ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, July 11, 2010

ವಾಸ್ತುವಿನ ವಾಸ್ತವಾಂಶ



ವಾಸ್ತುವಿನ ವಾಸ್ತವಾಂಶ

ಇತ್ತೀಚೆಗೆ ಮಾಧ್ಯಮಗಳ ಅಬ್ಬರದ ಒಡ್ಡೋಲಗದಲ್ಲಿ ಠಾಕು ಠೀಕಾಗಿ ಬಂದು ಕುಳಿತು ಥರಾವರಿ ದಿರಿಸಿನಲ್ಲಿ ಕಾಣಿಸುತ್ತ ಲ್ಯಾಪ್ ಟಾಪ್ ಇಟ್ಟುಕೊಂಡು ಜನತೆಗೆ ವಾಸ್ತು-ಭವಿಷ್ಯ ನುಡಿಯುತ್ತೇವೆ ಎನ್ನುವವರ ಸಂಖ್ಯೆ ದಿನೇ ದಿನೇ ನಾಯಿಕೊಡೆಯಂತೇ ಬೆಳೆದುಕೊಂಡು ಹೋಗುತ್ತಲೇ ಇದೆ. 'ಗುರೂಜಿಗಳು' ತಯಾರಾಗುತ್ತಲೇ ಇದ್ದಾರೆ ! ಇದಕ್ಕೆ ಮೊದಲನೇ ಕಾರಣ ಮಾಧ್ಯಮದವರು ಅವರ ವಿಜೃಂಭಣೆಗೆ ಅವಕಾಶಕೊಡುವುದು, ಎರಡನೆಯ ಕಾರಣ ಎಂತಹ ನಾಸ್ತಿಕನಿಗೂ ಮನದ ಯಾವುದೋ ಮೂಲೆಯಲ್ಲಿ ತನಗೆ ವಾಸ್ತುವಿನಿಂದ ಅಥವಾ ಗ್ರಹಚಾರದಿಂದ ಏನೋ ತೊಂದರೆ ಇರಬಹುದೇ ಎಂಬ ಕುತೂಹಲ! ಹಳ್ಳಿಯ ಜನರಿಗಂತೂ ಈ ಜ್ಯೋತಿಷಿಗಳು ಚಿತ್ರ ತಾರೆಯರಂತೇ ಕಾಣಿಸತೊಡಗಿದ್ದಾರೆ. ಮೊದಲೆಲ್ಲ ಹಕ್ಕಿ ಶಕುನವನ್ನೋ ಕವಡೆಶಾಸ್ತ್ರವನ್ನೋ ಹೇಳಿಕೊಂಡು ಉದರಂಭರಣೆ ಮಾಡಿಕೊಳ್ಳುತ್ತಿದ್ದ ಜನ ಈಗ ಫೈವ್ ಸ್ಟಾರ್ ಆಫೀಸ್ ಮಾಡಿ ಕೂತು ದೂರವಾಣಿಯಲ್ಲಿ ಅಪಾಯಿಂಟಮೆಂಟ್ ಕೊಡುತ್ತಾರೆ! ಗಣಕಯಂತ್ರವನ್ನೇ ನೋಡದಿದ್ದ ಈ ಮಂದಿ ಗಣಕಯಂತ್ರ ತಜ್ಞರಿಗಿಂತ ಚೆನಾಗಿ ಅದನ್ನು ಬಳಸಿಕೊಳ್ಳಲು ತೊಡಗಿದ್ದಾರೆ!

