ಈ ಟಚ್ಚಲಿ ಏನೋ ಇದೆ
ಜೀವನದಲ್ಲಿ ನಾವು ಅನೇಕ ವ್ಯಕ್ತಿಗಳನ್ನು ನೋಡುತ್ತೇವೆ. ||ಲೋಕೋ ಭಿನ್ನ ರುಚಿಃ ||ಎಂಬಂತೆ ಅವರವರ ಕಾರ್ಯಕ್ಷೇತ್ರ ಮತ್ತುವ್ಯಾಪ್ತಿ ವಿಭಿನ್ನವಾಗಿರುತ್ತದೆ. ಎಲ್ಲರೂ ಎಲ್ಲಾ ಕೆಲಸಗಳಲ್ಲೂ ಅಥವಾ ಹಿಡಿದ ಆ ಒಂದೇ ಕೆಲಸದಲ್ಲೂ ಪರಿಪಕ್ವವಾಗಿರುವುದಿಲ್ಲ. ಕೆಲವರಂತೂ ಮಾಡುವ ಕೆಲಸವನ್ನು ಯಾಕಾದರೂ ಮಾಡಬೇಕೋ ಎಂದುಕೊಂಡು ಮಾಡುತ್ತಾರೆ. ಆದರೆ ಪರಿಪಕ್ವ ಸ್ಥಾನವನ್ನುಪಡೆದವರು ಅದನ್ನು ವೃತ್ತಿ ಅಥವಾ ಕೆಲಸ ಎನ್ನದೆ ಪೂಜೆ ಎಂದು ಅದನ್ನೇ ಎಂಜಾಯ್ ಮಾಡುತ್ತಾರೆ. ಹೀಗೇ ಬಾಯಲ್ಲಿ ಹೆಳಿದರೂ ಬಹುತೇಕರಿಗೆ ಇದು ಸಾಧ್ಯವಿಲ್ಲ-ಕಾರಣ ಗೊತ್ತಿಲ್ಲ.
ಕೆಲವರ ಸಾಧನೆಯನ್ನು, ಆ ಒಲವನ್ನು, ಆ ತಾದಾತ್ಮ್ಯತೆಯನ್ನು ಒಮ್ಮೆ ಮೆಲುಕು ಹಾಕೋಣ.
ಮೊದಲನೆಯದಾಗಿ ಅಚ್ಚಕನ್ನಡಿಗ ಶ್ರೀಯುತ ಆರ್.ಗಣೆಶ್. ಒಬ್ಬ ಮೆಕಾನಿಕಲ್ ಎಂಜಿನೀಯರ್, ಅದರೆ ಅವರು ಬಹುಭಾಷಾ ಪ್ರವೀಣರು. ಸುಮಾರು ೮ಕ್ಕಿಂತಲೂ ಜಾಸ್ತಿ ಭಾಷೆಯಲ್ಲಿ ವ್ಯಾಕರಣ-ಸಾಹಿತ್ಯ ಸಹಿತ ಪ್ರೌಢಿಮೆಯಿದೆ. ಶತಾವಧಾನಿ ಎಂದೇ ಖ್ಯಾತರು. ಅವರಿಗೆ ಯವುದೇ ವಿಷಯವಸ್ತು ಕೊಡಿ, ಅವರು ವ್ಯಾಖ್ಯಾನಿಸಿದರೆ ಅದರ ಮುಂದೆ ಬೇರೆ ಯಾರ ಅನಾಲಿಸಿಸ್ ಕೂಡ ಶೂನ್ಯವಾಗಿರುತ್ತದೆ. ಏಕಕಾಲಕ್ಕೆ ಎರಡು ಮಂದಿಗೆ ಉತ್ತರಿಸುವಾಗ ನಾವು ಬೆ ಬೆ ಬೆ ಅಂದುಬಿಡುತ್ತೇವೆ. ಆದರೆ ಅವರು ಅನುಕ್ರಮವಾಗಿ ನೂರುಜನರಿಗೆ, ಅಷ್ಟೇ ಏಕೆ ಸಾವಿರ ಜನರಿಗೆ ಅವರವರ ಪ್ರಶ್ನೆಗಳಿಗೆ, ಕೊಟ್ಟ ಅವಧಿಯಲ್ಲಿ, ಅಪ್ರಸ್ತುತ-ಪ್ರಸ್ತುತಿ ಎಂಬ ’ಅಧಿಕ ಪ್ರಸಂಗಿ’ಯನ್ನು ನಿಭಾಯಿಸುತ್ತ ಉತ್ತರಿಸುವ ಪರಿ ನೀವು ನೋಡಬೇಕು! ಏನಿದೆ ಅವರ ಮೆದುಳಿನಲ್ಲಿ ?
