ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, February 13, 2013

ಜನಜೀವನಕ್ಕೆ ಯಾಕೆ ಬೇಕು ವೇದಸಾಹಿತ್ಯ? ಆದಿಶಂಕರರ ಅಧ್ಯಾಸಭಾಷ್ಯದಲ್ಲಿ ಉತ್ತರವನ್ನು ಹುಡುಕಿದೆ!

  ಚಿತ್ರಋಣ : ಅಂತರ್ಜಾಲ 
ಜನಜೀವನಕ್ಕೆ ಯಾಕೆ ಬೇಕು ವೇದಸಾಹಿತ್ಯ? ಆದಿಶಂಕರರ ಅಧ್ಯಾಸಭಾಷ್ಯದಲ್ಲಿ ಉತ್ತರವನ್ನು ಹುಡುಕಿದೆ!

ಅನೇಕ ದಿನಗಳಿಂದ ಭಾರತದ ಪ್ರಾಗೈತಿಹಾಸ,  ಇತಿಹಾಸ ಮತ್ತು ಸನಾತನ ಜೀವನಧರ್ಮ--ಇವುಗಳ ಕುರಿತೇ ಬರೆಯುತ್ತಿರುವ ನನ್ನ ಇಂತಹ ಬರಹಗಳನ್ನು ಓದುವ ಜನ ಬೆರಳೆಣಿಕೆಯಷ್ಟು ಎಂಬುದು ನನಗೂ ಗೊತ್ತು. ಆದರೂ ಯಾಕೆ ಸಮಯವ್ಯಯಿಸಿ, ಶ್ರಮಪಟ್ಟು ಇವುಗಳನ್ನು ಬರೆಯುತ್ತಿದ್ದೇನೆ ಎಂದರೆ: ಅಧ್ಯಾಸದಲ್ಲಿರುವ ನಾಲ್ಕೇ ನಾಲ್ಕು ಜನರಿಗಾದರೂ ಇವುಗಳ ಮಹತ್ವದ ಅರಿವು ಸುಲಭವಾಗಿ ಆದರೆ ನನ್ನ ಶ್ರಮಸಾರ್ಥಕವಾಗುತ್ತದೆ ಎಂಬ ಏಕೋಭಾವದಿಂದ ಮತ್ತು ಅತ್ಯುನ್ನತವಾದ ಸನಾತನಧರ್ಮದ ಮೇಲಿನ ಅತಿಶಯ ಪ್ರೀತಿಯಿಂದ. ಬರೆಯಲಿಕ್ಕೆ ರಾಜಕೀಯ, ಸಮಾಜಿಕ, ಸಾಂಸ್ಕೃತಿಕ, ಸಾಹಿತ್ಯ-ಸಂಗೀತ-ಕಲೆ ಇಂತಹ ಹಲವು ವಿಷಯಗಳ ಹೊರೆಹೊರೆ ಹಾಗೇ ಬಿದ್ದಿದೆ; ಯಾವುದನ್ನೋ ಬರೆಯುವುದಕ್ಕಿಂತಾ ಮೌಲಿಕವಾದುದನ್ನು ಬರೆದರೇ ಅದೊಂದು ಸಮಾಜಸೇವೆಯಾಗುತ್ತದೆ ಎಂದು ನಂಬಿದವ ನಾನು. ಹಸಿದ ಮನದಹೊಟ್ಟೆಯನ್ನು ಹೊತ್ತು ಹುಡುಕಿಹೊರಟಾಗ ಕಣ್ಣಿಗೆಬೀಳುವ ಪುಸ್ತಕಗಳು ಲಕ್ಷ ಲಕ್ಷ. ಅದರಲ್ಲಿ ಅನೇಕವು ನನ್ನ ಮಟ್ಟಿಗೆ ನಿರುಪಯುಕ್ತ, ಕೆಲವು ಮಧ್ಯಮ ತರಗತಿ, ಇನ್ನೂ ಕೆಲವು ಮಾತ್ರ ಉತ್ತಮ. ಉತ್ತಮ ಪುಸ್ತಕಗಳನ್ನು ಆಯ್ದುಕೊಳ್ಳುವುದೇ ಪರಿಶ್ರಮದ ಕೆಲಸ; ಯಾಕೆಂದರೆ ಅದು ನಮ್ಮ ಅನುಭೂತಿಗೆ ಬಿಟ್ಟ ವಿಷಯ. ಪುಸ್ತಕದ ಯಾವುದೋ ಪುಟದಲ್ಲೂ ಉಪಯುಕ್ತ ಮಾಹಿತಿ ಇದ್ದಿರಬಹುದು, ಅದನ್ನು ಓದಿದಾಗಲಷ್ಟೇ ಅದು ಗೊತ್ತಾಗುತ್ತದೆ. ಕೆಲವುಸರ್ತಿ ಲೇಖಕರ ವೈಯ್ಯಕ್ತಿಕ ಪರಿಚಯದ ಚರ್ಯೆ, ಅವರ ಬರಹಗಳು ಹೇಗಿರಬಹುದು ಎಂಬುದನ್ನು ಸಾಮಾನ್ಯವಾಗಿ ತಿಳಿಸಿಬಿಟ್ಟಿರುತ್ತದೆ. ಈ ಕಾಲದಲ್ಲಿ, ಕಾಲವ್ಯಯಿಸಿ ಹಣತೆತ್ತು ಕೊಂಡ ಉತ್ತಮ ಪುಸ್ತಕಗಳಲ್ಲೂ ಅತ್ಯುತ್ತಮ ಎನಿಸುವುದು ಕೆಲವೊಂದಷ್ಟು ಮಾತ್ರ. ಯಾಕೆಂದರೆ ಅನೇಕ ಬರಹಗಾರರು ಅಧ್ಯಾಸದಲ್ಲೇ ಇರುತ್ತಾರೆ; ಅವರ ಇಹಲೋಲುಪತೆಯ ತೆವಲಿನಲ್ಲೇ ಬರಹಗಳೂ ಓಲಾಡುತ್ತಿರುತ್ತವೆ. ಬಹಳ ವಿಶೇಷವೆನಿಸಿದ ಆಧ್ಯಾತ್ಮದ/ವೇದಸಾಹಿತ್ಯದ ಪುಸ್ತಕಗಳನ್ನು ಓದಲು ತೊಡಗಿದರೆ ನನ್ನನ್ನೇ ನಾನು ಕಳೆದುಕೊಳ್ಳುತ್ತೇನೆ ಎಂಬುದು ಅಕ್ಷರಶಃ ಸತ್ಯ. ಆಗಸಕ್ಕೆ ಹಾರಿಬಿಟ್ಟ ಗಗನನೌಕೆಯಲ್ಲಿರುವ ವ್ಯೋಮಯಾನಿಯಂತೇ ಓದುತ್ತಾ ಓದುತ್ತಾ ನಾನೆಲ್ಲಿದ್ದೇನೆ ಎಂಬುದರ ಪರಿವೆಯೇ ಇರದಷ್ಟು ಆಗಿಬಿಡುತ್ತದೆ. ಕ್ಲಿಷ್ಟ ಬರಹಗಳನ್ನು ಸುಲಭವಾಗಿ ಅರ್ಥವಿಸಿ ಹೇಳಲು ಪ್ರಯತ್ನಿಸುವುದು ಭೂಮಿಗೆ ಆ ನೌಕೆ ಮರಳಿದಮೇಲೇನೆ. ಎಷ್ಟೋ ಸರ್ತಿ ’ಲ್ಯಾಂಡಿಂಗ್ ಪ್ರಾಬ್ಲ್ಂ’ ಆಗಿ ಬರಹ ಒಡಮೂಡದೇ ಹೋಗಬಹುದು! ಸಹಯಾತ್ರಿಕನ ಈ ವಿಶಿಷ್ಟಯಾನವನ್ನು ದೂರದಿಂದ ವೀಕ್ಷಿಸುತ್ತಾ, ಕೊಡಮಾಡಿದ ಮಾಹಿತಿಗಳನ್ನು ಮನಸಾ ಆಸ್ವಾದಿಸಿದ ಎಲ್ಲರಿಗೂ ನನ್ನ ನಮನಗಳು. 

ನಚಿಕೇತನೆಂಬ ಋಷಿಕುಮಾರನೊಬ್ಬನಿದ್ದ. ಇವನ ಕಥೆಯನ್ನು ಕೆಲವರು ಕೇಳಿಯೇ ಇರುತ್ತೀರಿ. ಒಂದರ್ಥದಲ್ಲಿ ಆತ ಧ್ರುವನಿಗಿಂತಾ ಮುಗ್ಧ. ದೇವತೆಗಳಿಂದ ಉನ್ನತ ಸ್ಥಾನ-ಮಾನವನ್ನು ಬಯಸಿ ವಾಜಶ್ರವಸ ತನ್ನಲ್ಲಿರುವ ಎಲ್ಲವನ್ನೂ, ಹಸುಗಳನ್ನೂ ದಾನಮಾಡುತ್ತಲಿದ್ದ; ದಾನನೀಡುತ್ತಿರುವ ಹಸುಗಳಲ್ಲಿ ಕೆಲವು ಮುಪ್ಪಿನವು, ಕೆಲವು ಕಣ್ಣುಕುರುಡಾದವು, ಕೆಲವು ಹಾಲು ಕೊಡದವು ಎಂಬುದನ್ನು ಮಗ ನಚಿಕೇತ ಅರಿತ. "ಅಪ್ಪಾ ನಾನೂ ನಿಮ್ಮವನೇ ಅಲ್ಲವೇ? ನನ್ನನ್ನು ಯಾರಿಗೆ ದಾನ ಕೊಡುತ್ತೀರಿ?" ಎಂದು ಮುಗ್ಧ ನಚಿಕೇತ ಪ್ರಶಿಸಿದ. ಒಂದೆರಡು ಸರ್ತಿ ಮಗ ಅದನ್ನೇ ಕೇಳಿದ್ದನ್ನು ಆಲಿಸಿದ ತಂದೆ, ಕೋಪಗೊಂಡು " ನಿನ್ನನ್ನು ಯಮನಿಗೆ ಕೊಟ್ಟಿದ್ದೇನೆ, ಹೋಗು" ಎಂದುಬಿಟ್ಟ! ತಂದೆಯ ಆಜ್ಞೆಯನ್ನು ಶಿರಸಾವಹಿಸಿದ ಬಾಲಕ ಮರುಮಾತನಾಡದೇ ಯಮನನ್ನು ಸೇರಿಕೊಳ್ಳುವುದಕ್ಕೆ ಸಿದ್ಧನಾಗಿ ನಡೆದ. ತಂದೆಗೇ ಪಶ್ಚಾತ್ತಾಪವೆನಿಸಿದರೂ ಮಗನಲ್ಲಿ ಯಾವುದೇ ಅಂತಹ ಭಾವ ಉದ್ಭವಿಸಲಿಲ್ಲ. ಯಮನೆಡೆಗೆ ಸಾಗಿ, ಯಮನ ದ್ವಾರದೆದುರು ನಿಂತಿದ್ದ ಬಾಲಕನಿಗೆ ಮೂರುದಿನಗಳಕಾಲ ಯಮ ಸಿಗಲೇ ಇಲ್ಲ! ಮೂರುದಿನಗಳ ಬಳಿಕ, ಪಾಪದ ಹಸುಳೆಯೊಂದು ತನ್ನ ದ್ವಾರದೆದುರು ನಿಂತಿದ್ದನ್ನು ತಿಳಿದು ಯಮ ಸ್ವತಃ ತಾನೇ ಖುದ್ದಾಗಿ ನಚಿಕೇರ್ತನಲ್ಲಿಗೆ ಬಂದು ಆತನನ್ನು ಮಾತನಾಡಿಸತೊಡಗಿದ. "ಮೂರುದಿನಗಳ ಕಾಲ ಯಾವುದೇ ಆತಿಥ್ಯವನ್ನು ಪಡೆಯದೇ, ಉಪವಾಸವಿದ್ದು  ನನ್ನ ದರ್ಶನಕ್ಕಾಗಿ ಕಾದ ಮಗುವೇ, ನಿನಗೆ ನಾನು ಮೂರು ವರಗಳನ್ನು ಕೊಡುತ್ತಿದ್ದೇನೆ, ಕೇಳಿಕೋ" ಎಂದ.

ನಚಿಕೇತ, ಮೊದಲನೆಯ ವರವಾಗಿ ತಂದೆಗೂ, ತನಗೂ ಮನಶ್ಶಾಂತಿಯನ್ನು ಪ್ರಾರ್ಥಿಸಿದ. ಅಗ್ನಿಹೋತ್ರವನ್ನು ಆಚರಿಸುವ ಬಗೆಗಿನ ಮಾಹಿತಿಯನ್ನು ಎರ್ರಡನೆಯದಾಗಿ ಕೇಳಿದ, ಯಮ ಎರಡನ್ನೂ ಅನುಗ್ರಹಿಸಿದ. ಸಾವಿನ ನಂತರರ ರಹಸ್ಯವನ್ನು ತಿಳಿಸು ಎಂಬುದನ್ನು ಮೂರನೆಯದಾಗಿ ಕೇಳಿದ! ಕೆಲಹೊತ್ತು ಯಮ ನಿರುತ್ತರನಾಗಿದ್ದ. ಯಾವುದು ದೇವತೆಗಳಿಗೂ ಗೊತ್ತಿರದ ರಹಸ್ಯವೋ ಅದನ್ನು ಈ ಚಿಕ್ಕ ವಟು ಕೇಳುತ್ತಿರುವುದು ಅವನ ಅಶ್ಚರ್ಯಕ್ಕೆ ಕಾರಣವಾಗಿತ್ತು. "ಅದೊಂದನ್ನುಳಿದು ಇನ್ನೇನು ಬೇಕಾದರೂ ಕೇಳು ಮೇಲಾಗಿ ನಿನಗೆ ನನ್ನಲ್ಲಿರುವ ಹಲವು ಸುವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತೇನೆ, ಅದನ್ನು ಮಾತ್ರ ಕೇಳಬೇಡ" ಎಂದು ಯಮ ತಗಾದೆ ತೆಗೆದ. "ನನಗೆ ಸುವಸ್ತುಗಳ ಭೋಗಭಾಗ್ಯದ ಅಗತ್ಯವಿಲ್ಲ, ಅದು ಕೇವಲ ಇಂದಿಗೇ ಮುಗಿದುಹೋಗುತ್ತದೆ. ಬೇರಾವ ವರಗಳೂ ಕೂಡ ಬೇಡ. ಸಾವಿನ ನಂತರ ನಾವೇನಾಗುತ್ತೇವೆಂಬ ರಹಸ್ಯವನ್ನು ಮಾತ್ರ ತಿಳಿದುಕೊಳ್ಳಬೇಕು" ಎಂದು ನಚಿಕೇತ ಪಟ್ಟುಹಿಡಿದ. ಬಾಲಕನ ಧೈರ್ಯವನ್ನು ನೋಡಿ ಯಮನಿಗೆ ಒಳಗೊಳಗೇ ಸಂತಸವಾಯ್ತು. ಸಾವಿನ ನಂತರ ಉಳಿಯುವ ನಿಜವಾದ ಆತ್ಮದ ಬಗ್ಗೆ ಯಮ ನಚಿಕೇತನಿಗೆ ತಿಳಿಸಿದ: ಪ್ರತಿಯೊಬ್ಬರಲ್ಲಿಯೂ ಅವಿತಿರುವ ಈ ಆತ್ಮನ ಬಗ್ಗೆ ಜ್ಞಾನವುಂಟಾದರೆ, ಆತ್ಮ-ಪರಮಾತ್ಮನ ಭಾಗವೇ ಎಂಬುದರ ಅರಿವು ಉಂಟಾಗುತ್ತದೆ. ನಿರ್ಗುಣ ನಿರಾಕಾರನಾದ ಪರಬ್ರಹ್ಮನೇ ಸೃಷ್ಟಿ, ಸ್ಥಿತಿ, ಲಯಕ್ಕೆ ಮೂಲನೂ ಆಗಿದ್ದು ’ ಓಂ ’ ಎಂಬುದು ಆತನಿಂದಲೇ ಹೊರಡುವ ಶಬ್ದವಾಗಿದೆ!  ಓಂ ಎಂಬುದು ಆತನ ಸಂಕೇತಕೂಡಾ ಹೌದು. ಅವನು ಚಿಕ್ಕದೆಲ್ಲದಕ್ಕಿಂತಾ ಚಿಕ್ಕವನು ಮತ್ತು ದೊಡ್ಡದೆಲ್ಲದಕ್ಕಿಂತಾ ದೊಡ್ಡವನು. ಇಂದ್ರಿಯಗಳೆಂಬ ಕುದುರೆಯನ್ನು ಸವಾರಿಮಾಡುವಾತ ಆತ್ಮ. ಜೀವಾತ್ಮವಾಗಿ ಶರೀರ ಪಡೆಯುವ ಆತ, ಸಾವಿನ ನಂತರವೂ ಹಾಗೇ ಇರುತ್ತಾನೆ-ಶಾಶ್ವತನಾಗಿರುತ್ತಾನೆ. ಕೇವಲ ಹೆಚ್ಚಿನ ಓದು ಅಥವಾ ಬುದ್ಧಿಮತ್ತೆ ಆತ್ಮಸಾಕ್ಷಾತ್ಕಾರಕ್ಕೆ ದಾರಿಯಲ್ಲ. ಶರೀರವೇಂಬ ಪೀಠದಿಂದ ಆತ್ಮನನ್ನು ಬೇರ್ಪಡಿಸುವಲ್ಲಿ ಯಾರು ಯಶಸ್ವಿಯಾಗುತ್ತಾನೋ ಆತನಿಗೆ ಮಾತ್ರ ಇದನ್ನು ಅರಿಯಲು ಸಾಧ್ಯ! ಹೀಗೆ ಮಾಡಿದವ ಪರಬ್ರಹ್ಮನಲ್ಲಿ ಲೀನಾವಾಗುತ್ತಾನೆ-ಅದೇ ಮೋಕ್ಷ. ಆತ್ಮಜ್ಞಾನವನ್ನು ಪಡೆಯದವ ಹುಟ್ಟು-ಸಾವುಗಳೆಂಬ ಚಕ್ರದಲ್ಲಿ ಸುತ್ತುತ್ತಲೇ ಇರುತ್ತಾನೆ. ಈ ರೀತಿಯಾದ ಅತ್ಯುತ್ತಮ ವರದಿಂದ ನಚಿಕೇತ ಜರಾಮರಣ ಚಕ್ರದಿಂದ ಬಿಡುಗಡೆಗೊಂಡು ಪರಬ್ರಹ್ಮನಲ್ಲಿ ಐಕ್ಯನಾದ. ಇದು ವೇದಾಂತದ ಭಾಗವಾದ ಕಠೋಪನಿಷತ್ತಿನಲ್ಲಿ ಬರುವ ಕಥೆ.  

