ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, May 19, 2010

ಮಡಿ-ಸ್ವಚ್ಛತೆ ಮತ್ತು ಸುಗಂಧ ದ್ರವ್ಯಗಳು !!


ಮಡಿ-ಸ್ವಚ್ಛತೆ ಮತ್ತು ಸುಗಂಧ ದ್ರವ್ಯಗಳು


ಮಡಿ ಎಂದರೆ ಸ್ವಚ್ಛತೆ ಅಥವಾ ಸ್ವಚ್ಛತೆಯೇ ಮಡಿ ಎನ್ನಬಹುದು. ನಮ್ಮ ಪೂರ್ವಜರು ಕೊಳೆಯಿಂದ, ಗಲೀಜಿನಿಂದ, ಮಲದಿಂದ, ಅಸ್ವಚ್ಛತೆಯಿಂದ ಹರಡಬಹುದಾದ ಅನೇಕ ಸಾಂಕ್ರಾಮಿಕ,ಅಸಾಂಕ್ರಾಮಿಕ ಕಾಯಿಲೆಗಳನ್ನು ದೂರವಿಡಲು ’ಮಡಿ’ಯನ್ನು ಹುಟ್ಟುಹಾಕಿದರು.

ಮನುಷ್ಯನ ಕಣ್ಣು,ಮೂಗು,ಕಿವಿ,ಬಾಯಿ ಮತ್ತು ಚರ್ಮ ಎಂಬ ಪಂಚೇಂದ್ರಿಯಗಳು ಮತ್ತದೇ ಕಣ್ಣು, ಮೂಗು,ಕಿವಿ,ಬಾಯಿ,ಚರ್ಮ, ಗುದದ್ವಾರ, ಮೂತ್ರದ್ವಾರ,ಗುಹ್ಯದ್ವಾರ,ಉಗುರುಗಳ ಸಂದಿ ಹೀಗೇ ನವದ್ವಾರಗಳ ಮೂಲಕ ಶರೀರದ ಒಳಗಿನ ಕಲ್ಮಷಗಳನ್ನು ಹೊರಹಾಕುತ್ತಿರುತ್ತವೆ-ಇದು ಸಹಜ ಪ್ರಕ್ರಿಯೆ. ಈ ಶರೀರ ತ್ಯಾಜ್ಯಗಳು ಅನುಪಯುಕ್ತ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತವೆಯಲ್ಲದೇ ಹೊರಬಂದ ನಂತರ ಪ್ರಕೃತಿಯಲ್ಲಿರುವ, ವಾಯುವಿನಲ್ಲಿರುವ ಇನ್ನಿತರ ಬ್ಯಾಕ್ಟೀರಿಯಾಗಳೊಡನೆ ಸೇರಿ ಅಸಹ್ಯಕರ ವಾಸನೆಯನ್ನು ಸೃಜಿಸುತ್ತವೆ.

ಅದರಲ್ಲಂತೂ ನಾವು ತಿನ್ನುವ ಆಹಾರಗಳ ಮೇಲೆ ಅವಲಂಬಿಸಿ ನಮ್ಮ ಶರೀರದ ನೈರ್ಮಲ್ಯಗ್ರಂಥಿಗಳು ವಿವಿಧ ವಾಸನೆಯ ತ್ಯಾಜ್ಯಗಳನ್ನು ಹೊರದಬ್ಬುತ್ತವೆ. ಉದಾಹರಣೆಗೆ ನಾವು ಹಲಸಿನ ಹಣ್ಣು ತಿಂದಿದ್ದರೆ ಮಾರನೇ ದಿನ ಹಲಸಿನ ಹಣ್ಣಿನ ದುರ್ಬಲಗೊಂಡ ವಾಸನೆಯನ್ನು ನಮ್ಮ ಮಲದ ರೂಪದಲ್ಲಿ ಕಾಣಬಹುದು, ಬೆಳ್ಳುಳ್ಳಿ ತಿಂದವರ ಮಲ ಸ್ವಲ್ಪ ಬೆಳ್ಳುಳ್ಳಿಯ ವಾಸನಾಯುಕ್ತವಾಗಿರುತ್ತದೆ. ಸೀಬೆಹಣ್ಣನ್ನು ಅತಿಯಾಗಿ ತಿಂದವರ ಬೆವರು ಸೀಬೆಹಣ್ಣಿನ ವಾಸನೆಯನ್ನೇ ಹೊಂದಿರುತ್ತದೆ! ಒಟ್ಟಾರೆ ನಮ್ಮ ಶರೀರದ ತ್ಯಾಜ್ಯಗಳಲ್ಲಿ ಹಲವು ಥರದ ಸೂಕ್ಷ್ಮಾಣು ಜೀವಿಗಳು ಇದ್ದು ಅವು ವಾಸನೆಗೆ ಕಾರಣವಾಗುತ್ತವೆ ಎಂಬುದಂತೂ ಸತ್ಯ. ಮಲವಿಸರ್ಜನೆಗೆ ಮಾಡಿದಮೇಲೆ ಕೈಯ್ಯನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು, ಮಲ-ಮೂತ್ರವಿಸರ್ಜಿಸಿದ ನಂತರ ಕೈಕಾಲೌಗಳನ್ನು ತೊಳೆದುಕೊಳ್ಳಬೇಕಾದ್ದು ಸ್ವಚ್ಛತೆಯ ಅವಿಭಾಜ್ಯ ಅಂಗ. ಕಂಡಕ್ಟರ್ ಕೊಟ್ಟ ನೋಟು ಅಥವಾ ಇನ್ಯಾರೋ ಬಳಸಿ ನಮ್ಮ ಕೈಸೇರುವ ಪ್ರತೀ ವಸ್ತುವಿನಲ್ಲೂ ಕೆಟ್ಟ ಬ್ಯಾಕ್ಟೀರಿಯಾಗಳು ಇರಬಹುದು,ಹೀಗಾಗಿ ತಿಂಡಿ-ಊಟಕ್ಕೂ ಮೊದಲು ಕೈಗಳನ್ನು ಸ್ವಛ್ಛವಾಗಿ ತೊಳೆದುಕೊಳ್ಳುವುದಕ್ಕೆ ಆದ್ಯತೆ ಕೊಡಬೇಕು.


