ಬೊಂಬೆಯಾಟವಯ್ಯಾ ಆ ದೇವನಾಡುವಾ .....
ಜಪಾನಿನ ಸುನಾಮಿ ಆಕಸ್ಮಿಕದಲ್ಲಿ ಮಡಿದ ಸಾವಿರಾರು ಜನರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಸೃಷ್ಟಿಯ ಈ ವಿಕೋಪವನ್ನು ನೆನೆಯುತ್ತಿದ್ದೇನೆ. ಜಗತ್ತಿನಲ್ಲಿಯೇ ಅತೀ ಉತ್ಕೃಷ್ಟ ತಂತ್ರಜ್ಞಾನವನ್ನು ಆವಿಷ್ಕಾರಗೊಳಿಸುವ ದೇಶ ಜಪಾನ್. ಭಾರತದ ೨೨,೦೦೦ ಜನರೂ ಸೇರಿದಂತೇ ಹಲವು ರಾಷ್ಟ್ರಗಳ ಜನರು ಇಲ್ಲಿ ಉದ್ಯೋಗದಲ್ಲಿ ತೊಡಗಿದ್ದಾರೆ. ಮತ್ತೆ ಮತ್ತೆ ಮರುಕಳಿಸುವ ಭೂಕಂಪವನ್ನು ದಿನನಿತ್ಯದ ಅನಿವಾರ್ಯತೆಯೆಂದು ಸ್ವೀಕರಿಸಿ ಹೆದರದೇ, ಹಲವುಸಲ ಫೀನಿಕ್ಸ್ ಹಕ್ಕಿಯಂತೇ ಮತ್ತೆ ಜೀವತಾಳಿ ಮೇಲೆದ್ದ ರಾಷ್ಟ್ರ ಜಪಾನ್. ಬಹುಶಃ ಇದೇ ಒಂದು ಕಾರಣಕ್ಕೆ ಅಲ್ಲಿನ ಆ ಜನರಿಗೆ ಅಷ್ಟು ನೈಪುಣ್ಯತೆಯನ್ನು ಸೃಷ್ಟಿ ಒದಗಿಸಿದೆಯೇನೋ ಅನಿಸುತ್ತದೆ.
ಒಂದುಕಡೆ ಯಾವ ಕ್ಷಣದಲ್ಲೂ ಘಟಿಸಬಹುದಾದ ಭೂಕಂಪ, ಇನ್ನೊಂದು ಕಡೆ ಅಭಿವೃದ್ಧಿಯತ್ತ ಹೊಸ ತಂತ್ರಜ್ಞಾನಗಳ ಆವಿಷ್ಕಾರ...ಈ ಎರಡು ಶೃಂಗಗಳ ನಡುವೆ ಅತೀ ಲಘುವಾದ ಹಾಗೂ ಬಾಳಿಕೆಬರುವ ವಸ್ತುಗಳಿಂದ ಕಟ್ಟಡಗಳನ್ನು ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡವರು ಜಪಾನೀಯರು. ಅಲ್ಲಿನ ತಂತ್ರಜ್ಞಾನವೇ ಅವರ ನಿಜವಾದ ಬಂಡವಾಳ ಎಂದರೆ ತಪ್ಪಾಗಲಾರದೇನೋ. ಅವರು ತಯಾರಿಸಿದ ಯಾವುದೇ ವಸ್ತುವಿರಲಿ ಅದಕ್ಕೆ ಜಗತ್ತಿನಾದ್ಯಂತ ಬೇಡಿಕೆ. ಹೇಗೆ ಚೀನಾ ಅತೀ ಕಮ್ಮಿ ದರದಲ್ಲಿ ಬಾಳಿಕೆಬರಲಾರದ ಉತ್ಫನ್ನಗಳನ್ನು ತಯಾರಿಸಿದರೆ ಜಪಾನ್‍ನ ಉತ್ಫನ್ನಗಳು ಬಾಳಿಕೆಯಲ್ಲಿ ವಿಶ್ವಗುಣಮಟ್ಟವನ್ನು ಹೊಂದಿದಂಥವು. ಬೇರೇ ದೇಶಗಳೊಂದಿಗೆ ದರದಲ್ಲಿ ಪೈಪೋಟಿ ನಡೆಸದೇ ತಾವು ಸೃಜಿಸುವ ವಸ್ತುಗಳಲ್ಲಿ ತಮ್ಮತನವನ್ನು ಮೆರೆದವರು ಜಪಾನೀಯರು. ನೋಡಲು ಕುಬ್ಜರಾದರೂ ಮೆದುಳುಮಾತ್ರ ಬಹಳ ಚುರುಕು! ಬಹಳ ಚಾಲಾಕು.
ನಾಗಾಸಾಕಿ, ಹಿರೋಶೀಮಾ ಮೊದಲಾದ ಜಾಗಗಳು ಮತ್ತು ಅಲ್ಲಿ ನಡೆದ ಕೆಲವು ಘಟನೆಗಳು ನಮಗೆ ಜಪಾನನ್ನು ಆಗಾಗ ನೆನಪಿಗೆ ತರುತ್ತಲೇ ಇರುತ್ತವೆ. ನಮ್ಮಲ್ಲಿ ತುಸು ಜೋರಾಗಿ ಗಾಳಿ ಬೀಸಿದಷ್ಟು ಸಹಜ ಅಲ್ಲಿನ ಭೂಕಂಪ. ಚಿಕ್ಕ-ಪುಟ್ಟ ಭೂಕಂಪವೇನು ರಿಕ್ಟರ್ ಮಾಪಕದಲ್ಲಿ ೬-೭ ಕಾಣಿಸಿಕೊಂಡರೂ ತೀರಾ ತಲೆಕೆಡಿಸಿಕೊಂಡ ಜನಸಮುದಾಯ ಅದಲ್ಲ. ಬದಲಿಗೆ ಸದಾ ಮೃತ್ಯುವಿನ ದವಡೆಯಲ್ಲೇ ಜಾಗಮಾಡಿಕೊಂಡು ಕಾಲಹಾಕಿದವರು-ಕಾಲಹಾಕುತ್ತಿರುವವರು ಜಪಾನೀಯರು. ವಿದ್ಯುನ್ಮಾನ ರಂಗದಲ್ಲಿ ಆದ ವೇಗದ ಬೆಳವಣಿಗೆಗಳಲ್ಲಿ ಜಪಾನಿನ ಕೊಡುಗೆ ಸಿಂಹಪಾಲು. ಯಾವುದೇ ವಿದ್ಯುನ್ಮಾನ ವಸ್ತುವನ್ನು ತೆಗೆದುಕೊಳ್ಳಿ ಇಂದಿಗೂ ಅವರದ್ದೇ ಆದ ಕೊಡುಗೆ ಅಲ್ಲಿರುತ್ತದೆ! ಅನಿಶ್ಚಿತತೆಯ ನಡುವೆಯೂ ಅದನ್ನು ಮರೆತು ಸೃಜನಶೀಲರಾಗಿ ಬದುಕಲು ಕಲಿಯುವ ಆ ಮೂಲಕ ಜಗತ್ತಿಗೆ ಬದುಕುವ ಕಲೆಯನ್ನು ಬೋಧಿಸುವ ಆ ಮಂದಿ ಬಹಳ ಶ್ರಮಜೀವಿಗಳು.
ನಮ್ಮಂತಹ ದೇಶಗಳಲ್ಲಿ ಯಾವುದೇ ಅಪಘಾತವಾದರೆ ನಾವು ಪರಿಹಾರಕ್ಕೋ ನೆರವಿಗೋ ಬಾಯಿಬಾಯಿ ಬಿಡುತ್ತಾ ಕೂತುಬಿಡುತ್ತೇವೆ. ಮಂತ್ರಿ-ಮಾಗಧರು ಕಂಡರೂ ಕಾಣದಹಾಗೇ ಕೇಳಿದರೂ ಕೇಳದಹಾಗೇ ತಿಳಿದರೂ ತಿಳಿಯದಹಾಗೇ ಇದ್ದುಕೊಂಡು ತಡವಾಗಿ ಮಾಧ್ಯಮಗಳಲ್ಲಿ ಉತ್ತರಿಸುತ್ತಾರೆ! ಆ ಕಾಲದಲ್ಲೂ ಆಳುವ ಪಕ್ಷ ಮತ್ತು ವಿರೋಧಪಕ್ಷಗಳ ಜಗಳಗಳು ಮುಂದುವರಿಯುತ್ತವೆ. ಪರಿಹಾರಕ್ಕಾಗಿ ಸಮಾಜದಿಂದ ಬೇಡಿಪಡೆದ ’ಕೈ’ಗಳೇ ಅದನ್ನು ಸರಿಯಾಗಿ ತಲುಪಿಸದೇ ಮಧ್ಯೆ ತಿಂದುಹಾಕುತ್ತವೆ. ಸತ್ತ ಸಾವಿರಾರು ಜನರಿಗಾಗಿ ಜೀವಸಹಿತ ಉಳಿದ ಹಲವುಸಾವಿರ ನಿರಾಶ್ರಿತರಿಗಾಗಿ ಎಲ್ಲಾ ಸೇರಿ ಅಲ್ಲೆಲ್ಲೋ ಸಭೆಗಳನ್ನು