ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, May 30, 2010

ಮುಂಗಾರಿನ ಕಹಳೆ


[ಚಿತ್ರ ಋಣ : ಅಂತರ್ಜಾಲ ]

ಮುಂಗಾರಿನ ಕಹಳೆ

ಮಳೆಯ ಹನಿ ಪಟಪಟನೆ ಭುವಿಯ ಅಂಗಣಕುದುರಿ
ನಳಿನ ಮುಖಿಗಾಗಿಹುದು ಮಂಗಳದ ಸ್ನಾನ
ಇಳೆಯ ಮಂಟಪದಲ್ಲಿ ಹೊಳೆವ ಮೂರುತಿಯಿರಿಸಿ
ಸುಳಿದು ಒಡೆದಂತಿಹುದು ತೆಂಗು ಫಲವನ್ನಾ

ನವಿಲು ನೋಡುತ ಮೋಡ ನರ್ತಿಸಿತು ನಲಿವಿನಲಿ
ಒಲವಿನಲಿ ಗರಿಗೆದರಿ ತೋರಿಸುತ ಬಣ್ಣ
ಉಲಿಯಿತದೋ ನಡು ನಡುವೆ ಸಂಗಾತಿಯನು ಕರೆದು
ಗೆಲುವ ಭಾವದಿ ಮಿಟುಕಿಸುತ ತನ್ನ ಕಣ್ಣ

ಕಪ್ಪೆಗಳು ಎಲ್ಲಿಂದಲೋ ಇರವ ತೋರ್ಗೊಡುತ
ಕುಪ್ಪಳಿಸಿ ನೆಗೆದಿಹವು ರಸ್ತೆಯುದ್ದಗಲ
ಒಪ್ಪಿಸುತ ಒದರಿಹವು ಗೊಟರು ಗೊಟರಿನಮಾತು
ಸಪ್ಪೆ ಬದುಕಲಿ ತಂತು ಜೀವಕಳೆಯನ್ನ

ಬಲಿದ ಮಾರುತ ತನ್ನ ಮಂದ ಧೋರಣೆ ತೊರೆದು
ವಿವಿಧ ದಿಸೆಯಲಿ ಹರಿಸಿ ಹರಿಹಾಯ್ದು ಬೀಸಿ
ಸವಿದು ನುಂಗಿದ ಜಗದ ಜಡತತ್ವಗಳನೆಲ್ಲ
ತಿವಿದು ಜನಶಕ್ತಿಯನು ಬೆಚ್ಚಿಸುತ ಕುಣಿಸಿ

ಬಟ್ಟಬಯಲಲಿ ಒಣಗಿ ಮುರುಟಿ ಸತ್ತಿಹ ಸಸ್ಯ
ತಟ್ಟನೇ ಮೈಕೊಡವಿ ಮೇಲೆದ್ದು ಚಿಗುರಿ
ಕಟ್ಟೆ-ಕೆರೆಗಳು ತುಂಬಿ ಮಗುಚಿ ನುಗ್ಗುತ ನೀರು
ಸೃಷ್ಟಿಯಲಿ ಹೊಸಹಬ್ಬ ಜೀವಸಂಕುಲಕೆ

ಏಡಿ ಎರೆಹುಳವೆದ್ದು ಜಾಡಿಸುತ ಮೈಮುರಿದು
ಓಡಿಹವು ಊರಗಲದುದ್ದ ಜಾಗದಲಿ
ಆಡಿಸುತ ಬಾಲವನು ಹೊಸೆದು ಮೈಯ್ಯನು ಮುದುಡಿ
ಬೀಡುಬಿಟ್ಟಿವೆ ಒಳಗೆ ನಾಯಿ-ಬೆಕ್ಕುಗಳು

ಭುಗಿಲೆದ್ದ ಆಗಸದಿ ನೇಸರನು ಮರೆಯಾಗಿ
ಹಗಲಿನಾ ಚಹರೆ ಕಳೆದೋಯ್ತು ಮೋಡದಲಿ
ಬಗಲೊಳಗೆ ಮಿಂಚು ಕರೆತಂದು ಗುಡುಗುಮ್ಮನನು
ಒಗೆದು ಕೆಡವಿದ ಶಬ್ಧ ಮಕ್ಕಳವು ಹೆದರಿ

ಮರೆಯಲಾಗದ ಮಹಾನುಭಾವ ದಿ|ಶ್ರೀ ಶಂಭು ಹೆಗಡೆ ಕೆರೆಮನೆ


ಮರೆಯಲಾಗದ ಮಹಾನುಭಾವ ದಿ|ಶ್ರೀ ಶಂಭು ಹೆಗಡೆ ಕೆರೆಮನೆ

ಪಾರ್ತಿಸುಬ್ಬನಿಂದ ಹುಟ್ಟಿತೆನ್ನಲಾದ ಯಕ್ಷಗಾನ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಿಸಿಕೊಂಡು ಧೋ ಎಂದು ಸುರಿವ ಮಳೆಗಾಲದ ಮುಸಲಧಾರೆಯಲ್ಲಿ ಹೊರಗೆ ಹೋಗಲಾರದ ೪ತಿಂಗಳು ಮನೋರಂಜನೆಗಾಗಿ ಕೇವಲ ತಾಳಮದ್ದಲೆಯ ಮೂಲಕ ಪ್ರಾರಂಭಗೊಂಡ ಈ ಕಲೆ ಇಂದು ಶತಮಾನಗಳನ್ನು ದಾಟಿ ಸಮಗ್ರ ಕಲೆಯಾಗಿ ಅಭಿವೃದ್ಧಿಗೊಂಡಿದೆ. ಯಾರೇ ಏನೇ ಅಂದರೂ ವೃತ್ತಿ ಜೀವನವನ್ನಾಗಿ ಯಕ್ಷಗಾನವನ್ನು ಆಯ್ದು ಕೊಂಡವರಿಗೆ ಇಂದಿನ ಕಾಲ ಒಂದರ್ಥದಲ್ಲಿ ಒಳ್ಳೆಯಕಾಲವಾದರೂ ಎಲ್ಲರಿಗೂ ಅದು ಪೂರ್ಣಾವಧಿ ಅನ್ನನೀಡುವ ಕಾಲವಲ್ಲ--ಇದನ್ನು ಹೇಳಲು ಕಾರಣ ಇಷ್ಟೇ- ಈ ಕಲಾವಿದರು ಬಡತನದಲ್ಲೇ ಇರಬೇಕೇ ಹೊರತು ಇದು ವೈಯಕ್ತಿಕ ಬದುಕಿನಲ್ಲಿ ಸಿರಿತನತರುವ, ಅವರ ಅನುವು-ಆಪತ್ತಿನಲ್ಲಿ ಅನುಕೂಲಕ್ಕೆ ಬರುವ ಆಪದ್ಧನ ಕೊಡುವ ರಂಗವಲ್ಲ. ಬಹುತೇಕ ನಮ್ಮ ಕವಿ-ಸಾಹಿತಿಗಳಂತೆ ಯಕ್ಷರಂಗದ ಕಲಾವಿದರೂ ಬಡತನವನ್ನೇ ಹಾಸು ಹೊದ್ದವರು;ಹಾಗೇ ಬದುಕುವವರು.ಜೀವನದಲ್ಲಿ ವಿಪರ್ಯಾಸಗಳನ್ನು ಕಾಣುತ್ತಲೇ ಇರುತ್ತೇವೆ-ಉದಾಹರಣೆಗೆ ಸಾಲು ಮರದ ತಿಮ್ಮಕ್ಕ. ತಿಮ್ಮಕ್ಕ ದಂಪತಿಗೆ ಮಕ್ಕಳಿರಲಿಲ್ಲ, ಮಕ್ಕಳ ಬದಲಿಗೆ ಅವರು ಮರಗಳನ್ನು ಬೆಳೆಸಿದ್ದು ಅದೂ ಸಾರ್ವಜನಿಕರಿಗೆ ನೆರಳು ನೀಡುವಂತೆ ರಸ್ತೆಬದಿಯಲ್ಲಿ ಬೆಳೆಸಿದ್ದು ಅದಕ್ಕಾಗಿ ಸರಕಾರ ಪ್ರಶಸ್ತಿ ನೀಡಿದ್ದು ಈಗ ಇತಿಹಾಸ. ಆದರೆ ಮುಪ್ಪಿನ ಈ ಕಾಲದಲ್ಲಿ ಚಿಕ್ಕ ಗುಡಿಸಲಲ್ಲಿ ತಿಂದುಣ್ಣಲು,ಹಾಸು-ಹೊದೆಯಲು,ಮೈಮುಚ್ಚಲು ಬಟ್ಟೆ ಈ ಎಲ್ಲ ಮೂಲಭೂತ ಜೀವನಾವಶ್ಯಕ ವಸ್ತುಗಳಿಲ್ಲದೇ ಸೊರಗುವ ಆ ಹಿರಿಯ ಜೀವಕ್ಕೆ ಕೇವಲ ಕಾಗದದಲ್ಲಿ ಬರೆದು ಕಟ್ಟುಹಾಕಿಸಿದ ಪ್ರಶಸ್ತಿ ಅನುಪಯುಕ್ತ. ಅನೇಕ ಚಿಕ್ಕಪುಟ್ಟ ಸಂಘ-ಸಂಸ್ಥೆಗಳೂ ಕರೆದು ಕೊಟ್ಟಿರುವುದು ಮತ್ತದೇ ಥರದ ಕಟ್ಟುಹಕಿಸಿದ ಮುದ್ರಿತ ಕಾಗದ. ಅದರಲ್ಲಿ ಏನು ಬರೆದಿದೆ ಎಂಬುದನ್ನೂ ಓದಲಾರದ ಆಕೆಗೆ ಯಾವ ಅಶಾಕಿರಣವೂ ಇಲ್ಲ. ಗುಡಿಸಲಿನಲ್ಲಿ ಆ ಪ್ರಶಸ್ತಿಗಳನ್ನು ನೇತುಹಾಕಲೂ ಜಾಗವಿಲ್ಲ! ಕೇವಲ ಸರಕರದ ಮಾಶಸನ ಆಕೆಗೆ ಜೀವನಧಾರ. ವೃದ್ಧಾಪ್ಯ ಸಹಜ ಕಾಯಿಲೆಬಂದರೆ ಚಿಕಿತ್ಸೆಗೆ ಬೇಕಾದ ಹಣ ಕೂಡ ಆಕೆಯಲ್ಲಿಲ್ಲ. ಹೀಗೇ ಯಕ್ಷರಂಗದಲ್ಲೂ ಇದೇ ರೀತಿ. ವೇದಿಕೆಯಲ್ಲಿ ರಾಜಮಹಾರಾಜರಾಗಿ ಮೆರೆಯುವ ನಟರು ಮಾರನೇ ದಿನ ಸಾಲಮಾಡಿ ಅಕ್ಕಿತರಬೇಕಾದ ಪರಿಸ್ಥಿತಿ ಇದ್ದರೆ ಇದು ಆಶ್ಚರ್ಯವಲ್ಲ! ಅದೂ ಅಂಗಡಿಯಾತ ಕೊಟ್ಟರೆ ಉಂಟು ಕೊಡದಿದ್ದರೆ ಇಲ್ಲ! ಹೊಟ್ಟೆಯಮೇಲೆ ತಣ್ಣೀರು ಬಟ್ಟೆಯೇ ಗತಿ! ಹೀಗಿರುತ್ತ ಸಂಸಾರವನ್ನು ನಿಭಾಯಿಸುವುದು ಎಷ್ಟು ಸುಲಭದ ಕೆಲಸ ಎಂದು ನವು ಅರ್ಥಮಾಡಿಕೊಳ್ಳಬಹುದು. ಸಾಲದ್ದಕ್ಕೆ ಅಂದಿನ ಪ್ರತೀ ಇಡೀರಾತ್ರಿ ಯಕ್ಷಗಾನದಲ್ಲಿ ನಟಿಸಿದ ಬಹುತೇಕ ಕಲಾವಿದರಿಗೆ ನಿದ್ದೆಯ ಮಂಪರು ಹೋಗಿಸಲು ಬೀಡಿ-ಸಿಗರೇಟು-ಮದ್ಯ ಇತ್ಯಾದಿ ದುರ್ವ್ಯಸನಗಳು ಹುಟ್ಟಿಕೊಂಡವು. ಇಂದಿನ ಯುವ ಕಲಾವಿದರ ಪೀಳಿಗೆಯಲ್ಲಿ ಅವು ಸಿರಿತನದ ದ್ಯೋತಕವಾಗಿ ಗುಟ್ಕಾ,ಸಿಗರೇಟು ಮತ್ತು ವಿವಿಧ ಮಾದರಿಯ ಮಲ್ಯ-ಖೋಡೆಗಳ ಮದಿರಾರಸವಾಗಿ ಹರಿದಾಡುತ್ತಿವುದು ಖೇದಕರ!


ಇಂತಹ ಯಕ್ಷರಂಗದಲ್ಲಿ ಯಾವ ಚಟಗಳಿಗೂ ದಾಸರಾಗದೇ ಇರುವ ಶುದ್ಧ-ಸಾತ್ವಿಕ ಕುಟುಂಬ ಎಂದರೆ ಅದು ಕೆರೆಮನೆ ಕುಟುಂಬ. ತನ್ನ ತಾದತ್ಮ್ಯತೆಯಿಂದ ಯಕ್ಷಗಾನಕ್ಕೆ ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟ ದಿ| ಶ್ರೀ ಶಿವರಾಮ ಹೆಗಡೆಯವರ ತಂದೆ ಇಡಗುಂಜಿಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಏನೋ ಕೆಲಸಮಾಡಿಕೊಂಡಿದ್ದರಂತೆ, ಯಕ್ಷಗಾನಪ್ರಿಯನಾದ ಆ ದೇವನ ಮಹಿಮೆಯೋ ಎಂಬಂತೆ ಮಗ ಶಿವರಾಮ ಹುಟ್ಟಿದ, ಎಳವೆಯಲ್ಲೇ ಗೆಜ್ಜೆ ಕಟ್ಟಿದ, ಬೆಳೆದು ಮೇಳ ಕಟ್ಟಿದ! ಹೆಸರಾಂತ ದಿ| ಶ್ರೀ ಮೂಡ್ಕಣಿ ನಾರಾಯಣ ಹೆಗಡೆಯವರ ಸಹವರ್ತಿಯಾಗಿ, ಯಕ್ಷರಂಗದ ಭೀಷ್ಮರೆಂದೇ ಅಂದಿಗೆ ಖ್ಯಾತಿ ಪಡೆದಿದ್ದ ದಿ|ಶ್ರೀ ಸದಾನಂದ ಹೆಗಡೆಯವರ ಶಿಷ್ಯನಾಗಿ ಬೆಳೆದ ಶಿವರಾಮರು ತಂದೆ ಪೂಜಿಸಿದ,ಆರಾಧಿಸಿದ ಶ್ರೀ ಇಡಗುಂಜಿ ಮಹಾಗಣಪತಿಯ ಹೆಸರನ್ನೇ ಇಟ್ಟು ಯಕ್ಷಗಾನ ಮೇಳವನ್ನು ಕಟ್ಟಿದರು. ಈ ಶಿವರಾಮರಿಗೆ ಶಂಭು ಮತ್ತು ಗಜಾನನ ಎಂಬ ಇಬ್ಬರು ಮಕ್ಕಳು. ತಂದೆಯ ವೃತ್ತಿ ಮಕ್ಕಳಿಗೆ ಎನ್ನುವ ಕಾಲ ಅದಾಗಿದ್ದರಿಂದಲೋ ಏನೋ ಇಬ್ಬರೂ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದರು. ಇವತ್ತಿಗೆ ಈ ಇಬ್ಬರೂ ದಿವಂಗತರು.

ನೋಡಿದೆಯಾ ವಿದುರ....ಕೌರವನೊಡ್ಡೋಲಗವ ....ಇಂತಹ ಯಕ್ಷಗಾನದ ಹಾಡುಗಳು ನೆನಪಿಗೆತರುವುದು ದಿವಂಗತ ಶ್ರೀ ಶಂಭುಹೆಗಡೆ ಕೆರೆಮನೆಯವರನ್ನು. ಕಲಾವಿದನಾಗಿ ಬಹಳ ಶ್ರಮಿಸಿ,ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸುತ್ತ, ಎಲ್ಲೂ ಸಂಪ್ರದಾಯಕ್ಕೆ ಚ್ಯುತಿಯಾಗದಂತೆ ನೋಡಿಕೊಂಡು ಯಕ್ಷರಂಗಕ್ಕೆ ಹೊಸ ಹೊಸ ಪ್ರಯೋಗಗಳನ್ನು ಅಳವಡಿಸಲು ಉಪಕ್ರಮಿಸಿದ ಅಚ್ಯುತರವರು. ಹರೆಯದಲ್ಲಿ ತಂದೆ ಅರ್ಥಿಕ ಒದ್ದಾಟವನ್ನು ಕಂಡು ಮೇಳಕ್ಕೆ ಹೊಸ ರೂಪುರೇಷೆ ನೀಡಿದ ಶಂಭುಹೆಗಡೆ ಬಹುತೇಕರಿಗೆ ಶಂಭಣ್ಣನಾಗುವಷ್ಟು ಹತ್ತಿರವಾದವರು. ಜೋಡಿಸಿ-ಬಿಡಿಸಿಡಬಹುದಾದ ಅರ್ಧಚಂದ್ರಾಕೃತಿಯ ರಂಗಸಜ್ಜಿಕೆ ಕೆರೆಮನೆ ಮೇಳದ ಪ್ರಮುಖ ಆವಿಷ್ಕಾರ. ಆಗಿನ ಕಾಲಕ್ಕೆ ಮೇಳವೆಂದರೆ ಬರೇ ಕಲಾವಿದರ ಕೂಟವಾಗಿರಲಿಲ್ಲ, ಕಲಾವಿದರೆಲ್ಲ ನಾಟಕ ಮಂಡಳಿಯ ರೀತಿ ನೌಕರರೇ ಆಗಿರುತ್ತಿದ್ದು, ವೇದಿಕೆ, ಆಸನಗಳು,ಟೆಂಟು-ಗುಡಾರ,ಟೆಂಟು ಕಟ್ಟುವ ಸಾಮಗ್ರಿಗಳು, ದೀಪಕ್ಕಾಗಿ ಜನರೇಟರ್-ಅದರ ಹೊಟ್ಟೆಗೆ ವ್ಯವಸ್ಥೆ, ಟೆಂಟು ಕಟ್ಟಲು ಕೂಲಿ ಜನ, ಮೇಳದಲ್ಲಿ ಅಡಿಗೆಮನೆ-ಬಾಣಸಿಗ, ಅಡಿಗೆ ಸಾಮಗ್ರಿ, ಪಾತ್ರೆ-ಇತ್ಯಾದಿ, ಚೌಕಿಮನೆಯಲ್ಲಿ ವೇಷ-ಭೂಷಣಗಳು,ಬಣ್ಣಗಳು-ಮುಖವರ್ಣಿಕೆಯ ಸಾಮಗ್ರಿಗಳು,ಸಾಗಟಕ್ಕೆ ವಹನಗಳು-ಲಾರಿ ಇವುಗಳನ್ನೆಲ್ಲ ಸಮರ್ಪಕವಾಗಿ ನೋಡಿ-ನಿಭಾಯಿಸಲು ಒಬ್ಬ ವ್ಯವಸ್ಥಾಪಕರು ಹೀಗೇ ಒಂದೇ ಎರಡೇ...ಇದೂ ಒಂದು ಥರ ವ್ಯವಸ್ಥಿತ ಸಂಸ್ಥೆಯಾಗಿರುತ್ತಿತ್ತು[ಇಂದು ಕೆಲವೇ ಇಂತಹ ಸಂಸ್ಥೆಗಳು ಉಳಿದುಕೊಂಡಿವೆ] ಪ್ರತೀ ರಾತ್ರಿ ಬೇರೇ ಬೇರೆ ಪ್ರದೇಶಗಳಲ್ಲಿ ಆಟ, ಹೀಗಾಗಿ ಬೆಳಗಾಗುತ್ತಿದ್ದಂತೆ ಹಾಕಿದ ಟೆಂಟು ಕಿತ್ತು ಇನ್ನೊಂದು ಊರಿಗೆ ಹೋಗಿ ೧೧ಗಂಟೆಯೊಳಗೆ ಅಲ್ಲಿಗೆ ತಲುಪಿ ಅಲ್ಲಿ ಮತ್ತೆ ಟೆಂಟಿನ ಪುನರ್ನಿರ್ಮಾಣ!ಸಾಗಟದ ಲಾರಿ ಕೆಟ್ಟುನಿಂತರೆ, ಯಾವುದೋ ಒಬ್ಬ ಕಲಾವಿದ ರಜಾಹಾಕಿದರೆ, ಬರದಿದ್ದರೆ ಅವನ ಜಾಗ ತುಂಬಿಕೊಳ್ಳಲು ಪರ್ಯಾಯಕಲಾವಿದರು,ಕಲಾವಿದರ ಆರೋಗ್ಯ, ಕೂಲಿ ಜನರ ಆರೋಗ್ಯ, ಕಾಲದ ವೈಪರೀತ್ಯದಿಂದ ಘಟಿಸಬಹುದಾದ ಮಳೆ-ಗಾಳಿಗಳಂತಹ ಆಕಸ್ಮಿಕ ಸನ್ನಿವೇಶಗಳು-ಇವುಗಳನ್ನೆಲ್ಲ ನಿಭಾಯಿಸುವ ಸರ್ಕಸ್ ಕಂಪನಿಯಾಗಿತ್ತು ಯಕ್ಷಗಾನಮೇಳ!

ಏನೇ ಇದ್ದರೂ ಕೈಲಾಗುವವರೆಗೆ ಇಂತಹ ಒಂದು ವ್ಯವಸ್ಥೆಯನ್ನು ನಡೆಸಿದ, ಯಜಮಾನನಾಗಿ ಕಲೆಕ್ಷನ್ ಆಗದಿದ್ದರೂ ನಂಬಿಕೊಂಡ ಕಲಾವಿದರಿಗೆ,ಕೆಲಸದವರಿಗೆ ಒಂದಿನಿತೂ ಕೈಕೊಡದ ನಿಜವಾದ ’ಯಜಮಾನ’ ಶ್ರೀ ಶಂಭು ಹೆಗಡೆ. ಪರಿಸ್ಥಿತಿ ಹೇಗೇ ಇದ್ದರೂ ಅದನ್ನು ಮೆಟ್ಟಿನಿಂತು ಅವರು ನಿಭಾಯಿಸಿದ ಪಾತ್ರಗಳು ಬಹಳ ಮತ್ತು ಅವಿಸ್ಮರಣೀಯ ಕೂಡ. ಎಣ್ಣೆಗೆಂಪಿನ ಉರುಟು ಮುಖದ ಈ ಸ್ಪುರದ್ರೂಪಿಯ ಹಲ್ಲುಗಳು ಸ್ಪಟಿಕದಂತೇ ಕಂಗೊಳಿಸುತ್ತಿದ್ದವು. ವೇಷ ಯಾವುದೇ ಇರಲಿ ರಂಗಕ್ಕೆ ಬಂದಾಗ ಅವರ ಮುಖದಲ್ಲಿರುವ ಲಕ್ಷಣವೇ ಅದ್ಭುತ, ಮಲ್ಲಿಗೆಯನ್ನೂ ನಾಚಿಸುವ ಸಹಜ ನಗು, ಹೆಂಗಸರನ್ನೂ ಅಳಿಸುವ, ಆಂತರ್ಯದಿಂದ ಹೊಮ್ಮುತ್ತಿದ್ದ ಭಾವಪೂರಿತ ಅಳು ಇವೆರಡೂ ಬಹಳ ಅಪ್ಯಾಯಮಾನ. ಬಹಳ ಎತ್ತರವೂ ಅಲ್ಲದ, ಬಹಳ ಕುಳ್ಳೂ ಅಲ್ಲದ ಈ ವ್ಯಕ್ತಿ ಬೊಜ್ಜಿರದ ತನ್ನ ದೇಹದಂತೆ ತನ್ನ ತಲೆಯನ್ನೂ ಬಹಳ ತೆಳ್ಳಗಿಟ್ಟುಕೊಂಡು ಸದಾಕಾಲ ಮೌಲ್ಯಾಧಾರಿತವಾಗಿರುವ ಆವಿಷ್ಕಾರಗಳ-ಹೊಸತನಗಳ ಹುಡುಕಿವಿಕೆಯಲ್ಲೇ ತನ್ನನ್ನು ತೊಡಗಿಸಿಕೊಂಡಿರುತ್ತಿದ್ದರು.

ಶಂಭಣ್ಣ ನಿರ್ವಹಿಸಿದ ನಳ,ಹರಿಶ್ಚಂದ್ರ,ರಾಮ,ಕೌರವ,ಕರ್ಣ,ಕೃಷ್ಣ,ದಶರಥ ಮುಂತಾದ ಪಾತ್ರಗಳು ಈ ಕಲೆಯ ಅರಾಧಕರಿಗೆ, ಯಕ್ಷಗಾನ ಕಲಾನುಭೂತಿ ಇರುವವರಿಗೆ ಎಂದಿಗೂ ಮರೆಯಲು ಸಾಧ್ಯವಿಲ್ಲದ ಪಾತ್ರಗಳು. ಇದರ ಹೊರತಾಗಿ ಹನುಮಂತ,ಈಶ್ವರ,ವಿಶ್ವಾಮಿತ್ರ ಹೀಗೆ ಹತ್ತು-ಹಲವು ವೇಷಗಳನ್ನು ಇವರು ಮಾಡಿದ್ದರು-ಮಾಡಿ ಸೈ ಎನಿಸಿಕೊಂಡಿದ್ದರು.


ಕಲಿ ಕಿರೀಟಿಯೆ ಕೇಳು ...ಏನಪೇಳಲಿ ನಿನಗೆ........
ಕರ್ಣನಾಗಿ ಅವರು ರಥದ ಚಕ್ರ ಹೂತುಹೋದ ಸನ್ನಿವೇಶವನ್ನು ಅಭಿನಯಿಸುತ್ತಿದ್ದುದ್ದು ಎಲ್ಲರ ಕಣ್ಣಿಗೆ ಅಲ್ಲಿ ಹೂತುಹೋದ ರಥವನ್ನೇ ತೋರುತ್ತಿತ್ತು[ನಿಜವಾಗಿ ಅಲ್ಲಿ ರಥವಿರದಿದ್ದರೂ], ಬಾಹುಕನಾಗಿ ಅಷ್ಟಾವಕ್ರ ದೇಹಪಡೆದು,ದಮಯಂತಿಯನ್ನು ಕಳೆದುಕೊಂಡು ಗುರುತು ಹೇಳದೇ ಸ್ನೇಹಿತ ಋತುಪರ್ಣ ರಾಜನ ಆಸ್ಥಾನದಲ್ಲಿ ಕೆಲಸಮಾಡಿಕೊಂಡಿದ್ದು, ದಮಯಂತಿಯ ಪುನಃಸ್ವಯಂವರದ ಕರೆ ಕೇಳಿ ತನ್ನ ಮಿತ್ರ ನಳನ ಮಡದಿಗೆ ಮತ್ತೆ ಸ್ವಯಂವರವೇಕೆ ಎಂದುಕೊಂಡು ತಡೆಯಲಾರದೇ ಸ್ನೇಹಿತ ಋತುಪರ್ಣ ಹೊರಟು ನಿಂತಾಗ ಕಣ್ಣಲ್ಲಿ ಹರಿಸುವ ಭಾವನೆಗಳ ಮಹಾಪೂರಕ್ಕೆ ಸಭಾಸದರು ಕೊಚ್ಚಿಹೋಗುತ್ತಿದ್ದರು. ನಿರ್ಯಾಣದ ರಾಮನಾಗಿ ಅವರು ತನ್ನ ಬಂಧುವರ್ಗ, ಪ್ರಜೆಗಳು, ಮಾಂಡಲಿಕರು ಇತ್ಯಾದಿ ಹಲವರಿಗೆ ಕೊನೆಯದಾಗಿ ಕ್ರೂತಜ್ಞತೆ ಹೇಳಿ ನಿರ್ಗಮಿಸುವಾಗ ಬಹುತೇಕರ ಕರವಸ್ತ್ರಗಳು ಒದ್ದೆಯಾಗಿರುತ್ತಿದ್ದವು. ಮಗನನ್ನು ಕಾಡಿಗೆಕಳುಹಿಸಿದ ಅಪರಾಧೀ ಭಾವಕ್ಕೆ ಒಳಗಾಗಿ ಪರಿಪರಿಯಾಗಿ ನೋಯುವ-ಬೇಯುವ,ಬೆಂದು ಬಸವಳಿದು ಸಾಯುವ ದಶರಥನ ಪಾತ್ರ ಆ ಮಾತುಗಳು ಅದ್ವಿತೀಯ-ಅನನ್ಯ! ಹೆಗಲಮೇಲೆ ಕಂಬಳಿ ಹೊದ್ದು, ಕೈಯಲ್ಲಿ ಕೋಲು ಹಿಡಿದು ಒಡೆಯ ವೀರಬಾಹುವಿನ ಆಜ್~ಝೆಯಂತೆ ಸ್ಮಶಾನ ಕಾಯುತ್ತಿರುವಾಗ ತಮ್ಮಮಗನನ್ನೇ ಸುಡಲು ಬಂದ ಭಾರ್ಯೆ ಚಂದ್ರಮತಿಯನ್ನುದ್ದೇಶಿಸಿ ಆಡುತ್ತಿದ್ದ ಮಾತುಗಳು ಬಹುಶಃ ನಮ್ಮ ಕನ್ನಡ ಸಿನಿಮಾ ಕೊಡುವುದಕ್ಕಿಂತ ಸಾವಿರಪಟ್ಟು ಉತ್ತಮವಾಗಿರುತ್ತಿದ್ದವು. ಮನೋಜ್ಞ ಹಾಗೂ ಹಿತಮಿತ ಅಭಿನಯದೊಂದಿಗೆ ಪ್ರತೀ ವೇದಿಕೆಯಲ್ಲಿ ಮಾಡುವ ಅದದೇ ಪಾತ್ರಗಳೂ ಕಳಾವಂತಿಕೆಯಲ್ಲಿ-ಪಡಿಮೂಡಿಸುವಲ್ಲಿ ವಿಭಿನ್ನ-ವಿಶೇಷ! ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಹಾಡುಗಳನ್ನು ನೆಬ್ಬೂರು ಭಾಗವತರು ಹಾಡುತ್ತಿರುವಾಗ, ಕರ್ಕಿಯ ಭಂಡಾರೀ ಮನೆತದವರು ಚಂಡೆ-ಮದ್ದಳೆ ಬಾರಿಸುತ್ತಿರುವಾಗ ಶಂಭಣ್ಣನ ಪಾತ್ರ ರಂಗದಲ್ಲಿದ್ದರೆ ಅದು ಯಕ್ಷಲೋಕವೇ ಸರಿ! ಸದ್ಯಕ್ಕೆ ಅದು ನ ಭೂತೋ ನ ಭವಿಷ್ಯತಿ!