ನಮ್ಮ ಶರೀರ ಎಷ್ಟು ಗೊಂದಲದ ಗೂಡೆಂದರೆ ತಿಂದ ಆಹಾರದ ಕಣಗಳು ಹಲ್ಲುಗಳ ಸಂದಿಯಲ್ಲಿ ಸಿಕ್ಕಿಕೊಂಡು ಕೊಳೆತು ದುರ್ಗಂಧವನ್ನು ಬೀರುವುದರ ಜೊತೆಗೆ, ಅಲ್ಲಿ ಹುಟ್ಟುವ ಸೂಕ್ಷ್ಮಾಣು ಜೀವಿಗಳು ಹಲ್ಲುಗಳ ಮೇಲ್ಪದರವನ್ನು ಕೊರೆದೋ ಅಥವಾ ಸಿಹಿಯ ರಾಸಾಯನಿಕ ಪ್ರಕಿಯೆಯಿಂದ ಹಲ್ಲುಗಳ ಮೇಲ್ಪದರ ಕರಗಿಯೋ ಹಲ್ಲುಗಳು ಹುಳುಕಾಗಿ ಹಲ್ಲುನೋವು ಪ್ರಾರಂಭವಾಗುವುದು-ಇದು ಕಾಲಕ್ಕೆ ಸರಿಯಾಗಿ ಹಲ್ಲುಜ್ಜದವರ ಸ್ಥಿತಿ. ಇನ್ನು ಹಲ್ಲು ಉಜ್ಜುತ್ತಲೇ ಇದ್ದರೂ ಕೆಲವು ಹಲ್ಲುಗಳು ಹಾಳಾಗುವುದು ಅನುವಂಶೀಯ ಪ್ರಕ್ರಿಯೆ! ಆದರೆ ನಮ್ಮಲ್ಲಿ ಅನೇಕರು ಎಷ್ಟು ಸಮಯ ಆಹಾರ ತಿಂದ ನಂತರ ಹಲ್ಲುಜ್ಜುತ್ತೇವೆ. ಹಲ್ಲುಜ್ಜಲು ನಮ್ಮ ಪ್ರಾಚೀನರು ಇದ್ದಿಲು,ಸ್ಪಟಿಕ ಇವುಗಳನ್ನೆಲ್ಲ ಸೇರಿಸಿ ತಯಾರಿಸಿದ ದಂತಮಂಜನ ಪುಡಿಯನ್ನು ಉಪಯೋಗಿಸುತ್ತಿದ್ದರು.ಆದರೆ ನಮ್ಮಲ್ಲಿ ಈಗ ಅನೇಕ ವಿಧದ ಟೂತ್ ಪೇಸ್ಟ್ ಗಳು ಬಂದರೂ ಅವು ಒಂದೇ ಬಹಳ ವಾಣಿಜ್ಯೀಕರ್‍ಅಣದ ಧೋರಣೆಯಿಂದ ತಯಾರಿಸಲ್ಪಟ್ಟ ಕಳಪೆಯವು ಅಥವಾ ಅವು ಸರಿಯಾದ ದಂತಮಂಜನದ ಮೂಲವಸ್ತುಗಳನ್ನು ಹೊಂದಿರುವುದಿಲ್ಲ! ಹೀಗಿದ್ದರೂ ನಮ್ಮಲ್ಲಿ ಇದನ್ನಾದರೂ ಕೊನೇಪಕ್ಷ ಸರಿಯಾಗಿ ಉಪಯೋಗಿಸುವವರು ವಿರಳ. ದಂತಕ್ಷಯವೆಂಬ ಹೆಸರು ಕೇಳಿದ್ದೇವೆ-ಆದರೆ ಅದನ್ನು ತಡೆಗಟ್ಟುವುದು ಸಾಧ್ಯವೆಂಬುದನ್ನು ನೆನಪಿಡುವುದಿಲ್ಲ! ಗುಟ್ಕಾ,ಕೋಲಾ,ಚಿಪ್ಸ್ ಗಳಂಥ ರೆಡಿ ಟು ಯೂಸ್ ಪದಾರ್ಥಗಳು ಹಲ್ಲಿನ ಮೇಲೆ ದುಷ್ಪರಿಣಾಮ ಮಾಡಿದರೂ ಅವುಗಳು ನಮಗೆ ಬೇಕೇ ಬೇಕು ಅಲ್ಲವೇ? ನಮ್ಮ ಹಿಂದಿನವರು ಒಮ್ಮೆ ಆಹಾರ ಸೇವಿಸಿದಮೇಲೆ ಕನಿಷ್ಠ ೧೦ ಸರ್ತಿ ಶುದ್ಧ ನೀರಿನಿಂದ ಬಾಯಿಮುಕ್ಕಳಿಸುತ್ತಿದ್ದರು. ಬೇವಿನ ಕಡ್ಡಿ, ಮುತ್ತುಗದ ಕಡ್ಡಿ ಮುಂತಾದ ಕಡ್ಡಿಗಳನ್ನು ಉಪಯೋಗಿಸಿ ದಂತಮಂಜನಮಾಡುತ್ತಿದ್ದರು!

ಏನೇ ಇರಲಿ ನಮ್ಮ ಶರೀರ ನಿರ್ಮಲವಾಗಿದ್ದರೆ ಅದು ನಮಗೆ ಆರೋಗ್ಯಪೂರ್ಣ ದಿನಗಳನ್ನು ಕೊಟ್ಟು ಯಾವುದೇ ಕೆಲಸ ಮಾಡಲು ಸಹಕಾರಿಯಾಗುತ್ತದೆ,ನಾವು ಹಾಗಾಗೇ ಇದ್ದರೆ ಮಿಕ್ಕುಳಿದ ಜನರಿಗೆ ನಮ್ಮ ದುರ್ವಾಸನೆ ಸಹಿಸಲು ಸಾಧ್ಯವಗದಿರುವುದರ ಜೊತೆಗೆ ನಮ್ಮ ಶಾರೀರಿಕ ಮತ್ತು ಮಾನಸಿಕ ಸ್ಥಿತಿ ಹದಗೆಡುತ್ತದೆ. ಹೀಗಾಗಿ ಸರ್ವೇಂದ್ರಿಯಗಳಿಗೆ ಪ್ರಧಾನವಾಗಿ ಸ್ನಾನ ಬೇಕು. ದಿನಕ್ಕೆ ಎರಡಾವರ್ತಿ ಕೊನೇಪಕ್ಷ ಒಮ್ಮೆ ಮುಡಿಯಿಂದ ಅಡಿಯವರೆಗೆ ಸ್ನಾನಮಾಡಲೇಬೇಕು. ಹಾಗೊಮ್ಮೆ ಮಾಡಿದಾಗ ಇಡೀ ಶರೀರ ನವ ಚೈತನ್ಯ ಪಡೆದು ಮನಸ್ಸು ಪ್ರಪುಲ್ಲಗೊಳ್ಳುತ್ತದೆ. ಪ್ರಪುಲ್ಲಗೊಂಡ ಮನಸ್ಸು ಸಾಧನೆಗೆ ಅನುಕೂಲಕರವಾಗಿರುತ್ತದೆ. ಹೀಗಾಗಿ ನಮ್ಮೆಲ್ಲಾ ಆಚರಣೆಗಳಲ್ಲಿ ಸ್ನಾನಮಾಡಿ ಮಡಿಯಾಗು ಎಂದು ಹೇಳುತ್ತೇವೆ. ಸ್ನಾನ ಮಾಡಿದಾಗ ಸಿಗುವ ಫ್ರೆಶ್ನೆಸ್ ನಿಂದ ಮುಂದಿನ ನಮ್ಮ ಕೆಲಸಗಳು ಬಹಳ ಉತ್ಸುಕತೆಯಿಂದ ಪೂರೈಸಲ್ಪಡುತ್ತವೆ. ಮನಸ್ಸಿಗೆ ಮಂಕು ಕವಿದಿದ್ದರೆ ಒಮ್ಮೆ ಸ್ನಾನಮಾಡಿ ನೋಡಿ, ಅಷ್ಟರಲ್ಲೇ ಅರ್ಧ ಮಂಕು ಮಾಯ!

