ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, July 14, 2011

ಆ ಮಹಾಕಾವ್ಯ ಈ ಭಾವ ಗೀತೆ ನಿನ್ನ ಪದಧ್ವನಿ


ಆ ಮಹಾಕಾವ್ಯ ಈ ಭಾವ ಗೀತೆ ನಿನ್ನ ಪದಧ್ವನಿ

ಸಾಮಾನ್ಯರಾದ ನಮಗೆ ಕಾವ್ಯವನ್ನು ಬರೆಯುವಾಗ ಹಲವೊಮ್ಮೆ ಯಾವುದೇ ವಿವೇಚನೆ ಇರುವುದಿಲ್ಲ. ಆದರೆ ಮಹರ್ಷಿಗಳು, ಮಹಾಕವಿಗಳು ಕಾವ್ಯವನ್ನು ತಮ್ಮ ತಪಸ್ಸಿನಿಂದ ಬಸಿದು ಕೊಟ್ಟಿದ್ದಾರೆ ಅರ್ಥಾತ್ ಅವುಗಳ ಬಳಕೆಯಿಂದ ಓದುಗರಲ್ಲಿ, ಸಮಾಜದಲ್ಲಿ ಒಳಿತಾಗಬೇಕು, ಜನಜೀವನದಲ್ಲಿ ಇಹ-ಪರಗಳ ತಿಳುವಳಿಕೆಗಳು ಸಮರ್ಪಕವಾಗಿ ಮೂಡಿ ಸಮಾಜ ತಪ್ಪು ಹಾದಿಯಲ್ಲಿ ನಡೆಯದಂತಾಗಬೇಕು ಎಂಬುದು ಅವರ ಅಪೇಕ್ಷೆಯಾಗಿರುತ್ತಿತ್ತು. ಅದರಿಂದ ಅವರಿಗೆ ಯಾವ ಪ್ರಯೋಜನವಾಗದಿದ್ದರೂ ಲೋಕದ ಹಿತಾರ್ಥ ಅದನ್ನವರು ನಡೆಸಿಬಂದಿದ್ದರು.

ಆ ಮಹಾಕಾವ್ಯಗಳ ಸರಹದ್ದಿನಲ್ಲಿ ಹಿಂದಕ್ಕೆ ಹಿಂದಕ್ಕೆ ಹೋಗುತ್ತಾ ಹೋದರೆ ಆಸಕ್ತರಿಗೆ ಕಾಣಸಿಗುವುದೇ ಮಹಾಭಾರತ. ತಪಸ್ಸಿನಿಂದ ವಿಮುಖರಾಗಿ ಲೌಕಿಕವಾಗಿ ಚಿಂತನ-ಮಂಥನ ನಡೆಸುತ್ತಿದ್ದ ಮಹಾ ಋಷಿ ಕೃಷ್ಣದ್ವೈಪಾಯನರಿಗೆ ಜಲೌಘದಂತೇ ತಂತಾನೇ ಒಂದು ಕಾವ್ಯ ಬಾಯಿಂದ ಹೊರಡಹತ್ತಿತು. ಹಾಗೆ ಹೊರಬಂದ ಆ ಕಾವ್ಯವನ್ನು ತಾನೇ ಹೇಳಿಕೊಂಡು ಬರೆಯಲು ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಆ ಕುರಿತು ಹಾಗೇ ಜಂಜಾಟದಲ್ಲಿರುವಾಗ ದೇವರ್ಷಿ ನಾರದರು ಆ ಜಾಗಕ್ಕೆ ಬಿಜಯಂಗೈಯ್ಯುತ್ತಾರೆ, ಅದು ದೈವೀ ಸಂಕಲ್ಪ! ಬಂದ ನಾರದರಿಗೆ ಮಹರ್ಷಿಗಳ ಮುಖದಲ್ಲಿರುವ ಅವ್ಯಕ್ತ ಚಿಂತೆಯ ಅರಿವಾಗುತ್ತದೆ. ಲೋಕಾಭಿರಾಮವಾಗಿ ಉಭಯ ಕುಶಲೋಪರಿಗಳು ನಡೆದ ಬಳಿಕ ನಾರದರೇ ಅದನ್ನು ನೇರವಾಗಿ ಪ್ರಸ್ತಾಪಿಸುತ್ತಾರೆ. ತನ್ನಲ್ಲಿ ಒಡ ಮೂಡಿದ ಮಹಾಕಾವ್ಯವನ್ನು ಅಕ್ಷರ ರೂಪಕ್ಕೆ ತರಲಾಗದ ಪೀಕಲಾಟವನ್ನು ಮಹರ್ಷಿ ದೇವರ್ಷಿಗೆ ಹೇಳುತ್ತಾರೆ.

ಕೃತಿಗೆ ಲಿಪಿಕಾರನಾಗಿ ಒಬ್ಬಾತ ಬೇಕು, ಆತ ಬರೇ ಬೆರಳಚ್ಚು ತಜ್ಞನಾಗಿರದೇ ’ತಲೆ’ಯಿರುವಾತನಾಗಿ ತಾನು ಹೇಳುತ್ತಿರುವುದನ್ನು ಅರ್ಥವಿಸಿಕೊಂಡು ವೇಗದಲ್ಲಿ ಅದನ್ನು ಬರೆಯಬಲ್ಲವನಾಗಿರಬೇಕು ಎಂಬುದು ಮಹರ್ಷಿಗಳ ಆಶಯವಾಗಿರುತ್ತದೆ. ಅದಕ್ಕೆ ತಕ್ಕನಾದ ವ್ಯಕ್ತಿ ಈಶಸುತನೆನಿಸಿದ ಪರಬ್ರಹ್ಮ ಸ್ವರೂಪಿ ಗಣೇಶನೆಂಬುದು ನಾರದರ ಅಂಬೋಣ. ಗಣೇಶನನ್ನು ಒಲಿಸಿ ಕರೆಯಲು ಇರುವ ಸೂತ್ರಗಳಲ್ಲಿ ಖಂಡೋಪಾಸನೆ ಮತ್ತು ಅಖಂಡೋಪಾಸನೆಗಳೇ ಮೊದಲಾದ ಚರ್ಚೆಗಳು ನಡೆಯುತ್ತವೆ. ಕೊನೆಗೊಮ್ಮೆ ಇಬ್ಬರೂ ಧ್ಯಾನಾಸಕ್ತರಾಗಿ ಸ್ತುತಿಗೈದು ಗಣೇಶನನ್ನು ಪ್ರಸನ್ನಗೊಳಿಸಿ ಪ್ರತ್ಯಕ್ಷ ಕಾಣುವಲ್ಲಿ ಸಫಲರಾಗುತ್ತಾರೆ.

ಅಭ್ಯುತ್ಥಾನಂ ಸು ಆಸನಂ ಸ್ವಾಗತೋಕ್ತಿಃ
ಪಾದ್ಯಂಚಾರ್ಘ್ಯಂ ಮಧುಪರ್ಕಾಚ ಮೌಚ |
ಸ್ನಾನಂ ವಾಸೋ ಭೂಷಣಾಂಗಂಧಮಾಲ್ಯೇ
ಧೂಪೋ ದೀಪಃ ಸೋಪಹಾರಃ ಪ್ರಣಾಮ ||

ಬಂದ ಗಣೇಶನಿಗೆ ಸುಆಸನ[ ಕುಳಿತುಕೊಳ್ಳುವ ಪೀಠ-ಖುರ್ಚಿ] ಅರ್ಘ್ಯ [ಕೈತೊಳೆಯಲು ನೀರು] ಪಾದ್ಯ[ಕಾಲುತೊಳೆಯಲು ನೀರು]ಮಧು-ಪರ್ಕವೇ ಮೊದಲಾಗಿ ಷೋಡಶೋಪಚಾರವನ್ನು ನೆರವೇರಿಸಿದ ಬಳಿಕ ವಿಷಯ ಪ್ರಸ್ತಾವನೆಯಾಗುತ್ತದೆ. ಮಹರ್ಷಿಗಳು ಮಹಾಕಾವ್ಯದ ಹೇಳುವಿಕೆಯನ್ನು ಆರಂಭಿಸುತ್ತಾರೆ. ಗಣೇಶ ಅವರು ಹೇಳಿದ್ದನ್ನು ಅತಿ ಶೀಘ್ರವಾಗಿ ಬರೆದುಬಿಡುತ್ತಾನೆ. ಮಧ್ಯೆ ಹೇಳುವುದನ್ನು ನಿಲ್ಲಿಸಿದರೆ ಬರೆಯುತ್ತಿರುವ ಲೆಕ್ಕಣಿಕೆ[ಪೆನ್ನು] ಬಿಸುಟು ತಾನು ಹೊರಟುಹೋಗುತ್ತೇನೆ ಎಂಬ ಕರಾರು ಗಣೇಶನದ್ದಿರುತ್ತದೆ. ಆಗ ಮಹರ್ಷಿಗಳು ತಾನು ಹೇಳಿದ್ದನ್ನು ಅರ್ಥಮಾಡಿಕೊಂಡು ಬರೆಯುವಂತೇ ಗಣೇಶನಿಗೆ ಪ್ರತಿಕರಾರು ಹಾಕುತ್ತಾರೆ. ಗಣೇಶ ಒಪ್ಪಿ ಕಾವ್ಯದ ಬರಹ ಮುನ್ನಡೆಯುತ್ತದೆ.

ಮಹರ್ಷಿಗಳು ಹೇಳಿದ ಆ ಕಾವ್ಯದಲ್ಲಿ ಅಲ್ಲಲ್ಲಿ ತನಗೆ ಸಂದೇಹ ಬಂದಾಗ ಗಣೇಶ ಅದನ್ನು ಪರಿಹರಿಸುವಂತೇ ಮಹರ್ಷಿಗಳನ್ನು ಕೇಳುತ್ತಾನೆ, ಋಷಿಗಳು ಹಾಗೇ ಸಮಜಾಯಿಷಿ ಕೊಟ್ಟು ಸಂದೇಹ ನಿವಾರಣೆಯಾದಮೇಲೆ ಮತ್ತೆ ಲೆಕ್ಕಣಿಕೆ ಮುನ್ನಡೆಯುತ್ತದೆ. ಒಮ್ಮೆ ಹೀಗಾಗುತ್ತದೆ ಕಾವ್ಯದಲ್ಲಿರುವ ಕಥಾನಕ ಮಹಾಭಾರತ, ಭಾರತ ಕಥೆಯಲ್ಲಿ ಧರ್ಮರಾಯನ ರಥ ನೆಲದಿಂದ ಎತ್ತರಕ್ಕೆ ಗಾಳಿಯಲ್ಲಿ ಹಾರುತ್ತಿರುತ್ತದೆ. ಹಾರುತ್ತಿರುವ ರಥ ಒಮ್ಮೆ ಕುಸಿದು ಬೀಳುತ್ತದೆ. ಮಹಾ ಧರ್ಮಿಷ್ಠನಾದ ಯುಧಿಷ್ಠಿರನ ರಥವೇ ಹೀಗಾಗಲು ಕಾರಣವೇನು ? ಎಂಬ ಗಣೇಶನ ಪ್ರಶ್ನೆಗೆ ಋಷಿಗಳ ಉತ್ತರ - ಶ್ರೀಕೃಷ್ಣ " ಅಶ್ವತ್ಥಾಮೋ ಹತಃ ಕುಂಜರಃ " ಎಂದು ಘೋಷಿಸುವಂತೇ ಧರ್ಮರಾಯನಿಗೆ ಆಜ್ಞಾಪಿಸಿದಾಗ ಸತ್ಯಸಂಧನಾದ ಧರ್ಮರಾಯ " ಪ್ರತ್ಯಕ್ಷ ನೋಡದೆಯೇ ಹೇಳಲಾರೆ " ಎಂದುಬಿಡುತ್ತಾನೆ. ಸ್ವತಃ ಭಗವಂತನೇ ಆದ ಶ್ರೀಕೃಷ್ಣನ ಆಜ್ಞೆಯನ್ನು ಅವಗಣನೆಮಾಡಿದ್ದರ /ಉಲ್ಲಂಘನೆಮಾಡಿದ್ದರ ಪರಿಣಾಮವಾಗಿ ಧರ್ಮರಾಯನ ರಥ ಒಮ್ಮೆ ಹಾಗೆ ಧರೆಗುರುಳುತ್ತದೆ. " ಯಾರು ಭಗವಂತನನ್ನೇ ಸಂಶಯಿಸುತ್ತಾರೋ ಅವರಿಗೆ ಉಳಿಗಾಲವಿಲ್ಲ [ಸಂಶಯಾತ್ಮಾ ವಿನಶ್ಯತಿ] " ಎಂದು ಶ್ರೀಕೃಷ್ಣನೇ ಸಾರುತ್ತಾನೆ. --ಈ ಉತ್ತರ ಬರುತ್ತಿರುವಂತೆಯೇ ತನ್ನ ಶುಂಡ[ಸೊಂಡಿಲು]ವನ್ನೊಲೆದು ಹೂಂ ಹೂಂ ಎನ್ನುತ್ತಾ ಬಹಳ ಸಂತೋಷದಿಂದ ಭಾರತಕಥೆಯನ್ನು ಕಾವ್ಯರೂಪದಲ್ಲಿ ಬರೆದುಮುಗಿಸಿದನಂತೆ ಗಣೇಶ. ಗಣೇಶ ’ಗೀರ್ವಾಣ ಲಿಪಿ’ಯಲ್ಲಿ ಈ ಕಾವ್ಯವನ್ನು ಬರೆದ. ಛಂದಸ್ಸು-ವ್ಯಾಕರಣ, ಅಲಂಕಾರ, ಉಪಮೆ ಇತ್ಯೇತ್ಯಾದಿ ಸರ್ವಾಭರಣ ಸುಂದರಿಯಾದ ಈ ಮಹಾಕಾವ್ಯ [ಅದರ ಸಂಸ್ಕೃತದ ಆವೃತ್ತಿ] ಇಂದಿಗೂ ಸಾಹಿತ್ಯಾಸಕ್ತರಿಗೆ ಅತ್ಯುತ್ತಮ ’ಕಾವ್ಯ’ಳೆನಿಸಿದ್ದಾಳೆ!

ಬರೆಯುವಾಗ ಓದಿದ್ದಕ್ಕಿಂತ ಹತ್ತುಪಟ್ಟು ಹೆಚ್ಚಿನ ಅರ್ಥವಾಗುತ್ತದೆ ಎನ್ನುವುದು ಹಲವರ ಅನಿಸಿಕೆ ಅಲ್ಲವೇ? ಇನ್ನು ಕೆಲವರಿಗೆ ಬರೆಯುವಾಗಲೂ ತಲೆ ಎಲ್ಲೋ ಇರುತ್ತದೆ, ಹಾಗಾಗಿ ಅವರು ಬರೆದರೂ ಒಂದೇ ಬಿಟ್ಟರೂ ಒಂದೇ. ಗಣೇಶನಿಗೆ ಹೊಸದಾಗಿ ಅರ್ಥವಿವರಣೆಯೇನೂ ಬೇಕಾಗಿರಲಿಲ್ಲ, ಆದರೂ ಲೋಕದ ಹಿತಾರ್ಥ ರಚಿತವಾಗುವ ಅದಕ್ಕೆ ಲೋಕಕ್ಕೆ ತಿಳಿಯುವ ಹಾಗೇ ಆತ ಕಾರಣ ಕೇಳಿದ್ದಾನೆ. ಹೇಗೂ ಬರೆಯುವಾಗಲೇ ಅದರ ಪರಿಪೂರ್ಣ ಹುರುಳನ್ನು ಅರಿತಿದ್ದ ಗಣೇಶ ಬರೆದು ಮುಗಿಸಿ ನಿಂತು ಈ ಕೃತಿ ನಿಜಕ್ಕೂ ಮಹಾನ್ ಕಾವ್ಯವೇ ಸರಿ, ಇದು ಚತುರ್ವೇದಗಳ ನಂತರ ಜನಿಸಿದ್ದರಿಂದ ಪಂಚಮವೇದ ಎನಿಸಲಿ ಎಂದು ಹರಸಿ ಮಹರ್ಷಿಗಳಿಂದ ಬೀಳ್ಕೊಂಡನಂತೆ. ಈ ಮಹಾಕಾವ್ಯದ ಭಾಗವಾಗಿಯೇ ಸಂಗೀತದ ಸ್ವರ-ಲಯ-ತಾಳಗಳೂ ಹುಟ್ಟಿದ್ದರಿಂದ ಸಂಗೀತವನ್ನೂ ಇದೇ ಹೆಸರಿನಿಂದ ಕರೆಯುತ್ತಾರೆ. ಕೃತಿಯ ಕರ್ತೃವಾದ ಮಹರ್ಷಿ ಜಗತ್ತಿಗೇ ಒಳಿತಾಗಬಲ್ಲ ಹಲವು ಕೃತಿಗಳನ್ನು ಕೊಟ್ಟಿರುವುದರಿಂದ ವಿಶ್ವಬಂಧುವಾದ ಅವರನ್ನು ’ವ್ಯಾಸ’ ಎಂದು ಸಮಾಜ ಗೌರವಿಸುತ್ತದೆ.

ಚತುರ್ವೇದಗಳನ್ನೂ ಭಾಗವತ ಪುರಾಣವನ್ನೂ ವಾಣಿ ಮತ್ತು ವಾಙ್ಮಯಗಳನ್ನು ಸಮೀಕರಿಸಿ ಕೃತಿರೂಪಕ್ಕಿಳಿಸಿರುವುದರಿಂದ ವೈಶ್ವಿಕರಾದ [ವಿಶ್ವಬಂಧುವಾದ] ವ್ಯಾಸರಿಗೂ ಮೊದಲಾಗಿ ಯಾರೂ ಅಂತಹ ಮೇರು ಕೆಲಸಗಳನ್ನು ಮಾಡಿರಲಿಲ್ಲ. ವೇದವೆಂದರೇ ಜ್ಞಾನ. ತಾನು ಪಡೆದ ಜ್ಞಾನವನ್ನು ಜಗದ ಇತರರಿಗೂ ಹಂಚುವ ಹಂಬಲದಿಂದ ಇಂತಹ ಮಹತ್ಕಾರ್ಯವನ್ನು ಮಾಡಿ ಜ್ಞಾನಚಕ್ಷುವನ್ನು ಕರುಣಿಸಿದ ಮಹರ್ಷಿ ಗುರುಗಳೆಲ್ಲರ ಗುರುಗಳೆನಿಸಿದ್ದಾರೆ. ಈ ಕಾರಣಕ್ಕಾಗಿ ಉತ್ತಮ ಕೆಲಸಗಳನ್ನು ಮಾಡುವಾಗ ವ್ಯಾಸರನ್ನು ನೆನೆಯುವುದಾಗುತ್ತದೆ.

ಮಳೆಗಾಲದ ನಾಲ್ಕು ತಿಂಗಳು ಭೂಮಿಯಲ್ಲಿ ಹಲವು ಜೀವಿಗಳ ಸಂತಾನೋತ್ಫತ್ತಿ ಪ್ರಕ್ರಿಯೆ ಜಾಸ್ತಿಯಿರುತ್ತದೆ. ಹುಳ-ಹುಪ್ಪಟೆಗಳು, ಏಡಿಗಳು, ಸರೀಸೃಪಗಳೇ ಮೊದಲಾದ ಎಲ್ಲಾ ಜೀವಕೋಟಿಗಳ ಓಡಾಟ ಬಹಳ ಹೆಚ್ಚಿರುತ್ತದೆ. ಸರ್ವ ಸಂಗವನ್ನೂ ತ್ಯಜಿಸಿ ಜೀವನ್ಮುಕ್ತ ಸ್ಥಿತಿಯನ್ನು ಗಳಿಸುವತ್ತ ಹೆಜ್ಜೆಹಾಕುವ ಅಹಿಂಸೆಯನ್ನು ಅನುಸರಿಸುವ, ಬೋಧಿಸುವ ತಾಪಸಿಗಳು ಈ ಕಾಲದಲ್ಲಿ ಓಡಾಡಿದರೆ ಅವರ ಮರದ ಹಾವುಗೆಗಳಿಗೆ ಅರಿವಿಲ್ಲದೇ ಸಿಕ್ಕ ಜೀವಜಂತುಗಳು ಕೊಲ್ಲಲ್ಪಡುತ್ತವಲ್ಲಾ ಎಂಬ ಕಾರಣಕ್ಕೆ ಸನ್ಯಾಸಿಗಳಾದವರು ಕುಂಭದ್ರೋಣ ಮಳೆಯ ಸಮಯವಾದ ಅಷಾಢ ಹುಣ್ಣಿಮೆಯಿಂದ ಕಾರ್ತೀಕ ಹುಣ್ಣಿಮೆಯ ವರೆಗೆ ಒಂದೇ ಕಡೆಗೆ ಆಶ್ರಯಪಡೆದಿದ್ದು ತಮ್ಮ ತಪಸ್ಸನ್ನೂ ಏಕಾಂತವನ್ನೂ ಹೆಚ್ಚಿಸಿ ಜಗತ್ಕಲ್ಯಾಣಕ್ಕೆ ಪರೋಕ್ಷ ಕಾರಣೀಭೂತರಾಗುತ್ತಾರೆ. ನಾಲ್ಕು ಮಾಸಗಳ ಈ ಕಾಲವನ್ನು ಚಾತುರ್ಮಾಸವೆಂದೂ ನಡೆಯುವ ವೃತವನ್ನು ಚಾತುರ್ಮಾಸ್ಯವೆಂದೂ ಕರೆಯುತ್ತಾರೆ.


ಸಜ್ಜನರೂ ತಪೋನಿಷ್ಠರೂ ಆದ ಸಾಧು-ಸಂತರನ್ನು ಅವರ ಚಾತುರ್ಮಾಸ್ಯದ ವೇಳೆ ದರ್ಶಿಸಿ ಅವರಿಗೆ ಭಿಕ್ಷೆಯನ್ನು ನಡೆಸುವುದು, ಅವರ ಪಾದಪೂಜೆ ನಡೆಸುವುದು ಮತ್ತು ಅವರು ನಡೆಸಬಹುದಾದ ಸಂಕೀರ್ತನೆಗಳಲ್ಲಿ ಭಾಗಿಗಳಾಗುವುದು ಪುಣ್ಯತಮ ಕೆಲಸವಾಗಿರುತ್ತದೆ. ಲೌಕಿಕವಾಗಿ ಉದಾಹರಿಸಬಹುದಾದರೆ ತಾವೂ ಹೊರಟ ನೌಕೆಯಲ್ಲಿ ತಮಗೆ ಗೊತ್ತಿರುವ ಹಲವರನ್ನೂ ಜ್ಞಾನಮಾರ್ಗದಲ್ಲಿ ಕರೆದುಕೊಂಡು ಹೋಗುವ ಇಚ್ಛೆಯುಳ್ಳ ನಿಸ್ಪೃಹರು ಅವರಾಗಿರುತ್ತಾರೆ. ಜನನ-ಮರಣಗಳೆಂಬ ಚಕ್ರವ್ಯೂಹದಿಂದ ಹೊರಬರಲು ಸರಿಯಾದ ಆಯೋಜನೆ ಅಂಥಾ ತಪಸ್ವಿಗಳಿಂದ ಲಭಿಸಬೇಕೇ ವಿನಃ ಅದು ಕ್ರಯಕ್ಕೆ ಸಿಗುವಂಥದ್ದಲ್ಲ! ಜನಿಸಿದ ಪ್ರತೀವ್ಯಕ್ತಿಗೆ ಉತ್ತಮ ಗುರುವಿನ ದರ್ಶನವಾಗಬೇಕಾದರೆ ಅದೂ ಒಂದು ವಿಧಿಯಿಚ್ಛೆಯೇ ಆಗಿರುತ್ತದೆ. ಸಿಕ್ಕಿದ ಸದ್ಗುರುವನ್ನು ಸಮರ್ಪಕವಾಗಿ ಸೇವಿಸುವ ಬುದ್ಧಿ ಬರುವುದೂ ಕೂಡ ಆ ಯಾ ವ್ಯಕ್ತಿಯ ವಿಧಿಯೇ ಸರಿ.

ಯುಗಧರ್ಮಕ್ಕನುಗುಣವಾಗಿ ಕಲಿಯುಗದಲ್ಲಿ ಕಪಟ ಸನ್ಯಾಸಿಗಳು ಬಹಳವೇ ಇರುವುದರಿಂದ ಸನ್ಯಾಸಿಗಳಾದವರಿಗೆ ಕಾಲಹಾಕುವುದು ಕಷ್ಟವಾಗಿದೆ! ಸನ್ಯಾಸಿಗೂ ಸನ್ಯಾಸಿಯ ವೇಷಕ್ಕೂ ಹೊರನೋಟದಿಂದ ಸಾಮ್ಯತೆ ಕಾಣುವುದರಿಂದ ಅನೇಕ ಜನ ಸತ್ಯಾಸತ್ಯತೆಯ ಪರಾಮರ್ಷೆಗೆ ನಿಲುಕದ ವಿಷಯವೆಂದು ನಿಜ ಸನ್ಯಾಸಿಗಳನ್ನೂ ಮರೆತುಬಿಡುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾರೆ. ಆದ್ಯ ಶಂಕರರು ಈ ರೀತಿ ಅಪ್ಪಣೆಕೊಡಿಸಿದ್ದಾರೆ --

ಅಸ್ಮತ್ ಪೀಠೇ ಸಮಾರೂಢಃ ಪರಿವ್ರಾಡುಕ್ತ ಲಕ್ಷಣಃ |
ಅಹಮೇವೇತಿ ವಿಜ್ಞೇಯ ಯಸ್ಯ ದೇವ ಇತಿ ಶ್ರುತೇ ||

-ಪರಿವ್ರಾಜಕ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿ ತನ್ನ ಪೀಠದಲ್ಲಿ ಆಸೀನನಾದರೆ ಅವನನ್ನು ತಾನೇ ಅಂತ ತಿಳಿಯಿರಿ. ಅರಿಷಡ್ವರ್ಗಗಳಿಂದ ಮುಕ್ತರಾದ, ಹೊಗಳುವಿಕೆ-ತೆಗಳುವಿಕೆಯಲ್ಲಿ ಸ್ಥಿತಪ್ರಜ್ಞರಾದ, ಮೋಕ್ಷವನ್ನುಳಿದು ಇನ್ನುಳಿದ ಆಸೆಗಳನ್ನು ಪರಿತ್ಯಜಿಸಿದ, ಯಾರದೇ ಸಂಗವನ್ನೂ ಬಯಸದ, ತ್ರಿಕಾಲ ಸ್ನಾನ-ಸಂಧ್ಯಾ ತಪಃ ಪೂಜಾದಿ ಕೈಂಕರ್ಯನಿರತರಾದ, ಬಾಹ್ಯಾಸಕ್ತಿಯನ್ನು ವಿಜೃಂಭಿಸದ, ಜನರಿಗೆ ತ್ರಿಕರಣ ಪೂರ್ವಕ ಸನ್ಮಾರ್ಗ ಬೋಧಿಸುವ, ಸಾತ್ವಿಕ-ಸಸ್ಯಾಹಾರಿಗಳಾದ, ಅಹಿಂಸಾ ತತ್ಪರರಾದ, ಹೃದಯ ಸರೋವರದಲ್ಲಿ ಬೆಳಗುತ್ತಿರುವ ಪರಮಾತ್ಮನೆಂಬ ಸೂರ್ಯನನ್ನೇ ನೋಡುವ ಹಂಸದ ರೀತಿ ಪರಮಹಂಸರಾಗಿರುವ ವ್ಯಕ್ತಿಗಳು ಸನ್ಯಾಸಿಗಳು ಎನಿಸಿಕೊಳ್ಳುತ್ತಾರೆಯೇ ಹೊರತು ವಿಧಾನ ಸೌಧದಲ್ಲಿ ರಾಜಕೀಯ ಕಣಕ್ಕೆ ಮುನ್ನುಗ್ಗುವ, ವಿಷಯ ಪ್ರೇರಿತರಾಗಿ ಕಣ್ಣುಮುಚ್ಚಾಲೆಯಾಡುವ ವ್ಯಕ್ತಿಗಳಲ್ಲ. ಸನ್ಯಾಸಿಗಳ ನಡತೆಯನ್ನವಲೋಕಿಸಿ ಪರಿವ್ರಾಜಕರಾದವರನ್ನು ಮಾತ್ರ ಗುರುವೆಂದು ಪರಿಗಣಿಸು ಎಂದು ಆಚಾರ್ಯರು ಹೇಳಿದ್ದಾರಲ್ಲವೇ ? ಭಗವತ್ಪಾದ ಶಂಕರರಿಗೆ ಅಷ್ಟು ಹಿಂದೆಯೇ ಕಪಟ ಸನ್ಯಾಸಿಗಳ ಬಗ್ಗೆ ಅರಿವಿತ್ತು ಎಂಬುದು ಸ್ಪಷ್ಟವಾಗುತ್ತದೆ!

ಮನುಷ್ಯ ಎಷ್ಟೇ ತಾನರಿತರೂ ಅದು ಲೌಕಿಕ ವಿದ್ಯೆಯೇ ಹೊರತು ಪಾರಮಾರ್ಥಿಕವಲ್ಲ. ವಿಶ್ವವಿದ್ಯಾಲಯಗಳು ಕೊಡಮಾಡುವ ಪದವಿಗಳು ಕೇವಲ ಇಲ್ಲಿನ ವಿಷಯಗಳಿಗೆ ಸಂಬಂಧಿಸಿದ್ದೇ ಹೊರತು ಕಾಣದ ಲೋಕದ ಉನ್ನತ ಗಮ್ಯಸ್ಥಾನಕ್ಕೆ, ಗಹನವಾದ ಆ ವಿಷಯಗಳಿಗೆ ಸಂಬಂಧಿಸಿದ್ದಲ್ಲ. ವಿಜ್ಞಾನಮಯ ಲೋಕದಿಂದಾಚೆಗೆ ಏನಾದರೂ ಮಾಹಿತಿ ಲಭ್ಯವಾಗುವುದಾದರೆ ಅದು ಶುದ್ಧ ಸನ್ಯಾಸಿಗಳಿಗೇ ಹೊರತು ಸಾಮಾನ್ಯರಿಗಲ್ಲ. ನಮಗೆ ಗೊತ್ತಿರದ ಅನೇಕ ವಿಷಯಗಳನ್ನು ತಮ್ಮ ತಪೋಬಲದಿಂದ ತಾರ್ಕಿಕವಾಗಿ ನಿರ್ಣಯಿಸಬಹುದಾದ ತಾಕತ್ತು ಇರುವುದು ಕೇವಲ ತಾಪಸರಿಗೇ ಹೊರತು ಬೇರಾರಿಗೂ ಅಲ್ಲ.