ಎರಡನೆಯವರು ಅಪ್ರತಿಮ ಕುಂಚಕಲಾವಿದ ಶ್ರೀಯುತ ಬಿ.ಕೆ.ಶ್ರೀನಿವಾಸ ವರ್ಮಾ. ಹಲವಾರು ವೇದಿಕೆಗಳಲ್ಲಿ ತಾವು ಅವರ ಚಿತ್ರ ಬಿಡುಸುವಿಕೆಯನ್ನು ನೋಡಿರುತ್ತೀರಿ. ಮಸಿಯಲ್ಲಿ ಅದ್ದಿದ ದಾರದಿಂದ, ಕಡ್ಡಿಯಿಂದ ಅಥವಾ ಏನೂ ಬೇಡ ಬರೇ ಮಸಿ ಮತ್ತು ಕೈ ಬಳಸಿ ಬಹು ಸುಂದರ ಕಲಾಕೃತಿಗಳನ್ನು ೩-೪ ನಿಮಿಷಗಳಲ್ಲಿ ಬಿಡಿಸುತ್ತಾರೆ.ಇನ್ನು ಅವರ ಬಣ್ಣದ ಕಲಾಕೃತಿಗಳು ಅತೀ ಸುಂದರ. ಲಕ್ಷಗಟ್ಟಲೆ ಕಲಾವಿದರಿದ್ದರೂ ಅವರು ಭಿನ್ನವಾಗಿ ತೋರುತ್ತಾರೆ.
ಹಾಡುಗಾರ್ತಿಯರು ಅನೇಕ, ಅತ್ಯಂತ ಹೈ ಪಿಚ್ ನಲ್ಲಿ ಅತೀ ಸಂತೋಷದಿಂದ ಹಾಡುವ ಶ್ರೀಮತಿ ಎಮ್.ಡಿ.ಪಲ್ಲವಿ ಇದ್ದಾರೆ. ಅವರನ್ನು ನೋಡುತ್ತಿದ್ದರೆ ಪ್ರಾಯಶಃ ಅವರು ಸಂಗೀತ ಸರಸ್ವತಿಯ ಮಗಳೇ ಎಂದರೆ ತಪ್ಪಾಗಲಾರದಲ್ಲ?
ಪಿಟೀಲು ನುಡಿಸುವವರು ಅನೇಕಮಂದಿ. ಆದರೆ ವಾಯೊಲಿನ್ [ಪಿಟೀಲು]ವಾದ್ಯಕ್ಕೆ ಚೌಡಯ್ಯನವರನ್ನು ಬಿಟ್ಟಮೇಲೆ ಗೌರವ ತಂದುಕೊಟ್ಟ ಮಹೋನ್ನತ ವ್ಯಕ್ತಿ ಕಲೈ ಮಾಮಣಿ ವಿದ್ವಾನ್ ದಿ||ಕುನ್ನುಕುಡಿ ವೈದ್ಯನಾಥನ್.