ಮಾಡಿ ನಾವಿದ್ದೇವೆ ಎಂದು ಧ್ವನಿವರ್ಧಕದಲ್ಲಿ ಹೇಳಿಹೋದವರು ಮತ್ತೆ ಆ ಕಡೆ ತಲೆಹಾಕುವುದು ಚುನಾವಣೆ ಬಂದ ಸಂದರ್ಭಗಳಲ್ಲಿಯೇ! ಯಾವುದೋ ಮಠ-ಮಾನ್ಯ ಮತ್ತು ಸಾಮಾಜಿಕ ಸಂಘ-ಸಂಸ್ಥೆಗಳು ಕೊಡಬಹುದಾದ ಪರಿಹಾರವೇ ದೊಡ್ಡದಾಗಿರುತ್ತದೆ. ಆದರೆ ಜಪಾನಿನಲ್ಲಿ ಇಂದಿನ ಆ ದುರಂತ ಸನ್ನಿವೇಶ ಕಾಣುತ್ತಿರುವಂತೆಯೇ ಅವರು ೯೦೦ ಜೀವರಕ್ಷಕ ದಳಗಳನ್ನು ಕಳಿಸಿದ್ದಾರೆ. ತೊಂದರೆಗಳಲ್ಲಿ ಸಿಲುಕಿದ ಜನರಿಗೆ ಹಲವು ಮಾರ್ಗಗಳ ಮುಖಾಂತರ ಸಹಾಯ ಒದಗಿಸಲು ಹೆಣಗಾಡುತ್ತಿದ್ದಾರೆ.
ಸೃಷ್ಟಿಯಲ್ಲಿ ಯಾವುದೂ ಶಾಶ್ವತವಲ್ಲ ಎಂಬುದನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ ಆದಷ್ಟೂ ಅದನ್ನು ಮರೆತು ಮೆರೆಯುತ್ತೇವೆ. ನಮ್ಮ ಜೀವನವೇ ನಮ್ಮ ಕೈಯ್ಯಲ್ಲಿಲ್ಲ ಎಂಬುದು ನಮಗೇ ಅರಿವಿಗೆ ಬಾರದ ಮಿಥ್ಯಾಪ್ರಪಂಚದಲ್ಲಿ ಇಂತಹ ಘಟನೆಗಳನ್ನು ಮಾಧ್ಯಮಗಳಲ್ಲಿ ಕಾಣುವಾಗ ನಮಗನಿಸುವುದು " ಓಹೋಹೋ ಏನಪ್ಪಾ ಇದು ಸಾವಿರಾರು ವಾಹನಗಳೇ ಬೊಂಬೆಗಳ ಮಕ್ಕಳಾಟಿಕೆಯ ವಾಹನಗಳ ರೀತಿ ನೀರಿನಲ್ಲಿ ಕೊಚ್ಚಿಹೋಗುತ್ತಿವೆ ? "ಎಂದು ನಮ್ಮಲ್ಲೇ ಅಂದುಕೊಳ್ಳುತ್ತೇವೆ. ಬೀಸಿ ಬರುವ ಚಂಡಮಾರುತಕ್ಕಾಗಲೀ, ನುಗ್ಗಿಬರುವ ನೀರಿಗಾಗಲೀ, ಹೊತ್ತುರಿಯುತ್ತ ಬರುವ ಬೆಂಕಿಗಾಗಲೀ ನಮ್ಮ ಯಾವ ಆಧುನಿಕ ತಂತ್ರಜ್ಞಾನವೂ ತಡೆಹಾಕಲಾರದಲ್ಲ ! ಏನಿದ್ದರೂ ಸಣ್ಣ ಮಟ್ಟದಲ್ಲಿರುವ ಅವುಗಳನ್ನು ಹೇಗೋ ನಿಯಂತ್ರಿಣಕ್ಕೆ ತಂದಾಗ ’ನಾವು ಮಾಡಿದ್ದೇವೆ’ ಎಂದುಕೊಳ್ಳಬಹುದೇ ಹೊರತು ಮಿತಿಮೀರಿದ ಮಟ್ಟದಲ್ಲಿ ಅವುಗಳ ವ್ಯಾಪಕತ್ವ ಬೆಳೆದುನಿಂತಾಗ ಮನುಷ್ಯ ಸೋತುಹೋಗುತ್ತಾನೆ; ಕುಬ್ಜನಾಗಿ ಕಾಣುತ್ತಾನೆ.
