ಶನಿಗೂ ಬಂತು ಗ್ರಹಚಾರ !!
ಶನಿಮಹಾತ್ಮನ ಬಗ್ಗೆ ಅನೇಕ ಕಥೆಗಳಿವೆ. ಹುಟ್ಟಿನಿಂದ ಶನಿ ತಂದೆ ಸೂರ್ಯನನ್ನೇ ಬಿಡಲಿಲ್ಲ -ಕಾಡಿದ ಎಂಬುದಾಗಿ. ಶನಿ ಎಂದರೆ ನಮ್ಮ ರಾಜ್ಯಸರಕಾರದಲ್ಲಿ ಲೋಕಾಯುಕ್ತರಿರ್ವ ಹಾಗೇ, ಅಂಥದ್ದೇ ಪೋಸ್ಟು. ಇಲ್ಲಿ ಶನಿ ಪರ್ಮಮನೆಂಟ್ ಜಾಬ್ ಹೋಲ್ಡರ್, ಇದೇ ಒಂದು ಸ್ವಲ್ಪ ಬದಲು. ಬ್ರಹ್ಮಾಂಡದ ನಿರ್ವಹಣೆಗೆ ಪರಬ್ರಹ್ಮ ಶಕ್ತಿ ತನ್ನನ್ನೇ ತಾನು ಬೇರೆ ಬೇರೆ ಅಂಶಾಂಶ ರೂಪದಲ್ಲಿ ಸೃಜಿಸಿಕೊಂಡು ಕಾರ್ಯ ನಿರ್ವಹಿಸುತ್ತದೆ ಎಂಬುದು ಜಿಜ್ಞಾಸುಗಳ ಪ್ರತಿಪಾದನೆ. ಇದ್ದರೂ ಇರಬಹುದು ಎಂದಿಟ್ಟುಕೊಳ್ಳೋಣ.
ಅತಲ, ವಿತಲ, ಸುತಲ, ತಲಾತಲ, ರಸಾತಲ, ಪಾತಾಳ, ಭೂಲೋಕ, ಭುವರ್ಲೋಕ, ಸುವರ್ಲೋಕ, ಮಹರ್ಲೋಕ, ಜನರ್ಲೋಕ,ತಪೋಲೋಕ, ಸತ್ಯಲೋಕ...ಎಂಬಿತ್ಯಾದಿ ಹದಿನಾಲ್ಕು ಲೋಕಗಳಲ್ಲಿ ಯಾರು ಸರಿಯಾದ ಧರ್ಮ-ಕರ್ಮ ನಿರತರಲ್ಲವೋ ಅಂಥವರನ್ನು ಹುಡುಕಿ, ಕೇಸು ಜಡಿದು, ಕಾಲಾಕಾಲದಲ್ಲಿ ಅವರನ್ನು ಶಿಕ್ಷಿಸುವುದು,ದಂಡಿಸುವುದು, ಮತ್ತು ಅವರು ತಪ್ಪು ತಿದ್ದಿ ಕೊಳ್ಳುವವರೆಗೆ, ತನಗಿಂತ ಹೆಚ್ಚಿನದಾದ ಶಕ್ತಿಯೊಂದಿದೆ ಎಂಬ ಅರಿವು ಅವರಿಗೆ ಮೂಡುವವರೆಗೆ ಅವರನ್ನು ಬಿಡದೇ ಕಾಡುವುದು ಲೋಕಾಯುಕ್ತ ಶನಿಮಹಾತ್ಮರ ಕರ್ತವ್ಯ. ಕೊನೆಗೊಮ್ಮೆ ಸೋತು ಸುಣ್ಣವಾದ ಜನರಿಗೆ ತನ್ನ ಪೀಡನೆಯಿಂದ ಬಿಡುಗಡೆಮಾಡಿ ಅವರು ಕಳೆದುಕೊಂಡಿದ್ದನ್ನೆಲ್ಲ ಮರಳಿಸುವುದು ಶ್ರೀಮಾನ್ ಲೋಕಾಯುಕ್ತ ಶನಿಮಹಾತ್ಮರ ಕಾರ್ಯವೈಖರಿ. ಇಂತಿಪ್ಪ ಶನಿ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ-- ದಿನಂಪ್ರತಿ ನಮಗೆ ಹಾಜರಿತೋರಿಸುವ, ತನ್ನ ಪ್ರಸ್ತುತಿಯಿಂದ ಜಗದ ಜೀವರಾಶಿಗೆ ಚೈತನ್ಯ ತುಂಬುವ ಸೂರ್ಯದೇವ ನಮ್ಮ ಶನಿಮಹಾತ್ಮರ ತಂದೆ. ಸೂರ್ಯದೇವನ ಹೆಂಡತಿ ಛಾಯಾ[ಬಾಯಿ]ದೇವಿ ಶನೈಶ್ಚರನ ತಾಯಿ. ಮಗ ಹುಟ್ಟಿದ ಅಂತ ಪ್ರೀತಿಯಿಂದ ಮಗನನ್ನು ನೋಡಲಿಕ್ಕೆ ತನ್ನ ಕೆಲಸವನ್ನು ಸ್ವಲ್ಪ ನಿಲ್ಲಿಸಿ ಬಂದ ಅಂತ ತಂದೆಯನ್ನೇ ದುರುಗುಟ್ಟಿ [ಗುರಾಯಿಸಿ]ನೋಡಿದರಂತೆ ನಮ್ಮ ಶನಿಮಹಾತ್ಮ! ಇದರಿಂದ ಕೆಲವು ಕಾಲ ಸೂರ್ಯದೇವರಿಗೆ ಕಣ್ಣೇ ಕಾಣಿಸಲಿಲ್ಲವಂತೆ,ಕುಷ್ಟರೋಗ ಬಂತಂತೆ. ಯಾರನ್ನೂ ಬಿಡದೇ, ಲಂಚ ತೆಗೆದುಕೊಳ್ಳದೇ ಕೆಲಸಮಾಡುವ ಒಂದೇ ಪೋಸ್ಟು ನಮ್ಮ ಶನಿಮಹಾರಾಜರದ್ದು! [ಇಲ್ಲಾಂದರೆ ನಮ್ಮ ಜನ ಬಿಡುತ್ತಿದ್ದರೇ?] ಅವರು ಕಾಡಿದ ಕೆಲವೊಂದು ವಿಶೇಷ ವ್ಯಕ್ತಿಗಳನ್ನು ಕಾಲಕ್ರಮದಲ್ಲಿ ನೋಡೋಣ.
ಹೀಗೇ ಇಷ್ಟೆಲ್ಲ ಪರಾಕ್ರಮಿಯಾದ ನಮ್ಮ ಶನಿಮಹಾರಾಜರೂ ಕೂಡ ಪೇಚಿಗೆ ಸಿಲುಕಿದ ಅಪರೂಪದ ಪ್ರಸಂಗಗಳೆರಡು ನಮಗೆ ಪುರಾಣದಲ್ಲಿ ಕಾಣಸಿಗುತ್ತವೆ. ಶನಿಮಹಾರಾಜರನ್ನು ಪೇಚಿಗೆ ಸಿಲುಕಿಸಿದವರಲ್ಲಿ ಒಬ್ಬ ನಮ್ಮ ನಿಮ್ಮೆಲ್ಲರ ಪ್ರೀತಿಯ ಬೊಬ್ಬೆ ಗಣಪ ಅಲಿಯಾಸ್ ಮಹಾಗಣಪತಿ [ದೇವರನ್ನು ಗೇಲಿಮಾಡುವುದು ಕೂಡ ಒಂದು ಸೇವೆಯಂತೆ ನೆನಪಿರಲಿ, ಕೊನೆಪಕ್ಷ ಯಾರಿಗೆ ದೇವರ ಸ್ಮರಣೆ ಇಷ್ಟವಿಲ್ಲವೋ ಅಂಥವರು ದೇವರನ್ನು ಗೇಲಿಯಾಡಿಕೊಳ್ಳಿ-ಅದರಿಂದಲಾದರೂ ಒಳಿತಾದೀತು!],ಇನ್ನೊಬ್ಬ ನಮ್ಮ ಹನ್ಮಣ್ಣ ಅಲಿಯಾಸ್ ಆಂಜನೇಯ. ಇದನ್ನು ಒಂದೊಂದಾಗಿ ಹೇಳುತ್ತೇನೆ ಕೇಳಿ.
