ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, September 20, 2010

|| ಬರ್ಮುಡೇಶ್ವರ ಮತ್ತು ನೈಟೀದೇವಿ ಪ್ರಸನ್ನಾ ||



|| ಬರ್ಮುಡೇಶ್ವರ ಮತ್ತು ನೈಟೀದೇವಿ ಪ್ರಸನ್ನಾ ||


ಹೆಸರು ಕೇಳಿದಾಕ್ಷಣ ನಿಮಗೆ ಅಚ್ಚರಿಯೇ ? ಛೆ ಛೆ ಹಾಗೇನೂ ಗಾಬರಿ ಬೀಳಬೇಡಿ. ಇವು ನಮ್ಮ ಇವತ್ತಿನ ಸಮಾಜದ ದೇವ ದೇವಿಯರು ! ಇದೆಂತಾ ಹೆಸರು ಎಂದು ನೀವು ವಿಚಾರಿಸ ಬಂದರೆ ನಾನು ಹೇಳುವುದಕ್ಕಿಂತ ನೀವೇ ಸುತ್ತ ನೋಡಿದರೆ ನಿಮಗೇ ಸಿಗುತ್ತಾರೆ ನಡೆದಾಡುವ ಈ ದೇವ ದೇವಿಯರು! ಛೆ ಇವರನ್ನೆಲ್ಲಾ ದೇವ ದೇವಿರಎಂದು ಬಿಟ್ಟಿರಲ್ಲಾ ನಿಮಗೇನು ಕೆಲಸವಿಲ್ಲವೇ ಎಂದರೆ ನನಗನ್ನಿಸಿದ್ದನ್ನು ಹೇಳುವ ಅಢಿಕ ಪ್ರಸಂಗಿಯೂ ನಾನಾಗ ಬಾರದೇ ? ಅಬಬಬಬ ! ಅಲ್ರೀ ನಿವೂ ಹೇಳುವುದಿಲ್ಲ ನಂಗೂ ಹೇಳಲು ಬಿಡುವುದಿಲ್ಲಾ ಎಂದರೆ ಇದೆಂಥದ್ದು ನಮ್ಮ ಕರ್ಮ!

ಬ್ಯಾಂಕಿನಲ್ಲಿ ಅರ್ಜೆಂಟಾಗಿ ಕೆಲಸವಿತ್ತೆಂದು ಹೋಗಿದ್ದೆನಾ ಅಲ್ಲಿ ನೋಡಿದರೆ ಬರ್ಮುಡೇಶ್ವರ ಪ್ರತ್ಯಕ್ಷ! ಆತನ ಬಗಲಲ್ಲಿ ಸಣ್ಣ ಮಗು ಬೇರೇ ರೊಚ್ಚೆ ಹಿಡಿದಿತ್ತು. ೨೧ ನೇ ಶತಮಾನ ಕಳೆದು ೨೨ನೇ ಶತಮಾನದ ಹೊಸ್ತಿಲು : ಈಗಾದರೂ ನಾವು ವಿದೇಶೀಯರ ಅದರಲ್ಲೂ ಅಮೇರಿಕನ್ನರ ಅನುಕರಣೆ ಮಾಡದೇ ಹೋದರೆ ನಮ್ಮಷ್ಟು ದಡ್ಡರು ಇನ್ನೊಬರಿಲ್ಲ! ನಿಮಗೆ ಗೊತ್ತೇ ? ನಾನು ಕೇಳಿರಲೂ ಇಲ್ಲ ಆದರೂ ಎದುರಿಗೆ ಬಂದ ಬರ್ಮುಡೇಶ್ವರ " ಹಾಯ್ " ಅಂದ ! ಬಹಳ ಕ್ರತ್ರಿಮವಾಗಿ ನಕ್ಕ. ಜೊತೆಗೆ ಆ ನಗು ಯಾವುದೋ ಡಬ್ಬದ ಮುಚ್ಚಳ ಓ ಸರಿ ಸರಿ ಕೋಕಾ ಕೋಲಾ, ಪೆಪ್ಸಿ ಟಿನ್ ಗಳ ಓಪನರ್ ಭಾಗ ಇರುತ್ತದಲ್ಲ--ಆ ಶೇಪಿನ ಗಡ್ಡದ ಮಧ್ಯದ ಬಾಯಿಂದ ಹೊರಟಿರುವುದರಿಂದ ನನಗೆ ಬಹಳ ಕೋಪ! ನನಗೆ ಮೊದಲೇ ಬರ್ಮುಡೇಶ್ವರರನ್ನು ಕಂಡ್ರೆ ಆಗುವುದಿಲ್ಲ, ಅದರಲ್ಲೂ ಓಪನರ್ ಗಡ್ಡದ ಬರ್ಮುಡೇಶ್ವರ ಸಿಕ್ಕರೆ ಝಾಡಿಸಿ ಒದೆಯುವಷ್ಟು ಕೋಪ! ಇದೆಲ್ಲಾ ನಾನಂದುಕೊಳ್ಳುವುದಷ್ಟೇ ! ನನ್ನನ್ಯಾರಾದರೂ ಕೇಳುತ್ತಾರೆಯೇ ? ನಾನೇನಾದರೂ ಅಂದರೆ ಕೆಂಗಣ್ಣಿನಿಂದ ಗುರಾಯಿಸಿ ನೋಡಿ ಹೋದಾರು!

" ಹ್ವಾಯ್ ಎಂತು ಮಾರಾಯರೆ ನಿಮ್ಮದು, ಈಗ ನೀವು ಎಲ್ಲಿ ಇರುವುದು? ನೋಡದೇ ಬಹಳ ಸಮಯವಾಯಿತು "
ಧ್ವನಿಬಂದ ಕಡೆಗೆ ಮುಖ ತಿರುಗಿಸಿದರೆ ಅಲ್ಲೂ ಅದೇ ಗೋಳು ಮತ್ತೊಬ್ಬ ಪರಿಚಯದ ಬರ್ಮುಡೇಶ್ವರ! ಮುರುಡೇಶ್ವರನನ್ನು ನೀವೆಲ್ಲಾ ನೋಡಿಯೇ ಇರುತ್ತೀರಿ. ಬರ್ಮುಡೇಶ್ವರ ಯಾರೆಂದು ಬೇಕಲ್ಲ ! ಇದು ನಮ್ಮ ಅಜ್ಜಿಯೋ ತಾತನೋ ಯಾವುದೋ ಹರಕೆ ಹೊತ್ತು ಆ ಕಾಲದಲ್ಲಿ ಹೆಸರು ಇಡುತ್ತೇನೆಂದು ಇಟ್ಟಿದ್ದಲ್ಲ! ಅಸಲಿಗೆ ಇದು ದೇವರ ಹೆಸರೇ ಅಲ್ಲ! ಹಾಗಾದರೆ ಬರ್ಮುಡೇಶ್ವರ ಅಂದರೆ ಯಾರು. ಇದು ಕನ್ನಡದ ಬಹುವ್ರೀಹಿ ಸಮಾಸವನ್ನು ಮಟ್ಟಸವಾಗಿ ಬಳಸಿಕೊಂಡು ಇಟ್ಟ ಹೆಸರು: ಬರ್ಮುಡಾ ಚಡ್ಡಿಯನ್ನು ಧರಿಸಿದವರು ಯಾರೋ ಅವರೇ ಬರ್ಮುಡೇಶ್ವರರು!

ಕನ್ನಡ ವ್ಯಾಕರಣಕ್ಕೆ ಎಷ್ಟು ಒಳ್ಳೇಯ ಉದಾಹರಣೆ ನೋಡಿ. ಅಷ್ಟಾಗಿ ಕನ್ನಡ ವ್ಯಾಕರಣ ಕಲಿಯದವರೂ ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲ ಶಾಂಪಲ್ಲು [ಈ ಶಬ್ದ ಕಾಗೋಡು ತಿಮ್ಮಪ್ಪರ ಅನುಗ್ರಹದಿಂದ ಗಳಿಸಿದ್ದು!] ಹೀಗಾಗಿ ನಮ್ಮ ಕನ್ನಡ ಭಾಷೆ ಇದೆಯಲ್ಲ ಇದು ಬಹಳ ಅಡ್ಜಸ್ಟೇಬಲ್ಲು! ಎಲ್ಲಿ ಹೋದರೂ ತನ್ನತನವನ್ನು ಉಳಿಸಿಕೊಳ್ಳುವುದರ ಜೊತೆಗೆ ಬೇರೆ ಸಂಸ್ಕೃತಿಗೂ ಪುರಸ್ಕಾರ ಕೊಡುತ್ತದೆ. ಹೀಗಾಗಿಯೇ ನಮ್ಮಲ್ಲಿ ಬರ್ಮುಡೇಶ್ವರರ ಉಗಮವಾಗಿದ್ದು! ಕರ್ನಾಟಕದಲ್ಲಿ ಅವರ ಅಗ್ಮ ಸ್ಥಾನ ತಲಕಾವೇರಿಯೋ ಅಂಬು ತೀರ್ಥವೋ ಇನ್ಯಾವುದೋ ಗೊತ್ತಿಲ್ಲ. ಆದರೆ ಅವರು ಹರಿದದ್ದು ಮಾತ್ರ ಕರ್ನಾಟಕದಾದ್ಯಂತ. ಕಾವೇರಿ ನದಿಯಲ್ಲಿ ಒಂದೊಮ್ಮೆ ನೀರಿರದಿದ್ದರೂ ಚಿಂತೆಯಿಲ್ಲ ನಮ್ಮಲ್ಲಿ ಬರ್ಮುಡೇಶ್ವರರ ಬರ್ಮುಡಾಗಳು ಬಾಳ ಇವೆ. ಬರ್ಮುಡೇಶ್ವರರು ಸಿಗದಿದ್ದ ದಿನ ನಾನು ನನ್ನೊಳಗೇ ಖುಷಿಯಿಂದ ಜಗಗೆದ್ದ ಹರುಷದ ಖಳನಗೆ [ಯಾಕೆಂದರೆ ಬರ್ಮುಡೇಶ್ವರರಿಗೆಲ್ಲ ನಾನು ಖಳನಾಯಕನ ಥರ ಕಾಣಬಹುದೇನೋ ಅಂತ!] ನಗುತ್ತೇನೆ -" ಮುಗೇಂಬೋ ಬಹುತ್ ಖುಷ್ ಹುವಾ "

ಹಾಕಿಕೊಳ್ಳಲಿ ಪಾಪ, ಮನೆಯಲ್ಲಿ ಹೆಂಡತಿ ಮಕ್ಕಳ ಮುಂದೆ ಚಹ್ಡ್ಡಿ ಹಾಕಿಕೊಂಡರೆ ಬೇಸರವಿಲ್ಲ. ಕೆಲವರು ಈ ಚಡ್ಡಿಗೂ ಮುನ್ನ ಬಣ್ಣದ ಲುಂಗಿ ಉಡುತ್ತಿದ್ದರೆ ಇನ್ನು ಕೆಲವರು ಪೈಜಾಮಾ ಬಳಸುತ್ತಿದ್ದರು. ಬಣ್ಣದ ಲುಂಗಿಯನ್ನು ನಾನು ತಿಳಿದ ಮಟ್ಟಿಗೆ ೧೫ ದಿನಗಳಿಗೊಮ್ಮೆಯೂ ತೊಳೆದವರನ್ನು ಕಾಣೆ! ಅದು ವಾಕರಿಕೆ ಬರಿಸಬೇಕೆ --ಆಗ ತೊಳೆಯಬೇಕೆ! ಈಗ ಅದರ ಸರದಿ ಹೋಗಿದೆ. ಅದರ ಬದಲಿಗೆ ಬಳಕೆಗೆ ಬಂದಿದ್ದೇ ಬರ್ಮುಡಾ! ಬರ್ಮುಡಾ ಹಿಡಿದ ಬಚ್ಚಾಗಳು ತರಾವರಿ ಮೊಬೈಲು ಹಿಡಿದು ಬೆಳ್ಳಂಬೆಳಿಗ್ಗೆ ಹಾಲು ತರಲೋ ಕೊತ್ತಂಬರಿ ಸೊಪ್ಪು ತರಲೋ ಅಥವಾ ಒಂದು ರೂಪಾಯಿಗೆ ಶುಂಠಿ, ಅಷ್ಟೇ ಬೆಲೆಯೆ ಹಸಿಮೆಣಸು ಮತ್ತು ಕರಬೇವು ಇದನ್ನೆಲ್ಲಾ ತರಲೋ ಅಡ್ಡಾಡುವುದು ಒಂದು ತೆರನ ಗುಂಪಾದರೆ, ಟೆರೇಸಿನಲ್ಲಿ ಕುಳಿತು ಮೊಬೈಲು ಚಾಟಿಂಗ್ ನಲ್ಲಿ ತೊಡಗುವುದು ಇನ್ನೊಂದು ಬಗೆಯ ಗುಂಪು! ಒಟ್ಟಿನಲ್ಲಿ ನಾಯಿಗಳಿಗೆ ಹಿಂದೆ ಬಾಲವಿದ್ದರೆ ಬರ್ಮುಡೇಶ್ವರರಿಗೆ ಮುಂದೆ ಅಲೆಯುವ ಬಾಲವಿರುತ್ತದೆ! ಪಡ್ಡೆ ಬರ್ಮುಡೇಶ್ವರರಂತೂ ಪಾತಾಳದಿಂದ ಎದ್ದು ಬಂದವರಂತೇ ಮಾಡುತ್ತಾರೆ. ವಾಕಿಂಗ್ ಹೋಗುವಾಗ ಎರಡು ಮೂರು ಮಂದಿ ಒಟ್ಟಿಗೆ ಹೊರಡುವ ಇವರದ್ದು ಲಿವಿಂಗ್ ಇನ್ ಇಂಡಿಯಾ ಥಿಂಕಿಂಗ್ ಅಮೇರಿಕಾ. ತಮಗೆ ಒಂದು ಮಾತು ಗೊತ್ತೇ ನನಗೆ ಗೊತ್ತಿರುವ ಒಬ್ಬರು ಎದುರಿಗೆ ಬಂದ ಮಳ್ಳೇಗಣ್ಣಿ[ಮಾಲಗಣ್ಣು,ಕೊಂಬಗಣ್ಣು]ನವನನ್ನು ಹೆಸರಿಸುವ ಸಲುವಾಗಿ ಒಂದು ಕೋಡ್ ಉಪಯೋಗಿಸುತ್ತಿದ್ದರು. ಎಲ್ ಎಲ್ ಟಿ.ಟಿ. ಅಂತ. ನನಗ್ಯಾಕೋ ಅದು ಹಿಡಿಸಲಿಲ್ಲ--ಅದು ಅಪಹಾಸ್ಯವಾಗುತ್ತದೆ ಎಂಬ ಸಲುವಾಗಿ ಇರಬಹುದೆನ್ನಿ. ಅಂದಹಾಗೆ ಎಲ್.ಎಲ್.ಟಿ.ಟಿ. ಯ ವಿಸ್ತಾರದ ರೂಪ-ಲುಕಿಂಗ್ ಟು ಲಂಡನ್ ಟಾಕಿಂಗ್ ಟು ಟೋಕಿಯೋ ಅಂತ! ಅಂದರೆ ಎಲ್ಲೋ ನೋಡುತ್ತಾ ಇಲ್ಲಿ ಮಾತನಡುವುದು ಎಂದರ್ಥ! ಮಳ್ಳೆಗಣ್ಣಿನವರದು ಹಾಗೇ ತಾನೇ ? ಅವರು ನಮ್ಮನ್ನು ನೋಡುತ್ತಿದ್ದಾರೋ ಬೇರೇ ಯಾರನ್ನೋ ನೋಡುತ್ತಿದ್ದಾರೋ ಗೊತ್ತೇಆಗುವುದಿಲ್ಲವಲ್ಲ, ಪಾಪ ದೈವೀ ಅವಕೃಪೆ! ಆದರೂ ಕೆಲವೊಮ್ಮೆ ಒಳ್ಳೆಯ ಹುಡುಗಿಯರನ್ನು ನೊಡುವಾಗ ಮಳ್ಳೆಗಣ್ಣಿನ ಪಡ್ಡೆಗಳಿಗೆ ಇದು ವರದನವೇ ಆಗಿರಬಹುದೇನೋ ಅನಿಸುತ್ತದೆ !