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಂ ||

ಹುಟ್ಟಿಸಿದ ಆ ಶಕ್ತಿ ಮೂಕನನ್ನೇ ವಾಚಾಳಿಯನ್ನಾಗಿಯೂ ಹೆಳವನನ್ನೇ ಶಿಖರಗಾಮಿಯನ್ನಾಗಿಯೂ ಮಾಡಬಲ್ಲ ಸಾಮರ್ಥ್ಯ ಉಳ್ಳದ್ದಾಗಿದೆ ಎಂಬ ಸತ್ಯದ ಅರಿವು ನಿಜದ ಅರಿವು ಕೂಪಮಂಡೂಕಗಳಾದ ನಮಗೆ ಸಹಜವಾಗಿ ಪ್ರಾಪ್ತವಲ್ಲ. ಯಾವಾಗ ಯುದ್ಧದಲ್ಲಿ ನಮ್ಮ ಕುದುರೆ ಸೋಲುತ್ತದೋ, ಯಾವಾಗ ಪರೀಕ್ಷೆಯಲ್ಲಿ ನಮ್ಮ ಅನುತ್ತೀರ್ಣತೆ ಘೋಷಿಸಲ್ಪಡುತ್ತದೋ, ಯಾವಾಗ ಇಲ್ಲದ ಕಾಯಿಲೆ ನಮಗೆ ಅಡರಿಕೊಂಡು ಹಿಂಸಿಸುತ್ತದೋ, ಯಾವಾಗ ಇರುವ ಬೊಕ್ಕಸ ಬರಿದಾಗಿ ನಡೆವ ಮಾರ್ಗವೇ ಗತಿಯಾಗಿ ಪರಿಣಮಿಸುತ್ತದೋ ಅಂತಹ ದಯನೀಯ ದಿನಗಳಲ್ಲಿ ಮಾತ್ರ ನಮಗೆ ಆ ಇನ್ನೊಂದು ಶಕ್ತಿಯ ಅರಿವು ಸ್ವಲ್ಪ ಮಟ್ಟಿಗೆ ಆಗುತ್ತದೆ! ಆದರೂ ’ಅಡಿಗೆ ಬಿದ್ದರೂ ಮೂಗು ಮೇಲೇ ಇದೆ’ ಎನ್ನುವ ನಮ್ಮ ಅಹಂ ಅಲ್ಲೂ ಕೆಲಸಮಾಡುತ್ತಲೇ ಇರುತ್ತದೆ! ಯಾವಾಗ ಅಹಂ ಎಂಬ ಗಡಿಯಾರ ನಿಷ್ಕ್ರಿಯವಾಗುತ್ತದೋ ಆಗ ಪರಾಶಕ್ತಿಯೆಂಬ ಯಂತ್ರ [ವಿದ್ಯುತ್ತು ಹೋದಾಗ ಯೂ.ಪಿ.ಎಸ್ ಅಥವಾ ಜನರೇಟರ್ ಇರುವಂತೇ]ಚಾಲೂ ಆಗುತ್ತದೆ. ಇಲ್ಲಿ ಯೂ.ಪಿ.ಎಸ್ ಮತ್ತೆ ನಾವೇ ತಯಾರಿಸಿದ ಯಂತ್ರವಾಗಿರುವುದರಿಂದ ಇತಿ-ಮಿತಿ ಸಹಿತವಾಗಿದೆ, ಆದರೆ ಪರಾಶಕ್ತಿ ಇತಿಮಿತಿ ರಹಿತದ್ದಾಗಿದೆ ಎಂಬುದನ್ನು ನಾವು ಅರಿಯಬೇಕು. ಅದು ಕರಗದ ಶಕ್ತಿ. ಇದಕ್ಕೆ ಉದಾಹರಣೆ ದ್ರೌಪದೀ ವಸ್ತ್ರಾಪಹರಣ. ಅಸಾಮಾನ್ಯ ಶೂರರೂ ಮೂರುಲೋಕದ ಗಂಡ ಎಂದೆಲ್ಲಾ ಬಿರುದು ಪಡೆದವರೂ ಸೇರಿದ ಪಂಚಪಾಂಡವರಲ್ಲಿ ಕೇವಲ ಒಬ್ಬನೇ ಒಬ್ಬ ಗಂಡ ಕೂಡ ದ್ರೌಪದಿಯ ಮಾನ ಕಾಪಾಡಲು ಸಮರ್ಥರಾಗಿರಲಿಲ್ಲ. ತುಂಬಿದ ಸಭೆಯಲ್ಲಿ ಮಾನಹೋಗುವಾಗಲೂ ಒಂದೇ ಕೈ ಎತ್ತಿ ಇನ್ನೊಂದರಲ್ಲಿ ಮಾನಮುಚ್ಚಿಕೊಂಡಾಗಲೂ ಪರಾಶಕ್ತಿ ಚಾಲೂ ಆಗಲಿಲ್ಲ. ಯಾವಾಗ ತನ್ನಿಂದಾಗದೆಂದು ಎರಡೂ ಕೈ ಮೇಲೆತ್ತಿ ಗೋಳಿಟ್ಟಳೋ ಆಗ ಅಕ್ಷಯಾಂಬರದ ಕೃಪೆಗೆ ಪಾತ್ರಳಾದಳು. ಆದರೆ ನಮ್ಮ ಯಾವ ಮಾನಕಗಳಿಗೂ ನಿಲುಕದ್ದು ಆ ಅದ್ಭುತ ಶಕ್ತಿ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗಿದೆ.

ಕಣ್ಣಿಗೆ ಕಾಣುವ ಆಕಾಶದ ಬುಡ-ತುದಿಗಳನ್ನಾಗಲೀ ಆಳ-ಅಗಲಗಳನಾಗಲೀ ಅಳೆಯಲಾಗದ ವಿಜ್ಞಾನ ನಮ್ಮದು! ಗುರುತ್ವ ಪೊಳ್ಳುಗಳ [ಬ್ಲ್ಯಾಕ್ ಹೋಲ್ಸ್]ಬಗ್ಗೆ ಅರಿವು ಬಂದರೂ ಅದರಾಚೆ ಏನಿದೆಯೆಂದಾಗಲೀ ಅದು ಹೇಗೆ ಹೋದ ವಸ್ತು-ವ್ಯಕ್ತಿಗಳನ್ನು ತನ್ನೊಳಗೆ ಎಳೆದುಕೊಳ್ಳುತ್ತದೆ ಎಂಬುದರ ಬಗ್ಗೆಯಾಗಲೀ ಇದುವರೆಗೆ ಅರಿಯಲಾಗದ ವಿಜ್ಞಾನ ನಮ್ಮದು! ಹಾಡಹಗಲೇ ನುಗ್ಗಿ ಜೀವಸಂಕುಲಗಳಿಗೆ ಪ್ರತ್ಯಕ್ಷ ದೈವತ್ವವನ್ನು ಕಣ್ತುಂಬ ಕಾಣಗೊಡುವ ಸೂರ್ಯನಲ್ಲಿ ಏನಿದೆಯೆಂಬ ಪರಿಪೂರ್ಣ ಮಾಹಿತಿ ಸಿಗದೇ ಅಂದಾಜುಕಟ್ಟಿದ ವಿಜ್ಞಾನ ನಮ್ಮದು! ನಿಯಮಬದ್ಧವಾಗಿ ಕೆಲಸ ನಿರ್ವಹಿಸುವ ಆಕಾಶ ಕಾಯಗಳ ನಿಯಂತ್ರಣ ಎಲ್ಲಿದೆ ಎಂಬುದನ್ನು ಅರಿಯದ ವಿಜ್ಞಾನ ನಮ್ಮದು! ಹೋಗಲಿ ದೇಹವೆಂಬ ಹಾರ್ಡ್ವೇರ್ ನಲ್ಲಿರುವ ಆತ್ಮವೆಂಬ ’ತಂತ್ರಾಂಶ’ ಹುಟ್ಟುವುದಕ್ಕಿಂತಾ ಮೊದಲು ಎಲ್ಲಿತ್ತು ಅಥವಾ ಸತ್ತಮೇಲೆ ಎಲ್ಲಿಗೆ ಹೇಗೆ ಹೋಯ್ತು ಎಂದು ಅರಿಯಲಾಗದ ಅತಂತ್ರ ವಿಜ್ಞಾನ ವೈಭೋಗ ನಮ್ಮದು! ಈ ಎಲ್ಲದನ್ನೂ ನಿರೂಪಿಸಿ, ನಿರ್ವಹಿಸುವ ನಮ್ಮ ಮೇರೆಗೂ ಮೀರಿದ ಇನ್ನೊಂದು ಯಾವುದೋ ಶಕ್ತಿಯ ಆವಾಸವನ್ನು ಅಲ್ಲಗಳೆಯುತ್ತೀರೇನು ? ಸಾಧ್ಯವೇ ನೀವೇ ಅವಲೋಕಿಸಿ.

ಹೀಗಾಗಿ ನಮಗಿಂತ ಹಿರಿದಾದ ಆ ದಿವ್ಯಶಕ್ತಿಯ ಸಾನ್ನಿಧ್ಯವನ್ನು ಸದಾ ಸಂಸ್ಮರಣೆಗೈದು ಅದರ ಹತ್ತಿರ ಹತ್ತಿರಕ್ಕೆ ನಮ್ಮನ್ನು ಸೆಳೆದೊಯ್ಯುವ ಪರಲೋಕದ ನಮ್ಮ ಗೈಡ್ ಈ ’ಗುರು.'

’ಸರ್ವೇಷಾಂ ಮಹಾಜನಾನಾಂ ಯೋಗಕ್ಷೇಮಾಭ್ಯುದಯ ಸಿದ್ಧ್ಯರ್ಥಂ’

ಎಂದು ಸಂಕಲ್ಪಿಸಿ ಸತತ ಜಗದ ಜನರ ಅಹವಾಲುಗಳನ್ನು ಜಗನ್ನಿವಾಸನ ಬಳಿಗೆ ತನ್ನ ತಪಸ್ಸಿನ ಮೂಲಕ ಒಯ್ಯುವ, ರವಾನಿಸುವ ಈ ಗುರುವೆಂಬ ಸಂದೇಶಕಾರನಿಗೆ, ಈ ನಮ್ಮ ಹಿತೈಷಿಗೆ, ಈ ನಮ್ಮ ಬಂಧುವಿಗೆ ನಮಿಸುವುದು ನಮ್ಮ ಕರ್ತವ್ಯವಾಗಿದೆ. ಹಾಗೆ ನಾವು ಮನಸ್ಸುಮಾಡಿ ಮುನ್ನಡೆಯೋಣ, ಗುರುದರ್ಶನಮಾಡಿ ಕೃತಾರ್ಥರಾಗೋಣ-ನಿಜದ ನೆಲೆಯನ್ನು ಅರಿಯುವತ್ತ ಅಂಬೆಗಾಲಿಡಲು ಪ್ರಯತ್ನಿಸೋಣ ಎಂಬ ಸದಾಶಯದೊಂದಿಗೆ ಜಗದ ಎಲ್ಲರ ಪರವಾಗಿ ಗುರುವಂದನೆ ಮಾಡುತ್ತಿದ್ದೇನೆ -

Justify Fullಅಜ್ಞಾನತಿಮಿರಾಂಧಸ್ಯ ಜ್ಞಾನಾಂಜಲಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಸ್ಠಾವರಂ ಜಂಗಮಂ ವ್ಯಾಪ್ತಂ ಯತ್ಕಿಂಚಿತ್ ಸಚರಾಚರಂ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಜ್ಞಾನಶಕ್ತಿಸಮಾರೂಢಃ ತತ್ವಮಾಲಾವಿಭೂಷಿತಃ |
ಭುಕ್ತಿಮುಕ್ತಿಪ್ರದಾತಾ ಚ ತಸ್ಮೈ ಶ್ರೀಗುರವೇ ನಮಃ ||

ಕಾಷಾಯವಸ್ತ್ರಂ ಕರದಂಡಧಾರಿಣಂ ಕಮಂಡಲಂ ಪದ್ಮಕರೇಣ ಶಂಖಂ |
ಚಕ್ರಂ ಗದಾ ಭೂಷಿತ ಭೂಷಣಾಢ್ಯಂ ಶ್ರೀಪಾದರಾಜಂ ಶಿರಸಾ ನಮಾಮಿ ||

ಹಂಸ ಹಂಸಾಯ ವಿದ್ಮಹೇ ಪರಮಹಂಸಾಯ ಧೀಮಹಿ |
ತನ್ನೋ ಹಂಸಃ ಪ್ರಚೋದಯಾತ್ ||

|| ಓಂ ಸ್ವಸ್ತಿ ||

Tuesday, July 12, 2011

ಬೇಕು ಮುಂಗಡ !


ಬೇಕು ಮುಂಗಡ !

ಜೀವ ಜಡದ ಹೃದಯವನ್ನು ಒಮ್ಮೆ ಸಾರಿಸಿ
ದೇವ ದೇಹದೊಳಗೆ ನಿನ್ನ ಕರೆದು ಕೂರಿಸಿ |
ಭಾವಮಿಳಿತ ಮನಸದೆಂಬ ಹೂವ ಏರಿಸಿ
ಜಾವಜಾವಕೊಮ್ಮೆ ಪೂಜೆ ಭಕುತಿ ಪೇರಿಸಿ ||

ರಾಮ ಕೃಷ್ಣ ಬುದ್ಧ ಕಲ್ಕಿ ಹಲವು ರೂಪದಿ
ನೇಮ ನಡೆಸಿ ಮೆರೆವೆ ಹರಿಯೇ ಜಗದ ಕೂಪದಿ |
ನಾಮ ನೆನೆಯಲೆಮಗೆ ಸಮಯವಿರದು ತಾಪದಿ !
ಹೇಮ ಗಿರಿಗಳವನು ಬಯಸಿ ಆಡೆ ಚೌಪದಿ !!

ಬಲಿಗೆ ಒಲಿದೆ ದಾನ ಪಡೆದು ಹಿಂದೆ ಭುವಿಯಲಿ
ಕಲಿಯನೊಲಿದು ತಂದು ಜಡಿದೆ ಭವಕೆ ಕಹಿಯಲಿ !
ಸುಲಿಗೆ ಮೋಸ ಚೋರತನಗಳಧಿಕ ದಿನದಲಿ
ಒಲವು ಪ್ರೀತಿ ನಲುಗಿನಿಂತು ನೋಡುತಿರುವಲಿ ||

ಧರ್ಮ ಜಾತಿ ಮತಗಳೆಂಬನೇಕ ಪಂಗಡ
ಕರ್ಮವೆಮಗೆ ಸಾಗಬೇಕು ಅದರ ಸಂಗಡ |
ಮರ್ಮವರಿಯದಾದೆವಯ್ಯ ತತ್ವ ಹಿಂಗಡ
ಶರ್ಮ ಶೇಖ ಪೌಲಿಗೆಲ್ಲ ಬೇಕು ಮುಂಗಡ !

Monday, July 11, 2011

ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು


ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು

[ಭಾಗ-೨]

ಕನ್ನಡದ ಕಲಿಯಾಗಿ ಕನ್ನಡವನ್ನೇ ಉಸಿರಾಡಿ, ಪೌರಾಣಿಕ ಪಾತ್ರಗಳಿಗಷ್ಟೇ ತಮ್ಮನ್ನೂ ತಮ್ಮ ಬಳಗವನ್ನೂ ಮೀಸಲಾಗಿರಿಸಿಕೊಂಡು, ಬದುಕಿನ ಹಲವು ಮಜಲುಗಳಲ್ಲಿ ಸಾಕಷ್ಟು ನೋವನ್ನು ಅನುಭವಿಸಿ ಪ್ರೇಕ್ಷಕ ಪ್ರಭುಗಳಿಗೆ ನಲಿವನ್ನು ಉಣಬಡಿಸಿ ಮಿಂಚಿ ಮರೆಯಾದ, ನೀಲಾಗಸದಲ್ಲಿ ಶಾಶ್ವತ ಮಿನುಗುತಾರೆಯಾದ ದಿ| ಕೆರೆಮನೆ ಶಂಭು ಹೆಗಡೆಯವರ ಸತ್ಯ ಹರಿಶ್ಚಂದ್ರನ ಪಾತ್ರದ ಒಂದು ತುಣುಕನ್ನು ನಿಮ್ಮ ಆವಗಾಹನೆಗಾಗಿ ಇಲ್ಲಿ ನೀಡಿದ್ದೇನೆ. ಭಾಗವಹಿಸಿದ ಹಿಮ್ಮೇಳ-ಮುಮ್ಮೇಳದ ಎಲ್ಲ ಕಲಾವಿದರಿಗೂ ನನ್ನ ನಮನಗಳು --



ಬೇಸರದ ದಿನಗಳನ್ನು ಕಳೆಯಲಿಕ್ಕೆ ಹುಡುಕಿಕೊಂಡ ಒಂದು ಮಾರ್ಗ ನಿಜಕ್ಕೂ ಮನಸ್ಸಿನ ದಾಹವನ್ನು, ಹಸಿವನ್ನು ನಿವಾರಿಸುವ ತಾಕತ್ತನ್ನು ಹೊಂದಿತ್ತು; ಎಷ್ಟರಮಟ್ಟಿಗಪ್ಪಾ ಅಂತಂದರೆ ಕನ್ನಡದ ಇಂದಿನ ಉದ್ದಾಮ ಪಂಡಿತರಾದ ಶತಾವಧಾನಿ ಡಾ| ಆರ್. ಗಣೇಶ್ ಕೂಡ ಆ ಕಲೆಯನ್ನು ಮೆಚ್ಚಿಕೊಂಡರು, ಮಾತ್ರವಲ್ಲ ತಮ್ಮ ಪಾಂಡಿತ್ಯದಿಂದ ಕೆಲವು ಏಕವ್ಯಕ್ತೀ ಅಭಿನಯದ ಪ್ರಸಂಗಗಳನ್ನೂ ಬರೆದರು! ಕನ್ನಡದ ಇನ್ನೊಬ್ಬ ಕಟ್ಟಾಳು ಶತಾಯುಷಿ ಪ್ರೊ| ಜಿ. ವೆಂಕಟಸುಬ್ಬಯ್ಯನವರೂ ಸಹಿತ ಯಕ್ಷಗಾನ ತಾಳಮದ್ದಲೆಯನ್ನು ಕೂತು ಕೇಳಿದರು. ಸಂಸ್ಕೃತದ ಘನವಿದ್ವಾಂಸರೂ ಘನಪಾಠಿಗಳೂ ಮೆಚ್ಚಿ ತಲೆದೂಗುವಂತಹ ಅನ್ಯಭಾಷಿಕರು ಕದಿಯಲಾರದ ಅಪ್ಪಟ ಕನ್ನಡ ಕಲೆ ಯಕ್ಷಗಾನ! ಅಂದಿನ ದಿನಗಳಲ್ಲಿ ವಿದೇಶೀ ಪ್ರಜೆಗಳೂ ಪೂರ್ಣರಾತ್ರಿ ನಮ್ಮೊಟ್ಟಿಗೆ ಆರಾಮ್ ಖುರ್ಚಿಗಳಲ್ಲಿ ಕುಳಿತು ಯಕ್ಷಗಾನ ನೋಡಿದ್ದನ್ನು ನಾನು ಸ್ವತಃ ಕಂಡು ಹರುಷಪಟ್ಟಿದ್ದೇನೆ. ಮಾರ್ಥಾ ಆಸ್ಟಿನ್ ಎಂಬೊಬ್ಬ ಮಹಿಳೆಯಂತೂ ಅದರ ಮೇಲೆ ಸಂಶೋಧನೆಗೇ ತೊಡಗಿದ್ದರು! ಈ ಕಲೆ ಕೇವಲ ಕರಾವಳಿ ಜಿಲ್ಲೆಗಳಿಗೆ ಮೀಸಲಾಗಬಾರದು. ಇದರಲ್ಲಿನ ಸಾಹಿತ್ಯವನ್ನು ರಸಾನುಭೂತಿಯನ್ನು. ಇದರ ಅಂದಚಂದವನ್ನು ಇಡೀ ಕರ್ನಾಟಕದ ಜನತೆ ಅನುಭವಿಸುತ್ತಾ ಜ್ಞಾನದ ಖಜಾನೆಯನ್ನು ತಮ್ಮ ಮನೆಗಳಲ್ಲಿ ಸ್ಥಾಪಿಸಿಕೊಳ್ಳಲಿ ಎಂದು ಈ ಮೂಲಕ ಹಾರೈಸುತ್ತೇನೆ.

ನಾಗರ ಪಂಚಮಿಗೆ ಸುಳಿರೊಟ್ಟಿ ಮಾಡುತ್ತಿದ್ದರು. ಅಕ್ಕಿಹಿಟ್ಟಿನ ತಳಪಾಯದ ಮೇಲೆ ಕಾಯಿ-ಬೆಲ್ಲದ ಪಾಕಮಿಶ್ರಣವನ್ನು ಇಟ್ಟು ಅದನ್ನು ಶುಂಠಿ ಅಥವಾ ಅರಿಶಿನದ ಎಲೆಗಳಲ್ಲಿ ಮಡಚಿ ದೋಸೆ ಕಾವಲಿಯ ಮೇಲೆ ಬೇಯಿಸುತ್ತಿದ್ದರು. ತಿನ್ನಲು ಪೊಗದಸ್ತಾಗಿರುವ ಈ ತಿಂಡಿ ನಾಗನಿಗೂ ಇಷ್ಟವಂತೆ! ಯಾರು ಕಂಡರೋ ತಿಳಿದಿಲ್ಲ ! ಇದೇ ವೇಳೆ ದಾಲ್ಚಿನಿ ಗಿಡದ ಎಲೆಗಳನ್ನು ತಂದು ಅದರಲ್ಲಿ: ಇದೇರೀತಿ ನುಣ್ಣಗೆ ರುಬ್ಬಿದ ಅಕ್ಕಿ ಹಿಟ್ಟಿಗೆ ಬೆಲ್ಲಸೇರಿಸಿ ಕಾಯಿಸಿ ತಟ್ಟುವ ಹದಕ್ಕೆ ತಂದುಕೊಂಡು, ಆರಿದ ಅದನ್ನು ಉಂಡೆಗಳಾಗಿ ಕಟ್ಟಿ, ಆ ಉಂಡೆಗಳನ್ನು ದಾಲ್ಚಿನಿ ಎಲೆಯಾಕಾರಕ್ಕೆ ಎಲೆಗಳಲ್ಲಿ ತಟ್ಟಿ ಅದರೊಳಗೆ ಪಾಕದ ಕಾಯಿತುರಿ-ಬೆಲ್ಲ ಮೆತ್ತಿ, ನಂತರ ಎಲೆಯ ಬುಡಾ-ತುದಿಗಳನ್ನು ಮುಗಿದ ಕೈ ಆಕಾರಕ್ಕೆ ಮಡಚುತ್ತಿದ್ದರು. ಮಡಚಿದ ಅವುಗಳನ್ನು ತಾಮ್ರದ ಅಟ್ಟಿನ ಕೌಳಿಗೆಯಲ್ಲಿ ಒಂದರಮೇಲೊಂದು ಪೇರಿಸಿ ಅದರಲ್ಲೇ ತಯಾರಾಗುವ ಹಬೆಯಲ್ಲಿ ಬೇಯಿಸುತ್ತಿದ್ದರು.[ಓದುಗರು ನೀವ್ಯಾರಾದರೂ ಪ್ರಯತ್ನಿಸುವುದಾದರೆ ರುಚಿಗೆ ತಕ್ಕಷ್ಟು ಉಪ್ಪು ಹಾಕಲು ಮರೆಯಬೇಡಿ] ೩-೪ ದಿನಗಳವರೆಗೆ ಇಟ್ಟು ತಿನ್ನಬಹುದಾದ ಈ ತಿಂಡಿ ’ಕೈಮುಗು [ಮುಗಿದ ಕೈ ಆಕಾರದ ಕೈಮುಗ್ಯೋ ] ಮೊಮ್ಮಿ’ ಎಂತಲೂ, ಗೆಣಸಲೆ ಎಂತಲೂ ಕರೆಸಿಕೊಳ್ಳುತ್ತಿತ್ತು. ನಾವು ಮಕ್ಕಳು ಆಗಾಗ ಹಿರಿಯರ[ಅಜ್ಜಿ-ಅಮ್ಮ] ಕಣ್ತಪ್ಪಿಸಿ ಅಟ್ಟಿನಕೌಳಿಗೆಗೆ ಲಗ್ಗೆ ಇಡುವುದಿತ್ತು. " ೭೦ ರಲ್ಲಿ ೪-೫ ಕಾಣುತ್ತಿಲ್ಲಾ ? " ಎಂದು ಪ್ರಶ್ನಿಸಿದರೆ " ಬೆಕ್ಕು ತಿಂದಿರಬೇಕು " ಎಂದು ಹಾರಿಕೆಯ ಉತ್ತರ ಕೊಡುತ್ತಿದ್ದೆವು; ಆ ’ಕಳ್ಳಬೆಕ್ಕಿ’ನ ಬಗೆಗೆ ಅವರಿಗೂ ಗೊತ್ತು !

ಅಂದಹಾಗೇ ನಮ್ಮ ನೆಂಟರ ಮನೆಯಲ್ಲೊಂದು ಬೆಕ್ಕು ಸಾಕಿದ್ದರು. ಅದರ ವೈಶಿಷ್ಟ್ಯವೇನೆಂದರೆ ನೆಲದಮೇಲೆ ಎಲೆಗಳಲ್ಲಿ ಇಟ್ಟ ಆಹಾರಕ್ಕೆ ತಾನಾಗಿ ಯಾವುದಕ್ಕೂ ಬಾಯಿಹಾಕಿ ತಿನ್ನುತ್ತಿರಲಿಲ್ಲ. ಮನೆಯ ಹಿರಿಯರ ಮುಖ ನೋಡಿ ಕೀರಲು ದನಿಯಲ್ಲಿ " ಮ್ಯಾಂವ್ " ಎನ್ನುತ್ತಿತ್ತು. " ಹೋಗು ನಿಂಗೇ ಅದು ತಿನ್ನು " ಎಂಬ ಫರ್ಮಾನು ಬರುವವರೆಗೂ ಕಾಯುತ್ತಿತ್ತು. ಬೆಕ್ಕಿಗೂ ಅರ್ಥವಾಗುವ ನಮ್ಮ ಕನ್ನಡ ಇನ್ಯಾರಿಗೆ ಅರ್ಥವಾಗದೇ ಇದ್ದರೂ ಹೋಗಲಿ ಬಿಡಿ! ಕೆಲವು ಪ್ರಾಣಿಗಳೇ ಹಾಗೆ-ಅದ್ಭುತ ಬುದ್ಧಿಮತ್ತೆಯನ್ನು ತೋರುತ್ತವೆ. [ಬೆಂಗಳೂರಿನ ಸುಬ್ರಹ್ಮಣ್ಯ ನಗರದ ಕಾಲನಿಯೊಂದರ ರಸ್ತೆಯಲ್ಲಿ ನೀರಿನ ಟಾಕಿಯೊಂದಿತ್ತು. ಬಾಯಾರಿಕೆಯಾದಾಗ ಹಸುವೊಂದು ಅದರ ನಲ್ಲಿಯನ್ನು ಬಾಯಲ್ಲೇ ಒತ್ತಿ ತಿರುಗಿಸಿ ನೀರು ಕುಡಿದು ಮತ್ತೆ ಮರಳಿ ತಿರುಗಿಸಿ ನೀರನ್ನು ನಿಲ್ಲಿಸುವುದನ್ನು ೧೯೯೪ರಲ್ಲಿ ಕಂಡಿದ್ದೆ!] ಊರಲ್ಲಿ ನಮ್ಮಲ್ಲಿ ಇದ್ದ ಮಲೆನಾಡ ಗಿಡ್ಡ ತಳಿಯ ೨೫-೨೬ ಹಸುಗಳ ಪೈಕಿ ಒಂದು ಹಸು ಕೊಂಬಿನಲ್ಲಿ ಸರಗೋಲನ್ನು ತೆರೆದು ಒಳಗೆ ಬರುವುದನ್ನು ಅಭ್ಯಾಸಮಾಡಿಕೊಂಡಿತ್ತು. ಸರಗೋಲು ಅಥವಾ ದಣಕಲು ಅಂದರೆ ಮಧ್ಯದಲ್ಲಿ ನಾಲ್ಕಾರು ಅಡಿ ಜಾಗ ಬಿಟ್ಟು ಆ ಕಡೆ ಈ ಕಡೆ ಎರಡು ಮರದ ದಿಮ್ಮಿಗಳನ್ನು ನಿಲ್ಲಿಸಿ, ಸಮಾನಾಂತರದಲ್ಲಿ ೪ ಇಂಚು ವ್ಯಾಸದ ನಾಕಾರು ತೂತುಗಳಿರುವ ಆ ದಿಮ್ಮಿಗಳಿಗೆ ಬಿದಿರಿನ ದಪ್ಪ ತುಂಡುಗಳನ್ನು ತೂರಿಸುವುದು. ಬೇಕಾದಾಗ ಅದನ್ನು ಜರುಗಿಸಿ ತೆರೆದರೆ ದಾರಿ, ಹಾಗೇ ಬಿಟ್ಟರೆ ಮುಚ್ಚಿದ ದಾರಿ! ಹೀಗೇ ಅಪರೂಪದ ಸ್ವಭಾವಗಳನ್ನು ಪ್ರಾಣಿ/ಪಕ್ಷಿಗಳಲ್ಲಿ ಅಲ್ಲಲ್ಲಿ ಕಾಣಬಹುದಾಗಿದೆ.

ಮಳೆಗಾಲದಲ್ಲಿ ಮನೆಗಳ ಸುತ್ತ ಯಥೇಚ್ಛ ಜಾಗವಿರುವಲ್ಲಿ ಥರಥರದ ಹೂವಿನಗಿಡಗಳು ಬೆಳೆಯುತ್ತಿದ್ದವು. ಶಂಕರಗೌರೀ ಗಿಡ, ಬೋಳಮ್ಮನ ಗಿಡ ...ಹೀಗೇ ಹಲವು ಹತ್ತು ಬಣ್ಣ ವೈವಿಧ್ಯಗಳು, ಆಕಾರ ವೈವಿಧ್ಯಗಳು, ಪರಿಮಳ ವೈವಿಧ್ಯಗಳು, ಅವುಗಳ ಮೇಲೆ ಹಾರಾಡುವ ಕೂರುವ ದುಂಬಿ-ಪತಂಗ-ಪಾತರಗಿತ್ತಿಗಳು, ಮತ್ತವುಗಳಲ್ಲಿ ವೈವಿಧ್ಯಗಳು ಆಹಹಾ ...ಸೃಷ್ಟಿಸಿದ ಆ ಕಲಾವಿದ ಸಿಕ್ಕರೆ ಒಮ್ಮೆ ಅಪ್ಪಿ ಆನಂದಭಾಷ್ಪ ಸುರಿಸಿ ಕೈಲಾಗಬಹುದಾದ ಸನ್ಮಾನವನ್ನು ಮಾಡಿಬಿಡಬಹುದಿತ್ತು ಅನಿಸುತ್ತದೆ! ಜಾಜಿ ಜೂಜಿ ಮಲ್ಲಿಗೆ ಸಂಪಿಗೆ ಕೇದಿಗೆ ಪುನ್ನಾಗ ಕರವೀರ ಪುಷ್ಪಪೂಜೆಯಲ್ಲಿ ಹೆಸರಿಸುವ ಬಹುತೇಕ ಎಲ್ಲಾ ಜಾತಿಯ ಹೂವುಗಳು ಅಲ್ಲಿದ್ದವು. ಅದು ನಮ್ಮ ಪೂರ್ವಜರ, ನಮ್ಮ ಹಿರಿಯರ ಒಲವು-ಒತ್ತಾಸೆ. ತನ್ನ ಹೆಸರಲ್ಲಿ ನಮಗೂ ಒಂದಷ್ಟು ಕರುಣಿಸಿ ಕಣ್ಮನ ತಣಿಸಿದ ಆ ಕಾಣದ ದೇವರಿಗೆ ಯಾವಮಾರ್ಗದ ಮಿಂಚಂಚೆಯಲ್ಲಿ ಕೃತಜ್ಞನಾಗಲಿ ?

ಆಷಾಢದಲ್ಲಿ ಮಳೆ ವಿಪರೀತ ಇರುವುದರಿಂದ ಅದ್ಯಾಕೋ ಜಾಸ್ತಿ ಹೂವುಗಳು ಬಿಡುತ್ತಿರಲಿಲ್ಲ. ಆಗ ಏನಿದ್ದರೂ ತುಳಸೀ ಗಿಡಗಳ ಮೇಲಾಟ. ಹರೆಯದ ಹುಡುಗಿಯರಂತೇ ಅಲ್ಲಿನ ನೆಲದ ಕಸುವನ್ನುಂಡು ದಷ್ಟಪುಷ್ಟವಾಗಿ ಬೆಳೆದ ತುಳಸೀ ಗಿಡಗಳಿಂದ ಬುಟ್ಟಿ ಬುಟ್ಟಿ ತುಳಸಿ ಕೊಂಬೆಗಳನ್ನು ಕೊಯ್ದು ಹಾರಮಾಡಿ ದೇವರಿಗೆ ಹಾಕುವುದಿತ್ತು. ನಾಗರ ಪಂಚಮಿಯ ಆಜುಬಾಜಿನಲ್ಲೇ ಕೃಷ್ಣಾಷ್ಟಮಿ ಇನ್ನೇನು ಬಂದುಬಿಡುತ್ತದಲ್ಲ ! ಅದಾದ ೧೧ ದಿನಗಳಲ್ಲೇ ಗಣೇಶ ಹಬ್ಬ ! ಹಬ್ಬಗಳು ಬಂದವೆಂದರೆ ಮಕ್ಕಳಾದ ನಮಗೆ ಬಲು ಖುಷಿ. ತರಾವರಿ ತಿಂಡಿ-ತಿನಿಸುಗಳು ಸಿಗುತ್ತವಲ್ಲ! ಶ್ರೀಕೃಷ್ಣ ರಾತ್ರಿ ಹುಟ್ಟುವುದು-ಆತನಿಗೆ ಬೆಣ್ಣೆ ಮುದ್ದೆ, ವಿವಿಧ ಉಂಡೆಗಳು, ಸಜ್ಜಿಗೆ, ಕಲಸಿದ ಅರಳುಕಾಳು, ಗೋಡಂಬಿ-ದ್ರಾಕ್ಷಿ...ಹೀಗೇ ದೇವರ ಮುಂದೆ ಜಾಗವೇ ಇರದಷ್ಟು! ನಿಜ ಹೇಳಲೋ ಪುರಾಣಗಳಲ್ಲಿ ದೇವರು ಹಲವು ರೂಪಗಳಲ್ಲಿ ಕಾಣಿಸಿಕೊಂಡಿದ್ದು ತುಂಬಾ ಒಳ್ಳೇದಾಯ್ತು. ಜನ್ಮಾಷ್ಟಮಿಯ ಉಂಡೆಗಳು ಇಟ್ಟಲ್ಲೇ ಮಾಯವಾಗುವ ’ಶ್ರೀಕೃಷ್ಣನ ಮಹಿಮೆ’ಯ ಬಗ್ಗೆ ಹೊಸದಾಗಿ ಹೇಳಬೇಕೇ? ನಮಗೆ ಗಣೇಶ ಅಂದರೂ ತುಂಬಾ ಇಷ್ಟವಪ್ಪ. ಆತನಿಗೆ ನಮ್ಮಹಾಗೇ ಬೇಡದ ತಿಂಡಿಗಳೇ ಇರಲಿಲ್ಲ. ನಮ್ಮಲ್ಲಂತೂ ೨೧ ಬಗೆಯ ಸಿಹಿತಿನಿಸುಗಳನ್ನು ಮಾಡುತ್ತಿದ್ದರು! ಅದರೊಟ್ಟಿಗೆ ಕರಿದ ವ್ಯಂಜನಗಳು ಅಲಾಯ್ದ! ಪಾಯಸ ಪತ್ರೊಡೆ ಚಕ್ಕುಲಿ ಒಡೆ ಮತ್ತೇಕೆ ಪ್ರತ್ಯೇಕ ಹೆಸರಿಸಿ ನಿಮ್ಮ ಹೊಟ್ಟೆ ಉರಿಸಲಿ ?

