ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, May 28, 2010

ಗೋಪುರ ಗಾನ !!


ಗೋಪುರ ಗಾನ !!

ತಿಳಿ ಗುಲಾಬಿ ಪಂಚೆ, ಗಿಳಿಹಸಿರು ಬಣ್ಣದ ಜುಬ್ಬಾ ತೊಟ್ಟುಕೊಂಡು,ಎರಡೂ ಹೆಗಲಿಗೆ ಶಾಲನ್ನು ಹೊದ್ದು, ಹಣೆತುಂಬಾ ಢಾಳಾಗಿಕಣ್ಣಿಗೆ ಹೊಡೆಯುವಂತೇ ಭಸ್ಮ ತ್ರಿಪುಂಡ್ರ[ವಿಭೂತಿ], ಕೊರಳಲ್ಲಿ ಎರಡೆರಡು ಮಧ್ಯಮ ಗಾತ್ರದ,ಚಿನ್ನದಲ್ಲಿ ಕಟ್ಟಿದ ರುದ್ರಾಕ್ಷಿ ಹಾರಹೇರಿಕೊಂಡು, ಕೈಯ್ಯಲ್ಲಿ ಹೊಸ ಲ್ಯಾಪ್ ಟಾಪ್ ಮತ್ತು ಬ್ಲಾಕ್ ಬೆರ್ರಿ ಮೊಬೈಲು ಹಿಡಿದು ಕೊಂಡು ಬಂದೇ ಬಿಟ್ಟರು ನಮ್ಮಚಂದ್ರಕಾಂತ ಗುರೂಜಿ, ಇವರು ನಾನು ತಮಗೆಲ್ಲಾ ಮೊದಲೊಮ್ಮೆ ಪರಿಚಯಿಸಿದ " ಪುನರ್ಜನ್ಮ" ಖ್ಯಾತಿಯ ದಾಮೋದರಗುರೂಜಿಯ ಖಾಸಾ ತಮ್ಮ. ಏನಿಲ್ಲಾ ಅಂದರೂ ೧೦ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ, ಮಹೀಂದ್ರಾ ಸ್ಕಾರ್ಪಿಯೋ ಗಾಡಿಯಲ್ಲಿ ಅತೀ ಸಾಮಾನ್ಯನಂತೇ ಓಡಾಡಿಕೊಂಡಿದ್ದಾರೆ. ತಾವಾಯಿತು,ತಮ್ಮ ಕೆಲಸವಾಯಿತು. ಹಾಗಂತ ಅವರಿಗೆ ಯಾವ ಅಹಮ್ಮೂ ಇಲ್ಲ. ತುಂಬಾ ಡೌನ್ ಟು ಅರ್ಥ್ ಮ್ಯಾನ್ ! ತುಂಬಾನೇ ಸಿಂಪಲ್ಲು !

ಮಾಧ್ಯಮದಲ್ಲಿ ಗುರೂಜಿ ಕಾಣಿಸಿಕೊಂಡರೆ ಸಾಕು ಮಾರನೇ ದಿನವೇ ಗುರೂಜಿ ಅಫೀಸಿನ ಬಾಗಿಲಲ್ಲಿ ಸಾವಿರಾರು ಜನ! ಗುರೂಜಿಯ ಭವಿಷ್ಯವೇ ಹಾಗೆ. ಅದು ಫಲಕಾರಿಯೋ ಇಲ್ಲವೋ ಹರನೇ ಬಲ್ಲನಾದರೂ ಹೆದರಿ ಓಡಿ ಬಂದುಪರಿಹಾರಕಂಡುಕೊಳ್ಳುವ ಮಂದಿ ಬಹಳ. ತೀರಾ ಬಡತನದಲ್ಲಿ ಹುಟ್ಟಿ ಬೆಳೆದ ಗುರೂಜಿ ಕಷ್ಟಪಟ್ಟು ಮೂರನೇ ತರಗತಿ ಓದಿದ್ದಾರೆ. ನಂತರಅಣ್ಣ ದಾಮೋದರ ಗುರೂಜಿಯ ಸಹಾಯಕರಾಗಿ ಇತ್ತೀಚಿನವರೆಗೂ ಕೆಲಸ ಮಾಡಿ ಅಣ್ಣನ ಗರಡಿಯಲ್ಲಿ ಪಳಗಿದ ಹುಲಿಯಾಗಿದ್ದಾರೆ. ಯಾರನ್ನೋ ಕರೆಸಿ ಇಂಗ್ಲೀಷ್ ಅಭ್ಯಾಸ ಮಾಡಿಕೊಂಡು ಕಂಪ್ಯೂಟರ್ ಕಲಿತುಕೊಂಡಿದ್ದಾರೆ.