ಮನುಜಜೀವನದಲ್ಲಿ ತೊಂದರೆ ಅನುವು ಆಪತ್ತುಗಳು ಅನಿವಾರ್ಯ-ಸಹಜ. ತೊಂದರೆ ಬಂದಾಗ ಅದಕ್ಕೆ ಪರಿಹಾರವಾಗಿ ಹಲವು ಮಾರ್ಗವನ್ನು ಹುಡುಕುತ್ತೇವೆ, ಹಾಗೇ ಅಂತಹ ನಮ್ಮ ಅನಿವಾರ್ಯತೆಯಲ್ಲಿ ಹಾಲು ಹಿಂಡಿಕೊಳ್ಳುವ ಗೋಮುಖವ್ಯಾಘ್ರಗಳು ಹಲವು ಕೂತಿವೆ! ಅವರೈಗೆ ಜನರ ಒಳಿತಿಗಿಂತ ತಮ್ಮ ಹುಂಡಿಗೆ ಎಷ್ಟು ಬಿತ್ತು ಎಂಬುದೇ ಲೆಕ್ಕ! ಇಂತಹ ಫೈವ್ ಸ್ಟಾರ್ ಜ್ಯೋತಿಷಿಗಳು ವಿದೇಶಗಳಿಗೂ ಹೋಗುತ್ತಿರುತ್ತಾರೆ, ರಾಜಕಾರಣಿಗಳಿಗೆ ತಾವು ಭವಿಷ್ಯ ಹೇಳಿದ್ದರಿಂದಲೇ ಅವರು ಬೆಳೆಯಲು ಸಾಧ್ಯವಾಯಿತು ಎನ್ನುತ್ತಾರೆ. ಅಕಸ್ಮಾತ್ ಭವಿಷ್ಯ ಸುಳ್ಳಾದರೆ "ನಿಮ್ಮ ಹುಟ್ಟಿದ ಘಳಿಗೆ ಸರಿಯಿಲ್ಲ ಅದು ಸರಿ ಇದ್ದರೆ ಭವಿಷ್ಯ ಸುಳ್ಳಾಗುವುದೇ ಇಲ್ಲ" ಎನ್ನುತ್ತಾರೆ ಅಥವಾ ಇದ್ದಕ್ಕಿದ್ದಲ್ಲೇ ಕೆಲವು ದಿನ ನಾಪತ್ತೆಯಾಗಿಬಿಡುತ್ತಾರೆ! [ಕಲ್ಲು ಬೀಳುವುದನ್ನು ತಪ್ಪಿಸಿಕೊಳ್ಳಬೇಕಲ್ಲ!]

ಹಾಗದ್ರೆ ವಾಸ್ತು-ಜ್ಯೋತಿಷ್ಯ ಇವೆಲ್ಲ ಊರ್ಜಿತವಿಲ್ಲವೇ ? ಅವು ಹೆಳುವುದು ಸತ್ಯವಲ್ಲವೇ ಎಂದರೆ- ಇವೆಲ್ಲ ಒಂದು ರೀತಿಯಲ್ಲಿ ಗೋಚಾರ ವಿಜ್ಞಾನಗಳು. ಆದರೆ ಇದನ್ನು ಸಮರ್ಪಕವಾಗಿ ಕಲಿತ, ಅಳವಡಿಸಿಕೊಂಡ ಜನ ಕೇವಲ ಬೆರಳೆಣಿಕೆಯಷ್ಟು. ಮತ್ತು ಈ ವಿದ್ಯೆಗಳಿಗೆ ಆಧ್ಯಾತ್ಮಿಕ ಅನುಸಂಧಾನ ಮತ್ತು ಜಪ--ತಪದ ಫಲ ಸೇರಿರಬೇಕಾಗಿರುವುದರಿಂದ ಪಟ್ಟಣ-ಶಹರಗಳಲ್ಲಿ ಜಪ-ತಪವನ್ನು ಮಾಡಲು ಸರಿಯಾದ ಜ್ಯೋತಿಷಿಗಳಿಗೆ ವ್ಯವಸ್ಥೆ ಕಮ್ಮಿ ಇರುವುದರಿಂದ ಅವರು ಹಳ್ಳಿಯ ಮೂಲೆಗಳಲ್ಲೇ ಇರುತ್ತಾರೆ ಮತ್ತು ಕಾಸಿಗಾಗಿ ಇದನ್ನೇ ವೃತ್ತಿಯಾಗಿ ಸ್ವೀಕರಿಸುವ ಜನ ಅಲ್ಲ ಅವರು! ಶಹರದಲ್ಲಿರುವ ಎಲ್ಲಾ ಜ್ಯೊತಿಷಿಗಳೂ ಒಂದಿಲ್ಲೊಂದು ರೀತಿಯಲ್ಲಿ ಹಾದಿ ತಪ್ಪಿಸುವವರೇ ಆಗಿರುತ್ತಾರೆ-ಎಚ್ಚರವಿರಲಿ!

