ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 14, 2012

ಏಕೆ ಹೀಗೆ ನಮ್ಮ ನಡುವೆ ಹಮ್ಮು ಬೆಳೆದಿದೆ ?

ಚಿತ್ರಕೃಪೆ : ಅಂತರ್ಜಾಲ
ಏಕೆ ಹೀಗೆ ನಮ್ಮ ನಡುವೆ ಹಮ್ಮು ಬೆಳೆದಿದೆ ?

ಸ್ವಲ್ಪ ಯೋಚಿಸಬೇಕಾಸದ ಸಾಮಾನ್ಯ ಹಾಗೂ ಉತ್ತಮ ಪ್ರಶ್ನೆ! ನಾವು ಬಡಮರ್ಜಿಯಲ್ಲಿದ್ದಾಗ, ನಮ್ಮ ಕುದುರೆ ಸೋತಾಗ, ನಾವು ಪರೀಕ್ಷೆಗಳಲ್ಲಿ ಉತ್ತೀರ್ಣರಾಗದಾಗ, ನಾವು ಚುನಾವಣೆಗಳಲ್ಲಿ ಸೋತಾಗ, ನಮಗೆ ಉದ್ಯೋಗ ಸಿಗದಾಗ, ಸಿಕ್ಕ ಉದ್ಯೋಗ ಕಳೆದುಕೊಂಡಾಗ, ಯಾವುದೋ ರೀತಿಯಲ್ಲಿ ಶಾರೀರಿಕ ಅಸೌಖ್ಯವುಂಟಾದಾಗ, ಅಸಹಾಯ ಸ್ಥಿತಿ ಬಂದೊದಗಿದಾಗ, ಹೊರಲಾರದ ಸಂಸಾರದ ಭಾರ ಜಾಸ್ತಿಯಾದಾಗ, ಶಾರೀರಿಕ/ಮಾನಸಿಕ ವಿಕಲ ಮಕ್ಕಳು ಅಕಸ್ಮಾತ್ ಜನಿಸಿಬಿಟ್ಟಾಗ....ಹೀಗೇ ಹಲವಾರು ಸಮಯಗಳಲ್ಲಿ ನಾವು ಎಲ್ಲರೊಳಗೊಂದು ಎಂಬ ರೀತಿ ಇದ್ದುಬಿಡುತ್ತೇವೆ.

ನಾನು ನೋಡುತ್ತಲೇ ಬಂದಿದ್ದೇನೆ. ಊರಲ್ಲಿ ಕನ್ನಡ ಶಾಲೆಯ ಒಬ್ಬ ಬಡ ಮಾಸ್ತರರಿದ್ದರು. ಒಬ್ಬರ ದುಡಿಮೆ, ಅಂದಿನಕಾಲಕ್ಕೆ ಸಂಬಳವೂ ಅಷ್ಟೆಲ್ಲಾ ಇರಲಿಲ್ಲ. ನಾಲ್ಕು ಮಕ್ಕಳು ಇರುವ ಆರುಮಂದಿಯ ಕುಟುಂಬ. ಮಾಸ್ತರರ ಅಮ್ಮನ ಮುದುಕಿಯೊಬ್ಬಳೂ ಸೇರಿದಂತೇ ಲೆಕ್ಕಹಾಕಿದರೆ ಏಳುಮಂದಿ. ಎಲ್ಲಾ ನಡೆಯಬೇಕಲ್ಲ? ಅಗೆಲ್ಲಾ ಊರ ಜನರೊಟ್ಟಿಗೆ ಸಾದಾ ಸೀದಾ ಇದ್ದ ಮಾಸ್ತರರು ಎಲ್ಲರೊಂದಿಗೂ ಬೆರೆತು ಜನಪ್ರಿಯರಾಗಿದ್ದರು. ಮಾಸ್ತರಿಗೆ ವರ್ಗವಾಯ್ತು, ಬೇರೇ ಊರಿಗೆ ತೆರಳಿದರು, ಮಕ್ಕಳು ಬೆಳೆದವು. ಈಗ ಮಾಸ್ತರರ ಮಕ್ಕಳು ಎಮ್.ಎನ್.ಸಿ ಕಂಪನಿಯಲ್ಲಿ ಕೆಲಸಮಾಡುತ್ತಾರೆ, ಮಾಸ್ತರರಿಗೆ ನಿವೃತ್ತಿಯಾದರೂ ಆಗ ಸಿಕ್ಕ ಹಣದಲ್ಲಿ ಮನೆ ಕಟ್ಟಿದ್ದಾರೆ, ಮಕ್ಕಳು ಅಪ್ಪನಿಗೆ ಕಾರು ಕೊಡಿಸಿದ್ದಾರೆ! ಅಂತೂ ಮಾಸ್ತರರು ಈಗ ಬಡತನ ಎಂಬ ಮಟ್ಟದಲ್ಲಿಲ್ಲ. ಅದಕ್ಕೆ ತಕ್ಕಹಾಗೇ ಮಾಸ್ತರರು ಯಾರೊಡನೆಯೂ ಬೆರೆಯುವುದೂ ಇಲ್ಲ; ತಮ್ಮ ಸರ್ಕಲ್ಲೇ ಬೇರೆ ಎನ್ನುವ ತಂತ್ರಾಂಶ ತಂತ್ರಂಜ್ಞರಂತೇ ಮಾಸ್ತರರಿಗೆ! ’ಅಲ್ಪನಿಗೆ ಐಶ್ವರ್ಯ ಬಂದರೆ ತಿಂಗಳಬೆಳಕಲ್ಲೂ ಕೊಡೆ ಹಿಡಿದನಂತೆ’ ಎಂಬ ಗಾದೆ ಇದೆಯಲ್ಲಾ ಅದೇ ರೀತಿ ಮಾಸ್ತರು ೨ ಫರ್ಲಾಂಗು ದೂರ ಹೋಗುವುದಾದರೂ ಕಾರು ಬೇಕೇ ಬೇಕು. ಬೆಳೆದುನಿಂತ ಮಗಳನ್ನು ಸಾಮಾನ್ಯದ ಯಾರಿಗೂ ಮದುವೆಮಾಡಲು ಸಿದ್ಧರಿಲ್ಲ. ಅಮೇರಿಕಾದಲ್ಲಿರುವ ವ್ಯಕ್ತಿಗಾಗಿ ಹುಡುಕುತ್ತಿದ್ದಾರೆ.

ಇದು ಮಾಸ್ತರರೊಬ್ಬರ ವಿಷಯವಲ್ಲ. ಅಮೇರಿಕಾದಂತಹ ದೇಶಗಳಲ್ಲಿ ಆರ್ಥಿಕ ಮುಗ್ಗಟ್ಟು ಆರಂಭವಾಯ್ತೆಂದರೆ ನನಗೆ ಪಾಪ ಎನ್ನಿಸುವುದು ನಮ್ಮ ಭಾರತದ ಅದರಲ್ಲೂ ಬೆಂಗಳೂರಿನ ತಂತ್ರಾಂಶ ತಂತ್ರಜ್ಞರನ್ನು ನೋಡಿ! ಏಸಿ ಕಾರಿನಲ್ಲಿ ಧುತ್ತನೇ ಬಂದು ಹಠಾತ್ತನೆ ಬ್ರೇಕು ಗುದ್ದಿ ನಿಲ್ಲಿಸಿ, ರಸ್ತೆಬದಿಯಲ್ಲಿ ಸೌತೇಕಾಯಿ ಖರೀದಿಸಿ ೧೦೦ರೂಪಾಯಿಗಳ ನೋಟನ್ನು ಕೊಟ್ಟು ಚಿಲ್ಲರೆಯನ್ನೇ ಮರೆತುಹೋಗುತ್ತಿದ್ದ ಲೌಕಿಕ ವ್ಯಾವಹಾರಿಕ ಪರಿಜ್ಞಾನವನ್ನು ಕಳೆದುಕೊಂಡ ಈ ಜನ [ಕ್ಷಮಿಸಿ, ಅಪವಾದಗಳಿರಬಹುದು]ರೀಸೆಶನ್ ಎಂಬ ವಾರ್ತೆ ಕೇಳಿಯೇ ನಲುಗಿಹೋಗುತ್ತಾರೆ! ಯಾವಾಗ ಪಿಂಕ್ ಸ್ಲಿಪ್ ಬರುತ್ತದೋ ಎಂಬ ಭಯದಲ್ಲೇ ಕಾಲಹಾಕುತ್ತಾ ಬೆಂಕಿಪೊಟ್ಟಣ ಖರೀದಿಸಿದರೂ ಒಂದು ರೂಪಾಯಿಕೊಟ್ಟು ಚೌಕಾಸಿ ನಡೆಸುತ್ತಾರೆ; ಅಕ್ಕ-ಪಕ್ಕದ ಮನೆಗಳ ಜನರನ್ನು ಅನಾದಿಕಾಲದ ಆತ್ಮೀಯರಂತೇ ಹತ್ತಿರನಿಂತು ಮಾತನಾಡಿಸಲು ತೊಡಗಿಬಿಡುತ್ತಾರೆ! ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ಅವರನ್ನು ಮಾತನಾಡಿಸಲು ಸಾಧ್ಯವಿತ್ತೇ? ಬೇರೇ ಗ್ರಹದಿಂದ [ಪ್ಲಾನೆಟ್ಟಿನಿಂದ] ಬಂದ ಅದ್ವಿತೀಯ ಜೀವಿಗಳಂತೇ ತಮ್ಮದೇ ಸರ್ಕಲ್ ಮಾತ್ರ ಬೇರೇ ಎಂದುಕೊಳ್ಳುವ ಅವರನ್ನು ನೋಡುವಾಗಲೂ ಹಲವು ಬಾರಿ ನನಗೆ ಕಾಡಿದ ಪ್ರಶ್ನೆ ಅದೇ : ಏಕೆ ಹೀಗೆ ನಮ್ಮ ನಡುವೆ .....?

ಗಂಡ-ಹೆಂಡತಿ ಇಬ್ಬರೂ ನೌಕರಿ ಮಾಡುತ್ತಿದ್ದರೆ, ಮನೆಯಲ್ಲೇ ಬೇರೇ ಬೇರೇ ಅಕೌಂಟುಗಳು, ಬೇರೇ ಬೇರೇ ನೋಟಗಳು. ಅವರಲ್ಲೇ ಪರಸ್ಪರ ಮೇಲರಿಮೆ-ಕೀಳರಿಮೆ. ಕೂತು ಮಾತಾಡಲು ಸಮಯವಿಲ್ಲ; ಯಾರಿಗೆ ಬೇಕಾಗಿದೆ ಅವೆಲ್ಲಾ? ಎಂಬ ಉದಾಸೀನತೆ. ಎಳೆಯ ಮಕ್ಕಳಿಗೆ ಪಾಲಕರ ಪ್ರೀತಿಸಿಗದ ಗೋಳು, ಇರಬಹುದಾದ ವೃದ್ಧರಿಗೆ ನಾಯಿಪಾಡು! " ಏ ನಿಮ್ಮ ಅಪ್ಪ ಎಲ್ಲೋ?"ಎಂದು ಹೆಂಡತಿ ಮಗುವನ್ನೇ ಕೇಳುತ್ತಾಳೆ, " ನಿಮ್ಮ ಅಮ್ಮನಿಗೆ ಹೀಗಂತೆ ಅಂತ ಹೇಳು" ಹೇಳಿಕಳಿಸುತ್ತಾನೆ ಗಂಡ. ರಾತ್ರಿ ಅಂತೂ ಅಕ್ಕಪಕ್ಕದಲ್ಲೇ ಮಲಗಿದ್ದರೂ ಚೈನಾಮಹಾಗೋಡೆಯಂತಯ ಮನೋಗೋಡೆ! ಮನದ ತುಂಬಾ ದುಗುಡ-ದುಮ್ಮಾನ; ಒಂದೇ ನದಿಯ ಎಂದಿಗೂ ಸೇರದ ಎರಡುದಡಗಳಾದ ಅನುಭವ. ಯಾರಲ್ಲಿ ಹೇಳುವುದು, ಯಾರನ್ನು ಕೇಳುವುದು? ಹೊರನೋಟಕ್ಕೆ ಎಲ್ಲವೂ ಬಹಳ ಉತ್ತಮ, ಸತ್ಯನಾರಾಯಣ ಪೂಜೆ ಇಟ್ಟುಕೊಂಡರೆ ಬಂದ ನೆಂಟರೆದುರು ಅದೇನ್ ಪ್ರೀತಿ ಅದೇನ್ ನಗು ! ನೆಂಟರೂ ಬಂದ ದೇವರೂ ಮನೆಗೆ ತೆರಳಿದ ತರುವಾಯ ಮತ್ತೆ ಯಥಾಸ್ಥಿತಿ !

ಅದೂ ಇದೂ ಬರೆದ್ಕೊಂಡು ಮಾತಾಡ್ಕೊಂಡು ಫೇಸ್ ಬುಕ್ಕಿನಲ್ಲಿ ನಮ್ಮ ಪಕ್ಕಪಕ್ಕದಲ್ಲೇ ಇರೋ ಕೆಲವುಜನ ಮಾಧ್ಯಮವಾಹಿನಿಗೋ ಪತ್ರಿಕೆಗೋ ಕೆಲಸಕ್ಕೆ ಸೇರಿದಮೇಲೆ ಏಕಾಏಕಿ ಬದಲಾಗಿಹೋಗುತ್ತಾರೆ! ನಗರದ/ಪಟ್ಟಣದ ಬೀದಿಗಳಲ್ಲಿ ಕಂಡರೂ ಕಾಣಲಿಲ್ಲವೇನೋ ಎಂದು ತಿರುಗಿಯೂ ನೋಡದೇ ಸರ್ರನೆ ಸರಿದುಹೋಗುವ ಜಾಣಕುರುಡರಂತೇ ಯಾರಿಗೂ ಮಾತನಾಡುವ ವ್ಯವಧಾನ ಇರುವುದಿಲ್ಲ. ಕುಳಿತ ಸ್ಥಾನದ ಮಹಿಮೆ ಇರಬಹುದೇ? ಅಕಸ್ಮಾತ್ ಅಲ್ಲಿ ಕೆಲಸಕಳೆದುಕೊಂಡರೆ/ಹೊರನೂಕಲ್ಪಟ್ಟರೆ ಆಗ ಮತ್ತೆ ಅವರ ಆಟವೇನು ನೋಟವೇನು ಫೇಸ್ ಬುಕ್ಕಿನಲ್ಲಿ ಎಲ್ಲರಿಗೂ ಸಲ್ಲಿಸುವ ಪ್ರತಿಕ್ರಿಯೆಗಳೇನು...ಅಹಹ ಇವರು ಅವರೇನಾ ಅಥವಾ ಬೇರೇನೋ ಎಂದು, ಇದು ಮೇ ಫ್ಲವರೋ ಜೂನ್ ಫ್ಲವರೋ ನೋಡುವ ಪ್ರಸಂಗಬರುತ್ತದೆ. ಕೆಲವರಂತೂ ’ತಾಯಿಗೆ ಬಾಯೊಳು ಮೂಜಗ ತೋರಿದ..’ ಎಂದು ದಾಸರೆಂದಂತೇ ನಮ್ಮ ಪತ್ರಿಕೆಯಲ್ಲೇ/ನಮ್ಮ ಮಾಧ್ಯಮವಾಹಿನಿಯಲ್ಲೇ ನಾವು ಮೂರೂಜಗವನ್ನು ತೋರುವ ತಾಕತ್ತುಳ್ಳವರು ಅಂದುಕೊಂಡು ಬೇರೇ ಯಾವುದೂ ಲೆಕ್ಕಕ್ಕೇ ಇಲ್ಲಾ ಅನ್ನೋ ರೀತಿಯಲ್ಲಿ ಆಡುತ್ತಾರೆ. ಕಂಡರೂ ಕಾಣದಂತೆ ಕೆಲಸವಿಲ್ಲದೇ ಖಾಲೀ ಇದ್ದರೂ ’ಬ್ಯೂಸಿ’ ಎನಿಸಿಕೊಳ್ಳುವ [ಲೇಖಕಿ ಶೋಭಾ ಡೇ ಹೀಗೇ ಅಂತೆ ಅಂತ ಎಲ್ಲೋ ಓದಿದ ನೆನಪು]ಕೆಲವರನ್ನು ಕಂಡಾಗ ನನಗೆ ಉದ್ಭವಿಸುವ ಪ್ರಶ್ನೆ ಮತ್ತದೇ: ಏಕೆ ಹೀಗೆ ನಮ್ಮ ನಡುವೆ ...?

ಹಳ್ಳಿಯಲ್ಲಿ ಹುಟ್ಟಿಬೆಳೆದು ನಮ್ಮನಿಮ್ಮಂತೇ ಸಹಜವಾಗಿ ಕಷ್ಟಕೋಟಲೆಗಳನ್ನು ಅನುಭವಿಸಿ ಬೆಳೆದ ಹುಡುಗನೊಬ್ಬ ಚುನಾವಣೆಗೆ ನಿಂತು ರಾಜಕೀಯಕ್ಕೆ ಧುಮುಕಿದಾಗ ಏಕಾಏಕೀ ಬದಲಾಗಿ ಹೋಗುತ್ತಾನೆ! ಆತನ ಮುಗ್ಧಭಾವಗಳೆಲ್ಲಾ ಬದಲಾಗಿ ಇನ್ವೆಸ್ಟ್ ಮೆಂಟ್ ಚೌಕಟ್ಟಿಗೆ ಆತ ಸೇರಿಕೊಳ್ಳುತ್ತಾನೆ. ಜನಸೇವೆ ಎಂಬ ಸ್ಲೋಗನ್ನು ಬಳಸಿ ಆರಿಸಿಬಂದಾತನನ್ನು ಅರಿಸಿದ ಜನ ಹಗಲಲ್ಲೇ ಟಾರ್ಚ್ ಹಿಡಿದು ಹುಡುಕಿದರೂ ಸಿಗುವುದು ದುರ್ಲಭವಾಗುತ್ತದೆ. ಯಾರೋ ಆತನ ಜಿಲ್ಲೆಯಿಂದ ಆತನ ಶಾಸಕೀಯ/ಸಂಸದೀಯ ಆಳ್ವಿಕೆಗೆ ಒಳಪಡುವ ಪ್ರದೇಶದವರು ಹುಡುಕಿಕೊಂಡು ಬಂದರೆ "ಸೂಟ್ ಕೇಸ್ ತಂದಿದ್ದೀರೋ?" ಎನ್ನುತ್ತಾನೆ! ನಿಂತಲ್ಲಿ ಕುಂತಲ್ಲಿ ಎಲ್ಲೆಲ್ಲಿ ಯಾವ್ಯಾವ ರೀತಿ ಎಣಿಸಿ ಬಾಚಿಕೊಳ್ಳಲಿ ಅಂತ ನೋಡುತ್ತಾನೆ. ಅಕಸ್ಮಾತ್ ಮತ್ತೊಂದು ಚುನಾವಣೆಯಲ್ಲಿ ಸೋತರೆ ಆಗ ಮರಳಿ ಎಲ್ಲರ ಜೊತೆಗೆ ಮಾತಿಗೆ ಬರುವ ವ್ಯಕ್ತಿಯಾಗುತ್ತಾನೆ. ಇದನ್ನೆಲ್ಲಾ ನೋಡುತ್ತಿರುವ ನನಗೆ ಕಾಡುವುದು ಮತ್ತದೇ ಪ್ರಶ್ನೆ : ಏಕೆ ಹೀಗೆ ನಮ್ಮ ನಡುವೆ......?

ಪಂಡಿತರಿಗೆ ಪಂಡಿತರೇ ವೈರಿಗಳಂತೇ ಕಾಣುತ್ತಾರಂತೆ, ಅದರಂತೇ ಸಂಗೀತಗಾರರಿಗೆ ಸಂಗೀತಗಾರರು, ಕಲಾವಿದರಿಗೆ ಕಲಾವಿದರು ಹೀಗೇ ಆಯಾಯ ವೃತ್ತಿಯಲ್ಲಿ ಒಬ್ಬೊಬ್ಬರೂ ತಮ್ಮನ್ನು ಮೀರಿಸುವ ಮತ್ತೊಬ್ಬರಿಲ್ಲಾ ಎಂಬ ಹುಂಬತನದಿಂದ ಕೂಡಿರುತ್ತಾರೆ. ಇದು ಬಹುಹಿಂದೆ ರಾಜರುಗಳ ಇತಿಹಾಸದಲ್ಲೇ ನೋಡಸಿಗುತ್ತದೆ. ನಮ್ಮ ತೆನ್ನಾಲಿ ರಾಮಕೃಷ್ಣನ ’ಸರ್ ಡಬ್ ವಾಂಯ್’, ’ತಿಲಕಾಷ್ಠ ಮಹಿಷಬಂಧನ’ ಇವೆಲ್ಲಾ ಹುಟ್ಟಿಕೊಂಡಿದ್ದೇ ಹಾಗೆ ಅಲ್ಲವೇ? ಪ್ರಸಂಗದ ವಿವೇಚನೆ ಸರಿಯಾಗಿಲ್ಲದೇ ತಾನೇ ಸಾರ್ವಭೌಮ ಎಂದು ಹೇಳಿಸಿಕೊಳ್ಳುವ ಹಪಾಹಪಿ ಉಂಟಾದಾಗ ಪಂಡಿತ ಕೂಪ ಮಂಡೂಕವಾಗುತ್ತಾನೆ. ಇನ್ನು ಕೆಲವು ಪಂಡಿತರು ತಾವು ಹೇಳುವುದೇ ಸತ್ಯ ಅಂದುಕೊಳ್ಳುವರೋ ಅಥವಾ ಹೇಗೇ ಹೇಳಿದರೂ ಆಗುತ್ತದೆ ಎಂದುಕೊಳ್ಳುವರೋ ತಿಳಿಯದು. ಅನೇಕ ಬರಹಗಾರರು ಕವಿಗಳ ಮೂಲ ಕಾವ್ಯವನ್ನು ತಿದ್ದಿ ಹೇಗೇ ಹೇಗೋ ಬರೆದುಬಿಡುತ್ತಾರೆ. ತಮಗೂ ಗೊತ್ತಿದೆ ಎಂದು ತೋರಿಸಿಕೊಳ್ಳುವ ಪರಿಯೋ ಅಥವಾ ಕವಿಯೇ ತಪ್ಪುಮಾಡಿರಬಹುದೆಂದು ತಿದ್ದುವ ಪರಿಯೋ ಗೊತ್ತಿಲ್ಲ. ಅಂತೂ ಏನೋ ಬರೆಯುತ್ತಾರೆ: ಮನ್ನಣೆಯ ದಾಹ! ಕವಿಗಳ ಮೂಲ ಕಾವ್ಯವನ್ನು ತಿದ್ದುವುದು ಅವರ ಅನುಮತಿಯಿಲ್ಲದೇ ಸಲ್ಲ.

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕಿಂತ ಹೆಣ್ಣುಗಂಡೊಲವು
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ
ತಿನ್ನುವುದು ಆತ್ಮವನೆ-ಮಂಕುತಿಮ್ಮ

ಒಂದು ವಿಷಯದಲ್ಲಿ ಜ್ಞಾನಿ ಎಂದಮಾತ್ರಕ್ಕೆ ಎಲ್ಲದರಲ್ಲೂ ತಿಳುವಳಿಕೆ ಇದೆ ಎಂದು ತಿಳಿದುಕೊಳ್ಳುವುದು ತಪ್ಪಾಗುತ್ತದೆ. ವೇದವನ್ನೋದಿದವನಿಗೆ ದೋಣೀನಡೆಸುವ ಕಲೆ ತಿಳಿಯದೇ ಇರಬಹುದು, ವೈದ್ಯನಾದವನಿಗೆ ಅಡಿಗೆಯ ಮಹತ್ವದ ಅರಿವು ಇರದೇ ಇರಬಹುದು. ರೈತನಿಗೆ ಕೋಟಿಬಂಡವಾಳದ ವ್ಯಾಪಾರ-ವ್ಯವಹಾರ ತಿಳಿಯದೇ ಇರಬಹುದು, ಕೋಟಿ ಬಂಡವಾಳದವನಿಗೆ ಮೇಟಿವಿದ್ಯೆ ಗೊತ್ತಿಲ್ಲದಿರಬಹುದು. ಆದರೆ ಎಲ್ಲವಕ್ಕೂ ಅಷ್ಟಷ್ಟೇ ಮೌಲ್ಯ ಇರುತ್ತದೆ ಎಂಬುದನ್ನು ಅಲ್ಲಗಳೆಯಲಾಗದು. ಆಯಾಯ ವೃತ್ತಿಯವರು ಅದರದರ ಪಾಂಡಿತ್ಯವನ್ನು ತಕ್ಕಮಟ್ಟಿಗೆ ಗಳಿಸಿಯೇ ಇರುತ್ತಾರೆ, ಈ ನೀತಿ ಇಂದಿನ ಕೆಲವು ಅಡ್ಡಕಸುಬಿಗಳಿಗೆ ಅನ್ವಯಿಸುವುದಿಲ್ಲ! ಅಡ್ಡಕಸುಬಿಗಳಾದ ಜನ ತಾವು ಮಾಡಿದ ತಪ್ಪುಗಳನ್ನೇ ಸಮರ್ಥಿಸಿಕೊಳ್ಳುತ್ತಾರೆ. ಇವತ್ತಿನ ದಿನ ಏನೂ ಗೊತ್ತಿಲ್ಲದಿದ್ದರೂ ಗುಂಪುಗಾರಿಕೆ ಗೊತ್ತು. ಒಬ್ಬನಿಗೆ "ಇದು ತಪ್ಪು" ಎಂದು ಹೇಳಹೊರಟರೆ ಸೀಳುನಾಯಿಗಳಂತೇ ಅಟ್ಟಿಸಿಕೊಂಡು ಬರುವ ಗುಂಪೇ ಇರುತ್ತದೆ. ತಪ್ಪಿಲ್ಲದಿದ್ದರೂ ತಪ್ಪನ್ನು ತೋರಿಸಿದವನನ್ನೇ ಬೆಪ್ಪನನ್ನಾಗಿ ಮಾಡುವ, ಪ್ರವಾಹದ ವಿರುದ್ಧ ಈಜುವ ’ಪಂಡಿತರ’ ಗುಂಪು ಅದು. ಸಮಾಜದಲ್ಲಿ ನಮಗೆ ಆಗಾಗ ಇಂತಹ ಜನ ಸಿಗುತ್ತಲೇ ಇರುತ್ತಾರೆ. ತಪ್ಪು ಮಾಡಿಯೂ ಒಪ್ಪದ ಜನರನ್ನು ಕಂಡಾಗ ನನಗೇಳುವ ಪ್ರಶ್ನೆ : ಏಕೆ ಹೀಗೆ ನಮ್ಮ ನಡುವೆ ....?

ಅರಿಯದೇ ತಪ್ಪುಗಳಾಗುವುದು ಸಹಜ. ಗೊತ್ತಿದ್ದೂ ತಪ್ಪು ನಡೆಯುವುದೂ ಒಮ್ಮೊಮ್ಮೆ ಆಗಿಬಿಡಬಹುದು. ಆದರೆ ಮಾಡಿದ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡುವ ಹಂತಕ್ಕೆ ಇಳಿಯಬಾರದು. ಒಮ್ಮೆ ಮಾಡುವುದು ’ತಪ್ಪು’, ಇನ್ನೊಮ್ಮೆ ಅದನ್ನೇ ಮರುಕಳಿಸಿದರೆ ಅದು ’ಅಪರಾಧ’ವೆನಿಸುತ್ತದೆ. ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳುವ ಮನೋಭಾವ ಇಂದಿನ ಯುವಜನಾಂಗದಲ್ಲಿ ಕೆಲವರಲ್ಲಿ ಮಾತ್ರ ಇದೆ! ಇದಕ್ಕೆ ತಪ್ಪನ್ನು ಒಪ್ಪದೇ ಇರುವ ಕೆಟ್ಟ ಸ್ವಾಭಿಮಾನ ಅಥವಾ ಅಹಂಕಾರವೇ ಕಾರಣವಾಗಿರುತ್ತದೆ. ಸ್ವಾಭಿಮಾನವೇ ಅತಿಯಾದಾಗ ಅಹಂಕಾರವಾಗುತ್ತದೆ.

ಮಹಾಭಾರತದಲ್ಲಿ, ತುಂಬಿದ ಸಭೆಯಲ್ಲಿ ಮೂರುಲೋಕದ ಗಂಡನೂ ಸೇರಿರುವ ಪಂಚಪಾಂಡವರ ಎದುರಿನಲ್ಲೇ ದ್ರೌಪದಿಯ ವಸ್ತ್ರಾಪಹರಣವಾಗುವಾಗ ಹಲವರನ್ನು ಕರೆಯುತ್ತಾಳೆ ದ್ರೌಪದಿ. ಯಾರೂ ಮಾನಕಾಪಾಡಲು ಅರ್ಹರಲ್ಲ ಎಂದು ಗೊತ್ತಾದಾಗ ಕೃಷ್ಣನಲ್ಲಿ ಮೊರೆಯಿಡುತ್ತಾಳೆ. ಒಂದೊಂದೇ ಕೈಯ್ಯಿಂದ ಅವಳು ಮಾನ ಮುಚ್ಚಿಕೊಳ್ಳುವ ಪ್ರಯತ್ನ ನಡೆಸುತ್ತಾಳೆ. ಒಂದು ಕೈ ಮೇಲೂ ಇನ್ನೊಂದು ಶರೀರದ ಮೇಲೂ ಇರುವಾಗಲೂ ಕೃಷ್ಣ ಬರಲಿಲ್ಲ. ಯಾವಾಗ ಎರಡೂ ಕೈ ಮೇಲೆತ್ತಿ ತನ್ನಿಂದ ಸಾಧ್ಯವಿಲ್ಲಾ ಎಂದು ಗೋಳಿಟ್ಟಳೋ ಆಗ ಅಕ್ಷಯಾಂಬರ ಪ್ರಾಪ್ತವಾಯ್ತು! ಖಾಂಡವವನವನ್ನೇ ಅಗ್ನಿಗೆ ನೈವೇದ್ಯವಿತ್ತು ಗಾಂಡೀವಿ ಎಂದು ಬಿರುದುಪಡೆದ ಅರ್ಜುನ ಮಗನಾದ ಬಬ್ರುವಾಹನನಿಂದಲೇ ಒಮ್ಮೆ ಹತನಾಗಬೇಕಾಗಿ ಬಂತು! ಹುಡುಕಿದರೆ ಒಂದಲ್ಲ ಸಾವಿರಾರು ಘಟನೆಗಳು ಪುರಾಣಗಳಲ್ಲಿ ಕಾಣುತ್ತವೆ. ಅಹಂಕಾರವೇ ಅಧಃಪತನಕ್ಕೆ ಕಾರಣ ಎಂಬುದನ್ನೂ ತಿಳಿಸುತ್ತವೆ. ತಪ್ಪನ್ನು ತಪ್ಪೆಂದು ಒಪ್ಪಿಕೊಳ್ಳಲು ಎಲ್ಲೀವರೆಗೆ ನಾವು ಸಿದ್ಧರಿಲ್ಲವೋ ಅಲ್ಲೀವರೆಗೂ ನಮ್ಮ ಅಹಂಕಾರಕ್ಕೆ ಮತ್ತಷ್ಟು ಮೆರುಗು ಬರುತ್ತಲೇ ಇರುತ್ತದೆ. ಹೇಗೆ ಶರೀರದಲ್ಲಿ ಬಂದುಕುಳಿತ ಬೊಜ್ಜನ್ನು ನೀಗಿಸುವುದು ಕಷ್ಟವೋ ಅಹಂಕಾರವನ್ನು ನೀಗಿಸುವುದು ಇನ್ನೂ ಕಷ್ಟ. ಮೇಲಿನ ನನ್ನ ಪ್ರಶ್ನೆಗೆ ಉತ್ತರ ತಿಳಿಯಿತಲ್ಲ? ನಮ್ಮ-ನಮ್ಮ ನಡುವೆ ಇರುವ ಈ ಭೇದಕ್ಕೆ ನಮ್ಮೊಳಗೆ ಸ್ಥಾಪಿತವಾಗಿರುವ ಅಹಂಕಾರವೇ ಕಾರಣವಾಗಿರುತ್ತದೆ. ತಪ್ಪನ್ನು ತಪ್ಪೆಂದು ಒಪ್ಪಿಕೊಳ್ಳುವುದೂ ಗುರುವಿಗೆ ಶರಣಾಗುವುದೂ ವ್ಯಕ್ತಿಯ ಸೌಜನ್ಯದ, ಔನ್ನತ್ಯದ ಲಕ್ಷಣ. ಅದು ಇಂದಿನ ಯುವಜನಾಂಗದಲ್ಲಿ ಮತ್ತೆ ರೂಢಿಗೆ ಬರಬೇಕಾಗಿದೆ.

Monday, March 12, 2012

ಗಿರಿಶಿಖರ ಝರಿನೀರು ಸ್ವಚ್ಛಂದ ಆಕಾಶ ಇನ್ನೊಮ್ಮೆ ಅಂಥ ಸುಖ ಪಡುವೆನೇನು?

ಚಿತ್ರಕೃಪೆ : ಅಂತರ್ಜಾಲ

ಗಿರಿಶಿಖರ ಝರಿನೀರು ಸ್ವಚ್ಛಂದ ಆಕಾಶ
ಇನ್ನೊಮ್ಮೆ ಅಂಥ ಸುಖ ಪಡುವೆನೇನು?

ಭಾವಸರೋವರಕ್ಕೆ ಕಲ್ಲೆಸೆದರೆ ಏಳುವ ಅಲೆಗಳು ಬಹುಕಾಲ ಮತ್ತೆ ಮತ್ತೆ ಅಲೆಯಲೆಯಲೆಯಾಗಿ ಹೊಮ್ಮುತ್ತಾ ನಮನ್ನು ಆಗಾಗ ತಮ್ಮತ್ತ ಸೆಳೆಯುತ್ತಾ ಯಾವುದೋ ಲೋಕಕ್ಕೆ ನಮ್ಮನ್ನು ಕರೆದೊಯ್ದುಬಿಡುತ್ತವೆ. ಅಲ್ಲಿ ಏನುಂಟು ಏನಿಲ್ಲ ? ಸಿಗದ ವಸ್ತುವಿಷಯಗಳೇ ಇಲ್ಲ. ಮನುಷ್ಯ ಯಾವುದೇ ವೃತಿಯಲ್ಲೂ ತಾದಾತ್ಮ್ಯತೆಯಿಂದ ತೊಡಗಿಕೊಂಡಾಗ ಅಲ್ಲಿ ಆತನಿಗೆ ಪರಮೋಚ್ಛ ಸ್ಥಿತಿ ಕ್ರಮೇಣ ಲಭ್ಯವಾಗುತ್ತದೆ; ಇದು ಪ್ರಕೃತಿ ನಿಯಮ! ಉನ್ನತ ಸ್ಥಾನಕ್ಕೆ ಏರಿದ ಯಾವುದೇ ವ್ಯಕ್ತಿಯನ್ನು ನೋಡಿ: ವ್ಯಕ್ತಿ ಆ ಸ್ಥಾನಕ್ಕೆ ಏರುವ ಮೊದಲಿನ ಹಂತಗಳನ್ನು ಗಮನಿಸಿದರೆ ಚಿಟ್ಟೆಯ ಮೊಟ್ಟೆ ಮರಿಯಾಗಿ, ಕಂಬಳಿಹುಳುವಾಗಿ ಮತ್ತೆ ಕಾಲಾಂತರದಲ್ಲಿ ಮಾರ್ಪಾಟಾಗಿ ಪತಂಗವಾಗಿ-ಚಿಟ್ಟೆಯಾಗಿ ಮೈದಳೆಯುವ ರೋಮಾಂಚಕ ಸನ್ನಿವೇಶಗಳೂ ಭಾವನಾತ್ಮಕ ಸಂಗತಿಗಳೂ ಅಲ್ಲಿರುತ್ತವೆ.

ನಾವೆಲ್ಲಾ ಚಿಕ್ಕವರಿದ್ದಾಗ ಅಪರೂಪಕ್ಕೆ ಅಲ್ಲಿಲ್ಲಿ ಪ್ರವಾಸಕ್ಕೆ ಹೋದಾಗ ಹೋಗಿ ಬರುವ ರಸ್ತೆಯುದ್ದಗಲಕ್ಕೂ ಅಲ್ಲಲ್ಲಿ ನೆರಳಿಗಾಗಿ ನೆಟ್ಟಿದ್ದ ಮರಗಳಿರುತ್ತಿದ್ದವು. ಹಿಂದಿನ ಕಾಲದಲ್ಲಿ ರಾಜರು ಇದಕ್ಕೆ ಬಹಳ ಪ್ರೋತ್ಸಾಹ ನೀಡಿದ್ದರಂತೆ. ಜನರು ದೂರಪ್ರಯಾಣಕ್ಕಾಗಿ ನಡೆದಾಡುದಾಗ ಜಡಿ ಮಳೆಗೂ, ಬಿಸಿಲ ಝಳಕ್ಕೂ ಚಣಕಾಲ ನಿಂತೋ ಕುಂತೋ ಸಲ್ಪ ವಿಶ್ರಮಿಸಿಕೊಳ್ಳಲು ಮರಗಳ ನೆರಳಿನ ಆಶ್ರಯ ಸಿಗುತ್ತಿತ್ತು. ಕೇವಲ ೨೫ ವರ್ಷಗಳಲ್ಲಿ ಆದ ಬದಲಾವಣೆಯನ್ನು ನೋಡಿದರೆ ಇದು ನಾವೇ ಹುಟ್ಟಿಬೆಳೆದ ಪ್ರದೇಶವೇ/ರಾಜ್ಯವೇ ಎನ್ನುವಷ್ಟು ಪರಿಸ್ಥಿತಿ ಬದಲಾಗಿಹೋಯ್ತು. ತುಂಬಿ ತುಳುಕುತ್ತಿದ್ದ ಕೆರೆ ಬಾವಿಗಳು ಬರಿದಾದವು, ನೈಸರ್ಗಿಕವಾಗಿ ಜಿನುಗುತ್ತಿದ್ದ ಚಿಲುಮೆಗಳು ಒಣಗಿಹೋಗಿ ನದೀಪಾತ್ರಗಳು ಬಟಾಬಯಲಾಗಿ ಎಲ್ಲೆಲ್ಲೂ ನೀರೇ ಇಲ್ಲದ ಸ್ಥಿತಿ-ಮಳೆಗಾಲದಲ್ಲಿ ಮಳೆ ಸರಿಯಾಗಿ ಬಂದರೆ ಮಾತ್ರ ರಾಡಿನೀರನ್ನು ಕಾಣಬಹುದಾದ ಸ್ಥಿತಿ!

