ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, August 3, 2010

ಅಜ್ಞಾನ


ಚಿತ್ರ ಕೃಪೆ : ಅಂತರ್ಜಾಲ

ಅಜ್ಞಾನ

ಕನ್ನಡಿಯ ಪಕ್ಕದಿ ಕೂತು
ಗುಬ್ಬಚ್ಚಿ ಬಿಂಬಕೆ ಸೋತು
ಕುಕ್ಕುತ್ತ ಕೊಕ್ಕದು ನೋವು
ಗೊತ್ತಿಲ್ಲದೆ ಮನಕದು ಕಾವು !

ನಿನ್ನಿರುವಿಕೆ ಬ್ರಹ್ಮಾಂಡದಲಿ
ನೋಡುತ ನಾವ್ ಬೇರೆನುತಿರಲು
ಕಾಣೆವು ಅದ್ವೈತವನಲ್ಲಿ
ಕನಸದು ಅರ್ಥೈಸುವುದೆಲ್ಲಿ ?

ಬೆಳಗಾಗೆ ಸೂರ್ಯನು ಬರುವ
ಇರುಳಾಗೆ ಚಂದಿರನಿರುವ
ಈ ಲಾಂದ್ರಗಳೊಳಗಡೆಯಲ್ಲಿ
ಏನಿಹುದದು ತಿಳಿಯದು ಇಲ್ಲಿ !

ಹಿಮಪಾತವು ಒಂದೆಡೆಯಲ್ಲಿ
ಶರಧಿಗಳವು ಬೇರೆಡೆಯಲ್ಲಿ
ಕರವೀರ ಜಾಜಿ ಪುನ್ನಾಗ
ಮರೆವೆವು ನೀನಿತ್ತ ವೈಭೋಗ !

ಇರುವೆಯಿಂದ ಎಂಬತ್ತು ಕೋಟಿ
ಹರಿವು ದೊಡ್ಡ ಇರುವುದೆ ಸಾಟಿ ?
ಬರಗಾಲವು ಕೆಲಭಾಗದಲಿ
ಅನುಗಾಲವು ಚಿಂತಿಪುದಿಲ್ಲಿ !

Monday, August 2, 2010

ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು.....


ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು.....


ಮಾನವೀಯ ಸಂಬಂಧಗಳು ಹಣದ ಝಣತ್ಕಾರದಲ್ಲಿ ತನ್ನತನ ಕಳೆದುಕೊಂಡಿರುವ ಈ ಕಾಲದಲ್ಲೂ ನಮಗೆ ಅಷ್ಟಿಷ್ಟು ಪ್ರತಿಶತ ಜನ ಇನ್ನೂ ’ಮನುಷ್ಯ’ರಾಗಿರುವುದು ಕಂಡುಬರುತ್ತದೆ. ಹಿಂದಿನ ನನ್ನ ಲೇಖನದಲ್ಲಿ ಅದಕ್ಕಾಗಿಯೇ ಹೇಳಿದ್ದು- ಎಲ್ಲರೂ ಒಂದೇ ಥರ ಇರುವುದಿಲ್ಲ ಎಂದು - ಇದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ ಕೂಡ.

ಗಂಡಸರಲ್ಲೂ ’ಹೃದಯ ಇರುವವರು’ ಇದ್ದಾರೆ. ಅವರ ಅಂತಃಕರಣ ಹೆಣ್ಣಿನ ಅಳಲನ್ನು ಅರ್ಥಮಾಡಿಕೊಳ್ಳುತ್ತದೆ. ಹಿಂದಿನ ಹಲವು ಕವಿಗಳು ತಮ್ಮ ಬದುಕಿನುದ್ದಕ್ಕೂ ತಾವು ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರೂ ಹೆಂಡತಿ-ಮಕ್ಕಳಿಗೆ ಮಾತ್ರ ಅದರ ಬಿಸಿ ಬಹಳ ತಟ್ಟದಂತೆ ನೋಡಿಕೊಂಡಿದ್ದರು. ಈ ವಿಷಯವನ್ನು ನಾನು ’ಮೈಸೂರು ಮಲ್ಲಿಗೆಯ’ ಪರಿಮಳವನ್ನು ಹಬ್ಬಿಸಿದ ದಿ|ಶ್ರೀ ಕೆ.ಎಸ್.ನರಸಿಂಹ ಸ್ವಾಮಿಯವರ ಮನೆಗೆ ೧೯೯೬-೯೭ರಲ್ಲಿ ಹೋದಾಗ ತಿಳಿದಿದ್ದೆ. ಅದೇ ಮುಗ್ಧ ಮುಗುಳ್ನಗು, ಅದೇ ಮಂದಹಾಸ ಆ ಮುಪ್ಪಡಿರಿದ್ದ ಮುಖದಮೇಲೆ. ಅವರ ದಾಂಪತ್ಯ ಬಹಳ ಉತ್ಕೃಷ್ಟ ಉದಾಹರಣೆ ಎನ್ನಬಹುದು. ಗಂಡನ ಬಡತನವನ್ನು ಯಾವುದೇ ಒತ್ತಡವಿಲ್ಲದೇ ತನ್ನದೆಂದು ಒಪ್ಪಿಕೊಂಡು, ಅವರ ಸಾದಾ ಸೀದಾ ಬಾಳನ್ನೇ ಅಪ್ಪಿಕೊಂಡು ಬದುಕಿದವರು ಅವರ ಪತ್ನಿ ಸಾಧ್ವಿಮಣಿ ದಿ| ಶ್ರೀಮತಿ ವೆಂಕಮ್ಮನವರು. ನಾನವರ ಮನೆಗೆ ಹೋದಾಗ ಕವಿಗಳು ಸಾಯಂಕಾಲ ಹೊರಗಡೆ ಬೆತ್ತದ ಖುರ್ಚಿಯಲ್ಲಿ ಕುಳಿತು ಹೊರನೋಟ ಬೀರಿದ್ದರು. ಪತ್ನಿಯನ್ನು ಅವರು ಕರೆಯುವುದಕ್ಕಿಂತ ಮುಂಚೆಯೇ ಅವರೇ ಬಂದು ನನ್ನನ್ನು ಮಾತಾಡಿಸಿದರು. ಆಗಲೇ ನಾನು ನಮ್ಮ ಶ್ರೀ ನರಸಿಂಹಸ್ವಾಮಿಯವರು ಕಂಡ ’ಶಾರದೆ’ಯನ್ನು ಕಂಡಿದ್ದು. ಎಂತಹ ಅದ್ಬುತ ಸತ್ಕಾರ ಅಂತೀರಿ- ಬೇಡವೆಂದರೂ ಕೇಳದೇ ಅವರು ಕೈಯ್ಯಾರೆ ಮಾಡಿಕೊಟ್ಟ ಲಿಂಬೂ ಪಾನಕವನ್ನು ನನ್ನ ಜನ್ಮ ಪೂರ್ತಿ ನೆನೆಯಬೇಕು. ಮಲ್ಲಿಗೆ ಕವಿ ತನ್ನ ಕವನ ಸಂಕಲನದ ಪೂರ್ತಿ ಹಾಡುಗಳನ್ನೂ ಆಲ್ಮೋಸ್ಟ್ ತನ್ನ ಹೆಂಡತಿಯನ್ನು ನೆನೆದು-ಕಂಡು-ಪ್ರೀತಿಸಿಬರೆದಿದ್ದೆಂಬುದರಲ್ಲಿ ಸಂದೇಹವೇ ಇಲ್ಲಬಿಡಿ.

ನಮ್ಮ ಇತಿಹಾಸವನ್ನು ಕೆದಕಿದರೆ ಅಲ್ಲಿ ಪ್ರೀತಿಗಾಗಿ ಬಹಳ ಅರ್ಪಿಸಿಕೊಂಡ ಷಹಾಜಹಾನ್ ಸಿಗುತ್ತಾನೆ, ಮತ್ತೆಲ್ಲೋ ಲೈಲಾ-ಮಜ್ನೂ ಕಥೆ ಕೇಳಿಬರುತ್ತದೆ. [ಅದರಂತೇ ಕೆಟ್ಟ ಚಾಳಿಯ ಔರಂಗಜೇಬನೂ ಸಿಗುತ್ತಾನೆ!] ರಾಮಾಯಣದಲ್ಲಿ ಸೀತೆಗಾಗಿ ಇಡೀ ರಾಮಾಯಣ ವಿಸ್ತರಿಸಿರುವುದು ತಿಳಿದುಬರುತ್ತದೆ. ಇನ್ನು ಇತ್ತೀಚೆಗೆ ಸಂತ ಶ್ರೀ ರಾಮಕೃಷ್ಣ ಪರಮಹಂಸರು ಮಡದಿ ಶಾರದಾದೇವಿಯವರಲ್ಲಿ ಲೋಕಮಾತೆಯನ್ನೇ ಕಂಡು ಪೂಜಿಸಿದರು ಅಲ್ಲವೇ ? ಇದೇ ಥರದ ಹಲವು ವ್ಯಕ್ತಿಗಳು ನಮ್ಮ ನಡುವೆ ಅಲ್ಲಲ್ಲಿ ಇಂದಿಗೂ ಇದ್ದಾರೆ.

ನಾನು ನೋಡಿದ ಒಂದು ಘಟನೆ- ಮಗ ದ್ವಿತೀಯ ಪಿಯೂಸಿ ಮುಗಿಸಿ ಸಿ.ಈ.ಟಿ. ಬರೆದಿದ್ದ, ಒಳ್ಳೆಯ ರಾಂಕ್ ಪಡೆದ ಆತ ತಂದೆಯೊಟ್ಟಿಗೆ ಬೆಂಗಳೂರಿಗೆ ಕೌನ್ಸೆಲಿಂಗ್ ಗಾಗಿ ಬಂದಿದ್ದ. ಮಗನಿಗೆ ಬೇಕಾದ ತಾಂತ್ರಿಕಕಾಲೇಜು ಸಿಕ್ಕು ತಂದೆ-ಮಗ ಊರಿಗೆ ಒಮ್ಮೆ ಮರಳಿದರು. ಅಷ್ಟರಲ್ಲೇ ಮಗನಿಗೆ ಮುಂಬೈ ವಿಶ್ವವಿದ್ಯಾಲಯದ ರಾಸಾಯನಿಕ ವಿಭಾಗದಿಂದ ಆದ್ಯತೆಯ ಮೇರೆಗೆ ಸೀಟು ಕೊಡಮಾಡಲ್ಪಟ್ಟಿದೆ-ಬಂದು ಕಾಣುವುದು ಎಂಬ ಕರೆ ಬಂತು. ಲಿಖಿತ ಪತ್ರವೂ ಬಂತು. ಈ ಕಡೆ ಆತನ ತಾಯಿಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು ದಿನೇ ದಿನೇ ಉಲ್ಬಣವಾಗುತ್ತಾ ಹೋಯಿತು. ತಂದೆಯನ್ನು ಮನೆಯಲ್ಲೇ ಬಿಟ್ಟು ತಾನೊಬ್ಬನೇ ಗೊತ್ತಿರದ ಮಹಾನಗರಕ್ಕೆ ಧೌಡಾಯಿಸಿದ. ಅಲ್ಲೇ ಸೇರಿಕೊಂಡೂ ಬಿಟ್ಟ. ಆತನ ತಾಯಿಗೆ ಹಲವು ಪರೀಕ್ಷೆಗಳಾದವು-ನಂತರ ತಿಳಿದಿದ್ದು ಲೀವರ್ ಕ್ಯಾನ್ಸರ್ ಎಂಬುದು. ಅದನ್ನು ತಿಳಿದ ನಾವೆಲ್ಲಾ ಬಹಳ ಬೇಸರಗೊಂಡೆವು. ಆಕೆಯ ಯಜಮಾನನಂತೂ ಬದುಕಿದ್ದುದೇ ದೊಡ್ಡದು! ದೇವರಮೇಲೆ ಭಾರಹಾಕಿ ತನ್ನ ಕರ್ತವ್ಯಗಳನ್ನು ಚಾಚೂ ತಪ್ಪದೇ ನಿಭಾಯಿಸುತ್ತ ಹಲವು ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ. ಕಂಡ ಕಂಡ ದೇವರಲಿ ಬೇಡಿದ,ಪ್ರಾರ್ಥಿಸಿದ-ಆದರೆ ಪಡೆದು ಬಂದಿದ್ದನ್ನು ಅನುಭವಿಸಲೇ ಬೇಕಲ್ಲ! ಐದಾರು ತಿಂಗಳಲ್ಲಿ ಶೀಕು ಅಂತಿಮ ಹಂತ ತಲ್ಪಿತು. ದಿನವೂ ಹೆಂಡತಿಗಾಗಿ ಕಣ್ಣೀರುಗರೆಯುತ್ತಿದ್ದುದನ್ನು ನಾವು ಸ್ವತಃ ನೋಡಿದ್ದೇವೆ. ಅಂತಹ ಅಸಾಧ್ಯ ನೋವುಣ್ಣುತ್ತಿದ್ದರೂ ಒಡಲಲ್ಲಿ ಬೆಂಕಿ ಹೊತ್ತುರಿಯುತ್ತಿದ್ದರೂ ಆ ತಾಯಿ ಸ್ಥಿತಪ್ರಜ್ಞಳಾಗಿದ್ದಳು. ದಿನವೂ ಹಲವು ನೋವುನಿವಾರಕ ಮಾತ್ರೆ ನುಂಗುತ್ತ ಇರುವಷ್ಟು ದಿನ ತನಗಲ್ಲ-ತನ್ನ ಕುಟುಂಬಕ್ಕಾಗಿ ಎಂದು ತೀರ್ಮಾನ ಕೈಗೊಂಡಿದ್ದಳು. ಅಂತಹ ಅಸಹನೀಯ ಸ್ಥಿತಿಯಲ್ಲೂ ಮಗನನ್ನು ಓದಿಗೆ ಹುರಿದುಂಬಿಸಿದಳು. ತಾಯ ನೆನಪು ಎಷ್ಟೇ ಕಾಡಿದರೂ ಮಗ ಹಿಂಜರಿಯಲಿಲ್ಲ. ಆತನೂ ತನ್ನ ಓದನ್ನು ಮುಂದುವರಿಸುತ್ತ ನಡೆದ.

ಬದುಕಿನ ಕೊನೆಯಘಟ್ಟದಲ್ಲೂ ಬಹಳಕಾಲ ಹೆತ್ತ ಒಬ್ಬನೇ ಮಗನನ್ನೂ ಹತ್ತಿರವಿಟ್ಟುಕೊಂಡು ಆ ಪ್ರೀತಿಯನ್ನು ಅನುಭವಿಸಲಾರದ ಸ್ಥಿತಿ ಆ ತಾಯಿಯದಾಗಿತ್ತು. ಮಗನ ಮೊದಲ್ನೇ ಸೆಮಿಸ್ಟಾರ್ ಮುಗಿಯುವ ಹೊತ್ತಿಗೆ ಆ ತಾಯಿ ಇಹಲೋಕ ತ್ಯಜಿಸಿದಳು. ಅವಳ ಯಜಮಾನಕೂಡ ಅತ್ತೂ ಅತ್ತೂ ಕಣ್ಣೀರೆಲ್ಲ ಬತ್ತಿಹೋದ ಮೇಲೆ ಮನಸ್ಸನ್ನು ಗೆದ್ದಿದ್ದ! ಜೀವನ ಅಂದರೆ ಇದೇ ರೀತಿಯ ಹಲವು ಜಂಜಡಗಳು ಎಂಬುದನ್ನು ಅರ್ಥವಿಸಿದ್ದ. ಹೇಂಡತಿಯ ಉತ್ತರಕ್ರಿಯಾದಿಗಳನ್ನು ಸಮರ್ಪಕವಾಗಿ ಪೂರೈಸಿ ತನ್ನ ಮಗನ ಓದನ್ನು ಮುಂದುವರಿಸಲು ಬೇಕಾಗುವ ಎಲ್ಲಾರೀತಿಯ ಏರ್ಪಾಟು ಮಾಡಿದ. ಮಗ ಬಹುದೊಡ್ಡ ವ್ಯಕ್ತಿಯಾಗಿ ಬೆಳೆಯಲೆಂದು ಆಶಿಸಿದ ಆ ತಾಯಿಯ ಮಾತು ತಂದೆಯ ಕಿವಿಯಲ್ಲಿ ಸದಾ ಗುನುಗುನಿಸುತ್ತಿತ್ತು. ತನ್ನ ಸಕಲ ಕಷ್ಟಗಳನ್ನೂ ಮೆಟ್ಟಿನಿಂತು ಆತ ತನ್ನ ಮಗನ ಓದಿಗೆ ಪ್ರಥಮ ಪ್ರಾಶಸ್ತ್ಯ ಕೊಟ್ಟ. ಹೆಂಡತಿಯ ಮೇಲಿನ ಪ್ರೀತಿಗಾಗಿ ಅವಳ ಆ ಬದುಕಿದ ರೀತಿಯ ನೆನೆಪಿಗಾಗಿ ಮತ್ತೆ ಬೇರೆ ಮದುವೆಯಾಗದೇ ತನ್ನ ನಡುವಯಸ್ಸಿನಿಂದ ಹಾಗೇ ಬ್ರಹ್ಮಚರ್ಯದಲ್ಲಿ ಮುನ್ನಡೆದ. ಹೆಂಡತಿಯ ಭಾವಚಿತ್ರವನ್ನು ದೊಡ್ಡದಾಗಿಸಿ ಕಟ್ಟುಹಾಕಿಸಿಟ್ಟುಕೊಂಡು ಅದಕ್ಕೆ ಜಾಜಿ-ಮಲ್ಲಿಗೆ ಥರದ ಮಾಲೆಗಳನ್ನು ಇಟ್ಟು ಆ ತಾಯಿಯ ಆತ್ಮಕ್ಕೆ ಸ್ವತಃ ಈ ಯಜಮಾನ ಕೈಮುಗಿಯುತ್ತಿರುವುದನ್ನು ನೋಡಿದ ನಾನಿನ್ನೂ ಇದ್ದೇನೆ! ಮಗ ಎಂಜಿನೀಯರ್ ಆದ. ನಂತರವೂ ಓದಿ ಒಳ್ಳೆಯ ರ‍್ಯಾಂಕ್ [RANK] ಆಯ್.ಎ.ಎಸ್. ಪಾಸುಮಾಡಿ ಇವತ್ತು ಉತ್ತಮ ಅಧಿಕಾರದಲ್ಲಿದ್ದಾನೆ, ಭಾರತೀಯ ಸರಕಾರದ ಸೇವೆಯಲ್ಲಿದ್ದಾನೆ. ಆ ಯಜಮಾನ ಬೇರಾರೂ ಅಲ್ಲ, ಸ್ವತಃ ನನ್ನ ಚಿಕ್ಕಪ್ಪ ಶ್ರೀ ಸುಬ್ರಹ್ಮಣ್ಯ ಭಟ್. ಗತಿಸಿದ ಅವರ ಹೇಂಡತಿ ದಿ|ಶ್ರೀಮತಿ ಗಾಯತ್ರಿ. ಓದುವಾಗ ಹಲದಿನ ಅವರಾಶ್ರಯದಲ್ಲಿ ನಾನಿದ್ದೆ. ನನ್ನ ಮದುವೆಯ ಸಂದರ್ಭದಲ್ಲಿ ಆ ತಾಯಿ ಹಾಸಿಗೆ ಹಿಡಿದಿದ್ದರೂ ಮದುವೆಯ ನಂತರ ನಮ್ಮನ್ನು ಕರೆಸಿಕೊಂಡು ಉಡುಗೊರೆ ಇತ್ತಾಗ ನನ್ನ ಹೃದಯ ಉಕ್ಕಿ ಬಂತು, ಅವರ ಅನಾರೋಗ್ಯ ಸ್ಥಿತಿಗೆ ಒಳಗೊಳಗೇ ಮಮ್ಮಲ ಮರುಗಿದ ವ್ಯಕ್ತಿ ನಾನು. ನನ್ನ ಕಣ್ಣಲ್ಲಿ ಸಹಜವಾಗಿ ನೀರು ಹರಿಯಿತು. ಇವತ್ತಿಗೂ ಆ ತಾಯಿಯನ್ನು ನೆನೆಸಿಕೊಳ್ಳುತ್ತೇನೆ. ಅವರ ಋಣವನ್ನು ಖಂಡಿತ ತೀರಿಸಲು ಸಾಧ್ಯವಿಲ್ಲ . ಇದು ಗಂಡ-ಹೆಂಡತಿಯ ಪ್ರೀತಿಗೆ ಹಿಡಿದ ಇನ್ನೊಂದು ಕನ್ನಡಿ.

ಹಿಂದೂ ಮದುವೆಗಳಲ್ಲಿ ಹಿಂದೆಲ್ಲಾ ಹಲವು ಹಾಡುಗಳನ್ನು ಹಾಡುತ್ತಿದ್ದರು. ಇಂದೆಲ್ಲಾ ಅವು ಬರೇ ನೆನೆಪು ಮಾತ್ರ. ಆ ವಿಷಯದಲ್ಲಿ ಹಿಂದಿನ-ಇಂದಿನ ಪೀಳಿಗೆಯ ಕೊಂಡಿಯಾಗಿ ಬೆಳೆದ ನಾವೆಲ್ಲ ಭಾಗ್ಯವಂತರು. ಹಳ್ಳಿಗಳಲ್ಲಿ ಮನೆಯ ಅಂಗಳದಲ್ಲೇ ಚಪ್ಪರ ಹಾಕಿ, ಬಟ್ಟೆಯ ಮೇಲ್ಗಟ್ಟು ಕಟ್ಟಿ, ತಳಿರುತೋರಣಗಳಿಂದ ಅಲಂಕರಿಸಿ, ರಂಗೋಲಿ ಮುಂತಾದುವನ್ನು ಬರೆದು, ಚಪ್ಪರದಲ್ಲಿ ಮಂಟಪ ಕಟ್ಟಿ ಅಲ್ಲಿ ಮದುವೆ ನಡೆಯುತ್ತಿತ್ತು. ನಾವು ಬೆಳೆಯುವ ಹೊತ್ತಿಗೆ ಐದುದಿನ ನಡೆಯುತ್ತಿದ್ದ ಮದುವೆ ೨ ದಿನದ ಸಂಭ್ರಮಕ್ಕೆ ಇಳಿಯಿತು. ಈಗೆಲ್ಲ ಮದುವೆ ಎಂಬುದು ಯಾವಾಗ ಆಯಿತು ಎನ್ನುವಷ್ಟು ತ್ವರಿತಗತಿ. ಹಿಂದಿನ ಮದುವೆಯ ಸಂಭ್ರಮದಲ್ಲಿ ಹಲವು ಹಾಡುಗಳು-ಮನೆಯ ಒಳಗಡೆಯೇ ಆಡುವ ಆಟಗಳು,ಚಿಕ್ಕಪುಟ್ಟ ಸ್ಪರ್ಧೆಗಳು ಇವುಗಳೆಲ್ಲದರ ಹರವಿತ್ತು. ಮುಖ್ಯವಾಗಿ ಅಲ್ಲಿ ಹಲವು ಬಂಧು-ಭಗಿನಿಯರು ಒಟ್ಟಾಗಿ ಪರಸ್ಪರ ಸೌಹಾರ್ದದ ಮಾತುಕತೆ ನಡೆದು ಸಮಾರಂಭಕ್ಕೊಂದು ಜೀವಕಳೆಯಿರುತ್ತಿತ್ತು. ಮದುವೆಯಾದ ಹೆಣ್ಣು ಗಂಡನ ಮನೆ ಸೇರಿದಾಗ ಅಲ್ಲಿ ವಾಸ್ತು ಬಾಗಿಲ ಪೂಜೆಯನ್ನು ಮಾಡಿ ಗೃಹ ಪ್ರವೇಶಿಸಿದ ಬಳಿಕ ಸೇರಿದ ಹತ್ತು ಸಮಸ್ತರ ನಡುವೆ ಹೆಣ್ಣಿನಕಡೆಯವರು - ಗಂಡಿನಕಡೆಯವರಿಗೆ ’ಹೆಣ್ಣೊಪ್ಪಿಸು’ವ ಕಾರ್ಯಕ್ರಮವಿರುತ್ತಿತ್ತು. ಹೆಣ್ಣು ಎಂದರೆ ಹೂವಿನ ಸಸಿ ಅಥವಾ ಹೂವು-ಇವತ್ತಿನ ವರೆಗೆ ನಮ್ಮ ಆಶ್ರಯದಲ್ಲಿ ಇದ್ದ ಈ ಹೂ ಸಸಿಯನ್ನು ನಿಮ್ಮ ಕೈಗೆ ಹಾಕುತ್ತಿದ್ದೇವೆ, ಇನ್ನು ಮುಂದೆ ನಿಮ್ಮ ಆಶ್ರಯಕ್ಕೆ ಬರುವ ಈ ಹೂಸಸಿಗೆ ಕಾಲಕಾಲಕ್ಕೆ ಬೇಕಾದ ನೀರು-ಗೊಬ್ಬರ ಅರ್ಥಾತ್ ಬದುಕಲು ಬೇಕಾದ ಸೌಲಭ್ಯವನ್ನಿತ್ತು ನಿಮ್ಮ ಮಗಳಂತೇ ತಾವು ಪರಾಂಬರಿಸಿ ನೋಡಿಕೊಳ್ಳುವುದು-ಎಂದು ಹೆಣ್ಣಿನ ತಂದೆತಾಯಿ ಹೆಣ್ಣಿನ ಕೈಯ್ಯನ್ನು ಅವಳ ಗಂಡನೂ ಸೇರಿದಂತೆ ಆತನ ತಂದೆ-ತಾಯಿಗಳ ಕೈಗಳಲ್ಲಿ ಇಡಿಸಿ ಈ ಹೇಳಿಕೆ ನೀಡುತ್ತಿದ್ದುದು ಸಾಂಕೇತಿಕವಾಗಿ ಒಂದು ಜವಾಬ್ದಾರಿಯ ಹಸ್ತಾಂತರವಾಗಿತ್ತು.


ಆ ಕಾಲದಲ್ಲಿ ಹಲವು ಅಜ್ಞಾತ ಕವಿಗಳ ಹಾಡುಗಳು ನಮ್ಮ ಗ್ರಾಮಗಳಲ್ಲೆಲ್ಲ ಬಳಸಲ್ಪಡುತ್ತಿದ್ದವು. ಅವು ಹೇಗೆ ಪ್ರಚುರಗೊಳ್ಳಲ್ಪಟ್ಟವು-ಯಾರು ರಾಗ ಹಾಕಿ ಹಾಡಲು ಪ್ರಾರಂಭಿಸಿದ್ದು ಎಂಬುದು ನನಗೆ ವಿದಿತವಲ್ಲ. ಒಟ್ಟಾರೆ ಅವುಗಳೆಲ್ಲ ಬಹಳ ಭಾವನೆ ಕೆರಳಿಸುವಂತಹ ಹಾಡುಗಳಾಗಿದ್ದವು. ಮೌಲ್ಯವನ್ನು ಒತ್ತಿ ಹೇಳಿ ಎತ್ತಿಹಿಡಿಯುವ ಪದಗಳಾಗಿದ್ದವು. ಕವಿ ಪ್ರೊಫೆಸರ್ ದಿ| ವಿ. ಸೀತಾರಮಯ್ಯನವರು ಅಂತಹ ಒಬ್ಬ ಮಹಾನುಭಾವರು. ಇವರ ರೀತಿಯಲ್ಲೇ ಇನ್ನೂ ಅನೇಕ ಜನ ಬರೆದರು ಆದರೆ ನನ್ನ ಅತೀ ಬಾಲ್ಯದ ಕಾಲವಾದ್ದರಿಂದ ಹೆಸರುಗಳು ನೆನಪಿಗೆ ಬರುವುದಿಲ್ಲ. ನಮ್ಗೆ ಇವುಗಳೆಲ್ಲ ಕವಿಗಳು ಬರೆದಿದ್ದೆಂಬುದು ಗೊತ್ತಿರಲಿಲ್ಲ. ಹೆಂಗಸರು ಒಬ್ಬರಿಂದೊಬ್ಬರು ಬಾಯಿಂದ ಬಾಯಿಗೆ ಹಾಡಿಸಿ ಕೇಳಿ ಕಂಠಪಾಠ ಮಾಡುವಾಗ ನಾವೆಲ್ಲ ಮೂದಲಿಸುತ್ತಿದ್ದೆವು; ಅವುಗಳ ಅರ್ಥ ಗೊತ್ತಿರದೇ, ಅವುಗಳ ಮೌಲ್ಯ ತಿಳಿಯದೇ! ಇಂದು ಬೇಕೆಂದರೂ ಆ ಹಾಡುಗಳು ಕೇಳಸಿಗುವುದಿಲ್ಲ. ಮದುವೆಯ ಬಹುತೇಕ ಹಂತಗಳನ್ನು ಆದರ್ಶ ಸತಿಪತಿಗಳಾದ ಶ್ರೀ ಸೀತಾರಾಮಚಂದ್ರರ ಮದುವೆಯ ಸುತ್ತ ಹೆಣೆಯಲ್ಪಟ್ಟ ಹಾಡುಗಳಾಗಿದ್ದವು. ಉದಾಹರಣೆಗೆ --

ಧಾರೇ ಎರೆದ ರಾಯ ನಾರೀ ಜಾನಕಿಯ...
ಶ್ರೀರಾಮಚಂದ್ರಗೆ ಧಾರುಣೀ ಸುತೆಯಾ ....


--ಎಷ್ಟು ರಸವತ್ತಾಗಿದೆ ನೋಡಿ. ಧರಣಿಯಲ್ಲಿ ಜನಿಸಿದ್ದರಿಂದ ಧರಣೀಸುತೆಯಾದ ಜಾನಕಿಯನ್ನು ಸಾಕು ತಂದೆ ಜನಕ ಶ್ರೀರಾಮಚಂದ್ರನಿಗೆ ಧಾರೆಯೆರೆದ ಎಂದು ಹೇಳಲ್ಪಟ್ಟಿದೆ. ಮದುವೆಗೆ ಮುನ್ನ ಮಾಂಗಲ್ಯದ ಸಂಕೇತವಾದ ಕುಂಕುಮ ಹಾಕಿ ಅಕ್ಷತೆ ಕಲೆಸುವುದರಿಂದ ಹಿಡಿದು ’ಸಟ್ಟುಮುಡಿ’ [ಅನ್ನ ಬಡಿಸುವ ಸೌಟಿಗೆ ನಮ್ಮಲ್ಲಿ ಸಟ್ಟುಗ ಎಂದು ಕರೆಯುತ್ತಾರೆ, ಅದನ್ನು ಕೈಲಿ ಹಿಡಿದು ಹೊಸಸೊಸೆ ಅಡಿಗೆಮನೆಯ ಜವಾಬ್ದಾರಿ ವಹಿಸಿಕೊಂಡು ನಿಮಗೆಲ್ಲಾ ಅನ್ನಪೂರ್ಣೆ ಆದೆ ಎನ್ನುವುದೇ ಈ ಕಾರ್ಯಕ್ರಮ] ಎನ್ನುವ ಕಾರ್ಯಕ್ರಮದ ವರೆಗೂ ನೂರಾರು ಹಾಡುಗಳ ಹರವಿತ್ತು. ಊಟಕ್ಕೆ ಕುಳಿತಾಗ ಬೀಗರು ಬೀಗರನ್ನು ತಮಾಷೆಗಾಗಿ

ಆಚೆ ಪಂಕ್ತಿಗೆ ದೊನ್ನೆ ಈಚೆ ಪಂಕ್ತಿಗೆ ದೊನ್ನೆ
ಬೀಗರ ಪಂಕ್ತಿಗೆ ಹರಕ್ದೊನ್ನೆ ....

--ಎಂದು ಗೇಲಿಯಾಡುವುದೇ ಆಗಲೀ

ನಲಿದಾರತಿಗೈವಾ ಸಖಿಯೇ
ಎಲೆ ಶೋಭಿಪ ಸೀತಾರಾಮಚಂದ್ರರಿಗೇ ...

ಇವತ್ತಿಗೆ ಇವೆಲ್ಲ ಯಾರೋ ಅಜ್ಜಿಯರು ಇದ್ದರೆ, ಅವರ ಗಂಟಲು ಸರಿ ಇದ್ದರೆ ಹೇಳುತ್ತೀರಾ ಅಂತ ಕಾಡಿ ಬೇಡಿ ಹೇಳಿಸಿ ಕೇಳಬೇಕಾದ ಹಾಡುಗಳಷ್ಟೇ!

ಸೊಸೆಯಾ ನೋಡಿಕೋ ಜಾಣೆ
ಬಾ ಸುಪ್ರವೀಣೇ ......

--ಇದು ಸೊಸೆಯನ್ನು ಹೇಗಿದ್ದಾಳೆ ಎಂದು ನೋಡಿಕೊಳ್ಳಲು ಹೆಣ್ಣಿನ ಕಡೆಯವರು ಅತ್ತ್ಯಮ್ಮಂಗೆ ಹೇಳಿದರೆ

ಇಂದು ಬಂದ ಸೊಸೆಯಾ
ಇಂದು ನೋಡ್ವರೇನೆ ......

--ಇದು ಗಂಡಿನಕಡೆಯವರ ತಿರುಗುಬಾಣವಾಗಿತ್ತು!

