ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, March 5, 2012

ಎಲ್ಲಿ ಎಲ್ಲಿ ರಾಗಮಾಲೆ ಇರುವನಲ್ಲಿ ಕೇಶವ ಎಲ್ಲಿ ಎಲ್ಲಿ ರಾಸಲೀಲೆ ಅಲ್ಲಿ ಒಲವಿನುತ್ಸವ .....

ಈ ಚಿತ್ರಋಣ: ಆಲ್ ಇಂಡಿಯಾ ಆರ್ಟ್ಸ್.ಕಾಂ
ಮಿಕ್ಕಿದ ಚಿತ್ರಗಳ ಕೃಪೆ : ಅಂತರ್ಜಾಲ

ಎಲ್ಲಿ ಎಲ್ಲಿ ರಾಗಮಾಲೆ ಇರುವನಲ್ಲಿ ಕೇಶವ
ಎಲ್ಲಿ ಎಲ್ಲಿ ರಾಸಲೀಲೆ ಅಲ್ಲಿ ಒಲವಿನುತ್ಸವ

ಹೋಲಿಕಾ-ಕಾಮದಹನ ಎಂದು ಕರೆಯಲ್ಪಡುವ ಹೋಳಿಹಬ್ಬ ನಾಳೆ ಭಾರತಪೂರ್ತಿ ಆಚರಿಸಲ್ಪಡುತ್ತದೆ. ಹಾಗೆ ನೋಡಿದರೆ ಅಂತಹ ವಿಶೇಷ ಪೂಜೆ-ಪುನಸ್ಕಾರಗಳಿಲ್ಲದ ಈ ಹಬ್ಬದ ಮಹತ್ವ ಎಂಥದ್ದು ಎಂಬುದನ್ನು ತಿಳಿಯದೇ ಆಚರಿಸುವವರೂ ಇದ್ದಾರೆ! ಹೋಳಿ ಎಂದರೆ ಬರೇ ರಂಗಿನಾಟವೇ? ಹಾಗಾದರೆ ಅದು ಯಾತಕ್ಕೆ?

ಸಂಸ್ಕೃತದ ಪರ್ವ ಎಂಬುದು ಕನ್ನಡದಲ್ಲಿ ಹಬ್ಬ ಎಂದಾಗಿದೆ. ನಮ್ಮ ಪ್ರತಿಯೊಂದೂ ಹಬ್ಬದ ಹಿಂದೆ ಮನೋವೈಜ್ಞಾನಿಕ, ವೈಜ್ಞಾನಿಕ ಕಾರಣಗಳಿವೆ ಎಂಬುದನ್ನು ಅದೆಷ್ಟೋ ಸಂಶೋಧನೆಗಳು ಅದಾಗಲೇ ತಿಳಿಸಿವೆ. ಚಳಿಗಾಲ ಕಳಿದು ಬೇಸಿಗೆ ಕಾಲಿಡುವದರೊಳಗಿನ ಸೇತುವೆಯಂತೇ ಇರುವ ಈ ಕಾಲಘಟ್ಟವನ್ನು ಆಂಗ್ಲರು ’ಸ್ಪ್ರಿಂಗ್ ಸೀಸನ್’ ಎನುತ್ತಾರೆ. ಚಳಿ ಮುಗಿದು ಹೋಯ್ತು ಇನ್ನೇನೂ ಶೀತದ ಭಯವಿಲ್ಲ ಎಂಬ ಕಾರಣಕ್ಕೆ ಈ ಹಬ್ಬವೇ ? ಅಲ್ಲ. ಗಡದ್ದಾಗಿ ಅಡುಗೆಮಾಡಿ ಹೊಡೆಯಲಿಕ್ಕಾಗಿಯೇ ? ಅಲ್ಲ . ಯಾವುದೂ ಅಲ್ಲ ಎಂದಮೇಲೆ ಯಾಕಾಗಿ ಈ ಹಬ್ಬ ? ಹಿಂದೂಗಳಿಗೆ ಇದೊಂದು ವಿಶಿಷ್ಟ ಹಬ್ಬ. ಇದು ಗಂಡು-ಹೆಣ್ಣಿನ ನಡುವೆ ದೈಹಿಕ ಆಕರ್ಷಣೆ ಇಲ್ಲದ ಅಥವಾ ಕಾಮ ರಹಿತವಾದ ನಿಷ್ಕಲ್ಮಶ ಪ್ರೇಮವನ್ನೂ, ಸಮಾಜದಲ್ಲಿ ಎಲ್ಲರ ಬ್ರಾತೃತ್ವ ವೃದ್ಧಿಸುವ ನಿಷ್ಕಳಂಕ ಪ್ರೀತಿಯನ್ನೂ ತಿಳಿಸುವ ಹಬ್ಬ!

ಉತ್ತರ ಭಾರತದಲ್ಲಿ ಇದು ಕೃಷ್ಣನನ್ನು ಅತಿಯಾಗಿ ನೆನಪಿಸುವ ಹಬ್ಬಗಳಲ್ಲಿ ಒಂದು. ಇಂಥಾ ಹಬ್ಬದ ಸಾರವನ್ನು ತಿಳಿಯುವ ಜೊತೆಜೊತೆಗೇ ನಮ್ಮ ಕನ್ನಡದ ಕವಿ ಕೆ.ಸಿ.ಶಿವಪ್ಪನವರು ಬರೆದ ಒಂದು ಹಾಡನ್ನೂ ಗುನುಗುನಿಸುತ್ತಾ ಮುಂದುವರಿಯೋಣ. ಅಂದಹಾಗೇ ಕನ್ನಡದ ಈ ಕವಿ ಕೃಷ್ಣ-ರಾಧೆಯರ ಕುರಿತು ಅನೇಕ ಹಾಡುಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಒಂದಷ್ಟು ಧ್ವನಿಮಾಧ್ಯಮ [ಆಡಿಯೋ ಕ್ಯಾಸೆಟ್]ಕ್ಕೆ ಏರಿದವು. ಅಂತಹ ಅಪರೂಪದ ಕ್ಯಾಸೆಟ್‍ಗಳು ಇಂದು ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಮಾತ್ರ ದೊರೆಯಬಹುದು. ಕವಿಯ ಸರಳ ರಚನೆಗಳು ಬಹಳ ಸೆಳೆಯುತ್ತವೆ. ಮಕ್ಕಳೂ ಕೂಡ ಹಾಡಬಹುದಾದ ಸುಲಭ ಸಾಹಿತ್ಯಕ ಪದಗಳಲ್ಲಿ ಭಾವ ಪೂರ್ಣವಾಗಿ ಬರೆದ ಕವನಗಳು ಕೇಳಲು ಬಹಳ ಪ್ರಿಯವಾಗುತ್ತವೆ; ಕೇಳುತ್ತಾ ಕೇಳುತ್ತಾ ಭಾವಸರೋವರದಲ್ಲಿ ವಿಹರಿಸುವ ಅನುಭವ ಕೇಳುಗನಿಗಾಗುತ್ತದೆ. ಅಂತಹ ಒಂದು ಹಾಡಿನ ಸಾಂಗತ್ಯದೊಡನೆ ನಮ್ಮ ಹೋಳೀ ಹಬ್ಬದ ಕಥೆ ಮುಂದುವರಿಯುತ್ತದೆ!

