ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, March 14, 2011

ಸ ರಿ ಗ ಮ ಪ ದ ನಿ ಸ..........!!!


ರಿ ನಿ ..........!!!

" ಅಣಾ ಇಸ್ಯ ಗೊತ್ತಾಯ್ತಾ ? ಹರಾಮಿ ಮತ್ತೆ ಭೂಕೆಂಪು ಎರ್ಡೂವೆ ಸೇರ್ಕೆಂಡು ಪಾಕಿಸ್ತಾನ ತೊಳ್ಕಂಡೋಗ್ಬುಟ್ಟದೆ. ಜನ್ಗೋಳೆಲ್ಲಾ ಹೋಯ್ತಾ ಇರೋದ್ ಕಂಡ್ಬುಟ್ಟು ತಲೆ ಗಿರಿಕ್ ಅಂದ್ಬುಡ್ತು "

" ಯಾರಲೇ ಪಾಕಿಸ್ತಾನ ಹಂತಾ ಯೋಳಿದ್ದು ಮುಂಡೇದೆ ನಿಂಗೆ ಅದು ಜಪಾನ್ ಕಣಲೇ ಜಪಾನು. ಹರಾಮಿ ಹಂತೀಯಲ್ಲ ಅಷ್ಟೂನೂ ಗೊತಾಯಾಕಿಲ್ವಾ ತುನಾಮಿ ಅಂತಾವ ಅದು. ಭೂಕೆಂಪಗಲ್ಲ ಭೂಕಂಪ ಹಂತಾವ ಅಂಗಂದ್ರೆ ಭೂಮಿ ಇದ್ದಲ್ಲೇ ಒದರಕಂತದೆ ಹಂತರ್ಥ "

" ಎಂತೆಂಥಾ ಸಬ್ದನೆಲ್ಲಾ ತಂದಾಕ್ಬುಟ್ರು ನಮ್ ಇಗ್ನಾನಿಗಳು. ತುನಾಮಿ ಅಂದ್ರೇನ್ಕಣಣ್ಣಾ ಒಸಿ ಯೋಳ್ತೀಯಾ ಅಂಗೇ ಭೂಮಿ ಒದರಕಂಬುದೂ ಯೋಳ್ಬುಡಣಾ ನಿನ್ ಕಡೀಕಿಂದ್ಲೇ ಕೇಳ್ಕಬುಡುವಾ "

" ತುನಾಮಿ ಹಂದ್ರೆ ಸಮುದ್ರಕ್ಕೆ ಅಪರೂಪದಗೆ ಕೋಪಬಂದೋತದೆ. ಟೇಮ್ನಾಗೆ ಅದು ಜೋರಾಗಿ ಹಲೆ ಹೆಬ್ಸಿ ಹತ್ತರ್ದ ಊರೊಳೀಕೆಲ್ಲಾ ಕಳ್ಸಬುಡ್ತದೆ ಕಣ್ಲಾ. ಪ್ಯಾಟೆ ಮಂದಿ ಮುಳಕಟ್ಟಮ್ಗೂ ಕರುಮಾರಮ್ಗೂ ಸರ್ಯಾಗಿ ನಡ್ಕಳಾಕಿಲ್ಲ. ಹವ್ರಿಬ್ರೂ ಅಕ್ಕತಂಗೀದೀರು ಸೇರ್ಕಂಡು ಸಮುದ್ರಕೋಗಿ ಅಲ್ಲಿ ಕೋಪ ಬರುಸ್ತವೆ. ಕೋಪ ಬಂದೇಟ್ಗೆ ಅಗ್ಲೋ ರಾತ್ರ್ಯೋ ನೋಡ್ದೇಯಾ ನೀರು ನುಗ್ಗಸ್ಬುಡ್ತರೆ. ಜನೀಕೆ ಸಾಕೋ ಸಾಕಾಗೋತದೆ. ಇತ್ಲಗೆ ಭೂಕಂಪ್ಸು ಹೇಳಿದ್ನಲ್ಲ ಭೂಮಿಗೂವ ಆಗಾಗ ಮೈ ಒದರಕಂಬೋ ಅಭ್ಯಾಸ ಕಣ್ಲಾ. ಅದು ಯಾಪಾಟೀ ಎಲ್ಲಾತದೆ ಹಂತ ಯಾರ್ಗೂ ಮೊದ್ಲೇ ಗೊತಾಯಾಕಿಲ್ಲ..ಇಲ್ಲಾಂದ್ರೆ ತಪ್ಸಕಬುಟ್ಟಿರೋರು. ಭೂಮಿಗೆ ಚಂದ್ರನ ಕಂಡ್ರೆ ಆಯಾಕಿಲ್ಲ. ಯಾವ್ದೋ ಅಳೇ ದ್ವೇಸ. ಆಯಪ್ಪ ಅಂಗೂ ಇಂಗೂ ಒಂದೊಂದಪಾ ಹದೇನೋ ಭೂಮಿ ಅತ್ರ ಬತ್ತವ್ನಂತೆ...ಹಂತ ಅದ್ಯಾರೋ ಟೀವಿನೋರು ಯೋಳ್ತಾ ಇದ್ರು. ಅಂಗಾಂಗುತ್ಲೂವೆ ಭೂಮಿ ತಿರೀಕಬೇಕಾಯ್ತಾ ? ಹದ್ಕೇಯ ಅದು ಮಗ್ಗಲ ಬದಲಾಯ್ಸ್ತದೆ ಕಣ್ಲಾ. ತಿರೀಕಂಬೋ ಟೇಮ್ನಾಗೆ ಮನೀ ಒಳಿಕ್ಕೆ ಬಿರಡಿಂಗ್ನಾಗೆ ಇದ್ದೋರ್ಗೆಲ್ಲಾ ಒಳ್ಳೇ ಟ್ರೈನಗೆ ಆದಾಂಗಾತದೆ. ಕೆಲೂ ಸರ್ತಿ ಕಟ್ಟಡಗೋಳು ಬಿದ್ದೋಯ್ತವಂತೆ. ಹದ್ಕೇಯ ಭೂಕಂಪ್ಸು ಹಂತರೆ. ಅಲ್ಲಯ್ಯಾ ಚಂದ್ರಂಗಾದ್ರೂ ಒಸಿ ಬುದ್ಧಿ ಬ್ಯಾಡ್ವಾ ? "

" ಈಗ ನಮ್ಕತೆ ಯೋಳು ಮುಂದೆ ಭಾರತ ದೇಸ್ದಾಗೂ ಐತಾ ತುನಾಮಿ ಭೂಕಂಪ್ಸು ಎಂಗೆ?"

" ಅದೆ ಕಣ್ಲಾ ಎಲ್ಲಾಕಡೀಕ್ಕೂ ಅದೆ. ವರ್ಸಾ ವರ್ಸಾ ಊರಬ್ಬ ಮಾಡಿ ಕುರಿ-ಕೋಳಿ ಕೊಡ್ದೇವೋದ್ರೆ ಇದು ಆಗೇ ಆತದೆ"

---------------

" ಓಗ್ಲಿ ಬುಡಣಾ ನಮ್ ಮುಕ್ಮಂತ್ರಿ ಮುಂದೆ ಹದೇನೋ ಬುವನೇಸ್ವರಿ ದೇವಿ ಹಂತಾ ಕಟ್ಟುಸ್ತಾವ್ರಂತೆ. ಅದ್ಕೇ ಅದೆಷ್ಟೋ ಕೋಟಿ ಎತ್ತಿ ಮಡ್ಗವ್ರೆ ಅಷ್ಟೆಲ್ಲಾ ಬೇಕಾತದ ಒಂದು ಮೂರ್ತಿಗೆ ? "

" ಮಂತ್ರಿಗಿರಿ ಯಾಕೆ ಸುಮ್ನೇ ಏನ್ಲಾ? ಈಗೆಲ್ಲಾ ಎಲ್ಲಾ ಇಸ್ಯಾನೂ ಇರೋದ ಪಕ್ಸದವ್ರು ಕಣ್ಣಲ್ಲಿ ಎಣ್ಣೆಬಿಟ್ಗಂಡು ನೋಡ್ತಾ ಕೂತವ್ರೆ. ನಮ್ ಕುಮಾರಣ್ಣಂಗಂತೂ ಬಿಳೀ ಮಗಳಾಯ್ತಲ ಹದ್ಕೇಯ ಮುಂದೆ ಎಂಗಿದ್ರೂ ಸೀಟು ನಿಂಗೇಯ ಅಂದವ್ರಂತೆ. ಕಾಗದಪತ್ರ ಎಲ್ಲಾ ಕಂಪೂಟ್ರಗೆ ಸಿಕ್ಕಾಕಬುಟ್ಟದೆ...ಯಾರೇನ್ಮಾಡದ್ರೂ ಸಿಕ್ಕಾಕಬುಡ್ತರೆ.. ಇಂಗಾಗಿ ಓದಲ್ಲೆಲ್ಲಾ ಹದೂ ಇದೂ ಅಂತಾ ಕೊಟ್ಗಂಬುಟ್ಟು ಸಲ್ಪ ಸಿಗೋ ಪ್ರಸಾದ ಇಸ್ಗಂಡು ಸುಮ್ಕಿರ್ಬೋಕು"

-----------

" ಅಲ್ಲಣಾ ಸಾಲ್ಮರ್ದ ತಿಮ್ಮಕ್ಕ ಅಷ್ಟೆಲ್ಲಾ ಕೂಕ್ಕತದೆ ಒಂದ್ ಹೆರಿಗೆ ಆಸ್ಪತ್ರೆ ಕಟ್ಟಾಕಿ ಹಂತಾವ. ಬರೇ ಪಂಕ್ಸನ್ ಮಾಡದು ಪ್ರಸಸ್ತಿ ಕೊಡದು ಮಾಡ್ತರೆ ಬಿಟ್ರೆ ಆಯಮ್ಮಂಗೆ ಉಳ್ಕಳಕೊಂದು ಮನೆನೂ ಹಿಲ್ವಂತೆ, ಅದ್ಕೇನಾರಾ ಮಾಡ್ಬಾರ್ದಾ ? "

" ಹೋಗಲೇ ಗೂಬೆ ಅದರ್ತಾವ ಎಷ್ಟು ಓಟೈತೆ. ಅಬ್ಬಬ್ಬಾ ಹಂದ್ರೆ ಒಂದೇಯ...ಈಗ್ಲೋ ಆಗ್ಲೋ ನೆಗ್ದ್ ಬೀಳೋ ಮುದ್ಕಿಬೇರೆ..ಹದ್ಕೆಲ್ಲಾ ಕೊಡೋ ಬದ್ಲು ಯಾರಾನಾ ಸಲ್ಪ ಗಟ್ಟಿ ಜನೀನ ಕಂಡು ಮುಂದೆ ಇಲೆಕ್ಸನ್ನಾಗೆ ಕೆಲ್ಸಕ್ಬರೋ ಅಂಗೆ ಮಡೀಕಂಡ್ರೆ ಎಲ್ಲಾ ಸಲೀಸು ಅಂಬೋ ಲೆಕ್ಕಾಚಾರ "

-----------

" ಅಣಾ ಒಬ್ಬ್ ಮನಷ್ತೀಗೆ ಬದೀಕಣಕೆ ಲಕ್ಸಾಂತ್ರ ಎಕರೆ ಕಾಪೀ ತೋಟ ಬೇಕಾ ? ಅದೂ ಯಾವ್ದೇ ಆದಾಯ್ದ ಗಟ್ಟಿ ಮೂಲ ಇಲ್ದೇ ಇರೋ ರಾಜ್ಕೀಯ್ದೋರ್ಗೆ ಯಾವನೋ ಬ್ಯಾಂಕೋನು ಕೋಟಿಗಟ್ಲೆ ಅಣ ಸುರೀತಾನಲ್ಲಣಾ ಇದ್ಯಾವ್ ಮಾಯ ಹಂತೀಯ ? "

" ಯಾರೋ ನಿಂಗೇಳಿದ್ದು ರಾಜ್ಕೀಯ್ದೋರ್ಗೆ ಇನ್ಕಮ್ಮು ಇರಾಕಿಲ್ಲಾ ಹಂತಾವ...? ಅದೂ ಕೂಡ ಬಿಜ್ನೆಸ್ಸು ಕಣಲೇ ಗೂಬ್ನನ್ಮಗನೇ...ಆಳೋರು ನೇರಾಗಿ ಕೊಟ್ಬುಟ್ರೆ ಕಂಡೋತದೆ ಹಂತ ಬ್ಯಾಂಕೋನ್ಗೆ ಯೋಳಿ ಯವಸ್ತೆ ಮಾಡಿರಾದು. ಪಿರೂತಿ ಮುಂದೆ ಯಾವ್ದೈತೆ..ಹದ್ಕೇ ಹಿರೀಕ್ರಂದಿಲ್ವಾ ಗಂಡುಸ್ನ ಸಾಧ್ನೆ ಇಂದೆ ಹೆಂಗ್ಸು ಇದ್ದೇ ಇರ್ತಳೆ ಅಂತ ಅಷ್ಟೇಯ ತಿಳ್ಕ. ಇಂದಿರೋ ಗೆಳ್ತೀಗೆ ಎಂಗಾರಾಮಾಡಿ ಒಂದಷ್ಟು ಕೊಡ್ದೇವೋದ್ರೆ ಎಂಗೆ ಯೋಳು. ಹದ್ಕೇಯ ನಮ್ ಮಣ್ಣಿನ ಮಕ್ಳವ್ರ ಮಕ್ಳೂ ಬಿಳೀ ಬೊಂಬೆಗೆ ಅದೇನೆಲ್ಲಾ ಕೊಡುಸ್ಯವ್ರೆ."

------------

" ಅಣಾ ಟ್ರಷ್ಟು ಪಷ್ಟು ಹಂದ್ರೆಲ್ಲಾ ಯೇನಣಾ ? "

" ಅಂಗಂತವಾ ಒಂದು ಕಮೀಟಿ ಮಾಡ್ಕತರೆ. ರಾಜ್ಕೀಯದೋರ್ ಕಾಲ್ದಗೆ ಯಾರೋ ಒಳ್ಳೇ ಜನ ಮಾಡ್ದ ಟ್ರಷ್ಟ್ಗೂ ಬೆಲೆಯಿಲ್ದಾಂಗಾಗೋಗದೆ. ರಾಜ್ಕೀಯ್ದೋರು ಮಾಡ್ಕಂಬುದು ಕಳ್ ಕಮೀಟಿ. ಎಲ್ಲೆಲ್ಲಿ ತಿಂಬುಕಾತದೆ ಹದ್ನೆಲ್ಲಾ ತಮ್ಕಡೀಗೆ ಮಾಡ್ಕಳಕೇಯ ಕಮೀಟಿ ಎಲ್ಲಾನೂವೆ. ನಿತ್ಯಾನಂದ್ನ ಕಂಡು ಕಾವಿ ಬಟ್ಯೋರ್ನೆಲ್ಲಾ ಹಳ್ದೀಕಣ್ಣಿಂದ ನೋಡ್ತವ್ರಲ್ಲ ಹದೇತರ ಹೀಗ ಎಲ್ಲಾ ಟ್ರಷ್ಟೂನೂ ಆಗ್ಬುಟದೆ. ನಡ್ವೆ ರಾಜ್ಕೀಯ್ದೋರ್ ಬುಟ್ಟು ಯಾರಾನಾ ಸಾಲೆ-ಕಾಲೇಜು ನಡುಸ್ತರ ನೋಡು."

" ಹೌದಣೋ ನಮ್ ಮಾದ ಯೋಳ್ತಿತ್ತುಬೇಸ್ಗೆ ಬಂತು ಅಂದ್ರೆ ಇತ್ಲಾಗೆ ಕುಡಿಯೋ ನೀರ್ಗೂ ಪರ್ದಾಟ ಆಕಡೀಕೆ ಸ್ಕೂಲ್ನಾಗೆ ಸೀಟ್ಗೂ ಪರ್ದಾಟಹಂತಾವ "

" ಇದ್ಯಾದಾನ ಹನ್ನೋ ಹೆಸ್ರಲ್ಲಿ ಬೇಕಷ್ಟು ಅಣಾ ಮಾಡವ್ರೆ ಕಣಪಾ. ಬಡವ್ರ ಕುಡಿಯೋ ಗಂಜೀ ಕಸ್ದಾದ್ರೂ ತಮ್ಗೆ ಬೇಕಾದ್ನ ಮಡೀಕತರೆ."

-----------

" ಅಣಾ ಹೌದೂ ಮರ್ತಿದ್ದೆ ಪಿಸ್ ಬ್ಯಾಂಕಂದ್ರೆ ಯಾವ ಬ್ಯಾಂಕು ? ಮೊನ್ನೆ ಮೂರ್ದಿವ್ಸದ ಕೆಳ್ಗೆ ಪ್ಯಾಟೆಗೆ ಹೋಗಿದ್ನಾ ಹಲ್ಲೆಲ್ಲಾ ತಿರ್ಗೋವಾಗ ಇರೋ ಬರೋ ಎಲ್ಲಾ ಬ್ಯಾಂಕುಗೋಳ್ ಬೋಲ್ಡನ್ನೂ ಓದ್ದೆ ಆದ್ರೆ ಪಿಸ್ ಬ್ಯಾಂಕು ಸಿಗ್ಲೇ ಇಲ್ಲ ಕಣಣೋ "

" ಐತ್ತಲಕಡಿ.... ಅಂಗೆಲ್ಲಾ ಕಾಣ್ಸಕೆ ಅದೇನ್ ಸಣ್ಮುಕಪ್ನ ತಟ್ಟೆ ಇಡ್ಲಿ ಹೋಟ್ಲೇಲ್ನಾ? ಪಿಸ್ ಬ್ಯಾಂಕು ಅಂತ್ಯಲ್ಲ ಎಲ್ಲೂ ಪೇಪರ್ನಗೂ ಓದಿಲ್ವೆ? ಅದು ಸ್ವಿಸ್ ಬ್ಯಾಂಕು ಕಣ್ಲಾ. ಇದೇಸದಾಗಿರೋದು. ರಾಜ್ಕೀಯದೋರು ಮತ್ತೆ ಜಾಸ್ತಿ ದುಡ್ಡಿರೋರು ಸರ್ಕಾರಕ್ಕೆ ಲೆಕ್ಕ ತಪ್ಸಿ ಅಲ್ಲಿ ದುಡ್ ಮಡುಗ್ತರೆ. ಹಲ್ಲಿದ್ರೆ ಅದು ಎಲ್ಲೂ ಹೋಯಾಕಿಲ್ಲ ಅನ್ನೋ ಗ್ಯಾರಂಟಿಮೇಲೆ ಯಾವನೋ ಒಬ್ಬ ಸುರುವಿಟ್ಕಂಡ್ನ..ಅದುನ್ನ ನಮ್ ದುಡ್ಡಿರೋ ಖುಳಗೋಳೆಲ್ಲಾ ಕಂಡ್ಕಬುಟವ್ರೆ"

" ಅಲ್ಲಣಾ ದೇಸಕ್ಕೆ ಬಡ್ತನ ಅಂತವ್ರೆ ಮತ್ಯಾಂಗೆ ಅಲ್ಲೆಲ್ಲಾ ದುಡ್ಡಿಡ್ತರೆ ? "

" ಬಡ್ತನ ಬಡ್ತನ ಅಂಬೋದೆಲ್ಲಾ ಬಾಸಣ ಅಷ್ಟೇಯ. ನಿನ್ನಂತಾ ಮೂದೇವಿಗೊಳ್ನ ಯಾಮಾರ್ಸೋದು ಭಲೇ ಸಲೀಸು. ಇದ್ಯಂಗೆ ಅಂದ್ರೆ ಬೆಂಗ್ಳೂರ್ ಬಸ್ ಸ್ಟ್ಯಾಂಡ್ನಗೆಬ್ಯಾಗ ಕಳ್ದೋಗದೆ ಊರಿಗೋಗಾಕಿಲ್ಲ ಒಸಿ ಹಣ ಕೊಟ್ರೆ ಊರಿಗೋಗುತ್ಲೂವೆ ನಿಮ್ಗೆ ಮನಿ ಆಡ್ರ ಮಾಡ್ತೀನಿಅಂತ ಬತ್ತಾರಲ್ಲ ಹದೇ ರೀತಿ ಬಾಸಣ ಮಾಡ್ಕೋತಾ ಸುಮ್ಕೇ ಹೋಗಿ ಅಲ್ಲಿಟ್ಟು ಬರಾದು."

" ಮತ್ತೆ ಸರಕಾರ ನಡ್ಸೋ ಮಂದಿ ಎಂಗಾದ್ರೂ ಮಾಡಿ ಅದ್ನ ಪತ್ತೆ ಅಚ್ಚಿ ಇಸ್ಗಂಬೋದಲ್ವ ? "

" ಅಂಗೆಲ್ಲಾ ಆಯ್ತದೇನ್ಲಾ ? ಅಲ್ಲೇನಾಗದೆ ನನ್ನ ನಿನ್ನ ಬಿಟ್ಟು ಆಳೋ ಪಕ್ಸ ಇರೋದ್ ಪಕ್ಸ ಹನ್ನೋ ಬೇದ ಇಲ್ದೇ ಎಲ್ರೂ ಸಕ್ತಿಮೀರಿ ಮಡಗವ್ರೆ. ಜರ್ ಯಾರಾನಾ ಒಬ್ಬ ತಕಂಬರೋಕೋದ್ರೆ ಎಲ್ಲರ ಎಸ್ರೂ ಕಾಣಸ್ಕಬುಡ್ತದೆ. ಬರೇ ಯೋಳ್ತರೆ ಅಲ್ಲದೆ ಅಲ್ಲದೆ ಅಂತಾವ ಆದ್ರೆ ಯಾರೂ ತರಾಕೋಯಾಕಿಲ್ಲ "

" ಅಣಾ ನಾ ಬರ್ಲಾ ಹೊತ್ತಾತದೆ ಮತ್ತಿಂಗೆ ಸಿಗುಮು ? "

" ಚೋದಿ ಮಗ್ನೆ ಇಸ್ಯ ಒಟ್ಟಾಕಣಕೆ ಅಣ್ಣ ಬೇಕು ಮಿಕ್ಕಿದ್ದಕ್ಕೆ ಬ್ಯಾಡ ನಿಂಗೆ....ಒಸಿ ಏನಾರಾ ಯವಸ್ತೆ ಗಿವಸ್ತೆ ಮಾಡೀಯೋ ಇಲ್ಲಾ ಅಂಗೇ ಒಂಟೋಯ್ತೀಯೋ ? "

" ಇಲ್ಲಣಾ ಉಗಾದಿಗೆ ಒಸ್ತಡ್ಕು ಮಾಡ್ತೀವಲ್ಲ ಅದ್ಕಿರಲಿ ಅಂದವ್ನೆ ತಿಮ್ಮೇಗೌಡ ಅದ್ಕೇಯ ಇವತ್ತು ತರ್ನಿಲ್ಲ"

" ಮುಂದಿಂದ್ ಮುಂದೆ ಕಣಲೇ ಇಂದ್ನ ಕತೆ ಯೋಳು ನೀ ಈಗೇನ್ ತತ್ತೀಯೋ ಹಿಲ್ಲಾ ನಾನೇ ತರ್ಲೋ ? "

" ಇದೊಂದ್ಕಿತಾ ಬುಟ್ಬುಡಣಾ ಉಗಾದಿ ಆಕ್ಕಬುಡ್ಲಿ ಆಮೇಲೆ ಎಂಗೂ ಇದ್ದೇ ಅದೆ "

" ಆಯ್ತೋಗು ಉಗಾದಿ ಮಾರ್ನೇದಿನ ತರ್ಲಿಲ್ಲಾ ಅಂದ್ರೆ ನಿನ್ ಹುಟ್ಲಿಲ್ಲಾ ಅನ್ನಸ್ಬುಡ್ತೀನಿ ಹೋಗು "

Friday, March 11, 2011

ಬೊಂಬೆಯಾಟವಯ್ಯಾ ಆ ದೇವನಾಡುವಾ .....

