್ತಿ ಈ ರೀತಿ ನೋಡಿದ್ದೇನೆ. ಕೆಲವು ನಾಯಿಗಳೂ, ಉಳಿದ ಪಶು-ಪಕ್ಷಿಗಳೂ ಕೂಡ ತಮ್ಮ ಸಂಕೇತಗಳಿಗೆ ಬಳಸುತ್ತವೆ. ಒಮ್ಮೆ ಒಂದು ನಾಯಿಯನ್ನು ದುರುಗುಟ್ಟಿ ನೋಡಿ..ಅದು ಗು ಎನ್ನಬಹುದು.. ಅದರ ಕಣ್ಣು ಸರಿಯಾಗಿ ಕೆಲಸಮಾಡುತ್ತಿದ್ದು ಅದು ಜಾತಿ ನಾಯಿಯಾದರೆ ಹಾಗನ್ನುತ್ತದೆ.....ನಾಯಿ ಜಾತಿಯಾದರೆ ಹಾಗೇ ಬಿದ್ದುಕೊಂಡಿರಬಹುದು! ಮರದ ಮೇಲೆ ಕುಳಿತ ಕಾಗೆಗೆ ಕೆಳಗಿನಿಂದಲೇ ಕಲ್ಲೆತ್ತಿ ಎಸೆದ ಪೋಸು ಕೊಡಿ, ಕಾಗೆ ಕತ್ತು ತಿರುತಿರುವಿ ಕೊನೆಗೊಮ್ಮೆ ಹಾರಿಹೋಗುತ್ತದೆ. ಕೆಲವು ಸಿನಿಮಾಗಳಲ್ಲಿ ಹುಡುಗಿಗೋ ಹೆಂಗಸಿಗೋ ಎದುರುನಿಂತ ಗಂಡಸು ಒಂದೇ ಕಣ್ಣು ಮಿಟುಕಿಸುವುದರಿಂದ ಅವರು ಕೋಪಗೊಂಡು ಚೆನ್ನಾಗಿ ದಬಾಯಿಸುತ್ತಾರೆ-- ಆಮೇಲೆ ಆ ಆ ಗಂಡಸು ಕಣ್ಣಿನ ನರದೌರ್ಬಲ್ಯ ಉಳ್ಳವನು ಎಂಬ ಉತ್ತರಬಂದಾಗ ಸಮಾಧಾನಪಟ್ಟುಕೊಳ್ಳುತ್ತಾರೆ. ಕೆಲವರಿಗೆ ಹಾಗೆ ಕಣ್ಸನ್ನೆ ಮಾಡದಿದ್ದರೇ ಬೇಸರವಾಗಬಹುದು ಬಿಡಿ-ಆ ವಿಚಾರ ಬೇರೆ! ಇಲ್ಲಿ ನೋಡಿ-- ಹೆಂಗಸಿಗೆ/ಹುಡುಗಿಗೆ ಗಂಡಸೊಬ್ಬ/ಹುಡುಗನೊಬ್ಬ ಅಥವಾ ಗಂಡಸಿಗೆ/ಹುಡುಗನಿಗೆ ಹೆಂಗಸೊಬ್ಬಳು/ಹುಡುಗಿಯೊಬ್ಬಳು ಒಂದೇ ಕಣ್ಣು ಮಿಟುಕಿಸುವುದರಿಂದ ಅದರಲ್ಲಿರುವ ಅರ್ಥ ನಿಮಗೀಗ ಅರ್ಥವಾಗಿದೆ!

ಸಂದರ್ಶನಕ್ಕೆ ಕುಳಿತ ಗಂಡಸಿನ/ಹೆಂಗಸಿನ ಕಣ್ಣುಗಳಲ್ಲಿ ಪರಸ್ಪರ ಭಾವನೆಗಳು ಹರಿದಾಡುತ್ತಿರುತ್ತವೆ. ನೇರ ಸಂವಹನದಲ್ಲಿ ಕೆಲವೊಮ್ಮೆ ಕೆಲವರು ಬಹಳ ಆಳವಾಗಿ ಎದುರಿಗಿರುವವರ ಕಣ್ಣಲ್ಲಿ ಏನನ್ನೋ ಹುಡುಕುತ್ತಿರುತ್ತಾರೆ. ಅದು ಅವರ ವೈಯಕ್ತಿಕ ಮಾಹಿತಿಗಳ ಕಲೆಹಾಕುವಿಕೆಗೆ ಬೇಕಾಗಿ ಇರಬಹುದು, ಅಥವಾ ತನಗಿಂತ ಹೆಚ್ಚಿಗೆ ತಿಳಿದುಕೊಂಡ ವ್ಯಕ್ತಿಯನ್ನು ಆಳದವರೆಗೆ ನೂಕಿ ನೋಡುವ ರೀತಿ ಇರಬಹುದು ಅಥವಾ ಆಮೇಲೆ ಈ ಹುಡುಗ/ಹುಡುಗಿ ಎಲ್ಲಿ ಹೇಗೆ ತನಗೆ ಸಿಗಬಹುದು ಎಂಬ ಕಾಮದ ವಾಸನೆ ಇರುವ ನೋಟವಾಗಿರಬಹುದು. ಇದು ಆ ಈರ್ವರ ನಡುವೆ ಮಾತ್ರ ಗೊತ್ತಾಗುವ ವಿಷಯವೇ ಹೊರತು ಬೇರೇ ಸಾಕ್ಷಿ ಇದಕ್ಕಿರುವುದಿಲ್ಲ. ಆದರೆ ಪರಸ್ಪರರ ನೋಟವೇ ಕೆಲವೊಮ್ಮೆ ಸಹಜವಾಗಿದ್ದರೆ ಇನ್ನೊಮ್ಮೆ ಅಸಹಜವಾಗಿರಬಹುದು ಮತ್ತೊಮ್ಮೆ ಹತ್ತಿರ ಸೆಳೆವ ನೋಟವಗಿರಬಹುದು, ಇನ್ನೂ ಕೆಲವೊಮ್ಮೆ ಧಿಕ್ಕರಿಸುವ ನೋಟ, ಮಗುದೊಮ್ಮೆ ತಾನೇನು ಕಮ್ಮಿ ಎಂಬ ಅಹಮ್ಮಿನ ನೋಟ ಇರಬಹುದು.

ಹೀಗೇ ಮಾಡಿದರೆ ಸರಿ ಹೀಗೇ ಮಾಡಿದರೆ ತಪ್ಪು ಎಂಬ ಚೌಕಟ್ಟನ್ನು ಹಾಕಿ ಬಂಧಿಸುವುದಕ್ಕಿಂತ ಯಾವ ವ್ಯಕ್ತಿ ಎಲ್ಲೆಲ್ಲಿ ಹೇಗೇಗೆ ನೋಟ ಹರಿಸಿದರೆ ಒಳ್ಳೆಯದು ಎಂಬುದನ್ನು ಅವರವರೇ ಅರಿತುಕೊಳ್ಳುವುದು ಒಳ್ಳೆಯದು. ಒಂದೊಮ್ಮೆ ಇದಕ್ಕೆಲ್ಲ ಪಾಠಹೇಳಿ ಕಲಿಸಿದರೂ ಕಣ್ಣಿಗೆ ಬೀಗಹಾಕಲು ಸಾಧ್ಯವಿಲ್ಲವಷ್ಟೇ? ಇಲ್ಲಿ ಇಂದ್ರಿಯ ನಿಗ್ರಹವೆಂಬ ವಿಷಯ ಕೂಡ ತನ್ನ ಒಳಹರಿವನ್ನು ತೆರೆದಿಡುತ್ತದೆ ನೋಡಿ. ಗಂಡಿಗೆ ಹೆಣ್ಣಿಗಿಂತ ಸೌಂದರ್ಯೋಪಾಸನೆ ಜಾಸ್ತಿ ಎನ್ನಬಹುದು, ಅಥವಾ ಅದಕ್ಕಿಂತ ಭಿನ್ನವಾಗಿ ಚೆನ್ನಾಗಿ ಕಂಡ ಹಲವು ವಸ್ತು-ವಿರುದ್ಧ ಲಿಂಗೀ ವ್ಯಕ್ತಿಗಳನ್ನು ತನ್ನದಾಗಿ ಮಾಡಿಕೊಳ್ಳುವಾಸೆ ಪ್ರಕೃತಿ ಸಹಜವಾಗಿ ಗಂಡಿಗೆ ಜಾಸ್ತಿ. ಇದನ್ನರಿತ ಹಲವು ವ್ಯಾಪಾರೀ ಗಂಡುಗಳು ತಮ್ಮ ಮಳಿಗೆಗಳಲ್ಲಿ ಸುಂದರ ಹುಡುಗಿಯರನ್ನು ಕುಳ್ಳಿರಿಸಿ ತನ್ಮೂಲಕ ಪರೋಕ್ಷವಾಗಿ ಬೇರೆ ಗಂಡಸರನ್ನು ತಮ್ಮಲ್ಲಿ ಖರೀದಿಮಾಡುವಂತೆ ಆಕರ್ಷಣೆ ನೀಡುತ್ತಾರೆ. ಹಲವು ಇಂತಹ ಪ್ರದೇಶಗಳಲ್ಲಿ ಮುತ್ತಿನ ನಗೆಚೆಲ್ಲುವ ಚೆಲುವೆಯರ ಚಳುಕು ಥರುವ ಕಣ್ಣೋಟಕ್ಕೆ ಮನಸೋತ ಗಿರಾಕಿ ಒಲ್ಲೆ ಎನ್ನದೇ ಅಲ್ಲಿ ಮರಲ್ಪಡುವ ವಸ್ತುಗಳನ್ನು ಖರೀದಿಸಲು ಮುಂದಾಗುತ್ತಾನೆ!

ಕಣ್ಣಿನ ರೂಪ ವಿನ್ಯಾಸಗಳಲ್ಲಿ ಅಗಲ-ಉದ್ದ-ಆಕಾರಗಳಲ್ಲಿ ಹಲವು ವೈವಿಧ್ಯತೆಗಳನ್ನು ನಾವು ಕಾಣುತ್ತೇವೆ. ಅದು ಈ ಲೇಖನದ ವ್ಯಾಪ್ತಿಗೆ ಹೊರತಾಗಿದ್ದು ಇನ್ನೊಂದಿನ ನಿಮಗೆ ಹಾಸ್ಯರೂಪದಲ್ಲಿ ಕಾಣಸಿಗುತ್ತದೆ!

ಸಾಮಾನ್ಯವಾಗಿ ನಾವು ಸಂವಹಿಸುವಾಗ ಎದುರಿಗಿರುವ ವ್ಯಕ್ತಿ ಯಾರು, ಎಂಥವರು, ಯಾವ ವಯಸ್ಸು-ವರ್ಚಸ್ಸು, ನಾವು ಯಾರು, ನಮ್ಮ ವೈಯಕ್ತಿಕ ಹಕ್ಕು-ಬಾಧ್ಯತೆಗಳೇನು, ನಮ್ಮ ಸದ್ಯದ ಸ್ಥಿತಿ-ಗತಿ ಏನು, ನಮಗೂ ಎದುರಿಗಿರುವ ವ್ಯಕ್ತಿಗೂ ಇರುವ ಸಂಬಂಧವೇನು ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ವ್ಯವಹರಿಸುವುದು ಈಗ ಬೇಕಾದ ವಿಷಯ. ಸಂದರ್ಶನಕ್ಕೆ ಕುಳಿತಾಗ ಎಲ್ಲೆಲ್ಲೋ ನೋಡುತ್ತ ಮಾತನಾಡುವುದು, ನಮ್ಮ ಕಾಲುಗಳನ್ನು ನೋಡುತ್ತ ಮಾತನಾಡುವುದು, ಇನ್ಯಾವುದೋ ಪಕ್ಕದಲ್ಲಿ ಮಂಡಿಸಿದ ವ್ಯಕ್ತಿಯನ್ನು ಸತತ ನೋಡುತ್ತ ಮಾತನಾಡುವುದು, ಸಂದರ್ಶಕರನ್ನು ದುರುಗುಟ್ಟಿ ನೋಡುತ್ತ ಮಾತನಾಡುವುದು, ಕಣ್ಣು ಮುಚ್ಚಿಕೊಂಡು ಮಾತನಾಡುವುದು, ಒಂದು ಅಥವಾ ಎರಡೂ ಕಣ್ಣು ಉಜ್ಜಿಕೊಳ್ಳುತ್ತ ಮಾತನಾಡುವುದು, ಕಣ್ಣು ಹುಬ್ಬಿನ ಹತ್ತಿರ ತುರಿಸಿಕೊಳ್ಳುತ್ತ ಮಾತನಾಡುವುದು, ಒಮ್ಮೆ ನೋಡಿ ನಕ್ಕು ಮತ್ತೆಲ್ಲೋ ನೋಡುತ್ತ ಪುನಃ ನೋಡದೇ ಇದ್ದುಬಿಡುವುದು, ದರ್ಪದಿಂದ ಬೀಗುವ ನೋಟ ಹರಿಸುವುದು, ಯಾವ ಸಂವೇದನೆಯನ್ನೇ ಹರಿಸದ ಕಣ್ಣನ್ನು ಪೇಲವವಾಗಿ ಒಮ್ಮೊಮ್ಮೆ ಹರಿಬಿಡುವುದು, ಸುಸ್ತಾಗಿರುವ ರೀತಿ ಕಣ್ಣು ಹಾಯಿಸುವುದು ಇವೆಲ್ಲಾ ಸರಿಯಾದ ನೋಟಗಳಲ್ಲ.

ಅರಮನೆಗೆ/ಮಂತ್ರಿಗಳಮನೆಗೆ ಹೋದಾಗ ಅವರ ಹೆಂಗಸರನ್ನಾಗಲೀ, ಗುರುಮನೆಗೆ ಹೋದಾಗ ಅಲ್ಲಿರಬಹುದಾದ ಪರಿಚಾರಿಕೆಯರನ್ನಾಗಲೀ, ಶಿಕ್ಷಕರ ಮನೆಗೆ ಹೋದಾಗ ಅವರ ಹೆಂಡತಿ ಅಥವಾ ಮಗಳನ್ನಾಗಲೀ ನೋಡುವಾಗ ಅವನತ ಮುಖಿಯಾದ ಕಣ್ಣುಗಳಿದ್ದರೆ ಹಿತ. ಮನೆಯ ಹಿರಿಯರ ಮುಂದೆ, ದೊಡ್ಡವರ ಮುಂದೆ ಸಹಾ ಆದಷ್ಟು ವಿಧೇಯತೆ ಬಿಂಬಿಸುವ ಕಣ್ಣೋಟವಿದ್ದರೆ ಅದು ಸರಿ. ಸಭೆ-ಸಮಾರಂಭಗಳಲ್ಲಿ ನಮ್ಮ ನೋಟ ಸಭೆಯ ಉದ್ದಗಲಕ್ಕೂ ಓಡಾಡಬೇಕೇ ವಿನಃ ಕೇವಲ ಮುಂದೆ ಕುಳಿತ ಒಬ್ಬಿಬ್ಬರ ಮೇಲೋ ಅಥವಾ ಪರಿಚಿತರ ಮೇಲೋ ಕೇಂದ್ರೀಕೃತವಾಗಿರಬಾರದು. ಯಾವುದೇ ಸಂದರ್ಭದಲ್ಲೂ ದರ್ಪವನ್ನು ತೋರಿಸುವ ನೋಟ ಹರಿಸದಿದ್ದರೆ ಅದು ವಿನಯಕ್ಕೆ ಮತ್ತೊಂದು ಮಜಲನ್ನು ಕೊಡುತ್ತದೆ. ಮಕ್ಕಳನ್ನು ಸುಖಾಸುಮ್ಮನೇ ಕಣ್ಣು ಹಿಗ್ಗಿಸಿ ಹೆದರಿಸುವುದು ಸರಿಯಲ್ಲ. ಪಕ್ಕದಮನೆಯಲ್ಲಿ ಎಷ್ಟೆಲ್ಲಾ ಹಣ್ಣು ತಂದಿದ್ದಾರೆ ಎಂದು ಆಸೆಕಂಗಳಿಂದ ನೋಡುವುದು ಸರಿಯಲ್ಲ.

ಕೆಲವರು ಅಷ್ಟು ದೂರ ಬರುತ್ತಿರುವಾಗಲೇ ಅವರ ಕಣ್ಣನ್ನು ನೋಡಿಯೇ ನಾವು ಅಂದಾಜಿಸುತ್ತೇವೆ- ಬರುತ್ತಿರುವ ವ್ಯಕ್ತಿ ಯಾವ ಥರದವನು, ಅವನು ಕೋಪದಲ್ಲಿದ್ದಾನೋ, ಸಂತೋಷದಲ್ಲಿದ್ದಾನೋ, ಬೇಸರದಲ್ಲಿದ್ದಾನೋ, ಸೊಕ್ಕಿದ್ದಾನೋ, ಸೊರಗಿದ್ದಾನೋ ಇತ್ಯಾದಿ ಅವನ ಕಣ್ಣಲ್ಲಿ ಆತ ತೋರುವ ಮನದಿಂಗಿತಕ್ಕೆ ತಕ್ಕುನಾಗಿ ಭಾಷ್ಯ ಬರೆಯಲು ನೋಟಕರಿಗೆ ಸಾಧ್ಯವಾಗುತ್ತದೆ. ಕಣ್ಣ ಹುಬ್ಬನ್ನು ಆಗಿಂದಾಗ್ಗೆ ಅನಾವಶ್ಯಕವಾಗಿ ಹಾರಿಸುವವರು ಕೆಲವು ಮಂದಿ. ಇದು ರೂಢಿಯಾಗಿಬಿಟ್ಟರೆ ಬೀಡಿ-ಸಿಗರೇಟು ಚಟದಂತೆ ತಪ್ಪಿಸುವುದೇ ಕಷ್ಟ! ಬೊಗಸೆಕಂಗಳು ಎನ್ನುತ್ತೇವಲ್ಲ ಹಾಗೆಂದರೆ ಕಣ್ಣೇನು ಬೊಗಸೆ ತುಂಬಾ ತುಂಬುವಷ್ಟಿವಿಯೇ ? ಕಣ್ಣನ್ನು ನೋಡಿದಾಗ ನಮಗೆ ನಮ್ಮ ಬೊಗಸೆಯಲ್ಲಿ ತನ್ನ ಭಾವನೆಗಳನ್ನೆಲ್ಲ ಆ ವ್ಯಕ್ತಿ ತುಂಬಿಸಿಕೊಟ್ಟ ಅನುಭವವಾಗುತ್ತದೆ. ಅದಕ್ಕೇ ಅವು ಬೊಗಸೆಕಂಗಳು! ನೀಲಲೋಚನ ಅಂದರೆ ಕಣ್ಣೇನೂ ನೀಲಿಗಟ್ಟಿರುವುದಿಲ್ಲ ಬದಲಾಗಿ ಅರ್ಧನಿಮೀಲಿತವಾಗಿ ಜ್ಞಾನಚಕ್ಷುಗಳಂತೇ ಕಂಡುಬರುವುದರಿಂದ ಅವು ನೀಲಲೋಚನಗಳು. ಕಮಲಲೋಚನ ಎಂದರೆ ಕಮಲದಂತೇ ಅರಳಿರುವ ಭಾವವನ್ನು ಹೊರಹೊಮ್ಮಿಸುವ ಕಣ್ಣುಗಳು. ಸುಲೋಚನ--ಯಾವುದೋ ಹುಡುಗಿ ಬಂದು ಬಿಟ್ಟಾಳು! ಸುಲೋಚನ ಎಂದರೆ ಚೆನ್ನಾಗಿರುವಕಣ್ಣು ಅಲ್ಲವೇ? ಅದನ್ನೇ ಕೆಲವರು ಕನ್ನಡಕಕ್ಕೆ ಪರ್ಯಾಯವಾಗಿ ಬಳಸುತ್ತಾರೆಂಬುದನ್ನು ಕೇಳಿದ್ದೇನೆ.

ಎದುರಿಗಿರುವ ವ್ಯಕ್ತಿಯ ಬಹುತೇಕ ಆಯಾಮಗಳು ಅವನ ಕಣ್ಣ ನೋಟದಲ್ಲೇ ಬಿಂಬಿತವಾಗುತ್ತವೆ. ಕೆಲವರನ್ನು ನೋಡಿ--ಅವರು ನಮ್ಮನ್ನು ತಿಂದುಬಿಡುವಂತೆ ನೋಟ ಹರಿಸುತ್ತಿರುತ್ತಾರೆ, ಇನ್ನು ಕೆಲವರು ಎಲ್ಲೋ ಪರಿಚಯವಿರುವವರ ಹಾಗೇ ನೋಡುತ್ತಾರೆ, ಕೆಲವರಿಗೆ ಎದುರಿಗೆ ಯಾರು ಬಂದರೆಷ್ಟು ಹೋದರೆಷ್ಟು! ಅವರಿಗೆ ಭಾವನೆಗಳೇ ಇಲ್ಲವೇನೋ ಎನ್ನುವಂತಿರುತ್ತವೆ ಅವರ ಕಣ್ಣುಗಳು. ಕೆಲವರಿಗೆ ಅನಾಥಪ್ರಜ್ಞೆ ಕಾಡುವ ಕಣ್ಣುಗಳಾದರೆ ಇನ್ನು ಕೆಲವರ್ದು ಅಪರಾಧೀ ಭಾವ ಹೊಮ್ಮಿಸುವ ಕಣ್ಣುಗಳು. ಕುಹಕ ಬುದ್ಧಿಯುಳ್ಳವರ ಕಣ್ಣುಗಳು ಎದುರಿಗಿರುವವರ ಆಯಳತೆ ನಿರ್ಧರಿಸುವ, ಅವರಿಗೆ ಕೀಟಲೆಕೊಟ್ಟು ಮಜಾತೆಗೆದುಕೊಳ್ಳುವ ಗೋಮುಖ ವ್ಯಾಘ್ರನ ರೀತಿಯ ಕಣ್ಣುಗಳಾಗಿದ್ದು ಗುರುತಿಸುವುದು ಭಾರೀ ಕಷ್ಟದ ಕೆಲಸ! ತತ್ವಜ್ಞಾನಿಯೊಬ್ಬನ ಕಣ್ಣುಗಳು ಹಲವರಿಗೆ ಏನನ್ನೋ ಕೊಡಬಯಸುವಂತೆ ವಾತ್ಸಲ್ಯಪೂರಿತವಾಗಿರುತ್ತವಾದರೆ ವಿಜ್ಞಾನಿಗಳ ಕಣ್ಣುಗಳು ಸದಾ ಹುಡುಕುವ ಗಡಿಬಿಡಿಯಲ್ಲಿರುವವು, ನಟನ ಕಣ್ಣುಗಳು ಚಂಚಲವಾದರೆ, ನಟಿಯಲ್ಲಿ ಅವು ಮೀನಿನ ಹೆಜ್ಜೆಯನ್ನು ನೀರಲ್ಲಿ ಹುಡುಕಿದಂತೇ ಆಭಾಸವುಂಟುಮಾಡುವಂಥವು,ಕುಡುಕನ ಕಣ್ಣು ಕೆಂಪಾಗಿ ನಿಸ್ತೇಜವಾಗಿದ್ದರೆ ತಾಪಸರ ಕಣ್ಣು ಚೈತನ್ಯದ ಚಿಲುಮೆಯನ್ನೇ ಹರಿಸುವ ದಿವ್ಯ ಚಕ್ಷುಗಳಾಗಿರುತ್ತವೆ. ರಾಜಸರ ಕಣ್ಣು ಸುಖೋಪಭೋಗಗಳನ್ನು ಲೆಕ್ಕಿಸುವುದಾದರೆ ಲೆಕ್ಕಿಗರ ಕಣ್ಣು ಅಂಕೆಗಳನ್ನು ಜೋಪಾನವಾಗಿ ಗ್ರಹಿಸುವ ತೀಕ್ಷ್ಣಮತಿಯುಳ್ಳವು, ವೈದ್ಯರ ಕಣ್ಣು ರೋಗಿಗೆ ಆಶಾದಾಯಕ ಭಾವನೆಯನ್ನು ಕೊಡುವವಾದರೆ ಜ್ಯೋತಿಷರ ಕಣ್ಣು ಖಗೋಳವನ್ನೇ ನುಂಗಿ ನೀರು ಕುಡಿದ ಮಹಾಪಾಂಡಿತ್ಯದ ಬೂಟಾಟಿಕೆಯಿಂದ ಕೂಡಿದವುಗಳು, ವಿದ್ಯಾರ್ಥಿಯ ಕಣ್ಣು ಪರೀಕ್ಷೆಯ ಚಿಂತೆಯನ್ನು ಸೂಚಿವಂತವಾಗಿದ್ದರೆ ಅಭ್ಯರ್ಥಿಯ ಕಣ್ಣು ಸೋಲು-ಗೆಲುವಿನ ತಳಮಳ ಹೊತ್ತಿರುವವು,ಜ್ಞಾನಿಗಳ ಕಣ್ಣು ಇನ್ನೂ ತಿಳಿದುಕೊಳ್ಳುವ ಕಾತುರದಿಂದ ಕೂಡಿದ್ದರೆ ಪಾತಕಿಗಳ ಕಣ್ಣು ಕ್ರೌರ್ಯವನ್ನು ಮೆರೆಯುವಂಥವು. ಹೀಗೇ ಆಯಾಯ ವ್ಯಕ್ತಿ ಮತ್ತು ಆಯಾಮಗಳಿಗೆ ತಕ್ಕನಾಗಿ ಕಣ್ಣು ಹಲವು ಭಾವನೆಗಳನ್ನು ಹೊರಸೂಸುವ ಮಾಯಾಪೆಟ್ಟಿಗೆಯಾಗಿರುತ್ತದೆ.

