ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, March 14, 2010

ಹರಕಂಗಿ ಮಾಬ್ಲೇಶ್ವರ ಪುರಾಣವು

ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಕಾಮಕಾಂಡದ ಕಾವೀಪರ್ವದ 420 ನೇ ಶ್ಲೋಕದಲ್ಲಿ 8 ನೇ ಉಪಸರ್ಗದಲ್ಲಿ ಉಲ್ಲೇಖವಿದೆ. " ಕಾಮಾತುರಾಣಾಂ ನ ಭಯಂ ನ ಲಜ್ಜಾ " ಅಂದರೆ ಕಾಮದಲ್ಲಿ ಅತೀವ ಆಸಕ್ತಿಯುಳ್ಳವನಿಗೆ ಯಾವ ಭಯವೂ ನಾಚಿಕೆಯೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದೂ ಅವನೊಳಗಿನ 'ಕಳ್ಳ ಬೆಕ್ಕು ಇಲಿಹಿಡಿಯಲು' ಹಗಲಿರುಳೂ ಸತತ ಪ್ರಯತ್ನಿಸುತ್ತಿರುತ್ತದೆಂದೂ ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ.

ವನವಾಸ
- ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ಬಿಡದಿ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಅತೃಪ್ತ ಆತ್ಮದ ಆರ್ತನಾದ ಅವನಿಗೆ ಕೇಳಿಸಿತು . ಈಗ ಆತ್ಮಗಳು ಅಳುತ್ತವೆಯೇ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಅತೃಪ್ತ ಆತ್ಮಗಳದ್ದೂ ಒಂದು ಲೋಕವಿದೆ ಅಂತ ಒಪ್ಪಿಕೊಳ್ಳದಿದ್ದರೂ ದೆವ್ವ-ಭೂತ-ಪಿಶಾಚಾದಿಗಳು ಭುವಿಯಲ್ಲಿ
ಮನೆಮಾಡಿರುವುದಂತೂ ಸತ್ಯ ಎಂದು ಇವತ್ತಿನ ವಿಜ್ಞಾನವೇ ಒಪ್ಪಿಕೊಂಡಿದೆ. ಹೀಗಾಗಿ ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ " ತರುಲತೆಗಳೇ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು??? ................. ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆರ್ತಸ್ವರ ಕೇಳಿದ ರಾಮ ಅದರ ಬಳಿ ಬಂದು "ಏನಾಯಿತು ?" ಎಂದು ಕೇಳಿದಾಗ ಅತೃಪ್ತ ಆತ್ಮ ಹೀಗೆ ಉತ್ತರಿಸಿತು .

"ನೋಡು ರಾಮ ನಿನ್ನ ತಮ್ಮ ಲಕ್ಷ್ಮಣನಿಂದ ಬಾಣವನ್ನು ತಿಂದು ದೇಹವನ್ನು ತ್ಯಜಿಸಿದ ಲಂಕೆಯ ಹಲವಾರು ರಕ್ಕಸರಲ್ಲಿ ಓರ್ವ ಖೂಳ ರಕ್ಕಸ ನಾನು . ನನ್ನನ್ನು ಹಿಂಡಿ ರಸ ತೆಗೆದು ಬಿಸಾಕುವ ಕಬ್ಬಿನ ಸಿಪ್ಪೆಯಂತೆ ಮಾಡಿದ ಲಕ್ಷ್ಮಣಾದಿಗಳು ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು ಹೋಗಿದ್ದಾರೆ. ಇರುವುದಕ್ಕೆ ದೇಹವಿರದೇ ನನ್ನಲ್ಲಿರುವ ಬಹಳ ಬಯಕೆಯ ಸುಖೋಪಭೋಗಗಳನ್ನು ಪಡೆಯಲಾರದೇ ಬಹುಕಾಲದಿಂದ ಪರಿತಪಿಸುತ್ತಿರುವೆ. ರಾಮರಾಜ್ಯದಲ್ಲಿ ಇದು ನ್ಯಾಯವೇ ??" ಎಂದು ಕೇಳಿದಾಗ ರಾಮ ಹೇಳಿದ " ಎಲೈ ರಕ್ಕಸಾತ್ಮವೇ ಹೀಗೆ ಮರದ ಕೆಳಗೆ ಬೀಳುವುದು ನಿನ್ನ ಪೂರ್ವ ಜನ್ಮದ ಕರ್ಮ ಫಲ. ನಾನು ವಿಧಿಗೆ ವಿರುದ್ಧವಾಗಿ ನಿನ್ನನ್ನು ಬದುಕಿಸಲಾರೆ . ಆದರೆ ನನ್ನ ತಮ್ಮನ ಬಾಣದಿಂದ ಗತಿಸಿದ್ದಕ್ಕಾಗಿ ಕಲಿಯುಗದಲ್ಲಿ ನಿನಗೆ ಪುನರ್ಜನ್ಮ ಪ್ರಾಪ್ತಿಯಾಗಲೆಂದು ಆಶೀರ್ವದಿಸುತ್ತೇನೆ.ಅಲ್ಲಿ ನೀನು ಎಲ್ಲರನ್ನೂ ವಂಚಿಸುತ್ತಾ ನಿನ್ನ ಐಹಿಕ ಭೋಗಗಳನ್ನು ಯಥೇಚ್ಛ ತೀರಿಸಿಕೊಂಡು ಪುನರಪಿ ರೌರವ ನರಕಕ್ಕೆ ಬರುವಷ್ಟು ಪಾಪಗ್ರಸ್ತವಾಗುವಂತೆ ಅನುಗ್ರಹಿಸುತ್ತೇನೆ, ಆ ಮೂಲಕವಾದರೂ ಮತ್ತೆ ಬೇರೆ ಏನಾದರೂ ಆಗಿ ಜನ್ಮಾಂತರಗಳಲ್ಲಿ ಪುಣ್ಯ ಸಂಚಯನ ಮಾಡಿ ಕೊನೆಗೆ ಮಾಮೂಲಿ ಮನುಷ್ಯನಂತೆ ಮರಳಿ ಜನಿಸು "ಎಂದು ಹರಸಿದ . ಅದರ ಪರಿಣಾಮವಾಗಿ ಹುಟ್ಟಿದ ಅವತಾರವೇ ನಮ್ಮ ಕಳ್ಳಕಾವಿಯ ಅವತಾರ.

ತನ್ನ ಅಂಗಿ ಹರಿದಿದ್ದರಿಂದ, ಬೇರೆ ಹೊಲಿಸಿಕೊಳ್ಳಲು ಬಡತನವಿದ್ದದ್ದರಿಂದ ಅದೇ ಹರುಕು ಅಂಗಿಯನ್ನೇ ತನ್ನ ಕಾವ್ಯನಾಮವಾಗಿಸಿಕೊಂಡು ಆದಿಕವಿ ಮಾಬ್ಲೇಶ್ವರ ತನ್ನ ' ಹರಕಂಗಿ ಮಾಬ್ಲೇಶ್ವರ ಪುರಾಣವು ' ವೆಂಬ ಹೆಸರಿನಿಂದ ಈ ಮಹಾಕಾವ್ಯವನ್ನು ಧರೆಯ ಜನರುಪಕಾರಕ್ಕೆ ಲಿಖಿತ ರೂಪದಲ್ಲಿ ಕೊಟ್ಟ. ಇದರ ಫಲಶ್ರುತಿಯಂತೆ ಇದನ್ನು ಓದಿದವರಿಗೆ, ಬೇರೆಯವರಿಗೆ ಓದಲು ಹೇಳಿದವರಿಗೆ, ಓದಿ ಯತಾನ್ ಶಕ್ತಿ ನಗುವವರಿಗೆ , ಇದರ ಸಲುವಾಗಿ ಈ ಮೇಲ್ ಮಾಡಿ ಸ್ನೇಹಿತರನ್ನು ರಂಜಿಸುವವರಿಗೆ, ಕೆಲಸವಿಲ್ಲದೇ ಗಣಕಯಂತ್ರದ ಮುಂದೆ ಕುಳಿತು ಹೊಟ್ಟೆಬರಿಸಿ ಕೊಂಡವರಿಗೆ, ಬಂದ ಹೊಟ್ಟೆ ಕರಗಲೆಂದು ಶತಾಯಗತಾಯ ಪಾರ್ಕಲ್ಲಿ ತಕತಕತಕನೆ ಕುಣಿವವರಿಗೆ, ಇಂತಹ ಪಾಪಾತ್ಮರ ಪಾಪಜನ್ಮದ ಕಥೆ ಕೇಳಿ ಇಹದಲ್ಲಿ ಬಳಲಿ ಬೆಂಡಾಗಿರುವ ನತದೃಷ್ಟ ಕುವರಿಯರಿಗೂ ಇದರಿಂದ ಅವರವರ ಸಂಕಷ್ಟ ನಿವಾರಣೆಯಾಗಿ ಒಳಿತಾಗಲೆಂದೂ ಪುರಾಣ ಸಾರುತ್ತದೆ. ಅದರ ಆಯ್ದ ಭಾಗಗಳನ್ನು ಸಂಪ್ರದಾಯದಂತೆ ಆದಿ-ಅಂತ್ಯಭಾಗಗಳೊಂದಿಗೆ ಯಥಾವತ್ ಇಲ್ಲಿ ಕೊಡಲಾಗಿದೆ--





ಹರಕಂಗಿ ಮಾಬ್ಲೇಶ್ವರ ಪುರಾಣವು

ಪುರಾಣದ ಆದಿ ಭಾಗದಲ್ಲಿ ಕವಿ ತನ್ನ ಸ್ವಗತದಲ್ಲಿ ........

ವಂದಿಪೆನು ಗಣನಾಥಗೊಂದಿಪೆನು ಶಾರದೆಗೆ ಬಂದ ಭಂಗವ ಕಳೆಯಲ್ಕೆ ಸುಕೃತವ ನೀವ ಕಥೆಯ ಹೊಸೆಯಲ್ಕೆ ಹರಸು ಹರಸೆಂದೆನುತ
ನಮಿಸಿ ನಾರಾಯಣನ ನರನ ಪುರುಷೋತ್ತಮನ ವ್ಯಾಸವಾಲ್ಮೀಕಿಗಳ ಬಳಿಕ ಪೇಳ್ವುದು ಜಯವ

ಪುರಾಣದ ಮಧ್ಯಭಾಗ ಬಹಿರ್ಗತದಲ್ಲಿ .........


ರೂಢಿಯೋಳ್ ನಮಗೆ ಮೀಡಿಯದವರ ಬೆಂಬಲವು ನೋಡಿಬಂದಿದೆ ಹಲವು ಬೆಳಕಿಂಡಿಗಳಲಿ ಜಾಡು ಹಿಡಿದು ಝಾಡಿಸಲ್ಕೀ ಲಾಡು ಪಂಚಾ -ಮೃತವ ನಿತ್ಯ ಸತ್ಯದ ಪೂಜೆಯ ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಬಿಸಜನಾಭನ ಪೂಜೆ ಕೈಂಕರ್ಯ ಕೈಕಸುಬಿನಿಂ ಪೂರೈಸಿ ಕಪಟದಲಿ ಕನವರಿಸೆ ಪಂಚತಾರಾ ವ್ಯವಸ್ಥೆಯೋಳ್ ಕೆಸರಿಲ್ಲದ ಸರೋವರಂಗಳನು ಕೃತ್ರಿಮ ನಿರ್ಮಿಸಲ್ಕೆ ಮನದಲಿ ಕೆಸರಿಲ್ಲದ ಭಕ್ತರದೋ ತಾವ್ ಬಂದು ಧೊಪ್ಪೆಂದು ಮುಗಿಬಿದ್ದರದಾ ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಶಾವಿಗೆ ಬಾತು ಖೀರು ಪರಮಾನ್ನ ಮಾಳಿಗೆಯ ವಸತಿ ಮೃದ್ವಂಗಿ ಕೈಕಾಲು ಹೊಸೆಯಲ್ಕೆ ಚಿತ್ರತಾರೆಯರಿಟ್ಟು ಮಿಗೆ ಎಲ್ಲ ಶಿಷ್ಯಂಗಳ್ಗೆ ಬ್ರಹ್ಮಪದ ಬೋಧಿಸುವೋಲ್ ನೀಮು ಮದುವೆಯಪ್ಪುದು ನಿಮಗೆ ಬಿಟ್ಟಿದ್ದೆನುತ ಕಾವಿಯೋಳ್ ಕಣ್ಕಟ್ವರೈ ಹರಹರಾ ಹರಕಂಗಿ ಮಾಬ್ಲೇಶ್ವರಾ!

ವ್ಯಸನದೋಳ್ ತಲೆಕಾಯ್ವರಿಲ್ಲೆನಗೆ ಅದಕೆ ಮಸಿಯ ಬಳಿಯಲುಪಕ್ರಮಿಸಿಹರು ಎಂದು ತಿಳಿಯದೇ
ಸ್ವಯಂಕೃತಾಪರಾಧವಂ ಮಾಡಿ ಸೀಡಿಯಲಿ ಸಕಲರ್ಗೆ ತೋರಿಸಲ್ಕೆ ಭಕುತರೆಲ್ಲ ಹೌಹಾರಿ ಬಿಡದಿಯ ತೊರೆದು
ರಕುತಬಸಿಯುತ ಹಾರೋಡಿ ಹೋದರೈ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಪಕಪಕನೆ ಅರ್ಥಮಪ್ಪ ಆಂಗ್ಲಭಾಷೆಯ ಸುಖದಿ ಉಚ್ಚರಿಸುತ್ತ ಮತಿಹೀನ ನಾನಾದೆನೇಂ ಎನುಕೊಳುತ ಮತ್ತೆ ಪುನರಾವರ್ತಿಸದಂತೆ ಎಚ್ಚರೆಚ್ಚರಮಿರುವೆನೆನುತ ಯುಕುತಿಯ ಮೆರೆಯೇಮ್ ಸಂದರ್ಶಕನಿಟ್ಟ ಚಿಲ್ಲರೆ ಪ್ರಶ್ನೆಗಳಿಗೇಂ ಉತ್ತರಿಸುತ ಎಡವಿದ ಕಥೆಯಪೇಳ್ದನು ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!


ಬಿಸಿಲಝಳ ಅಬ್ಬರಿಸೆ ಸುಖವಿಲ್ಲ ದೇಹದಲಿ ಇಸಿದುಕುಡಿದರೆ ಶಾಂಪೇನು ಕಷಾಯವಂ ಶಯ್ಯೆಯೋಳ್
ನಸುನಾಚಿ ಬರ್ಪ ಹಸುಗೂಸ ನೆನೆನೆನೆದು ರಂಜಿತಾನಂದದಿಂದ ಮುಸಲ ಮುದ್ಗಲ ವಜ್ರಾಯುಧಗಳೆಲ್ಲ ಬೀಸಿ ವಕ್ಕರಿಸುವ ನಿರೀಕ್ಷೆಯಂ ಕಳೆದುಕೊಂಡು ನಸುನಕ್ಕು ಮೂರುದಿನ ಲೇಟಾಗಿ ಯೂಟ್ಯೂಬಲೆಂದ ನೋಡಾ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಏನುತಿಳಿದಿರಿ ನೀಮು ಎನ್ನನೇನು ತಿಳಿದಿರಿ ಆತುರದಿ ನಿರ್ಧರಿಸಬೇಡೀ ಯೆನುತ ಆತುಕೊಂಡಾ ಮಂಚವೆಲ್ಲಂ ಬರೇ ಕಪೋಲಕಲ್ಪಿತಮಕ್ಕು ರಾಶಿಕಾಂಚಾಣಮಂ ನಾ ಸುರಿಯೇ ರಾಜಕೀಯವೇ ಹಾಸುಹೊಕ್ಕಾಗಿರ್ಪ ಆಶ್ರಮದೊಳೆಂದ ನೋಡಾ ಹರಹರಾ ಹರಕಂಗಿ ಮಾಬ್ಲೇಶ್ವರಾ!

ವನಜಮುಖಿಯರು ತಾಮು ಹಲವುಕಾಲದಿ ಇರ್ಪರ್ ಯೆನಗದೆಲ್ಲ ಹೊಸದಲ್ಲವೈ ಯೀಗ ಕಣಜದುಡ್ಡಿನದಾಯ್ತು ಬಹಳ ಜನ ಮುಗಿಬಿದ್ದರದಕೆ ತಾ ಪಾಲು ಕೊಡದಿರ್ಪೆ ಅದಕೀಗಲಂ ಅವರುಗಳ್ ಸಂದಿಯೋಳ್ ಕ್ಯಾಮರಮಿಟ್ಟು ನಡೆಪ ಆಷ್ಟಾಂಗಯೋಗವಂ ಚಿತ್ರೀಕರಿಸಿ ಬಿತ್ತರಿಪರ್ ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಪೊರಗೆ ನಮ್ಮನು ನೋಡಿ ಪೊಗಳಲ್ಕೆ ಒಂದು ಕಾಮನ್ ಕಾರಣವಂ ಮುಂದಿಟ್ಟುಮಿಗೆಯಿದಕೆ 'ರಾಜಕೀಯ ಷಡ್ಯಂತ್ರ' ಮೆನುತ ಪೆಸರಿಸುವೋಲ್ ಕೆಲಮಂದಿಯಿರ್ಕು ಅವರ್ಗೆ ಬೇರೆ ಕಸುಬಿಲ್ಲ ನಮ್ಮಂಥ ಬಣ್ಣದ ಕಾವಿಯಂ ಬೆಂಬಲಿಸಲ್ ಭರದಿ ಬರ್ಪರ್ ನೋಡ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಕಾಕಶುಕಪಿಕವಾಗಿ ಪಂದಿನಾಯಿಯದಾಗಿ ಮೇಕೆಕುರಿಮರಿಯಾಗಿ ಏನದರೊಂದಾಗಿ ಮೇಣ್ ಮರಿದುಂಬಿಯಾಗಿ ಹಲವು ಪೂವುಗಳ್ಗೆ ಪರಾಗವನಿಕ್ಕೆ ಕಾವಿಯಂ ಭರದಿ ಅಂಬರದೆತ್ತರಕೇರಿ ಉದ್ಧರಿಪ ಸಸಾರವಲ್ಲದ ಸಂಸಾರಮಿದು ಸಂ-ನ್ಯಾಸ ನ್ಯಾಸದಿಂ ಪೂರ್ಣಗೊಳಿಪೆನೆಂದ ಹರಹರಾ ಹರಕಂಗಿ ಮಾಬ್ಲೇಶ್ವರಾ!

ಫಲಶೃತಿ....

ಭಕ್ತಿಯಿಂದೀಪುರಾಣಮಂ ಕೇಳ್ವರ್ಗೆ ಬೋಧಿಪರ್ಗೆ ಮಿತ್ರರಂದದಿಂ ಈ -ಮೇಲ್ ಮಾಳ್ಪರ್ಗೆ ಶಕ್ತ್ಯಾನುಸಾರ ಸತತಂ ನಕ್ಕು ಮತ್ತೆಯೀಪುರಾಣಮಂ ಎತ್ತಿಟ್ಟು ಕೊಡಲ್ಕೆ ಹಲವರ್ಗೆ ಬೇಕಾದ ರೀತಿ ಓದಿ ಸಂತಸವಂ ಪಡೆಯಲ್ಕೆ ಮುಕ್ತದ್ವಾರದಿ ಗೂಗಲ್ ಬಜ್ಜಿನೋಳ್ ಗುಜ್ಜಾಡಿಪರ್ಗೆ ಮಿದಲ್ಲದೇ ನಜ್ಜುಗುಜ್ಜಾಗಿ ಕನಸು ಕಳಕೊಂಡ ಕುವರಿಯರ್ಗೆ ಬೊಜ್ಜುದೇಹವಂ ದಣಿಸದೆ ಗಣಕಯಂತ್ರದ ಮುಂದೆ ಕುಂತಿರ್ಪ ಸಕಲರ್ಗೆ ಸದಾ ಸನ್ಮಂಗಳಮಪ್ಪುದು

ಪುರಾಣದ ಅಂತ್ಯಭಾಗ ಪುನಃ ಸ್ವಗತದಲ್ಲಿ .......

ಜಯಜಯಮೆನುವೆ ಸರಸತಿಗೆ ಜಯಮು ಪಾರ್ವತಿಪತಿಗೆ ಜಯಮು ಲಕ್ಷ್ಮೀರಮಣ ಗೋವಿಂದಗೇ ಭಯವ ಕಳೆಯಲ್ಕೆರಗಿ ಹನುಮ ಮೂರುತಿಗೆ ಸುಮನಸಗೆ ಸ್ಕಂದ ಸಿರಿಗಣನಾಥಗೇ

ನಲ್ಲೆಯ ಕೂಡ ಕಳೆವಾರೆ ಒಂದು ದಿನ

ಒಂದು ಭಾನುವಾರ ಹೆಂಡತಿ ಮಕ್ಕಳೊಂದಿಗೆ ಕಳೆಯಲು ಸಮಯವೇ ಇಲ್ಲ ನಮಗೆ ! ಬೆಳಿಗ್ಗೆ ಎದ್ದರೆ ಎಂತೆಂತಹ ವೇಷಗಳನ್ನು ಎದುರಿಸಬೇಕು! ಯಾರ್ಯಾರಿಗೆ ಉತ್ತರಿಸಬೇಕು? ಯಾರ್ಯಾರನ್ನು ಹಾಗೇ ಕಳಿಸಬೇಕು ಇದೆಲ್ಲಾ ತಲೆಯಲ್ಲಿ. ತಿಂಡಿ-ಊಟ ಮಾಡುವಾಗಲೇ ಬೆಲ್ಲು, ಓಹೋ ಯಾರೋ ಬಂದ್ರು ಓಡು ಬಾಗಿಲು ತೆಗಿ ಇದೇ ರಗಳೆ, ಈ ನಡುವೆ ನಡು ನಡುವೆಯೇ ಹೊರಳಿ ಹೊರಳಿ ಹುಟ್ಟಿದ್ದು ಕುರ್ಕುರ್ರೆ ಥರದ ಕಂಗ್ಲೀಷ್ ಹಾಡು [ಕನ್ನಡ-ಇಂಗ್ಲೀಷ್ ಮಿಶ್ರಿತ ಅಂಥ] ಬಹಳ ಹೇಳುವುದೇಕೆ, ಇದೆಲ್ಲಾ ನೀವೂ ಅನುಭವಿಸುವ ಊಟದಲ್ಲಿ ನಡುವೆ ಕೆಲವೊಮ್ಮೆ ಸಿಗುವ ಕಲ್ಲಿನ ಥರ!




ನಲ್ಲೆಯ
ಕೂಡ ಕಳೆವಾರೆ ಒಂದು ದಿನ


ನಲ್ಲೆಯ ಕೂಡ ಕಳೆವಾರೆ ಒಂದು ದಿನ
ಬೆಲ್ಲ ದಂತಹ ಈ ದಿನ
ಅಲ್ಲುಂಟು ಹಲವು ಕಾಣಿಸದಂತ ಅಡತಡೆಯು
'ಕಲ್ಲು ಸಿಗುವ ಊಟದ' ಮನ

ಬರುವ ಹಲವರಿಗೇನು ಭಾನುವಾರವೇ ಬೇಕೇ ?
ಬರಿದೇ ತೊಂದರೆ ಕೊಡಲು ತಿಳಿಯದಾಯ್ತೆ ?
ಕರಿಮೋಡ ಮುಸುಕಿದ ರೀತಿ ಕೆಲಸಗಳು
ಸರಿಹೋಯ್ತು ಇನ್ನೆಲ್ಲಿ ಕುರುಕುರುಕಲು ?

ಹಾಲಿನವ ಬಂದ ಎಣಿಸುತ ಹೋದನಾಗಷ್ಟೇ
ಪೇಪರವ ಬಂದ ಲೆಕ್ಕವ ತೆಗೆಯುತಾ
ರಸ್ತೆ ಕಸದವ ಬಂದ ಅಕ್ಕಾ -ಅಮ್ಮಾ ಎನುತ
ರೊಚ್ಚೆ ಮಗುವಿನದು ಏನೋ ನೆನೆಯುತಾ

'ಅನ್ನದಾನಕೆ ಕೊಡಿರಿ' ಬಂದರಣ್ಣಮ್ಮ ಜನ
ಮುನ್ನ ವಯ್ದಿಹರು ತಿಳಿಯದೆ ಅವರಿಗೆ ?
ಸಣ್ಣ ಹೆಲ್ಪನು ಕೇಳಿ ಸುಬ್ರಾಯ ತಾ ಬಂದ
ಅಣ್ಣಾ ನಮಸ್ಕಾರ ಹೇಗಿದ್ರಿ ಎನುತಾ

ಪಕ್ಕದಾಕೆಗೆ ಎಲ್ಲೋ ಹೋಗುವಾ ಅರ್ಜೆಂಟು
ಸಿಕ್ಕ ಕೆಲಸದ ಲಿಸ್ಟು ರೆಡಿ ತಂದು ತಾನು
ಚೊಕ್ಕಮನದಲಿ ನನ್ನ ಹೆಂಡತಿಯ ಕೈಲಿಕ್ಕಿ
ಬೊಕ್ಕತಲೆಯನ ಕೂಡ ಬುರ್ರನೋಡಿದಳು

" ಏನ್ರೀ ಈ ದಿನ ಅಲ್ಲಿ ಹೊಸ ಸೇಲು-ಡಿಸ್ಕೌಂಟು
ಹೋಗಿ ಬರುವಾ " ಎನಲು ಆಸೆಯಿಂದವಳು
" ಬನ್ರೀ ಇಲ್ಲೇ ನಮ್ಮ ಭಾವಮೈದುನನ ಮದುವೆ"
ಬೇಗ ಕರೆದರು ಗೌಡ್ರು ಭಾವ ಭಂಗಿಯೊಳು

ಮಗನ ಆಟಕೆ ಬೇಕು ಮಿಕ್ಕ ಇಷ್ಟೇ ಇಷ್ಟು
ಮಘಮಘಿಸುವಾ ಸಮಯವೂ
ಗಗನದೆತ್ತರ ರಾಶಿ ಆಟಿಗೆಯ ವಸ್ತುಗಳು
ನಗೆ ಮುಖವು ಬಾಡುವುದು ಮಿತಿಹೇರಲು

Friday, March 12, 2010

ಕಳುಸುವಿರೇತಕೆ ನನ್ನ ಸ್ವಾಮೀ ?