ಬಂಗಲೆಗಳಲ್ಲಿ ಇದ್ದುಕೊಂಡು -ಕಾರುಗಳಲ್ಲಿ ಓಡಾಡಿಕೊಂಡು ತಮ್ಮ ವ್ಯವಹಾರ ಇಟ್ಟು ನಡೆಸುವ ಇಂಥವರಿಗೆ ಹಲವು ಸ್ವಯಂವರ ಎನ್ನುವ ಕಾರ್ಯಕ್ರಮಗಳು, ಬೆಳಗಿನ ಮಂಗಲಮುಹೂರ್ತದ ಸಮಯಗಳು ಮಾಧ್ಯಮಗಳಲ್ಲಿ ಸಿಕ್ಕು ಇವರಿಗೆಲ್ಲ ಒಳ್ಳೇ ಮಸಾಲೆ ದೋಸೆ ಸಿಕ್ಕಹಾಗಾಗಿದೆ! ಚೆನ್ನಾಗಿ ಮೇಯುತ್ತಲೇ ಇದ್ದಾರೆ! ಇದರಲ್ಲಿ ಸಂಖ್ಯಾಶಾಸ್ತ್ರ ಎಂಬುದೊಂದು ಹೊಸ ಗೋಳು. " ನಿಮ್ಮ ಹೆಸರಿಗೆ ಈ ನಂಬರು ಬರುತ್ತದೆ, ಸ್ವಲ್ಪ ಹೀಗೆ ಮಾಡಿಕೊಳ್ಳಿ ಅದರಿಂದ ನಿಮ್ಮ ಗತಿಯೇ ಬದಲಾಗುತ್ತದೆ" ಎನ್ನುವವರು, " ಗಂಡ-ಹೆಂಡತಿ ನೀವು ಮದುವೆಯಾದ ಸಮಯ ಸರಿ ಇರಲಿಲ್ಲ, ಕಾಸುಕೊಡಿ ತಿರುಪತಿಯಲ್ಲಿ ಮರುಮಾಂಗಲ್ಯಧಾರಣೆ ಮಾಡಿಸುತ್ತೇನೆ " ಎನ್ನುವ ಪಾತಕಿಗಳು ಸೇರಿದ್ದಾರೆ. ಕೆಲವರದು ದೊಡ್ಡ ಪರಿವಾರವೇ ಇದೆ! ಅವರು ಅಪ್ಪ-ಮಕ್ಕಳು ಎಲ್ಲಾ ಸೇರಿ ’ಮಿಕ’ವನ್ನು ಹಿಡಿಯುತ್ತವೆ. ಇನ್ನು ಕೆಲವರು ತಮಗೆ ಇನ್ನೂ ೩ ತಿಂಗಳು ಭೇಟಿಗೆ ಅವಕಾಶಕೊಡಲಾಗುವುದಿಲ್ಲ ಎನ್ನುವ ಬ್ಯೂಸಿನೆಸ್ಸು!

