ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, April 11, 2011

ರಾಮಾ ರಾಮಾ ಎನ್ನಿರೋ ಇಂಥ ಸ್ವಾಮಿಯ ನಾಮವ ಮರೆಯದಿರೋ


ರಾಮಾ ರಾಮಾ ಎನ್ನಿರೋ ಇಂಥ ಸ್ವಾಮಿಯ ನಾಮವ ಮರೆಯದಿರೋ

ಮಲೆನಾಡ ಮತ್ತು ಕರಾವಳಿಯ ಪ್ರಾಂತಗಳಲ್ಲಿ ಇಂದಿಗೂ ಆಗಾಗ ತಂಬೂರೀ ಹಿಡಿದು ಸಂಭಾವನೆಗೆ ಬರುವ ಬಯಲನಾಡ ಜನರಿದ್ದಾರೆ. ಅವರು ಭಿಕ್ಷುಕರಲ್ಲ, ನಿರ್ಗತಿಕರೂ ಅಲ್ಲ. ಅವರಿಗೂ ಅಷ್ಟಿಷ್ಟು ಹೊಲಗದ್ದೆಗಳಿವೆ. ಮಳೆಗಾಲದಲ್ಲಿ ಬೇಸಾಯಮಾಡಿ ಭೂಮಿತಾಯಿ ನೀಡುವ ಫಲವನ್ನು ಪಡೆದು ಅದನ್ನಷ್ಟು ತಮ್ಮ ಜೀವನೋಪಾಯಕ್ಕೆ ಬಳಸುತ್ತಾ ಬೇಸಿಗೆಯಲ್ಲಿ ನಮ್ಮ ಪ್ರಾಂತಗಳೆಡೆಗೆ ದೇವರನಾಮಗಳನ್ನು ಹಾಡಿಕೊಂಡು ತಂಬೂರೀ ಮೀಟುತ್ತಾ ಬರುತ್ತಾರೆ. ರಾಗಬದ್ಧವಾಗಿ ಲಯಶುದ್ಧವಾಗಿ ಹಾಡುವ ಅವರು ಯಾವ ಉತ್ತಮ ಕಲಾವಿದರಿಗೂ ಕಮ್ಮಿ ಇರುವುದಿಲ್ಲ! ಉರುಟು ತಳಿಯ ಹಾಲುಸೋರೆಕಾಯಿಯನ್ನು ಒಂದೆಡೆ ತೂತುಮಾಡಿ ಅದರ ಹೊರಕವಚವನ್ನು ಬಿಸಿಲಿಗೆ ಒಣಗಿಸಿ ಮಾಡಿದ ಬುರುಡೆ ತಂಬೂರಿಗೆ ಬಳಕೆಯಾಗುತ್ತದೆ.

ಬೆಂಗಳೂರಿಗೆ ಬಂದ ಹಲವುವರ್ಷಗಳ ತರುವಾಯ ನಾಕಾರು ವರ್ಷಗಳ ಹಿಂದೆ ಒಮ್ಮೆ ಈ ಸಮಯದಲ್ಲಿ ಊರಿನಕಡೆಗೇ ಇದ್ದೆ. ಊರಲ್ಲಿ ಮಧ್ಯಾಹ್ನ ಊಟಮುಗಿಸಿ ಹೀಗೇ ಲೋಕಾಭಿರಾಮ ಮಾತನಾಡುತ್ತಾ ಕುಳಿತಿರುವಾಗ ಪಕ್ಕದ ಮನೆಯಲ್ಲಿ ಯಾರೋ ಹಾಡಿದ ಅನುಭವ! ಸಂಗೀತ-ಸಾಹಿತ್ಯಕ್ಕೆ ಮನಸೋಲುವ ಜಾಯಮಾನದ ಮನಸ್ಸನ್ನು ಆ ಹಾಡು ಹಿಡಿದೆಳೆಯಿತು. ಹಾಡಿದ್ದು ಮತ್ತದೇ ಹೇಳಿದೆನಲ್ಲ ಬಯಲನಾಡ ಕಲಾವಿದರು. ಆ ಮನೆಯಲ್ಲಿ ಯಾವುದೋ ಹಾಡು ಹಾಡಿ ನಮ್ಮನೆಗೆ ಬಂದರು. ದಾಸರಪದಗಳನ್ನು ಹಾಡುತ್ತಿದ್ದರು. ಅನಿರೀಕ್ಷಿತವಾಗಿ "ರಾಮಾ ರಾಮಾ ಎನ್ನಿರೋ ....." ಎನ್ನುವ ಹಾಡನ್ನು ಹಾಡಿದರು. ಅವರು ಹಾಡಿದಷ್ಟೂ ಮತ್ತೆ ಮತ್ತೆ ಬೇಕೆಂಬ ಬಯಕೆ ನನ್ನನ್ನು ಕಾಡುತ್ತಿತ್ತು. ಅವರ ಕಂಠಕೂಡ ಅಷ್ಟೇ ಚೆನ್ನಾಗಿತ್ತು. ಹೊರಗೆ ಬಿಸಿಲ ಬೇಗೆ ಇದ್ದರೂ ಸೆಕೆಯಿಂದ ಬರಿಮೈ ಕೂಡ ಬೆವರುತ್ತಿದ್ದರೂ ಅವರ ಹಾಡಿನಿಂದ ಇಡೀ ವಾತಾವರಣವೇ ತಂಪಾದ ಹಾಗೆ ಅನಿಸುತ್ತಿತ್ತು. ಹಾಡು ಮುಗಿಯುವ ಮುನ್ನ ನಾನೊಮ್ಮೆ ಸಾಕ್ಷಾತ್ ಶ್ರೀರಾಮನನ್ನೇ ಹಾಡಿನಲ್ಲಿ ದರ್ಶಿಸಿ ಬಂದ ಭಾವಸಮಾಧಿ ಕೇವಲ ಆ ಐದೇ ನಿಮಿಷ ನನಗೆ ಲಭಿಸಿತ್ತು! ಸಹೋದರ ಕೊಟ್ಟ ಸಂಭಾವನೆಯನ್ನು ಪಡೆದು ಅವರು ಮುಂದಿನ ಮನೆಗೆ ಪಯಣ ಬೆಳೆಸಿದ್ದರೂ ನಾನು ಬಾಯಿಬಿಟ್ಟು ಅವರು ಹಾಡಿದ ಹಾಡನ್ನು ದಿನಗಟ್ಟಲೆ ಗುನುಗುನಿಸುತ್ತಿದ್ದೆ. ಹೆಚ್ಚಿನ ವಾದ್ಯ ಪರಿಕರಗಳಿಲ್ಲದೆಯೂ ಕೇವಲ ತಮ್ಮ ಶಾರೀರ ಶುದ್ಧಿಯನ್ನು ಮತ್ತು ಸ್ಫುಟವಾದ ಸಾಹಿತ್ಯವನ್ನು ಬಳಸುವ ಆ ಮೂಲಕ ಜನರಿಗೆ ಮುದನೀಡುವ ಅವರು ಬಹಳ ಹಿಡಿಸುತ್ತಾರೆ.