ಒಮ್ಮೆ ಏನಾಯ್ತು ಗೊತ್ತಾ ನಾನು ಚಿಕ್ಕವನಿದ್ದೆನಲ್ಲಾ ಮೆಟ್ಗನ [ಪುಟಬಾಳೆ, ಯಾಲಕ್ಕೀಬಾಳೆ]ಬಾಳೇಹಣ್ಣು ಎಂದರೆ ನಂಗೆ ಅತಿ ಪ್ರೀತಿಯಿತ್ತು. ಆದರೆ ಒಂದೆರಡು ತಿಂದು ಬಿಟ್ಟರೆ ಜೀರ್ಣವಾಗುವುದು ಕಷ್ಟ ಎಂಬುದು ನಮ್ಮ ಹಿರಿಯರ ಅಂಬೋಣ, ಅದು ಅವರ ಅಂಬೋಣ ಬಿಡಿ-ನಂಗೇ ಬಿಟ್ಟರೆ ಗಣೇಶನಿಗೇ ಪೈಪೋಟಿ ಕೊಡಲು ಸಿದ್ಧನಾಗುತ್ತಿದ್ದೆ ಎಂದುಕೊಳ್ಳೋಣ! ಒಂದು ಗಣೇಶ ಚತುರ್ಥಿಯಂದು ಮಂಗಲಾರತಿಯಾಗುವ ವೇಳೆ ಚಂದದ ಆರತಿಗಳನ್ನೇ ಕಣ್ತುಂಬಾ ಈಕ್ಷಿಸುತ್ತಿದ್ದೆ. ಅವೆಷ್ಟು ಆರಾತಿಗಳಪ್ಪಾ ಏಕದಳ, ದ್ವಿದಳ, ತ್ರಿದಳ. ಚತುರ್ದಳ, ಪಂಚದಳ, ನಾಗಾರತಿ, ಗರುಡಾರತಿ, ಹಲವು ಬತ್ತಿಗಳ ನೀರಾಜನ ಇಲ್ಲೂ ಮತ್ತದೇ ವೈವಿಧ್ಯ! ಆರತಿ ಮುಗಿದು ಮಂತ್ರಪುಷ್ಪದ ಘೋಷ ನಡೆಯುವ ಗಡಿಬಿಡಿಯಲ್ಲಿ ದೇವರ ಮುಂದೆ ಇಟ್ಟಿರುವ ಬಾಳೆಗೊನೆ ನಾಪತ್ತೆ! ನಂಗಂತೂ ಕಣ್ಣೀರೇ ಬಂದ್ಹೋಯ್ತು. ಗಣಪತಿಯ ಹೊಟ್ಟೆ ಬಹಳ ದೊಡ್ಡದು, ಆತ ಕೆಲವೊಮ್ಮೆ ಮುಂದಿರಿಸಿದ ಹಣ್ಣು-ತಿಂಡಿಗಳನ್ನು ತಿಂದುಬಿಡುತ್ತಾನೆ ಎಂದು ಸಮಾಧಾನ ಮಾಡಿದ್ದರು ಹಿರಿಯರು! ನಾವು ಅಂದು ಐಟಿ ಬಿಟಿಯುಗದ ಮಕ್ಕಳಾಗದೇ ಪೆದ್ಮುಂಡೆಯವುಗಳಾಗಿದ್ದದ್ದರಿಂದ ಅವರು ಬಚಾವು!

ಪಾಯಸವೂ ನನ್ನ ಪ್ರೀತಿಯ ಖಾದ್ಯಗಳಲ್ಲೊಂದು. ಅಕ್ಕಿಯ/ ಗೋಧಿ-ಕಡ್ಲೆಯ ಪಾಯಸ ಮಾಡಿದರೆ ಅಜೀರ್ಣವಾಗುವಷ್ಟು ಊಟಮಾಡಿಬಿಡುವುದು ನನ್ನ ಅಭ್ಯಾಸ ಅಂತಿದ್ದರು ನನ್ನ ಹಿರಿಯರು. [ಅಸಲಿಗೆ ನನ್ನ ಜೀರ್ಣಾಂಗ ಮನಸ್ಸಿನಷ್ಟು ದೊಡ್ಡದಾಗಿರಲಿಲ್ಲವಲ್ಲ!] ಹೀಗೇ ಒಮ್ಮೆ ಮನೇಲಿ ಯಾವಾಗಲೋ ಊಟಮಾಡುವಾಗ " ನೋಡು ತಮ್ಮಾ ನಿನ್ ಹೊಟ್ಟೆ ಉಂಡುಂಡು ಮೂಗು ನೋಡ್ತಾ ಇದೆ " ಎಂದು ಚಿಕ್ಕಪ್ಪ ಗೇಲಿಮಾಡಿದ್ದರು. ನಾನು ಹೌದಿರಬೇಕೆಂದು ಊಟ ನಿಲ್ಲಿಸಿ ಕೈತೊಳೆದಿದ್ದೆ. ಹೊಟ್ಟೆ ಭರ್ತಿಯಾದಾಗ ಅದು ಮುಮ್ಮುಖವಾಗಿ ನಿಂತಾಗ ನಮ್ಮ ಮೂಗನ್ನು ದಿಟ್ಟಿಸಿದಂತೇ ಕಾಣುವುದಿಲ್ಲವೇ ? ಬೇಕಾದ್ರೆ ನೀವೇ ನೋಡ್ಕೊಳಿ. ಒಮ್ಮೆ ಪುರೋಹಿತರೊಬ್ಬರು ಸಪ್ತಶತೀ ಪಾರಾಯಣಕ್ಕೆ ನಮ್ಮನೆಗೆ ಬಂದಿದ್ದರು. ಅವರು ಕಾಯಂ ಬರುವವರೇ ಆಗಿರುವುದರಿಂದ ನಂಗೆ ಅವರಲ್ಲಿ ಸಲುಗೆಯೂ ಇತ್ತು. ಅಂದು ಪೂಜೆಯೂ ಮುಗಿದು ಊಟಕ್ಕೆ ಕುಳಿತಾಗ ಪುರೋಹಿತರು ಪಾಯಸವನ್ನು ಉಣ್ಣುತ್ತಿದ್ದರು. ಚಿಕ್ಕಪ್ಪ ಹೇಳಿದ ಆ ಮಾತು ನಂಗೆ ನೆನಪಿಗೆ ಬಂದು " ನೋಡು ಭಟ್ಟರ [ಪುರೋಹಿತರ] ಹೊಟ್ಟೆ ಉಂಡುಂಡು ಮೂಗು ನೋಡ್ತಾ ಇದೆ " ಎಂದುಬಿಟ್ಟೆನಂತೆ! ಚಿಕ್ಕಪ್ಪ ನನ್ನಮೇಲೆ ಪ್ರಯೋಗಿಸಿದ್ದನ್ನು ನಾನು ಪುರೋಹಿತರಮೇಲೆ ಪ್ರಯೋಗಿಸಿಬಿಟ್ಟಿದ್ದೆ ಅಂತ ಕಾಣುತ್ತೆ! ಪಾಪ ಆ ಬಡ ಪುರೋಹಿತರ ಸ್ಥಿತಿ ಏನಾಗಿರಬೇಡ !

ಮಳೆಗಾಲದ ಕೆಲವು ದಿನಗಳಲ್ಲಿ ಭಾನುವಾರ ಬಂದಾಗ ಹೊಸದಾಗಿ ಮೇಯಲು ಸಿದ್ಧವಾಗಿ ನಿಂತ ಆಕಳ ಎಳೆಗರುಗಳನ್ನು ಮೇಯುವ ತರಬೇತಿ ನೀಡಲು ದೇವರಮಕ್ಕಿ ಗದ್ದೆಗೆ ಕೊಂಡೊಯ್ಯುತ್ತಿದ್ದೆವು. ಅಲ್ಲಿ ನಮ್ಮದೇ ರಾಜ್ಯ! ಗೂಟಕ್ಕೆ ಕರುಗಳನ್ನು ಕಟ್ಟಿಬಿಟ್ಟರೆ ಆಮೇಲೆ ಆಡುವುದು ಹೂಡುವುದು ಮರವೇರುವುದು ಮರಕೋತಿಯಾಡುವುದು ಹೀಗೇ ಅಂದಿನ ದಿನಚರಿ. ಊಟ-ತಿಂಡಿ ಬೇಕಾಗಿಯೇ ಇರಲಿಲ್ಲ. ನಮಗೆಲ್ಲಾ ನಮ್ ಮಾಸ್ತರು ಹೇಳಿಕೊಟ್ಟಿದ್ದು

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ

-- ಅಂದು ಅದು ಕುವೆಂಪುರವರ ರಚನೆ ಎಂಬುದು ನಮಗೆ ಮಾಸ್ತರು ಹೇಳಿದ್ದೇ ಬಿಟ್ಟರೆ ಕುವೆಂಪು ಯಾರು ಅವರು ಇದ್ದಕ್ಕಿದ್ದಲ್ಲೇ ಅದೆಲ್ಲಾ ಯಾಕೆ ಬರೆದರು-ಆ ಬಗ್ಗೆ ಜಾಸ್ತಿ ಮಂಡೆಬಿಸಿಮಾಡಿಕೊಂಡ ಜನವಲ್ಲ ನಾವು! ಕೆಲವೊಮ್ಮೆ ’ಮೊರೆವ ತೊರೆಯೆಡೆಯಲ್ಲಿ’ ಇರುವುದು ’ಮೆರೆವ ತೊರೆಯೆಡೆಯಲ್ಲಿ’ ಅಂತಾಗಿಬಿಟ್ಟು ಅದನ್ನೇ ಕಂಠಪಾಠಮಾಡುತ್ತಿದ್ದೆವು. ಅರ್ಥವನ್ನಂತೂ ಮಾಸ್ತರು ಬಿಡಿಸಿ ಹೇಳಿದ್ದರು. ಹೀಗಾಗಿ ಹಾಡೇನ್ ಕೇಳ್ತೀರಿ? ನಾವಾಯ್ತು ಮತ್ತೆ ನಮ್ಮ ಮಾಸ್ತರು, ಅಪರೂಪಕ್ಕೆ ಬರುವ ಇನೇಶ್ ಭಟ್ಟರು! ನಮ್ಮೂರಕಡೆ ’ಭಟ್ಟ’ ಎನ್ನುವ ಹೆಸರು ಧಾರಾಳವಾಗಿ ಸಿಗುವುದರಿಂದಲೂ ’ಇನ್ಸ್‍ಪೆಕ್ಟರ್’ ಎಂಬೆಲ್ಲಾ ಶಬ್ದವನ್ನು ಉಚ್ಚರಿಸುವುದು ಸರಿಯಾಗಿ ಗೊತ್ತಿಲ್ಲದ್ದರಿಂದಲೂ ನಾವು ಅಪರೂಪಕ್ಕೆ ಶಾಲೆಗೆ ಆಗಮಿಸುವ ಆ ಅತಿಥಿಯನ್ನು ಭಟ್ಟರುಗಳ ಸಾಲಿಗೇ ಸೇರಿಸಿಕೊಂಡು ’ಇನೇಶ್ ಭಟ್ಟ’ರನ್ನಾಗಿಸಿಬಿಟ್ಟಿದ್ದೆವು !

ಅಷ್ಟೇ ಏಕೆ ದೇವಸ್ಥಾನಗಳಿಗೆ ಹೋದರೆ ಶ್ಲೋಕಗಳನ್ನು ಹೇಳಿ ನಮಸ್ಕರಿಸಬೇಕು ಎಂದು ಹಿರಿಯರು ಆಜ್ಞಾಪಿಸಿದ್ದರು. ನಮ್ಮೊಳಗೊಬ್ಬ ಮಾಬ್ಲೇಶ್ವರ. ದೇವಸ್ಥಾನಕ್ಕೆ ಹೋದಾಗ ಅಕಸ್ಮಾತ್ ಅವನನ್ನು ಕಂಡರೆ ನಗುಬರುತ್ತಿತ್ತು, ಯಾಕೆ ಗೊತ್ತೇ ’ ಶಾಂತಾಕಾರಂ ಭುಜಗ ಶಯನಂ ’ಎಂಬ ಶ್ಲೋಕವನ್ನು ಹೇಳುವಾಗ ಎಲ್ಲಿ ತಪ್ಪಿಹೋಗುತ್ತದೋ ಎಂದು ಅತೀ ಗಡಿಬಿಡಿ ಮಾಡಿಕೊಂಡು ಮನದ ಆ ಗೋಜಲಿನಲ್ಲಿ ’ಶಾಂತಾಕಾರಂ ಗಜಭುಜ ಶಯನಂ ’ ಎಂದು ಆತ ಹೇಳುವುದು ಸರ್ವೇ ಸಾಮಾನ್ಯವಾಗಿತ್ತು. ದೇವಸ್ಥಾನಗಳಲ್ಲಿ ಊರ ಹಿರಿಯರು ಕೆಲವು ಮರಾಠಿ ಭಕ್ತಿಗೀತೆಗಳನ್ನೂ ಮೀರಾ ಭಜನೆಗಳನ್ನೂ ಹಾಡುತ್ತಿದ್ದರು. ಸಮೂಹಗಾನವಾದ ಭಜನೆಗಳಲ್ಲಿ ನಾವೂ ಭಾಗವಹಿಸುತ್ತಿದ್ದೆವು. ಹಾಡಿನ ಚರಣಗಳು ಬರದೇ ಇದ್ದರೆ ಮಿಕ್ಕುಳಿದವರು ಹಾಡುವಾಗ ಬಾಯಾಡಿಸುತ್ತಾ ಇದ್ದು ಕೊನೇ ಶಬ್ದವನ್ನು ನೆನಪಿಟ್ಟು ಅವರಿಗಿಂತಾ ಗಟ್ಟಿ ಧ್ವನಿಯಲ್ಲಿ ಜೋರಾಗಿ ಹಾಡುತ್ತಿದ್ದೆವು! ಹೀಗಾಗಿ ನಮಗೂ ಮರಾಠಿ ಹಾಡುಗಳು ಬರುತ್ತಿದ್ದವು ಅಂತ ಜನ ಅಂದುಕೊಂಡಿರಲೂ ಸಾಕು!

ಮನವೆಂಬ ಕೆದಕೂಪವನ್ನು ಕೆದಕಿದರೆ, ನೆನೆದರೆ ಸಾವಿರ ಸಾವಿರ ಘಟನೆಗಳು ಸಾಲಾಗಿ ಹೊರಬರುತ್ತವೆ. ಯಾವುದು ನಿಮಗೆ ಪಥ್ಯವೋ ಯಾವುದು ಅಪಥ್ಯವೋ ಹಂಸಕ್ಷೀರ ನ್ಯಾಯದಿಂದ ಸ್ವೀಕರಿಸಲು ನಿಮ್ಮಲ್ಲೇ ಕೋರಿ ಪ್ರಥಮೇಕಾದಶಿ ಹಬ್ಬದ ಆಚರಣೆಯ ನೆನಹಿನಲ್ಲಿ ಇಂದು ನಿನ್ನೆ ನಡೆಸಿದ ಈ ನನ್ನ ರಾಮಾಯಣಕ್ಕೆ ಸದ್ಯಕ್ಕೆ ಮಂಗಳ ಹಾಡುತ್ತಿದ್ದೇನೆ, ನಮಸ್ಕಾರ.

Sunday, July 10, 2011

ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು...



ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು...

[ಭಾಗ-೧]
ಮಳೆಗಾಲವೆಂದರೆ ಕರಾವಳಿ ಜಿಲ್ಲೆಗಳಲ್ಲಿ ಸೂರ್ಯದರ್ಶನ ಅಪರೂಪ. ಧೋ ಗುಟ್ಟಿ ಸುರಿವ ಮುಸಲಧಾರೆ, ಕೆಲವೊಮ್ಮೆ ವಿಪರೀತ ಗಾಳಿ, ಅತಿಯಾದ ಗುಡುಗು-ಮಿಂಚು, ಸಿಡಿಲಿನ ಅಬ್ಬರ. ತಾವೇನೂ ಕಮ್ಮಿ ಇಲ್ಲಾ ಎನ್ನುವಂತೇ ಕೆರೆಗಳಲ್ಲಿ ಬಂಡೆಯ ಸಂದುಗಳಲ್ಲಿ ಅಡಗಿ ಕುಳಿತ ಬೃಹತ್ ಗಾತ್ರದ ಗೂಕರ ಕಪ್ಪೆಗಳ ಚಿತ್ರ ವಿಚಿತ್ರ ಕೂಗು, ಮರಿಕಪ್ಪೆಗಳ ಗೊಟ್ಗೊಟ್ ಗೊಟರ್ ಎಂಬ ಸದ್ದು, ದಿಬ್ಬಣಕ್ಕೆ ಅವಸರದಿಂದ ಓಡಿ ಸೇರುವಂತೇ ಕೊಂಬೆತ್ತಿ ಓಡುವ ಚಿಕ್ಕ ಚಿಕ್ಕ ಸಾವಿರಾರು ಏಡಿಮರಿಗಳು. ನಾಮುಂದು ತಾಮುಂದು ಎಂದು ಸಾಗುವ ಶತಪದಿ [ಹಣ್ಣಡಕೆ ಪಚ್ಹುಳು], ಸಹಸ್ರಪದಿ[ಚೋರಟೆ], ಪಡಚೆ ಹುಳು ಒಂದೆಡೆಗಾದರೆ ನಿಧಾನವೇ ಪ್ರಧಾನವೆನ್ನುವ ಹಿಸ್ಗ, ಮಣ್ಣಲ್ಲಿ ಉರುಳಾಡುವ ಎರೆಹುಳು ಹೀಗೇ ಈ ಪಟ್ಟಿ ಊದ್ದ ಬೆಳೆಯುತ್ತದೆ.

ಉಳಿದ ಕಾಲದಲ್ಲಿ ಎಂದೆಂದೂ ಕಾಣದಂತಹ ಜೀವಸಂಕುಲಗಳು ಜಾತ್ರೆ ಸೇರಿದಂತೇ ಒಮ್ಮೆಲೇ ಸಂತಾನೋತ್ಫತ್ತಿ ನಡೆಸುವ ಈ ಕಾಲದಲ್ಲಿ ಕಪ್ಪುಗಟ್ಟಿದ ಮೋಡಗಳ ಸಂದಿನಿಂದ ಅಪರೂಪಕ್ಕೊಮ್ಮೆ ಸೂರ್ಯ ಅಂಚೆಯವನ ರೀತಿ ಬಂದುಹೋಗುತ್ತಾನೆ. ಗದ್ದೆ-ತೋಟಗಳಲ್ಲಿ ಕೆಲಸ ಬಹಳವೇ ನಡೆಯುತ್ತಿದ್ದರೂ ಸುರಿವ ಮಳೆ ಕೆಲವೊಮ್ಮೆ ಏನನ್ನೂ ಮಾಡಗೊಡದೆ ರಜಾ ಸಾರಿಬಿಡುತ್ತದೆ! ಇಂತಹ ದಿನಗಳಲ್ಲಿ ಹಿಂದೆ ಉಪಜೀವಿತಕ್ಕೆ ಬೇಕಾದ ಸಾಮಾನುಗಳನ್ನು ಮಧ್ಯೆ ಮಧ್ಯೆ ತಾಲೂಕು ಪ್ರದೇಶಕ್ಕೆ ಹೋಗಿ ತರುವುದಾಗುತ್ತಿರಲಿಲ್ಲ. ಇಂದಿನಂತೇ ದೂರವಾಣಿ ಸೌಲಭ್ಯವಾಗಲೀ ವಾಹನ ಸೌಕರ್ಯವಾಗಲೀ ಇರದ ಆ ಕಾಲದಲ್ಲಿ ಮಳೆಗಾಲದ ೬ ತಿಂಗಳಿಗೆ [ನೆನಪಿಡಿ ಅಲ್ಲಿ ಮಳೆಗಾಲಕ್ಕೆ ತೆರೆ ಬೀಳುವುದು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ] ಸಾಕಾಗುವಷ್ಟು ಕಿರಾಣಿ ಸಾಮಾನುಗಳನ್ನು ಮನೆಗಳಲ್ಲೇ ದಾಸ್ತಾನುಮಾಡಿಕೊಳ್ಳುತ್ತಿದ್ದರು. ಉಳ್ಳವರು ಹೀಗೆ ಮಾಡಿದರೆ ಇರದಿದ್ದವರು ಉಳ್ಳವರ ಮನೆಗಳಲ್ಲಿ ಕಡಾ ಪಡೆದೋ ಭಕ್ಷೀಸು ಪಡೆದೋ ಅಥವಾ ಸಹಕಾರ ಅಂತ ಪಡೆದೋ ಜೀವನ ನಡೆಸುತ್ತಿದ್ದರು.

ಆ ೬ ತಿಂಗಳ ಸಮಯದಲ್ಲಿ ಯಾವುದೇ ಮನೋರಂಜನೆ ಕಾರ್ಯಕ್ರಮ ಇರುತ್ತಿರಲಿಲ್ಲ. ಇಂದಿನಹಾಗೇ ಚಲನಚಿತ್ರ ಮಂದಿರಗಳಾಗಲೀ ರಂಗಮಂದಿರಗಳಾಗಲೀ ಇದ್ದಿರಲಿಲ್ಲವಾಗಿ ಮನೋರಂಜನೆಗೆ ಅಂದು ಬೇರಾವ ಮಾರ್ಗವೂ ಇರಲಿಲ್ಲ. ಹಗಲೆಲ್ಲಾ ದುಡಿಯುವ ಮನಸ್ಸಿಗೆ ಬೇಸರವಾಗುವುದು ಸಾಯಂಕಾಲದಲ್ಲಿ. ಸಂಜೆ ೬ ಗಂಟೆಗೆಲ್ಲಾ ಕತ್ತಲಾವರಿಸಿ ಬಿಟ್ಟರೆ ಮಾರನೇದಿನ ಬೆಳಿಗ್ಗೆ ೮ಗಂಟೆಗೇ ಸ್ವಲ್ಪ ಬೆಳಕು ಅಂತ ಕಾಣುವುದು! ಆ ರಾತ್ರಿಗಳಲ್ಲಿ ವಿದ್ಯುದ್ದೀಪಗಳಿರಲಿಲ್ಲ. ಹರಳೆಣ್ಣೆಯ ದೀಪಗಳು, ವಿಶೇಷವಿದ್ದರೆ ಅವುಗಳ ದೊಂದಿಗಳು-ದೀವಟಿಗೆಗಳು, ಹಿಲಾಲು-ಜುಂಜಿ, ಓಡಾಡಲು ಒಣಗಿದ ತೆಂಗಿನಗರಿಗಳನ್ನು ಕತ್ತರಿಸಿ ಮಡಿಸಿದ ಸೂಡಿ, ಅಡಕೆದಬ್ಬೆಗಳನ್ನು ಸಣ್ಣಗೆ ಸಿಗಿದು ಕಟ್ಟಿದ ಹಗರಸೂಡಿ ಇತ್ಯಾದಿಗಳೇ ಪರಿಕರಗಳಿದ್ದವು. ಕೆಲವೊಮ್ಮೆ ಒಬ್ಬರ ಮುಖ ಇನ್ನೊಬ್ಬರಿಗೆ ಸರಿಯಾಗಿ ಕಾಣದಂತಹ ಮಂದ ದೀಪಗಳಲ್ಲಿ ಕಾಲಹಾಕಬೇಕಾಗಿ ಬರುತ್ತಿತ್ತು. ಕತ್ತಲೆಯ ನೀರವವನ್ನು ಬಗೆಬಗೆದು ಕಿವಿಗೆ ಎಲ್ಲಿಹೋದರೂ ಅದೇ ಸದ್ದು ಎನ್ನುವಂತೇ ಒಂದೇ ನೇರಕ್ಕೆ ಕೂಗುವ ಜೀರುಂಡೆಗಳು ಮಾತ್ರ ತಮ್ಮತನವನ್ನು ಸಂಪೂರ್ಣ ಮೆರೆಯುತ್ತಿದ್ದವು. ಕಾಯಿಲೆಯೋ ಕಸಾಲೆಯೋ ಆದರಂತೂ ಆಗುವ ಬವಣೆ ಹೇಳತೀರ. ನಡೆಯಲಾರದೇ ನಿತ್ರಾಣನಾದ/ಳಾದ ರೋಗಿಯನ್ನು ಕಂಬಳಿಯೊಂದರಲ್ಲಿ ಮಲಗಿಸಿ ಅದನ್ನು ಒನಕೆಗೆ ಕಟ್ಟಿ ಒನಕೆಯ ಎರಡೂ ತುದಿಗಳಲ್ಲಿ ಒಬ್ಬೊಬ್ಬರೂ ಹೊತ್ತುಕೊಂಡು ವೈದ್ಯರಲ್ಲಿಗೆ ಹೋಗಬೇಕಾಗುತ್ತಿತ್ತು.

ಹಳ್ಳಿಗೊಬ್ಬ ವೈದ್ಯ ಎಂತೆಲ್ಲಾ ಇರಲಿಲ್ಲ. ಪರಂಪರಾಗತ ನಾಟಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಎಲ್ಲಾ ಕಾಯಿಲೆಗೂ ಒಬ್ಬರೇ ವೈದ್ಯರೆಂದೇನೂ ಇರಲಿಲ್ಲ. ಒಂದೊಂದು ಕಾಯಿಲೆಗೆ ಒಬ್ಬೊಬ್ಬ ವೈದ್ಯರ ಹೆಸರು ಕೇಳಿಬರುತ್ತಿತ್ತು. ಯಾವುದೇ ಮಾಧ್ಯಮ ಸರಿಯಾಗಿರದ ಕಾರಣ ಇದು ಕೇವಲ ಬಾಯಿಂದ ಬಾಯಿಗೆ ಹಬ್ಬುವ ಅನುಭವಿಗಳ ಸುದ್ದಿ ಮೂಲವನ್ನು ಅವಲಂಬಿಸಿತ್ತು. ಇರುವ ವೈದ್ಯರು ಬೇರಾವುದೋ ಕಾರ್ಯವಶಾತ್ ಬೇರೆಲ್ಲಿಗೋ ಹೋಗಿದ್ದರೆ ಅವರು ಬರುವ ದಿನದ ವರೆಗೂ ಕಾಯುವ ಅನಿವಾರ್ಯತೆಯೂ ಇರುತ್ತಿತ್ತು. ನಾಡಿ ಪರೀಕ್ಷೆಯಲ್ಲಿ ನಿಪುಣರಾಗಿರುತ್ತಿದ್ದ ವೈದ್ಯರುಗಳು ಸಾಕಷ್ಟು ಮೂಲಿಕೆಗಳನ್ನು ಕಂಡುಕೊಂಡಿದ್ದರು. ಕಾಡು ಮನೆಗಳ ಮಗ್ಗುಲವರೆಗೂ ಇರುತ್ತಿತ್ತಾಗಿ ಗಿಡಮೂಲಿಕೆಗಳಿಗೆ ಬರಗಾಲವಿರಲಿಲ್ಲ. ’ಇದ್ರೆ ಬೇರಿನ ಮದ್ದು ಸತ್ರೆ ಕುಂಟೆ ಮದ್ದು ’ ಎಂಬುದು ಅಲ್ಲಿನ ಒಂದು ಹಳೇ ಗಾದೆ! ಅದರರ್ಥ ಜೀವ ಇದ್ದರೆ ವೈದ್ಯರು ಕೊಡುವ ನಾರು-ಬೇರುಗಳ ಚಿಕಿತ್ಸೆ, ಜೀವ ಹೋದರೆ ಮರದ ಕುಂಟೆಗಳನ್ನು ಜೋಡಿಸಿ ಸುಡುವುದು ಎಂಬುದು.

ಮಳೆ ಜಾಸ್ತಿಯಾಗಲೀ ಕಮ್ಮಿಯಾಗಲೀ ಅದಕ್ಕೆಲ್ಲಾ ಜನ ದೇವರನ್ನೇ ಮೊರೆಹೋಗುತ್ತಿದ್ದರು. ಇಂದಿಗೂ ಈ ವಿಷಯ ಜನರ ನಿಯಂತ್ರಣದಲ್ಲಿಲ್ಲ ಎಂಬುದನ್ನು ಮರೆಯುವ ಹಾಗಿಲ್ಲವಲ್ಲ! ಸ್ಥಾನಿಕವಾಗಿ ಅಲ್ಲಲ್ಲಿ ಆಯಾಯ ದೇವರುಗಳಿಗೆ ಕೆಲವು ರೀತಿರಿವಾಜುಗಳನ್ನು ನಡೆಸಿದರೆ ದೇವರು ಪ್ರಸನ್ನನಾಗುತ್ತಾನೆ ಅಥವಾ ಜನರ ಸಂಕಷ್ಟವನ್ನು ಕಂಡು ಸ್ಪಂದಿಸುತ್ತಾನೆ ಎನ್ನುವ ಭಾವನೆ ಅಂದಿನ ಅಲ್ಲಿನ ಜನಾಂಗಗಳಲ್ಲಿ ಸದಾ ಇತ್ತು. ಉದಾಹರಣೆಗೆ ಮಳೆ ಕಮ್ಮಿಯಾದರೆ ಧಾರೇಶ್ವರ ದೇವಸ್ಥಾನದ ಪುಷ್ಕರಣಿಯಲ್ಲಿ ಮುಳುಗಿರುವ ಗಣಪನ ವಿಗ್ರಹವನ್ನು ಮೇಲಕ್ಕೆ ತೆಗೆದು ಇಡೀ ವಿಗ್ರಹಕ್ಕೂ ಕಾಳು ಮೆಣಸಿನ[ಅರೆದು ತಯಾರಿಸಿದ] ಲೇಪನ ಮಾಡಿ ಹೊರಗಡೆ ಬಿಸಿಲಲ್ಲಿ ಕೂರಿಸುತ್ತಿದ್ದರಂತೆ. ಹೆಚ್ಚಾಗಿ ಎಲ್ಲಿ ನೋಡಿದರೂ ಜನಪ್ರಿಯನಾಗಿ ಜನಪರನಾಗಿ ಇರುವ ದೇವರೆನಿಸಿಕೊಂಡ ಗಣಪ ಜನ ಮುನಿದಿದ್ದಾರೆ ಎಂದು ತಿಳಿದು ಕೇವಲ ದಿನವೊಪ್ಪತ್ತಿನಲ್ಲಿ ಅಸಾಧಾರಣ ಮಳೆಸುರಿಸಿದ ದಾಖಲೆಗಳು ಅಲ್ಲಿ ಸಿಗುತ್ತವೆ! [ಇನ್ನುಳಿದಂತೇ ಈಶ್ವರನಿಗೆ ರುದ್ರಾಭಿಷೇಕ, ಗಣಪನಿಗೆ ಕಡುಬು ನೈವೇದ್ಯವೇ ಮೊದಲಾದ ಹಲವು ಸೇವೆಗಳು ನಡೆಯುತ್ತಿದ್ದವು.] ಮಳೆ ಬಂದಮೇಲೆ ಗಣಪನಲ್ಲಿ ಕ್ಷಮೆಕೋರಿ ಪಶ್ಚಾತ್ತಾಪ ಪಟ್ಟು ಪ್ರಾಯಶ್ಚಿತ್ತ ಪೂಜೆ ನೆರವೇರಿಸಿ ಪುನಃ ಆತನನ್ನು ಸ್ವಸ್ಥಾನಕ್ಕೆ ಮರಳಿ ಕಳುಹಿಸುವ ಪದ್ಧತಿಯಿತ್ತು. ಇದು ಕಾಕತಾಳೀಯವೋ ಮೂಢನಂಬಿಕೆಯೋ ನೀವೇನೇ ಅಂದರೂ ಇವತ್ತಿಗೂ ಇದು ಆಗಾಗ ಮರುಕಳಿಸುವ ಸತ್ಯ!