ಥರಾವರಿ ಉಂಗುರಗಳು-ಮಣಿಗಳು-ಸರಗಳು,ತಾಯಿತಗಳು-ಯಂತ್ರಗಳು ಏನೆಲ್ಲವನ್ನೂ ಕೊಡುತ್ತಾರೆ ಎಂದರೆ ಸ್ವಲ್ಪ ವಿವೇಚಿಸಿದರೆ ಇವು ಅನಗತ್ಯ ಎನಿಸುತ್ತದೆ ಅಲ್ಲವೇ? ಇಲ್ಲದ ಕಾರಣಹೇಳಿ ಆ ಹೋಮ ಈ ಪೂಜೆ ಮಾಡಿಸಿ ಎನ್ನುವ ಕೆಲವರು ಪುರೋಹಿತರನ್ನು ತಮ್ಮಲ್ಲೇ ಸಂಬಳಕ್ಕೆ ಇಟ್ಟುಕೊಂಡು ಅದನ್ನೂ ನಡೆಸಿಕೊಡಲು ಮುಂದಾಗಿದ್ದಾರೆ. ಇದರಲ್ಲೇ ಮನೆ ಕಟ್ಟಿದ್ದಾರೆ, ವಾಹನ ಖರೀದಿಸಿದ್ದಾರೆ. ಇನ್ನೂ ಕೆಲವರು ಗಳಿಸಿದ ದುಡ್ಡನ್ನು ಅಬ್ಬರದ ಪ್ರಚಾರಕ್ಕಾಗಿ ನೆರೆಪೀಡಿತರಿಗೆ ಸಹಾಯಮಾಡುತ್ತೇವೆ ಎಂದು ಘೋಷಿಸಿದ್ದಾರೆ! [ಇದಕ್ಕೆ ಯಾವ ರಾಜಕಾರಣಿಯ ಕೃಪೆ ಇದೇಯೋ ಗೊತ್ತಿಲ್ಲ!] ಇನ್ನು ಟೆಲಿಮಾರ್ಕೆಟಿಂಗ್ ಮೂಲಕ ಹನುಮಾನ್ ಯಂತ್ರ, ಶನಿಯಂತ್ರ, ವಾಸ್ತುಲಕ್ಷ್ಮಿ ಯಂತ್ರ ಕೊಡುವವರು ಅಲ್ಲದೇ ಗಾಡಿಗೆ ಮಂತ್ರಿಸಿದ ಕಲ್ಲು-ಕಪ್ಪು ಮಸಿಬಳಿದ ಹಗ್ಗ,ಬಿಳಿಯ ಶಂಖ ಇವನ್ನೆಲ್ಲ ಸುರಿದು ಯಾವುದೇ ತೊಂದರೆ ಆಗದಂತೆ ಮಾಡುತ್ತೇವೆ ಎನ್ನುವವರಿದ್ದಾರೆ!

ಒಮ್ಮೆ ವಿಚಾರಮಾಡಿ-ನಮ್ಮ ಹಿಂದಿನ ತಲೆಮಾರಿನ ಜನರೆಲ್ಲ ಬದುಕಿರಲಿಲ್ಲವೇ ? ಮಾಧ್ಯಮಗಳು ಬೆಳೆಯುವ ಮೊದಲು ಅವರು ಇಷ್ಟೆಲ್ಲಾ ತಲೆಕೆಡಿಸಿಕೊಂಡಿದ್ದರೇ? ಅವರಿಗೂ ಕಾಯಿಲೆ-ಕಸಾಲೆ, ಅನುವು-ಆಪತ್ತು ಇತ್ತಲ್ಲವೇ? ಅವರೂ ಗೃಹ--ಗೋಷ್ಠ ಮೊದಲಾದ ಕಟ್ಟಡಗಳನ್ನು ಕಟ್ಟಿಕೊಂಡು ನಡೆದುಬಂದಿದ್ದರಲವೇ? ನಮ್ಮನ್ನೆಲ್ಲ ಬೆಳೆಸಿ ಬಂದಿದ್ದಾರಲ್ಲವೇ? ಹಾಗಾದರೆ ಇತ್ತೀಚೆಹೆಗೆ ಮಾತ್ರ ಇದಕ್ಕೆ ಇಷ್ಟೊಂದು ಪ್ರಾಮುಖ್ಯತೆ ಏಕೆ?