ಅಂತೂ ಬದುಕು ಪೂರ್ತಿ ಹಸನಾಗಲೀ ಎಂಬ ಕಾರಣಕ್ಕೇ ಹಿಂದಿನವರು ಹಲವು ಘಟನೆಗಳನ್ನು ದಾಖಲಿಸಿ ಹಾಡಿನ ರೂಪದಲ್ಲಿ ಬಳಸುತ್ತಿದ್ದರು.

ಜನಪದರಲ್ಲೂ ಒಮ್ಮೆ ಕಣ್ಣಾಡಿಸಿ ನೋಡಿ: ಮದುವೆಯಾಗಿ ಮನೆಗೆ ಬಂದ ಕೆಲದಿನಗಳ ತರುವಾಯ ತವರಿನ ನೆನಪಲ್ಲಿ ಕೊರಗುವ ಹೆಂಡತಿಯನ್ನು ಕಂಡ ಗಂಡ ಆಕೆಯ ಮುಂಗುರುಳು ನೇವರಿಸಿ-

ಹಾಸೀಗಿ ಹಾಸಂದ ಮಲ್ಲೀಗಿ ಮುಡಿಯೆಂದ
ಬ್ಯಾಸತ್ರ ಮಡದೀ ಮಲಗಂದ....
ಬ್ಯಾಸತ್ರ ಮಡದೀ ಮಲಗಂದ ಪ್ರೀತೀಲೇ ತನ್ನೋಡಿ ತವರಾ ಮರೆಯೆಂದಾ....

ತನ್ನಲ್ಲೇ ಎಲ್ಲವನ್ನೂ ಕಾಣು, ಅಪ್ಪ-ಅಮ್ಮ,ಅಣ್ಣ-ತಮ್ಮ, ಅಕ್ಕ-ತಂಗಿ ಎಲ್ಲರ ಪ್ರೀತಿಯನ್ನು ತಾನೇ ಕೊಡುತ್ತೇನೆ ಮಡದೀ ಹಾಸಿಗೆ ಹಾಸಿಕೊಡು, ಇಲ್ಲವೇ ಇದೋ ತಗೋ ಮಲ್ಲಿಗೆ ಹೂವು ನೋಡು ಎಷ್ಟು ಚೆನ್ನಾಗಿದೆ ಮುಡಿದುಕೋ ಎಂದೆಲ್ಲಾ ಹೇಳಿ ಅವಳ ಮನಸ್ಸನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುವ ಆತ, ನಿಂಗೆ ಬೇಜಾರಾಗಿದ್ರೆ ತನ್ನನ್ನೇ ನೋಡಿ ಎಲ್ಲವನ್ನೂ ಮರೆ ಎಂದು ಸಂತೈಸುತ್ತಾನೆ. ಹೆಂಡತಿಯಾದರೂ ಅಷ್ಟೇ ತನ್ನ ಗಂಡ ಬಡವನೇ ಆಗಿದ್ದರೂ ಆತ ಒಳ್ಳೆಯವ, ತನಗೆ ಬದುಕು ಕೊಟ್ಟವ ಎಂಬ ತುಂಬಿದ ಹಂಬಲದಿಂದ--

ಕೂಲಿ ಮಾಡಿದರೇನ ಕಂಬಳಿ ಹೊದ್ದರೇನ
ನಮಗ ನಮರಾಯ ಬಡವೇನ ?

--ಇತರರಲ್ಲಿ ಈ ರೀತಿ ಪ್ರಶ್ನೆ ಹಾಕುತ್ತಿದ್ದಳು. ಇಂದಿಗೆ ಆ ಮೌಲ್ಯವೆಲ್ಲ ಕುಸಿದು ಗಂಡನಿಗೆ ಹೆಂಡತಿ ಎಷ್ಟು ದುಡಿಯುತ್ತಾಳೆ ಎಂದಾದರೆ ಹೆಂಡತಿಗೆ ಗಂಡ ತರುವ ಸಂಬಳ ಯಾತಕ್ಕೂ ಸಾಲದಾಗಿದೆ. ಶಹರ-ಪಟ್ಟಣಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವಾಗ ಹುಟ್ಟಿ ಬೆಳೆಯುತ್ತಿರುವ ಚಿಕ್ಕ ಮಗುವಿಗೆ ಕೇವಲ ’ಸಾಕಮ್ಮ’ ಅಥವಾ ’ಸಾಕಮ್ಮನ ಗೂಡು’ [ಬೇಬಿ ಸಿಟ್ಟರ್]ಗಳೇ ದಾರಿಯಾಗಿವೆ. ಅಲ್ಲಿ ಅವರು ನೀಡಿದ್ದೇ ಆಹಾರ! ಕೆಲವು ಸಾಕಮ್ಮ ಗೂಡುಗಳಲ್ಲಿ ಸಣ್ಣ ಪ್ರಮಾಣದಲ್ಲಿ ನಿದ್ರೆ ಮಾತ್ರೆ ತೇಯ್ದು ಕುಡಿಸಿ ಎಲ್ಲಾ ಮಕ್ಕಳೂ ಮಲಗುವಂತೇ ಮಾಡಿ ಸಾಕಮ್ಮಗಳು ಬೇರೆ ಕೆಲಸಮಾಡುತ್ತಿರುತ್ತವೆ ಎಂಬುದು ನನಗೆ ಗೊತ್ತಾದ ಖೇದಕರ ವಿಷಯ! ಹಾಗೆ ಬೆಳೆಯುವ ಮಗುವಿಗೆ ಯಾವ ಸಂಸ್ಕಾರ ಸಿಗಬಹುದು- ಆ ಬಾಳು ಒಂಥರಾ ನರಕದ ಬಾಳು ಅನ್ನಿಸೋದಿಲ್ವಾ? ತಂದೆ-ತಾಯಿ ಇದ್ದೂ ಮಗುವನ್ನು ಬೇರೆಯವರ ಬುಟ್ಟಿಯಲ್ಲಿ ಕೂಡ್ರಿಸಿ ಟಾಟಾ ಮಾಡಿ ಹೋದಾಗ ಆ ಮಗುವಿಗೆ ಏನನ್ನಿಸಬಹುದು? ಶಹರದ ಮಕ್ಕಳಲ್ಲಿ ಬಹುತೇಕರನ್ನು ಮಾತಾಡಿಸಿ ಅವುಗಳಿಗೆ ಆಂಗ್ಲ ಭಾಷೆಯ ಕೆಲವು ಪಲುಕುಗಳನ್ನು ಬಿಟ್ಟರೆ ಬೇರೆ ಯಾವ ಪರಿಜ್ಞಾನ ಕೂಡ ಬಂದಿರುವುದಿಲ್ಲ. ಊರಿಂದ ಹಿರಿಯರು ಬಂದಿದ್ದರೆ" ನೋಡೋ ನಿನ್ನ ಮಾವ ಬಂದಿದಾರೆ " ಅಂದರೆ "ಹಾಯ್" ಎನ್ನುವಂತೆಯೂ ಎಲ್ಲಿಗಾದರೂ ಹೊರಟರೆ " ಬಾಯ್ " ಎನ್ನುವಂತೆಯೂ ಕಲಿಸಿರುವುದನ್ನು ಬಿಟ್ಟರೆ ನಿಜಜೀವನದ ರೀಯಾಲಿಟಿ ಶೋ ಗೆ ಬೇಕಾದ ಯಾವ ತಯಾರಿ ಕೂಡ ನಡೆದಿರುವುದಿಲ್ಲ. ’ದುಡ್ಡು ಕೊಡು ಸೀಟು ಪಡಿ’ ಇದಿಷ್ಟೇ ಅನುಸರಣೆ ತಂದೆ-ತಾಯಿಗಳದ್ದು!

ಇಂದು ನಾವು ಶಹರದ ಬದುಕಿಗೆ ನಮ್ಮನ್ನು ಮಾರಿಕೊಂಡಿದ್ದೇವೆ. ಪ್ರಾಕ್ಟಿಕಲ್ ಆಗಿ ಯಾರಿಗೂ ನಾವು ಹಳ್ಳಿಯಲ್ಲಿ ಬದುಕಬಲ್ಲೆವು ಎಂದು ಹೇಳುವ ಗಟ್ಟಿ ಎದೆ ಕೂಡ ಇಲ್ಲ! ನಮಗೆ ನಮ್ಮ ಹಿರಿಯರು ಬೇಕಾಗಿಲ್ಲ! ನಾವಿಬ್ಬರು-ನಮಗೊಬ್ಬ ಹೋಗ್ತಾ ಹೋಗ್ತಾ ನಾವಿಬ್ಬರು-ನಮಗಾರು? ಎನ್ನುವ ಸ್ಥಿತಿ ಬರುತ್ತಿದೆ. ಹುಡುಗಿಯರು ಈ ವಿಷಯದಲ್ಲಿ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು. ತಮ್ಮ ತಂದೆ-ತಾಯಿಗಳನ್ನು ಆದರಿಸುವ ಅವರು ಅತ್ತೆ-ಮಾವಂದಿರನ್ನೂ ಅದೇ ಮಟ್ಟದಲ್ಲಿ ನೋಡಿಕೊಳ್ಳಬೇಕು. ಒಂದೊಮ್ಮೆ ತಮಗೆ ಒಬ್ಬನೇ ಮಗ ಎಂದು ಜೊತೆಗೆ ಇರಲು ಬಯಸಿದರೆ ಅವರನ್ನು ವೃದ್ಧಾಶ್ರಮಕ್ಕೆ ಸಾಗಹಾಕುವ ಸಾಹಸ ಮೆರೆಯಬಾರದು! ಎಷ್ಟೇ ಆಗಲಿ ನಮ್ಮವರು ನಮ್ಮವರೇ-ದುಡ್ಡಿಗೆ ಸಿಗುವ ಸಾಕಮ್ಮಗಳು ಬರೇ ಹಣಕ್ಕಾಗಿ ಮಾಡುವವರು. ಮನೆಯಲ್ಲಿ ಹಿರಿಯರು ಇದ್ದಾಗ ಕೆಲವೊಮ್ಮೆ ಹೊಸ ಬದುಕಿನ ಚಟುವಟಿಕೆಗಳು ಆಡಂಬರಗಳು, ನವನವೀನ ವಿನ್ಯಾಸದ ಹೆಂಗಸರು ತೊಡಬಾರದ ದಿರಿಸುಗಳು, ಮೇಕಪ್ ಸಾಮಗ್ರಿಗಳು ಇವುಗಳನ್ನೆಲ್ಲ ನೋಡಿ ಇರುಸುಮುರುಸು ಉಂಟಾಗಿ ಅವರೇನಾದರೂ ಅನ್ನಬಹುದು-ಆದ್ರೆ ದೇವರಾಣೆ ಹೇಳುತ್ತೇನೆ ಕೇಳಿ ಯಾವ ತಂದೆ-ತಾಯಿಯೇ ಆಗಲಿ ತಮ್ಮ ಮಕ್ಕಳಿಗಾಗಿ ತಮ್ಮ ಆಚರಣೆ-ಸಂಪ್ರದಾಯಗಳಲ್ಲೇ ಬದಲಾವಣೆ ಮಾಡಿಕೊಳ್ಳುತ್ತಾರೆ. ಅವರಿಗೆ ತಿಳಿಸಿ ಹೇಳುವ-ಹೊರ ಜಗತ್ತನ್ನು ತೋರಿಸಿ ಮನವೊಲಿಸುವ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ಕೆಟ್ಟ ಚಾಳಿಯೊಂದು ಆಚರಣೆಯಲ್ಲಿದೆ-ಇಂದು ಮದುವೆಗೆ ತಯಾರಾಗುವ ಹುಡುಗಿ " ಹುಡುಗನಿಗೆ ಅಪ್ಪ-ಅಮ್ಮ ಜೊತೆಯಲ್ಲೇ ಇದ್ದರೆ ಬೇಡ, ಆಮೇಲೆ ಕಷ್ಟವಾಗುತ್ತೆ " ಎಂದು ತನ್ನ ತಂದೆ-ತಾಯಿಗಳಿಗೆ ಹೇಳುತ್ತಾರೆ. ಬದುಕಿನ ಬಹುದಿನ ಅನೇಕ ಮಹಡಿಗಳಿರುವ ಕಟ್ಟಡ ಕಟ್ಟಿದಂತೇ ಇಳಿವಯಸ್ಸಿನಲ್ಲಿ ತಮಗೆ ಸುಖಕಾಣುವ ಕನಸು ಕಟ್ಟಿ ಹಡೆದು-ಪೋಷಿಸಿ-ಬೆಳೆಸಿ-ವಿದ್ಯೆಕಲಿಸಿ ಬದುಕಿನಲ್ಲಿ ದಡ ಹತ್ತಿಸಿದ ಇದ್ದೊಬ್ಬ ಮಗನ ಒಳಿತಿಗಾಗಿ ’ವೃದ್ಧರ ಗೂಡು’ ಸೇರುವ ಹಲವು ಮಾತಾಪಿತೃಗಳಿಲ್ಲವೇ? ಇದಕ್ಕೆಲ್ಲ ನಮ್ಮ ಸಮಾಜದ ಬೇಜವಾಬ್ದಾರಿತನವೇ ಕಾರಣ ಅಲ್ಲಾಂತೀರಾ? ನಾಳೆ ನಾವೊ ನೀವೂ ಈಗ ಓದುತ್ತಿರುವ ಅಕ್ಷರಗಳನ್ನು ಓದಲಾರದಷ್ಟು ಮುದುಕಾಗಿ, ಸೋಡಾ ಗ್ಲಾಸನ್ನು ಕಣ್ಣಿಗೆ ಇಟ್ಟುಕೊಂಡು, ಕೈಲಿ ಕೋಲು ಹಿಡಿದು " ಮಗಾ ಮಗಾ ಮಗಾ" ಅಂತ ನಡೆವಾಗ ನಮಗೂ ಆ ಸ್ಥಿತಿ ಬಂದರೆ ಅದಕ್ಕೂ ನಾವೇ ಹೊಣೆಯಲ್ಲವೇ?

ಹೆಣ್ಣು ಮಕ್ಕಳ ಪಾಲಕರೇ ತಮ್ಮಲ್ಲಿ ಒಂದು ವಿನಂತಿ- ನಿಮ್ಮ ಮಗಳಿಗೆ ಹುಟ್ಟಿದ ಮನೆಗೂ-ಕೊಟ್ಟಮನೆಗೂ ಕೀರ್ತಿ ತರುವಂತಹ ಕೆಲಸಮಾಡಲು, ಅತ್ತೆ-ಮಾವಂದಿರಿದ್ದರೆ ಅವರನ್ನು ಸಂಭಾಳಿಸಿಕೊಂಡು ಹೋಗಲು, ಬದುಕಿನಲ್ಲಿ ಸಹಕಾರ ಮತ್ತು ಸಹಬಾಳ್ವೆಯನ್ನು ಅಳವಡಿಸಿಕೊಳ್ಳಲು, ಕೇವಲ ಕೂಪಮಂಡೂಕಗಳಾಗಿ ಮೆರೆಯದೇ-ಮೆರೆದು ಮರುಗದೇ ವಿಶಾಲ ಮನೋಭಾವ ಬೆಳೆಸಿಕೊಳ್ಳಲು, ಜೀವನದಲ್ಲಿ ರಾಮಾಯಣ-ಭಾರತಗಳಂತಹ ದಾರ್ಶನಿಕರ ಕಥೆಗಳ ತತ್ವವನ್ನು ಹೀರಿ ಅನುಸರಿಸಲು, ಗಂಡನ ದುಡಿಮೆಗೆ ಲೆಕ್ಕಹಾಕದೇ ಇದ್ದುದರಲ್ಲಿ ತೃಪ್ತಿಪಡಲು --ಕಲಿಸಬಹುದೇ ತಾವು? ’ ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೇ’ ಅಂತಾರಲ್ಲ ಈ ಗಾದೆ ತಮಗೂ ಅರ್ಥವಾಗಬಹುದಲ್ಲ ?

ಅಂತಹ ಸುಸಂಸ್ಕೃತ ಮಗಳನ್ನು ಬೆಳೆಸಿ,ಅನೇಕ ಮನಗಳನ್ನು ಬೆಳಗಿಸುವ ಮಗಳನ್ನು ಬೆಳೆಸಿ, ಒಳ್ಳೆಯ ಮನದಿಂದ ಬೆಳೆಸಿ, ಆಗ ಜನಕರಾಯ ಜಾನಕಿಯನ್ನು ಶ್ರೀರಾಮಚಂದ್ರನಿಗೆ ಧಾರೆ ಎರೆದಂತೇ ನೀವೂ ಧಾರೆ ಎರೆದು ಕೊಡಲು ಹಾಗೂ ಅದನ್ನು ಸ್ವೀಕರಿಸಲು ಶ್ರೀರಾಮಚಂದ್ರನಂತಹದೇ ವ್ಯಕ್ತಿಯೊಬ್ಬ ಒಡಮೂಡುತ್ತಾನೆ- ಇದು ಸತ್ಯ ಸಂಕಲ್ಪ, ಇದು ದೈವೀ ಸಂಕಲ್ಪ, ಇದು ನಿತ್ಯ ನಿಸರ್ಗದ ಸಂಕಲ್ಪ ಎಂಬುದರೊಂದಿಗೆ ಅಂತಹ ಸಂದರ್ಭದಲ್ಲಿ ನಾವೆಲ್ಲಾ ಅರ್ಥಗರ್ಭಿತವಾಗಿ, ಮನದಂದು ಹಾಡೋಣ ದಿ| ವೀ.ಸೀ. ಬರೆದ ಹಾಡು --

" ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು
ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು "


ನಮಸ್ಕಾರ.

Sunday, August 1, 2010

ಶ್ರೀ ಭೈರವೆಶ್ವರ ಯುವಕರ ಸಂಘ(ರಿ)-2

ಚಿತ್ರ ಕೃಪೆ : ಅಂತರ್ಜಾಲ

ಶ್ರೀ ಭೈರವೆಶ್ವರ ಯುವಕರ ಸಂಘ(ರಿ)

ಹೆಸರೇಳು ತಾಲ್ಲೋಕು,ಸಕಲಾಪುರ ಹೋಬಳಿ, ಹುಡುಕಾಡು ಜಿಲ್ಲೆ, ಕರ್ನಾಟಕ ರಾಜ್ಯ
ಪಿನ್ನ್ :- ೫೬_ _ ೧೦ ಫೋನ್ : ೧೨೩೪೫
ಅಧ್ಯಕ್ಷರು : ಚೆಲುವಯ್ಯ ಕಾರ್ಯದರ್ಶಿಗಳು: ಪರಮೇಶಿ

ಭಾಗ-೨

ಸರ್ವರಿಗೂ ಹಾದರದ ಸ್ವಾಗತ


" ಬಾಬಾರೋ ರಸಿಕಾ .............. " ಅಯ್ಯಯ್ಯೋ ಇದೆಂತಾ ಭರತನಾಟ್ಯವೆನ್ನುವ ಹೊತ್ತಿಗೆ ಸೈಡ್ ವಿಂಗ್ ನಲ್ಲಿ ಅನೌನ್ಸರ್ ಹೆಳಿದ " ಆಮಂತ್ರಣದಲ್ಲಿ ತಪ್ಪಾಗಿ ಭರತನಾಟ್ಯ ಎಂದು ಪ್ರಿಂಟಾಗಿದ್ದಕ್ಕೆ ನಮ್ಮ ಹೈಕ್ಳೆಲ್ಲಾ ಬೋ ಬೆಜಾರ್ದಾಗಿದ್ರು ಅದು ತಪ್ಪಾಗಿರೋದು ಈಗ್ ನೀವೆಲ್ಲಾ ನೋಡುತ್ತಿದ್ದೀರಿ ಹದ್ಬುತ ಡ್ಯಾನ್ಸು "

ಭರತನಾಟ್ಯದ ಹೆಸರಲ್ಲಿ ಇಬ್ಬರು ಪ್ರಾಯದ ಹುಡುಗಿಯರು ಅತೀ ಕಮ್ಮಿ ಬಟ್ಟೆಯಲ್ಲಿ ನಂಗಾನಾಚ್ ಗೆ ತೊಡಗಿದ್ದರು. ನನಗಂತೂ ಮಜಾ ಹಾಳ್ ಬೀಳ್ಲಿ ಅಲ್ಲಿಂದ ಎದ್ದು ಓಡಿಹೋದರೆ ಸಾಕಾಗಿತ್ತು.

ರಸಿಕಾ ರಸಿಕಾ ಹಾಡು ಮುಕ್ಕಾಲು ಆಗುತ್ತಿರುವಾಗ ಅದ್ಯಾವನೋ ಎಣ್ಣೆ ಕುಡಿದವ ವೇದಿಕೆಯೇರಿ ಒಬ್ಬ ಹುಡುಗಿಯ ಹತ್ತಿರವೇ ಡ್ಯಾನ್ಸ್ ಮಾಡಲು ಪ್ರಾರಂಭಿಸಿದ! ಅದನ್ನು ನೋಡಿ ಸುಮಾರು ಹದಿನೈದಿಪ್ಪತ್ತು ಪಡ್ಡೆಗಳೂ ಕುಣಿಯ ಹತ್ತಿದವು.

ರಸಿಕಾ ಹಾಡು ಹಾಗೇ ಹಾಗೇ ಮುಗೀತು. ಮುಗಿದ ಮೇಲೆ ಸಂಘದ ಕೆಲವರು ಬಂದು ವೇದಿಕೆಯೇರಿದ್ದ ಎಲ್ಲರನ್ನೂ ಒಮ್ಮೆ ಕೆಳಗೆ ಕಳಿಸಿದರು. [ ಇಬ್ಬರು ನೃತ್ಯಾಂಗನೆಯರನ್ನು ಬಿಟ್ಟು]

" ಈಗ ಮತ್ತೊಂದು ಅದ್ಬುತ ಡ್ಯಾನ್ಸ್ ಕುಮಾರಿ ಮೆಗಾಸ್ರೀ ಮತ್ತು ಕುಮಾರಿ ಹೇಮಾಸ್ರೀರವರುಗಳಿಂದ "

" ಹೇ ಮುಚ್ಲಾ ಬಾಯ್ನ ಬ್ಯಾಗ್ ಸುರುಮಾಡ್ಲ ಡಾನ್ಸ್ ನ ತಡ್ಕೊಳಕಾಯಾಕಿಲ್ಲ ನಂ ತಾವ ಇಲ್ಲಿ " --ಸಭೆಯಿಂದ ಕೇಳಿದ್ದು!

" ಜಾಣಾ ಓ ಜಾಣಾ ಜಾಣಾ ಓ ಜಾಣಾ......ಝಣ ಝಣ ಈ ಕಾಂಚಾಣ......." ಏನಬ್ಬರ ಅಂತೀರಿ.... ತಿರುಗಿ ನೋಡಿದೆ ಸಭೆಯಕಡೆ ಚಳಿಗೆ ಚಾದರಹೊದ್ದು ಎಣ್ಣೆಯ ಅಮಲಲ್ಲಿದ್ದ ಮುದುಕರೆಲ್ಲಾ ಕುಣಿಯತೊಡಗಿದ್ದಾರೆ!
ಅಯ್ಯಯ್ಯೋ ! ನಾನೊಬ್ಬನೇ ಹಾಗೆ ಕೂತಿದ್ದು ಬಿಟ್ಟರೆ ಯಾರೂ ಸರಿಯಾಗಿ ಕೊತುಕೊಳ್ಳುತ್ತಲೇ ಇರಲಿಲ್ಲ. ಅಲ್ಲಿ ಸೇರಿದ್ದ ಹಳ್ಳಿಯ ಹೆಂಗಸರೂ ಸೇರು-ಪಾವು ಅಂತ ಸ್ವಲ್ಪ ಅಮಲಾಗಿದ್ದರು! ಅವರಲ್ಲೂ ಕೆಲವರು ಅಲ್ಲಲ್ಲೇ ಸಣ್ಣಗೆ ಕುಣಿಯುತ್ತಿದ್ದರು! ಸಿಳ್ಳೆಯೇನು , ರಾಕೆಟ್ಟೇನು , ಚಪ್ಪಾಳೆಯೇನು ಛೆ ಛೆ ಮರೆಯಲಾಗದ್ದು ಬಿಡಿ, ಇದನ್ನೆಲ್ಲ ನೀವು ಲೈವ್ ಆಗಿ[ನೇರವಾಗಿ] ನೋಡಿದರೇನೆ ಅನುಭವಕ್ಕೆ ಬರೋದು. ಎರಡು ನೃತ್ಯ ಮುಗಿಯಲು ಒಂದೂವರೆ ಗಂಟೆ ಸ್ಮಯ ಹಿಡಿಯಿತು. ಅಂತೂ ನಂಗಾನಾಚ್ ಕಲಾವಿದೆಯರು ಸುಸ್ತಾದರು-ಇನ್ನು ಕುಣಿಯದಾದರು ಎನ್ನುವಾಗ ಅನೌನ್ಸರ್ ಕೂಗಿದ " ಹಿವತ್ತಿನ ಕಾರ್ಯಕ್ರಮಗೋಳ ಮದ್ಯ ನಮ್ಮ ಮೆಗಾಸ್ರೀ ಮತ್ತು ಹೇಮಾಸ್ರೀಯವರ ಡ್ಯಾನ್ಸ್ ಸೂಪ್ಪರಾಗಾಯ್ತು "

ಆತನಿಗೆ ಮಾತನಾಡಲೇ ಬಿಡುತ್ತಿರಲಿಲ್ಲ. ಮುದುಕರಿಗೆ ಇನ್ನೂ ಡ್ಯಾನ್ಸ್ ನೋಡಬೇಕಾಗಿತ್ತಂತೆ ಅಂತ ತಿಳೀತು. ಅವರೆಲ್ಲಾ ತರತರವಾಗಿ ಬೊಬ್ಬೆಹಾಕುತ್ತಿದ್ದರು. ಹುಳಿಸೆಮುಪ್ಪಾದರೂ ಹುಳಿಮುಪ್ಪೇ ಅನ್ನುವ ಗಾದೆ ಹುಟ್ಟಿದ್ದು ಇದೇ ಊರಲ್ಲೆ ? ಅಂತೂ ಅನೌನ್ಸರ ಬೌನ್ಸರ್ ಥರನೂ ಕೆಲಸ ಮಾಡಿ ಅವರನ್ನೆಲ್ಲ ದಬ್ಬಿ ಕೂರಿಸಿದ. ಮತ್ತೆ ವೇದಿಕೆಯೇರಿ ಕೂಗಿದ " ಈಗ ನಮ್ಮ ಸಂಘದ ಅವ್ಯಾಸಿ ಕಲಾವಿದ್ರಗೋಳಿಂದ ದ್ರೌಪತೀ ವಸ್ತ್ರಾಪ ಅರಣ ಹೆಂಬ ಸುಂದರ ಪೌರಾಣಿಕ ನಾಟ್ಕ, ಹೆಲ್ಲರೂ ಸಾಂತರೀತಿಯಿಂದ ಕೂತ್ಕೊಳಿ ಇಲ್ಲಾಂದ್ರೆ ನಾಟ್ಕ ಬಂದ್ಮಾಡಾಕೋಯ್ತೀವಿ ಮತ್ತೆ ಹೇಳ್ಬುಟ್ಟಿದ್ದೇನಿ "

ಇನ್ನೊಂದ ಸಲ ಅದೇ ಹೇಳಿಕೆಯನ್ನು ರಿಪೀಟ್ ಮಾಡ್ದ.

ಅಂತೂ ನಾಟಕದ ಆರಂಭ ಇನ್ನೇನು ....

" ಗಜವದ ನಾ ಬೇಡುವೇ ಗೌರಿ ತನೇಯಾ ... ಗಜವದ ನಾ ಬೇಡುವೇ ........" ಕ್ಯಾಸಿಯೋ [ಕೀ ಬೋರ್ಡು] ಜೋರಾಗಿತ್ತು.
ನಿರ್ದೇಶಕರೇ ಹಾಡುಗಾರರೂ ಆಗಿರುವುದರಿಂದ ಹಾಡು ಪ್ರಾರಂಭವಾಯಿತು.

ಕಥೆ ಮುಂದುವರಿದಿತ್ತು. ಮೊದಲಿಗೆ ಪಾಂಡವರು ಮಾತಾಡೊದು. ಶುರುವಾಗೋಯ್ತು... ಭೀಮ ಇರಲಿಲ್ಲ! ಬಾಕಿ ಎಲ್ಲಾ ಇದ್ದರು. " ಹೇ ಹೆಲ್ಲಲೇ ಭೀಮಾ ? ಎಲ್ಲೋಗ್ ಕೂತ್ವನೋ ಅವನ್ಮನೆಕಾಯಾಕೋಗ ಇಂತಿಂತಾ ಹೆಮರ್ಜೆನ್ಸಿ ಟೇಮ್ನಾಗೇ ಇಂಗೇ ಕೈಕೊಡೋದು ಮುಂದಿನ ವರ್ಸ ಹಿಂತಾನನ್ಮಕ್ಳಿಗ್ ಒಬ್ಬರ್ಗೂ ಪಾರ್ಟ್ ಕೊಡಾಕಿಲ್ಲ " ನಾಟಕದ ವ್ಯವಸ್ಥಾಪಕರ ಕೂಗು!

ಭೀಮನ ಪಾತ್ರ ಮಾಡಿದ್ದು ಕೇಬಲ್ ಭೈರಪ್ಪ. ಅವನಿಗೆ ಊರಲ್ಲಿ ಪಕ್ಕದೂರಲ್ಲಿ ಅಲ್ಲಲ್ಲಿ ಕೆಲವು ಗೆಳತಿಯರ ಸಹವಾಸವಂತೆ! ಆದಿನ ಯಾವುದೋ ಹೊಸಗೆಳತಿ ಬಂದಿದ್ದಾಗಿಯೂ ಆಕೆಯೊಡನೆ ಆತ ಸಾಯಂಕಾಲದವರೆಗೆ ಮಾತನಾಡುತ್ತಿದ್ದುದನ್ನು ಸಾಣೆ ಹಳ್ಳದ ಸುರೇಶ ಕಂಡಿದಾನಂತೆ ! ಎಲ್ಲಾ ಅಂತೆಕಂತೆ ಇಂತದ್ದೇ ಮಾತಿತ್ತು. ಆದರೆ ಭೀಮನ ಪಾತ್ರದ ಪ್ರವೇಶದ ಅವಶ್ಯಕತೆಯಿದ್ದರೂ ಇನ್ನೂ ಭೀಮ ಬರದಿದ್ದುದು ಬಹಳಜನರಿಗೆ ಗಲಿಬಿಲಿ ಉಂಟುಮಾಡಿತ್ತು. ನಾಟಕದಲ್ಲಿ ಮಧ್ಯೆ ಹಾಗೆ ಯಾರನ್ನು ಆ ಪಾತ್ರಕ್ಕೆ ತಾಲೀಮು ಇಲ್ಲದೇ ಹೊಂದಿಸುವುದು?ನಿರ್ದೇಶಕರು ಎಲ್ಲಾ ಕಿತ್ತೆಸೆದು ಓಡಿಹೋಗುವಷ್ಟು ಕೋಪದಲ್ಲಿದ್ದರು. ಆದರೂ ನಾಟಕ ಮುಗಿದ ಹೊರತೂ ಅವರ ಸಂಭಾವನೆ ಸಿಕ್ಕಿರುವುದಿಲ್ಲವಾಗಿ ಅನಿವಾರ್ಯವಾಗಿ ಹಾಗೂ ಹೊಟ್ಟೆಪಾಡಿನ ನೆನಪಾಗಿ ಅಲ್ಲೇ ಉಳಿದರು. ಬಹಳ ಜನರ ಹತ್ತಿರ ಹುಡುಕಲು ಹೇಳಿದರು.

ಇತ್ತ ಕೇಬಲ್ ಭೈರಪ್ಪನ್ನ ಹುಡುಕಲು ಸುರೇಶನನ್ನೇ ಮುಂದಾಗಿ ಕಳಿಸಿ ಎಲ್ಲರೂ ಪ್ರಯತ್ನಿಸುತ್ತಿದ್ದರು. ಸುರೇಶ ಸುಮಾರು ಎಂಟತ್ತು ಮಂದಿ ಪಡ್ಡೆಗಳೊಂದಿಗೆ ಹುಡುಕಲು ಹೋದ. ಸಾಣೆ ಹಳ್ಳದ ಸೇತುವೆ[ ಹತ್ತಿರ ಸುಳುಕಾಡುತ್ತಿರುವಾಗ ಅವರಿಗೆಲ್ಲ ಅರೆಗತ್ತಲಲ್ಲಿ ಸಣ್ಣಗೆ ಗುಣು ಗುಣು ಮಾತಿನ ಸದ್ದು ಕೇಳಿಬರುತ್ತಿತ್ತು. ಸುರೇಶನಿಗೆ ಬಹಳ ಕುತೂಹಲವಿದ್ದುದರಿಂದ ಆತ ಸೇತುವೆ ಕೆಳಗೆ ನೋಡಲು ಮುಂದಾದ. ಟಾರ್ಚ್ ಹತ್ತಿಸಿಕೊಂಡು ಒಂದಿಬ್ಬರು ಆತನ ಜೊತೆಗೆ ಬಂದರು. ಅಲ್ಲಿಳಿದು ನೀರಿಲ್ಲದೇ ಆರಿದ್ದ ಜಾಗದಲ್ಲಿ ಬೆಳೆದಿದ್ದ ಸಣ್ಣ ಕುರುಚಲು ಗಿಡಗಳ ಮಧ್ಯೆ ನಾಲ್ಕು ಕಾಲುಗಳು ಕಂಡವು! ಸುರೇಶನ ಅನುಮಾನ ಗಟ್ಟಿಯಾಯಿತು. ಸರಿಯಾದ ಮೂರುಸೆಲ್ಲಿನ ಟಾರ್ಚ್ ನ ಬೆಳಕನ್ನು ಹತ್ತಿರವೇ ಹೋಗಿ ಫೋಕಸ್ ಮಾಡಿದ. ಪಕ್ಕದೂರಿನ ರಮ್ಯಾಳೊಂದಿಗೆ ’ಭೀಮ’ ’ ಕ್ರೀಡೆ’ಯಲ್ಲಿ ನಿರತನಾಗಿದ್ದ. ಬೆಳಕು ಮೈಮೇಲೆ ಬೀಳುತ್ತಿದ್ದಂತೆಯೇ ಯಾರಿಗೂ ಮುಖವನ್ನೂ ಸರಿಯಾಗಿ ತೋರಿಸದೇ ಬಟ್ಟೆಯನ್ನೂ ಧರಿಸದೇ ಇಬ್ಬರೂ ಸತ್ನೋ ಇದ್ನೋ ಅಂತ ಓಡಿಹೋದರು!