ಕಣ್ಣ ನೋತದ ಬಗ್ಗೆ ಹಲವು ಭಾವಗೀತೆಗಳು- ಸಿನಿಮಾ ಹಾಡುಗಳು ಬರೆಯಲ್ಪಟ್ಟವು, ಇನ್ನೂ ಬರೆಯಲ್ಪಡುತ್ತಲೇ ಇವೆ. ಯಾಕೆಂದರೆ ಹೆಣ್ಣ ಕಣ್ಣುಗಳು ಹಲವೊಮ್ಮೆ ಕವನಗಳನ್ನು ಹಾಡುತ್ತವೆ! ನಾಯಕನ ಕಣ್ಣುಗಳು ನಾಯಕಿಗೆ ರುಚಿಸಿದರೆ ನಾಯಕಿಯ ನಯನಗಳು ನಾಯಕನಿಗೆ ಅತಿ ವಿಶಿಷ್ಟವಾಗಿ ಹೊರಹೊಮ್ಮುತ್ತವೆ. ರತಿ-ಮನ್ಮಥರನ್ನು ಗಣನೆಗೆ ತೆಗೆದುಕೊಂಡು ಬರೆಯುವಾಗ ಕಾಮನಬಿಲ್ಲು ಎಂದು ಬರೆದು ಅದನ್ನು ಕಣ್ಣಹುಬ್ಬಿಗೆ ಹೋಲಿಸಿದ್ದಾರೆ. ಪೌರಾಣಿಕ ಕಥೆಗಳನ್ನು ಗಮನಿಸಿದರೆ ಅಲ್ಲಿ ವಿಶ್ವಾಮಿತ್ರ ಮೇನಕೆಯನ್ನು ಕಂಡ ಪ್ರೇಮ ಸಂಚಲಿತ ಕಾಮದ ಕಣ್ಣು, ದುಷ್ಯಂತ-ಶಕುಂತಲೆಯರ ಮೊದಲ ನೋಟದ ಪ್ರೇಮ, ವಾಮನನ ಚಿಕ್ಕ ರೂಪ ಕಂಡು ದಾನಗೈದ ಬಲಿಗೆ ಬಹುದೊಡ್ಡ ರೂಪದ ವಾಮನನ್ನು ತೋರಿದ ಅದೇ ಕಣ್ಣು, ಚಿನ್ನದ ಜಿಂಕೆಯನ್ನು ಕಂಡ ಸೀತೆ ರಾಮ-ಲಕ್ಷ್ಮಣರನ್ನು ಕರೆದು ಅದನ್ನು ತಂದುಕೊಡುವಂತೆ ಮಾಡಿದ ಆ ಕಣ್ಣು, ಮಾರುತಿಗೆ ಶತಯೋಜನ ವಿಸ್ತೀರ್ಣದ ಸಮುದ್ರವನ್ನು ಅತಿ ಚಿಕ್ಕ ಕೂಗಳತೆಯ ನದಿಯದಡಗಳ ರೀತಿ ತೋರ್ಪಡಿಸಿದ್ದು ಅದೇ ಕಣ್ಣು. ಕಣ್ಣಿನ ಭಾಷೆಯ ವ್ಯಾಪಕತ್ವ ಇಷ್ಟಕ್ಕೇ ಸೀಮಿತವಲ್ಲ. ಆದರೆ ಇದ್ದುದರಲ್ಲಿ ಅದನ್ನು ಹೇಗೆ ಬಳಸಿದರೆ ಅನುಕೂಲಕರ ಅಥವಾ ಒಳ್ಳೆಯದು ಎಂದು ತಿಳಿದುಕೊಂಡರೆ ಅದರ ಮಹತ್ವದ ಅರಿವಾಗುತ್ತದೆ.

ಸ್ಥೂಲವಾಗಿ ಹೇಳಿಬಿಡಬಹುದಾದರೆ ಮನಸ್ಸಿಗೆ ವಿಷಯದ ದೃಶ್ಯಮಾಧ್ಯಮಗಳ ಅನುಭೂತಿಯನ್ನು ತರುವ ಅತಿ ವಿಷಿಷ್ಟ ಅಂಗ ನಮ್ಮ ಕಣ್ಣು. ಕಣ್ಣನ್ನು ಕೈಯ್ಯಲ್ಲಿ ಇಟ್ಟುಕೊಳ್ಳೋಣ, ಕಣ್ಣಿಗೆ ಕಂಡಿದ್ದೆಲ್ಲಾ ಬೇಕು ಎನ್ನುವ ಕೊಳ್ಳುಬಾಕ ಸಂಸ್ಕೃತಿಯನ್ನು ಮಟ್ಟಹಾಕೋಣ, ಈ ಕಣ್ಣು ಮನದಲ್ಲಿ ಜ್ಞಾನದ ದೀವಿಗೆಯನ್ನು ಬೆಳಗುವ ಮೂಲ ದೀಪವಾಗಲಿ, ಈ ಕಣ್ಣು ತನ್ನ ಸ್ವಯಂಪ್ರಕಾಶದಿಂದ ಹಲವರ ಬಾಳಿಗೆ ಬೆಳಕನ್ನು ನೀಡಲು ಉಪಕಾರವಾಗುವ ದೀಪವಾಗಲಿ ಎಂದು ಆಶಿಸೋಣವೇ?

Wednesday, July 7, 2010

ಜಗವಾಗಲಿ ಮನೆ

ಜಗವಾಗಲಿ ಮನೆ

ಜಗವದೊಂದು ಮದುವೆಮನೆ
ನಗುವಿನಲೆಯ ನವಿಲಮನೆ
ಮಗುವಿನಂತ ಮುಗ್ಧರಿರುವ
ಬಗೆಬಗೆ ಜೀವಿಗಳಮನೆ

ಸಡಗರದಲಿ ಹಲವರೆದ್ದು
ಗಡಬಡಿಸುತ ಓಡಿ ಹೋಗಿ
ಹಡಗು ರೈಲು ವಿಮಾನವೇರಿ
ಒಡನಾಡುವ ನಡುಮನೆ

ಗುಡುಗು ಮಿಂಚು ಮಳೆಯು ಬಿಸಿಲು
ಗುಡಿ ಮಸೀದಿ ಇಗರ್ಜಿಗಳು
ಮಡಿಮನಸಲಿ ಮಂಡಿಯೂರಿ
ಗಡಿಮೀರಿ ಪ್ರಾರ್ಥಿಪಮನೆ

ಮೃಷ್ಟಾನ್ನದ ಸುಗ್ರಾಸವು
ಅಷ್ಟಾಂಗಕು ಯೋಗ-ಧ್ಯಾನ
ಕಷ್ಟಗಳನು ತಿಳಿದು ಕಳೆದು
ಇಷ್ಟಾರ್ಥವ ಪಡೆವಮನೆ

ಧರ್ಮಕರ್ಮ ಅರ್ಥಗ್ರಹಿಸಿ
ಮರ್ಮವರಿತು ಮನುಜರಾಗಿ
ವರ್ಮ ಅಬ್ದುಲ್ ಆಂಟನಿ ಜತೆ
ಶರ್ಮ ಸೇರಿ ಬಾಳ್ವಮನೆ

Tuesday, July 6, 2010

ಭಾಗೀರಥಿ














ಭಾಗೀರಥಿ


ಭಾಗೀರಥಿ ಬರಲಿಲ್ಲ ಎಂಬುದು ಎಲ್ಲರ ಮನಸ್ಸಿಗೆ ಬೇಸರತಂದಿತ್ತು. ಬಹಳಕಾಲದಿಂದ ಭಾಗೀರಥಿ ಎಂದರೆ ನಮ್ಮೆಲ್ಲರ ಮೆಚ್ಚುಗೆ ಪಡೆದಿದ್ದಳು. ಅವಳ ಅಪರೂಪದ ರೂಪ, ಅವಳ ಸೌಮ್ಯ ಸ್ವಭಾವ, ಸಮಯಪ್ರಜ್ಞೆ ಮತ್ತು ಶಿಸ್ತು ಇದನ್ನೆಲ್ಲ ನೋಡಿದರೆ ಇವಳಿಗ್ಯಾರು ಇಷ್ಟು ಚೆನ್ನಾಗಿ ಹೇಳಿಕೊಟ್ಟರು ಎಂಬುದೇ ಅರ್ಥವಾಗದ್ದು ನಮಗೆ! ಬಹುಶಃ ಪೂರ್ವಜನ್ಮದ ಸ್ಮರಣೆಯೋ ಏನೋ ಭಾಗೀರಥಿ ನಿಜವಾಗಿಯೂ ಕಾಶೀ ಭಾಗೀರಥಿಯ ಅಪ್ಪಟ ಸಂಯಮವನ್ನೂ, ಸಹನೆಯನ್ನೂ, ಗುಣಧರ್ಮವನ್ನೂ ಪಡೆದವಳು.

ಮಳೆಗಾಲದ ಕರಾವಳಿಯ ದಿನಗಳೇ ಹಾಗೆ. ಅಲ್ಲಿ ಧೋ ಎಂದು ಸುರಿವ ಮುಸಲಧಾರೆಗೆ ಕೆಲವೊಮ್ಮೆ ದಿನಗಟ್ಟಲೆ ಕೆಲವೊಮ್ಮೆ ವಾರಗಟ್ಟಲೆ ಬಿಡುವೇ ಇರುತ್ತಿರಲಿಲ್ಲ. ಮಳೆಗಾಲ ಬಂತೆಂದರೆ ಹಳ್ಳಿಯ ಜೀವನವೆಲ್ಲ ದ್ವೀಪವಾಸಿಗಳ ಜೀವನದ ರೀತಿ ಆಗಿ ಬಿಡುತ್ತಿತ್ತು. ಪಟ್ಟಣ ಮತ್ತು ಹಳ್ಳಿಗಳ ನಡುವೆ ಸಂಪರ್ಕವೇ ಕಡಿದ ರೀತಿ ಇರುತ್ತಿತ್ತು. ಆಕಾಲದಲ್ಲಿ ಅಷ್ಟಾಗಿ ಸ್ಥಿರದೂರವಾಣಿಗಳು ಎಲ್ಲಕಡೆ ಲಭ್ಯವಿರಲಿಲ್ಲ. ದಿನಪತ್ರಿಕೆ, ಟಿ.ವಿ. ಯಾವುದೂ ಇರಲಿಲ್ಲ. ಅಂದಿನ ಮಹೋನ್ನತ ವಾರ್ತಾಮಾಧ್ಯಮವೆಂದರೆ ರೇಡಿಯೋ. ಅದು ಬಿಟ್ಟರೆ ಗ್ರಾಮಲೆಕ್ಕಿಗರು, ಸರಕಾರೀ ದಾಯಿಗಳು[ಹೆಲ್ತ್ ಇನ್ಸ್ಪೆಕ್ಟರ್ ಅಂತಾಗಿದೆ ಈಗ], ಮಾಸ್ತರರು ಇಂಥವರೇ ಸುದ್ದಿಮಾಧ್ಯಮವಾಗಿ ಶಾಲೆಯ ಮಕ್ಕಳ ಮೂಲಕ, ತಿರುಗಾಟದಲ್ಲಿ ಅಲೊಮ್ಮೆ ಇಲ್ಲೊಮ್ಮೆ ಭೇಟಿಯಾಗುವ ಜನರ ಮೂಲಕ ವಾರ್ತಾಲಾಪ ತಿಳಿಸುತ್ತಿದ್ದರು. ಆಗೆಲ್ಲ ಜನಸಂಖ್ಯೆಯೂ ಇಷ್ಟೊಂದು ಇರಲಿಲ್ಲ. ಬಾಂಬು ಚಾಕು-ಚೂರಿ ಸಂಸ್ಕೃತಿ ನಮಗೆಲ್ಲ ಕೇಳರಿಯದ್ದು. ಹೀಗೇ ಬದುಕು ಇರುವಷ್ಟು ಪರಿಕರಗಳಿಂದ ಸಂತೃಪ್ತಿಯಲ್ಲಿ ಯಾವುದೇ ಗೋಜಲುಗಳಿಲ್ಲದೇ ನಡೆಯುತ್ತಿತ್ತು.

ಹಳ್ಳಿಗರಿಗೆ ಅನೇಕ ಗಿಡಮೂಲಿಕೆ ಔಷಧ ಕ್ರಮಗಳು ಗೊತ್ತಿದ್ದವು. ಅವುಗಳಿಂದ ಯಾವುದೇ ಅಪಾಯವಂತೂ ಇರುತ್ತಿರಲಿಲ್ಲ. ಹಲವು ಔಷಧಗಳು ಪರಿಣಾಮಕಾರಿಯಾಗಿ ಕೆಲಸಮಾಡುತ್ತಿದ್ದವು. ವೈದ್ಯರು ಬೇಕೆಂದರೆ ಹತ್ತು-ಹದಿನೈದು ಕೆಲವೊಮ್ಮೆ ಇಪ್ಪತ್ತು ಕಿಲೋಮೀಟರ್ ದೂರದ ಪಟ್ಟಣದಲ್ಲಿ ಇರುವ ಸರಕಾರೀ ಆಸ್ಪತ್ರೆಗೆ ಹೋಗಬೇಕು. ಕೆಲವರ್ಷಗಳ ನಂತರ ಇಂಗ್ಲೀಷ ಮೆಡಿಸಿನ್ ಓದಿದವರು ಬಂದು ಅಲ್ಲಲ್ಲಿ ತಾಸೆರಡು ತಾಸು ದವಾಖಾನೆಯನ್ನು ನಡೆಸಿ ಬೇರೆಲ್ಲಿಗೋ ತೆರಳುತ್ತಿದ್ದರು. ಆದರೂ ಇಂಗ್ಲೀಷ್ ಮೆಡಿಸಿನ್ ಬಳಕೆ ಅಂತಹ ಅನಿವಾರ್ಯ ಅಂತಾದರೆ ಮಾತ್ರವಾಗಿತ್ತು. ಚಿಕ್ಕ-ಪುಟ್ಟ ನಂಜಿನ ಜ್ವರ-ನೆಗಡಿ ಇದಕ್ಕೆಲ್ಲ ಯಾವತ್ತೂ ಕಷಾಯದ ಹೊರತು ಬೇರೆ ಏನೂ ಔಷಧ ಬೇಕಾಗುತ್ತಿರಲಿಲ್ಲ. ಹಳ್ಳಿಯಲ್ಲಿ ಸಿಗುವ ಮುಸ್ತಕ, ಒಂದೆಲಗ, ಕಡ್ಲಂಗಡ್ಲೆ, ಏಕನಾಯಕ,ಕಾಡು ಜೀರಿಗೆ, ಮೆಣಸಿನಕಾಳು, ಅಮೃತಬಳ್ಳಿ, ಕೊಡಸನ ಬೇರು, ನೆಗ್ಗಿನಮುಳ್ಳು, ತೆಂಗಿನಕೊನೆ ಇವೆಲ್ಲ ಗಿಡಮೂಲಿಕೆಗಳೂ ಸೇರಿದಂತೆ ಸಾವಿರಾರು ಮೂಲಿಕೆಗಳು ಹಲವಾರು ಔಷಧ ಪ್ರಕ್ರಿಯೆಗಳಾಗಿ ಬಳಸಲ್ಪಡುತ್ತಿದ್ದವು.

ಸುಬ್ರಾಯ ಹೆಗ್ಡೇರು ಮನಸ್ಸು ಮಾಡಿ ಒಂದು ಆ ಕಾಲದಲ್ಲಿ ಲಭ್ಯವಿದ್ದ ಚಿಕ್ಕ ಲಾರಿಯ ಥರದ ವಾಹನವೊಂದನ್ನು ಖರೀದಿಸಿ ಹಳ್ಳಿಯಿಂದ ಪಟ್ಟಣಕ್ಕೆ ತೆರಳಲು ಸಾರ್ವಜನಿಕರ ಬಾಡಿಗೆಗೆ ಉಪಯೋಗಿಸುತ್ತಿದ್ದರು. ಅದರಲ್ಲಿ ಡ್ರೈವರ್ ಕ್ಯಾಬೀನಿನಲ್ಲಿ ಚಾಲಕ ಮತ್ತು ಯಜಮಾನರನ್ನು ಬಿಟ್ಟರೆ ಮೈಗೆ ಮೈತಾಗಿಸಿ ತಳುತ್ತ ಕುಳಿತರೆ ಒಬ್ಬ ಕೂರಬಹುದಿತ್ತು. ಮಿಕ್ಕಿದವರಿಗೆಲ್ಲ ವಾಹನದ ಹಿಂಬದಿಯಲ್ಲಿ ಟಾರ್ಪಾಲಿನ್ ಕಟ್ಟಿದ ಗೂಡಿನಲ್ಲಿ ಇಕ್ಕೆಲಗಳಲ್ಲಿ ಎಅಡು ಉದ್ದನೆಯ ಮರದ ಬೆಂಚುಗಳು ಇದ್ದವು. ಅದೂ ಭರ್ತಿಯಾದ ಮೇಲೆ ಜನ ನಿಂತುಕೊಂಡೇ ಕೈಗೆ ಸಿಗುವ ಗೂಡಿನ ಮೇಲ್ಚಾವಣಿಗೆ ಕಟ್ಟಿರುವ ಗಳವನ್ನೇ ಹಿಡಿದು ತೂಗಾಡುತ್ತ ಪಟ್ಟಣ ಸೇರಬೇಕಾಗಿತ್ತು. ಅವರು ಬೆಳಿಗ್ಗೆ ಹಳ್ಳಿಗರನ್ನು ಪಟ್ಟಣಕ್ಕೆ ಕರೆದೊಯ್ದು ಬಿಟ್ಟರೆ ಸರಿ ಸುಮಾರು ಮಧ್ಯಾಹ್ನ ಮೂರು ಗಂಟೆಗೆ ಅಲ್ಲಿಂದ ಮರಳಿ ಹೊರಡುತ್ತಿದ್ದರು. ಬರುಬರುತ್ತ ಅವರಿಗೆ ಗಿರಾಕಿ ಜಾಸ್ತಿಯಾಗಿ ಮತ್ತೆರಡು ವಾಹನಗಳನ್ನು ಪಾಳಿಯ ರೀತಿಯಲ್ಲಿ ಬಿಡುತ್ತಿದ್ದರು. ದಿನಸಿ ಸಾಮಾನು, ಪಾತ್ರೆ-ಪಗಡೆ ಇತ್ಯಾದಿ ಮನೆಬಳಕೆಯ ಸಾಮಾನುಗಳನ್ನು ಹಳ್ಳಿಗರು ಅಲ್ಲಿಂದ ತರೋರು. ತರಕಾರಿಯನ್ನು ಕೊಂಡುಕೊಳ್ಳುವ ವಹಿವಾಟು ಮೊದಲಿಗಿರಲಿಲ್ಲ.

ಬಿದ್ದ ಮಳೆಗೆ ಕೆರೆಕಟ್ಟೆಗಳೆಲ್ಲ ತುಂಬಿ ಎಲ್ಲಿ ನೋಡಿದರೂ ಹಳದಿ ಅಥವಾ ಮಣ್ಣಿನ ಬಣ್ಣದ ನೀರು ಕಾಣಿಸುತ್ತಿತ್ತು. ಕೆಲವೇ ದಿನಗಳಲ್ಲಿ ಗುಡ್ಡ ಬೆಟ್ಟಗಳೆಲ್ಲ ಹಸಿರು ಹುಲ್ಲನ್ನು ಹೊದ್ದು, ಗಿಡ-ಮರಗಳೆಲ್ಲ ಉದ್ದಿನವಡೆ ಊದಿದಂತೇ ಹುಲುಸಾಗಿ ಬೆಳೆಯುತ್ತಿದ್ದವು. ಅಲ್ಲಲ್ಲಿ ಗಿಳಿ-ಗೊರವಂಕದಾದಿಯಾಗಿ ಹಲವು ಹಕ್ಕಿಗಳು ಉಲಿವ ದನಿ ಇಂಪಾಗಿ ಕೇಳುತ್ತಿತ್ತು. ಬಣ್ಣ ಬಣ್ಣದ ಎಲೆಗಳು ಚಿಗುರಿ, ಹೂಗಳು ಅರಳಿ ನಿಸರ್ಗಪ್ರೇಮಿಗಳಿಗೆ ಅದೊಂದು ಹಬ್ಬದ ವಾತಾವರಣ. ಬದುಕಿನಲ್ಲಿ ಇದಕ್ಕಿಂತ ಇನ್ನೇನು ಬೇಕು ಎಂಬಷ್ಟು ಕಂಟೆಂಟ್ಮೆಂಟ್ ಇದ್ದ ಜನ ಅವತ್ತಿಗಿದ್ದರು! ರಾಜಕೀಯ ಬೆಳೆದಿರಲಿಲ್ಲ. ನ್ಯಾಯ ಎಲ್ಲರಿಗೂ ಒಂದೇ ರೀತಿ ಇತ್ತು. ಯಾರೂ ಯಾರನ್ನೂ ಹತ್ತಿ ತುಳಿಯುತ್ತಿರಲಿಲ್ಲ. ಅವರವರ ಕೆಲಸವಾಯಿತು, ಅವರ ಪಾಡಾಯಿತು. ದಿನಗೂಲಿ ಮಾಡುವ ಜನರಲ್ಲೂ ಜಮೀನುದಾರರಲ್ಲೂ ಒಡೆಯ-ಒಕ್ಕಲಿನ ಹಿತವಾದ ಬಾಂಧವ್ಯವಿತ್ತು. ಕೂಲಿಯ ಜನರ ಊಟ-ತಿಂಡಿಗಳೆಲ್ಲ ಬಹುತೇಕ ಒಡೆಯನಮನೆಯಲ್ಲೇ ನಡೆದುಹೋಗುತ್ತಿತ್ತು. ಸಾಯಂಕಾಲ ಮನೆಗೆ ಹೋಗುವಾಗ ಕೂಡ ಅಷ್ಟಿಷ್ಟು ಆಹಾರ ಪದಾರ್ಥಗಳನ್ನು ಅವರು ತೆಗೆದುಕೊಂಡು ಹೋಗುತ್ತಿದ್ದರು. ಅವರಿಗೆ ಕೂಲಿಯ ಹಣವನ್ನು ಮುಂಗಡವಾಗಿ ಕೆಲವರು ಅದಕ್ಕೆ ಇದಕ್ಕೆ ಅಂತ ಪಡೆದರೆ ಕೆಲವರು ಕೈಗಡ ಅಂತ ಸಾಲಪಡೆದು ಆಮೇಲೆ ಕಂತಿನ ರೂಪದಲ್ಲಿ ದುಡಿದ ಕೂಲಿಯಲ್ಲಿ ಆದಷ್ಟು ಆದಷ್ಟು ಮರಳಿ ಕಟ್ಟೋರು. ಕೂಲಿಯವರ ಮಕ್ಕಳಿಗೆ ಶಾಲೆ ಓದಲು ಖರ್ಚಿಗೆ, ಅವರಿಗೆ ಕೆಲ ಬಟ್ಟೆ-ಬರೆಗಳು, ಹಳೆಯ ಪುಸ್ತಕಗಳು ಇವೆಲ್ಲವನ್ನೂ ಕೊಡುತ್ತಿದ್ದರು. ಶಾಲೆಗಳಲ್ಲಿ ಕೂಲಿಮಾಡುವವರ ಮಕ್ಕಳು- ಜಮೀನುದಾರರ ಮಕ್ಕಳು ಎಂಬ ಭೇದವಿರಲಿಲ್ಲ. ಎಲ್ಲರೂ ಸ್ನೇಹಿತರಾಗಿ ಓದುತ್ತಿದ್ದೆವು.


[ಆಯಾಯ ಕಾಲಕ್ಕೆ ಬೇರೆ ಬೇರೆ ಹಣ್ಣು-ಕಾಯಿ ಪದಾರ್ಥಗಳು ನೈಸರ್ಗಿಕವಾಗಿ ಬೆಳೆದಿದ್ದನ್ನು ಯಜಮಾನರುಗಳೂ ಕೂಲಿಗಳೂ ಎಲ್ಲರೂ ಉಪಯೋಗಿಸುತ್ತಿದ್ದರು. ವಾಸ್ತವವಾಗಿ ಕೂಲಿಗಳ-ಜಮೀನ್ದಾರರ ನಡುವೆ ಅದೆಂತಹ ಆತ್ಮೀಯತೆ ಇತ್ತು ಎಂದರೆ ಅದನ್ನು ಈ ಕಾಲದಲ್ಲಿ ಹಳ್ಳಿಗಳಲ್ಲಾಗಲೀ, ಪಟ್ಟಣಗಳಲ್ಲಾಗಲೀ ನೋಡಲು ಸಾಧ್ಯವಿಲ್ಲ. ಕೂಲಿಜನರನ್ನು ಅವರು ಕೂಲಿಗಳು ಎನ್ನುವ ಬದಲು ಮನೆಮಂದಿಯ ರೀತಿಯಲ್ಲೇ ನಡೆಸಿಕೊಂಡ ಕಾಲಘಟ್ಟವದು. ಆ ನಂತರ ರಾಜಕೀಯ ಪ್ರವೇಶದಿಂದ ಹಳ್ಳಿಗಳು ಎಂದಿನ ಮಾರ್ದವತೆಯನ್ನೂ ಆ ಆಹ್ಲಾದಕರ ವಾತವರಣವನ್ನೂ ಆ ಪ್ರೀತಿ-ವಿಶ್ವಾಸವನ್ನೂ ಕಳೆದುಕೊಂಡು ಪಟ್ಟಣದ ಸಂಸ್ಕೃತಿಗೆ ಹಳ್ಳಿ ತನ್ನನ್ನು ಮಾರಿಕೊಂಡಿತು. ಎಲ್ಲೆಲ್ಲಿಯೂ ದುಡ್ಡೇ ದೊಡ್ಡಪ್ಪಗಳಾದವು! ಮೂಲ ವೃತ್ತಿಯನ್ನು ಬಿಟ್ಟು ಜನ ದುಡ್ಡು ಹೆಚ್ಚು ಬರುವ ದಂಧೆಗೆ ಇಳಿಯ ತೊಡಗಿದರು. ವಾತಾವರಣ ಕ್ರಮೇಣ ಕಲುಷಿತವಾಗಿ ಗ್ರಾಮೀಣ ಸೊಗಡನ್ನು ಕಳೆದುಕೊಂಡಿತು. ಮುಖದಲ್ಲಿ ನಗುಹೊತ್ತ ಜನಸಮುದಾಯ ಹೋಗಿ ಮುಖ ಅಡ್ಡಹಾಕಿ ತಿರುಗುವ ಕೆಟ್ಟ ಸಂಸ್ಕೃತಿ ಕಾಲಿಟ್ಟಿತು.]