ಅದಕ್ಕೆ ರಾಮನ ವಿಷಯವಾಗಿ ಅವರು ಹಾಡಿದ್ದೂ ಕೂಡ ಕಾರಣವಿರಬಹುದು. ಬೇಕಾದ ಎಲ್ಲವೂ ಲಭಿಸುತ್ತಿದ್ದರೂ, ಅನಾಯಾಸವಾಗಿ ಪಟ್ಟಾಧಿಕಾರ ದೊರೆಯುತ್ತಿದ್ದರೂ ತಂದೆಯಮೇಲಿನ ಪ್ರೀತಿಗೆ ಆ ವ್ಯಾಮೋಹಕ್ಕೆ, ಅವರ ಮಾತಿಗೆ ಸಲ್ಲಬೇಕಾದ ಗೌರವಕ್ಕೆ ರಾಮ ಕಾಡಿಗೆ ಹೋದ. ಬೇಡವೆಂದರೂ ಬರುವ ತಮ್ಮ ಲಕ್ಷಣನನ್ನೂ ನೆರಳಂತೇ ಹಿಂಬಾಲಿಸುವ ಸತಿ ಸೀತೆಯನ್ನೂ ಒಲ್ಲದ ಮನಸ್ಸಿನಿಂದಲೇ ಜೊತೆಮಾಡಿಕೊಂಡ. ತನ್ನ ಸಲುವಾಗಿ ಅವರ್ಯಾರೂ ನೋವುಪಡುವುದು ಬೇಡಾ ಎಂಬುದೇ ರಾಮನ ಇಚ್ಛೆಯಾಗಿತ್ತು. ಸರಯೂ ನದಿಯ ದಡದವರೆಗೂ ನಡೆದುಬಂದ ಪುರಜನಸ್ತೋಮಕ್ಕೆ ರಾಮ ಕೈಮುಗಿದು ಇಲ್ಲಿಂದಲೇ ಹಿಂದಿರುಗಿರೆಂದು ವಿನಂತಿಸಿದ. ನದಿಯನ್ನು ದಾಟಿ ಘೋರವಾದ ದಂಡಕಾರಣ್ಯವನ್ನು ಸೇರಿದ. ಹೇಳೀ ಕೇಳೀ ಸುಖದ ಸುಪ್ಪತ್ತಿಗೆಯಲ್ಲಿ ಮೆರೆಯಬೇಕಾದ ರಾಜಕುಮಾರ ಕಾಡಿನಲ್ಲಿ ಕಲ್ಲುಮುಳ್ಳುಗಳಮೇಲೇ ಕಾಲಿಡುತ್ತಾ ನಡೆಯುತ್ತಿದ್ದ. ಜೊತೆಗಿರುವ ಇಬ್ಬರನ್ನೂ ಸಂತೈಸುತ್ತಾ ಕಾಡಿಗೆ ಅಟ್ಟಿದ ಚಿಕ್ಕಮ್ಮನಲ್ಲಿ ಕಿಂಚಿತ್ತೂ ದೋಷವೆಣಿಸದೇ ಅದು ತಾನೇ ಪಡೆದುಬಂದ ಭಾಗ್ಯವೆಂದು ನಂಬಿನಡೆದ ಶ್ರೀರಾಮ.

ಕಾಡಿನಲ್ಲಿ ಇರಲು ಗುಡಿಸಲಿಲ್ಲ, ಉಡಲು ಹೇರಳ ಬಟ್ಟೆಬರೆಗಳಿಲ್ಲ, ಅಡುಗೆಗೆ ಬೇಕಾದ ಪಾತ್ರೆಗಳಿಲ್ಲ, ಅಡುಗೆಯ ಪರಿಕರಗಳಾಗಲೀ ಬೇಳೇ ಕಾಳುಗಳಾಗಲೀ ಇರಲಿಲ್ಲ. ಹೊಸದಾಗಿ ಆರಂಭಗೊಳ್ಳಬೇಕಾಗಿದ್ದ ’ವನವಾಸ’. ಕಂದಮೂಲ ಫಲಗಳನ್ನು ಸಂಶೋಧಿಸಿ ಅವುಗಳಲ್ಲಿ ತಿನ್ನಲು ಯೋಗ್ಯವಾದ ಕೆಲವನ್ನು ತರಬೇಕಾಗಿತ್ತು, ಸ್ನಾನಾದಿಗಳನ್ನು ಪೂರೈಸಿ, ತಂದ ಅವುಗಳನ್ನು ಶುಚಿಗೊಳಿಸಿ, ಕತ್ತರಿಸಿಯೋ ಜಜ್ಜಿಯೋ ದೈವಾರ್ಪಣೆಗೈದು ತಿನ್ನಬೇಕಿತ್ತು. ಎಲ್ಲವನ್ನೂ ತನ್ನ ಔದಾರ್ಯದಿಂದಲೇ ಸಹಿಸಿ ಬದುಕಿದ ಕೌಸಲ್ಯಾರಾಮ. ಕಾಡಿನ ರಕ್ಕಸರ ಉಪಟಳ ಎಲ್ಲಿ ಯಾವಾಗ ಹೇಗೆ ಎಂಬುದು ತಿಳಿಯುತ್ತಿರಲಿಲ್ಲ. ಹಿಂಸ್ರ ಪಶುಗಳ ದಾಳಿಯನ್ನೂ ಅಲ್ಲಗಳೆಯುವಂತಿರಲಿಲ್ಲ. ಆದರೂ ಅವೆಲ್ಲವನ್ನೂ ಮರೆತು ಕಾಡಿನಲ್ಲೇ ಹುಟ್ಟಿಬೆಳೆದ ಜನಾಂಗದವರಂತೇ ಜೀವಿಸಿದ ಆ ರಾಮ. ತಾನು ಹೊರಟಾಗ ತಂದೆ ಅಳುತ್ತಿದ್ದುದನ್ನು ಕಂಡಿದ್ದ ರಾಮನಿಗೆ ಕಾಡಿಗೆ ಬಂದ ಬಹಳದಿನಗಳವರೆಗೂ ತಂದೆಯ ಚಿಂತೆಯೇ ಕಾಡುತ್ತಿತ್ತು. ಅಪ್ಪ ಈಗ ಏನುಮಾಡುತ್ತಿರಬಹುದು ? ತನ್ನನ್ನು ಕಾಡಿಗೆ ಕಳಿಸಿದ ನೋವನ್ನು ಮರೆತಿರಬಹುದೇ ? ಎಂಬಿತ್ಯಾದಿ ಹಲವು ಪ್ರಶ್ನೆಗಳು ಸದಾ ಉದ್ಭವಿಸುತ್ತಿದ್ದವು.