ಎಲ್ಲಿ ನೋಡಿದರೂ ನಾನಾ ವಿಧದ ಗಣಿಗಳು, ಎಲ್ಲಿನೋಡಿದರೂ ಅನಾವಶ್ಯಕ ಚತುಷ್ಪಥ ರಸ್ತೆಗಳ ತಯಾರಿ, ರಸ್ತೆ ಅಗಲೀಕರಣಕ್ಕೆ ತುತ್ತಾಗಿ ಕುರುಕ್ಷೇತ್ರದಲ್ಲಿ ಕೈಕಾಲುಗಳು ಕತ್ತರಿಸಿಹೋಗಿ ಬಿದ್ದು ರೋದಿಸುತ್ತಿರುವ ಮಹಾಯೋಧರಂತೇ ಕಾಣುವ ಹಳೆಯತಲೆಮಾರಿನ ಹೆಮ್ಮರಗಳು. ಕಾರ್ಖಾನೆಗಳ ಕಲ್ಮಶಗಳನ್ನು ತುಂಬಿಸಾಗಿಸುತ್ತಿರುವ ಚಿಕ್ಕಪುಟ್ಟ ಹೊಲಸುನಾರುವ ನದಿಗಳು--ಇವುಗಳನ್ನೆಲ್ಲಾ ಕಂಡಾಗ ಒಂದು ಕಾಲಕ್ಕೆ ಉಂಡುಟ್ಟು ಇದ್ದುದರಲ್ಲೇ ತೃಪ್ತಿ ಪಡುತ್ತಿದ್ದ ಮಾನವನಿಗೆ ಈಗ ತೃಪ್ತಿಯೇ ಇಲ್ಲವೇ ಎಂಬುದು ಪ್ರಶ್ನೆಯಾಗುತ್ತದೆ. ಇತಿಹಾಸದಲ್ಲಿ, ಪುರಾಣಗಳಲ್ಲಿ ಕೇಳಿದ ಗೊಂಡಾರಣ್ಯಗಳು, ನಿತ್ಯಹರಿದ್ವರ್ಣ ಕಾಡುಗಳು, ಬೃಹದಾರಣ್ಯಗಳು, ಗುಂಜಾರಣ್ಯಗಳು, ಋಷ್ಯಮೂಕ-ಪಂಚವಟಿ-ದಂಡಕಾರಣ್ಯ ಇವೆಲ್ಲಾ ಕೇವಲ ಕೇವಲ ಕಲ್ಪನೆಗೂ ನಿಲುಕದ ರೀತಿ ಮಾಯವಾದವು! ಅವುಗಳಲ್ಲಿ ಮನೆಮಾಡಿದ್ದ ಅಸಂಖ್ಯ ಜೀವರಾಶಿಗಳು ಹೆಸರೇ ಇಲ್ಲದಂತೇ ವಿನಾಶವಾಗಿ ಹೋದವು. ಉಳಿದ ಕೆಲವು ಪ್ರತಿಶತ ಕಾಡುಗಳಿಗೆ ಬೆಂಕಿಯೋ ಮರ್ದೊಂದೋ ಬಿದ್ದು ಅವೂ ನಾಶವಾದಾಗ ಆನೆ-ಚಿರತೆ-ಹುಲಿಗಳಂಥಾ ಕೆಲವೇ ಪ್ರಾಣಿ ಪ್ರಭೇದಗಳು ಬದುಕಲು ಅತಿ ಅವಶ್ಯಕವಾದ ಆಹಾರ ಸಿಗುವುದೇ ದುಸ್ತರವಾಗಿ ತಮ್ಮತನವನ್ನು ಬಿಟ್ಟು ಬದುಕುವುದಕ್ಕಾಗಿ ಹೊಟ್ಟೆಗಾಗಿ ಹಳ್ಳಿ-ಪಟ್ಟಣಗಳಿಗೆ ನುಗ್ಗಿದವು!

ನಾವು ಚಿಕ್ಕವರಿದ್ದಾಗ ಎಲ್ಲಾ ಮನೆಗಳಲ್ಲೂ ಕೇಳಿ ಬರುತ್ತಿದ್ದ ಗೋವಿನಹಾಡು ಅದೆಲ್ಲೋ ಹೋಯ್ತು, ದೇಸೀ ತಳಿಯ ಗೋವುಗಳು ನಿರ್ನಾಮವಾದವು! ಡಾ| ಸತ್ಯನಾರಾಯಣ ಭಟ್ಟರು ತಮ್ಮ ’ಪೃಥಿವೀಸೂಕ್ತ’ದಲ್ಲಿ ಹೇಳಿರುವಂತೇ ಜೀವವೈವಿಧ್ಯಗಳಲ್ಲೂ ಸಸ್ಯವೈವಿಧ್ಯಗಳಲ್ಲೂ ಹಲವನ್ನು ನಾವಿಂದು ಉಳಿಸಿಕೊಂಡಿಲ್ಲ, ಇರುವ ಕೆಲವೂ ನಮ್ಮ ಕೈತಪ್ಪಿಹೋಗುವ ಅಂಚಿನಲ್ಲಿವೆ! ಮಲೆನಾಡ ತಣ್ಣಗಿನ ಗೋಮಾಳದಲ್ಲಿ ಕುಳಿತ ಗೋವಳನಲ್ಲಿ ತನ್ನನ್ನು ಕಂಡು ಕವಿ ಕುವೆಂಪು " ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ’ ಬರೆದರು, ಆದರೆ ಸದ್ದೇ ಇಲ್ಲದಹಾಗೇ ಮಲೆನಾಡ ಮಳೆಕಾಡುಗಳು ಬರಿದಾಗಿ ಗೋಮಾಳಗಳು ವಾಣಿಜ್ಯ ಮಳಿಗೆಗಳಾಗುತ್ತಾ ನಡೆದಿವೆ! ಬಹುಶಃ ಈ ಶತಮಾನದಲ್ಲಿ ಹಿಂದೆಂದೂ ಕಾಣದಿದ್ದ ಪರಿಸರ ನಿರ್ಮೂಲನಾ ಆಂದೋಲನವನ್ನು ನಾವು ಕಂಡಿದ್ದೇವೆ, ಅದನ್ನು ಪರೋಕ್ಷ ಬೆಂಬಲಿಸಿದ್ದೇವೆ ಕೂಡಾ!

ಕವಿ ಶಿವಾನಂದ ಸಿದ್ದಣ್ಣ ಮಸಳಿ ಬರೆದ ಕವನವೊಂದನ್ನು ಮಿತ್ರ ವಸಂತ್ ಕುಮಾರ್ ಫೇಸ್ ಬುಕ್ ನಲ್ಲಿ ಹಾಕಿದ್ದರು. ನಾವು ಅದನ್ನು ಪಠ್ಯಕ್ರಮದಲ್ಲಿ ಓದಿಲ್ಲ. ಆದರೆ ನಮಲ್ಲಿ ಹಲವರು ಅದನ್ನು ಹಾಡುತ್ತಿದ್ದರು. ಕೆಲವರಿಗೆ ಅದು ಪಠ್ಯದಲ್ಲೂ ಲಭ್ಯವಿತ್ತು ಎಂಬುದು ತಿಳಿದುಬಂದಿದೆ. ಇವತ್ತು ಬೆಳಗಾವಿಯಲ್ಲಿ ತನ್ನ ವೃತ್ತಿಯಲ್ಲಿ ತೊಡಗಿರುವ ಕವಿ ಮಸಳಿಯವರು ಕೊಟ್ಟಿರುವ ಈ ಹಾಡು ಗಿಳಿಯೊಂದರ ಆಂತರ್ಯವನ್ನು ಅದೆಷ್ಟು ಸೆರೆಹಿಡಿದಿದೆಯೆಂದರೆ ಈ ಹಾಡನ್ನು ಕೇಳಿದ ಹೃದಯವುಳ್ಳ ಯಾರೇ ಆಗಲಿ ಪ್ರಾಣಿಹಿಂಸೆಯನ್ನು ಸಹಜವಾಗಿ ನಿಲ್ಲಿಸಿಬಿಡುತ್ತಾರೆ:

ನಾನು ಪಂಜರ ಪಕ್ಷಿ ಇನ್ನು ನನಗಾರು ಗತಿ
ಕೇಳಬಯಸುವಿಯೇನು ನನ್ನ ಕಥೆಯಾ?
ಯಾರ ಸಂತೋಷಕ್ಕೆ ಹಿಡಿದು ತಂದರೋ ನನ್ನ
ಅರಿಯಬಲ್ಲೆಯ ನನ್ನ ಒಡಲ ವ್ಯಥೆಯಾ?

ಗಿಳಿಯನ್ನು ಹಿಡಿದಾಗ ಅದು ತನ್ನ ಗೆಳೆಯರ ಅಥವಾ ಕುಟುಂಬದ ಗುಂಪಿನಿಂದ ಬೇರ್ಪಡುತ್ತದೆ. ಅದನ್ನು ನಮ್ಮ ಸಂತೋಷಕ್ಕಾಗಿ ಪಂಜರದಲ್ಲಿಟ್ಟು ಮಾತು ಕಲಿಸುವಾಗ ನಮಗೇನೋ ಖುಷಿಯೆನಿಸಬಹುದು ಆದರೆ ಅದರ ಅಳಲು ನಮಗರ್ಥವಾದೀತೇ ? ಹೋಗಲಿ ಎಲ್ಲಿತ್ತು ಆ ಗಿಳಿ ನೋಡೋಣ:

ಬಹುದೂರ ಯಾವುದೋ ಪರ್ವತದ ಓರೆಯಲಿ
ಮರದ ಗಿರಿ ಶಿಖರದಲಿ ಜನಿಸಿ ಬಂದೆ!
ಆ ತಂದೆ ತಾಯಿಯರು ನನ್ನಣ್ಣ ತಂಗಿಯರು
ಅವರ ಜೊತೆಯಲಿ ನಾನು ನಲಿಯುತಿದ್ದೆ!

ತಾನು ಎಲ್ಲಿ ಹುಟ್ಟಿ ಬೆಳೆದೆ ಎಂಬ ಬಗ್ಗೆ ಗಿಳಿ ಹೇಳುತ್ತಿದೆ--ತಾನು ಬಹುದೂರದಲ್ಲಿ ಅದಾವುದೋ ಗಿರಿ ಶಿಖರದ ಮರದ ಕೊಂಬೆಯ ಗೂಡಿನಲ್ಲಿ ಜನಿಸಿದ್ದೆ, ಅಲ್ಲಿ ನನ್ನ ತಂದೆ-ತಾಯಿ, ಅಣ್ಣ-ತಂಗಿ ಎಲ್ಲರೊಡನೆ ನಾನು ಹಾಯಾಗಿ ನಲಿದಾಡುತ್ತಾ ಇದ್ದೆ. ಇನ್ನು ಮರಳಿ ಅಲ್ಲಿಗೆ ತೆರಳಲು ಸಾಧ್ಯವೇ?

ಗಿರಿಶಿಖರ ಝರಿನೀರು ಸ್ವಚ್ಛಂದ ಆಕಾಶ
ಇನ್ನೊಮ್ಮೆ ಅಂಥ ಸುಖ ಪಡುವೆನೇನು?
ಯಾರ ನಂಬಿ ಇನ್ನು ಜೀವ ಹಿಡಿಯಲಿ ನಾನು
ಅರ್ಥವಿಲ್ಲದ ಹಾಡ ಹಾಡಲೇನು?

ಗಿರಿಶಿಖರದಲ್ಲಿ ಹುಟ್ಟಿ ಹರಿವ ತೊರೆಗಳ ಝರಿಗಳ ಸ್ಫಟಿಕಸದೃಶ ಸ್ವಚ್ಛ ನೀರು ಅಲ್ಲಿತ್ತು-ಅದನ್ನು ನಾನು ಕಡಿಯುತ್ತಿದ್ದೆ, ಹಾರಾಡಲು ಧೂಳಿನ ಲವಲೇಶವೂ ಇಲ್ಲದ ನೀಲಾಗಸದ ಅವಕಾಶವಿತ್ತು, ಮತ್ತೆ ಅದು ಸಿಗುತ್ತದೇನು ? ನನ್ನವರೆಲ್ಲರನ್ನೂ ಕಳೆದುಕೊಂಡು ಯಾರನ್ನು ನಂಬಿ ನಾನಿಲ್ಲಿ ಜೀವ ಹಿಡಿದು ಬದುಕಿರಲಿ ?

ನೀಲದಾಕಾಶದಲಿ ಮೋಡದಾ ಮರೆಯಲ್ಲಿ
ಮನತುಂಬಿ ಬಂದಂತೆ ಹಾಡುತಿದ್ದೆ
ಮುಗಿಯಲಾ ಸ್ವಾತಂತ್ಯ ಸವಿಯಿಲ್ಲ ಕಂಠದಲಿ
ದುಗುಡ ತುಂಬೀ ಮನದಿ ಹಾಡದಾದೆ!

ನೀಲಿಯಾಕಾಶದಲ್ಲಿ ಅಲ್ಲಲ್ಲಿ ಕಾಣಿಸುವ ಬೆಳ್ಮುಗಿಲನ್ನು ಕಂಡು ಗಿಡ-ಮರಗಳಲ್ಲಿ ಕೂತು ಹಾಡುತ್ತಿದ್ದೆ, ಆಡುತ್ತಿದ್ದೆ. ಇಂದು ಆ ಸ್ವಾತಂತ್ರ್ಯ ನನ್ನಪಾಲಿಗಿಲ್ಲವಾಗಿದೆ, ದುಗುಡ ತುಂಬಿದ ಮನಸ್ಸಿನ ನನ್ನ ಕಂಠದಲ್ಲಿ ಧ್ವನಿ ಉಡುಗಿಹೋಗಿದೆ, ಈಗ ಹಾಡಲೂ ಆರೆ, ಹಾಡಬಯಸಲೂ ಆರೆ!

ಅಲ್ಲಿ ಬನಬನದಲ್ಲಿ ಕಾಡಗಿಡಗಿಡದಲ್ಲಿ
ಕೊಂಬೆ ಕೊಂಬೆಗೂ ಹೂವು ಸಾವಿರಾರು
ಬನದ ಹಣ್ಣಿನ ರುಚಿಯ ಬರಿ ನೆನೆಯಲೇನುಂಟು
ಮರಳಿದೊರೆಯಲು ಬಹುದೆ ತೌರಿನವರು?

ಅಲ್ಲಿರುವ ವನವನಗಳಲ್ಲೂ ಗಿಡಗಿಡಗಳಲೂ ವಿಧವಿಧದ ಹೂವುಗಳು, ಹಣ್ಣುಗಳು, ಕಾಯಿಗಳು ಸಿಗುತ್ತಿದ್ದವು. ಬಣ್ಣಬಣ್ಣದ ಹೂಗಳನ್ನು ಕಣ್ತುಂಬಾ ನೋಡುತ್ತಿದ್ದೆ, ಹಸಿವೆಯಾದಾಗ ಬೇಕಷ್ಟು ಹಣ್ಣುಗಳನ್ನು ಹೊಟ್ಟೆತುಂಬಾ ತಿನ್ನುತ್ತಿದ್ದೆ. ನನ್ನೆಲ್ಲ ಸಹಜೀವಿಗಳ ಜೊತೆಗೆ ಕುಟುಂಬಿಕರ ಜೊತೆಗೆ ಅಲ್ಲಿ ಕುಳಿತು ಸವಿಯುತ್ತಿದ್ದ ಆ ಹಣ್ಣುಗಳ ರುಚಿಯನ್ನು ಹೇಳಿನ್ನೇನು ಪ್ರಯೋಜನ? ನನ್ನ ತೌರಿನವರನ್ನು ನಾನು ಮರಳಿ ಮತ್ತೆಂದಾದರೂ ಕಾಣಲಾದೀತೇ ?

ಹೀಗೇ ಪಂಜರದ ಹಕ್ಕಿಯಾಗಿ ಹರಿದುಬಂದ ಕವಿಮನದ ಭಾವಗಳಿಗೆ ಯಾವತ್ತಿಗೂ ಜೀವವಿರುತ್ತದೆ! ಸಮಾಜದಲ್ಲಿ ಅನೇಕರು ಕವಿಹೃದಯದ ಮಿಡಿತಕ್ಕೆ ತುಡಿಯುತ್ತಾರೆ ಎಂಬುದಂತೂ ಸತ್ಯ. ಬರೆದ ಕವನಗಳ ಸಂಖ್ಯೆಗಿಂತ ಕವನದ ಸಂದೇಶ ಬಹಳ ಮುಖ್ಯವಾಗುತ್ತದೆ. ಈ ಕವನದ ಸಂದೇಶದಿಂದಲೇ ಕವಿ ನಮ್ಮ ಮನದ ಮೂಸೆಗೆ ಹೋಗಿ ಭದ್ರವಾಗಿ ಕುಳಿತುಬಿಡುತ್ತಾರೆ! ಸಿದ್ದಣ್ಣ ಮಸಳಿಯವರ "ದೀಪಾವತಾರ" ಮತ್ತು "ಮನೆ ತುಂಬಿದ ಬೆಳಕು" ಎರಡು ಕವನ ಸಂಕಲಗಳೂ ಪ್ರಕಟವಾಗಿವೆ. ಪ್ರಸ್ತುತ ಕವನ " ತಟ್ಟು ಚಪ್ಪಾಳೆ ಪುಟ್ಟ ಮಗು" ಎಂಬ ಕವನ ಸಂಕಲನದ್ದಾಗಿದೆ. ಈ ಸಂಕಲನದ ಕೆಲವು ಕವನಗಳನ್ನು ಸುಮಾರು ೫೦ ವರ್ಷಗಳ ಹಿಂದಿನಿಂದಲೂ ಚಿಕ್ಕ ಮಕ್ಕಳಿಗೆ ಪಾಠ ಕ್ರಮದಲ್ಲಿರುವ ಕನ್ನಡ ಪಠ್ಯ ಪುಸ್ತಕದಲ್ಲಿ ಸೇರಿಸುತ್ತಾ ಬರಲಾಗಿದೆ. ೧೯೫೭ ಇಸವಿ ಮೇ ತಿಂಗಳ ೨೨ನೆ ತಾರೀಕು ಜನಿಸಿದ ಈ ಕವಿ ೧೯೭೯ ರಲ್ಲಿ ಕೆ. ಎಲ್. ಇ ಸೊಸೈಟಿಯ ಲಿಂಗರಾಜ ಕಾಲೇಜಿನಲ್ಲಿ (ಬೆಳಗಾವಿ )ತಮ್ಮ ವ್ಯಾಸಂಗವನ್ನು ಮುಗಿಸಿ ಪ್ರಸ್ತುತ ಪ್ರಾಧ್ಯಾಪಕರಾಗಿದ್ದಾರೆ -ಎಂಬುದನ್ನು ಇನ್ನೊಬ್ಬ ಹಿರಿಯ ಮಿತ್ರ ರವಿ ತಿರುಮಲೈ ಅವರು ತಿಳಿಸಿದ್ದಾರೆ. ಕವಿ ಮಸಳಿಯವರಿಗೂ ಮತ್ತು ಸ್ನೇಹಿತರಾದ ವಸಂತ್ ಕುಮಾರ್, ರವಿ ಈರ್ವರಿಗೂ ನನ್ನ ನಮನಗಳು.

ಬೇಸಿಗೆಯಂಚಿನಲ್ಲಿ ನಾವೆಲ್ಲಾ ಪಕ್ಕದೂರಲ್ಲಿ ಜಾತ್ರೆಗೆ ಹೋಗುತ್ತಿದ್ದುದುಂಟು. ಅಲ್ಲಿ ನಡೆಯುತ್ತಾ ನಡೆಯುತ್ತಾ ಸಾಗುವ ದಾರಿಹೋಕರಿಗೆ ಬಾಯಾರಿಕೆ ಸಹಜ. ಜಾತ್ರೆಗೆ ಸ್ವಸಂತೋಷಕ್ಕಾಗಿಯೂ ಊರದೇವರು ತೇರನೇರಿದ ಸಂಭ್ರಮವನ್ನು ಕಣ್ತುಂಬಿಕೊಂಡು ಹಣ್ಣು-ಕಾಯಿ ಸಮರ್ಪಿಸಲಾಗಿಯೂ ಬರುವ ಮಂದಿಗೆ ಕುಡಿಯುವ ನೀರು ದಾರಿಯಲ್ಲಿ ಸಿಗುವುದು ದುರ್ಲಭ. ಅಂತಹ ಸನ್ನಿವೇಶವನ್ನು ಅರ್ಥಮಾಡಿಕೊಂಡ ಪುಣ್ಯಾತ್ಮರೊಬ್ಬರು ನಮ್ಮ ಪಕ್ಕದೂರಲ್ಲಿದ್ದರು. ಹೆಬ್ಬಾರ ಸಣ್ಣಪ್ಪ ಎಂಬ ಹೆಸರಿನ ಈ ವ್ಯಕ್ತಿ ನಾಕಾರು ಮಡಕೆ [ನಮ್ಮಲ್ಲಿ ಜೋನಿ ಬೆಲ್ಲವನ್ನು ಆಗೆಲ್ಲಾ ತುಂಬಿಸುತ್ತಿದ್ದುದು ಮಣ್ಣಿನ ವಿಶಿಷ್ಟ ಆಕಾರದ ಮಡಕೆಗಳಲ್ಲಿ!]ಬೆಲ್ಲವನ್ನು ತಂದಿಟ್ಟುಕೊಂಡು, ಲಿಂಬೆಹಣ್ಣುಗಳನ್ನೂ, ಕಾಳುಮೆಣಸು, ಯಾಲಕ್ಕಿ ಇತ್ಯಾದಿಗಳನ್ನೂ ಜೋಡಿಸಿಕೊಂಡು, [ನೀರಂತೂ ಸಹಜವಾಗಿ ಬೇಕಲ್ಲ]ಪಾನಕ ಸಿದ್ಧಪಡಿಸಿ ಹಾದಿಹೋಕರಿಗೆ ಜಾತ್ರೆಯಲ್ಲಿ ಒಂದುವಾರಕಾಲ ಅದನ್ನು ನಿಶ್ಶುಲ್ಕ ನೀಡುತ್ತಿದ್ದರು. ಮಾತನಾಡಿಸಿದಾಗ ಅವರು ಹೇಳುತ್ತಿದ್ದುದು "ಇದೊಂದು ಸೇವೆ, ಯಾವುದನ್ನು ಕೊಟ್ಟರೂ ತೃಪ್ತವಾಗದ ಮನುಷ್ಯರು ಹೊಟ್ಟೆಗೆ ನೀರು-ಆಹಾರ ಕೊಟ್ಟಾಗ ತೃಪ್ತರಾಗುತ್ತಾರಲ್ಲ, ಆ ತೃಪ್ತಿಯಿಂದ ಭಗವಂತ ತೃಪ್ತನಾಗುತ್ತಾನೆ!" ಎಂಥಾ ಮಾತು ಮತ್ತು ಎಂಥಾ ಸೇವೆ ಅಲ್ಲವೇ? ಇಂಥಾದ್ದನ್ನೆಲ್ಲಾ ನಾವಿವತ್ತು ಅಪರೂಪಕ್ಕಾದರೂ ಕಾಣಲು ಸಾಧ್ಯವೇ ?

ರಾಜರುಗಳೂ ಕೂಡ ಆ ಕಾಲದಲ್ಲಿ ದಾರಿಹೋಕರಿಗೆ ಕುಡಿಯುವ ನೀರಿಗೆ ಅರವಟ್ಟಿಗೆಗಳನ್ನು ಕಟ್ಟಿಸಿದ್ದರಂತೆ. ಇಂದು ಅಲ್ಲಿಲ್ಲಿ ಜೈನ ಸಮುದಾಯ ಅರವಟ್ಟಿಗೆಗಳನ್ನು ಮಾಡಿದೆ ಬಿಟ್ಟರೆ ಕುಡಿಯುವ ನೀರು ಬಾಟಲಿಗಳಲ್ಲಿ ಹಣಕ್ಕೆ ಮಾತ್ರ ಲಭ್ಯ. ಅದೂ ಕೂಡ ಕೆಲವೊಮ್ಮೆ ರಾಸಾಯನಿಕ ಮಿಶ್ರಿತ! ಇಂದು ಗೂಡಿನ ಪಕ್ಷಿಯರೀತಿಯಲ್ಲೇ ನಮ್ಮಂತಹ ಅನೇಕ ಜನ ವ್ಯಾವಹಾರಿಕ ಬಂಧನದಲ್ಲಿ ಸಿಲುಕಿರುತ್ತೇವೆ. ಮತ್ತೆ ಆ ತಿಳಿನೀಲ ಆಕಾಶ, ಸ್ವಚ್ಛಗಾಳಿ-ನೀರು, ಗಿರಿಶಿಖರ ಇವುಗಳ ಸುತ್ತ ವಾಸಿಸುವ ಅವಕಾಶ ನಮಗೆಲ್ಲಿದೆ? ನಮಗಿರಲಿ ಸದ್ಯ ಅಳಿದುಳಿದ ವನ್ಯಜೀವಿಗಳಿಗಾದರೂ ಆ ಅವಕಾಶ ಇದೆಯೇ ? ಇದಕ್ಕೆಲ್ಲಾ ಕಾರಣೀಭೂತರಾರು ? ತಪ್ಪುತ್ತಿರುವ ನೈಸರ್ಗಿಕ ಸಮತೋಲನ ತಹಬಂದಿಗೆ ಬರಲು ಸ್ವಲ್ಪವಾದರೂ ನಾವು ಕಾರ್ಯಪ್ರವೃತ್ತರಾಗಬೇಡವೇ? ರಾಜಕಾರಣಿಗಳ ’ಹಗಲು-ರಾತ್ರಿ ನಾಟಕ’ಗಳಿಂದ ನೈಸರ್ಗಿಕ ಸಂಪತ್ತನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಬೇಕಾದುದು ನಮ್ಮ ಕರ್ತವ್ಯವಲ್ಲವೇ?


Sunday, March 11, 2012

ಭೋಗಷಟ್ಪದಿಯ ವೈಭೋಗದ ಅರಮನೆಯಲ್ಲಿ

ಚಿತ್ರಕೃಪೆ : ಅಂತರ್ಜಾಲ

ಭೋಗಷಟ್ಪದಿಯ ವೈಭೋಗದ ಅರಮನೆಯಲ್ಲಿ

ಮೂಗು ಮುರಿಯುವಂಥಾದ್ದು ಏನೂ ಇಲ್ಲ! ಕನ್ನಡನಾಡು ಕಂಡ ಅಪ್ರತಿಮ ಪ್ರತಿಭೆಗಳು ಒಂದು ಕಾಲಕ್ಕೆ ನಾಡುನುಡಿಯನ್ನು ಕಟ್ಟುವುದಕ್ಕಾಗಿ ಎಷ್ಟೆಲ್ಲಾ ಹರಸಾಹಸ ಪಟ್ಟರು ಎಂಬುದಕ್ಕೆ ಕನ್ನಡ ಕಾವ್ಯ ಶೈಲಿ ಅದ್ಭುತ ಉದಾಹರಣೆಯಾಗುತ್ತದೆ! ಜನಪದ ಕಾವ್ಯದಿಂದ ಹಿಡಿದು ರಾಗವಾಗಿ ಮುಕ್ತವಾಗಿ ಹಾಡಬಲ್ಲ ಎಲ್ಲಾ ಗೇಯಗೀತೆಗಳಿಗೂ ಒಂದೊಂದು ಛಂದಸ್ಸು ಇದ್ದೇ ಇರುತ್ತದೆ! ಅದು ನಮಗೆ ಗೊತ್ತಿರಲಿ ಬಿಡಲಿ ಕಾವ್ಯಗತಿಯಲ್ಲಿ ಅದರ ಒಳಹರಿವು ಕೆಲಸಮಾಡುತ್ತದೆ. ನಮ್ಮ ಸಂಸ್ಕೃತ ವೇದಮೂರ್ತಿಗಳು ಮಂತ್ರಪುಷ್ಪವನ್ನು ಹೇಳುವಾಗ "ಅಷ್ಟಾಪದೇ ನವಪದೇ ಬಭೂವಷೀ" ಎಂದು ಉಚ್ಚರಿಸಿದಾಗೆಲ್ಲಾ ನನಗೆ ನೆನಪಾಗುತ್ತಿದ್ದುದು ನಮ್ಮ ಕನ್ನಡದ ತ್ರಿಪದಿ, ಚೌಪದಿ, ಷಟ್ಪದಿ ಮೊದಲಾದವುಗಳು. ಮದುವೆಗೆ ಬೆಳೆದು ನಿಂತ ಹುಡುಗಿಯನ್ನೋ ಹುಡುಗನನ್ನೋ ಪರಸ್ಪರ ನೋಡದೇ ಮದುವೆಮಾಡಿಬಿಡುವುದು ನ್ಯಾಯವೇ? ಅದೇರೀತಿ ಮದುವಣಗಿತ್ತಿಗೆ ಆಭರಣಗಳು, ವಿವಿಧ ಹೂಗಳಮಾಲೆ, ಕಾಡಿಗೆ, ಮದರಂಗಿ, ರೇಷ್ಮೆ ಸೀರೆ ಇತ್ಯಾದಿಗಳಿಂದ ಅಲಂಕರಿಸಿದಾಗ ಹೇಗೆ ಒಳ್ಳೇ ಒಡ್ಡಾಗಿ ಕಾಣುವುದೋ ಅದೇ ರೀತಿಯಲ್ಲಿ ಕಾವ್ಯಕ್ಕೆ ಛಂದಸ್ಸನ್ನು ಬಳಸಿದರೆ ಅದು ಸಮರ್ಪಕವಾಗಿ ಸಿದ್ಧಗೊಳ್ಳುತ್ತದೆ.

ಛಂದಸ್ಸು, ಪ್ರಾಸ, ಉಪಮೆ, ಪ್ರತಿಮೆ ಇವೆಲ್ಲವುಗಳನ್ನೂ ಮೇಳವಿಸುತ್ತಾ ಕವನ ಬರೆಯುವುದು ಇವತ್ತಿನ ಗದ್ಯಕಾವ್ಯ ಬರೆದಷ್ಟು ಸುಲಭದ ಕೆಲಸವಲ್ಲ. ಸಾಕಷ್ಟು ಪದಪುಂಜಗಳ ರಾಶಿ ಮನದ ಬತ್ತಳಿಕೆಯಲ್ಲಿರಬೇಕು, ಬಳಸುವ ಪದಗಳ ಅರ್ಥಗಳ ಬಗ್ಗೆ ಯಾವುದೇ ಸಂದೇಹವಿರಕೂಡದು, ಲಘು-ಗುರು ಮನದಲ್ಲೇ ಗುಣಿಸಿಕೊಳ್ಳುವ ಪರಿಜ್ಞಾನ ಇರಬೇಕು, ಸಾಮಾನ್ಯವಾಗಿ ಯಾವ ಶೈಲಿಯಲ್ಲಿ ಬರೆಯುತ್ತೇನೆ ಎಂಬ ಬಗ್ಗೆ ಲಕ್ಷ್ಯವಿರಬೇಕು ಇವೆಲ್ಲದರ ಜೊತೆಗೆ ಕವನದಲ್ಲಿ ಹೇಳಬೇಕಾದ ಸಂಗತಿಗೆ ತೊಡಕಾಗಬಾರದು, ಉಪಮಾಲಂಕಾರ ಮತ್ತು ರೂಪಕಾಲಂಕಾರಗಳನ್ನು ಸೇರಿಸುವ ಕಲೆ ಸಿದ್ಧಿಸಿರಬೇಕು, ವ್ಯಾಕರಣದ ಪರಿಭಾಷೆಯಲ್ಲಿ ಲಿಂಗ, ವಿಭಕ್ತಿ-ಪ್ರತ್ಯಯ, ವಚನ, ಕಾಲ, ಸಂಧಿ, ಸಮಾಸ ಇವೆಲ್ಲವುಗಳ ನಡಾವಳಿ ಸರಿಯಿರಬೇಕು! ಆಗ ಮಾತ್ರ ಕವನ ಸರಿಯಾಗಿ ರೂಪುಗೊಳ್ಳುತ್ತದೆ; ಹೇಳಲಿಕ್ಕೂ ಕೇಳಲಿಕ್ಕೂ ಬಹಳ ಪಸಂದಾಗಿರುತ್ತದೆ.

ಆದಿಕವಿಗಳೆಲ್ಲ ಇದನ್ನು ಅನುಸರಿಸಿದ್ದರು. ಅದರಿಂದಲೇ ಅವರ ಮಹಾಕಾವ್ಯಗಳನ್ನೂ ಕೂಡ ಗಮಕಿಗಳು ಲಯಬದ್ಧವಾಗಿ ವಾಚಿಸಲು ಸಾಧ್ಯವಾಗುತ್ತದೆ. ನಾವು ಸರಿಯಾಗಿ ಮನೆಗೆಲಸ [ಹೋಮ್ ವರ್ಕ್] ಪೂರೈಸದೇ ಹಾಗೇ ತೆರಳಿದ್ದರೆ "ಬರುಬರುತ್ತಾ ರಾಯರ ಕುದುರೆ ಕತ್ತೆಯಾಯಿತು" ಎಂದು ಶಾಲಾ ಮಾಸ್ತರರು ಹೇಳುತ್ತಿದ್ದುದುಂಟು. ಅದೇರೀತಿ ಇವತ್ತಿನ ’ಕವಿ’ಗಳು ಇವಾವ ಬಂಧನಕ್ಕೂ ಸಿಲುಕದೇ ನೇರವಾಗಿ ಒಂದಷ್ಟು ಗೀಚುತ್ತಾರೆ. ಓದಿ ಎನ್ನುತ್ತಾರೆ. ಓದುವುದಾದರೂ ಹೇಗೆ? ಹೀಗೆ ಬರೆದ ಅವರ ಕೃತಿಗಳನ್ನು ಹಾಡಿಕೊಳ್ಳಲು ಸಾಧ್ಯವಿಲ್ಲ; ಓದಿಕೊಂಡರೆ ಗದ್ಯಕ್ಕೂ ಪದ್ಯಕ್ಕೂ ಬಹಳ ವ್ಯತ್ಯಾಸ ಇರುವುದಿಲ್ಲ! ಇದನ್ನೆಲ್ಲಾ ಗಮನಿಸಿದ್ದು ಹಿರಿಯರಾದ ಪ್ರೊ.ಅ.ರಾ.ಮಿತ್ರ ಅವರು. " ಇಲ್ಲಾ ಇದನ್ನು ಹೀಗೇ ಬಿಟ್ಟರೆ ಕನ್ನಡ ಕುಲಗೆಟ್ಟು ಹೋಗುತ್ತದೆ" ಎಂಬ ತುಡಿತದಿಂದ, ಹಳೆಯ ಮತ್ತು ನಮ್ಮಂಥವರಿಗೆ ಸುಲಭವಾಗಿ ’ಜೀರ್ಣವಾಗದ’ ಛಂದಸ್ಸಿನ ಕುರಿತಾದ ಹೊತ್ತಗೆಗಳನ್ನು ಆಧಾರವಾಗಿ ಬಳಸಿಕೊಂಡು ’ಛಂದೋಮಿತ್ರ’ ಎಂಬ ಮನನೀಯ ಪುಸ್ತಕವೊಂದನ್ನು ಹೊರತಂದರು.

ಅ.ರಾ. ಮಿತ್ರರ [ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ೧೯೩೫ ರಲ್ಲಿ ಜನಿಸಿದರು, ಕನ್ನಡದಲ್ಲಿ ಎಂ. ಏ ಮುಗಿಸಿಕೊಂಡ ಶ್ರೀಯುತರು ಬೆಂಗಳೂರು, ತುಮಕೂರು, ಮಡಿಕೇರಿ ಕಾಲೇಜುಗಳಲ್ಲಿ ಕೆಲಸಮಾಡಿದರು, ಕೊನೆಯದಾಗಿ ಬೆಂಗಳೂರಿನ ಮಾಹಾರಾಣೀ ಆರ್ಟ್ಸ್ ಕಾಲೇಜಿನ ಪ್ರಾಂಶುಪಾಲರಾಗಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಸಮಗ್ರ ಲಲಿತ ಪ್ರಬಂಧಗಳು, ವಚನಕಾರರು, ಶಬ್ದ ಕಲ್ಪ, ಒಳನೋಟಗಳು, ಛಂದೋಮಿತ್ರ, ಕೈಲಾಸಂ, ಪ್ರೇಮನದಿಯ ದಡಗಳಲ್ಲಿ-ಇವು ಅವರ ಪ್ರಮುಖ ಕೃತಿಗಳು. ಎಲ್ಲವೂ ಕನ್ನಡದ ಉತ್ಕೃಷ್ಟ ಸಾಹಿತ್ಯ ಶೈಲಿಯಲ್ಲಿವೆ. ’ಈಟೀವಿ’ಯಲ್ಲಿ ಸುಮಾರು ನಾಲ್ಕುವರ್ಷಗಳಿಗೂ ಅಧಿಕಕಾಲ ಕುಮಾರವ್ಯಾಸನ ಬಗ್ಗೆ ಧಾರಾವಾಹಿಯ ರೂಪದಲ್ಲಿ ತಿಳಿಸಿಕೊಟ್ಟ ಕಾರ್ಯಕ್ರಮ ನಡೆದು ಅಪಾರ ಜನಮೆಚ್ಚುಗೆಗೆ ಕಾರಣವಾಯ್ತು, ಈ ಸಂದರ್ಭದಲ್ಲೇ ಸುಮಾರು ೩೦೦೦ಕ್ಕೂ ಅಧಿಕ ಪುಟಗಳಷ್ಟು ಮಾಹಿತಿಯನ್ನು ಕುಮಾರವ್ಯಾಸನ ಕುರಿತು ಅವರು ಬರೆದರು, ಇದರಿಂದಾಗಿ ಜನ ಅವರನ್ನು ’ಅಭಿನವ ಕುಮಾರವ್ಯಾಸ ಮಲ್ಲಿನಾಥ’ ಎಂದು ಕರೆದಿದ್ದಾರೆ. ] ಬಗ್ಗೆ ಪರಿಚಯದ ಅವಶ್ಯಕತೆ ಇಲ್ಲವೆನಿಸುತ್ತದೆ.

