ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, January 28, 2010

ಯಾವುದೀ ಹೊಸಸಂಚು ಎದೆಯಂಚಿನಲಿ ಮಿಂಚಿ...


ಯಾವುದೀ ಹೊಸಸಂಚು ಎದೆಯಂಚಿನಲಿ ಮಿಂಚಿ...

ಜಯದೇವಾ ಜಯದೇವಾ
ಜಯಶ್ರೀ ಗುರುವರಗೆ ಜಯ ಸದ್ಗುರುವರಗೆ
ಜಯಜಯ ನಿತ್ಯ ನಿರಂಜನ ನಿರುತಾನಂದನಿಗೆ ”

ಯಾವ ಮಿಲಿಟರಿ ಪಡೆಯೂ ಕೂಡ ಅಷ್ಟು ಅಚ್ಚುಕಟ್ಟಾಗಿ ದೇಶ ಭಕ್ತಿಗೀತೆ ಹಾಡಲಿಕ್ಕಿಲ್ಲ, ಅಂತಹ ರೀತಿಯಲ್ಲಿ ಸುಲಭ-ಸರಳಸಾಹಿತ್ಯಹೊಂದಿರುವ ಅಜ್ಞಾತ ಕವಿಯಿಂದ ರಚಿಸಲ್ಪಟ್ಟ ಸ್ತುತಿಗೀತೆಯನ್ನು ನೀವೊಮ್ಮೆ ಕೇಳಬೇಕು. ಅಲ್ಲಿ pindrop silence. ಅದರ ಭಾವತರಂಗಗಳು ನಮ್ಮ ಮನಕ್ಕೆ ತಲ್ಪುತ್ತಿದ್ದಂತೆ ಏನೋ ಒಂದು ಅವಿಸ್ಮರಣೀಯ ಆನಂದ.



ಬಹುಶಃ ಇದರಬಗ್ಗೆ ತಮಗೆ ತಿಳಿದಿರದಿದ್ದರೂ ಮುರುಡೇಶ್ವರದ ಬಗ್ಗೆ ತಮಗೆ ಹೊಸದಾಗಿ ಹೇಳುವುದು ಬೇಡ. ಇವತ್ತು ಜಗತ್ಪ್ರಸಿದ್ಧಿ
ಪಡೆದ ಮುರುಡೇಶ್ವರ ದೇವಸ್ಥಾನ ಸುಮಾರು ೪೦ ವರ್ಷಗಳ ಹಿಂದೆ ಕುಸಿದು ಬೀಳುವಷ್ಟು ಶಿಥಿಲವಾಗಿತ್ತು. ಅದು ಮುಂದೆ ಸರಿಯಾದ ವ್ಯಕ್ತಿಯೊಬ್ಬರಿಂದ ಜೀರ್ಣೋದ್ಧಾರಗೊಂಡು ಬಹಳ ಉತ್ತಮ ಮಟ್ಟಕ್ಕೆ ತಲ್ಪುತ್ತದೆ ಎಂದು ತಮ್ಮ ಯೋಗಬಲದಿಂದ ಆಗಲೇ ಸಾರಿದ್ದ, ಮಕ್ಕಳಿರದಿದ್ದ ಮೈಸೂರು ಜಯಚಾಮರಾಜೇಂದ್ರರಿಗೆ ಮಗು ಶ್ರೀಕಂಠದತ್ತನರಸಿಂಹರಾಜರು ಜನಿಸುವಂತೆ ಆಶೀರ್ವದಿಸಿದ್ದ, ಮೈಸೂರಿನಲ್ಲಿ ಏಕಕಾಲದಲ್ಲಿ ಸ್ಥಳಗಳ ವೇದಿಕೆಯಲ್ಲಿ ಆಶೀರ್ವಚನ ನೀಡಿದ್ದ, ನಮ್ಮ ವಿಧಾನಸೌಧದ ಕಟ್ಟಡ ಅದ್ಬುತವಾಗಿ ರೂಪುಗೊಳ್ಳಲೆಂದು ಹರಸಿದ್ದ ಅದಮ್ಯ ದಿವ್ಯ ಚೇತನ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು.

ಉತ್ತರ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಲಾಡ್
ಚಿಂಚೋಳಿಯಲ್ಲಿ ಬಡ ಬ್ರಾಹ್ಮಣ ಕುಟುಂಬದಲ್ಲಿ ದತ್ತಾತ್ತ್ರೇಯನ ಅವತಾರವಾಗಿ ಜನಿಸಿದ್ದರು. ದೇಶದುದ್ದಗಲ ಸಂಚರಿಸಿ ಜನರ ಕಷ್ಟಕಾರ್ಪಣ್ಯಗಳನ್ನು ದೂರಮಾಡಿದ ಮಹಾನ್ ಚೇತನಗಳಲ್ಲಿ ಶ್ರೀಗಳೂ ಒಬ್ಬರು. ಬಹುಶಃ ಶ್ರೀ ಆದಿಶಂಕರರ ನಂತರ ದೇಶದುದ್ದಗಲ ಸಂಚರಿಸಿ ಜನರಿಗೆ ನೆರವಾದ ಸನ್ಯಾಸಿ ಇವರೊಬ್ಬರೇ ಅಂದರೆ ತಪ್ಪಾಗಲಾರದು.

ನಾವು ಅನೇಕ ಮಹಾತ್ಮರ ಬಾಲ್ಯದ ಬಗ್ಗೆ ಕೇಳಿದ್ದೇವೆ. ಆದರೆ ಅತೀವ ಕಷ್ಟದ, ಬಡತನದ ಬಾಲ್ಯ ಮಿಕ್ಕುಳಿದವರ ಚರಿತ್ರೆಗಳಲ್ಲಿ
ಕಂಡುಬರುವುದಿಲ್ಲ. ಪ್ರಾಯಶಃ ಅವರ ಬಾಲ್ಯದ ಬಗೆಗೆ ಓದುವಾಗ ನಮಗೆ ಕಣ್ಣೀರೊರೆಸಿ ಹಿಂಡಲು ಪ್ರತ್ಯೇಕ ಬಟ್ಟೆಯೇ ಬೇಕು. ಇಂತಹ ಅತಿ ಕಠಿಣ ಬಾಲ್ಯವನ್ನು ಸಹಿಸಿ, ಕುಟುಂಬದ ಎಲ್ಲರನ್ನೂ ಕಳೆದುಕೊಂಡು, ವಾಸಿಸಲು ಸರಿಯಾದ,ಸ್ಥಿರವಾದ ಮನೆಯಿಲ್ಲದೇ ಮುನ್ನಡೆದ ಬಾಲಕ ಮುಂದೊಂದು ದಿನ ಆರ್ತರ ಕಣ್ಣೀರೊರೆಸುವ ಮಹಾನ್ ಯೋಗಿಯಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಅವರು ಹುಟ್ಟಿದ್ದೇ ಬೇರೆಯವರ ಸೇವೆಗಾಗಿ ಎಂಬುದು ಸ್ಥೂಲವಾಗಿ ನೋಡಿದಾಗ ಗೊತ್ತಾಗುತ್ತದೆ.

|| ಮೋಕ್ಷಶ್ರಿಯಂ ಧರತೀ ಇತಿ ಶ್ರೀಧರಃ ||

ಶ್ರೀಧರಎನ್ನುವ ಹೆಸರು ಬಹಳ ಅರ್ಥಗರ್ಭಿತ. ಮೋಕ್ಷಶ್ರೀಯನ್ನು ಧರಿಸಿದಾತನೇ ಶ್ರೀಧರ. ಸಂಸ್ಕೃತದಲ್ಲಿ || ವರ್ಣಮಾತ್ರಂ
ಗುರುಃ || ಎನ್ನುತ್ತಾರೆ. ಅಂದರೆ ಒಂದೇ ಒಂದು ಅಕ್ಷರವನ್ನು ಕಲಿಸಿ/ತಿಳಿಸಿಕೊಟ್ಟರೂ ಆತಗುರುಎಂದು ಗೌರವಿಸುತ್ತಾರೆ. ಜನನಿ ಮೊದಲಗುರು ಎಂದೂ ನಂತರ ಮಿಕ್ಕುಳಿದ ಹಲವಾರು ರೀತ್ಯಾ ಗುರುಗಳು ಜೀವನದಲ್ಲಿ ಬರುತ್ತಾರೆ. ಆದರೆ ನಮ್ಮ ಆತ್ಮಕ್ಕೆ ಸರಿಯಾದ ಪಾರಮಾರ್ಥಿಕ ದಾರಿಯನ್ನು ತೋರಿ ನಮ್ಮನ್ನು ಜನ್ಮಾಂತರಗಳ ಬಂಧನದಿಂದ, ಕುಣಿಕೆಯಿಂದ ತಪ್ಪಿಸುವಾತನೇ ನಿಜವಾದ ಗುರು ಎಂದು ಪರಿಗಣಿಸಲ್ಪಡುತ್ತಾನೆ. ಇಲ್ಲಿ ನಾಸ್ತಿಕರು ವಾದಿಸಿದರೆ ಅವರಲ್ಲಿ ನನ್ನ ಪ್ರಶ್ನೆಗಳೊಂದೆರಡು-

ಆತ್ಮ ಎಂಬ ಚೇತನ ಯಾವರೂಪದಲ್ಲಿದೆ? ಅದು ದೇಹದಲ್ಲಿ ಎಲ್ಲಿರುತ್ತದೆ? ಅದು ಬರುವಾಗ ಎಲ್ಲಿಂದ ಬಂತು? ಸತ್ತಮೇಲೆ ಎಲ್ಲಿಗೆ
ಹೋಗುತ್ತದೆ ?

. ಸೂರ್ಯ ಚಂದ್ರಾದಿ ಆಕಾಶ ಕಾಯಗಳನ್ನು ಯಾ ಸ್ಥಾನಗಳಲ್ಲಿ ಸರಿಯಾಗಿ ಇರುವಂತೆ ಆಡಳಿತ ನಡೆಸುವ ಗುರುತ್ವ
ಶಕ್ತಿ ಯಾಕೆ, ಹೇಗೆ ಸೃಜಿಸಲ್ಪಟ್ಟಿತು?

. ವಿಜ್ಞಾನಿಗಳು ಕುಳಿತು ನಮಗೆ ಬೇಕಾದ ನೀರಿಗಾಗಿ H2O Formula ಮಾಡಿ ನೀರು ತಯಾರಿಸುತ್ತಾರೆಯೇ? ಅಥವಾ
ಗಾಳಿಯಲ್ಲಿ ಆಮ್ಲಜನಕವನ್ನು ತುಂಬಿದವರು ಅವರೇನಾ?

ಇಂತಹ ಅನೇಕ ಪ್ರಶ್ನೆಗಳು ಇಂದಿಗೂ ಉತ್ತರ ರಹಿತ ! ಹೀಗಾಗಿ ಮಾರ್ಮಿಕವಾಗಿ ಚಿಂತನ ನಡೆಸುವಾಗ ನಮ್ಮ ಹೃದಯದಲ್ಲಿ
ಇರುವ ಸಂಚಿನ ಅರ್ಥ ನಮಗೇ ಅರಿವಿಲ್ಲವಲ್ಲ ಎಂಬುದು ಸ್ಪಷ್ಟ !

ಜೀವನದಲ್ಲಿ ಸದ್ಗುರುವನ್ನು ಪಡೆಯಲೂ ಯೋಗಬೇಕು, ಅವರ ಅಪ್ಪಣೆ ಸಿಗಬೇಕು. ಗುರುವನ್ನು ಕಾದು ದರ್ಶನ ಮಾಡಬೇಕು.ಜನರ
ಅಹವಾಲುಗಳನ್ನು ಸ್ವೀಕರಿಸಿ ಅವರ ಕಷ್ಟಗಳನ್ನೆಲ್ಲ ತಾನು ಅನುಭವಿಸವಂತೆ ಪಡೆದು, ತಪೋಬಲದಿಂದ ಅವರೆಲ್ಲರ ಕಣ್ಣೀರೊರೆಸಿದ, ಅವರಿಗೆ ಹೊಸ ಜೀವನ, ಮಾರ್ಗ ಕಲ್ಪಿಸಿದ ಶ್ರೀಧರರು ಮಹಾರಾಷ್ಟ್ರದ ಸನ್ಯಾಸಿ ಸಮರ್ಥ ರಾಮದಾಸರ ಶಿಷ್ಯರಾಗಿ, ದೇಶಾಂತರ ತಿರುಗುತ್ತ ಶಿವಮೊಗ್ಗೆಯ ಸಾಗರ ಪ್ರಾಂತದಲ್ಲಿ ವರದಪುರ ಎಂಬ ಗುಡ್ಡದಮೇಲೆ ಲೋಕೋದ್ಧಾರಕ್ಕಾಗಿ ಅಖಂಡ ತಪಸ್ಸನ್ನು ನಡೆಸಿದರು.ಹಾಗೆ ಮಾಡಲು ಕಾರಣಗಳಿವೆ.ವರದಪುರ ಬಹಳ ರಮ್ಯ-ಮನಮೋಹಕ ತಾಣ. ಸಹಜವಾಗಿ ಋಷಿಗಳಿಗೆ ಹೇಳಿಮಾಡಿಸಿದ ಹಾಗಿರುವ , ಹಿಂದೆ ಅಗಸ್ತ್ಯರಾದಿಯಾಗಿ ಅನೇಕರು ತಪಸ್ಸುನಡೆಸಿದ ತಪೋಭೂಮಿ. ಇಂತಹ ಕ್ಷೇತ್ರವನ್ನು ಆಯ್ದುಕೊಂಡು ಅಲ್ಲಿ ಪವಿತ್ರ ತೀರ್ಥವನ್ನು ಸೃಜಿಸಿ ಗಂಗಾದಿ ಸರ್ವ ತೀರ್ಥಗಳನ್ನೂ ಅಲ್ಲಿಗೆ ಆಕರ್ಶಿಸಿ ತಮ್ಮ ತಪದ ಧಾರೆಯನ್ನೇ ಆ ಜಲಧಾರೆಗೆ ತುಂಬಿ ಅದನ್ನೇ ದಿವ್ಯೌಷಧವೆಂದು ಘೋಷಿಸಿದರು.