ಸೈನ್ಯದೊಟ್ಟಿಗೆ ಬಂದ ಭರತನನ್ನು ದೂರದಿಂದಲೇ ಈಕ್ಷಿಸಿದ ಲಕ್ಷ್ಮಣ ಯುದ್ಧಕ್ಕೇ ಬಂದರೆಂಬ ಅಪಾರ್ಥದಿಂದ ದೊಡ್ಡ ರಂಪವನ್ನೇ ಶುರುವಿಟ್ಟ. ಲಕ್ಷ್ಮಣನನ್ನು ಸುಮ್ಮನಾಗಿಸಿ ಬಂದ ಭರತನನ್ನು ಬಿಗಿದಪ್ಪಿ ಅಯೋಧ್ಯೆಯ ಆಗು-ಹೋಗುಗಳನ್ನು ಕೇಳುತ್ತಾ ತನ್ನ ವಿಯೋಗದ ನಂತರ ಕೆಲವೇ ದಿನಗಳಲ್ಲಿ ತನ್ನ ಹಂಬಲದಲ್ಲೇ ಕೊರಗಿ ಕೊರಗಿ ಬಳಲಿ ಗತಿಸಿದ ತಂದೆ ದಶರಥನ ಅಂತ್ಯ ಕೇಳಿ ರಾಮನ ಕಣ್ಣಾಲಿಗಳು ಮಡುಗಟ್ಟಿ ತೊಟ್ಟಿಕ್ಕಿದವು. ಕಂಡರೂ ಕಾಣದಹಾಗೇ ಸಾವರಿಸಿಕೊಂಡು ಮಿಕ್ಕೆಲ್ಲರಿಗೂ ಸಾಂತ್ವನಹೇಳುತ್ತಾ ರಾಮ ಮುಂದಿನ ಪಿತೃತರ್ಪಣಾದಿ ಕಾರ್ಯಕ್ಕೆ ಅನುವಾದ. ಅಲ್ಲೇ ಹರಿಯುತ್ತಿದ್ದ ತೊರೆಯೊಂದರಲ್ಲಿ ಸ್ನಾನಮಾಡಿ ಅಣ್ಣ-ತಮ್ಮಂದಿರು ಲಭ್ಯವಿದ್ದ ಪರಿಕರಗಳಿಂದಲೇ ಪಿಂಡಪ್ರದಾನ ಮಾಡಿದರು. ದೂರದಲ್ಲಿ ಇದನ್ನೆಲ್ಲಾ ಗಮನಿಸುತ್ತಾ ನಿಂತ ಊರಜನತೆ ಕಣ್ಣೀರ್ಗರೆದರು. ಎಲ್ಲರನ್ನೂ ಸಂತೈಸಿದ ರಾಮ ಭರತನೂ ಮತ್ತು ಬಳಗವೂ ತನ್ನನ್ನು ಕರೆದೊಯ್ಯಲು ಬಂದುದನ್ನು ಕೇಳಿ ಚಕಿತನಾದ. "ಪಟ್ಟಾಧಿಕಾರವನ್ನು ನೀನೇ ವಹಿಸಿಕೊಳ್ಳಬೇಕು" ಎಂಬ ಭರತನ ಹಠಕ್ಕೆ ಈಕ್ಷಣ ಅದು ಸಾಧ್ಯವಿಲ್ಲವೆಂದೂ ಮುಂದೆ ೧೪ ವರುಷಗಳು ಮುಗಿದಮೇಲೆ ತಾನು ಬರುವೆನೆಂದೂ ಅಲ್ಲಿಯತನಕ ಭರತನೇ ಆಳಲೆಂದೂ ಹೇಳಿದ. ಆಗಲೂ ಭರತ ಸಮ್ಮತಿಸದೇ ತನಗೆ ಅಣ್ಣನ ಪಾದುಕೆಯೇ ಸಾಕೆಂದೂ ಅದನ್ನೇ ಸಿಂಹಾಸನದಲ್ಲಿಟ್ಟು ರಾಮ ಬರುವವರೆಗೆ ರಾಜ್ಯಭಾರನಡೆಸುವೆನೆಂದೂ ತಿಳಿಸಿದಾಗ ಅನಿವಾರ್ಯವಾಗಿ ಪಾದುಕಾಪ್ರದಾನ ಮಾಡಿದ ಶ್ರೀರಾಮ.

ಮುಂದೆ ನಡೆದ ಪ್ರತೀ ಘಟನೆಗಳೂ ವ್ಯಕ್ತಿಯೊಬ್ಬನ ಜೀವನದಲ್ಲಿ ನಡೆದಿರಬಹುದಾದ ಸಂಬಂಧದ-ಐಹಿಕ ವ್ಯಾಮೋಹದ, ಸತ್ಯ-ತತ್ವ ನಿಷ್ಠೆಯ, ಮನೋನಿಗ್ರಹದ ಭಾವನಾತ್ಮಕ ಎಳೆಗಳನ್ನು ನರಮಂಡಲದಂತೇ ವಿಶಿಷ್ಟವಾಗಿ ಮತ್ತು ರುಚಿಕಟ್ಟಾಗಿ ಹೆಣೆದು ರಾಮಕಥೆಯನ್ನು ಉಣಬಡಿಸಿದ ಕವಿ ಕೋಗಿಲೆ ವಾಲ್ಮೀಕಿಯನ್ನು ನೆನೆದಾಗ ಕೈಗಳೆರಡೂ ಜೋಡುತ್ತವೆ, ಶಿರಬಾಗುತ್ತದೆ.