ಹಾಸ್ಯಸಾಹಿತಿಗಳಲ್ಲಿ ಅದರಲ್ಲೂ ಗಂಭೀರ ಹಾಸ್ಯಸಾಹಿತಿಯಾಗಿ ಅ.ರಾ.ಮಿತ್ರ ಖ್ಯಾತರು. ಮೂಗಿನ ಬಗ್ಗೆ ಅವರು ಬರೆದ ಲೇಖನವನ್ನು ಓದಿದ್ದ ನಾನು ಇಂದಿಗೂ ಕೆಲವೊಮ್ಮೆ ನನ್ನ ಮೂಗನ್ನೇ ನೆನಪಿಸಿಕೊಂಡು ನಗುವುದಿದೆ. ಅತ್ಯಂತ ಮನೋಜ್ಞವಾಗಿ ಹಾಸ್ಯದ ಪ್ರತಿಮೆಗಳನ್ನು ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟ ಮಿತ್ರರು ಕನ್ನಡಕ್ಕೆ ’ಛಂದೋಮಿತ್ರ’ದಂತಹ ಅಪೂರ್ವ ಕಾಣಿಕೆಯನ್ನೂ ಕೊಟ್ಟಿದ್ದಾರೆ. ಅದರಲ್ಲಿ ಛಂದಸ್ಸುಗಳ ಬಳಕೆ ಹೇಗೆ ಎಂಬ ಕುರಿತಾಗಿ ಬಹಳ ಲಘುವಾಗಿ ಕಲಿಸುವ ಗುರು ಅವರಾಗುತ್ತಾರೆ! ’ಹಾಡೀ ಹಾಡೀ ರಾಗ ಉಗಳೀ ಉಗಳೀ ರೋಗ’ ಎಂಬ ಗಾದೆಯಂತೇ ಪ್ರಯತ್ನಿಸಿ ಕಲಿಯಬೇಕೇ ವಿನಃ ಕೇವಲ "ಅಯ್ಯೋ ಛಂದಸ್ಸು ಕಬ್ಬಿಣದ ಕಡಲೆಯಪ್ಪಾ" ಎಂದು ಕೂತರೆ ಅದನ್ನು ಅರ್ಥವಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ತಮಾಷೆಯೊಂದನ್ನು ಹೇಳುತ್ತೇನೆ ಕೇಳಿ: ನನಗೆ ನಾನು ಕಾಲೇಜಿಗೆ ಹೋದರೂ ಆಂಗ್ಲ ಭಾಷೆ ಬಳಕೆಗೆ ಬರುತ್ತಿರಲಿಲ್ಲ! ಯಾಕೆಂದರೆ ನಾವೆಲ್ಲಾ ಕಲಿತಿದ್ದು ಕನ್ನಡ ಮಾಧ್ಯಮದ ಶಾಲೆಗಳಲ್ಲಿ. ಇಂಗ್ಲೀಷ್ ಎಂಬ ಭಾಷೆಯನ್ನು ಅಲ್ಲಿ ಕಲಿಸಿಕೊಡುವ ಶಿಕ್ಷಕರೇ ’ಗೈಡ್’ ನೋಡಿಕೊಂಡು ಪ್ರಶ್ನೋತ್ತರಗಳನ್ನು ಬಾಯಿಪಾಠ ಮಾಡಿಸಿಬಿಡುತ್ತಿದ್ದರು. ನಮಗೆ ಅಂದು ಅದು ಹೇಗೆ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಕಾಯ್ತೋ ಗೊತ್ತಿಲ್ಲ.

ಹೊರಗಡೆ ಬಂದ್ರೆ ಎಲ್ಲರೂ ಆಂಗ್ಲಭಾಷೆಯಲ್ಲಿ ನಮ್ಮೆದುರು ಮಾತನಾಡುವಾಗ ನಮ್ಮದು ಕಾಳೀದಾಸನ ವಾಕ್ಯ "ಹೇಳುವುದಕ್ಕೂ ಕೇಳುವುದಕ್ಕೂ ಈಗ ಸಮಯವಲ್ಲಾ" ! ಇಂಗ್ಲೀಷ್ ಬರದಿದ್ದ ಕಾರಣ ’ಕನ್ನಡ ಸಂಘ’ವನ್ನೂ ನಾವು ಕಟ್ಟಿದ್ದೂ ಇದೆ! ’ಕತ್ತೆ ಬಲ್ಲುದೆ ತಾನು ಕತ್ತುರಿಯ ಪರಿಮಳವ’ ಎನ್ನುತ್ತಾ ತಿರುಗಿದ್ದೂ ಇದೆ ! ಭಾಷೆ ಬೇಕು ನಿಜ, ಭಾಷೆಯ ದುರಭಿಮಾನ ಸಲ್ಲ ಅಲ್ಲವೇ? ಆಮೇಲೆ ಧೈರ್ಯಮಾಡಿ ಆಂಗ್ಲ ಕಲಿಯಲು ಸ್ವಪ್ರಯತ್ನದಿಂದ ಮುಂದಾಗಿದ್ದಾಯ್ತು. ಮುಂದೆ ಕಲಿತ ತಾಂತ್ರಿಕ ಪುಸ್ತಕಗಳೆಲ್ಲಾ ಆಂಗ್ಲದಲ್ಲೇ ಇದ್ದುದರಿಂದಲೂ ಅವು ಬಹಳ ಕಠಿಣ ಪದಗಳಿಂದ ಕೂಡಿದ್ದವಾಗಿದ್ದರಿಂದಲೂ ಅನಿವಾರ್ಯವಾಗಿ ಪದಗಳನ್ನೂ ಜೋಡಣೆಗಳನ್ನೂ ನೋಡುತ್ತಾ ನೋಡುತ್ತಾ ಪ್ರಯತ್ನಿಸಿ ಈಗ ಆಂಗ್ಲವೆಂದರೆ ನಿದ್ದೆಯಲ್ಲೂ ಸರಾಗ. ಆಗ ನಮಗೆ ಆಂಗ್ಲಭಾಷೆ ಕಲಿಸಿದ ಶಿಕ್ಷಕರನ್ನೂ " ಇದು ಬಾಳಾ ಕಠಿಣದೆ ಹಾಂ .. ಕಂಠಪಾಠ ಮಾಡ್ಬಿಡಿ" ಎಂದು ಅವರು ಹೇಳಿದ್ದನ್ನೂ ನೆನೆದರೆ ನಗು ಉಕ್ಕಿಬರುತ್ತದೆ. ಇದೇ ತೆರನಾಗಿ ಛಂದಸ್ಸಿನ ಉದಾಹರಣೆಗಳನ್ನು ಅವಲೋಕಿಸುತ್ತಾ ನಡೆದರೆ ಅವಲಕ್ಕಿ ತಿಂದಷ್ಟೇ ಹಗುರವಾಗಿ ಅವುಗಳನ್ನು ಬಳಸಲು ಸಾಧ್ಯವಾಗುತ್ತದೆ, ಪ್ರಯತ್ನಿಸಿ ಎಂಬುದು ಇಂದಿನ ಯುವ ’ಕವಿ’ಗಳಿಗೆ ನನ್ನ ಸಲಹೆ.


ಹಿಂದೊಮ್ಮೆ ಭೋಗಷಟ್ಪದಿಯ ಬಗ್ಗೆ ಒಂಚೂರು ಬರೆದಿದ್ದೆ. ರಾಗವಾಗಿ ಹಾಡಿಕೊಳ್ಳಬಲ್ಲ ಈ ಭೋಗ ನಿಜಕ್ಕೂ ಈ ಧರೆಯ ವೈಭೋಗ ! ಅಕ್ಕಿಯಲ್ಲಿ ಅದೇನೋ ’ರಾಜ್ ಭೋಗ್’ ಅಂತಲೋ ಏನೋ ಯಾರೋ ಅಂಗಡಿಯಾತ ಹೇಳಿದ ನೆನಪು, ಅದೇ ರೀತಿ ಭೋಗಷಟ್ಪದಿಯನ್ನು ಕಲಿತು ಗುನುಗುನಿಸಿದರೆ ನಮ್ಮ ನಿತ್ಯದ ವ್ಯವಹಾರಗಳ ನಡುವೆಯೇ ಹಲವು ಕಾವ್ಯಗಳು ಸೃಜಿಸಲ್ಪಡುತ್ತವೆ. ಕೆಲವು ಉದಾಹರಣೆಗಳನ್ನು ನೋಡೋಣ:

ಕುಡುಕರ ಚಾಳಿ ಒಮ್ಮೆ ಜಾಸ್ತಿಯಾದಾಗ ಎಲ್ಲಾಕಡೆ ಅದೇ ಸುದ್ದಿ, ಯಾವ ಪತ್ರಿಕೆ ತೆರೆದರೂ ಅದೇ ಚಿತ್ರಣವಾಗಿತ್ತು. ರಾತ್ರಿ ಎಣ್ಣೆಪಾರ್ಟಿ ಮುಗಿಸಿಕೊಂಡು ಮನೆಗೆ ಮರಳುವಾಗ ಅಲ್ಲಲ್ಲಿ ಅಪಘಾತಗಳನ್ನು ನಡೆಸಿ ಪರಾರಿಯಾಗಲು ಯತ್ನಿಸುವ ಅನೇಕ ಪಡ್ಡೆಗಳು ಪೋಲೀಸರ ಕೈಗೆ ಸಿಕ್ಕಿಬೀಳುತ್ತಿದ್ದರು. ಬಾರ್‍ಗಳಲ್ಲಿ ನರ್ತನ ಮಾಡುವ ಹುಡುಗಿಯರನ್ನು ಕಂಡು ಹಲವು ಪಡ್ಡೆಗಳು ಒಬ್ಬರ ಹಿಂದೆ ಇನ್ನೊಬ್ಬರಂತೇ ಹೋಗುತ್ತಿದ್ದರು; ಹಣ ಪೋಲುಮಾಡುತ್ತಿದ್ದರು. ಆಗ ಆಂಗ್ಲಪದವೂ ಸೇರಿದ ಒಂದು ಭೋಗಷಟ್ಪದಿ ಹುಟ್ಟಿದ್ದು ಹೀಗೆ:

ಗಲ್ಲಿಗಲ್ಲಿಗೊಂದು ಬಾರು
ಇಲ್ಲದಿದ್ರು ಜನಕೆ ಸೂರು
ಬಲ್ಲ ಜನರೆ ನಡೆಸುತಾರೆ ಬಹಳ ವಿಪ್ಲವ |
ಚೆಲ್ಲು ಹುಡುಗಿಯರನು ಕಂಡು
ಹಲ್ಲುಕಿರಿದು ಹಾಳುಬಿದ್ದ
ಎಲ್ಲ ಪಡ್ಡೆಗಳಿಗೆ ಅಡ್ಡೆ ‘ನಡೆಪರೆಲ್ಲವ’ ||

ಹಣಕ್ಕಾಗಿ ಪಡ್ಡೆಗಳು ಕ್ರಿಕೆಟ್ ಬೆಟ್ಟಿಂಗ್ ಆರಂಭಿಸಿದ್ದರು. ಬಿಡ್ಡಿನ ಹಣ ಕೊಡಲಾಗದಿದ್ದ ಸಂದರ್ಭದಲ್ಲಿ ಕೆಲವರಲ್ಲಿ ರೌಡಿಸಂ ನಡೆದಿದ್ದೂ ಕಂಡುಬರುತ್ತದೆ. ಹಲವು ಸಂದರ್ಭಗಳಲ್ಲಿ ಹೀಗೇ ಒಳಗೊಳಗೇ ಬಿಡ್ಡಿಂಗ್‍ಗಳು ನಡೆಯುತ್ತಿದ್ದವು ಎಂದು ಕೇಳಿಬಂದಾಗ ಹುಟ್ಟಿದ್ದು :

ಪಡ್ಡೆಹುಡುಗರೆಲ್ಲ ಸೇರಿ
ಬಿಡ್ಡಿನಾಟವಾಡಿ ದಣಿದು
ಸಡ್ಡುಹೊಡೆದು ನಿಲ್ಲುತಾರೆ ಖಡ್ಗ ಹಿಡಿಯುತ |
ವಡ್ಡತನದ ಹಿರಿಯರೆಲ್ಲ
ಒಡ್ಡುತವರ ಒಟ್ಟುಬಲವ
ಖೆಡ್ಡವಾಯ್ತು ರಸ್ತೆ ರಸ್ತೆ ಬದುಕು ದುಷ್ಕೃತ ||


ಟೀವಿ ಮಾಧ್ಯಮದ ಮುಖಾಂತರ ಪೂರ್ವಜನ್ಮಗಳನ್ನು ತೋರಿಸುತ್ತೇವೆ ಎಂಬ ಜನ ಹುಟ್ಟಿಕೊಂಡು ಕಾಸುಮಾಡಲಾರಂಭಿಸಿದಾಗ ಅವರನ್ನು ಲೇವಡಿಮಾಡಲು ಹುಟ್ಟಿದ ಭೋಗ :

ಕಾಸುಕೊಟ್ರೆ ಪೂರ್ವಜನ್ಮ
ಪೋಸು ತೋರ್ವೆವೆಂದು ಹೇಳಿ
ವಾಸುದೇವನಾಣೆ ಹಿಡಿದು ಬೊಗಳೆ ಬಿಟ್ಟರು |
ಬೀಸುತಿರುವ ’ಗಾಳಿಯಲ್ಲಿ’
ಸೋಸಿಕೊಂಡು ’ತಮ್ಮ ಧಾನ್ಯ’
ಲೇಸು ಹರಸುತೇವೆಯೆನುತ ಕಳಿಸಿ ಕೊಟ್ಟರು ||

ಸಾಮಾನ್ಯವಾಗಿ ಇಂದಿನ ಹೈಟೆಕ್ ಆಸ್ಪತ್ರೆಗಳಿಗೆ ರೋಗಿ[ಗಿರಾಕಿ!] ಸಿಕ್ಕಿದರೆ ಏನುಮಾಡುತ್ತಾರೆ ಎಂಬುದು ನಮಗೆ ತಿಳಿದೇ ಇದೆ. ಮೆಡಿಕಲ್ ಸರ್ವಿಸ್ ಈಸ್ ನೋ ಮೋರ್ ಏ ಸರ್ವಿಸ್ ಬಟ್ ಇಟ್ ಹ್ಯಾಸ್ ಬಿಕಂ ಏ ಬ್ಯುಸಿನೆಸ್ ಫಾರ್ ಮೆನಿ! ಆರೋಗ್ಯದಿಂದಿರುವ ವ್ಯಕ್ತಿಯೂ ಸುಮ್ನೇ ತಮಾಷೆಗೆ ಅನಾರೋಗ್ಯ ಎಂದು ಹೇಳಿಕೊಂಡು ಹೋದರೆ, ದಾಖಲುಮಾಡಿ ಮಲಗಿಸಿ ಚಿಕಿತ್ಸೆ ನೀಡುವ ಕಾಲ ಇದಾಗಿದೆ:

ಸೇವೆಯೆಂಬ ಸೋಗಿನಲ್ಲಿ
ಯಾವರೋಗವೆಂದು ತಿಳಿದು
ತಾವೆ ವಾಸಿ ಮಾಳ್ಪೆವೆಂದು ಬೀಗುತ್ತಿದ್ದರು|
ಆವರೋಗವಿಲ್ಲದವನ
ಜಾವತನಕ ಮಲಗಿಸಿಟ್ಟು
ನೋವುಮರೆಯಲೊಮ್ಮೆ ದೊಡ್ಡ ಬಿಲ್ಲು ಕೊಟ್ಟರು ||

ಇನ್ನು, ಹುಟ್ಟುವ ಶಿಶುವಿಗೆ ತೊಟ್ಟಿಲಲ್ಲಿರುವಾಗಲೇ ಸ್ಕೂಲು ಗೊತ್ತುಮಾಡಿ ಕ್ವಿಂಟಾಲುಗಟ್ಟಲೇ ಕಂತೆ ಎಣಿಸಿ ಹೆಸರು ನೋಂದಾಯಿಸಿಕೊಳ್ಳುವ ಕಾಲ ಬಂದಿದೆ. ನಾವೆಲ್ಲಾ ಕಲಿತಾಗ ನಮಗೆ ಬಹುತೇಕ ಇಡೀ ೭ನೇ ಈಯತ್ತೆ ವರೆಗೆ ಖರ್ಚು ಬಂದಿದ್ದು ಬರೀ ನೂರು ರೂಪಾಯಿ ಇದ್ದಿರಬಹುದು! ಈಗ ನೋಡಿ ಕೊಡುವಾತ ಕೋಡಂಗಿ ಇಸಿದುಕೊಳ್ಳುವಾತ ಈರಭದ್ರ ! ಕೊಡೋದಿಲ್ವಾ ನಿಮ್ ಮಗೂಗೆ ಎಡ್ಮಿಶನ್ ಇಲ್ಲ ಹೋಗಿ ಅಂತಾರೆ :

ವಿದ್ಯೆಕಲಿಸುತೇವೆವೆನುತ
ಗದ್ಯಪದ್ಯಕಿಂತ ಮೊದಲು
ಅಧ್ಯಯನಕೆ ರಾಶಿ ಹಣವ ತೆಗೆದುಕೊಂಡರು |
ವಾದ್ಯ-ನಾಟ್ಯ-ಗೀತ-ಚಿತ್ರ
ಖಾದ್ಯ-ಆಟ- ನೋಟವೆನುತ
ಸಾಧ್ಯವಾದಯೆಲ್ಲರೀತಿ ಮೊಗೆದುಕೊಂಡರು ||


ಬೆಂಗಳೂರಿನಲ್ಲೂ ಸುತ್ತಮುತ್ತಲ ಹಳ್ಳಿಗಳಲ್ಲೂ ವರದಿಯಾಗುವ ವರದಕ್ಷಿಣೆ ಸಾವು ಅಪಾರ. ಯಾಕೆ ನಮ್ಮ ವಿದ್ಯಾವಂತ ಜನಾಂಗದ ಗಂಡುಗಳಿಗೆ ಬುದ್ಧಿ ಎಂಬುದು ಇಲ್ಲವೇ ? ಪಾಪದ ಹೆಣ್ಣುಮಕ್ಕಳು ರಸ್ತೆಯಲ್ಲಿ ಹೆಗ್ಗಣ ಸತ್ತಷ್ಟೇ ಸಸಾರವಾಗಿ ಅನಾಥರಾಗಿ ಅನ್ಯಾಯವಾಗಿ ಸಾಯುತ್ತಿದ್ದಾರಲ್ಲಾ ಎನಿಸಿದಾಗ ಹುಟ್ಟಿದ್ದು ಈ ಭೋಗ:

ಅಳೆದು ಸುರಿದು ತೂಗಿ ನೋಡಿ
ಘಳಿಗೆ ಫಲವ ತಿರುಗಿ ನೋಡಿ
ತೊಳೆದು ಪಾದ ಹರುಷದಿಂದ ಮಗಳಕೊಟ್ಟರು |
ಕಳೆಯದಿರಲು ಕೆಲವು ವರುಷ
ಅಳಿಯದಿರಲು ನೆನೆಪು ನಿಮಿಷ
ಹಳಿದು ನಗವ ತರಲು ಮನೆಗೆ ಕಳಿಸಿಬಿಟ್ಟರು ||

ಹೀಗೇ ಭೋಗದ ವೈಭೋಗ ಹೇಳುತ್ತಾ ಹೋದರೆ ಅದು ಹುಟ್ಟದೇ ಇರುವ ಸನ್ನಿವೇಶಗಳೇ ಕಡಿಮೆ. ಯಾವಾಗ ಎಲ್ಲಿಬೇಕಾದರೂ ಗಂಭೀರ ಹಾಸ್ಯವನ್ನು ಪಡೆಯಲಾಗಿ ಕನ್ನಡ ಛಂದೋಬದ್ಧ ಕಾವ್ಯಗಳನ್ನು ಬಳಸಿಕೊಳ್ಳಬಹುದಾಗಿದೆ. ಎರಡು ವರ್ಷಗಳ ಕೆಳಗೆ ಒಮ್ಮೆ ಭೋಗಷಟ್ಪದಿಯಲ್ಲಿ ಕುಂಟುವ ಕುರಿಗಳು ಎಂದು ಇವನ್ನು ಹೆಸರಿಸಿದ್ದೆ. ಇವುಗಳಲ್ಲಿ ಕೆಲವು ಒತ್ತುಗಳೂ ಪದಗಳೂ ಅಲ್ಲಲ್ಲಿ ಛಂದಸ್ಸಿಗೆ ಭಂಗ ತರುತ್ತಿದ್ದವು. ಅವುಗಳನ್ನೆಲ್ಲಾ ಸ್ವಲ್ಪ ಟ್ರಿಮ್ ಮಾಡಿ ಇನ್ನೊಮ್ಮೆ ನಿಮ್ಮೆದುರು ಪ್ರಸ್ತಾವಿಸುವ ಮಾತನ್ನೂ ಹೇಳಿದ್ದು ಬಾಕಿ ಇತ್ತು. ಹಾಗೇ ಬಿಟ್ಟರೆ ದಶರಥನಲ್ಲಿ ಕೈಕೇಯಿ ವರ ಕೇಳಿದಂತೇ ಯಾವತ್ತೋ ನೀವು ಕೇಳಿಬಿಟ್ಟರೆ ಕಷ್ಟ ಅದಕ್ಕಾಗಿ ಇಂದೇ ಅದನ್ನು ಪೂರೈಸಿದ್ದೇನೆ! ನಿಮ್ಮೆಲ್ಲರ ಪ್ರೀತಿಯ ಕುರಿತು ಒಂದು ’ಆರುಕಾಲಿ’ನ ಭೋಗ ಬರೆಯುವ ಮೂಲಕ ಈ ಭೋಗದ ವೈಭೋಗದ ಅರಮನೆಯ ಅಡ್ಡಾಟದಿಂದ ನಿಮ್ಮನ್ನು ಬೀಳ್ಕೊಡುತ್ತೇನೆ :


ನಿಮ್ಮ ಜೊತೆಗೆ ನಾನು ಸೇರಿ
ಹಮ್ಮುಬಿಮ್ಮುಗಳನು ತೊರೆದು
ಒಮ್ಮೆನಕ್ಕರಾಯ್ತಲದುವೆ ಯೋಗರಿಂಗಣ |
ಚಿಮ್ಮಿಸಲ್ಕೆ ನಗೆಯ ಬುಗ್ಗೆ
ಹೊಮ್ಮಿಬಂದಿತಾರುಕಾಲು
ಹೆಮ್ಮೆಯಂಥದೇನುವಿದುವೆ ಭೋಗರಿಂಗಣ ||


Thursday, March 8, 2012

ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ

ಆಮಂತ್ರಣ ಚಿತ್ರ ಕೃಪೆ: ಶ್ರೀ ರಾಮಚಂದ್ರ ಹೆಗಡೆ, ದ್ವಾರಾ: ಫೇಸ್ ಬುಕ್

ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ

ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು.....ಎಂದು ದಾಸರು ಹೇಳಿದ ಭಜನೆ ನಮಗೆ ನಮ್ಮ ಎಳವೆಯಲ್ಲಿ ಅರ್ಥವಾಗುತ್ತಿರಲಿಲ್ಲ. ನೆಂಟರಬಾಗಿಲನ್ನು ಸೇರಬಾರದು ಎಂದರೇನು ? ಯಾರಾದರೂ ಬಾಗಿಲಲ್ಲಿ ಸೇರೋಕಾಗುತ್ಯೇ ಎಂಬ ಶಬ್ದಶಹ ಅರ್ಥದ ಅವಲೋಕನವಷ್ಟೇ ನಮಗೆ ನಿಲುಕಿದ್ದು. ಲೌಕಿಕ ಜೀವನನದಲ್ಲಿ ಬಡತನ-ಸಿರಿತನ ಇವೆಲ್ಲಾ ಪಡೆದುಬಂದ ಭಾಗ್ಯದಿಂದಲೂ ಭಾಗಶಃ ಅನುಭವಿಸಲ್ಪಡುವ ಮಜಲುಗಳು ಎಂಬುದನ್ನು ಮರೆಯುವ ಹಾಗಿಲ್ಲ. ಎಲ್ಲರಿಗೂ ಸಿರಿವಂತರಾಗಬೇಕು ತಾವೂ ಯಾರಿಗೂ ಕಮ್ಮಿಯಿಲ್ಲ ಎನಿಸಿಕೊಳ್ಳಬೇಕು, ಯಾರಿಗೂ ತಮ್ಮಲ್ಲಿ ಎಷ್ಟು ಧನಸಂಪತ್ತಿದೆ ಎಂಬ ಲೆಕ್ಕ ಸರಿಯಾಗಿ ಸಿಗಲಾಗದ ರೀತಿ ಬದುಕಬೇಕೆಂಬ ಹಪಹಪಿಕೆ. ಸಾಲದಲ್ಲಿ ಕೊಂಡರೂ ಸಾಲವಿಲ್ಲವೆಂಬಂತೇ ಸೋಗಿನಲ್ಲಿ ಓಡಿಸುವ ಕಾರು-ಬಾರು!

ವ್ಯಕ್ತಿ ಬೆಳೆದು ವ್ಯಾವಹಾರಿಕ ಬದುಕಿನಲ್ಲಿ ತನ್ನನ್ನು ತೊಡಗಿಸಿಕೊಂಡು ಉದ್ಯೋಗವನ್ನೋ, ವ್ಯವಸಾಯವನ್ನೋ, ವ್ಯಾಪಾರ-ವಹಿವಾಟನ್ನೋ ಆರಂಭಿಸಿದಮೇಲೆ ಎಂದೋ ಒಮ್ಮೊಮ್ಮೆ ಕುಸಿದು ಕೂರುವುದು ಸಹಜವೇ. ಜಾಗತೀಕರಣದ ಕಾರಣದಿಂದ ಸಣ್ಣಕೈಗಾರಿಕೆ ನಡೆಸುವ ಯಜಮಾನ ಕಂಗೆಡುವುದು, ಅಮೇರಿಕಾದ ಆರ್ಥಿಕ ಹಿನ್ನಡೆಯಿಂದ ತಂತ್ರಜ್ಞರಾದ ಯುವಕರು ಉದ್ಯೋಗ ಕಳೆದುಕೊಳ್ಳಬಹುದು, ಯಾವುದೋ ಗುಂಪಿನ ದುರುದ್ದೇಶದಿಂದ ವ್ಯವಹಾರದಲ್ಲಿ ಮೋಸಕ್ಕೆ ಬಲಿಯಾಗಬಹುದು, ಸಕಾಲದಲ್ಲಿ ಮಳೆಬರದೇ ಬೆಳೆತೆಗೆಯಲಾಗದೇ ರೈತರು ಕಂಗಾಲಾಗಬಹುದು ಇಂಥವೆಲ್ಲಾ ನಡೆಯುವುದು ಸಹಜವೇ ಆಗಿದೆ. ಬಡತನದಲ್ಲಿದ್ದವರಿಗೆ ಸಿರಿತನ ಬಂದರೆ ಸಹಿಸುವುದು ಸುಲಭ. ಸಿರಿತನದಲ್ಲಿದ್ದವರಿಗೆ ಬಡತನ ಬಂದರೆ ಮಾತ್ರ ಅದು ಸಹಿಸಲಸಾಧ್ಯ! ಬಡತನ-ಸಿರಿತನಗಳಲ್ಲೂ ಸುಖ-ದುಃಖಗಳಲ್ಲೂ ಸಮಾನ ಮನಸ್ಕರಾಗಿರಬೇಕು...ಪರಿಸ್ಥಿತಿ ಬಂದಹಾಗೇ ಅದನ್ನು ಸ್ವೀಕರಿಸಬೇಕು ಎಂಬುದು ದಾಸರು ಪರ್ಯಾಯವಾಗಿ ಹೇಳಿದಮಾತು.

ಈ ಪ್ರಪಂಚದ ವ್ಯಾವಹಾರಿಕ ರಂಗದಲ್ಲಿ ನಮ್ಮನ್ನು ತೊಡಗಿಸಿಕೊಂಡಮೇಲೆ ನಮ್ಮ ಮೂಗಿನ ನೇರಕ್ಕೇ ಎಲ್ಲವೂ ಇರಬೇಕೆಂಬ ನಿರೀಕ್ಷೆ ಮತ್ತು ಅಪೇಕ್ಷೆ ನಮ್ಮದು! ಆದರೆ ವಸ್ತುಸ್ಥಿತಿ ಹಾಗಿರುವುದಿಲ್ಲವಲ್ಲ ? ಸಮಾಜದಲ್ಲಿ ಎಲ್ಲರೂ ತಂತಮ್ಮ ಮೂಗಿನ ನೇರಕ್ಕೇ ಹೋಗಲಿ ಗಾಡಿ ಎಂದು ಬಯಸುತ್ತಾರೆ. ಎಲ್ಲರಿಗೂ ಸಲ್ಲುವ ಸಮಷ್ಟಿಯ ದಾರಿಯಲ್ಲಿ ಗಾಡಿ ಸಾಗಬೇಕಾಗುತ್ತದೆಯೇ ಹೊರತು ನಮ್ಮೊಬ್ಬರ ಸ್ವಾರ್ಥಕ್ಕೆ ಅದು ತಗುಲಿಕೊಳ್ಳಬಾರದು. ಈ ಸತ್ಯದ ಅರ್ಥ ಆಗದ ಜನರಿಗೆ ನಿಂತು ನಿಂತಲ್ಲಿ ಕೋಪ ಉಕ್ಕಿಬರುತ್ತದೆ, ಎದುರಿಗಿರುವ ಜನರು ಪರಮವೈರಿಗಳಂತೇ ಭಾಸವಾಗುತ್ತದೆ, ಎರಡು ಇಟ್ಟುಬಿಡೋಣ ಎಂದುಕೊಳ್ಳುವ ಮಹಾನುಭಾವರೂ ಇರಬಹುದು! ಇಲ್ಲೆಲ್ಲಾ ಕೆಲಸಮಾಡುವುದು ನಮ್ಮ ಅಹಂಕಾರ ವೃತ್ತಿ ಎಂಬುದನ್ನು ನೆನಪಿಸಿಕೊಳ್ಳಬೇಕು.

ರಾಮಕೃಷ್ಣಾಶ್ರಮಕ್ಕೆ ವಿರಕ್ತರು ಸೇರಿದಾಗ ಅವರಿಗೆ ಸನ್ಯಾಸ ಕೊಡುವ ಮೊದಲು ಹಲವಾರು ಪರೀಕ್ಷೆಗಳನ್ನು ಒಡ್ಡುತ್ತಾರೆ. ಅವುಗಳಲ್ಲಿ ರಸ್ತೆಬದಿಯ ಗೋಡೆಗೆ ಅಂಟಿಸಿದ ಪೋಸ್ಟರ್ ಕಿತ್ತು ಸ್ವಚ್ಛಗೊಳಿಸುವ ಕೆಲಸವೂ ಇರಬಹುದು, ಬೀದಿ ಗುಡಿಸುವ ಕೆಲಸವೂ ಆಗಬಹುದು. ವಿರಕ್ತನಾದವನಿಗೆ ಅಹಂಕಾರ ತೊಲಗಬೇಕೆಂಬ ಅನಿಸಿಕೆಯಿಂದ ಹಾಗೆ ಮಾಡುತ್ತಾರೆ ಎಂದು ಕೇಳಿದ್ದೇನೆ. ಅಹಂಕಾರದ ಅಂಶ ಇನ್ನೂ ಇದ್ದರೆ ಆತ ಅಲ್ಲಿನ ಹಿರಿಯರು ಹೇಳಿದ ಅಂತಹ ಕೆಲಸಕ್ಕೆ ವಿರೋಧ ವ್ಯಕ್ತಪಡಿಸುತ್ತಾನೆ. ಅಹಂಕಾರ ಅಳಿದುಹೋಗಿದ್ದರೆ ಸುಮ್ಮನೇ ಹೇಳಿದ ಕೆಲಸವನ್ನು ಕರ್ತವ್ಯವೆಂದು ಪರಿಪಾಲಿಸುತ್ತಾನೆ ಎಂಬುದು ರಾಮಕೃಷ್ಣಾಶ್ರಮದ ಸಂಯಮ ಪರೀಕ್ಷಾ ಪದ್ಧತಿ ಎಂದು ಹೇಳುತ್ತಾರೆ. ದಿ| ಮತ್ತೂರು ಕೃಷ್ಣಮೂರ್ತಿಗಳು ವಾರಾನ್ನ ಮಾಡಿಕೊಂಡು ಓದಿದವರಾಗಿದ್ದರು. ಶಿವಮೊಗ್ಗೆಯಿಂದ ಬೆಂಗಳೂರಿಗೆ ಅವರು ಬಂದಾಗ ನಿಲ್ಲಲು ಜಾಗವಿರಲಿಲ್ಲ ಅವರಿಗೆ. ಶ್ರೀರಾಂಪುರದ ಒಂದು ಪುಟ್ಟ ಕೊಠಡಿಯಲ್ಲಿ ವಾಸವಿದ್ದರು ಎಂದು ತಿಳಿದುಬರುತ್ತದೆ. ಆಗ ಅವರಿಗೆ ಪರಿಚಿತರಾದ ಗಾಂಧೀವಾದಿ ಹೋ.ಶ್ರೀನಿವಾಸಯ್ಯನವರಲ್ಲಿ ತೆರಳಿದಾಗ ಮತ್ತೂರರಿಗೆ ಅವರು ಗಾಂಧೀ ಸಂಘದ ಕಾರ್ಯಕ್ರಮ ಗೊತ್ತಾಗಿದೆಯೆಂತಲೂ ನಾಳೆಯಿಂದ ನಡೆಯುವ ಕಾರ್ಯಕ್ರಮದ ಕಾರ್ಯಕರ್ತರಿಗೆ ಬಯಲಿನಲ್ಲಿ ತಂಬು[ಟೆಂಟು]-ಗುಡಾರಗಳಲ್ಲಿ ಬಿಡಾರಕ್ಕೆ ವ್ಯವಸ್ಥೆಮಾಡಿದ್ದಾಗಿಯೂ ತಿಳಿಸಿ, ಮಾರನೇ ದಿನದಿಂದ ಅಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಕಕ್ಕಸುಗಳ ಹೊಲಸು ಎತ್ತಿ ಸ್ವಚ್ಛಗೊಳಿಸುವಂತೇ ತಿಳಿಸುತ್ತಾರೆ. "ವಾಸನೆ ಬರುತ್ತದಲ್ಲಾ" ಎಂದುಕೊಂಡರೂ ಮತ್ತೂರರು ಮರುಮಾತಿಲ್ಲದೇ ಅದನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತು ಸ್ವತಃ ನಿರ್ವಹಿಸುತ್ತಾರೆ! ಇದು ಮತ್ತೂರರು ಹುಡುಗನಾಗಿದ್ದಾಗ ನಡೆಸಿದ ನಿರಂಹಕಾರದ ಕೆಲಸ.

ವ್ಯಾವಹಾರಿಕವಾಗಿ ನಾವು ಸೋತಾಗ ಸುತ್ತಲ ಜನ ನೆಂಟರಿಷ್ಟರು, ಆಪ್ತೇಷ್ಟರು ಎನಿಸಿಕೊಂಡವರು ವಿಚಿತ್ರವಾಗಿ ನೋಡಲು ತೊಡಗುತ್ತಾರೆ. ಯಾರೂ ಹತ್ತಿರ ಕರೆಯುವುದಿರಲಿ ಮನುಷ್ಯರ ರೀತಿ ನಡೆಸಿಕೊಳ್ಳುವುದಿಲ್ಲ. ತಲೆಗೊಂದು ಮಾತನಾಡುತ್ತಾ ಎಲ್ಲವೂ ನಾವು ಬುದ್ಧ್ಯಾ ಮಾಡಿಕೊಂಡ ನಷ್ಟ ಎಂಬಂತೇ ಹಲುಬತೊಡಗುತ್ತಾರೆ. ಅದೇ ಕಾಲಕ್ಕೆ ಮನೆಯಲ್ಲಿ ಇಲ್ಲದ ದೈಹಿಕ ಅನಾರೋಗ್ಯಗಳೂ ಕಾಣಿಸಿಕೊಳ್ಳುತ್ತವೆ. ಚಿಕ್ಕಮಕ್ಕಳಿದ್ದರಂತೂ ಅವರ ಪಾಡು ಪಾಪ ಎನಿಸುತ್ತದೆ. ಇದೇ ಸಂದರ್ಭದಲ್ಲಿ ಹತ್ತಿರದವರು ಪರಿಚಯದವರು ವ್ಯಾವಹಾರಿಕವಾಗಿ ಕೊಡಬಹುದಾದ ನೈತಿಕಧೈರ್ಯವನ್ನು ಕೊಡುವುದಕ್ಕೆ ಮುಂದಾಗುವುದಿಲ್ಲ. ನನಗೆ ಪರಿಚಯವಿರುವ ವ್ಯಕ್ತಿಯೊಬ್ಬರು ವ್ಯಾವಹಾರಿಕ ನಷ್ಟವನ್ನು ಅನುಭವಿಸಿದ್ದರು. ಹಿಡಿದ ಕೆಲಸವೆಲ್ಲಾ ನಿರಾಶಾದಾಯಕವಾಗುತ್ತಿತ್ತು. ಕೆಲಸಮಾತ್ರ ಸದಾ ಇದ್ದರೂ ಪ್ರತಿಫಲ ದೊರೆಯುತ್ತಿರಲಿಲ್ಲ; ಗುಡ್ಡಕ್ಕೆ ಮಣ್ಣುಹೊತ್ತಂತೇ ಆಗುತ್ತಿತ್ತು. ಅವರು ತಯಾರಿಸುವ ಗುಣಮಟ್ಟದ ಗಣಕಯಂತ್ರಗಳು ಕಚೇರಿಗಳಲ್ಲೂ ಅಲ್ಲದೇ ಮನೆಮನೆಗಳಲ್ಲೂ ಬಳಕೆಗೆ ಯೋಗ್ಯವಾಗಿದ್ದವು. ವ್ಯಾವಹಾರಿಕ ನಷ್ಟದಲ್ಲಿದ್ದಾಗ ಅವರ ಸುತ್ತ ಇರುವ ಬಂಧುಬಳಗ ಹಲವು ಮನೆಗಳವರು ಬೇರೇ ಜನರ ಮಳಿಗೆಗಳಿಂದ ಗಣಕಯಂತ್ರಗಳನ್ನು ತಮ್ಮಲ್ಲಿಗೆ ತರಿಸಿಕೊಂಡರೇ ವಿನಃ ಯಾರೂ ಬಿಡಿಗಾಸಿನ ವ್ಯಾವಹಾರಿಕ ಪಾಯ್ದೆಯನ್ನೂ ಕೊಡಲು ಮುಂದೆ ಬರಲಿಲ್ಲ!