ಸಂಸ್ಕೃತ ಶ್ಲೋಕಗಳನ್ನು, ಸ್ತೋತ್ರಗಳನ್ನು ಎಲ್ಲರಿಗಿಂತ ಚೆನ್ನಗಿ ನಮಗೆ ಶ್ರುತಪಡಿಸುವುದು ದಿ||ಶ್ರೀಮತಿ ಎಮ್.ಎಸ್.ಸುಬ್ಬಲಕ್ಷ್ಮಿ. ಜಗದ್ಗುರು ಆದಿಶಂಕರರು ಮಹಾ ಮಹೋಪಾಧ್ಯಾಯರಾಗಿಯೂ, ಮಹಾಕವಿಯಾಗಿಯೂ ಸಂಸ್ಕೃತದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕ್ಲಿಷ್ಟ ಶಬ್ಧಗಳಿರುವ ಅವರ ಕೃತಿಗಳನ್ನು ಬಹು ಲೀಲಾಜಾಲವಾಗಿ, ಸಲೀಸಾಗಿ,ಸುಶ್ರಾವ್ಯವಾಗಿ ನಮ್ಮ ಕಿವಿಗೆ ಕ್ಯಾಸೆಟ್ ಗಳಮೂಲಕ ಇಂದಿಗೂ ತಲ್ಪಿಸುತ್ತಿರುವ ಸುಬ್ಬಲಕ್ಷ್ಮಿಗೆ ಶರಣು ಎನ್ನೋಣವೇ ?
ಕದ್ರಿ ಗೊಪಾಲನಾಥ್ ಅಂದರೆ ಸಾಕು ಅನೇಕ ಮಕ್ಕಳೂ ಕೂಡ ಅವರ ಬಗೆಗೆ ಹೇಳಲು ಪ್ರಾರಂಭಿಸುತ್ತಾರೆ. ವಿದೇಶೀ ವಾದ್ಯವಾದ ಸ್ಯಾಕ್ಸೋಫೋನ್ ಅನ್ನು ನಮ್ಮ ಕವಿಗಳ ಕೃತಿಗಳಿಗೆ ಸಮರ್ಪಕವಾಗಿ ಅಳವಡಿಸಿದ ಗೌರವ ಇವರಿಗೆ ಸಲ್ಲಲೇಬೇಕು ತಾನೆ ? ಅಂತೆಯೇ ಈ ವಾದ್ಯವನ್ನು ಉಸಿರು ಬಿಗಿ ಹಿಡಿದು ತಾರಕ ಸ್ವರದಲ್ಲಿ ನುಡಿಸುವದು ಸುಲಭದ ಮಾತೇನಲ್ಲವಲ್ಲ?
ಅದೇರೀತಿಯಲ್ಲಿ ಸಮಯೋಚಿತ ಹಾಗೂ ತುಲನಾತ್ಮಕ, ಅಚ್ಚುಕಟ್ಟಾದ ಲೇಖನಗಳನ್ನೊಳಗೊಂಡ, ಸುದ್ದಿ-ಸಾರವನ್ನು,ಕಾವ್ಯ ಪದ ಪಾಯಸವನ್ನು ಒಳಗೊಂಡ ದಿನಪತ್ರಿಕೆಯನ್ನು ದಿನಾಲೂ ನಮ್ಮ ಕೈಗಿಡುವುದು ಸುಲಭದ ಮಾತೇ? ಅತೀ ವಿಶಿಷ್ಟವಾಗಿ, ನಿಖರವಾಗಿ, ನಿರ್ಭಿಡೆಯ ನಡೆಯಿಂದ, ಸಲ್ಲಕ್ಷಣ ಭರಿತವಾಗಿ, ಕೊಟ್ಟ ಕಾಸಿಗೆ ಎಲ್ಲೂ ಮೋಸವಾಗದಂತೆ, ಅತೀ ಹೆಚ್ಚಿನ ಹಾಗೂ ತೀರಾ ತಡರಾತ್ರಿಯಲ್ಲಿ ಸಿಗುವ ವರದಿಗಳನ್ನು