ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, January 26, 2010

ಎನಿತು ಧನ್ಯ ಅಮ್ಮಾ...


ಎನಿತು ಧನ್ಯ ಅಮ್ಮಾ...

ಭುವಿಯಲ್ಲಿ ಅತೀ ಮೌಲ್ಯವುಳ್ಳದ್ದೆಂದರೆ ಅದು ‘ಅಮ್ಮ’. ಈ ‘ಅಮ್ಮ’ ಎಂಬ ಶಬ್ಧವೇ ಕರ್ಣಾನಂದಕರ. ಋಣತೀರಿಸಲಾಗದ ಒಂದೇ ಸ್ಥಾನ ಅಮ್ಮ. ತನ್ನ ಕಷ್ಟಗಳೆಲ್ಲವನ್ನೂ ಕಂದನ ಮುಖಾರವಿಂದದಲ್ಲಿ ಅರಳುವ ನಗೆಯಲ್ಲಿ ಕಳೆದು ಬಿಸುಟುವ ಅಮ್ಮ ನಮಗಾಗಿ ಪಟ್ಟ ಪಾದು ಸಣ್ಣದೇನಲ್ಲ.
||ಸರ್ವವಂದ್ಯೇಣ ಯತಿನಾ ಪ್ರಸೂರ್ಮಾತಾ ಹಿ ವಂದ್ಯತೆ||
- ಸರ್ವರಿಂದಲೂ ವಂದಿಸಲ್ಪಡುವ ಯತಿ[ಸನ್ಯಾಸಿ]ಯೂ
ಕೂಡ ತನ್ನ ತಾಯಿಗೆ ಮಾತ್ರ ನಮಸ್ಕರಿಸುತ್ತಾನೆ ಇದು ಸಂಸ್ಕೃತದ ಉಲ್ಲೆಖ. ಇದಕ್ಕೆಂತಲೇ ನಮ್ಮ ಆದಿಶಂಕರರು ಹೇಳಿದರು-

“ಕುಪುತ್ರೋ ಜಾಯೇತ ಕ್ವಚಿತಪಿ ಕುಮಾತಾ ನ ಭವತಿ”

--ಲೋಕದಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಕೆಟ್ಟ ತಾಯಿ ಇರುವುದಿಲ್ಲ. ಪಶು-ಪಕ್ಷಿಗಳಲ್ಲಿ ಕೂಡ ಈ ಮಾತೃತ್ವವನ್ನು ನಾವು ಕಾಣಬಹುದು. ತಾನು ಉಪವಾಸ ಇದ್ದರೂ ತನ್ನ ಕಂದಮ್ಮ ಚೆನ್ನಾಗಿರಲಿ ಎಂಬುದು ಅಮ್ಮನ ಅಪೇಕ್ಷೆ.

ಗರ್ಭದಲ್ಲಿರುವಾಗಲೇ ಬಂದ ಈ ಸಂಬಂಧ ಹೊಕ್ಕುಳಬಳ್ಳಿ ಕತ್ತರಿಸಿದ ಮಾತ್ರಕ್ಕೆ ಕಡಿಯಲಾರದ ಋಣಾನುಬಂಧ. ಹುಟ್ಟು, ಶೈಶವ,ಬಾಲ್ಯ,ಯೌವ್ವನ,ವಾರ್ಧಕ್ಯ ಹೀಗೇ ಪ್ರತೀ ಹಂತದಲ್ಲಿ ಪ್ರಜ್ಞಾಪೂರ್ವಕವಾಗಿ ನಮ್ಮ ಏಳ್ಗೆ ಬಯಸಿ,ತನ್ನ ಬೇಕು-ಬೇಡಗಳನ್ನು ಬದಿಗೊತ್ತಿ,ನಮಗಾಗಿ ಹಲವು ಮಹೋನ್ನತ ಕನಸುಗಳನ್ನು ಹೊಸೆಯುತ್ತ ನಮ್ಮ ನೆನಪಲ್ಲೇ ಜೀವನ ಸವೆಸುವ ಆ ಜೀವ ಭಗವಂತನ ವಿಶಿಷ್ಟ ಸೃಷ್ಟಿ. ಇಂತಹ ಅಮ್ಮನಿಗೊಂದು ನಮನ ಸಲ್ಲಿಸುವ ಪ್ರಯತ್ನ ನನ್ನೀ ಕಾವ್ಯರೂಪದಲ್ಲಿ ಕಟ್ಟಿಕೊಡುತ್ತಿದ್ದೇನೆ.


ಎನಿತು ಧನ್ಯ ಅಮ್ಮಾ...

ಎನಿತು ಧನ್ಯ ಅಮ್ಮಾ ನಿನ್ನ
ಮಡಿಲೊಳ್ ಜನಿಸುತ
ಘನತೆವೆತ್ತ ಮೂರ್ತಿನಿನ್ನ ಋಣವ ಸ್ಮರಿಸುತ

ನವಮಾಸದ ಅನುದಿನದೊಳು ಹಲವು ಹಂಬಲ
ಪವಡಿಸೆ ನಿನ್ನುದರದೊಳಗೆ ಇಟ್ಟೆ ಬೆಂಬಲ.

ಶಿಶುವು ನಾನು ಹಸಿವು ನನಗೆ ಕೊಸರಿ ಕೂಗಿದೆ
ನಿಶೆಯು ಹಗಲು ನಿದ್ದೆ ತೊರೆದು ಅಶನ ನೀಡಿದೆ

ಅಂಬೆಗಾಲನಿಕ್ಕುವಾಗ ಇಂಬುನೀಡುತ
ಕಂಬ ದಿಣ್ಣೆ ಏರು ಇಳಿತ ತುಂಬ ಹೆದರುತ

‘ಊಟಬೇಡ ಆಟಬೇಕು’ ಕಾಟ ನೀಗುತ
ಕೋಟಿಮೈಲ ತಂಗದಿರನ ಕೋಟೆ ತೋರುತ

ಬಾಲ್ಯದಾಟ ರೊಚ್ಚೆ ರಂಪ ತಿದ್ದಿ ತೀಡುತ
ವ್ಯಾಳ್ಯ ಮರೆತು ಚಂಡು ಬುಗುರಿ ಆಟ ನೋಡುತ

ಸುಖವ ಕಂಡೆ ನನ್ನ ನಗೆಯೊಳ್ ದುಃಖವ ಮರೆಯುತ
ಮುಖದ ತುಂಬ ಮುತ್ತನಿಟ್ಟು ಲಲ್ಲೆಗರೆಯುತ

ಬೆಳೆದೆನಮ್ಮ ಸ್ವಾರ್ಥಿಜನುಮ ನಿನ್ನ ತೊರೆಯುತ
ಕಳೆದು ಹೋಗುತಿರಲು ಬದುಕು ಯಾರು ಶಾಶ್ವತ?

ಹರಸಿ ನನ್ನ ಏಳ್ಗೆ ಬಯಸಿ ಕನಸು ಕಾಣುತ
ಭರಿಸಲಾರೆ ಋಣವ ಬದುಕು ಪೂರ್ವನಿಗದಿತ

1 comment:

  1. ಬಹಳ ಸುಂದರ ಕವನ...

    ನನ್ನಮ್ಮನ ನೆನಪಾಯಿತು...

    ಚಂದದ ಕವಿತೆಗೆ ಅಭಿನಂದನೆಗಳು...

    ReplyDelete