ಆಗೆಲ್ಲಾ ನೋಡುಗನಾದ ನನಗೆ ಅನಿಸಿದ್ದು ಬಡತನ ಬಂದಾಗ ನೆಂಟರ ಬಾಗಿಲು ಸೇರಬಾರದು....ದಾಸರು ಹೇಳಿದ ಮಾತು ಎಷ್ಟು ನೈಜತೆಯಿಂದ ಕೂಡಿದೆ! ನಮ್ಮಲ್ಲಿ ’ಇಗೊ ಮಣೆ’ ’ತಗೊ ಮಣೆ’ ’ತಾ ಮಣೆ’ ಎನ್ನುವ ಹಿಂದಿನಕಾಲದ ಗಾದೆಯೊಂದಿತ್ತು. ನೂರಾರು ಸರ್ತಿ ಕರೆದಾಗ ಒಮ್ಮೆ ಹೋದರೆ ನೆಂಟರು "ಇಗೋ ಮಣೆ ಹಾಕಿದ್ದೇನೆ" ಎನ್ನುತ್ತಾರಂತೆ. ನೆಂಟರೆನಿಸಿಕೊಂಡವರು ಅಗಾಗ ಭೇಟಿ ನೀಡುತ್ತಿದ್ದರೆ "ಓ ಅಲ್ಲಿದೆ ನೋಡು ತಗೋ ಮಣೆ" ಎನ್ನುತ್ತಾರಂತೆ, ನೆಂಟರು ಮತ್ತೆಮತ್ತೆ ಅಲ್ಲಿಗೆ ಹೋಗುತ್ತಿದ್ದರೆ "ಓ ಅಲ್ಲಿ ಮಣೆ ಇದೆ ನೋಡು ಸ್ವಲ್ಪ ಇಲ್ಲಿ ತಾ" ಎಂದು ಬಂದ ಮತ್ತಿನ್ಯಾರಿಗೋ ಮಣೆಹಾಕಲು ಮುಂದಾಗುತ್ತಾರಂತೆ! ಹೀಗಾಗಿ ’ಕೀಪ್ ದಿ ನೆಂಟರ್[ರಿಲೇಟಿವ್ಸ್] ಎಟ್ ಆರ್ಮ್ಸ್ ದಿಸ್ಟನ್ಸ್’! ನೆಂಟರನ್ನು ಅತಿಯಾಗಿ ಹತ್ತಿರಕ್ಕೆ ಬಿಟ್ಟುಕೊಳ್ಳುವುದೂ ಅಪಾಯಕರ. ಸಿರಿತನವೇ ಇರಲಿ ಬಡತನವೇ ಇರಲಿ ಒಂದೇಹದಕ್ಕೆ ಯಾರು ಮನುಷ್ಯರಾಗಿ ನಮಗೆ ಆಪ್ತರಾಗುತ್ತಾರೋ ಅವರೇ ನಿಜವಾದ ನೆಂಟರು ಎಂಬುದು ನನ್ನ ಅನಿಸಿಕೆ.

ಇನೊಮ್ಮೆ ನಾನು ಕೂತಾಗ ಯೋಚಿಸಿದ್ದು ಈ ರೀತಿ ಇದೆ : ನಮ್ಮ ನಮ್ಮ ವ್ಯವಹಾರದಲ್ಲಿ ನಮಗೆ ಗೊತ್ತಿರುವವರು ನಮಗೆ ಬೇಕಾದಂತೇ ನಡೆದುಕೊಳ್ಳದಿದ್ದರೆ ನಾವೇಕೆ ಅವರನ್ನು ದೂಷಿಸಬೇಕು? ಉದಾಹರಣೆಗೆ ನನ್ನ ಸುತ್ತಲ ಬಳಗದಲ್ಲಿ ಎಮ್.ಎಲ್.ಎಮ್. [ಮಲ್ಟಿ ಲೆವೆಲ್ ಮಾರ್ಕೆಟಿಂಗ್] ಮಾಡುವವರು ತುಂಬಾ ಮಂದಿ ಇದ್ದಾರೆ. ಆಮ್ ವೇ, ಮೋದೀ ಕೇರ್, ಕ್ವಾಂಟಮ್, ಜಪಾನ್ ಲೈಫ್, ಆದೀಶ್ವರ್, ಹರ್ಬಲ್ ಲೈಫ್, ಟಪ್ಪರ್ ವೇರ್, ವಿವಿಧ ಶೋ ಬಿಜ಼್ ಗಳು ಮೊದಲಾದ ಏಜೆಂಟರಾಗಿ ಕೆಲಸಮಾಡುತ್ತಿದ್ದವರು ಇದ್ದಾರೆ. ಬ್ಯಾಂಕ್ ಮ್ಯಾನೇಜರ್ ಒತ್ತಾಯಕ್ಕೆ ಆಮ್ ವೇ ತಗೊಂಡೆ, ಸ್ನೇಹಿತನ ಒತ್ತಾಯಕ್ಕೆ ಕ್ವಾಂಟಮ್ ತಗೊಂಡೆ, ಇನ್ನೊಬ್ಬ ನೆಂಟನ ವಿನಂತಿಗೆ ಮೋದೀಕೇರ್ ತಗೊಂಡೆ ಹೀಗೇ ಪಟ್ಟಿ ಬೆಳೆಯಿತೇ ವಿನಃ ನಾನು ಅವುಗಳನ್ನು ಮುಂದುವರಿಸಲಿಲ್ಲ. ಕೆಲವರು ತಮ್ಮಿಂದ ತೆಗೆದುಕೊಳ್ಳಲಿಲ್ಲಾ ಎಂತಲೂ ಕೆಲವರು ತೆಗೆದುಕೊಂಡಿದ್ದನ್ನು ಮುಂದುವರಿಸಲಿಲ್ಲಾ ಎಂತಲೂ ಬಿಟ್ಟುಹೋದರು; ಹಿಂದುಗಡೆಯಲ್ಲಿ ದೂಷಿಸಿದರು. ಸುಮಾರು ಎರಡು ಲಕ್ಷ ಮೊತ್ತವನ್ನು ಅದಕ್ಕೆ ಇದಕ್ಕೆ ಅಂತ ಕಳೆದುಕೊಂಡಿದ್ದೂ ಆಗಿದೆ, ಅನುಭವ ಪಡೆದುಕೊಂಡಿದ್ದೂ ಆಗಿದೆ. ಕೆಲವಂತೂ ವಿದೇಶೀ ಕಂಪನಿಗಳು ಭಾರತವನ್ನು ಟಾರ್ಗೆಟ್ ಮಾಡಿಕೊಂಡು ಮಾರುಕಟ್ಟೆ ಗಳಿಸುವತ್ತ ದಾಪುಗಾಲು ಹಾಕಿ ಇವತ್ತಿನದಿನ ಹಳ್ಳಿ ಹಳ್ಳಿಗಳಲ್ಲೂ ಈ ಎಲ್ಲಾ ಕಂಪನಿಗಳ ಏಜೆಂಟರು ಇದ್ದಾರೆ. ಎಲ್.ಐ.ಸಿ ಏಜೆಂಟರು ಬಂದರೆ ಬಾಗಿಲ ಸಂದಿಯಲ್ಲಿ ಅಡಗಿನಿಂತು "ಇಲ್ಲಾ" ಹೇಳಿಕಳಿಸುವ ಕಾಲವೊಂದಿತ್ತು! ಈಗ ಹಲವು ವಿಧದ ಏಜೆಂಟರು!! ಯಾರಿಗೆ ಬಾಗಿಲು ತೆರೆಯುತ್ತೀರಿ ಯಾರಿಗೆ ಇಲ್ಲ? ಒತ್ತಾಯಕ್ಕೆ ಬಸಿರಾದರೆ ಹಡೆಯುವುದು ದಾರಿಯಲ್ಲಿ ಎಂಬ ಗಾದೆ ಗೊತ್ತಿದೆಯಲ್ಲಾ ?

ಅಕಸ್ಮಾತ್ ನಾವೇ ಅಂತಹ ಏಜೆಂಟರುಗಳಾಗಿದ್ದಾಗ ನಮ್ಮಿಂದ ಖರೀದಿಸಲಿಲ್ಲಾ ಅಥವಾ ನಮಗೆ ಮನ್ನಣೆಕೊಡಲಿಲ್ಲಾ ಎಂಬುದೇ ನಮ್ಮ-ಅವರ ಬಾಂಧವ್ಯಕ್ಕೆ ಹೊಡೆತಕೊಡಬೇಕೇ? ವ್ಯವಹಾರವನ್ನು ಹೊರಗೇ ಇಡಿ, ಬಾಂಧವ್ಯವನ್ನು ಮರೆಯಬೇಡಿ ಎನ್ನುತ್ತಾರೆ ನಮ್ಮ ತಿಮ್ಮಗುರು.

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ
ವರಯೋಗ ಸೂತ್ರವಿದು-ಮಂಕುತಿಮ್ಮ

ಇಂತಹ ಲೌಕಿಕ ಜಂಜಾಟಗಳನ್ನೆಲ್ಲಾ ಮನದ ಹೊರಕೋಣೆಯಲ್ಲೇ ಬಂಧಿಸು, ಅವುಗಳಿಗೆ ಎಂದಿಗೂ ಮನದ ಒಳಕೋಣೆಗೆ ಪ್ರವೇಶ ನೀಡಬೇಡ ಎಂದಿದ್ದಾರೆ. ಒಳಕೋಣೆ ಭಗವಂತನ ವಾಸಸ್ಥಾನ! ಅಲ್ಲಿ ನಾನು ಮತ್ತು ’ನಾನಲ್ಲದ ನಾನು’ ಇಬ್ಬರಿಗೇ ಅವಕಾಶ. ಆ ಕೋಣೆಯಲ್ಲಿ ಇಬ್ಬರ ಸಂಭಾಷಣೆ ಮಾತ್ರ! ಅದು ಲೋಕಾಂತವಲ್ಲ ಏಕಾಂತ. ಆ ಏಕಾಂತದಲ್ಲಿ ಲೋಕಾಂತದ ವ್ಯವಹಾರಗಳನ್ನು ಬಳಸುವುದರಿಂದ ಏಕಾಂತಕ್ಕೆ ಭಂಗಬರುತ್ತದೆ. ಯಾವಾಗ ಆ ಏಕಾಂತಕ್ಕೆ ಭಂಗಬರುತ್ತದೋ ಆಗ ಏಕಾಂತವೂ ಲೋಕಾಂತವಾಗಿ ಮನ ಭ್ರಮೆಯಲ್ಲಿ ತೇಲಾಡುತ್ತದೆ, ತನ್ನತನ ಕಳೆದುಕೊಳ್ಳುತ್ತದೆ. ಹೇಳುವವರ ಮಾತುಗಳನ್ನು ನಮ್ಮ ಕಿವಿ ಹಿತ್ತಾಳೆಯ ಕಿವಿಯಾಗಿ ಕೇಳಿಸಿಕೊಳ್ಳುತ್ತದೆ. ಯಾರದೋ ವಿರುದ್ಧ ಯಾರನ್ನೋ ಎತ್ತಿಕಟ್ಟುತ್ತದೆ! ಎಲ್ಲಾ ಇಲ್ಲಸಲ್ಲದ ಉಪದ್ವ್ಯಾಪಗಳೇ.

ಮನಸ್ಸನ್ನು ಹೀಗೇ ಎರಡು ಭಾಗಗಳನ್ನಾಗಿ ವಿಂಗಡಿಸಿಕೊಳ್ಳಲಿಕ್ಕೆ ಅಭ್ಯಾಸಮಾಡಿಕೊಳ್ಳಬೇಕು. ನಮ್ಮ ತಯಾರಿಕೆಯ ಅಥವಾ ಏಜೆನ್ಸಿಯ ವಸ್ತುಗಳನ್ನೋ ಮತ್ತಿನ್ನೇನನ್ನೋ ಅವರು ಖರೀದಿಸಲಿಲ್ಲ ಎಂದ ಮಾತ್ರಕ್ಕೆ ಅವರದೇನೂ ತಪ್ಪಿಲ್ಲಾ ಎಂಬ ಭಾವವನ್ನು ನಾವೇ ತಳೆದರೆ, ವಿರೋಧವೊಡ್ಡಿದವರ ಸಲುವಾಗಿಯೂ ಅವರಿಗೆ ಒಳ್ಳೆಯ ಬುದ್ಧಿಬರಲಿ ಎಂಬ ಸಂದೇಶವನ್ನು ಸಾರಿದರೆ ಆಗ ಎದುರಿಗಿರುವ ಆ ಜನ ತಾವೇ ಕೊರಗಲು ತೊಡಗುತ್ತಾರೆ, ತಾವೇ ಸಣ್ಣವರಾದೆವಲ್ಲಾ ಎಂಬ ಕೊರಗು ಹಲವು ವರ್ಷಗಳ ಕಾಲ ಅವರನ್ನು ಬಾಧಿಸುತ್ತದೆ!

ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ
ತೃಣ ಮೊಳೆಯುವುದು ಮರಳಿ ಹನಿಯೆರಡು ಬೀಳೆ
ಅಣಗಿದ್ದು ನರನಾಶೆಯಂತು ಕಷ್ಟದ ದಿನದಿ
ಕುಣಿವದನುಕೂಲ ಬರೆ-ಮಂಕುತಿಮ್ಮ

ಇಂತಹ ಒಂದೊಂದೂ ಮುಕ್ತಕಗಳನ್ನು ಮಹಾತ್ಮ ಡೀವೀಜಿ ಬರೆದರು. ಕಷ್ಟದ ದಿನಗಳಲ್ಲಿ ನಮ್ಮ ದಿನಚರಿಯನ್ನು ಬರೆದಿಟ್ಟರೆ ಸುಖದ ದಿನಗಳಲ್ಲಿ ನಾವದನ್ನು ತೆರೆದು ಓದಿದಾಗ ಓ ಹೀಗೆಲ್ಲಾ ಇತ್ತಲ್ಲಾ ಎನಿಸುತ್ತದೆ!

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು
ಒಪ್ಪಿದ್ದೊಡದು ಭೋಜ್ಯವಂತು ಜೀವತಮುಂ
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ
ಯಿಪ್ಪತ್ತು ಸೇರೆ ರುಚಿ -ಮಂಕುತಿಮ್ಮ

ಉಪ್ಪಿಟ್ಟನ್ನು ಮಾಡುವಾಗ ಹೇಗೆ ಉಪ್ಪು, ಹುಳಿ, ಕಾರ, ಸಿಹಿ ಒಗ್ಗರಣೆ ಸಾಮಾನುಗಳು, ರವೆ, ನೀರು, ಕರಿಬೇವು ಇದನ್ನೆಲ್ಲಾ ಆಯಾಯ ಹದಕ್ಕೆ ಉಪಯೋಗಿಸಿದರೆ ರುಚಿಕಟ್ಟಾಗಿರುತ್ತದೋ ಈ ಜೀವನವೆಂಬುದೂ ಒಂದು ಉಪ್ಪಿಟ್ಟು! ಅದರಲ್ಲಿ ಬಡತನ, ಸಿರಿತನ, ಕಷ್ಟಕೋಟಲೆ, ಕಾಯಿಲೆ-ಕಸಾಲೆ, ದುಃಖ-ದುಮ್ಮಾನ, ಸುಖ-ಶಾಂತಿ-ನೆಮ್ಮದಿ ಎಲ್ಲವೂ ಅಷ್ಟಿಷ್ಟು ಸೇರಿಯೇ ಇರುತ್ತದೆ. ಹಣವಿದ್ದ ಮಾತ್ರಕ್ಕೆ ಸಾಯುವ ಶ್ರೀಮಂತ ಬದುಕಲಾರ ಹೇಗೋ ಹಣವಿಲ್ಲದ ಮಾತ್ರಕ್ಕೆ ಬದುಕು ಬರಡು ಎಂದು ತಿಳಿಯುವುದು ಮೂರ್ಖತನ. ಹಣದಿಂದಲೇ ಎಲ್ಲವೂ ಎಂಬ ಭ್ರಮೆಗೆ ಒಳಗಾಗಿ ನಾವು ಕೆಡುತ್ತೇವೆ.

ಉದಾಹರಣೆಗೆ ಪದ್ಮಾಲಕ್ಷ್ಮೀ ಎಂಬ ಮಹಿಳೆ ತನ್ನನ್ನು ಜಾಗತಿಕ ಮಟ್ಟದಲ್ಲಿ ಶೀಲಮಾರಿಕೊಳ್ಳುವುದರ ಮೂಲಕ ಗುರುತಿಸಿಕೊಂಡು ಹಣಮಾಡಿದ್ದಾಳೆ. ಆದರೆ ಆಕೆ ಸುಖಿಯೇ? ಸರ್ವಥಾ ಸಾಧ್ಯವಿಲ್ಲ! ಮುಪ್ಪಿನ ವಯೋಮಾನಕ್ಕೆ ಅವಳಿಗೆ ಅದರ ಅರ್ಥವ್ಯತ್ಯಾಸ ಗೊತ್ತಾಗುತ್ತದೆ, ಕಾಲ ಸರಿದುಹೋಗಿರುತ್ತದೆ! ಹಣದ ಹೊಳೆಯಲ್ಲೇ ಸದಾ ತೇಲಾಡುವ ವಿದೇಶೀಯರು ಶಾಂತಿಯನ್ನರಸಿ ಭಾರತಕ್ಕೆ ಬರುತ್ತಾರೆ ಯಾಕೆ ? ಅಲ್ಲಿ ಎಕ್ಸ್‍ಪೋರ್ಟ್ ಮಾಡಿ ಎಂದು ಕುಳಿತಲ್ಲಿಂದಲೇ ಆರ್ಡರ್ ಮಾಡಲಾಗುತ್ತಿರಲಿಲ್ಲವೇ? ಶಾಂತಿ-ನೆಮ್ಮದಿ ಖರೀದಿಸುವ ವಸ್ತುವಲ್ಲವಲ್ಲ, ಇಲ್ಲದಿದ್ದರೆ ಜನ ಅದನ್ನೂ ವ್ಯಾವಹಾರಿಕವಾಗಿ ಮಾಡಿಕೊಳ್ಳುತ್ತಿದ್ದರು!

’ಬಡವಾ ನೀ ಮಡಗದ್ಹಾಂಗಿರು’ ಎಂಬುದು ಜನಪದ ಜಾಣ್ಣುಡಿ. ಮಡಗೋದು ಎಂದರೆ ಇಡೋದು. ಇಡೋದು ಯಾರು? ಕಾಣದ ಶಕ್ತಿ ಕಾಣುವ ಈ ಲೋಕದ ಅಣುಅಣುವಿನ ಸಂಚಾರದಲ್ಲೂ ಕೆಲಸಮಾಡುತ್ತದೆ; ನಿಯಂತ್ರಿಸುತ್ತದೆ. ಇದನ್ನರಿತ ಆಚಾರ್ಯ ಶಂಕರರು " ತೃಣಮಪಿ ನ ಚಲತಿ ತೇನವಿನಾ " ಎಂದರು! ನಾವಿನ್ನೂ ಅದನ್ನು ಅರಿತಿಲ್ಲ, ಅರಿಯುವುದಕ್ಕೆ ಮುಂದಾಗುವುದೂ ಇಲ್ಲ! ಅರಿಯುವುದು ಒಂದನ್ನೇ- ಪಾರ್ಶಿಮಾತ್ಯರ ಅಂಧಾನುಕರಣೆ ಮಾಡುವುದನ್ನು ಮತ್ತು ಪ್ರಗತಿಪರರು ಎನಿಸುವ ಸಲುವಾಗಿ ಸದ್ಧರ್ಮ ಸೂತ್ರಗಳನ್ನೂ ವೇದವೇದಾಂಗಗಳನ್ನೂ ಅಲ್ಲಗಳೆಯುವುದು!

ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು
ಹೊಸ ಯುಕ್ತಿ ಹಳೆತತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜನ ಜೀವನಕೆ-ಮಂಕುತಿಮ್ಮ

ಬೇರು ಹಳೆಯದಾದಷ್ಟೂ ಮರ ಬಾಳುತ್ತದೆ, ಚಿಗುರು ಹೊಸದಾದಷ್ಟೂ ಅದರ ಅಂದ ಹೆಚ್ಚುತ್ತದೆ ಹೇಗೋ ಹಾಗೇ ಆರ್ಷೇಯ ತತ್ವಗಳಿಂದ ಮನುಜಮತವನ್ನು ಹೇಳಿದ ಸನಾತನ ಧರ್ಮ, ವೇದ-ಉಪನಿಷತ್ತುಗಳು ಇವೆಲ್ಲವುಗಳ ಆಧಾರದಮೇಲೆ ಆಧುನಿಕ ವಿಜ್ಞಾನವನ್ನು ಬಳಸಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾ, ಜೊತೆಗೆ ಸುರಸ ಲಾಲಿತ್ಯ ಸಂಗೀತ, ಶಿಲ್ಪ, ಚಿತ್ರಕಲೆಗಳನ್ನೂ ಜೋಡಿಸಿಕೊಳ್ಳುತ್ತಾ ಬದುಕಿದರೆ ಜನಜೀವನಕ್ಕೆ ಅದು ಉತ್ತಮಮಾರ್ಗ ಎಂದು ಪ್ರಾಜ್ಞರು ಅನುಭವದಿಂದಲೂ ಆಧಾರದಿಂದಲೂ ಹೇಳಿದ್ದಾರೆ.

ಸರ್ವರುಂ ಸಾಧುಗಳೇ ಸರ್ವರುಂ ಬೋಧಕರೆ
ಜೀವನ ಪರೀಕ್ಷೆ ಬಂದಿದಿರು ನಿಲುವನಕ
ಭಾವಮರ್ಮಂಗಳೇಳುವುವಾಗ ತಳದಿಂದ
ದೇವರೇ ಗತಿಯಾಗ -ಮಂಕುತಿಮ್ಮ

ಹೇಳುವುದು ಸುಲಭ, ನಡೆಸುವುದು ಕಷ್ಟ ಎಂಬುದೂ ಒಂದು ಮಾತು. ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಬೋಧಕರೇ ಆಗಿರುತ್ತೇವೆ. ಬೇರೆಯವರಿಗೆ ಬೋಧಿಸುವ ಕೆಲಸದಂತೇ ನಾವೆಷ್ಟು ಅದನ್ನು ಅಳವಡಿಸಿಕೊಂಡಿದ್ದೇವೆ ಎಂಬುದು ಪ್ರಮುಖವಾಗಿ ಶೋಧಮಾಡಬೇಕಾದ ಅಂಶ. ಎಷ್ಟೋ ಸಲ ಬೋಧಕರಿಗೇ ನಿಂತನೆಲ ಕುಸಿಯುವ ಸನ್ನಿವೇಶವೂ ಇರಬಹುದು. ಮನದ ಮೂಸೆಯಿಂದ ಧುತ್ತನೇ ಮೇಲೇಳುವ ಎಲ್ಲಾಭಾವನೆಗಳನ್ನೂ ನಿಯಂತ್ರಿಸುತ್ತಾ ಜೀವನವೆಂಬ ನಿಜವಾದ ಪರೀಕ್ಷೆಗೆ ನಮ್ಮನ್ನು ನಾವು ಒಡ್ಡುವಾಗ ದೇವರೆಂಬ ಅಗೋಚರ ಶಕ್ತಿ ನಮಗೆ ಉತ್ತೀರ್ಣರಾಗುವ ಶಕ್ತಿಯನ್ನೂ ತಕ್ಕಮಟ್ಟಿನ ಯುಕ್ತಿಯನ್ನೂ ನೀಡಬೇಕಾಗುತ್ತದೆ.

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದ ಹಸಾದವೆಂದುಣ್ಣು ಗೊಣಗುಡದೆ
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ
ಹೊರಡು ಕರೆ ಬರಲ್ ಅಳದೇ -ಮಂಕುತಿಮ್ಮ

ಪಾಲಿಗೆ ಬಂದ ಯಾವ ಕೆಲಸವೇ ಆದರೂ ಅದನ್ನೇ ಮನಸ್ಸಂತೋಷದಿಂದ ಮಾಡಿ ಅದರಿಂದ ದೊರೆತ ಫಲವನ್ನು ದೇವರ ಪ್ರಸಾದವೆಂದು ಸ್ವೀಕರಿಸುತ್ತಾ, ಯಾವುದಕ್ಕೂ ಗೊಣಗುಡದೇ ಬದುಕಿನ ಖರ್ಚುಗಳನ್ನು ’ಹಾಸಿಗೆಗೆ ತಕ್ಕಂತೇ ಕಾಲುಚಾಚು’ ಎಂಬರೀತಿಯಲ್ಲಿ ನಿಭಾಯಿಸುತ್ತಾ ನಡೆದರೆ, ಬದುಕಿದರೆ ವ್ಯಕ್ತಿ ಸತ್ತಮೇಲೂ ಜನ ಇನ್ನೂ ಬೇಕಾಗಿತ್ತು ಎನ್ನುತ್ತಾರೆ! ಇದಕ್ಕೆ ಸದ್ಯ ನಾನು ಉದಾಹರಿಸುವುದು ರಾಜಕಾರಣಿ ಡಾ|ವಿ.ಎಸ್.ಆಚಾರ್ಯರನ್ನು. ಮತ್ತೆ ವಿವರಣೆ ಬೇಡ ಎನಿಸುತ್ತದೆ.

ಕಾಗೆಯುಂ ಕೋಗಿಲೆಯುವೊಂದೆ ಮೇಲ್ನೋಟಕ್ಕೆ
ಯೋಗಿಯುಂ ಸಂಸಾರ ಭೋಗಿಯೇ ಹೊರಕೆ
ಲೋಗರವೊಲಿರುತೆ ಸುಖದುಃಖ ಸಂಭ್ರಮಗಳಲಿ
ತ್ಯಾಗಿಯವನ್ ಅಂತರದಿ -ಮಂಕುತಿಮ್ಮ

ಕಾಗೆಯೂ ಕೋಗಿಲೆಯೂ ದೂರದಿಂದ ಕಪ್ಪಗೇ ಕಾಣುತ್ತವೆ ಹೇಗೋ ಹಾಗೇ ಯೋಗಿಯೂ ಭೋಗಿಯೂ ಇಬ್ಬರೂ ಒಂದರ್ಥದಲ್ಲಿ ಸಂಸಾರಸ್ಥರೇ ಆಗಿರುತ್ತಾರೆ. ಸನ್ಯಾಸಿಗಳಿಗೆ ನೇರವಾದ ತ್ಯಾಗದ ಅನುಕೂಲವಿದ್ದರೆ ಸಂಸಾರಿಗಳಿಗೆ ಸ್ವನಿಯಂತ್ರಣದಿಂದ ತ್ಯಾಗ ಸಾಧ್ಯವಾಗುತ್ತದೆ. ಸಂಸಾರಿಯಾಗಿದ್ದೂ ಯೋಗಿಗಳಾಗುವ ಮಹಾತ್ಮರೂ ಇದ್ದಾರೆ. ಅದಕ್ಕೆ ಸ್ವತಃ ಡೀವೀಜಿಯವರೇ ಉದಾಹರಣೆಯಾಗುತ್ತಾರೆ! ತನಗೆ ಸನ್ಮಾನಧನವಾಗಿ ಬಂದ ಒಂದುಕೋಟಿ [ಅಂದಿನ ೧೯೭೫ರ ಕಾಲದಲ್ಲಿ ಒಂದುಕೋಟಿ]ಯನ್ನೂ ಸಂಪೂರ್ಣ ಸಾರ್ವಜನಿಕರ ಸೇವೆಗಾಗಿ ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ಕಟ್ಟುವುದಕ್ಕೆ ನೀಡಿ, ನಿಂತು ಕಟ್ಟಿಸಿ ಲೋಕಾರ್ಪಣೆಗೈದರು. ಮಾರನೇ ದಿನವೇ ಮನೆಗೆ ಬಂದ ಅಭಿಮಾನಿಗಳಿಗೆ ಕಾಫಿ ಕೊಡುವ ವ್ಯವಸ್ಥೆಗೂ ಸ್ವಲ್ಪ ಹಣವನ್ನೂ ಇಟ್ಟುಕೊಳ್ಳಲಿಲ್ಲ, ಶೆಟ್ಟಿ ಅಂಗಡಿಯಿಂದ ಸಾಲದ ರೂಪದಲ್ಲಿ ಕಾಫಿಗೆ ಬೇಕಾದ ಸಾಮಾನು ಪಡೆದು ನಂತರ ತೀರಿಸಿದರು! ನಾವೆಲ್ಲರೂ ಹೀಗೇ ಮಾಡಲು ಸಾಧ್ಯವೇ? ಹೊರನೋಟಕ್ಕೆ ಡೀವೀಜಿಯೂ ನಮ್ಮಂತೇ ಸಂಸಾರಿಗಳೇ ಅಗಿದ್ದರಲ್ಲವೇ? ’ತ್ಯಾಗಿಯವನ್ ಅಂತರದಿ’ ಎಂಬ ಮಾತು ಎಷ್ಟು ಸತ್ಯ ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗಿದೆ.

ಶರಣವೊಗು ಜೀವನ ರಹಸ್ಯದಲಿ ಸತ್ತ್ವದಲಿ
ಶರಣು ಜೀವನವ ಸುಮವೆನಿಪ ಯತ್ನದಲಿ
ಶರಣಂತರಾತ್ಮ ಗಂಭೀರ ಪ್ರಶಾಂತಿಯಲಿ
ಶರಣು ವಿಶ್ವಾತ್ಮನಲಿ -ಮಂಕುತಿಮ್ಮ

|ವಸುಧೈವ ಕುಟುಂಬಕಮ್| ಎಂಬ ವ್ಯಾಖ್ಯೆಯನ್ನು ಈ ಮುಕ್ತಕದಲ್ಲಿ ಡೀವೀಜಿ ಅಳವಡಿಸಿದ್ದಾರೆ. ಆದಿಶಂಕರರು ಆತ್ಮಷಟ್ಕದಲ್ಲಿ ಚಿದಾನಂದರೂಪಂ ಶಿವೋಹಂ ಶಿವೋಹಂ ಎಂದಿದ್ದನ್ನು ಕಳೆದವರ್ಷ ವಿವರಿಸಿದ್ದೆನಷ್ಟೇ ? ಅದರಂತೇ ಈ ಪ್ರಪಂಚದ ಒಳಗೂ ಮತ್ತು ಅದರಾಚೆಗೂ ಹುದುಗಿ ಕುಳಿತು, ರಹಸ್ಯವಾಗಿ ಈ ಲೋಕವನ್ನು, ಬ್ರಹ್ಮಾಂಡವನ್ನು ನಡೆಸುತ್ತಿರುವ ಜಗನ್ನಿಯಾಮಕ ವಿಶ್ವಂಭರ ಶಕ್ತಿಗೆ ನಾವು ನಮಸ್ಕರಿಸಲು ಮರೆಯಬಾರದು. ಲೌಕಿಕವಾಗಿ ಮನುಷ್ಯನ ಜೀವನಕ್ಕಾಗಿ ಅದೆಷ್ಟೋ ಕಾರ್ಮಿಕರು ಕಾರ್ಖಾನೆಗಳಲ್ಲಿ, ರೈತರಾಗಿ ಹೊಲಗಳಲ್ಲಿ, ರಸ್ತೆ, ಸೇತುವೆ-ಸಾರ್ವಜನಿಕ ಕಟ್ಟಡಗಳ ನಿರ್ಮಾಣಗಳಲ್ಲಿ, ನೀರು-ಆಹಾರ ಪೂರೈಕೆಮಾಡುವುದರಲ್ಲಿ, ಆರೋಗ್ಯ-ವಿದ್ಯೆ-ಉದ್ಯೋಗ-ವ್ಯಾಪಾರ ಮೊದಲಾದುವುಗಳನ್ನು ಸಮದೂಗಿಸುವಲ್ಲಿ, ವಿದ್ಯುತ್ತು-ವಾಹನಾದಿ ಸಕಲ ಸೌಲಭ್ಯಗಳನ್ನು ಕೊಡುವಲ್ಲಿ ತೊಡಗಿಸಿಕೊಂಡಿರುವ ಮಾನವನಲ್ಲಿರುವ ಆ ಪರೋಕ್ಷ ಶಕ್ತಿಗೆ ನಮಸ್ಕರಿಸಬೇಕು. ಪ್ರತಿಯೊಂದೂ ಜೀವಿಯ ಆಂತರ್ಯದಲ್ಲಿ ನೆಲಸಿರುವ ಗಂಭೀರನೂ ಪ್ರಶಾಂತನೂ ಆದ ಪರಮಾತ್ಮನನ್ನು ಕಂಡು ನಮಸ್ಕರಿಸಬೇಕು ಎಂಬುದು ಡೀವೀಜಿಯವರ ಸಂದೇಶವಾಗಿದೆ. ಇಂದಿಗೆ ಸುಮಾರು ೧೨೫ ವರ್ಷಗಳ ಹಿಂದೆ ಜನಿಸಿದ್ದ ಡೀವೀಜಿಯವರ ಅನುಭವ ಮತ್ತು ಅನುಭಾವ ಅನನ್ಯ, ಮಾನ್ಯ. ಅವರ ಹೆಸರನ್ನು ಹೇಳಿಕೊಂಡು ಬರೆಯುವುದೂ ನಮ್ಮ ಪುಣ್ಯ ಎಂದು ತಿಳಿಸುತ್ತಾ, ಜೀವನಧರ್ಮವನ್ನು ಅರ್ಥಮಾಡಿಕೊಳ್ಳಲು ಅವರ ’ಜೀವನಧರ್ಮ ಯೋಗ’ ವೆಂಬ ಬೃಹದ್ಗ್ರಂಥವನ್ನು ಸಮಯಮಾಡಿಕೊಂಡು ಓದಿ ಎಂದು ಸಲಹೆ ನೀಡುತ್ತಾ ಡೀವೀಜಿಯವರಿಗೆ ನನ್ನ ಸಾಷ್ಟಾಂಗ ವಂದನೆಗಳನ್ನು ಸಲ್ಲಿಸಿ ನಿಮ್ಮೆಲ್ಲರಿಗೂ ವಂದಿಸುವುದರೊಂದಿಗೆ ಶುಭಕೋರುತ್ತೇನೆ.

Wednesday, March 7, 2012

ಗೋಕುಲ ರಂಗಿನಾಟ

ಚಿತ್ರಕೃಪೆ : ಅಂತರ್ಜಾಲ

ಗೋಕುಲ ರಂಗಿನಾಟ

ಇದೊಂದು ಆದಿಪ್ರಾಸದ ಕವನ, ಎರಡೆರಡು ಸಾಲುಗಳಲ್ಲಿ ಅಂತ್ಯಪ್ರಾಸವನ್ನೂ ಕಾಣಬಹುದು, ಎರಡೆರಡು ಸಾಲುಗಳ ಗುಂಪು ಮುಕ್ತಕಗಳಂತೇ ಅಂದರೆ ಪ್ರತ್ಯೇಕ ಪ್ರತ್ಯೇಕವಾಗಿವೆ. ಯಾವುದನ್ನು ಎಲ್ಲಿಬೇಕಾದರೂ ಪ್ಲಗ್ ಅಂಡ್ ಪ್ಲೇ ಮಾಡಿಕೊಳ್ಳಬಹುದು! ಹೀಗೊಂದು ಪ್ರಯತ್ನದಲ್ಲಿ ಹೋಳಿಯಂಚಿನಲ್ಲಿ ರಂಗಿನಾಟಕ್ಕಾಗಿಯೂ ದಾಂಡಿಯಾ ನೃತ್ಯಕ್ಕಾಗಿಯೂ ಬಳಸಿಕೊಳ್ಳಬಹುದಾದ ಕನ್ನಡ ಕವನ ನಿಮಗಾಗಿ :

ಕಳ್ಳ ಕಳ್ಳ ಹೆಜ್ಜೆಯಿಟ್ಟು ಬಂದನಿಲ್ಲಿ ಮಾಧವ |
ಪಿಳ್ಳೆನೆಪವನೊಡ್ಡಿ ಸನಿಹ ಸರಿಯುತ ರಾಧಾಧವ ||

ಮಳ್ಳನಂತೆ ನಕ್ಕನಾತ ಕಾರಣಗಳೇ ಇಲ್ಲದೇ |
ಸಿಳ್ಳೆ ಹೊಡೆದ ಮುರಳಿ ನುಡಿದ ಒಂದೆಡೆಯಲಿ ನಿಲ್ಲದೇ ||

ಬಳ್ಳುತಲ್ಲಿ ರಂಗಿನಾಟ ಗೋಪಸಖಿಯರೊಂದಿಗೆ |
ಕುಳ್ಳನಲ್ಲ ಕುಂಟನಲ್ಲ ಎಂಟು ವೇಷ ಮಂದಿಗೆ! ||

ಬಳ್ಳಿಹಿಡಿದು ಜೋತುಬಿದ್ದ ವಾರೆವಾರೆ ನೋಡುತ |
ಸುಳ್ಳು ಹೇಳಿ ಬಿದ್ದೆನೆಂದು ಬೇಕಂತಲೆ ಕಾಡುತ ||

ತಳ್ಳಿಮಾಡಿ ಹೆಸರುಗಳನು ಕೆಸರನೆರಚಿ ಸುಮ್ಮಗೆ |
ತಳ್ಳುತಲ್ಲಿ ಭಾವದಲ್ಲಿ ಬಿಗಿಯುತೊಮ್ಮೆ ಬಿಮ್ಮಗೆ ||

ಗುಳ್ಳೆ ಗುಳ್ಳೆ ಹಾರಿಸುತ್ತ ಏರಿಸಿದನು ಬಣ್ಣವ |
ತೊಳ್ಳೆತೆಗೆದ ಹಲಸು ತಿಂದು ಹೊಡೆದುಬಿಟ್ಟ ಕಣ್ಣವ! ||

ಮೆಳ್ಳಗಣ್ಣು ಕೆಂಪುಗಣ್ಣು ತೋರಿ ಬೆದರಿಸಟ್ಟುತ |
ಪೊಳ್ಳು ಪುಕ್ಕಲೆಂದು ಜರಿದು ಕರೆದು ಬೆನ್ನುತಟ್ಟುತ ||

ಹಳ್ಳದಲ್ಲಿ ನೀರಿನಾಟ ಗೊಲ್ಲ ಗೋಪಜನರೊಡೆ |
ಮಿಳ್ಳೆ ಬಿದಿರ ಪಿಚಕಾರಿಯ ಬಣ್ಣ ಚೆಲ್ಲಿ ಎಲ್ಲೆಡೆ ||


Monday, March 5, 2012

ಎಲ್ಲಿ ಎಲ್ಲಿ ರಾಗಮಾಲೆ ಇರುವನಲ್ಲಿ ಕೇಶವ ಎಲ್ಲಿ ಎಲ್ಲಿ ರಾಸಲೀಲೆ ಅಲ್ಲಿ ಒಲವಿನುತ್ಸವ .....

