ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, March 12, 2010

ಕಳುಸುವಿರೇತಕೆ ನನ್ನ ಸ್ವಾಮೀ ?

ರಾಮಂ ಲಕ್ಷ್ಮಣ ಪೂರ್ವಜಂ ರಘುವರಂ ಸೀತಾಪತಿಂ ಸುಂದರಂ
ಕಾಕುಸ್ಥಂ ಕರುಣಾನಿಧಿಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಂ |
ರಾಜೇಂದ್ರಂ ಸತ್ಯಸಂದಂ ದಶರಥತನಯಂ ಕೇವಲಮ್ ಶಾಂತಮೂರ್ತಿಂ
ವಂದೇ ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್||

ಕೋಸಲ ದೇಶದ ಪ್ರಜೆಗಳು ಸುಖದಿಂದ ರಾಮರಾಜ್ಯಭಾರವನ್ನು ಅನುಭವಿಸುತ್ತಿರುವ ಶುಭಕಾಲ ಅದು. ಬಹಳ ಕಾಲವಾಗಿರಲಿಲ್ಲ ರಾಮ-ರಾವಣ ಯುದ್ಧ ಮುಗಿದು. ಆಗತಾನೆ ಕೆಲವು ದಿನಗಳು ಶ್ರೀರಾಮ ಪಟ್ಟಾಭಿಷೇಕವಾಗಿ. ವಿಸ್ತರವನ್ನೇರಿದ ರಾಮನ ಮುಖದಲ್ಲಿ ಏನೋ ಹೇಳಲಾಗದ ಅವ್ಯಕ್ತ ದುಃಖ ಮಡುಗಟ್ಟಿತ್ತು. ಮರ್ಯಾದಾಪುರುಷೋತ್ತಮ ನೆಂದು -ಕರೆಯಲ್ಪಟ್ಟು ಪ್ರಜೆಗಳಿಂದ, ದೇವರು ತನ್ನ ಭಕ್ತರನ್ನು ಪೊರೆದಂತೆ ಪ್ರಜೆಗಳನ್ನು ಪರಿಪಾಲಿಸುತ್ತಿದ್ದ ಸೀತಾರಾಮ ಪ್ರಜೆಗಳ ವಾಕ್ಯವನ್ನು ಸ್ವೀಕರಿಸಿ ಅವಲೋಕಿಸುತ್ತಿದ್ದ. ತಪ್ಪನ್ನು ಕನಸಲ್ಲೂ ಮಾಡದ, ಆ ಬಗೆಗೆ ಯೋಚನೆ ಸಹಿತ ಮಾಡದ ಇಂತಹ ರಾಮನ ಮುಖದಲ್ಲಿ ನೋವು, ಆತಂಕ,ಕಳವಳ,ಆವೇಶ,ಉದ್ವೇಗ,ಕೋಪ ಎಲ್ಲಾ ಸೇರಿ ಒಡೆದುಕ್ಕಿದ ಮಿಶ್ರಛಾಪು. ಕರ್ತವ್ಯದ ಕರೆಗೆ ಓಗೊಟ್ಟು ತನ್ನ ಮನಸ್ಸನ್ನು ಹದ್ದುಬಸ್ತಿನಲ್ಲಿಟ್ಟು ರಾಜಕಾರ್ಯವನ್ನು ಮಾಡಹೊರಟ ದಾಶರಥಿಯ ಮುಖ ಕೆಂಪಗಾಗಿದೆ, ಅನುಜ ಲಕ್ಷ್ಮಣನನ್ನು ಕರೆದು ಆಜ್ಞೆವಿಧಿಸಿದ್ದಾನೆ

" ತಮ್ಮಾ ಲಕ್ಷ್ಮಣಾ, ಸೀತೆಯನ್ನು ಏಕಾಂಗಿಯಾಗಿ ಕಾಡಿನಲ್ಲಿ ಬಿಟ್ಟು ಬಾ "

ಅಂದಿನ ರಾಜಸಭೆಯ ವಂದಿಮಾಗಧರೆಲ್ಲ ಆಶ್ಚರ್ಯಚಕಿತರಾಗಿದ್ದಾರೆ ! ಎಲ್ಲರ ಮುಖದಲ್ಲೂ ಏನನ್ನೋ ಕಳೆದುಕೊಳ್ಳುತ್ತಿರುವ ಅನುಭವ ! ಲಕ್ಷ್ಮಣ ಧರೆಗಿಳಿದುಹೋಗಿದ್ದಾನೆ, ಆತನಿಗೆ ಅಣ್ಣನ ಕೂಡ ಮರು ಮಾತನ್ನು ಆಡಿ ಅಭ್ಯಾಸವಿಲ್ಲ.ಅಣ್ಣನ ನೆರಳಾಗಿ ಸದಾ ಅಣ್ಣನನ್ನು ಹಿಂಬಾಲಿಸುವುದೇ ಲಕ್ಷ್ಮಣನ ಕೆಲಸ. ಎಂದಿಗೂ ಅಣ್ಣನಿಗೆ ಎದುರಾಡಿದವನಲ್ಲ. ಲಕ್ಷ್ಮಣನಿಗೆ ಗೊತ್ತು ಎದುರಿಗಿರುವ ಅಣ್ಣ ಸಣ್ಣ ಆಸಾಮಿಯಲ್ಲ; ಆತ ಸಾಕ್ಷಾತ್ ದೈವಾಂಶ ಸಂಭೂತ ನರನಾರಾಯಣ !

