ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 8, 2012

ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ

ಆಮಂತ್ರಣ ಚಿತ್ರ ಕೃಪೆ: ಶ್ರೀ ರಾಮಚಂದ್ರ ಹೆಗಡೆ, ದ್ವಾರಾ: ಫೇಸ್ ಬುಕ್

ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ

ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು.....ಎಂದು ದಾಸರು ಹೇಳಿದ ಭಜನೆ ನಮಗೆ ನಮ್ಮ ಎಳವೆಯಲ್ಲಿ ಅರ್ಥವಾಗುತ್ತಿರಲಿಲ್ಲ. ನೆಂಟರಬಾಗಿಲನ್ನು ಸೇರಬಾರದು ಎಂದರೇನು ? ಯಾರಾದರೂ ಬಾಗಿಲಲ್ಲಿ ಸೇರೋಕಾಗುತ್ಯೇ ಎಂಬ ಶಬ್ದಶಹ ಅರ್ಥದ ಅವಲೋಕನವಷ್ಟೇ ನಮಗೆ ನಿಲುಕಿದ್ದು. ಲೌಕಿಕ ಜೀವನನದಲ್ಲಿ ಬಡತನ-ಸಿರಿತನ ಇವೆಲ್ಲಾ ಪಡೆದುಬಂದ ಭಾಗ್ಯದಿಂದಲೂ ಭಾಗಶಃ ಅನುಭವಿಸಲ್ಪಡುವ ಮಜಲುಗಳು ಎಂಬುದನ್ನು ಮರೆಯುವ ಹಾಗಿಲ್ಲ. ಎಲ್ಲರಿಗೂ ಸಿರಿವಂತರಾಗಬೇಕು ತಾವೂ ಯಾರಿಗೂ ಕಮ್ಮಿಯಿಲ್ಲ ಎನಿಸಿಕೊಳ್ಳಬೇಕು, ಯಾರಿಗೂ ತಮ್ಮಲ್ಲಿ ಎಷ್ಟು ಧನಸಂಪತ್ತಿದೆ ಎಂಬ ಲೆಕ್ಕ ಸರಿಯಾಗಿ ಸಿಗಲಾಗದ ರೀತಿ ಬದುಕಬೇಕೆಂಬ ಹಪಹಪಿಕೆ. ಸಾಲದಲ್ಲಿ ಕೊಂಡರೂ ಸಾಲವಿಲ್ಲವೆಂಬಂತೇ ಸೋಗಿನಲ್ಲಿ ಓಡಿಸುವ ಕಾರು-ಬಾರು!

ವ್ಯಕ್ತಿ ಬೆಳೆದು ವ್ಯಾವಹಾರಿಕ ಬದುಕಿನಲ್ಲಿ ತನ್ನನ್ನು ತೊಡಗಿಸಿಕೊಂಡು ಉದ್ಯೋಗವನ್ನೋ, ವ್ಯವಸಾಯವನ್ನೋ, ವ್ಯಾಪಾರ-ವಹಿವಾಟನ್ನೋ ಆರಂಭಿಸಿದಮೇಲೆ ಎಂದೋ ಒಮ್ಮೊಮ್ಮೆ ಕುಸಿದು ಕೂರುವುದು ಸಹಜವೇ. ಜಾಗತೀಕರಣದ ಕಾರಣದಿಂದ ಸಣ್ಣಕೈಗಾರಿಕೆ ನಡೆಸುವ ಯಜಮಾನ ಕಂಗೆಡುವುದು, ಅಮೇರಿಕಾದ ಆರ್ಥಿಕ ಹಿನ್ನಡೆಯಿಂದ ತಂತ್ರಜ್ಞರಾದ ಯುವಕರು ಉದ್ಯೋಗ ಕಳೆದುಕೊಳ್ಳಬಹುದು, ಯಾವುದೋ ಗುಂಪಿನ ದುರುದ್ದೇಶದಿಂದ ವ್ಯವಹಾರದಲ್ಲಿ ಮೋಸಕ್ಕೆ ಬಲಿಯಾಗಬಹುದು, ಸಕಾಲದಲ್ಲಿ ಮಳೆಬರದೇ ಬೆಳೆತೆಗೆಯಲಾಗದೇ ರೈತರು ಕಂಗಾಲಾಗಬಹುದು ಇಂಥವೆಲ್ಲಾ ನಡೆಯುವುದು ಸಹಜವೇ ಆಗಿದೆ. ಬಡತನದಲ್ಲಿದ್ದವರಿಗೆ ಸಿರಿತನ ಬಂದರೆ ಸಹಿಸುವುದು ಸುಲಭ. ಸಿರಿತನದಲ್ಲಿದ್ದವರಿಗೆ ಬಡತನ ಬಂದರೆ ಮಾತ್ರ ಅದು ಸಹಿಸಲಸಾಧ್ಯ! ಬಡತನ-ಸಿರಿತನಗಳಲ್ಲೂ ಸುಖ-ದುಃಖಗಳಲ್ಲೂ ಸಮಾನ ಮನಸ್ಕರಾಗಿರಬೇಕು...ಪರಿಸ್ಥಿತಿ ಬಂದಹಾಗೇ ಅದನ್ನು ಸ್ವೀಕರಿಸಬೇಕು ಎಂಬುದು ದಾಸರು ಪರ್ಯಾಯವಾಗಿ ಹೇಳಿದಮಾತು.

ಈ ಪ್ರಪಂಚದ ವ್ಯಾವಹಾರಿಕ ರಂಗದಲ್ಲಿ ನಮ್ಮನ್ನು ತೊಡಗಿಸಿಕೊಂಡಮೇಲೆ ನಮ್ಮ ಮೂಗಿನ ನೇರಕ್ಕೇ ಎಲ್ಲವೂ ಇರಬೇಕೆಂಬ ನಿರೀಕ್ಷೆ ಮತ್ತು ಅಪೇಕ್ಷೆ ನಮ್ಮದು! ಆದರೆ ವಸ್ತುಸ್ಥಿತಿ ಹಾಗಿರುವುದಿಲ್ಲವಲ್ಲ ? ಸಮಾಜದಲ್ಲಿ ಎಲ್ಲರೂ ತಂತಮ್ಮ ಮೂಗಿನ ನೇರಕ್ಕೇ ಹೋಗಲಿ ಗಾಡಿ ಎಂದು ಬಯಸುತ್ತಾರೆ. ಎಲ್ಲರಿಗೂ ಸಲ್ಲುವ ಸಮಷ್ಟಿಯ ದಾರಿಯಲ್ಲಿ ಗಾಡಿ ಸಾಗಬೇಕಾಗುತ್ತದೆಯೇ ಹೊರತು ನಮ್ಮೊಬ್ಬರ ಸ್ವಾರ್ಥಕ್ಕೆ ಅದು ತಗುಲಿಕೊಳ್ಳಬಾರದು. ಈ ಸತ್ಯದ ಅರ್ಥ ಆಗದ ಜನರಿಗೆ ನಿಂತು ನಿಂತಲ್ಲಿ ಕೋಪ ಉಕ್ಕಿಬರುತ್ತದೆ, ಎದುರಿಗಿರುವ ಜನರು ಪರಮವೈರಿಗಳಂತೇ ಭಾಸವಾಗುತ್ತದೆ, ಎರಡು ಇಟ್ಟುಬಿಡೋಣ ಎಂದುಕೊಳ್ಳುವ ಮಹಾನುಭಾವರೂ ಇರಬಹುದು! ಇಲ್ಲೆಲ್ಲಾ ಕೆಲಸಮಾಡುವುದು ನಮ್ಮ ಅಹಂಕಾರ ವೃತ್ತಿ ಎಂಬುದನ್ನು ನೆನಪಿಸಿಕೊಳ್ಳಬೇಕು.