ಪ್ರಪಂಚ ಮಿಥ್ಯಾವಾದವನ್ನು ಸರಿಯಾಗಿ ಅರಿಯಬೇಕಾದರೆ ಶಂಕರರ ಅಧ್ಯಾಸಭಾಷ್ಯವನ್ನು ಮೊದಲು ಸರಿಯಾಗಿ ಓದಿ ತಿಳಿದುಕೊಳ್ಳಬೇಕು. ದೇವರು ಒಬ್ಬನೇ ಎಂದು ವೇದಾಂತದಲ್ಲಿ ಹಲವೆಡೆ ಹೇಳಿದೆ. ತತ್ವಮಸಿ, ಪ್ರಜ್ಞಾನಂ ಬ್ರಹ್ಮ ಇತ್ಯಾದಿ ಹಲವು ಉಲ್ಲೇಖಗಳು ಹಾಗೆ ತಿಳಿಸುತ್ತವೆ. ಜ್ಞಾನದ ಶುದ್ಧ ರೂಪವೇ ಬ್ರಹ್ಮ, ಅಶುದ್ಧ ರೂಪವೇ ಜೀವಾತ್ಮ! ಯಾವ ಆಕಾರವೂ, ಯಾವಗುಣವೂ, ಯಾವ ಕರ್ಮಬಂಧನವೂ ಇಲ್ಲದ, ಕ್ರಿಯಾಹೀನ ಅಥವಾ ಕರ್ಮಗಳನ್ನು ಮಾಡದ ಪರಬ್ರಹ್ಮ ಜಗತ್ತನ್ನು ಹೇಗೆ ಸೃಷ್ಟಿಸಿದ ಎಂಬ ಪ್ರಶ್ನೆಯ ಉದ್ಭವ ಸಹಜ. ಅದಕ್ಕೆ ಶಂಕರರು ಅಲ್ಲಿ ಉತ್ತರವನ್ನು ಹೇಳಿದ್ದಾರೆ! ಪರಬ್ರಹ್ಮವೆಂಬುದು ಎರಡುರೂಪಗಳನ್ನು ಹೊಂದಿದೆ: ಜ್ಞಾನ ಮತ್ತು ಶಕ್ತಿ. ಇದರಲ್ಲಿ ಶಕ್ತಿ ಆತನ ಅಚ್ಛಿಕ ಭಾಗ! ಅಮೆಯೊಂದು ಬಯಸಿದಾಗ ತನ್ನ ಕವಚದ ಹೊರಗೆ ತಲೆ-ಕೈಕಾಲುಗಳನ್ನು ಚಾಚುತ್ತದೆ, ಬೇಡವಾದಾಗ ಅವುಗಳನ್ನು ಒಳಗೆ ಸೇರಿಸಿಕೊಳ್ಳುತ್ತದೆ[ಆಮೆಗೆ ಅದು ರಕ್ಷಣಾ ಕವಚ, ಪರಬ್ರಹ್ಮನಲ್ಲಿ ಅದು ಹಾಗಲ್ಲ-ಇದು ನಾನು ಕೊಟ್ಟ, ತೀರಾ ಲೌಕಿಕ ಉದಾಹರಣೆ]ಹೇಗೋ ಹಾಗೆಯೇ ಪರಬ್ರಹ್ಮ, ಶಕ್ತಿಯ ಭಾಗವನ್ನು ಪ್ರಕಟಪಡಿಸಿ, ಅದರಿಂದ ಮಾಯೆಯ ಬೀಜವನ್ನು ಸೃಜಿಸಿ ಆ ಮೂಲಕ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾಗುತ್ತಾನೆ. ಜೀವಾತ್ಮಕ್ಕೆ ಅಂಟಿಕೊಳ್ಳುವ ಕರ್ಮಬಂಧನಗಳ ವ್ಯಾಪ್ತಿಗೆ ಆತ ನಿಲುಕುವುದಿಲ್ಲ. ಯಾವಾಗ ಆತ ಶಕ್ತಿಮುಖವನ್ನು ತೆರೆಯುತ್ತಾನೆ ಎಂಬುದನ್ನು ಹೇಳಲಾಗುವುದಿಲ್ಲ. ಶಕ್ತಿಮುಖ ಇರುವಾಗಲೂ ಇಲ್ಲದಾಗಲೂ ಆತಮಾತ್ರ ಜ್ಞಾನಮಯ, ಆನಂದಮಯ.

ಅಧ್ಯಾಸ ಎಂದರೆ ಅಜ್ಞಾನ ಎಂದರ್ಥ. ನಾವು ಎಷ್ಟೆಲ್ಲಾ ಓದಿಕೊಂಡಿದ್ದೇವೆ ಎಂದರೂ ಪರಮಾತ್ಮನ ಪೂರ್ಣಜ್ಞಾನ ನಮಗೆ ಇರುವುದಿಲ್ಲ. ಪರಮಾತ್ಮನೇ ಈ ಜಗತ್ತು ಎಂಬುದೂ ಕೂಡ ಸರಿಯಲ್ಲ. ಅದು ಅಧ್ಯಾಸವೇ! ನಮ್ಮ ಶರೀರ ಜಡ ಮತ್ತು ಆತ್ಮ ಚೇತನ, ಅದರಂತೇ ಈ ಜಗತ್ತು ಜಡ ಮತ್ತು ಪರಮಾತ್ಮ ಅದರಲ್ಲಿ ಸೇರಿಕೊಳ್ಳುವ ಚೇತನ. ವಿದ್ಯುತ್ತು ಪ್ರವಹಿಸಿದಾಗ ಯಂತ್ರ ಕ್ರಿಯಾಶೀಲವಾಗುತ್ತದೆ. ಯಂತ್ರ ಕೆಟ್ಟುನಿಂತಾಗ ಹರಿಯುತ್ತಿರುವ ವಿದ್ಯುತ್ತಿನ ದೋಷ ಅದಾಗಿರುವುದಿಲ್ಲ ಅಲ್ಲವೇ?[ಇದು ಕೂಡ ಕೇವಲ ಹೋಲಿಕೆ, ಸಮರ್ಪಕ ಉದಾಹರಣೆಯಲ್ಲ] ಅದೇ ರೀತಿ ಆತ್ಮ ಹೊರಟುಹೋದಾಗ ಶರೀರ ಶವವೆನಿಸುತ್ತದೆ, ಪರಮಾತ್ಮ ಹೊರಟುನಿಂತಾಗ ಜಗತ್ತು ಪ್ರಳಯದಲ್ಲಿ ಸಮಾಪ್ತವಾಗುತ್ತದೆ! ಪರಿಸಮಾಪ್ತಿಗೊಂಡ ಜಗತ್ತನ್ನು ಆತನ ಶಕ್ತಿಮುಖ ಮತ್ತೆ ಸೃಜಿಸುತ್ತದೆ, ತನ್ನಲ್ಲಿ ವಿಲೀನವಾಗಿರದೇ ತಾನೇ ಮಾಯೆಯಿಂದ ಸೃಜಿಸಿದ ಲೋಕಾಂತರಗಳಲ್ಲಿ ಇರುವ ಆತ್ಮಗಳನ್ನು ಆತ ಮತ್ತೆ ಈ ಜಗದಲ್ಲಿ ಪುನರಪಿ ಜೀವಾತ್ಮಗಳಾಗಿ ತೇಲಿಬಿಡುತ್ತಾನೆ. ಈ ಕುರಿತು ಉಂಟಾಗುವ ಜ್ಞಾನವೇ ನಿಜವಾದ ಜ್ಞಾನವಾಗುತ್ತದೆ, ಮಿಕ್ಕಿದ್ದೆಲ್ಲಾ ಲೌಕಿಕ ವ್ಯಾವಹಾರಿಕ ಜ್ಞಾನವಾಗುತ್ತದೆಯೇ ಹೊರತು ವೇದಾಂತದ ದೃಷ್ಟಿಯಿಂದ ಅದು ಅಧ್ಯಾಸ. ಈ ಜಗತ್ತಿನಲ್ಲಿ ಪುರುಷ ಮತ್ತು ದೈವಗಳ ಅಂತರವಿಷ್ಟೇ: ದೈವತ ಎನ್ನುವ ನಿಷ್ಕಾಮ್ಯ[ಪ್ರತಿಫಲರಹಿತ]ಕರ್ಮವನ್ನು ದೇವರು ನಡೆಸುತ್ತಾನೆ. ಉದಾ: ಸೂರ್ಯ ಬೆಳಗುವುದು, ಸಮುದ್ರದ ನೀರು ಆವಿಯಾಗಿ ಮಳೆಯಾಗುವುದು, ಗಾಳಿಬೀಸುವುದು, ಭೂಮಿಯಲ್ಲಿ ಬಿತ್ತಿದ ಬೀಜಗಳು ಫಲಗಳನ್ನು ಕೊಡುವುದು. ಪೌರುಷ ಎನ್ನುವ ಕರ್ಮಗಳು ಪುರುಷ ಅಥವಾ ಮನುಷ್ಯ ಪ್ರಯತ್ನದಿಂದ ಆಗುವಂಥದ್ದು-ಅದು ಕಾಮ್ಯಕರ್ಮವಾಗಿರುತ್ತದೆ. ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸುವುದು, ಕಚ್ಚಾವಸ್ತುಗಳಿಂದ ವಸ್ತುಗಳನ್ನೂ, ಯಂತ್ರೋಪಕರಣಗಳನ್ನೂ ತಯಾರಿಸಿಕೊಳ್ಳುವುದು, ಸಂಶೋಧನೆ ನಡೆಸಿ ಯಾವುದೋ ಸಮಸ್ಯೆಗೆ ಪರಿಹಾರೋಪಾಯ ಕಂಡುಕೊಳ್ಳುವುದು--ಇಲ್ಲೆಲ್ಲಾ ಪ್ರತಿಫಲ ಬಯಸಿ ಮನುಷ್ಯ ಕೆಲಸಮಾಡುತ್ತಾನೆ. ಪೌರುಷಕ್ಕೆ ದೈವತದ ಸಹಾಯಬೇಕು; ಸೂರ್ಯ ಬೆಳಗದೇ ದಿನಮಾನ ಸಾಧ್ಯವಿಲ್ಲ, ಕಚ್ಚಾವಸ್ತುಗಳಿಲ್ಲದೇ ಮುಂದಿನ ತಯಾರಿಕೆ ಸಾಧ್ಯವಿಲ್ಲ.

ಏನೇನೂ ಅರಿಯದ ಎಡಪಂಥೀಯ ಜನ ಮಾಧ್ಯಮಗಳಲ್ಲಿ ಕೂತು ಬಡಬಡಾಯಿಸುತ್ತಾ ವೇದವಿದ್ವಾಂಸರ ವಿರುದ್ಧ ಕೆಂಡಕಾರುವುದನ್ನು ನೋಡಿದರೆ ಪಾಪ ಎನ್ನಿಸುತ್ತದೆ; ತಿನ್ನುವುದಕ್ಕಾಗಿಯೇ ಹುಟ್ಟಿದ್ದರೆ ಅದನ್ನೇ ಮಾಡುತ್ತಾರೆಯೇ ವಿನಃ ಮತ್ತೇನನ್ನೂ ಅವರು ಯೋಚಿಸುವ ಗೋಜಿಗೂ ಹೋಗುವುದಿಲ್ಲ. ’ಅಥಾತೋ ಬ್ರಹ್ಮ ಜಿಜ್ಞಾಸ’ ಎಂಬ ಸಮಯದಲ್ಲಿ ಬ್ರಹ್ಮಜಿಜ್ಞಾಸೆಗೆ ಅಧಿಕಾರ ಯಾರಿಗೆ ಎಂಬುದನ್ನೂ ಆಚಾರ್ಯರು ಹೇಳುತ್ತಾರೆ[ಪ್ರಾಯಶಃ ಇಂಥವರನ್ನು ನೋಡಿಯೇ ಆಚಾರ್ಯರು ಹೇಳಿರಬೇಕು]: ೧. ನಿತ್ಯಾನಿತ್ಯ ವಿವೇಕ, ೨. ಇಹಾ ಅಮುತ್ರ ಫಲಭೋಗ ವಿರಾಗ, ೩. ಶಮದಮಾದಿ ಸಂಪತ್ತಿ, ೪. ಮುಮುಕ್ಷುತ್ವ ಇವುಗಳ ಬಗ್ಗೆ ಸ್ಥೂಲವಾಗಿ ತಿಳಿಯೋಣ:

೧. ನಿತ್ಯಾನಿತ್ಯ ವಿವೇಕ: ಈ ಲೋಕದಲ್ಲಿ ನಿತ್ಯ[ಸತ್ಯ-ಶಾಶ್ವತ]ವಾದ ಮತ್ತು ಅನಿತ್ಯವಾದ ಪದಾರ್ಥವು ಯಾವುದೆಂಬುದನ್ನು ತಿಳಿದು ನಾವು ನಿತ್ಯದ ಪ್ರಾಪ್ತಿಗೆ ಮನಸ್ಸನ್ನು ಒಲಿಸಿಕೊಳ್ಳಬೇಕು. ಶರೀರ-ಆತ್ಮಗಳಲ್ಲಿ: ಶರೀರ ಅನಿತ್ಯ, ಆತ್ಮ ನಿತ್ಯ. ಬ್ರಹ್ಮ ಮತ್ತು ಜಗತ್ತಿನಲ್ಲಿ: ಬ್ರಹ್ಮ ನಿತ್ಯ ಜಗತ್ತು ಅನಿತ್ಯ. ಜ್ಞಾನ ಮತ್ತು ವಸ್ತುವಿನಲ್ಲಿ: ಜ್ಞಾನ ನಿತ್ಯ, ವಸ್ತು ಅನಿತ್ಯ. ಅಂದರೆ ಬ್ರಹ್ಮ, ಜ್ಞಾನ, ಜೀವಾತ್ಮ ಇವುಗಳು ನಿತ್ಯ, ಇತರೆ ಎಲ್ಲವೂ ಅನಿತ್ಯ ಎಂದಾಯ್ತು! ಇದರ ಹೊಳವೇ ಇಲ್ಲದಿರುವುದೇ ಅವಿದ್ಯೆ.

೨. ಇಹಾ ಅಮುತ್ರ ಫಲಭೋಗ ವಿರಾಗ : ಈ ಲೋಕದ ಫಲಗಳು, ಅನೇಕ ಸುಖಸಾಧನಗಳು ಇವುಗಳಲ್ಲಿ ಆಸಕ್ತಿ ಇರುವ ಜನರಿಗೆ ಬ್ರಹ್ಮಜ್ಞಾನವು ಬರುವುದಿಲ್ಲ! ಯಜ್ಞಯಾಗಾದಿ ಕರ್ಮಗಳಿಂದ ಫಲಾಪೇಕ್ಷಿಯಾಗಿ ಇಷ್ಟಪಟ್ಟು ನಿರಂತರ ಅಂತಹ ಕರ್ಮಗಳನ್ನು ಮಾಡಿದರೂ ಸಹ ಬ್ರಹ್ಮಜ್ಞಾನ ಬರುವುದಿಲ್ಲ! ಅನಿತ್ಯವಾದ ಅಶಾಶ್ವತವಾದ ಫಲಬೇಡ, ನಿತ್ಯವೂ ಮತ್ತು ಶಾಶ್ವತವೂ ಅದ ಫಲಬೇಕು ಎಂಬ ಬಯಕೆ ಅಮುತ್ರವೆನಿಸಿದೆ. ಆದರೆ ಲೌಕಿಕವಾಗಿ, ಲೋಕಾಂತರವಾಗಿ ದೊರೆಯಬಹುದಾದ ಫಲಗಳನ್ನು ತ್ಯಜಿಸುವ ವೈರಾಗ್ಯ ಇರಬೇಕು.