" ಆ ಭೀಮ ಸಿಕ್ಕ ಭೀಮ ಸಿಕ್ಕ ಇಡ್ಕೊಳಿ ಇಡ್ಕೊಳಿ " ಕೂಗುತ್ತಾ ಅವರೆಲ್ಲ ಕತ್ತಲಲ್ಲೇ ಆತನ ಬೆನ್ನುಹತ್ತಿದರು.

ನಾಟಕದ ನಿರ್ದೇಶಕರು ಪಾತ್ರಧಾರಿಗಳನ್ನು ರಂಗಕ್ಕೆ ಸಜ್ಜುಗೊಳಿಸುವಷ್ಟರಲ್ಲಿ ಹೈರಾಣಾಗಿದ್ದರು, ಆದರೂ ಈ ಬೇಡದ ಸಮಸ್ಯೆಗಳಿರದಿದ್ದರೆ ನಾಟಕ ಹೇಗೋ ನಡೆಯುತ್ತಿತ್ತು. ಈ ರೀತಿ ಹೊಸ ಹೊಸ ’ದ್ರೌಪತೀ ವಸ್ತ್ರಾಪಹರಣ’ಗಳು ಹುಟ್ಟಿಕೊಂಡು ಪಾತ್ರಧಾರಿಗಳೇ ನಾಪತ್ತೆಯಾದರೆ ಹೇಗೆ ತಾನೇ ನಾಟಕಮಾಡಲು ಸಾಧ್ಯ ? ಅಂತೂ ಮುಖ ಒಣಗಿಸಿಕೊಂಡು ಕೂತಿದ್ದರು.

ಸುಮಾರು ಅರ್ಧರಾತ್ರಿ ಕಳೆದು ಹೋಗಿ ಬೆಳಗಿನ ೨ ಗಂಟೆಯಾಗಿಬಿಟ್ಟಿತ್ತು ಅನಿಸುತ್ತದೆ. ಸಭಿಕರಲ್ಲಿ ಕೆಲವರು ಕಾಡುಗಳ್ಳರು ರಾತ್ರಿ ಕಾಡಲ್ಲಿ ಮರದದಿಮ್ಮಿಯನ್ನು ಕತ್ತರಿಸುವಾಗ ಆಗುವ ಸದ್ದಿನಂತೇ " ಗೊರಾರ್ ಸಾಂ ......ಗೊರಾರ್ ಸಾಂ...... ಗೊರಾರ್ ಸಾಂ " ಎಂದು ಗೊರಕೆ ಹೊಡೆಯುತ್ತಿದ್ದರೆ ಅತೀ ಕುಡುಕರು ಕುರುಕ್ಷೇತ್ರದಲ್ಲಿ ಮಲಗಿದ ಹೆಣಗಳಂತೇ ಬಾಯಿಂದ ಜೊಲ್ಲು ಸುರಿಸುತ್ತಾ ಈ ಲೋಕದ ಪರಿವೆಯೇ ಇಲ್ಲದೇ ಮಲಗಿದ್ದರು. ಅರ್ಧಂಬರ್ದ ಕುಡಿದವರು " ಬಾಬಾರೋ ರಸಿಕಾ ಬಾಬಾರೋ ರಸಿಕಾ ಏ ಬಾ ಮಕ್ಕಾ....ಬೂಂ... ಬಾ.... ಮನಿಕ್ಕಾ....ಹೂಂ... " ಅಂತೇನೋ ಗೊಣಗುತ್ತಿದ್ದರು. ಇನ್ನೂ ಕೆಲವರು ಅಲ್ಲಲ್ಲೇ ಹತ್ತತ್ತು ಜನ ಗುಂಪಾಗಿ ಇಸ್ಪೀಟು ಆಡುತ್ತಿದ್ದರು [ತಿಂಗಳ ಬೆಳಕಲ್ಲಿ], ಬೀಡಿ ಸಿಗರೇಟುಗಳ ಹೊಗೆ ಹೋಮಮಾಡಿದ ರೀತಿಯಲ್ಲಿ ಬರುತ್ತಲೇ ಇತ್ತು! ಹುರಿಗಡ್ಲೆ, ಕಡ್ಲೇ ಬೀಜ[ಶೇಂಗಾ], ಬಟಾಣಿ ಇವನ್ನೆಲ್ಲ ಪಕ್ಕದ ಇಕ್ಕೆಲಗಳಲ್ಲಿ ಬಂದುಕೂತ ತಾತ್ಕಾಲಿಕ ರಟ್ಟಿನ ಪೆಟ್ಟಿಗೆಯ ಅಂಗಡಿಗಳಿಂದ ಖರೀದಿಸಿ ತಿಂದವರು, ಮಕ್ಕಳು ಹೀಗೆ ಹಲವರು ಕೆಟ್ಟ ಕೆಟ್ಟ ಹೂಂಸು ಬಿಡುತ್ತಿದ್ದರು. ಸೀನುವುದು, ಕ್ಯಾಕರಿಸಿ ಕಫ ಉಗಿಯುವುದು, ಮಹಾ ರೋಗ ಹಿಡಿದವರಂತೇ ಆಗಾಗ ಕೆಮ್ಮುವುದು, ಬ್ರಾಂಕೈಟಿಸ್ ಇದ್ದವರು ಶ್ವಾಸದಲ್ಲಿ ಸಪ್ತಸ್ವರ ನುಡಿಸುವುದು-- ಈ ಎಲ್ಲಾ ಕಲಾವಿದರ ಸಹಭಾಗಿತ್ವ ಇದ್ದೇ ಇತ್ತು.


ಅಂತೂ ಬೆನ್ನತ್ತಿದ್ದರೂ ಸಿಗದ ಭೀಮ ತನ್ನ ತೆವಲು ಆದಷ್ಟು ತೀರಿತ್ತಲ್ಲ ಹೀಗಾಗಿ ಮುಸಿಮುಸಿ ನಗುತ್ತ ಅಲ್ಲೆಲ್ಲೋ ಹೇಗೋ ಪಂಚೆಸುತ್ತುಕೊಂಡು ಬಣ್ಣದ ಮನೆಗೆ ಬಂದ! ಆತನಿಗೆ ಬಣ್ಣ ಹಚ್ಚಿ ವೇಷ ಹಾಕಿದ್ದೂ ಆಯಿತು. [ನಡು ನಡುವೆ ಅವರ ಮತುಗಳನ್ನೆಲ್ಲ ಸಮಯದ ಅಭಾವದಿಂದ ಕೈಬಿಟ್ಟಿದ್ದೇನೆ ]

ನಾಟಕ ಅಷ್ಟು ಹೊತ್ತು ಹೇಗೇಗೋ ಭೀಮನಿಲ್ಲದೇ ನಡೆದಿದ್ದು ಅಂತೂ ಭೀಮನ ಪ್ರವೇಶವಾಯಿತು. ದುಶ್ಯಾಸನ ದ್ರೌಪದಿಯ ಸೀರೆಯನ್ನು ಸೆಳೆಯುವ ಸನ್ನಿವೇಶ ಬಂತು.

" ಏ ಕ್ರಿಷ್ಣಾ ವಾಸುದೇವಾ ಮುರಾರಿ, ಹೈದು ಜನ ಗಂಡಂದಿರಿದ್ದೂ ನನ್ನನ್ನು ಒಬ್ಬರೂ ಕಾಪಾಡಲು ಮುಂದೆಬರುತ್ತಿಲ್ಲವಲ್ಲಾ, ನನ್ನ ಮಾನ ಅರಣವಾಗಿ ಓಗುತ್ತಿದೆ ಕ್ರಿಷ್ಣಾ, ಹೋ ಅಣ್ಣಾ ನೀನು ಬೇಗನೇ ಬಾ ಹಣ್ಣಾ ನೀ ಬೇಗನೇ ಬಾ, ಹೀ ಆರ್ತಳ ಮೊರೆ ಕೇಳದೇ ಹಣ್ಣಾ ನಿನಗೆ ಹೀ ಬಡವಳಮೇಲೆ ದಯೆಬಾರದೇ , ದಯಮಾಡಿ ಏಗಾದರೂ ಬಡ್ಡಿಗಾದರೂ ಕೊಡು [ಎಂದುಬಿಟ್ಟ ಯಾಕೆಂದರೆ ಆತ ಲೇವಾದೇವಿ ವ್ಯವಹಾರದವನಾಗಿದ್ದುದರಿಂದ ಅದೇ ಅಭ್ಯಾಸ!] "

ನಿರ್ದೇಶಕರ ಕಣ್ಣು ಮತ್ತೆ ಕೆಂಪಗಾಯಿತು[ ಕತ್ತಲಲ್ಲೂ ನನಗೆ ಅವರ ಕೆಂಪು ಕಣ್ಣು ಕಾಣುತ್ತಿತ್ತು ಅಂದರೆ ನೀವೇ ತಿಳ್ಕೊಳಿ ಎಷ್ಟು ಕೆಂಪಾಗಿರಬಹುದು ಎಂದು!] ಹಾಗೂ ಅವರು ಸಾವರಿಸಿಕೊಂಡು ಮಾತನ್ನು ತಿದ್ದಿಕೊಟ್ಟರು. ದುಶ್ಯಾಸನ ಸೀರೆ ಎಳೆಯುತ್ತಲೇ ಇದ್ದ. ಕೃಷ್ಣ ಬರಬೇಕಾಗಿತ್ತು. ಬಂದಿರಲಿಲ್ಲ. ಯಾರೋ ಕ್ರಿಷ್ಣನ ಪಾತ್ರ ಮಾಡಿದ ಗಂಗಹನುಮಯ್ಯ[ನಿವೃತ್ತ ಬಿ.ಎಸ್.ಎನ್.ಎಲ್ ವ್ಯವಸ್ಥಾಪಕರು]ರವರಿಗೆ ಭೇದಿ ಶುರುವಾಗಿದೆ ಅದಕ್ಕೇ ಅವರು ಹತ್ತಾರುಸಲ ಭೇದಿ ಮಾಡೀ ಮಡೀ ಸೋತು ಈಗ ಡಾಕ್ಟರನ್ನು ಕಾಣಲು ಹೋಗಿದ್ದಾರೆ ಎಂಬ ಸುದ್ದಿಯನ್ನು ತಂದರು! ನಿರ್ದೇಶಕರ ಫಜೀತಿ ಬೇಕೆ !

ದುಶ್ಯಾಸನ ನಿಲ್ಲಿಸಲೇ ಇಲ್ಲ, ಸೀರೆಯನ್ನು ಎಳೆಯುತ್ತಲೇ ಇದ್ದ! ಬಣ್ಣ ಬಣ್ಣದ ಸೀರೆಗಳೈದಾರನ್ನು ನಿರ್ದೇಶಕರು ದ್ರೌಪದಿ ಪಾತ್ರಧಾರಿಗೆ ಉಡಿಸಿದ್ದರು. ಎಲ್ಲವೂ ಮುಗಿಯುತ್ತಿದ್ದರೂ ಕೃಷ್ಣ ಬರಲಿಲ್ಲ. ವಿಷಯ ಗೊತ್ತಾಯಿತು.
["ರುಖಾವಟ್ ಕೇಲಿಯೇ ಖೇದ್ ಹೈ ಕೇವಲ್ ಆಪತ್ಕಾಲಿಕ ಸೇವಾ ಯೇಹಿ ಅಭೀ ನಹೀ ಮಿಲ್ಸಕ್ತಾಹೈ " [ಬಿ.ಎಸ್.ಎನ್.ಎಲ್]]

ದ್ರೌಪದಿ ಪಾತ್ರ ಮಾಡಿದ ಚಿಕ್ಕಹನುಮಂತರಾಯಪ್ಪ ಅಲ್ಲಲ್ಲಿ ಓಡಾಡುವಾಗ ದುಶ್ಯಾಸನನ ಪಾತ್ರ ಮಾಡಿದ ಮಾಡಿದ ದಫೇದಾರ್ ತಿಮ್ಮೇಗೌಡರ ಮದುವೆಗೆ ಬೆಳೆದುನಿಂತ ಮಗಳನ್ನು ಆಗಾಗ ಚುಡಾಯಿಸುತ್ತಿದ್ದ. ಸಮಯ ಕಾಯುತ್ತಿದ್ದ ತಿಮ್ಮೇಗೌಡರು ಇದೇ ಸರಿಯಾದ ಸಮಯವೇಂದು ತಿಳಿದು ಎಲ್ಲಾ ಸೀರೇಗಳನ್ನೂ ದರದರದರನೇ ಎಳೆದು ಬಿಸಾಕಿ ಬರೇ ಪಟ್ಟಾಪಟ್ಟಿ ಚೆಡ್ಡಿಯೊಂದನ್ನು ಬಿಟ್ಟು ಎಲ್ಲವನ್ನೂ ಕಿತ್ತೂ ಹರಿದೂ ಹಾಕಿಬಿಟ್ಟರು ಮಾತ್ರವಲ್ಲ

" ನನ್ಮಗ್ನೇ ನನ್ ಮಗ್ಳ ಸುದ್ದೀಗ್ ಬತ್ತೀಯಾ, ಆದಿಬೀದೀಲಿ ಓಗ್ವಾಗ ಬರ್ವಾಗ ಇಂದೆ ಬೀಳ್ತಿಯೇನಲೇ ಮಾಡ್ಸ್ತೀನ್ ನಿಂಗೆ ಹಿರು ................................" ಅಂತ ಅವಾಚ್ಯ ಶಬ್ಧಗಳನ್ನೆಲ್ಲ ಉಪಯೋಗಿಸಿ ಬಯ್ಯುವುದರೊಂದಿಗೆ ಚೆನ್ನಾಗಿ ನಾಲ್ಕು ಏಟನ್ನೂ ಕೊಟ್ಟರು. ಅಷ್ಟರಲ್ಲಿ ಯಾರೋ ತಪ್ಪಿಸಿದರು. ಮೂಗಿನಮೇಲೆ ಏಟು ತಿಂದ ’ದ್ರೌಪತಿ’ಯ ಮೂಗಿನಿಂದ ರಕ್ತ ಒಸರಹತ್ತಿತ್ತು. ಅವನನ್ನು ಕೂಡಲೇ ಬಣ್ಣದಮನೆಗೆ [ಡ್ರೆಸ್ಸಿಂಗ್ ರೂಮ್]ಕರೆದೊಯ್ಯಲಾಯಿತು. ಅಲ್ಲಿ ಆತನಿಗೆ ನೀರು ಸಿಂಪಡಿಸಿ ಅದೂ ಇದೂ ಉಪಚಾರ ಮಾಡಿದ ಮೇಲೆ ಸ್ವಲ್ಪ ಚೇತರಿಸ್ಕೊಂಡ.

ನಿರ್ದೇಶಕರು ಈ ನಡುವೆ ಎಲ್ಲೋ ಎದ್ದು ಹೋದರು. ಅವರ ಕಥೆ ಏನಾಯಿತು ಎನ್ನುವುದು ತಿಳಿಯಲೇ ಇಲ್ಲ. ನಾನೊಬ್ಬ ಮಾತ್ರ ಕಾಡಲ್ಲಿ ಹುಲಿಯನ್ನು ಕಂಡ ಮಂಗ ಮರದಮೇಲೇ ಹಾಗೆ ಹೆದರಿ ಕುಳಿತಂತೇ ಕುಳಿತೇ ಇದ್ದೆ-ಬೆಳಕಿಗಾಗಿ, ಹೊಸಗಾಳಿಗಾಗಿ, ನನ್ನ ಮೂಲ ಸಂಸ್ಕೃತಿಯನ್ನು ಮರಳಿ ಸೇರುವುದಕ್ಕಾಗಿ!

Saturday, July 31, 2010

ಭಕ್ತಿ-ಶ್ರದ್ಧೆ-ಸೇವೆ


ಭಕ್ತಿ-ಶ್ರದ್ಧೆ-ಸೇವೆ

ಯಾತ್ರೆ ಹೋಗಲುಬೇಕು ತೀರ್ಥಕ್ಷೇತ್ರಂಗಳಿಗೆ
ಜಾತ್ರೆ ನೋಡಲು ಜನರ ಬಹುರೂಪಗಳನು
ಮಾತ್ರೆ ನುಂಗುವ ಬದಲು ರಕ್ತದೊತ್ತಡವದಕೆ
ಸೂತ್ರ-ಮನಮುದಗೊಳಿಸು | ಜಗದಮಿತ್ರ

ಪ್ರೀತಿಸುತ ದೈವಗಳ ಪಲ್ಲಕಿಯ ಹೊರು ನೀನು
ರೀತಿಯಲಿ ಬಹುವಿಧದಿ ಪೂಜಿಸುತಲವನ
ಭೀತಿಯಿಂ ಮುಗ್ಗರಿಸಿ ಹೊರನೋಟದಲಿ ಭಜಿಸೆ
ನೀತಿಯದು ಸರಿಯಿರದು | ಜಗದಮಿತ್ರ

ಕಾವ ದೇವನ ಕಂಡು ಜಾವದಲಿ ಸರದಿಯಲಿ
ಭಾವಭಕ್ತಿಯ ಹೃದಯ ತೆರೆದಿಡುತಲವಗೆ
ಮಾವು ತೆಂಗಿನಕಾಯಿ ಜಾಜಿ-ಮಲ್ಲಿಗೆಯಿಟ್ಟು
ಜೀವಕಳೆ ನೀ ಕಾಣು | ಜಗದಮಿತ್ರ

ಪತ್ರೆಯಾದರು ಇರಲಿ ಪುಷ್ಪವಾದರು ಬರಲಿ
ಗಾತ್ರದಲಿ ಮನ ಮಾತ್ರ ಬಹುದೊಡ್ಡದಿರಲಿ
ಹತ್ರದಲಿ ಸಿಗುವಂತ ಫಲ ನೀರು ಪನ್ನೀರು
ಪಾತ್ರೆಯೊಳಗಿಟ್ಟು ಮುಗಿ | ಜಗದಮಿತ್ರ

ಹೃದಯಕಮಲದ ಮಧ್ಯೆ ಸಿಂಹಾಸನದಿ ಕುಳಿತ
ಉದಯ ನಾರಾಯಣನ ಮುದದಿಂದ ನೆನೆದು
ಬದುಕಿನಲಿ ಜೊತೆಗಾರ ಅನನ್ಯ ಸಹಕಾರ
ವಿಧಿಯವನೆ ಹಿಡಿಯವನ | ಜಗದಮಿತ್ರ

ಛತ್ರ ಚಾಮರನೀಡು ಶಯನದುತ್ಸವ ಮಾಡು
ಉತ್ತರೋತ್ತರ ನಾಮ ಸ್ಮರಣೆಯದ ಪಾಡು
ಕ್ಷಾತ್ರನಾ ಚಂಡಕೌಶಿಕ ಜಪಿಸಿ ಮುನಿಯಾದ
ಖಾತ್ರಿಯದು ನೀ ಪಡೆವೆ | ಜಗದಮಿತ್ರ

ನರ್ತಿಸುತ ಕೈಕಾಲು ದಂಡಿಸುತ ಶಿರ ಬಾಗಿ
ವರ್ತನೆಯೊಳಾದೈವ ಸಂಪ್ರೀತಗೊಳಿಸು
ವ್ಯರ್ಥಮಾಡದೆ ಸಮಯ ಅಷ್ಟಾಂಗ ಸೇವಿಸಲು
ಪಾರ್ಥಸಾರಥಿಯೊಲಿವ | ಜಗದಮಿತ್ರ


Friday, July 30, 2010

ಗಾಡಿಕಾರನ ರೂಢಿ



ಗಾಡಿಕಾರನ ರೂಢಿ



ಗೂಡಲಿರುವೀ ಕಣ್ಣ
ದೂರದೆಡೆ ಹರಿಬಿಟ್ಟು
ಆಡಿ ತುಂಬಿದೆ ಮನದಿ ರೂಪಗಳನ




ಬೇಡವೆಂದರು ಬಿಡದೆ
ಕಿವಿಗಳನು ತೆರೆದಿಟ್ಟು
ಜಾಡಿಸುತ ತುಂಬಿರುವೆ ಶಬ್ಧಗಳನ


ನಾಡನೆಲ್ಲವ ತಿರುಗಿ
ನಾಸಿಕದಿ ಆಘ್ರಾಣಿಸಿ
ಕಾಡಿ ತುರುಕಿದೆ ಒಳಗೆ ಕಂಪುಗಳನ


ಬೀಡಾಡಿ ತಿನ್ನುತ್ತ
ಮತ್ತಷ್ಟು ಒದರೆಂದು
ಜೋಡಿಸಿದೆ ಜಿಹ್ವೆಯೊಳು ರುಚಿಗ್ರಂಥಿಗಳನ


ಬೀಡುಬಿಡುತಲಿ ಸ್ಪರ್ಶ
ಸುಖ ನೀಡಿ ಪಡೆಯೆಂದು
ಮಾಡುಮಾಡಿದೆ ಚರ್ಮ ಪದರಗಳನ


ಗಾಡಿಯನು ನಮಗಿತ್ತು
ಸವಲತ್ತು ಕೊಟ್ಟುಣಿಸಿ
ಗಾಢಾಂಧಕಾರದಲಿ ಕೂಡಿ ನಮ್ಮನ್ನ

ಗಾಡಿಕಾರನೆ ನಿನ್ನ
ಅಡಿಯೆಲ್ಲಿ ಮುಡಿಯೆಲ್ಲಿ ?
ವಾಡಿಕೆಯು ಪೂಜಿಪುದು ಹಲರೂಪಗಳನ

Thursday, July 29, 2010

ಶ್ರೀ ಭೈರವೆಶ್ವರ ಯುವಕರ ಸಂಘ(ರಿ)


ಶ್ರೀ ಭೈರವೆಶ್ವರ ಯುವಕರ ಸಂಘ(ರಿ)
ಹೆಸರೇಳು ತಾಲ್ಲೋಕು,ಸಕಲಾಪುರ ಹೋಬಳಿ, ಹುಡುಕಾಡು ಜಿಲ್ಲೆ, ಕರ್ನಾಟಕ ರಾಜ್ಯ
ಪಿನ್ನ್ :- ೫೬_ _ ೧೦ ಫೋನ್ : ೧೨೩೪೫
ಅಧ್ಯಕ್ಷರು : ಚೆಲುವಯ್ಯ ಕಾರ್ಯದರ್ಶಿಗಳು: ಪರಮೇಶಿ


ಸರ್ವರಿಗೂ ಹಾದರದ ಸ್ವಾಗತ

-- ಸೊಂಟದ ಕೀಲುಗಳಲ್ಲಿ, ಪಕ್ಕೆಗಳಲ್ಲಿ, ಬೆನ್ನುಹುರಿಯಲ್ಲಿ ಚಳಿಯಾದ ಅನುಭವ !

ಮೇಲಿನ ಸಂಘದವರು ವಾರ್ಷಿಕೋತ್ಸವ ಇಟ್ಟುಕೊಂಡು ಭಾಷಣ ಮಾಡಲು ಕರೆದರು. ಆಮಂತ್ರಣದಲ್ಲಿ ಹೆಸರು ಹಾಕಿಸಿಕೊಂಡೂ ಬಂದಿದ್ದರು. ಆಮಂತ್ರಣ ಓದಿ ತಬ್ಬಿಬ್ಬಾಗಿಬಿಟ್ಟೆ ! ಯಾಕ್ರೀ ಅನ್ನೋದೇ ಸಸ್ಪೆನ್ಸು !

ಆ ಊರಿನ ಒಂಡೆರಡು ಮಂದಿಗೆ ನಾನು ಚೆನ್ನಾಗಿ ಗೊತ್ತಂತೆ, ಹಾಗಾಗಿ " ನೀವೇ ಬರಬೇಕು" ಎಂಬ ಹಠ.

ಆಮಂತ್ರಣ ಮುಂದೆ ಓದಿ --

ಮರೆಯದಿರಿ ಮರೆತು ನಿರಾಶರಾಗದಿರಿ

ದ್ರೌಪತೀ ವಸ್ತ್ರಾಪಹರಣ ಎಂಬ ಪೌರಾಣಿಕ ನಾಟಕವನ್ನು ಹಾಡಿತೋರಿಸಲಿದ್ದಾರೆ.

ವಿಸೇಷ ಆಕರ್ಶಣೆ:- ಚಲುವೇ ಗೌಡರ ಹೊಸ ಸೀನರಿ, ಹೊಸ ಡ್ರಸ್ಸು ,ಏಕಕಾಲಕ್ಕೆ ಅನೇಕ ವಾಧ್ಯಗಳನ್ನು ನೋಡಿ ಆನಂದಿಸಿ

ಪಾತ್ರದಾರಿಗಳು

ಶ್ರೀ ದಫೇದಾರ ತಿಮ್ಮೇಗೌಡರು-ದುಶ್ಯಾಶನ
ಶ್ರೀ ಪೋಲೀಸ್ ಅನುಮೇಗೌಡರು-ಶಕುನಿ
ಶ್ರೀ ಕೇಬಲ್ ಭೈರಪ್ಪ--ಭೀಮ
ಶ್ರೀ ಸಾಹುಕಾರ್ ಚಿನ್ನಪ್ಪ--ಕೌರವ
ಶ್ರೀ ನಂದಿನಿ ಮಾದೇಶ--ಅರ್ಜುನ
ಶ್ರೀ ಜಮೀನ್ದಾರ್ ಜವರಯ್ಯ-ನಕುಲ
ಶ್ರೀ ಮೀಸೆ ಹೊನ್ನಪ್ಪ-ಸಹದೇವ
ಶ್ರೀ ಕಲಾಕಾರ್ ಮಂಜು-ಧರ್ಮರಾಯ
ಶ್ರೀ ಗಂಗಹನುಮಯ್ಯ [ನಿವ್ರೂತ್ತ ಬಿಎಸೆನೆಲ್ ವ್ಯವಸ್ಥಾಪಕರು]-- ಕ್ರಿ ಷ್ಣ
ಶ್ರೀ ಚಿಕ್ಕಹನುಮಂತರಾಯಪ್ಪ-ದ್ರೌಪತಿ
ಸೀನ, ಪುಟ್ಟಣ್ಣ, ರೇವಣ್ಣ, ಕರಿಬಸವ, ಬಸ್ಯ, ವೆಂಕಿ, ಯಲಹಂಕ ಸೋಮು, ಮೈಕೊ ಕ್ರಿಷ್ಣಪ್ಪ,
ದೊಡ್ಡಹನುಮ, ದೊಡ್ಡಗಣೇಷ, ವೆಂಕಟೇಶು, ರಾಜು, ಬಾಬು, ಕಡ್ಡೀಪುಡಿ ಆನಂದ, ತರ್ಲೆರಾಮ, ಗೋವಿಂದು
ಇನ್ನೂ ಅನೇಕರು ವಿವಿಧ ಪಾತ್ರಗಳಲ್ಲಿ ತಮ್ಮನ್ನು ರಂಜಿಸಲಿದ್ದಾರೆ.

ನಾಟಕ ನಿರ್ದೇಶಕರು :- ಹಾಮಾ ಬಾಲಯ್ಯ ಬಣ್ಣ :- ಮೇಕಪ್ ರಾಜು ಕ್ಯಾಸಿಯೋ :- ಪ್ರಕಾಶ್


ಕುಮಾರಿ ಮೆಗಾಶ್ರೀ ಮತ್ತು ಕುಮಾರಿ ಹೇಮಾಶ್ರೀ ಇವರುಗಳಿಂದ ಭರತನಾಟ್ಯ

ಸಭಾ ಕಾರ್ಯಕ್ರಮ :- ರಾತ್ರಿ ೭:೩೦ ರಿಂದ

ಸ್ವಾಗತಗೀತೆ
ಸ್ವಾಗತಭಾಶಣ
ಮಾಲಾರ್ಪಣೆ
ಮುಖ್ಯ ಅತಿಥಿಗಳ ಭಾಶಣ
ಸಂಘದ ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ
ಅಧ್ಯಕ್ಷರ ಭಾಶಣ
ವಂದನಾರ್ಪಣೆ

ರಾತ್ರಿ ೯:೩೦ ರಿಂದ ವಿವಿಧ ಮನೋರಂಜನಾಕಾರ್ಯಕ್ರಮಗಳು ಹಾಗೂ ದ್ರೌಪತೀ ವಸ್ತ್ರಾಪಹರಣ ನಾಟಕ

ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬನ್ನಿ, ನಿಮ್ಮವರನ್ನೂ ಕರೆತನ್ನಿ
-------------------

--ಇಲ್ಲಿಗೆ ಆಮಂತ್ರಣ ಪತ್ರಿಕೆ ಮುಗಿಯಿತು

ಈಗ ಅಲ್ಲಿ ನಡೆದ ಅನುಭವದ ಬಗ್ಗೆ ಕೇಳಿ

ಅವತ್ತು ಈ ಸಂಘದ ವತಿಯಿಂದ ಬಾಡಿನ ಊಟ ಎರ್ಪಾಟಾಗಿತ್ತಂತೆ ! ಮಧ್ಯಾಹ್ನದಿಂದ ಸಾಯಂಕಾಲದವರೆಗೆ ಗ್ರಾಮಸ್ಥರು, ಪರಊರವರು, ಅವರವರ ನೆಂಟರಿಷ್ಟರು ಎಲ್ಲಾ ಸೇರಿ ಸರಿಸುಮಾರು ೩ಸಾವಿರ ಜನರಿದ್ದರು.ಸಭೆಗೆ ಬರುವಾಗಲೇ ಅಲ್ಲಿ ಕುಳಿತ ಕೆಲವರ ಹತ್ತಿರದಿಂದ ಪಾಸಾಗಿ ಬರುವಾಗ ಹುಳಿ ಹುಳಿ ವಾಸನೆ ಬರುತ್ತಿತ್ತು.
ಸಂಜೆ ಸಭೆ ಶುರುವಾಯ್ತು.

" ಈಗ ಸ್ವಾಗತ ಗೀತೆ-ಕುಮಾರಿ ರಶ್ಶಿತಾರವರಿಂದ "

ಸ್ವಾಗತವೂ ನಿಮಗೆ ಸುಸ್ವಾಗತವೂ ನಿಮಗೆ --ಸ್ವರ ಹೊರಟಾಗ ಡಬ್ಬುಹಾಕಿಕೊಂಡ ಕಿವಿ ಮತ್ತೆತೆರೆಯುವುದೇ ಇಲ್ಲವೇನೋ ಅಂದುಕೊಂಡಿದ್ದೆ. ಅಂತೂ ಮುಗಿಯಿತು, ಉಸ್ಸಪ್ಪಾ! ಶ್ಶು...

" ಈಗ ಸ್ವಾಗತ ಭಾಷಣ- ನಮ್ಮ ಸಂಘದ ಸದಸ್ಯರಾದ ಗೋವಿಂದುರವರಿಂದ"

" ಮಾಹನೀಯರೇ ಮಹಳಿಯರೇ ಮತ್ತು ನಮ್ಮ ಸಂಘದ ಪದಾಧಿಕಾರಿಗಳೇ, ಈಗ ಸ್ವಾಗತ ಭಾಷಣವನ್ನುಮಾಡುವಂತೆ ನಮ್ಮ ಹಿರಿಯ ಸದಸ್ಯರಾದಂತ ವೆಂಕಿರವರು ಹೇಳಿದರು. ಅವರ ಮಾತನ್ನು ಮನ್ನಿಸಿ ಈಗ ಸುರುಮಾಡುತ್ತೇನೆ.
ಮೊದಲ್ನೇದಾಗಿ ಗಣ್ಯರಾದಂತಹ ಶ್ರೀ ವಿ.ಆರ್.ಭಟ್ಟರು ಬೆಂಗಳೂರಿಂದ ನಮ್ಮ ಕರೆಗೆ ಹೋ ಗೊಟ್ಟು ಹಿಲ್ಲೀತಂಕ ಬಂದಿದಾರೆ ಹವರಿಗೆ ಹಾದರದ ಸ್ವಾಗತ.