ಅಣ್ಣ ಎಂದೂ ಬೇಡದ ದಾರಿ ತುಳಿದವನಲ್ಲ, ಕೆಟ್ಟದ್ದನ್ನು ತಮ್ಮನ ಕೂಡ ಮಾಡಿಸಲು ಆಗ್ರಹಿಸಿದ, ಆಜ್ಞಾಪಿಸಿದ, ಅನುಮೋದಿಸಿದ,ಆದರಿಸಿದ ವ್ಯಕ್ತಿತ್ವ ಅಲ್ಲ ಅದು. ಇಂತಿಪ್ಪ ಶ್ರೀರಾಮಚಂದ್ರ ಯಾಕೆ ಈ ರೀತಿ ಸೀತಾಮಾತೆಯನ್ನು ಕಾಡಿಗೆ ಕಳಿಸಲು ಆಜ್ಞೆವಿಧಿಸಿದ ಎಂಬುದು ಆ ಕ್ಷಣಕ್ಕೆ ಲಕ್ಷ್ಮಣನ ಮುಖದಲ್ಲಿ ಹೊಮ್ಮುತ್ತಿದ ಅಸಮಾಧಾನದ ಜ್ವಾಲೆಗಳಿಂದ [strong negative waves !] ಯಾರಿಗಾದರೂ ಅನ್ನಿಸಿಬಿಡುತ್ತಿತ್ತು . ಆತನೀಗ ನಿರುಂಬಳನಲ್ಲ. ಆತನಲ್ಲಿ ಹಲವು ಪ್ರಶ್ನೆಗಳಿವೆ, ಆದರೆ ಕೇಳಲೂ ಆಗದ ಕೇಳದಿರಲೂ ಆಗದ ದಯನೀಯ ಮನೋಭಾವ ! ಕೇಳಿದರೆ ಜೀವನದ ಅತಿ ಪ್ರೀತಿಪಾತ್ರ-ವಿಶ್ವಾಸಪಾತ್ರ ಅಣ್ಣನನ್ನೇ ಸಂದೇಹದಿಂದ ನೋಡಿದಂತಾಗುವುದಲ್ಲವೇ ? ಕೇಳದಿರೆ ತಾಯಿಯಂತಹ ಅತ್ತಿಗೆ, ಹೂವಿನಂತೆ ಮುಗ್ಧ-ಕೋಮಲ ಸ್ವಭಾವದ ಅಣ್ಣನ ಸಸ್ವರೂಪ ಅರ್ಧಾಂಗಿ ಸೀತಾಮಾತೆಯನ್ನು ಇನ್ನಿಲ್ಲದ ಕಷ್ಟದಲ್ಲಿ,ಗತಿಯಿರದ ಕಾಡಿನ ಜಾಗದಲ್ಲಿ, ಆನ್ನಾಹಾರವಿಲ್ಲದ ಆ ಕಗ್ಗಾಡಿನಲ್ಲಿ, ಕ್ರೂರ ಮೃಗಗಳ ಆವಾಸದಲ್ಲಿ ಬಿಟ್ಟು ಬಂದು ತನ್ಮೂಲಕ ಆ ಪರಿಹರಿಸಲಾರದ ಪಾಪಕ್ಕೆ ಒಳಗಾಗುವುದಿಲ್ಲವೇ ? ಮೇಲಾಗಿ ಸೀತೆ ಬಸುರಿ, ಇನ್ನೇನು ದಿನತುಂಬಿದ ಬಸುರಿಯೇ, ಇಂತಹ ಸ್ಥಿತಿಯಲ್ಲಿ ಯಾರುತಾನೆ ಯಾವ ಹೆಣ್ಣನ್ನು ಅನಾಥಳನ್ನಾಗಿ ಮಾಡಲು ಮನಸ್ಸುಮಾಡುತ್ತಾರೆ? [ ಹಾಗೊಮ್ಮೆ ಅಂತಹ ಮನಸ್ಸುಳ್ಳವರು ನಮ್ಮ ಓದುಗರಿಲ್ಲಿದ್ದರೆ ಅಂಥವರಿಗೆ ನನ್ನ ಧಿಕ್ಕಾರ! ] ಭುಗಿಲೆದ್ದ ಲಕ್ಷ್ಮಣನ ಸ್ವಗತಗಳು ಹಲವು. ಅದಕ್ಕೆಲ್ಲ ಉತ್ತರ ಕೇಳುತ್ತ ಕುಳಿತುಕೊಳ್ಳುವ ಕಾಲವಲ್ಲ ಅದು. ರಾಜಾಜ್ಞೆಯಾಗಿದೆ. ಸೀತೆಯನ್ನು ಕಾಡಿಗೆ ಕಳಿಸಿಬರಲೇ ಬೇಕು. ಇನ್ನೇನು ಲಕ್ಷ್ಮಣ ವಿಧಿಯಿಲ್ಲದ ಗಾಡಿಯ ಎತ್ತಿನಂತೆ ಈ ಭಾರವನ್ನು ಹೊರಲು ಹೆಗಲುಗೊಡಬೇಕು.