ಬೇಸಿಗೆಯಲ್ಲಿ ಮಾಡಿ ಪೇರಿಸಿ ಇಟ್ಟ ಹಲಸಿನ ಹಪ್ಪಳಗಳು ಮಳೆಗಾಲದಲ್ಲಿ ಬಹಳ ರುಚಿಕಟ್ಟಾಗಿರುತ್ತಿದ್ದವು. ಅವುಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಕರಿದೋ, ಕೆಂಡದ ಒಲೆಯಲ್ಲಿ ಸುಟ್ಟಿ ಕೊಬ್ಬರಿ ಎಣ್ಣೆ ಸವರಿಯೋ ಬಳಸುತ್ತಿದ್ದರು. ಜೊತೆಗೆ ತೆಂಗಿನಕಾಯಿತುರಿ ಹಚ್ಚಿದ ಈ ಹಪ್ಪಳಗಳು ಅಲ್ಲಿನ ಮಳೆಗಾಲಕ್ಕೆ ಹೇಳಿಮಾಡಿಸಿದ ವ್ಯಂಜನಗಳು! ಕರಿದ ಹಲಸಿನ ಹಪ್ಪಳವನ್ನು ನುರಿದು ಅದಕ್ಕೆ ಒಗ್ಗರಣೆ ಹಾಕಿ, ಕಾಯಿತುರಿಯೊಂದಿಗೆ ಸ್ವಲ್ಪ ಖಾರ ಮತ್ತು ಬೆಲ್ಲ ಸೇರಿಸಿದರೆ ಅದನ್ನು ಮೆಲ್ಲುವಾಗಿನ ಆನಂದ ಇಂದಿನ ನಮ್ಮ ಪಿಝ್ಝಾ ಕಾಲದಲ್ಲಿ ಬರೇ ನೆನೆಪು ಮಾತ್ರ. ಹಲಸಿನ ತೊಳೆಯನ್ನು ಸೀಳಿ ಕರಿದು, ಉಪ್ಪು-ಖಾರ ಹದವಗಿ ಹಾಕಿದ ಚಿಪ್ಸು ಇನ್ನೊಂದು ಅದ್ಬುತ ವ್ಯಂಜನ. ನೆನಪುಗಳ ಮಾಯಲೋಕದಲ್ಲಿ ನಾವು ಕೆದಕೂಪದ ಕೈಕೋಲಿನಂತೇ ನಮ್ಮ ಯೋಚನೆಯನು ಹರಿಬಿಟ್ಟರೆ ಅಂದಿನ ದಿನಗಳ ವಿಚಾರ ಅದು ಮರೆಯಲಾಗದ ಆಚಾರ. ಅಮಿತ ಸಹಜ ಆನಂದದ ಆಗರ.

ಸುರಿವ ಮಳೆಯ ದಿನಗಳಲ್ಲಿ ಕರಿದ ಹಪ್ಪಳವನ್ನು ತಿನ್ನುತ್ತ ಅಜ್ಜ-ಅಜ್ಜಿ-ಕೂಲಿಯಾಳುಗಳು ಹೇಳುವ ಕಥೆಗಳನ್ನು ಕೇಳುತ್ತಿದ್ದರೆ ಅದು ಮನಸ್ಸಿಗೆ ಸಿಗುವ ಮತ್ತೊಂದು ವ್ಯಂಜನ. ಜನಸಾಮಾನ್ಯರ ಬದುಕಲ್ಲಿ ನಡೆದ, ನಡೆಯಬಹುದಾದ ಹಲವು ಘಟನೆಗಳನ್ನು ಕಥಾರೂಪದಲ್ಲಿ ಮಕ್ಕಳಿಗೆ ಹೇಳುವ ಅಂದಿನ ಕ್ರಮ ಅತ್ಯಂತ ಅನುಭವವನ್ನು ತರುವಂಥದ್ದೂ ಮತ್ತು ಜೀವನ ನಿರ್ವಹಣೆಗೆ ಮಾರ್ಗದರ್ಶಿಯೂ ಆಗುತ್ತಿತ್ತು. ಅಜ್ಜ-ಅಜ್ಜಿಯರು ರಾಮಯಣ ಮಹಾಭಾರತದ ಕಥೆಗಳನ್ನು ಹೇಳಿದರೆ ಕೂಲಿಯ ಮಾದೇವ, ಹನಮಂತ, ನಾಗು, ಈಶ್ವರ, ಸಣಕೂಸ, ಅಮಗೂಸ ಇವರೆಲ್ಲ ಥರಾವರಿ ಕಥೆಗಳನ್ನು ಹೇಳುತ್ತಿದ್ದುದುಂಟು. ನಾವು ಮಕ್ಕಳು ಅವರು ತೋಟ-ತುಡಿಕೆಗಳಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿಗೇ ಹೋಗಿ ಅವರನ್ನು ಕೇಳಿಕೊಂಡರೆ ಅವರಿಗೂ ಕೆಲಸದ ಆಯಾಸ ಗಮನಕ್ಕೆ ಬರುತ್ತಿರಲಿಲ್ಲ, ನಮಗೂ ಕಥೆಕೇಳಿ ಮನಸ್ಸು ಮಜಾ ಅನುಭವಿಸುತ್ತಿತ್ತು. ಈ ಕಥೆಗಳಲ್ಲಿ ಒಬ್ಬೊಬ್ಬರ ಕಥೆ ಹೇಳುವ ಕ್ರಮಗಳೂ ಅತಿ ವಿಶಿಷ್ಟವಾಗಿರುತ್ತಿದ್ದವು. ಆಯಾಯ ಕಥೆಗಳನ್ನು ಅವರವರ ಬಾಯಿಂದಲೇ ಕೇಳಿದರೇ ಚೆನ್ನ ಎನಿಸುತ್ತಿತ್ತು. ಒಂದರ್ಥದಲ್ಲಿ ಅವರಲ್ಲೆಲ್ಲಾ ಒಬ್ಬೊಬ್ಬ ಕಥೆಗಾರನಿದ್ದ! ಕಲಾವಿದನೂ ಇದ್ದ! ಸಂಗೀತಗಾರನೂ ಇದ್ದ! ಕೂಲಿಗಳ ಜೀವನ ಕ್ರಮದಲ್ಲಿ ಸ್ನಾನ ದಿನಾಲೂ ಸಂಜೆ ಇರುತ್ತಿತ್ತು, ಹಗಲೆಲ್ಲಾ ಜಮೀನಿನಲ್ಲಿ ದುಡಿದು ಹೈರಾಣಾದ ಮೈ-ಮನಕ್ಕೆ ಮರದ ಕುಂಟೆ ಹೆಟ್ಟಿ ತಿರುವಿದ ಸತತ ಉರಿವ ಬೆಂಕಿಯಲ್ಲಿ ಕಾಯಿಸಿದ ಹಂಡೆಯ ಮರಳುವ ನೀರಿನಲ್ಲಿ ಸ್ನಾನಮಾಡಿಬಿಟ್ಟರೆ ಆ ದಿನದ ಆಯಾಸವೆಲ್ಲ ಪರಿಹಾರವಾದಂತೇ. ಅವರು ಸ್ನಾನ ಮಾಡುವಾಗ ಕೂಡ ನಾವು ಕಥೆಗಾಗಿ ಬೆನ್ನುಹತ್ತಿತ್ತಿದ್ದುದುಂಟು!

ಮಳೆಗಾಲದಲ್ಲಿ ಅಡಿಕೆತೋಟಗಳಲ್ಲಿ ಕೊಳೆಮದ್ದು[ಮೈಲುತುತ್ತು-ಕಾಪರ್ ಸಲ್ಫೇಟ್+ಸುಣ್ಣ] ಸಿಂಪಡಿಸಲು ಹೋದ ಕೂಲಿ ಜನ ಬಂದಿಳಿದು ಮೈಗೆಲ್ಲ ಮೆತ್ತಿದ ಕೊಳೆಮದ್ದಿನ ದ್ರಾವಣದ ಕಲೆಗಳನ್ನು ಕೊಬ್ಬರಿ ಎಣ್ಣೆ ನೀವಿಕೊಳ್ಳುತ್ತ ಹುಣಿಸೇ ಹಣ್ಣಿನಿಂದ ಉಜ್ಜಿ ತೊಳೆದುಕೊಳ್ಳುತ್ತ ಬಾಯಿಂದ ಉಸ್ ಉಸ್ ಉಸ್ ಎನ್ನುವಾಗ ನಮಗೂ ಒಂಥರಾ ಸ್ನಾನಮಾಡಿಬಿಡಬೇಕೆನ್ನುವ ಆಸೆ ಅಮರಿಕೊಳ್ಳುತ್ತಿತ್ತು. ಚಳಿ ಹಿಡಿವ ಮಳೆಗಾಲದಲ್ಲಿ ಹಂಡೆಯಲ್ಲಿ ಮರಳುವ ಬಿಸಿ ನೀರು ಯಾರಿಗೆ ಬೇಡ ಹೇಳಿ? ಸ್ನಾನ ಮಾಡಿದ ತರುವಾಯ ಅವರು ಬಟ್ಟೆಗಳನ್ನೆಲ್ಲ ಆಲ್ಲೆಲ್ಲೋ ಹೊರಗೆ ಬಿದಿರಗಳಗಳ ಮೇಲೆ ಹರವುತ್ತಿದ್ದರು. ದೇವರನ್ನು ನೆನೆದು ಕೈಮುಗಿದು ಮನೆಯ ಜಗುಲಿಯಲ್ಲಿ ಬಂದು ಕೂತರೆ ಅವರಿಗೆ ಬಿಸಿ ಬಿಸಿ ಊಟ ರೆಡಿ. ಬೆಳಿಗ್ಗೆ ಮೂರಾವರ್ತಿ ತಿಂಡಿ ತಿನ್ನುವ ಈ ಜನ ಹೊಟ್ಟೆ ಭಾರವಾದರೆ ಕೆಲಸಮಾಡಲಗದೆಂದು ಊಟವನ್ನು ಸಾಯಂಕಾಲಕ್ಕೆ ಇಟ್ಟುಕೊಳ್ಳುವುದು ಸರ್ವೇಸಾಮಾನ್ಯವಾಗಿತ್ತು. ನಾಗಪ್ಪ ಶೆಟ್ಟಿ ಎಂಬ ೫೫ ವಯಸ್ಸಿನ ವ್ಯಕ್ತಿ ದೂರದ ಊರಿಂದ ನಮ್ಮೂರಿಗೆ ಕೊಳೆಮದ್ದು ಸಿಂಪಡಿಸಲಾಗಿಯೇ ಬರುತ್ತಿದ್ದ. ನಾಗು ಅಥವಾ ನಾಗಪ್ಪಜ್ಜ ವಾರಕಾಲ ನಮ್ಮಲ್ಲೆ ಠಿಕಾಣಿ ಹೂಡಿ ಮದ್ದಿನಕೊಯ್ಲು ಮುಗಿದಮೇಲೆಯೇ ಮನೆಗೆ ತೆರಳುತ್ತಿದ್ದ. ಆತ್ ಇದ್ದಷ್ಟು ದಿನ ಆತನೊಡನೆ ಕಥೆ ಕೇಳದ ದಿನಗಳೇ ಇಲ್ಲ! ಪುಸು ಪುಸು ಬೀಡಿ ಸೇದುತ್ತ ಉಜ್ಜದೇ ಹಾಳುಬಿದ್ದ ಮುರುಕು ಹಲ್ಲುಗಳ ಮಧ್ಯೆ ನಾಲಿಗೆ ಇಟ್ಟು ಆತ ನಗುವುದು ನಮಗೆಲ್ಲ ಇಷ್ಟವಾದ ವಿಷಯ! ಬೀಡಿಯ ನಾತ ರುಚಿಸದಿದ್ದರೂ ಬೀಡಿ ಸೇದುವವರು ನಮ್ಮ ದೋಸ್ತರಾಗಿರುವಾಗ ನಾವು ಬೀಡಿ ಸೇದಬೇಡ ಎಂದು ಹೇಳಲುಂಟೇ? ಹಾಗೊಮ್ಮೆ ಹೇಳಿದರೆ ಕೋಪಿಸಿಕೊಂಡು ಹೇಳಬೇಕಾದ ಕಥೆಗೇ ಸಂಚಕಾರ ಕೊಟ್ಟರೆ? ನಾಗು ಊಟಮಾಡುವಾಗ ಅದೂ ಇದೂ ಬಡಿಸುವ ನೆಪದಲ್ಲಿ ನಮ್ಮ ಸ್ನೇಹಸಂಪಾದನೆ ಆಗುತ್ತಿತ್ತು. ಕಥೆಯೇನು ಪುಕ್ಸಟೆ ಬರುತ್ತದೆಯೇ ಹಾಗಂತ ಅದು ದುಡ್ಡು ಕೊಟ್ಟರೂ ಸಿಗುವಂಥದ್ದಾಗಿರಲಿಲ್ಲ! " ತಮಾ ಏನ್ರ ಅಜ್ಜನ್ ಮನಿಗೆ ಹೋಗ್ಲಿಲ್ವನ ? " ನಾಗಣ್ಣ ಈ ಸ್ವರ ಎತ್ತಿದರೆ ಆತನ ಫ್ರೆಂಡಶಿಪ್ ಗಟ್ಟಿ ಎಂದರ್ಥ, ನಾಗು ಏನೂ ಮಾತನಾಡದೇ ಸುಮ್ಮನಿದ್ದರೆ ಅವನಿಗ್ ಕಥೆ ಹೇಳುವ ಮನಸ್ಸು ಇಲ್ಲ ಎಂದರ್ಥ. ಆತನ ಮುಖಚರ್ಯೆ ನೋಡಿಯೇ ಅರ್ಥಮಾಡಿಕೊಳ್ಳುತ್ತಿದ್ದ ನಮಗೆ ಸಮಯ ಸಂದರ್ಭ ನೋಡಿ ಲಂಚಕೊಟ್ಟು ಸಹಿಮಾಡಿಸಿಕೊಳ್ಳುವ ಸರಕಾರೀ ಅಧಿಕರಿಗಳ ಜೊತೆ ಸಹವಾಸ ಇಟ್ಟುಕೊಂಡಿರುವವರ ರೀತಿ, ಕಥೆ ಕೇಳುವಿಕೆಯ ಪ್ರಸ್ತಾವನೆಯಾಗುತ್ತಿತ್ತು. ಕಥೆ ಪ್ರಾರಂಭವಾದರೆ ರಾತ್ರಿ ದೊಡ್ಡವರು ಬೈಯ್ದು ಊಟಕ್ಕೆ ಹೊತ್ತಾಯ್ತು ಅಂತ ಗದರಿಸುವವರೆಗೂ ಕಥಾಕಾಲಕ್ಷೇಪ ನಡೆದೇ ಇರುತ್ತಿತ್ತು! ಇಂತಹ ನಾಗು ಊರಿಗೆ ಹೋದಮೇಲೆ ಕೆಲದಿನ ನಮಗೆ ಬೇಜಾರಾಗುತ್ತಿತ್ತು.

ಇಂತಹ ಮಳೆಗಾಲದಲ್ಲಿ ಕಂಬಳಿಗೊಪ್ಪೆಯನ್ನೋ ಗುರುಬನ್ನೋ [ತಾಳಿಗರಿಯಿಂದ ಮಾಡಿದ್ದು] ಹಾಕಿಕೊಂಡು ತೋಟ-ಗದ್ದೆಗಳಲ್ಲಿ, ಬೆಟ್ಟ್-ಬೇಣಗಳಲ್ಲಿ ಹತ್ತಾಡಿ ಸುತ್ತಿಳಿದು ಹರುಷಪಡೆವ ಮಕ್ಕಳು ನಾವಾಗಿದ್ದೆವು. ಬೇಸಿಗೆಯಲ್ಲಿ ಕಸುವಿನಿಂದ ಬೀಸಿ ಎಶೆದ ಕಲ್ಲಿಂದ ಬಿದ್ದ ಮಾವಿನ ಮಿಡಿಯನ್ನು ಅಂಗಿಯ ಕೆಳಬಾಗದಲ್ಲಿ ಸುತ್ತಿ, [ಕಚ್ಚಿ ತುಂಡುಮಾಡಿ] ಕಾಗೆ ಎಂಜಲು ಮಾಡಿ ಹಂಚಿಕೊಂಡು ತಿನ್ನುತ್ತಿದ್ದ ನಾವುಗಳು ಈಗೀಗ ಒಂದೇ ಕಂಬಳಿಗೊಪ್ಪೆಯಲ್ಲಿ ಇಬ್ಬಿಬ್ಬರು ತೂರಿಕೊಂಡು ಹೋಗಿ ಆಡುವುದಿತ್ತು.ಮಳೆ ಬಿಡುವುಕೊಟ್ಟಾಗ, ಶಾಲೆಗೆ ರಜೆ ಸಿಕ್ಕಿದಾಗ ಆಡುವ ಕಬಡ್ಡಿ, ಮರಕೋತಿ, ಕಳ್ಳ-ಪೋಲೀಸ್, ಚಿನ್ನಿ-ದಾಂಡು[ನಮ್ಮಲ್ಲಿ ಇದಕ್ಕೆ ಹಾಣೆಗೆಂಡೆ ಅಥವಾ ಹಾಣೇಕೋಲು ಎನ್ನುತ್ತಿದ್ದರು!] ಇವುಗಳಿಗೇನೂ ಕೊರತೆ ಇರಲಿಲ್ಲ. ಇವತ್ತು ದೋಸ್ತಿ ಇದ್ದರೆ ನಾಳೆ ಬದ್ಧ ವೈರಿಗಳಂತೇ ಆಗುವ ಮಕ್ಕಳ ನಡುವಿನ ಕ್ಷಣಿಕ ನಿಷ್ಠುರದ ಘಟನೆಗಳು ಬಹಳವೇ ಇದ್ದವು. ಅದೇನೇ ಇದ್ದರೂ ರಜಾಸಿಕ್ಕಾಗ ಆಡಲು ವೈರತ್ವವನ್ನು ಮರೆತು ಕೈಯ ತೋರುಬೆರಳು-ಮಧ್ಯಬೆರಳು ಎರಡ್ನ್ನು ಸೇರಿಸಿ ಹಿಡಿದರೆ ಅಲ್ಲಿಗೆ ರಾಜಿಯಾಗಿಬಿಡುತ್ತಿತ್ತು! ನಮ್ಮ ಆಟಗಳ ನಡುವೆ ಹಲವಾರು ಗ್ರಾಮೀಣ ಸಾಮಗ್ರಿಗಳಿರುತ್ತಿದ್ದವು. ನಮಗೂ ದನ-ಕರುಗಳಿಗೂ ಕೂಡ ಆಟದ ಪ್ರೀತಿಯ ನಂಟು! ಸ್ನಾನಕ್ಕೂ ಮುನ್ನ ಮನೆಯಲ್ಲಿ ರಜದಲ್ಲಿ ಕೊಟ್ಟಿಗೆಗೆ ಹೋಗಿ ಅಲ್ಲಿರುವ ಸಣ್ಣ ಕರುಗಳನ್ನೋ ಅನಾರೋಗ್ಯದಿಂದ ಗೋಮಾಳಕ್ಕೆ ತೆರಳದೇ ಅಲ್ಲೇ ಇರುವ ದನವನ್ನೋ ಮಾತಾಡಿಸುತ್ತ, ಹುಲ್ಲು ನೀಡುವುದು, ಮೈ ಉಜ್ಜುವುದು ಆಮೇಲೆ ಪ್ರೀತಿಯಿಂದ ಅವುಗಳು ನಾವು ಅಂಗಿ ತೆಗೆದು ಕುಳಿತರೆ ಮೈಯ್ಯನ್ನೆಲ್ಲ ನೆಕ್ಕುತ್ತಿದ್ದವು. ಅವು ಹಾಗೆ ನೆಕ್ಕುವಾಗ ತರಿತರಿಯಾದ ಅವುಗಳ ನಾಲಿಗೆ ತಗಿದರೆ ಕಚಗುಳಿಯಗುತ್ತಿತ್ತು. ಇದನ್ನೆಲ್ಲಾ ಅನುಭವಿಸಲು ನಮಗೆ ರಜವೇ ಸಿಗುವುದಿಲ್ಲ ಎನ್ನುವ ಬೇಸರವೂ ಆಗುತ್ತಿತ್ತು. ಯಾರದರೂ ರಾಜಕೀಯದವರು ಸತ್ತರೆ ನಮಗೆ ಶೋಕಾಚರಣೆಗಿಂತ ರಜೆಸಿಕ್ಕುವುದಕ್ಕೆ ಆನಂದವಾಗುತ್ತಿತ್ತು! ಹೀಗಾಗಿ ನಾವು ಮಕ್ಕಳು ನಮಗೇನು ಗೊತ್ತು- ಯಾರಾದರೂ ರಾಜಕಾರಣಿಗಳು ಸಾಯುವುದನ್ನೇ ಕಾಯುತ್ತಿದ್ದೆವು!

ನಮ್ಮಲ್ಲಿ ಆಗ ೩೪-೩೫ ಆಕಳ ಬಾಲಗಳು ಇದ್ದವು! [ನೆನಪಿಡಿ ಆಕಳುಗಳನ್ನು ಬಾಲದ ಲೆಕ್ಕಾಚಾರದಲ್ಲಿ ಎಣಿಸುತ್ತಿದ್ದರು ಎಂದು ಹಿಂದೊಮ್ಮೆ ಹೇಳಿದ್ದೇನೆ] ಗೀತಾ, ಕಮಲಿ, ರೆಣುಕಾ, ಲಲಿತಾ, ವಸುಂಧರೆ....ಹೀಗೆಲ್ಲ. ಅವುಗಳ ಪೈಕಿ ಭಾಗೀರಥಿ ಎಂಬುದು ಹಿರಿಯಜ್ಜಿ. ಭಾಗೀರಥಿ ಬಹಳ ಅಚ್ಚುಮೆಚ್ಚಿನ ದನ. ಗೋವು ಅಂದರೆ ಗೋವು! ಅದರ ಮುಖದ ಲಕ್ಷಣವೇ ಹಾಗಿತ್ತು. ಉದ್ದನೆಯ ಕೊಂಬು ಮೇಲೆದ್ದು ಒಂದಕ್ಕೊಂದು ಒಳಬಾಗಿ ಅವಳ ನೆತ್ತಿಯಮೇಲೆ ಪೂರ್ಣ ಚಂದ್ರಾಕಾರವನ್ನು ಸೃಷ್ಟಿಸಿದ್ದವು. ಬಾಲದ ಕೊನೆಯಲ್ಲಿ ಗೊಂಡೆಯಂತಿರುವ ಕೂದಲಿನ ಗುಚ್ಚವಿತ್ತು. ಮಕ್ಕಳು ಕಾಲ್ಕೆಳಗೆ ತೂರಿ ಆಛೆ ಹೋಗಲಿ, ಬಾಲ ಹಿಡಿದು ಆಡಲಿ.... ಕಮಕ್ ಕಿಮಕ್ ಎನ್ನದ ಸಭ್ಯ ದನ ಅದಾಗಿತ್ತು. ನಾವು ಹೆಚ್ಚಗಿ ಪ್ರೀತಿಯಿಂದ ಎಲ್ಲಾ ಆಕಳು ಮತ್ತು ಹೋರಿಗಳನ್ನು ಅವಳು-ಅವನು ಎಂದೇ ಮನುಷ್ಯರನ್ನು ಟ್ರೀಟ್ ಮಾಡಿದ ಹಾಗೇ ಮಾಡುತ್ತಿದ್ದೆವು. ಬೆಳಿಗ್ಗೆ ಎದ್ದು ಮಲ-ಮೂತ್ರ ವಿಸರ್ಜಿಸಿ, ಅಜ್ಜಿಯಿಂದ ಸ್ನಾನ ಪೂಜೆ ಪಡೆವ ಭಾಗೀರಥಿ ನಂತರ ಅಜ್ಜಿ ಶಾಸ್ತ್ರೋಕ್ತವಾಗಿ ಕೊಡುವ ಬಾಳೆಲೆಯಲ್ಲಿ ಮಡಚಿ ಕಟ್ಟಿದ ತೊಳೆದ ಅಕ್ಕಿಯನ್ನು ತಿನ್ನುತ್ತಿದ್ದಳು. ನಂತರ ಅಕ್ಕಚ್ಚು-ಹಿಂಡಿ ಇವುಗಳನ್ನು ಪಡೆದು ಸರಿಸುಮಾರು ೯ ಗಂಟೆಗೆ ತನ್ನ ಮಕ್ಕಳು-ಮರಿಮಕ್ಕಳು ಎಲ್ಲರನ್ನೂ ಕಟ್ಟಿಕೊಂಡು ಗುಂಪಿನ ನಾಯಕಿಯಾಗಿ ಎಲ್ಲರನ್ನೂ ಸಾಲಾಗಿ ಶಾಲೆಗೆ ಹೋಗುವ ಮಕ್ಕಳಂತೇ ನಡೆಸುತ್ತ ಗೋಮಾಳಕ್ಕೆ ಮೇಯಲು ತೆರಳುವಳು. ಅವಳು ಹಾಗೆ ಹೋಗುವಾಗ ದನಗಳಲ್ಲಿ ವಯಸ್ಸಿಗೆ ಅನುಗುಣವಾಗಿ ಅನುಕ್ರಮವಾಗಿ ಅವಳನ್ನು ಅವುಗಳು ಸಾಲಾಗಿ ಹಿಂಬಾಲಿಸುತ್ತಿದ್ದುದು ನಮಗೆ ಆಶ್ಚರ್ಯವೂ ಮತ್ತು ಖುಷಿಕೊಡುವ ವಿಚಾರವೂ ಆಗಿತ್ತು. ತಮಾಷೆಗೆ ನವು ಗಣಿತದ " ಏರಿಕೆಯೆ-ಇಳಿಕೆಯ ಕ್ರಮವನ್ನು ನೋಡೋ " ಎಂದುಕೊಂಡು ನಗುತ್ತಿದ್ದೆವು.