ಚಿತ್ರ ಕೃಪೆ : ಅಂತರ್ಜಾಲ
ಬೊಂಬೆಯಾಟವಯ್ಯಾ ಆ ದೇವನಾಡುವಾ .....

ಜಪಾನಿನ ಸುನಾಮಿ ಆಕಸ್ಮಿಕದಲ್ಲಿ ಮಡಿದ ಸಾವಿರಾರು ಜನರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಸೃಷ್ಟಿಯ ಈ ವಿಕೋಪವನ್ನು ನೆನೆಯುತ್ತಿದ್ದೇನೆ. ಜಗತ್ತಿನಲ್ಲಿಯೇ ಅತೀ ಉತ್ಕೃಷ್ಟ ತಂತ್ರಜ್ಞಾನವನ್ನು ಆವಿಷ್ಕಾರಗೊಳಿಸುವ ದೇಶ ಜಪಾನ್. ಭಾರತದ ೨೨,೦೦೦ ಜನರೂ ಸೇರಿದಂತೇ ಹಲವು ರಾಷ್ಟ್ರಗಳ ಜನರು ಇಲ್ಲಿ ಉದ್ಯೋಗದಲ್ಲಿ ತೊಡಗಿದ್ದಾರೆ. ಮತ್ತೆ ಮತ್ತೆ ಮರುಕಳಿಸುವ ಭೂಕಂಪವನ್ನು ದಿನನಿತ್ಯದ ಅನಿವಾರ್ಯತೆಯೆಂದು ಸ್ವೀಕರಿಸಿ ಹೆದರದೇ, ಹಲವುಸಲ ಫೀನಿಕ್ಸ್ ಹಕ್ಕಿಯಂತೇ ಮತ್ತೆ ಜೀವತಾಳಿ ಮೇಲೆದ್ದ ರಾಷ್ಟ್ರ ಜಪಾನ್. ಬಹುಶಃ ಇದೇ ಒಂದು ಕಾರಣಕ್ಕೆ ಅಲ್ಲಿನ ಆ ಜನರಿಗೆ ಅಷ್ಟು ನೈಪುಣ್ಯತೆಯನ್ನು ಸೃಷ್ಟಿ ಒದಗಿಸಿದೆಯೇನೋ ಅನಿಸುತ್ತದೆ.

ಒಂದುಕಡೆ ಯಾವ ಕ್ಷಣದಲ್ಲೂ ಘಟಿಸಬಹುದಾದ ಭೂಕಂಪ, ಇನ್ನೊಂದು ಕಡೆ ಅಭಿವೃದ್ಧಿಯತ್ತ ಹೊಸ ತಂತ್ರಜ್ಞಾನಗಳ ಆವಿಷ್ಕಾರ...ಈ ಎರಡು ಶೃಂಗಗಳ ನಡುವೆ ಅತೀ ಲಘುವಾದ ಹಾಗೂ ಬಾಳಿಕೆಬರುವ ವಸ್ತುಗಳಿಂದ ಕಟ್ಟಡಗಳನ್ನು ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡವರು ಜಪಾನೀಯರು. ಅಲ್ಲಿನ ತಂತ್ರಜ್ಞಾನವೇ ಅವರ ನಿಜವಾದ ಬಂಡವಾಳ ಎಂದರೆ ತಪ್ಪಾಗಲಾರದೇನೋ. ಅವರು ತಯಾರಿಸಿದ ಯಾವುದೇ ವಸ್ತುವಿರಲಿ ಅದಕ್ಕೆ ಜಗತ್ತಿನಾದ್ಯಂತ ಬೇಡಿಕೆ. ಹೇಗೆ ಚೀನಾ ಅತೀ ಕಮ್ಮಿ ದರದಲ್ಲಿ ಬಾಳಿಕೆಬರಲಾರದ ಉತ್ಫನ್ನಗಳನ್ನು ತಯಾರಿಸಿದರೆ ಜಪಾನ್‍ನ ಉತ್ಫನ್ನಗಳು ಬಾಳಿಕೆಯಲ್ಲಿ ವಿಶ್ವಗುಣಮಟ್ಟವನ್ನು ಹೊಂದಿದಂಥವು. ಬೇರೇ ದೇಶಗಳೊಂದಿಗೆ ದರದಲ್ಲಿ ಪೈಪೋಟಿ ನಡೆಸದೇ ತಾವು ಸೃಜಿಸುವ ವಸ್ತುಗಳಲ್ಲಿ ತಮ್ಮತನವನ್ನು ಮೆರೆದವರು ಜಪಾನೀಯರು. ನೋಡಲು ಕುಬ್ಜರಾದರೂ ಮೆದುಳುಮಾತ್ರ ಬಹಳ ಚುರುಕು! ಬಹಳ ಚಾಲಾಕು.

ನಾಗಾಸಾಕಿ, ಹಿರೋಶೀಮಾ ಮೊದಲಾದ ಜಾಗಗಳು ಮತ್ತು ಅಲ್ಲಿ ನಡೆದ ಕೆಲವು ಘಟನೆಗಳು ನಮಗೆ ಜಪಾನನ್ನು ಆಗಾಗ ನೆನಪಿಗೆ ತರುತ್ತಲೇ ಇರುತ್ತವೆ. ನಮ್ಮಲ್ಲಿ ತುಸು ಜೋರಾಗಿ ಗಾಳಿ ಬೀಸಿದಷ್ಟು ಸಹಜ ಅಲ್ಲಿನ ಭೂಕಂಪ. ಚಿಕ್ಕ-ಪುಟ್ಟ ಭೂಕಂಪವೇನು ರಿಕ್ಟರ್ ಮಾಪಕದಲ್ಲಿ ೬-೭ ಕಾಣಿಸಿಕೊಂಡರೂ ತೀರಾ ತಲೆಕೆಡಿಸಿಕೊಂಡ ಜನಸಮುದಾಯ ಅದಲ್ಲ. ಬದಲಿಗೆ ಸದಾ ಮೃತ್ಯುವಿನ ದವಡೆಯಲ್ಲೇ ಜಾಗಮಾಡಿಕೊಂಡು ಕಾಲಹಾಕಿದವರು-ಕಾಲಹಾಕುತ್ತಿರುವವರು ಜಪಾನೀಯರು. ವಿದ್ಯುನ್ಮಾನ ರಂಗದಲ್ಲಿ ಆದ ವೇಗದ ಬೆಳವಣಿಗೆಗಳಲ್ಲಿ ಜಪಾನಿನ ಕೊಡುಗೆ ಸಿಂಹಪಾಲು. ಯಾವುದೇ ವಿದ್ಯುನ್ಮಾನ ವಸ್ತುವನ್ನು ತೆಗೆದುಕೊಳ್ಳಿ ಇಂದಿಗೂ ಅವರದ್ದೇ ಆದ ಕೊಡುಗೆ ಅಲ್ಲಿರುತ್ತದೆ! ಅನಿಶ್ಚಿತತೆಯ ನಡುವೆಯೂ ಅದನ್ನು ಮರೆತು ಸೃಜನಶೀಲರಾಗಿ ಬದುಕಲು ಕಲಿಯುವ ಆ ಮೂಲಕ ಜಗತ್ತಿಗೆ ಬದುಕುವ ಕಲೆಯನ್ನು ಬೋಧಿಸುವ ಆ ಮಂದಿ ಬಹಳ ಶ್ರಮಜೀವಿಗಳು.

ನಮ್ಮಂತಹ ದೇಶಗಳಲ್ಲಿ ಯಾವುದೇ ಅಪಘಾತವಾದರೆ ನಾವು ಪರಿಹಾರಕ್ಕೋ ನೆರವಿಗೋ ಬಾಯಿಬಾಯಿ ಬಿಡುತ್ತಾ ಕೂತುಬಿಡುತ್ತೇವೆ. ಮಂತ್ರಿ-ಮಾಗಧರು ಕಂಡರೂ ಕಾಣದಹಾಗೇ ಕೇಳಿದರೂ ಕೇಳದಹಾಗೇ ತಿಳಿದರೂ ತಿಳಿಯದಹಾಗೇ ಇದ್ದುಕೊಂಡು ತಡವಾಗಿ ಮಾಧ್ಯಮಗಳಲ್ಲಿ ಉತ್ತರಿಸುತ್ತಾರೆ! ಆ ಕಾಲದಲ್ಲೂ ಆಳುವ ಪಕ್ಷ ಮತ್ತು ವಿರೋಧಪಕ್ಷಗಳ ಜಗಳಗಳು ಮುಂದುವರಿಯುತ್ತವೆ. ಪರಿಹಾರಕ್ಕಾಗಿ ಸಮಾಜದಿಂದ ಬೇಡಿಪಡೆದ ’ಕೈ’ಗಳೇ ಅದನ್ನು ಸರಿಯಾಗಿ ತಲುಪಿಸದೇ ಮಧ್ಯೆ ತಿಂದುಹಾಕುತ್ತವೆ. ಸತ್ತ ಸಾವಿರಾರು ಜನರಿಗಾಗಿ ಜೀವಸಹಿತ ಉಳಿದ ಹಲವುಸಾವಿರ ನಿರಾಶ್ರಿತರಿಗಾಗಿ ಎಲ್ಲಾ ಸೇರಿ ಅಲ್ಲೆಲ್ಲೋ ಸಭೆಗಳನ್ನು ಮಾಡಿ ನಾವಿದ್ದೇವೆ ಎಂದು ಧ್ವನಿವರ್ಧಕದಲ್ಲಿ ಹೇಳಿಹೋದವರು ಮತ್ತೆ ಆ ಕಡೆ ತಲೆಹಾಕುವುದು ಚುನಾವಣೆ ಬಂದ ಸಂದರ್ಭಗಳಲ್ಲಿಯೇ! ಯಾವುದೋ ಮಠ-ಮಾನ್ಯ ಮತ್ತು ಸಾಮಾಜಿಕ ಸಂಘ-ಸಂಸ್ಥೆಗಳು ಕೊಡಬಹುದಾದ ಪರಿಹಾರವೇ ದೊಡ್ಡದಾಗಿರುತ್ತದೆ. ಆದರೆ ಜಪಾನಿನಲ್ಲಿ ಇಂದಿನ ಆ ದುರಂತ ಸನ್ನಿವೇಶ ಕಾಣುತ್ತಿರುವಂತೆಯೇ ಅವರು ೯೦೦ ಜೀವರಕ್ಷಕ ದಳಗಳನ್ನು ಕಳಿಸಿದ್ದಾರೆ. ತೊಂದರೆಗಳಲ್ಲಿ ಸಿಲುಕಿದ ಜನರಿಗೆ ಹಲವು ಮಾರ್ಗಗಳ ಮುಖಾಂತರ ಸಹಾಯ ಒದಗಿಸಲು ಹೆಣಗಾಡುತ್ತಿದ್ದಾರೆ.

ಸೃಷ್ಟಿಯಲ್ಲಿ ಯಾವುದೂ ಶಾಶ್ವತವಲ್ಲ ಎಂಬುದನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ ಆದಷ್ಟೂ ಅದನ್ನು ಮರೆತು ಮೆರೆಯುತ್ತೇವೆ. ನಮ್ಮ ಜೀವನವೇ ನಮ್ಮ ಕೈಯ್ಯಲ್ಲಿಲ್ಲ ಎಂಬುದು ನಮಗೇ ಅರಿವಿಗೆ ಬಾರದ ಮಿಥ್ಯಾಪ್ರಪಂಚದಲ್ಲಿ ಇಂತಹ ಘಟನೆಗಳನ್ನು ಮಾಧ್ಯಮಗಳಲ್ಲಿ ಕಾಣುವಾಗ ನಮಗನಿಸುವುದು " ಓಹೋಹೋ ಏನಪ್ಪಾ ಇದು ಸಾವಿರಾರು ವಾಹನಗಳೇ ಬೊಂಬೆಗಳ ಮಕ್ಕಳಾಟಿಕೆಯ ವಾಹನಗಳ ರೀತಿ ನೀರಿನಲ್ಲಿ ಕೊಚ್ಚಿಹೋಗುತ್ತಿವೆ ? "ಎಂದು ನಮ್ಮಲ್ಲೇ ಅಂದುಕೊಳ್ಳುತ್ತೇವೆ. ಬೀಸಿ ಬರುವ ಚಂಡಮಾರುತಕ್ಕಾಗಲೀ, ನುಗ್ಗಿಬರುವ ನೀರಿಗಾಗಲೀ, ಹೊತ್ತುರಿಯುತ್ತ ಬರುವ ಬೆಂಕಿಗಾಗಲೀ ನಮ್ಮ ಯಾವ ಆಧುನಿಕ ತಂತ್ರಜ್ಞಾನವೂ ತಡೆಹಾಕಲಾರದಲ್ಲ ! ಏನಿದ್ದರೂ ಸಣ್ಣ ಮಟ್ಟದಲ್ಲಿರುವ ಅವುಗಳನ್ನು ಹೇಗೋ ನಿಯಂತ್ರಿಣಕ್ಕೆ ತಂದಾಗ ’ನಾವು ಮಾಡಿದ್ದೇವೆ’ ಎಂದುಕೊಳ್ಳಬಹುದೇ ಹೊರತು ಮಿತಿಮೀರಿದ ಮಟ್ಟದಲ್ಲಿ ಅವುಗಳ ವ್ಯಾಪಕತ್ವ ಬೆಳೆದುನಿಂತಾಗ ಮನುಷ್ಯ ಸೋತುಹೋಗುತ್ತಾನೆ; ಕುಬ್ಜನಾಗಿ ಕಾಣುತ್ತಾನೆ.

ಇದೇ ಸಂದರ್ಭಗಳಲ್ಲಿ ನಮ್ಮಲ್ಲಿ ಮಾಧ್ಯಮವನ್ನು ಆತುಕೊಂಡಿರುವ ಹಣದ ಥೈಲಿಯ ಜ್ಯೋತಿಷಿಗಳು ಹೊಟ್ಟೆತೊಳೆದುಹೋದವರಂತೇ ಬಡಬಡಿಸುತ್ತಾ ಜನರಲ್ಲಿ ಇನ್ನಷ್ಟು ದಿಗಿಲನ್ನು ಉಂಟುಮಾಡುವುದು ವಿಪರ್ಯಾಸವೆನಿಸುತ್ತದೆ. ಜ್ಯೋತಿಷ್ಯವನ್ನು ಅತಿಯಾಗಿ ನಂಬುವ ಮಹಾಜನಗಳೇ ಕೇಳಿ-- ನಿಮ್ಮ ಹಣೆಯಲ್ಲಿ ಏನು ಬರೆದಿದೆಯೋ ಅದನ್ನು ಯಾವನೇ ಜ್ಯೋತಿಷಿಯೂ ತಿದ್ದಲಾರ. ಅದು ನಿಮಗೆ ಬೇಕಾಗಿರಲಿ ಬೇಡವಾಗಿರಲಿ ಘಟಿಸೇ ಘಟಿಸುತ್ತದೆ. ಅಂದಮೇಲೆ ಕೇವಲ ತಂತಮ್ಮ ಉಳಿವಿಗಾಗಿ ಓಡಿಹೋಗಿ ದೇವಸ್ಥಾನಗಳಲ್ಲೋ ಮಸೀದಿಗಳಲ್ಲೋ ಇಗರ್ಜಿಗಳಲ್ಲೋ ದೀಪಹಚ್ಚುವುದೇ ಮೊದಲಾದ ತುರ್ತು ಕಾರ್ಯ ಬೇಕಾಗಿಲ್ಲ! ದೀಪವನ್ನು ನಿತ್ಯವೂ ಹಚ್ಚಿ-ಅದು ಜ್ಞಾನವನ್ನೀಯುವ ಸಂಕೇತ,ಅದು ಅಂಧಕಾರವನ್ನು ಕಳೆಯುತ್ತದೆ. ಬದಲಾಗಿ ಸ್ವಾರ್ಥಿಯಾಗಿ ತಾನೋ ತಮ್ಮನೆಯವರೋ ಇತ್ಯಾದಿಯಾಗಿ ಹಾಯಾಗಿರಲಿ ಎಂದು ವಿಶೇಷವಾಗಿ ಪ್ರಾರ್ಥಿಸುವ ಕೈಂಕರ್ಯ ಬೇಡ. ಹುಟ್ಟಿಸಿದಾತನಿಗೆ ಗೊತ್ತು ನಿಮ್ಮ ಜಾತಕ. ಕೊಡುವಾತನಿಗೆ ಕೊಳ್ಳುವ ಹಕ್ಕೂ ಅರ್ಹತೆಯೂ ಪರಿಪೂರ್ಣ ಮಾಹಿತಿಯೂ ಇರುತ್ತದೆ. ತಾನೇ ಸೃಷ್ಟಿಸಿದ ಪ್ರಪಂಚವನ್ನು ಹೇಗೆ ಸುಸ್ಥಿತಿಯಲ್ಲಿಡಬೇಕು ಅಥವಾ ಯಾವಾಗ ನಾಶಗೊಳಿಸಬೇಕೆಂಬುದು ಆತನ ಲಕ್ಷ್ಯಕ್ಕಿರುತ್ತದೆ. ಹೀಗಾಗಿ ಹೆದರಿಕೆಯಿಂದ ನಾವು ಮಾಡುವ ಯಾವುದೇ ಪ್ರಾರ್ಥನೆಯೂ ಫಲಿಸುವುದಿಲ್ಲ. ಬದಲಾಗಿ ದೇವರೆಂಬ ಶಕ್ತಿಯನ್ನು ಕಚ್ಚಾಟವಿಲ್ಲದೇ ನಿತ್ಯವೂ ಸ್ನೇಹಿತನರೀತಿ, ನಮ್ಮದೇ ತಂದೆ-ತಾಯಿಗಳನ್ನು ನೋಡುವ ರೀತಿ[ಇಲ್ಲಿ ಕೆಲವರು ತಂದೆ-ತಾಯಿಗಳನ್ನು ನೋಡಿಕೊಳ್ಳುವ ರೀತಿ ಬದಲಿರಬಹುದು: ಅವರನ್ನು ಕೈಬಿಡಲಾಗಿದೆ]ನೋಡಿ ಆ ಶಕ್ತಿಯಲ್ಲಿ ನಿಮ್ಮ ದೈನಂದಿನ ಕರ್ತವ್ಯಪಾಲನೆಯ ವರದಿಯನ್ನು ಒಪ್ಪಿಸಿ. ಅದೇ ಸರಿಯಾದ ಮಾರ್ಗವೇ ಹೊರತು ವಿಜ್ಞಾನ ಜ್ಯೋತಿಷಿಗಳೆಂದುಕೊಳ್ಳುವವರಾಗಲೀ, ಧೂಳುಮೂಟೆಯಂತೇ ಪೀಠತುಂಬಾ ಮೈಚೆಲ್ಲಿ ಕುಳಿತು ಅಕರಾಳ ವಿಕರಾಳವಾಗಿ ಕೈಯ್ಯಾಡಿಸುತ್ತಾ ಬಾಯಿಗೆ ಬಂದಿದ್ದನ್ನು ಹಲಬುವವರಾಗಲೀ ಜ್ಯೋತಿಷ್ಯದಲ್ಲಿ ಇದಮಿತ್ಥಂ ಎನ್ನುತ್ತಾ ಇರುವ ಹತ್ತು ಬೆರಳಿಗೆ ಇಪ್ಪತ್ತೋ ಇಪ್ಪತ್ತೈದೋ ಉಂಗುರ ತೊಟ್ಟು ಭವಿಷ್ಯ ನುಡಿಯುವವರಾಗಲೀ ಹೇಳುವುದು ಕೇವಲ ಕೇವಲ ಕಾಕತಾಳೀಯ.

ಇಲ್ಲಿ ಒಂದನ್ನು ನೆನಪಿಡಬೇಕು. ಖಗೋಲ ಗಣಿತ ಸತ್ಯ. ಅದರಿಂದ ಅವರು ಗುಣಿಸಿ ಹೇಳುವ ಗ್ರಹಣವೇ ಮೊದಲಾದ ಘಟನೆಗಳೂ ಸತ್ಯ. ಆದರೆ ಫಲ ಜ್ಯೋತಿಷ್ಯ ಇದೆಯಲ್ಲಾ--ಇದರಲ್ಲಿ ಹುರುಳಿಲ್ಲ. ಎಲ್ಲಾಂದರೆ ನಾಳೆ ಏನು ಘಟಿಸುತ್ತದೆ ಎನ್ನುವುದನ್ನು ಮೊದಲೇ ಸೂಚಿಸಲು ಮುಖ್ಯಮಂತ್ರಿಗಳಿಗೋ ಪ್ರಧಾನಮಂತ್ರಿಗಳಿಗೋ ಆಪ್ತ ಜ್ಯೋತಿಷ್ಯ ಕಾರ್ಯದರ್ಶಿಗಳನ್ನು ನೇಮಿಸಲಾಗುತ್ತಿತ್ತು. ಹಾಗಾಗುವುದಿಲ್ಲ ಯಾಕೆ ? ಯಾವ ಜ್ಯೋತಿಷಿಯೂ ಪರಿಪೂರ್ಣನಲ್ಲ. ಅದಲ್ಲದೇ ಫಲ ಜ್ಯೋತಿಷ್ಯದಲ್ಲಿ ಅವರ ಆಧ್ಯಾತ್ಮಿಕ ಬ್ಯಾಲೆನ್ಸ್ ಖರ್ಚಾಗುತ್ತದೆ--ಅವರು ಮಾಡಿದ ಜಪ-ತಪ ಪ್ರಾರ್ಥನೆಯಿಂದ ಅವರು ಹೆಳಿದ ಕೆಲವು ಸಂಗತಿಗಳು ನಡೆಯಬಹುದು --ಆದರೆ ಅಂತಹ ತಪೋ ನಿಷ್ಠ ಜ್ಯೋತಿಷಿಗಳು ಮಾಧ್ಯಮಗಳಲ್ಲಿರಲಿ ನಗರವಾಸಿಗಳಿಗಂತೂ ಸಿಗುವುದಿಲ್ಲ.

ಪ್ರಕೃತಿಯಲ್ಲಿ ಯಾವುದು ಆಗಬಾರದಿತ್ತೋ ಅಂತಹ ಅನಾಹುತಗಳು ಆಗಾಗ ಘಟಿಸುತ್ತವೆ. ನಮ್ಮೆಲ್ಲರನ್ನು ಆಗಾಗ ಭಯ ವಿಹ್ವಲರನ್ನಾಗಿ ಮಾಡುತ್ತವೆ. ಚಲಿಸುವ ರೈಲು ಅಪಘಾತಕ್ಕೀಡಾದಾಗ ರೈಲಿನಲ್ಲಿ ಹೋಗಲು ಭಯ, ಹಾರುವ ವಿಮಾನ ಧರೆಗುರುಳಿ ಉರಿದುಹೋದಾಗ ವಿಮಾನಯಾನದಲ್ಲೇ ಶಂಕೆ, ಮಾರ್ಗಮಧ್ಯೆ ಅಪಘಾತಕ್ಕೀಡಾದ ವಾಹನಗಳನ್ನು ನೋಡಿ ವಾಹನಪ್ರಯಾಣವೇ ಬೇಡವೆಂಬ ಅನಿಸಿಕೆ, ಯಾವುದೋ ಕಟ್ಟಡ ಕುಸಿದುಬಿದ್ದದ್ದನ್ನು ನೋಡಿ ನಾವಿರುವ ತಾಣ ಗಟ್ಟಿಯಿದೇಯೋ ಅಲುಗಾಡುತ್ತಿದೆಯೋ ಎಂಬ ಆತಂಕ, ಬಾಂಬು ಹಾಕಿದ್ದಾರೆಂಬ ಸುದ್ದಿ ತಿಳಿದಾಗ ನಗರವಾಸವೇ ಬೇಡ ಎಂಬ ತೀರ್ಮಾನ .....ಹೀಗೇ ಒಂದೇ ಎರಡೇ ನಮ್ಮ ಅನಿಸಿಕೆಗಳು ಹಲವು. ಆದರೆ ನಮ್ಮ ಭಾವನೆಗಳನ್ನೂ ಮೀರಿದ ಜಗನ್ನಿಯಾಮಕ ಶಕ್ತಿ ನಾವು ಏನೇ ಮಾಡಿದರೂ ಅದರ ಕರ್ತವ್ಯದಲ್ಲಿ ಅದು ನಿರತವಾಗಿರುತ್ತದೆ. ಭುವಿಯ ಋಣ ತೀರಿದ ಜೀವಿಯನ್ನು ಕ್ಷಣಕಾಲವೂ ಇಲ್ಲಿರಗೊಡದು ಆ ಶಕ್ತಿ. ಋಣವಿದ್ದರೆ ಏನೇ ಆದರೂ ಸಾಯುವ ಪ್ರಶ್ನೆ ಬರುವುದೇ ಇಲ್ಲ.