ಮುರಳಿನಾದ ಹರಿದು ಸುರಿಯೆ ಅಲ್ಲಿ ರಾಗಮೋಹನ
ಕಮಲ ನಾಚಿ ಬಿರಿದು ಕರೆಯೆ ಅಲ್ಲಿ ನೀಲಲೋಚನ


ಮುದ್ದು ಕೃಷ್ಣ ಯಾರಿಗೆ ಬೇಕಾಗಿಲ್ಲ? ಆತ ರಾಧೆಗೋ ರುಕ್ಮಿಣಿಗೋ ಗೋಪಿಕೆಯರಿಗೋ ಬೇಕಾದ ಹಾಗೇ ನಮಗೆಲ್ಲಾ ಬೇಕೇ ಆಗಿರುವ ಆಪ್ತ. ಮುದ್ದು ಮಗುವಿನಿಂದ ಹಿಡಿದು ಮುದಕರವರೆಗೂ ಆತ ಎಲ್ಲರಿಗೂ ಪರೋಕ್ಷ ಪರಿಚಿತನೇ! ಅಂಬೆಹರೆಯುವ ಕೃಷ್ಣನ ತುಂಬು ಗಡಿಗೆಯ ಬೆಣ್ಣೆ ಕದ್ದ ಕಥೆಕೇಳುವ ಮಕ್ಕಳಿಗೂ ಆತ ಬೇಕು, ಮಿಲನಮಹೋತ್ಸವಕ್ಕಾಗಿ ಕಾದ ದಂಪತಿಯ ಪ್ರೇಮ ಸಲ್ಲಾಪಕ್ಕೆ ಸ್ಫೂರ್ತಿ ನೀಡುವನಾಗಿ ಬೇಕು, ಹರೆಯದ ಜನರಿಗೆ ಗುರಿ ತಲುಪುವ ಬಗೆ ತೋರುವ ಗೋಪಾಲ ಬೇಕು, ನಡುಪ್ರಾಯದ ಜನರಿಗೆ ನಡೆಯುವ ಹಾದಿ ತಿಳಿಸಿದ ಜಗದ್ಗುರು ಕೃಷ್ಣ ಬೇಕು, ಹೆಜ್ಜೆ ಕಿತ್ತಿಡಲು ಊರುಗೋಲಿನ ಸಹಾಯ ಪಡೆಯುವ ಅಜ್ಜ-ಅಜ್ಜಿಯರಿಗೂ ಆತ ಭಗವಂತನಾಗಿ ಬೇಕು. ಇಷ್ಟೆಲ್ಲಾ ಹಬ್ಬಿರುವ ಆ ಕೃಷ್ಣ ಗೀತೆಯನ್ನು ಬೋಧಿಸಿದ ಅಪ್ರತಿಮ ಮೇಧಾವಿ ಎಂದರೆ ನಂಬಲಾಗದಷ್ಟು ಎಲ್ಲರಿಗೂ ಆತ ಫ್ರೆಂಡು, ಸ್ನೇಹಿತ, ಒಂಥರಾ ಮನೆಜನ ಇದ್ದಹಾಗೇ!

ತಾರೆ ಮಿನುಗಿ ಸನ್ನೆ ಮಾಡೆ ಬರುವ ಚಾರು ಚಂದಿರ
ಮುಗುದೆಯೊಡನೆ ಒಂಟಿಯಾಡೆ ನಲಿವಶ್ಯಾಮಸುಂದರ !

ಇಂತಹ ಗೊಲ್ಲನ ಆ ಕಾಲದಲ್ಲಿ ಹೋಲಿಯನ್ನು ಆತನೂ ಸೇರಿದಂತೇ ಎಲ್ಲರೂ ಸೇರಿ ಆಡುತ್ತಿದ್ದರಂತೆ. ಬಿದಿರಿನ ಪೆಟ್ಲಂಡೆ-ಪಿಚಕಾರಿಗಳಲ್ಲಿ ನೈಸರ್ಗಿಕವಾಗಿ ಸಿದ್ಧಗೊಂಡ ವಿವಿಧ ಬಣ್ಣಗಳ ನೀರನ್ನು ತುಂಬಿಕೊಂಡು ಪರಸ್ಪರ ಹಾರಿಸುತ್ತಾ ಸಂತಸಪಡುತ್ತಿದ್ದರಂತೆ. ಸಖಿಯರ ನಡುವೆ ನಿಂತ ಸಖ ಗೋವಿಂದನಿಗೆ ಸುತ್ತಲ ಎಲ್ಲರಿಂದಲೂ ಬಣ್ಣದ ಓಕುಳಿಯಾಟ. ಕೃಷ್ಣ ಹದಿನಾರು ಸಾವಿರ ಗೋಪಿಕೆಯರ ಗಂಡ ಎಂಬುದೊಂದು ಐತಿಹ್ಯವಿದೆ. ನರಕಾಸುರ ಕೂಡಿಟ್ಟ ಹದಿನಾರುಸಾವಿರ ಹೆಣ್ಣುಮಕ್ಕಳನ್ನು ಆತ ಬಂಧಮುಕ್ತಗೊಳಿಸಿದಾಗ "ಅನಾಥರಾದ ನಮಗೆ ನೀನೇ ಶ್ರೀನಾಥನಾಗು" ಎಂದು ಅವರೆಲ್ಲಾ ಗೋಳಿಟ್ಟರಂತೆ. ಅವರ ಅಳಲನ್ನು ಕೇಳಿದ ಕೇಶವ ನೆಪಮಾತ್ರಕ್ಕೆ ತಾನು ಗಂಡ ಎನಿಸಿಕೊಂಡನಾದರೂ ಅವರ ಬೇಕುಬೇಡಗಳನ್ನು ಪೂರೈಸಿದ ಬ್ರಹ್ಮಚಾರಿ ಕೃಷ್ಣ! ಇದು ಹೇಗೆ ಎಂದರೆ ಕೆಸವೆಯ ಅಥವಾ ತಾವರೆಯ ಎಲೆಯಮೇಲೆ ಬಿದ್ದ ನೀರು ಅದನ್ನು ಒದ್ದೆ ಮಾಡದಲ್ಲ? ಹಾಗೇ ಸಂಸಾರದೊಳಗಿದ್ದೂ ಆತ ಯಾವುದನ್ನೂ ಅಂಟಿಸಿಕೊಳ್ಳದವ. ಇಂದ್ರಿಯಗಳನ್ನು ಹದ್ದುಬಸ್ತಿನಲ್ಲಿಟ್ಟೂ ಹೆಂಗಸರ ಮಳ್ಳ! ಇದೇ ಆ ಯಾದವನ ವೈಶಿಷ್ಟ್ಯ.

ಎಲ್ಲಿರಾಧೆ ಅಲ್ಲಿ ಶ್ಯಾಮ ಜೀವ ಭಾವ ಚಂದಕೆ
ಎಲ್ಲಿ ಚಲುವೊ ಅಲ್ಲಿ ಒಲುಮೆ ಮುಗಿಲು-ತಿರೆಯ ಮಿಲನಕೆ

ಇಂತಹ ಸಕಲರ ಪ್ರಿಯಕರ ಕೃಷ್ಣನನ್ನು ಹೆಣ್ಣು-ಗಂಡೆಂಬ ಭೇದವಿಲ್ಲದೇ ಎಲ್ಲರೂ ಪ್ರೀತಿಸುತ್ತಾರೆ. ಇಲ್ಲಿ ಒಂದು ಸೂಕ್ಷವನ್ನೂ ಗಮನಿಸಬೇಕು: ಯಾರಾದರೂ ಪ್ರಯತ್ನಿಸಿದರೆ ಹದಿನಾರು ಸಾವಿರ ಹೆಂಡಿರ ಗಂಡ ಆಗಬಹುದೇನೋ ಆದರೆ ಕಿರುಬೆರಳಲ್ಲಿ ಗೋವರ್ಧನವೆತ್ತಿ ನಿಲ್ಲುವುದು ಯಾರಿಂದಲೂ ಆಗದಮಾತು! ಅದಕ್ಕಾಗಿಯೇ ಕೃಷ್ಣ ವಿಶೇಷನಾಗುತ್ತಾನೆ; ವಿಶಿಷ್ಟನಾಗುತ್ತಾನೆ. ನೀಲಮೇಘಶ್ಯಾಮನ ನೆನಪಿನಲ್ಲಿ ಆತ ಹುಟ್ಟಿಬೆಳೆದ ನೆಲದಲ್ಲಿ ಹೆಚ್ಚಾಗಿ ಉತ್ತರ ಭಾರತದಲ್ಲಿ ಕೆಲವು ಪ್ರಾಂತಗಳಲ್ಲಿ ಹೋಲಿಯನ್ನು ೧೬ ದಿನಗಳ ಪರ್ಯಂತ ಅಂದರೆ ರಂಗಪಂಚಮಿಯ ವರೆಗೆ ಆಚರಿಸುವ ಪರಿಪಾಟ ಇದೆ ಎಂಬುದಾಗಿ ತಿಳಿದುಬರುತ್ತದೆ. ಆಯ್ತು ಬಣ್ಣ ಎರಚಿದ್ದಾಯ್ತಲ್ಲಾ ಇಷ್ಟೇನಾ ಹಬ್ಬ? ಅಲ್ಲ ಇನ್ನೂ ಇದೆ, ಆದರೆ ಶಿವಪ್ಪನವರ ಆ ಹಾಡು ಇಲ್ಲಿಗೆ ಪೂರ್ತಿಯಾಗುತ್ತದೆ; ನಮ್ಮ ಹೋಲೀ ಕಥೆ ಮುಂದುವರಿಯುತ್ತದೆ.