೧೯೦೮ ರಲ್ಲಿ ಜನಿಸಿದ ಶ್ರೀಗಳು ೧೯೭೩ ತನಕ ದೇಹದಿಂದಿದ್ದರು. ಅವರ ಬಗೆಗಿನ ಅವರ ಚರಿತ್ರೆಯಲ್ಲಿ ಸಾ
ವಿರ ಸಾವಿರದೋಪಾದಿಯಲ್ಲಿ ವಿಚಿತ್ರ ಘಟನೆಗಳು ನೋಡಸಿಗುತ್ತವೆ. ಅವೆಲ್ಲವನ್ನೂ ಕಾಲದ ಹಾಗೂ ಸ್ಥಳದ ಪರಿಮಿತಿಯಿಂದ ಇಲ್ಲಿ ಹೇಳಲಾಗುತ್ತಿಲ್ಲ. ಆಸಕ್ತರು ನೇರವಾಗಿ ಶ್ರೀಧರರ ಅಶ್ರಮಕ್ಕೆ ಹೋಗಿ ಪಡೆಯಬಹುದು. ಬೆಂಗಳೂರಿಗೆ ಬಂದ ಗುರುಗಳನ್ನು ಗೌಡರೊಬ್ಬರು ತಮ್ಮ ಮನೆಯವರ ವಾಸಿಮಾಡಲಾಗದ ಕಾಯಿಲೆಯನ್ನು ನಿವಾರಿಸುವಂತೆ ಪ್ರಾರ್ಥಿಸಿದಾಗ ಅವರ ಕಾಯಿಲೆ ವಾಸಿಯಾಗಿ, ಗುರುಗಳಿಗೆ ಪ್ರತಿಯಾಗಿ ಏನಾದರೂ ಸ್ವೀಕರಿಸಬೇಕೆಂದು ಹಠ ಹಿಡಿದರಂತೆ. ಯಾವತ್ತೂ ಯಾರಿಂದಲೂ ಏನನ್ನೂ ಬಯಸದ-ಸ್ವೀಕರಿಸದ ಶ್ರೀಗಳು ವಸಂತಪುರದಲ್ಲಿ ಗೌಡರ ಮನೆಯ ಪಕ್ಕದಲ್ಲಿ ಸ್ವಲ್ಪ ಜಾಗವನ್ನು ದಾನವಾಗಿ ಪಡೆದರು. ಅದು ನಮ್ಮ ಬೆಂಗಳೂರಿಗರಿಗೆ ಇಂದು ಶ್ರೀಧರ ಪಾದುಕಾಶ್ರಮವಾಗಿ ಹರಸುತ್ತಿದೆ.

ಅವರ ಉಪಸ್ಥಿತಿಯಲ್ಲಿ ಪಶು-ಪಕ್ಷಿಗಳೂ ಕೂಡ ಆನಂದವನ್ನು ಅನುಭವಿಸುತ್ತಿದ್ದವು ಎಂಬುದಕ್ಕೆ ಸಾಕ್ಷಿಯಾಗಿ ವರದಪುರದಲ್ಲಿ ಅವರ ಸಮಾಧಿಗೆ
ಮಧ್ಯಾಹ್ನದ ಮಂಗಲಾರತಿ ವೇಳೆ ಎಲ್ಲಾ ನಾಯಿಗಳೂ ಮುಖ ಮೇಲೆತ್ತಿ ಅಳುವರೀತಿಯಲ್ಲಿ ಕೂಗುವುದು ಬಲು ಸೋಜಿಗವೇಸರಿ!ತಾಯಿಗೂ ಮಿಗಿಲಾಗಿ ಎಲ್ಲರ ತಾಯ್ತಂದೆಯಂತಿದ್ದ ಶ್ರೀಗಳ ಜನ್ಮ ಶತಮಾನೋತ್ಸವ ಕಳೆದವರ್ಷ ನಡೆಯಿತು. ಇಂತಹ ಮಹಾತ್ಮರು ಮತ್ತೆ ಜನಿಸಲಿ, ನಿಜವಾಗಿ ಜನತೆಯ ಕಣ್ಣೀರೊರೆಸಲಿ ಎಂದು ಪ್ರಾರ್ಥಿಸೋಣ.

Wednesday, January 27, 2010

ಲಾಟೀನು ಎಂಬ ಅದ್ಬುತ ದೀಪ !!

ಲಾಟೀನು ಎಂಬ ಅದ್ಬುತ ದೀಪ!!


ನಾವು ತುಂಬಾ ಚಿಕ್ಕವರಿದ್ದೆವು. ನಮ್ಮ ಅಜ್ಜನ ಹತ್ತಿರ ಕತೆಗಾಗಿ ಬಹಳ ಪೀಡಿಸುತ್ತಿದ್ದೆವು. ದಿನವಿಡೀ ಕೆಲಸದಲ್ಲಿ ದಣಿದಿರುವ ಅವರು ಸಾಯಂಕಾಲ ಸುಸ್ತಾಗಿ ಮಲಗುತ್ತಿದ್ದರು. ಆದರೂ ನಮ್ಮಕೋರಿಕೆಯನ್ನು ಎಂದೂ ತಿರಸ್ಕರಿಸಿದವರಲ್ಲ. ಮಳೆಗಾಲದಲ್ಲಿ ಅವರು ಮಲಗಿರುವಾಗ ಅವರಕಾಲುಗಳ ಮಧ್ಯೆ ಮಲಗಿಕೊಂಡು ಆಟವಾಡುವುದು ನನ್ನ ಪರಮ ಖುಷಿಯ ವಿಷಯವಾಗಿತ್ತು. ಹೀಗೇಒಂದುದಿನ ನನ್ನ ಒತ್ತಾಯಕ್ಕೆ ಕುತೂಹಲಕ್ಕೆಲಾಟೀನು ಮಹಾತ್ಮೆಯನ್ನು ಹೇಳತೊಡಗಿದರು....


ಆಗ ಬ್ರಿಟಿಷರ ಆಳ್ವಿಕೆಯಿತ್ತು. ಎಲ್ಲರಮನೆಯಲ್ಲೂ ರಾತ್ರಿ ಹರಳೆಣ್ಣೆ ದೀಪ. ಇಡೀ ಊರಿನಲ್ಲಿ ಎಲ್ಲೆಲ್ಲೂ ಸೀಮೆ ಎಣ್ಣೆ ದೀಪ ಕೂಡಇರಲಿಲ್ಲ. ಸ್ವಲ್ಪ ವರುಷ ಕಳೆದಮೇಲೆ ಪಟೇಲರ ಮನೆಯಲ್ಲಿ ಬುಡ್ಡಿ ದೀಪ ಬಂತು. ಆಗ ಅದು ಅಷ್ಟೇನೂ ಸುದ್ದಿಯಾಗಲಿಲ್ಲ. ಊರಲ್ಲಿಎಲ್ಲದರಲ್ಲೂ ಪ್ರಥಮ ಪಟೇಲರ ಮನೆಯಾಗಿತ್ತು.ಏನಾದರೂ ಹೊಸ ಬದಲಾವಣೆ ಬಂದರೆ ಅದು ಪಟೆಲರಮನೆಯಿಂದಲೇಎಂಬುದು ಎಲ್ಲರಿಗೂ ಗೊತ್ತು. ಇಂತಹ ಒಂದುದಿನಲಾಟೀನುಎಂಬ ಹೊಸ ದೀಪ ಬಂದಿರುವುದಾಗಿಯೂ, ಅದನ್ನುನೋಡಬಯಸುವವರು ಒಟ್ಟಾಗಿ ಬಂದರೆ ಆಗ ತೋರಿಸಲಾಗುವುದು ಎಂಬ ಸುದ್ದಿ ಬಂತು. ನಾವೆಲ್ಲ -೧೦ವಯಸ್ಸಿನ ಮಕ್ಕಳು, ನಮಗೆ ಮೈಯೆಲ್ಲ ಪುಳಕ ! ಸುದ್ದಿ ಬಂದ ಸ್ವಲ್ಪ ಹೊತ್ತಿನಲ್ಲೇ ಅನೇಕರು ಒಟ್ಟಾದೆವು. ಎಲ್ಲರೂ ಪಟೇಲರ ಮನೆಗೆ ಹೋದೆವು. ಅಲ್ಲಿಮೊದಲು ಆಥರದ ಹೊಸವಸ್ತು ಯವುದೂ ಕಣ್ಣಿಗೆ ಕಾಣಿಸಲಿಲ್ಲ. ಹಾಗೇ ಕಾಯುತ್ತ ಕುಳಿತೆವು. ಮಾತನಾಡುವಹಾಗಿಲ್ಲ-ಪಟೇಲರಮನೆ! ಹಾಗೂ ಹೀಗೂ ಹೊತ್ತಿಗೆ ಊರು-ಪರವೂರು ಎಂದು ಸುಮಾರು ೫೦೦ ಜನ ಸೇರಿದ್ದರು ! ಪಟೇಲರ ಮಗಹೊರಗೆ ಬಂದರು.ಬಂದವರೇ ವಿಷಯ ತಿಳಿದು ಎಲ್ಲ ಸಾಲಾಗಿ ಕುಳಿತುಕೊಳ್ಳಬೇಕೆಂದೂ, ’ಲಾಟೀನುಬಹಳ ನಾಜೂಕಿನ ಮತ್ತುದುಬಾರಿಯ ವಸ್ತುವಾಗಿರುವುದರಿಂದ ಅದು ಬಿದ್ದುಹೋದರೆ ಅದರಲ್ಲಿರುವ ಗಾಜು ಒಡೆದುಹೋಗುತ್ತದೆಂದೂ ತಿಳಿಸಿ ತಾಕೀತುಮಾಡಿದರು. ಎಲ್ಲರೂ ಗಪ್ ಚುಪ್! ಬಾಯ್ ಮುಚ್ಚಿ ಸಾಲಾಗಿ ಕುಳಿತುಕೊಂಡೆವು. ಮೊದಲನೋಟಕ್ಕೆ ತೇರಿನಾಕಾರದಲ್ಲಿರುವಒಂದು ಸ್ಪುರದ್ರೂಪಿ ವಸ್ತು ಕಂಡಿತು. ಅದು ಮೈತುಂಬಾ ಗಾಜನ್ನು ಹೊದ್ದಿತ್ತು. ಅದನ್ನು ಹಗಲುಹೊತ್ತು ಬಿದ್ದುಹೋಗದಿರಲೆಂದುಒಂದು ಮರದ ಪೆಟ್ಟಿಗೆಯಲ್ಲಿ ಹಾಕಿಡುತ್ತಿದ್ದರು.

ದೂರ ಕೂತ್ಗೊಳಿ, ಇಲ್ಲಾಂದ್ರೆ ಒಳ್ಗಡೆ ಇಟ್ಟುಬಿಡ್ತೇನೆ’--ಪಟೇಲರ ಮಗ ಗುಡುಗಿದರು. ತುಂಬಾ ದೂರ ಕುಳಿತರೆ ನಮಗೆ ಅದುಸರಿಇಯಾಗಿ ಕಾಣುತ್ತಿರಲಿಲ್ಲ. ಆದರೂ ಪಾಪ ಪಟೇಲರ ಮಗ ನಮಗೆ ಅದನ್ನು ಬಳಸುವ ಬಗೆ ಹೇಗೆ ಎಂದೆಲ್ಲತೋರಿಸತೊದಗಿದರು. ’ಇಲ್ಲಿ ದೀಪ ಹಚ್ಚಿದರೆ ಬಗ್ಗನೆ ಉರೀತದೆ, ಗಾಜನ್ನು ಮೇಲಿಂದ ಇಳಿಬಿಡುವುದರಿಂದ ಗಾಳಿಬಂದರೂ ದೀಪಆರುವುದಿಲ್ಲ.’ ದೀಪ ಸಣ್ಣ ದೊಡ್ಡ ಮಾಡಲು ಇರುವ ಕಡ್ಡಿಯಥರದ್ದನ್ನು ತೋರಿಸಿದರು. ದೀಪ ಹಚ್ಚಿ ತೋರಿಸುವಂತೆ ಪಟೇಲರಅಪ್ಪಣೆ ಬಂತು. ಅತ್ಯಂತ ಶ್ರೀಮಂತರ ವಸ್ತುವಾದಲಾಟೀನುತಮ್ಮ ಮನೆಯಲ್ಲೂ ಇದೆ ಎಂಬುದೇ ಪಟೇಲರ ಹೆಗ್ಗಳಿಕೆಯಾಗಿತ್ತು. ಹೀಗಾಗಿ ತಮ್ಮ ಗತ್ತಿಗೆ ತಕ್ಕದಾಗಿ ಅದನ್ನು ಬೆಳಗಿಸಿ ತೋರಿಸಿ ಎಂದು ಆಜ್ಞೆಬಂತು.

ಆಗ ನಮಗೆ ಅದಕ್ಕೆ ಸೀಮೆ ಎಣ್ಣೆ ತುಂಬುವ ದ್ವಾರ ಹಾಗೂ ಪದ್ದತಿಯನ್ನು ತೋರಿಸಿದರು. ಇನ್ನೇನು ಬೆಂಕಿ ಹಚ್ಚಬೇಕು. ಅಷ್ಟರಲ್ಲಿಮಕ್ಕಳೆಲ್ಲ ದೂರ ಸರಿದೆವು. ಬೆಂಕಿ ಹಚ್ಚಿದಾಗ ಶುರುವಿನಲ್ಲಿ ಯಾವುದೋರೀತಿ ಟುಸ್ ಪುಸ್ ಎಂಬ ಶಬ್ಢ ಬರಬಹುದೆಂಬ ಹೆದರಿಕೆನಮ್ಮನ್ನಾವರಿಸಿತ್ತು. ಅಂತೂ ಹರಳೆಣ್ಣೆ ದೀಪದಿಂದ ಹಚ್ಚಿಸಿಕೊಂಡ ಇನ್ನೊಂದು ಬತ್ತಿಯ ಸಹಾಯಪಡೆದು ಲಾಟೀನನ್ನು ಹಚ್ಚಿದರು. ನಮಗೆ ಸಖತ್ ಆಶ್ಚರ್ಯ ! ಎಂತ ಅದ್ಬುತ ದೀಪ ಅದು ! ಅಲ್ಲಿಯವರೆಗೆ ಎಲ್ಲೂ ನೋಡಿರದ ವಿಚಿತ್ರ. ಅದಾದ ಕಾಲುಘಂಟೆಲಾಟೀನನ್ನು ನೋಡುತ್ತಲೇ ಇದ್ದೆವು. ನಮಗೂ ನಮ್ಮ ಮನೆಗಳಿಗೆ ಒಂದೊಂದು ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಆಸೆ. ಪಟೇಲರಮನೆಯಲ್ಲಿ ಮಾತ್ರ ಇದೆಯಲ್ಲ ಎಂಬ ಹೊಟ್ಟೆ ಕಿಚ್ಚು! ನಂತರವೂ ಅನೇಕದಿನ ಪಟೇಲರ ಮನೆಯ ಮಾರ್ಗವಾಗಿಹೋಗುತ್ತ ಬರುತ್ತ ಇದ್ದೆವು. ಕಣ್ಣಿಗೆ ಹಬ್ಬ ಉಂಟು ಮಾಡಿದ ಅದ್ಬುತ ದೀಪವನ್ನು ನೋಡಲು ಎಲ್ಲಾದರೂ ಅವಕಾಶ ಸಿಕ್ಕೀತೆಎಂಬುದೇ ಅದಕ್ಕೆ ಕಾರಣ.