ರಾಮಂ ಲಕ್ಷ್ಮಣ ಪೂರ್ವಜಂ ರಘುವರಂ ಸೀತಾಪತಿಂ ಸುಂದರಂ
ಕಾಕುಸ್ಥಂ ಕರುಣಾನಿಧಿಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಂ |
ರಾಜೇಂದ್ರಂ ಸತ್ಯಸಂದಂ ದಶರಥತನಯಂ ಕೇವಲಮ್ ಶಾಂತಮೂರ್ತಿಂ
ವಂದೇ ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್||

ಕೋಸಲ ದೇಶದ ಪ್ರಜೆಗಳು ಸುಖದಿಂದ ರಾಮರಾಜ್ಯಭಾರವನ್ನು ಅನುಭವಿಸುತ್ತಿರುವ ಶುಭಕಾಲ ಅದು. ಬಹಳ ಕಾಲವಾಗಿರಲಿಲ್ಲ ರಾಮ-ರಾವಣ ಯುದ್ಧ ಮುಗಿದು. ಆಗತಾನೆ ಕೆಲವು ದಿನಗಳು ಶ್ರೀರಾಮ ಪಟ್ಟಾಭಿಷೇಕವಾಗಿ. ವಿಸ್ತರವನ್ನೇರಿದ ರಾಮನ ಮುಖದಲ್ಲಿ ಏನೋ ಹೇಳಲಾಗದ ಅವ್ಯಕ್ತ ದುಃಖ ಮಡುಗಟ್ಟಿತ್ತು. ಮರ್ಯಾದಾಪುರುಷೋತ್ತಮ ನೆಂದು -ಕರೆಯಲ್ಪಟ್ಟು ಪ್ರಜೆಗಳಿಂದ, ದೇವರು ತನ್ನ ಭಕ್ತರನ್ನು ಪೊರೆದಂತೆ ಪ್ರಜೆಗಳನ್ನು ಪರಿಪಾಲಿಸುತ್ತಿದ್ದ ಸೀತಾರಾಮ ಪ್ರಜೆಗಳ ವಾಕ್ಯವನ್ನು ಸ್ವೀಕರಿಸಿ ಅವಲೋಕಿಸುತ್ತಿದ್ದ. ತಪ್ಪನ್ನು ಕನಸಲ್ಲೂ ಮಾಡದ, ಆ ಬಗೆಗೆ ಯೋಚನೆ ಸಹಿತ ಮಾಡದ ಇಂತಹ ರಾಮನ ಮುಖದಲ್ಲಿ ನೋವು, ಆತಂಕ,ಕಳವಳ,ಆವೇಶ,ಉದ್ವೇಗ,ಕೋಪ ಎಲ್ಲಾ ಸೇರಿ ಒಡೆದುಕ್ಕಿದ ಮಿಶ್ರಛಾಪು. ಕರ್ತವ್ಯದ ಕರೆಗೆ ಓಗೊಟ್ಟು ತನ್ನ ಮನಸ್ಸನ್ನು ಹದ್ದುಬಸ್ತಿನಲ್ಲಿಟ್ಟು ರಾಜಕಾರ್ಯವನ್ನು ಮಾಡಹೊರಟ ದಾಶರಥಿಯ ಮುಖ ಕೆಂಪಗಾಗಿದೆ, ಅನುಜ ಲಕ್ಷ್ಮಣನನ್ನು ಕರೆದು ಆಜ್ಞೆವಿಧಿಸಿದ್ದಾನೆ

" ತಮ್ಮಾ ಲಕ್ಷ್ಮಣಾ, ಸೀತೆಯನ್ನು ಏಕಾಂಗಿಯಾಗಿ ಕಾಡಿನಲ್ಲಿ ಬಿಟ್ಟು ಬಾ "

ಅಂದಿನ ರಾಜಸಭೆಯ ವಂದಿಮಾಗಧರೆಲ್ಲ ಆಶ್ಚರ್ಯಚಕಿತರಾಗಿದ್ದಾರೆ ! ಎಲ್ಲರ ಮುಖದಲ್ಲೂ ಏನನ್ನೋ ಕಳೆದುಕೊಳ್ಳುತ್ತಿರುವ ಅನುಭವ ! ಲಕ್ಷ್ಮಣ ಧರೆಗಿಳಿದುಹೋಗಿದ್ದಾನೆ, ಆತನಿಗೆ ಅಣ್ಣನ ಕೂಡ ಮರು ಮಾತನ್ನು ಆಡಿ ಅಭ್ಯಾಸವಿಲ್ಲ.ಅಣ್ಣನ ನೆರಳಾಗಿ ಸದಾ ಅಣ್ಣನನ್ನು ಹಿಂಬಾಲಿಸುವುದೇ ಲಕ್ಷ್ಮಣನ ಕೆಲಸ. ಎಂದಿಗೂ ಅಣ್ಣನಿಗೆ ಎದುರಾಡಿದವನಲ್ಲ. ಲಕ್ಷ್ಮಣನಿಗೆ ಗೊತ್ತು ಎದುರಿಗಿರುವ ಅಣ್ಣ ಸಣ್ಣ ಆಸಾಮಿಯಲ್ಲ; ಆತ ಸಾಕ್ಷಾತ್ ದೈವಾಂಶ ಸಂಭೂತ ನರನಾರಾಯಣ !

ಅಣ್ಣ ಎಂದೂ ಬೇಡದ ದಾರಿ ತುಳಿದವನಲ್ಲ, ಕೆಟ್ಟದ್ದನ್ನು ತಮ್ಮನ ಕೂಡ ಮಾಡಿಸಲು ಆಗ್ರಹಿಸಿದ, ಆಜ್ಞಾಪಿಸಿದ, ಅನುಮೋದಿಸಿದ,ಆದರಿಸಿದ ವ್ಯಕ್ತಿತ್ವ ಅಲ್ಲ ಅದು. ಇಂತಿಪ್ಪ ಶ್ರೀರಾಮಚಂದ್ರ ಯಾಕೆ ಈ ರೀತಿ ಸೀತಾಮಾತೆಯನ್ನು ಕಾಡಿಗೆ ಕಳಿಸಲು ಆಜ್ಞೆವಿಧಿಸಿದ ಎಂಬುದು ಆ ಕ್ಷಣಕ್ಕೆ ಲಕ್ಷ್ಮಣನ ಮುಖದಲ್ಲಿ ಹೊಮ್ಮುತ್ತಿದ ಅಸಮಾಧಾನದ ಜ್ವಾಲೆಗಳಿಂದ [strong negative waves !] ಯಾರಿಗಾದರೂ ಅನ್ನಿಸಿಬಿಡುತ್ತಿತ್ತು . ಆತನೀಗ ನಿರುಂಬಳನಲ್ಲ. ಆತನಲ್ಲಿ ಹಲವು ಪ್ರಶ್ನೆಗಳಿವೆ, ಆದರೆ ಕೇಳಲೂ ಆಗದ ಕೇಳದಿರಲೂ ಆಗದ ದಯನೀಯ ಮನೋಭಾವ ! ಕೇಳಿದರೆ ಜೀವನದ ಅತಿ ಪ್ರೀತಿಪಾತ್ರ-ವಿಶ್ವಾಸಪಾತ್ರ ಅಣ್ಣನನ್ನೇ ಸಂದೇಹದಿಂದ ನೋಡಿದಂತಾಗುವುದಲ್ಲವೇ ? ಕೇಳದಿರೆ ತಾಯಿಯಂತಹ ಅತ್ತಿಗೆ, ಹೂವಿನಂತೆ ಮುಗ್ಧ-ಕೋಮಲ ಸ್ವಭಾವದ ಅಣ್ಣನ ಸಸ್ವರೂಪ ಅರ್ಧಾಂಗಿ ಸೀತಾಮಾತೆಯನ್ನು ಇನ್ನಿಲ್ಲದ ಕಷ್ಟದಲ್ಲಿ,ಗತಿಯಿರದ ಕಾಡಿನ ಜಾಗದಲ್ಲಿ, ಆನ್ನಾಹಾರವಿಲ್ಲದ ಆ ಕಗ್ಗಾಡಿನಲ್ಲಿ, ಕ್ರೂರ ಮೃಗಗಳ ಆವಾಸದಲ್ಲಿ ಬಿಟ್ಟು ಬಂದು ತನ್ಮೂಲಕ ಆ ಪರಿಹರಿಸಲಾರದ ಪಾಪಕ್ಕೆ ಒಳಗಾಗುವುದಿಲ್ಲವೇ ? ಮೇಲಾಗಿ ಸೀತೆ ಬಸುರಿ, ಇನ್ನೇನು ದಿನತುಂಬಿದ ಬಸುರಿಯೇ, ಇಂತಹ ಸ್ಥಿತಿಯಲ್ಲಿ ಯಾರುತಾನೆ ಯಾವ ಹೆಣ್ಣನ್ನು ಅನಾಥಳನ್ನಾಗಿ ಮಾಡಲು ಮನಸ್ಸುಮಾಡುತ್ತಾರೆ? [ ಹಾಗೊಮ್ಮೆ ಅಂತಹ ಮನಸ್ಸುಳ್ಳವರು ನಮ್ಮ ಓದುಗರಿಲ್ಲಿದ್ದರೆ ಅಂಥವರಿಗೆ ನನ್ನ ಧಿಕ್ಕಾರ! ] ಭುಗಿಲೆದ್ದ ಲಕ್ಷ್ಮಣನ ಸ್ವಗತಗಳು ಹಲವು. ಅದಕ್ಕೆಲ್ಲ ಉತ್ತರ ಕೇಳುತ್ತ ಕುಳಿತುಕೊಳ್ಳುವ ಕಾಲವಲ್ಲ ಅದು. ರಾಜಾಜ್ಞೆಯಾಗಿದೆ. ಸೀತೆಯನ್ನು ಕಾಡಿಗೆ ಕಳಿಸಿಬರಲೇ ಬೇಕು. ಇನ್ನೇನು ಲಕ್ಷ್ಮಣ ವಿಧಿಯಿಲ್ಲದ ಗಾಡಿಯ ಎತ್ತಿನಂತೆ ಈ ಭಾರವನ್ನು ಹೊರಲು ಹೆಗಲುಗೊಡಬೇಕು.

ಅಷ್ಟರಲ್ಲಿ ಜಾನಕಿ ಸಭೆಗೆ ಆಗಮಿಸಿದ್ದಾಳೆ, ಪ್ರಭು ಶ್ರೀರಾಮನ ಮನದ ಇಂಗಿತವನ್ನು ಅರಿತು ಚಾಚೂ ತಪ್ಪದೇ ಅವನ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆದ ಸ್ನೇಹ ದಾಂಪತ್ಯ ಅವಳದು. ವಿಷಯವನ್ನು ರಾಣೀವಾಸದಲ್ಲಿದ್ದೇ ಸಖಿಯರಮೂಲಕ ತಿಳಿದುಕೊಂಡ ಅವಳ ಮುಖದಲ್ಲೂ ಕೂಡ ಅದೇ ಇಬ್ಬಂದಿತನ. ಎಂದೂ ಯಾರಿಗೂ ಕೇಡನ್ನು ಬಯಸದ ಭೂಮಿತಾಯಿಯ ಮಗಳವಳು! ರಾಮನ ಆದರ್ಶಗಳನ್ನು ಕೃತಿಯಲ್ಲಿ ಪೋಷಿಸಿದ-ಪೋಷಿಸುವ ರಾಮನ ಕಾರ್ಯಾಂಗ ಅವಳು! ಹುಚ್ಚು ಹಂಬಲದಿಂದ ಬಂಗಾರದ ಜಿಂಕೆಯ ಬೆನ್ನೊಂದನ್ನ ಹತ್ತಿದ್ದು ಬಿಟ್ಟರೆ ಇನ್ಯಾವುದನ್ನೂ ಶ್ರೀರಾಮನಕೂಡ ಮಾಡುವಂತೆ ಬಲವಂತಮಾಡದ ವ್ಯಕ್ತಿಯವಳು.ನಿಷ್ಠೆಗೆ ಹೆಸರಾದ ದಾಶರಥಿ ವನವಾಸಕ್ಕೆ ಹೊರಟಾಗ ಆತನ ಕಷ್ಟಗಳನ್ನೆಲ್ಲ ಮನಸ್ಸಲ್ಲಿ ಆಲೋಚಿಸಿ ಪತಿಯ ಸುಖ-ದುಃಖಗಳಲ್ಲಿ, ಆತನ ಸೇವೆಯಲ್ಲಿ ನಿರತಳಾಗಿ ನಿಂತ ಪ್ರೇಮಿಯವಳು,ನಾರುಡುಗೆಯುಟ್ಟು ತನ್ನೆಲ್ಲಾ ಆಭರಣಗಳನ್ನು ಬಿಚ್ಚಿಟ್ಟು ಕಾಡಿಗೈತಂದ ಪತಿಯಪಡಿಯಚ್ಚವಳು. ಕಾಡಿನ ಕಂದಮೂಲ ಫಲಗಳನ್ನೇ ಪಂಚಭಕ್ಷ್ಯ ಪರಮಾನ್ನದಂತೆ ಪ್ರೀತಿಯಿಂದ ರಾಮನೊಟ್ಟಿಗೆ ಕುಳಿತು ತಿಂದ, ಪತಿಯ ನಲಿವಲ್ಲಿ ತನ್ನ ನೋವನ್ನು ಮರೆತ-ಮರೆಯುವ ಸಾಧ್ವೀ ಸತಿಶಿರೋ ಮಣಿಯವಳು; ರಾಮನ ಸಕಲ ಕಾರ್ಯಗಳಲ್ಲಿ ಸದಾ ಸರ್ವದಾ ಸಹಭಾಗಿ ಅವಳು. ಇಂತಹ ಸೀತೆ ರಾಜಾಜ್ಞೆಗೆ ತಲೆಬಾಗುತ್ತ ಕಾಡಿಗೆ ಹೊರಡಲು ಮಾನಸಿಕ ಸಿದ್ಧತೆ ನಡೆಸಿದ್ದಾಳೆ. ಎಂದೂ ರಾಮನನ್ನು ಬಿಟ್ಟಿರದ ಮನಸ್ಸು ಇಂದೂ ಕೂಡ ಅದನ್ನೇ ಹಂಬಲಿಸುತ್ತಿದೆ. ಹಿಂದೆ ತಾನು ಅನುಭವಿಸಿದ ಎಲ್ಲಾ ಕಷ್ಟಗಳನ್ನೂ ರಾಮನಿಗಾಗಿ ಮರೆತಿದ್ದಳಾಕೆ, ಇಲ್ಲದಿದ್ದರೆ ತಾನು ಎಂದೋ ಹೇಗೋ ರಾವಣನ ರಾಜ್ಯದಲ್ಲಿ ಅಸುನೀಗಿಬಿಡುತ್ತಿದ್ದಳು ! ಹೀಗಾಗಿ ರಾಜಧಾನಿಗೆ ಮರಳಿ ಪ್ರಜೆಗಳನ್ನು ಕಂಡು ಪುಳಕಿತರಾಗಿ ಕಳೆದ ದಿನಗಳು ಕೇವಲ ಕೆಲವು. ಇಷ್ಟರಲ್ಲೇ ಶ್ರೀರಾಮ ಯಾಕಾಗಿ ಈ ರೀತಿ ಹೊರಲಾರದ-ಹೊರಬಾರದ ಹೊರೆ ಹೊರಿಸಿದ ಎಂಬುದನ್ನು ಮನದಲ್ಲಿ ಚಿಂತಿಸುತ್ತಾಳೆ. ಅಗಸನೋರ್ವ ರಾಮನ ಕಿವಿಗೆ ತಲಪುವಂತೆ ನೋವಿನ ಮಾತೊಂದನ್ನ ಆಡಿದ್ದ


" ಬಿಟ್ಟ ಹೆಂಡತಿಯನ್ನು ಕಟ್ಟಿಕೊಳ್ಳಲು ನಾನೇನು ರಾಮನೇ ? "

---ಈ ಮಾತಿನ ಚಾಟಿ ಏಟು ರಾಮನ ನರನಾಡಿಗಳನ್ನೆಲ್ಲ ಹರಿದು ಬಿಸಾಕಿದಷ್ಟು ಆತನನ್ನು ದಂಗುಬಡಿಸಿತ್ತು ! ಅಷ್ಟಕ್ಕೂ ರಾಮ ಮಾಡಬಾರದ್ದೇನು ಮಾಡಿದ ? ಹೆಂಡತಿಯೊಂದಿಗಿನ ಅವನ ಜೀವನ ಅವನ ವೈಯಕ್ತಿಕತೆ ತಾನೇ ? [ಇಂದಾದರೆ ಮಾನಹಾನಿ ಕೇಸು ಜಡಿಯುತ್ತಿದ್ದರು -ಅಗಸನ ಮೇಲೆ ] ಆದರೂ ರಾಮ ಪ್ರತೀ ಪ್ರಜೆಯ ಮಾತನ್ನೂ ಬಹಳವಾಗಿ ಅವಲೋಕಿಸುತ್ತಿದ್ದ, ಆ ಮಾತುಗಳ ಬಗ್ಗೆ ಚಿಂತನ-ಮಂಥನ ಮಾಡುತ್ತಿದ್ದ. ಗಂಡನ ನೋವು ಅವಳಿಗೆ ಅರ್ಥವಾಗದೇ ಇದ್ದಿರಲಿಲ್ಲ. ಆದರೂ ಬಿಟ್ಟಿರಲಾರದ ಅವಿನಾಭಾವ ಸಂಬಂಧ, ಆ ಮೋಹ-ವ್ಯಾಮೋಹ, ನರಳುವ ಪ್ರೀತಿಯ ಸಂಕೋಲೆ, ಮತ್ತೆಂದೂ ಅನುಭವಿಸಲಾಗದ ರಾಮನ ಬಾಹುಬಂಧನದ ಸಂಕೋಲೆ, ರಂಜಕರಾಮನ ರಂಜಿಪ ನುಡಿಗಳ nill ಆದ null ಆದ ಸ್ಥಿತಿ, ಪಿಸುಮಾತನು ಕೇಳಿ ನಸುನಗುತ್ತಿದ್ದ ದಿನಗಳನು ನೆನೆದು ಕಿವುಡಾಗುವ ಕಿವಿಗಳ ತುಡಿತ, ಹರಳಾದ-ಹಳಸಿದ್ದ ಹಳೆಯ ದುಃಖಘಟನೆಗಳ ನೆನಕೆಯ ಪುನರಾವರ್ತನೆ, ಇನ್ನೆಂದೂ ಹತ್ತಿರದಿಂದ ಕಾಣಲಾರದ ರಾಮನ ಬಿತ್ತಿ ಚಿತ್ರವನ್ನು ತುಂಬಿಸಿಕೊಂಡು ಆತ್ತು ಚೀರಿ ಭೋರ್ಗರೆದು ಒಳಗೊಳಗೇ ಸೋತ ಮನ, ಅವಡುಗಚ್ಚಿದಾಗಿನ ಹೊತ್ತು ಹೇಳಲೂ ಆರದೆ ಕೇಳಲೂ ಆರದೆ ಅಸಾಧ್ಯ ಭಾರದ ಹೊರೆಹೊತ್ತು ಮಡುಗಟ್ಟಿದ ಕಣ್ಣುಗಳು, ಸಭೆಯ ನೀರವ ಮೌನ ಪ್ರಶ್ನಿಸದೆ ನಿಂತಹೋದ ನಾಲಿಗೆ, ಸೀತೆ ಕಲ್ಲಾಗಿದ್ದಾಳೆ; ರಾಮನಿಗಾಗಿ, ಆದರೆ ಮನದಲ್ಲೊಮ್ಮೆ ಒಡೆಯನಲ್ಲಿ ಪ್ರಶ್ನಿಸಿದ್ದಾಳೆ --ಯಾಕೆ ತನ್ನನ್ನು ಕಾಡಿಗೆ ಕಳುಹಿಸುತ್ತಿದ್ದೀರಿ? ಎಂದು. ಈ ಸನ್ನಿವೇಶದಲ್ಲಿ ಸೀತೆಯ ಮನದಿಂಗಿತದಿಂದ ಬಂದ ಹಾಡು ---




[ ಚಿತ್ರ ಋಣ : ಅಂತರ್ಜಾಲ ]
ಕಳುಸುವಿರೇತಕೆ ನನ್ನ ಸ್ವಾಮೀ ?


ಕಳುಸುವಿರೇತಕೆ ನನ್ನ ಸ್ವಾಮೀ ?
ರಾಮಾ..... ರಾಮಾ.......ರಾಮಚಂದ್ರ ,,,,,,.
ಶ್ರೀರಾಮಚಂದ್ರ....... ಶ್ರೀರಾಮಚಂದ್ರ.......

ಹದಿನಾಲ್ಕು ವರುಷವು ಸಹಿಸುತ ಕಷ್ಟವ

ಕಾಡಲಿ ಕಳೆದೆನು ನಿಮ್ಮ ಜೊತೆ
ಪದನಾಲ್ಕು ಬರಲದು ಅಗಸನ ಬಾಯಿಂದ
ಕಾಡಿತೆ ನಿಮಗದು ಬಹಳವ್ಯಥೇ ?

ಅಂದು ರಾವಣನು ಬಂದಿರೆ ಭಿಕ್ಷಕೆ

ಸಂದೆ ನಾ ತಿಳಿಯದೇ ಮೋಸದಲೀ
ಕುಂದುಗಳೆಣಿಸದೆ ನೀಡಲಾ ಧರ್ಮದ
ಬಂಧುರ ಕಾರಣವೀ ಕಥೆಗೇ

ಶೋಕಸಹಿತ ನಾ ಅಶೋಕವನದಲಿ

ಕಾಕ ಗೂಬೆ ಕೂಗನು ನೆನೆಯೇ
ಯಾಕಾದರೂ ಸೃಜಿಸಿದ ದೇವರು ನನ್ನ
ಸಾಕುಮಾಡೈ ತಂದೆ ಪತಿವೃತೆಗೇ

ಬಂದು ಮಾರುತಿಯು ನೀಡಿದನುಂಗುರ

ಚಂದದಿ ಕುಣಿಯಿತು ನನ್ನಮನ
ಕಂದನ ತೆರದಲಿ ಮಿಡಿದನು ಕಣ್ಣೀರು
ಬಂಧನ ಬಿಡಿಸುವ ರಘುವೆನುತ

ಖೂಳ ರಕ್ಕಸನ ಕಾಟವ ತಾಳದೆ

ಮೂಳೆ ಮೈಮನವು ದಣಿದಿರಲೂ
ಹಾಳುಗೈದು ಲಂಕೆಗೆ ಬೆಂಕಿಯ ಹಚ್ಚಿ
ಬೀಳುತೆದ್ದು ಓಡಿದ ಹನುಮಾ

ಹರುಷವಾಯ್ತೆನಗೆ ಬಣ್ಣಿಸಲಸದಳ

ಪುರುಷ ಬರುವ ಇಂಗಿತ ಕೇಳಿ
ಪರಿಷೆಯ ರಕ್ಕಸ ಪಡೆಯ ಕಣ್ತಪ್ಪಿಸಿ
ಪರಿಶೋಭಿಪ ರಾಮನ ನೆನೆದು

ಅಯೋಧ್ಯಾರಾಮ ತಾ ದಶರಥರಾಮ

ಕೌಸಲ್ಯರಾಮ ಮುನಿಜನ ಪ್ರೇಮ
ಕಾರುಣ್ಯರಾಮ ತಾ ಕೈವಲ್ಯರಾಮ
ಸೂರ್ಯವಂಶದ ಶ್ರೀಚಂದ್ರಮನೇ

ತೊರೆದು ಜೀವಿಸಲೇ ನಿನ್ನ ಪದಾಂಬುಜ

ಪರಿತಪಿಸುತ ಕಾಡಲಿ ಭಯದೀ
ಬರಿದೇ ಬಂದೆನು ಅಯೋಧ್ಯ ನಗರಕೆ
ಹರಿಯೇ ಎನಗಿನ್ನಾರುಗತೀ ?

Thursday, March 11, 2010

ಪರಮಹಂಸ

ಪರಮಹಂಸ
ಪರಮಹಂಸ
ಪಂಚೇಂದ್ರಿಯಗಳು, ಅರಿ ಷಡ್ವರ್ಗಗಳು ಮತ್ತು ಅವುಗಳ ನಿಗ್ರಹ
[ಎರಡು ಚಿತ್ರಗಳ ಋಣ : ಅಂತರ್ಜಾಲ ]

ಮನುಷ್ಯನಾಗಿ ಹುಟ್ಟಿದ ಮೇಲೆ ಪಂಚೆಂದ್ರಿಯಗಳ ಅಧೀನಕ್ಕೆ ನಮ್ಮ ಮನಸ್ಸು ಒಳಪಡುತ್ತದೆ. ಕಣ್ಣು, ಕಿವಿ, ಮೂಗು,ಬಾಯಿ, ಚರ್ಮ --ಈ ಇಂದ್ರಿಯಗಳು ನಮ್ಮ ಐಹಿಕ ಸುಖ-ಭೋಗಗಳನ್ನು ಉಪಭೋಗಿಸುವ ದ್ವಾರಗಳು. ಇವುಗಳನ್ನು ನಿಗ್ರಹಿಸಿದರೆ, ಗೆದ್ದರೆ, ಹತೋಟಿಯಲ್ಲಿಟ್ಟರೆ ಆತ ಸುಮಾರು ಸನ್ಯಾಸದ ಮೊದಲ ಹಂತಕ್ಕೆ ತಲುಪಲು ಹೋದ ಹಾಗೇ ಸರಿ. ಇಂತಹ ಇಂದ್ರಿಯಗಳ ಜೊತೆಗೇ ನಮಗೆ ಮನಸ್ಸಿನಲ್ಲಿ ಕಾಮ,ಕ್ರೋಧ, ಲೋಭ, ಮೋಹ, ಮದ,ಮತ್ಸರಗಳೆಂಬ ಆರು ಕಡು ವೈರೀ ಅಂಶಗಳು ತುಂಬಿಕೊಂಡಿವೆ! ಆದರೆ ಮೇಲ್ನೋಟಕ್ಕೆ ಅವುಗಳನ್ನು ಅರಿಯುವುದು ಕಷ್ಟಸಾಧ್ಯ! ಇವುಗಳನ್ನು ಸಂಗೀತದ ಸ ರಿ ಗ ಮ ಪ ದ ನೀ --ಸ್ವರಗಳಿಗೆ ಹೋಲಿಸಿದರೆ [ಕೇವಲ ನೆನಪಿಗಾಗಿ ಹೋಲಿಕೆ ಅಷ್ಟೇ, ಅದು ಹೀಗೇ ಅಂತ ಅಲ್ಲ !] ಮೊದಲಿನ ಆರು ಸ್ವರಗಳು ನಮ್ಮ ಅರಿ ಷಡ್ವರ್ಗಗಳು ಎಂದು ತಿಳಿದರೆ 'ನೀ' ಎಂಬುದು ಎಲ್ಲವನ್ನೂ ಬಿಟ್ಟ ವಿರಕ್ತ ಜೀವನಕ್ಕೆ ಹೋಲಿಸಬಹುದೇನೋ !

