ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, May 30, 2010

ಮರೆಯಲಾಗದ ಮಹಾನುಭಾವ ದಿ|ಶ್ರೀ ಶಂಭು ಹೆಗಡೆ ಕೆರೆಮನೆ


ಮರೆಯಲಾಗದ ಮಹಾನುಭಾವ ದಿ|ಶ್ರೀ ಶಂಭು ಹೆಗಡೆ ಕೆರೆಮನೆ

ಪಾರ್ತಿಸುಬ್ಬನಿಂದ ಹುಟ್ಟಿತೆನ್ನಲಾದ ಯಕ್ಷಗಾನ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಿಸಿಕೊಂಡು ಧೋ ಎಂದು ಸುರಿವ ಮಳೆಗಾಲದ ಮುಸಲಧಾರೆಯಲ್ಲಿ ಹೊರಗೆ ಹೋಗಲಾರದ ೪ತಿಂಗಳು ಮನೋರಂಜನೆಗಾಗಿ ಕೇವಲ ತಾಳಮದ್ದಲೆಯ ಮೂಲಕ ಪ್ರಾರಂಭಗೊಂಡ ಈ ಕಲೆ ಇಂದು ಶತಮಾನಗಳನ್ನು ದಾಟಿ ಸಮಗ್ರ ಕಲೆಯಾಗಿ ಅಭಿವೃದ್ಧಿಗೊಂಡಿದೆ. ಯಾರೇ ಏನೇ ಅಂದರೂ ವೃತ್ತಿ ಜೀವನವನ್ನಾಗಿ ಯಕ್ಷಗಾನವನ್ನು ಆಯ್ದು ಕೊಂಡವರಿಗೆ ಇಂದಿನ ಕಾಲ ಒಂದರ್ಥದಲ್ಲಿ ಒಳ್ಳೆಯಕಾಲವಾದರೂ ಎಲ್ಲರಿಗೂ ಅದು ಪೂರ್ಣಾವಧಿ ಅನ್ನನೀಡುವ ಕಾಲವಲ್ಲ--ಇದನ್ನು ಹೇಳಲು ಕಾರಣ ಇಷ್ಟೇ- ಈ ಕಲಾವಿದರು ಬಡತನದಲ್ಲೇ ಇರಬೇಕೇ ಹೊರತು ಇದು ವೈಯಕ್ತಿಕ ಬದುಕಿನಲ್ಲಿ ಸಿರಿತನತರುವ, ಅವರ ಅನುವು-ಆಪತ್ತಿನಲ್ಲಿ ಅನುಕೂಲಕ್ಕೆ ಬರುವ ಆಪದ್ಧನ ಕೊಡುವ ರಂಗವಲ್ಲ. ಬಹುತೇಕ ನಮ್ಮ ಕವಿ-ಸಾಹಿತಿಗಳಂತೆ ಯಕ್ಷರಂಗದ ಕಲಾವಿದರೂ ಬಡತನವನ್ನೇ ಹಾಸು ಹೊದ್ದವರು;ಹಾಗೇ ಬದುಕುವವರು.ಜೀವನದಲ್ಲಿ ವಿಪರ್ಯಾಸಗಳನ್ನು ಕಾಣುತ್ತಲೇ ಇರುತ್ತೇವೆ-ಉದಾಹರಣೆಗೆ ಸಾಲು ಮರದ ತಿಮ್ಮಕ್ಕ. ತಿಮ್ಮಕ್ಕ ದಂಪತಿಗೆ ಮಕ್ಕಳಿರಲಿಲ್ಲ, ಮಕ್ಕಳ ಬದಲಿಗೆ ಅವರು ಮರಗಳನ್ನು ಬೆಳೆಸಿದ್ದು ಅದೂ ಸಾರ್ವಜನಿಕರಿಗೆ ನೆರಳು ನೀಡುವಂತೆ ರಸ್ತೆಬದಿಯಲ್ಲಿ ಬೆಳೆಸಿದ್ದು ಅದಕ್ಕಾಗಿ ಸರಕಾರ ಪ್ರಶಸ್ತಿ ನೀಡಿದ್ದು ಈಗ ಇತಿಹಾಸ. ಆದರೆ ಮುಪ್ಪಿನ ಈ ಕಾಲದಲ್ಲಿ ಚಿಕ್ಕ ಗುಡಿಸಲಲ್ಲಿ ತಿಂದುಣ್ಣಲು,ಹಾಸು-ಹೊದೆಯಲು,ಮೈಮುಚ್ಚಲು ಬಟ್ಟೆ ಈ ಎಲ್ಲ ಮೂಲಭೂತ ಜೀವನಾವಶ್ಯಕ ವಸ್ತುಗಳಿಲ್ಲದೇ ಸೊರಗುವ ಆ ಹಿರಿಯ ಜೀವಕ್ಕೆ ಕೇವಲ ಕಾಗದದಲ್ಲಿ ಬರೆದು ಕಟ್ಟುಹಾಕಿಸಿದ ಪ್ರಶಸ್ತಿ ಅನುಪಯುಕ್ತ. ಅನೇಕ ಚಿಕ್ಕಪುಟ್ಟ ಸಂಘ-ಸಂಸ್ಥೆಗಳೂ ಕರೆದು ಕೊಟ್ಟಿರುವುದು ಮತ್ತದೇ ಥರದ ಕಟ್ಟುಹಕಿಸಿದ ಮುದ್ರಿತ ಕಾಗದ. ಅದರಲ್ಲಿ ಏನು ಬರೆದಿದೆ ಎಂಬುದನ್ನೂ ಓದಲಾರದ ಆಕೆಗೆ ಯಾವ ಅಶಾಕಿರಣವೂ ಇಲ್ಲ. ಗುಡಿಸಲಿನಲ್ಲಿ ಆ ಪ್ರಶಸ್ತಿಗಳನ್ನು ನೇತುಹಾಕಲೂ ಜಾಗವಿಲ್ಲ! ಕೇವಲ ಸರಕರದ ಮಾಶಸನ ಆಕೆಗೆ ಜೀವನಧಾರ. ವೃದ್ಧಾಪ್ಯ ಸಹಜ ಕಾಯಿಲೆಬಂದರೆ ಚಿಕಿತ್ಸೆಗೆ ಬೇಕಾದ ಹಣ ಕೂಡ ಆಕೆಯಲ್ಲಿಲ್ಲ. ಹೀಗೇ ಯಕ್ಷರಂಗದಲ್ಲೂ ಇದೇ ರೀತಿ. ವೇದಿಕೆಯಲ್ಲಿ ರಾಜಮಹಾರಾಜರಾಗಿ ಮೆರೆಯುವ ನಟರು ಮಾರನೇ ದಿನ ಸಾಲಮಾಡಿ ಅಕ್ಕಿತರಬೇಕಾದ ಪರಿಸ್ಥಿತಿ ಇದ್ದರೆ ಇದು ಆಶ್ಚರ್ಯವಲ್ಲ! ಅದೂ ಅಂಗಡಿಯಾತ ಕೊಟ್ಟರೆ ಉಂಟು ಕೊಡದಿದ್ದರೆ ಇಲ್ಲ! ಹೊಟ್ಟೆಯಮೇಲೆ ತಣ್ಣೀರು ಬಟ್ಟೆಯೇ ಗತಿ! ಹೀಗಿರುತ್ತ ಸಂಸಾರವನ್ನು ನಿಭಾಯಿಸುವುದು ಎಷ್ಟು ಸುಲಭದ ಕೆಲಸ ಎಂದು ನವು ಅರ್ಥಮಾಡಿಕೊಳ್ಳಬಹುದು. ಸಾಲದ್ದಕ್ಕೆ ಅಂದಿನ ಪ್ರತೀ ಇಡೀರಾತ್ರಿ ಯಕ್ಷಗಾನದಲ್ಲಿ ನಟಿಸಿದ ಬಹುತೇಕ ಕಲಾವಿದರಿಗೆ ನಿದ್ದೆಯ ಮಂಪರು ಹೋಗಿಸಲು ಬೀಡಿ-ಸಿಗರೇಟು-ಮದ್ಯ ಇತ್ಯಾದಿ ದುರ್ವ್ಯಸನಗಳು ಹುಟ್ಟಿಕೊಂಡವು. ಇಂದಿನ ಯುವ ಕಲಾವಿದರ ಪೀಳಿಗೆಯಲ್ಲಿ ಅವು ಸಿರಿತನದ ದ್ಯೋತಕವಾಗಿ ಗುಟ್ಕಾ,ಸಿಗರೇಟು ಮತ್ತು ವಿವಿಧ ಮಾದರಿಯ ಮಲ್ಯ-ಖೋಡೆಗಳ ಮದಿರಾರಸವಾಗಿ ಹರಿದಾಡುತ್ತಿವುದು ಖೇದಕರ!