ಇಲ್ಲೇ ಒಂದು ಸಣ್ಣ ಜಿಜ್ಞಾಸೆ ಇರುತ್ತದೆ: ಜೀವಾತ್ಮ ದೇಹವನ್ನು ತ್ಯಜಿಸಿ ಹೊರಟಮೇಲೆ ಆತನಿಗೆ ಲಿಂಗಶರೀರ ಪ್ರಾಪ್ತವಾಗಿರುತ್ತದೆ. ಆ ಲಿಂಗಶರೀರ ರೂಪ ಇಹದಲ್ಲಿ ಮಾಡಿದ ಕರ್ಮಫಲಗಳನ್ನು ಲೋಕಾಂತರದಲ್ಲಿ ಅನುಭವಿಸಿ [ ವಿಶೇಷ ಸುಕೃತಫಲವಾಗಿದ್ದರೆ ಸ್ವರ್ಗ ಸುಖ ಇತ್ಯಾದಿಗಳನ್ನು ಅನುಭವಿಸಿ] ಮತ್ತೆ ಭೂಮಿಗೆ ಮರಳುತ್ತಾನೆ. ಲಿಂಗಶರೀರವನ್ನೂ ಸಹ ಕಿತ್ತೊಗೆದ ಆತ್ಮವೇ ಕೇವಲಾತ್ಮ -ಅದು ಕೈವಲ್ಯ ಅಥವಾ ಮೋಕ್ಷವನ್ನು ಕಾಣುತ್ತದೆ-ಪರಮಾತ್ಮನಲ್ಲಿ ಲೀನವಾಗುತ್ತದೆ. ಕೆಲವರು ನಡೆಸುವ ಪುಣ್ಯಕಾರ್ಯಗಳಿಂದ, ಕೆಲಮಟ್ಟಿಗಿನ ತಪಸ್ಸಿದ್ಧಿಯಿಂದ ಅವರ ಆತ್ಮಗಳು ಲಿಂಗಶರೀರವನ್ನು ಪಡೆದು ಲೋಕಾಂತರದಲ್ಲಿ ಸ್ಥಾಪಿತವಾಗಿರಬಹುದು. ಸಮರ್ಪಕವಾಗಿ ಸಂನ್ಯಾಸ ದೀಕ್ಷೆ ಪಡೆದು ಸಾಧನಾಪಥದಲ್ಲಿ ಮುನ್ನಡೆದ ಸ್ವಾಮಿಗಳೂ ಸಹ ಲಿಂಗಶರೀರದಿಂದ ಬಿಡುಗಡೆಹೊಂದಲು ಇನ್ನೊಂದು ಸಂನ್ಯಾಸಜನ್ಮವನ್ನು ಎತ್ತಬೇಕಾಗಿ ಬರಬಹುದು. ಕೇವಲ ಸಂನ್ಯಾಸಿಯೆನಿಸಿದ ಮಾತ್ರಕ್ಕೆ ಮೋಕ್ಷಪ್ರಾಪ್ತವಾಗುತ್ತದೆ ಎಂಬುದು ಸುಳ್ಳು. ಶರೀರ, ಲಿಂಗಶರೀರಗಳನ್ನು ಮೊಬೈಲಿಗೆ ಹೋಲಿಸಿದರೆ ದೇಹ ಹ್ಯಾಂಡ್ ಸೆಟ್ ಎನಿಸುತ್ತದೆ, ಸಿಮ್ಮು ಜೀವಾತ್ಮವೆನಿಸುತ್ತದೆ. ಸಿಮ್ಮು ಹ್ಯಾಂಡ್ ಸೆಟ್ ನಿಂದ ಹೊರತೆಗೆಯಲ್ಪಟ್ಟರೂ ಅದಕ್ಕೊಂದು ಅಸ್ಥಿತ್ವ ಇರುತ್ತದೆ! ಸಿಮ್ಮಿಲ್ಲದ ಹ್ಯಾಂಡ್ ಸೆಟ್ ಕೆಲಸಮಾಡದು. ಸಿಮ್ಮನ್ನು ಬೇರೇ ನೂತನ ಹ್ಯಾಂಡ್ ಸೆಟ್ ಗೆ ಹಾಕಿದಮೇಲೆ ಅದು ಹೊಸಮೊಬೈಲ್ ಆಗುತ್ತದೆ! ಸಿಮ್ಮಿನ ಸಂಬಂಧೀ ಆರ್ಥಿಕ ಲೆಕ್ಕಾಚಾರ ವ್ಯವಹಾರವನ್ನು ತತ್ಸಂಬಂಧೀ ಒಡಂಬಡಿಕೆಯಿರುವ/ಪೂರೈಸಿದ ಜನ ನೋಡಿಕೊಳ್ಳುತ್ತಾರೆ, ಸಿಮ್ಮನ್ನು ಬಳಸಿ ಇಲ್ಲಸಲ್ಲದ ಕೆಟ್ಟಕರೆಗಳನ್ನೋ ದುರುಪಯೋಗವನ್ನೋ ಮಾಡಿದ್ದರೆ ಪೋಲೀಸರು ನೋಡಿಕೊಳ್ಳುತ್ತಾರೆ, ಸಿಮ್ಮಿನ ಸಹಾಯದಿಂದ ನಾವು ಎಲ್ಲರೊಟ್ಟಿಗೆ ಸಂವಹಿಸುತ್ತೇವೆ. ಒಂದೊಮ್ಮೆ ಸಿಮ್ಮನ್ನು ಬೇಡವೆಂದು ಬಿಸುಟರೂ ಸಿಮ್ಮಿನ ದಾಖಲೆಗಳು ಹೋಗುವುದಿಲ್ಲ! ಸಿಮ್ಮನ್ನು ಬೇಡಾ ಎಂದು ಸಂಬಂಧಿಸಿದ ಕಂಪನಿಗೆ ಸರ್ರೆಂಡರ್ ಮಾಡಿಬಿಟ್ಟರೆ ಅಲ್ಲಿಗೆ ಬಾಧೆ ಮುಗಿಯುತ್ತದೆ. ವಾಸ್ತವವಾಗಿ ಇಂತಹ ಹೋಲಿಕೆಗಳನ್ನು ಕೊಡುವುದು ಸಮಂಜಸವಲ್ಲ, ಆದರೂ ಸುಲಭವಾಗಿ ಅರಿಯಲು ಇದೊಂದು ಪ್ರಯತ್ನವಷ್ಟೇ.    

೩. ಶಮದಮಾದಿ ಸಂಪತ್ತಿ: ಮನುಷ್ಯನ ಮನಸ್ಸು ಶಾಂತವಾಗಿರಬೇಕು, ಇಂದ್ರಿಯಗಳ ನಿಗ್ರಹವಿರಬೇಕು, ನಮ್ಮ ಶರೀರದ ಆರೋಗ್ಯಕ್ಕೂ ಬೇರೇ ಕೆಲಸಗಳಿಗೂ ಮನಸ್ಸಿನ ದೃಢತೆಯೇ ಕಾರಣವಾಗಿರುತ್ತದೆ. ಮನಸ್ಸನಮೇಲೆ ನಾವು ಆರೂಢರಾಗಬೇಕು. ಮನಸ್ಸು ಪಕ್ವವಾಗದಿದ್ದರೆ ಆರೂರುಕ್ಷುವಾಗುತ್ತೇವೆ.

ಆರೂರುಕ್ಷೋರ್ಮುನೇರ್ಯೋಗಂ ಕರ್ಮಕಾರಣ ಮುಚ್ಯತೇ |
ಯೋಗಾರೂಢಸ್ಯ ತಸ್ಯೈವ ಶಮಃ ಕಾರಣ ಮುಚ್ಯತೇ ||

                      ----ಗೀತೆ [ಹೀಗೆ ಹೇಳಿದೆ]

೪. ಮುಮುಕ್ಷುತ್ವ : ಮೋಕ್ಷದಲ್ಲಿ ನಂಬಿಕೆಯಿರಬೇಕು. ತನಗೆ ಮೋಕ್ಷವಾಗುವುದೆಂಬುದರಲ್ಲಿ ಸಂದೇಹವಿರಬಾರದು. ಈ ಶರೀರವನ್ನು ಬಿಟ್ಟುಹೋದಮೇಲೆ ಮತ್ತೆ ಜರಾಮರಣ ಚಕ್ರದಲ್ಲಿ ಸುತ್ತುವುದನ್ನು ತಪ್ಪಿಸಿಕೊಳ್ಳುವ ಇಚ್ಛೆ ಅತೀವವಾಗಿರಬೇಕು. ಕರ್ಮಗಳಿಂದ ವಿಮುಕ್ತನಾದಾಗ ಮೋಕ್ಷವನ್ನು ಪಡೆಯಲು ಸಾಧ್ಯ ಎಂಬ ಶ್ರದ್ಧಾವಿಶೇಷವಿರಬೇಕು. ಆ ಮೋಕ್ಷಕ್ಕಾಗಿ ಸದಾ ಪ್ರಯತ್ನಿಸಬೇಕು. ಮೋಕ್ಷವೊಂದನ್ನುಳಿದು ಇನ್ನೇನನ್ನೂ ಅಪೇಕ್ಷಿಸಬಾರದು. ಈ ಲೋಕಕ್ಕೆ ತನ್ನಿಂದಾಗಬಹುದಾದ ಶ್ರೇಯಸ್ಸನ್ನು ಒದಗಿಸಿಕೊಡುವಲ್ಲಿ ಚಿಂತನೆ ನಡೆಸುತ್ತಾ ಅದ್ವೈತವನ್ನು ಅನುಭವಿಸಬೇಕು.

ಎಲ್ಲಿಯವರೆಗೆ ನಾವು ಮೂರ್ತಿ ಪೂಜೆಯನ್ನು ಮಾಡುತ್ತೇವೋ ಅಲ್ಲೀವರೆಗೂ ದೇವರು ಬೇರೇ ನಾವು ಬೇರೇ ಎಂದೇ ಅರ್ಥ! ನಾವು ಅವನಲ್ಲಿ ಒಂದಾದಾಗ ಅದು ಅ-ದ್ವೈತವಾಗುತ್ತದೆ; ದ್ವೈತರಹಿತವಾಗುತ್ತದೆ! ಹಾಗಾದರೆ ಅದ್ವೈತದ ಸನ್ಯಾಸಿಗಳೂ ಸಾಧುಸಂತರೂ ಸಹ ಪೂಜೆ-ಪುನಸ್ಕಾರಗಳನ್ನು ಮಾಡುತ್ತಾರಲ್ಲಾ ಎಂದಿರೋ ? -ಅದು ಕೇವಲ ಲೋಕಹಿತಾರ್ಥವಾಗಿ ಮಾತ್ರ. ಸ್ವಹಿತಾರ್ಥವಾಗಿ ಅವರು ಯಾವ ಕರ್ಮವನ್ನೂ ಮಾಡುವ ಅಧಿಕಾರವನ್ನು ಹೊಂದಿರುವುದಿಲ್ಲ! ಪೂಜೆ ಕೂಡ ಕರ್ಮವೇ ಆಗುವುದರಿಂದ ಇಲ್ಲಿ ಹೇಳುತ್ತಿದ್ದೇನೆ: ಪೂಜೆಯನ್ನು ಮಾಡುವುದು ಶಿಷ್ಯಂದಿರಿಗೆ ಮಾರ್ಗಸೂಚಿಸುವ ಸಲುವಾಗಿ, ಏಕಾಗ್ರತೆ ಹುಟ್ಟದ ಜನರನ್ನು ಸಾಧನಾಪಥದೆಡೆಗೆ ಸೆಳೆಯುವ ಸಲುವಾಗಿ. ಅದ್ವೈತವನ್ನು ಸಾರುವ ಅವರೇ ದೇವರೆಂದು ಪ್ರತ್ಯೇಕ ಗುರುತಿಸಲ್ಪಟ್ಟ ವಿಗ್ರಹಗಳಿಗೆ ಪೂಜೆಮಾಡಿದ ನಂತರ ನಮಸ್ಕರಿಸುವಾಗ ಸಾಮಾನ್ಯವಾಗಿ ಅದನ್ನು ನೋಡಬಾರದು ಎಂದಿದೆ; ಯಾಕೆಂದರೆ ಅಲ್ಲಿ ದ್ವೈತಭಾವ ಬರುತ್ತದಲ್ಲಾ ಎಂಬ ಕಾರಣಕ್ಕಾಗಿ. ಶಂಕರರು ಭಕ್ತಿಮಾರ್ಗವನ್ನು ಪುರಸ್ಕರಿಸಲಿಲ್ಲ, ಯಾಕೆಂದರೆ ಅದು ಜ್ಞಾನಕ್ಕೆ ಹೇಳಿದ ಮಾರ್ಗವಲ್ಲ. ಜ್ಞಾನವೇ ಬ್ರಹ್ಮ ಎನ್ನುತ್ತದೆ ವೇದ! ಹಾಗೆ ಜ್ಞಾನಮಯವಾದುದನ್ನು ಹುಡುಕಿ ಹೊರಟವರು ಶಂಕರರು. ಅದಕ್ಕೆಂದೇ ಸಿಕ್ಕಸಿಕ್ಕವರಿಗೆಲ್ಲಾ ದೀಕ್ಷೆಕೊಟ್ಟು   ಸನ್ಯಾಸಿಗಳನ್ನಾಗಿಸುವ ಪರಿಪಾಠ ಅದ್ವೈತ ಸಿದ್ಧಾಂತದಲ್ಲಿ ಇರುವುದಿಲ್ಲ.

ಸಂನ್ಯಾಸಿಗಳಾಗಲೂ ಕೂಡ ಹಲವು ಕಠಿಣತಮ ಪರೀಕ್ಷೆಗಳಿವೆ, ಅವುಗಳಲ್ಲಿ ತೇರ್ಗಡೆಯಾದರೆಮಾತ್ರ ಆ ದೀಕ್ಷೆ ನೀಡಲಾಗುತ್ತದೆ. [ಅಲ್ಲಿ ಲಂಚ,ರುಷುವತ್ತುಗಳು ಇರುವುದಿಲ್ಲ!!] ಸಂನ್ಯಾಸಿಗಳಿಗೆ ಪೂರ್ವಾಶ್ರಮದ ನಿಕಟ ಸಂಬಂಧ ಕಡಿದುಹೋಗುತ್ತದೆ, ತಮ್ಮ ಮಠಗಳಲ್ಲಿ,ಮಠಗಳ ವ್ಯವಹಾರಗಳಲ್ಲಿ ಸಂಬಂಧಿಕರನ್ನು ಹತ್ತಿರ ಬಿಟ್ಟುಕೊಳ್ಳಬಾರದು ಎಂಬ ನಿಯಮವಿದೆ. ಆದಿಶಂಕರರೇ ಸ್ವತಃ ಅದಿಷ್ಟನ್ನೂ ಹೇಳಿಬಿಟ್ಟಿದ್ದಾರೆ. ಆಮ್ನಾಯ ಮಠಗಳಲ್ಲಿ ಉತ್ತರದವರನ್ನು ದಕ್ಷಿಣಕ್ಕೂ ದಕ್ಷಿಣದವರನ್ನು ಉತ್ತರಕ್ಕೂ ಅಲ್ಲದೇ ಪೂರ್ವದವರನ್ನು ಪಶ್ಚಿಮಕ್ಕೂ ಪಶ್ಚಿಮದವರನ್ನು ಪೂರ್ವಕ್ಕೂ ಪೀಠಾಧೀಶರನ್ನಾಗಿಸಿದ್ದರು ಯಾಕೆಂದರೆ ಸಂನ್ಯಾಸಿಗಳಿಗೆ ತನ್ನ ಪ್ರಾಂತ, ತನ್ನ ಮನೆ-ಮಠ, ತಾನು ತನ್ನದು ಎಂಬ ವ್ಯಾಮೋಹ ನಿಶ್ಶೇಷವಾಗಿಬಿಡಬೇಕು ಎಂಬುದು ಅವರ ಇರಾದೆಯಾಗಿತ್ತು. ಸಂನ್ಯಾಸಿಗಳು ಮಠದಲ್ಲೇ ಇರಬೇಕೆಂಬುದೇನೂ ಇಲ್ಲ, ಸಂನ್ಯಾಸದ ಹಲವುವಿಧಗಳಲ್ಲಿ ಯೋಗ ಸಂನ್ಯಾಸವೂ ಒಂದು-ಅಲ್ಲಿ ಲೌಕಿಕ ವ್ಯವಹಾರವೆಂಬುದರ ಅಗತ್ಯತೆ ಉಂಟಾಗುವುದೇ ಇಲ್ಲ-ಇವತ್ತಿಗೂ ಹಿಮಾಲಯದಲ್ಲಿ ಇಂಥಾ ಯೋಗಿಗಳು ನೆಲೆಸಿದ್ದಾರೆ!  Somthing thrown upwards will fell down in few seceonds because of the gravitational force as we know. We use rockets to reach the space, which can't be pulled down by this gravitation force! Once after we reach the space we can be there for as long as we are prepared, similarly to comeout out of the birth-death cycle we must use our Atma as a rocket, [where 'linga shareera' is gravitational force pulling us into the same cycle.] To empower the rocket before its launch, we must fill that rocket with the fuel called 'jjnaana' using 'vairaagya', once launched it must reach to the space called 'paramaatma' where we remain forever!      

ಈ ಅರ್ಹತೆಗಳು ನಮ್ಮಲ್ಲಿದ್ದರೆ ನಾವು ಬ್ರಹ್ಮಸೂತ್ರದ ಪೂರ್ಣಪಾಠವನ್ನು ಸಮರ್ಪಕವಾಗಿ ಅರಿಯಲು ಸಾಧ್ಯ ಎಂಬುದಾಗಿ ಆಚಾರ್ಯರು[ಆಚರಿಸಿ ತೋರಿಸುವವರನ್ನು ಆಚಾರ್ಯರು ಎನ್ನುತೇವೆ] ತಿಳಿಸಿದ್ದಾರೆ. ಹೀಗೇ ಆಯಾಯ ಓದಿನ ಮಟ್ಟಕ್ಕೆ, ಬೆಳವಣಿಗೆಗೆ ಕೆಲವು ಅಧಿಕಾರಗಳು ಬೇಕಾಗುತ್ತವೆ. ಅಧಿಕಾರವಿಲ್ಲದೇ ಮುನ್ನುಗ್ಗಿದರೆ ಅಪಾರ್ಥವನ್ನು ಕಲ್ಪಿಸಿಕೊಳ್ಳುವ ನಮಗೆ ಇದ್ದಿದ್ದೂ ಅಧ್ವಾನವಾಗಿ ನಾವು ಭ್ರಷ್ಟರಾಗುತ್ತೇವೆ, ಎಡಪಂಥೀಯರಾಗುತ್ತೇವೆ.