ಇದೇ ಸಂದರ್ಭಗಳಲ್ಲಿ ನಮ್ಮಲ್ಲಿ ಮಾಧ್ಯಮವನ್ನು ಆತುಕೊಂಡಿರುವ ಹಣದ ಥೈಲಿಯ ಜ್ಯೋತಿಷಿಗಳು ಹೊಟ್ಟೆತೊಳೆದುಹೋದವರಂತೇ ಬಡಬಡಿಸುತ್ತಾ ಜನರಲ್ಲಿ ಇನ್ನಷ್ಟು ದಿಗಿಲನ್ನು ಉಂಟುಮಾಡುವುದು ವಿಪರ್ಯಾಸವೆನಿಸುತ್ತದೆ. ಜ್ಯೋತಿಷ್ಯವನ್ನು ಅತಿಯಾಗಿ ನಂಬುವ ಮಹಾಜನಗಳೇ ಕೇಳಿ-- ನಿಮ್ಮ ಹಣೆಯಲ್ಲಿ ಏನು ಬರೆದಿದೆಯೋ ಅದನ್ನು ಯಾವನೇ ಜ್ಯೋತಿಷಿಯೂ ತಿದ್ದಲಾರ. ಅದು ನಿಮಗೆ ಬೇಕಾಗಿರಲಿ ಬೇಡವಾಗಿರಲಿ ಘಟಿಸೇ ಘಟಿಸುತ್ತದೆ. ಅಂದಮೇಲೆ ಕೇವಲ ತಂತಮ್ಮ ಉಳಿವಿಗಾಗಿ ಓಡಿಹೋಗಿ ದೇವಸ್ಥಾನಗಳಲ್ಲೋ ಮಸೀದಿಗಳಲ್ಲೋ ಇಗರ್ಜಿಗಳಲ್ಲೋ ದೀಪಹಚ್ಚುವುದೇ ಮೊದಲಾದ ತುರ್ತು ಕಾರ್ಯ ಬೇಕಾಗಿಲ್ಲ! ದೀಪವನ್ನು ನಿತ್ಯವೂ ಹಚ್ಚಿ-ಅದು ಜ್ಞಾನವನ್ನೀಯುವ ಸಂಕೇತ,ಅದು ಅಂಧಕಾರವನ್ನು ಕಳೆಯುತ್ತದೆ. ಬದಲಾಗಿ ಸ್ವಾರ್ಥಿಯಾಗಿ ತಾನೋ ತಮ್ಮನೆಯವರೋ ಇತ್ಯಾದಿಯಾಗಿ ಹಾಯಾಗಿರಲಿ ಎಂದು ವಿಶೇಷವಾಗಿ ಪ್ರಾರ್ಥಿಸುವ ಕೈಂಕರ್ಯ ಬೇಡ. ಹುಟ್ಟಿಸಿದಾತನಿಗೆ ಗೊತ್ತು ನಿಮ್ಮ ಜಾತಕ. ಕೊಡುವಾತನಿಗೆ ಕೊಳ್ಳುವ ಹಕ್ಕೂ ಅರ್ಹತೆಯೂ ಪರಿಪೂರ್ಣ ಮಾಹಿತಿಯೂ ಇರುತ್ತದೆ. ತಾನೇ ಸೃಷ್ಟಿಸಿದ ಪ್ರಪಂಚವನ್ನು ಹೇಗೆ ಸುಸ್ಥಿತಿಯಲ್ಲಿಡಬೇಕು ಅಥವಾ ಯಾವಾಗ ನಾಶಗೊಳಿಸಬೇಕೆಂಬುದು ಆತನ ಲಕ್ಷ್ಯಕ್ಕಿರುತ್ತದೆ. ಹೀಗಾಗಿ ಹೆದರಿಕೆಯಿಂದ ನಾವು ಮಾಡುವ ಯಾವುದೇ ಪ್ರಾರ್ಥನೆಯೂ ಫಲಿಸುವುದಿಲ್ಲ. ಬದಲಾಗಿ ದೇವರೆಂಬ ಶಕ್ತಿಯನ್ನು ಕಚ್ಚಾಟವಿಲ್ಲದೇ ನಿತ್ಯವೂ ಸ್ನೇಹಿತನರೀತಿ, ನಮ್ಮದೇ ತಂದೆ-ತಾಯಿಗಳನ್ನು ನೋಡುವ ರೀತಿ[ಇಲ್ಲಿ ಕೆಲವರು ತಂದೆ-ತಾಯಿಗಳನ್ನು ನೋಡಿಕೊಳ್ಳುವ ರೀತಿ ಬದಲಿರಬಹುದು: ಅವರನ್ನು ಕೈಬಿಡಲಾಗಿದೆ]ನೋಡಿ ಆ ಶಕ್ತಿಯಲ್ಲಿ ನಿಮ್ಮ ದೈನಂದಿನ ಕರ್ತವ್ಯಪಾಲನೆಯ ವರದಿಯನ್ನು ಒಪ್ಪಿಸಿ. ಅದೇ ಸರಿಯಾದ ಮಾರ್ಗವೇ ಹೊರತು ವಿಜ್ಞಾನ ಜ್ಯೋತಿಷಿಗಳೆಂದುಕೊಳ್ಳುವವರಾಗಲೀ, ಧೂಳುಮೂಟೆಯಂತೇ ಪೀಠತುಂಬಾ ಮೈಚೆಲ್ಲಿ ಕುಳಿತು ಅಕರಾಳ ವಿಕರಾಳವಾಗಿ ಕೈಯ್ಯಾಡಿಸುತ್ತಾ ಬಾಯಿಗೆ ಬಂದಿದ್ದನ್ನು ಹಲಬುವವರಾಗಲೀ ಜ್ಯೋತಿಷ್ಯದಲ್ಲಿ ಇದಮಿತ್ಥಂ ಎನ್ನುತ್ತಾ ಇರುವ ಹತ್ತು ಬೆರಳಿಗೆ ಇಪ್ಪತ್ತೋ ಇಪ್ಪತ್ತೈದೋ ಉಂಗುರ ತೊಟ್ಟು ಭವಿಷ್ಯ ನುಡಿಯುವವರಾಗಲೀ ಹೇಳುವುದು ಕೇವಲ ಕೇವಲ ಕಾಕತಾಳೀಯ.
ಇಲ್ಲಿ ಒಂದನ್ನು ನೆನಪಿಡಬೇಕು. ಖಗೋಲ ಗಣಿತ ಸತ್ಯ. ಅದರಿಂದ ಅವರು ಗುಣಿಸಿ ಹೇಳುವ ಗ್ರಹಣವೇ ಮೊದಲಾದ ಘಟನೆಗಳೂ ಸತ್ಯ. ಆದರೆ ಫಲ ಜ್ಯೋತಿಷ್ಯ ಇದೆಯಲ್ಲಾ--ಇದರಲ್ಲಿ ಹುರುಳಿಲ್ಲ. ಎಲ್ಲಾಂದರೆ ನಾಳೆ ಏನು ಘಟಿಸುತ್ತದೆ ಎನ್ನುವುದನ್ನು ಮೊದಲೇ ಸೂಚಿಸಲು ಮುಖ್ಯಮಂತ್ರಿಗಳಿಗೋ ಪ್ರಧಾನಮಂತ್ರಿಗಳಿಗೋ ಆಪ್ತ ಜ್ಯೋತಿಷ್ಯ ಕಾರ್ಯದರ್ಶಿಗಳನ್ನು ನೇಮಿಸಲಾಗುತ್ತಿತ್ತು. ಹಾಗಾಗುವುದಿಲ್ಲ ಯಾಕೆ ? ಯಾವ ಜ್ಯೋತಿಷಿಯೂ ಪರಿಪೂರ್ಣನಲ್ಲ. ಅದಲ್ಲದೇ ಫಲ ಜ್ಯೋತಿಷ್ಯದಲ್ಲಿ ಅವರ ಆಧ್ಯಾತ್ಮಿಕ ಬ್ಯಾಲೆನ್ಸ್ ಖರ್ಚಾಗುತ್ತದೆ--ಅವರು ಮಾಡಿದ ಜಪ-ತಪ ಪ್ರಾರ್ಥನೆಯಿಂದ ಅವರು ಹೆಳಿದ ಕೆಲವು ಸಂಗತಿಗಳು ನಡೆಯಬಹುದು --ಆದರೆ ಅಂತಹ ತಪೋ ನಿಷ್ಠ ಜ್ಯೋತಿಷಿಗಳು ಮಾಧ್ಯಮಗಳಲ್ಲಿರಲಿ ನಗರವಾಸಿಗಳಿಗಂತೂ ಸಿಗುವುದಿಲ್ಲ.