ನಿಮಗೆ ಇಷ್ಟೇ ಗೊತ್ತಿರುವುದು ಎಂಬುದು ನನಗೆ ಈಗಲೇ ತಿಳಿದದ್ದು. ಯಾಕೆ ಗೊತ್ತೇ ? ನೀವೇ ಹೇಳಿಬಿಡಿ ನೋಡೋಣ! ಕೆಲವರು ಇಂತಹದೇ ಪ್ರಶ್ನೆ ಕೇಳುತ್ತಾರಲ್ಲವೇ ? ಆನೆ ಇರುವೆಯನ್ನು ಮದುವೆಯಾದ ಕಥೆ ತಮಗೆ ಇದೇ ರೀತಿಯಲ್ಲಿ ಮೊಬೈಲಿನಲ್ಲಿ ಫಾರ್ವರ್ಡ್ ಆಗಿರುತ್ತದೆ. ಆಗಲಿಲ್ಲವೇ ಹಾಗಾದರೆ ಯಾಕೆ ಆಗಲಿಲ್ಲ ಎಂದು ಆನೆಯನ್ನೇ ಕೇಳಿ ! ಈಗಂತೂ ದಿನಂಪ್ರತಿ ಮೊಬೈಲಿನಲ್ಲಿ ಮೆಸ್ಸೇಜೋ ಮೆಸ್ಸೇಜು, ಚೆನ್ನಾಗಿ ಉಜ್ಜಿ ಮಸ್ಸಾಜುಮಡಿಕೊಳ್ಳುವಷ್ಟು ಮೆಸ್ಸೇಜು! ಬೇಕಾದ್ದು ಬೇಡಾದ್ದು ಅಂತೂ ಬಂದೇ ಬರುತ್ತವೆ. ನೋಡುತ್ತಲೇ ಇರಬೇಕು! ಯಾಕೆಂದರೆ ನಮಗೆ ನೋಡುವ ಚಟ ಅಲ್ಲವೇ ? ಬರ್ಮುಡಾದ ಬಗ್ಗೆ ಮಾತ್ರ ಒಂದೂ ಜೋಕು ಬರಲಿಲ್ಲ ಇದುವರೆಗೆ, ಯಾಕೆಂದರೆ ಅದರ ಸಂಖ್ಯೆ ಜಾಸ್ತಿ ಇರುವುದರಿಂದ. ಇನ್ನು ದಿನಗಳೆಯುತ್ತಾ ಬರ್ಮುಡಾದಿನಾಚರಣೆ, ಬರ್ಮುಡಾ ರಕ್ಷಣಾ ವೇದಿಕೆ ಇವೆಲ್ಲಾ ಹುಟ್ಟಿಕೊಂಡರೆ ಆಶ್ಚರ್ಯವೇನೂ ಇಲ್ಲ! ಅಲ್ಲಾರೀ ಪಾಪ ಒಂದು ಚಡ್ಡೀ ಹಾಕಿಕೊಳ್ಳಲಿಕ್ಕೂ ಸ್ವಾತಂತ್ರ್ಯವಿಲ್ಲವೇನ್ರೀ ಎನ್ನುತ್ತೀರಾ ಹಾಕ್ಕೊಳಿ ಸ್ವಾಮೀ ಒಂದ್ಯಾಕೆ ಹತ್ತರು ಚೆಡ್ಡಿ ಹಾಕ್ಕೊಳಿ. ಆರ್.ಎಸ್.ಎಸ್. ನವರು ಖಾಕಿ ಚೆಡ್ಡಿ ಧರಿಸಿದರೆ ನಿಮಗೆ ಕೆಂಗಣ್ಣು, ಅವರಿಗೆ ಚೆಡ್ಡಿ ಅನ್ನುತ್ತೀರಿ, ಆದ್ರೆ ನೀವು ಮಾತ್ರ ಹಾಕಿಕೊಳ್ಳಬಹುದೇ ? ಬಣ್ಬಣ್ಣದ ಚೆಡ್ಡಿ, ಪಟ್ಟಾಪಟ್ಟಿ, ಲಾಲ್ ರಂಗೀ, ನೀಲ್ ರಂಗೀ, ಪಂಚರಂಗೀ .....
ಅಂತೂ ಬರ್ಮುಡಾ ಮಹಾತ್ಮೆ ಬಹಳ ಅಗಾಧ. ಕೆಲವು ವರ್ಷ ಕಳೆದರೆ ಅದರ ಮೇಲೆ ಪಿ.ಎಚ್.ಡಿ.ಮಾಡುತ್ತಾರೇನೋ ಅನಿಸುತ್ತದೆ;ಯಾಕೆಂದರೆ ನಮ್ಮಲ್ಲಿ ಬಹುತೇಕರು ಸಂಶೋಧನೆಮಾಡುವುದು ಅಂಥದ್ದೇ ವಿಷಯಗಳಮೇಲಲ್ಲವೇ ?

ದಾಸರ ಪದವನ್ನು ಸ್ವಲ್ಪ ತಿರುಗಿಸಿ ಹಾಡಿದರೆ ಅದರಿಂದ ಸಿಗುವ ಮಜಾನೇ ಬೇರೇ ಅನ್ನಿಸ್ತು-

ಎಂದಿಗಾದರೊಮ್ಮೆ ಜನರು ಬಂದು ಭೂಮಿಯಲ್ಲಿ ನಿಂದು
ಬರ್ಮುಡಾವ ಧರಿಸಿಕೊಂಡು ಆನಂದದಿಂದ ಮೊಬೈಲುಚಾಟ್ ಮಾಡದ
ಜನ್ಮವೇತಕೋ ಅಮೇರಿಕಾ ಬದುಕ ಬದುಕದ

ಇನ್ನೂ ಹಲವು ಹಾಡುಗಳಿವೆ ಹಾಗೇ ಹೇಳಿಕೊಂಡು ಕಡಲೆಪುರಿ ತಿನ್ನಿ --

೨> ಸದಾ ಎನ್ನ ಜೋಳಿಗೆಯಲಿ ಬರಲಿ ಮೂರು ಬರ್ಮುಡಾ
ಬರ್ಮುಡಾವನ್ನು ಬಳಸುವುದಕೆ ಎನಗೆಮನವ ಈಯೊದೇವ


೩> ಕೈಲಾಸವಾಸ ಗೌರೀಶ ಈಶ
ಬಾಲಮುಂದಲೆವಂತ ಬರ್ಮುಡವ ಕೊಡೊ ಎನಗೆ ಶಂಭೋ .......

ಯುವ ಗೃಹಸ್ಥರನೇಕರು ಬರ್ಮುಡಾವನ್ನೇ ನೆಚ್ಚಿಕೊಂಡಿದ್ದಾರೆಂದಮೇಲೆ ಯಾರೋ ಕೆಲವು ನಮ್ಮಂಥವರು ತಪ್ಪಿಸಿಕೊಂಡಿರಬಹುದು ಅಷ್ಟೇ! ಬಕ್ರೀಕಾ ದಾಡಿ ಅಥವಾ ಓಪನರ್ ಶೇಪ್ ದಾಡಿ ಇವೆರಡರಲ್ಲಿ ಒಂದು ದಾಡಿ ಬಿಟ್ಟು, ಬರ್ಮುಡಾ ತೊಟ್ಟು, ಕೈಲಿ ಮೊಬೈಲ್ ಹಿಡಿದಾಗಲೇ ನಿಜವಾದ ಅಮೇರಿಕನ್ ದೀಕ್ಷೆ ! ಬರ್ಮುಡಾವನ್ನು ಕಾಲೇಜಿಗೂ ಹಾಕಿಕೊಂಡು ಹೊದರೆ ತಪ್ಪಿಲ್ಲವೆಂತ ನನ್ನ ಅಭಿಪ್ರಾಯ. ಬೇರೇಡೆಗೆಲ್ಲಾ ಅಡ್ಡಿಲ್ಲವಾದರೆ ಕಾಲೇಜಿನಲ್ಲಿ ಮಾತ್ರ ಬೇಡವೇ ? ಕಾಲೇಜಿನಲ್ಲಿ ಯುವ ಅಧ್ಯಾಪಕರಿಂದಲೇ ಈ ಕುರಿತು ಪ್ರಾರಂಭವಾಗಿಬಿಟ್ಟರೆ ಆಮೇಲೆ ವಿದ್ಯಾರ್ಥಿಗಳಲ್ಲೂ ಸಹಜವಗಿ ಬರುತ್ತದೆ. ಅಮೇಲೆ ಎಲ್ಲಾ ಅಫೀಸುಗಳಲ್ಲಿ, ಸರಕಾರೀ ಕಚೇರಿಗಳಲ್ಲಿ ಎಲ್ಲೆಲ್ಲೂ ಬರ್ಮುಡಾ ಬಳಕೆ ಕಡ್ಡಾಯವಾಗಿ ಅನ್ಯಾಯವಾಗಿ ಸಾವಿರಾರು ರೂಪಾಯಿ ಪೋಲುಮಾಡಿ ಪ್ಯಾಂಟು ಖರೀದಿಸುವ ಬದಲು, ನ್ಯಾಷನಲ್ ವೇಸ್ಟ್ ಮಾಡುವ ಬದಲು ಕೇವಲ ಬರ್ಮುಡಾ ಧರಿಸಿ ಎಲ್ಲೆಡೆಯೂ ಕೆಲಸಮಾಡಬಹುದು. ಮುಂಬೈ ಡಬ್ಬಾವಾಲಾಗಳಿಗೂ ಆರಾಮು, ನಮಗೂ ಆರಾಮು, ನಿಮಗೂ ಆರಾಮು ಅಲ್ಲವೇ ? ಆರಾಮಾಗಿ ನಿರುಂಬಳವಾಗಿ ಒಂದು ಬರ್ಮುಡಾ ಮತ್ತು ಟೀ ಶರ್ಟ್ ಹಾಕಿಕೊಂಡು ಬಿಟ್ಟರೆ ಬದುಕೆಷ್ಟು ಸುಂದರ ಅಂತೀರಿ ? ಸ್ವಲ್ಪ ವಿವೇಚಿಸಿ ನೋಡಿ. ನಿಮಗೆ ಒಪ್ಪಿಗೆಯಾದರೆ ಆಮೇಲೆ ಒಂದು ವೇದಿಕೆ ಸ್ಥಾಪಿಸಿಕೊಂಡು ನಮ್ಮ ಅಧ್ಯಕ್ಷರಿಗೆ ಕೆಂಪು ಗೂಟದ ಕಾರು ಕೊಡಿಸೋಣ ಮತ್ತು ಅದಕ್ಕೆ ಮುಂದೆ ಬರ್ಮುಡಾಧ್ವಜವಿರಿಸೋಣ.

ಮಂಗಲಂ ಬರ್ಮುಡೇಶಾಯ ಓಪನರ್ ಗಡ್ಡಧರಾಯಚ |
ಮಂಗಲಂ ಸಂಸ್ಕೃತೀಶಾಯ ಮಂಗಲಂ ಬರ್ಮುಡಧ್ವಜಃ ||

ಹೀಗೇ ಬರ್ಮುಡೆಶ್ವರರನ್ನು ಸ್ಮರಿಸುತ್ತ ಈಗ ನಟೀದೇವಿಯ ಕಥೆ ಕೇಳೊಣ ಬನ್ನಿ. ದೇವನಿಗೊಬ್ಬ ದೇವಿ ಇದ್ದರೆ ಚೆಂದ ಅನಿಸಿತು ಮತ್ತು ಇಲ್ಲಿ ಸರಿಹೊಂದುವ ’ದೇವಿ’ಯೂ ಸಿಕ್ಕಳು. ಅದಕ್ಕೇ ನೈಟೀ ದೇವಿಯಬಗ್ಗೆ ಮುಂದಿನ ಮಾತುಕತೆ.
ನೈಟಿ ಎನ್ನುವುದು ನೈಟ್ ಗೌನ್ ಎನ್ನುವುದರ ಶಾರ್ಟ್ ಫಾರ್ಮ್ ಎಂದು ಕೆಲವರು ಹೇಳಿದ್ದಾರೆ. ನಾನು ಅದಕ್ಕೆಲ್ಲಾ ಜಾಸ್ತಿ ತಲೆಕೆಡಿಸಿಕೊಂಡಿಲ್ಲ. ಆದರೆ ತಲೆತಿರುಗುವುದು ನೈಟೀ ದೇವಿಯರು ತಪಸ್ಸಿಲ್ಲದೆಯೂ ಕಣ್ಣೆದುರಿಗೆ ಧುತ್ತೆಂದು ಬಂದು ನಿಂತಾಗ. ಇಲ್ಲೂ ಅದೇ ರಾಗ ಅದೇ ಹಾಡು! ಆಕಾರ ಸ್ವಲ್ಪ ಬದಲು! ನೈಟೀ ದೇವಿಯರೆಂದರೆ ನೈಟಿಂಗೇಲ್ ಗೆ ನೆಂಟರೆಂದು ತಿಳಿಯಬೇಡಿ. ಕೆಲವೊಮ್ಮೆ ಬೆಳಗಿನ ಜಾವ ಕೋಳಿಕೂಗುವ ಮೊದಲೇ ನೈಟೀದೇವಿಗಳ ಬೀದಿ ರಂಪ ಶುರುವಾಗಿರುತ್ತದೆ. ಅವರ ಶುದ್ಧ ಸಂಸ್ಕೃತದ ಸುಪ್ರಭಾತವನ್ನು ಕೇಳಲೂ ಯೋಗಬೇಕು!

ನೈಟಿ ಧರಿಸಲು ಇಂಥದ್ದೇ ಅಂತ ಅರ್ಹತಾ ಪತ್ರವೆಲ್ಲ ಬೇಕಿಲ್ಲ. ಪ್ರಾಯಶಃ ಬರ್ಮುಡಾದ ಜೊತೆ ಜೊತೆಗೋ ಅಥವಾ ಸ್ವಲ್ಪ ಮೊದಲೋ ಹುಟ್ಟಿದ್ದು ಈ ನೈಟೀರೂಪ. ಒಂದು ನೈಟಿ ಸಿಕ್ಕಾಕಿಕೊಂಡರೆ ಜಗತ್ತಿನ ವ್ಯವಹರವನ್ನೇ ಅದರಲ್ಲಿ ನಿಭಾಯಿಸಬಲ್ಲಷ್ಟು ನಿಪುಣ ಗೃಹಿಣಿಯರು ನಮ್ಮಲ್ಲಿದ್ದಾರೆ. ಖರ್ಚಿನ ಲೆಕ್ಕದಲ್ಲಿ ಹಲವರು ಸೀರೆಗಳ ಉಳಿತಾಯ! ಅಗೇನ್ ನ್ಯಾಶನಲ್ ವೇಸ್ಟ್ ಆಗುತ್ತಿದ್ದುದನ್ನು ತಡೆಗಟ್ಟುವುದು! ನೈಟಿ ತೊಟ್ಟ ದೇವಿ ಹೊರಗೆ ಕಾಲಿಟ್ಟರೆ ಆಕೆ ಬರೇ ಅವಳ ಮನೆಯ ಹೊರಬಾಗಿಲಲ್ಲ ಅವಳ ಮನೆಯಿರುವ ಬೀದಿಯೂ ಅಲ್ಲ, ಇಡೀ ಊರನ್ನೆ ಸುತ್ತುಹಾಕಲು ಅದೇ ಸಾಕು. ಸೀರೆ ಉಡುವುದು ರಾಮಾರಗಳೆ! ಮೇಲಾಗಿ ಪ್ರತೀದಿನ ತೊಳೆದು, ಇಸ್ತ್ರಿ ಮಾಡಬೇಕು-ಇವೆಲ್ಲಾ ಯಾರಿಗೆ ಬೇಕು. ಒಮ್ಮೆ ಶುಭ ಮುಹೂರ್ತ್ವನ್ನೂ ನೋಡದೇ ಹಾಗೇ ತೊಡಬಹುದಾದ ಕಾಲಾತೀತ ನೈಟಿಯನ್ನು ತೊಟ್ಟುಬಿಟ್ಟ್ರೆ ವಾಸ್ನೆ ಹೊಡೆಯುವವರೆಗೆ ತೊಳೆಯುವ ಗೋಜೇ ಇಲ್ಲ. ಅಡಿಗೆಮನೆಯಲ್ಲಿ ಕೆಲಸಮಾಡುವಾಗ ಕೈತೊಳೆದು ಒರೆಸಲೂ ನೈಟಿಯ ಇಕ್ಕೆಲಗಳು ಸಹಾಯಕ್ಕ ಬರುತ್ತವೆ! ಬಣ್ಣದ ನೈಟಿಗೆ ಕೈ ಒರೆಸಿದ ಜಾಗದ ಮತ್ತೊಂದು ಬಣ್ಣ ಬಹಳ ಕಳೆಗಟ್ಟಿಸುತ್ತದೆ!

ಕೆಲವೊಮ್ಮೆ ಇವರೂ ಬೆಳಿಗ್ಗೆ ಅಂಗಡಿಗಳಿಗೆ ಅರ್ಧ ಲೀಟರ್ ಹಾಲು ತರಲೋ ಅಥವಾ ಮಾಮೂಲಿ ಮೇಲೆ ಹೇಳಿದ ಹಾಗೇ ಶುಂಠಿ, ಕರಬೇವು, ಕೊತ್ತಂಬ್ರಿ ಸೊಪ್ಪು ಅದಕ್ಕೆ ಇದಕ್ಕೆ ಅಂತ ಓಡಾಡುತ್ತ ಬರುತ್ತಾರೆ. ಹೀಗೆ ಓಡಾಡುವಾಗ ಕೆಲವರಂತೂ ಖಂಡ್ಗಕ್ಕಿ ಮುನಿಯ ರೀತಿ ಕಂಡರೆ ಇನ್ನು ಕೆಲವರು ಸಣ್ಣ ಮರಿಯಾನೆ ಬಂದಂತೇ ತೋರ್ಪಡುತ್ತಾರೆ! ಇದುವರೆಗೆ ಕಾಡುಕೋಣ, ಹಂದಿ, ಕಡವೆ ಇಂಥಾ ಪ್ರಾಣಿಗಳನ್ನು ನೋಡದ ಜನ ಹೀಗೇ ಇರುತ್ತಿದ್ದವಂತೆ ಎಂದು ನೋಡಿದ ತೃಪ್ತಿಪಡೆಯಬಹುದು. ಈ ನೈಟೀದೇವಿಯರಲ್ಲಿ ಕೆಲವರು ಮೇಲೊಂದು ಟವಲು ಹಾಕಿಕೊಳ್ಳುತ್ತಾರೆ. ಇದು ವೇಲಿನ ಬದಲಿಗೋ ಅಥವಾ ಸಿಂಬಳ ಒರೆಸಲೋ ಗೊತ್ತಿಲ್ಲ. ಅಂತೂ ನೈಟೀದೇವಿಗಳಿಗೆ ಹೀಗೇ ಇರಬೇಕೆಂಬ ನಿಯಮವೇನಿಲ್ಲ.