ಜ್ಯೋತಿಷ್ಯ ಕೇವಲ ಗಣಿತವೊಂದನ್ನೇ ಅವಲಂಬಿಸಿಲ್ಲ, ಅಲ್ಲಿ ಅತಿಮಾನುಷ ಶಕ್ತಿಗಳ ಅನುಗ್ರಹ ಬೇಕು. ಅವನ್ನು ಸಂಪಾದಿಸಲು ಒಳ್ಳೆಯ ಮಾರ್ಗದಲ್ಲಿ ಜಪ-ತಪಾದಿ ನಿತ್ಯ ನೈಮಿತ್ತಿಕ ವ್ಯವಹಾರ ಬೇಕು-ಅನುಷ್ಠಾನ ಬೇಕು. ಗಂಟೆಗಟ್ಟಲೇ ಅನುಷ್ಠಾನ ಪರರಾಗುವ ನಿಜ ಜ್ಯೋತಿಷಿಗಳಿಗೆ ಅವರು ಕಾಸಿಗಾಗಿ ಅದನ್ನು ಮಾಡಹೊರಟರೆ-ಮಾರಹೊರಟರೆ ಪಡೆದ ಮಂತ್ರ ಸಿದ್ಧಿ ತೊರೆದುಹೋಗುತ್ತದೆ. ಇದು ಕೇವಲ ಜನರ ಹಿತಾರ್ಥವಾಗಿ ನಮಗೆ ಅರಿವಿಲ್ಲದ ದೇವರೆಂಬ ಮಹಾಶಕ್ತಿ ನಡೆಸಿಕೊಡುವ ವಹಿವಾಟು! ಇಂತಹ ಜ್ಯೋತಿಷ್ಕರು ಬಂಗಲೆ ಕಟ್ಟುವುದಿಲ್ಲ, ಆಫೀಸು ತೆರೆಯುವುದಿಲ್ಲ, ಲ್ಯಾಪ್ ಟಾಪ್ ಇಡುವುದಿಲ್ಲ! ಅಷ್ಟೇ ಏಕೆ ಅವರು ಮಾಧ್ಯಮಗಳಿಗೆ ನೋಡಲೂ ಸಿಗುವುದಿಲ್ಲ. ಅವರು ಪ್ರಚಾರಪ್ರಿಯರಲ್ಲ, ಅವರೌ ಬೂಟಾಟಿಕೆಯ ಜನವಲ್ಲ. ಲೋಕೋಪಕಾರಾರ್ಥ, ಪರೋಪಕಾರಾರ್ಥ " ಸರ್ವೇಷಾಂ ಮಹಾಜನಾನಾಂ ಯೋಗಕ್ಷೇಮಾಭ್ಯುದಯ ಸಿದ್ಧ್ಯರ್ಥಂ " ಎಂಬ ಸಂಕಲ್ಪದೊಂದಿಗೆ ತಮ್ಮ ಗುರುಮುಖೇನ ಪಡೆದ ಆ ರಮಲ ಧಾರೆಯನ್ನು ಹರಿಸುತ್ತಾರೆಯೇ ವಿನಃ ಇರುವ ಇಪ್ಪತ್ತೂ ಬೆರಳಿಗೆ ವಜ್ರ ವೈಢೂರ್ಯಗಳ ಉಂಗುರ ಹಾಕಿಕೊಂಡು ಕುಳಿತುಕೊಳ್ಳುವವರಲ್ಲ! ಇಂಥವರು ವಾರದ ಕೆಲವೇ ತಿಥಿ-ಮಿತಿಯ ದಿನಗಳಲ್ಲಿ ತಮ್ಮ ನೈತಿಕ ನಿಷ್ಠೆಯಿಂದ ಗಳಿಸಿದ ಜಪಸಿದ್ಧಿಯಿಂದ ಪ್ರಸಾದಿಸುವ ನುಡಿ ಕೆಲಸಮಾಡುವುದು ನಿಜ. ಆದರೆ ಯಾರು ಆ ಜನ ಎಲ್ಲಿದ್ದಾರೆ ಎಂಬುದನ್ನು ಹುಡುಕುವುದಕ್ಕೂ ಬಹಳ ಸ್ಮಯವಿರುತ್ತದೆ.