ಕ್ರೋಢೀಕರಿಸಿ ನಮ್ಮ ಕೈಗಿಡುವ ವಿಜಯಕರ್ನಾಟಕ ದಿನಪತ್ರಿಕೆಯ ಸಂಪಾದಕ ಶ್ರೀಯುತ ವಿಶ್ವೇಶ್ವರ ಭಟ್ ಒಬ್ಬ ’ಔಟ್ ಸ್ಟ್ಯಾಂಡಿಂಗ್ ಪರ್ಸ್ನಾಲಿಟಿ’ ಅಥವಾ ’ಇಂಡಸ್ಟ್ರಿಯಸ್ ’ ಎಂತ ಅನ್ನೋಣವೇ? [ಇದೀಗ ಅವರಿಗೆ ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ, ಇದಕ್ಕಾಗಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ]
ಒಬ್ಬ ಸಾಮಾನ್ಯ, ಅತೀ ಬಡ ಕುಟುಂಬದಿಂದ ಬಂದ ವ್ಯಕ್ತಿ , ಕೇವಲ ತನ್ನ ಜ್ಞಾನ ಮತ್ತು ಕ್ರಿಯಾ ಶಕ್ತಿಯಿಂದ ವಿಜ್ನಾನಿಯಾಗಿ, ರಾಷ್ಟ್ರಪತಿಯಾಗಿ ಬೆಳಗಿದ ಹೆಮ್ಮೆಯ ಎ.ಪಿ.ಜೆ. ಅಬ್ದುಲ್ ಕಲಾಮ್ ಅವರಲ್ಲಿ ಯಾವಶಕ್ತಿಕೆಲಸಮಾಡುತ್ತಿದೆ ? ಅವರ ಆ ಚಿಂತನಶೀಲ ಮೆದುಳಿಗೆ ಎಲ್ಲಿಂದ ಪ್ರೋತ್ಸಾಹ ಬರುತ್ತದೆ?
ವಿದೇಶದಲ್ಲಿದ್ದೂ ನಮ್ಮ ಭಾಷೆಯಲ್ಲಿ ತನ್ನದೇ ಛಾಪು ಮೂಡಿಸಿದ ಅಮೆರಿಕನ್ನಡಿಗ ಶ್ರೀಯುತ ಶ್ರೀವತ್ಸ ಜೋಶಿಯವರ ಬಗ್ಗೆ ಹಾಗೂ ಅವರ ಕಣ್ಣಿಗೆ ಕಟ್ಟುವಂತೆ ವಿವರಿಸುವ ಆ ವಿವರಣಾ ಚಾತುರ್ಯ, ಭಾಷೆಯ ಛಂದಸ್ಸು, ವ್ಯಾಕರಣ ಆದಿಯಾಗಿ ಅತ್ಯಂತ ಕಾಳಜಿಯಿಂದ, ಸೃಜನಾತ್ಮಕತೆಯಿಂದ, ವಾರ ವಾರಕ್ಕೂ ನವನಾವೀನ್ಯತೆಯಿಂದ ಕೂಡಿದ ಅವರ ಲೇಖನಗಳಲ್ಲಿ ತೋರ್ಪಡುವ ನಿಷ್ಕಲ್ಮಶ ಕನ್ನಡ ಪ್ರೀತಿಯನ್ನ ಏನನ್ನೋಣ? ಒಬ್ಬ ಟೆಕ್ನಾಕ್ರಾಟ್ ಭಾಷಾರಂಗದಲ್ಲಿ ಅಷ್ಟು ರುಚಿಕರವಾಗಿ ಇಷ್ಟೆಲ್ಲ ಬರೆಯಲು ಸಾಧ್ಯವೇ ? ಅವರ ’ಪರಾಗ ಸ್ಪರ್ಶ’ಹೆಸರಿಗೆ ಅನ್ವರ್ಥಕವಾಗಿದೆಯಲ್ಲವೇ ?