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್ ||

ವಾಲ್ಮೀಕೇರ್ಮುನಿಸಿಂಹಸ್ಯ ಕವಿತಾವನಚಾರಿಣಃ |
ಶೃಣ್ವನ್ರಾಮಕಥಾನಾದಂ ಕೋ ನ ಯಾತಿ ಪರಾಂ ಗತಿಮ್ ||

ಯಃ ಪಿಬನ್ ಸತತಂ ರಾಮಚರಿತಾಮೃತಸಾಗರಮ್ |
ಅತೃಪ್ತಸ್ತಂ ಮುನಿಂ ವಂದೇ ಪ್ರಾಚೇತಸಮಕಲ್ಮಷಮ್ ||

ಆಹಾ ತಾಯಿ ಸಂಸ್ಕೃತದ ಉಪಮೆಗಳನ್ನು ನೋಡಿ! ಸಂಸ್ಕೃತಿಯನ್ನು ಕಲಿಸಿಕೊಡುವ ಆ ಮಾತೆ ನಿಜಕ್ಕೂ ಸ್ತುತ್ಯಾರ್ಹಳು. ಒಂದುಕಾಲಕ್ಕೆ ಬೇಡನಾಗಿದ್ದ ಮನುಜನೊಬ್ಬ ಕೇವಲ ರಾಮ ಜಪದಿಂದ ಪರಮಸಿದ್ಧಿಯನ್ನು ಪಡೆದ! ಗೊತ್ತಿಲ್ಲದ ’ಮರಾ’ ಶಬ್ದವನ್ನೇ ಪುನರಪಿ ಉಚ್ಚರಿಸಿದಾಗ ಅದು ರಾಮ ರಾಮ ರಾಮ ಎಂದಾಗಿ, ಏಕೋಭಾವದಿಂದ ತಪಗೈದ ಅವನ ಸುತ್ತ ಹುತ್ತ[ವಲ್ಮೀಕ]ವೇ ಬೆಳೆದುನಿಂತಿತು. ಕವಿತೆಯೆಂಬ ವನದಲ್ಲಿ ವಿಹರಿಸುವ ಸಿಂಹವಾದ ವಾಲ್ಮೀಕಿಮುನಿಗೆ ರಾಮನಾಮವನ್ನು ಕುಡಿದಷ್ಟೂ ಮತ್ತೂ ಕುಡಿಯಬೇಕೆಂಬ ಆಸೆಯಂತೆ. ಆದಕ್ಕೇ ಅತೃಪ್ತನೆಂದಿದ್ದಾರೆ. ವಾಲ್ಮೀಕಿ ಸಂತೃಪ್ತರೇ ಸರಿ ಆದರೂ ರಾಮನಾಮ ಜಪಿಸಿದಷ್ಟೂ ಮತ್ತೂ ಜಪಿಸಬೇಕೆಂಬ ಅವರ ಹಪಹಪಿಕೆಯನ್ನು ಮೇಲಿನ ಶ್ಲೋಕಗಳು ತೋರಿಸುತ್ತವೆ.

ತ್ರೇತಾಯುಗದಲ್ಲಿ ನಡೆದ ಕಥೆಗೆ ಇಂದಿಗೂ ಜೀವಂತಸಾಕ್ಷಿಯಾಗಿ ಹನುಮನಿದ್ದಾನೆ.

ಯತ್ರ ಯತ್ರ ರಘುನಾಥ ಕೀರ್ತನಂ
ತತ್ರ ತತ್ರ ಕೃತ ಮಸ್ತಕಾಂಜಲಿಮ್ |
ಬಾಷ್ಪ ವಾರಿಪರಿಪೂರ್ಣಲೋಚನಂ
ಮಾರುತಿಂ ನಮತ ರಾಕ್ಷಸಾಂತಕಮ್ ||

ರಾಮನ ಸೊಲ್ಲೆತ್ತಿದರೂ ಹನುಮ ಅಲ್ಲಿರುತ್ತಾನೆ ಎಂಬುದೊಂದು ಐತಿಹ್ಯ. ಇವತ್ತಿಗೂ ರಾಮಕಥೆಗಳು ನಡೆಯುವ ಸಭೆಗಳ ವೇದಿಕೆಯಲ್ಲಿ ಹನುಮನಿಗೆ ಒಂದು ಆಸನವನ್ನು ಇಡುವುದು ಅಭ್ಯಾಸ ಮತ್ತು ಗೌರವ ಸೂಚಕ. ಎಲ್ಲೇ ರಾಮಕಥೆ ನಡೆಯಲಿ ಅಲ್ಲಿಗೆ ಬಿಜಯಂಗೈಯ್ಯುವ ಮಾರುತಿ ಆ ಕಥೆಯನ್ನು ಕೇಳುತ್ತಾ ಶಿರಭಾಗಿ ಕೈಗಳಂಜಲಿಯಲ್ಲಿ ಆನಂದಬಾಷ್ಪವನ್ನು ಸುರಿಸುತ್ತಾನಂತೆ. ರಾಮನಾಗಿ ಮಹಾವಿಷ್ಣು ಬಂದರೆ ಹನುಮನಾಗಿ ಮಹಾರುದ್ರ ಶಿವ ಆತನ ಸೇವೆಗೆ ಬಂದಿದ್ದ! ದೈವೀ ಶಕ್ತಿ ಹಲವು ರೂಪಗಳಲ್ಲಿ ತನ್ನನ್ನೇ ಹೇಗೆ ಪ್ರಕಟಗೊಳಿಸಿಕೊಳ್ಳುತ್ತದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ.