ಉತ್ತರದ ರಾಜ್ಯಗಳಲ್ಲಿ :
--------------------------

ಮಹಾವಿಷ್ಣುವಿನ ದಶಾವತಾರಗಳಲ್ಲಿ ನಾಕನೇ ಅವತಾರ ನಾರಸಿಂಹಾವತಾರ. ಹಿರಣ್ಯಕಶಿಪು ಕ್ರುದ್ಧನಾಗಿ ಮಗ ಪ್ರಹ್ಲಾದನನ್ನು ಜರಿಯುತ್ತಿರುತ್ತಾನೆ. ಹರನನ್ನು ಮಾತ್ರ ಪೂಜಿಸು ಎಂಬ ಮಾತು ಉಲ್ಲಂಘಿಸಿದ ಮಗನಿಗೆ ವಿಧವಿಧವಾದ ಹಿಂಸೆಗಳನ್ನು ನೀಡಿ ಆತನನ್ನು ಹೆದರಿಸಿ ಮನಃಪರಿವರ್ತನೆ ಮಾಡಲು ಪ್ರಯತ್ನಿಸುತ್ತಾನೆ. ಆ ಘಳಿಗೆಯಲ್ಲಿ ಒಂದು ಪ್ರಯತ್ನದಲ್ಲಿ ತನ್ನ ತಂಗಿಯಾದ ಹೋಲಿಕಾಳನ್ನು ಕಟ್ಟಿಗೆರಾಶಿಯೊಂದರಮೇಲೆ ಕೂರಿಸಿ ಅವಳ ಕಾಲಮೇಲೆ ಪ್ರಹ್ಲಾದನನ್ನೂ ಕೂರಿಸಿ ಬೆಂಕಿ ಹಚ್ಚಲಾಗುತ್ತದೆ. ಯಾಕೆಂದರೆ ಆಕೆಗೂ ಸಹ ಸಾವು ಬರದಂತೇ ಬ್ರಹ್ಮನ ವರವಿರುತ್ತದೆ. ಆದರೆ ಆಕೆ ಪ್ರಹ್ಲಾದನನ್ನು ತೊಡೆಯಮೇಲೆ ಕೂರಿಸಿಕೊಂಡಿದ್ದರ ಪರಿಣಾಮವಾಗಿ ಆಕೆಯ ವರಕ್ಕೆ ಇರುವ ಶರತ್ತು ಮುರಿದುಹೋಗುತ್ತದೆ! ಆಕೆ ಬೆಂಕಿಗೆ ಆಹುತಿಯಾಗಿ ಭಸ್ಮವಾಗುತ್ತಾಳೆ; ಪ್ರಹ್ಲಾದನಿಗೆ ಬೆಂಕಿ ತಾಗುವುದೇ ಇಲ್ಲ! ಇದು ಹೋಲಿಕಾ ದಹನದ ಕಥೆ.

ದಕ್ಷಿಣದ ರಾಜ್ಯಗಳಲ್ಲಿ :
----------------------------

ದಕ್ಷಯಜ್ಞದಲ್ಲಿ ತನ್ನನ್ನೇ ಯಜ್ಞಕುಂಡಕ್ಕೆ ಅರ್ಪಿಸಿಕೊಂಡ ಸತಿ ಮರುಜನ್ಮದಲ್ಲಿ ಪರ್ವತರಾಜನ ಮಗಳು ಪಾರ್ವತಿಯಾಗಿ ಜನಿಸಿರುತ್ತಾಳೆ. ನಿತ್ಯವೂ ಹರಸೇವೆಯೇ ಅವಳ ಪರಮಗುರಿ. ತಪಸ್ಸಿಗೆ ಕುಳಿತ ಪರಮೇಶ್ವರ ಏನುಮಾಡಿದರೂ ಕಣ್ಣನ್ನೇ ಬಿಡಲೊಲ್ಲ. ಪರಿಪರಿಯಾಗಿ ಪ್ರಯತ್ನಿಸಿದರೂ ಫಲಮಾತ್ರ ಸಿಗುತ್ತಲೇ ಇರಲಿಲ್ಲ. ಇದನ್ನರಿತ ಮಹಾವಿಷ್ಣು ಮಗನಾದ ಮನ್ಮಥನನ್ನು ತನ್ನ ಬಾಣಗಳ ಸಮೇತ ಕಳುಹಿಸುತ್ತಾನೆ. ಶಿವ-ಶಿವೆಯರು ಎದುರಾಬದುರಾ ಇರುವ ಸಮಯದಲ್ಲಿ ಮನ್ಮಥ ಆ ಪ್ರಾಂತದಲ್ಲಿ ಅಶೋಕ, ಚೂತ, ಅರವಿಂದ, ನವಮಲ್ಲಿಕಾ, ನೀಲೋತ್ಫಲ ಎಂಬ ಬಾಣಗಳನ್ನು ಪ್ರಯೋಗಿಸಿ ಎಲ್ಲೆಲ್ಲೂ ಹಸಿರು ಕಂಗೊಳಿಸುವಂತೆಯೂ, ಮೊಲ್ಲೆ-ಮಲ್ಲಿಗೆ-ಜಾಜಿ-ಸಂಪಿಗೆ-ಸೇವಂತಿಗೆ-ಪುನ್ನಾಗ-ಕರವೀರ-ಕಮಲದಂತಹ ಬಣ್ಣಬಣ್ಣದ ಹೂಗಳು ಅರಳುವಂತೆಯೂ, ಸುಗಂಧಭರಿತ ತಂಗಾಳಿ ತೀಡುತ್ತಿರುವಂತೆಯೂ ನೋಡಿಕೊಂಡು ಶಿವನ ತಪೋಭಂಗಕ್ಕೆ ಕಾರಣೀಭೂತನಾಗುತ್ತಾನೆ. ಕಣ್ತೆರೆದ ಶಿವನಿಗೆ ಮೊದಲು ಕಂಡಿದ್ದು ಪಾರ್ವತಿ. ಆಕೆಯ ಮುಗುಳು ನಗೆಗೆ ಮನಸೋತರೂ ತನ್ನ ತಪಸ್ಸಿಗೆ ಭಂಗತಂದ ವ್ಯಕ್ತಿಯನ್ನು ಆತ ಕುಳಿತಲ್ಲೇ ಗ್ರಹಿಸಿ ಕೋಪದಿಂದ ತನ್ನ ಮೂರನೇ ಕಣ್ಣನ್ನು ತೆರೆದು ಕ್ಷಣಮಾತ್ರದಲ್ಲಿ ಮನ್ಮಥ[ಕಾಮ]ನನ್ನು ಸುಟ್ಟು ಭಸ್ಮಮಾಡಿಬಿಡುತ್ತಾನೆ! ಇದನ್ನು ತಿಳಿದ ರತೀದೇವಿ ತನ್ನ ಗಂಡನನ್ನು ತನಗೆ ಕೊಡು ಎಂದು ಪ್ರಾರ್ಥಿಸಿದಾಗ ಕೇವಲ ಮಾನಸರೂಪದಲ್ಲಿ ಮನ್ಮಥ ಉಳಿಯಲಿ ಎಂದು ವರನೀಡುತ್ತಾನೆ. ಹೀಗೇ ಆ ನಂತರದಲ್ಲಿ ಮನ್ಮಥ ಕೇವಲ ಸುಂದರ ಮನೋರೂಪವಾಗಿರುತ್ತಾನೆ, ಛಾಯಾರೂಪವಾಗಿದ್ದಾನೆ. ಇಂತಹ ಕಾಮನನ್ನು ದಹಿಸಿದ ದಿನ ಅತಿರೇಕದ ನಮ್ಮೆಲ್ಲಾ ಕಾಮಗಳನ್ನೂ ಸುಟ್ಟುಹಾಕಬೇಕೆಂಬುದು ಒಂದು ಹೋಲಿಕೆ. ಹೀಗಾಗಿ ಕಾಮದಹನ ನಡೆಯುತ್ತದೆ!