ಹಳ್ಳಿಗಳಲ್ಲೂ ಪುಡಿ ಹಕ್ಕಿ ಶಕುನಿಗಳು ಮಣೆಮೇಲೆ ಅಕ್ಕಿ ಇಟ್ಟು ಭವಿಷ್ಯ ಹೇಳುತ್ತಿದ್ದವರು ಮಾಧ್ಯಮದಲ್ಲಿ ಜ್ಯೋತಿಷಕ್ಕೆ ಜಾಸ್ತಿ ಬೆಲೆಸಿಕ್ಕಮೇಲೆ ಚಿಕ್ಕ ಕೋಣೆ ಬಾಡಿಗೆಗೆ ಹಿಡಿದು ಅಬಿವೃದ್ಧಿ ಸಾಧಿಸಿದ್ದಾರೆ! ಅಪ್ಪಿ-ತಪ್ಪಿ ನಿಜ ಉಸುರುವ ಜ್ಯೋತಿಷಿ ಅಂತ ತಿಳಿದು ಇಂಥವರನ್ನು ಕಂಡಿರೋ ನುಣ್ಣಗೆ ಬೋಳಿಸಿಯೇ ಕಳಿಸುತ್ತಾರೆ!

ಇನ್ನು ವಾಸ್ತು ವಿಷಯಕ್ಕೆ ಬಂದರೆ ಯಾವುದನ್ನು ನಮ್ಮ ಕೈಯ್ಯಲ್ಲಿ ಸಸಾರಕ್ಕೆ ಮಾಡಲು ಆಗುವುದಿಲ್ಲವೋ ಅದನ್ನೇ ವಾಸ್ತುಪುರಾಣಿಕರು ಹೇಳುವುದು. ಮನೆಯಲ್ಲಿ ಅಗ್ನಿಮೂಲೆ-ವಾಯುಮೂಲೆ, ಆಮೂಲೆ ಈ ಮೂಲೆ ಎಲ್ಲಾ ಮೂಲೆಯೂ ಇರುತ್ತವೆ ಸ್ವಾಮೀ, ನಿಮ್ನಿಮ್ಮ ಅನುಕೂಲಕ್ಕೆ ತಕ್ಕಂತೇ ಅದನ್ನು ಅಳವಡಿಸಿಕೊಳ್ಳಿ- ಅದೇ ವಾಸ್ತು- ಅದೇ ಶುದ್ಧ ವಾಸ್ತು. ಚಪ್ಪಲಿ ಸ್ಟ್ಯಾಂಡ್ ಇಡುವಲ್ಲಿ ದೇವರನ್ನು ಇಡಿ ದೇವರನ್ನು ಇಟ್ಟಲ್ಲಿ ಚಪ್ಪಲಿ ಸ್ಟ್ಯಾಂಡ್ ಇಡಿ ಎನ್ನುವುದು ಈ ದುಡ್ಡಿನ ವಾಸ್ತು ಪುರಾಣಿಕರ ವಾಸ್ತು. ಆಫ್ಟರ್ ಆಲ್ ವಾಸ್ತು ಎನ್ನುವುದು ಒಂದು ಸಾಮಾನ್ಯ ಜ್ಞಾನ! ಕಾಮನ್ ಸೆನ್ಸ್- ದಿ ಸೆನ್ಸ್ ವ್ಹಿಚ್ ಈಸ್ ನಾಟ್ ಸೋ ಕಾಮನ್ ! ನಮಗೆ ಕಾಮನ್ ಸೆನ್ಸ್ ಎನ್ನುವುದಿದ್ದರೆ ವಾಸ್ತು ಪುರಾಣಿಕರ ಹಾರ ತುರಾಯಿಗಳು ಶೀಘ್ರ ಮಾಯವಾಗುತ್ತವೆ!