ಸದಾನಂದಮಯ್ಯ ಅವರ ಬಗ್ಗೆ ಇತ್ತೀಚೆಗೆ ಕೇಳಿದ್ದೀರಿ, ಆದ್ರೆ ಎಮ್.ಟಿ.ಆರ್. ಬಗ್ಗೆ ೫೦ ವರ್ಷಗಳಿಂದ ಕೇಳುತ್ತಿದ್ದೀರಿ. ಶುಚಿ ಹಾಗೂ ರುಚಿ ಎಂಬ ಶಬ್ಧಕ್ಕೆ ಅರ್ಥವನ್ನು ಸೃಸ್ಟಿಸಿಕೊಟ್ಟವರು, ಹೊಸ ಕಾಯ್ದೆ ಬರೆದವರು ಇವರಲ್ಲವೇ? ಒಂದು ಹೋಟೆಲ್ ಉದ್ಯಮ ದಿಢೀರ್ ತಯಾರಿಸುವ ತಿಂಡಿಯ ಪರಿಕಲ್ಪನೆಗಿಳಿದು ಅದಕ್ಕೆ ವಿಶ್ವವ್ಯಾಪಕತ್ವವನ್ನು ತಂದುಕೊಟ್ಟು ಜನಮಾನಸದಲ್ಲಿ ಸ್ಥಾನ ಪಡೆದ ಮಯ್ಯ ಅವರು ಕೂಡ ವಿದ್ಯೆಯಿಂದ ಒಬ್ಬ ಮೆಕಾನಿಕಲ್ ಎಂಜಿನೀಯರ್ ಎಂದರೆ ಆಶ್ಚರ್ಯವಾಗುವುದೇ?
ಅಕ್ಷರವನ್ನೇ ಕಲಿಯದ ಒಬ್ಬ ವ್ಯಕ್ತಿ, ನವರಸ ಭರಿತವಾಗಿ ಸಂಪೂರ್ಣ ಶುದ್ಧಕಲೆಯಾದ ಯಕ್ಷಗಾನಕ್ಕೆ ತನ್ನ ಅದ್ಬುತ ಕುಣಿತ,ಹಾವ-ಭಾವ, ಆಂಗಿಕಾಭಿನಯ, ವಿಶಿಷ್ಟ ’ಎಕ್ಸ್ ಪ್ರೆಶನ್’ ನಿಂದ ಜನಶಕ್ತಿ ಬೆರಳಿಟ್ಟು ಗೌರವಿಸುವ ರಾಜ್ಯ-ರಾಷ್ಟ್ರ ಪ್ರಶಸ್ತಿಗಳಿಸಿದ ಶ್ರೀಯುತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರನ್ನು ತಿಳಿದಿರುವಿರಲ್ಲ.ಅಧ್ಯಯನದ ಅಭಾವದಿಂದ ಅಸ್ಖಲಿತ ಮಾತುಗಳನ್ನಾಡಲು ಬಾರದಿದ್ದರೂ ಕೇವಲ ತನ್ನ ಹಿತ-ಮಿತ ಸಂಭಾಷಣೆಯಿಂದ, ನವಿಲಿಗೆ ಸರಿಗಟ್ಟುವ ಮನಮೋಹಕ ನೃತ್ಯದಿಂದ ಖ್ಯಾತನಾಮರಾಗಿರುವರಲ್ಲ! ಎಪ್ಪತ್ತೈದರ ಇಳಿವಯಸ್ಸಿನಲ್ಲೂ[ ಒಬ್ಬ ಮುದುಕನಾಗಿದ್ದೂ] ಕುಣಿದು ಜನರನ್ನು ರಂಜಿಸುವ ತನ್ಮೂಲಕ ತಾನೂ ಅದನ್ನೇ ಎಂಜಾಯ್ ಮಾಡುವ ಯಾವ ಶಕ್ತಿ ಅವರಲ್ಲಿ ಅಡಗಿದೆಯಪ್ಪಾ? ಇದೇರೀತಿಯಲ್ಲಿ ಆದರೆ ತನ್ನ ಭಾಷಾ ಲಾಲಿತ್ಯದಿಂದ ಹಾಗೂ ಪಾತ್ರದಲ್ಲಿನ ತನ್ಮಯತೆಯಿಂದ ಜನಮಾನಸದಲ್ಲಿ ನೆಲೆನಿಂತ ದಿ||ಶ್ರೀಯುತ ಶಂಭು ಹೆಗಡೆ, ಹಾಗೂ ದಿ||ಶ್ರೀಯುತ ಮಹಾಬಲ ಹೆಗಡೆ ಇವರೆಲ್ಲರಲ್ಲಿ ಅಂತಹ ಯಾವಶಕ್ತಿ ಮನೆಮಾಡಿತ್ತು?