ಭಾಗೀರಥಿ ನಮ್ಮನೆಯ ಅಜ್ಜಿ ಹೇಗೋ ಹಾಗೇ ಆ ಅಕಳ ಮಂದೆಗೆಲ್ಲ. ಆಕೆ ಕೂಗಿದರೆ ಎಲ್ಲವೂ ಸೇರುತ್ತಿದ್ದವು, ಆಕೆ ಹೊರಟರೆ ಅವಳ ಜೊತೆ ಎಲ್ಲವೂ ಹೊರಟುಬಿಡುತ್ತಿದ್ದವು. ಸಾಯಂಕಾಲ ೫ಗಂಟೆಗೆಲ್ಲ ಈ ಭಾಗೀರಥಿ ವಾಪಸ್ಸು ಕೊಟ್ಟಿಗೆಗೆ ಬರೋಳು, ತನ್ನ ಪರಿವಾರವನ್ನು ಕಾಳಜಿಯಿಂದ ಸಾಲಾಗಿ ಕರೆತರೋಳು. ಊರ ಪರವೂರ ಹತ್ತಾರು ಜನ ನಮ್ಮನೆಯ ದನಗಳ ದೈನಂದಿನ ಈ ಮಿಲಿಟರಿ ಶಿಸ್ತನ್ನು ಆಗಾಗ ನಿಂತು ನೋಡುತ್ತಿದ್ದರು. ನಮ್ಮೊಡನೆ ಬಹಳ ಜನ ಈ ಕುರಿತು ಸಂತಸ ವ್ಯಕ್ತಪಡಿಸಿದ್ದೂ ಉಂಟು. ನಾವೇ ಕೇಳಿ ತಿಳಿದಿದ್ದು-ನಮ್ಮನೆಯ ಕೊಟ್ಟಿಗೆಯ ಪರಂಪರೆಯಲ್ಲಿ ಪಡೆಯ ಮುಖ್ಯಸ್ಥೆ/ಮುಖ್ಯಸ್ಥ ಸತ್ತ ಮೇಲೆ ನಂತರ ಸೀನೆಯಾರಿಟಿಯಲ್ಲಿ ಮುಂದಿರುವವರು ಅದನ್ನು ನಿಭಾಯಿಸುತ್ತಿದ್ದರು. ಯಾವುದಾದರೂ ಆಕಳು-ಕರು ಸತ್ತರೆ ಇಡೀ ಕೊಟ್ಟಿಗೆಯಲ್ಲಿ ಮೌನರೋದನ ಕಂಡುಬರುತ್ತಿತ್ತು. ಎಲ್ಲಾ ಆಕಳುಗಳ ಕಣ್ಣಿಂದ ನೀರು ಸುರಿದ ಹಸಿ ಕಲೆಯನ್ನು ನಾವು ಗುರುತಿಸಬಹುದಿತ್ತು!ಹೀಗೇ ಅತ್ಯಂತ ಮುತುವರ್ಜಿಯಿಂದ ತನ್ನ ಮೇಳನಡೆಸಿಬಂದ ಭಾಗೀರಥಿ ಮಳೆಗಾಲದ ಒಂದು ಸಂಜೆ ಮರಳಲೇ ಇಲ್ಲ.

ಹರೆಯದ ದಿನತುಂಬಿದ ದನಗಳು ಕೆಲವೊಮ್ಮೆ ತನ್ನನ್ನು ಮೇಯಲು ಬಿಡು ಎನ್ನುತ್ತ ಹಗ್ಗವನ್ನು ಎಳೆದೆಳೆದು ಸಾಂಕೆತಿಕವಾಗಿ ತೋರುತ್ತ ಹಠಮಾಡಿಕೊಂಡು ಮೇಯಲು ಹೋಗಿ ಗುಡ್ಡ-ಬೆಟ್ಟಗಳಲ್ಲಿ ಕರು ಹಾಕಿಬಿಡುವುದು ಒಮ್ಮೊಮ್ಮೆ ನಡೆದುಬಿಡುತ್ತಿತ್ತು. ಆ ರಾತ್ರಿ ಅವುಗಳು ವಾಪಸ್ ಬರದಾಗ ಭಾಗೀರಥಿ ಏನನ್ನೋ ತನ್ನ ಭಾಷೆಯಲ್ಲಿ ಹೇಳುತ್ತಿದಳು, ಅದು ನಮಗೆ ತಿಳಿಯುತ್ತಿರಲಿಲ್ಲ. ಆದರೂ ಮಾರನೇ ದಿನ ಹುಡುಕಿದರೆ ಕರುಹಾಕಿದ ದನಗಳು ತಮ್ಮ ಕಂದಮ್ಮನನ್ನು ಹೊಟ್ಟೆಯಕೆಳಭಾಗ ಇರಿಸಿಕೊಂಡು ನಾಯಿ-ನರಿ ಇತ್ಯಾದಿ ಪ್ರಾಣಿಗಳಿಂದ ಹಗಲಿರುಳೂ ನವು ಹೋಗಿ ಕರೆತರುವವರೆಗೂ ಕಾಯುತ್ತಿದ್ದವು! ಉಪವಾಸವಿದ್ದರೂ ಚಿಂತೆಯಿಲ್ಲ ಕರುವನ್ನು ಬಿಡುತ್ತಿರಲಿಲ್ಲ! ಆಮೇಲೆ ಹುಡುಕುವ ನಮ್ಮ ಮನೆಯವರಿಗೋ ಕೆಲಸದವರಿಗೋ ಅಲ್ಲೆಲ್ಲೋ ಕಂಡು ಕೂಗುತ್ತ ನಂತರ ತಾಯಿ-ಕರು ಇಬ್ಬರನ್ನೂ ಕರೆತರುವುದಾಗಿರುತ್ತಿತ್ತು. ಆದರೆ ಅಂದು ಸಂಜೆಯ ಸ್ಥಿತಿ ಅದಾಗಿರಲಿಲ್ಲ. ಅಜ್ಜಮ್ಮ ಭಾಗೀರಥಿ ಬಂದಿರಲಿಲ್ಲ. ಮುದುಕಾದೆಯಮ್ಮ--ನೀನು ಮೇಯಲು ಹೊರಗಡೆ ಹೋಗುವುದು ಬೇಡ ಎಂದರೂ ಹಠಮಡಿಕೊಂಡು ಹೋಗುತ್ತಿದ್ದಳಾಕೆ! ದನ-ಕರು ನಿಂತಲ್ಲೆ ಇದ್ದರೆ ಮೈಯ್ಯೆಲ್ಲ ಜಡ್ಡು ಹತ್ತುತ್ತದೆ ಎಂಬ ಇನ್ನೊಂದು ಕಾರಣಕ್ಕೂ ಅಡ್ಡಾಡಿಕೊಂಡು ಬರಲಿ ಎಂದು ಅವಳನ್ನು ಮೇಯಲು ಬಿಡುತ್ತಿದ್ದರು.

ಬಾರದ ಭಗೀರಥಿಗಾಗಿ ಬೆಳಕು ಹರಿವವರೆಗೂ ನಂತರವೂ ಬ್ಯಾಟರಿ,ಬೆಂಕಿ ಹಚ್ಚಿದ ಸೂಡಿ[ತೆಂಗಿನ ಒಣಗರಿಗಳ ಕಟ್ಟು],ಹಗರ ಸೂಡಿ[ಅಡಿಕೆ ಮರದ ದಬ್ಬೆಯನ್ನು ಸಣ್ಣಗೆ ಉದ್ದುದ್ದಾಗಿ ಸೀಳಿ,ಏಳೆಂಟು ಸೇರಿಸಿ ಕಟ್ಟಿದ ಕಟ್ಟು] ಮತ್ತು ದೊಂದಿಯ ಸಹಾಯದಿಂದ ಸಮರೋಪಾದಿಯಲ್ಲಿ ಹುಡುಕಾಟ ನಡೆಯಿತು. ಭಾಗೀರಥಿಯ ಕುರುಹೇ ಇರಲಿಲ್ಲ, ಅವಳ ಸುಳಿವೇ ಎಲ್ಲೂ ಸಿಕ್ಕಿರಲಿಲ್ಲ. ಅವತ್ತಿನ ದಿನ ಬೆಳಿಗ್ಗೆ ಅವಳನ್ನು ಹಗ್ಗಬಿಡಿಸಿ ಕಳಿಸಿದ್ದಕ್ಕೆ ನಮ್ಮಮ್ಮ ತನ್ನನ್ನೇ ಕಾರಣಮಾಡಿಕೊಂಡು ತಾನೇ ಬಹಳ ಅತ್ತು ಕರೆದು ಮಾಡಿದ್ದೂ ಆಯಿತು. ಆದರೆ ಅದರಿಂದ ಭಾಗೀರಥಿ ಬರುವುದು ಸಾಧ್ಯವೇ? ಎಲ್ಲಾದರೂ ದಿಕ್ಕು ತಪ್ಪಿ ಹೋಹಿರಬಹುದೇ? ಎಲ್ಲಾದರೂ ಸುಸ್ತಾಗಿ ಮಲಗಿ ಬಿಟ್ಟಿರಬಹುದೇ ? ಎಲ್ಲಾದರೂ ಏಟುಮಾಡಿಕೊಂಡು ಮನೆಯಿಂದ ಯಾರಾದರೂ ಬರಬಹುದೆಂದು ಸಹಾಯಕ್ಕಾಗಿ ಕಾತರಿಸುತ್ತಿರಬಹುದೇ? ಬಾಯಾರಿಕೆಗೆ ನೀರು ಕುಡಿಯಲು ಎಲ್ಲೋ ಮಡುವಿಗಿಳಿದು ಮುಳುಗಿ ಹೋಗಿರಬಹುದೇ? ಒಂದಲ್ಲ ಎರಡಲ್ಲ....ಪ್ರಶ್ನೆಗಳಿಗೆ ಲೆಕ್ಕವೇ ಇಲ್ಲ. ಎಲ್ಲಾ ಬೇಡದ ಕೆಟ್ಟ ಆಲೋಚನೆಗಳದೇ ರಾಶಿ. ನಾವು ಮಕ್ಕಳು-ನಮಗೆ ಕೊಟ್ಟಿಗೆಯ ಅಜ್ಜಮ್ಮನನ್ನು ಕಾಣದ ಆದರೆ ಏನೂ ಮಾಡಲರದ ಸ್ಥಿತಿ. ಏನು ಮಾಡೋಣ? ದೊಡ್ಡವರೆಲ್ಲ ತಲೆನೋವಲ್ಲಿದ್ದಾರೆ, ಕಥೆಹೇಳುವ ನಮ್ಮ ದೋಸ್ತರೆಲ್ಲ ಮುಖವೂದಿಸಿಕೊಂಡು ಸುಮ್ಮನೇ ನಿಂತಿದ್ದಾರೆ, ಕೆಲವರು ಅಲ್ಲಿಲ್ಲಿ ಹುಡುಕುತ್ತ ಹೋಗಿದ್ದಾರೆ, ಮನೆಯವರಲ್ಲಿ ಗಟ್ಟಿಗರು ಹುಡುಕುತ್ತ ಹೋಗಿದ್ದಾರೆ, ನಮ್ಮನೆಯ ಹತ್ತಿರದ ಊರಲ್ಲಿ ವಾಸಿಸುವ ಬಂಧು-ಬಳಗದ ಜನ ಅದು ಹೇಗೋ ಸುದ್ದಿ ತಿಳಿದು ಹುಡುಕಲು ಮುಂದಾಗಿದ್ದಾರೆ....ಹೀಗೇ ಭಾಗೀರಥಿ ಎಲ್ಲರಿಗೂ ಬೇಕಾಗಿದ್ದ, ಒಬ್ಬ ಸಾಮನ್ಯ ಮನುಷ್ಯನಿಗಿಂತ ಹೆಚ್ಚಿನ ತಲೆಯುಳ್ಳ ದನವಾಗಿದ್ದಳು. ಎಲ್ಲರೂ ಪರಿತಪಿಸಿದವರೇ. ಅಂತೂ ಮಾರನೇ ದಿನ ಅಪರಾಹ್ನ ಮೂರು ಗಂಟೆಯ ಹೊತ್ತಿಗೆ ಯಾರೋ ಒಬ್ಬರು ಓಡುತ್ತಾ ಬಂದರು. ಅವರು ಬಹಳ ಗಾಬರಿಗೊಂಡಿದ್ದರು ಎಂದು ಅವರ ಮುಖನೋಡಿಯೇ ಹೇಳಬಹುದಿತ್ತು.ಬಂದ ಆ ವ್ಯಕ್ತಿ ನಮ್ಮ ಪರವೂರ ಬಂಧುವೊಬ್ಬರಾಗಿದ್ದರು " ನಿಮ್ಮನೆ ಭಾಗೀರಥಿ ಕಾಶಿ ವಿಶ್ವೇಶ್ವರನ ಸನ್ನಿಧಿ ಸೇರಾಯ್ತು" ಅನ್ನುತ್ತ ಅಳುತ್ತಿದ್ದರು. ಮನೆಯವರೆಲ್ಲ ಬಹಳ ಅತ್ತರು. ನಾವು ಅತ್ತೆವೆಂದು ಬೇರೆ ಹೇಳಬೇಕೆ? ಭಾಗೀರಥಿ ಗುಡ್ಡದ ಒಂದು ಪಕ್ಕದಿಂದ ಇನ್ನೊಂದು ಗುಡ್ಡದ ಪಕ್ಕಕ್ಕೆ ಹೋಗುವಾಗ ಮಧ್ಯೆ ಯಾವುದೋ ಕಾಲದಲ್ಲಿ ನಿರ್ಮಿತವಾದ ಆಳ ಕಂದಕದಲ್ಲಿ ಕಾಲು ಜಾರಿ ಬಿದ್ದಿದ್ದಳು, ಕಂದಕದ ದಡದ ಮೇಲಿನ ಹುಲ್ಲನ್ನು ತಿನ್ನಲು ಹೋದಳೊ ಅಥವಾ ಈ ಬದಿಯಿಂದ ಆ ಬದಿಗೆ ಹಾರಲು ಹೊರಟಿದ್ದಳೋ ದೇವರಿಗೇ ಗೊತ್ತು. ಬಿದ್ದ ಭಾಗೀರಥಿ ಬಹಳ ಕಾಲ ಉಳಿದಿರಲಿಕ್ಕಿಲ್ಲ. ಅದೂ ಮಳೆಗಾಲವಾದ್ದರಿಂದ ಕೆಳಗೆ ನೀರು ಹರಿಯುತ್ತಿತ್ತು. ಎರಡು ಕಲ್ಲುಗಳ ಮಧ್ಯೆ ಬಿದ್ದು ತಡೆದು ನಿಂತು ಇಹಲೋಕ ಯಾತ್ರೆ ಪೂರೈಸಿದ ಭಾಗೀರಥಿ ನಿಜವಾಗಿಯೂ ಕಾಶೀ ವಿಶ್ವನಾಥನ ಸನ್ನಿಧಾನ ಸೇರಿ ನಮ್ಮೆಲ್ಲರ ಮನದಲ್ಲಿ ಅಮರಳಾಗಿದ್ದಳು;ಚಿರಸ್ಥಾಯಿಯಾಗಿದ್ದಳು.

Monday, July 5, 2010

ರಸಿಕನ ಹುಡುಗಿ

[ರಾಜಾ ರವಿವರ್ಮ ರಚಿತ ಚಿತ್ರ ಕೃಪೆ -ಅಂತರ್ಜಾಲ ]

ರಸಿಕನ ಹುಡುಗಿ


ಏನಿದು ಅಹಾ ಈ ಬಳುಕು
ಏನೋ ಥಳುಕು ಥಳುಕು
ನವನವೀನ ಒರಸೆ ನಿನ್ನಾ ನಡುವಿನಲ್ಲೀ

ಸಂಚೊಂದು ಸಲಿಗೆಯಲ್ಲಿ
ಹೊಂಚಿದ್ದು ಸೆಳವಿನಲ್ಲಿ
ಮಿಂಚಗೊಂಚಲ ಹರಿಬಿಟ್ಟ ಚಳುಕು ಎದೆಯಾಳದಲ್ಲೀ

ಮಲ್ಲಿಗೆಯ ನಗೆಯ ಒನಪು
ಗಲ್ಲದ ಗುಳಿಯ ಹಾಸ್ಯ
ಅಲ್ಲೊಮ್ಮೆ ಮೂಗು ಕೊಂಕಿ ನನ್ನೆದೆಯ ನವಿಲ ಲಾಸ್ಯ!

ಅಟಕಾಯ್ಸೊ ಕಣ್ಣ ಕಾವ್ಯ
ತುಟಿಯಲ್ಲಿ ಭಾಷೆ ನವ್ಯ
ಕುಟುಕಿತ್ತು ನನ್ನ ಹೃದಯ ಹಗಲಿರುಳು ಬರೆದು ಭಾಷ್ಯ!

ಕೈಯಲ್ಲಿ ನೂರು ತಿರುವಿ
ಮೈಮನವ ಹೊರಳಿ ಬರುವಿ
ಸೈ ಸರಿಯು ಎಂಬ ಮನಸು ನಿನ್ನ ನೋಡಿ ಹೆಣೆದು ಕನಸು!

ಬಳ್ಳಿಯದು ಆ ಶರೀರ
ಬೆಳ್ಳಗಿನ ಎದೆಯ ಭಾರ
ಅಳ್ಳೆದೆಯೆ ಅಳೆದು ನುಂಗಿ ಕಳ್ಳನಾಮಾಡಿತಿಲ್ಲಿ!

ಎಳೆ ಬೆಂಡೆಕಾಯಿ ಬೆರಳು
ಸುಳಿಸುಳಿದು ಬರುವ ಕುರುಳು
ಕುಳಿತಲ್ಲೇ ಬಿಟ್ಟು ಬಾಯ ನಾನಲ್ಲಿ ಮಂಗಮಾಯ !

ನೀನ್ಯಾಕೋ ನನಗೆ ಇಷ್ಟ
ನೀನಿದ್ರೆ ಇಲ್ಲ ಕಷ್ಟ
ನೀನಿರದ ಬಾಳು ಶೂನ್ಯ ನೀ ಕೂಡಿ ಮಾಡು ಧನ್ಯ!

Saturday, July 3, 2010

'ಆ ಆತ'

ಚಿತ್ರ ಕೃಪೆ : ಅಂತರ್ಜಾಲ

'ಆ ಆತ'

ಎದೆಯುಬ್ಬಿಸಿ ನಡೆವನು ಆತ ಒಳಗೊಳಗೆ
ನನ್ನೊಳಗೆ
ಎಡಬಿಡದೆ..ಅನುದಿನವೂ....ಅನುಕ್ಷಣವೂ!

ಹೆದರುವನಲ್ಲ ಆತ ಒಂದಿನಿತು ಯಾವುದಕೂ
ಮರುಗುವನಲ್ಲ ಆತ ನೂರೆಂಟು ಮೊರೆತಕ್ಕೂ
ಅಲುಗುವುದಿಲ್ಲ ಆತ ಜಗವರಿತ ಕಂಪನಕೂ !
ನಲುಗುವುದಿಲ್ಲ ಆತ ಈ ಬೆಂಕಿ ಆ ಮಳೆಗೂ

ಬಿರುಬಿಸಿಲದು ಬಿಸಿಲೇ ಅಲ್ಲ ಆತನಿಗೆ ಅರೆಘಳಿಗೆ
ನೊರೆಹಾಲನು ಕುಡಿಯುವುದಿಲ್ಲ ಈ ಘಳಿಗೆ ಮರುಘಳಿಗೆ
ಹರೆದಾಡುವ ಹಂಬಲವಿಲ್ಲ ಸ್ಥಿರನಾತ ಶಾಶ್ವತನು
ಬರೆ ಸುಮ್ಮನೆ ಇರುವನು ಒಳಗೆ ಇಣುಕುತ್ತ ನನ್ನೊಳಗೆ!

ಚಿಂತೆಯ ಸಂತೆಯನೆಂದೂ ಬಯಸಿಲ್ಲ-ಬಯಸಲ್ಲ
ಕಂತೆನೋಟುಗಳನ್ನು ತನದಾಗಿಸೋ ಆಸೆಯದಿಲ್ಲ!
ಕುಂತು ತಿನ್ನುವನಲ್ಲ..ಮಲಗುವುದು..ಗೊತ್ತಿಲ್ಲ
ಆಂತರ್ಯದಿ ಬರೆಯುತ ಏನೋ ಕೂತಿರುವ ಕಡೆತನಕ !

ಅಣ್ಣ-ತಮ್ಮಂದಿರನು ಕಂಡಿಲ್ಲ-ಕಾಣಲ್ಲ
ಸುಣ್ಣ-ಬೆಣ್ಣೆಗಳಲಿ ಆಸಕ್ತಿ ಮೊದಲವಗಿಲ್ಲ!
ಕಣ್ಣಿಗೆ ಕಾಣದ ಲೋಕ ಅವನಿರವು ಅನಿವಾರ್ಯ
ಮಣ್ಣಲಿ ನನ್ನೊಡನಿದ್ದು ನನಗೊಮ್ಮೆಯು ಕಾಣನು ಆತ!

’ಅವನೆನ್ನುವ’ ನನ್ನಯ ಬುದ್ಧಿ ಅತಿಮಿತವೋ ನನಗರಿವಿಲ್ಲ
’ಅವನಲ್ಲ’ದ ಆ ’ಅವನ’ನ್ನು ಅವನೆನ್ನುವೆ ನಿಮ್ಮೊಡನೆಲ್ಲ
’ಅವನಿ’ಲ್ಲದೆ ಈ ಜಗವಿಲ್ಲ ’ಅದು’ ಎನ್ನಲು ಮನಸೊಪ್ಪಲ್ಲ
ಇದಕಾಯಿತು ಭಾವದ ಹರಿವು ನನ್ನೊಳಗಿನ ’ಆತನ’ ಒಲವು!

Friday, July 2, 2010

ರಾಮಾಂಜನೇಯ ಯುದ್ಧ


ರಾಮಾಂಜನೇಯ ಯುದ್ಧ

ನಾವೆಲ್ಲ ತಿಳಿದಂತೆ ರಾಮನ ಸದ್ಭಕ್ತ ಆಂಜನೇಯ. ರಾಮನ ನೆರಳಿನಂತೆ ಆತನನ್ನು ಸದಾ ಹಿಂಬಾಲಿಸುವ ವ್ಯಕ್ತಿ ಹನುಮಂತ. ರಾಮನ ಪರಿಚಯವಾದಂದಿನಿಂದ ಇಂದಿನವರೆಗೂ ಕಲ್ಪದಲ್ಲಿ ನೆಲೆಸಿದ್ದು ಸದಾ ರಾಮ ಸ್ಮರಣೆಯಲ್ಲಿ ನಿರತ ನಮ್ಮ ಹನುಮಣ್ಣ. ವಜಕಾಯಿಯೆಂದು ಕ್ಯಾತಿ ಪಡೆದು ಶತಯೋಜನ ವಿಸ್ತೀರ್ಣದ ಸಾಗರವನ್ನೇ ಹಾರಿ ಲಂಕೆಯನ್ನು ತಲ್ಪಿದ ಏಕಮೇವಾದ್ವಿತೀಯ ಸಾಹಸಿ ಈ ಗುಣವಂತ. ರಮನನ್ನು ನೆನೆಸದೇ ತೊಟ್ಟು ನೀರನ್ನೂ ಸೇವಿಸದ ಅನನ್ಯ ಭಾವದ ಶ್ರದ್ಧಾಳು ಈ ಭಗವಂತ. ಬಯಸದೇ ಮುಂದಿನ ಕಲ್ಪದಲ್ಲಿ ಬ್ರಹ್ಮಪದವನ್ನು ಪಡೆದ ಅಸೀಮ ಸಾಧಕ ಈ ಮಹಾನ್ ಯುಕ್ತಿವಂತ. ಇಂತಹ ಹನುಮನಿಗೂ ಆತನ ಆರಾಧ್ಯ ಸ್ವಾಮಿ ರಾಮನಿಗೂ ಯುದ್ಧವೇ ? ಕಲ್ಪಿಸಿಕೊಳ್ಳಲೂ ಅಸಾಧ್ಯ! ಆದರೆ ಇದು ಪುರಾಣೋಕ್ತ ಸತ್ಯ. ರಾಮಾಯಣ ಕಂಡ ಸತ್ಯ.


ರಾಮಾಯಣವನ್ನು ಎಲ್ಲಾದರೂ ಎಂದಾದರೂ ಹೇಗಾದರೂ ಓದಿ, ಅಲ್ಲಿ ಕಣ್ಣಿಂದ ದಳ ದಳ ದಳನೇ ನೀರು ಹರಿಸುತ್ತ-ಬಾಷ್ಪಾಂಜಲಿಯನ್ನು ಹಿಡಿದು ತಗ್ಗಿ ಬಗ್ಗಿ ನಮಿಸುವ ಹನುಮ ನಮಗೆಲ್ಲಾ ಕಾಣದ ಸ್ಥಿತಿಯಲ್ಲಿ ಕೂತೇ ಇರುತ್ತಾನೆ ಎಂಬುದು ಪ್ರತೀತಿ. ಆತ ತನ್ನ ತಪೋಬಲದಿಂದ ತನ್ನ ಪ್ರಸ್ತುತಿಯನ್ನು ಏಕಕಾಲದಲ್ಲಿ ಅನೇಕ ಪ್ರದೇಶಗಳಲ್ಲಿ ಪ್ರಚುರಗೊಳಿಸಬಲ್ಲ ಮಹಿಮಾನ್ವಿತ. ಹೀಗಾಗಿ ರಾಮಾಯಣವನ್ನು ಬಳಸುವವರು ಆಂಜನೇಯನಿಗೊಂದು ಆಸನವನ್ನು ಕಲ್ಪಿಸಿ ಅಲ್ಲಿ ಆತನ ಚಿತ್ರಪಟವನ್ನಿಟ್ಟು ಹೂವು ಹಣ್ಣುಗಳನ್ನು ಸಮರ್ಪಿಸುತ್ತಾರೆ.