ಪ್ರಸಂಗ-೧ [ಶನಿಮಹಾರಾಜ V/s ಮಹಾಗಣಪತಿ]
ಹೀಗೆ ತಿರುಗುತ್ತ ನಮ್ಮ ಶನಿಮಹಾರಾಜರು ಒಂದುದಿನ ಗಣಪತಿಯ ಮನೆಗೆ ಏಕಾಏಕಿ ರೈಡ್ ಮಾಡಿದ್ರು. ದೇವತೆಗಳಲ್ಲೇ ಬಲು ಕುಶಾಗ್ರಮತಿ ಎಂಬ ಹೆಗ್ಗಳಿಕೆ ಪಡೆದುಕೊಂಡ ನಮ್ಮ ಶ್ರೀಮನ್ ಮಹಾಗಣಪತಿಯವರು ಸ್ವಲ್ಪ ಹೊತ್ತು ಯೋಚಿಸಿ ತನಗೆ ಕಾರ್ಯಬಾಹುಳ್ಯದ ನಿಮಿತ್ತ ಇವತ್ತು ನಿನ್ನೊಂದಿಗೆ ಕಾಲಕಳೆಯಲು ಸಾಧ್ಯವಿಲ್ಲವೆಂದೂ, ಶನಿಮಹಾರಾಜರು ಈ ದಿನವನ್ನು ಬಿಟ್ಟು ನಾಳೆಯ ಮೇಲೆ ಯಾವಾಗಲಾದರೂ ಬರಬಹುದು ಎಂದು ಅಪಾಯಿಂಟ್ ಮೆಂಟ್ ಕೊಟ್ಟೂ ’ಇಂದಲ್ಲ ನಾಳೆ ಬಾ’ ಎಂಬ ಬೋರ್ಡನ್ನು ತನ್ನ ಮನೆ ಮುಂದೆ ತಗುಲಿಹಾಕಿಸಿದರು. ಅದಾದ ಪಶ್ಚಾತ್, ದಿನವೂ ಬಿಡದೇ ನಮ್ಮ ಶನಿಮಹಾರಾಜರು ಮಹಾಗಣಪತಿಯವರ ಮನೆಗೆ ಬರಹತ್ತಿದರು. ಯಾವಾಗ ಬಂದರೂ ನಮ್ಮ ಗಣಪಣ್ಣ ಹೇಳಿದ್ದು ಒಂದೇ ’ಇಂದಲ್ಲ ನಾಳೆ ಬಾ’ - ಈ ಬೋರ್ಡು ಶಾಶ್ವತವಾಗಿ ಬಿಟ್ಟಿತು! [ಅದಕ್ಕೇ ಇಂದಿಗೂ ನಮ್ಮ ಸರಕಾರೀ ನೌಕರರಲ್ಲಿ ಅನೇಕರು ಅದೇ ಬೋರ್ಡನ್ನು ಕಾಯಮ್ಮಾಗಿ ಗೌಪ್ಯವಾಗಿ ಇಟ್ಟುಕೊಂಡುಬಿಟ್ಟಿದ್ದಾರೆ.] ಹೀಗೇ ತಿರುಗೀ ತಿರುಗೀ ತಿರುಗೀ ಬೇಸತ್ತು ಹೋದ ನಮ್ಮ ಶನಿಮಹಾರಾಜರಿಗೆ ಅದ್ಯಾವುದೋಘಳಿಗೆಯಲ್ಲಿ ಒಳ್ಳೆಯ ಮೂಡ್ ಬಂತು. ಬಲಾಬಲದಲ್ಲಿ ವಿಚಾರಿಸಿದರೆ ಈ ಗಣಪತಿ ತಂಟೆಗೆ ಹೋದರೆ ತನ್ನ ಪೋಸ್ಟ್ ಕಳೆದುಕೊಳ್ಳುವ ಹೆದರಿಕೆ ಶುರುವಾಯ್ತು. ಆ ಮೂಡ್ ನಲ್ಲಿ ಅವರು ಮಹಾಗಣಪತಿಯವರಿಗೆ ’ಬುದ್ಧಿವಂತ’ ಎಂಬ ಪದಾಭಿದಾನವನ್ನಿತ್ತರು ! [ಕಾಣುವ 'ಕೈ'ಯವರು ತಮ್ಮ 'ಕೈ'ವಾಡ ವಿಲ್ಲ ಎಂದಮೇಲೆ ಮೊನ್ನೆ ಮೊನ್ನೆ ನಮ್ಮ ಯಡ್ಡ್ಯೂರಪ್ಪಾಜಿಯವರು ಕಾಣದ ಕೈಗೆ [ಗಣಿಧಣಿಗಳಿಗೆ! ] ಸಲಾಮುಹಾಕಲಿಲ್ವೇ ಹಾಗೆ] ಮತ್ತು ಅವರಲ್ಲಿಗೆ ಎಡತಾಕುವುದನ್ನೂ ನಿಲ್ಲಿಸಿಬಿಟ್ಟರು.