ಅಷ್ಟರಲ್ಲಿ ಜಾನಕಿ ಸಭೆಗೆ ಆಗಮಿಸಿದ್ದಾಳೆ, ಪ್ರಭು ಶ್ರೀರಾಮನ ಮನದ ಇಂಗಿತವನ್ನು ಅರಿತು ಚಾಚೂ ತಪ್ಪದೇ ಅವನ ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ನಡೆದ ಸ್ನೇಹ ದಾಂಪತ್ಯ ಅವಳದು. ವಿಷಯವನ್ನು ರಾಣೀವಾಸದಲ್ಲಿದ್ದೇ ಸಖಿಯರಮೂಲಕ ತಿಳಿದುಕೊಂಡ ಅವಳ ಮುಖದಲ್ಲೂ ಕೂಡ ಅದೇ ಇಬ್ಬಂದಿತನ. ಎಂದೂ ಯಾರಿಗೂ ಕೇಡನ್ನು ಬಯಸದ ಭೂಮಿತಾಯಿಯ ಮಗಳವಳು! ರಾಮನ ಆದರ್ಶಗಳನ್ನು ಕೃತಿಯಲ್ಲಿ ಪೋಷಿಸಿದ-ಪೋಷಿಸುವ ರಾಮನ ಕಾರ್ಯಾಂಗ ಅವಳು! ಹುಚ್ಚು ಹಂಬಲದಿಂದ ಬಂಗಾರದ ಜಿಂಕೆಯ ಬೆನ್ನೊಂದನ್ನ ಹತ್ತಿದ್ದು ಬಿಟ್ಟರೆ ಇನ್ಯಾವುದನ್ನೂ ಶ್ರೀರಾಮನಕೂಡ ಮಾಡುವಂತೆ ಬಲವಂತಮಾಡದ ವ್ಯಕ್ತಿಯವಳು.ನಿಷ್ಠೆಗೆ ಹೆಸರಾದ ದಾಶರಥಿ ವನವಾಸಕ್ಕೆ ಹೊರಟಾಗ ಆತನ ಕಷ್ಟಗಳನ್ನೆಲ್ಲ ಮನಸ್ಸಲ್ಲಿ ಆಲೋಚಿಸಿ ಪತಿಯ ಸುಖ-ದುಃಖಗಳಲ್ಲಿ, ಆತನ ಸೇವೆಯಲ್ಲಿ ನಿರತಳಾಗಿ ನಿಂತ ಪ್ರೇಮಿಯವಳು,ನಾರುಡುಗೆಯುಟ್ಟು ತನ್ನೆಲ್ಲಾ ಆಭರಣಗಳನ್ನು ಬಿಚ್ಚಿಟ್ಟು ಕಾಡಿಗೈತಂದ ಪತಿಯಪಡಿಯಚ್ಚವಳು. ಕಾಡಿನ ಕಂದಮೂಲ ಫಲಗಳನ್ನೇ ಪಂಚಭಕ್ಷ್ಯ ಪರಮಾನ್ನದಂತೆ ಪ್ರೀತಿಯಿಂದ ರಾಮನೊಟ್ಟಿಗೆ ಕುಳಿತು ತಿಂದ, ಪತಿಯ ನಲಿವಲ್ಲಿ ತನ್ನ ನೋವನ್ನು ಮರೆತ-ಮರೆಯುವ ಸಾಧ್ವೀ ಸತಿಶಿರೋ ಮಣಿಯವಳು; ರಾಮನ ಸಕಲ ಕಾರ್ಯಗಳಲ್ಲಿ ಸದಾ ಸರ್ವದಾ ಸಹಭಾಗಿ ಅವಳು. ಇಂತಹ ಸೀತೆ ರಾಜಾಜ್ಞೆಗೆ ತಲೆಬಾಗುತ್ತ ಕಾಡಿಗೆ ಹೊರಡಲು ಮಾನಸಿಕ ಸಿದ್ಧತೆ ನಡೆಸಿದ್ದಾಳೆ. ಎಂದೂ ರಾಮನನ್ನು ಬಿಟ್ಟಿರದ ಮನಸ್ಸು ಇಂದೂ ಕೂಡ ಅದನ್ನೇ ಹಂಬಲಿಸುತ್ತಿದೆ. ಹಿಂದೆ ತಾನು ಅನುಭವಿಸಿದ ಎಲ್ಲಾ ಕಷ್ಟಗಳನ್ನೂ ರಾಮನಿಗಾಗಿ ಮರೆತಿದ್ದಳಾಕೆ, ಇಲ್ಲದಿದ್ದರೆ ತಾನು ಎಂದೋ ಹೇಗೋ ರಾವಣನ ರಾಜ್ಯದಲ್ಲಿ ಅಸುನೀಗಿಬಿಡುತ್ತಿದ್ದಳು ! ಹೀಗಾಗಿ ರಾಜಧಾನಿಗೆ ಮರಳಿ ಪ್ರಜೆಗಳನ್ನು ಕಂಡು ಪುಳಕಿತರಾಗಿ ಕಳೆದ ದಿನಗಳು ಕೇವಲ ಕೆಲವು. ಇಷ್ಟರಲ್ಲೇ ಶ್ರೀರಾಮ ಯಾಕಾಗಿ ಈ ರೀತಿ ಹೊರಲಾರದ-ಹೊರಬಾರದ ಹೊರೆ ಹೊರಿಸಿದ ಎಂಬುದನ್ನು ಮನದಲ್ಲಿ ಚಿಂತಿಸುತ್ತಾಳೆ. ಅಗಸನೋರ್ವ ರಾಮನ ಕಿವಿಗೆ ತಲಪುವಂತೆ ನೋವಿನ ಮಾತೊಂದನ್ನ ಆಡಿದ್ದ


