ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, April 14, 2011

ಗಾಲಿ ಉರುಳಿದಂತೇ ಕಾಡಿನ ದಾರಿ ಹೊರಳಿದಂತೇ .......


ಗಾಲಿ ಉರುಳಿದಂತೇ ಕಾಡಿನ ದಾರಿ ಹೊರಳಿದಂತೇ.....

ಒಂದಲ್ಲಾ ಒಂದೂರಿನಲ್ಲಿ ಬಡ ಬ್ರಾಹ್ಮಣನೊಬ್ಬ ಯಾರದೋ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದ. ಅಲ್ಲಿ ಉಂಡೆದ್ದು ಮನಗೆ ಹೊರಟ ಆತನಿಗೆ ಮನೆಯಲ್ಲಿರುವ ಇತರರಿಗೆ ಕೊಡಲು ಸ್ವಲ್ಪ ಸುಟ್ಟೇವನ್ನು ಕಟ್ಟಿಕೊಟ್ಟರು. ಅದನ್ನು ತೆಗೆದುಕೊಂಡ ಆತ ಕಾಡಿನ ದಾರಿಯಲ್ಲಿ ಬರುತ್ತಿರುವಾಗ ಘೋರವಾದ ದನಿ ಕೇಳಿ ಬೆಚ್ಚಿಬಿದ್ದ. ನೋಡುತ್ತಾನೆ - ಪರ್ವತದಂತಹ ರಾಕ್ಷಸ. ...ಇಷ್ಟನ್ನ ಕೇಳುತ್ತಿರುವಾಗಲೇ ಬಾಲಕರಾದ ನಮ್ಮ ಪ್ರಸಾದ ಒಣಗಿಹೋದದ್ದಿದೆ.

ನಮ್ಮನೆಯಲ್ಲಂತೂ ಮಾಳಿಗೆಯಿತ್ತು. ಅದಕ್ಕೊಂದು ಏಣಿಯಿತ್ತು ಈಗಲೂ ಇದೆ. ಹುಲಿಕಥೆಯಲ್ಲಿ ಏಣಿಯ ಸುದ್ದಿ ಬರುತ್ತದೆ. ಅದು ಉದ್ದಿನ ದೋಸೆ ಕಥೆ. ಗಂಡಾ ಹೆಂಡ್ತೀ ಇಬ್ಬರೂ ಬಡವರಾಗಿದ್ದರು. ಅವರಿಗೆ ದೋಸೆ ತಿನ್ನುವ ಆಸೆಯಾಯಿತು. ಅವರ ಹತ್ತಿರ ದುಡ್ಡಿರಲಿಲ್ಲ. ಸಾಮಾನು ತರಬೇಕಲ್ಲ ? ಹೀಗಾಗಿ ಗಂಡ ಮೈಗೆಲ್ಲಾ ಎಣ್ಣೆ ಬಳಿದುಕೊಂಡು ಶೆಟ್ಟರ ಅಂಗಡಿಯ ನೆಲದಲ್ಲಿ ಸ್ವಲ್ಪ ಹೊರಳಾಡಿ ಬಂದ. ಅಲ್ಲಿ ಮಾರಾಟಮಾಡುವಾಗ ಎಲ್ಲಾ ಅಲ್ಲಿ-ಇಲ್ಲಿ ಚೆಲ್ಲಿರ್ತದಲ್ಲ ? ಅದೆಲ್ಲಾ ಮೈಗೆ ಅಂಟಿತ್ತು. ಮೈಗೆ ಅಂಟಿದ್ದ ಉದ್ದು ಅಕ್ಕಿಗಳನ್ನು ಗಂಡಾ ಹೆಂಡ್ತಿ ಒಟ್ಟುಮಾಡಿದರು. ಹೀಗೇ ಒಂದಷ್ಟು ದಿನ ಮಾಡಿದಮೇಲೆ ದೋಸೆಗೆ ಸಾಕಾಗುವಷ್ಟು ಆಯ್ತು. ಒಲೆಗೆ ಸೌದೆ ಬೇಕಲ್ಲ. ಗಂಡ ಸೌದೆ ತರಲು ಕಾಡಿಗೆ ಹೋದ. ಕಾಡಿನಲ್ಲಿ ಒಣಗಿದ ಸೌದೆ ಕಡಿಯುತ್ತಿರುವಾಗ ದೂರದಲ್ಲಿ ಏನೋ ಕೂಗುವುದು ಕೇಳಿ ಬೆಚ್ಚಿಬಿದ್ದ. ನೋಡುತ್ತಾನೆ ಅದು ಹುಲ್ಯಣ್ಣ! ಹುಲ್ಯಣ್ಣ ಹತ್ತಿರ ಬಂದೇ ಬಿಟ್ಟಿತು. ಹೇಗೂ ತನ್ನನ್ನು ತಿಂದುಹಾಕುತ್ತದೆ ಎಂದು ತಿಳಿದವ್ನೇ ಹುಲ್ಯಣ್ಣನಿಗೆ ಕೈಮುಗಿದು ಪ್ರಾರ್ಥನೆಮಾಡ್ದ " ಹುಲ್ಯಣ್ಣಾ ಹುಲ್ಯಣ್ಣಾ ನನ್ ತಿನ್ಬೇಡ ನಿಂಗೆ ಉದ್ದಿನ ದೋಸೆ ಕೊಡ್ತೆ "

" ಯಾವಾಗ ಬರಲಿ ? " ಹುಲಿ ಪ್ರಶ್ನಿಸಿತು. " ನಾನು ಮನೆಗೆ ಹೋಗಿ ದೋಸೆ ಮಾಡಿದಮೇಲೆ ಜೋರಾಗಿ ಕೂ [ನಮ್ಮಲ್ಲಿನ ವಿಶಿಷ್ಟವಾದ ಕರೆಯುವ/ಮಾರುತ್ತರ ನೀಡುವ ಸಾಂಕೇತಿಕ ಕೂಗು]ಹಾಕ್ತೇನೆ ಆಗ ಬಾ " ಎಂದ. ಶರ್ತಕ್ಕೆ ಹುಲ್ಯಣ್ಣ ಒಪ್ಪಿತು. ಜೀವ ಕೈಲಿ ಹಿಡ್ಕಂಡು ಮನೆಗೆ ಬಂದವ್ನೇ ಹೆಂಡ್ತಿಗೆ ನಡ್ದ ಸಂಗ್ತಿ ಎಲ್ಲಾ ಹೇಳ್ದ. ಬೇಗ ದೋಸೆ ಮಾಡು, ನಾವು ತಿಂದು ಮುಗಿಸಿ ಅಟ್ಟ ಹತ್ತಿ ಕೂತು ಹುಲ್ಯಣ್ಣಂಗೆ ಕೂ ಹಾಕಬೇಕು ಅಂದ. ಗಂಡಾ ಹೆಂಡ್ತೀ ಇಬ್ರೂ ಸೇರಿ ಬೇಗ ದೋಸೆ ಮಾಡಿ ತಿಂದರು. ಮೊದಲೇ ಹಿಟ್ಟು ಕಮ್ಮಿ ಇದ್ದು ಅವರಿಬ್ರಿಗೇ ಜಾಸ್ತಿ ದೋಸೆ ಇರ್ಲಿಲ್ಲ ಇನ್ನು ಹುಲ್ಯಣ್ಣಂಗೆ ಕೊಡೂದ್ ಹೆಂಗೆ ? ಹೆದರ್ತಾ ಹೆದರ್ತಾ ಇಬ್ರೂ ಅಟ್ಟ ಹತ್ತಿದರು. ಹುಲ್ಯಣ್ಣಂಗೆ ಕೂ ಹಾಕದಿದ್ರೆ ಅದು ಯಾವಗ್ಲಾದ್ರೂ ಸಿಟ್ಟಿನಿಂದ ಬಂದ್ರೆ ಕಷ್ಟ. ಅದ್ಕೇ ಕೂ ಹಾಕ್ಲೇ ಬೇಕಾಗಿತ್ತು. ಗಂಡ ಒಂದ್ ಉಪಾಯ ಮಾಡ್ದ. ಅಟ್ಟದ ಏಣಿ ಮೆಟ್ಲಿಗೆಲ್ಲಾ ಎಣ್ಣೆ ಹಚ್ಚಿಟ್ಟ. ಇಬ್ರೂ ಅಟ್ಟ ಹತ್ತಾದ್ ಮೇಲೆ ಕೂ ಹಾಕ್ದ.