ಇಂತಹ ಯಕ್ಷರಂಗದಲ್ಲಿ ಯಾವ ಚಟಗಳಿಗೂ ದಾಸರಾಗದೇ ಇರುವ ಶುದ್ಧ-ಸಾತ್ವಿಕ ಕುಟುಂಬ ಎಂದರೆ ಅದು ಕೆರೆಮನೆ ಕುಟುಂಬ. ತನ್ನ ತಾದತ್ಮ್ಯತೆಯಿಂದ ಯಕ್ಷಗಾನಕ್ಕೆ ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟ ದಿ| ಶ್ರೀ ಶಿವರಾಮ ಹೆಗಡೆಯವರ ತಂದೆ ಇಡಗುಂಜಿಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಏನೋ ಕೆಲಸಮಾಡಿಕೊಂಡಿದ್ದರಂತೆ, ಯಕ್ಷಗಾನಪ್ರಿಯನಾದ ಆ ದೇವನ ಮಹಿಮೆಯೋ ಎಂಬಂತೆ ಮಗ ಶಿವರಾಮ ಹುಟ್ಟಿದ, ಎಳವೆಯಲ್ಲೇ ಗೆಜ್ಜೆ ಕಟ್ಟಿದ, ಬೆಳೆದು ಮೇಳ ಕಟ್ಟಿದ! ಹೆಸರಾಂತ ದಿ| ಶ್ರೀ ಮೂಡ್ಕಣಿ ನಾರಾಯಣ ಹೆಗಡೆಯವರ ಸಹವರ್ತಿಯಾಗಿ, ಯಕ್ಷರಂಗದ ಭೀಷ್ಮರೆಂದೇ ಅಂದಿಗೆ ಖ್ಯಾತಿ ಪಡೆದಿದ್ದ ದಿ|ಶ್ರೀ ಸದಾನಂದ ಹೆಗಡೆಯವರ ಶಿಷ್ಯನಾಗಿ ಬೆಳೆದ ಶಿವರಾಮರು ತಂದೆ ಪೂಜಿಸಿದ,ಆರಾಧಿಸಿದ ಶ್ರೀ ಇಡಗುಂಜಿ ಮಹಾಗಣಪತಿಯ ಹೆಸರನ್ನೇ ಇಟ್ಟು ಯಕ್ಷಗಾನ ಮೇಳವನ್ನು ಕಟ್ಟಿದರು. ಈ ಶಿವರಾಮರಿಗೆ ಶಂಭು ಮತ್ತು ಗಜಾನನ ಎಂಬ ಇಬ್ಬರು ಮಕ್ಕಳು. ತಂದೆಯ ವೃತ್ತಿ ಮಕ್ಕಳಿಗೆ ಎನ್ನುವ ಕಾಲ ಅದಾಗಿದ್ದರಿಂದಲೋ ಏನೋ ಇಬ್ಬರೂ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದರು. ಇವತ್ತಿಗೆ ಈ ಇಬ್ಬರೂ ದಿವಂಗತರು.