ಪ್ರಸಂಗ-೨ [ಶನಿಮಹಾರಾಜರು V/s ಆಂಜನೇಯ]
ರಾಮಾಯಣದಲ್ಲಿ ನಮಗೆ ಅತ್ಯಂತ ನಿಷ್ಠೆಯ ಪಾತ್ರವೊಂದು ಕಾಣಸಿಗುತ್ತದೆ. ಅದುವೇ ಶ್ರೀ ಆಂಜನೇಯ. ರುದ್ರಾಂಶ ಸಂಭೂತನಾಗಿ, ವಾಯು ಮತ್ತು ಅಂಜನಾದೇವಿಯರ ಪುತ್ರನಾಗಿ ಜನಿಸಿ, ಶ್ರೀರಾಮನ ಸೇವೆಗೆ ತನ್ನನ್ನೇ ಅರ್ಪಿಸಿಕೊಂಡಂತ ಪಾತ್ರ ಇನ್ನೆಲ್ಲೂ ಇಂತಹ ಪಾತ್ರ ನೋಡಸಿಗುವುದಿಲ್ಲ. ತನ್ನ ನಿರಂತರ ಸೇವಾ ಕೈಂಕರ್ಯದಿಂದ ಚಿರಂಜೀವಿಯಾಗಿರುವಂತೆಯೂ ಕಲ್ಪಾಂತರದಲ್ಲಿ ಬ್ರಹ್ಮಪದವಿಯನ್ನು ಪಡೆಯೆಂದೂ ವರವನ್ನು ಪಡೆದ ಅತಿ ವಿಶಿಷ್ಟ ಜೀವ ಇದು-ಸಂಜೀವ. ಸಂಜೀವಿನಿಯನ್ನು ತಂದಿದ್ದರಿಂದ ಸಂಜೀವರಾಯನೆಂದೂ, ಸೀತಾಮಾತೆಯಿಂದ ನದಿಯಲ್ಲಿ ಕಳೆಯಲ್ಪಟ್ಟ ಮುತ್ತನ್ನು ಹುಡುಕಿ ತಂದು ಕೊಟ್ಟಿದ್ದರಿಂದ ಮುತ್ತೆತ್ತಿರಾಯ-ಅಥವಾ ಮುತ್ತೂರಾಯ ಎಂಬೆಲ್ಲ ಬಿರುದು-ಬಾವಲಿ ಗಳನ್ನು ಪಡೆದು ತನ್ನ ನಿರಂತರ ಜಪ-ಧ್ಯಾನವನ್ನು ನಡೆಸುತ್ತಿರುವವರು ಶ್ರೀ ಹನುಮಣ್ಣನವರು.
ತಿರುಗುತ್ತ ತಿರುಗುತ್ತ ನಮ್ಮ ಲೋಕಾಯುಕ್ತ ಶನಿಮಹಾರಾಜರ ಸವಾರಿ ಬಂತು -ಆನ್ಜನೆಯನ ಸನ್ನಿಧಿಗೆ.[ದೇವಸ್ಥಾನವಲ್ಲ!]ಬಂದಾಗ ನಮ್ಮ ಆಂಜನೇಯನವರು ಧ್ಯಾನನಿರತರಾಗಿದ್ದರು. ’ಉದ್ಯೊಗವಿಲ್ಲದ ಆಚಾರಿ[ಬಡಗಿ]ಮಗುವಿನ ಕುಂಡೆಯನ್ನು [ಪೃಷ್ಟವನ್ನು]ಕೆತ್ತಿದ್ದನಂತೆ’-ಎಂಬ ಗಾದೆ ಇದೆ. ಅದೇ ರೀತಿ ಕೆಲವೊಮ್ಮೆ ನಮ್ಮ ಶನಿಮಹಾರಾಜರು ಫ್ರೀ ಇರುತ್ತಾರೆ ಅನಿಸುತ್ತದೆ, ಹೀಗಾಗಿ ಕಣ್ಣಿಗೆ ಬಿದ್ದರೆ ವಕ್ಕರಿಸಿಬಿಡುತ್ತಾರೆ, ಅದಕ್ಕೇ ಕೆಲವರು ’ಶನಿ’ ಎಂಬ ಶಬ್ಧಪ್ರಯೋಗವನ್ನೂ ಮಾಡಲೂ ಹೆದರುತ್ತಾರೆ! ನಮ್ಮ ಶನಿಮಹಾರಾಜರು ಸುಮ್ಮನಿರಬೇಕೋ ಬೇಡವೋ ? ಹೀಗೇ ಇಲ್ಲದ ಬಾಲವನ್ನು ಅಲ್ಲಾಡಿಸಿಕೊಂಡು ಬಂದ ನಮ್ಮ ಶನಿಮಹಾರಾಜರು ಬಾಲ ಇರುವ ಕಪಿಯನ್ನು ಕೆಣಕಿಬಿಟ್ಟರು!