ಹುಲ್ಯಣ್ಣ ದಸೋಬುಸೋ ಶ್ವಾಸ ತೆಗೀತಾ ಓಡೋಡ್ ಬಂತು. ಬಂದದ್ದೇ ಇಡೀ ಮನೇಲೆಲ್ಲಾ ಹುಡಕ್ತು. ಯಾರೂ ಕಾಣ್ಲೇ ಇಲ್ಲ. ಜೋರಾಗಿ ಕೂಗ್ತು. ಅಟ್ಟದ ಏಣಿ ಹತ್ಲಿಕ್ಕೆ ಬಂತು. ಒಂದ್ ಹರೆ [ಮೆಟ್ಟಿಲು] ಹತ್ತತು ಜಾರ್ಜಾರ್ ಬಿತ್ತು. ಎರಡ್ ಹರೆ ಹತ್ತತು ಜಾರ್ಜಾರ್ ಬಿತ್ತು. ಮೂರ್ ಹರೆ ಹತ್ತತು ಜಾರ್ಜಾರ್ ಬಿತ್ತು. ಏನ್ಮಾಡ್ವ ಹೇಳಿ ಯೋಚ್ನೇ ಮಾಡ್ತಾ ಇತ್ತು. ಅಟ್ಟದ ಮೇಲೆ ಹಳೇಕಾಲದ ತಾಮ್ರದ ದೊಡ್ಡ ದಳ್ಳೆ ಇತ್ತು. ಅದರಲ್ಲಿ ಗಂಡಾ ಹೆಂಡ್ತಿ ಹೆದರ್ತಾ ಕೂತಿದ್ರು. ಹುಲ್ಯಣ್ಣ ಕೂಗಿದ್ದೇ ಕೂಗಿದ್ದು ಗಂಡ್ನಿಗೆ ಪ್ರಾಣವೇ ಹೋದಷ್ಟು ಹೆದ್ರಿಕೆ ಆಯ್ತು. ಏಣಿ ಹತ್ತಿ ಅಟ್ಟಕ್ಕೆ ಬಂದ್ರೆ ನಮ್ಗತಿ ಏನು ಎಂಬ ಚಿಂತೆ ಆಯ್ತು. ಅದೇ ಸಮಯಕ್ಕೆ ಸರಿಯಾಗಿ ಅವಂಗೆ ಹೊಟ್ಟೇಲಿ ವಾಯು ಪ್ರಕೋಪ ಶುರುವಾಯ್ತು. ಹೆಂಡ್ತೀ ಹತ್ರ " ವಾಯು ತೊಂದ್ರೆ" ಅಂದ. " ಹೇಗೂ ಹೋಗೂದ್ ಹೋಗೂದೇ ಬಿಟ್ಬುಡಿ " ಅಂದ್ಳು. ಗಂಡ ಬಿಟ್ಟ ಅಬ್ಬರಕ್ಕೆ ವಾಯು ಶಬ್ದ ತಾಮ್ರದ ಪಾತ್ರೆಯೊಳಗೇ ಅತೀ ದೊಡ್ದಾಗಿ ಬಂದಿದ್ರಿಂದ ಅಟ್ಟದ ಕೆಳಗೆ ನಿಂತ ಹುಲ್ಯಣ್ಣಂಗೆ ವಿಚಿತ್ರವಾಗಿ ಕೇಳಿ ಹೆದ್ರಿಕೆಯಾಗಿ ಒಂದೇ ಉಸ್ರಿಗೆ ಅದು ಓಡಿ ಪರಾರಿ [ಹೋಯ್ತು]!