ರಾಮಕೃಷ್ಣಾಶ್ರಮಕ್ಕೆ ವಿರಕ್ತರು ಸೇರಿದಾಗ ಅವರಿಗೆ ಸನ್ಯಾಸ ಕೊಡುವ ಮೊದಲು ಹಲವಾರು ಪರೀಕ್ಷೆಗಳನ್ನು ಒಡ್ಡುತ್ತಾರೆ. ಅವುಗಳಲ್ಲಿ ರಸ್ತೆಬದಿಯ ಗೋಡೆಗೆ ಅಂಟಿಸಿದ ಪೋಸ್ಟರ್ ಕಿತ್ತು ಸ್ವಚ್ಛಗೊಳಿಸುವ ಕೆಲಸವೂ ಇರಬಹುದು, ಬೀದಿ ಗುಡಿಸುವ ಕೆಲಸವೂ ಆಗಬಹುದು. ವಿರಕ್ತನಾದವನಿಗೆ ಅಹಂಕಾರ ತೊಲಗಬೇಕೆಂಬ ಅನಿಸಿಕೆಯಿಂದ ಹಾಗೆ ಮಾಡುತ್ತಾರೆ ಎಂದು ಕೇಳಿದ್ದೇನೆ. ಅಹಂಕಾರದ ಅಂಶ ಇನ್ನೂ ಇದ್ದರೆ ಆತ ಅಲ್ಲಿನ ಹಿರಿಯರು ಹೇಳಿದ ಅಂತಹ ಕೆಲಸಕ್ಕೆ ವಿರೋಧ ವ್ಯಕ್ತಪಡಿಸುತ್ತಾನೆ. ಅಹಂಕಾರ ಅಳಿದುಹೋಗಿದ್ದರೆ ಸುಮ್ಮನೇ ಹೇಳಿದ ಕೆಲಸವನ್ನು ಕರ್ತವ್ಯವೆಂದು ಪರಿಪಾಲಿಸುತ್ತಾನೆ ಎಂಬುದು ರಾಮಕೃಷ್ಣಾಶ್ರಮದ ಸಂಯಮ ಪರೀಕ್ಷಾ ಪದ್ಧತಿ ಎಂದು ಹೇಳುತ್ತಾರೆ. ದಿ| ಮತ್ತೂರು ಕೃಷ್ಣಮೂರ್ತಿಗಳು ವಾರಾನ್ನ ಮಾಡಿಕೊಂಡು ಓದಿದವರಾಗಿದ್ದರು. ಶಿವಮೊಗ್ಗೆಯಿಂದ ಬೆಂಗಳೂರಿಗೆ ಅವರು ಬಂದಾಗ ನಿಲ್ಲಲು ಜಾಗವಿರಲಿಲ್ಲ ಅವರಿಗೆ. ಶ್ರೀರಾಂಪುರದ ಒಂದು ಪುಟ್ಟ ಕೊಠಡಿಯಲ್ಲಿ ವಾಸವಿದ್ದರು ಎಂದು ತಿಳಿದುಬರುತ್ತದೆ. ಆಗ ಅವರಿಗೆ ಪರಿಚಿತರಾದ ಗಾಂಧೀವಾದಿ ಹೋ.ಶ್ರೀನಿವಾಸಯ್ಯನವರಲ್ಲಿ ತೆರಳಿದಾಗ ಮತ್ತೂರರಿಗೆ ಅವರು ಗಾಂಧೀ ಸಂಘದ ಕಾರ್ಯಕ್ರಮ ಗೊತ್ತಾಗಿದೆಯೆಂತಲೂ ನಾಳೆಯಿಂದ ನಡೆಯುವ ಕಾರ್ಯಕ್ರಮದ ಕಾರ್ಯಕರ್ತರಿಗೆ ಬಯಲಿನಲ್ಲಿ ತಂಬು[ಟೆಂಟು]-ಗುಡಾರಗಳಲ್ಲಿ ಬಿಡಾರಕ್ಕೆ ವ್ಯವಸ್ಥೆಮಾಡಿದ್ದಾಗಿಯೂ ತಿಳಿಸಿ, ಮಾರನೇ ದಿನದಿಂದ ಅಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಕಕ್ಕಸುಗಳ ಹೊಲಸು ಎತ್ತಿ ಸ್ವಚ್ಛಗೊಳಿಸುವಂತೇ ತಿಳಿಸುತ್ತಾರೆ. "ವಾಸನೆ ಬರುತ್ತದಲ್ಲಾ" ಎಂದುಕೊಂಡರೂ ಮತ್ತೂರರು ಮರುಮಾತಿಲ್ಲದೇ ಅದನ್ನು ನಿಭಾಯಿಸುವ ಜವಾಬ್ದಾರಿಯನ್ನು ಹೊತ್ತು ಸ್ವತಃ ನಿರ್ವಹಿಸುತ್ತಾರೆ! ಇದು ಮತ್ತೂರರು ಹುಡುಗನಾಗಿದ್ದಾಗ ನಡೆಸಿದ ನಿರಂಹಕಾರದ ಕೆಲಸ.