ಎರಡ್ನೇದಾಗಿ ನಮ್ಮ ಸನ್ಮಾನ್ಯ ಅಧ್ಯಕ್ಸರಾದಂತ ಶ್ರೀ ಚೆಲುವಯ್ಯನೋರು ಬಹಳ ಮುಂಚಿತವಾಗಿ ಬಂದು ಹೀ ಸ್ಥಾನವನ್ನು ಹಲಂಕರಿಸಿದ್ದಾರೆ ಹವರಿಗೂ ಸ್ವಾಗತ.

ಮೂರನೇದಾಗಿ ಅನೇಕ ಅಳ್ಳಿಗಳಿಂದ ತಾವೆಲ್ಲಾ ಬಂದು ಸೇರಿದ್ದೀರಿ ತಮಗೆಲ್ಲಾ ಸುಸುಸ್ವಾಗತ.

ಇನ್ನು ನಾಲ್ಕನೇದಾಗಿ ನಮ್ ಗ್ರಾಮಸ್ಥರು ಹಿರೀಕ್ರು ಎಲ್ಲಾ ಬಂದವ್ರೆ, ಮಕ್ಳು-ಮರಿಗೊಳ್ನ ಎತ್ಕಂಡು ತಮ್ಮ ಅಲವಾರು ಕಷ್ಟಗೋಳ ಮಧ್ಯೆನೂವೆ ನಮ್ಮ ಎಂಗುಸ್ರೆಲ್ಲಾ ಬಂದವ್ರೆ ಅವರೆಲ್ಲರಿಗೂ ಸ್ವಾಗತ ಸುಸ್ವಾಗತ.

ಇನ್ನು ಕೊನೇಕಿತ ನಮ್ ಸಂಘದ ಕಾರ್ಯದರ್ಸಿಗೋಳಾದಂತ ಶ್ರೀಮಾನ್ ಪರಮೇಶಿ ಇದ್ದಾರೆ ಹಾಗೂ ಅನೇಕ ಸದಸ್ಯರುಗೋಳು ಬಂದವ್ರೆ, ತಮ್ಮ ಇರೋಬರೋ ಕೆಲ್ಸಾನೆಲ್ಲ ಪಕ್ಕಕ್ ಮಡೀಕಂಡು ಬಂದವ್ರೆ ಇದೆಲ್ಲಾ ಯಾಕೇಳಿ ನಮ್ಮೂರ್ ಜನ್ಕೆ ಒಸಿ ಸಂತೋಸಾಗ್ಲಿ, ವರ್ಸದಾಗ ಒಂದ್ಕಿತಾ ಈ ತರ ಕಾರ್ಯಕ್ರಮ್ಗೋಳ್ನ ಮಡೀಕಂಡ್ರೆ ಎಲ್ಲಾ ಚೆನ್ನಾಗಿರ್ತೈತೆ ಹಂತ ಅಮ್ಮಕೊಂಡೀವಿ, ತಮ್ಮೆಲ್ಲರ್ಗೂನೂವೆ ಹಾದರದ ಸ್ವಾಗತ.

ಇಷ್ಟು ಏಳಿ ನನ್ನ ಚಿಕ್ಕ ಭಾಶಣ ಮುಗಸ್ತಾ ಇದೀನಿ ನಮುಸ್ಕಾರ, ಜೈಹಿಂದ್, ಜೈ ಕರ್ನಾಟಕ, ಸಿರಿಗನ್ನಡಂ ಗೆಲ್ಗೆ "

ನನಗೆ ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ.

" ಈಗ ಮಾಲಾರ್ಪಣೆ ನಮ್ಮ ಸಂಘದ ಕಾರ್ಯದರ್ಸಿಗಳಾದಂತ ಸ್ರೀಮಾನ್ ಪರಮೇಶಿ ಎಲ್ಲಿದ್ರೂ ಅರ್ಜೆಂಟಾಗಿ ಸ್ಟೇಜಿನ್ ಮ್ಯಾಕೆ ಬರ್ಬೇಕು "

ಆಕಡೆ ಈಕಡೆ ಆಕಡೆ ಈಕಡೆ ಕತ್ತಾಡಿಸಿ ಹುಡುಕಾಡಬೇಕಾಯ್ತು ಹಾರಹಾಕುವವರಿಗಾಗಿ! ಅಂತೂ ಪರಮೇಶಿ ಬಂದ್ರು.

"ಮೊದಲನೇ ದಾಗಿ ನಮ್ಮ ಮುಖ್ಯ ಹತಿಥಿ ಸ್ರೀ ವಿ.ಆರ್.ಭಟ್ ರವರಿಗೆ ಮಾಲಾರ್ಪಣೆ "

" ಏ ಬಸ್ಯಾ ಹೊಡೀರ್ಲಾ ಚಪ್ಪಾಳೆನಾ ಏನ್ ಹಾಂಗ್ ಮಕಮಕ ನೋಡ್ತಾಯ್ಕಂಡ್ರಿ ? " --ಇದೂ ಅನೌನ್ಸರ್ ಹೆಳಿದ್ದೇ ಆಗಿದೆ!

" ಎರುಡ್ನೇ ದಾಗಿ ನಮ್ ಅಧ್ಯಕ್ಸರೂಗೆ ಮಾಲಾರ್ಪಣೆ "

ಸಭೆ ನಡೆಯುತ್ತಿರುವಾಗ ಅನಿರೀಕ್ಷಿತವಾಗಿ ಅಲ್ಲಿನ ಎಮ್.ಎಲ್.ಏ ಬಂದ್ರು. ಅವರನ್ನು ಕಂಡವ್ರೇ ಸಂಘದ ಅಧ್ಯಕ್ಷರು ಪರಮೇಶಿಯವರನ್ನು ಪಕ್ಕಕ್ಕೆ ಕರೆದು ಕೇಳಿದರು " ಪರಮೇಶಿ ಎಸ್ಟ್ರಾ ಆರ ತಂದಿದ್ದು ಐತೇನ್ಲಾ ಒಳೀಕ್ಕೆ ?"
ಪರಮೇಶಿ ಎದ್ನೋ ಬಿದ್ನೋ ಅಂತ ಗ್ರೀನ್ ರೂಮ್ ಕಡೆ ಚೆಕ್ ಮಾಡೋಕೆ ಹೋದ್ರು.

ಅನೌನ್ಸರ್ ಘೋಷಿಸಿದ " ಇದೀಗ ತಾನೇ ಸನ್ಮಾನ್ಯ ಎಮ್ಮೆಲ್ಲೆ ಸಾಹೇಬ್ರು ಸೋಮಣ್ಣ ಬಂದವ್ರೆ, ತಮ್ಮ ಬಿಡುವಿಲ್ದ ಕಾರ್ಯಗೋಳ ನಡುವೆ ಬರಕಾಯಾಕಿಲ್ಲ ಅಂದಿದ್ದ್ರೂನೂವೆ ಹಿಂದು ಬಂದವ್ರೆ ಹವರಿಗೆ ಹಾದರದ ಸ್ವಾಗತವನು ಕೋರುತ್ತೇವೆ "

" ಈಗ ಸನ್ಮಾನ್ಯ ಎಮ್ಮೆಲ್ಲೆ ಸೋಮಣ್ಣೋರ್ಗೆ ನಮ್ಮ ಅಧ್ಯಕ್ಸರಿಂದ ಆರಾರ್ಪಣೆ"

--ಇದೆಲ್ಲಾ ಮುಗೀತು. ನನಗೆ ಬಳಸುವ ಅಪ್ಪಟ ಕನ್ನಡ ನೋಡಿ ಬಹಳ ನಗುಬರುತ್ತಿತ್ತು, ಒಮ್ಮೊಮ್ಮೆ ವಿಷಾದವೂ ಆಗುತ್ತಿತ್ತು!

ನಮ್ಮ ಹತ್ತಿರ ಬಂದ ಅನೌನ್ಸರ್ ಯಾರು ಮೊದಲು ಭಾಷಣಮಾಡುತ್ತಾರೆ ಅಂತ ಕೂಗಲಿ ಎಂದು ಕಿವಿಗಳಲ್ಲಿ ಕೇಳಿದರು. ಅಂತೂ ನಮ್ಮೊಳಗೆ ತೀರ್ಮಾನವಾಗಿ ಮೊದಲು ನಾನೇ ಮಾತನಾಡಬೇಕೆಂದುತಿಳಿದುಬಂತು. ನಾನು ಮಾತನಾದಲು ನಿಂತೆ. ನನ್ನ ಬಾಯಿಂದ ಮಾತು ಹೊರಬರುವ ಪ್ರತೀ ಹಂತದಲ್ಲಿ ನನಗೆ ನಗು ಉಕ್ಕರಿಸಿ ಬರುತ್ತಿತ್ತು. ನನ್ನ ಭಾಷಣವನ್ನು ಕೇಳುವ ರುಚಿ-ಅಭಿರುಚಿ ಇದ್ದವರು ಅಲ್ಲಿ ಯಾರೂ ಇದ್ದಹಾಗಿಲ್ಲ ಎಂಬ ನನ್ನ ಅನಿಸಿಕೆ ನಿಜವಾಗಿತ್ತು. ನನ್ನ ಭಾಷಣದ ಅರ್ಥವನ್ನು ಕೇಳಿದರೆ ಬಹುಶಃ ರಾಮನಿಗೆ ಸೀತೆ ಏನಾಗಬೇಕು ಎಂದು ರಾಮಾಯಣ ಕೇಳಿದವರಲ್ಲಿ ಪ್ರಶ್ನಿಸಿದರೆ ಸೀತೆ ರಾಮನಿಗೆ ತಂಗಿ ಅಂದಹಾಗಾಯ್ತು ಅಂದ್ರಂತೆ-- ಈ ಥರ ಆಗಿತ್ತು. ಕೆಲವೊಮ್ಮೆ ಹೀಗೇ ಆಗಿಬಿಡುತ್ತದೆ. ನಾವು ಬರಲಾಗುವುದಿಲ್ಲ ಎನ್ನಲಾಗುವುದಿಲ್ಲ, ಹೋಗದಿದ್ದರೆ ನಮಗೆ ಸೊಕ್ಕು ಅಂತಾರೆ ಹೋದರೆ ಈ ರೀತಿ ’ ಆರಾರ್ಪಣೆ’ !

" ಸಂಘದವರ ಚಟುವಟಿಕೆಗಳ ಬಗ್ಗೆ ಹಾಗೂ ಜನೋಪಕಾರೀ ಕೆಲಸಗಳ ಬಗ್ಗೆ ಕೇಳಿದ್ದೇನೆ, ಪ್ರೀತಿಯಿಂದ ಸಂಘದ ಸದಸ್ಯರ ಆಹ್ವಾನಕ್ಕೆ ಬೆಲೆಕೊಟ್ಟು ತಾವೆಲ್ಲಾ ಇಲ್ಲಿ ಬಂದು ಸೇರಿದ್ದೀರಿ, ಇದು ನನಗೆ ಬಹಳ ಸಂತೋಷ "

ಹೇಳುತ್ತಿರುವಾಗಲೇ ಮುಂದಿರುವ ಕೆಲವು ಗಂಡಸರು ಗೊರೆಯುವುದು ಕೇಳಿಸಿತು. ಹಿಂದೆ ಕತ್ತಲಲ್ಲಿ ಯಾರ್ಯಾರೋ ಏನೇನೋ ಬಡಬಡಾಯಿಸುತ್ತಿದ್ದರು. ನನ್ನ ಮಾತು ಅತ್ಯಂತ ಬೇಗ ಮುಗೀತು-ಇದರರ್ಥ ಜಾಸ್ತಿ ನನ್ನ ಮಾತಿನ ಅವಶ್ಯಕತೆ ಅಲ್ಲಿ ಕಂಡುಬರಲಿಲ್ಲ. ಸಂಘದವರು ಪಾಪ ಭಕ್ತಿಯಿಂದ ಕರೆದಿದ್ದಾರೆ-ಹೋಗಿದ್ದೇನೆ. ಅದಕ್ಕೇ ಸ್ವೀಟ್ ಆಂಡ್ ಶಾರ್ಟ್ ಆಗಿ ಮುಗಿಸಿಬಿಟ್ಟೆ.

" ಈಗ ನಮ್ಮ ಎಮ್ಮೆಲ್ಲೆ ಸ್ರೀ ಸೋಮಣ್ಣೋರು ಸಭಿಕರನ್ನುದ್ದೇಸಿಸಿ ಹೆರಡು ಮಾತನ್ನಾಡಲಿದ್ದಾರೆ "

ಶ್ರುವಾಯ್ತು ನೋಡಿ, ಹನ್ನೆರಡು ಇಂಚಿನ ಡ್ರಿಲ್ ಬಿಟ್ಟಿನ ಕೊರೆತ ಹಾಗೂ ಮೊರೆತ, ಇಡೀ ಸಭೆ ನಿದ್ದೆಮಾಡುತ್ತಿತ್ತು ಎನ್ನಬೇಕು, ಎಮ್ಮೆಲ್ಲೆ ಬಾಲಬಡುಕರು ನೂರಾರು ಜನರನ್ನ " ಏ ಬನ್ರೋ " ಅಂತ ಅವ್ರೇ ಎಬ್ಬಿಸ್ಕೊಂಡು ಬಂದಿದ್ರು. ಅವರೆಲ್ಲ ಅಲ್ಲಲ್ಲಿ ಕೂತವರು ವಿಧಿಯಿಲ್ಲದೇ ಚಪ್ಪಾಳೆ ತಟ್ಟುತ್ತಿದ್ದರು! ಅಂತೂ ೩೦ ನಿಮಿಷಗಳ ಡ್ರಿಲ್ ಈಗ ನಿಂತಿತು.

" ಈಗ ನಮ್ಮ ಸಂಘದ ಅಧ್ಯಕ್ಸರಾದಂತ ಸ್ರೀಮಾನ್ ಸ್ರೀ ಚಲುವಯ್ಯರವರು ತಮ್ಮ ಹಭಿಪ್ರಾಯವನ್ನು ತಮ್ಮೊಡನೆ ಅಂಚಿಕೊಳ್ಳಲಿದ್ದಾರೆ"

ಚಲುವಯ್ಯನವರು ಶುದ್ಧ ಗ್ರಾಮ್ಯ ಭಾಷೆಯಲ್ಲಿ ಕೊರೆದಿದ್ದೇ ಕೊರೆದಿದ್ದು! ಇಡೀಸಭೆಯಲ್ಲಿ ಪಿನ್ ಡ್ರಾಪ್ ಸೈಲನ್ಸ್ ! ಕಾರಣ ಗೊತ್ತೇ- ಎಲ್ಲರೂ ನಿದ್ದೆಮಾಡುತ್ತಿದ್ದರು. ಸಂಘಕ್ಕೆ ಹೊಸದಾಗಿ ಸೇರಿದ ಪಡ್ಡೆಗಳಷ್ಟು ಜನ ಮಧ್ಯೆ ಮಧ್ಯೆ ಕೂತವರು ಟಪ ಟಪ ಟಪ ಟಪ ಅಂತ ನಿಲ್ಲಿಸಿ ಎನ್ನುವವರೆಗೂ ಚಪ್ಪಾಳೆ ತಟ್ಟುತ್ತಿದ್ದರು, ಅದು ಅವರ ಅಧ್ಯಕ್ಷರಮೇಲಿನ ಅಭಿಮಾನದಿಂದ. ವೇದಿಕೆಯ ಪರದೆಯ ಹಿಂದೆ ಯಾವುದೋ ಪಡ್ಡೆ ಹೇಳುತ್ತಿತ್ತು " ನಮ್ ಚಲವಯ್ಯೋರು ಯಾರ್ಗೂ ಬಿಟ್ಕೊಡಾಕಿಲ್ಲ, ಭಾಳ ಚನ್ನಾಗ್ ಮಾತಾಡ್ತರೆ, ಯಾರೂ ಎಲ್ಲಿದ್ರೂನೂವೆ ಚಪ್ಪಾಳೆ ತಟ್ಟಬೇಕು ಕಣಪ್ಪೋ"
ಮುಗೀತು!

"ಈಗ ಹೊಂದನಾರ್ಪಣೆ ನಮ್ಮ ಸಂಘದ ಹಿರಿಯ ಸದಸ್ಯರಾಗಿರತಕ್ಕಂತಹ ಶಾಂಭಪ್ಪನವರಿಂದ "

" ಮಾನ್ಯ ಅಧ್ಯಕ್ಸರೇ, ಪೂಜ್ಯ ಗುರುಗಳೇ ಹಾಗೂ ನನ್ನ ಸಹಪಾಠಿಗಳೇ " -ಏನಪ್ಪಾ ಇದು ಎಂದು ಆಶ್ಚರ್ಯವಾಯಿತು.
"ಶಾಂಭಪ್ಪಾ ಅದು ಸ್ಕೂಲ್ದು ಕಣ್ಲಾ, ಸಂಘದ್ದೇಳ್ಲಾ " ಅಂತ ಅನೌನ್ಸರ್ ಹೇಳಿದ್ದು ಮೈಕ್ ನಲ್ಲಿ ಎಲ್ಲರಿಗೂ ಕೇಳಿಸಿತು, ಆದರೆ ಯಾರೂ ನಗಲಿಲ್ಲ : ಕಾರಣ ನೀವೇ ಊಹಿಸಿಕೊಳ್ಳಿ. ಮತ್ತೆ ಮುಂದುವರೀತು.

" ನನ್ನ ಹೊಂದನಾರ್ಪಣೆ ಮಾಡಕಾಕವ್ರೆ, ಗೊತ್ತಿದ್ದಷ್ಟ್ ಏಳ್ಬುಡು ಅಂದ್ರು. ನಮ್ಗೆಲ್ಲಾ ತೀರಾ ಭಾಶಣ ಮಾಡಕಾಯಾಕಿಲ್ಲ. ಅದ್ಕೇ ಒಸಿ ಅಡ್ಜಸ್ಟ್ ಮಾಡ್ಕೋಬುಡಿ. ತಪ್ಪ್ನೆಲ್ಲಾ ನಿಮ್ಮ್ ಹೊಟ್ಟೆವಳೀಕಾಕೊಂಬುಡಿ. ಮೊದಲ್ನೇ ದಾಗಿ ಇಲ್ಲಿಗೆ ಭಾಶಣ ಮಾಡಲು ಬಂದಿರತಕ್ಕಂತಹ ಸ್ರೀ ವಿ.ಆರ್.ಭಟ್ಗೆ ಹೊಂದನೆಗಳು. ಎರಡ್ನೇದಾಗಿ ಸನ್ಮಾನ್ಯ ಹೆಮ್ಮೆಲ್ಲೆ ಸಾಏಬ್ರು ಕುಂತವ್ರೆ ಹವರ್ಗೂ ಹೊಂದನೆಗಳು. ಮೂರ್ನೇದಾಗಿ ನಮ್ಮ್ ಪಕ್ಕದಳ್ಳಿ ಕಡೆಗಿಂದೇಲ್ಲಾ ಕಿತ್ತೆದ್ ಬಂದಾರಲ್ಲ ಅಂತವ್ರಗೆಲ್ಲ ಹೊಂದನೆಗಳು. ಈ ಕಿತಾ ನಮ್ಮೂರ್ ಜನಗೋಳ್ಗೆ ಎಲ್ರೂಗೂನು ಹೊಂದನೆಗಳು. ನಾಟಕದಾಗೆ ನನ್ನ ಪಾರ್ಟ್ ನೋಡೋಕೋಸ್ಕರ ನಮ್ಮ ಅತ್ತೆ-ಮಾವ,ಬಾಮೈದ ಎಲ್ಲಾದಿರು ಬಂದವ್ರೆ ಅವ್ರಗೆಲ್ಲಾನುನೂವೆ ಹೊಂದನೆಗಳು. ನಮ್ ಸಂಘ ಭಾಳ ಚೆನ್ನಾಗಿ ಕೆಲ್ಸ ಮಾಡ್ತೈತೆ, ಗಣೇಶಬ್ಬ, ಊರಬ್ಬ ಇದೆಲ್ಲಾ ಮಾಡೋದು, ಅಂದಾನ, ರಸ್ತೆರಿಪೇರಿ,ರಕ್ತದಾನ ಇದೆಲ್ಲಾ ಮಾಡ್ತವ್ರೆ ನಮ್ ಹೈಕ್ಳು ಅವ್ರೀಗೆಲ್ಲಾನುನೂವೆ ಹೊಂದನೆಗಳು,ಇಲ್ಲಿಗೆ ನನ್ನ ಭಾಷಣ ಮುಗುಸ್ತೀನಿ, ನಂಗೆ ಭಾಶಣಮಾಡೋದು ಕಲ್ಸಬುಟ್ಟು ಹೀಂಗ್ ನಿಂತ್ಕಾ, ಚೀಟಿ ಹೀಂಗ ಮಡೀಕಾ ಅಂತೆಲ್ಲಾ ಹೇಳ್ಕೊಟ್ಟು ನಮ್ಮನ್ನು ಬೆಳ್ಸಸದ ನಮ್ ಅಧ್ಯಕ್ಸರುಗೆ ನನ್ನ ನಮಸ್ಕಾರ"

" ಇಲ್ಲಿಗೆ ಸಭಾ ಕಾರ್ಯಕ್ರಮ ಮುಗೀತು, ಈಗ ಭರತನಾಟ್ಯ ಸುರುವಾಗ್ತೈತೆ, ಎಲ್ಲಾ ಅಲ್ಲಲ್ಲೇ ಕೂತಿದ್ದು ಸಾಂತರೀತಿಯಿಂದ ನೊಡ್ಬೇಕು ಹಂತೇಳಿ ಪ್ರಾರ್ಥನೆ "

ಅಯ್ಯಯ್ಯೋ ರಾಮ ! ಅಂತೂ ಸಭೆ ಮುಗೀತು. ನಂತ್ರ ಮುಂದೆ ಕೂತು ಮಜಾ ತಗೋಬೇಕಲ್ಲ! ದೂರದ ಹಳ್ಳಿಗಾಡು ಬೇರೆ. ರಾತ್ರಿ ವಾಹನ ಸೌಲಭ್ಯ ಇರೋದಿಲ್ಲ. ಅದಕ್ಕಿಂತ ಬಂದದ್ದಕ್ಕೆ ಅಲ್ಲೇ ಮುಂದೆ ಕೂತು ಬೆಳಗುಮಾಡುವ ಪರಿಸ್ಥಿತಿ ನನ್ನದಾಗಿತ್ತು!

[ಮುಂದಿನ ಭಾಗದಲ್ಲಿ ನಾಟಕದ ಬಗ್ಗೆ ಓದಿ- ಒಂದೆರಡು ದಿನಗಳಲ್ಲಿ!]

Wednesday, July 28, 2010

ಹೊಲಸು ಹೊರುವರು ನಾವು !!



ಹೊಲಸು ಹೊರುವರು ನಾವು !!

[ಇಂದಿನ ರಾಜಕೀಯದ ಜನರ ಕುರಿತು, ಅವರನ್ನು ಆಯ್ದು ಕಳಿಸಿದ ನಮ್ಮ ಮಂಕು ಬುದ್ಧಿಯ ಕುರಿತು ಈ ವಿಪ್ಲವದ ಕವನ]

ಹೊಲಸು ತುಂಬಿದ ಬುಟ್ಟಿ
ಹೊತ್ತು ನಾವೀವತ್ತು
ಕಳೆಗುಂದಿ ಕುಳಿತಿಹೆವು ಮಂಗನಂತೆ !
ಕಳಿಸುವಾಗಿರಲಿಲ್ಲ
’ತಲೆ’ ನಮಗೆ ತಲೆಯಲ್ಲಿ
ಬಿಳಿಹಂದಿ ಆನೆಗಳು ಬೆಳೆದವಂತೆ!

ಹಳೆಯ ಪೈಜಾಮಿನಲಿ
ಹಲವತ್ತುಕೊಳುತಾಗ
ಬಂದಿದ್ದ ಹಲವರನು ನಾನು ಕಂಡೆ
ಕಳೆಕಳೆಯ ಹೊಸ ವೇಷ
ಹೊಸ ಭಾಷೆ ಹೊಸ ಬದುಕು
'ಬಂದಿದ್ದು ಏಕೆಂಬ' ಮಾತನುಂಡೆ!

ಇಪ್ಪತ್ತು ಅಂಶಗಳ
ಜನಸೇವೆ ತಮದೆನುತ
ಒಪ್ಪತ್ತು ಊಟಕ್ಕೂ ಸೈ ಎಂದರಾಗ
ಒಪ್ಪುತ್ತ ಭೂರಮೆಯ
ಭಾರ ಕಳೆಯುವೆವೆಂದು
ತಪ್ಪುದಾರಿಗೆ ಎಳೆದು ಬದಲಿಸುತ ರಾಗ !

ಜನತೆ ಸುಖಿಸುವುದಕ್ಕೆ
ಘನಥರದ ಕಾರ್ಯಗಳ
ಮನವಿಟ್ಟು ಮಾಡುವುದು ಅವರಿತ್ತ ವಚನ
ಘನತೆಗಪ್ಪುದು ಕುಂದು
ಗಣಿಧಣಿಗಳಿಲ್ಲದಿರೆ
ಗಹನವಾಗಿದೆ ಗಾತ್ರ ಆಗಿಲ್ಲ ಪಚನ !

ಮನುಕುಲದ ಮುನ್ನಡೆಗೆ
ತನುಮನದ ಸಹಕಾರ
ಕನವರಿಸಿ ನಡೆಸುವೆವು ಕಾಲ್ನಡಿಗೆಯೆನುತ
ಅನುಕೂಲಕೊಂದು ಥರ
ಜನಜಾತ್ರೆ ಹೊಮ್ಮಿಸುತ
ತನುಕುಣಿಸಿ ಕೈ ತೋರಿ ಹಲವಾರು ಕುಣಿತ !

ಸೌಧದಲಿ ಸಭೆಗಳಲಿ
ವಾದ ಮಂಡಿಸುವಾಗ
ಬಾಧಿಸುವುದವುಗಳಿಗೆ ಅಸಹ್ಯ ರೋಗ !
ಕೌದಿ ಹೊದ್ದುದ ಮರೆತು
ಬೈದಾಡಿ ಕಬ್ಬರಿದು
ಕಾದಾಟನಡೆಸಿ ಸಭ್ಯತೆಮರೆವರಾಗ

ನಮ್ಮನಾಳುವ ಜನಕೆ
ಬಿಡಲೊಮ್ಮೆ ಬಾಣವನು
ಇರುತಿಲ್ಲ ನಮ್ಮಕಡೆ ಸಿದ್ಧ ಬತ್ತಳಿಕೆ
ತಿಮ್ಮ ಯಂಕರ ಕರೆದು
ಭುಜ ತಟ್ಟಿ ಹೊಗಳುವರು
ಬರುತಿಲ್ಲ ನಮಗೆಲ್ಲ ಬುದ್ಧಿ ಯಾತಕ್ಕೆ ?

Tuesday, July 27, 2010

ಭಾಗ್ಯದ ಬಳೆಗಾರ ಹೋಗಿಬಾ ನನ್ನ ತವರೀಗೆ

ಚಿತ್ರ ಋಣ : ಅಂತರ್ಜಾಲ

ಭಾಗ್ಯದ ಬಳೆಗಾರ ಹೋಗಿಬಾ ನನ್ನ ತವರೀಗೆ


ತನ್ನ ತಂದೆ-ತಾಯಿಗಳನ್ನು ಮಗಳು ನೆನೆಸಿಕೊಂಡಷ್ಟು ಮಗ ನೆನೆಸಿಕೊಳ್ಳಲಾರ! ಮದುವೆ ಆಗುವವರೆಗೆ ಮಗ ಎಲ್ಲದಕ್ಕೂ " ಅಮ್ಮ" " ಅಮ್ಮ" " ಅಮ್ಮ" ಎನ್ನುತ್ತಿದ್ದವನು ಮದುವೆಯಾದ ಘಳಿಗೆಯಿಂದ ಅಮ್ಮನನ್ನು ದೂರವಿಡಲು ಪ್ರಾರಂಭಿಸುತ್ತಾನೆ. ವಾಸ್ತವವಾಗಿ ಮದುವೆಯ ಹೊಸ್ತಿಲಲ್ಲಿ ನಿಂತ ಮಗನನ್ನು ನೋಡಿದಾಗ ಅಮ್ಮನಿಗೆ ಆತನ ಪ್ರೀತಿ ತನಗಿನ್ನೆಲ್ಲಿ ಸಿಗುವುದೋ ಎಂಬಭಾವ ಉದ್ಬವಿಸುವುದೋ ಏನೋ! ಯಾಕೆಂದರೆ ಮದುವೆಯಾದ ನಂತರ ಮಗ ಮೊದಲಿನ ಪ್ರೀತಿಯಿಂದ ಇರಲು ಬಂದ ಇನ್ನೊಂದು ಹೆಣ್ಣು ಬಿಡಬೇಕಲ್ಲ.

ಇದು ಒಂದು ವಾದವಾದರೆ, ಬಂದ ಹೆಣ್ಣಿಗೆ ಒಂಚೂರೂ ಸೌಲಭ್ಯ ಕಲ್ಪಿಸದೆ, ಮನೆಯ ಆಳಿನಂತೇ ನಡೆಸಿಕೊಳ್ಳುವ ಅತ್ತೆಯೊಂದಿಗೆ ಸೇರಿಕೂಳ್ಳುವ ಗಂಡ ತನ್ನನ್ನು ಲೆಕ್ಕಿಸುವುದೇ ಇಲ್ಲ --ಎನ್ನುವ ವಾದ ಇನ್ನೊಂದೆಡೆ.

ಈ ಎರಡರ ನಡುವೆ ದಿನಬೆಳಗಾದರೆ ವರದಕ್ಷಿಣೆಯ ಗೋಳು ದೃಶ್ಯ ಹಾಗೂ ಶ್ರಾವ್ಯ ಮಾಧ್ಯಮಗಳು, ಪತ್ರಿಕೆಗಳು ಇವುಗಳ ವಾರ್ತೆಗಳ ಒಂದು ಭಾಗವಾಗಿಹೋಗಿವೆ! ಒಂದುಕಡೆ ಭಯೋತ್ಪಾದಕರು, ನಕ್ಸಲೈಟ್ಸ್ ವಿಭಾಗ, ಇನ್ನೊಂದು ಕಡೆ ಅಪಘಾತಗಳ ವಿಭಾಗ ಮತ್ತೊಂದು ಕಡೆ ಕೊಲೆ,ಸುಲಿಗೆ,ದರೋಡೆ,ಡಕಾಯಿತಿ ಮತ್ತು ವರದಕ್ಷಿಣೆ ವಿಭಾಗ ಹೀಗೇ ಪತ್ರಿಕೆ ಮತ್ತು ಮಾಧ್ಯಮಗಳವರು ಇವುಗಳನ್ನೆಲ್ಲ ಬೆಳಿಗ್ಗೆ ಬೆಳಿಗ್ಗೆ ಮನವನ್ನು ಹಿಂಡುವ ಈ ಥರದ ವಾರ್ತೆಗಳನ್ನು ಕೊನೆಯ ಪುಟಕ್ಕೋ ದೃಶ್ಯದಲ್ಲಾದರೆ ಸ್ವಲ್ಪ ಹಿತಮಿತವಾಗೋ ಪ್ರಕಟಪಡಿಸುವುದು ಒಳ್ಳೆಯದು ಅನಿಸುತ್ತಿದೆ.

ಇತ್ತೀಚೆಗೆ ನಾವು ಕಾಣುತ್ತಿರುವ ಮನುಷ್ಯರ ರಾಕ್ಷಸೀ ಪ್ರವೃತ್ತಿ ಬಹಳ ಖೇದವನ್ನುಂಟುಮಾಡುತ್ತದೆ. ಹೆಣ್ಣಿನ ಬಾಳ್ವೆ ಕಷ್ಟ. ಹುಟ್ಟುವುದು ಒಂದುಕಡೆ, ಬದುಕುವುದು ಇನ್ನೊಂದು ಕಡೆ. ಗಂಡನಿಗಾಗಿ ತನ್ನ ತಂದೆ-ತಾಯಿ, ಅಣ್ಣ-ತಮ್ಮ[ಇದ್ದರೆ,ಯಾಕೆಂದರೆ ಈಗೆಲ್ಲ ಒಂಟಿ ಮಕ್ಕಳಾದರೆ ಅವರೆಲ್ಲ ಎಲ್ಲಿ!] ಇವರನ್ನೆಲ್ಲ ತೊರೆದು ಗಂಡನ ಮನೆ ಸೇರುತ್ತಾಳೆ. ನಾಳೆಯ ಬದುಕಿನ ಸುಂದರ ಕನಸುಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತ, ಒಡಲೊಳಗಾಡುವ ಕರುಳಬಳ್ಳಿಯನು ನೆನೆಸುತ್ತ, ತಂದೆ-ತಾಯಿ, ಅಣ್ಣ-ತಮ್ಮಂದಿರನ್ನು ಆಗಾಗ ಜ್ಞಾಪಿಸಿ ಕೊಳ್ಳುತ್ತ ಕಾಲಹಾಕುತ್ತಾಳೆ. ಹೆಣ್ಣೆಂಬ ಈ ಜೀವ ಬಯಸುವುದು ಕೇವಲ ಪ್ರೀತಿಯ ಆಸರೆ!

