ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, December 16, 2010

ಲಿವಿಂಗ್ ಇನ್ ದಿ ಹೆವನ್-ಭಾಗ ೩ [ಕೊನೆಯ ಭಾಗ]


ಲಿವಿಂಗ್ ಇನ್ ದಿ ಹೆವನ್-ಭಾಗ ೩ [ಕೊನೆಯ ಭಾಗ]
[ಪ್ಲಗ್ಗಿಂಗ್ ಆಂಡ್ ಅನ್ ಪ್ಲಗ್ಗಿಂಗ್]
[ಗೀತಾ ಜಯಂತಿಯ ಅಂಗವಾಗಿ ಗೀತಾ ಸಂದೇಶ]

ಹಲವು ದಿನಗಳ ಹಿಂದೆ ಈ ವಿಷಯಕವಾಗಿ ಭಾಗಗಳನ್ನು ಓದಿದ್ದೀರಿ. ಬಹಳ ಕಡೆ ನಾನು ನಮ್ಮ ಗಣಕಯಂತ್ರದ ಸರಳ ಮತ್ತು ಸುಲಭ ಸೂತ್ರವಾದ ’ಪ್ಲಗ್ ಆಂಡ್ ಪ್ಲೇ’ ಶಬ್ದವನ್ನು ಬಳಸುವುದಿದೆ. ಇಹ ಜೀವನದ ಬಹುತೇಕ ಭಾಗಗಳಲ್ಲಿ, ನಮ್ಮ ಕೆಲಸ-ಕಾರ್ಯ ಹಾಗೂ ಫಲಾಫಲಗಳಲ್ಲಿ ಇದು ಅನ್ವಯವಾಗುತ್ತದೆ. ಮಾಹಿತಿತಂತ್ರಜ್ಞಾನದ ಇಂದಿನ ಹಲವು ಉಪಕರಣಗಳು ಇದೇ ತತ್ವವನ್ನು ಅನುಸರಿಸುವುದರಿಂದ ಅವುಗಳ ಉಪಯೋಗ ಬಹಳ ಸುಲಭವಾಗಿದೆ. ಇಫ್ ಯು ವಾಂಟ್ ಟು ಯೂಸ್ ಇಟ್ ಜಸ್ಟ್ ಪ್ಲಗ್ ಇಟ್ ಎಂಬ ರೀತಿ ಇದು ಕೆಲಸಮಾಡುತ್ತದೆ.

ದೈನಂದಿನ ಕೆಲಸಗಳಲ್ಲಿ ನಾವು ಸದಾ ತೊಡಗಿಕೊಂಡಿರುತ್ತೇವೆ. ನಮಗೆ ಬಿಡುವೇ ಇರುವುದಿಲ್ಲ. ವಿಪರ್ಯಾಸವೆಂದರೆ ಜಗತ್ತಿನ ಅತೀ ಉನ್ನತ ಮಟ್ಟದ ವ್ಯಾವಹಾರಿಕ ವ್ಯಕ್ತಿಗೂ ಕೂಡ ಒಂದಷ್ಟು ಕಾಲ ಸಮಯವಿರುತ್ತದೆ. ಆತ ತಾನೆಷ್ಟೇ ಕೆಲಸನಿರತ ಎಂದುಕೊಂಡರೂ ದಿನದ ಕೆಲವು ಭಾಗಗಳನ್ನು ಬೇಡದ ಹವ್ಯಾಸಗಳಲ್ಲೋ ಚಟಗಳಲ್ಲೋ ಕಳೆಯುತ್ತಾನೆ. ಆ ಸಮಯವನ್ನು ಸದುಪಯೋಗ ಪಡೆದುಕೊಂಡರೆ ಆತನ ಸ್ವಂತದ ಏಳ್ಗೆಯೂ ಜೊತೆಗೆ ಆತನನ್ನು ಅವಲಂಬಿಸಿದವರ ಹಾಗೂ ಸುತ್ತಲ ಜಗತ್ತಿನ ಏಳ್ಗೆಯೂ ಸಾಧ್ಯವಾಗುತ್ತಿತ್ತು. ಆದರೆ ಅದನ್ನು ಆತ ಪರಿಗಣಿಸುವುದಿಲ್ಲ. ಆತನಿಗೆ ಏನಿಲ್ಲವೆಂದರೂ ಸಹಜವಾದ ಅಹಂಕಾರ ಉದ್ಭವವಾಗಿರುತ್ತದೆ. ಜಗತ್ತೆಲ್ಲಾ ತನ್ನನ್ನು ಕೊಂಡಾಡಬೇಕು, ತಾನು ಬಹುಪ್ರಸಿದ್ಧನಾಗಿ ಬೇಕಾದದ್ದಕ್ಕಿಂತಾ ಹೆಚ್ಚಿನ ಹಣವನ್ನು ಗಳಿಸಿ ಸುಖವಾಗಿ ಕಾಲಕಳೆಯಬೇಕೆಂಬುದು ಪ್ರತಿಯೊಬ್ಬರಲ್ಲೂ ಹುಟ್ಟಬಹುದಾದ ಆಸೆ.

ಅಶನಕ್ಕಾದರೆ ವಶನಕ್ಕೆ ನಂತರ ನಿದ್ರೆಗೆ ಆನಂತರ ಮೈಥುನಕ್ಕೆ ಆನಂತರ ಕೂಡಿಡುವ ಕಾರ್ಯಕ್ಕೆ ಹೀಗೇ ಆಹಾರ,ಬಟ್ಟೆ, ವಸತಿ,ನಿದ್ರೆ,ಮೈಥುನ,ಹಣಗಳಿಕೆ-ಕೂಡುವಿಕೆ ಇವುಗಳಲ್ಲೇ ಪ್ರತಿಯೊಬ್ಬರೂ ಆಸಕ್ತರಾಗಿರುತ್ತೇವೆ. ಮತ್ತೊಬ್ಬನಲ್ಲಿ ಬಿ.ಎಮ್.ಡಬ್ಲ್ಯೂ ಕಾರಿದೆ ಎಂದಾದತಕ್ಷಣ ತನ್ನಲ್ಲೂ ಒಂದಲ್ಲ ಎರಡೆರಡು ಇರಲಿ ಎಂಬ ಬಯಕೆ. ತನ್ನ ಬಂಗಲೆ ಅತೀ ಎತ್ತರವಾಗಿಯೂ ಅತೀ ಸುಂದರವಾಗಿಯೂ ಅತ್ಯಂತ ಆಧುನಿಕ ವ್ಯವಸ್ಥೆಗಳಿಂದ ಕೂಡಿದ್ದೂ ಆಗಿರಲಿ ಎಂಬ ವಾಂಛೆ. ಇದರ ಹೊರಗಿನ ಅರಿವು ನಮಗಿರುವುದೇ ಇಲ್ಲ ! ನಿಜವಾಗಿಯೂ ನಮ್ಮೊಳಗೇನಿದೆ? ಒಳಗೆ ಆತ್ಮ ಎಂಬ ಅದ್ಭುತ ಚೇತನವಿದ್ದರೆ ಅದು ಯಾವರೂಪದಲ್ಲಿರುತ್ತದೆ ? ಇವತ್ತು ವೈಜ್ಞಾನಿಕ ಬೆಳವಣಿಗೆಯಿಂದ ಹೊಸ ಹೊಸ ಯಂತ್ರಗಳನ್ನು ಕಂಡುಕೊಂಡು ಹೃದಯವನ್ನೇ ಬದಲಿಸುವ ಅಥವಾ ಇನ್ನು ಕೆಲವೇ ದಿನಗಳಲ್ಲಿ ಮೆದುಳನ್ನೇ ಬದಲಿಸುವ ಹಂತಕ್ಕೆ ನಾವು ಮುನ್ನುಗ್ಗಿದ್ದೇವೆ, ಆದರೂ ರೋಗಿಯ ಅಳಿವು ಉಳಿವಿನ ಪ್ರಶ್ನೆ ನಮ್ಮ ಕೈಲಿರುವುದಿಲ್ಲ ! ಹಾಗಾದರೆ ಅಲ್ಲೆಲ್ಲೂ ಕಾಣದ ಆ ಸುಪ್ತ ಚೇತನ ಎಲ್ಲಿ ಕುಳಿತಿದೆ? ನಾವಂತೂ ಅದರಬಗ್ಗೆ ಒಂದೇ ಒಂದು ಕ್ಷಣವೂ ಚಿಂತಿಸುವುದಿಲ್ಲ.