ಈ ಚಿತ್ರಋಣ: ಆಲ್ ಇಂಡಿಯಾ ಆರ್ಟ್ಸ್.ಕಾಂ
ಮಿಕ್ಕಿದ ಚಿತ್ರಗಳ ಕೃಪೆ : ಅಂತರ್ಜಾಲ

ಎಲ್ಲಿ ಎಲ್ಲಿ ರಾಗಮಾಲೆ ಇರುವನಲ್ಲಿ ಕೇಶವ
ಎಲ್ಲಿ ಎಲ್ಲಿ ರಾಸಲೀಲೆ ಅಲ್ಲಿ ಒಲವಿನುತ್ಸವ

ಹೋಲಿಕಾ-ಕಾಮದಹನ ಎಂದು ಕರೆಯಲ್ಪಡುವ ಹೋಳಿಹಬ್ಬ ನಾಳೆ ಭಾರತಪೂರ್ತಿ ಆಚರಿಸಲ್ಪಡುತ್ತದೆ. ಹಾಗೆ ನೋಡಿದರೆ ಅಂತಹ ವಿಶೇಷ ಪೂಜೆ-ಪುನಸ್ಕಾರಗಳಿಲ್ಲದ ಈ ಹಬ್ಬದ ಮಹತ್ವ ಎಂಥದ್ದು ಎಂಬುದನ್ನು ತಿಳಿಯದೇ ಆಚರಿಸುವವರೂ ಇದ್ದಾರೆ! ಹೋಳಿ ಎಂದರೆ ಬರೇ ರಂಗಿನಾಟವೇ? ಹಾಗಾದರೆ ಅದು ಯಾತಕ್ಕೆ?

ಸಂಸ್ಕೃತದ ಪರ್ವ ಎಂಬುದು ಕನ್ನಡದಲ್ಲಿ ಹಬ್ಬ ಎಂದಾಗಿದೆ. ನಮ್ಮ ಪ್ರತಿಯೊಂದೂ ಹಬ್ಬದ ಹಿಂದೆ ಮನೋವೈಜ್ಞಾನಿಕ, ವೈಜ್ಞಾನಿಕ ಕಾರಣಗಳಿವೆ ಎಂಬುದನ್ನು ಅದೆಷ್ಟೋ ಸಂಶೋಧನೆಗಳು ಅದಾಗಲೇ ತಿಳಿಸಿವೆ. ಚಳಿಗಾಲ ಕಳಿದು ಬೇಸಿಗೆ ಕಾಲಿಡುವದರೊಳಗಿನ ಸೇತುವೆಯಂತೇ ಇರುವ ಈ ಕಾಲಘಟ್ಟವನ್ನು ಆಂಗ್ಲರು ’ಸ್ಪ್ರಿಂಗ್ ಸೀಸನ್’ ಎನುತ್ತಾರೆ. ಚಳಿ ಮುಗಿದು ಹೋಯ್ತು ಇನ್ನೇನೂ ಶೀತದ ಭಯವಿಲ್ಲ ಎಂಬ ಕಾರಣಕ್ಕೆ ಈ ಹಬ್ಬವೇ ? ಅಲ್ಲ. ಗಡದ್ದಾಗಿ ಅಡುಗೆಮಾಡಿ ಹೊಡೆಯಲಿಕ್ಕಾಗಿಯೇ ? ಅಲ್ಲ . ಯಾವುದೂ ಅಲ್ಲ ಎಂದಮೇಲೆ ಯಾಕಾಗಿ ಈ ಹಬ್ಬ ? ಹಿಂದೂಗಳಿಗೆ ಇದೊಂದು ವಿಶಿಷ್ಟ ಹಬ್ಬ. ಇದು ಗಂಡು-ಹೆಣ್ಣಿನ ನಡುವೆ ದೈಹಿಕ ಆಕರ್ಷಣೆ ಇಲ್ಲದ ಅಥವಾ ಕಾಮ ರಹಿತವಾದ ನಿಷ್ಕಲ್ಮಶ ಪ್ರೇಮವನ್ನೂ, ಸಮಾಜದಲ್ಲಿ ಎಲ್ಲರ ಬ್ರಾತೃತ್ವ ವೃದ್ಧಿಸುವ ನಿಷ್ಕಳಂಕ ಪ್ರೀತಿಯನ್ನೂ ತಿಳಿಸುವ ಹಬ್ಬ!

ಉತ್ತರ ಭಾರತದಲ್ಲಿ ಇದು ಕೃಷ್ಣನನ್ನು ಅತಿಯಾಗಿ ನೆನಪಿಸುವ ಹಬ್ಬಗಳಲ್ಲಿ ಒಂದು. ಇಂಥಾ ಹಬ್ಬದ ಸಾರವನ್ನು ತಿಳಿಯುವ ಜೊತೆಜೊತೆಗೇ ನಮ್ಮ ಕನ್ನಡದ ಕವಿ ಕೆ.ಸಿ.ಶಿವಪ್ಪನವರು ಬರೆದ ಒಂದು ಹಾಡನ್ನೂ ಗುನುಗುನಿಸುತ್ತಾ ಮುಂದುವರಿಯೋಣ. ಅಂದಹಾಗೇ ಕನ್ನಡದ ಈ ಕವಿ ಕೃಷ್ಣ-ರಾಧೆಯರ ಕುರಿತು ಅನೇಕ ಹಾಡುಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಒಂದಷ್ಟು ಧ್ವನಿಮಾಧ್ಯಮ [ಆಡಿಯೋ ಕ್ಯಾಸೆಟ್]ಕ್ಕೆ ಏರಿದವು. ಅಂತಹ ಅಪರೂಪದ ಕ್ಯಾಸೆಟ್‍ಗಳು ಇಂದು ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಮಾತ್ರ ದೊರೆಯಬಹುದು. ಕವಿಯ ಸರಳ ರಚನೆಗಳು ಬಹಳ ಸೆಳೆಯುತ್ತವೆ. ಮಕ್ಕಳೂ ಕೂಡ ಹಾಡಬಹುದಾದ ಸುಲಭ ಸಾಹಿತ್ಯಕ ಪದಗಳಲ್ಲಿ ಭಾವ ಪೂರ್ಣವಾಗಿ ಬರೆದ ಕವನಗಳು ಕೇಳಲು ಬಹಳ ಪ್ರಿಯವಾಗುತ್ತವೆ; ಕೇಳುತ್ತಾ ಕೇಳುತ್ತಾ ಭಾವಸರೋವರದಲ್ಲಿ ವಿಹರಿಸುವ ಅನುಭವ ಕೇಳುಗನಿಗಾಗುತ್ತದೆ. ಅಂತಹ ಒಂದು ಹಾಡಿನ ಸಾಂಗತ್ಯದೊಡನೆ ನಮ್ಮ ಹೋಳೀ ಹಬ್ಬದ ಕಥೆ ಮುಂದುವರಿಯುತ್ತದೆ!

ಮುರಳಿನಾದ ಹರಿದು ಸುರಿಯೆ ಅಲ್ಲಿ ರಾಗಮೋಹನ
ಕಮಲ ನಾಚಿ ಬಿರಿದು ಕರೆಯೆ ಅಲ್ಲಿ ನೀಲಲೋಚನ


ಮುದ್ದು ಕೃಷ್ಣ ಯಾರಿಗೆ ಬೇಕಾಗಿಲ್ಲ? ಆತ ರಾಧೆಗೋ ರುಕ್ಮಿಣಿಗೋ ಗೋಪಿಕೆಯರಿಗೋ ಬೇಕಾದ ಹಾಗೇ ನಮಗೆಲ್ಲಾ ಬೇಕೇ ಆಗಿರುವ ಆಪ್ತ. ಮುದ್ದು ಮಗುವಿನಿಂದ ಹಿಡಿದು ಮುದಕರವರೆಗೂ ಆತ ಎಲ್ಲರಿಗೂ ಪರೋಕ್ಷ ಪರಿಚಿತನೇ! ಅಂಬೆಹರೆಯುವ ಕೃಷ್ಣನ ತುಂಬು ಗಡಿಗೆಯ ಬೆಣ್ಣೆ ಕದ್ದ ಕಥೆಕೇಳುವ ಮಕ್ಕಳಿಗೂ ಆತ ಬೇಕು, ಮಿಲನಮಹೋತ್ಸವಕ್ಕಾಗಿ ಕಾದ ದಂಪತಿಯ ಪ್ರೇಮ ಸಲ್ಲಾಪಕ್ಕೆ ಸ್ಫೂರ್ತಿ ನೀಡುವನಾಗಿ ಬೇಕು, ಹರೆಯದ ಜನರಿಗೆ ಗುರಿ ತಲುಪುವ ಬಗೆ ತೋರುವ ಗೋಪಾಲ ಬೇಕು, ನಡುಪ್ರಾಯದ ಜನರಿಗೆ ನಡೆಯುವ ಹಾದಿ ತಿಳಿಸಿದ ಜಗದ್ಗುರು ಕೃಷ್ಣ ಬೇಕು, ಹೆಜ್ಜೆ ಕಿತ್ತಿಡಲು ಊರುಗೋಲಿನ ಸಹಾಯ ಪಡೆಯುವ ಅಜ್ಜ-ಅಜ್ಜಿಯರಿಗೂ ಆತ ಭಗವಂತನಾಗಿ ಬೇಕು. ಇಷ್ಟೆಲ್ಲಾ ಹಬ್ಬಿರುವ ಆ ಕೃಷ್ಣ ಗೀತೆಯನ್ನು ಬೋಧಿಸಿದ ಅಪ್ರತಿಮ ಮೇಧಾವಿ ಎಂದರೆ ನಂಬಲಾಗದಷ್ಟು ಎಲ್ಲರಿಗೂ ಆತ ಫ್ರೆಂಡು, ಸ್ನೇಹಿತ, ಒಂಥರಾ ಮನೆಜನ ಇದ್ದಹಾಗೇ!

ತಾರೆ ಮಿನುಗಿ ಸನ್ನೆ ಮಾಡೆ ಬರುವ ಚಾರು ಚಂದಿರ
ಮುಗುದೆಯೊಡನೆ ಒಂಟಿಯಾಡೆ ನಲಿವಶ್ಯಾಮಸುಂದರ !

ಇಂತಹ ಗೊಲ್ಲನ ಆ ಕಾಲದಲ್ಲಿ ಹೋಲಿಯನ್ನು ಆತನೂ ಸೇರಿದಂತೇ ಎಲ್ಲರೂ ಸೇರಿ ಆಡುತ್ತಿದ್ದರಂತೆ. ಬಿದಿರಿನ ಪೆಟ್ಲಂಡೆ-ಪಿಚಕಾರಿಗಳಲ್ಲಿ ನೈಸರ್ಗಿಕವಾಗಿ ಸಿದ್ಧಗೊಂಡ ವಿವಿಧ ಬಣ್ಣಗಳ ನೀರನ್ನು ತುಂಬಿಕೊಂಡು ಪರಸ್ಪರ ಹಾರಿಸುತ್ತಾ ಸಂತಸಪಡುತ್ತಿದ್ದರಂತೆ. ಸಖಿಯರ ನಡುವೆ ನಿಂತ ಸಖ ಗೋವಿಂದನಿಗೆ ಸುತ್ತಲ ಎಲ್ಲರಿಂದಲೂ ಬಣ್ಣದ ಓಕುಳಿಯಾಟ. ಕೃಷ್ಣ ಹದಿನಾರು ಸಾವಿರ ಗೋಪಿಕೆಯರ ಗಂಡ ಎಂಬುದೊಂದು ಐತಿಹ್ಯವಿದೆ. ನರಕಾಸುರ ಕೂಡಿಟ್ಟ ಹದಿನಾರುಸಾವಿರ ಹೆಣ್ಣುಮಕ್ಕಳನ್ನು ಆತ ಬಂಧಮುಕ್ತಗೊಳಿಸಿದಾಗ "ಅನಾಥರಾದ ನಮಗೆ ನೀನೇ ಶ್ರೀನಾಥನಾಗು" ಎಂದು ಅವರೆಲ್ಲಾ ಗೋಳಿಟ್ಟರಂತೆ. ಅವರ ಅಳಲನ್ನು ಕೇಳಿದ ಕೇಶವ ನೆಪಮಾತ್ರಕ್ಕೆ ತಾನು ಗಂಡ ಎನಿಸಿಕೊಂಡನಾದರೂ ಅವರ ಬೇಕುಬೇಡಗಳನ್ನು ಪೂರೈಸಿದ ಬ್ರಹ್ಮಚಾರಿ ಕೃಷ್ಣ! ಇದು ಹೇಗೆ ಎಂದರೆ ಕೆಸವೆಯ ಅಥವಾ ತಾವರೆಯ ಎಲೆಯಮೇಲೆ ಬಿದ್ದ ನೀರು ಅದನ್ನು ಒದ್ದೆ ಮಾಡದಲ್ಲ? ಹಾಗೇ ಸಂಸಾರದೊಳಗಿದ್ದೂ ಆತ ಯಾವುದನ್ನೂ ಅಂಟಿಸಿಕೊಳ್ಳದವ. ಇಂದ್ರಿಯಗಳನ್ನು ಹದ್ದುಬಸ್ತಿನಲ್ಲಿಟ್ಟೂ ಹೆಂಗಸರ ಮಳ್ಳ! ಇದೇ ಆ ಯಾದವನ ವೈಶಿಷ್ಟ್ಯ.

ಎಲ್ಲಿರಾಧೆ ಅಲ್ಲಿ ಶ್ಯಾಮ ಜೀವ ಭಾವ ಚಂದಕೆ
ಎಲ್ಲಿ ಚಲುವೊ ಅಲ್ಲಿ ಒಲುಮೆ ಮುಗಿಲು-ತಿರೆಯ ಮಿಲನಕೆ

ಇಂತಹ ಸಕಲರ ಪ್ರಿಯಕರ ಕೃಷ್ಣನನ್ನು ಹೆಣ್ಣು-ಗಂಡೆಂಬ ಭೇದವಿಲ್ಲದೇ ಎಲ್ಲರೂ ಪ್ರೀತಿಸುತ್ತಾರೆ. ಇಲ್ಲಿ ಒಂದು ಸೂಕ್ಷವನ್ನೂ ಗಮನಿಸಬೇಕು: ಯಾರಾದರೂ ಪ್ರಯತ್ನಿಸಿದರೆ ಹದಿನಾರು ಸಾವಿರ ಹೆಂಡಿರ ಗಂಡ ಆಗಬಹುದೇನೋ ಆದರೆ ಕಿರುಬೆರಳಲ್ಲಿ ಗೋವರ್ಧನವೆತ್ತಿ ನಿಲ್ಲುವುದು ಯಾರಿಂದಲೂ ಆಗದಮಾತು! ಅದಕ್ಕಾಗಿಯೇ ಕೃಷ್ಣ ವಿಶೇಷನಾಗುತ್ತಾನೆ; ವಿಶಿಷ್ಟನಾಗುತ್ತಾನೆ. ನೀಲಮೇಘಶ್ಯಾಮನ ನೆನಪಿನಲ್ಲಿ ಆತ ಹುಟ್ಟಿಬೆಳೆದ ನೆಲದಲ್ಲಿ ಹೆಚ್ಚಾಗಿ ಉತ್ತರ ಭಾರತದಲ್ಲಿ ಕೆಲವು ಪ್ರಾಂತಗಳಲ್ಲಿ ಹೋಲಿಯನ್ನು ೧೬ ದಿನಗಳ ಪರ್ಯಂತ ಅಂದರೆ ರಂಗಪಂಚಮಿಯ ವರೆಗೆ ಆಚರಿಸುವ ಪರಿಪಾಟ ಇದೆ ಎಂಬುದಾಗಿ ತಿಳಿದುಬರುತ್ತದೆ. ಆಯ್ತು ಬಣ್ಣ ಎರಚಿದ್ದಾಯ್ತಲ್ಲಾ ಇಷ್ಟೇನಾ ಹಬ್ಬ? ಅಲ್ಲ ಇನ್ನೂ ಇದೆ, ಆದರೆ ಶಿವಪ್ಪನವರ ಆ ಹಾಡು ಇಲ್ಲಿಗೆ ಪೂರ್ತಿಯಾಗುತ್ತದೆ; ನಮ್ಮ ಹೋಲೀ ಕಥೆ ಮುಂದುವರಿಯುತ್ತದೆ.

ಉತ್ತರದ ರಾಜ್ಯಗಳಲ್ಲಿ :
--------------------------

ಮಹಾವಿಷ್ಣುವಿನ ದಶಾವತಾರಗಳಲ್ಲಿ ನಾಕನೇ ಅವತಾರ ನಾರಸಿಂಹಾವತಾರ. ಹಿರಣ್ಯಕಶಿಪು ಕ್ರುದ್ಧನಾಗಿ ಮಗ ಪ್ರಹ್ಲಾದನನ್ನು ಜರಿಯುತ್ತಿರುತ್ತಾನೆ. ಹರನನ್ನು ಮಾತ್ರ ಪೂಜಿಸು ಎಂಬ ಮಾತು ಉಲ್ಲಂಘಿಸಿದ ಮಗನಿಗೆ ವಿಧವಿಧವಾದ ಹಿಂಸೆಗಳನ್ನು ನೀಡಿ ಆತನನ್ನು ಹೆದರಿಸಿ ಮನಃಪರಿವರ್ತನೆ ಮಾಡಲು ಪ್ರಯತ್ನಿಸುತ್ತಾನೆ. ಆ ಘಳಿಗೆಯಲ್ಲಿ ಒಂದು ಪ್ರಯತ್ನದಲ್ಲಿ ತನ್ನ ತಂಗಿಯಾದ ಹೋಲಿಕಾಳನ್ನು ಕಟ್ಟಿಗೆರಾಶಿಯೊಂದರಮೇಲೆ ಕೂರಿಸಿ ಅವಳ ಕಾಲಮೇಲೆ ಪ್ರಹ್ಲಾದನನ್ನೂ ಕೂರಿಸಿ ಬೆಂಕಿ ಹಚ್ಚಲಾಗುತ್ತದೆ. ಯಾಕೆಂದರೆ ಆಕೆಗೂ ಸಹ ಸಾವು ಬರದಂತೇ ಬ್ರಹ್ಮನ ವರವಿರುತ್ತದೆ. ಆದರೆ ಆಕೆ ಪ್ರಹ್ಲಾದನನ್ನು ತೊಡೆಯಮೇಲೆ ಕೂರಿಸಿಕೊಂಡಿದ್ದರ ಪರಿಣಾಮವಾಗಿ ಆಕೆಯ ವರಕ್ಕೆ ಇರುವ ಶರತ್ತು ಮುರಿದುಹೋಗುತ್ತದೆ! ಆಕೆ ಬೆಂಕಿಗೆ ಆಹುತಿಯಾಗಿ ಭಸ್ಮವಾಗುತ್ತಾಳೆ; ಪ್ರಹ್ಲಾದನಿಗೆ ಬೆಂಕಿ ತಾಗುವುದೇ ಇಲ್ಲ! ಇದು ಹೋಲಿಕಾ ದಹನದ ಕಥೆ.

ದಕ್ಷಿಣದ ರಾಜ್ಯಗಳಲ್ಲಿ :
----------------------------

ದಕ್ಷಯಜ್ಞದಲ್ಲಿ ತನ್ನನ್ನೇ ಯಜ್ಞಕುಂಡಕ್ಕೆ ಅರ್ಪಿಸಿಕೊಂಡ ಸತಿ ಮರುಜನ್ಮದಲ್ಲಿ ಪರ್ವತರಾಜನ ಮಗಳು ಪಾರ್ವತಿಯಾಗಿ ಜನಿಸಿರುತ್ತಾಳೆ. ನಿತ್ಯವೂ ಹರಸೇವೆಯೇ ಅವಳ ಪರಮಗುರಿ. ತಪಸ್ಸಿಗೆ ಕುಳಿತ ಪರಮೇಶ್ವರ ಏನುಮಾಡಿದರೂ ಕಣ್ಣನ್ನೇ ಬಿಡಲೊಲ್ಲ. ಪರಿಪರಿಯಾಗಿ ಪ್ರಯತ್ನಿಸಿದರೂ ಫಲಮಾತ್ರ ಸಿಗುತ್ತಲೇ ಇರಲಿಲ್ಲ. ಇದನ್ನರಿತ ಮಹಾವಿಷ್ಣು ಮಗನಾದ ಮನ್ಮಥನನ್ನು ತನ್ನ ಬಾಣಗಳ ಸಮೇತ ಕಳುಹಿಸುತ್ತಾನೆ. ಶಿವ-ಶಿವೆಯರು ಎದುರಾಬದುರಾ ಇರುವ ಸಮಯದಲ್ಲಿ ಮನ್ಮಥ ಆ ಪ್ರಾಂತದಲ್ಲಿ ಅಶೋಕ, ಚೂತ, ಅರವಿಂದ, ನವಮಲ್ಲಿಕಾ, ನೀಲೋತ್ಫಲ ಎಂಬ ಬಾಣಗಳನ್ನು ಪ್ರಯೋಗಿಸಿ ಎಲ್ಲೆಲ್ಲೂ ಹಸಿರು ಕಂಗೊಳಿಸುವಂತೆಯೂ, ಮೊಲ್ಲೆ-ಮಲ್ಲಿಗೆ-ಜಾಜಿ-ಸಂಪಿಗೆ-ಸೇವಂತಿಗೆ-ಪುನ್ನಾಗ-ಕರವೀರ-ಕಮಲದಂತಹ ಬಣ್ಣಬಣ್ಣದ ಹೂಗಳು ಅರಳುವಂತೆಯೂ, ಸುಗಂಧಭರಿತ ತಂಗಾಳಿ ತೀಡುತ್ತಿರುವಂತೆಯೂ ನೋಡಿಕೊಂಡು ಶಿವನ ತಪೋಭಂಗಕ್ಕೆ ಕಾರಣೀಭೂತನಾಗುತ್ತಾನೆ. ಕಣ್ತೆರೆದ ಶಿವನಿಗೆ ಮೊದಲು ಕಂಡಿದ್ದು ಪಾರ್ವತಿ. ಆಕೆಯ ಮುಗುಳು ನಗೆಗೆ ಮನಸೋತರೂ ತನ್ನ ತಪಸ್ಸಿಗೆ ಭಂಗತಂದ ವ್ಯಕ್ತಿಯನ್ನು ಆತ ಕುಳಿತಲ್ಲೇ ಗ್ರಹಿಸಿ ಕೋಪದಿಂದ ತನ್ನ ಮೂರನೇ ಕಣ್ಣನ್ನು ತೆರೆದು ಕ್ಷಣಮಾತ್ರದಲ್ಲಿ ಮನ್ಮಥ[ಕಾಮ]ನನ್ನು ಸುಟ್ಟು ಭಸ್ಮಮಾಡಿಬಿಡುತ್ತಾನೆ! ಇದನ್ನು ತಿಳಿದ ರತೀದೇವಿ ತನ್ನ ಗಂಡನನ್ನು ತನಗೆ ಕೊಡು ಎಂದು ಪ್ರಾರ್ಥಿಸಿದಾಗ ಕೇವಲ ಮಾನಸರೂಪದಲ್ಲಿ ಮನ್ಮಥ ಉಳಿಯಲಿ ಎಂದು ವರನೀಡುತ್ತಾನೆ. ಹೀಗೇ ಆ ನಂತರದಲ್ಲಿ ಮನ್ಮಥ ಕೇವಲ ಸುಂದರ ಮನೋರೂಪವಾಗಿರುತ್ತಾನೆ, ಛಾಯಾರೂಪವಾಗಿದ್ದಾನೆ. ಇಂತಹ ಕಾಮನನ್ನು ದಹಿಸಿದ ದಿನ ಅತಿರೇಕದ ನಮ್ಮೆಲ್ಲಾ ಕಾಮಗಳನ್ನೂ ಸುಟ್ಟುಹಾಕಬೇಕೆಂಬುದು ಒಂದು ಹೋಲಿಕೆ. ಹೀಗಾಗಿ ಕಾಮದಹನ ನಡೆಯುತ್ತದೆ!

ಇದು ಹೋಳೀಹಬ್ಬದ ಹಿಂದಿನ ನಿಜವಾದ ಕಥೆ. ಇನ್ನು ಯಾವಯಾವ ರಾಜ್ಯದಲ್ಲಿ ಯಾವೆಲ್ಲಾ ರೀತಿಯ ಆಚರಣೆಗಳು ಎಂಬುದನ್ನು ಚಿಕ್ಕದಾಗಿ ತಿಳಿಯೋಣ:

ಉತ್ತರಪ್ರದೇಶದಲ್ಲಿ :
---------------------

ಇಲ್ಲಿನ ಬರ್ಸಾನಾ ಎಂಬಲ್ಲಿ ರಾಧಾರಾಣಿ ಎಂಬ ಪ್ರಸಿದ್ಧ ದೇವಸ್ಥಾನವಿದೆ. ಅದರ ಸುತ್ತಮುತ್ತಲಲ್ಲಿ ’ಲಾಠ್ ಮರೋ’ ಎಂದು ಹೋಳಿ ಆಚರಿಸಲ್ಪಡುತ್ತದೆ. ಬಣ್ಣ ಎರಚಿಕೊಂಡ ಗಂಡಸರು ಪರಸ್ಪರ ಕೃಷ್ಣ-ರಾಧೆಯರ ಹಾಡುಗಳನ್ನು ಹಾಡುತ್ತಾರೆ. ಸ್ತ್ರೀಯರು ದೊಣ್ಣೆಗಳನ್ನು ಹಿಡಿದು ಪುರುಷರನ್ನು ಊರಿಂದ ಹೊರಗೆ ಅಟ್ಟುವ ರೀತಿಯಲ್ಲಿ ನರ್ತಿಸುವಾಗ ಪುರುಷರು ಗುರಾಣಿಯಂತಹ ಪಾತ್ರೆಗಳನ್ನು ತಲೆಯಮೇಲೆ ಕವುಚಿಕೊಂಡು ಏಟು ತಗುಲದಂತೇ ರಕ್ಷಿಸಿಕೊಳ್ಳುತ್ತಾರೆ. ಇದು ಬಹಳಹೊತ್ತು ನಡೆಯುವ ರಂಗಿನಾಟವಾಗಿ ಹೆಸರುಮಾಡಿದೆ.

ಇನ್ನು ಮಥುರಾ ಮತ್ತು ವೃಂದಾವನಗಳಲ್ಲಿ ೧೬ ದಿನಗಳ ಪರ್ಯಂತ ಕೃಷ್ಣ ಪೂಜೆ ನಡೆಯುತ್ತದೆ. ಅಲ್ಲಿನ ಜನರಿಗೆ ಇದು ಬಹಳ ವಿಶೇಷ ಹಬ್ಬವಾಗಿದೆ. ಗೋರಖಪುರದಲ್ಲಿಯೂ ಕೂಡ ಹೋಳಿಯ ದಿನ ಬೆಳಿಗ್ಗೆ ಪೂಜೆ ನಡೆಯುತ್ತದೆ. ಸಹೋದರ ಬಾಂಧವ್ಯ ಹೆಚ್ಚಿಸುವ ಹಬ್ಬವೆಂದು ಪರಿಗಣಿತವಾದ ಈ ಹಬ್ಬದ ದಿನ ಪರಸ್ಪರ ಕೆಂಪು ಬಣ್ಣವನ್ನು ಹಚ್ಚಿಕೊಂಡು ಅನ್ಯೋನ್ಯತೆಯನ್ನು ಕಂಡುಕೊಳ್ಳುತ್ತಾರೆ.

ಉತ್ತರಖಂಡದಲ್ಲಿ :
------------------

ಕುಮಾಂವ್ ನಲ್ಲಿ ಹೋಲೀ ಆಚರಣೆಗೆ ಮಹತ್ವ ನೀಡಿರುವುದು ಸಂಗೀತದ ತಳಹದಿಯಲ್ಲಿ. ಬೈಠಕಿ ಹೋಲಿ[ನಿರ್ವಾಣ್ ಕಿ ಹೋಲಿ], ಖಾರಿ ಹೋಲಿ, ಮಹಿಳಾ ಹೋಲಿ ಹೀಗೇ ಮೂರು ವಿಧಗಳು ಕಾಣಸಿಗುತ್ತವೆ. ಸಂಗೀತದ ಆರಂಭ ದೇವಸ್ಥಾನಗಳಿಂದ. ಆಮೇಲೆ ಅದು ಹಲವು ಪ್ರದೇಶಗಳಲ್ಲಿ ನಡೆಯುತ್ತದೆ. ಹಲವು ವಾದ್ಯಪರಿಕರಗಳನ್ನು ಬಳಸಲಾಗುತ್ತದೆ. ಪೀಲು, ಭೀಂಪಲಾಸಿ, ಸಾರಂಗೀ ರಾಗಗಳು ಮಧ್ಯಾಹ್ನಕಾಲದಲ್ಲಿ ಹಾಡಲ್ಪಟ್ಟರೆ, ಕಲ್ಯಾಣ್,ಶ್ಯಾಮಕಲ್ಯಾಣ್, ಯಮನ್ ರಾಗಗಳು ಸಂಜೆಹೊತ್ತಿನಲ್ಲಿ ಹಾಡಲ್ಪಡುತ್ತವೆ. ಖಾರಿ ಹೋಲಿಯನ್ನು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಬಿಳಿಯ ಕುರ್ತಾ ಪೈಜಾಮು ತೊಟ್ಟ ಜನ ನಮ್ಮಲ್ಲಿನ ಜನಪದರಂತೇ ಡೋಳು-ಹುರ್ಕಾ ಬಡಿಯುತ್ತಾ, ಹಾಡುತ್ತಾ ಕುಣಿಯುತ್ತಾ ಆಚರಿಸುತ್ತಾರೆ.

ಊರಿನಲ್ಲಿ ಬಳಕೆಗೆ ಅನರ್ವಾದ ಹಳೆಯ ಮರದ ವಸ್ತುಗಳನ್ನು ಹದಿನೈದುದಿನ ದಿನಗಳ ಮುಂಚೆಯೇ ಒಂದುಕಡೆ ರಾಶಿಹಾಕಿ ’ಚೀರ್ ಬಂಧನ್’ ತಯಾರಿಸಿ ಪಕ್ಕದ ಊರವರು ಕದ್ದೊಯ್ಯದಂತೇ ಕಾಯುತ್ತಾರೆ. ಹೋಳಿಯ ದಿನ ಹಸಿರು ಟೊಂಗೆಯನ್ನು ಮಧ್ಯೆ ನೆಟ್ಟು ’ದುಲ್ಹೆಂದಿ’ ಎಂಬ ಆಚರಣೆ ನಡೆಯುತ್ತದೆ.

ಬಿಹಾರದಲ್ಲಿ :
--------------

ಬಿಹಾರದ ಭೋಜ್ಪುರೀ ಭಾಷೆಯಲ್ಲಿ ಹೋಲಿಯನ್ನು ’ಫಾಗ್ವಾ’ ಎನ್ನುತ್ತಾರೆ. ಫಾಲ್ಗುಣ ಪೂರ್ಣಿಮೆಯದಿನ ಹೋಲಿಕಾದಹನ ನಡೆಯುತ್ತದೆ. ರಾಶಿಹಾಕಿದ ಬೇಡದ ಮರದ ವಸ್ತುಗಳಿಗೆ ಆ ಪ್ರಾಂತದ ಹಿರಿಯ ಪುರೋಹಿತನೊಬ್ಬ ಬೆಂಕಿಹಚ್ಚುತ್ತಾನೆ. ನಂತರ ಸುತ್ತಲೂ ಇರುವ ಜನರಿಗೆ ಆತ ಕೆಂಪು ಬಣ್ಣವನ್ನು ಹಚ್ಚುತ್ತಾನೆ. ಮಾರನೇ ಬೆಳಿಗ್ಗೆ ಎಲ್ಲರೂ ಪರಸ್ಪರ ಬಣ್ಣ ಎರಚಾಡುತ್ತಾರೆ. ಭಂಗೀ ಪಾನಕ, ಗಾಂಜಾ, ಪಕೋಡ, ತಂಪುಪಾನೀಯಗಳು ಮತ್ತು ಸಾರಾಯಿ ಹೇರಳವಾಗಿ ಬಳಸಲ್ಪಡುತ್ತವೆ.


ಬಂಗಾಳದಲ್ಲಿ:
--------------

’ಡೋಳ್ ಪೂರ್ಣಿಮಾ’ ದಿನ ಬೆಳಿಗ್ಗೆ ವಿದ್ಯಾರ್ಥಿಗಳು ಕೇಸರೀ ಅಥವಾ ಬಿಳಿ ಬಣ್ಣದ ದಿರಿಸುಗಳಲ್ಲಿ ತಯಾರಾಗಿ ಕೊರಳಿಗೆ ಸುಗಂಧಸೂಸುವ ಹೂಮಾಲೆಗಳನ್ನು ಧರಿಸುತ್ತಾರೆ. ಕೃಷ್ಣ-ರಾಧೆಯರ ಚಿತ್ರಪಟಗಳನ್ನು ಅಲಂಕೃತ ವಾಹನಗಳಲ್ಲಿಟ್ಟು ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ಹುಡುಗರು ಕೃಷ್ಣ-ರಾಧೆಯರ ಹಾಡುಹಾಡುತ್ತಾ ನಲಿದರೆ ಮಿಕ್ಕುಳಿದವರು ಬಣ್ಣ ಎರಚಾಟ ನಡೆಸುತ್ತಾರೆ. ಪ್ರತೀ ಮನೆಯಲ್ಲೂ ಮನೆಹಿರಿಯ ಉಪವಾಸ ವ್ರತ ನಡೆಸಿ ಕೃಷ್ಣ ಮತ್ತು ಅಗ್ನಿ ಇಬ್ಬರನ್ನೂ ಪೂಜಿಸುತ್ತಾನೆ. ಪೂಜಾವಿಧಿಗಳು ಮುಗಿದಮೇಲೆ ನೈವೇದ್ಯ ಅರ್ಪಿಸುತ್ತಾನೆ.

ಶಾಂತಿನಿಕೇತನದಲ್ಲಿ ಈ ಹಬ್ಬವನ್ನು ಸಂಗೀತದ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಇಡೀ ಬಂಗಾಳದಲ್ಲಿ ಮಾಲ್ಪೋವಾ, ಕ್ಷೀರ್ ಸಂದೇಶ್, ಬಸಂತಿ ಸಂದೇಶ್ ಮತ್ತು ಪಾಯಸಗಳನ್ನು ತಯಾರಿಸಿ ತಿನ್ನುತ್ತಾರೆ.

ಓಡಿಶಾದಲ್ಲಿ :
--------------

ಬಹುತೇಕ ಉತ್ತರಭಾರದೆಡೆಯಲ್ಲೆಲ್ಲಾ ನಡೆದಂತೇ ಇಲ್ಲೂ ಹಬ್ಬ ಆಚರಿಸಲ್ಪಡುತ್ತದೆ. ಒಂದೇ ಬದಲಾವಣೆ ಎಂದರೆ ಇಲ್ಲಿ ಕೃಷ್ಣನ ಚಿತ್ರಪಟಗಳ ಬದಲಿಗೆ ಪೂರಿ ಜಗನ್ನಾಥನ ಚಿತ್ರಪಟಗಳನ್ನು ಬಳಸಲಾಗುತ್ತದೆ.

ಗೋವಾದಲ್ಲಿ :
-----------------

ಗೋವಾವಾಸೀ ಕೊಂಕಣಿಗರಿಗೆ ವಿಶಿಷ್ಟ ಹಬ್ಬವಿದು. ಇದನ್ನವರು ಸಿಗ್ಮೋ ಅಥವಾ ಶಿಶಿರೋತ್ಸವ್ ಎನ್ನುತ್ತಾರೆ. ಸುಮಾರು ತಿಂಗಳವರೆಗೂ ಈ ಹಬ್ಬದ ಅಚರಣೆಯ ಸಂಭ್ರಮ ಅಲ್ಲಲ್ಲಿ ಕಾಣುತ್ತದೆ. ಹೋಳಿಯದಿನ ಮಾತ್ರ ಹೋಲಿಕಾ ಪೂಜೆ, ದಹನ, ಧೂಳ್ವಾಡ್, ಧೂಳೀ ವಂದನ್, ಹಳ್ದೂಣೆ ಅಥವಾ ಹಳದೀ ಮತ್ತು ಕೇಸರೀ ಬಣ್ಣಗಳನ್ನು ಗುಲಾಲು ಬಣ್ಣವಾಗಿ ದೇವರಿಗೆ ಅರ್ಪಿಸುವ ಆಚರಣೆಗಳು ನಡೆಸಲ್ಪಡುತ್ತವೆ.


ಗುಜರಾತ್ ನಲ್ಲಿ :
----------------
--



ಮುಖ್ಯಬೀದಿಗಳ ಚೌಕಗಳಲ್ಲಿ ಹೋಲಿಕಾದಹನ ನಡೆಯುತ್ತದೆ. ರಾಬೀ ಬೆಳೆಯ ಕಾಲವಾದ್ದರಿಂದ ರೈತರಿಗೆ ಸುಗ್ಗಿಯ ಕಾಲ ಇದಾಗಿದೆ. ಉಡುಪಿಯ ಇಟ್ಲಪಿಂಡಿ ಉತ್ಸವದಂತೇ ಅಲ್ಲಲ್ಲಿ ಮಡಕೆಗಳಲ್ಲಿ ಮೊಸರನ್ನು ತುಂಬಿ ಎತ್ತರದಲ್ಲಿ ನೇತಾಡಿಸಿರುತ್ತಾರೆ. ಹರೆಯದ ಹುಡುಗರು ಒಬ್ಬರಮೇಲೋಬ್ಬರು ಹತ್ತಿಕೊಂಡು ಅದನ್ನು ಒಡೆಯುವ ಸಾಹಸ ಕ್ರೀಡೆ ನಡೆಯುತ್ತದೆ. ಹುಡುಗರು ಈ ಪ್ರಯತ್ನದಲ್ಲಿರುವಾಗ ಹುಡುಗಿಯರು ದೂರದಿಂದ ಪಿಚಕಾರಿಗಳ ಮೂಲಕ ಅವರಮೇಲೆ ಬಣ್ಣದ ನೀರನ್ನು ಎರಚುತ್ತಿರುತ್ತಾರೆ. ಮಡಕೆ ಒಡೆದ ಹುಡುಗನನ್ನು ’ಹೋಲಿ ಕಿಂಗ್’ ಎಂದು ಗೌರವಿಸಲಾಗುತ್ತದೆ. ನಂತರ ಸಾವಿರಾರು ಜನರು ಮೆರವಣಿಗೆಗಳಲ್ಲಿ ತೆರಳಿ ಕೃಷ್ಣ ತಮ್ಮ ಮನೆಗಳಿಗೆ ಬೆಣ್ಣೆ ಕದಿಯಲು ಬಂದಿರಬಹುದೆಂದು ಭಾವಿಸುತ್ತಾರೆ!