ಇತ್ತ ಹಲವು ಗಂಡಸರು ಬಯಸುವುದು ಕದ್ದೋ ಮುಚ್ಚೋ ಒಟ್ಟಿನಲ್ಲಿ ವರದಕ್ಷಿಣೆ! ಅವರಿಗೆ ಪ್ರೀತಿಯನ್ನೀಯುವ ಆ ಜೀವಕ್ಕಿಂತ ಆ ಜೀವವನ್ನು ಆಟದ ದಾಳವಾಗಿಟ್ಟುಕೊಂಡು ಬೇಕಾದಾಗ, ಹಾರಿಸಿದಾಗ ಅವಳ ತವರು ಮನೆಯಿಂದ ಬರುವ ದುಡ್ಡು-ಬಂಗಾರ-ಆಸ್ತಿ ಇವುಗಳೇ ಮುಖ್ಯ! ನಾಟ್ ದಾಟ್ ಎವರಿಒನ್ ಈಸ್ ಸೇಮ್ ಬಟ್ ಇಟ್ ಈಸ್ ಇನ್ಕ್ರೀಸಿಂಗ್ ಇನ್ ಆರ್ಡರ್!

ಹಿಂದೊಂದು ಕಾಲವಿತ್ತು ಅಂದುಬಿಟ್ಟರೆ ಸಾಕು ಕಥೆ ಕೊರೆಯಲು ಹೊರಟ ಅಂದುಕೊಂಡುಬಿಡುತ್ತೀರಿ. ಆದರೆ ಹಿಂದಾಗಿದ್ದು ಇಂದು ಇತಿಹಾಸ, ಅದು ಕಥೆ, ಅದು ಹಲವು ಕಾವ್ಯ-ಸಾಹಿತ್ಯಕ್ಕೆ, ಕಾದಂಬರಿಗೆ ಜೀವೆಜೀವಾಳ! ಇರ್ಲಿ, ವಿಷಯಕ್ಕೆ ಮರಳೋಣ. ಆ ಕಾಲದಲ್ಲಿ ಮನುಷ್ಯ ಮನುಷ್ಯನಾಗಿ ಬದುಕಿದ್ದ! ಅಲ್ಲಿ ’ಮಾನವೀಯ ಮೌಲ್ಯ’ ಎಂಬೊಂದು ಅಪರೂಪದ ವಿಷಯವಿತ್ತು, ಅದಕ್ಕೆ ಧಕ್ಕೆಬಾರದ ರೀತಿಯಲ್ಲಿ ಘನತೆ,ಗೌರವದಿಂದ ಬದುಕೂ ಸಾಗುತ್ತಿತ್ತು. ಅಲ್ಲಿ ಕೇವಲ ಹಣಕ್ಕಾಗಿ, ಆಸ್ತಿಗಾಗಿ ಜನ ಸಂಬಂಧಗಳನ್ನು ಮಾಡಿಕೊಳ್ಳುತ್ತಿರಲಿಲ್ಲ. ಇಂದಿನ ಕಲುಷಿತ, ಕುತ್ಸಿತ ರಾಜಕೀಯ ಅಲ್ಲಿನ ಬದುಕಿಗೆ ಪ್ರವೆಶಿಸಿರಲಿಲ್ಲ! ಜನ ತಮ್ಮಷ್ಟಕ್ಕೆ ತಾವು ಗ್ರಾಮ್ಯ ಶೈಲಿಯಲ್ಲಿ ಬದುಕುತ್ತ ಹಾಯಾಗಿದ್ದರು, ಅಷ್ಟೇಅಲ್ಲ ಹಬ್ಬ-ಹುಣ್ಣಿಮೆಗಳನ್ನು ಬಹಳ ಗಡದ್ದಾಗಿ ಜನಪದ ಶೈಲಿಯ ಆಚರಣೆಗಳಿಂದ ಪ್ರೇರಿತರಾಗಿ ಅನುಭವಿಸುತ್ತಿದ್ದರು.

ಪಂಚ್ಮಿ ಹಬ್ಬ ಉಳಿದಾವು ದಿನ ನಾಕ....
ಅಣ್ಣ ಬರಲಿಲ್ಲ ಯಾಕ ಕರಿಲಾಕ....?

ಎಂಥಾ ಹಾಡು ಅಂತೀರಿ. ಇದನ್ನು ನಾಗರ ಪಂಚಮಿಯ ಸಲುವಾಗಿ ನಮ್ಮ ಜನ ಬಳಸುತ್ತಿದ್ದರು. ಇದೊಂದೇ ಏನು ? ಹಲವು ಹತ್ತು. ರಾಗಿ ಬೀಸುವಾಗ, ಹಿಟ್ಟು ರುಬ್ಬುವಾಗ, ಮಕ್ಕಳನ್ನು ರಮಿಸುವಾಗ, ಪೂಜೆ-ಪುನಸ್ಕಾರ ನಡೆಸುವಾಗ, ಹೊಲದಲ್ಲಿ ಬಿತ್ತನೆ ಕಾರ್ಯವೇ ಮೊದಲಾಗಿ ಕೆಲ್ಸ ನಡೆಸುವಾಗ...ಎಲ್ಲೆಲ್ಲೂ ಆ ಹಾಡುಗಳ ಆಪ್ಯಾಯಮಾನ ಅವಲಂಬನೆ ಮತ್ತು ಅದರ ಅರ್ಥ ಬದುಕಿನ ಏಕತಾನತೆಯನ್ನು ಬದಲಿಸುತ್ತಿದ್ದವು. ಯವುದೋ ಒಂದು ರಿಧಮ್ ಅನುಸರಿಸಿಕೊಂಡು ಹಾಡುವ ಪ್ರತೀ ಹಾಡು ಕೂಡ ಕೆಲ್ಸ-ಕಾರ್ಯಗಳಿಂದ ಆಗಬಹುದಾದ ದಣಿವನ್ನು ನಿವಾರಿಸುತ್ತಿತ್ತು, ಪರಸ್ಪರರಲ್ಲಿ ಬಾಂಧವ್ಯ-ಆಪ್ತತೆ ಹೆಚ್ಚುವಂತೆ ಮಾಡುತ್ತಿತ್ತು. ಮತ್ತೊಮ್ಮೆ ಅದೇ ಕೆಲ್ಸ ಮಾಡಲು ಉತ್ಸಾಹ ಕುಂದದಂತೇ ತಡೆಯುತ್ತಿತ್ತು. ಇವತ್ತು ಪಂಚ್ಮಿ ಹಬ್ಬದ ಹಾಡೇ ಇರಲಿ ಮತ್ತೊಂದೇ ಇರಲಿ ಯಾರಾದರೂ ಜನಪದ ಕಲಾವಿದರನ್ನು ಕರೆಸಿ ಹಾಡಿಸಬೇಕಾಗಿದೆಯೇ ಹೊರತು ಅವುಗಳು ಜನಸಾಮಾನ್ಯನ ದೈನಂದಿನ ಚಟುವಟಿಕೆಗಳಿಂದ ಬೇರ್ಪಟ್ಟಿವೆ.

ಕಾಡೀಗಚ್ಚಿದ ಕಣ್ಣು ತೀಡಿ ಮಾಡಿದ ಹುಬ್ಬು
ಮಾವೀನ ಹೋಳು ನಿನ ಕಣ್ಣು ...
ಮಾವೀನ ಹೋಳು ನಿನ ಕಣ್ಣು ಕಂದಮ್ಮ ಮಾವ ಬಣ್ಣೀಸಿ ಕರೆದಾನ ....

ಎಲ್ಲಿದೆ ಮಗುವನ್ನು ರಮಿಸುವ ಈ ಪದ್ಯ? ಇಂದು ಇದನ್ನೆಲ್ಲಾ ನಾವು ತೊರೆದಿದ್ದೇವೆ, ಬೆಳಗಾದರೆ ದೃಶ್ಯಮಾಧ್ಯಮದ ಮುಂದೆ! ದೇವರು-ದಿಂಡರು ಏನೂ ಬೇಕಾಗಿಲ್ಲ. ಅಷ್ಟೂ ಬೇಕೆಂದರೆ ಎರಡು ಊದಿನಕಡ್ಡಿಯನ್ನು ಟಿವಿಗೇ ಹಚ್ಚಿಬಿಟ್ಟರೆ ಮುಗಿಯಿತಲ್ಲ! ಸುಬ್ಬಲಕ್ಷ್ಮಿಯವರ ಸುಪ್ರಭಾತ ದೇವಸ್ಥಾನಕ್ಕೆ ಮಾತ್ರ! ನಮಗೆಲ್ಲ ಅದ್ಯಾಕೆ ? ದಿನಾಲೂ ಕೇಳೀ ಕೇಳೀ ಬೇಜಾರು !

ನಮ್ಮನೆಯ ಪಕ್ಕದ್ಮನೆ ಪಡ್ಡೆಗೆ ಬೆಳಗಿನ ಜಾವವೇ ’ಕಣ್ ಕಣ್ ಕಣ್ ಹೊಡಿತಾಳೆ .....ಗಲ್ ಗಲ್ ಗಲ್ ಎಂತೈತೆ ...’ ಹಾಡು ಬೇಕು! ಹಾಸಿಗೆ ಬಿಟ್ಟು ಏಳುವುದೇ ೯ ಘಂಟೆಗೆ. ಅಲ್ಲೀವರೆಗೂ ಅವೇ ಸಿನಿಮಾ ಹಾಡುಗಳು. ಎಪ್ಫೆಮ್ಮು ಎಪ್ಫೆಮ್ಮು! ಮಕ್ಕಳಿಗೆ ತಿಳಿಹೇಳಬೇಕಾದ ಹಿರಿಯರೇ ಅದನ್ನು ಅನುಗ್ರಹಿಸಿರುವಾಗ ಇನ್ನು ಮಕ್ಕಳ ತಪ್ಪೇನು?

ಇವತ್ತಿನ ಢಾಂಬಿಕತನ,ಢೋಂಗಿಮನ ನಮಗೆ ಹಲವು ಹತ್ತು ಆಸೆಗಳನ್ನು ಹೊತ್ತು ತಂದಿದೆ. ಮಾಧ್ಯಮಗಳ ಅತಿರಂಜಿತ ಕಥಾ ಹಂದರಗಳಿಂದಲೂ, ಸಿನಿಮಾಗಳ ಬಟ್ಟೆ ರಹಿತ ಎಲ್ಲಾ ಓಪನ್ ದೃಶ್ಯಗಳ ಹದಿಹರೆಯದವರ ಮನಗೆದರುವ ಕಾಮ ಸಂಬಂಧೀ ದೃಶ್ಯಾವಳಿ ಮತ್ತು ಕಥೆಗಳಿಂದಲೂ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ನಿನ್ನೆಯವರೆಗೆ ಅಪ್ಪಾ ಅಪ್ಪಾ ....ಎಂದು ಅಪ್ಪ ಹೇಳಿದ ಹಾಗೇ ಕೇಳುತ್ತಿದ್ದ ಹುಡುಗಿ ಇಂದು ಅಪ್ಪನ ವಿರುದ್ಧ ದೃಶ್ಯಮಾಧ್ಯಮದಲ್ಲಿ ಹೇಳಿಕೆ ಕೊಡುತ್ತಾಳೆ. ಅಪ್ಪ ತನ್ನ ಪ್ರೇಮಿಯನ್ನು ಅಗಲಿಸಲು ಪ್ರಯತ್ನಿಸುತ್ತಾನೆ ಎಂದು ರಂಪಮಾಡುತ್ತಾಳೆ. ಆದರೆ ಮುಂದಾಗುವ ಪರಿಣಾಮವನ್ನು ನೆನೆದ ಅಪ್ಪ-ಅಮ್ಮ ಕಣ್ಣೀರಲ್ಲಿ ಕೈತೊಳೆಯುತ್ತ ಕೈಕೈ ಹಿಸುಕಿಕೊಳ್ಳುತ್ತ ಕೂರುವಂತೆ ಮಾಡುತ್ತಾರೆ. ಮಠದಲ್ಲಿದ್ದ ವೈರಾಗ್ಯಮಾತೆ ಎಳೆವೆಯ ಹುಡುಗನನ್ನು ಬಯಸಿ ತನಗೆ ಪ್ರೀತಿ ಕೊಡುವವರಿಲ್ಲಾ ಎನ್ನುತ್ತ ಆತನನ್ನೇ ವರಿಸಿ ಆತನ ತಾಯಿಯ ಮನಸ್ಸನ್ನು ತಲ್ಲಣಗೊಳಿಸುತ್ತಾಳೆ! ಇವೆಲ್ಲ ಇಂದಿನ ಮುಂದುವರಿದ ನಮ್ಮ ಸಂಸ್ಕೃತಿಯ ಸ್ವೇಚ್ಛಾಚಾರದ ಮನೋವಾಂಛೆ ಅನ್ನೋಣವೇ ?

ಹಾಗಾದರೆ ನಮಗೆಲ್ಲಾ ಏನಾಗಿದೆ ? ಅದನ್ನೇ ನಾವು ಅರ್ಥೈಸಿಕೊಳ್ಳುತ್ತಿಲ್ಲ. ಅರ್ಥೈಸಿಕೊಂಡರೆ ಧುತ್ತನೆ ನಮಗೆದುರಾಗುವ ಪ್ರಶ್ನೆ>> ಹೀಗೂ ಉಂಟೇ ? .....

ಅತಿ ಆಸೆಗೆ ಬಲಿಯಾಗಿದ್ದೇವೆ, ಢಾಂಬಿಕರಾಗಿದ್ದೇವೆ, ನಮಗೇ ನಾವು ಮೋಸಗಾರರಾಗಿದ್ದೇವೆ, ದೈವ ಭಕ್ತಿ ಕೇವಲ ಆಚರಣೆಗೆ ಸೀಮಿತವಾಗಿದೆ, ಹಿರಿ-ಕಿರಿಯ ಭೇದಭಾವವಿಲ್ಲ, ವಕೀಲರು ಗೆದ್ದಿದ್ದೇ ನ್ಯಾಯ, ಸರಿಯಾದ ಗುರುವನ್ನು ಗುರುತಿಸಿಕೊಳ್ಳುವ ಶಕ್ತಿ ನಮಗಿಲ್ಲ, ವಿದೇಶೀ ಕಂಪನಿಗಳು ದುಡ್ಡುಮಾಡಲು ಬಂದು ಪ್ರಾರಂಭಿಸಿದ ಮಾಲ್ ಕಲ್ಚರ್ ಗೆ ನಾವು ಒಣ ಪ್ರತಿಷ್ಠೆ ಮೆರೆಯಲು ಹೋಗುತ್ತೇವೆ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಬೇಕು ಎಂಬಂತೇ ಕಂಡಿದ್ದನ್ನೆಲ್ಲ ಕೊಳ್ಳುವ,ಖರೀದಿಸುವ ಕೊಳ್ಳುಬಾಕರಾಗಿದ್ದೇವೆ, ಕ್ಷಣಿಕ ವ್ಯಾಮೋಹಕ್ಕಾಗಿ-ಕಾಮತೀಟೆಗಾಗಿ ಮಡದಿಯನ್ನೇ ಮರೆತು ಬೇರೊಂದು ಹೆಂಗಸನ್ನೋ ಹುಡುಗಿಯನ್ನೋ ಹುಡುಕುವ ದುರಾಚಾರಿಗಳಾಗಿದ್ದೇವೆ, ಕೆಲಸಬೇಡ-ಹಣಬೇಕು ಎಂಬ ಸೂತ್ರಕ್ಕೆ ಅಂಟಿಕೊಂಡಿದ್ದೇವೆ--ಇವೆಲ್ಲ ಅದಕ್ಕೆ ಕಾರಣ! ಇರುಳಲ್ಲಿ ಕಂಡ ಬಾವಿಗೆ ಹಗಲಲ್ಲಿ ಬಿದ್ದಿರುವುದೇ ಇದಕ್ಕೆ ಕಾರಣ. ನಮಗರ್ಥವಾಗದ ಸಂಸ್ಕೃತಿಯ ಜಾಡು ಹಿಡಿದು ನಮ್ಮತನವನ್ನು ತೊರೆಯುತ್ತಿರುವುದೇ ಇದಕ್ಕೆಲ್ಲಾ ಕಾರಣ! ಈ ಒಂದು ಗಾಡಾಂಧಕಾರದಲ್ಲಿ ನಾವು ಮಾನವರಾಗಿರುವ ಬದಲು ದಾನವರಾಗುತ್ತಿದ್ದೇವೆ, ತಾಮಸರಾಗುತ್ತಿದ್ದೇವೆ.

ನಮ್ಮಲ್ಲಿ ಹೆಣ್ಣುಮಕ್ಕಳು ಮಣ್ಣಿನ ಬಳೆಗಳನ್ನು ಇಡುವುದು ಬಿಟ್ಟು ಬಹಳಕಾಲವಾಯಿತು. ಹಿಂದಕ್ಕೆ ಬಳೆಗಾರ ಮನೆಬಾಗಿಲಿಗೇ ಬರುತ್ತಿದ್ದ. ಬಳೆಯ ಮಲಾರವನ್ನು ಹೊತ್ತು ತರುತ್ತಿದ್ದ ಆತನ ಉದರಂಭರಣೆಯ ಜೊತೆಜೊತೆಗೇ ಆತ ಬಳೆಗಾರ ಚೆನ್ನಯ್ಯನ [ಕೇಳಿದ್ದೀರಲ್ಲ? ನರಸಿಂಹಸ್ವಾಮಿಗಳ ಕವನದಲ್ಲಿ]ಪಾತ್ರವನ್ನೂ ನಿರ್ವಹಿಸುತ್ತಿದ್ದರು. ಬೇಕಾದ ಬಳೆಗಳನ್ನು ಕೊಡುವುದರ ಜೊತೆಗೆ ಹಳ್ಳಿಯಿಂದ ಹಳ್ಳಿಗೆ ಹರಿಕಾರರಾಗಿ ಕೆಲಸಮಾಡುತ್ತಿದ್ದರು. ಅಂದಿನ ಆ ಬದುಕಿನಲ್ಲಿ ಈ ಥರದ ದ್ವೇಷ-ವೈಷಮ್ಯವಿರಲಿಲ್ಲ, ಸಿರಿವಂತಿಕೆಯ ಸೋಗಿರಲಿಲ್ಲ, ಪಟ್ಟಣದ ಬದುಕಿನ ಥಳುಕುಬಳುಕು-ಒಳಗೆಲ್ಲಾ ಹುಳುಕಿನ ವ್ಯವಹಾರವಿರಲಿಲ್ಲ. ಅಂದಿನ ಬಾಣಂತಿ ತನ್ನ ತವರನ್ನು ನೆನೆಸಿ ಹೊರಟಾಗ ಬರುವ ಹಾಡು ನೋಡಿ--

ತೌರೂರ ದಾರಿಯಲಿ ನವಿಲ ಬಣ್ಣದ ಪಕ್ಷಿ
ತಲಿಬ್ಯಾನಿ ಎದ್ದು ಅಳುತಿತ್ತ....
ತಲಿಬ್ಯಾನಿ ಎದ್ದು ಅಳತಿತ್ತ ಕಂದನ ನಗುವೀಕಿ ನೋಡಿ ನಲಿತಿತ್ತ...

ಎಂತಹ ಆಪ್ತತೆ ತುಂಬಿದೆ ನೋಡಿ. ಹಾದಿಯಲ್ಲಿ ನವಿಲೊಂದು ತಲೆನೋವಿನಿಂದ ಬಳಲುತ್ತಿದ್ದುದಾಗಿಯೂ ಆಕೆಯ ಕಂದನನ್ನು ನೋಡಿ ಅದರ ನೋವು ಮರೆಯಿತೆಂದೂ ಬರೆದ ಜನಪದ ಮಹಾಶಯ ಯಾರಿರಬಹುದು ?

ಅದೇ ರೀತಿ ಬಳೆಗಾರ ತನ್ನ ಗಂಡನ ಮನೆಯಲ್ಲಿದ್ದಾಗ ಬಂದರೆ ಅವನನ್ನು ತನ್ನ ತಾಯಿಗೂ, ಅಕ್ಕ-ತಂಗಿಯರಿಗೂ ಬಳೆಸಿಗಲಿ ಎನ್ನುವ ಸಲುವಾಗಿ, ಗರತಿ ಆತನಲ್ಲಿ ವಿನಂತಿಸುತ್ತಿದ್ದುದು " ಅಯ್ಯಾ ಭಾಗ್ಯದ ಲಕ್ಷಣವಾದ ಬಳೆಯನ್ನು ಮಾರುವ ಬಳೆಗಾರನೇ ನನ್ನ ತವರಿಗೂ ಸ್ವಲ್ಪ ಹೋಗಿಬಾರಪ್ಪಾ" ಎಂದು.
ಈ ಹಿನ್ನೆಲೆಯಲ್ಲಿ ಆ ಬಳೆಗಾರನ ಕೂಡ ಹಾಡುವ ಹಾಡು--

ಭಾಗ್ಯದ ಬಳೆಗಾರ ಹೋಗಿಬಾ ನನ್ ತವರೀಗೆ

ಹಂಚಿನ ಮನೆ ಕಾಣೋ..ಕಂಚಿನ ಕದ ಕಾಣೋ....

ಎಷ್ಟೆಲ್ಲಾ ಗುರುತು, ಬಣ್ಣನೆ ತನ್ನ ತೌರಬಗೆಗೆ. ಇದು ಆ ತಂಗಿಯ, ಆ ಅಕ್ಕನ, ಆ ಗರತಿಯ ತೌರಿನ ಬಗೆಗಿದ್ದ ಪ್ರೀತಿಯನ್ನು ತೋರಿಸುತ್ತದೆ. ’ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎಂದು ಯಾವಾತನೋ ಗಾದೆ ಮಾಡಿರಬಹುದು ಆದರೆ ಅದು ನಿಜವಾಗಿ ಅನ್ಯಾಯ. ಕೇವಲ ಹೆಣ್ಣಾಗಿ ಹುಟ್ಟಿದ ಮಾತ್ರಕ್ಕೆ ಆಕೆ ತನ್ನೆಲ್ಲಾ ಆಪ್ತರ-ಹುಟ್ಟಿದ ಮನೆಯವರ ಔದಾರ್ಯದಿಂದ ವಂಚಿತಳಾಗಬೇಕೆ? ಹಾಗಂತ ತವರಿನ ಮೇಲೆಯೇ ವಿಪರೀತ ಒತ್ತಡ ಹೇರಿ ವಸೂಲಿ ಕೆಲ್ಸವನ್ನೂ ಅವಳು ಮಾಡಲಾರಳು. ಈ ಇಕ್ಕಟ್ಟಿನಲ್ಲಿ ಆ ಕಡೆ ಗಂಡನಮನೆಯವರ ಕಿರುಕುಳ ಈ ಕಡೆ ತವರುಮನೆಗೆ ಹೇಳಲಾಗದ ತಳಮಳ-ಇಲ್ಲೆಲ್ಲೋ ನಡುವೆ ಒಂದು ಆಳ ಕಮರಿಯಲ್ಲಿ ಸಿಲುಕಿದ ಆ ಮಹಾತಾಯಿ ನಿಟ್ಟುಸಿರುಬಿಡುತ್ತಾಳೆ, ತನ್ನನ್ನು ಮುಗಿಸಿಕೊಳ್ಳುವ ಹಂತಕ್ಕೆ ಮಾನಸಿಕ ಸಿದ್ಧತೆ ನಡೆಸುತ್ತಾಳೆ, ಅಥವಾ ಏನಾದರಾಗಲಿ ಎಂದು ಗಂಡನ ಮನೆಯಲ್ಲೇ ಇದ್ದು ಅಲ್ಲಿನವರಿಂದ ಕೊಲ್ಲಲ್ಪಡುತ್ತಾಳೆ! ಇದು ನಮ್ಮ ಇಂದಿನ ಸಿರಿವಂತಿಕೆಯ ದ್ಯೋತಕವಾಗಿಬಿಟ್ಟಿದೆ. ಆಮೇಲೆ ಸ್ವಲ್ಪಕಾಲ ರಾಜಕೀಯ ಮಾಡಿ ಕೊಲೆಗಡುಕರು ತಪ್ಪಿಸ್ಕೊಂಡು ಆ ಹುಡುಗನಿಗೆ ಇನ್ನೊಂದು ಮದುವೆಗೆ [ಇನ್ನೊಂದು ’ಕುರಿ ಬಲಿಗೆ’] ತಯಾರಿ ನಡೆಸುತ್ತಾರೆ. ಇದು ಮೂರ್ನಾಲ್ಕು ಹುಡುಗಿಯರನ್ನು ಆತ ಹಾಗೆ ಮದುವೆಯಾಗಿ ಸಾಯಿಸುವವರೆಗೂ ತೀರಾ ಬೆಳಕಿಗೆ ಬರುವುದೇ ಇಲ್ಲ!

ಇಂತಹದ್ದನ್ನೆಲ್ಲ ಅರಿತೇ ಇಂದು ಹೆಣ್ಣು ಮಗುವೇ ಬೇಡ ಎಂಬ ಹಂತಕ್ಕೆ ಪಾಲಕರು ಬಂದಿದ್ದಾರೆ. ಇದರ ಸಲುವಾಗೇ ಅನೇಕ ವರ್ಷಗಳ ಕಾಲ ಗೌಪ್ಯವಾಗಿ ಸ್ಕ್ಯಾನಿಂಗ್ ಯಂತ್ರಗಳ ಮೂಲಕ ಭ್ರೂಣದ ಲಿಂಗ ಪರೀಕ್ಷೆ ಮಾಡಿಸಿ ಅದು ಹೆಣ್ಣಾಗಿದ್ದರೆ ಅದನ್ನು ಆಬಾರ್ಷನ್ ಮಾಡಿಬಿಡುತ್ತಿದ್ದರು.ನೋಡಿ ಎಲ್ಲಿಗೆ ಹೋಗಿ ಎಲ್ಲಿಗೆ ಬಂತು ಕಾಲ! ನಮ್ಮ ಹಿರಿಯರು ಇದನ್ನೆಲ್ಲ ತಿಳಿದೇ ಭ್ರೂಣ ಹತ್ಯೆ ಮಹಾಪಾಪ ಅದೊಂದು ಕೊಲೆಯಷ್ಟೇ ಪಾಪದ ಕೆಲಸ, ಪಾತಕ ಎಂದು ಹೇಳಿದ್ದಾರೆ.

ನಮ್ಮಷ್ಟಕ್ಕೆ ನಾವು ಅಲ್ಪ ತೃಪ್ತರಾಗಿ ಅಂದಿನ ದಿನಗಳಂತೇ ದೇವರು ಕೊಟ್ಟದ್ದರಲ್ಲಿ, ಪ್ರಾಮಾಣಿಕವಾಗಿ ಗಳಿಸಿದ್ದರಲ್ಲಿ ತೃಪ್ತಿ ಕಂಡಿದ್ದರೆ ಈ ರೀತಿ ಬವಣೆಗಳು ಬರುತ್ತಿರಲಿಲ್ಲ. ಒತ್ತಡಗಳು ಉದ್ಭವವಾಗುತ್ತಿರಲಿಲ್ಲ, ಮಾನವೀಯ ಮೌಲ್ಯಗಳು ಕುಸಿಯುತ್ತಿರಲಿಲ್ಲ, ಜೀವಗಳು ಬಲಿಯಾಗುತ್ತಿರಲಿಲ್ಲ. ಇದನ್ನೆಲ್ಲಾ ಬರೆಯುವಾಗ ಕೊನೆಗೊಮ್ಮೆ ನಾನು ಕೇಳಿದ ಹಾಡು

ಭಾಗ್ಯದ ಬಳೆಗಾರ ಹೋಗಿಬಾ ನನ್ ತೌರೀಗೆ.....

ಆ ಗರತಿ, ಆ ಭಾರತಿ ಮತ್ತೆ ಜನಿಸಲಿ, ಸುಖದ ಕಾಲ ನಮಗೆ ಮತ್ತೆ ಸಿಗುವಂತಾಗಲಿ, ಮಾನವೀಯ ಮೌಲ್ಯಗಳು ಮತ್ತೆ ಚಿಗಿತು ಬೆಳೆಯಲಿ, ಅನ್ಯಾಯ-ಅಧರ್ಮ ಅಳಿದು ಮಾನವ ಪ್ರೇಮ ಎಲ್ಲೆಡೆಗೆ ಅನುರಳಿಸಲಿ ಎಂಬ ಸದಾಶಯದೊಂದಿಗೆ ನಿಮ್ಮಕೈಗೀಲೇಖನ, ನಮಸ್ಕಾರ.

Monday, July 26, 2010

ಉದ್ಯಾನದಲ್ಲೊಂದರ್ಧಘಂಟೆ !!


ಚಿತ್ರಗಳ ಋಣ : ಅಂತರ್ಜಾಲ

ಉದ್ಯಾನದಲ್ಲೊಂದರ್ಧಘಂಟೆ !!

ತದರಿನನನ......ರಿನನನ...ರಿನನನ.... ಎನ್ನುತ್ತ ತಮ್ಮಷ್ಟಕ್ಕೆ ಹಾಡಿಕೊಳ್ಳುತ್ತ ಕುಳಿತಿದ್ದರು ವೆಂಕೋಬರಾಯರು. ನಾನೂ ರಾಯರಿಗೆ ಪರಿಚಯವಿದ್ದರೂ ಸಿಗುವುದು ಅಪರೂಪ. ಎಲ್ಲಾದರೂ ಪುಗಸಟ್ಟೆ ಮನೋರಂಜನೆ ಬೇಕೆಂದಿದ್ದರೆ ಪಾರ್ಕಿಗೆ ಹೋಗುವುದು ಜಾಸ್ತಿ. ನೀವೀಗ ಕೇಳುವ ಪ್ರಶ್ನೆ ಮೊದಲೇ ನನಗೆ ತಿಳಿದಿದೆ. ಪಾರ್ಕಿನಲ್ಲೇನು ಸಿಗುತ್ತೆ ಮನೋರಂಜನೆ.... ನೀನೇನೋ ತಲೆ ತುರಿಸಿಕೊಂಡು ಹಾಡು ಬರೆಯುತ್ತೇನೆ ಎಂದು ಕುಳಿತುಕೊಂಡುಬಿಡಬಹುದು ಆದರೆ ನಮಗೆಲ್ಲಾ ಏನ್ ಸಿಗುತ್ತೆ ಮಹಾ?

ನೆವರ್, ನೆವರ್ ಮಿಸ್ ಎನ್ ಅಪಾರ್ಚ್ಯುನಿಟಿ --ಇದು ಒಂದುಕಾಲದಲ್ಲಿ ಸ್ಪೈಸ್ ಟೆಲಿಕಾಂ ನವರ ಸ್ಲೋಗನ್ ಆಗಿದ್ದರೂ ಯಾವಾಗಲೂ ಅದು ಅವರದೇ ಆಗಿರಲು ಆ ಮಾತೇನು ಅವರಪ್ಪನಮನೆ ಸೊತ್ತೇ? ಅದೆಲ್ಲಾ ಇರ್ಲಿ, ನಾನು ಹೇಳುತ್ತಿರುವುದು ತಾವು ಪಾರ್ಕಿನಲ್ಲಿ ಮಜಾ ತೆಗೆದುಕೊಳ್ಳುವುದನ್ನು ಮರೆಯಬೇಡಿ ಎಂದು. ತಲೆಹರಟೆ ಎಂದಿರೇ ಹಾಂ ಒಂಥರಾ ಹಾಗೇ ಅಂದುಕೊಳ್ಳಿ ತಪ್ಪೇನಿಲ್ಲ!

ನೀವೇ ವಿಚಾರ ಮಾಡಿ... ಪಾರ್ಕಿನಲ್ಲಿ ಥರಾವರಿ ಜನರ ಜಾತ್ರೆಯೇ ಇರುತ್ತದೆ [ಕೆಲವು ಪಾರ್ಕಿನಲ್ಲಿ ಗಿಡಗಳೂ ಇರುವುದಿಲ್ಲ, ಜನರೂ ಇರುವುದಿಲ್ಲ.. ತುಕ್ಕು ಹಿಡಿದ ಬೋರ್ಡುಗಳು ಮಾತ್ರ ನಮ್ಮನ್ನೇ ಹೆದರಿಸುವಂತೆ ನಿಂತಿರುತ್ತವೆ ಅನ್ನಿ!] ಆದರೂ ಹಲವೊಂದು ಪಾರ್ಕುಗಳು ಜನನಿಬಿಡ. ಅಲ್ಲಿ ಸುಮ್ಮನೇ ಹೋಗಿ ಒಂದುಕಡೆ ಕುಳಿತುಕೊಳ್ಳಿ.