ರಾಮಾಯಣದಲ್ಲಿ ವಿಶ್ವಾಮಿತ್ರರ ಪಾತ್ರ ಕೂಡ ಮಹತ್ವ ಪೂರ್ಣವಾದುದು. ತನ್ನ ಸ್ವಾಯತ್ತ ಕಲ್ಪನೆಯಿಂದ ಕ್ಷತ್ರಿಯನಾದ ಕೌಶಿಕ ಮಹಾರಾಜ ಕೇವಲ ತನ್ನ ದೀರ್ಘಕಾಲದ ಉದ್ದಂಡ, ನಿಕಟ, ನಿಷ್ಕಲ್ಮಷ, ಜ್ವಲಂತ ತಪಸ್ಸಿನಿಂದ ಮಹರ್ಷಿಯಾಗಿ ತ್ರಿಶಂಕುವಿಗೆ ಬೇರೊಂದು ಸ್ವರ್ಗವನ್ನೇ ಸೃಷ್ಟಿಸಿ ಹಲವು ಆಖ್ಯಾನಗಳಿಗೆ ಕಾರಣೀಭೂತರಾಗಿ ಬ್ರಹ್ಮರ್ಷಿ ಎಂಬ ಪದವನ್ನು ಪಡೆದ ಹಠಸಾಧಕ ಮಹಾಮುನಿ ವಿಶ್ವಾಮಿತ್ರ. ಇಂತಹ ವಿಶ್ವಾಮಿತ್ರರಿಗೆ ಒಮ್ಮೆ ಏನೋ ಮನಸ್ಸಲ್ಲಿ ಸಂಕಲ್ಪವಾಗಿ ಅವರು ರಾಮನನ್ನು ಕರೆದರು. ಶಕುಂತ ಎಂಬ ಸೂರ್ಯವಂಶಜ ವ್ಯಕ್ತಿ ಕ್ರೌಂಚಪಕ್ಷಿಜೋಡಿಯನ್ನು ಬಾಣದಿಂದ ಹೊಡೆದುರುಳಿಸುವಾಗ ಒಂದು ತನ್ನ ಯಜ್ಞಕುಂಡಕ್ಕೆ ಬಿದ್ದು ತನ್ನ ವೃತಭಂಗವಾಯಿತು,ಮಾಡಿದ ತಪ್ಪಿಗೆ ಕ್ಷಮೆಯಾಚಿಸದೇ ತಪ್ಪು ಮಾಡಿದ್ದಾನೆ ಆ ಶಕುಂತ ಆತನನ್ನು ೮ ದಿನಗಳಲ್ಲಿ ವಧಿಸು ಎಂಬುದಾಗಿ ಅಜ್ಞಾಪಿಸಿದರು. ಗುರು ವಿಶ್ವಾಮಿತ್ರರ ಆದೇಶಕ್ಕೆ ರಾಮ ಅಸ್ತು ಎಂದ. ಆ ಕ್ಷಣದಿಂದಲೇ ಪ್ರಾರಂಭವಾಯಿತು ಶಕುಂತನ ಬೇಟೆ!

ಇತ್ತ ತನ್ನ ವಧೆಗಾಗಿ ರಾಮನನ್ನು ನಿಯೋಜಿಸಿದ್ದನ್ನು ಜನರಿಂದ ಕೇಳಿ ತಿಳಿದ ಶಕುಂತ ದಿಕ್ಕಾಪಾಲಾಗಿ ಓಡುತ್ತ ಹನುಮನ ಅಮ್ಮ ಅಂಜನಾದೇವಿಯಿದ್ದಲ್ಲಿಗೆ ಬಂದು ಪಾದಕ್ಕೆ ಬಿದ್ದು ಪ್ರಾಣಭಿಕ್ಷೆ ಬೇಡಿದ. ಯಾರು ಯಾವ ಕಾರಣಕ್ಕೆ ಆತನನ್ನು ಕೊಲ್ಲಲು ಮುಂದಾಗಿದ್ದಾರೆ ಎಂಬುದನ್ನು ಕೇಳಲಾಗಿ ತನಗೆ ಪ್ರಾಣಭಿಕ್ಷೆ ಕೊಡುತ್ತೇನೆಂಬ ವಾಗ್ದಾನ ಕೊಟ್ಟರೆ ಮಾತ್ರ ಆಮೇಲೆ ಅದನ್ನು ತಿಳಿಸುವುದಾಗಿ ಹೇಳಿದ! ಜೀವಭಯದಿಂದ ಹೆದರಿ ಕಂಗಾಲಾಗಿದ್ದ ಆತನಿಗೆ ಅಂಜನಾದೇವಿ ಪ್ರಾಣಭಿಕ್ಷೆಯನ್ನು ಕೊಡುವುದಾಗಿ ವಾಗ್ದಾನ ಮಾಡಿಬಿಟ್ಟಳು! ನಂತರ ತಿಳಿದದ್ದು ಆತನನ್ನು ಕೊಲ್ಲಲು ಬರುತ್ತಿರುವುದು ಸ್ವತಃ ಶ್ರೀರಾಮ ಎಂಬುದು. ಆಗ ಆಕೆ ಕಕ್ಕಾವಿಕ್ಕಿಯಾದಳು. ಕಂದ ಹನುಮನನ್ನು ಕರೆದು ಅಮ್ಮನಾದ ತನಗೆ ಈ ಒಂದು ಆಸೆಯನ್ನು ಪೂರೈಸಿಕೊಡುವಂತೆ ಮಗನಲ್ಲಿ ಮೊರೆಯಿತ್ತಳು.

ಅಯೋಧ್ಯೆಯಲ್ಲಿ ರಾಮ ನಡೆಯುವ ಎಲ್ಲಾ ವರ್ತಮಾನಗಳನ್ನು ತಿಳಿದುಕೊಳ್ಳುತ್ತಲೇ ಇದ್ದ. ಶಕುಂತ ಹನುಮನಿದ್ದಲ್ಲಿಗೆ ಓಡಿರುವುದೂ ಮತ್ತು ಹನುಮನಿಂದ ರಕ್ಷಿತನಾಗಿರುವುದೂ ರಾಮನಿಗೆ ತಿಳಿದುಬಂತು. ರಾಮ ಬಹಳ ಜಂಜಡದಲ್ಲಿ ಸಿಲುಕಿದ್ದ. ಇತ್ತ ಗುರುವಿನ ಅದೇಶವನ್ನು ಪರಿಪಾಲಿಸಬರದು ಅಥವಾ ಅತ್ತ ಸದ್ಭಕ್ತನ ಜೊತೆ ವೈರುಧ್ಯ ಮಾಡಿಕೊಂಡು ಶಕುಂತನಿಗಿಂತಲೂ ಮೊದಲು ಹನುಮಂತನನ್ನು ಮುಗಿಸಬೇಕು-ಎಂತಹ ಪೇಚಾಟ ನೋಡಿ. ಕ್ರುದ್ಧನಾದ ರಾಮ ಅರಮನೆಯ ಉಪ್ಪರಿಗೆಯಲ್ಲಿ ಶತಾಯ ಗತಾಯ ತಿರುಗುತ್ತಿದ್ದ. ಏನುಮಾಡೋಣ ಏನುಮಾಡೋಣ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದ. ಹಾಗೂ ಹೀಗೂ ಮನದಲ್ಲೇ ಒದ್ದಾಡುತ್ತ ದಿನವೊಂದನ್ನು ಕಳೆದ ರಾಮ. ಹಾಗಂತ ಶಕುಂತನನ್ನು ಮುಗಿಸುವ ಕಾರ್ಯವನ್ನು ಬಹಳ ಮುಂದೂಡುವಂತಿರಲಿಲ್ಲ.

ಇತ್ತ ರಾಮ ಹೊರಗಡೆಗೆ ಹೋದ ಸಮಯದಲ್ಲಿ ಅಂಜನಾದೇವಿ ಅಯೋಧ್ಯೆಗೆ ಹಣ್ಣು-ಹೂವಿನೊಂದಿಗೆ ಬಂದು ದೇವೀ ಎಂದು ಕರೆದು ತನ್ನ ಅಳಲನ್ನು ಸೀತಾಮಾತೆಗೆ ತೋಡಿಕೊಂಡಳು. ಸೀತೆಯ ಮನಸ್ಸು ಅವಳ ಅಹವಾಲನ್ನು ಅವಲೋಕಿಸಿ, ಅನಸೂಯಾ ದೇವಿಯಿಂದ ಪ್ರೇರಿತವಾದ ಪತಿವೃತಾಧರ್ಮದ ಫಲಾಫಲದ ಪರಿಶೀಲನೆಗಾಗಿಯೂ ಮತ್ತು ಹಿಂದೆ ಹನುಮನಿಂದ ಪಡೆದ ಸೇವೆಯ ಕೃತಜ್ಞತಾರ್ಥವಾಗಿಯೂ ಎರಡು ವರಗಳನ್ನು ಅನುಗ್ರಹಿಸಿತು. ಮೊದಲನೆಯದಾಗಿ ರಾಮ ಹನುಮನ ಮೇಲೆ ಬಿಡುವ ಎಲ್ಲಾ ಬಾಣಗಳೂ ಶಾಂಡಿಲ್ಯಪತ್ರೆಗಳಾಗಿ, ಬಿಲ್ವಪತ್ರೆಗಳಾಗಿ,ತುಳಸೀದಳಗಳಾಗಿ ಆತನಮೇಲೆ ಬೀಳಲಿ, ಎರಡನೆಯದು ರಾಮ ಬ್ರಹ್ಮಾಸ್ತ್ರವನ್ನು ಹನುಮನ ಮೇಲೆ ಪ್ರಯೋಗಿಸಿದರೆ ಅದು ವೈಜಯಂತೀ ಹಾರವಾಗಿ ಆತನ ಕೊರಳಲ್ಲಿ ವಿಜೃಂಭಿಸಲಿ-ಎಂಬೀ ವರಗಳನ್ನು ಪಡೆದು ಹೊರಟುಹೋದಳು. ಈ ವಿಷಯವನ್ನು ರಾಮನಲ್ಲಿ ಸೀತೆ ಭಿನ್ನವಿಸಲಿಲ್ಲ, ಆ ಕಾರಣ ರಾಮನಿಗೆ ಇದು ತಿಳಿಯಲೇ ಇಲ್ಲ. ಹಾಗಂತ ಸೀತೆಯ ಕಪಟತನವಲ್ಲ ಇದು! ತನಗೋಸ್ಕರ ಲಂಕೆಯವರೆಗೆ ಜೀವವನ್ನೇ ಪಣವಾಗಿಟ್ಟು ಹಾರಿಬಂದು ತನ್ನನ್ನು ಪರೋಕ್ಷವಾಗಿ ರಕ್ಷಿಸಿದ, ತನ್ನ ಮಗನ ಸಮಾನನೆಂದು ಸೀತೆ ತಿಳಿದುಕೊಂಡ ಹನುಮನ ರಕ್ಷಣೆಯ ಕಾರ್ಯದಲ್ಲಿ ಅವಳಿಗೆ ಆಸಕ್ತಿ ಇತ್ತು, ತಾಯಿಯ ಮಮತೆ-ವಾತ್ಸಲ್ಯ ಇತ್ತು, ಮಗುವಿನ ಮೇಲಿರುವಂತಹ ಪ್ರೇಮವಿತ್ತು. ರಾಮನ ಮನಸ್ಸನ್ನು ಬದಲಾಯಿಸಿ ಹೇಗಾದರೂ ಮಾಡಿ ಯುದ್ಧವನ್ನು ತಪ್ಪಿಸಿಬೇಕೆಂಬ ಇರಾದೆ ಅವಳದಾಗಿತ್ತು. ಅದಕ್ಕಾಗಿ ಅವಳು ರಾಮನ ಬರವನ್ನೇ[ಬರುವಿಕೆಯನ್ನೆ]ಕಾದಳು.


ರಾಮ ಬಂದ, ತಿಂಡಿ ಬೇಡ-ಊಟಬೇಡ, ಕನಸಲ್ಲೂ ಅದೇ ಕನವರಿಕೆ, ರಾಮನ ಮುಖ ತುಂಬಾ ಕೆಂಪಡರಿ ಹೋಗಿತ್ತು. ಸೈರಣೆಯನ್ನೇ ಕಳೆದುಕೊಂಡಿದ್ದ ರಾಮ ತನ್ನೋಳಗೇ ಹೊಯ್ದಾಡುತ್ತಿದ್ದ. ಏನುಮಾಡಲಿ ಏನುಮಾಡಲಿ--ಅಂದುಕೊಳ್ಳುತ್ತ ಅದೇ ಕೈ ಕೈ ಹಿಸುಕಿಕೊಳ್ಳುವ ಕೆಲಸ. ಇದನ್ನು ಪರಾಂಬರಿಸಿದ ಸೀತೆ ರಾಮನ ಸಮಸ್ಯೆ ಏನೆಂಬುದನ್ನು ಕೇಳಿದಳು.[ತನಗೆ ಅದರ ಅರಿವಿದೆಯೆಂಬುದನ್ನು ಅವನ ಗಮನಕ್ಕೆ ತರಲಿಲ್ಲ, ತಂದರೆ ರಾಮಾಯಣದ ಕಥೆ ಇನ್ನೇನೋ ಆಗುತ್ತಿತ್ತೇನೋ!] ರಾಮ ವಿವರಿಸಿದ. ತಾನು ಕೊಲ್ಲಬೇಕಾದ ಶಕುಂತನನ್ನು ಹನುಮ ಬಚ್ಚಿಟ್ಟು ಪರೋಕ್ಷ ಸ್ವಾಮಿದ್ರೋಹಮಾಡಿದ್ದಾನೆ, ಹನುಮನನ್ನು ಕೊಲ್ಲದೇ ವಿಧಿಯಿಲ್ಲ, ಆ ಕಪಿಗೆ ಕಪಿ ಬುದ್ಧಿಯನ್ನು ಬಿಟ್ಟು ಬೇರೆ ಬುದ್ಧಿ ಬರಲು ಆತ ಹುಟ್ಟಿದ್ದು ಕಪಿಯಜಾತಿಯಲ್ಲಲ್ಲವೇ ? ಎಂದೆಲ್ಲ ಬಡಬಡಾಯಿಸಿದ. ಮನದಲ್ಲಿ ಒಮ್ಮೆ ಕನಿಕರವೂ ಇನ್ನೊಮ್ಮೆ ಕೋಪವೂ ಉಕ್ಕಿಹರಿಯುತ್ತಿತ್ತು. ತನಗಾಗಿ ಹನುಮ ಮಾಡಿದ ಸೇವೆಯನ್ನು ನೆನೆದು ರಾಮ ಬಹಳ ದಯಾರ್ದ್ರ ಹೃದಯವನ್ನು ತಳೆಯುತ್ತಾನೆ -ಮರುಕ್ಷಣ ತನ್ನ ಗುರುವಿನ ವೈರಿಯನ್ನು ತನ್ನಿಂದ ಅಡಗಿಸಿಟ್ಟು ಹನುಮ ಆತನನ್ನು ರಕ್ಷಿಸಿ ಸ್ವಾಮಿದ್ರೋಹಿಯಾದ ಎಂಬುದನ್ನು ನೆನೆದು ರಾಮ ವಜ್ರದಷ್ಟು ಕಠೋರನಾಗುತ್ತಾನೆ! ಈ ಎರಡೂ ಆಚೆ-ಈಚೆ ಆಚೆ-ಈಚೆ ಮನದ ಮಗ್ಗಲುಬದಲಿಸುತ್ತ ರಾಮನಿಗೆ ಕೊನೆಗೊಮ್ಮೆ ಕಿವಿಯಲ್ಲಿ ಕಾದ ಸೀಸವನ್ನು ಸುರುವಿದ ಅನುಭವವಾಗಿದೆ! ನಿಂತ ಮೆಟ್ಟಲ್ಲೇ ಹೊರಡುವ ನಿರ್ಧಾರಕ್ಕೆ ಬಂದ ರಾಮನನ್ನು ಮಡದಿ ಸೀತೆ ಏನೇ ಹೇಳಿದರೂ ಕೇಳದೇ ಹಿಂಬಾಲಿಸಿದ್ದಾಳೆ.

ಅಡವಿಗೆ ನಡೆತಂದ ಶ್ರೀರಾಮ ಅಂಗದ ಮುಂತಾದ ಕೆಳದರ್ಜೆಯ ವಾನರ ನಾಯಕರನ್ನು ಕರೆದು ಹನುಮನಿಗೆ ಸುದ್ದಿ ತಲ್ಪಿಸಿ ಯುದ್ಧಕ್ಕೆ ದುರವೀಳ್ಯವನ್ನು ಕಳುಹಿಸಿದ್ದಾನೆ. ದೂರದಿಂದ ಓಡೋಡಿ ಬಂದ ಅವರು ಮಾರುತಿಗೆ ನಡೆದ ವಿಷಯವನ್ನೆಲ್ಲ ಅರುಹಿದ್ದಾರೆ, ಶಕುಂತನನ್ನು ಬಿಟ್ಟುಕೊಡುವಂತೆ ಬೇಡಿದ್ದಾರೆ. ಆದರೆ ಹನುಮ ಬಿಡಬೇಕಲ್ಲ! ಆತ ಅಮ್ಮನಿಗೆ ಮಾತುಕೊಟ್ಟಿದ್ದ! ತನ್ನ ಪ್ರಾಣವನ್ನಾದರೂ ಕೊಟ್ಟಾನೆಯೇ ಹೊರತು ಜೀವ ಇರುವವರೆಗೆ ಶಕುಂತನ ಕೂದಲೂ ಕೊಂಕದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದನ್ನು ಆತ ಯಾವುದೇ ಕಾರಣಕ್ಕೂ ಅಲ್ಲಗಳೆಯಲಿಲ್ಲ, ಅದನ್ನು ಕಾರ್ಯಗತಗೊಳಿಸದೇ ಬಿಡಲೂ ಸಿದ್ಧನಿರಲಿಲ್ಲ. ಆದರೂ ನಿತ್ಯ ನೈಮಿತ್ತಿಕ ಆಚರಣೆಯಂತೇ ರಾಮಭಜನೆಯಲ್ಲೇ ತಲ್ಲೀನನಾಗಿದ್ದ ಹನುಮ.


ರಾಮಾ ರಾಮಾ ರಾಮಾ ರಾಮಾ

ಪಾಲಿಸು ನನ್ನನು ನೀ ರಘುವೀರ
ರಾಮಾ ರಾಮಾ ರಾಮಚಂದ್ರಾ...ಶ್ರೀ ರಾಮಚಂದ್ರಾ

ನಿನ್ನ ಭಕುತರ ಭಕುತನು ನಾನು
ಅನ್ನವನೀಯುವ ಪ್ರಭುವರ ನೀನು
ಘನ್ನ ಮಹಿಮನೇ ಶರಣೆಂಬೆನು ನಾ
ಮನ್ನಿಸಿ ನೀ ಪೊರೆಯೋ..ಅನುದಿನಾ....

ಅಮ್ಮನ ಅಣತಿಯು ನನ್ನನು ಹಿಡಿದು
ಸುಮ್ಮನೆ ಕೂರಲು ಮತ್ತದು ಬಿಡದು
ಒಮ್ಮೆ ಕ್ಷಮಿಸಿ ಆ ಬಡ ಶಮಂತಗೆ
ಒಮ್ಮತದಲಿ ಜೀವನವನು ಕರುಣಿಸೋ ....

ಗುರುನೀನು ಗುಣಧಾಮನು ನೀನು
ಹರಿ ನೀನು ಪುರುಷೋತ್ತಮ ನೀನು
ಅರಿಹಂತನು ನೀ ಅಭಯಂಕರ ನೇ
ಪರಿನೋಡುತಲರಿ ಸಲಹೆನ್ನಾ.......


ಅಯೋಧ್ಯಾರಾಮಾ ...ದಶರಥರಾಮಾ...ಕೌಸಲ್ಯಾರಾಮಾ...ಕಾರುಣ್ಯರಾಮಾ...ರಾಮಾ..ರಾಮಾ......


ರಾಮನ ಪುರಪ್ರವೇಶವಾಯಿತು. ರಾಮ ಹನುಮನಿದ್ದಲ್ಲಿಗೆ ಧಾವಿಸಿಬಿಟ್ಟ. ಇನ್ನೇನು ಬಾಣಪ್ರಯೋಗವಷ್ಟೇ ಬಾಕಿ! ಆದರೂ ಮಗುವಿನ ಥರದ ಮಾರುತಿಯನ್ನು ನೋಡಿ ಶಕುಂತನನ್ನು ಬಿಟ್ಟುಬಿಡುವಂತೆ ಸ್ವತಃ ಬುದ್ಧಿವಾದ ಹೇಳಿದ. ಎಷ್ಟೇ ಹೆಳಿದರೂ ಕೇಳದ ಹನುಮಂತ ರಾಮನೊಡನೆ ಯುದ್ಧವನ್ನೇ ಬೇಕಾದರೂ ಮಾಡಿಯೇನು ಆದರೆ ಶಕುಂತನನ್ನು ಬಿಡಲೊಲ್ಲೆ ಎಂದು ಪಟ್ಟುಹಿಡಿದ. ಯುದ್ಧ ನಡೆಯಿತು. ರಾಮ ನಾಮವನ್ನು ಜಪಿಸುತ್ತ ಕುಳಿತ ಹನುಮ, ಆಅತನ ಮೇಲೆ ಬಾಣಗಳ ಪ್ರಯೋಗಕ್ಕೆ ಮುಂದಾದ ರಾಮ. ನಡುವೆ ಬಾನಂಗಳದಿಂದ ಭಾಸ್ಕರ ವಾಲುತ್ತ ಮುಳುಗತೊಡಗಿದ. ಇದನ್ನು ದೂರಗ್ರಾಹಿಯಾಗಿ ನೋಡುತ್ತ ನಿಂತ ವಿಶ್ವಾಮಿತ್ರರು ಅಲ್ಲಿಗೆ ಬಂದು ರಾಮಾ ನೀನು ಇಷ್ಟುಹೊತ್ತು ಅಡೆನು ಮಾಡಿದೆ? ಸಂಜೆ ಸಮೀಪಿಸಿದರೂ ನಿನ್ನಿಂದ ಶಕುಂತನನ್ನು ವಧಿಸಲಾಗಲಿಲ್ಲವಲ್ಲಾ...ಅದೋ ನೋಡು ಸೂರ್ಯನಿಗೆ ತಡೆಹಿಡಿಯುತ್ತಿದ್ದೇನೆ ಬೇಗನೇ ಯುದ್ಧ ಪೂರೈಸಿ ಮುಗಿಸು ಎಂದರು. ವಿಶ್ವಾಮಿತ್ರರು ಅಷ್ಟುಮಾಡಿದ್ದೇ ತಡ ರಾಮ ಎಲ್ಲಿಲ್ಲದ ಅಸ್ತ್ರಗಳನ್ನು ಮಾರುತಿಯ ಮೇಲೆ ಪ್ರಯೋಗಿಸತೊಡಗಿದ.

ಉಹುಂ..ಏನೂ ಪ್ರಯೋಜನವಾಗಲಿಲ್ಲ. ಎಲ್ಲವೂ ಶಾಂಡಿಲ್ಯ, ಭಿಲ್ವ
ಮುಂತಾದ ಪತ್ರೆಗಳಾಗಿ ಹನುಮನ ತಲೆಯಮೇಲೆ ಬೀಳುತ್ತಿದ್ದವು. ಕೊನೆಗೊಮ್ಮೆ ಬ್ರಹ್ಮಾಸ್ತ್ರ ಪ್ರಯೋಗಿಸಿದ. ಅದು ವೈಜಯಂತೀ ಹಾರವಾಗಿ ಹನುಮನ ಕೊರಳಿಗೆ ಬಂದು ಬಿತ್ತು. ಬಹಳ ಆಶ್ಚರ್ಯಚಕಿತನಾದ ರಾಮ ಜೊತೆಗೇ ಇದ್ದ ಸೀತೆಯನ್ನು ಕೇಳಿದ. ಆಗ ಆಕೆ ಹಿಂದೆ ನೀಡಿದ ವರಗಳನ್ನು ಹೇಳಿದಳು. ಪುನಃ ಕೋಪಗೊಂಡ ರಾಮ ನಾರಾಯಣಾಸ್ತ್ರವನ್ನು ಹೊಅರತೆಗೆದ..ಇನ್ನೇನು ಬಿಡಬೇಕು..ಅಷ್ಟರಲ್ಲಿ ಪುನಃ ವಿಶ್ವಾಮಿತ್ರರು ಪ್ರತ್ಯಕ್ಷರಾಗಿ ರಾಮನನ್ನು ತಡೆದರು. ಹಿಡಿದಿರುವ ನಾರಾಯಣಾಸ್ತ್ರದಿಂದ ಪ್ರಳಯಸದೃಶ ವಾತಾವರಾಣ ಉಂಟಾಗಿ ಹಲವು ಸಾವು-ನೋವು ಸಂಭವಿಸುವುದರಿಂದ ಅದು ಬೇಡವೆಂತಲೂ ಯಾವ ಶಕುಂತನಿಗಾಗಿ ರಾಮ ಹುಡುಕುತ್ತಿದ್ದಾನೋ ಅವನ ರುಂಡ ಅಲ್ಲಿ ಬಿದ್ದಿದೆ ನೋಡು ಎಂತಲೂ ರಾಮನಿಗೆ ಅಪ್ಪಣೆಕೊಡಿಸಿದರು. ಒಪ್ಪಿದ ಮಾತನ್ನು ತಾನು ಪೂರೈಸಿಕೊಟ್ಟದ್ದಕ್ಕೆ ರಾಮನಿಗೆ ಸಮಧಾನವಾಯಿತು, ಆದರೆ ಅದನ್ನು ಹನುಮನಿಗೂ ಹೇಳಿಬಿಡು ಎಂದು ಹೇಳಿದರು ವಿಶ್ವಾಮಿತ್ರರು. ಸತ್ತ ಶಕುಂತನನ್ನು ಕಂಡು ಹನುಮ ಅಮ್ಮನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗಲಿಲ್ಲವಲ್ಲ ಎಂದು ಕ್ರುದ್ಧಗೊಂಡ ಹನುಮ ಇದೆಲ್ಲಾ ಆ ಮುನಿಯ ಆಟವೆಂದು ವಿಶ್ವಾಮಿತ್ರರ ಮೇಲೆ ಹರಿಹಾಯತೊಡಗಿದಾಗ ಮಧ್ಯೆ ನಾರದರ ಪ್ರವೇಶವಾಯಿತು. ನಾರದರು ಬರುಬರುತ್ತಿದ್ದಂತೆ ಹನುಮನಿಗೆ ಸಶರೀರಿಯಾಗಿ ಜೀವಂತವಿರುವ ಶಕುಂತನನ್ನು ತೋರಿಸಿದರು. ತನ್ಮೂಲಕ ಅಲ್ಲಿ ಏನು ನಡೆಯಿತು ಎಂಬುದನ್ನು ವಿಸ್ತರಿಸಿ ಹೇಳಿದರು. ರಾಮ-ರಾಮನಾಮ ಈ ಎರಡರ ಮಹಾತ್ಮೆಯನ್ನು ಜಗತ್ತಿಗೆ ತೋರುವ ಸಲುವಾಗಿ ಅದರಲ್ಲೂ ರಾಮನಾಮಕ್ಕೆ ಸರಿಸಾಟಿಯಾದ ನಾಮವಿಲ್ಲ ಎಂಬುದನ್ನು ಸಾರುವುದಕ್ಕಾಗಿ ಅದನ್ನು ಪ್ರಚುರಪಡಿಸಲು ಹನುಮನೇ ಸರಿಯಾದ ಭಕ್ತ ಎಂಬುದನ್ನು ಮನಗಂಡು ಇಷ್ಟೆಲ್ಲ ನಾಟಕವನ್ನು ಮುನಿ ವಿಶ್ವಾಮಿತ್ರರು ಹೆಣೆದಿದ್ದರು ಎಂಬುದನ್ನು ತಿಳಿಸಿದರು.