ಕಥೆಯ ಅಂತ್ಯಕೇಳಿ ನಗುಬಂದರೂ ಈ ಕಥೆ ಕೇಳಿದ ಕೆಲವಾರು ದಿನ ಏಣಿ ನೆನಪಾದಾಗೆಲ್ಲಾ ಹುಲ್ಯಣ್ಣನ ನೆನಪಾಗಿ ಬಹಳ ತ್ರಾಸಾಗ್ತಾ ಇತ್ತು. ಅದೊಂದು ಹೇಳಲಾಗದ ಒಳಗಿನ ಭಯ! ರಾತ್ರಿಯಾದರೆ ಸಾಕು ಹುಲ್ಯಣ್ಣನ ನೆನಪು ನಮ್ಮನ್ನು ಹುರಿದು ಮುಕ್ಕುತ್ತಿತ್ತು. ಎಲ್ಲಾದರೂ ನಾವು ಮಲಗಿರುವಾಗ ಬಂದುಬಿಟ್ಟರೆ. ಪುಣ್ಯಕ್ಕೆ ನಾವು ಬರೇ ಬಣ್ಣದ ಚಿತ್ರಗಳಲ್ಲಿ ಮಾತ್ರ ಹುಲ್ಯಣ್ಣನನ್ನು ನೋಡಿದ್ದಿತ್ತು. ಇವತ್ತಿನಂತೇ ಟಿವಿ ಗೀವಿ ಇರ್ಲಿಲ್ಲ ಹೀಗಾಗಿ ಬಚಾವು! ಒಕ್ಕಣ್ಣಿನ ರಾಕ್ಷಸನ ಕಥೆ, ಗೋಕರ್ಣಜ್ಜಿ ಕಥೆ, ಗುಬ್ಬಿ ನೆಂಟರೂಟದ ಕಥೆ... ಒಂದೋ ಎರಡೋ ತರಾವರಿ ಕಥೆಗಳು. ಅದ್ರಲ್ಲಂತೂ ಕಥೆ ಕೇಳಲು ನನ್ನಷ್ಟು ಪೀಡಿಸುತ್ತಿದ್ದ ಮಕ್ಕಳು ಬೇರಾರೂ ಇರ್ಲಿಲ್ವೇನೋ ಅಂದ್ಕೋತೀನಿ. ಇದೆಲ್ಲದರ ಜೊತೆಗೆ ಹಿರಿಯರ ಕೃಪೆಯಿಂದ ಆಗಾಗ ’ಚಂದಮಾಮ’ ಸಿಗುತ್ತಿತ್ತು. ಚಂದಮಾಮ ಬಂದ ದಿನ ಹುಲಿ ತಾನು ಹಿಡಿದ ಜಿಂಕೆಯನ್ನು ಎತ್ತಿಕೊಂಡು ಬೇರಾರಿಗೂ ಕೊಡದೇ ಮರವೇರಿ ಕುಳಿತು ತಿನ್ನುವಹಾಗೇ ಆ ದಿನಪೂರ್ತಿ ಅದು ನನಗೇ ಸಿಗಬೇಕು ! ನಾನು ಓದಿ ಹೊಟ್ಟೆ ತುಂಬಿದಮೇಲೆ ಬಾಕಿ ಜನ್ರಿಗೆ. ಕಥೆಯ ಮೇಲಿನ ಕಳಕಳಿ ನೋಡಿ ಚಿಕ್ಕಪ್ಪಂದಿರು ಆಗಾಗ ಪ್ರೀತಿಯಿಂದ ’ಅಮರಚಿತ್ರ ಕಥೆ’ ತಂದುಕೊಡುತ್ತಿದ್ದರು. ಅದರಲ್ಲಿ ರಾಮಾಯಣ ಮಹಾಭಾರತಗಳ ಕಥೆಗಳನ್ನು ದಿ| ಶಿವರಾಮ ಕಾರಂತರು ಅನುವಾದಿಸಿ ಬರೆಯುತ್ತಿದ್ದರು. ಸಚಿತ್ರಕಥೆಗಳಾದುದರಿಂದ ಅವುಗಳಲ್ಲಿನ ಭೀಮ, ಧುರ್ಯೋಧನ, ಶಕುನಿ ರಾಮ, ಲಕ್ಷ್ಮಣ ಮುಂತಾದವರ ಚಿತ್ರಗಳನ್ನು ನೋಡುತ್ತಾ ನೋಡುತ್ತಾ ಯಾವಯಾವ ಕೋನದಲ್ಲಿ ಅವರು ಹೇಗೆ ಕಾಣುತ್ತಿದ್ದರು ಎಂದು ಮನದಟ್ಟಾಗುವವರೆಗೂ ಓದಿ ಮುಗಿಯುತ್ತಿರಲಿಲ್ಲ. ಕೆಲವೊಮ್ಮೆ ಹಲವು ಪುಸ್ತಕಗಳು ಒಟ್ಟಿಗೇ ಸಿಕ್ಕಾಗ ಎಲ್ಲವನ್ನೂ ಗುಪ್ಪೆಹಾಕಿಕೊಂಡು ಓದುವ ಹೆಬ್ಬಾಶೆ. ಅದಕ್ಕೇ ಮಿಕ್ಕವರೆಲ್ಲಾ ನನ್ನ ’ಅಭಲಾಷೆ [ನಮ್ಮಲ್ಲಿ ಅತಿ ಆಸೆಗೆ ಈ ಪದ ಬಳಸುವುದಿದೆ] ಪೋರ’ ಎನ್ನುತ್ತಿದ್ದರು.

ರಜಾದಿನಗಳಲ್ಲಿ ನಾವು ಆಡಿದ ಆಟಗಳಿಗೇನೂ ಕಮ್ಮಿ ಇಲ್ಲ. ಮಾವಿನ ಮರಕ್ಕೆ ಕಲ್ಲೆಸೆದು ಹಣ್ಣು ಬೀಳುವವರೆಗೂ ಬಿಡುತ್ತಿರಲಿಲ್ಲ. ರಟ್ಟೆನೋವಾದರೂ ಬೇಸರವಿರಲಿಲ್ಲ; ಹಣ್ಣೋ ಕಾಯೋ ಬೀಳ್ಲೇ ಬೇಕು. " ಮಾಯ್ನ ಮಾಯ್ನ ಮಂಕಾಳಿ ಮಾಯ್ನತುಂಕೆ ತುಂಕಾಳಿ ನಂಗೊಂದ್ ಹಣ್ಣು ನಿಂಗೊಂದ್ ಕಾಯಿ ದಡೋ ಬುಡೋ " -ಇದು ನಮ್ಮಲ್ಲಿನ ಹುಡುಗರ ಹಾಡು. ಮರಕೋತಿ ಆಟ ಆಡುವುದರ ಜೊತೆಗೆ ಹಣ್ಣು-ಕಾಯಿ ತಿಂದು ಸಂಭ್ರಮಿಸಿದ ಆ ದಿನಗಳು ಅವರ್ಣನೀಯ. ರಜಾ ಮುಗಿಯುವುದೇ ಬೇಡ ಎಂಬ ಬಯಕೆ. ಹಳ್ಳದ ನೀರಲ್ಲಿ[ನೈಸರ್ಗಿಕ ಸ್ವಿಮ್ಮಿಂಗ್ ಪೂಲ್] ಈಜಾಡುವುದು, ಗುಡ್ಡದಲ್ಲಿ ಯಕ್ಷಗಾನ ನಡೆಸುವುದು, ಕಚ್ಚಾಡುವುದು-ಮತ್ತೆ ಒಂದಾಗುವುದು, ಮದುವೆ-ಮುಂಜಿಗಳಲ್ಲಿ ನೀರು/ಕುಡಿಯುವ ಸಾರು/ಮಜ್ಜಿಗೆ/ಪಾನಕ ಬಡಿಸಲು ಹೋಗುವುದು, ಅವಕಾಶಕ್ಕಾಗಿ ಬೇಡಿ ಮೈಕ್ ಸಿಕ್ಕರೆ ಹಾಡುವುದು ಇವೆಲ್ಲಾ ನಮ್ಮಲ್ಲಿನ ರಜಾದ ಮಜಾದಿನಗಳಾಗಿದ್ದವು. " ಯಾರಮನೆ ತಮ್ನೋ ನೀನು ಚಲೋ ಹಾಡ್ತೆ ಮಾರಾಯ" ಅಂತ ಯಾರಾದ್ರೂ ಬೆನ್ನು ತಟ್ಟಿದ್ರೆ ಅಂದಿಗೆ ಅದೇ ನಮಗೆ ’ಪದ್ಮವಿಭೂಷಣ’! ಅಲ್ಲೆಲ್ಲೋ ಯಾರೋ ಅವರವರಲ್ಲೇ " ಆ ತಮ್ಮ ಬಾಳ ಚುರ್ಕಿದ್ದ " ಎಂದಿದ್ದನ್ನು ದೂರದಿಂದಲೇ ಕೇಳದ್ರೂ ಸಾಕು ಅದು ’ಭಾರತರತ್ನ’ !

