ಅಮ್ಮ ಗುಬ್ಬಿ
[ ನಿಸರ್ಗದ ಹಲವು ವೈಚಿತ್ರ್ಯಗಳಲ್ಲಿ ಹಕ್ಕಿಗಳ ಜೀವನ ಕೂಡ ಒಂದು. ಆ ಜೀವನ ಚಿತ್ರಣವನ್ನು ಗುಬ್ಬಿಯನ್ನು ಸಾಂಕೇತಿಕವಾಗಿ ಹೆಸರಿಸಿ ಕವನಿಸಿದ್ದೇನೆ. ಕೃತಘ್ನರಾಗುವ ಮರಿಗಳು ಅಮ್ಮನನ್ನು ಬಿಟ್ಟುಹೋಗುವವೋ ಅಥವಾ ಅಮ್ಮನೇ ಮರಿಗಳನ್ನು ಗೂಡಿಂದಾಚೆ ದಬ್ಬುವುದೋ ಅರ್ಥವಾಗದ ಜೀವನ! ಮುಂದಿನ ಅನಿಸಿಕೆಗಳು ನಿಮಗೇ ಬಿಟ್ಟಿದ್ದು]
ಮೊಟ್ಟೆಯಿಟ್ಟು ಕಾವು ಕೊಟ್ಟು ಪ್ರೀತಿಯಿಂದ ರಕ್ಷಿಸಿಟ್ಟು
ಹೊಟ್ಟೆಗಾಗಿ ಹಿಟ್ಟು ಹುಡುಕಿ ತರುವ ಅಮ್ಮ ಗುಬ್ಬಿಯೇ
ರಟ್ಟೆಯಂಥ ಗರಿಯ ತಿರುವಿ ದೂರವೆಲ್ಲೋ ಹಾರಿ ತಿರುಗಿ
ಸಿಟ್ಟು ಸಿಡುಕು ಮಾಡದಂಥ ಕಷ್ಟವಾನಿ ಸುಬ್ಬಿಯೇ !
ಮೊಟ್ಟೆಯೊಡೆದು ಮರಿಗಳಾಗಿ ಪಟ್ಟ ಕಷ್ಟ ಫಲವದಾಗಿ
ಒಟ್ಟಿನಲ್ಲಿ ಕಂಡ ಕನಸು ನನಸಾಗುತ ನೆಮ್ಮದಿ
ತೊಟ್ಟು ಪಣವ ಸಾಧಿಪಂತೆ ಮತ್ತೆ ಹಿಟ್ಟಿಗಾಗಿ ತವಕ
ಜಟ್ಟಿ ತೋಳ ತಟ್ಟಿದಂತೆ ಹಾರಿ ತರುತ ಭುವನದಿ
ಇಟ್ಟ ಗೂಡಿಗೆಂದೂ ಹಾವು ಹದ್ದು ಬಾರದಂತೆ ನೋಡಿ
ಬಿಟ್ಟ ಕಣ್ಣು ಬಿಟ್ಟಹಾಗೇ ಕಾಯುತಿರುವ ಪರಿಯಲಿ
ತಟ್ಟೆಬಾಯಲನ್ನ ತಂದು ತುತ್ತು ತುತ್ತು ಉಣಿಸಿ ಮರಿಗೆ
ಗಟ್ಟಿಯಾಗುವಂತೆ ಬೆಳೆಸಿ ಹಾರಕಲಿಸಿ ತಡದಲಿ
ಸೊಟ್ಟವಾಯ್ತು ಆ ಶರೀರ ಮುಪ್ಪುಬಂದು ಜೀವ ಭಾರ
ಮೆಟ್ಟಿನಿಂತು ಜೀವನವನು ಮುನ್ನಡೆಸುವ ದಿನದಲಿ
ಕೊಟ್ಟ ಮರಿಗಳೆಲ್ಲ ದೂರ ಅಮ್ಮ ಗುಬ್ಬಿಯೆಡೆಗೆ ಬಾರ
ಅಟ್ಟದಲ್ಲಿ ಕುಳಿತ ದೇವ ಏನಿದೆಲ್ಲ ಜಗದಲಿ ?
ಕವನದೊಳಗಿನ ಭಾವ ಅರ್ಥವಾಯ್ತು, ಚೆನ್ನಾಗಿದೆ, ಪ್ರಸ್ತುತ ಸ್ಥಿತಿಯ ಚಿತ್ರಣ ಅದರೊಳಗಡೆ ಅಡಕವಿದೆ. ನಿಮ್ಮ ಕವನದ ಮು೦ದುವರಿಕೆಯಾಗಿ ನನ್ನದೊ೦ದಿಷ್ಟು :-
ReplyDeleteಯಾರೂ ಅನಿವಾರ್ಯರಲ್ಲ ಸ೦ಬ೦ಧವದು ಬೇಕೇ ಇಲ್ಲ
ಬೇರು ಮರೆತ ಮರಗಳಾಗಿ ಬೆಳೆವ ಪರಿ ಇದು
ದೇವನೆನು ಮಾಡಬಲ್ಲ ಅವನ ಕಷ್ಟ ಅವನೇ ಬಲ್ಲ
ಭಾವ ಬ೦ಧ ಕಳಚುತಿಹುದು ಕಲಿಯುಗದೊಳು
nice...
ReplyDeleteಸೊಗಸಾದ ಕವನ.
ReplyDeleteThank you Sir.
ReplyDelete