" ಬಿಟ್ಟ ಹೆಂಡತಿಯನ್ನು ಕಟ್ಟಿಕೊಳ್ಳಲು ನಾನೇನು ರಾಮನೇ ? "

---ಈ ಮಾತಿನ ಚಾಟಿ ಏಟು ರಾಮನ ನರನಾಡಿಗಳನ್ನೆಲ್ಲ ಹರಿದು ಬಿಸಾಕಿದಷ್ಟು ಆತನನ್ನು ದಂಗುಬಡಿಸಿತ್ತು ! ಅಷ್ಟಕ್ಕೂ ರಾಮ ಮಾಡಬಾರದ್ದೇನು ಮಾಡಿದ ? ಹೆಂಡತಿಯೊಂದಿಗಿನ ಅವನ ಜೀವನ ಅವನ ವೈಯಕ್ತಿಕತೆ ತಾನೇ ? [ಇಂದಾದರೆ ಮಾನಹಾನಿ ಕೇಸು ಜಡಿಯುತ್ತಿದ್ದರು -ಅಗಸನ ಮೇಲೆ ] ಆದರೂ ರಾಮ ಪ್ರತೀ ಪ್ರಜೆಯ ಮಾತನ್ನೂ ಬಹಳವಾಗಿ ಅವಲೋಕಿಸುತ್ತಿದ್ದ, ಆ ಮಾತುಗಳ ಬಗ್ಗೆ ಚಿಂತನ-ಮಂಥನ ಮಾಡುತ್ತಿದ್ದ. ಗಂಡನ ನೋವು ಅವಳಿಗೆ ಅರ್ಥವಾಗದೇ ಇದ್ದಿರಲಿಲ್ಲ. ಆದರೂ ಬಿಟ್ಟಿರಲಾರದ ಅವಿನಾಭಾವ ಸಂಬಂಧ, ಆ ಮೋಹ-ವ್ಯಾಮೋಹ, ನರಳುವ ಪ್ರೀತಿಯ ಸಂಕೋಲೆ, ಮತ್ತೆಂದೂ ಅನುಭವಿಸಲಾಗದ ರಾಮನ ಬಾಹುಬಂಧನದ ಸಂಕೋಲೆ, ರಂಜಕರಾಮನ ರಂಜಿಪ ನುಡಿಗಳ nill ಆದ null ಆದ ಸ್ಥಿತಿ, ಪಿಸುಮಾತನು ಕೇಳಿ ನಸುನಗುತ್ತಿದ್ದ ದಿನಗಳನು ನೆನೆದು ಕಿವುಡಾಗುವ ಕಿವಿಗಳ ತುಡಿತ, ಹರಳಾದ-ಹಳಸಿದ್ದ ಹಳೆಯ ದುಃಖಘಟನೆಗಳ ನೆನಕೆಯ ಪುನರಾವರ್ತನೆ, ಇನ್ನೆಂದೂ ಹತ್ತಿರದಿಂದ ಕಾಣಲಾರದ ರಾಮನ ಬಿತ್ತಿ ಚಿತ್ರವನ್ನು ತುಂಬಿಸಿಕೊಂಡು ಆತ್ತು ಚೀರಿ ಭೋರ್ಗರೆದು ಒಳಗೊಳಗೇ ಸೋತ ಮನ, ಅವಡುಗಚ್ಚಿದಾಗಿನ ಹೊತ್ತು ಹೇಳಲೂ ಆರದೆ ಕೇಳಲೂ ಆರದೆ ಅಸಾಧ್ಯ ಭಾರದ ಹೊರೆಹೊತ್ತು ಮಡುಗಟ್ಟಿದ ಕಣ್ಣುಗಳು, ಸಭೆಯ ನೀರವ ಮೌನ ಪ್ರಶ್ನಿಸದೆ ನಿಂತಹೋದ ನಾಲಿಗೆ, ಸೀತೆ ಕಲ್ಲಾಗಿದ್ದಾಳೆ; ರಾಮನಿಗಾಗಿ, ಆದರೆ ಮನದಲ್ಲೊಮ್ಮೆ ಒಡೆಯನಲ್ಲಿ ಪ್ರಶ್ನಿಸಿದ್ದಾಳೆ --ಯಾಕೆ ತನ್ನನ್ನು ಕಾಡಿಗೆ ಕಳುಹಿಸುತ್ತಿದ್ದೀರಿ? ಎಂದು. ಈ ಸನ್ನಿವೇಶದಲ್ಲಿ ಸೀತೆಯ ಮನದಿಂಗಿತದಿಂದ ಬಂದ ಹಾಡು ---




[ ಚಿತ್ರ ಋಣ : ಅಂತರ್ಜಾಲ ]
ಕಳುಸುವಿರೇತಕೆ ನನ್ನ ಸ್ವಾಮೀ ?


ಕಳುಸುವಿರೇತಕೆ ನನ್ನ ಸ್ವಾಮೀ ?
ರಾಮಾ..... ರಾಮಾ.......ರಾಮಚಂದ್ರ ,,,,,,.
ಶ್ರೀರಾಮಚಂದ್ರ....... ಶ್ರೀರಾಮಚಂದ್ರ.......