ಹೀಗೊಂದು ಹೋಲಿಕೆ ನಡೆಸುವ ಪ್ರಯತ್ನ---
ಸ- ಕಾಮ
ರಿ-ಕ್ರೋಧ
ಗ -ಲೋಭ
ಮ-ಮೋಹ
ಪ -ಮದ
ದ -ಮತ್ಸರ
ನೀ-ಸನ್ಯಾಸ

ಇಲ್ಲಿ ಮೊದಲೇ ಹೇಳಿದ ಹಾಗೇ ಅರಿ ಷಡ್ವರ್ಗಗಳನ್ನು ಬಿಡುವುದು ಸುಲಭವಲ್ಲ! ಇಹದ ಮಾಯೆಯ ಬಂಧನದಲ್ಲಿ ಅವುಗಳನ್ನು ಬಿಟ್ಟು ಬದುಕಲು ಸಾಧ್ಯತೆಗಳೂ ಕಮ್ಮಿ ಇವೆ. ಇವತ್ತಿನ ಅನೇಕ ಸಾಧು-ಸಂತ-ಮಹಂತರಿಗೂ ಕೂಡ ಪೂರ್ತಿಯಾಗಿ ಅರಿ ಷಡ್ವರ್ಗಗಳನ್ನು ಬಿಡುವುದು ಸಾಧ್ಯವಾಗಲಿಲ್ಲ. ಅಂತಹ ಸಮಯದಲ್ಲಿ ನಾವು ಅವುಗಳ ನೇರ ಹೆಸರಿನ ಬದಲಿಗೆ ಪರ್ಯಾಯ ಪದಗಳನ್ನು ಉಪಯೋಗಿಸುತ್ತೇವೆ.

ಈ ಪಂಚೇಂದ್ರಿಯಗಳಿಗೂ ಅರಿ ಷಡ್ವರ್ಗಗಳಿಗೂ ಅವಿನಾಭಾವ ಸಂಬಂಧ, ಹೇಗೆ ಕಿವಿ-ಮೂಗು-ಗಂಟಲುಗಳು ಸೇರಿ ಒಂದು ವಿಭಾಗವೆಂತ ವೈದ್ಯರಂಗ ಪರಿಗಣಿಸಿದೆಯೋ ಹಾಗೆಯೇ ಇಲ್ಲಿ ಕೂಡ ಇವೆರಡೂ ಗುಂಪುಗಳು inter connected.

ಅರಿಗಳ ಪರಿಚಯ ಮಾಡಿಕೊಳ್ಳೋಣ

ಕಾಮ
ಅಂದರೆ ಕಾಮನೆಗಳು, ಬಯಕೆಗಳು, ಆಸೆಗಳು, ಒತ್ತಾಸೆಗಳು, Human wants. ಇದು ಅದುಮಿಡಲಾಗದ ಅಂಶ, ಎಲ್ಲಾದರೂ ಚೆನ್ನಾಗಿರುವುದು ಏನಾದರೂ ಕಂಡರೆ ತನಗೆ ಬೇಕು, ಚೆನ್ನಗಿರುವುದೆಲ್ಲ ತನ್ನಲ್ಲೊಂದೊಂದು ಇರಲೇಬೇಕು, ಚೆನ್ನಾಗಿರುವುದನ್ನು ನೋಡಬೇಕು, ಒಳ್ಳೆಯ ಸಂಗೀತ ಕೇಳಬೇಕು, ರುಚಿಯಾದ ಪದಾರ್ಥ ತಿನ್ನಬೇಕು, ದಿವ್ಯಪರಿಮಳಗಳು ಮೂಗಿಗೆ ಬರುತಾ ಇರಲಿ -ಒಳ್ಳೆ ಸೆಂಟ್ ಇದ್ದರೆ ಬೇಕೆಂದು ಹೇಳುತ್ತೇವಲ್ಲ, ಚೆನ್ನಾಗಿರುವ ಹುಡುಗ/ಹುಡುಗಿಯ ಜೊತೆ ಭೋಗಿಸಲು ಬೇಕು --ಇವೆಲ್ಲ ಉದಾಹರಣೆಗಳು.

ಕ್ರೋಧ
ಕೋಪ,ಸಿಟ್ಟು ಎಂದೆಲ್ಲಾ ಕರೆಯುತ್ತೇವಲ್ಲ, ಅದನ್ನೇ ಕ್ರೋಧ ಎನ್ನುವುದು, ಸಣ್ಣ ವಿಷಯಗಳಿಂದ-ದೊಡ್ಡದರ ತನಕ ಅವುಗಳ ಹರವು. ಹೆಂಡತಿ ಯವುದೋ ಕೆಲಸ ಮಾಡದ್ದಕ್ಕೋ, ಗಂಡ ಸೀರೆ ತರದ್ದಕ್ಕೋ, ಮಗು ಶಾಲೆಯಲ್ಲಿ ಕಡಿಮೆ ಅಂಕ ತೆಗೆದುಕೊಂಡಿದ್ದಕ್ಕೋ, ಪಕ್ಕದ ಮನೆಯವ ಸಾಲ ಹಿಂದಿರುಗಿಸದುದಕ್ಕೋ, ಡ್ರೈವರ್ ನಮಗೆ ಬೇಕಾದಲ್ಲಿ ಬಸ್ ನಿಲ್ಲಿಸದೆ ಹೊದುದಕ್ಕೋ, ಪ್ರಿಯರು ಉದ್ಯಾನದಲ್ಲಿ ಬರದೇ ಕೈಕೊಟ್ಟಿದ್ದಕ್ಕೋ ಹೀಗೇ ಹಲವಾರು ಕಾರಣಗಳಿಗೆ ನಾವು ಕೊಪಗೊಳ್ಳುತ್ತೇವೆ. ಜಮದಗ್ನಿ ಆಗಿ ಬಿಡುತ್ತೇವೆ [ --ಅಂದಹಾಗೆ ಜಮದಗ್ನಿ ಕೂಡ ಸನ್ಯಾಸಿ , ತನ್ನ ಕೋಪವನ್ನು ಪೂರ್ತಿ ಹತ್ತಿಕ್ಕಲಾರದೆ ತಪಸ್ಸಿನ ಬಹುಭಾಗವನ್ನು ನಷ್ಟಮಾಡಿಕೊಂಡಾತ ಈ ಋಷಿ! -ಅದೂ ಆ ಕಾಲದಲ್ಲಿ, ಇಂದಾದರೆ ಆತನಿಗೆ ಕಾರ್ಯ ಸಿದ್ಧಿಸದೆ ಆತ ಸಾಮಾನ್ಯನೇ ಆಗಿರುತ್ತಿದ್ದನೇನೋ ! ]

ಲೋಭ

ಜಿಪುಣತನಕ್ಕೆ ಪರ್ಯಾಯಪದ ಲೋಭ. ಗಳಿಸಿದ ದುಡಿಮೆಯಲ್ಲಿ ಒಂಚೂರನ್ನೂ ದಾನಮಾಡದೇ, ಕೂಡಿಡುತ್ತಾ ಅದರಲ್ಲೇ ನೆಮ್ಮದಿ ಕಾಣುವುದು. ತನ್ನ ಬ್ಯಾಂಕ್ನಲ್ಲಿ ಇಷ್ಟಿದೆ-ನಾಳೆ ಅಷ್ಟು ಸೇರಿಸಿದರೆ ಅಷ್ಟಾಗಿಬಿಡುತ್ತದೆ. ಹಣ್ಣಿನ ದೊಡ್ಡ ಕಣಜವೇ ಇದೆ, ಆದ್ರೆ ಪಕ್ಕದವರಿಗೆ ,ನೆರೆಯವರಿಗೆ ಯಾರೊಬ್ಬರಿಗೂ ಒಂದೂ ಹಣ್ಣನ್ನು ಕೊಡದಿರುವುದು-ತಾನು-ತನ್ನ ಕುಟುಂಬ-ತನ್ನ ಮನೆ ಎಂಬ ಸ್ವಾರ್ಥ! ಬೇರೆಯವರ ಕಷ್ಟ ಕಂಡು ಬಾಯಲ್ಲಿ ಬೆಲ್ಲದ ಮಾತನ್ನಾಡುತ್ತ " ಹೌದಲ್ಲಾ ನಾನಾದರೂ ಹೆಲ್ಪ್ ಮಾಡೋಣ ಅಂದರೆ ನಿನೆಯಷ್ಟೇ ರಮೇಶ ಬಂದಿದ್ದ, ಅವನಿಗೆ ಕೊಟ್ಟುಬಿಟ್ಟೆ, ಇಲ್ಲಾಂದರೆ ಹೀಗೆಲ್ಲ ಇರುವಾಗ ನಾನು ಸಹಾಯಮಾಡದೆ ಇರುವ ಜನವೇ ಅಲ್ಲ ನಿಂಗೆ ಗೊತ್ತಲ್ಲ " ಅನ್ನುವುದು. ಯಾರೋ ಸಂಘ-ಸಂಸ್ಥೆಯವರು ವರ್ಗಿಣಿಗೆ ಬಂದರೆ ಇದೇ ಥರದ ಏನಾದರೂ ಹೇಳಿ ಅಥವಾ ಬಸಿದು ಕಳಿಸುವುದು. ಅನುಕೂಲ ಸಾಕಷ್ಟಿದ್ದರೂ ಸಮಾಜಕ್ಕಾಗಿ ಏನನ್ನೂ ಮಾಡದೇ ಸರಕಾರ ಮಾಡಲಿ ಅಂತ ಕಂಡೂ ಕಾಣದಂತೆ ಸುಮ್ಮನೇ ಇರುವ ವ್ಯಕ್ತಿ --ಇವೆಲ್ಲ ಲೋಭಕ್ಕೆ ಉದಾಹರಣೆಗಳು.

ಮೋಹ

ನನ್ನ ಹುಡುಗಿ/ಹುಡುಗ, ನನ್ನ ಹೆಂಡತಿ, ನನ್ನ ಸ್ವತ್ತು, ನನ್ನ ಆಸ್ತಿ, ನನ್ನ ಮನೆ, ನನ್ನ ಜಮೀನು, ನನ್ನ ಪ್ರಿಯತಮ/ಪ್ರಿಯತಮೆ, 'ನನ್ನ ಖುರ್ಚಿ' ಇವೆಲ್ಲ ಮೋಹಗಳು. ಇದಕ್ಕೆ ಮಾಯೆ ಅಂತಲೂ ಕರೀತಾರೆ. ಇದಕ್ಕೆ ಒಂದು ಚಿಕ್ಕ ಕಥೆ -- ಒಮ್ಮೆ ನಾರದ ಋಷಿಗೆ ತಾನು ಮೋಹಕ್ಕೆ ಒಳಗಾಗುವವನಲ್ಲ ಎಂಬ ಹಮ್ಮು ಬಂತು. ಅದನ್ನು ತಹಬಂದಿಗೆ ತರಲು ಭಾಗವನ್ನಾರಾಯಣ ಒಂದು ಕಥೆ ಸೃಷ್ಟಿಸಿದ, ಕಥೆಯಲ್ಲಿ ನಾರದ ಸಂಸಾರಿಯಾಗುತ್ತಾನೆ, ಕೆಲಕಾಲ ಭುವಿಯಲ್ಲಿ ಆರಾಮಾಗಿ ಇರುತ್ತಾನೆ. ಇದ್ದಕ್ಕಿದ್ದಂತೆ ಒಂದು ದಿನ ಮಳೆ-ಚಂಡಮಾರುತ ಹೀಗೆಲ್ಲ ಏಕಕಾಲಕ್ಕೆ ಶುರುವಾಗಿ ಎಲ್ಲವೂ ಕೊಚ್ಚಿಹೋಗುತ್ತದೆ, ನಾರದನ ಹೆಂಡತಿ-ಮಕ್ಕಳೂ ಕೂಡ, ನಾರದ ಅಯ್ಯೋ ಅಂತ ಗೋಳಿಡುತ್ತಾನೆ, ತನ್ನದೆಲ್ಲಾ ಹೋಯಿತು, ತನ್ನ ಅತೀ ಆಪ್ತರಾದ ಹೆಂಡತಿ-ಮಕ್ಕಳು ಕೂಡ ಹೋದರಲ್ಲ ಅಂತ ತಾಳಲಾರದ ಸ್ಥಿತಿಗೆ ತಲ್ಪಿಬಿಡುತ್ತಾನೆ. ಇದು ಕ್ಷಣಮಾತ್ರಕ್ಕೆ ನಾರಾಯಣ-ನಾರದ ಈ ಇಬ್ಬರ ಸಂವಾದದ ನಡುವಿನಲ್ಲಿ ಕನಸು ಕಂಡ ರೀತಿ ನಾರದ ಅನುಭವಿಸಿದ ಪಾಡು. ನಾರದ ತನ್ನ ತಪ್ಪಿನ ಅರಿವಾಗಿ ನಿಶ್ಚೇಷ್ಟಿತನಾಗುತ್ತಾನೆ! ಹೀಗೇ ಮೋಹ ಎಂಬುದು ಅದೊಂದು ಪಾಶ, ಬಲೆ -ತಪ್ಪಿಸಿಕೊಳ್ಳಲಾರದ ಸ್ಥಿತಿ!

ಮದ

ಸೊಕ್ಕಿಗೆ ಪರ್ಯಾಯ ಪದ. ನಾನೇನು ಕಮ್ಮಿ, ಒಳ್ಳೆಯ ಕವನ ಬರೀತೇನೆ, ನಾನೇನು ಕಮ್ಮಿ ಪ್ರಪಂಚದ ಅದ್ಬುತ ಹಾಡುಗಾರ, ನಾನು ಬಹುದೊಡ್ಡ ನಟ, ನಾನೊಬ್ಬ ಅಪ್ರತಿಮ ಕಲಾವಿದ, ನಾನು ಜಗತ್ತಿನ ಅತಿ ದೊಡ್ಡ ಬ್ಯುಸಿನೆಸ್ ಮನ್, ನಾನು ಅತೀ ಶ್ರೀಮಂತ, ನಾನು ಇಂಥಾ ಮಂತ್ರಿ-ಇಂಥಾ ರಾಜಕಾರಣಿ, ನಾನು ಭುವನೈಕ ತ್ರಿಪುರ ಸುಂದರಿ, ನಾನು ವ್ಯವಸ್ಥಾಪಕ ನಿರ್ದೇಶಕಿ, ನಾನು ನಂಬರ್ ಒನ್ ನಟಿ ಹೀಗೆಲ್ಲ ಅಂದುಕೊಂಡು ಭೂಮಿಮೆಲಿದ್ದೂ ಆಕಾಶಕ್ಕೆ ಹತ್ತಿರ ಎನ್ನುವ ರೀತಿಯಲ್ಲಿ ಇರುವುದು. ಇದಕ್ಕೆ ಒಂದು ಉದಾಹರಣೆ, ನೀವು ಒಂದು ಎತ್ತರದ ಕಟ್ಟಡದ ತಳದಲ್ಲಿ ನಿಂತು ಮೇಲೆ ನೋಡಿ, ಬಹಳ ಎತ್ತರ ಏನಿಲ್ಲ, ಇದೇನಾ 'ಬುರ್ಜ್ ಖಲೀಫಾ' ? ಅಂದುಕೊಳ್ಳುತ್ತೀರಿ, ಅದರ ಎತ್ತರ ಕೂಡ ನಿಮಗೆ ದೊಡ್ಡದಲ್ಲ, ಅದೇ ಕಟ್ಟಡದ ಮೇಲಕ್ಕೆ ಹೋಗಿ, ಕಿಟಕಿಯಿಂದಲೋ ಪಾರ್ಶ್ವದಿಂದಲೋ ಕೆಳಗೆ ನೋಡಿ --ಈಗ ನಿಮಗೆ ತಲೆ ಸುತ್ತುವಷ್ಟು ಆಳ, ಭಯ, ಹಾಗೆಯೇ ನಾವು ಮದದಿಂದ ಮೇಲೇರಿದಾಗ ಕೆಳಗಡೆ ಇರುವ ಮಿಕ್ಕುಳಿದ ಎಲ್ಲರನ್ನೂ ಎಲ್ಲವನ್ನೂ ಬಹಳ ದೂರದಲ್ಲಿ ನೋಡುತ್ತೇವೆ.ಅದಕ್ಕೆ ಕವಿ ಪಂಜೆ ಮಂಗೇಶ್ ರಾಯರು ಹೇಳಿದರು

ಏರುವನು ರವಿ ಏರುವನು ಬಾನೊಳು ಸಣ್ಣಗೆ ತೋರುವನು

ಏರಿದವನು ಚಿಕ್ಕವನಿರಬೇಕೆಲೆ ಎಂಬಾ ಮಾತನು ಸಾರುವನು

ಎಂತಹ ಮಾತು ನೋಡಿ.


ಮತ್ಸರ

ಹೊಟ್ಟೆಕಿಚ್ಚಿಗೆ ಪರ್ಯಾಯಪದ. " ಅವರಮನೆಯ ಹುಡುಗ ಪಿ.ಯು.ಸಿ.ಯಲ್ಲಿ ಪಾಸಾಗಿಬಿಟ್ಟ, ಯಾವಾಗ ನೋಡಿದರೂ ರಸ್ತೆಯಲ್ಲೇ ಕ್ರಿಕೆಟ್ ಆಡಿಕೊಂಡು ಇರ್ತಾಇದ್ದ , ಏನನ್ನೂ ಓದುವುದಿರಲಿ ಹೊಸದಾಗಿ ತಂದ ಬುಕ್ಸ್ ಎಲ್ಲಿ ಬಿದ್ದಿದೆ ಅಂತ ಅವುಗಳ ಧೂಳುಕೂಡ ಹೊಡೆದವನಲ್ಲ, ನನ್ನ ಮಗ ಇಡೀದಿನ ಓದುತ್ತಾ ಇದ್ದ, ಅವನಾಯಿತು-ಅವನ ರೂಮಾಯಿತು-ಅವನ ಓದು ಇಷ್ಟು ಬಿಟ್ಟು ಅವನಿಗೆ ಏನೂ ಗೊತ್ತಿಲ್ಲ, ಆದರೂ ಇಂಥವನನ್ನು ಫೇಲ್ ಮಾಡಿದ್ದಾರೆ, ಇದ್ರಲ್ಲಿ ಏನೋ ಮಸಲತ್ತು ಇದೆ, ಕಲಿಗಾಲ " ಅಂತೆಲ್ಲ ಅಂದುಕೊಳ್ಳುತ್ತೇವೆ, ಅವರಮನೆಯಲ್ಲಿ ಲಕ್ಷ ರೂಪಾಯಿಯ ಸೋಫಾ ಇದೆ, " ಆ ನನ್ಮಗ ಏನ್ ದುಡೀತಾನೋ ಗೊತ್ತಿಲ್ಲ ಮಹಿಂದ್ರ ಲೋಗನ್ ಕಾರಲ್ಲಿ ಓಡಾಡ್ತಾನೆ " , " ಅವಳು ನನ್ನಷ್ಟು ಚೆನ್ನಾಗಿಲ್ಲ ಆದರೂ ನಂಬರ್ ಒನ್ ನಟಿ ಆಗ್ಬುಟ್ಟಿ ದ್ದಾಳೆ ", " ಅವನ ಹೆಂಡತಿ ಮಾರಾಯ ಎಂತಾ ಪೆದ್ದು, ತರಕಾರಿ ಖರೀದಿ ಕೂಡ ಗೊತ್ತಿಲ್ಲ ಅದ್ಹೇಗೆ ಬ್ಯಾಂಕ್ ಮ್ಯಾನೇಜರ್ ಆಗಿದಾಳೋ ", " ಕಳ್ಳ ದುಡ್ಡು, ಗಿಗಾರು-ಲಂಚ, ಬರೇ ಲಂಚ ತಗೊಂಡೆ ದೊಡ್ಡ ಬಂಗಲೆ ಕಟ್ಟಿದ್ದಾನೆ " ಇವೆಲ್ಲ ಉದಾಹರಣೆಗಳು,ನಡೆವುದೆಲ್ಲ ನಡೆಯಲಿ ಅಂತ ಸುಮ್ಮನಿರುವುದಿಲ್ಲ, ಅಲ್ಲದೇ ನಮ್ಮ ಅನುಕೂಲಕ್ಕೆ ತಕ್ಕಂತೆ ನಮಗೇ ಎಲ್ಲವೂ ಸಿಗಲಿ-ಮತ್ತೊಬ್ಬರಿಗೆ ಯಾಕೆ ಎಂಬ ಧೋರಣೆ !

ಈ ಅರಿಗಳು ಅರ್ಥಾತ್ ವೈರಿಗಳು ನಮ್ಮೊಳಗೇ ಹುದುಗಿ ಕುಳಿತು ನಮ್ಮನ್ನೇ ತಿಂದುಮುಗಿಸುವ ಕ್ಯಾನ್ಸರ್ ಥರದ ಸ್ವಭಾವದವು, ಆದರೆ ಇವುಗಳ ಅವಲೋಕನ, ಮರ್ದನ, ಹತ್ತಿಕ್ಕುವಿಕೆ ನಮ್ಮೆಲ್ಲರಿಂದ ಸಾಧ್ಯವೇ ? ಇದನ್ನು ಸಾಧ್ಯ ಮಾಡಿಸುವಾತನೇ ಸನ್ಯಾಸಿ . ನಾವು ಸನ್ಯಾಸಿಯಾಗುವುದು ಬೇಡ, ಕೊನೇ ಪಕ್ಷ ಈ ಆರನ್ನು ಸ್ವಲ್ಪ ನಮ್ಮ ಮನಸ್ಸೆಂಬ ಹದ್ದಿನ ಕಣ್ಣಿನಿಂದ ರಕ್ಷಿಸಲು ಸಾಧ್ಯವೇ? ಈ ದಿಸೆಯಲ್ಲಿ ಮುನ್ನಡೆದರೆ ಅಲ್ಲಿ ತೋರಿಬರುತ್ತದೆ ಒಳ್ಳೆಯದು, ಅಲ್ಲಿ ಕಾಣಸಿಗುತ್ತದೆ ಬೆಳಕು, ಅಲ್ಲಿ ಲಭಿಸುತ್ತದೆ ಅಮೃತತ್ವ. ಅದನ್ನೇ ಪ್ರಾಜ್ಞರು ಹೇಳಿದರು


ಓಂ ಅಸತೋಮಾ ಸದ್ಗಮಯ
|
ತಮಸೋಮಾ ಜ್ಯೋತಿರ್ಗಮಯ |
ಮೃತ್ಯೋರ್ಮಾ ಅಮೃತಂಗಮಯ |
ಓಂ ಶಾಂತಿಃ ಶಾಂತಿಃ ಶಾಂತಿಃ ||

ಒಂದೇ ಸಲ ಶಾಂತಿ ಅಂದ್ರೆ ಸಾಕಲ್ಲವೇ, ಯಾಕೆ ಮೂರಾವರ್ತಿ ?
ಕಾಯಾ ವಾಚಾ ಮನಸಾ ಅಂದರೆ ದೇಹ-ಬುದ್ಧಿ-ಮನಸ್ಸುಗಳಿಗೆ, ತ್ರಿಕರಣಗಳಿಗೆ ಶಾಂತಿ ಸಿಗಲಿ ಎಂದು ಮೂರುಸಲ ಶಾಂತಿ ಎನ್ನುತ್ತೇವೆ, ನಮ್ಮಲ್ಲಿ ಎಷ್ಟುಜನರಿಗೆ ಇದರ ಅರ್ಥ ತಿಳಿದಿದೆ. ನಾವೇನಿದ್ದರೂ ' ಸರ್ ಎಲ್ಟನ್ ಜಾನ್ ' 'ಮೈಕೆಲ್ ಜಾಕ್ಸನ್' ' ಈ ಥರದ ಹೆಸರುಗಳಿಗೆ ನಮ್ಮನ್ನೇ ಮಾರಿಕೊಂಡು ಅವರ ದಾಸರಾಗಿ ಅವರು ಹೇಳಿದ್ದಕ್ಕೆಲ್ಲಾ ತಲೆ ಹಾಕುವ ಕೋಲೇ ಬಸವಗಳಾಗಿಬಿಟ್ಟಿದ್ದೇವೆ. ಮೈಕೆಲ್ ಜಾಕ್ಸನ್ ಕೂಡ ಭಾರತೀಯ ಸಂಸ್ಕೃತ ಭಾಷೆಯಲ್ಲಿ, ತಜ್ಜನಿತ ವೇದ-ತತ್ವಸಾರಗಳಲ್ಲಿ ಅಭ್ಯಸಿಸುವ ಇಚ್ಛೆ ಇಟ್ಟುಕೊಂಡಿದ್ದನಂತೆ ಅಂದರೆ ನಂಬುತ್ತೀರಾ ?

ಇಂತಹ ಗಹನವಾದ ವಿಷಯವನ್ನು ಅರಿತು, ವಿಷಯವಸ್ತುಗಳ ವಾಸನೆಯನ್ನು[ ಪಂಚೇಂದ್ರಿಯಗಳ ಕರ್ಮಗಳನ್ನು ನಿಗ್ರಹಿಸಿ ಎಂದರ್ಥ] ತೊರೆದು ಸಮಾಜದ-ವಿಶ್ವದ ಸರ್ವತೋಮುಖ ಅಭಿವೃದ್ಧಿಗಾಗಿ ತನ್ನನ್ನೇ ತಾನು ದೈವಕ್ಕೆ , ದೈವಧ್ಯಾನಕ್ಕೆ ಸದಾ ಅರ್ಪಿಸಿಕೊಂಡು ಪ್ರಜ್ಞಾನಬ್ರಹ್ಮನ ಸಾಕ್ಷಾತ್ಕಾರ ಪಡೆಯಲು ದೇಹವೆಂಬ ವಿಶ್ವ ಸರೋವರದಲ್ಲಿ, ಆತ್ಮವೆಂಬ ಸೂರ್ಯನನ್ನು ಹಂಸರೂಪಿಯಾದ ಮನಸ್ಸು ಸತತವೂ, ನಿರತವೂ, ಅನವರತವೂ ಆರಾಧಿಸುವ ಈ ಸ್ಥಿತಿಯೇ 'ಪರಮಹಂಸ' ಸ್ಥಿತಿ. ಅಂತಹ ಸದ್ಗುರು ಸಂಕುಲವನ್ನು ಸದಾ ಆರಾಧಿಸೋಣ, ಅಭಿವಂದಿಸೋಣ, ಅಭಿನಂದಿಸೋಣ, ತನ್ಮೂಲಕ ಗುರು ಪರಬ್ರಹ್ಮನ ಆಶೀರ್ವಾದ ಪಡೆಯೋಣ.

ಗುರವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ |
ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||

Wednesday, March 10, 2010

ಕಳ್ಳ ಕಾವಿಯ ಬೆಕ್ಕು

ಜಗದಮಿತ್ರನಿಗೆ ಇಂದೇಕೋ ಮನಸ್ಸಿಗೆ ಬೇಸರವಾಗಿಬಿಟ್ಟಿದೆ ! ತನ್ನ ಕರ್ತವ್ಯವನ್ನು ಮನದಂದು ತನ್ನ ಕೆಲಸದಲ್ಲಿ ತಾನು ತನ್ಮಗ್ನನಾಗಿರುತ್ತಿದ್ದ ಆತ, ಎಂದೂ ಯಾವ ವಿಷಯಗಳಿಗೂ ಬಹಳ ತಲೆಕೆಡಿಸಿಕೊಳ್ಳದ ಆತ ಇಂದು ವಿಮುಖನಾಗಿದ್ದಾನೆ! ಕಾರಣ ಯಾವಜ್ಜೀವಿತದಲ್ಲಿ ಸಮಸ್ತ ತ್ಯಾಗದ ಸಂಕೇತವಾದ ಕಾವಿಯ ಬಣ್ಣಕ್ಕೆ ಬೇರೆ ಬಣ್ಣ ಕೊಡುವ ಕೆಲಸ ನಡೆಯುತ್ತಿರುವ ಇಂದಿನ ದಿನಗಳಲ್ಲಿ ಆತನಿಗೆ ಅರ್ಜುನ ಸನ್ಯಾಸಿಯ ಕಥೆ ನೆನಪಿಗೆ ಬರುತ್ತಿದೆಯಂತೆ. ಅಂದರೆ ಹಿಂದೂ ಕೂಡ ಇಂತಹ ಕೆಲವು ಕಾವಿ ಧಾರಿಗಳಿದ್ದರು, ಆದರೆ ಇಷ್ಟೊಂದು ಸಂಖ್ಯೆಯಲ್ಲಿರಲಿಲ್ಲ! ಈಗ ಕಾವಿ ಕೆಲವರಿಗೆ ದುಡ್ಡು ಮಾಡುವ ಸುಲಭ ಉಪಾಯವಾಗಿಬಿಟ್ಟಿದೆ. ಇಂತಹ ಕಾವಿ ವೇಷದವರನ್ನು ಕಂಡಾಗ ಗೌರವಾನ್ವಿತ ಕಾವಿಗೆ ಎಂತಹ ಅಪಚಾರಮಾಡುತ್ತಿದ್ದಾರಲ್ಲ ಎಂಬ ಆಕ್ರೋಶ ಮನದ ತುಂಬೆಲ್ಲ ಭುಗಿಲೆದ್ದು ಜಗದಮಿತ್ರ ಬೊಬ್ಬಿರಿದಿದ್ದಾನೆ ! ಸಿಂಹದಂತೆ ಗರ್ಜಿಸಿದ್ದಾನೆ; ಸಂಸ್ಕೃತಿಗೆ ಹೆಸರಾದ ಭಾರತದಲ್ಲಿ ಯಾವುದು ನಡೆಯಬಾರದಿತ್ತೋ ಅದನ್ನೇ ಜಾಸ್ತಿ ನೋಡುವಂತಾಯ್ತಲ್ಲ ಅಂತ ಮರುಗಿದ್ದಾನೆ.

ಹಿಂದೆ ರಾಜರುಗಳು ಆಳುವಾಗ ಈ ರೀತಿ ಅಪಚಾರವೆಸಗುವ ವ್ಯಕ್ತಿಗಳನ್ನು ಹಿಡಿದು ಕಠಿಣ ಶಿಕ್ಷೆ ವಿಧಿಸುತ್ತಿದ್ದರು,ಮಾತ್ರವಲ್ಲ ಕಿವಿ-ಮೂಗು ಮುಂತಾದ ಅಂಗಗಳಲ್ಲಿ ಒಂದನ್ನು ಊನ ಮಾಡಲು ಆಜ್ಞೆ ಮಾಡುತ್ತಿದ್ದರು. ಶಿಕ್ಷೆ ನೋಡಿಯೇ ಅಂತಹ ಖದೀಮರು ಕೆಟ್ಟ ಕೆಲಸಕ್ಕೆ ಇಳಿಯಲು ಹಿಜರಿಯುತ್ತಿದ್ದರು. ಇಂದಿನ ರಾಜಕೀಯ ವಿಪರ್ಯಾಸ ಎಂದರೆ ಅಂತಹ ಕಳ್ಳ-ಖದೀಮರನ್ನು, ದೇವರ ಹೆಸರಲ್ಲಿ ದುಡ್ಡು ಗಳಿಸಿ ಮೆರೆವ ಬಕಗಳನ್ನು ಪೋಷಿಸುವುದು ಮತ್ತು ಅವರು ಸೋಗಿನಲ್ಲಿ ಮತ್ತಷ್ಟು ಜನರನ್ನು ಕಲೆಹಾಕಲು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಇಂದಿನ ರಾಜಕಾರಣಿಗಳ ವೈಶಿಷ್ಟ್ಯ !

|| ಸಮಾನ ಶೀಲೇಷು ವ್ಯಸನೇಷು ಸಖ್ಯಂ || ಎಂಬ ಉಕ್ತಿಯಂತೆ ಒಂದೇ ಥರದ ಶೀಲ, ಸ್ವಭಾವಗಳುಳ್ಳ ಜನರು ಸ್ನೇಹಿತರಾಗುತ್ತಾರಂತೆ, ಇಲ್ಲೂ ಕೂಡ ರಾಜಕಾರಣಿಗಳೇ ಹಾಗಿದ್ದಾಗ ಅವರ ಸಖ್ಯ ಕೂಡ ಅಂಥಹ ನಿರ್ಲಜ್ಜ ಖೂಳರೊಂದಿಗೇ ಆಗುತ್ತದೆ !

ಶ್ರೀಮತ್ಪಯೋನಿಧಿನಿಕೇತನ ಚಕ್ರಪಾಣೇ
ಭೋಗೀಂದ್ರಭೋಗಮಣಿರಂಜಿತ -ಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಮ್ ||

ಕೆರಳಿ ಕೆಂಡಾಮಂಡಲವಾದ ಜಗದಮಿತ್ರನನ್ನು ಮರಳಿ ತಂಪಾಗಿಸಲು ಮುಂಜಾವಿನ ತಂಪಿನ ಹಾಡು ಹಾಡಿದರೂ ಸಾಧ್ಯವಾಗಲಿಲ್ಲ ! ಅಂತೂ ಇಂತೂ ಹೇಗೋ ಕೊನೇ ಸಲ ಅಂತ ಪ್ರಯತ್ನಿಸಿ ಕೊನೆಗೊಮ್ಮೆ ತನಗೆ ಮನದಲ್ಲಿ ಇರುವ ಖಾರವನ್ನೆಲ್ಲ ಹೊರಗೆ ಕಾವ್ಯದ ರೂಪದಲ್ಲಿ ತೂರಿಬಿಟ್ಟಿದ್ದಾನೆ; ಅದಾದಮೇಲೆ ಸ್ವಲ್ಪ ಶಾಂತನಾಗಿದ್ದಾನೆ- ಇದು ನಮ್ಮ ಜಗದಮಿತ್ರನ ನಾರಸಿಂಹಾವತಾರ ! " ಕೈಮುಗಿದು ಬಿಟ್ಟೆನಪ್ಪಾ ನರಸಿಂಹ ಭಕ್ತರನ್ನು ಹೆದರಿಸಬೇಡ " ಅಂತ ಪ್ರಾರ್ಥಿಸಿದರೆ " ಭಕ್ತಿಯ ಹೆಸರಲ್ಲಿ , ಸ್ವಾಮಿಗಳ ಸೋಗಿನಲ್ಲಿ ಅಡ್ಡಾಡುವ ಉಂಡಾಡಿ ಗುಂಡರನ್ನು ಅವರ ಕಾವಿಯನ್ನು,ವೇಷವನ್ನು ಪರಾಮರ್ಶಿಸಿ, ಅದು ನಾಟಕದ ವೇಷವಾದರೆ-ಕಪಟ ವೇಷವಾದರೆ ಹಿಡಿದು ಥಳಿಸುವಂತೆ ಆಜ್ಞೆ " ವಿಧಿಸಿದ್ದಾನೆ, ನಮಿಸಿ ನಾರಸಿಂಹಗೆ ಆತನ ಆಜ್ಞೆಯನ್ನು ಶಿರಸಾವಹಿಸಲು ಒಪ್ಪಿದಮೇಲೆ ಸದ್ಯಕ್ಕೆ ಅವತಾರ ಮುಗಿದಿದೆ, ಅದರ ತಾತ್ಪರ್ಯವನ್ನು ಡೀವೀಜಿ ಶೈಲಿಯಲ್ಲಿ ಓದಿ ---


ಕಳ್ಳ ಕಾವಿಯ ಬೆಕ್ಕು

ಪ್ರಾಯದಲಿ ಹುಡುಗರಲಿ 'ರಾಣಿಹುಳಗಳ' ಚಿಂತೆ
'ರಾಯಭಾರವ' ತೋರಿ ಬರಸೆಳೆಯಲವರ
ಕಾಯನಲುಗಿದರೆಷ್ಟು ತಾಯಿ-ತಂದೆಯರಿಂಗೆ
ಮಾಯವಾಗದು ಮನದಿ | ಜಗದಮಿತ್ರ

ಭೂಮಿಯದು ಹಲವು ಕಲೆಗಳ ತವರು ಎನ್ನುವುದು

ಕಾಮಿಗಳಿಗೂ ತಿಳಿದ ಸಾಮಾನ್ಯ ವಿಷಯ
ನೇಮ ನಿಷ್ಠೆಯ ಸೋಗು ತೋರಿಸುತ ಘನತರದಿ
ನಾಮವೆಳೆವರು ನೋಡು | ಜಗದಮಿತ್ರ

ಸುರಪತಿಯು ರಾಜ್ಯಭಾರವ ಹಿತದಿ ತಾ ನಡೆಸಿ

ಪರಸತಿಯ ಪೀಡಕರ ಹಿಡಿದು ಗುರುತಿಸುತ
ದರದರನೆ ಎಳೆದೊಯ್ದು ಕುಳ್ಳಿರಿಸಿ ಸಜೆಯೊಳಗೆ
ಬರೆಯನೆಳೆದನು ನೋಡ | ಜಗದಮಿತ್ರ

ಸನ್ಯಾಸಿ ತಾನೆಂದು ಬಂದ ವ್ಯಕ್ತಿಯ ಹಿಡಿದು

ಅನ್ಯವಿಷಯಂಗಳನು ಅವಲೋಕಿಸುತ
ಮಾನ್ಯಮಾಡಲು ಹಲವು ಮೆಟ್ಟಿಲುಗಳನುಸರಿಸು
ಧನ್ಯನಾಗುತ ಜಗದಿ | ಜಗದಮಿತ್ರ

ಹುಡುಗಿಯರು ದಿರಿಸಿನಲಿ ಸೆಳೆಯುವರು ಕಣ್ಣುಗಳ
ಬೆಡಗು ಬಿನ್ನಾಣಗಳ ನಗೆ ಪ್ರದರ್ಶಿಸುತ
ಹಡಗಿನೋಪಾದಿಯಲಿ ನಡೆದು ಹೋಪರು ಮುಂದೆ
ಗುಡುಗಿಲ್ಲದಾ ಮಳೆಯೂ | ಜಗದಮಿತ್ರ

ಹೆಂಗಸರು ತಮಗೆಲ್ಲ ಮೀಸಲಾತಿಯ ಎಣಿಸಿ
ಭಂಗವಿಲ್ಲದೆ ಪಡೆದು ನುಗ್ಗಲಾಶ್ರಮಕೆ
ಕಂಗೆಟ್ಟು ಕುಲಗೆಟ್ಟ ಕಳ್ಳ ಕಾವಿಯ ಬೆಕ್ಕು
ಚಂಗನೇ ಜಿಗಿಯಿತದೊ | ಜಗದಮಿತ್ರ


ಕಾವಿಯುಟ್ಟರೆ ಜಗಕೆ ಕಾಣದದು ಅನುಕೊಳುತ
ಹಾವಿನಂದದಿ ಹುದುಗಿ ಕಳ್ಳ ಕಿಂಡಿಯಲಿ
ಹೂವಿನಂತಹ ಮುಗ್ಧ ಮನಸುಗಳ ಬಲಿಗೈದ
ಆವಿಚಿತ್ರನ ಥಳಿಸು | ಜಗದಮಿತ್ರ

Tuesday, March 9, 2010

ಬೆಡಗಿನ ಮುಂಜಾವು

ಬೆಡಗಿನ ಮಂಜಿನ ಮುಂಜಾವನ್ನು ಅನುಭವಿಸಬೇಕೆ ಹೊರತು ಅದನ್ನು ಹಾಡಿನಲ್ಲಿ, ಪದಗಳಲ್ಲಿ ಬಣ್ಣಿಸಲು ಸ್ವಲ್ಪ ಕಷ್ಟ, ಒಂದೊಂದು ಕೆಡೆಗೆ ನಮ್ಮ ನಿಸರ್ಗದ ಬೆಳಗು ಮತ್ತು ಬೆಡಗು ಒಂದೊಂದು ಥರ ! ಇಡೀ ದಿನದಲ್ಲಿ ತಂಪಾದ ವಾತಾವರಣ ಇರುವುದು ಮುಂಜಾವಿನಲ್ಲಿ ಮಾತ್ರ. ಬೆಳಗಿನ ೫ ಗಂಟೆ ಅತೀ ತಣ್ಣಗಿನ ಕಾಲ ವೆಂದು ವಿಜ್ಞಾನ ಹೇಳುತ್ತದೆ. ನಮಗೆ ಅತ್ಯುಪಯುಕ್ತವಾದ ozone ಪದರಕೂಡ ಈ ಹೊತ್ತಿನಲ್ಲೇ ಭೂಮಿಯ ಹತ್ತಿರಕ್ಕೆ ಇಳಿದಿರುತ್ತದೆ.


ಈ ಸಮಯ ಆನಂದಮಯ. ಸ್ವಲ್ಪ ಮಂಜು ಇದ್ದರೆ, ಥರಥರದ ಹೂವುಗಳು ಅರಳಿ ಪರಿಮಳ ಬೀರಿದ್ದರೆ, ಗಿಡ-ಮರಗಳು ಮಂದ ಮಾರುತಕ್ಕೆ ತಲೆಯಲ್ಲಾಡಿಸಿ ತೊನೆಯುತ್ತಿದ್ದರೆ, ಹಕ್ಕಿಗಳು ತಮ್ಮ ವಿವಿಧ ಧ್ವನಿಗಳಲ್ಲಿ ಕಲರವ ಎಬ್ಬಿಸಿದರೆ, ದುಂಬಿಗಳು ಹಾರಡಿದರೆ, ಚಿಟ್ಟೆಗಳೂ ಕೈ ಜೋಡಿಸಿದರೆ, ಆಕಳ ಎಳೆಗರುಗಳು ಅಂಬೆ ಎಂದು ಕೂಗಿದರೆ, ಮಾವು ತನ್ನ ನಳಿದೋಳುಗಳಿಂದ ತೋರಣ ಕಟ್ಟಿದ್ದರೆ, ಸಣ್ಣ ಕಾಮನ ಬಿಲ್ಲು ಹುಟ್ಟಿಕೊಂಡರೆ ಯಾರಿಗೆ ಬೇಕು ಇಂದ್ರನ ನಂದನವನ, ಇದೇ ಭುವಿಯ ನಂದನವನವಲ್ಲವೇ ? ಇದನ್ನು ನೀವೂ ಹಾಡಿನ ಮೂಲಕ ಅನುಭವಿಸಿ ಬನ್ನಿ --------



ಬೆಡಗಿನ ಮುಂಜಾವು


ಎಷ್ಟು ಚಂದವೀ ಸೃಷ್ಟಿಯ ಸೊಬಗಿದು
ಇಂಪಿನ
ತಂಪಿನ ಮುಂಜಾವು
ಇಷ್ಟವಾಯ್ತೆನಗೆ ನಿಸರ್ಗ ನೋಂಪಿಯು
ಬೆಡಗಿನ
ನಿತ್ಯೋತ್ಸವದರಿವು


ಚೆಂಗುಲಾಬಿಯ ತುಂಬ ಮುತ್ತು ಪೋಣಿಸಿ ಇಟ್ಟು
ಮತ್ತೆ
ದಿನಕರನು ಬರಲು
ಬೃಂಗಕುಂತಳೆ ಹೇಳು ಯಾರಿಗಿದು ಔತಣವು
ಪ್ರತಿದಿನವು ನಡೆಯುತಿರಲು


ಮಂದಮಾರುತ ಬೀಸಿ ಮುಂಗುರಳ ನೇವರಿಸೆ
ಗಿಡ
-ಮರಗಳವು ನಲಿಯುತಾ
ಬಂದಜನತೆಗೆ ಹಸಿರ ಹುಲ್ಲ ಚಾಪೆಯ ಹಾಸಿ
ಕರೆ
ವಳದೋ ತಾಯಿ ಸತತ


ಜಾಜಿ ಮಲ್ಲಿಗೆ ಕೇದಗೆ ಸಂಪಿಗೆಯ
ಕಂಪು
ಬನದ ತುಂಬೆಲ್ಲ ಹರಡಿ
ರಾಜದುಂಬಿಯ ಕರೆಯೆ ನಡೆಸಿಹವು ಪೈಪೋಟಿ
ರಾಜಿಸುತ
ತನುವನೀಡಿ


ಮಾವು ತೂಗುತ ತೋರಣವ ಕಟ್ಟಿ ಬಾಂದಳದಿ
ಜಾವದಲೆ ಶುಭವಕೋರಿ
ಆವು ಕರುಗಳು ಕೊರಳ ಗಂಟೆಯಾಡಿಸಿ ತಾವು
ಜೀವನೋತ್ಸವದಿ ಹಾರಿ


ಹೊಗೆಯ ನಗುವಿನ ಮಂಜು ಮುಸುಕಿಹುದು
ಬಯಲಿನಲಿ
ತಣ್ಣನೆಯ ಚಳಿಯ ಬೀರಿ
ಬಗೆಯ ಚಿಟ್ಟೆಗಳೆಲ್ಲ ಹಾರಾಡಿ ನಲಿದಿಹವು
ಸಿಹಿಯ
ಮಕರಂದ ಹೀರಿ

Monday, March 8, 2010

ಭಾಷೆ ಮತ್ತು ಅದರ ಮಹತ್ವ

ಭಾಷೆ ಮತ್ತು ಅದರ ಮಹತ್ವ

ಭಾಷೆ ವ್ಯಕ್ತಿತ್ವದ ಒಂದು ಮುಖ್ಯ ಭಾಗ, ಭಾಷೆಯಿಲ್ಲದೆ ವ್ಯವಹರಿಸುವುದು ಕಷ್ಟದ ಕೆಲಸ. ಎಷ್ಟು ಜಾಸ್ತಿ ಭಾಷೆ ಬರುತ್ತದೋ ಅಷ್ಟು ಒಳ್ಳೆಯ ಬೆಳವಣಿಗೆ ಸಾಧ್ಯ. ವ್ಯಕ್ತಿಯೊಬ್ಬ ಆಸ್ಸಾಮ್ ನಿಂದ ಬಂದಿದ್ರೆ ಅವನ ಕೂಡ ಅಸ್ಸಾಮ್ ಭಾಷೆಯಲ್ಲೇ ಮಾತನಾಡಿದರೆ ಅವನಿಗೆ ತುಂಬಾ ಅಪ್ಯಾಯಮಾನವೆನಿಸುತ್ತದೆ. ನೀವೇ ನೋಡಿ ನಿಮ್ಮ ಮೂಲ ಪ್ರದೇಶಗಳಿಂದ [from your native places] ಯಾರಾದರೂ ಬಂದಿದ್ದರೆ ಅವರನ್ನು ಮಾತಿನಿಂದಲೇ ನೀವು ಪತ್ತೆ ಹಚ್ಚುತ್ತೀರಿ, " ನೀವು ಧಾರವಾಡದವರಾ ? ಧಾರವಾಡದ ಭಾಷೆ ಚೆನ್ನಾಗಿ ಮಾತಾಡುತ್ತೀರಿ ಅದಕ್ಕೇ ಕೇಳಿದೆ " ಹೀಗೇ ಯಾರನ್ನೇ ಕಂಡರೂ ಮನಸ್ಸು ಮೊದಲು ಗೌರವಿಸುವುದು, ಹತ್ತಿರಕ್ಕೆ ಕರೆಯುವುದು ಪ್ರಾದೇಶಿಕ ಭಾಷೆ [native language]. ಇದನ್ನೇ ಮನಗಂಡಿದ್ದ ನಮ್ಮ ಕವಿ-ಸಾಹಿತಿಗಳು ಅವರದೇ ಭಾಷೆಗಳಲ್ಲಿ ಬರೆದರು,ಜನರಿಗೆ ಹತ್ತಿರವಾದರು. ಪ್ರತಿಯೊಂದು ಭಾಷೆ ಕೂಡ ಅದರದ್ದೇ ಆದ ಸೊಗಡಿನಿಂದ,ಸೊಬಗಿನಿಂದ ಕೂಡಿದೆ. ಯಾವುದು ಮೇಲು ಯಾವುದು ಕೆಳಗೆ ಎನ್ನುವ ಭಾಷಾಂಧಕಾರ ಸಲ್ಲ. ಮಾತೃ ಭಾಷೆ ಎನ್ನುವುದು ನಮ್ಮ ಜೀವನಾಡಿ, ಆದರೆ ಮಿಕ್ಕುಳಿದ ಭಾಷೆಗಳ ಬಗೆಗೂ ನಮಗೆ ಗೌರವ ಇರಲಿ.

ವ್ಯಾವಹಾರಿಕವಾಗಿ ಇಂಗ್ಲೀಷ್ ಭಾಷೆ ಜಗತ್ತಿನ ಎಲ್ಲಾ ಕಡೆ ಪ್ರಭುತ್ವ ಸ್ಥಾಪಿಸಿದೆ, ಇದಕ್ಕೆ ಇಂಗ್ಲೀಷರ ವಿಶ್ವಪರ್ಯಟನ ಕಾರ್ಯ ಕಾರಣವಿರಬಹುದು. ನಾವು ನಮ್ಮ ಮಾತೃ ಭಾಷೆಯನ್ನೇ ಇಷ್ಟಪಟ್ಟರೂ ಸ್ಟೈಲ್ ಗಾಗಿ

"
ಗೋ ಯಾ "

" ವಾಟ್ ಮ್ಯಾನ್ ಯು ಆರ್ ನಾಟ್ ಹೆಲ್ಪಿಂಗ್ ಮಿ ? "

ಎಂದೆಲ್ಲಾ ಬರ್ಮುಡಾ ಹಾಕಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಿರುತ್ತೇವೆ ! ನಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗೇ ಕಳಿಸುತ್ತೇವೆ! ಯಾಕೆಂದರೆ ನಮಗೆ ಗೊತ್ತು ಇಂಗ್ಲೀಷ್ ಅನ್ನೋದು ಅಷ್ಟು ಪಾಪ್ಯುಲರ್ !


ಒಂದು ಹಳ್ಳಿಗೆ ಬೆಂಗಳೂರಿಂದ ಕೆಲವು ಮಂದಿ ಹೋಗಿದ್ದರು, ಅದು ಅವರಿಗೆ ಹೊಸಾ ಪ್ರದೇಶ. ಸೃಷ್ಟಿಯ ಸೊಬಗನ್ನು ನೋಡಲು ಕಾತುರರಾಗಿ ಅಲ್ಲಿಗೆ ಹೋಗಿದ್ದರು. ಅಲ್ಲಿ ಹಸಿರು ಕಾಡು ಇತ್ತೆಂದು ಅವರು ಹೋಗಿದ್ದರು,ಕಾಡಿಗೂ ಹಳ್ಳಿಗೂ ನಡುವೆ ಒಂದು ನದಿ. ಶರಾವತಿ ನದಿ ಅಂತಲೇ ಇಟ್ಟುಕೊಳ್ಳೋಣ. ಒಂದುಕಡೆ ಅವರಿಗೆ ನದಿ ದಾಟಿ ಆಚೆ ಹೋಗಬೇಕಾಗಿ ಬಂತು. ಅಲ್ಲಿ ಹೇಗೆ ಮಾಡುವುದು ಎಂದು ತಿಳಿಯಲಿಲ್ಲ, ಅಲ್ಲಿಯೇ ಚಿಕ್ಕ ಗುಡಿಸಲೊಂದಿತ್ತು, ಯಾರೋ ಒಬ್ಬಾತ ಏನೋ ಮಾಡುತ್ತಿದ್ದ,ಆತನನ್ನು ಮಾತನಾಡಿಸಲು ಹೋದಾಗ ಆತ ಶುದ್ಧ ಕನ್ನಡ ಗ್ರಾಮ್ಯ ಭಾಷೆಯಲ್ಲಿ ಮಾತನ್ನಾಡುತ್ತಿದ್ದ. ಹೋದವರು ಆತನ ಹತ್ತಿರ ಹೇಳಿದಾಗ ಆತ ತಾನೇ ಅಂಬಿಗನೆಂದೂ ತಾನು ದೋಣಿ ದಾಟಿಸಿ ನಿಮ್ಮನ್ನು ಆಚೆ ದಡಕ್ಕೆ ಬಿಡುವೆನೆಂದೂ ಬಹಳ ಸಂತೋಷದಿಂದ ಹೇಳಿದ. ದೋಣಿ ದಾಟಿಸಿದ ಕೂಡ ! ದೋಣಿ ದಾಟಿಸಿ ಆದ ಮೇಲೆ, ಬೆಂಗಳೂರಿನ ಈ ನೆಂಟರು ಅಭ್ಯಾಸ ಬಲದಿಂದ " ಥ್ಯಾಂಕ್ಸ್ " ಎಂದರು. ಆ ಅಂಬಿಗನಿಗೆ ಎಲ್ಲಿಲ್ಲದ ಕೋಪ ಬಂತು, ಕಣ್ಣು ಕೆಂಪಗಾಯ್ತು. ಏನೇನೋ ಬೈಯ್ದ. ಹೆಚ್ಚೇಕೆ ಅವರನ್ನು ಅಲ್ಲಿಂದ ಮುಂದಕ್ಕೆ ಅಟ್ಟಿಸಿ ಓಡಿಸಿದ, ಯಾಕೆಂದರೆ ಅವನ ಭಾಷೆಯಲ್ಲಿ " ಥ್ಯಾಂಕ್ಸ್ " ಅನ್ನೋದು ಒಂದು ಕೆಟ್ಟ ಅರ್ಥ ಕೊಡುವ ಶಬ್ಧವಾಗಿತ್ತು. ಹೋದವರಿಗೆ ಕಾಡು ನೋಡುವುದಕ್ಕಿಂತ ಮರಳಿ ಹೋಗುವ ಚಿಂತೆ ಕಾಡ ಹತ್ತಿತು! ನೆನೆಸಿಕೊಂಡರೆ ಮೈಯೆಲ್ಲಾ ಬೆವರುತ್ತಿತ್ತು ! ಆ ಅಂಬಿಗ ಇನ್ನು ಬರುವುದಿಲ್ಲ, ಹತ್ತಿರ ಹೋದರೆ ಹೊಡೆದರೂ ತಿನ್ನಬೇಕು ಅಷ್ಟೇ ! ಅವನನ್ನು ಬಿಟ್ಟು ಅಲ್ಲಿ ನದಿ ದಾಟಿಸಲು ಬೇರಾವುದೇ ಸೌಲಭ್ಯ ಇಲ್ಲ. ಹೀಗಾಗಿ ಮರಳಿ ಹೋಗುವಾಗ ಏನುಮಾಡುವುದು ಎಂಬುದೇ ಪರ್ವತಾಕಾರದ ಸಮಸ್ಯೆಯಾಗಿತ್ತು ! ಕೊನೆಗೆ ದೇವರು ದೊಡ್ಡವನು ಆ ಹಳ್ಳಿಯವ ಅವರ ತಪ್ಪನ್ನು ಯವುದೋ ಗಳಿಗೆಯಲ್ಲಿ ಕ್ಷಮಿಸಿದ್ದ, ಅವರನ್ನು ವಾಪಸ್ ಬಿಡುವುದು ತನ್ನ ಕರ್ತವ್ಯ ಎಂಬಂತೆ ಕರ್ತವ್ಯ ಪ್ರಜ್ಞೆ ಮೆರೆದಿದ್ದ, ಹೀಗಾಗಿ ಕೊನೆಗೊಮ್ಮೆ ಮರಳಲು ಸಹಾಯ ಮಾಡಿದ,ಈಗ ಮತ್ತೆ ಅವರು " ಥ್ಯಾಂಕ್ಸ್ " ಅನ್ನುವ ಬದಲು ಕೈಮುಗಿದರು , ಅದಕ್ಕಾತ ಕಿಸ ಕಿಸನೇ ನಕ್ಕ

. " ಓ ಒಡ್ಯಾ ನಂಕೈ.ಮುಗುದ್ಬ್ಯಾಡ ಬಿಡ್ರ, ದ್ಯಾವರವ್ನೆ, ಎಲ್ಲಾ ಘನಾಕಿಟ್ಟಿರ್ಲಿ, ಇನ್ನೊಂದಪಾ ಬನ್ನಿ " ಎಂದ.