ತನ್ನ ಸುಶ್ರಾವ್ಯ ಗಾಯನದಿಂದ ಯಕ್ಷಗಾನದ ನವರಸಗಳನ್ನು ಆಸ್ವಾದಿಸಲು ಹಿಮ್ಮೇಳದಲ್ಲಿದ್ದು ಹೀರೋ ಆದ ಭಾಗವತ ಶ್ರೀಯುತ ಸುಬ್ರಹ್ಮಣ್ಯ ಧಾರೇಶ್ವರರನ್ನು ಪ್ರತ್ಯೇಕ ವಿವರಿಸಬೇಕೆ?
ಹೆಚ್ಚೇಕೆ ನಮ್ಮ ನೆಚ್ಚಿನ ಸರ್ ಎಂ.ವಿಶ್ವೇಶ್ವರಯ್ಯ ನವರಿದ್ದರಲ್ಲ, ತನ್ನದೆಲ್ಲವನ್ನೂ ರಾಜ್ಯಕ್ಕೆ-ದೇಶಕ್ಕೆ ಅರ್ಪಿಸಿದ ಈ ಕರ್ಮಯೋಗಿ ಎಲ್ಲಿ ನೀರಿಲ್ಲವೋ ಅಲ್ಲಿ ನೀರನ್ನು ಒದಗಿಸುವ, ಎಲ್ಲಿ ಬೆಳಕಿಲ್ಲವೋ ಅಲ್ಲಿ ಬೆಳಕನ್ನು 'ಉತ್ಪಾದಿಸುವ', ಎಲ್ಲಿ ನಿರುದ್ಯೋಗವೋ ಅಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಮಹಾನ್ ಮೇಧಾವಿಯಾಗಿ ವಿಶ್ವವಂದ್ಯರಾಗಿ, ಸತ್ತಮೇಲೂ ತಮ್ಮ ಮೆದುಳಿನ ಬಗೆಗೆ ಬೇಡಿಕೆ ಪಡೆದ ಇಂತಹ ವ್ಯಕ್ತಿಯಲ್ಲಿ ಪ್ರಚುರಗೊಂಡಿದ್ದ ಯಾವ ಇಚ್ಛೆ ಅವರಿಂದ ಅನೇಕ, ಆ ಕಾಲಕ್ಕೆ ಅಸಾಧ್ಯವೆಂದು ಪರಿಗಣಿಸಲ್ಪಟ್ಟ ಕೆಲಸವನ್ನು ಮಾಡಿಸಿತು ?
ಸಂಗೀತದ ಮೇರು ಎನಿಸಿಕೊಂಡ ಶ್ರೀಯುತ ಭೀಮಸೇನ ಜೋಷಿಯವರ ಹಾಡುಗಳನ್ನು ಕೇಳಿಯೇ ಇರುತ್ತೀರಿ. ಆ ಗಂಧರ್ವ ಗಾನ ಹೊರ ಹೊಮ್ಮಲು ಅಂಥಾ ಕಂಠ ಅವರಲ್ಲಿ ಆಶ್ರಯಿಸಲು, ಅವರು ಅಸ್ಟು ಆಸ್ತೆವಹಿಸಿ ಹಾಡಲು ಏನಿರಬಹುದು ಕಾರಣ ?