ಛೇ ಛೇ ನೀವೇನೂ ಅಂದ್ಕೋಬೇಡಿ ನಾವು ಉಪವಾಸ ಸತ್ಯಾಗ್ರಹ ಮಾಡಿದ್ದೂ ಇದೆ. ಆದ್ರೆ ಅಣ್ಣಾ ಹಜಾರೆಯವರಾಗಲೀ ಗಾಂಧೀಜಿಯವರಾಗಲೀ ಇಟ್ಟುಕೊಂಡ ಉದ್ದೇಶವಲ್ಲ! ನಮ್ಮದೆಲ್ಲಾ ಸಣ್ಣ ಸಣ್ಣ ಉದ್ದೇಶಗಳು. ಪಾಲಕರು ಅವುಗಳನ್ನು ಈಡೇರಿಸುವ ವರೆಗೂ ನಮ್ಮ ಉಪವಾಸ ನಿಲ್ಲುವುದಿಲ್ಲ. ನಮಗೆ ಗೊತ್ತಿತ್ತು: ಪಾಲಕರು ಹೇಗಾದ್ರೂ ಬಂದೇ ಬರ್ತಾರೆ ಅಂತ. ಆದರೂ ತಡವಾಗಿಬಿಟ್ಟರೆ ನಮ್ಮೊಳಗೇ ನಾವು ಅಂದುಕೊಳ್ಳುವುದು

ವಿದ್ಯೆ ಕಲಿಸದ ತಂದೆ ಬುದ್ಧಿಹೇಳದ ಗುರುವು
ಬಿದ್ದಿರಲು ಬಂದು ತಾ ನೋಡದಾ ತಾಯಿಯು
ಶುದ್ಧ ವೈರಿಗಳು | ಸರ್ವಜ್ಞ

[ಅಲ್ಲಿಲ್ಲಿ ಸ್ವಲ್ಪ ಸರ್ವಜ್ಞನ ವಚನಗಳೆಲ್ಲಾ ಓದಸಿಕ್ಕಿದ್ದವಲ್ಲ! ಅದರ ಅರ್ಥ ನಮಗೆ ಬೇಕಾದ ರೀತಿಯಲ್ಲಿ ನಾವು ಮಾಡಿಕೊಳ್ಳುತ್ತಿದ್ದೆವಪ್ಪ] ಇದರಲ್ಲಿ ಬಿದ್ದಿರಲು ಬಂದು ನೋಡದಾ ತಾಯಿಯು ಎಂಬುದನ್ನು ಬಹಳವಾಗಿ ಬಳಸಿಕೊಂಡ ಜನ ನಾವು! ಪಾಪ, ಪಾಲಕರ ಕಷ್ಟ ಅವರಿಗೇ ಗೊತ್ತು. ಆದರೂ ಮಕ್ಕಳಾದ ನಮ್ಮನ್ನು ಅವರು ಮರೆತಾರೆಯೇ ? ಮಗುವೊಂದು ಹೊತ್ತಿನ ಊಟ ಮಾಡಿಲ್ಲ ಎಂದರೆ ಅವರಿಗಾಗುವ ನೋವು ಇಂದಿಗೆ ನಾವೂ ಪಾಲಕರಾದಾಗಲೇ ಅರ್ಥವಾಗಿದ್ದು! ಸಿಟ್ಟಿನಲ್ಲಿ " ಹೋಗು ಹೋಗು ಹಾಗೇ ಮಲಕ್ಕೋ ಮಕ್ಳಿಗೆ ಬೆಕ್ಕಿಗೆ ನಾವು ಸಾಕ್ದಾಂಗಿರ್ತದೆ, ಹುಟ್ಟಿ ಮೂರು ಶನವಾರ ಆಗ್ಲಿಲ್ಲ ಹಠನೋಡು " ಎಂದು ಬೈಯ್ಯುತ್ತಿದ್ದರೂ ಉಣ್ಣದ ಮಕ್ಕಳನ್ನು ನೋಡಿ ಸುಮ್ಮನಿರಲಾರದೇ ಚಡಪಡಿಸುವ ಅವರ ಮನಸ್ಸು ರಾಜಿಪಂಚಾಯ್ತಿಗೆ ಬರುವಂತೇ ಮಾಡುತ್ತಿತ್ತು. ಇದು ನಮಗೆ ತಿಳಿದ ವಿಷಯವೇ ಆಗಿದ್ದರಿಂದ ನಮ್ಮ ಡಿಮಾಂಡುಗಳನ್ನು ಪೂರೈಸುವವರೆಗೂ ನಮ್ಮ ಉಪವಾಸ ಮುಂದುವರಿಯುತ್ತಿತ್ತು. ಅಂತೂ ಸೀಇಟಿಯ ಸಮಯದಲ್ಲೇ ಪದವೀಪೂರ್ವ ಕಾಲೇಜುಗಳ ಉಪನ್ಯಾಸಕರು ಧರಣಿ ಕೂತು ಪರಿಹಾರ ಪಡೆದಂತೇ ಇಲ್ಲೂ ನಾವೇ ಗೆಲ್ಲುತ್ತಿದ್ದೆವು!