ಹಾಗೆ ಹೇಳುವಾಗ ಆತನ ಮುಖದಲ್ಲಿ ಮಗುವಿನಂತ ಮುಗ್ಧ ಭಾವವಿತ್ತು, ಆತ್ಮೀಯತೆ ಇತ್ತು, ಪ್ರೀತಿಯಿತ್ತು, ' ಪಾಪ, ಏನೂ ಗುತ್ತಿಲ್ಲ ಅವ್ರಗೆ ' ಎನ್ನುವ ಮನೋಧರ್ಮ ಇತ್ತು, 'ಬೇರೆ ಊರಿಂದ ಬಂದರೆ, ಸಹಾಯ ಮಾಡಬೇಕು ' ಎನ್ನುವ ತಿಳುವಳಿಕೆ ಇತ್ತು. ಅವೆಲ್ಲವನ್ನೂ ಮಿಳಿಸಿ ಆತ ತನ್ನದೇ ಗ್ರಾಮ್ಯ ಭಾಷೆಯಲ್ಲಿ ಶುಭಹಾರೈಸಿ ಅವರನ್ನು ಬೀಳ್ಕೊಟ್ಟಿದ್ದ ! We learn the lesson ' be a Roman when you are in Rome ' ! ಹಳ್ಳಿಗರು ಎಂದೂ ಕೆಟ್ಟವರಾಗಿರುವುದಿಲ್ಲ, ಅವರಲ್ಲಿ ಅಲ್ಲಿನ ಪರಿಸರದ ನಿತ್ಯ-ಸತ್ಯದ ಬದುಕಿನ ಅರಿವಿರುತ್ತದೆ. ಆದರೆ ಅವರಿಗೆ ಆರ್ಥವಾಗದ ಭಾಷೆ ಅಪಾರ್ಥಕ್ಕೆ ಕಾರಣವಾದರೆ ಆಗ ಆಗುವ ಅನಾಹುತಗಳೇ ಬೇರೆ. ಇಂತಹ ಸನ್ನಿವೇಶಗಳಲ್ಲಿ ಆಂಗಿಕಾಭಿನಯ [ Body Language ] ಬಳಸುವುದು ಸೂಕ್ತ.

ಎಷ್ಟೋ ಜನರಿಗೆ ಆಂಗಿಕಾಭಿನಯ ಬರುವುದೇ ಇಲ್ಲ. ಆಂಗಿಕಾಭಿನಯದ ಕಲ್ಪನೆ ಬಂದರೆ ಅನೇಕರು ಭಾಷೆ ಗೊತ್ತಿರದಿದ್ದರೂ ಕೆಲಕಾಲ ಬದುಕಬಹುದು. ಯಾರೋ ಸುಲಭವಾಗಿ ನರ್ತಿಸಲು ತನಗೆ ಬರುವುದಿಲ್ಲ, ಹೇಗೆ ಮಾಡಬೇಕೆಂದೇ ತಿಳಿಯುವುದಿಲ್ಲ, ಸಾದಾ-ಸೀದಾ ಡ್ಯಾನ್ಸ್ [ನೃತ್ಯ] ಮಾಡುವ ಒಂದು ಸ್ಟೆಪ್ ಹೇಳಿಕೊಡುತ್ತೀರಾ ಎಂದು ನಮ್ಮ ಕನ್ನಡದವರೇ ಆದ ತಮಿಳಿನಲ್ಲಿ ಬೆಳಗಿದ ಪ್ರಭುದೇವ ಎಂಬ ಸಿನಿಮಾ ನಟನನ್ನು ಕೇಳಿದರು. ಅದಕ್ಕೆ ಆತ ಕೊಟ್ಟ ಉತ್ತರ-
"
೧. ನಿಮ್ಮ ಬಲಗೈ ಮೇಲೆತ್ತಿ ಬಲ್ಬ್ ಹಾಕುವ ರೀತಿ ತಿರುಗಿಸಿ,

ಈಗ ಅದನ್ನು ನಿಲ್ಲಿಸಿ

೨. ನಿಮ್ಮ ಎಡಗಾಲಿನ ತುದಿಯಿಂದ ಆರದೇ ಬಿದ್ದಿರುವ ಸಿಗರೇಟ್ ತುಂಡನ್ನು ಹೊಸಕುತ್ತಾ ಆರಿಸಲು ಪ್ರಯತ್ನಿಸಿ

ಈಗ ಅದನ್ನು ನಿಲ್ಲಿಸಿ

ಈಗ ಮೇಲಿನ ಎರಡೂ ಕೆಲಸಗಳನ್ನು ಏಕಕಾಲದಲ್ಲಿ ಮಾಡಿ. ನೀವೀಗ ಒಂಥರಾ ಡ್ಯಾನ್ಸ್ ಮಾಡುತ್ತಿದ್ದೀರ ಅಲ್ಲವೇ ? "

ಹೀಗೇ ಆಂಗಿಕಾಭಿನಯ ಜೀವನದಲ್ಲಿ ಬಹಳ ಉಪಯುಕ್ತ, ಅದು ಎಲ್ಲಾ ಕಡೆಗೂ ಉಪಯೋಗಕ್ಕೆ ಬರಬಹುದಾದ, ಹೆಚ್ಚಿನ ಕಲಿಕೆ ಬೇಕಾಗದ ಒಂದು ಭಾಷೆ!

ಎಲ್ಲಾದರೂ ಹೋದಾಗ ನಮ್ಮ ಭಾಷೆಯವರು ಸಿಕ್ಕಿ ಬಿಟ್ಟರೆ ನಮ್ಮ ಖುಷಿಯೇ ಬೇರೆ ! ಉದಾಹರಣೆಗೆ ಉತ್ತರಪ್ರದೇಶಕ್ಕೆ ಹೋಗಿದ್ದೀರಿ, ಏನೋ ಕೆಲಸದಲ್ಲಿ ನಿರತರಾಗಿದ್ದೀರಿ, ನಿಮಗೆ ಅಲ್ಲಿ ಅನೇಕ ದಿನಗಳ ನಂತರ ಒಬ್ಬರ ಪರಿಚಯವಾಗುತ್ತದೆ, ಆತ ಕನ್ನಡದವರೇ ಅಂತ ತಿಳಿದಾಗ ಆಗುವ ಸಂತೋಷ ಅಷ್ಟಿಷ್ಟಲ್ಲ ! ಅಲ್ಲೇ ಶುರು 'ಉತ್ತರಪ್ರದೇಶ್ ಕನ್ನಡ ಸಂಘ'. ಅಮೇರಿಕಾ ಅಥವಾ ಬೇರೆ ದೇಶಗಳಿಗೆ ಹೋದಾಗ ಅದು ಇನ್ನೂ ಹೆಚ್ಚು

" ಅಯ್ಯೋ ನೀವು ಉಡುಪಿ ಕೃಷ್ಣ ಹೋಟೆಲಿನಲ್ಲಿ ಕೆಲಸ ಮಾ
ಡುತ್ತಿದ್ದಿರಲ್ಲವೇ ಮ್ಯಾನೇಜರ್ ಆಗಿ ಈಗ ಇಲ್ಲಿ ?"

" ಇಲ್ಲಿ ಅವರದ್ದೇ ಬ್ರಾಂಚು ಉಂಟು ಮಾರಾಯರೇ ಅದಕ್ಕೇ, ನನಗೆ ಇಂಗ್ಲೀಷು ಚೆನ್ನಾಗಿ ಬರ್ತಿತ್ತು, ಯಜಮಾನರು '
ಪ್ರದೀಪ ನೀನು ಅಮೆರಿಕಾದಲ್ಲಿ ಸ್ವಲ್ಪ ದಿನ ಇದ್ದು ಬಾ' ಅಂತ ಕಳಿಸಿದ್ದು, ನೀವು ಏನುಮಾಡುವುದು ಇಲ್ಲಿ ? "

ಎಂದು ಶುರುವಿಟ್ಟುಕೊಳ್ಳುತ್ತೇವೆ.

|| ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||

ಎಂಬಂತೆ ನಮಗೆ ಮಾತೃ ಭಾಷೆಯ, ಮಾತೃ ಭೂಮಿಯ ಕೊಡು-ಕೊಳ್ಳುವಿಕೆಯ ಅದಮ್ಯ ಪ್ರೀತಿ, ಆ ತುಡಿತ ಅದು ಅನನ್ಯ-ಅನೂಹ್ಯ, ಅನುಭವ ಮಾನ್ಯ!

[ ಮುಂದಿನವಾರ ನೋಡೋಣ ...............]

Sunday, March 7, 2010

ವನಿತಾ ದಶಾವತಾರಕೆ ಶರಣು

ಮಹಿಳಾ ದಿನಾಚರಣೆ ಅಂತ ಪ್ರತ್ಯೇಕ ಬೇಕೇ ಎನ್ನುವುದು ನನ್ನ ವಾದ, ಬಲ್ಲವರಿಗೆ ದಿನವೂ ರಾಜ್ಯೋತ್ಸವ, ದಿನವೂ ಮದರ್ಸ್ ಡೇ, ದಿನವೂ ಶಿಕ್ಷಕರ ದಿನಾಚರಣೆ ಹೀಗೇ ಎಲ್ಲವೂ ದಿನವೂ ಇರುತ್ತವೆ ಹೊರತು ಅದು ಒಂದೇ ದಿನಕ್ಕೆ ಆಗುವ- ಆಗಿ ಮುಗಿದುಬಿಡುವ ವ್ಯವಹಾರವಲ್ಲ. ಹೆಂಗಸು-ಗಂಡಸು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ! ಒಂದನ್ನು ಬಿಟ್ಟರೆ ಇನ್ನೊಂದಕ್ಕೆ ಬೆಲೆ ಇರುವುದಿಲ್ಲ. ಈಗೀಗ ನಾವು ಮಹಿಳಾ ದಿನಾಚರಣೆ ಎನ್ನುತ್ತೇವೆ, ಆದರೆ ಮಹಿಳೆಯರು ಒಂದರ್ಥದಲ್ಲಿ ಗಂಡಸರನ್ನು ತಪ್ಪಾಗಿ ಗ್ರಹಿಸಿದ್ದಾರೆ. ಶಾರೀರಿಕ ಪ್ರಕ್ರಿಯೆಯಲ್ಲಂತೂ ಮಹಿಳೆಯರಿಗೂ-ಮಹನೀಯರಿಗೂ ಅಜಗಜಾಂತರವಿದೆ. ಮಹಿಳೆ ದೈಹಿಕವಾಗಿ ಹೊರಗಡೆಯ ಕೆಲಸಕ್ಕೆ ತೊಡಗಿದರೆ ಅವಳಿಗೆ ತೊಂದರೆಯಾಗುತ್ತದೆ ಎಂಬ ಪಾಪಪ್ರಜ್ಞೆಯಿಂದ ನಮ್ಮ ಪೂರ್ವಜರು ಮನೆಯಲ್ಲೇ ಉಳಿಸಿದರು[ಓಡಬೇಡ, ಬುದ್ಧಿವಿಕಾಸಕ್ಕೆ ಪ್ರಯತ್ನಿಸಬೇಡ ಎನ್ನಲಿಲ್ಲ] ಮಾತ್ರವಲ್ಲ ತಿಂಗಳ ನಾಲ್ಕುದಿನ ಅವರ ಋತು ಚಕ್ರದ ಕ್ರಿಯೆಗೆ ಅನುಕೂಲವಾಗಿ, ನೋವನುಭವಿಸುವ ಆ ಮಹಿಳೆ ಆರೋಗ್ಯದಿಂದ ವಿಶ್ರಾಂತಿಪಡೆಯಲಿ ಎಂಬ ಉದ್ದೇಶ ದಿಂದ ಆ ದಿನಗಳನ್ನು 'ಮೈಲಿಗೆಯ ದಿನಗಳು' ಎಂದು ಘೋಷಿಸಿದ್ದರು, ಮಧ್ಯದಲ್ಲಿ ಕೆಲವರ ಮೌಡ್ಯದಿಂದ ಕೆಲವು ಹುಚ್ಚು ಶಾಸ್ತ್ರಗಳು-ಸಂಪ್ರದಾಯಗಳು ಬಂದವು ಬಿಟ್ಟರೆ ಪೂರ್ವೇತಿಹಾಸದಲ್ಲಿ ಅವು ಕಾಣಸಿಗುವುದಿಲ್ಲ. ಇಂದು ಅದನ್ನೆಲ್ಲ ತಿರುವಿಹಾಕಿದ ಮಹಿಳೆ ತನ್ನ ಮೈಮೇಲೆ ತಾನೇ ಚಪ್ಪಡಿ ಕಲ್ಲನ್ನು ಹಾಕಿಕೊಂಡಿದ್ದಾಳೆ. ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಮಡದಿಯಾಗಿ,ದಾದಿಯಾಗಿ, ವೈದ್ಯೆಯಾಗಿ, ದಾಸಿಯಾಗಿ, ಶಿಕ್ಷಕಿಯಾಗಿ ಹೀಗೇ ಹಲವಾರು ವಿಭಿನ್ನ ಪಾತ್ರ ಪೋಷಣೆಯ ಅವಶ್ಯಕತೆ ಅನೇಕ ಮಹಿಳೆಯರ ಜೀವನದ ದಿನಗಳಲ್ಲಿ ಬರುತ್ತದೆ. ಎಲ್ಲವನ್ನೂ ಸಮರಸದಿಂದ, ಸಂತುಷ್ಟಿಯಿಂದ ನಿಭಾಯಿಸುವ ಮಹಿಳೆಯನ್ನು ಆಗಬಹುದಾದ ಕೆಲವು ರೂಪಗಳಿಂದ ಬಣ್ಣಿಸಿ , ಎಲ್ಲರಿಗೂ ಲೋಕದ ಸಮಸ್ತ ಗಂಡಸರ ಪರವಾಗಿ ಶುಭ ಹಾರೈಸಿ ಮಹಿಳೆಯರೆಲ್ಲರ ಗೌರವಾರ್ಥ ಜಾನಪದದ ಶೈಲಿಯಲ್ಲಿ ಅರ್ಪಿಸಿದ ಕವನ ಇಂತಿದೆ --


ವನಿತಾ ದಶಾವತಾರಕೆ ಶರಣು
[ಚಿತ್ರ ಋಣ : ೧೨೩ ಗ್ರೀಟಿಂಗ್ಸ್. ಕಾಂ ]

ಒಂಬತ್ತು ತಿಂಗಳು ನಮ್ಮನ್ನು ಹೊತಗೊಂಡು
ಅಮ್ಮ ಹಡೆದಳು ತನ್ನ ಕನಸ ನೆನೆಸಿ
ತುಂಬಿತ್ತು ಹದಿನೆಂಟು ಓದುತ್ತ ಕೂತ್ಗೊಂಡು
ಬೆಂಬಿಡದೆ ಕಾಡಿದೆವು ಕೆಲಸ ವಿಧಿಸಿ

ಅಕ್ಕ ಬಂದಳು ಮನೆಗೆ ಚೊಕ್ಕ ಬಟ್ಟೆಯ ಕೊಡಲು
ಬೆಕ್ಕಸ ಬೆರಗು ಈ ಮನೆತುಂಬೆಲ್ಲ
ಅಕ್ಕಿಕಾಳಿನ ಮೇಲೆ ಹೆಸರು ಬರೆದಿಹರೆಂದು
ಅಕ್ಕರೆಯ ಮಾತಲ್ಲಿ ಬುದ್ಧಿ ತಿಳಿಸಿ

ತಂಗಿಗ್ಯಾತಕೋ ಕೋಪ ಆದ್ರೂ ಒಂಥರಾ ಪಾಪ!
ಭಂಗ ತಾರಳು ನಮ್ಮ ಇರವ ಗಣಿಸಿ
ಬೃಂಗದಾ ಬೆನ್ನೇರಿ ಬಂತು ತೋಂ ತನ ಎನುತ
ಅಂಗಳದಿ ಜಿಗಿದಾಡಿ ಗೆಲುವಲಿರಿಸಿ

ಮಲ್ಲಿಗೆ ಹೂವನ್ನು ಮುಡಿದ ಮಾದಕ್ಕಂಗೆ
ಗಲ್ಲದ ಮೇಲಿನ ಮಚ್ಚೆ ಗುರುತು
ಬೆಲ್ಲದಂತಹ ಮಾತು ಆಡ್ಯಾಳ ಎಲ್ಲರೊಡೆ
ಬಲ್ಲವರೇ ಕೇಳಿ ನೀವ್ ದಾಯಿಯವಳು

'ಮಡದಿಮಾತನು ಕೇಳೆ ಗಿಡಕೆಲ್ಲ ನೋವಕ್ಕು'
ಗುಡಿಸಿ ಸ್ವಚ್ಛಗೊಳಿಸಿ ಈ ಮಾತನ್ನು
ಒಡಲುತುಂಬಾ ಊಟ ಮನತುಂಬುವಾ ನೋಟ
ಬಡಿಸಿ ಪ್ರೇಮದ ಮೂರ್ತಿ ತಾನಾದಳು

ವೈದ್ಯೆ ಪ್ರೇಮಕ್ಕನು ಬಡರೋಗಿಗಳ ಕೂಡ
ಚೋದ್ಯವಿಲ್ಲದೆ ಮಾತನಾಡುವಳು
ಆದ್ಯತೆ ನೀಡುತಾ ಪಾಪ ಅವರ ಕಷ್ಟ
ಬಾಧ್ಯತೆಗಳ ಮೀರಿ ಹರಿಸುವಳು


ಊರ ಶಾಲೇಲಿ ಮತ್ತೆ ಗ್ರಾಮಪಂಚಾಯ್ತಿಯಲಿ
ಭಾರೀ ಕೆಲಸದ ಜನರು ಹೆಂಗಳೆಯರು
ಯಾರೇನೇ ಅಂದರೂ ಖಾರಸಹಿಸುತ ನಡೆದು
ದಾರೀ ತುಂಬೆಲ್ಲ ಶುಭ ಹರಸಿಹರು

Saturday, March 6, 2010

ಸಮಯವಿಲ್ಲ ನನಗೆ ಅರೆಘಳಿಗೆ


ಇವತ್ತಿನ ಗಡಿಬಿಡಿಯ ವಾತಾವರಣ ಯಾರಿಗೂ ಇಷ್ಟವಾಗುವಂತಹುದಲ್ಲ. ಇಲ್ಲಿ ಯಾರಿಗೂ ತೃಪ್ತಿ ಇಲ್ಲ, ಬೆಳಗಾದರೆ ಸಾಕು ಒತ್ತಡ, ಒತ್ತಡ. ಸ್ನಾನ,ಪೂಜೆ, ತಿಂಡಿ, ಮಕ್ಕಳ ಸ್ಕೂಲು, ಅವರ ತಯಾರಿ,ಆಫೀಸಿನ ಕೆಲಸ-ಅಲ್ಲೂ-ಹೊಸಕೆಲಸಗಳು, ಮನೆಯಲ್ಲಿ ಹೆಂಡತಿ ಬೇಸರದಲ್ಲಿದ್ದರೆ ಅದನ್ನು ನಮ್ಮ ಬಾಸ್ ಗೆ ಹೇಳಿದರೆ ಅವರ ಹೊಸ ಕೆಂಪುಕಣ್ಣಿನ ಭಂಗಿ, ಪಕ್ಕದವರನ್ನು ಜೊತೆಮಾಡಿಕೊಂಡು ಎಲ್ಲಾದರೂ ಅಪರೂಪಕ್ಕಾದರೂ ಸ್ವಲ್ಪ ಊರಾಚೆ ಹೋಗಿಬರೋಣವೆಂದರೆ ನಾಳೆಯ ಕೆಲಸಕ್ಕೆ ಹೋಗಲು ತಡವಾಗಬಹುದೆಂಬ ಆತಂಕ, ದುಗುಡ-ದುಮ್ಮಾನ. ನಿಜವಾಗಿಯೂ ಈ ಮಾನಸಿಕ ಒತ್ತಡವೇ ದೈಹಿಕ ಆನಾರೋಗ್ಯಕ್ಕೆ ಕಾರಣ ಎಂಬುದು ನಮಗೇ ತಿಳಿದಿಲ್ಲ, ಇದನ್ನು ಬಗೆಹರಿಸುವ ಯಾವುದೇ ಪ್ರಯತ್ನ ನಾವು ಮಾಡಿಲ್ಲ, ಯೋಗ-ಧ್ಯಾನ-ಸಂಗೀತ-ಸಾಹಿತ್ಯ-ಕಲೆ ಇವುಗಳಿಗೆಲ್ಲ ನಮಗೇ ಸಮಯವೇ ಉಳಿದಿಲ್ಲ, ದಿನಕಳೆದ ಹಾಗೆ ನಾವು ಪ್ರೊಮೋಶನ್ ಗಾಗಿ ಕಾಯುತ್ತೇವೆ, ಬರೇ ಅಲ್ಲಿ ಮಾತ್ರ ಪ್ರೊಮೋಶನ್ , ಮನೆಯಲ್ಲಿ ಡಿಮೋಶನ್ ಆಗುತ್ತಿರುತ್ತದೆ. ನಮ್ಮವರು,ಹಿತೈಷಿಗಳು ಸಲಹೆ ಕೊಡುತ್ತಾರೆ, ಆದರೆ ಅವರೂ ನಮ್ಮ ಥರಾನೇ ಬ್ಯುಸೀ ಆಗಿಬಿಡುತ್ತಾರೆ! ಇದನ್ನೆಲ್ಲಾ ತೊಡೆದುಹಾಕದಿದ್ದರೆ ಹೈ ಬ್ಲಡ್ ಪ್ರೆಶರ್ [high bp] ತನ್ಮೂಲಕ ಹೃದ್ರೋಗ, ಸಕ್ಕರೆ ಕಾಯಿಲೆ ಇವೆಲ್ಲ ಒಕ್ಕರಿಸುತ್ತವೆ! ಹಾಗಾಗಿ ವಾರದಲ್ಲಿ ಒಂದಾವರ್ತಿಯಾದರೂ 'ನಮಗೇ' ಅಂತ ಸ್ವಂತ ಸಮಯ ಮೀಸಲಿರಲಿ ಎಂಬುದು ಈ ಹಾಡಿನ ಧ್ವನಿತ ಸಂದೇಶ.

ಸಮಯವಿಲ್ಲ ನನಗೆ ಅರೆಘಳಿಗೆ

ಸಮಯವಿಲ್ಲ ನನಗೆ ಅರೆಘಳಿಗೆ
ಸಮಯವಿಲ್ಲ ನನಗೆ

ಬೆಡರು ಬೆಳಗಿನಲಿ ಸ್ನಾನ-ಪೂಜೆಗಳು
ಒಡನೆಯೇ ಗಬಗಬ ತಿಂಡಿಯ ಹಂತ
ಗಡಬಡಿಸುತ ಮಗನನು ಬಿಡೆ ಶಾಲೆಗೆ
ಬಿಡದೆ ಓಡುವುದು ಕಛೇರಿ ಕಡೆಗೇ

ಒಡನಾಡಿಗಳನು ಮಾತನಾಡಿಸಲು
ಜಡಜೀವಕೆ ತುಸು ಬೇಗುದಿ ಕಳೆಯಲು
ಅಡಿಗಡಿಗೊದಗುವ ಕಷ್ಟದ ದಿನಗಳು
ಬಿಡುಗಡೆಯಿಲ್ಲದ ಯಂತ್ರದ ಥರದಲಿ

ನಿಡುಸುಯ್ದಿರೆ ಮನೆಯಲಿ ಅರ್ಧಾಂಗಿ
ಗಡುಸಾಯಿತು ಯಜಮಾನರ ಭಂಗಿ
ನಡುನಡುವಲೇ ಬರೋ ಹೊಸ ಕೆಲಸಂಗಳು
ಎಡಬಿಡದೇ ಪೂರೈಸಲಿ ಹೇಗೇ ?

ಬಾಡಿಗೆ ಗಾಡಿಯ ಎರವಲು ಪಡೆದು
ಜೋಡಿಗೆ ಪಕ್ಕದ ಜನರನು ಕರೆದು
ನಾಡಸಿರಿಯ ನೋಡಲು ಯತ್ನಿಸಿದರೆ
ಗೂಡುಸೇರುವಾತಂಕವು ಮನಕೆ !

