ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, September 19, 2010

ಚಿಗುರು


ಚಿಗುರು

ಬತ್ತಿಹೋದ ಭಾವಗಳನು
ಮತ್ತೆ ಚಿಗುರುವಂತೆ ಬೆದಕಿ
ಎತ್ತಿ ತೆಗೆದು ಮೂಟೆ ಕಟ್ಟಲಾಯ್ತು ಹಾಡು ಕ್ಷಣದಲಿ !
ಸತ್ತು ಹೋಗುತಿದ್ದ ಗಿಡಕೆ
ಸುತ್ತ ನೀರಹನಿಸಿ ಒಮ್ಮೆ
ಮತ್ತೆ ಗಾಳಿ ಪೂಸಲಾಗ ಅರಳಿ ಹೂವು ಮುದದಲಿ !

ಕುತ್ತುಗಳವು ಹಿಂಡಿ ಮನವ
ಕುತ್ತಿಗೆಯನು ಒತ್ತಿ ಹಿಡಿದು
ಎತ್ತೆತ್ತಲೂ ಕಗ್ಗತ್ತಲು ನಗುತಲಿದ್ದ ದಿನದಲಿ
ಬೆತ್ತಲಾದ ಆಗಸದಲಿ
ಮತ್ತೆ ಮಿಂಚು ಹರಿದು ಭರದಿ
ಬುತ್ತಿ ಅನ್ನ ನೀಡಿತೆನಗೆ ಚಿಗಿತ ನೆಲದ ನೆರಳಲಿ

ಮೆತ್ತಗಿರುವ ದಿಂಬು ಗಾದಿ
ಅತ್ತುಕರೆಯೆ ಸಹಕರಿಸುತ
ಇತ್ತ ಆಸರೆಯೊಳ ಬದುಕು ನೀರಸವೆನಿಸಿರಲಲಿ
ತುತ್ತತುದಿಗೆ ಇರುವ ಹಣ್ಣು
ಗೊತ್ತಿಲ್ಲದೆ ಕೈಗೆ ಎಟುಕಿ
ನಿತ್ತ ನನ್ನ ಚಲಿಸುವಂತೆ ಮಾಡಿತಾಗ ಮನದಲಿ

ನೆತ್ತಿಯಲ್ಲಿ ಉರಿವ ಸೂರ್ಯ
ಕತ್ತಲಲ್ಲಿ ಹೊಳೆವ ಚಂದ್ರ
ಇತ್ತಯಾರೂ ಬರಲೇ ಇಲ್ಲ ಕಷ್ಟದಿನಗಳೆಡೆಯಲಿ
ಪತ್ತಿನಲ್ಲಿ ದೈವಲೀಲೆ
ಹತ್ತಿಬಂದು ಮೆಟ್ಟಿಲುಗಳ
ಪಿತ್ತನೆತ್ತಿಗೇರದಂತೆ ಹಿಡಿದು ಮನವ ಬಿಡದಲಿ

ಅತ್ತ ನೆಂಟರಿಷ್ಟರೆಲ್ಲ
ಎತ್ತಿನೋಡಿ ನೀರ ಆಳ
ಒತ್ತುಕೊಡದೆ ದೂರವಿರಲು ಕಹಿಸಮಯದ ನಡುವಲಿ
ಬಿತ್ತ ಬೀಜ ಬೆಳೆವರಿಲ್ಲ !
ಉತ್ತುತೆಗೆದು ಮುಗಿವುದಲ್ಲ !
ಇತ್ತಲಾಯ್ತು ದೈವಕೃಪೆಯು ಕವಿಸಮಯದ ಬಿಡುವಲಿ

8 comments:

  1. ಭಟ್ಟರೇ
    ತು೦ಬಾ ಚೆನ್ನಾದ ಸಾಲುಗಳು. ಒಂದೊಂದು ಸಾಲಿನಲ್ಲಿಯೂ ಅರ್ಥಪೂರ್ಣ ಒಳನೋಟದ ಹೂರಣ ತು೦ಬಿದ್ದೀರಿ.

    ReplyDelete
  2. oLLeya kavana enta arthapooraNavaagide...

    ReplyDelete
  3. ಕವಿಸಮಯದ ದೈವಕೃಪೆಯು ನಿಮಗೀಗ ಭಾಮಿನಿಷಟ್ಪದಿಯ ರೂಪದಲ್ಲಿ ಆಗಿದೆಯೆಂದು ನನಗೆ ಭಾಸವಾಗುತ್ತದೆ.

    ReplyDelete
  4. ಭಟ್ ಸರ್ ಸುಂದರ ಸಾಲುಗಳು ನಿಮ್ಮ ಬರವಣಿಗೆಯ ಓಘ ಹಾಗೂ ವೈವಿಧ್ಯತೆಗೆ ಇದೋ ಸಲಾಮು

    ReplyDelete
  5. ಭಟ್ ಸಾರ್..

    ಚೆನ್ನಾಗಿದೆ......

    ಶ್ಯಾಮಲ

    ReplyDelete
  6. Bhatre,

    tumbaa sundara, arthapurna kavana, odoke tumbaa kushi aagutte, layabaddhavaagi haadoduku chennagide.

    ReplyDelete
  7. ಪ್ರತಿಕ್ರಿಯಿಸಿದ ಎಲ್ಲಾ ಮಿತ್ರ ಓದುಗರಿಗೂ, ಗೂಗಲ್ ಬಜ್ ಓದುಗರಿಗೂ ಅನಂತ ನಮನಗಳು, ಸ್ವಲ್ಪ ಕೆಲಸದ ಒತ್ತಡ ಇದೆ, ಮರಳಿ ನಿಮ್ಮೆಲ್ಲರನ್ನು ಸಂಪರ್ಕಿಸುತ್ತೇನೆ.

    ReplyDelete
  8. ಚೆಂದದ ಒಳಾರ್ಥದ ಕವನ. ಸ್ವಲ್ಪ ಸಮಯವೇ ಹಿಡಿಯಿತು ಅರ್ಥೈಸಲು.

    ReplyDelete