ಅದೆಲ್ಲಾ ಓಕೆ ಈಗ ಇಷ್ಟೆಲ್ಲಾ ಪುರಾಣ ಯಾಕೆ ಎಂದಿರೇ ತಡೆಯಿರಿ- ನಮಗೆ ಇವುಗಳೆಲ್ಲ ಇಲ್ಲದೇ ಬದುಕಲು ಸಾಧ್ಯವಿಲ್ಲವೇ? ಅವರು ನಮ್ಮ ಪರವಾಗಿ ಮಧ್ಯವರ್ತಿಗಳಾಗಿ ದೇವರನ್ನು ಕೂಗಿ ಕರೆಯುವ ಬದಲು ನಾವೇ ಕಯಾ ವಾಚಾ ಮನಸಾ ದಿನವೂ ಕೆಲಸಮಯ ಪ್ರಾರ್ಥಿಸಿ ಕರೆಯುವುದು-ಬೇಡಿಕೊಳ್ಳುವುದು ಸಾಧ್ಯವಾಗದ ಮಾತೇ? ನಮ್ಮ ಪೂರ್ವಿಕರು ಅನುಭವದಿಂದ ಅನುಗ್ರಹಿಸಿದ, ಪಂಚಾಂಗದಲ್ಲಿ ಎಂದಿಗೂ ಲಭ್ಯವಿರುವ ಧ್ವಜಾಯ, ಗಜಾಯ ಮುಂತಾದ ಆಯಗಳನ್ನು ಅವಲೋಕಿಸಿ ಅವೇ ವಾಸ್ತು! ಅಷ್ಟು ಸಾಕು ನಮ್ಮ ಬದುಕಿಗೆ. ಒಂದನ್ನು ಅರ್ಥಮಾಡಿಕೊಳ್ಳಿ- ನಮ್ಮ ಹಣೆಬರಹ ಅದು ಪೂರ್ವ ನಿರ್ಧರಿತ! ಯಾವ ಸರಸ್ವತೀ ಚಕ್ರವಾಗಲೀ ಸುದರ್ಶನ ಚಕ್ರವಾಗಲೀ ವಾಸ್ತು ಯಂತ್ರವಾಗಲೀ ಅದನ್ನು ಬದಲಯಿಸಲು ಸಾಧ್ಯವಿಲ್ಲ! ಅದು ಬದಲಾಗಬೇಕೆಂದು ಬರೆದಿದ್ದರೆ ಅದಕ್ಕೆ ಕಾಸುಕೊಟ್ಟು ಬದಲಾಯ್ಸಿಕೊಳ್ಳುವ ಅವಶ್ಯಕತೆಯಿಲ್ಲ. ಕೇವಲ ಪ್ರಾರ್ಥನೆಯಿಂದ ಸಾಧ್ಯ!

ಮರ್ಕಟ ನ್ಯಾಯ ಮತ್ತು ಮಾರ್ಜಾಲ ನ್ಯಾಯ ಎಂಬಂತೆ ದೇವರು ಯಾರನ್ನೂ ಕೈಬಿಡುವುದಿಲ್ಲ. ಮಾರ್ಜಾಲ ನ್ಯಾಯದಲ್ಲಿ ದೇವರು ಹಲವರನ್ನು ಬೆಕ್ಕು ತನ್ನ ಎಳೆಯ ಮರಿಗಳನ್ನು ಬಾಯಲ್ಲಿ ನೋವಾಗದಂತೆ ಕಚ್ಚಿ ಬೇರೆಡೆ ಸಾಗಿಸುವಂತೆ ಕಷ್ಟದಿಂದ ಸುಖದೆಡೆಗೆ ಸಾಗಿಸಿದರೆ, ಸ್ವಲ್ಪ ನತದೃಷ್ಟರು ಜಾಸ್ತಿ ಪ್ರಾರ್ಥಿಸಿದಾಗ ನಾವೇ ದೇವರನ್ನು ಮಂಗನ ಮರಿ ತಾಯಿ ಮಂಗನನ್ನು ಅಪ್ಪಿಕೊಂಡಂತೆ ಅಪ್ಪಿಕೊಂಡಾಗ ಅಲ್ಲಿ ನಮ್ಮನೆಲ್ಲ ಕಷ್ಟದ ನೆರೆನೀರಿಂದ ಹೊರಗೆ ಸಾಗಿಸಿ ನಮಗೊಂದು ಸುಖದ ವಾಸ್ತವ್ಯ ಕಲ್ಪಿಸುತ್ತಾನೆ-ಇದು ಮರ್ಕಟನ್ಯಾಯ. ನಮ್ನಮ್ಮ ವೈಯಕ್ತಿಕ ನಂಬಿಕೆ ಮತ್ತು ವಿಶ್ವಾಸದ ಮೇಲೆ ನಮಗೆ ಫಲ ದೊರಕುತ್ತದೆ. ನಾವು ಸದಾಚಾರಿಗಳಾಗೋಣ. ದಿನವೂ ಪ್ರಾರ್ಥನೆ ಮಾಡೋಣ-ಕೇವಲ ನಿಷ್ಕಪಟ,ನಿಷ್ಕಳಂಕ ಮನಸ್ಸಿನ ಪ್ರಾರ್ಥನೆಯಿಂದ ಮಾತ್ರ ಪರಿವರ್ತನೆ ಸಾಧ್ಯ.