ನಾದೋಪಾಸನೆ ನಾಗರಹಬ್ಬ
ವೇದವೆಲ್ಲ ನನಗ್ಯಾತಕೋ ಅಪ್ಪಾ ?
ಓದಲೂ ಆಗದ ಈ ದಿನಗಳಲಿ
ವೇದನೆಯಾಯಿತು ಮನದಲಿ ತಪ್ಪಾ
?

Friday, March 5, 2010

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ


ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ


ಆದಿ ಶಂಕರರ ಬಗ್ಗೆ ತಮಗೆ ಹೊಸದಾಗಿ ಪರಿಚಯಿಸುವ ಅವಶ್ಯಕತೆಯಿಲ್ಲ. ಯಾವುದೇ ಪ್ರಲೋಭನೆಗೆ ಒಳಗಾಗದೆ, ಯಾವುದೇ ಮಾಧ್ಯಮಗಳು ಪ್ರಚಾರಮೂಲಗಳು ಇಲ್ಲದ ಆ ಕಾಲದಲ್ಲಿ, ಪ್ರಾಣಿಬಲಿ-ಹಿಂಸೆ ಅತಿಯಾಗಿದ್ದ ಆ ಕಾಲದಲ್ಲಿ ಸನಾತನ ಧರ್ಮವನ್ನು ಪುನರುತ್ಥಾನಗೈದ, ಅದೇ ಕಾರಣಕ್ಕಾಗಿ ಜನಿಸಿ ಕಷ್ಟದ ಜೀವಿತ ನಡೆಸಿ, ೫ ನೇ ವರ್ಷದಲ್ಲೇ ಉಪನಯನ ಸಂಸ್ಕಾರ ಪಡೆದುಕೊಂಡು,ಬಾಲ ಸನ್ಯಾಸಿಯಾಗಿ ಅಸೇತು-ಹಿಮಾಚಲ ಪರ್ಯಂತ ಕಾಲ್ನಡಿಗೆಯಲ್ಲಿ ಓಡಾಡಿ ಜನರನ್ನು-ಮನುಕುಲವನ್ನು ಉದ್ಧರಿಸಿದ ಉದ್ಧಾಮ ಪಂಡಿತ,ವಾಗ್ಮಿ, ವಾಗ್ಗೇಯಕಾರ, ಪರಕಾಯಪ್ರವೇಶದ ವಿಭೂತಿಪುರುಷ, ಅಖಂಡ ತಪಸ್ವಿ ಅವರು. ಅವರನ್ನು ಜನ ಮೊದಲೊಮ್ಮೆ ಗುರುತಿಸದಿದ್ದರೂ ತನ್ನದಲ್ಲದ ಜಗತ್ತಿಗೆ ಕೇವಲ ಕಾರ್ಯಸಿದ್ಧಿಗೆ ಭಗವಂತನಿಂದ ಕಳಿಸಲ್ಪಟ್ಟ ಕೈಲಾಸಪತಿ ಶಂಕರನ ಸಾಕ್ಷಾತ್ ಅವತಾರ ಗುರು ಶಂಕರರು. ತಂದೆ-ತಾಯಿ-ಅಣ್ಣ-ತಮ್ಮ-ಅಕ್ಕ-ತಂಗಿ-ಬಂಧು-ಬಾಂಧವ ಎಲ್ಲವೂ ಆಗಿ ಜನರನ್ನು ಅನುಗ್ರಹಿಸಿದ ಕೀರ್ತಿ ಈ ಮಾನವೀಯತೆಯ ಮೂರ್ತಿಗೆ ಸಂದಿದೆ. ಜನರ ಕಷ್ಟಗಳನ್ನು ತನ್ನ ಕಷ್ಟಗಳೆಂದು ಪರಿಗಣಿಸಿ ಅದಕ್ಕೆ ಪರಿಹಾರೋಪಾಯವಾಗಿ ಅನೇಕ ಧ್ಯಾನ-ಪ್ರಾರ್ಥನೆಗಳ ಮಾರ್ಗಗಳನ್ನು ಬೋಧಿಸಿದ ಜಗದ್ಗುರು ಶ್ರೀ ಶಂಕರರು. ಅವರ ಬಗ್ಗೆ ಅನೇಕ ದಂತಕಥೆಗಳೇ ಇವೆ.

ಶೃತಿಸ್ಮೃತಿಪುರಾಣಾನಾಮಾಲಯಂ ಕರುಣಾಲಯಂ |
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್ ||
ಶಂಕರಂ ಶಂಕರಾಚಾರ್ಯಂ ಕೇಶವಂ ಬಾದರಾಯಣಂ |
ಸೂತ್ರಭಾಷ್ಯಕೃತೌ ವಂದೇ ಭಗವಂತೌ ಪುನಃ ಪುನಃ ||

ಆಡು ಮುಟ್ಟದ ಸೊಪ್ಪಿಲ್ಲ ಹೇಗೋ ಹಾಗೇ ಶಂಕರರು ಎತ್ತುಕೊಳ್ಳದ ವೇದ-ವೇದಾಂತ-ಶಾಸ್ತ್ರ-ಸೂತ್ರ-ಸಂಹಿತೆ-ಶೃತಿ-ಸ್ಮೃತಿ-ಪುರಾಣ ಇಲ್ಲವೇ ಇಲ್ಲ ! ಎಲ್ಲಿ ನೋಡಿ ಅಲ್ಲಿ ಶಂಕರರ ಕೊಡುಗೆ ಇದೆ. ಯಾವ ದೇವ-ದೇವತೆಗಳನ್ನೂ ಸ್ತುತಿಸದೇ ಇರಲಿಲ್ಲ ನಮ್ಮ ಶಂಕರರು. ಹೇಗೆ ಕವಿಗೆ ಸಮಯ ಕೆಲವೊಮ್ಮೆ ಸ್ಫೂರ್ತಿ ತರುತ್ತದೋ ಹಾಗೇ ಶಂಕರರು ಓಡಾಡುವಾಗ ಎದುರಾಗುವ ಹಲವು ಪ್ರಸಂಗಗಳಲ್ಲಿ ಹಲವು ಕೃತಿಗಳು ಅವರಿಂದ ಹುಟ್ಟಿಕೊಂಡವು. ಅದನ್ನು ಇಂದಿನವರೆಗೂ ಕಾಪಾಡಿಕೊಂಡು ಬಂದ ನಮ್ಮ ಪೂರ್ವಜರಿಗೆ ನಾವು ಶರಣೆನ್ನಬೇಕು.


ಇಂತಹ ಶಂಕರರು ಕೆಲವೊಮ್ಮೆ ಶಿಷ್ಯರನ್ನು ಬಿಟ್ಟು ಭಿಕ್ಷೆಗಾಗಿ ತೆರಳುತ್ತಿದ್ದರು, [ಮೊನ್ನೆಯಷ್ಟೇ ಯೋಗಭಿಕ್ಷೆಯ ಬಗ್ಗೆ ಹೇಳಿದ್ದೇನೆ]. ಹೀಗೇ ಒಂದು ದಿನ ಶಂಕರರು ಭಿಕ್ಷೆಗಾಗಿ ಹೊರಟು ಅತೀವ ಕಷ್ಟದಲ್ಲಿರುವ,ಬಡತನದಲ್ಲಿರುವ ಓರ್ವನ ಮನೆಯ ಮುಂದೆ ಭಿಕ್ಷೆ ಕೇಳುತ್ತಾ ನಿಂತರು--


|| ಭವತಿ ಭಿಕ್ಷಾಂದೇಹಿ || " ಅಮ್ಮಾ , ಸನ್ಯಾಸಿ ಬಂದಿದ್ದೇನೆ, ಭಿಕ್ಷೆ ನೀಡು ತಾಯಿ "


ಮನೆಯಲ್ಲಿ ಮನೆಯ ಯಜಮಾನರು ಇರಲಿಲ್ಲ, ಅವರ ಹೆಂಡತಿ ಮಾತ್ರ ಇದ್ದಳು, ಆಕೆ ಹೊರಗಡೆ ಬಂದು ಸನ್ಯಾಸಿಯ ಎದುರು ಒಮ್ಮೆ ನಿಂತು ನೋಡಿ ಕೈಮುಗಿದು ಗಳಗಳನೆ ಅಳಲು ಪ್ರಾರಂಭಿಸಿದಳು. ಶಂಕರರು ಕೇಳಿದರು

" ಅಮ್ಮಾ ಯಾಕಮ್ಮ ಅಳುತ್ತಿರುವೆ ? ಒಂದು ಮುಷ್ಠಿ ಭಿಕ್ಷೆ ಹಾಕೆಂದರೆ ಅದಕ್ಕೆ ಅಳಬೇಕೇಕೆ? "


ಆಕೆ ಉತ್ತರಿಸಿದಳು " ಸ್ವಾಮೀ ಸನ್ಯಾಸಿಗಳೇ, ನಾವು ತುಂಬಾ ಬಡವರು, ಊಟ ಮಾಡದೇ ದಿವಸಗಳೇ ಆದವು, ಮನೆಯಲ್ಲಿ ಉಣಲು-ಉಡಲು ಅನುಕೂಲವಿಲ್ಲದವರು, ಏನೂ ಇಲ್ಲದ ನಮ್ಮ ಮನೆಯ ಎದುರು ತಮ್ಮಂತಹ ಸನ್ಯಾಸಿ ಬಂದರೂ ಕೂಡ ಕೊಡಲೂ ತುತ್ತಿರದಷ್ಟು ಬಡತನದಲ್ಲಿ ದೇವರು ಇಟ್ಟುಬಿಟ್ಟ ಸ್ಥಿತಿ ನೆನಪಾಗಿ ಅಳು ಬಂತು, ನಮ್ಮನ್ನು ಕ್ಷಮಿಸಿ ಸ್ವಾಮೀ, ಮನೆಯಲ್ಲಿ ಕೊಡಲು ಏನೂ ಉಳಿದಿಲ್ಲ "


" ನೋಡಮ್ಮಾ, ಏನೂ ಇಲ್ಲ ಅನ್ನಬಾರದು, ಏನಾದರೊಂದು ಇದ್ದೇ ಇದೆ, ಹುಡುಕಿ ಸಿಕ್ಕಿದ್ದನ್ನೇ ಕೊಡು, ನಗದಷ್ಟೇ ಸಾಕು "


" ಸ್ವಾಮೀ, ಏನೂ ಇಲ್ಲವೆಂದರೂ ಈ ರೀತಿ ಹಠ ಮಾಡುತ್ತೀರಿ ಯಾಕೆ? ಮನೆಯಲ್ಲಿ ಕೈಗೆ ಸಿಗಬಹುದಾದ ತಿನ್ನುವ ಯಾವ ಪದರ್ಥವೂ ಉಳಿದಿಲ್ಲ "


" ಒಂದು ಲೋಟ ನೀರು ಕೊಡಮ್ಮಾ ನನಗೆ, ಅದೂ ಇಲ್ಲವೇ ನಿಮ್ಮ ಮನೆಯಲ್ಲಿ ? "


" ನೀರನ್ನು ಕೊಡಬಹುದು, ಬರೇ ನೀರನ್ನು ಹೇಗೆ ಕೊಡುವುದು ಸ್ವಾಮೀ ? "


" ಬರೇ ನೀರೇ ಸಾಕು ಕೊಡಮ್ಮ, ಇಲ್ಲದಿದ್ದರೆ ಉಪ್ಪಿನಕಾಯಿ ಇದ್ದರೆ ಕೊಡು "


ಹುಡುಕುತ್ತಾಳೆ, ಅಡುಗೆ ಮನೆಯಲ್ಲಿ ಉಪ್ಪಿನ ಭರಣಿಯಲ್ಲಿ ಹಾಕಿಟ್ಟಿರುವ ನೆಲ್ಲಿಕಾಯಿ ಒಂದಿರುವುದು ನೆನಪಾಯ್ತು. ಅದನ್ನೇ ಕೊಡಲೇ ಎಂದಾಗ ಶಂಕರರು ಕೊಡುವಂತೆ ಹೇಳಿದ್ದಾರೆ. ಭಕ್ತಿಯಿಂದ ಆ ನೆಲ್ಲಿಕಾಯನ್ನು ಶಂಕರರ ಕೈಗೆ ಹಾಕಿ, ಲೋಟದಲ್ಲಿ ನೀರಿತ್ತು ನಮಸ್ಕರಿಸಿದ್ದಾಳೆ ಆ ತಾಯಿ.


ಶಂಕರರು ಅದನ್ನು ಅಷ್ಟೇ ತೃಪ್ತಿಯಿಂದ ತಿಂದು ನೀರನ್ನು ಕುಡಿದು, ಅಲ್ಲೇ ನೇರವಾಗಿ ದೇವಿ
ಮಹಾಲಕ್ಷ್ಮಿಯೊಂದಿಗೆ ಸಂವಾದ ಮಾಡುತ್ತಾರೆ!

"ಅಮ್ಮಾ ಮಾತೆ ಮಹಾಲಕ್ಷ್ಮೀ , ಯಾಕಮ್ಮಾ ಇವರಿಗೆ ಈ ರೀತಿ ಬಡತನ ? "


" ಅದು ಅವರ ಪೂರ್ವ ಜನ್ಮದ ದುಷ್ಕೃತಗಳ ಪಾಪಾವಶೇಷ, ಹೀಗಾಗಿ ಅದು ಕಳೆಯುವವರೆಗೆ ನಾನೇನೂ ಮಾಡಲಾರೆ " ಉತ್ತರಿಸುತ್ತಾಳೆ ಭಗವತಿ.


ಹೀಗೇ ವಾಗ್ವಾದ ಮುಂದುವರಿದು ದೇವಿಯನ್ನು ಒಲಿಸಿಕೊಳ್ಳುವಲ್ಲಿ, ಒಲಿಸಿಕೊಂಡು ಬಡತನ ನಿವಾರಿಸಿಕೊಡುವಲ್ಲಿ ಶಂಕರರು ಯಶಸ್ವಿಯಾಗುತ್ತಾರೆ. ಇದಕ್ಕೇ ನಮ್ಮಲ್ಲಿ ಒಂದು ಮಾತಿದೆ ' ಹರಮುನಿದರೂ ಗುರು ಕಾಯುವ 'ನೆಂದು!


ಆಗ ಶಂಕರರ ಬಾಯಿಂದ ಹುಟ್ಟಿದ್ದೇ 'ಕನಕಧಾರಾ ಸ್ತೋತ್ರ'. ಶಂಕರರು ಈ ಸ್ತೋತ್ರ ಪಠಿಸಿ ಅದರಿಂದ ಆ ಮನೆಗೆ ಕನಕವೃಷ್ಟಿ ಯಾಗುವಂತೆ,ಸಿರಿವಂತಿಕೆ ಬರುವಂತೆ ಮಾಡುತ್ತಾರೆ. ಬಹುಶಃ ಸನ್ಯಾಸಿಗೆ ಭಿಕ್ಷೆ ನೀಡಲೂ ಯೋಗಬೇಕು. ಸನ್ಯಾಸಿಗಳಿಗೂ ಮನಸ್ಸಿಗೆ ಮೊದಲೇ ಅನಿಸುತ್ತದಿರಬೇಕು 'ಇಂದು ಇಂಥಾ ಮನೆಗೇ ಭಿಕ್ಷೆಗೆ ಹೋಗು' ಅವರ ಆತ್ಮ ನುಡಿಯುತ್ತಿರಬೇಕು! ಆಚಾರ್ಯ ಶಂಕರರು ಇದನ್ನು ಮೊದಲೇ ಗ್ರಹಿಸಿಯೇ ಬೇಕೆಂತಲೇ ಅಲ್ಲಿಗೇ ಬಂದಿದ್ದರು ಅನಿಸುತ್ತದೆ, ಹೀಗೇ ಬಂದು ಕಷ್ಟನಿವಾರಿಸಲೂ ಒಂದು ಯೋಗ ಬಡತನದಲ್ಲಿದ್ದವರಿಗೆ ಬೇಕು.


ಇಂತಹ ಗುರುವನ್ನು ಪಡೆದ ನಾವೇ ಧನ್ಯರು. ಜಗದಮಿತ್ರ ಒಮ್ಮೆ ಇಂತಹ ಗುರು ಸಂಕುಲಕ್ಕೆ ಎರಗುತ್ತ ನೆನಪಿಸಿಕೊಳ್ಳುತ್ತಾನೆ -


ಆದಿ ಶಂಕರತಾನು ಮೋದದಲಿ ವೇದವನು
ಓದುತನುಭವಿಸಿ ಲೋಕದ ಕಷ್ಟಗಳನು
ಬಾಧೆ ಕಳೆಯಲು ಹಲವು ಸನ್ಮಾರ್ಗ ಬೋಧಿಸಿದ
ಆದರ್ಶ ಗುರು ನೋಡ | ಜಗದಮಿತ್ರ



ಶೃತಿ-ಸ್ಮೃತಿ ಪುರಾಣಗಳ ನೋಡಿ ಭಾಷ್ಯವ ಬರೆದ
ಕೃತಿಗಳಪಾರವ ದಯದಿ ಕರುಣಿಸುತ ಜಗಕೆ
ಧೃತಿಗೆಟ್ಟ ಮನುಕುಲಕೆ ಭೂರಿ ಕಾಣ್ಕೆಯ ಕೊಟ್ಟ
ಕೃತದೋಷ ಕಳೆ ನಮಿಸಿ | ಜಗದಮಿತ್ರ



ಇರಲು ಇಂಥಹ ಗುರುವು ಬರಲಿ ಯಾವುದೇ ಬವಣೆ
ಹರಮುನಿಯೇ ಗುರು ಕಾಯ್ವ ನಮ್ಮ ಬದುಕಿನಲಿ
ಬರದ ಛಾಯೆಯದೆಂದು ಬಾಧಿಸದು ಜಗದೊಳಗೆ
ವರವ ಪಡೆಯಲು ಕ್ರಮಿಸು | ಜಗದಮಿತ್ರ



ಸದಾಶಿವಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||

Thursday, March 4, 2010

ಘಮಾ ಘಮಾ ಘಮಾಡಸ್ತಾವ ಮಲ್ಲೀಗೀ


ಘಮಾ ಘಮಾ ಘಮಾಡಸ್ತಾವ ಮಲ್ಲೀಗೀ

ನೀ ಹೊರಟಿದ್ದೀಗ ಎಲ್ಲಿಗಿ ?

ನೀ ಹೊರಟಿದ್ದೀಗ ಎಲ್ಲಿಗಿ ?
[ಒಂದು ಚಿತ್ರದ ಋಣ: ಅಂತರ್ಜಾಲ ]

ಇಷ್ಟು ಹೇಳುತ್ತಿದ್ದಂತೆ ನಿಮಗೆ ನಾನು ಏನು ಹೇಳಹೊರಟೆ ಎಂಬುದನ್ನು ಹೊಸದಾಗಿ ಹೇಳುವುದು ಬೇಡ ! ಹೌದೌದು ನಾನು ಬೇಂದ್ರೆ ಮಾಸ್ತರ್ ಬಗ್ಗ ಮಾತಾಡ್ಲಾಕ್ ಹತ್ತೇನಿ. ವರಕವಿ, ಕರ್ನಾಟಕ ಕುಲ ತಿಲಕ, ಪದ್ಮಶ್ರೀ,ಅಂಬಿಕಾತನಯದತ್ತ ದಿ| ಶ್ರೀ ದ.ರಾ.ಬೇಂದ್ರೆ [ ದತ್ತಾತ್ರೇಯ ರಾಮಚಂದ್ರ ಬೇಂದ್ರೆ]ಯವರು ಕರ್ನಾಟಕದ ಧಾರವಾಡದಲ್ಲಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ೩೧ ಜನವರಿ ೧೮೯೬ ರಂದು ಜನಿಸಿದರು. ಅಜ್ಜ ಮತ್ತು ತಂದೆ ಇಬ್ಬರೂ ಸಂಸ್ಕೃತದಲ್ಲಿ ಘನ ಪಾಂಡಿತ್ಯ ಉಳ್ಳವರಾಗಿದ್ದರು. ಅಜ್ಜ ಹತ್ತು ಪವಿತ್ರ ಗ್ರಂಥಗಳಲ್ಲಿ ಪ್ರಾವೀಣ್ಯತೆ ಪಡೆದು 'ದಾಸಗ್ರಂಥಿ' ಎಂದು ಕರೆಯಲ್ಪಡುತ್ತಿದ್ದರು. ಎಳವೆಯಲ್ಲೇ ೧೨ ವರ್ಷದಲ್ಲಿರುವಾಗಲೇ ತನ್ನ ತಂದೆಯನ್ನು ಕಳೆದುಕೊಂಡರು. ಬಡತನವನ್ನೇ ಹಾಸು-ಹೊದ್ದ ಬೇಂದ್ರೆಯವರ ಕುಟುಂಬದ ಬಂಡಿ ಎಳೆಯಲು ತಾಯಿ ಖಾನಾವಳಿ ಯನ್ನು [ಊಟ-ತಿಂಡಿ ಪೂರೈಸುವ ಮೆಸ್ ಥರದ ವ್ಯವಸ್ಥೆ] ಪ್ರಾರಂಭಿಸಿ ನಡೆಸಿದರು. ತಾಯಿಯ ಆ ಕಷ್ಟದ ಅನುಭವದ ಪರಿಣಾಮ ಮಗ ದತ್ತನ ಮೇಲೆ ಆಗದಿರಲಿಲ್ಲ. ಆ ನೆನಪಲ್ಲೇ ತಾಯಿ ಅಂಬಿಕೆಯ ಹೆಸರಲ್ಲೇ ದತ್ತನಿಗೆ ಅಂಬಿಕೆ ಸೇರಿತು 'ಅಂಬಿಕಾತನಯದತ್ತ' ಹುಟ್ಟಿದ ! ಚಿಕ್ಕಪ್ಪನ ಸಹಾಯದಿಂದ ಧಾರವಾಡದಲ್ಲೇ ಪ್ರಾಥಮಿಕ, ಮಾಧ್ಯಮಿಕ-ಪ್ರೌಢ ಶಾಲೆಗಳಲ್ಲಿ ಕಲಿತು ೧೯೧೩ ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬೇಂದ್ರೆ ಹೆಚ್ಚಿನ ವ್ಯಾಸಂಗಕ್ಕೆ ಪುಣೆಯಲ್ಲಿರುವ ಫರ್ಗಸ್ಸನ್ ಕಾಲೇಜ್ ಗೆ ಸೇರಿದರು.ಬ್ಯಾಚುಲರ್ ಆಫ್ ಆರ್ಟ್ಸ್ ಡಿಗ್ರೀ ಪಡೆದ ಬಳಿಕ ಧಾರವಾಡಕ್ಕೆ ವಾಪಸ್ಸಾಗಿ ಅಲ್ಲಿ ವಿಕ್ಟೋರಿಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಪ್ರಾರಂಭಿಸಿದರು. ೧೯೧೯ರಲ್ಲಿ ಲಕ್ಷ್ಮಿಬಾಯಿ ಎಂಬವರೊಟ್ಟಿಗೆ ವಿವಾಹವಾಯಿತು. ನಂತರದಲ್ಲಿ ೧೯೩೫ರಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದರು. ನಂತರ ಸೊಲ್ಲಾಪುರದಲ್ಲಿಯ ಡಿ.ಎ. ವಿ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ೧೯೪೪ ರಿಂದ ೧೯೫೬ ರ ತನಕ ಕೆಲಸಮಾಡಿದರು. ೧೯೫೬ ರಲ್ಲಿ ಆಲ್ ಇಂಡಿಯಾ ರೇಡಿಯೋದ ಧಾರವಾಡ ಸ್ಟೇಶನ್ ನಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದರು.

[ಶ್ರೀ ಕೀರ್ತಿನಾಥ್ ಕುರ್ತಕೋಟಿ, ಶ್ರೀ ಜಿ.ಬಿ.ಜೋಶಿ ಮತ್ತು ಶ್ರೀ ದ.ರಾ.ಬೇಂದ್ರೆ ]

೧೯೨೨ರಲ್ಲಿ ಬೇಂದ್ರೆ ಸಮಾನ ಮನಸ್ಕ ಗೆಳೆಯರ ಗುಂಪೊಂದನ್ನು ಆರಂಭಿಸಿದರು. ಅದರಲ್ಲಿ ಸಂಸ್ಕೃತಿ-ಸಂಸ್ಕಾರಗಳ ಹರಿಕಾರರಾದ ಆನಂದಕಂದ[ಬೆಟಗೇರಿ ಕೃಷ್ಣ ಶರ್ಮ], ಶಂ.ಬಾ.ಜೋಶಿ, ಎನ್ಕೆ, ಸಿದ್ಧವನಹಳ್ಳಿ ಕೃಷ್ಣ ಶರ್ಮ, ಜಿ.ಬಿ.ಜೋಶಿ, ರಂ.ಶ್ರೀ.ಮುಗಳಿ ಮುಂತಾದ ಕೆಲವು ಆಪ್ತ ಸ್ನೇಹಿತರು ಸೇರಿದ್ದರು. ಕಾವ್ಯ -ಸಾಹಿತ್ಯ-ಸಂಸ್ಕೃತಿಗಳ ಕುರಿತು ಆಗಾಗ ಮಾತುಕತೆಗೆ ಸೇರುತ್ತಿದ್ದರು. ೧೯೨೬ ರಲ್ಲಿ ಬೇಂದ್ರೆಯವರು 'ನಾಡ ಹಬ್ಬ' ವೆಂಬ ಸಣ್ಣ ಸಮ್ಮೇಳನವನ್ನು ಪ್ರಾರಂಭಿಸಿದರು. ಇದು ನವರಾತ್ರಿ ಅಥವಾ ದಸರಾದಲ್ಲಿ ಬರುವ ಕಾರ್ಯಕ್ರಮವಾಗಿತ್ತು. ೧೯೩೨ರಲ್ಲಿ 'ನರಬಲಿ' ಎಂಬ ಸರಕಾರೀವೈರುಧ್ಯ ಬರಹವನ್ನು ಬರೆದದ್ದಕ್ಕೆ ಬೇಂದ್ರೆಯವರಿಗೆ ಮುಗದ ಎಂಬ ಹಳ್ಳಿಯಲ್ಲಿ ಮನೆಜೈಲುವಾಸವಾಯಿತು. ೧೯೪೩ ರಲ್ಲಿ ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ೧೯೭೨ ರಲ್ಲಿ ಕರ್ನಾಟಕ ಸರಕಾರ ಬೇಂದ್ರೆಯವರ ಜೀವನದಬಗೆಗೆ ಒಂದು ಡಾಕ್ಯುಮೆಂಟರಿ ತಯಾರಿಸಿತು.

