ಆತ್ಮಾನುಸಂಧಾನ
ಹುಚ್ಚುಹರಿಯಲು ಬೇಡ ಓ ನನ್ನ ಮನವೇ ...
ಹತ್ತಾರು ಯಂತ್ರಗಳ ಮತ್ತಾರು ಮಂತ್ರಿಗಳ
ಗತ್ತಿನ ಕಾರುಬಾರಿದು ಮಿಥ್ಯಶಾಲೆ |
ಎತ್ತಹೋದರು ನಿನಗೆ ಹತ್ತಿ ತುಳಿವ ಪರೀಕ್ಷೆ
ಸುಸ್ತು ಬೀಳಲು ಬೇಡ ನಿನಗಿದೋ ಓಲೆ ||
ಹಿಂದೆ ನೀನೆಲ್ಲಿದ್ದೆ ಮುಂದೆ ನೀನೆಲ್ಲಿರುವೆ
ಒಂದೊಮ್ಮೆ ಕುಳಿತು ಯೋಚಿಸು ನಿನ್ನ ಇರಹು|
ಇಂದು ನಿನ್ನೆಯದಿರಲಿ ಮುಂದೆ ನಾಳೆಯದಿರಲಿ
ಎಂದೂ ತಿಳಿಯದು ನಿನಗೆ ಈ ಪಾಕಶಾಲೆ ||
ಕಮ೯ಬಂಧನದಿಂದ ಬಂಧಿಯು ಈ ಗೂಡಿನಲಿ
ಮಮ೯ವರಿಯದೆ ನೀನು ಮತಿಭ್ರಮಣೆಯಲ್ಲಿ|
ಪಂಡಿತರು ಜ್ಯೋತಿಷರು ವೈದ್ಯರಾದಿಯ ತೆರದಿ
ಹಲವು ಹಂಬಲಿಸಿ ಬೆನ್ನಟ್ಟುವೆಯ ಭರದಿ ?
ಚಂದದಲಿ ಸೇರುವರು ಬಂಧುಭಗಿನಿಯರೆಲ್ಲ
ತಿಂದುಂಡು ನಲಿದಾಡಲಿರಲು ಧನಕನಕ !
ಸಂದು ಹೋಪುದು ಕಾಲ ಸವೆದು ಹೋಪುದು ಕನಕ
ಅಂದಿನಲಿ ಯಾರಿಲ್ಲ ನೀನೊಬ್ಬ ತಿರುಕ ||
ಯಾರೂ ಕಾಯುವುದಿಲ್ಲ ಯಾರೂ ಕರುಬುವುದಿಲ್ಲ
ಯಾರಿಗೂ ಯಾರು ನಿಜವಾಗಿ ಇಲ್ಲಿಲ್ಲ |
ದಾರಿ ನಿನಗಿಹುದೊಂದೆ ಮಾರಜನಕನ ಕರುಣೆ
ಮೀರಿ ಎಲ್ಲೆಯ ಹಾರು ತೋರಿಬರ್ಪುದು ಬೆಳಕು||
No comments:
Post a Comment