ಸ್ನಾನ ಮಾಡಿದಮೇಲೆ ಸ್ವಚ್ಛ ಬಟ್ಟೆ ಉಟ್ಟುಕೊಂಡರೆ ಮನಸ್ಸು ಇನ್ನಷ್ಟು ಉಲ್ಲಸಿತವಾಗಿರುತ್ತದೆ. ಶುದ್ಧ ಬಟ್ಟೆ ನಮಗೆ ಪೊಸಿಟಿವ್ ಎನರ್ಜಿ ಕೊಡುತ್ತದೆ, ಉನ್ನತ ಚೈತನ್ಯವನ್ನು ಒದಗಿಸುತ್ತದೆ. ಅದಕ್ಕೇ ಎಲ್ಲಾ ಕೆಲಸಗಳಿಗೂ ಒಂದೇ ತೆರನಾದ ಬಟ್ಟೆ ಇರದಿರಲಿ ಎಂಬ ಸದುದ್ದೇಶದಿಂದ ನಮ್ಮ ಹಿರಿಯರು ’ಮಡಿ’ ಎಂಬ ಬಟ್ಟೆಯನ್ನು ಸೃಜಿಸಿದರು. ನಾರಿನಿಂದ ಮಾಡಿದ್ದು, ಬಿಳಿಯ ಬಣ್ಣ ಹೊಂದಿದ್ದು, ಬೇರೇ ಕಲೆಗಳಿರದ ಶುದ್ಧ ಬಟ್ಟೆಯನ್ನು ಶುದ್ಧ ನೀರಿನಲ್ಲಿ ಅದ್ದಿ ತೆಗೆದು ಹಿಂಡಿ ಗಾಳಿಯಲ್ಲಿ ಸೂರ್ಯನ ಬಿಸಿಲಲ್ಲಿ ಪ್ರತ್ಯೇಕವಾಗಿ ಒಣಗಿಸಿ, ಬೇರೆ ಬಟ್ಟೆಗಳಿಗೆ ಸೋಕಿಸದೇ ಉಟ್ಟರೆ ಅದು ಮಡಿ ಬಟ್ಟೆ, ದಾಟ್ ಹ್ಯಾಸ್ ಗಾಟ್ ಪೊಸಿಟಿವ್ ಎನರ್ಜಿ ಜನರೇಟೆಡ್ ಅಂಡರ್ ದಿ ಸನ್! ಅಂತಹ ಬಟ್ಟೆ ಉಟ್ಟು ಕುಳಿತಾಗ ಒಳ್ಳೆಯ ಕಾರ್ಯಗಳನ್ನು ಮಾಡಲು ಮನಸ್ಸೆಂಬ ವೇದಿಕೆ ಸಂಪೂರ್ಣ ಸಜ್ಜಾಗುತ್ತದೆ, ಇಲ್ಲದಿದ್ದರೆ ಇಲ್ಲ! ಒಮ್ಮೆ ಉಪಯೋಗಿಸಿದ ಈ ಮಡಿಯನ್ನು ಮತ್ತೆ ಉಪಯೋಗಿಸಲು ಮತ್ತೆ ಅದೇ ತೊಳೆಯುವ,ಒಣಗಿಸುವ ಕ್ರಮ ಅನುಸರಿಸಬೇಕು. ಒಮ್ಮೆ ತೊಳೆದು, ಉಟ್ಟು, ಅದ್ದನ್ನುಟ್ಟಾಗಲೇ ತಿಂಡಿ-ತೀರ್ಥ,ಊಟ ಇತ್ಯಾದಿಗಳನು ಪೂರೈಸಿದರೆ, ಅದಕ್ಕೆ ನಮ್ಮ ಬೆವರು, ತುಪ್ಪ, ಹಾಲು-ಮೊಸರು ಇತ್ಯಾದಿ ಯವುದೇ ಪದಾರ್ಥ ಹತ್ತಿಕೊಂಡಿದ್ದರೆ ಅದು ಕ್ರಮೇಣ ಕೆಟ್ಟ ವಾಸನೆಸೂಸುವ ವಿಶೇಷ ಬಟ್ಟೆಯಾಗಿ ಪರಿವರ್ತಿತವಾಗುತ್ತದೆಯೇ ಹೊರತು ಅದು ಮಡಿಯಾಗುವುದಿಲ್ಲ! ಹಿರಿಯರು ಹೇಳಿದ್ದಾರೆ ನಾರು ಅಥವಾ ರೇಷ್ಮೆ ಬಟ್ಟೆ ಶುದ್ಧ ಅಂತ, ಹೀಗಾಗಿ ಅದನ್ನುಟ್ಟು ಏನೇ ಮಾಡಿದರೂ ಮೈಲಿಗೆ ಸೋಕದ ಅದ್ಭುತ ಬಟ್ಟೆ ಅದು ಅಂತ ತಿಳಿದು ವರ್ತಿಸಿದರೆ ಅದು ನಮ್ಮ ಗಾಢಾಂಧಕಾರವಲ್ಲದೇ ಮತ್ತೇನೂ ಅಲ್ಲ! ಅಲ್ಲಿ ದೇವರು ನಮಗೆ ಸಹಾಯಕನಗಿ ಬಂದು ಅಯ್ಯಾ ಬಟ್ಟೆ ಒಗೆದುಕೋ ಎಂದು ಹೇಳುವುದಿಲ್ಲ ! ಪ್ರತಿದಿನ ನಾವು ಬಳಸುವ ಬಟ್ಟೆಯನ್ನು ನೇರ ಬಿಸಿಲಲ್ಲಿ ಒಣಗಿಸಲಾಗದಿದ್ದರೂ, ಒಗೆದು ಒಣಗಿಸಿದ ಬಟ್ಟೆಯನ್ನು ಧರಿಸಬೇಕೇ ವಿನಃ ಬಳಸಿದ ಬಟ್ಟೆಯನ್ನೇ ವಾರಾಂತ್ಯದವರೆಗೆ ಅದು ಪರರಿಗೆ ತೀರಾ ಅಸಹ್ಯವಗುವವವರೆಗೆ ಬಳಸುವುದು ಶುದ್ಧಾಚಾರದ ಕೊರತೆಯ ಶುದ್ಧ ಲಕ್ಷಣ! ಕೆಲವರು ಒಳ ಉಡುಪುಗಳನ್ನೂ ಕೂಡ ಹಾಗೇ ಒಗೆಯದೇ ಬಳಸುವುದು ನನ್ನ ಗಮನಕ್ಕೆ ಬಂದಿದೆ- ಶಿವ ಶಿವಾ ಎನ್ನೊಡೆಯನೇ ಎಂದುಕೊಂಡು ಸುಮ್ಮನಾಗಿದ್ದೇನೆ-ಸುಮ್ಮನಾಗುತ್ತೇನೆ, ಸ್ವಲ್ಪ ಸುಲಭ ಸಾಧ್ಯರಾದರೆ ತಿಳಿಹೇಳುತ್ತೇನೆ. ಬಟ್ಟೆಗಳನ್ನು ಸ್ವಚ್ಛಗೊಳಿಸಲು-ಮಡಿಮಾಡಲು ಇರುವ ಜನರೇ ಮಡಿವಾಳರು! ಹರಿವ ನದಿಯ ಹೊಸ ಶುದ್ಧ ನೀರಲ್ಲಿ ಬಟ್ಟೆಗಳನ್ನು ಶುಭ್ರಗೊಳಿಸುವುದು ಅವರ ಕಾಯಕವಾಗಿತ್ತು, ಆದರೆ ಇಂದು ಅದೂ ಕೂಡ ವಾಣಿಜ್ಯೀಕರಣದಿಂದ ದೂರದ ಮಾತಾಗಿದೆ. ನದಿಗಳು ಬತ್ತಿವೆ, ಜಲಮೂಲಗಳು ನಾಪತ್ತೆಯಾಗಿವೆ. ಇರುವ ಕೂಡಿಟ್ಟ ನೀರಲ್ಲೇ ಅನೇಕ ಬಟ್ಟೆಗಳನ್ನು ಒಗೆಯಬೇಕಾಗಿ ಬಂದು ಮಡಿಯೆಂಬುದು ಕೇವಲ ಶಬ್ಢವಾಗಿದೆ!