ಕೆಲವು ಪ್ರದೇಶಗಳಲ್ಲಿ ಮೈದುನರು ಅತ್ತಿಗೆಯರಿಗೆ ಬಣ್ಣ ಎರಚುತ್ತಿದ್ದರೆ ಅತ್ತಿಗೆಯಂದಿರು ಸುತ್ತಿದ ಸೀರೆಯ ಹಗ್ಗದಿಂದ ತಮ್ಮ ಮೈದುನರಿಗೆ ಠಳಾಯಿಸುತ್ತಾರೆ.

ಮಹಾರಾಷ್ಟ್ರದಲ್ಲಿ :
-------------------

ಮಹಾರಾಷ್ಟ್ರದಲ್ಲಿಯೂ ಹೋಲಿಕಾ ಕಾಮದಹನ ನಡೆಯುತ್ತದೆ. ಇದನ್ನು ’ಶಿಗ್ಮಾ’ ಎನ್ನುತ್ತಾರೆ. ಹೋಳೀ ಹಬ್ಬಕ್ಕೂ ವಾರಕಾಲ ಮುಂಚೆಯೇ ಹರೆಯದ ಹುಡುಗರು ಮನೆಮನೆಗೂ ತೆರಳಿ ಹಣ, ಸೌದೆ ಸಂಗ್ರಹಿಸುತ್ತಾರೆ. ಹಬ್ಬದ ದನ ಗೊತ್ತಾದ ಜಾಗದಲ್ಲಿ ದೊಡ್ಡದಾಗಿ ರಾಶಿಹಾಕಿದ ಕಟ್ಟಿಗೆತುಂಡುಗಳಿಗೆ ಬೆಂಕಿ ಹಚ್ಚುತ್ತಾರೆ. ಅಗ್ನಿಗೆ ನೈವೇದ್ಯ ಅರ್ಪಿಸುವುದು ಇಲ್ಲಿನವರ ವಾಡಿಕೆ. ಬಹುತೇಕ ಎಲ್ಲಾ ಮನೆಗಳಲ್ಲೂ ’ಪೂರಣ್ ಪೊಳಿ’ [ಹೂರಣದ ಹೋಳಿಗೆ] ಮಾಡುತ್ತಾರೆ. ಮಕ್ಕಳು " ಹೋಳೀರೇ ಹೋಳಿ ಪೂರಣಾಚಿ ಪೊಳಿ" ಎಂದು ಕೂಗಿ ಹರ್ಷಿಸುತ್ತಾರೆ. ಆದರೆ ಇಲ್ಲಿ ಬಣ್ಣಗಳ ಎರಚಾಟ ನಡೆಯುವುದು ರಂಗಪಂಚಮಿಯ ದಿನ ಎಂದರೆ ಹೋಳಿಯ ದಿನದಿಂದ ಐದನೇ ದಿನ.

ಮಣಿಪುರದಲ್ಲಿ :
-----------------

ಮಣಿಪುರದಲ್ಲಿ ಹೋಳಿ ಆರು ದಿನಗಳ ಹಬ್ಬ. ಈ ಹಬ್ಬ ಅಲ್ಲಿನ ಯೋಸಾಂಗ್ ಎಂಬ ಹಬ್ಬದ ಜೊತೆಗೆ ಸಮ್ಮಿಶ್ರವಾಗಿ ಆಚರಿಸಲ್ಪಡುತ್ತದೆ. ಬೇಡದ ವಸ್ತುಗಳನ್ನು ಪೇರಿಸಿ ಮಾಡಿದ ಗುಡಿಸಲಿಗೆ ಬೆಂಕಿ ಹಚ್ಚುವ ಮೂಲಕ ಹಬ್ಬದ ಆರಂಭವಾಗುತ್ತದೆ. ಹುಡುಗರು ಮನೆಮನೆಗೆ ತೆರಳಿ ’ನಾಕಾಥೆಂಗ್’ ಎಂದು ಕರೆಯಲ್ಪಡುವ ಹಣ ಮತ್ತು ಕಾಣಿಕೆಗಳನ್ನು ಸಂಗ್ರಹಿಸುತ್ತಾರೆ. ’ಲಾಮ್ಟಾ’[ಫಾಲ್ಗುಣ]ದ ಹೋಳಿಯ ರಾತ್ರಿ ’ತಾಬಾಲ್ ಚೋಂಗ್ಬಾ’ ನರ್ತನ ನಡೆಸಲ್ಪಡುತ್ತದೆ. ಲಯಬದ್ಧ ಡ್ರಮ್ ಗಳ ಸದ್ದಿನೊಂದಿಗೆ ಮನಮೋಹಕ ನರ್ತನ ಮುದನೀಡುತ್ತದೆ. ಕೃಷ್ಣನ ದೇವಾಲಯಗಳಲ್ಲಿ ಪೂಜೆ ನಡೆಯುತ್ತದೆ. ಜನ ಭಜನೆಗಳನ್ನೂ ಹಾಡುತ್ತಾರೆ. ಬಿಳೀ ದಿರಿಸುಗಳಲ್ಲಿ ಸಾವಿರಾರು ಜನ ಒಟ್ಟೊಟ್ಟಿಗೆ ಕೃಷ್ಣಮಂದಿರಗಳಿಂದ ಮೆರವಣಿಗೆ ಹೊರಡುತ್ತಾರೆ. ಮೊದಲು ಇಂಪಾಲದಲ್ಲಿ ಮಾತ್ರ ಇದು ನಡೆಯುತ್ತಿದ್ದು ಈಗೀಗ ಮಣಿಪುರದ ಎಲ್ಲೆಡೆಯಲ್ಲೂ ನಡೆಯುತ್ತದೆ.

ನಮ್ಮ ಕರ್ನಾಟಕದಲ್ಲಿ :
-----------------------

ನಮ್ಮ ಮೈಸೂರಿನದೇ ಚಿತ್ರ

ಹೊಸದಾಗಿ ಹೇಳಬೇಕಾಗಿಲ್ಲ. ಹೋಲಿಕಾ-ಕಾಮದಹನದ ಆಚರಣೆ ನಡೆಯುತ್ತದೆ. ಕನ್ನಡ ರೈತರಿಗೆ ಸುಗ್ಗಿಯಕಾಲ. ಹಲವು ಫಸಲುಗಳು ಕೈಗೆ ಬರುವ ಈ ಸಮಯದಲ್ಲಿ ರಾಜ್ಯದ ಕರಾವಳಿ ಭಾಗಗಳಲ್ಲಿ ಸುಗ್ಗಿ ಕುಣಿತವನ್ನು ಕಾಣಬಹುದಾಗಿದೆ. ಹಾಲಕ್ಕೀ ಜನಾಂಗದ ಸುಗ್ಗಿ ಕುಣಿತ ನೋಡಲು ಸುಂದರವಾಗಿರುತ್ತದೆ. ವಾರಕ್ಕೂ ಹೆಚ್ಚುದಿನ ಸುಗ್ಗಿಕಟ್ಟಿದ ಜನ ಅವರವರ ಮನೆಗಳಿಗೆ ತೆರಳದೇ ಪ್ರತ್ಯೇಕವಾಗಿ ಒಂದು ಜಾಗದಲ್ಲಿ ಉಳಿದುಕೊಳ್ಳುತ್ತಾರೆ. ಸುಗ್ಗೀ ತುರಾಯಿ ಬಿಚ್ಚುವ ಹೋಳೀ ಹಬ್ಬದ ರಾತ್ರಿ ಕಾಮನ ಪೂಜೆ ಮತ್ತು ದಹನ ನಡೆಯುತ್ತದೆ. ಮಾರನೇ ದಿನ ಬೆಳಿಗ್ಗೆ ಗುಮ್ಟೆಪಾಂಗ ಮೃದಂಗ ತಾಳ ಹಿಡಿದ ಆ ಜನ ಮನೆಮನೆಗೆ ತೆರಳಿ "ದುಮ್ಸಾಲ್ಯೋ" ಎಂದು ರಾಗವಾಗಿ ಹಾಡುತ್ತಾ ಹಣ, ತೆಂಗಿನಕಾಯಿ, ಭತ್ತ ಇತ್ಯಾದಿಗಳನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆ. ಆ ದಿನ ’ಸುಗ್ಗಿಮನೆ’ಯಲ್ಲಿ ಭೂರಿಭೋಜನ ಮುಗಿಸಿದ ಅವರು ತಮ್ಮ ತಮ್ಮ ಮನೆಗೆ ತೆರಳುತ್ತಾರೆ. ಇನ್ನು ಮುಂದಿನವರ್ಷವೇ ಅವರು ಸುಗ್ಗಿ ಕಟ್ಟುವುದು!

ಕರ್ನಾಟಕದಲ್ಲಿ ಬಣ್ಣಗಳ ಎರಚಾಟ ಜಾಸ್ತಿ ಇಲ್ಲ. ಈಗೀಗ ಉತ್ತರಭಾರತದವರ ವಾಸ್ತವ್ಯಗಳೂ ಕೆಲವು ಅಲ್ಲಲ್ಲಿ ಇರುವುದರಿಂದ ಬಣ್ಣಗಳ ಬಳಕೆ ನಡೆಯುತ್ತಿದೆ.

ಆಂಧ್ರಪ್ರದೇಶದಲ್ಲಿ :
----------------------

ಬಹುತೇಕ ಕರ್ನಾಟಕದಂತೆಯೇ. ಕಾಮದಹನ ನಡೆಯುತ್ತದೆ. ತೆಲಂಗಾಣ ಪ್ರದೇಶಗಳಲ್ಲಿ ಬಸಂತ ಪಂಚಮಿ ಆಚರಿಸಲ್ಪಡುತ್ತದೆ. ಹೈದ್ರಾಬಾದ್ ಮುಂತಾಡೆಡೆಗೆ ಬಣ್ಣಗಳ ಎರಚಾಟ ನಡೆಯುತ್ತದೆ.


ಕೇರಳದಲ್ಲಿ:
----------------

’ಗಾಡ್ಸ್ ಓನ್ ಕಂಟ್ರಿ’ ಎಂದು ಕರೆಸಿಕೊಂಡ ಕೇರಳದಲ್ಲಿ ಸುಮಾರು ೨೨ ವಿವಿಧ ಜನಾಂಗಗಳು ಸಾಮರಸ್ಯದಲ್ಲಿ ಬದುಕುತ್ತಿವೆ. ಪಶ್ಚಿಮ ಕೋಚಿಯ ಚೆರ್ಲೈ ಎಂಬಲ್ಲಿ ಈ ಹಬ್ಬ ಗೌಡ ಸಾರಸ್ವತ ಬ್ರಾಹ್ಮಣರಿಂದ ನಡೆಸಲ್ಪಡುತ್ತದೆ. ಇಲ್ಲಿನ ಕೊಂಕಣಿಯಲ್ಲಿ ಉಕ್ಕುಳಿ ಎಂದು ಕರೆಯಲ್ಪಡುವ ಈ ಹಬ್ಬವನ್ನು ಮಲಬಾರದವರು ಮಂಜಾಳ್ ಕುಳಿ ಎನ್ನುತ್ತಾರೆ. ಗೊಸ್ರೀಪುರಂದಲ್ಲಿರುವ ತಿರುಮಲ ದೇವಸ್ಥಾನದಲ್ಲಿ ಈ ಹಬ್ಬ ಆಚರಿಸಲ್ಪಡುತ್ತದೆ.

ಜಮ್ಮು-ಕಾಶ್ಮೀರದಲ್ಲಿ:
--------------------

ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿರುವಂತೇಯೇ ನಡೆಯುತ್ತದೆ.


ಮಧ್ಯಪ್ರದೇಶದಲ್ಲಿ:
--------------------

ಉತ್ತರಭಾರತದ ಅಚರಣೆಗಳನ್ನು ಹೋಲುವ ರೀತಿಯಲ್ಲೇ ಈ ಹಬ್ಬ ವಿಶೇಷವಾಗಿ ಆಚರಿಸಲ್ಪಡುತ್ತದೆ.


ಪಂಜಾಬ್ ನಲ್ಲಿ :
------------------

ಸಿಖ್ಖರು ಹೋಲ್ ಎಂಬ ಹಬ್ಬವನ್ನು ಮಾರ್ಚ್ ಆರಂಭದಿಂದಲೇ ಆಚರಿಸಲು ಆರಂಭಿಸುತ್ತಾರೆ. ಕತ್ತಿವರಸೆ, ಕುದುರೆ ಸವಾರಿ ಇನ್ನೂ ಮೊದಲಾದ ಕುಶಲಕಲೆಗಳಲ್ಲಿ ಪಳಗಿರುವ ಸಿಖ್ಖರು ಅವುಗಳನ್ನು ದೊಡ್ಡಮಟ್ಟದಲ್ಲಿ ವ್ಯಕ್ತಪಡಿಸುತ್ತಾರೆ. ಹೆಚ್ಚಿನದಾಗಿ ಗುರುದ್ವಾರಗಳಲ್ಲಿ ಈ ಚಟುವಟಿಕೆಗಳು ಕಂಡುಬರುತ್ತವೆ.

ಸಣ್ಣದೊಂದು ಸಲಹೆ :
-------------------------------

ಇತ್ತೀಚೆಗೆ ರಾಸಾಯನಿಕ ಜನ್ಯ ಬಣ್ಣಗಳನ್ನು ತಯಾರಿಸಿ ಮಾರುತ್ತಾರೆ. ಅವುಗಳ ಬಳಕೆಯಿಂದ ಹಲವುವಿಧದ ಚರ್ಮರೋಗಗಳು ಬರುತ್ತವೆ. ಹಬ್ಬವನ್ನು ಸಂಭ್ರಮಿಸುವ ಹಂಬಲದಲ್ಲಿ, ಕಣ್ಣುಕುಕ್ಕುವ ಕಡು ರಾಸಾಯನಿಕ ಬಣ್ಣಗಳ ಆಕರ್ಷಣೆಯಲ್ಲಿ ಅವುಗಳನ್ನು ಬಳಸಿದರೆ ಹೋಳಿಯ ಪರಿಣಾಮ ಆಚರಿಸುವವರನ್ನೇ ದಹಿಸಲೂ ಬಹುದು. ಆದಷ್ಟೂ ನೈಸರ್ಗಿಕ ಬಣ್ಣಗಳನ್ನು ಹುಡುಕಿ ಬಳಸುವುದು ಒಳಿತು.


ಫಲಶ್ರುತಿ :
------------

ದೇಶದ ಜನತೆ ಸಹಜವಾಗಿ ಖುಷಿಪಡುವುದು ಬೆನ್ನೆಲುಬಾದ ಅನ್ನದಾತ ರೈತ ಸುಖಿಸಿದಾಗ ಮಾತ್ರ. ’ಬೇಸಿಗೆಯ ಬೆಳೆ’ ಎಂಬ ವಿವಿಧ ಫಸಲುಗಳು ಈ ಸಮಯ ರೈತನ ಕೈಸೇರುವುದು ನಿಸರ್ಗ ನಿಯಮ. ದೈನಂದಿನ ತನ್ನ ಕಷ್ಟಕೋಟಲೆಗಳನ್ನು ಮರೆತ ರೈತ ಹೋಳಿ ಆಚರಿಸಿ ಸಂಭ್ರಮಿಸುತ್ತಾನೆ, ರಂಜನೆಗೊಳಗಾಗಿ ಮಾನಸಿಕ ನೆಮ್ಮದಿಪಡೆಯುತ್ತಾನೆ. ಚಳಿಗಾಲದ ಚುಮುಚುಮು ಚಳಿಯ ಹಿತಕರ ಅನುಭವವನ್ನು ಮರೆತು ಬಿರುಬೇಸಿಗೆಯ ಬಿಸಿಲ ಝಳವನ್ನೂ ಸೆಕೆಯನ್ನೂ ಸಹಿಸಿಕೊಳ್ಳಲು ನಮ್ಮನ್ನು ಸಜ್ಜುಗೊಳಿಸುವ ಈ ವಾತಾವರಣ, ನಿಸರ್ಗವೇ ಜಲಧಾರೆಯಂತೇ ಒರಟಾಗದೇ, ತೈಲಧಾರೆಯಂತೇ ಪಸೆಯುಳ್ಳದ್ದಾಗಿ ನುಣುಪಾಗಿ ಕರೆದೊಯ್ಯುವ ಉಪಾಯ ಈ ಟ್ರಾನ್ಸಿಷನ್ ಪೀರಿಯಡ್! [ನೀರಿನಧಾರೆ ಹರಿದು ಮುಗಿದಾನಂತರ ಆರಿದ ಜಾಗದಲ್ಲಿ ತೇವ ಇರುವುದಿಲ್ಲ, ತೈಲಧಾರೆ ಹರಿಸಿದ ಜಾಗದಲ್ಲಿ ಎಣ್ಣೆಯ ನಯವಾದ ಪಸೆ ಇದ್ದೇಇರುವುದಲ್ಲಾ ?] ಇದು ಈ ಹಬ್ಬದ ವೈಜ್ಞಾನಿಕ ಮಹತ್ವವಾಗಿದೆ.

ಹೋಳೀ ಹಬ್ಬದ ಬಗ್ಗೆ ಕಥೆಗಳನ್ನೂ ವಿವಿಧ ಪ್ರಾಂತಗಳಲ್ಲಿನ ಪ್ರಾದೇಶಿಕ ಆಚರಣೆಗಳನ್ನೂ ತಿಳಿದುಕೊಂಡ ನಿಮಗೆ ಹಬ್ಬದ ಸಡಗರವನ್ನು ಹಂಚುವ ಸಲುವಾಗಿ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯ ಅತ್ಯುತ್ತಮ ಕೃಷ್ಣ ಭಜನೆಯೊಂದನ್ನು ತೋರಿಸುತ್ತಾ ಹೋಳಿಯ ಶುಭ ಅವಸರದಲ್ಲಿ ಹಾರ್ದಿಕ ಶುಭಕಾಮನೆಗಳನ್ನು ಸಲ್ಲಿಸುತ್ತಿದ್ದೇನೆ, ನಮಸ್ಕಾರ.




Saturday, March 3, 2012

ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಸಂಭ್ರಮ !

ಚಿತ್ರಕೃಪೆ: ಅಂತರ್ಜಾಲ

ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಸಂಭ್ರಮ!

ಚಿಕ್ಕದೊಂದು ವಿಷಯವನ್ನು ದೊಡ್ಡದಾಗಿ ಹೇಳಿ ಸಂಭ್ರಮಿಸುವ ಪರಿಪಾಟ ನಮ್ಮಲ್ಲಿ ಅನೇಕರಿಗೆ ಇರುತ್ತದೆ. ಅದು ತಪ್ಪು ಎನ್ನುವುದಿಲ್ಲ. ಆದರೆ ಚಿಕ್ಕದನ್ನೇ ದೊಡ್ಡದನ್ನಾಗಿ ಮಾಡುವ/ಬೆಳೆಸುವ ಸ್ವಭಾವ ಕೆಲವೊಮ್ಮೆ ಹೋದಲ್ಲೆಲ್ಲಾ ಅದನ್ನೇ ಮಾಡುವುದು ಅರಿವಿಗಿಲ್ಲದೇ ನಡೆದುಬಿಡುತ್ತದೆ. ಕೆಲವೊಮ್ಮೆ ಚಿಕ್ಕದನ್ನು ದೊಡ್ಡದನ್ನಾಗಿ ಮಾಡಲೇಬೇಕಾದ ಅನಿವಾರ್ಯತೆ ಬಂದುಬಿಡುತ್ತದೆ! ಅದಕ್ಕೊಂದು ಚಿಕ್ಕ ಉದಾಹರಣೆ: ನಮ್ಮೂರಕಡೆ ಹಳ್ಳಿಯ ರಸ್ತೆಯಲ್ಲಿ ರಾತ್ರಿ ಹೊತ್ತಿನಲ್ಲಿ ಒಬ್ಬ ಅನಿರೀಕ್ಷಿತವಾಗಿ ಸೈಕಲ್ ಏರಿ ಹೊರಟ. ಅವನು ತುರ್ತಾಗಿ ತಾಲೂಕಾ ಪ್ರದೇಶವನ್ನು ತಲ್ಪಲೇಬೇಕಾದ ಅನಿವಾರ್ಯತೆ ಇತ್ತಂತೆ. ಹೋಗುತ್ತಾ ಹೋಗುತ್ತಾ ತಾಲೂಕು ಕೇಂದ್ರ ತಲುಪುವಾಗ ಪಟ್ಟಣದ ವ್ಯಾಪ್ತಿ ಬರುತ್ತದಲ್ಲಾ....ಅಲ್ಲಿ ಪೋಲೀಸನೊಬ್ಬ ಕೈ ಅಡ್ಡಹಾಕಿ ನಿಲ್ಲಿಸಿದ್ದಾನೆ.


" ಹೇಯ್ ನಿಲ್ಲು "

ಸೈಕಲ್‍ನಲ್ಲಿದ್ದವನಿಗೆ ಉಚ್ಚೆ ಬರುವುದೊಂದು ಬಾಕಿ! ಯಾಕೆಂದರೆ ಹಳ್ಳೀಜನ ಪೋಲೀಸರಿಗೆ ಅಷ್ಟು ಹೆದರುತ್ತಿದ್ದರು ಆಗ.

" ಮಹಾಸ್ವಾಮೀ ನಿಂತೆ, ಯಾಕೆ ಎಂದು ಕೇಳಬಹುದಾ ? "


" ಎಲ್ಲಯ್ಯ ನಿನ್ನ ಸೈಕಲ್ ಡೈನೆಮೋ ? "

[ಆಗೆಲ್ಲಾ ರಾತ್ರಿ ಓಡಿಸೋ ಸೈಕಲ್ಲಿಗೆ ಡೈನೆಮೋ ಎಂಬ ಚಿಕ್ಕ ಹೆಡ್ ಲೈಟು ಇರಬೇಕಾದುದು ಕಡ್ಡಾಯವಾಗಿತ್ತು]


" ಮಹಾಸ್ವಾಮೀ ಡೈನೆಮೋ ಇಲ್ಲ, ಮನೇಲಿ ಯಾರಿಗೋ ಹುಷಾರಿಲ್ಲ, ಅದಕ್ಕೇ ವೈದ್ಯರನ್ನು ಕಾಣಲು ಬಂದೆ "


" ಎಲಾ ಇವನ ನನ್ನ ಹತ್ರ ಸುಳ್ ಹೇಳ್ತೀಯಾ ? ಬಿಡುವುದಿಲ್ಲ ಇಲ್ಲೇ ಇರು "

ಪರಿಪರಿಯಾಗಿ ಸೈಕಲ್ಲಿನಾತ ಬೇಡಿಕೊಂಡಮೇಲೆ ...


" ಆಯ್ತು ನಿನ್ನ ಹೆಸರು ಹೇಳು ಬರೆದುಕೊಳ್ತೇನೆ "


" ಭಯಕೃದ್ಭಯನಾಶನಾಚಾರ್ " --ಉತ್ತರ ಬಂತು !

ಪೋಲೀಸ ಇನ್ನೊಮ್ಮೆ ಕೇಳಿದ, ಮತ್ತೊಮ್ಮೆ ಕೇಳಿದ. ಸರಿಯಾಗಿ ಬರೆದುಕೊಳ್ಳಲು ಆಗಲೇ ಇಲ್ವಂತೆ!

" ಹೂಂ ..ಹೋಗ್ ಹೋಗು ಇನ್ಮೇಲೆ ಡೈನೆಮೋ ಇಲ್ದೇ ಓಡಿಸ್ಬೇಡ "

ಎಂದನಂತೆ!

ಸೈಕಲ್ ಸುದ್ದಿ ಬಂದಾಗಲೆಲ್ಲಾ ಈ ಕಥೆ ನೆನಪಾಗುತ್ತದೆ; ಗೆಳೆಯರ ಗುಂಪಿನಲ್ಲಿ ತಮಾಷೆಯಾಗಿ ಬೆಳೆಯುತ್ತದೆ, ದೊಡ್ಡದಾಗುತ್ತದೆ!

ಆದರೆ ಹಿಂದೊಮ್ಮೆ ಚಿಕ್ಕದಾದ, ಪೋಲೀಸರು ಮತ್ತು ವಕೀಲರ ನಡುವಿನ ತೊಡಕೊಂದನ್ನು ಮಾಧ್ಯಮದವರು ದೊಡ್ಡದಾಗಿ ತೋರಿಸಿದ್ದೇ ನಿನ್ನೆಯ ಅನಾಹುತಕ್ಕೆ ಕಾರಣವಾಯ್ತು ಎಂಬುದು ನನ್ನ ಅನಿಸಿಕೆಯಾಗಿದೆ. ಸಮಾಜಕ್ಕೆ ಎಲ್ಲರೂ ಬೇಕು. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ. ಮಾಧ್ಯಮ ಚತುರ್ಥ ಅಂಗವಾಗಿ ಬರುತ್ತದೆ ಎಂದರೆ ತಪ್ಪಲ್ಲ. ಕೆಲವೊಮ್ಮೆ ಸರಕಾರೀ ವಿಭಾಗಗಳಲ್ಲೇ ಕೆಲವು ತಂಟೆ-ತಕರಾರು ಉದ್ಭವವಾಗುವುದು ಸಹಜ. ಅದಕ್ಕೂ ನ್ಯಾಯಾಲಯ ಪರಿಶೀಲಿಸಿ ಪರಿಹಾರ ಸೂಚಿಸುತ್ತದೆ. ವಕೀಲರ ಮತ್ತು ಪೋಲೀಸರ ನಡುವೆ ನಡೆದ ಚಿಕ್ಕ ಬಡಿದಾಟವನ್ನು ತಿಂಗಳುಗಳ ಹಿಂದೆ ಮಾಧ್ಯಮದವರು ಬಿತ್ತರಿಸಿದ್ದೇ ನಿನ್ನೆಯ ಘಟನೆಗೆ ಮೂಲ ಕಾರಣವಿರಬಹುದೇ ಎಂಬುದು ಹಲವರಿಗೆ ಬಂದ ಸಂಶಯ.

ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಮಾಧ್ಯಮದವರ ವೃತ್ತಿ ಗುಣಧರ್ಮ ಅವತ್ತು ವಕೀಲರುಗಳ-ಆರಕ್ಷಕರ ನಡುವಿನ ಕಥೆಯನ್ನೂ ತೋರಿಸಿತ್ತು! ಆ ಈರ್ಷ್ಯೆಯೇ ವಕೀಲರುಗಳಿಗೆ ಕೋಪಬರಿಸಿತ್ತು ಎನಿಸುತ್ತದೆ. ಏನಿದ್ದರೂ ನ್ಯಾಯಾಂಗದಲ್ಲಿ ಕೆಲಸಮಾಡುವ ವಕೀಲರುಗಳು ಹೊಡೆದಾಟಕ್ಕೆ ಇಳಿದಿದ್ದು ಖಂಡನಾರ್ಹವೇ ಸರಿ. ಅದು ಎಲ್ಲರಿಗೂ ಬೇಸರ ತರಿಸಿದೆ. ಹೀಗಾಗಿ ಚಿಕ್ಕದನ್ನು ದೊಡ್ಡದುಮಾಡಿ ಸಂಭ್ರಮಿಸುವ ಮೊದಲು ಯೋಚಿಸಲೇ ಬೇಕು ಎಂಬುದು ಪಥ್ಯ.

ಇತ್ತೀಚೆಗೆ ಮಾಧ್ಯಮದವರ ಮೇಲೂ ಸಾಕಷ್ಟು ಆಪಾದನೆಗಳಿವೆ. ಮಾಧ್ಯಮದ ಕೆಲವರು [ಎಲ್ಲವರೂ ಅಲ್ಲ ಎಂಬುದನ್ನು ಈಗಲೇ ಸ್ಪಷ್ಟಪಡಿಸುತ್ತೇನೆ] ದಬ್ಬಾಳಿಕೆ ಮಾಡುತ್ತಾರಂತೆ. " ಏನ್ರೀ ನಾವು ಮಾಧ್ಯಮದವ್ರು " ಎಂದು ಎಲ್ಲದಕ್ಕೂ ಬೆದರಿಕೆ ಹಾಕುತ್ತಾರಂತೆ! ಇದಕ್ಕೆ ಪೂರಕವಾಗಿ ನಾನು ಕೇಳಿದ ಘಟನೆಯೊಂದು ಹೀಗಿದೆ : ಒಂದುಕಡೆ ಪ್ರಾಚೀನ ದೇವಳವೊಂದಿದೆ. ಅಲ್ಲಿ ಯಾತ್ರಿಕರು ಜಾಸ್ತಿ ಬರುತ್ತಿದ್ದಾರೆ. ಯಾರ್ಯಾರೋ ನಿಸರ್ಗ, ಪ್ರವಾಸ ಎಂದೆಲ್ಲಾ ಹೇಳಿಕೊಂಡು ತಿನ್ನುವುದಕ್ಕೆ, ಕುಡಿಯುವುದಕ್ಕೆ ಒಂದಷ್ಟು ಕಟ್ಟಿಸಿಕೊಂಡು ಬರುತ್ತಾರೆ. ಹಾಗೆ ಬರುವ ನಾಕುಚಕ್ರದ ಗಾಡಿಗಳನ್ನು ಗೇಟಿನಲ್ಲಿ ಪಾಸ್ ಮೂಲಕ ಒಳಗೆ ನಿಲ್ಲಿಸಲು ಬಿಡಲಾಗುತ್ತದೆ. ಯಾಕೆಂದರೆ ಯಾರು ಯಾರು? ಯಾರು ಭಯೋತ್ಫಾದಕರು-ಯಾರು ಅಲ್ಲಾ ? ಎಂದೆಲ್ಲಾ ಗೊತ್ತಾಗುವುದಿಲ್ಲವಲ್ಲಾ! ಹೀಗಾಗಿ ವಾಹನದಲ್ಲಿ ಬಂದವರು ಒಬ್ಬರು ಕೆಳಗಿಳಿದು ಅಲ್ಲಿನ ಕಚೇರಿಗೆ ಹೋಗಿ ಹೆಸರು, ವಿಳಾಸ, ಗಾಡಿಯ ಮಾಹಿತಿ ನೀಡಿ ಪಾಸು ಪಡೆದು ಬರಬೇಕು. ಆಮೇಲೆ ಗೇಟ್ ಕೀಪರ್ ಗಾಡಿಯನ್ನು ಒಳಗೆ ಬಿಡುತ್ತಾನೆ.

ಒಂದುದಿನ ಅನಿರೀಕ್ಷಿತವಾಗಿ ಒಂದು ನಾಕುಚಕ್ರದ ವಾಹನ ಬಂದಿದೆ. ಅದರಲ್ಲಿ ಒಬ್ಬಳು ಹೆಂಗಸು ಇದ್ದಳಂತೆ. ಕೂತಲ್ಲಿಂದಲೇ ಅದೇನೋ ಮಾತು ನಡೆಯಿತು ಗೇಟ್ ಕೀಪರ್ ಜೊತೆಗೆ. ಮಾತು ವಾದಕ್ಕಿಳಿಯಿತು. ಆತ ಪಾಸು ಇಲ್ಲದೇ ಬಿಡುವುದಿಲ್ಲ ಎಂದು...ಈಕೆ "ನಾವು ಮಾಧ್ಯಮದವರು" ಎಂದು! ಮಾಧ್ಯಮದ ಮಹಿಳೆಯ ಧಮಕಿ ಎಲ್ಲೀವರೆಗೆ ಬಂತೆಂದರೆ ಪಾಪದ ಗೇಟ್ ಕೀಪರನನ್ನು ಕಾಲರ್ ಹಿಡಿದು ಕೆನ್ನೆಗೆ ಒಂದು ಹೊಡೆದಳಂತೆ. ಆಮೇಲೆ ಗಾಡಿಯಲ್ಲಿ ಅವಳ ಜೊತೆ ಬಂದಿರುವವರೆಲ್ಲಾ ಸೇರಿಕೊಂಡು ಅವನನ್ನು ಹಿಗ್ಗಾಮುಗ್ಗಾ ಥಳಿಸಿದರಂತೆ. ಆಮೇಲೆ ಕಚೇರಿಗೆ ನುಗ್ಗಿ ಅಲ್ಲಿನ ಆಡಳಿತ ಕಚೇರಿಯಲ್ಲಿರುವ ಗುಮಾಸ್ತರನ್ನೂ ಬಿಡದೇ ಅವರ ಕಾಲರ್ ಕೂಡ ಹಿಡಿದು ದಬಾಯಿಸಿದರಂತೆ! ಆಯ್ತು ಆ ಪಾಪದ ಜನ ಸುಮ್ಮನಿದ್ದರು. ಗುಮಾಸ್ತರು ಅಲ್ಲಿನ ಆಡಳ್ತೆಯ ಹಿರಿಯರಿಗೆ ಸುದ್ದಿ ತಲ್ಪಿಸಲೋ ಬೇಡವೋ ಎಂದುಕೊಂಡು ಅಳುಮುಖದಲ್ಲಿ ಕೆಲಸ ಮುಂದುವರಿಸಿದ್ದರಂತೆ.

ಮಾಧ್ಯಮದವರು ಎನಿಸಿಕೊಂಡವರು ಒಳಗೆ ಹೋದರು. ತಮಗೆ ಬೇಕಾದ ಕೆಲಸ ಮುಗಿಸಿಕೊಂಡು ಹೊರಗೆ ಬಂದರು. ಮರಳಿ ಗಾಡಿ ತೆಗೆಯಲು ಹೊರಟಾಗ ಆ ಸುತ್ತಮುತ್ತಲಿನ ಅಲ್ಲಿನ ಸ್ಥಾನಿಕ ನಿವಾಸಿಗಳು ೨೫೦-೩೦೦ ಮಂದಿ ಜಮಾಯಿಸಿದ್ದರಂತೆ. ಎಲ್ಲರೂ ಸೇರಿ ಮಾಧ್ಯಮದವರು ಎಂದು ಹೇಳಿಕೊಂಡವರಿಗೆ ಎರಡೆರಡು ಬಿಟ್ಟು ಇನ್ನು ಆ ಕಡೆ ಮುಖಹಾಕದಹಾಗೇ ಮಾಡಿದ ಘಟನೆ ನಡೆದಿದೆ. ಇದನ್ನು ಆ ಮಾಧ್ಯಮದವರೂ ಸೇರಿದಂತೇ ಯಾರೂ ಸುದ್ದಿಮಾಡಲಿಲ್ಲ ಯಾಕೆಂದರೆ ಮಾಧ್ಯಮದವರೂ ತಪ್ಪು ಮಾಡುವ ಸಾಧ್ಯತೆ ಇರುತ್ತದೆ ಎಂಬುದು ಸಾಬೀತಾಗಿ ಜನ ಹಾಗೇ ಭಾವಿಸಬಹುದು ಎಂದು! ಹೀಗಾಗಿ ಮಾಧ್ಯಮದವರು ಸಿಕ್ಕಾಪಟ್ಟೆ ಸಂಭಾವಿತರು ಎಂಬುದು ತಳ್ಳಿಹಾಕಿದ ಮಾತು!

ಮಾಧ್ಯಮದಲ್ಲಿರುವ ವರದಿಗಾರರಿಗೆ ಕೆಲವೊಮ್ಮೆ ತಾವೇನು ಮಾಡುತ್ತಿದ್ದೇವೆ, ಯಾರ ಹತ್ತಿರ ಏನು ಮಾತಾಡುತ್ತಿದ್ದೇವೆ ಎಂಬ ಕನಿಷ್ಠ ಪರಿವೆಯೂ ಇರುವುದಿಲ್ಲ ಎಂಬುದಕ್ಕೆ ಒಂದು ಉದಾಹರಣೆ : ಕಳೆದಸಾಲಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧಕ್ಷರಾಗಿದ್ದ ಜೀವಿಯವರನ್ನು ಒಬ್ಬ ವರದಿಗಾರ್ತಿ ಸಂದರ್ಶಿಸಿದ್ದು ನನಗಿನ್ನೂ ನೆನಪಿದೆ. ನೂರರ ವಯೋಮಾನದ ಅವರಲ್ಲಿ " ಕನ್ನಡಕ್ಕೆ ನೀವೇನು ಕೊಡ್ಬೇಕು ಅಂತಿದೀರಾ ? " ಎಂದು ಕೇಳಿದ್ದಾಳೆ. ಅವರು ನಗುತ್ತಲೇ ತುಸು ಬಿಗುವಿನಿಂದ " ಕನ್ನಡಕ್ಕೆ ನಾನು ಕೊಡುವುದನ್ನು ಕೊಟ್ಟಾಗಿದೆ ಇನ್ನು ಬೇರೆಯವರು ಕೊಡುವುದನ್ನು ನೋಡುವುದು " ಎಂದಿದ್ದಾರೆ. ಕನ್ನಡಕ್ಕೆ ಅತ್ಯಮೂಲ್ಯ ನಿಘಂಟನ್ನೇ ತಯಾರಿಸಿ ಕೊಟ್ಟ ಜೀವಿಯವರಲ್ಲಿ ಆಕೆ ಹಾಗೆ ಕೇಳಬಹುದಿತ್ತೇ ?

ಒಪ್ಪಿಕೊಳ್ಳೋಣ: ಬಿಸಿಲು, ಮಳೆ, ಚಳಿ ಯಾವುದನ್ನೂ ಲೆಕ್ಕಿಸದೇ ಮಾಧ್ಯಮದವರು ಕ್ಯಾಮೆರಾ, ಮೈಕು ಹಿಡಿದು ವೀಕ್ಷಕ ಪ್ರಭುಗಳಿಗೆ, ಜನಸಾಮಾನ್ಯರಿಗೆ, ಪ್ರಜೆಗಳಿಗೆ ವಿಷಯತಲ್ಪಿಸುವಲ್ಲಿ ಬಹಳ ಪ್ರಯಾಸಪಡುತ್ತಾರೆ. ಅಷ್ಟಷ್ಟೇ ಪ್ರಯಾಸವನ್ನು ಆ ಯಾ ರಂಗಗಳಲ್ಲಿ ಇರುವವರು ಅನುಭವಿಸುವುದು ಬದುಕಿನ ಅನಿವಾರ್ಯತೆ. ಮಾಧ್ಯಮವೂ ಒಂದು ವೃತ್ತಿ ತಾನೇ? ಅಲ್ಲಿ ಕೆಲಸಮಾಡಿ ಅದಕ್ಕೆ ಹಣಸಂಪಾದಿಸುತ್ತಾರಲ್ಲ? ಕೊನೇಪಕ್ಷ ರೈತರ ಹಾಗಲ್ಲ! ನಿಗದಿತ ಸಂಬಳವೋ ಪ್ಯಾಕೇಜೋ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಂತೂ ಇರುತ್ತದೆ. "ಪ್ರಯಾಸ ಪಡ್ತೀವಿ ಪ್ರಯಾಸ ಪಡ್ತೀವಿ " ಅಂತ ಅದನ್ನೇ ಹೇಳಿಕೊಳ್ಳುವುದರಲ್ಲಿ ಯಾವ ಅರ್ಥವೂ ಕಾಣುವುದಿಲ್ಲ. ಎಲ್ಲಾ ವೃತ್ತಿಗಳ ಹಾಗೇ ಅಲ್ಲೂ ಅದು ಅನಿವಾರ್ಯು!