ಹಲವು ದಿನಗಳ ಕಾಲ ಪಟೇಲರ ಮನೆಯಲ್ಲಿ ಜನವೋ ಜನ, ಪಟೇಲರಿಗೆ ತೋರಿಸಲು ಕೂತರೆ ಬೇರೆ ಕೆಲಸವೆಲ್ಲ ಹಾಳು, ತೋರಿಸದಿದ್ದರೆ ಪಟೇಲ ಅಂತಸ್ತಿಗೆ/ಘನತೆಗೆ ಏನಾಗಬೇಡ ! ಅಂತೂ ಜನರ ದಂಡು ದಂಡೇ ಸಾಲಾಗಿ ಈಗ ಚುನಾವಣೆಯಲ್ಲಿ ಮತಚಲಾಯಿಸಲು ಬರುವಂತೆ ಬರುತ್ತಿದ್ದರು. ಪಟೇಲರ ಮನೆಯವರು ಒಳಗೊಳಗೇ ಬೈದುಕೊಳ್ಳುತ್ತಿದ್ದರೂ ಪಟೇಲರು ಮಾತ್ರ ತಮ್ಮ ಪೊದೆಮೀಸೆ ತಿರುಗಿಸುತ್ತಲಾಟೀನಿನ ಮಹತ್ವವನ್ನು ಕೊಂಡಾಡುತ್ತಿದ್ದರು.


Tuesday, January 26, 2010

ಎನಿತು ಧನ್ಯ ಅಮ್ಮಾ...


ಎನಿತು ಧನ್ಯ ಅಮ್ಮಾ...

ಭುವಿಯಲ್ಲಿ ಅತೀ ಮೌಲ್ಯವುಳ್ಳದ್ದೆಂದರೆ ಅದು ‘ಅಮ್ಮ’. ಈ ‘ಅಮ್ಮ’ ಎಂಬ ಶಬ್ಧವೇ ಕರ್ಣಾನಂದಕರ. ಋಣತೀರಿಸಲಾಗದ ಒಂದೇ ಸ್ಥಾನ ಅಮ್ಮ. ತನ್ನ ಕಷ್ಟಗಳೆಲ್ಲವನ್ನೂ ಕಂದನ ಮುಖಾರವಿಂದದಲ್ಲಿ ಅರಳುವ ನಗೆಯಲ್ಲಿ ಕಳೆದು ಬಿಸುಟುವ ಅಮ್ಮ ನಮಗಾಗಿ ಪಟ್ಟ ಪಾದು ಸಣ್ಣದೇನಲ್ಲ.
||ಸರ್ವವಂದ್ಯೇಣ ಯತಿನಾ ಪ್ರಸೂರ್ಮಾತಾ ಹಿ ವಂದ್ಯತೆ||
- ಸರ್ವರಿಂದಲೂ ವಂದಿಸಲ್ಪಡುವ ಯತಿ[ಸನ್ಯಾಸಿ]ಯೂ
ಕೂಡ ತನ್ನ ತಾಯಿಗೆ ಮಾತ್ರ ನಮಸ್ಕರಿಸುತ್ತಾನೆ ಇದು ಸಂಸ್ಕೃತದ ಉಲ್ಲೆಖ. ಇದಕ್ಕೆಂತಲೇ ನಮ್ಮ ಆದಿಶಂಕರರು ಹೇಳಿದರು-

“ಕುಪುತ್ರೋ ಜಾಯೇತ ಕ್ವಚಿತಪಿ ಕುಮಾತಾ ನ ಭವತಿ”

--ಲೋಕದಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಕೆಟ್ಟ ತಾಯಿ ಇರುವುದಿಲ್ಲ. ಪಶು-ಪಕ್ಷಿಗಳಲ್ಲಿ ಕೂಡ ಈ ಮಾತೃತ್ವವನ್ನು ನಾವು ಕಾಣಬಹುದು. ತಾನು ಉಪವಾಸ ಇದ್ದರೂ ತನ್ನ ಕಂದಮ್ಮ ಚೆನ್ನಾಗಿರಲಿ ಎಂಬುದು ಅಮ್ಮನ ಅಪೇಕ್ಷೆ.

ಗರ್ಭದಲ್ಲಿರುವಾಗಲೇ ಬಂದ ಈ ಸಂಬಂಧ ಹೊಕ್ಕುಳಬಳ್ಳಿ ಕತ್ತರಿಸಿದ ಮಾತ್ರಕ್ಕೆ ಕಡಿಯಲಾರದ ಋಣಾನುಬಂಧ. ಹುಟ್ಟು, ಶೈಶವ,ಬಾಲ್ಯ,ಯೌವ್ವನ,ವಾರ್ಧಕ್ಯ ಹೀಗೇ ಪ್ರತೀ ಹಂತದಲ್ಲಿ ಪ್ರಜ್ಞಾಪೂರ್ವಕವಾಗಿ ನಮ್ಮ ಏಳ್ಗೆ ಬಯಸಿ,ತನ್ನ ಬೇಕು-ಬೇಡಗಳನ್ನು ಬದಿಗೊತ್ತಿ,ನಮಗಾಗಿ ಹಲವು ಮಹೋನ್ನತ ಕನಸುಗಳನ್ನು ಹೊಸೆಯುತ್ತ ನಮ್ಮ ನೆನಪಲ್ಲೇ ಜೀವನ ಸವೆಸುವ ಆ ಜೀವ ಭಗವಂತನ ವಿಶಿಷ್ಟ ಸೃಷ್ಟಿ. ಇಂತಹ ಅಮ್ಮನಿಗೊಂದು ನಮನ ಸಲ್ಲಿಸುವ ಪ್ರಯತ್ನ ನನ್ನೀ ಕಾವ್ಯರೂಪದಲ್ಲಿ ಕಟ್ಟಿಕೊಡುತ್ತಿದ್ದೇನೆ.


ಎನಿತು ಧನ್ಯ ಅಮ್ಮಾ...

ಎನಿತು ಧನ್ಯ ಅಮ್ಮಾ ನಿನ್ನ
ಮಡಿಲೊಳ್ ಜನಿಸುತ
ಘನತೆವೆತ್ತ ಮೂರ್ತಿನಿನ್ನ ಋಣವ ಸ್ಮರಿಸುತ

ನವಮಾಸದ ಅನುದಿನದೊಳು ಹಲವು ಹಂಬಲ
ಪವಡಿಸೆ ನಿನ್ನುದರದೊಳಗೆ ಇಟ್ಟೆ ಬೆಂಬಲ.

ಶಿಶುವು ನಾನು ಹಸಿವು ನನಗೆ ಕೊಸರಿ ಕೂಗಿದೆ
ನಿಶೆಯು ಹಗಲು ನಿದ್ದೆ ತೊರೆದು ಅಶನ ನೀಡಿದೆ

ಅಂಬೆಗಾಲನಿಕ್ಕುವಾಗ ಇಂಬುನೀಡುತ
ಕಂಬ ದಿಣ್ಣೆ ಏರು ಇಳಿತ ತುಂಬ ಹೆದರುತ

‘ಊಟಬೇಡ ಆಟಬೇಕು’ ಕಾಟ ನೀಗುತ
ಕೋಟಿಮೈಲ ತಂಗದಿರನ ಕೋಟೆ ತೋರುತ

ಬಾಲ್ಯದಾಟ ರೊಚ್ಚೆ ರಂಪ ತಿದ್ದಿ ತೀಡುತ
ವ್ಯಾಳ್ಯ ಮರೆತು ಚಂಡು ಬುಗುರಿ ಆಟ ನೋಡುತ

ಸುಖವ ಕಂಡೆ ನನ್ನ ನಗೆಯೊಳ್ ದುಃಖವ ಮರೆಯುತ
ಮುಖದ ತುಂಬ ಮುತ್ತನಿಟ್ಟು ಲಲ್ಲೆಗರೆಯುತ

ಬೆಳೆದೆನಮ್ಮ ಸ್ವಾರ್ಥಿಜನುಮ ನಿನ್ನ ತೊರೆಯುತ
ಕಳೆದು ಹೋಗುತಿರಲು ಬದುಕು ಯಾರು ಶಾಶ್ವತ?

ಹರಸಿ ನನ್ನ ಏಳ್ಗೆ ಬಯಸಿ ಕನಸು ಕಾಣುತ
ಭರಿಸಲಾರೆ ಋಣವ ಬದುಕು ಪೂರ್ವನಿಗದಿತ

Monday, January 25, 2010

ವಿಜಯೋತ್ಸವ


ವಿಜಯೋತ್ಸವ

ವಿಜಯೋತ್ಸವ ಇದುವೆ ವಿಜಯೋತ್ಸವ
ಜಗದ ಜನತೆ ನೆನೆದು ನೋಡೆ ಗಣರಾಜ್ಯೋತ್ಸವ

ವಿವಿಧ ಧರ್ಮ ಮತಗಳು ಸವಿಧ ನೀತಿ ಪಥಗಳು
ತ್ರಿವಿಧ ದಾಸೋಹ ನಡೆಪ ಸಂತ ಮಹಂತರುಗಳು
ಭವದ ದೇಶ ಮೆರೆಸಲು ಬರದ ಬವಣೆ ತಣಿಸಲು
ಕವಿದ ಮೋಡ ಸರಿಸಲು ಭಾರತವನು ಬೆಳಗಲು

ವಿಜ್ಞಾನದ ನಡೆಗಳು ತಂತ್ರಜ್ಞಾನ ಪಡೆಗಳು
ಸುಜ್ಞಾನದ ದೀಪವಾಗಿ ಹಲವು ಮಾಧ್ಯಮಗಳು
ಅಜ್ಞಾನವ ಕಳೆಯಲು ಅನ್ಯಾಯವ ತಡೆಯಲು
ಪ್ರಜ್ಞಾನವ ವಿಸ್ತರಿಸಿ ಭಾರತವನು ಬೆಳಗಲು

ಹಲವು ರಾಜ್ಯಂಗಳು ಕೆಲವು ಪ್ರಾಂತಂಗಳು
ಹಲವು ವೇಷಭೂಷಣ ಕೆಲವು ನೀತಿದರ್ಪಣ
ಒಲವಿನಿಂದ ಕೂಡಿದ ಹಲವು ಭಾಷೆನಮ್ಮದು
ಗೆಲುವನೆಮಗೆ ನೀಡಲು ಭಾರತವನು ಬೆಳಗಲು

ಅರಸು ವಂದಿ-ಮಾಗಧರು ಹರಸುತಾಳಿ ಅಳಿದರು
ಬೆರೆಸಿ ಹಾಲು-ಜೇನು ನಮ್ಮ ಸಾಹಿತಿಗಳು ಸುರಿದರು
ಒರೆಸೆ ಕಣ್ಣನೀರ ಹನಿಯ ಸೋದರಿಯರು ಬರುವರು
ಹರಿಸಲೆಮ್ಮನೆಲ್ಲರು ಭಾರತವನು ಬೆಳಗಲು

ಕಲೆಯನಾಡು ಭಾರತ ಕರುಣೆ ನಮಗೆ ಕರಗತ
ಮಲೆಯನಾಡು ಭಾರತ ದಯೆಯು ನಮ್ಮ ರಕುತ
ಬಲಿದನಾಡು ಭಾರತ ಅನುಕಂಪವ ಬೀರುತ
ಒಲಿದನಾಡು ಭಾರತ ವಿಶ್ವಪ್ರೇಮ ಮೆರೆಯುತ

ಜೈ ಹಿಂದ್ ಜೈ ಹಿಂದ್

ಜೈ ಹಿಂದ್
ಜೈ ಹಿಂದ್ ಜೈ ಹಿಂದ್



Sunday, January 24, 2010

ರೇಣುಕಾಚಾರ್ಯರ ಅಖಂಡ ಕೃಷಿ‌ಅಧ್ಯಯನ !!


‘ಸೀಡಿ’ ಎಂಬ ಬಟ್ಟೆ ಹಾವು
ರೇಣುಕಾಚಾರ್ಯರ ಅಖಂಡ ಕೃಷಿ‌ಅಧ್ಯಯನ
[ಸಂಪೂರ್ಣ ರಾಮಾಯಣ ಎಂಬಂತೆ]


ನಾವು ಬಂದೇವ ನಾವು ಬಂದೇವ
ನಾವು ಬಂದೇವ ಭಿನ್ನಮತ ತೋರುದಕ್ಕ
ಮತ್ತೆ ತಿಂದು-ಕುಡ್ದು ನುಂಗಿ ತೇಗೋದಕ್ಕ
ಗೀಯ ಗೀಯ ಗಾಗೀಯ ಗೀಯ ಹಾ ಹಾ ಹಾ ಹಾ ಹಾ......

ಹೈದ್ರಾಬಾದಿನಾಗ ರಿಸಾರ್ಟು ಯಾಕಂತ ?
ಹೂಂ... ಹೇಳಪಾ....... ಕೃಷಿ‌ಅಧ್ಯಯನಕ್ಕಂತ
ಸಿವಾ ಕೃಷಿ‌ಅಧ್ಯಯನಕ್ಕಂತಾ ತಾ ತಾತಾತಾ..ಗೀಯ ಗೀಯ..

ನರ್ಸ ಜಯಲಕ್ಷ್ಮಿಗೆ ಏನಪಾ ಆತಂತ....?
ಪ್ರೇಮಾಮಾಡ್ಯಾರಂತ..ಏನೆಲ್ಲಾ ಮಾಡ್ಯಾರಂತ...
ಯಾರಂತಾ.....? ರೇಣುಕಾಚಾರ್ಯರಂತ ನಮ್ಮ
ರೇಣುಕಾಚಾರ್ಯರಂತಾ ತಾ ತಾತಾತಾ..ಗೀಯ ಗೀಯ..