ಕಾಲಾನಂತರದಲ್ಲಿ ಈ ಕಲೆಯ ಪೈಪೋಟಿ ಮತ್ತು ಕಲಾಸಕ್ತರ ಮನೋಸ್ಥಿತಿ ಬದಲಾಗಬಹುದಾದ ಸನ್ನಿವೇಶವನ್ನು ಮುನ್ನವೇ ಅಂದಾಜಿಸಿದ್ದ ಬುದ್ಧಿವಂತ ಶಂಭಣ್ಣ ಕಾಲಮಿತಿ ಪ್ರಯೋಗವನ್ನು ಹುಟ್ಟುಹಾಕಿದ್ದರು. ಪ್ರಾರಂಭದಲ್ಲಿ ಇದಕ್ಕೆ ಬಹಳ ವಿರೋಧಾಭಾಸ ಕಂಡರೂ ನಂತರ ಬಹಳ ಜನ ಅದನ್ನೇ ಇಷ್ಟಪಟ್ಟರು. ಸ್ವಲ್ಪಮಟ್ಟಿಗೆ ಮಾತು-ನೃತ್ಯ್-ಪಾತ್ರಗಳಿಗೆ ಕಡಿವಾಣಹಾಕುವ ಕಾಲಮಿತಿ ಪ್ರಯೋಗ ಕೊನೇಪಕ್ಷ ಇಡೀ ರತ್ರಿ ಕುಳಿತು ನೋಡಲು ಅನಾನುಕೂಲವಿರುವ ಆಸಕ್ತರಿಗೆ ಈ ಕಲೆಯನ್ನು ಆಸ್ವಾದಿಸಲು ಒಂದು ಪರ್ಯಾಯ ಮಾರ್ಗ! ಒಂದನ್ನು ಪಡೆಯುವಾಗ ಇನ್ನೊಂದನ್ನು ಸ್ವಲ್ಪ ಕಳೆದುಕೊಳ್ಳುವುದು ಎಷ್ಟೋ ಕಾರ್ಯಗಳಲ್ಲಿ ಸೃಷ್ಟಿಯ ಸಹಜಧರ್ಮ. ಹೀಗಾಗಿ ಇಡೀ ರಾತ್ರಿಯಲ್ಲಿ ನಡೆದು ಪಡೆಯಬಹುದಾದ ಹಾಸ್ಯ-ಲಹರಿ, ಚಿಕ್ಕ-ಪುಟ್ಟ ಪಾತ್ರಗಳು,ಉದ್ದನೆಯ ಸಭಾಲಕ್ಷಣದ ಕಾರ್ಯ ಇವುಗಳನ್ನೂ ಮತ್ತು ಕೆಲವು ಪಾತ್ರಗಳ ಕೆಲವು ಹಾಡು-ಸನ್ನಿವೇಶಗಳನ್ನೂ ಇಲ್ಲಿ ಕೈಬಿಡಲಾಗುವುದರಿಂದ ಇದನ್ನು ಸಹಿಸಿಕೊಂಡಿ ಆಸ್ವದಿಸಬೇಕಾದುದು ಮೊದಲಿನಿಂದ ಇಡೀರಾತ್ರಿ ನೋಡುತ್ತ ಬಂದ ಈ ಕಲೆಯ ಹಲವು ಆರಾಧಕರ ಅನಿಸಿಕೆ-ಅನಿವಾರ್ಯತೆ. ಏನಿದ್ದರೂ ಸಮ್ ಥಿಂಗ್ ಈಸ್ ಬೆಟರ್ ದ್ಯಾನ್ ನಥಿಂಗ್ ಅಲ್ಲವೇ ?

ಯಾವೊಂದೂ ಹೆಜ್ಜೆಗುರುತು, ಸ್ಥಾನಮನ ಸರಿಯಗಿ ಸಿಗದ ಯಕ್ಷಗಾನಕ್ಕೆ ದಿ|ಶ್ರೀ ಶಿವರಾಮ ಕಾರಂತರ ರೀತಿಯಲ್ಲಿ ಪ್ರಯತ್ನಶೀಲರಾಗಿ ಹಲವು ಮಾನ್ಯತೆಗಳನ್ನೂ,ಹಕ್ಕು-ಬಾಧ್ಯತೆಗಳನ್ನೂ ಜಾನಪದ-ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಶ್ರೀಯುತರು ತಂದುಕೊಟ್ಟರು. ಯಕ್ಷಗಾನ ಕಲೆ ಜನಪದವಲ್ಲ, ಇಲ್ಲಿ ನವರಸ ಭರಿತವಾದ ವೈಖರಿ ಇದೆ, ತಾಳ-ಲಯ-ಗಚ್ಚುಗಾರಿಕೆಯಿದೆ, ಸ್ವಚ್ಛ-ಅಚ್ಚಕನ್ನಡದ ಶಬ್ಧಗಳಗಳ ಮಾತಿನ ಲಹರಿಯಿದೆ, ಚಂಡೆ-ಮದ್ದಳೆಗಳ ಪೂರಕ ಉಪೋದ್ಘಾತವಿದೆ, ಶಾಸ್ತ್ರೀಯ ಕುಣಿತದ ಲಾಸ್ಯವಿದೆ ಎಂಬುದನ್ನೆಲ್ಲ ನಿರ್ಭಿಡೆಯವಾಗಿ ಹೇಳಿ ಪ್ರತ್ಯೇಕ ಯಕ್ಷಗಾನ ಅಕಾಡೆಮಿ ಮಾಡಲು ಮೊಟ್ಟಮೊದಲಾಗಿ ಸೂಚಿಸಿದ ಅನುಮೋದಿಸಿದ ಏಕೈಕ ವ್ಯಕ್ತಿ ನಮ್ಮ ಶಂಭಣ್ಣ ಅಂದರೆ ತಪ್ಪಲ್ಲ. ದೇಶವಿದೇಶಗಳಲ್ಲಿ ಈ ಕಲೆಯ ಸೊಬಗು-ಸಂಸ್ಕೃತಿಯನ್ನು ವಿಜೃಂಭಿಸಿದ ಹೆಗ್ಗಳಿಕೆ ಕೆರೆಮನೆ ಮೇಳಕ್ಕೆ ಸಲುತ್ತದೆ. ಈ ಕಲೆಗೊಂದು ಕ್ರಮಬದ್ಧ ಕಲಿಕೆಯ ರೂಪಕೊಡಲು ಶ್ರಮಿಸಿದ ಶಂಭಣ್ಣ ಕೆರೆಮನೆಯಲ್ಲಿ ಶ್ರೀಮಯ[ ಅವರ ಟ್ರೂಪ್ ನ ಶಾಟ್ ಫಾರ್ಮ್] ಕಲಾಕೇಂದ್ರವನ್ನು ಕಟ್ಟಿ-ಬೆಳೆಸಿ ಯಶಸ್ವಿಯಾಗಿ ನಡೆಸಿದ್ದಾರೆ.ಬದುಕಿದ್ದಾಗಲೇ ಸಂಶೋಧನೆಯ ಸಾಹಿತ್ಯಕ್ಕೆ ವಸ್ತುವಾದ ಶ್ರೀ ಶಂಭು ಹೆಗಡೆಯವರ ಯಕ್ಷಗಾನದ ಪತ್ರಗಳ ಬಗ್ಗೆ ಸಾಗರದ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿರುವ ಶ್ರೀ ಜಿ.ಎಸ್.ಭಟ್ ಅವರಿಗೆ ಡಾಕ್ಟರೇಟ್ ಪಡೆಯುವಲ್ಲಿ ಸಹಕಾರಿಯಾಯಿತು.

ಇಂದು ಅವರ ಮಗ ಶ್ರೀ ಶಿವಾನಂದ ಹೆಗಡೆ ಕೆರೆಮನೆ ಮೇಳವನ್ನು ಮುನ್ನಡೆಸಿದ್ದಾರೆ. ಈಗ ಕೇವಲ ಕಾಲಮಿತಿ ಪ್ರಯೋಗದ ಮೇಳ. ಹೆಚ್ಚಾಗಿ ರಂಗಮಂದಿರಗಳಲ್ಲಿ, ಸಜ್ಜಾಗಿರುವ ವೇದಿಕೆಗಳಲ್ಲಿ ಇವರು ತಮ್ಮ ತಂಡವನ್ನು ತಂದು ಪ್ರದರ್ಶನ ನೀಡೂತ್ತಾರೆ. ತನ್ನ ಪ್ರಯತ್ನದಿಂದ ಬೆಂಗಳೂರಿನಂತಹ ಅನೇಕ ಶಹರ,ಪಟ್ಟಣಗಳಲ್ಲಿ ಇವರು ಪ್ರದರ್ಶನ ನೀಡಿ ಹಲವು ವಿದ್ಯಾರ್ಥಿ ಅಭಿಮಾನಿಗಳನ್ನೂ ಪಡೆದಿದ್ದಾರೆ. ಮಿತ್ರರಾದ ಶಿವಾನಂದರು ಒಮ್ಮೆ ನಮ್ಮ ಆಫೀಸಿಗೆ ತನ್ನ ಲ್ಯಾಪ್ ಟಾಪ್ ಸರಿಪಡಿಸಿಕೊಳ್ಳಲು ಬಂದಿದ್ದರು. ಆಗ ಅವರನ್ನು ಕೇಳದೆಯೇ ಅವರ ಮಂಡಳಿಯ ಛಾಯಾಚಿತ್ರಗಳಿರುವ ಕಟ್ಟೊಂದನ್ನು[ಡೈರೆಕ್ಟ್ರಿ] ಪಡೆಯಲು ಉದ್ಯುಕ್ತನಗುವಷ್ಟು ತಹತಹ ನನಗಿತ್ತು, ಕಾರಣವಿಷ್ಟೇ ನನಗೆ ಇತ್ತೀಚೆಗೆ ಎಲ್ಲೂ ಶಂಭಣ್ಣನ ಯಕ್ಷಗಾನ ನೋಡಸಿಗಲಿಲ್ಲ, ಕೊನೇಪಕ್ಷ ಅವರ ಬೇರೆ ಬೇರೆ ಹಾವ-ಭಾವಗಳ ಭಾವಚಿತ್ರಗಳಾದರೂ ನನ್ನಲ್ಲಿರಲಿ, ಮತ್ತು ಅದು ಬಹುಬೇಗ ನನಗೆ ಸಿಗಲಿ ಎಂಬುದಾಗಿತ್ತೇ ಹೊರತು ಅದರ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ. ಆಮೇಲೆ ಸ್ವತಃ ಅವರೇ ಕರುಣಿಸಿದ ಕೆಲವು ಚಿತ್ರಗಳು ನನ್ನಲ್ಲಿವೆ.ಅವರಲ್ಲಿ ಕೆರೆಮನೆ ಮೇಳದ ವೀಡಿಯೋ ಬಗ್ಗೆ ವಿಚಾರಿಸಿದ್ದೆ, ಕೆಲವು ಇವೆ-ಆದರೆ ಇನ್ನೂ ಹೊಅರತಂದಿಲ್ಲ-ನಿಮಗೆ ಬೇಕಾದರೆ ಕೊಡುತ್ತೇನೆ ಎಂದಿದ್ದರು. ನಾನು ಅವರಿಂದ ಪಡೆದ ಛಾಯಚಿತ್ರಗಳಲ್ಲಿ ಕೆಲವು ಗಣಕಯಂತ್ರಕ್ಕೆ ವೈರಸ್ ಬಂದಾಗ ಕೆಲವು ಅಳಿಸಿ ಹೋಗಿವೆ. ಮೊನ್ನೆ ಪತ್ರಿಕೆಯೊಂದರಲ್ಲಿ ಒಂದು ಸಂದೇಶ ಬಂತು ’ನಿಜರಾಮ ನಿರ್ಯಾಣ’ ಸಿ.ಡಿ. ಬಿಡುಗಡೆಯಾಗಿದೆ,ಆಸಕ್ತರು ಕೊಳ್ಳಬಹುದು ಎಂದು.ಇದುವರೆಗೆ ಕೆರೆಮನೆ ಮೇಳದ ವೀಡಿಯೋ ಸಿ.ಡಿಗಳು ಹೊರಬಂದಿರಲಿಲ್ಲ. ಇದೀಗ ಆ ಒಂದು ಮಾಧ್ಯದಲ್ಲಿ ಮೊದಲ ಕಾಣಿಕೆಯಾಗಿ ಅದನ್ನು ತಂದಿದ್ದಾರೆ. ಈ ಸುದ್ದಿ ಕೇಳಿ ಬಹಳ ಸಂತೋಷವಾಯ್ತು.

ವ್ಯಕ್ತಿಗಿಂತ ವ್ಯಕ್ತಿತ್ವ ಬಹಳ ಮುಖ್ಯ. ಕಲಾವಿದರ ವೈಯಕ್ತಿಕ ಬದುಕಿನಲ್ಲಿ ಹಲವಾರು ಕಷ್ಟಕೋಟಲೆಗಳು ಇರುತ್ತವೆ ಯಾಕೆಂದರೆ ಅವರೂ ಮನುಷ್ಯರಲ್ಲವೇ ? ವ್ಯಕ್ತಿಯಾಗಿ ತನ್ನ ಹಲವು ನೋವುಗಳನ್ನೂ ಮರೆತು ಸಮಾಜದ ಒಳಿತಿಗಾಗಿ ಸಾತ್ವಿಕ,ಸಮಗ್ರ ಹಾಗೂ ಸಮರ್ಥ ಕಲೆಯೊಂದನ್ನು ಪ್ರಚುರಪಡಿಸಿ " ಶರಣರ ಬದುಕಿನ ಅರ್ಥವನ್ನು ಮರಣದಲ್ಲಿ ನೋಡು ಎಂದು ಪ್ರಾಜ್ಞರು ಹೇಳಿದ್ದಾರೆ" ಎನ್ನುತ್ತ ತಾನೂ ಒಬ್ಬ ಶರಣನೇ ಸರಿ ಎಂಬುದನ್ನು ಸಾಬೀತುಪಡಿಸಿದ ದಿ|ಶ್ರೀ ಶಂಭು ಹೆಗಡೆ ಕರಾವಳಿ ಹಾಗೂ ಮಳೆನಾಡು ಜಿಲ್ಲೆಗಳಲ್ಲಿ ಉತ್ತಮ ವಾಗ್ಗೇಯಕಾರರಾಗಿ ಹಲವು ಸಾಹಿತ್ಯಾಸಕ್ತರಿಗೆ,ಭಾವುಕರಿಗೆ,ಕಲಾರಸಿಕರಿಗೆ,ಕಲಾಫೋಷಕರಿಗೆ,ಕಲಾರಾಧಕರಿಗೆ ತಮ್ಮ ನಳಪಾಕವನ್ನು ಬಡಿಸಿದ್ದಾರೆ, ನಿರ್ಯಾಣದ ಶ್ರೀರಾಮನಾಗಿಯೇ ಅಭಿನಯಿಸುತ್ತ ಆರಾಧ್ಯದೈವದ ಸನ್ನಿಧಿಯಿಂದ ನೇರ ದೇವರ ಆಸ್ಥಾನಕ್ಕೆ ನಿರ್ಗಮಿಸಿಬಿಟ್ಟಿದ್ದಾರೆ, ಅನೇಕ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಶ್ರೀರಾಮನ ರೀತಿಯಲ್ಲೇ ಜನಪ್ರಿಯರಾಗಿಯೂ ಇದ್ದ ಈ ವ್ಯಕ್ತಿಯ ನಿರ್ಗಮನ ’ನಿಜರಾಮನಿರ್ಯಾಣ’ ಎಂದರೆ ಅತಿಶಯೋಕ್ತಿಯಲ್ಲ.

Saturday, May 29, 2010

ನಮ್ಮ ಭಾರತ


ನಮ್ಮ ಭಾರತ

ಸೇತು ರಾಮೇಶ್ವರದಿಂದ ಮೇರು ಪರ್ವತದನಕ
ಹಬ್ಬಿರುವ ಉದ್ದದಾ ನಮ್ಮ ಭಾರತವು
ಆತುಕೊಂಡಿದೆ ವಿವಿಧ ಧರ್ಮ ಆಚಾರಗಳ
ಈ ಕಥೆಯ ಕೇಳಿ ಸುಖಿಸುವೆವು ಅನುದಿನವು

ಗಂಗೆ ಕಾವೇರಿ ನರ್ಮದೆ ಕೃಷ್ಣೆ ಗೋದೆಯರು
ತುಂಗೆ ಕಪಿಲೆ ಕಬಿನಿ ಬ್ರಹ್ಮಪುತ್ರೆಯರೂ
ಅಂಗಳದಿ ಮಂಗಳದ ದೀಪ ಶರಾವತಿಯು
ಬಂಗಾಳಕೊಲ್ಲಿಯಲಿ ಸಂಘಮಿಪ ನದಿಗಳು

ಭಾಷೆ ಹಲವು ನಮದು ಶ್ರೀಮಂತವಾಗಿಹುದು
ವೇಷಭೂಷಣಗಳಲು ಭಿನ್ನತೆಯ ಮೆರೆದೂ
ಕೋಶತುಂಬಲು ಹಗಲು ಇರುಳೆನದೆ ಶ್ರಮಿಸುವೆವು
ಆಶಯವು ಒಂದೇ ತಾಯೊಲುಮೆ ನಮಗಿರಲು

ಒಡಹುಟ್ಟಿದವರಂತೆ ಬದುಕಿ ಬಂದಿಹೆವಿಲ್ಲಿ
ನಡುತಟ್ಟಿ ಎದೆತಟ್ಟಿ ಸ್ವಾಭಿಮಾನದಲಿ
ಇಡಿದಾದ ಹಳೆಯ ಭಾರತ ನಮದು ನೆಲವೆನುತ
ಗಡಿನಾಡ ಜನಕೆಲ್ಲ ಗುಡುಗಿ ಹೇಳುವೆವು

ಬಲುರುಚಿಯ ಖಾದ್ಯ ನೈವೇದ್ಯ ಭಾರತಜನಕೆ
ಖಲುಶಿತದ ಮನವ ನಿರ್ಮಲಗೊಳಿಸುತಿರಲು
ಹಲಸು ಮಾವು ಬಾಳೆ ಏಲಕ್ಕಿ ಎಳೆನೀರು
ಬಳಸುತಾ ಭೂರಮೆಯ ಸಗ್ಗ ನೆನೆಯುವೆವು

ತಾಯಿ ಭಾರತಿ ನಿಂತು ಹರಸಿ ಮಕ್ಕಳನೆಲ್ಲ
ಬಾಯಿಗನ್ನವನಿಕ್ಕಿ ಮುದ್ದಿಸುವ ಕಾಲ
ಹಾಯ ಹರಿಗೋಲಿಕ್ಕಿ ದುರ್ಗಮದ ನದಿಯಲ್ಲಿ
ಮಾಯದಲಿ ರಮಿಸುವಳು ಬರಸೆಳೆದು ಬಹಳ

Friday, May 28, 2010

ಗೋಪುರ ಗಾನ !!


ಗೋಪುರ ಗಾನ !!

ತಿಳಿ ಗುಲಾಬಿ ಪಂಚೆ, ಗಿಳಿಹಸಿರು ಬಣ್ಣದ ಜುಬ್ಬಾ ತೊಟ್ಟುಕೊಂಡು,ಎರಡೂ ಹೆಗಲಿಗೆ ಶಾಲನ್ನು ಹೊದ್ದು, ಹಣೆತುಂಬಾ ಢಾಳಾಗಿಕಣ್ಣಿಗೆ ಹೊಡೆಯುವಂತೇ ಭಸ್ಮ ತ್ರಿಪುಂಡ್ರ[ವಿಭೂತಿ], ಕೊರಳಲ್ಲಿ ಎರಡೆರಡು ಮಧ್ಯಮ ಗಾತ್ರದ,ಚಿನ್ನದಲ್ಲಿ ಕಟ್ಟಿದ ರುದ್ರಾಕ್ಷಿ ಹಾರಹೇರಿಕೊಂಡು, ಕೈಯ್ಯಲ್ಲಿ ಹೊಸ ಲ್ಯಾಪ್ ಟಾಪ್ ಮತ್ತು ಬ್ಲಾಕ್ ಬೆರ್ರಿ ಮೊಬೈಲು ಹಿಡಿದು ಕೊಂಡು ಬಂದೇ ಬಿಟ್ಟರು ನಮ್ಮಚಂದ್ರಕಾಂತ ಗುರೂಜಿ, ಇವರು ನಾನು ತಮಗೆಲ್ಲಾ ಮೊದಲೊಮ್ಮೆ ಪರಿಚಯಿಸಿದ " ಪುನರ್ಜನ್ಮ" ಖ್ಯಾತಿಯ ದಾಮೋದರಗುರೂಜಿಯ ಖಾಸಾ ತಮ್ಮ. ಏನಿಲ್ಲಾ ಅಂದರೂ ೧೦ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ, ಮಹೀಂದ್ರಾ ಸ್ಕಾರ್ಪಿಯೋ ಗಾಡಿಯಲ್ಲಿ ಅತೀ ಸಾಮಾನ್ಯನಂತೇ ಓಡಾಡಿಕೊಂಡಿದ್ದಾರೆ. ತಾವಾಯಿತು,ತಮ್ಮ ಕೆಲಸವಾಯಿತು. ಹಾಗಂತ ಅವರಿಗೆ ಯಾವ ಅಹಮ್ಮೂ ಇಲ್ಲ. ತುಂಬಾ ಡೌನ್ ಟು ಅರ್ಥ್ ಮ್ಯಾನ್ ! ತುಂಬಾನೇ ಸಿಂಪಲ್ಲು !

ಮಾಧ್ಯಮದಲ್ಲಿ ಗುರೂಜಿ ಕಾಣಿಸಿಕೊಂಡರೆ ಸಾಕು ಮಾರನೇ ದಿನವೇ ಗುರೂಜಿ ಅಫೀಸಿನ ಬಾಗಿಲಲ್ಲಿ ಸಾವಿರಾರು ಜನ! ಗುರೂಜಿಯ ಭವಿಷ್ಯವೇ ಹಾಗೆ. ಅದು ಫಲಕಾರಿಯೋ ಇಲ್ಲವೋ ಹರನೇ ಬಲ್ಲನಾದರೂ ಹೆದರಿ ಓಡಿ ಬಂದುಪರಿಹಾರಕಂಡುಕೊಳ್ಳುವ ಮಂದಿ ಬಹಳ. ತೀರಾ ಬಡತನದಲ್ಲಿ ಹುಟ್ಟಿ ಬೆಳೆದ ಗುರೂಜಿ ಕಷ್ಟಪಟ್ಟು ಮೂರನೇ ತರಗತಿ ಓದಿದ್ದಾರೆ. ನಂತರಅಣ್ಣ ದಾಮೋದರ ಗುರೂಜಿಯ ಸಹಾಯಕರಾಗಿ ಇತ್ತೀಚಿನವರೆಗೂ ಕೆಲಸ ಮಾಡಿ ಅಣ್ಣನ ಗರಡಿಯಲ್ಲಿ ಪಳಗಿದ ಹುಲಿಯಾಗಿದ್ದಾರೆ. ಯಾರನ್ನೋ ಕರೆಸಿ ಇಂಗ್ಲೀಷ್ ಅಭ್ಯಾಸ ಮಾಡಿಕೊಂಡು ಕಂಪ್ಯೂಟರ್ ಕಲಿತುಕೊಂಡಿದ್ದಾರೆ.

ಕಳಪೆ ಟಿವಿಯ ಸಂದರ್ಶನ ಕೋಣೆಗೆ ಪ್ರವೇಶಿಸಿಯೇ ಬಿಟ್ಟರು ನಮ್ಮ ಗುರೂಜಿ.


" ನಮಸ್ಕಾರ ವೀಕ್ಷಕರೇ ನಾನು ನಿಮ್ಮ ಅಸಹ್ಯಾ... ಇಂದು ನಮ್ಮೊಂದಿಗಿದ್ದಾರೆ ಖ್ಯಾತ ಜ್ಯೋತಿಷಿ ಚಂದ್ರಕಾಂತ ಗುರೂಜಿಯವರು, ನಿನ್ನೆ ಕಾಳಹಸ್ತಿಯಲ್ಲಿ ರಜಗೋಪುರ ಕುಸಿದು ಬಿದ್ದ ಮೇಲಿನ ಶಕುನ ಮತ್ತು ಪರಿಣಾಮಗಳ ಬಗ್ಗೆ ಅವರು ತಮ್ಮ ಪ್ರಶ್ನೆಗಳಿಗೆಉತ್ತರಿಸಲಿದ್ದಾರೆ, ಪ್ರಶ್ನೆ ಕೇಳಲಿಚ್ಛಿಸುವವರು ನಮ್ಮ ಕೆಳಗಿನ ದೂರವಾಣಿಗಳ ಮೂಲಕ ನಮ್ಮನ್ನು ಸಂಪರ್ಕಿಸಬಹುದು... ೯೯೮೭೬೧೨೩೪_ ಹಾಗೂ ೯೯೮೭೬೧೨೪೪_ "

" ನಮಸ್ಕಾರ ಗುರೂಜಿ, ಕಾರ್ಯಕ್ರಮಕ್ಕೆ ತಮಗೆ ಸ್ವಾಗತ "

" ನಮಸ್ಕಾರ,

ವಂದೇ ಶಂಭುಮುಮಾಪತಿಂ .....ವಂದೇ ಸೂರ್ಯ ಶಶಾಂಕವಹ್ನಿ ನಯನಂ ವಂದೇ ಶಿವಂ ಶಂಕರಂ, ಜಗತ್ಪಿತೃವಾದ ಪರಮೇಶ್ವರನಿಗೆ ನಮಿಸುತ್ತ ಎಲ್ಲಾ ವೀಕ್ಷಕರಿಗೂ ಭಗವಂತನ ಕರುಣೆ ದೊರಕಲಿ ಎಂದು ಹೇಳುತ್ತ ಇವತ್ತಿನ ಕಾರ್ಯಕ್ರಮಆರಂಭಿಸೋಣ "

" ಸ್ವಾಮೀ ನಾವು ಬರಗಾಲಪುರದಿಂದ ಕಾಲ್ ಮಾಡ್ತಿರೋದು "

" ಏನು ನಿಮ್ಮ ಹೆಸರು ? ಏನ್ ಕೇಳಬೇಕಾಗಿತ್ತು "

" ನಾನು ಬೀರಣ್ಣಾ ಅಂತ, ಈಗ ಕಾಳಹಸ್ತಿಯಲ್ಲಿ ರಾಜಗೋಪುರ ಬಿದ್ದಿರೋದ್ರಿಂದ ಪರಿಣಾಮ ಏನಾಗ್ಬೌದು ಹೇಳ್ತೀರಾ? "

" ಇದೊಂದು ದೊಡ್ಡ ದುರಂತ, ದೇಶಕ್ಕೇ ಏಕೆ ಜಗತ್ತಿಗೇ ಇದರಿಂದ ವಿಪತ್ತು ತಪ್ಪಿದ್ದಲ್ಲ, ಹಿಂದೆಂದೂ ನಡೆಯದ ಇಂತಹ ಘಟನೆಇದೀಗ ಸಂಭವಿಸಿದೆ, ಗುರುಗ್ರಹದ ಸ್ಥಾನಪಲ್ಲಟವೇ ಇದಕ್ಕೆಲ್ಲ ಕಾರಣ"

" ಗುರೂಜಿ ಹಾಗಾದ್ರೆ ಮುಂದೆ ಇನ್ನೇನಾಗ್ಬೌದು ? "

" ಸುನಾಮಿ ಬರುವ ಲಕ್ಷಣ ಕಂಡು ಬರ್ತಾ ಇದೆ, ಜಗತ್ತಲ್ಲೇ ಅಲ್ಲೋಲ-ಕಲ್ಲೋಲ್, ಎಲ್ಲೆಲ್ಲೂ ದೊಂಬಿ-ಗಲಾಟೆ, ಬಾಂಬು "

" ಮತ್ತೆ ಈಗಾಗಲೇ ನಡೀತಿರೋದೇ ಆಗೋಯ್ತಲ್ಲ ಸ್ವಾಮಿ ಬೇರೆ ಇನ್ನೇನೂ ಆಗೋದಿಲ್ಲ ತಾನೇ ? "

" ಸದ್ಯಕ್ಕೆ ಹಾಗೇನೂ ಕಾಣಿಸ್ತಾ ಇಲ್ಲ, ಈಗಿರುವ ಪರಿಸ್ಥಿತಿ ನೋಡಿದ್ರೆ ಜನ ತಕ್ಷಣಕ್ಕೆ ಶಾಂತಿ-ಹೋಮ ಪೂಜೆ ಇತ್ಯಾದಿಗಳನ್ನುನುರಿತ ಪಂಡಿತರಿಂದ ಗುರೂಜಿಗಳ ಆಶೀರ್ವಾದ ಪಡೆದುಕೊಂಡು ಮಾಡ್ಸಿದ್ರೆ ಬರಬಹುದಾದ ಅನೇಕ ದೊಡ್ಡ ಕೆಟ್ಟಪರಿಣಾಮಗಳನ್ನು ಸ್ವಲ್ಪ ಮಟ್ಟಿಗೆ ಕಮ್ಮಿಮಾಡಿಕೊಳ್ಳಬಹುದು "

" ಅಲ್ಲಾ ಸ್ವಾಮ್ಯೋರೇ ಬುಡಬುಡಿಕೆ ಹಕ್ಕಿ ನರಸಪ್ಪ ಜಾವ್ದಲ್ಲೇ ಕೂಕ್ಕೊಂಡು ಹೋಯ್ತಾ ಇರ್ತಾನಲ್ಲ, ಎಲ್ಲಾ ರಕ್ತವಾಂತಿಮಾಡ್ಕತಾರೆ, ಅದ್ಯಾರೋ ಸತ್ತೋಗ್ಬುಡ್ತಾರೆ, ಮತ್ಯಾರ್ಗೋ ತುಂಬಾ ತ್ರಾಸಾಗ್ತೈತೆ,ಮಕ್ಳು-ಮರಿಗಳ್ಗೆಲ್ಲ ಹುಸಾರಿರಾಕಿಲ್ಲಅಂತೆಲ್ಲ.... ರೀತಿ ಏನೂ ಆಯಾಕಿಲ್ಲ ತಾನೇ ? "

" ರೀತಿ ಏನೂ ಆಗಲ್ಲ ಅಂತ ಹೇಳೋಕಾಗಲ್ಲ, ಆದ್ರೆ ಆದಷ್ಟು ನೀವು ಶಾಂತಿ ಕರ್ಮ ಮಾಡ್ಸೋದು ತುಂಬಾ ಒಳ್ಳೆದು "

" ಅಂದ್ರೆ ಈಗ ಅರ್ಜೆಂಟ್ ಗೆ ಶಾಂತಿ ಮಾಡ್ಬೇಕೂ ಅಂತೀರಿ,ಎಲ್ಲಿ ಮಾಡ್ಸಬೇಕೂ ಸುಮಾರು ಎಷ್ಟು ಖರ್ಚಾಗ್ಬೌದುಹೇಳಾಕಾಗ್ಬೋದಾ "

" ಅದು ಎಲ್ಲರ್ಗೂ ಸೇರಿ ಸಮೂಹಿಕ ಆದ್ರೆ ಒಂಥರಾ, ನಿಮ್ಗೆ ಒಬ್ಬರ್ಗೇ ಆದ್ರೆ ಒಂಥರಾ ಆಗತ್ತೆ, ಒಬ್ಬರ್ಗೇ ಆದ್ರೆ ಸುಮ್ನೇ ಭಾರ ಜಾಸ್ತಿಅಂತಾದ್ರೆ ಎಲ್ಲಾ ಸೇರ್ಕೊಂಡು ಮಾಡ್ಸ್ಕೋಬೌದು, ಒಟ್ಟೆಲ್ಲಾ ಸುಮಾರು ಲಕ್ಷ ಖರ್ಚು ಆಗ್ಬೌದು, ೨೦ ಜನ ಪುರೋಹಿತ್ರು ಬೇಕು, ೧೫ ಕ್ವಿಂಟಾಲ್ ತುಪ್ಪ ಬೇಕು ಹೀಗೇ ಬಹಳ ಸಾಮಾನು ಬೇಕಾಗ್ತವೆ ಬೀರಣ್ಣೋರೇ, ನೀವು ಖುದ್ದಾಗಿ ಭೇಟಿ ಆದ್ರೆ ಎಲ್ಲಾಮಾತಾಡ್ಬೌದು "


" ಮೊನ್ನೆ ಅಕ್ಷಯ ತದಿಗೆ ದಿವ್ಸ ಬೆಂಗ್ಳೂರ್ ಬಂಟಿ ಜಿವೆಲ್ಲರಿ ಶಾಪ್ನಾಗೆ ತಾವು ಕುಂತು ಭಾಳ ಮಂದಿಗೆ ಉಪಕಾರ ಮಾಡುದ್ರಿ"