ಕನ್ನಡದ ಅಪ್ರತಿಮ ಕವಿ ಬೇಂದ್ರೆ ಬರೆಯಲು ಪಾರಭಿಸಿದ್ದು ತನ್ನ ಸರಳ-ಸುಲಲಿತ ಸ್ಥಳೀಯ ಭಾಷಾ ಶೈಲಿಯಲ್ಲಿ. ನಂತರ ಅವರ ಕೃತಿಗಳು ಜ್ಞಾನದ ಆಳಕ್ಕೆ ಇಳಿದವು. ಸ್ವತಹ ತನ್ನನ್ನೇ ಮೂರು ಮಜಲುಗಳುಳ್ಳ ಆತ್ಮ ಎಂಬುದಾಗಿ ವರ್ಣಿಸುತ್ತಿದ್ದ ಬೇಂದ್ರೆ, ಸಹಜವಾಗಿ ತಾನು,ಅಂಬಿಕಾತನಯದತ್ತ ತಾನು, ಪ್ರೊಫೆಸರ್ ಬೇಂದ್ರೆ ಎಂಬುದಾಗಿ ಈ ಮೂರು ಬೇರೆ ಬೇರೆ ವ್ಯಕ್ತಿತ್ವವನ್ನು ಹೇಳುತ್ತಿದ್ದರು, ಮತ್ತು ಅವು ಒಂದನ್ನೊಂದು ಬಿಟ್ಟಿರದ ಸಂಬಂಧದ ಬಗ್ಗೆ ಹೊಟ್ಟೆಗೂ-ಬೆನ್ನಿಗೂ ಇರುವ ಸಂಬಂಧ ಅಥವಾ ನದಿಯ ಎರಡು ದಡಗಳ ಸಂಬಂಧವನ್ನು ಹೋಲಿಸುತ್ತಿದ್ದರು.

ಕನ್ನಡ ಕಾವ್ಯಲೋಕದ ತಂದೆ ಎಂದು ಗುರುತಿಸಲ್ಪಡುವ ಬೇಂದ್ರೆಯವರ ಕೃತಿಗಳನ್ನು ವಚನ-ಕೀರ್ತನ ಸಾಹಿತ್ಯಕ್ಕೆ ಹೋಲಿಸುತ್ತಾರೆ. ಬೇಂದ್ರೆಯವರ ಕವನಗಳಲ್ಲಿ ಸ್ಥಳೀಯ ಆಡು ಭಾಷೆಯ ಸೊಗಡು, ಜಾನಪದ ಶಬ್ಧಗಳ ಮಿಳಿತ, ಜನಪದರ ನಂಬಿಕೆ, ಪುರಾಣ, ವೇದ-ವೇದಾಂತಗಳ ಸಾರಗಳನ್ನೆಲ್ಲ ಒಳಗೊಂಡಿವೆ. ಆಧ್ಯಾತ್ಮ, ದೇಶಪ್ರೇಮ,ದಂತಕಥೆಗಳು ಮೊದಲಾದವುಗಳ ಮಿಶ್ರ ಛಾಪು ಎದ್ದು ಕಾಣಸಿಗುತ್ತದೆ. ಅಸಾಧಾರಣ ಪ್ರತಿಭೆ ಬೇಂದ್ರೆ ಕವಿ-ಸಾಹಿತಿಗಳು, ಬುದ್ಧಿ ಜೀವಿಗಳು, ಮತ್ತು ಅಕ್ಷರ ಕಲಿತಿರದ ಹಳ್ಳಿಯ ಜನ ಎಲ್ಲರೊಟ್ಟಿಗೆ ಬೆರೆಯುತ್ತಿದ್ದರು. ಅವರ ಹಳ್ಳಿಯ ಜೀವನದ ರೀತಿಯ ವಾಗ್ಝರಿ ಜನರನ್ನು ಅವರಕಡೆ ಸೆಳೆಯುತ್ತಿತ್ತು. ಕೊನೇ ಕೊನೆಗೆ ಬೇಂದ್ರೆ ಸಂಖ್ಯೆಗಳಲ್ಲಿ ಬಹಳ ಆಸಕ್ತರಾಗಿದ್ದರು. 'ವಿಶ್ವಧಾರನಸೂತ್ರ' ಎಂಬ ಅವರ ಕೃತಿಯಲ್ಲಿ ಇದು ಸ್ಪಷ್ಟವಾಗುತ್ತದೆ. ಇದರಲ್ಲಿ ಅವರು ಕಾವ್ಯವನ್ನು ಸಂಖ್ಯೆಗಳ ರೂಪದಲ್ಲಿ ಅಳವಡಿಸುವುದನ್ನು ಕಾಣಬಹುದಾಗಿದೆ.

ಕವಿಸಮಯ ಅಂತ ಹೇಳುತ್ತೇವಲ್ಲ, ಕವಿಗೆ ಏನೋ ಒಂದು ಬಿಂದು ರೂಪ ತಲೆಯಲ್ಲಿ ಮೊಳಕೆಯೊಡೆದು ಅದು ಗರ್ಭದ ಕೂಸಾಗಿ ಹೊರಬರುವಾಗ ಹಲವಾರು ಕಾರಣ,ಸನ್ನಿವೇಶಗಳು ನಡುವೆ ಬಂದಿರುತ್ತವೆ, ಅತೀ ಶ್ರೀಮಂತ ವ್ಯಕ್ತಿ ಕವಿ ಎಂದೆನಿಸುವುದು ಅಪರೂಪ. ಬಹುತೇಕ ಕಾವ್ಯಗಳು-ಮಹಾಕಾವ್ಯಗಳೆಲ್ಲ ಜನಿಸಿದ್ದು ಕವಿಯ ನೋವಿನ ಘಳಿಗೆಯಲ್ಲೇ. ಹಾಗಾಗಿ ಕಾವ್ಯವನ್ನು ಓದುವಾಗ,ಹಾಡುವಾಗ,ಬಳಸುವಾಗ ಆ ಕರ್ತೃ ಕವಿಯನ್ನು ನೆನೆದರೆ ಅದರಿಂದ ಅವರಿಗೂ ತೃಪ್ತಿ ಮತ್ತು ಒಂದು ಸಾಧು ಜೀವಕ್ಕೆ ಸೇವೆ ಸಲ್ಲಿಸಿದ ಪುಣ್ಯಭಾಗಿಗಳು ನಾವಾಗುತ್ತೇವೆ!

'ಹೂ ಬಳ್ಳಿಯ [ಹುಬ್ಬಳ್ಳಿ]ಹೂ ಧಾರವಾಡದ ದಾರ ಅಂಬಿಕಾತನಯದತ್ತ ಸೂಜಿ' ಎಂದು ಎಷ್ಟೋ ಸಲ ಈ ಕವಿ ಹೇಳಿದ್ದಿದೆ. ಧಾರವಾಡದ ಜನತೆಗೆ ಅವ್ರು ಬೇಂದ್ರೆ ಮಾಸ್ತರ್ ಆಗಿದ್ರು ಬಿಟ್ರೆ ಅವರು ಅಂತಸ್ತಿನಲ್ಲಿ ಕಾಣುವ 'ದೊಡ್ಡಜನ' ಅಂತ ಅನಿಸಿಕೊಳ್ಳಲಿಲ್ಲ. ಅದಕ್ಕೇ ಅಲ್ಲಿನ ಜನತೆ ಅವರನ್ನು ತಮ್ಮ ಮನೆಜನರಂತೆ ಕಂಡರು, ಆಗಾಗ ಬೇಂದ್ರೆ ಕವಿ ಗೋಷ್ಠಿ ನಡೀತಾ ಇತ್ತು. ಬೆಳಿಗ್ಗೆ ಕಾಪಿ-ತಿಂಡಿ ಹೇಗೆ ಹಿತವೆನಿಸುತ್ತದೋ ಹಾಗೇ ಬೇಂದ್ರೆ ಮಾಸ್ತರ್ ಹಾಡು ಹಾಡಿಕೊಂಡು ನರ್ತಿಸಿದಾಗ ಕವಿಯ ಮುಖದಲ್ಲಿ ಮೂಡುವ ಸಂತಸದ ಹಲವು ಗೆರೆಗಳಲ್ಲಿ ಜನ ತಮ್ಮ ಜೀವನದ ಹಬ್ಬವನ್ನು ಆಚರಿಸುತ್ತಿದ್ದರು! ಕಿತ್ತು ತಿನ್ನುವ ಬಡತನದಲ್ಲೂ ಬೇಂದ್ರೆ ಎಂದೂ ಅತಿಥಿಗಳನ್ನು ಹಾಗೇ ಕಳಿಸಲಿಲ್ಲ! ಬೇಂದ್ರೆಯವರ ಮನೆಯಲ್ಲಿ ಅನೇಕದಿನ ಅಘೋಷಿತ ಉಪವಾಸವಿರುತ್ತಿತ್ತು-ಅಂದರೆ ಮನೆಯಲ್ಲಿ ದಿನಸಿಗಳು ಮುಗಿದುಹೋಗಿ ಮತ್ತೆ ಕೊಂಡು ತರಲಾರದ ಬಡತನವಿತ್ತು ! --ಇಂತಹ ಒಂದು ದಿನ ಹೆಂಡತಿಯ ದುಃಖದ ಮುಖನೋಡಿ ತನ್ನ ಸ್ಥಿತಪ್ರಜ್ಞ ಮನಸ್ಸಿನಿಂದ ಹೆಂಡತಿಗೆ ಕವಿ ಸಾರಿದರು--

ಕುಣಿಯೋಣು ಬಾರಾ ಕುಣಿಯೋಣು ಬಾ .....

ಪರಿಸ್ಥಿತಿಗೆ ನಮ್ಮನ್ನು ನಾವು ಮಾರಿಕೊಳ್ಳುವ ಮನೋಸ್ಥಿತಿ ಬೇಡ, ನಮ್ಮ ಅನಿವಾರ್ಯತೆಗಳನ್ನು-ಅಗತ್ಯಗಳನ್ನು ನಮ್ಮ ಮನದ ಹದ್ದುಬಸ್ತಿನಲ್ಲಿಟ್ಟು ಇದ್ದರೂ ಇರದಿದ್ದರೂ ಮನದಲ್ಲಿ ಒಂದೇ ಸ್ಥಿತಿಯಲ್ಲಿರೋಣ ಎಂಬ ಬಗ್ಗೆ ಮಾತಾಡುತ್ತ ಈ ಮೇಲಿನ ಹಾಡು ಹಾಡಿ ನರ್ತಿಸಿದರು ನಮ್ಮ ಬೇಂದ್ರೆ ! ಮತ್ತೆ ಎಲ್ಲರೂ ಕೇಳಿದ್ದೀರಿ --

ಮೂಡಲ ಮನೆಯಾ ಮುತ್ತಿನ ನೀರಿನ ಎರಕಾವಾ ಹೊಯ್ದ
ನುಣ್ಣನೆ ಎರಕಾವ ಹೊಯ್ದ ....
ಬಾಗಿಲು ತೆರೆದು ಬೆಳಕೂ ಹರಿದೂ ಜಗವೆಲ್ಲಾ ತೊಯ್ದ
ದೇವನಾ ಜಗವೆಲ್ಲಾ ತೊಯ್ದ....

ಒಂದೊಂದು ಕಾವ್ಯವೂ ಅತಿ ವಿಶಿಷ್ಟ-ಅತಿ ವಿಶೇಷ, ಹೆಚ್ಚೇಕೆ ನಮ್ಮ ಬೇಂದ್ರೆ ಪುಟಗಳಲ್ಲಿ ತುಂಬಿಸಿ ಮುಗಿಸಲಾರದ ಘನ ವ್ಯಕ್ತಿತ್ವ ಹೊಂದಿದವರು.

ಮಕ್ಕಳು-ಮನೆ-ಕುಟುಂಬ
ಬಡತನಕ್ಕೆ ಹಸಿವೆ ಜಾಸ್ತಿ,ಮಕ್ಕಳು ಜಾಸ್ತಿ ಅಂತೆಲ್ಲ ಜನ ಅಂತಾರೆ, ಬಹುಶಃ ಬಡತನದಲ್ಲಿ ನೋವಿನ ಮರೆವಿಗೆ ಹಾಗೋ ಏನೋ ಅಂತ ನನಗನಿಸುತ್ತಿದೆ. ಅಂತೆಯೇ ನಮ್ಮ ಬೇಂದ್ರೆಯವರಿಗೆ ಬರ್ತಿ ೯ ಜನ ಮಕ್ಕಳು ಹುಟ್ಟಿದ್ದರು, ಆದರೆ ಬದುಕಿ ಉಳಿದದು ಬರೇ ಮೂರು. ಉಳಿದ ೬ ಹಲವಾರು ಶಾರೀರಿಕ ಅನಾರೋಗ್ಯದಿಂದ ಮರಣಿಸಿದವು. ಪ್ರತೀ ಸರ್ತಿ ಕೂಸೊಂದು ಸತ್ತಾಗ ಆ ಹಡೆದ ತಾಯಿ-ತಂದೆಗೆ ಏನನ್ನಿಸಿರಬೇಡ ! ಅಂತಹ ದುಃಖವನ್ನೂ ಕವಿ ಹಾಡಿನಲ್ಲಿ ಮರೆತರು--

ನೀ ಹೀಂಗ ನೋಡಬೇಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ
ನಾ ಹ್ಯಾಂಗ ನೋಡಲೇ ನಿನ್ನ .......

ಮಕ್ಕಳು ಪಾಂಡುರಂಗ, ವಾಮನ ಮತ್ತು ಸುಮಂಗಲಾ ಉಳಿದುಕೊಂಡರು. ಆದರೆ ಕಾವ್ಯ-ಸಾಹಿತ್ಯದಲ್ಲಿ ಅವರಿಂದ ಮತ್ತೊಬ್ಬ ಬೇಂದ್ರೆ ಹೊರಬರಲಿಲ್ಲ-ಅದು ಸಾಧ್ಯವೂ ಇಲ್ಲಬಿಡಿ, ಬೇಂದ್ರೆ ಒಬ್ಬರೇ-ಅವರಿಗೆ ಅವರೇ ಸಾಟಿ -ಕಾರಂತರ ಹಾಗೆ ! ಮೊದಲೇ ನಾನೊಮ್ಮೆ ಹೇಳಿದ ಹಾಗೆ ಅದು ದೈವದ 'ಬೇಂದ್ರೆ ಅವತಾರ', ಅದೇ ರೀತಿ ದೇವರ ಹಲವು ಒಂದೊಂದಂಶದ ಅವತಾರಗಳೇ ಹುಟ್ಟಿ ಕವಿ-ಸಾಹಿತಿಗಳಾಗಿ ಮೆರೆದವು ಈ ಭುವಿಯಲ್ಲಿ.

ಧಾರವಾಡದ ಸಾಧನಕೇರಿಯಲ್ಲಿ ವಾಸವಿದ್ದ ಬೇಂದ್ರೆ

ಬಾ ಬಾರೋ ಬಾರೋ ಬಾರೋ
ಬಾರೋ ಸಾಧನ ಕೇರಿಗೇ.....

ಎಂಬ ಹಾಡು ಬರೆದರು. ಕವನ ಸಂಕಲನಗಳಲ್ಲಿ 'ನಾದಲೀಲೆ' ಅತೀ ಜನಪ್ರಿಯ. ನಾಕುತಂತಿ ಶ್ರೇಷ್ಠವಾದ ಜ್ಞಾನಪೀಠ ಪ್ರಶಸ್ತಿಯನ್ನು ಕವಿಗೆ ತಂದುಕೊಟ್ಟಿತು. ವಿಪರ್ಯಾಸವೆಂದರೆ ಕನ್ನಡದ ನಮ್ಮ ಬೇಂದ್ರೆಯವರನ್ನುಕರ್ನಾಟಕಕ್ಕಿಂತ ಮೊದಲು ಗುರುತಿಸಿದ್ದು ಮಹಾರಾಷ್ಟ್ರ ಸರಕಾರ, ಅವರ ಕೇಳ್ಕರ್ ಪ್ರಶಸ್ತಿ ನೀಡುವ ಮೂಲಕ.

ಬೇಂದ್ರೆಯವರ ಕೆಲವು ಎರಡು ಜನಪ್ರಿಯ ಹಾಡುಗಳನ್ನು ಈ ಕೆಳಗಿನ ಕೊಂಡಿಯನ್ನು ಅಡ್ರೆಸ್ ಬಾರ್ ನಲ್ಲಿ ಟೈಪ್ ಮಾಡಿ, ಪ್ಲೇ ಮಾಡಿ ಆನಂದಿಸಿ --
Youtube links

೧. ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ
http://www.youtube.com/watch?v=ix5-81AyZyU

೨. ಮೂಡಲ ಮನೆಯಾ ಮುತ್ತಿನ ನೀರಿನ ಎರಕಾವಾ ಹೊಯ್ದ ....
http://www.youtube.com/watch?v=n-Dfzg9RuEA

ಇವುಗಳ ಹಾಡುಗಾರರು, ಸಂಗೀತ ಸಂಯೋಜಕರು ಮತ್ತು ಹೆಚ್ಚಿನದಾಗಿ ವರಕವಿ ಬೇಂದ್ರೆ ಎಲ್ಲರಿಗೂ ನಮ್ಮ ನಮನಗಳು

ಪ್ರಶಸ್ತಿ-ಫಲಕಗಳು
  • ಜ್ಞಾನಪೀಠ ಪ್ರಶಸ್ತಿ - 1974 (ನಾಕುತಂತಿ ಕವನ ಸಂಕಲನಕ್ಕೆ )
  • ಪದ್ಮಶ್ರೀ - 1968
  • ಸಾಹಿತ್ಯ ಅಕಾಡೆಮಿ ಪ್ರಶಸ್ತಿ - 1958
  • ಕೇಳ್ಕರ್ ಪ್ರಶಸ್ತಿ - 1965
  • ಸಾಹಿತ್ಯ ಅಕಾಡೆಮಿಯ ಗೌರವ ಸದಸ್ಯತ್ವ - ೧೯೬೮
  • ಉಡುಪಿಯ ಅದಮಾರು ಮಠ ಅನುಗ್ರಹಿಸಿದ 'ಕರ್ನಾಟಕ ಕುಲ ತಿಲಕ' ಪ್ರಶಸ್ತಿ

ಬೇಂದ್ರೆಯವರ ಕವನ ಸಂಕಲನಗಳು
  • ಕೃಷ್ಣಕುಮಾರಿ (1922)
  • ಗರಿ (1932)
  • ಮೂರ್ತಿ ಮತ್ತು ಕಾಮಕಸ್ತೂರಿ (1934)
  • ಸಖೀಗೀತ (1937)
  • ಉಯ್ಯಾಲೆ (1938)
  • ನಾದಲೀಲೆ (1940)
  • ಮೇಘದೂತ (1943))
  • ಹಾಡು ಪಾಡು (1946)
  • ಗಂಗಾವತರಣ (1951)
  • ಕೃಷ್ಣಕುಮಾರಿ ಮತ್ತು ಹಾಡು ಪಾಡು (1956)
  • ಸೂರ್ಯಪಾನ (1956)
  • ಹೃದಯಸಮುದ್ರ (1956)
  • ಮುಕ್ತಕಂಠ (1956)
  • ಚೈತ್ಯಾಲಯ (1957)
  • ಜೀವಲಹರಿ (1957)
  • ಅರಳು ಮರಳು (1957)
  • ನಮನ (1958)
  • ಸಂಚಯ (1959)
  • ಉತ್ತರಾಯಣ (1960)
  • ಮುಗಿಲಮಲ್ಲಿಗೆ (1961)
  • ಯಕ್ಷ ಯಕ್ಷಿ (1962)
  • ನಾಕು ತಂತಿ (1964)
  • ಮರ್ಯಾದೆ (1966)
  • ಶ್ರಿಮತ (1968)
  • ಬಾ ಹತ್ತರ (1969)
  • ಇದು ನಭೋವಾಣಿ (1970)
  • ವಿನಯ (1972)
  • ಮತ್ತೆ ಶ್ರಾವಣ ಬಂತು (1973)
  • ಒಲವೆ ನಮ್ಮ ಬದಕು (1977)
  • ಚತುರೋಕ್ತಿ (1978)
  • ಪರಾಕಿ (1982)
  • ಕಾವ್ಯವೈಖರಿ (1982)
  • ಬಾಲಬೋಧೆ (1983)
  • ತ ಲೆಕ್ಕನಿಕಿ ತ ದುತಿ (1983)
  • ಚೈತನ್ಯದ ಪೂಜೆ (1983)
  • ಪ್ರತಿಬಿಂಬಗಳು (1987)
  • ಶ್ರಾವಣ ಪ್ರತಿಭೆ (1987)
  • ಕುಣಿಯೋಣು ಬಾ (1990)


ನಾಟಕ-ರೂಪಕಗಳು
  • ತಿರುಕರ ಪಿಡುಗು (1930)
  • ಉದ್ಧಾರ (1930)
  • ನಗೆಯ ಹೋಗೆ (1931)
  • ಹುಚ್ಚಾಟಗಳು (1935)
  • ಹೊಸ ಸಂಸಾರ ಮತ್ತು ಇತರ ಏಕಾಂಕಗಳು (1950)
  • ಅಂಬಿಕಾತನಯದತ್ತ ನಾಟಕ ಸಂಪುಟ (1982)

ಪ್ರಬಂಧ
  • ನಿರಾಭರಣಸುಂದರಿ (1940)
ವಿಮರ್ಶೆ

  • ಸಾಹಿತ್ಯ ಮತ್ತು ವಿಮರ್ಶೆ (1937)
  • ಸಾಹಿತ್ಯಸಂಶೂಧನ್ (1940)
  • ವಿಚರಮಂಜರಿ (1945)
  • ಕವಿ ಲಕ್ಷ್ಮೀಶನ ಜೈಮಿನಿ ಭಾರತಕ್ಕೆ ಮುನ್ನುಡಿ (1954)
  • ಮಹಾರಾಷ್ಟ್ರ ಸಾಹಿತ್ಯ (1959)
  • ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು (1968)
  • ಮಾತೆಲ್ಲ ಜ್ಯೋತು (1972)
  • ಸಾಹಿತ್ಯದ ವಿರಾಟ್ಸ್ವರೂಪ (1974)
  • ಕುಮಾರವ್ಯಾಸ (1979)
  • ಮತಧರ್ಮ ಮತ್ತು ಅಧುನಿಕ ಮಾನವ (1979)
ಸಂಪಾದಿತ ಕೃತಿಗಳು

  • ನನ್ನದು ಈ ಕನ್ನಡ ನಡು (1928)
  • ಹಕ್ಕಿ ಹಾರುತಿದೆ (1930)
  • ಚಂದ್ರಹಾಸ (1948)
  • ಹೊಸಗನ್ನಡ ಕಾವ್ಯಶ್ರೀ (1957)
  • ಕನಕದಾಸ ಚತುರ್ಷತಮಾನೋತ್ಸವ ಸಂಸ್ಮರಣ - ಸಂಪುಟ (1965)
ಬೇರೆ ಭಾಷೆಗಳಲ್ಲಿ ಬರೆದ ಮತ್ತು ತರ್ಜುಮೆ ಮಾಡಿದ ಕೃತಿಗಳು

  • A Theory of Immortality (1977)
  • ಸಂತ ಮಹಂತಂಚ ಪೂರ್ಣ ಶಂಭು ವಿಟ್ಠಲ್ (1963)
  • ಸಂವಾದ (1965)
  • ವಿಟ್ಟಲ ಸಂಪ್ರದಾಯ (1984)
  • ಹೊಸಗನ್ನಡ ಕಾವ್ಯಶ್ರೀ (1957)
  • ಶಾಂತಲ (1972)
  • ಉಪನಿಶದ್ರಹಸ್ಯ by R.D. Ranade (1923)
  • ಭಾರತೀಯ ನವಜನ್ಮ " The Indian Renaissance" by Sri Aurobindo (1936)
  • ಶ್ರೀ ಅರವಿಂದರ ಯೋಗ ಆಶ್ರಮ ಮತ್ತು ತತ್ವೋಪದೇಶ (1947)
  • ಕಬೀರ ವಚನಾವಳಿ (1968)
  • ಭಗ್ನಮೂರ್ತಿ-ಮರಾಟಿ ಕವಿ ಅನಿಲ್ ಅವರ ಕಾವ್ಯದ ಅನುವಾದ (1972)
  • ಗುರು ಗೋವಿಂದಸಿಂಗ್ -ಹರವನ್ಸ್ ಸಿಂಗ್ ಅವರ ಕೃತಿಯ ಅನುವಾದ
  • ನೂರೊಂದು ಕವನಗಳು - ಹುಮಾಯುನ್ ಕಬೀರ್ ಅವರಿಂದ ಸಂಪಾದಿತ ಕವಿ ರವೀಂದ್ರನಾಥ್ ಟಾಗೋರ್ ರವರ ಕೃತಿಗಳ ಅನುವಾದ.
ಕೊನೆಯ ದಿನಗಳಲ್ಲಿ ಬೇಂದ್ರೆ ಕ್ಯಾನ್ಸರ್ ನಿಂದ ಕೆಲವು ಕಾಲ ಬಳಲಿದರು, ಆಗ ಅವರನ್ನು ಮಗ ಡಾ|ವಾಮನ ಬೇಂದ್ರೆನೋಡಿಕೊಳ್ಳುತ್ತಿದ್ದರು. ಕರ್ನಾಟಕ ಸರಕಾರ ಕೊಟ್ಟ ಮಾಶಾಸನ ರೂ.೨೫೦ ರಲ್ಲೇ ಬೇಂದ್ರೆ ತನ್ನ ಕೊನೆಯ ದಿನಗಳನ್ನು ಕಳೆದರು, ಅಷ್ಟರಲ್ಲೇ ತೃಪ್ತರು. ಮುಪ್ಪಿನಲ್ಲಿ ಅವರು ಹೇಳಿದ ಅನೇಕ ಕವನ-ಸಾಹಿತ್ಯಗಳನ್ನು ಮಗ ಶ್ರೀ ವಾಮನ ಬೇಂದ್ರೆ ಬರೆದುಕೊಂಡುನಂತರ ಅವುಗಳನ್ನೆಲ್ಲ ಪುಸ್ತಕವಾಗಿಸಿದರು. ದಿನಾಂಕ ೨೧ ಅಕ್ಟೋಬರ್ ೧೯೮೧ರಂದು ಮುಂಬೈ [ಅಂದಿನ ಬಾಂಬೆ]ಯಲ್ಲಿ ತಮ್ಮ ಕಾವ್ಯಯಾತ್ರೆ ಮುಗಿಸಿದ ಶ್ರೀ ಬೇಂದ್ರೆ ನಮ್ಮೊಳಗೇ ಮತ್ತೆ ಮತ್ತೆ ಬಂದುಕೂರುವ ಆಪ್ತರು, ಅಜರಾಮರರು. ಅವರ ಇಚ್ಛೆಯಂತೆ ಅವರ ಅಂತ್ಯಕ್ರಿಯೆ ಕೂಡ ಅವರದೇ ಖರ್ಚಿನಲ್ಲಿನಡೆಯಿತು, ಅದರ ನಂತರ ಒಂದೇ ಒಂದು ರೂಪಾಯಿ ಕೂಡ ಬೇರೆಯವರಿಂದ ಖರ್ಚೂ ಆಗಬಾರದು ಮತ್ತು ತನ್ನ ಬ್ಯಾಂಕ್ಖಾತೆಯಲ್ಲೂ ಏನೂ ಉಳಿಯಬಾರದೆಂಬ ಅವರ ಇಚ್ಛೆಯನ್ನು ಮಗ ವಾಮನ ಬೇಂದ್ರೆ ಹಾಗೇ ಆಗುವಂತೆ ನೋಡಿಪೂರೈಸಿಕೊಟ್ಟರು.