ವ್ಯಾವಹಾರಿಕವಾಗಿ ನಾವು ಸೋತಾಗ ಸುತ್ತಲ ಜನ ನೆಂಟರಿಷ್ಟರು, ಆಪ್ತೇಷ್ಟರು ಎನಿಸಿಕೊಂಡವರು ವಿಚಿತ್ರವಾಗಿ ನೋಡಲು ತೊಡಗುತ್ತಾರೆ. ಯಾರೂ ಹತ್ತಿರ ಕರೆಯುವುದಿರಲಿ ಮನುಷ್ಯರ ರೀತಿ ನಡೆಸಿಕೊಳ್ಳುವುದಿಲ್ಲ. ತಲೆಗೊಂದು ಮಾತನಾಡುತ್ತಾ ಎಲ್ಲವೂ ನಾವು ಬುದ್ಧ್ಯಾ ಮಾಡಿಕೊಂಡ ನಷ್ಟ ಎಂಬಂತೇ ಹಲುಬತೊಡಗುತ್ತಾರೆ. ಅದೇ ಕಾಲಕ್ಕೆ ಮನೆಯಲ್ಲಿ ಇಲ್ಲದ ದೈಹಿಕ ಅನಾರೋಗ್ಯಗಳೂ ಕಾಣಿಸಿಕೊಳ್ಳುತ್ತವೆ. ಚಿಕ್ಕಮಕ್ಕಳಿದ್ದರಂತೂ ಅವರ ಪಾಡು ಪಾಪ ಎನಿಸುತ್ತದೆ. ಇದೇ ಸಂದರ್ಭದಲ್ಲಿ ಹತ್ತಿರದವರು ಪರಿಚಯದವರು ವ್ಯಾವಹಾರಿಕವಾಗಿ ಕೊಡಬಹುದಾದ ನೈತಿಕಧೈರ್ಯವನ್ನು ಕೊಡುವುದಕ್ಕೆ ಮುಂದಾಗುವುದಿಲ್ಲ. ನನಗೆ ಪರಿಚಯವಿರುವ ವ್ಯಕ್ತಿಯೊಬ್ಬರು ವ್ಯಾವಹಾರಿಕ ನಷ್ಟವನ್ನು ಅನುಭವಿಸಿದ್ದರು. ಹಿಡಿದ ಕೆಲಸವೆಲ್ಲಾ ನಿರಾಶಾದಾಯಕವಾಗುತ್ತಿತ್ತು. ಕೆಲಸಮಾತ್ರ ಸದಾ ಇದ್ದರೂ ಪ್ರತಿಫಲ ದೊರೆಯುತ್ತಿರಲಿಲ್ಲ; ಗುಡ್ಡಕ್ಕೆ ಮಣ್ಣುಹೊತ್ತಂತೇ ಆಗುತ್ತಿತ್ತು. ಅವರು ತಯಾರಿಸುವ ಗುಣಮಟ್ಟದ ಗಣಕಯಂತ್ರಗಳು ಕಚೇರಿಗಳಲ್ಲೂ ಅಲ್ಲದೇ ಮನೆಮನೆಗಳಲ್ಲೂ ಬಳಕೆಗೆ ಯೋಗ್ಯವಾಗಿದ್ದವು. ವ್ಯಾವಹಾರಿಕ ನಷ್ಟದಲ್ಲಿದ್ದಾಗ ಅವರ ಸುತ್ತ ಇರುವ ಬಂಧುಬಳಗ ಹಲವು ಮನೆಗಳವರು ಬೇರೇ ಜನರ ಮಳಿಗೆಗಳಿಂದ ಗಣಕಯಂತ್ರಗಳನ್ನು ತಮ್ಮಲ್ಲಿಗೆ ತರಿಸಿಕೊಂಡರೇ ವಿನಃ ಯಾರೂ ಬಿಡಿಗಾಸಿನ ವ್ಯಾವಹಾರಿಕ ಪಾಯ್ದೆಯನ್ನೂ ಕೊಡಲು ಮುಂದೆ ಬರಲಿಲ್ಲ!

ಆಗೆಲ್ಲಾ ನೋಡುಗನಾದ ನನಗೆ ಅನಿಸಿದ್ದು ಬಡತನ ಬಂದಾಗ ನೆಂಟರ ಬಾಗಿಲು ಸೇರಬಾರದು....ದಾಸರು ಹೇಳಿದ ಮಾತು ಎಷ್ಟು ನೈಜತೆಯಿಂದ ಕೂಡಿದೆ! ನಮ್ಮಲ್ಲಿ ’ಇಗೊ ಮಣೆ’ ’ತಗೊ ಮಣೆ’ ’ತಾ ಮಣೆ’ ಎನ್ನುವ ಹಿಂದಿನಕಾಲದ ಗಾದೆಯೊಂದಿತ್ತು. ನೂರಾರು ಸರ್ತಿ ಕರೆದಾಗ ಒಮ್ಮೆ ಹೋದರೆ ನೆಂಟರು "ಇಗೋ ಮಣೆ ಹಾಕಿದ್ದೇನೆ" ಎನ್ನುತ್ತಾರಂತೆ. ನೆಂಟರೆನಿಸಿಕೊಂಡವರು ಅಗಾಗ ಭೇಟಿ ನೀಡುತ್ತಿದ್ದರೆ "ಓ ಅಲ್ಲಿದೆ ನೋಡು ತಗೋ ಮಣೆ" ಎನ್ನುತ್ತಾರಂತೆ, ನೆಂಟರು ಮತ್ತೆಮತ್ತೆ ಅಲ್ಲಿಗೆ ಹೋಗುತ್ತಿದ್ದರೆ "ಓ ಅಲ್ಲಿ ಮಣೆ ಇದೆ ನೋಡು ಸ್ವಲ್ಪ ಇಲ್ಲಿ ತಾ" ಎಂದು ಬಂದ ಮತ್ತಿನ್ಯಾರಿಗೋ ಮಣೆಹಾಕಲು ಮುಂದಾಗುತ್ತಾರಂತೆ! ಹೀಗಾಗಿ ’ಕೀಪ್ ದಿ ನೆಂಟರ್[ರಿಲೇಟಿವ್ಸ್] ಎಟ್ ಆರ್ಮ್ಸ್ ದಿಸ್ಟನ್ಸ್’! ನೆಂಟರನ್ನು ಅತಿಯಾಗಿ ಹತ್ತಿರಕ್ಕೆ ಬಿಟ್ಟುಕೊಳ್ಳುವುದೂ ಅಪಾಯಕರ. ಸಿರಿತನವೇ ಇರಲಿ ಬಡತನವೇ ಇರಲಿ ಒಂದೇಹದಕ್ಕೆ ಯಾರು ಮನುಷ್ಯರಾಗಿ ನಮಗೆ ಆಪ್ತರಾಗುತ್ತಾರೋ ಅವರೇ ನಿಜವಾದ ನೆಂಟರು ಎಂಬುದು ನನ್ನ ಅನಿಸಿಕೆ.