ಮಳೆ ಸರಿಯಾಗಿ ಬಿದ್ದ ದಿನಗಳಲ್ಲಿ ಎಲ್ಲೆಲ್ಲೂ ಜಾರುವ ಪಾಚಿಗಟ್ಟಿದ ನೆಲದಮೇಲೇ ನಡೆಯಬೇಕಾಗುತ್ತಿತ್ತು. ಮನೆಯ ಅಂಗಳಗಳಲ್ಲಿ ಅಡಕೆ ದಬ್ಬೆಗಳ ಸಂಕಗಳನ್ನು ಹಾಕಿಕೊಳ್ಳುತ್ತಿದ್ದರು. ಆಮೇಲಾಮೇಲೆ ಸುಧಾರಿಸಿದವರು ಕಲ್ಲುಹಾಸನ್ನು ಮಾಡಿದರಾದರೂ ಜಾರುವಿಕೆ ಹಾಗೇ ಇತ್ತು. ಜಾರಿಬಿದ್ದ ವ್ಯಕ್ತಿಯನ್ನು ತಕ್ಷಣ ಕಂಡರೆ " ಅಗೋ ಗಂಟು ಹೆಕ್ಕಿದ " " ಅಲ್ನೋಡು ಗಂಟು ಹೆಕ್ಕಿದ್ಲು " ಎಂದು ತಮಾಷೆಮಾಡುವ ಪರಿಪಾಟವಿತ್ತು. ಆಗೆಲ್ಲಾ ಮದುವೆಗಳು ಎಂದರೆ ಸಾಮಾನ್ಯವಾಗಿ ಕಾರ್ತೀಕದಲ್ಲಿ ತುಳಸೀ ವಿವಾಹ ಆದನಂತರ ಸರಿಸುಮಾರು ಜೂನ್ ವರೆಗೆ ನಡೆಯುತ್ತಿದ್ದವು. ಹೊಸದಾಗಿ ಮದುವೆಯಾದ ಜೋಡಿ ಅಳಿಯನ[ಭೀಮನ] ಅಮಾವಾಸ್ಯೆಗೆ ಮಾವನ ಮನೆಗೆ ಬರುವ ಸಂಪ್ರದಾಯವಿತ್ತು. ಈ ಅಮಾವಾಸ್ಯೆಗೆ ಕೆಲವುಕಡೆ ಕೊಡೆ ಅಮಾಸೆ ಎನ್ನುವುದೂ ಇದೆ. ರಾಯರು ಮಾವನಮನೆಗೆ ಬರುವಾಗ ಕೊಡೆಹಿಡಿದು ಬರುತ್ತಾರಲ್ಲಾ ಅದಕ್ಕೇ ಈ ಅಮಾಸೆ ಕೊಡೆ ಅಮಾಸೆ! ಈಗೆಲ್ಲಾ ರಾಯರೂ ರಾಯರ ಮಾವನೂ ಪಟ್ಟಣ ಸೇರಿಬಿಟ್ಟಿದ್ದಾರೆ, ಹಾಗೂ ಹಳ್ಳಿಯಲ್ಲೇ ಮಾವನಮನೆ ಇದ್ದರೆ ರಾಯರು ಕಾರಲ್ಲೋ ಬೈಕಿನಲ್ಲೋ ಬರುತ್ತಾರೆ ಬಿಡಿ; ಕೊಡೆ ಬೇಕಾಗಿಯೇ ಇಲ್ಲ.

ಎಣ್ಣೆ ಬತ್ತಿ ದೀಪದ ಆ ಕಾಲದಲ್ಲಿ ಜನಮನದಲ್ಲಿ ಭಯಭೀತಿಗಳೂ ಸಾಕಷ್ಟಿದ್ದವು. ಅದರಲ್ಲಂತೂ ಮಳೆಗಾಲದಲ್ಲೆಲ್ಲಾ ಯಾರಾದರೂ ಸತ್ತುಬಿಟ್ಟರೆ ತಿಂಗಳುಗಳ ಕಾಲ ಆ ಪ್ರದೇಶದ ಹೆಂಗಸರು, ಮಕ್ಕಳು, ಕೆಲವು ಪುಕ್ಕಲು ಗಂಡಸರು ತುಂಬಾ ಹೆದರಿಕೊಳ್ಳುತ್ತಿದ್ದರು. ಮನುಷ್ಯ ತನ್ನನ್ನು ಸರಿಯಾಗಿ ತಾನು ಅರಿಯದೇ ಹೊದರೆ ಸಾವಿನ ಭೀತಿ ಅತಿಯಾಗಿ ಆತನನ್ನು ಮುತ್ತಿಕೊಳ್ಳುತ್ತದೆ. ಯಾರೋ ಬಂದು ಏನನ್ನೋ ಮಾಡಿ ತಮ್ಮನ್ನು ಕೊಂದುಬಿಟ್ಟರೆ ಎಂಬ ಅಂಜಿಕೆ ಸದಾ ಬೆನ್ನಟ್ಟಿ ಬರುತ್ತದೆ. ಆ ಕಾಲಘಟ್ಟದಲ್ಲಿ ಹಲವರಿಗೆ ಇದರ ಪರಿವೆಯೇ ಇರಲಿಲ್ಲ. ಸಾವು ಅನಿವಾರ್ಯ ಎಂಬುದನ್ನು ಅವರು ಮರೆತಿದ್ದರೋ ಏನೋ ಅಂತೂ ಸಾವನ್ನು ಆದಷ್ಟೂ ಮುಂದೂಡಲು ಇಷ್ಟಪಡುತ್ತಿದ್ದರು. ಶುದ್ಧ ಗಾಳಿ, ನೀರು, ನೈಸರ್ಗಿಕವಾಗಿ ಬೆಳೆದ ಪೌಷ್ಟಿಕ ಆಹಾರಪದಾರ್ಥಗಳ ಬಳಕೆ ಇದ್ದುದರಿಂದ ರೋಗಗಳು ಇವತ್ತಿನಷ್ಟು ಸಾಮಾನ್ಯವಾಗಿರಲಿಲ್ಲ. ಎಲ್ಲರಿಗೂ ಮಧುಮೇಹವಾಗಲೀ ಅಧಿಕ ರಕ್ತದೊತ್ತಡವಾಗಲೀ ಬರುವುದು ಸಹಜವೆಂಬ ಸ್ಥಿತಿ ಇರಲಿಲ್ಲ. ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗುವ ಕಾಯಿಲೆ ಬರುವುದು ಅಪರೂಪವಾಗಿರುತ್ತಿತ್ತು. ಒಂದೊಮ್ಮೆ ಅಂತಹ ಸ್ಥಿತಿ ಬಂದರೆ ಆಗ ವ್ಯಕ್ತಿ ಸತ್ತ ಅಂತಲೇ ಲೆಕ್ಕ; ಯಾಕೆಂದರೆ ಶಸ್ತ್ರ ಚಿಕಿತ್ಸೆಯೆಲ್ಲಾ ಅಂದಿಗೆ ಅಲ್ಲಿ ಲಭ್ಯವಿರಲಿಲ್ಲ.

ಭಯ, ಆತಂಕ, ದುಗುಡ, ಏಕತಾನತೆಯಿಂದ ಬೇಸರಗೊಳ್ಳುವ ಮನಸ್ಸುಗಳನ್ನು ಮುದಗೊಳಿಸಲು ಅಂದಿನ ಜನರಲ್ಲಿಯೇ ಪಾರ್ತಿ ಸುಬ್ಬ ಎಂಬೊಬ್ಬಾತ ಹೆಜ್ಜೆ ಮುಂದಿಟ್ಟು ಕಲೆಯೊಂದನ್ನು ಆಲೋಚಿಸಿ, ಸೃಜಿಸಿ, ಕರಗತಮಾಡಿಕೊಂಡ -ಪ್ರಚುರಪಡಿಸಿದ. ಆ ಕಲೆಯೇ ಮುಂದೆ ಯಕ್ಷಗಾನವೆಂದು ಪ್ರಸಿದ್ಧ ಸಮಗ್ರ ಕಲಾಪ್ರಾಕಾರವಾಗಿ ಗೋಚರಿಸಿತು. ಅಲ್ಲಲ್ಲಿ ಕೆಲವು ಕವಿಗಳೂ ಇದ್ದರು-ಅವರು ತಾಡವೋಲೆಗಳಲ್ಲಿ ರಾಮಾಯಣ-ಮಹಾಭಾರತಗಳು ಮತ್ತು ಪುರಾಣಗಳನ್ನು ಅವಲಂಬಿಸಿ ಕೃತಿಗಳನ್ನು ರಚಿಸುತ್ತಿದ್ದರು. ಅಂತಹ ಕವಿಗಳಲ್ಲಿ ಒಬ್ಬನಾದ ಯಾಣದ ಬತ್ತಲೇಶ್ವರ ರಚಿಸಿದ ’ಬತ್ತಲೇಶ್ವರ ರಾಮಾಯಣ’ ನನ್ನ ನೋಡುವಿಕೆಗೆ ಸಿಕ್ಕಿತ್ತು. ತಿಗಳಾರೀ ಲಿಪಿಯಲ್ಲಿ ರಚಯಿತವಾದ ಆ ಹೊತ್ತಗೆಯನ್ನು ಯಾರದೋ ಕೃಪೆಯಿಂದ ಕಣ್ತುಂಬಿಕೊಳ್ಳುವುದು ಸಾಧ್ಯವಾಯಿತು. ನನ್ನ ಪೂರ್ವಜರಲ್ಲೂ ಒಬ್ಬಾತ ಕವಿಯಾಗಿದ್ದ ಎಂಬುದು ನಮ್ಮನೆಯಲ್ಲೇ ಇರುವ ತಾಡವೋಲೆಯ ರಾಮಾಯಣದಿಂದ ತಿಳಿಯುತ್ತದೆ. ನನ್ನ ಅಜ್ಜ ಪ್ರತೀ ನವರಾತ್ರಿಯಲ್ಲಿ ಆ ಪುಸ್ತಕವನ್ನು ಪೂಜಿಸಿ, ಶಾರದೆಯಾಗಿ ಪೂಜೆಗೊಂಡ ಆ ಪುಸ್ತಕವನ್ನು ಶಾರದೆಯನ್ನು ವಿಸರ್ಜಿಸಿದ ವಿಜಯದಶಮಿಯ ದಿನ ಓದುತ್ತಿದ್ದರು. ಶಾರದೆಯನ್ನು ವಿಸರ್ಜಿಸಿದ ದಿನ ಚಿಕ್ಕಮಕ್ಕಳಿದ್ದರೆ ಅಕ್ಷರಾಭ್ಯಾಸ, ದೊಡ್ಡವರಾದರೆ ಪುಸ್ತಕಾಭ್ಯಾಸ ನಮ್ಮಲ್ಲಿನ ಕ್ರಮವಾಗಿತ್ತು. ಅಜ್ಜ ರಾಮಾಯಣವನ್ನು ರಾಗವಾಗಿ ಗಮಕದಲ್ಲಿ ಹಾಡಿಕೊಂಡು ನಮ್ಮನ್ನೆಲ್ಲಾ ಸೆಳೆಯುತಿದ್ದರು. ತಕ್ಕಮಟ್ಟಿಗಿನ ಪಾಂಡಿತ್ಯವನ್ನು ಹೊಂದಿದ್ದ ಅವರು ತಮ್ಮ ವ್ಯಾವಹಾರಿಕ ಅನುಭವಗಳನ್ನೂ ಸೇರಿಸಿ ಅರ್ಥವಿವರಣೆ ನೀಡುತ್ತಿದ್ದರು. ಈ ರೀತಿಯಿಂದಲೂ ಅಜ್ಜ ನಮಗೆಲ್ಲಾ ಗುರುವಾಗಿ ಸದಾ ಪ್ರಾತಃಸ್ಮರಣೀಯರು. ಅದರ ಆರಂಭದ ಒಕ್ಕಣೆ ಈ ರೀತಿ ಇದೆ --

ಮೇದಿನಿಪ ದಶರಥನ ಬಸುರಲಿ ರಾಮಲಕ್ಷ್ಮಣ ಭರತ ಶತ್ರುಹ....

ಹಾಗೇ ಮುಂದುವರಿದು

ಆದನೊಬ್ಬನು ಕೌಸಲೆಗೆ ಮಗನಾದನೊಬ್ಬನು ಕೈಕೆಗಿಬ್ಬರು...

....ಹೀಗೆಲ್ಲಾ ಬರುತ್ತಾ ಸಾಗುತ್ತದೆ. ಅಚ್ಚ ಹಳಗನ್ನಡ. ಅಭ್ಯಾಸಬಲದಿಂದ ಅಜ್ಜ ಇಡೀ ಆ ರಾಮಾಯಣವನ್ನು ಓದುತ್ತಿದ್ದರು.

ತಾಡವೋಲೆಯ ಪುಸ್ತಕಗಳಲ್ಲಿ ಎರಡು ಕ್ರಮ. ಒಂದು ಅಕ್ಷರಗಳನ್ನು ಯಾವುದೋ ಮರದ ರಸದಲ್ಲಿ ಬರೆದಿರುವುದು, ಇನ್ನೊಂದು ಅಕ್ಷರಗಳನ್ನು ಕೊರೆದಿರುವುದು. ನಮ್ಮನೆಯಲ್ಲಿರುವ ಪುಸ್ತಕ ಕೊರೆದು ಮೂಡಿಸಿದ ಅಕ್ಷರಗಳಿಂದಾಗಿದೆ. ಓದುವಾಗ ಅಕ್ಷರಗಳು ಸರಿಯಾಗಿ ಕಾಣಿಸಲಿ ಎಂಬ ಕಾರಣಕ್ಕೆ ಬಾಳೆಯ ಮೂತಿಯಲ್ಲಿ ಸಿಗುವ ಕುಪ್ಪಡ [ಮೂತಿಯ ಎಲೆಯಂತಹ ಒಂದು ಭಾಗ]ದ ರಸವನ್ನು ಹಾಕಿ ಉಜ್ಜುತ್ತಿದ್ದರು. ಹಾಗೆ ಮತ್ತೆ ಮತ್ತೆ ಆ ರಸವನ್ನು ಹಾಕುವುದರಿಂದ ತಾಡವೋಲೆ ಜೀರ್ಣವಾಗಿ ಹೋಗುವ ಸಂಭವನೀಯತೆ ಇರುವುದರಿಂದ ಈಗ ಆ ಪುಸ್ತಕವನ್ನು ನಮ್ಮ ಹಿರಿಯರ ಆಶೀರ್ವಾದದ ಆಸ್ತಿಯಾಗಿ ಪರಿಗಣಿಸಿ ಜೋಪಾನಮಾಡಲಾಗಿದೆ.

ಪ್ರಥಮೇಕಾದಶಿ ಎಂಬ ಹಬ್ಬದಿಂದ ಆರಂಭಗೊಳ್ಳುವ ಹಬ್ಬಗಳ ಸಾಲು ಅಲ್ಲಿನ ಜನರಿಗೆ ಸ್ವಲ್ಪ ಉತ್ತೇಜನ ನೀಡುತ್ತಿದ್ದವು. ಚಿಕ್ಕ ಆಚರಣೆಗಳನ್ನೂ ಜನ ದೊಡ್ಡ ಹಬ್ಬವನ್ನಾಗಿ ಪರಿಗಣಿಸಿ ಪರಸ್ಪರ ಹೋಗಿ-ಬಂದು ಮಾಡುವುದು ಕರೆದು-ಇರಿಸಿ ಮಾಡುವುದು ಹೀಗೇ ಸಂಬಂಧಗಳ ಬಳಕೆ ಬಹಳವಾಗಿತ್ತು. ಅಲ್ಲಲ್ಲಿ ಆ ಯಾ ಹಬ್ಬಗಳಿಗೆ ಸೇರುವ ನೆಂಟರಿಷ್ಟರು ತಮ್ಮ ಉತ್ತಮ ಸಮಯದ ಸದುಪಯೋಗಕ್ಕಾಗಿಯೂ ಮನೋರಂಜಕವಾಗಿಯೂ ಯಕ್ಷಗಾನ ತಾಳಮದ್ದಲೆಯನ್ನು ನಡೆಸುತ್ತಿದ್ದರು. ಯಕ್ಷಗಾನಕ್ಕೆ ಇನ್ನೊಂದು ಹೆಸರು ದಶಾವತಾರ ಆಟ. ಮಹಾವಿಷ್ಣುವಿನ ಹತ್ತು ಅವತಾರಗಳಲ್ಲಿ ಹರವಿಕೊಂಡ ಬಹುತೇಕ ಕಥಾಭಾಗಗಳನ್ನು ಪ್ರಸಂಗಗಳಾಗಿ ವಿಂಗಡಿಸಿ ಅಂದಿನ ಆದಿಕವಿಗಳು ತಮ್ಮ ಉತ್ತಮೋತ್ತಮ ಶೈಲಿಯಲ್ಲಿ ಭಾಮಿನಿಷಟ್ಪದಿಯೇ ಮೊದಲಾದ ಛಂದಸ್ಸುಗಳನ್ನು ಬಳಸಿ ಪ್ರಾಸಬದ್ಧವಾಗಿಯೂ ಸರ್ವಾಂಗ ಶುದ್ಧವಾಗಿಯೂ ಮತ್ತು ವ್ಯಾಕರಣ ಬದ್ಧವಾಗಿಯೂ ಬರೆದು ಲೋಕಾರ್ಪಣೆಗೈದಿದ್ದಾರೆ. ಎಷ್ಟೋ ಕವಿಗಳ ಹೆಸರುಗಳು ಇವತ್ತಿಗೆ ಜನ ಮರೆತಿದ್ದರೂ ಅವರ ಕೃತಿಗಳು ಮಾತ್ರ ಅಲ್ಲಿನ ಜನ ಮರೆಯುವ ಹಾಗೇ ಇಲ್ಲ. ಚಕ್ರವರ್ತಿ ರುಕ್ಮಾಂಗದ ಹಾಗೂ ಆತನ ಮಗ ಧರ್ಮಾಂಗದ ಪ್ರಥಮೇಕಾದಶೀ ವೃತವನ್ನು ನಡೆಸಿದ ಕಥೆಯನ್ನು ’ಧರ್ಮಾಂಗದ ದಿಗ್ವಿಜಯ’ದಲ್ಲಿ ಹೇಳಲಾಗಿದೆ. ಹಿಂದೂಸ್ಥಾನಕ್ಕೆ ಭಾರತವೆಂಬ ಹೆಸರು ತಂದುಕೊಟ್ಟ ಮಹಾನುಭಾವ ದುಶ್ಯಂತ-ಶಕುಂತಲೆಯರ ಪುತ್ರ ಚಕ್ರವರ್ತಿ ಭರತನ ಬೀಗತನವೂ ಕೂಡ ಇದೇ ಪ್ರಸಂಗದಲ್ಲಿ ನಿರೂಪಿತವಾಗಿದೆ! ಇವೆಲ್ಲಾ ಕಥೆಗಳು ನಮಗೆಲ್ಲಾ ತಿಳಿದಿದ್ದರೆ ಅದು ಯಕ್ಷಗಾನದ ಕೃಪೆ! ಆ ಹಿರಿಯ ಕವಿಗಳ ಆಶೀರ್ವಾದ.

ಜನಮನ ಸುಸಂಸ್ಕೃತವಾಗಬೇಕಾದರೆ ಉತ್ತಮ ಸಾಹಿತ್ಯಗಳನ್ನು ಓದಬೇಕು; ಅವುಗಳಲ್ಲಿರುವ ಸಾತ್ವಿಕ ಶಕ್ತಿಯನ್ನು ತಮ್ಮಲ್ಲಿ ಆವಾಹಿಸಿಕೊಳ್ಳಬೇಕು. ತಮ್ಮಲ್ಲಿನ ನ್ಯೂನತೆಗಳನ್ನು ಕಥಾಭಾಗಗಳಲ್ಲಿ ಸಿಗುವ ಸನ್ನಿವೇಶಗಳಿಗೆ ತುಲನೆಮಾಡಿಕೊಂಡು ಸರಿಪಡಿಸಿಕೊಳ್ಳಬೇಕು. ಹಿಂದಿನ ಕವಿಗಳು ಮಹಾಮಹೋಪಾಧ್ಯಾಯರಾಗಿದ್ದರು. ಇಂದಿನಂತೇ ಮೂರಕ್ಷರ ಬರೆದವರೆಲ್ಲಾ ಕವಿಗಳೋ ಸಾಹಿತಿಗಳೋ ಆಗಿಬಿಡುತ್ತಿರಲಿಲ್ಲ. ಹಿನ್ನೆಲೆಗೆ ಭಾಷೆಗಳ ತಾಯಿಯಾದ ಸಂಸ್ಕೃತದ ಪರಿಪೂರ್ಣ ಜ್ಞಾನವನ್ನು ಅವರು ಹೊಂದಿರುತ್ತಿದ್ದರು. ಆ ಭಾಷಾಪ್ರೌಢಿಮೆಯೊಡನೆ ಸನ್ನಿವೇಶಗಳ ರಸಾನುಭೂತಿಯನ್ನು ಮನಸಾ ಧರಿಸಿ ಅದನ್ನು ಕೃತಿರೂಪಕ್ಕೆ ಇಳಿಸುತ್ತಿದ್ದರು. ಹೀಗಾಗಿ ಪ್ರತಿಯೊಂದೂ ಕೃತಿ ’ಮಾಸ್ಟರ್ ಪೀಸ್’ ಆಗಿರುತ್ತಿತ್ತು ಮತ್ತು ಅದನ್ನು ಬಳಸಿದ, ಓದಿದ ವ್ಯಕ್ತಿ ಮತ್ತೆ ಮತ್ತೆ ಓದುವಂತೇ ಪ್ರಲೋಭನೆ ಉಂಟುಮಾಡುತ್ತಿತ್ತು. ಇಂದು ಎಷ್ಟೋ ಸಲ ಬೇರೇ ಬೇರೇ ಮಂತ್ರಗಳ ಜಪವನ್ನು ಮಾಡಲು ಹೇಳುವುದು ವಾಡಿಕೆ: ಅದಕ್ಕೆ ಕಾರಣವಿಷ್ಟೇ-- ಅಷ್ಟು ಹೊತ್ತಾದರೂ ಮನಸ್ಸು ಏಕಾಗ್ರತೆಯನ್ನು ಸಾಧಿಸಲಿ, ಒಳ್ಳೆಯದನ್ನು ಬಯಸಲಿ ಎಂಬುದು. ಅದೇ ರೀತಿ ಯಕ್ಷಗಾನ ಪ್ರಸಂಗಗಳ ಪ್ರದರ್ಶನವನ್ನೂ ದೇವರ ಸೇವೆಯೆಂದೇ ಜನ ಪರಿಗಣಿಸಿದ್ದರು. ಪಾತ್ರಧಾರಿಗಳೂ-ಸೂತ್ರಧಾರಿಗಳೂ ಅದೇ ಭಾವನೆಯಿಂದ ಆಟವನ್ನು ನಡೆಸುತ್ತಿದ್ದರು.

ಉಳಿದ ಭಾಗವನ್ನು ಮುಂದಿನ ಕಂತಿನಲ್ಲಿ ನೋಡೋಣ, ನಮಸ್ಕಾರ

Thursday, July 7, 2011

ದಂ-ಪತಿ




ದಂ-ಪತಿ

ಈ ಜ್ವರ ಶುರುವಾಗಿದ್ದು " ದಂ ಲಗಾಕೆ ಐಸ್ಸಾ " ಎಂದು ಬರೋಬ್ಬರಿ ಮಾಲು ತುಂಬಿದ ಕೈಗಾಡಿಯನ್ನು ಕುಮಟಾಪ್ಯಾಟೆಯಲ್ಲಿ ತಳ್ಳುವವರು ಕೂಗಿದಾಗ. ಇನ್ನೂ ಹಲವಾರು ಪಟ್ಟಣ ಮತ್ತು ಶಹರಗಳಲ್ಲಿ ಅಲ್ಲಲ್ಲಿ ಕಾಣಸಿಗುವ ದಿನನಿತ್ಯದ ಸಾಮಾನು ಸಾಗಾಟ ವೈಖರಿಯಲ್ಲಿ ಇದೂ ಒಂದು ರೀತಿ. ಆದರೆ ಈ ದಂ ಗೂ ನಮ್ಮ ದಂಪತಿಗೂ ಏನಾದರೂ ಸಂಬಂಧವಿರಬಹುದೇ ಎನ್ನುವ ಪ್ರಶ್ನೆ ಅಕಸ್ಮಾತ್ ಕಾಡತೊಡಗಿದ್ದು ನಿಜ. ಆ ಪೀಡನೆಗೆ ಯಾವ ಮಾಂತ್ರಿಕನಲ್ಲೂ ಪರಿಹಾರ ಸಿಗುವಂತಿರಲಿಲ್ಲ! ಹಾಗಾಗಿ ನಾನೇ ಹುಡುಕಿ ನಡೆಯುವ ಪರಿಸ್ಥಿತಿ ಎದುರಾಗಿ ಆ ದಂ-ಪತಿಯನ್ನು ಹುಡುಕಿದೆ!

ಛೆ ಛೆ ಛೆ ಛೆ, ನೀವಂದುಕೊಂಡಹಾಗೇ ಯಾವುದೋ ದಂಪತಿಯನ್ನು ನಾನು ಹುಡುಕಿ ಹೊರಟಿರಲಿಲ್ಲ. ಅದು ದಂ-ಪತಿ ಶಬ್ದದ ಕುರಿತಾದ ಒಂದು ಸಂಶೋಧನೆಯಾಗಿತ್ತು. ಸಂಶೋಧನೆ ಮಾಡುವಾಗ ಟಾಟಾ ಇನ್ಸ್‍ಟಿಟ್ಯೂಟ್‍ನವರಾಗಲೀ ಬಾಬಾ ಅಟೊಮಿಕ್ ರಿಸರ್ಚ ಸೆಂಟರ್ ನವರಾಗಲೀ ಜಾಗಕೊಡಲಿಲ್ಲ. ಹೋಗಲಿ ಬಿಡಿ ಏನು ಇಡೀ ಜಗತ್ತೆಲ್ಲಾ ಅವರೇ ವ್ಯಾಪಿಸಿಕೊಂಡಿದ್ದಾರೆಯೇ? ಅಷ್ಟಕ್ಕೂ ನಾನು ಮಾಡುವ ಸಂಶೋಧನೆಯ ಮಹತ್ವವನ್ನೇ ಅರಿಯದ ಮಹಾನುಭಾವರುಗಳು ಅಲ್ಲಿದ್ದಾರೆ; ಅದಕ್ಕೇ ಹಾಗೆ ಎಂದುಕೊಂಡು ನನ್ನ ಸಂಶೋಧನೆ ಮುಂದುವರಿಯಿತು. ತಿನ್ನಲಾರದ ದ್ರಾಕ್ಷಿ ಎತ್ತರದ ಬಳ್ಳಿಯಲ್ಲಿದ್ದುದರಿಂದ ಹುಳಿ ಎಂದ ನರಿಯಹಾಗೇ ಎಂದು ನೀವು ಮೂದಲಿಸಿದರೂ ಅಡ್ಡಿಯಿಲ್ಲ-ನಾನು ಮಾಡುವ ಕೆಲಸ ನನಗೆ ಗೊತ್ತಿದೆಯಲ್ಲಾ ಅದೇ ಸಂತೃಪ್ತಿ ಸಾಕು ಬಿಡಿ. ದಾಸರೂ ಹೇಳಿದ್ದಾರೆ ’ನಿಂದಕರಿರಬೇಕು ಜಗದಲಿ ’! ಅಂತಹ ದಾಸರಂತಹ ದಾಸರೇ ನನ್ನ ಪರವಾಗಿರುವಾಗ ಇನ್ನು ಯಾರಿದ್ದರೇನು ಇರದಿದ್ದರೇನು ಅಲ್ಲವೇ? ಹೋಗ್ಲಿ ಬಿಡಿ, ಸಂಶೋಧನೆ ಮುಂದೇನಾಯ್ತು ತಿಳಿಯೋಣ.

ನಾವು ಮದುವೆಯಾದ ಹೊಸದರಲ್ಲಿ " ನೀವು ದಂಪತಿ ಸಮೇತ ಬನ್ನಿ " ಎಂದು ಕರೆದವರು ನೂರಾರು ಜನ. ಇಲ್ಲಿ ಸುಳ್ಳು ಸಂಖ್ಯೆಯೇನೂ ಕೊಡುತ್ತಿಲ್ಲ, ಇರೋ ಹಕೀಕತ್ತು ಇರೋಹಾಗೇ ಹೇಳೊದೇ ನನ್ನ ಅಭ್ಯಾಸ. ಅಂದಾಜಿಗೆ ಸಂಖ್ಯೆ ಗುಜರಾಯಿಸಲು ಅದೇನು ಹುಲಿ-ಸಿಂಹಗಳ ಗಣತಿಯೇ? ಅದೂ ಕಷ್ಟ ಅನ್ನಿ ಪಾಪ ಅವರಾದರೂ ಏನುಮಾಡುತ್ತಾರೆ? ಒಂದೊಮ್ಮೆ ಹುಲಿ ಲೆಕ್ಕ ಮಾಡಲಿಕ್ಕೆ ಹೋಗಿ ಅದಕ್ಕೆ ಕಂಡುಬಿಟ್ಟರೆ ಅಧಿಕಾರಿಗಳನ್ನು ಮನೆಗೆ ವಾಪಸ್ ಕಳಿಸದೇ ಇರುವ ಜವಾಬ್ದಾರಿಗಳನ್ನು ಹುಲಿ-ಸಿಂಹ-ಆನೆಗಳೂ ಹೊತ್ತಹಾಗಿವೆ. ಅದ್ಕೇ ಇರಬೇಕು ಅವು ಇತ್ತೀಚೆಗೆ ಅರಣ್ಯಾಧಿಕಾರಿಗಳನ್ನೂ ಅರಣ್ಯಪಾಲಕರನ್ನೂ ಹುಡುಕಿಕೊಂಡು ಊರೂರು ಅಲೀತಾ ಇವೆ! ಮೇಲ್ಗಡೆ ಇರೋ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು " ಹೋಗ್ರೋ " ಅಂತಾರೆ, ಕಡಿತಗೊಂಡ ಬೋಳುಕಾಡಲ್ಲಿ ಕುಳಿತ ಹಿಂಸ್ರ ಪಶುಗಳು " ಬನ್ರೋ " ಅಂತವೆ! ಕೃಷಿಕರು ಇಲ್ಲದ ಆರೋಪ ಮಾಡ್ತಾರೆ. ಪಾಪ ಅರಣ್ಯಾಧಿಕಾರಿಗಳು-ಅರಣ್ಯಪಾಲಕರ ಫಜೀತಿ ನಾಯಿ-ನರಿಗೆ ಕೊಟ್ರೂ ಬೇಡ! ಮುಂದಿನ ಸಲದಿಂದ ಮಿಲಿಟ್ರಿಗಾದ್ರೂ ಸೇರ್ಕಂಬುಡ್ತಾರ್ಯೇ ಹೊರ್ತು ಅರಣ್ಯ ಇಲಾಖೆಗೆ ಮಾತ್ರ ಸೇರುವುದು ಡೌಟು.

ದಂಪತಿ ಸಮೇತ ಬನ್ನಿ ಅಂದಿದ್ರು ಅಂದ್ನಲ್ಲಾ ದಂ-ಪತಿ ಅಂದ್ರೇನೂ ಅಂತ ಮತ್ತೆ ಕೆದಕಲು ಕುಳಿತೆ. ’ಪತಿ’ ಅಂದರೆ ಗಂಡ, ಯಜಮಾನ ಇತ್ಯೇತ್ಯಾದಿ ವರ್ಣನೆ ಸಿಕ್ಕಿತು. ’ದಂ’ ಎಂದರೆ ಹೆಂಡತಿ ಆಗಿರಲೇಬೇಕಲ್ಲವೇ? ಹೆಂಡತಿ ಇರದ ಪತಿಗೆ ದಂ ಇರದ ಪತಿ ಅಂತ ಬರೆಯುವುದು ಸರಿಯೇ? ಅಥವಾ ಯಾರಾದ್ರೂ ಹೆಂಡತಿ ಮಾತ್ರ ಬಂದರೆ ದೂರದಿಂದಲೇ ಅವರನ್ನು ಕಂಡು ಇಂಥವರ ’ದಂ’ ಮಾತ್ರ ಬಂದ್ರು ಎನ್ನುವುದು ಸರಿಯೇ? ಕೆಲವರು ದಂಪತಿಗಳು ಎಂತ್ಲೂ ಕರೀತಾರಲ್ಲ ಅದ್ಯಾಕೆ ಹಾಗೆ? ದಂಪತಿ ಎನ್ನುವುದೇ ಜೋಡಿ ಸೂಚಕ ಶಬ್ದ ಎಂದಮೇಲೆ ಅನೇಕ ದಂಪತಿ ಜೋಡಿಗಳಿದ್ದರೆ ಮಾತ್ರ ’ದಂಪತಿಗಳು’ ಎನ್ನುವುದು ಸಮಂಜಸವೇನೋ ಅನಿಸುತ್ತದಪ್ಪ. ಸಮಸ್ಯೆ ಇಲ್ಲೂ ಅದೇ ಇದೆ! ಎಲ್ಲರ ’ದಂ’ ಗಳೂ ಬಂದಿದ್ದರೆ ’ಪತಿ’ಗಳು ಇನ್ನೂ ಬರುವವರಿದ್ದರೆ " ಹಾಂ ... ಎಲ್ಲರ ದಂ ಗಳೂ ಬಂದ್ರು ಇನ್ನು ಪತಿಗಳು ಬರ್ತಾ ಇದ್ದಾರೆ ಎಂದು ಹೇಳುವ ಹಾಗೂ ಇಲ್ಲ ಅಲ್ಲವೇ? ಯಾಕೋ ಸಮಸ್ಯೆ ಸುಲಭಕ್ಕೆ ಬಗೆಹರಿಯಲಿಲ್ಲ. ಬೀಜಗಣಿತವೂ ಅಲ್ಲ, ರೇಖಾಗಣಿತವೂ ಅಲ್ಲ, ದೃಗ್ಗಣಿತವೂ ಅಲ್ಲ; ದಂಗಣಿತ ! ಯಾವ ಫಾರ್ಮ್ಯುಲಾವೂ ನಾಟುವ ಸ್ಥಿತಿಯಲ್ಲಿರಲಿಲ್ಲ ಬಿಡಿ.