ಇದು ಹೋಳೀಹಬ್ಬದ ಹಿಂದಿನ ನಿಜವಾದ ಕಥೆ. ಇನ್ನು ಯಾವಯಾವ ರಾಜ್ಯದಲ್ಲಿ ಯಾವೆಲ್ಲಾ ರೀತಿಯ ಆಚರಣೆಗಳು ಎಂಬುದನ್ನು ಚಿಕ್ಕದಾಗಿ ತಿಳಿಯೋಣ:

ಉತ್ತರಪ್ರದೇಶದಲ್ಲಿ :
---------------------

ಇಲ್ಲಿನ ಬರ್ಸಾನಾ ಎಂಬಲ್ಲಿ ರಾಧಾರಾಣಿ ಎಂಬ ಪ್ರಸಿದ್ಧ ದೇವಸ್ಥಾನವಿದೆ. ಅದರ ಸುತ್ತಮುತ್ತಲಲ್ಲಿ ’ಲಾಠ್ ಮರೋ’ ಎಂದು ಹೋಳಿ ಆಚರಿಸಲ್ಪಡುತ್ತದೆ. ಬಣ್ಣ ಎರಚಿಕೊಂಡ ಗಂಡಸರು ಪರಸ್ಪರ ಕೃಷ್ಣ-ರಾಧೆಯರ ಹಾಡುಗಳನ್ನು ಹಾಡುತ್ತಾರೆ. ಸ್ತ್ರೀಯರು ದೊಣ್ಣೆಗಳನ್ನು ಹಿಡಿದು ಪುರುಷರನ್ನು ಊರಿಂದ ಹೊರಗೆ ಅಟ್ಟುವ ರೀತಿಯಲ್ಲಿ ನರ್ತಿಸುವಾಗ ಪುರುಷರು ಗುರಾಣಿಯಂತಹ ಪಾತ್ರೆಗಳನ್ನು ತಲೆಯಮೇಲೆ ಕವುಚಿಕೊಂಡು ಏಟು ತಗುಲದಂತೇ ರಕ್ಷಿಸಿಕೊಳ್ಳುತ್ತಾರೆ. ಇದು ಬಹಳಹೊತ್ತು ನಡೆಯುವ ರಂಗಿನಾಟವಾಗಿ ಹೆಸರುಮಾಡಿದೆ.

ಇನ್ನು ಮಥುರಾ ಮತ್ತು ವೃಂದಾವನಗಳಲ್ಲಿ ೧೬ ದಿನಗಳ ಪರ್ಯಂತ ಕೃಷ್ಣ ಪೂಜೆ ನಡೆಯುತ್ತದೆ. ಅಲ್ಲಿನ ಜನರಿಗೆ ಇದು ಬಹಳ ವಿಶೇಷ ಹಬ್ಬವಾಗಿದೆ. ಗೋರಖಪುರದಲ್ಲಿಯೂ ಕೂಡ ಹೋಳಿಯ ದಿನ ಬೆಳಿಗ್ಗೆ ಪೂಜೆ ನಡೆಯುತ್ತದೆ. ಸಹೋದರ ಬಾಂಧವ್ಯ ಹೆಚ್ಚಿಸುವ ಹಬ್ಬವೆಂದು ಪರಿಗಣಿತವಾದ ಈ ಹಬ್ಬದ ದಿನ ಪರಸ್ಪರ ಕೆಂಪು ಬಣ್ಣವನ್ನು ಹಚ್ಚಿಕೊಂಡು ಅನ್ಯೋನ್ಯತೆಯನ್ನು ಕಂಡುಕೊಳ್ಳುತ್ತಾರೆ.

ಉತ್ತರಖಂಡದಲ್ಲಿ :
------------------

ಕುಮಾಂವ್ ನಲ್ಲಿ ಹೋಲೀ ಆಚರಣೆಗೆ ಮಹತ್ವ ನೀಡಿರುವುದು ಸಂಗೀತದ ತಳಹದಿಯಲ್ಲಿ. ಬೈಠಕಿ ಹೋಲಿ[ನಿರ್ವಾಣ್ ಕಿ ಹೋಲಿ], ಖಾರಿ ಹೋಲಿ, ಮಹಿಳಾ ಹೋಲಿ ಹೀಗೇ ಮೂರು ವಿಧಗಳು ಕಾಣಸಿಗುತ್ತವೆ. ಸಂಗೀತದ ಆರಂಭ ದೇವಸ್ಥಾನಗಳಿಂದ. ಆಮೇಲೆ ಅದು ಹಲವು ಪ್ರದೇಶಗಳಲ್ಲಿ ನಡೆಯುತ್ತದೆ. ಹಲವು ವಾದ್ಯಪರಿಕರಗಳನ್ನು ಬಳಸಲಾಗುತ್ತದೆ. ಪೀಲು, ಭೀಂಪಲಾಸಿ, ಸಾರಂಗೀ ರಾಗಗಳು ಮಧ್ಯಾಹ್ನಕಾಲದಲ್ಲಿ ಹಾಡಲ್ಪಟ್ಟರೆ, ಕಲ್ಯಾಣ್,ಶ್ಯಾಮಕಲ್ಯಾಣ್, ಯಮನ್ ರಾಗಗಳು ಸಂಜೆಹೊತ್ತಿನಲ್ಲಿ ಹಾಡಲ್ಪಡುತ್ತವೆ. ಖಾರಿ ಹೋಲಿಯನ್ನು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಬಿಳಿಯ ಕುರ್ತಾ ಪೈಜಾಮು ತೊಟ್ಟ ಜನ ನಮ್ಮಲ್ಲಿನ ಜನಪದರಂತೇ ಡೋಳು-ಹುರ್ಕಾ ಬಡಿಯುತ್ತಾ, ಹಾಡುತ್ತಾ ಕುಣಿಯುತ್ತಾ ಆಚರಿಸುತ್ತಾರೆ.

ಊರಿನಲ್ಲಿ ಬಳಕೆಗೆ ಅನರ್ವಾದ ಹಳೆಯ ಮರದ ವಸ್ತುಗಳನ್ನು ಹದಿನೈದುದಿನ ದಿನಗಳ ಮುಂಚೆಯೇ ಒಂದುಕಡೆ ರಾಶಿಹಾಕಿ ’ಚೀರ್ ಬಂಧನ್’ ತಯಾರಿಸಿ ಪಕ್ಕದ ಊರವರು ಕದ್ದೊಯ್ಯದಂತೇ ಕಾಯುತ್ತಾರೆ. ಹೋಳಿಯ ದಿನ ಹಸಿರು ಟೊಂಗೆಯನ್ನು ಮಧ್ಯೆ ನೆಟ್ಟು ’ದುಲ್ಹೆಂದಿ’ ಎಂಬ ಆಚರಣೆ ನಡೆಯುತ್ತದೆ.