ಹುಚ್ಚನೊಬ್ಬನ ತಲೆಯಲ್ಲಿರುವ ವಿಷಯವನ್ನು ಪರಿಪೂರ್ಣವಾಗಿ ಬದಲಾಯಿಸಲು ನಾವು ಶಕ್ತರಲ್ಲ, ಎಷ್ಟೇ ಯತ್ನಿಸಿದರೂ ಹೋದ ಜೀವವನ್ನು ಮರಳಿ ತರಲು ನಮ್ಮಿಂದ ಸಾಧ್ಯವಿಲ್ಲ, ಪಂಚಭೂತಗಳಾದ ಆಕಾಶ-ಭೂಮಿ-ವಾಯು-ಅಗ್ನಿ-ನೀರು ಇವುಗಳನ್ನು ನಾವು ಸೃಷ್ಟಿಸಲು ಸಾಧ್ಯವಿಲ್ಲ ಮತ್ತು ಅವುಗಳ ಸೃಷ್ಟಿ ಹೇಗಾಯ್ತೆಂಬ ಮಾಹಿತಿ ನಮ್ಮಲ್ಲಿಲ್ಲ[ಮೊಂಡು ವಾದ ಮಾಡುವವರು ಕ್ಷಮಿಸಿ], ಸೂರ್ಯ-ಚಂದ್ರ-ಗ್ರಹ-ತಾರೆಗಳ ದಿಕ್ಕು-ದೆಸೆ ನಿಯಂತ್ರಣ ನಮ್ಮ ಕೈಲಿಲ್ಲ. ಬೆಟ್ಟ, ಗುಡ್ಡ, ನದಿ, ಸರೋವರ, ಕಾಡು ಇವುಗಳನ್ನು ದೈವತ ರೂಪಿಸಿದಂತೇ ರೂಪಿಸಲು ನಮ್ಮಿಂದ ಆಗುವುದಿಲ್ಲ, ವಿಜ್ಞಾನದ ನಮ್ಮೆಲ್ಲಾ ಸಂಶೋಧನೆಗಳಿಗೂ ಮೂಲವಸ್ತು ದೈವತದ ಕೊಡುಗೆಯೇ-ನಮ್ಮದಲ್ಲ ಎಂದಾಗ ನಮ್ಮ ಜ್ಞಾನಕ್ಕೆ ಮಿತಿಯಿದೆ. ಜನ್ಮಜಾತವಾಗಿ ಬಂದ ನಮ್ಮ ಜ್ಞಾನ ಸೀಮಿತವಾಗಿದೆ, ಬ್ರಹ್ಮವೆಂಬ ಜ್ಞಾನ ಅಪರಿಮಿತವಾಗಿದೆ. ಬ್ರಹ್ಮ ಎಂದರೆ ಶಿವ-ವಿಷ್ಣು-ಬ್ರಹ್ಮ ಈ ಸಾಲಿಗೆ ಸೇರ್ರಿದ ಬ್ರಹ್ಮನಲ್ಲ, ಎಲ್ಲಕ್ಕೂ ಮೂಲವಾದ ಪರಬ್ರಹ್ಮನೇ ಆಗಿದ್ದಾನೆ. ಪರಬ್ರಹ್ಮನ ಪರಮಾತ್ಮನ ತುಣುಕೊಂದು ಆತ್ಮವಾಗಿ-ಜೀವಾತ್ಮವಾಗಿ ದೇಹವನ್ನು ಪಡೆಯುತ್ತದೆ, ಕರ್ಮಬಂಧನಕ್ಕೊಳಪಟ್ಟು ಜರಾಮರಣ ಚಕ್ರದಲ್ಲಿ ಸುತ್ತತ್ತದೆ-ಮೂಲದ ಅರಿವಿಲ್ಲದೇ. ಆತ್ಮಶಕ್ತಿ ದೇಹವನ್ನು ಆಶ್ರಯಿಸಿದಾಗ ಅದಕ್ಕೆ ಮಾಯೆ ಮುಸುಕುತ್ತದೆ; ಕರ್ಮಬಂಧನಗಳಿಂದ ಶಕ್ತಿ ಪ್ರಕಟಗೊಳ್ಳಲಾಗದೇ ಕುಗ್ಗುತ್ತದೆ. ಬಂಧಿಯಾದ ಆತ್ಮ ಬಿಡುಗಡೆ ಬಯಸಿದರೆ ಅದಕ್ಕೆ ಅವಕಾಶ ಸಿಗುತ್ತದೆ, ಆ ಅವಕಾಶ ಪ್ರಾಪ್ತವಾಗಲು ಕೆಲವು ನಿಯಮಗಳು ಹೇಳಲ್ಪಟ್ಟಿವೆ. ಒಂದೇ ಜನ್ಮದಲ್ಲಿ ಆಗದಿದ್ದರೂ ಜನ್ಮಾಂತರಗಳಲ್ಲಿ ಮುಮುಕ್ಷುತ್ವವನ್ನು ಸಾಧಿಸಿಕೊಂಡು ಮೋಕ್ಷ[ಮೋಹ ಕ್ಷಯ]ವನ್ನು ಪಡೆಯಬಹುದಾಗಿದೆ; ಪೂರ್ತಿಯಾಗಿ ಮೋಹಕ್ಷಯಗೊಂಡ ಮೇಲೆ ಪರಮಾತ್ಮನೇ ನಾವಾಗಬಹುದಾಗಿದೆ! -ಆದರೆ ಅದಕ್ಕೆ ಅಚಲ ನಿರ್ಧಾರಬೇಕು, ಸಾಧನೆ ಬೇಕು. ಎಲ್ಲಿಯವರೆಗೆ ದ್ವೈತವನ್ನು ಕಾಣುತ್ತೇವೋ ಅಲ್ಲೀವರೆಗೂ ನಾವು ಪರಮಾತ್ಮನಲ್ಲಿ ಲೀನವಾಗಲು ಸಾಧ್ಯವಿಲ್ಲ, ಅ-ದ್ವೈತವಾಗುವುದಿಲ್ಲ!!  

ಅಥರ್ವವೇದದಲ್ಲಿ ಬರುವ ಗಣಪತಿ ಉಪನಿಷತ್ತು ಪರಬ್ರಹ್ಮನನ್ನೇ ವರ್ಣಿಸುವ ಅತ್ಯಂತ ಶ್ರೇಷ್ಠ ಮಂತ್ರ ಎಂಬುದು ನನ್ನ ಅನುಭೂತಿ. ಗಣಪತಿ ಅಥವಾ ಗಣೇಶ ಎಂದರೆ ಶಿವ-ಪಾರ್ವತಿಯರ ಪುತ್ರ ಎಂದಷ್ಟೇ ನಾವು ತಿಳಿದುಕೊಂಡಿದ್ದೇವೆ. ಗಣಗಳಿಗೆ ಒಡೆಯ ಗಣಪತಿಯಾಗುತ್ತಾನೆ! ಈ ಜಗತ್ತಿನಲ್ಲಿ ಇರುವ ಎಲ್ಲಾ ಗಣಗಳಿಗೂ ಒಡೆಯ ಗಣಪತಿಯೇರ್ ಸರಿ; ಆತ ಪರಬ್ರಹ್ಮನೇ ಸರಿ. ಹೋಮ-ಹವನ-ಯಜ್ಞ-ಯಾಗಾದಿಗಳಲ್ಲಿ ಬ್ರಹ್ಮನಿಗೆ ಹವಿಸ್ಸನ್ನು ಸಮರ್ಪಿಸುವುದಿಲ್ಲ. ಆದರೆ ಅಂತಹ ಹೋಮಗಳಲ್ಲಿ ಬ್ರಹ್ಮಸ್ಥಾನವೆಂಬ ಜಾಗದಲ್ಲಿ ಗೌರವದಿಂದ ಬ್ರಹ್ಮನನ್ನು ಕಲ್ಪಿಸಿಕೊಂಡು, ಆಚಾರವಂತ ಬ್ರಾಹ್ಮಣ ಪುರೋಹಿತನೊಬ್ಬನನ್ನು ಕೂರಿಸಲಾಗುತ್ತದೆ! ಬ್ರಹ್ಮನ ಸಮ್ಮುಖದಲ್ಲಿ ದೇವತೆಗಳಿಗೆ ಹವಿಸ್ಸು[ಹೋಮಕ್ಕೆ ಹಾಕುವ ಸಾಮಗ್ರಿ] ಸಮರ್ಪಿಸಲಾಗುತ್ತದೆ."ಬ್ರಹ್ಮಣೇಸ್ವಾಹಾ" ಎಂಬ ಉಕ್ತಿ ಕೇಳಿಬರುವುದಿಲ್ಲ, ಒಂದೊಮ್ಮೆ ಅಪರೂಪದಲ್ಲಿ ಬಂದರೂ ಅದು ಪರಬ್ರಹ್ಮನ ಕುರಿತಾದದ್ದಲ್ಲ; ಅಜ-ಹರಿ-ಹರರ ಸಾಲಿಬಲ್ಲಿರುವ ಬ್ರಹ್ಮನ ಕುರಿತಾದದ್ದು.

ಓಂ ನಮಸ್ತೇ ಗಣಪತಯೇ |
ತ್ವಮೇವ ಪ್ರತ್ಯಕ್ಷಂ ತತ್ವಮಸಿ| ತ್ವಮೇವ ಕೇವಲಂ ಕರ್ತಾಸಿ| ತ್ವಮೇವ ಕೇವಲಂ ಧರ್ತಾಸಿ| ತ್ವಮೇವ ಕೇವಲಂ ಹರ್ತಾಸಿ| ತ್ವಮೇವ ಸರ್ವಂ ಖಲ್ವಿದಂ  ಬ್ರಹ್ಮಾಸಿ | ತ್ವಂ ಸಾಕ್ಷಾದಾತ್ಮಾಸಿ ನಿತ್ಯಮ್|

ಓಂ ಎಂದು ಆತನನ್ನು ಸಂಬೋಧಿಸಿ, ನೀನೇ ತತ್ವಮಸಿ, ನೀನೇ ಕರ್ತಾ, ಧರ್ತಾ, ಹರ್ತಾ ಮತ್ತು ನಮ್ಮ ಆತ್ಮವೇ ನೀನು ಎಂಬುದನ್ನು ಗಣಪತ್ಯಥರ್ವಶೀರ್ಷದಲ್ಲಿ ಕಾಣುತ್ತೇವೆ. 

ಮುಂದೆ ಹೋಗುತ್ತಾ

ತ್ವಂ ಗುಣತ್ರಯಾತೀತಃ| ತ್ವಂ ದೇಹತ್ರಯಾತೀತಃ| ತ್ವಂ ಕಾಲತ್ರಯಾತೀತಃ| ತ್ವಮವಸ್ಥಾತ್ರಯಾತೀತಃ| ತ್ವಂ ಮೂಲಾಧಾರಾಸ್ಥಿತೋಸಿ ನಿತ್ಯಮ್| ತ್ವಂ ಶಕ್ತಿತ್ರಯಾತ್ಮಕಃ| ತ್ವಾಂ ಯೋಗಿನೋ ಧ್ಯಾಯಂತಿ ನಿತ್ಯಮ್|

ಎಂದು ಹೇಳಲಾಗಿದೆ. ಅಲ್ಲದೇ |ತ್ವಂ ಜ್ಞಾನಮಯೋ ವಿಜ್ಞಾನಮಯೋಸಿ| ಎಂದೂ ಹೇಳಲ್ಪಟ್ಟಿದೆ. ಹೀಗೇ ಯುಗಯುಗಗಳ ಪರ್ಯಟನೆಯಲ್ಲಿ ಅನಿತ್ಯವಾದ ಜಗತ್ತು ಸತ್ತು ಹುಟ್ಟುತ್ತಾ, ಮತ್ತೆ ಜೀವರ ಜೀವಸಖರಾಗಿ ಹುಟ್ಟುವ ಮುನಿಜನರ ಸಹಸ್ರಸಹಸ್ರವರ್ಷಗಳ ಶ್ರಮಕ್ಕೆ ಪರಮಾತ್ಮ ಜ್ಞಾನಧಾರೆಯನ್ನು ನೀಡುತ್ತಾನೆ. ಅಂತಹ ದೀರ್ಘತಮ  research & develoment ನಡೆಸುವಾಗ ಋಷಿಗಳಿಗಾಗುವ ಅನುಭೂತಿ ಎಂಥಾದ್ದು ಎಂಬುದು ಮಿತ/ಪೀತಮನಸ್ಕರಾದ ನಮಗೆ ಹೇಳಲಸಾಧ್ಯ. ಹೇಗೆ ವಿಜ್ಞಾನದ ಕೃಷಿಗೆ ನಮ್ಮಲ್ಲಿ ಮಹತ್ವ ಇದೆಯೋ ಹಾಗೇ ಅಂದಿನಕಾಲಕ್ಕೆ ಭಗವಂತ ಋಷಿಗಳಿಗೆ ಅಂತಹ ಮಹತ್ವ ದೊರೆಯುವಂತೇ ಸಮಾಜವನ್ನು ಸಂಘಟಿಸಿದ್ದ-ಸಂಘಟಿಸಿದ್ದಾನೆ-ಸಂಘಟಿಸುತ್ತಾನೆ. Those who don't know the value of such Vedas, Shatras & Vedanta, tell evrything is baseless or menaningless; why becuase they can't understand meaning of such Vedic Hymns/Mantras. Leftists simply blame Brahmins telling "These Brahmins are chanting some shlokas & don't translate them into other languages, inorder to run their business[pooja-porohitya] to mint money from the general public & make the people foolish, if at all if they translate them, we could realise what they are telling. Beacuse of the faith & belief what our ancestors have created in our mind, we are following blindly whatever these Brahmins say." But foreigners have made better efforts to understand the meanings of Vedas/Shatras to find hidden tresures & pleasures. Leftists, before declaring anything is meaningless must try to get into the stemcell details of such immortal tresures, then only they can atleast sense a bit of aroma of Purity which is Divinity. 

ನಾಲ್ಕು ವೇದಗಳು, ಹತ್ತು ಉಪನಿಷತ್ತುಗಳು, ಆರು  ದರ್ಶನಗಳು, ಆರು ವೇದಾಂಗಗಳು, ಇವುಗಳನ್ನೆಲ್ಲಾ ಜನಸಾಮಾನ್ಯರು ಅರ್ಥವಿಸಿಕೊಳ್ಳಲು ಸಮಯ ವ್ಯಯಿಸುವುದು ಕಷ್ಟ ಎಂಬ ದೃಷ್ಟಿಯಿಂದಲೇ ವೇದವ್ಯಾಸರು ಮಹಾಭಾರತ ಮತ್ತು ಅದರ ಅಂಗವಾಗಿ ಭಗವದ್ಗೀತೆಯನ್ನು ಒದಗಿಸಿದ್ದಾರೆ. ಇವುಗಳನ್ನೆಲ್ಲಾ ಕಾಪಿಡಲು ಶ್ರಮಿಸಿದ, ಇವತ್ತಿಗೂ ಅವುಗಳನ್ನು ಉಪಾಸಿಸಿ, ಜನಸಂದೋಹಕ್ಕೆ ತಿಳಿಸಿಕೊಡುವ ಜನಸಮುದಾಯವನ್ನು ಎಡಪಂಥೀಯರು ವಿಚಿತ್ರಗತಿಯಲ್ಲಿ ಹೀಗಳೆಯುವುದನ್ನು ನೋಡಿದಾಗ ನಾನು ಹೇಳಬಯಸಿದ್ದು ಇಷ್ಟೇ: ಸನಾತನ ಪರಂಪರೆಯಲ್ಲಿ ಯಾರಮೇಲೂ ಯಾವುದೇ ಒತ್ತಡವಿಲ್ಲ. ಧರ್ಮಗ್ರಂಥವಾದ ಗೀತೆಯನ್ನು ನಿತ್ಯವೂ ಪಠಿಸಲೇಬೇಕೆಂಬ ಕಡ್ಡಾಯವನ್ನು ಧರ್ಮ ಹೇರಲಿಲ್ಲ! ಬೇಕಾದ್ದನ್ನು ಬೇಕಾದಾಗ ಓದಬಹುದಾಗಿದೆ, ತಿಳಿದುಕೊಳ್ಳಬಹುದಾಗಿದೆ. ಈ ಎಲ್ಲದರ ಅನುವಾದಗಳನ್ನೂ ಅರ್ಥಪುಸ್ತಿಕೆಗಳನ್ನೂ ನಿಸ್ಪೃಹರನೇಕರು ಪ್ರತಿಫಲಾಪೇಕ್ಷೆಯಿಲ್ಲದೇ ಬರೆದಿದ್ದಾರೆ. ಯಾವುದನ್ನೂ ಓದದೇ ಏಕಾಏಕಿ ಮಾಧ್ಯಮವಾಹಿನಿಗಳಲ್ಲಿ ಕುಳಿತು ವೈದಿಕ ವಿದ್ವಾಂಸರನ್ನು ಅವಹೇಳನ ಮಾಡುವುದು ಸನಾತನ ಧರ್ಮಕ್ಕೆ ಮಾಡುವ ಅಪಚಾರವಾಗುತ್ತದೆ. ಟಿ.ಆರ್.ಪಿ ರೇಟ್ ಜಾಸ್ತಿಮಾಡಿಕೊಳ್ಳುವ ಸಲುವಾಗಿ ಏನೂ ಗೊತ್ತಿಲ್ಲದ[ಎಣ್ಣೆಗುಡುಕ] ಎಡಪಂಥೀಯರನ್ನು ಆಹ್ವಾನಿಸಿ, ಜೊತೆಯಲ್ಲಿ ವೈದಿಕ ವಿದ್ವಾಂಸರನ್ನೂ ಕೂರಿಸಿ ಚರ್ಚೆ ನಡೆಸುವುದು ವಾಹಿನಿಗಳ ಸಂಪಾದಕರುಗಳಿಗೆ ಶೋಭೆತರುವ ಕೆಲಸವಲ್ಲ; ಒಂದೊಮ್ಮೆ ತೀರಾ ಅಪದ್ಧ ಪರಿಕ್ರಮಗಳು ನಡೆದರೆ ಅಂಥಾ ಸಂಪಾದಕರುಗಳ ವಿರುದ್ಧ ಸನಾತನಿಗಳನೇಕರು ಕ್ರಮ ಜರುಗಿಸುವಲ್ಲಿ ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನು ರವಾನಿಸಬಯಸುತ್ತೇನೆ.     