" ಉಪಕಾರ ಏನ್ಬಂತು, ಬಂಟಿ ಮಾಲೀಕರಾದ ನಮ್ಮ ಸುಂದರೇಶು ನಮ್ಗೆ ತುಂಬಾ ಬೇಕಾದವ್ರು, ಸ್ವಲ್ಪ ಬಂದು ಕೂತ್ಗಂಡುರತ್ನ,ಹಅಳು,ವಜ್ರಗಳ ಬಗ್ಗೆ ಸ್ವಲ್ಪ ಗಿರಾಕಿಗೆ ತಿಳ್ಸ್ಕೊಡಿ ಅಂದ್ರು, ಅಷ್ಟಾಗಿ ಕರ್ದ್ರಲ್ಲ ಅಂತ ಹೋಗಿದ್ದೆ, ಬೆಳಿಗ್ಗೆಯಿಂದ ರಾತ್ರಿ ೧೦ಘಂಟೆತನ್ಕ ಭಾಳಾ ಸುಸ್ತಾಗ್ಬುಡ್ತು"

" ನೀವು ಕುಂತಿದ್ದೇ ಕುಂತಿದ್ದು ಆಯಪ್ಪಂಗೆ ಒಳ್ಳೆ ಯಾಪಾರ್ವಂತೆ, ಅಂತೂ ತಮ್ಮ ದಯದಿಂದ ಒಳ್ಳೇ ಯಾಪಾರ ಮಾಡ್ಕಂಡ್ರುಅನ್ನಿ, ತಮ್ಮ ಕಾಲ್ಗುಣವೇ ಹಾಗೆ ಅಲ್ವಾ ಸ್ವಾಮೀ? "

" ಇರ್ಲಿ ಬಿಡಿ, ಹೊಗಳಿಕೆ ನಂಗೆ ಇಷ್ಟ ಆಗಲ್ಲ, ನಿಮ್ಗೆ ಬೇಕಾದ್ರೆ ಬಂದು ಭೇಟಿ ಮಾಡಿ ಆಯ್ತಾ? "

" ಆಯ್ತು ಸ್ವಾಮಿ, ನಾನು ಒಂದೆರ್ಡದಿನದಲ್ಲೇ ತಮ್ಮನ್ಕಾಣ್ತೀನಿ"

" ನಂಸ್ಕಾರ ನಾನು ರಂಗಣ್ಣಾ ಅಂತ,ಸಿಡ್ಲಘಟ್ಟದಿಂದ, ಸರ್ತಿ ನಂಗೆ ಸೈಕಲ್ ಪಕ್ಷದೋರು ರಾಜ್ಯಸಭೆಗೆ ಅವಕಾಶ ಕೊಡ್ತೀನಿಅಂದವ್ರೆ,ಅದ್ರ ಬಗ್ಗೆ ಕೇಳೊಣ ಅಂತ "

" ರಂಗಣ್ಣೋರೇ ಇವತ್ತಿನ ವಿಷ್ಯ ಗೋಪುರ ಉರುಳಿದ ಬಗ್ಗೆ ಮಾತ್ರ, ಇರ್ಲಿ ನೀವು ಕೇಳಿದೀರಿ ಅಂತ ಹೇಳ್ತೀನಿ, ನಿಮ್ಗೆ ಸ್ಥಾನ ದಕ್ಕಲುಸ್ವಲ್ಪ ತಡೆ ಇದೆ, ನಿಮ್ಮ ಹತ್ತಿರದವ್ರೇ ಸ್ವಲ್ಪ ಅಡ್ಡಗಾಲು ಹಾಕ್ತಾ ಇದಾರೆ. ಹೀಗಾಗಿ ಸ್ಥಾನ ನಿಮ್ಗೆ ದಕ್ಬೇಕು ಅಂದ್ರೆ ಒಂದೆರಡು ಕ್ರಮಜರುಗಿಸಬೇಕು, ನೀವು ನನ್ನನ್ನು ಇವತ್ತೇ ಭೇಟಿ ಆಗಿ..ಎಲ್ಲಾ ಮಾತಾಡೋಣ "

ಗುರೂಜಿ ಕನ್ನಡಿಯಲ್ಲಿ ಕಾಣುತ್ತಿರುವ ಹಾಗೆ ಹೇಳುತ್ತಾ ಮುಂದುವರಿಸಿದರು --

" ವೀಕ್ಷಕರೇ ಇದು ಅಂತಿಥ ವಿಪತ್ತಲ್ಲ, ಭಾರೀ ಅಪಶಕುನ, ದೇಶ ಒಬ್ಬ ಒಳ್ಳೆಯ ರಾಜಕಾರಣಿಯನ್ನು, ಒಬ್ಬ ಮೇರು ನಟನನ್ನುಹಾಗೂ ಒಬ್ಬ ಅತ್ಯಂತ ಪ್ರಭಾವೀ ಮಹಿಳೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಬರುವ ಮಳೆಗಾಲದಲ್ಲಿ ಅಕಾಲಿಕ ಮಳೆ, ಭಯಂಕರ ಚಂಡಮಾರುತ ಬೀಸಿ ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಹಾನಿಯುಂಟುಮಾಡಲಿದೆ, ಒಂದು ನದಿಯ ಅಣೆಕಟ್ಟೆಗೆಧಕ್ಕೆಯಾಗಲಿದೆ, ಭಾರೀ ವಿಮಾನ ದುರಂತದ ಸಾಧ್ಯತೆ ಕೂಡ ಕಂಡು ಬರ್ತಾ ಇದೆ "

" ವೀಕ್ಷಕರೇ ಈಗ ಒಂದು ಚಿಕ್ಕ ವಿರಾಮ ತಗೋತೀವಿ, ವಿರಾಮದ ನಂತರ ಗುರೂಜಿ ಅಪಶಕುನದ ಬಗ್ಗೆ ಇನ್ನೂ ಬಹಳತಿಳಿಸಿಕೊಡುವವರಿದ್ದಾರೆ, ಪ್ಲೀಸ್ ಡೋಂಟ್ ಗೋ ಅವೇ "

ಫೇಸ್ ಈಸ್ ದಿ ಇಂಡೆಕ್ಸ್ ಆಫ್ ಮೈಂಡ್


ಫೇಸ್ ಈಸ್ ದಿ ಇಂಡೆಕ್ಸ್ ಆಫ್ ಮೈಂಡ್

ಮನುಷ್ಯ ಯಾವ ತರಗತಿಯವನು ಎಂಬುದನ್ನು ಅವನ್ ಮುಖ ನೋಡಿಯೇ ಹೇಳಬಹುದು ಎನ್ನುತ್ತದೆ ಆಂಗ್ಲ ಗಾದೆ. ಇದುಸಮಂಜಸ್ವೇ ಸರಿ. ಇದುವರೆಗಿನ ನನ್ನ ವೃತ್ತಿನಿರತ ಕಾರ್ಯಕಲಾಪಗಳಲ್ಲಿ ಲಕ್ಷಾಂತರ ಜನರನ್ನು ನೋದಿದ್ದೇನೆ. ಜಗತ್ತಿನಲ್ಲಿ ಒಬ್ಬರಮುಖದಂತೇ ಇನ್ನೊಬ್ಬರದಿಲ್ಲ. ಒಂದೊಮ್ಮೆ ತದ್ರೂಪ ಹೋಲಿಕೆ ಇದ್ದರೂ ಪ್ರತಿವ್ಯಕ್ತಿಯೂ ಒಂದೆಲ್ಲಾ ಒಂದು ರೀತಿಯಲ್ಲಿ ಭಿನ್ನ! ಬೀಗನಿರ್ಮಿಸುವ ಗಾಡ್ರೆಜ್ ನಂತಹ ಕಂಪನಿಗಳು ಎಷ್ಟೋ ಕೊಟಿ ಬೀಗಗಳನ್ನು ಮಾಡಿರಬಹುದು-ಆದರೆ ಅವುಗಳಲ್ಲಿ ಹಲವಷ್ಟುಒಂದೇತೆರನಾಗಿರುತ್ತವೆ, ಆದರೆ ನಮ್ಮ ನಿರ್ಮಾತೃವಿನ ಚಾಕಚಕ್ಯತೆ ವಿಷಯದಲ್ಲಿ ನಕಲು ಮಾಡಲಾಗದ ಕೆಲಸವಾಗಿದೆ!

ನಾವು ಹಲವು ವ್ಯಕ್ತಿಗಳನ್ನು ನೋಡಿದಾಗ ಅವರು ಕಣ್ಣಲ್ಲೇ ನಗುತ್ತಾರೆ ಎಂದು ಹೇಳುತ್ತೇವೆ. ಇನ್ನು ಕೆಲವರದು ಕಣ್ಣಲ್ಲೇಮಾತನಾಡುವಷ್ಟು ಚಾಲಾಕೀ ಕಣ್ಣುಗಳು-ಆಕರ್ಷಕ ಕಣ್ಣುಗಳು. ಮುಖದ ಬಹುಮುಖ್ಯ ಅಂಗವಾದ ಕಣ್ಣು ಕತ್ತಲಲ್ಲಿ ದೀಪವಿದ್ದಂತೇಜೀವಂತಿಕೆಯ ಸಂಕೇತ. ಅದರಲ್ಲೂ ವಿದ್ಯುತ್ ದೀಪಕ್ಕಿಂತ ಎಣ್ಣೆಬತ್ತಿಯ ದೀಪ ಅಲ್ಲಾಡುತ್ತ ಉರಿಯುತ್ತ ತನ್ನ ಜ್ವಲಂತ ಸ್ಥಿತಿಯಲ್ಲಿವಿಭಿನ್ನವಾದ ಹೊಂಬಣ್ಣದಿಂದ ಕಂಗೊಳಿಸುತ್ತ ಇಹದ ಬದುಕಿಗೆ ಬಹಳ ಉತ್ತೇಜನ ನೀಡುವ ಉತ್ಕೃಷ್ಟ ಮಾಧ್ಯಮ, ಮನಸ್ಸನ್ನುಪೂರಕ ಪ್ರಚೋದನೆಗಳಿಂದ ತುಂಬುವ ದೀಪದಂತೇ ಮುಖದಲ್ಲಿ ಕಣ್ಣುಗಳೂ ಕೂಡ. ಕಣ್ಣಿಲ್ಲದ ದಿನಗಳನ್ನು ನೆನೆಸಿಕೊಳ್ಳಲೂಕಣ್ಣಿದ್ದವರಿಗೆ ಸಾಧ್ಯವಿಲ್ಲ! ಹೀಗಿರುವ ಕಣ್ಣುಗಳಲ್ಲೂ ಆಕಾರ,ಗಾತ್ರ,ವಿನ್ಯಾಸ ವೈವಿಧ್ಯತೆ ಇದೆ. ಮುಖದ ಪ್ರತಿ ಇಂಚಿಂಚಿನಲ್ಲೂಒಂದಷ್ಟು ಸೂಕ್ಷ್ಮತೆಯನ್ನು ಸೃಶ್ಟಿಕರ್ತ ಕಲಾಕಾರ ಮೆರೆಯುತ್ತ ಒಬ್ಬರಿಗಿಂತ ಒಬ್ಬರನ್ನು ಭಿನ್ನವಾಗಿ ತೋರಿಸುವಲ್ಲಿ ಸಂಪೂರ್ಣಯಶಸ್ವಿಯಾಗಿದ್ದಾನೆ!

ಪ್ರತೀ ಮುಖದಲ್ಲಿ ಪ್ರತಿಯೊಂದು ಅವಯವವೂ ವಿಭಿನ್ನ,ವಿಶಿಷ್ಟ. ಹೆಣ್ಣಾದರೆ ಕಣ್ಣು ಹುಬ್ಬಿನಲ್ಲೋ, ಕಣ್ಣ ವಿನ್ಯಾಸದಲ್ಲೋ,ಗಡ್ಡದವಿನ್ಯಾಸದಲ್ಲೋ,ಕೆನ್ನೆಯ ಆಯಗಲದ ವಿನ್ಯಾಸದಲ್ಲೋ,ಕೆನ್ನೆ ಗುಳಿಯ ಮಾರ್ಪಾಡಿನಲ್ಲೋ,ಕೇಶವಿನ್ಯಾಸದಲ್ಲೋ, ತಲೆಯಆಕಾರದಲ್ಲೋ,ತುಟಿಯ ಅಳತೆ-ಆಕಾರ-ಬಣ್ಣ-ವಿನ್ಯಾಸದಲ್ಲೋ, ಕಿವಿಯ ಪ್ರಸ್ತುತಿಯಲ್ಲೋ, ಕಿವಿಯ ಉದ್ದಗಲ ವಿನ್ಯಾಸದಲ್ಲೋಹೀಗೆ ಭಿನ್ನವಾಗಿಸುವ ಸೃಷ್ಟಿ, ಗಂಡಾದರೆ ಇವೆಲ್ಲವೂ ಸೇರಿದಂತೆ ಮೀಸೆ,ಗಡ್ಡ ಇವುಗಳ ಉದ್ದಗಲ,ವಿನ್ಯಾಸ,ಬಣ್ಣ,ಗಡುಸುತನಇವುಗಳನ್ನೆಲ್ಲ ಮೇಳೈಸಿ ಭಿನ್ನತೆ ಕಾಣುವ ಹಾಗೆ ಮಾಡುತ್ತದೆ.

ಒಟ್ಟಾರೆ ಮುಖದ ಚಹರೆ ನಮಗೆ ಮುಖ್ಯಗುರುತು. ದೃಶ್ಯಮಾಧ್ಯಮಗಳಲ್ಲಿ ಅದಕ್ಕೇ ಯಾರನ್ನಾದರೂ ಕಾರಣಾಂತರಗಳಿಂದತೋರಿಸಬಾರದು ಎಂದಿದ್ದರೆ ಅವರ ಮುಖಕ್ಕೆ ಮಾಸ್ಕ್ ಹಾಕಿ ತೋರಿಸುತ್ತಾರೆ ಅಲ್ಲವೇ?

ವ್ಯಕ್ತಿಯನ್ನು ನೋಡಿದಾಕ್ಷಣ ನಮ್ಮ ಮನಸ್ಸಲ್ಲಿ ಯಾವುದೋ ತರಂಗಗಳ ಉದ್ಭವವಾಗುತ್ತದೆ. ತರಂಗಗಳೇ ಸಂದೇಶಗಳಾಗಿದ್ದುಸರಿಯಾಗಿ ಅರ್ಥವಿಸುವ ತಾಕತ್ತು ಇರುವ ಜನರಿಗೆ ಎದುರಿನ ವ್ಯಕ್ತಿ ಯಾವರೀತಿಯವನು ಎಂಬುದು ಸಾಮಾನ್ಯವಾಗಿತಿಳಿದುಹೋಗಿರುತ್ತದೆ. ಒಂದು ತಮಾಷೆಯೆಂದರೆ ಭವಿಷ್ಯವನ್ನು ಹೇಳುವವರ ಮುಖಗಳನ್ನು ನೋಡಿಯೇ ಅವರ ಭವಿಷ್ಯಹೇಳಿಬಿಡಬಹುದು- ವಿಷಯದಲ್ಲಿ ನನ್ನ ವೈಯಕ್ತಿಕ ನಿರ್ಧಾರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ! ಭವಿಷ್ಯ ಹೇಳುವವರೂಕೂಡ ಬಹುತೇಕ ಮುಖ ನೋಡಿ ಅರಿಯಲು ಪ್ರಯತ್ನಿಸುವ ಕಲೆಯನ್ನು ಮೈಗೂಡಿಸಿಕೊಂಡಿರುತ್ತಾರೆ.

ಮುಖವನ್ನು ಅವಲೋಕಿಸಿದಾಗ, ಅವರು ಕಣ್ಣಿಗೆ ಕಣ್ಣುಕೊಟ್ಟು ಮಾತನಾಡುವವರೋ ಅಲ್ಲವೋ, ಅವರು ಎತ್ತನೋಡುತ್ತಮಾತನಾಡುತ್ತಾರೆ, ಅವರ ಮುಖದ ಭಾವನೆಗಳು ಹೇಗೆ ಬದಲಾಗುತ್ತವೆ, ಅವರ ಹಣೆಯಲ್ಲಿ ಯಾವರೀತಿ ಗೆರೆಗಳುಗೋಚರಿಸುತ್ತವೆ, ಅವರ ಮುಖವನ್ನು[ಬಾಯಿ,ಗಡ್ಡ ಇಅವುಗಳನ್ನು] ಯಾವ ಆಕಾರಕ್ಕೆ ಅವರು ತಿರುಗಿಸುತ್ತಿರುತ್ತಾರೆ ಎಲ್ಲಾಅಂಶಗಳು ಅವರ ಸಂಸ್ಕೃತಿ ಮತ್ತು ಭಾವನೆಗಳನ್ನು ಹೊರಹೊಮ್ಮಿಸಿದರೆ ಮುಖದ ಮೇಲಿನ ಕೂದಲು, ಅವುಗಳ ಆಕಾರ, ಮುಖದಸ್ವಚ್ಛತೆ, ಕಣ್ಣುಗಳ ಬಣ್ಣ ಕೆಲವು ಅಂಶಗಳು ಅವರ ಬಹುಮುಖದ ವ್ಯಕ್ತಿತ್ವದ ಪ್ರಾತ್ಯಕ್ಷಿಕೆ ತೋರಿಸುವ ಶೋ ರೂಮ್ ಗಳಾಗಿಕೆಲಸಮಾಡುತ್ತವೆ.

ವ್ಯಕ್ತಿಯೊಬ್ಬ ಖೂಳನೋ, ಒಳ್ಳೆಯವನೋ, ಸಾಧುವೋ, ಕಳ್ಳನೋ, ಸುಳ್ಳನೋ, ಅಪರಾಧಿಯೋ, ನಿರಪರಾಧಿಯೋ, ನಿಸ್ಪೃಹನೋ, ಸ್ವಾರ್ಥಿಯೋ, ಸಾದಾ-ಸೀದಾ ಮನುಷ್ಯನೋ, ಢೋಂಗಿಯೋ, ಕ್ರೂರನೋ, ಕರುಣಿಯೋ, ಹೃದಯವಂತನೋ, ಸಮರ್ಥನೋ, ಅಸಮರ್ಥನೋ, ಅರ್ಹತೆಯುಳ್ಳವನೋ ಅಥವಾ ಅನರ್ಹನೋ, ಉಪದ್ರವಿಯೋ, ನಿರುಪದ್ರವಿಯೋ, ಪ್ರಾಮಾಣಿಕನೋ,ಧೂರ್ತನೋ,ದೂತನೋ,ಸಾತ್ವಿಕನೋ, ಮೈಗಳ್ಳನೋ ಎಲ್ಲವನ್ನೂ ಬಹುತೇಕ ಮುಖದರ್ಶನದಿಂದಲೇಒಮ್ಮೆ ಕೆಲವು ಮಟ್ಟಿಗೆ ನಿರ್ಧರಿಸಿಬಿಡಬಹುದು.

ಮಾನವ ಸಂಪನ್ಮೂಲವನ್ನು ಅರಿತಿರುವ ನುರಿತ ವ್ಯಕ್ತಿಗಳಿಗೆ ಅಳಯುವಿಕೆ ಒಗ್ಗಿಕೊಂಡಿರುವುದರಿಂದ ಅವರು ಬಂದ ಬಹಳಅಭ್ಯರ್ಥಿ,ವ್ಯಕ್ತಿಗಳನ್ನು ಮೊದಲ ನೋಟದಲ್ಲೇ ಇಂಥಾ ವ್ಯಕ್ತಿ ಎಂದು ಗುರುತಿಸಲು ಸಮರ್ಥರಾಗಿರುತ್ತಾರೆ. ಹೀಗಾಗಿ ವ್ಯಕ್ತಿತ್ವದಲ್ಲಿಮುಖಲಕ್ಷಣವೂ ಕೂಡ ಬಹಳ ಪ್ರಾಮುಖ್ಯ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ಹುಟ್ಟಿನಿಂದ ಪಡೆದ ತಲೆಬುರುಡೆ-ಮುಖದ ಆಕಾರ ಬದಲಾಯಿಸಲಾಗದ್ದಾದರೆ ವ್ಯಕ್ತಿಯ ಹುಟ್ಟು, ಪರಿಸರ,ಸಂಘ-ಸಾಹಚರ್ಯೆ,ಅನುಕರಣೆ,ಅಂಧಾನುಕರಣೆ, ಅತಿರೇಕದ ಅಭಿಮಾನ, ಹೊಸತನವನ್ನು ಅಳವಡಿಸಿಕೊಳ್ಳುವ ತಹತಹ, ತಾನೂ ಏನೂಕಮ್ಮಿ ಇಲ್ಲ ಎಂದು ಮುಖದಲ್ಲೇ ತೋರಿಸಬೇಕೆಂಬ ಅಹಂ ಇವೆಲ್ಲ ವ್ಯಕ್ತಿಯ ಮುಖವನ್ನು ಲೌಕಿಕವಾಗಿ ಮಾರ್ಪಾಡುಗೊಳಿಸುತ್ತವೆ.

ವ್ಯಕ್ತಿಯ ಮುಖ ಯಾವ ರೀತಿ ವಿಸ್ತ್ರತವಾಗಿದೆ, ಕೂದಲು[ಗಡ್ಡ-ಮೀಸೆ-ತಲೆಗೂದಲು-ಹುಬ್ಬು]ಯಾವರೀತಿ ವಿನ್ಯಾಸ ಹೊಂದಿದೆ, ಮುಖದ ಹಾಗೂ ಕಣ್ಣುಗಳ ಬಣ್ಣ ಏನು, ಕಿವಿಯಲ್ಲಿ ಏನಾದರೂ ಆಭರಣವಿದೆಯೇ[ಇದ್ದರೆ ಒಂದೇ ಕಿವಿಯಲ್ಲೋ ಅಥವಾಎರಡರಲ್ಲೋ] ಎಂಬೆಲ್ಲಾ ಅಂಶಗಳು ವ್ಯಕ್ತಿ ಸಾಮಾನ್ಯವಾಗಿ ಯಾವರೀತಿ ಎಂದು ನಿರ್ಧರಿಸಲು ಪೂರಕ ಅಂಶಗಳಾಗಿಕೆಲಸಮಾಡುತ್ತವೆ.

ಹೀಗಾಗಿ ಶಾರೂಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್, ರಜನೀಕಾಂತ್,ಪ್ರಭುದೇವ್,ದೋನಿ ಸ್ಟೈಲ್ ಎಂದುಕೊಳ್ಳುತ್ತಾಹೊಸ ಹೊಸ ಮಾದರಿಯ ಕೇಶವಿನ್ಯಾಸಗಳನ್ನು ತಮ್ಮ ಮುಖಕ್ಕೆ ಹೊಂದದಿದ್ದರೂ ಅಳವಡಿಸಿಕೊಂಡು, ಒಂಟಿಯಂತಹಆಭರಣಗಳನ್ನು ಒಂದೇ ಕಿವಿಗೆ ಸಿಕ್ಕಿಸಿಕೊಂಡು, ಹರಕುಗಳಿರುವ ಲೋ ಜೀನ್ಸ್ ಮತ್ತು ಟೀ ಶರ್ಟ್ ಹಾಕಿಕೊಂಡು, ಸ್ಪೋರ್ಟ್ಸ್ ಶೂಹಾಕಿಕೊಂಡು, ಸರಿಯಾದ ದಾಖಲು ಪತ್ರಗಳನ್ನು ತರದೇ ಸಂದರ್ಶನಕ್ಕೆ ಬರುವವರಿಗೆ ಏನನ್ನುತ್ತೀರಿ? ಅವರ ಮುಖವಂತೂ ಬಹಳಕಳಪೆಯದ್ದಾಗಿರುತ್ತದೆಂದು ಬೇರೆ ಹೇಳಬೇಕೆ?
ಮುಖವನ್ನು ಬೇಕಾಬಿಟ್ಟಿ ತಿರುಗಿಸುತ್ತ, ಭುಜಗಳನ್ನು ಕುಣಿಸುತ್ತ, ಕಣ್ಣುಗಳಲ್ಲಿ ಇವನೇನು ಮಹಾ ಎಂಬರೀತಿ ವಿಚಿತ್ರ ಭಾವನೆಗಳನ್ನುಹೊಮ್ಮಿಸುತ್ತ, ಒಂದು ಕಾಲಮೇಲೆ ಇನ್ನೊಂದು ಕಾಲುಹಾಕಿಕೊಂಡು ಕೈಯಿಂದ ತಲೆತುರಿಸಿಕೊಳ್ಳುತ್ತ ಸಂದರ್ಶನಕ್ಕೆ ಕೂರುವಹುಡುಗರಿದ್ದಾರೆ! ಇಂಥವರಿಗೆಲ್ಲ ದೇವರೇ ಗತಿ! ಇನ್ನು ಕೆಲವು ಮುಖಗಳಲ್ಲಿ ಭಾವನೆಗಳೇ ಇರುವುದಿಲ್ಲ, ಕಳಾಹೀನಮುಖ-ಸಪ್ಪೆ,ಸಪ್ಪೆ. ವ್ಯಕ್ತಿಯ ಜೀವಂತಿಕೆ ಅವನ ಕಳೆ ಕಳೆಯಾಗಿರುವ ಹುರುಪಿನ ಮುಖದಲ್ಲಿರತ್ತದಲ್ಲವೇ? ಆದರೆ ಇಂದಿನ ನಮ್ಮಅನೇಕ ಯುವಜನರಿಗೆ ಅದರ ಅನಿಸಿಕೆಯೇ ಇಲ್ಲ!

ಒಳ್ಳೆಯ ವ್ಯಕ್ತಿತ್ವಕ್ಕೆ ಒಳ್ಳೆಯ ಮುಖಲಕ್ಷಣ ಕೂಡ ಕಾರಣ. ಒಂದು ಕಟ್ಟಡಕ್ಕೆ ಎಲ್ಲಾ ಚೆನ್ನಾಗಿದ್ದು ವಾಸ್ತು ಅದೂ ಇದೂ ಅಂತಯಾರೋ ಅಡ್ಡಕಸುಬಿಗಳ ಸಲಹೆ ಪಡೆದು ಇಡೀ ಕಟ್ಟಡವನ್ನೇ ಹೇಗೆ ವಿರೂಪಗೊಳಿಸುತ್ತಾರೋ ಹಾಗೇ ಯರನ್ನೋ ಅನುಕರಿಸಲುಹೋಗಿ ತಮ್ಮ ಇರುವ ಮುಖಲಕ್ಷಣವನ್ನೂ ಕಳೆದುಕೊಳ್ಳುವ ಇಂದಿನ ಅನೇಕ ಹುಡುಗರು ಸಂದರ್ಶನದಲ್ಲಿ ಮುಖವೇ ಮೊದಲನಿರ್ಧಾರಕ್ಕೆ ಕಾರಣ ಎಂಬ ಅಂಶವನ್ನು ಮರೆಯುವಂತಿಲ್ಲ.

ಕವಿ ಕಾಳಿದಾಸ ಕೂಡ ಅರ್ಥವಿಸಿದ್ದು-|| ಕಮಲೇ ಕಮಲೋತ್ಪತ್ತಿಃ ||
ಅಂದರೆ ಮುಖವೆಂಬುದೇ ಒಂದು ಕಮಲವಾದರೆ ಅದರಲ್ಲಿರುವ ಕಣ್ಣುಗಳು ಎರಡು ಕಮಲಗಳು. ಹೀಗಾಗಿ ಮುಖವನ್ನು ಕಮಲಕ್ಕೆಹೋಲಿಸುತ್ತಾರೆ ಎಂದಾದಮೇಲೆ ಮುಖ ಎಷ್ಟು ಶುಭ್ರ ಮತ್ತು ಕಳಾಭರಿತವಾಗಿರಬೇಕು ಎಂಬುದನ್ನು ಊಹಿಸಿಕೊಳ್ಳಬೇಕಾಗುತ್ತದೆ.

ಯಾವುದೋ ಆಫೀಸಿಗೆ ಹೋಗಿ, ಅಲ್ಲಿ ನೀವು ನೋಡುವ ವ್ಯಕ್ತಿಯನ್ನು ಅವರ ವೇಷ-ಭೂಷಣ,ಆಕಾರ,ಮುಖ,ನಿಲುವು ಇವುಗಳಿಂದಅವನು ದಫೇದಾರನೋ, ಗುಮಾಸ್ತನೋ, ಜವಾನನೋ, ಅಧಿಕಾರಿಯೋ, ಅಭಿಯಂತನೋ ಎಂದು ನೀವೇ ಅಳೆದುಬಿಡುತ್ತೀರಿ! ಅಂದಮೇಲೆ ಮುಖವೇ ಪ್ರಧಾನ ಕಛೇರಿ-ಹೆಡ್ ಆಫೀಸ್. ಇದು ಶಿರೋಭಾಗವನ್ನೂ ಹೊಂದಿರುವುದರಿಂದ ಮುಖ ನಿಜವಾಗಿಯೂಪ್ರಧಾನ ಕಛೇರಿಯೇ.

ನಾವು ನಾವೇ, ನಾವು ಅವರಲ್ಲ, ನಮಗೆ ಬೇರೆಯೇ ಆದ ವ್ಯಕ್ತಿತ್ವ ಇದೆ, ನಮ್ಮತನವನ್ನು ನಾವು ಕಳೆದುಕೊಳ್ಳಬಾರದೆಂಬಅಂಶವನ್ನು ಮನದಟ್ಟುಮಾಡಿಕೊಂಡು ಅಂಧಾನುಕರಣೆಮಾಡದೇ ನಮ್ಮ ವ್ಯಕ್ತಿತ್ವಕ್ಕೆ ಪೂರಕವಾಗುವ ಚಹರೆಗಳನ್ನು ಹೊಂದಲುವ್ಯಕ್ತಿತ್ವ ವಿಕಸನ ತರಬೇತುದಾರರ ಸಲಹೆ ಪಡೆಯಬಹುದು. ಮುಖವನ್ನು ಆದಷ್ಟೂ ತೊಳೆಯುತ್ತ ಸ್ವಚ್ಛವಾಗಿ ಇಟ್ಟುಕೊಂಡಿದ್ದುಕಣ್ಣುಗಳಲ್ಲಿ ಮಡ್ [ಕೊಳೆ] ಕೂತಿರದ ಹಾಗೆ ನೋಡಿಕೊಂಡು, ಮುಖದ ಹಾವ-ಭಾವ, ಕಣ್ಣುಗಳ ಬಳಕೆ-ನೋಟ, ಕ್ಷಣಿಕವಾಗಿಮುಖದ ಕೇಂದ್ರೀಕರಣೆ ಇವುಗಳ ಬಗ್ಗೆ ಸಾಕಷ್ಟು ತಿಳಿದು ನಡೆಯುವುದು ಬಹಳ ಉತ್ತಮ.