ಕಥೆ ಕೇಳಿದವರಲ್ಲೊಬ್ಬನನ್ನು ಯಾರೋ ಪ್ರಶ್ನಿಸಿ "ರಾಮನಿಗೆ ಸೀತೆ ಅಕ್ಕ ಆಗಬೇಕು" ಎಂದಿದ್ದನಂತೆ ಎಂಬುದು ನಾವು ನಮ್ಮ ಲಘುಹಾಸ್ಯಕ್ಕೆ ಬಳಸುವ ಹೇಳಿಕೆ. ಆದರೆ ನಿಜವಾಗಿ ನೋಡಿದರೆ ರಾಮನ ಜೀವನದಲ್ಲಿ ಆತ ಅನುಭವಿಸಿದ ಆತಂಕ ಬಹಳ. ಇಬ್ಬಂದಿತನವೂ ಬಹಳ. ಸಮೃದ್ಧವಾದ ಕೋಸಲದೇಶದ ಅಯೋಧ್ಯಾನಗರಕ್ಕೆ ಕಾಲಪುರುಷ ಬಂದಾಗ ಇಂತಹ ಸುಖದ ನಾಡಿನ ಜೀವನಕ್ಕೆ ತಾನು ಕುತ್ತು ತರುವುದೇ ಎಂದುಕೊಂಡನಂತೆ! ಆದರೂ ಆತನ ಕರ್ತವ್ಯ ಆತ ಮಾಡಲೇಕೇಕಿತ್ತು. ಪಟ್ಟಾಭಿರಾಮನ ರಾಜಸಭೆ ನಡೆಯುತ್ತಿರುವಾಗ ಎದುರಿಗೆ ದೂರದಲ್ಲಿ ಕಾಣಿಸಿಕೊಂಡ ಕಾಲ ರಾಮನ ಅಪ್ಪಣೆಗಾಗಿ ಕಾದನಂತೆ! ಅಂತೂ ಯಾರನ್ನೂ ತಿರಸ್ಕರಿಸದ ರಾಮ ಅನುಮತಿಸಿದಾಗ ಆ ಅರಮನೆಗೆ ಆತನ ಪ್ರವೇಶವಾಯ್ತು. ಕಾಲನ ಪ್ರವೇಶವಾದಾಗ ದೂರ್ವಾಸರೂ ಬಂದರು, ಕಾವಲುನಿಂತ ತಮ್ಮ ಲಕ್ಷ್ಮಣನನ್ನು ಹೂಂಕರಿಸಿ ಅವರು ಒಳನುಗ್ಗಿ ಏಕಾಂತ ಮಾತುಕತೆಗೆ ಭಂಗತಂದಾಗ ಮೊದಲೇ ಒಪ್ಪಿದ ಕರಾರಿನಂತೇ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆಯನ್ನು ವಿಧಿಸುವಾಗ ರಾಮನ ಮನಸ್ಸು ಇನ್ನಿಲ್ಲದ ನೋವನ್ನು ಅನುಭವಿಸಿತು. ಹಾದಿಹೋಕ ಅಗಸನೊಬ್ಬ ಅಣಕವಾಡಿ " ಬಿಟ್ಟ ಹೆಂಡತಿಯನ್ನು ಕಟ್ಟಿಕೊಳ್ಳಲು ನಾನೇನು ರಾಮನಲ್ಲ" ಎಂಬುದು ಕಾರಣವಾಗಿ ಸಮಾಜದಲ್ಲಿ ತನ್ನಮೇಲೆ ಅಪಸಂಶಯ ಬಾರದಿರಲೆಂಬ ಅನಿಸಿಕೆಯಿಂದ ತುಂಬುಗರ್ಭಿಣಿ ಸೀತೆಯನ್ನು ಕಾಡಿಗೆ ಕಳುಹಿಸುವಾಗ ಆದ ವೇದನೆಯನ್ನು ಹೇಳಿಕೊಳ್ಳಲು ಯಾರೂ ಇರಲಿಲ್ಲ; ಹಾಗೆ ಹೇಳಿಕೊಂಡು ಅಭ್ಯಾಸವೂ ಇದ್ದ ಜನ ರಾಮನಲ್ಲ. ಕಾಡಿಗೆ ತೆರಳಿದ ಸೀತೆಯ ಗತಿ ಏನಾಯ್ತು ಎಂಬ ಕಸಿವಿಸಿ ಮನೋವ್ಯಾಕುಲ ಬಹಳ ಸಮಯ ಕಾಡಿದರೂ ತನ್ನ ನಿತ್ಯ ಪ್ರಾರ್ಥನೆಯಲ್ಲಿ ಸೀತೆಯ ರಕ್ಷಣೆಯನ್ನು ನಂಬಿದ ದೈವಕ್ಕೆ ಒಪ್ಪಿಸಿಬಿಟ್ಟಿದ್ದ ರಾಜಾರಾಮ. ಆದರೂ ಪತಿಸಹಜ ಭಾವನೆಗಳು ಮನವನ್ನು ಮುತ್ತಿಕೊಳ್ಳದಷ್ಟು ಕ್ರೂರಿಯಾಗಿರಲಿಲ್ಲ ರಾಮ.