ವಿಷಯ ತಿಳಿದ ಹನುಮ ಬಹಳ ಸಂತೊಷಗೊಂಡ. ಲೋಕದಲ್ಲಿ ಯಾರೂ ಕೃತಘ್ನರಾಗಿರಬಾರದು, ಬದುಕಿನಲ್ಲಿ ಕೃತಜ್ಞತಾಭಾವ ಬಹಳ ದೊಡ್ಡದು--ಇದನ್ನೂ ಕೂಡ ಈ ಕಥೆಯಿಂದ ಲೋಕಾರ್ಪಣೆಮಾಡಿದ ಮುನಿಗಳಿಗೆ ಎಲ್ಲರೂ ಅಭಿವಂದಿಸೋಣ ಎಂಬಲ್ಲಿಗೆ ರಾಮ-ಸೀತೆಯರನ್ನು ಮತ್ತೆ ಹನುಮ ಸುತ್ತುತ್ತ ತನ್ನ ಭಕ್ತಿಯನ್ನು ಪುನಃ ಅಭಿವ್ಯಕ್ತಗೊಳಿಸಿದ. ರಾ ಎನ್ನುವಾಗ ಸಕಲ ಪಾಪಗಳೂ ನಮ್ಮ ಬಾಯಿಂದ ಹಒಅರಗೆ ಹೋಗಿ ಮ ಎಂದಾಗ ಹೊರಗಿನ ಪಾಪಗಳು ಒಳಗೆ ಬಾರದಂತೆ ತುಟಿ ಮುಚ್ಚಿಕೊಳ್ಳುವುದರಿಂದ ಈ ರಾಮ ಶಬ್ಧ ಅತಿ ವಿಶಿಷ್ಟವಾಗಿದೆಯೆಂತಲೂ, ಮಹಾವಿಷ್ಣುವಿನ ಕುರಿತ ಅಷ್ಟಾಕ್ಷರೀ ಮಹಾಮಂತ್ರದಿಂದ ’ರಾ’ ಎನ್ನುವ ಅಕ್ಷರವನ್ನೂ ಶಿವಪಂಚಾಕ್ಷರಿ ಮಹಾಮಂತ್ರದಿಂದ ’ಮ’ ಎಂಬ ಅಕ್ಷರವನ್ನೂ ತೆಗೆದು ಪೋಣಿಸಿ ’ರಾಮ’ಎಂದು ಹೆಸರಿಡಲಾಗಿದ್ದನ್ನು ಮಹರ್ಷಿ ವಿಶ್ವಾಮಿತ್ರರೂ ಮತ್ತು ನಾರದರೂ ನೆನಪಿಸಿಕೊಂಡರು, ರಾಮನಾಮ ಜಪದ ಫಲವಾಗಿ ಹನುಮ ಸೋಲಲಿಲ್ಲ ಮಾತ್ರವಲ್ಲ ಶಕುಂತನೂ ಬದುಕುಳಿದ ಎಂಬುದನ್ನು ಜಗತ್ತು ನೋಡಿ ನಲಿಯಿತು.

Thursday, July 1, 2010

ಪಲ್ಲಕ್ಕಿಯ ನಾಯಿ ’ಪರಿಮಳವ’ ಹೀರುತ್ತ......


ಪಲ್ಲಕ್ಕಿಯ ನಾಯಿ ’ಪರಿಮಳವ’ ಹೀರುತ್ತ......


ಈಗಿನ ಜೀವನವೇ ಹೀಗೆ. ಇಲ್ಲಿ ಯಾರೆಂಬುದಿಲ್ಲ, ಯಾತರದ್ದೆಂಬುದಿಲ್ಲ, ಎಲ್ಲೆಲ್ಲಿ ರಾಜಕಾರಣ ಮಾಡಲು ಸಾಧ್ಯವೋ ಅಲ್ಲೆಲ್ಲ ಮಾಡುವುದು. ಹೇಳುವುದು ಆಚಾರ;ತಿನ್ನುವುದು ಬೂದಿ. ಇಂಥವರ ಮಧ್ಯೆ ಊರಿಗಲ್ಲ ನಾಡಿಗೆ, ನಾಡಿಗಲ್ಲ ದೇಶಕ್ಕೆ, ದೇಶಕ್ಕಲ್ಲ ಜಗತ್ತಿಗೇ ಒಳಿತನ್ನು ಬಯಸುವವರು ಅಪರೂಪ, ಅಂಥವರಲ್ಲಿ ಶ್ರೀ ಶ್ರೀ ರವಿಶಂಕರ್ ಒಬ್ಬರು. ಈ ಶತಮಾನ ಕಂಡ ತತ್ವಜ್ಞಾನಿಗಳಲ್ಲಿ ಅವರು ಬಹಳ ಉನ್ನತ ಹಂತದಲ್ಲಿದ್ದಾರೆ. ದುಡ್ಡಿಗಾಗಿ ಆಶ್ರಮ ಕಟ್ಟಲಿಲ್ಲ, ಹಾಗೆ ನೋಡಿದರೆ ಅವರು ಈಗಿರುವ ಆ ಆಶ್ರಮ ಅವರ ತಂದೆಯ ಆಸ್ತಿ. ತಂದೆಯಿಂದ ಮಕ್ಕಳಿಗೆ ಸಿಗಬಹುದಾದ ಆಸ್ತಿ. ಅಂತಹ ಆಸ್ತಿಯನ್ನು ಲೋಕೋಪಕಾರದ ಕಾರ್ಯಕ್ರಮಗಳಿಗೆ ಬಳಸುತ್ತಿರುವುದು ಮೊದಲನೆಯದಾಗಿ ಪ್ರಶಂಸನಾರ್ಹ. ಎರಡನೆಯದಾಗಿ ತಮ್ಮ ವೈಯಕ್ತಿಕ ಬೇಕು-ಬೇಡಗಳನ್ನು ಬಿಟ್ಟು ಹಲವರಿಗೆ ಮಾರ್ಗದರ್ಶಿಸುವುದು ಕೂಡ ಅಭಿನಂದನೀಯ. ಮೂರನೆಯದಾಗಿ ಆಡುವುದನ್ನು ಆಚರಣೆಯಲ್ಲೂ ಅಳವಡಿಸಿಕೊಳ್ಳುವ ಸತ್ಸಂಪ್ರದಾಯ.

ಮಹರ್ಷಿ ಮಹೇಶ್ ಯೋಗಿಗಳ ತತ್ವಾನುಯಾಗಿ ಹೊರಟ ರವಿಶಂಕರರು ಧ್ಯಾನದಲ್ಲಿ ತಲ್ಲೀನರಾಗಿ ಬಹಳಕಾಲ ಕುಳಿತಾಗ ಹೊಸದಾದ ತತ್ವವೊಂದನ್ನು ಕಂಡುಕೊಂಡರು. ಆ ತತ್ವವನ್ನು ಅನುಸರಿಸಲು ಕಲಿಯುವುದನ್ನು ’ಸುದರ್ಶನ ಕ್ರಿಯೆ’ ಎಂಬುದಾಗಿ ಹೆಸರಿಸಿದರು. ಇದಕ್ಕೆ ಯಾವ ಮತ ಭೇದವಾಗಲೀ ಭಿನ್ನಾಭಿಪ್ರಾಯವಾಗಲೀ ಇಲ್ಲ, ಶುದ್ಧ ಮನಸ್ಸು ಮತ್ತು ಸ್ವಚ್ಛವಾತಾವರಣ, ಶುಭ್ರ ಬಟ್ಟೆ ಇವಿಷ್ಟೇ ಬೇಕಾದ ಪರಿಕರಗಳು. ಯಾರೂ ಯಾವಾಗ ಬೇಕಾದರೂ ಅಳವಡಿಸಿಕೊಂಡು ತಮ್ಮಲ್ಲಿಯೇ ತಮಗೆ ಪಾಸಿಟಿವ್ ಎನರ್ಜಿ ತುಂಬಿಕೊಳ್ಳಬಹುದಾದ ಪ್ರಕ್ರಿಯೆ ಇದು. ಇದನ್ನು ಕಲಿಯುವವರು ಕಲಿಸುವವರಿಗೆ ಅವರ ಅಸಲು ಖರ್ಚಾಗಿ ಸ್ವಲ್ಪ ಹಣವನ್ನು ಕೊಡಬೇಕಷ್ಟೇ ಬಿಟ್ಟರೆ ಇದು ಸುಲಿಗೆಯ ಮಾರ್ಗವಲ್ಲ!

ಜಗದ್ವ್ಯಾಪೀ ಮರವಾಗಿ ಬೆಳೆದ ಈ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಅಲ್ಲಲ್ಲಿ ಅನೇಕ ಪ್ರತಿನಿಧಿಗಳೆಂಬ ವಾಲಂಟೀಯರ್ಸ್ ಗಳಿಂದ ನಡೆಸಲ್ಪಡುತ್ತದೆ. ಈ ಕಲಿಸುವ ಪ್ರಕ್ರಿಯೆಗೆ ಒಂದು ಸಂಸ್ಥೆಯ ಆಕಾರ ಕೊಡುವ ಸಲುವಾಗಿ ಆಶ್ರಮವನ್ನು ಬಳಸಲಾಗುತ್ತದೆ. ಇಲ್ಲಿ ಕಲಿತು ಮೇಲಿನ ಹಂತಕ್ಕೆ ತಲುಪಿದ ತಾತ್ವಿಕ ಮತ್ತು ಯೋಗ ಶಿಕ್ಷಕರು ಸತ್ಸಂಗವೆಂಬ ಧ್ಯಾನ ಶಿಬಿರಗಳಲ್ಲಿ ಪಾಲ್ಗೊಂಡು ಮುಂದಿನ ತಮ್ಮ ಯೋಜನೆಗಳಿಗೆ, ವಿಸ್ತಾರದ ಅಳವಡಿಕೆಯ ಮಾರ್ಗಗಳಿಗೆ ಕೆಲವಾರು ಪ್ಲಾನುಗಳನ್ನು ರವಿಶಂಕರರಿಂದ ಪಡೆಯುವ ಕೇಂದ್ರವಿದು. ಅದೇ ರೀತಿ ಶಾಂತಿ-ಸೌಹಾರ್ದತೆಯಿಂದ ಬದುಕು ಸುಗಮ ಎಂದು ಬೋಧಿಸುವ ವಿಶ್ವಮಾನವ ತತ್ವವನ್ನು ಒಳಗೊಂಡ ಕೇಂದ್ರವಿದು.

ಸ್ವಾಮೀ ನಾನದರ ಆರಾಧಕನಾಗಲೀ, ಭಕ್ತನಾಗಲೀ ಅಲ್ಲ--ಹಾಗಂದುಕೊಳ್ಳಬೇಡಿ! ಆದರೆ ಅಲ್ಲಿನ ತತ್ವ ಮತ್ತು ಸತ್ವ ಎರಡನ್ನೂ ಕೂಲಂಕಶವಾಗಿ ಕೇಳಿ ತಿಳಿದುಕೊಂಡಿದ್ದೇನೆ, ಮಹೇಶ್ ಯೋಗಿಗಳ ಬಗ್ಗೆ ಬಹಳ ಹಿಂದೆಯೇ ಓದಿದ್ದೆ, ತಿಳಿದಿದ್ದೆ,ಅಭ್ಯಸಿಸಿದ್ದೆ,ಅನುಭವಿಸಿದ್ದೆ. ಅಂಥವರ ಗರಡಿಯಲ್ಲಿ ಪಳಗಿದ ವ್ಯಕ್ತಿ ಯಾವರೀತಿ ಇರಬಹುದು ಎಂಬ ಪರಿಕಲ್ಪನೆ ನನಗಿದೆ. ಯಾರೋ ಸಿಕ್ಕರು ಎಂದು ಶಿಷ್ಯನನ್ನಾಗಿ ಸ್ವೀಕರಿಸಲು ಮಹೇಶ್ ಯೋಗಿಗಳು ಸಿದ್ಧರಿರಲಿಲ್ಲ, ಅವರಿಗೆ ಹಲವಾರು ಪರೀಕ್ಷೆಗಳಿದ್ದವು, ಪಾಂಡಿತ್ಯದ-ಬುದ್ಧಿಮಟ್ಟದ ಪರಿಶೀಲನೆ ಕೂಡ ನಡೆಯುತ್ತಿತ್ತು ಅಲ್ಲದೇ ಬ್ರಹ್ಮಚರ್ಯವನ್ನು ಸರಿಯಾಗಿ ಪಾಲಿಸುವರೇ ಎಂಬುದನ್ನು ಹಲವು ದಿಕ್ಕು-ದಿಸೆ ಮತ್ತು ದೆಸೆಗಳಿಂದ ಅಂಬಿನ ಅಲುಗಿನ ಮೇಲೆ ನಿಲ್ಲಿಸಿ ಪರೀಕ್ಷಿಸುವಂತೆ ನೋಡಿಕೊಳ್ಳುತ್ತಿದ್ದರು. ಪ್ರಾಯಶಃ ನಮ್ಮ ರಾಮಕೃಷ್ಣಾಶ್ರಮದ ಸನ್ಯಾಸಿಗಳಿಗೆ ಅಂಥದೇ ಪರೀಕ್ಷೆಗಳಿವೆ ಎನ್ನಬಹುದು. ಅಂತಹ ಧ್ಯಾನದ ಪೈಲ್ವಾನರ ಗರಡಿಯಲ್ಲಿ ಮರಿ ಪೈಲ್ವಾನರಾಗಿ ಹೊರಹೊಮ್ಮಿದವರು ರವಿಶಂಕರ್. ಅವರ ತಂದೆ-ತಾಯಿಯ ಮದುವೆಗೆ ಬಂದ ಹಿರಿಯರೊಬ್ಬರು " ನಿಮಗೆ ಜಗತ್ಕಲ್ಯಾಣ ಕಾರ್ಯದಲ್ಲಿ ಭಾಗಿಯಾಗುವ ಮಗುವೊಂದು ಜನಿಸುತ್ತದೆ " ಎಂದು ಹರಸಿದ್ದರಂತೆ, ಆ ಮಾತು ಬಹುತೇಕ ಸತ್ಯ ಎಂಬುದನ್ನು ಇಲ್ಲಿ ನೆನೆಸಿಕೊಳ್ಳಲು ಇಷ್ಟಪಡುತ್ತೇನೆ!

ಜಗತ್ತಿನಲ್ಲಿ ನಾವೆಲ್ಲ ಇದ್ದೇವೆ. ಇದ್ದುಬಿಟ್ಟರಾಗಲಿಲ್ಲ, ಹಲವು ಪಶು-ಪಕ್ಷಿಗಳೂ ಇರುತ್ತವೆ. ಆದರೆ ನಮಗೆ ಅವುಗಳಿಗಿಂತ ಭಿನ್ನವಾಗಿ ಯೋಚಿಸುವ ಮೆದುಳನ್ನು ಜಗನ್ನಿಯಾಮಕ ಕೊಟ್ಟಿದ್ದಾನೆ. ನಾವು ಯಾರೇ ಆದರೂ ಯಾವ ಧರ್ಮ, ಮತ, ಪಂಗಡ, ಜಾತಿ, ಕೋಮು ಯಾವುದನ್ನೇ ಅನುಸರಿಸುತ್ತಿದ್ದರೂ ಮೂಲ ಮಾನವನಾಗಿ, ಇನ್ನೊಬ್ಬರಿಗೆ ನೋವಾಗದಂತೆ, ಇನ್ನೊಬ್ಬರ ಬದುಕಿನಲ್ಲಿ ಹಸ್ತಕ್ಷೇಪವಾಗದಂತೆ, ಇನ್ನೊಬ್ಬರಿಗೆ ನಮ್ಮಿಂದ ಅಪಚಾರವಾಗದಂತೆ, ಹಲವರಿಗೆ ನಮ್ಮಿಂದ ಸಾಧ್ಯವಾದ ರೀತಿಯಲ್ಲಿ ಉಪಕಾರವಾಗುವಂತೆ, ಸತ್ಯ-ಶಾಂತಿ-ನೆಮ್ಮದಿಯಿಂದ, ನಮ್ಮದೇ ಉಸಿರಾಟದ ಹಂತಗಳನ್ನು ಅವಲೋಕಿಸಿ ನಮ್ಮೊಳಗಿನ ನೆಗೆಟಿವ್ ಎನರ್ಜಿಯನ್ನು ತೊಲಗಿಸಿ ಸಹಜ ಬದುಕುವುದನ್ನು ಬದುಕುವ ಕಲೆಯನ್ನು ಬೋಧಿಸುವ ಸೇವೆಯೇ ಆರ್ಟ್ ಆಫ್ ಲಿವಿಂಗ್.


ನಮ್ಮೂರಲ್ಲಿ ಹಲವುಜನ ಹೇಳುವುದನ್ನು ಕೇಳಿದ್ದೆ- ನಾಯಿಯನ್ನು ದೇವರೆಂದು ಪಲ್ಲಕ್ಕಿಯಲ್ಲಿ ಕೂರಿಸಿ ಹೊತ್ತರಂತೆ. ಬಂಗಾರದ ಪಲ್ಲಕ್ಕಿ, ವಜ್ರಖಚಿತ ಮೇಲ್ಭಾಗವನ್ನೂ ಬಹಳ ಮೌಲ್ಯದ ಮೆತ್ತನ ಆಸನವನ್ನೂ ಹೊಂದಿತ್ತು. ನಾಯಿ ನಾರಾಯಣ ಸ್ವಾಮಿ , ದತ್ತಾತ್ರೇಯನ ಹತ್ತಿರವಿತ್ತು ಎಂಬೆಲ್ಲ ಕಾರಣಕ್ಕೆ ಅಷ್ಟೊಂದು ಮನ್ನಣೆ! ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗುತ್ತಾ ಇತ್ತು. ನಾಯಿ ಮಹಾರಾಜರು ಜನರನ್ನು ನೋಡುತ್ತಾ ನೋಡುತ್ತಾ ಸಾಗಿದ್ದರು ಪಲ್ಲಕ್ಕಿಯಲ್ಲಿ. ಹಳ್ಳಿಯ ಯಾವುದೋ ರಸ್ತೆಯ ಮೂಲೆಯೊಂದರಲ್ಲಿ ಯಾರೋ ಹೊಲಸು ಮಾಡಿದ್ದರು. ಅದರ ಕೆಟ್ಟ ನಾತ ನಮ್ಮ ನಾಯಿ ಮಾಹಾರಾಜರ ಮೂಗಿಗೆ ದಿವ್ಯ ಸುಗಂಧವಾಗಿ ತೇಲಿಬಂತು. ಆ ಕಡೆ ದೃಷ್ಟಿ ಹಾಯಿಸಿದ್ದೇ ನಾಯಿ ಮಹಾರಾಜರು ತಮ್ಮ ಮೇಲಿನ ಶಾಲನ್ನು ಕೊಡವಿ ಬೀಳಿಸಿ, ಕಣ್ಣರಳಿಸಿ ನೋಡಿ, ಮೂಗು ಹಿಗ್ಗಿಸುತ್ತ ಪಲ್ಲಕ್ಕಿಯಿಂದ ಎಲ್ಲರೂ ಏನಾಗುತ್ತಿದೆಯೆಂದು ನೋಡುವ ಮುಂಚೆಯೇ ಜಿಗಿದೋಡಿ ಹೊಲಸು ತಿನ್ನಲು ಹೋದರು! ಪಲ್ಲಕ್ಕಿ ಹೊತ್ತವರು ನಿಂತಲ್ಲೇ ಅವಾಕ್ಕಾಗಿ ನೋಡಬೇಕಾಯಿತಲ್ಲದೇ ನಾಯಿಯ ಯಜಮಾನರು ತಮ್ಮ ನಾಯಿ ಅಂತಿಂಥದ್ದಲ್ಲ ಎಂದು ಹೇಳಿಕೊಡಿದ್ದರಲ್ಲ, ಅವರ ಮುಖ ಹುಳಿಹಿಂಡಿದ ಹಾಲಿನಂತೆ, ಕಪ್ಪಿಟ್ಟ ಸೂರ್ಯನಂತೆ ಕಳಾಹೀನವಾಯಿತು. ಆದರೆ ನಾಯಿ ಮಾತ್ರ ತನ್ನ ಹೊಲಸು ತಿನ್ನುವ ಕೆಲಸವನ್ನು ಯಾವುದೇ ಮುಜುಗರವಿಲ್ಲದೇ ನಿರ್ಭಿಡೆಯವಾಗಿ ಮುಂದುವರಿಸಿತ್ತು! ಇದನ್ನು ಪ್ರಸ್ತಾವಿಸಲಿ ಕಾರಣವಿದೆ. ಹೀಗೆ ಓದಿ-