ಹದಿನಾಲ್ಕು ವರುಷವು ಸಹಿಸುತ ಕಷ್ಟವ

ಕಾಡಲಿ ಕಳೆದೆನು ನಿಮ್ಮ ಜೊತೆ
ಪದನಾಲ್ಕು ಬರಲದು ಅಗಸನ ಬಾಯಿಂದ
ಕಾಡಿತೆ ನಿಮಗದು ಬಹಳವ್ಯಥೇ ?

ಅಂದು ರಾವಣನು ಬಂದಿರೆ ಭಿಕ್ಷಕೆ

ಸಂದೆ ನಾ ತಿಳಿಯದೇ ಮೋಸದಲೀ
ಕುಂದುಗಳೆಣಿಸದೆ ನೀಡಲಾ ಧರ್ಮದ
ಬಂಧುರ ಕಾರಣವೀ ಕಥೆಗೇ

ಶೋಕಸಹಿತ ನಾ ಅಶೋಕವನದಲಿ

ಕಾಕ ಗೂಬೆ ಕೂಗನು ನೆನೆಯೇ
ಯಾಕಾದರೂ ಸೃಜಿಸಿದ ದೇವರು ನನ್ನ
ಸಾಕುಮಾಡೈ ತಂದೆ ಪತಿವೃತೆಗೇ

ಬಂದು ಮಾರುತಿಯು ನೀಡಿದನುಂಗುರ

ಚಂದದಿ ಕುಣಿಯಿತು ನನ್ನಮನ
ಕಂದನ ತೆರದಲಿ ಮಿಡಿದನು ಕಣ್ಣೀರು
ಬಂಧನ ಬಿಡಿಸುವ ರಘುವೆನುತ

ಖೂಳ ರಕ್ಕಸನ ಕಾಟವ ತಾಳದೆ

ಮೂಳೆ ಮೈಮನವು ದಣಿದಿರಲೂ
ಹಾಳುಗೈದು ಲಂಕೆಗೆ ಬೆಂಕಿಯ ಹಚ್ಚಿ
ಬೀಳುತೆದ್ದು ಓಡಿದ ಹನುಮಾ

ಹರುಷವಾಯ್ತೆನಗೆ ಬಣ್ಣಿಸಲಸದಳ

ಪುರುಷ ಬರುವ ಇಂಗಿತ ಕೇಳಿ
ಪರಿಷೆಯ ರಕ್ಕಸ ಪಡೆಯ ಕಣ್ತಪ್ಪಿಸಿ
ಪರಿಶೋಭಿಪ ರಾಮನ ನೆನೆದು

ಅಯೋಧ್ಯಾರಾಮ ತಾ ದಶರಥರಾಮ

ಕೌಸಲ್ಯರಾಮ ಮುನಿಜನ ಪ್ರೇಮ
ಕಾರುಣ್ಯರಾಮ ತಾ ಕೈವಲ್ಯರಾಮ
ಸೂರ್ಯವಂಶದ ಶ್ರೀಚಂದ್ರಮನೇ

ತೊರೆದು ಜೀವಿಸಲೇ ನಿನ್ನ ಪದಾಂಬುಜ

ಪರಿತಪಿಸುತ ಕಾಡಲಿ ಭಯದೀ
ಬರಿದೇ ಬಂದೆನು ಅಯೋಧ್ಯ ನಗರಕೆ
ಹರಿಯೇ ಎನಗಿನ್ನಾರುಗತೀ ?

11 comments:

  1. ಆತ್ಮೀಯರೇ,
    ಚೆನ್ನಾಗಿದೆ. ಇಂದು ರಾಮನ ಹೆಸರಲ್ಲಿ ನಮ್ಮನ್ನಾಳುವವರ ಕಿವಿಗೆ ಮುಟ್ಟಿಸ ಬೇಕು. ಲಂಕೆಯ ಸಂಪತ್ತನ್ನು ಕಂಡ ಲಕ್ಷ್ಮಣನು ರಾಮನಿಗೆ " ಇಲ್ಲೇ ಇದ್ದು ಬಿಡೋಣ" ಎಂದಾಗ ರಾಮ ಹೇಳುತ್ತಾನಲ್ಲಾ...
    ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ.. ಈ ಘಟನೆಯ ಬಗ್ಗೆ ಮುಂದೆ ಬರೆಯಿರಿ.

    ReplyDelete
  2. ಇಂದು ಇದು ನನ್ನ ಭಾಗ್ಯ, ರಾಮ-ಲಕ್ಷ್ಮಣ-ಸೀತಾ ಈ ಪಾತ್ರಗಳಲ್ಲಿನ ಸ್ವಗತಗಳನ್ನು ಅನುಭವಿಸಿ ಬರೆದಿದ್ದೇನೆ, ಮುಂದೆ ಮತ್ತೆ ಬರೆಯುತ್ತೇನೆ, ತಾವು ಬೇಗನೆ ಅಂತರ್ಜಾಲಕ್ಕೆ ಬಂದು ಓದಿ ಆನಂದಿಸಿದ್ದಕ್ಕೆ ತಮಗೆ ಧನ್ಯವಾದಗಳು.ತಮಗೆ ಶುಭದಿನ