Tuesday, May 25, 2010

ವಿಧಿಲಿಖಿತ

[ಚಿತ್ರ ಋಣ : ಫೋಟೋ ಸರ್ಚ್.ಕಾಂ ]

ತಮಗೆಲ್ಲ ತಿಳಿದಂತೆ ಈ ಜೀವ ಜಗತ್ತು ಪುನರ್ಜನ್ಮದಿಂದಾವೃತವಾದುದು. ಇತ್ತೀಚಿನ ಅನೇಕ ವೈಜ್ಞಾನಿಕ ಸಂಶೋಧನೆಗಳೂ ಕೂಡ ಇದನ್ನು ಒಪ್ಪುವ ಹಂತಕ್ಕೆ ಬಂದಿವೆ, ಆದರೂ ಮಾನವ ತಾನೇನು ಕಮ್ಮಿ ಎನ್ನುವ ಅಹಂ ತಕ್ಷಣಕ್ಕೆ ಬಿಟ್ಟುಕೊಡಲಾರ! ಸಮಾಜದಲ್ಲಿ ಭಿಕ್ಷಾಧಿಪತಿಯಿಂದ ಹಿಡಿದು ಲಕ್ಷಾಧಿಪತಿ-ಕೋಟ್ಯಾಢಿಪತಿಯವರೆಗೆ ಅನೇಕ ಬಡ-ಸಿರಿತನದ ಸ್ತರಗಳನ್ನು ನೋಡುತ್ತೇವೆ. ಎಷ್ಟೇ ಪ್ರಯತ್ನಿಸಿದರೂ ಒಂದೇ ತರಗತಿಯನ್ನು ಮಾಡಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ಇದು ಪಡೆದು ಬಂದ ಕರ್ಮ ಸಿದ್ಧಾಂತದ ಆಧರಿತ ನಡೆ. ಈ ಹಿಂದಿನ ಲೇಖನದಲ್ಲಿ ಉಲ್ಲೇಖಿಸಿದ ಹಾಗೇ ನಾವೆಲ್ಲ ಪರಿಸ್ಥಿತಿಯ ಕೈಗೊಂಬೆಗಳು! ಆದರೂ ಲೌಕಿಕವಾಗಿ ನಾವು ಬದುಕಿನಲ್ಲಿ ಹಲವು ಹತ್ತು ಆಸೆ ಇಟ್ಟುಕೊಳ್ಳುತ್ತೇವೆ. ಸೈಕಲ್ಲಿರುವವನಿಗೆ ಇಂಧನದಿಂದ ನಡೆಸುವ ದ್ವಿಚಕ್ರವಾಹನ ಕೊಳ್ಳುವ ಬಯಕೆ,ಅಂತಹ ದ್ವಿಚಕ್ರವಾಹನವಿರುವವನಿಗೆ ಕಾರು ಕೊಳ್ಳುವ ಬಯಕೆ, ಕಾರು ಇರುವವನಿಗೆ ಜಗತ್ತಿನಲ್ಲೇ ಹೆಚ್ಚಿನ ಮೊತ್ತದ ಹೊಸ ಕಾರನ್ನು ತನ್ನದಾಗಿಸಿಕೊಳ್ಳುವ ಬಯಕೆ, ಸಣ್ಣ ಉದ್ಯಮಿಗೆ ದೊಡ್ಡ ಉದ್ಯಮಿಯಾಗುವ ಕನಸು, ದೊಡ್ಡ ಉದ್ಯಮಿಗೆ ದೇಶದಗಲ ಬೆಳೆವ ಸ್ವಪ್ನ, ದೇಶದಗಲ ಬೆಳೆದ ಉದ್ಯಮಿಗೆ ಜಗತ್ತನ್ನೇ ತನ್ನ ಉದ್ಯಮದಿಂದ ಆವರಿಸುವ ಆಸೆ....ಹೀಗೆ ಇದು ಸನ್ಯಾಸಿ ಬೆಕ್ಕುಸಾಕಿದ ಕಥೆಯಂತೆ ಬೆಳೆಯುತ್ತಲೇ ಹೋಗುವ ಬಯಕೆ.

ಬಯಕೆಗಳ ಮಹಾಪೂರ! ಈ ಮಹಾಪೂರಕ್ಕೆ ನಮ್ಮ ದುರ್ಬಲ ಮನಸ್ಸೇ ಕಾರಣ. ಮೊನ್ನೆಯ ಪತ್ರಿಕೆಯೊಂದರಲ್ಲಿ ಮುನಿ ಶ್ರೀ ತರುಣಸಾಗರಜೀ ಹೇಳಿದ್ದಾರೆ- ಯಾವುದನ್ನೂ ಅಭ್ಯಾಸ ಅಂತ ಮಾಡಿಕೊಳ್ಳಬೇಡಿ ಅಂತ-ಅದು ಯಾವುದಕ್ಕೂ ಶಾಶ್ವತವಾಗಿ ಅಂಟಿಕೊಳ್ಳಬೇಡಿ ಎಂಬ ಸಂದೇಶ. ಕೆಲವರಿಗೆ ಹೊತ್ತಿಗೆ ಸರಿಯಾಗಿ ಚಹಾ ಕುಡಿಯದಿದ್ದರೆ ತಲೆನೋವು ಬರುತ್ತದೆ, ಹಲವರಿಗೆ ಗುಟ್ಕಾ ಜಗಿಯದಿದ್ದರೆ ತಲೆಗೆ ಏನೂ ಸೂಚಿಸುವುದೇ ಇಲ್ಲ, ಕೆಲವರು ಮದ್ಯ ಸೇವಿಸಿದರೇನೇ ವಾಹನ ಚಾಲನೆ ಮಾಡಲು ಬರುತ್ತದೆ...ಹೀಗೇ ಇವೆಲ್ಲ ಅಭ್ಯಾಸಗಳು. ಅಭ್ಯಾಸ ಸದಭ್ಯಾಸವೋ ದುರಭ್ಯಾಸವೋ ಅದು ಎರಡನೇ ಪ್ರಶ್ನೆ, ಆದರೆ ಈ ಅಭ್ಯಾಸ ಅನ್ನುವುದೇ ಅಂಟುಕೊಳ್ಳುವ ಬಯಕೆ. ಇದನ್ನು ನಮ್ಮ ತಲೆಯಲ್ಲಿ ಇಟ್ಟುಕೊಳ್ಳದೇ ನಮ್ಮ ಮುಷ್ಠಿಯಲ್ಲಿ ಬಿಗಿಹಿಡಿದು ನಡೆದರೆ ಆಗ ಅದು ಒಂದು ಅಭ್ಯಾಸವಾಗದೇ ಕೇವಲ ಉಪಯೋಗ ಅಥವಾ ಪ್ರಯೋಗವಾಗುತ್ತದೆ. ಆಗ ನಾವು ಆ ಕೆಲಸಗಳಿಗೆ ಯಜಮಾನರಾಗುತ್ತೇವೆಯೇ ಹೊರತು ದಾಸರಾಗುವುದಿಲ್ಲ. ಯಾವುದೇ ವಿಷಯಕ್ಕೆ ನಾವು ದಾಸರಾಗುತ್ತ ನಮ್ಮ ದೌರ್ಬಲ್ಯವನ್ನು ಹೆಚ್ಚಿಸಿಕೊಂಡರೆ ಆಗ ನಮ್ಮತನ ಕಳೆದುಹೋಗಿ ನಮ್ಮ ಇಹಪರದ ಸ್ವಾಸ್ಥ್ಯಗಳು ಅಸ್ವಸ್ಥಗೊಳ್ಳುತ್ತವೆ. ಈ ’ಅಭ್ಯಾಸ’ವೆಂಬ ಅಂಟನ್ನು ಬಿಟ್ಟು ಅವುಗಳ ಯಜಮಾನರಾದರೂ ಅವುಗಳಲ್ಲಿ ಒಳ್ಳೆಯದನ್ನು ಮಾತ್ರ ಆರಿಸಿಕೊಂಡು ಅವುಗಳಿಗೆ ಯಜಮಾನರಾಗುವುದು ಒಳಿತು. ಇಲ್ಲದಿದ್ದರೆ ಮುನಿಗಳು ಹೇಳಿದ್ದಾರೆ ಅಪರೂಪಕ್ಕೊಮ್ಮೆ ಹೆಂಡ ಕುಡಿದರೆ ತಪ್ಪಲ್ಲ ಎಂದುಕೊಂಡು ಸಾಧನೆಯ ಮಾರ್ಗದಲ್ಲಿ ಸ್ವಲ್ಪ ಮುನ್ನಡೆದ ವ್ಯಕ್ತಿ ಹೆಂಡದ ರುಚಿ ನೋಡಿ ಮತ್ತೆ ಅಪರೂಪಕ್ಕೊಮ್ಮೆ ಅದನ್ನು ಆಸ್ವಾದಿಸುವ ಯಜಮಾನತ್ವಕ್ಕೆ ಇಳಿಯಬಹುದು.


ಯುಗಧರ್ಮ ಎಂಬುದು ಸುಳ್ಳಲ್ಲ! ಈ ಯುಗದಲ್ಲಿ ಮದ್ಯ,ಮಾಂಸ,ಮಾನಿನಿ ಈ ಮೂರಕ್ಕೆ ಬಹಳ ದುರ್ವಾಜ್ಯವೂ ಮತ್ತು ಅವುಗಳ ಅಂಧಾದುಂಧಿ ವ್ಯಾಪಾರೀಕರಣದಿಂದ ಬಹಳ ಲಾಭವೂ ಬಂದು ಮಾಯೆ ಬಹಳ ವಿಜೃಂಭಿಸುತ್ತದೆ.ಜೂಜುಕೋರರು,ದಗಾಕೋರರು,ಹಲಾಲುಟೋಪಿಗಳು,ವಂಚಕರು,ಅತ್ಯಾಚಾರಿಗಳು,ದುರಾಚಾರಿಗ-ಳು,ಮಾದಕ ವ್ಯಸನಿಗಳೇ ರಾಜ್ಯಭಾರಮಾಡುತ್ತಾರೆ, ಅವರೇ ಆರ್ಥಿಕವಾಗಿ ಬಹಳ ಉನ್ನತ ಸ್ಥಾನಕ್ಕೆ ಎತ್ತಲ್ಪಟ್ಟು ಮೆರೆಯುತ್ತಾರೆ‍ ಎಂಬುದು ಜನಜನಿತ ಯುಗಧರ್ಮದ ಅಂಬೋಣ. ಅದು ಸತ್ಯವಾಗಿ ತೋರುತ್ತಿರುವುದೂ ಹೌದು. ಹೀಗಾಗಿ ಕೆಲವೊಮ್ಮೆ ಒಳ್ಳೆಯತನಕ್ಕೆ, ಸತ್ಯಕ್ಕೆ, ಸದಾಚಾರಿಗಳಿಗೆ ಸಡ್ಡುಹೊಡೆದು ಅಟ್ಟಹಾಸದಿಂದ ಮೆರೆವ ರೌಡಿ ತರಗತಿಯವರನ್ನು ನಾವು ಸಹಿಸಬೇಕಾಗಿದೆ. ಅಂತಹ ವ್ಯಕ್ತಿತ್ವವನ್ನು ಬೆಳೆಸಿಕೊಂಡವರೆಲ್ಲ ಹಲವರನ್ನು ನೋಯಿಸಿ,ಹಿಂಸಿಸಿ ಮತ್ತೆ ಜನ್ಮಾಂತರದಲ್ಲಿ ಹೇಳವರಾಗೋ, ಕುಂಟರಾಗೋ ಹುಟ್ಟಿ ಪಾಪದ ಪ್ರಾಯಶ್ಚಿತ್ತ ಜೀವನವನ್ನು ನಡೆಸಬೇಕಾಗಿ ಬರುತ್ತದೆ.

ಹಲವರು ಹೇಳುವುದಿದೆ " ನಾನು ಈ ಜನ್ಮದಲ್ಲಂತೂ ಎಳ್ಳಷ್ಟೂ ತಪ್ಪುಮಾಡಿಲ್ಲ, ಆದರೂ ಅನುಭವಿಸುತ್ತಿರುವ ಕಷ್ಟಮಾತ್ರ ಹೇಳತೀರದು, ಒಮ್ಮೊಮ್ಮೆ ವಿಚಾರಿಸಿದರೆ ದೇವರು ಇರುವುದು ಸುಳ್ಳೇನೋ ಅನಿಸುತ್ತಿದೆ" ಎಂದೆಲ್ಲ. ಅದಕ್ಕೆ ಉತ್ತರ, ದೇವರು ಎಂಬ ಶಕ್ತಿ ನಾವು ಪ್ರತಿ ಘಳಿಗೆ-ಕ್ಷಣಗಳಲ್ಲೂ ಮಾಡುವ ತಪ್ಪು-ಒಪ್ಪುಗಳನ್ನು ಕಲೆಹಾಕಿ ಅಳೆದು-ಸುರಿದು ಮುಂದಿನ ನಮ್ಮ ಜನ್ಮವನ್ನು ನಿರ್ಧರಿಸುತ್ತದೆ. ಹೀಗಾಗಿ ಈ ಜನ್ಮದ ಕೆಲಸದ ಫಲವನ್ನೇ ನಾವು ಉಪಭೋಗಿಸದೇ ಹಿಂದಿನ ಜನ್ಮಾಂತರದ ಕರ್ಮಗಳ ಫಲಗಳನ್ನು ಪಡೆಯುತ್ತಿರುತ್ತೇವೆ-ಅನುಭವಿಸುತ್ತಿರುತ್ತೇವೆ. ಅಂತೆಯೇ ಅಂದುಕೊಂಡ ಹಾಗೆಲ್ಲಾ ನಾವು ಏನೆಲ್ಲಾ ಪಡೆಯಲು, ಏನೆಲ್ಲಾ ಆಗಲು ಆಗುವುದಿಲ್ಲ. ನಾನು ನಾಳೆಯೇ ಹಲವಾರು ಕೋಟಿಗೆ ಒಡೆಯನಾಗಿ ಅನೇಕ ಜನರನ್ನು ಸಹಾಯಕಾರನ್ನಾಗಿ ಇಟ್ಟುಕೊಂಡು ಹಾಯಾಗಿ ಬದುಕಬೇಕು ಎಂಬಂತ ಆಸೆಯಾಗಲೀ, ಛೆ ಆ ಹುಡುಗಿ ನನಗಾಗೇ ಹುಟ್ಟಿಬಂದ ಅಪ್ರತಿಮ ಸುಂದರಿ-ಆಕೆ ನನ್ನನ್ನು ಬಿಟ್ಟು ಬೇರೆ ಯಾರನ್ನೂ ಬಯಸುವುದಿಲ್ಲ ಎಂಬ ಸೌಂದರ್ಯದ ಕುರುಡು ಕಲ್ಪನೆಯಾಗಲೀ, ಈ ಆಸ್ತಿ ನಂಗೇ ದಕ್ಕುತ್ತದೆ ಎಂಬ ವ್ಯಾಮೋಹವಾಗಲೀ ಕೇವಲ ನಮ್ಮ ಬಾಹ್ಯ ಪ್ರಪಂಚದ ವ್ಯಾಪಾರೀ ಚಿಂತನೆಗಳು-ಪ್ರಾಜ್ಞರು,ಜಿಜ್ಞಾಸುಗಳು,ಮುಮುಕ್ಷುಗಳು ಇವುಗಳನ್ನೆಲ್ಲ ’ಬಾಹ್ಯವೃತ್ತಿಗಳು’ ಎಂದಿದ್ದಾರೆ. ಇಂತಹ ಬಾಹ್ಯವೃತ್ತಿಗಳನ್ನು ಅರಿತು ಅವುಗಳನ್ನು ನಮ್ಮ ಹದ್ದುಬಸ್ತಿನಲ್ಲಿಟ್ಟುಕೊಂಡು ಬದುಕೋಣ ಎಂಬುದು ಜಗದಮಿತ್ರನ ಅಪೇಕ್ಷೆಯಾಗಿದೆ.


ವಿಧಿಲಿಖಿತ

ಹುಟ್ಟು ಸಾವುಗಳೆಲ್ಲ ನಮ್ಮ ಕೈಯೊಳಗಿಲ್ಲ
ಪಟ್ಟ ಪದವಿಯ ಬಯಸಿ ಹೊರಟಿಹೆವು ನಾವು
ಕೊಟ್ಟ ಪಾತ್ರವ ಮಾಡು ಪೋಷಿಸುತ ಚೆನ್ನಾಗಿ
ಮೆಟ್ಟಿ ಮಿಥ್ಯದ ಬಯಕೆ | ಜಗದಮಿತ್ರ

ಹೊರಗೆ ಬಣ್ಣದ ಗೋಡೆ ಒಳಗೆ ಮಣ್ಣಿನಗಚ್ಚು
ನರನಾಡಿಗಳ ರೀತಿ ತಂತಿ ತುಂಬಿಹುದು
ನರನ ನಯನವ ನಲಿಸಿ ಬಣ್ಣ ಬಿರುಕನು ಮುಚ್ಚಿ
ಹರನಮರೆಸುವ ತಂತ್ರ | ಜಗದಮಿತ್ರ

ಇರುವನಕ ಬೇಕೆಮಗೆ ಸಂಪತ್ತು ಧನಕನಕ
ಬರುವಾಗ ತರಲಿಲ್ಲ ಹೋಗುವಾಗಿಲ್ಲ
ಮರೆಯದಲೆ ಉಪಕ್ರಮಿಸು ಪರದ ಸತ್ಯವನರಿತು
ಗುರುತನದಿ ಬಾಳುನೀ | ಜಗದಮಿತ್ರ

ಕರ್ಮಬಂಧನದಿಂದ ಬಂಧಿತವು ಈ ಜೀವ
ಮರ್ಮವರಿಯದ ನಮಗೆ ತರುತಿಹುದು ಕಾವ
ಚರ್ಮವ್ಯಾಧಿಯರೀತಿ ಮರುಹುಟ್ಟು ಮತ್ತಂತ್ಯ
ತೀರ್ಮಾನ ಮನಕಿರಲಿ | ಜಗದಮಿತ್ರ

ಹಳೆಯ ಕಟ್ಟಡದಂತೆ ಸೋರುವುದು ಜೀವಜಗ
ಮಳೆಯ ಅಜ್ಞಾನದಾ ನೀರು ಹನಿಸುತಲಿ
ಕೊಳೆಯ ಎಳೆಯುತ ತಂದು ಸೋಕಿಸುತ ಮೈಮನಕೆ
ಮೆಳೆಯ ಮಾಯೆಯ ಮುಸುಕಿ | ಜಗದಮಿತ್ರ

ನನ್ನಮನೆ ನನ್ನಜನ ನಾನು ನನದೇ ಎಂಬ
ಕನ್ನವಿಕ್ಕುವ ಕೆಲಸ ಕಾರ್ಯಗಳು ಬೇಡ
ಮುನ್ನ ನೀ ಅರ್ಥವಿಸಿ ಚೆನ್ನಾಗಿ ಬ್ರಹ್ಮಾಂಡ
ಕನ್ನಯ್ಯನೊಲುಮೆ ಪಡೆ| ಜಗದಮಿತ್ರ

ಮತ್ತೆ ಹುಟ್ಟುವ ಬಯಕೆ ಗಗನದೆತ್ತರದಾಸೆ
ಮತ್ತುಬರಿಸುತ ಆತ್ಮಕಡರುತಿದೆ ಬಳ್ಳಿ
ಕುತ್ತು ಇದ ತಿಳಿದು ನೀ ಪಥ್ಯಜೀವಿತ ನಡೆಸಿ
ಹತ್ತು ಆ ಪರಮಪದ | ಜಗದಮಿತ್ರ

Monday, May 24, 2010

ಆಡಿಸುವಾತ ಬೇಸರ ಮೂಡಿ ಆಟ ನಿಲಿಸಿದ...

ಆಡಿಸುವಾತ ಬೇಸರ ಮೂಡಿ ಆಟ ನಿಲಿಸಿದ...

ಇವತ್ತು ಅನಿವಾರ್ಯವಾಗಿ ಮತ್ತೆ ಇದೇ ಅಂಕಣ ಬರೆಯಬೇಕಾಗಿ ಬಂತು. ನಮ್ಮ ಬಾಂಧವರನೇಕರು ಕರ್ನಾಟಕದ ನೆಲದಲ್ಲೇ ವಿಮಾನ ದುರಂತದಲ್ಲಿ ಮಡಿದರು. ಸುಮಾರು ೧೬೦ ಜನ ಅಸುನೀಗಿದ ಆ ಕ್ಷಣ ವಿಮಾನದಲ್ಲಿದ್ದೂ ಜಿಗಿದು ಜೀವ ಉಳಿಸಿಕೊಂಡು ಬಂದ ಸಾವಿಗೆ ಬಾಗಿಲುಹಾಕಿ ಬದುಕಿಬಂದ ೭-೮ ಮಂದಿಯನ್ನು ವಿಚಾರಿಸಿದರೆ ಮಾತನಾಡಿಸಿದರೆ ವಿಮಾನದ ಒಳಗಿನ ಅಂತಿಮ ಕ್ಷಣದ ಚಿತ್ರವನ್ನು ಹೇಳುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ಕೂಡ ಜೀವಭಯದಿಂದ ಚೀರುತ್ತಿದ್ದುದಾಗಿ ಅವರಲ್ಲಿ ಒಬ್ಬರು ಈಗಾಗಲೇ ಹೇಳಿದ್ದಾರೆ.

ಹಲವಾರು ಬಾರಿ ನಾನು ಹತ್ತಿರದಿಂದ ಮಾಲಿಕೆಯಲ್ಲಿ ಹೇಳುತ್ತಲೇ ಬಂದಿರುವ ಸಾಮಾನ್ಯ ವಿಷಯ ಜಗತ್ತನ್ನೆಲ್ಲ ಯಾವುದೋ ಶಕ್ತಿ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ; ತನ್ನ ಇಚ್ಛೆಯಂತೆ ಅದು ನಿರ್ವಹಿಸುತ್ತದೆ. ಕೆಲವರು ಎಷ್ಟೇ ಅವಿತುಕೊಂಡರೂ ಬಿಡದೇ ಸೆಳೆದಪ್ಪುವ ಸಾವು ಇನ್ನು ಕೆಲವರು ತನ್ನನ್ನು ಕರೆದುಕೋ ಅಂತ ಕೂಗಿ ಕರೆದರೂ ಹತ್ತಿರ ಬರುವುದಿಲ್ಲ! ಕೆಲವರನ್ನು ಕುಂತಲ್ಲಿ ನಿಂತಲ್ಲಿ ಆ ಕ್ಷಣಕ್ಕೇ ಹೃದಯ ಸ್ತಂಭಿಸಿ ಬರಸೆಳೆದರೆ ಇನ್ನು ಕೆಲವರು ನರಳಿ ನರಳಿ ಬದುಕುಳಿವಂತೇ ಮಾಡಿ ಯಾಕಪ್ಪಾ ಈ ಜೀವನ ಎನಿಸುವಷ್ಟು ಅವರಿಗೆ ಪೀಡನೆ ಕೊಡುತ್ತದೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಓದಿದ್ದು ದಕ್ಷಿಣ ಕನ್ನಡದ ವ್ಯಕ್ತಿಯೊಬ್ಬರು ಕೊಂಕಣ ರೈಲ್ವೆ ಸಲುವಾಗಿ ಕೆಲೆಸಮಾಡುತ್ತಿರುವಾಗ ಬೆಟ್ಟದಿಂದ ಉರುಳಿಬಂದ ಕಲ್ಲು ಬೆನ್ನಮೇಲೆ ಬಿದ್ದು ಆ ದಿನದಿಂದ ಅವರು ಮಲಗಿದಲ್ಲೇ ಜೀವಹಿಡಿದು ಅರ್ಧದೇಹಧಾರಿಯಾಗಿ[ ಶರೀರದ ಕೆಳಭಾಗಕ್ಕೆ ಸ್ವಾಸ್ಥ್ಯವಿಲ್ಲ]ಅಮ್ಮನಿಂದ ಸೇವೆ ಮಾಡಿಸ್ಕೊಳ್ಳುತ್ತ ಬದುಕಿರುವುದು. ಯಾಕೆ ಹೀಗೆ ? ಒಂದೋ ಸರಿಯಾಗಿ ಇರಲಿ ಅಥವಾ ಹೋಗಿಬಿಟ್ಟರೆ ಚೆನ್ನ ಎಂದುಕೊಂಡರೆ ಯಾವುದೂ ನಮ್ಮ ಕೈಲಿಲ್ಲ. ನಾವೆಣಿಸಿದ ರೀತಿ ನಡೆಯುವುದೇ ಇಲ್ಲ.

ಈ ಲೋಕದ ವ್ಯವಹಾರವೇ ಹಾಗೆ! ನಾವು ಚಾಲಕರು ಎಂದುಕೊಂಡ ವಾಹನ ನಮ್ಮ ನಿಯಂತ್ರಣ ತಪ್ಪಿ ಇನ್ನೆಲ್ಲೋ ಸಾಗಬಹುದು, ಅಥವಾ ನಾವು ನಮ್ಮ ಕೈತಪ್ಪಿ ಹೊಯಿತೆಂದು ಕೈಚೆಲ್ಲುವಾಗ ಅನಿರೀಕ್ಷಿತ ತಿರುವಿನಿಂದ ನಮ್ಮ ವಾಹನ ನಮ್ಮ ನಿಯಂತ್ರಣಕ್ಕೆ ಮರಳಿ ಸಿಗಬಹುದು. ಎಷ್ಟೋ ಅಪಘಾತಗಳಲ್ಲಿ ಕೆಲವು ಚಿಕ್ಕಮಕ್ಕಳು ಮಾತ್ರ ಬದುಕಿ ಉಳಿಯುತ್ತಾರೆ. ಇತ್ತೀಚೆಗೆ ಬೆಂಗಳೂರಿನ ಹೊರವಲಯದಲ್ಲಿ ನಡೆದ ವಾಹನ ದುರಂತವೊಂದರಲ್ಲಿ ಎಲ್ಲರೂ ಸತ್ತರೂ ಚಿಕ್ಕ ಮಗುವೊಂದು ದೂರ ಎಸೆಯಲ್ಪಟ್ಟು ಏನೂ ಏಟಾಗದೇ ಹಾಗೇ ಬದುಕಿ ಕ್ಷೇಮವಾಗಿತ್ತು!


ಸಮಾಜದಲ್ಲಿ ಎಲ್ಲಾ ಥರದ ವ್ಯವಸ್ಥೆ ಇದ್ದರೂ ಹಾವು ಕಚ್ಚಿದ ನೆಪದಿಂದ ಸಾವು ಬರುವುದು, ನಾಯಿ ಕಚ್ಚಿದ ನೆಪದಿಂದ ಹುಚ್ಚು ಹಿಡಿದು ಸಾಯುವುದು, ಗೊತ್ತಿದ್ದೋ ಗೊತ್ತಿಲ್ಲದೆಯೋ ಮಹಾಕಾಯಿಲೆಗಳಾದ ಟಿ.ಬಿ.,ಕ್ಯಾನ್ಸರ್ ಇತ್ಯಾದಿಗಳು ಜನರನ್ನು ಬಲಿತೆಗೆದುಕೊಳ್ಳುವುದು, ಯಕ್ಕಶ್ಚಿತ ಕಾಯಿಲೆಯಾದ ಕಾಮಾಲೆ ಜೀವಗಳನ್ನೇ ತಿಂದುಹಾಕುವುದು, ಪಾರ್ಕಿನ್ಸನ್, ಪೋಲಿಯೋ ಮುಂತಾದ ಕಾಯಿಲೆಗಳು ಔಷಧಗಳಿದ್ದರೂ ಬರುವುದು, ಕುಂಟರು-ಕುರುಡರು-ಮೂಕರು-ಹೆಳವರು ಅನಿರೀಕ್ಷಿತವಾಗಿ ಜನಿಸುವುದು...ಇವೆಲ್ಲಾ ನೋಡಿದರೆ ಪ್ರತಿಯೊಂದಿ ಜೀವಿಯ ಹುಟ್ಟು-ಸಾವಿನ ಹಿಂದೆ ಒಂದು ದೊಡ್ಡ ಕರ್ಮದ ಜಾಲವೇ ಹೆಣೆಯಲ್ಪಟ್ಟಿದೆ, ಅದು ನಾಟ್ ಅಂಡರ್ಸ್ಟ್ಯಾಂಡೇಬಲ್ ವೆರಿ ಬಿಗ್ ರಿಮೋಟ್ ನೆಟ್ ವರ್ಕ್!

ನಮಗೆ ಇದೇ ನೌಕರಿ ಸಿಗಲಿ, ನಮಗೆ ಇದೇ ವಿದ್ಯೆ ಬರಲಿ, ನಮಗೆ ಬೇಕಾದಷ್ಟು ಹಣ ಸಿಗಲಿ, ನಮಗೆ ರಾಶಿ ರಾಶಿ ಒಡವೆ-ವಸ್ತ್ರ ಸಿಗಲಿ ಎಂಬೆಲ್ಲಾ ನಮ್ಮ ಆಸೆಗಳು ಕೇವಲ ಆಸೆಗಳಾಗಿರಲೂ ಬಹುದು ಅಥವಾ ಆಸೆಗಳು ಕೈಗೂಡಬಹುದು. ಇದನ್ನೆಲ್ಲ ಅರಿತ ನಮ್ಮ ಪೂರ್ವಜರು ತಮ್ಮ ಅನುಭವದಿಂದ ಬರೆದ ಕೆಲವು ಶ್ಲೋಕಗಳನ್ನು ನೋಡಿ-

ಜನನೀಂ ಜನ್ಮಸೌಖ್ಯಾನಾಂ ವರ್ಧಿನೀ ಕುಲಸಂಪದಾಂ |
ಪದವೀಂ ಪೂರ್ವಪುಣ್ಯಾನಾಂ ಲಿಖ್ಯತೇ ಜನ್ಮಪತ್ರಿಕಾ ||

ಈ ಮಾತಿನ ಹರವು ಎಷ್ಟೊಂದು ಗಂಭೀರ ! ಯಾರು ಎಲ್ಲಿ, ಹೇಗೆ, ಯಾವಾಗ, ಯಾವರೀತಿ, ಯಾರಿಗೆ ಮಗುವಾಗಿ ಹುಟ್ಟಬೇಕು, ಏನೆಲ್ಲಾ ಉಪಭೋಗಿಸಬೇಕು, ಏನು ವೃತ್ತಿ ಮಾಡಬೇಕು, ಯಾವರೀತಿ ದುಡಿಮೆ ಆ ವ್ಯಕ್ತಿಗೆ ಸಿಗಬೇಕು, ಆತನ ದುಡಿಮೆಗೆ ಯಾವರೀತಿ ಪ್ರತಿಫಲ ಸಿಗಬೇಕು, ವ್ಯಕ್ತಿಗೆ ಎಲ್ಲಿಯ ಸಂಬಂಧಗಳು ಬೆಳೆಯಬೇಕು, ಯಾವ ಮಟ್ಟಕ್ಕೆ ವ್ಯಕ್ತಿ ಬೆಳೆಯಬೇಕು, ಯಾವ ಕಾಯಿಲೆ ವ್ಯಕ್ತಿಗೆ ಬಾಧಿಸಬೇಕು, ಯಾವ ಅಪಘಾತವನ್ನು ವ್ಯಕ್ತಿ ಎದುರಿಸಬೇಕು/ಎದುರಿಸಬಾರದು, ಯಾವ್ಯಾವ ವ್ಯಕ್ತಿಗಳನ್ನು-ಸಂಬಂಧಿಕರನ್ನು ಯಾವ್ಯಾವಾಗ ಕಳೆದುಕೊಳ್ಳಬೇಕು ಇವೆಲ್ಲಾ ವಿಷಯಗಳು ಪೂರ್ವ ನಿರ್ಧರಿತ, ಇದು ಮೇಲ್ನೋಟಕ್ಕೆ ನಮ್ಮ ಊಹೆಗೆ ನಿಲುಕದ್ದಾದರೂ ವಸ್ತುನಿಷ್ಠ ಸತ್ಯ ಇಂದಿಗೂ ಎಂದಿಗೂ ಎಂದೆದಿಗೂ-ಈ ಲೋಕ ಇರುವಲ್ಲೀವರೆಗೂ!