ವಿಪರ್ಯಾಸವೆಂದರೆ ನೈಟೀದೇವಿಗಳಲ್ಲಿ ಹುಡುಗಿಯರು ಕಮ್ಮಿ. ಹುಡುಗಿಯರದೇನಿದ್ದರೂ ಲೋ ಜೀನ್ಸು ಮತ್ತು ಮಿನಿ ಟಾಪು! ಇಲ್ಲಾಂದ್ರೆ ಹುಡುಗಿಯರಿಗೂ ನೈಟಿ ಬಹಳ ಉಪಯೋಗಕ್ಕೆ ಬರುತ್ತಿತ್ತೇನೋ. ಹಾಗಾಗಿ ಕಾಲೇಜಿಗೆ ನೈಟೀ ಧರಿಸಿಬರುವವರಿದ್ದರೆ ಅವರು ಅಧ್ಯಾಪಕಿಯರು ಮಾತ್ರ! ಬರಲೇಬೇಕೆಂಬುದು ನನ್ನ ತಕರಾರಲ್ಲ, ಆದ್ರೆ ಬಂದರೂ ಬರಬಹುದೇನೋ ಎನಿಸುತ್ತದೆ. ಆದರೆ ಅವರು ಒಂದೊಮ್ಮೆ ನೈಟೀದೇವಿಗಳಾದರೂ ಹುಡುಗಿಯರು ಮಾತ್ರ ಅದಕ್ಕೆ ಒಗುವುದಿಲ್ಲ. ಈಗ ಕಾಲವೇ ಹಾಗಲ್ಲವೇ. ಹುಡುಗಿಯರು ಹುಡುಗರ ಡ್ರೆಸ್ಸು ಹುಡುಗರು ಹುಡುಗಿಯರ ಡ್ರೆಸ್ಸನ್ನು ಇನ್ನೂ ಶುರುಮಾಡಿಲ್ಲ......ಮಾಡಲೂ ಬಹುದು. ಹಲವಾಅರು ಸಲ ಗಾಡಿಯಲ್ಲಿ ಓಡುವಾಗ ನಮಗೆ ಕಾಣಸಿಗುವ ಉದ್ದ ಕೂದಲಿನ ಹುಡುಗಿ ಮುಂದೆ ಓಪನರ್ ಗಡ್ಡ ಬಿಟ್ಟಿದ್ದನ್ನು ನೋಡಿದಾಗಲೇ ಅದು ಹುಡುಗಿಯಲ್ಲ ಎಂಬುದು ತಿಳಿಯುತ್ತದೆ! ಹೀಗೇ ಹೇಂಗೂದಲನ್ನು ಬಿಟ್ಟ ಗಂಡಸು ಬಹಳಷ್ಟು ಹೆಂಗಸನ್ನೇ ಹೋಲುವುದರಿಂದ ವೇಷವನ್ನೂ ಹೆಂಗಸರದ್ದೇ ಹಾಕ್ಕೊಂಡುಬಿಟ್ಟರೆ ರಗಳೆಯೇ ಇಲ್ಲ!

ಸಮಸ್ಯೆ ಇರುವುದು ಎಲ್ಲಿ ಗೊತ್ತೇ ಇಂದಿನ ನಮ್ಮ ಹೊಸ ಸಮಾಜದಲ್ಲಿ ಮಂಗಳ ಮುಖಿಯರು ಯಾರು,ಗಂಡಸು ಯಾರು ಮತ್ತು ಹೆಂಗಸು ಯಾರು ಎಂದು ಗುರುತಿಸಲು ಕಷ್ಟವಾಗುವ ಕಾಲ ಬರುತ್ತಿದೆ! ಎಲ್ಲರಿಗೂ ಯುನಿಸೆಕ್ಸ್ ಉಡುಗೆಗಳು-ತೊಡುಗೆಗಳು, ಚಪ್ಪಲಿಗಳು ಹೀಗೇ ಎಲ್ಲವೂ ಯುನಿ ಯುನಿ ಯಾಗಿ ಕೊನೆಗೊಮ್ಮೆ ಕಣಿಕೇಳುವ ಪ್ರಸಂಗ ಬಂದರೂ ತಪ್ಪೇನಿಲ್ಲ. ವಾಸ್ತವವಾಗಿ ಇಂದಿನ ಎಷ್ಟೋ ಜೀನ್ಸ್ ಹುಡುಗಿಯರು ಮೋಟು ಕೂದಲನ್ನೂ ಬಾಬ್ ಮಾಡಿಕೊಂಡು ಥೇಟ್ ಹುಡುಗರೇಯೇನೋ ಅನ್ನಿಸುವಷ್ಟು ರೆಡಿಯಾಗಿರುತ್ತಾರೆ. ಹುಡುಗಿಯರಲ್ಲಿರುವ ನಯ-ನಾಜೂಕುತನ ಇವನ್ನೆಲ್ಲಾ ಕಳೆದುಕೊಂಡು ಗಡುಸುತನವನ್ನೂ ಪಡೆದುಕೊಂಡಿರುತ್ತಾರೆ. ಇವತ್ತು ಬೀದಿಯಲ್ಲಿ ನಡೆಯುವಾಗ ತಲೆ ತಗ್ಗಿಸಿ ನಡೆಯುವುದು ಹುಡುಗನೇ ಹೊರತು ಹುಡುಗಿ ತನ್ನೆದುರಿಗೆ ಬರುವ ಹುಡುಗನನ್ನು ದಿಟ್ಟಿಸಿ ನೋಡುತ್ತಾ ನಡೆಯುತ್ತಾಳೆ. ನಾಚಿಕೆ, ಮರ್ಯಾದೆ ಇವುಗಳೆಲ್ಲಾ ವ್ಯಾಕರಣದ ಶಬ್ದಗಳು-ನಮಗ್ಯಾಕೆ ಅವುಗಳ ಗೋಳು! ಕೆಲವೊಮ್ಮೆ ಹುಡುಗರೇ ನಾಚಿ ನೀರಾಗುವುದನ್ನು ನಾನು ನೋಡಿದ್ದೇನೆ! ಈಗ ಹಾಡು ಹಾಡುವ ಗೌರಮ್ಮನ ಬದಲು ಪಾಪ್ ಹಾಡುವ ಜೆನ್ನಿಪರ್ ಗಳಿದ್ದಾರೆ! ಎಲ್ಲವುದರಲ್ಲೂ ಸೈ ಎನಿಸಿಕೊಂಡ ಹೆಂಗಸರು ಸಮಾಜಕ್ಕೆ ತಮ್ಮದೂ ಒಂದು ಕೊಡುಗೆ ಇರಲಿ ಎಂದು ತಮ್ಮಲ್ಲೇ ನೈಟೀದೇವಿಗಳನ್ನು ಸೃಷ್ಟಿಸಿಕೊಂಡಿದ್ದಾರೆ!

ಮೊದಲ ನೈಟಿಗೂ ಎರಡ್ನೇ ನೈಟಿಗೂ ಹದಿನೈದು ದಿನದ ಅಂತರ
ತೊಳೆದು ಉಟ್ಟರೆ ವಾಸನೆಯು ಬರ ಅದಕೆ ತೊಳೆವುದೇ ಒಂಥರಾ !

ಸ್ನೇಹದಾ ನೈಟೀಯಲೀ ಕಳೆದೆ ಒಂದು ವರುಷವ
ಕೊನೆಗೂ ಹರಿದೇ ಹೋಯಿತೇ ಮುಗಿಯದಿರಲೀ ಬಂಧನ !

ತಮ್ಮ ವಾಸನಾಬಲದಿಂದಲೇ ಒಂದು ನೈಟೀದೇವಿ ಇನ್ನೊಂದು ನೈಟೀದೇವಿಯನ್ನು ಪತ್ತೆಹಚ್ಚಬಲ್ಲಳು! ಅವರ ಅಘೋಷಿತ ಸಂಘದ ಕಾರ್ಯ ವೈಖರಿ ಡಬ್ಬಾವಾಲಗಳ ಕಾರ್ಯವೈಖರಿಯಂತೆಯೇ! ಏನನ್ನೇ ಖರೀದಿಸಲಿ, ಮಾಡ್ಲಿ-ಮಟ್ಲಿ ಎಲ್ಲಾದಕ್ಕೂ ಜೊತೆಗಾಗಿ ನೈಟೀದೇವಿಯ ಸಹಭಾಗಿತ್ವ ಇದ್ದೇ ಇರುತ್ತದೆ. ಒಮ್ಮೊಮ್ಮೆ ಬೌ ಬೌ ಅಂತ ಪರಸ್ಪರ ಕಚ್ಚಾಡಿಕೊಂಡರೂ ಮತ್ತೆ ಯಥಾವತ್ ಮುಂದಿನ ಅಮಾವಾಸ್ಯೆಯೋ ಹುಣ್ಣಿಮೆಯೋ ಬಂದಾಗ ಒಂದಾಗುತ್ತಾರೆ. ನೋ ಟೂ ಆರ್ ನೋ ಸೇ ! ಇದೊಂಥರಾ ಮಕ್ಕಳಾಟದಂತೇ! ನೆಚ್ಚಿಕೊಂಡು ಯಾರದಾದರೂ ಪಕ್ಷವಹಿಸಿ ಮಾತನಾಡಿದರೆ ಆಡಿದವರು ಸೋಲುತ್ತಾರೆ! ನೋಡಿ ಎಂತಹ ಅದ್ಬುತ ಸಂಘಟನೆ. ಹೀಗಾಗಿ ಅಪ್ಪಿತಪ್ಪಿಯೂ ನೈಟೀದೇವಿಗಳ ಅವಕೃಪೆಗೆ ಪಾತ್ರರಾಗಬೇಡಿ. ಇಲ್ಲೂ ಕೂಡ ನೈಟೀ ಹಿತರಕ್ಷಣಾ ಸಮಿತಿ ರಚನೆಯಾಗುವುದರಲ್ಲಿದೆ !

ಅಂತೂ ಇಂತೂ ದೇವ ದೇವಿಯರ ಮಹಾತ್ಮೆ ಕೇಳಿ ಕೊನೆಯ ಘಟ್ಟಕ್ಕೆ ಬಂದು ನಿಂತಿದ್ದೀರಿ. ಇಲ್ಲಿ ಎಲ್ಲಾ ಬರ್ಮುಡೇಶ್ವರರೂ ಮತ್ತು ನೈಟೀದೇವಿಗಳೂ ಗಂಡಹೆಂಡಂದಿರಲ್ಲ,ಆದರೆ ಅಲ್ಲಲ್ಲಿ ಆಗಾಗ ಆ ಶಾಂಪಲ್ಲುಗಳೂ ಸಿಗುತ್ತವೆ! ಈಗ ಏನ್ ಕೊಡ್ಲಿ ಬರ್ಮುಡಾ ? ನೈಟಿ ? ಹೋಗ್ಲಿಬಿಡಿ ಇಲ್ಲಿ ಈ ವಿಷಯದಲ್ಲಿ, ಅದೂ ಇದನ್ನೆಲ್ಲಾ ಓದಿದಮೇಲೆ ನೀವೇನೂ ಖರೀದಿ ಮಾಡದ ಖಂಜೂಸು ಅಂತ ನನಗ್ಗೊತ್ತು! ಹೋಗಿ ನಿನ್ಮಿಮ್ ಕೆಲ್ಸ ನೋಡ್ಕಳಿ. ಮತ್ತೆ ಎಲ್ಲಾದ್ರೂ ಬರ್ಮುಡೇಶ್ವರ ಅಥವಾ ನೈಟೀದೇವಿ ಕಂಡರೆ ನಾನು ಹೇಳಿದೆ ಅಂತ ಹೇಳಬೇಡಿ, ಉ[ಚ್ಚೆ]ಚ್ಚ ಸಂಸ್ಕೃತಿಯ ಹರಿಕಾರರಾದ ಅವರನ್ನು ಸುಮ್ನೇ ಕೇಳಿ ನೋಡಿ--ಬಹಳ ಚೆನ್ನಾಗಿರುತ್ತೆ ಅಲ್ವಾ ಅಂತ. " ಮುಗೇಂಬೋ ಅಭಿ ನಹೀ ಖುಷ್ ಹುವಾ " !!

Sunday, September 19, 2010

ಚಿಗುರು


ಚಿಗುರು

ಬತ್ತಿಹೋದ ಭಾವಗಳನು
ಮತ್ತೆ ಚಿಗುರುವಂತೆ ಬೆದಕಿ
ಎತ್ತಿ ತೆಗೆದು ಮೂಟೆ ಕಟ್ಟಲಾಯ್ತು ಹಾಡು ಕ್ಷಣದಲಿ !
ಸತ್ತು ಹೋಗುತಿದ್ದ ಗಿಡಕೆ
ಸುತ್ತ ನೀರಹನಿಸಿ ಒಮ್ಮೆ
ಮತ್ತೆ ಗಾಳಿ ಪೂಸಲಾಗ ಅರಳಿ ಹೂವು ಮುದದಲಿ !

ಕುತ್ತುಗಳವು ಹಿಂಡಿ ಮನವ
ಕುತ್ತಿಗೆಯನು ಒತ್ತಿ ಹಿಡಿದು
ಎತ್ತೆತ್ತಲೂ ಕಗ್ಗತ್ತಲು ನಗುತಲಿದ್ದ ದಿನದಲಿ
ಬೆತ್ತಲಾದ ಆಗಸದಲಿ
ಮತ್ತೆ ಮಿಂಚು ಹರಿದು ಭರದಿ
ಬುತ್ತಿ ಅನ್ನ ನೀಡಿತೆನಗೆ ಚಿಗಿತ ನೆಲದ ನೆರಳಲಿ

ಮೆತ್ತಗಿರುವ ದಿಂಬು ಗಾದಿ
ಅತ್ತುಕರೆಯೆ ಸಹಕರಿಸುತ
ಇತ್ತ ಆಸರೆಯೊಳ ಬದುಕು ನೀರಸವೆನಿಸಿರಲಲಿ
ತುತ್ತತುದಿಗೆ ಇರುವ ಹಣ್ಣು
ಗೊತ್ತಿಲ್ಲದೆ ಕೈಗೆ ಎಟುಕಿ
ನಿತ್ತ ನನ್ನ ಚಲಿಸುವಂತೆ ಮಾಡಿತಾಗ ಮನದಲಿ

ನೆತ್ತಿಯಲ್ಲಿ ಉರಿವ ಸೂರ್ಯ
ಕತ್ತಲಲ್ಲಿ ಹೊಳೆವ ಚಂದ್ರ
ಇತ್ತಯಾರೂ ಬರಲೇ ಇಲ್ಲ ಕಷ್ಟದಿನಗಳೆಡೆಯಲಿ
ಪತ್ತಿನಲ್ಲಿ ದೈವಲೀಲೆ
ಹತ್ತಿಬಂದು ಮೆಟ್ಟಿಲುಗಳ
ಪಿತ್ತನೆತ್ತಿಗೇರದಂತೆ ಹಿಡಿದು ಮನವ ಬಿಡದಲಿ

ಅತ್ತ ನೆಂಟರಿಷ್ಟರೆಲ್ಲ
ಎತ್ತಿನೋಡಿ ನೀರ ಆಳ
ಒತ್ತುಕೊಡದೆ ದೂರವಿರಲು ಕಹಿಸಮಯದ ನಡುವಲಿ
ಬಿತ್ತ ಬೀಜ ಬೆಳೆವರಿಲ್ಲ !
ಉತ್ತುತೆಗೆದು ಮುಗಿವುದಲ್ಲ !
ಇತ್ತಲಾಯ್ತು ದೈವಕೃಪೆಯು ಕವಿಸಮಯದ ಬಿಡುವಲಿ

Saturday, September 18, 2010

ನಂದದ ನಂದಾದೀಪ


ನಂದದ ನಂದಾದೀಪ

ಪ್ರತ್ಯಾಹಾರದ ಬಗ್ಗೆ ಕೆಲದಿನಗಳ ಹಿಂದೆ ಬರೆಯುತ್ತ ಹೇಳಿದ್ದೆ-- ಒಳಗಿರುವ ಆತ್ಮವನ್ನು ಬಾಹ್ಯವಾಗಿ ನಾವು ಪಂಚೇಂದ್ರಿಯಗಳ ಮೂಲಕ ವಿಭಿನ್ನವಾಗಿ ನೋಡುತ್ತೇವೆ ಎಂದು. ಇದಕ್ಕೆ ಜ್ವಲಂತ ಉದಾಹರಣೆ ಬ್ರಹ್ಮೈಕ್ಯ ಡಾ|ಪುಟ್ಟರಾಜ ಗವಾಯಿಗಳು. ಅವರಿಗೆ ಕಣ್ಣೆಂಬ ಹೊಸ ಇಂದ್ರಿಯ ಬೇಕಾಗಿರಲಿಲ್ಲ. ಅವರು ಕಣ್ಣಿಲ್ಲದೆಯೂ ಹಲವನ್ನು ಕಂಡಿದ್ದರು ! ಇದು ಅವರ ಆತ್ಮ ಶಕ್ತಿ! ಜೀವಿತದ ಎಳವೆಯಿಂದ ಮಣ್ಣಲ್ಲಿ ಮಿಳಿವವರೆಗೂ ಪರಹಿತಕ್ಕಾಗಿ ದುಡಿದ, ಸೇವೆಸಲ್ಲಿಸಿದ ಅದ್ಬುತ ಚೈತನ್ಯವದು. ಖುದ್ದಾಗಿ ನಾನವರನ್ನು ನೋಡಿದ್ದಿಲ್ಲ,ಆದರೆ ಅವರ ಬಗ್ಗೆ ಸಾಕಷ್ಟು ಓದಿದ್ದೆ, ಕೇಳಿದ್ದೆ,ಮಾಧ್ಯಮಗಳಲ್ಲಿ ನೋಡಿದ್ದೆ. ’ಗಾನಯೋಗಿ ಪಂಚಾಕ್ಷರಿ ಗವಾಯಿ’ ಎನ್ನುವ ಸುಮಧುರ ಕನ್ನಡ ಸಿನಿಮಾವನ್ನು ಕೂಡ ನೋಡಿದ್ದೆ.