ಬಿಹಾರದಲ್ಲಿ :
--------------

ಬಿಹಾರದ ಭೋಜ್ಪುರೀ ಭಾಷೆಯಲ್ಲಿ ಹೋಲಿಯನ್ನು ’ಫಾಗ್ವಾ’ ಎನ್ನುತ್ತಾರೆ. ಫಾಲ್ಗುಣ ಪೂರ್ಣಿಮೆಯದಿನ ಹೋಲಿಕಾದಹನ ನಡೆಯುತ್ತದೆ. ರಾಶಿಹಾಕಿದ ಬೇಡದ ಮರದ ವಸ್ತುಗಳಿಗೆ ಆ ಪ್ರಾಂತದ ಹಿರಿಯ ಪುರೋಹಿತನೊಬ್ಬ ಬೆಂಕಿಹಚ್ಚುತ್ತಾನೆ. ನಂತರ ಸುತ್ತಲೂ ಇರುವ ಜನರಿಗೆ ಆತ ಕೆಂಪು ಬಣ್ಣವನ್ನು ಹಚ್ಚುತ್ತಾನೆ. ಮಾರನೇ ಬೆಳಿಗ್ಗೆ ಎಲ್ಲರೂ ಪರಸ್ಪರ ಬಣ್ಣ ಎರಚಾಡುತ್ತಾರೆ. ಭಂಗೀ ಪಾನಕ, ಗಾಂಜಾ, ಪಕೋಡ, ತಂಪುಪಾನೀಯಗಳು ಮತ್ತು ಸಾರಾಯಿ ಹೇರಳವಾಗಿ ಬಳಸಲ್ಪಡುತ್ತವೆ.


ಬಂಗಾಳದಲ್ಲಿ:
--------------

’ಡೋಳ್ ಪೂರ್ಣಿಮಾ’ ದಿನ ಬೆಳಿಗ್ಗೆ ವಿದ್ಯಾರ್ಥಿಗಳು ಕೇಸರೀ ಅಥವಾ ಬಿಳಿ ಬಣ್ಣದ ದಿರಿಸುಗಳಲ್ಲಿ ತಯಾರಾಗಿ ಕೊರಳಿಗೆ ಸುಗಂಧಸೂಸುವ ಹೂಮಾಲೆಗಳನ್ನು ಧರಿಸುತ್ತಾರೆ. ಕೃಷ್ಣ-ರಾಧೆಯರ ಚಿತ್ರಪಟಗಳನ್ನು ಅಲಂಕೃತ ವಾಹನಗಳಲ್ಲಿಟ್ಟು ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ಹುಡುಗರು ಕೃಷ್ಣ-ರಾಧೆಯರ ಹಾಡುಹಾಡುತ್ತಾ ನಲಿದರೆ ಮಿಕ್ಕುಳಿದವರು ಬಣ್ಣ ಎರಚಾಟ ನಡೆಸುತ್ತಾರೆ. ಪ್ರತೀ ಮನೆಯಲ್ಲೂ ಮನೆಹಿರಿಯ ಉಪವಾಸ ವ್ರತ ನಡೆಸಿ ಕೃಷ್ಣ ಮತ್ತು ಅಗ್ನಿ ಇಬ್ಬರನ್ನೂ ಪೂಜಿಸುತ್ತಾನೆ. ಪೂಜಾವಿಧಿಗಳು ಮುಗಿದಮೇಲೆ ನೈವೇದ್ಯ ಅರ್ಪಿಸುತ್ತಾನೆ.

ಶಾಂತಿನಿಕೇತನದಲ್ಲಿ ಈ ಹಬ್ಬವನ್ನು ಸಂಗೀತದ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಇಡೀ ಬಂಗಾಳದಲ್ಲಿ ಮಾಲ್ಪೋವಾ, ಕ್ಷೀರ್ ಸಂದೇಶ್, ಬಸಂತಿ ಸಂದೇಶ್ ಮತ್ತು ಪಾಯಸಗಳನ್ನು ತಯಾರಿಸಿ ತಿನ್ನುತ್ತಾರೆ.

ಓಡಿಶಾದಲ್ಲಿ :
--------------

ಬಹುತೇಕ ಉತ್ತರಭಾರದೆಡೆಯಲ್ಲೆಲ್ಲಾ ನಡೆದಂತೇ ಇಲ್ಲೂ ಹಬ್ಬ ಆಚರಿಸಲ್ಪಡುತ್ತದೆ. ಒಂದೇ ಬದಲಾವಣೆ ಎಂದರೆ ಇಲ್ಲಿ ಕೃಷ್ಣನ ಚಿತ್ರಪಟಗಳ ಬದಲಿಗೆ ಪೂರಿ ಜಗನ್ನಾಥನ ಚಿತ್ರಪಟಗಳನ್ನು ಬಳಸಲಾಗುತ್ತದೆ.

ಗೋವಾದಲ್ಲಿ :
-----------------

ಗೋವಾವಾಸೀ ಕೊಂಕಣಿಗರಿಗೆ ವಿಶಿಷ್ಟ ಹಬ್ಬವಿದು. ಇದನ್ನವರು ಸಿಗ್ಮೋ ಅಥವಾ ಶಿಶಿರೋತ್ಸವ್ ಎನ್ನುತ್ತಾರೆ. ಸುಮಾರು ತಿಂಗಳವರೆಗೂ ಈ ಹಬ್ಬದ ಅಚರಣೆಯ ಸಂಭ್ರಮ ಅಲ್ಲಲ್ಲಿ ಕಾಣುತ್ತದೆ. ಹೋಳಿಯದಿನ ಮಾತ್ರ ಹೋಲಿಕಾ ಪೂಜೆ, ದಹನ, ಧೂಳ್ವಾಡ್, ಧೂಳೀ ವಂದನ್, ಹಳ್ದೂಣೆ ಅಥವಾ ಹಳದೀ ಮತ್ತು ಕೇಸರೀ ಬಣ್ಣಗಳನ್ನು ಗುಲಾಲು ಬಣ್ಣವಾಗಿ ದೇವರಿಗೆ ಅರ್ಪಿಸುವ ಆಚರಣೆಗಳು ನಡೆಸಲ್ಪಡುತ್ತವೆ.


ಗುಜರಾತ್ ನಲ್ಲಿ :
----------------
--



ಮುಖ್ಯಬೀದಿಗಳ ಚೌಕಗಳಲ್ಲಿ ಹೋಲಿಕಾದಹನ ನಡೆಯುತ್ತದೆ. ರಾಬೀ ಬೆಳೆಯ ಕಾಲವಾದ್ದರಿಂದ ರೈತರಿಗೆ ಸುಗ್ಗಿಯ ಕಾಲ ಇದಾಗಿದೆ. ಉಡುಪಿಯ ಇಟ್ಲಪಿಂಡಿ ಉತ್ಸವದಂತೇ ಅಲ್ಲಲ್ಲಿ ಮಡಕೆಗಳಲ್ಲಿ ಮೊಸರನ್ನು ತುಂಬಿ ಎತ್ತರದಲ್ಲಿ ನೇತಾಡಿಸಿರುತ್ತಾರೆ. ಹರೆಯದ ಹುಡುಗರು ಒಬ್ಬರಮೇಲೋಬ್ಬರು ಹತ್ತಿಕೊಂಡು ಅದನ್ನು ಒಡೆಯುವ ಸಾಹಸ ಕ್ರೀಡೆ ನಡೆಯುತ್ತದೆ. ಹುಡುಗರು ಈ ಪ್ರಯತ್ನದಲ್ಲಿರುವಾಗ ಹುಡುಗಿಯರು ದೂರದಿಂದ ಪಿಚಕಾರಿಗಳ ಮೂಲಕ ಅವರಮೇಲೆ ಬಣ್ಣದ ನೀರನ್ನು ಎರಚುತ್ತಿರುತ್ತಾರೆ. ಮಡಕೆ ಒಡೆದ ಹುಡುಗನನ್ನು ’ಹೋಲಿ ಕಿಂಗ್’ ಎಂದು ಗೌರವಿಸಲಾಗುತ್ತದೆ. ನಂತರ ಸಾವಿರಾರು ಜನರು ಮೆರವಣಿಗೆಗಳಲ್ಲಿ ತೆರಳಿ ಕೃಷ್ಣ ತಮ್ಮ ಮನೆಗಳಿಗೆ ಬೆಣ್ಣೆ ಕದಿಯಲು ಬಂದಿರಬಹುದೆಂದು ಭಾವಿಸುತ್ತಾರೆ!