ಇನ್ನೊಂದು ಮಾತು ನೋಡಿ-
|| ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ||

ಅಂದರೆ ನಮಗೆ ಒಂದು ಸಾಕು ಪಶುವನ್ನು ಇಟ್ಟುಕೊಳ್ಳಲಾಗಲೀ, ಮದುವೆಯಾಗಿ ಒಬ್ಬರಜೊತೆ ಸಂಸಾರ ನಡೆಸಲಾಗಲೀ, ಮಕ್ಕಳನ್ನು ಪಡೆಯಲಾಗಲೀ, ಮನೆಯನ್ನು ಕಟ್ಟಿ ವಾಸಿಸಲಾಗಲೀ ಅದಕ್ಕೆಲ್ಲ ಋಣವೆಂಬುದಿರಬೇಕು. ಋಣದ ಬಂಧನವಿರದಿದ್ದರೆ ಏನೂ ಮಾಡಿದರೂ ಅವುಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವರಿಗೆ ಸುಲಭಸಾಧ್ಯವಾಗುವ ಈ ಕೆಲಸಗಳು ಇನ್ನು ಕೆಲವರಿಗೆ ಕಬ್ಬಿಣದ ಕಡಲೆ ಜಗೆದಂತೆ!ಕೇವಲ ದೈಹಿಕ ಹಿಂಸೆ ಮಾತ್ರ ಹಿಂಸೆಯೇ ?ಜೀವನದಲ್ಲಿ ಸಾಂದರ್ಭಿಕವಾಗಿ ಆರ್ಥಿಕವಾಗಿ ಸಾಲಸೋಲಗಳನ್ನು ಮಾಡಿಕೊಂಡು ಒದ್ದಾಡುವುದು,ತೊಳಲಾಡುವುದೂ ಕೂಡ ನಮ್ಮ ಹಣೆಬರಹವೇ ಆಗಿದೆ. ಎಲ್ಲರಿಗೂ ಜೀವನ ಹೂವಿನ ಹಾಸಿಗೆಯಲ್ಲ, ಆದರೆ ಕೆಲವರಿಗೆ ಜೀವನ ಹೂಬನ ! ಇದಕ್ಕೆ ಏನನ್ನೋಣ ? ಇದಕ್ಕೆಲ್ಲ ಕಾರಣ ನಮ್ಮ ವಿಧಿ ಎಂದು ನಾವು ಹೇಳುತ್ತೇವಲ್ಲ ಆ ವಿಧಿಗೂ ಒಂದು ನಿಯಮವಿದೆ,ನಿರ್ಬಂಧವಿದೆ. ಅದಕ್ಕೆ ಯಾರೂ ಅತೀತರಲ್ಲ. ಹೀಗೆ ವಿಧಿ ತನ್ನ ಡೈರಿಯಲ್ಲಿ ನಮ್ಮ ಸರ್ವಿಸ್ ರೆಕಾರ್ಡ್ ಬರೆಯುವಾಗ ಯಾವ ಲಂಚವನ್ನೂ ಸ್ವೀಕರಿಸುವುದಿಲ್ಲ, ಯಾರ ಮಗ/ಮಗಳು ಎಂಬ ಸ್ಥಾನಮಾನವನ್ನೂ ನೋಡುವುದಿಲ್ಲ. ದೆರ್ ಎವರಿಥಿಂಗ್ ಈಸ್ ಕಾಮನ್ ಆಂಡ್ ಸಿಂಪಲ್,ಕಾಣದ ವಿಧಿ ದೂರದಿಂದ ಪ್ರತ್ಯಕ್ಷವಾಗಿ ನಮ್ಮ ಬಗ್ಗೆ ಏನು ನೋಡಿದೆಯೋ ಅದನ್ನು ಬರೆದುಬಿಡುತ್ತದೆ. ಅದು ಬದಲಾಯಿಸಲಾರದ ಶಾಶ್ವತ ಬ್ಲಾಕ್ ಬಾಕ್ಸ್. ದೆರ್ ಎಂಡ್ಸ್ ದಿ ಮ್ಯಾಟರ್!

ನಾವು ಹಾರುತ್ತೇವೆ-ವಿಮಾನ ಹಾರಿಸುತ್ತೇವೆ, ವಾಹನ ಚಲಾಯಿಸುತ್ತೇವೆ, ವೈದ್ಯರಾಗಿ ಎಲ್ಲಾ ಕಾಯಿಲೆಗಳಿಗೆ ಔಷಧ ಹುಡುಕಿ ೦ಏನನ್ನೋ ಸಾಧಿಸ ಬಯಸುತ್ತೇವೆ, ರಾಜಕಾರಣಿಯಾಗಿ ಇಡೀ ಭೂಮಂಡಲವನ್ನೇ ಆಪೋಶನ ತೆಗೆದುಕೊಳ್ಳುವ ಅತಿಯಾಸೆಗೆ ಬಲಿಯಾಗುತ್ತೇವೆ, ಪರರನ್ನು ಹಿಂಸಿಸಿ ಮೋಜುಮಾಡಿಸುತ್ತೇವೆ, ಇನ್ನೊಬ್ಬರನ್ನು ಕುಣಿಸಿ ನಾವು ಸಂತಸಪಡುತ್ತೇವೆ, ಅಣ್ಣ-ತಮ್ಮಂದಿರಾಗಿದ್ದವರು ದಾಯಾದಿಗಳಾಗಿ ಭೂಮಿ ಪಾಲು ಹಂಚಿಕೊಳ್ಳಲು ಗುದ್ದಾಡುತ್ತೇವೆ, ವಿವಿಧ ಕಾರಣಗಳಿಗೆ ನ್ಯಾಯಬೇಡಿಕೆ ಇಟ್ಟು ನ್ಯಾಯಾಲಯ ನಡೆಸುತ್ತೇವೆ, ನಮ್ಮೊಳಗೇ ಆಳುವವರು, ಶಿಕ್ಷಿಸುವವರು-ಭಕ್ಷಿಸುವವರು-ನಿಂದಿಸುವವರು-ಹೊಗಳು ಭಟ್ಟಂಗಿಗಳು ಎಲ್ಲರನ್ನೂ ಸೃಜಿಸಿಕೊಳ್ಳುತ್ತೇವೆ. ಆದರೆ ನಾವು ನಮಗೆ ಗೊತ್ತಿಲ್ಲದೇ ಯಾವುದನ್ನೋ ಮಾಡುತ್ತಿದ್ದೇವೆ, ಗೊತ್ತಿದೆ ಎಂದು ತಿಳಿದು ಮೂರ್ಖರಾಗಿದ್ದೇವೆ!

ಹಾಗಂತ ಯಾವುದೂ ನಮಗರಿವಿಲ್ಲದಲ್ಲವಲ್ಲ ! ಅರಿವಿಗಿರುತ್ತದೆ ಆದರೆ ಕಾಲ ಮೀರಿಹೋಗಿರುತ್ತದೆ. ಒಮ್ಮೆ ಅಪಘಾತವದಾಗ ಅಯ್ಯೋ ದೇವರೇ ಐದು ನಿಮಿಷ ಮೊದಲೇ ಆಗಿದ್ದರೆ ಏನೂ ಆಗುತ್ತಿರಲಿಲ್ಲವಲ್ಲ-ಹೀಗಾಗಿಬಿಟ್ಟಿತಲ್ಲ, ಮೊದಲೇ ತಿಳಿದಿದ್ದರೆ ’ಸಿ.ಡಿ’ ತಯಾರುಮಾಡುವವರ ಬಲೆಗೆ ಬೀಳುತ್ತಿರಲಿಲ್ಲವಲ್ಲ ಅಂತ ಇತ್ತೀಚೆಗೆ ಕೆಲವು ಮಾಜಿ ಮಂತ್ರಿಗಳೂ ತಮ್ಮೊಳಗೇ ಹಪಹಪಿಸಿದ್ದಾರೆ! ಕಾಲ ಯಾರನ್ನೂ ಯಾವುದನ್ನೂ ಕಾಯುವುದಿಲ್ಲ! ಪರೀಕ್ಷೆ ಬರೆಯಲೇ ಬೇಕು, ಬರೆದಮೇಲೆ ಬರುವ ಫಲಿತಾಂಶ ಅನುಭವಿಸಲೇ ಬೇಕು.ದೇವರೇ ಪರೀಕ್ಷೆ ಮುಂದೆ ಹೋಗಿದ್ದರೆ ಚೆನ್ನಾಗಿತ್ತು ಎಂದು ಹಲವತ್ತುಕೊಳ್ಳುತ್ತೇವೆ ಆದರೆ ಅದು ಎಲ್ಲಾ ಸರ್ತಿ ಸಾಧ್ಯವೇ? ಅಂತೂ ಹೀಹಾಗಬೇಕು-ಹೀಗಾಗಬಾರದು ಎಂಬುದು ಮೊದಲೇ ನಿರ್ಧರಿಸಲ್ಪಟ್ಟಿರುವ ವಿಚಾರ ಎಂದಹಾಗಾಯಿತು.

ಇನ್ನೂ ಒಂದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು, ಕೇವಲ ಹೋಮ,ಪೂಜೆ-ಪುನಸ್ಕಾರಗಳಿಂದ ಅಥವಾ ಪ್ರಾರ್ಥನೆಗಳಿಂದ ನಮ್ಮ ಪೂರ್ವದ ಕರ್ಮಬಂಧನ ಕಡಿದುಹೋಗುವುದಿಲ್ಲ! ಅದು ಕಡಿಯಲು ನಮ್ಮ ಆದರ್ಶಗಳು,ಪರೋಪಕಾರ,ಅಹಿಂಸೆ,ಸಹಾಯ,ತ್ಯಾಗ,ಸೌಜನ್ಯ,ಪರಹಿತ ಇಂತಹ ಅನೇಕ ಸತ್ಕಾರ್ಯಗಳು ಕಾರಣ. ಲೋಹಕ್ಕೆ ನಮ್ಮ ಇನ್ನೊಂದು ಪ್ರತ್ಯಾಮ್ಲೀಯ ಗುಣವಿರುವ ಪದಾರ್ಥವನ್ನು ನಾವು ಉಜ್ಜಿದಾಗ ಕ್ರಮೇಣ ಹೇಗೆ ಹೊಳಪು ಸಿಗುವುದೋ ಹಾಗೇ ಸತತ ಒಳ್ಳೆಯ ಕಾರ್ಯಗಳನ್ನು ಒಳ್ಳೆಯ ಮನಸ್ಸಿನಿಂದ ಮಾಡುತ್ತಾ ಬದುಕಿದರೆ ಜನ್ಮಾಂತರಗಳಲ್ಲಿ ನಮ್ಮ ಕಾಫಿ ಫಿಲ್ಟರ್ ನಂತೇ ಆತ್ಮಕ್ಕೆ ಸೋಸುವ ಸಂಸ್ಕಾರ ಸಿಕ್ಕು ಅದು ಉತ್ತಮ ತರಗತಿಯನ್ನು ಹೊಂದುತ್ತ ನಡೆಯುತ್ತದೆ ಅಲ್ಲದೇ ಕೊನೆಗೊಮ್ಮೆ ಅದು ಪರಮಾತ್ಮನ ಸಾಯುಜ್ಯವನ್ನು ಸೇರಲು ಉಪಕ್ರಮಿಸಿ ಯಶಸ್ವಿಯಾಗುತ್ತದೆ. ಅಲ್ಲಿಯವರೆಗೆ ನಮ್ಮ ಕೊಡುಗೆಗಳಿಗೆಲ್ಲ ’ಇಂಥವರಿಂದ ಇಂಥಾ ಕೊಡುಗೆ’[ಉದಾಹರಣೆ: ಕೊಡೆಗೆ-ಮುದ್ದೇಗೌಡರು ಮತ್ತು ಕುಟುಂಬದವರು] ಎಂದು ಚಿಕ್ಕ ಕೊಡುಗೆಗೂ ನಾಮಫಲಕ ಬರೆಸಿಹಾಕುತ್ತಾರಲ್ಲ ಹಾಗೇ ಅವು ಅರ್ಥಹೀನವಾಗಿ, ಕ್ಷುಲ್ಲಕವಾಗಿ ಕಾಣುತ್ತವೆ.

ದೇವತೆಗಳು ಅವತರಿಸಲೂ ಕೂಡ ಹಲವಾರು ಕಾರಣಗಳಿರುತ್ತವೆ, ಅಂತಹ ದೈವಾಂಶ ಸಂಭೂತರಾದ ಶ್ರೀರಾಮ,ಶ್ರೀಕೃಷ್ಣ ಇವರೆಲ್ಲ ಜನ್ಮದಲ್ಲಿ ಅನೇಕ ತೊಂದರೆಗಳನ್ನು-ಕಷ್ಟಕೋಟಲೆಗಳನ್ನು ಅನುಭವಿಸಿದ್ದಾರೆ ಎನ್ನುವಾಗ ನಾವೆಲ್ಲ ಹುಟ್ಟಲು ನಮ್ಮ ಕರ್ಮಗಳು ನಮ್ಮನ್ನು ಬಾಧಿಸುವುದೇ ಕಾರಣ ಎನ್ನಬಹುದೇನೋ. ಇದನ್ನೆಲ್ಲ ಅರಿತು ನಾವು ಸಮಾಜದಲ್ಲಿ ನಮ್ಮಿಂದ ಅನ್ಯಾಯ,ಅಪಚಾರ,ಬ್ರಷ್ಟಾಚಾರ,ದುರಾಚಾರವೇ ಮುಂತಾದ ಖೂಳವೃತ್ತಿಗಳನ್ನು ದಮನಿಸಿ ಬದುಕೋಣ, ಪರಸ್ಪರ ಪ್ರೀತಿಯಿಂದ-ಜಗದ ಜೀವಿತದ ಗುರಿಯನ್ನು ಅರ್ಥೈಸಿ ಮುಂಬರುವ ಜನ್ಮಗಳಲ್ಲಿ ಒಳ್ಳೆಯ ಹಂತಕ್ಕೆ ತಲುಪೋಣ ಅಲ್ಲವೇ?

Friday, May 21, 2010

ನೋಡೀ ಸಾಹೇಬ್ರೆ ನೋಟಿರೋದೇ ಹೀಗೆ !!

[ಚಿತ್ರ ಕೃಪೆ : ಫೋಟೋ ಸರ್ಚ್ ಡಾಟ್ ಕಾಂ ]

ನೋಡೀ ಸಾಹೇಬ್ರೆ ನೋಟಿರೋದೇ ಹೀಗೆ !!

ಪ್ಯಾಂಟಿನ ಜೇಬಿಗೆ ಕೈಹಾಕಿ ತೆಗೆದರೆ ಅದೆಂತದೋ ಕೆಟ್ಟ ವಾಸನೆ ಹೊಡೆಯುತ್ತಿತ್ತು! ಸಹಿಸಿಕೊಳ್ಳಲು ಆಗದ್ದು! ಒಗೆದು ಇಸ್ತ್ರಿ ಮಾಡಿ ಚೆನ್ನಾಗೇ ಇತ್ತಲ್ಲ ಹೇಗೆ ಬಂತು ಈ ವಾಸನೆ ? ವಾಸನಾ ಮೂಲವನ್ನು ಹುಡುಕುವ ಪ್ರಯತ್ನ ನಡೆಯಿತು. ವಾಸನೆಯ ಜಾಡು ಹಿಡಿದು ದಟ್ಟಕಾಡಲ್ಲಿ ಪ್ರಾಣಿಯನ್ನರಸಿ ಹೊರಟ ರೀತಿಯಲ್ಲಿ ಹೊರಟಾಯಿತು! ಅಲ್ಲಿ ಕೈಲಿ ರಕ್ಷಣೆಗೆ ಬಂದೂಕು ಇರುವಂತೆ ಇಲ್ಲಿ ಒಳ್ಳೆಯ ಸೆಂಟಿನ ಅವಶ್ಯಕತೆಯಿತ್ತು.


ಅಂದಹಾಗೇ ಕೆಲವರಿಗೆ ವಾಸನೆ ಎಂಬುದರ ಕಲ್ಪನೆಯೇ ಇರುವುದಿಲ್ಲ. ಅವರು ಅದರ ಮಧ್ಯದಲ್ಲೇ ಹಾಯಾಗಿರುತ್ತಾರೆ. ಕೆಲವರ ಮನೆಗೆ ನಾವು ಹೋದಾಗ ಅಲ್ಲಿ ಹಳೆಯ ನಾರುವ ಬಟ್ಟೆಯದ್ದೋ, ಕೊಳೆತ ಕಾಲುಚೀಲ[ಸಾಕ್ಸ್]ದ್ದೋ, ತೊಳೆಯದೇ ಬಿಸಕಿದ ಟವೆಲ್ಲಿನದೋ, ಮುಗ್ಗಿದ ಮಲ್ಟಿಪರ್ಪಸ್ ಒರೆಸುವ ಬಟ್ಟೆಯದೋ ಅಂತೂ ವಾಸನಾಲೋಕ ಅರಳಿಕೊಂಡು ನಮ್ಮ ಮೂಗಿಗೆ ತನ್ಮೂಲಕ ಮೈಮನಕ್ಕೆಲ್ಲ ಅಮರಿಕೊಂಡು ಅಲ್ಲಿಂದ ಕಾಲ್ಕಿತ್ತರೆ ಸಾಕೆನ್ನುವಷ್ಟಾಗಿಬಿಡುತ್ತದೆ, ಆದರೆ ಅವರು ಮಾತ್ರ ಎಂದಿನಂತೆ ತಮ್ಮಕಾರ್ಯ ಅದೇ ’ಪರಿಮಳ’ದಲ್ಲಿ ಮುಂದುವರಿಸಿರುತ್ತಾರೆ!

ನೋಡಿ ಸ್ವಾಮೀ, ಇಂದ್ರಿಯಗಳಲ್ಲಿ ಘ್ರಾಣೇಂದ್ರಿಯ ಇದೆಯಲ್ಲ, ಅಲ್ಲಿಂದ ಆಘ್ರಾಣಿಸಲ್ಪಟ್ಟ ವಾಸನೆ ನೇರವಾಗಿ ನಮ್ಮ ಆತ್ಮದವರೆಗೂ ತಲ್ಪುತ್ತದಂತೆ, ಅದಕ್ಕೆಂದೇ ಈರುಳ್ಳಿ ಮತ್ತು ಬೆಳ್ಳುಳ್ಳಿಗಳ ವಾಸನೆ ಕೂಡ ಸಲ್ಲ ಎಂದು ಸನ್ಯಾಸಧರ್ಮ ಹೇಳುತ್ತದೆ. ನಾವು ತಿಂದುಂಡು ತೇಗುವ, ಉಡುವ, ನೋಡುವ, ಮುಟ್ಟುವ,ಹಿಡಿಯುವ,ಅಪ್ಪುವ,ಒಪ್ಪುವ, ಎಲ್ಲಾ ವಸ್ತುಗಳಿಗೆ ಒಂದಿಲ್ಲೊಂದು ವಾಸನೆ ಇದ್ದೇ ಇರುತ್ತದೆಯಲ್ಲವೇ? ಕೆಲವು ಸುವಾಸನೆಯಾದರೆ ಇನ್ನು ಕೆಲವು ದುರ್ವಾಸನೆ. ಈ ವಾಸನೆಗಳ ಲೋಕ ತೆರೆದಿಡುವ ಜಗತ್ತೇ ಅತಿ ವಿಶಿಷ್ಟ! ಏನಿದ್ದರೂ ನಾವನುಭವಿಸುವ ವಸ್ತುಗಳು ಭೌತಿಕವಾಗಿ ನಮ್ಮ ಅನುಭೂತಿಗೆ ಸಿಗುವುದಾದರೆ ಅವುಗಳ ವಾಸನೆಗಳ ಛಾಯೆ ಅತ್ಮಕ್ಕೆ ಅಂಟಿಕೊಳ್ಳುವ ಅಂಶಕ್ಕೆ ಸೇರುತ್ತವಂತೆ! ಹೀಗಗಿ ಸಾವಿಲ್ಲದ ಆತ್ಮ ವಾಸನೆಗಳ ಮೂಲವನ್ನು ಹೊತ್ತುಕೊಂಡೇ ಸಾಗುತ್ತದೆ. ಅದಕ್ಕೇ ಆದಷ್ಟೂ ಸುವಸನಾಭರಿತ ಪದಾರ್ಥವನ್ನು ಬಳಸೋಣ ಎಂದು ಒಂದು ವಾದ!

ವಾಸನೆ ಅಂದ ತಕ್ಷಣ ನೆನಪಾಗುವುದು ಮೂಗು. ಮೂಗಿನ ಮ್ಯಾನುಫ್ಯಾಕ್ಚರಿಂಗ ನಲ್ಲಿ ಹಲವು ವೈವಿಧ್ಯಮೆರೆವ ಭಗವಂತ ಕೆಲವರಿಗೆ ಬಂದೂಕಿನ ನಳಿಗೆಯ ಥರದ ಮೂಗು ಕೊಟ್ಟರೆ ಇನ್ನು ಕೆಲವರಿಗೆ ಸಂಪಿಗೆಯ ಎಸಳಿನ ನಾಸಿಕ, ಮತ್ತೆಕೆಲವರಿಗೆ ಹಂದಿಯ ಮೂತಿಯ ಥರದ್ದಾದರೆ ಇನ್ನೂ ಕೆಲವರಿಗೆ ಬೆಕ್ಕಿನ ಮೂಗಿನ ಹಾಗೇ ಚಪ್ಪಟೆ ಮೂಗು ಕೊಟ್ಟಿರುತ್ತಾನೆ! ಹಾವಿನ ಮುಖದ ಮೂಗು ಕೆಲವರಿಗಾದರೆ ಗೋವಿನಹಾಗೇ ದೊಡ್ಡ ಹೊಳ್ಳೆಯ ಮೂಗು ಕೆಲವರಿಗೆ! ತಾವು ನೈಜೀರಿಯಾ ಮೂಲದವರನ್ನು ನೋಡಿ, ಸಾಕ್ಷಾತ್ ಕಾಡುಕೋಣದ ಹೂಂಕರಿಸುವ ಮೂಗು ಅವರದ್ದು!ಅಪರೂಪದಲ್ಲಿ ಕೆಲವರಿಗೆ [ಶೂರ್ಪನಖಿಯ ನೆನಪು ಸದಾ ಇರಲೆಂದು ಇರಬೇಕು!]ಕತ್ತರಿಸಿದ ಹಾಗಿರುವ ಮೂಗು!ಕೆಲವರಿಗೆ ಕಾಲು ಕೇಜಿ ನಶ್ಯ ತುಂಬಿಡುವಷ್ಟು ದೊಡ್ಡಗಾತ್ರದ ಡಬ್ಬದ ರೀತಿಯ ಮೂಗು!ಕೆಲವರಿಗೆ ಮಣ್ಣಿನಿಂದ ಮಾಡಿದ ವಿಗ್ರಹಗಳಿಗೆ ಲಾಸ್ಟ್ ಮಾಮೆಂಟ್ ನಲ್ಲಿ ಕಲಾವಿದ ಜೋಡಿಸಿದಂತೆ ಬ್ರಹ್ಮ ಜೋಡಿಸಿದ್ದಾನೇನೋ ಅಂತನ್ನಿಸುವಮೂಗು. ಆಮೇಲೆ ಸೊಟ್ಟಮೂಗು, ಉದ್ದಮೂಗು, ಮೊಂಡು ಮೂಗು, ಗಿಣಿ ಮೂಗು, ಗರುಡ ಮೂಗು, ಕಪ್ಪೆ ಒತ್ತಿಟ್ಟ ಹಾಗಿನ ಮೂಗು ಇವೆಲ್ಲ ಮಿಕ್ಕುಳಿದ ಸಾಮಾನ್ಯ ಪ್ರಭೇದಗಳು!ಸದ್ಯಕ್ಕೆ ಆನೆಯ ಮೂಗಿನ ಥರದ ಮೂಗನ್ನು ಮಾತ್ರ ಕೊಟ್ಟಿಲ್ಲವಲ್ಲ ಎಂದುಕೊಳ್ಳಬೇಕು ಏನಂತೀರಾ? ಪುಣ್ಯಾತ್ಮ ದೇವರು ಮೂಗಿನ ಆಕಾರದಂತೆ ಆಘ್ರಾಣ ಶಕ್ತಿಯನ್ನೂ ಪರ್ಸಂಟೇಜ್ ನಲ್ಲಿ ಕರುಣಿಸಿದ್ದಾನೇನೋ ಅನಿಸುತ್ತಿದೆ. ಹೇಳಿದೆನಲ್ಲ-ಕೆಲವರಿಗೆ ವಾಸನೆಗಳಲ್ಲಿ ಭೇದವೇ ಇಲ್ಲ!

ನಶ್ಯಂ ವಶ್ಯಕರಮ್ ವಸ್ತ್ರೆಲ್ಲ ಸಿಂಬ್ಳಾಕರಮ್ --ಅಂತ ಯಾರೋ ಹೇಳಿದಹಾಗಯ್ತು, ಯಾಕೆ ಗೊತ್ತೇ ಈ ನಶ್ಯದವರು ಇರುತ್ತಾರಲ್ಲ ಅವರ ಹಿಂದೆ-ಮುಂದೆ ಇರುವವರು ತುಂಬಾ ಹುಷಾರಾಗಿರಬೇಕು. ತಟಕ್ಕನೆ ಮಿಂಚಿ-ಗುಡುಗಿದಂತೆ ಯಾವಾಗಲಾದರೂ ಅವರು ಆಆಆಆಆಆಅ ಕ್ಷೀಈಈಈಈಈಈಈ ಅಂದುಬಿಡುತ್ತಾರೆ, ಅವರ ಆ ಊಊಊಊಊಊಊದ್ದ ಸೀನಿನೊಟ್ಟಿಗೆ ಹಿಂದೆ-ಮುಂದೆ ಇರುವವರ ಬಟ್ಟೆಯ ’ಸೀನು’ ಬದಲಾಗಿಬಿಡಬಹುದು! ನಶ್ಯವನ್ನು ಉಪಯೋಗಿಸುವ ಯಾರೇ ಪುಣ್ಯಾತ್ಮನನ್ನು ಕೇಳಿ ಆತ ಮೂಗಿರುವುದೇ ಅದಕ್ಕೆ ಅಂದರೆ ಆಶ್ಚರ್ಯವಿಲ್ಲ! ನನಗೆ ಗೊತ್ತಿರುವ ಹಾಗೆ ಸಿಗರೇಟು ಸೇದುವ ಒಬ್ಬ ಮಹಾನುಭಾವ ಅದರ ಕುರಿತು ವ್ಯಾಖ್ಯಾನಿಸುತ್ತ ಸಿಗರೇಟಿನ ಹೊಗೆ ಶರೀರದ ಒಳಗಿರುವ ಕೀಟಾಣುಗಳನ್ನೆಲ್ಲ ಹೊಡೆದೋಡಿಸುತ್ತದೆ ಎನ್ನುತ್ತಿದ್ದ...ಬಹುಶಃ ಮನೆಗಳಲ್ಲಿ ಧೂಪದ ಹೊಗೆ ಹಾಕುತ್ತಾರಲ್ಲ ಹಾಗೇ ಇರಬೇಕು ಏನಂತೀರಿ?!!

ಕೆಲವರ ಮುಖ ಬೆಳಿಗ್ಗೆ ನೋಡಿದರೆ ಕೆಲಸವೇ ಆಗುವುದಿಲ್ಲ ಎಂಬ ಇನ್ನೂ ಕೆಲವರ ಅಂಬೋಣ ಕಾರಣ ನನಗೀಗ ಸಿಕ್ಕಿದೆ! ಆ ನಸೀಬುಗೆಟ್ಟ ಮುಖಗಳವರು ಸರಿಯಾಗಿ ಮುಖಮಾರ್ಜನೆ,ನಿತ್ಯ ನೈಮಿತ್ತಿಕ ಸ್ವಚ್ಛತಾಕೆಲಸಗಳನ್ನು ಮಾಡದೇ ಆಳಸಿಗಳಾಗಿ ಅದೀಗತಾನೇ ಹಾಸಿಗೆಯಿಂದ ಎದ್ದು ಬಂದವರ ಮುಖ ಹೊತ್ತಿರುತ್ತಾರೆ. ಜೀವನದಲ್ಲಿ ಏನಿದೆ ಮಹಾ ಎಂಬ ತತ್ವೋಪದೇಶ ನೀಡುವ ಅಂಥವರು ಅಲ್ಲಿಲ್ಲಿ ಸುತ್ತುತ್ತ ಹಾಗೂ ಹೀಗೂ ಜೀವಿಸುತ್ತಾರೆ! ಅವರು ಮಾಡಿದ್ದೆಲ್ಲ ಸರಿ ಎಂಬ ಧೋರಣೆ ತಳೆದಿರುವ ಅವರಲ್ಲಿ ಮಾಡಿದ್ದನ್ನು ಪ್ರಶ್ನಿಸಲು ಬೇರೆಯವರಿಗೆ ಅವಕಾಶವೇ ಇಲ್ಲ! ಇಂತಹ ಜನ ಎದುರಾಗಿ ಸಿಕ್ಕರೆ ಅವರು ಬೇರೆಯವರ ಮೂಡ್ ಕೆಡಿಸಿಬಿಡುತ್ತಾರೆ! ಮೂಡ್ ಕಳೆದುಕೊಂಡ ಜನ ಅದಕ್ಕೆ ಕಾರಣೀಭೂತರಾದ ’ಭೂತ’ಗಳನ್ನು ಬೈಯ್ಯುವುದರಲ್ಲಿ ತಪ್ಪೇನಿದೆ? ಇನ್ನು ಕೆಲವರು ಐಏಎಸ್,ಡಾಕ್ಟರೇಟ್ ಎಲ್ಲಾ ಮಾಡಿರುತ್ತಾರೆ--ಆದರೆ ಅವರ ಬಟ್ಟೆಬರೆ-ಅವರು ಮನೆಯಲ್ಲಿ-ಹತ್ತಿರದವರೊಡನೆ ನಡೆದುಕೊಳ್ಳುವ ರೀತಿಗೆ ಮಾತ್ರ ಮತ್ತೆ ಅವರಿಗೆ ಈ ವಿಷಯಗಳಲ್ಲಿ ಐಏಎಸ್,ಡಾಕ್ಟರೇಟ್ ಮಾಡಿಸಬೇಕಾಗುತ್ತದೆ!

ಬಹುಶಃ ಈ ವಾಸನಾ ಗ್ರಹಿಕೆ ಎಂಬುದಿದೆಯಲ್ಲ ಅದು ರ್‍ಊಟ್ ಕಲ್ಚರ್ ಅಂದರೆ ತಪ್ಪಲ್ಲವೇನೋ! ಮೂಲ ಸಂಸ್ಕಾರವಿಲ್ಲದಿದ್ದರೆ ವಾಸನೆಗಳೆಲ್ಲ ಅರ್ಥಹೀನವೇನೋ! ಪಟ್ಟಣಗಳಲ್ಲಿ ತಿಪ್ಪೆ ಎತ್ತುವ ಗಾಡಿಗಳಲ್ಲಿ ಕೆಲಸಗಾರರು ಹಾಯಾಗಿ ಹಾಡುಹೇಳಿಕೊಂಡು ಹೋಗುತ್ತಿರುವುದಿಲ್ಲವೇ ? ಮೀನು-ಕೋಳಿ-ಮಟನ್ ಮಾರುವ ಜನರಿಗೆ ಮೂಗಿಲ್ಲವೇ? ಕೆಲವು ಮೀನು ಸಾಗಾಣಿಕೆಯ ಲಾರಿಗಳನ್ನು ನೆನೆಸಿಕೊಂಡರೆ ದಿನವಿಡೀ ವಾಂತಿ ಫ಼್ರೀ! ಒಮ್ಮೆ ಹೀಗಾಯ್ತು- ಮೀನುಮರುವ ಹೆಂಗಸರು ಪೇಟೆಯಿಂದ ಅವರ ಹಳ್ಳಿಗೆ ರಾತ್ರಿ ವಾಪಸ್ಸಾಗಬೇಕಾಗಿತ್ತು ಆದರೆ ಆಅ ದಿನದ ಕೊನೆಯ ಬಸ್ ಆಗಲೇ ಹೋಗಿಬಿಟ್ಟಿದ್ದರಿಂದ ಅವರು ಶಹರದ ಬಸ್ ಶೆಲ್ಟರ್ನಲ್ಲೇ ರಾತ್ರಿ ಮಲಗುವ ಪ್ರಮೇಯ ಬಂತು. ಅಲ್ಲಿ ಮಲ್ಲಿಗೆ ಮಾರುವ ಹೆಂಗಸರು ಹಗಲು ಹೊತ್ತು ಮಲ್ಲಿಗೆ ಮಾರಿದ್ದರಿಂದ ಅಲ್ಲಲ್ಲಿ ಮಲ್ಲಿಗೆಯ ಪಕಳೆಗಳು ಬಿದ್ದಿದ್ದು ಮಲ್ಲಿಗೆಯ ಪರಿಮಳ ಘಮ್ಮೆಂದು ಒಸರುತ್ತಿತ್ತು. ಮೀನುಗಾರ್ತಿಯರಿಗೆ ಬಹಳ ಹೊತ್ತು ನಿದ್ದೆಯೇ ಬರಲಿಲ್ಲವಂತೆ! ಕಾರಣ ಇಷ್ಟೇ ಮಲ್ಲಿಗೆಯ ಕೆಟ್ಟ ವಾಸನೆ ಅವರ ಮೂಗಿಗೆ ಸೋಕುತ್ತಲೇ ಇತ್ತು! "ಅಕ್ಕಾ ನಂಗೆ ನಿದ್ದೆನೇ ಬಂದಿಲ್ಲ ಕಣೇ, ಆ ಮಲ್ಗೇ ವಾಸ್ನೆ ಐತಲ್ಲಾ ಹಾಳಾದ್ದು, ಏನ್ಮಾಡೂದು ಇವಾಗ?" ಅಂತ ಒಬ್ಬಾಕೆ ಇನ್ನೊಬ್ಬಳಿಗೆ ಕೇಳಿ ಅವರಲ್ಲೇ ಪ್ಲಾನು ಹೊಳೆದು ಮೀನುಹಾಕಿದ ಬುಟ್ಟಿಯನ್ನು ಮುಖಕ್ಕೆ ಮುಚ್ಚಿಕೊಂಡು ಮಲಗಿದಮೇಲೆ ಜಗತ್ತಿಗೇ ನಿದ್ದೆ ಆವರಿಸಿದಂತೇ ಏನು ನಿದ್ದೆ ಅಂತೀರಿ! ಅಂತೂ ವಾಸನೆಗಳನ್ನು ಅಘ್ರಾಣಿಸಲು ಕೊಟ್ಟ ಯಂತ್ರದ ಮಹಿಮೆ ಅಪಾರ!