ಕೆಲವೊಮ್ಮೆ
ಹೀಗೂ ಯೋಚನೆ ಬಂದಿದ್ದಿದೆ. ’ದಮ್ಮು’ ಇರುವ ಪತಿಗೆ ದಂಪತಿ ಎಂದರೆ ಹೇಗೆ ? ಮಳೆಗಾಲ ಚಳಿಗಾಲದಲ್ಲಿ ದಮ್ಮು ಇರುವವರಿಗೆ ಸ್ವಲ್ಪ ಅಡಚಣೆ ಜಾಸ್ತಿ. ಶ್ವಾಸ ಮೇಲೆತ್ತುವಾಗ ಹಂದಿಯಹಾಗೇ ಹೂಂಕರಿಸುವವರು ಗೂಳಿಯಹಾಗೇ ಗುಟುರುವವರು ನಂಗಂತೂ ಕಾಣಸಿಗುತ್ತಾರೆ. ಅಮಿತಾಭನಿಗೆ ಉಬ್ಬಸರೋಗವಿದೆ ಎಂಬುದು ಅವರಿಗೆಲ್ಲಾ ತಿಳಿದಿರೋ ಹಾಗಿದೆ. ಹೀಗಾಗಿ ಇಂತಹ ’ದಮ್‍ಪತಿ’ಗಳ ಸಂಘದ ಬಲವರ್ಧನೆಯಾದ ಹಾಗಾಗಿದೆ. ಜಯವರ್ಧನೆಗೂ ಬಲವರ್ಧನೆಗೂ ಏನೂ ಸಂಬಂಧವಿಲ್ಲ-ಸದ್ಯ ಅದನ್ನು ಮಧ್ಯೆ ತರುವುದು ಬೇಡ-ಯಾಕೆಂದರೆ ಸಂಶೋಧನೆಯ ಫಾರ್ಮ್ಯುಲಾ ಕೆಟ್ಟುಹೋಗುವ ಸಂಭವವಿದೆ, ಗೊತ್ತಾಯಿತಲ್ಲ? ಅಂತೂ ಮಳೆಚಳಿಗಾಲಗಳಲ್ಲಿ ಕೆಲವಾರು ಕಾರ್ಯಕ್ರಮಗಳಿಗೆ ಬರೇ ಮಡದಿಯರೇ ಹೋಗಿಬರಬೇಕಾಗಬಹುದು. ಆಗ ಅವರು "ನಮ್ಮ ದಮ್‍ಪತಿ" ಬರಲಿಲ್ಲ ಎನ್ನಬಹುದಲ್ಲವೇ?

’ದಂ ಮಾರೋ ದಂ’ ಹಾಡುಕೇಳಿದಾಗಲಂತೂ ಹಲವು ನನ್ನಂಥಾ ಪಡ್ಡೆಗಳಿಗೆ ಚಡ್ಡಿಹಾಕಿ ಕುಣಿಯುವ ಹುಚ್ಚು ಬರುತ್ತದೆ. ’ದಂ’ ಎಳೆಯುವುದರಲ್ಲೂ ಅದೆಷ್ಟು ಸುಖಾಂತೀರಿ ಕೆಲವರಿಗೆ. ಒಂದೇ ಒಂದು ದಂ ತಮ್ಮ ದಿನದ ರಿಧಮ್ಮನ್ನೇ ಬದಲಾಯಿಸುತ್ತದೆ ಅಂತಾರೆ ಇನ್ಕೆಲ್ವು ಜನ. ಇಲ್ಲೂ ಅದೆಂಥದೋ ’ದಂ’ ಕರಾಮತ್ತು. ಯೇ ಕ್ಯಾ ಹೈ ದುನಿಯಾ ? ಅನಂತನಾಗರು [ನಾಗರ ಹಾವಲ್ಲ!] ನಾರದನಾಗಿ ಅಭಿನಯಿಸಿದ ’ಇದು ಎಂಥಾ ಲೋಕವಯ್ಯಾ ? ’ ಹಾಡು ನೆನಪಾಗುತ್ತದೆ. ದಂ ಎನ್ನುವ ಆ ಒಂದೇ ಅನುನಾಸಿಕ ಅಕ್ಷರಕ್ಕೆ ಅಷ್ಟೆಲ್ಲಾ ಆನೆಗಾತ್ರದ ಕಿಮ್ಮತ್ತಿದ್ದಮೇಲೆ ದಂ ಇಲ್ಲದ ಪತಿ ಎಂದರೆ " ಛೆ ಅವನಾ ಅವನಿಗೆ ದಮ್ಮೇ ಇಲ್ಲ " ಅಂತಾರಲ್ಲಾ ಅದೂ ನೆನಪಾಗುತ್ತದೆ. "ದಂ ಇದ್ರೆ ಮುಂದೆ ಬಾ ನೋಡೋಣ " ಎಂದ ಕುಡುಕನ ನೆನಪೂ ಆಯ್ತು ಸ್ವಾಮೀ. ಎಷ್ಟೋಸಲ ನಮ್ಮಲ್ಲಿ ಇರುವ ದಂ ಎಲ್ಲಾ ಮಾಯವಾಗಿ ನಮ್ಮ ಜಂಘಾಬಲವೇ ಉಡುಗಿಹೋಗಿ ಅಡಗಿಕೂತು ತಪ್ಪಿಸಿಕೊಳ್ಳುವ ಪರಿಯೂ ಇರುತ್ತದೆ. ಬಾಲ್ಯದಲ್ಲಿ ಶಾಲೆಯ ಮಾಸ್ತರು ಬಂದರೆ ಹಾಗಾಗುತ್ತಿತ್ತು. ಬರ್ತಾ ಬರ್ತಾ ಯಾರದ್ರೂ ಸುಂದರ ಹುಡುಗೀರು ಅತೀ ಹತ್ತಿರ ಬಂದರೆ ಒಂಥರಾ ಹಾಗಾಗೋಕ್ಹಿಡೀತು! ಈಗೀಗ ಮನೇಲಿರೋ ’ದಂ’ ದಬಾಯಿಸಿದ್ರೂ ಮರುದಬಾಯಿಸಲು ದಂ ಇರದ ಸ್ಥಿತಿ ನಮ್ದು! ಇನ್ನು ಕಾಲೇಜಿಗೆ ಹೋಗುವ ನಮ್ಮ ಮಕ್ಳೇನಾದ್ರೂ ತಿರುಗಿನಿಂತುಬಿಟ್ಟರೆ ದೇವ್ರೇಗತಿ! ಇಷ್ಟಿದ್ದೂ ಆ ’ದಂ’ ಶರೀರದ ಯಾವ ಮೂಲೆಯಲ್ಲಿ ಹುದುಗಿ ಕೂತಿದೆ ಎನ್ನುವುದು ಅರ್ಥವಾಗಲಿಲ್ಲ.

ದಂ-ಪತಿಯೊಳಗೆ ಇರುವ ’ದಂ’ ಗೂ ನಮ್ಮೊಳಗೇ ಆಳದಲ್ಲೆಲ್ಲೋ ಇರುವ ’ದಂ’ಗೂ ಹಾಗೂ ಮಳೆಚಳಿಗಾಲದಲ್ಲಿ ಏಕಾಏಕೀ ಅಟ್ಯಾಕ್ ಮಾಡಿ ’ಇನ್ನೇನು ಈ ಸರ್ತಿ ಉಳಿಯೊಲ್ಲ’ ಅಂತನ್ನಿಸಿಬಿಡುವ ಈ ದಮ್ಮಿಗೂ ಏನಾದರೂ ಸಂಪರ್ಕ-ಸಂಬಂಧವಿರಲೇಬೇಕಲ್ಲಾ ? ಇವುಗಳ ಹಿಂದಿನ ಕಾಮನ್ ಬೇಸ್ ಯಾವುದು ಎಂಬುದನ್ನು ಪ್ರಥಮವಾಗಿ ಕಂಡುಹಿಡಿಯಬೇಕಾಯಿತು. ಜಾಗದ ಅನಿವಾರ್ಯತೆಯನ್ನು ಮನೆಯ ಧೂಳು ತುಂಬಿ ದಮ್ಮು ಕಟ್ಟುವ ಗ್ಯಾರೇಜು ನಿವಾರಿಸಿತು. ಅಲ್ಲೂ ಕೂಡ ಮನೆಯವರೆಲ್ಲರ ಆಕ್ಷೇಪಣೆ ಸಹಿಸುತ್ತಲೇ ಸಂಶೋಧಿಸಬೇಕಾದ ಅನಿವಾರ್ಯತೆ ಇತ್ತು. ಸಂಶೋಧನೆಯ ಸಮಯದಲ್ಲಿ ಕುಟುಂಬ ನಿರ್ವಹಣೆಗೆ ಸರಕಾರವಾಗಲೀ ಯಾ ಯಾವುದೇ ದೊಡ್ಡ ಸಂಘ-ಸಂಸ್ಥೆಯಾಗಲೀ ಧನಸಹಾಯ/ಮಾಶಾಸನ ನೀಡುತ್ತಿರಲಿಲ್ಲ. ಮಾಶಾಸನದಲ್ಲಿ ಬಹಳಪಾಲು ಬೇಡದ ಜನಗಳಿಗೇ ಸಲ್ಲುವುದು ಯಾರಿಗೂ ತಿಳಿಯದ್ದೇನಲ್ಲವಲ್ಲ ! ಸಂಶೋಧನೆ ಫಲಕಾರಿಯಾದರೆ ಮುಂದೆ ಹಾರತುರಾಯಿ ಮೆರವಣಿಗೆ ! ಅಂದುಕೊಂಡಹಾಗೇ ಆಗದೇ ಹೊದರೆ ಮುಂದಿರುವ ಮಾರೀ ಹಬ್ಬದ ನೆನಪು ಆಗಾಗ ಮರುಕಳಿಸಿ ಕೆಲಸಮಾಡಲು ದಮ್ಮೇ ಇರುತ್ತಿರಲಿಲ್ಲ.

ಆರೇಳು ತಿಂಗ್ಳೇ ಕಳೆದು ಹೋಯ್ತು. ಇನ್ನೂ ಸರಿಯಾದ ಫಾರ್ಮ್ಯುಲಾ ಸಿಗಲಿಲ್ಲ. ನನ್ನನ್ನೇ ನಾನು ಸರಿಯಾಗಿ ನೋಡಿಕೊಂಡರೆ ಏನಾದ್ರೂ ಉತ್ತರ ಹೊಳೆಯಬಹುದು ಎಂದು ನಮಗೆ ಯಾರೋ ಉಡುಗೊರೆಯಾಗಿ ಕೊಟ್ಟ ನಾಕಡಿ ಉದ್ದದ ಕನ್ನಡಿಯಲ್ಲಿ ತಿರುಗಿ ಮುರುಗಿ ನೋಡಿಕೊಳ್ಳುತ್ತಿದ್ದೆ. ಜೋರಾಗಿ ಬಂದ ಗುಡುಗಿಗೆ ಒಮ್ಮೆ ಎದೆಯೊಳಗೆ ದಮ್ಮೇ ಇಲ್ಲದಂತಾಗಿ ಹಿಡಿದಿದ್ದ ಕನ್ನಡಿ ಕೈತಪ್ಪಿ ವಾಲಿತು. ಹೆಚ್ಚೇನೂ ಬೀಳಲಿಲ್ಲ ಆದ್ರೂ ನನ್ನ ಫಿಗರನ್ನು ಸರಿಯಾಗಿ ತೋರುತ್ತಿದ್ದ ಕನ್ನಡಿ ಮುಖ ಸಿಂಡರಿಸಿಕೊಂಡ ಹಾಗಿದೆಯಲ್ಲಾ ಎಂದು ಎತ್ತಲು ಹೋದ್ರೆ " ಅದೇನ್ರೀ ಬಿದ್ದಿದ್ದು ಕನ್ನಡೀನಾ ಅಯ್ಯೋ ದೇವ್ರೇ ನಮ್ ಬಾವ ಬಾಂಬೆಯಿಂದ ತಂದಿದ್ದು......" ಎಂದು ಮಂತ್ರಪಠಿಸುತ್ತಾ ಬಂದ ’ದಂ’ ನೋಡುತ್ತಿದ್ದಂತೇ ಕೈಕಾಲೆಲ್ಲಾ ತರತರ ಎದೆಯಲಿ ಡವಡವ, ಮತ್ತೆ ಕರೆಂಟು ಹೋದ ಹಾಗೇ ’ದಂ’ ಉಡುಗೇ ಹೋಯಿತು. ಸಂಶೋಧನೆ ಅಷ್ಟಕ್ಕೇ ನಿಂತಿದೆ. ರಿಸರ್ಚ್ ಮಾಡಲಿಚ್ಛಿಸುವ ಹುಡುಗಿಯರಿಗೆ/ಹೆಂಗಸರಿಗೆ ಹೆಚ್ಚಿನ ಆದ್ಯತೆ! ವಿಶ್ವವಿದ್ಯಾಲಯಗಳ ಇತ್ತೀಚಿನ ಗೈಡ್‍ಗಳಿಗೂ ಮೀರಿ ಎಲ್ಲಾರೀತಿಯ ಸಹಕಾರ ನೀಡಲಾಗುವುದು! ಕ್ಯಾನ್ ಸಂಬಡಿ ಟೇಕ್ ಓವರ್ ಪ್ಲೀಸ್ ?

Tuesday, July 5, 2011

ಓಪನ್-ಕ್ಲೋಸ್


ಓಪನ್-ಕ್ಲೋಸ್

ಅಕೌಂಟು ಓಪನ್ ಮಾಡುವಾಗ
ಮಿನಿಮಮ್ ಬ್ಯಾಲೆನ್ಸ್ ಇರಲೇಬೇಕು
ಬ್ಯಾಲೆನ್ಸೇ ಇರದಿದ್ದರೆ
ಅಕೌಂಟಾದರೂ ಯಾಕೆ ಓಪನ್ ಮಾಡಬೇಕು ?
ಅದಕ್ಕೇ ನಾನು ಹಲವುದಿನ
ಬಜ್ಜಿನಲ್ಲಿ ಅಕೌಂಟು ಓಪನ್ ಮಾಡುವುದೇ ಇಲ್ಲ !
ಈ ವಿಷಯ ಯಾರಿಗೂ ಹೇಳಬೇಡಿ
ಎಂದರೆ ನೀವು ಮುದ್ದಾಂ ಹೇಳಿಯೇ ಹೇಳುತ್ತೀರಿ
ಯಾರಿಗಾದ್ರೂ ಹೇಳ್ಕೊಳಿ ಎಂದರೆ
ಹಾಗೇ ಕಸದಎಸೆದ ಥರ ಬಿಟ್ಟುಬಿಡುತ್ತೀರಿ

ಚಿಕ್ಕ ಮಕ್ಕಳೂ ಹಾಗೆ
ಮಾಡಬೇಡ ಎಂದರೆ ಅರ್ಗಿಸ್ ಮಾಡೇಮಾಡುತ್ತಾರೆ
ಏನದ್ರೂ ಮಾಡ್ಕೊ ಅಂದರೆ
ಹೆದರಿಕೆಯಿಂದ ಸುಮ್ನೇ ಕೂತಿರ್ತಾರೆ
ಬಿದ್ದಾಗ ಯಾರೂ ನೋಡದಿದ್ದರೆ
ಅಂಡು ನೀವಿಕೊಂಡು ಎದ್ದುಹೋಗುತ್ತಾರೆ
ಅಪ್ಪಿತಪ್ಪಿ ಯಾರೋ ನೋಡಿದ್ದನ್ನು
ಅವರು ನೋಡಿಬಿಟ್ಟರೆ
ಆಕಾಶ ಕಳಚಿಬಿದ್ದಹಾಗೇ
ಅಳಲು ಶುರುವಿಡುತ್ತಾರೆ !

ರಾಜಕಾರಣಿಗಳೇನು ಇದಕ್ಕೆ ಹೊರತೇ?
ನೆರೆಪರಿಹಾರಕ್ಕೂ ಕನ್ನಹಾಕಿ
ಅಲ್ಲಲ್ಲೇ ಅಷ್ಟಷ್ಟು ಬಸಿದುಕೊಳ್ಳುತ್ತಾರೆ !
ಯಾರೂ ಪರಾಂಬರಿಸದಿದ್ದರೆ
’ಬೆಣ್ಣೆ’ ಪೂರ್ತಿ ತಿಂದು ಹಾಗೇ ನಡೆಯುತ್ತಾರೆ
ಯಾರಾದ್ರೂ "ಏನ್ರೀ ಅದು ಸರೀನಾ ? " ಅಂದ್ರೆ
ಪಕ್ಕದಲ್ಲಿದ್ದ ಯಾರ ಬಾಯಿಗೋ ಕೈ ಒರೆಸಿಬಿಡುತ್ತಾರೆ
ವರ್ಗಾವರ್ಗೀ ಇದ್ಯಾ ? ಕೆಲ್ಸ ಆಗ್ಬೇಕಾ ?
ಸೂಟ್ ಕೇಸ್ ತಕಂಬನ್ನಿ ಆಗುತ್ತೆ !
ಬ್ಯಾಲೆನ್ಸೇ ಇಲ್ಲಾಂದ್ರೆ
ನಿನ್ನಕೌಂಟೇ ಓಪನ್ನಾಗಲ್ಲ ಹೋಗಪ್ಪಾ ಅಂತಾರೆ
ಕೆಲವರು ಓದದೇ ಇದ್ದರೂ ’ಸಂಸ್ಕೃತ’ ಬಳಸುತ್ತಾರೆ

ಜ್ಯೋತಿಷಿಗಳು ಮುಂದ್ಗಡೆ ತಟ್ಟೇಲಿ
ಒಂದೈನೂರರ ನೋಟು ಸಾವಿರದ್ದು ಒಂದು
ನೂರರದ್ದು ನೂರಾರು ಹರಡಿಕೊಂಡು ಕೂತಿರ್ತಾರೆ!
ಪಾಪ ದುಡ್ಡಿನ ಮೋಹವನ್ನೇ ಮರೆತ
ಪರಿತ್ಯಾಗಿಗಳು !
ಏನಾದ್ರೂ ಸಮಸ್ಯೆ ಇದ್ಯೇ ?
ಸಾವಿರದಿಂದಲೇ ಅಕೌಂಟು ಓಪನ್ನು !
ನೂರರ ಲೆಕ್ಕದಲ್ಲಿ ಕೇಳಿದರೆ
ಚಿಕಿತ್ಸೆಗೆ ಪವರ್ ಇರುವುದಿಲ್ಲ-ಪರಿಣಾಮ ಕಮ್ಮಿ !
ಹತ್ತೋ ಇಪ್ಪತ್ತೋ ಎಂದರೆ
ಗುರಾಯಿಸಿ ನೋಡುತ್ತಾರೆ !

ಕತ್ತರಿ ಹಿಡ್ಕೊಂಡು
ದುಡ್ಡು ಕೊಡ್ಲಿಲ್ಲಾ ಅಂದ್ರೆ ರೋಗಿ ಸಾಯ್ತಾನೆ
೨ ಲಕ್ಷ ಕೊಟ್ರೆ ಚಿಕಿತ್ಸೆಮಾಡ್ಬಹುದು
ಇಲ್ಲಾಂದ್ರೆ ಆಪರೇಷನ್ ಮಾಡಕಾಗಲ್ಲ
ಅಂತಾನೆ ಸೇವೆಯ ಪ್ರತಿಜ್ಞೆಗೈದ ವೈದ್ಯ !
ಇನ್ನೇನು ಉಸಿರಾಡ್ತಿದಾನೆ ರೋಗಿ
ಬದುಕಿಸಬೇಕು ಅಂದ್ಕಳಿ
ಮೊದಲು ಅಕೌಂಟ್ ಓಪನ್ ಮಾಡ್ಬೇಕು!
ಪತ್ರಿಕೇಲಿ ನಿಮ್ಬಗ್ಗೆ ಚೆನ್ನಾಗಿ ಬರೀಬೇಕಾ?
ಅಕೌಂಟ್ ಓಪನ್ ಮಾಡಿ ಪ್ಲೀಸ್ !
ಎಲ್ಲಾಕಡೆನೂ ಅಕೌಂಟು
ಅನ್ನಕೌಂಟು ಇಲ್ಲಾ ಅನ್ಕೋಬೇಡಿ
ಅದು ಸ್ವಿಸ್ ಬ್ಯಾಂಕಿನಲ್ಲಿದೆ !
ಅದೊಂಥರಾ ಅಕೌಂಟು
ಇದ್ನೆಲ್ಲಾ ನೋಡ್ತಾ ನಂಗನ್ಸಿದ್ದು
ಲೆಟ್ ಮಿ ನಾಟ್ ಓಪನ್ ದಿ ಅಕೌಂಟ್

Sunday, July 3, 2011

ನೀವು ಏನೂ ಅಂದುಕೊಳ್ಳಬೇಡಿ!


ನೀವು ಏನೂ ಅಂದುಕೊಳ್ಳಬೇಡಿ!

ನೀವೇನೂ ಅಂದುಕೊಳ್ಳಬೇಡಿ
ನಾನೂ ಏನೂ ಅಂದುಕೊಳ್ಳುವುದಿಲ್ಲ
ಹೀಗಂದುಕೊಂಡೇ ಅಂದುಕೊಳ್ಳುವ ವಿಷಯಗಳೆಷ್ಟೋ !

ಬಸ್ಸಿನಲ್ಲಿ ಮಾತನಾಡುವಾಗ
ಇನ್ನೊಬ್ಬರ ಮುಖಕ್ಕೆ ನಮ್ಮ ಎಂಜಲು ಸಿಡಿದಾಗ
ನಡೆಯುವ ಅವಸರದಲ್ಲಿ ಕಾಲು
ಇನ್ನೊಬ್ಬರಿಗೆ ತಾಕಿದಾಗ
ಎಲೆಯಲ್ಲಿ ಊಟಮಾಡುವಾಗ
ಕೈತುತ್ತು ಜಾರಿ ಮೈಮೇಲೆ ಬಿದ್ದು
ಹಿಮಪಾತವಾದಂತೇ ಜಾರಿ
ಪಕ್ಕದವರ ಎಲೆಗೋ ತಟ್ಟೆಗೋ ಇಣುಕಿದಾಗ

ಅದೇನೋ ಸರಿ ಆದರೆ ಎದುರುಗಡೆಮನೆ
ಮಾಧುರಿ ದೀಕ್ಷಿತ ಕಣ್ಣು ಕೋರೈಸಿದಾಗ
ಕಣ್ಸನ್ನೆಮಾಡಿ ಬೆಂಬತ್ತ ಮಾಧವ
ಪರೀಕ್ಷೆಗಳು ಮುಗಿದರೂ ಕಾಲೇಜು ತಪ್ಪಿಸಲಿಲ್ಲ!
ಮಿನಿಟಾಪು ಬಾಟಮ್ಮು ಲೋ ಜೀನ್ಸು ಲೆಗ್ಗಿಂಗು
ಕಡಿವಾಣವೇ ಇರದ ಅವಳ ಫ್ಯಾಶನ್ ಶೋಗೆ
ಸದಾ ವೀಕ್ಷಕನಾಗಿ ತದೇಕಚಿತ್ತದಿಂದ
ನೋಡನೋಡುತ್ತಾ ಅವಳನ್ನು ಅದು ಹೇಗೋ
ಮರುಳುಮಾಡಿ ಇನಿಯೇ ನೀನೇ ನನ್ನ ಪ್ರಾಣ ಎಂದಾಗ
ಮನಸುಕೊಟ್ಟೆ ಎಲ್ಲಾ ಕೊಟ್ಟೆ ಎಂದವಳಿಗೆ
ಕೀಲಿ ತಿರುಗಿಸಿ ಕೈಲೊಂದು ಕೊಟ್ಟು
ಮತ್ತೆ ತಪ್ಪಿಸಿಕೊಂಡ ಮಹಾನುಭಾವ

ಅಲಲಲಲೇ ಎಂದವರಿಗೆಲ್ಲಾ ಹೂನಗೆ ಬೀರಿ
ಸರಿಯಾಗೇ ಇದ್ದವಳನ್ನು ಕಣ್ತುಂಬಾ ಕಂಡು
ಕೆಕ್ಕರಿಸಿದ ವೆಂಕೋಬಜ್ಜನಿಗೆ ೭೮
’ಹುಳಿ’ಗೆ ಕೊರತೆಯಿಲ್ಲ ! ಶತಾಯಗತಾಯ ಪ್ರಯತ್ನಕ್ಕೂ
ಯಶಸಿಗದಾಗ ಆತನೆಂದ " ಆಕೆ ಸರಿಯಿಲ್ಲ ಗಂಡು ಬೀರಿ "
ಆತನ ಬಳಗವೆಲ್ಲಾ ಆಕೆಯನ್ನು ಹೆಸರಿಸಿದ್ದು
ಅದೇ ಹೆಸರಿನಿಂದ !

ಶೀಲಾ ಓಡಾಡುವಾಗ ಜಗವೆಲ್ಲಾ ಸುಂದರ
ಭುವನ ಸುಂದರಿಯಾದ ಆಕೆ ಎಲ್ಲರಿಗೂ ಬೇಕು
ಹೃದಯ ವೈಶಾಲ್ಯದಿಂದ ಸ್ನೇಹಿತರ ಬಳಗವೂ ವಿಶಾಲ
ಮೊನ್ನೆ ಆಕೆಯ ಮನೆಯ ಮುಂದೆ ಪೋಲೀಸು ಗಾಡಿ !
ಯಾಕಮ್ಮಾ ಎಂದರೆ "ನಾನೇನೂ ತಪ್ಪು ಮಾಡಿಲ್ಲಾ"
ಎನ್ನುತ್ತಿದ್ದಂತೇ ಜೀಪಿನೊಳಗೆ ಜಗಸುಂದರಿ
ಅಭಿಮಾನೀ ಬಳಗ ಚೀರಿತು ಆದರೂ
ಹಿಂದೆ ’ಅಭಿಮಾನಿ’ಗಳಾಗಿದ್ದವರೇ ಕೊಟ್ಟ ಅರ್ಜಿ
ಆಕೆ ಹಲವರು ಸ್ವತ್ತು !
ನುಂಗಿದ್ದಾಳೆ ಹಲವರು ಸ್ವತ್ತು !
ಆದರೂ ಇನ್ನೂ ’ಕುಮಾರಿ’
ಮತ್ತೆ ಮದುವೆಯಾಗಲು ತಯಾರಿ !

ಪಕ್ಕದಮನೆಯಲ್ಲಿ ಎರಡು
ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳು
ಅವರಿಗೊಬ್ಬಳೇ ತಾಯಿ!
ಮಹಾಲೆ ಬರುತ್ತಾನೆ ಪೇಟೆಯಿಂದ ದಿನಾ
ಕುಡಿದು ಬಂದಾಗ ಒದರಾಟ ಜೋರು
" ನಕರಾ ಮಾಡಬ್ಯಾಡ " ಎಂದೆಲ್ಲಾ ಆಕೆಗೆ ಬೈಯುತ್ತಾನೆ
ಆಕೆಯೆ ಯಜಮಾನ ಮನೆಯಲ್ಲಿದ್ದರೂ ಇರದಿದ್ದರೂ
ಗಂಟೆಗಟ್ಟಲೆ ಮೀಟಿಂಗು ಚಾಟಿಂಗು !
ಇರಬಹುದೇ ಮೇಟಿಂಗು ?
ಆಗಮಾತ್ರ ಯಾರಿಗೂ ಪ್ರವೇಶವಿಲ್ಲ !
ದೂರವಾಣಿ ರಿಂಗಣಿಸಿದರೂ ಎತ್ತುವುದಿಲ್ಲ

ಇಷ್ಟು ಸ್ಯಾಂಪಲ್ಲುಗಳು ಸಾಕು
ನೀವೇನೂ ಅಂದುಕೊಳ್ಳಬೇಡಿ
ನಾನೇನೂ ಅಂದುಕೊಳ್ಳುವುದಿಲ್ಲ
ಹಾಂ... ಹೇಳುವುದು ಮರೆತೆ :
ಕೇಳಿದ್ದೆಲ್ಲಾ ನಿಮ್ಮಲ್ಲೇ ಇರಲಿ !


Friday, July 1, 2011

ಅಣ್ಣಾ ಕೃಷ್ಣ ಏನು ಕೊಡಲಿ?


ಅಣ್ಣಾ ಕೃಷ್ಣ ಏನು ಕೊಡಲಿ?

ಎಲ್ಲರೂ ಉಂಡು ದ್ರೌಪದಿ ಪಾತ್ರೆ ತೊಳೆದು ಮಲಗಿದ ಮೇಲೆ ಆ ಅಪರಾಹ್ನ ಕೃಷ್ಣ ಬಂದ. ತಂಗೀ ಹಸಿವು ತಂಗೀ ಹಸಿವು ಎಂದ. ಮಾಡಿದ ಅಡುಗೆ ಮುಗಿದಿದ್ದ ಆ ವೇಳೆ ಅಷ್ಟು ಬೇಗ ಏನನ್ನು ಕೊಡಲಾದೀತು? ಅದೂ ಆ ಕಾಲಘಟ್ಟದಲ್ಲಿ ಮಾಡಿದ್ದನ್ನು ಹಾಗೇ ಇಡುವ ಪರಿಪಾಟವಿರಲಿಲ್ಲ. ಗೊಲ್ಲ ಸುಮ್ಮನೇ ಇರಲಿಲ್ಲ. ನೋಡು ಅಲ್ಲೆಲ್ಲೋ ಏನೋ ಇರಲೇ ಬೇಕು. ಏನೂ ಇರದೇ ಹೋಗದು ಎಂದ! ದ್ರೌಪದಿ ಹುಡುಕೇ ಹುಡುಕಿದಳು. ಏನೂ ಇರಲಿಲ್ಲ.

ಸ್ವತಃ ಕೃಷ್ಣ ತಂಗಿಗೆ ಹೇಳಿದ ಮಾತು ನಡೆಸಬೇಕಲ್ಲಾ ಆ ಕಾರಣದಿಂದ ಪ್ರತಿಯೊಂದೂ ಪಾತ್ರೆಯನ್ನು ತೆಗೆದು ನೋಡಿದ. ಅನ್ನದ ಪಾತ್ರೆಗೆ ಒಂದೇ ಅಗುಳು ಅಂಟಿಕೊಂಡಿತ್ತು. ಹಾಗಂತ ದ್ರೌಪದಿ ಗಲೀಜೇ ಎಂಬುದು ಪ್ರಶ್ನಾರ್ಹವಲ್ಲ! ಅದು ಕಪಟನಾಟಕ ಸೂತ್ರಧಾರಿ ಎಂದು ಖ್ಯಾತಿಗೊಳಗಾದ ಘನಶ್ಯಾಮನ ಒಂದು ಸೂತ್ರ. ಆತ ಅದನ್ನೇ ಎತ್ತಿ ತೋರುತ್ತಾ ತಿಂದು ’ಡರ್’ ಎಂದು ದೊಡ್ಡದಾಗಿ ತೇಗಿದ. ತೇಗಿದ ಸದ್ದಿಗೆ ಇಡೀ ಆ ಪ್ರದೇಶವೇ ಎಚ್ಚರಗೊಂಡಿತು! ಅದು ಸಂತೃಪ್ತ ಸ್ಥಿತಿ! ಭಕ್ತಿಯಿಂದ ತನ್ನನ್ನು ಕ್ಷಮಿಸು ಕೊಡಲು ತತ್ಕಾಲದಲ್ಲಿ ಅಡುಗೆ ಸಿದ್ಧವಿಲ್ಲಾ ಎಂಬ ಪಾಂಚಾಲಿಯ ಪ್ರಾರ್ಥನೆಗೆ ಪಾಂಚಜನ್ಯಧಾರಿ ತಲೆದೂಗಿದ. ಆ ಪ್ರಾರ್ಥನೆಯಲ್ಲಿನ ಅಳುಕು, ಭಕ್ತಿ, ಶ್ರದ್ಧೆ, ನೋವು, ತುಡಿತ, ಅಸಹಾಯಕತೆ ಎಲ್ಲವೂ ಆತನ ಗಮನಕ್ಕೆ ಬಂದಿದ್ದವು. ಯಾವುದನ್ನು ಆ ಹೊತ್ತಿಗೆ ಬಯಸಿ ಬಂದಿದ್ದನೋ ಅದು ಸಿಕ್ಕಿತ್ತು! ಅದೇ ಆತನ ಅಷ್ಟು ದೊಡ್ಡ ತೇಗಿಗೆ ಕಾರಣವಾಗಿತ್ತು.

ಅಳುಕು ಮನೋಸ್ಥಿತಿಯಲ್ಲಿ ದ್ರೌಪದಿ ಹೇಗೆ ನಡೆದಿರಬಹುದು ಎಂಬುದೇ ಈ ಹಾಡಿನ ಚಿತ್ರಣ:

ಅಣ್ಣಾ ಕೃಷ್ಣ ಏನು ಕೊಡಲಿ?
ಅಡುಗೆ ತೀರಿತಲ್ಲ
ನಿನ್ನಾಣೆಗೂ ನಿನ್ನ ಬರವು ನಿರೀಕ್ಷಿತವಲ್ಲ

ಎಲ್ಲಿ ಎಲ್ಲಿ ಸುತ್ತುತಾ ಬಂದೆ
ಯಾಕೆ ಇಷ್ಟು ತಡವಾಯ್ತು ?
ಗೊಲ್ಲ ಕೃಷ್ಣಗೇನು ಕೊಡಲಿ ತಗೋ ನೀರು ಬೆಲ್ಲ !