ದೇವರು ಒಂದನ್ನು ಕೊಟ್ಟರೆ ಇನ್ನೊಂದನ್ನು ಕೊಡ ಎನ್ನುತ್ತಾರೆ ಅನುಭಾವಿಗಳು. ಇದು ನಿಜವೇನೋ ಅನಿಸುತ್ತದೆ: ಹಲವು ಸನ್ನಿವೇಶಗಳಲ್ಲಿ. ಒಬ್ಬಾತ ಕುರುಡನೋ ಕಿವುಡನೋ ಆಗಿದ್ದರೆ ಅವನಿಗೆ ಉಳಿದ ಇಂದ್ರಿಯಗಳಲ್ಲಿ ಸ್ಪಂದನ ಜಾಸ್ತಿಯಾಗಿ [ಒಬ್ಬನೇ ವ್ಯಕ್ತಿ ಎರಡೆರಡು ಕೆಲಸಮಾಡಿದ ಹಾಗೇ ] ಕೆಲಸಮಾಡದ ಇಂದ್ರಿಯದ ಜಾಗವನ್ನು ತುಂಬುತ್ತವೆ. ಇಂತಹ ವ್ಯಕ್ತಿಗಳಿಗೆ ದೇವರು ವಿಶೇಷ ಚೈತನ್ಯವನ್ನು ಕೊಟ್ಟಿರುತ್ತಾನೆ. ದೇ ಆ ಬ್ಲೆಸ್ಡ್ ವಿತ್ ರಿಮೇನಿಂಗ್ ಸ್ಪೆಷಲ್ ಸೆನ್ಸಿಟಿವ್ ಆರ್ಗನ್ಸ್. ಹಾಗಾಗಿ ಇಂಥವರು ಮಾಡಿದ ಪ್ರಯತ್ನಗಳೆಲ್ಲ ಫಲದಾಯಕವಾಗುವ ಹಾಗೇ ಭಗವಂತ ಅನುಗ್ರಹಿಸುತ್ತಾನೆ. ಇದನ್ನು ಹಿಂದೆ ನಾನು ಹೇಳಿದ್ದ ಮಾರ್ಜಾಲ ನ್ಯಾಯಕ್ಕೆ ಹೋಲಿಸಬಹುದು.ಅದರಲ್ಲೂ ಕೆಲವರು ಬಹಳ ಅದ್ಬುತ ಶಕ್ತಿಯನ್ನು ಪಡೆದಿರುತ್ತಾರೆ. ಬದುಕಿನ ಸಾರವನ್ನು ಬಹುಬೇಗ ಅರಿಯುವ ಇವರು ಮಿಕ್ಕುಳಿದವರಿಗೆ ದಾರಿದೀಪವಾಗುತ್ತಾರೆ.

ಪಂಡಿತ್ ಪುಟ್ಟರಾಜ ಗವಾಯಿಗಳು ಅಂತಹ ಒಬ್ಬ ಅದಮ್ಯ ಚೇತನ. ಅವರು ತನಗಾಗಿ ಬದುಕಲಿಲ್ಲ, ಹಲವರಿಗಾಗಿ ಬದುಕಿದರು. ನಾನು ಕೇಳಿದ ಒಂದು ವಿಷಯ- ಒಬ್ಬ ತಾಯಿ ಹಡೆದ ಶಿಶುವನ್ನು ೪-೫ ತಿಂಗಳಾಗುವ ಹೊತ್ತಿಗೆ ಅದು ಕುರುಡು ಎಂದು ತಿಳಿದಾಗ, ಎತ್ತಿ ತಂದು ಪುಟ್ಟರಾಜ ಗವಾಯಿಗಳ ಆಶ್ರಮದ ಹೊರಾಂಗಣದ ಬಾವಿಯ ಪಕ್ಕ ಮಲಗಿಸಿ ಹೊರಟುಹೋಗಿದ್ದಳಂತೆ, ಇದು ನಡೆದಿದ್ದು ಯಾವುದೋ ಒಂದು ರಾತ್ರಿ. ಬೆಳಿಗ್ಗೆ ಶಿಷ್ಯರಿಂದ ವಿಷಯ ತಿಳಿದ ಗವಾಯಿಗಳು ಆ ಮಗುವನ್ನು ತನ್ನ ಕೈಗೆತ್ತಿಕೊಂಡು ಸ್ವತಃ ಅದಕ್ಕೆ ಬಾಟಲಿಯಿಂದ ಹಾಲುಣಿಸಿ ನಂತರ ಹಾಗೇ ಜೋಪಾನಮಾಡಿದರಂತೆ. ಈಗ ಆ ಗಂಡು ಮಗು ಬೆಳೆದು ಸಂಗೀತ ಕಲಿತು ಸಂಗೀತ ಶಿಕ್ಷಕನಾಗಿ ಕೆಲಸಮಾಡುತ್ತಿದೆಯಂತೆ! ಇದು ಗವಾಯಿಗಳ ವೈಖರಿ. ಅದಕ್ಕೇ ನಿಜವಾಗಿ ಅದು ಪುಣ್ಯಾಶ್ರಮ--ಶ್ರೀ ವೀರೇಶ್ವರ ಪುಣ್ಯಾಶ್ರಮ, ಗದಗ.

ಬದುಕಿನ ಬಂಡಿ ಎಳೆಯುವಾಗ ಎಷ್ಟೋ ತಂದೆ-ತಾಯಿಗಳಿಗೆ ಕೆಲವೊಮ್ಮೆ ಅಂಗವಿಕಲರೋ ವಿಕಲ ಚೇತನರೋ ಹುಟ್ಟುವುದು ಅವರ ವಿಧಿಬರಹ! ಇಂತಹ ಹುಟ್ಟಿ ಯಾವುದೋ ಕೆಟ್ಟ ಘಳಿಗೆಯಲ್ಲಿ ಪಾಲಕರಿಂದ ತ್ಯಜಿಸಲ್ಪಟ್ಟ ಹಲವು ಮಕ್ಕಳ ಮಾತಾ-ಪಿತೃವಾಗಿ ಅವರನ್ನು ಉಳಿಸಿ-ಬೆಳೆಸಿ, ಸಂಗೀತ ಕಲಿಸಿ, ಅವರಿಗೆ ಒಂದರ್ಥದಲ್ಲಿ ಪುನರ್ಜನ್ಮವಿತ್ತ ಸದ್ಗುರುವೇ ಶ್ರೀ ಪುಟ್ಟರಾಜರು. ತಮಗೆ ಅಭಿಮಾನಿಗಳು ಪ್ರೀತ್ಯಾದರಗಳಿಂದ ನಡೆಸಿದ ನೂರಾರು ತುಲಾಭಾರಗಳಿಂದ ಬಂದ ಆದಾಯವನ್ನೂ ಸೇರಿದಂತೆ ಉಳ್ಳವರು ಕೊಟ್ಟ ಎಲ್ಲಾ ಸಹಾಯವನ್ನು ಕೇವಲ ಸಮಾಜದ ಇಂತಹ ಮಕ್ಕಳ ಸೇವೆಗಾಗಿ, ಅವರಿಗೊಂದು ಬದುಕು ಕಟ್ಟಿಕೊಡಲಾಗಿ ಬಳಸಿದ ಬೃಹತ್ ಕುಟುಂಬದ ಯಜಮಾನ ಶ್ರೀ ಗವಾಯಿಗಳು.

ಅಂಧನೊಬ್ಬ ಮೂರು ಭಾಷೆಗಳಲ್ಲಿ ಪಂಡಿತನೆಂದರೆ, ಹಲವು ಸಂಗೀತವಾದ್ಯಗಳಲ್ಲಿ ಪರಿಣತನೆಂದರೆ ಅವನ ಅಸಾಧಾರಣ ತಪಸ್ಸನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಹಾಗೆ ಅವರಿಗೆ ಇವೆಲ್ಲವನ್ನೂ ಕಲಿಯುವುದು ಅಷ್ಟು ಸುಲಭದ ಮಾತೂ ಅಲ್ಲ. ಆದರೆ ಗವಾಯಿಗಳು ಕನ್ನಡ, ಸಂಸ್ಕೃತ ಮತ್ತು ಹಿಂದಿ ಈ ಮೂರು ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು, ಅಲ್ಲದೇ ಅದನ್ನು ಹಲವರಿಗೆ ಧಾರೆ ಎರೆಯುವ ಹೊಸ ಮಾರ್ಗವನ್ನು ಹುಟ್ಟುಹಾಕಿಕೊಂಡಿದ್ದರು. ’ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬುದು ಹಳೆಯ ಗಾದೆ ಈಗ ಅದು ಹಾಗಲ್ಲ ಸದ್ಗುರುವೊಬ್ಬನಿದ್ದರೆ ಸಮಾಜವೆಲ್ಲ ಕಲಿತಂತೆ, ಕಲಿತು ಜೇನು ಸವಿದಂತೆ ಎಂದರೆ ತಪ್ಪಲ್ಲ. ಪ್ರತಿನಿತ್ಯ ಪೂಜೆ, ಧ್ಯಾನ, ಸಂಗೀತಾರಾಧನೆ, ಕಲಿಸುವಿಕೆ, ಅನ್ನದಾಸೋಹವೇ ಮೊದಲಾದ ಜ್ಞಾನ, ಅಶನ-ವಶನಾದಿ ಹಲವು ಕೈಂಕರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬೆಳಕು ಕಾಣದ ಕಂದಮ್ಮಗಳಿಗೆ ಮಾನಸ ಬೆಳಕನ್ನು ಹರಿಸಿದ ಜ್ಞಾನ ಜ್ಯೋತಿ ಶ್ರೀ ಪುಟ್ಟರಾಜರು. ಕಾಣುವ ಪ್ರಪಂಚದ ಜನ ಕಾಣಲಾರದ ಜನರಿಗೆ ತೊಂದರೆಕೊಟ್ಟು ತಪ್ಪು ಮಾಡಿದರೂ ಅಂತಹ ಕಣ್ಣಿರುವ ಪಾತಕಿಗಳನ್ನು ಕರೆದು ತಿಳಿಹೇಳಿ ತಿದ್ದಿದ ಖ್ಯಾತಿ ಅವರದ್ದು.

ಕಣ್ಣಿರುವ ನಾವು ಮಾಡದ ಮೇರು ಸಾಧನೆಯನ್ನು ಕಣ್ಣಿರದ ಈ ಪುಣ್ಯಜೀವಿ ಇದುವರೆಗೆ ನಡೆಸಿಕೊಟ್ಟರು. ಕಣ್ಣಿರದ ಮಗುವಾಗಿ ಆಶ್ರಮಕ್ಕೆ ಬಂದ ಗವಾಯಿಗಳು ಗುರು ಪಂಚಾಕ್ಷರಿಗವಾಯಿಗಳ ಕೃಪೆಗೆ ಪಾತ್ರರಾಗಿ ಅದನ್ನು ನೆನೆಸಿ ಹಲವು ಸಾವಿರ ಕುರುಡು,ಕಿವುಡು, ಮೂಕ ಮಕ್ಕಳಿಗೆ ವಿದ್ಯಾದಾನ ಮಾಡಿದರು. ದಾಸರು ಹೇಳಿದ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಮಾತನ್ನು ಅಕ್ಷರಶಃ ಪಾಲಿಸಿ ತೋರಿಸಿದ ಈ ನಂದಾದೀಪ ನಂದಲಿಲ್ಲ, ಅದು ಬೆಳಗಿದ್ದು ಒಂದೆರಡು ದೀವಿಗೆಗಳನ್ನಲ್ಲ-ಹಲವು ಸಾವಿರ ದೀವಿಗೆಗಳನ್ನು. ಅಂತಹ ಹಲವು ದೀವಿಗಗಳನ್ನು ಸಮಾಜಕ್ಕೆ ಕೊಟ್ಟ ಶ್ರೀಗಳು ಭೌತಿಕವಾಗಿ ತನ್ನ ಅಸ್ಥಿತ್ವವನ್ನು ಮೊಟಕುಗೊಳಿಸಿದರೂ ಚೈತನ್ಯರೂಪದಲ್ಲಿ ಪುಣ್ಯಾಶ್ರಮದಲ್ಲಿ ನೆನೆನಿಂತಿದ್ದಾರೆ. ಈ ಸತ್ಪರಂಪರೆ ಸತತ ಮುನ್ನಡೆಯಲಿ, ಅವರ ಸದಾಶಯ ಸದಾ ಪೂರ್ತಿಗೊಳ್ಳುತ್ತಿರಲಿ, ಕಣ್ಣಿರುವ ಜನತೆ ಕಾಣ್ಣಿರದ,ಕಿವಿಯಿರದ, ಮಾತುಬಾರದ ಆ ಜನತೆಗೆ ಪ್ರೀತಿಯಿಂದ ಸಹಕರಿಸಲಿ ಎಂದು ಪ್ರಾರ್ಥಿಸೋಣ. ಅಗಲಿದ ಮಹಾತ್ಮರಿಗೆ ನಮ್ಮ ಭಾಷ್ಪಾಂಜಲಿಯನ್ನು ಸಮರ್ಪಿಸೋಣ.

ಸಂಗೀತದ ಸುಸ್ವರಸಾಮ್ರಾಜ್ಯದಿ
ಮಂಗಳಕುವರನು ಉದಯಿಸುತ
ಅಂಗವಿಕಲಚೇತನರನು ಸೇವಿಸಿ
ಕಂಗಳಿರದ ತನ್ನನೇ ಮರೆತ

ತಾನು ತನದೆಂಬ ಕಣ್ಣಿಹ ಜನತೆಗೆ
’ನಾನಿ’ಲ್ಲದ ತತ್ವವನರುಹಿ
ಗಾನದಿ ಜನರನು ರಂಜಿಸಿ ನಿತ್ಯವೂ
ಯಾನವ ಬೇಳೆಸುತ ಹಲವೆಡೆಗೆ

ಗಾನಯೋಗಿ ಪಂಚಾಕ್ಷರಿ ಹರಸಲು
ಮಾನಸಮ್ಮಾನ ಸಾಸಿರವು
ದೀನಬಂಧುವನು ನೆನೆಸಿ ಬಂದವರ
ಧೇನುರೂಪದಲಿ ಕಂಡಿಹುದು

ಯೋಗಿಯಾದ ಭವರೋಗವೈದ್ಯ
ಭೋಗಿಸಲಿರದಿರೆ ಕಣ್ಣು-ಕಿವಿ
ತ್ಯಾಗದಿ ಪೂಜೆಯ ನಡೆಸುತ ಹರಸಿದ
ಬೀಗದೆ ಪುಟ್ಟರಾಜನು ತಾ

Friday, September 17, 2010

ಸ್ವಯಂ ಚಾಲಿತ


ಸ್ವಯಂ ಚಾಲಿತ

ಗಾಳಿ ಕೇಳಿ ಬೀಸಲಿಲ್ಲ
ನನ್ನ ನಿನ್ನ ಅವರನು
ವೇಳೆ ನಿಂತು ಕಾಯಲಿಲ್ಲ
ನಿನ್ನ ನನ್ನ ಬರವನು

ಮಳೆಯು ಹನಿದು ಬೀಳಲಿಲ್ಲ
ನಮ್ಮ ಇಚ್ಛೆ ಮೇರೆಗೆ
ಇಳೆಯು ಕುಸಿದು ಕಟ್ಟಲಿಲ್ಲ
ನಿಮ್ಮ ಆಜ್ಞೆ ಯಾರಿಗೆ ?

ಸೂರ್ಯ ಬೆಳಕ ಹರಿಸಲಿಲ್ಲ
ಕತ್ತಲಲ್ಲಿ ಬಾ ಎನೆ
ಚಂದ್ರ ಗುರುತು ಮರೆಸಿಕೊಂಡ
ಹಗಲು ನೋಡಬೇಕೆನೆ !

ನೀರ ಮಟ್ಟ ಏರಲಿಲ್ಲ
ಯಾರಿಗೋ ಬಾಯಾರಿಕೆ
ಬೆಂಕಿ ಕಸುವ ಕಳಚಲಿಲ್ಲ
ಉರಿಯಬೇಡ ಅನಲಿಕೆ !

ಬಾನು ಹೊಳೆಯದಿರದು ನಿತ್ಯ
ನಾನು ನೀನು ಮಲಗಿರೆ
ಏನು ನಿನ್ನ ಕೊಡುಗೆ ನೋಡು
ಇವುಗಳೆಲ್ಲ ನಡೆದಿರೆ !

Thursday, September 16, 2010

ನಾ ಡೊಂಕಾದರೆ ನಿನ್ನ ನಾಮ ಡೊಂಕೇ ವಿಠಲಾ ?



ನಾ ಡೊಂಕಾದರೆ ನಿನ್ನ ನಾಮ ಡೊಂಕೇ ವಿಠಲಾ ?