ಮೋಚಿಗಳನ್ನು ಮತ್ತು ಕ್ಷೌರಿಕರನ್ನು ಸಂಪರ್ಕಿಸಿದಾಗ ಹಿರಿಯರು ಮೈಲಿಗೆಯ ಭಾವ ಹೊಂದುತ್ತಿದ್ದರು, ಕಾರಣ ಅವರು ಹಲವಾರು ಜನರ ಸಂಪರ್ಕಕ್ಕೆ ಬರುತ್ತಾರೆ, ಅವರ ಕೈ ಹಲವರನ್ನು ಸಂಪರ್ಕಿಸುತ್ತದೆ, ಅಲ್ಲಿ ಬ್ಯಾಕ್ಟೀರಿಯಾಗಳು ಹರಿದಾಡುತ್ತವೆ.ಅದಕ್ಕೇ ಮನಗೆ ಬಂದ ಮೇಲೆ ಸ್ನಾನಾದಿಗಳನ್ನು ಪುನಃ ಪೂರೈಸಿ ಶುಚಿಗೊಳ್ಳುತ್ತಿದ್ದರು.ಇಂದು ಅಧುನಿಕತೆಯ ಸೋಗಿನಲ್ಲಿ ಕ್ಷೌರಿಕರಲ್ಲಿ ಗಡ್ಡಬೋಳಿಸಿಕೊಂಡ ನಮ್ಮಲ್ಲಿ ಬಹಳಜನ ಹಾಗೇ ಇನ್ನಾವುದೋ ಕೆಲಸಕ್ಕೆ ಹೋಗುತ್ತೇವೆ, ಅವನು ನಮ್ಮ ಮೈಗೆ ಹಾಸುವ ಬಟ್ಟೆ, ಉಜ್ಜುವ ಬ್ರಶ್,ಕ್ಷೌರ ಕತ್ತಿ ಎಲ್ಲವನ್ನೂ ಹಲವರಿಗೆ ಉಪಯೋಗಿಸುತ್ತಿರುತ್ತಾನೆ ಎಂಬುದನ್ನು ಮರೆಯುತ್ತೇವೆ. ಯಾರೋ ಬಂದು ಬೆವರು ವಾಸನೆ ಸೂಸುತ್ತ ನಮ್ಮೆದುರಲ್ಲೇ ಅವರ ಕಂಕುಳ ಸಂದಿಯ ಕೂದಲನ್ನು ಅದೇ ಕ್ಷೌರಕತ್ತಿಯಿಂದ ತೆಗೆಸಿಕೊಂಡಾಗ ಮನಸ್ಸಿಗೆ ಒಂಥರಾ ಆಗುತ್ತದೆಯಲ್ಲವೇ? ಆದರೆ ಮರುಕ್ಷಣ ಅದನ್ನು ಮರೆತು ಮತ್ತೆ ಹಾಗೆ ಮುನ್ನುಗ್ಗುತ್ತೇವೆ ಅಲ್ಲವೇ? ಈಗೀಗ ಏಡ್ಸ್ ಎಂಬ ರೋಗ ಬಂದ ಮೇಲೆ ಕೊನೇಪಕ್ಷ ಕತ್ತಿಯ ಬ್ಲೇಡ್ [ಮುಂದಲುಗು]ಅನ್ನಾದರೂ ಬದಲಾಯಿಸುತ್ತಾರಲ್ಲ ಎಂಬುದೇ ಒಂದು ಸಂತಸದ ವಿಷಯ. ಇರಲಿ ನಮ್ಮ ಪ್ರಾಚೀನರು ಸ್ವಚ್ಛತೆಯ ದೃಷ್ಟಿಯಿಂದ ಹಾಗೆ ಇದನ್ನೆಲ್ಲ ಮೈಲಿಗೆ ಅಂದಿದ್ದು ತಪ್ಪೇ ?