ಸೀತೆ ಸುರಕ್ಷಿತವಾಗಂತೂ ಇದ್ದಾಳೆ ಎಂಬ ಅನಿಸಿಕೆ ಮನಸ್ಸಿಗೆ ದೃಢವಾಗಿತ್ತು. ಬಸುರಿ ಸೀತೆ ಎಲ್ಲಿರಬಹುದು ? ಮಗು ಜನಿಸಿರಬಹುದೇ ? ಜನಿಸಿದ್ದರೆ ಆ ಮಗು ಹೆಣ್ಣೋ ಗಂಡೋ ? ಈಗ ಆ ಮಗು ಏನುಮಾಡುತ್ತಿರಬಹುದು ಎಂಬಿತ್ಯಾದಿ ಕುತೂಹಲಗಳು ಮನದಲ್ಲಿ ಇದ್ದೇ ಇದ್ದವು. ಹೀಗೇ ಜೀವನದುದ್ದಕ್ಕೂ ತನ್ನ ಹಾಗೂ ಹೆಂಡತಿ-ಮಕ್ಕಳ ವೈಯ್ಯಕ್ತಿಕ ಬದುಕನ್ನೇ ಮುಖ್ಯವಾಗಿ ಪರಿಗಣಿಸದೇ ಪ್ರಜೆಗಳೆಲ್ಲರ ಜೀವನವನ್ನೂ ತನ್ನ ಜೀವನವೆಂಬ ತುಂಬು ಹಂಬಲದಿಂದ ರಾಜ್ಯಭಾರನಡೆಸಿದ ಶ್ರೀರಾಮ ಅವರೆಲ್ಲರ ಮುಖದ ಮಂದಹಾಸದಲ್ಲೇ ಸುಖವನ್ನು ಕಾಣುತ್ತಿದ್ದ. ಕೇವಲ ಅಧಿಕಾರಕ್ಕಾಗಿ ಸಿಂಹಾಸನವನ್ನು ಬಯಸದೇ ಪ್ರಜೆಗಳ ಹಿತಕ್ಕಾಗಿ ರಾಜನಾಗಿದ್ದ ರಾಜಾರಾಮ ಕಾಲನ ಅಣತಿಯಮೇರೆಗೆ ಅವತಾರದ ಪರಿಸಮಾಪ್ತಿಮಾಡಿ ವೈಕುಂಠಕ್ಕೆ ಹೊರಡುವ ಘಳಿಗೆಯಲ್ಲೂ ಅಯೋಧ್ಯೆಯ ಸತ್ಪ್ರಜೆಗಳನ್ನು ಅಗಲಿ ಇನ್ನಿರಲಾರದ ಮನಸ್ಸು ಅವನದಾಗಿತ್ತು; ಅಷ್ಟಾಗಿ ಲೌಕಿಕ ಪ್ರಜಾ ವ್ಯಾಮೋಹ ಅವನಲ್ಲಿ ತುಂಬಿತ್ತು. ರಾಜರುಗಳು ಹಲವು ಹೆಂಡಿರನ್ನು/ರಾಣಿಯರನ್ನು ಹೊಂದಿರಬಹುದಾದ ಸನ್ನಿವೇಶದಲ್ಲಿಯೂ ರಾಮಮಾತ್ರ ಕಾಯಾ ವಾಚಾ ಮನಸಾ ಸೀತೆಯೊಬ್ಬಳನ್ನೇ ಹೆಂಡತಿಯನ್ನಾಗಿ/ ರಾಣಿಯನ್ನಾಗಿ ಪಡೆದು ಏಕಪತ್ನೀ ವ್ರತಸ್ಥನಾಗಿದ್ದ. ತನ್ನ ರಾಜ್ಯಭಾರದಲ್ಲಿ ಪಶು-ಪಕ್ಷಿಗಳ ಅಳಲನ್ನೂ ರಾಮ ಆಲೈಸುವಷ್ಟು ಸರ್ವಭೂತ ನಿವಾಸಿಯಾಗಿದ್ದ; ಸಹಾನುಭೂತಿ ಹೊಂದಿದ್ದ.

ರಾಮ ಸೇತುವೆ ಕಟ್ಟುವಾಗ ಚಿಕ್ಕ ಅಳಿಲೊಂದು ತಾನೂ ಸೇವೆಯಲ್ಲಿ ತೊಡಗಿತ್ತಂತೆ. ಪ್ರಾಯಶಃ ಅದಕ್ಕೆ ಭಗವಂತನ ಅವತಾರದ ಯಾವುದೋ ಕಲ್ಪನೆ ಬಂದಿತ್ತೋ ಏನೋ. ಸಮುದ್ರದ ನೀರಲ್ಲಿ ಮೈನೆನೆಸಿಕೊಂಡು ದಡಕ್ಕೆ ಬಂದು ಮರಳು-ಮಣ್ಣಿನಲಿ ಹೊರಳಾಡಿ ಮತ್ತೆ ಮರಳಿ ಸೇತುವೆ ಕಟ್ಟುವ ಜಾಗಕ್ಕೆ ಹೋಗಿ ನೀರಲ್ಲಿ ದೇಹವನ್ನು ಅದ್ದುತ್ತಿತ್ತಂತೆ. ಅದರಿಂದ ಮೈಗೆ ಅಂಟಿರುವ ಮಣ್ಣು-ಮರಳು ಸಾಗಿ ನೀರಲ್ಲಿ ಬೀಳುವುದಲ್ಲ ಎಂಬ ಸಣ್ಣ ಅನಿಸಿಕೆ ಅದರದ್ದಿತ್ತು. ಹಾಗೆ ಸೇವೆಮಾಡುತ್ತಿದ್ದ ಅಳಿಲನ್ನು ರಾಮ ಅಂತಹ ಗಡಿಬಿಡಿಯಲ್ಲೂ ಕೈಯ್ಯಲ್ಲೆತ್ತಿಕೊಂಡು ಅದರ ಬೆನ್ನಮೇಲೆ ಮೂರು ಬೆರಳಿನಲ್ಲಿ ಬಂಗಾರದ ರೇಖೆ ಬರೆದನಂತೆ. ಬಂಗಾರದ ಆಸೆಗೆ ಅದರ ಯಾರಾದರೂ ಅದರ ಜೀವವನ್ನು ತೆಗೆದಾರು ಎಂದುಕೊಂಡು ಕಲಿಯುಗದಲ್ಲಿ ಅದು ಬರೇ ರೇಖೆಗಳ ರೀತಿ ಗೋಚರಿಸುವಂತೇ ಆಗಿದೆಯಂತೆ. ಹೀಗೊಂದು ಜನಪ್ರಿಯ ಕಥೆಯಿದ್ದು ಚಿಕ್ಕ ಪ್ರಮಾಣದ ಸೇವೆಗೆ ’ಅಳಿಲು ಸೇವೆ’ ಎಂಬುದಾಗಿ ಉದಾಹರಿಸುತ್ತೇವೆ.