ಆಧುನಿಕ ವೈದ್ಯರು ಹೇಳುತ್ತಾರೆ ಶರೀರದಲ್ಲಿ ಕೊಲೆಸ್ಟರಾಲ್ ಜಾಸ್ತಿ ಇದ್ದರೆ ಹೃದಯಸ್ತಂಭನಕ್ಕೆ ಅದೇ ಕಾರಣವಾಗುತ್ತದೆ ಎಂದು. ಗುಲ್ವಾಡಿಯವರು ಹೃದಯಸ್ತಂಭನದಿಂದಲೇ ತಮ್ಮ ಯಾತ್ರೆಮುಗಿಸಿದರೆಂದು ನಾವು ತಿಳಿದಿದ್ದೇವೆ. ಪ್ರಾಯಶಃ ಅವರ ಆ ಸಣಕಲು ದೇಹದಲ್ಲಿ ಹಿಂಡಿತೆಗೆದರೂ ಕೊಲೆಸ್ಟರಾಲ್ ಸಿಗುತ್ತಿರಲಿಲ್ಲ! ಹಾಗಾದರೆ ಅವರಿಗೆ ೪೫-೫೦ ವರ್ಷಗಳಿಂದ ಹೃದಯ ಸಂಬಂಧೀ ತೊಂದರೆ ಅದು ಹೇಗೆ ಬಂದಿತ್ತು? ಮಾಧ್ಯಮಗಳಲ್ಲಿ ನಾವು ಎಂತೆಂತಹಾ ದಢೂತಿಗಳನ್ನು ನೋಡುತ್ತೇವೆ ಆದರೆ ಅವರಲ್ಲಿ ಅನೇಕರಿಗೆ ಹೃದಯದ ತೊಂದರೆಯೇ ಬರುವುದಿಲ್ಲ ಯಾಕೆ ? ಕಾರಣ ನಮಗೆ, ನಮ್ಮ ವಿಜ್ಞಾನಕ್ಕೆ ಇನ್ನೂ ತಿಳಿದಿಲ್ಲ ! ನನ್ನ ಹತ್ತಿರದ ಸಂಬಂಧಿಯೋರ್ವರಿಗೆ ಮೂತ್ರನಾಳಕ್ಕೆ ಸಂಬಂಧಿಸಿದಂತೇ ತೊಂದರೆ ಕಾಣಿಸಿತು. ಅಮೇರಿಕಾದಲ್ಲಿ ತರಬೇತಿ ಪಡೆದು ಈಗ ಭಾರತದಲ್ಲಿ ಕೆಲಸಮಾಡುತ್ತಿರುವ ತಜ್ಞವೈದ್ಯರೊಬ್ಬರು ಎಲ್ಲಾ ರೀತಿಯ ಪ್ರಯೋಗಪರಿಶೀಲನೆ ನಡೆಸಿ ೨ ಸರ್ತಿ ಗುರುತರ ಶಸ್ತ್ರಚಿಕಿತ್ಸೆ ನಡೆಸಿದರು. ಆದಾಗ್ಯೂ ಕೆಲವೇ ತಿಂಗಳಲ್ಲಿ ಅವರ ಆ ತೊಂದರೆ ಮತ್ತೆ ಹಾಗೇಇರುವುದು ಕಾಣಿಸಿತು. ಆದಾದಮೇಲೆ ನಮ್ಮ ನಿಪುಣ ಆಯುರ್ವೇದ ವೈದ್ಯರನ್ನು ಕಾಣಿರೆಂದು ನಾನೊಂದು ಪುಗಸಟ್ಟೆ ಸಲಹೆಕೊಟ್ಟೆ! ಆದರೆ ಅದರಂತೇ ಅವರು ನಡೆದುಕೊಂಡು ಆ ತೊಂದರೆಯಿಂದ ಈಗ ಗುಣಮುಖರಾಗಿದ್ದಾರೆ ಎಂದರೆ ನಿಮಗೆಲ್ಲಾ ಆಶ್ಚರ್ಯವಾಗಬಹುದಲ್ಲವೇ ? ಇದು ನಡೆದ ನೈಜ ಕಥೆ ಎಂದರೆ ನೀವು ನಂಬಬಹುದೇ ? ನಂಬದಿದ್ದರೂ ಅದು ಸುಳ್ಳಾಗದಲ್ಲಾ !