ಇನೊಮ್ಮೆ ನಾನು ಕೂತಾಗ ಯೋಚಿಸಿದ್ದು ಈ ರೀತಿ ಇದೆ : ನಮ್ಮ ನಮ್ಮ ವ್ಯವಹಾರದಲ್ಲಿ ನಮಗೆ ಗೊತ್ತಿರುವವರು ನಮಗೆ ಬೇಕಾದಂತೇ ನಡೆದುಕೊಳ್ಳದಿದ್ದರೆ ನಾವೇಕೆ ಅವರನ್ನು ದೂಷಿಸಬೇಕು? ಉದಾಹರಣೆಗೆ ನನ್ನ ಸುತ್ತಲ ಬಳಗದಲ್ಲಿ ಎಮ್.ಎಲ್.ಎಮ್. [ಮಲ್ಟಿ ಲೆವೆಲ್ ಮಾರ್ಕೆಟಿಂಗ್] ಮಾಡುವವರು ತುಂಬಾ ಮಂದಿ ಇದ್ದಾರೆ. ಆಮ್ ವೇ, ಮೋದೀ ಕೇರ್, ಕ್ವಾಂಟಮ್, ಜಪಾನ್ ಲೈಫ್, ಆದೀಶ್ವರ್, ಹರ್ಬಲ್ ಲೈಫ್, ಟಪ್ಪರ್ ವೇರ್, ವಿವಿಧ ಶೋ ಬಿಜ಼್ ಗಳು ಮೊದಲಾದ ಏಜೆಂಟರಾಗಿ ಕೆಲಸಮಾಡುತ್ತಿದ್ದವರು ಇದ್ದಾರೆ. ಬ್ಯಾಂಕ್ ಮ್ಯಾನೇಜರ್ ಒತ್ತಾಯಕ್ಕೆ ಆಮ್ ವೇ ತಗೊಂಡೆ, ಸ್ನೇಹಿತನ ಒತ್ತಾಯಕ್ಕೆ ಕ್ವಾಂಟಮ್ ತಗೊಂಡೆ, ಇನ್ನೊಬ್ಬ ನೆಂಟನ ವಿನಂತಿಗೆ ಮೋದೀಕೇರ್ ತಗೊಂಡೆ ಹೀಗೇ ಪಟ್ಟಿ ಬೆಳೆಯಿತೇ ವಿನಃ ನಾನು ಅವುಗಳನ್ನು ಮುಂದುವರಿಸಲಿಲ್ಲ. ಕೆಲವರು ತಮ್ಮಿಂದ ತೆಗೆದುಕೊಳ್ಳಲಿಲ್ಲಾ ಎಂತಲೂ ಕೆಲವರು ತೆಗೆದುಕೊಂಡಿದ್ದನ್ನು ಮುಂದುವರಿಸಲಿಲ್ಲಾ ಎಂತಲೂ ಬಿಟ್ಟುಹೋದರು; ಹಿಂದುಗಡೆಯಲ್ಲಿ ದೂಷಿಸಿದರು. ಸುಮಾರು ಎರಡು ಲಕ್ಷ ಮೊತ್ತವನ್ನು ಅದಕ್ಕೆ ಇದಕ್ಕೆ ಅಂತ ಕಳೆದುಕೊಂಡಿದ್ದೂ ಆಗಿದೆ, ಅನುಭವ ಪಡೆದುಕೊಂಡಿದ್ದೂ ಆಗಿದೆ. ಕೆಲವಂತೂ ವಿದೇಶೀ ಕಂಪನಿಗಳು ಭಾರತವನ್ನು ಟಾರ್ಗೆಟ್ ಮಾಡಿಕೊಂಡು ಮಾರುಕಟ್ಟೆ ಗಳಿಸುವತ್ತ ದಾಪುಗಾಲು ಹಾಕಿ ಇವತ್ತಿನದಿನ ಹಳ್ಳಿ ಹಳ್ಳಿಗಳಲ್ಲೂ ಈ ಎಲ್ಲಾ ಕಂಪನಿಗಳ ಏಜೆಂಟರು ಇದ್ದಾರೆ. ಎಲ್.ಐ.ಸಿ ಏಜೆಂಟರು ಬಂದರೆ ಬಾಗಿಲ ಸಂದಿಯಲ್ಲಿ ಅಡಗಿನಿಂತು "ಇಲ್ಲಾ" ಹೇಳಿಕಳಿಸುವ ಕಾಲವೊಂದಿತ್ತು! ಈಗ ಹಲವು ವಿಧದ ಏಜೆಂಟರು!! ಯಾರಿಗೆ ಬಾಗಿಲು ತೆರೆಯುತ್ತೀರಿ ಯಾರಿಗೆ ಇಲ್ಲ? ಒತ್ತಾಯಕ್ಕೆ ಬಸಿರಾದರೆ ಹಡೆಯುವುದು ದಾರಿಯಲ್ಲಿ ಎಂಬ ಗಾದೆ ಗೊತ್ತಿದೆಯಲ್ಲಾ ?

ಅಕಸ್ಮಾತ್ ನಾವೇ ಅಂತಹ ಏಜೆಂಟರುಗಳಾಗಿದ್ದಾಗ ನಮ್ಮಿಂದ ಖರೀದಿಸಲಿಲ್ಲಾ ಅಥವಾ ನಮಗೆ ಮನ್ನಣೆಕೊಡಲಿಲ್ಲಾ ಎಂಬುದೇ ನಮ್ಮ-ಅವರ ಬಾಂಧವ್ಯಕ್ಕೆ ಹೊಡೆತಕೊಡಬೇಕೇ? ವ್ಯವಹಾರವನ್ನು ಹೊರಗೇ ಇಡಿ, ಬಾಂಧವ್ಯವನ್ನು ಮರೆಯಬೇಡಿ ಎನ್ನುತ್ತಾರೆ ನಮ್ಮ ತಿಮ್ಮಗುರು.