ಅರೆಪ್ರಜ್ಞಾವಸ್ಥೆಯಲ್ಲಿ ೩೭ ವರ್ಷಗಳಿಂದ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿ ಇನ್ನೂ ಜೀವದಿಂದಿರುವ ಅರುಣಾ ಶಾನಭಾಗ್ ಸುದ್ದಿ ಕೇಳಿದ್ದೀರಿ. ಕೊಂಕಣ ರೈಲ್ವೆಯಲ್ಲಿ ಕೆಲಸಮಾಡುತ್ತಿದ್ದ ದಕ್ಷಿಣ ಕನ್ನಡದ ಶೆಟ್ಟರೊಬ್ಬರು ಬೆನ್ನಮೇಲೆ ಕಲ್ಲು ಬಿದ್ದ ಪರಿಣಾಮ ೧೭-೧೮ ವರ್ಷಗಳಿಂದ ಸೊಂಟದಕೆಳಭಾಗಕ್ಕೆ ಯಾವುದೇ ಚಲನೆಯಿಲ್ಲದೇ ಮುದಿ ತಾಯಿಯ ಶುಶ್ರೂಷೆಯಲ್ಲಿ ಇನ್ನೂ ಜೀವದಿಂದಿದ್ದಾರೆ. ಇವರುಗಳಿಗೆಲ್ಲಾ ನಮ್ಮ ಆಧುನಿಕ ಔಷಧೀಯ ಪದ್ಧತಿಗಳೂ ಏನೂ ಮಾಡಲಾಗಲಿಲ್ಲ! ಎರಡು ದೇಹದಾಕೃತಿಗಳು ಇದ್ದ ಸಣ್ಣ ಮಗು ಲಕ್ಷ್ಮಿಯ ಶರೀರದ ಬೇಡದ ಭಾಗಗಳನ್ನು ತೆಗೆದುಹಾಕಿ ಮತ್ತೆ ಸಾಧಾರಣ ಮಾಮೂಲು ಶರೀರದ ರೂಪಕ್ಕೆ ತಂದಿದ್ದಾರೆ--ಇದು ಸಾಧ್ಯವಾಯಿತು, ಆದರೆ ಎಳವೆಯಲ್ಲೇ ಆ ಹುಡುಗಿ ಬಹುದೊಡ್ಡ ಶಸ್ತ್ರಕ್ರಿಯೆಗೆ ಒಳಗಾಗಬೇಕಾಯಿತು. ಅಂದಮೇಲೆ ಎಲ್ಲರ ಮಾಹಿತಿಯನ್ನೂ ದಾಖಲಿಸಿಕೊಳ್ಳುವ ಸರ್ವೇ ವಿಭಾಗವೊಂದಿದೆ ಅಂತಾಯಿತು! ಆ ಸರ್ವೇ ವಿಭಾಗ ನಮಗೆ ಕಾಣುವಂಥದ್ದಲ್ಲ, ಕಾಣದಿದ್ದರೂ ಕಾರ್ಯಮಾತ್ರ ನಡೆದೇ ಇದೆ.

ಜಪಾನಿನಲ್ಲಿ ಪ್ರಕೃತಿ ವಿಕೋಪ ನಡೆದ ಈ ಸಂದರ್ಭದಲ್ಲಿ ನಾವು ಪ್ರಾರ್ಥಿಸಬಹುದಾದದ್ದಿಷ್ಟೇ " ಹೇ ಜಗನ್ನಿಯಾಮಕನೇ, ಮಾನವ ಮಾತ್ರರು ಹಿಂದೆ ಮಾಡಿದ ಎಲ್ಲಾ ಕುಕೃತ್ಯಗಳನ್ನೂ ತಜ್ಜನಿತ ಪಾಪಫಲಗಳ್ನೂ ಒಮ್ಮೆ ನಿನ್ನ ಪುಸ್ತಕದಿಂದ ಅಳಿಸಿಬಿಡು. ಹಲವರ ಆಕ್ರಂದನ ಕೇಳಿ ನಾವು ಮನಸಾ ಸೋತಿದ್ದೇವೆ, ನೋವನುಭವಿಸುತ್ತಿದ್ದೇವೆ. ನಿನ್ನ ಕ್ರೀಡಾಂಗಣವಾದ ಈ ಜಗದಲ್ಲಿ ಆದಷ್ಟೂ ಮತ್ತೆಂದೂ ಇಂತಹ ದುರ್ಘಟನೆಗಳು ಮರುಕಳಿಸದಂತೇ ಶಾಂತಿಯಿಂದ ನಡೆಸು. ನೀನೇ ಇಚ್ಛಿಸಿದಷ್ಟು ದಿನ ಇದ್ದು ನಿನ್ನಲ್ಲಿಗೇ ಮರಳುತ್ತೇವೆ ..ಆದರೆ ಆ ನಡುವೆ ಈ ದಯನೀಯ ಸ್ಥಿತಿಗೆ ನಮ್ಮನ್ನು ನೂಕುವ ನೂಕಿ ಪರೀಕ್ಷಿಸುವ ಹಂತ ಬೇಡ. ಎಲ್ಲರೂ ನಿನ್ನ ಮಕ್ಕಳೇ. ತಪ್ಪು ಮಾಡಿದ ಮಕ್ಕಳನ್ನು ಕ್ಷಮಿಸುವುದು ತಂದೆಯಾದ ನಿನ್ನಲ್ಲೇ ಇದೆ. ನಮಗೆಲ್ಲಾ ಒಳ್ಳೆಯ ಪ್ರೇರೇಪಣೆ ಕೊಡು. ಎಲ್ಲರಿಗೂ ಒಳಿತಾಗಲಿ, ಎಲ್ಲೆಲ್ಲೂ ಸುಭಿಕ್ಷ, ಸಮೃದ್ಧಿ ನೆಲೆಸಲಿ."

Thursday, March 10, 2011

ನಿಯಂತ್ರಣವೇ ಇಲ್ಲದ ಮನೋರಂಜನಾ ಪ್ರಯೋಗಗಳು


ನಿಯಂತ್ರಣವೇ ಇಲ್ಲದ ಮನೋರಂಜನಾ ಪ್ರಯೋಗಗಳು

" ಅಮ್ಮಾ ನಂಗೆ ಭಯ ಆಗ್ತಿದೆ....ಯಾರಿದ್ದೀರ ಅಲ್ಲಿ ಪ್ಲೀಸ್ ಹೆಲ್ಪ್ ಮಿ.......ಆಯ್ ಕಾಂಟ್ ಡು ಎನಿಮೋರ್.....ಪ್ಲೀಸ್....ನಾನು ಹೆಲ್ಪ್ ಸಿಗ್ಲಿಲ್ಲಾ ಅಂದ್ರೆ ಸತ್ತೇ ಹೋಗ್ತೀನಿ " ---ಇದು ಹರೆಯದ ಹುಡುಗಿಯೊಬ್ಬಳ ಸ್ಮಶಾನರೋದನ ! ಇದೇ ರೀತಿ ವಿದೇಶೀಯರ ಪಾದಸೇವೆ ಮಸ್ಸಾಜು, ಹಳ್ಳಿಗಳಲ್ಲಿ ಎಮ್ಮೆ ಸಗಣಿ ತಿನ್ನುವುದು ಪೂರ್ತಿ ಒಂದು ಲೋಟ ಗಂಜಳ ಕುಡಿಯುವುದು, ಹೊಲದಲ್ಲಿ ಟ್ರಾಕ್ಟರುಗಳನ್ನು ಓಡಿಸುವುದು,ಗುಡ್ಡಗಾಡು ವಾಸಿಗಳಾದ ಸಿದ್ಧಿ ಜನಾಂಗದ ಹುಡುಗರನ್ನು ತಂದು ನಗರಗಳಲ್ಲಿ ಅವರ ಗೋಳು ಹುಯ್ದು ಕೊಳ್ಳುವುದು ಇತ್ಯಾದಿ ಹಲವು ಹುಚ್ಚು ಕ್ರೀಡೆಗಳನ್ನು ನೀವೆಲ್ಲಾ ನೋಡಿರುತ್ತೀರಿ. ಇದು ಯಾವ ತಲೆಹಿಡುಕ ಮಹಾಶಯನ ಕ್ರಿಯೇಟಿವಿಟಿಯ ಫಲವೋ ಗೊತ್ತಿಲ್ಲ. ಆದರೆ ಒಂದಾದಮೇಲೊಂದು ಮಾಧ್ಯಮ ವಾಹಿನಿಗಳು ಇಂಥದಕ್ಕೆ ಎಡತಾಕಿರುವುದು ಬಹಳ ಬೇಸರ ತರಿಸುವ ವಿಷಯ.

ನಗರಗಳಲ್ಲಿ ಹಾಯಾಗಿ ತಮ್ಮ ಸ್ಕೂಲು-ಕಾಲೇಜುಗಳು ಅಭ್ಯಾಸ,ಗೆಳೆಯ/ಗೆಳತಿಯರು ಅಂತ ನಲಿದುಕೊಂಡಿದ್ದ ಪ್ರಾಯದ ಹುಡುಗಿಯರ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವ ತೆವಲಿಗೆ ಆ ಹುಡುಗಿಯರು ಇಂತಹ ಬೆಲೆ ತೆರುತ್ತಿದ್ದಾರೆ. ಹುಟ್ಟಿದಾರಭ್ಯ ಇದುವರೆಗೆ ತಂದೆ-ತಾಯಿಯ ಪಾದಪೂಜೆ ಮಾಡದ ಇಂಥಾ ಕ್ಷುದ್ರ ಜೀವಿಗಳು ತಾವೂ ಕಮ್ಮಿಯಿಲ್ಲಾ ಎಂದು ಹೇಳಿಸಿಕೊಳ್ಳುವ ಸಲುವಾಗಿ ’ರಿಯಾಲಿಟಿ ಶೋ’ ನಿರ್ಮಾಪಕ/ನಿರ್ದೇಶಕರು ಹೇಳಿದ್ದೆಲ್ಲವನ್ನೂ ಚಾಚೂತಪ್ಪದೇ ಮಾಡುತ್ತಿದ್ದಾರೆ. ಮನೆಯಲ್ಲಿ ಮೊಬೈಲಿಗೆ ಮತ್ತು ಲ್ಯಾಪ್‍ಟಾಪಿಗೆ ಅಂಟಿಕೊಂಡು ಇಡೀ ದಿನದಲ್ಲಿ ಕಡ್ಡಿ ಕೆಲಸ ಹಂದದ ಇಂಥಾ ನಫರದಂಡ ಹುಡುಗಿಯರಿಗೆ ಮಾಡಲು ಬೇರೇ ಕೆಲಸವಿಲ್ಲವೇ ? ಅಥವಾ ಅಂಥಾ ಕಚಡಾ ಶೋ ಗಳಿಗೆ ಕಳಿಸುವ ಅವರ ಮಾತಾ-ಪಿತೃಗಳಿಗೆ ತಲೆ ಸರಿಯಿಲ್ಲವೋ ತಿಳಿಯದಾಗಿದೆ! ಎಲ್ಲವೂ ಪ್ರಚಾರದ ಪ್ರಶ್ನೆ !

ಆಯ್ತು ಬಿಡಿ ಹೋಗಲಿ, ಬಾಕಿ ಎಲ್ಲಾ ಕೆಲಸಗಳಿಗೂ ತಲೆಹಾಕುವ ಸರಕಾರೀ ಹ್ಯೂಮನ್ ರೈಟ್ಸ್ ಸಂಸ್ಥೆಯವರು ಇಂಥಾ ಅಸಂಬದ್ಧ ಕೆಲಸಗಳನ್ನು ಮಾಡಿಸುವ ಮಾಧ್ಯಮ ಧಾರಾವಾಹಿಗಳ ನಿರ್ಮಾಪಕ/ನಿರ್ದೇಶಕರತ್ತ ನೋಡುವುದೇ ಇಲ್ಲವಲ್ಲ ! ಹಿಂದಿಯಲ್ಲಿ ಮಾಡಿದರು ಎಂದು ಕನ್ನಡದಲ್ಲಿ ಇಲ್ಲಾ ಮತ್ತೊಂದು ಭಾಷೆಯಲ್ಲಿ ಹೀಗೇ ಇತ್ತೀಚೆಗೆ ಸತತವಾಗಿ ಇಂಥಾ ಕೆಟ್ಟ ಶೋಗಳು ನಡೆದೇ ಇವೆಯಲ್ಲಾ ಇವುಗಳಿಗೆ ಕಡಿವಾಣ ಹಾಕುವವರ್ಯಾರೂ ಕಾಣುತ್ತಿಲ್ಲ. ಪ್ರಾಯಶಃ ನಾಗರಿಕರೆನಿಸಿದ ನಾಗರಿಕರಿಗೂ ಆಗಾಗ ಬದಲಾವಣೆಗಾಗಿ ರಕ್ಕಸ ಮನೋರಂಜನೆ ಬೇಕೆನಿಸುತ್ತದೆ ! ಚಲನಚಿತ್ರಗಳಲ್ಲಿ ಐಟಮ್ ಸಾಂಗ್‍ಗಳಲ್ಲಿ ಬಿಚ್ಚುಡುಗೆ ಅಂದಗಾತಿಯರನ್ನು ಬಯಸುವ ಸಮಾಜದ ಕೆಲವು ಮುಖಗಳು ಮಾಧ್ಯಮವಾಹಿನಿಗಳಲ್ಲೂ ಮಸಾಲೆಯನ್ನೇ ಬಯಸುತ್ತಾರೆಯೋ ಎಂಬ ಅನುಮಾನ ಉದ್ಭವವಾಗುತ್ತದೆ.

ಸೃಜನಶೀಲತೆ ಸಮಾಜವನ್ನು ದಿಕ್ಕು ತಪ್ಪಿಸುವ ದಿಸೆಯಲ್ಲಿ ನಡೆಯಬೇಕೇ ? ಇಂತಹ ಎಡಬಿಡಂಗಿಗಳಿಗೆ ಮಾಡಲು ಬೇರೇ ಯಾವುದೂ ತೋಚದಿದ್ದರೆ ಹಿಂದಿಯವರನ್ನೋ ಮತ್ಯಾರನ್ನೋ ಅನುಕರಿಸುತ್ತಾ ಅದನ್ನೇ ಭಾರೀ ವಿಶೇಷವೆನ್ನುವ ರೀತಿಯಲ್ಲಿ ಪ್ರಚುರಪಡಿಸುವುದು ನಿಜಕ್ಕೂ ವಿಷಾದನೀಯ. ವಾಹಿನಿಯೊಂದೆರಡು ಮದುವೆ ಮಾಡಿಸಲು ಹೊರಟವು...ಮಧ್ಯದಲ್ಲೇ ಮಗುಚಿಬಿದ್ದವು! ಹಿಂದೀ ಮಾಧ್ಯಮವಾಹಿನಿಗಳಲ್ಲಿ ಕಾಣುವ, ಹಣಕ್ಕಾಗಿ ಏನಾನ್ನಾದರೂ ಮಾಡಲೂ ತಮ್ಮನ್ನೇ ಮಾರಿಕೊಳ್ಳಲೂ ಸಿದ್ಧರಿರುವ ಬೆಕ್ಕಿನ ಕಣ್ಣಿನ ಗಂಡುಬೀರಿ ಹುಡುಗಿಯರು ನಡೆಸಿಕೊಟ್ಟ ಅಂಥಾ ಶೋಗಳು ಕನ್ನಡದ ಸಂಸ್ಕೃತಿಗೆ ಒಗ್ಗುತ್ತಿತ್ತೇ ಎಂಬುದೂ ಕಾಡುವ ಪ್ರಶ್ನೆಯಾಗಿದೆ. ನೇರವಾಗಿ ವ್ಯವಹರಿಸಿ, ಜಾತಕ-ಮೇಳಾಮೇಳಿ ಮೊದಲಾದವುಗಳನ್ನೆಲ್ಲಾ ಪರಿಗಣಿಸಿ ಆದಮೇಲೂ ಕೊಡುಕೊಳ್ಳುವಿಕೆಯ [ಮುಸುಕಿನಲ್ಲಿ ನಡೆಯುವ ವರದಕ್ಷಿಣೆ ವ್ಯವಹಾರ]ಮಾತುಕತೆಯಿಂದಲೋ ಅಥವಾ ಹುಡುಗ-ಹುಡುಗಿಯ ವೈಯ್ಯಕ್ತಿಕ ಪ್ರೀತಿ-ಪ್ರೇಮಗಳ ಹಿಂದಿನ ಅಧ್ಯಾಯಗಳನ್ನು ಅವರು ಹಂಚಿಕೊಂಡಮೇಲೋ ಸಂಬಂಧ ನಿಂತುಹೋಗುವುದಿದೆ!ಸಮಾಜಕ್ಕೆ ಗೊತ್ತಿರಲಿ ಬಿಡಲಿ ’ಲಿವ್-ಇನ್ ರಿಲೇಶನ್’ ಎಂಬ ಹೊಸಮಾದರಿಯ ಜೀವನಕ್ರಮಕ್ಕೆ ಅದಾಗಲೇ ಒಗ್ಗಿಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳ ಉದ್ಯೋಗಿಗಳು, ಕಾಲ್‍ಸೆಂಟರ್ ಕಾರ್ಯಾನುವರ್ತಿಗಳು ಆಗಾಗ ಆಗಾಗ ದೋಸೆ ಮಗುಚಿದ ಹಾಗೇ ಸಂಬಂಧಗಳನ್ನು ಬದಲಾಯಿಸಿಕೊಳ್ಳುತ್ತಾ ನಡೆಯುತ್ತಿರುವ ಈ ದಿನಗಳಲ್ಲಿ ಅದನ್ನೇ ಪುಷ್ಟೀಕರಿಸುವ ಧಾರಾವಾಹಿಗಳೂ ಬಂದಿವೆ-ಬರುತ್ತಲಿವೆ.

ಕಳೆದ ಕೆಲವು ದಿನಗಳ ಹಿಂದೆ ಮಾಧ್ಯಮವಾಹಿನಿಗಳು ಕನ್ನಡದಲ್ಲಿ ಕೆಲವು ಚಲನಚಿತ್ರ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ ನಟಿಯೊಬ್ಬಳ ಕಾಮಕಾಂಡದ ಬಗ್ಗೆ ವಿಶ್ಲೇಷಿದವು. ಅದೂ ಕೂಡಾ ತುಂಬಾ ಮಹತ್ವಕೊಟ್ಟು ಪದೇ ಪದೇ ಅದನ್ನು ತೋರಿಸುತ್ತಲೇ ಇದ್ದವು. ನಿಜ ಹೇಳುತ್ತೇನೆ ಕೇಳಿ ನಮಗೆ-ನಿಮಗೆ ಗೊತ್ತಿರುವ ಆದರೂ ಬಹಿರಂಗವಾಗಿ ನಾವು ಹಾಗೆ ನೋಡದ ಹಾದರಗಿತ್ತಿಯರೇ ನಟಿಯರು! ನಟಿಯರು ಒಂದಿಲ್ಲೊಂದು ಸಮಯದಲ್ಲಿ ತಮ್ಮ ಶೀಲವನ್ನು ಕಳೆದುಕೊಳ್ಳಲೇ ಬೇಕಾಗುತ್ತದೆ ಎಂದು ಚಾಣಕ್ಯನೇ ಹೇಳುತ್ತಾನೆ! ಇನ್ನು ರೂಪವನ್ನೇ ಬಳಸಿಕೊಂಡು ಹಣಮಾಡುವ ನಟಿ/ಹುಡುಗಿಯರಿಗೇನೂ ಕಮ್ಮಿ ಇಲ್ಲ. ಸಾಮಾಜಿಕವಾಗಿ ಸಾಮೂಹಿಕ ಸಂಪರ್ಕಕ್ಕೆ ಬಂದ ಬಹುಸಂಖ್ಯಾಕ ಹೆಣ್ಣುಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ ತಮ್ಮ ಶೀಲವನ್ನು ಕಾಪಾಡಿಕೊಂಡಿರಬಹುದೇ ಹೊರತು ಆ ರಂಗದಲ್ಲಿ ಅದನ್ನು ಹಾಗೇ ಜೋಪಾನ ಮಾಡುವುದು ಹಿಮಪಾತವಾಗುವಾಗ ಮೌಂಟ್‍ಎವರೆಸ್ಟ್ ಏರುವಷ್ಟು ಕಷ್ಟ! ಇತ್ತೀಚೆಗಂತೂ ಕಲಿಕಾ ಕೇಂದ್ರಗಳಲ್ಲಿ ಜ್ಞಾನದೇಗುಲಗಳಲ್ಲಿ ಉಪನ್ಯಾಸಕರೆನಿಸಿದ ಗಂಡುಗೂಳಿಗಳು ತಮ್ಮ ತೆವಲನ್ನು ತೀರಿಸಿಕೊಳ್ಳಲು ವಿದ್ಯಾರ್ಜನೆಗೆ ಬರುವ ಹುಡುಗಿ/ಹೆಂಗಸರನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎಂಬುದನ್ನು ತಾವು ಕಾಣುತ್ತಿದ್ದೀರಿ. ಎಂತಹ ಆಭಾಸ !