" ಅಣಾ ಹಬ್ಬ ಮುಗೀತಾ ? "

" ಹೂಂ ಮುಗೀತ್ ಕಣಪ್ಪಾ...ವಾರಾ ಕಳ್ದೋತಲ್ಲ ಎಂಗಿದೀಯ ? "

" ಏನಿಲ್ಕಣಣ್ಣಾ ಇಂಗೇ ಇವ್ನಿ...ಅಣಾ ಅಲ್ಲಾ ರಾಚಂಗೌನ ಮನೆಕ್ಕಳ್ಸವ್ರಂತೆ ? "

" ಏನ್ಲೇ ನಿಂಗೇನ್ ಬೇರೆ ಮಾತೇ ಇಲ್ವೇನ್ಲಾ ? ಇಂತದ್ದೇ ತಕಂಬತ್ತೀಯಲ್ಲ...ಹೌದು ಓದ್ರು ಹೇನಾಯ್ತೀಗ ? "

" ಪಾಪಾ ಅನ್ನುಸ್ಬುಡ್ತು ಕಣಣ್ಣಾ, ಏನೋ ಕೈ ಹಾಕ್ಬುಟ್ಟವ್ರೆ...ರೇಣುಕ್ನ ಥರ ಪಾಲ್ಟಿ ಪಾಲಿಟಿಕ್ಸ್ ಇರ್ಲಿಲ್ಲ....ಓಕ್ಕಳ್ಳಿ ಬುಡು ಇನ್ನೇನಾತದೆ ನೋಡನ "

" ಅಣಾ ಎಂತೆಂತಾ ಕುರಿ ಮೇಯ್ಸ್ಕಂಡ್ ಇದ್ದವರೆಲ್ಲ ಮಂತ್ರಿಗೊಳಾಗವ್ರೆ ನೀನು ಒಂದ್ಕಿತಾ ನಿಂತ್ಕೊಬಾರ್ದಾ ? "

" ಹೋಗಲೇ ಹೋಗೋ ನಾನೇನು ಬಿಡ್ತೀನಾ ಮುಂದಿನ್ಸಲ ದೇಸ್ಪಾಂಡೇ ಹಿಡ್ಕಂಡು ನಿಲ್ಲಾಕಿಲ್ಲಾ ನಾ ಗಂಡಸೇ ಹಲ್ಲಾ ಹನ್ನು "

" ಇಂಗ್ ಬಾ ನಂಗೂ ಬಾಳಾ ಖುಸಿ ಆಯ್ತು ಕಣಪ್ಪೋ ಅಣಾ ನನ್ ಮಾತ್ರ ಮರ್ತಾಕ್ ಬುಟ್ಟೀಯ ಏನಾರಾ ವರ್ಗಾವರ್ಗೀ ಯವಾರಾ ಬತ್ತದಲ್ಲ ಒಸಿ ಚಿಲ್ರೆ ಕಾಸಾದ್ರು ಮಾಡ್ಕಣಕೆ ಸಲ್ಪ ಎಲ್ಪ್ ಮಾಡು ಬುದ್ಧಿ ಇರ್ಲಿ "

" ನಿನ್ ಕಡೆ ಹೋಟರ್ಸ್ ಎಸ್ಟ್ ಮಂದಿ ಅವ್ರೆ ? "

" ಲೂಸ್ ಮಾದ, ಸೀನ, ಮಾದೇಸ, ಯೆಂಕಿ, ರಮೇಸ, ಸತೀಸು, ಕೇಬಲ್ ವಾಸು, ಆಪಲ್ ಮಂಜ, ಕೋಳಿ ಹನ್ಮಂತು.....ಓ ಸುಮಾರು ೨೦೦-೩೦೦ ಮಂದಿ ಆಗೋತರೆ "
" ಅವ್ರ್ನೆಲ್ಲಾ ಕರ್ಕಂಬಾ ಆಮೇಲೆ ಕೂತು ಮಾತಾಡವ "


--------------


" ಅಣಾ ತುಪ್ಪ ಹಾಲಪ್ಪಂದೇ ಅಂತೆ "

" ಹಯ್ಯೋ ಸಿವಾ ನಿಂಗಿನ್ನೂ ಹನ್ಮಾನನೇನ್ಲಾ ? ಹಾಲಪ್ಪ ಬೋ ಉಸಾರು ಆದ್ರೂ ತುಪ್ಪ ಬಿದ್ದು ೬-೭ ತಿಂಗ್ಳಾಗದೆ ಇನ್ನು ಅದ್ರ ಪತ್ತೆ ಮಾಡಾಕಾಯಕಿಲ್ಲ ಹಂತ ಕೂತ್ಗಂಡು ಈಗ ತಲೆ ಕೆರೀಕತವ್ನೆ "

" ಯಾಕೆ ಒಂದಷ್ಟು ಕಾಸ್ಕೊಟ್ಟು ತಪ್ಪಸ್ಕೊಳಾಕಿಲ್ವ "

" ಅದು ಮೊದ್ಲಾದ್ರೆ ನಡೀತಾ ಇತ್ತು... ಎಂಕಟೇಸು ಅದಕ್ಕೇ ಪ್ಲಾನ್ ಮಾಡಿದ್ದು... ಆ ವಯ್ಯಾ ಕೇಳೀ ಕೇಳೀ ಸುಸ್ತಾದ ಈವಯ್ಯ ಹಾಗ ಜಗ್ಲಿಲ್ಲ "

" ಈವಯ್ಯಂಗೆ ಇಂಗಾಗೋತದೆ ಹಂತ ಗೊತ್ತಾಗಿದ್ರೆ ಮತ್ತೇನಾರ ಮಾಡಿರ್ವ ಹಲ್ವೇನಣ ? "

" ಹಿಲ್ಲಾ ಕಣ್ಲಾ ಆ ಮನ್ಸನೂ ಸಣ್ ಕುಳ ಆಲ್ಲ..ಸಾನೆ ದೊಡ್ ರಕಂ ಕೇಳ್ಯವ್ನೆ ...ಅದ್ಕೇಯ ಈ ಪಾಲ್ಟಿ ಸುಮ್ಕೇ ಒದೀತಾ ಇತ್ತು "

" ಮುಂದೇನಾತದೆ ಹಂತೀಯ "

" ನೋಡ್ತಾಯಿರು ಏನಾತದೆ ಹಂತಾ ನಂಗೂ ಗೊತ್ತಾಯಾಕಿಲ್ಲ ... ಹೇನೋ ನಡೀತದೆ ಹಂತಾ ಕಾಯ್ತಿವ್ನಿ... ನಡೀಲಿ ಬುಡು ನಂಗೆ ನಿಂಗೆ ಒಂದ್ಕಿತಾ ಗುಂಡಾಕಂಡು ಮಜಾತಗಳಕಾದ್ರೂ ಇಸ್ಯಾ ಬೇಕಲ್ಲಪ್ಪಾ "

" ಹಂತೂ ಹಾಲಪ್ಪನ್ ತುಪ್ಪ ಜಾರಿ ರೊಟ್ಟೀಗ್ ಬಿತ್ತು ... ಕೇಸು ಹುಲ್ಟಾ ಅಂತೀಯ ಓಗ್ಲಿ ಬುಡು "

-------------

" ಅಣಾ ನಯನತಾರಾ ಮದ್ವೆ ಹಂತೆ ? "

" ಅಂಗಂದ್ರ ಯಾರ್ಲಾ ? "

" ತಮ್ಳು ಫಿಲ್ಮ್ನಾಗೈತಲ್ಲ ಹೀರೋಯಿಣಿ ಹವ್ಳು ಕಣಣ್ಣಾ "

" ಔದಾ ... ಯಾರನ್ ಮದ್ವೆ ಆಯ್ತವ್ಳಂತೆ ? "

" ಪ್ರಭುದೇವ ಹಿದಾನಲ್ಲ ಅವುನ್ನಾ "

" ಪ್ರಭುದೇವ ಕನ್ನಡದ ಹುಡ್ಗಾ ಅಲ್ವೇನ್ಲಾ ? "

" ಔದ್ಕಣಣ್ಣಾ...ನಮ್ಮ ಮೂಗೂರು ಸುಂದ್ರಪ್ಪೋರದಾರಲ್ಲ ಅವ್ರ ಮಗ "

" ಮತ್ತೆ ಆಗ್ಲಿ ಬುಡು ಒಳ್ಳೇದಾತಲ್ಲ "

" ಅದಲ್ಲ ಇಸ್ಯ ಕಣಣ್ಣಾ... ಹಿನ್ಮೇಲೆ ಆಯಮ್ಮ ಯಾವ ಸಿನ್ಮಾದಾಗೂ ನಟ್ಸೋ ಆಗಿಲ್ವಂತೆ "

" ಹಾಗ್ಲಿ ಹದಕ್ಕೇನಂತೆ ..ಲಗ್ಣ ಕಟ್ಟಿಸ್ಕ್ಯಂಡ ಮ್ಯಾಕೆ ಸುಮ್ಕೇ ಇರ್ಬೇಕಪ್ಪ "

" ನನ್ನಂತಾ ಪಡ್ಡೆ ಐಕ್ಳುಗಳ ಗತಿ ಏನಣಾ ...ಟೆಂಟಾಗೊಂದಷ್ಟು ತಮ್ಳು ಸಿನ್ಮಾ ನೋಡಿ ಬೋ ಖುಸಿಯಾತಿತ್ತು "

" ಓಗ್ಲಿ ಬಿಟ್ಟಾಕು ಒಂದೋದ್ರೆ ಇನ್ನೊಂದ್ ಬತ್ತದೆ ಹೆಂತೆಂತಾ ಫಿಗರ್ ಗಳವ್ರೆ ಯಾಕ್ತಲೆಕೆಡ್ಸ್ಕತೀಯ "


--------------

" ಊರ್ನಾಗೆ ರೌಂಡೊಡ್ದು ಕಾಸ್ ತಕಂಬರ್ಲಿಲ್ವೇನ್ಲಾ ಗಣೇಶನ ಇಡಾಕೆ ? "

" ಹೂನಣಾ ನಮ್ಮೈಕ್ಳು ಓಗ್ಯವೆ "

" ಹೆಷ್ಟಾಯ್ತು ಕಲೆಕ್ಸನ್ನು "

" ಹಿಲ್ಲೀಗಂಟ ೨೫೦೦೦ ಆಗೈತೆ...ಹಿನ್ನೂ ಬಾಳ ಬರೋದವೆ ಅಂದವ್ರೆ "

" ನೋಡಪಾ ಈ ಸಲ ನಂಗಂತೂ ಎಲ್ಡೆಲ್ಡ್ ದಿನ ಪಾಲ್ಟಿ ಬೇಕು...ಸಾನೆ ಬೇಜಾರಾಗೋಗದೆ "

" ನಮ್ಮೈಕ್ಳು ಬೆಂಗ್ಳೂರ್ಗೋಗಿ ಲೈವ್ ಬ್ಯಾಂಡ್ ನೋಡವ ಅಂತವ್ರೆ ಕಣಣ್ಣೋ "

" ಮತ್ತೆ ಹಿಲ್ಲೀ ಖರ್ಚು ಕಳ್ದ್ ಮ್ಯಾಕೆ ನಮ್ಕೈನಾಗೇನಿರತೈತೆ ಹಂತೀಯ ? "

" ಹೇನಣಾ ನೀ ಇಂಗಂತೀಯ ಹೇನಿಲ್ಲಾ ಹಂದ್ರೂ ಕೊನೇಪಕ್ಸ ೩೦ ಸಾವ್ರ ಉಳ್ಸ್ಕೋಬೇಕಣ...ಪಾಪ ಪಡ್ಡೆಗೋಳು ಕಾಯ್ತಾ ಅವೆ "

" ಏನೋ ಅಂಗೊ ಇಂಗೂ ಮಾಡಿ ಗಣೇಶನ್ನ ಇಟ್ಟಾಂಗ್ ಮಾಡ್ಬುಟ್ಟು ಡಂ ಅನ್ಸ್ಬುಡಿ ಅತ್ಲಾಗೆ...ಹಾಮೇಲೆ ನೋಡ್ಕಳವ "


--------------

" ಅಣಾ ಆಟೋ ಮೀಟರ್ನ ಟ್ಯಾಂಪರ್ ಮಾಡಿ ಕಾಸು ಎಗುರ್ಸುದ್ರೆ ಕಡ್ಡಾಯ ಜೈಲಂತೆ "

" ಏ ಗೊತ್ತದೆ ಕಣಪ್ಪಾ ಹಿವ್ರ ಹಾರಂಭ ಸೂರತನ ನಾವ್ಕಂಡಿಲ್ವಾ....ಯೋಳ್ತಲೇ ಇರ್ತರೆ... ಆಮ್ಯಾಕಾಮ್ಯಾಕೆ ’ಮಾಮೂಲಿ’ ಸುರುಹಚ್ಚುತ್ಲೂವೆ ಹೆಲ್ಲಾ ಬಿಟ್ಟೊತದೆ "

" ಹದ್ಕೂ ಮಾಮೂಲಿ ಬೇರೆ ಅಚ್ತಾರಾ "

" ಯಾವ್ದಕ್ಕೇ ಹಾಗ್ಲಿ ಸಿಕ್ಸೆ ಪಕ್ಸೆ ದಂಡ ಹಂತೆಲ್ಲಾ ಬಂದ್ಮ್ಯಾಗೆ ಮಾಮೂಲಿ ಐತೆ ಹಂತ್ಲೇ ಲೆಕ್ಕ.... ಸರಕಾರೀ ಕಾಯ್ದೆ ಮುಂದಗಡೀಕಿಂದ ಬಂದ್ರೆ ಮಾಮೂಲಿಯವ್ರ ಕಾಯ್ದೆ ಅದಾಗ್ಲೇ ಒಳೀಕೋಗಿ ಕೂತ್ಬುಟ್ಟಿರ್ತದೆ ಕಣ್ಲಾ... ಹೆಲ್ಲೋ ಸಾವ್ರಕ್ಕೊಂದ್ ಕೇಸ್ನ ಇಡ್ದೆ ಅಂತ ಮಾಡ್ತರೆ... ಟಿವಿನಾಗೆ ತೋರ್ಸದ್ಮ್ಯಾಕೆ ಬಿಟ್ಟಾಕ್ತರೆ ಹೆಲ್ಲಾ ನಾಟ್ಕ "

" ಹಲ್ಲಣಾ ಆಟೋದವ್ರು ಕರದ್ರೆ ಅಲ್ಲೀಗ್ ಬರಾಕಿಲ್ಲ ಹಿಲ್ಲೀಗ್ ಬರಾಕಿಲ್ಲ ಹಂತಾರಲ್ಲ ಇದ್ಯಾವ ನ್ಯಾಯ ? "

" ಅದೆಲ್ಲಾ ನಡೀತದೆ ಯಜಮಾನ್ ಅವ್ರಿಸ್ಟ ಬಂದ್ಕಡೆ ಹೋಯ್ಕತರೆ ನೀನ್ಯಾರು ಕೇಳಕೆ... ಬಂದ್ರೆ ಓಗು ಇಲ್ಲಾಂದ್ರೆ ಸುಮ್ನಾಕ್ಕೊ "

" ಅಣಾ ಬಸ್ರಿದೀರೆಲ್ಲಾ ಅರ್ಜೆಂಟ್ನಾಗಿರ್ತರೆ ಆ ಟೇಮ್ನಾಗೂ ಹಿವ್ರು ಕೈ ತಿರುಗುಸ್ಬುಟ್ರೆ ? "

" ಬಸ್ರಿದೀರ್ನ ಕೇಳ್ಬುಟ್ಟು ಆಟೋ ಮಡಗವರೇನ್ಲಾ ...ಪಾಪ ಹವ್ರಗೆ ಹವ್ರದೇ ಚಿಂತೆ....ನಿಂದೊಂದ್ ಗೋಳು "


--------------

" ಅಣಾ ಬೆಂಗ್ಳೂರಗೆ ಕುಡ್ಯಕೆ ನೀರಿಲ್ಲ ಹಂತ ಯೋಳಿದ್ಯಲ "

" ಔದು ಯೇನಾಯ್ತೀಗ ? "

" ನಮ್ಮಂಜವನಲ್ಲ ಅವ್ನ ಬಾಮೈದ ಸಾನೆ ನೀರ್ ಸಪ್ಲೈ ಬಿಜ್ನೆಸ್ ಮಾಡ್ತವ್ನಂತೆ "

" ಮಾಡ್ಲಿಬಿಡೋ ನಿಂಗೇನ್ ಒಟ್ಟೆಕಿಚ್ಚಾ ? "

" ಹೆಲ್ಲಾ ೨೦- ೨೦ ಲೀಟ್ರು ಬಾಟ್ಲಿ ತುಂಬ್ಸಿ ಮಡೀಕಂಡು ಒಂದಷ್ಟು ಸ್ಟಿಕ್ಕರ್ ಪ್ರಿಂಟಾಕ್ಸಿ ಇಟ್ಕೋಬುಟ್ಟವ್ನಂತೆ... ಬಾಟ್ಲಿಗೆಲ್ಲ ಸ್ಟಿಕ್ಕರ್ ಅಚ್ಚದು ಕಳ್ಸದು ಸ್ಟಿಕ್ಕರ್ ಅಚ್ಚದು ಕಳ್ಸದು "

" ಮಾಡ್ಲಿ ಬುಡಲೇ ಎಲ್ಲರೂ ಹದನ್ನೇ ಮಾಡ್ತಿರೋದು ನಿಂಗೊತಾಯಾಕಿಲ್ಲ ಹಸ್ಟೇಯ "

" ಹಲ್ಲಣಾ ಹೆಂತೆಂತಾ ಕಂಪ್ನಿ ಮಡಗವ್ರೆ ಹವ್ರೆಲ್ಲಾ ಅಂಗೇ ಮಾಡಾರಾ ? "

" ಕೋಕಾಕೋಲಾ ಪೆಪ್ಸಿನಾಗೆಲ್ಲಾ ಹೊಲಕ್ಕೊಡ್ಯೋ ಔಸ್ದೀನ ಸಣ್ಣಪ್ರಮಾಣ್ದಾಗೆ ಆಕ್ತರೆ... ಕೆಟ್ಟೋಗ್ದಿರ್ಲಿ ಹಂತಾವ ಹಿಂತಿಂತದ್ದೆಲ್ಲಾ ನಡ್ದೈತೆ ಹಿದ್ಯಾವ ಮಹಾ ಏಳು "

" ಹಂತೂ ಬಾಟ್ಲಿನಾಗೆ ತುಂಬ್ಸಿ ಸ್ಟಿಕ್ಕರ್ ಅಚ್ಚಿರೋ ನೀರಿನ್ ಕತೆಯೆಲ್ಲಾ ಇಂಗೇಯ ಹನ್ನು... ಕಾಸ್ ಮಾಡಕೆ ಬೇಜ್ಜಾನ್ ದಾರಿ ನೋಡು ಸಿಟಿನಾಗೆ "

" ಹೋಕ್ಕಳ್ಳಿ ಬಿಡು ಸಿವಾ ಜನ ಅಣೇಲ್ ಬರ್ದ್ರೆ ಬದೀಕತರೆ ಇಲ್ಲಾಂದ್ರೆ ಸತ್ಕತರೆ ಅದಕ್ಕೆಲ್ಲಾ ನೀನ್ಯಾಕಿಸ್ಟು ಬೇಜಾರಾಯ್ತೀಯ ಅಂತೀನಿ "

-------------

" ಅಣಾ ಆ ಮಂಗ್ಳಿ ಹವ್ಳಲ್ಲಾ ಹಳ್ವ ಬಿಜ್ನೆಸ್ ನೋಡ್ದಾ "

" ಹೇನಪ್ಪಾ ಹವ್ಳ ಬಿಜ್ನೆಸ್ಸು ಮಾಮೂಲಿ ಮಾಂಸದ್ ದಂದೆನಾ ? "

" ಯೇ ಇಲ್ಕಣಣಾ ಹದು ಬೇರೆ ಇಸ್ಯ ಆತರ ಮಾಮೂಲಿ ಇಸ್ಯ ಹಲ್ಲ "

" ಅಂಗಂದ್ರೇನ್ಲಾ ? "

" ಆಯಮ್ಮ ಮದ್ವೆ ಆಗೋದು ಗಂಡನ್ ಮೇಲೆ ಸುಮ್ಸುಮ್ನೇ ಡೌರೀ ಕೇಸ್ ಜಡ್ಯದು ...ಸ್ವಲ್ಪ ದಿನ ಆಗುತ್ಲೂವೆ ಒಟ್ಟಿಗೇ ಇರಕಾಯಾಕಿಲ್ಲ ಹಂತ ಕೊರ್ಟ್ಗೋಗಿ ಇಚ್ಚೇದ್ನ ಕೇಳದು....ಪರಿಹಾರ ಕೊಡ್ಸಿ ಅನ್ನದು"

" ಈಗ ಎಸ್ಟನೇ ಗಂಡ "