ಪರಿಮಳ ದ್ರವ್ಯಗಳ ಬಳಕೆ ನಮ್ಮ ಜೀವನಕ್ಕೆ ಜೀವನೋತ್ಸಾಹ ಇಮ್ಮಡಿಸಲು ಕಾರಣವಗುತ್ತದೆ. ಅನಾದಿ ಕಾಲದಿಂದಲೂ ಯಾಲಕ್ಕಿ,ಪಚ್ಚೆತೆನೆ,ಲವಂಗ,ಕರ್ಪೂರ,ಪಚ್ಚಕರ್ಪೂರ, ಕೇಸರಿ, ಶ್ರೀಗಂಧ,ತುಲಸಿ, ಭಿಲ್ವ ಮುಂತಾದ ಅನೇಕಾನೇಕ ಮೂಲವಸ್ತುಗಳಿಂದ ಪರಿಮಳ ದ್ರವ್ಯಗಳನ್ನು ತಯಾರಿಸಿ ಉಪಯೋಗಿಸುತ್ತಿದ್ದರು. ಇಂದು ನಾವು ಕ್ರತ್ರಿಮವಾಗಿ ಅನೇಕ ಪರಿಮಳದ್ರವ್ಯಗಳನ್ನು ಸಿದ್ಧಪಡಿಸುವುದನ್ನು ಕಾಣುತ್ತೇವೆ, ಆದರೆ ಬಳಸುವುದು ಸ್ನಾನಮಾಡದಾಗ! ಇದು ಸರಿಯದ ಕ್ರಮ ಅಲ್ಲ. ನಾವು ಸ್ನಾನವನ್ನೇ ಮಾಡಿದ್ದರೂ ಕಾಲಾನುಕ್ರಮದಲ್ಲಿ ಗಂಟೆಗಳಕಾಲ ಕೆಲಸದಲ್ಲಿ ತೊಡಗಿರುವಾಗ ನಮ್ಮ ಬೆವರು ಹರಿದೋ, ಎಂಜಲು-ಕಣ್ಣೀರು ಹರಿದೋ ನಾವು ಮತ್ತೆ ವಾಸನೆಸೂಸುವ ಯಂತ್ರವಗುತ್ತೇವೆ. ಅದನ್ನು ಪರರು ಆಡಲಾರದೇ ಅನುಭವಿಸಲಾರದೇ ತಡೆದುಕೊಂಡು ಮನಸ್ಸಲ್ಲೇ ಶಪಿಸುತ್ತಿರುತ್ತಾರೆ. ಕೆಲವರಂತೂ ತಮ್ಮ ಪಕ್ಕದಿಂದ ಎದ್ದು ಹೋದರೆ ಸಾಕು ಈ ಆಸಾಮಿ ಎಂದು ಎದುರುನೋಡುತ್ತಿರುತ್ತಾರೆ. ಹೀಗಾಗಿ ಇಂತಹ ವ್ಯತ್ಯಸ್ಥ ಸ್ಥಿತಿಯಲ್ಲೂ ಎಲ್ಲರಿಗೆ ಮುದನೀಡುವ ವ್ಯಕ್ತಿತ್ವ ನಮ್ಮದಗಿರಲು ತಕ್ಕ ಹಾಗೂ ಮೂಗು ಒಡೆದುಹೋಗುವಂತ ಘಾಟು ಇರದ ಆದರೆ ಲಘು-ಹಿತಕರ ಪರಿಮಳ ಬೀರುವ ಪರಿಮಳ ದ್ರವ್ಯಗಳನ್ನು ಉಪಯೋಗಿಸುವುದು ಬಹಳ ಸಿಂಧು.


ಇದನ್ನೆಲ್ಲ ತಿಳಿದೇ ನಮ್ಮ ಪೂರ್ವಜರು ಯಾವುದೇ ಯಜ್ಞಯಾಗಾದಿ ಮಹಾನ್ ಕಾರ್ಯಗಳ ಪೂರ್ವಭಾವಿಯಾಗಿ ಮಧುಪರ್ಕ ಎಂಬ ಕ್ರಿಯೆಯನ್ನು [ಕರ್ತೃವಿಗೆ ಸ್ನಾನಾದಿ ಶೌಚ ಕಾರ್ಯಗಳಾದಮೇಲೆ] ಮಾಡಿಸುತ್ತಿದ್ದರು. ಅದಾದಮೆಲೆ ಪಂಚಗವ್ಯವಿತ್ತು, ಮಂತ್ರಾಚಮನ-ಮಂತ್ರ ಜಲ ಪ್ರೋಕ್ಷಣ ಇತ್ಯಾದಿಗಳನ್ನು ಮಾಡಿಸಿ ಶುದ್ಧೀಕರಣ ಕ್ರಿಯೆಯನ್ನು ಪೂರ್ತಿಗೊಳಿಸುತ್ತಿದ್ದರು. ಇವತ್ತು ನಮಗದು ಆಡಂಬರವೆಂದೆನಿಸಿದರೆ ಅದು ನಮ್ಮ ತರಾತುರಿಯ ಜೀವನದ ಸಂಕೇತವಷ್ಟೇ!