ಪ್ರಕೃತಿಯಲ್ಲಿ ಯಾವುದು ಆಗಬಾರದಿತ್ತೋ ಅಂತಹ ಅನಾಹುತಗಳು ಆಗಾಗ ಘಟಿಸುತ್ತವೆ. ನಮ್ಮೆಲ್ಲರನ್ನು ಆಗಾಗ ಭಯ ವಿಹ್ವಲರನ್ನಾಗಿ ಮಾಡುತ್ತವೆ. ಚಲಿಸುವ ರೈಲು ಅಪಘಾತಕ್ಕೀಡಾದಾಗ ರೈಲಿನಲ್ಲಿ ಹೋಗಲು ಭಯ, ಹಾರುವ ವಿಮಾನ ಧರೆಗುರುಳಿ ಉರಿದುಹೋದಾಗ ವಿಮಾನಯಾನದಲ್ಲೇ ಶಂಕೆ, ಮಾರ್ಗಮಧ್ಯೆ ಅಪಘಾತಕ್ಕೀಡಾದ ವಾಹನಗಳನ್ನು ನೋಡಿ ವಾಹನಪ್ರಯಾಣವೇ ಬೇಡವೆಂಬ ಅನಿಸಿಕೆ, ಯಾವುದೋ ಕಟ್ಟಡ ಕುಸಿದುಬಿದ್ದದ್ದನ್ನು ನೋಡಿ ನಾವಿರುವ ತಾಣ ಗಟ್ಟಿಯಿದೇಯೋ ಅಲುಗಾಡುತ್ತಿದೆಯೋ ಎಂಬ ಆತಂಕ, ಬಾಂಬು ಹಾಕಿದ್ದಾರೆಂಬ ಸುದ್ದಿ ತಿಳಿದಾಗ ನಗರವಾಸವೇ ಬೇಡ ಎಂಬ ತೀರ್ಮಾನ .....ಹೀಗೇ ಒಂದೇ ಎರಡೇ ನಮ್ಮ ಅನಿಸಿಕೆಗಳು ಹಲವು. ಆದರೆ ನಮ್ಮ ಭಾವನೆಗಳನ್ನೂ ಮೀರಿದ ಜಗನ್ನಿಯಾಮಕ ಶಕ್ತಿ ನಾವು ಏನೇ ಮಾಡಿದರೂ ಅದರ ಕರ್ತವ್ಯದಲ್ಲಿ ಅದು ನಿರತವಾಗಿರುತ್ತದೆ. ಭುವಿಯ ಋಣ ತೀರಿದ ಜೀವಿಯನ್ನು ಕ್ಷಣಕಾಲವೂ ಇಲ್ಲಿರಗೊಡದು ಆ ಶಕ್ತಿ. ಋಣವಿದ್ದರೆ ಏನೇ ಆದರೂ ಸಾಯುವ ಪ್ರಶ್ನೆ ಬರುವುದೇ ಇಲ್ಲ.
ಅರೆಪ್ರಜ್ಞಾವಸ್ಥೆಯಲ್ಲಿ ೩೭ ವರ್ಷಗಳಿಂದ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿ ಇನ್ನೂ ಜೀವದಿಂದಿರುವ ಅರುಣಾ ಶಾನಭಾಗ್ ಸುದ್ದಿ ಕೇಳಿದ್ದೀರಿ. ಕೊಂಕಣ ರೈಲ್ವೆಯಲ್ಲಿ ಕೆಲಸಮಾಡುತ್ತಿದ್ದ ದಕ್ಷಿಣ ಕನ್ನಡದ ಶೆಟ್ಟರೊಬ್ಬರು ಬೆನ್ನಮೇಲೆ ಕಲ್ಲು ಬಿದ್ದ ಪರಿಣಾಮ ೧೭-೧೮ ವರ್ಷಗಳಿಂದ ಸೊಂಟದಕೆಳಭಾಗಕ್ಕೆ ಯಾವುದೇ ಚಲನೆಯಿಲ್ಲದೇ ಮುದಿ ತಾಯಿಯ ಶುಶ್ರೂಷೆಯಲ್ಲಿ ಇನ್ನೂ ಜೀವದಿಂದಿದ್ದಾರೆ. ಇವರುಗಳಿಗೆಲ್ಲಾ ನಮ್ಮ ಆಧುನಿಕ ಔಷಧೀಯ ಪದ್ಧತಿಗಳೂ ಏನೂ ಮಾಡಲಾಗಲಿಲ್ಲ! ಎರಡು ದೇಹದಾಕೃತಿಗಳು ಇದ್ದ ಸಣ್ಣ ಮಗು ಲಕ್ಷ್ಮಿಯ ಶರೀರದ ಬೇಡದ ಭಾಗಗಳನ್ನು ತೆಗೆದುಹಾಕಿ ಮತ್ತೆ ಸಾಧಾರಣ ಮಾಮೂಲು ಶರೀರದ ರೂಪಕ್ಕೆ ತಂದಿದ್ದಾರೆ--ಇದು ಸಾಧ್ಯವಾಯಿತು, ಆದರೆ ಎಳವೆಯಲ್ಲೇ ಆ ಹುಡುಗಿ ಬಹುದೊಡ್ಡ ಶಸ್ತ್ರಕ್ರಿಯೆಗೆ ಒಳಗಾಗಬೇಕಾಯಿತು. ಅಂದಮೇಲೆ ಎಲ್ಲರ ಮಾಹಿತಿಯನ್ನೂ ದಾಖಲಿಸಿಕೊಳ್ಳುವ ಸರ್ವೇ ವಿಭಾಗವೊಂದಿದೆ ಅಂತಾಯಿತು! ಆ ಸರ್ವೇ ವಿಭಾಗ ನಮಗೆ ಕಾಣುವಂಥದ್ದಲ್ಲ, ಕಾಣದಿದ್ದರೂ ಕಾರ್ಯಮಾತ್ರ ನಡೆದೇ ಇದೆ.