ನಮ್ಮಲ್ಲಿ ಯುದ್ಧವೇನೂ ಆಗುತ್ತಿರಲಿಲ್ಲ ಎಂದುಕೊಂಡರೆ ಅದು ಶುದ್ಧತಪ್ಪು. ಅಪ್ಪ-ಅಮ್ಮ ಮತ್ತು ಅವರ ಮಹತ್ವವನ್ನು ತಿಳಿಯದ ಆ ದಿನಗಳಲ್ಲಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿಬಿಟ್ಟರೆ ಅವರೊಂದಿಗೆ ಯುದ್ಧವೇ ನಡೆಯುತ್ತಿತ್ತು. ಕೊನೆಗೆ ನಾಕು ಲತ್ತೆ [ಪೆಟ್ಟು] ತಿಂದರೂ ಬೇಜಾರಿಲ್ಲ. ಲತ್ತೆ ತಿಂದು ಪೆಚ್ಚಾಗಿ ಕೂತಾಗಲೂ ಅಮ್ಮ ಬಂದು ಸಮಾಧಾನಮಾಡುತ್ತಿದ್ದಳು. ನೀವೇ ಬೇಕಾದರೆ ನೋಡಿ : ಚಿಕ್ಕಮಕ್ಕಳು ಬಿದ್ದ ತಕ್ಷಣ ಅವರಿಗೆ ನೋವಾದರೂ ಎದ್ದು ಸುಮ್ಮನಾಗಿಬಿಡುತ್ತಾರೆ, ಅದೇ ಯಾರಾದರೂ ಕಂಡುಬಿಟ್ಟರೆ " ಬೋ " ಎಂದು ಮುಸಲಧಾರೆ ಸುರಿದ ಹಾಗೇ ಅಳಲು ಆರಂಭಿಸುತ್ತಾರೆ. ಇಲ್ಲಿ ಅವರಿಗೆ ಸ್ವಾಭಿಮಾನಕ್ಕೆ ಬೀಳುವ ಪೆಟ್ಟು ಅದಾಗಿರುತ್ತದೆ. ನಮ್ಮಲ್ಲಿ ಚಿಕ್ಕಪ್ಪ ನುಕ್ಕಿ [ಲಕ್ಕಿ ಗಿಡದ ಕೋಲು]ಬಡ್ರು ರೆಡಿ ಇಟ್ಟುಕೊಳ್ಳುತ್ತಿದ್ದರು. ನಮ್ಮ ಆಟ ಜಾಸ್ತಿಯಾಯ್ತು ಎನಿಸಿದರೆ ಕಿವಿಹಿಂಡಿ ನುಕ್ಕಿಬಡ್ರಿನಲ್ಲಿ ಎರಡು ಬಿಡುತ್ತಿದ್ದರು. ಅದಕ್ಕೇ ಚಿಕ್ಕಪ್ಪ ಇಲ್ಲದಾಗಲೇ ನಮ್ಮ ಆಟ ನಡೆಸಿಕೊಳ್ಳುತ್ತಿದ್ದೆವು. ಆಗಾಗ ಅವರು ತಯಾರಿಸಿ ಇಟ್ಟುಕೊಳ್ಳುತ್ತಿದ್ದ ನುಕ್ಕಿಬಡ್ರು ನಾಪತ್ತೆಯಾಗಿಬಿಡುತ್ತಿತ್ತು!

ಹಾಗಂತ ನಾವು ಕೆಲಸಮಾಡದೇ ಬರೇ ಹುಡುಗಾಟ ಮಾತ್ರ ನಡೆಸಿದವರಲ್ಲ. ಮನೇಲಿ ಹಾಲು ಕಮ್ಮಿಯಾದಾಗ ಊರಲ್ಲಿ ಬೇರೇ ಮನೆಯಿಂದ ಹಾಲು ತರಬೇಕಾಗುತ್ತಿತ್ತು. ಅಂಗಡಿಗೆ ಹೋಗಿ ಚಿಲ್ಲರೆ ಸಾಮಾನು : ಲಿಂಬೆಹಣ್ಣು, ಶುಂಠಿ, ಹಸಿಮೆಣಸು ಇತ್ಯಾದಿ ತರೋದು, ಬಟ್ಟೆ ಹೊಲಿಸಲು ಕೊಟ್ಟಿದ್ರೆ ಅದು ರೆಡಿ ಆಗಿದ್ಯಾ ವಿಚಾರ್ಸ್ಕೊಂಡು ಬರೋದು, ತೋಟಗಳಿಗೆ ನೀರು ಹಾಯಿಸುವಾಗ ಸಹಾಯಮಾಡೋದು. ಎಮ್ಮೆ-ದನಗಳ ಮೈತೊಳೆಯುವಾಗ ಸಹಾಯಮಡುವುದು; ಅವು ನಮ್ಮ ಮಾತುಕೇಳಿದರೆ ನಾವೇ ಸ್ನಾನಮಾಡಿಸುವುದು, ಬಚ್ಚಲು ಒಲೆಯಲ್ಲಿ ಬೆಂಕಿ ಹಾಕುವುದು, ಬಟ್ಟೆ ಒಣಗಿಸಿದ್ದನ್ನು ಎತ್ತುಕೊಂಡು ಬಂದು ಒಳಗಿಡುವುದು, ದೇವಸ್ಥಾನಕ್ಕೆ ಹೋಗಿ ಬೆಳಿಗ್ಗೆ ಒಡೆಯಲು ಕೊಟ್ಟಿದ್ದ ಕಾಯಿ-ಪ್ರಸಾದ ತರುವುದು ಹೀಗೇ ಕಾಣದ ಹಲವು ಕೆಲಸಗಳು ನಮಗಿರುತ್ತಿದ್ದವು.

ನಮ್ಮೂರಲ್ಲಿ ಒಬ ಕ್ರೈಸ್ತ ಧರ್ಮದ ’ಗೇಬ್ರಿಯಲ್’ ಎಂಬಾತ ದರ್ಜಿಯಾಗಿದ್ದ. ಆತ ಮನೆಗೇ ಬಂದು ಅಳತೆ ತೆಗೆದುಕೊಂಡು ಹೋಗುತ್ತಿದ್ದ. ಬಟ್ಟೆ ಹೊಲಿದು ಮುಗಿಸುವುದು ಮಾತ್ರ ಬಹಳ ನಿಧಾನವಾಗಿ. ಊರಜನ ಅವನನ್ನು ’ಗಾಬ್ರಿಲ್ಲ’ ಎಂದು ಕರೆಯುತ್ತಿದ್ದರು. ’ಗಾಬ್ರಿಲ್ಲ’ ಎಂದರೆ ಗಾಭರಿಯಿಲ್ಲ, ಗಡಿಬಿಡಿಯಿಲ್ಲ, ನಿಧಾನವಾದರೂ ಪರವಾಗಿಲ್ಲ ಎಂಬರ್ಥವೂ ಆಗುತ್ತಿತ್ತು. ಆತ ನಿಧಾನವಾಗಿ ಕೆಲಸಮಡುವುದಕ್ಕೆ ಆತನಿಗೆ ಹಾಗೆ ಹೇಳುತ್ತಾರೇನೋ ಅಂದುಕೊಂಡಿದ್ದೆ! ಆದರೆ ಆತನ ಹೆಸರು ’ಗೇಬ್ರಿಯಲ್’ ಎಂದೂ ಅದನ್ನು ಆಡುವಾಗ ಚಿಕ್ಕದಾಗಿ ಆರೀತಿ ತಿರುಚಿ[ ಉದಾ : ಸತ್ಯನಾರಾಯಣ -ಸತ್ನಾರಣ ಅನ್ನುವುದಿಲ್ಲವೇ ?] ಹೇಳುತ್ತಾರೆಂದೂ ಬಹಳದಿನಗಳ ನಂತರ ತಿಳಿಯಿತು. ಬೇರೇ ಕೆಲವರು ಇದ್ದರೂ ಅವರೆಲ್ಲರ ಪೈಕಿ ಈ ಮನುಷ್ಯ ಹೊಲಿಗೆ ಸ್ವಲ್ಪ ಸರಿಯಾಗಿ ಮಾಡುತ್ತಿದ್ದ. ಬಾಕಿ ಜನ ಎಲ್ಲಾ ನಂಗೆ ಚಡ್ಡಿ ಹೊಲಿದರೆ [ಅದು ಕಾಲೇಜಿಗೆ ಹೋಗುವವರೆಗೂ ಇರಲೆಂದು ಹಾರೈಸುತ್ತಿದ್ದರೋ ಏನೋ!]ಅದು ನನ್ನಂತಹ ಇಬ್ಬರು ಕಾಲುತೂರಿಸಿ ಹಾಕಿಕೊಳ್ಳುವಷ್ಟು ದೊಗಳೆಯಾಗಿರುತ್ತಿತ್ತು. ಅದಕ್ಕೇ ಗಾಬ್ರಿಲ್ಲ ಅಂದ್ರೆ ನಮಗೆಲ್ಲಾ ಒಂಥರಾ ಖುಷಿ ನೀಡುವ ವ್ಯಕ್ತಿಯಾಗಿದ್ದ.