Wednesday, February 6, 2013

ಗಾದೆ ಸುಳ್ಳಾದರೂ ವೇದ ಸುಳ್ಳಾಗದಲ್ಲಾ !!

ಚಿತ್ರಋಣ : ಅಂತರ್ಜಾಲ 
ಗಾದೆ ಸುಳ್ಳಾದರೂ ವೇದ ಸುಳ್ಳಾಗದಲ್ಲಾ !! 

ಹುಟ್ಟಿಸಿದ ದೇವರು ಹುಲ್ಲನ್ನು ಮೇಯಿಸಲಾರ ಎಂಬುದು ನಮ್ಮಲ್ಲಿನ ಗಾದೆ. ಆದರೆ ಹುಲ್ಲನ್ನು ಮೇಯುವ ಹಣೆಬರಹವೇ ಜೀವಿಯ ಹಣೆಯಲ್ಲಿ ಬರೆದಿದ್ದರೆ ಅದನ್ನು ಹುಟ್ಟಿಸಿದ ದೇವರೂ ತಪ್ಪಿಸಲಾರನೇನೋ. ಜಗವನ್ನಾಳುವ ಬಹುರೂಪೀ ಶಕ್ತಿಗೆ ಅದರದ್ದೇ ಆದ ಕೆಲವು ನಿಯಮ-ನಿಬಂಧನೆಗಳಿವೆ: ಅವು ’ಇಂಡಿಯಾ’ದ ಪ್ರಜಾತಂತ್ರದ ಹಾಗೇ ಒಬ್ಬರಿಗೊಂದು ಇನ್ನೊಬ್ಬರಿಗಿನ್ನೊಂದು ಎನ್ನುವ ಪರಿಭೇದ ಹೊಂದಿರುವುದಿಲ್ಲ; ಆದರೆ ಆ ಶಕ್ತಿಯ ಮೂಲ ನಿಯಮಗಳ ಅರಿವು ನಮ್ಮಲ್ಲಿ ಬಹುತೇಕರಿಗೆ ಇರುವುದಿಲ್ಲ! ಆರ್ಷೇಯ ಮಹಾ ಋಷಿಗಳನೇಕರು ತಮ್ಮ ಸುದೀರ್ಘ, ಅಖಂಡ ತಪಸ್ಸಿನ ಮೂಲಕ ಆ ಲೀಲೆಗಳನ್ನು ಅರಿತರು. ಸಹಸ್ರಾರು ವರ್ಷಗಳ ಕಾಲ ಬದುಕುವ ಅರ್ಹತೆಯಿದ್ದ ಅವರ ಅವಿರತ ಕಠಿಣ ಪರಿಶ್ರಮಕ್ಕೆ ಭಗವಂತನೆಂಬ ಶಕ್ತಿ ಕರುಣೆದೋರಿತು. ಕೆಲವರು ಧ್ಯಾನಾಸಕ್ತರಾಗಿ ಕುಳಿತು ಸಮಾಧಿ ಸ್ಥಿತಿಯಲ್ಲಿದ್ದಾಗ ಅವರನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದ [ಶಿಷ್ಯರು] ಇನ್ನೂ ಕೆಲವರು ಪಕ್ಕದಲ್ಲಿ ಎಚ್ಚೆತ್ತಿದ್ದರು. ಐಹಿಕ ದೇಹದ  ಪ್ರಜ್ಞೆಯಿಲ್ಲದ ಗುರುಗಳ ಬಾಯಿಂದ, ಸಮಾಧಿಸ್ಥಿತಿಯಲ್ಲಿ ಅವ್ಯಾಹತವಾಗಿ ಹೊರಹರಿದ ಧ್ವನಿಗೆ ಅವರು ಕಿವಿಗೊಟ್ಟರು. ಗುರುಗಳಿ ಕಲಿಸಿದ್ದ ಶ್ರದ್ಧೆ-ಭಕ್ತಿಯ ತೊಡಗಿಕೊಳ್ಳುವಿಕೆಯಿಂದ ಅಪಾರವಾದ ಮನೋಬಲವನ್ನು ಹೊಂದಿದ್ದ ಶಿಷ್ಯರು ಗುರುಗಳು ಅನಿರೀಕ್ಷಿತವಾಗಿ ಬಾಯಿಂದ ಉದ್ಗರಿಸಿದ ಮಾಹಿತಿಯನ್ನು ಮನದಲ್ಲಿ ಶೇಖರಿಸಿಕೊಂಡರು. ಶ್ರುತವಾಗಿ ಶೇಖರಿಸಿಕೊಂಡ ಆ ಮಾಹಿತಿಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಸಲುವಾಗಿ ತಮ್ಮ ಮುಂದಿನ ಶಿಷ್ಯರುಗಳಿಗೆ ಬಾಯಿಪಾಠವಾಗಿ ಹೇಳಿಕೊಟ್ಟು, ಅದರ ಅರ್ಥವನ್ನು ವಿವರಿಸಿದರು. ಹಾಗೆ ಬಂದ ಮಾಹಿತಿಯನ್ನು ಅವರು ವೇದಗಳೆಂದು ಕರೆದರು; ಸಮಾಧಿಸ್ಥಿಯಲ್ಲಿದ್ದ ಪುರುಷನ ಬಾಯಿಂದ ತಂತಾನೇ ಹೊರಟಿದ್ದರಿಂದ ಮತ್ತು ಸಮಾಧಿಯಿಂದ ಎಚ್ಚೆತ್ತ ಬಳಿಕ ಉದ್ಗರಿಸಿದ ಅದೇ ಪುರುಷನಿಗೆ ಅವುಗಳು ಹೊರಬಂದ ಬಗ್ಗೆ ಅಲ್ಲಿಯವರೆಗೆ ತಿಳಿಯದೇ ಇದ್ದದ್ದರಿಂದಲೂ ಅವುಗಳನ್ನು ಅಪೌರುಷೇಯವೆಂದು ಕರೆಯಲಾಯ್ತು. ಹೊರಬಂದ ಮಾಹಿತಿಮಾತ್ರ ನಿಖರವಾಗಿತ್ತು; ಅದು ಅಗಣಿತ ಜ್ಞಾನಬಂಡಾರದ ಕೀಲಿ ಕೈ ಆಗಿತ್ತು! ಅದನ್ನೇ ವೇದಗಳೆಂದು ಮಹರ್ಷಿಗಳು ಹೆಸರಿಸಿದರು; ಕಾಲಾನಂತರದಲ್ಲಿ ವೇದವ್ಯಾಸರು ಅವುಗಳನ್ನು ವಿಂಗಡಿಸಿದರು. 

ವನಚರೀ ವನ್ಯಜೀವಿಗಳೇನಕವಕ್ಕೆ ಹುಟ್ಟಿಸಿದ ದೇವರು ಹುಲ್ಲನ್ನು ಮೇಯಿಸಬೇಕಾದದ್ದೇ ಜಗನ್ನಿಯಾಮಕನ ಕೆಲಸ. ಆದರೆ ಅಲ್ಲೂ ಕೂಡ ಕೆಲವು ಕಡೆ ಹುಲ್ಲೂ ಸಿಗುವುದಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ! ಹಸಿದ ಹೊಟ್ಟೆಯನ್ನು ಹೊತ್ತು ಮರಿಯೊಂದಿಗೆ ಆಹಾರವನ್ನು ಅರಸುತ್ತಾ ಅನೆ ಹೊರಟಿತ್ತು. ಒಂದು ಕಾಲಕ್ಕೆ ಆ ಪ್ರಾಣಿಯ ರಹದಾರಿಯಾಗಿದ್ದ, ಆಡುಂಬೊಲವಾಗಿದ್ದ ಕಾಡು ಅತಿಕ್ರಮಿಯಾದ ಮಾನವನ ಅತಿರೇಕಗಳ ಫಲವಾಗಿ ನಡುವೆ ಹಲವು ಅಡೆತಡೆಗಳನ್ನು ಹೊಂದಿರುವುದು ಆನೆಗೆ ಗೊತ್ತಾಗಲಿಲ್ಲ. ದಟ್ಟವಾಗಿದ್ದ ಆ ಕಾಡಿನ ಮಧ್ಯೆ ರಸ್ತೆಗಳು ಹಾದುಹೋದವು, ರೈಲ್ವೇ ಹಳಿಗಳೂ ಹಾದುಹೋದವು. ದಿನದ ಅದೆಷ್ಟೋ ವೇಳೆಗಳಲ್ಲಿ ಬುರ್ರನೆ ವಾಹನಗಳು, ರೈಲುಗಳು ಅಲ್ಲಿ ಹಾದುಹೋಗುವವು; ಹಾಗೇನೋ ಹಾದು ಹೋಗುವವು ಎಂಬ ಅರಿವು ಆನೆಗಿದ್ದರೂ ಇಂತಿಷ್ಟೇ ಸಮಯಕ್ಕೆ ಹಾದುಹೋಗುವ ಬಗ್ಗೆ ಅರಿವಿಲ್ಲ; ಧಾವಂತದಲ್ಲಿ ನೂರಾರು ಕಿ.ಮೀ. ವೇಗದಲ್ಲಿ ಹಾದುಹೋಗುತ್ತವೆ ಎಂಬ ಬಗ್ಗೆಯೂ ತಿಳಿಯುವುದಿಲ್ಲ. ಕಾಡಿನಲ್ಲಿ ಕುಡಿಯಲು ಈಗ ನೀರಿಲ್ಲ, ಬಿದಿರಬೊಂಬುಗಳಿಗೆ ಕಳೆದಸಾಲಿನಲ್ಲೇ ಹೂವು ಬಂದಿದ್ದರಿಂದ ಚಿಗುರುಗಳು ಇನ್ನೂ ಬರಲಿಲ್ಲ-ಹೀಗಾಗಿ ಊಟವೂ ಇಲ್ಲ. ಹುಟ್ಟಿಸಿದ ದೇವ ಹೊಟ್ಟೆಯನ್ನು ಕೊಟ್ಟ, ಹಸಿದ ಹೊಟ್ಟೆಗೆ ಆಹಾರವನ್ನೂ ಒಂದಷ್ಟು ಕಾಲ ಕೊಟ್ಟ, ಆಹಾರ ಸಾಲದಾದಾಗ ತಿರುಗಿ, ಹುಡುಕಿ ಏನಾದರೂ ತಿನ್ನಬಲ್ಲದ್ದು ಲಭ್ಯವಾದಾಗ ತಿನ್ನಲು ಬುದ್ಧಿಕೊಟ್ಟ. ಹಸಿದ ಹೊಟ್ಟೆಯ ಭರ್ತಿಗಾಗಿ ಆನೆಗಳು ತಮಗೆ ಗೊತ್ತಿರುವ ಜಾಗದಲ್ಲಿ ಅಲೆವವು, ಹಿಂದೆ ಅವುಗಳ ಪೂರ್ವಜರು ಓಡಾಡಿಕೊಂಡಿದ್ದ ಕಾಡಿನಭಾಗಗಳಲ್ಲಿ ಮನುಷ್ಯ ತನ್ನ ವಸಾಹತುಗಳನ್ನು ಮಾಡಿಕೊಂಡಿದ್ದನ್ನು ಕಾಣುವವು, ಹಾಗೆ ಅಲ್ಲಿಹೋದಾಗ ಸಿಕ್ಕಿದ್ದನ್ನು ತಿನ್ನುವವು. ಹಸಿದ ಹೊಟ್ಟೆಗೆ ಮರ್ಯಾದೆಯ ಪ್ರಶ್ನೆ ಬರುವುದಿಲ್ಲ, ಮನುಜರ ಕೂಗು ಕೇಳಿಸುವುದಿಲ್ಲ. 

ಆಹಾರವನ್ನು ಹುಡುಕುತ್ತಾ ಹೊರಟ ಆನೆ ತನ್ನ ಮರಿಯೊಂದಿಗೆ ಅಲೆಯುತ್ತಿರುವಾಗ ಮರಿ ರೈಲು ಹಳಿಗಳಮೇಲೆ ನಿಂತಿತ್ತು. ಮರುಕ್ಷಣದಲ್ಲಿ ಮಿಂಚಿನವೇಗದಲ್ಲಿ ರೈಲು ಹಾದುಹೋದಾಗ ಮರಿ ರೈಲಿಗೆ ಸಿಕ್ಕಿ ಇಹಲೋಕವನ್ನೇ ತ್ಯಜಿಸಿತ್ತು. ಮರಿ ಸತ್ತುಹೋಯ್ತೆಂದು ಕಂಡ ತಾಯಾನೆ ಕೋಪಾವಿಷ್ಟವಾಗಿ ಚಲಿಸುತ್ತಿದ್ದ ಅದೇ ರೈಲನ್ನು ನೂಕಲು ಹೋಯ್ತು. ಆಯತಪ್ಪಿ ತಾನೂ ಹೊಡೆತ ತಿಂದು ಹಸಿದ ಹೊಟ್ಟೆಯಲ್ಲೇ ಸತ್ತುಹೋಯ್ತು. ಇಂತಹ ಅನೇಕ ದಾರುಣ ಪ್ರಸಂಗಗಳು ಇತ್ತೀಚೆಗೆ ನಡೆಯುತ್ತಲೇ ಇರುತ್ತವೆ; ಗೊತ್ತಿದ್ದೂ ತಡೆಯಲಾರದ ಮನುಷ್ಯನ ಸಂಕಲ್ಪಕ್ಕೆ ಇವು ನಿಲುಕಿದ್ದಲ್ಲ. ಕಾಡ ಮಧ್ಯದಲ್ಲಿ ಸಾವಿರಾರು ಕಿ.ಮೀ.ಗಳ ದೂರದವರೆಗೆ ರೈಲು ಹಳಿಯ/ರಸ್ತೆಯ ಇಕ್ಕೆಲಗಳಲ್ಲಿ ಯಾವ ಬೇಲಿಯನ್ನೂ ಹಾಕುವುದು ಸಾಧ್ಯವಾಗದೇ ಹೋಗಬಹುದು, ಬೇಲಿ ಹಾಕಿದರೆ ವನಸಂಚಾರಿಗಳ ಸಂಚಾರಕ್ಕೇ ಸಂಚಕಾರ ಬರಬಹುದು. ಮನುಷ್ಯ ತನ್ನ ಅಗತ್ಯಗಳಿಗೆ ತಕ್ಕಂತೇ ಬೆಳೆಸಿಕೊಂಡ ತನ್ನ ಮಾರ್ಗಗಳು ಪ್ರಕೃತಿಯ ಹಲವು ಜೀವಿಗಳ ಬದುಕಿಗೆ ಮಾರಣಹೋಮ ನಡೆಸುವ ಹೋಮಕುಂಡಗಳಾಗಿ ಪರಿಣಮಿಸಿವೆ. ಹೀಗಾಗಬೇಕೆಂಬುದು ವಿಧಿಲಿಖಿತವಾಗಿದ್ದಾಗ ಅದನ್ನು ತಪ್ಪಿಸುವುದು ಸಾಧ್ಯವೇ? ಹಾಗಂತ ಅನೇಕ ಕಾಡುಪ್ರಾಣಿಗಳು ಆ ರಸ್ತೆಗಳನ್ನೂ/ರೈಲುಹಳಿಗಳನ್ನೂ ದಾಟಿ ಸುರಕ್ಷಿತವಾಗಿ ಓಡಾಡುವುದೂ ಇದೆ. ಆದರೆ ಕೆಲವಕ್ಕೆ ಮಾತ್ರ ಗ್ರಹಚಾರ ಕಾಡುತ್ತದೆ; ಜೀವವನ್ನೇ ಬಲಿತೆಗೆದುಕೊಳ್ಳುತ್ತದೆ ಅಥವಾ ಅರೆಜೀವವನ್ನಾಗಿಸಿ ಬದುಕಲೂ ಆಗದ ಸಾಯಲೂ ಆಗದ ಸ್ಥಿತಿಯಲಿ ತಿಂಗಳಾನು ಗಟ್ಟಲೆ ಬಳಲುವಂತೇ ಮಾಡುತ್ತದೆ. 