ಹಲವೊಮ್ಮೆ ನಮ್ಮ ದಿನದ ವ್ಯವಹಾರಗಳಲ್ಲಿ ಬೇಡದ್ದನ್ನೆಲ್ಲಾ ತಂದು ಗುಪ್ಪೆ ಹಾಕಿಕೊಂಡು ಎಲ್ಲವೂ ನಮ್ಮ ಸಮಸ್ಯೆಗಳೇ ಎಂದು ತಿಳಿಯುತ್ತೇವಲ್ಲಾ ಇದಕ್ಕಿಂತ ದೊಡ್ಡ ತಪ್ಪು ಬೇಕೆ? ದಿನವಿಡೀ ಪರರ ಬಗ್ಗೆ ಚಿಂತಿಸುವುದು, ಅವರಿಗೆ ಕೇಡು ಬಯಸುವುದು, ಅವರ ಕಾಲೆಳೆಯಲು ಪ್ರಯತ್ನಿಸುವುದು, ಅವರ ಬೆಳವಣಿಗೆ ಕಂಡು ಕರುಬುವುದು ಇದರಲ್ಲೆಲ್ಲಾ ನಮ್ಮ ಸಮಸ್ಯೆಗಳು ಅಡಗಿವೆ ಅಲ್ಲವೇ ? ಬುದ್ಧ ಸಾರಿದಂತೇ 'ಆಸೆಯೇ ದುಃಖಕ್ಕೆ ಮೂಲ ' ಎನ್ನುವುದು ಎಷ್ಟು ಸಮಂಜಸ ನೋಡಿ. ಇಲ್ಲದ ಆಸೆಗಳಿಗೆ, ಬಯಕೆಗಳಿಗೆ ದಾಸರಾಗಿ, ಸಾಮಾಜಿಕ ವ್ಯವಸ್ಥೆಯಿಂದ ಛೇಡಿಸಲ್ಪಟ್ಟೋ ಹತ್ತಿಕ್ಕಲ್ಪಟ್ಟೋ ನಿಶ್ಚೇಷ್ಟಿತರಾಗಿ ಮರಳಿದರೂ ಮತ್ತೂ ಮತ್ತೂ ಅನಾಯಾಸವಾಗಿ ಪಡೆಯಲಾಗದ್ದನ್ನೇ ಬಯಸುವ ನಮಗೆ ಅವುಗಳಿಂದಲೇ ಸಮಸ್ಯೆಗಳ ಆರಂಭವೆಂದರೆ ತಪ್ಪೇನಿದೆ ? ಆಸೆಪಟ್ಟಿದ್ದು ಸಿಗದಾಗ ಮನಸ್ಸು ಕ್ರುದ್ಧವಾಗಿ ಬೇರೇನನ್ನೋ ಚಿಂತಿಸುತ್ತದೆ, ಅಲ್ಲೂ ಅದನ್ನು ಪಡೆಯದಾದಾಗ ಸುತ್ತಲ ಸಮಾಜದವರ ಮೇಲೆ ಕೋಪಬರುತ್ತದೆ. ಆ ಕೋಪ ತೀರಿಸಿಕೊಳ್ಳುವ ಭರದಲ್ಲಿ ಪರಿತಾಪವುಂಟಾಗುತ್ತದೆ. ಜಗಳಗಳು-ದೊಂಬಿಗಳು ನಡೆಯುತ್ತವೆ. ಈರ್ಷ್ಯೆಯುಂಟಾಗುತ್ತದೆ. ಕ್ಷಣಕ್ಷಣಕ್ಕೂ ಮನಸ್ಸು ಉದ್ವೇಗಕ್ಕೊಳಗಾಗುತ್ತದೆ. ಮನಸ್ಸಿನ ಉದ್ವೇಗ ನಮ್ಮ ಅಂಗಾಂಗಗಳಮೇಲೆ ಪರಿಣಾಮ ಬೀರುತ್ತದೆ. ಸಹಜ ಸ್ಥಿತಿಯಲ್ಲಿ ನಡೆಯಬೇಕಾದ ದೇಹಯಂತ್ರ ತನ್ನ ಮೂಲಸ್ಥಿತಿಯನ್ನು ಕಳೆದುಕೊಳ್ಳತೊಡಗುತ್ತದೆ. ಆಗ ಇಲ್ಲದ ಕಾಯಿಲೆಗಳು ಅಡರಿಕೊಳ್ಳುತ್ತವೆ."ವಂಶದಲ್ಲೇ ಇಲ್ಲದ ಕಾಯಿಲೆ ಅದು ಹೇಗೆ ಬಂತಪ್ಪಾ " ಎಂದು ಮತ್ತೆ ಕಳವಳಕ್ಕೀಡಾಗುತ್ತೇವೆ. ಹಲವು ಮಾರ್ಗದಲ್ಲಿ ಪರಿಹಾರಗಳನ್ನು ಹುಡುಕುತ್ತೇವೆ. ವೈದ್ಯರು, ಜ್ಯೋತಿಷ್ಕರು, ಧರ್ಮಗುರುಗಳು, ಪವಾಡ ಪುರುಷರು, ಪ್ರಾರ್ಥನಾ ಮಂದಿರಗಳು, ಪುನರ್ಜನ್ಮವನ್ನು ತಿದ್ದುತ್ತೇವೆನ್ನುವ ಮೂರ್ಖರು, ಪೂಜೆ-ಪುನಸ್ಕಾರಗಳು ಇನ್ನೂ ಹಲವು ದಾರಿಗಳಲ್ಲಿ ಪರಿಹಾರಗಳನ್ನು ಕಾಣಲು ಪ್ರಯತ್ನಿಸುತ್ತೇವೆ. ಆದರೆ ನಮ್ಮೊಳಗೇ ಕೂತಿರುವ ವೈದ್ಯ ಮಹಾಶಯ ಇದನ್ನೆಲ್ಲಾ ನೋಡಿ ನಗುವುದನ್ನು ಮರೆತುಬಿಡುತ್ತೇವೆ !

ಇವತ್ತಿನ ದಿನಮಾನದಲ್ಲಿ ಅನೇಕರು ಹೇಳುವುದು ತಾವು ಸಾಧಿಸಿದ್ದೇವೆ, ಬಂಗಲೆ ಕಟ್ಟಿದ್ದೇವೆ, ಕಾರುಕೊಂಡಿದ್ದೇವೆ, ಬ್ಯಾಂಕಿನಲ್ಲಿ ಹಣ ಇಟ್ಟಿದ್ದೇವೆ, ಮನೆಯಲ್ಲಿ ಯಂತ್ರಚಾಲಿತ ಕೆಲಸ ನಿರ್ವಹಣೆಯಾಗುವಂತೇ ನೋಡಿಕೊಂಡಿದ್ದೇವೆ. ಹೀಗಾಗಿ ನಮಗೆ ಯಾವುದೇ ಕೊರತೆಯೂ ಇಲ್ಲ. ಬರಿದೇ ಪರಾಶಕ್ತಿ ಇದೆಯೆಂದು ಬೊಗಳೆಬಿಡುತ್ತಾ ಹೋಮ, ಹವನ, ಪೂಜೆ-ಪುನಸ್ಕಾರೈವುಗಳಲ್ಲಿ ಕಾಲಕಳೆಯುವವರಿಗೆ ತಾವು ಹೇಳುವುದು --ಜಗತ್ತು ಸೃಷ್ಟಿಯ ಸಹಜ ನಿಯಮ, ನಮ್ಮ ಪ್ರಯತ್ನದಲ್ಲೇ ಎಲ್ಲವೂ ಅಡಗಿದೆ, ಅದರಿಂದಲೇ ಎಲ್ಲವೂ ಸಾಧ್ಯವಾಗುತ್ತದೆ. ಹೀಗಾಗಿ ದೇವರು ಎಂಬುದೆಲ್ಲಾ ಸುಳ್ಳು, ಏನಿದ್ದರೂ ಅದೆಲ್ಲಾ ಕಟ್ಟುಕಥೆ. ಅದೇ ಜನರ ಮಕ್ಕಳನ್ನು ಯಾರೋ ಅಪಹರಿಸಿದರೆ ಅಥವಾ ಮುಂದಿನ ಅವರ ವ್ಯವಹಾರಗಳಲ್ಲಿ ಪ್ರಗತಿ ಕುಂಠಿತವಾಗಿ ಬಯಸಿದ ಫಲಗಳು ಸಿಗದೇ ಹೋದರೆ, ಮನೆಯಲ್ಲಿ ಅನುವಂಶಿಕವಾಗಿಯೋ ಕರ್ಮಬಂಧನದಿಂದಲೋ ಅನಿರೀಕ್ಷಿತವಾಗಿ ಯಾರಿಗೋ ಕಾಯಿಲೆ ಕಾಣಿಸಿಕೊಂಡರೆ ಆಗ ಅವರಲ್ಲೂ ತಮಗಿಂತಾ ಹಿರಿದಾದ ಶಕ್ತಿ ಒಂದಿದೆ ಎಂಬ ಅಭಿಪ್ರಾಯ ಮೂಡಲು ಆರಂಭವಾಗುತ್ತದೆ. ಆದರೂ ಅವರಿಗಿರುವ ಅಹಂಕಾರ ತಕ್ಷಣಕ್ಕೆ ದೇವರನ್ನು ಬಾಹ್ಯವಾಗಿ ಎಲ್ಲರೆದುರು ಒಪ್ಪಲು ಅವಕಾಶಕೊಡುವುದಿಲ್ಲ. ಎಲ್ಲಿಯವರೆಗೆ ಅವರು ಪರಾಶಕ್ತಿಯನ್ನು ಸಮಾಜದಲ್ಲಿ ಒಪ್ಪುವುದಿಲ್ಲವೋ ಅಲ್ಲೀವರೆಗೆ ಅವರಿಗೆ ಯಾವ ದೈವೀಕೃಪೆಯೂ ಸಿಗುವುದಿಲ್ಲ.