ಜಪಾನಿನಲ್ಲಿ ಪ್ರಕೃತಿ ವಿಕೋಪ ನಡೆದ ಈ ಸಂದರ್ಭದಲ್ಲಿ ನಾವು ಪ್ರಾರ್ಥಿಸಬಹುದಾದದ್ದಿಷ್ಟೇ " ಹೇ ಜಗನ್ನಿಯಾಮಕನೇ, ಮಾನವ ಮಾತ್ರರು ಹಿಂದೆ ಮಾಡಿದ ಎಲ್ಲಾ ಕುಕೃತ್ಯಗಳನ್ನೂ ತಜ್ಜನಿತ ಪಾಪಫಲಗಳ್ನೂ ಒಮ್ಮೆ ನಿನ್ನ ಪುಸ್ತಕದಿಂದ ಅಳಿಸಿಬಿಡು. ಹಲವರ ಆಕ್ರಂದನ ಕೇಳಿ ನಾವು ಮನಸಾ ಸೋತಿದ್ದೇವೆ, ನೋವನುಭವಿಸುತ್ತಿದ್ದೇವೆ. ನಿನ್ನ ಕ್ರೀಡಾಂಗಣವಾದ ಈ ಜಗದಲ್ಲಿ ಆದಷ್ಟೂ ಮತ್ತೆಂದೂ ಇಂತಹ ದುರ್ಘಟನೆಗಳು ಮರುಕಳಿಸದಂತೇ ಶಾಂತಿಯಿಂದ ನಡೆಸು. ನೀನೇ ಇಚ್ಛಿಸಿದಷ್ಟು ದಿನ ಇದ್ದು ನಿನ್ನಲ್ಲಿಗೇ ಮರಳುತ್ತೇವೆ ..ಆದರೆ ಆ ನಡುವೆ ಈ ದಯನೀಯ ಸ್ಥಿತಿಗೆ ನಮ್ಮನ್ನು ನೂಕುವ ನೂಕಿ ಪರೀಕ್ಷಿಸುವ ಹಂತ ಬೇಡ. ಎಲ್ಲರೂ ನಿನ್ನ ಮಕ್ಕಳೇ. ತಪ್ಪು ಮಾಡಿದ ಮಕ್ಕಳನ್ನು ಕ್ಷಮಿಸುವುದು ತಂದೆಯಾದ ನಿನ್ನಲ್ಲೇ ಇದೆ. ನಮಗೆಲ್ಲಾ ಒಳ್ಳೆಯ ಪ್ರೇರೇಪಣೆ ಕೊಡು. ಎಲ್ಲರಿಗೂ ಒಳಿತಾಗಲಿ, ಎಲ್ಲೆಲ್ಲೂ ಸುಭಿಕ್ಷ, ಸಮೃದ್ಧಿ ನೆಲೆಸಲಿ."
ಹೌದು, ಭಟ್ಟರೆ. ‘ಮಕ್ಕಳ ಮೇಲೆ ಮುನಿಯಬೇಡ, ತಾಯಿ’ ಎಂದು ಪ್ರಾರ್ಥಿಸುವದರ ಹೊರತಾಗಿ ಬೇರೇನು ಮಾಡಬಹುದು ನಾವು?
ReplyDeleteಭಟ್ಟರೆ;ನಿಮ್ಮ ಲೇಖನದಲ್ಲಿ ಸುಮಾರು ವಿಷಯಗಳ ಬಗ್ಗೆ ವಿಚಾರ ಮಂಥನವಿರುತ್ತದೆ.
ReplyDelete'ಗ್ರಹ ಗತಿಯ ತಿದ್ದುವನೆ ಜೋಯಿಸನು ಜಾತಕದಿ'ಎನ್ನುವ ಡಿ.ವಿ.ಜಿ.ಯವರ ಮಾತುಗಳು ನೆನಪಾದವು.