ಕಾಡುಗಳಲ್ಲಿ ಹೊಸ ಪ್ರಯಾಣ ಮಾರ್ಗಗಳನ್ನು ರೂಪಿಸುವಾಗ ಯೋಚಿಸಬೇಕಾದುದು ಮನುಷ್ಯನ ಕರ್ತವ್ಯ. ಹಾಗೆ ಮಾರ್ಗಗಳನ್ನು ಅಲ್ಲಿ ಹಾಕದೇ ಇರುವುದು ಆಗಬೇಕಾದ ಕೆಲಸ-ಆದರೆ ಊರಿಂದೂರಿಗೆ ನಾಡಿಂದ ನಾಡಿಗೆ ಪ್ರಯಾಣಿಸುವಾಗ ಎದುರಾಗುವ ಉಳಿಕೆಯಾಗಿ ಉಳಿದ ಕೇವಲ ಕೆಲವೇ ಭಾಗಗಳಷ್ಟು ಕಾಡುಗಳಲ್ಲೂ  ರಸ್ತೆಗಳು, ರೈಲುಮಾರ್ಗಗಳು ಹಾದುಹೋಗುವಂತೆ  ಮಾಡುವುದು ನವನಾಗರಿಕತೆಯ ವಿಪರ್ಯಾಸ! ಕಾಡುಗಳನ್ನೆಲ್ಲಾ ನಮ್ಮ ಸ್ವಾರ್ಥಕ್ಕೆ, ಮನೆ, ಪೀಠೋಪಕರಣ, ಉರುವಲು, ಹಡಗು, ವ್ಯಾವಸಾಯಿಕ ಉಪಕರಣಗಳು, ವಾಹನಗಳನ್ನು ತಯಾರಿಸಿಕೊಳ್ಳುವ ಸಲುವಾಗಿ ಕಡಿದು ನಮ್ಮಾದಾಗಿಸಿಕೊಂಡು ಬೋಳುನೆಲವನ್ನಾಗಿಸಿದವ ಮನುಷ್ಯನೇ ತಾನೇ?  ಕಾಡಿ ಬರಿದಾದಮೇಲೆ ಮಳೆಯಿಲ್ಲ, ಮಳೆಯಿಲ್ಲದಿದ್ದಮೇಲೆ ಅಂತರ್ಜಲವಿಲ್ಲ-ಕುಡಿಯುವ ನೀರಿಲ್ಲ, ಬೆಳೆಗಳಿಲ್ಲ, ಬೆಳೆಗಳನ್ನು ಬೆಳೆದುಳಿಯುವ ಹುಲ್ಲನ್ನು ತಿನ್ನುವ ಜಾನುವಾರುಗಳಿಗೆ ಉಳಿಗಾಲವಿಲ್ಲ. ಇರುವೆಯಿಂದ ಹಿಡಿದು ೮೦ ಕೋಟಿಯಂತೆ ಜೀವರಾಶಿಗಳು. ಅಷ್ಟನ್ನೆಲ್ಲಾ ನಾವು ಬರಿಗಣ್ಣಿಗೇ ಕಾಣಲು ಸಾಧ್ಯವಾಗದಿದ್ದರೂ ಇರುವೆಯಿಂದ ಆನೆಯವರೆಗೆ ಅದೆಷ್ಟೋ ಮೂಕ-ಮುಗ್ಧ ಜೀವಗಳನ್ನು ಪ್ರತಿನಿತ್ಯ ಬಲಿಹಾಕುವ ನಮಗೆ ಕಿಂಚಿತ್ತೂ ಕರುಣೆಯಿಲ್ಲ. ಸಮೃದ್ಧ ಕಾಡಿದ್ದರೆ ಬಹು ಮರ್ಯಾದಸ್ಥ ಆನೆ ಕಾಡಿನಿಂದ ನಾಡಿಗೆ ಬರುತ್ತಿರಲಿಲ್ಲ, ಪರಪೀಡನೆ ಅದರ ಉದ್ದೇಶವಲ್ಲ; ಬದಲಾಗಿ  ಶಕ್ತಿಗುಂದಿದ ನಾಲ್ಕುಕಾಲುಗಳ ಮೇಲಿನ ಹೊರಲಾರದ ಹಸಿದ ಹೊಟ್ಟೆಯನ್ನು ಹೊತ್ತು ನಾಡಿನೆಡೆಗೆ ಅವು ನುಗ್ಗುತ್ತವೆ, ಉರುಳಿಗೆ, ವಿದ್ಯುತ್ ತಂತಿಗೆ, ಮುಚ್ಚಿಟ್ಟ ಆಳದ ಕಮರಿಗೆ ಬಿದ್ದು, ತಗುಲಿ ದಾರುಣವಾಗಿ ಅಂತ್ಯಕಾಣುತ್ತವೆ. ಹೊಟ್ಟೆಗೆ ಆಹಾರ ಕಡಿಮೆಯಾದ ಹಂತದಲ್ಲಿ ಹುಲಿ-ಚಿರತೆಗಳೂ ಸಹ ಜಾನುವಾರುಗಳ ಬೇಟೆಗಾಗಿ ನಾಡಿಗೆ ನುಗ್ಗುತ್ತವೆ. ರಣಹದ್ದುಗಳಂತಹ ಅನೇಕ ಪಕ್ಷಿ ಪ್ರಭೇದಗಳು, ಪಶು ಪ್ರಭೇದಗಳು ಇಂದು ನಶಿಸಿಹೋಗಿವೆ. ಇರುವುದು ಮೂರು ಹಾವು, ನಾಲ್ಕು ಮಂಗ, ಕೆಲವು ಆನೆಗಳು, ಸ್ವಲ್ಪ ಹುಲಿ-ಚಿರತೆಗಳು ಮಾತ್ರ. ಮಿಕ್ಕಿದ ಜೀವಿಗಳನ್ನೆಲ್ಲಾ ಕೇವಲ ಚಿತ್ರದಲ್ಲಿ ಮಾತ್ರ ನೋಡುವ ಕಾಲ ಬಹುದೂರವಿಲ್ಲ.  

ಮನುಷ್ಯರ ಬಗ್ಗೆ ಮಾತನಾಡುವುದಾದರೆ ಬೀಡಾಡಿಗಳು ಚೆನ್ನಾಗಿ ಕಾಲಹಾಕುತ್ತಿದ್ದಾರೆ; ಅವರಿಗೆ ಯಾವುದೇ ತಲೆನೋವು ಹತ್ತಿಕೊಳ್ಳುವುದಿಲ್ಲ. ವ್ಯಸನಿಕರು, ಜೂಜುಕೋರರು, ಮೋಸಗಾರರು, ನಯವಂಚಕರು, ಕೊಲೆಗಡುಕರು, ಭ್ರಷ್ಟರಾಜಕಾರಣಿಗಳು ಎಲ್ಲರೂ ಸುಖವಾಗಿದ್ದಾರೆ, ಆದರೆ ಕೆಲವು ಸಜ್ಜನರಿಗೆ ಇಲ್ಲದ ತೊಂದರೆ ಕಾಣಿಸಿಕೊಳ್ಳುತ್ತದೆ. ಮಕ್ಕಳಿಲ್ಲದ ಮನೆಯಲ್ಲಿ ಅಪರೂಪದಲ್ಲಿ ಅನೇಕವರ್ಷಗಳ ನಂತರ ಹುಟ್ಟಿದ ಏಕೈಕ ಮಗು ಎಲ್ಲೋ ಅಪಹೃತವಾಗುತ್ತದೆ ಅಥವಾ ಶಾರೀರಿಕವಾಗಿ ಬಳಲುತ್ತದೆ, ಅಪಘಾತದಲ್ಲಿ  ಸತ್ತುಹೋಗುತ್ತದೆ.  ಹುಟ್ಟಿದಾರಭ್ಯ ಯಾವ ತಪ್ಪನ್ನೂ ಮಾಡದ ವ್ಯಕ್ತಿಗೆ ಪರಿಹರಿಸಿಕೊಳ್ಳಲಾಗದ ಆಪತ್ತು ಬಂದೊದಗುತ್ತದೆ, ಇಲ್ಲದ ಸಂಕಟಗಳು ಎದುರಾಗುತ್ತವೆ. ಇದನ್ನೆಲ್ಲಾ ನೋಡುವಾಗ ಸಂಕಲ್ಪ ಬೇರೆಲ್ಲೋ ಆಗಿದೆ, ಸೂತ್ರಧಾರನ ಜಾಲ ವಿಚಿತ್ರವಾಗಿರುತ್ತದೆ ಎನಿಸುತ್ತದೆ. ಒಬ್ಬ ವ್ಯಕ್ತಿಗೆ ಜೀವನದಲ್ಲಿ ಎಷ್ಟು ಶಸ್ತ್ರಕ್ರಿಯೆಗಳು ನಡೆಯಬಹುದು? ಒಂದು ಅಥವಾ ಎರಡು, ಆದರೆ ನಾನು ನೋಡಿದ ಒಬ್ಬ ಸಜ್ಜನನಿಗೆ ನಾಲ್ಕು ಶಸ್ತ್ರಕ್ರಿಯೆಗಳು ನಡೆದಿವೆ; ಎಲ್ಲವೂ ಬಹಳ ಗಂಭೀರ ಮಟ್ಟದ ಶಸ್ತ್ರಕ್ರಿಯೆಗಳೇ. ಸರಕಾರೀ ಅಧಿಕಾರಿಯಾದ ಆತ ಕರ್ತವ್ಯ ನಿರತನಾಗಿ ಓಡಾಡುವಾಗ ಮೋಟಾರು ಬೈಕಿನಿಂದ ಬಿದ್ದು ಸ್ಲಿಪ್ ಡಿಸ್ಕ್ ಆಯ್ತು, ಅದಕ್ಕೊಂದು ದೊಡ್ಡ ಶಸ್ತ್ರಕ್ರಿಯೆ ಬೆನ್ನ ಹಿಂಭಾಗದಲ್ಲಿ ನಡೆಯಿತು. ಅದಾದ ಕೆಲವೇ ವರ್ಷಗಳಲ್ಲಿ ಮೂತ್ರ ಸಂಬಂಧೀ ದೋಷ ಕಾಣಿಸಿಕೊಂಡು, ವಾಸಿಯಾಗದೇ ಸ್ಕ್ಯಾನಿಂಗ್ ಮಾಡಿಸಿದಾಗ ಮೂತ್ರಕೋಶದಿಂದ ಬರುವ ನಾಳದ ಉದ್ದ ಜಾಸ್ತಿ ಇದ್ದು ಅದು ತಿರುಚಿಕೊಂಡಿದೆ-ಇದು ಕೆಲವರಲ್ಲಿ ಹುಟ್ಟುವಾಗಲೇ ಹೀಗಿರುತ್ತದೆ, ತೊಂದರೆಯಾದರೆ ಕತ್ತರಿಸಿ ತೆಗೆಯಬೇಕಾಗುತ್ತದೆ ಎಂದ ವೈದ್ಯರು ಹಾಗೆ ಕತ್ತರಿಸಲು ಶಸ್ತ್ರಕ್ರಿಯೆ ನಡೆಸಿದರು. ಅದಾದ ವರ್ಷಾನಂತರವೂ ಮೂತ್ರದಲ್ಲಿ ದೋಷ ಕಾಣುತ್ತಿದ್ದುದರಿಂದ ಮತ್ತೆ ಪರೀಕ್ಷಿಸಲಾಗಿ ಕತ್ತರಿಸಿದ ನಾಳದ ತುದಿಯ ಜೋಡಣೆ ಸಮರ್ಪಕವಾಗಿಲ್ಲ, ಅದು ಹಾಳಾಗಿದೆ ಮತ್ತೆ ಬೇರೇ ಸ್ಟಂಟ್ ಹಾಕಬೇಕು ಎಂದು ವೈದ್ಯರು ತಿಳಿಸಿದರು. ಆಗ ಇನ್ನೊಂದು ಶಸ್ತ್ರಕ್ರಿಯೆ ನಡೆಯಿತು. ಇದಾದ ವರ್ಷವೆರಡರಲ್ಲೇ ಮೂತ್ರದ ತೊಂದರೆ ಹಾಗೇ ಇರುವುದು ತಿಳಿಯಿತು-ಔಷಧ ನಿಲ್ಲಿಸಿದರೆ ಮತ್ತೆ ತೊಂದರೆ ಕಾಣುತ್ತಿತ್ತು. ಇದೀಗ ಮೊನ್ನೆ ೨೨ ದಿನಗಳ ಹಿಂದೆ ನಾಲ್ಕನೇ ಶಸ್ತ್ರಕ್ರಿಯೆ ನಡೆಯಿತು. ಸಣ್ಣ ಕರುಳಿನ ಭಾಗವನ್ನು ಕತ್ತರಿಸಿ, ಅದನ್ನೇ ಹೊಸ ಮೂತ್ರನಾಳವಾಗಿ ಹಳೆಯ ಮೂತ್ರನಾಳವಿದ್ದ ಜಾಗದಲ್ಲಿ ಜೋಡಿಸಲಾಗಿದೆ! ವ್ಯಕ್ತಿಗೆ ಅದೆಷ್ಟು ಸಲ ಸತ್ತು ಹುಟ್ಟಿದ ಅನುಭವ ಆಯ್ತೋ ಪರಮಾತ್ಮನೇ ಬಲ್ಲ. ಶಸ್ತ್ರಕ್ರಿಯೆ ನಡೆಸಿದಾಗ ಆಗುವ ನೋವು, ನಂತರದ ವರ್ಷಗಳಲ್ಲಿ ತೆಗೆದುಕೊಳ್ಳಬೇಕಾದ ಔಷಧಗಳು, ಅಧಿಕಾರಿಯ ಕರ್ತವ್ಯಕ್ಕೆ ಹಾಜರಾಗದೇ ರಜಾ ತೆಗೆದುಕೊಳ್ಳಬೇಕಾದ ಅನಿವಾರ್ಯತೆ, ಆಸ್ಪತ್ರೆಯಲ್ಲಿ ತಗಲುವ ಲಕ್ಷಾಂತರ ರೂಪಾಯಿಗಳ ವೆಚ್ಚ ಭರಿಸುವಿಕೆ ಇದರೊಂದಿಗೆ ಮಿಕ್ಕುಳಿದವರಂತೇ ಮಾಮೂಲಿ ಸಂಸಾರದ ಜವಾಬ್ದಾರಿ!

ಎಡಪಂಥೀಯ ಜನ ಗಾದೆಯೊಂದನ್ನು ಉಪಯೋಗಿಸುತ್ತಾರೆ: ’ವೇದ ಸುಳ್ಳಾದರೂ ಗಾದೆಸುಳ್ಳಾಗದಲ್ಲಾ’ ಎಂದು; ವೇದವನ್ನು ಅಷ್ಟರಮಟ್ಟಿಗಾದರೂ ಒಪ್ಪಿದ್ದಾರಲ್ಲಾ ಎಂದುಕೊಂಡು ಸುಮ್ಮನಾಗಬೇಕು. ವೇದವೆಂದೂ ಸುಳ್ಳಾಗುವುದಿಲ್ಲ ಯಾಕೆಂದರೆ ಅದು ಮನುಷ್ಯ ಕೂತು ಯೋಚಿಸಿ ಬರೆದಿದ್ದಲ್ಲ, ಜನಸಾಮಾನ್ಯನ ಅನುಭವಕ್ಕೆ ನಿಲುಕಿದ ಹೇಳಿಕೆಗಳ ಯಾದಿಯೂ ಅಲ್ಲ. ಗಾದೆಗಳು ಹಾಗಲ್ಲ-ಅವು ಜನಪದರ ಹೇಳಿಕೆಗಳಾಗಿವೆ. ಗಾದೆಗಳು  ಕಾಲಕ್ರಮದಲ್ಲಿ ಬದಲಾಗಬಹುದು ಅಥವಾ ಅರ್ಥಹೀನವೆನಿಸಬಹುದು. ಆದರೆ ವೇದ ಹಾಗಲ್ಲ; ಅದು ಸಾರ್ವಕಾಲಿಕ. ವೇದಗಳ ಸಾರವಾಗಿ ವೇದಾಂತಗಳು ಹುಟ್ಟಿಕೊಂಡರೆ ವೇದಗಳಲ್ಲಿ ಹೇಳಿದ ಕರ್ಮಗಳನ್ನು ಕ್ರಿಯೆಯ ರೂಪಕ್ಕೆ ಇಳಿಸುವ ಸಲುವಾಗಿ ವೇದಾಂಗ ರೂಪಿತವಾಯ್ತು. ಅಂತಹ ವೇದಾಂಗದಲ್ಲಿ ವೇದಾಂಗ ಜ್ಯೋತಿಷ್ಯ ಕೂಡ ಒಂದು. ವೇದಾಂಗ ಜ್ಯೋತಿಷ್ಯದಲ್ಲಿ ಖಗೋಲ ಕಾಯಗಳನೇಕಗಳ ಬಗ್ಗೆ ಮಾಹಿತಿ-ಲೆಕ್ಕಾಚಾರ ಇರುವುದರ ಜೊತೆಗೆ ಗ್ರಹ-ನಕ್ಷತ್ರಗಳ ಕುರಿತಾದ ಮಾಹಿತಿ ಕೂಡ ಇದೆ. ವ್ಯಕ್ತಿಯೋ ವಸ್ತುವೋ ಹೊಸದಾಗಿ ಹುಟ್ಟಿದಾಗ, ಹುಟ್ಟಿದ ಸಮಯವನ್ನಾಧರಿಸಿ ಅದಕ್ಕೊಂದು ಜಾತಕ ನಿರ್ಮಿಸಬಹುದಾಗಿದೆ. ಆ ಜಾತಕ ತಯಾರಿಸುವಾಗ ಹುಟ್ಟಿದ ಸಮಯ, ದಿನಾಂಕ ಮೊದಲಾದವು ಸರಿಯಾಗಿದ್ದರೆ ಜಾತಕದಲ್ಲಿರುವ ಗ್ರಹಕೂಟಗಳ ರೀತ್ಯಾ ವ್ಯಕ್ತಿ ಮುಂದೆ ಏನೇನು ಮಾಡುವುದು ಸಾಧ್ಯ ಎಂಬುದನ್ನು ನಿರ್ಧರಿಸುತ್ತಾರೆ ಅರ್ಥಾತ್ ಜನಿಸಿದ ವ್ಯಕ್ತಿಗೆ ಯಾವೆಲ್ಲಾ ಗುಣಾವಗುಣಗಳು-ಯಾವೆಲ್ಲಾ ಯೋಗಗಳು ಮತ್ತು ಯಾವೆಲ್ಲಾ ತೊಂದರೆಗಳು ಪ್ರಾಪ್ತವಾಗುತ್ತವೆ ಎಂಬುದನ್ನು ಸಾಮಾನ್ಯವಾಗಿ ಹೇಳಬಹುದಾಗಿರುತ್ತದೆ. 