ಗಾಂಡೀವಿಯೂ ಎನಿಸಿದ ಸವ್ಯಸಾಚಿ ಮಹಾಪರಾಕ್ರಮಿ ಅರ್ಜುನ ತನ್ನಮಗ ಬಭ್ರುವಾಹನನಿಂದಲೇ ಸೋತು ಸಾವನ್ನಪ್ಪುವಾಗ ಬಾವ ಭಗವಾನ್ ಕೃಷ್ಣ ಬೇಗನೇ ಸಹಾಯಕ್ಕೆ ಬರಲಿಲ್ಲ. ಯಾಕೆಂದರೆ ಅರ್ಜುನನ ಅಂಹಕಾರದ ಅರಿವು ಆತನಿಗೆ ತಿಳಿದುಬರಲಿ ಎಂಬ ಉದ್ದೇಶ ಕೃಷ್ಣನದಾಗಿತ್ತು. ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಸೆಳೆಯುವಾಗ ಧೀರ ಶೂರ ಪಂಚಪಾಂಡವರು ನಿಸ್ಸಹಾಯಕರಾಗಿ ತಲೆತಗ್ಗಿಸಿ ನಿಂತಿದ್ದರು. ದ್ರೌಪದಿ ಒಂದು ಕೈಯ್ಯಲ್ಲಿ ದೇಹವನ್ನು ಮುಚ್ಚಿ ಇನ್ನೊಂದು ಕೈಯ್ಯೆತ್ತಿ " ಅಣ್ಣಾ ಕೃಷ್ಣಾ "ಎಂದು ಗೋಗರೆದರೂ ಕೃಷ್ಣ ಬರಲಿಲ್ಲ, ಯಾವಾಗ ಆಕೆ ಎರಡೂ ಕೈಯ್ಯನ್ನು ಎತ್ತಿ ತನ್ನ ಮಾನಾಪಮಾನ ನಿನಗೇ ಬಿಟ್ಟಿದ್ದು ಎಂದು ಘೋಷಿಸಿದಳೋ ಆಗ ಕಾಣದ ಕೈ ಅವಳ ಸೀರೆಯನ್ನು ಅಕ್ಷಯಾಂಬರವನ್ನಾಗಿ ಮಾರ್ಪಡಿಸಿತು. ಸೆಳೆಯುತ್ತ ಸೆಳೆಯುತ್ತ ದುಷ್ಟ ದುಶ್ಶಾಸನ ತಾನೇ ಸೋತ ! ಧರ್ಮವನ್ನೇ ಸದಾ ಪರಿಪಾಲನೆ ಮಾಡುವೆನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಯುಧಿಷ್ಠಿರನ ರಥ ನೆಲಕ್ಕೆ ಕುಪ್ಪಳಿಸಿ ಬಿದ್ದಿತು-ಕೃಷ್ಣನನ್ನೇ ಸಂಶಯಿಸಿ ’ ಅಶ್ವತ್ಥಾಮ ಎಂಬ ಆನೆ ಸತ್ತಿದ್ದನ್ನು ನೋಡದೇ ಘೋಷಿಸಲಾರೆ’ ಎಂಬ ಆತನ ಧೋರಣೆ ಅದಕ್ಕೆ ಕಾರಣವಾಗಿತ್ತು !

ನಂಬಿದರೆ ನಂಬಿ ಬಿಟ್ಟರೆ ಬಿಡಿ. ಈ ಜಗತ್ತಿನ ಪ್ರತಿಯೊಂದೂ ಆಗುಹೋಗುವಿಕೆ ಪರಾಶಕ್ತಿಯ ಸಂಕಲ್ಪದಂತೇ ನಡೆಯುತ್ತದೆ. ನಾವೇನು ಮಾಡುತ್ತಿದ್ದೇವೋ ಅದನ್ನು ಮಾಡಿಸುತ್ತಿರುವುದು ಅದೇ ಆ ಶಕ್ತಿ. ನಾವು ಮಾಡುತ್ತಿರುವ ಕೆಲಸಗಳಿಗೂ, ಫಲಾಫಲಗಳಿಗೂ ನಮ್ಮ ಜನ್ಮಾಂತರಗಳ ಕರ್ಮಬಂಧನದ ಆವಿಷ್ಕಾರ ಅಳವಡಿಸಲ್ಪಟ್ಟಿರುತ್ತದೆ. ಯಾವಾತ ಎಲ್ಲಿ ಹುಟ್ಟಿ ಏನು ಮಾಡಿ ಯಾವಾಗ ಮರಣಿಸಬೇಕು ಎಂದೆಲ್ಲಾ ಪೂರ್ವನಿಗದಿತ ವಿಷಯಗಳು. ಬೂದಿಮುಚ್ಚಿದ ಕೆಂಡದಂತೇ ಹೊಗೆಯೊಳಗಿನ ಜ್ವಾಲೆಯಂತೇ ನಮ್ಮ ಮನಸ್ಸು ಇಹದ ಮಾಯೆಯ ಮುಸುಕಿನಲ್ಲಿ ಅಡಗಿರುತ್ತದೆ. ಆ ಮಾಯೆಯ ಮುಸುಕನ್ನು ಸ್ವಲ್ಪ ಪಕ್ಕಕ್ಕೆ ಸರಿಸಲು ಪ್ರಯತ್ನಿಸಿದರೆ ಅದು ನಮ್ಮರಿವಿಗೆ ನಾವಿಡುವ ಮೊದಲ ಹೆಜ್ಜೆಯಾಗುತ್ತದೆ. ಉತ್ಸದ್ಧೀ ಮುದುಕನೊಬ್ಬನೂ ತನ್ನ ಸ್ವಾನುಭವದಿಂದ ಸಾಧ್ಯವಾಗಿಸಲಾಗದ ಅನೇಕ ಕೆಲಸಗಳನ್ನು ಎಳೆಯ ಬಾಲಕನೊಬ್ಬ ಸಲೀಸಾಗಿ ಮಾಡಿರುವ ದಾಖಲೆಗಳಿವೆ. ಅಗಣಿತ ತಪಸ್ಸನ್ನಾಚರಿಸಿಯೂ ಏನನ್ನೂ ಸಾಧಿಸಲಾಗದ ವ್ಯಕ್ತಿಗಳು ಆಗಿಹೋಗಿದ್ದಾರೆ. ಡಾಂಭಿಕ ಆಚರಣೆಯನ್ನು ತೊರೆದು ವಿಶುದ್ಧಮನಸ್ಸಿನಿಂದ ನಾವು ಮಾಡುವ ಧ್ಯಾನ ನಮ್ಮ ಉಪಕಾರಕ್ಕೆ ಬರುತ್ತದೆ. ಹೀಗಾಗಿ ಯಾರ್ಯಾರು ಏನೇನು ಆಗಬೇಕೋ ಏನೇನು ನಡೆಯಬೇಕೋ ಅದೆಲ್ಲಾ ನಡೆಯುವುದು ವಿಧಿಯೆಂಬ ಆ ಪರಾಶಕ್ತಿಯ ಇಚ್ಛೆ. ಕೆಲವೊಮ್ಮೆ ಮನಸ್ಸಿಗೆ ಹಿತ ಇನ್ನೊಮ್ಮೆ ಅಹಿತ, ಕೆಲವೊಮ್ಮೆ ಸುಖ ಇನ್ನೊಮ್ಮೆ ದುಃಖ, ಕೆಲವೊಮ್ಮೆ ಬಹುಮಾನ ಹಲವೊಮ್ಮೆ ಅವಮಾನ ಇವೆಲ್ಲಾ ಸಹಜವಾಗಿ ನಮ್ಮ ಜೀವನದ ದಾರಿಯ ಏರುತಗ್ಗುಗಳು. ಈ ಎಲ್ಲಾ ಏರುತಗ್ಗುಗಳನ್ನೂ ಸಮಭಾವದಿಂದ ಸ್ವೀಕರಿಸದರೆ ಮಾತ್ರ ನಾವು ಪ್ಲಗ್ ಆಂಡ್ ಅನ್ ಪ್ಲಗ್ ಆಗುತ್ತೇವೆ.