ನೋಡಿದೆಯಾ ವಿದುರ....ಕೌರವನೊಡ್ಡೋಲಗವ ....ಇಂತಹ ಯಕ್ಷಗಾನದ ಹಾಡುಗಳು ನೆನಪಿಗೆತರುವುದು ದಿವಂಗತ ಶ್ರೀ ಶಂಭುಹೆಗಡೆ ಕೆರೆಮನೆಯವರನ್ನು. ಕಲಾವಿದನಾಗಿ ಬಹಳ ಶ್ರಮಿಸಿ,ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸುತ್ತ, ಎಲ್ಲೂ ಸಂಪ್ರದಾಯಕ್ಕೆ ಚ್ಯುತಿಯಾಗದಂತೆ ನೋಡಿಕೊಂಡು ಯಕ್ಷರಂಗಕ್ಕೆ ಹೊಸ ಹೊಸ ಪ್ರಯೋಗಗಳನ್ನು ಅಳವಡಿಸಲು ಉಪಕ್ರಮಿಸಿದ ಅಚ್ಯುತರವರು. ಹರೆಯದಲ್ಲಿ ತಂದೆ ಅರ್ಥಿಕ ಒದ್ದಾಟವನ್ನು ಕಂಡು ಮೇಳಕ್ಕೆ ಹೊಸ ರೂಪುರೇಷೆ ನೀಡಿದ ಶಂಭುಹೆಗಡೆ ಬಹುತೇಕರಿಗೆ ಶಂಭಣ್ಣನಾಗುವಷ್ಟು ಹತ್ತಿರವಾದವರು. ಜೋಡಿಸಿ-ಬಿಡಿಸಿಡಬಹುದಾದ ಅರ್ಧಚಂದ್ರಾಕೃತಿಯ ರಂಗಸಜ್ಜಿಕೆ ಕೆರೆಮನೆ ಮೇಳದ ಪ್ರಮುಖ ಆವಿಷ್ಕಾರ. ಆಗಿನ ಕಾಲಕ್ಕೆ ಮೇಳವೆಂದರೆ ಬರೇ ಕಲಾವಿದರ ಕೂಟವಾಗಿರಲಿಲ್ಲ, ಕಲಾವಿದರೆಲ್ಲ ನಾಟಕ ಮಂಡಳಿಯ ರೀತಿ ನೌಕರರೇ ಆಗಿರುತ್ತಿದ್ದು, ವೇದಿಕೆ, ಆಸನಗಳು,ಟೆಂಟು-ಗುಡಾರ,ಟೆಂಟು ಕಟ್ಟುವ ಸಾಮಗ್ರಿಗಳು, ದೀಪಕ್ಕಾಗಿ ಜನರೇಟರ್-ಅದರ ಹೊಟ್ಟೆಗೆ ವ್ಯವಸ್ಥೆ, ಟೆಂಟು ಕಟ್ಟಲು ಕೂಲಿ ಜನ, ಮೇಳದಲ್ಲಿ ಅಡಿಗೆಮನೆ-ಬಾಣಸಿಗ, ಅಡಿಗೆ ಸಾಮಗ್ರಿ, ಪಾತ್ರೆ-ಇತ್ಯಾದಿ, ಚೌಕಿಮನೆಯಲ್ಲಿ ವೇಷ-ಭೂಷಣಗಳು,ಬಣ್ಣಗಳು-ಮುಖವರ್ಣಿಕೆಯ ಸಾಮಗ್ರಿಗಳು,ಸಾಗಟಕ್ಕೆ ವಹನಗಳು-ಲಾರಿ ಇವುಗಳನ್ನೆಲ್ಲ ಸಮರ್ಪಕವಾಗಿ ನೋಡಿ-ನಿಭಾಯಿಸಲು ಒಬ್ಬ ವ್ಯವಸ್ಥಾಪಕರು ಹೀಗೇ ಒಂದೇ ಎರಡೇ...ಇದೂ ಒಂದು ಥರ ವ್ಯವಸ್ಥಿತ ಸಂಸ್ಥೆಯಾಗಿರುತ್ತಿತ್ತು[ಇಂದು ಕೆಲವೇ ಇಂತಹ ಸಂಸ್ಥೆಗಳು ಉಳಿದುಕೊಂಡಿವೆ] ಪ್ರತೀ ರಾತ್ರಿ ಬೇರೇ ಬೇರೆ ಪ್ರದೇಶಗಳಲ್ಲಿ ಆಟ, ಹೀಗಾಗಿ ಬೆಳಗಾಗುತ್ತಿದ್ದಂತೆ ಹಾಕಿದ ಟೆಂಟು ಕಿತ್ತು ಇನ್ನೊಂದು ಊರಿಗೆ ಹೋಗಿ ೧೧ಗಂಟೆಯೊಳಗೆ ಅಲ್ಲಿಗೆ ತಲುಪಿ ಅಲ್ಲಿ ಮತ್ತೆ ಟೆಂಟಿನ ಪುನರ್ನಿರ್ಮಾಣ!ಸಾಗಟದ ಲಾರಿ ಕೆಟ್ಟುನಿಂತರೆ, ಯಾವುದೋ ಒಬ್ಬ ಕಲಾವಿದ ರಜಾಹಾಕಿದರೆ, ಬರದಿದ್ದರೆ ಅವನ ಜಾಗ ತುಂಬಿಕೊಳ್ಳಲು ಪರ್ಯಾಯಕಲಾವಿದರು,ಕಲಾವಿದರ ಆರೋಗ್ಯ, ಕೂಲಿ ಜನರ ಆರೋಗ್ಯ, ಕಾಲದ ವೈಪರೀತ್ಯದಿಂದ ಘಟಿಸಬಹುದಾದ ಮಳೆ-ಗಾಳಿಗಳಂತಹ ಆಕಸ್ಮಿಕ ಸನ್ನಿವೇಶಗಳು-ಇವುಗಳನ್ನೆಲ್ಲ ನಿಭಾಯಿಸುವ ಸರ್ಕಸ್ ಕಂಪನಿಯಾಗಿತ್ತು ಯಕ್ಷಗಾನಮೇಳ!