ಶುಕ್ರವಾರ ೦೨.೦೩.೧೦೧೨ ರ ಸಂಜೆ, ವಾಹಿನಿಯೊಂದರಲ್ಲಿ , ವಕೀಲರುಗಳ ದೌರ್ಜನ್ಯದಿಂದ ಒಬ್ಬ ಪೋಲೀಸ ಸತ್ತನೆಂದೂ, ಸುಮಾರು ೨೦ ಮಂದಿ ಪೋಲೀಸರನ್ನು ಕಟ್ಟಡವೊಂದರಲ್ಲಿ ಕೂಡಿಟ್ಟು ಇಬ್ಬರ ಕಣ್ಣುಕೀಳಲಾಯಿತೆಂದೂ ಪೇದೆಗಳ ಹೆಸರು ಸಹಿತ ತಿಳಿಸಿ ವರದಿ ಬಿತ್ತರಿಸುತ್ತಿದ್ದ ಒಬ್ಬ ಪುಣ್ಯಾತ್ಮ!! ಇದರ ಸತ್ಯಾಸತ್ಯತೆ ಎಷ್ಟು? ಬರೇ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಹಪಾಹಪಿಯಿಂದ ಇಲ್ಲದ್ದನ್ನೂ ಇದ್ದಹಾಗೇ ಹೇಳುವುದಕ್ಕೆ ಇದು ಸಾಕ್ಷಿಯಲ್ಲವೇ? "ವಕೀಲರ ಸಂಖ್ಯೆ ಜಾಸ್ತಿ ಆಗಿರುವುದರಿಂದ ಕೆಲಸವಿಲ್ಲದೇ ಅಲೆಯುವ ವಕೀಲರು ಈ ದೊಂಬಿಗೆ ಕಾರಣರಾಗಿರಬಹುದೇ?"--ಎಂಬ ಪ್ರಶ್ನೆಯನ್ನೂ ಆ ಪುಣ್ಯಾತ್ಮ ಎದುರು ಕೂತವರಲ್ಲಿ ಕೇಳುತ್ತಿದ್ದ. ಇನ್ನೊಂದು ವೃತ್ತಿ ಸಮುದಾಯದ ಸಂಖ್ಯಾಬಲ-ನಿರುದ್ಯೋಗದ ಬಗ್ಗೆ ಅವಹೇಳನಕಾರೀ ಮಾತು ಇದಾಗುವುದಿಲ್ಲವೇ? ಇದರಿಂದ ನೋಡುಗರ ಮನದಲ್ಲಿ ಕೆರಳುವ ಭಾವನೆಗಳೇನಿರಬಹುದು? [ಸುಳ್ಳನ್ನೇ ನೂರು ಸಲ ತೋರಿಸಿದರೆ ದೂರದಲ್ಲಿನ ಜನ ಅದನ್ನೇ ಸತ್ಯ ಎಂದು ನಂಬುವಷ್ಟು ಪರಿಣಾಮಕಾರೀ ಮಾಧ್ಯಮವಾಹಕಗಳೇ ಮಾಧ್ಯಮದವರ ಹತ್ತಿರ ಇವೆ!] ಇಂಥಾದ್ದೆಲ್ಲಾ ನೋಡಿದರೆ ಮಾಧ್ಯಮದವರು ಹೇಗಾದರೂ ಏನಾದರೂ ಹೇಳಿ ಯಾವರೀತಿಯಲ್ಲಾದರೂ ನುಣುಚಿಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆಲ್ಲಾ ಒಂದು ನಿಯಂತ್ರಕ ಕಾನೂನು ಜಾರಿಗೆ ಬರಬೇಕಾಗಿದೆ.

ಕೆಲವೊಮ್ಮೆ ಮಾಧ್ಯಮವಾಹಿನಿಗಳ ಕುರ್ಚಿಗಳಲ್ಲಿ ಕುಳಿತಾಗ ಅಧಿಕಾರ ಮದವೋ ಎಂಬಂತೇ ಚಿತ್ರ-ವಿಚಿತ್ರ ಪ್ರಶ್ನೆಗಳನ್ನು ಎದುರಿಗಿರುವ ಮಹಾನ್ ವ್ಯಕ್ತಿಗಳಲ್ಲಿ ಕೇಳುತ್ತಾರೆ. ಸ್ವರ್ಗದಿಂದ ಧರೆಗಿಳಿದವರಂತೇ ಕಾಣಿಸುತ್ತಾ, ಜನಸಾಮಾನ್ಯರಿಗಿಂತ ತಾವು ಭಿನ್ನ ತಾವು ಮಾಧ್ಯಮದವರು ಎಂಬ ಅಹಮಿಕೆ ಮೆರೆಯುವ ನಿರೂಪಕರೂ/ಸಂದರ್ಶಕರೂ ಇದ್ದಾರೆ. ತಾವು ಜನಸಾಮಾನ್ಯರಲ್ಲಿ ಒಂದುಭಾಗ ಎನ್ನುವ ಭಾವನೆ ಬರುವವರೆಗೂ ಅವರು ತಪ್ಪುಗಳನ್ನು ಮಾಡಬಹುದು ಎನಿಸುತ್ತದೆ! ಯಾವಾಗ ತಮ್ಮನ್ನು ತಾವು ಸರಿಯಾಗಿ ಅರಿಯುತ್ತಾರೋ ಆಗ ಇಂತಹ ತಾಪತ್ರಯಗಳು ನಿವಾರಣೆಯಾಗಬಹುದು.

ಪತ್ರಿಕೆ ನಡೆಸುವ ಒಬ್ಬಾತ ಹಿಂದೊಮ್ಮೆ ಅತ್ಯಂತ ಹಳೆಯ, ಉತ್ತಮ ಸಂಪ್ರದಾಯದ, ಯಾವುದೇ ತಪ್ಪನ್ನೆಸಗದ ಮಠವೊಂದಕ್ಕೆ ಕರೆಮಾಡಿ ಹಣ ಕೇಳಿದ್ದೂ ಸುದ್ದಿ ಮೊದಲೇ ಬಂದಿದೆ. ಆದರೆ ಆ ಮಠದವರು ಅದಕ್ಕೆ ಸೊಪ್ಪುಹಾಕಲಿಲ್ಲ. ಅವರ ವಿರುದ್ಧ ಒಂದಷ್ಟು ಬರೆದ ಆತ ಇನ್ಯಾರಿಗೋ ಕರೆಮಾಡಿ ಕೈಕಾಲು ಮುರಿಸಿಕೊಂಡಿದ್ದ! ’ಮಾಧ್ಯಮದವರು’ ಎನಿಸಿಕೊಂಡು ರೋಲ್ ಕಾಲ್ ಮಾಡುವ ಜನವೂ ಇದ್ದಾರೆ. ರೋಲ್ ಕಾಲ್ ನಲ್ಲೇ ಪತ್ರಿಕೆ ಓಡಿಸಿ ಮನೆ-ಮಠ ಕಟ್ಟಿಕೊಂಡವರೂ ಇದ್ದಾರೆ. ಹೀಗಾಗಿ ದೇಶದ ಎಲ್ಲೆಡೆ ಮಾಧ್ಯಮವೂ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಅಪರೂಪಕ್ಕೆ ಆರಕ್ಷಕರಲ್ಲಿ ಕೆಲವರು ಎಣ್ಣೆಹಾಕಿ ಡ್ಯೂಟಿ ಮಾಡಿದಂತೇ ಮಾಧ್ಯಮದಲ್ಲೂ ಎಡವಟ್ಟುಗಳು ಸೇರ್ಕೊಂಡಿರ್ತಾರೆ. ಇನ್ನು ಹಣ ಸ್ವೀಕೃತಿಯ ಬಗ್ಗೆ ದಿನಪತ್ರಿಕೆಗಳೇ ವರದಿ ಮಾಡಿವೆ! ಲೋಕಾಯುಕ್ತರ ವರದಿಯಲ್ಲೂ ಗಣಿಧಣಿಗಳಿಂದ ಕೆಲವರು ಹಣಪಡೆದದ್ದರ ಬಗ್ಗೆ ದಾಖಲೆ ಇದೆ ಎಂಬುದು ಗುಸುಗುಸು! ಹೀಗಾಗಿ ಮಾಧ್ಯಮದವರೂ ತಮ್ಮ ಆತ್ಮಶೋಧನೆ ಮಾಡಿಕೊಳ್ಳಬೇಕಾಗಿದೆ.

ಬೆಂಗಳೂರಿನ ವಕೀಲರ ಬಗ್ಗೆ ಬರೆಯುವ ಅಗತ್ಯವೇ ಇಲ್ಲ! ೦೨.೦೩.೧೦೧೨ ಶುಕ್ರವಾರ ಮಧ್ಯಾಹ್ನದಿಂದ ಶನಿವಾರ ರಾತ್ರೀವರೆಗೆ ಅದನ್ನು ಜನ ನೋಡೀ ನೋಡೀ ಸುಸ್ತಾಗಿ, ಬೇಸತ್ತು ಟಿವಿ ಆನ್ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ! ಇದೊಂದು ತ್ರಿಕೋನ ದ್ವೇಷ ಸರಣಿಯೆನ್ನಬಹುದೇ? ಪೋಲೀಸರ ಮೇಲಿನ ಸಿಟ್ಟಿಗೆ ವಕೀಲರು ಅವರಮೇಲೆ-ವಕೀಲರಮೇಲಿನ ಸಿಟ್ಟಿಗೆ ಪೋಲೀಸರು ವಕೀಲರ ಮೇಲೆ, ತಮ್ಮೊಳಗಿನ ಜಗಳವನ್ನು ಕೋಟ್ಯಂತರ ಜನರಿಗೆ ತೋರಿಸಿದ್ದಕ್ಕಾಗಿ ವಕೀಲರು ಮಾಧ್ಯಮದವರ ಮೇಲೆ ಹೀಗೆ ನಡೆದಿದೆ ಈ ನಿಯಮ ಉಲ್ಲಂಘನೆ! ಸರಕಾರೀ ಇಲಾಖೆಗಳಿಗೆ-ವಿಭಾಗಗಳಿಗೆ ಸಂಬಂಧಿಸಿದ ವಕೀಲರು ಮತ್ತು ಪೋಲೀಸರು ತಮ್ಮೊಳಗಿನ ಸಮಸ್ಯೆಗಳನ್ನು ಕೂತು ಮಾತಾಡಿ ಬಗೆಹರಿಸಿಕೊಳ್ಳಬೇಕಿತ್ತು. ಅದನ್ನು ಆದಷ್ಟೂ ಚಿಕ್ಕದಾಗಿ ಮಾಧ್ಯಮ ತೋರಿಸಿದ್ದರೆ ಅವರುಗಳಿಗೂ ಬೇಸರವಾಗುತ್ತಿರಲಿಲ್ಲವೇನೋ. ಹೀಗೆ ನೋಡಿದಾಗ ವಕೀಲರುಗಳೂ ಪೋಲೀಸರೂ ತಮ್ಮತಮ್ಮೊಳಗೇ ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯವೆನಿಸುತ್ತದೆ.

ಇಲ್ಲಿ ರಾಜಕಾರಣಿಗಳ ಸ್ವಾರ್ಥಪರತೆಯಿಂದ, ಪರಸ್ಪರ ಕಚ್ಚಾಟಗಳಿಂದ ಹಡಾಲೆದ್ದುಹೋದ ಪ್ರಜಾತಂತ್ರದ ವ್ಯವಸ್ಥೆಯೂ ತನ್ನ ಪಾತ್ರವನ್ನು ನಿರ್ವಹಿಸುತ್ತದೆ. ಆಳುವವರು ಸರಿಯಾಗಿದ್ದರೆ ಎಲ್ಲರೂ ಸರಿಯಾಗಿರುತ್ತಾರೆ. ಸ್ವಾತಂತ್ರ್ಯಬಂದ ಆ ಕಾಲಘಟ್ಟದಲ್ಲಿ ಆತುರದಲ್ಲಿ ಮಾಡಿದ ಸಂವಿಧಾನದಲ್ಲಿ ಸಾಕಷ್ಟು ಲೋಪದೋಷಗಳಿವೆ-ಅದನ್ನೇ ಬಂಡವಾಳ ಮಾಡಿಕೊಂಡ ಧೂರ್ತ ರಾಜಕಾರಣಿಗಳು ಅದರಿಂದಲೇ ಲಾಭಪಡೆಯಲು ತಂತ್ರಗಾರಿಕೆ ಮಾಡಿಕೊಂಡಿದ್ದಾರೆ. ವೈಯ್ಯಕ್ತಿಕ ಬದುಕಿನ ನಡತೆಯೇ ಸರಿಯಿಲ್ಲದ ಖೂಳಜನರನೇಕರು ಆಡಳಿತ ಯಂತ್ರಕ್ಕೆ ಸೇರಿಕೊಂಡಿದ್ದಾಗ, ಆಳುವ ಪಕ್ಷದ ಒಳಹುಳುಕು-ಜಗಳ ವಿಪರೀತವಾದಾಗ, ವಿರೋಧ ಪಕ್ಷಗಳು ಕೇವಲ ಚಿಕ್ಕಚಿಕ್ಕ ತಪ್ಪುಗಳನ್ನೇ ದೊಡ್ಡದು ಮಾಡಿ ವಿಜೃಂಭಿಸಿ ತಮ್ಮ ಬೇಳೇ ಬೇಯಿಸಿಕೊಳ್ಳುವ ಪರಿ ನಡೆಯುವಾಗ ಆಡಳಿತ ಹಿಡಿತವಿಲ್ಲದೇ ಸಡಿಲಗೊಳ್ಳುತ್ತದೆ. ರೋಗನಿರೋಧಕ ಶಕ್ತಿ ಕಮ್ಮಿ ಇರುವ ಬಲಹೀನ ಶರೀರಕ್ಕೆ ಹಲವು ಕಾಯಿಲೆಗಳು ಅಮರಿಕೊಂಡಂತೇ ಸಡಿಲವಾದ ಪ್ರಜಾತಂತ್ರದ ಅಂಗಾಂಗಗಳಲ್ಲಿ ಇಂತಹ ಬಡಿದಾಟ ಮೊದಲಾದ ’ಸಾಮಾಜಿಕ ರೋಗಗಳು’ ಕಾಣಿಸಿಕೊಳ್ಳುತ್ತವೆ.

ಒಟ್ಟಿನಲ್ಲಿ ನಿನ್ನೆಯ ಈ ತ್ರಿಕೋನ ಜಗಳದಲ್ಲಿ, ದೊಂಬಿಯಲ್ಲಿ, ಯಾರದು ತಪ್ಪು ಯಾರದು ಒಪ್ಪು ಎಂಬುದನ್ನು ಬಹಳ ಸಂಯಮದಿಂದ ನಿಗಾವಹಿಸಿ ನಿರ್ಧರಿಸಬೇಕಾಗಿದೆ, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಬೇಕಾಗಿದೆ. ಸಂಬಂಧಿಸಿದ ಈ ಮೂರೂ ವಿಭಾಗಗಳವರು ಕೂತು ಮಾತಾಡಿ ಜಗಳ ಪರಿಹರಿಸಿಕೊಳ್ಳಬೇಕಾಗಿದೆ. ಚಿಕ್ಕದನ್ನು ದೊಡ್ಡದಾಗಿ ಮಾಡಿ ಸಂಭ್ರಮಿಸುವ ಮೊದಲು ಹತ್ತಾರುಸಲ ಯೋಚನೆ ಮಾಡುವ ಅಗತ್ಯ ಕಾಣುತ್ತದೆ.

Thursday, March 1, 2012

’ಬೆಟ್ಟದ ಜೀವ’ ದ ಹುಟ್ಟಿಬೆಳೆದ ಮನೆಯ ಕಥೆ ಕಥೆಯಾದಾಗ !

ಚಿತ್ರಗಳ ಋಣ : ಗೂಗಲ್ ಅಂತರ್ಜಾಲ

’ಬೆಟ್ಟದ ಜೀವ’ ದ ಹುಟ್ಟಿಬೆಳೆದ ಮನೆಯ ಕಥೆ ಕಥೆಯಾದಾಗ !

ಗುಜರಿ ಆಯುವ ಹುಡುಗನೊಬ್ಬ ಬರೆಯುತ್ತಾನೆ- ’ಗೋರಿ ಕಾಯುವವರು’ ಎಂಬ ತನ್ನ ಕೆಟ್ಟ ಪದಗಳ ಬರಹದಲ್ಲಿ! ಆತನಿಗೆ ಗೋರಿಯಾವುದು ದೇವಳಯಾವುದು ಬೇರ್ಪಡಿಸಲಾಗದ ಹುಟ್ಟುಕುರುಡು! ಇಂಥವರೆಲ್ಲಾ ಇವತ್ತು ಪತ್ರಕರ್ತರಾಗಿ ಬರಹಗಾರರಾಗಿ ತಯರಾಗಿದ್ದಾರೆ ಎಂದಾಗ ಕಾಲದ ಸ್ಥಿತಿಯ ಅವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಮೊನ್ನೆಯಷ್ಟೇ ಒಬ್ಬ ಮಹಾತ್ಮರು ಹೇಳಿದ್ದಾರೆ " ಧರ್ಮ ಕಾಲಕ್ಕೆ ತಕ್ಕಂತೇ ಬದಲಾಗುವುದಿಲ್ಲ, ಧರ್ಮವೆಂಬುದು ಮಾನವ ಜೀವನದ ಒಳಿತಿಗಾಗಿ ಇರುವ ನೀತಿಯುಕ್ತ ಜೀವನಮಾರ್ಗ. ಧರ್ಮವನ್ನು ಬದಲಿಸಹೊರಡುವುದೇ ಅಧರ್ಮ, ಅದಕ್ಕೆ ಬದಲಾಗಿ ಧರ್ಮಕ್ಕೆ ನಾವು ನಮ್ಮನ್ನು ಅಳವಡಿಸಿಕೊಳ್ಳಬೇಕಾಗುತ್ತದೆ." ಅವರ ಮಾತು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಇಲ್ಲಿ ಧರ್ಮ ಎಂದರೆ ಯಾವುದು ಎಂಬ ಪ್ರಶ್ನೆ ಮೂಡಬಹುದು: ಅದು ಮಾನವ ಜೀವನಧರ್ಮ. ಮಹಾಕವಿ ಡೀವೀಜಿಯವರು ’ಜೀವನಧರ್ಮ ಯೋಗ’ ಎಂಬ ಗ್ರಂಥವನ್ನು ಬರೆದರು. ’ಮಂಕುತಿಮ್ಮನ ಕಗ್ಗ’ ಅರ್ಥವಾಗದವರಿಗೆ/ಕಗ್ಗಂಟು ಎನಿಸುವವರಿಗೆ ಇದು ಬಳಕೆಯಾಗಲಿ ಎಂಬುದು ಅವರ ಆಶಯವಾಗಿತ್ತು. ಅಂತಹ ಡೀವೀಜಿಯವರು ಬಾಳಿ ಬದುಕಿದ್ದ ಅವರ ಮನೆ ಇಂದು ಇಲ್ಲವೇ ಇಲ್ಲ. ಅ.ನ.ಕೃಷ್ಣರಾಯರು ಒಂದುಕಾಲಕ್ಕೆ ಉಪವಾಸವಿದ್ದ ಕನ್ನಡದ ಕೆಲಸಗಾರರಿಗೆ ಊಟವೊದಗಿಸಿದವರು! ಅವರ ಮನೆ ಇರುವ ಜಾಗ ಚಪ್ಪಲಿಗಳ ಗೋದಾಮು ಎಂಬುದು ತಿಳಿದರೆ ಬೇಸರವಾಗುವುದಿಲ್ಲವೇ? ಅದರಂತೇ ಮಲ್ಲಿಗೆಕವಿ ನರಸಿಂಹಸ್ವಾಮಿಯವರ ಮನೆಗೆ ಖುದ್ದಾಗಿ ನಾನು ಹೋಗಿ ನೋಡಿಬಂದಿದ್ದಿದೆ. ಇವತ್ತು ಹುಡುಕಿದರೆ ಆ ಮನೆ ಇಲ್ಲವೇ ಇಲ್ಲ!

ಕಾರಂತರು ಹುಟ್ಟಿಬೆಳೆದ ಮನೆ

ಕುಪ್ಪಳ್ಳಿಯ ವಿಸ್ತಾರವಾದ ಪ್ರದೇಶದಲ್ಲಿ ರಾಷ್ಟ್ರೀಯ ರಸ್ತೆಗಳಿಂದ ದೂರ ಉಳಿದ ಕುವೆಂಪು ಅವರ ಮನೆ ಮಾತ್ರ ಉಳಿದುಕೊಂಡಿತು. ಅದನ್ನು ರಕ್ಷಿಸಿಕೊಳ್ಳಲು, ನೋಡಿಕೊಳ್ಳಲು ಹಲವರು ಇದ್ದಾರೆ ಬಿಡಿ, ಕಾರಂತರ ಮನೆ ಹಾಗಲ್ಲ! ’ಬೆಟ್ಟದ ಜೀವ’, ’ಚೋಮನ ದುಡಿ’, ’ಮೂಕಜ್ಜಿಯ ಕನಸುಗಳು’, ’ಹುಚ್ಚುಮನಸ್ಸಿನ ಹತ್ತುಮುಖಗಳು’ ಮುಂತಾದ ಮನನೀಯ ಕಾದಂಬರಿಗಳನ್ನು ಕೊಟ್ಟ ಕಾರಂತರು ಕೈಯಾಡಿಸಿದ ಕಾರ್ಯಕ್ಷೇತ್ರ ಒಂದೇ ಎರಡೇ? ಕನ್ನಡಕ್ಕಾಗಿ ಅವರು ಕೊಟ್ಟ ಕೊಡುಗೆ ಲೆಕ್ಕಹಾಕಿದರೆ ಕುವೆಂಪುವಿಗಿಂತ ಮೇಲೆ ಕೂರಬೇಕಾದ ವ್ಯಕ್ತಿತ್ವ ಅವರದ್ದು! ಅಪಾರ ಪಾಂಡಿತ್ಯದ ಕಾರಂತರು ಸಾಹಿತ್ಯಾಸಕ್ತಿಯುಳ್ಳ ಹೊರದೇಶದಲ್ಲಿನ ಜನ ಕರೆದಾಗ ತನ್ನ ಸ್ವಂತ ಜಮೀನಿನ ಭಾಗವನ್ನೇ ಮಾರಿ ಅದರಿಂದ ಖರ್ಚನ್ನು ನಿಭಾಯಿಸಿದರೂ ಮತ್ತೂ ಸಾಲ ಬಾಕಿ ಉಳಿದಿತ್ತು ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ! ಕಾರಂತರು ವೇತನ ಪಡೆಯುವ ಯಾವುದೇ ಹುದ್ದೆಗೆ ಅಂಟಿಕೊಳ್ಳಲಿಲ್ಲ. ಕನ್ನಡಕ್ಕಾಗಿ ತನ್ನಲ್ಲಿದ್ದುದನ್ನೇ ಖರ್ಚುಮಾಡಿದರು!’ಈ ಜಗತ್ತು’ ಎಂಬ ಐದು ಸಂಪುಟಗಳ ಅವರ ಖಗೋಳಗ್ರಂಥವನ್ನು ಇಂದಿನ ಖಗೋಳಶಾಸ್ತ್ರಿಗಳು ಓದಿ ತಿಳಿದುಕೊಳ್ಳುವಂಥದ್ದಿದೆ! ಯಕ್ಷಗಾನ, ಬ್ಯಾಲೆ ನರ್ತನ, ಹಾಡು-ಹಸೆ, ಸಾಹಿತ್ಯ, ರಾಜಕೀಯ, ಶರಾವತೀ ಟೇಲರೇಸ್ ಎಂಬ ನಿಸರ್ಗಾಂದೋಲನ, ಮಕ್ಕಳಿಗೆ ಶಿಕ್ಷಣ ಹೀಗೇ ಕಾರಂತರದು ಆನೆಗಾತ್ರದ ಹೆಜ್ಜೆಗಳು! ಎಲ್ಲೇ ಹೋಗಲಿ ಕಾರಂತರು ತನ್ನದೇ ಆದ ಛಾಪು ಮೂಡಿಸಿದ್ದಾರೆ.

ಈ ಉಯ್ಯಾಲೆ ಮಂಚದಲ್ಲಿ ಕಾರಂತರು ಕುಳಿತು ಅದೆಷ್ಟು ಚಿಂತಿಸಿದರೋ ! [ಹಳೆಯ ಪರಿಕರಗಳನ್ನು ಗಮನಿಸಿ]

ಇವತ್ತು ಸರಕಾರದ ಸವಲತ್ತುಗಳಿಗೆ ಬುದ್ಧ್ಯಾಪೂರ್ವಕ ನಿಷೇಧಕ್ಕೊಳಗಾಗಿರುವ ಮೇಲ್ವರ್ಗದಲ್ಲಿ ಜನಿಸಿದ್ದರೂ ’ಚೋಮನ ದುಡಿ’ಯಲ್ಲಿ ಅವರ ಮನಮಿಡಿದ ರೀತಿಯನ್ನು ಕಾದಂಬರಿ ಓದದ ಅನೇಕರು ಅದೇ ಹೆಸರಿನ ಸಿನಿಮಾ ನೋಡಿ ಅರಿತಿದ್ದಾರೆ. ನಿಮ್ನವರ್ಗದವರ ಬಗ್ಗೆ ಕಾಳಜಿ ಇರದಿದ್ದರೆ ಅವರು ಅದನ್ನು ಬರೆಯಲು ಸಾಧ್ಯವಿತ್ತೇ ? ಒಂದು ಕಾಲಕ್ಕೆ ಕಾರಂತರು ಇದ್ದಾರೆಂದರೆ ಅವರೆದುರು ಕೆಲವರು ನಿಲ್ಲಲು ಹೆದರಿಕೊಳ್ಳುತ್ತಿದ್ದರು ಯಾಕೆಂದರೆ ತನಗನ್ನಿಸಿದ್ದನ್ನು ಯಾವ ಮುಲಾಜಿಗೂ ಒಳಗಾಗದೇ ನೇರಾನೇರ ಮುಖದಮೇಲೆ ಬಡಿದಹಾಗೇ ಹೇಳುವ ನಿಷ್ಠುರವಾದಿಯಾಗಿದ್ದರು ಕಾರಂತರು. ಮೀಸಾಕಾಯ್ದೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ತನಗೆ ಕೇಂದ್ರ ಕೊಡಮಾಡಿದ ಪ್ರಶಸ್ತಿಯನ್ನು ಧಿಕ್ಕರಿಸಿ ಜನರ ನೋವಿರುವವರೆಗೂ ತನಗೆ ಪ್ರಶಸ್ತಿ ಬೇಡವೆಂದ ಮಹಾಜನ ಕಾರಂತರು!

ಬರೆದು ಮುಗಿಯದಷ್ಟು ಬರೆಯಲ್ಲಿಕ್ಕಿರುವ ಅಗಾಧ ವ್ಯಕ್ತಿತ್ವ ಕಾರಂತರದ್ದು. ಅವರ ಬಗ್ಗೆ ಹೆಚ್ಚಿನದಾಗಿ ಇಲ್ಲಿ ಓದಿ :

ಥೈ ಥೈ ತದ್ದಿನ ಧೇಂ ಧೇಂ......[ http://nimmodanevrbhat.blogspot.in/2010/07/blog-post_14.html ]

ಕಾರಂತರೇ ಬದುಕಿದ್ದರೆ ಚತುಷ್ಪಥಕ್ಕೆ ಏನೆನ್ನುತ್ತಿದ್ದರೋ ತಿಳಿಯದು! ಯಾಕೆಂದರೆ ಇರುವ ಭೂಪ್ರದೇಶವನ್ನೆಲ್ಲಾ ಗಣಿಗೊಂದಿಷ್ಟು, ರಸ್ತೆಗಳಿಗೊಂದಿಷ್ಟು ಕೊಟ್ಟುಬಿಟ್ಟರೆ ಜನಜೀವನ ಸುಧಾರಿಸುತ್ತದೇನು ? ಅಷ್ಟಕ್ಕೂ ಅಲ್ಲಿ ಚತುಷ್ಪಥ ಯಾರಿಗೆ ಬೇಕಾಗಿದೆ? ನಾವು ವಿದೇಶೀಯರಲ್ಲ, ನಾವು ಅಮೇರಿಕನ್ನರಲ್ಲ,ನಾವು ಭಾರತೀಯರು! ನಮ್ಮದು ಕೃಷಿಪ್ರಧಾನ ದೇಶ; ಹಳ್ಳಿಗಳೇ ನಮ್ಮ ಪ್ರಮುಖ ಜೀವಜೀವಾಳ! ಅನೇಕ ಹಳ್ಳಿಗಳ ಜನಜೀವನವನ್ನೂ ಹಳ್ಳಿಗಳ ಜನರ ಜೀವನಕ್ರಮವನ್ನೂ ತಿರುಚಿಹಾಕುವ ಇಂತಹ ಹೆದ್ದಾರಿಗಳು ಯಾವ ಉದ್ಧಾರಕ್ಕಾಗಿ? ಕೇಂದ್ರ ರಸ್ತೆಕಾಮಗಾರಿಯಲ್ಲಿ ಯಾರ್ಯಾರಿಗೆ ಎಷ್ಟುಪಾಲು ? ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ರಾಜ್ಯಗಳ ಸಂಪರ್ಕವನ್ನು ಕಲ್ಪಿಸುವುದಕ್ಕೆ ಚತುಷ್ಪಥ ಅನಿವಾರ್ಯವಿತ್ತೇ ಹೊರತು ಇಲ್ಲೆಲ್ಲಾ ಅದರ ಅನಿವಾರ್ಯತೆ ಕಾಣಲಿಲ್ಲ. ಕರ್ನಾಟಕ ರಾಜ್ಯದಲ್ಲೂ ಅನವಶ್ಯಕವಾಗಿ ನಿರ್ಮಾಣಗೊಂಡ ರಾಜ್ಯಹೆದ್ದಾರಿಗಳೆಷ್ಟೋ! ಇಲ್ಲೆಲ್ಲಾ ಅಭಿವೃದ್ಧಿಯ ನೆಪದಲ್ಲಿ ಕಳ್ಳ ರಾಜಕಾರಣಿಗಳ ಬೊಕ್ಕಸಕ್ಕೆ ಎಷ್ಟೆಷ್ಟು ಹರಿದುಬಂತು ಎಂಬುದು ತಿಳಿಯುತ್ತಿಲ್ಲ!

ಕಾರಂತರ ಮನೆಯ ಹಿಂಪಾರ್ಶ್ವದಲ್ಲಿ ಔಟ್ ಹೌಸ್

ಎಡಪಂಥೀಯ ಎನಿಸಿಕೊಂಡ ಜನ ಬುದ್ಧಿಜೀವಿಗಳು ಎಂದು ಅವರಷ್ಟಕ್ಕೇ ಅವರು ಘೋಷಿಸಿಕೊಂಡಿದ್ದಾರೆ. ನೇರವಾಗಿರುವ ಮಾರ್ಗಕ್ಕೆ ಅಡ್ಡಹಾಕಿ ತಮ್ಮತ್ತ ಜನರನ್ನು ಆಕರ್ಷಿಸುವ ಅಡ್ಡಕಸುಬಿಗಳು ಅವರು! ಕಾರಂತರಿದ್ದರೆ ಇವತ್ತು ಕನ್ನಡನಾಡಿನಲ್ಲಿ ಮೆರೆಯುತ್ತಿದ್ದ ಅನೇಕ ಬುದ್ಧಿಜೀವಿಗಳು ಅಡಗಿ ಹೋಗುತ್ತಿದ್ದರು! ಗುಜರಿ ಆಯುವ ಹುಡುಗ ಬರೆಯುವ ರೀತಿ ನೋಡಿದರೆ ಆತನ ಗುಜರಿ ಸಾಮಗ್ರಿಗಳ ಬಗ್ಗೆ ನಿಜಕ್ಕೂ ಅಸಹ್ಯ ಹುಟ್ಟುತ್ತದೆ. ಕವಿ-ಸಾಹಿತಿಗಳು ಗತಿಸಿದಮೇಲೆ ಅವರ ಮನೆಗಳು, ಅವರು ಬಳಸಿದ್ದ ವಸ್ತುಗಳು ಇಂಥವೆಲ್ಲಾ ಮುಖ್ಯವಲ್ಲಾ ಕೇವಲ ಅವರ ಬರಹಗಳು-ತತ್ವಗಳು ಮಾತ್ರ ಮುಖ್ಯವೆಂಬ ಆತನ ಅನಿಸಿಕೆಯೊಂದಿಗೆ ಕಾರಂತರ ಮನೆ ಕೆಡವಿದಂತೇ ಅನೇಕ ಜನಸಾಮಾನ್ಯರ ಮನೆ ಕೆಡವಿದ್ದಾರೆ, ಸಾವಿರಾರು ಜನ ಬೀದಿ ಪಾಲಾಗಿದ್ದಾರೆ ಎನ್ನುವ ಆತನ ’ಸಾಮಾಜಿಕ ಕಳಕಳಿ’ಯಲ್ಲಿ ಕಾರಂತರೇ ಇದಕ್ಕೆಲ್ಲಾ ಪರೋಕ್ಷ ಕಾರಣವೋ ಎಂಬಂತೇ ಪ್ರತಿಧ್ವನಿತವಾಗಿದೆ. ಜನಸಾಮಾನ್ಯರು ಎಲ್ಲೆಡೆಯೂ ಇರುತ್ತಾರೆ ಆದರೆ ಎಲ್ಲರೂ ಕಾರಂತರಾಗಲು ಸಾಧ್ಯವೇ? ಕಾರಂತರ ಸಾಹಿತ್ಯ ದಾರ್ಷ್ಟ್ಯತೆ ಆ ವೈವಿಧ್ಯತೆ ಯಾರಲ್ಲಿದೆ ಕನ್ನಡದಲ್ಲಿ ? ಕಾರಂತರ ಮನೆ ಹೋಗಿದ್ದು ತನಗಂತೂ ಬೇಸರವಿಲ್ಲಾ ಎನ್ನುವ ಗುಜರಿ ಹುಡುಗನನ್ನು ಅನುಮೋದಿಸುವ ಮಂದಿಯೂ ಇದ್ದಾರೆ ಎಂಬುದು ಗೊತ್ತಾಗಿ ಬಹಳಖೇದವೂ ಆಯ್ತು. ಅಕಸ್ಮಾತ್ ಕುವೆಂಪು ಮನೆಯ ಒಂದು ಹಂಚನ್ನು ಕೆಡವಲಿ : ಅದರ ಪರಿಣಾಮ ಅನುಭವಕ್ಕೆ ಬರುತ್ತದೆ!

ಕುವೆಂಪು ಅವರಿಗೆ ಕೊಡಮಾಡಿದ ಘನತೆ ಗೌರವವನ್ನು ಕಾರಂತ, ಮಾಸ್ತಿ, ಡೀವೀಜಿ, ಅನಕೃ ಮುಂತಾದವರಿಗೆ ಸರಕಾರ ಕೊಡಲಿಲ್ಲ. [ಕುವೆಂಪು ಹುಟ್ಟಾ ಶ್ರೀಮಂತರಾಗಿದ್ದರು! ದಕ್ಷಿಣಕನ್ನಡದ ಉಪಾಧ್ಯಾಯರೊಬ್ಬರು ಅವರ ಮನೆಗೇ ಹೋಗಿ ಪಾಠಹೇಳಿಕೊಡುತ್ತಿದ್ದರು! ಈ ಸವಲತ್ತು ನಾನು ಇಲ್ಲಿ ಪಟ್ಟಿಮಾಡಿದ ಎಷ್ಟು ಜನರಿಗಿತ್ತು? ] ಡೀವೀಜಿ ಬದುಕಿನಲ್ಲಿ ಬಡತನದಿಂದ ಬಳಲಿದರೂ ಸಾರ್ವಜನಿಕರಿಗಾಗಿ ಗೋಖಲೆ ಸಂಸ್ಥೆಯನ್ನು ಕಟ್ಟಿಕೊಟ್ಟರು-ತನಗೆ ಬಂದ ಸನ್ಮಾನಧನದಲ್ಲಿ! ಸನ್ಮಾನ ಪಡೆದ ಮಾರನೇ ದಿನವೂ ಸೆಟ್ಟಿ ಅಂಗಡಿಯಿಂದ ತರಿಸುವ ಕಾಫಿ ಪುಡಿಗೆ ಕಾಸಿರಲಿಲ್ಲ ಡೀವೀಜಿಯಲ್ಲಿ! ಮನೆಗೆ ಬಂದ ಅಭಿಮಾನಿಗಳಿಗೆ ಕಾಫಿ ಕೊಡಲು ಅನುಕೂಲವಿಲ್ಲದಾಗ " ಶೆಟ್ಟರೇ, ದಯಮಾಡಿ ಕಾಫಿಪುಡಿ, ಸಕ್ಕರೆ ಕೊಟ್ಟು ಕಳಿಸಿ, ಲೆಕ್ಕ ಬರೆದಿಟ್ಟುಕೊಳ್ಳಿ ಆಮೇಲೆ ತೀರಿಸುತ್ತೇನೆ" ಎಂದು ಗುಪ್ತವಾಗಿ ಹುಡುಗನೊಬ್ಬನ ಮೂಲಕ ಚೀಟಿ ಕಳಿಸಿದ್ದಾರೆ ಅಂಗಡಿಗೆ! ಎಂತೆಂತೆಹ ಮಹಾನುಭಾವರು ಕನ್ನಡದಲ್ಲಿ ಆಗಿಹೋದರೂ ಅವರಿಗಿಲ್ಲದ ವಿಶೇಷ ರಾಜಮರ್ಯಾದೆ ಕುವೆಂಪು ಅವರಿಗೆ ಮಾತ್ರ ದೊರೆತಿದೆ; ದೊರೆಯುತ್ತಿದೆ; ದೊರೆಯುತ್ತದೆ!!ಕವಿ-ಸಾಹಿತಿಗಳ ಬಗ್ಗೆಯೂ ಜಾತೀ ರಾಜಕಾರಣ ಎನಿಸುವುದಿಲ್ಲವೇ?