ಎಲ್ಲವೂ ಬೇಕು ಆದರೆ ಯಾವುದೂ ಬೇಡ ! ದಾಸರು ಹೇಳಿದರು--’ಈಸಬೇಕು ಇದ್ದೂ ಜಯಿಸಬೇಕು’. ಅವರ ಅನುಭವ ಎಷ್ಟು ಸತ್ಯವಾಗಿದೆಯಲ್ಲವೇ ? ಕಮದ ಎಲೆ ಅಥವಾ ಕೆಸವೆಯ ಎಲೆ ನೀರಲ್ಲಿ ಹಾಕಿದರೂ ನೀರನ್ನು ಹೀರಿಕೊಂಡು ಒದ್ದೆಯಾಗುವುದಿಲ್ಲವೋ ಹಾಗೇ ಜಗತ್ತಿನ ವ್ಯವಹಾರಗಳಲ್ಲಿ ನಾವಿರಬೇಕು, ಆದರೆ ಅದರಲ್ಲೇ ಮುಳುಗಿ ನಮ್ಮತನವನ್ನು ಕಳೆದುಕೊಳ್ಳಬಾರದು. ನಿಜ-ಮಾನವ ಸಹಜವಾಗಿ ಗಂಡ, ಹೆಂಡತಿ, ಮಕ್ಕಳು, ಅಪ್ಪ-ಅಮ್ಮ, ಬಂಧುಗಳು ಇವೆಲ್ಲವೂ ಮೋಹದ ಸಂಬಂಧಗಳೇ ಆದರೆ ಮೋಹ ನಮ್ಮ ಹಿಡಿತದಲ್ಲಿರಬೇಕು. ಬರೇ ಮೋಹವಲ್ಲ ಪಂಚೇಂದ್ರಿಯಗಳೂ ನಮ್ಮ ಹಿಡಿತದಲ್ಲಿರಬೇಕು. ಅಪಾಯದ ಸೂಚನೆ ಕಂಡಾಗ ಆಮೆಯೊಂದು ತನ್ನ ನಾಲ್ಕು ಕಾಲುಗಳು ಮತ್ತು ತಲೆಯನ್ನು ಹೇಗೆ ಕವಚದೊಳಗೆ ಎಳೆದು ಸೇರಿಸಿಕೊಳ್ಳುತ್ತದೋ ಹಾಗೇ ಈ ಇಂದ್ರಿಯಗಳನ್ನು ನಾವು ಹಿತಮಿತವಾಗಿ ಬಳಸಬೇಕು. ಅತಿಯಾದಾಗ ಅದೇ ನಮಗೆ ಮಾರಕವಾಗುತ್ತದೆ! ಇಂದ್ರಿಯಗಳ ಮೂಲಕ ಕರ್ಮಗಳನ್ನು ಮಾಡುತ್ತೇವೆ. ಪ್ರತಿಯೊಂದೂ ಕರ್ಮಗಳಲ್ಲಿ ಲೋಪದೋಷಗಳು ಇದ್ದೇ ಇರುತ್ತವೆ. ಆ ದೋಷಗಳು ನಮ್ಮೊಳಗಿನ ಜೀವಾತ್ಮನಿಗೆ ಅಂಟಿಕೊಂಡು ಬರುತ್ತವೆ. ಹೇಗೆ ಮೊಬೈಲ್ ನ ಸಿಮ್ಮು ತೆಗೆದು ಬೇರೆ ಹ್ಯಾಂಡ್ ಸೆಟ್ ಗೆ ಹಾಕಿದಾಗ ಅದರಲ್ಲಿರುವ ಮಾಹಿತಿಗಳಲ್ಲಿ ಅನೇಕವು ಜೊತೆಗೇ ಇರುತ್ತವೋ ಅದೇ ರೀತಿಯಲ್ಲಿ ಜನ್ಮದಿಂದ ಜನ್ಮಕ್ಕೆ ಸಾಗುವಾಗ ಇಹದ ನಮ್ಮ ಕರ್ಮಫಲಗಳು ಜೀವಾತ್ಮನ ಜೊತೆಗೇ ಸಾಗುತ್ತವೆ. ಮನಸ್ಸೆಂಬುದು ಜೀವಾತ್ಮನ ಒಂದು ಭಾಗವಾದುದರಿಂದಲೂ ನಮ್ಮ ಕರ್ಮಗಳ ಲೆಕ್ಕವನ್ನು ಒಳಗೆ ಕುಳಿತ ಪರಮಾತ್ಮನೇ ಇಟ್ಟುಕೊಳ್ಳುವುದರಿಂದಲೂ ಇಲ್ಲಿಮಾತ್ರ ಯಾರೂ ಮೋಸಮಾಡಲಾಗುವುದಿಲ್ಲ!

ಕರ್ಮಫಲಗಳಿಗನುಗುಣವಾಗಿ ಜನ್ಮವೆತ್ತುವ ನಾವು ಸಿರಿತನವೋ ಬಡತನವೋ ಅದನ್ನು ಅನುಭವಿಸಲೇ ಬೇಕಾಗಿಬರುವುದು ಪ್ರಕೃತಿಸಹಜಧರ್ಮ. ಈ ನಿಟ್ಟಿನಲ್ಲಿ ಪ್ರಾರ್ಥಿಸಿದಾಗ ಪರಮಾತ್ಮ ಪ್ರತ್ಯಕ್ಷನಾಗುವುದಿಲ್ಲ. ಪರೋಕ್ಷ ಆತನ ಸಹಾಯ ನಮ್ಮ ಮೆದುಳಿಗೆ ಒದಗಿಬರುತ್ತದೆ! ನಮ್ಮ ಬುದ್ಧಿಗೆ ಹೊಳಪು ಬರುತ್ತದೆ. ಮೊಂಡುಬುದ್ಧಿ ತೀಕ್ಷ್ಣವಾಗುತ್ತದೆ. ಉದ್ಭವಿಸುವ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳುವ ದಾರಿಕಾಣಿಸುತ್ತ ಹೋಗುತ್ತದೆ.ಒಳ್ಳೆಯ ಬುದ್ಧಿಯನ್ನು ಪಡೆಯುವಾಗ ಬುದ್ಧಿಗೆ ಪರಾಶಕ್ತಿಯ ಪ್ರಚೋದನೆ ಬೇಕಾಗುತ್ತದೆ. ಉತ್ತಮ ಪ್ರಚೋದನೆಗಳನ್ನು ಪಡೆಯಲು ನಾವು ನಮ್ಮನ್ನು ಸಂಸ್ಕರಿಸಿಕೊಳ್ಳಬೇಕಾಗುತ್ತದೆ. ಕಸಸಹಿತ ಇರುವ ಹಾಲನ್ನೋ ನೀರನ್ನೋ ಜಾಳಿಗೆಯಲ್ಲಿ ಸೋಸಿ ಬೇರ್ಪಡಿಸುವ ಹಾಗೇ ನಮ್ಮ ಮನಸ್ಸಿಗೆ ಒಳ್ಳೆಯ ಸಂಸ್ಕಾರವನ್ನು ಕೊಡಬೇಕಾಗುತ್ತದೆ. ಉತ್ತಮರ ಸಂಘದಿಂದ, ಜ್ಞಾನಿಗಳ ಸಹವಾಸದಿಂದ, ಪುಣ್ಯಪುರುಷರ ಸೇವೆಯಿಂದ-ಅನುಸರಣೆಯಿಂದ, ಯಾರಿಗೋ ಕೇಡನ್ನು ಬಯಸದೇ ಇರುವ ಸ್ವಭಾವದಿಂದ, ಅಹಿಂಸಾತ್ಮಕವಾಗಿ ಶುಚಿಯಾಗಿ ತಯಾರಿಸಿದ ಅತಿಯಾದ ಉಪ್ಪು-ಹುಳಿ-ಖಾರ-ಕಹಿ-ಬಿಸಿ ಇರದ ಸಾತ್ವಿಕ ಆಹಾರದಿಂದ, ಕಷ್ಟಾರ್ಜಿದಲ್ಲಿ ಕೆಲಭಾಗವನ್ನು ಹೆಗ್ಗಳಿಕೆಯಿಲ್ಲದೇ ದಾನಮಾಡುವ ಪ್ರಕ್ರಿಯೆಯಿಂದ, ಎಲ್ಲಾ ಪ್ರಾಣಿಗಳಲ್ಲಿ ಸಹಾನುಭೂತಿ-ಅನುಕಂಪವನ್ನು ಇರಿಸಿಕೊಳ್ಳುವುದರಿಂದ, ಅಣುರೇಣುತೃಣಕಾಷ್ಠಗಳಲ್ಲೂ ಪರಮಾತ್ಮನ ಸಾನ್ನಿಧ್ಯವಿದೆ ಎಂಬ ತಿಳುವಳಿಕೆಯಿಂದ ನಾವು ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬುದನ್ನು ವಿವೇಚಿಸಿ ನಡೆದರೆ ಆಗ ಬುದ್ಧಿಗೆ ಒಳ್ಳೆಯ ಪ್ರಚೋದನೆಯಾಗುತ್ತದೆ.