ದಶರಥನ ಆಸ್ಥಾನಕ್ಕೆ ಆಗಮಿಸಿದ ಗುರು ವಿಶ್ವಾಮಿತ್ರರು ಎಳೆಯ ಮಕ್ಕಳಾದ ರಾಮ-ಲಕ್ಷ್ಮಣರನ್ನು ಗುರುಕುಲ ವಿದ್ಯಾಭ್ಯಾಸಕ್ಕೆ ಕಳುಹಿಸಲು ದಶರಥನಲ್ಲಿ ಕೇಳಿದಾಗ ರಾಜಾ ದಶರಥನಿಗೆ ಅಷ್ಟು ಚಿಕ್ಕಮಕ್ಕಳನ್ನು ಕಾಡಿಗೆ ಹೇಗೆ ಕಳುಹಿಸುವುದೆಂಬ ಕಳವಳ. ಅದನ್ನರಿತ ವಿಶ್ವಾಮಿತ್ರರು ರಾಮ ಸಾಮಾನ್ಯದವನಲ್ಲ, ಆತನ ಸಾಮರ್ಥ್ಯ ಬೆಳಗಲು ಆತ ಈಗಲೇ ವಿದ್ಯಾಭ್ಯಾಸ ಮಾಡಬೇಕು ಎಂದು ಮತ್ತೆ ಮತ್ತೆ ಹೇಳಿದಾಗ ಮನಸ್ಸೇಕೋ ಹಿಂದೇಟು ಹಾಕುತ್ತಿದ್ದರೂ ಜೊತೆಗೆ ಇರುವವರು ವಿಶ್ವಾಮಿತ್ರರು ಎಂಬ ಅಭಿಪ್ರಾಯ ತಳೆದು ಕಳುಹಿಸಿದ್ದ. ವಿಶ್ವಾಮಿತ್ರರ ಜೊತೆಗೆ ಕಾಡಿಗೆ ನಡೆದ ಅಣ್ಣ-ತಮ್ಮಂದಿರು ಕಾಡ ದಾರಿಯಲ್ಲಿ ಗುಡ್ಡ ಬೆಟ್ಟಗಳನ್ನು ಹತ್ತಿ-ಇಳಿಯುತ್ತಾ ಏದುಸಿರು ಬಿಡುತ್ತಾ ಕ್ರಮಿಸಿದ ಹಾದಿ ಬಹುದೂರ.ನಡೆದೂ ನಡೆದೂ ನಡೆದೂ ದಣಿವಾಗಿ ಸರಿರಾತ್ರಿ ವಿಶಾಲವಾದ ಬಂಡೆಯೊಂದರಮೇಲೆ ಮಲಗಿದ ಮೂವರಲ್ಲಿ ವಿಶ್ವಾಮಿತ್ರರು ಬೆಳಗಿನ ಬ್ರಾಹ್ಮೀಮುಹೂರ್ತದಲ್ಲೇ ಇನ್ನೂ ಗಾಢ ನಿದ್ದೆಯಲ್ಲಿದ್ದ ಮುದ್ದು ಬಾಲಕ ಶ್ರೀರಾಮನನ್ನು ಕುರಿತು

ಕೌಸಲ್ಯಾ ಸುಪ್ರಜಾ ರಾಮಾ
ಪೂರ್ವಾ ಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ
ಕರ್ತವ್ಯಂ ದೈವಮಾಹ್ನಿಕಂ ||

ಎಂದು ಎಬ್ಬಿಸುವ ಆ ದೃಶ್ಯ ಮಕ್ಕಳಿರುವ ಯಾವ ಪಾಲಕರ ಕಣ್ಣಲ್ಲೂ ನೀರುತರಿಸದೇ ಇರುವಂತಹುದಲ್ಲ. ಜಗದ ಜೀವರಾಶಿಗಳ ದುಃಖವನ್ನು ತೊಡೆಯುವ ಇಂತಹ ಶ್ರೀರಾಮ ಜನಿಸಿದ್ದು ಚೈತ್ರ ಶುದ್ಧ ನವಮಿಯಂದು ಬೆಳಗಿನ ಜಾವದಲ್ಲಿ. ಪ್ರಜಾರಂಜಕ ಗುಣವೂ ಸೇರಿದಂತೇ ಸಕಲ ಸದ್ಗುಣಗಳ ಗಣಿಯಾಗಿದ್ದ ಶ್ರೀರಾಮ ಅದಕ್ಕೇ ಇಂದಿಗೂ ಸರ್ವಜನಾನುರಾಗಿ. ರಾಮನಿಗೆ ಕ್ಷುದ್ರ ಶಕ್ತಿಗಳು ನಿಶಾಚರ ಶಕ್ತಿಗಳು ಹೆದರುತ್ತವಂತೆ. ರಾಮ ಹೆಜ್ಜೆಯಿಟ್ಟಲ್ಲಿ ಅವುಗಳು ನಾಶಹೊಂದುತ್ತವಂತೆ. ಅದಕ್ಕೇ

ಶ್ರೀರಾಘವಂ ದಶರಥಾತ್ಮಜಮಪ್ರಮೇಯಂ
ಸೀತಾಪತಿಂ ರಘುಕುಲಾನ್ವಯ ರತ್ನದೀಪಮ್ |
ಆಜಾನುಬಾಹುಮ್ ಅರವಿಂದದಳಾಯತಾಕ್ಷಮ್
ರಾಮಂ ನಿಶಾಚರವಿನಾಶಕರಮ್ ನಮಾಮಿ ||

--ಹೀಗೆ ಧ್ಯಾನಿಸುತ್ತಾರೆ.

ಸುಖ ಸಂಪತ್ತಿನ ಪ್ರಾಪ್ತಿಗಾಗಿ :

ಆಪದಾಮಪ ಹರ್ತಾರಂ ದಾತಾರಂ ಸರ್ವಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||

--ಈ ರೀತಿ ಸ್ತ್ರೋತ್ರಮಾಡುತ್ತಾರೆ.

ಶ್ರೀರಾಮನ ಬಗ್ಗೆ ಹೇಳುವುದನ್ನು ಕೇಳುವುದೇ ಚಂದ. ಚಂದಕ್ಕೆ ಮತ್ತೊಂದು ಹೆಸರೇ ಶ್ರೀರಾಮಚಂದ್ರ. ವಿದ್ವಾಂಸರು ರಾಮಕಥೆಯನ್ನು ಪ್ರಸ್ತಾಪಿಸಿದಾಗ ಆ ಕಲ್ಲುಸಕ್ಕರೆಯನ್ನು ಮತ್ತಷ್ಟು ಕೊಳ್ಳುವಾಸೆ. ರಾಮನ ಬಗ್ಗೆ ತದನಂತರದಲ್ಲಿ ಹಲವು ರಾಮಾಯಣಗಳು ಬರೆಯಲ್ಪಟ್ಟವು. ಆದರೂ ಮಹರ್ಷಿ ವಾಲ್ಮೀಕಿ ಬರೆದ ’ವಾಲ್ಮೀಕಿ ರಾಮಾಯಣ’ ಎಲ್ಲದಕ್ಕೂ ಶೃಂಗವಾಗಿದೆ. ’ಪಿಬರೇ ರಾಮರಸಂ ಮಾನಸ ......’ ಹಾಡು ಅದ್ಭುತವೂ ಕರ್ಣಾನಂದಕರವೂ ಆಗಿದೆ.