ಇನ್ನು ಮನೆಯ ವಾತಾವರಣದ ಬಗ್ಗೆ ಹೇಳುವುದಾದರೆ ಕೆಲವರ ಮನೆಗಳಿಗೆ ಹೋದರೇ ಸಾಕು ನಮಗೆ ತೆನ್ನಾಲಿ ರಾಮನ ಬೆಕ್ಕು ಹಾಲುಕುಡಿದ ಅನುಭವ! ನಮ್ಮ ಪರಿಸರ-ಮನೆ-ವಾಸಸ್ಥಳ ಶುದ್ಧವಾಗಿದ್ದರೇನೇ ನಮಗೆ ಎಲ್ಲಾರೀತಿಯ ಉತ್ತಮ ಚೈತನ್ಯ ಒದಗಿ ಬರುವುದು. ಮನೆಯಲ್ಲಿ ಕಸದ ಸಂಗ್ರಹ ಬಹಳ ಸಮಯ ಇರಬಾರದು. ಮಾಡಿದ ತಿನಿಸು-ಪದಾರ್ಥ ಬೇಗ ಖಾಲಿಯಾಗಬೇಕು, ಅನ್ನದಂತಹ ಪದಾರ್ಥ ಒಂದು ಜಾವದ ನಂತರ ಉಪಯೋಗ ಯೋಗ್ಯವಲ್ಲ! ಬೆವರು ಸೋಕಿದ ಬಟ್ಟೆ, ಮಕ್ಕಳ ಉಚ್ಚೆತಾಗಿದ ಬಟ್ಟೆ, ಜೊಲ್ಲುತಾಗಿದ ಬಟ್ಟೆ ಹೀಗೇ ಬಳಸಿದ ಬಟ್ಟೆಗಳನ್ನು ಬಹಳ ಹೊತ್ತು ಒಗೆಯದೇ ಹಾಗೇ ಇಡಬಾರದು. ಎಲ್ಲಿ ಇವುಗಳೆಲ್ಲ ಹಾಗೇ ಕುಂತಿರುತ್ತವೆಯೋ ಅಲ್ಲಿ ಅಲಕ್ಷ್ಮಿಯ ಆವಾಸವಗುತ್ತದೆ, ದರಿದ್ರತನ ಬರುತ್ತದೆ, ಮನಸ್ಸಿಗೆ ದುಗುಡ ಹಣುಕುತ್ತದೆ, ಪರಿಸರ-ಮನೆ ರೋಗ ಗ್ರಸ್ತವಾಗುತ್ತದೆ. ಅದಕ್ಕೇ ಮನೆಯಲ್ಲಿ, ಪರಿಸರದಲ್ಲಿ ಆದಷ್ಟೂ ಸ್ವಚ್ಛತೆ ಮುಖ್ಯ. ಸ್ವಚ್ಛತೆಯೇ ಎಲ್ಲಾ ಪೂರಕ ಹಾಗೂ ಪ್ರೇರಕ ಚೈತನ್ಯ ನಮಗೊದಗುವಂತೆ ಮಾಡುವ ಮೂಲ ಪ್ರಕ್ರಿಯೆ.

ಮನೆಯ ವಾತಾವರಣ ಶುದ್ಧವಾಗಿರಲೆಂದು ಗೋಮಯದಿಂದ [ಕರುವಿರುವ ಹಸುವಿನ ತಾಜಾ ಸಗಣಿಯಿಂದ]ಮನೆಯ ನೆಲಗಳನ್ನೂ, ಹೊರ ಅಂಗಳಗಳನ್ನೂ ಸಾರಿಸುತ್ತಿದ್ದರು,ತಾಜ ಸಗಣಿಯಲ್ಲಿ ಕ್ರಿಮಿನಾಶಕವಿದೆ ಎಂದು ತಮಗೆಲ್ಲ ಮೊದಲೊಮ್ಮೆ ಹೇಳಿದ್ದೇನೆ. ಆ ಸಗಣಿ ಕೂಡ ಭಾರತೀಯ ತಳಿಯ ಕರುವಿರುವ ಹಸುವಿನ ತಾಜಾ ಸಗಣಿಯಾಗಿರಬೇಕು-ಇದು ಕರಾರು, ಅದಿಲ್ಲದಿದ್ದರೆ ಯಾವುದೋ ದಿನ ಹಾಕಿದ ಹಳಸಲು ಸಗಣಿ ಅಥವಾ ವಿದೇಶೀ ಮಿಶ್ರ ತಳಿಯ ಹಸುವಿನ ಸಗಣಿ ವ್ಯತಿರಿಕ್ತ ಪರಿಣಾಮ ಕೊಟ್ಟೀತು! ಇದಕ್ಕೆ ಶಾಸ್ತ್ರಕಾರರು,ಅಚಾರ್ಯರು ಜವಾಬ್ದಾರರಲ್ಲ. ನಮಗೆ ವೇದ್ಯವಲ್ಲದ ವಿಷಯಗಳನ್ನು ಅರಿತು ನಡೆಯಬೇಕಾದ್ದು ನಮ್ಮ ಕರ್ತವ್ಯ. ಬೆಂಕಿಗೆ,ವಿದ್ಯುತ್ತಿಗೆ ಚಿಕ್ಕವರು ದೊಡ್ಡವರು ಎಂಬ ಭೇದ ಹೇಗಿಲ್ಲವೋ ಹಾಗೇ ಅರಿಯದೇ ಮಾಡಿದ ತಪ್ಪು ಅದು ತಪ್ಪೇ ಎಂದು ಪರಿಗಣಿಸಲ್ಪಡುತ್ತದೆ, ಅದಕ್ಕಾಗಿ ನಮ್ಮ ಪೂರ್ವಜರನ್ನು ದೂಷಿಸುವ ಹಕ್ಕು ನಮಗಿಲ್ಲ, ನೆನಪಿರಲಿ! ಇಂದು ನಗರವಾಸಿಗಳು ನಾವು ಅನೇಕರು ಸಗಣಿ ಸಿಗದ ಹತಭಾಗ್ಯರು, ಪೂಜ್ಯಮಾತೆ ಗೋವನ್ನು ದೂರ ಇಟ್ಟು ಅದರ ಉತ್ಪನ್ನಗಳನ್ನು ಮಾತ್ರ ಬಳಸಿಕೊಂಬವರು. ನಮಗಾಗಿ ಪರ್ಯಾಯವಾಗಿ ಫಿನಾಯ್ಲ್ ಸಿಗುತ್ತದೆ, ಗೋ ಅರ್ಕ ಸಿಗುತ್ತದೆ, ಇವುಗಳನ್ನು ಬಳಸಿ ನೆಲ ಸಾರಿಸಿ ಮನೆ-ಪರಿಸರ ಸ್ವಚ್ಛವಾಗಿಡೋಣ ಅಲ್ಲವೇ? ಅನುಕೂಲ ಇದ್ದಾಗ್ಯೂ ಟಿ.ವಿ. ಮುಂದೆ ಕಾಲಹರಣ ಮಾಡುತ್ತ ಕೆಲಸಮಾಡದೆ ಆಲಸ್ಯ ಮೆರೆದರೆ ಅಗ ಅಲ್ಲಿ ಕೂದ ಅಲಕ್ಷ್ಮಿ ಬರುತ್ತಾಳೆ ಎಚ್ಚರ!