ಶ್ರೀಯುತ ಎನ್.ಆರ್.ನಾರಾಯಣಮೂರ್ತಿಯವರು ಇನ್ಫೋಸಿಸ್ ಎಂಬ 'ಕೂಸನ್ನು' ೧೦,೦೦೦ ರೂಪಾಯಿಗಳಿಂದ ಆರಂಭಿಸಿ ಇಂದಿನ ೧೦,೦೦೦ ಕೋಟಿ ರೂಪಾಯಿಗಳವರೆಗೆ ಬೆಳೆಸಿದ ಆ ದೂರದರ್ಶಿತ್ವ ಎಲ್ಲಿಂದ ಬಂದಿರಬಹುದು? ಅವರಲ್ಲಿಯ ಅತುತ್ತಮ ಕೆಲಸಗಾರನಿಗೆ ತರಬೇತಿ ನೀಡಿದಾತ ಯಾರು? ದಣಿವಿಲ್ಲದೆ ಬೇಸರವಿಲ್ಲದೆ ಅವರು ಪ್ರಾರಂಭದ ತಮ್ಮ ದಿನಗಳನ್ನು ಹೇಗೆ ಕಷ್ಟಸಹಿಸಿ ಕಳೆದರು?
ಇದನ್ನೆಲ್ಲ ವಿವರಿಸಲು ಯಾವ ತರ್ಕಕ್ಕೆ ಸಾಧ್ಯ? ಕನ್ನಡದ ಅತ್ಯಂತ ಶ್ರೇಷ್ಟ ಕವಿಗಳಲ್ಲಿ ಒಬ್ಬರಾದ ಶ್ರೀಯುತ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಅನೇಕ ’ಕವಿತೆ’ ಎಂಬ ರತ್ನಗರ್ಭಗಳನ್ನೇ ಬರೆದಿದ್ದಾರೆ. ಇಂತಹ ಕಾವ್ಯಕನ್ನಿಕೆಗಳು ಕವಿಯಿಂದ ಹೇಗೆ ಸೃಜಿಸಲ್ಪಟ್ಟವು? ಯಾವ ಕವಿತೆಯ ಚರಣದಿಂದ ಮೊನ್ನೆ ತಮಗೆ ಮಹಾತ್ಮರ ಕಥನವನ್ನು ವಿವರಿಸಿದ್ದೆನೋ ಅದೇ ಕವಿತೆಯನ್ನು ಕವಿ ಇದೇ ಅರ್ಥದಲ್ಲಿ ಬರೆದರೇ ?? ಬಹುಶಃ ನಮ್ಮೆಲ್ಲ ಇಷ್ಟಾನಿಷ್ಟಗಳು ನಮ್ಮದೇ ಕೈಯ್ಯಲ್ಲಿದ್ದರೂ ಅದರ ಸೂತ್ರ ಬೇರೆ ಕಡೆಗೆ ಇದೆ ಎಂಬ ಈ ಪುನರ್ಜನ್ಮದ ಸೆಳಕು ಈ ಕವಿತೆಯಲ್ಲಿದೆಯೆ ? ಆಗಬಾರದೇಕೆ? ಹೇಗೆ ಮೊಬೈಲ್ ನಲ್ಲಿ ಸಿಮ್ಮನ್ನು ಇಟ್ಟು ಆ ಸಿಮ್ಮಿನ್ನು ಹೊರಗಿನಿಂದಲೇ ನಿಯಂತ್ರಿಸುತ್ತಾರೋ ಹಾಗೇ ನಮ್ಮ ದೇಹವೆಂಬ ಮೊಬೈಲ್ ನಲ್ಲಿ ಆತ್ಮವೆಂಬ ಸಿಮ್ ಇಟ್ಟು ಕಾಣದ ಟಾವರ್ ಮತ್ತು ಬೋರ್ಡ್ ಗಳಿಂದ ಸಿಗ್ನಾಲ್ ಕಳಿಸಿ ಎಲ್ಲವನ್ನೂ ಯಾರೋಪ್ರೋಗ್ರಾಮಿಂಗ್ ಮಾಡಿರಬೇಕಲ್ಲವೇ? ಈ ಜನ್ಮಾಂತರದ ಟಚ್ಚಲ್ಲಿ ನಮ್ಮ 'ಪಡೆದ ಪುಣ್ಯದಿಂದ' ನಾವು ಯಾವ ಗಮ್ಯ ಸ್ಥಾನವನ್ನು ಸೇರಬೇಕೋ ಅದು ನಿರ್ಧರಿಸಲ್ಪಡುತ್ತದೆ ಎಂದರೆ ತಪ್ಪೆ?