ಕಾರಂತರ ಮನೆಯನ್ನು ಕೆಡವಿದ್ದು ಕನ್ನಡದ ಮನೆಯ ಒಂದು ಕಂಬ ಕೆಡವಿದಂತೆಯೇ ಸರಿ. ಮುಕ್ತಮನದಿಂದ ಕಾರಂತರನ್ನು ಆಮೂಲಾಗ್ರವಾಗಿ ತಿಳಿದುಕೊಂಡ ಜನ ಕಾರಂತರು ಕೇವಲ ಮೇಲ್ವರ್ಗಕ್ಕಾಗಿ ಅಥವಾ ಮೇಲ್ವರ್ಗವನ್ನು ಹೊಗಳಿ ಏನನ್ನೋ ಬರೆದರು ಎನ್ನುವುದಿಲ್ಲ. ’ಚೋಮನ ದುಡ”ಯ ಕೆಲವು ಸನ್ನಿವೇಶಗಳು ಅಸಹಾಯ ದಲಿತನ ಕಣ್ಣೀರಕಥೆ ಹೃದಯದೊಳಗೆ ಮಡುಗಟ್ಟಿ-ಹಾಡಾಗಿ, ಆತ ದುಡಿಬಡಿದು ಕುಣಿಯುವುದನ್ನು ನೆನಪಿಸಿಕೊಳ್ಳುವಾಗ ಓದುಗನ ಕಣ್ಣಲ್ಲಿ ಆರ್ದ್ರತೆ ಒಸರದಿದ್ದರೆ ನನ್ನ ಮಾತನ್ನು ತೆಗೆದುಹಾಕಿ! ಇವತ್ತಿಗೂ ಕಾರಂತರು ಕಟ್ಟಿದ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಮುಖ್ಯಸ್ಥರಾಗಿರುವ ಸಂಜೀವ ಸುವರ್ಣರನ್ನು ಕೇಳಿದರೆ ಕಾರಂತರ ಬಗ್ಗೆ ತುಸು ಆತ್ಮೀಯವಾಗಿ ಹೇಳಿಯಾರು. ನನಗೆ ಆಶ್ಚರ್ಯವಾಗಿದ್ದು, ದಕ್ಷಿಣ ಕನ್ನಡ ಜನತೆ ಯಾಕೆ ಹಾಗೆ ಸುಮ್ಮನೇ ಕುಳಿತಿದ್ದಾರೆ, ಕಾರಂತರ ಮನೆ ಹೋಗುತ್ತದೆ ಎಂದಾಗಲೂ ಅವರಿಗೆ ಏನೂ ಅನಿಸಲಿಲ್ಲವೇ? ಅಥವಾ ಹತ್ತಿರವಿರುವ ದೇವರು ಸಸಾರವಾದಂತೇ ಆಯ್ತೇ?

ಧರ್ಮಸ್ಥಳ/ತಿರುಪತಿ ದೇವಳದ ಪಕ್ಕದಲ್ಲೇ ಇರುವವರಿಗೆ ಆ ದೇವರು ಸಸಾರ! ನೋಡೀ ನೋಡೀ ಚಡ್ಡೆ! ಅದೇ ದೂರದಿಂದ ಹೋಗುವ ಯಾತ್ರಿಗೆ ಅವು ಕಣ್ತುಂಬಿಸಿಕೊಳ್ಳುವ ಭಕ್ತಿಯ ಸ್ವರ್ಗ! ಅದೇ ರೀತೀ ಕವಿ-ಸಾಹಿತಿಗಳನ್ನು ಖುದ್ದಾಗಿ ಕಾಣುವುದು ಸಾಧ್ಯವಾಗದಾಗ ಕೊನೇಪಕ್ಷ ಅವರು ಈ ಜಾಗದಲ್ಲಿ ಬದುಕಿದ್ದರು ಎನ್ನಲಿಕ್ಕೆ, ಅವರು ಬಳಸಿದ ವಸ್ತುಗಳನ್ನು ನೋಡಿ ಖುಷಿಪಡಲಿಕ್ಕೆ ಒಂದು ಸ್ಮಾರಕವಿದ್ದರೆ ಅದರಿಂದ ಸಿಗುವ ಆತ್ಮತೃಪ್ತಿ ಹೇಳಿಕೊಳ್ಳಲು ಆಗುವಂಥದ್ದಲ್ಲ. ’ಗೋರಿ’ ಎಂಬ ಗುಜರಿ ಹುಡುಗ ಬಳಸಿದ ಪದ ಇದೆಯಲ್ಲ ಅದು ನನಗೆ ಕೊಟ್ಟ ನೋವು ಅಷ್ಟಿಷ್ಟಲ್ಲ.
ಏನೇ ಇರಲಿ ಕಾರಂತರ ಮನೆ ಕೆಡವಿದ್ದು ಖಂಡನೀಯ, ವಿಷಾದನೀಯ, ಅದನ್ನು ಸಮರ್ಥಿಸಿ ಬರೆಯುವ ಎಲ್ಲರ ಲೇಖನಗಳೂ ಖಂಡನೀಯ ಎಂಬುದನ್ನು ಘಂಟಾಘೋಷವಾಗಿ ಹೇಳುತ್ತಿದ್ದೇನೆ.

Wednesday, February 29, 2012

ಬದುಕು ಮಾಯೆಯ ಮಾಟ ಮಾತು ನೊರೆತೆರೆಯಾಟ.....


ಬದುಕು ಮಾಯೆಯ ಮಾಟ ಮಾತು ನೊರೆತೆರೆಯಾಟ.....

ನನ್ನ ಬಾಲ್ಯದ ಚಳಿಗಾಲದ ಒಂದುದಿನ. ಬೆಳಗಿನ ಚುಮುಚುಮು ಚಳಿ ಇನ್ನೂ ಹರಿಯದ ಸಮಯ. ನಮ್ಮ ಹಳ್ಳಿಯ ರಿವಾಜಿನಂತೇ ಬೆಳಿಗ್ಗೆ ಬೇಗ ಎದ್ದು, ಮುಖಮಾರ್ಜನೆ ಶೌಚವಿಧಿಗಳನ್ನು ತೀರಿಸಿಕೊಂಡು ದೇವರಿಗೆ ಹೂವುಗಳನ್ನು ಕೊಯ್ದಿಟ್ಟು ನಮಿಸಿ, ೭ ಗಂಟೆಗೇ ತಿಂಡಿತಿಂದು ಪ್ರಾಥಮಿಕ ಶಾಲೆಗೆ ನಮ್ಮ ಪಯಣ. ಆದರೆ ಅಂದು ಭಾನುವಾರ ಬೆಳಿಗ್ಗೆ ಎಂದಿನಂತೇ ಮಿಕ್ಕೆಲ್ಲಾ ಮುಗಿದಿತ್ತು. ರಜಾದಿನವಾದ್ದರಿಂದ ಸ್ವಲ್ಪ ಆಟೋಪಚಾರಗಳು ನಡೆಯುವ ಸಮಯ. ಅಂಗಳದ ಮೂಲೆಯಿಂದ ಹಾರ್ಮೋನಿಯಂ ನಿಂದ ಹೊರಟ ಸದ್ದು..ಸ.ರಿ.ಗ.ಮ.ಪ...ಮುದುಕಿಯೊಬ್ಬಳು ಹೆಗಲಿಂದ ಇಳಿದ ದಾರಕ್ಕೆ ಹಾರ್ಮೋನಿಯಂ ಕಟ್ಟಿಕೊಂಡು ನುಡಿಸುತ್ತಾ ಮುಂದೆ ಬರುತ್ತಿದ್ದಳು. ಹಣೆಯಲ್ಲಿ ವಿಭೂತಿ, ಮಧ್ಯೆ ಕಾಸಿನಗಲದ ಕುಂಕುಮ, ಮೊಳಕಾಲ್ಮೂರು ಸೀರೆ ಧರಿಸಿದ್ದಳು. ಬಂದವಳೇ ಅಂಗಳದ ಒಂದು ಪಕ್ಕದಲ್ಲಿ ಕೂತು

ಬಾರೊ ಗೋಪಾಲ ಮುಖವನೇ ತೋರೊ ಶ್ರೀಲೋಲ
ಬಾರಿಬಾರಿಗೂ ಭಾಗ್ಯವ ಕೊಡುವಾ ತುಳಸೀ ವನಮಾಲ ....

ರಾಗವಾಗಿ ಹಾಡುತ್ತಿದ್ದಳು. ಕಂಠ ಸುಮಧುರವಾಗಿತ್ತು, ತಾಳದ ಗತಿಯೂ ಇತ್ತು, ಹಾರ್ಮೋನಿಯಂ ಸಾಥ್ ಕೂಡ ಅವಳೇ ಕೊಟ್ಟುಕೊಂಡು ಕೇಳುಗರಿಗೆ ಮುದನೀಡುವಂತೇ ಭಕ್ತಿ-ಶ್ರದ್ಧೆಯಿಂದ ಹಾಡುತ್ತಿದ್ದಳು. ಹಾಡುವ ಮುಖ ಭಾವದಲ್ಲಿ ಪರಮಾತ್ಮನನ್ನು ಕರೆಯುವ ಭಾವತಲ್ಲೀನತೆ ಕಾಣುತ್ತಿತ್ತು. ಹೇಳೀಕೇಳೀ ಅವಳೊಬ್ಬ ಸಾದಾಸೀದಾ ಬೇಡುವ ಹೆಂಗಸು, ಬಯಲಸೀಮೆಯ ಕಡೆಯವಳು. ಅವಳಿಗೆ ಯಾರು ಸಂಗೀತ ಕಲಿಸಿದರು ? ತಿಳಿದುಬಂದಿಲ್ಲ. ಹಿತಮಿತ ಆಲಾಪದ ಜೊತೆಗೆ ಹಾಡುತ್ತಿದ್ದ ಅವಳ ಹಾಡು

ಇಂದುಧರ ಸಖನೇ ಇಂದ್ರಾದಿ ವಂದಿತನೇ
ಇಂದು ನಿನ್ನಯ ಪಾದವ ಪೊಗಳುವೆ ವೆಂಕಟಾಚಲನೇ .....

ಆಹಾ ...ಇನ್ನೂ ಆ ಗರಳಿನ ನೆನೆಪು ನನಗಾಗುತ್ತಿದೆ. ಹಾಡು ಮುಗಿಸಿ ಕೈಮುಗಿದು " ತಮ್ಮಾ ಅಜ್ಜೀಗೆ ಏನಾರಾ ತಿನ್ನಾಕ್ ಕೊಡಪ್ಪಾ ಶಿವಾ ....ಏನೋ ಒಂಚೂರು ಮನೇಲಿ ಮಾಡಿದ್ದು ಮಿಕ್ಕಿದ್ದು ಪಕ್ಕಿದ್ದು....ಅಜ್ಜಿಗೆ ಚಳಿಗೆ ಹಾಕ್ಕೊಳ್ಳೋದಕ್ಕೆ ಹಳೇ ಹರಿದ ಬಟ್ಟೆಬರೆ ಇದ್ರೆ. " ಯಾವುದಕ್ಕೂ ಆ ಅಜ್ಜಿಯ ಒತ್ತಾಯವಿರಲಿಲ್ಲ. ಅದೊಂದು ಪ್ರಾರ್ಥನೆಯಷ್ಟೇ. ಎಂತಹ ಪ್ರತಿಭೆಗೂ ಇದೆಂತಹ ಸ್ಥಿತಿ ಎಂಬುದು ಮುಗ್ಧಬಾಲಕನಾಗಿದ್ದ ನನ್ನ ಮನಸ್ಸಿಗೆ ಅಂದೇ ನಾಟಿದ ವಿಷಯ! ಎಂತೆಂಥವರಿಗೂ ಎಂತೆಂಥಾ ವಿಶಿಷ್ಟ ಶಕ್ತಿಯನ್ನೂ ಚೈತನ್ಯವನ್ನೂ ಕೊಟ್ಟ ಭಗವಂತ ಅವರವರ ಪಾಲಿಗೆ ಸಂಚಿತ ಕರ್ಮಫಲಗಳನ್ನಷ್ಟೇ ನೀಡುತ್ತಾನೆ ಎಂಬುದು ಸುಳ್ಳಲ್ಲ ಎಂದು ನನಗೀಗ ಅನ್ನಿಸುತ್ತಿದೆ. ಅಜ್ಜಿಗೆ ತಿಂಡಿ, ಹಳೆಬಟ್ಟೆ ಕೊಡಿಸಿ ಅಜ್ಜಿ ಅಕ್ಕ-ಪಕ್ಕದ ಮನೆಗಳಿಗೆ ಹೋಗಿ ಹಾಡುವುದನ್ನೂ ಹಿಂಬಾಲಿಸಿ ಹೋಗಿ ಕೇಳಿ ಸುಖಪಟ್ಟೆ. ಅಜ್ಜಿಯ ರಾಗಕ್ಕೆ ಹಿರಿಕಿರಿಯರಾದಿಯಾಗಿ ಹಲವು ಜನ ನಿಂತು ಆಲೈಸುತ್ತಿದ್ದರು! ಅಂಥಾ ಸುಶ್ರಾವ್ಯ ಸಂಗೀತವದು! ಸಾಹಿತ್ಯದಲ್ಲೂ ತಪ್ಪಿಲ್ಲದೇ ಲಯಬದ್ಧವಾಗಿ ಹಾಡುವ ಕಲೆಗಾರಿಕೆಯನ್ನೇ ಬಂಡವಾಳವನ್ನಾಗಿ ಭಗವಂತ ಆಕೆಗೆ ನೀಡಿದ್ದ.

ಹುಟ್ಟು ಆಯ್ಕೆಯಲ್ಲ, ಅದು ಕೇವಲ ಅನಿವಾರ್ಯ ಸಹಜ ಎಂದು ಹಲವರು ಹೇಳುತ್ತಾರೆ. ಬೆಳೆಯುತ್ತಾ ತಮ್ಮನ್ನು ಬದಲಿಸಿ ದುಡಿಮೆಗೆ ಹಚ್ಚಿಕೊಳ್ಳುವ ದುಡಿದು ಶ್ರೀಮಂತಿಕೆ ಪಡೆಯಬಹುದೆನ್ನುವ ಇರಾದೆ ಬಹುತೇಕರದ್ದು. ಅದರ ಜೊತೆಜೊತೆಗೇ ಬದುಕಿನಲ್ಲಿ ಅದೃಷ್ಟದಾಟವೂ ಕೆಲಮಟ್ಟಿಗೆ ನಡೆಯುತ್ತದೆ ಎಂಬುದನ್ನು ಮರೆಯುವಹಾಗಿಲ್ಲ! ಇದರರ್ಥ ಅದೃಷ್ಟವೇ ಎಲ್ಲವನ್ನೂ ಮಾಡುತ್ತದೆ ಎಂದಲ್ಲ, ಅಡಿಗೆಯಲ್ಲಿ ಉಪ್ಪಿನ ಪಾತ್ರ ಎಷ್ಟು ಮಹತ್ವವೋ ಅಂಥದ್ದೇ ಮಹತ್ವವನ್ನು ಜೀವನದ ಅಡಿಗೆಯಲ್ಲಿ ಅದೃಷ್ಟವೆಂಬ ಉಪ್ಪು ನಿರ್ವಹಿಸುತ್ತದೆ. ಅದೃಷ್ಟ ಸರಿಯಾಗಿಲ್ಲದಿದ್ದರೆ ಎಷ್ಟೇ ದುಡಿದರೂ ಅದರ ಫಲಗಳು ಸಂಚಿತಕರ್ಮ ನಿಷ್ಪನ್ನವಾಗಿರುತ್ತವೆ. ಆಗಲೂ ಜಗನ್ನಿಯಾಮಕ ಶಕ್ತಿ ಯಾವುದೋ ಒಂದು ರೀತಿಯಲ್ಲಿ ಅದನ್ನು ನಿಭಾಯಿಸಲು ಬೇಕಾಗುವ ವಿಶೇಷ ಸೌಲತ್ತುಗಳನ್ನು ಕೊಟ್ಟಿರುತ್ತದೆ ಎಂಬುದಕ್ಕೆ ಹುಟ್ಟಾ ಕಣ್ಣುಗಳಿದ್ದೂ ಶೈಶವಾವಸ್ಥೆಯಲ್ಲಿ ಕುರುಡರಾಗಿಹೋಗಿ ನಂತರ ಗಾನಯೋಗಿ ಎಂದೇ ಖ್ಯಾತರಾದ ಪಂಚಾಕ್ಷರ ಗವಾಯಿಗಳ ಶಿಷ್ಯತ್ವ ಪಡೆದ ದಿ|ಪುಟ್ಟರಾಜ ಗವಾಯಿಗಳ ಜೀವನಗಾಥೆಯನ್ನು ನೋಡಿ ತಿಳಿಯಬಹುದಾಗಿದೆ. ಕಳೆದುಹೋದ ಚೊಂಬನ್ನೂ ತಮ್ಮ ಆಶ್ರಮದ್ದೆಂದು ಕೇವಲ ಅದನ್ನು ಬಡಿದಾಗ ಹೊರಡುವ ಸದ್ದಿನಿಂದಲೇ ಅವರು ನಿರ್ಧರಿಸಿದ್ದ/ನಿರ್ಧರಿಸಬಲ್ಲ ವಿಶಿಷ್ಟ ಶಕ್ತಿ ಉಳ್ಳವರಾಗಿದ್ದರು. ಇಂದ್ರಿಯಗಳ ನ್ಯೂನತೆ ಹೊಂದಿದ ಜನರಿಗೆಲ್ಲಾ ಸಾಮಾನ್ಯರಿಗೆ ಅಗೋಚರವಾದ ಹೆಚ್ಚಿನ ಶಕ್ತಿಯೊಂದು ಲಭಿಸಿರುತ್ತದೆ.

ಸೃಷ್ಟಿ ಒಂದು ಮಾಯೆ ಅಥವಾ ಮಿಥ್ಯೆ ಎಂಬುದು ಬಲ್ಲವರ/ವಿಮುಕ್ತರ ಮಾತು. ನಾವು ಕಾಣಲಾಗದ ಪರಾಶಕ್ತಿ ತನ್ನ ಲೀಲಾನಾಟಕವಾಗಿ ಈ ಬ್ರಹ್ಮಾಂಡವನ್ನು ಸೃಷ್ಟಿಸಿದೆ, ಇಲ್ಲಿನ ಪ್ರತಿಯೊಂದೂ ಕ್ರಿಯೆಗಳೂ ಆ ಶಕ್ತಿಯ ಪ್ರೇರಣೆಯಿಂದ ನಡೆಯುತ್ತವೆ ಎಂಬುದೂ ಕೂಡ ನಂಬಲರ್ಹ ಸತ್ಯ. ಏನೂ ತಪ್ಪೆಸಗದ ಯಾತ್ರಿಗಳು ಹೊರಟ ವಾಹನದ ಚಾಲಕ ಎಲ್ಲೋ ಅಪಘಾತಕ್ಕೆ ಈಡುಮಾಡಿದಾಗ ಕೆಲವರು ಮಡಿಯಬಹುದು, ಏಟು ಅನುಭವಿಸಬಹುದು, ದೈಹಿಕ ನ್ಯೂನತೆಗಳಿಗೆ ಒಳಗಾಗಬಹುದು. ವಾಹನ ಚಲಾಯಿಸುತ್ತಿರುವ ಚಾಲಕನಿಗೆ ಹೃದಯಾಘಾತವಾಗಿ ಆತ ಬದುಕಿನ ಕೊನೇ ಕ್ಷಣದಲ್ಲೂ ತನ್ನನ್ನು ನಂಬಿ ವಾಹನವೇರಿದ್ದ ಜನರನ್ನು ಬದುಕಿಸಿ ತಾನು ಸತ್ತ ಘಟನೆಗಳನ್ನೂ ಓದಿ ತಿಳಿದುಕೊಂಡಿದ್ದೇವೆ. ಯಾವುದೋ ರಸ್ತೆ ಅಪಘಾತದಲ್ಲಿ ಕಾರಿನಲ್ಲಿರುವ ಎಲ್ಲರೂ ಸತ್ತು ಮಗುವೊಂದು ಹಾರಿಹೋಗಿ ದೂರಬಿದ್ದರೂ ಬದುಕಿರುವುದನ್ನು ಅರಿತಿದ್ದೇವೆ. ಸುನಾಮಿ ಬಂದು ಎಲ್ಲರನ್ನೂ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿ ಕೆಲವರು ಮಾತ್ರ ಉಳಿಯುವಂತೇ ಮಾಡುವುದನ್ನು ಮಾಧ್ಯಮಗಳಲ್ಲಿ ಕಂಡಿದ್ದೇವೆ. ಎಂದಮೇಲೆ ನಿಸರ್ಗದ ಕೈಲಿ ಮಾನವನೇ ಹೊರತು ಮಾನವನ ನಿಯಂತ್ರಣಕ್ಕೆ ನಿಸರ್ಗ ಒಳಪಡುವುದಿಲ್ಲ.

ಈ ಬದುಕು ಮಾಯೆಯ ಆಟ ಎಂಬುದನ್ನು ಸ್ವಾನುಭವದಿಂದ ಅರಿತ ಕವಿವರ್ಯ ಬೇಂದ್ರೆ ಅದನ್ನೇ ಒಂದು ಕಾವ್ಯವಾಗಿ ಬರೆದರು. ಪ್ರಾಯಶಃ ಬೇಂದ್ರೆಯಷ್ಟು ಕಷ್ಟದ ಜೀವನಗತಿಯನ್ನು ಯಾವ ಕವಿಯೂ ಅನುಭವಿಸಿರಲಿಕ್ಕಿಲ್ಲ. ಕಷ್ಟಗಳನ್ನು ನುಂಗಿ ಹೇಗೆ ಬದುಕಬೇಕು ಎಂಬುದಕ್ಕೆ ಬೇಂದ್ರೆ ಮಾದರಿಯಾಗುತ್ತಾರೆ. ಸಿರಿವಂತರಾಗಬೇಕೆಂಬ ಆಸೆ, ಆಸಕ್ತಿ ಎಲ್ಲರಿಗೂ ಸಹಜ. ಕಾಣುವ ಓ ಅವರಿಗಿಂತಾ ತಾವೇನೂ ಕಮ್ಮಿಯಿಲ್ಲಾ ಎಂಬ ಅನಿಸಿಕೆಯೂ ಅಹಂಕಾರವೂ ನಮ್ಮನ್ನು ನಮಗೇ ಅರಿವಿಲ್ಲದಂತೇ ಆಕ್ರಮಿಸಿರುತ್ತದೆ. ಎಲ್ಲರಂತೇ ಬದುಕಬೇಕೆಂಬ ತಹತಹ ನಮ್ಮನ್ನು ನಿತ್ಯ ಧನೋಪಾಸಕರನ್ನಾಗುವಂತೇ ಹಚ್ಚುತ್ತದೆ! ಆಸೆಗಳ ಮಟ್ಟ ಅಧಿಕವಾದಾಗ ಅನೇಕಾವರ್ತಿ ನಿರೀಕ್ಷೆಗಳು ಹುಸಿಯಾಗುತ್ತವೆ, ಗುರಿಗಳು ನೆರವೇರದೇ ಚಡಪಡಿಸುವಂತಾಗುತ್ತದೆ. ಮಗ ಕೊನೆಯ ಕ್ಷಣದಲ್ಲಿ ಸಹಾಯಕ್ಕೆ ಬರುತ್ತಾನೆಂದು ನಿರೀಕ್ಷಿಸಿದ ಅಪ್ಪನ-ಅಮ್ಮನ ಮುಪ್ಪಿನ ವಯದಲ್ಲಿ, ಇದ್ದೊಬ್ಬ ಮಗ ಅಮೇರಿಕಾದಲ್ಲಿ ತಂತ್ರಾಂಶ ತಂತ್ರಜ್ಞನಾಗಿದ್ದು, ಅಪ್ಪ-ಅಮ್ಮಂದಿರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾನೆ, ಸಾವಿನ ಕ್ಷಣದಲ್ಲೂ ಮಗನ ಮುಖ ಕಾಣುವ ಹಂಬಲದಲ್ಲೇ ಅವರು ಅಸುನೀಗುತ್ತಾರೆ. ಹೀಗೆಲ್ಲಾ ಆಗುವಾಗ ನೆನಪಾಗುವುದು ಬದುಕು ಮಾಯೆಯ ಮಾಟ!

ಮರದಮೇಲಿನ ಮುಸ್ಯಾನನ್ನೂ[ಮಂಗನನ್ನೂ] ಮಾತನಾಡಿಸುವ ಕಲೆ ಬೇಂದ್ರೆಯವರಿಗಿತ್ತು. ಧಾರವಾಡದ ಜನರಿಗಷ್ಟೇ ಅವರ ಬಳಕೆಯಲ್ಲ, ಪಶು-ಪಕ್ಷಿಗಳೂ ಬೇಂದ್ರೆಯವರ ಕವಿಹೃದಯವನ್ನು ಅರಿತಿದ್ದವು ಎಂದರೆ ತಪ್ಪಾಗಲಾರದು. ಸಮಾನ್ಯವಾಗಿ ಬಯಲಸೀಮೆ ಮಂದಿ ಮಂಗಗಳನ್ನೆಲ್ಲಾ ಹತ್ತಿರಬಿಟ್ಟುಕೊಳ್ಳುವುದಿಲ್ಲ. ಕಾಗೆ, ಮಂಗ, ಪಾರಿವಾಳ ಇಂತಹ ಸುತ್ತಲ ವಾಸಿಗಳನ್ನೂ ಬೇಂದ್ರೆ ಹತ್ತಿರ ಕರೆಯುತ್ತಿದ್ದರು. ಅವು ಬರುತ್ತಿದ್ದವು. ಬೇಂದ್ರೆ ಕೊಡುವ ಏನಾದರೂ ಚೂರುಪಾರು ಪಡೆದುಕೊಂಡು ತಿಂದು ಸುಖಿಸುತ್ತಿದ್ದವು! ಇಂತಹ ಬೇಂದ್ರೆ ಹಲವು ಮಕ್ಕಳನ್ನು ಕಳೆದುಕೊಂಡರು. ಶೈಶವಾವಸ್ಥೆಯ ಮಕ್ಕಳು-ಅವರ ನಗು, ಮುಗ್ಧ-ಸ್ನಿಗ್ಧ ಮುಖಭಾವ-ಭಂಗಿ, ಅವರುಗಳ ಆಟ-ಪಾಟ ಯಾರಿಗೆ ತಾನೇ ಹಿತವಲ್ಲ ? ಅದನ್ನು ಮರೆಯಲು ಸಾಧ್ಯವೇ? ರಾಮನನ್ನು ಕಾಡಿಗೆ ಕಳುಹಿಸಿದ ಕೊರಗಿನಲ್ಲೇ ಪುತ್ರನ ಅಗಲುವಿಕೆಯ ಶೋಕದಿಂದ ದಶರಥ ಮಹಾರಾಜ ಸತ್ತ! || ಪುತ್ರಶೋಕಂ ನಿರಂತರಂ|| ಎಂಬೊಂದು ಉಲ್ಲೇಖವಿದೆ. ಇಲ್ಲಿ ಪುತ್ರ ಎಂದರೆ ಕೇವಲ ಗಂಡು ಮಗು ಎಂದಲ್ಲ, ಮಕ್ಕಳು ಎಂಬ ಭಾವ. ರಾಮ ಜೀವಂತವಾಗಿಯೇ ಇದ್ದರೂ ಆತ ವನವಾಸದಲ್ಲಿ ಅದೆಷ್ಟು ಕಷ್ಟಪಡಬೇಕಾಗಬಹುದು ಎಂಬುದನ್ನು ಚಿಂತಿಸಿಯೇ ಕಂಗೆಟ್ಟು ಇಹಲೋಕ ತ್ಯಜಿಸಿದ್ದ ರಾಜಾ ದಶರಥ ಎಂದಮೇಲೆ ಹಲವು ಮಕ್ಕಳ ಸಾವಿನ ಸಮಯದಲ್ಲಿ ಕಣ್ಣಾರೆ ಕಾಣುತ್ತಾ ಬದುಕಿಸಿಕೊಳ್ಳಲಾಗದ ಆ ಅಸಹನೀಯ ಕ್ಷಣಗಳು ತಂದೆ-ತಾಯಿಗೆ ಯಾವ ನೋವನ್ನು ಕೊಡಬಹುದು ಎಂಬುದು ಚಿಂತನ ಮಾಡಬೇಕಾದ ವಿಷಯ.

ಮಗುವನ್ನು ಕಳೆದುಕೊಂಡ ಹಲವು ಘಳಿಗೆಗಳು ಮೌನವಾಗಿದ್ದವು, ಅಲ್ಲಿ ಬರೇ ಬೇಂದ್ರೆಯಲ್ಲ-ಆ ಇಡೀ ವಾತಾವರಣವೇ ರೋದಿಸುತ್ತಿತ್ತು! ಒಮ್ಮೆ ಹೆಂಡತಿ ಮಮ್ಮಲ ಮರುಗುತ್ತಾ ಬೇಂದ್ರೆಯವರನ್ನು ತಿರುಗಿ ನೋಡುವಾಗ ಹುಟ್ಟಿದ್ದು ’ನೀ ಹೀಂಗ ನೋಡಬ್ಯಾಡ ನನ್ನ..’ಕವನವಾದರೆ ಇನೊಮ್ಮೆ ಹೆಂಡತಿಗೆ ಬದುಕೇ ಬೇಡವೆನಿಸಿದಾಗ ಹುಟ್ಟಿದ್ದು ’ಕುಣಿಯೋಣು ಬಾರಾ ಕುಣಿಯೋಣು ಬಾ... .’ ಇಂಥದ್ದೇ ಇನ್ನೊಂದು ಘಳಿಗೆಯಲ್ಲಿ ಬೇಂದ್ರೆ ಬರೆದರು

ಬದುಕು ಮಾಯೆಯೆ ಮಾಟ
ಮಾತು ನೊರೆತೆರೆಯಾಟ
ಜೀವ ಮೌನದ ತುಂಬಾ ...

ಇದನ್ನು ಸಂಗೀತಕ್ಕೆ ಅಳವಡಿಸಿದ್ದ ಸುಗಮ ಸಂಗೀತದ ದಿಗ್ಗಜ ದಿ| ಸಿ. ಅಶ್ವತ್ಥ್ ರವರು ತಮ್ಮ ಬದುಕಿನ ಮಹತ್ತರ ಘಟ್ಟವಾಗಿ ’ ಕನ್ನಡವೇ ಸತ್ಯ’ ಎಂಬ ಸಂಗೀತ ಕಾರ್ಯಕ್ರಮದಂತೇ ಇನ್ನೊಂದು ಅತಿದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮೈಸೂರು ಅನಂತಸ್ವಾಮಿಯವರ ನಂತರ ದಶಕಗಳ ಕಾಲ ಸುಗಮ ಸಂಗೀತ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಗಾಢವಾಗಿ ಒತ್ತಿ, ಹಲವು ಕವಿಗಳ ಭಾವನೆಗಳಿಗೆ ಕಂಠವಾಗಿದ್ದ, ಅನೇಕ ಕೃತಿಗಳನ್ನು ರಾಗಬದ್ಧವಾಗಿ ಸಂಯೋಜಿಸಿ ನಿರೂಪಿಸಿ ಶ್ರೋತೃಗಳಿಗೆ ತಲುಪಿಸಿದ್ದ ಅಶ್ವತ್ಥರಿಗೂ ಕೂಡ ಅವರ ಬದುಕಿನ ಕೊನೆಯ ಮಾಯೆಯ ಮಾಟ ಗೊತ್ತಿರಲಿಲ್ಲ ಅಲ್ಲವೇ? ಈ ಬದುಕೇ ಹೀಗೆ. ಇರುವಷ್ಟುಕಾಲ ಇರುವಷ್ಟು ಘಳಿಗೆ ಉತ್ತಮ ಕೆಲಸಗಳನ್ನು ಮಾಡಬೇಕು, ಆದಷ್ಟೂ ಪರೋಪಕಾರಿಯಾಗಿ, ನಿಸ್ವಾರ್ಥಿಯಾಗಿ, ಮನುಜಮತವನ್ನು ಅರಿತು ಜೀವನ ನಡೆಸಿದರೆ ಆ ಕರ್ಮಫಲವನ್ನು ಮುಂದಿನ ನಮ್ಮ ಜನ್ಮದಲ್ಲಿ ಪಡೆಯಲು ಅನುಕೂಲವಾಗುತ್ತದೆ. ಮಾಯೆಯ ಮಾಟಕ್ಕೆ ಬಲಿಯಾದ ರಾಜೀವ ದೀಕ್ಷಿತರನ್ನೂ ನಾವು ಕಂಡಿದ್ದೇವೆ. ನಿನ್ನೆ ಕಂಡವರು ಇವತ್ತು ಕಾಣುತ್ತಾರೆಂಬ ಗ್ಯಾರಂಟಿ ಇಲ್ಲ. ಇಂದು ಇರುವವರು ನಾಳೆ ಇರುತ್ತಾರೋ ಗೊತ್ತಿಲ್ಲ. ಯಾರು ಯಾವ ಕ್ಷಣವೂ ಹೋಗಬಹುದು ಇಲ್ಲಾ ನೂರಾರು ವರುಷಗಳ ಕಾಲ ಆರಾಮಾಗಿಯೇ ಬದುಕಬಹುದು! ತಾಮಾಷೆಗೆ ಹನಿಗವಿ ಜೋಕು ಹೇಳಿದ್ದರು :

ರಾತ್ರಿ ಮಲಗುವಾಗ
ನೆನೆಸಿಡಿ ಉದ್ದು

ಎದ್ದರೆ ದೋಸೆ
ಇಲ್ಲದಿದ್ದರೆ ವಡೆ !

ಇಷ್ಟೇ ನಮ್ಮ ಬದುಕು ಎಂದಾದಾಗ ಬದುಕಿನ ಮುಖಗಳ ಅರಿವಿಲ್ಲದೇ ನಾವು ಗಟ್ಟಿ ನಾವು ಗಟ್ಟಿ ಎಂದು ಪರಾಕ್ರಮ ಕೊಚ್ಚಿಕೊಳ್ಳುವ ಹಲವರಿಗೆ ಮಾಯಯೆ ಮಾಟದ ಅರಿವು ಯಾವಕ್ಷಣದಲ್ಲಾದರೂ ಆಗಬಹುದು. ನಾವೆಲ್ಲಾ ಯೋಚಿಸಲೂ ಹಿಂದೇಟುಹಾಕುವ ವಿಷಯವನ್ನು ವರಕವಿ ಬೇಂದ್ರೆ ಕವನವಾಗಿಸಿದರು. ಅಶ್ವತ್ಥರು ಅದಕ್ಕೆ ಸಂಗೀತ ಜೋಡಿಸಿದರು! ಇಬ್ಬರೂ ದಿಗ್ಗಜರೇ ಅವರವರ ಕ್ಷೇತ್ರಗಳಲ್ಲಿ. ಈ ಇಬ್ಬರ ಜೊತೆಗೆ ಎಲ್ಲಾ ಪಕ್ಕವಾದ್ಯಗಳವರಿಗೂ ವಂದಿಸುತ್ತಾ , ಹಾಡನ್ನು ನಿಮ್ಮ ಮುಂದಿಡುತ್ತಾ ಈ ಲೇಖನಕ್ಕೆ ಮಂಗಳಹಾಡುತ್ತೇನೆ.



Monday, February 27, 2012

ಸಗ್ಗವೀ ವಸುಂಧರಾ !

ಸಗ್ಗವೀ ವಸುಂಧರಾ !

ಚಿಗುರು ಹೂವು ಕಾಯಿ ಹಣ್ಣು
ನಗದು ಲೋಕ ಸುಂದರ !
ಬಗೆಬಗೆಯಲಿ ಬದಲುಗೊಳುವ
ಸಗ್ಗವೀ ವಸುಂಧರಾ !!

ಜಲದ ಚಿಲುಮೆ ಹರಿದು ಮುಂದೆ
ವಲಯ ಮಲಯಗಳಲಿ ಸಾಗಿ
ಸಲಿಲ ಜಲಲಧಾರೆಯಾಗಿ
ನಲಿದು ಧುಮ್ಮಿಕ್ಕುತಾ |
ಒಲಿದ ಮಿಥುನಗಳವು ನಿಂದು
ಕಲೆಯುತಲ್ಲಿ ದೇವಳದಲಿ
ನಲಿವುದಂತು ದೃಶ್ಯಕಾವ್ಯ
ಕಲೆಯು ಹಿಗ್ಗಿ ಸೊಕ್ಕುತಾ ||

ವನದ ತುಂಬ ವೃಕ್ಷರಾಶಿ
ದಿನವು ಮೊಲ್ಲೆ ಹುಲ್ಲು ಹಸಿರು
ಮನಕೆ ಮುದವ ನೀಡ್ವ ರಂಗು
ಘನತರಂಗವೆಬ್ಬಿಸೀ |
ಜಿನುಗುತಿರುವ ಜೇನು ಮಿಸರೆ
ಗುನುಗು ದುಂಬಿನಾದ ತುಂಬಿ
ಸನಿಹ ನವಿಲ ನಾಟ್ಯ ಭಂಗಿ
ಬನದಿ ಗುಲ್ಲು ಹಬ್ಬಿಸೀ ||

ಕೆಂಪು ಹಳದಿ ಪಚ್ಚೆ ನೀಲಿ
ಗುಂಪಿನ ಬಂಗಾರ ಸೇರಿ
ತಂಪು ಸ್ಫಟಿಕ ಮುತ್ತು ಹವಳ
ಸೊಂಪಾಗಿಸಿ ಭರಣವ |
ಇಂಪಿನ ಸಂಗೀತ ಗಾನ
ಮಂಪರಿನಲು ಸುಖದ ಧ್ಯಾನ
ನೋಂಪಿ ನಾಂದಿ ಮಂತ್ರ ಘೋಷ
ಗಂಪಾಗಿಸಿ ಕರಣವ ||

ಗಿರಿ ಸಾಗರ ನದಿ ಪರ್ವತ
ಪುರಿ ದ್ವಾರಕೆ ಹರಿದ್ವಾರ
ಮರೆಯಲಪ್ಪುದೇ ಅಜಂತಾ
ಕರೆವ ಎಲ್ಲೋರವಾ ?
ಬರಿಯದಲ್ಲ ಶಿಲೆಯ ಕಬ್ಬ
ಹಿರಿದು ಹಂಪೆ ಹಳೆಬೀಡಲಿ
ಬರಿದೇ ಜನ್ಮತಳೆದ ಕಾವ್ಯ
ಹರಿದು ಬಂತು ಕಲರವ ||