ಎಲ್ಲ ಉಂಡು ತೇಗಿ ತೂಗಿ
ಮಲಗಿ ನಿದ್ದೆ ಜಾರಿದರು
ಅಲ್ಲಿ ನೋಡು ಪಾತ್ರೆಪಗಡೆ ಡಬ್ಬ್ಹಾಕಿಹೆನಲ್ಲ

ಅನ್ನ ಬೇಳೆ ಸಾರು ಪಲ್ಯ
ಇನ್ನೂ ಇದೇ ಅನ್ನೋವಾಗ
ಅಣ್ಣ ಮುದ್ದು ಕೃಷ್ಣ ಇಲ್ಲಿಗೆ ನಿನ್ಯಾಕ್ ಬರಲಿಲ್ಲ?

ಹಸಿದ ಹೊಟ್ಟೆ ಹೊತ್ತುದ ನೋಡಿ
ಕುಸಿದು ಬೀಳುವಂತಾಗುತಿದೆ
ಒಸಗೆ ನಿನ್ನಲಣ್ಣ ನನ್ನ ಕ್ಷಮಿಸ ಬೇಕಲ್ಲಾ ?

ವ್ಯಾಕುಲತೆ


ವ್ಯಾಕುಲತೆ

ಕನಸಿನಲ್ಲಿ ಕಂಡ ಚಿತ್ತಾರಗಳನ್ನು
ನೆನಪಿಗೆ ಕರೆದು ಸೋತೆ

ಅವು ಪೂರ್ತಿ ಬರಲೊಲ್ಲವು ನಾನು ಬಿಡಲೊಲ್ಲೆ
ಬರದ-ಬಿಡದ ಈ ಬಂಧದ ನಡುವೆ

ಹರಿದು ಚಿಂದಿಯಾದ ಕೆಲವು ಹೊರಬಂದವು

ಅವು ಮೂರ್ತವಲ್ಲ ಅಮೂರ್ತವೂ ಅಲ್ಲ
ಆಕಸ್ಮಿಕವಲ್ಲ ಅನಿರೀಕ್ಷಿತವೂ ಅಲ್ಲ

ಹಲವರ ಸಭೆಯನಡುವೆ ಕೂತೆ

ಹೆದರಿ ಹೊರಬರುವ ನನ್ನ ನಿರೀಕ್ಷೆ ಫಲಿಸಲಿಲ್ಲ
ಯಾರೂ ಇಲ್ಲದ ಏಕಾಂತದಲ್ಲಿ ತಪಗೈದೆ

ಅವು ಮತ್ತದೇ ಸ್ವಸ್ಥಾನದಲ್ಲಿ ನಿಂತು

ಎಳನೀರಿನ ಬೊಂಡದ ಸಣ್ಣ ತೂತಿನೊಳಗೆ

ಕೈ ಸಿಗಿಸಿಕೊಂಡು ಹೊರತರಲಾರದ

ಮಂಗನ ಮರಿಯಂತೇ ಕಂಡವು !

ಸಣ್ಣಗೆ ಇನ್ನೊಮ್ಮೆ ಪ್ರಯತ್ನಿಸಿದೆ

ಬಾಟಲೊಳಗೆ ಸಿಕ್ಕು ಅದರ ಬಾಯಿಂದ
ಹೊರಬರದ ದೊಡ್ಡ ವಸ್ತುವಿನಂತೇ

ಮೇಣಕ್ಕೆ ಕಾಲು ಸಿಲುಕಿ ಒದ್ದಾಡುತ್ತಿರುವ

ನೊಣಗಳಂತೇ ಕಂಡವು!

ಇನ್ನೊಮ್ಮೆ ಪ್ರಯತ್ನಿಸಿದೆ

ರಾವಣ ಲಿಂಗವನ್ನು ತಿರುತಿರುವಿ ಕಿತ್ತೆಸೆಯಲು

ಮಹಾಬಲೋ ಮಹಾಬಲೋ ಎಂದು

ಕೂಗಿದ ಆ ಅಸುರೀ ಧ್ವನಿ

ಎಲ್ಲೆಲ್ಲೂ ಮಾರ್ದನಿಸಿತು.

ಆತ್ಮಲಿಂಗವನ್ನೇ ಆ ರಾವಣ ಬಿಟ್ಟನಂತೆ
ಈ ನಡುವೆ ಇದೆಲ್ಲಾ ಏನು ಮಹಾ ಎಂದುಕೊಂಡೆ
ಹಾಗೇ ಸುಮ್ಮನಿದ್ದುಬಿಟ್ಟೆ

ಈಗ ಹಾಯಾಗಿದ್ದೇನೆ

ಮನಸ್ಸು ನಿರುಂಬಳವಾಗಿದೆ
ಏಕಾಂತವೂ ಬೇಡ ಲೋಕಾಂತವೂ ಬೇಡ
ನಂಗೆ ಬೇಕಾದ ಮನೋಲೋಕವನ್ನು

ಪ್ಲಗ್ ಆಂಡ್ ಪ್ಲೇ ಮಾಡುತ್ತೇನೆ

ಅಲ್ಲಿ ನಲಿವಿದೆ ಸದಾ ಶಾಂತಿಯಿದೆ
ಬರುವಿರೇ ನನ್ನೊಟ್ಟಿಗೆ
?
ತಿಳಿಯಲು ಆ ಪ್ರಶಾಂತಿಯ ಅರಸೊತ್ತಿಗೆ!

Wednesday, June 29, 2011

ಅಮ್ಮ ಗುಬ್ಬಿ


ಅಮ್ಮ ಗುಬ್ಬಿ

[ ನಿಸರ್ಗದ ಹಲವು ವೈಚಿತ್ರ್ಯಗಳಲ್ಲಿ ಹಕ್ಕಿಗಳ ಜೀವನ ಕೂಡ ಒಂದು. ಆ ಜೀವನ ಚಿತ್ರಣವನ್ನು ಗುಬ್ಬಿಯನ್ನು ಸಾಂಕೇತಿಕವಾಗಿ ಹೆಸರಿಸಿ ಕವನಿಸಿದ್ದೇನೆ. ಕೃತಘ್ನರಾಗುವ ಮರಿಗಳು ಅಮ್ಮನನ್ನು ಬಿಟ್ಟುಹೋಗುವವೋ ಅಥವಾ ಅಮ್ಮನೇ ಮರಿಗಳನ್ನು ಗೂಡಿಂದಾಚೆ ದಬ್ಬುವುದೋ ಅರ್ಥವಾಗದ ಜೀವನ! ಮುಂದಿನ ಅನಿಸಿಕೆಗಳು ನಿಮಗೇ ಬಿಟ್ಟಿದ್ದು]


ಮೊಟ್ಟೆಯಿಟ್ಟು ಕಾವು ಕೊಟ್ಟು ಪ್ರೀತಿಯಿಂದ ರಕ್ಷಿಸಿಟ್ಟು
ಹೊಟ್ಟೆಗಾಗಿ ಹಿಟ್ಟು ಹುಡುಕಿ ತರುವ ಅಮ್ಮ ಗುಬ್ಬಿಯೇ
ರಟ್ಟೆಯಂಥ ಗರಿಯ ತಿರುವಿ ದೂರವೆಲ್ಲೋ ಹಾರಿ ತಿರುಗಿ
ಸಿಟ್ಟು ಸಿಡುಕು ಮಾಡದಂಥ ಕಷ್ಟವಾನಿ ಸುಬ್ಬಿಯೇ !

ಮೊಟ್ಟೆಯೊಡೆದು ಮರಿಗಳಾಗಿ ಪಟ್ಟ ಕಷ್ಟ ಫಲವದಾಗಿ
ಒಟ್ಟಿನಲ್ಲಿ ಕಂಡ ಕನಸು ನನಸಾಗುತ ನೆಮ್ಮದಿ
ತೊಟ್ಟು ಪಣವ ಸಾಧಿಪಂತೆ ಮತ್ತೆ ಹಿಟ್ಟಿಗಾಗಿ ತವಕ
ಜಟ್ಟಿ ತೋಳ ತಟ್ಟಿದಂತೆ ಹಾರಿ ತರುತ ಭುವನದಿ

ಇಟ್ಟ ಗೂಡಿಗೆಂದೂ ಹಾವು ಹದ್ದು ಬಾರದಂತೆ ನೋಡಿ
ಬಿಟ್ಟ ಕಣ್ಣು ಬಿಟ್ಟಹಾಗೇ ಕಾಯುತಿರುವ ಪರಿಯಲಿ
ತಟ್ಟೆಬಾಯಲನ್ನ ತಂದು ತುತ್ತು ತುತ್ತು ಉಣಿಸಿ ಮರಿಗೆ
ಗಟ್ಟಿಯಾಗುವಂತೆ ಬೆಳೆಸಿ ಹಾರಕಲಿಸಿ ತಡದಲಿ

ಸೊಟ್ಟವಾಯ್ತು ಆ ಶರೀರ ಮುಪ್ಪುಬಂದು ಜೀವ ಭಾರ
ಮೆಟ್ಟಿನಿಂತು ಜೀವನವನು ಮುನ್ನಡೆಸುವ ದಿನದಲಿ
ಕೊಟ್ಟ ಮರಿಗಳೆಲ್ಲ ದೂರ ಅಮ್ಮ ಗುಬ್ಬಿಯೆಡೆಗೆ ಬಾರ
ಅಟ್ಟದಲ್ಲಿ ಕುಳಿತ ದೇವ ಏನಿದೆಲ್ಲ ಜಗದಲಿ ?


Tuesday, June 28, 2011

ನೆಚ್ಚುವುದು-ಮೆಚ್ಚುವುದು


ನೆಚ್ಚುವುದು-ಮೆಚ್ಚುವುದು

[ ಸ್ನೇಹಿತರೇ, ’ಜಗದಮಿತ್ರನ ಕಗ್ಗ’ದ ೨೩ನೇ ಕಂತು ನಿಮ್ಮೆಲ್ಲರ ಓದಿಗಾಗಿ: ]


ಯಾರದೋ ಮೆಚ್ಚುಗೆಯ ದಾರಿಕಾಯಲು ಬೇಡ
ಯಾರನೋ ನಂಬಿ ನೀ ಜೀವಿಸಲು ಬೇಡ
ಭೂರಿ ಭೋಜನ ನಿನಗೆ ದೈವವಂ ನೆಚ್ಚಿದಡೆ
ಸಾರಿ ನೀ ಅದ ನಂಬು | ಜಗದಮಿತ್ರ

ಕೂರಿಸುತ ತೇರನೆಳೆವರು ನೀನು ಗೆದ್ದಾಗ
ಹಾರಿಸುವರಷ್ಟು ಪಟಾಕಿ ತೋಪುಗಳ
ಜಾರಿಕೊಳ್ಳುವರೆಲ್ಲ ನೀ ಬಿದ್ದು ಅಳುವಾಗ
ದೂರವಿಡು ಮೊಳದಷ್ಟು | ಜಗದಮಿತ್ರ

ಹಾರಿ ಬಂದಿಹ ಹದ್ದು ಹರೆದು ಹೋಗುವ ರೀತಿ
ಊರು ಉದರವು ಬೆನ್ನು ಸೊಂಟ ಕೈಕಾಲು
ಭಾರ ಹೇರಿದ ಹಾಗೆ ಬಳಲುವುದು ಕಾಯಿಲೆಯೊಳ್
ದೂರುವುದು ಯಾರಲ್ಲಿ ? ಜಗದಮಿತ್ರ

ನೂರೆಂಟು ತಿನಿಸುಗಳು ನಾನಾ ಭಕ್ಷ್ಯಗಳು
ಸೂರೆಹೊಡೆವವು ಕಣ್ಣು ಹಾಯಿಸಲು ಮನವ
ಮಾರಕವು ಜಿಹ್ವಾ ಚಾಪಲ್ಯ ಜೀವಕ್ಕೆ
ಮೀರದಂತಿರಲಿ ಮಿತಿ | ಜಗದಮಿತ್ರ

ಆರು ಗಾವುದ ನಡೆದು ನೂರು ಮೆಟ್ಟಿಲು ತುಳಿದು
ಊರುದ್ದ ಅಲೆಸಿ ದಂಡಿಸು ಶರೀರವನು
ಬೇರಾವ ಮಾರ್ಗಕಿಂ ಈ ಯೋಗವತಿಸೂಕ್ತ
ಆರೋಗ್ಯ ಸೂತ್ರವಿದು | ಜಗದಮಿತ್ರ

Monday, June 27, 2011

ಇಳೆಯ ಸಡಗರ


ಇಳೆಯ ಸಡಗರ

ಇಳೆಯು ಸಡಗರದಲ್ಲಿ ಮಳೆಯಲ್ಲಿ ತಾ ಮಿಂದು
ಕಳೆಕಳೆಯ ಮುಖ ಹೊತ್ತು ನಗುವ ಚೆಲ್ಲಿಹಳು
ತೊಳೆದುಟ್ಟ ಸೀರೆ ಬಣ್ಣದ ಕುಬುಸ ಬಲುಚಂದ
ಹೊಳೆಯಿತದೋ ರೇಷಿಮೆಯ ತಲೆಗೂದಲು

ಬಳುಕು ಬಳ್ಳಿಯು ಹುಟ್ಟಿ ಬೆಳೆಬೆಳೆದು ವೇಗದಲಿ
ಸುಳಿವು ನೀಡದೆ ಹೂವು ಕಾಯಿ ಹಣ್ಣುಗಳು
ಘಳಿಗೆಗೊಂದಾವರ್ತಿ ಬಲುವಿಧದ ಹಕ್ಕಿಗಳು
ಮೊಳಗಿದವು ಇಲ್ಲಿ ಇಂಚರದಿ ಹಾಡುಗಳು

ಜುಳುಜುಳನೆ ಹರಿವ ತೊರೆಗಳು ಭರದಿ ಮೈದುಂಬಿ
ಕೊಳೆಯ ತೊಳೆಯುತಲತ್ತ ಮುಂದೆ ಸಾಗುವವು !
ಹೊಳೆಯು ರಭಸದಿ ನುಗ್ಗಿ ನದಿ ಸಾಗರವ ಸೇರಿ
ಕಳುವು ಮಾಡಿತು ಕವಿಯ ಆರ್ದ್ರ ಹೃದಯವನು !

ಬಳೆಗಳಂದದಿ ಬಾಗಿ ನಿಂದಿಹವು ಬಿದಿರುಗಳು
ಮೆಳೆತುಂಬ ಎಲೆಚಿಗುರಿ ಚಲುವಚಿತ್ತಾರ
ಮಳೆರಾಯ ಬಾನ ಮದುಮಗನ ಕರೆತರುವಾಗ
ಸೆಳೆವಳದೋ ಹಸಿರು ಪೀತಾಂಬರದಿ ಅವನ

ಹಳೆಯದೆಲ್ಲವು ಮರೆತು ಹೊಸತು ಜೀವದಿ ಬೆರೆತು
ಅಳತೆ ಮೀರಿದ ಆನಂದವನು ತಂದು
ಕಳಿತ ಫಲಗಳ ತಿಂದ ಸಿಹಿಯಮೃತ ಜಿಹ್ವೆಯಲಿ
ಮಿಳಿಯುತೀ ಮನಸು ನೋಂಪಿಯ ನೋಡಿ ನಿಂದು

Sunday, June 26, 2011

ಪೈಪು ಕೊಟ್ಟ ಗೋವಿಂದ ಹೆಗಡೆಯವರಿಗೆ ನಮ್ಮ ವಂದನೆಗಳು!

ಸಾಂಕೇತಿಕ ಚಿತ್ರ ಕೃಪೆ: ಅಂತರ್ಜಾಲ
ಪೈಪು ಕೊಟ್ಟ ಗೋವಿಂದ ಹೆಗಡೆಯವರಿಗೆ ನಮ್ಮ ವಂದನೆಗಳು!

[ ಆತ್ಮೀಯ ಸ್ನೇಹಿತರೇ, ನಮಸ್ಕಾರ. ಹಾಸ್ಯಸಪ್ತಾಹದ ೭ನೇ ದಿನ ಇಂದು. ರಾತ್ರಿ ಹತ್ತುಗಂಟೆಗೆ ಸಮಾರೋಪ : ಬ್ಲಾಗ್ ಮತ್ತು ಬಜ್ ಮುಖಾಂತರ ನೇರವಾಗಿ ನಿಮ್ಮೊಡನೆ ಸಂವಹಿಸಿವುದರೊಂದಿಗೆ ನಡೆಯುತ್ತದೆ. ಆಸಕ್ತರು ಭಾಗವಹಿಸಲು ವಿನಂತಿಸುತ್ತೇನೆ.ವಿಷಯ: ’ ನಿಮ್ಮೊಡನೆ ವಿ.ಆರ್.ಭಟ್ ಬ್ಲಾಗಿನ ಬಗ್ಗೆ ನಿಮ್ಮ ಅನಿಸಿಕೆ’. ವಾರದಕಾಲ ನೀವು ಹಲವು ಹಾಸ್ಯ ಕಥಾನಕಗಳನ್ನು ಓದಿದ್ದೀರಿ. ಯಾವುದೇ ಪೂರ್ವತಯಾರಿಯಿಲ್ಲದೇ ಅಂಕದ ಪರದೆಯನ್ನು ಸರಿಸಿಬಿಟ್ಟಿದ್ದೆ; ವೇದಿಕೆಗೆ ಬಂದಮೇಲೇ ರೂಪಿಸಿದ ೭ ದಿನಗಳ ಪ್ರಹಸನ ಇದಾಗಿದೆ. ಬಂದ ಅತಿಥಿಗಳು ಊಟಕ್ಕೆ ಕುಳಿತಾಗ " ನಮ್ಮ ಅಡುಗೆ ನಿಮಗೆ ರುಚಿಸುವುದಿಲ್ಲವೋ ಏನೋ " ಎಂದು ಹೇಳುವುದು ನಮ್ಮ ಸಹಜ ವಾಡಿಕೆ, ಅದೇ ರೀತಿ ನನ್ನ ಹಾಸ್ಯ ಬರಹಗಳು ತಮಗೆ ಖುಷಿಕೊಟ್ಟವೋ ಅಥವಾ ಮತ್ತೊಂದಷ್ಟು ನೋವು ಕೊಟ್ಟವೋ ಅಷ್ಟಾಗಿ ಪಕ್ಕಾ ಆಗಲಿಲ್ಲ. ಆದರೂ ಹೀಗೊಂದು ಅಪರೂಪದ ಪ್ರಯತ್ನವನ್ನು ಬ್ಲಾಗ್ ಮೂಲಕ ನಡೆಸಿದ್ದೇನೆ ಎಂಬ ಸಮಾಧಾನವಿದೆ. ಹಲವು ಸಮ್ಮಿಶ್ರ ಸರಕಾರಗಳನ್ನು ನೋಡಿದ ನಿಮಗೆ ಇವತ್ತಿನ ಈ ಸಮ್ಮಿಶ್ರ ಕಥಾನಕ ಕೊಡುವುದರೊಂದಿಗೆ ಹಾಸ್ಯಸಪ್ತಾಹ ಮುಕ್ಕಾಲು ಭಾಗ ಸಂಪನ್ನಗೊಂಡಿದೆ. ರಾತ್ರಿಯ ನೇರ ಸಂವಹನದೊಂದಿಗೆ ಅದು ಮುಗಿಯುತ್ತದೆ. ಮತ್ತೆ ಎಂದಿನಂತೇ ಹಲವು ಮಜಲುಗಳ ಬರಹಗಳು ಮುಂದುವರಿಯುತ್ತವೆ, ಜೊತೆಗೆ ಆಗಾಗ ಹಾಸ್ಯ ಕೂಡಾ. ಸಮಯ ವ್ಯಯಿಸಿ ಓದುವ ನಿಮ್ಮಲ್ಲರಿಗೂ ಸತತ ಅಭಾರಿಯಾಗಿದ್ದೇನೆ]

ಸುಮಾರು ೨೫ ವರ್ಷಗಳಿಗೂ ಮೊದಲಿನ ಕಾಲ. ಆಗೆಲ್ಲಾ ಹಳ್ಳಿಗಳಲ್ಲಿ ನಾಟಕವೇ ಪ್ರಧಾನ ಆಕರ್ಷಣೆ. ಯಾಕೆಂದರೆ ಸ್ಥಳೀಯ ಜನರೇಸೇರಿಕೊಂಡು ನಾಟಕವಾಡುತ್ತಿದ್ದರು. ಬಣ್ಣ, ಸಾಮಗ್ರಿ, ವೇಷ-ಭೂಷಣ ಅಂತ ಅದೂ ಇದೂ ಖರ್ಚುಗಳಿರುವುದರಿಂದ ವರ್ಷಕ್ಕೆಕೇವಲ ಒಮ್ಮೆಮಾತ್ರ ಸಿಗುವಂತಹ ಮನೋರಂಜನೆ ಇದಾಗಿರುತ್ತಿತ್ತು. ಇಲ್ಲಿ ನಾಟಕ ಹೇಗಿತ್ತು ಅನ್ನುವ ಬದಲು ನಾಟಕದಲ್ಲಿಅಭಿನಯಿಸಿದವರು ನಿಭಾಯಿಸುವ ರೀತಿಯೇ ನಗುಬರಿಸುತ್ತಿತ್ತು.

ಮೂಲತಃ ಅಭಿನಯಿಸುವ ಹಳ್ಳಿಗರು ಹುಟ್ಟು ಕಲಾವಿದರೇನಲ್ಲ. ಹರೆಯದಲ್ಲಿ ಹತ್ತಾರು ಜನರೆದುರಿಗೆ ’ಚೆನ್ನಾಗಿ ಪಾತ್ರ ಮಾಡಿದ್ದಾನಪ್ಪಾ’ ಎನಿಸಿಕೊಳ್ಳುವ ಆಸೆ, ಹಾಗೊಮ್ಮೆ ಚಾರ್ಜ್ ಆದ ಬ್ಯಾಟರಿ ಮುಂದಿನ ವರ್ಷದ ತನಕ ಸ್ಟ್ಯಾಂಡ್ ಬೈ ಮೋಡ್ ನಲ್ಲಿ ಬಾಳಿಕೆ ಬರುತ್ತಿತ್ತು! ಅದರಲ್ಲಂತೂ ಮದುವೆಯ ವಯಸ್ಸಿನ ಹುಡುಗರಿಗೆ ಪಾತ್ರಮಾಡಿ ಸೈ ಎನಿಸಿಕೊಂಡುಬಿಟ್ಟರೆ, ವೇದಿಕೆಯ ಮುಂದೆ ಕುಳಿತ ಹುಡುಗಿಯರ ಮುಖದಲ್ಲಿ ನಗು ಕಂಡುಬಿಟ್ಟರೆ ಮೌಂಟ್ ಎವರೆಸ್ಟ್ ಹತ್ತಿ ದಾಖಲೆ ಮಾಡಿದ್ದಕ್ಕಿಂತಾ ಒಂದು ಕೈ ಹೆಚ್ಚೇ ಎಂಬ ಅನುಭವ!

ವೇದಿಕೆಯನ್ನು ಶಾಲೆಯ ಅಂಗಳದಲ್ಲಿ ನಿರ್ಮಿಸುತ್ತಿದ್ದುದು ಅಭ್ಯಾಸ. ಅಲ್ಲಿ ವೇದಿಕೆಗಳಿಗೆಲ್ಲ ರೆಡಿ ಮೇಡ್ ವ್ಯವಸ್ಥೆ ಯಾವುದೂ ಇರುತ್ತಿರಲಿಲ್ಲ. ಶಾಲೆಯ ಹುಡುಗರು ತಮ್ಮ ಶ್ರಮದಾನದಿಂದ ಸುತ್ತಲೂ ಕಲ್ಲಿನ ಕಟ್ಟೆ ಕಟ್ಟಿ ಅದರೊಳಗೆ ಮಣ್ಣು ತುಂಬಿಸಿ ಪರ್ಮನೆಂಟ್ ವೇದಿಕೆ ನಿರ್ಮಿಸಿದ್ದು ಅದಾಗಲೇ ನಮ್ಮೂರಿನ ಇತಿಹಾಸದ ಪುಟದಲ್ಲಿ ದಾಖಲಾಗಿತ್ತು. ಅದೇ ವೇದಿಕೆಯ ಮೇಲೆ ಹವ್ಯಾಸೀ ಕಲಾವಿದರೇ ತಮ್ಮ ಮನೆಗಳಿಂದ ಹಾಗೂ ಪಕ್ಕದ ಮನೆಗಳಿಂದ ಅಡಕೆ ಮರದ ತುಂಡುಗಳನ್ನು ತಂದು ನಾಲ್ಕು ಮೂಲೆಯಲ್ಲಿ ಕಂಬ ನಿಲ್ಲಿಸುತ್ತಿದ್ದರು. ಮೇಲ್ಗಡೆ ತೆಂಗಿನ ಗರಿಯಿಂದ ಮಾಡಿದ ಮಡಲು ತಡಿಕೆಯ ಹೊದಿಕೆ. ಇದು ವೇದಿಕೆಯ ಸ್ಕೆಲಟನ್ !

ಇನ್ನು ಸೀನರಿಗಳು, ಧ್ವನಿವರ್ಧಕ, ಸಂಗೀತ ಪರಿಕರಗಳು, ಸಭೆಗೆ ಬಂದವರಿಗೆ ಹಾರತುರಾಯಿಗಳು ಹೀಗೇ ಹಲವು ಹತ್ತು ಬೇಕು. ತೀರಾ ತುಟ್ಟಿಯಾಗಿಬಿಟ್ಟರೆ ಸಾಧ್ಯವಿಲ್ಲ. ಹಾಗಾಗಿ ಅಗ್ಗದಲ್ಲಿ ಸಿಗುವ ಮಾಲುಗಳನ್ನು ಹುಡುಕುವುದು ಅನಿವಾರ್ಯವಾಗಿತ್ತು. ಅದಕ್ಕಾಗಿ ಹಳ್ಳಿಗಳಲ್ಲಿ ಅಲ್ಲಲ್ಲಿ ಆ ಯಾ ಪರಿಕರಗಳಿಗೆ ಸಂಬಂಧಿಸಿದಂತೇ ಕೆಲವು ಜನ ಇರುತ್ತಿದ್ದರು. ಅವರುಗಳಲ್ಲಿ ಆ ಯಾ ಸೌಲಭ್ಯ ಬಾಡಿಗೆಗೆ ದೊರೆಯುತ್ತಿತ್ತು ಮಾತ್ರವಲ್ಲ ಬಾಡಿಗೆಗೆ ಕೊಟ್ಟ ವಸ್ತುವಿನ ಜೊತೆ ಅವರು ತಾವೂ ಬಿಜಯಂಗೈದು ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಬಣ್ಣದ ಸೀನರಿಗಳು ಮಣಕಿ ಮಡಿವಾಳರಲ್ಲಿ ಸಿಗುತ್ತಿದ್ದವು, ಕಡತೋಕದಲ್ಲೊಬ್ಬರು ಹೊಸದಾಗಿ ಕೀ ಬೋರ್ಡ್ ತರಿಸಿದ್ದು ಅವರ ಜೊತೆಗೆ ತಬಲಾ ಗಿಬಲಾ ಎಲ್ಲಾ ಬಾರಿಸುವವರ ವ್ಯವಸ್ಥೆ ಸಿಗುತ್ತಿತ್ತು. ಶೆಟ್ಟಿ ಮಾಸ್ತರು ಬಣ್ಣ ಬಳಿಯಲು ಸಹಕರಿಸುತ್ತಿದ್ದರು-ಅವರಲ್ಲಿ ಟೋಪನ್ನು, ಚಿಕ್ಕ-ಪುಟ್ಟ ಸರಗಳು ಇವೆಲ್ಲಾ ಇದ್ದವು.

ಒಂದು ನಾಟಕ ನಡೆಯಬೇಕೆಂದರೆ ವ್ಯವಸ್ಥಾಪಕರಿಗೆ ಏಳು ಕೆರೆ ನೀರು ಕುಡಿದ ಅನುಭವ! ಪರದೆಗಳನ್ನು ಕಟ್ಟಬೇಕಲ್ಲಾ, ಅದಕ್ಕೆ ಮೊದಮೊದಲು ಬಿದಿರುಗಳಗಳನ್ನು ಬಳಸುತ್ತಿದ್ದರು, ನೇರವಾಗಿರುವ ಬಿದಿರ ಗಳ ಸಿಗದೇ ಇದ್ದರೆ ಸೀನರಿ ಸ್ವಲ್ಪ ಸೊಟ್ಟಗೆ ನಿಲ್ಲುತ್ತಿತ್ತು! ಅದೆಲ್ಲಾ ನಮ್ಮಲಿ ಅಡ್ಜಸ್ಟ್ ಆಗುತ್ತಿತ್ತು ಬಿಡಿ. ವಿಶಾಲ ಹೃದಯದ ಗೋವಿಂದ ಹೆಗಡೆಯವರು ಬಿದಿರಗಳಗಳ ಬದಲಾಗಿ ಪರ್ಪೋಪೈಪು ಕೊಡಲು ಮುಂದಾಗಿದ್ದರು! ಪೈಪುಗಳು ನೇರವಾಗಿ ಇರುವುದರಿಂದ ಆ ಸರ್ತಿ ಸೊಟ್ಟಗೆ ನಿಲ್ಲುವ ಸೀನರಿಗಳು ನೆಟ್ಟಗೆ ನಿಲ್ಲಲು ಕಲಿತವು! ಮಡಚಲಾಗುವ ಸೀನರಿಗಳನ್ನು ಆ ಯಾ ಸನ್ನಿವೇಶಗಳಿಗೆ ತಕ್ಕಂತೇ ಗಡಗಡೆ ಹಾಗೂ ಹಗ್ಗಗಳ ಸಹಾಯದಿಂದ ಕೆಳಗೆ ಬಿಡುವುದು ಮತ್ತು ಮೇಲೆತ್ತುವುದು ನಡೆಯುತ್ತಿತ್ತು. ಕರೆಂಟನ್ನು ಅಷ್ಟುದೂರದಲ್ಲಿರುವ ಕಂಬದಿಂದ ಲೈನ್ ಮನ್ ಕೊಡುವ ವ್ಯವಸ್ಥೆ ಮಾಡುತ್ತಿದ್ದ-ಆತನನ್ನು ಸ್ವಲ್ಪ ನೋಡಿಕೊಂಡ್ರೆ ಸಾಕಾಗುತ್ತಿತ್ತು. ಸೈಡ್ ವಿಂಗ್‍ಗಳಿಗೆ ಆಯ ಅಳತೆ ಒಂದೇ ತೆರನಾಗಿ ಇರುತ್ತಿರಲಿಲ್ಲವಾಗಿ ಮಡಿವಾಳರು ತಂದ ಸೀನರಿಗಳು ಸಾಲದೇ ಬಿದ್ದಾಗ ಊರಲ್ಲಿ ಧಾರಾಳಿಗಳಾದ ಕೆಲವು ಹೆಂಗಸರಲ್ಲಿ ಬೇಡಿ ಬಣ್ಣದ ಸೀರೆಗಳನ್ನು ತರಿಸಿ ಖುಲ್ಲಾ ಜಾಗವನ್ನು ಭರ್ತಿಮಾಡುವ ವ್ಯವಸ್ಥೆಯಾಗುತ್ತಿತ್ತು. ದೀಪದ ಬಲ್ಬುಗಳು ಮತ್ತು ಅದಕ್ಕೆ ಕಲರ್ ಕಲರ್ ಹೊದಿಕೆಗಳನ್ನೂ ಮಡಿವಾಳರೇ ಏಕಗವಾಕ್ಷೀ ವ್ಯವಸ್ಥೆಯಂತೇ ತಂದುಬಿಡುತ್ತಿದ್ದರು. ವರ್ಷಾ ವರ್ಷಾ ಬರುವ ಪ್ರೀತಿಯಿಂದ ಅವರು ಹೊಸದಾಗಿ ಆ ವರ್ಷ ಜಿಗ್ ಜಾಗ್ ಲೈಟು ತಂದಿದ್ದರು.