" ನಾಲ್ಕ್ನೇದೋ ಹೈದ್ನೇದೋ ಇರ್ಬೋಕು....ನಂಗೂ ಸರಿ ಗೊತ್ತಿಲ್ಲ...ಅವ್ರು ದೂರ್ದ ಊರ್ನಾಗೆ ಗಂಡ್ ಹುಡ್ಕದು ಪ್ರತೀಸಲಿನೂವೆ "

" ಹಯ್ಯೋ ಇದೆನ್ಲಾ ಹಂತಾ ಮಾದೊಡ್ಡ ಇಸ್ಯಾ ? "

" ಪಾಪ ಆ ಗಂಡಾದೋನ್ಗೆ ಎಸ್ಟು ತೊಂದ್ರೆ ಯೋಳು ....ಕಾಯ್ದೆ ಐತೆ ಹಂತಾ ಇಂಗೂ ಮಾಡಾರಲ್ಲ ಜನ ಇದಕ್ಕೇನಂತ್ಯ ನೀನು ? "

" ಔದಪ್ಪಾ ಕೆಲ್ವು ಕಾಯ್ದೇನೇ ಹಲವ್ರೀಗೆ ಮುಳುವಾಗದೆ ಎನ್ಮಾಡುದು ಸಮಾಜ ಹಿಂತವ್ರ ಕಂಡ್ರೆ ಸರ್ಯಾಗಿ ಇಡ್ದು ಬಡ್ದು ಮಾಡ್ಬೇಕಪ್ಪ ಅಸ್ಟೇಯ ಇನ್ನಿರಾದು "

-------------

’ ಕುಮ್ಟಾ ಊರ್ ಗೊತ್ತೈತೇನಣಾ ನಿಂಗೆ ? "

" ಯಾಕ್ಲಾ ಬಡ್ಸಾಮಿ ? "

" ಹಲ್ಲಿ ಈಡಿ ಭಟ್ ಹಂತನ್ನೋ ಪತ್ರುಕರ್ತುನ್ನಾ ಸುಮ್ಸುಕ್ಕೇ ಎತ್ಗೊಂಡೋಗಿ ಒಳಗಾಕಿ ತ್ರಾಸಕೊಟ್ರಂತೆ ಸಬ್ ಇನ್ಸ್ಪಟ್ರು "

" ಯಾಕ್ಲಾ ಅಂತದೆಂತಾ ಆಗೋಗದೆ ಹಲ್ಲಿ ? "

" ಹೇನಿಲ್ಲಾ ಹೆಲ್ಲಾ ಜಾತೀ ರಾಜ್ಕೀಯ ಎಚ್ಬುಟದೆ....ಒಂದೆರಡು ಹೆಂಗುಸ್ರಿಂದ ಸುಮ್ಸುಮ್ಕೇ ಕಂಪ್ಲೇಟ್ ಕೊಡ್ಸ್ಕ್ಯಂಡು ರಾದ್ಧಾಂತ ಮಾಡವ್ರೆ "

" ಹಲ್ಲೂ ಈ ನಮ್ ಮಂಗ್ಳಿ ಥರದ ಎಂಗ್ಸ್ರೂ ಅದಾರೇನ್ಲ ? "

" ಯಾಕಿಲ್ಲ ? ಇದ್ಕೂ ಜೋರ್ನ ಎಂಗುಸ್ರವ್ರೆ ಹಂತಾ ತಿಮ್ಮ ಯೋಳ್ದ, ಪಾಪ ಆ ಈಡಿಭಟ್ಟು ತಾನಾಯ್ತು ತನ್ ಕೆಲ್ಸಾಯ್ತು ಅಂದ್ಕಂಡಿದ್ದ, ಹಂತೋನ ಬೆನ್ನತ್ತಿ ಬೈಕ್ ಬೀಳ್ಸಿ ಎತ್ತಾಕೊಂಡೋಗಿದ್ರಲ್ಲ ಹದ್ಕೇಯ ಈಗ ರಜಧಾನೀ ತಂಕ ಕೇಸು ಬಂದದಂತೆ...ಸದ್ಯ್ ಸಬ್ ಇನ್ಸ್ಪಟ್ರುನ ಅಮಾನತ್ ಮಾಡ್ಯವ್ರೆ ಹಂತಿದ್ನಪ್ಪ "

" ಮಾಡ್ಲಿ ಬುಡು ಹಿಲ್ಲೇನ್ ಕಮ್ಮಿ ಐತಾ ಬೆಂಗ್ಳೂರ್ ಎಂಬೋ ಬೆಂಗ್ಳೂರಾಗೇ ಹುಡುಗನ ಕಡೆ ದುಡ್ ತಿನ್ಕೊಂಡು ನಂದಿನಿ ಲೇ ಔಟ್ ಠಾಣೆ ಮಂದಿ ಕಳ್ದ್ಸಲ ಅದ್ಯಾವ್ದೋ ಹುಡ್ಗೀ ಲವ್ ಕೇಸ್ನ ಗಾಳಿಗೆ ತೂರಿದ್ರಲ್ಲ...ಹಂಥೋರ್ಗೆಲ್ಲಾ ಸಿಕ್ಸೆ ಆಗ್ಬೇಕು ಸಿವಾ ಹಿಲ್ಲಾಂದ್ರೆ ಸುಮ್ಕೇ ಕಾರ್ಯಾಂಗ ಹನ್ನೋದ್ಯಾಕೆ ? "

" ಹಂತೂ ಬೇಲಿನೇ ಹೊಲ ಮೇಯೋ ಕಾಲ ಹನ್ನು "

" ಹೊತ್ತಾತದೆ ಮುಂದಿನವಾರ ಸಿಗುಮು....ಮತ್ತೆ ನಾ ಹೇಳಿದ್ ತಂದ್ಯೇನ್ಲಾ ? "

" ಅಣಾ ...ಹೂತಿಟ್ ಜಾಗ ಮರ್ತ್ಬುಟ್ಟು ತಿಮ್ಮೇಗೌಡ ಹುಡೀಕಂಡ್ ಕುಂತವ್ನೆ "

" ಓಗ್ಲಿ ಬುಡು ಮುಂದಿನ್ವಾರನಾದ್ರೂ ಮರೀಬ್ಯಾಡ ಸಾನೆ ಮೈಕೈನೋವು...ಒಂದಪಾ ಸಲ್ಪ ಏರಿಸ್ಕ್ಯಂಡು ಗಮ್ಮತ್ತಾಗಿ ಲೋಕಾನೆ ಮರ್ತು ಒಂದಸ್ಟೊತ್ತು ಇದ್ರೇನೆ ಮನ್ಸೀಗೆ ನೆಮ್ದಿ "

" ಆಯ್ತಣೋ ನಾ ಓಯ್ತಿದೀನಿ ಬರ್ಲಾ ? "

" ಹಾಂ "

Wednesday, September 15, 2010

ಪಿರೂತಿ ಮಾಡ್ಲೇನ ಚಿನ್ನ?

ಚಿತ್ರ ಋಣ : ಅಂತರ್ಜಾಲ

ಪಿರೂತಿ ಮಾಡ್ಲೇನ ಚಿನ್ನ?

ಪಿರೂತಿ ಮಾಡ್ಲೇನ ಚಿನ್ನ ನಿನ್ನ
ಪಿರೂತಿ ಮಾಡ್ಲೇನ ?

ಕಾರಿಲ್ಲಾ ಬಂಗ್ಲಿಲ್ಲಾ ಬರಿಗೈ ದಾಸಾ ನಾ
ವಾರೀ ಕಣ್ಣಾಗೊಂದಷ್ಟ್ ನಿನ್ ಕಂಡೇನ
ವಾರಕ್ಮುಂಚೇನೆ ಮನಸ್ಕದ್ಯಲ್ಲ ನೀ
ಯಾರ್ಗೂ ಹೇಳ್ಬ್ಯಾಡ್ ಮತ್ತ ಹಿಂಗೈತಿ ಅಂತ !

ಸಾಲೀ ಕಲಿತಿಲ್ಲ ತಗಿ ವಾಲಿ ಓದಿಲ್ಲ
ನೀಲೀ ಬಣ್ಣದ ಬುಸ್ ಕೋಟು ನನ್ನಾಸ್ತಿ
ಕಾಲ ಹೊಸ್ತಾಗಿದ್ರು ನಾ ಮಾತ್ರ ಹಳ್ಬ
ಗಾಲಿ ಎರಡಾದ್ರೆ ಹ್ಯಾಂಗಾದ್ರೂ ಬದ್ಕೋಣ !

ಅದ್ಯೇನ್ ಮಿಂಚು ಅಂತೀಯ ನಿನ್ನ ಕಣ್ಣಾಗ
ಉದ್ಯಾನ್ ಎಕ್ಸ್ ಪ್ರೆಸ್ ರೈಲು ಸುರ್ರಂತ ಸರಿದಾಂಗ
ಉದ್ಯೋಗ ನಾ ದಿನಾ ಹೀಂಗ ಅದೂಇದೂ ಮಾಡಾಂವ
ಬಾಧ್ಯಸ್ಥಳಾಗ್ತೀಯೇನ ನನ್ನ ಬದ್ಕೀಗ ?

ಪ್ರತಿನಿತ್ಯ ನೀ ಆ ಕಡಿ ಹೋಗ್ತೀಯಲ್ಲ
ವೃತಗಿತ ಐತೇನ್ ಅಲ್ಲಿ ಅದ್ಯಂತಾ ಕೆಲ್ಸ ?
ದೃತರಾಷ್ಟ್ರನಂತೆ ನನ್ ನೀ ನೋಡ್ವಲ್ಯಾಕ ?
ಧೃತಿಗೆಟ್ಟಂವ ಇಂವ ಅಂತ ತಿಳ್ದೀಯೇನ್ ಮತ್ತ ?

ನಿಂಗೀ ಅಂದ್ ಕರೀಲೇನು ಪಿರೂತಿಯಿಂದಾನ ?
ಅಂಗಳ್ದಾ ತುಂಬೆಲ್ಲ ನಿನ್ ಚಿತ್ರ
ನೋಡೇನ !
ಭಂಗಬರದಂಗ ಬಾರ ನೋಡ್ತೀನಾಗಾಗ
ನಂಗೊಮ್ಮಿ ದ್ಯಾವ್ರು ಹರಸಿಲ್ಲ ಅಂವ್ಗೇನೈತಿ ರೋಗ ?

ಅಣ್ಣಾ ಅನಬ್ಯಾಡ್ ಮತ್ತ ತಂಗಿ ನೀನಲ್ಲ
ಸಣ್ಣ್ಕಿದ್ರೂ ನನ್ನಾಕಿ ನೀನೇ ಬಿಲಕುಲ್ಲ !
ಸೊಣ್ಕ್ಮಾತಾಗ ಸಿಟ್ಟಾಗಿ ಸಿಡುಕ್ಯಾಡಬ್ಯಾಡ
ಬಣ್ಣ ಹಚ್ತೀಯೇನ ನನ್ ಬದಕ್ನಾಗ ನೋಡ !

Tuesday, September 14, 2010

ಗಣೇಶ ಬಂದ!!


ಗಣೇಶ ಬಂದ!!

ಸಮಯ ಎಲ್ಲವನ್ನೂ ಕೂಡುತ್ತದೆ, ಕಳೆಯುತ್ತದೆ ಮತ್ತು ಭಾಗಿಸುತ್ತದೆ, ಒಂದರ್ಥದಲ್ಲಿ ಸಮಯವೇ ಎಲ್ಲಕ್ಕೂ ಕಾರಣ ಎಂದರೆ ತಪ್ಪಾಗಲಾರದು ಅಂತ ನನಗಂತೂ ಅನಿಸುತ್ತಿದೆಯಪ್ಪ. ಗಣೇಶನ ಹಬ್ಬಕ್ಕೆ ಊರಿಗೆ ಹೋಗಿದ್ದೆನಲ್ಲ, ಇದ್ದ ಮೂರೇ ದಿನದಲ್ಲಿ ಎರಡು ದಿನ ಹಬ್ಬದ ಆಚರಣೆ-ಪೂಜೆ-ಪುನಸ್ಕಾರ,ಅತಿಥಿಸತ್ಕಾರ, ಮನೆಜನರೊಟ್ಟಿಗೆ ಹರಟುವಿಕೆ ಇದ್ರಲ್ಲೇ ಕಳೆದುಹೋಯಿತು. ಇನ್ನುಳಿದ ಒಂದೇ ದಿನ ಹತ್ತೆಂಟು ಕಡೆ ಸುತ್ತಾಡಿದೆವು. ಬಾಲ್ಯದಲ್ಲಿ ನೋಡಿದ ಹಲವು ಸ್ಥಳಗಳ ಮತ್ತು ಜನರ ಸ್ಥಿತಿಗತಿಯಲ್ಲಿ ಬದಲಾವಣೆಯಾಗಿಬಿಟ್ಟಿದೆ ! ಕೆಲವು ಸ್ನೆಹಿತರು ಮುದುಕರಂತೇ ಕಂಡರೆ ಇನ್ನು ಕೆಲವರು ತಲೆಯಮೇಲೆ ಬಹಳ ಪ್ರತಿಷ್ಠೆಯ ಭಾರ ಹೊತ್ತಿದ್ದಾರೆ. ಕೆಲವರು ಮದುವೆಯಾಗಿದ್ದರೆ ಇನ್ನೂ ಕೆಲವರಿಗೆ ಮದುವೆ-ಮನಕಾಲ ಏನೂ ಇಲ್ಲ. ಮದುವೆ ಆದ ಕೆಲವರಿಗೆ ಮಕ್ಕಳ ಭಾಗ್ಯವಿಲ್ಲ! ಮದುವೆ ಆಗದ ಕೆಲವರಿಗೆ ಇನ್ನು ನೇರ ವಾನಪ್ರಸ್ಥಾಶ್ರಮವೇ ಗತಿ!

ಹಿರಿಯ ಸಾಹಿತಿ ಮಿತ್ರರಾದ ಶ್ರೀ ಜಯಂತ್ ಕಾಯ್ಕಿಣಿಯವರ ಮನೆಕಡೆ ಹೊಗಿದ್ದೆ ಅಂದರೆ ಗೋಕರ್ಣಕ್ಕೆ ಅಂತ! ಅಲ್ಲಿ ಅವರ ಕುಟುಂಬದ ಪೈಕಿ ಯಾರಿದ್ದಾರೋ ಗೊತ್ತಿಲ್ಲ, ಆರಾಧ್ಯ ಶ್ರೀ ಇಡಗುಂಜಿ ಮಹಾಗಣಪತಿಯ ದರ್ಶನ ಮಾಡಿದೆ. ಮೂರ್ನಾಲ್ಕು ಸನ್ಯಾಸಿಗಳನ್ನು ಭೇಟಿ ಮಾಡಿದೆ: ಅವರೆಲ್ಲಾ ಸದ್ಯ ಚಾತುರ್ಮಾಸ್ಯ ನಡೆಸುತ್ತಿದ್ದಾರಲ್ಲ, ಈ ಕಾಲಘಟ್ಟದಲ್ಲಿ ಅವರ ಸೇವೆ, ದರ್ಶನ ಬಹಳ ಪುಣ್ಯಪ್ರದವೆಂಬುದು ಹಲವರ ಅಂಬೋಣ. ನಾಸ್ತಿಕರಿಗೆ,ವಿತಂಡವಾದಿಗಳಿಗೆ ಬಹಳ ಬೇಸರದ ಸಂಗತಿ ಇದಾದರೂ ನಾವು ಸದ್ಯ ನಾಸ್ತಿಕರಲ್ಲ, ಹೀಗಾಗಿ ನಮ್ಮ ’ಒಳಗಿನ ಕರೆ’ ಮನ್ನಿಸಿ ಹಾಗೆ ನಡೆದಿದ್ದೆವು.

ಬೆಂಗಳೂರಿನಲ್ಲಿ ನಾವು ಬ್ಲಾಗಿಗರು ಸ್ನೇಹಿತರು ಭೇಟಿಯಾದದ್ದಕ್ಕಿಂತ ಹೆಚ್ಚಿನ ಸಂತೋಷದ ವಿಷಯವೆಂದರೆ ನಾನು ನನ್ನ ಬಾಲ್ಯ ಸ್ನೇಹಿತರನೇಕರನ್ನು ಅಪರೂಪಕ್ಕೊಮ್ಮೆ ಮುಖತಃ ಸಂವಹಿಸಲು ಸಾಧ್ಯವಾಯಿತು.ಸಿಕ್ಕ ಕೆಲವೇ ನಿಮಿಷಗಳ ಕಾಲ ನಾವು ನಮ್ಮ ಬಾಲ್ಯಲೋಕದಲ್ಲಿ ವಿಹರಿಸಿದೆವು. ಓದಿನಲ್ಲಿ ನಮ್ಮಲ್ಲಿದ್ದ ಕಾಂಪಿಟಿಶನ್, ಆಶುಭಾಷಣ ಸ್ಪರ್ಧೆ, ಪ್ರತೀವರ್ಷ ಮಾಸ್ತರು ನಡೆಸುವ ’ಕೊಡೆ ಮೇಲೋ ಕಂಬಳಿಮೇಲೋ’ ಚರ್ಚಾಕೂಟ, ಆಗಷ್ಟ್ ೧೫ ರ ಪ್ರಭಾತ್ ಪೇರಿ ಹಾಡುಗಳು, ಸ್ವಾತಂತ್ರ್ಯ ಸೇನಾನಿಗಳಾದ ಮಹತ್ಮಾಗಾಂಧಿ, ಲಾಲಾ ಲಜಪತರಾಯ್, ಲೋಕಮಾನ್ಯ ತಿಲಕ್, ಸರ್ದಾರ್ ಪಟೇಲ್, ಮಂಗಲಪಾಂಡೆ, ಝಾನ್ಸಿರಾಣಿ ಲಕ್ಷ್ಮೀಬಾಯಿ ಮುಂತಾದ ಹಲವರ ಕುರಿತು ಹಿರಿಯರಿಂದ ದುಂಬಾಲು ಬಿದ್ದು ಬರೆಸಿ ಬಾಯಿಪಾಠ ಮಾಡಿಕೊಂಡ ಭಾಷಣಗಳನ್ನು ಪ್ರಸ್ತುತಪಡಿಸಲು ಮುಂದಾಗುತ್ತಿದ್ದೆವು. ಕೆಲವೊಮ್ಮೆ ಕೆಲವನ್ನು ನಿಭಾಯಿಸುವ ಪೂರ್ವ ನಮ್ಮ ಹೆಸರನ್ನು ಕರೆಯುವ ಮೊದಲೇ ನಮಗೆ ಪುಕುಪುಕು ಶುರುವಾಗುತ್ತಿತ್ತು! ಭಾಷಣ ನಿಜವಾಗಿಯೂ ನಮಗೆ ಮರೆತುಹೋಗಿರದಿದ್ದರೂ ಸಭಾಕಂಪನದಿಂದ [ನರ್ವಸ್ನೆಸ್] ಕೈಕಾಲೆಲ್ಲಾ ಸಣ್ಣಗೆ ತರಗುಡಲು ಶುರುವಾಗಿ ಉಚ್ಚೆಬರುವಂತೇ ಭಾಸವಾಗಿ ಇನ್ನೇನೇನೋ ಆಗಿ ಬಹಳ ಚಡಪಡಿಸುತ್ತಿದ್ದೆವು. ಆಡಲಾರದ ಅನುಭವಿಸಲಾರದ ನಮ್ಮ ಅಂದಿನ ಸ್ಥಿತಿಯನ್ನು ಈಗ ನೆನೆಸಿಕೊಂಡರೆ ತುಂಬಾ ನಗು ಉಕ್ಕಿಬರುತ್ತದೆ. ಆಗಿನ ಆ ನಮ್ಮ ಅನಿವಾರ್ಯ ಸಹಜ ಶ್ರಮದಿಂದ ಈಗ ನಮಗೆ ಬಹಳ ವ್ಯಕ್ತಿಗಳ ಬಗ್ಗೆ ತಿಳುವಳಿಕೆ ಬರಲು ಸಾಧ್ಯವಾಯಿತು!