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ
ವರಯೋಗ ಸೂತ್ರವಿದು-ಮಂಕುತಿಮ್ಮ

ಇಂತಹ ಲೌಕಿಕ ಜಂಜಾಟಗಳನ್ನೆಲ್ಲಾ ಮನದ ಹೊರಕೋಣೆಯಲ್ಲೇ ಬಂಧಿಸು, ಅವುಗಳಿಗೆ ಎಂದಿಗೂ ಮನದ ಒಳಕೋಣೆಗೆ ಪ್ರವೇಶ ನೀಡಬೇಡ ಎಂದಿದ್ದಾರೆ. ಒಳಕೋಣೆ ಭಗವಂತನ ವಾಸಸ್ಥಾನ! ಅಲ್ಲಿ ನಾನು ಮತ್ತು ’ನಾನಲ್ಲದ ನಾನು’ ಇಬ್ಬರಿಗೇ ಅವಕಾಶ. ಆ ಕೋಣೆಯಲ್ಲಿ ಇಬ್ಬರ ಸಂಭಾಷಣೆ ಮಾತ್ರ! ಅದು ಲೋಕಾಂತವಲ್ಲ ಏಕಾಂತ. ಆ ಏಕಾಂತದಲ್ಲಿ ಲೋಕಾಂತದ ವ್ಯವಹಾರಗಳನ್ನು ಬಳಸುವುದರಿಂದ ಏಕಾಂತಕ್ಕೆ ಭಂಗಬರುತ್ತದೆ. ಯಾವಾಗ ಆ ಏಕಾಂತಕ್ಕೆ ಭಂಗಬರುತ್ತದೋ ಆಗ ಏಕಾಂತವೂ ಲೋಕಾಂತವಾಗಿ ಮನ ಭ್ರಮೆಯಲ್ಲಿ ತೇಲಾಡುತ್ತದೆ, ತನ್ನತನ ಕಳೆದುಕೊಳ್ಳುತ್ತದೆ. ಹೇಳುವವರ ಮಾತುಗಳನ್ನು ನಮ್ಮ ಕಿವಿ ಹಿತ್ತಾಳೆಯ ಕಿವಿಯಾಗಿ ಕೇಳಿಸಿಕೊಳ್ಳುತ್ತದೆ. ಯಾರದೋ ವಿರುದ್ಧ ಯಾರನ್ನೋ ಎತ್ತಿಕಟ್ಟುತ್ತದೆ! ಎಲ್ಲಾ ಇಲ್ಲಸಲ್ಲದ ಉಪದ್ವ್ಯಾಪಗಳೇ.

ಮನಸ್ಸನ್ನು ಹೀಗೇ ಎರಡು ಭಾಗಗಳನ್ನಾಗಿ ವಿಂಗಡಿಸಿಕೊಳ್ಳಲಿಕ್ಕೆ ಅಭ್ಯಾಸಮಾಡಿಕೊಳ್ಳಬೇಕು. ನಮ್ಮ ತಯಾರಿಕೆಯ ಅಥವಾ ಏಜೆನ್ಸಿಯ ವಸ್ತುಗಳನ್ನೋ ಮತ್ತಿನ್ನೇನನ್ನೋ ಅವರು ಖರೀದಿಸಲಿಲ್ಲ ಎಂದ ಮಾತ್ರಕ್ಕೆ ಅವರದೇನೂ ತಪ್ಪಿಲ್ಲಾ ಎಂಬ ಭಾವವನ್ನು ನಾವೇ ತಳೆದರೆ, ವಿರೋಧವೊಡ್ಡಿದವರ ಸಲುವಾಗಿಯೂ ಅವರಿಗೆ ಒಳ್ಳೆಯ ಬುದ್ಧಿಬರಲಿ ಎಂಬ ಸಂದೇಶವನ್ನು ಸಾರಿದರೆ ಆಗ ಎದುರಿಗಿರುವ ಆ ಜನ ತಾವೇ ಕೊರಗಲು ತೊಡಗುತ್ತಾರೆ, ತಾವೇ ಸಣ್ಣವರಾದೆವಲ್ಲಾ ಎಂಬ ಕೊರಗು ಹಲವು ವರ್ಷಗಳ ಕಾಲ ಅವರನ್ನು ಬಾಧಿಸುತ್ತದೆ!

ಒಣಗಿ ಬೇಸಗೆಯಿಂದ ಮಣ್ಣಾಗಿ ಕಾಣದಿಹ
ತೃಣ ಮೊಳೆಯುವುದು ಮರಳಿ ಹನಿಯೆರಡು ಬೀಳೆ
ಅಣಗಿದ್ದು ನರನಾಶೆಯಂತು ಕಷ್ಟದ ದಿನದಿ
ಕುಣಿವದನುಕೂಲ ಬರೆ-ಮಂಕುತಿಮ್ಮ

ಇಂತಹ ಒಂದೊಂದೂ ಮುಕ್ತಕಗಳನ್ನು ಮಹಾತ್ಮ ಡೀವೀಜಿ ಬರೆದರು. ಕಷ್ಟದ ದಿನಗಳಲ್ಲಿ ನಮ್ಮ ದಿನಚರಿಯನ್ನು ಬರೆದಿಟ್ಟರೆ ಸುಖದ ದಿನಗಳಲ್ಲಿ ನಾವದನ್ನು ತೆರೆದು ಓದಿದಾಗ ಓ ಹೀಗೆಲ್ಲಾ ಇತ್ತಲ್ಲಾ ಎನಿಸುತ್ತದೆ!

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು
ಒಪ್ಪಿದ್ದೊಡದು ಭೋಜ್ಯವಂತು ಜೀವತಮುಂ
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ
ಯಿಪ್ಪತ್ತು ಸೇರೆ ರುಚಿ -ಮಂಕುತಿಮ್ಮ

ಉಪ್ಪಿಟ್ಟನ್ನು ಮಾಡುವಾಗ ಹೇಗೆ ಉಪ್ಪು, ಹುಳಿ, ಕಾರ, ಸಿಹಿ ಒಗ್ಗರಣೆ ಸಾಮಾನುಗಳು, ರವೆ, ನೀರು, ಕರಿಬೇವು ಇದನ್ನೆಲ್ಲಾ ಆಯಾಯ ಹದಕ್ಕೆ ಉಪಯೋಗಿಸಿದರೆ ರುಚಿಕಟ್ಟಾಗಿರುತ್ತದೋ ಈ ಜೀವನವೆಂಬುದೂ ಒಂದು ಉಪ್ಪಿಟ್ಟು! ಅದರಲ್ಲಿ ಬಡತನ, ಸಿರಿತನ, ಕಷ್ಟಕೋಟಲೆ, ಕಾಯಿಲೆ-ಕಸಾಲೆ, ದುಃಖ-ದುಮ್ಮಾನ, ಸುಖ-ಶಾಂತಿ-ನೆಮ್ಮದಿ ಎಲ್ಲವೂ ಅಷ್ಟಿಷ್ಟು ಸೇರಿಯೇ ಇರುತ್ತದೆ. ಹಣವಿದ್ದ ಮಾತ್ರಕ್ಕೆ ಸಾಯುವ ಶ್ರೀಮಂತ ಬದುಕಲಾರ ಹೇಗೋ ಹಣವಿಲ್ಲದ ಮಾತ್ರಕ್ಕೆ ಬದುಕು ಬರಡು ಎಂದು ತಿಳಿಯುವುದು ಮೂರ್ಖತನ. ಹಣದಿಂದಲೇ ಎಲ್ಲವೂ ಎಂಬ ಭ್ರಮೆಗೆ ಒಳಗಾಗಿ ನಾವು ಕೆಡುತ್ತೇವೆ.