ಕೆಲವು ಪ್ರದೇಶಗಳಲ್ಲಿ ಮೈದುನರು ಅತ್ತಿಗೆಯರಿಗೆ ಬಣ್ಣ ಎರಚುತ್ತಿದ್ದರೆ ಅತ್ತಿಗೆಯಂದಿರು ಸುತ್ತಿದ ಸೀರೆಯ ಹಗ್ಗದಿಂದ ತಮ್ಮ ಮೈದುನರಿಗೆ ಠಳಾಯಿಸುತ್ತಾರೆ.

ಮಹಾರಾಷ್ಟ್ರದಲ್ಲಿ :
-------------------

ಮಹಾರಾಷ್ಟ್ರದಲ್ಲಿಯೂ ಹೋಲಿಕಾ ಕಾಮದಹನ ನಡೆಯುತ್ತದೆ. ಇದನ್ನು ’ಶಿಗ್ಮಾ’ ಎನ್ನುತ್ತಾರೆ. ಹೋಳೀ ಹಬ್ಬಕ್ಕೂ ವಾರಕಾಲ ಮುಂಚೆಯೇ ಹರೆಯದ ಹುಡುಗರು ಮನೆಮನೆಗೂ ತೆರಳಿ ಹಣ, ಸೌದೆ ಸಂಗ್ರಹಿಸುತ್ತಾರೆ. ಹಬ್ಬದ ದನ ಗೊತ್ತಾದ ಜಾಗದಲ್ಲಿ ದೊಡ್ಡದಾಗಿ ರಾಶಿಹಾಕಿದ ಕಟ್ಟಿಗೆತುಂಡುಗಳಿಗೆ ಬೆಂಕಿ ಹಚ್ಚುತ್ತಾರೆ. ಅಗ್ನಿಗೆ ನೈವೇದ್ಯ ಅರ್ಪಿಸುವುದು ಇಲ್ಲಿನವರ ವಾಡಿಕೆ. ಬಹುತೇಕ ಎಲ್ಲಾ ಮನೆಗಳಲ್ಲೂ ’ಪೂರಣ್ ಪೊಳಿ’ [ಹೂರಣದ ಹೋಳಿಗೆ] ಮಾಡುತ್ತಾರೆ. ಮಕ್ಕಳು " ಹೋಳೀರೇ ಹೋಳಿ ಪೂರಣಾಚಿ ಪೊಳಿ" ಎಂದು ಕೂಗಿ ಹರ್ಷಿಸುತ್ತಾರೆ. ಆದರೆ ಇಲ್ಲಿ ಬಣ್ಣಗಳ ಎರಚಾಟ ನಡೆಯುವುದು ರಂಗಪಂಚಮಿಯ ದಿನ ಎಂದರೆ ಹೋಳಿಯ ದಿನದಿಂದ ಐದನೇ ದಿನ.

ಮಣಿಪುರದಲ್ಲಿ :
-----------------

ಮಣಿಪುರದಲ್ಲಿ ಹೋಳಿ ಆರು ದಿನಗಳ ಹಬ್ಬ. ಈ ಹಬ್ಬ ಅಲ್ಲಿನ ಯೋಸಾಂಗ್ ಎಂಬ ಹಬ್ಬದ ಜೊತೆಗೆ ಸಮ್ಮಿಶ್ರವಾಗಿ ಆಚರಿಸಲ್ಪಡುತ್ತದೆ. ಬೇಡದ ವಸ್ತುಗಳನ್ನು ಪೇರಿಸಿ ಮಾಡಿದ ಗುಡಿಸಲಿಗೆ ಬೆಂಕಿ ಹಚ್ಚುವ ಮೂಲಕ ಹಬ್ಬದ ಆರಂಭವಾಗುತ್ತದೆ. ಹುಡುಗರು ಮನೆಮನೆಗೆ ತೆರಳಿ ’ನಾಕಾಥೆಂಗ್’ ಎಂದು ಕರೆಯಲ್ಪಡುವ ಹಣ ಮತ್ತು ಕಾಣಿಕೆಗಳನ್ನು ಸಂಗ್ರಹಿಸುತ್ತಾರೆ. ’ಲಾಮ್ಟಾ’[ಫಾಲ್ಗುಣ]ದ ಹೋಳಿಯ ರಾತ್ರಿ ’ತಾಬಾಲ್ ಚೋಂಗ್ಬಾ’ ನರ್ತನ ನಡೆಸಲ್ಪಡುತ್ತದೆ. ಲಯಬದ್ಧ ಡ್ರಮ್ ಗಳ ಸದ್ದಿನೊಂದಿಗೆ ಮನಮೋಹಕ ನರ್ತನ ಮುದನೀಡುತ್ತದೆ. ಕೃಷ್ಣನ ದೇವಾಲಯಗಳಲ್ಲಿ ಪೂಜೆ ನಡೆಯುತ್ತದೆ. ಜನ ಭಜನೆಗಳನ್ನೂ ಹಾಡುತ್ತಾರೆ. ಬಿಳೀ ದಿರಿಸುಗಳಲ್ಲಿ ಸಾವಿರಾರು ಜನ ಒಟ್ಟೊಟ್ಟಿಗೆ ಕೃಷ್ಣಮಂದಿರಗಳಿಂದ ಮೆರವಣಿಗೆ ಹೊರಡುತ್ತಾರೆ. ಮೊದಲು ಇಂಪಾಲದಲ್ಲಿ ಮಾತ್ರ ಇದು ನಡೆಯುತ್ತಿದ್ದು ಈಗೀಗ ಮಣಿಪುರದ ಎಲ್ಲೆಡೆಯಲ್ಲೂ ನಡೆಯುತ್ತದೆ.