ಕಳಪೆ ಟಿವಿಯ ಸಂದರ್ಶನ ಕೋಣೆಗೆ ಪ್ರವೇಶಿಸಿಯೇ ಬಿಟ್ಟರು ನಮ್ಮ ಗುರೂಜಿ.


" ನಮಸ್ಕಾರ ವೀಕ್ಷಕರೇ ನಾನು ನಿಮ್ಮ ಅಸಹ್ಯಾ... ಇಂದು ನಮ್ಮೊಂದಿಗಿದ್ದಾರೆ ಖ್ಯಾತ ಜ್ಯೋತಿಷಿ ಚಂದ್ರಕಾಂತ ಗುರೂಜಿಯವರು, ನಿನ್ನೆ ಕಾಳಹಸ್ತಿಯಲ್ಲಿ ರಜಗೋಪುರ ಕುಸಿದು ಬಿದ್ದ ಮೇಲಿನ ಶಕುನ ಮತ್ತು ಪರಿಣಾಮಗಳ ಬಗ್ಗೆ ಅವರು ತಮ್ಮ ಪ್ರಶ್ನೆಗಳಿಗೆಉತ್ತರಿಸಲಿದ್ದಾರೆ, ಪ್ರಶ್ನೆ ಕೇಳಲಿಚ್ಛಿಸುವವರು ನಮ್ಮ ಕೆಳಗಿನ ದೂರವಾಣಿಗಳ ಮೂಲಕ ನಮ್ಮನ್ನು ಸಂಪರ್ಕಿಸಬಹುದು... ೯೯೮೭೬೧೨೩೪_ ಹಾಗೂ ೯೯೮೭೬೧೨೪೪_ "

" ನಮಸ್ಕಾರ ಗುರೂಜಿ, ಕಾರ್ಯಕ್ರಮಕ್ಕೆ ತಮಗೆ ಸ್ವಾಗತ "

" ನಮಸ್ಕಾರ,

ವಂದೇ ಶಂಭುಮುಮಾಪತಿಂ .....ವಂದೇ ಸೂರ್ಯ ಶಶಾಂಕವಹ್ನಿ ನಯನಂ ವಂದೇ ಶಿವಂ ಶಂಕರಂ, ಜಗತ್ಪಿತೃವಾದ ಪರಮೇಶ್ವರನಿಗೆ ನಮಿಸುತ್ತ ಎಲ್ಲಾ ವೀಕ್ಷಕರಿಗೂ ಭಗವಂತನ ಕರುಣೆ ದೊರಕಲಿ ಎಂದು ಹೇಳುತ್ತ ಇವತ್ತಿನ ಕಾರ್ಯಕ್ರಮಆರಂಭಿಸೋಣ "

" ಸ್ವಾಮೀ ನಾವು ಬರಗಾಲಪುರದಿಂದ ಕಾಲ್ ಮಾಡ್ತಿರೋದು "

" ಏನು ನಿಮ್ಮ ಹೆಸರು ? ಏನ್ ಕೇಳಬೇಕಾಗಿತ್ತು "

" ನಾನು ಬೀರಣ್ಣಾ ಅಂತ, ಈಗ ಕಾಳಹಸ್ತಿಯಲ್ಲಿ ರಾಜಗೋಪುರ ಬಿದ್ದಿರೋದ್ರಿಂದ ಪರಿಣಾಮ ಏನಾಗ್ಬೌದು ಹೇಳ್ತೀರಾ? "

" ಇದೊಂದು ದೊಡ್ಡ ದುರಂತ, ದೇಶಕ್ಕೇ ಏಕೆ ಜಗತ್ತಿಗೇ ಇದರಿಂದ ವಿಪತ್ತು ತಪ್ಪಿದ್ದಲ್ಲ, ಹಿಂದೆಂದೂ ನಡೆಯದ ಇಂತಹ ಘಟನೆಇದೀಗ ಸಂಭವಿಸಿದೆ, ಗುರುಗ್ರಹದ ಸ್ಥಾನಪಲ್ಲಟವೇ ಇದಕ್ಕೆಲ್ಲ ಕಾರಣ"