ಛೆ ಛೆ... ನಾನು ಎಲ್ಲೋ ಬಂದುಬಿಟ್ಟೆನಲ್ಲಾ... ಅಂದಹಾಗೇ ಅಂತೂ ತೊಳೆದು ಉಟ್ಟ ಪ್ಯಾಂಟಿನ ಜೇಬಿನ ವಾಸನೆಗೆ ಮೂಲ ಅದರಲ್ಲಿ ಹಾಕಿದ್ದ ಹರಕಲು ನೋಟು!

ನೋಟು ಹಳೆಯದಾದರೇನು ನೋಟ ನವನವೀನ!
ಮನದ ಭಾವ ಕೆರಳುವುದಕೆ ವಾಸನೆಗಳು ಜಾಣಾ !


ಅಯ್ಯಯ್ಯೋ ನೋಟು ಎಂದರಾಗಲಿಲ್ಲ, ಅದರ ಆತ್ಮಕಥೆಯೇ ಬೇರೆ! ಅದನ್ನು ಇನ್ನೊಮ್ಮೆ ಇಟ್ಟುಕೊಳ್ಳೋಣ! ಐದು ರೂಪಾಯಿಯಿಂದ ಹಿಡಿದು ಸಾವಿರ ರೂಪಾಯಿಗಳ ೭-೮ ನಮೂನೆಯ ನೋಟುಗಳಿವೆ ಅಲ್ಲವೇ? ಆದರೆ ನಮ್ಮಲ್ಲಿ ಏಳೆಂಟು ನೂರು ವಿಧದ ನೋಟುಗಳಿವೆ! ಒಂದೇ ದೇಶ, ಒಂದೇ ಕಾಯಿದೆ ಅದು ಹೇಗೆ ಅಂತೀರಾ ಹಾಗಾದ್ರೆ ನಿಧಾನವಾಗಿ ನೆನಪುಮಾಡಿಕೊಳ್ಳಿ. ಮೊನ್ನೆ ನೀವು ಬಸ್ಸಿನಲ್ಲಿ ಬರುವಾಗ ಕಂಡಕ್ಟರ್ ಗೆ ಐನೂರರ ನೋಟು ಕೊಟ್ಟು ಆತ ಬೆರಳಿಗೆ ಎಂಜಲನ್ನು ತಾಗಿಸಿಕೊಂಡು ಚಪ ಚಪ ಚಪನೆ ಎಣಿಸಿದ ಚಿಲ್ಲರೆ ಪಡೆದದ್ದರಲ್ಲೇ ಹಲವು ಥರದ ನೋಟುಗಳಿವೆ! ಒಂದೊಂದ ಮಹಾತ್ಮೆಯೇ ಒಂದೊಂದು ಥರ! ಒಂದು ಎಣ್ಣೆಯ ಅಭ್ಯಂಜನ ಮಾಡಿದ್ದು, ಇನ್ನೊಂದು ಮಳೆಯಲ್ಲಿ ನೆನೆದ ಹಂದಿಯಹಾಗೆ ಆಗಿದ್ದು, ಮತ್ತೊಂದು ಕುಂಕುಮ ಅಂಟಿಸಿಕೊಂಡ ಸುಮಂಗಲೆ, ಇನ್ನೊಂದು ಅರಿಶಿನದಲ್ಲಿ ಅದ್ದಿದ್ದು, ಹಾಗೇ ಮತ್ತೊಂದು ಮೇಲಿಂದ ನೀಲಿ ಇಂಕು ಪೇರಿಸಿಕೊಂಡಿದ್ದು, ಮತ್ತೊಂದು ಕಪ್ಪು ಕಲೆಯನ್ನು ಹಚ್ಚಿದ್ದು, ಇನ್ನೂ ಒಂದು ಹೆಸರು ಬರೆಸಿಕೊಂಡಿದ್ದು,ಮಗುದೊಂದು ಹಾಲು ಕುಡಿದಿದ್ದು,ಮತ್ತಾಮಗುದೊಂದು ಗಡ್ಡದ ಕ್ರೀಮ್ ನ್ನು ಹಚ್ಚಿಸಿ ಗಡ್ಡಮಾಡಿಸಿಕೊಂಡಿದ್ದು, ಕೊನೆಯದಾಗಿ ಪಾನೀಪೂರಿಯವನ ಕೈಲಿ ಪಾನೀ ಕುಡಿದಿದ್ದು,ಮಸಾಲ ಪೂರಿ ತಿಂದಿದ್ದು---ಇವೆಲ್ಲಾ ವೈವಿಧ್ಯಗಳು! ಮೌಲ್ಯ ಏನೇ ಇದ್ದರೂ ಭಾರತೀಯತೆ ಮೆರೆಯುತ್ತೇವೆ --ವಿವಿಧತೆಯಲ್ಲಿ ಏಕತೆ, ಏಕದರಲ್ಲಿ ಅನೇಕತೆ!

ಮಡಚಿದ್ದು, ನಾಲ್ಕು ಭಾಗಮಾಡಿ ಪ್ಲಸ್ ಪ್ಲಾಸ್ಟರ್ ಹಾಕಿದ್ದು, ಜಗತ್ತಿಗೇ ದುರ್ಬೀನು ಹಿಡಿವಂತೆ ತೂತಾಗಿರುವುದು, ಅನೇಕಬಾರಿ ಪಿನ್ನುಮಾಡಿಸಿಕೊಂಡು ಮಸಾಲೆ ದೋಸೆಯಂತೆ ತೂತಾಗಿದ್ದು, ಅಸಲಿಗೆ ಗುರುತಿನ ಸಂಖ್ಯೆಯೇ ಬೇರೆಯಾಗಿದ್ದು, ನೀರಿಲ್ಲದೇ ಬಿಸಿಲಲ್ಲಿ ಒಣಗಿ ಒಡೆದ ಗದ್ದೆಯ ಮೇಲ್ಮೈಥರದ್ದು, ಮಣ್ಣಲ್ಲೇ ಹುಟ್ಟಿ ಮಣ್ಣಲ್ಲೇ ಸಾಯ್ವ ತತ್ವ ಓದಿದ್ದು--ಹೀಗೆ ಇವೆಲ್ಲ ಇತರ ಪ್ರಭೇದಗಳು! ಇಲ್ಲೂ ಅದೇ ವಿವಿಧತೆಯಲ್ಲಿ ಏಕತೆ!

ಹೀಗೇ ಇಂತಹ ಯವುದೋ ಮೂಲದಿಂದ ಬಂದ ನೋಟೊಂದು ಒಂದೆರಡು ನೋಟುಗಳ ಮಧ್ಯೆ ಕೆಲಕಾಲ ಬಂದು ನನ್ನ ಪ್ಯಾಂಟಿನ ಜೇಬಿನಲ್ಲಿ ವಾಸ್ತವ್ಯ ಹೂಡಿತ್ತು! ಅದು ಹಾಗೇ ಕೆಲನಿಮಿಷಗಳಲ್ಲೇ ಮತ್ಯಾರದೋ ಕೈಗೆ ಸರಿದು ಹೋಗಿತ್ತು! ಆದರೆ ಅದರ ಬಂದು ಹೋಗುವ ನಡುವೆ ತನ್ನ ’ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ಎಂಬ ನಿಜದ ಅರಿವನ್ನು ಮೂಡಿಸಿಯೇ ಹೋಗಿತ್ತು!ಇದ್ದರೆ ಇರಬೇಕು ವಾಸನೆಯ ನೋಟಿನ ರೀತಿ ಎಂದು ನೆನಪಿಸಿಕೊಳ್ಳಲೋ ಎಂಬಂತೆ ಅದರ ವಾಸನಾಬಲ ನನ್ನ ಮೂಗನ್ನಡರಿ ನನ್ನ ಜಂಘಾಬಲವನ್ನೇ ನುಂಗಿಹಾಕಿತ್ತು! ಹೊರಗಿನಿಂದ ಯಾರದೋ ಕೈಲಿರುವ ಆ ನೋಟು ಸಿನಿಮಾ ಹಾಡೊಂದನ್ನು ಹಾಡಿದ ಹಾಗೇ ಅನಿಸುತ್ತಿತ್ತು.....ಜನ್ಮ ಜನ್ಮದಾ ಅನುಬಂಧ.. ನೋಟು ಜೇಬುಗಳ ಪ್ರೇಮಾನುಬಂಧ!

Thursday, May 20, 2010

ಗ್ರಾಮಾನಂದ ಲಹರೀ


ಇಂದಿನ ನವ ಪೀಳಿಗೆಗೆ ಹಿಂದಿನ ಗ್ರಾಮೀಣ ಬದುಕು-ಪರಿಸರ ಕೇವಲ ನೆನಪು ಮಾತ್ರ. ಅಂದಿನ ಜೀವನದ ಮಜಾ ಇಂದಿಲ್ಲ. ಇಂದು ಕೇವಲ ನಮ್ಮದು ಆತುರದ ಬದುಕು. ಅಂದು ಅದು ವಿಭಿನ್ನವಾಗಿ ಪ್ರತೀ ಕ್ಷಣವನ್ನು ರುಚಿರುಚಿಯಾಗಿ ಅನುಭವಿಸುವ, ಹಂಚಿಕೊಳ್ಳುವ ಬದುಕಾಗಿತ್ತು. ಇವತ್ತು ನೀವು ಊರಿಗೆ ಹೋದರೆ ನೆರೆಯಾತ ಎಲ್ಲೋ ಹೊರಟುನಿಂತಾಗ ನೀವು ನಿಮ್ಮ ಬಾಲ್ಯದ ಪ್ರವೃತ್ತಿಯಂತೆ " ಎಲ್ಲಿಗಪ್ಪ ಹೊರಟುಬಿಟ್ಟೆ ? " ಅಂತ ಕೇಳಿದರೆ ಆತ " ಇಲ್ಲೇ ಪೇಟೆಗೆ, ಸ್ವಲ್ಪ ಕೆಲ್ಸ ಇತ್ತು ಅದಕ್ಕೇ..." ಎನ್ನುತ್ತಾನೆ. ಯಾವ ಕೆಲ್ಸ, ಎಲ್ಲಿ ಅದೆಲ್ಲ ಹಂಚಿಕೊಳ್ಳಲಾರದ ವಿಷಯವಸ್ತು ಈಗ. ಅದೇ ಹದಿನೈದಿಪ್ಪತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಗಳಲ್ಲಿ ಹೀಗಿರಲಿಲ್ಲ. ಹಳ್ಳಿಯಲ್ಲಿ ಅಕ್ಕಪಕ್ಕ ಯಾರಾದರೂ ಪೇಟೆಗೆ ಹೊರಟರೆ ನೆರೆ-ಕೆರೆಯ ಮನೆಗಳಿಗೆ ಏನಾದರೂ ತರುವುದಿದೆಯೇ ಎಂದು ಕೇಳಿಕೊಂಡು ಅದನ್ನು ಹೋಗಿ ಬರುವಾಗ ತಂದುಕೊಡುತ್ತಿದ್ದರು. ಈಗ ಕೇವಲ ಒಂದು ದಿನಪತ್ರಿಕೆ ತರಲು ಪ್ರತೀ ಮನೆಯಾತನೂ ತಾನೇ ಪೇಟೆಗೆ ಹೋಗಿಬರುತ್ತಾನೆ. ಕೇಳಿದರೆ ಅದೇ ಮೇಲಿನ ರೀತಿ ಉತ್ತರ. ["ಒಂದು ಸ್ವಲ್ಪ ಕೆಲ್ಸ ಇತ್ತು"]. ಈಗಂತೂ ರಾಜಕೀಯದವರ ಪಂಚಾಯತ ಚುನಾವಣೆ ಗಾಳಕ್ಕೆ ಸಿಲುಕಿ ಗ್ರಾಮೀಣ ಜನರಲ್ಲೂ ಹಿಂದಿದ್ದ ಪ್ರೀತಿ-ವಿಶ್ವಾಸ-ಆತ್ಮೀಯತೆಗಳು ಕೇವಲ ಪುಸ್ತಕದ ಶಬ್ಢವಾಗುತ್ತಿವೆ;ಕೋಶಸೇರುತ್ತಿವೆ! ಮಾಧ್ಯಮದಲ್ಲಿ ಯಾರೋ ಪರಿಚಯದವರ ಮುಖ ಕಂಡರೆ " ಓ ಅವ್ನಾ ಅದು ಹ್ಯಾಗೆ ಟಿ.ವಿಯಲ್ಲಿ ಬಂದ ಮಾರಾಯ " ಎಂದುಕೊಳ್ಳುತ್ತ ಕೈ ಕೈ ಹೊಸಕಿಕೊಂಡು ಹೊಟ್ಟೆಕಿಚ್ಚುಪಟ್ಟು ತಾನೂ ಹೇಗಾದರೂ ಸತ್ತ ಹೆಗ್ಗಣವನ್ನಾದರೂ ಪೂಜಿಸಿ ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಬಯಸುವ ಕೆಟ್ಟಚಾಳಿಗೆ ಇಳಿಯುತ್ತಿದ್ದಾರೆ!ಇರಲಿ.

ಹಿಂದೆ ನಮ್ಮ ಗ್ರಾಮೀಣ ಬದುಕು ಸಾಂಪ್ರದಾಯಕ ಕಲೆಗಳಿಂದ,ಗ್ರಾಮೀಣ ಕ್ರೀಡೆಗಳಿಂದ, ಗ್ರಾಮೀಣ ಜಾತ್ರೆ-ಹಬ್ಬ-ಹರಿದಿನಗಳಗಳ ಸಹಬಾಳ್ವೆಯಿಂದ, ಗ್ರಾಮೀಣ ತಿಂಡಿ-ತೀರ್ಥ-ಹಣ್ಣು-ಹಂಪಲುಗಳಿಂದ ತುಂಬಿ ಬಹಳ ಹುಲುಸಾಗಿತ್ತು. ತರಾವರಿ ಹಣ್ಣುಗಳು, ಸ್ಪರ್ಧೆಗಳು, ಪೂಜೆಗಳು, ನಾಟಕ-ಜಾತ್ರೆಗಳು, ಪೇಟೆಯಿಂದ ಬಂದ ನಾನಾತರದ ಅಪರೂಪದ ದಿನಬಳಕೆ ವಸ್ತುಗಳು, ಮಣ್ಣಿನಲ್ಲಿ ಅರಳಿದ ಮಡಿಕೆ-ಕುಡಿಕೆ-ಹಣತೆ-ತಾಟು-ಬೋಗುಣಿ ಮುಂತಾದ ಸಾಮಾನುಗಳು ಇರುತ್ತಿದ್ದವು. ಮಂಗಳವನ್ನು ಮನೆಗೆ ಕರೆಯಲು ಬಳೆಗಾರ,ಚಿನಿವಾರ,ದರ್ಜಿ,ಪಡಸಾಲಿ ಮುಂತಾದ ಹಲವಾರು ಹಳ್ಳಿಮಾರಾಟಗಾರರು ಬರುತ್ತಿದ್ದರು. ಇಂದಿಗೆ ಅದು ಕಥೆ. ಮಕ್ಕಳು ರಜದಲ್ಲಿ ಊರೆಲ್ಲ ಅಲೆಯುತ್ತ, ಮರಕೋತಿ, ಕುಂಟೆಬಿಲ್ಲೆ, ಕಣ್ಣಾಮುಚ್ಚಾಲೆ, ಚಿನ್ನಿದಾಂಡು, ಚೆನ್ನೆಮಣೆ, ಕಬಡ್ಡಿ[ಸುರಗುದ್ದು] ಮುಂತಾದ ಅನೇಕ ಆಟಗಳನ್ನು ಆಡುತ್ತ, ಹಣ್ಣಿನ ಮರಗಳಿಗೆ ಕಲ್ಲು ಎಸೆಯುತ್ತ ಕುಣಿದು,ನಲಿದು ಕುಪ್ಪಳಿಸುತ್ತಿದ್ದರು. ಮುದುಕರು ಪರಸ್ಪರರ ಮನೆಗಳಲ್ಲೋ ಅಥವಾ ದೇವಸ್ಥಾನಗಳ ಹತ್ತಿರದ ಕಟ್ಟೆಗಳಮೇಲೋ ಕುಳಿತು ತಮ್ಮ ಬಾಲ್ಯವನ್ನು ನೆನೆಸಿ ನಗುತ್ತಿದ್ದರು. ಹೆಂಗಳೆಯರು ಜಾತ್ರೆ,ನೆಂಟರಮನೆ ಇತ್ಯಾದಿ ತಿರುಗುತ್ತ ತಮಗೆ ಅಪರೂಪವೆನಿಸುವ ಬಳಕೆಯ ವಸ್ತುಗಳನ್ನು ಖರೀದಿಸುತ್ತಿದ್ದರು. ಇಂದಿಗೆ ಅದು ಕೇವಲ ಕಥೆ ಅಂದರೆ ತಪ್ಪಾಗಲಾರದಲ್ಲ? ಅಲ್ಲಿ ಬಡವ-ಶ್ರೀಮಂತ ಎಂಬ ಭೇದ ಬಹಳವಾಗಿ ಇರಲಿಲ್ಲ. ಯರೋ ಒಂದಿಬ್ಬರು ಮುಖಂಡರನ್ನು ಬಿಟ್ಟರೆ ಮಿಕ್ಕವರೆಲ್ಲ ಒಂದೇ ಸ್ತರದಲ್ಲಿ ಇರುತ್ತಿದ್ದರು. ಬದುಕು ಯಾಂತ್ರಿಕವಾಗಿರಲಿಲ್ಲ;ನಿಸ್ತೇಜವಾಗಿರಲಿಲ್ಲ. ಅಲ್ಲಿ ಕೊಳ್ಳುಬಾಕ ಸಂಕೃತಿಯಿರಲಿಲ್ಲ. ನಾಮುಂದು ತಾಮುಂದು ಎಂಬ ಪೈಪೋಟಿ, ನಾಮೇಲೆ ತಾಮೇಲೆ ಎಂಬ ಅಹಂ ಯಾವುದೂ ಇರಲಿಲ್ಲ. ನಿತ್ಯ ಬೆಳಗಾದರೆ ಕಾಣುವ ಹಿತ್ತಗಿಡಗಳೇ ಮದ್ದಾಗಿ ಇರುವ ಅಲ್ಪರೋಗಗಳನ್ನು ವಾಸಿಮಾಡುತ್ತಿದ್ದವು! ಜನಸಾಮಾನ್ಯರಿಗೆಲ್ಲ ಮಧುಮೇಹ,ಹೃದ್ರೋಗ ಇತ್ಯಾದಿ ಶ್ರೀಮಂತರ ಕಾಯಿಲೆಗಳು ಬರುತ್ತಿರಲಿಲ್ಲ. ಇಂದಿಗೆ ಅದೊಂದು ಮುಗಿದುಹೋದ ಅಪ್ಪಟ ಗ್ರಾಮೀಣ ಸೊಗಡಿನ ಅಧ್ಯಾಯ! ಆ ಅಧ್ಯಾಯದ ನೆನೆಕೆಯಲ್ಲಿ ಹುಟ್ಟಿದ ಕೂಸುಮರಿ ಈ ಹಾಡು --


ಗ್ರಾಮಾನಂದ ಲಹರೀ

ಬಲು ಸೊಗಸು ಆ ಹಲಸು ಹಸಿರು-ಕೆಂಪಿನ ಮಾವು
ಒಲವನಿಕ್ಕುವ ಜನರ ನಡುವೆ ಕೂಗುವ ಗೋವು
ಬಲವನರಿಯಲು ಕ್ರೀಡೆ ಗಂಭೀರ ತುಸು ನೋವು
ಮುಲುಗುತಿದೆ ಮನ ನೆನೆದು ಗ್ರಾಮೀಣದೊಳಹರಿವು

ಬೀಸುತಿಹ ತಂಗಾಳಿ ತಂಪಡರಿ ಮೈಮನದಿ
ರಾಶಿ ವ್ಯಸನಂಗಳನು ಬೆದಕಿ ತೆಗೆದೂ
ನಾಸಿಕಕೆ ಹಬ್ಬಿ ಮುದವಾವರಿಸಿ ಪರಿಮಳದಿ
ಈ ಸೊಬಗ ಬಣ್ಣಿಸಲು ಮುಸುಕು ಕವಿದೂ

ಅತ್ತಿತ್ತ ಸುಳಿಯುತಿಹ ಜನರ ಗುಂಪುಗಳೆಲ್ಲ
ಇತ್ತತ್ತ ಬಂದು ಭೂರಮೆಯೊಸಗೆ ಪಡೆದೂ
ಕತ್ತೆತ್ತಿ ಎಲ್ಲಿ ನೋಡಿದರಲ್ಲಿ ಫಲಪುಷ್ಪ
ಹತ್ತುತ್ತ ಮರಗಿಡಗಳಾ ಜಾಡು ಹಿಡಿದೂ

ಶಾಲೆಮಕ್ಕಳು ರಜದಿ ಆಟವಾಡುತಲಲ್ಲಿ
ಕಾಲವರಿಯದೇ ದಿನಗಳವು ಭರದಿ ಕಳೆದೂ
ಕೋಲು ಬಡಿಗೆಯ ಹಿಡಿದು ಹಾರಿ ಕಲ್ಲನು ತೂರಿ
ಬೇಲ ಹಲಸೂ ಮಾವು ಕೆಡಗುತಲಿ ಕುಣಿದೂ

ಮುಪ್ಪಿನಾ ಜನರೆಲ್ಲ ಕಲೆಯುತ್ತ ಬಯಲಲ್ಲಿ
ನೆಪ್ಪು ಕರೆಯುತ ಮನದಿ ಅವರ ಹರೆಯ
ಒಪ್ಪಿನಲಿ ನಕ್ಕರದೋ ತುಂಟಾಟ ಹಂಬಲಿಸಿ
ತಪ್ಪಿಹೋಯಿತು ಇನ್ನು ಬಹದೇ ಪ್ರಾಯ ?

ಸಡಗರದ ನಾರಿಯರು ಹಡಗಿನೋಪಾದಿಯಲಿ
ಹುಡುಗುಮಕ್ಕಳ ನಡೆಸಿ ಜಾತ್ರೆಯಲಿ ನಡೆದೂ
ನಡುರಾತ್ರಿ ಜಾವದಾವರೆಗಿರ್ಪ ಜಾತ್ರೆಯಲಿ
ಕಡೆದು ಕೊರಸುತ ದರಕೆ ವಸ್ತುಗಳ ಪಡೆದೂ

Wednesday, May 19, 2010

ಮಡಿ-ಸ್ವಚ್ಛತೆ ಮತ್ತು ಸುಗಂಧ ದ್ರವ್ಯಗಳು !!


ಮಡಿ-ಸ್ವಚ್ಛತೆ ಮತ್ತು ಸುಗಂಧ ದ್ರವ್ಯಗಳು


ಮಡಿ ಎಂದರೆ ಸ್ವಚ್ಛತೆ ಅಥವಾ ಸ್ವಚ್ಛತೆಯೇ ಮಡಿ ಎನ್ನಬಹುದು. ನಮ್ಮ ಪೂರ್ವಜರು ಕೊಳೆಯಿಂದ, ಗಲೀಜಿನಿಂದ, ಮಲದಿಂದ, ಅಸ್ವಚ್ಛತೆಯಿಂದ ಹರಡಬಹುದಾದ ಅನೇಕ ಸಾಂಕ್ರಾಮಿಕ,ಅಸಾಂಕ್ರಾಮಿಕ ಕಾಯಿಲೆಗಳನ್ನು ದೂರವಿಡಲು ’ಮಡಿ’ಯನ್ನು ಹುಟ್ಟುಹಾಕಿದರು.

ಮನುಷ್ಯನ ಕಣ್ಣು,ಮೂಗು,ಕಿವಿ,ಬಾಯಿ ಮತ್ತು ಚರ್ಮ ಎಂಬ ಪಂಚೇಂದ್ರಿಯಗಳು ಮತ್ತದೇ ಕಣ್ಣು, ಮೂಗು,ಕಿವಿ,ಬಾಯಿ,ಚರ್ಮ, ಗುದದ್ವಾರ, ಮೂತ್ರದ್ವಾರ,ಗುಹ್ಯದ್ವಾರ,ಉಗುರುಗಳ ಸಂದಿ ಹೀಗೇ ನವದ್ವಾರಗಳ ಮೂಲಕ ಶರೀರದ ಒಳಗಿನ ಕಲ್ಮಷಗಳನ್ನು ಹೊರಹಾಕುತ್ತಿರುತ್ತವೆ-ಇದು ಸಹಜ ಪ್ರಕ್ರಿಯೆ. ಈ ಶರೀರ ತ್ಯಾಜ್ಯಗಳು ಅನುಪಯುಕ್ತ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತವೆಯಲ್ಲದೇ ಹೊರಬಂದ ನಂತರ ಪ್ರಕೃತಿಯಲ್ಲಿರುವ, ವಾಯುವಿನಲ್ಲಿರುವ ಇನ್ನಿತರ ಬ್ಯಾಕ್ಟೀರಿಯಾಗಳೊಡನೆ ಸೇರಿ ಅಸಹ್ಯಕರ ವಾಸನೆಯನ್ನು ಸೃಜಿಸುತ್ತವೆ.

ಅದರಲ್ಲಂತೂ ನಾವು ತಿನ್ನುವ ಆಹಾರಗಳ ಮೇಲೆ ಅವಲಂಬಿಸಿ ನಮ್ಮ ಶರೀರದ ನೈರ್ಮಲ್ಯಗ್ರಂಥಿಗಳು ವಿವಿಧ ವಾಸನೆಯ ತ್ಯಾಜ್ಯಗಳನ್ನು ಹೊರದಬ್ಬುತ್ತವೆ. ಉದಾಹರಣೆಗೆ ನಾವು ಹಲಸಿನ ಹಣ್ಣು ತಿಂದಿದ್ದರೆ ಮಾರನೇ ದಿನ ಹಲಸಿನ ಹಣ್ಣಿನ ದುರ್ಬಲಗೊಂಡ ವಾಸನೆಯನ್ನು ನಮ್ಮ ಮಲದ ರೂಪದಲ್ಲಿ ಕಾಣಬಹುದು, ಬೆಳ್ಳುಳ್ಳಿ ತಿಂದವರ ಮಲ ಸ್ವಲ್ಪ ಬೆಳ್ಳುಳ್ಳಿಯ ವಾಸನಾಯುಕ್ತವಾಗಿರುತ್ತದೆ. ಸೀಬೆಹಣ್ಣನ್ನು ಅತಿಯಾಗಿ ತಿಂದವರ ಬೆವರು ಸೀಬೆಹಣ್ಣಿನ ವಾಸನೆಯನ್ನೇ ಹೊಂದಿರುತ್ತದೆ! ಒಟ್ಟಾರೆ ನಮ್ಮ ಶರೀರದ ತ್ಯಾಜ್ಯಗಳಲ್ಲಿ ಹಲವು ಥರದ ಸೂಕ್ಷ್ಮಾಣು ಜೀವಿಗಳು ಇದ್ದು ಅವು ವಾಸನೆಗೆ ಕಾರಣವಾಗುತ್ತವೆ ಎಂಬುದಂತೂ ಸತ್ಯ. ಮಲವಿಸರ್ಜನೆಗೆ ಮಾಡಿದಮೇಲೆ ಕೈಯ್ಯನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು, ಮಲ-ಮೂತ್ರವಿಸರ್ಜಿಸಿದ ನಂತರ ಕೈಕಾಲೌಗಳನ್ನು ತೊಳೆದುಕೊಳ್ಳಬೇಕಾದ್ದು ಸ್ವಚ್ಛತೆಯ ಅವಿಭಾಜ್ಯ ಅಂಗ. ಕಂಡಕ್ಟರ್ ಕೊಟ್ಟ ನೋಟು ಅಥವಾ ಇನ್ಯಾರೋ ಬಳಸಿ ನಮ್ಮ ಕೈಸೇರುವ ಪ್ರತೀ ವಸ್ತುವಿನಲ್ಲೂ ಕೆಟ್ಟ ಬ್ಯಾಕ್ಟೀರಿಯಾಗಳು ಇರಬಹುದು,ಹೀಗಾಗಿ ತಿಂಡಿ-ಊಟಕ್ಕೂ ಮೊದಲು ಕೈಗಳನ್ನು ಸ್ವಛ್ಛವಾಗಿ ತೊಳೆದುಕೊಳ್ಳುವುದಕ್ಕೆ ಆದ್ಯತೆ ಕೊಡಬೇಕು.