ನಮ್ಮ ಅನುಕೂಲಕ್ಕೆ ತಕ್ಕಂತೆ ಯಾವಗಲೋ ಸ್ನಾನ, ಎಲ್ಲೋ ಊಟ, ಹೇಗೋ ನಿದ್ದೆ, ವಾರಕ್ಕೊಮ್ಮೆ ಬಟ್ಟೆ ಒಗೆತ ಇವೆಲ್ಲ ನಮಗೆ ಬೇಡದ ಅಥವಾ ಮಾರಕ ಚೈತನ್ಯವನ್ನು ತರುತ್ತವೆ. ಹೀಗಾಗಿ ನಮ್ಮ ಪೂರ್ವಜರು ಯಾಕೆ ಮಡಿ ಎಂದರು, ಯಾಕೆ ಸ್ವಚ್ಛತೆ ಎಂದರು ಯಾಕೆ ಪರಿಮಳಯುಕ್ತ ಮಂಗಳ ದ್ರವ್ಯಗಳನ್ನು ಬಳಸುತ್ತಿದ್ದರು ಎಂಬುದನ್ನು ಒಮ್ಮೆ ಮನಗಾಣೋಣವೇ?

6 comments:

  1. ವಿ ಆರ್ ಭಟ್ ಸರ್,
    ಎಷ್ಟೊಂದು ಉಪಯುಕ್ತ ಲೇಖನ!
    ಜ್ಞಾನದ ಖಜಾನೆಯಿಂದ ಸಾಕಷ್ಟು ವಿಷಯಗಳು ತಿಳಿದು ಬಂದವು
    ಜೀವನಕ್ಕೆ ಬೇಕಾದ ಮಾಹಿತಿಗಳಿಂದ ಕೂಡಿದ ನಿಮ್ಮ ಲೇಖನಕ್ಕೆ, ನಿಮ್ಮ ಜ್ಞಾನ ಭಂಡಾರಕ್ಕೆ ಧನ್ಯವಾದಗಳು.

    ReplyDelete
  2. ಮಡಿಯ ಬಗ್ಗೆ ವಿವರಣೆ ವಿಸ್ತೃತವೂ ,ಅರ್ಥಪೂರ್ಣವೂ ಆಗಿತ್ತು.ಮಡಿ ಎಂಬುದು ಒಂದು
    ಕಂದಾಚಾರವಾಗದೆ,ಸ್ವಚ್ಚತೆಯ ಸಾಮಾನ್ಯ ಜ್ಞಾನವಾದಾಗ ಆರೋಗ್ಯದ ರಹದಾರಿಯಾಗುತ್ತದೆ.

    ReplyDelete
  3. ಭಟ್ಟರೇ,
    ಲೇಖನ ಚೆನ್ನಾಗಿದೆ.ನಾವು ಮಾಡುತ್ತಿರುವ ಮಡಿಯ ಬಗ್ಗೆ ಒಂದಿಷ್ಟು ಬರೆದು ಕಾಮೆಂಟ್ ಪೋಸ್ಟ್ ಮಾಡುವಾಗ ಅದೇನೋ ತಪ್ಪಾಗಿ ಹೋಯ್ತು.ಇರಲಿ. ನಮ್ಮ ಪೂರ್ವಜರು ಮಾಡುತ್ತಿದ್ದ ಆಚರಣೆಗಳನ್ನು ಇಂದಿನ ದಿನಗಳಲ್ಲಿ ಆಚರಿಸುವಾಗ ಅವುಗಳ ಒಂದಿಷ್ಟು ವೈಜ್ಞಾನಿಕ ಅರಿವು ಮೂಡಿಸುವ ಲೇಖನ ನಿಮ್ಮ ಮುಂದಿನ ಲೇಖನವಾಗಲಿ.

    ReplyDelete
  4. ಉತ್ತಮ ಲೇಖನ. ಚೆನ್ನಾಗಿದೆ.

    ReplyDelete
  5. ಲೇಖನದ ಉದ್ದೇಶ ಮಡಿಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದೇ ಆಗಿದೆ. ಆಚರಣೆಗಳಿಗೆ ಸ್ವಲ್ಪ ಕನ್ನಡಿ ಹಿಡಿದಿದ್ದೇನೆ. ಓದಿದ,ಪ್ರತಿಕ್ರಿಯಿಸಿದ ಎಲ್ಲಾ ಮಿತ್ರರಿಗೆ ಹಾಗೂ ಪ್ರಸಕ್ತ ಸರ್ವಶ್ರೀ ಪ್ರವೀಣ್, ಡಾ.ಕೃಷ್ಣಮೂರ್ತಿ,ಹರಿಹರಪುರ ಶ್ರೀಧರ್, ಸೀತಾರಾಮ್ ಹಾಗೂ ಶ್ರೀಮತಿ ತೇಜಸ್ವಿನಿ ಹೆಗಡೆ --ಈ ಎಲ್ಲರಿಗೂ ಅನಂತ ಧನ್ಯವಾದಗಳು.

    ReplyDelete