    ReplyDelete
  3. ಅಲಗಿನ೦ತೀವೆ ಸೀತಾಮಾತೆಯ ಪ್ರಶ್ನೇ-"ಪದನಾಲ್ಕು ಬರಲದು ಅಗಸನ ಬಾಯಿಂದ
    ಕಾಡಿತೆ ನಿಮಗದು ಬಹಳವ್ಯಥೇ ?".
    ಯಜ್ಞ ಪರೀಕ್ಷೇಗೊಳಗಾದ ಪವಿತ್ರಳನ್ನು ಪ್ರಜೆಯ ಮಾತಿಗಾಗಿ ಕಾಡಿಗಟ್ಟಿದ ರಾಮನ ರಾಜಯೋಗ್ಯ ಗುಣ. ಮನಸ್ಸು ಆರ್ದ್ರವಾಯಿತು ತಮ್ಮ ಕವನ ಓದಿ. ಅಗ್ನಿಪರೀಕ್ಷಿತಳನ್ನು ಸ೦ಶಯಿಸಿದ ಬಗ್ಗೆಯು ಸೀತೆ ಸಾಲೊ೦ದರಲ್ಲಿ ಪ್ರಶ್ನಿಸಿದ್ದರೇ ಚೆನ್ನಾಗಿರುತ್ತಿತ್ತೇನೋ ಅನಿಸಿತು.
    ಚೆ೦ದದ ಕವನ ಮತ್ತು ಪೂರಕ ಲೇಖನ.

    ReplyDelete
  4. ಚೆನ್ನಾಗಿದೆ ನಿಮ್ಮ ಕವನ ಮತ್ತು ಪೂರಕ ವಿವರಣೆ.

    ಶ್ರೀರಾಮ ಚಂದ್ರ ಸೀತೆಯನ್ನು ಕಾಡಿಗಟ್ಟಲು ಮೂಲ ಕಾರಣ ರಾಜಕಾರಣವೇ ಅಥವಾ ತನ್ನ ಮನದ ಸಂಶಯವೇ? ಒಬ್ಬ ರಾಜನಾಗಿ ಜನ ಹೇಳಿದ ಮಾತು ಕೇಳಿ ಈ ಕೆಲಸ ಮಾಡಿರಲಾರ. ತನ್ನ ಮನದ ಸಂಶಯಕ್ಕೆ ರಾಜಕಾರಣದ ಬಣ್ಣ ಹಚ್ಚಿ ಸೀತೆಯನ್ನು ಕಾಡಿಗೆ ಕಳುಹಿಸಿರಬಹುದು. ಒಂದು ವೇಳೆ ರಾಜಕಾರಣವೇ ಆಗಿದ್ದರೆ ಅದನ್ನು ಹೇಗೆ ಬಗೆಹರಿಸಬೇಕೆಂಬ ಬುದ್ಧಿವಂತಿಕೆ ರಘುವಂಶ ತಿಲಕನಿಗೆ ಇರಲಿಲ್ಲವೇ? ಪ್ರಜೆಗಳ ದೃಷ್ಟಿಯಲ್ಲಿ ತಾನು ಉತ್ತಮ ರಾಜ ಎನಿಸಿಕೊಳ್ಳಲು ಪತಿವ್ರತೆಯಾದ ಹೆಂಡತಿಯನ್ನು ಸಂಶಯಿಸಿದನೆ?
    (ಇದು ಕೇವಲ ನನ್ನ ಸಂಶಯ ಅಷ್ಟೇ!)

    ಹೀಗೆ ಯೋಚಿಸುತ್ತ ಹೋದರೆ ಹಲವಾರು ವಿಷಯಗಳು ತರ್ಕಕ್ಕೂ ಸಿಗುವುದಿಲ್ಲ
    ಒಟ್ಟಾರೆ ಸೀತೆ ಒತ್ತಮವಾಗಿ ಪ್ರಶ್ನಿಸಿದ್ದಾಳೆ.

    ReplyDelete
  5. ಕವನದ ವಿಷಯಕ್ಕೆ ಮುಂಚಿನ ವಿಚಾರವಂತೂ ಸೊಗಸಾಗಿದೆ. ಕವನಗಳಲ್ಲಿ ಇಂಥಾ ವಿಷಯಗಳನ್ನು ಹೇಳುವ ನಿಮ್ಮ ಚಾತುರ್ಯಕ್ಕೆ ನಮನಗಳು. ಹೀಗೆ ಇನ್ನಷ್ಟು ವಿಚಾರ ಮಂಥನವಾಗಬಲ್ಲ ಬರಹಗಳು ನಿಮ್ಮಿಂದ ಬರಲಿ...:) ಧನ್ಯವಾದ