ಇಷ್ಟೆಲ್ಲಾ ಆದಮೇಲೆ ಕಾವಲುಪಡೆಯ ನಿರ್ಮಾಣ ಆಗಬೇಕಾಗುತ್ತಿತ್ತು. ಯಾರೋ ಮಜಕ್ಕೆ ಹತ್ತಿರದ ಕರೆಂಟ್ ಲೈನುಗಳಿಗೆ ಹಳೆಯ ಸೈಕಲ್ ಚೈನು/ ಎರಡೂ ಬದಿಗೆ ಕಲ್ಲುಕಟ್ಟಿದ ಹಗ್ಗದ ತುಂಡು ಈಥರದ್ದೇನನ್ನಾದರೂ ಎಸೆದು ವಿದ್ಯುದ್ದೀಪ ಆರಿಹೋಗುವ ಸಂಭವನೀಯತೆ ಇರುತ್ತಿತ್ತು. [ಇದೆಲ್ಲಾ ಅನುಭವ ಜನ್ಯವೇ ಆಗಿ ಕೆಲವಾರು ವರ್ಷಗಳೇ ಸಂದಿದ್ದವು.]ಹಾಗೆ ಕರೆಂಟು ಹೋದರೆ ಲೈನ್ ಮನ್ ಏನೂ ಮಾಡಲೂ ಕಷ್ಟವಾಗುತ್ತಿತ್ತು. ಬೇರೆ ಯಾವುದೋ ಅನಿವಾರ್ಯತೆಯಲ್ಲಿ ಕರೆಂಟು ಹೋದರೆ ಸೀಮೆ ಎಣ್ಣೆ ಗ್ಯಾಸ್ ಲೈಟು ಬೇಕಾಗುತ್ತಿತ್ತು. ಹಾಗೆ ಕರೆಂಟು ಹೋದಾಗ ಮಾತನಾಡಿದ್ದು ಕೇಳಿಸಲಿ ಎಂಬ ಕಾರಣಕ್ಕೆ ಧ್ವನಿವರ್ಧಕಕ್ಕೆ ಬ್ಯಾಟರಿ ತರುತ್ತಿದ್ದರು. ಅಕಸ್ಮಾತ್ ಕರೆಂಟು ಹೋದರೆ ಬೇಗ ಬರಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿರುತ್ತಿತ್ತು. ಹಾಗೆ ಕರೆಂಟು ಹೋದರೆ ವ್ಯವಸ್ಥಾಪಕರ ಮುಖದಲ್ಲಿ ಎಷ್ಟೆಷ್ಟೋ ನೋವಿನ ನಿರಿಗೆಗಳು ಕತ್ತಲಲ್ಲೂ ಕಾಣುತ್ತಿದ್ದವು! ಯಾಕೆಂದರೆ ವ್ಯವಸ್ಥಾಪಕರೇ ಪಾತ್ರಧಾರಿಗಳೂ ಆಗಿರುತ್ತಿದ್ದರು. ಬಣ್ಣ ಹಚ್ಚಿಕೊಂಡೂ ಒಮ್ಮೊಮ್ಮೆ ಹೊರಗೆಬಂದು ಅವರು ಚಡಪಡಿಸುವ ರೀತಿ ಮಾತ್ರ ಇಂದಿಗೂ ಕಣ್ಣೆದುರು ಬಂದು ನಿಲ್ಲುತ್ತದೆ.

ಹೀಗೆ ಪೂರ್ಣರಾತ್ರಿ ನಾಟಕ ಪ್ರದರ್ಶಿಸುವ ಈ ಮೇಕ್ ಶಿಫ್ಟ್ ನಾಟಕ ಮಂಡಳಿಯವರಿಗೆ ನಿದ್ದೆ ಬಾರದಿರಲೆಂದು ಪೊಮ್ಮನ ಅಂಗಡಿಯ ಬುಂಚಾಣಿ ಚಾ ಸಪ್ಲೈ ಆಗುತ್ತಿತ್ತು. ಇದಕ್ಕಾಗಿ ಒಂದು ಮೇಜು ಮತ್ತು ಒಂದೇ ಮುರುಕು ಖುರ್ಚಿ, ಐದಾರು ಪಾತ್ರೆಗಳು, ಸೀಮೆ ಎಣ್ಣೆ ಗ್ಯಾಸ್ ಸ್ಟವ್ ಹೀಗೆ ಇವಿಷ್ಟರಿಂದಲೇ ನಡೆಯುವ ಇಡೀ ಪೊಮ್ಮನ ಅಂಗಡಿಯೇ ನಾಟಕ ತಾಣದ ಹೊರಬದಿಗೆ ಬಂದು ಸ್ಥಾಪಿತವಾಗುತ್ತಿತ್ತು. ಅತಿಯಾದ ಖಾರದ ಮಿರ್ಚಿ ಮತ್ತು ಕುದಿಸಿ ಕುದಿಸಿ ಏನೂ ಸಾರವೇ ಉಳಿಯದ ಟೀ ಪುಡಿಯನ್ನೇ ಮತ್ತೆ ಮತ್ತೆ ಕುದಿಸಿ ತೆಗೆದ ಚಾ ಕಣ್ಣಿನ [ಡಿಕಾಕ್ಶನ್‍ಗೆ ನಾವು ಬಳಸುವ ಶಬ್ದ] ಕೆಟ್ಟ ಚಾ ಕುಡಿದ ಅನುಭವ ಜೀವನ ಪರ್ಯಂತ ಪೊಮ್ಮನ ಸವಿನೆನಪನ್ನು ಮರುಕಳಿಸುತ್ತದೆ. ಇಷ್ಟಿದ್ದರೂ ಪೊಮ್ಮನಿಗೆ ಬೆಳವರೆಗೆ ನಡೆಯುವ ವ್ಯಾಪಾರ ಇಡೀ ವರ್ಷದಲ್ಲೇ ಆತನಿಗೆ ಬೇರೇ ಕಡೆ ಸಿಗದಷ್ಟು !

ಇಷ್ಟೆಲ್ಲಾ ಆಯಾಮಗಳ ನಡುವೆ ಯಾರಾದರೂ ಲೋಕಲ್ ರಾಜಕೀಯದವರನ್ನು ವೇದಿಕೆಯ ಮೇಲೆ ಕರೆದು ಸಭೆ ನಡೆಸುವುದು ಪದ್ದತಿಯೇ ಆಗಿಬಿಟ್ಟಿತ್ತು; ಹಾಗೊಮ್ಮೆ ಮಾಡದಿದ್ದರೆ ಮುಂದಿನವರ್ಷದಿಂದ ನಾಟಕಮಾಡಲು ಅವರು ತೊಂದರೆ ಕೊಡುತ್ತಿದ್ದರು. ನಾಟಕದ ಆರಂಭಕ್ಕೂ ಮುನ್ನ ವೇದಿಕೆಯಲ್ಲಿ ಕೆಲಸಕ್ಕೆ ಬಾರದ ಜನ ಕೂತು ತಲೆಚಿಟ್ಟು ಹಿಡಿಸುವ ಭಾಷಣ ನಡೆಸುತ್ತಿದ್ದರು. ಅವರಿಗೆಲ್ಲಾ ಹಾರ-ತುರಾಯಿ ಅರ್ಪಣೆಯಾಗಿ ಅವರೆದ್ದು ಆಚೆ ಬಂದಮೇಲೆ ’ಪಾಹಿ ಶಾಂತ ಭುವನೇಶ್ವರ’ ಆರಂಭ. ಇದಕ್ಕೆ ಅಷ್ಟೂ ಪಾತ್ರಧಾರಿಗಳು ವೇದಿಕೆಯ ಅಂಕದ ಪರದೆಯ ಹಿಂದೆ ಬಂದು ನಿಲ್ಲುತ್ತಿದ್ದರು. ತೆಂಗಿನಕಾಯಿ ಒಡೆದು ಧೂಪ ಹಚ್ಚಿ ಹಾಡಿದ್ದೋ ಹಾಡಿದ್ದು. ನನ್ನಂಥವರು ಮಡಿವಾಳರ ಪರದೆಯ ಸಂದಿಯಿಂದ ಇಣುಕಿ ಒಳಗೆ ನಡೆಯುವುದನ್ನು ’ಎಕ್ಸ್ ಕ್ಲೂಸಿವ್’ ಆಗಿ ನೋಡುತ್ತಿದ್ದೆವು. ಮಡಿವಾಳರು ಕಣ್ಣುಬಿಟ್ಟರೆ ಅವರಿಗೆ ಪರದೆಯ ಹಗ್ಗ ಎಳೆಯಲು ಸ್ವಲ್ಪ ಸಹಕಾರ ಕೊಟ್ಟರೆ ಆಯ್ತಪ್ಪ-ಸಮಸ್ಯೆಗೆ ಅಲ್ಲೇ ಪರಿಹಾರ!

ನಾಟಕದ ಬಗ್ಗೆ ಹೊಸದಾಗಿ ಮತ್ತೆ ಹೇಳಬೇಕೆ? ಹಳ್ಳೀ ನಾಟಕ.ಆದರೆ ನಾಟಕ ನಡೆಯುವಾಗ ಅಗೊಮ್ಮೆ ಸ್ವಲ್ಪ ’ಸುಧಾರಣೆ’ಯೂ ಆಗಿತ್ತು. ನಾಟಕದ ಹೆಣ್ಣು ಪಾತ್ರವೊಂದನ್ನು ಪಕ್ಕದ ಊರಿನ ಶಾಂತಲಾ ನಿರ್ವಹಿಸಿದ್ದಳು. ಇರುವುದರಲ್ಲೇ ಸುಂದರಿ ಎನಿಸಿಕೊಂಡ ಆಕೆಯ ಪ್ರೇಮಿಯ ಪಾತ್ರವನ್ನು ಸುಧಾಕರ ನಿರ್ವಹಿಸಿದ್ದ. ನಾಟಕ ಹಳ್ಳಿಗರ ಲೆಕ್ಕದಲ್ಲಿ ಚೆನ್ನಾಗೇ ನಡೆಯಿತು. ಬೆಳಿಗ್ಗೆ ೬ ಗಂಟೆಗೆ ವಂದನಾರ್ಪಣೆ ನಡೆಯಬೇಕು. ಅದು ಅಲ್ಲಿ ಸಾಮಗ್ರಿಗಳನ್ನು ಕೊಟ್ಟವರಿಗೆ, ಸಹಕಾರ ಕೊಟ್ಟವರಿಗೆ, ಬಾಡಿಗೆಗೆ ಸೌಲಭ್ಯಗಳನ್ನು ಕೊಟ್ಟವರಿಗೆ ಹೀಗೇ ಈ ಎಲ್ಲರಿಗೆ. ಸುಧಾಕರ ವಂದನಾರ್ಪಣೆ ಮಾಡಬೇಕಾಗಿತ್ತು. ಆದರೆ ನಾಟಕ ಮುಗಿಯುತ್ತಿದ್ದಂತೇ ಸುಧಾಕರ ಮತ್ತು ಶಾಂತಲಾ ನಾಪತ್ತೆಯಾಗಿದ್ದರು ಎಂಬುದು ಗೊತ್ತಾಗಿದ್ದು! ನಾಟಕದಲ್ಲಿ ಅವರದ್ದು ಮುರಿದು ಬಿದ್ದ ಪ್ರೇಮ; ಹೊರಗಡೆ ಅದು ಏನೋ ಅರ್ಥವಾಗಿರಲಿಲ್ಲ. ಅವರ ಸೀನುಗಳು ಸುಮಾರು ಬೆಳಗಿನ ಜಾವ ೩ ಗಂಟೆಗೇ ಮುಗಿದಿದ್ದವು. ಆಮೇಲೆ ಅವರನ್ನು ಕಂಡವರಿದ್ದೇವೆ ಎಂದವರಿಲ್ಲ.

ವಂದನಾರ್ಪಣೆ ಮಾಡಲು ಬೇರಾರಿಗೂ ಅಷ್ಟಾಗಿ ಗೊತ್ತಾಗುತ್ತಿರಲಿಲ್ಲ. ನಾಟಕದ ಮಾತುಗಳನ್ನು ಎಲ್ಲರೂ ಕಂಠಪಾಠ ಮಾಡಿರುತ್ತಿದ್ದರು. ಒಳಗಡೆ ಅವರವರಲ್ಲೇ "ಬೀದಿ ದೃಶ್ಯ ಬೀದಿ ದೃಶ್ಯ " "ಜಂಗಲ್ ಸೀನು ಜಂಗಲ್ ಸೀನು " ಹೀಗೆಲ್ಲಾ ಕೂಗುವುದು ಆಗಾಗ ಪ್ರೇಕ್ಷಕರಿಗೂ ಕೇಳುತ್ತಿತ್ತು! ಅಂತೂ ವಂದನಾರ್ಪಣೆ ಮಾಡಲು ’ಸ್ವಲ್ಪ ಅಡ್ಡಿಲ್ಲ’ ಎನಿಸಿಕೊಂಡ ೩೦ ವಯಸ್ಸಿನ ಗೋವಿಂದ ಹೆಗಡೆಯವರೇ ಸ್ವತಃ ಬಂದರು. ಸಹೃದಯರಾದ ಅವರು ಊರಿನ ಮರ್ಯಾದೆ ಕಾಪಾಡಲು [ಪರ ಊರ ಪ್ರೇಕ್ಷಕರೂ ಇರುತ್ತಾರೆ ಎಂಬುದನ್ನು ಗಮನಿಸಿ]ಹಾಗೆ ಬಂದಿದ್ದರು." ಈಗ ವಂದನಾರ್ಪಣೆ. ವೇದಿಕೆಗೆ ಹಾಸಲು ಜಮಖಾನ ಕೊಟ್ಟ ರಾಮಚಂದ್ರ ಭಟ್ಟರಿಗೆ ನಮ್ಮ ವಂದನೆಗಳು, ಅಡಕೆ ಕಂಬ ಕೊಟ್ಟ .........ವಂದನೆಗಳು, ಮಡ್ಲು ತಡಿಕೆ ಕೊಟ್ಟ...ವಂದನೆಗಳು"...ಮಧ್ಯೆ ಗಾಡಿ ನಿಲ್ಲುತ್ತಿತು. ನಾಟಕ ಮಂಡಳಿಯ ಯಾರ್ಯಾರೋ ಒಂದೊಂದೇ ಹೆಸರು ಬರೆದು ಚೀಟಿ ತಂದುಕೊಟ್ಟಾಗ ವಂದನಾರ್ಪಣೆ ಮುಂದುವರಿಯುತ್ತಿತ್ತು. " ಪರ್ಪೋ ಪೈಪುಗಳನ್ನು ಕೊಟ್ಟ ಗೋವಿಂದ ಹೇಗಡೆಯವರಿಗೆ ನಮ್ಮ ವಂದನೆಗಳು [ಅವರು ತಮಗೇ ಹೇಳಿಕೊಂಡಿದ್ದು ಎಂಬುದನ್ನು ಗಮನಿಸಿ], ಸಮಯಕ್ಕೆ ಸರಿಯಾಗಿ ಕೆಂಪು ಸೀರೆ ಕೊಟ್ಟ ಪಾರ್ವತಮ್ಮನವರಿಗೆ ವಂದನೆಗಳು, ಸೀಮೆ ಎಣ್ಣೆ ಗ್ಯಾಸ್ ಲೈಟು ಕೊಟ್ಟ ನಾಗೇಶ್ ಶೆಟ್ಟರಿಗೆ ವಂದನೆಗಳು, ಕರೆಂಟು ಸರಿಯಾಗಿರುವಂತೇ ದೊರಕಿಸಿಕೊಟ್ಟ ಲೈನ್ ಮನ್ ....ವಂದನೆಗಳು "

ವಂದನಾರ್ಪಣೆ ಮುಗಿದಾಗ ಬರೊಬ್ಬರಿ ಬೆಳಗಿನ ಏಳುಗಂಟೆ ಬಾರಿಸಿತ್ತು. ಬಾರಿಸಿತ್ತು ಎನ್ನಲು ಅಡ್ಡಿಲ್ಲ ಬಿಡಿ, ಆಗೆಲ್ಲಾ ಅದೆಂಥದೋ ಬೆಲ್ಲದಂತಹದ್ದನ್ನು ಹಚ್ಚಿ ರಿಪೇರಿ ಮಾಡುವ ಗೋಡೆ ಗಡಿಯಾರಗಳೇ ಇದ್ದವು! ಎಲ್ಲೋ ಹೋಗಿದ್ದ ಸುಧಾಕರ-ಶಾಂತಲಾ ಎಷ್ಟೋ ದಿನಗಳ ನಂತರ ಮರಳಿದ್ದರು. ಅವರು ಕೆಲವು ಸಿನಿಮಾ ಹೀರೋ-ಹೀರೋಯಿನ್ ಗಳ ರೀತಿ ಮತ್ತೆ ಕಾಯಂ ಕೆಲವು ನಾಟಕಗಳಲ್ಲಿ ಜೋಡಿಯಾಗಿದ್ದರು; ಈಗ ಆ ಜೋಡಿ ದೇಶಕ್ಕೆ ಎರಡೆರಡು ಕೊಡುಗೆ ನೀಡಿದೆ! ಸುಧಾಕರ-ಶಾಂತಲಾ ಎಂದು ನಾವು ಹೇಳಬೇಕಾಗಿಲ್ಲ ’ಶಾಂತಲಾ ಸುಧಾಕರ’ ಎಂದು ಶಾಂತಲಾ ಅವರೇ ಸಹಿಮಾಡುತ್ತಾರೆ!

ಕೆಲವು ಜೋಕುಗಳು :

1. Father: Your teacher says she finds it
Impossible to teach you anything!
Son: That’s why I say she’s no good!

2. If Malika plays roll of Draupadi,
Duryodhan will say pheli bhabhi ko sari to pehna,
hum to dekhen ye vastro mein kaisi lagti hai..?

3. Human brain is the most outstanding object in world.It functions 24 hours a day,365 days a year.It functions right from the time we are born, and stop only when we enter the examination hall.

4. Man at medical store:I need poison
Chemist: I can’t sell you that

Man shows his marriage certificate
.
.
.
Chemist: Oh! sorry, I didn’t knew you had a prescription.

5. Ladies hostel caught Fire

It took 1 hour to bring the Fire under control
& another 3 hours to bring d Firemen under control.


6. After a quarrel, a husband said to his wife,
You know, I was a fool when I married you.
She replied, Yes dear, I know
but I was in love and didn't notice.

7. Doctor to Banta : You will die within 2 hours.
Do you want to see any one before you die?
Banta : Yes. A good doctor.

8. On a romantic day Banta’s girlfriend asks him,
“Darling on our engagement day will you give me a ring?”
Banta : “Ya sure, from landline or mobile”.

9. Santa and Banta were fixing a bomb in a car.
Santa : What would you do if the bomb explodes while fixing.
Banta : Don’t worry, I have a one more.

10. Patient : What are the chances
of my recovering doctor?

Doctor : One hundred percent.
Medical records show that
nine out of ten people die of the disease you have.
Yours is the tenth case I’ve treated.The others all died.

11. Positive thinking is like…..
you are standing on the middle of the road………
&
suddenly a crow beats on your head….
But you remain calm…
and thanks to God…
that cows dont fly

12. A man went to the Police Station wishing
to speak with the burglar who had
broken into his house the night before.

“You’ll get your chance in court,” said the Police officer.

“No, no no!” said the man.
“I want to know how he got into the house without waking my wife. I’ve been trying for years.”

13. Sardarji & his wife going to city in auto.
Driver adjusted mirror.
Sardarji shouted you are seeing my wife.
Go & sit back. I will drive auto

15. A student was asked to write a signboard for the traffic rules near the college campus

He wrote:-

“Drive Carefully!
Don’t kill the students,
wait for the Teachers”wait for the Teachers”

------
hope you enjoyed all these, thank you,
ನಮಸ್ಕಾರ


Saturday, June 25, 2011

ಮಾದೇಸ್ವರಾ ದಯಬಾರದೇ ?

ಚಿತ್ರ ಕೃಪೆ : ಅಂತರ್ಜಾಲ
ಮಾದೇಸ್ವರಾ ದಯಬಾರದೇ ?
[ ಸ್ನೇಹಿತರೇ,ನಮಸ್ಕಾರ. ಇವತ್ತು ಹಾಸ್ಯಸಪ್ತಾಹದ ೬ನೇ ದಿನ. ಈ ದಿನವನ್ನು ಕೇವಲ ತಮಾಷೆಗಾಗಿ ಮೀಸಲಿರಿಸಿದ್ದೇನೆ, ಯಾವುದೇ ವೈಚಾರಿಕ ಬರಹಗಳಿಗೆ ಜೊತೆಮಾಡದೇ ಏಕ್ದಂ ಜೋಕ್ಸ್ ! ಭಯಂಕರ ಹಾಸ್ಯ ಪಟಾಕಿಗಳಿವೆ ಎಚ್ಚರಿಕೆ! : ಮಾದೇಸ್ವರಾ ದಯಬಾರದೇ ?]

ನಮ್ಮೂರಕಡೆಗೊಬ್ಬ ಅತಿ ವಿಶಿಷ್ಟ ವ್ಯಕ್ತಿ ಇದ್ದಾರೆ; ಇನ್ನೂ ಜೀವಂತ! ಅವರಿಗೆ ಸದಾ ತಾನು ಎಲ್ಲದರಲ್ಲೂ ಮುಂದು ಎನಿಸಿಕೊಳ್ಳುವಾಸೆ. ’ಅಪ್ಪನನ್ನು ದೂಡ್ಹಾಕಿ ಮಾವಿನಹಣ್ಣು ಹೆಕ್ಕುವುದು’ ಅವರ ಸ್ವಭಾವ! ಆ ನಮ್ಮ ಹಳ್ಳಿಯಲ್ಲೇ ಜನರೊಳಗೆ ವಿಷ ಬೀಜ ಬಿತ್ತಿ ತನ್ನ ಬೇಳೆ ಬೇಯಿಸಿಕೊಳ್ಳುವ ಸಾಧು ಜೀವಿ! ಅಡ್ಡಗೋಡೆಯಮೇಲೆ ದೀಪ ಇಟ್ಟು ಅದರಲ್ಲೇ ಎಣಿಸಿದ ಹಣದಿಂದ ಹೊಸಮನೆ ಕಟ್ಟಿದ್ದಾರೆ! ಎಲ್ಲದರಲ್ಲೂ ತನ್ನದೇ ಒಂದು ಡಿಫ಼ರೆಂಟ್ ಛಾಪು ಎನ್ನುವುದು ಅವರ ಸ್ವಭಾವ; ಹಲವೊಮ್ಮೆ ಅಡಿಗೆ ಬಿದ್ದರೂ ಮೂಗುಮಾತ್ರ ಮೇಲೇ ಇದೆ ಎನ್ನುವ ಜನ!

ಇಂತಹ ಮನುಷ್ಯನ ತಮ್ಮನ ಮಗನೊಬ್ಬ ಕಾಲೇಜಿನಲ್ಲಿ ಎಂ.ಎಸ್. ಸಿ ಮಾಡತೊಡಗಿದ. ಊರಜನ ಏನಾದರೂ ಕೇಳುತ್ತಿರುತ್ತಾರಲ್ಲ ಹಾಗೇ " ನಿಮ್ಮ ತಮ್ಮನ ಮಗ ಏನ್ಮಾಡ್ತಾನೆ ಈಗ? " ಕೇಳಿದ್ದಾರೆ, ಅದಕ್ಕೆ ಶುದ್ಧ ಇಂಗ್ಲೀಷಿನಲ್ಲಿ ಆತ ಹೇಳಿದ್ದು " ಅವ ಈಗ ಮ್ಯಾಟ್ನೀ ಕಾಲೇಜಿಗೆ ಹೋಗುತ್ತಿದ್ದಾನೆ." ಕೇಳಿದವರಿಗೆ ತಬ್ಬಿಬ್ಬು, ಯಾಕೆಂದ್ರೆ ಎಲ್ಲೂ ಕೇಳರಿಯದ ಹೆಸರು. ಸಿನಿಮಾ ಮಂದಿರಗಳಲ್ಲಿ ಮ್ಯಾಟ್ನಿ ಶೋ ಬಿಟ್ಟರೆ ಮ್ಯಾಟ್ನಿ ಕಾಲೇಜು ಎಂಬುದೂ ಇರುತ್ತದೆ ಅಂತ ಆಗಲೇ ಕೇಳಿದ್ದು ! ತಡವಾಗಿ ಅರ್ಥೈಸಿದ ಯಾರೋ ಸರಿಪಡಿಸಿದ್ದಾರೆ ಅದು ’ಬಾಟ್ನಿ ಕಾಲೇಜು’[ಸಸ್ಯ ಶಾಸ್ತ್ರದ ಅಧ್ಯಯನದ ಕಾಲೇಜು]

ಅದೇ ಆ ’ಗಣ್ಯ’ ವ್ಯಕ್ತಿ ಬೆಂಗಳೂರಿಗೆ ಒಮ್ಮೆ ಬಂದು ಹೋದ ತಿಂಗಳಾನುಗಟ್ಟಲೆ ಊರಕಡೆ ಎಲ್ಲರ ಜಗುಲಿಮೇಲೆ ಕುಂತು ಬೆಂಗಳೂರನ್ನು ಹೊಗಳುತ್ತಿದ್ದರು. ೨೪ ಅಂತಸ್ತುಗಳುಳ್ಳ ’ಬಿರಡಿಂಗು’, ಅದ್ಯಾವ್ದೋ ಬಾಗದಲ್ಲಿ ’ಗ್ಯಾಸ್ ಹೌಸು’ ಇತ್ಯಾದಿ ಇತ್ಯಾದಿ ಶಬ್ದಗಳನ್ನು ಬಳಸಿ ಅವರು ಹೊಡೆದ ಶಂಖಕ್ಕೆ ಜನ ನಗಲೂ ಆರದೆ ಅಳಲೂ ಆರದೆ ಇದ್ದರು. ಸ್ವತಃ ಪುಡಿರಾಜಕೀಯದಲ್ಲಿರುವ ಆತನನ್ನು ಎದುರುಹಾಕಿಕೊಂಡರೆ ಕಷ್ಟವೆಂದು ಭಾವಿಸಿ ಹೇಳಿದ ಸುದ್ದಿಯನ್ನೆಲ್ಲಾ ಸುಮ್ಮನೇ ಆಲಿಸುತ್ತಿದ್ದರು. ಅಂದಹಾಗೆ ಆತ ಹೇಳಿದ್ದು ಲಾಲ್ಬಾಗ್ ನಲ್ಲಿರೋ ಗ್ಲಾಸ್ ಹೌಸ್ !

------

ಎಸ್ಸೆಮ್ಮೆಸ್ಸುಗಳ ಮೂಲಕ ಹರಿದಾಡುವ ಜೋಕುಗಳು ಕೆಲವೊಮ್ಮೆ ಬಹಳ ತಮಾಷೆಯಾಗಿರುತ್ತವೆ. ಅವುಗಳಲ್ಲಿ ಒಂದೆರಡು ಸ್ಯಾಂಪಲ್ಲು:

೧. ಸ್ನೇಹಿತ ಪರಾಂಜಪೆಯವರು ೬ ತಿಂಗಳ ಹಿಂದೆ ಹೇಳಿದ್ದು-

ಚಿಕ್ಕಮಗಳೂರಿನ ಕಾಫೀಪುಡಿ ಅಂಗಡಿಯೊಂದರಲ್ಲಿ ಬರೆದ ಬೋರ್ಡು : ನಿಮ್ಮ ಬೀಜವನ್ನು ನಿಮ್ಮೆದುರೇ ಹುರಿದು, ಕುಟ್ಟಿ-ಪುಡಿಮಾಡಿ, ಪ್ಯಾಕ್ ಮಾಡಿ ಕೊಡಲಾಗುವುದು!

೨. ಇನ್ನೊಬ್ಬ ಸ್ನೇಹಿತ ಕಳುಹಿಸಿದ್ದು -

ಗುಂಡ - " ಅವಳು ತುಂಬಾ ಸುಂದರಿಕಣೋ "

ಪುಂಡ -" ಹೌದಾ ಅದಕ್ಕೇನೀಗ ? "

ಗುಂಡ- " ಅವಳನ್ನು ನಾನೇ ಮದುವೆ ಆಗ್ಬೇಕೂಂತಿದೀನಿ ಅದ್ಕೇ ನೋಡಿದ ತಕ್ಷಣ ’ಐ ಲವ್ ಯು’ ಎಂದುಬಿಟ್ಟೆ "

ಪುಂಡ- " ಆಯ್ತಲ್ಲ ಅವಳೇನಂದ್ಲು ? "

ಗುಂಡ - " ನನ್ನ ಚಪ್ಪಲಿ ಸೈಜು ಗೊತ್ತಾ ? ಅಂತ ಕೇಳಿದ್ಲು "

ಪುಂಡ - " ಗುಂಡಾ ಈ ಹೆಣ್ಮಕ್ಳ ಕಥೇನೇ ಹೀಗೆ ಇನ್ನೂ ಪರಿಚಯವಾಗೋಕೂ ಮುಂಚೇನೇ ಗಿಫ್ಟ್ ಕೇಳೋಕೆ ಶುರುಮಾಡ್ಬುಡ್ತಾರೆ "

೩. ಹುಡುಗಿಯೊಬ್ಬಳು ತೂಕದ ಯಂತ್ರದಮೇಲೆ ನಿಂತು ತೂಕ ನೋಡಿಕೊಳ್ಳುತ್ತಿರುತ್ತಾಳೆ. ಮೊದಲು ೫೮ ಕೆ.ಜಿ, ಚಪ್ಪಲಿ ತೆಗೆದಾಗ ೫೬, ಕೈಲಿರೋ ವ್ಯಾನಿಟಿ ಬ್ಯಾಗ್ ತೆಗೆದಿರಿಸಿದಾಗ ೫೫.೩೬ ಕೆ.ಜಿ, ದುಪಟ್ಟಾ ತೆಗೆದಿರಿಸಿದಾಗ ೫೪....ಹೀಗೆ ಒಂದೊಂದು ಸರ್ತಿಯೂ ಬಳಸಿ ಅವಳಲ್ಲಿರುವ ನಾಣ್ಯಗಳು ಖಾಲೀ ಆಗಿಬಿಡುತ್ತವೆ.

ಹಿಂದೆ ನೋಡುತ್ತಲೇ ನಿಂತಿದ್ದ ಹುಡುಗ ಹೇಳುತ್ತಾನೆ : " ಮುಂದುವರಿಸು, ನಾನು ನಾಣ್ಯಗಳನ್ನು ಕೊಡುತ್ತೇನೆ "

೪ ಗೆಳೆಯರಿಬ್ಬರು ಮಾತಾಡಿಕೊಂಡರು
ಗುಂಡ " ಅನುಭವ ಪಡೆಯದೇ ರಾಜಕಾರಣಿಯಾಗುವುದಕ್ಕೂ ಅನುಭವ ಪಡೆದು ರಾಜಕಾರಣಿಯಾಗುಯುವುದಕ್ಕೂ ಏನಪ್ಪಾ ಅಂತರಾ ? "

ಪುಂಡ " ಅನುಭವ ಪಡೆಯದೇ ರಾಜಕಾರಣಿಯಾದವ ತಿಂದು ಒದ್ದಾಡುತ್ತಾನೆ, ಅನುಭವ ಪಡೆದು ರಾಜಕಾರಣಿಯಾದವ ತಿಂದು ಇನ್ನೊಬ್ಬನ ಮೂತಿಗೆ ಒರೆಸುತ್ತಾನೆ "

೫. ಪ್ರಶ್ನೆ - ಕಾರ್ಯದರ್ಶಿಗೂ ಆಪ್ತ ಕಾರ್ಯದರ್ಶಿಗೂ ಅಂತರವೇನು ?

ಉತ್ತರ - ಕಾರ್ಯದರ್ಶಿ "ಗುಡ್ ಮಾರ್ನಿಂಗ್ ಸರ್" ಎನ್ನುತ್ತಾನೆ ಅದೇ ಆಪ್ತ ಕಾರ್ಯದರ್ಶಿ " ಇಟ್ ಈಸ್ ಮಾರ್ನಿಂಗ್ ಸರ್ " ಎನ್ನುತ್ತಾಳೆ

೬. " ನಿಮ್ಮ ಸ್ನೇಹಿತರ ಬಳಗದಲ್ಲಿ ಯಾರಾದರೂ ಮಂಗನ ಥರಾ ಇದ್ದರೆ ಹೆಸರಿಸಿ " ಎಂದು ಕೇಳಿದರು ನೀವಿರುವಾಗ ನಿಮ್ಮೆದುರು ಅದನ್ನು ಹೇಗೆ ಹೇಳಲಿ ?

೭. ಬಂತಾ ಕಾರ್ಖಾನೆಯೊಂದನ್ನು ತೆರೆದ. ಹೊರಗೆ ’ಕೆಲಸ ಖಾಲಿ ಇದೆ: ಮದುವೆಯಾದ ಗಂಡಸರು ಮಾತ್ರ ಬೇಕಾಗಿದ್ದಾರೆ’ ಎಂದು ಬರೆಸಿದ. ಸ್ನೇಹಿತ "ಯಾಕೆ ಹೀಗೆ ಮಾಡಿದೆ" ಎಂದಾಗ ಬಂತಾ ಹೇಳಿದ " ಮದುವೆಯಾದ ಗಂಡಸರು ಬಹಳ ವಿಧೇಯರಾಗಿರುತ್ತಾರೆ"

ಒಂದಷ್ಟು ಆಂಗ್ಲ ಜೋಕುಗಳು:

8. Son - I want a baby brother .
Mom - your dad is overseas. When he comes back we will talk over it .
Son - why don't u give him a surprise?

9. A newly married girl got first class in her B.Ed exams.
Her husband sent telegram to her parents -
Ruby First Class in Bed!

10. Banta falls in love wit a nurse..
After much thinking, he finally writes a love letter 2 her: "I LOVE U SISTER"

11. Girl : Mom, i m in love with a guy..
Mom shocked : How old is the boy & what is he doing ?
Girl : 3 month & kicking happily in my stomach..


12. terrorists have kidnapped our lecturers... and demanded aransom of 500000 rs or else they will burn them with kerosene... plz donate. i have donated 15 litres.