5 comments:

  1. ಚೆನ್ನಾಗಿದೆ. ನಿಮ್ಮ ಲೇಖನದ ಒಳ ಹೂರಣ ನೂರಕ್ಕೆ ನೂರು ಸತ್ಯ.
    I second your opinion.

    ReplyDelete
  2. ಚೆನ್ನಾಗಿ ಹೇಳಿದಿರಿ ಭಟ್ಟರೇ!!!
    ಬಹಳ ಚೆಂದದ ಸಕಾಲಿಕ ಲೇಖನ!

    ReplyDelete
  3. ನಿಜವಾದ ಮಾತು. ದೇವರಲ್ಲಿ ಶ್ರದ್ಧೆ ಇದ್ದರೆ ಜ್ಯೋತಿಷ್ಯದ ಮೇಲೆ ಅವಲಂಬನೆ ಯಾಕೆ?

    ReplyDelete
  4. ನಿಜ ಸರ್, ಮೊದ್ಲು ಗಿಳಿ ಮಾತ್ರ ಶಾಸ್ತ್ರ ಹೇಳ್ತಿತ್ತು... ಈಗ ಅಕ್ಟೋಪಸ್, ಜಿರಾಫೆ ಒಂಟೆಗಳು ಭವಿಷ್ಯ ಹೇಳ್ತಿವೆ!
    ''ಅನಿಷ್ಟಕ್ಕೆಲ್ಲ ಶನೆಶ್ವರನೆ ಕಾರಣ" ಅನ್ನೋಹಾಗೆ ಕಳಪೆ ಗುಣಮಟ್ಟದಿಂದ ಅನಾಹುತ ಆದ್ರೂ ವಾಸ್ತು ದೋಷ ಅನ್ಬಿಡ್ತಾರೆ..

    ReplyDelete
  5. ಅಭಿಪ್ರಾಯ ಭೇದ ತಮ್ಮಲ್ಲಿ ಇರಬಹುದು ಆದರೆ ಒಟ್ಟಾರೆ ನಾವು ನೋಡಿದರೆ ನಮಗೆ ಹಲವು ಬೂಟಾಟಿಕೆಯ ಜ್ಯೋತಿಷ್ಯರು ಸಿಗುತ್ತಾರೆ ಅಲ್ಲವೇ? ಬಹಳ ಉತ್ತಮವಾಗಿ ಪ್ರತಿಕ್ರಿಯಿಸಿದ್ದೀರಿ. ಸರ್ವಶ್ರೀ ಪರಾಂಜಪೆ, ಸೀತಾರಾಮ್, ಸುಧೀಂದ್ರ ದೇಶಪಾಂಡೆ ಹಾಗೂ ಪ್ರಗತಿ ಮೇಡಂ ತಮಗೆಲ್ಲ ಹೃತ್ಪೂರ್ವಕ ಅಭಿವಂದನೆಗಳು,ಅಭಿನಂದನೆಗಳು.

    ReplyDelete