    ReplyDelete
  6. ಇಲ್ಲಿ ಬಹುಮುಖ್ಯ ಏನೆಂದರೆ ರಾಜಕೀಯದಲ್ಲಿ ಇರುವವರ ಕುಟುಂಬದ ಪಾರದರ್ಶಕತೆ, ರಾಮ ತನ್ನೊಳಗೆ ಕಿಂಚಿತ್ತೂ ಸಂಶಯಿಸಲಿಲ್ಲ, ಹಾಗೊಮ್ಮೆ ನಾವು ಚಿಂತಿಸಲೂ ಸಾಧ್ಯವಿಲ್ಲ, ಹಾಗಿದ್ದರೆ ಆತ ಯಾರೋ ಚಿಕ್ಕಮ್ಮ ಹೇಳಿದ್ದಕ್ಕೆ ತಾನೇ ಸುದೀರ್ಘ ವನವಾಸ ಅನುಭವಿಸುತ್ತಿರಲಿಲ್ಲ! ಆದರೆ ಪ್ರಜೆಗಳಿಗೆ ಆಡಳಿತದಲ್ಲಿರುವವರು ಹೇಗೇ ಮಾಡಿದರೂ ನಡೆಯುತ್ತದೆ ಎಂಬ ಮಾತನ್ನು ಸುಳ್ಳಾಗಿ ತೋರಿಸಲು ತನ್ನ-ತನ್ನಕುಟುಂಬದ -ಸಹ ಕುಟುಂಬದ ನೋವಿನಲ್ಲೂ ಕೂಡ ಪ್ರಜೆಗಳ ತೀರ್ಮಾನವನ್ನು ಅಂತಿಮ ಎಂದು ಮನ್ನಿಸಿ ಅದನ್ನು ಶಿರಸಾವಹಿಸಿ ನಡೆದ ಉದಾತ್ತ ತ್ಯಾಗ ಶಿರೋಮಣಿ ! ಇವತ್ತಿನ ನಮ್ಮ ರಾಜಕೀಯದಲ್ಲಿ ರೇಣುಕಾಚಾರ್ಯನಂತ ಶೀಲ ಕಳಂಕಿತರೇ ಬಹಳ ಇದ್ದಾರೆ, ಎಲ್ಲರ ಸುದ್ದಿ ಪ್ರಕಟಗೊಳ್ಳುವುದಿಲ್ಲ, ಹಾಗೊಮ್ಮೆ ಆದರೆ ನಾವು ಇಡೀ ಆಳುವ ವರ್ಗಕ್ಕೆ ಹೊಸ ಪಾಠ ಕಳಿಸಲು ಸಾಧ್ಯವಾಗುತ್ತಿತ್ತು. ಹೀಗಾಗಿ ಬೆಂಕಿಯಲ್ಲಿ ತನನ್ನು ತೋಯಿಸಿ ಸುಡದೆ ಪರಿಶುದ್ಧ ತಾನು ಎಂಬುದನ್ನು ಸಾಕ್ಷೀಕರಿಸಿ ತೋರಿದ ಮೇಲೂ ತನಗೆ ಬಂದ ಪಾಡನ್ನು ಸೀತೆ ನೆನೆಯುತ್ತಾಳೆ, ಮರುಗುತ್ತಾಳೆ. ನಿಸ್ಪ್ರಹ ಶ್ರೀರಾಮ ತನ್ನ ಒಳ ಬೇಗುದಿಯಲ್ಲಿ ತನ್ನ ಮನವನ್ನೇ ದಹಿಸಿಕೊಂಡು ವಿಷಣ್ಣವದನನಾಗಿ ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆಯೇ ವಿನಃ ಆಕೆ ಕಾಡಿಗೆ ಹೋದ ತರುವಾಯ ತಾನು ಸುಖದಲ್ಲಿರಲಾರೆ ಎಂಬ ಬಿಟ್ಟಿರಲಾರದ ಅದಮ್ಯ ಅನಿಸಿಕೆ ಇದ್ದರೂ ತನ್ನ ವಾಂಛೆಗಳನ್ನೆಲ್ಲ ನಿಗ್ರಹಿಸಿ ತನ್ಮೂಲಕ ತನ್ನ ರಾಜ ಕುಟುಂಬವೇ ಪ್ರಜೆಗಳ ಸೇವೆಗೆ ನಿಂತಿರುವುದನ್ನು ಸಾಬೀತುಪಡಿಸಿದ ಸಂಸಾರದಲ್ಲಿದ್ದೂ ಸನ್ಯಾಸಿಯಾಗಿ ಮೆರೆದ ದಿವ್ಯಮಂಗಳಮೂರ್ತಿ ಶ್ರೀರಾಮ. ಹೀಗಾಗಿ ರಾಮ-ಸೀತಾ-ಲಕ್ಷ್ಮಣ ಈ ಯಾರಲ್ಲೂ ದೋಷವಿಲ್ಲ, ಅವರವರ ಪಾಲಿಗೆ ಬಂದದ್ದನ್ನು ಸಂತೋಷದಿಂದಲೇ ಅವರು ಶಿರಸಾವಹಿಸಿ ಜಗನ್ಮಾನ್ಯರಾಗಿದ್ದಾರೆ, ಪ್ರತಿಕ್ರಿಯಿಸಿದ ಸೀತಾರಾಮ್ , ಪ್ರವೀಣ್ ಮತ್ತು ಸುಬ್ರಹ್ಮಣ್ಯ ಭಟ್ ಇವರೆಲ್ಲರಿಗೂ ಧನ್ಯವಾದಗಳು, ಮುಂದೆ ಓಡಲಿರುವ ಎಲ್ಲರಿಗೂ ಕೂಡ ಧನ್ಯವಾದಗಳು.