" ಮಾತಾ ರಾಮೋ ಮತ್ ಪಿತಾ ರಾಮಚಂದ್ರಃ
ಸ್ವಾಮೀ ರಾಮೋ ಮತ್ ಸಖಾ ರಾಮಚಂದ್ರಃ |
ಸರ್ವಸ್ವಮ್ ಮೇ ರಾಮಚಂದ್ರೋ ದಯಾಲುಃ
ನಾನ್ಯಮ್ ಜಾನೇ ನೈವ ಜಾನೇ ನ ಜಾನೇ || "
ಧ್ಯಾನದಿಂದ ಎಚ್ಚೆತ್ತ ಹನುಮನಿಗೆ ಕಂಡಿದ್ದು ಕಪ್ಪನೆಯ ವಿಕೃಷ್ಟ ಆಕೃತಿ. ಛೆ ! ಭುವಿಯೆಂಬ ಭುವಿಯಲ್ಲಿ ಎಲ್ಲೆಲ್ಲೂ ನೋಡಿರದ, ಕೇಳರಿಯದ ಎಂತಹ ಕಲಾಕೃತಿ ! ತೊಳೆದಿಟ್ಟ ಕೆಂಡದ ಬಣ್ಣ, ಕೆನ್ನಾಲಿಗೆ , ಹೆಗಲಮೇಲೊಂದು ಚಂದಗಾವಿಯ ಶಾಲು, ಕೊರಳಲ್ಲಿ ಚಂದ್ರಹಾರ, ಪಕ್ಕದಲ್ಲಿ ಕಾಗೆ ! [ವಾಹನ] ಅರೆಕ್ಷಣ ಹನುಮ ವಿಚಾರಿಸಿದ.
"ತ್ರಿಕರಣ ಪೂರ್ವಕವಾಗಿ [ಅಂದರೆ ಕಾಯಾ ವಾಚಾ ಮನಸಾ-ದೇಹದಿಂದಲೂ, ವಚನದಿಂದಲೂ, ಮನಸ್ಸಿನಿಂದಲೂ] ಅನನ್ಯ ಶರಣನಾಗಿ ಸ್ವಾಮಿ ಶ್ರೀರಾಮಚಂದ್ರನನ್ನೇ ಸರ್ವಸ್ವ ಎಂದು ತಿಳಿದು ಕರ್ತವ್ಯನಿರತನಾಗಿ-ಧ್ಯಾನಾಸಕ್ತನಾಗಿದ್ದ ನನ್ನನ್ನು ಯಾರಾತ ಎಬ್ಬಿಸಿದ್ದು ?" [ನಿಮ್ಮಲ್ಲೇ ಇರಲಿ --ನಿಜವಾಗಿ ಬೊಬ್ಬೆಹೊಡೆದಿದ್ದು ಹನುಮ, ಗಣಪನಲ್ಲ, ಫಲಾನುಭವಿಯಷ್ಟೇ ಗಣಪ, ನಮ್ಮ ಸರಕಾರೀ ಕೆಲಸದಲ್ಲಿ ಪುಸ್ತಕದಲ್ಲಿ ಫಲಾನುಭವಿ ಹೆಸರು ರೈತರದ್ದು ಫಲಾನುಭವಿ ಮಧ್ಯೆಕುಳಿತ ಕುತ್ಸಿತ ವ್ಯಕ್ತಿ [ಆದರೆ ಇದು ಹಣದ ಫಲಾನುಭವಿಯ ಕೇಸಲ್ಲವಾದ್ದರಿಂದ ಹನುಮ ಕುತ್ಸಿತ ವ್ಯಕ್ತಿಯೆಂದು ತಿಳಿಯಬೇಡಿ .] ಆಗಿರುವುದಿಲ್ಲವೋ ಹಾಗೇ!