ಏನೇ ಇದ್ದರೂ ಕೈಲಾಗುವವರೆಗೆ ಇಂತಹ ಒಂದು ವ್ಯವಸ್ಥೆಯನ್ನು ನಡೆಸಿದ, ಯಜಮಾನನಾಗಿ ಕಲೆಕ್ಷನ್ ಆಗದಿದ್ದರೂ ನಂಬಿಕೊಂಡ ಕಲಾವಿದರಿಗೆ,ಕೆಲಸದವರಿಗೆ ಒಂದಿನಿತೂ ಕೈಕೊಡದ ನಿಜವಾದ ’ಯಜಮಾನ’ ಶ್ರೀ ಶಂಭು ಹೆಗಡೆ. ಪರಿಸ್ಥಿತಿ ಹೇಗೇ ಇದ್ದರೂ ಅದನ್ನು ಮೆಟ್ಟಿನಿಂತು ಅವರು ನಿಭಾಯಿಸಿದ ಪಾತ್ರಗಳು ಬಹಳ ಮತ್ತು ಅವಿಸ್ಮರಣೀಯ ಕೂಡ. ಎಣ್ಣೆಗೆಂಪಿನ ಉರುಟು ಮುಖದ ಈ ಸ್ಪುರದ್ರೂಪಿಯ ಹಲ್ಲುಗಳು ಸ್ಪಟಿಕದಂತೇ ಕಂಗೊಳಿಸುತ್ತಿದ್ದವು. ವೇಷ ಯಾವುದೇ ಇರಲಿ ರಂಗಕ್ಕೆ ಬಂದಾಗ ಅವರ ಮುಖದಲ್ಲಿರುವ ಲಕ್ಷಣವೇ ಅದ್ಭುತ, ಮಲ್ಲಿಗೆಯನ್ನೂ ನಾಚಿಸುವ ಸಹಜ ನಗು, ಹೆಂಗಸರನ್ನೂ ಅಳಿಸುವ, ಆಂತರ್ಯದಿಂದ ಹೊಮ್ಮುತ್ತಿದ್ದ ಭಾವಪೂರಿತ ಅಳು ಇವೆರಡೂ ಬಹಳ ಅಪ್ಯಾಯಮಾನ. ಬಹಳ ಎತ್ತರವೂ ಅಲ್ಲದ, ಬಹಳ ಕುಳ್ಳೂ ಅಲ್ಲದ ಈ ವ್ಯಕ್ತಿ ಬೊಜ್ಜಿರದ ತನ್ನ ದೇಹದಂತೆ ತನ್ನ ತಲೆಯನ್ನೂ ಬಹಳ ತೆಳ್ಳಗಿಟ್ಟುಕೊಂಡು ಸದಾಕಾಲ ಮೌಲ್ಯಾಧಾರಿತವಾಗಿರುವ ಆವಿಷ್ಕಾರಗಳ-ಹೊಸತನಗಳ ಹುಡುಕಿವಿಕೆಯಲ್ಲೇ ತನ್ನನ್ನು ತೊಡಗಿಸಿಕೊಂಡಿರುತ್ತಿದ್ದರು.

ಶಂಭಣ್ಣ ನಿರ್ವಹಿಸಿದ ನಳ,ಹರಿಶ್ಚಂದ್ರ,ರಾಮ,ಕೌರವ,ಕರ್ಣ,ಕೃಷ್ಣ,ದಶರಥ ಮುಂತಾದ ಪಾತ್ರಗಳು ಈ ಕಲೆಯ ಅರಾಧಕರಿಗೆ, ಯಕ್ಷಗಾನ ಕಲಾನುಭೂತಿ ಇರುವವರಿಗೆ ಎಂದಿಗೂ ಮರೆಯಲು ಸಾಧ್ಯವಿಲ್ಲದ ಪಾತ್ರಗಳು. ಇದರ ಹೊರತಾಗಿ ಹನುಮಂತ,ಈಶ್ವರ,ವಿಶ್ವಾಮಿತ್ರ ಹೀಗೆ ಹತ್ತು-ಹಲವು ವೇಷಗಳನ್ನು ಇವರು ಮಾಡಿದ್ದರು-ಮಾಡಿ ಸೈ ಎನಿಸಿಕೊಂಡಿದ್ದರು.