ನಮ್ಮ ಕರ್ನಾಟಕದಲ್ಲಿ :
-----------------------

ನಮ್ಮ ಮೈಸೂರಿನದೇ ಚಿತ್ರ

ಹೊಸದಾಗಿ ಹೇಳಬೇಕಾಗಿಲ್ಲ. ಹೋಲಿಕಾ-ಕಾಮದಹನದ ಆಚರಣೆ ನಡೆಯುತ್ತದೆ. ಕನ್ನಡ ರೈತರಿಗೆ ಸುಗ್ಗಿಯಕಾಲ. ಹಲವು ಫಸಲುಗಳು ಕೈಗೆ ಬರುವ ಈ ಸಮಯದಲ್ಲಿ ರಾಜ್ಯದ ಕರಾವಳಿ ಭಾಗಗಳಲ್ಲಿ ಸುಗ್ಗಿ ಕುಣಿತವನ್ನು ಕಾಣಬಹುದಾಗಿದೆ. ಹಾಲಕ್ಕೀ ಜನಾಂಗದ ಸುಗ್ಗಿ ಕುಣಿತ ನೋಡಲು ಸುಂದರವಾಗಿರುತ್ತದೆ. ವಾರಕ್ಕೂ ಹೆಚ್ಚುದಿನ ಸುಗ್ಗಿಕಟ್ಟಿದ ಜನ ಅವರವರ ಮನೆಗಳಿಗೆ ತೆರಳದೇ ಪ್ರತ್ಯೇಕವಾಗಿ ಒಂದು ಜಾಗದಲ್ಲಿ ಉಳಿದುಕೊಳ್ಳುತ್ತಾರೆ. ಸುಗ್ಗೀ ತುರಾಯಿ ಬಿಚ್ಚುವ ಹೋಳೀ ಹಬ್ಬದ ರಾತ್ರಿ ಕಾಮನ ಪೂಜೆ ಮತ್ತು ದಹನ ನಡೆಯುತ್ತದೆ. ಮಾರನೇ ದಿನ ಬೆಳಿಗ್ಗೆ ಗುಮ್ಟೆಪಾಂಗ ಮೃದಂಗ ತಾಳ ಹಿಡಿದ ಆ ಜನ ಮನೆಮನೆಗೆ ತೆರಳಿ "ದುಮ್ಸಾಲ್ಯೋ" ಎಂದು ರಾಗವಾಗಿ ಹಾಡುತ್ತಾ ಹಣ, ತೆಂಗಿನಕಾಯಿ, ಭತ್ತ ಇತ್ಯಾದಿಗಳನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆ. ಆ ದಿನ ’ಸುಗ್ಗಿಮನೆ’ಯಲ್ಲಿ ಭೂರಿಭೋಜನ ಮುಗಿಸಿದ ಅವರು ತಮ್ಮ ತಮ್ಮ ಮನೆಗೆ ತೆರಳುತ್ತಾರೆ. ಇನ್ನು ಮುಂದಿನವರ್ಷವೇ ಅವರು ಸುಗ್ಗಿ ಕಟ್ಟುವುದು!

ಕರ್ನಾಟಕದಲ್ಲಿ ಬಣ್ಣಗಳ ಎರಚಾಟ ಜಾಸ್ತಿ ಇಲ್ಲ. ಈಗೀಗ ಉತ್ತರಭಾರತದವರ ವಾಸ್ತವ್ಯಗಳೂ ಕೆಲವು ಅಲ್ಲಲ್ಲಿ ಇರುವುದರಿಂದ ಬಣ್ಣಗಳ ಬಳಕೆ ನಡೆಯುತ್ತಿದೆ.

ಆಂಧ್ರಪ್ರದೇಶದಲ್ಲಿ :
----------------------

ಬಹುತೇಕ ಕರ್ನಾಟಕದಂತೆಯೇ. ಕಾಮದಹನ ನಡೆಯುತ್ತದೆ. ತೆಲಂಗಾಣ ಪ್ರದೇಶಗಳಲ್ಲಿ ಬಸಂತ ಪಂಚಮಿ ಆಚರಿಸಲ್ಪಡುತ್ತದೆ. ಹೈದ್ರಾಬಾದ್ ಮುಂತಾಡೆಡೆಗೆ ಬಣ್ಣಗಳ ಎರಚಾಟ ನಡೆಯುತ್ತದೆ.


ಕೇರಳದಲ್ಲಿ:
----------------

’ಗಾಡ್ಸ್ ಓನ್ ಕಂಟ್ರಿ’ ಎಂದು ಕರೆಸಿಕೊಂಡ ಕೇರಳದಲ್ಲಿ ಸುಮಾರು ೨೨ ವಿವಿಧ ಜನಾಂಗಗಳು ಸಾಮರಸ್ಯದಲ್ಲಿ ಬದುಕುತ್ತಿವೆ. ಪಶ್ಚಿಮ ಕೋಚಿಯ ಚೆರ್ಲೈ ಎಂಬಲ್ಲಿ ಈ ಹಬ್ಬ ಗೌಡ ಸಾರಸ್ವತ ಬ್ರಾಹ್ಮಣರಿಂದ ನಡೆಸಲ್ಪಡುತ್ತದೆ. ಇಲ್ಲಿನ ಕೊಂಕಣಿಯಲ್ಲಿ ಉಕ್ಕುಳಿ ಎಂದು ಕರೆಯಲ್ಪಡುವ ಈ ಹಬ್ಬವನ್ನು ಮಲಬಾರದವರು ಮಂಜಾಳ್ ಕುಳಿ ಎನ್ನುತ್ತಾರೆ. ಗೊಸ್ರೀಪುರಂದಲ್ಲಿರುವ ತಿರುಮಲ ದೇವಸ್ಥಾನದಲ್ಲಿ ಈ ಹಬ್ಬ ಆಚರಿಸಲ್ಪಡುತ್ತದೆ.

ಜಮ್ಮು-ಕಾಶ್ಮೀರದಲ್ಲಿ:
--------------------

ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿರುವಂತೇಯೇ ನಡೆಯುತ್ತದೆ.


ಮಧ್ಯಪ್ರದೇಶದಲ್ಲಿ:
--------------------

ಉತ್ತರಭಾರತದ ಅಚರಣೆಗಳನ್ನು ಹೋಲುವ ರೀತಿಯಲ್ಲೇ ಈ ಹಬ್ಬ ವಿಶೇಷವಾಗಿ ಆಚರಿಸಲ್ಪಡುತ್ತದೆ.


ಪಂಜಾಬ್ ನಲ್ಲಿ :
------------------

ಸಿಖ್ಖರು ಹೋಲ್ ಎಂಬ ಹಬ್ಬವನ್ನು ಮಾರ್ಚ್ ಆರಂಭದಿಂದಲೇ ಆಚರಿಸಲು ಆರಂಭಿಸುತ್ತಾರೆ. ಕತ್ತಿವರಸೆ, ಕುದುರೆ ಸವಾರಿ ಇನ್ನೂ ಮೊದಲಾದ ಕುಶಲಕಲೆಗಳಲ್ಲಿ ಪಳಗಿರುವ ಸಿಖ್ಖರು ಅವುಗಳನ್ನು ದೊಡ್ಡಮಟ್ಟದಲ್ಲಿ ವ್ಯಕ್ತಪಡಿಸುತ್ತಾರೆ. ಹೆಚ್ಚಿನದಾಗಿ ಗುರುದ್ವಾರಗಳಲ್ಲಿ ಈ ಚಟುವಟಿಕೆಗಳು ಕಂಡುಬರುತ್ತವೆ.

ಸಣ್ಣದೊಂದು ಸಲಹೆ :
-------------------------------

ಇತ್ತೀಚೆಗೆ ರಾಸಾಯನಿಕ ಜನ್ಯ ಬಣ್ಣಗಳನ್ನು ತಯಾರಿಸಿ ಮಾರುತ್ತಾರೆ. ಅವುಗಳ ಬಳಕೆಯಿಂದ ಹಲವುವಿಧದ ಚರ್ಮರೋಗಗಳು ಬರುತ್ತವೆ. ಹಬ್ಬವನ್ನು ಸಂಭ್ರಮಿಸುವ ಹಂಬಲದಲ್ಲಿ, ಕಣ್ಣುಕುಕ್ಕುವ ಕಡು ರಾಸಾಯನಿಕ ಬಣ್ಣಗಳ ಆಕರ್ಷಣೆಯಲ್ಲಿ ಅವುಗಳನ್ನು ಬಳಸಿದರೆ ಹೋಳಿಯ ಪರಿಣಾಮ ಆಚರಿಸುವವರನ್ನೇ ದಹಿಸಲೂ ಬಹುದು. ಆದಷ್ಟೂ ನೈಸರ್ಗಿಕ ಬಣ್ಣಗಳನ್ನು ಹುಡುಕಿ ಬಳಸುವುದು ಒಳಿತು.