'ಯಾವುದೀ ಹೊಸಸಂಚು ಎದೆಯಂಚಿನಲಿ ಮಿಂಚಿ........'
ಇಂತಹ ಅರ್ಥಗರ್ಭಿತ ಸುಶ್ರಾವ್ಯವಾಗಿ ಹಾಡಬಲ್ಲ ಕವನವನ್ನು ಕೊಟ್ಟಿದ್ದಕ್ಕೆ ಲಕ್ಷ್ಮೀನಾರಾಯಣ ಭಟ್ಟರಿಗೆ ನಮ್ಮ ನೆನಕೆಗಳನ್ನು ಅರ್ಪಿಸುತ್ತ ಅವರಿಂದ ಇನ್ನೂ ಅನೇಕ ಭಾವಗೀತೆಗಳು ಬರಲೆಂದು ಅಪೇಕ್ಷಿಸೋಣವೇ?
ಚೆನ್ನಾಗಿದೆ....ಒಮ್ಮೆಗೇ ಎಲ್ಲವನ್ನೂ ಹೇಳಿಬಿಟ್ಟಿದ್ದೀರಿ..:) ಮುಂದೆ ಒಬ್ಬೊಬ್ಬರದೇ ಜೀವನ ಸಾಧನೆಗಳ ಬಗ್ಗೆ ಬರೆದರೆ ಓದುವ ...ತಿಳಿಯುವ ಭಾಗ್ಯ ನಮ್ಮದಾಗುತ್ತದೆ...ಧನ್ಯವಾದಗಳು
ReplyDeleteನನ್ನ ಉದ್ದೇಶವಿಲ್ಲಿ ನಮ್ಮಲ್ಲಿರುವ ವಿಶೇಷ ಸಿಮ್ಮನ್ನು ಬಿಂಬಿಸುವುದಿತ್ತೆ ಹೊರತು ಎಲ್ಲರನ್ನು ವಿಸ್ತ್ರತವಾಗಿ ಹೇಳುವುದಲ್ಲ, ಸಾಧ್ಯವಾದಾಗ ಆದಷ್ಟು ಹೆಚ್ಚಿನ ಪರಿಚಯ ಮಾಲಿಕೆಯನ್ನು ಕೊಡುತ್ತೇನೆ. ಏನಿದ್ದರೂ ತಮಗೆ ಅವರ ಬಗೆಗೆ ಈಗಾಗಲೇ ಬೇರೆ ಬೇರೆ ಮಾಧ್ಯಮಗಳಿಂದ ಸಾಕಷ್ಟು ತಿಳಿದಿರುತ್ತದೆ ಅಂದುಕೊಂಡಿದ್ದೇನೆ,ಧನ್ಯವಾದಗಳು
ReplyDeleteಅಸಾಮಾನ್ಯರ ಬಗ್ಗೆ ಸರಳಭಾಷೆಯ ರಸದೌತಣ | ಬಾಯಿ ಚಪ್ಪರಿಸುವಂತೆ ಆಗುತ್ತಿದೆ.
ReplyDeleteಧನ್ಯವಾದ
ReplyDelete