ಕಲಿ ಕಿರೀಟಿಯೆ ಕೇಳು ...ಏನಪೇಳಲಿ ನಿನಗೆ........
ಕರ್ಣನಾಗಿ ಅವರು ರಥದ ಚಕ್ರ ಹೂತುಹೋದ ಸನ್ನಿವೇಶವನ್ನು ಅಭಿನಯಿಸುತ್ತಿದ್ದುದ್ದು ಎಲ್ಲರ ಕಣ್ಣಿಗೆ ಅಲ್ಲಿ ಹೂತುಹೋದ ರಥವನ್ನೇ ತೋರುತ್ತಿತ್ತು[ನಿಜವಾಗಿ ಅಲ್ಲಿ ರಥವಿರದಿದ್ದರೂ], ಬಾಹುಕನಾಗಿ ಅಷ್ಟಾವಕ್ರ ದೇಹಪಡೆದು,ದಮಯಂತಿಯನ್ನು ಕಳೆದುಕೊಂಡು ಗುರುತು ಹೇಳದೇ ಸ್ನೇಹಿತ ಋತುಪರ್ಣ ರಾಜನ ಆಸ್ಥಾನದಲ್ಲಿ ಕೆಲಸಮಾಡಿಕೊಂಡಿದ್ದು, ದಮಯಂತಿಯ ಪುನಃಸ್ವಯಂವರದ ಕರೆ ಕೇಳಿ ತನ್ನ ಮಿತ್ರ ನಳನ ಮಡದಿಗೆ ಮತ್ತೆ ಸ್ವಯಂವರವೇಕೆ ಎಂದುಕೊಂಡು ತಡೆಯಲಾರದೇ ಸ್ನೇಹಿತ ಋತುಪರ್ಣ ಹೊರಟು ನಿಂತಾಗ ಕಣ್ಣಲ್ಲಿ ಹರಿಸುವ ಭಾವನೆಗಳ ಮಹಾಪೂರಕ್ಕೆ ಸಭಾಸದರು ಕೊಚ್ಚಿಹೋಗುತ್ತಿದ್ದರು. ನಿರ್ಯಾಣದ ರಾಮನಾಗಿ ಅವರು ತನ್ನ ಬಂಧುವರ್ಗ, ಪ್ರಜೆಗಳು, ಮಾಂಡಲಿಕರು ಇತ್ಯಾದಿ ಹಲವರಿಗೆ ಕೊನೆಯದಾಗಿ ಕ್ರೂತಜ್ಞತೆ ಹೇಳಿ ನಿರ್ಗಮಿಸುವಾಗ ಬಹುತೇಕರ ಕರವಸ್ತ್ರಗಳು ಒದ್ದೆಯಾಗಿರುತ್ತಿದ್ದವು. ಮಗನನ್ನು ಕಾಡಿಗೆಕಳುಹಿಸಿದ ಅಪರಾಧೀ ಭಾವಕ್ಕೆ ಒಳಗಾಗಿ ಪರಿಪರಿಯಾಗಿ ನೋಯುವ-ಬೇಯುವ,ಬೆಂದು ಬಸವಳಿದು ಸಾಯುವ ದಶರಥನ ಪಾತ್ರ ಆ ಮಾತುಗಳು ಅದ್ವಿತೀಯ-ಅನನ್ಯ! ಹೆಗಲಮೇಲೆ ಕಂಬಳಿ ಹೊದ್ದು, ಕೈಯಲ್ಲಿ ಕೋಲು ಹಿಡಿದು ಒಡೆಯ ವೀರಬಾಹುವಿನ ಆಜ್~ಝೆಯಂತೆ ಸ್ಮಶಾನ ಕಾಯುತ್ತಿರುವಾಗ ತಮ್ಮಮಗನನ್ನೇ ಸುಡಲು ಬಂದ ಭಾರ್ಯೆ ಚಂದ್ರಮತಿಯನ್ನುದ್ದೇಶಿಸಿ ಆಡುತ್ತಿದ್ದ ಮಾತುಗಳು ಬಹುಶಃ ನಮ್ಮ ಕನ್ನಡ ಸಿನಿಮಾ ಕೊಡುವುದಕ್ಕಿಂತ ಸಾವಿರಪಟ್ಟು ಉತ್ತಮವಾಗಿರುತ್ತಿದ್ದವು. ಮನೋಜ್ಞ ಹಾಗೂ ಹಿತಮಿತ ಅಭಿನಯದೊಂದಿಗೆ ಪ್ರತೀ ವೇದಿಕೆಯಲ್ಲಿ ಮಾಡುವ ಅದದೇ ಪಾತ್ರಗಳೂ ಕಳಾವಂತಿಕೆಯಲ್ಲಿ-ಪಡಿಮೂಡಿಸುವಲ್ಲಿ ವಿಭಿನ್ನ-ವಿಶೇಷ! ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಹಾಡುಗಳನ್ನು ನೆಬ್ಬೂರು ಭಾಗವತರು ಹಾಡುತ್ತಿರುವಾಗ, ಕರ್ಕಿಯ ಭಂಡಾರೀ ಮನೆತದವರು ಚಂಡೆ-ಮದ್ದಳೆ ಬಾರಿಸುತ್ತಿರುವಾಗ ಶಂಭಣ್ಣನ ಪಾತ್ರ ರಂಗದಲ್ಲಿದ್ದರೆ ಅದು ಯಕ್ಷಲೋಕವೇ ಸರಿ! ಸದ್ಯಕ್ಕೆ ಅದು ನ ಭೂತೋ ನ ಭವಿಷ್ಯತಿ!