ಮಹಿಳೆಯರ ಬಗ್ಗೆ ವಾದಮಂಡಿಸುವ/ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಹಲವರಿದ್ದಾರೆ. ಆದರೆ ಇಂತಹ ’ರಿಯಾಲಿಟಿ ಶೋ’ಗಳ ಬಗ್ಗೆ ಅವರು ಚಕಾರ ಎತ್ತುವುದಿಲ್ಲವಲ್ಲ--ಆಶ್ಚರ್ಯವಾಗುತ್ತದೆ. ೨೨ನೇ ಶತಮಾನದಲ್ಲಿದ್ದೇವೆ ಇದೆಂತಹ ಹಳಸಲು ವಿಷಯವೆಂದು ಮೂಗು ಮುರಿಯುವ ಮಹಾನುಭಾವರಿಗೆ ಒಂದು ಪ್ರಶ್ನೆ-- ನೀವೇ ಆ ಗಂಡೋ/ಹೆಣ್ಣೋ ಅಥವಾ ಪಾಲಕರೋ ಆಗಿದ್ದರೆ ಪೂರ್ವದಲ್ಲಿ ಹಲವು ಸಂಬಂಧಗಳನ್ನು ಇರಲಿ ಒಂದೇಒಂದು ಸಂಬಂಧವನ್ನು ಇಟ್ಟುಕೊಂಡಿದ್ದ ವ್ಯಕ್ತಿಯೊಡನೆ ಶಾಶ್ವತ ಸಂಬಂಧ ಕಲ್ಪಿಸಿಕೊಂಡು ಜೀವನನಡೆಸಲು ಒಪ್ಪುತ್ತೀರಾ ? ತಮ್ಮ ಕಾಲಬುಡಕ್ಕೆ ಬಂದಾಗ ತಮಗೆ ಮಾತ್ರ ಯಾವುದೇ ತೊಂದರೆಯಾಗದಿರಲಿ ಎನ್ನುವ ಜನ ಬೇರೆಯವರ ವಿಷಯಗಳಲ್ಲಿ ಅದು ಸಹಜ ಎಂದು ನಡೆದುಕೊಳ್ಳುವುದು ಎಷ್ಟು ಸಮಂಜಸ ? ಇಂತಹ ಲಿವ್-ಇನ್‍ಗಳು ಜಾಸ್ತಿಯಾದರೆ ಮುಂದೆ ಭಾರತದಲ್ಲಿ ಸ್ವಸ್ತ ಸಮಾಜ ಇರಬಹುದೇ? ಅಥವಾ ಐರೋಪ್ಯ ರಾಷ್ಟ್ರಗಳ/ಅಮೇರಿಕದ ರೀತಿ ಶಾಂತಿಯನ್ನು ಅರಸುತ್ತಾ ನಾವೂ ಮತ್ಯಾವುದಾದರೂ ದೇಶಕ್ಕೆ ಹೋಗಬೇಕಾಗಬಹುದೇ ಎಂಬುದು ಗಹನವಾಗಿ ಚಿಂತಿಸಬೇಕಾದ ವಿಚಾರ.

ಇದಕ್ಕೆ ಪೂರಕವಾಗಿ ೧೬ನೇ ವಯಸ್ಸು ಆಗುತ್ತಿದ್ದಂತೇ ಸ್ವೇಚ್ಛೆಯಿಂದ ಹೆಣ್ಣು-ಗಂಡುಗಳು ಸೇರಬಹುದು ಎಂಬ ಕಾಯ್ದೆಯನ್ನು ಕೇಂದ್ರ ಸರಕಾರ ಜಾರಿಗೆ ತರುವುದನ್ನು ಕೇಳುತ್ತಿದ್ದೇವೆ. ಈಗಾಗಲೇ ಗೌಪ್ಯವಾಗಿದ್ದೇ ಅನಿಯಂತ್ರಿತವಾಗಿದೆ. ಬೀದಿಗಳಲ್ಲಿ, ಕಸದಗುಡ್ಡೆಗಳ ಪಕ್ಕದಲ್ಲಿ ಬೇಡದ ಸಂಬಂಧದ ಫಲವಾದ ಪಾಪದ ಕೂಸುಗಳು ಬಿಸುಡಲ್ಪಟ್ಟು ಬೀದಿನಾಯಿಗಳಿಗೆ ಆಹಾರವಾಗುತ್ತಿರುವ ದೃಶ್ಯವನ್ನು ಕಾಣುತ್ತಿದ್ದೇವೆ. ಇಂತಹ ಎಲ್ಲದರ ನಡುವೆ ಆ ಕಾಯ್ದೆಯೂ ಬಂದರೆ ಅಪ್ಪ-ಅಮ್ಮನ ಎದುರೇ ಪ್ರಿಯಕರ ಬಂದು ಮಗಳನ್ನು ಎಳೆದೊಯ್ದರೂ ಅವರು ಬೆಪ್ಪರಾಗಬೇಕಾದ ಪರಿಸ್ಥಿತಿ ಇದೆ. ಆಮೇಲಾಮೇಲೆ ನಾಯಿಗೋತ್ರ ! ಅಪ್ಪ ಯಾರೋ- ಅಮ್ಮ ಯಾರೋ ! ಹಲೋ ಎನ್ನುತ್ತಿದಂತೇ ಪ್ರೀತಿ, ಹಾಯ್ ಎನ್ನುತ್ತಿದ್ದಂತೇ ಮಕ್ಕಳು, ಬಾಯ್ ಎನ್ನುತ್ತಿದಂತೇ ವಿಚ್ಛೇದನ!

ರಿಯಾಲಿಟಿ ಶೋವೊಂದರಲ್ಲಿ ವೀಣಾ ಮಾಲಿಕ್ ಎಂಬ ಪಾಕಿಸ್ತಾನೀ ಯುವತಿ ಮತ್ತು ಅಶ್ಮಿತ್ ಪಟೇಲ್ ಪರಸ್ಪರ ಚುಂಬಿಸಿದರು ತಬ್ಬಿಕೊಂಡರು. ಇಂತಹ ರಿಯಾಲಿಟಿ ಶೋಗಳನ್ನು ಹಿರಿಯರು ನೋಡುವಾಗ ಅದನ್ನೇ ನೋಡುತ್ತಿರುವ ಕಿರಿಯರ ಮನಸ್ಸಿನ ಮೇಲೆ ಯಾವ ಪರಿಣಾಮವಾಗಬಹುದು? ಒಳ ಉಡುಗೆಗಳ ಜಾಹೀರಾತನ್ನು ಕೊಡುವ ಜನ ಒಂದಿಂಚು ಜಾಗ ಬಿಟ್ಟು ಇಡೀ ಶರೀರವನ್ನೂ ತೋರಿಸುತ್ತಾರೆ! ಕಾಂಡೋಮ್‍ಗಳ ವ್ಯಾಪಕ ಪ್ರಚಾರದ ಭಾರಾಟೆಯೇ ಇದೆ. ಇದನ್ನೆಲ್ಲಾ ಅವಲೋಕಿಸುವ ಕಿರಿಯರಿಗೆ ಅರ್ಥವಾಗದ್ದೇನು ? ಓಮ್ದು ಕಾಲಕ್ಕೆ ನಾರಿಯ ಸೀರೆಯ ಸೆರಗು ಜಾರಿದರೇ ಜನ ವಿಚಿತ್ರವಾಗಿ ನೋಡುತ್ತಿದ್ದರು. ಇಂದು ಸೆರಗೇ ಇಲ್ಲದ ಪ್ರದರ್ಶನ! ಇದೂ ನಮ್ಮ ಸಂಸ್ಕೃತಿಯಲ್ಲಾದ ಬದಲಾವಣೆ ಎನ್ನೋಣವೇ ? ಕಾಲೇಜುಗಳಿಗೆ ಜೀನ್ಸ್ ಮತ್ತು ಟೀ ಶರ್ಟ್ ಹಾಕಿ ಬರಬೇಡಿ ಎಂದು ಹುಡುಗಿಯರಿಗೆ ತಾಕೀತು ಮಾಡಿದರೆ ದಂಗೆಯೇ ಆರಂಭ! ಅಸಹ್ಯಕರ ಬರಹಗಳನ್ನು ಹೊತ್ತ ಟೀಶರ್ಟ್‍ನ್ನು ಅವರು ಧರಿಸಿ ಬರುವಾಗ ಕೆಲವರಿಗಾದರೂ ನೋಡಲು ಮುಜುಗರವೆನಿಸಬಹುದಲ್ಲ ? ಹೀಗೇ ಚಿತ್ರ ವಿಚಿತ್ರ ದಿರಿಸುಗಳ ಮೂಲಕ ಪರೋಕ್ಷ ಹರೆಯದ ಹುಡುಗರ ಮನಸೆಳೆಯುವ ಹುಡುಗಿಯರು ಮುಂದಿನ ಅಧ್ಯಾಯಕ್ಕೆ ನಾಂದಿಹಾಡಲು ಕಾರಣರು ಎಂದರೆ ತಪ್ಪೇ ?

ಇಂದಿನ ಧಾರಾವಾಹಿಗಳಲ್ಲಿ ತಲೆಬೋಳಿಸಿಕೊಂಡು ಪಾತ್ರಮಾಡುವುದಕ್ಕಾದರೂ ಸೈ ಎನ್ನುವ ನಮ್ಮ ಹುಡುಗಿಯರನೇಕರು ಗ್ರಾಮೀಣಭಾಗದಲ್ಲಿ ಕೈತುಂಬಾ ಕೆಲಸಗಳಿದ್ದರೂ ತೊರೆದು ನಗರಕ್ಕೆ ಬಂದು ನೆಲೆಸಿ ಮಾಧ್ಯಮಗಳಿಗೆ ಅಂಟಿಕೊಂಡಿರುವುದು ಒಂದು ವಿಪರ್ಯಾಸ ಎಂದರೆ "ನಾವು ಕಲಾವಿದರು ನಮಗೆ ಹಳ್ಳಿಗಳಲ್ಲಿ ಬೆಲೆಯಿಲ್ಲಾ" ಎನ್ನುವ ಅವರ ಉತ್ತರ ಬರಬಹುದು ಆದರೆ ಹಳ್ಳಿಗಳಲ್ಲಿ ಅವರಿಗಿಂತಾ ಉತ್ತಮ ಕಲಾವಿದರು ನೆಲೆಸಿದ್ದಾರೆ; ಅವರೆಂದೂ ತಮ್ಮತನ ಕಳೆದುಕೊಳ್ಳುವ ಗೋಜಿಗೆ ಹೋದವರಲ್ಲ, ಮಾಧ್ಯಮದ ಅನಿವಾರ್ಯತೆಗಾಗಿ ಯಾವನೋ ಹುಡುಗನ ಜೊತೆಗೆ ಕ್ರತ್ರಿಮವಾಗಿ ನಗುತ್ತಾ ಕಾರ್ಯಕ್ರಮಗಳನ್ನು ನಡೆಸುವ ಬಣ್ಣದಬೊಂಬೆಗಳು ಒಂದೆರಡೇ ? ಆರ್ಥಿಕ ಸ್ವಾತಂತ್ರ್ಯವೆಂಬ ಏಕಮುಖೀ ಧೋರಣೆಯಲ್ಲಿ ಇಂಥವರೇ ಬಹಳಮಂದಿ ’ಇವ್-ಇನ್ ರಿಲೇಶನ್’ನಲ್ಲಿ ಇರುತ್ತಾರೆ ಎಂದರೆ ಇಲ್ಲವೆನ್ನುತ್ತೀರೇ? ಇನ್ನು ತಾಂತ್ರಿಕ ಮತ್ತು ಔಷಧೀಯ ವಿಷಯಗಳನ್ನೂ ಸೇರಿದಂತೇ ಹಲವು ಉನ್ನತ ವಿದ್ಯೆಗಳನ್ನು ಕಲಿಯಲು ಊರು ತೊರೆದು ನಗರಕ್ಕೆ ತೆರಳುವ ಹುಡುಗಿಯರು ಇಂತಹ ಸಂಬಂಧಗಳನ್ನು ಅಪ್ಪಿರುವುದೂ ಕಾಣಬರುವ ಸತ್ಯಸಂಗತಿಯಾಗಿದೆ.

ತಂತ್ರಜ್ಞಾನದ ಕ್ರಾಂತಿಯಿಂದ ತಳ್ಳುವಗಾಡಿಯ ವ್ಯಾಪಾರಿಯೂ ಬೀದಿಗುಡಿಸುವವರೂ ಸೇರಿದಂತೇ ಎಲ್ಲರೂ ಮೊಬೈಲ್ ಬಳಸುತ್ತಿರುವುದು ಕಾಣುತ್ತದೆ. ಆಗಲಿ ಬಿಡಿ. ಪ್ರಗತಿ ಒಳ್ಳೆಯದಕ್ಕಾದರೆ ಬೇಸರವಿಲ್ಲ. ಇಅದೇ ತಂತ್ರಜ್ಞಾನವೇ ಅನೈತಿಕ ಸಂಬಂಧಗಳನ್ನು ಕುದುರಿಸಿಕೊಳ್ಳುವಲ್ಲಿ, ನಡೆಸುವಲ್ಲಿ ಸಹಕಾರಿಯಾಗುತ್ತಿರುವುದು ಖೇದತರುವ ವಿಷಯ. ಸೋಶಿಯಲ್ ನೆಟವರ್ಕಿಂಗ್ ಸೈಟ್‍ಗಳಲ್ಲಿ ಇಂದು ಪರಿಚಯವಾದ ಹುಡುಗ-ಹುಡುಗಿ ನಾಳೆ ಉದ್ಯಾನದಲ್ಲಿ ಕೈಕೈ ಹಿಡಿದು ಅಲೆಯುವಷ್ಟು ಪ್ರಗತಿ ನಮ್ಮದು ! ಈ ಸಂಬಂಧಗಳೆಲ್ಲಾ ಸ್ಥಿರವೇ ? ಇವುಗಳಿಂದ ಯಾವುದೇ ಆಘಾತ ಇಲ್ಲವೇ ? ಹಾಗಾದ್ರೆ ಯಾವುದೇ ತಪ್ಪು ಮಾಡಿರದ ಸ್ಪುರದ್ರೂಪೀ ತಂತ್ರಾಂಶ ಅಭಿಯಂತರ[ಗಿರೀಶ್]ನನ್ನು ಮದುವೆಯ ನಿಶ್ಚಿತಾರ್ಥದವರೆಗೂ ಕಮಕ್ ಕಿಮಕ್ ಎನ್ನದೇ ಒಪ್ಪಿ ನಡೆದಿದ್ದ ಅನುರೂಪೀ ಹುಡುಗಿ ಶುಭಾ ಕರೀ ಜಿರಲೆಯ ಮರಿಯಂತಿದ್ದ ಅದ್ಯಾವುದೋ ತಮಿಳು ಹುಡುಗನನ್ನು ಮೊಬೈಲ್ ಸಂದೇಶದ ಮೂಲಕ ಕರೆದು ಬಲಿಹಾಕಿರುವುದು ಯಾಕೆ ? ತನಗೆ ಈ ಮದುವೆ ಇಷ್ಟವಿಲ್ಲಾ ಎಂದರೆ ಅವಳ ಗಂಟೇನು ಹೋಗುತ್ತಿತ್ತು. ಮಾಡಿದ್ದನ್ನು ಮಾಡಿಕೊಂಡೂ ತನ್ನದೇನೂ ತಪ್ಪಿಲ್ಲಾ ಎಂದು ಸರ್ವೋಚ್ಚ ನ್ಯಾಯಾಲಯದ ಮೊರೆಹೋಗುವ ಆಕೆಗೆ ಆತನ ಹೆತ್ತ ಪಾಲಕರು ಯಾವ ಶಿಕ್ಷೆ ವಿಧಿಸಬೇಕು? ಸಮಾಜ ಕಂಡೂ ಕಂಡೂ ಇಂಥಾದ್ದನ್ನು ಪುರಸ್ಕರಿಸಬೇಕೇ ?

ನಮ್ಮೂರಲ್ಲಿ ಒಂದು ಗಾದೆ ಇದೆ-- ಹೆಣ್ಣು ತಿರುಗಿ ಕೆಟ್ಟಳು ಗಂಡು ಕೂತು ಕೆಟ್ಟ-ಅಂತ. ಇದರರ್ಥ ಸೃಷ್ಟಿ ಸಹಜ ನಿಯಮದಂತೇ ಮಾನವರಲ್ಲಿ ಸಹಜವಾಗಿ ಹುಡುಗಿಯರೇ ಸುಂದರವಾಗಿರುತ್ತಾರೆ. ಅಂತಹ ಹುಡುಗಿಯರು ಉದ್ಯೋಗಕ್ಕೋ, ಕಲಿಕೆಗೋ, ವ್ಯವಹಾರಕ್ಕೋ ತಿರುಗಾಡುವುದು ಜಾಸ್ತಿಯಾದಾಗ ಸಹಜವಾಗಿ ಹುಡುಗರ ದೃಷ್ಟಿಗೆ ಬೀಳುತ್ತಾರೆ. ಮುಂದೆ ಹುಡುಗರು ಅವರ ಹಿಂದೆ ಬಿದ್ದು ಅವರನ್ನು ಹೇಗಾದರೂ ಪಡೆಯಲು ಪ್ರಯತ್ನಿಸುತ್ತಾರೆ. ಆಗ ಇಷ್ಟವೋ ಅನಿಷ್ಟವೋ ಹುಡುಗಿಯರನೇಕರು ಜಾರುತ್ತಾರೆ! ಗಂಡಿನ ಸೌಂದರ್ಯ ಆತನ ಗಡುಸುತನ ಮತ್ತು ಸಮರ್ಪಕ ಕೆಲಸ ನಿರ್ವಹಣೆಯಲ್ಲಿರುತ್ತದೆ. ಹೀಗಾಗಿ ಶಾರೀರಿಕವಾಗಿ ಮಾಸಿಕ ಸ್ರಾವಾದಿ ತೊಂದರೆಗಳಾಗಲೀ ಮಕ್ಕಳನ್ನು ಹಡೆದು ಪೋಷಿಸುವ ಅಮ್ಮಂದಿರ ಪಾತ್ರವಾಗಲೀ ಗಂಡಸಿಗೆ ಬರುವುದಿಲ್ಲವಾದ್ದರಿಂದ ಆತ ದುಡಿಮೆಗೆ ಯೋಗ್ಯ ಎಂಬ ಹಿತಾರ್ಥದಿಂದ ಗಂಡು ಎಂದೂ ಕೂತು ಉಣ್ಣಬಾರದು ಎಂದಿದ್ದಾರೆ. ಆದರೆ ಇಂದು ಇದನ್ನೆಲ್ಲಾ ಪರಿಗಣಿಸುವವರೇ ಇಲ್ಲ. ಮಹಿಳಾ ಸಬಲೀಕರಣ ಮಹಿಳಾ ಸಬಲೀಕರಣ...ಇವತ್ತಿಗೂ ನಾನೊಂದು ಪ್ರಶ್ನೆ ಕೇಳುತ್ತೇನೆ-ಗಂಡಸರ ಯಾವ ಹಂಗೂ ಇಲ್ಲದೇ ಮಹಿಳೆಯರೇ ಯಾವುದನ್ನಾದರೂ ಸ್ವತಂತ್ರವಾಗಿ ನಡೆಸುತ್ತಾರೆಯೇ ? ಆಗುವುದಿಲ್ಲ, ಬರೀ ಆಡುವುದಷ್ಟೇ!

ಕೇವಲ ಆರ್ಥಿಕ ಸ್ವಾತಂತ್ರ್ಯದಿಂದ ಮಾತ್ರ ಹೆಣ್ಣು ಸಬಲಳಾದರೆ ಸಾಲದು ಅದಕ್ಕೆ ಪೂರಕ ಸಂಸ್ಕಾರ ಬೇಕು. ವಿನಾಕಾರಣ ಗಂಡಸರು ತಮ್ಮನ್ನು ಹಾಗೆ ಮಾಡುತ್ತಾರೆ ಹೀಗೆ ಮಾಡುತ್ತಾರೆ ಎನ್ನುವ ಬದಲು ತಮ್ಮ ಮಡಿವಂತಿಕೆಯ[ಸ್ವೇಚ್ಛಾಚಾರ ರಹಿತವಾಗಿರುವುದ]ನ್ನು ಸ್ವಲ್ಪವಾದರೂ ಅವರು ಉಳಿಸಿಕೊಂಡರೆ ಆಗ ಅವರು ಸಬಲರಾಗುತ್ತಾರೆ. ಮಾಧ್ಯಮಗಳಲ್ಲಿ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಅಪೇಕ್ಷೆಯಿಂದ ಯಾರೋ ವಿದೇಶೀಯನ ಕಾಲು ಉಜ್ಜುವುದು, ಪಾದಸೇವೆ ಮಾಡುವುದು, ಪಡ್ಡೆಗಳ ಜೊತೆ ನಾಟ್ಯವಾಡುವುದು ಇದನ್ನೆಲ್ಲಾ ಮಾಡಹೊರಟ ಯುವತಿಯರೇ ನಿಮಗಾದರೂ ಕೊಂಚ ಬುದ್ಧಿಬೇಡವೇ ? ನಿಮ್ಮ ಜೀವನದ ಯಾವ ಅನಿವಾರ್ಯತೆಗೆ ಇಂತಹ ಕೆಲಸಕ್ಕೆ ಇಳಿಯುತ್ತೀರಿ ? ಓದುಗ ಮಿತ್ರರೇ ಈ ಬಗ್ಗೆ ನೀವೇನನ್ನುತ್ತೀರಿ?

Wednesday, March 9, 2011

ಸ್ವಚ್ಛ ಕನ್ನಡ

ಸ್ವಚ್ಛ ಕನ್ನಡ
[ವಿಶ್ವ ಕನ್ನಡ ಸಮ್ಮೇಳನದಲ್ಲಿ ಖುದ್ದಾಗಿ ಭಾಗವಹಿಸಲು ಆಗದ ಕಾರಣ ಇಲ್ಲಿಂದಲೇ ಕನ್ನಡಮಾತೆಯನ್ನು ನೆನೆಸಿಕೊಳ್ಳುವ ಪ್ರಯತ್ನಮಾಡಿದ್ದೇನೆ ]

ನಂದನದ ಸಿರಿ ಭೋಗ ತುಂಬಿದ
ನಮ್ಮ ನಾಡಿದು ಕನ್ನಡ
ಚಂದನದ ಪರಿಮಳವ ತೀಡಿದ
ಹೆಮ್ಮೆಯಾ ಸಿರಿಗನ್ನಡ

ಭರತಭೂಮಿಯ ಕುವರಿಯಾಗಿ
ದಕ್ಷಿಣದಿ ನೆಲೆನಿಂತಿದೆ
ತರತರದ ಪ್ರತಿಭೆಗಳನೀಯುತ
ದಶದಿಸೆಯಲೂ ಚಲಿಸಿದೆ!

ಕಲೆಯು ಸಂಗೀತಗಳು ಸಾಹಿತ್ಯಾ
-ಭಿರುಚಿಯನು ಹೊಂದಿದಾ
ನೆಲೆಯು ನಿಪುಣರ ಬೀಡು ಸುಮಧುರ
ಸಂಸ್ಕೃತಿಯು ಬಲು ಚಂದದಾ

ಕೋಶಬರೆದಾ ದೇಶಕಟ್ಟಿದ
ಹಲವು ಹೈದರ ಅಂಗಳ
ಶೇಷವಿರದರೂ ಕೀರ್ತಿಮೆರೆದಿಹ
ಭಾಷೆ ನಿರತಗೆ ಮಂಗಳ

ಅಚ್ಚ ಕನ್ನಡ ಸ್ವಚ್ಛ ಕನ್ನಡ
ಅಚ್ಚುಮೆಚ್ಚಿನ ಕನ್ನಡ
ತುಚ್ಛವಾದವು ಉಳಿದ ಭಾಷೆಗಳ್
ಪಚ್ಚೆ ನಮ್ಮಯ ಕನ್ನಡ


Tuesday, March 8, 2011

ಜಾರಕೀಯ ಹೊಳಿಯಲ್ಲಿ ಲಿಂಬೀಹುಳಿ ತೊಳೆದಾಂಗ !


ಜಾರಕೀಯ ಹೊಳಿಯಲ್ಲಿ ಲಿಂಬೀಹುಳಿ ತೊಳೆದಾಂಗ !