ಊರಕಡೆ ತೋಟತುಡಿಕೆಗಳಲ್ಲಿ ಕಾಲಹಾಕದೇ ಮತ್ತು ಕಾಲನ್ನೂ ಹಾಕದೇ ಬಹಳದಿನಗಳೇ ಸಂದಿದ್ದವು. ನಮದೇನಿದ್ದರೂ ಈಗ ಪ್ಯಾಕೇಜ್ ಟೂರ್ ಥರದ ವ್ಯವಸ್ಥೆ: ಕೆಲಸವಿರುವಾಗ ಮುಂಚಿನ ರಾತ್ರಿ ಬಸ್ಸನ್ನೋ ಕಾರನ್ನೋ ಏರುವುದು, ಮಾರನೇ ದಿನ ಬೆಳಿಗ್ಗೆ ಊರಲ್ಲಿದ್ದು ಸ್ನಾನ,ತಿಂಡಿ,ಕೆಲಸ,ಊಟ ಹೀಗೇ ಗಡಿಬಿಡಿಯಲ್ಲಿ ಎಲ್ಲವನ್ನೂ ಮುಗಿಸಿ ಇನ್ನೇನು ಯಾರಾದರೂ ನಾವು ಬಂದ ಸುದ್ದಿತಿಳಿದು ಪ್ರೀತಿಯಿಂದ ಮಾತನಾಡಿಸಲು ಬರುವಷ್ಟರಲ್ಲಿ ಈ ಆಸಾಮಿ ನಾಪತ್ತೆ>> ವಾಸಪ್ ಬೆಂಗಳೂರಿಗೆ ಹೊರಟಾಗಿರುತ್ತಿತ್ತು! ಹೀಗಾಗಿ ಊರಿಗೆ ಹೋದರೂ ನೀರಿಗೆ ಹೋಗದ ನಾರಿಯರೂ ಇದ್ದಾರೆ ಮತ್ತು ಪುರುಷರೂ ಇದ್ದಾರೆ ! ಸ್ವಾಭಾವಿಕವಾಗಿ ಹುಟ್ಟಿನ ಜಾಗದಲ್ಲಿ, ಆ ಊರಲ್ಲಿ, ಅಲ್ಲಿನ ನೆಲ-ಜಲ,ಜನವಸತಿ ಇವನ್ನೆಲ್ಲ ಬಹಳ ಹತ್ತಿರದಿಂದ ನೋಡಿ ಅದರ ನಡುವೆ ನಾವೂ ಒಬ್ಬೊಬ್ಬರಾಗಿ ಬೆಳೆದು ಬದುಕಿದ ನಮಗೆ ಅಲ್ಲಿಯೇ ನಮ್ಮ ಹೊಕ್ಕುಳ ಚೊಟ್ಟನ್ನು [ಹೊಕ್ಕುಳಬಳ್ಳಿಯನ್ನು] ಹೂತಿದ್ದರಿಂದ ಆ ಪರಿಸರದ ಸ್ನೇಹವನ್ನು ಮರೆಯಲು ಅಸಾಧ್ಯ. ಒಂದು ಹೆಚ್ಚೋ ಕಮ್ಮಿಯೋ ತುಂಬು ಗ್ರಾಮ್ಯ ಜೀವನದಲ್ಲಿ ಬೆಳೆದುಬಂದ ಕಂದಮ್ಮಗಳು ನಾವಾಗಿದ್ದರಿಂದ ಅಲ್ಲಿನ ಹಂಬಲ ನಮ್ಮನ್ನು ಬೆಂಬಿಡದೇ ಅಂಟಿಕೊಂಡೇ ಬಂದಿರುತ್ತದೆ. ತೋಟದಲ್ಲಿ ಒಂದೇ ಒಂದು ರೌಂಡ್ ಹಾಕಿಬಿಟ್ಟರೆ ಸ್ವರ್ಗಸಮಾನ ಸುಖ ನಮಗೆ ! ಅದ್ರಲ್ಲೂ ಬಾಲ್ಯಸಖರು ಸಿಕ್ಕರೆ ಕೇಳಬೇಕೇ !

ಕಾಗೆ-ಗುಬ್ಬಿ ಎಂಜಲುಗಳ ಕಾಲ ಮುಗಿದು ಹೋಗಿ, ಸ್ನೇಹಿತರುಗಳಲ್ಲಿ ಹಿರಿಯರ ತಲೆ ಬೋಳಾಗಿ ನವಿಲುಕೋಸಿನ ರೀತಿ ಮೂರ್ನಾಲ್ಕು ಕೂದಲಿನಿಂದ ಚಂದಕಂಡರೆ, ಕಿರಿಯ ಸ್ನೇಹಿತರ ಅಂದಿನ ಚೆಡ್ಡಿಯೆಲ್ಲಾ ಹಳತಾದ ಮೇಲೆ ಇಂದೀಗ ಬರ್ಮುಡಾಗಳು ಬಂದಿವೆ! ಇರುವ ಕೆರೆ-ತೊರೆಗಳು ಬತ್ತಿ, ತಿಳಿನೀರಿನ ಬಾವಿಗಳು ಕೊಳೆಕಲ್ಮಶಗಳಿಂದ ತುಂಬಿವೆ. ನನ್ನ ಸಹಪಾಠಿಗಳ ಬಾಯಿಗಳಲ್ಲಿ ಎಲ್ಲೋ ಅಪರೂಪಕ್ಕೆ ಹಿರಿಯರ ಕಣ್ತಪ್ಪಿಸಿ ಅರಳುತ್ತಿದ್ದ ತಂಬಾಕು ರಹಿತ ಎಲೆಯಡಿಕೆ ಇಂದು ಗುಟ್ಕಾದ ಮಟ್ಕಾಗಳಂತೆ ರಾರಾಜಿಸುತ್ತಿವೆ! ಕೆಲವ್ರು ದಪ್ಪಗೂ ಇನ್ನು ಕೆಲವ್ರು ತೆಳ್ಳಗೂ ಇನ್ನೂ ಹಲವರು ಉದ್ದದ್ದ ಅಡ್ಡಡ್ಡ ಹೇಗೇಗೋ ಅಂತೂ ಬೆಳೆದಿದ್ದಾರೆ. ಕೆಲವರು ವಕ್ರತುಂಡರಾದರೆ ಇನ್ನೂ ಕೆಲವರು ಪ್ಲಾಸ್ಟಿಕ್ ಹಲ್ಲುಧಾರಿಗಳು, ಕೆಲವರು ಹುಳಬಿದ್ದ ಹಲ್ಲನ್ನು ಹಾಗೇ ಇಟ್ಟುಕೊಂಡು ಹಳೆಯ ಸಂಪ್ರದಾಯವನ್ನು ಅನೂಚಾನವಾಗಿ ಮುನ್ನಡೆಸುವಂತೇ ಕಾಣಿಸುವ ಮಹಾನುಭಾವರು! ನಮ್ಮ ಓರಗೆಯ ಹುಡುಗಿಯರು ಮದುವೆಯಾಗಿ ಎಲ್ಲೆಲ್ಲಿಗೋ ಹೋಗಿ ಮೂವತ್ತು ವಯಸ್ಸಿನ ಒಳಗೇ ನಾಲ್ಕಾರು ಮಕ್ಕಳನ್ನು ಹಡೆದು ಸಂತಾನಲಕ್ಷ್ಮಿಯರಾದರೆ ಇನ್ನು ಕೆಲವರು ಪೇಟೆ-ಪಟ್ಟಣ ಸೇರಿ ’ನಾವು ಇಬ್ಬರು ನಮಗೊಬ್ಬರು’ ಎನ್ನುತ್ತಾ ಹಡೆದ ಒಂದನ್ನೇ ಸರಿಯಾಗಿ ಸಾಕಲು ಪೀಕಲಾಡುವ ಸ್ಥಿತಿಯಲ್ಲಿದ್ದಾರೆ. ಅವರಿವರ ಬಾಯಲ್ಲಿ ಒಬ್ಬೊಬ್ಬರದೂ ಕಥೆ ಕೇಳುವಾಗ ನಾನು ನಿಮಗೆ ಹಲವು ಕಥೆ ಬರೆದು ಒಪ್ಪಿಸಿಯೇನು ಎನ್ನುವ ಹೊಸ ಹುಮ್ಮಸ್ಸು ಬಂದು ಬಿಟ್ಟಿದೆ! ಓ ದೇವರೇ ಆ ಬಾಲ್ಯ ಮತ್ತೆ ಮರಳಿ ಬಾರದೇ ?

ಊರಿಗೆ ಹೋಗುವಾಗ ಬಸ್ಸಿನಲ್ಲಿ ಹೋದರೆ ಬಹಳ ಮಜಸಿಗುವುದು ಗ್ಯಾರಂಟಿ! ತಮಗೆಲ್ಲಾ ಇದು ತಿಳಿಯದೇ ಇರುವ ವಿಷಯವೇ ? ಒಮ್ಮೆ ನಾವು ಪ್ರಯಾಣಿಸುವಾಗ ಪುಟ್ಟ ಕಂದಮ್ಮ ಒಬ್ಬಳು ಹಿಂದಿನ ಸೀಟಿನಲ್ಲಿ ಹಾಡುತ್ತಿದ್ದಳು-
’ ಶ್ರೀಚಕ್ರಧಾರಿಗೇ ಶಿವಲಾಲಿ ಲಾಲಿ .....ಹಾಲ್ಗೆನ್ನೆ ಕೃಷ್ಣನಿಗೆ ’ ಅವಳ ಮುಗ್ಧ ಮನಸ್ಸಿಂದ ತಪ್ಪು ತಪ್ಪಾಗಿ ತೊದಲು ಭಾಷೆಯಲ್ಲಿ ಉಚ್ಚರಿಸಲ್ಪಟ್ಟ ಹಾಡನ್ನು ಕೇಳುವುದೇ ಒಂದು ಥ್ರಿಲ್ಲಿಂಗ್ ಇಫೆಕ್ಟ್ ಆಗಿತ್ತು. ಈಗ್ ಬಿಡಿ ಥ್ರಿಲ್ಲೇ ಥ್ರಿಲ್ಲು! ತೂಗುಯ್ಯಾಲೆಯಾಡುವ ಅಟ್ಟದಮೇಲೆ ಮೇಲೆ ಮಲಗಿಸಿಕೊಂಡು ಒಬ್ಬನೇ ಚಾಲಕನಿಂದ ಚಲಾಯಿಸಲ್ಪಟ್ಟು ಆತ ಓಡಿಸುವ ವೇಗದಲ್ಲಿ ಕಾಣದ ರಸ್ತೆಯ ಬಾವಿಗಳಲ್ಲಿ ಚಕ್ರಗಳು ಬಿದ್ದೂ ಎದ್ದೂ ಹೋರಾಡುತ್ತ ಅಂತೂ ಸೇರಬೇಕಾದ ಸ್ಥಳವನ್ನು ಸೇರಿನಿಂತಮೇಲೇ ’ಉಸ್ಸಪ್ಪಾ ದೇವರೇ ಅಂತೂ ತಂದು ಬಿಟ್ಯಲ್ಲಪ್ಪಾ ’ ಎಂದುಕೊಂಡು ಎದೆಭಾರ-ತಲೆನೋವು ಕಮ್ಮಿಮಾಡಿಕೊಳ್ಳುವ ಪ್ರಸಂಗ! ಹಿಂದೆ ಕೇವಲ ೩೬ ರೂಪಾಯಿಗೆ ಕೆಂಪುಡಬ್ಬದಲ್ಲಿ ಆರಾಮವಾಗಿ ಪ್ರಯಾಣಿಸಿದ್ದ ಹಿರಿಯ ಸ್ನೇಹಿತರೊಬ್ಬರು ಹೇಳಿದರು " ಅಲ್ಲಾ ಮಾರಾಯ ಇದು ದುಡ್ಡು ಕೊಟ್ಟು ಗ್ರಹಚಾರ ತಂದ್ಕೊಳು ಪರಿಸ್ಥಿತಿ ನೋಡು " ನೀವೇ ನೋಡಿ ನಮ್ಮ ಬಸ್ಸುಗಳಲ್ಲಿ ಎಷ್ಟು ಮಾರ್ಪಾಟುಗಳಾಗಿವೆ ಅಂತ. ನಮ್ಮ ಕಾಲಮಾಪನದಲ್ಲೂ ಅಷ್ಟೇ ಬದಲಾವಣೆಯಾಗಿದೆ! ನಮಗೆ ಇವತ್ತಿನ ಆಫೀಸು ಕೆಲಸಕ್ಕೂ ಹೋಗಬೇಕು, ರಾತ್ರಿ ಎಂಟುಗಂಟೆಗೆ ಅಫೀಸಿನಿಂದ ಮರಳಿ ದಸಬುಸನೆ ಒಂಚೂರು ತಿಂದು, ಕಾದು ಕುಳಿತ ಮನೆಯವರೊಟ್ಟಿಗೆ ಶಾಸ್ತ್ರಕ್ಕೊಂದು ಹೊಸ ಪ್ಯಾಂಟು-ಶರ್ಟು ಸಿಕ್ಕಾಕಿಕೊಂಡು ಓಡುತ್ತಾ ಏದುಸಿರುಬಿಡುತ್ತಾ ಬಸ್ ಬರುವ ಜಾಗ ತಲ್ಪಿ, ಬರುವ ಬಸ್ಸನ್ನು ಏರಿ ಕುಳಿತು ಮಾರನೇ ಬೆಳಿಗ್ಗೆ ಚೌತಿ ಹಬ್ಬಕ್ಕೋ ಗಂಗಜ್ಜಿಯ ಶ್ರಾದ್ಧಕ್ಕೋ ತಿರುಮಲೇಶನ ಮದುವೆಗೋ ಅಟೆಂಡ್ ಆಗಬೇಕು! --ಇದು ಕಥೆಯಲ್ಲ ಇಂದಿನ ಮಹಾಭಾರತ!

ಬಸ್ಸಿನಲ್ಲಿ ಹೊರಟಮೇಲಂತೂ ನಮಗೆ ನಮ್ಮದೇ ಲೋಕ. ಅಲ್ಲಿ ರಾತ್ರಿಯ ಕಾಡುಗಳ್ಳರು ನಾಟಾ ಕುಯ್ಯುವಂತೇ ಗೊರಕೆಹೊಡೆಯುವ ಜನವಿದ್ದಾರೆ, ಸಣ್ಣಗೆ ತಮ್ಮದೇ ಆದ ದನಿಯಲ್ಲಿ ಹಾಡುವವರಿದ್ದಾರೆ, ಲೋಕ ಹಾಳಾದರೆ ನಮಗೇನಂತೆ ನಾವು ಚೆನ್ನಾಗಿದ್ದರೆ ಎಲ್ಲವೂ ಚೆನ್ನ ಎಂದು ಹರಟುವ ಸಂಗೀತಾ-ಸಾಹಿತ್ಯಾ ಎಂಬ ಅಕ್ಕಂದಿರಿದ್ದಾರೆ! ತಮ್ಮ ’ಹಿಂದುಗಡೆ ಬಾಯಲ್ಲಿ’ ’ಗಮಕ’ ಹಾಡುವ ಕಲಾವಿದರಿದ್ದಾರೆ! ಲೋ ಜೀನ್ಸ್ ನಲ್ಲಿ ಊರಿಗೆ ಹೊರಟು ಫಿಲ್ಮ್ ಸ್ಟಾರ್ ಥರ ಮಿಂಚುವ ಚಂಚಲಾ ಇದ್ದಾಳೆ! ಗುಡಾಣ ಹೊಟ್ಟೆಯನ್ನು ಹೊತ್ತು ನಡೆದುಬಂದ ನಮ್ಮೂರ ಪಕ್ಕದ ಯಜಮಾನರಿದ್ದಾರೆ! ಲ್ಯಾಪ್ ಟಾಪಿಗೆ ತಮ್ಮನ್ನು ಅಂಟಿಸಿಕೊಂಡು ಟೈಪಿಸುತ್ತ ಕೂತ ಗಣಕ ತಂತ್ರಾಂಶ ಪಿಪಾಸುಗಳಿದ್ದಾರೆ! ಐಪಾಡಿಲ್ಲದೇ ಜಗತ್ತೇ ಅಸಹ್ಯವೆಂದು ಅದನ್ನೂ ಮತ್ತು ಮೊಬೈಲನ್ನೂ ಬಳಸಿ ಬೇಕು ಬೇಕಾದ ಸಾಂಗ್ ಹಾಕಿ ಕಿವಿಗೆ ಧ್ವನಿ ದಾರಸಿಕ್ಕಿಸಿ ಕಿವುಡರಂತೇ ಕಾಣುವವರಿದ್ದಾರೆ! ಸಣ್ಣ ಮಕ್ಕಳಿಗೆ " ಕನ್ನಡ ಬೇಡ ಬರೇ ಇಂಗ್ಲೀಷ್ನಲ್ಲೇ ಮಾತಾಡ್ಬೇಕು ಇಲ್ಲಾಂದ್ರೆ ಪೆದ್ದಾಗೋಗ್ತೆ " ಎನ್ನುವ ಮಮ್ಮಿ-ಡ್ಯಾಡ್ ಇದ್ದಾರೆ! ಓ ಪರಮ ಶಿವನೇ ಈ ಬಸ್ಸು ಬಹಳ ಅರ್ಥಗರ್ಭಿತ!