ಕಾಲಾನಂತರದಲ್ಲಿ ಈ ಕಲೆಯ ಪೈಪೋಟಿ ಮತ್ತು ಕಲಾಸಕ್ತರ ಮನೋಸ್ಥಿತಿ ಬದಲಾಗಬಹುದಾದ ಸನ್ನಿವೇಶವನ್ನು ಮುನ್ನವೇ ಅಂದಾಜಿಸಿದ್ದ ಬುದ್ಧಿವಂತ ಶಂಭಣ್ಣ ಕಾಲಮಿತಿ ಪ್ರಯೋಗವನ್ನು ಹುಟ್ಟುಹಾಕಿದ್ದರು. ಪ್ರಾರಂಭದಲ್ಲಿ ಇದಕ್ಕೆ ಬಹಳ ವಿರೋಧಾಭಾಸ ಕಂಡರೂ ನಂತರ ಬಹಳ ಜನ ಅದನ್ನೇ ಇಷ್ಟಪಟ್ಟರು. ಸ್ವಲ್ಪಮಟ್ಟಿಗೆ ಮಾತು-ನೃತ್ಯ್-ಪಾತ್ರಗಳಿಗೆ ಕಡಿವಾಣಹಾಕುವ ಕಾಲಮಿತಿ ಪ್ರಯೋಗ ಕೊನೇಪಕ್ಷ ಇಡೀ ರತ್ರಿ ಕುಳಿತು ನೋಡಲು ಅನಾನುಕೂಲವಿರುವ ಆಸಕ್ತರಿಗೆ ಈ ಕಲೆಯನ್ನು ಆಸ್ವಾದಿಸಲು ಒಂದು ಪರ್ಯಾಯ ಮಾರ್ಗ! ಒಂದನ್ನು ಪಡೆಯುವಾಗ ಇನ್ನೊಂದನ್ನು ಸ್ವಲ್ಪ ಕಳೆದುಕೊಳ್ಳುವುದು ಎಷ್ಟೋ ಕಾರ್ಯಗಳಲ್ಲಿ ಸೃಷ್ಟಿಯ ಸಹಜಧರ್ಮ. ಹೀಗಾಗಿ ಇಡೀ ರಾತ್ರಿಯಲ್ಲಿ ನಡೆದು ಪಡೆಯಬಹುದಾದ ಹಾಸ್ಯ-ಲಹರಿ, ಚಿಕ್ಕ-ಪುಟ್ಟ ಪಾತ್ರಗಳು,ಉದ್ದನೆಯ ಸಭಾಲಕ್ಷಣದ ಕಾರ್ಯ ಇವುಗಳನ್ನೂ ಮತ್ತು ಕೆಲವು ಪಾತ್ರಗಳ ಕೆಲವು ಹಾಡು-ಸನ್ನಿವೇಶಗಳನ್ನೂ ಇಲ್ಲಿ ಕೈಬಿಡಲಾಗುವುದರಿಂದ ಇದನ್ನು ಸಹಿಸಿಕೊಂಡಿ ಆಸ್ವದಿಸಬೇಕಾದುದು ಮೊದಲಿನಿಂದ ಇಡೀರಾತ್ರಿ ನೋಡುತ್ತ ಬಂದ ಈ ಕಲೆಯ ಹಲವು ಆರಾಧಕರ ಅನಿಸಿಕೆ-ಅನಿವಾರ್ಯತೆ. ಏನಿದ್ದರೂ ಸಮ್ ಥಿಂಗ್ ಈಸ್ ಬೆಟರ್ ದ್ಯಾನ್ ನಥಿಂಗ್ ಅಲ್ಲವೇ ?

ಯಾವೊಂದೂ ಹೆಜ್ಜೆಗುರುತು, ಸ್ಥಾನಮನ ಸರಿಯಗಿ ಸಿಗದ ಯಕ್ಷಗಾನಕ್ಕೆ ದಿ|ಶ್ರೀ ಶಿವರಾಮ ಕಾರಂತರ ರೀತಿಯಲ್ಲಿ ಪ್ರಯತ್ನಶೀಲರಾಗಿ ಹಲವು ಮಾನ್ಯತೆಗಳನ್ನೂ,ಹಕ್ಕು-ಬಾಧ್ಯತೆಗಳನ್ನೂ ಜಾನಪದ-ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಶ್ರೀಯುತರು ತಂದುಕೊಟ್ಟರು. ಯಕ್ಷಗಾನ ಕಲೆ ಜನಪದವಲ್ಲ, ಇಲ್ಲಿ ನವರಸ ಭರಿತವಾದ ವೈಖರಿ ಇದೆ, ತಾಳ-ಲಯ-ಗಚ್ಚುಗಾರಿಕೆಯಿದೆ, ಸ್ವಚ್ಛ-ಅಚ್ಚಕನ್ನಡದ ಶಬ್ಧಗಳಗಳ ಮಾತಿನ ಲಹರಿಯಿದೆ, ಚಂಡೆ-ಮದ್ದಳೆಗಳ ಪೂರಕ ಉಪೋದ್ಘಾತವಿದೆ, ಶಾಸ್ತ್ರೀಯ ಕುಣಿತದ ಲಾಸ್ಯವಿದೆ ಎಂಬುದನ್ನೆಲ್ಲ ನಿರ್ಭಿಡೆಯವಾಗಿ ಹೇಳಿ ಪ್ರತ್ಯೇಕ ಯಕ್ಷಗಾನ ಅಕಾಡೆಮಿ ಮಾಡಲು ಮೊಟ್ಟಮೊದಲಾಗಿ ಸೂಚಿಸಿದ ಅನುಮೋದಿಸಿದ ಏಕೈಕ ವ್ಯಕ್ತಿ ನಮ್ಮ ಶಂಭಣ್ಣ ಅಂದರೆ ತಪ್ಪಲ್ಲ. ದೇಶವಿದೇಶಗಳಲ್ಲಿ ಈ ಕಲೆಯ ಸೊಬಗು-ಸಂಸ್ಕೃತಿಯನ್ನು ವಿಜೃಂಭಿಸಿದ ಹೆಗ್ಗಳಿಕೆ ಕೆರೆಮನೆ ಮೇಳಕ್ಕೆ ಸಲುತ್ತದೆ. ಈ ಕಲೆಗೊಂದು ಕ್ರಮಬದ್ಧ ಕಲಿಕೆಯ ರೂಪಕೊಡಲು ಶ್ರಮಿಸಿದ ಶಂಭಣ್ಣ ಕೆರೆಮನೆಯಲ್ಲಿ ಶ್ರೀಮಯ[ ಅವರ ಟ್ರೂಪ್ ನ ಶಾಟ್ ಫಾರ್ಮ್] ಕಲಾಕೇಂದ್ರವನ್ನು ಕಟ್ಟಿ-ಬೆಳೆಸಿ ಯಶಸ್ವಿಯಾಗಿ ನಡೆಸಿದ್ದಾರೆ.ಬದುಕಿದ್ದಾಗಲೇ ಸಂಶೋಧನೆಯ ಸಾಹಿತ್ಯಕ್ಕೆ ವಸ್ತುವಾದ ಶ್ರೀ ಶಂಭು ಹೆಗಡೆಯವರ ಯಕ್ಷಗಾನದ ಪತ್ರಗಳ ಬಗ್ಗೆ ಸಾಗರದ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿರುವ ಶ್ರೀ ಜಿ.ಎಸ್.ಭಟ್ ಅವರಿಗೆ ಡಾಕ್ಟರೇಟ್ ಪಡೆಯುವಲ್ಲಿ ಸಹಕಾರಿಯಾಯಿತು.