ದೇಶವ್ಯಾಪಿ ನಡೆಯುತ್ತಿರುವ ಹಲವು ಸಂಗತಿಗಳಲ್ಲಿ ಮಾಧ್ಯಮಗಳು ರಾಜಕೀಯದವರವೇ ಆಗುತ್ತಿರುವ ಸಂಗತಿ ಎದ್ದು ತೋರುತ್ತಿರುವುದು ಹೊಸವಿದ್ಯಮಾನ. ಅಂತೆಯೇ ನಮ್ಮ ಶಾಸಕರಲ್ಲಿ ಬಹುತೇಕರು ಅನೇಕ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವುದು ಜನಸಾಮಾನ್ಯನಿಗೆ ತಿಳಿಯದ ವಿಷಯವೇನಲ್ಲ! ಈ ಹಿಂದೆ ಮಣ್ಣಿನಮಕ್ಕಳು ಆಸ್ಪತ್ರೆ ಮಾಡಿದ್ದು, ಪೆಟ್ರೋಲ್ ಬಂಕ್ ಮಾಡಿದ್ದು ಎಲ್ಲಾ ಆಗಾಗ ಸುದ್ದಿಗೆ ಬಂದಿದ್ದವು. ಇವತ್ತಿನ ಹೊಸ ಹೆಜ್ಜೆಯೆಂದರೆ ಕಾಲಬಂದಾಗ ತಮ್ಮ ಬಗ್ಗೆ ತಮ್ಮ ಪಕ್ಷದಬಗ್ಗೆ ಪ್ರಚಾರಮಾಡಲಾಗಿ ಮಾಧ್ಯಮಗಳನ್ನು ನಡೆಸುವುದು. ಟಿ.ಆರ್.ಪಿ ದರಹೆಚ್ಚಿಸಿಕೊಂಡು ಸಾಕಷ್ಟು ಜಾಹೀರಾತು ಗಿಟ್ಟಿಸಿ ಉಣ್ಣುವುದರ ಜೊತೆಗೆ ಚುನಾವಣೆಗಳಂತಹ ಸಮಯದಲ್ಲಿ ಮತದಾರರನ್ನು ಕೊಂಡುಹೋಗಲು ಮಾಧ್ಯಮಗಳ ಪ್ರಚಾರ ವೈಖರಿ ಪ್ರಭಾವಶಾಲಿಯಾಗುತ್ತದೆ.

ಒಂದುಕಾಲದಲ್ಲಿ ಮಾಧ್ಯಮ ಪೈಪೋಟಿ ಕಮ್ಮಿಯಿದ್ದಾಗ ರಾಜನಗೆ ನಕ್ಕ ಪತ್ರಿಕೆಗಳು ತಮ್ಮ ಎಂದಿನ ಹಳೇ ಹಳಸಿದ ಗಂಜಿಮುಖವನ್ನೇ ಹೊತ್ತು ನಡೆಯುತ್ತಾ, ಹೊಸ ಪತ್ರಿಕೆಗಳ ಹಾಗೂ ಅವುಗಳನ್ನು ನಡೆಸುವ ಯುವ ಪತ್ರಕರ್ತರ ಹೊಸ ಆಯಾಮಗಳ ಆವಿಷ್ಕಾರಗಳ ಎದುರು ಸೋತು ಪೇಲವ ನಗೆ ನಗುವಾಗ ಅಂತಹ ಪತ್ರಿಕಾ ಸಮೂಹ ಅಥವಾ ಮಾಧ್ಯಮಗುಚ್ಛವನ್ನೇ ಖರೀದಿಸಿ ಅವುಗಳಿಗೆ ಬಣ್ಣ-ಸುಣ್ಣಬಳಿಯಲು ಒಳ್ಳೇ ಕಲಾಕಾರ ಪತ್ರಿಕಾಕರ್ತರನ್ನು ಸೆಳೆದರೆ ಹಾಗೆ ಮಾಡಬಹುದೆಂಬುದು ಕೆಲವು ರಾಜಕೀಯ ಮುಖಂಡರ ಅಂಬೋಣ ! ಅದನ್ನು ಕಾರ್ಯರೂಪಕ್ಕೆ ಇಳಿಸಿದವರನ್ನು ನಾವೀಗ ಕಾಣಬಹುದಾಗಿದೆ.

ಒಂದು ಕಾಲದಲ್ಲಿ ಅತಿಯಾದ ಮೌಢ್ಯಹಿಡಿದ ಸಂಪಾದಕರುಗಳು ತಮ್ಮ ಮೂಗಿನ ನೇರಕ್ಕೇ ಬರೆಯಿರಿ ಇಲ್ಲವೆಂದರೆ ಉದ್ಯೋಗಬಿಟ್ಟು ತೊಲಗಿ ಎಂಬ ಬೋರ್ಡನ್ನು ಹಾಕಿ ಪತ್ರಿಕೆಗಳನ್ನು ನಡೆಸುತ್ತಿದ್ದರು. ಅಂತಹ ಪತ್ರಿಕೆಗಳಲ್ಲಿ ’ಎಮ್ಮೆ ಕಳೆದಿರುವುದೂ’ ಮುಖ್ಯ ಸುದ್ದಿಯಾಗುತ್ತಿತ್ತು! ಅಂತಹ ’ಘನತವೆತ್ತ’ ಸಂ.ಗಳು ತಾವ್ಯ್ ಕುಳಿತ ಖುರ್ಚಿ ಸವೆದುಹೋದಮೇಲೋ ತಮಗೆ ವಯಸ್ಸಿನ ಅನಾನುಕೂಲ ಕಾಡಿದಮೇಲೋ ಆ ಖುರ್ಚಿಗಳನ್ನು ಬಿಟ್ಟುಕೊಟ್ಟಾಗ ಅದುವರೆಗೆ ಅವರ ಕೈಕೆಳಗೆ ಅಚ್ಚಿನಬೊಂಬೆಯಂತೇ ತಯಾರಾದ ಮಹಾಪುರುಷರು ಆ ಜಾಗಗಳಿಗೆ ಬರುತ್ತಿದ್ದರು! ಇದು ಓದುಗನ ದೌರ್ಭಾಗ್ಯವೋ ಅಥವಾ ಇನ್ನೇನೋ. ಗುರುವಿನ ಗರಡಿಯಲ್ಲಿ ಪಳಗಿದ ಆ ಶಿಷ್ಯಂದಿರು ಮತ್ತದೇ ಮೌಢ್ಯದ ಪಡಿಯಚ್ಚಿನ ಮೌಲ್ಯವರ್ಧನೆ ಮಾಡುತ್ತಿದ್ದರು.

ಉದಾಹರಣೆಗೆ ನಾನು ಬರೆದ ಯಾವುದೋ ಲೇಖನವನ್ನು ತೆಗಳಿದ ಸಂ. ಒಬ್ಬರು ಹೇಳುವಂತೆ ’ಅವ’ ಮತ್ತು ’ಆತ’ ಈ ಶಬ್ದಗಳಲ್ಲಿ ಅಜಗಜಾಂತರವಂತೆ! ಗದ್ಯದಲ್ಲಿ ಸಾಲುಗಳ ಕೊನೆಯಲ್ಲಿ ಪ್ರಾಸದ ಶಬ್ದಗಳು ಕಣ್ತಪ್ಪಿಯೂ ಬರಬಾರದಂತೆ. ಇನ್ನು ವಿಶೇಷಣಗಳನ್ನು ಉಪಯೋಗಿಸಿದರೆ ಆ ಮಹನೀಯ ಹೇಳುವುದು " ಏನ್ರೀ ನಾಟಕಗಳ ಶಬ್ದ ಬಳಸಿಬಿಟ್ಟಿದ್ದೀರಿ " ಎಂದು, ವಿಶೇಷಣಗಳಿಲ್ಲದೇ ಬರೆದರೆ " ಇದರಲ್ಲಿ ಏನೂ ಇಲ್ಲ, ಎಲ್ಲಾ ಸಪ್ಪೆ ಸಪ್ಪೆ ಕನ್ನಡಶಾಲೆಯ ಮಕ್ಕಳ ಪಠ್ಯದಂಥಿದೆ " ಎನ್ನುತ್ತಿದ್ದರು. ಹೇಗೆ ಬರೆಯಬೇಕೆಂಬುದನ್ನು ಅವರಿಂದಲೇ ಕೇಳೋಣವೆಂದರೆ ಅಲ್ಲಿಪ್ರತೀ ಶಬ್ದದಲ್ಲೂ ತಪ್ಪನ್ನೇ ಕಾಣುವ ಜಾಯಮಾನ ಆ ಮನುಷ್ಯನದ್ದು. " ಸ್ವಾಮೀ ನಾನು ನನ್ನ ಸಹಜಶೈಲಿಯಲ್ಲಿ ಬರೆಯುತ್ತೇನೆ, ಬೇಕಾದರೆ ತೆಗೆದುಕೊಳ್ಳಿ ಇಲ್ಲದಿದ್ದರೆ ಬಿಟ್ಹಾಕಿ " ಎಂದು ಹೇಳಿಬಿಟ್ಟಿದ್ದೇನೆ. ಸಂಪಾದಕರಲ್ಲಿ ಬಹುತೇಕರು ಬರಹಗಾರರಲ್ಲ. ಅವರದೇನಿದ್ದರೂ ಕೂಡಿ-ಕಳೆಯುವ ಕೆಲಸ. ಇನ್ನು ಕೆಲವು ಸಂ.ಗಳಿಗೆ ಇನ್ಯಾವುದೋ ಪತ್ರಿಕೆಯಲ್ಲಿ ಬರೆದ ಲೇಖಕರ ಕೃತಿಗಳು ಸಿಕ್ಕಿಬಿಟ್ಟರೆ ಅವುಗಳಲ್ಲಿ ತಪ್ಪಿದ್ದರೂ ಸರಿಯೇ ಅದು ನೇರ ಪ್ರಕಟಣೆ ಕಾಣಬೇಕಾದ ವಿಷಯ! ಹೇಗಿದೆ ನೋಡಿ.

ಸಂಪಾದಕರುಗಳೂ ಕಲಿಯಬೇಕಾದ ವಿಷಯಗಳು ಹಲವಿವೆ. ಅವುಗಳನ್ನು ಕಾಲಾನಂತರದಲ್ಲಿ ವಿವೇಚಿಸೋಣ. ಕೆಲವು ಸಂ.ಗಳು ಬರೆದ/ಅನುವಾದಿಸಿದ ಪುಸ್ತಕಗಳು ನಿಜವಾಗಿಯೂ ಅವರುಗಳೇ ಮಾಡಿದ ಕೃತಿಗಳಲ್ಲ. ಇಲ್ಲಿ ’ಹೆಸರು ಯಾರದ್ದೋ ಬಸಿರು ಇನ್ಯಾರದ್ದೋ’ ಅನ್ನೋ ವ್ಯವಹಾರ! ಆದರೂ ಅಂತಹ ಸಂಗಳಿಗೆ ತಾವು ಬರಹಗಾರರು ಎನಿಸಿಕೊಳ್ಳುವ ಅಪೇಕ್ಷೆ! ಪತ್ರಿಕಾಕರ್ತರೆಲ್ಲಾ ಸಾಹಿತಿಗಳಲ್ಲ. ನಮ್ಮ ಯಕ್ಷಗಾನದ ಮಾತಿನ ದಾಟಿಯಂತೇ ಪತ್ರಿಕಾಕರ್ತರದೂ ಒಂದು ದಾಟಿಯಿದೆ. ಆ ದಾಟಿಯಲ್ಲಿ ಬರೆದರೆಮಾತ್ರ ಅದು ಸುದ್ದಿ ಎನಿಸಿಕೊಳ್ಳುತ್ತದೆ. ಹೀಗಾಗಿ ಅಲ್ಲಿ ಅವರಿಗೆ ಸ್ವಾತಂತ್ರ್ಯ ಇರುವುದಿಲ್ಲ. ಕವಿ/ಸಾಹಿತಿಗಳು ಸ್ವತಂತ್ರ ಬರಹಗಾರರಾಗಿರುತ್ತಾರೆ. ಯಾರೋ ಹಾಕಿದ ತಾಳಕ್ಕೆ ಅವರು ಕುಣಿಯುವುದಿಲ್ಲ. ಸಾಹಿತ್ಯದ ಎರಡು ಮಗ್ಗಲುಗಳಾದ ಗದ್ಯ-ಪದ್ಯಗಳು ಸಾಹಿತಿಗೆ ಮಾನಸ ಕೂಸುಗಳು. ’ಕುರಿಯನ್ನು ಕೇಳಿ ಸಾಂಬಾರ್ ಹುರಿಯುವುದಿಲ್ಲ’ ಎನ್ನೋದು ಮಾಂಸಾಹಾರೀ ಮಿತ್ರರುಗಳ ಅಭಿಪ್ರಾಯ, ಅದೇ ರೀತಿ ಸಾಹಿತಿ ಇನ್ಯಾರನ್ನೋ ಕೇಳಿ ತಾನು ಬರೆಯುವುದಿಲ್ಲ; ಬದಲಾಗಿ ತನಗೆ ತೋಚಿದ್ದನ್ನು ತನ್ನ ಭಾವನೆಗಳನ್ನು ತನ್ನ ಬಳಗದಲ್ಲಿ/ಓದುಗರಲ್ಲಿ ಹಂಚಿಕೊಳ್ಳುತ್ತಾನೆ/ಳೆ.

ಈಗ ವಾಪಸ್ಸು ನಮ್ಮ ಮುಖ್ಯ ವಿಷಯಕ್ಕೆ ಬರೋಣ: ಪತ್ರಿಕೋದ್ಯಮ ಅಂದಿನಂತಿರದೇ ಲಾಭದಾಯಕವಾಗಿದೆ ಈಗ. ಯಾರೋ ಚಿಲ್ಲರೆ ಪತ್ರಿಕೆಯವರು ಕೆಲಸಕ್ಕೆ ಬಾರದ ಬರಹಗಳನ್ನು ಒತ್ತಾಯದ ಮೇರೆಗೆ ಪ್ರಕಟಿಸಿ ಪ್ರತಿಗಳನ್ನು ಕೊಳ್ಳುವವರಿಲ್ಲದೇ ನಷ್ಟ ಅನುಭವಿಸಿರಬಹುದು. ಆದರೆ ಒಳ್ಳೆಯ ಪತ್ರಿಕೆಗಳೆಂದು ಹೆಸರುಗಳಿಸಿಕೊಂಡ ಪತ್ರಿಕೆಗಳವರು ಸಾಕಷ್ಟು ಹಣಗಳಿಸಿದ್ದಾರೆ-ಗಳಿಸುತ್ತಿದ್ದಾರೆ. ಇಂತಹ ಕೆಲವು ಪತ್ರಿಕೆಗಳು ಪೈಪೋಟಿಯಲ್ಲಿ ಲೇಖನಗಳನ್ನು ಪ್ರಕಟಿಸುವಾಗ ಅಲ್ಲಿನ ಸಂ. ತಮಗೆ ಡೊಗ್ಗುಸಲಾಮು ಹಾಕುವವರ ಲೇಖನಗಳನ್ನು ಪುಸಕ್ಕನೇ ಮಧ್ಯೆ ಮಧ್ಯೆ ಪ್ರಕಟಿಸುವುದಿದೆ. ಒಳ್ಳೆಯ ಲೇಖಕರಿಗೆ ಸೌಜನ್ಯಕ್ಕಾದರೂ ನೀಡಬೇಕಾದ ಸಂಭಾವನೆಯ ಮಾತೂ ಎತ್ತದ ಸಂ.ಗಳೂ ಇದ್ದಾರೆ! ಅವರ ಲೆಕ್ಕದಲ್ಲಿ ಅದು ರಾಷ್ಟ್ರೀಯ ಉಳಿತಾಯವಿರಬಹುದು. ಇನ್ನು ಪತ್ರಿಕಾಕರ್ತರ ರಾಗ-ದ್ವೇಷಗಳನ್ನು ಬಹಿರಂಗವಾಗಿ ಮೊನ್ನೆ ಮೊನ್ನೆಯಷ್ಟೇ ಸಾಕಷ್ಟು ಪ್ರಹಸನಗಳ ಮೂಲಕ ನೋಡಿದ್ದೀರಿ.

ದೇಶದಲ್ಲಿ ಪ್ರಜಾಪ್ರಭುತ್ವದ ಸರಕಾರ ಸರಿಯಾಗಿ ನಡೆಯಬೇಕಾದಾಗ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕಷ್ಟೇ ? ಹಿಂದೆ ನಾವು ಪಠ್ಯಗಳಲ್ಲಿ ಓದಿದ್ದೆವು ಚುನಾವಣೆಗೆ ನಿಲ್ಲುವವರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರಬಾರದು ಎಂಬುದಾಗಿ. ಆದರೆ ಇಂದು ಪರಿಸ್ಥಿತಿ ಕೈಮೀರಿಹೋಗಿದೆ! ಇರುವವರಲ್ಲಿ ಬಹುತೇಕರು ಅವರೇ ಆಗಿದ್ದಾರೆ. ಕಾನೂನುಗಳು ಸಮಾಜದ ಅನುಕೂಲಕ್ಕಾಗಿರಬೇಕೇ ಹೊರತು ಸಮಾಜದಲ್ಲಿ ಬೇಕಾದವರಿಗೆ ಒಂದುರೀತಿ ಬೇಡದವರಿಗೆ ಇನ್ನೊಂದು ರೀತಿ ಮಾಡಲಲ್ಲ. ಆದರೆ ಇಂದಿನ ಕಾಯ್ದೆಗಳಲ್ಲಿ ಹಲವಕ್ಕೆ ಲೋಪದೋಷಗಳಿವೆ. ಅವುಗಳನ್ನು ಬಳಸಿಕೊಂಡು ತಮ್ಮ ಬೇಳೇ ಬೇಯಿಸಿಕೊಳ್ಳಲು ಹಲವರು ಪ್ರಯತ್ನಿಸುತ್ತಿದ್ದಾರೆ. ಕಾರ್ಯಾಂಗದ ಬಗ್ಗೆ ಜಾಸ್ತಿ ಹೇಳುವುದೇ ಬೇಡ, ಇದು ಎಲ್ಲರಿಗೂ ಕಾಣುವ ನಿತ್ಯ ರಾಜಕೀಯ ಪ್ರಹಸನ ! ನ್ಯಾಯಾಂಗ ಕಾರ್ಯಾಂಗಗಳು ಶಾಸಕಾಂಗದ ರಾಜಕೀಯ ಪ್ರೇರಿತವಾಗಿರದೇ ನಿರ್ಭಿಡೆಯ ಮತ್ತು ನಿರ್ದಾಕ್ಷಿಣ್ಯ ಧೋರಣೆಯಲ್ಲಿ ಕೆಲಸಮಾಡಬೇಕೆಂಬುದು ಒಂದು ನೀತಿ. ಯಾವನೋ ಮಂತ್ರಿ ತನಗೆ ಬೇಕಾದ ಯಾವನೋ ಅರಣ್ಯಲೂಟಿಮಾಡುವ ಆಸಾಮಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ಮಾತನಾಡಿ ಬಿಡಿಸಿಕಳಿಸುತ್ತಾನೆ! ಬಾರ್ ಒಂದರಲ್ಲಿ ರಾತ್ರಿ ಕುಡಿದ ಮತ್ತಿನಲ್ಲಿ ಅಲ್ಲಿನ ಸಿಬ್ಬಂದಿಗಳೊಂದಿಗೆ ಅಸಹ್ಯಕರವಾಗಿ ಜಗಳವಾಡಿ ಕಿಟಖಿ ಗಾಜುಗಳನ್ನೆಲ್ಲಾ ಪುಡಿಪುಡಿ ಮಾಡಿದ ಮಣ್ಣಿನ ಮೊಮ್ಮಗ ಯಾವುದೇ ಗುನ್ನೆಯಿಲ್ಲದೇ ಪಾರಾಗಿಹೋಗುತ್ತಾನೆ !

ಇಂತಹ ಯಾವುದೇ ಬೇಡದ ಘಟನೆಗಳನ್ನು ಮತ್ತೆ ನಡೆಯದಂತೇ ನೋಡಿಕೊಳ್ಳಲು. ನ್ಯೂನತೆಗಳನ್ನು ಸರಿಪಡಿಸಲು ಇರುವ ಮಾರ್ಗ ಮಾಧ್ಯಮ. ಆದರೆ ಆಳುವ ಜನರಕೈಗೇ ಮಾಧ್ಯಮಗಳು ಸಿಕ್ಕಾಗ ಅಲ್ಲಿಂದ ಯಾವ ನ್ಯಾಯಯುತ ವರದಿ/ವಿಶ್ಲೇಷಣೆಗಳನ್ನು ನಾವು ಪಡೆಯಲು ಸಾಧ್ಯ? ’ಕಳ್ಳನ ಕೈಗೇ ಬೀಗ ಕೊಟ್ಟರೆ ಆಗ ಆತನಿಗೇ ಜವಾಬ್ದಾರಿ ಬರುತ್ತದೆ’ ಎಂಬುದು ಹಳೆಯ ಗಾದೆ. ಆದರೆ ಈ ಕಳ್ಳರು ಸಾಮಾನ್ಯದ ಕಳ್ಳರಲ್ಲ. ಸಮಾಜದಲ್ಲಿ ಯಾವ ಜನಸಾಮಾನ್ಯನಿಗೂ ಇವರನ್ನು ಹಿಡಿಯುವ ತಾಕತ್ತಿಲ್ಲ! ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು, ಹೆಣ್ಣಿನ ಮನದ ಜಾಡನ್ನಾದರೂ ಹಿಡಿಯಬಹುದು ಆದರೆ ಧೂರ್ತ ರಾಜಕಾರಣಿಗಳ ನಡೆಯನ್ನು ಊಹಿಸಲಾಗಲೀ ನಿರೀಕ್ಷಿಸಲಾಗಲೀ ಸಾಧ್ಯವೇ ಇಲ್ಲ. ಹಾಗೊಮ್ಮೆ ಸಾಧ್ಯವಿದ್ದರೆ ಸ್ವಿಸ್ ಬ್ಯಾಂಕಿನಲ್ಲಿ ಅಷ್ಟೊಂದು ಕಪ್ಪುಹಣ ಇರುತ್ತಿರಲಿಲ್ಲ! ಯೋಚನೆಗಳಿಗೆ ಕಡಿವಾಣ ಹಾಕದಿದ್ದರೆ ಇಂತಹ ಹಲವು ಹತ್ತು ವಿದ್ಯಮಾನಗಳು ಮತ್ತೆ ಮತ್ತೆ ನೆನಪಾಗುತ್ತವೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಉತ್ತಮಪಾತ್ರ ನಿರ್ವಹಿಸಬೇಕಾದ ಮಾಧ್ಯಮಗಳು ರಾಜಕೀಯದವರ ಕೈವಶವಾಗುತ್ತಿರುವುದು ಮತ್ತು ರಾಜಕೀಯದಲ್ಲಿರುವವರಿಗೆ ಅದಕ್ಕೆ ಅವಕಾಶ ಕೊಟ್ಟಿರುವುದು ಜಾರುವ ಜಾರಕೀಯ ಹೊಳೆಯಲ್ಲಿ ಲಿಂಬೇ ಹುಳಿಹಿಂಡಿ ಪಾನಕ ತಯಾರಿಸಲು ಹೊರಟ ಹಾಗಿದೆ. ಅದು ಸಾಧ್ಯವೇ ?

Saturday, March 5, 2011

ಭಾವದಪ್ಸರೆ !

ಚಿತ್ರಕೃಪೆ : ಅಂತರ್ಜಾಲ

ಭಾವದಪ್ಸರೆ !

ಬರೆಯಲು ಕುಳಿತಾ ಆ ಕ್ಷಣದಿ
ಭಾವಗಳಾ ಬುಗ್ಗೆಗಳ್ ತಕ್ಷಣದಿ
ತಾನೇ ಮೊದಲು ತಾ ಮೊದಲೆನ್ನುವ ಪೈಪೋಟಿಯೊಳು ಕ್ಷಣಕ್ಷಣದಿ

ಬೆತ್ತಲೆ ನಿಂತಾ ಭಾವಗಳು
ಮತ್ತಲ್ಲೇ ಕತ್ತನು ಆಡಿಸುತಾ
ಹುತ್ತದೊಳಿಹ ಹಾವಿನ ತಲೆಯಾಪರಿ ಹೊರಸುಳಿದವು ತುಸು ನಸುನಗುತಾ

ಮನದಾ ವೇದಿಕೆ ಏರಿದವು
ತಮ್ಮೊಳಗೇ ಹಿರಿಹಿರಿ ಹಿಗ್ಗಿದವು
ರೂಪದರ್ಶಿಗಳ ಬೆಕ್ಕಿನ ನಡತೆಯ ಅನುಕರಿಸುತ ಹಾರೋಡಿದವು !