ನಾವು ಅತೀ ಚಿಕ್ಕವರಿರುವಾಗ ಮಾಯ್ನಕುರಿ {ಮಾವಿನಕುರ್ವಾ ನಾರಾಯಣ] ನಾರಣ ಆಗಾಗ ನಮ್ಮ ಮನೆ ಹಿಂದಿನ ಗುಡ್ಡದ ಮೇಲ್ಭಾಗದಲ್ಲಿ ಬಂದು ಕೂ ಹಾಕುತ್ತಿದ್ದ. ತೆಂಗಿನ ಗೆರಟೆ[ಕರಟ]ದಲ್ಲಿ ನೀರು ತೆಗೆದುಕೊಂಡು ನಾವೆಲ್ಲಾ ಹೋದರೆ ಅಲ್ಲಿ ಆತ ಒಂದು ಕಲ್ಲಮೇಲೆ ಕೂತಿರುತ್ತಿದ್ದ. ಎದುರಿಗೆ ಇನ್ನೊಂದು ಸಪಾಟು ಕಲ್ಲು. ಆ ಕಲ್ಲಿನಮೇಲೆ ನಮ್ಮನ್ನು ಒಬ್ಬೊಬ್ಬರನ್ನೇ ಕೂರಿಸಿ ಕೂದಲು ಕತ್ತರಿಸುತ್ತಿದ್ದ. ಆತನ ಬಡ್ಡು ಕತ್ತರಿ ನೀಡುವ ನೋವು ನಮಗೆ ಆತ ಬಂದರೇ ತೆನ್ನಾಲಿಯ ಬೆಕ್ಕಿಗೆ ಹಾಲುಕಂಡ ಅನುಭವವಗುತ್ತಿತ್ತು! ಸಾಲದ್ದಕ್ಕೆ ಅಂದು ಚಾಕುವಿನಂತಹ ತೆಳ್ಳಗಿನ ಕತ್ತಿಯೊ[ಕೂಪು]ಂದನ್ನು ’ಕಿಚ್ಮಿಚ್ ಕಿಚ್ಮಿಚ್ ಕಿಚ್ಮಿಚ್ ಕಿಚ್ಮಿಚ್’ ಎಂದು ಎಂಥದೋ ಕಪ್ಪು ಕಲ್ಲಿನ ಥರದ ನುಣುಪಾದ ವಸ್ತುವಿಗೆ ಉಜ್ಜಿ ಅದನ್ನು ಹರಿತಗೊಳಿಸಿಕೊಂಡು ನಮ್ಮ ಕಿವಿಯ ಮೇಲ್ಭಾಗ ಮತ್ತು ಕತ್ತಿನ ಹಿಂಭಾಗದಲ್ಲೆಲ್ಲಾ ಇರುವ ಕೂದಲನ್ನು ಹೆರೆಯುತ್ತಿದ್ದ. ಕೆಲಸಿ ಎಂಬ ಆ ವೃತ್ತಿಗೆ ಆ ದಿನಗಳಲ್ಲಿ ಭತ್ತ/ಅಕ್ಕಿ, ಕಾಯಿ, ಬಟ್ಟೆ ಈ ರೀತಿಯ ಏನಾದರೂ ಜೀವನಾವಶ್ಯಕ ವಸ್ತುಗಳನ್ನು ಕೊಡುವುದಿತ್ತು. ಆತ ಮುದುಕಾದ ನಂತರ ಬರುವುದು ನಿಲ್ಲಿಸಿದ. ಊರ ಹತ್ತಿರದ ಸಣ್ಣ ಪೇಟೆ ಬೀದಿಯಲ್ಲಿ ದಾಸ ಎಂಬ ಇನ್ನೊಬ್ಬ ಆ ತರುವಾಯ ಕೆಲಸಿ ಅಂಗಡಿಯನ್ನೇ ತೆರೆದ. ಅಲ್ಲಿ ಆರಂಭದಲ್ಲಿ ಕೊಂಯ್ಕು ಕೊಂಯ್ಕು ಸದ್ದುಮಾಡುವ ಹಳೆಯ ಮರದ ಖುರ್ಚಿ ಇತ್ತು. ಹಿಂದೆ ಮುಂದೆ ಎಲ್ಲಾ ಗೋಡೆಗೆ ಸ್ವಲ್ಪದೊಡ್ಡ ಕನ್ನಡಿಗಳಿದ್ದವು. ಖುರ್ಚಿಯಮೇಲೆ ಕುಳಿತಾಗ ಕನ್ನಡಿಯೊಳಗೆ ಇನ್ನೊಂದು ಕನ್ನಡಿ ಅದರೊಳಗಿನ್ನೊಂದು ಹೀಗೇ ನಮ್ಮ ಪ್ರತಿಬಿಂಬ ನಮಗೆ ಹಲವು ಕನ್ನಡಿಗಳಲ್ಲಿ ಕಾಣುತ್ತಿತ್ತು. [ಡಾ| ರಾಜ್ ಕುಮಾರ್ ಕಾಳಿದಾಸನಾಗಿ "ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ " ಎಂದು ಕುಣಿದಿದ್ದು ನೆನಪಾಗುತ್ತದೆ !] ಆತ ಸ್ವಲ್ಪ ಹರಿತವಾದ ಕತ್ತರಿಯನ್ನೂ ಕೂಪನ್ನೂ ಬಳಸುತ್ತಿದ್ದ. ಎಂಥಾ ಸವಲತ್ತು! ಆ ಕಾಲಕ್ಕೆ ನಾವೆಂದುಕೊಂಡಿದ್ದು " ಓ ದೇವರೇ ನೀನೆಷ್ಟು ಕರುಣಾಮಯಿ " ಎಂದು.