ನಮ್ಮ ಆರ್ಕೋಟಿ ಕನ್ನಡ ಜನತೆ ಒಂದು ಕಾಲದ ಭೂಗತ ಲೋಕದ ರೌಡಿಯೊಬ್ಬನನ್ನು ಪತ್ರಕರ್ತನೆಂದು ಪಲ್ಲಕ್ಕಿಯಲ್ಲಿ ಹೊತ್ತರು. ಆತ ಮಾಡಿದ್ದನ್ನೆಲ್ಲಾ ಏನೋ ಪಾಪ ಅನಿವಾರ್ಯತೆಗಾಗಿ ಮಾಡಿದ್ದ, ಈಗ ಹಾಗಿಲ್ಲ ಎಂಬ ಅನಿಸಿಕೆಯಿಂದ ಮರೆತು,ಕ್ಷಮಿಸಿ ಆತನನ್ನು ಬೆಳೆಸಿದರು. ಆತ ಬೆಳೆದ. ದಿನಗಳೆದಂತೆ ತಾನು ಬಹಳಾ ಒಳ್ಳೇ ಆದರ್ಶವ್ಯಕ್ತಿ, ತನ್ನನ್ನೇ ಎಲ್ಲರೂ ಫಾಲೋ ಮಾಡಿ ಎಂಬ ಹಂತಕ್ಕೆ ಬೆಳೆದುನಿಂತ. ಸರಿ. ಆಯ್ತು ಬಿಡಿ. ಫಾಲೋ ಮಾಡುವುದು ಬಿಡುವುದು ನಮ್ನಮ್ಮ ವೈಯಕ್ತಿಕ ವಿಷಯ ಅದನ್ನ ಮರೆಯೋಣ. ಆದರೆ ಆದ ತಾನೊಬ್ಬ ಪ್ರಭಾವೀ ವ್ಯಕ್ತಿ ತನ್ನ ಪ್ರಭಾವದಿಂದ ಅನೇಕರಿಗೆ ಚಳ್ಳೆಹಣ್ಣು ತಿನ್ನಿಸುವಷ್ಟು ಶನಿಮಹಾತ್ಮ ತಾನೆಂದು ಭಾವಿಸಿದ ಈತ ಎಕ್ಸ್ ಟಾರ್ಶನ್ ಮಾಡುವುದಕ್ಕೆ ಹೊರಟುಬಿಟ್ಟ. ಹೇಗಾದರೂ ಈಗ ಮಾಜಿ ರೌಡಿ ಹಾಲೀ ಪತ್ರಕರ್ತ, ತಾನು ಬಟ್ಟೆಹಾವು ಬಿಟ್ಟರೂ ಜನ ಹಾವೇ ಬಂದಿದೆ ಎಂದು ಹೆದರುತ್ತಾರೆ ಎಂಬುದನ್ನು ಮನಗಂಡ ಈತ ಕೆಲವು ಕಳಂಕಿತ ಪತ್ರಿಕೆಗಳು ಮೊದಲೆಲ್ಲಾ ಮಾಡಿ ಹೆಸರು ಕೆಡಿಸಿಕೊಂಡು ಹಳ್ಳಹಿಡಿದುಹೋಗಿದ್ದರೂ ತನ್ನದೂ ಒಂದು ಪತ್ರಿಕೆಯಿದೆ-ತಾನು ತನಗೆ ಬೇಕಾದ್ದನ್ನು ಬರೆಯಬಲ್ಲೆ, ಸೀಡಿ ಮಾಡಿ ಜನತೆಗೆ ತೋರಿಸಬಲ್ಲೆ- ಇಲ್ಲದಿದ್ದರೆ ೪೩ ಕೋಟಿ ಹಣಕೊಡಿ ಎಂದು ಹಾರುವಷ್ಟು ತಯಾರಾದ. ಇದಕ್ಕೆ ಬೇಕಾಗಿ ಕೆಲವರನ್ನು ತನ್ನೊಡನೆ ಸೇರಿಸಿಕೊಂಡ. ಯರೋ ಒಬ್ಬಾತ ತನ್ನ ಜಮೀನನ್ನೇ ಆಶ್ರಮ ಕಬಳಿಸಿದೆ ಎಂದು ಈ ಮಾಜಿ ರೌಡಿಗೆ ಹೇಳಿಕೊಂಡು ಅತ್ತನಂತೆ, ಅದಕ್ಕೇ ಈ ಮಾಜಿ ಹಾಲಿಯಾಗುವುದಕ್ಕೂ ತಯಾರಾಗಿಬಿಟ್ಟ. ಕೆಲವರುಷದ ಹಿಂದೆ ಇದೇ ಮಾಜಿಗೆ ಒಂದೆರಡು ಕಡೆ ಚಳ್ಳೆಹಣ್ಣು ತಿನ್ನಿಸಿದ್ದಾರೆ! ಈಗ ಸಿಗುವುದು ಹೊಸ ಚಳ್ಳೇಹಣ್ಣು!ಜಗದೋದ್ಧಾರಕನಾದ ಕೃಷ್ಣಪರಮಾತ್ಮ ಹೊರಟಂತೆ ತಾನು ಹೊರಟಿದ್ದೇನೆ ಎಂದುಕೊಳ್ಳುತ್ತ, ಪಲ್ಲಕ್ಕಿಯಲ್ಲೇ ಕೂತು ಹೊರಗಡೆ ಯಾರೋ ಒಬ್ಬಾತ ತನ್ನ ಜಮೀನು ತನ್ನ ಜಮೀನು ಎಂದು ಕೂಗಿಕೊಳ್ಳುವವ ಕೊಡುವ ಹೊಲಸನ್ನು ಪಡೆದುಬಿಟ್ಟ. ಅನೇಕದಿನಗಳಿಂದ ನಿತ್ಯಾನಂದನ ಮೇಲೆ ಬರೆದಿದ್ದನಂತೆ--ಈಗ ನಿನ್ನಮೇಲೂ ಬರೆಯುತ್ತೇನೆ ಎಂದು ಶ್ರೀ ಶ್ರೀ ರವಿಶಂಕರ್ ಅವರನ್ನು ಏಕವಚನದಲ್ಲಿ ಮಾತನಾಡುತ್ತಿದ್ದನಂತೆ. ನಾಯಿಯ ಕಥೆ ಕೇಳಿದಿರಲ್ಲ,ಹಾಗೆಯೇ ಮಾಜಿಗಳು ಎಂದಿದ್ದರೂ ಅವರು ಮಾಜಿಗಳೇ! ಸಂದರ್ಭಬಂದರೆ ಅವರು ’ಹಾಲಿ’ ಎಂಬ ಸ್ಲಾಟಿಗೆ ಜಿಗಿದುಬಿಡುತ್ತಾರೆ. ಇದನ್ನೆಲ್ಲ ನೋಡಿಯೇ ನಮ್ಮ ಹಿರಿಯರು ’ಹುಟ್ಟಿದ ಗುಣ ಘಟ್ಟಹತ್ತಿದರೂ ಬಿಡದು’ ಎಂಬ ಗಾದೆಯನ್ನು ಶತಶತಮಾನಗಳ ಹಿಂದೆಯೇ ಬರೆದಿದ್ದಾರೆ.

ನಮ್ಮ ಸುತ್ತ ಇಂತಹ ಹಲವಾರು ಮಾಜಿಗಳು, ರಾಜಿಗಳು ಅಂಡಲೆಯುತ್ತಿರುತ್ತಾರೆ. ಮಾಧ್ಯಮಗಳಲ್ಲಿ ಅವರ ಕೈವಾಡವನ್ನು ಮಾಡುವ ಇಂತಹ ಅನೇಕರು ಇರುತ್ತಾರೆ. ಸಾರ್ವಜನಿಕರಲ್ಲಿ ಒಂದು ಹೊಸ ಹುಸಿ ಅಲೆಯನ್ನು ತಾತ್ಕಾಲಿಕವಾದರೂ ಬಿಸಿಬಿಸಿಯಾಗಿ ಎಬ್ಬಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಮಯಕಾಯುತ್ತಿರುತ್ತಾರೆ. ಇಂಥವರಿಗೆ ಕಾಸು ಮುಖ್ಯವೇ ಹೊರತು ಸಾಮಾಜಿಕ ಸ್ವಾಸ್ಥ್ಯವಲ್ಲ. ನಿಜವಾಗಿ ಹೇಳುವುದಾದರೆ ಇಂತಹ ಮಾಜಿಗಳು ನಿತ್ಯಾನಂದ ಪರಂಪರೆಗೆ ಯೋಗ್ಯ! ಅಲ್ಲಿ ಜಾಗ ಸಿಕ್ಕರೆ ಕೂತು ’ಪ್ರಸಾದ’ ಮೆಲ್ಲುತ್ತ ಹಾಯಾಗಿರಬಹುದು. ಯಕ್ಕಶ್ಚಿತ ಒಬ್ಬ ಮಾಜಿಯನ್ನು ಸಮಾಜ ತಲೆಯಮೇಲೆ ಪಲ್ಲಕ್ಕಿಯಲ್ಲಿ ಹೊತ್ತ ಪರಿಣಾಮ ಈಗೀಗ ಕಂಡುಬರುತ್ತಿದೆ. ಹೀಗಾಗಿ ಪತ್ರಿಕೆಗಳಲ್ಲಿ ಬಂದಿದ್ದೆಲ್ಲಾ ನಿಜವಲ್ಲ;ಅವುಗಳಲ್ಲಿ ಕೆಲವು ಬೇಡದ ಮಾಹಿತಿಗಳೂ ಇರುತ್ತವೆ, ಮೂಲಭೂತವಾಗಿ ಪತ್ರಿಕೆಯನ್ನು ನಡೆಸುವವರಮೇಲೆ ಅವಲಂಬಿಸಿ, ಅವುಗಳ ಸಂಪಾದಕರನ್ನು ಅವಲಂಬಿಸಿ ಪತ್ರಿಕೆಗಳ ಸ್ವರೂಪ, ಸ್ವಭಾವ, ಸಂವಹನಶೀಲತೆ, ಪದಪ್ರಯೋಗ ಇವೆಲ್ಲಾ ಇರುತ್ತವೆ ಎಂದು ತಮಗೆಲ್ಲಾ ತಿಳಿಸಬಯಸುತ್ತೇನೆ. ಇದನ್ನೇ ಜಗದಮಿತ್ರ ನಿನ್ನೆಯ ಆಖ್ಯಾಯಿಕೆಯಲ್ಲಿ

ಸಂಪಾದಕನು ತಾನು ತಂಪೆರೆವೆ ಹಲಜನಕೆ......ಎಂದು ಹೇಳಿ ಪರಿತಪಿಸಿದ್ದಾನೆ! ತಮ್ಮಲ್ಲಿ ತಣ್ಣೀರನ್ನೂ ತಣಿಸಿ ಕುಡಿವ ತಾಳ್ಮೆಯಿರಲಿ; ಕಣ್ಣಾರೆ ಕಂಡಿದ್ದನ್ನೂ ಇನ್ನೊಮ್ಮೆ ಪರಾಂಬರಿಸುವ ಸಹನೆಯಿರಲಿ ಎಂಬ ಹೇಳಿಕೆಯೊಡನೆ ತಮ್ಮಿಂದ ಸದ್ಯಕ್ಕೆ ಈ ಲೆಖನದಿಂದ ಬೇರ್ಪಟ್ಟು ನನ್ನ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದೇನೆ.

Wednesday, June 30, 2010

ಅಹಂಕಾರ


ಚಿತ್ರ ಕೃಪೆ-ಫೋಟೋ ಸರ್ಚ್.ಕಾಂ

ಅಹಂಕಾರ

ಒಂದು ತರಗೆಲೆ ಹಾರಿ ಸಂದುಗೊಂದನು ಮೀರಿ
ಚಂದದಲಿ ಬೀಗುತ್ತ ಸೇರಲಾಗಸವ
ಮಂದಾಸನದಿಂದ ಬಿದ್ದ ನಹುಷನಂತೆ
ಸಂದಿತಿಳೆಗೈತಂದು | ಜಗದಮಿತ್ರ

ಮನದ ಮೂಸೆಯ ತುಂಬ ತಾನುತಾನೆಂತೆಂಬ
ವನದಿ ಮರ್ಕಟ ಕುಣಿವ ಹದವಿರದ ಕುಣಿತ
ಸನದು ಶಾಸನವಿಲ್ಲ ಅನುಭವದ ಪರಿಯಲ್ಲ
ಅನುಗಾಲ ತಿನ್ನುವುದು ! ಜಗದಮಿತ್ರ

ಅಶನಮದ ವಶನಮದ ಅರ್ಥ-ವೈಭೋಗ ಮದ
ಕುಶಲತೆಯ ಕಳೆಯುವುದು ಬುದ್ಧಿ ಬದಿಗೊತ್ತಿ
ವಿಷದವಹುದಾಮೇಲೆ ನೆಶೆಕಳೆದ ಹೊತ್ತಲ್ಲಿ
ಖುಷಿಯು ಶಾಶ್ವತವಹುದೇ ? ಜಗದಮಿತ್ರ

ಕಟ್ಟಿನೂರೆಂಟು ಬಂಗಲೆಗಳನು ಒಟ್ಟಿನಲಿ
ಮೆಟ್ಟುತೇಳುವ ಹಲವು ಬಡಜನಂಗಳನು
ಚಟ್ಟವೇರುವ ಮುನ್ನ ಪದಕುಸಿದು ಪರಿನೋಳ್ಪೆ
ಕಟ್ಟಕಡೆಗದು ಖಚಿತ | ಜಗದಮಿತ್ರ

ಆರ ನೂರನುಮಾಡಿ ನೂರು ಮುನ್ನೂರೆಂದು
ಹಾರೋಡಿ ಇರಿಸಿ ಹಣವನು ಬೆಳೆಯುವವನೇ
ವಾರಾನ್ನದಿಂ ಕಲಿವ ಮಕ್ಕಳನು ನೋಡಿಕಲಿ
ಭಾರವಪ್ಪುದು ಹೋಗೆ | ಜಗದಮಿತ್ರ

ಹಣವು ಅಧಿಕಾರ ಯೌವ್ವನವು ಮೇಳೈಸಿರಲು
ಗುಣವ ಸುಟ್ಟುರಿವೆ ಬಲು ಬಣಿವೆಗಳಮಾಡಿ
ಕಣಕಣದಿ ಕಾಮಾಂಧನಾದ ಲೋಲುಪನಿನ್ನ
ಅಣಕಿಸುವ ದಿನಬಹುದು | ಜಗದಮಿತ್ರ

ಯಶವು ಜಯಸಿರಿಯು ನಸುನಕ್ಕು ತಾನಡಿಯಿಡಲು
ಪಶುವಪ್ಪೆ ಮರೆತು ಕರ್ತವ್ಯ ಕುಲುಮೆಗಳ
ವಶವಾದ ಸಿರಿಯೊಮ್ಮೆ ಕೃಶವಾಗಿ ಕರಗಿರಲು
ಅಶನಕಲೆವಂತಕ್ಕು | ಜಗದಮಿತ್ರ

ದರ್ಪದೊಳು ರಾಜ್ಯಪದ ಪಟ್ಟಗಳ ಸುಖ ಪಡೆದು
ಅರ್ಪಿಸಿದರೆಲ್ಲ ತನು-ಮನ-ಧನವ ಮರಳಿ
ದರ್ಪಣದಿ ಕಂಡ ಸಿರಿಸಂಪತ್ತೆಲ್ಲ ನಮದಲ್ಲ
ತರ್ಪಣವ ಬಿಡು ಅದಕೆ | ಜಗದಮಿತ್ರ

ಸಂಪಾದಕನು ತಾನು ತಂಪೆರೆವೆ ಹಲಜನಕೆ
ಕಂಪು ಕಸುವಿನ ಸರಕು ಕೊಡುವ ಮದವೇರೆ
ಇಂಪಾಗಿ ಹಾಡುವಗೆ ಧ್ವನಿಪಟಲ ಒಡೆದಂತೆ
ಜೋಂಪು ಹಿಡಿವುದು ನಿನಗೆ | ಜಗದಮಿತ್ರ

ನಾನೆಂಬ ಪದವನ್ನು ಕಡೆಗಣಿಸು ಜೀವನದಿ
ಹೀನಬುದ್ಧಿಯ ತೊರೆದು ಅನುಕ್ಷಣ ಕ್ಷಣದಿ
ಆನೆಬಲ ಅಸುರಬಲ ಎನಿತೂ ನೆಮ್ಮದಿ ಥರದು
ಮಾನವನು ನೀನಾಗು | ಜಗದಮಿತ್ರ

Tuesday, June 29, 2010

ಹಾಯ್ ಲಿಟ್ಲ್ ಗಣಪಣ್ ವಿ ಸೆಲ್ಯೂಟ್ ಯು!



ಹಾಯ್ ಲಿಟ್ಲ್ ಗಣಪಣ್ ವಿ ಸೆಲ್ಯೂಟ್ ಯು!

ಗಣಪತಿಯ ಬಗ್ಗೆ ಬರೆದರೆ ಅದಕ್ಕೆ ಕೊನೆಯೇ ಇರುವುದಿಲ್ಲ, ನಾವು ಮನುಜರಾಗಿರುವುದರಿಂದ ಬರೆಯುವುದಕ್ಕೆ ಆದಿ ಇರಬಹುದು ಆದರೆ ಅಂತ್ಯಕಾಣಿಸುತ್ತೇನೆ ಎಂದು ಹೇಳುವ ದಾರ್ಷ್ಟ್ಯತೆ ಯಾರಲ್ಲಿಯೂ ಇಲ್ಲ;ಯಾಕೆಂದರೆ ಗಣಪನ ವಿಷಯವೇ ಹಾಗೆ. ಗಣಪ ಎಂದರೆ ಆತನೊಬ್ಬ ಜನತೆಯ ಅತೀ ಪ್ರೀತಿಪಾತ್ರ ದೇವರು. ಬಹುತೇಕ ಎಲ್ಲಾ ಕಡೆ ಅವನ ವಿಗ್ರಹಗಳನ್ನು ನೋಡುತ್ತೇವೆ. ಬಿಂದು ರೂಪದಿಂದ ಪ್ರಾರಂಭಗೊಳ್ಳುವ ಆತನ ರೂಪ ಇಂಥದ್ದೇ ಎನ್ನಲಾಗದ ರೀತಿ ಹಬ್ಬಿ ಹರಡುತ್ತದೆ. ಬಹಳ ಸರ್ತಿ ನಾವು ಯಾರೋ ನಮ್ಮನ್ನು ಕರೆದು " ನೋಡ್ರೀ ಇಲ್ಲಿ ನಮ್ಮನೇಲಿ ಕುಂಬಳಕಾಯಿಯಲ್ಲಿ ಗಣಪ ಮೂಡಿದ್ದಾನೆ, ನಮ್ಮಲ್ಲಿ ಟೊಮೇಟೊ ದಲ್ಲಿ ಮೂಡಿದ್ದಾನೆ" ಎಂದೆಲ್ಲ ಹೇಳುತ್ತಿರುತ್ತಾರೆ. ಅಲ್ಲಲ್ಲಿ ಆಗಾಗ ಕಾಣಿಸಿಕೊಳ್ಳುವ ಸೊಂಡಿಲ ಆಕೃತಿಯನ್ನು ಗಣಪನಿಗೆ ಹೋಲಿಸಿ ಖುಷಿಪಡುತ್ತಾರೆ. ವಿನಾಯಕನೇ ಹಾಗೆ. ಆತ ವಿಶ್ವವ್ಯಾಪಿ-ವಿಶ್ವಂಭರ. ಹದಿನೇಳು ಅವತಾರಗಳಲ್ಲಿ ವಿಜೃಂಭಿಸಿ ಅಸುರರನ್ನು ಸದೆಬಡಿದು ಮಹಾಭಾರತವನ್ನು ಅದರೊಳಗಣ ಭಗವದ್ಗೀತೆಯನ್ನೂ ನಮಗೆ ಬರೆದು ಕರುಣಿಸಿದ ಗೀರ್ವಾಣ ಲಿಪಿಕಾರ! ಸೊಂಡಿಲಿನಲ್ಲಿರುವ ಬೆರಳರೀತಿಯ ಆಕಾರದ ಭಾಗದಿಂದ ಬರೆದದ್ದೇ ಗೀರ್ವಾಣ ಲಿಪಿ! ಅದು ಓಘ, ಅದು ಅಮೋಘ, ಅದು ಆಮೋದ,ಅದು ಪ್ರಮೋದ,ಅದು ವಿಕಟ, ಅದು ವಿಲಂಬ, ಅದು ನಿರ್ವಿಕಾರ, ಅದು ಸದಾಕಾರ, ಅದು ಸದಾಲಂಬ,ಅದು ನಿರಾಲಂಬ ಹೀಗೆ ಏನೆಲ್ಲಾ ಹೇಳಹೊರಟರೂ ಅದು ಗಣನಾಯಕನ ಸಹಸ್ರನಾಮಗಳಲ್ಲಿ ಒಂದಾಗುತ್ತದೆ.

ಮಕ್ಕಳಿಗೆ ಬಾಲಗಣಪ ಆಟದ ವಸ್ತುವಾಗಿ ಲಭಿಸಿದರೆ ಕೆಲವರಿಗೆ ಆತ ಸ್ನೇಹಿತ, ಹಲವರಿಗೆ ಆದಿ ಪೂಜ್ಯನಾದರೆ ಇನ್ನೂ ಕೆಲವರು ಅವನನ್ನು ಅಲಂಕಾರಿಕ ವಸ್ತುವಾಗಿ ಮನೆಯಲ್ಲಿ ಇಟ್ಟುಕೊಳ್ಳಬಯಸುವವರು. ಯಾವುದೇ ಮಡಿ-ಮೈಲಿಗೆ-ಭಯ-ಭಕ್ತಿ ಇವುಗಳನ್ನೆಲ್ಲ ಮೀರಿದ ಅತಿ ಹೃದಯಸ್ಪರ್ಶೀ ದೇವರು ನಮ್ಮ ಗಣೇಶ. ಹಲ್ಲನ್ನು ವಕ್ರವಾಗಿ ಹೊಂದಿರುವುದರಿಂದ ವಕ್ರತುಂಡ ಎಂತಲೂ, ಕೋಪದಲ್ಲಿ ಒಂದು ಹಲ್ಲನ್ನು ಚಂದ್ರನತ್ತ ಮುರಿದೆಸೆದು ಇನ್ನೊಂದು ಕೋರೆದಾಡೆಯನ್ನು ಮಾತ್ರ ಇಟ್ಟುಕೊಂಡಿರುವುದರಿಂದ ಏಕದಂತ ಎಂತಲೂ, ಕೃಷ್ಣಮೃಗದ ಕಣ್ಣನ್ನು ಹೋಲುವ ಸಣ್ಣ ಕಣ್ಣುಳ್ಳವನದುದರಿಂದ ಕೃಷ್ಣಪಿಂಗಾಕ್ಷ ಎಂತಲೂ,ಆನೆಯ ಬಹುತೇಕ ಮೇಲ್ನೋಟವನ್ನು ಪ್ರದರ್ಶಿಸುವುದರಿಂದ ಗಜವಕ್ತ್ರ ಎಂತಲೂ, ಉದ್ದನೆಯ ದೊಡ್ಡ ಹೊಟ್ಟೆಯನ್ನು ಪಡೆದು ಲಂಬೋದರನೆಂತಲೂ,ವಿಕಟ ನಾಟಕದ ಸಕ್ರಿಯ ರೂವಾರಿಯಾಗುವುದರಿಂದ ವಿಕಟನೆಂತಲೂ,ವಿಘ್ನವನ್ನು ಕಾರಕ-ವಿಘ್ನ ನಿವಾರಕ ಎರಡೂ ಆಗಿರುವುದರಿಂದ ವಿಘ್ನರಾಜೇಂದ್ರನೆಂದೂ,ಹೊಗೆಯಬಣ್ಣದಲ್ಲೂ ಕಾಣಿಸುವುದರಿಂದ ಧೂಮ್ರವರ್ಣ ಎಂತಲೂ, ಬಿದಿಗೆಯ ಚಂದ್ರನನ್ನು ಹೋಲುವುದರಿಂದ ಮತ್ತು ಚಂದ್ರನಿಂದ ಪೂಜಿತನಾಗಿ ಅವನನ್ನು ಧರಿಸಿರುವುದರಿಂದ ಭಾಲಚಂದ್ರ ಎಂತಲೂ, ನಾಯಕರಿಗೆ ನಾಯಕನಾದುದರಿಂದ ವಿನಾಯಕ ಎಂತಲೂ ವರ್ಣಿಸಲ್ಪಟ್ಟಿದ್ದಾನೆ.

ಹಲವಾರು ಗಾಡಿಗಳ ಮುಂಭಾಗದಲ್ಲಿ ಕುಳಿತು ಕಣ್ಣಿಗೆ ಹರುಷತರುವ ಈತ ಮನೆಗಳ ಮುಂಭಾಗದಲ್ಲಿ, ಕಾರ್ಖಾನೆಗಳ ಮುಂಭಾಗದಲ್ಲಿ, ವಸತಿ ಸಮುಚ್ಚಯ-ಆಸ್ಪತ್ರೆ-ಹೋಟೆಲ್ ಹೀಗೇ ಎಲ್ಲೆಂದರಲ್ಲಿ ಗಣೇಶನ ಅತಿ ಚಿಕ್ಕ ವಿಗ್ರಹದಿಂದ ಹಿಡಿದು ಅತಿ ದೊಡ್ಡವಿಗ್ರಹಗಳನ್ನು ಕಾಣಬಹುದು. ಬೆನಕನ ಮೂರ್ತಿ ಇದ್ದುಬಿಟ್ಟರೆ ಅದೊಂದು ಸೇಕ್ಯುರ್ಡ್ ಪ್ಲೇಸ್ ಟು ಲಿವ್-ಇನ್ ಎಂದುಕೊಳ್ಳುವವರು ಎಷ್ಟೋ ಮಂದಿ. ಕೆಲವೆಡೆ ಘಟ್ಟದ ರಸ್ತೆಗಳಲ್ಲಿ ಅಲ್ಲೆಲ್ಲೋ ಅಡ್ಡಸಿಕ್ಕು ಪೂಜೆಗೊಳ್ಳುವ ’ಹಾದಿ ಗಣಪತಿ’ ಕೂಡ ಇರುತ್ತಾನೆ. ದುರ್ಗಮ ಪ್ರದೇಶಗಳಲ್ಲಿ, ಕಾಡು-ಮೇಡುಗಳಲ್ಲಿ ಅಂಡಲೆಯುವವರು ಕಷ್ಟಕಳೆಯಲು ನೆನೆದರೆ ಮೀನುಗಾರರು, ಸಮುದ್ರಯಾನಿಗಳು ತಮ್ಮನ್ನು ಸಂಕಷ್ಟದಲ್ಲಿ ಸಿಲುಕದಂತೆ ನೋಡಿಕೊಳ್ಳಲು ಆತನನ್ನು ಇಟ್ಟು ಪ್ರಾರ್ಥಿಸುತ್ತಾರೆ. ಶಾಲೆಗಳಲ್ಲಿ ನಿಂತು ವಿದ್ಯಾಗಣಪತಿ ಎಂಬ ಅಭಿದಾನ ಪಡೆದ ಈತ ಕಾಶಿಯಲ್ಲಿ ಡುಂಢಿರಾಜನಾಗಿದ್ದಾನೆ! ಇತ್ತೀಚೆಗೆ ದೃಷ್ಟಿಗಣೇಶ ಎಂಬ ಹೊಸ ನಾಮವನ್ನು ಪಡೆದು ಅಂಗಡಿ-ಮುಂಗಟ್ಟು ಹಾಗೂ ಮನೆ-ಮಹಲುಗಳಲ್ಲಿ ಚಿತ್ರರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಅಂತೂ ಗಣಪತಿಯನ್ನು ಬಿಟ್ಟು ನಮಗೆ ಯಾವ ಪೂಜೆಯನ್ನು ಮಾಡಿದರೂ ಅದು ತೃಪ್ತಿ ತರುವುದಿಲ್ಲ.