ಅಗೋ ಅಲ್ಲಿ ಲಕ್ಷ್ಮಮ್ಮನಂತೆ ಯಾರೋ ಕರೆದರು. ನೋಡುತ್ತಲೇ ಇದ್ದೇನೆ, ನಾನೇನೂ ವಯಸ್ಸಾದ ಮುದುಕಿ[ ಎಡಮುದುಕಿಯಲ್ಲ ] ಎಂದುಕೊಂಡರೆ ಇನ್ನೂ ವಯಸ್ಸು ೪೫ ದಾಟಿರುವ ಹಾಗಿಲ್ಲ. ೯೯ ಕೆಜಿ ಶರೀರದ ಕಾಂಪ್ಲೆಕ್ಸ್ ನ್ನು ಎರಡೂ ಸೇರಿದಂತೆ ೯ ಕೆಜಿ ತೂಗುವ ಕಾಲುಗಳ ಪಿಲ್ಲಾರ್ ಮೇಲೆ ಹೊತ್ತುಕೊಂಡು ದಸ್ಸೋ ಬುಸ್ಸೋ ದಸ್ಸೋ ಬುಸ್ಸೋ ಎನ್ನುತ್ತ ಗಾಳಿಗೆ ಹಾಯಿದೋಣಿ ತೂಗಿದ ಹಾಗೇ, ಹಳೆಯ ಗೋಡೆ ಗಡಿಯಾರದ ಪೆಂಡೂಲಂ ತೂಗಿದ ಹಾಗೇ ಆಕಡೆ ಈಕಡೆ ಆಕಡೆ ಈಕಡೆ ತೂಗುತ್ತ ಬಂತು ಸವಾರಿ! ಆ ಇಬ್ಬರು ಹೆಂಗಸರು ನನ್ನ ಪಕ್ಕದ ಕಲ್ಲು ಬೆಂಚಿನಮೇಲೆ ಕುಳಿತು ಹರಟಲು ತೊಡಗಿದರು.

" ಅಲ್ರೀ ಲಕ್ಷ್ಮಮ್ನೋರೇ ನಿಮ್ಮನೇಲ್ ಏನ್ ತಿಂಡಿ ಇವತ್ತು? "

" ಪೂರಿ ಸಾಗು"
ನೋಡಿದಾಗಲೇ ಅಂದುಕೊಂಡಿದ್ದೆ ’ಕಾಂಪ್ಲೆಕ್ಸ್’ ಕಟ್ಟಿರುವುದು ಬರಿದೇ ಅಲ್ಲ ಅದರ ಹಿಂದೆ ಸಾಕಷ್ಟು ’ಪರಿಶ್ರಮ’ ಅಡಗಿದೆ ಅಂತ, ಹೌದಪ್ಪಾ ಹೌದು ಅನುಮಾನವೇ ಇಲ್ಲ!

ಅದೂ ಇದೂ ಬೇಕಾದ್ದು ಬೇಡಾದ್ದು ಉಗುರಿನಿಂದ ತಲೆಯವರೆಗಿನ ಎಲ್ಲಾವಿಚಾರಗಳ ಪಾರಾಯಣ ಕೇಳಿದೆ! ಸುಮಾರು ೧೦ ನಿಮಿಷವಾಗಿತ್ತೇನೋ. ಮಧ್ಯೆ ಮಧ್ಯೆ ಒಬ್ಬೊಬರಾಗಿ ಹೆಂಗಸರು ಬರುತ್ತಲೇ ಇದ್ದರು. ನಾನು ಸಹಜವಾಗಿ ಎಲ್ಲವನ್ನೂ ನೋಡಿದರೂ ನೋಡದ ಹಾಗೇ ಜಾಣಕುರುಡನಾಗಿದ್ದೆ ! ಸುಮಾರು ೧೫ ನಿಮಿಷಗಳಲ್ಲಿ ೧೫-೨೦ ಹೆಂಗಸರು ಸೇರಿದರು. ಕಥೆ ಕಥೆ ಕಥೆ, ಕಾಡು ಹರಟೆ. ಗಂಡಂದಿರು ಎದುರಿಗಿಲ್ಲದ ಸಂತೋಷದಲ್ಲಿ ಮಂಗಗಳ ಥರ ಕಾಲಕಳೆದಿದ್ದೇ ಬಂತು. ಎಲ್ಲರೂ ತೂಕದ ’ತೂಗಮ್ಮ’ಗಳೇ!

" ರೀ ಅವರ್ಮನೆ ಸಂಗೀತಾ ಓಡಿಹೋಗ್ಬಿಟ್ಳಂತೆ ಕಣ್ರೀ"

" ಹೌದಾ ನಾ ಮೊದ್ಲೇ ಲೆಕ್ಕ ಹಾಕಿದ್ದೆ ಒಂದಲ್ಲಾ ಒಂದಿನ ಆಕೆ ಹೋಗೇ ಹೋಗ್ತಾಳೆ ಅಂತ, ಹಾಗೇ ಆಗ್ಲಿ ಬಿಡಿ ಸುಧಮ್ಮಂಗೆ ಸ್ವಲ್ಪ ಬುದ್ಧಿಬರ್ಬೇಕು"

ನೋವಲ್ಲೂ ನಲಿವನ್ನು ಕೊಡುವವರು ಇದ್ದಾರೆ ಅನ್ನುತ್ತಾರಲ್ಲ ಇಲ್ಲಿ ಅದು ಬೇರೆ ರೀತಿ- ಪರರ ನೋವಲ್ಲೂ ತಾವು ಇತರರಿಗೆ ಅದನ್ನಾಡಿಕೊಂಡು ನಲಿವು ಕೊಡುತ್ತಾರೆ. ನನಗಂತೂ ಅಲ್ಲಲ್ಲೇ ಸಿಟ್ಟು, ವಿಷಾದ, ನೋವು, ನಲಿವು ನೀವು ಏನೇ ಹೇಳಿ ನವರಸಗಳು ಮೇಳೈಸಿದ ಅನುಭವ! ಅಲ್ಲಲ್ಲೇ ಸಣ್ಣಗೆ ಹಾಡು ಹಾಡಿಕೊಳ್ಳುವವರು, ಸಿಳ್ಳೆಯಲ್ಲಿ ಹಾಡು ನುಡಿಸುವ ಆಧುನಿಕ ಸಿಳ್ಳೆಕಲಾವಿದೆಯರಾದ ಗರತಿಯರು, ಮಗ ವಿದೇಶದಿಂದ ಮೂರು ತಿಂಗಳಹಿಂದೆ ತಂದ ತಿನ್ನಲಾಗದೇ ಫ್ರಿಜ್ ನಲ್ಲಿ ಇಟ್ಟಿದ್ದ ಸ್ವೀಟು ಇಲ್ಲಿಗೆ ತಂದು ಗೆಳತಿಯರೊಂದಿಗೆ ವಿದೇಶೀ ಸಂಗತಿಗಳನ್ನು ರುಚಿರುಚಿಯಾಗಿ ಹರಟಿ ಹಳಸಲು ಸ್ವೀಟನ್ನು ಅಂತಸ್ತು ತೋರಿಸಲೂ ಆಯಿತು ಮತ್ತು ಖರ್ಚುಮಾಡಿದ ಹಾಗೂ ಆಯಿತು ಎಂಬಂತೇ ತಂದಿರುವವರು, ನಿನ್ನೆ ಖರೀದಿಸಿದ ರೇಷ್ಮೆ ಸೀರೆಗಳನ್ನು ತೋರಿಸಿ ಹೊಟ್ಟೆ ಉರಿಸಲು ಬಂದವರು ಹೀಗೇ ಹಲವು ಥರದವರಿದ್ದರು!

ಅಲ್ಲಾ ಸ್ವಾಮೀ ನಮ್ಮೂರಲ್ಲಿ ಹಬ್ಬಗಳಿಗೆ ಮಾತ್ರ ಕರಿದ ಪದಾರ್ಥಗಳನ್ನು ಮಾಡೋರು. ಈಗ್ಲೂ ಹಾಗೇನೆ. ಅಲ್ಲಿ ತೂಗಪ್ಪ-ತೂಗಮ್ಮ ಇಲ್ಲವೇ ಇಲ್ಲ! ದಿನಬೆಳಗಾದರೆ ಇಲ್ಲದ್ದು ಸಲ್ಲದ್ದು ಮಾಧ್ಯಮದ ಅಡುಗೆ ಶೋ ಗಳಲ್ಲಿ ಕಂಡಿದ್ದು ಅಂತ ಅದೂ ಇದೂ ಕರಿಯುತ್ತಲೇ ಇದ್ದರೆ ಸಮಾಜದಲ್ಲಿ ಎಲ್ಲರೂ ’ತೂಕದ ವ್ಯಕ್ತಿ’ಗಳಾಗುತ್ತಾರೆ ಎಂಬುದು ನನ್ನ ಥೀಸಿಸ್, ಇದರ ಬಗ್ಗೆ ಪ್ರಬಂಧ ಬರೆದರೆ ನನಗೆ ಗಿನ್ನೆಸ್ ದಾಖಲೆ ಪಾರ್ಕಿನಲ್ಲಿ ನಾನು ಕೂತಾಗಲೇ ಕೈಗೆ ತಂದುಕೊಟ್ಟು ಹೋಗುತ್ತಾರೆ!

ರಾಮೇಗೌಡ್ರು ಲೈಟಾಗಿ ಬೈಟೂ ಕಾಪಿ ಕುಡ್ದು ಎರ್ಡಿಡ್ಲಿ ತಿಂದು ಉದ್ದುದ್ದ ಪೈಜಾಮಿನಲ್ಲಿ ಅಡ್ಡಡ್ಡ ಕಾಲಾಡಿಸುತ್ತ ಬಂದೇಬಿಟ್ಟರು. ಇವತ್ತು ಅವರಜೊತೆ ಅವರ ಅಳಿಯನೋ ಯಾರೋ ಬಂದಿದ್ದಾರೆ. ಸುಮಾರು ಹದಿನೈದು ಕೋಳಿಗಳನ್ನು ತುಂಬಿದ ಚೀಲದಷ್ಟು ಸಣ್ಣ ಹೊಟ್ಟೆ! ಹೊಟ್ಟೆಯ ಸುತ್ತ ಸ್ಕೂಟರ್ ಟೈರು ಇದ್ದಹಾಗೇ ಅಲ್ಲೇ ಒಂದು ರಿಂಗಿನ ಆಕಾರ! ಬಟ್ಟೆಯೊಳಗಿದ್ದರೇ ಹೀಗೆ ಇನ್ನು ಬಟ್ಟೆ ತೆಗೆದರೆ ಸುಮೋಗಳೆಲ್ಲ ಹೆದರಿ ಜಪಾನುತೊರೆಯಲೇ ಬೇಕು ಏನಂತೀರಿ? ರಾಮೇ ಗೌಡ್ರು ಬರದಿದ್ರೆ ಪಾರ್ಕಿಗೆ ಕಳೆಯೇ ಇಲ್ಲ, ಬರೇ ಪಾರ್ಕಿನಲ್ಲಿ ಬೆಳೆದಿರುವ ಕಳೆಗಳನ್ನೇ ನೋಡಿ ಮರಳಬೇಕು! ಅವರ ಗತ್ತೇನು ಗಾಂಭೀರ್ಯವೇನು ಆ ನಡಿಗೆಯೇನು ನಾಲ್ಕು ಜನರಿಗೆ ಬದುಕನ್ನು ರೂಪಿಸಿಕೊಟ್ಟಿದ್ದೇನೆಂಬ ಸಂತೋಷವೇನು ಇದನ್ನೆಲ್ಲ ಅವರಬಾಯಿಂದಲೇ ನೀವೊಮ್ಮೆ ಕೇಳಬೇಕು. ಆಗ ಅದರ ನಿಜವಾದ ರುಚಿ ಅನುಭವಕ್ಕೆ ನಿಲುಕುತ್ತದೆ.

ರಾಮೇಗೌಡ್ರ ಬಳಗವೇ ಒಂದಷ್ಟು ಜನ ಇದಾರೆ. ಅಭಿಮಾನ ಅನ್ನಿ, ಕಾಸು ಬೇಕಾದಾಗ ಅನಿವಾರ್ಯತೆಗೆ ಇರಲಿ ಅಂತ ಬೆನ್ನಿಗೆ ಆತುಕೊಂಡಿರುವವರೆನ್ನಿ [ರಾಮೇಗೌಡ್ರು ಕಾಸು ಬಿಚ್ಚುತ್ತಾರೋ ಇಲ್ಲವೋ ಅದು ತಿಳಿದಿಲ್ಲ, ಆದರೂ ಬಾಯಲ್ಲಿ ಪಟಾಕಿ ಹಾರಿಸಿದ್ದಾರಲ್ಲ ಅದನ್ನೇ ಕೇಳಿ ರಾಮೇಗೌಡ್ರು ಜನೋಪಕಾರಿ ಎಂದುಕೊಂಡವರೆಷ್ಟೋ!] ಈ ಬಳಗವೆಲ್ಲ ಟೈರ್ ಟ್ಯೂಬ್ ಇದ್ದವ್ರೇ! ಎಲ್ಲರಲ್ಲೂ ಒಂದೊಂದು ಸೇರಿ ಟೈರಿನ ಅಂಗಡಿಯೇ ಪಾರ್ಕಲ್ಲಿ ಪ್ರಾರಂಭಗೊಂಡಹಾಗೇ ಇರುತ್ತದೆ. ಇವರೆಲ್ಲರ ಕಥೆ ಏನು ಗೊತ್ತೇ ? ರಾತ್ರಿ ಮಲಗಿದಾಗ ಹಲವು ಕೋಳಿಗಳು ಇವರೆಲ್ಲರೊಡನೆ ಅತ್ಮಕಥೆ ಹೇಳಿಕೊಂಡು ಗೋಳಿಡುವುದೇ ಅವರು ಘೀಳಿಡುವುದಕ್ಕೆ ಕಾರಣ. ಅದಕ್ಕೇ ಆದಷ್ಟೂ ಅವುಗಳನ್ನು ಮಟ್ಟಹಾಕುವ ಲೆಕ್ಕದಲ್ಲಿ ಬೇಗ ಜೀರ್ಣಿಸಿ ಕರಗಿಸಿಬಿಟ್ಟರೆ ಆಮೇಲೆ ಅವುಗಳ ಕಥೆ ಕೇಳುವ ತೊಂದರೆ ತಪ್ಪುತ್ತದಲ್ಲಾ ಎಂಬುದು ತುಂಬಿದ ಹಂಬಲ! ಜೊತೆಗೆ ಅಷ್ಟಿಷ್ಟು ಮೊಬೈಲ್ ಬಗ್ಗೆ, ಈ ಮೇಲ್ ಬಗ್ಗೆ ಎಲ್ಲ ಪರಸ್ಪರ ತಿಳುವಳಿಕೆ ಪಡೆಯುವಾ ಅಂತ. ಪಾರ್ಕಿಗೆ ಹಂದಿಗಳಂತೇ ಬಂದವರೇ ಇವರು ನಿಲ್ಲುವುದೇ ಇಲ್ಲ! ಜೋರಾಗಿ ಓಡುವವರು, ನಿಧಾನಕ್ಕೆ ಸ್ಕೂಟರ್ ಬಿಟ್ಟ ಹಾಗೇ ಬ್ಯಾಲೆನ್ಸ್ ಮಾಡಿಕೊಂಡು ಓಡುವವರು, ಯೋಗಾಸನದ ತಪ್ಪು ಭಂಗಿಗಳನ್ನು ತಪತಪತಪನೆ ಹಾಕುವವರು, ಬಸ್ಕಿ ಹೊಡೆಯುವವರು, ನೀರಲ್ಲಿ ನೆನೆದ ನಾಯಿ ತಲೆಯಲ್ಲಾಡಿಸಿದಂತೇ ಮಾಡುವವರು, ಕೈಕಾಲಿನ ಎಲ್ಲಾಬೆರಳು-ಸಂದಿ ಇತ್ಯಾದಿಗಳಲ್ಲಿ ಥರಥರದ ಶಬ್ಢ ಹೊರಡಿಸುವವರು, ನಿಂತಲ್ಲೇ ಸ್ಕೂಲ್ ಕವಾಯತು ಮಾಡಿದ ಹಾಗೇ ಮಾಡುವವರು, ಹಾವು ಬಳುಕಿದ ಹಾಗೇ ಬಳುಕಲು ಪ್ರಯತ್ನಿಸಿ ಬೀಳುವವರು ಹೀಗೇ ಒಂದೇ ಎರಡೇ? ಮರೆಯಲು ಸಾಧ್ಯವಾಗದ ಅಗಾಧ ಅನುಭವ ಸ್ವಾಮೀ!

ಪಡ್ಡೆ ಹೈಕಳು ಮೊಬೈಲಿಂದ ತಮ್ಮ ತಮ್ಮ ಹುಡುಗಿಯರನ್ನು ಬುಕ್ ಮಾಡಿಕೊಂಡು ಬಂದು ಅಲ್ಲಲ್ಲಿ ಸಂದುಗೊಂದುಗಳಲ್ಲಿ ಸರಿಯಾಗಿ ಬೆಳಕು ಬೀಳದ ಭಾಗದಲ್ಲಿ ಕುಳಿತು ತಮಗೆ ಲೋಕವೇ ಗೊತ್ತಿಲ್ಲ ಎನ್ನುವ ಹಾಗೇ ಪರಸ್ಪರ ಅಂಟಿಕೊಂಡು ಆಂಟಿಯರಿಗೆಲ್ಲ ಮುಜುಗರ ಉಂಟುಮಾಡುತ್ತಿದ್ದರು! ಅವರಲ್ಲಿ ಕೆಲವರು ’ಈ ಗುಲಾಬಿಯು ನಿನಗಾಗಿ..’ ಸ್ಟೇಜ್ ನಲ್ಲಿದ್ದರೆ ಇನ್ನು ಕೆಲವರು ’ ಈ ಬಂಧನಾ ಜನುಮ ಜನುಮದಾ...’ ದಲ್ಲಿದ್ದರು, ಸ್ವಲ್ಪಮಟ್ಟಿಗೆ ’ ಈ ಸಮಯ ಆನಂದಮಯ ...’ ಎನ್ನುವ ನಿತ್ಯಾನಂದನ ಶಿಷ್ಯರೂ ಇದ್ದರು! ಅಪರೂಪಕ್ಕೆ ’ನಾನೊಂದು ತೀರ ನೀನೊಂದು ತೀರ...’ ಹಾಡುವ ಪಾಲಕರ ನಿರ್ವಹಣೆಯಲ್ಲಿ ಸಿಕ್ಕು ಬೇರಾಗುವ ರೀತಿಯವರೂ ಇದ್ದರು.

ಹೌದೀಗ ಕೇಳಲು ಮರೆತೇ ಬಿಟ್ಟೆ ನಿಮಗೆಲ್ಲ ಒಟ್ಟೂ ಎಷ್ಟು ಆಂಟಿ-ಅಂಕಲ್ ಗಳು ಇದ್ದಾರೆ? ನಮ್ಮ ಬೆಂಗಳೂರಲ್ಲಿ ಇದಕ್ಕೆ ಕೊರತೆಯೇ ಇಲ್ಲ! ಮನೆಗೆ ಬಾಡಿಗೆಗೆ ಬಂದವರು ಯಜಮಾನನಿಗೆ ’ಅಂಕಲ್’ ಎಂದರೆ ಸ್ಕೂಲ್ ನಲ್ಲಿ ಡ್ಯಾನ್ಸ್ ಕಲಿಸುವ ಮೇಡಂ ಗೆ ಕಲಿಯುತ್ತಿರುವ ಹುಡುಗಿ ’ಆಂಟಿ’ ಎನ್ನುತ್ತಾಳೆ, ಇದೆಲ್ಲಾ ಹೋಗಲಿ ಆಫೀಸುಗಳಿಗೆ ಬಂದ ಪಡ್ಡೆಗಳು ಕೆಲವೊಮ್ಮೆ ಅಂಕಲ್ -ಆಂಟಿ ಎನ್ನುವುದನ್ನು ಮರೆತಿರುವುದಿಲ್ಲ. ಒಬ್ಬಾತ ನನ್ನ ಮಿತ್ರರೊಬ್ಬರಿಗೆ [ಅವರ ಕಚೇರಿಯಲ್ಲಿ ಕೆಲಸಮಾಡುತ್ತಿರುವಾತ ] ’ಅಂಕಲ್’ ಎಂದನಂತೆ, ಅದಕ್ಕೇ ಕೋಪಗೊಂಡ ಅವರು ತಕ್ಷಣ ಆತನ ಲೆಕ್ಕಾಚಾರಮಾಡಿ ಕೆಲಸದಿಂದ ವಜಾಗೊಳಿಸಿದ್ದಾಗಿ ತಿಳಿಸಿದರು.

ಅರ್ಧ ಘಂಟೆ ಕಳೆದಿದ್ದೇ ಗೊತ್ತಾಗಲಿಲ್ಲ ನೋಡಿ. ಅದೇನದು ಸದ್ದು? ಯಾರೋ ನಗುವಂತಿದೆ ? ಅವರೇ ಅಲ್ಲವೇ ನಾನು ನೋಡಿ ನಿಮಗೆ ತಿಳಿಸಿದ ಹೆಂಗಸರು? ಹೌದು. ಅದೇಕೆ ಆ ಥರ ನಗು, ಕೆಟ್ಟನಗು, ಹುಚ್ಚನಗು? ಹೊರಗಡೆ ಎಲ್ಲೂ ನಗದ ಜನ ಪಾರ್ಕಿನಲ್ಲಿ ನಿಮಗೆ ನಕ್ಕು ತೋರಿಸುತ್ತಾರೆ! ನಗುವಿನ ಮಿಮಿಕ್ರಿ ಮಾಡುತ್ತಾರೆ! ’ಮಣ್ಣಿನ ಮಕ್ಕಳ’ಂತೇ ಹುಟ್ಟಿದಾರಭ್ಯ ಇಲ್ಲೀವರೆಗೆ ಅವರ ಮುಖಗಳಲ್ಲಿ ನಗುವಿನ ನರ ಅಲ್ಲಾಡದೇ ಸೀಲ್ ಓಪನ್ ಆಗದ ಬಾಕ್ಸಿನ ಥರ ಇದ್ದುಬಿಡುತ್ತದೆ! ಅಪರೂಪಕ್ಕೆ " ಬಿ.ಪಿ, ಜಾಸ್ತಿಯಾಗಿದೆ, ನೀವು ಸ್ವಲ್ಪ ವ್ಯಾಯಾಮ ಮಾಡಿ, ಸ್ವಲ್ಪ ನಗುವುದನ್ನು ಅಭ್ಯಾಸಮಾಡಿಕೊಳ್ಳಿ " ಎಂದು ವೈದ್ಯರು ಹೇಳಿದ ಮಾರನೇ ದಿನವೇ ಸ್ಟಾರ್ಟ್! ನಗುವ ಹೆಂಗಸರ ಗುಂಪಿಗೆ ಹಲವು ಗಂಡಸರೂ ಬಂದು ಸೇರಿದರು... ಹ್ಹ ಹ್ಹ ಹ್ಹ ಹ್ಹ ಹ್ಹ .....ಜೋರಾಯಿತು ಜೋರಾಯಿತು ಜೋರಾಯಿತು ಅಗೋ ನೋಡಿ ತಾರಕ ಸ್ವರದಲ್ಲಿ ವಿಜೃಂಭಿಸುತ್ತಿದೆ ಹುಚ್ಚು ನಗು..ಕ್ರತ್ರಿಮ ನಗು! ಅಲ್ಲೆಲ್ಲೋ ಅಡ್ಡಾಡುತ್ತಿದ್ದ ಬೀದಿ ನಾಯಿಗಳು ಏನಾಯಿತೆಂದು ತಿಳಿಯದೇ ಕಂಗಾಲು! ಪಾಪ ಕೂಗಿದರೆ ಅವುಗಳ ಪ್ರಾಣಕ್ಕೇ ಸಂಚಕಾರ, ಕೂಗದೇ ಇದ್ದರೆ ಕೂಗಲಾರದ ನಾಯಿಗಳೇ ಇವು ಅಂತ ಯಾರಾದರೂ ತಿಳಿಯುತ್ತಾರೇನೋ.. ನಾಯಿಪಾಡು ..ಡ್ಯೂಟಿ ಮಾಡಲೇಬೇಕು!

ಇನ್ನೇನು ನಾನು ಹೊರಟೆ. ಅನಿತರಲ್ಲಿ ಇಲ್ಲೀವರೆಗೆ ಯಾವತ್ತೂ ಒಂದೇ ಒಂದು ಫರ್ಲಾಂಗೂ ನಡೆದು ಗೊತ್ತಿರದ ಅತಿರಥ ಮಹಾರಥರು ಒಳ್ಳೆಳ್ಳೆಯ ಅಫೀಶಿಯಲ್ ಡೆಸ್ಸು, ಜ್ಯೂಡೋ ಶೂಸ್ ಹಾಕಿಕೊಂಡು ಶ್ರೀಮದ್ಗಾಂಭೀರ್ಯದಿಂದ ನಿಧಾನವಾಗಿ ಬರುತ್ತಿದ್ದರು. ಈಗೀಗ ಪಾರ್ಕಿನ ರಂಗಸ್ಥಳಕ್ಕೆ ಅವರ ಪಾತ್ರಗಳ ಪ್ರವೇಶ! ಭೀಮನ ಥರದವರು, ಕೌರವನ ಮೋರೆಯವರು, ಶಕುನಿ-ದುಶ್ಯಾಸನ ಎಲ್ಲಥರದ ಪರ್ಸನಾಲಿಟಿಯವರೂ ಇದ್ದರು. ಮಹಾಭಾರತವನ್ನು ಮಟ್ಟಸವಾಗಿ ನೋಡಿದ ಅನುಭವ ಕೊಡುವಷ್ಟು ಠಾಕುಠೀಕಾಗಿ ಮುಗುಮ್ಮಾಗಿ ಯುದ್ಧಮುಗಿಸಿ ಜಯಸಿರಿಯನ್ನು ಹೊತ್ತುತಂದ ಯೋಧರಂತೇ ಕಾಣುವವರಿದ್ದರು! ಹೂತ ರಥದ ಗಾಲಿಯನ್ನು ಎತ್ತುತ್ತಿರುವ ಕರ್ಣನಂತೇ ಕಾಣುವ ಬಿದ್ದ ಮೊಬೈಲ್ ಎತ್ತುತ್ತಿರುವವರಿದ್ದರು!

ಹೊರಟೆ ಎಂದುಕೊಳ್ಳುತ್ತಿರುವಾಗಲೇ ಒಂದು ಕಲ್ಲು ಬೆಂಚಿನಲ್ಲಿ ಮಾಸಿದ ಬಟ್ಟೆಯಲ್ಲಿ ಮಲಗಿದ ಉದ್ದ ಗಡ್ಡದ ಮುದುಕನೊಬ್ಬ ಕುರುಕ್ಷೇತ್ರವನ್ನು ನೆನಪಿಗೆ ತಂದ! ಅಲ್ಲೇ " ಕಳ್ಳೇಕಾಯ್ ಕಳ್ಳೇಕಾಯ್ " ಎನ್ನುತ್ತ ಆಗಾಗ ಬೆಕ್ಕು ಮಿಯಾಂವ್ ಮಿಯಾಂವ್ ಎಂದ ಹಾಗೇ ಕೂಗುವಾತ ಕೂತಿದ್ದ! ಕುರುಕ್ಷೇತ್ರದ ಕೈಲಾಗದ ಗಾಯಾಳುಗಳ ರೀತಿ ಕಂಡ! ಸಿನಿಮಾ ನೋಡಿ ಹೊರಬಂದ ಹಾಗಿದ್ದ ನನಗೆ ಏನಪ್ಪಾ ಜಗವೆನ್ನಿಸಿತು. ಜಗ ಸೋಜಿಗ !

ಸಂಪೂರ್ಣ ಕುರುಕ್ಷೇತ್ರ !
" ಕೃಷ್ಣಾ ನನ್ನಿಂದ ಯುದ್ಧ ಸಾಧ್ಯವಿಲ್ಲ, ನೋಡಿದರೆ ಎಲ್ಲರೂ ನನ್ನವರಂತೇ ಕಾಣುತ್ತಾರಪ್ಪಾ! ಬೇಡವೇ ಬೇಡ ನಾನು ಯುದ್ಧ ಬಿಟ್ಟು ತೆರಳುತ್ತೇನೆ " ಎಂದು ಹೊರಹೊರಟಾಗಲೇ ಅನಿಸಿದ್ದು ನಾನೂ ತೂಗಪ್ಪ ಆಗಿಬಿಡಬಹುದೇ? ಆ ಚಕ್ರವ್ಯೂಹವನ್ನು ಬೇಧಿಸಲು ನನ್ನಿಂದ ಸಾಧ್ಯವೇ ?

ಅಶರೀರವಾಣಿ ಮೊಳಗಿತು " ನಾಲಿಗೆ ನಿನ್ನ ಹಿಡಿತಲ್ಲಿಡು ಅರ್ಜುನ, ನಿನ್ನ ಕೆಲಸವನ್ನು ಜಾಸ್ತಿ ಮಾಡು, ಗಾಡಿ ಬಿಟ್ಟು ಭೂಮಿಗೆ ಇಳಿ, ನಾಲಿಗೆ ಬಿಗಿಹಿಡಿ, ನಿನಗೆ ಮಂಗಳವಾಗಲಿ"

" ಧನ್ಯೋಸ್ಮಿ " !

Sunday, July 25, 2010

ಯಾರು ?


ಚಿತ್ರ ಋಣ: ಅಂತರ್ಜಾಲ

ಯಾರು ?


ಸೌರಮಂಡಲದಲ್ಲಿ ಇರುವೆಲ್ಲ ಕಾಯಗಳ
ಗೌರವದಿ ಹಿಡಿದಿಟ್ಟು ನಡೆಸುವುದು ಯಾರು ?
ಪೌರುಷದಿ ಕುಂಟ ಕುರುಡಾದಿ ಹಲವರ ಸೃಜಿಸಿ
ರೌರವದ ನರಕವನು ಉಣಿಸುವರು ಯಾರು ?

ಬುದ್ಧಿಮಾಂದ್ಯರ ತಂದು ಬುದ್ಧಿವಂತರನಡುವೆ
ಇದ್ದುಬಿಡಿ ನೀವೆಂತ ಹುಟ್ಟಿಸುವರಾರು ?
ಎದ್ದೇಳಲಾಗದಾ ಪೋಲಿಯೋ ಹಬ್ಬಿಸುತ
ಒದ್ದಾಟ ಮೂಡಿಸುವ ಆ ಅದುವೆ ಯಾರು ?

ದೇಹದೊಳಗೊಂದೇನೋ ಕಾಣದುದನಿಳಿಬಿಟ್ಟು
ದಾಹ ತಣಿಸಿಕೊ ಎಂದು ಕಳಿಸಿದವರಾರು ?
'ಆಹಾ ಇದು ಏನು ಮಹಾ' ಹಾರಾಟ ಜೋರಾಗೆ
ವಾಹ ವಾ ಬಾ ಎಂದು ಕಿತ್ತವರು ಯಾರು ?

ಅಂಚಿರದ ಆಗಸವ ಕಟ್ಟಿನಿಲ್ಲಿಸುತಲ್ಲಿ
ಕಂಚು-ತಾಮ್ರಗಳನ್ನು ಕೊಟ್ಟವರು ಯಾರು?
ಮಂಚ ಮಾನಿನಿ ಮದ್ಯ ಮಾಂಸಾದಿಗಳ ತುಂಬಿ
ಸಂಚಿನಲಿ ಸಿಲುಕಿಸುತ ಬಂಧಿಸುವರಾರು?

ಬಿರುಗಾಳಿ ನೆರೆಗಳನು ಥರಥರದಿ ತಂದಿಡುತ
ಒರೆಹಚ್ಚಿ ಓರೆಯಲಿ ನೋಡುವುದದಾರು?
ತೆರೆಯೆಳೆದು ಹಲವಕ್ಕೆ ಮರುಮಾತಲೆಕ್ಕಿಸದೆ
ಅರಿವಿಡದೆ ಕರೆದೊಯ್ವ ಅಗೋಚರವಾರು?

ವೈದ್ಯರನು ಕಂಡು ನಸುನಕ್ಕು ತಾ ಮುಸುಕಿನಲಿ
ವೇದ್ಯವಾಗದ ಅವಧಿ ನೀಡುವವರಾರು?
ವಾದ್ಯಮೇಳಗಳಲ್ಲಿ ಖಾದ್ಯ ತೈಲಗಳಲ್ಲಿ
ಬಾಧ್ಯಸ್ಥವಾಗಿರುವ ಅಣುರೂಪವಾರು?

ಬಾಂಬು ಗರ್ನಾಲು ತೋಪು ತಪರಾಕಿಗಳ
ಕಾಂಬಕೈಯಲೆ ಕೊಟ್ಟು ಆಡಿಸುವರಾರು ?
ಸಾಂಬ ನಿನ್ನಯ ರೂಪ ಕಾಣುವೆನು ಕಣಕಣದಿ
ಮಾಂಬರದಿ ಕುಳಿತ ನೀನಲ್ಲದಿನ್ಯಾರು?

----------

ಆತ್ಮೀಯ ಬ೦ಧು, ಪ್ರಣಾಮಗಳು.