    ReplyDelete
  7. ಸಹೃದಯರೇ, ಮೊನ್ನೆ ಜಗದಮಿತ್ರ ತನ್ನ ಭಾರವಾದ-ಖಾರವಾದ ಮನಸ್ಸಿನಿಂದ ' ಕಾವಿಯ ಕಳ್ಳ ಬೆಕ್ಕು ' ಎಂಬ ಕವನ ಬರೆದಿದ್ದನಷ್ಟೇ, ಗೂಗಲ್ ಬಜ್ ನಲ್ಲಿ ನಮ್ಮ ಓದುಗ ಮಿತ್ರರಾದ ಶ್ರೀಕಾಂತ್ ಹೆಗಡೆಯವರು ಈ ಬಗ್ಗೆ ತಮ್ಮ ಅತೀವ ವಿರೋಧವನ್ನು ವ್ಯಕ್ತಪಡಿಸಿದ್ದರು, ಇವತ್ತು ಕಳ್ಳ ಬೆಕ್ಕೇ ಸ್ವತಹ ತಾನೇ ಹಾಳು ಕುಡಿದಿದ್ದು ಅಂತ ಒಪ್ಪಿಕೊಂಡಿದೆ ಮಾಧ್ಯಮಗಳಲ್ಲಿ ಅರ್ಥಾತ್ ಈ ತರ್ಕದಲಿ ಕುತರ್ಕ ಮಾಡಹೊರಟ ನಮ್ಮ ಮಿತ್ರರಿಗೆ ಹೇಳುತ್ತಿದ್ದೇನೆ- ಜಗದಮಿತ್ರ ಬರೆಯುವಾಗ ದೇಹದ
    ' ಒಳಗಿನ ಬಲ' [ಆತ್ಮ ಬಲ] ಇದ್ದರೆ ಮಾತ್ರ ಜಗದಮಿತ್ರನಿಗೆ ಆ ಕಾವ್ಯ ಬರೆಯಲು ಸಾಧ್ಯ, ಇಲ್ಲದಿದ್ದರೆ ಸಾಧ್ಯವೇ ಇಲ್ಲ, ನಿಜವಾಗಿಯೂ ಹೇಳುತ್ತಿದ್ದೇನೆ ಅಂದು ಮನಸ್ಸು ತುಂಬಾ 'ನಾರಸಿಂಹಾವತಾರ'ವಿತ್ತು . ಅದು ಇದ್ದಾಗಲೇ ಬರೆದಿದ್ದು ಬಿಟ್ಟರೆ ನಂತರ ಅದು ಸಾಧ್ಯವಿರಲಿಲ್ಲ. ಕವಿಮನಕ್ಕೆ ಸಾತ್ವಿಕತೆಗೆ ಒಂದು ಅದ್ಬುತ ಶಕ್ತಿಯಿರುತ್ತದೆ, ಅದರ ಅನುಭವ ಪಡೆದು ನಾನು ನಾನಲ್ಲದಾಗ ಬರೆಯುವುದೇ 'ಜಗದಮಿತ್ರನ ಕಗ್ಗ'. ತರ್ಕದಲ್ಲಿ ಯಾರು ಗೆದ್ದರು ಅನ್ನುವುದಕ್ಕಿಂತ ಇದು ಧರ್ಮಕ್ಕೆ ಸಂದ ಜಯ, ಅಂತೂ ನಾರಸಿಂಹ ಬಂದು ಹೇಳಿದ್ದು ನಿಜವೇ ಆಯಿತು, ತಮಗೆಲ್ಲ ಧನ್ಯವಾದಗಳು.

    ReplyDelete
  8. ನಾನು ಅವತ್ತು ಅಂದು ಕೊಂಡೆ-ಜಗದ ಮಿತ್ರನಿಗೆ ಕೋಪ ಬಂದಿದೆ ಎಂದು! ಸಾತ್ವಿಕ ಕೋಪ ಇರಬೇಕು.ಎಷ್ಟೂ ಅಂತಾ ತಡೆದುಕೊಳ್ಳುವುದಕ್ಕೆ ಆಗುತ್ತೆ ಅಲ್ವಾ?

    ReplyDelete
  9. ಒಮ್ಮೊಮ್ಮೆ ಹೀಗೇ, ತಮ್ಮಲ್ಲಿ ಒಂದು ಮಾತು, ಕವಿ ತಾಯಿಯ ಸ್ವಭಾವದವನು, ಆತ ಸಹಜವಾಗಿ ತಪ್ಪು ಮಾಡದವನು, ಅವನ ಅಸಹನೆಗೆ, ಕೋಪಕ್ಕೆ ಸರಿಯಾದ ಮತ್ತು ಪ್ರಬಲ ಕಾರಣವಿದ್ದರೆ ಮಾತ್ರ ಹಾಗೆ ಕೋಪಗೊಳ್ಳುವವನು, ಇಲ್ಲಿ ನಡೆದ ವಂಚನೆ ಇದೊಂದು ಇತ್ತೀಚಿನ ದೊಡ್ಡ ಪಿಡುಗು, ಸಮಾಜದಲ್ಲಿ ಅನೇಕ ನಿತ್ಯಾನಂದರಿದ್ದಾರೆ-ಅಂತವರನ್ನು ಬೆಂಬಲಿಸುವವರೂ ತುಂಬಾ ಮಂದಿ ಇದ್ದಾರೆ, ಅದಕ್ಕೇ ಕೋಪ ಬಂತು, ಧನ್ಯವಾದಗಳು

    ReplyDelete