ಇಂತಹ ಪ್ರಚೋದನೆಯನ್ನು ಪಡೆಯಲು ದಿನಕ್ಕೆ ಒಂದಾವರ್ತಿಯಾದರೂ ನಿರ್ವಿಷಯ ಧ್ಯಾನಮಾಡುವುದನ್ನು ನಿಜವಾದ ಸನ್ಯಾಸಿ/ಯೋಗಿಯ ಮೂಲಕ ಕಲಿತು ಅನುಸರಿಸಿದರೆ ಆಗ ನಮ್ಮೊಳಗಿನ ಮೊಬೈಲ್ ಚಾರ್ಜ್ ಆಗುತ್ತದೆ. ಮೊಬೈಲ್ ಹೊಸದಿದ್ದಾಗ ಕಡಿಮೆ ಹೊತ್ತು ಚಾರ್ಜಿಗೆ ಹಾಕಿದರೂ ಸರಿ ಅದು ತುಂಬಾ ಹೊತ್ತು ನಮ್ಮ ಬಳಕೆಗೆ ಸಿಗುತ್ತದೆ; ವರುಷಗಳ ನಂತರ ಮೊಬೈಲ್ ಚಾರ್ಜ್ ಬೇಗ ಮುಗಿದುಹೋಗುತ್ತದೆ. ಬ್ಯಾಟರಿ ಬದಲಾಯಿಸಿದರೂ ಮತ್ತೇನೋ ಪ್ರಾಬ್ಲಮ್ಮು ಇರುತ್ತದೆ! ಹೀಗೆಯೇ ಮನುಷ್ಯ ಚಿಕ್ಕವನಿದ್ದಾಗ ಆತನಿಗೆ ಸಮಸ್ಯೆಗಳು ಜಾಸ್ತಿ ಎಡತಾಕುವುದಿಲ್ಲ. [ಎಲ್ಲೋ ಅಪವಾದಗಳಿರಬಹುದು] ಆದರೆ ಮನುಷ್ಯ ಬೆಳೆದಂತೇ ಹಲವು ಸಮಸ್ಯೆಗಳನ್ನು ಸಂದಿಗ್ಧಗಳನ್ನು ಎದುರಿಸಬೇಕಾಗಿ ಬರುತ್ತದೆ. ಅಂತಹ ಸಮಸ್ಯೆ-ಸಂದಿಗ್ಧಗಳು ಬರುವುದು ನಮ್ಮ ಜನ್ಮಾಂತರ ಕರ್ಮಫಲಗಳಿಂದ. ಹಾಗೆ ಬಾರದಂತೇ ಅಥವಾ ಬಂದರೂ ನಿಭಾಯಿಸಲು ಮಾರ್ಗಸಿಗುವಂತೇ ಮಾರ್ಗದರ್ಶನ ನೀಡುವ ತಾಕತ್ತಿರುವುದು ನಮ್ಮೊಳಗಿನ ಬುದ್ಧಿಗೆಮಾತ್ರ. ಯಾವ ವಿಟಾಮಿನ್ ಗಳಿಂದಲೋ ಮಾತ್ರೆಗಳಿಂದಲೋ ಬುದ್ಧಿಮಟ್ಟವನ್ನು ಅತಿಜಾಗ್ರತ ಗೊಳಿಸಲು ಸಾಧ್ಯವಿಲ್ಲ. ಅಬಾಕಸ್ ನಂತಹ ಮೆದುಳು ವ್ಯಾಯಾಮವನ್ನು ಮಾಡಿಸಿದರೂ ಅದು ಲೌಕಿಕ ಲೆಕ್ಕಾಚಾರಗಳಿಗೇ ಸೀಮಿತವಾಗಿಬಿಡುತ್ತದೆ! ಇವೆಲ್ಲಾ ಪರಿಧಿಯನ್ನು ಮೀರಿ ನಾವು ನಿಲ್ಲಬೇಕಾದರೆ ಪ್ಲಗ್ಗಿಂಗ್ ಆಂಡ್ ಅನ್ ಪ್ಲಗ್ಗಿಂಗ್ ಅಗತ್ಯ. ದಿನವೊಮ್ಮೆಯಾದರೂ ನೀವು ಭಗವಂತನಿಗೆ ಪ್ಲಗ್ ಹಾಕಿಕೊಳ್ಳಿ. ಇದು ಹೇಳುವಷ್ಟು ಸಲಭವಲ್ಲ.

ಧ್ಯಾನಕ್ಕೆ ಕುಳಿತಾಗ ಇಲ್ಲದ ವ್ಯವಹಾರದ ಯೋಚನೆ, ಕಾಮದ ತೆವಲುಗಳು, ಜಿಹ್ವಾಚಾಪಲ್ಯದ ಚಪ್ಪರಿಕೆಗಳು, ಶ್ರವಣಾನಂದದ ಗುಂಗುಗಳು ಇವೆಲ್ಲಾ ಅತಿಸಹಜ ಮನೋವೃತ್ತಿಗಳು. ಇವುಗಳಿಗೆಲ್ಲಾ ಬ್ರೇಕ್ ಹಾಕಿ ನಿಲ್ಲಿಸಿಕೊಂಡು ಏಕಾಂತದಲ್ಲಿ ಯಾರೊಂದಿಗೋ ಮಾತನಾಡಿದಂತೇ ಕೇವಲ ಪರಾಶಕ್ತಿಯನ್ನು ಧ್ಯಾನಿಸಬೇಕು. ಆ ಧ್ಯಾನದಿಂದ ಪಡೆದ ಚಾರ್ಜ್ ನ್ನು ನಾವು ಧಾರಣೆಮಾಡಬೇಕು. ಹಾಗೊಮ್ಮೆ ಅದನ್ನು ಧರಿಸಿದಾಗ ನಮಗೆ ಎಲ್ಲರೂ ಮಿತ್ರರಾಗುತ್ತಾರೆ, ಜಗತ್ತೇ ಕುಟುಂಬವಾಗುತ್ತದೆ, ನಮ್ಮೊಳಗೇ ನಾವು ಆನಂದತುಂದಿಲರಾಗುತ್ತೇವೆ. ಜೀವನವನ್ನು ಪರಮಾತ್ಮನ ಪ್ರಸಾದವೆಂದೂ, ಪಾಲಿಗೆಬಂದ ಪಂಚಾಮೃತವೆಂದೂ ಇದ್ದುದ್ದರಲ್ಲಿಯೇ ತೃಪ್ತಿಯಿಂದ ಕಳೆದರೆ ಅದೇ ನಿಜವಾದ ಸುಖವಾಗುತ್ತದೆ. ಹಾಗಂತ ಇಡೀದಿನ ನಾವು ಒಂದೆಡೆಕೂತು ದೇವರು ಕೊಟ್ಟಿದ್ದೇ ಇಷ್ಟು ಎಂದುಕೊಂಡರೆ ಅದು ಶುದ್ಧ ತಪ್ಪು. ವ್ಯಕ್ತಿಗಳಾಗಿ ನಾವು ನಮ್ಮ ದೈನಂದಿನ ದುಡಿಮೆಯ ವ್ಯಹವಾರಗಳನ್ನೆಲ್ಲಾ ನಿಲ್ಲಿಸುವುದಲ್ಲ. ನಾವು ಮಾಡುತ್ತಿರುವ ಕಾರ್ಯಗಳಲ್ಲಿ ಪರಮಾತ್ಮನಿಗೆ ಅದು ತಪ್ಪಾಗಿಕಾಣದಂತೇ ಆತ್ಮವಂಚನೆಮಾಡಿಕೊಳ್ಳದಂತೇ ಸತತವಾಗಿ ತೊಡಗಿಕೊಂಡರೆ ಅಲ್ಲಿ ತಂತಾನೇ ಬೆಳಕು ಬರುತ್ತದೆ. ಆ ಬೆಳಕು ಹರಿದಾಗ ಅದೇ ನಮ್ಮ ಜೀವನಕ್ಕೆ ಸಾಲುತ್ತದೆ!