ಹನುಮ ಬೊಬ್ಬಿರಿದ, ಕೂಗು ಹಾಕಿದ. ಕೋಪಗೊಂಡ. ಎದುರಿಗೆ ಶ್ರೀಮಾನ್ ಶನಿಮಹಾರಾಜರು ನಿಂತಿದ್ದಾರೆ. ಅವರನ್ನು ನಖ-ಶಿಖಾಂತ ಕೆಂಗಣ್ಣಿನಿಂದ ನುಂಗುವಂತೆ ನೋಡುತ್ತಿದ್ದಾನೆ ಹನುಮ. ಶನಿಮಹಾರಾಜರಿಗೆ ನಡುಕ ! ಹನುಮ ರುದ್ರಾಂಶ ಸಂಭೂತ ಅಂತ ಮೊದಲೇ ಹೇಳಿದ್ದೇನೆ, ಯಾರಿಗೂ ಹೆದರುವ ಗಿರಾಕಿ ಅಲ್ಲ ! ಕೇಳಿಯೇ ಬಿಟ್ಟ ಹನುಮ--
" ಎನಯ್ಯಾ, ನನ್ನ ತಪವನ್ನು ಕೆಡಿಸಿ ಹೀಗೆ ನಿಂತಿರುವೆಯಲ್ಲ, ನಿನ್ನನ್ನು ಅರೆಕ್ಷಣವೂ ಬಿಡದೇ ನಜ್ಜುಗುಜ್ಜಾಗಿಸುತ್ತೇನೆ" ಎಂದು ತಿರುಗಿ ಉತ್ತರಕ್ಕೂ ಕಾಯದೆ ಶನಿಮಹಾರಾಜರನ್ನು ತನ್ನ ಬಾಲದಿಂದ ಅನೇಕಸುತ್ತು ಸುತ್ತಿಕಟ್ಟಿಕೊಂಡು ನದಿಗೆ ಧುಮುಕಿ ಬಿಟ್ಟ!
" ರಾಮ್ ರಾಮ್ ರಾಮ್, ಜಯ ರಾಮ್ ರಾಮ್ ರಾಮ್" ಎಂದಷ್ಟೇ ಕೂಗುತ್ತ ನಾಲ್ಕಾರಾವರ್ತಿ ಮುಳುಗಿಸಿ ತೆಗೆದು ಇನ್ನೇನು ಬಂಡೆಗೆ ಅಪ್ಪಳಿಸಬೇಕು ಅಷ್ಟರಲ್ಲಿ ನಮ್ಮ ಶನಿಮಹಾರಾಜರು ಆರ್ತಸ್ವರದಿಂದ ಪ್ರಾರ್ಥಿಸಿದರು
ಯತ್ರ ಯತ್ರ ರಘುನಾಥ ಕೀರ್ತನಮ್
ತತ್ರ ತತ್ರ ಕೃತ ಮಸ್ತಕಾಂಜಲಿಮ್|
ಭಾಷ್ಪವಾರಿ ಪರಿಪೂರ್ಣಲೋಚನಂ
ಮಾರುತಿಂ ನಮತ ರಾಕ್ಷಸಾಂತಕಮ್||
ಪರಿ ಪರಿಯಾಗಿ ಪ್ರಾರ್ಥಿಸಿದ ಮೇರೆಗೆ ಶನಿಮಹಾರಾಜರ ದಯನೀಯ ಸ್ಥಿತಿಯನ್ನು ಕಂಡು ಮಾರುತಿ ಮರುಗಿದ,ಕರಗಿದ,ಆವೇಶ ಇಳಿಯಿತು. ತನ್ನನ್ನು ಮರಳಿ ತಾನು ನಿಂತಿರುವಲ್ಲಿಗೆ ಬಿಟ್ಟ ಹನುಮನನ್ನು ನೋಡುತ್ತ ಶನಿಮಹಾರಾಜರು ಹೇಳಿದರು
" ತಪ್ಪಾಯ್ತು ಹನುಮಾ, ನಿನ್ನನ್ನು ತಪ್ಪಾಗಿ ಭಾವಿಸಿಬಿಟ್ಟಿದ್ದೆ [ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು!], ನಿನ್ನ ಸ್ವಾಮಿನಿಷ್ಠೆಗೆ, ನಿನ್ನ ಕರ್ತವ್ಯಪರತೆಗೆ ಮನಸೋತಿದ್ದೇನಪ್ಪಾ, ಇನ್ನು ಮುಂದೆ ಯಾರು ನನ್ನಿಂದ ಪೀಡನೆಗೆ ಒಳಗಾಗುತ್ತಾರೋ ಅಂಥವರು ನಿನ್ನನ್ನು ಪೂಜಿಸಿದರೆ, ನಿನಗೆ ಎಳ್ಳೆಣ್ಣೆಯಿಂದ [ತಿಲತೈಲ]ಅಭಿಷೇಕಮಾಡಿಸಿದರೆ/ಮಾಡಿದರೆ, ನಿನಗೆ ಸಲ್ಲುವ ಪೂಜೆಯಿಂದ ನಾನು ಸಂತುಷ್ಟಿಗೊಳ್ಳುತ್ತೇನೆ" ಎಂದು ವಚನ ಕೊಟ್ಟರು.