ಇಂದು ಅವರ ಮಗ ಶ್ರೀ ಶಿವಾನಂದ ಹೆಗಡೆ ಕೆರೆಮನೆ ಮೇಳವನ್ನು ಮುನ್ನಡೆಸಿದ್ದಾರೆ. ಈಗ ಕೇವಲ ಕಾಲಮಿತಿ ಪ್ರಯೋಗದ ಮೇಳ. ಹೆಚ್ಚಾಗಿ ರಂಗಮಂದಿರಗಳಲ್ಲಿ, ಸಜ್ಜಾಗಿರುವ ವೇದಿಕೆಗಳಲ್ಲಿ ಇವರು ತಮ್ಮ ತಂಡವನ್ನು ತಂದು ಪ್ರದರ್ಶನ ನೀಡೂತ್ತಾರೆ. ತನ್ನ ಪ್ರಯತ್ನದಿಂದ ಬೆಂಗಳೂರಿನಂತಹ ಅನೇಕ ಶಹರ,ಪಟ್ಟಣಗಳಲ್ಲಿ ಇವರು ಪ್ರದರ್ಶನ ನೀಡಿ ಹಲವು ವಿದ್ಯಾರ್ಥಿ ಅಭಿಮಾನಿಗಳನ್ನೂ ಪಡೆದಿದ್ದಾರೆ. ಮಿತ್ರರಾದ ಶಿವಾನಂದರು ಒಮ್ಮೆ ನಮ್ಮ ಆಫೀಸಿಗೆ ತನ್ನ ಲ್ಯಾಪ್ ಟಾಪ್ ಸರಿಪಡಿಸಿಕೊಳ್ಳಲು ಬಂದಿದ್ದರು. ಆಗ ಅವರನ್ನು ಕೇಳದೆಯೇ ಅವರ ಮಂಡಳಿಯ ಛಾಯಾಚಿತ್ರಗಳಿರುವ ಕಟ್ಟೊಂದನ್ನು[ಡೈರೆಕ್ಟ್ರಿ] ಪಡೆಯಲು ಉದ್ಯುಕ್ತನಗುವಷ್ಟು ತಹತಹ ನನಗಿತ್ತು, ಕಾರಣವಿಷ್ಟೇ ನನಗೆ ಇತ್ತೀಚೆಗೆ ಎಲ್ಲೂ ಶಂಭಣ್ಣನ ಯಕ್ಷಗಾನ ನೋಡಸಿಗಲಿಲ್ಲ, ಕೊನೇಪಕ್ಷ ಅವರ ಬೇರೆ ಬೇರೆ ಹಾವ-ಭಾವಗಳ ಭಾವಚಿತ್ರಗಳಾದರೂ ನನ್ನಲ್ಲಿರಲಿ, ಮತ್ತು ಅದು ಬಹುಬೇಗ ನನಗೆ ಸಿಗಲಿ ಎಂಬುದಾಗಿತ್ತೇ ಹೊರತು ಅದರ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ. ಆಮೇಲೆ ಸ್ವತಃ ಅವರೇ ಕರುಣಿಸಿದ ಕೆಲವು ಚಿತ್ರಗಳು ನನ್ನಲ್ಲಿವೆ.ಅವರಲ್ಲಿ ಕೆರೆಮನೆ ಮೇಳದ ವೀಡಿಯೋ ಬಗ್ಗೆ ವಿಚಾರಿಸಿದ್ದೆ, ಕೆಲವು ಇವೆ-ಆದರೆ ಇನ್ನೂ ಹೊಅರತಂದಿಲ್ಲ-ನಿಮಗೆ ಬೇಕಾದರೆ ಕೊಡುತ್ತೇನೆ ಎಂದಿದ್ದರು. ನಾನು ಅವರಿಂದ ಪಡೆದ ಛಾಯಚಿತ್ರಗಳಲ್ಲಿ ಕೆಲವು ಗಣಕಯಂತ್ರಕ್ಕೆ ವೈರಸ್ ಬಂದಾಗ ಕೆಲವು ಅಳಿಸಿ ಹೋಗಿವೆ. ಮೊನ್ನೆ ಪತ್ರಿಕೆಯೊಂದರಲ್ಲಿ ಒಂದು ಸಂದೇಶ ಬಂತು ’ನಿಜರಾಮ ನಿರ್ಯಾಣ’ ಸಿ.ಡಿ. ಬಿಡುಗಡೆಯಾಗಿದೆ,ಆಸಕ್ತರು ಕೊಳ್ಳಬಹುದು ಎಂದು.ಇದುವರೆಗೆ ಕೆರೆಮನೆ ಮೇಳದ ವೀಡಿಯೋ ಸಿ.ಡಿಗಳು ಹೊರಬಂದಿರಲಿಲ್ಲ. ಇದೀಗ ಆ ಒಂದು ಮಾಧ್ಯದಲ್ಲಿ ಮೊದಲ ಕಾಣಿಕೆಯಾಗಿ ಅದನ್ನು ತಂದಿದ್ದಾರೆ. ಈ ಸುದ್ದಿ ಕೇಳಿ ಬಹಳ ಸಂತೋಷವಾಯ್ತು.

