ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, February 28, 2011

ಈ 'ಸಮಯ' ಆನಂದಮಯ’ !


ಈ 'ಸಮಯ' ಆನಂದಮಯ !
ತೀಟೆ ತಾಳಲಾರದ ಆತ
ಸಣ್ಣ ನಡುವಿನ ಸುಂದರಿಯ
ಬಳುಕುವ ವಯ್ಯಾರಕ್ಕೆ ಮನಸೋತು
"ನಾ ದುಷ್ಯಂತ ನೀ ಶಕುಂತಲೆ "ಎಂದ !

ಮಸಿಮಂಗನಂತೇ ಬಾಗಿ ಮುಸಿಮುಸಿ ನಗುತ್ತಾ
ಹಲ್ಕಿರಿದು ನಿಂತ ತೊಳೆದಿಟ್ಟ
ಮಸಿಕೆಂಡದಂಥಾ ದುಷ್ಯಂತನನ್ನು
ಸಿವನೇ ಸಂಭುಲಿಂಗವೆನ್ನುತ್ತಾ
ಕಡೆಗಣ್ಣಿನಿಂದಲೇ ನೋಡಿ ಎಚ್ಚರತಪ್ಪುತ್ತಾ
ನೀರೆ " ನಾ ಒಲ್ಲೆ " ಎಂದಳಾದರೂ
ಕಣ್ವರಿರದ ತಾಣ ಅದಾಗಿರುವುದರಿಂದ
ಕೈ ಹಿಡಿದು ಬೆನ್ನು ಸವರಿ ಸೊಂಟ ಬಳಸಿ
ಕುವರ ತೋರಿದ ನಾನಾ ವಿಧ ಭಂಗಿಯ
ಕಾಸಿನ ಕರಾಮತ್ತು ಕುವರಿಯ ಕಣ್ಣುಕೋರೈಸಿತ್ತು !

ಅಕಟಕಟಾ ಮನೆಯೊಂದಷ್ಟು ಸಾವಿರ ಸೈಟು
ಇಡೀ ರಾಜ್ಯಾಧಿಪತ್ಯವನ್ನು ಗುತ್ತಿಗೆ ಹಿಡಿದಂತೇ
ಕೃಷ್ಣ ಕಿರುಬೆರಳಲ್ಲಿ ಗೋವರ್ಧನವೆತ್ತಿದಂತೇ
ಕನ್ನಡ ಜನತೆಗಾಗಿ ತನ್ನನ್ನೇ ’ಕೊಟ್ಟುಕೊಂಡೆ’
ಎಂದು ಸಾರುವ ಆ ಗಂಡು ಅಪ್ಪ ಹಾಕಿದ ಚಿನ್ನದ
ಬೇಲಿಯನ್ನು ನಸುಕಿನಲ್ಲಿ ಮುಸುಕಿನಲ್ಲಿ ದಾಟಿಹೋದ
ಅಪ್ಪ ಕಣ್ಣಿದ್ದೂ ಕಾಣದಾದ ತ..ತ...ತಡೆಯದಾದ !

ಈ ಕಾಲಕ್ಕೆ ಮರ್ಯಾದಿತವಾಗಿ ಮಾಡಿಕೊಂಡರೆ
ನ್ಯಾಯಲಯ ಕಟ್ಟು ಕಟ್ಟಳೆ
ಗೋವಿಂದ ಕಲಾವಿದರಿಗೆ ವಯಸ್ಸಿನ ಗಡುವಿಲ್ಲ ಅದಕ್ಕೇ
"ನನಗೇನು ಬೇಕೋ ಅದನು ಕೊಟ್ಟು ನಿನಗೇನು ಬೇಕೋ
ಅದನು ಪಡೆಯುವಂಥವಳಾಗು ಮುಗುದೇ" ಎಂದಾಗ
ನಾಗಮಂಡಲಕ್ಕೆ ಹೋಗಿಬಂದ ಮರುದಿನವೇ
ಗರ್ಭಾದಾನವಾಗಿ ’ಮೋಹಿನಿ’ ಜನಿಸಿದಳು !

ಮಾಧ್ಯಮದ ಮಂದಿ ಆ ಸುದ್ದಿ ಕೇಳುತ್ತಲೇ
ನಿಸ್ತಂತು ದೂರವಾಣಿ " ಆ ವಿಷಯದ ಬಗ್ಗೆ
ನಾನೇನೂ ಹೇಳಲಾರೆನೆನ್ನುತ್ತಾ" ನೆಗೆದುಬಿದ್ದು ಹೋಗುತ್ತಿತ್ತು !

ಮಾಟವನ್ನೇ ನಂಬಿ ಬದುಕಿದ
ಮನೆಯಲ್ಲಿ ಮಡದಿ ಮತ್ತುಳಿದವರು
ಕೇಳಿದಾಗ ಯಾರೋ ಜ್ಯೋತಿಷ್ಕರು
"ಹೆಣ್ಣುಮಗುವಾದರೆ ನೀನೇ ಎಂದೆಂದೂ
ರಾಜನೆಂದರು ನಿಮ್ಮ ಕುಟುಂಬವೇ
ರಾಜ್ಯಭಾರ ನಡೆಸುತ್ತದೆಂದರು" ಎಂಬ
ಮಂತ್ರ ದಂಡವನ್ನು ಪ್ರಯೋಗಿಸಿಬಿಟ್ಟ !