ಒಂದಕ್ಕಿಂತಲೂ ಇನ್ನೊಂದು
ಅದು ಬರದೇ ಹೋದರೆ ಮತ್ತೊಂದು
ಬಣ್ಣಹಲವಿರುವ ದಿರಿಸನು ಧರಿಸುತ ಸಣ್ಣನೆ ನಡುವನು ಕುಣಿಸಿದವು

ಒಂದರ ಕೆನ್ನೆ ಬಲು ನುಣುಪು
ಇನ್ನೊಂದರ ಕೂದಲು ಬಲು ಸೊಂಪು
ಹಂದರದೊಳಗಿಹ ಮದುವಣಗಿತ್ತಿಯ ನಾಚಿಕೆ ಇರುವಳು ನರುಗೆಂಪು

ಯಾವುದು ಚೆಂದವು ನಿರ್ಧರಿಸೆ
ಮನಕಾಗದು ಮಂಕು ಆವರಿಸೆ
ತಾವೆಲ್ಲರು ತೂಗುತ ತೀರ್ಮಾನಿಸಿ ಆವಳು ಈ ಜಗದಪ್ಸರೆಯು !

Thursday, March 3, 2011

ಆಯುರ್ಭಾವ


ಆಯುರ್ಭಾವ

ನವರಸಗಳು ತುಂಬಿದ ಬೇರುಗಳಾ
ನವವಿಧದಾ ಭಾವದ ನಾರುಗಳಾ
ಹವಣಿಸಿ ತಂದೂ ನೆನೆಸೀ ಕಾಸಿ
ಹವೆಯಾಡಿಳಿಸಿದ ಪಾನಕ ಸೋಸಿ

ಭವದೊಳಗಿರುವುದು ಆರುದಿನ
ಅವ ಇವ ಎನ್ನುತ ಮೂರುದಿನ
ಯುವಜನತೆಯು ಕಣ್ತೆರೆಯುವ ಹೊತ್ತಿಗೆ
ಜವ ತೆರೆವನು ತನ್ಹೊತ್ತಗೆ ಮೆತ್ತಗೆ

ಹವನಿಸಿ ಮನಸಿನ ಮೆಣಸುಗಳಾ
ಭವಣೆಯು ತುಂಬಿದ ಕನಸುಗಳಾ
ನವೆಯಾಗಲಿ ಉಸಿರಾಡಲೂ ಆಗದೆ
ಅವನೋಡಲಿ ಮತ್ತೆಂದಿಗೂ ಬಾರದೆ !

ಕವನದ ಕಷಾಯ ಕುಡಿಯುತಿರಿ
ಚ್ಯವನಪ್ರಾಶವ ಜಡಿಯುತಿರಿ
ನವಯೌವ್ವನ ನಮದಾಗಿಸೆ ಸತತವು
ಅವು ಕೊಡುವಾ ಖುಷಿಯಪರಿಮಿತವು

Wednesday, March 2, 2011

ಶಿವ ಎಂದರೆ ಶುಭ


ಶಿವ ಎಂದರೆ ಶುಭ

ಜಗನ್ನಿಯಾಮಕನ ಹಲವು ಸಾಕಾರ-ರೂಪಗಳಲ್ಲಿ ಶಿವನಾಗಿಯೂ ಒಂದುರೂಪ ಕಾಣುತ್ತದೆ. ಸಮಷ್ಟಿಯಿಂದ ನೋಡುವವರಿಗೆ ಹರಿ ಹರ ಬ್ರಹ್ಮಾದಿಗಳಲ್ಲಿ ಭೇದ ಕಾಣಸಿಗುವುದಿಲ್ಲ. ವಾದಕ್ಕೆ ಕೆಲವರು ಬ್ರಹ್ಮನ ಮಗಳಾದ ಶಾರದೆಯನ್ನೇ ಬ್ರಹ್ಮ ಮದುವೆಯಾಗಿರುವುದು ತೀರಾ ಹಾಸ್ಯಾಸ್ಪದ ಮತ್ತು ಖಂಡನಾರ್ಹ ಎಂದು ಹೇಳಿದರೂ ನಮಗೆ ಕಾಣದ ಆ ಆನಂದಲೋಕದಲ್ಲಿ ಯಾವ ಬ್ರಹ್ಮನೂ ಇಲ್ಲ, ಶಾರದೆಯೂ ಇಲ್ಲ, ವಿಷ್ಣುವಾಗಲೀ ಶಿವನಾಗಲೀ ಇಲ್ಲ. ಅಥವಾ ಎಲ್ಲರೂ ಇದ್ದಾರೆ ಎಂಬುದಾಗಿ ತೋರಿಸುವ ಕೈವಾಡ ಮೂಲ ಪರಬ್ರಹ್ಮನದ್ದು. ಒಂದು ಕಡೆ ಕೈಲಾಸ ಇನ್ನೊಂದು ಕಡೆ ವೈಕುಂಠ ಅಲ್ಲೇ ಕಮಲವುದ್ಭವಿಸಿ ಮೇಲೆದ್ದು ಬ್ರಹ್ಮಲೋಕ. ಒಟ್ಟಾರೆ ನಮ್ಮ ಮಾನವೀಯ ಸಂಪರ್ಕ-ಸಂಬಂಧ-ಕ್ಲೀಷೆ-ಭಾವನೆ ಎಲ್ಲವನ್ನೂ ತುಂಬಿ ನಾವು ಕಾಣಬಹುದಾದ ಎಲ್ಲಾ ರೂಪಗಳಲ್ಲೂ ಭಗವಂತನನ್ನು ಕಂಡಿದ್ದೇವೆ, ಚಿತ್ರಿಸಿದ್ದೇವೆ.

ಹಾಗೆ ಚಿತ್ರಿಸಿರುವುದು ತಪ್ಪೆಂದು ಹೇಳುವುದಕ್ಕಿಂತಾ ಆದ್ಯ ಋಷಿಮುನಿಗಳು ಅ ಥರದ ಹಲವು ರೂಪಗಳಲ್ಲಿ ಪರಬ್ರಹ್ಮನ ಅನುಸಂಧಾನ ಮಾಡಿದರು. ಮೂಲಶಕ್ತಿ ತನ್ನನ್ನೇ ಹಲವು ರೂಪಗಳಲ್ಲಿ ಪ್ರಕಟಪಡಿಸಿಕೊಂಡು ಹಲವು ದೇವಾನುದೇವತೆಗಳ ಮುಖಹೊತ್ತು ಅಲ್ಲಿಯೂ ಭಾವ ಮಾವ ಅಣ್ಣ-ತಮ್ಮ ತಂದೆ-ತಾಯಿ ಇಂತಹ ಸಂಬಂಧಗಳಲ್ಲಿ ವಿಜೃಂಭಿಸಿ ತೋರಿಸಿತು. ಹೀಗೆ ನೋಡುವಾಗ ಶಾರದೆ ಬ್ರಹ್ಮನ ಮಗಳೂ ಅಲ್ಲ, ಬ್ರಹ್ಮ ಶಾರದೆಗೆ ಗಂಡನೂ ಅಲ್ಲ. ’ಏಕೋ ದೇವಃ ಕೇಶವೋವಾಂ ಶಿವೋವಾಂ’ ಎಂಬುದನ್ನು ನೆನೆದರೆ ದೇವನೊಬ್ಬನೇ ನಾಮ ಹಲವು ಎಂಬುದು ಸ್ಪಷ್ಟವಾಗುತ್ತದೆ. ಈ ಹಲವು ನಾಮಗಳನ್ನು ಉಪಯೋಗಿಸಿಕೊಂಡೇ ಇಂದಿನ ಮಾಧ್ಯಮಚಾಲಿತ ಜ್ಯೋತಿಷಿಗಳು ಎಲ್ಲರಿಗೂ ನಾಮ ಎಳೆಯುವ ಕೆಲಸಮಾಡುತ್ತಿದ್ದಾರೆ ಎಂಬುದೂ ಕೂಡ ಅಷ್ಟೇ ವಿಷಾದನೀಯ.

ಮುನಿಜನ ಕಂಡ ಪರಬ್ರಹ್ಮನ ಹಲವು ರೂಪವಿನ್ಯಾಸಗಳಲ್ಲಿ ಶಿವನರೂಪವೂ ಒಂದು. ಅಲಂಕಾರದ ದೇವರಾಗಿ ವಿಷ್ಣುವನ್ನು ಗುರುತಿಸಿದ ನಮ್ಮ ಜನ ನಿರಾಡಂಬರ ಸರಳರೂಪದಲ್ಲಿ ಶಿವನನ್ನು ಕಂಡರು. ಸೃಷ್ಟಿಗೆ ಬ್ರಹ್ಮನೆಂದೂ ಪಾಲನೆಗೆ ವಿಷ್ಣುವೆಂದೂ ಲಯಕರ್ತ ಶಿವನೆಂದೂ ತಿಳಿದ ಕೆಲವರು ಶಿವನು ತಮ್ಮನ್ನು ನಾಶಗೊಳಿಸುವಾತನೆಂದು ತಿಳಿದು ಆತನನ್ನು ದೂರವೇ ಇಟ್ಟರು; ದ್ವೇಷಿಸಿದರು. ಹಲವು ಪೌರಾಣಿಕ ಕಥೆಗಳಲ್ಲಿ ಸಮಸ್ಯೆಗಳನ್ನು ತಾನೇ ಸೃಜಿಸಿಕೊಂಡು ಅವುಗಳ ಸುಳಿಯೊಳಗೆ ತಾನೇ ಸಿಲುಕಿ ಒದ್ದಾಡುವ ಶಿವನನ್ನು ಕಂಡು ಜನ ’ಬೋಳೇ ಶಂಕರ’ ’ಬೋಲೇನಾಥ್’ ಎಂದು ಕರೆದರು. ಲಯಕರ್ತನೆಂಬ ತಿಳುವಳಿಕೆಯಿಂದ ಆತ ಸ್ಮಶಾನವಾಸಿ ಎಂದರು, ಬೂದಿಬಡಕ ಎಂದರು. ಆದರೆ ಆತ ಲೋಕದ ಕಂಟಕವನ್ನು ನಾಶಮಾಡುವ ಸಲುವಾಗಿ ತನ್ನನ್ನೇ ಸಂಕಷ್ಟಕ್ಕೆ ಸಿಲುಕಿಸಿಕೊಂಡು ಪರೋಕ್ಷವಾಗಿ ಉಪಕರಿಸಿದ. ಸಮುದ್ರಮಥನದಲ್ಲಿ ಪ್ರಪ್ರಥಮವಾಗಿ ಲಭಿಸಿದ ಹಾಲಾಹಲವನ್ನು ಕುಡಿದು ನಂಜುಡಿಯಾದ. ತನ್ನದೇ ಇನ್ನೊಂದು ರೂಪ ಪಾರ್ವತಿ ಓಡಿಬಂದು ಕುಡಿದ ನಂಜು ಶರೀರದ ಒಳಗೆ ಇಳಿಯದಂತೇ ಗಂಟಲನ್ನು ನಾಗನಿಂದ ಬಂಧಿಸಿದಾಗ ನೀಲಿಯಾದ ಕಂಠಕಾಣಿಸಿ ನೀಲಕಂಠನಾದ. ನಾಗನನ್ನು ಮನಸಾರೆ ಧರಿಸಿ ನಾಗಾಭರಣನಾದ. ಚಂದದ ಚಂದ್ರಮನನ್ನು ಶಿರದಲ್ಲಿ ಧರಿಸಿ ಚಂದ್ರಮೌಳಿಯಾದ. ಹರಿಯುವ ಗಂಗೆಯನ್ನು ಮುಡಿಯಲ್ಲಿ ಜೋಪಾನವಾಗಿಸಿ ಗಂಗಾಧರನಾದ.

ಇದೇ ಬೋಳೇ ಶಂಕರ ನಂದಿಯನ್ನೇ ವಾಹನವನ್ನಾಗಿಸಿಕೊಂಡು ಪಶುಪತಿಯಾದ. ಮೃತ್ಯುವಿನ ದವಡೆಯಲ್ಲಿ ಸಿಲುಕಿದ್ದ ಭಕ್ತ ಮಾರ್ಕಾಂಡೆಯನಿಗೆ ಜೀವದಾನ ನೀಡಿ ಮೃತ್ಯುಂಜಯನಾದ! ತಿಳಿಯದೇ ಬೇಡನೊಬ್ಬ ಪ್ರದೋಷಕಾಲದಿಂದ ಬೆಳಗಿನತನಕ ನಡೆಸಿದ ಬಿಲ್ವಾರ್ಚನೆಗೆ ಒಲಿದ ಪರಮಶಿವನಾದ. ಮಾಂಸವನ್ನೇ ಉಣಬಡಿಸಿ ತನ್ನ ಕಣ್ಣನ್ನೇ ಕಿತ್ತು ಲಿಂಗಕ್ಕೆ ಅಂಟಿಸಿದ ಭಕ್ತ ಬೇಡರ ಕಣ್ಣಪ್ಪನಿಗೆ ಪ್ರತ್ಯಕ್ಷನಾದ. ಒಂದೇ ಎರಡೇ ....ಹೇಳುತ್ತಾ ಹೋದರೆ ತಿಂಗಳುಗಟ್ಟಲೇ ಹೇಳುವಂತಹ ಸ್ವಾರಸ್ಯಕರ ಘಟನೆಗಳು ನಮ ಶಿವನ ಸುತ್ತ ಇವೆ.

ಕೈಲಾಗದ ಮನುಜರಿಗೆ ಕುಳಿತಲ್ಲೇ ಹೃದಯದಲ್ಲೇ ಮನಸ್ಸಿನಲ್ಲೇ ಪೂಜಿಸಲು ಅನುವಾಗಲೆನ್ನುವ ಅರ್ಥದಲ್ಲಿ ಪರಶಿವನ ಲೌಕಿಕದ ಮೂರ್ತರೂಪವಾದ ಶ್ರೀಆದಿ ಶಂಕರರು ಒಂದು ಸ್ತುತಿಗೀತೆಯನ್ನು ರಚಿಸಿದರು. ಅದೇ ’ಶಿವ ಮಾನಸ ಪೂಜಾ’ ಎಂಬ ಹೆಸರಲ್ಲಿ ಜನಜನಿತವಾಯಿತು.

ರತ್ನೈಃ ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ
ನಾನಾರತ್ನ-ವಿಭೂಷಿತಂ ಮೃಗಮದಾ-ಮೋದಾಂಕಿತಂ ಚಂದನಂ |
ಜಾತೀ-ಚಂಪಕ-ಬಿಲ್ವಪತ್ರ ರಚಿತಂ ಪುಷ್ಪಂ ಚ ಧೂಪಂ ತಥಾ
ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಮ್ || ೧ ||

ತಾತ್ಪರ್ಯ ---

ಹೇ ಪರಶಿವನೇ, ರತ್ನಖಚಿತ ಸಿಂಹಾಸನದಲ್ಲಿ ನಿನ್ನನ್ನು ಕೂರಿಸಿ ಶುದ್ಧವಾದ ಹಿಮಜಲದಿಂದ ಅಭಿಷೇಚಿಸಿ ದಿವ್ಯ ಪೀತಾಂಬರವನ್ನು ಅರ್ಪಿಸುತ್ತಿದ್ದೇನೆ, ನಾನಾ ವಿಧದ ರತ್ನಾಭರಣಗಳಿಂದ ಅಲಂಕರಿಸಿ ಕಸ್ತೂರೀಯುಕ್ತ ಚಂದನವನ್ನು ಪೂಸಿ ತಿಲಕವನ್ನು ಹಚ್ಚಿದ್ದೇನೆ. ಜಾತೀ ಚಂಪಕಾದಿ ಹಲವು ಪುಷ್ಪಗಳಿಂದಲೂ ಬಿಲ್ವಪತ್ರೆಯಿಂದಲೂ ಅರ್ಚಿಸಿ ಸುಗಂಧಭರಿತ ಧೂಪವನ್ನು ಬೆಳಗಿದ್ದೇನೆ, ಸುಂದರ ದೀಪವನ್ನು ಉರಿಸಿ ಆರತಿಮಾಡುತ್ತಿದ್ದೇನೆ. ಈ ಎಲ್ಲವನ್ನೂ ನನ್ನ ಹೃದಯದಲ್ಲಿಯೇ ಮನಸಾ ನಿನಗೆ ಅರ್ಪಿಸುತ್ತಿದ್ದೇನೆ....ಸ್ವೀಕರಿಸು.

ಎಲ್ಲವನ್ನೂ ಕೇವಲ ಪರಿಶುದ್ಧ ಮನದಿಂದ ಕಲ್ಪಿಸಿಕೊಂಡು ನಡೆಸಬಹುದಾದ ಈ ಪೂಜೆಯಲ್ಲಿ ಶಿವನಿಗೆ ಅವರು ಸಲ್ಲಿಸಿದ ವೈಭವೋಪೇತ ಪೂಜೆಯನ್ನು ನಾವು ಕಾಣಬೇಕು.

ಮುಂದುವರಿದು ಶಂಕರರು ಹೇಳಿದ್ದಾರೆ....

ಸೌವರ್ಣೇ ನವರತ್ನಖಂಡರಚಿತೇ ಪಾತ್ರೇ ಘೃತಂ ಪಾಯಸಂ
ಭಕ್ಷ್ಯಂ ಪಂಚವಿಧಂ ಪಯೋದಧಿಯುತಂ ರಂಭಾಫಲಂ ಪಾನಕಂ|
ಶಾಖಾನಾಮಯುತಂ ಜಲಂ ರುಚಿಕರಂ ಕರ್ಪೂರ-ಖಂಡೋಜ್ವಲಂ
ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು || ೨ ||

ನವರತ್ನ ಖಚಿತವಾದ ಬಂಗಾರದ ಪಾತ್ರೆಗಳಲ್ಲಿ ತುಪ್ಪಸಹಿತ ಪಾಯಸವನ್ನು ನೀಡುತ್ತಿದ್ದೇನೆ, ಹಾಲು ಮೊಸರು ಬಳಸಿದ ಸೇರಿದಂತೇ ಪಂಚ ಭಕ್ಷ್ಯವನ್ನು ನೀಡುತ್ತಿದ್ದೇನೆ, ಬಾಳೇಹಣ್ಣುಗಳನ್ನು ಕೊಡುತ್ತಿದ್ದೇನೆ, ಕುಡಿಯಲು ಪಚ್ಚಕರ್ಪೂರಭರಿತ ಸ್ವಾದಿಷ್ಟ ಪಾನಕವನ್ನು ನೀಡುತ್ತಿದ್ದೇನೆ, ಯಾಲಕ್ಕೀ-ಲವಂಗಾದಿ ಪಚ್ಚಕರ್ಪೂರ ಮಿಶ್ರಿತ ನಾಗವಲ್ಲೀ ವೀಳ್ಯದೆಲೆಯ ತಾಂಬೂಲವನ್ನು ಮೆಲ್ಲಲು ಮನಸಾರೆ ಕಲ್ಪಿಸಿಕೊಂಡು ನೀಡುತ್ತಿದ್ದೇನೆ ಪ್ರಭೋ ನೀನು ಸ್ವೀಕರಿಸುವಂಥವನಾಗು.

ಮತ್ತೆ ಹೇಗೆಲ್ಲಾ ಶಿವನನ್ನು ಸೇವಿಸಬೇಕೆಂಬುದನ್ನು ಶಂಕರರು ಮುಂದೆ ಹೇಳುತ್ತಾರೆ....

ಛತ್ರಂ ಚಾಮರಯೋರ್ಯುಗಂ ವ್ಯಜನಕಂ ಚಾದರ್ಶಕಂ ನಿರ್ಮಲಂ
ವೀಣಾ-ಭೇರಿ-ಮೃದಂಗ-ಕಾಹಲ-ಕಲಾ ಗೀತಂ ಚ ನೃತ್ಯಂ ತಥಾ |
ಸಾಷ್ಟಾಂಗ ಪ್ರಣತಿಃ ಸ್ತುತಿರ್ಬಹುವಿಧಾ ಹ್ಯೇತತ್ ಸಮಸ್ತಂ ಮಯಾ
ಸಂಕಲ್ಪೇನ ಸಮರ್ಪಿತ ತವ ವಿಭೋ ಪೂಜಾಂ ಗೃಹಾಣ ಪ್ರಭೋ || ೩ ||

ಚತ್ರಿಯನ್ನು ಹಿಡಿದ್ದೇನೆ, ಚಾಮರದಿಂದ ಗಾಳಿಬೀಸುತ್ತಿದ್ದೇನೆ, ಪಲ್ಲಂಗವೇ ಮೊದಲಾದ ಎಲ್ಲವನ್ನೂ ಸಮರ್ಪಿಸುತ್ತಿದ್ದೇನೆ, ಹೊಳೆಯುವ ದರ್ಪಣವನ್ನು ತೋರಿಸಿದ್ದೇನೆ, ವೀಣೆ ಭೇರಿ ಮೃದಂಗವೇ ಮೊದಲಾದ ಸಂಗೀತವಾದ್ಯಗಳನ್ನು ನುಡಿಸಿ/ಬಾರಿಸಿ ಹಾಡುಗಳನ್ನು ಹಾಡಿ ನರ್ತಿಸುತ್ತಿದ್ದೇನೆ. ಹಲವು ವಿಧ ಸ್ತುತಿಗಳನ್ನು ಹೇಳಿ ಸಾಷ್ಟಾಂಗವೆರಗುವ ಈ ಎಲ್ಲಾ ಕಾರ್ಯಗಳನ್ನೂ ಸಂಕಲ್ಪಮಾತ್ರದಲ್ಲೇ ಮನದಲ್ಲಿ ಕಲ್ಪಿಸಿಕೊಂಡು ಕೊಡುತ್ತಿದ್ದೇನೆ ಪ್ರಭುವೇ ದಯಮಾಡಿ ನನ್ನ ಪೂಜೆಯನ್ನು ಗ್ರಹಿಸು.

ಇನ್ನೇನು ಮಾಡಲಾದೀತು ಎಂಬುದನ್ನು ಶಿವನಲ್ಲೇ ಕೇಳುತ್ತಾರೆ ...

ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ |
ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾ ಗಿರೋ
ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ || ೪ ||

ವಿಷಯೋಪಭೋಗಗಳಲ್ಲಿ ನಿರತವಾದ ಪ್ರಾಣಭರಿತ ಈ ಮನುಜ ಶರೀರದಲ್ಲಿ ಪಾದಗಳಿಂದ ಸಂಚರಿಸುವುದೇ ಪ್ರದಕ್ಷಿಣವಿಧಿಯೆಂದು ತಿಳಿದು ನಡೆಸುತ್ತಿರುವ ಈ ಪೂಜೆಯನ್ನು ಆತ್ಮರೂಪದಲ್ಲಿ ಗಿರಿಜಾ ಸಹಿತನಾಗಿ ಒಳಗೊಳಗೇ ಸಂಚರಿಸುತ್ತಿರುವ/ಕುಳಿತಿರುವ ನಿನ್ನ ಆರಾಧನೆಯ ಕರ್ಮ ನನ್ನಿಂದ ನಡೆಯಿತೆಂದು ತಿಳಿಯುತ್ತೇನೆ.

ಇದೆಲ್ಲವೂ ಮುಗಿದಮೇಲೆ ಬೇಡುವುದೇ ಅಪರಾಧ ಕ್ಷಮಾಪಣೆಗಾಗಿ .....