ಈಗ ಊರಿನಲ್ಲಿ ಜಾಗ ಕಿರಿದಾಗುತ್ತಾ ಜನಸಂಖ್ಯೆ ಜಾಸ್ತಿಯಾಗುತ್ತಾ ನಡೆದಿದೆ. ಅಂದಿನ ಎಷ್ಟೋ ಮರಗಳು ನೆಲಕಚ್ಚಿವೆ. ರಸ್ತೆ ಅಗಲವಾಗಿದೆ. ಹಲವರು ವಾಹನಗಳು ಓಡಾಡುತ್ತವೆ. ಊರಿನ ಹಿರಿಯ ತಲೆಗಳೆಲ್ಲಾ ಮುದುಕಾಗಿವೆ, ಕೆಲವರು ಆಗಲೇ ಬಿಜಯಂಗೈದಿದ್ದಾರೆ! ಅಲ್ಲಿನ ಇಂದಿನ ಮಕ್ಕಳಿಗೆ ಕ್ರಿಕೆಟ್ ಬಿಟ್ಟರೆ ಬೇರಾವ ಆಟವೂ ಹಿಡಿಸುವುದಿಲ್ಲ. ಎಲ್ಲರ ಮನೆಗಳಲ್ಲೂ ಬಹುತೇಕ ಟಿವಿ ಬಂದಿದೆ. ಮಕ್ಕಳಿಗೆ ಸಿಗಬೇಕಾದ ’ಕಥಾರೂಪ ಇತಿಹಾಸ’ವೆಂಬ ಪುಸ್ತಕವನ್ನು ಕೈಬಿಡಲಾಗಿದೆ. ಕಥೆ ಹೇಳಲು ಹಿರಿಯರು ಕಮ್ಮಿ ಇದ್ದಾರೆ, ಇದ್ದವರಿಗೆ ಕಥೆ ಹೇಳುವ ಕಲೆ ಗೊತ್ತಿಲ್ಲ; ಆಸಕ್ತಿಯೂ ಇಲ್ಲ. ಸಿನಿಮಾ ಬಂದಮೇಲೆ ಯಕ್ಷಗಾನ ಪ್ರದರ್ಶನಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ರಾಮಾಯಣ ಮಹಭಾರತಗಳಂಥಾ ನೀತಿಬೋಧಕ ಕಥಾನಕಗಳಿಗೆ ಎಲ್ಲೂ ಮನ್ನಣೆ ಕಾಣುತ್ತಿಲ್ಲ. ಇವತ್ತಿನ ತಾಯಂದಿರಿಗಾಗಲೀ ಮಕ್ಕಳಿಗಾಗಲೀ ಅದರ ಗಂಧಗಾಳಿಯೂ ಇಲ್ಲವೆಂದರೆ ತಪ್ಪಲ್ಲ. ನಮ್ಮ ಜನ ಮಾಧ್ಯಮಗಳಲ್ಲಿ ಬರಲು ಹಾತೊರೆಯುತ್ತಾರೆ! ಮಕ್ಕಳಿಗೆ ಸಂಗೀತವನ್ನು ರಿಯಾಲಿಟಿ ಶೋ ಸಲುವಾಗಿ ಕಲಿಸುತ್ತಾರೆ. ಮಕ್ಕಳ ಮನೋವಿಕಾಸಕ್ಕೆ ಬೇಕಾಗುವ ಗ್ರಾಮೀಣ ಕ್ರೀಡೆಗಳಾಗಲೀ ಆಚರಣೆಗಳಾಗಲೀ ಇಲ್ಲವೇ ಇಲ್ಲ. ಅಲ್ಲೂ ಈಗೀಗ ಹೆಚ್ಚು ಅಂಕಗಳನ್ನು ತೆಗೆಯುವ ’ಮಶಿನ್’ ಗಳನ್ನು ತಯಾರಿಸಲು ತೊಡಗಿದ್ದಾರೆ. ಜೀವನದ ಮೌಲ್ಯಗಳಾಗಲೀ ಬದುಕುವ ಕಲೆಯನ್ನಾಗಲೀ ಕಲಿಸುವವರಿಲ್ಲವಾಗಿದ್ದಾರೆ. ಮನೆಗಳಲ್ಲಿ ಅಂತಸ್ತಿನ ಪ್ರಶ್ನೆ ಕಾಡುತ್ತಿದೆ. ಪರಸ್ಪರರಲ್ಲಿ ಮೊದಲಿನ ಪ್ರೀತಿ-ವಾತ್ಸಲ್ಯ, ವಿಶ್ವಾಸ ಉಳಿದಿಲ್ಲ. ಕಾಲದ ಮಹಿಮೆ !

ಬೇಸಿಗೆ ಬಂದೇಬಿಟ್ಟಿದೆ. ವಸಂತನ ಆಗಮನದಿಂದ ಬೆವರಿಳಿಸುವ ಬೇಸಿಗೆಯಲ್ಲೂ ಮರಗಿಡಗಳು ಚಿಗುರಿವೆ. ೯ ತಿಂಗಳುಗಳ ಕಾಲ ಶಾಲೆಯ ಓದಿನ ಒತ್ತಡಗಳಲ್ಲಿ ತೊಡಗಿದ್ದ ಬಾಲಕ/ಬಾಲಕಿಯರಿಗೆ ಈಗ [ಕೇಂದ್ರೀಯ ವಿದ್ಯಾಲಯಗಳನ್ನು ಹೊರತುಪಡಿಸಿ] ಬಹುತೇಕ ಬಿಡುವು. ಬಿಡುವು ಸಿಕ್ಕರೆ ಸಾಕು ಎಲ್ಲಾದರೂ ಹೋಗೋಣ ಏನಾದರೂ ಆಟ ಆಡೋಣ ಅಥವಾ ಅವರದೇ ಭಾಷೆಯಲ್ಲಿ ಹೇಳುವುದಾದರೆ ಮಜಾ ಉಡಾಯಿಸೋಣ ಎಂಬ ಬಹುದಿನಗಳಿಂದ ರಜಾದಿನಗಳು ಯಾವಾಗ ಬಂದಾವು ಎಂದು ಲೆಕ್ಕಹಾಕುತ್ತಿದ್ದವರಿಗೆ ಈ ವೇಳೆ ಆಕಾಶವೇ ಕೈಗೆಟುಕಿದಷ್ಟು ಖುಷಿಯಾಗಿರುತ್ತದೆ. ಹಳ್ಳಿಯ ಮೂಲದ ಸಂಪರ್ಕವನ್ನು ಹೊಂದಿರುವವರಿಗೆ ಅವರ ಅಜ್ಜನಮನೆಗೋ ಅತ್ತೆಯಮನೆಗೋ ಅಂತೂ ಹೋಗಿ ಒಂದಷ್ಟುದಿನ ಕುಣಿದು ಕುಪ್ಪಳಿಸಲು ಅವಕಾಶವಿರುತ್ತದೆ. ನಗರವಾಸಿಗಳಿಗೆ ಬೇಸಿಗೆ ಶಿಬಿರಗಳು, ಟ್ರೆಕ್ಕಿಂಗ್, ಸಂಗೀತ-ನೃತ್ಯ ಮೊದಲಾದ ಕಲಿಕೆಗಳಿಗೆ ಅನೇಕ ಸಂಸ್ಥೆಗಳು ಏರ್ಪಾಟುಮಾಡುತ್ತಾರೆ. [ ಹಾಗಂತ ಮಕ್ಕಳನ್ನು ಜವಾಬ್ದಾರಿ ಇಲ್ಲದೇ ಕಳಿಸಬೇಡಿ, ಜೀವಕ್ಕೆ ಅಪಾಯ ತರುವಂಥಾಬೇಜವಾಬ್ದಾರಿ ಏರ್ಪಾಟುಗಳೂ ಇರುತ್ತವೆ. ] ಮಕ್ಕಳ ಬದುಕಿನ ಏಕತಾನತೆಯನ್ನು ಕಳೆಯಲು ಅವರಿಗೆ ಬಣ್ಣಬಣ್ಣದ ಕಥೆಗಳುಬೇಕು, ಚಿಕ್ಕ 'ಥ್ರಿಲ್ಲಿಂಗ್ ಇಫೆಕ್ಟ್ ' ನೀಡುವ ಕಥೆಗಳಾದರೆ ಒಳ್ಳೆಯದು.