ಮೋಸದಿಂದ, ವ್ಯಭಿಚಾರದಿಂದ, ಬ್ರಷ್ಟಾಚಾರದಿಂದ, ಕೊಲೆ-ಸುಲಿಗೆ-ಕಳ್ಳತನಗಳಿಂದ ದುಡಿದು ಆಮೇಲೆ ಮನೆಕಟ್ಟಿ, ಹೋಮಮಾಡಿಸಿದರೆ ಅದು ಸರಿಯಾದ ಮಾರ್ಗವಲ್ಲ. ಮನಸ್ಸನ್ನು ಎಲ್ಲೋ ನೆಟ್ಟು ತಾನು ಅಷ್ಟೆಲ್ಲಾ ಜಪಮಾಡಿದರೂ ಪ್ರಯೋಜನವಾಗಲಿಲ್ಲಾ ಎಂಬುದೂ ಸರಿಯಲ್ಲ. ವಿಜ್ಞಾನಿ ಸಂಶೋಧನೆಯಲ್ಲೂ, ಚಾಲಕ ಗಮ್ಯ ಸ್ಥಳಕ್ಕೆ ಹೋಗುವುದರಲ್ಲೂ ಹೇಗೆ ತೊಡಗಿಕೊಂಡಿರುತ್ತಾರೋ ಹಾಗೇ ನಾವುಮಾಡುವ ವೃತ್ತಿಗಳಲ್ಲಿ ನಮಗೆ ತಾದಾತ್ಮ್ಯತೆ ಇರಬೇಕು. ಹೊಟ್ಟೆಕಿಚ್ಚಿಗೆ ಮಾಡುವ ಕೆಲಸ ಅದಾಗಿರಬಾರದು. ಮನಸ್ಸನ್ನು ದಿನಕ್ಕೊಮ್ಮೆಯಾದರೂ ಚಾರ್ಜ್ ಮಾಡುವಾಗ ಬೇರಾವಯೋಚನೆಗಳೂ ಶಾರೀರಿಕ ಬಾಧೆಗಳೂ ಬಾರದಿರಲಿ ಎಂಬ ಸಲುವಾಗಿ, ಶುಚಿತ್ವ ಕಾಪಾಡಲು ’ಮಡಿ’ ಎಂಬ ಸಾಧನವನ್ನು ಹೇಳಿದ್ದಾರೆ. ಕೆಸರುಮೆತ್ತಿಕೊಂಡ, ನಾವು ತಿನ್ನುವಾಗ ಸೀರಿದ್ದನ್ನೂ ಅಂಟಿಸಿಕೊಂಡ, ಮಲ-ಮೂತ್ರಾದಿ ವಿಸರ್ಜನ ಕ್ರಿಯೆಯಲ್ಲಿ ಬಳಸಿ ಕೀಟಾಣುಗಳನ್ನು ಹಿಡಿದುಕೊಂಡಿರುವ, ಸ್ನಾನಮಾಡದೇ ಬಹಳ ಹೊತ್ತಾದಾಗ ಬೆವರನ್ನು ಹೀರಿರುವ---ಹೀಗೇ ಅನೇಕ ರೀತಿಯಲ್ಲಿ ಮಲಿನವಾಗುವ ಬಟ್ಟೆಯ ಹೊರತಾಗಿ ಸ್ವಚ್ಛವಾಗಿ ತೊಳೆದಿರಿಸಿದ ಬಟ್ಟೆಯನ್ನು ಧರಿಸಿ, ಸ್ವಚ್ಛಪ್ರದೇಶದಲ್ಲಿ, ಸುತ್ತಲ ಜಗತ್ತಿನ ಸದ್ದು ಕಮ್ಮಿ ಇರುವ ಜಾಗದಲ್ಲಿ, ಸ್ವಚ್ಛ ಹುಲ್ಲಿನ/ದರ್ಬೆಯ ಚಾಪೆಯಮೇಲೆ ಕುಳಿತಾಗ ಧ್ಯಾನಕ್ಕೆ ಮನದ ಸಿದ್ಧತೆಯಾಗುತ್ತದೆ. ಮನಸ್ಸು ತನ್ನ ದೈನಂದಿನ ವ್ಯವಹಾರಗಳ ಜಂಜಡಗಳನ್ನು ಕಳೆದುಕೊಂಡು ಪ್ರಸನ್ನವಾಗಿರುವುದು ಬಹುತೇಕ ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ. ಆ ಘಳಿಗೆಯಲ್ಲಿ ಶೌಚ-ಸ್ನಾನಾದಿಗಳನ್ನು ಪೂರೈಸಿ ಧ್ಯಾನಮಾಡಿದರೆ ನಿಜಕ್ಕೂ ಚಾರ್ಜ್ ಸಿಗುತ್ತದೆ! ಆ ಘಳಿಗೆಯನ್ನು ನೆನೆದಾಗ ನಾವು ಪ್ರಾಥಮಿಕ ಶಾಲೆಯಲ್ಲಿ ಹೇಳುತ್ತಿದ್ದ ಪಾರ್ಥನೆಯೊಂದು ನೆನಪಿಗೆ ಬರುತ್ತಿದೆ --

ಸ್ವಾಮಿ ದೇವನೆ ಲೋಕಪಾಲನೆ
ತೇ ನಮೋಸ್ತು ನಮೋಸ್ತುತೇ
ಪ್ರೇಮದಿಂದಲಿ ನೋಡು ನಮ್ಮನು
ತೇ ನಮೋಸ್ತು ನಮೋಸ್ತುತೇ

ದೇವದೇವನೆ ಹಸ್ತಪಾದಗಳಿಂದಲೂ
ಮನದಿಂದಲೂ
ನಾವುಮಾಡಿದ ಪಾಪವೆಲ್ಲವ ಹೋಗಲಾಡಿಸು
ಸ್ವಾಮಿಯೇ ....