[ಏನುವಚನವೋ ಏನೋ, ಹೀಗೆ ಅನವಶ್ಯಕವಾಗಿ ಇನ್ನೊಬ್ಬರಿಗೆ ತೊಂದರೆ ಕೊಡುವವರು ಜೀವನದಲ್ಲಿ ಹಲವರಿರುತ್ತಾರೆ. ಅಂಥವರು ಹಿಂದೆಬಿದ್ದಾಗ ಜನ ಇಂದಿಗೂ ಶನಿಯ ಹಾಗೆ ಕಾಡುತ್ತಿದ್ದಾನಪ್ಪ ಅಂತಾರೆ!]
ಹನುಮ ಸಂತಸಗೊಂಡ, ಶನಿಮಹಾರಾಜರನ್ನು ಅಂತೂ ಹೋಗಗೊಟ್ಟ!!
ಏನಿದ್ದರೂ ನಮ್ಮ-ನಿಮ್ಮಂತವರಿಗೆ ಹೇಳಿಸಿದ್ದಲ್ಲ ಬಿಡಿ, ತೀರ ದೊಡ್ಡವರ ವಿಚಾರ-ದೇವರುಗಳ ವಿಚಾರ, ಜನಸಾಮಾನ್ಯವಿಧಾನಸೌಧಕ್ಕೆ ನಡೆದು ಸುಧಾರಿಸಲು ಸಾಧ್ಯವೇ ? ಹಾಗಾಗಿ ಮರೆತು ಬಿಡೋಣ! ನಮ್ಮನ್ನು ಶನಿಮಹರಾಜರು ಪೀಡಿಸಿದರೆ ತಪ್ಪಿಸಿಕೊಳ್ಳಲು ಬೇರೇ ದಾರಿ ಇಲ್ಲ, ಬರೇ ಪ್ರಾರ್ಥನೆ ಅಷ್ಟೇ . ಪ್ರಾರ್ಥನೆಯಿಂದ ಪರಿವರ್ತನೆ ಸಾಧ್ಯ ಎಂಬುದು ಅನುಭವಿಸಿನೋಡಿದ ಮಹಾತ್ಮರು ಹೇಳಿದ್ದಾರೆ , ಇದಕ್ಕೆ ವಿವರಣೆ ಬೇಕಿದ್ದರೆ ಅನುಭವದ ಅನುಭಾವ ಆಗಿಬೇಕಿದ್ದರೆ ಸ್ವಾಮೀ ವಿವೇಕಾನಂದರು-ಸಿಸ್ಟರ್ ನಿವೇದಿತಾ ಇವರ ಸಂವಾದವನ್ನು ನೋಡಿದರೆ ಸಿಗುತ್ತದೆ! ಹಾಗಾದ್ರೆ ಮುಚ್ಚುಮರೆಯಿಲ್ಲದೆ ಶನಿಮಹಾರಾಜರನ್ನು ಒಮ್ಮೆಪ್ರಾರ್ಥಿಸೋಣ ಬನ್ನಿ --
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ |
ಛಾಯಾ ಮಾರ್ತಾಂಡ ಸಂಭೂತಂ ತಮ್ ನಮಾಮಿ ಶನೈಶ್ಚರಂ ||
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ |
ಛಾಯಾ ಮಾರ್ತಾಂಡ ಸಂಭೂತಂ ತಮ್ ನಮಾಮಿ ಶನೈಶ್ಚರಂ ||