ಕರಚರಣಕೃತಂ ವಾಕ್-ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀಮಹಾದೇವ ಶಂಭೋ || ೫ ||

ಹೇ ಮಹಾದೇವ ಶಂಭೋ, ನನ್ನ ಕೈ-ಕಾಲುಗಳಿಂದ ದೇಹದಿಂದ ನಡೆದ ಕರ್ಮದಿಂದ, ಕಣ್ಣು-ಕಿವಿ-ಮೂಗು-ಬಾಯಿ-ಚರ್ಮ ಈ ಪಂಚೇಂದ್ರಿಯಗಳಿಂದ, ಮನಸ್ಸಿನಿಂದ ವಿಹಿತವೋ ಅವಿಹಿತವೋ ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆದ ಅಪರಾಧಗಳನ್ನೆಲ್ಲಾ ಕ್ಷಮಿಸು.

ಸಂಸ್ಕೃತಭಾಷೆಯ ರಸಪಾಕದೊಂದಿಗೆ ಸರಳಪೂಜೆಯ ಸುಲಭಮಾರ್ಗವನ್ನು ಶಂಕರರೆಂಬ ಪಾಕಶಾಸ್ತ್ರ ಪಂಡಿತ ’ಶಿವ ಮಾನಸ ಪೂಜಾ’ ಎಂಬ ಶಿರೋನಾಮೆಯಡಿ ಎರಕವೆರೆದು ಜನಸಾಮಾನ್ಯರಿಗೆ ಉಪಕರಿಸಿದರು. ಕೃತಿಕಾರರಿಗೆ ನಮಿಸುವುದೂ ಒಂದೇ ಸಾಕ್ಷಾತ್ ಶಂಭುವಿಗೆ ವಂದಿಸುವುದೂ ಒಂದೇ ಆಗಿರುವುದರಿಂದ ಈ ಸ್ತುತಿಯನ್ನು ಓದುತ್ತಿರುವಂತೆಯೇ ನಾವು ಅಸದೃಶ ಆನಂದಕ್ಕೆ ಒಳಗಾಗಿ ತಂತಾನೇ ಅವರೀರ್ವರಿಗೂ ನಮಿಸಿರುತ್ತೇವೆ; ಪರಮಾತ್ಮನಿಗೆ ಮಣಿದಿರುತ್ತೇವೆ. ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುತ್ತಾರಲ್ಲಾ ಹಾಗೇ ಕಂಠಸ್ಥವಾಗಿ ಈ ಮಾನಸ ಪೂಜೆಯನ್ನು ಹಾಡಿದಾಗ/ಹಾಡಿದ್ದನ್ನು ಕೇಳಿದಾಗ ಸಿಗುವ ಆನಂದ ಸ್ಥಿತಿಯನ್ನು ಅನುಭವಿಸಿದವರೇ ಬಲ್ಲರು!

ಅರಿತವರಿಗೆ ಹರಿಯೂ ಒಂದೇ ಹರನೂ ಒಂದೇ. ಕವಿ ದಿ| ಪು.ತಿ. ನರಸಿಂಹಾಚಾರ್ಯರು ಸಾರಿದರು---

ಹರಿಯ ಹೃದಯದಿ ಹರನ ಕಂಡೆನು
ಹರನ ಹೃದಯದಿ ಹರಿಯನು
ಸಿರಿಯ ಹೃದಯದಿ ಶಿವೆಯ ಕಂಡೆನು
ಶಿವೆಯ ಹೃದಯದಿ ಸಿರಿಯನೂ

ಇದರರ್ಥ ತಮಗೆಲ್ಲಾ ವಿದಿತವಷ್ಟೇ ? ಬೇಡನೊಬ್ಬ ರಾತ್ರಿಹೊತ್ತು ಕಾಡಲ್ಲಿ ದಾರಿತಪ್ಪಿ, ಹಸಿದ ಹೆಂಡತಿ-ಮಕ್ಕಳನ್ನು ನೆನೆಯುತ್ತಾ ಶೋಕಭರಿತನಾಗಿ, ಪ್ರಾಣಭೀತಿಯಿಂದ ಕಾಡುಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ರಾತ್ರಿಕಳೆಯುವ ಸಲುವಾಗಿ ಗೊತ್ತಿಲ್ಲದೇ ಬಿಲ್ವದಮರವನ್ನೇರಿ ಕುಳಿತು, ಬೇಸರ ಕಳೆಯಲು ಆಗಾಗ ಬಿಲ್ವದಳಗಳನ್ನು ಕಿತ್ತು ಕೆಳಗೆ ಬಿಸುಟಿದ್ದು ಮರದಡಿಯಲ್ಲಿ ಯಾವುದೋ ಕಾಲಘಟ್ಟದಲ್ಲಿ ಸ್ಥಾಪಿತವಾಗಿದ್ದ ಲಿಂಗದಮೇಲೆ ಅದು ಬೀಳುತ್ತಿದ್ದು, ಕೇವಲ ಈ ಪೂಜೆಯಿಂದಲೇ ಪ್ರಸನ್ನನಾದ ಭಕ್ತಾಗ್ರೇಸರ ಬೋಳೇ ಶಂಕರನನ್ನು ಮೈಸೂರಿನ ಕಡೆಯ ಜನ ಅಪ್ಪಟ ಕನ್ನಡದಲ್ಲಿ ರಾಗವಾಗಿ

ಮಲ್ಲೀಗಿ ಹೂವಿರಿಸಿ ಮಣ್ಣ ಹಣತೆಯ ಬೆಳಗಿ

........ಸ್ವಾಮೀ ನಂಜುಂಡೂ ಮನಗಂಡೂ

-ಎಂದು ನಮ್ಮ ಜನಪದರು ಕಟ್ಟಿದ ಹಾಡನ್ನು ಹಾಡುವಾಗ ಕೂಡ ಸ್ವಾಮಿ ನಂಜುಂಡು ಇವರೆಲ್ಲಾ ಹೇಳುತ್ತಿರುವುದನ್ನು ನಂಜನಗೂಡಿನಲ್ಲಿ ಕೂತು ಆಲೈಸುತ್ತಿದ್ದಾನೇನೋ ಅನಿಸುವಷ್ಟು ಭಾವನೆ ಉಕ್ಕಿ ಹರಿಯುತ್ತದೆ. ಜನತೆ ತಮ್ಮ ಕಷ್ಟ-ಸುಖಗಳನ್ನು ಸಖನಾದ/ಗೆಳೆಯನಾದ/ ರಕ್ಷಕನಾದ ಶಿವನಲ್ಲಿ ಹೇಳಿಕೊಳ್ಳುವ ಪರಿ ಇದೆಯಲ್ಲಾ ಅದನ್ನೊಮ್ಮೆ ಕೇಳಿದರೆ ಭಾವುಕರ ಕಣ್ಣು ತೇವವಾಗಿ ಆನಂದಭಾಷ್ಪ ಉದುರುವುದರಲ್ಲಿ ಯಾವುದೇ ಸಂಶಯವಿಲ್ಲ.

ಶಿವವೆಂದರೆ ಶುಭವೇ ಹೊರತು ಶಿವ ಎನ್ನುವುದು ಕೇವಲ ಪರಶಿವ ಎಂಬರ್ಥದಲ್ಲಲ್ಲ. ಶುಭವೆಲ್ಲವೂ ಶಿವನಿಂದಲೇ ಘಟಿಸುವುದರಿಂದ ಅವನಿಗೆ ಅದು ಅನ್ವರ್ಥನಾಮ. ಇಂತಹ ಶಿವನಿಗೆ ಇಂಥದ್ದೇ ರೂಪವೆಂದಿಲ್ಲ.

ಶಿವಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಂ |
ಮಮ ಶತ್ರು ಹಿತಾರ್ಥಾಯ ಸಂಧ್ಯಾಜ್ಯೋತಿರ್ನಮೋಸ್ತುತೇ ||

--ಎನ್ನುತ್ತೇವೆ. ಇಲ್ಲಿಯೂ ’ಶಿವಂ’ ಎಂಬ ಹೆಸರು ಬಂತು. ಶುಭವನ್ನುಂಟು ಮಾಡುವ, ಆರೋಗ್ಯವನ್ನೂ ಧನಕನಕ ಸಂಪತ್ತನ್ನೂ ತರುವ ಜ್ಯೋತಿಯೇ ನನ್ನ ಶತ್ರುವಿನ ಒಳಿತಿಗಾಗಿಯೂ ಕೂಡ ಸಂಜೆಹೊತ್ತಲ್ಲಿ ನಿನ್ನನ್ನು ಬೆಳಗಿ ಪ್ರಾರ್ಥಿಸುತ್ತೇನೆ--ಎಂತಹ ಆದರ್ಶ ತತ್ವ-ಸಂಪ್ರದಾಯ. ಇಂತಹ ಜ್ಯೋತಿಸ್ವರೂಪನೂ ಶಿವನೇ ಆಗಿರುವಾಗ ಪರ್ವಕಾಲದಲ್ಲಿ ಹಲವು ದೀಪಗಳನ್ನು/ಜ್ಯೋತಿಗಳನ್ನು ಬೆಳಗಿ ಪ್ರಾರ್ಥಿಸುವುದರಿಂದ ನಮ್ಮ ಅಂಧಕಾರ ತೊಲಗುತ್ತದೆ ಎಂಬುದು ನಮ್ಮ ಪೂರ್ವಿಕರು ಕಂಡ ಸತ್ಯ. ಶಿವರಾತ್ರಿಯ ಈ ದಿನ/ಈ ಸಂಜೆ ಹಲವು ಜ್ಯೋತಿಗಳನ್ನು ಬೆಳಗೋಣ ಮತ್ತು ಶಿವನನ್ನು ಧ್ಯಾನಿಸೋಣ, ಜಗದ ಎಲ್ಲರ ಒಳಿತಿಗಾಗಿ ಪ್ರಾರ್ಥಿಸೋಣ ಅಲ್ಲವೇ ?

Tuesday, March 1, 2011

ವಸುಧೈವ ಕುಟುಂಬಕಮ್


ವಸುಧೈವ ಕುಟುಂಬಕಮ್

ಹೃದಯವರಿತಮೇಲೆ ನಮ್ಮ ನಿಮ್ಮ ನಡುವೆ ಭೇದವೇ?
ಅದುವೆ ಮಂತ್ರವಾಗಲೊಮ್ಮೆ ಜಗದ ತುಂಬಾ ನಾದವೇ

ಒಂದೇ ತಾಯ ಹೊಟ್ಟೆಯಲ್ಲಿ ಹುಟ್ಟಿ ಬೆಳೆದ ಮರಿಗಳು
ತಿಂದು ಬೆಳೆದು ತಿಳಿಯದಾಗ ಜಗಳಮಾಳ್ಪ ಕುರಿಗಳು !

ಗರುವದಿಂದ ಹರಿದು ದೇಶ ಕೋಶ ರಾಜ್ಯಂಗಳ
ಮೆರೆದರೆಲ್ಲ ಮಣ್ಣಾದರು ಕರಗುತ ವ್ಯಾಜ್ಯಂಗಳ

ನಡೆವ ನಡತೆ ನುಡಿವ ನುಡಿಯು ಉತ್ತಮವಿರೆ ಯೋಗವ
ಒಡವೆ ವಸ್ತ್ರ ಕಡೆಗೆ ಕೀರ್ತಿ ಪಡೆವರೆಲ್ಲ ಭೋಗವ


ಹುಂಡು ಹೆಚ್ಚು-ಕಮ್ಮಿ ಇರಲು ಸಹಿಸಿ ನಡೆಯೆ ಮಾನವ
ತಂಡ ಕಟ್ಟಿ ಭುಜವ ತಟ್ಟಿ ಹೋರಲಾತ ದಾನವ

ಮುಂದೆ ನಮ್ಮ ಅಂತ್ಯವೆಂತೋ ಯಾರು ಅದನು ಬಲ್ಲರು ?
ಇಂದು ಇರುವ ಜಾಗದಲ್ಲಿ ಸುಖದಿ ಬದುಕಲೆಲ್ಲರು

Monday, February 28, 2011

ಈ 'ಸಮಯ' ಆನಂದಮಯ’ !


ಈ 'ಸಮಯ' ಆನಂದಮಯ !
ತೀಟೆ ತಾಳಲಾರದ ಆತ
ಸಣ್ಣ ನಡುವಿನ ಸುಂದರಿಯ
ಬಳುಕುವ ವಯ್ಯಾರಕ್ಕೆ ಮನಸೋತು
"ನಾ ದುಷ್ಯಂತ ನೀ ಶಕುಂತಲೆ "ಎಂದ !

ಮಸಿಮಂಗನಂತೇ ಬಾಗಿ ಮುಸಿಮುಸಿ ನಗುತ್ತಾ
ಹಲ್ಕಿರಿದು ನಿಂತ ತೊಳೆದಿಟ್ಟ
ಮಸಿಕೆಂಡದಂಥಾ ದುಷ್ಯಂತನನ್ನು
ಸಿವನೇ ಸಂಭುಲಿಂಗವೆನ್ನುತ್ತಾ
ಕಡೆಗಣ್ಣಿನಿಂದಲೇ ನೋಡಿ ಎಚ್ಚರತಪ್ಪುತ್ತಾ
ನೀರೆ " ನಾ ಒಲ್ಲೆ " ಎಂದಳಾದರೂ
ಕಣ್ವರಿರದ ತಾಣ ಅದಾಗಿರುವುದರಿಂದ
ಕೈ ಹಿಡಿದು ಬೆನ್ನು ಸವರಿ ಸೊಂಟ ಬಳಸಿ
ಕುವರ ತೋರಿದ ನಾನಾ ವಿಧ ಭಂಗಿಯ
ಕಾಸಿನ ಕರಾಮತ್ತು ಕುವರಿಯ ಕಣ್ಣುಕೋರೈಸಿತ್ತು !

ಅಕಟಕಟಾ ಮನೆಯೊಂದಷ್ಟು ಸಾವಿರ ಸೈಟು
ಇಡೀ ರಾಜ್ಯಾಧಿಪತ್ಯವನ್ನು ಗುತ್ತಿಗೆ ಹಿಡಿದಂತೇ
ಕೃಷ್ಣ ಕಿರುಬೆರಳಲ್ಲಿ ಗೋವರ್ಧನವೆತ್ತಿದಂತೇ
ಕನ್ನಡ ಜನತೆಗಾಗಿ ತನ್ನನ್ನೇ ’ಕೊಟ್ಟುಕೊಂಡೆ’
ಎಂದು ಸಾರುವ ಆ ಗಂಡು ಅಪ್ಪ ಹಾಕಿದ ಚಿನ್ನದ
ಬೇಲಿಯನ್ನು ನಸುಕಿನಲ್ಲಿ ಮುಸುಕಿನಲ್ಲಿ ದಾಟಿಹೋದ
ಅಪ್ಪ ಕಣ್ಣಿದ್ದೂ ಕಾಣದಾದ ತ..ತ...ತಡೆಯದಾದ !

ಈ ಕಾಲಕ್ಕೆ ಮರ್ಯಾದಿತವಾಗಿ ಮಾಡಿಕೊಂಡರೆ
ನ್ಯಾಯಲಯ ಕಟ್ಟು ಕಟ್ಟಳೆ
ಗೋವಿಂದ ಕಲಾವಿದರಿಗೆ ವಯಸ್ಸಿನ ಗಡುವಿಲ್ಲ ಅದಕ್ಕೇ
"ನನಗೇನು ಬೇಕೋ ಅದನು ಕೊಟ್ಟು ನಿನಗೇನು ಬೇಕೋ
ಅದನು ಪಡೆಯುವಂಥವಳಾಗು ಮುಗುದೇ" ಎಂದಾಗ
ನಾಗಮಂಡಲಕ್ಕೆ ಹೋಗಿಬಂದ ಮರುದಿನವೇ
ಗರ್ಭಾದಾನವಾಗಿ ’ಮೋಹಿನಿ’ ಜನಿಸಿದಳು !

ಮಾಧ್ಯಮದ ಮಂದಿ ಆ ಸುದ್ದಿ ಕೇಳುತ್ತಲೇ
ನಿಸ್ತಂತು ದೂರವಾಣಿ " ಆ ವಿಷಯದ ಬಗ್ಗೆ
ನಾನೇನೂ ಹೇಳಲಾರೆನೆನ್ನುತ್ತಾ" ನೆಗೆದುಬಿದ್ದು ಹೋಗುತ್ತಿತ್ತು !

ಮಾಟವನ್ನೇ ನಂಬಿ ಬದುಕಿದ
ಮನೆಯಲ್ಲಿ ಮಡದಿ ಮತ್ತುಳಿದವರು
ಕೇಳಿದಾಗ ಯಾರೋ ಜ್ಯೋತಿಷ್ಕರು
"ಹೆಣ್ಣುಮಗುವಾದರೆ ನೀನೇ ಎಂದೆಂದೂ
ರಾಜನೆಂದರು ನಿಮ್ಮ ಕುಟುಂಬವೇ
ರಾಜ್ಯಭಾರ ನಡೆಸುತ್ತದೆಂದರು" ಎಂಬ
ಮಂತ್ರ ದಂಡವನ್ನು ಪ್ರಯೋಗಿಸಿಬಿಟ್ಟ !

’ಕಸ್ತೂರಿ’ಯ ಪರಿಮಳದಂತೇ ತನಗೂ ಇರಲೆಂದ
ಕುವರಿಯ ಒತ್ತಾಸೆಯನು ಕಂಡ ಮುದ್ದಣ
’ಸಮಯ’ಕ್ಕೆ ಸರಿಯಾಗಿ ಕೈಹಾಕುವ
ಮನಸ್ಸುಮಾಡಿದ ’ಮನೋರಮೆ’ಗಾಗಿ

ನೋಡಿರೈ ಅಣ್ಣಂದಿರೇ ತಮ್ಮಂದಿರೇ
ಅಕ್ಕತಂಗಿಯರೇ ಮದುವೆ ಎರಡಾಗುವುದು ನಿಷೇಧ
ಹಲವಾರು ಆದರೆ ಅದು ನಿರ್ವ್ಯಾಜ
ಅಂಕೆಯನ್ನು ಆಪಸ್ನಾತಿಯಲ್ಲಿ ಡೈರಿಯಲ್ಲಿ
ಬರೆದಿಟ್ಟು ವಿಕಸನ ಬಯಸಿದಾಗೆಲ್ಲಾ
ಪುಸಕ್ಕನೇ ಅಲ್ಲಿಲ್ಲಿ ಹೋಗಿ ಅಡ್ಡಡ್ಡ ಉದ್ದುದ್ದ
ಮಲಗಿಬಿಟ್ಟರೆ ಬರುವ ಸಂತಾನಗೋಪಾಲರೆಲ್ಲಾ
ನಮ್ಮವರೇ ಅಲ್ಲವೇ ? ಮುಪ್ಪಿನ ವಯಸ್ಸಿಗೆ
ಆ ಮುದಿ ಅಮ್ಮಂದಿರು ’ಅಪ್ಪಕಟ್ಟಿದ ಪಕ್ಷ’
ಎನ್ನಲು ಆ ಮಕ್ಕಳೆಲ್ಲಾ ಬಂದೇ ಬರುವರಲ್ಲವೇ?

ಯಾವ ಜ್ಞಾನಿಯೂ ವಿಜ್ಞಾನಿಯೂ ಕಾಣದ
ರಸಮಯ ಸಂಶೋಧನೆ ಆ ಕುವರನಿಗೆ
ನಿಜವಾಗಿಯೂ ಕೊಡಬೇಕು ಗೌರವ ಡಾಕ್ಟರೇಟು !
"ಯಾರಲ್ಲೀ...? ವಿದೇಶೀ
ವಿಶ್ವವಿದ್ಯಾಲಯಗಳವರೇ
ನಮ್ಮ ಕರಿದುಷ್ಯಂತನ ವಂಶಾಭಿವೃದ್ಧಿ
’ಜನಪ್ರಗತಿ’ಗೆ ನೀವಾರಾದರೂ ಅದನ್ನು ಕೊಡುವಿರೇ?"
ಕೊಡದಿದ್ದರೆ ಬಿಡಿ ನಮಗೆ ಗೊತ್ತು ಅದೂ ಕೂಡ
ಈಗ ಕಾಸಿಗೆ ಸಿಗುವ ಕಾಗದದ ಸುರುಳಿ!

Friday, February 25, 2011

ಜನ್ಮಾಂತರಗಳ ಫಲ ಸುಳ್ಳಾಗದಲ್ಲ !


ಜನ್ಮಾಂತರಗಳ ಫಲ ಸುಳ್ಳಾಗದಲ್ಲ !

ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ
ಕಲಾಧರಾವತಂಸಕಂ ವಿಲಾಸಿಲೋಕ ರಕ್ಷಕಂ
ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ ೧

ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ
ನಮತ್ಸುರಾರಿನಿರ್ಜರಂ ನತಾದಿಕಾಪದುದ್ಧರಂ
ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ
ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ ೨

ಸಮಸ್ತಲೋಕಶಂಕರಂ ನಿರಸ್ತದೈತ್ಯ ಕುಂಜರಂ
ದರೇತರೋದರಂ ವರಂ ವರೇಭ-ವಕ್ತ್ರಮಕ್ಷರಂ
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್ ೩

ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ
ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಂ
ಪ್ರಪಂಚನಾಶಭೀಷಣಂ ಧನಂಜಯಾದಿಭೂಷಣಂ
ಕಪೋಲದಾನವಾರಣಂ ಭಜೇ ಪುರಾಣವಾರಣಮ್ ೪

ನಿತಾಂತ-ಕಾಂತದಂತ- ಕಾಂತಿಮಂತಕಾಂತಕಾಂತ್ಮಜಂ
ಅಚಿಂತ್ಯರೂಪಮಂತಹೀನಮಂತರಾಯ ಕೃಂತನಂ
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್ ೫

ಮಹಾಗಣೇಶಪಂಚರತ್ನಮಾದರೇಣ ಯೋನ್ವಹಂ
ಪ್ರಜಲ್ಪತಿ ಪ್ರಭಾತಕೇ ಹೃದಿಸ್ಮರನ್ ಗಣೇಶ್ವರಂ
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ
ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋಚಿರಾತ್ ೬


ಅದ್ಭುತ ಸಂಸ್ಕೃತ ಸಾಹಿತ್ಯದ ಪುಷ್ಕಳ ಭೋಜನಕ್ಕೆ ಭಾಜನರಾದ ನಿಮಗೆಲ್ಲಾ ಅಭಿನಂದನೆಗಳು. ಹೀಗೆ ಹೇಳುವುದಕ್ಕೆ ಕಾರಣ ನಿಮಗೆ ತಿಳಿದೇ ಇದ್ದರೆ ಆಶ್ಚರ್ಯವೇನಿಲ್ಲ. ತಿಳಿಯದೇ ಇದ್ದವರಿಗೆ ತಿಳಿದಿರಲಿ ಎಂಬ ಕಾರಣಕ್ಕಾಗಿಯೂ ಮತ್ತು ’ಗಣೇಶ ಪಂಚರತ್ನ’ ವೆಂಬ ಈ ಪಂಚಕದ ಪ್ರಾರ್ಥನೆಯ ಪರಿಣಾಮ ಬಹಳ ಉತ್ತಮವಿರುವುದರಿಂದಲೂ ಇದನ್ನು ನಿಮಗೆಲ್ಲಾ ಹೇಳುವ ಮನಸ್ಸುಮಾಡಿದೆ. ಅಂದಹಾಗೇ ಇದರ ಕರ್ತೃ ಶ್ರೀ ಆದಿಶಂಕರರು. ಎಂತಹ ಪ್ರಾಸಬದ್ಧ ಪಂಚಕವೆಂದರೆ ಇಷ್ಟು ಸರಳ ಶಬ್ದಗಳಲ್ಲಿ ಅಗಾಧವಾದ ಮಹಿಮೆಯುಳ್ಳ ಪರಬ್ರಹ್ಮನ ವರ್ಣನೆ ಮಾಡಿದ್ದಾರೆ. ಗಣಗಳಿಗೆ ನಾಯಕನಾದ ಒಂದು ಶಕ್ತಿಯನ್ನು ಗಣನಾಯಕ ಅಥವಾ ಗಣಾಧಿಪ ಅಥವಾ ಗಣೇಶ್ವರ ಎಂದು ಕರೆದರಲ್ಲಾ ಅಂತಹ ಗಣಗಳು ಯಾವವೆಂದು ತಿಳಿಯಲಿಕ್ಕೆ ಹೊರಟಾಗ ಎಲ್ಲವೂಗಣಗಳೇ ಆಗಿವೆ. ಮನುಷ್ಯಗಣ, ಪಶುಗಣ, ಪಕ್ಷಿಗಣ ಹೀಗೇ ಲೌಕಿಕವಾಗಿ ಜೀವಿಗಳ ಗಣಗಣಗಳನ್ನು ನಾವು ಗುರುತಿಸಿದರೆನಿರ್ಜೀವಿಗಳೆಂದು ಗುರುತಿಸಲ್ಪಟ್ಟ ಅನೇಕ ಲೋಹಗಳು, ಅದಿರುಗಳು, ಕಲ್ಲು-ಮಣ್ಣುಗಳು, ಮಾನವ ನಿರ್ಮಿತ ವಸ್ತುಗಳು ಹೀಗೇಪ್ರತಿಯೊಂದೂ ಗಣಗಳೇ.