" ಗುರೂಜಿ ಹಾಗಾದ್ರೆ ಮುಂದೆ ಇನ್ನೇನಾಗ್ಬೌದು ? "

" ಸುನಾಮಿ ಬರುವ ಲಕ್ಷಣ ಕಂಡು ಬರ್ತಾ ಇದೆ, ಜಗತ್ತಲ್ಲೇ ಅಲ್ಲೋಲ-ಕಲ್ಲೋಲ್, ಎಲ್ಲೆಲ್ಲೂ ದೊಂಬಿ-ಗಲಾಟೆ, ಬಾಂಬು "

" ಮತ್ತೆ ಈಗಾಗಲೇ ನಡೀತಿರೋದೇ ಆಗೋಯ್ತಲ್ಲ ಸ್ವಾಮಿ ಬೇರೆ ಇನ್ನೇನೂ ಆಗೋದಿಲ್ಲ ತಾನೇ ? "

" ಸದ್ಯಕ್ಕೆ ಹಾಗೇನೂ ಕಾಣಿಸ್ತಾ ಇಲ್ಲ, ಈಗಿರುವ ಪರಿಸ್ಥಿತಿ ನೋಡಿದ್ರೆ ಜನ ತಕ್ಷಣಕ್ಕೆ ಶಾಂತಿ-ಹೋಮ ಪೂಜೆ ಇತ್ಯಾದಿಗಳನ್ನುನುರಿತ ಪಂಡಿತರಿಂದ ಗುರೂಜಿಗಳ ಆಶೀರ್ವಾದ ಪಡೆದುಕೊಂಡು ಮಾಡ್ಸಿದ್ರೆ ಬರಬಹುದಾದ ಅನೇಕ ದೊಡ್ಡ ಕೆಟ್ಟಪರಿಣಾಮಗಳನ್ನು ಸ್ವಲ್ಪ ಮಟ್ಟಿಗೆ ಕಮ್ಮಿಮಾಡಿಕೊಳ್ಳಬಹುದು "

" ಅಲ್ಲಾ ಸ್ವಾಮ್ಯೋರೇ ಬುಡಬುಡಿಕೆ ಹಕ್ಕಿ ನರಸಪ್ಪ ಜಾವ್ದಲ್ಲೇ ಕೂಕ್ಕೊಂಡು ಹೋಯ್ತಾ ಇರ್ತಾನಲ್ಲ, ಎಲ್ಲಾ ರಕ್ತವಾಂತಿಮಾಡ್ಕತಾರೆ, ಅದ್ಯಾರೋ ಸತ್ತೋಗ್ಬುಡ್ತಾರೆ, ಮತ್ಯಾರ್ಗೋ ತುಂಬಾ ತ್ರಾಸಾಗ್ತೈತೆ,ಮಕ್ಳು-ಮರಿಗಳ್ಗೆಲ್ಲ ಹುಸಾರಿರಾಕಿಲ್ಲಅಂತೆಲ್ಲ.... ರೀತಿ ಏನೂ ಆಯಾಕಿಲ್ಲ ತಾನೇ ? "

" ರೀತಿ ಏನೂ ಆಗಲ್ಲ ಅಂತ ಹೇಳೋಕಾಗಲ್ಲ, ಆದ್ರೆ ಆದಷ್ಟು ನೀವು ಶಾಂತಿ ಕರ್ಮ ಮಾಡ್ಸೋದು ತುಂಬಾ ಒಳ್ಳೆದು "

" ಅಂದ್ರೆ ಈಗ ಅರ್ಜೆಂಟ್ ಗೆ ಶಾಂತಿ ಮಾಡ್ಬೇಕೂ ಅಂತೀರಿ,ಎಲ್ಲಿ ಮಾಡ್ಸಬೇಕೂ ಸುಮಾರು ಎಷ್ಟು ಖರ್ಚಾಗ್ಬೌದುಹೇಳಾಕಾಗ್ಬೋದಾ "