13. God made man and then rested. God made women and then no one rested

14. Life without u is impossible,
u r in my breath and blood.
i cant stay for a second without u,
if u r not there i am dead
.. hello i am talking about OXYGEN

15. Pappu, while filling up a form: Dad, what should I write for mother tongue.?
Santa: Very long!

16. Girl: when we get married, i want to share all your worries, troubles and lighten your burden.
boy: it's very kind of you, darling, but i don't have any worries or troubles.
girl: well that is because we aren't married yet


17. Newton's Law of Romance LOVE CAN NEITHER BE CREATED NOR BE DESTROYED, IT CAN ONLY BE CHANGED FROM ONE GIRL FRIEND TO ANOTHER

18. Marriage:
It's an agreement in which a man loses his bachelor degree and a woman gains her master

19. Husband wanted to call the hospital
to ask about his pregnant wife,
but accidently called the cricket stadium.

He asks, “How’s the situation?”

He was shocked & nearly died on hearing the reply.

They said, “It’s fine. 3 are out,
hope to get another 7 out by lunch,
last one was a duck!”..


20. Interviewer to Millionaire: To whom do you owe your success as a millionaire?”
Millionaire: “I owe everything to my wife.”

Interviewer: “Wow, she must be some woman.
Interviewer: “What were you before you married her?”
Millionaire: “A Billionaire”

ಇದನ್ನೆಲ್ಲಾ ಓದುತ್ತಾ ಓದುತ್ತಾ ನಗುವಾಗ ಹೊಟ್ಟೆ ನೋವಾಗದಂತೇ ರಕ್ಷಿಸಪ್ಪಾ ಅಂತ ಮಾದೇಸ್ವರನನ್ನು ಬೆಳಿಗ್ಗೆ ೫:೦೦ಕ್ಕೇ ಎಬ್ಬಿಸುತ್ತಾರೆ-ನಮ್ಮ ಏರಿಯಾದ ಪಡ್ಡೆಗಳು ಮೈಕ್ ಹಾಕಿ, ಹೋಗ್ಲಿ ನೀವೂ ಒಮ್ಮೆ ಕೇಳಿಬಿಡಿ-




Friday, June 24, 2011

ಅಚ್ಚುತ ಹೋದನು ಬಚ್ಚಲು ಮನೆಗೆ !


ಅಚ್ಚುತ ಹೋದನು ಬಚ್ಚಲು ಮನೆಗೆ !

[ನಲ್ಮೆಯ ಸ್ನೇಹಿತರೇ, ನಮಸ್ಕಾರಗಳು. ಹಾಸ್ಯಸಪ್ತಾಹದ ೫ನೇ ದಿನಕ್ಕೆ ಇದು ಆಮಂತ್ರಣ. ಕೆಲವೊಂದು ಘಟನೆಗಳು ಅಂತಹ ವ್ಯಕ್ತಿಗಳು ಎದುರಾದಾಗ ಅಥವಾ ನೆನಪಾದಾಗ ನಮ್ಮ ನೆನಪಿನ ಆಳದಿಂದ ಪುಟಿದೆದ್ದು ಗರಿಬಂದ ಹಕ್ಕಿಮರಿ ಕಂಡಲ್ಲೆಲ್ಲಾ ಹಾರಾಡಿದಂತೇ ಕುಣಿದು ಕುಪ್ಪಳಿಸುತ್ತವೆ; ಹೊಸದಾಗಿ ಸೈಕಲ್/ವೆಹಿಕಲ್ ಕಲಿತ ವ್ಯಕ್ತಿ ಹೊತ್ತುಗೊತ್ತಿಲ್ಲದೇ ಅದನ್ನು ಓಡಿಸಿದ ರೀತಿ ಅದೇ ಮೂಡ್‍ನಲ್ಲಿರುತ್ತವೆ. ಅಂತಹ ಒಂದೆರಡು ಸ್ವಾರಸ್ಯ ಇಂದು ನಿಮ್ಮೆಲ್ಲರಿಗಾಗಿ: ಅಚ್ಚುತ ಹೋದನು ಬಚ್ಚಲು ಮನೆಗೆ !]

ನನ್ನ ಬಳಗದಲ್ಲಿ ಒಬ್ಬ ಮಹರಾಯನಿಗೆ ಕವಿಯಾಗಬೇಕೆಂಬಾಸೆ ಇತ್ತು. ಯಾರ್ಯಾರೆಲ್ಲಾ ಕವನಗಳನ್ನು ಬರೀತಾರೆ ನಾನ್ಯಾಕೆ ಬರೀಬಾರ್ದು ಎಂಬುದು ಅವನ ಸಮಸ್ಯೆ. ಸಮಸ್ಯೆಯನ್ನು ನನ್ನೆದುರು ತಂದಾಗ ಬೆನ್ನು ತಟ್ಟಿದೆ, ಬರೀ ಅಂದೆ. ಆಗಷ್ಟೇ ನಾವು ಅಚ್ಯುತ ಎನ್ನುವ ಮನುಷ್ಯನ ಕಥೆ ಮಾತಾಡಿ ನಕ್ಕು ಮುಗಿಸಿದ್ದೆವು. ಅದೇ ಗುಂಗಿನಲ್ಲಿದ್ದ ಆ ಬಡಪಾಯಿಗೆ ಕವನಕ್ಕೆ ವಸ್ತು ಬೇರಾವುದೂ ಸಿಗದುದರಿಂದಲೂ ಮತ್ತೆ ಬೇರೆಯದನ್ನು ಹುಡುಕುತ್ತಾ ಕೂರುವ ಬದಲು ಅದೇ ವಿಷಯದಮೇಲೆ ಆಶು ಕವಿತೆಯೊಂದನ್ನು ತಾನು ಬರೆಯುವುದಾಗಿಯೂ ಹೇಳಿದ ಆತ ಬರವಣಿಗೆಗೆ ಕೂತೇಬಿಟ್ಟ!

ಅಷ್ಟಕ್ಕೂ ನಿಮಗಿಲ್ಲಿ ಅಚ್ಯುತ ಯಾರೆಂದು ಹೇಳಬೇಕಲ್ಲ? ನಮ್ಮ ಪಕ್ಕದ ಊರಿನ ಮನುಷ್ಯ. ಅಚ್ಯುತ ಪ್ರಭು. ವಿದ್ಯೆ ಕನ್ನಡ ಪ್ರಾಥಮಿಕ. ಘಟನೆ ನಡೆದಾಗ ಆತನ ವಯಸ್ಸು ಸುಮಾರು ೨೭-೨೮ ವರ್ಷ. ಒಳ್ಳೇ ಪ್ರಾಯ. ಹುಡುಗಿಯರ ಮುಂದೆ ತಾನು ಚೆನ್ನಾಗಿ ಕಾಣಬೇಕೆಂಬ ಕನಸುಕಾಣುತ್ತಿದ್ದ ಹುರಿಮೀಸೆ ಹೈದ. ವೃತ್ತಿಯಲ್ಲಿ ಕೃಷಿಕ: ಅಡಕೆ ಬೆಳೆಗಾರ. ತಯಾರಿಸಿದ ಅಡಕೆ ತೆಗೆದುಕೊಂಡು ಕುಮಟಾದ ಮಂಡಿಗೆ ಹೋಗಿದ್ದ. ಅಲ್ಲಿನ ಹಲವು ಮಂಡಿಗಳ ಪೈಕಿ ಒಂದು ನಮ್ಮನೆಗೆ ಸೇರಿದ್ದಿತ್ತು. ಅಲ್ಲಿ ಅದನ್ನು ನನ್ನ ಅಜ್ಜ ಆರಂಭಿಸಿದ್ದು ಚಿಕ್ಕಪ್ಪ ನೋಡಿಕೊಳ್ಳುತ್ತಿದ್ದರು. ಅಚ್ಯುತ ನಮಗೆಲ್ಲಾ ಬಹಳ ಪರಿಚಯದವ. ಸಲುಗೆ ಜಾಸ್ತಿ. ಕುಮಟಾಕ್ಕೆ ಅಡಕೆ ಮಾರಲು ಹೋದಾತ ಅಲ್ಲಿ ಮಂಡಿಯ ಒಳಭಾಗದಲ್ಲಿ ಆಗಿನ್ನೂ ಬ್ರಹ್ಮಚಾರಿಯಾಗಿದ್ದ ಚಿಕ್ಕಪ್ಪನ ಬಳಕೆಗೆ ಅಂತ ಸ್ನಾನದ ಕೋಣೆಯೊಂದು ಇತ್ತು. ಸ್ನಾನದ ಕೋಣೆ ಉದ್ದದಲ್ಲಿ ಸುಮಾರು ರೈಲ್ವೇ ಬೋಗಿಯ ಆಕಾರದಲ್ಲಿದ್ದು ಒಂದುಕಡೆ ಗೋಡೆಯಲ್ಲಿ ಒಂದು ಕಪಾಟು ಇತ್ತು. ಆ ಕಪಾಟಿನಲ್ಲಿ ಹಲವು ಸಾಮಾನುಗಳು: ಹಣಿಗೆ, ಕನ್ನಡಿ, ಹೇರ್ ಆಯಿಲ್, ಸ್ನೋ ಪೌಡರ್, ಟೂತ್ ಪೇಸ್ಟ್, ಬ್ರಶ್ ಇತ್ಯಾದಿ ಇತ್ಯಾದಿ...

ಕುಮಟಾಕ್ಕೆ ಹೋಗಿದ್ದ ಅಚ್ಯುತ ಸ್ನಾನದ ಕೋಣೆಗೆ ನಡೆದ. ಅಲ್ಲಿರುವ ಕಪಾಟಿನಲ್ಲಿ ಸ್ವರ್ಗವನ್ನೇ ಕಂಡ! ಜಾಸ್ತಿ ಓದಿರದ ಆತನಿಗೆ ಆಂಗ್ಲ ಭಾಷೆಯಲ್ಲಿ ನಮೂದಿಸಿದ ಹೆಸರುಗಳನ್ನು ಓದಲು ಕಷ್ಟವಾಗುತ್ತಿತ್ತು; ಒಂದೊಮ್ಮೆ ಓದಿದರೂ ಅರ್ಥವಾಗುತ್ತಿರಲಿಲ್ಲ. ಮಂಗಹೊಕ್ಕ ಬಾಳೆ ತೋಟದಂತೇ ಕಪಾಟಿನಲ್ಲಿರುವ ಎಲ್ಲಾ ಸಾಮಾನುಗಳನ್ನೂ ಹೇಗೇಗೋ ತಿರುಗಿಸಿ/ತೆಗೆದು ನೋಡೇ ನೋಡಿದ. ಪರಿಮಳ ಮೂಸಿದ, ಕೈಗೆ ಹಚ್ಚಿಕೊಂಡ...ಹೀಗೇ ಏನೇನೋ ಮಾಡಿದ. ಧಾರಾಳಿಯಾಗಿದ್ದ ನನ್ನ ಚಿಕ್ಕಪ್ಪ ಅಚ್ಯುತನಿಗೆ ಪ್ರವೇಶವನ್ನಾಗಲೀ ಅಥವಾ ಅವನು ಅಲ್ಲಿ ಆರಾಮಾಗಿ ಯಾವುದೇ ವಸ್ತುವನ್ನು ಬಳಸಲಾಗಲೀ ಬೇಡಾ ಎನ್ನಲಿಲ್ಲ. ಚಿಕ್ಕಪ್ಪ ಹೊರಗಡೆ ವ್ಯವಹಾರದಲ್ಲಿ ಬ್ಯೂಸಿಯಾಗಿರುವಾಗ ಅಚ್ಯುತನ ರಿಸರ್ಚು ಬಹಳ ಆಳವಾಗಿ ನಡೆಯಿತು!

ರಿಸರ್ಚಿನ ಕೊನೆಯ ಭಾಗವನ್ನು ತಲ್ಪಿದ ಅಚ್ಯುತನಿಗೆ ಸಿಕ್ಕಿದ್ದು ಬೆಳ್ಳಗಿನ ವಸ್ತು! ಎಣ್ಣೆಗಪ್ಪಿನ ಬಣ್ಣದಲ್ಲಿದ್ದ ತನ್ನನ್ನು ಸುಂದರ ಹುಡುಗಿಯರು ನೋಡಬೇಕಾದರೆ ಇಂತಹ ಅದ್ಭುತ ವಸ್ತುವಿನ ಬಳಕೆ ಅನಿವಾರ್ಯ ಎಂಬುದನ್ನು ಅಚ್ಯುತ ಅಂದೇ ನಿರ್ಧರಿಸಿ ಬಿಟ್ಟ! ಸಂಶೋಧನೆಯನ್ನು ಪ್ರಾಯೋಗಿಕವಾಗಿ ನೋಡುವ ಅತೀವ ಹಂಬಲದಲ್ಲಿ ಬೆಳ್ಳಗಿನ ಸುವಾಸನೆಯುಳ್ಳ ಆ ವಸ್ತುವನ್ನು ಮುಖದ ತುಂಬಾ ಲೇಪಿಸಿಕೊಂಡ. ೫-೧೦ ನಿಮಿಷ ಒಣಗಲು ಬಿಟ್ಟ! ಕನ್ನಡಿ ನೋಡಿಕೊಂಡು ತಾನು ಬೆಳ್ಳಗೆ ಕಾಣುವುದನ್ನು ಕಂಡು ಬಹಳ ಸಂತಸಪಟ್ಟ. ಹುಟ್ಟಿದರೆ ಹುಟ್ಟ ಬೇಕು ಇಂಥಾ ಪಟ್ಟಣಗಳಲ್ಲಿ ಎಂತೆಂತಹ ವಸ್ತುಗಳೆಲ್ಲಾ ಸಿಗುವುದಪ್ಪಾ ಎಂದು ತನ್ನಲ್ಲೇ ಹೇಳಿಕೊಂಡ. ಈ ಕೆಲಸದ ನಡುವೆ ಸಮಯದ ಪರಿವೆಯೇ ಇರಲಿಲ್ಲ.

ಇತ್ತ ಚಿಕ್ಕಪ್ಪ ಕೆಲಸ ಮುಗಿಸಿ ಮಧ್ಯಾಹ್ನದ ಊಟಕ್ಕೂ ಮುನ್ನ ಸ್ವಲ್ಪ ಫ್ರೆಶ್ ಆಗಲು ಸ್ನಾನದ ಕೋಣೆಗೆ ತೆರಳಿದರು. ಬಾಗಿಲ ಅಗುಳಿ ಹಾಕಿತ್ತು. ಅಚ್ಯುತ ಹೋಗಿದ್ದನಲ್ಲವಾ ಅಂದುಕೊಂಡರು. ಬಾಗಿಲು ಬಡಿದರು. ಬಡಿದ ಬಾಗಿಲ ಸದ್ದಿಗೆ ಆಗಸದಲ್ಲಿ ಹಾರುತ್ತಿದ್ದ ಅಚ್ಯುತ ಮನೋವಿಮಾನ ದಬೋಲ್ಲನೆ ಭೂಮಿಗೆ ಬಿದ್ದಿತು! ಅಚ್ಯುತ ಬಾಗಿಲು ತೆರೆದ. ಚಿಕ್ಕಪ್ಪ ಹೆದರಿ ಹೌಹಾರಿ ಬಿದ್ದರು! ವಿಷಯಕೇಳಿ : ಬೆಳ್ಳಗೆ ಕಾಣುವ ಬಯಕೆಯಿಂದ ಅಚ್ಯುತ ಮುಖ ಪೂರ್ತಿ ಕಾಲ್ಗೇಟ್ ಪೇಸ್ಟ್ ಹಚ್ಚಿಕೊಂಡುಬಿಟ್ಟಿದ್ದ!

ಕೋಣೆಯ ಬಾಗಿಲು ತೆರೆದಾಗಲೇ ಅದರ ಪರಿಮಳ ಚಿಕ್ಕಪ್ಪನಿಗೆ ಬಂತಾದರೂ ಅಚ್ಯುತನನ್ನೇ ಕೇಳಿದಾಗ ಆತ ಸಂಶೋಧನೆ ಮಾಡಿ ಬಳಸಿದ ವಸ್ತುವಿನೆಡೆಗೆ ಕೈ ತೋರಿದ!ಹೆಸರು ಗೊತ್ತಿಲ್ಲ, ಯಾಕೆ ಅಂತ ಗೊತ್ತಿಲ್ಲ. ಬೆಳ್ಳಗಾಗುವುದೊಂದೇ ಗೊತ್ತು. ಸದ್ಯ ಅಲ್ಲಿ ಬೆಳ್ಳಗಿನ ಡಿಸ್ಟೆಂಪರೊ ಪೇಂಟೋ ಇರಲಿಲ್ಲ; ಇದ್ದಿರುತ್ತಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು! ಚಿಕ್ಕಪ್ಪನ ಮುಖವೆಲ್ಲಾ ನಕ್ಕೂ ನಕ್ಕೂ ಕೆಂಪಗಾಗಿ ಹೋಯಿತು. ನಗುವುದನ್ನು ಕೇಳಿಸಿಕೊಂಡ ಜನ ಅಲ್ಲಲ್ಲೇ ಹಣಿಕಿ ಇಣುಕಿ ನೋಡಹತ್ತಿದರು. ಹಲವರಿಗೆ ಕುತೂಹಲ. ಮಾಡಿದ ತಪ್ಪಿನ ಅರಿವಾಗಿ ಅಚ್ಯುತ ತಾನೂ ನಗುತ್ತಲೇ ಇದ್ದ. ಆಮೇಲೆ ಆತನಿಗೆ ತಿಳಿಹೇಳಿ ಮುಖ ತೊಳೆದುಕೊಳ್ಳಲು ತಿಳಿಸಿದರು. ಅಂದಿನಿಂದ ಅಚ್ಯುತ ಎಲ್ಲೇ ಸಿಕ್ಕರೂ ನಗುಮಾತ್ರ ಕಾಯಂ ಆಗಿಬಿಟ್ಟಿತು.

ಈ ಕಥೆಯನ್ನು ಬಳಗದ ’ಕವಿ’ ಮಹಾಶಯ ಕವನರೂಪ ಕೊಡಲು ಕೂತ. ಕೂತ ಕೂತ ಕೂತ ಕೂತೇ ಇದ್ದ! ಬೆಳಗಿನಿಂದ ಸಂಜೆಯವರೆಗೆ ಕೂತರೂ ಪದಗಳ ಜೋಡಣೆ ಸಾಧ್ಯವಾಗಲಿಲ್ಲ. ಜೊತೆಗೆ ಆತನಿಗೆ ಭಾಷಾ ಪ್ರೌಢಿಮೆ ಬೇರೆ ಇರಲಿಲ್ಲ. ನಮ್ಮ ಹಳ್ಳಿಗಳಲ್ಲಿ ಕೆಲವರು ಆಡುಭಾಷೆಯಲ್ಲಿ ಹಲವು ತಪ್ಪುಗಳನ್ನು ಮಾಡುತ್ತಾರೆ. ಅಲ್ಲಿ ’ಅಚ್ಯುತ’ ಇರುವುದು ಹೋಗಿ ’ಅಚ್ಚುತ’ ಆಗಿಬಿಡುತ್ತದೆ. ನಮ್ಮ ಬಳಗದ ಕವಿಗಳೂ ಅದನ್ನೇ ಮಾಡಿದರು. ಮಲಬದ್ಧತೆಯಾದವರು ತಾಸುಗಟ್ಟಲೇ ಮುಖ ಗಂಟುಹಾಕಿಕೊಂಡು ತಿಣುಕಿದ ಹಾಗೇ ತಿಣುಕಿ ತಿಣುಕಿ ಎರಡು ಸಾಲು ಬರೆದಿದ್ದ:

ಅಚ್ಚುತ ಹೋದನು ಬಚ್ಚಲುಮನೆಗೆ
ಹಚ್ಚಿದ ಪೇಸ್ಟನು ಮೆಚ್ಚುತ ಮುಖಕೆ ...

ಅಹ ಅಹ ಏನು ಪ್ರಾಸ ಏನು ಪ್ರಾಸ ನಂಗಂತೂ ತುಂಬಾ ಇಷ್ಟವಾಯ್ತಪ್ಪ! " ಕವಿವರ್ಯ ಮುಂದುವರಿಯಲಿ ಗಾಡಿ " ಎಂದರೆ ಬ್ರಹ್ಮರಾಕ್ಷಸ ಅರಳೀಮರ ಹಿಡಿದು ಕೂತ ಹಾಗೇ ಕೂತುಬಿಟ್ಟಿದ್ದ; ಜಪ್ಪಯ್ಯಾ ಅಂದ್ರೂ ಬಿಡೋ ಥರಾ ಕಾಣಿಸುತ್ತಿರಲಿಲ್ಲ. ಸಮಯ ಆಗ್ತಾ ಆಗ್ತಾ ಕವಿಗೆ ತಲೆನೋವು ಬಂತು. ಬಂದ ತಲೆನೋವು ಜೋರಾಗುತ್ತಾ ಜೋರಾಗುತ್ತಾ ಬದುಕೇ ಬೋರಾಗಿ ಹೋಯ್ತು! ತಥ್ ನನ್ಮಗಂದು ಹಾಳಾಗ್ಹೋಗಲಿ ಎಂದು ಪೆನ್ನು ಕಾಗದ ಬಿಸಾಕಿ ಕವನ ಬರೆಯುವುದನ್ನೇ ಬಿಟ್ಟ! "ಬರ್ಯಯ್ಯಾ ಸುಧಾ, ತರಂಗ ಯಾವ್ದಕ್ಕಾದರೂ ಕಳಿಸೋಣ" ಎಂದರೆ ಯದ್ವಾ ತದ್ವಾ ಬಯ್ಕೊಂಡು ಎದ್ದೇ ಹೋದ!

’ಕವಿ’ ಎದ್ದುಹೋದರೇನಾಯ್ತು ಇನ್ನೊಂದು ಕಪಿ ಕಥೆ ಕೇಳಿ: ಆಗಷ್ಟೇ ನಮ್ಮ ಹಳ್ಳೀ ಕಡೆ ಅಡಕೆ ವ್ಯಾಪಾರ ಜೋರಾಗಿತ್ತು. ಅರೆಕಲಿತ ಹಳ್ಳೀ ವ್ಯಾಪಾರಸ್ಥರು. ಬಹುತೇಕರು ಅಚ್ಯುತನ ಎಡಕ್ಕೋ ಬಲಕ್ಕೋ ನಿಲ್ಲುವ ಅರ್ಹತೆಯವರು. ಅಂಥವರಲ್ಲಿ ಮಹಾಬಲೇಶ್ವರ ಒಬ್ಬ. ಹೆಸರು ಉದ್ದ ಇರುವುದರಿಂದ ಊರಕಡೆ ಜನ ಪ್ರೀತಿಯಿಂದ ’ಮಾಚ’ ಎನ್ನುತ್ತಿದ್ದರು. ಮಾಚ ಅಡಕೆ ವ್ಯಾಪಾರದಲ್ಲಿ ಎತ್ತಿದಕೈ! ಮುಗ್ಧನಾದ ಮಾಚ ದುಡ್ಡಿಗೆ ಎಂದೂ ಕೈ ಎತ್ತುವುದಿಲ್ಲಾ ಎಂಬ ನಂಬಿಕೆಯಿದ್ದುದರಿಂದ ಅನೇಕ ಜನ ತಾವು ಬೆಳೆದ ಅಡಕೆಯನ್ನು ಹಳ್ಳಿಯ ವ್ಯಾಪಾರಸ್ಥನಾದ ಮಾಚನಿಗೇ ಕೊಡುತ್ತಿದ್ದರು.

ಒಮ್ಮೆ ಮಂಗಳೂರಿನ ವ್ಯಾಪಾರಿಯೊಬ್ಬರಿಗೆ ರಾಶಿ ರಾಶಿ ಅಡಕೆ ಬೇಕಂತೆ, ಒಳ್ಳೇ ರೇಟು ಕೊಡ್ತಾರಂತೆ ಎಂಬ ಸುದ್ದಿ ಮಾಚ ಮತ್ತು ಅಂತಹ ಹತ್ತಾರು ಜನ ಹಳ್ಳಿ ವ್ಯಾಪಾರಸ್ಥರಿಗೆ ತಲುಪಿತು. ವ್ಯವಹಾರ ಕುದುರಿಸುವ ಸಲುವಾಗಿ ಸಂಘವಿಲ್ಲದ ಕೂಟದ ಸದಸ್ಯರೆಲ್ಲಾ ಸೇರಿ ಮಂಗಳೂರಿಗೆ ತೆರಳಿದರು. ಮಾಚನಿಗೆ ಇದೆಲ್ಲಾ ಹೊಸತು. ಹೆಚ್ಚೆಂದರೆ ತಾಲೂಕು ಪಟ್ಟಣ ನೋಡಿ ಗೊತ್ತಿದ್ದ ಆತನಿಗೆ ಮಂಗಳೂರಿಗೆ ಹೋಗುವುದೇ ಅಮೇರಿಕಾಕ್ಕೆ ಹೋದಂತಹ ಥ್ರಿಲ್ಲಿಂಗು! ಮಂಗಳೂರು ಬಂದೇ ಬಿಟ್ಟಿತು. ಬಸ್ಸು ಇಳಿಯುತ್ತಿದ್ದ ಹಾಗೇ ಅಲ್ಲಿನ ಜನಜಂಗುಳಿ ಅಗಲದ ರಸ್ತೆಗಳು ತರಾವರಿ ಅಂಗಡಿ ಮುಂಗಟ್ಟುಗಳು ಇವುಗಳನ್ನೆಲ್ಲಾ ಕಂಡ. ಎತ್ತೆತ್ತರದ ’ಬಿರಡಿಂಗು’ ಮಾಚನನ್ನು ದಂಗುಬಡಿಸಿತು. ಅದಾಗಲೇ ಸಾಯಂಕಾಲವಾಗುತ್ತಾ ಬಂದಿದ್ದರಿಂದ ಅವರೆಲ್ಲಾ ಒಂದು ಲಾಡ್ಜ್‍ನಲ್ಲಿ ತಂಗಲು ಅವರಲ್ಲಿಯೇ ’ಸ್ವಲ್ಪ ಅಡ್ಡಿಲ್ಲ’ ಎನ್ನುವ ಥರದವನೊಬ್ಬ ವ್ಯವಸ್ಥೆ ಮಾಡಿದ.

ರೂಮು ತೆಗೆದುಕೊಂಡ ಈ ಜನ ಸ್ವಲ್ಪ ಹೊತ್ತು ಅಲ್ಲೇ ಲೋಕಲ್ ಓಡಾಟಕ್ಕೆ ತೆರಳಿದರು. ರಾತ್ರಿಯ ಜಗಮಗ ಬೆಳಕು ಮಾಚನಿಗೆ ಸ್ವರ್ಗವನ್ನೇ ಕಾಣುತ್ತಿದ್ದೇನೇನೋ ಎನ್ನುವ ಅನುಭವ ಕೊಟ್ಟವು. ರಂಭೆ ಊರ್ವಶಿಯಂತಹ ಸುಂದರ ತರುಣಿಯರು ಅದಾಗಲೇ ಅಲ್ಲಲ್ಲಿ ಪ್ಯಾಂಟು ಧರಿಸಿ ಎದುರಾದಾಗ ಮಾಚ ನಾಚಿ ತಲೆತಗ್ಗಿಸಿ ನಡೆಯುತ್ತಿದ್ದ! ಆ ರಾತ್ರಿ ಆತನಿಗೆ ಇಂದ್ರನ ಅರಮನೆಯಲ್ಲಿ ಮಲಗಿದ ಅನುಭವ ! ಏನು ಐಶಾರಾಮ ಏನು ವ್ಯವಸ್ಥೆ! ಅಬಬಬಬ ಮಾಚ ಊರಿಗೆ ಮರಳಿದಮೇಲೆ ಏನೆಲ್ಲಾ ಸುದ್ದಿ ಹೇಳಬೇಕೆಂಬುದನ್ನು ನೆನಪಿಸಿಕೊಳ್ಳುತ್ತಿದ್ದ. ಆದ್ರೆ ರಾತ್ರಿ ಎಷ್ಟೊತ್ತಾದರೂ ಆ ಸುಟ್ಟ ಗಾಡಿಗಳವರು ಶಬ್ದಮಾಡುವುದನ್ನು ನಿಲ್ಲಿಸಲೇ ಇಲ್ಲ! ಶಿವಾರಾಮಾ ಅಂತ ಉಂಡು ಸ್ವಲ್ಪ ಅಲ್ಲೇ ದಿಂಬಿಗೆ ಒರಗಿಕೊಂಡ ಅರೆಘಳಿಗೆಯಲ್ಲೇ ಗೊಂಯ್ ಪುಂಯ್ ಕೊಂಯ್ ಎನ್ನುತ್ತಾ ಶರವೇಗದಲ್ಲಿ ಬಂದ ಸೊಳ್ಳೆಗಳು ಯಮಯಾತನೆ ನೀಡಲು ಶುರುವಿಟ್ಟವು! ಇದೆರಡು ಬಿಟ್ಟರೆ ಬಾಕಿ ಎಲ್ಲಾ ದೇವಲೋಕ ಎಂದುಕೊಂಡ ಮಾಚನಿಗೆ ಬೆಳಗಾಗಿದ್ದೇ ಗೊತ್ತಾಗಲಿಲ್ಲ.

ಆದರೂ ಸ್ನೇಹಿತರೆಲ್ಲರಿಗಿಂತ ತಾನೇ ಮೊದಲು ಎದ್ದು ಸ್ನಾನದ ಕೋಣೆಗೆ ಹೋದ ಮಾಚ ಹೊಳೆಯುವ ನುಣುಪಾದ ಬೆಳ್ಳಗಿನ ಗೋಡೆಯನ್ನು ಮುಟ್ಟಿನೋಡಿದ. ಅಹಹಾ ಎಂಥಾ ವ್ಯವಸ್ಥೆಯಪ್ಪಾ! ಸ್ನಾನದ ಕೋಣೆಯಲ್ಲಿ ಮುನ್ನಡೆದ ಮಾಚನಿಗೆ ಅಂಡಾಕೃತಿಯ ತೊಟ್ಟಿಯಲ್ಲಿ ನೀರು ಇಟ್ಟಿದ್ದು ಕಂಡಿತು. ತೊಟ್ಟಿ ಅತ್ಯಂತ ಸ್ವಚ್ಛವಿತ್ತು, ಆದರೆ ನೀರು ಮಾತ್ರ ತಳಕ್ಕೆ ಹೋಗಿತ್ತು ಯಾಕೆ ಅಂತ ತಿಳಿಯಲಿಲ್ಲ. ಮಗ್ಗನ್ನು ಹಾಕಿ ನೀರೆತ್ತಲು ನೋಡಿದರೆ ಸಾಧ್ಯವಾಗಲಿಲ್ಲ ಹೀಗಾಗಿ ಕೈಯನ್ನೇ ಬೊಗಸೆಮಾಡಿ ನೀರು ಮೊಗೆದ ಮಾಚ ಎಷ್ಟು ಶುದ್ಧವಾಗಿದೆಯಪ್ಪಾ ಎಂದುಕೊಳ್ಳುತ್ತಾ ಮುಖಕ್ಕೆ ಸಿಂಪಡಿಸಿಕೊಂಡು ತೊಳೆದೇ ತೊಳೆದ.

ಇತ್ತ ಸ್ನೇಹಿತರು ಎದ್ದರು. ಆಕಳಿಸುತ್ತಾ ಮೈಮುರಿದು ಸ್ನಾನಕ್ಕೋ ಮುಖಮಾರ್ಜನೆಗೋ ಅಂತ ಒಬ್ಬೊಬ್ಬರಾಗಿ ಇನ್ನೇನು ಹೋಗಬೇಕು, ಅಷ್ಟರಲ್ಲಿ ಮಾಚ ಸ್ನಾನದಕೋಣೆಯಿಂದ ಹೊರಗೆ ಬಂದವನೇ ಅಂಡಾಕೃತಿಯ ತೊಟ್ಟಿಯನ್ನು ಹೊಗಳ ತೊಡಗಿದ. ’ಸ್ವಲ್ಪ ಅಡ್ಡಿಲ್ಲ’ ಎನಿಸಿಕೊಂಡ ವ್ಯಕ್ತಿ ಒಳಗೆ ಹೋಗಿ ನೋಡುತ್ತಾನೆ-ಅದು ಕಮೋಡು! ಶಿವನೇ ... ಆತ ಅದರಲ್ಲಿಯೇ ಮುಖಮಾರ್ಜನೆ ಮಾಡಿದ ಮಾಚನ ಹೇಳಿಕೆಯನ್ನು ನೋಡಿ ನಗುತಡೆಯದಾದ. ಊರಿಗೆ ಮರಳಿದಮೇಲೆ ಬಾಯಿಂದ ಬಾಯಿಗೆ ಹಬ್ಬಿದ ಸುದ್ದಿ ಊರಪರವೂರ ಹತ್ತಾರು ಹಳ್ಳಿಯ ಚಿಲ್ಲರೆ ವ್ಯಾಪಾರಸ್ಥರಿಗೆ ತಿಳಿಯಿತು. ಅವರೆಲ್ಲಾ ಪರಸ್ಪರ ಹೇಳಿಕೊಂಡಿದ್ದೇನು ಗೊತ್ತೇ " ಅದೆಂಥದೋ ಬಿಳೀ ಸಂಡಾಸ್ ಪೆಟ್ಗಿ ಇರ್ತದಂತೆ ಸಲ್ಪ ನೀರ್ ತುಂಬ್ಕಂಡು, ನಾವೆಲ್ಲಾನಾ ಹೋದ್ರೆ ಹುಸಾರಾಗಿರ್ಬೇಕಪ್ಪಾ "

Justify Full