ಹೊನ್ನಾಳಿಯಾಗೆಲ್ಲ ‘ಉದ್ಧಾರ’ಮಾಡ್ತಾರಂತ....
ಯಾರಂತ....?.ನಮ್ಮ ರೇಣುಕಾಚಾರ್ಯರಂತ...
ಯಾಕಪ್ಪಾ ಸಿವಾ.?.ಮುಂದೆ ಮುಖ್ಮಂತ್ರಿ ಅಗ್ಬೇಕಂತ..
ಮುಖ್ಮಂತ್ರಿ ಅಗ್ಬೇಕಂತ..ತಾ ತಾತಾತಾ..ಗೀಯ ಗೀಯ..

ಯಡ್ಯೂರಪ್ಪರ ಸರ್ಕಾರ್ದಾಗೆ ಬಡ್ಯೂರಪ್ಪರೆ
ಜಾಸ್ತಿ‌ಆಗ್ಯಾರಂತ..ಯಾಕಂತ..... ?
ಆ ದಾರಿ ಕಂಡಾರಂತ.. ಎಲ್ಲಾರ್ಗೆ ಮಂತ್ರಿಗಿರಿ ಬೇಕಂತ..
ಮಂತ್ರಿಗಿರಿ ಬೇಕಂತ.. ತಾ ತಾತಾತಾ..ಗೀಯ ಗೀಯ..

ಸರ್ಕಾರ್ದಾಗಾಗಾಗ ಬಟ್ಟೆ ಹಾವು ಬಿಟ್ಟಾರಂತ..
‘ಸೀಡಿ ಮಡ್ಗ್ಯಾರಂತ’... ಯಾಕಪ್ಪಾ..ಹಾಂಗಂದ್ರೆ ಏನಾತು.?.
ಏ.. ಎಂತೆಂಥಾ ಮನುಷ್ಯರೆಲ್ಲಾ ಗಡಗಡಾ ಅಂತಾರಂತ
‘ಕೆಲ್ಸಾ’ ಆಗುತಂತ..!. ‘ಹಾವುಬಿಟ್ರೆ’…..
‘ಕೆಲ್ಸಾ’ ಆಗುತಂತ ತಾ ತಾತಾತಾ..ಗೀಯ ಗೀಯ..

ನಮ್ ಮುಖ್ಮಂತ್ರಿ ಸಾಹೇಬ್ರು ಬಡವಾಗಿ ಹೋಗ್ಯಾರಂತ..
ಯಾಕಂತಪ್ಪಾ.....?. ಸುಸ್ತಾಗಿ ಬುಟ್ಟಾರಂತ....
ಕುಣ್ದೂ ಕುಣ್ದೂ ಸುಸ್ತಾಗಿ ಬುಟ್ಟಾರಂತ....ಯಾಕಂತ...?
ಸೋಬಕ್ಕನ್ನ ಇಳ್ಸೂಂದ್ರಂತ ಇಳ್ಸದ್ರಂತ...ಬಳ್ಗಾರ್ ಬ್ಯಾಡಾಂದ್ರಂತ
ಕಳ್ಸದ್ರಂತ.. ಅವ್ರನ್ನೂ ಕಳ್ಸದ್ರಂತಾ ತಾತಾತಾ..ಗೀಯ ಗೀಯ..

ಅಂಗೈಕೊಟ್ನಲ್ಲಪ್ಪ ಸಿವಾ..ಮುಂಗೈನೂ ಕೇಳ್ತಾಕುಂತ್ರಲ್ಲ
ಯಾಕಪಾ... ಏನಾತು..?.ಹಿತ್ಲಬಾಗ್ಲಿಂದ ಬಂದಾರಂತ..
‘ಮಂತ್ರಿಪಟ್ಟಾ ಕೊಡು’ಅಂತ..ಮುಂದೇನಾತು...?
ಕೊಟ್ರಂತಲ್ಲಪ್ಪಾ ನಮ್ ಸಿವಾ...ಹೊಟ್ಟೇ‌ಉರಿದುಹೋತ
ಹೊಟ್ಟೇ‌ಉರಿದುಹೋತ ತಾತಾತಾ..ಗೀಯ ಗೀಯ..

ಮೀಡಿಯಾದಾಗ್ ಕೂತ್ಗಂಡು ನಾನಾಥರ ಹೇಳ್ಯಾರಂತ
“ಕೃಷಿ‌ಅಧ್ಯಯನ”ಕ್ಕೋಗಿದ್ರಂತ...ಮತ್ತೆ ಬೇರೇನು ಇಲ್ವಂತ..
‘ಎಲ್ಲಾ ಒಟ್ಟಾಗೇ’ ಇದಾರಂತ.. ‘ಬಿಕ್ಕಟ್ಟೆಲ್ಲ ಸುಳ್ಳಂತ'
ಸಲ್ಪ ‘ಯಾಯಾಮ’ಮಾಡದ್ರಂತ..ಸುಮ್ಕೇ ಇದ್ಬುಟ್ಟು ಬಂದ್ರಂತ...
ಉದ್ಧಾರ ಮಾಡ್ತಾರಂತ ರಾಜ್ಯ ಉದ್ಧಾರ
ಮಾಡ್ತಾರಂತಾ ತಾ ಗೀಯ ಗೀಯ !
---------

Saturday, January 23, 2010

ಅತಿ ಸಣ್ಣ ಕಥೆಗಳು


ಅತಿ ಸಣ್ಣ ಕಥೆಗಳು

ಅವಳು ಅಪ್ರತಿಮ ಸುಂದರಿ. ಆಗಾಗ ದಿನಸಿ ಕೊಳ್ಳಲು ಬರುವಳು. ಬೇಕಾದ ಸಾಮಾನಿನ ಚೀಟಿ ತರುತ್ತಿದ್ದಳು. ದುಡ್ಡುಕೊಟ್ಟು ತೆಗೆದುಕೊಂಡು ಹೋಗುತ್ತಿದ್ದಳು,ಮಾತೇ ಅಡುತ್ತಿರಲಿಲ್ಲ. ಶೆಟ್ಟರ ಮಗನಿಗೆ ಒಳಗೊಳಗೇ ಅಂಥಾ ಪ್ರೀತಿ, ಬಿಟ್ಟಿರಲಾರದ ಬಯಕೆ.ಅಂಗಡಿಯನ್ನಾದರೂ ಬಿಟ್ಟೇನು ಅವಳನ್ನು ಬಿಡೆ-ಮದುವೆಯಾದರೆ ಅವಳನ್ನೇ ಎಂಬ ತುಡಿತ.ಅಂದು ಬಂದಿದ್ದಳು-ಚಿಕ್ಕಮ್ಮನೊಡನೆ, ಅವಳೊಡನೆಯೂ ಮಾತಾಡುತ್ತಿರಲಿಲ್ಲ, ಎರ್ಡು ನಿಮಿಷಗಳ ಬಳಿಕ ಸನ್ನೆ ಮಾಡಿದಳು. ಶೆಟ್ಟರ ಮಗನಿಗೆ ಅರ್ಥವಾದಾಕ್ಷಣ ಕುಸಿದು ಹೋದ.

-----------

ಅವನೂ ಅವಳೂ ಅಲ್ಲೇ ಕೆಲಸಮಾಡುತ್ತಿದ್ದರು. ಎಂದೂ ಪರಸ್ಪರ ಮಾತಾಡಿರಲಿಲ್ಲ. ಕಣ್ಣಲ್ಲೇ ಮಾತನಾಡುತ್ತಿದ್ದರು. ದಿನಗಳು ಸರಿದುಹೋದವು. ನಾಲ್ಕಾರುದಿನ ಆಕೆ ಬಂದಿರಲಿಲ್ಲ. ಅವನಿಗೆ ಆತಂಕ. ಆದರೆ ಯಾರಲ್ಲಿಯೂ ಹೇಳಿಕೊಳ್ಳಲಾರ. ಮತ್ತೆ ಬಂದಳು- ಆಮಂತ್ರಣ ತಂದಿದ್ದಳು, " ಬನ್ನಿ,ನನ್ನ ಮದುವೆಗೆ ಫೆಬ್ರುವರಿ ೧೪ ರಂದು " .

-----------

ಡಾಕ್ಟರು ಮೊದಲು ಏನೂ ಹೇಳಿರಲಿಲ್ಲ, ಮಾಮೂಲಿ ಸಿಸೇರಿಯನ್ ಆಗಿರೋದ್ರಿಂದ ಆತ ಜಾಸ್ತಿ ಕೇಳಿರಲೂ ಇಲ್ಲ. ಗಡಿಬಿಡಿಯಲ್ಲಿ ಆತನ ಹೆಂಡ್ತಿಗೆ ಆಪರೇಶನ್ ನಡೆದೇ ಹೋಯಿತು.ಇನ್ನೇನು ಬಿಡುಗಡೆಮಾಡಿ ಕಳಿಸಬೇಕು.ಬಿಲ್ಲು ಕೊಟ್ಟರು, ಆತ ಹೇಳಿದ "ಬಿಡಿ ಡಾಕ್ಟ್ರೇ ನಂಗೊಂಥರಾ ಎದೆಯಲ್ಲಿ ಏನೋ ಆಗ್ತಾ ಇದೆ, ನಾನೂ ಇಲ್ಲೇ ಎಡ್ಮಿಟ್ ಆಗ್ತೀನಿ"

-----------

ಮುಂದಿನವಾರ ಸಂಕ್ರಾಂತಿ. ಅವರದ್ದು ಕೂಲಿ ಬದುಕು. ಚಿಕ್ಕ ಮಕ್ಕಳು, ಬೇಡುತ್ತವೆ: ಎಳ್ಳು-ಬೆಲ್ಲದ ಜೊತೆ ಸಿಹಿ ತಿಂಡಿ ಮಾಡಲು ಲೆಕ್ಕಹಾಕಿಕೊಂಡರು. ಅದಕ್ಕೆ ತಕ್ಕದಾಗಿ ಹಣಹೊಂದಿಸಿದರು.ಹಬ್ಬ ಬಂದೇಬಿಟ್ಟಿತು, ಅಂಗಡಿಗೆ ಹೋದಾಗ ಶೆಟ್ಟರು ಹೇಳಿದರು "ಸಕ್ರೆ ನಿಮ್ಕೈಗೆ ಸಿಗಲ್ಲ ಬಿಡಿ"

------------

ಆತ ವ್ಯಕ್ತಿಶಃ ತುಂಬಾ ಒಳ್ಳೆಯವನು. ಕಾರು,ಮನೆಯನ್ನೆಲ್ಲ ಸಾಲದಲ್ಲಿ ಕೊಂಡುಕೊಂಡಾಗಿತ್ತು. ಆಗಷ್ಟೇ ಮದುವೆಯಾಗಿತ್ತು ಬೇರೆ. ’ಸಾಫ್ಟ್ ವೇರ್ ಎಂಜಿನೀಯರ್’ ಎಂದು ಹುಡುಗಿ ಕೊಟ್ಟಿದ್ದರು. ಹಲವರನ್ನು ಕೆಲಸದಿಂದ ತೆಗೆದಿದ್ದರು;ಕೆಲಸದಲ್ಲಿ ತಪ್ಪಿರದಿದ್ದರೂ. ಒಂದಾವರ್ತಿ ಎಲ್ಲ ಮುಗಿಯಿತು. ತನಗೆ "ಗುಡ್ ಪರ್ಫಾರ್ಮರ್" ಎಂಬ ಸರ್ಟಿಫಿಕೇಟ್ ಕೊಟ್ಟಿದ್ದರು. ತನಗಂತೂ ತೊಂದರೆಯಿಲ್ಲ ಎಂದುಕೊಂಡಿದ್ದರೂ ಆ ದಿನ ಬಂದೇ ಬಿಟ್ಟಿತು. ಕೆಲವುದಿನಗಳ ನಂತರ ಪೇಪರ್ನಲ್ಲಿ ಬಂದಿತ್ತು "ಕಾಣೆಯಾಗಿದ್ದಾರೆ".

-------------

ಝಣಝಣ ಕಾಂಚಾಣ



ಝಣಝಣ ಕಾಂಚಾಣ




ಝಣ ಝಣ ಝಣಝಣ ಕಾಂಚಾಣ
ಕಿಂಕಿಣಿ ವಡ್ಯಾಣ |
ಝಣ ಝಣ ಝಣಝಣ ಕಾಂಚಾಣ

ಹದಿನಾಲ್ಕು ಲೋಕದೊಳು ನಿನ್ನ
ಹೊಗಳುವರೋ ರನ್ನ |
ನಿಧಿಯಿರಲು ನೀನೇ ಬಲುಚೆನ್ನ

ಹಲವರಿಗೆ ನೆಂಟನು ನೀನಣ್ಣ
ಹಣವಿರೆ ತಿಮ್ಮಣ್ಣ !
ಹಣವಿರದಿರೆ ನೀನೇ ತಿಪ್ಪಣ್ಣ !

ಘನಕಾರ್ಯಕೆ ಅತಿಥಿಗಳು ತಾವು
ಬೆಂಬಿಡರೀ ಜನವು |
ಧನಶಂಕರಿ ಹರಿಸಿರಲು ಒಲವು

ತಿರುಪತಿಯಲಿ ದರುಶನವು ತಮಗೆ
ಬೇಕಷ್ಟು ಘಳಿಗೆ !
ಗರಿನೋಟು ನಗಣಿತವೆನಿಸಿದಗೆ

ವೈದ್ಯರಾಜ ಬರುವರು ತಮ್ಮನೆಗೆ
ತಾವಿರುವ ಎಡೆಗೆ |
ವೇದ್ಯವಿಪ್ಪ ಸಂಪತ್ತಿರುವರೆಗೆ


ರಾಜಕೀಯ ಸ್ಥಾನಕೆಶುಭಮಸ್ತು
ಪಕ್ಷದಲೀ ಒತ್ತು |
ಚಲಿಸಿ ತಾವು ಹೇಳಿರೆಶ್ರೀರಸ್ತು

ಮಾಧ್ಯಮದಲಿ ತಮದೇ ಆರ್ಭಟವು
ಸಾಕಷ್ಟು ದಿನವು |
ಆದ್ಯತೆಯಲಿ ಕಳಿಸಿರೆಸಂಪದವು

ಜನಮನ್ನಣೆ ಮಾನ ಸನ್ಮಾನ
ಕಾಸಿರುವಾವರೆಗೆ |
ಮನದನ್ನೆಗೆ ದಕ್ಕೀತು ಬಹುಮಾನ

ಜನಸಾಗರ ಹರಿಸಿರೆ ಮೆರವಣಿಗೆ
ನೀಹೋದಾ ಹೊತ್ತು |
ನುಡಿಸಾವಿರ’-ಪತ್ರಿಕೆ ಬರವಣಿಗೆ
-----

Wednesday, January 20, 2010

ತೋರಿಸೇ ಮಾಧವನಾ......