" ಅದು ಎಲ್ಲರ್ಗೂ ಸೇರಿ ಸಮೂಹಿಕ ಆದ್ರೆ ಒಂಥರಾ, ನಿಮ್ಗೆ ಒಬ್ಬರ್ಗೇ ಆದ್ರೆ ಒಂಥರಾ ಆಗತ್ತೆ, ಒಬ್ಬರ್ಗೇ ಆದ್ರೆ ಸುಮ್ನೇ ಭಾರ ಜಾಸ್ತಿಅಂತಾದ್ರೆ ಎಲ್ಲಾ ಸೇರ್ಕೊಂಡು ಮಾಡ್ಸ್ಕೋಬೌದು, ಒಟ್ಟೆಲ್ಲಾ ಸುಮಾರು ಲಕ್ಷ ಖರ್ಚು ಆಗ್ಬೌದು, ೨೦ ಜನ ಪುರೋಹಿತ್ರು ಬೇಕು, ೧೫ ಕ್ವಿಂಟಾಲ್ ತುಪ್ಪ ಬೇಕು ಹೀಗೇ ಬಹಳ ಸಾಮಾನು ಬೇಕಾಗ್ತವೆ ಬೀರಣ್ಣೋರೇ, ನೀವು ಖುದ್ದಾಗಿ ಭೇಟಿ ಆದ್ರೆ ಎಲ್ಲಾಮಾತಾಡ್ಬೌದು "


" ಮೊನ್ನೆ ಅಕ್ಷಯ ತದಿಗೆ ದಿವ್ಸ ಬೆಂಗ್ಳೂರ್ ಬಂಟಿ ಜಿವೆಲ್ಲರಿ ಶಾಪ್ನಾಗೆ ತಾವು ಕುಂತು ಭಾಳ ಮಂದಿಗೆ ಉಪಕಾರ ಮಾಡುದ್ರಿ"

" ಉಪಕಾರ ಏನ್ಬಂತು, ಬಂಟಿ ಮಾಲೀಕರಾದ ನಮ್ಮ ಸುಂದರೇಶು ನಮ್ಗೆ ತುಂಬಾ ಬೇಕಾದವ್ರು, ಸ್ವಲ್ಪ ಬಂದು ಕೂತ್ಗಂಡುರತ್ನ,ಹಅಳು,ವಜ್ರಗಳ ಬಗ್ಗೆ ಸ್ವಲ್ಪ ಗಿರಾಕಿಗೆ ತಿಳ್ಸ್ಕೊಡಿ ಅಂದ್ರು, ಅಷ್ಟಾಗಿ ಕರ್ದ್ರಲ್ಲ ಅಂತ ಹೋಗಿದ್ದೆ, ಬೆಳಿಗ್ಗೆಯಿಂದ ರಾತ್ರಿ ೧೦ಘಂಟೆತನ್ಕ ಭಾಳಾ ಸುಸ್ತಾಗ್ಬುಡ್ತು"

" ನೀವು ಕುಂತಿದ್ದೇ ಕುಂತಿದ್ದು ಆಯಪ್ಪಂಗೆ ಒಳ್ಳೆ ಯಾಪಾರ್ವಂತೆ, ಅಂತೂ ತಮ್ಮ ದಯದಿಂದ ಒಳ್ಳೇ ಯಾಪಾರ ಮಾಡ್ಕಂಡ್ರುಅನ್ನಿ, ತಮ್ಮ ಕಾಲ್ಗುಣವೇ ಹಾಗೆ ಅಲ್ವಾ ಸ್ವಾಮೀ? "

" ಇರ್ಲಿ ಬಿಡಿ, ಹೊಗಳಿಕೆ ನಂಗೆ ಇಷ್ಟ ಆಗಲ್ಲ, ನಿಮ್ಗೆ ಬೇಕಾದ್ರೆ ಬಂದು ಭೇಟಿ ಮಾಡಿ ಆಯ್ತಾ? "

" ಆಯ್ತು ಸ್ವಾಮಿ, ನಾನು ಒಂದೆರ್ಡದಿನದಲ್ಲೇ ತಮ್ಮನ್ಕಾಣ್ತೀನಿ"