ಭಟ್ಟರೇ, ಪ್ರಕೃತಿಯ ಮು೦ದೆ ನಾವೆಲ್ಲಾ ತೃಣಮಾತ್ರರು. ಜಗನ್ನಿಯಾಮಕನ ಲೀಲೆ ಬಲ್ಲವರಿಲ್ಲ. ಹೌದು, ಇ೦ದು ಖೊಟ್ಟಿ ಜ್ಯೋತಿಷಿಗಳ ಬೊಬ್ಬೆ ಜಾಸ್ತಿ ಆಗಿದೆ. ಅವರಿಗೆ ಮನೆಹಾಕುವ ವಾಹಿನಿಗಳಿಗೂ ಕಮ್ಮಿ ಇಲ್ಲ. ನಾಳೆ ಏನು ಎ೦ಬ ಅರಿವಿಲ್ಲದ ನಾವು ಎಷ್ಟೊ೦ದು ಸ್ವಾರ್ಥಪರತೆಯಿ೦ದ ಬದುಕುತ್ತಿದ್ದೇವಲ್ಲ.
ReplyDeleteಹುಟ್ಟು ಹೋರಾಟಗಾರರಾದ ಜಪಾನಿಯರ ಈ ಸ್ಥಿತಿಗೆ ಮರುಕ ಉಂಟಾಗಿತ್ತಿದೆ. ಹಾಗಂತ ಅವರು ಎಲ್ಲಾಹೊಯ್ತು ಅಂತಾ ಕುಳಿತು ಕೊಳ್ಳುವ ಜನರಲ್ಲ. ಬಾಂಬ್ ಬಿದ್ದ ನಂತರ ಚೇತರಿಸಿಕೊಂಡ ಬಗೆ ನಿಜಕ್ಕೂ ಶ್ಲಾಘನೀಯ. ಇನ್ನು ಸ್ವಲ್ಪ ವರ್ಷಕ್ಕೆ ಜಪಾನ್ ಮತ್ತೆ ಮೇಳೆಳುವದು ಖಚಿತ. ಹಾಗೆ ದೇಶಕಟ್ಟುವ ಬುದ್ದಿ ನಮಗೂ ಇದ್ದಿದ್ದರೆ ಈ ಹೊತ್ತಿಗೆ ಭಾರತ ನಿಜಕ್ಕೂ ಸಿರಿವಂತ ದೇಶವಗುತ್ತಿತ್ತು. ಆದರೆ ನಮ್ಮ ಕೆಲ ರಾಜಕಾರಿಣಿಗಳು ಇದ್ದಾರಲ್ಲ.!
ReplyDeleteಸರ್,
ReplyDeleteನಾವು ಪ್ರಕೃತಿ ಮಾತೆಯನ್ನು ಪ್ರಾರ್ಥಿಸುವುದು ಬಿಟ್ಟರೆ ಬೇರೆ ದಾರಿ ತೋರುತ್ತಿಲ್ಲ. ನಮ್ಮ ಹೊಟ್ಟೆ ಜ್ಯೋತಿಷಿಗಳು ಸ್ವಲ್ಪ ದಿನ ಮರೆಯಾಗಿರಲಿ ಅಂತ ಆಶಿಸುತ್ತೇನೆ.
Bhatre,
ReplyDeletetumbaa vicharasheela lekhana, prakruti maate munisu kadimeyaagi ella kadeyallu olleyadaagali...
ಮಾನ್ಯ ಭಟ್ಟರೆ,
ReplyDeleteನಿಮ್ಮ ಲೇಖನವನ್ನೋದಿ ಮನದುಂಬಿಬಂತು. ಉತ್ತಮವಾದ ಮತ್ತು ಕಳಕಳಿಯುಳ್ಳ ಸಂದೇಶವನ್ನು ನೀಡಿದ್ದೀರಿ. ಧನ್ಯವಾದಗಳು ನಿಮಗೆ.
ನಿಮ್ಮ ಈ ಲೇಖನ ಮನ ಮುಟ್ಟಿತು.. ಭೂಕಂಪನಗಳ ನೆಲೆನಾಡಲ್ಲಿ ಜಪಾನೀಯರ ಜೀವನೋಪಾಯಗಳು ಮನಸೆಳೆದವು.. ಹತವಾದ ಜೀವಗಳಿಗೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವೆ..
ReplyDeleteಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ವಂದನೆಗಳು. ದುರ್ಮರಣಕ್ಕೀಡಾದ ಜಪಾನಿನ ಹಾಗೂ ಅಲ್ಲಿ ನೆಲೆಸಿದ್ದ ಮತ್ತಿತರ ದೇಶಗಳ ಜನರಿಗೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.
ReplyDelete