ತೋರಿಸೇ ಮಾಧವನಾ.......

ಮುದ್ದು ಕೃಷ್ಣನ ಮುಖಾರವಿಂದದ ನೆನಪು ಯಾರಿಗೆ ಮುದನೀಡುವುದಿಲ್ಲ? ಬಾಲ್ಯದಲ್ಲಿ-ಶೈಶವಾವಸ್ಥೆಯಲ್ಲಿ ಎಲ್ಲಾ ಕಂದಮ್ಮಗಳನ್ನೂ ಹೋಲಿಸುವುದು ಕೃಷ್ಣನಿಗೆ ಮಾತ್ರ! ಅದರಲ್ಲಂತೂ ಕಿಲಾಡಿಗಾಗಿ ಪ್ರಸಿದ್ಧರಾದವರು ಇಬ್ಬರೇ-ಒಬ್ಬಾತ ಕೃಷ್ಣ[ಕಿಲಾಡಿ ಕಿಟ್ಟ] ಮತ್ತೊಬ್ಬಾತ ಹನುಮಂತ [ಕಿಲಾಡಿ ಹನುಮ] ‘ಯೇ ಕಿಲಾಡಿ ಕಾ ಮಾಮ್ಲಾ ಹೈ’

ನೊಂದ ರಾಧೆ ತನ್ನ ತುಂಟ ಕೃಷ್ಣನನ್ನು ಅವನ ತುಂಟಾಟದ ವೈಭವ, ವೈಖರಿಯೊಂದಿಗೆ ತುಸುಕೋಪದಿಂದ, ಅತಿ ಪ್ರೀತಿಯಿಂದ [ಒಂಥರಾ ಪ್ರೀತಿ, ಒಂಥರಾ ಕೋಪ ಅಂತಾರಲ್ಲ ಹಾಗೇ] ಬಣ್ಣಿಸಿ ತನ್ನ ಸಖಿಗೆ ಆತನನ್ನು ಹುಡುಕಿಕೊಂಡು ಬರಲು ಹೇಳುತ್ತಾಳೆ. ಕೃಷ್ಣ ಎಂದರೆ ಅನೇಕದರಲ್ಲಿ ಏಕ-ಏಕದರಲ್ಲಿ ಅನೇಕ ತತ್ವವನ್ನು ತೋರಿಸಿದ ಅತಿಮಾನುಷ ವ್ಯಕ್ತಿ, ಹೀಗೆ ಜೊತೆಗೆ ಕಂಡೂ ಕಾಣಿಸದ-ಕಾಣಿಸದೆಯೂ ಕಾಣುವ ಈ ತುಂಟಾಟ [ಈ ನನ್ನ ಕವನದಲ್ಲಿ] ರಾಧೆಗೆ ಬೇಸರಮೂಡಿಸುತ್ತದೆ.

ಮಹಾಭಾರತದ ಈ ಪಾತ್ರ: ಗೆಳೆಯನಾಗಿ, ನೆಂಟನಾಗಿ, ಹಿತೈಷಿಯಾಗಿ, ಸಂಧಾನಕಾರನಾಗಿ, ಆಪದ್ಬಾಂಧವನಾಗಿ, ದುಷ್ಟ ಶಕ್ತಿನಿರ್ಮೂಲಕನಾಗಿ, ವಿಶ್ವಕ್ಕೆ ಮನುಜ ಮತವನ್ನೂ, ವಿಶ್ವ ಪಥವನ್ನೂ ಬೋಧಿಸಿ ವಿರಾಟ್ ಸ್ವರೂಪನಾಗುತ್ತಾನೆ; ವಿಶ್ವವಂದ್ಯನಾಗುತ್ತಾನೆ, ‘ಜಗದ್ಗುರು’ವಾಗುತ್ತಾನೆ. ಎಲ್ಲಿಯವರೆಗೆ ಜಗದಲ್ಲಿ ಚಿಕ್ಕಮಕ್ಕಳಿರುತ್ತಾರೋ ಅಲ್ಲಿಯವರೆಗೆ ನಮ್ಮ ‘ತುಂಟಗುರು’ವಿನ ನೆನಪು ಹಸಿರಾಗಿರುತ್ತದೆ; ಹಸಿ ಹಸಿಯಾಗಿರುತ್ತದೆ. ಇಂಥ ‘ತುಂಟಗುರು’ವಿನ ತಂಟೆಯನ್ನು, ‘ಅವನು ನಮ್ಮವ’ ಎಂದು ಬಾಚಿ ತಬ್ಬಿಕೊಳುವ ಹಪಹಪಿಕೆಯನ್ನು ನಿಮ್ಮ ಮುಂದೆ ನನ್ನ ಶಬ್ಧಗಳಲ್ಲಿ ಇಡುವ ಪ್ರಯತ್ನಮಾಡಿದ್ದೇನೆ............

ತೋರಿಸೇ ಮಾಧವನಾ.......ಕೇಳೆಲೆ ಸಖೀ
ತೋರಿಸೇ ಮಾಧವನಾ.......

ಗೋಪಕನ್ನಿಕೆಯರು ಗೋಪಾಲನಕಂಡು
ನೂಪುರಕಟ್ಟಿ ತಾವ್ ನೋಂಪಿಹಾಡಿದರು
ಛಾಪು ಒತ್ತುತ ತನ್ನ ಕಾಪೀ ರಾಗದ ಕೊಳಲ
ಆಪರಿ ನುಡಿಸುತ ನೇಪಥ್ಯ ಸೇರಿದ.......||೧||

ಪರಿಜನ ಪುರಜನ ಹರಿಜನರೆಲ್ಲರು
ಸರಸರ ನಡೆವರೆ ತಡೆದಾಲೈಪರು
ಮರಕತ ಮಾಣಿಕ್ಯ ವೈಡೂರ್ಯಬೇಡದೆ
ಬಿರುಕಿನ ಬಿದಿರಲೆ ಮೋಡಿಯ ಮಾಡಿದ....||೨||

ಮೂರುಜಾವದ ವಿರಹ ನೂರು ಜನ್ಮದ ಥರ
ನಾರೀಹೃದಯದ ಗೋಳು ನೀರೆ ಬಲ್ಲೆಯ ಹೇಳು?
ಖಾರವಾಗಿದೆ ಮನ.. ನೆನೆದು ಮೂರ್ಖತನ
ಮಾರನ ಶರದಬ್ಬರ ಸಾರಿಬರುತಿದೆ...........||೩||

ಮೊಸರು-ಬೆಣ್ಣೆಯ ಕದ್ದು ಹೆಸರು ಕೆಡಿಸಿಕೊಂಡ
ಕೆಸರೊಳಗಾಡುತ ಹಾವನು ತುಳಿದಾತ
ಕಸಿವಿಸಿಗೊಂಡಿಹ ತಾಯಿಗೆ ಬಾಯಲಿ
ನಸುನಗುತಾ ಮೂಜಗವನೆ ತೋರಿದಾ...||೪||


ಆಗೊಮ್ಮೆ ಈಗೊಮ್ಮೆ ಮತ್ತೊಮ್ಮೆ ಮಗದೊಮ್ಮೆ
ಬೇಗಬರುವೆನೆಂದು ಸಾಗಿ ಹೋಗುವನೀತ
ಕೂಗಿಕರೆದರಿಲ್ಲ ಹೋಗಿ ಹುಡುಕಿದರಿಲ್ಲ
ನಾಗವೇಣಿಯೆ ತೋರೆ ಜಾಗಕೆಳೆದುತಾರೆ...||೫||

Tuesday, January 19, 2010

ಮಾಘಿಯ ಇಬ್ಬನಿ



ಮಾಘಿಯ ಇಬ್ಬನಿ

ನಸುಕಲೆ ಯಾಕೆ ಕೂಗಿದೆ ಹೇಳೇ
ಮಾಮರದಿ ಕೋಗಿಲೆ?
ಮಾಘಿಯ ಚಳಿಗೆ ಮರದಲಿ ಅವಿತು
ರಾಗವದು ಯಾಕೆಲೆ?

ಮುಂಜಾವದಲೇ ಸೂರ್ಯಬಂದಿರಲು
ಮೇಲೇಳದ ಆಲಸ್ಯ
ಮೈಯ್ಯನು ಮುರಿಯುತ ಹೊದಿಕೆಯ ಎಳೆದರೂ
ಹಾಸಿಗೆ ಬಿಡದು ರಹಸ್ಯ !

ಮಲೆನಾಡಿನ ಮೂಲೆಯೂರಿನ ಮನೆಯಲಿ
ಆಲೆಯ ಗಾಣದ ತಿರುವು
ಗಣಗಣಗುಡಿಸುತ ಗಾಣವ ಎಳೆಯುವ
ಹೋರಿಗಿದೆಯೆ ತುಸು ತೆರವು ?

ಬಿಸಿ ಬಿಸಿ ಕಾಫಿಯ ಲೋಟದೊಳಾಪರಿ
ಏನಡಗಿದೆ ಹೊಸ ಸತ್ವ ?
ಕಸುವು ತುಂಬಿ ಕೆಲಸಕೆ ಅಣಿಗೊಳಿಸುವ
ಬಿಂಕದ ಬಿಸಿರಸ ತತ್ವ !

ಬಚ್ಚಲು ಮನೆಯದು ನೆಚ್ಚಿನ ಆಸರೆ
ದಿನದೀ ಚೊಚ್ಚಲ ಘಳಿಗೆ
ಹುಚ್ಚು ಹರಿಯೆ ಹಂಡೆಯ ಬಿಸಿನೀರಿದೆ
ಬೆಚ್ಚನ ಆ ಒಲೆ ಬಳಿಗೆ


ತೊಟ್ಟಿಲ ಮಗುವಿನ ಕಿಲಕಿಲ ನಗುವಲಿ
ಕಳೆದು ಹೋಗುವ ಬಯಕೆ
ಬೆಟ್ಟವನೇರುತ ಎಳೆ-ಹೂ ಬಿಸಿಲಲಿ
ಮಿಳಿತು ಕುಣಿವ ಮೈ-ಮನಕೆ

ನಸುಗೆಂಪು ನಗೆಯ ಗುಲಾಬಿ ಮೇಲ್ಗಡೆ
ನವಿರಾದ ಮಂಜಹನಿಯು
ತುಸುನಾಚಿ ಮುಂದೆ ಸಾಗುವ ಇರುವೆಗೆ
ತಡಸೀತೆ ನೀರಹನಿಯು ?

ಗಡಬಡಿಸಿ ಓಡ್ವ ಗಡಿಯಾರದ ಮೇಷ್ಟ್ರಿಗೆ
ಯಾಕಿಲ್ಲವೊ ತುಸು ಕರುಣೆ ?
ಎಡಬಿಡದೆ ನಡೆದು ಈ ಜೀವಸಂಕುಲಕೆ
ಕಾಲದ ಒಗ್ಗರಣೆ !


Monday, January 18, 2010

ದಾಮೋದರ ಗುರೂಜಿ


ದಾಮೋದರ ಗುರೂಜಿ

ಹಿಂದೆ ಬೇಲೂರು-ಹಳೇಬೀಡು ದೇವಸ್ಥಾನಗಳನ್ನೆಲ್ಲ ಕೆತ್ತಿ ಕಟ್ಟಿದ್ದು ಜಕಣಾಚಾರಿ ಎಂಬುದು ಹಲವರಿಗೆ ವಿದಿತವಷ್ಟೆ ? ಈ ಸಾಲಿನಲ್ಲಿಮಾನಸಿಕವಾಗಿ’ ನಿಲ್ಲುವವರು ನಮ್ಮ ದಾಮೋದರ ಗುರೂಜಿ!

“ದಾಮೇನ ಉದರಂ ಬದ್ಧಃ ಇತಿ ದಾಮೋದರಃ” ಎಂದುಕೊಳ್ಳುತ್ತ ತಮ್ಮ ಲಂಬೋದರವನ್ನು ನೀಟಾಗಿ ನೀವಿಕೊಳ್ಳುತ್ತನಗೆಯಾಡುವುದು ಬಲು ಆಕರ್ಷಕ. ಹದವಾದ ಹುರಿಮೀಸೆ, ಹಿಂದಕ್ಕೆ ಬಾಚಿ ಹರಡಿದ ತಲೆಗೂದಲು, ಗರಿಗರಿ ಜುಬ್ಬ-ಪೈಜಾಮು, ಹೆಗಲಮೇಲೊಂದು ಶಾಲು, ಕೊರಳಲ್ಲಿ ಒಂದು ನವರತ್ನ ಹಾರ, ಕೈಯ್ಯಲ್ಲೊಂದು ಬ್ಲಾಕ್ ಬೆರ್ರಿ ಮೊಬೈಲು -ಇದು ನಮ್ಮಗುರೂಜಿಯ ಭೌತಿಕ ಸ್ವರೂಪ.

ಹಿನ್ನೆಲೆ [ಯಾರಿಗೂ ಹೇಳತಕ್ಕದ್ದಲ್ಲ; ನಿಮ್ಮಲ್ಲೇ ಇರಲಿ]-ಪೂರ್ವಾಶ್ರಮ
________________________________________
ರಿಪ್ಪನ್ಪೇಟೆಯಲ್ಲಿ ಸಣ್ಣದೊಂದು ಬೀಡಿ ಅಂಗಡಿ ಇಟ್ಟು ಗಿರಾಕಿ ಇಲ್ಲದೇ ಲಾಸು ಹೊಡೆದಿದ್ದ ದಾಮು ಟರ್ನಿಂಗ್ ಪಾಯಿಂಟ್ಗಾಗಿಕಾದಿದ್ದ. ಕಂಡ ಕಂಡ ದೇವರಿಗೆ ಹರಕೆ ಹೊತ್ತಿದ್ದೇ ಹೊತ್ತಿದ್ದು;ಹೇಗೋ ಏನೋ ದೇವರು ಕೃಪೆ ತೋರೇ ಬಿಟ್ಟ. ಕ್ಲಾಸ್ ಮೇಟ್ ಆಗಿದ್ದಸುರೇಶ O2 tv channel ನಲ್ಲಿ ಹೊಸ ಕಾರ್ಯಕ್ರಮ ನೀಡಲು ತಡಕಾಡುತ್ತಿದ್ದ. ಅನಿರೀಕ್ಷಿತವಾಗಿ ದೀಪಾವಳಿಗೆ ಊರಿಗೆ ಬಂದವಶಿವಮೊಗ್ಗದ ಅದ್ಯಾವುದೋ ಬೀದಿಯಲ್ಲಿ ದಾಮು ಎದುರಿಗೆ ಪ್ರತ್ಯಕ್ಷನಾದ. ಪರಸ್ಪರ ಲೋಕಾಭಿರಾಮ ಆದಮೇಲೆಒಳಒಪ್ಪಂದವಾಯ್ತು. ದಾಮು ‘ದಾಮೋದರ ಗುರೂಜಿ’ಎಂಬ ನಾಮಾಭಿದೇಯವನ್ನು ಪಡೆದು ಬೆಂಗಳೂರಿನಚೋಳೂರ್ಪಾಳ್ಯದಲ್ಲಿ ಸಣ್ಣರೂಮ್ನಲ್ಲಿ ಸೆಟ್ಲ್ ಆದರು!
“ ಬನ್ನಿ ವೀಕ್ಷಕರೇ, ನೀವು ಈ ದಿನ ಆಧ್ಯಾತ್ಮಿಕವಾಗಿ ಹಲವು ವರ್ಷಗಳಕಾಲ ಸಾಧನೆಮಾಡಿ ಸಿದ್ಧಿಪಡೆದ, ಆಸ್ಟ್ರಾಲಜಿ ಹಾಗೂವಾಸ್ತುಶಾಸ್ತ್ರಗಳಲ್ಲಿ ಪ್ರಾವೀಣ್ಯತೆಗಳಿಸಿರುವ ಬಹಳ ಅಪರೂಪದ ವ್ಯಕ್ತಿಯನ್ನು ಭೇಟಿಮಾಡಲಿದ್ದೀರಿ. ” --O2 ಬಿತ್ತರಿಸಿತು.