ಸಂತಸದಿಂದ ಶ್ರೀರಾಮನ ಕಥೆಯ ಕೆಲವಂಶಗಳನ್ನು ನಿಮ್ಮೊಡನೆ ಹಂಚಿಕೊಂಡ ನಂತರದಲ್ಲಿ ಜಗತ್ತಿನ ಸಮಸ್ತರಿಗೂ ಶುಭವನ್ನು ಕೋರುತ್ತಾ, ಸಮೃದ್ಧಿಯನ್ನು ಪ್ರಾರ್ಥಿಸುತ್ತಾ , ರಘುವೀರನಿಗೂ ಆತನ ಪರಿವಾರಕ್ಕೂ ಹನುಮನಿಗೂ ನಮಿಸುತ್ತಾ ಕಥೆಗೆ ಮಂಗಳ ಹಾಡುತ್ತೇನೆ.

ನೇಮವೆನಗೆ ಇರಲೀ ರಾಮಾ ನಾಮ ನೆನೆಯಬರಲೀ
ಸೋಮಸುಂದರನೆ ರಾಮಚಂದಿರನೆ ಬಾಳನೌಕೆಯಲ್ಲೀ
ರಾಮಾ ಬಾಳನೌಕೆಯಲ್ಲೀ || ಪ ||

ಕ್ಷೇಮದಿ ಪ್ರಜೆಗಳ ರಂಜಿಸಿ ಅನುದಿನ
ಕಾಮಿತಾರ್ಥಗಳ ಕರುಣಿಸಿದಾತನೆ
ರೋಮರೋಮದಲು ರಾಮನಾಮವದು ತುಂಬಿಹರಿಯುತಿರಲೀ
ರಾಮಾ ತುಂಬಿ ಹರಿಯುತಿರಲೀ || ೧ ||

ಆಮಹಾಮಹಿಮ ಗುರು ವಶಿಷ್ಠರು
ಸಾಮಗಾನದಷ್ಟಾಕ್ಷರಿಯೊಳ ’ರಾ’
ಆಮಂತ್ರಿಸಿ ಪಂಚಾಕ್ಷರಿಯೊಳ ’ಮ’ ಸೇರಲಾಯ್ತು ಶುಭನಾಮ
ರಾಮಾ ಸೇರಲಾಯ್ತು ಶುಭನಾಮ || ೨ ||

ಹೇಮಕಂಕಣ ಕೇಯೂರ ಕಿರೀಟಿಯೆ
ಪ್ರೇಮಮೂರ್ತಿ ಕರುಣಾರ್ದೃ ಹೃದಯಿಯೇ
ಭೀಮರಕ್ಷೆ ನಿನ್ನ ನಾಮದ ಬಲವದು ಹಾಡಲು ಕೇಳಲು ಹಿತಕರ
ರಾಮಾ ಹಾಡಲು ಕೇಳಲು ಹಿತಕರವು || ೩ ||

ಮಂಗಲಂ ಕೋಸಲೇಂದ್ರಾಯ ಮಹನೀಯಗುಣಾಬ್ಧಯೇ |
ಚಕ್ರವರ್ತಿತನೂಜಾಯ ಸಾರ್ವಭೌಮಾಯ ಮಂಗಳಮ್||

8 comments:

  1. ಸರ್‍, ಶ್ರೀ ರಾಮನವಮಿ ಯ ಶುಭಾಶಯಗಳು.

    ಸರಳವಾಗಿ ಶ್ರೀರಾಮನ ಬಗ್ಗೆ, ಅವನ ನಾಮದ ಬಗ್ಗೆ ಇತ್ಯಾದಿ ಸರಳವಾಗಿ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು.

    ReplyDelete
  2. ರಾಮನಾಮ ಸ್ಮರಣೆಯೊ೦ದಿಗೆ ಅನೇಕ ವಿಚಾರ ಮಂಥನ ಮಾಡಿದ್ದೀರಿ. ಚೆನ್ನಾಗಿದೆ. ರಾಮನವಮಿ ಸ೦ದರ್ಭದಲ್ಲಿ ಹಾರ್ದಿಕ ಶುಭಾಶಯ.

    ReplyDelete
  3. ರಾಮ ನವಮಿಯ ಶುಭಾಶಯಗಳು,
    ಒಳ್ಳೆಯ ವಿಚಾರಗಳನ್ನು ತಿಳಿಸಿದ್ದೀರ

    ReplyDelete
  4. ರಾಮನವಮಿಗೆ ಉತ್ತಮವಾದ ಲೇಖನಕುಸುಮ.

    ReplyDelete
  5. ನಿಮಗೂ ರಾಮ ನವಮಿಯ ಶುಭಾಶಯ... ಸರ್, ಇದೇ ತಿಂಗಳ ೨೪ ಕ್ಕೆ ಮತ್ತೊಮ್ಮೆ ಎಲ್ಲರೂ ಸಿಗೋಣ.... ಪ್ರಕಾಶಣ್ಣನ ಪುಸ್ತಕ ಬಿಡುಗಡೆಯ ನೆವದಲ್ಲಿ ಎಲ್ಲಾ ಬ್ಲೊಗ್ ಗೆಳೆಯರು ಸೇರೋಣ......

    ReplyDelete
  6. ಓದಿದ,ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ನಮನಗಳು

    ReplyDelete
  7. ರಾಮ ರಾಮ ಎನ್ನಿರೋ.. ಹಾಡಿನ ಪೂರ್ಣಪಾಠ ಇದ್ದರೆ ದಯವಿಟ್ಟು ತಿಳಿಸಿ

    ReplyDelete