ಫಲಶ್ರುತಿ :
------------

ದೇಶದ ಜನತೆ ಸಹಜವಾಗಿ ಖುಷಿಪಡುವುದು ಬೆನ್ನೆಲುಬಾದ ಅನ್ನದಾತ ರೈತ ಸುಖಿಸಿದಾಗ ಮಾತ್ರ. ’ಬೇಸಿಗೆಯ ಬೆಳೆ’ ಎಂಬ ವಿವಿಧ ಫಸಲುಗಳು ಈ ಸಮಯ ರೈತನ ಕೈಸೇರುವುದು ನಿಸರ್ಗ ನಿಯಮ. ದೈನಂದಿನ ತನ್ನ ಕಷ್ಟಕೋಟಲೆಗಳನ್ನು ಮರೆತ ರೈತ ಹೋಳಿ ಆಚರಿಸಿ ಸಂಭ್ರಮಿಸುತ್ತಾನೆ, ರಂಜನೆಗೊಳಗಾಗಿ ಮಾನಸಿಕ ನೆಮ್ಮದಿಪಡೆಯುತ್ತಾನೆ. ಚಳಿಗಾಲದ ಚುಮುಚುಮು ಚಳಿಯ ಹಿತಕರ ಅನುಭವವನ್ನು ಮರೆತು ಬಿರುಬೇಸಿಗೆಯ ಬಿಸಿಲ ಝಳವನ್ನೂ ಸೆಕೆಯನ್ನೂ ಸಹಿಸಿಕೊಳ್ಳಲು ನಮ್ಮನ್ನು ಸಜ್ಜುಗೊಳಿಸುವ ಈ ವಾತಾವರಣ, ನಿಸರ್ಗವೇ ಜಲಧಾರೆಯಂತೇ ಒರಟಾಗದೇ, ತೈಲಧಾರೆಯಂತೇ ಪಸೆಯುಳ್ಳದ್ದಾಗಿ ನುಣುಪಾಗಿ ಕರೆದೊಯ್ಯುವ ಉಪಾಯ ಈ ಟ್ರಾನ್ಸಿಷನ್ ಪೀರಿಯಡ್! [ನೀರಿನಧಾರೆ ಹರಿದು ಮುಗಿದಾನಂತರ ಆರಿದ ಜಾಗದಲ್ಲಿ ತೇವ ಇರುವುದಿಲ್ಲ, ತೈಲಧಾರೆ ಹರಿಸಿದ ಜಾಗದಲ್ಲಿ ಎಣ್ಣೆಯ ನಯವಾದ ಪಸೆ ಇದ್ದೇಇರುವುದಲ್ಲಾ ?] ಇದು ಈ ಹಬ್ಬದ ವೈಜ್ಞಾನಿಕ ಮಹತ್ವವಾಗಿದೆ.

ಹೋಳೀ ಹಬ್ಬದ ಬಗ್ಗೆ ಕಥೆಗಳನ್ನೂ ವಿವಿಧ ಪ್ರಾಂತಗಳಲ್ಲಿನ ಪ್ರಾದೇಶಿಕ ಆಚರಣೆಗಳನ್ನೂ ತಿಳಿದುಕೊಂಡ ನಿಮಗೆ ಹಬ್ಬದ ಸಡಗರವನ್ನು ಹಂಚುವ ಸಲುವಾಗಿ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯ ಅತ್ಯುತ್ತಮ ಕೃಷ್ಣ ಭಜನೆಯೊಂದನ್ನು ತೋರಿಸುತ್ತಾ ಹೋಳಿಯ ಶುಭ ಅವಸರದಲ್ಲಿ ಹಾರ್ದಿಕ ಶುಭಕಾಮನೆಗಳನ್ನು ಸಲ್ಲಿಸುತ್ತಿದ್ದೇನೆ, ನಮಸ್ಕಾರ.




12 comments:

  1. ಒಂದು ಸಂಗ್ರಹ ಯೋಗ್ಯ ಲೇಖನಕ್ಕಾಗಿ ಧನ್ಯವಾದಗಳು.

    ಹೋಳಿ ಹಬ್ಬದ ವೈಶಿಷ್ಟ್ಯ ವಿವರಿಸುವಲ್ಲಿನ ನಿಮ್ಮ ಶ್ರಮ ಸಾರ್ಥಕವಾಗಿದೆ.

    ಶಿವಪ್ಪನವರ ಕಾವ್ಯ ಮತ್ತದರ ವಿಶ್ಲೇಷಣೆಯೂ ಅತ್ಯುತ್ತಮವಾಗಿದೆ.

    ನನ್ನ ಬ್ಲಾಗಿಗೂ ಸ್ವಾಗತ ಸಾರ್.

    ReplyDelete
    Replies
    1. ಧನ್ಯವಾದಗಳು, ಬಂದಿದ್ದೇನಲ್ಲಾ, ಮತ್ತೆ ಬರುತ್ತೇನೆ.

      Delete
  2. ನಮಸ್ತೆ. ನೀವು ಕೂಡ "ಫಲಶೃತಿ" ಅಂತ ಬರೆದಿದ್ದೀರಲ್ಲ! ತಿದ್ದಿಬಿಡುವಿರಾ?

    ReplyDelete
    Replies
    1. ನಮಸ್ತೆ, ಹಂಸಾನಂದಿಗಳೇ, ಬರೆದಾಗ ಬೆಳಗಿನ ಜಾವದ 3 ಗಂಟೆ, ಲಿಪಿದೋಷಗಳು ಅಲ್ಲಲ್ಲಿ ಕಣ್ತಪ್ಪಿನಿಂದ ಆಗಿದ್ದು ಇನ್ನೂ ಇರಬಹುದು, ತಾವು ತಿಳಿಸಿದಂತೆ ಅದನ್ನು ಸರಿಪಡಿಸಿದ್ದೇನೆ, ಸಮಯದಲ್ಲಿ ಗುರುತಿಸಿದ್ದಕ್ಕೆ ಧನ್ಯವಾದಗಳು.

      Delete
  3. ತಮ್ಮ ಅತ್ಯುತ್ತಮ ವಿಷಯ ಸಂಗ್ರಹಣೆಗಾಗಿ ಧನ್ಯವಾದಗಳು

    ReplyDelete
  4. ಹೋಲಿಯ ಆಚರಣೆಗೆ ಸ೦ಬ೦ಧಪಟ್ಟ೦ತೆ ದೇಶದ ವಿವಿಧೆಡೆ ಇರುವ ರೀತಿ-ರಿವಾಜುಗಳ ಉಪಯುಕ್ತ ಮಾಹಿತಿ ಕಲೆಹಾಕಿ, ನಡುನಡುವೆ ಶಿವಪ್ಪನವರ ಕಾವ್ಯದ ವ್ಯ೦ಜನದೊ೦ದಿಗೆ ಉಣಬಡಿಸಿದ್ದೀರಿ. ಚೆನ್ನಾಗಿದೆ. ಶುಭಮಸ್ತು.

    ReplyDelete
  5. ಉತ್ತಮ ಸಂಗ್ರಹಯೋಗ್ಯ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  6. ಸಂಗ್ರಹಯೋಗ್ಯ ಲೇಖನ

    ReplyDelete
  7. ಭಾರತದ ವಿವಿಧ ಭಾಗಗಳಲ್ಲಿಯ ಆಚರಣೆಗಳ ವಿವರಣೆ ಚೆನ್ನಾಗಿದೆ. ಕೊನೆಯಲ್ಲಿ ನೀಡಿದ ಗೀತೆ ಮಧುರವಾಗಿದೆ. ಧನ್ಯವಾದಗಳು.

    ReplyDelete
  8. ಓದಿದ, ಭಾವನಾತ್ಮಕ ಹೋಳೀ ಆಡಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಮತ್ತೊಮ್ಮೆ ಶುಭಾಶಯಗಳೊಂದಿಗೆ ಧನ್ಯವಾದಗಳು.

    ReplyDelete
  9. tumba chennagide bahala kushi aitu odi dhanyavadagalu

    ReplyDelete