“ ನಮಸ್ಕಾರ ಗುರೂಜಿ, ತಮ್ಮ ಬಗ್ಗೆ ಬಹಳ ಕೇಳಿದ್ದೇನೆ, ನಾನು ಸರೋಜಮ್ಮಾ ಅಂತ ಹಾಸನದಿಂದ ”

“ ನಮಸ್ಕಾರ,ಹೇಳಿ ಯಾವ ವಿಷಯದ ಸಲುವಾಗಿ ಕಾಲ್ ಮಾಡಿದ್ದೀರಿ ?”
“ ನನ್ನ ಮಗನ ಬಗ್ಗೆ ಗುರೂಜಿ, ಆತನಿಗೆ ಎಕ್ಸಿಡೆಂಟ್ ಆಗಿತ್ತು,ಆಸ್ಪತ್ರೆಯ
ಲ್ಲಿ ...............................”
“ಏನೂ ಹೆದರುವ ಅವಶ್ಯಕತೆ ಇಲ್ಲಮ್ಮಾ, ಆತ ಬೇಗ ಗುಣಮುಖನಾಗುತ್ತಾನೆ.”
“ ಗುರೂಜಿ, ಅವನು ತೀರಿಕೊಂಡು 22 ದಿನಗಳಾದವು,ಅವನ ಆತ್ಮಕ್ಕೆ ಸದ್ಗತಿ ಸಿಗುತ್ತಾ ಅಂತ? ”
“ ವೀಕ್ಷಕರೆ ಕ್ಷಮಿಸಿ, ಈ ಕರೆ ಕಟ್ಟಾಗಿದೆ,ನಮ್ಮ ಮುಂದಿನ ಕಾಲರ್ ಯಾರು ಅಂತ ನೋಡೋಣ”-[ಸಂದರ್ಶಕ]
“ನಮಸ್ಕಾರ,ನಾನು ಸುಬ್ಬರಾವ್ ಅಂತ, ಇತ್ತೀಚೆಗೆ recession ಬಂದಾಗಿನಿಂದ ನಮ್ಮ factory ಲಾಸ್ನಲ್ಲಿ ನಡೀತಾ ಇದೆ ”
“ ನಿಮ್ಮ factory building ಯಾವ ದಿಕ್ಕಿಗೆ ಮುಖವಾಗಿದೆ?”
“ ಪೂರ್ವಕ್ಕೆ, ಎದುರಿಗೆ ರಸ್ತೆ ಇದೆ ”

“ ನೀವು ನಿಮ್ಮ factory ಗಿಲನ್ನು ಪಶ್ಚಿಮಕ್ಕೆ ಮಾಡಿ, ಈಶಾನ್ಯ ದಿಕ್ಕಿನಲ್ಲಿ ಒಂದು ವಾಟರ್ ಟ್ಯಾಂಕ್ ಕಟ್ಟಿಸಿ ಎಲ್ಲಾಸರಿಹೋಗುತ್ತೆ,ನಮಸ್ಕಾರ”
ಸಂದರ್ಶಕ-“ ಗುರೂಜಿ ತಮ್ಮ ಬಗ್ಗೆ ತಾವು ಹೇಳುತ್ತಾ ಇದ್ದೀರಿ, ಹೋದಜನ್ಮದಲ್ಲಿ ತಾವು ಜಕಣಾಚಾರಿಯಾಗಿದ್ದೂ, ಕೈಗಳನ್ನುಕಳೆದುಕೊಂಡಿದ್ದೂ ಎಲ್ಲ ಬಹಳ ಆಶ್ಚರ್ಯವಾಗ್ತಾಇದೆ. ಬಹುಶಃ ತಾವು ಜಕಣಾಚಾರಿ ಅಗಿದ್ದುದರಿಂದಲೇ ಈಗ ವಾಸ್ತು ಬಗ್ಗೆಕರಾರುವಾಕ್ಕಾಗಿ ಹೇಳುತ್ತಿದೀರಿ ಅನಿಸುತ್ತದೆ. ”
“ ಹೌದು ಹೌದು, ಅದ್ರಿಂದ್ಲೇ ಇದೆಲ್ಲಾ ಸಾಧ್ಯಾನೇ ಹೊರ್ತು ಇಲ್ಲಾಂದ್ರೆ ಹೇಗೆ? ”
[ಗುರೂಜಿ -ಸ್ವಗತ: TV ಯಲ್ಲಿ ಯಾರ್ಯಾರೋ ಎನೇನೋ ಪ್ರಶ್ನೆ ಕೇಳುತ್ತಾರಲ್ಲಪ್ಪಾ, ಏನು ಮಾಡ್ಲಿ? ಮೆಜೆಸ್ಟಿಕ್ಫ಼ೂಟ್ಪಾತ್ನಲ್ಲಿ ೫೦% ಡಿಸ್ಕೌಂಟ್ನಲ್ಲಿ 5 ಪುಸ್ತಕ ತಂದೆ-ಜ್ಯೋತಿಷ್ಯದ ಮೇಲೆ 3 , ವಾಸ್ತು ಶಾಸ್ತ್ರದಮೇಲೆ 2. ಓದಕ್ಕೂ ಬಿಡಲ್ಲಈ ಜನ. ಅಕಸ್ಮಾತ್ ನಾನು ಹೇಳಿದ್ದು ತಪ್ಪಾಗಿ ನಾಳೆದಿನ ಕಲ್ಲುಹೊಡೆದರೆ ಏನಪ್ಪ ದೇವ್ರೆ ಗತಿ? ಕೆಲವರಿಗೆ ತಪ್ಪಿಸಿಕೊಳ್ಳುವಸಲುವಾಗಿ 6 ತಿಂಗಳು ಅಪಾಯಿಂಟ್ಮೆಂಟ್ ಕೊಡ್ಲೇ ಇಲ್ಲ,ಹಲವರಿಗೆ 1 ವರ್ಷ. ‘ಗುರೂಜಿ ತುಂಬಾ ಬೀಜಿ’ ಅಂದುಕೊಂಡಿರುತ್ತಾರೆ. ಇಲ್ಲಿ ನೋಡಿದ್ರೆ ಕೆಲವೊಮ್ಮೆ ಖರ್ಚಿಗೇ ಸಾಲದು.]
ಅಷ್ಟರಲ್ಲಿ ರಾಜಕಾರಣಿಯೊಬ್ಬರಿಗೆ ಭವಿಷ್ಯಹೇಳಿದ್ದು ಸುಳ್ಳಾಗಿದ್ದು ಅವರು ಚುನಾವಣೆಯಲ್ಲಿ ಸೋತಿದ್ದಾರಾಗಿಯೂ, ಅವರ ಕಡೆಶಿಳ್ಳೇರಾಮ’ಎಂಬ ರೌಡಿಯು ಗುರೂಜಿಗೆ ‘ಗೂಸಾ’ತಿನ್ನಿಸಲು ಬಂದಿದ್ದಾಗಿಯೂ sms ಬಂತು. ಕೂತಲ್ಲೇ ಗುರೂಜಿಗೆ ಬಟ್ಟೆ ಎಲ್ಲಾಒದ್ದೆಯಾಗಿಹೋಯ್ತು. ಹಾಗೂ ಹೀಗೂ 30 ನಿಮಿಷ ಕಳೆದು ಗುರೂಜಿ ತಮ್ಮ ಸ್ವಕ್ಷೆತ್ರ ರಿಪ್ಪನ್ ಪೇಟೆಗೆ ಸೀದಾ ಓಡಿಹೋಗಿತಲೆಮರೆಸಿಕೊಂಡರು. ಅಪಾಯಿಂಟ್ಮೆಂಟ್ಮೇಲೆ ಅವರನ್ನು ಭೇಟಿಮಾಡಲು ಬಂದವರು “ ಗುರೂಜಿಗೆ ಆರೋಗ್ಯ ಸರಿಯಿ,15 ದಿವಸದ ಮೇಲೆ ಬನ್ನಿ “ ಎಂಬ ಉತ್ತರ ತೆಗೆದುಕೊಂಡು ವಾಪಾಸ್ಸಾದರು.


ಗುರೂಜಿ ವಾರತಡೆದು ಗೆಳೆಯ ಸುರೆಶ್ಗೆ ಫೋನ್ ಮಾಡಿದರು-“ಸುರೆಶ, ಏನೋ ತುಂಬಾ ಅಧೈರ್ಯವಾಗ್ಬುಟ್ಟಿದೆ ಕಣಪ್ಪಾ, ಬೆಂಗ್ಳೂರಿಗೆ ಬರಕ್ಕೇ ಬೇಜಾರು”

“ ಯಾಕೆ ಏನಾಯ್ತು ದಾಮು? ಮತ್ತೆ ಬ್ಯುಸಿನೆಸ್ ಡೌನಾ?”
“ಇಲ್ಲ ಕಣೋ, ಆ EX-MLA ಕಡೆ ಶಿಳ್ಳೇರಾಮ ಬಹಳ ತೊಂದ್ರೆ ಕೊಡ್ತಾ ಇದಾನೆ. ಬಹುಶಃ ಆತ ಹಿಂದೆ ಮಹಾಭಾರತದಲ್ಲಿಘಟೋದ್ಗಜ ಆಗಿದ್ದಿರಬೇಕು”

“ನಿನ್ನಂಥಾ ಗೆಳೆಯರನ್ನ ಹಾಗೇ ಬಿಡೋಕಾಗುತ್ತಾ? ನೋದ್ತೀನಿ ಬಿಡು, ಬೇರೆ ಏನಾದ್ರೂ ದಾರಿ ಮಾಡೋಣ”

ಸುರೆಶನ ಮುಖಾಂತರ, ಮರುಚುನಾವಣೆಗೆ ನಿಂತಿದ್ದ EX-MLA ಮುನಿವೆಂಕಟಪ್ಪನ ಸಂಬಂಧ ಕುದುರಿತು.ಯಾವ ಅದೃಷ್ಟವೋ, ಕಾಕತಾಳೀಯವೋ ಮುನಿವೆಂಕಟಪ್ಪಗೆ ಹೇಳಿದ ಭವಿಷ್ಯ ನಿಜವಾಗಿ ಆತ್ ಗೆದ್ದು ಮಂತ್ರಿಯಾದರು. ಎಲ್ಲಾ ರಾಜಕಾರಣಿಗಳಿಗೆ ಇದುಸುದ್ದಿಯಾಯ್ತು. ಮತ್ತೆ ಗುರೂಜಿ ಆಫೀಸ್ ನಲ್ಲಿ ನೂಕುನುಗ್ಗಲು !
ಅಲ್ಲಿಂದಾಚೆ ದಾಮೋದರ ಗುರೂಜಿ ದುಡ್ಡನ್ನು ಗೋಣಿಚೀಲದಲ್ಲೇ ತುಂಬಬೇಕಾಯ್ತು. new aiport ರಸ್ತೆಯಲ್ಲಿ ಆಫ಼ೀಸು, ಓಡಾಡಲು BMW ಕಾರು, ಕೆಲಸಕ್ಕೆ ಇರುವ ಎಲ್ಲಾ ಹಾಂಡ್ಸ್ ಗೆ ಸೇರಿ ಹತ್ತಾರು ಕಾರುಗಳು. ಗುರೂಜಿ ಆಶ್ರಮ ಕಟ್ಟಿದ್ದಾರೆ- 32 ಎಕರೆಗಳಷ್ಟು ವಿಶಾಲವಾದ ಜಾಗದಲ್ಲಿ-ಬಿಡದಿಯ ಹತ್ತಿರದಲ್ಲಿ.ಸದ್ಯದಲ್ಲೇ ಮುನಿವೆಂಕಟಪ್ಪರ ಕೃಪೆಯಿಂದ BMTC ಬಸ್ಸುಆಶ್ರಮಕ್ಕೆ ಹೋಗಿಬರುತ್ತದೆ. ಆಶ್ರಮದ ಆನೆಯನ್ನು ಅದು ಸೊಂಡಿಲಲ್ಲಾಡಿಸುತ್ತ ನಾಣ್ಯ ಸ್ವೀಕರಿಸಿಯೇ ಆಶೀರ್ವದಿಸುವುದುನೋಡಲು ಮನೋಹರ. ಅಶ್ರಮದಲ್ಲಿ ವಿದೇಶೀ ಭಕ್ತರು ಬಂದರೆ ಇರಲಿ ಎಂದು ಸ್ವಿಮ್ಮಿಂಗ್ ಪೂಲ್ ಮತ್ತು ಎಲ್ಲಾ 5 ಸ್ಟಾರ್ವ್ಯವಸ್ಥೆಯುಳ್ಳ ರೂಮ್ ಗಳನ್ನು ಕಟ್ಟಿಸಿದ್ದಾರೆ. ಗುರೂಜಿಗೆ ಯಾರೋ ಭಕ್ತರು ಇತ್ತೀಚೆಗೆ ಬಂಗಾರದ ಪೀಠವನ್ನು ಕೊಡುಗೆ ಯಾಗಿಕೊಟ್ಟಿದ್ದಾರೆ. ಇಷ್ಟೆಲ್ಲಾ ಇದ್ದೂ ನಮ್ಮ ದಾಮೋದರ ಗುರೂಜಿ ವೆರೀ ಸಿಂಪಲ್ಲು.