ಉದಾಹರಣೆಗೆ ಪದ್ಮಾಲಕ್ಷ್ಮೀ ಎಂಬ ಮಹಿಳೆ ತನ್ನನ್ನು ಜಾಗತಿಕ ಮಟ್ಟದಲ್ಲಿ ಶೀಲಮಾರಿಕೊಳ್ಳುವುದರ ಮೂಲಕ ಗುರುತಿಸಿಕೊಂಡು ಹಣಮಾಡಿದ್ದಾಳೆ. ಆದರೆ ಆಕೆ ಸುಖಿಯೇ? ಸರ್ವಥಾ ಸಾಧ್ಯವಿಲ್ಲ! ಮುಪ್ಪಿನ ವಯೋಮಾನಕ್ಕೆ ಅವಳಿಗೆ ಅದರ ಅರ್ಥವ್ಯತ್ಯಾಸ ಗೊತ್ತಾಗುತ್ತದೆ, ಕಾಲ ಸರಿದುಹೋಗಿರುತ್ತದೆ! ಹಣದ ಹೊಳೆಯಲ್ಲೇ ಸದಾ ತೇಲಾಡುವ ವಿದೇಶೀಯರು ಶಾಂತಿಯನ್ನರಸಿ ಭಾರತಕ್ಕೆ ಬರುತ್ತಾರೆ ಯಾಕೆ ? ಅಲ್ಲಿ ಎಕ್ಸ್‍ಪೋರ್ಟ್ ಮಾಡಿ ಎಂದು ಕುಳಿತಲ್ಲಿಂದಲೇ ಆರ್ಡರ್ ಮಾಡಲಾಗುತ್ತಿರಲಿಲ್ಲವೇ? ಶಾಂತಿ-ನೆಮ್ಮದಿ ಖರೀದಿಸುವ ವಸ್ತುವಲ್ಲವಲ್ಲ, ಇಲ್ಲದಿದ್ದರೆ ಜನ ಅದನ್ನೂ ವ್ಯಾವಹಾರಿಕವಾಗಿ ಮಾಡಿಕೊಳ್ಳುತ್ತಿದ್ದರು!

’ಬಡವಾ ನೀ ಮಡಗದ್ಹಾಂಗಿರು’ ಎಂಬುದು ಜನಪದ ಜಾಣ್ಣುಡಿ. ಮಡಗೋದು ಎಂದರೆ ಇಡೋದು. ಇಡೋದು ಯಾರು? ಕಾಣದ ಶಕ್ತಿ ಕಾಣುವ ಈ ಲೋಕದ ಅಣುಅಣುವಿನ ಸಂಚಾರದಲ್ಲೂ ಕೆಲಸಮಾಡುತ್ತದೆ; ನಿಯಂತ್ರಿಸುತ್ತದೆ. ಇದನ್ನರಿತ ಆಚಾರ್ಯ ಶಂಕರರು " ತೃಣಮಪಿ ನ ಚಲತಿ ತೇನವಿನಾ " ಎಂದರು! ನಾವಿನ್ನೂ ಅದನ್ನು ಅರಿತಿಲ್ಲ, ಅರಿಯುವುದಕ್ಕೆ ಮುಂದಾಗುವುದೂ ಇಲ್ಲ! ಅರಿಯುವುದು ಒಂದನ್ನೇ- ಪಾರ್ಶಿಮಾತ್ಯರ ಅಂಧಾನುಕರಣೆ ಮಾಡುವುದನ್ನು ಮತ್ತು ಪ್ರಗತಿಪರರು ಎನಿಸುವ ಸಲುವಾಗಿ ಸದ್ಧರ್ಮ ಸೂತ್ರಗಳನ್ನೂ ವೇದವೇದಾಂಗಗಳನ್ನೂ ಅಲ್ಲಗಳೆಯುವುದು!

ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು
ಹೊಸ ಯುಕ್ತಿ ಹಳೆತತ್ವದೊಡಗೂಡೆ ಧರ್ಮ
ಋಷಿವಾಕ್ಯದೊಡೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜನ ಜೀವನಕೆ-ಮಂಕುತಿಮ್ಮ

ಬೇರು ಹಳೆಯದಾದಷ್ಟೂ ಮರ ಬಾಳುತ್ತದೆ, ಚಿಗುರು ಹೊಸದಾದಷ್ಟೂ ಅದರ ಅಂದ ಹೆಚ್ಚುತ್ತದೆ ಹೇಗೋ ಹಾಗೇ ಆರ್ಷೇಯ ತತ್ವಗಳಿಂದ ಮನುಜಮತವನ್ನು ಹೇಳಿದ ಸನಾತನ ಧರ್ಮ, ವೇದ-ಉಪನಿಷತ್ತುಗಳು ಇವೆಲ್ಲವುಗಳ ಆಧಾರದಮೇಲೆ ಆಧುನಿಕ ವಿಜ್ಞಾನವನ್ನು ಬಳಸಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾ, ಜೊತೆಗೆ ಸುರಸ ಲಾಲಿತ್ಯ ಸಂಗೀತ, ಶಿಲ್ಪ, ಚಿತ್ರಕಲೆಗಳನ್ನೂ ಜೋಡಿಸಿಕೊಳ್ಳುತ್ತಾ ಬದುಕಿದರೆ ಜನಜೀವನಕ್ಕೆ ಅದು ಉತ್ತಮಮಾರ್ಗ ಎಂದು ಪ್ರಾಜ್ಞರು ಅನುಭವದಿಂದಲೂ ಆಧಾರದಿಂದಲೂ ಹೇಳಿದ್ದಾರೆ.

ಸರ್ವರುಂ ಸಾಧುಗಳೇ ಸರ್ವರುಂ ಬೋಧಕರೆ
ಜೀವನ ಪರೀಕ್ಷೆ ಬಂದಿದಿರು ನಿಲುವನಕ
ಭಾವಮರ್ಮಂಗಳೇಳುವುವಾಗ ತಳದಿಂದ
ದೇವರೇ ಗತಿಯಾಗ -ಮಂಕುತಿಮ್ಮ