ನಮ್ಮ ಶರೀರ ಎಷ್ಟು ಗೊಂದಲದ ಗೂಡೆಂದರೆ ತಿಂದ ಆಹಾರದ ಕಣಗಳು ಹಲ್ಲುಗಳ ಸಂದಿಯಲ್ಲಿ ಸಿಕ್ಕಿಕೊಂಡು ಕೊಳೆತು ದುರ್ಗಂಧವನ್ನು ಬೀರುವುದರ ಜೊತೆಗೆ, ಅಲ್ಲಿ ಹುಟ್ಟುವ ಸೂಕ್ಷ್ಮಾಣು ಜೀವಿಗಳು ಹಲ್ಲುಗಳ ಮೇಲ್ಪದರವನ್ನು ಕೊರೆದೋ ಅಥವಾ ಸಿಹಿಯ ರಾಸಾಯನಿಕ ಪ್ರಕಿಯೆಯಿಂದ ಹಲ್ಲುಗಳ ಮೇಲ್ಪದರ ಕರಗಿಯೋ ಹಲ್ಲುಗಳು ಹುಳುಕಾಗಿ ಹಲ್ಲುನೋವು ಪ್ರಾರಂಭವಾಗುವುದು-ಇದು ಕಾಲಕ್ಕೆ ಸರಿಯಾಗಿ ಹಲ್ಲುಜ್ಜದವರ ಸ್ಥಿತಿ. ಇನ್ನು ಹಲ್ಲು ಉಜ್ಜುತ್ತಲೇ ಇದ್ದರೂ ಕೆಲವು ಹಲ್ಲುಗಳು ಹಾಳಾಗುವುದು ಅನುವಂಶೀಯ ಪ್ರಕ್ರಿಯೆ! ಆದರೆ ನಮ್ಮಲ್ಲಿ ಅನೇಕರು ಎಷ್ಟು ಸಮಯ ಆಹಾರ ತಿಂದ ನಂತರ ಹಲ್ಲುಜ್ಜುತ್ತೇವೆ. ಹಲ್ಲುಜ್ಜಲು ನಮ್ಮ ಪ್ರಾಚೀನರು ಇದ್ದಿಲು,ಸ್ಪಟಿಕ ಇವುಗಳನ್ನೆಲ್ಲ ಸೇರಿಸಿ ತಯಾರಿಸಿದ ದಂತಮಂಜನ ಪುಡಿಯನ್ನು ಉಪಯೋಗಿಸುತ್ತಿದ್ದರು.ಆದರೆ ನಮ್ಮಲ್ಲಿ ಈಗ ಅನೇಕ ವಿಧದ ಟೂತ್ ಪೇಸ್ಟ್ ಗಳು ಬಂದರೂ ಅವು ಒಂದೇ ಬಹಳ ವಾಣಿಜ್ಯೀಕರ್‍ಅಣದ ಧೋರಣೆಯಿಂದ ತಯಾರಿಸಲ್ಪಟ್ಟ ಕಳಪೆಯವು ಅಥವಾ ಅವು ಸರಿಯಾದ ದಂತಮಂಜನದ ಮೂಲವಸ್ತುಗಳನ್ನು ಹೊಂದಿರುವುದಿಲ್ಲ! ಹೀಗಿದ್ದರೂ ನಮ್ಮಲ್ಲಿ ಇದನ್ನಾದರೂ ಕೊನೇಪಕ್ಷ ಸರಿಯಾಗಿ ಉಪಯೋಗಿಸುವವರು ವಿರಳ. ದಂತಕ್ಷಯವೆಂಬ ಹೆಸರು ಕೇಳಿದ್ದೇವೆ-ಆದರೆ ಅದನ್ನು ತಡೆಗಟ್ಟುವುದು ಸಾಧ್ಯವೆಂಬುದನ್ನು ನೆನಪಿಡುವುದಿಲ್ಲ! ಗುಟ್ಕಾ,ಕೋಲಾ,ಚಿಪ್ಸ್ ಗಳಂಥ ರೆಡಿ ಟು ಯೂಸ್ ಪದಾರ್ಥಗಳು ಹಲ್ಲಿನ ಮೇಲೆ ದುಷ್ಪರಿಣಾಮ ಮಾಡಿದರೂ ಅವುಗಳು ನಮಗೆ ಬೇಕೇ ಬೇಕು ಅಲ್ಲವೇ? ನಮ್ಮ ಹಿಂದಿನವರು ಒಮ್ಮೆ ಆಹಾರ ಸೇವಿಸಿದಮೇಲೆ ಕನಿಷ್ಠ ೧೦ ಸರ್ತಿ ಶುದ್ಧ ನೀರಿನಿಂದ ಬಾಯಿಮುಕ್ಕಳಿಸುತ್ತಿದ್ದರು. ಬೇವಿನ ಕಡ್ಡಿ, ಮುತ್ತುಗದ ಕಡ್ಡಿ ಮುಂತಾದ ಕಡ್ಡಿಗಳನ್ನು ಉಪಯೋಗಿಸಿ ದಂತಮಂಜನಮಾಡುತ್ತಿದ್ದರು!

ಏನೇ ಇರಲಿ ನಮ್ಮ ಶರೀರ ನಿರ್ಮಲವಾಗಿದ್ದರೆ ಅದು ನಮಗೆ ಆರೋಗ್ಯಪೂರ್ಣ ದಿನಗಳನ್ನು ಕೊಟ್ಟು ಯಾವುದೇ ಕೆಲಸ ಮಾಡಲು ಸಹಕಾರಿಯಾಗುತ್ತದೆ,ನಾವು ಹಾಗಾಗೇ ಇದ್ದರೆ ಮಿಕ್ಕುಳಿದ ಜನರಿಗೆ ನಮ್ಮ ದುರ್ವಾಸನೆ ಸಹಿಸಲು ಸಾಧ್ಯವಗದಿರುವುದರ ಜೊತೆಗೆ ನಮ್ಮ ಶಾರೀರಿಕ ಮತ್ತು ಮಾನಸಿಕ ಸ್ಥಿತಿ ಹದಗೆಡುತ್ತದೆ. ಹೀಗಾಗಿ ಸರ್ವೇಂದ್ರಿಯಗಳಿಗೆ ಪ್ರಧಾನವಾಗಿ ಸ್ನಾನ ಬೇಕು. ದಿನಕ್ಕೆ ಎರಡಾವರ್ತಿ ಕೊನೇಪಕ್ಷ ಒಮ್ಮೆ ಮುಡಿಯಿಂದ ಅಡಿಯವರೆಗೆ ಸ್ನಾನಮಾಡಲೇಬೇಕು. ಹಾಗೊಮ್ಮೆ ಮಾಡಿದಾಗ ಇಡೀ ಶರೀರ ನವ ಚೈತನ್ಯ ಪಡೆದು ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ಪ್ರಪುಲ್ಲಗೊಂಡ ಮನಸ್ಸು ಸಾಧನೆಗೆ ಅನುಕೂಲಕರವಾಗಿರುತ್ತದೆ. ಹೀಗಾಗಿ ನಮ್ಮೆಲ್ಲಾ ಆಚರಣೆಗಳಲ್ಲಿ ಸ್ನಾನಮಾಡಿ ಮಡಿಯಾಗು ಎಂದು ಹೇಳುತ್ತೇವೆ. ಸ್ನಾನ ಮಾಡಿದಾಗ ಸಿಗುವ ಫ್ರೆಶ್ನೆಸ್ ನಿಂದ ಮುಂದಿನ ನಮ್ಮ ಕೆಲಸಗಳು ಬಹಳ ಉತ್ಸುಕತೆಯಿಂದ ಪೂರೈಸಲ್ಪಡುತ್ತವೆ. ಮನಸ್ಸಿಗೆ ಮಂಕು ಕವಿದಿದ್ದರೆ ಒಮ್ಮೆ ಸ್ನಾನಮಾಡಿ ನೋಡಿ, ಅಷ್ಟರಲ್ಲೇ ಅರ್ಧ ಮಂಕು ಮಾಯ!

ಸ್ನಾನ ಮಾಡಿದಮೇಲೆ ಸ್ವಚ್ಛ ಬಟ್ಟೆ ಉಟ್ಟುಕೊಂಡರೆ ಮನಸ್ಸು ಇನ್ನಷ್ಟು ಉಲ್ಲಸಿತವಾಗಿರುತ್ತದೆ. ಶುದ್ಧ ಬಟ್ಟೆ ನಮಗೆ ಪೊಸಿಟಿವ್ ಎನರ್ಜಿ ಕೊಡುತ್ತದೆ, ಉನ್ನತ ಚೈತನ್ಯವನ್ನು ಒದಗಿಸುತ್ತದೆ. ಅದಕ್ಕೇ ಎಲ್ಲಾ ಕೆಲಸಗಳಿಗೂ ಒಂದೇ ತೆರನಾದ ಬಟ್ಟೆ ಇರದಿರಲಿ ಎಂಬ ಸದುದ್ದೇಶದಿಂದ ನಮ್ಮ ಹಿರಿಯರು ’ಮಡಿ’ ಎಂಬ ಬಟ್ಟೆಯನ್ನು ಸೃಜಿಸಿದರು. ನಾರಿನಿಂದ ಮಾಡಿದ್ದು, ಬಿಳಿಯ ಬಣ್ಣ ಹೊಂದಿದ್ದು, ಬೇರೇ ಕಲೆಗಳಿರದ ಶುದ್ಧ ಬಟ್ಟೆಯನ್ನು ಶುದ್ಧ ನೀರಿನಲ್ಲಿ ಅದ್ದಿ ತೆಗೆದು ಹಿಂಡಿ ಗಾಳಿಯಲ್ಲಿ ಸೂರ್ಯನ ಬಿಸಿಲಲ್ಲಿ ಪ್ರತ್ಯೇಕವಾಗಿ ಒಣಗಿಸಿ, ಬೇರೆ ಬಟ್ಟೆಗಳಿಗೆ ಸೋಕಿಸದೇ ಉಟ್ಟರೆ ಅದು ಮಡಿ ಬಟ್ಟೆ, ದಾಟ್ ಹ್ಯಾಸ್ ಗಾಟ್ ಪೊಸಿಟಿವ್ ಎನರ್ಜಿ ಜನರೇಟೆಡ್ ಅಂಡರ್ ದಿ ಸನ್! ಅಂತಹ ಬಟ್ಟೆ ಉಟ್ಟು ಕುಳಿತಾಗ ಒಳ್ಳೆಯ ಕಾರ್ಯಗಳನ್ನು ಮಾಡಲು ಮನಸ್ಸೆಂಬ ವೇದಿಕೆ ಸಂಪೂರ್ಣ ಸಜ್ಜಾಗುತ್ತದೆ, ಇಲ್ಲದಿದ್ದರೆ ಇಲ್ಲ! ಒಮ್ಮೆ ಉಪಯೋಗಿಸಿದ ಈ ಮಡಿಯನ್ನು ಮತ್ತೆ ಉಪಯೋಗಿಸಲು ಮತ್ತೆ ಅದೇ ತೊಳೆಯುವ,ಒಣಗಿಸುವ ಕ್ರಮ ಅನುಸರಿಸಬೇಕು. ಒಮ್ಮೆ ತೊಳೆದು, ಉಟ್ಟು, ಅದ್ದನ್ನುಟ್ಟಾಗಲೇ ತಿಂಡಿ-ತೀರ್ಥ,ಊಟ ಇತ್ಯಾದಿಗಳನು ಪೂರೈಸಿದರೆ, ಅದಕ್ಕೆ ನಮ್ಮ ಬೆವರು, ತುಪ್ಪ, ಹಾಲು-ಮೊಸರು ಇತ್ಯಾದಿ ಯವುದೇ ಪದಾರ್ಥ ಹತ್ತಿಕೊಂಡಿದ್ದರೆ ಅದು ಕ್ರಮೇಣ ಕೆಟ್ಟ ವಾಸನೆಸೂಸುವ ವಿಶೇಷ ಬಟ್ಟೆಯಾಗಿ ಪರಿವರ್ತಿತವಾಗುತ್ತದೆಯೇ ಹೊರತು ಅದು ಮಡಿಯಾಗುವುದಿಲ್ಲ! ಹಿರಿಯರು ಹೇಳಿದ್ದಾರೆ ನಾರು ಅಥವಾ ರೇಷ್ಮೆ ಬಟ್ಟೆ ಶುದ್ಧ ಅಂತ, ಹೀಗಾಗಿ ಅದನ್ನುಟ್ಟು ಏನೇ ಮಾಡಿದರೂ ಮೈಲಿಗೆ ಸೋಕದ ಅದ್ಭುತ ಬಟ್ಟೆ ಅದು ಅಂತ ತಿಳಿದು ವರ್ತಿಸಿದರೆ ಅದು ನಮ್ಮ ಗಾಢಾಂಧಕಾರವಲ್ಲದೇ ಮತ್ತೇನೂ ಅಲ್ಲ! ಅಲ್ಲಿ ದೇವರು ನಮಗೆ ಸಹಾಯಕನಗಿ ಬಂದು ಅಯ್ಯಾ ಬಟ್ಟೆ ಒಗೆದುಕೋ ಎಂದು ಹೇಳುವುದಿಲ್ಲ ! ಪ್ರತಿದಿನ ನಾವು ಬಳಸುವ ಬಟ್ಟೆಯನ್ನು ನೇರ ಬಿಸಿಲಲ್ಲಿ ಒಣಗಿಸಲಾಗದಿದ್ದರೂ, ಒಗೆದು ಒಣಗಿಸಿದ ಬಟ್ಟೆಯನ್ನು ಧರಿಸಬೇಕೇ ವಿನಃ ಬಳಸಿದ ಬಟ್ಟೆಯನ್ನೇ ವಾರಾಂತ್ಯದವರೆಗೆ ಅದು ಪರರಿಗೆ ತೀರಾ ಅಸಹ್ಯವಗುವವವರೆಗೆ ಬಳಸುವುದು ಶುದ್ಧಾಚಾರದ ಕೊರತೆಯ ಶುದ್ಧ ಲಕ್ಷಣ! ಕೆಲವರು ಒಳ ಉಡುಪುಗಳನ್ನೂ ಕೂಡ ಹಾಗೇ ಒಗೆಯದೇ ಬಳಸುವುದು ನನ್ನ ಗಮನಕ್ಕೆ ಬಂದಿದೆ- ಶಿವ ಶಿವಾ ಎನ್ನೊಡೆಯನೇ ಎಂದುಕೊಂಡು ಸುಮ್ಮನಾಗಿದ್ದೇನೆ-ಸುಮ್ಮನಾಗುತ್ತೇನೆ, ಸ್ವಲ್ಪ ಸುಲಭ ಸಾಧ್ಯರಾದರೆ ತಿಳಿಹೇಳುತ್ತೇನೆ. ಬಟ್ಟೆಗಳನ್ನು ಸ್ವಚ್ಛಗೊಳಿಸಲು-ಮಡಿಮಾಡಲು ಇರುವ ಜನರೇ ಮಡಿವಾಳರು! ಹರಿವ ನದಿಯ ಹೊಸ ಶುದ್ಧ ನೀರಲ್ಲಿ ಬಟ್ಟೆಗಳನ್ನು ಶುಭ್ರಗೊಳಿಸುವುದು ಅವರ ಕಾಯಕವಾಗಿತ್ತು, ಆದರೆ ಇಂದು ಅದೂ ಕೂಡ ವಾಣಿಜ್ಯೀಕರಣದಿಂದ ದೂರದ ಮಾತಾಗಿದೆ. ನದಿಗಳು ಬತ್ತಿವೆ, ಜಲಮೂಲಗಳು ನಾಪತ್ತೆಯಾಗಿವೆ. ಇರುವ ಕೂಡಿಟ್ಟ ನೀರಲ್ಲೇ ಅನೇಕ ಬಟ್ಟೆಗಳನ್ನು ಒಗೆಯಬೇಕಾಗಿ ಬಂದು ಮಡಿಯೆಂಬುದು ಕೇವಲ ಶಬ್ಢವಾಗಿದೆ!


ಮೋಚಿಗಳನ್ನು ಮತ್ತು ಕ್ಷೌರಿಕರನ್ನು ಸಂಪರ್ಕಿಸಿದಾಗ ಹಿರಿಯರು ಮೈಲಿಗೆಯ ಭಾವ ಹೊಂದುತ್ತಿದ್ದರು, ಕಾರಣ ಅವರು ಹಲವಾರು ಜನರ ಸಂಪರ್ಕಕ್ಕೆ ಬರುತ್ತಾರೆ, ಅವರ ಕೈ ಹಲವರನ್ನು ಸಂಪರ್ಕಿಸುತ್ತದೆ, ಅಲ್ಲಿ ಬ್ಯಾಕ್ಟೀರಿಯಾಗಳು ಹರಿದಾಡುತ್ತವೆ.ಅದಕ್ಕೇ ಮನಗೆ ಬಂದ ಮೇಲೆ ಸ್ನಾನಾದಿಗಳನ್ನು ಪುನಃ ಪೂರೈಸಿ ಶುಚಿಗೊಳ್ಳುತ್ತಿದ್ದರು.ಇಂದು ಅಧುನಿಕತೆಯ ಸೋಗಿನಲ್ಲಿ ಕ್ಷೌರಿಕರಲ್ಲಿ ಗಡ್ಡಬೋಳಿಸಿಕೊಂಡ ನಮ್ಮಲ್ಲಿ ಬಹಳಜನ ಹಾಗೇ ಇನ್ನಾವುದೋ ಕೆಲಸಕ್ಕೆ ಹೋಗುತ್ತೇವೆ, ಅವನು ನಮ್ಮ ಮೈಗೆ ಹಾಸುವ ಬಟ್ಟೆ, ಉಜ್ಜುವ ಬ್ರಶ್,ಕ್ಷೌರ ಕತ್ತಿ ಎಲ್ಲವನ್ನೂ ಹಲವರಿಗೆ ಉಪಯೋಗಿಸುತ್ತಿರುತ್ತಾನೆ ಎಂಬುದನ್ನು ಮರೆಯುತ್ತೇವೆ. ಯಾರೋ ಬಂದು ಬೆವರು ವಾಸನೆ ಸೂಸುತ್ತ ನಮ್ಮೆದುರಲ್ಲೇ ಅವರ ಕಂಕುಳ ಸಂದಿಯ ಕೂದಲನ್ನು ಅದೇ ಕ್ಷೌರಕತ್ತಿಯಿಂದ ತೆಗೆಸಿಕೊಂಡಾಗ ಮನಸ್ಸಿಗೆ ಒಂಥರಾ ಆಗುತ್ತದೆಯಲ್ಲವೇ? ಆದರೆ ಮರುಕ್ಷಣ ಅದನ್ನು ಮರೆತು ಮತ್ತೆ ಹಾಗೆ ಮುನ್ನುಗ್ಗುತ್ತೇವೆ ಅಲ್ಲವೇ? ಈಗೀಗ ಏಡ್ಸ್ ಎಂಬ ರೋಗ ಬಂದ ಮೇಲೆ ಕೊನೇಪಕ್ಷ ಕತ್ತಿಯ ಬ್ಲೇಡ್ [ಮುಂದಲುಗು]ಅನ್ನಾದರೂ ಬದಲಾಯಿಸುತ್ತಾರಲ್ಲ ಎಂಬುದೇ ಒಂದು ಸಂತಸದ ವಿಷಯ. ಇರಲಿ ನಮ್ಮ ಪ್ರಾಚೀನರು ಸ್ವಚ್ಛತೆಯ ದೃಷ್ಟಿಯಿಂದ ಹಾಗೆ ಇದನ್ನೆಲ್ಲ ಮೈಲಿಗೆ ಅಂದಿದ್ದು ತಪ್ಪೇ ?

ಪರಿಮಳ ದ್ರವ್ಯಗಳ ಬಳಕೆ ನಮ್ಮ ಜೀವನಕ್ಕೆ ಜೀವನೋತ್ಸಾಹ ಇಮ್ಮಡಿಸಲು ಕಾರಣವಗುತ್ತದೆ. ಅನಾದಿ ಕಾಲದಿಂದಲೂ ಯಾಲಕ್ಕಿ,ಪಚ್ಚೆತೆನೆ,ಲವಂಗ,ಕರ್ಪೂರ,ಪಚ್ಚಕರ್ಪೂರ, ಕೇಸರಿ, ಶ್ರೀಗಂಧ,ತುಲಸಿ, ಭಿಲ್ವ ಮುಂತಾದ ಅನೇಕಾನೇಕ ಮೂಲವಸ್ತುಗಳಿಂದ ಪರಿಮಳ ದ್ರವ್ಯಗಳನ್ನು ತಯಾರಿಸಿ ಉಪಯೋಗಿಸುತ್ತಿದ್ದರು. ಇಂದು ನಾವು ಕ್ರತ್ರಿಮವಾಗಿ ಅನೇಕ ಪರಿಮಳದ್ರವ್ಯಗಳನ್ನು ಸಿದ್ಧಪಡಿಸುವುದನ್ನು ಕಾಣುತ್ತೇವೆ, ಆದರೆ ಬಳಸುವುದು ಸ್ನಾನಮಾಡದಾಗ! ಇದು ಸರಿಯದ ಕ್ರಮ ಅಲ್ಲ. ನಾವು ಸ್ನಾನವನ್ನೇ ಮಾಡಿದ್ದರೂ ಕಾಲಾನುಕ್ರಮದಲ್ಲಿ ಗಂಟೆಗಳಕಾಲ ಕೆಲಸದಲ್ಲಿ ತೊಡಗಿರುವಾಗ ನಮ್ಮ ಬೆವರು ಹರಿದೋ, ಎಂಜಲು-ಕಣ್ಣೀರು ಹರಿದೋ ನಾವು ಮತ್ತೆ ವಾಸನೆಸೂಸುವ ಯಂತ್ರವಗುತ್ತೇವೆ. ಅದನ್ನು ಪರರು ಆಡಲಾರದೇ ಅನುಭವಿಸಲಾರದೇ ತಡೆದುಕೊಂಡು ಮನಸ್ಸಲ್ಲೇ ಶಪಿಸುತ್ತಿರುತ್ತಾರೆ. ಕೆಲವರಂತೂ ತಮ್ಮ ಪಕ್ಕದಿಂದ ಎದ್ದು ಹೋದರೆ ಸಾಕು ಈ ಆಸಾಮಿ ಎಂದು ಎದುರುನೋಡುತ್ತಿರುತ್ತಾರೆ. ಹೀಗಾಗಿ ಇಂತಹ ವ್ಯತ್ಯಸ್ಥ ಸ್ಥಿತಿಯಲ್ಲೂ ಎಲ್ಲರಿಗೆ ಮುದನೀಡುವ ವ್ಯಕ್ತಿತ್ವ ನಮ್ಮದಗಿರಲು ತಕ್ಕ ಹಾಗೂ ಮೂಗು ಒಡೆದುಹೋಗುವಂತ ಘಾಟು ಇರದ ಆದರೆ ಲಘು-ಹಿತಕರ ಪರಿಮಳ ಬೀರುವ ಪರಿಮಳ ದ್ರವ್ಯಗಳನ್ನು ಉಪಯೋಗಿಸುವುದು ಬಹಳ ಸಿಂಧು.


ಇದನ್ನೆಲ್ಲ ತಿಳಿದೇ ನಮ್ಮ ಪೂರ್ವಜರು ಯಾವುದೇ ಯಜ್ಞಯಾಗಾದಿ ಮಹಾನ್ ಕಾರ್ಯಗಳ ಪೂರ್ವಭಾವಿಯಾಗಿ ಮಧುಪರ್ಕ ಎಂಬ ಕ್ರಿಯೆಯನ್ನು [ಕರ್ತೃವಿಗೆ ಸ್ನಾನಾದಿ ಶೌಚ ಕಾರ್ಯಗಳಾದಮೇಲೆ] ಮಾಡಿಸುತ್ತಿದ್ದರು. ಅದಾದಮೆಲೆ ಪಂಚಗವ್ಯವಿತ್ತು, ಮಂತ್ರಾಚಮನ-ಮಂತ್ರ ಜಲ ಪ್ರೋಕ್ಷಣ ಇತ್ಯಾದಿಗಳನ್ನು ಮಾಡಿಸಿ ಶುದ್ಧೀಕರಣ ಕ್ರಿಯೆಯನ್ನು ಪೂರ್ತಿಗೊಳಿಸುತ್ತಿದ್ದರು. ಇವತ್ತು ನಮಗದು ಆಡಂಬರವೆಂದೆನಿಸಿದರೆ ಅದು ನಮ್ಮ ತರಾತುರಿಯ ಜೀವನದ ಸಂಕೇತವಷ್ಟೇ!

ಇನ್ನು ಮನೆಯ ವಾತಾವರಣದ ಬಗ್ಗೆ ಹೇಳುವುದಾದರೆ ಕೆಲವರ ಮನೆಗಳಿಗೆ ಹೋದರೇ ಸಾಕು ನಮಗೆ ತೆನ್ನಾಲಿ ರಾಮನ ಬೆಕ್ಕು ಹಾಲುಕುಡಿದ ಅನುಭವ! ನಮ್ಮ ಪರಿಸರ-ಮನೆ-ವಾಸಸ್ಥಳ ಶುದ್ಧವಾಗಿದ್ದರೇನೇ ನಮಗೆ ಎಲ್ಲಾರೀತಿಯ ಉತ್ತಮ ಚೈತನ್ಯ ಒದಗಿ ಬರುವುದು. ಮನೆಯಲ್ಲಿ ಕಸದ ಸಂಗ್ರಹ ಬಹಳ ಸಮಯ ಇರಬಾರದು. ಮಾಡಿದ ತಿನಿಸು-ಪದಾರ್ಥ ಬೇಗ ಖಾಲಿಯಾಗಬೇಕು, ಅನ್ನದಂತಹ ಪದಾರ್ಥ ಒಂದು ಜಾವದ ನಂತರ ಉಪಯೋಗ ಯೋಗ್ಯವಲ್ಲ! ಬೆವರು ಸೋಕಿದ ಬಟ್ಟೆ, ಮಕ್ಕಳ ಉಚ್ಚೆತಾಗಿದ ಬಟ್ಟೆ, ಜೊಲ್ಲುತಾಗಿದ ಬಟ್ಟೆ ಹೀಗೇ ಬಳಸಿದ ಬಟ್ಟೆಗಳನ್ನು ಬಹಳ ಹೊತ್ತು ಒಗೆಯದೇ ಹಾಗೇ ಇಡಬಾರದು. ಎಲ್ಲಿ ಇವುಗಳೆಲ್ಲ ಹಾಗೇ ಕುಂತಿರುತ್ತವೆಯೋ ಅಲ್ಲಿ ಅಲಕ್ಷ್ಮಿಯ ಆವಾಸವಗುತ್ತದೆ, ದರಿದ್ರತನ ಬರುತ್ತದೆ, ಮನಸ್ಸಿಗೆ ದುಗುಡ ಹಣುಕುತ್ತದೆ, ಪರಿಸರ-ಮನೆ ರೋಗ ಗ್ರಸ್ತವಾಗುತ್ತದೆ. ಅದಕ್ಕೇ ಮನೆಯಲ್ಲಿ, ಪರಿಸರದಲ್ಲಿ ಆದಷ್ಟೂ ಸ್ವಚ್ಛತೆ ಮುಖ್ಯ. ಸ್ವಚ್ಛತೆಯೇ ಎಲ್ಲಾ ಪೂರಕ ಹಾಗೂ ಪ್ರೇರಕ ಚೈತನ್ಯ ನಮಗೊದಗುವಂತೆ ಮಾಡುವ ಮೂಲ ಪ್ರಕ್ರಿಯೆ.

ಮನೆಯ ವಾತಾವರಣ ಶುದ್ಧವಾಗಿರಲೆಂದು ಗೋಮಯದಿಂದ [ಕರುವಿರುವ ಹಸುವಿನ ತಾಜಾ ಸಗಣಿಯಿಂದ]ಮನೆಯ ನೆಲಗಳನ್ನೂ, ಹೊರ ಅಂಗಳಗಳನ್ನೂ ಸಾರಿಸುತ್ತಿದ್ದರು,ತಾಜ ಸಗಣಿಯಲ್ಲಿ ಕ್ರಿಮಿನಾಶಕವಿದೆ ಎಂದು ತಮಗೆಲ್ಲ ಮೊದಲೊಮ್ಮೆ ಹೇಳಿದ್ದೇನೆ. ಆ ಸಗಣಿ ಕೂಡ ಭಾರತೀಯ ತಳಿಯ ಕರುವಿರುವ ಹಸುವಿನ ತಾಜಾ ಸಗಣಿಯಾಗಿರಬೇಕು-ಇದು ಕರಾರು, ಅದಿಲ್ಲದಿದ್ದರೆ ಯಾವುದೋ ದಿನ ಹಾಕಿದ ಹಳಸಲು ಸಗಣಿ ಅಥವಾ ವಿದೇಶೀ ಮಿಶ್ರ ತಳಿಯ ಹಸುವಿನ ಸಗಣಿ ವ್ಯತಿರಿಕ್ತ ಪರಿಣಾಮ ಕೊಟ್ಟೀತು! ಇದಕ್ಕೆ ಶಾಸ್ತ್ರಕಾರರು,ಅಚಾರ್ಯರು ಜವಾಬ್ದಾರರಲ್ಲ. ನಮಗೆ ವೇದ್ಯವಲ್ಲದ ವಿಷಯಗಳನ್ನು ಅರಿತು ನಡೆಯಬೇಕಾದ್ದು ನಮ್ಮ ಕರ್ತವ್ಯ. ಬೆಂಕಿಗೆ,ವಿದ್ಯುತ್ತಿಗೆ ಚಿಕ್ಕವರು ದೊಡ್ಡವರು ಎಂಬ ಭೇದ ಹೇಗಿಲ್ಲವೋ ಹಾಗೇ ಅರಿಯದೇ ಮಾಡಿದ ತಪ್ಪು ಅದು ತಪ್ಪೇ ಎಂದು ಪರಿಗಣಿಸಲ್ಪಡುತ್ತದೆ, ಅದಕ್ಕಾಗಿ ನಮ್ಮ ಪೂರ್ವಜರನ್ನು ದೂಷಿಸುವ ಹಕ್ಕು ನಮಗಿಲ್ಲ, ನೆನಪಿರಲಿ! ಇಂದು ನಗರವಾಸಿಗಳು ನಾವು ಅನೇಕರು ಸಗಣಿ ಸಿಗದ ಹತಭಾಗ್ಯರು, ಪೂಜ್ಯಮಾತೆ ಗೋವನ್ನು ದೂರ ಇಟ್ಟು ಅದರ ಉತ್ಪನ್ನಗಳನ್ನು ಮಾತ್ರ ಬಳಸಿಕೊಂಬವರು. ನಮಗಾಗಿ ಪರ್ಯಾಯವಾಗಿ ಫಿನಾಯ್ಲ್ ಸಿಗುತ್ತದೆ, ಗೋ ಅರ್ಕ ಸಿಗುತ್ತದೆ, ಇವುಗಳನ್ನು ಬಳಸಿ ನೆಲ ಸಾರಿಸಿ ಮನೆ-ಪರಿಸರ ಸ್ವಚ್ಛವಾಗಿಡೋಣ ಅಲ್ಲವೇ? ಅನುಕೂಲ ಇದ್ದಾಗ್ಯೂ ಟಿ.ವಿ. ಮುಂದೆ ಕಾಲಹರಣ ಮಾಡುತ್ತ ಕೆಲಸಮಾಡದೆ ಆಲಸ್ಯ ಮೆರೆದರೆ ಅಗ ಅಲ್ಲಿ ಕೂದ ಅಲಕ್ಷ್ಮಿ ಬರುತ್ತಾಳೆ ಎಚ್ಚರ!

ನಮ್ಮ ಅನುಕೂಲಕ್ಕೆ ತಕ್ಕಂತೆ ಯಾವಗಲೋ ಸ್ನಾನ, ಎಲ್ಲೋ ಊಟ, ಹೇಗೋ ನಿದ್ದೆ, ವಾರಕ್ಕೊಮ್ಮೆ ಬಟ್ಟೆ ಒಗೆತ ಇವೆಲ್ಲ ನಮಗೆ ಬೇಡದ ಅಥವಾ ಮಾರಕ ಚೈತನ್ಯವನ್ನು ತರುತ್ತವೆ. ಹೀಗಾಗಿ ನಮ್ಮ ಪೂರ್ವಜರು ಯಾಕೆ ಮಡಿ ಎಂದರು, ಯಾಕೆ ಸ್ವಚ್ಛತೆ ಎಂದರು ಯಾಕೆ ಪರಿಮಳಯುಕ್ತ ಮಂಗಳ ದ್ರವ್ಯಗಳನ್ನು ಬಳಸುತ್ತಿದ್ದರು ಎಂಬುದನ್ನು ಒಮ್ಮೆ ಮನಗಾಣೋಣವೇ?

Tuesday, May 18, 2010

ಶ್ರೀ ಶಂಕರ ಸ್ಮೃತಿ



ಶ್ರೀ ಶಂಕರ ಸ್ಮೃತಿ

ಕೇರಳದ ಕಾಲಟಿಯಲ್ಲಿ ಕ್ರಿ..೬೩೦ ರಲ್ಲಿ ಜನಿಸಿ ೬೬೨ರವರೆಗೆ ಬದುಕಿದ್ದ ಶ್ರೀ ಆದಿಶಂಕರರು ವೈಶಾಖ ಶುದ್ಧ ಪಂಚಮಿಯಂದುಅವತರಿಸಿದ ಪರಮೇಶ್ವರನ ರೂಪ ಎಂಬ ಪ್ರತಿಪಾದನೆಯಿದೆ. ಮನುಷ್ಯಮಾತ್ರರಿಂದಲೂ ಇವೆಲ್ಲಾ ಸಾಧ್ಯ ಎಂಬ ಅನೇಕಕೆಲಸಗಳನ್ನು ಮಾಡಿತೋರಿಸಿದ ಮಹಾಮೇಧಾವಿ, ಮುನಿ ಶಂಕರರ ಬಗ್ಗೆ ಬರೆಯಲು ಹೊರಟರ್ ಶಬ್ಢಗಳೇ ಸೋಲುತ್ತವೆ!