ವ್ಯಕ್ತಿಗಿಂತ ವ್ಯಕ್ತಿತ್ವ ಬಹಳ ಮುಖ್ಯ. ಕಲಾವಿದರ ವೈಯಕ್ತಿಕ ಬದುಕಿನಲ್ಲಿ ಹಲವಾರು ಕಷ್ಟಕೋಟಲೆಗಳು ಇರುತ್ತವೆ ಯಾಕೆಂದರೆ ಅವರೂ ಮನುಷ್ಯರಲ್ಲವೇ ? ವ್ಯಕ್ತಿಯಾಗಿ ತನ್ನ ಹಲವು ನೋವುಗಳನ್ನೂ ಮರೆತು ಸಮಾಜದ ಒಳಿತಿಗಾಗಿ ಸಾತ್ವಿಕ,ಸಮಗ್ರ ಹಾಗೂ ಸಮರ್ಥ ಕಲೆಯೊಂದನ್ನು ಪ್ರಚುರಪಡಿಸಿ " ಶರಣರ ಬದುಕಿನ ಅರ್ಥವನ್ನು ಮರಣದಲ್ಲಿ ನೋಡು ಎಂದು ಪ್ರಾಜ್ಞರು ಹೇಳಿದ್ದಾರೆ" ಎನ್ನುತ್ತ ತಾನೂ ಒಬ್ಬ ಶರಣನೇ ಸರಿ ಎಂಬುದನ್ನು ಸಾಬೀತುಪಡಿಸಿದ ದಿ|ಶ್ರೀ ಶಂಭು ಹೆಗಡೆ ಕರಾವಳಿ ಹಾಗೂ ಮಳೆನಾಡು ಜಿಲ್ಲೆಗಳಲ್ಲಿ ಉತ್ತಮ ವಾಗ್ಗೇಯಕಾರರಾಗಿ ಹಲವು ಸಾಹಿತ್ಯಾಸಕ್ತರಿಗೆ,ಭಾವುಕರಿಗೆ,ಕಲಾರಸಿಕರಿಗೆ,ಕಲಾಫೋಷಕರಿಗೆ,ಕಲಾರಾಧಕರಿಗೆ ತಮ್ಮ ನಳಪಾಕವನ್ನು ಬಡಿಸಿದ್ದಾರೆ, ನಿರ್ಯಾಣದ ಶ್ರೀರಾಮನಾಗಿಯೇ ಅಭಿನಯಿಸುತ್ತ ಆರಾಧ್ಯದೈವದ ಸನ್ನಿಧಿಯಿಂದ ನೇರ ದೇವರ ಆಸ್ಥಾನಕ್ಕೆ ನಿರ್ಗಮಿಸಿಬಿಟ್ಟಿದ್ದಾರೆ, ಅನೇಕ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಶ್ರೀರಾಮನ ರೀತಿಯಲ್ಲೇ ಜನಪ್ರಿಯರಾಗಿಯೂ ಇದ್ದ ಈ ವ್ಯಕ್ತಿಯ ನಿರ್ಗಮನ ’ನಿಜರಾಮನಿರ್ಯಾಣ’ ಎಂದರೆ ಅತಿಶಯೋಕ್ತಿಯಲ್ಲ.

3 comments:

  1. ಒಬ್ಬ ದೀಮಂತ ಕಲಾವಿದನಾದ ದಿ.ಕೆರೆಮನೆ ಶಂಬು ಹೆಗಡೆಯವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರ ವೇಷ-ಭೂಷಣ, ಮಾತಿನ ವೈಕರಿ ಮುಂತಾದವುಗಳು ಅತ್ಯದ್ಭುತ! ನಾನು ಸಣ್ಣವನಿರುವಾಗ ನಮ್ಮ ತಂದೆ ಅವರ ಬಗ್ಗೆ ಹೇಳುತ್ತಿದ್ದರು. ಅವರ ವೇಷವನ್ನು ನೋಡಬೇಕೆಂಬ ಆಸೆ ಹಾಗೆಯೇ ಉಳಿದಿತ್ತು. ಒಮ್ಮೆ ಸಾಗರದ ನಮ್ಮ ದೊಡ್ಡಮ್ಮನ ಮನೆಗೆ ಹೋದಾಗ ಆ ಭಾಗ್ಯ ಲಭಿಸಿತ್ತು.
    ಅಂತಹ ಮೇರು ವ್ಯಕ್ತಿಯ ಬಗೆಗಿನ ಲೇಖನವನ್ನು ಓದುವ ಪುಣ್ಯ ದೊರಕಿಸಿಕೊಟ್ಟ ನಿಮಗೆ ಧನ್ಯವಾದಗಳು.

    ReplyDelete
  2. atyuttama lekhana. yakshagaanada ondu apurva adyayada parichaya maadikottiddiraa....

    ReplyDelete
  3. Thanks to Sri Praveen & Sri Sitaram & also to others who read this

    ReplyDelete