ಹೇಳುವುದು ಸುಲಭ, ನಡೆಸುವುದು ಕಷ್ಟ ಎಂಬುದೂ ಒಂದು ಮಾತು. ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಬೋಧಕರೇ ಆಗಿರುತ್ತೇವೆ. ಬೇರೆಯವರಿಗೆ ಬೋಧಿಸುವ ಕೆಲಸದಂತೇ ನಾವೆಷ್ಟು ಅದನ್ನು ಅಳವಡಿಸಿಕೊಂಡಿದ್ದೇವೆ ಎಂಬುದು ಪ್ರಮುಖವಾಗಿ ಶೋಧಮಾಡಬೇಕಾದ ಅಂಶ. ಎಷ್ಟೋ ಸಲ ಬೋಧಕರಿಗೇ ನಿಂತನೆಲ ಕುಸಿಯುವ ಸನ್ನಿವೇಶವೂ ಇರಬಹುದು. ಮನದ ಮೂಸೆಯಿಂದ ಧುತ್ತನೇ ಮೇಲೇಳುವ ಎಲ್ಲಾಭಾವನೆಗಳನ್ನೂ ನಿಯಂತ್ರಿಸುತ್ತಾ ಜೀವನವೆಂಬ ನಿಜವಾದ ಪರೀಕ್ಷೆಗೆ ನಮ್ಮನ್ನು ನಾವು ಒಡ್ಡುವಾಗ ದೇವರೆಂಬ ಅಗೋಚರ ಶಕ್ತಿ ನಮಗೆ ಉತ್ತೀರ್ಣರಾಗುವ ಶಕ್ತಿಯನ್ನೂ ತಕ್ಕಮಟ್ಟಿನ ಯುಕ್ತಿಯನ್ನೂ ನೀಡಬೇಕಾಗುತ್ತದೆ.

ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದ ಹಸಾದವೆಂದುಣ್ಣು ಗೊಣಗುಡದೆ
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ
ಹೊರಡು ಕರೆ ಬರಲ್ ಅಳದೇ -ಮಂಕುತಿಮ್ಮ

ಪಾಲಿಗೆ ಬಂದ ಯಾವ ಕೆಲಸವೇ ಆದರೂ ಅದನ್ನೇ ಮನಸ್ಸಂತೋಷದಿಂದ ಮಾಡಿ ಅದರಿಂದ ದೊರೆತ ಫಲವನ್ನು ದೇವರ ಪ್ರಸಾದವೆಂದು ಸ್ವೀಕರಿಸುತ್ತಾ, ಯಾವುದಕ್ಕೂ ಗೊಣಗುಡದೇ ಬದುಕಿನ ಖರ್ಚುಗಳನ್ನು ’ಹಾಸಿಗೆಗೆ ತಕ್ಕಂತೇ ಕಾಲುಚಾಚು’ ಎಂಬರೀತಿಯಲ್ಲಿ ನಿಭಾಯಿಸುತ್ತಾ ನಡೆದರೆ, ಬದುಕಿದರೆ ವ್ಯಕ್ತಿ ಸತ್ತಮೇಲೂ ಜನ ಇನ್ನೂ ಬೇಕಾಗಿತ್ತು ಎನ್ನುತ್ತಾರೆ! ಇದಕ್ಕೆ ಸದ್ಯ ನಾನು ಉದಾಹರಿಸುವುದು ರಾಜಕಾರಣಿ ಡಾ|ವಿ.ಎಸ್.ಆಚಾರ್ಯರನ್ನು. ಮತ್ತೆ ವಿವರಣೆ ಬೇಡ ಎನಿಸುತ್ತದೆ.

ಕಾಗೆಯುಂ ಕೋಗಿಲೆಯುವೊಂದೆ ಮೇಲ್ನೋಟಕ್ಕೆ
ಯೋಗಿಯುಂ ಸಂಸಾರ ಭೋಗಿಯೇ ಹೊರಕೆ
ಲೋಗರವೊಲಿರುತೆ ಸುಖದುಃಖ ಸಂಭ್ರಮಗಳಲಿ
ತ್ಯಾಗಿಯವನ್ ಅಂತರದಿ -ಮಂಕುತಿಮ್ಮ

ಕಾಗೆಯೂ ಕೋಗಿಲೆಯೂ ದೂರದಿಂದ ಕಪ್ಪಗೇ ಕಾಣುತ್ತವೆ ಹೇಗೋ ಹಾಗೇ ಯೋಗಿಯೂ ಭೋಗಿಯೂ ಇಬ್ಬರೂ ಒಂದರ್ಥದಲ್ಲಿ ಸಂಸಾರಸ್ಥರೇ ಆಗಿರುತ್ತಾರೆ. ಸನ್ಯಾಸಿಗಳಿಗೆ ನೇರವಾದ ತ್ಯಾಗದ ಅನುಕೂಲವಿದ್ದರೆ ಸಂಸಾರಿಗಳಿಗೆ ಸ್ವನಿಯಂತ್ರಣದಿಂದ ತ್ಯಾಗ ಸಾಧ್ಯವಾಗುತ್ತದೆ. ಸಂಸಾರಿಯಾಗಿದ್ದೂ ಯೋಗಿಗಳಾಗುವ ಮಹಾತ್ಮರೂ ಇದ್ದಾರೆ. ಅದಕ್ಕೆ ಸ್ವತಃ ಡೀವೀಜಿಯವರೇ ಉದಾಹರಣೆಯಾಗುತ್ತಾರೆ! ತನಗೆ ಸನ್ಮಾನಧನವಾಗಿ ಬಂದ ಒಂದುಕೋಟಿ [ಅಂದಿನ ೧೯೭೫ರ ಕಾಲದಲ್ಲಿ ಒಂದುಕೋಟಿ]ಯನ್ನೂ ಸಂಪೂರ್ಣ ಸಾರ್ವಜನಿಕರ ಸೇವೆಗಾಗಿ ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ಕಟ್ಟುವುದಕ್ಕೆ ನೀಡಿ, ನಿಂತು ಕಟ್ಟಿಸಿ ಲೋಕಾರ್ಪಣೆಗೈದರು. ಮಾರನೇ ದಿನವೇ ಮನೆಗೆ ಬಂದ ಅಭಿಮಾನಿಗಳಿಗೆ ಕಾಫಿ ಕೊಡುವ ವ್ಯವಸ್ಥೆಗೂ ಸ್ವಲ್ಪ ಹಣವನ್ನೂ ಇಟ್ಟುಕೊಳ್ಳಲಿಲ್ಲ, ಶೆಟ್ಟಿ ಅಂಗಡಿಯಿಂದ ಸಾಲದ ರೂಪದಲ್ಲಿ ಕಾಫಿಗೆ ಬೇಕಾದ ಸಾಮಾನು ಪಡೆದು ನಂತರ ತೀರಿಸಿದರು! ನಾವೆಲ್ಲರೂ ಹೀಗೇ ಮಾಡಲು ಸಾಧ್ಯವೇ? ಹೊರನೋಟಕ್ಕೆ ಡೀವೀಜಿಯೂ ನಮ್ಮಂತೇ ಸಂಸಾರಿಗಳೇ ಅಗಿದ್ದರಲ್ಲವೇ? ’ತ್ಯಾಗಿಯವನ್ ಅಂತರದಿ’ ಎಂಬ ಮಾತು ಎಷ್ಟು ಸತ್ಯ ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗಿದೆ.