ಆದಿ ಶಂಕರರನ್ನು ನೆನೆಸಿಕೊಳ್ಳಲು ಹಲವು ಕಾರಣಗಳು ಸಿಗುತ್ತವೆ.

. ಅವರು ಬಾಲ ಪ್ರತಿಭೆ-ಇಲ್ಲಿಯ ತನಕ ಜಗತ್ತು ಕಂಡು ಕೇಳರಿಯದ ಅಪ್ರತಿಮ ಮತ್ತು ಅನ್ಯಾದೃಶ ಬಾಲಪ್ರತಿಭೆ ಶ್ರೀ ಶಂಕರರು.

. ಸಂಸ್ಕೃತದ ಮೇರು ಕವಿ-ಮಹಾಕವಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಕಾವ್ಯ ಪ್ರಭೆಯನ್ನು ಹೊಮ್ಮಿಸಿ, ಸಂಸ್ಕೃತಭಾಷೆಗೆ ಮತ್ತಷ್ಟು ಉತ್ಕೃಷ್ಟ ಸ್ಥಾನ ಒದಗಿಸಿದ, ಭಾಷಾ ಸಾಹಿತ್ಯವನ್ನು ಸುಲಲಿತ ಶಬ್ಧಗಳಿಂದ ಅಲಂಕರಿಸಿದ ಪ್ರಜ್ಞಾನ ಬ್ರಹ್ಮ ಶ್ರೀಶಂಕರರು.

. ದಾರ್ಶನಿಕತೆಗೆ ದಾರ್ಶನಿಕರು-ಜಗತ್ತು ಅನೇಕ ದಾರ್ಶನಿಕರನ್ನು ಕಂಡಿದೆ, ಆದರೆ ಶಂಕರರಂತಹ ಆದರ್ಶ ದಾರ್ಶನಿಕರುಸಿಗುವುದು ವಿರಳ. ಜಗತ್ತಿನ ಎಲ್ಲೇ ಯಾರೇ ಯಾವಾಗಲೇ ಬಯಸಿದರೂ ಅವರವರ ಧರ್ಮದಲ್ಲೇ ಇದ್ದುಕೊಂಡು ಕೇವಲತತ್ವಾನುಭೂತಿಯಿಂದ ಜಗತ್ತನ್ನು ನೋಡುವ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶಂಕರರು ಯಾವ ದೀಕ್ಷೆಯನ್ನೂ ಹೇಳದೇತಮ್ಮ ತತ್ವವನ್ನು ಅನುಸರಿಸಲು ರಾಜಮಾರ್ಗವನ್ನು ತೋರಿದರು!

. ಕಣ್ಣಿಗೆ ಕಟ್ಟುವ ಅದ್ವೈತ- ನಾವು ಯಾವ ಜೀವಿಯನ್ನೇ ತೆಗೆದುಕೊಂಡರೂ ಅದರಲ್ಲಿ ನಮ್ಮೊಳಗಿರುವ ಪರಮಾತ್ಮನೇ ಇದ್ದಾನೆಎಂಬ ಸತ್ಯ ತಿಳಿದಾಗ ವಿಶ್ವ ಬ್ರಾತ್ವತ್ವ ಬರುತ್ತದಲ್ಲವೇ ? ಇದರಿಂದ ಪ್ರಾಣಿಹಿಂಸೆ, ಮಾಂಸಾಹಾರ, ವೈರತ್ವ,ಜಗಳ,ದೊಂಬಿ,ಕಚ್ಚಾಟ ಸಾಕಷ್ಟು ದೂರವಾಗಿ ಮಾನವ ಸಂಸ್ಕೃತಿಯನ್ನು ಅನುಸರಿಸಲು ಅನುಕೂಲವಾಗುತ್ತದೆಯಲ್ಲವೇ?

. ಪ್ರಾಂತ ಭೇದ ನಿವಾರಕ-ಇಡೀ ಭರತಖಂಡವನ್ನು ಬದುಕಿದ್ದ ೩೨ ವರ್ಷಗಳಲ್ಲೇ ಮೂರಾವರ್ತಿ ಸುತ್ತಿದ ಮಹಾನುಭಾವಶಂಕರರು ಮಾನವ ಕುಲಕ್ಕೆ ಮಾರ್ಗದರ್ಶಿಸಲು ಆಮ್ನಾಯ ಮಠಗಳೆಂಬ ನಾಲ್ಕು ಪ್ರಮುಖ ಪೀಠಗಳನು ಸ್ಥಾಪಿಸಿದರು. ಶೃಂಗೆರಿ, ಪುರಿ,ದ್ವಾರಕೆ ಹಾಗೂ ಜ್ಯೊತಿರ್ಮಠಗಳೆಂಬ ಪೀಠಗಳಲ್ಲಿ ಮೊದಲಾಗಿ ಸ್ಥಳೀಯರಲ್ಲದವರನ್ನು ಕುಳ್ಳಿರಿಸಿ ಪೀಠಾಧಿಪತಿಗಳೆಂದುಜನತೆಗೆ ಬೋಧಿಸಿದರು. ಶೃಂಗೇರಿಗೆ ಉತ್ತರದ ಸುರೇಶ್ವರಾಚಾರ್ಯರನ್ನು ಕೂರಿಸಿದರೆ ದಕ್ಷಿಣದ ಹಸ್ತಾಮಲಕರನ್ನು ಉತ್ತರದಪೀಠದಲ್ಲಿ ನೆಲೆಸುವಂತೆ ಮಾಡಿದರು.

. ವಿಶ್ವವ್ಯಾಪಕ ತತ್ವ-ಯಾವ ಧರ್ಮದವರನ್ನೂ ಹೀಗಳೆಯದ ಶಂಕರರು ಬೇರೆ ಧರ್ಮದ ಪ್ರಮುಖರಿಂದ ಗೌರವವನ್ನು ಪಡೆದವರು. ಮಾತಾಂತರವೆಂಬ ಗೋಜಲಿಗೆ ಕಾರಣವಾಗಬಹುದಾದ ದೀಕ್ಷೆಯನ್ನೇ ಪ್ರತಿಪಾದಿಸದೇ ಸರ್ವಧರ್ಮೀಯರೂ ಅನುಸರಿಸಬಹುದಾದ ಆದರ್ಶ ಜೀವನ ಪಥವನ್ನು ತೋರಿಸಿಮನುಕುಲಕ್ಕೆ ಇದು ಹಿತಎಂಬುದನ್ನು ಪ್ರಾತ್ಯಕ್ಷಿಕೆಗಳೊಂದಿಗೆ ತೋರಿಸಿದರು.

. ಕುಪುತ್ರೋ ಜಾಯೇತ ಕ್ವಚಿತಪಿ ಕುಮಾತಾ ಭವತಿ-ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂಬುದನ್ನು ಸನ್ಯಾಸಿಯಾಗಿಯೂ ತೋರಿಸಿದ ಮಾನವೀಯ ಕರುಣಾಮೂರ್ತಿ ಶ್ರೀ ಶಂಕರರು. " ಅಮ್ಮಾ ನಿನ್ನ ಅಂತ್ಯಕಾಲದಲ್ಲಿ ಎಲ್ಲಿದ್ದರೂ ನಿನ್ನಲ್ಲಿಗೆ ಬಂದು ತಲ್ಪುತ್ತೇನೆ" ಎಂಬ ಮಾತನ್ನು ಹೇಳಿದಂತೆ ನಡೆಸಿಕೊಟ್ಟ ಮಾತೃಪ್ರೇಮಿ ಶ್ರೀ ಶಂಕರರು ಎಲ್ಲರಿಂದಲೂ ವಂದಿಸಲ್ಪಡುವ ಯತಿಗಳೂ ಕೂಡ ಹಡೆದ ಅಮ್ಮನಿಗೆ ಹೇಗೆ ತಲೆಬಾಗಬೇಕೆಂದು ತೋರಿಸಿದರು. ಲೋಕದಲ್ಲಿ ಕೆಟ್ಟ ಮಗ ಜನಿಸಬಹುದೇ ಹೊರತು ಕೆಟ್ಟತಾಯಿ ಇರಲು ಸಾಧ್ಯವಿಲ್ಲ ಎಂದು ಹೇಳಿದರು.

. ಸಂಶಯ ನಿವಾರಕ-ಯಾವುದೇ ಸಿದ್ಧಾಂತವನ್ನು ನಿಷ್ಕರ್ಷೆಗೆ ಒಳಪಡಿಸಿದರೆ ಸಹಜವಾಗಿ ಅದರ ಮೂಲವಸ್ತು ಅದ್ವೈತದೆಡೆಗೆವಾಲುತ್ತದೆ. ಆಲದ ಮರದ ಪಕ್ಕದಲ್ಲಿ ಹೇಗೆ ಬೇರೆ ಗಿಡಗಳು ವಿಜೃಂಭಿಸಲು ಅಸಾಧ್ಯವೋ ಹಾಗೇ ಅದ್ವೈತವೆಂಬುದು ಎಲ್ಲಗಿಡಮರಗಳನ್ನೂ ಮೀರಿದ ಅಗಲ ಎತ್ತರ ಉಳ್ಳ ಆಲದಮರ ಎಂಬುದು ನಮಗೆ ಗೋಚರವಾಗುತ್ತದೆ! ಸಂಶಯಗಳಿಗೆ ಸಂಪೂರ್ಣನಿವಾರಣೆ ಹಾಗೂ ನಿರ್ಣಯಾತ್ಮಕ ಸಂದೇಶ ಸಿಗುವುದು ಅದ್ವೈತತೆಯಲ್ಲಿ ಮಾತ್ರ ಎಂಬುದನ್ನು ಇಂದಿಗೂ ಯಾರೇ ಆದರೂ ಮನಗಾಣಬಹುದು.

. ಅದ್ವಿತೀಯ ಸಾಧಕರು-ಬದುಕಿನಲ್ಲಿ ಇವತ್ತಿಗೆ ನಮ್ಮ ವಿದ್ಯಾಭ್ಯಾಸವೇ ಸರಿಯಾಗಿ ಮುಗಿಯದ ೩೨ ವಯಸ್ಸಿಗೆ ಇಡೀಬ್ರಹ್ಮಾಂಡವನ್ನೇ ಅರಿತು, ಅರೆದು ಕುಡಿದು ಅರ್ಥೈಸಿ ಬ್ರಹ್ಮಸೂತ್ರಗಳಿಗೆಲ್ಲ ಭಾಷ್ಯಬರೆದರು! ಯಾವ ಭಾಷೆ ಕ್ಲಿಷ್ಟವಾಗಿ ಸಂಕೀರ್ಣಶಬ್ಢಗಳಿಂದ ಕೂಡಿದೆಯೋ ಅದನ್ನೇ ಬಳಸಿ ಅದಕ್ಕೇ ತನ್ನ ಅನೇಕ ಕೊಡುಗೆ ಕೊಡುವಷ್ಟು ಸಾಧನೆ ಮಾಡಿದರು. ವಿಮಾನ,ರೈಲುಅಥವಾ ಯಾವುದೇ ಯಂತ್ರಚಾಲಿತ ವಾಹನಗಳ ಅವಲಂಬನೆ ಇಲ್ಲದೇ ಇಡೀ ದೇಶವನ್ನು ಅಂದಿನ ಕಾಡುಗಳ ಹಾದಿ ತುಳಿದುಸುತ್ತಿದ, ’ಇದಮಿತ್ಥಮ್ಎಂದು ತೋರಿಸಿದ ಪ್ರಾಕ್ಟಿಕಲ್ ಎಂಜಿನೀಯರ್ ನಮ್ಮ ಶಂಕರರು! ಜೀವಿತದ ಒಂದರೆಘಳಿಗೆಯನ್ನೂಸುಮ್ಮನೇ ವ್ಯಯಿಸದೆ ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದೆಂಬುದಕ್ಕೆ, ಹೇಗೆ ಪ್ರಾಡಕ್ಟಿವ್ ಆಗಿರಬಹುದು ಎಂಬುದಕ್ಕೆ ಉತ್ತಮಉದಾಹರಣೆಯಾಗಿ ಬದುಕಿದ ಮಾಷ್ಟರ್ ಆಫ್ [ಆಲ್] ಬ್ಯುಸಿನೆಸ್ ಎಡ್ಮಿನಿಷ್ಟ್ರೇಶನ್ ಡಿಗ್ರಿಯನ್ನು ತಾನಾಗೇ ಸ್ಥಾನ ಅಲಂಕರಿಸಿ ಸ್ಥಾನಕ್ಕೇ ಕೀರ್ತಿಕಳಶವಿಟ್ಟ ಮಾನವ ಸಂಪನ್ಮೂಲದ ಮಹಾಮೇರು ನಮ್ಮ ಶಂಕರರು!

೧೦. ನಿಸ್ವಾರ್ಥರು-ಬದುಕು ಪೂರ್ತಿ ಲೋಕದ ಜನರ ಕಲ್ಯಾಣಕ್ಕಾಗಿ ವ್ಯಯಿಸಿದ, ಪಾರಮಾರ್ಥ ಚಿಂತನೆಯಿಂದ ಲೋಕವನ್ನು ಬೆಳಗಲು ಅನೇಕ ಸಾವಿರ ಸಾವಿರ ಕೃತಿಗಳನ್ನು ಬರೆದು, ತೋರಿಸಿ, ತಿಳಿಹೇಳಿ, ಮಾರ್ಗದರ್ಶಿಸಿ ತನ್ನ ಜೀವಿತಾವಧಿಯನ್ನು ಪರಸೇವೆಗೆ ಮೀಸಲಿಟ್ಟ ಪರಮಹಂಸ ಪರಿವ್ರಾಜಕಾಚಾರ್ಯರು ಶ್ರೀ ಶಂಕರರು.

ಸನ್ಯಾಸಿಗೆ-ಗುರುವಿಗೆ ಅವರ ನೆರವಿಗೆ, ಅವರ ಇಹದ ಬದುಕಿನ ಭೌತಿಕ ದೇಹಕ್ಕೆ ಅನಾರೋಗ್ಯವಾದಾಗ ಅವರನ್ನು ನೋದಿಕೊಳ್ಳಲು ಅವರಿಗೆ ಮನೆಮಂದಿ ಎಂಬ ಜನರಿಲ್ಲ! ಅಣ್ಣ-ತಮ್ಮ,ಅಕ್ಕ-ತಂಗಿಯರಿಲ್ಲ! ಬದಲಾಗಿ ನಾವೆಲ್ಲಾ ಅಂಥವರ ಶುಶ್ರೂಷೆಮಾಡಬೇಕು, ಅದು ನಮ್ಮ ಅದ್ಯ ಕರ್ತವ್ಯ.

ಯಾರೋ ಕೇಳಿದರು " ಅಂತಹ ಮಹಾತ್ಮರಿಗೆ ರೋಗ ಬರುವುದೇಕೆ? ಒಂದೊಮ್ಮೆ ಬಂದರೆ ತಾವೇ ತಪಸ್ಸಿದ್ಧಿಯಿಂದ ಅದನ್ನು ಬರದಂತೆ ನಿವಾರಿಸಿಕೊಳ್ಳಬಹುದಲ್ಲವೇ? "

ಇದಕ್ಕೆ ಉತ್ತರ--
ಸನ್ಯಾಸಿಗಳೂ ಜನ್ಮಾಂತರದ ಕರ್ಮವನ್ನು ಅನುಭವಿಸಲೇ ಬೇಕು. ಅವರ ಭೌತಿಕ ಕಾಯಕ್ಕೆ ಹಿಂದಿನ ಜನ್ಮಗಳ ಲವಲೇಶವಿದ್ದರೆ ಅದರಿಂದ ಅವರು ಮುಕ್ತರಾಗುವುದಿಲ್ಲ. ಅದನ್ನು ಪರಿಹರಿಸಿಕೊಳ್ಳಲು ಅವರು ಶಾರ್ಟ್ ಕಟ್ ಉಪಯೋಗಿಸುವುದಿಲ್ಲ,ಬದಲಿಗೆ ಅನುಭವಿಸಿಯೇ ಮುಂದಿನ ಕಾರ್ಯಕ್ಕೆ ಅಣಿಗೊಳ್ಳುತ್ತಾರೆ! ಹೀಗಾಗಿ ಅವರು ತಮ್ಮ ಮೇಲೆಯೇ ಮಂತ್ರಸಿದ್ಧಿ ಪ್ರಯೋಗಿಸಿಕೊಂಡು ಪಡೆದು ಬಂದ ಕರ್ಮಫಲವನ್ನು ತೊಡೆದುಹಾಕಲು ಇಷ್ಟಪಡುವುದಿಲ್ಲ-ಇದು ಗುರುತತ್ವದ ಒಂದು ಅಂಶಕೂಡ.

ಇಂತಹ ಸದ್ಗುರು ಸಂಕುಲಕ್ಕೆ ಕಳಶಃಪ್ರಾಯರಾಗಿ ನಿಂತ ನಮ್ಮ ಜಗದ್ಗುರು ಶಂಕರರನ್ನು ಒಮ್ಮೆ ಸ್ಮರಿಸೋಣ ಬನ್ನಿ-


ಸ್ಮರಿಸುವೆವಯ್ಯಾ ಶಂಕರ ಗುರುವರ
ನುತಿಸುವೆವಯ್ಯಾ ಭವಹರ

ಕಾಷಾಯಾಂಬರ ಕರದಿ ಕಮಂಡಲ
ಪದ್ಮಕರದಿ ಶಂಖ ಚಕ್ರವ ಪಿಡಿದು
ಶ್ರೀಪಾದನು ತಾನೆನ್ನುವ ರೂಪವ
ಲೋಕದಿ ತೋರಿದೆ ಬದುಕಿ ಮುನಿವರ

ವ್ಯಾಪಾರವು ಈ ಜೀವನ ನಾಟಕ
ಆಪ್ಯಾಯತೆಯಲಿ ಮೋಹದ ಮುಸುಕು
ಕೋಪ ಲೋಭ ಮದ ಮಾತ್ಸರ್ಯಗಳಲಿ
ಕಾಮನೆಗಳ ಅಲೆ ಬಲೆಯ ತೋರಿದನೇ

ಭರತ ಖಂಡದೀ ಭುವಿಯಲಿ ಜನಿಸುತ
ಅವಿರತ ಶ್ರಮಿಸುತ ಜನರನುದ್ಧರಿಸಿ
ಕವಿಕುಲಗುರು ನೀನಾಗುತ ವಿಶ್ವಕೆ
ಸವಿಯೂಟವ ನೀಡಿದೆಯೋ ಶಾಶ್ವತ

Sunday, May 9, 2010

ಅಮ್ಮಾ..ಎಂದರೇ ತೃಪ್ತಿಯು


ಕೇವಲ ಮದರ್‍ಸ ಡೇ ಆಚರಣೆಯಿಂದ ಯಾವ ಪ್ರಯೋಜನವೂ ಈ ಜಗತ್ತಿನಲ್ಲಿಲ್ಲ, ಬದಲಾಗಿ ಆ ತಾಯಂದಿರನ್ನು ಪ್ರತಿ ದಿನ ಪ್ರತಿ ಕ್ಷಣ ನೆನಪಿಸಿಕೊಂಡು ಅವರಿಗೆ ಅವರ ಮುಪ್ಪಿನ ಕಾಲದಲ್ಲಿ ಅವರನ್ನು ಎಲ್ಲಿಗೂ ಸಾಗಹಾಕದೆ, ವೃದ್ಧಾಶ್ರಮಕ್ಕೆ ಸೇರಿಸದೆ, ಅವರ ಅವಶ್ಯಕತೆಗಳನ್ನು-ಬೇಡಿಕೆಗಳನ್ನು ಪೂರೈಸಿದರೆ ಅದೇ ನಿಜವಾದ ಮದರ್‍ಸ್ ಡೇ ! ನಾವು ಪ್ರತಿನಿತ್ಯ ಟಿ.ವಿ ಚಾನೆಲ್ ಗಳಲ್ಲಿ, ಪೇಪರ್ ಗಳಲ್ಲಿ ನೋಡುತ್ತ/ಓದುತ್ತ ಇರುತ್ತೇವೆ--ಮಕ್ಕಳಿದ್ದೂ ಬೀದಿಪಾಲಾದ ಅಮ್ಮಂದಿರ ಬಗ್ಗೆ. ಯಾವ ತಾಯಿ ಕೂಡ ತನ್ನ ಮಗುವನ್ನು ಹಡೆದಾಗ ಮುಂದೆ ಅದರಿಂದ ತನ್ನ ಸ್ವಾರ್ಥಕ್ಕಾಗಿ ಏನನ್ನೋ ಬಯಸಿ ಹಡೆಯುವುದಿಲ್ಲ. ಅದು ನಿಸರ್ಗ ಸಹಜ ಕ್ರಿಯೆ. ಹಡೆದ ಮಗುವನ್ನು ಅತಿ ಪ್ರೀತಿಯಿಂದ ಲಾಲನೆ-ಪಾಲನೆ-ಪೋಷಣೆಮಾಡಿ ಬೆಳೆಸಿ, ಪ್ರಾಥಮಿಕ ವಿದ್ಯೆಯನ್ನು ತಾನೇ ಪ್ರಾರಂಭಿಸಿ ಮುನ್ನಡೆಸುವ ಅಮ್ಮನ ಪಾತ್ರ ಪ್ರತೀ ವ್ಯಕ್ತಿಯ ಬದುಕಿನಲ್ಲೂ ಬಹಳ ಅರ್ಥಗರ್ಭಿತ;ಸತ್ವಪೂರ್ಣ. ಅಮ್ಮನ ಆ ಜಾಗವನ್ನು ಯಾರೂ ತುಂಬಲು ಸಾಧ್ಯವೇ ಇಲ್ಲ.

ನಾವೆಲ್ಲ ಕೇವಲ ಶ್ರೀಸಾಮಾನ್ಯರು, ಇನ್ನು ಮಹಾತ್ಮರೆನಿಸಿದ ಶ್ರೀ ಆದಿಶಂಕರರು ತಾಯಿಗೆ ಒಬ್ಬನೇ ಮಗನಾಗಿದ್ದರು. ದೈವೇಚ್ಛೆಯಂತೆ ಸನ್ಯಾಸ ಸ್ವೀಕರಿಸಿದ ಅವರು ತಾಯಿಗೊಮ್ಮೆ ವಚನವಿತ್ತರು " ಅಮ್ಮಾ ನಿನ್ನ ಅಂತ್ಯಕಾಲಕ್ಕೆ ಎಲ್ಲಿದ್ದರೂ ಬಂದು ಸೇರುತ್ತೇನಮ್ಮ " ಎಂದು. ಹಾಗೇ ಅನೇಕ ವರ್ಷಗಳ ನಂತರ ಶಂಕರರು ಲೋಕಕಲ್ಯಾಣಾರ್ಥ ಬಹುದೂರದಲ್ಲಿರುವಾಗ ಅವರಿಗೆ ಧ್ಯಾನಾಸಕ್ತರಾಗಿ ಕುಳಿತೊಂದು ದಿನ ಅಮ್ಮನ ಅಂತ್ಯಕಾಲ ಸಮೀಪಿಸಿದ್ದು ತಿಳಿದುಬಂತು, ಕೂಡಲೇ ಕೇರಳದ ಕಾಲಟಿಗೆ ಧಾವಿಸಿದ ಶಂಕರರು ಅಮ್ಮನ ಸನಿಹಕ್ಕೆ ಬಂದರು, ಅದಾಗಲೇ ಅಮ್ಮ ಇಹದ ಬಂಧನ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದರು, ಅಮ್ಮನ ಆತ್ಮಕ್ಕೆ ಚಿರಶಾಂತಿಯನ್ನು ತನ್ನ ತಪೋಬಲದಿಂದ ಅನುಗ್ರಹಿಸಿದ ಶಂಕರರು ಕೇವಲ ಒಬ್ಬನೇ ಮಗನಾದ ಕಾರಣ ಅಮ್ಮನ ಅಂತ್ಯಕ್ರಿಯೆಗೆ ಸ್ವತಃ ಮುಂದಾದರು. ನೆರೆಹೊರೆಯ ಯಾರೂ ಅವರ ಸಹಾಯಕ್ಕೆ ಬರಲಿಲ್ಲ. ಯಾಕೆಂದರೆ ಸನ್ಯಾಸಿಗೆ ಕಾರ್ಮಾಧಿಕಾರವಿಲ್ಲ-ಅವ್ರು ಅದನ್ನೆಲ್ಲ ಮಾಡುವ ಹಾಗಿಲ್ಲ ಎಂಬುದು. ಯಾರ ಸಹಾಯಕ್ಕಾಗಿ ಕಾಯದೇ ಶಂಕರರು ತಮ್ಮ ಪೂರ್ವಾಶ್ರಮದ ಮನೆಯ ಪಕ್ಕದಲ್ಲೇ ಅಮ್ಮನ ಅಂತ್ಯಕ್ರಿಯೆ ನಡೆಸಿದರು. ಇಹದ ಕರ್ತವ್ಯವಾದ ಅಂತ್ಯೇಷ್ಟಿಯ ವಿಧಿವಿಧಾನಗಳನ್ನು ತಮ್ಮ ದಿವ್ಯ ತಪಸ್ಸಿದ್ಧಿಯ ಫಲದಿಂದ ಅರಿತು ಪೂರೈಸಿ ಅಮ್ಮನ ಇಹದ ಋಣವನ್ನು ನೆನೆದರು. ಅಂದಿನಿಂದ ಸನ್ಯಾಸ ಧರ್ಮದಲ್ಲಿ ಹೇಗಿರಬೇಕು ಎಂಬ ಅಧ್ಯಾಯಗಳನ್ನು ಬರೆದರು. ಹೀಗಿರುವಾಗ ಅಮ್ಮನಿಗೆ ಯಾವ ರೀತಿಯಲ್ಲೂ ಉಪಕರಿಸದೇ ನಮ್ಮ ಸ್ವಾರ್ಥದಲ್ಲೇ ಮುಳುಗಿರುವ ನಾವು ಕೇವಲ ಹೀಗೊಂದು ಪಾಶ್ಚಾತ್ಯರ ಗೌಣ ಪದ್ಧತಿಯನ್ನು ಅನುಕರಿಸಿ ಅನುಸರಿಸುವುದರಿಂದ ಮದರ್‍ಸ ಡೇ ಅರ್ಥಪೂರ್ಣವೇ ? ಅನೇಕ ಗಂಡಸರು ಮದುವೆಯಾದಮೇಲೆ ಹೆಂಡತಿಯ ಮಾತನ್ನು ಕೇಳಿ ಅಮ್ಮನನ್ನು ದೂರಮಾಡುತ್ತಾರೆಂಬುದು ಸರ್ವ ವೇದ್ಯ ಸಂಗತಿ. ಇಂದಿನ ಅಮ್ಮಂದಿರಂತೂ ಹಿಂದಿನವರ ಥರ ಇಲ್ಲ, ಅವರು ಹೊಂದಿಕೊಳ್ಳುವ ಸ್ವಭಾವದವರಗಿರುತ್ತಾರೆ, ಎಲ್ಲೋ ಏನೋ ಅಭಿಪ್ರಾಯ ಭೇದ ಬಂದುದಕ್ಕೆ ಅದನ್ನು ತಿದ್ದಬೇಕೇ ಹೊರತು ಅಮ್ಮನನ್ನು ದೂರಮಾಡುವುದು,ಯಾರದೋ ಸುಪರ್ದಿಗೆ ನೋಡಿಕೊಳ್ಳಲು ಬಿಡುವುದು ತರವಲ್ಲ. ಹೀಗೇ ಆಲೋಚಿಸುತ್ತಿರುವಾಗ ಇಳಿದ ಕಣ್ಣಿನ ಧಾರೆಗೆ ಅಕ್ಷರ ರೂಪ ಕೊಡಲು ಪ್ರಯತ್ನಿಸಿ ನಿಮ್ಮ ಮುಂದಿಡುತ್ತಿದ್ದೇನೆ.......

ಅಮ್ಮಾ..ಎಂದರೇ ತೃಪ್ತಿಯು

ಅವ್ವಾ ಎನ್ನಲೇ ?
ಅಬ್ಬೇ ನಿನ್ನನೂ
ಅಮ್ಮಾ..ಎಂದರೇ ತೃಪ್ತಿಯು
ಚೆನ್ನಾದ ಬಾಳು ನೀಡಿ
ನಮ್ಮನ್ನು ಹರಸಿದೆ
ಹಣ್ಣಾದ ನಿನ್ನ ಜೀವ
ನಮಗಾಗೀ ತುಡಿದಿದೇ
ಇನ್ನೆಲ್ಲಿ ತೀರಿಸಲಮ್ಮ
ನಿನ್ನೊಡಲಿನ ಆ ಋಣ.......ಅವ್ವಾ ಎನ್ನಲೇ ?||ಪ||


ಒಂಬತ್ತು ತಿಂಗಳಷ್ಟು
ನಮ್ಮನ್ನು ಬಸಿರೊಳೂ
ಮುಂದಷ್ಟು ವರುಷ ದಿನವೂ
ಸೊಂಟ ತೋಳಿನಲೀ ಹೊತ್ತೂ
ಈ ಲೋಕದ ಬದುಕಿನ ಹೆಜ್ಜೆ
ಕಲಿಸಿದೆ ನೀ ಪ್ರತಿ ಕ್ಷಣ......ಅವ್ವಾ ಎನ್ನಲೇ ? ||೧||


ಅಂಬೆಗಾಲನಿಕ್ಕಿ ಬೆಳೆದೂ
ಅಡುತ್ತಾ ಮಡಿಲೊಳೂ
ತುಂಬ ತಪ್ಪು ಹೆಜ್ಜೆ ಇಡುತಾ
ನಡೆದಂತಾ ದಿನಗಳೂ
ಹಂಬಲಿಸಿ ಬದುಕಿನ ತೊಡಕು
ಬೆಂಬಿಡದೇ ಅರೆಕ್ಷಣ.......ಅವ್ವಾ ಎನ್ನಲೇ ? ||೨||


ಓದು ಬರಹ ಕಲಿಸುತ ದಿನವೂ
ಕಥೆ ನೀತಿ ನಿಯಮಂಗಳಾ
ಸಾಧು ಗೋಧು ಪಿರಂಗಿ ಚಾರೀ
ಕಣ್ಣಾ ಮುಚ್ಚಾಲೆ ಆಟಂಗಳಾ
ವೇದ ಸಾರವೇ ತುಂಬಿದ ಶ್ಲೋಕ
ಆದೆ ಜ್ಞಾನದ ಹರಿವಾಣ.....ಅವ್ವಾ ಎನ್ನಲೇ ? ||೩||


ಹೊತ್ತಾರೆ ಅನ್ನವನಿಕ್ಕಿ
ಸಂತಸದೀ ನೋಡುತಾ
ಒಟ್ಟಾರೆ ಕಷ್ಟಗಳನೂ
ನಮ್ಮ ನಗುವಲಿ ಕಳೆಯುತಾ
ಹೆತ್ತ ಕರುಳಿನ ಕುಡಿಯೊಳು ನಿತ್ಯ
ತುಂಬಿ ಭವಿತವ್ಯದ ಹೂರಣ.....ಅವ್ವಾ ಎನ್ನಲೇ ? ||೪||


ಬೆಳೆಬೆಳೆಯುತ ದೊಡ್ಡವರಾಗಿ
ಸೇರಿದೆವೂ ಪಟ್ಟಣ
ಕಳೆಗುಂದಿದ ನಿನ್ನಯ ಮುಖವಾ
ಮರೆಯುತ್ತಾ ಜೀವನ
ಮುಪ್ಪಡರಿದ ನಿನ್ನಯ ಬದುಕಲಿ
ಬಂದೇವೇ ಅರೆಕ್ಷಣ?......ಅವ್ವಾ ಎನ್ನಲೇ ? ||೫||