ಮಾಧ್ಯಮಗಳಲ್ಲಿ ಗಾಡ್ ಪಾರ್ಟಿಕಲ್ ಅಥವಾ ಹಿಗ್ಸ್ ಬೋಸ್ಸನ್ ಬಗ್ಗೆ ಬಂದಾಗ ವಾರಗಳ ಕಾಲ ಎಡಪಂಥೀಯರು ತಣ್ಣಗಾಗಿದ್ದರು: ಕಾರಣವಿಷ್ಟೇ ವೇದಗಳಲ್ಲಿ ಆ ಬಗ್ಗೆ ಅದೆಷ್ಟು ಮಾಹಿತಿ ಮೊದಲೇ ಇದೆ ಎಂದು ವಿಜ್ಞಾನಿಗಳೇ ಹೊಗಳಿದ್ದರು. ಇಂದಿನ ನವಯುಗದಲ್ಲಿ ಈ ವಿಜ್ಞಾನದ ಮುನ್ನಡೆಯಲ್ಲೂ ನಾವು ಕಾಣಲಾಗದ ಖಗೋಲ ವಸ್ತುವಿಷಯಗಳ ಬಗ್ಗೆ ಸಾವಿರಾರು ವರ್ಷಗಳ ಹಿಂದೆ ಆರ್ಯಭಟನಂಥಾ ತಜ್ಞರು ಅದು ಹೇಗೆ ಮಾಹಿತಿ ಪಡೆದಿರಬಹುದು? ಗ್ರಹಗಳ ಪರಿಭ್ರಮಣಗಳ ಬಗ್ಗೆ ಲೆಕ್ಕವನ್ನಿಡುತ್ತಾ ದೃಗ್ಗಣಿತಾದಿ ಗಣಿತ ಕೋಷ್ಟಕಗಳನ್ನು ಅದು ಹೇಗೆ ಸಿದ್ಧಪಡಿಸಿರಬಹುದು? -ಎಂದು ಯೋಚಿಸುತ್ತಾ ಕುಳಿತರೆ ವೇದಾಂಗ ಜ್ಯೋತಿಷ್ಯದ ನೆನಪಾಗುತ್ತದೆ. ವೇದಾಂಗ ಜ್ಯೋತಿಷ್ಯದ ಸಹಾಯಪಡೆದುಕೊಂಡವರು ಹೊಸಹೊಸ ಕೊಡುಗೆಗಳನ್ನು ಈ ಜಗತ್ತಿನ ಉಪಕಾರಾರ್ಥವಾಗಿ ಕೊಟ್ಟುಹೋದರು. ಹುಟ್ಟಿದ ಪ್ರತಿಯೊಂದೂ ಜೀವಿಗೆ ಜನ್ಮಾಂತರಗಳ ಋಣಾನುಬಂಧ-ಕರ್ಮಾನುಬಂಧ ಇರುತ್ತದೆ. ಜೀವಾತ್ಮವೊಂದು ಇಂಥಾ ಯೋನಿಯಲ್ಲೇ ಜನಿಸಬೇಕು, ಈ ತೆರನಾಗಿಯೇ ಬದುಕಬೇಕು, ಅದರ ಬದುಕಿಗೆ ಈ ಈ ರೀತಿಯ ಸೌಲಭ್ಯಗಳು-ಸೌಕರ್ಯಗಳು ಸಿಗುವಂತಿರಬೇಕು, ಈ ರೀತಿಯಲ್ಲೇ ಬಳಲಬೇಕು ಅಥವಾ ಈ ರೀತಿಯಲ್ಲೇ ಮೆರೆಯಬೇಕು...ಹೀಗೆಲ್ಲಾ. ಜರಾಮರಣದ ಚಕ್ರವನ್ನು ನೆನಪಿಸಿಕೊಂಡು ಆಧ್ಯಾತ್ಮಿಕ ಸಾಧನೆ ಮಾಡಲೂ ಕೂಡ ಯೋಗಬೇಕು ಎನ್ನುವುದು ಇದಕ್ಕೇನೆ. ಲಕ್ಷಮಂದಿಗಳಲ್ಲಿ ಒಬ್ಬರೋ ಇಬ್ಬರೋ ಅಂಥಾ ಉನ್ನತ ಸಾಧನೆ ಮಾಡುತ್ತಾರೆ. ಹಾಗೆ ಸಾಧನೆ ಮಾಡಿ ಮನಸ್ಸು ಪಕ್ವವಾಗುವ ಮುನ್ನವೇ ಮತ್ತೆ ವಿಷಯಾಸಕ್ತಿಗೆ ತೊಡಗಿದರೂ ಇನ್ನೊಂದು ಜನ್ಮದಲ್ಲಿ ಮತ್ತೆ  ಸಾಧನೆಮಾಡುವ ಅವಕಾಶ ಕೊಡುವೆನೆಂದು ಕೃಷ್ಣ ಹೇಳಿದ್ದಾನಲ್ಲವೇ? ವೇದಗಳು ಹೇಳಿದ್ದೆಲ್ಲಾ ಒಂದೊಂದಾಗಿ ಸತ್ಯವಾಗುತ್ತಿರುವಾಗ ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಭಂಡರಿಗೆ ಏನೆನ್ನಬೇಕು? ವೇದ ಸುಳ್ಳಾಗಲು ಸಾಧ್ಯವೇ ಇಲ್ಲ, ವೇದಮಂತ್ರಗಳ ಅರ್ಥವನ್ನು ನಾವು ಗ್ರಹಿಸಿದ್ದು ವ್ಯತ್ಯಾಸವಾಗಿ ಸುಳ್ಳುಎಂದು ನಮ್ಮ ಮಿತಿಯಲ್ಲಿ ನಾವು ತೀರ್ಮಾನಿಸಿರಬಹುದು, ಆದರೆ ವಸ್ತುಸ್ಥಿತಿ ಭಿನ್ನವಾಗಿದೆ ಎಂಬುದನ್ನು ಸತ್ಯವರಿತ ದಿನ ಒಪ್ಪಿಕೊಳ್ಳಬೇಕಾಗುತ್ತದೆ; ಅಂತಹ ಅನೇಕ ಉದಾಹರಣೆಗಳು ಈಗಾಗಲೇ ನೋಡಲು ಸಿಗುತ್ತಿವೆ!     

Saturday, February 2, 2013

ಉತ್ಥಾನ ಕ್ರಮ ಮತ್ತು ಸ್ನಾನಾದಿ ಶೌಚ ವಿಧಿಗಳು


ಚಿತ್ರ ಋಣ : ಅಂತರ್ಜಾಲ 
ಉತ್ಥಾನ ಕ್ರಮ ಮತ್ತು ಸ್ನಾನಾದಿ ಶೌಚ ವಿಧಿಗಳು  

[ಮನುಕುಲ ಬದುಕುವ ಅತಿ ಶ್ರೇಷ್ಠ ಹಿಂದೂ ಜೀವನ ಧರ್ಮದ ಈ ಅಧ್ಯಾಯಕ್ಕೆ ತಮಗೆಲ್ಲಾ ಆದರದ ಸ್ವಾಗತ]  

ಕೌಸಲ್ಯಾ ಸುಪ್ರಜಾರಾಮ ಪೂರ್ವಾ ಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ ||

---ವಾಲ್ಮೀಕಿ ರಾಮಾಯಣ [ಬಾಲಕಾಂಡ]
ದಶರಥನ ಆಸ್ಥಾನಕ್ಕೆ ಆಗಮಿಸಿದ ಗುರು ವಿಶ್ವಾಮಿತ್ರರು ಎಳೆಯ ಮಕ್ಕಳಾದ ರಾಮ-ಲಕ್ಷ್ಮಣರನ್ನು ಗುರುಕುಲ ವಿದ್ಯಾಭ್ಯಾಸಕ್ಕೆ ಕಳುಹಿಸಲು ದಶರಥನಲ್ಲಿ ಕೇಳಿದಾಗ ರಾಜಾ ದಶರಥನಿಗೆ ಅಷ್ಟು ಚಿಕ್ಕಮಕ್ಕಳನ್ನು ಕಾಡಿಗೆ ಹೇಗೆ ಕಳುಹಿಸುವುದೆಂಬ ಕಳವಳ. ಅದನ್ನರಿತ ವಿಶ್ವಾಮಿತ್ರರು ರಾಮ ಸಾಮಾನ್ಯದವನಲ್ಲ, ಆತನ ಸಾಮರ್ಥ್ಯ ಬೆಳಗಲು ಆತ ಈಗಲೇ ವಿದ್ಯಾಭ್ಯಾಸ ಮಾಡಬೇಕು ಎಂದು ಮತ್ತೆ ಮತ್ತೆ ಹೇಳಿದಾಗ ಮನಸ್ಸೇಕೋ ಹಿಂದೇಟು ಹಾಕುತ್ತಿದ್ದರೂ ಜೊತೆಗೆ ಇರುವವರು ವಿಶ್ವಾಮಿತ್ರರು ಎಂಬ ಅಭಿಪ್ರಾಯ ತಳೆದು ಕಳುಹಿಸಿದ್ದ. ವಿಶ್ವಾಮಿತ್ರರ ಜೊತೆಗೆ ಕಾಡಿಗೆ ನಡೆದ ಅಣ್ಣ-ತಮ್ಮಂದಿರು ಕಾಡು ದಾರಿಯಲ್ಲಿ ಗುಡ್ಡ ಬೆಟ್ಟಗಳನ್ನು ಹತ್ತಿ-ಇಳಿಯುತ್ತಾ ಏದುಸಿರು ಬಿಡುತ್ತಾ ಕ್ರಮಿಸಿದ ಹಾದಿ ಬಹುದೂರ. ನಡೆದೂ ನಡೆದೂ ನಡೆದೂ ದಣಿವಾಗಿ ಸರಿರಾತ್ರಿ ವಿಶಾಲವಾದ ಬಂಡೆಯೊಂದರಮೇಲೆ ಮಲಗಿದ ಮೂವರಲ್ಲಿ ವಿಶ್ವಾಮಿತ್ರರು ಬೆಳಗಿನ ಬ್ರಾಹ್ಮೀಮುಹೂರ್ತದಲ್ಲೇ ಇನ್ನೂ ಗಾಢ ನಿದ್ದೆಯಲ್ಲಿದ್ದ ಮುದ್ದು ಬಾಲಕ ಶ್ರೀರಾಮನನ್ನು ಕುರಿತು  ಮೇಲಿನ ಮಂಗಳಶ್ಲೋಕವನ್ನು ಹೇಳುತ್ತಾರೆ. 

"ಹೇ ರಾಮಾ, ಕೌಸಲ್ಯೆ ನಿನ್ನನ್ನು ಹಡೆದು ಧನ್ಯಳಾದಳು. ಬೆಳಗಿನ ಸಂಧ್ಯಾಕಾಲ ಹತ್ತಿರವಾಗುತ್ತಿದೆ.  ಎದ್ದು ಶುಚಿರ್ಭೂತರಾಗಿ ದೇವರಿಗೆ ಆಹ್ನಿಕವನ್ನು ನೀಡುವುದು ಮಾನವರಾದ ನಮ್ಮ ಕರ್ತವ್ಯ. ನರಶ್ರೇಷ್ಠನೇ ಎದ್ದೇಳು" 


ದಣಿದು ನಿದ್ದೆಯಲ್ಲಿರುವ ಅಷ್ಟು ಚಿಕ್ಕ ಬಾಲಕರನ್ನು ಆ ಬೆಳಗಿನಜಾವದ ಬ್ರಾಹ್ಮೀ ಮುಹೂರ್ತದಲ್ಲಿ ಎಬ್ಬಿಸಬೇಕಿತ್ತೇ ಎಂಬುದು ಪ್ರಶ್ನೆ. ಪ್ರಕೃತಿಮಾತೆ ತನ್ನದ್ದಾದ ಕೆಲವೊಂದು ನಿಯಮಗಳನ್ನು ಪರೋಕ್ಷವಾಗಿ ತನ್ನ ಕ್ರಿಯೆಗಳಲ್ಲಿ ತಿಳಿಸುತ್ತಾ ಇರುತ್ತಾಳೆ: ನಿತ್ಯವೂ ಸೂರ್ಯ ಹುಟ್ಟುವ ಅದೆಷ್ಟೋ ಸಮಯಕ್ಕೇ ಮೊದಲು ಭೂಭಾಗಕ್ಕೆ ಬೆಳಕು ಬರಲು ಆರಂಭವಾಗುತ್ತದೆ! ಆಗಲೇ ಹಕ್ಕಿಗಳು ಎಚ್ಚೆತ್ತುಕೊಂಡು ತಮ್ಮ ಗೂಡುಗಳಿಂದ ಹೊರಕ್ಕೆ ಬಂದು ಮಧುರಸ್ವರಗಳಿಂದ ಹೊಸದಿನವನ್ನು ಸ್ವಾಗತಿಸುವ ಹಾಡುಗಳನ್ನು ಹಾಡುತ್ತಾ ಆಕಾಶದಲ್ಲಿ ಹಾರಾಡುತ್ತವೆ. ಯೋಗಿಗಳಿಗೆ, ಕವಿಗಳಿಗೆ, ತತ್ತ್ವ ಚಿಂತಕರಿಗೆ ಮತ್ತು ತಮ್ಮ ಜೀವನವನ್ನು ಸಫಲಗೊಳಿಸಲು ಬಯಸುವ ಎಲ್ಲಾ ಸಾಧಕರಿಗೆ ಪ್ರಕೃತಿಯು " ಇಗೋ ನಿಮಗೆ ಸ್ಫೂರ್ತಿಯ ಮತ್ತು ಶಕ್ತಿಯ ಕಾಲ ಇದು ಏಳಿ, ಎದ್ದೇಳಿ " ಎಂದು ಸೂಚಿಸುತ್ತಾಳೆ. 

ಮೂಡಲ ಮನೆಯಾ ಮುತ್ತಿನ ನೀರಿನ ಎರಕಾವ ಹೊಯ್ದ
ನುಣ್ಣನೆ ಎರಕಾವ ಹೊಯ್ದ
ಬಾಗಿಲು ತೆರೆದು ಬೆಳಕೂ ಹರಿದೂ ಜಗವೆಲ್ಲಾ ತೊಯ್ದ 
ದೇವನಾ ಜಗವೆಲ್ಲಾ ತೊಯ್ದ 


ಗಿಡಗಂಟೆಗಳ ಕೊರಳೊಳಗಿಂದ ಹಕ್ಕಿಗಳಾ ಹಾಡು 
ಹೊರಟಿತು ಹಕ್ಕಿಗಳಾ ಹಾಡು.....


ವರಕವಿ ಬೇಂದ್ರೆ ತಮ್ಮ ಪ್ರಾತಃಕಾಲದ ಕವನದಲ್ಲಿ ಹೀಗೆ ಉದ್ಗರಿಸಿದ್ದಾರೆ ಅಲ್ಲವೇ?  ವೈಜ್ಞಾನಿಕವಾಗಿ ನಾವು ತರ್ಕಿಸಿದಾಗ ಬ್ರಾಹ್ಮೀ ಮುಹೂರ್ತದಲ್ಲಿ ಓಝೋನ್ ಪದರ ಭೂಮಿಯ ಹತ್ತಿರಕ್ಕೆ ಇಳಿದಿರುತ್ತದೆ. ಅದರಿಂದ ತೃಪ್ತವಾದ ಗಿಡ-ಮರಗಳು, ಮಾನವ ದೇಹವೆಂಬೀ ದೇಶಕ್ಕೆ ಬೇಕಾದ ಆಮ್ಲಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರಸೂಸುತ್ತವೆ. ಹೊರಗೆ ಅಡ್ಡಾಡಿ ಶುದ್ಧಹವೆಯನ್ನು ಸೇವಿಸಬೇಕು ಎಂದು ಹೇಳುವುದು ಇದೇ ಕಾರಣಕ್ಕೆ. ಪ್ರಾತರ್ವಿಧಿಯಲ್ಲಿ ನಿತ್ಯ ಚಾರಣದ ಅಲ್ಪ ಭಾಗವೂ ಸೇರಿದೆ. 


ಹೊತ್ತಾರೆ ಎದ್ದು ಅಗ್ಗವಣಿ ಪತ್ತರೆಯ ತಂದು
ಹೊತ್ತು ಹೋಗುವ ಮುನ್ನ ಪೂಜಿಸು ಲಿಂಗವ
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು
ಹೊತ್ತು ಹೋಗದ ಮುನ್ನ ಮೃತ್ಯು ಒಯ್ಯುವ ಮುನ್ನ
ತೊತ್ತುಗೆಲಸವ ಮಾಡು ಕೂಡಲ ಸಂಗಮದೇವ -----ಶ್ರೀ ಬಸವೇಶ್ವರ


"ಬೆಳಗಿನ ಜಾವದ ಅಮೃತ ಘಳಿಗೆಯಲ್ಲಿ ಪರಮೇಶ್ವರನ ದಿವ್ಯ ಭಂಡಾರದ ಬಾಗಿಲು ತೆರೆದಿರುವುದು. ಅದೃಷ್ಟಶಾಲಿಗಳು ಆಗ ಎದ್ದು ತಮಗೆ ಬೇಕಾದಷ್ಟು ರತ್ನಗಳನ್ನು ದೋಚಿಕೊಳ್ಳಬಹುದು, ಮೂರ್ಖರು, ಸೋಮಾರಿಗಳು ಮತ್ತು ಭಾಗ್ಯಹೀನರು ಮಾತ್ರ ಆಗ ಮಲಗಿರುವರು" ----ಗುರು ನಾನಕ್ 


ಬ್ರಾಹ್ಮೇ ಮುಹೂರ್ತೇ ಉತ್ಥಾಯ ವಾರ್ಯುಪಸ್ಪ್ಮಶ್ಯ ಮಾಧವಃ |
ದಧ್ಯೌ ಪ್ರಸನ್ನಕರಣ ಸ್ವಾತ್ಮಾನಂ ತಮಸಃ ಪರಂ || 
                                               ------- ಶ್ರೀಮದ್ಭಾಗವತ 