ಇಂತಹ ಸುಮುಖ ಕೆಲವುಕಡೆ ದುರ್ಮುಖನಾಗಿಯೂ ಕಾಣುವುದರಿಂದ ಏಕದರಲ್ಲಿ ಅನೇಕ-ಅನೇಕದರಲ್ಲಿ ಏಕ ಎಂಬುದನ್ನು ತನ್ನ ಬಹುರೂಪೀ ಪ್ರಸ್ತುತಿಯೊಂದಿಗೆ ಸಾದರಪಡಿಸುತ್ತಾನೆ. ಈ ವಿನಾಯಕ ವಿವಾಹಿತ ಎನ್ನುವವರು ಕೆಲವರಾದರೆ ಈತ ಅವಿವಾಹಿತ ಅಂತ ನಂಬಿ ಪೂಜಿಸುವವರು ಹಲವರು. ಅಣಿಮಾ,ಗರಿಮಾ,ಲಘಿಮಾದಿ ಹಲವು ಮೂಲ ಶಕ್ತಿಗಳ ಆಗರವನ್ನು ತನ್ನಲ್ಲೇ ಇರಿಸಿಕೊಂಡು ಅನಂತ ಶಕ್ತಿ ಸಂದೋಹನೆಂಬ ಹೆಗ್ಗಳಿಕೆಗೆ ಪಾತ್ರನಾದ ಈತ ಹಲವು ಹತ್ತು ಕೈಗಳು, ತಲೆಗಳು, ವಿರಾಟ್ ರೂಪಗಳನ್ನೆಲ್ಲ ತೋರಿಸಿ ಪರಮಾತ್ಮನ ಪೂರ್ಣರೂಪವೆಂತಲೂ ಕರೆಯಲ್ಪಟ್ಟಿದ್ದಾನೆ. ಕಾರ್ಯಗಳಿಗೆ ಜಯವನ್ನು ತಂದುಕೊಡುವ ಸಿದ್ಧಿ ಮತ್ತು ಮನಸ್ಸಿಗೆ ಹೆಚ್ಚಿನ ಮಟ್ಟದ ಜ್ಞಾನವನ್ನು ಕೊಡುವ ಬುದ್ಧಿ ಈ ಈರ್ವರನ್ನೂ ಹೆಂಡಿರನ್ನಾಗಿ ಪಡೆದು ಸಿದ್ಧಿ-ಬುದ್ಧಿವಿನಾಯಕನಾಗಿದ್ದಾನೆ. ಹಲವರು ಕ್ಷೇತ್ರಗಳಲ್ಲಿ ಅಲ್ಲಲ್ಲಿ ಸ್ಥಾನಿಕವಾಗಿ ಏನನ್ನೋ ಪಡೆದು ಹರಸುತ್ತ-ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತ ಕಡ್ಲೆಗಣಪತಿ, ಬಟ್ಟೆವಿನಾಯಕ,ಉಪ್ಪಿನಗಣಪತಿ, ಟಿಟ್ವಾಳಾ ಗಣಪತಿ, ಜಂಭುಗಣಪತಿ ಹೀಗೆಲ್ಲ ಹಲವಾರು ಹೆಸರಿನಿಂದ ಮೆರೆಯುತ್ತಾನೆ.

ಬಹುತೇಕ ಹಿಂದೂ ಹಿರಿಯಡಿಗೆಗಳಲ್ಲಿ ದೇವರಿಗೆ ಉಪ್ಪು ನಿಷಿದ್ಧ, ಆದರೆ ಉಪ್ಪಿನಲ್ಲೇ ಸಿಕ್ಕು ಪ್ರತಿಷ್ಠಾಪಿತನಾಗಿ ಉಪ್ಪನ್ನೇ ನೇರವಾಗಿ ಹರಕೆಯಾಗಿ ಪಡೆಯುವ ಉಪ್ಪಿನಗಣಪನಿದ್ದಾನೆ ! ಮಯವಾದ ಬಟ್ಟೆಯ ಗಂಟನ್ನು ತನ್ನ ಮೈಮೇಲೆ ಪ್ರದರ್ಶಿಸುವುದರ ಮೂಲಕ ತನಗೆ ಬಟ್ಟೆ ಎಂದರೆ ಪ್ರೀತಿ ಎಂಬುದಾಗಿ ಪರೋಕ್ಷ ತಿಳಿಸಿ ಅದನ್ನೇ ಹರಕೆಯಾಗಿ ಪಡೆದು ಹರಸುವ ಬಟ್ಟೆವಿನಾಯಕನಿದ್ದಾನೆ. ಇದೆಲ್ಲ ಹೇಗಿದ್ದರೂ ವಿನಾಯಕ ಎಲ್ಲ ಶಕ್ತಿಗಳ ಸಂಗಮವೆನ್ನಲು ಕಾರಣಗಳಿವೆ. ಈತನಿಗೆ ಅಲಂಕಾರವೂ ಬೇಕು, ಅಭಿಷೇಕವೂ ಬೇಕು, ನೈವೇದ್ಯವೂ ಭರಪೂರಬೇಕು[ಹಾಗಂತ ನೈವೇದ್ಯ ನೀಡದಿದ್ದರೆ ಒಣಗಣೇಶನಾಗಿಯೂ ಇರಲು ಸಿದ್ಧ!]--ಅಂದರೆ ಯಾವುದು ಬೇಡ ಈತನಿಗೆ?ತಿನ್ನುವ ಎಲ್ಲಾ ವಸ್ತುಗಳೂ ಅತ್ಯಂತ ಮೋದಕರ-ಅತ್ಯಂತ ಸತ್ವಭರಿತ, ನಡೆಸುವ ಎಲ್ಲಾಕಾರ್ಯಗಳೂ ಅಷ್ಟೇ ತತ್ವಪೂರಿತ, ತೋರುವ ಆಕಾರಗಳೂ ತತ್ವ ಪ್ರೇರಿತ. ಹರಿ-ಹರ-ಬ್ರಹ್ಮರನ್ನು ಸೇರಿಸಿದಂತಿರುವ ಈತ ಇವರೆಲ್ಲರ ಮೂಲವಾದ ಪರಬ್ರಹ್ಮ ಎಂಬ ತತ್ವವನ್ನು ಸಾರಿ ತೋರಿಸುತ್ತಾನೆ.

ದೇವರನ್ನು ಹೆಚ್ಚಾಗಿ ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸುತ್ತಾರೆ. ಆದರೆ ನಮ್ಮ ಬೆನವನಿಗೆ ದಿಕ್ಕೇ ಇಲ್ಲ. ಅದರಲ್ಲೂ ನೆಗೆಟಿವ್ ಎನರ್ಜಿಯ ದಿಕ್ಕು ಎಂದೇ ಖ್ಯಾತವಾದ ದಕ್ಷಿಣದಿಕ್ಕಿಗೆ ಮುಖಮಾಡಿರುವ ಗಣೇಶ ಸಿಕ್ಕರೆ ಅಲ್ಲಿ ನಮಗೆ ಅದು ಕನ್ವಟ್ ಆಗಿ ಪಾಸಿಟಿವ್ ಎನರ್ಜಿ ಆಗುತ್ತದೆ ಎಂಬುದು ಬಹಳ ವಿಶೇಷ! ಮನೆಯ ಎದುರಿಗೇ ರಸ್ತೆಯೊಂದು ನೇರವಾಗಿ ಬಂದು ಸೇರುವಂತಿದ್ದರೆ ಅಲ್ಲಿ ಗಣೇಶನ ವಿಗ್ರಹವನ್ನು ಇಡುತ್ತಾರೆ, ನಡೆಯಬಹುದಾದ ವಾಹನ ಇತ್ಯಾದಿ ಅಪಘಾತಗಳಿಂದ ರಕ್ಷಣೆ ಸಿಗಲೆಂದು ಹಾಗೆ ಮಾಡಿರುತ್ತಾರೆ.

ಉಳಿದ ದೇವತೆಗಳು ತಾವು ಮಾಡಿಕೊಂಡ ಉಪದ್ವ್ಯಾಪಕ್ಕೆ ಗಣೇಶನ ಮೊರೆಹೊಕ್ಕು ಪರಿಹಾರ ಕಂಡುಕೊಂಡಿದ್ದು ಸರ್ವೇ ಸಾಮಾನ್ಯ. ಯಾಕೆಂದರೆ ಅತೀ ಬುದ್ಧಿವಂತ ದೇವರಾದ ಈತನಿಗೆ ಯಾವುದಾದರೊಂದು ಹೊಸಮಾರ್ಗಕಂಡುಬರುತ್ತದೆ ಎಂಬುದು ಅವರಿಗೆಲ್ಲ ತಿಳಿದೇಇದೆ. ಪರರು ಮಾಡಿದ ತಪ್ಪಿಗೆ ತಾನು ನೋವು ಸಹಿಸಿ ಅವರನ್ನು ಕಾಪಾಡಿದ ಪೇಚಿನಪ್ರಸಂಗಗಳು ಒಂದೆರಡಲ್ಲ. ಆತ್ಮಲಿಂಗವನ್ನು ರಾವಣನ ಕೈಯ್ಯಿಂದ ತಪ್ಪಿಸುವಾಗ ರಾವಣ ಕೊಟ್ಟ ಹೊಡೆತವನ್ನು ಒಂದಿನಿತೂ ಹೆದರದೇ ತಿಂದ ಈತ ಮಹಾನ್ ಧೈರ್ಯಶಾಲಿಯೂ ಕೂಡ. ತಂದೆ-ತಾಯಿಗೆ ಮೂರು ಸುತ್ತು ಬಂದು ಜಗತ್ತೇ ನಿಮ್ಮಲ್ಲಡಗಿದೆ ಎಂಬ ತತ್ವವನ್ನು ಬೋಧಿಸಿದ ಬುದ್ಧಿವಂತನೂ ಇವನೇ ಅಲ್ಲವೇ ? ಸ್ವಾಮಿನಿಷ್ಠೆಗೆ ಪ್ರತೀಕವಾದ ಈತ ಅಮ್ಮ ತನ್ನನ್ನು ದ್ವಾರದ ಕಾವಲುಗಾರನಾಗಿ ನಿಯೋಜಿಸಿದಾಗ ಅರಿಯದೇ ಮಾಡಿದ-ಶಿವನನ್ನೇ ಒಳಗೆ ಬಿಡದ ತಪ್ಪಿಗೆ ತನ್ನನ್ನೇ ಒಮ್ಮೆ ಬಲಿಕೊಟ್ಟುಕೊಂಡ ವೀರ ಮತ್ತು ಶೂರ!

ವೇದವ್ಯಾಸರು ಮಹಾವಿಷ್ಣುವಿನ ಸ್ವರೂಪವೇ ಅನ್ನುತ್ತಾರೆ. ಅಂಥವರು ಭಾರತ ಬರೆಯುವಾಗ ಅವರು ಶೀಘ್ರಗತಿಯಲ್ಲಿ ಹೇಳುತ್ತ ಹೋಗುವಾಗ ಬರೆದುಕೊಳ್ಳುವ ಲಿಪಿಕಾರನ ಅವಶ್ಯಕತೆಯಿತ್ತು. ಬರೇ ತಲೆಯಿಲ್ಲದ ಲಿಪಿಕಾರನಾದರೆ ಆತ ತಪ್ಪು ಮಾಡಿಯಾನು ಎಂದು ಹೇಳಿದ್ದನ್ನು ಅರ್ಥಮಾಡಿಕೊಂಡು ಬರೆಯುವ ಲಿಪಿಕಾರನೇ ಬೇಕೆಂಬ ಹುಡುಕಾಟಕ್ಕೆ ಮಿತಿಯಿರಲಿಲ್ಲ, ಯಾರೂ ಸಿಗುವ ಕುರುಹೇ ಇರಲಿಲ್ಲ! ಚಿಂತಾಕ್ರಾಂತರಾದ ವ್ಯಾಸರಲ್ಲಿಗೆ ಸೃಷ್ಟಿಕರ್ತ ಬ್ರಹ್ಮನ ಮಾನಸಪುತ್ರ ನಾರದರೇ ಬಂದು ನಿಮ್ಮ ಚಿಂತೆಗೆ ಕಾರಣವೇನು ಎಂದು ಕೇಳಬೇಕಾಯಿತು! ವ್ಯಾಸರಿಂದ ಉತ್ತರ ಪಡೆದ ನಾರದರು ಗಣೇಶನ ಉಲ್ಲೇಖವನ್ನೂ ಆತ ಆವಿರ್ಭಾವವಾಗುವ ಕ್ರಮವನ್ನೂ ಅವನನ್ನು ಒಲಿಸಿಕೊಳ್ಳುವ ವೈಖರಿಯನ್ನೂ ತಿಳಿಸಿ ಈ ಬರವಣಿಗೆ ಆತನಿಂದಲ್ಲದೇ ಬೇರೆಯವರಿಂದ ಸಾಧ್ಯವಿಲ್ಲ ಎಂದುಬಿಟ್ಟರು. ವ್ಯಾಸರು ಗಣಪನನ್ನು ಆರಾಧಿಸಲಾಗಿ ಪ್ರಸನ್ನನಾದ ಸಿದ್ಧಿವಿನಾಯಕ ತನ್ನನ್ನು ಕರೆಸಿದ ಕಾರಣ ತಿಳಿದುಕೊಂದು ಅವರಿಗೊಂದು ನಿಬಂಧನೆ ವಿಧಿಸಿದ, ಏನೆಂದರೆ ವ್ಯಾಸರೇ ನೀವು ನಿಲ್ಲಿಸದೇ ನಿರರ್ಗಳವಾಗಿ ತೈಲಧಾರೆಯಂತೆ ಹೇಳುತ್ತ ಹೋಗಬೇಕು, ನೀವು ಮಧ್ಯೆ ಎಲ್ಲಾದರೂ ನಿಲ್ಲಿಸಿದರೆ ತಾನು ಲೇಖನಿ ಬಿಸುಟು ಹೊರಡುತ್ತೇನೆ ಎಂದು! ವ್ಯಾಸರಿಗೆ ವ್ಯಸನವಯಿತು, ಪುನಃ ಪ್ರಾರ್ಥಿಸಿ ತಾನು ಹೇಳುವುದನ್ನು ಅರ್ಥವಿಸಿಕೊಂಡು ಬರೆಯಬೇಕಾಗಿ ವಿನಂತಿಸಿದರು, ಇದಕ್ಕೆ ಇಬ್ಬರೂ ಸಮ್ಮತಿಸಿ ಭಾರತ ಬರೆಯಲ್ಪಟ್ಟಿತು, ತನ್ಮಧ್ಯೆ ಬರುವ ಹಲವು ಸಂಶಯಗಳನ್ನು ಬೇಕೆಂತಲೇ ಗಣೇಶ ಪ್ರಶ್ನೆಮಾಡಿ ತಿಳಿದುಕೊಂಡ. ಭಗವದ್ಗೀತೆಯನ್ನೂ ಒಳಗೊಂಡ ಮಹಾಭಾರತ ಗಣೇಶಗೀತೆಯನ್ನೂ ಸೇರಿಸಿಕೊಂಡಿತು! ಬರೆದು ಮುಗಿಸಿದ ಮಹಾಗಣಪತಿ ವೇದವ್ಯಾಸರಿಂದ ರಚಿಸಲ್ಪಟ್ಟ ಈ ಕಾವ್ಯ ಪಂಚಮವೇದವಾಗಲಿ ಎಂದು ಹರಸಿ ಹಾರೈಸಿ ಹೊರಟ. ಅದರ ಫಲವಾಗಿ ನಾವಿಂದು ಭಾರತವನ್ನು ಮೂಲ ಸಂಸ್ಕೃತದಲ್ಲಿ ಕಾವ್ಯವಾಗಿ ಪಡೆದಿದ್ದೇವೆ.

ನಿರಾಕಾರ ಮತ್ತು ಸದಾಕಾರ ಈ ಎರಡು ಮೂಲ ಸ್ವರೂಪದ ಆರಾಧನೆಯ ಕ್ರಮಗಳಾದರೆ ವಿಗ್ರಹರೂಪದ ಗಣಪನ ಉಪಾಸನೆಯಲ್ಲಿ ಖಂಡೋಪಾಸನೆ ಮತ್ತು ಅಖಂಡೋಪಾಸನೆ ಎಂಬ ಎರಡು ವಿಧಗಳು. ಭಾಗಶಃ ಕುತ್ತಿಗೆಯ ಮೇಲ್ಭಾಗವನ್ನಷ್ಟೇ ಇಟ್ಟುಕೊಂಡು ಪೂಜಿಸುವುದು ಖಂಡೋಪಾಸನೆ, ಇಡೀ ಮೂರ್ತಿಯನ್ನು ಇಟ್ಟುಕೊಂಡು ಆರಾಧಿಸುವುದು ಅಖಂಡೋಪಾಸನೆ. [ಇನ್ನು ಕೆಲವರಂತೂ ಬರೇ ಒಂದು ಉರುಟು ಪ್ಲಾಸ್ಟಿಕ್ ರೂಪದಲ್ಲಿ ಅಲ್ಲೇ ಮಧ್ಯೆ ಸ್ವಲ್ಪ ಉಬ್ಬು ಸೊಂಡಿಲಾಕಾರಮಾಡಿ ನಮ್ಮ ವಾಹನಗಳಲ್ಲಿ ಇಟ್ಟುಕೊಂಡಿರುತ್ತೇವೆ.] ಭಾರತದ ಹಲವು ಪ್ರದೇಶಗಳಲ್ಲಿ,ರಾಜ್ಯಗಳಲ್ಲಿ ವಿವಿಧ ನಮೂನೆಯ ವಿಘ್ನೇಶ ವಿಗ್ರಹಗಳು ಕಾಣಸಿಗುತ್ತವೆ. ಕೆಲವು ಕೇಸರಿ ಬಣ್ಣದವು, ಹಲವು ಕಪ್ಪು ಶಿಲೆಯವು, ಇನ್ನು ಕೆಲವು ಬಿಳಿಯ ಗ್ರಾನೈಟ್ ನಿಂದ ಮಾಡಿದವು ಮತ್ತಿನ್ನೂ ಕೆಲವು ಮಣ್ಣಿನಿಂದ ಮಾಡಿದವುಗಳು. ಅಪರೂಪದಲ್ಲಿ ಮರದಲ್ಲಿ ತಯಾರಿಸಿದ ವಿಗ್ರಹಗಳು ಮತ್ತು ಲೋಹದಲ್ಲಿ ತಯಾರಿಸಿದವುಗಳೂ ಬಳಕೆಯಲ್ಲಿವೆ. ಮೂರ್ತಿ ಯಾವುದೇ ಆಗಿರಲಿ ಅದನ್ನು ತಂದ ಮೇಲೆ ಅದಕ್ಕೊಂದು ಸಂಸ್ಕಾರದ ಕ್ರಮ ಇರುತ್ತದೆ. ಅದನ್ನು ಮಾಡದ ಹೊರತು ಆ ಮೂರ್ತಿಯಲ್ಲಿ ದೇವರ ಪ್ರತಿಬಿಂಬ ಅಥವಾ ಛಾಯಾಬಿಂಬ ಪೂಜೆಗೆ ಅಣಿಗೊಂಡಿರುವುದಿಲ್ಲ. ಇದರಲ್ಲೂ ದೇವಸ್ಥಾನ, ಮನೆ/ಗೃಹ/ಮಹಲು, ವಾಹನ ಈ ರೀತಿ ಮೂರು ರೀತ್ಯಾ ವಿಭಜಿಸಿ ಆಯಾಯ ಸ್ಥಳಕ್ಕೆ ತಕ್ಕುದಾದ ವಿಗ್ರಹವನ್ನು ಪಡೆಯಬಹುದಾಗಿದೆ. ಇಲ್ಲಿ ಪೂಜೆಗೂ ಮುನ್ನ ನಡೆಸುವ ವೈದಿಕ ವಿಧಿ-ವಿಧಾನ ಸಂಸ್ಕಾರಗಳು ಆಯಾಯ ಸ್ಥಳ ಮತ್ತು ವಿಗ್ರಹದ ಸ್ವರೂಪಕ್ಕೆ ತಕ್ಕಂತೆ ಇರುತ್ತವೆ. ಉದಾಹರಣೆಗೆ ದೇವಸ್ಥಾನಕ್ಕಾದರೆ ಅಲ್ಲಿ ಆಗಮ ಶಾಸ್ತ್ರ ರೀತ್ಯಾ ಹೋಮಗಳು-ಶುದ್ಧೀಕರಣ,ಸಾತ್ವಿಕ ಬಲಿ[ಪ್ರಾಣಿ ಬಲಿಯಲ್ಲ], ಅಷ್ಟಬಂಧ ಇವೇ ಮೊದಲಾದ ಹಲವು ಹತ್ತು ಕಾರ್ಯಕ್ರಮಗಳಾದರೆ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಆವಾಹನಾ ಕಾರ್ಯಕ್ರಮದ ಪ್ರಮಾಣ ತುಂಬಾ ಕಮ್ಮಿ ಇರುತ್ತದೆ. ಅಂತೆಯೇ ವಾಹನದಲ್ಲಿ ಇಡುವ ಮೂರ್ತಿಗಳಿಗೆ ಅತೀ ಕಡಿಮೆ ಕಾರ್ಯದಿಂದ ಅವುಗಳಿಗೊಂದು ಸಂಸ್ಕಾರ ಕೊಡುತ್ತಾರೆ. ಈ ಸಂಸ್ಕಾರ ಕೊಡುವಿಕೆಯಿಂದ ವಿಗ್ರಹದ ತಯಾರಿಕಾ ಹಂತದಲ್ಲಿ ಆಗಿರಬಹುದಾದ ದೋಷಗಳು ಅಥವಾ ವಿಗ್ರಹ ರೂಪಕ್ಕೂ ಬರುವ ಮೊದಲು ಆ ಮೂಲವಸ್ತುವಿದ್ದ ರೀತಿ, ಅದರ ಹೀನ ಸ್ವರೂಪ, ಅದರಲ್ಲಿರುವ ನೆಗೆಟಿವ್ ಎನರ್ಜಿ ಎಲ್ಲಾ ತೆಗೆದು ಹಾಕಲ್ಪಡುತ್ತದೆ. ಇಷ್ಟಾದ ಮೇಲೆಯೇ ಮೂರ್ತಿ ಪೂಜೆಗೆ ಅರ್ಹವೇ ಹೊರತು ಅದಕ್ಕೂ ಮೊದಲು ಅದೊಂದು ಕಲಾಕೃತಿ ಅಷ್ಟೇ! ದೇವಸ್ಥನಗಳಲ್ಲಿ ಇರುವ ವಿಗ್ರಹಗಳು ಸ್ಥಿರ ಅಥವ ಅಚಲ ವಿಗ್ರಹಗಳೆಂದೂ ಮನೆ ಹಾಗೂ ವಾಹನಗಳಲ್ಲಿರುವ ವಿಗ್ರಹಗಳು ಚರ ಅಥವಾ ಚಲವಿಗ್ರಹಗಳೆಂದೂ ಗುರುತಿಸಲ್ಪಡುತ್ತವೆ. ದೇವಸ್ಥಾನಗಳಲ್ಲಿರುವ ವಿಗ್ರಹಗಳಲ್ಲಿ ಪಾಸಿಟಿವ್ ಎನರ್ಜಿ ಜಾಸ್ತಿ ಇದ್ದು ಮನೆಯಲ್ಲಿರುವ ವಿಗ್ರಹಗಳಲ್ಲಿ ಕಡಿಮೆ ಮತ್ತು ಇತರೆಡೆಗಳಲ್ಲಿರುವ ವಿಗ್ರಹಗಳಲ್ಲಿ ಅದು ಇನ್ನೂ ಕಡಿಮೆ ಇರುತ್ತದೆ.

ನಮಗೆ ಗೊತ್ತಿರದ ಅನೇಕ ಚೀನೀಯರ ಕಪ್ಪೆಯನ್ನೋ-ಕವಡೆಯನ್ನೋ ತಂದು ಅದು ವಾಸ್ತು ಎಂದು ದುಡ್ಡುಮಾಡುವವರು ಭಾರತದ ಎಲ್ಲೆಡೆ ಹಬ್ಬಿದ್ದಾರೆ. ಅದಕ್ಕೆ ಬದಲಾಗಿ ನಮ್ಮ ಕಣ್ಣೆದುರು ಕುಳಿತರೆ ಅತ್ಯಂತ ಕಿರಿದದ ವಿಗ್ರಹವಾಗಿಯೂ ಎಲ್ಲ ಪಾಸಿಟಿವ್ ಎನರ್ಜಿಯನ್ನು ಎಳೆದು ತರಬಲ್ಲ ಗಣೇಶನನ್ನು ಇಟ್ಟುಕೊಳ್ಳುವುದು ಒಳ್ಳೆಯದಲ್ಲವೇ ? ಒಬ್ಬ ಲಾಫಿಂಗ್ ಮ್ಯಾನ್ ಬದಲಿಗೆ ನಗುತ್ತ ನೃತ್ಯಮಾಡುವ ನಾಟ್ಯಗಣೇಶನನ್ನು ಇಟ್ಟುಕೊಳ್ಳಬಹುದಲ್ಲ ?


ಸರಿಗಮಪದನಿಸ ಹಾಡೀ
ನಮ್ಮ ಬೆನಕಣ್ಣನ ಕೊಂಡಾಡೀ ||ಪ||

ಮೊರದಗಲದ ಕಿವಿಯಿಂದಾ ದುಗುಡವ
ಹರ ಸುತ ಕೇಳುತ ಬಂದಾ
ಮಿರಿಮಿರಿ ಮಿಂಚುವ ಕಣ್ಣು ಸೊಂಡಿಲ
ಹರಿದಾಡಿಸಿ ತಾ ನಿಂದಾ ||೧||

ಲಂಬೋದರನನು ಹೊತ್ತು ಮೂಷಕ
ಅಂಬೆಗಾಲಿಡುವ ಪರಿಯು
ತುಂಬಿತು ಹೃನ್ಮನವೆಲ್ಲಾ ಖುಷಿಯಲಿ
ಸಂಭ್ರಮಿಸುವ ದಿನಚರಿಯೂ ||೨||

ಅದ್ಭುತ ಮಾಯಾಲೋಕ ಈ ಗಣಪ
ಸದ್ದುಮಾಡದಲೇ ಬರುವಾ
ನಿದ್ದೆಯಲಿಹ ಜನವೆಲ್ಲಾ ಕೇಳಿ
ಎದ್ದು ನಿಂತು ನಾವ್ ಕರೆವ ||೩||

ಶುದ್ಧಮನವು ಸಾಕವಗೆ ನಮ್ಮನು
ಉದ್ಧರಿಸಲು ಬರುವವಗೆ
ಪೆದ್ದುತನದಿ ನಾವೆಲ್ಲಾ ಈ ಪರಿ
ಗುದ್ದಾಡಲೇಕೆ ಒಳಗೆ ||೪||