ಮಕ್ಕಳ ಬೆಳವಣಿಗೆ ಎಂದರೆ ಕೇವಲ ಹೆಚ್ಚಿನ ಅಂಕಗಳನ್ನು ತೆಗೆಯುವುದು ಮಾತ್ರವಲ್ಲ. ಬದುಕುವ ಕಲೆ ಗೊತ್ತಿರುವ ವ್ಯಕ್ತಿ ಎಲ್ಲೂ ಬದುಕಬಲ್ಲ. ಹಿಂದಿನ ಶತಮಾನದ ನಮ್ಮ ಕನ್ನಡದ ಹಲವು ಜನ ಜಾಸ್ತಿ ಓದಿರದಿದ್ದರೂ ದೇಶವಿದೇಶಗಳಲ್ಲಿ ಹಲವಾರು ವೃತ್ತಿಗಳನ್ನು ನಡೆಸಿದರು. ಈಗ ಬಹಳ ಅಂಕಗಳನ್ನು ಪಡೆದ ವ್ಯಕ್ತಿಗಳೂ ಕೂಡ ಬದುಕಿನ ಸೂತ್ರ ಅರಿಯದೇ ತೊಳಲಾಡುತ್ತಾರೆ. ಶಿಕ್ಷಣವೇನೋ ಇದೆ; ಸಂಸ್ಕಾರವಿಲ್ಲ. ಜಂಗಮವಾಣಿ, ಗಣಕಯಂತ್ರದಲ್ಲೇ ಸಂಪರ್ಕವೇ ಹೊರತು ನೇರವಾದ ಒಡನಾಟವಿಲ್ಲ. ಪಾಲಕರ ಜೊತೆಗೆ ಕಳೆಯಲು ಬಹಳ ಜನರಿಗೆ ಸಮಯವಿರುವುದಿಲ್ಲ; ಇದ್ದರೂ ಮನಸ್ಸಿಲ್ಲ. ಮೊದಲಿದ್ದ ಬೆಚ್ಚಗಿನ ಹಚ್ಚಗಿನ ವಾತಾವರಣ, ಆ ಆಪ್ತತೆ ಈಗ ಉಳಿದಿಲ್ಲ. ಇವತ್ತು ಲವ್ವು ನಾಳೆ ಮದುವೆ ನಾಡಿದ್ದು ವಿಚ್ಛೇದನ! --ಇದು ನಮ್ಮ ಆಧುನಿಕ ಸಮಾಜ ಹಿಡಿಯುತ್ತಿರುವ ದಾರಿ. ಇದನ್ನ ನೆನೆದಾಗ ಮನಸ್ಸಿಗೆ ಬೇಸರವಾಗಿ ಹೊರಬಂದಿದ್ದೇ ಈ ಲೇಖನ.

ಮಕ್ಕಳು ಮುದ್ದು ಕೃಷ್ಣನ ರೂಪ. ಅವರನ್ನು ತಿದ್ದಿ ಕಲಿಸಬೇಕಾದ ಬುದ್ಧಿ ನಮಗಿರಬೇಕು. ರಾಮನ ಆದರ್ಶಗಳನ್ನೂ ಕೃಷ್ಣನ ಜಾಣ್ಮೆಯನ್ನೂ ಸೇರಿಸಿ ತಿಳಿಸಿ ಹೇಳಿಕೊಟ್ಟರೆ ಅವರ ಎಳೆಮನದಲ್ಲಿ ಕಲಿಯುವ ಆಸಕ್ತಿ ಬೆಳೆಯುತ್ತದೆ. ಕವಿ ಮನದಲ್ಲಿ ಹಲವನ್ನು ಕೇವಲ ಒಳ್ಳೆಯ ಕಲ್ಪನೆಯಿಂದಲೇ ಬರೆಯುವ ತಾಕತ್ತಿರುತ್ತದೆ. ಅಂತಹ ದಾಂಪತ್ಯಗೀತೆಗಳನ್ನು ಬರೆದ ಕವಿ ದಿ| ನರಸಿಂಹ ಸ್ವಾಮಿಯವರ ಗೀತೆಯೊಂದರ ಆರಂಭಿಕ ಸಾಲಿನೊಂದಿಗೆ ನಿಮ್ಮಕೈಗೀ ಲೇಖನ.

4 comments:

  1. ಹುಲ್ಯಣ್ಣನ ಕತೆ ಭಾರಿ ಇದೆ! ಆದರೆ ಗಾಬ್ರಿಲ್ಲ, ಬಿಡಿ!

    ReplyDelete
  2. ಹುಲಿಯಣ್ಣನ ಕಥೆಯ ಜೊತೆಗೆ, ನಿಮ್ಮ ಬಾಲ್ಯದ ದಿನಗಳ ಘಟನೆಗಳನ್ನು ನೆನಪಿಸಿ ಮಕ್ಕಳ ಪಾಲನೆ ಬೆಳವಣಿಗೆ ಬಗ್ಗೆಯೂ ಉತ್ತಮ ಒಳನೋಟ ಹರಿಸಿದ್ದೀರಿ.

    ReplyDelete
  3. ಭಟ್ರೇ, ಎಲ್ಲಿ ಇತ್ತೀಚಿಗೆ ನೀವು ನಾಪತ್ತೆ, buzzನಲ್ಲಿ ಕಾಣೋದೇ ಇಲ್ವಲ್ಲ? ನಾನೇನೋ unfollow ಆಗಿಬಿಟ್ಟಿದೆಯೇನೋ ಅಂತ ನೋಡಿದೆ, ಹಾಗೇನಿಲ್ಲ.

    ಚೆನ್ನಾದ ಬರಹ.

    ReplyDelete
  4. ಮಾನ್ಯ ಮಂಜುನಾಥರೇ, ಬಜ್ ಗೇ ಯಾಕೆ ಬರುತ್ತಿಲ್ಲ ಎನ್ನುವ ಕುರಿತು ತಮಗೆ ಮಿಂಚಂಚೆ ಕಳಿಸಿದ್ದೇನೆ,

    ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನಮನಗಳು

    ReplyDelete