ಇತ್ತೀಚೆಗೆ ಗುರೂಜಿ ಪುನರ್ಜನ್ಮದ ಕುರಿತು ತಿಳಿಸಿಕೊಡಲು ತಯಾರಿ ನಡೆಸುತ್ತಿದ್ದಾರೆ. ನಿಮ್ಮ ಅನುಕೂಲಕ್ಕಾಗಿ ಮತ್ತು ನೀವು ಅಗತ್ಯಸಂಪರ್ಕಿಸಬೇಕಾದಾಗ ಇರಲಿ ಎಂದು ಇಲ್ಲಿ ಕೊಡುತ್ತಿದ್ದೇನೆ- ಗುರೂಜಿ ಯವರನ್ನು ಸಂಪರ್ಕಿಸಬಹುದಾದ ಮೊಬೈಲ್ : 98450__
_89 ‌‌ ‌‌‌‌ ‌‍‌‌ ‌‌

Saturday, January 16, 2010


ಹಾಡಲೇ ಹಾಡಿನಾ ಪಲ್ಲವೀ ........


ಬರೆಯದೇ ಬಹಳ ಸಮಯದಿಂದ ಹಾಗೇ ಕಾಲ ಕಳೆದುಬಿಟ್ಟಿದ್ದೇನೆ. ಬರೆಯುವ ಹವ್ಯಾಸ ಇದ್ದರೂ ಅದಕ್ಕೆ ಸಮಯಾವಕಾಶ ಕೂಡಿಬರಲಿಲ್ಲ. ಅನೇಕ ಬಾಲ್ಯದ ಚೆಡ್ಡಿ ಗೆಳೆಯರ ಒತ್ತಡ ಶುರುವಾಯ್ತು "ನಿನ್ನ ಬರಹಗಳು ತುಂಬಾ ಚೆನ್ನಾಗಿರುತ್ತಾವಪ್ಪಾ ನೀನುಬರೆಯಲೇಬೇಕು, ಎಂದು? " ಹಠಹಿಡಿದಿದ್ದಾರೆ. ನನ್ನ ಬರಹಗಳು ಅನೇಕರಿಗೆ ರುಚಿಸುವುದೇ!? ಎಂಬ ಅನುಮಾನ ಕಾಡತೊಡಗಿತು. ಆದರೂ ನನ್ನ ತಾಣದ ಓದುಗರನ್ನು ನಿತ್ರಾಣರಾಗಿಸುವಷ್ಟು ಅರ್ಥಹೀನವೇ ನನ್ನ ಬರಹಗಳು ಎಂಬ ದುಗುಡ ಮನಸ್ಸಿನಲ್ಲಿ! ಎಹೇ ನಾನೇನು ಕಮ್ಮಿಯೇ,ಶೇಕಸ್ಪೀಯರ್ ಮೊಮ್ಮಗನ ಥರ ಇದ್ದೇನೆ ! ನಾಲ್ಕು ಸಾಲು ಗೀಚಿದರೆ ಒಂದು ಕವಿತೆ ರೆಡಿಯಪ್ಪ ಅಂತ ಒಂಥರಾ ಒಣ ಜಂಬ ಬಂದುಬಿಟ್ಟಿತೇ? ಒಮ್ಮೊಮ್ಮೆ ನನಗೇ ನಾನು ಅಂದುಕೊಂಡಿದ್ದಿದೆ "ಏಯ್ ಸುಮ್ಮನಿರೋ ಮಾರಾಯ, ಸುಮ್ನೇಏನೋ ಬರೆದು ನನ್ನನ್ನು ಯಾಕೆ ನಗೆಪಾಟಲಿಗೆ ಈಡುಮಾಡ್ತೀಯ? ಬೇರೆ ಕೆಲಸ ಇಲ್ದೇಇದ್ರೆ ಬಾತ್ರೂಮ್ನಲ್ಲಿ ಸಿನಿಮಾ ಹಾಡುಹೇಳು,ಇಲ್ಲಾಂದ್ರೆ ಟಿವಿ ನೋಡು ಸುಮ್ನೇ ನನ್ನನ್ನ ನನ್ನ ಪಾಡಿಗೆ ಬಿಟ್ಟುಬಿಡು". ಬಹುಶಃ ಇದು ಅನೇಕರ ಅನುಭವವೂ ಹೌದಿರಬೇಕು. ಏನೇ ಇರಲಿ ಬರೆದೇ ಬಿಡೋಣ ಅಂತ ಕೆಲವೊಮ್ಮೆ ಸ್ವಲ್ಪ ಹಂದಿಯ ಥರ ಹೂಂಕರಿಸುತ್ತೇನೆ ! ಸ್ವಲ್ಪ ಸ್ಲೋ ಮೋಶನ್ ಆದ್ರೆಗೂಳಿಯ ಥರ ಸಣ್ಣ ಗುಟುರು ಹೊಮ್ಮುತ್ತದೆ ! ಏನಿದ್ರೂ ನನ್ನ ಅನಿಸಿಕೆ ಹೇಳುವುದರಲ್ಲಿ- ನೀವದನ್ನು ಕೇಳುವುದರಲ್ಲಿ ಚೌಕಾಸಿವ್ಯಾಪಾರ ಯಾಕೆ -ಅದೆಲ್ಲ ಏನಿದ್ರೂ ತಳ್ಳು ಗಾಡಿಯವರಹತ್ತಿರ ಅಲ್ಲವೇ ?


ಬರೆದೇ
ಬಿಡುತ್ತೇನೆ ಎಂದು ಮತ್ತೆ ಬಿಲ್ಲು-ಬಾಣ ಹಿಡಿದು
ಬ್ಲಾಗ್ ರಥವೇರುವ ಹೊತ್ತಿಗೆ ಮತ್ತೆ ಅರ್ಜುನನ ರೀತಿ ಕುಸಿದುಬಿಡುತ್ತೇನೆ, ಎಂಥೆಂಥ ಅತಿರಥ ಮಹಾರಥರು ಕಣ್ಣೆದುರಿಗೆ ಬಂದುನಿಲ್ಲುತ್ತಾರೆ. ಛೆ ! ಪ್ರಾತಸ್ಮರಣೀಯರಾದ ಕಾರಂತರು,ಬೇಂದ್ರೆಯವರು, ಮಾಸ್ತಿ, ಕುವೆಂಪು .......ಆದಿಯಾಗಿ ಸಾವಿರಾರು ಸೈನಿಕರು, ಅಜಾನುಬಾಹುಗಳು, ವಿಗಡ ವಿಕ್ರಮರಾಯರುಗಳು ಎದುರಾಗುತ್ತಿದ್ದಾರೆ, ಏನುಮಾಡಲಿ ನನ್ನ ಸಾರಥಿಯಾಗಿ ಇರುವ ಕೃಷ್ಣಮಾತಾಡದೇ ಕುಳಿತುಬಿಟ್ಟಿದ್ದಾನೆ, ಕರೆಯುತ್ತೇನೆ ನೋಡೋಣ"ಕೃಷ್ಣ ,ಹೇ ಕೃಷ್ಣ ಪರಮಾತ್ಮ, ನೋಡಪ್ಪ ನಮ್ಮವರೆಲ್ಲ 'ದೊಡ್ಡದಾದ Parker ಮತ್ತು ಸ್ವಲ್ಪ ಚಿಕ್ಕದಾದ Reynolds' ಹಿಡಿದು ತಯಾರಾಗಿದ್ದಾರಪ್ಪ , ನನ್ನಿಂದ ಯುದ್ಧ ಸಾಧ್ಯವಿಲ್ಲ, ನನ್ನನ್ನು ಕ್ಷಮಿಸು", ತಡೆಯಿರಿ ಯಾವುದೋ ದ್ವನಿ ಕೇಳಿಸುತ್ತಿದೆ ! " ಯಾರಯ್ಯ ನಿನಗೆ ಬರೆಯಲು ಹೇಳಿದ್ದು? ಬರೆಯಲು ಹೊರಟಮೇಲೆ ಬರೆಯಲೇಬೇಕು, ನಿನ್ನ ಹಿರಿಯರು-ಬಂಧು ಮಿತ್ರರು-ನೆಂಟರಿಷ್ಟರು-ಅವರ ಮಕ್ಕಳು-ಅವರಮಕ್ಕಳು-ಮಗುದವರ ಮಕ್ಕಳು-ಮಗುದವರ ಮರಿ ಮೊಮ್ಮಕ್ಕಳು ಎಲ್ಲಾ ಇರುತ್ತಾರಪ್ಪ , ಅವರನ್ನು ಎದುರಾಳಿಗಳು ಎಂತ ನಿನಗೆ ಯಾರು ಹೇಳಿದರು ? " --ನನ್ನ ಕೃಷ್ಣ ಮಾತನಾಡುತ್ತಾನೆ.

" ಕೃಷ್ಣ, ಬರೆಯಲು ಹೊರಟಾಗ ನಾನೇ ಎಲ್ಲರಿಗಿಂತ ದೊಡ್ಡ ಸಾಹಿತಿ-ಬರೆಹಗಾರ,ಸವ್ಯಸಾಚಿ,ಕವಿ-ಗಾಂಡೀವಿ,ಸಾರಸ್ವತಲೋಕದಗಂಡ ಎಂದೆನಿಸಿಕೊಳ್ಳಬೇಕಲ್ಲವೇ ? ಅದನ್ನೆಲ್ಲ ಮಾಡುವಾಗ ನಾನು ಎದುರಾಗಿ ಬರುವ ಎಲ್ಲರನ್ನೂ ಸೋಲಿಸಿ ಸದೆಬಡಿಯಬೇಕಲ್ಲವೇ ? "

ಮತ್ತೆ ಕೃಷ್ಣ ಉವಾಚ " ಅವರನ್ನು ನಿನ್ನ ವೈರಿಗಳು, ಎದುರಾಳಿಗಳು ಎಂದು ಯಾರು ಹೇಳಿದರು ನಿನಗೆ ? ಅವರ ಪಾಡಿಗೆ ಅವರವರು ಯುದ್ಧಮಾಡಿದ್ದಾರೆ, ಮಾಡುತ್ತಿದ್ದಾರೆ, ಮಾಡುತ್ತಾರೆ. ಇದು ನಿಜವಾದ ಯುದ್ಧವಲ್ಲ. ಸುಮ್ಮನೇ ನಾಟಕ-ಯಕ್ಷಗಾನಗಳಲ್ಲಿ ಬಿಲ್ಲು-ಬಾಣ ಹಿಡಿದು ವೇದಿಕೆಯ ಮೇಲೆ ಆಕಡೆ ಈಕಡೆ ಓಡಾಡಿದ ಹಾಗೇ ಮಾಡು, ಅದು ಒಂದು ರೀತಿ ಯುದ್ಧದ ರೀತಿ ಕಾಣಿಸುತ್ತದೆ. ಆದರೆ ಅಲ್ಲಿ ಬಾಣ ಬಿಡುವುದೂ ಇಲ್ಲ;ನೋವು ಕಾವೂ ಇಲ್ಲ. ಅಂತಿಮವಾಗಿ ಕಥೆ ನಿನಗೆ ಮೊದಲೇ ತಿಳಿದಿರುವಂತೆ ಇಲ್ಲಿ ಕೌರವರೂಇಲ್ಲ-ಪಾಂಡವರೂ ಇಲ್ಲ, ಒಂಥರಾ ವೇಷ ಅಷ್ಟೇ ! ಅಂತಿಮವಾಗಿ ಎಲ್ಲರಿಗೂ ಗೆಲುವು. All participants are winners ! -ಎಲ್ಲರಿಗೂ ಏನಾದರೊಂದು ಬಹುಮಾನ ಇದೆ ಅಂತ ಅನೇಕ ಸ್ಥಳೀಯ ಮಾರಾಟ ಪ್ರಕ್ರಿಯೆಯ ಲಾಟರಿಯಲ್ಲಿ ಹೇಳುವುದಿಲ್ಲವೋ ? ಹಾಗೇ. ಹೀಗಾಗಿ ನನ್ನನ್ನೊಮ್ಮೆ ನೋಡು "

"ನೀನು ಬಹಳ ಸಾರಿ ಹಲವಾರು ರೀತಿ ತಿಳಿಸಿ ಹೇಳಿದೆ ಕೃಷ್ಣ, ಆದರೂ ನನಗ್ಯಾಕೋ ಅನುಮಾನ ಕೃಷ್ಣಾ, ನಾನು ಬಿಲ್ಲು ಹಿಡಿಯಲೂ ಅರ್ಹನಲ್ಲ ಅಂತ, ಹೀಗಾಗಿ ಮೇಲೇಳಲೇ ಆಗದೇ polio ಆದವರ ರೀತಿ ಆಗ್ಬಿಟ್ಟಿದೆ, ನನ್ನಿಂದ ಸಾಹಿತ್ಯರಣರಂಗದಲ್ಲಿ ಯುದ್ಧ ಸುತರಾಂ ಸಲ್ಲ "

"ಅರ್ಥವಾಯ್ತು, ನಿನಗಿನ್ನೂ ಅರ್ಥವಾಗಲಿಲ್ಲವೆಂಬುದು ಅರ್ಥವಾಯ್ತು. ನಿನ್ನ ಪರಾಮರ್ಶೆಗಾಗಿ ದೇವನಾದ ನಾನು ಹುಲುಮಾನವನಾದ ನಿನಗೆ ನನ್ನ ನಿಜರೂಪವನ್ನು ತೋರಿಸುತ್ತಿದ್ದೇನೆ ನೋಡು "

" ಕೃಷ್ಣ, ಬಹಳ ಪ್ರಕಾಶಮಾನವಾಗಿದೆ, ನೋಡಲು ಸಾಧ್ಯವೇ ಇಲ್ಲ, ಮೊದಲೇ ಹೇಳಲಿಲ್ಲವೇ, ನನಗೆ ಯಾವ ಗಾಂಡೀವವೂ ಬೇಡ, ಎಲ್ಲಾ ನಿನ್ನಲ್ಲೇ ಇರಲಿ, ದಿನದಲ್ಲಿ ಎರಡು ಹೊತ್ತಿಗೆ ಊಟ, ಎರಡು ಸರ್ತಿ ಕಾಪಿ ಅಥವಾ ಟೀ ಸಿಕ್ಕರೆ ಸಾಕು. Additional ಆಗಿಒಂದು ಮೇಜು ಮತ್ತು ಒಂದು ಕುರ್ಚಿ ಒಂದು ಬರೆಯುವ ಪೆನ್ನು[!] ಮತ್ತು ಕಾಲಿಹಾಳೆ ಸಿಗುವಂತೆ ಅನುಗ್ರಹಿಸು. ನನ್ನಪಾಡಿಗೆನಾನು ಇದ್ದುಬಿಡುತ್ತೇನೆ , ಅತಿಮಾನುಷನಾದ ನೀನು ಬೇರೆ ಅರ್ಜುನನ್ನು ಹುಡುಕಿಕೋ "