" ನಂಸ್ಕಾರ ನಾನು ರಂಗಣ್ಣಾ ಅಂತ,ಸಿಡ್ಲಘಟ್ಟದಿಂದ, ಸರ್ತಿ ನಂಗೆ ಸೈಕಲ್ ಪಕ್ಷದೋರು ರಾಜ್ಯಸಭೆಗೆ ಅವಕಾಶ ಕೊಡ್ತೀನಿಅಂದವ್ರೆ,ಅದ್ರ ಬಗ್ಗೆ ಕೇಳೊಣ ಅಂತ "

" ರಂಗಣ್ಣೋರೇ ಇವತ್ತಿನ ವಿಷ್ಯ ಗೋಪುರ ಉರುಳಿದ ಬಗ್ಗೆ ಮಾತ್ರ, ಇರ್ಲಿ ನೀವು ಕೇಳಿದೀರಿ ಅಂತ ಹೇಳ್ತೀನಿ, ನಿಮ್ಗೆ ಸ್ಥಾನ ದಕ್ಕಲುಸ್ವಲ್ಪ ತಡೆ ಇದೆ, ನಿಮ್ಮ ಹತ್ತಿರದವ್ರೇ ಸ್ವಲ್ಪ ಅಡ್ಡಗಾಲು ಹಾಕ್ತಾ ಇದಾರೆ. ಹೀಗಾಗಿ ಸ್ಥಾನ ನಿಮ್ಗೆ ದಕ್ಬೇಕು ಅಂದ್ರೆ ಒಂದೆರಡು ಕ್ರಮಜರುಗಿಸಬೇಕು, ನೀವು ನನ್ನನ್ನು ಇವತ್ತೇ ಭೇಟಿ ಆಗಿ..ಎಲ್ಲಾ ಮಾತಾಡೋಣ "

ಗುರೂಜಿ ಕನ್ನಡಿಯಲ್ಲಿ ಕಾಣುತ್ತಿರುವ ಹಾಗೆ ಹೇಳುತ್ತಾ ಮುಂದುವರಿಸಿದರು --

" ವೀಕ್ಷಕರೇ ಇದು ಅಂತಿಥ ವಿಪತ್ತಲ್ಲ, ಭಾರೀ ಅಪಶಕುನ, ದೇಶ ಒಬ್ಬ ಒಳ್ಳೆಯ ರಾಜಕಾರಣಿಯನ್ನು, ಒಬ್ಬ ಮೇರು ನಟನನ್ನುಹಾಗೂ ಒಬ್ಬ ಅತ್ಯಂತ ಪ್ರಭಾವೀ ಮಹಿಳೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಬರುವ ಮಳೆಗಾಲದಲ್ಲಿ ಅಕಾಲಿಕ ಮಳೆ, ಭಯಂಕರ ಚಂಡಮಾರುತ ಬೀಸಿ ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ಹಾನಿಯುಂಟುಮಾಡಲಿದೆ, ಒಂದು ನದಿಯ ಅಣೆಕಟ್ಟೆಗೆಧಕ್ಕೆಯಾಗಲಿದೆ, ಭಾರೀ ವಿಮಾನ ದುರಂತದ ಸಾಧ್ಯತೆ ಕೂಡ ಕಂಡು ಬರ್ತಾ ಇದೆ "

" ವೀಕ್ಷಕರೇ ಈಗ ಒಂದು ಚಿಕ್ಕ ವಿರಾಮ ತಗೋತೀವಿ, ವಿರಾಮದ ನಂತರ ಗುರೂಜಿ ಅಪಶಕುನದ ಬಗ್ಗೆ ಇನ್ನೂ ಬಹಳತಿಳಿಸಿಕೊಡುವವರಿದ್ದಾರೆ, ಪ್ಲೀಸ್ ಡೋಂಟ್ ಗೋ ಅವೇ "

5 comments:

  1. ವಿಡಂಬನೆ ಚೆನ್ನಾಗಿದೆ. ಗೋಪುರ ಗಾನ ?

    ReplyDelete
  2. ತುಂಬಾ ಚೆನ್ನಾಗಿದೆ...

    ReplyDelete
  3. Thanks to sarvashri Hariaharapura Sridhar,Narayana Bhat, Sitaram, Raghu and also to all who read this article.

    ReplyDelete