ತಮ್ಮ ಮೈಲ್ ಮತ್ತು ಬ್ಲಾಗ್ ಗಳನ್ನು ನೋಡಿದೆ. ಸ೦ತಸವಾಯ್ತು. ತಮ್ಮ ಮೈಲ್ ವಿಳಾಸವನ್ನು ಹಿಡಿದುಇಟ್ಟಿದ್ದೇನೆ. ನನಗೆ ಸಮಯ ಸಿಕ್ಕಾಗ ನನ್ನ ಕೆಲವು ಲೇಖನಗಳನ್ನು ಕಳುಹಿಸುತ್ತೇನೆ. ತಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ. ತಮ್ಮೊ೦ದಿಗೆ ಈ ಮೂಲಕ ಮಾತಾಡಲು ನನಗೆ ಪ್ರೇರೇಪಿಸಿದ್ದು ನಮ್ಮ ಪೂಜ್ಯ ಗುರುಗಳೂ, ನಮ್ಮ ನಾಟಕವನ್ನು ಸಾಗರದಲ್ಲಿ 1959 ರಲ್ಲಿ ನೋಡಿ, ಅನುಗ್ರಹಿಸಿ ತಮ್ಮ ಬ೦ಗಾರದ ಪಾದುಕೆಗಳನ್ನಿತ್ತು ಹರಸಿದ, ಇ೦ದಿಗೂ ನನ್ನೊಳಗೇ ಇದ್ದು ಪ್ರತಿ ನಿಮಿಷವೂ ನಮ್ಮನ್ನೆಲ್ಲಾ ಹರಸುತ್ತಿರುವ ಶ್ರೀ ಶ್ರೀಧರಸ್ವಾಮಿಗಳ ಭಾವಚಿತ್ರ. ನಿಮಗೆಲ್ಲಾ ಶುಭವಾಗಲಿ. ವ೦ದನೆಗಳು.

ಎ೦ದೂನಿಮ್ಮವ,.

ಮಾಸ್ಟರ್ ಹಿರಣ್ಣಯ್ಯ.

-----ಮಾನ್ಯ ಮಿತ್ರರೇ, ಇವತ್ತು ' ನಿಮ್ಮೊಡನೆ.....' ಬ್ಲಾಗಿಗೆ ಹಿರಿಯರಾದ ಮಾಸ್ಟರ್ ಹಿರಣ್ಣಯ್ಯ ಬಂದು, ಗುರು ಶ್ರೀಧರರ ಬಗ್ಗೆ ಓದಿದ್ದು, ಶ್ರೀಗಳ ಬಗೆಗಿನ ಅವರ ಸ್ವಂತದ ಅನಿಸಿಕೆಗಳನ್ನು ನನ್ನೊಡನೆ ಮೇಲ್ ಮುಖಾಂತರ ಹಂಚಿಕೊಂಡಿದ್ದಾರೆ, ಜ್ಞಾನಿಗಳಾದ- ಪಕ್ವ ಮನದವರಾದ ಶ್ರೀಯುತರನ್ನು ಬ್ಲಾಗಿಗೆ ಹೃತ್ಪೂರ್ವಕವಾಗಿ ಸ್ವಾಗತಿಸಿದ್ದೇನೆ ಮತ್ತು ಧನ್ಯತೆಗಳನ್ನು ಅರ್ಪಿಸಿದ್ದೇನೆ. ಸಮಾಜವನ್ನು ಸುಧಾರಿಸುವ ಕೆಲಸವನ್ನು ನಾಟಕಗಳ ಮುಖಾಂತರ ಮಾಡಲು ಸಾಧ್ಯ ಎಂಬುದನ್ನು ಶ್ರೀಯುತರು ತೋರಿಸಿಕೊಟ್ಟ ಬಗ್ಗೆ ಋಜುಮಾರ್ಗದವರಾದ ತಮಗೆಲ್ಲ ಹೊಸದಾಗಿ ಹೇಳಬೇಕಿಲ್ಲ. ಅವರ ಆಪ್ತ ನುಡಿಗಳು ನನ್ನ ಮನಸ್ಸನ್ನು ತುಂಬಾ ಸೆಳೆದವು. ಅವರು ನೂರ್ಕಾಲ ನಮ್ಮೊಡನಿರಲಿ ಮತ್ತು ನಮಗೆಲ್ಲ ಮಾರ್ಗದರ್ಶಕರಾಗಿರಲಿ ಎಂದು ಹಾರೈಸುತ್ತೇನೆ.

Saturday, July 24, 2010

|| ಗುರು ಬುದ್ಧಿ ವಿಶೇಷತಃ ||


|| ಗುರು ಬುದ್ಧಿ ವಿಶೇಷತಃ ||

ಜಗತ್ತಿನಲ್ಲಿ ಎಲ್ಲರ ಬುದ್ಧಿಗಿಂತ ಗುರುಬುದ್ಧಿ ವಿಶೇಷ ಎಂದು ಪ್ರಮಾಣೀಕೃತವಾಗಿದೆ! ಇದು ಇಂದಿನ ನಮ್ಮ ವಿಜ್ಞಾನಕ್ಕೂ ಸವಾಲೊಡ್ಡಿ ಜಯಿಸಬಹುದಾದ ವಿಷಯ! ಸದ್ಗುರುವೊಬ್ಬ ಕೇವಲ ತನ್ನ ತಪೋಬಲದಿಂದ ಕುಳಿತಲ್ಲೇ ಎಲ್ಲವನ್ನೂ ಗಳಿಸಬಲ್ಲ. ಎಲ್ಲಾ ಜ್ಞಾನ, ಭಾಷೆ, ಪರಿಕರ ಏನು ಬೇಕು ಹೇಳಿ ಅದನ್ನೆಲ್ಲವನ್ನೂ ಪಡೆಯಬಲ್ಲ ಯೋಗಸಿದ್ಧಿ ಗುರುವಿಗೆ ಸಾಧ್ಯ. ಹಾಗಂತ ಎಲ್ಲಾ ಗುರುವಿಗೂ ಅದು ಧಕ್ಕಲೇ ಬೇಕೆಂತಿಲ್ಲ ಅಥವಾ ಧಕ್ಕಿದವರೆಲ್ಲ ಅದನ್ನು ಪ್ರಯೋಗಿಸಿ ತೋರಿಸಬೇಕೆಂದಿಲ್ಲ.

ತನಗಾಗಿ ಪರಿತಪಿಸದ, ತನ್ನ ಹೊಟ್ಟೆಬಟ್ಟೆಯ ಹಾಗೂ ತನ್ನ ಸ್ವಾಸ್ಥ್ಯದ ಚಿಂತೆಯನ್ನು ಮರೆತು ಕೇವಲ ಆತ್ಮೋನ್ನತಿ ಬಯಸಿ, ಮೋಕ್ಷ ಬಯಸಿ ತಪಸ್ಸನ್ನಾಚರಿಸುವ ಯತಿಗೆ ಗುರುವೆನ್ನುತ್ತಾರೆ. ಸದ್ಗುರುವಾದವನು ’ನಾನು’ ಎಂಬ ಅನಿಸಿಕೆ ತೊರೆದು ’ನಾವು’ ಎಂಬ ಹಂತವನ್ನು ತಲ್ಪಿ ತನ್ನ ಆತ್ಮೋದ್ಧಾರದ ಜೊತೆಗೆ ನಂಬಿಬಂದ ಶಿಷ್ಯಗಣದ ಉದ್ಧಾರವನ್ನು ಬಯಸುತ್ತಾನೆ. ಇಂತಹ ಸಾಧನೆಯ ಮಾರ್ಗ ಬಲು ದುರ್ಗಮ, ಬಹಳ ಕಠಿಣ. ಎಲ್ಲಕ್ಕಿಂತ ಹೆಚ್ಚಾಗಿ ಇಂದಿನ ಈ ದಿನಗಳಲ್ಲಿ ಸಿಗುವ ಕಣ್ಣಿಗೆ ರಾಚುವ ಹಲವು ಐಹಿಕ ಸುಖೋಪಭೋಗಗಳನ್ನು ತ್ಯಜಿಸಿ ಏಕನಿಷ್ಠೆಯಿಂದ ಇಂದ್ರಿಯನಿಗ್ರಹಮಾಡಿ ಸಾಧನೆಮಾಡುವುದು ವಜ್ರಾದಪಿ ಕಠೋರ! ಹಿಂದಿನ ಕಾಲದಲ್ಲಿ ಸರಿಸುಮಾರು ೧೯ ನೇ ಶತಮಾನಕ್ಕೂ ಮುಂಚೆ ಕೊನೇಪಕ್ಷ ಸರಿಯಾದ ಶಿಷ್ಯಂದಿರಾದರೂ ಸಿಗುತ್ತಿದ್ದರು, ಈಗ ನಿಜವಾದ ಸನ್ಯಾಸಿಗಳಿಗೆ ಶಿಷ್ಯರು ಸಿಗುವುದು ದುರ್ಲಭ, ಅದೇ ಢಾಂಬಿಕರಿಗೆ ಬಹಳಜನ ಸಿಗುತ್ತಾರೆ!

ಗುರುಪೂರ್ಣಿಮೆ ಮತ್ತು ಚಾತುರ್ಮಾಸ್ಯ ವೃತ

ಆಷಾಢ ಮಾಸದ ಹುಣ್ಣಿಮೆಯನ್ನು ಗುರುಪೂರ್ಣಿಮೆ ಎಂದು ಪ್ರಾಜ್ಞರು ಗುರುತಿಸಿದ್ದಾರೆ. ಈ ಹುಣ್ಣಿಮೆಯ ದಿನ ಗುರುವನ್ನು ನೆನೆಯುವುದರಿಂದ, ದರ್ಶಿಸುವುದರಿಂದ, ತೀರ್ಥ-ಮಂತ್ರಾಕ್ಷತೆಗಳನ್ನು ಪಡೆಯುವುದರಿಂದ ವಿಷಿಷ್ಟ ಅನುಭೂತಿ ಉಂಟಾಗುವುದು ಹಲವರ ಅನುಭವಕ್ಕೆ ನಿಲುಕಿದ ವಿಷಯ. ನಮಗೆ ವಿದ್ಯೆ ಕಲಿಸಿದ, ಬುದ್ಧಿ ಹೇಳಿದ, ತಿದ್ದಿಬರೆಸಿದ, ಗುದ್ದು ಕೊಟ್ಟು ಒಂದು ಮನುಷ್ಯರೂಪಕ್ಕೆ ತಂದ ಗುರುವಿಗಲ್ಲದೇ ನಮ್ಮೊಳಗಿನ ನಮ್ಮಾತ್ಮಕ್ಕೆ ಪರದ ತತ್ವವನ್ನು ಪರಿಚಯಿಸುವ, ಆ ಮೂಲಕ ಆತ್ಮಕ್ಕೆ ಉತ್ತಮ ಸಂಸ್ಕಾರ ಕೊಡುವ ಗುರುಗಳೆಲ್ಲರನ್ನೂ ನೆನಪುಮಾಡಿಕೊಂಡು ಅವರ ಪಾದಾರವಿಂದಗಳಿಗೆ ಶಿರಸಾ ವಂದಿಸುವ ದಿನವೇ ಗುರುಪೂರ್ಣಿಮೆ. ಗುರುವಿನ ಮೂಲವನ್ನು ಹುಡುಕಿದರೆ ಅದು ಪರೋಕ್ಷ ಆದಿನಾರಾಯಣ ಅಂದರೆ ಮಹಾವಿಷ್ಣುವನ್ನೇ ಪುನಃ ಸೇರುತ್ತದೆ. ಯಾವ ಪರಂಪರಾ ಶ್ಲೋಕವನ್ನೇ ತೆಗೆದುಕೊಂಡರೂ ಮೂಲದಲ್ಲಿ ಆ ಶ್ಲೋಕ ನಾರಾಯಣನ ಕುರಿತೇ ಪ್ರಾರಂಭವಾಗುತ್ತದೆ.

ಭಗವಂತ ತನ್ನ ಭಕ್ತರ ಒಳಿತಿಗಾಗಿ, ಅವನಾಡುವ ನಾಟಕದ ಪಾತ್ರಧಾರಿಗಳಿಗೆ ಪರೋಕ್ಷ ಸಹಕರಿಸಲಾಗಿ, ಹಾರಾಡುವ ಮತಿಗೆಟ್ಟ ಜನರ-ರಕ್ಕಸ ಸಂಸ್ಕೃತಿಯ ದಮನಕ್ಕಾಗಿ ಆಗಾಗ ಬೇರೆಬೇರೆ ರೂಪದಲ್ಲಿ ಅವತರಿಸುತ್ತಾನೆ ಎಂಬುದನ್ನು ಅವನೇ ಗೀತೆಯಲ್ಲಿ ಹೇಳಿದ್ದಾನಲ್ಲವೇ ? ಈ ಅವತಾರಗಳಲ್ಲಿ ಪೂರ್ಣಾವತಾರ, ಅಂಶಾವತಾರ, ಅಂಶಾಂಶಾವತಾರ ಎಂಬ ಕೆಲವು ಭೇದಗಳಿವೆ. ಉದಾಹರಣೆಗೆ ವರಾಹ, ನಾರಸಿಂಹ, ರಾಮ, ಕೃಷ್ಣ ಇವೆಲ್ಲ ಪೂರ್ಣಾವತಾಗಳಾದರೆ ತಿರುಪತಿ ಶ್ರೀನಿವಾಸ, ದತ್ತಾತ್ರೇಯ, ಅಯಪ್ಪ ಇವುಗಳೆಲ್ಲಾ ಅಂಶಾವತಾರಗಳು. ವ್ಯಾಸ, ಪರಾಶರ, ಶಂಕರ, ರಾಮಾನುಜ, ಮಧ್ವ ಈ ಥರದವೆಲ್ಲಾ ಅಂಶಾಂಶಾವತಾರಗಳೆಂದರೆ ತಪ್ಪೇನಿಲ್ಲ. ಹೀಗೇ ಹಲವು ಸ್ತರಗಳಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ಗೋಚರಿಸುವ ಈ ಗುರುಪರಂಪರೆಗಳಲ್ಲಿ ಏರುತ್ತಾ ಏರುತ್ತಾ ಹಿಂದಕ್ಕೆ ಹೋದರೆ ಕಾಣುವುದು ಶ್ರೀಮನ್ನಾರಾಯಣ ಸ್ವರೂಪ! ನನಗೊಬ್ಬ ಗುರು, ಆ ಗುರುವಿಗೆ ಇನ್ನೊಬ್ಬ ಗುರು, ಅವರ ಗುರುವಿಗೆ ಮತ್ತೊಬ್ಬ ಗುರು ಹೀಗೇ ಸ್ತರಗಳು ಮೇಲೆ ಹೋಗುತ್ತವೆ. ಒಟ್ಟಿನಲ್ಲಿ ಇಡೀ ಗುರುಸಂಕುಲವನ್ನೇ ಧ್ಯಾನಾವಾಹನಾದಿ ಪೂಜೆ ನಡೆಸಿ ಒಮ್ಮೆ ಅವರ ಋಣ ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಈ ಗುರುಪೂಜೆಯನ್ನು ಆಯಾಯ ಧರ್ಮಗಳವರು ಅವರವರ ಧರ್ಮಾನುಸಾರ ನೆರವೇರಿಸಬಹುದು.

ಮಳೆಗಾಲದಲ್ಲಿ ಮುಂಗಾರಿನ ಮಳೆಯ ಸೇಚನಕ್ಕೆ ಭೂಮಿ ನೆನೆದಾಗ ಅಲ್ಲಿ ಹಲವು ಥರದ ಕ್ರಿಮಿಕೀಟಗಳು ಹುಟ್ಟಿಕೊಂಡು ಭೂಮಿಯ ಮೇಲ್ಪದರದಲ್ಲಿ ನೆಲೆಗೊಳ್ಳುತ್ತವೆ. ಕಪ್ಪೆಮರಿಗಳು, ಏಡಿಮರಿಗಳು, ಎರೆಹುಳುಗಳು, ಶತಪದಿ, ಸಹಸ್ರಪದಿ, ಚೇಳು, ಪಡಚೇಹುಳು, ಶಂಖದ ಹುಳು, ಬಸವನಹುಳು .....ಹೀಗೇ ಒಂದೆರಡಲ್ಲ ಅನೇಕ ಸಹಸ್ರಥರದ ಪ್ರಭೇದಗಳನ್ನು ಹೊಂದಿರುವ ಕೀಟಕುಟುಂಬಗಳ ಸಂತಾನವೃದ್ಧಿ ಈ ಕಾಲಘಟ್ಟದಲ್ಲಿ ಜಾಸ್ತಿ. ಇಂತಹ ಸಂದರ್ಭದಲ್ಲಿ ಅಹಿಂಸೆಯನ್ನು ಬೋಧಿಸುವ-ಪ್ರತಿಪಾದಿಸುವ ಸನ್ಯಾಸಿಗಳು ಓಡಾಡಿದರೆ ತಾನು ಎಲ್ಲಿ ಅವುಗಳ ಜೀವಕ್ಕೆ ಕುತ್ತು ತರಬೇಕಾಗುತ್ತದೋ ಎಂಬ ಅನಿಸಿಕೆಯಿಂದ ಒಂದು ಸರಿಯಾದ ತಪೋಯೋಗ್ಯ ಜಾಗ ಹುಡುಕಿ ಅಲ್ಲಿ ನಾಲ್ಕು ಮಾಸಗಳು ಅಥವಾ ನಾಲ್ಕು ಪಕ್ಷಗಳ ಪರ್ಯಂತ ತಪಸ್ಸಿನಲ್ಲಿ ಮಗ್ನರಗುತ್ತಾರೆ. ಒಂದೇ ಕಡೆ ಅವರು ಹಾಗೆ ಮೊಕ್ಕಾಂ ಹೂಡಿರುವ ವೇಳೆ ಬೇರೆ ಬೇರೆ ಸ್ಥಳಗಳ ಶಿಷ್ಯರು ಗುರುವನ್ನು ಕಾಣಲೂ ಸಾಧ್ಯವಾಗುತ್ತದೆ. ಹೀಗಾಗಿ ವ್ಯಾಸಮಹರ್ಷಿಯನ್ನೂ ತಮ್ಮ ಗುರುಸಂಕುಲವನ್ನೂ ಅರ್ಘ್ಯ-ಪಾದ್ಯಾದಿ ಶೋಡಷೋಪಚಾರದಿಂದಲೂ ನೈವೇದ್ಯವೇ ಮೊದಲಾದ ವಿಶೇಷ ಉಪಚಾರಗಳಿಂದಲೂ ಅರ್ಚಿಸಿ, ಪೂಜಿಸಿ ತಾವು ಕೈಗೊಳ್ಳುವ ದೀರ್ಘ ತಪಸ್ಸಿಗೆ ಅನುಕೂಲವಿರುವಂತೆಯೂ ತಮ್ಮಿಂದ ಶಿಷ್ಯಗಣದ ಉದ್ಧಾರಕ್ಕೆ ಅನುಕೂಲವಾಗಲೆಂದೂ ಪ್ರಾರ್ಥಿಸುತ್ತಾರೆ. ಹೀಗೆ ಪೂಜಿಸಿದ ವೃತದ ಆದಿಭಾಗದಲ್ಲಿ ಆ ದಿನದ ಜಪತಪಗಳನ್ನು ಪೂರೈಸಿ ಹೊರಬಂದು ನೆರೆದ ಶಿಷ್ಯರಿಗೆ ಅಭಿಮಂತ್ರಿಸಿದ ಅಕ್ಷತೆಗಳನ್ನು ಎರಚುವುದು ಅಥವಾ ಕೊಡುವುದು ಸಂಪ್ರದಾಯ. ಹಾಗೆ ಗುರುವು ಕೊಡುವ ಆ ಮಂತ್ರಾಕ್ಷತೆ ಎಂದಿಗಿಂತ ಹೆಚ್ಚಿನ ಶಕ್ತಿಯನ್ನು ಹೊಂದಿದ್ದಾಗಿರುತ್ತದೆ ಮತ್ತು ಅದಕ್ಕೆ ವ್ಯಾಸಮಂತ್ರಾಕ್ಷತೆ ಎಂದೇ ಕರೆಯುತ್ತಾರೆ. ಹೇಗೆ ದೊಡ್ಡ ಆಯಸ್ಕಾಂತದ ಪ್ರಭಾವ ಜಾಸ್ತಿ ಇರುತ್ತದೋ ಹಾಗೇ ಉಳಿದ ದಿನ ಸಣ್ಣ ಆಯಸ್ಕಾಂತವಾದರೆ ಗುರುಪೂರ್ಣಿಮೆಯ ದಿನ ಅತೀದೊಡ್ಡ ಆಯಸ್ಕಾಂತದ ಬಲ ಈ ಆಶೀರ್ವಾದಕ್ಕಿದೆ ಎಂಬುದು ಅನುಭವಿಕರ ಮಾತು.

ಈ ಸುಸಂದರ್ಭ ಒಂದು ಕಥೆ ಹೇಳುತ್ತೇನೆ ಕೇಳಿ- ಶ್ರೀ ಶಂಕರರು ತಿರುಗುತ್ತ ತಿರುಗುತ್ತ ಹಿಮಾಲಯದ ತಪ್ಪಲಿನ ಗುಹೆಯೊಂದರಲ್ಲಿ ತನಗೆ ಬೇಕಾದ ಆಧ್ಯಾತ್ಮಿಕ ಗುರುವನ್ನು ಕಾಣುತ್ತಾರೆ. ಹಾಗೆ ಕಂಡಿದ್ದು ಕೇವಲ ಯೋಗ ದೃಷ್ಟಿಯಿಂದಲೇ ಹೊರತು ನೇರವಾದ ದರ್ಶನ ಅವರಿಗಿನ್ನೂ ಆಗಿರುವುದಿಲ್ಲ. ಶಂಕರರು ಕಾಯುತ್ತಾ ಕಾಯುತ್ತಾ ಬಹಳ ಸಮಯವಾಗುತ್ತದೆ. ಆದರೆ ಗುಹೆಯಲ್ಲಿ ಇರುವ ಆ ಗುರುಗಳು ಸಮಾಧಿ ಸ್ಥಿತಿಯಲ್ಲಿದ್ದಾರೆ. ಅವರನ್ನು ಜಾಗ್ರತಸ್ಥಿತಿಗೆ ತಂದರೆ ಕೋಪಬರಲೂ ಬಹುದು ಅಥವಾ ಹಾಗೆ ತಪೋಭಂಗ ಮಾಡಿದ ಪಾಪ ಬರಬಹುದೆಂಬ ಅನಿಸಿಕೆಯಿಂದ ಕೇವಲ ಯೋಗ ಮಾರ್ಗದಿಂದಲೇ ಅವರ ಆತ್ಮವನ್ನು ಸಂಧಿಸಿ ತಾನು ಬಂದಿದ್ದೇನೆ ಎನ್ನುತ್ತಾರೆ. ಆಗ ಎಚ್ಚೆತ್ತ ಗುರುಗಳು ಕೇವಲ ತನ್ನ ಕಾಲು ಪಾದಗಳನ್ನು ಮಾತ್ರ ಹೊರಗೆ ಕಾಣಿಸಿ ಮಿಕ್ಕಿದ ಶರೀರಭಾಗದ ದರ್ಶನ ಕೊಡದಂತೇ ಇರುತ್ತಾರೆ. ಮತ್ತು ಕೇಳುತ್ತಾರೆ " ನೀನು ಬಂದೆ ಅಂದೆಯಲ್ಲ, ಯಾರು ನೀನು ? " " ನಾವು ಬಂದಿದ್ದೇವೆ " ಶಂಕರರು ಹೀಗೆ ಹೇಳುವವರೆಗೂ ಅವರು ಹಾಗೇ ಬರೇ ಪಾದಗಳನ್ನು ಮಾತ್ರ ತೋರಿಸಿದರಂತೆ. ಆ ಗುರುಗಳೇ ಗುರು ಗೋವಿಂದ ಭಗವತ್ಪಾದರು. ಆಗ ಶಂಕರರ ಬಾಯಿಂದ ಹುಟ್ಟಿದ್ದು ’ಗೋವಿಂದಾಷ್ಟಕಮ್’ ಅಷ್ಟಕ ಸ್ತೋತ್ರ! ಹೀಗೇ ಗುರುವನ್ನು ಕಾದು ನೋಡಬೇಕೆಂಬುದು ಪ್ರತೀತಿ.

ಇತ್ತೀಚಿನ ಇಂತಹ ಒಂದು ಗುರುವೆಂದರೆ ಬ್ರಹ್ಮೈಕ್ಯ ಶ್ರೀ ಶ್ರೀಧರ ಸ್ವಾಮಿಗಳು. ಕರ್ನಾಟಕದ ಗಡಿಭಾಗದಲ್ಲಿ ಗುಲಬರ್ಗಾದ ಲಾಡ್ ಚಿಂಚೋಳಿಯಲ್ಲಿ ಜನಿಸಿದ ದತ್ತಾತ್ರೇಯನ ಅವತಾರವಾದ ಶ್ರೀ ಭಗವಾನರು ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತಜನರನ್ನು ಉದ್ಧರಿಸಿದ್ದಾರೆ. ಯಾವುದೇ ಪವಾಡಗಳನ್ನು ಅವರೌ ಮಾಡುತ್ತಿರಲಿಲ್ಲ, ಬದಲಾಗಿ ಅವರ ಉಪಸ್ಥಿತಿಯಿದ್ದಲ್ಲಿ ಹಲವು ಪವಾಡಗಳು ನಡೆಯುತ್ತಿದ್ದವು. ಒಮ್ಮೆ ಹೀಗಾಯಿತು ಅತೀ ಬಡವನೊಬ್ಬ ಶ್ರೀಗಳಲ್ಲಿ ಬೇಡಿದ "ಸ್ವಾಮೀ ನಾನೊಬ್ಬ ಬಡವ, ನನ್ನಲ್ಲಿ ಕೊಡಲು ಏನೂ ಇಲ್ಲ, ತಾವು ಒಮ್ಮೆ ನಮ್ಮನೆಗೆ ಬಂದು ತಮ್ಮ ಪಾದಧೂಳಿಯಿಂದ ನಮ್ಮನ್ನು ಪುನೀತರನ್ನಾಗಿ ಮಾಡ್ಬೇಕು. " ತಮಾಷೆಗಾಗಿ ಗುರುಗಳು " ಆಯ್ತಪ್ಪಾ ನೀನು ಹೋಗಿ ಬಯಲಿನಲ್ಲಿರುವ ಧೂಳನ್ನು ತಂದು ನಿಮ್ಮನೆಯ ನೆಲದಮೇಲೆಲ್ಲಾ ಚೆಲ್ಲು, ನಾನು ನಡೆದು ಹೋದಾಗ ಅಲ್ಲಿ ನನ್ನ ಪಾದ ಸೋಕುವುದರಿಂದ ಅದು ನನ್ನ ಪಾದಧೂಳಿಯೇ ಆಯಿತಲ್ಲ ಇನ್ನೇನು ಆಗದೇ ? " ಎಂದರಂತೆ. ಶ್ರದ್ಧೆಯಿಂದ ಮರುಮಾತನಾಡದ ಆ ಶಿಷ್ಯ ಗುರುಗಳು ಹೇಳಿದ ಹಾಗೇ ಮಾಡಿದ್ದು ಗುರುಗಳನ್ನು ಕರೆದೊಯ್ಯಲು ಬಂದ. ಗುರುಗಳಿಗೆ ಬಹಳ ಕನಿಕರ ಮೂಡಿಬಿಟ್ಟಿತು. ತಕ್ಷಣಕ್ಕೆ ಗುರುಗಳು ಹೊರಟು ಆತನ ಮನೆಗೆ ಬಂದು ಆತನಿಗೆ ಹೇಳಿದಂತೇ ಮನೆಯ ತುಂಬೆಲ್ಲ ನಡೆದಾಡಿದರು. ಅವರು ಹೋದಲ್ಲೆಲ್ಲಾ ಬಂಗಾರದ ನಾಣ್ಯಗಳು ಕಾಣಿಸಿಕೊಂಡವು ! ಅವುಗಳನ್ನೆತ್ತಿ ಗುರುಗಳ ಪಾದಕ್ಕೆ ತುಲಸೀ ಸಮೇತ ಅರ್ಚಿಸಿದ ಆ ಭಕ್ತ. ಆತನ ನಿರ್ವಿಣ್ಣಭಾವ ನೋಡಿದ ಗುರುಗಳು " ಬದುಕು ಪೂರ್ತಿ ನಿನಗಿದು ಸಾಕು" ಎಂದು ಎಲ್ಲಾ ಬಂಗಾರದ ನಾಣ್ಯಗಳನ್ನೂ ಅವನ ಕೈಗೆ ಹಾಕಿ, ತಲೆಯಮೇಲೆ ಅಭಯ ಹಸ್ತವನ್ನಿಟ್ಟು ಹರಸಿದರು. ಅಂದಿನಿಂದ ಆತನಿಗೆ ಯಾವುದೇ ಬಡತನದ ಭವಣೆ ಕಾಡಲಿಲ್ಲ.

ಇದು ಕೇಳಲು ಕಥೆ ಎನಿಸಿದರೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಪುರದ ಶ್ರೀ ಶ್ರೀಧರಾಶ್ರಮದಲ್ಲಿ ಇದರ ದಿನಾಂಕ ಮತ್ತು ಭಕ್ತ ವ್ಯಕ್ತಿ ಯಾರಗಿದ್ದ ಎಂಬ ದಾಖಲೆ ಸಹಿತ ಸಿಗುತ್ತದೆ! ಇಂತಹ ಹಲವು ಸಾವಿರ ಘಟನೆಗಳು ಶ್ರೀಧರರ ಅವತಾರದಲ್ಲಿ ನಡೆದವು. ಅದಕ್ಕೇ ಅವರನ್ನು ಜನ ’ಭಗವಾನ್’ ಎಂದರು, ’ಅಘಟಿತ ಘಟನಾ ಅದ್ಬುತ ಶಕ್ತಿ’ ಎಂದರು. ಇಂತಹ ಗುರುವನ್ನು ಪಡೆಯಲು ಯೋಗ ಬೇಕು. ಇದು ಎಲ್ಲರಿಗೂ ಲಭ್ಯವಲ್ಲ. ಇಂದಿನ ನಮ್ಮ ಜಂಜಾಟಗಳಲ್ಲಿ ಸಿಲುಕಿಕೊಂಡು ನಮ್ಮ ಮೂಲಸ್ವರೂಪವನ್ನೇ ಮರೆತ ನಾವು ಚಕ್ರವ್ಯೂಹದ ಅಭಿಮನ್ಯುವಿನ ರೀತಿ ಆಗಿಬಿಟ್ಟಿದ್ದೇವೆ. ಹುಟ್ಟು-ಸಾವು ಎಂಬ ಈ ಜೀವನ ಚಕ್ರದಿಂದ ಹೊರಬರಲು ಅದಕ್ಕಿರುವ ಮಾರ್ಗವೊಂದೇ ಅದು ಗುರುವನ್ನು ಮೊರೆಹೋಗುವುದು! ಅವರ ದರ್ಶನ, ಪಾದಸ್ಪರ್ಶನದಿಂದ ಮಾತ್ರ, ಅವರ ಕೃಪೆಯಿಂದ ಮಾತ್ರ ಶೀಘ್ರಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ನಮ್ಮಲ್ಲಿನ ಗಾದೆ ಹೀಗಿದೆ -’ಹರ ಮುನಿದರೂ ಗುರು ಕಾಯುತ್ತಾನೆ’ ಎಂದು. ಮನೆಯಲ್ಲಿ ಚಿಕ್ಕವರಿರುವಾಗ ಅಪ್ಪ ಮುನಿಸಿಕೊಂಡರೆ ಅಮ್ಮನ ಸೆರಗಿನ ಹಿಂದೋ ಕಾಲಹಿಂದೋ ನಿಂತು ಅಮ್ಮನ ಮುಖೇನ ಅಪ್ಪನ ಸಿಟ್ಟನ್ನು ಶಮನಗೊಳಿಸುತ್ತಿದ್ದೆವು. ಅದೇ ರೀತಿ ಹರನಿಗೇ ಅಂದರೆ ದೇವರಿಗೇ ಕೋಪಬಂದು ನಿನ್ನನ್ನು ತರಿದುಬಿಡುತ್ತೇನೆ ಎಂತ ಬಂದರೂ ರಾಮನಿಗೆ ಹನುಮ ತೋರಿದಂತೆ ಕೇವಲ ದೇವರ ನಾಮಬಲದಿಂದ ದೇವರನ್ನೇ ಮಂತ್ರಮುಗ್ಧಗೊಳಿಸಿ ತನ್ಮೂಲಕ ನಮ್ಮನ್ನು ಕಾಪಾಡುವ, ಸನ್ಮಾರ್ಗ ಬೋಧಿಸಿ ನಮ್ಮನ್ನು ಉದ್ಧರಿಸುವ ಸ್ಥಾನವೊಂದಿದ್ದರೆ ಅದು ’ಗುರು’ ಮಾತ್ರ. ಅಮ್ಮನ ಪ್ರೀತಿ, ಅಪ್ಪನ ವಾತ್ಸಲ್ಯ, ಸ್ನೇಹಿತನ ಹೆಗಲು, ಅಕ್ಕ-ತಂಗಿ-ಅಣ್ಣ-ತಮ್ಮ ಈ ಎಲ್ಲರ ಆಪ್ತತೆ ತೋರುವ ಸಕಲವೂ ಆಗಿ ಸಂಭಾಳಿಸುವ, ಸಂತೈಸುವ, ಆಲಿಸುವ, ಲಾಲಿಹಾಡುವ, ರಮಿಸುವ, ಎತ್ತಿ ಮುದ್ದಾಡುವ ಪರಾತ್ಪರ ಶಕ್ತಿಯಾದ ಇಂತಹ ಗುರುವನ್ನು ಸ್ಮರಿಸಲು ಬೇರೆ ಹಲವು ಲೌಕಿಕ ಕಾರಣಗಳು ಬೇಕಿಲ್ಲ. ಇಂತಹ ಗುರುರೂಪವನ್ನು ನೆನೆಯೋಣವೇ ?