’ಕಸ್ತೂರಿ’ಯ ಪರಿಮಳದಂತೇ ತನಗೂ ಇರಲೆಂದ
ಕುವರಿಯ ಒತ್ತಾಸೆಯನು ಕಂಡ ಮುದ್ದಣ
’ಸಮಯ’ಕ್ಕೆ ಸರಿಯಾಗಿ ಕೈಹಾಕುವ
ಮನಸ್ಸುಮಾಡಿದ ’ಮನೋರಮೆ’ಗಾಗಿ

ನೋಡಿರೈ ಅಣ್ಣಂದಿರೇ ತಮ್ಮಂದಿರೇ
ಅಕ್ಕತಂಗಿಯರೇ ಮದುವೆ ಎರಡಾಗುವುದು ನಿಷೇಧ
ಹಲವಾರು ಆದರೆ ಅದು ನಿರ್ವ್ಯಾಜ
ಅಂಕೆಯನ್ನು ಆಪಸ್ನಾತಿಯಲ್ಲಿ ಡೈರಿಯಲ್ಲಿ
ಬರೆದಿಟ್ಟು ವಿಕಸನ ಬಯಸಿದಾಗೆಲ್ಲಾ
ಪುಸಕ್ಕನೇ ಅಲ್ಲಿಲ್ಲಿ ಹೋಗಿ ಅಡ್ಡಡ್ಡ ಉದ್ದುದ್ದ
ಮಲಗಿಬಿಟ್ಟರೆ ಬರುವ ಸಂತಾನಗೋಪಾಲರೆಲ್ಲಾ
ನಮ್ಮವರೇ ಅಲ್ಲವೇ ? ಮುಪ್ಪಿನ ವಯಸ್ಸಿಗೆ
ಆ ಮುದಿ ಅಮ್ಮಂದಿರು ’ಅಪ್ಪಕಟ್ಟಿದ ಪಕ್ಷ’
ಎನ್ನಲು ಆ ಮಕ್ಕಳೆಲ್ಲಾ ಬಂದೇ ಬರುವರಲ್ಲವೇ?

ಯಾವ ಜ್ಞಾನಿಯೂ ವಿಜ್ಞಾನಿಯೂ ಕಾಣದ
ರಸಮಯ ಸಂಶೋಧನೆ ಆ ಕುವರನಿಗೆ
ನಿಜವಾಗಿಯೂ ಕೊಡಬೇಕು ಗೌರವ ಡಾಕ್ಟರೇಟು !
"ಯಾರಲ್ಲೀ...? ವಿದೇಶೀ
ವಿಶ್ವವಿದ್ಯಾಲಯಗಳವರೇ
ನಮ್ಮ ಕರಿದುಷ್ಯಂತನ ವಂಶಾಭಿವೃದ್ಧಿ
’ಜನಪ್ರಗತಿ’ಗೆ ನೀವಾರಾದರೂ ಅದನ್ನು ಕೊಡುವಿರೇ?"
ಕೊಡದಿದ್ದರೆ ಬಿಡಿ ನಮಗೆ ಗೊತ್ತು ಅದೂ ಕೂಡ
ಈಗ ಕಾಸಿಗೆ ಸಿಗುವ ಕಾಗದದ ಸುರುಳಿ!

7 comments:

  1. ನಿಮಗೆ ಆ ರಾಧಿಕೆ ಅದೆಷ್ಟು ಮೋಡಿ ಮಾಡಿದ್ದಾಳೆ ಮಾರಾಯ್ರೇ. ಕರಿದುಷ್ಯ೦ತ ನಿಮ್ಮನ್ನು ಅಟ್ಟಿಸಿಕೊ೦ಡು ಬ೦ದಾನು, ಚೆನ್ನಾಗಿದೆ.

    ReplyDelete
  2. ರಾಧಿಕೆ ಬೇರೆಯವರ ಸ್ವತ್ತು ಸಾರ್..ಈಗ ಹೀಗೆಲ್ಲಾ ಕವನ ಬರೆಯಬಾರದು...[ತಮಾಷೆಗೆ ಹೇಳಿದೆ] ಚೆನ್ನಾಗಿದೆ ಕವನ.

    ReplyDelete
  3. ಹಾ ಹಾ ಚೆನ್ನಾಗಿದೆ ಭಟ್ರೇ ,,,, ಬಹುಷಃ ಸ್ವಾಮಿಯವರ ಮೇಲೆ ಭಾರಿ ಸಿಟ್ಟು ಇದ್ದ ಹಾಗಿದೆ ....

    ReplyDelete
  4. ಕರಿದುಷ್ಯ೦ತನಿಗೆ ಇದನ್ನು ಮೈಲ್ ಮಾಡಿ ಭಟ್ರೆ....
    ಚೆನ್ನಾಗಿದೆ....

    ReplyDelete
  5. ಭಟ್ಟರೆ,
    ಆ ಜೋಕುಮಾರಸ್ವಾಮಿಯನ್ನು ಕವನಗಳ ಚಾಟಿಯಿಂದಲೇ ಸಿಕ್ಕಾಪಟ್ಟೆ ಬಾರಿಸ್ತಾ ಇದ್ದೀರಲ್ಲಪ್ಪಾ! ಇನ್ನು ಆತ ಮಂಗಳೂರು ಕಡೆ ಮುಖ ಹಾಕಲಿಕ್ಕಿಲ್ಲ!

    ReplyDelete
  6. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಹಲವು ಸಲ ನಮಿಸಿದ್ದೇನೆ.

    ReplyDelete