ಮರೆಯಲಳವೇ ? ಗುನುಗುನಿಸುತ್ತಿಲ್ಲವೇ ನಮ್ಮ ಕಿವಿಯಲ್ಲೀಗ........

ಘಮಾ ಘಮಾ ಘಮಾಡಸ್ತಾವ ಮಲ್ಲೀಗೀ.........

ನೀ ಹೊರಟಿದ್ದೀಗ ಎಲ್ಲಿಗಿ ?........

ನೀ ಹೊರಟಿದ್ದೀಗ ಎಲ್ಲಿಗಿ ?.........

Wednesday, March 3, 2010

ಭಿಕ್ಷೆ, ಭಿಕ್ಷು ಮತ್ತು ಭಿಕ್ಷಾಟನೆ

ಭಿಕ್ಷೆ, ಭಿಕ್ಷು ಮತ್ತು ಭಿಕ್ಷಾಟನೆ

ಭಗವಂತ ಕೊಟ್ಟ ಹಲಾವು ದಾರಿಗಳಲ್ಲಿ ನಾವು ದುಡಿಮೆಯಲ್ಲಿ ತೊಡಗಿದ್ದರೂ ಕೊನೆಗೊಮ್ಮೆ ಎಲ್ಲರ ಒಡಲಿಗೆ ದಾಹತಣಿಸಲು ಬೇಕಾದ್ದು ಅನ್ನ. ಅಗ್ನಿಯ ಹಲವು ರೂಪಗಳಲ್ಲಿ ಜಠರಾಗ್ನಿ ಕೂಡ ಒಂದು ಅದನ್ನು ವೈಜ್ಞಾನಿಕವಾಗಿ ನಾವು ದುರ್ಬಲ ಗಂಧಕಾಮ್ಲ ಎನ್ನುತ್ತೇವೆ. ಹೊಟ್ಟೆ ಹಸಿದಾಗ ದುರ್ಬಲ ಗಂಧಕಾಮ್ಲದ ಸ್ರವಿಸುವಿಕೆ ಜಾಸ್ತಿ ಆದಾಗ ಅದು ಜಠರದಲ್ಲಿ ಏನೂ ಇಲ್ಲದಿದ್ದರೆ ಜಠರದ ಗೋಡೆಯನ್ನೇ ಕರಗಿಸಿ ಹುಣ್ಣುಮಾಡಲು ತೊಡಗುತ್ತದೆ, ಇದನ್ನು ' ಅಲ್ಸರ್ ' ಎನ್ನುತ್ತೇವೆ. ಒಂದು ವಿಶೇಷವೆಂದರೆ ಕೆಲವರಿಗೆ ಹೊಟ್ಟೆ ಹಸಿದಿದ್ದರೂ ಅದನ್ನು ಕಟ್ಟಿ ನಿಲ್ಲಿಸುವ ತಾಕತ್ತು ಇರುತ್ತದೆ-ಆದರೆ ನಮ್ಮಂಥ ಜನಸಾಮಾನ್ಯರಿಗೆ ಇದು ಅಸಾಧ್ಯ. ಈ ಹೊಟ್ಟೆಗೆ ನೀಡುವ ಆಹಾರಕ್ಕಾಗಿ ನಾವು ನಮ್ಮನ್ನು ಹಲವು ವೇಷಗಳಲ್ಲಿ ಹಲವು ಕೆಲಸಗಳಲ್ಲಿ ತೊಡಗಿಕೊಂಡಿರುತ್ತೇವೆ. ಅಧ್ಯಯನ,ಅಧ್ಯಾಪನ, ವೈದ್ಯ, ತಂತ್ರಜ್ಞ, ಗಣಿಕಾರ್ಮಿಕ, ಸುವರ್ಣಪರೀಕ್ಷಕ, ಸಿನಿಮಾನಟ, ಹಾಡುಗಾರ,ಸಂಗೀತಗಾರ ಹೀಗೇ ವೃತ್ತಿ ಅನೇಕ. ಇದನ್ನೇ ಸಂಸ್ಕೃತದಲ್ಲಿ ಉದರ ನಿಮಿತ್ತಂ ಬಹುಕೃತ ವೇಷಂ ಅಂದಿದ್ದಾರೆ. ಕೆಲವರು ಬುಕುವುದಕ್ಕಾಗಿ ತಿನ್ನುವ ಪ್ರವೃತ್ತಿಯುಳ್ಳವರಾದರೆ ಇನ್ನು ಕೆಲವರು ತಿನ್ನುವುದಕ್ಕಾಗೇ ಬದುಕಿರುವ ರೀತಿಯಲ್ಲಿ ಇರುತ್ತಾರೆ. ಇದರಲ್ಲಿ ಜ್ಞಾನಿಗಳು ಮೊದಲ ತರಗತಿಯವರು, ಅಂದರೆ ಬುಕುವುದಕ್ಕಾಗಿ ತಿನ್ನುವ ಪ್ರವೃತ್ತಿಯುಳ್ಳವರು.ಮನುಷ್ಯನಿಗೆ ಹಸಿವಿದ್ದಾಗ ಮಾತ್ರ ಆತ ಕೆಲಸದಲ್ಲಿ ತೊಡಗಲು ಸಾಧ್ಯ, ಹೊಟ್ಟೆಯ ಹಸಿವಿದ್ದರೆ ಅನ್ನವನ್ನು ಹೇಗೆ ಸಂಪಾದಿಸಲು ಪ್ರಯತ್ನಿಸುತ್ತಾನೋ ಹಾಗೇ ಜ್ಞಾನದ ಹಸಿವಿದ್ದರೆ ವ್ಯಕ್ತಿ ಓದಿನ/ಕೋಶದ ಮೊರೆಹೋಗುತ್ತಾನೆ. ಬಹಳ ಜ್ಞಾನಿಗಳು ಎಂದೂ ಹೊಟ್ಟೆಬಿರಿ ಊಟಮಾಡುವುದಿಲ್ಲ. ಅದನ್ನೇ ನಮ್ಮ ಸರ್ವಜ್ಞ ಕವಿಯ ಬಾಯಲ್ಲಿ ಕೇಳಿ

ಒಮ್ಮೆ ಉಂಡರೆ ಯೋಗಿ ಮಗುದೊಮ್ಮೆ

ಉಂಡರೆ ಭೋಗಿ ಭಿಮ್ಮಗುಂಡರವರೋಗಿ

ಯೋಗಿಯು ಸುಮ್ಮನಿರುತಿಹನು ಸರ್ವಜ್ಞ

ಹೀಗೇ ಯಾರು ಕಾರ್ಯ ತತ್ಪರರೋ ಅವರಿಗೆ ಬಹಳ ಹೊಟ್ಟೆ ಬಿರಿ ಊಟಮಾಡಿದರೆ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕೇ ಇಂಗ್ಲೀಷನಲ್ಲಿ ಕೂಡ ನಾವು working lunch ಎನ್ನುತ್ತೇವೆ. ಜ್ಞಾನಿಗಳು ಅದರಲ್ಲೂ ಯೋಗಿಗಳು ಒಪ್ಪತ್ತಿನ ಊಟ ಮಾಡುತ್ತಾರೆ, ಅದೂ ಸ್ವಲ್ಪ ಮಾತ್ರ, ಇನ್ನೊಂದು ಹೊತ್ತು ಸ್ವಲ್ಪ ಹಾಲು-ಹಣ್ಣು ಸೇವಿಸಿ ಕಾಲಹಾಕುತ್ತಾರೆ. ಇಂತಹ ಯೋಗಿಗಳು, ಸನ್ಯಾಸಿಗಳು ಸ್ವಾರ್ಥರಹಿತರಾಗಿ ಬದುಕುವುದರಿಂದ ಅವರಿಗೆ ಅನ್ನವನ್ನು ಬೇರೆ ದುಡಿಮೆಯ ಮಾರ್ಗದಿಂದ ಸಂಪಾದಿಸುವ ಅವಕಾಶ-ಅನುಕೂಲ ಇರುವುದಿಲ್ಲ;ಅರ್ಥಾತ್ ಅವರು ಕರ್ಮದಿಂದ ವಿಮುಕ್ತರಾಗಿರುತ್ತಾರೆ. ಇಂತಹ ಯೋಗಿಗಳಿಗೆ ಪ್ರತಿಯೊಂದು ಕೆಲಸಕ್ಕೆ ಬೇರೆಯವರ ಸಹಾಯ ಬೇಕು. ಮಧ್ಯಾಹ್ನ ಮಾತ್ರ ಊಟ, ಅದೂ ಊಟಮಾಡಲು ಯಾರೋ ಸತ್ ಶಿಷ್ಯನೊಬ್ಬ ಹಸ್ತೋದಕ [ಕೈ ಮೇಲೆ ಆಪೋಶನಕ್ಕೆ ಅನುಮತಿಸುವ ನೀರು] ಹಾಕಬೇಕು,ಅದಿಲ್ಲದಿದ್ದರೆ ಆತ ಊಟ ಸ್ವೀಕರಿಸಲಾರ ! ಇಂತಹ ಸತ್ಪಾತ್ರರಿಗೆ ಅನ್ನ ನೀಡುವುದು ಒಂದು ಸೇವೆ ಎಂದು ಪರಿಗಣಿತವಾಗಿದೆ. ಅದನ್ನು ' ಯೋಗ ಭಿಕ್ಷೆ ' ಎನ್ನುತ್ತೇವೆ.

ಅನ್ನಪೂರ್ಣೆ ಸದಾ ಪೂರ್ಣೆ ಶಂಕರಃ ಪ್ರಾಣ ವಲ್ಲಭೇ|

ಜ್ಞಾನ-ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂದೇಹಿ ಚ ಪಾರ್ವತಿ||

--ಭಗವಾನ್ ಆದಿ ಶಂಕರರು ಅನ್ನಪೂರ್ಣೆಯಾದ, ಜಗನ್ಮಾತೃವಾದ ಪಾರ್ವತಿಯ ಸನ್ನಿಧಿಯಲ್ಲಿ ಹೀಗೆ ಪ್ರಾರ್ಥಿಸಿದ್ದಾರೆ. ಜ್ಞಾನ-ವೈರಾಗ್ಯದ ಸಿದ್ಧಿಗಾಗಿ ತನಗೆ ಭಿಕ್ಷೆ ನೀಡು ಎಂದು ಬೇಡಿದ್ದಾರೆ. ಹೀಗೇ ದೊರೆತ ಅನ್ನವನ್ನು ಸ್ವೀಕರಿಸುವ ಮುನ್ನ ಗುಟುಕು ಪಾಲನ್ನು ದೈವದ ಹೆಸರಲ್ಲಿ ಎತ್ತಿ ಪಕ್ಕಕ್ಕಿಟ್ಟು ಊಟಮಾಡು ಎನ್ನುತ್ತದೆ ಶಾಸ್ತ್ರ, ಇದು ತಣ್ಣೀರನ್ನು ತಣಿಸಿಕುಡಿ ಎಂಬ ರೀತಿ. ದೊರೆತ ಅನ್ನಕ್ಕೆ ಅದು ದೈವಸ್ವರೂಪವೆಂದು ಕೈಮುಗಿದು, ಅದರಲ್ಲೊಂದೆರಡಗುಳು ಪಕ್ಕಕ್ಕಿಟ್ಟು ಆಮೇಲೆ ಊಟ. ನಮ್ಮ ಪೂರ್ವಜರು ದೂರದೃಷ್ಟಿಯನ್ನು ಪಡೆದಿದ್ದರಿಂದ ಸುತ್ತಲ ಪ್ರಾಣಿ-ಪಕ್ಷಿಗಳನ್ನೂ ಸೇರಿಸಿಕೊಂಡರು, ಸಾಧ್ಯವಾದಾಗ ಕಾಗೆಗೆ-ನಾಯಿಗೆ,ಬೆಕ್ಕಿಗೆ ಈ ರೀತಿ ಎಲ್ಲಾ ಜೀವಿಗಳಿಗೆ ಸ್ವಲ್ಪ ಅನ್ನ ನೀಡಿ ಎಂದರು. ಅದನ್ನೇ ಕಾಕ ಬಲಿ ಎಂದರು. ಗೃಹಸ್ಥರಿಗೆ ಅನ್ನ ಸ್ವೀಕಾರಕ್ಕೂ ಮುನ್ನ ವೈಶ್ವದೇವ, ಗೋ ಗ್ರಾಸ, ಅತಿಥಿ ಸತ್ಕಾರ[ಅದರಲ್ಲಿ ಯೋಗಭಿಕ್ಷೆ ಕೂಡ ಸೇರಿದೆ] ಅಂದರೆ ದಿನಂಪ್ರತಿ ಅನ್ನ ಬೇಯಿಸಿಕೊಡುವ ಅಗ್ನಿದೇವನಿಗೆ ತುತ್ತನ್ನ ಅರ್ಪಿಸಿ, ಗೋವಿಗೆ ಮುಷ್ಠಿ ಅನ್ನ ಅರ್ಪಿಸಿ, ಅತಿಥಿಗಾಗಿ ಕಾದು ಅವರಿಗೆ ಬಡಿಸಿ -- ಇವನ್ನೆಲ್ಲ ನಡೆಸಿ ನಂತರ ಊಟಮಾಡು ಎನ್ನುವ ಕಟ್ಟುಕಟ್ಟಳೆಯಿದೆ. ಎಂತಹ ಆರ್ಷೇಯ ವಾದ ನೋಡಿ ! ಎಂತಹ ಪರಿಕಲ್ಪನೆ ನೋಡಿ ! ಎಂತಹ ಆದರ್ಶ ನೋಡಿ ! ಆದರೆ ಇವತ್ತಿನ ನವೀಕರಣಮಾರ್ಗದಲ್ಲಿ ನಾವು ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ಎಲ್ಲವನ್ನೂ ಮರೆತಿದ್ದೇವೆ, ಅದಕ್ಕೆಲ್ಲಾ ಯಾರಿಗೆ ಪುರುಸೊತ್ತಿದೆ ಅಲ್ವೇ ? ಹೀಗೇ ನಮ್ಮಿಂದ ಅನ್ನ ಸ್ವೀಕರಿಸಿದ ಪ್ರತೀ ಜೀವಿಯೂ ತೃಪ್ತವಾಗಿ ನಮ್ಮನ್ನು ತನ್ಮೂಲಕ ಹರಸುತ್ತದೆ, ಶುಭ ಹಾರೈಸುತ್ತದೆ ! ಇದು ದಾಸರ ಕೆರೆಯ ನೀರನು ಕೆರೆಗೆ ಚೆಲ್ಲಿ ಹಾಡನ್ನು ನೆನಪಿಸುವುದಿಲ್ವೇ ? ಕೊಟ್ಟ ಪರಮಾತ್ಮನ ಹಲವು ರೂಪಗಳೆಂದು ತಿಳಿದು ಸುತ್ತಲ ಜೀವಿಗಳಿಗೆ ಇತ್ತು ಉಂಡಾಗ ಅದು ಆತನೇ ಕರುಣಿಸಿದ್ದನ್ನು ಅವನಿಗೇ ಅರ್ಪಿಸಿದಂತಲ್ಲವೇ ?

ನಮ್ಮಿಂದ ಅನ್ನದ ಸೇವೆ ಪಡೆಯುವವರನ್ನು ಭಿಕ್ಷು ಎನ್ನಬಹುದು[ಇದು ಬೌದ್ಧಮತದಲ್ಲಿ ಸಾಮಾನ್ಯವಾಗಿ ನೋಡ ಸಿಗುವ ಪದ] ಊರು ತಿರುಗಿ " ಭವತಿ ಭಿಕ್ಷಾಂದೇಹಿ " ಎಂದು ಮನೆಗಳ ಬಾಗಿಲಲ್ಲಿ ನಿಂತು ಮಧುಕರಿ ಭಿಕ್ಷೆ ಎತ್ತಿಚೂರು ಚೂರು ತಂದ ಎಲ್ಲವನ್ನೂ ಸೇರಿಸಿ ಅದರಲ್ಲಿ ಭಾಗಮಾಡಿ ಮೇಲೆ ಹೇಳಿದ ಎದುರಾಗುವ ಎಲ್ಲಾ ಜೀವಿಗಳಿಗೆ ಕೊಟ್ಟು ಮಿಕ್ಕುಳಿದರೆ ಉಳಿದದ್ದನ್ನು ಭಗವಂತನ ಹೆಸರಲ್ಲಿ ಕೇವಲ ಭೌತಿಕಕಾಯದಿಂದ ಭುವಿಯಮೇಲೆ ಬದುಕುಳಿಯಲು ಸ್ವೀಕರಿಸುವುದು, ಎಷ್ಟು ತ್ಯಾಗ ನೋಡಿ ! ನಮಗೆ ಇಂದು ಮೃಷ್ಟಾನ್ನ ಇದ್ದರೂ ತೃಪ್ತಿ ಇಲ್ಲ, ಆದರೆ ಯೋಗಿಯೊಬ್ಬ ಇದರಲ್ಲೇ ಸಂಪೂರ್ಣ ತೃಪ್ತ ! ಹೀಗೂ ಇದೆಯೇ ಎಂದರೆ ಆಶ್ಚರ್ಯಪಡಬೇಡಿ, ಇದನ್ನು ಸಾಕ್ಷೀಕರಿಸಿದ ಇತ್ತೀಚಿನ ಮಹಾನ್ ಯೋಗಿಗಳಲ್ಲಿ ವರದಹಳ್ಳಿಯ ಭಗವಾನ್ ಶ್ರೀ ಶ್ರೀಧರಸ್ವಾಮಿಗಳೂ ಒಬ್ಬರು! ಇವರ ತ್ಯಾಗ-ಮತ್ತು ತಪಸ್ಸಿನಬಗ್ಗೆ ಹಿಂದೆ ಬರೆದಿದ್ದೆ, ತಾವು 'ಭಕ್ತಿ ಸಿಂಚನ' ಮಾಲಿಕೆಯಲ್ಲಿ ಅದನ್ನು ಓದಬಹುದು.ಒಬ್ಬ ಸನ್ಯಾಸಿಗೆ ವಿರಕ್ತಿಯಿಂದಿರಲು ಯೋಗ ಭಿಕ್ಷೆ ಅನುಕೂಲ, ಅದು ಪಥ್ಯವೂ ಕೂಡ. ಅದಕ್ಕಾಗಿಯೇ ಸನ್ಯಾಸಿಗಳು ಬೇರೆ ಬೇರೆ ಕಡೆ ಭಿಕ್ಷೆಪಡೆಯುತ್ತಾರೆ, ಸನ್ಯಾಸದ ಹಲವು ಮಾರ್ಗಗಳಲ್ಲಿ ರಾಜ ಸನ್ಯಾಸವೂ ಒಂದು ಅದು ಮಠಾಧೀಶರಿಗೆ ಹೇಳಿರುವುದು.

ಭಿಕ್ಷಾಟನೆ ಅಂದರೆ ಅದು ಹೀನ ವೃತ್ತಿ , ದೈನ್ಯವೃತ್ತಿ , ಕೇವಲ ಬದುಕಿಗಾಗಿ, ತಿನ್ನುವುದಕ್ಕಾಗಿ ಆಲಸ್ಯದಲ್ಲಿ ಕೆಲಸಮಾಡದೆ ಭಿಕ್ಷೆ ಬೇಡುವುದು ಬಹಳ ಅಪವಿತ್ರ ಕೆಲಸ. ಇಂದು ಅನೇಕರು ಸ್ಟಾರ್ ಭಿಕ್ಷುಕರಾಗಿದ್ದಾರೆ ಅಂದರೆ ಎಲ್ಲಾದರೂ ದೇವಾಲಯಗಳ ಮುಂದೆ ಸದಾ ಭಕ್ತರು ಬರುವಲ್ಲಿ ಅವರನ್ನು ಓಲೈಸಿ ಕಾಸು ತೆಗೆದುಕೊಂಡು ಅದರಿಂದ ಸುಮಾರಷ್ಟು ಗಳಿಸಿ ಬ್ಯಾಂಕ್ ಬ್ಯಾಲೆನ್ಸ್ ಮಾಡುವವರು, ಇದೂ ಒಂದು ಗೀಳಾಗಿಬಿಟ್ಟಿದೆ ಈಗ, ಇಂಥವರು ಕೆಲಸಮಾಡಲೊಲ್ಲರು, ಇದು ಜನ್ಮಾಂತರಕ್ಕೆ ಬರುವ ಹೀನ ಕಳೆ, ಬೇರೆಯವರ ಪಾಪ, ದುಷ್ಕೃತಿ ಬೇಡುವವನಿಗೆ ಹಸ್ತಾಂತರವಾಗುತ್ತದೆ, ಸದ್ಯಕ್ಕೆ ಬೇಡುವವ ಆರಾಮಾಗಿದ್ದರೂ ಮರುಜನ್ಮದಲ್ಲಿ ಅವನ ಕಷ್ಟ ಹೇಳತೀರ. ಅದಕ್ಕೇ ನಮ್ಮ ಹಿರಿಯರು ಪ್ರಾರ್ಥಿಸುತ್ತಾರೆ --


ಅನಾಯಾಸೇನ ಮರಣಂ|
ವಿನಾ ದೈನ್ಯೇನ ಜೀವನಮ್||

--ಎಂಬುದಾಗಿ ಅಂದರೆ ಮರಣಿಸುವಾಗ ಅನಾಯಾಸವಾಗಿ ಮರಣ ಬರಲಿ, ಯಾರೊಬ್ಬರಿಗೂ ಹೊರೆಯಾಗದಂತೆ, ತೊಂದರೆಯಾಗದಂತೆ, ಎಂದೂ ಬಹಳ ಕಾಲ ಹಾಸಿಗೆ ಹಿಡಿಯದೆ,ರೋಗ-ರುಜಿನಾದಿಗಳನ್ನು ಬಹಳ ಅನುಭವಿಸದೆ, ನೋಯದೇ-ಬೇಯದೇ ಮರಣಿಸುವ ಸ್ಥಿತಿ, ಉದಾಹರಣೆಗೆ ಕರ್ತವ್ಯವೆಲ್ಲ ಮುಗಿದಮೇಲೆ ಹೃದಯ ಸ್ತಂಬನವಾಗಿ ಹೋಗಿಬಿಡುವುದು. ಹೀಗೇ ಆಗಲು ಪೂರ್ವದ ಸುಕೃತ ಬೇಕು, ಸುಮ್ಮನೆ ಹಾಗೆಲ್ಲ ಮರಣ ನಮ್ಮ ಇಚ್ಛೆಯಲ್ಲ , ಆಯ್ಕೆಯೂ ಅಲ್ಲ. ಅದಕ್ಕಾಗಿಯೇ ನಮಗೆ ಗೊತ್ತಿರದ ಸ್ಥಿತಿ ತಂದು ಎಲ್ಲೋ ದಾರಿಯಲ್ಲೋ, ಇನ್ನೆಲ್ಲೋ ಹೇಗೋ ಏನೋ ಬಿದ್ದು-ತುಳಿಸಿಕೊಂಡು, ಅಪಘಾತವಾಗಿ ಸಾವು ಬೇಡ,ನಮಗೆ ನಮ್ಮ ಜನ್ಮದ ವಾರಸುದಾರರ ಆಶ್ರಯದಲ್ಲಿ ಅವರ ಹಾರೈಕೆಗಳೊಡನೆ , ಅವರೆಲ್ಲರ ಸಂತೋಷದ ಕಾಲದಲ್ಲಿ ಒಳ್ಳೆಯ ಮರಣ ಸಿಗಲಿ, ಮತ್ತು ಇರುವವರೆಗೆ ದೀನರಾಗಿ ಯಾರಲ್ಲಿಯೂ ಕೈಯೊಡ್ಡಿ ಹೊಟ್ಟೆ ತುಂಬಿಸಿಕೊಳ್ಳುವ ಪರಿಪಾಟ ಬರದಿರಲಿ ಎಂದು ಭುವಿಗೆ ಕಳಿಸಿದ ಭಗವಂತನಲ್ಲಿ ಪ್ರಾರ್ಥಿಸುವುದು.

ದೀನನಾನು ಸಮಸ್ತ ಲೋಕಕೆ ದಾನಿ ನೀನು ವಿಚಾರಿಸಲು
ಮತಿಹೀನ ನಾನು ಮಹಾ ಮಹಿಮ ಕೈವಲ್ಯ ಪತಿ ನೀನು
ಏನಬಲ್ಲೆನು ನಾನು ಎನ್ನೊಳು ನೆಲೆಸು ಜ್ಞಾನ ಮೂರುತಿ ನೀನು
ನಿನ್ನ ಸಮಾನರುಮ್ಟೇ ದೇವ ರಕ್ಷಿಸು ನಮ್ಮನನವರತ

--ಎಷ್ಟು ಅಧ್ಬುತ ಕವಿಯ ಸಾಲುಗಳು ! ಬಹುಶಃ ನಮಗೆ ಕವಿಯಾಕೆ ಹಾಗೆ ಹೇಳಿದರೆಂದು ಅದರರ್ಥ ಆಗಿರಲಿಕ್ಕಿಲ್ಲ ಇಲ್ಲಿಯವರೆಗೆಅನ್ನೋಣವೇ

ಬದುಕುವ ಮೂರ್ಕಾಲ ಹಬ್ಬಿರಲಿ ಸ್ನೇಹದಲಿ

ಕೆದಕುತ್ತ ಕಳೆಯೋಣ ಎಲ್ಲ ಸಿಹಿನೆನಪು

ಅದುಬೇಡ ಇದುಬೇಡ ಎನ್ನುವುದದೇ ಬೇಡ

ಕದವ ತಟ್ಟುತ ತೆರೆಯೋ ಜಗದಮಿತ್ರ


ಜಗದಮಿತ್ರ ಮೊದಲೊಮ್ಮೆ ಹೇಳಿದ್ದು ನೆನಪಾಯಿತೇ ?