ಬಸ್ಸಿನಲ್ಲಿ ಹೊರಟ ಸ್ವಲ್ಪ ಹೊತ್ತಿನಲ್ಲಿ ನಮಗೆ ಅತಿಥಿ ಸತ್ಕಾರ ಸಿಗುತ್ತದೆ! ತಿಗಣೆಗಳು ಕಾಲಿಗೋ ಕೈಗೋ ಕಚ್ಚಲು ಪ್ರಾರಂಭ ಎಂದು ಅರ್ಥೈಸಿಕೊಳ್ಳಿ! ಇಂತಹ ಅತಿಥಿಗಳು ಮಗುವೊಂದನ್ನು ಕಚ್ಚಿದಾಗ ತುರಿಕೆಯಾಗಿ ಮಗು " ಅಪ್ಪಾ ತುರಿಸ್ತಾ ಇದ್ದು " ಎಂದರೆ " ಶ್ಶು ! ನೋ ಕನ್ನಡಾ, ಸೇ ಇಟ್ ಈಸ್ ಇಚ್ಚಿಂಗ್ " ಎಂದು ಹೇಳಿಕೊಡುವ ಆಂಗ್ಲಭಾಷಾ ಭಕ್ತರು ನಮ್ಮ ಮಧ್ಯೆ ಹೇರಳವಾಗಿ ಇದ್ದಾರೆ. ಅದು ನಾವೂ ನೀವೂ ಅಥವಾ ಅವರೂ ಕೂಡ ಆಗಿದ್ದರೆ ಆಶ್ಚರ್ಯವಿಲ್ಲ. ಕನ್ನಡವೇ ನಮ್ಮಮ್ಮ ಎನ್ನುವ ನಮ್ಮ ಪೈಕಿ ನಾವೆಷ್ಟು ಜನ ನಿಜವಾಗಿ ಕನ್ನಡಪ್ರಿಯರಾಗಿದ್ದೇವೆ ಎಂಬುದು ಹಲವಾರು ಸಲ ಕಂಡುಬರುತ್ತದೆ ಸ್ವಾಮೀ! ಅಂತೂ ಊರು ಬಂದೇ ಬಿಟ್ಟಿತು ಎನ್ನಿ, ಆಗ ಸ್ವಲ್ಪಕಾಲ ಇಳಿಯುವ ಗಡಿಬಿಡಿಯಲ್ಲಿ ಇಂಗ್ಲೀಷೆಲ್ಲಾ ಮಾಯವಾಗಿ " ಹೋಯ್ ಸ್ನೇಹಾ ಬ್ಯಾಗ ತಕಂಡ್ಯಾ ? " " ಅದು ನೋಡು ಅಲ್ಲೇ ಬಿಟ್ಟೋಯ್ದು " ಎಂದೆಲ್ಲಾ ಉದ್ಗಾರಗಳು ಹೊರಹೊಮ್ಮುತ್ತವೆ! ಊರಿಗೆ ಹೋಗಿ ಇಳಿದಾಗ ನಮಗೆ ಆ ಊರಿನ ಗಾಳಿ ತಟ್ಟುತ್ತದೆ. ಮರಳಿ ನಾವು ಬೆಂಗಳೂರೋ ಅಥವಾ ನಮ್ಮ ಇನ್ನವುದೋ ಶಹರವೋ ಅದನ್ನು ಸೇರುವಾಗ ಇನ್ನೇನು ಹತ್ತಿರಬರುತ್ತಿದ್ದಂತೆಯೇ ’ ಛೆ ! ಶುರುವಾಯಿತಲ್ಲಪ್ಪಾ ಗೋಳು ’ ಎಂದುಕೊಳ್ಳುತ್ತೇವೆ. ಇದು ನಮ್ಮ ಉದರಂಭರಣೆಗೆ ನಾವು ತೊಡಗಿಕೊಂಡ ಊರಿನ ಜಂಜಡ ತುಂಬಿದ ಗಾಳಿ!

ಇಷ್ಟೆಲ್ಲದರ ನಡುವೆಯೂ ವಕ್ರತುಂಡ ವಿಘ್ನೇಶ ಹಲವು ವೇಷಗಳಲ್ಲಿ ಪ್ರತೀ ವರ್ಷ ಬರುತ್ತಲೇ ಇದ್ದಾನೆ, ಹರ್ಷ ತರುತ್ತಲೇ ಇದ್ದಾನೆ. ಬರುವ ಬಹುರೂಪೀ ಗಣಪಣ್ಣನ ಬಗ್ಗೆ ನಿಮಗೆ ಹೇಳಲೇಬೇಕೆ ? ಸಾಯಿಗಣಪ, ಕಾರ್ಗಿಲ್ ಯೋಧ ಗಣಪ, ವೀರಪ್ಪನ್ ಹಂತಕ ಗಣಪ, ಗಾಂಧೀ ಗಣಪ, ಅಮಿತಾಭ್ ಗಣಪ....ಹೀಗೇ ಹೊಸ ಹೊಸ ರೂಪಗಳ ಸೃಷ್ಟಿ ನಡೆಯುತ್ತಲೇ ಇವೆ. ಹಾದಿಬೀದಿಗಳಲ್ಲಿ ಅವನನ್ನು ಕೂರಿಸಿ, ಒಂದಷ್ಟು ವಂತಿಗೆ ಎತ್ತಿ ಅದರಲ್ಲಿ ಚೂರುಪಾರು ಖರ್ಚುಮಾಡಿ, ಬೇಡದ ಸಿನಿಮಾಹಾಡುಗಳ ಆರ್ಕೆಷ್ಟ್ರಾ ನಡೆಸಿ, ಉಳಿದ ಹಣದಲ್ಲಿ ತಮಗೆ ಎಣ್ಣೆಸೇವೆಯನ್ನು ಪೂರೈಸಿಕೊಳ್ಳುವ ಬಹಳ ಯುವಕರಿದ್ದಾರೆ. ಅಂದಿನ ಆ ಕಾಲಕ್ಕೆ ಭಕ್ತಿರಸ ತುಂಬಿ ಭಾವೈಕ್ಯತೆ ಹೊಮ್ಮಲಿ ಎಂದು ಲೋಕಮಾನ್ಯ ತಿಲಕರು ಹಬ್ಬಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ಈ ಮಟ್ಟ ತಲ್ಪಿದ್ದನ್ನು ನೋಡಿದರೆ ಅವರು ಈಗ ಬದುಕಿದ್ದರೆ ಆತ್ಮಹತ್ಯೆಗೆ ಶರಣಾಗುತ್ತಿದ್ದರೇನೋ ಎನಿಸುವಷ್ಟು ಅಸಹ್ಯ ಹುಟ್ಟಿಸುತ್ತದೆ. ಇಲ್ಲೀಗ ಭಾವವೂ ಇಲ್ಲ;ಭಕ್ತಿಯೂ ಇಲ್ಲ, ’ಭಾವ’ ಮತ್ತು ’ಭಕ್ತಿ’ ಎಂಬಿಬ್ಬರು ಹರೆಯದ ಹುಡುಗಿಯರು ಕನಿಷ್ಠ ಉಡುಪು ಧರಿಸಿ ಬೆನಕನ ಎದುರಲ್ಲಿ ನರ್ತಿಸುತ್ತಿದ್ದಾರೆ! ಒಂದೋ ಗಣಪ ಸುಮ್ಮನೇ ಕೂತು ಸಹಿಸಿಕೊಳ್ಳಬೇಕು ಇಲ್ಲಾ ಆತ ಎದ್ದು ಬಂದು ಇಂತವರನ್ನು ವದೆಯಬೇಕು ! ಆಯ್ಕೆ ನಿನಗೇ ಬಿಟ್ಟುದ್ದು ಶ್ರೀ ಗಣರಾಜ್ , ತಾವು ತಮಗೆ ಬೇಕಾದ್ದನ್ನು ಆಯ್ದುಕೊಳ್ಳಿ!

ಎರಡು ಮೆಲುಕು ಹಾಕುವ ಕಹಿನೆನಪುಗಳೊಂದಿಗೆ ಈ ಕಥಾನಕವನ್ನು ಮುಕ್ತಾಯಗೊಳಿಸಬೇಕಾದುದು ಅನಿವಾರ್ಯ. ಇದು ನಮ್ಮ ಅನುಭವ ನಾಳೆ ನಿಮಗೆಲ್ಲಾ ಸಹಕಾರಿಯಾಗಲೂ ಬಹುದೆಂಬ ಅನುಭಾವ! ಮೊದಲನೆಯದು ಮೇಲೆ ಹೇಳಿದ ಸಾರ್ವಜನಿಕ ಗಣೇಶೋತ್ಸವ- ನಾವು ಊರಿಗೆ ಹೊರಟುನಿಂತ ಅವಸರದಲ್ಲಿ ಸುಮಾರು ೨೦ ಜನರಂತೇ ಮೂರು ಬೇರೆ ಬೇರೆ ಮೇಳಗಳು ವರ್ಗಿಣಿಗೆ ಬಂದಿದ್ದರು. " ಸಾರ್ ಗಣೇಶನ್ ಇಡ್ತೀವಿ ಕೊಡಿ " . ಹತ್ತು ಇಪ್ಪತ್ತು ರೂಪಾಯಿ ಕೊಟ್ಟರೆ ಸಾಲುವುದಿಲ್ಲ ಇಂತಿಷ್ಟೇ ಕೊಡಿ ಎಂಬ ತಾಕೀತು! "ನಾವೇನು ನಿಮ್ಮ ಹತ್ತಿರ ಗಣೇಶನ್ನ ಇಡಿ ಅಂತ ಹೇಳಿದ್ದೀವಾ ? " ಎಂದು ಗದರಿಕೊಳ್ಳುವ ಮನಸ್ಸದರೂ ಹೊರಡುವಾಗ ಕದಡುವ ಮನಸ್ಸು ಬೇಡವೆಂದು ಅವರನ್ನೆಲ್ಲಾ ಹೇಗೋ ಸಾಗಹಾಕಿದ್ದೇವೆ . ಹೇಳಿ ಈ ರೀತಿಯ ಮೋಜು ಮಜಾ ಜನರಿಗೆ ದೇಣಿಗೆ ನೀಡಬೇಕೆ ?

ಎರಡನೆಯದು ನಾವು ಹೋಗುತ್ತಿರುವ ಬಸ್ಸು ಶಿವಮೊಗ್ಗಾ ಜಿಲ್ಲೆಯ ಕುಂಸಿಯ ಹತ್ತಿರ ನಿಂತಿತು. ಮುಂದೆ ಅಪಘಾತವಾಗಿದೆ ಎಂಬ ಕಾರಣ. ಅಲ್ಲಿ ನೋಡಿದರೆ ’ಸೀ ಬರ್ಡ್’ ಕಂಪನಿಯ ಅಟ್ಟದ ಬಸ್ಸೊಂದು ಆಗತಾನೇ ಜರ್ಜರಿತವಾಗಿ ನಿಂತಿತ್ತು. ಯಾರದ್ದೂ ಸದ್ದು-ಸುದ್ದಿ ಇರಲಿಲ್ಲ! ಬೆಳಗಿನ ೫ ಘಂಟೆಯ ಸಮಯ. ಕತ್ತಲಲ್ಲಿ ಸರಿಯಾಗಿ ಕಾಣುತ್ತಲೂ ಇರಲಿಲ್ಲ. ಕಾಡಿನ ಮಧ್ಯದ ದಾರಿಯಲ್ಲಿ ಮೊಬೈಲ್ ಸಿಗ್ನಾಲ್ ಇರಲಿಲ್ಲ. ಡಿಕ್ಕಿ ಹೊಡೆದ ಬಸ್ಸು ರಸ್ತೆಗೆ ಅಡ್ಡಲಾಗಿ ನಿಂತಿತ್ತು. ಅದು ಹಾಗೆ ಡಿಕ್ಕಿ ಹೊಡೆದದ್ದು ಎದುರುಗಡೆ ನಿಂತಿರುವ ಕಬ್ಬಿಣ ತುಂಬಿದ ಲಾರಿಗೆ. ಲಾರಿಯಲ್ಲಿ ಏನೋ ತೊಂದರೆಯಾಗಿ ಅದರ ಚಾಲಕ ಮತ್ತು ಸಹಾಯಕ ರಿಪೇರಿಯಲ್ಲಿ ತೊಡಗಿರಬೇಕು ಎನಿಸುತ್ತದೆ, ಆದರೆ ಲಾರಿ ಮುಖ್ಯರಸ್ತೆಯಿಂದ ಕೆಳಗೆ ಬಲಗಡೆಗೆ ಸರಿಯಾಗಿ ನಿಲ್ಲಿಸಲ್ಪಟ್ಟಿತ್ತು. ಸೀ ಬರ್ಡ್ ಚಾಲಕ ತನ್ನ ಅತಿವೇಗದಲ್ಲಿ ಬಸ್ಸನ್ನು ಓಡಿಸುತ್ತಿದ್ದ. ಯಾವುದೋ ಕೆಟ್ಟಘಳಿಗೆ ಆತನ ಕಣ್ಣಿಗೆ ಜೋಂಪು ಹತ್ತಿದೆ, ನಿಮಿಷದಲ್ಲಿ ಆತ ಜೀವಕಳೆದುಕೊಂಡಿದ್ದಾನೆ. ಬಸ್ಸಿನ ಮುಂಭಾಗ ಪೂರ್ತಿ ನಜ್ಜುಗುಜ್ಜಾಗಿತ್ತು. ಲಾರಿಯ ಮುಂಭಾಗ ನುಜ್ಜಾಗಿ ಮಹಡಿಯಿರುವ ಕಟ್ಟಡದಂತೇ ಗೋಚರಿಸುತ್ತಿತ್ತು. ಇದನ್ನು ಅವಲೋಕಿಸುವಾಗ ನನಗನಿಸಿದ್ದು ಒಬ್ಬ ಚಾಲಕನ ಕೈಯ್ಯಲ್ಲಿ ೩೫-೩೬ ಜೀವಗಳು ಇರುತ್ತವೆ. ಜೊತೆಗೆ ಅವನ ಜೀವವೂ ಕೂಡ! ಉದರನಿಮಿತ್ತ ಆತ ಹೆಣಗಾಡುತ್ತ ಹಲವರನ್ನು ಹಬ್ಬಕ್ಕೋ ಹುಣ್ಣಿಮೆಗೋ ಕರೆದೊಯ್ಯುತ್ತಿರುತ್ತಾನೆ. ಒಬ್ಬನೇ ಚಾಲಕನಿಗೆ ಒತ್ತಡ ಬಹಳವಾದರೆ ದೇಹ ಆಯಾಸಗೊಂಡು ಸಹಜವಾಗಿ ನಿದ್ರೆ ಆವರಿಸುತ್ತದೆ. ದೂರದ ಪ್ರಯಾಣಕ್ಕೆ ಇಬ್ಬರು ಚಾಲಕರು ಇರುವುದು ಬಹಳ ವಿಹಿತ. ಇದನ್ನು ನಾವೆಲ್ಲಾ ಪರಿಶೀಲಿಸಬೇಕಾಗಿದೆ ಮಾತ್ರವಲ್ಲ ಈ ವಿಷಯದಲ್ಲಿ ನಾವು ಸಾರಿಗೆ ಮಂತ್ರಿಗಳಿಗೇ ಒಂದು ಅಹವಾಲನ್ನು ತಲ್ಪಿಸಬೇಕಾಗಿದೆ. ಈ ಥರದ ಅಪಘಾತಗಳು ಬಹಳ ನಡೆಯುತ್ತಲೇ ಇವೆ. ಆದರೆ ನಾವದನ್ನು ಮರೆತು ನಮ್ಮ ಕಾಲಬುಡಕ್ಕೆ ಬಂದಾಗ ಎಚ್ಚೆತ್ತುಕೊಳ್ಳುತ್ತೇವೆ. ಅಂದು ನಮಗೆ ಹಬ್ಬದ ಬದಲಿಗೆ ಮನಸ್ಸನ್ನು ಸಂತೈಸಿಕೊಳ್ಳುವುದೇ ಕಷ್ಟವಾಗಿತ್ತು. ಪಾಪದ ಚಾಲಕ ಪರಲೋಕಕ್ಕೆ ಹೋಗಿದ್ದ;ಆತನನ್ನು ಅವಲಂಬಿಸಿದ ಆತನ ಮನೆಮಂದಿಯ ಗತಿ ಏನಾಗಿರಬೇಡ!

ಗಣೇಶ ಬರಲಿ, ನಮ್ಮೆಲ್ಲರ ಗಾಢಾಂಧಕಾರದಲಿ ಜ್ಞಾನದ ದೀವಿಗೆ ಬೆಳಗಲಿ. ಓಡುವ ಸಮಯಕ್ಕೆ ತಕ್ಕಂತೇ ನಮ್ಮ ಮನಸ್ಸನ್ನೂ ಜಾಗೃತಗೊಳಿಸಲಿ; ಆತಂಕ-ಜಂಜಡ ರಹಿತ ಬದುಕನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತ ನಿಮಗೆಲ್ಲಾ ಪುನರಪಿ ಶುಭಕೋರುತ್ತಿದ್ದೇನೆ, ನಮಸ್ಕಾರ.