" ಛೇ! ಎಲ್ಲಾದರೂ ಉಂಟೆ ಅರ್ಜುನ ? ನಿನಗೆ ದಿವ್ಯ ಚಕ್ಷುಸ್ಸನ್ನು ಕರುಣಿಸಿದ್ದೇನೆ, ಕಣ್ಣಿನಿಂದ ಹೀಗೊಮ್ಮೆ ನೋಡು, ನನ್ನಲ್ಲಿಯೇ ಎಲ್ಲವೂ ಇದೆ, ನಾನೇ ಎಲ್ಲವೂ, ನೀನೂ ನಾನೇ-ನಿನ್ನ ಕಾರಂತರು-ಮಾಸ್ತಿ-ಬೇಂದ್ರೆ ಎಲ್ಲಾ ನಾನೇ, ಕಾಣುತ್ತಿರುವೆಯಷ್ಟೇ ? "

"ಹಾ ಹಾ , ಏನೇನೋ ಕಾಣುತ್ತಿದೆ ಪರಮಾತ್ಮ! ಇದೇನಾಶ್ಚರ್ಯ ! ಕಾರಂತರ ' ಜಗತ್ತು ', ಬೇಂದ್ರೆಯವರ 'ನಾಕು ತಂತಿ ', ಕುವೆಂಪು ಅವರ ' ರಾಮಾಯಣ ದರ್ಶನಂ', .....................ಇನ್ನೂ ಏನೆಲ್ಲಾ ಇದೆ ಎಣಿಸಲಸದಳ ಸ್ವಾಮೀ....... ಒಂದುಕಡೆ ಡಿ.ವಿ.ಜಿ,..ಕೃ, .ರಾ.ಸು., ಇನ್ನೊಂದುಕಡೆ ದೇವುಡು,ಗೊರೂರು,ವಿ.ಕೃ.ಗೋಕಾಕ್, ...........ಇಷ್ಟುದಿನ ಯಾಕೆ ಹೇಳಲಿಲ್ಲ ಸ್ವಾಮೀ, ಸರಕಾರೀ ಗ್ರಂಥಾಲಯಗಳಲ್ಲಿ ಸಿಗದ ಅತ್ಯಮೂಲ್ಯ ಎಲ್ಲಾ ಕೃತಿಗಳನ್ನೂ,ಕರ್ತ್ರುಗಳನ್ನೂ ನಿನ್ನಲ್ಲೇ ಹುದುಗಿಸಿಟ್ಟುಕೊಂಡು ಸುಮ್ಮನೇ ಹಾದಿಹೋಕರ ಹಾಗೇ ನನ್ನಜೊತೆ ಇದ್ದೂ ಸುಮ್ಮನಿದ್ದೆಯಲ್ಲ ಇದು ಯಾವ ನ್ಯಾಯ ? ಇಷ್ಟೆಲ್ಲಾ ಇದೆ ಅಂತ ಗೊತ್ತಿದ್ದರೆ ನಾನು ಮೊದಲೇ ನಿನ್ನಲ್ಲಿ ಕೇಳಿಪಡೆಯುತ್ತಿರಲಿಲ್ಲವೇ ? ಎಲ್ಲಾ ಮುಗಿದ ಮೇಲೆ ತನ್ನಲ್ಲೇ ಇದೆ ಅಂದರೆ ಅದರ ಉಪಕಾರ ಯಾರಿಗೆ ಬೇಕು? ಏನೇ ಇರಲಿ ಇದನ್ನೆಲ್ಲಾ ನನಗೆ ತೋರಿಸಿದ ಹಾಗೇ ಜಗತ್ತಿಗೂ ತೋರಿಸಬಾರದೆ ?"

" ಅರ್ಜುನಾ, ಎಲ್ಲವನ್ನೂ ಎಲ್ಲರಿಗೆ ಕೊಡುವುದು ಸಮಂಜಸವಲ್ಲ. ನೀನು 'ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಹಾಗೆ ' ಎಂಬಗಾದೆಯನ್ನು ಕೆಳಿದ್ದೀಯೇ. ಹಾಗೇ ಸಮುದ್ರದ ನೀರನ್ನು ಒಂದೇ ಪಾತ್ರೆಗೆ ತುಂಬಿಸಲು ಸಾಧ್ಯವಿಲ್ಲವಲ್ಲ; ಹಾಗೇ ನಿನ್ನಂತ ಮನುಜರು ಅವರವರ ಆಸಕ್ತಿಗನುಗುಣವಾಗಿ ಅವರವರ ಇಚ್ಛಾ ಪಾತ್ರೆ ತಂದು ನನ್ನಿಂದ ಜ್ಞಾನವೆಂಬ ನೀರನ್ನು ತುಂಬಿಸಿಕೊಳ್ಳುತ್ತಾರೆ. ಅದಕ್ಕೆಮಾರ್ಗದರ್ಶಿಯಾಗಿ Parmanent ಆಗಿ ಇರಲಿ ಅಂತ ನನ್ನದೇ ರಚಿತ 'ಗೀತೆ' ಎಂಬ ಸಾಹಿತ್ಯವನ್ನು ಇಡುತ್ತೇನೆ-ಅದೂ ನಿನ್ನಪ್ರಾರ್ಥನೆಯ ಮೇರೆಗೆ. ಆಯಿತಲ್ಲ, ಸನ್ನದ್ದನಾಗು "

" ಆಯ್ತು ಪರಮಾತ್ಮ , ಯಾರು ಏನಾದರೂ ಮಾಡಲಿ ಬಿಡಲಿ ನೀನಂತೂ ನನಗೆ ಮಾರ್ಗದರ್ಶಿಯಾಗಿ ಇತರರಿಗೂ ಮಾರ್ಗದರ್ಶಿಸಿದೆ , ನಿನ್ನ direction ನಲ್ಲಿ ನನ್ನ production ಹಣ ವಾಪಸು ಬರುವಂತೆ ನೋಡಿಕೊಳ್ಳುವ ಬರವಸೆ ಕೊಟ್ಟುಬಿಡು, ಯುದ್ಧಕ್ಕೆ ಸನ್ನದ್ದನಾಗುತ್ತೇನೆ."

[[ಕೃಷ್ಣ : ಸ್ವಗತ]ಆಯ್ತಪ್ಪ, ನೀನು ಅಷ್ಟಾಗಿ ಕೇಳಿಕೊಳ್ಳುತ್ತಿರುವೆ , ಈಗ 'ತಥಾಸ್ತು' ಅನ್ನದಿದ್ದರೆ ನಾಳೆ [ನಾಟಕ ಮುಗಿದ ಮೇಲೆ] ಬೀದಿಯಲ್ಲಿ ಹೊಡೆದುಬಿಟ್ಟೀಯ ],
"ತಥಾಸ್ತು "

" ಧನ್ಯೋಸ್ಮಿ ಕೃಷ್ಣ , ಭಗವಂತ, ನಾನಾದೆ ಈಗ ಬುದ್ಧಿವಂತ, ಇಷ್ಟರವರೆಗೆ ನೀನು ಬರೇ ಬಿಲ್ಲು ಬಾಣ ಅಂತೆಲ್ಲ ಅಂತಿದ್ದೆಯಲ್ಲ, ಸಾಹಿತಿಗಳನೇಕರಿಗೆ current bill ಕಟ್ಟುವ ತಾಕತ್ತೂ ಇರಲಿಲ್ಲ! ಬರೆಯುವವರಿಗೆ 'ಬರಪರಿಹಾರ' ಕಾಮಗಾರಿ ನಿನ್ನಿಂದಾಗದಲ್ಲ, ಇಲ್ಲದಿದ್ದರೆ 'ಮರಿಗಳು' ಹುಲುಸಾಗಿ ಬೆಳೆಯುತ್ತಿದ್ದವು, ಅನೇಕ ಕಾರಂತರು-ಬೇಂದ್ರೆಗಳು ಹುಟ್ಟುತ್ತಿದ್ದರು ಅಲ್ಲವೇ ? "

" ಏನೋ ನಿನ್ನದು ಅತಿಯಾಯ್ತು ಕಣೋ ಅರ್ಜುನ, ಎಲ್ಲವನ್ನೂ ಕೊಡಲಿಕ್ಕೆ ನಾನೂ ಅವತಾರೀ 'ವೇಷ' ದವನು ಎಂಬುದು ನಿನಗೆತಿಳಿಯದೇ? ಮತ್ತೆ ಹಪಹಪಿಸಬೇಡ, ನಿನ್ನ ಕರ್ತವ್ಯ ನೀನು ಮಾಡು -ಫಲಾಫಲ ನನಗೆ ಬಿಡು,ಹೊರಡು ಮುಂದಕ್ಕೆ "

" ಬಾವಾ, ನಿನ್ನ ಮರುಳು ಮಾಡುವ ಮುರಳಿಯನ್ನು ಕೇಳುವ ಆಸೆಯಾಗಿದೆ ಸ್ವಲ್ಪ ನುಡಿಸಬಾರದೇ? "


[[ಕೃಷ್ಣ : ಸ್ವಗತ ] ತಾಲೀಮಿನಲ್ಲಿ ಇದು ಇರಲಿಲ್ಲವೋ? ಮೇಷ್ಟ್ರು ಹೇಳಿಕೊಡಲಿಲ್ಲವೋ ? ಫಜೀತಿಗೆ ಬಂತಲ್ಲ !!]
" ಇದು ಯುದ್ಧ ಭೂಮಿ, ಈಗ ಶಸ್ತ್ರಾಭ್ಯಾಸ, ಮುರಳೀ ಗಾಯನ ಸಲ್ಲ, ನೀನು ಮುಗಿಸಿ ಬರುತ್ತೀಯಲ್ಲ ಆಗ ಯಾವುದೋ ಒಂದು ಗಾಯನ ಮಾಡೋಣ ಬಿಡು "

....................................../................ಅಂತೂ ಭಾವನಾ ಲೋಕ ಅಧ್ಬುತ! ಇಲ್ಲಿ ಇಳಿದರೆ ಆಳ-ಅಗಲಗಳ ವ್ಯತ್ಯಾಸ ತಿಳಿಯದು, ಹೀಗೆ ನನ್ನ ಮನಸ್ಸು ಪ್ರಾರಂಭಿಸಿತು. ಮತ್ತೆ ಸಮಯವಾದಾಗ ನಿಮ್ಮೊಟ್ಟಿಗೆ ಇರುತ್ತೇನೆ,ಬರಲೇ ....

Saturday, December 5, 2009

ಆತ್ಮಾನುಸಂಧಾನ



ಆತ್ಮಾನುಸಂಧಾನ


ನಿತ್ಯಸುಖಿಯಾಗು ನೀ ಸತ್ಯಚಿಂತನೆ ಮಾಡಿ
ಹುಚ್ಚುಹರಿಯಲು ಬೇಡ ಓ ನನ್ನ ಮನವೇ ...

ಹತ್ತಾರು ಯಂತ್ರಗಳ ಮತ್ತಾರು ಮಂತ್ರಿಗಳ
ಗತ್ತಿನ ಕಾರುಬಾರಿದು ಮಿಥ್ಯಶಾಲೆ |
ಎತ್ತಹೋದರು ನಿನಗೆ ಹತ್ತಿ ತುಳಿವ ಪರೀಕ್ಷೆ
ಸುಸ್ತು ಬೀಳಲು ಬೇಡ ನಿನಗಿದೋ ಓಲೆ ||

ಹಿಂದೆ ನೀನೆಲ್ಲಿದ್ದೆ ಮುಂದೆ ನೀನೆಲ್ಲಿರುವೆ
ಒಂದೊಮ್ಮೆ ಕುಳಿತು ಯೋಚಿಸು ನಿನ್ನ ಇರಹು|
ಇಂದು ನಿನ್ನೆಯದಿರಲಿ ಮುಂದೆ ನಾಳೆಯದಿರಲಿ
ಎಂದೂ ತಿಳಿಯದು ನಿನಗೆ ಈ ಪಾಕಶಾಲೆ ||

ಕಮ೯ಬಂಧನದಿಂದ ಬಂಧಿಯು ಈ ಗೂಡಿನಲಿ
ಮಮ೯ವರಿಯದೆ ನೀನು ಮತಿಭ್ರಮಣೆಯಲ್ಲಿ|
ಪಂಡಿತರು ಜ್ಯೋತಿಷರು ವೈದ್ಯರಾದಿಯ ತೆರದಿ
ಹಲವು ಹಂಬಲಿಸಿ ಬೆನ್ನಟ್ಟುವೆಯ ಭರದಿ ?

ಚಂದದಲಿ ಸೇರುವರು ಬಂಧುಭಗಿನಿಯರೆಲ್ಲ
ತಿಂದುಂಡು ನಲಿದಾಡಲಿರಲು ಧನಕನಕ !
ಸಂದು ಹೋಪುದು ಕಾಲ ಸವೆದು ಹೋಪುದು ಕನಕ
ಅಂದಿನಲಿ ಯಾರಿಲ್ಲ ನೀನೊಬ್ಬ ತಿರುಕ ||

ಯಾರೂ ಕಾಯುವುದಿಲ್ಲ ಯಾರೂ ಕರುಬುವುದಿಲ್ಲ
ಯಾರಿಗೂ ಯಾರು ನಿಜವಾಗಿ ಇಲ್ಲಿಲ್ಲ |
ದಾರಿ ನಿನಗಿಹುದೊಂದೆ ಮಾರಜನಕನ ಕರುಣೆ
ಮೀರಿ ಎಲ್ಲೆಯ ಹಾರು ತೋರಿಬರ್ಪುದು ಬೆಳಕು||


Thursday, December 3, 2009

ಬನ್ನಿ ನಿಮಗಿದೋ ಸ್ವಾಗತ
ನನ್ನ 'ಬ್ಲಾಗಿಗೆ ಕ್ರಮಿಸುತ
ಮುನ್ನ ನಿಮ್ಮಲಿ ಭಿನ್ನಹ :
ಮನ್ನಿಸಿರಿ ನಿಮ್ಮಭಿಮತ