ಶರಣವೊಗು ಜೀವನ ರಹಸ್ಯದಲಿ ಸತ್ತ್ವದಲಿ
ಶರಣು ಜೀವನವ ಸುಮವೆನಿಪ ಯತ್ನದಲಿ
ಶರಣಂತರಾತ್ಮ ಗಂಭೀರ ಪ್ರಶಾಂತಿಯಲಿ
ಶರಣು ವಿಶ್ವಾತ್ಮನಲಿ -ಮಂಕುತಿಮ್ಮ

|ವಸುಧೈವ ಕುಟುಂಬಕಮ್| ಎಂಬ ವ್ಯಾಖ್ಯೆಯನ್ನು ಈ ಮುಕ್ತಕದಲ್ಲಿ ಡೀವೀಜಿ ಅಳವಡಿಸಿದ್ದಾರೆ. ಆದಿಶಂಕರರು ಆತ್ಮಷಟ್ಕದಲ್ಲಿ ಚಿದಾನಂದರೂಪಂ ಶಿವೋಹಂ ಶಿವೋಹಂ ಎಂದಿದ್ದನ್ನು ಕಳೆದವರ್ಷ ವಿವರಿಸಿದ್ದೆನಷ್ಟೇ ? ಅದರಂತೇ ಈ ಪ್ರಪಂಚದ ಒಳಗೂ ಮತ್ತು ಅದರಾಚೆಗೂ ಹುದುಗಿ ಕುಳಿತು, ರಹಸ್ಯವಾಗಿ ಈ ಲೋಕವನ್ನು, ಬ್ರಹ್ಮಾಂಡವನ್ನು ನಡೆಸುತ್ತಿರುವ ಜಗನ್ನಿಯಾಮಕ ವಿಶ್ವಂಭರ ಶಕ್ತಿಗೆ ನಾವು ನಮಸ್ಕರಿಸಲು ಮರೆಯಬಾರದು. ಲೌಕಿಕವಾಗಿ ಮನುಷ್ಯನ ಜೀವನಕ್ಕಾಗಿ ಅದೆಷ್ಟೋ ಕಾರ್ಮಿಕರು ಕಾರ್ಖಾನೆಗಳಲ್ಲಿ, ರೈತರಾಗಿ ಹೊಲಗಳಲ್ಲಿ, ರಸ್ತೆ, ಸೇತುವೆ-ಸಾರ್ವಜನಿಕ ಕಟ್ಟಡಗಳ ನಿರ್ಮಾಣಗಳಲ್ಲಿ, ನೀರು-ಆಹಾರ ಪೂರೈಕೆಮಾಡುವುದರಲ್ಲಿ, ಆರೋಗ್ಯ-ವಿದ್ಯೆ-ಉದ್ಯೋಗ-ವ್ಯಾಪಾರ ಮೊದಲಾದುವುಗಳನ್ನು ಸಮದೂಗಿಸುವಲ್ಲಿ, ವಿದ್ಯುತ್ತು-ವಾಹನಾದಿ ಸಕಲ ಸೌಲಭ್ಯಗಳನ್ನು ಕೊಡುವಲ್ಲಿ ತೊಡಗಿಸಿಕೊಂಡಿರುವ ಮಾನವನಲ್ಲಿರುವ ಆ ಪರೋಕ್ಷ ಶಕ್ತಿಗೆ ನಮಸ್ಕರಿಸಬೇಕು. ಪ್ರತಿಯೊಂದೂ ಜೀವಿಯ ಆಂತರ್ಯದಲ್ಲಿ ನೆಲಸಿರುವ ಗಂಭೀರನೂ ಪ್ರಶಾಂತನೂ ಆದ ಪರಮಾತ್ಮನನ್ನು ಕಂಡು ನಮಸ್ಕರಿಸಬೇಕು ಎಂಬುದು ಡೀವೀಜಿಯವರ ಸಂದೇಶವಾಗಿದೆ. ಇಂದಿಗೆ ಸುಮಾರು ೧೨೫ ವರ್ಷಗಳ ಹಿಂದೆ ಜನಿಸಿದ್ದ ಡೀವೀಜಿಯವರ ಅನುಭವ ಮತ್ತು ಅನುಭಾವ ಅನನ್ಯ, ಮಾನ್ಯ. ಅವರ ಹೆಸರನ್ನು ಹೇಳಿಕೊಂಡು ಬರೆಯುವುದೂ ನಮ್ಮ ಪುಣ್ಯ ಎಂದು ತಿಳಿಸುತ್ತಾ, ಜೀವನಧರ್ಮವನ್ನು ಅರ್ಥಮಾಡಿಕೊಳ್ಳಲು ಅವರ ’ಜೀವನಧರ್ಮ ಯೋಗ’ ವೆಂಬ ಬೃಹದ್ಗ್ರಂಥವನ್ನು ಸಮಯಮಾಡಿಕೊಂಡು ಓದಿ ಎಂದು ಸಲಹೆ ನೀಡುತ್ತಾ ಡೀವೀಜಿಯವರಿಗೆ ನನ್ನ ಸಾಷ್ಟಾಂಗ ವಂದನೆಗಳನ್ನು ಸಲ್ಲಿಸಿ ನಿಮ್ಮೆಲ್ಲರಿಗೂ ವಂದಿಸುವುದರೊಂದಿಗೆ ಶುಭಕೋರುತ್ತೇನೆ.

3 comments:

  1. ಗು೦ಡಪ್ಪನವರ ಕಗ್ಗದ ಜೊತೆಗೆ ಜೀವನದ ಕಟುಸತ್ಯವನ್ನು ಶಬ್ದರೂಪದಲ್ಲಿ ಹಿಡಿದಿಡುವಲ್ಲಿ ನೀವು ಯಶಸ್ವಿಯಾಗಿದ್ದೀರಿ. ತು೦ಬಾ ಚೆನ್ನಾಗಿದೆ ಬರಹ. simply great.

    ReplyDelete
  2. ತುಂಬಾ ಉಪಯುಕ್ತವಾದ ಉತ್ತಮವಾದ ಲೇಖನ. ಧನ್ಯವಾದಗಳು.

    ReplyDelete
  3. ಓದಿ ಪ್ರತಿಕ್ರಿಯಿಸಿದ ಶ್ರೀಯುತ ಪರಾಂಜಪೆ ಮತ್ತು ಶ್ರೀಮತಿ ಉಮಾ ಭಟ್ ತಮಗಿಬ್ಬರಿಗೂ ಮತ್ತು ಓದಿದ ಎಲ್ಲರಿಗೂ ನನ್ನ ಹಲವು ನೆನಕೆಗಳು.

    ReplyDelete