ಮೂಲ ಭಗವಂತನಿಗೆ ಯಾವುದೇ ಆಕಾರವಿಲ್ಲ. ಆದರೆ ನೀರನ್ನು ನಾವು ಪಾತ್ರೆಗಳಲ್ಲಿ ಹಿಡಿದಿಟ್ಟಾಗ ನೀರು ಹೇಗೆ ಅದೇ ಆಕಾರದಲ್ಲಿ ಕಾಣುವುದೋ ಪರಮಾತ್ಮಕೂಡ ಅವರವರ ಭಾವಕ್ಕೆ ಅನುಗುಣವಾಗಿ ಆ ಯಾ ರೂಪದಲ್ಲಿ ಪ್ರಕಟಗೊಳ್ಳುತ್ತಾನೆ. ಅಂತಹ ರೂಪಗಳನ್ನು ಕಂಡ ಮುನಿಜನರು ಜನಸಾಮಾನ್ಯರಾದ ನಮ್ಮ ಅನುಕೂಲಕ್ಕಾಗಿ ಮೂರ್ತಿಗಳನ್ನು ಸೃಜಿಸಿದರು. ನಮ್ಮ ನಿಲುವಿಗೆ ನಿಲುಕದ ಅಪರಿಮಿತ ಶಕ್ತಿಯ ಆಗರವಾದ ಭಗವಂತ ತನ್ನ ಲೀಲೆಗಾಗಿ ಆಟಕ್ಕಾಗಿ ನಮ್ಮನ್ನೆಲ್ಲಾ ಸೃಜಿಸುತ್ತಾನೆ, ನಡೆಸುತ್ತಾನೆ. ಯಾವಾಗ ಮೂಲವನ್ನು ನಾವು ಅರಿತೆವೋ, ಅರಿತು ನಡೆವೆವೋ ಕ್ರಮೇಣ ನಾವು ಅವನನ್ನೇ ಸೇರಿಹೋಗುತ್ತೇವೆ:ಅ-ದ್ವೈತ[ಎರಡಿಲ್ಲದ]ವಾಗುತ್ತೇವೆ. ಎಲ್ಲೀವರೆಗೆ ಅವನು ಬೇರೆ ನಾವೇ ಬೇರೆ ಎಂದು ತಿಳಿಯುತ್ತೇವೋ ಆಗ ನಾವು ಆತನನ್ನು ಸೇರಲಾಗುವುದಿಲ್ಲ-ದ್ವೈತವಾಗುತ್ತೇವೆ.

ಜಗತ್ತಿನ ಉಪಕಾರಕ್ಕೆ ಯಾವ ವಿಜ್ಞಾನಿಯೂ ನೀರನ್ನು ಕಂಡುಹಿಡಿಯಲಿಲ್ಲ, ಜಗತ್ತಿಗೆ ಬೆಳಕುಕೊಡಲು ನಿಯಮಿಸಿದ ಸೂರ್ಯಚಂದ್ರರು ಮಾನವಜನ್ಯವಲ್ಲ, ಹೊತ್ತಿಸಿದಾಗ ಹತ್ತುಕೊಳ್ಳುವ-ಉರಿಯುವ ಅಗ್ನಿ ನಮ್ಮ ಆವಿಷ್ಕಾರವಲ್ಲ, ಮತ್ತೊಂದು ಭೂಮಿಯನ್ನು ಮನುಷ್ಯ ತಯಾರಿಸಲು ಸಾಧ್ಯವಿಲ್ಲ, ಆಕಾಶದಷ್ಟು ಅವಕಾಶವನ್ನು ನಾವೆಲ್ಲೂ ಕಾಣಲೂ ನಿರ್ಮಿಸಲೂ ಅನುಕೂಲವೂ ಇಲ್ಲ, ಆಗುವುದೂ ಇಲ್ಲ ! ಇಂತಹ ಪಂಚಭೂತಗಳನ್ನು ದಿನವೂ ನಾವು ಒಟ್ಟಿಗೇ ಇದ್ದು ನೋಡುತ್ತೇವೆ, ಅನುಭವಿಸುತ್ತೇವೆ, ಆದರೂ ಪರಾಶಕ್ತಿಯ ಅಸ್ಥಿತ್ವವನ್ನುಮಾತ್ರ ನಾವು ಹಲವರು ನಂಬುವುದಿಲ್ಲ. ಪ್ರಯತ್ನಕ್ಕೊಂದು ಫಲವಿರಲಿ ಎಂಬ ಇಚ್ಛೆಯಿಂದ ಶಕ್ತಿ ನಮ್ಮನ್ನು ಚಂದ್ರನಲ್ಲಿಗೆ ಬಿಟ್ಟಿತು ಆದರೆ ಸೂರ್ಯನಲ್ಲಿಗೆ ಅಲ್ಲ. ಆಕಾಶದ ಆದಿ ಅಂತ್ಯವನ್ನು ನಾವು ಕಾಣಲು ಸಾಧ್ಯಗೊಡಲಿಲ್ಲ. ಮೂರುಪಾಲು ನೀರು ಒಂದುಪಾಲು ನೆಲವೆನ್ನುವ ನಮಗೆ ನೀರಿನಲ್ಲಿ ಭೂಮಿ ನಿಂತಿದೆಯೋ ಭೂಮಿಯಮೇಲೆ ನೀರಿದೆಯೋ ಸಮರ್ಪಕವಾದ ಅರಿವು ನಿಜಕ್ಕೂ ಇಲ್ಲ! ಇಷ್ಟೆಲ್ಲಾ ಪ್ರಶ್ನೆಗಳ ನಡುವೆ ಅವ್ಯಾಹತವಾಗಿ ನಾವು ಸ್ವಾರ್ಥಿಗಳಾಗಿ ನಡೆದೇ ಇದ್ದೇವೆ. ಈಗಲಾದರೂ ನಾವು ಸ್ವಲ್ಪ ನಮಗಿಂತ ಹಿರಿದಾದ ಶಕ್ತಿಯೊಂದಿದೆ ಎಂಬುದನ್ನು ಸ್ಮರಿಸಿದರೆ ಅದು ನಮ್ಮ ಏಳಿಗೆಯ ಮೊದಲದ್ವಾರವಾಗುತ್ತದೆ.

ಅತಿಕಡಿಮೆ ಹಣಹೂಡಿಕೆಯಿಂದ ಮತ್ತು ಅತಿ ಹೆಚ್ಚುಬುದ್ಧಿಮತ್ತೆಯನ್ನು ತೊಡಗಿಸಿಕೊಳ್ಳುವುದರಿಂದ ನಾರಾಯಣ ಮೂರ್ತಿಯಂಥವರು ಇನ್ಫೋಸಿಸ್ ಕಟ್ಟಿಬೆಳೆಸಿದರು, ಅತ್ಯಂತ ವೇಗದಲ್ಲಿ ಬೆಳೆದು ಸಾಧನೆಮೆರೆದು ಜಗತ್ತನ್ನೇ ತನ್ನ ಮುಷ್ಠಿಯಲ್ಲಿ ಆಡಿಸುವ ಸಾಮರ್ಥ್ಯವಿದೆಯೆಂಬ ಹೆಸರುಪಡೆದ ಅಮೇರಿಕಾ ಆರ್ಥಿಕ ಮುಗ್ಗಟ್ಟನ್ನು ಅನುಭವಿಸಿ ನಗೆಪಾಟಲಿಗೀಡಾಯಿತು. ಇವೆರಡೇ ಪ್ರಸಂಗಗಳ ಅವಲೋಕನೆಯಿಂದಲೂ ನಾವು ತಿಳಿಯಬಹುದಾದ ಸತ್ಯ--

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಮ್ ||

ದಿನವೂ ಪ್ಲಗ್ ಹಾಕಿಕೊಳ್ಳಿ, ನಿಧಾನಾವಾಗಿ ಬೇಕಾದಾಗೆಲ್ಲಾ ಪ್ಲಗ್ ಹಾಕಿ ಚಾರ್ಜ್ ಮಾಡಿಕೊಳ್ಳಿ, ಆ ಮೂಲಕ ಸಿಗುವ ಶಕ್ತಿಯಿಂದ, ಧೀ ಶಕ್ತಿಯಿಂದ ಎಲ್ಲರೂ ಬೆಳಗಲಿ, ಜಗತ್ತು ಸುಭಿಕ್ಷದಿಂದ ಸುಕ್ಷೇಮವಾಗಿರಲಿ ಆಶಿಸುತ್ತೇನೆ, ಅದನ್ನೇ ಸದಾ ಪ್ರಾರ್ಥಿಸುತ್ತೇನೆ, ನಮಸ್ಕಾರ.

2 comments:

  1. ಭಟ್ಟರೆ,
    ಬಾಳಿಗೆ ಬೆಳಕು ನೀಡುವ ಸತ್ಯವನ್ನು ಹೇಳಿದ್ದೀರಿ. ನಿಮಗೆ ಧನ್ಯವಾದಗಳು.

    ReplyDelete
  2. ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ವಂದನೆಗಳು

    ReplyDelete