ಗಣಗಳಿಗೆ ನಾಯಕನಾದವನು ಕೇವಲ ಒಂದೇರೂಪದಲ್ಲಿರಲು ಸಾಧ್ಯವೇ? ಅಂತಹ ವಿಶ್ವಂಭರ ಸ್ವರೂಪವನ್ನು ಭಗವತ್ಪಾದರು ವಿಶಿಷ್ಟವಾದ ಶಬ್ದಗಳಲ್ಲಿ ಬಣ್ಣಿಸಿದ್ದಾರೆ. ಪ್ರಪಂಚವನ್ನು ಸೃಷ್ಟಿಸುವ, ಪೊರೆಯುವ ಮತ್ತು ವಿನಾಶಮಾಡುವ ಬ್ರಹ್ಮ ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳ ರೂಪವನ್ನೂ ಸೇರಿದಂತೇ ಹಲವು ಅಗಾಧ ಶಕ್ತಿಗಳನ್ನೊಳಗೊಂಡ ನಿರಾಕಾರ ಪರಬ್ರಹ್ಮನನ್ನುಸದಾಕಾರವಾಗಿಯೂ ಹೀಗೆ ಆರಾಧಿಸುವುದರಲ್ಲಿ ತಪ್ಪಿಲ್ಲವೆಂಬ ಅವರ ಅನುಭವಾಮೃತವನ್ನು ಆಸ್ತಿಕರಿಗೆ ಈ ಪಂಚಕದ ಮೂಲಕ ಉಣಬಡಿಸಿದರು. ಸುಶ್ರಾವ್ಯವಾಗಿ ಹಾಡಬಲ್ಲ ಈ ಪಂಚಕದ ಪಠನೆಯಿಂದ ಉಚ್ಛಾರ ಶುದ್ಧಿ ಮತ್ತು ಭಾಷಾಶುದ್ಧಿ ಘಟಿಸುತ್ತದೆ. ಅವರೇಹೇಳಿದಂತೇ ಇದನ್ನು ಪಠಿಸಿದವರು ಉತ್ತಮ ಸಾಹಿತಿಯಾಗಿ ಬಾಳಲಿ ಎಂದೂ ಅವರು ಹರಸಿದ್ದಾರೆ.

ಸಾಹಿತ್ಯಕ್ಕೆ ಭಾಷೆಗಳ ಗಡಿಮಿತಿಯನ್ನು ಹಾಕಬಾರದು. ಉತ್ತಮವಾದ ಸಾಹಿತ್ಯ ಯಾವ ಭಾಷೆಯಲ್ಲಿದ್ದರೂ ಅದು ಪ್ರಶಂಶನೀಯವೇ ಸರಿ. ಅದರಲ್ಲಂತೂ ಇತ್ತೀಚೆಗೆ ಕೆಲವು ಭಾಷಾಂಧರು ಎಲ್ಲಭಾಷೆಗಳ ಮಾತೃಸ್ವರೂಪಿಣಿಯಾದ ದೇವನಾಗರೀ ಅಥವಾ ಸಂಸ್ಕೃತಭಾಷೆಯನ್ನು ದೂರುತ್ತಿದ್ದಾರೆ. ಸಂಸ್ಕೃತಭಾಷೆ ಯಾವ ಭಾಷೆಗೂ ಯಾವ ಒತ್ತಡವನ್ನೂ ಹೇರಲಿಲ್ಲ. ಬದಲಾಗಿ ಮೂಲಮಹಾಕವಿಗಳೆಲ್ಲಾ ಸಂಸ್ಕೃತ ಭಾಷೆಯಲ್ಲೇ ಬರೆದರು. ವೇದ-ವೇದಾಂತಗಳು, ಶ್ರುತಿ ಸ್ಮೃತಿ ಪುರಾಣಗಳು, ರಾಮಾಯಣ ಮಹಾಭಾರತ ಭಾಗವತವೇ ಮೊದಲಾದ ಕೃತಿಗಳು ಮೊದಲಾಗಿ ರಚಿತವಾಗಿದ್ದು ದೇವನಾಗರಿಯಲ್ಲೇ. ಈ ಪ್ರಪಂಚಕ್ಕೆ, ಭಾರತಕ್ಕೆಮಾನವೀಯ ಮೌಲ್ಯವುಳ್ಳ ಅತ್ಯುತ್ತಮ ಕೃತಿಗಳನ್ನು ಕೊಟ್ಟ ಜಗತ್ತಿನ ಏಕೈಕ ಭಾಷೆ ಸಂಸ್ಕೃತ ಎಂದು ಹೇಳಲು ಯಾವಹಿಂಜರಿಕೆಯೂ ಇಲ್ಲ.

ಕನ್ನಡದಲ್ಲೇ ಪೂಜೆಯನ್ನೂ ಮಾಡಬಹುದು. ಅಥವಾ ಅವರವರ ಭಾಷೆಯಲ್ಲೇ ಆರಾಧನೆ ನಡೆಸಬಹುದು. ಆದರೂ ಸ್ವರಬದ್ಧವಾದ ವೇದಮಂತ್ರಗಳನ್ನು ದೇವನಾಗರಿಯ ಆ ಲಯತರಂಗಗಳಲ್ಲಿ ಕೇಳಿದಾಗ ಸಿಗುವ ಅಲೌಕಿಕ ಆನಂದ ಬೇರೇ ಯಾವ ಭಾಷೆಯಲ್ಲೂ ಸಿಗುವುದಿಲ್ಲ . ಪೂಜೆ ಮಾಡಿದ ಖುಷಿ ಸಿಗುವುದು ಆ ಸಂತೃಪ್ತಿ ದೊರೆಯುವುದು ಕೇವಲ ಕೇವಲ ಸಂಸ್ಕೃತದ ಸ್ವರಬದ್ಧ ವ್ಯಾಕರಣಶುದ್ಧ ಮಂತ್ರೋಚ್ಛಾರಣೆ ಕೇಳಿದಾಗ ಮಾತ್ರ. ಇತ್ತೀಚೆಗೆ ನಾವು ಸಂಗೀತದಿಂದಲೂ ನಮ್ಮ ಮಾನಸಿಕ ಒತ್ತಡಗಳಿಂದಮುಕ್ತರಾಗಬಹುದು, ಹೈ/ಲೋ ಬಿ.ಪಿ, ಶುಗರ್, ಹೃದಯ ಸಂಬಂಧೀ ತೊಂದರೆ ಮೊದಲಾದವುಗಳಿಗೆ ಸಂಗೀತದ ಆಲಾಪನೆಯನ್ನು ಆಲೈಸುತ್ತಿದ್ದರೆ ಅವುಗಳನ್ನು ತಹಬಂದಿಗೆ ತರಬಹುದು ಎಂದು ತಿಳಿದಿದ್ದೇವೆ. ಸಂಗೀತಕ್ಕೂ ಮೂಲ ಸಾಮವೇದವೇ ಕಾರಣ. ಗೇಯರೂಪದ ಈ ವೇದವೇ ಮೂಲವಾಗಿ ಭಾರತೀಯ ಸಂಗೀತದ ಜನನವಾಯಿತು. ಹೀಗೆ ಜನಿಸಿದ ನಮ್ಮ ಶಾಸ್ತ್ರೀಯ ಸಂಗೀತವಿದೇಶೀಯರನ್ನೂ ಕೈಬೀಸಿ ಸೆಳೆಯಿತು ಎಂದರೆ ಇದರಲ್ಲಿ ಲವಲೇಶವೂ ತಪ್ಪಿಲ್ಲ.

ಯಾರೋ ಓದುಗರೊಬ್ಬರು ನನ್ನಲ್ಲಿ ಕೇಳಿದ್ದರು, ತನಗೆ ಕಾಳಿದಾಸ, ಬಾಣ, ದಂಡಿ ಇಂತಹ ಕವಿ-ಸಾಹಿತಿಗಳ ಕೃತಿಗಳು ಬೇಕಾಗಿವೆ, ಕನ್ನಡದಲ್ಲಿ ಅವು ಎಲ್ಲಿ ಸಿಗುತ್ತವೆ? --ಎಂಬುದಾಗಿ. ಅಂತಹ ಸಾರಸ್ವತರ ಕೃತಿಗಳನ್ನು ಮೂಲ ಭಾಷೆಯಾದ ಸಂಸ್ಕೃತದಲ್ಲೇಓದಿದಾಗ ಸಿಗುವ ಆನಂದ ತರ್ಜುಮೆಗೊಂಡ ಕೃತಿಯನ್ನು ಓದಿದಾಗ ಸಿಗುವುದಿಲ್ಲ. ಅವರುಗಳ ಕೃತಿಗಳೆಲ್ಲಾ ದೇವನಾಗರಿಯಲ್ಲೇಇವೆ. ಸಂಸ್ಕೃತ ಬಾರದವರು ಏನುಮಾಡುವುದು ಎಂಬುದಕ್ಕೆ ಉತ್ತರ, ಸಂಸ್ಕೃತದ ಉತ್ತಮ ತಜ್ಞರನ್ನು ಕಂಡು ಭಾಷೆಯನ್ನುಅಭ್ಯಸಿಸುವುದು ಅಥವಾ ಸಂಸ್ಕೃತ ವಾಗ್ಮಿಗಳನ್ನು ಪಂಡಿತರನ್ನು ಕಂಡು ಬಿಡುವಿನಲ್ಲಿ ಅವರಿಂದ ಅಂತಹ ಕೃತಿಗಳನ್ನು ವಾಚಿಸಿಕೊಂಡು ಅರ್ಥಗ್ರಹಣಮಾಡಿ ಆನಂದಿಸುವುದು.

ಸಂಸ್ಕೃತದ ಈ ಆಕರ್ಷಣೆಯಿಂದಲೇ ಕನ್ನಡದ ವರಕವಿ ಬೇಂದ್ರೆಯವರ ಕಾವ್ಯಗಳಲ್ಲಿ ಅದರ ಪ್ರಭಾವವನ್ನು ಕಾಣಬಹುದಾಗಿದೆ. ಕಾವ್ಯವನ್ನು ಮೇಲ್ನೋಟಕ್ಕೆ ಓದುವ ಬದಲು ಆಳವಾಗಿ ಅರ್ಥೈಸುವ ಹಲವು ಕಾವ್ಯಗಳಿರುತ್ತವೆ. ಅಂತಹ ಆಳ ನಮ್ಮನ್ನು ಮೂಲವೇದಾಂತದೆಡೆಗೆ ಕರೆದೊಯ್ಯುತ್ತದೆ ಎನ್ನುವುದು ಅನುಭವಿಸಿದವರ ಅಭಿಪ್ರಾಯವಾಗಿದೆ. ಅನೇಕರಿಗೆ ಬೇಂದ್ರೆಯವರ ಕೆಲವುಕವನಗಳು ಕಗ್ಗಂಟಾಗಿ ಕಾಣುವುದು ಇದೇ ಕಾರಣಕ್ಕಾಗಿ. ನಾಟ್ಯದಲ್ಲಿ ಚಿತ್ರಕಲೆಯಲ್ಲಿ ಕಲಾವಿದರು ತನ್ಮಯರಾಗಿತೊಡಗಿಕೊಂಡಂತೇ ಬೇಂದ್ರೆಯವರು ಕವನ ರಚನೆಯಲ್ಲಿ ತೊಡಗಿದಾಗ ತನ್ನನ್ನೇ ಮರೆಯುತ್ತಿದ್ದರು.ಸಾವಿರ ಜನಸಂದಣಿ ತುಂಬಿದಸಭೆಯಲ್ಲೇ ಇದ್ದರೂ ಸುತ್ತಲ ಜಗತ್ತಿನ ಪ್ರಭಾವದಿಂದ ದೂರವಾಗಿ ಏಕಾಗ್ರತೆಯಿಂದ ಕವನ ಬರೆಯ ಹೊರಟರೆ ಆ ಕವನಸರಾಗವಾಗಿ ಹೊರಬರುವಷ್ಟು ಶಬ್ದಗಳು ಅವರ ಬಾಯಲ್ಲಿ ನುಲಿಯುತ್ತಿದ್ದವು; ನಲಿಯುತ್ತಿದ್ದವು. ಡೀವೀಜಿ ಸಂಸ್ಕೃತದಮಹಾಮೇಧಾವಿಯಾಗಿದ್ದುದರಿಂದಲೇ ಕಗ್ಗದ ಮಗ್ಗ ಉತ್ತಮ ಸಂಸ್ಕೃತಿಯ ಸಮಾಜವನ್ನು ನೇಯುವಲ್ಲಿ ಕನ್ನಡದ ಭಗವದ್ಗೀತೆಎನಿಸಿತು. ಹೆಚ್ಚೇಕೆ ಕನ್ನಡವೂ ಸೇರಿದಂತೇ ಅನೇಕ ಭಾಷೆಗಳ ಹಲವಾರು ಶಬ್ದಗಳು ಸಂಸ್ಕೃತ ಮೂಲದಿಂದಲೇ ಬಂದವು. ಹೀಗಾಗಿಸಂಸ್ಕೃತವನ್ನು ಜರಿದರೆ ಉಂಡಮನೆಗೆ ಎರಡುಬಗೆಯುವ ತಪ್ಪನ್ನು ಮಾಡಿದಂತಾಗುವುದರಲ್ಲಿ ಸಂಶಯವಿಲ್ಲ.

ಭಾರತೀಯ ಸಂಸ್ಕೃತಿಯ ಕೊಡುಗಗಳಾದ ಸಂಸ್ಕೃತ, ಯೋಗ, ಆಯುರ್ವೇದ ಇವೆಲ್ಲಾ ವಿದೇಶೀಯರ ಪಾಲಾಗಿ ಅಲ್ಲಿ ಅವರುಅದನ್ನು ತಮದೆಂದು ಹಕ್ಕುಸಾಧಿಸಹೊರಟ ಈ ಸನ್ನಿವೇಶದಲ್ಲಾದರೂ ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವೊಂದುಸ್ಥಾಪಿತವಾಗಿರುವುದು ಹೆಮ್ಮೆಯ ಸಂಗತಿ. ಸಮಾಜದ ಕೆಲವರಾದರೂ ಇದರ ಬಗ್ಗೆ ಕಳಕಳಿ ಉಳ್ಳವರು ಎಂಬುದಕ್ಕೆ ಕೆಲವು ತಿಂಗಳಹಿಂದೆ ನಡೆದ ವಿಶ್ವಸಂಸ್ಕೃತ ಸಮ್ಮೇಳನದ ಸಮಯ ಲಕ್ಷಾಂತರ ಜನ ಭಾಗವಹಿಸಿದ್ದು ಸಾಕ್ಷಿಯಾಗಿದೆ. ನಮ್ಮ ತಾಯಿ ಕನ್ನಡವಾದರೆನಮ್ಮ ತಾಯಿಯ ತಾಯಿ ಅಂದರೆ ಅಜ್ಜಿ ಸಂಸ್ಕೃತ. ಅಜ್ಜಿಗೆ ಅಪಚಾರಮಾಡುವುದು ಸರಿಯೇ. ನಮಗೆ ಅಮ್ಮ ಹೇಗೆ ಅಷ್ಟೊಂದುಇಷ್ಟವೋ ಆ ಅಮ್ಮನಿಗೆ ಅವಳ ಅಮ್ಮ ಎಂದರೆ ಅಷ್ಟೇ ಇಷ್ಟ. ಅಮ್ಮ ಚೆನ್ನಾಗಿರಬೇಕೆಂದರೆ ಅಮ್ಮನಿಗೆ ಅಡಿಗೆಗೋ ಮನೆವಾರ್ತೆಗೋಮತ್ತಿನ್ನೇತಕ್ಕೋ ಅನುಭವಿಯಾಗಿ ಮಾರ್ಗದರ್ಶಿಸಲು ಅಜ್ಜಿ ಹೇಗೆ ಸಹಕರಿಸುವಳೋ ಹಾಗೇ ಕನ್ನಡ ಚೆನ್ನಾಗಿರಬೇಕಾದರೆಸಂಸ್ಕೃತವೂ ಜೊತೆಗಿರಲೇಬೇಕು. ಇದು ಒಂದು ಕೂಡುಕುಟುಂಬದ ವ್ಯವಸ್ಥೆ, ದಯಮಾಡಿ ಅನ್ಯಥಾ ಭಾವಿಸಬೇಡಿ.

ಇನ್ನು ನಿನ್ನೆಯ ಒಂದು ಘಟನೆ ನನ್ನ ಮನಸ್ಸನ್ನು ಕಲಕಿತು. ನನಗೆ ಗೊತ್ತಿರುವ ನಮ್ಮೂರ ಕಡೆಯ ಒಳ್ಳೆಯ ವ್ಯಕ್ತಿ ತನ್ನಮಧ್ಯವಯಸ್ಸಿನಲ್ಲೇ[೪೭-೪೮] ಇಲಿಜ್ವರ ಪೀಡಿತನಾಗಿ ಮರಣಿಸಿದ. ಕೇವಲ ವಾರದ ಹಿಂದೆ ಹಲವಾರು ಕೆಲಸಗಳಲ್ಲಿತೊಡಗಿಕೊಂಡಿದ್ದ ಆತ ಸರಳ ಜೀವನವನ್ನು ನಡೆಸಿಬಂದ ತುಂಬುಕುಟುಂಬದ ಬಡಜೀವಿಯಾಗಿದ್ದ. ಊರಲ್ಲಿ ಯಾರೇ ಆಗಲಿಆತನನ್ನು ಮೆಚ್ಚುತ್ತಿದ್ದರು. ಎಂದೂ ಯಾರನ್ನೂ ಆಡಿಕೊಂಡವನಲ್ಲ, ಯಾರೊಂದಿಗೂ ಜಗಳ-ದೊಂಬಿ ಇರಲಿಲ್ಲ. ಎಲ್ಲರ ಜೊತೆ ಇದ್ದುಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಬಡತನದಲ್ಲಿ ತನ್ನ ಉಪಜೀವಿತಕ್ಕೆ ಬೇಕಾಗಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದ. ಹೆಂಡತಿ ಮತ್ತುಇಬ್ಬರು ಹೆಣ್ಣುಮಕ್ಕಳು ಹಾಗೂ ಮುಪ್ಪಿನ ತಂದೆ-ತಾಯಿಯರೊಟ್ಟಿಗೆ ಇರುವುದರಲ್ಲೇ ತೃಪ್ತನಾಗಿದ್ದ. ೪-೫ ದಿನಗಳ ಹಿಂದೆಕಾಣಿಸಿಕೊಂಡ ಜ್ವರ ಶೀಘ್ರ ಉಲ್ಬಣಿಸಿತು. ಕಳೆದ ವಾರಾಂತ್ಯದಲ್ಲಿ ಮಂಗಳೂರಿನ ದೊಡ್ಡ ಖಾಸಗೀ ಆಸ್ಪತ್ರೆಯೊಂದಕ್ಕೆಕರೆದೊಯ್ದರೂ ಅಲ್ಲಿ ಅವರು ಹೇಳಿದ್ದು ಯಕೃತ್ತು ೮೦ ಪ್ರತಿಶತ ಹಾಳಾಗಿದೆ-ಬದುಕುವುದು ಕಷ್ಟವೆಂದು. ಅಲ್ಲಿಗೆ ತೆರಳಿದಮಾರನೇದಿನವೇ ಆತ ಕಣ್ಣುಗಳನ್ನು[ದೃಷ್ಟಿ] ಕಳೆದುಕೊಂಡ. ನಂತರ ಒಂದೊಂದೇ ಅಂಗಾಂಗಗಳ ಕ್ರಿಯೆಗಳು ನಿಧಾನವಾಗಿನಿಲ್ಲಲು ಆರಂಭಿಸಿದವು. ನಿನ್ನೆ ಸುಮಾರು ಬೆಳಗಿನ ೧೦:೩೦ಕ್ಕೆ ಆತ ಇಹಲೋಕ ಯಾತ್ರೆಗೆ ವಿದಾಯಹೇಳಿದ. ಊರ ಜನರೆಲ್ಲಾಹಿರಿಕಿರಿಯ ಭೇದಭಾವವಿಲ್ಲದೇ ಸೇರಿ ಕಣ್ಣೀರ್ಗರೆದು ಆತನ ಭೌತಿಕ ದೇಹವನ್ನು ಕವ್ಯಾಗ್ನಿಗೆ ಅರ್ಪಿಸಿದರು. ಈ ಜನ್ಮದಲ್ಲಿ ಆತಮಾಡಿದ ಯಾವ ತಪ್ಪಿಗೆ ಈ ಶಿಕ್ಷೆ ಎಂದು ಆಲೋಚಿಸುವಾಗ ಆತಮಾಡಿದ ಯಾವತಪ್ಪೂ ಕಾಣಲಿಲ್ಲ. ಪಡೆದು ಬಂದ ವಿಧಿಲಿಖಿತವೇಹಾಗಿರುವಾಗ ಯಾವ ವೈದ್ಯರು ಏನುಮಾಡಲಾದೀತು ? ವಿಶ್ವನಾಥನೆಂಬ ಗತಿಸಿದ ಆ ಒಳ್ಳೆಯ ವ್ಯಕ್ತಿಗೆ ವಿಶ್ವದ ನಾಥನಲ್ಲಿವಿಶ್ವನಾಯಕನಲ್ಲಿ ಒಮ್ಮೆ ಪ್ರಾರ್ಥಿಸುವಾಗ ಸಹಜವಾಗಿ ಶ್ರೀ ಶಂಕರರ ಮೇಲಿನ ಪಂಚಕದ ನೆನಪು ಬಂತು. ವಿಶ್ವನಾಥನಿಗೆ ಮುಕ್ತಿಸಿಗಲಿ ಆತನ ಆತ್ಮ ಚಿರಶಾಂತಿಯಲ್ಲಿ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಈ ನನ್ನ ಪ್ರಾರ್ಥನೆಯನ್ನು ಸಹೃದಯರಾದ ನಿಮ್ಮೆಲ್ಲರೊಡನೆ ಹಂಚಿಕೊಂಡಿದ್ದೇನೆ, ಪುನಃ ಸಿಗೋಣ, ನಮಸ್ಕಾರ.