ನೆನೆವೆ ಶ್ರೀಧರ ಸತತ ಗುರುವರ
ನಿನ್ನ ಅಡಿದಾವರೆಗಳ
ಮನವನಣಿಗೊಳಿಸುತ್ತ ಭವಹರ
ಕನವರಿಸುವೇ ಪದಗಳ

ದೇಗಲೂರಲಿ ಹುಟ್ಟಿಬೆಳೆಯುತ ದೇಗುಲವೆ ನೀನಾಗಿಹೆ
ಸಾಗಿ ದೂರದಿ ಉತ್ತರದಿ ನಿನ್ನ ಪಾದಪದ್ಮವನೂರಿದೆ
ಯಾಗಯಜ್ಞದ ತಿರುಳ ಅರುಹಿದೆ ಮಾರ್ದನಿಸಿ ಜನಕೂಗಿರೆ
ಸಾಗರದ ಪ್ರಾಂತದಲಿ ನೆಲೆಸಿದ ಯೋಗಿ ನಿನ್ನನು ಭಜಿಸುವೆ

ದತ್ತರೂಪನೆ ಕಮಲಾ ತನಯನೆ ವಿಮಲ ಕೋಮಲ ನೇತ್ರನೆ
ನೆತ್ತಿನೇವರಿಸುತ್ತ ಹರಸಿದೆ ಭಕ್ತಜನರನುರಾಗನೆ
ಒತ್ತಿ ಬೆರಳನು ಹರಿಸಿ ತೀರ್ಥವ ಕೊಟ್ಟೆ ನೀನೌಷಧವನು
ಎತ್ತುವೆನು ಮಂಗಳದ ಆರತಿ ಸೃಷ್ಟಿಗೊಡೆಯನೆ ನಮಿಪೆನು
----


ಬೀಜಸ್ಯಾಂತರಿವಾಂಕುರೋ ಜಗದಿದಂ ಪ್ರಾಙ್ ನಿರ್ವಿಕಲ್ಪಂ ಪುನಃ
ಮಾಯಾಕಲ್ಪಿತ-ದೇಶಕಾಲಕಲನಾ-ವೈಚಿತ್ರ್ಯ-ಚಿತ್ರೀಕೃತಂ|
ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ ||


ಸದಾಶಿವಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||

Friday, July 23, 2010

’ಮಳೆಗಾಲದ ಒಂದು ದಿನ’


’ಮಳೆಗಾಲದ ಒಂದು ದಿನ’

ಬಹಳ ಜನ ಸೇರಿದ್ದರೂ ಮೊದಮೊದಲು ಯಾಕೆಂಬುದು ತಿಳಿಯಲಿಲ್ಲ. ನಂತರ ನನ್ನನ್ನು ಅಜ್ಜಿ-ಅಮ್ಮ ಆಗಾಗ ತಮ್ಮ ತೊಡೆಯ ಮೇಲೆ ಮಲಗಿಸಿಕೊಂಡು " ಹುಷಾರಾಗುತ್ತದೆ ಹೆದರಬೇಡ" ಎನ್ನುವಾಗಲೇ ಏನೋ ಅನುಮಾನ ಶುರುವಾಗಿದ್ದು! ಅದನ್ನು ಅರ್ಥೈಸಿಕೊಳ್ಳಲು ಬಹಳ ಸಮಯ ಹಿಡಿಯಲಿಲ್ಲ. ಯಾಕೆಂದರೆ ಅದು ಮೊದಲು ಮನಸ್ಸಿಗೆ ಗೊತ್ತಾಗಿ ಮರೆತಿದ್ದ ವಿಷಯ ಅಷ್ಟೇ !

ಮಳೆಗಾಲ ನಮ್ಮ ಕರಾವಳಿಯಲ್ಲಿ ಬಹಳ ಜೋರು. ಒಮ್ಮೊಮ್ಮೆ ಧೋ ಎನ್ನಹತ್ತಿದರೆ ಬರೋಬರಿ ಮೂರು ನಾಲ್ಕುದಿನಗಳವರೆಗೆ ಬಿಡದೇ ಇರುವ ಮಳೆಯೂ ಇತ್ತು. ವಾರಗಳತನಕ ಸುರಿದೂ ಸುರಿದೂ ಸುರಿದೂ ಬೇಸರಹುಟ್ಟಿಸುವಷ್ಟು ಮಳೆ ಬರುತ್ತಿತ್ತು. ಅಂದಿನ ಆ ಬೇಸರದ ಮಳೆಯ ದಿನಗಳಲ್ಲಿ ಕಾಲಹಾಕಲೇಂದೇ ಯಕ್ಷಗಾನದ ತಾಳಮದ್ದಲೆಯ ರೂಪ ಬಂದಿದ್ದು! ಯಾರಾದರೂ ಒಳ್ಳೆಯ ಮಾತುಗಾರರು ಬಂದ ಸುದ್ದಿ ತಿಳಿದರೆ ಪ್ರಸಂಗ ಯಾವುದೇ ಇರಲಿ ನಾವು ಹೋಗಿ ಅಕ್ಕ ಪಕ್ಕದ ಮನೆಗಳಲ್ಲೋ ದೇವಸ್ಥಾನದಲ್ಲೋ ಅದೆಲ್ಲಿ ತಾಳಮದ್ದಲೆ ನಡೆಯುತ್ತಿತ್ತೋ ಅಲ್ಲಿಗೆ ಧೌಡಾಯಿಸಿ ಕುಳಿತುಕೊಳ್ಳುತ್ತಿದ್ದೆವು. ಆದರೆ ದಿನಂಪ್ರತಿ ಪ್ರಸಂಗ[ತಾಳಮದ್ದಲೆ]ಇರುತ್ತಿರಲಿಲ್ಲ. ಆಗೆಲ್ಲ ಕಥೆ ಹೇಳುವವರನ್ನು ಹುಡುಕುವುದು! ಯಾರು ಚೆನ್ನಾಗಿ ಕಥೆ ಹೇಳುತ್ತಾರೋ ಅವರನ್ನು ಹುಡುಕಿ ದುಂಬಾಲು ಬೀಳುವುದು. ಅಂತೂ ಬ್ಯಾಂಕಿನಿಂದ ಸಾಲಪಡೆದಷ್ಟು ಕಷ್ಟಪಟ್ಟಾದರೂ ಅವರಿಂದ ಕಥೆ ಕೇಳಲೇಬೇಕು! ಇದು ನಮ್ಮ ಸಂಕಲ್ಪ ಸಿದ್ಧಿ!

ಮಳೆಗಾಲದ ನಮ್ಮ ಶಾಲೆಗಳಲ್ಲಿ ದಾಖಲೆ ನಿರ್ಮಿತ ಒಂದು ಕಾಯಂ ಪ್ರಬಂಧವೆಂದರೆ ’ಮಳೆಗಾಲದ ಒಂದು ದಿನ’ ! ಮಕ್ಕಳೇ ನಾಳೆ ಎಲ್ಲರೂ ಪ್ರಬಂಧ ಬರೆದುಕೊಂಡು ಬನ್ನಿ ಎಂದುಬಿಟ್ಟರೆ ನಾವೆಲ್ಲ ಬರೆಯೋದಕ್ಕೆ ಅಷ್ಟಾಗಿ ಗಟ್ಟಿಗರಲ್ಲದ ಕಾಲ ಅದಾಗಿದ್ದರಿಂದ ಬೆಕ್ಕಿಗೆ ಬರೆಹಾಕಿದಂತಾಗುತ್ತಿತ್ತು. " ಹ್ಯಾಗಾದ್ರೂ ತಪ್ಪಿಸ್ಕೊಳ್ಬೇಕಲ್ಲೋ ಸದಾಶಿವ " ಅಂತ ನಮ್ನಮ್ಮೊಳಗೆ ನಾವು ಮಾತಾಡಿಕೊಳ್ಳುತ್ತಿದ್ದೆವು. ಯಾಕೆಂದರೆ ಪ್ರಬಂಧ ಚೆನ್ನಾಗಿರಲಿಲ್ಲವೆಂದರೆ ನಮ್ಮ ಸರ್ ನಮ್ಮನ್ನು ಇತರ ಹುಡುಗರ ಮುಂದೆ ಛೇಡಿಸುವುದಾಗಾಲೀ ಗೇಲಿಮಾಡುವುದಾಗಲೀ ನಮಗೆ ಸತ್ತಷ್ಟಾಗುತ್ತಿತ್ತು, ಮರ್ಯಾದೆವಂತರು ನೋಡಿ! ಅದಕ್ಕೇ ಸಹವಾಸವೇ ಬೇಡ ಅಂತ ಯಾವುದಾದರೂ ಕಾರಣ ಹುಡುಕಿ ರಜಾಗುಜರಾಯಿಸಿಬಿಟ್ಟರೆ ಆಮೇಲೆ ಸರು ಅವರೇ ಕರಿಹಲಗೆಯ ಮೇಲೆ ಬರೆಯಿಸಿಕೊಡುವುದನ್ನು ನಕಲುಮಾಡಿಕೊಂಡರೆ ಸರಿ ಎಂಬುದು ನಮ್ಮ ಅಂಬೋಣ.

ವಿಷಯಕೇಳಿ ! ಮಳೆಗಾಲದ ಒಂದು ದಿನ ಅಂತ ಈಗ ಬರೆಯಲು ಹೇಳಿದರೆ ಒಂದಲ್ಲ, ಮಳೆಗಾಲದ ಸಾವಿರದಿನ ಬೇಕಾದರೂ ಬರೆದು ಕೊಟ್ಟೇವು, ಆದರೆ ಅಂದಿಗೆ ನಮಗದು ಆಗುತ್ತಿರಲಿಲ್ಲ. ಏನು ಬರೆಯಬೇಕೆಂಬುದೇ ತಿಳಿಯುತ್ತಿರಲಿಲ್ಲ. ಅಸಲಿಗೆ ನಾವು ವಿದ್ಯಾವಂತರೇನೋ ಹೌದಾಗಿದ್ದೆವು, ಅಂದರೆ ಪತ್ರಿಕೆಗಳನ್ನು ತಲೆಕೆಳಗಾಗಿ ಹಿಡಿದರೆ ನಮಗೆ ದೂರದಿಂದಲೇ ಗೊತ್ತಾಗುತ್ತಿತ್ತಪ್ಪ ಇನ್ನೇನು ಬೇಕು ಹೇಳಿ ? ಹಾಗಂತ ಕಮ್ಮಿ ಎಂದುಕೊಳ್ಳಬೇಡಿ ನಮ್ಮ ಚಿಕ್ಕಪ್ಪ, ಅಜ್ಜ ಎಲ್ಲಾ ಹೇಳಿದ್ದರು ದಿನಾಲೂ ರೇಡಿಯೋ ವಾರ್ತೆಕೇಳಿ ಲೋಕದ ಎಲ್ಲಾವಿಷಯ ಗೊತ್ತಾಗುತ್ತದೆ ಅಂತ. ನಿಜಹೇಳಲಾ ವಾರ್ತೆ ಮುಗಿದ ತಕ್ಷಣ ಬರುವ ಸಿನಿಮಾ ಹಾಡುಗಳು ನಮ್ಮ ಮನಕದ್ದುಬಿಟ್ಟಿದ್ದವು! ನಮಗೆ ವಾರ್ತೆಗೀರ್ತೆ ಎಲ್ಲಾ ಬೇಕಾಗುತ್ತಿರಲಿಲ್ಲ, ಆದರೆ ಹಾಡು ಕೇಳುವ ಚಟದಿಂದ ರೇಡಿಯೋ ಹತ್ತಿರವೇ ಸುಳುಕಾಡುವುದು ಜಾಸ್ತಿ ಇತ್ತು. ದೊಡ್ಡವರು ಬಂದರೆ ವಾರ್ತೆಕೇಳುವುದನ್ನು ತೋರಿಸುವುದು ಜೋರು! ಇಲ್ಲೂ ಅಷ್ಟೇ-ಅವರು ಬೈಯ್ದರೆ ತಡಕೊಳ್ಳುವ ತಾಕತ್ತು ನಮಗಿರಲಿಲ್ಲ,ಮರ್ಯಾದೆ ಪ್ರಶ್ನೆ ನೋಡಿ-ಅದಕ್ಕೇ ಅವರು ಹೇಳಿದ ಹಾಗೇ ವಾರ್ತೆ ಕೇಳಿದ ಹಾಗೇ ಕೇಳಿ ನಂತರ ಹಾಡು ಶುರುವಾದಾಗ ಸಣ್ಣಗೆ ಎಲೆ ಅಡಿಕೆ ಜೊತೆಗಿರುವ ಸುಣ್ಣದ ಅಂಡೆಯ ಥರದ ಅದೇನನ್ನೋ ತಿರುಗಿಸಿ ಸ್ವಲ್ಪ ಶಬ್ಢ ಜೋರಾಗಿ ಬರುವಂತೆ ಇಟ್ಟುಕೊಳ್ಳುತ್ತಿದ್ದೆವು. ಯಾರಾದರೂ ದೊಡ್ಡವರು ದೊಡ್ಡಬಾಯಿಮಾಡಿದರೆ [ಎನೋ ಕೂಗಿಕರೆದರೆ] ನಮಗೆ ಅನಿರೀಕ್ಷಿತವಾಗಿ ದೊಡ್ಡ ರೋಡ್ ಹಂಪ್ ಸಿಕ್ಕಿದ ಅನುಭವ ! ಹಾಡಿನ ಶಬ್ಢ ಸಣ್ಣಗಾಗಿಬಿಡುತ್ತಿತ್ತು !

ಸುಮ್ಮನೇ ಹೇಳುವುದಕ್ಕಲ್ಲ ದಿ|ಹೈಗುಂದ ಡಾಕ್ಟರು ಎಂದರೆ ನಮ್ಮಲ್ಲಿ ಆಗ ಜನಜನಿತ. ಜನರ ನಡುವೆ ತನ್ನನ್ನು ತೊಡಗಿಸಿಕೊಂಡ, ತೀರಾ ಬದುಕುವುದಕ್ಕೆ ಬೇಕಾಗುವಷ್ಟು ಮಾತ್ರ ಶುಲ್ಕ ಪಡೆದು ತುಲನಾತ್ಮಕ ನಾಡಿ ಪರೀಕ್ಷೆಯೇ ಮೊದಲಾದ ಕೆಲವು ಕ್ರಮಗಳಿಂದ ರೋಗಿಗಳ ರೋಗವಾಸಿಮಾಡುವ ಸೇವಾಭಾವನೆಯ ಆಯುರ್ವೈದ್ಯ ಅವರಾಗಿದ್ದರೂ ಪ್ರಸಂಗದ ಅರ್ಥ ಹೇಗೆ ಹೇಳುತ್ತಿದ್ದರು ಬಲ್ಲಿರೋ ಕೂತವ ಕೂತೇ ಇರಬೇಕು-ಬಾಯಿ ತೆರೆದುಕೊಂಡು! ಅವರ ಜೊತೆ ಎದುರಿಗೆ ಅಪರೂಪಕ್ಕೆ ಕೆರೆಮನೆ ದಿ|ಮಹಾಬಲ ಹೆಗಡೆಯವರು ಬಂದುಬಿಟ್ಟರೆ ಮುಗಿಯಿತು- ಅಲ್ಲಿ ಬೆಳಗಾಗುವವರೆಗೂ ಹಬ್ಬವೇ! ಕೇಳುವ ಕಿವಿಗೆ ರಸದೌತಣ. ಮಹಾಬಲರು ತಮ್ಮ ತೋಟ ಗದ್ದೆಗಳಲ್ಲೂ ತಿರುಗಾಡುತ್ತ " ನೋಡಿದೆಯಾ ವಿದುರ ಕೌರವನೊಡ್ಡೋಲಗವ......." ಎಂದು ಅಲ್ಲಿ ಹುಟ್ಟಿ ಬೆಳೆದ ಕಳೆಯ ಸಸಿಗಳೆಡೆಗೆ ಅಡ್ಡಡ್ಡ ಕೈತೋರಿಸುತ್ತ ನಡೆಯುತ್ತಿದ್ದರಂತೆ!ಇನ್ನೂ ವಿಶೇಷ ಎಂದರೆ ಬಾಂಬೆಗೋ ಎಲ್ಲಿಗೋ ಹೋಗಿ ಮರಳಿಬಂದವರು ಅಲ್ಲೆಲ್ಲೋ ಊರಕಡೆಯಲ್ಲಿ ಎಳೆನೀರನ್ನು ಕುಡಿದು ನೂರು ರುಪಾಯಿ ನೋಟು ಕೊಟ್ಟು [ಅಂದಿನ ಕಾಲಕ್ಕೆ ನೂರು] ಚಿಲ್ಲರೆ ಪಡೆಯದೇ ಯಕ್ಷಗಾನದ ಹಾಡು ಹೇಳಿಕೊಳ್ಳುತ್ತಾ ಹಾಗೇ ಹೋಗಿದ್ದರಂತೆ! ಅಂದರೆ ಯಕ್ಷಗಾನವನ್ನೇ ತನ್ನ ಉಸಿರಾಗಿ ಅನುಭವಿಸಿದ ಮಹಾನ್ ಕಲಾವಿದರಲ್ಲಿ ಮಹಾಬಲರೂ ಒಬ್ಬರು. ಇಂತಹ ಘಟಾನುಘಟಿಗಳು ಪ್ರಸಂಗ ನಡೆಸಿಕೊಡುವದಿನ ನಾವೆಲ್ಲಾ ಅಲ್ಲಿ ಹಾಜರು! ಮಾರನೇ ದಿನ ಶಾಲೆಯಲ್ಲಿ ಕಣ್ಣಲ್ಲಿ ಆಗಾಗ ಆಗಾಗ ಹಲವು ಕಲಾವಿದರು ಪ್ರಸಂಗದ ಅರ್ಥಹೇಳುವಂತೇ ಭಾಸ!

ಎಲ್ಲೋ ಒಮ್ಮೊಮ್ಮೆ ಗುರು ಮಾಸ್ತರು ಕ್ಲಾಸು ತೆಗೆದುಕೊಂಡರೆ ’ಮಳೆಗಾಲದ ಒಂದುದಿನ’ ಬರೆಯಬೇಕಾಗಿಯೇ ಬರುತ್ತಿತ್ತು. ಈ ಪ್ರಬಂಧ ಇದೆಯಲ್ಲ ಇದನ್ನು ಬರೆಸದ ಶಾಲೆಗಳು ಹಾಗೂ ತರಗತಿಗಳು ಇಲ್ಲವೆಂದರೆ ತಪ್ಪಿಲ್ಲವೇನೋ! ಏನೇನೋ ಸರ್ಕಸ್ಸು ಮಾಡಿ ಅದನ್ನು ಬರೆಯಹೊರಟರೆ ಮತ್ತದೇ ಪ್ರಶ್ನೆ- ಏನಂತ ಬರೆಯಬೇಕು. ಪ್ರಬಂಧದ ಗಂಧ-ಗಾಳಿಯೂ ಇರದ ಜನ ನಾವು, ಅಷ್ಟಿದ್ದೂ ಪ್ರಬಂಧ ಬರೆಯುತ್ತೇವೆಂದು ಹೊರಟರೆ ಸ್ಥಿತಿಗತಿ ಏನಾಗಬೇಡ! ಅವರಿವರ ಹತ್ತಿರ ಕೇಳುವುದು. ಅದೂ ಇದೂ ಸೇರಿಸಿ ಕೊನೆಗೊಮ್ಮೆ ಅದನ್ನು ಪ್ರಬಂಧ ಅಂತ ಕರೆದುಬಿಡುವುದು ನಮ್ಮ ವಿಶ್ವಪ್ರಯತ್ನ! [ಭಗೀರಥ ಪ್ರಯತ್ನಕ್ಕಿಂತ ದೊಡ್ಡದು ಎಂದು ತಿಳಿದುಕೊಳ್ಳಿ]

ಹೀಗೇ ಒಂದು ಮಳೆಗಾಲ. ಹಲಸಿನ ಹಪ್ಪಳ ತಿನ್ನುವ ಕಾಲ! ಹೊರಗೆ ಹನಿಹನಿ ಸೋನೆ ಮಳೆಯಿತ್ತು. ನಾನು ಮತ್ತು ಅಜ್ಜಿ ಅಡಿಗೆಮನೆಯಲ್ಲಿ ಹಲಸಿನ ಹಪ್ಪಳವನ್ನು ತಿನ್ನುವ ಪೂರ್ವ ತಯಾರಿಯಲ್ಲಿ ತೊಡಗಿದ್ದೆವು. ನಾನು ನೋಡುವುದು-ಅಜ್ಜಿ ತಯಾರುಮಾಡುವುದು. ಎರಡು ಹಲಸಿನ ಹಪ್ಪಳ ನಿಗಿನಿಗಿ ಇಂಗಾಳದ[ಕೆಂಡದ] ಒಲೆಯಲ್ಲಿಟ್ಟು ಸುಟ್ಟು ಅವುಗಳ ಎರಡೂ ಮೈಗೆ ಕೊಬ್ಬರಿ ಎಣ್ಣೆ ಸವರಿ ಮೇಲೆ ಕಾಯಿತುರಿ ಇಟ್ಟು ಅಜ್ಜಿ ನನ್ನ ಹತ್ತಿರ ಅದನ್ನು ಕೊಟ್ಟು ಮಹಡಿಯಲ್ಲಿ ಕುಳಿತು ಓದುತ್ತಿದ್ದ ನನ್ನ ಚಿಕ್ಕಪ್ಪನಿಗೆ ಕೊಟ್ಟುಬರಲು ತಾಕೀತು ಮಾಡಿದಳು. ಭಕ್ತಿಯಿಂದ ಅದನ್ನು ಶಿರಸಾವಹಿಸಿ ನಡೆಸಲು ಸುಕುಮಾರನಾದ ನಾನು ಮನೆಯ ಒಳಗಡೆಯ ಮರದ ಏಣಿಯನ್ನು ಹತ್ತಿ ಹೋಗಿ ಅದನ್ನು ಚಿಕ್ಕಪ್ಪನಿಗೆ ಕೊಟ್ಟು ನನ್ನ ಪಾಲಿನ ಹಪ್ಪಳದ ವಸೂಲಿಗೆ ವಾಪಸ್ಸು ಬರುತ್ತಿದ್ದೆ. ಅಲ್ಲೇ ನೋಡಿ ಎಡವಟ್ಟಾಗಿದ್ದು- ಏಣಿಯು ಹೊರ ಕಿಟಕಿಗೆ ಹತ್ತಿರವಿದ್ದುದರಿಂದ ಮಳೆಯ ನೀರಿನ ಸಣ್ಣ ಹನಿಗಳು ಗಾಳಿಗೆ ಕಿಟಕಿ ಮೂಲಕ ಹಾರಿ ಏಣಿಯ ಮೆಟ್ಟಿಲ ಮೇಲೆ ಬಿದ್ದಿದ್ದವು. ಇದನ್ನು ತಿಳಿಯದೇ ಇಳಿಯುತ್ತಿದ್ದ ನಾನು ಏಣಿಯ ತುದಿಯಿಂದ ಕೆಳತನಕ ಎಷ್ಟು ಮೆಟ್ಟಿಲು ಇದೆಯೆಂಬುದನ್ನು ಒಂದೇ ಸಲಕ್ಕೆ ಲೆಕ್ಕಹಾಕಿಬಿಟ್ಟಿದ್ದೆ! ಹಾಗೆ ಬಿದ್ದ ಪರಿಣಾಮ [ಬಿದ್ದ ಎನ್ನಬೇಡಿ-ಮರ್ಯಾದೆ ಪ್ರಶ್ನೆ ಮಾರಾಯರೆ] ಹಣೆಯ ಮೂಲೆಗೆ ಏನೋ ಬಡಿದು ಆಳವಾದ ಗಾಯದ ಜೊತೆಗೆ ನನಗೆ ಪ್ರಜ್ಞೆ ಇರಲಿಲ್ಲ. ಅಷ್ಟು ಮಾತ್ರ ತಿಳಿದಿತ್ತೇ ವಿನಃ ನಂತರದ್ದು ನನಗೆ ಏನೂ ಗೊತ್ತಿರಲಿಲ್ಲ.

ತಿಳಿದಿದ್ದು ಇಷ್ಟು- ನಾನು ಬಿದ್ದಮೇಲೆ ರಕ್ತ ಸುಮಾರು ಹೋಯಿತು. ನಂತರ ಕಂಗಾಲಾದ ಮನೆಯ ಹಿರಿಯರು ಅದು ಹೇಗೋ ಗಾಡಿ ಹಿಡಿದು ಹತ್ತು ಕಿಲೋಮೀಟರ್ ದೂರಕ್ರಮಿಸಿ ಅಡಿಗ ವೈದ್ಯರನ್ನು ಕರೆತಂದರು. ಅಡಿಗ ವೈದ್ಯರು ಬಂದವರೇ ಅದೇನೇನೋ ಚಿಕಿತ್ಸೆ ಮಾಡಿ ಹಣೆಯ ಗಾಯಕ್ಕೆ ಬ್ಯಾಂಡೇಜು ಕಟ್ಟಿ, ನನಗೆ ನೋವು ತಿಳಿಯದಂತೆ ಏನೇನೋ ಮಾಡಿದ್ದರು. ಇದನ್ನೆಲ್ಲ ಕಂಡು ಹೌಹಾರಿ ಹೆದರಿಬಿದ್ದ ನನ್ನ ಅಜ್ಜಿ-ಆಮ್ಮ ಎಲ್ಲಾ ಸೇರಿ ಮಳೆಗೆ ಹಿಡಿಶಾಪ ಹಾಕಿದರಿರಬೇಕು! ಅಂತೂ ನನಗಾದ ಸ್ಥಿತಿ ನೋಡಿ ಅವರು ನನಗೆ ಇನ್ನೇನಾಗುತ್ತದೋ ಎಂಬ ಒಳ ಮನಸ್ಸಿನ ಹೆದರಿಕೆಯಿಂದ " ಹೆದರಬೇಡ ಹೆದರಬೇಡ " ಎನ್ನುತ್ತ ತಲೆನೇವರಿಸುತ್ತಿದ್ದರು. ಅಂತೂ ಕೊನೆಗೊಮ್ಮೆ ನಿರುಂಬಳವಾಗಿ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು! ಆಮೇಲೆ ಸರಿಸುಮಾರು ತಿಂಗಳಕಾಲ ನನ್ನ ಬ್ಯಾಂಡೇಜು ಬಿಡಿಸಿರಲಿಲ್ಲ. ಕೊನೆಕೊನೆಗೆ ಅದಕ್ಕೆ ಮೇಲಿಂದ ಕೊಬ್ಬರಿ ಎಣ್ಣೆ ಬಿಡುತ್ತ ಅದು ತಂತಾನೇ ಜಾರುವಂತೆ ಮಾಡಿದರು. ತಿಂಗಳ ಮೇಲೆ ಅದ್ಯಾವುದೋ ಒಂದು ರಾತ್ರಿ ಮಲಗಿರುವಾಗ ಹಾಸಿಗೆಯಲ್ಲೇ ಅದು ತನ್ನಿಂದ ತಾನೇ ಬಿದ್ದುಹೋಯಿತು. ಮಳೆಗಾಲವನ್ನು ವಿನಾಕಾರಣ ಬೈದರೇ ಹೊರತು ಅದರದ್ದೇನು ತಪ್ಪು!

ಅದಾದಮೇಲೆ ಮಳೆಗಾಲದ ಹಲವು ದಿನಗಳು ಬಂದುಹೋದವು. ಆದರೆ ಬರೆಯಬೇಕಾದ ಆ ಪ್ರಬಂಧಮಾತ್ರ ಹಾಗೆಯೇ ಕುಳಿತಿರುತ್ತಿತ್ತು. ಮಳೆ ಜೋರಾದಾಗ ಮರದಮೇಲೆ ನೆನೆಯುತ್ತ ಕೂರುವ ಮಂಗಗಳು " ಸಾಯ್ಲಿ ಹಾಳಾದ್ ಮಳೆಗಾಲ, ನಾಳೆ ಬೆಳಗಾಗಲಿ ನಾವೆಲ್ಲ ಸೇರಿ ಮನೆ ಕಟ್ಟಿಯೇ ಬಿಡೋಣ " ಎಂದುಕೊಳ್ಳುತ್ತವಂತೆ. ಬೆಳಗಾದಾಗ ಆಹಾರ ಹುಡುಕುವ ಗಡಿಬಿಡಿಯಲ್ಲಿ ರೊಯ್ಯ ರೊಯ್ಯನೆ ಮರದಿಂದ ಜಿಗಿಜಿಗಿದು ಹಾರೋಡಿ ಪರಾರಿ, ಮತ್ತೆ ಮರುರಾತ್ರಿ ಮಳೆಬಂದಾಗ ಅದೇ ಮನೆಕಟ್ಟುವ ಮೀಟಿಂಗು! ಇದರ ಪುನರಾವರ್ತನೆ ಮಳೆಗಾಲ ಮುಗಿಯುವವರೆಗೂ. ಒಂದರ್ಥದಲ್ಲಿ ಮಾಡಬೇಕು ಮಾಡಬೇಕು ಎನ್ನುತ್ತ ಹಾಗೇ ಮುಂದೂಡುವ ಕೆಲಸಗಳಿಗೆ ನಮ್ಮಲ್ಲಿ ಇಂದಿಗೂ ಬಳಸುವ ಗಾದೆ ’ಮಂಗ ಮನೆಕಟ್ಟಿದ ಹಾಗೇ ’ ಅಂತ. ಇಲ್ಲಿ ’ಮಳೆಗಾಲದ ಒಂದುದಿನ’ ಕೂಡ ಮಂಗ ಮನೆಕಟ್ಟಿದ ಹಾಗೇ ಅಲ್ಲವೇ ?

Thursday, July 22, 2010

ಋಣಿ

ಚಿತ್ರ ಋಣ :ಅಂತರ್ಜಾಲ

ಋಣಿ

ಋಣಿಯಾಗು ಜಗದಲ್ಲಿ ತಂದೆತಾಯಿಗಳಿಂಗೆ
ಅಣಿಗೊಳಿಸು ನಿನ್ನ ಮನ ನೆನೆಸೆ ಧೇನುವನು
ಕಣಕಣದ ತುಂಬೆಲ್ಲ ದೈವತ್ವವಂ ಹೊತ್ತ
ಗಣಿಯು ಸಾತ್ವಿಕ ರೂಪ | ಜಗದಮಿತ್ರ

ಊರೊಳಗೆ ದೊಡ್ಡಜನ ನೀನಹುದು ದುಡ್ಡಿರಲು
ವೀರನೆಂಬರು ನಿನಗೆ ನೀ ಗೆದ್ದುಬರಲು
ಆರೇಳುದಿನ ಕಾಲ ಬಡತನವ ನಟಿಸೊಮ್ಮೆ
ಕೇರುತ್ತ ಜನರೆಣಿಸು | ಜಗದಮಿತ್ರ

ಮರೆಯದಿರು ಶಿಕ್ಷಕರ ತೊರೆಯದಿರು ಮನೆಜನರ
ಕುರಿತೋದು ಮಹಾನುಭಾವ ಜೀವಿಗಳ
ಅರೆಕಾಸಿನಾಸೆಯಲಿ ಮಾರದಿರು ನಿನ್ನತನ
ಬರೆದು ತೋರಿಸು ಜಗಕೆ | ಜಗದಮಿತ್ರ

ನೆನೆಯೊ ನೆರೆಹೊರೆಯನ್ನ ನೆನೆಯೊ ಗುರುಹಿರಿಯರನ
ಮನಮುಟ್ಟಿ ಭಜಿಸು ನೀ ನಿತ್ಯ ದೈವವನ
ವನರಾಶಿ ಈ ಭೂಮಿ ವಾಯು ನದಿಗಳ ನೆನೆಯೊ
ಕನಸಲ್ಲು ಕೆಡಿಸದಿರು | ಜಗದಮಿತ್ರ

ವಿನಯ ವಿದ್ಯೆಗೆ ಬೇಕು ಮನೆಗೆ ಛಾವಣಿಬೇಕು
ಘನಕಾರ್ಯಮಾಡುವಗೆ ಮೊದಲು ಮನಬೇಕು
ಜನತಂತ್ರ ತುಳಿದಿರಲು ಅಡ್ಡದಾರಿಯ ಭರದಿ
ತನುಕೊಡವಿ ಸಡ್ಡುಹೊಡೆ | ಜಗದಮಿತ್ರ

ನೆನೆ ನಿನ್ನ ದೇಶವನು ನೆನೆ ನಿನ್ನ ರಾಜ್ಯವನು
ನೆನೆಯೊಮ್ಮೆ ಈ ಜನ್ಮದುಪಕರಿಪ ಜನರ
ಮನವ ಒಂದಾವರ್ತಿ ಹಿಡಿದು ಜಾಗ್ರತಗೊಳಿಸಿ
ಮುನಿಜನರ ನೆನೆಯೊ ನೀ | ಜಗದಮಿತ್ರ