ಮಾಧವನು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ನೀರಿನಿಂದ ಶುದ್ಧಿಮಾಡಿಕೊಂಡನು. ತಮಸ್ಸಿನಿಂದ [ಶರೀರ ಪ್ರಕೃತಿಯಿಂದ]ಆಚೆಗೆ ಇರುವ ಬೆಳಕಿನ ರೂಪವಾದ ತನ್ನ ಆತ್ಮವನ್ನು ಧ್ಯಾನಿಸಿದನು ಎಂದು ವ್ಯಾಸರು ಶ್ರೀಕೃಷ್ಣನ ಉತ್ಥಾನಕ್ರಮವನ್ನು ವರ್ಣಿಸಿದ್ದಾರೆ. ಸೂರ್ಯನು ಹುಟ್ಟುವಾಗ ಇನ್ನೂ ಮಲಗಿರುವವರನ್ನು ’ಅಭ್ಯುದಿತ’ರೆಂದೂ ಸೂರ್ಯನು ಮುಳುಗುವಾಗ ಮಲಗಿರುವವರನ್ನು ’ಅಭಿನಿರ್ಮುಕ್ತ’ರೆಂದೂ ಧರ್ಮಶಾಸ್ತ್ರ ತಿಳಿಸಿ ಅವರನ್ನು ನಿಂದ್ಯರೆಂದು ತೀರ್ಮಾನಿಸಿದೆ. ಹಾಗಾದರೆ ಉಷಃಕಾಲ ಎಂದರೆ ಯಾವುದು ? ಸೂರ್ಯನು ಹುಟ್ಟುವುದಕ್ಕೆ ೫ ಘಳಿಗೆಗಳಷ್ಟು ಮುಂಚಿನಕಾಲ ಉಷಃಕಾಲವೆಂದು ಪರಿಗಣಿತವಾಗಿದೆ. ಒಂದು ಘಳಿಗೆಗೆ ೨೪ ನಿಮಿಷಗಳು ಅಂದರೆ ೫ x ೨೪ = ೧೨೦ ನಿಮಿಷಗಳು ಅರ್ಥಾತ್ ಎರಡುಗಂಟೆಗಳ ಕಾಲ. ಅರುಣೋದಯ ಕಾಲ ಎಂದರೆ ಸೂರ್ಯೋದಯಕ್ಕೂ ೪ ಘಳಿಗೆಗಳು ಮುಂಚಿನ ಕಾಲ ಅಂದರೆ ೪ x ೨೪= ೯೬ ಅರ್ಥಾತ್ ಒಂದು ಗಂಟೆ ಮೂವತ್ತಾರು ನಿಮಿಷಗಳು. ಉಷಃಕಾಲದಿಂದ ಅರುಣೋದಯ ಕಾಲದ ಒಳಗಿನ ಸಮಯವೇ ನಾವು ಏಳಬೇಕಾದ ಬ್ರಾಹ್ಮೀ ಮುಹೂರ್ತ! ಕಷ್ಟಪಟ್ಟು ಹಾಗೆ ಏಳಲು ರೂಢಿಮಾಡಿಕೊಳ್ಳಬೇಕು. ಸಾಧ್ಯವಿಲ್ಲವಾದರೆ ಸೂರ್ಯನು ಹುಟ್ಟುವ ಒಂದು ಗಂಟೆಗೆ ಮೊದಲಾದರೂ ಏಳಬೇಕು, ಅದೂ ಆಗದಿದ್ದರೆ ಕೊನೇಪಕ್ಷ ಸೂರ್ಯನ ಜೊತೆಗಾದರೂ ಏಳಬೇಕು. ಇವನ್ನು ಉತ್ತಮ, ಮಧ್ಯಮ ಮತ್ತು ಅಧಮ ಕಲ್ಪಗಳೆಂದು ಗುರುತಿಸಲಾಗಿದೆ. ಸೂರ್ಯ ಹುಟ್ಟಿದ ನಂತರವೂ ಮಲಗೇ ಇರುವುದು ಪ್ರಕೃತಿ ನಿಯಮಕ್ಕೆ ವಿರುದ್ಧವಾದುದು.  
ಆರೋಗ್ಯವಂತನಾದ ವಯಸ್ಕನಿಗೆ ೬-೭ ಗಂಟೆಗಳ ಕಾಲದ ನಿದ್ದೆ ಸಾಕಾಗುತ್ತದೆ. ಬೇಗ ಮಲಗಿ ಬೇಗ ಏಳಬೇಕಾದುದು ಉತ್ತಮ. ಹರಟೆ, ಮನೋರಂಜನೆ, ಅಧ್ಯಯನ, ಬರವಣಿಗೆ ಈ ಯಾವುದೇ ಕಾರಣಕ್ಕಾಗಿಯೂ ಬೇಗ ಮಲಗುವುದನ್ನು ಮುಂದೂಡುತ್ತಾ ಬೆಳಿಗ್ಗೆ ಬೇಗ ಏಳುವುದನ್ನು ತಪ್ಪಿಸಿಕೊಳ್ಳುವುದು ದುರಭ್ಯಾಸವಾಗಿದೆ. ಬೆಳಗಿನಜಾವದ ಒಂದು ಗಂಟೆಯು ರಾತ್ರಿಯ ಎರಡುಗಂಟೆಗಳಿಗೆ ಗುಣದಲ್ಲಿ ಸಮ, ಬುದ್ಧಿವಂತನು ೧೦ ರೂಪಾಯಿ ಬದಲಿಗೆ ೫ ರೂಪಾಯಿ ಪಡೆದು ತೃಪ್ತನಾಗುವನೇ ಎಂದುಕೊಳ್ಳುತ್ತಾ ಬೇಗನೇ ಮಲಗಿ ತಡವಾಗಿ ಏಳುವವರೂ ಇದ್ದಾರೆ-ಇದೂ ಕೂಡ ಸಲ್ಲ. ರಾತ್ರಿ ಮಲಗುವಾಗ ಎಡಮಗ್ಗುಲಾಗಿ ಮಲಗಬೇಕು; ಆಹಾರ ತುಂಬಿದ ಜಠರದ ಭಾಗ ತಲೆಕೆಳಗಾಗಿ ಜೀರ್ಣಕ್ರಿಯೆಗೆ ತೊಂದರೆಯಾಗಬಾರದು, ನಂತರ ನಿದ್ದೆಯಲ್ಲಿ ಅಂಗಾತ ಮಲಗುತ್ತೇವೆ, ಮಗ್ಗುಲುಗಳನ್ನು ಬದಲಾಯಿಸುತ್ತೇವೆ. ಬೆಳಿಗ್ಗೆ ಏಳುವಾಗ ಬಲಮಗ್ಗುಲಲ್ಲೇ ಏಳಬೇಕು. ಎದ್ದು ಕುಳಿತು ಅಂಗೈಗಳನ್ನು ಉಜ್ಜಿಕೊಂಡು ಅವುಗಳನ್ನು ನಮ್ಮ ಮುಖದ ಮುಂದೆ ಹಿಡಿದು ನೋಡಿಕೊಳ್ಳಬೇಕು. ಎದ್ದಕಾಲಕ್ಕೆ ನಮ್ಮ ಅಂಗೈಗಳಲ್ಲಿ ಶಕ್ತಿತುಂಬಿರುತ್ತದೆ. ಮುಖಕ್ಕೆ ಆ ಶಕ್ತಿಯ ವರ್ಗಾವಣೆ ಆಗುವುದರಿಂದ ಕಣ್ಣು ತೇಜಸ್ಸನ್ನು ಪಡೆಯುತ್ತದೆ ಮತ್ತು ಹೊರಜಗತ್ತಿನ ಬೆಳಕಿಗೆ ತನ್ನನ್ನು ಹೊಂದಿಸಿಕೊಳ್ಳಲು ಕಣ್ಣಿಗೆ ಇದು ಪೂರಕವಾಗಿರುತ್ತದೆ.
ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |
ಕರಮೂಲೇ ಸ್ಥಿತೇ ಗೌರೀ ಪ್ರಭಾತೇ ಕರದರ್ಶನಂ || 

ಇದೊಂದು ಅರ್ಥಹೀನ ಮೂಢನಂಬಿಕೆಯಲ್ಲ! ಶ್ರೇಷ್ಠವಾದ ಭಾವವನ್ನು ಒಳಗೊಂಡ ಸಾಂಕೇತಿಕ ಕ್ರಿಯೆ. . ಲಕ್ಷ್ಮಿ ಎಂದರೆ ಸಂಪತ್ತು-ಚಂಚಲವಾಗಿದ್ದು ಬೆರಳ ತುದಿಯಲ್ಲಿನ ವಸ್ತುವಿನಂತೇ ಜಾರಿಹೋಗಬಹುದು, ಎಚ್ಚರವಿರಲಿ ಎಂಬ ಭಾವ. ಸರಸ್ವತಿ ಎಂದರೆ ಕೈಯ ಮಧ್ಯಭಾಗವಾಗಿದ್ದು ಅದು ಸ್ಥಿರವಾದುದು ಮತ್ತು ವ್ಯಕ್ತಿಗೆ ಸತತವಾಗಿ ಆಧಾರವಾದುದು ಅದನ್ನು ಗಟ್ಟಿಯಾಗಿ ಹಿಡಿದುಕೋ ಎಂಬ ಭಾವ. ಗೌರೀ ಎಂದರೆ ಹಿಂದೆ ವ್ಯಕ್ತಿ ಮಾಡಿದ ಕರ್ಮಗಳ ಫಲ- ಅದು ಈಗಿನ ಇರುವಿಕೆಗೆ ಮೂಲಕಾರಣವಾಗಿ ಆಧಾರವಾಗಿದೆ ಎಂಬ ಭಾವ. ಇನ್ನು ಒಳಗಿನ ಭಾವ ಬಹಳ ಗಹನವಾದುದು! ನಮ್ಮ ಕೈಗಳಲ್ಲಿಯೇ ಭಗವಂತನ ಸನ್ನಿಧಾನವಿದೆ. ಈ ಕೈಗಳಿಂದಲೇ ದೇವನು ಶ್ರೇಷ್ಠವಾದ ಮತ್ತು ಲೌಕಿಕ ಕರ್ಮಗಳನ್ನು ಮಾಡಿಸಲಿ. ಅವನ ಅನುಗ್ರಹದಿಂದ ಈ ಕೈಗಳಿಗೆ ಐಶ್ವರ್ಯವು ಬಂದು ಸೇರಲಿ. ಕೈಗಳಿಂದ ಮಾಡಲಾಗುವ ಕಠಿಣ ಪರಿಶ್ರಮವೇ ಎಲ್ಲಾಬಗೆಯ ರೋಗಗಳಿಗೂ ಮದ್ದು ಇದ್ದಂತೆ. ಇದರಿಂದ ನಾವು ಯಾರನ್ನಾದರೂ ಮುಟ್ಟಿದರೂ ಅಷ್ಟರಿಂದಲೇ ಅವರಿಗೆ ಮಂಗಳವಾಗುವ ದಿವ್ಯ ಶಕ್ತಿ ಕೈಗಳಿಗೆ ಲಭಿಸಲಿ ಎಂಬ ಪ್ರಾರ್ಥನೆ ಕೂಡ ಇದಾಗಿದೆ. ಮಹರ್ಷಿ ರಮಣರು, ರಾಮಕೃಷ್ಣ ಪರಮಹಂಸರು ಮೊದಲಾದವರು ತಮ್ಮ ಕೈಗಳಲ್ಲಿ ಆ ದಿವ್ಯತ್ವವನ್ನು ಹೊಂದಿದ್ದರು, ಇದು ಕೇವಲ ಉದಾಹರಣೆ, ಇಂತಹ ಅಸಂಖ್ಯ ಮಹಿಮಾನ್ವಿತರು ಭಾರತದಲ್ಲಿ ಆಗಿಹೋಗಿದ್ದಾರೆ-ಈಗಲೂ ಇದ್ದಾರೆ! ಅದಕ್ಕೇ ಗುರುಸ್ಥಾನ[ತಪಸ್ವಿ-ಸಾಧಕರುಗಳಿಂದ]ದಲ್ಲಿ ಇರುವವರಿಂದ ವಂದನೆ ಸ್ವೀಕರಿಸಬಾರದು, ಆಶೀರ್ವಾದ ಗ್ರಹಣಮಾಡಬೇಕು. ಸಾಮಾನ್ಯವಾಗಿ ಅದಕ್ಕೇ ದೇವಮೂರ್ತಿಗಳಲ್ಲಿ, ತಪಸ್ವಿಗಳ ಭಾವಚಿತ್ರಗಳಲ್ಲಿ ಬಲಗೈ ಎತ್ತಿ ಆಶೀರ್ವದಿಸುವುದನ್ನು ಕಾಣಬಹುದಾಗಿದೆ.   


ಅನಂತರ ಜಲ-ಮಲ-ವಿಸರ್ಜನೆ, ದಂತಧವನ ಅಥವಾ ದಂತಶೋಧನ[ಹಲ್ಲುಜ್ಜುವಿಕೆ], ಜಿಹ್ವಾಶೋಧನ[ಬಲಗೈ ಮಧ್ಯದ ಮೂರು ಬೆರಳುಗಳಿಂದ ನಾಲಿಗೆ ತಿಕ್ಕಿ ತೊಳೆಯಬೇಕು], ಕೈಕಾಲು-ಮುಖಗಳ ಮಾರ್ಜನ ಇವು ನಡೆಯಬೇಕು.ಈ ಕ್ರಿಯೆಗಳಿಗೆಲ್ಲಾ ಶುದ್ಧ ತಣ್ಣೀರನ್ನೇ ಬಳಸಬೇಕು. ಎರಡು ಕಣ್ಣು, ಎರಡು ಕಿವಿ, ಎರಡು ಮೂಗಿನ ಹೊಳ್ಳೆಗಳು, ಒಂದು ಬಾಯಿ, ಕೆಳಗಿನ ಎರಡು ದ್ವಾರಗಳು ಇವುಗಳನ್ನು ಶುದ್ಧ ನೀರಿನಲ್ಲಿ ತಿಕ್ಕಿ ತೊಳೆದಾಗ, ರಾತ್ರಿಕಾಲದಲ್ಲಿ ಅಲ್ಲಿ ಸೇರಿರಬಹುದಾದ ಮಲಗಳು ಹೋಗಿ ಅವು ಚುರುಕಾಗುತ್ತವೆ; ಶರೀರವು ಅನಾಯಾಸವಾಗಿ ಮುಂದಿನ ಕೆಲಸಗಳಿಗೆ ಅಣಿಯಾಗುತ್ತದೆ. 

ಆ ನಂತರ ಕಪಿಲ[ಕಂದು, ಕೌಲು]ಬಣ್ಣದ ಹಸು[ಹಸು ಯಾವುದೇ ಬಣ್ಣದ್ದಾದರೂ ಪರವಾಗಿಲ್ಲ, ಅಂತೂ ಹಸುವನ್ನು ನೋಡಬೇಕು], ಕನ್ನಡಿ[ಕನ್ನಡಿಯಲ್ಲಿ ನಮ್ಮ ಮುಖ ದರ್ಶನಮಾಡಿಕೊಂಡು ದಿನದಿನವೂ ಕಾಣಬಹುದಾದ ವ್ಯತ್ಯಾಸಗಳನ್ನು ಅರೆನಿಮಿಷ ಗ್ರಹಿಸಬೇಕು], ಸೂರ್ಯ, ಭಾಗ್ಯವಂತ[ಪುಣ್ಯಶಾಲಿ: ಸಾಧು, ಸಂತ, ಸಜ್ಜನ], ರಾಜ[ಅಧಿಕಾರಿ], ವಿದ್ಯಾಗುರು, ಮತ್ತು ಪತಿವ್ರತಾ ಸ್ತ್ರೀ ಇವರನ್ನು ನೋಡುವುದು ಒಳ್ಳೆಯದೆಂದು ಶಾಸ್ತ್ರ ಹೇಳುತ್ತದೆ. ಸಮಯಕ್ಕೆ ಅವರು ಸಿಗದಿದ್ದರೆ ಹುಡುಕಿಕೊಂಡು ಹೋಗಬೇಕೆಂದು ಅರ್ಥವಲ್ಲ, ಸ್ಮರಣೆಯೂ ಸಾಕು.

ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ |
ಪಂಚಕನ್ಯಾ ಸ್ಮರೇನ್ನಿತ್ಯಂ ಮಹಾಪಾತಕ ನಾಶನಮ್ ||

ಪತಿವ್ರತೆಯರಾದ ಅಹಲ್ಯೆ, ದ್ರೌಪದಿ, ಸೀತೆ, ತಾರಾ ಮತ್ತು ಮಂಡೋದರಿ ತಮ್ಮ ಪತಿವ್ರತಾ ಧರ್ಮದಿಂದ ಜಗತ್ತನ್ನೇ ಬೆರಗುಗೊಳಿಸಿದರು, ಮಾರುವೇಷದಲ್ಲಿ ತಮ್ಮನ್ನು ಪರೀಕ್ಷಿಸಲು ಬಂದ ದೇವ-ದೈವತಕ್ಕೇ ಸವಾಲೆಸೆದರು. ತಮ್ಮ ಪತಿವ್ರತಾ ಧರ್ಮದ ಪಾಲನೆಗಾಗಿ ಅವರು ಅನೇಕ ಸಂಕಷ್ಟಗಳನ್ನು ಎದುರಿಸಿದರೂ ಧರ್ಮಮಾರ್ಗಿಗಳಾಗಿ ಅವುಗಳನ್ನು ನಿವಾರಿಸಿಕೊಳ್ಳುವಲ್ಲಿ ಯಶಸ್ಸು ಪಡೆದರು, ಲೋಕಮಾನ್ಯರಾದರು. ಅಂಥಾ ಪತಿವ್ರತೆಯರನ್ನು ನೆನೆದರೂ ಸಹಿತ ಅದು ಪುಣ್ಯದ ಕೆಲಸ ಎಂಬುದು ಧರ್ಮದ ನೀತಿಸಾರ.


ಪ್ರಾತಃಕಾಲದಲ್ಲಿ ಪಠಿಸಬಹುದಾದ ಸ್ತುತಿಗಳು ಬಹಳ ಇವೆ. ನಮ ಇಷ್ಟದೇವತೆ, ಕುಲದೇವತೆ, ಗುರುಪರಂಪರೆ, ಅಭಿರುಚಿ ಮತ್ತು ಕಾಲಾವಕಾಶ ಅನುಸರಿಸಿ ಆಯ್ಕೆಮಾಡಿಕೊಳ್ಳಬಹುದು. ಪುಣ್ಯಾತ್ಮರು ಗಮಕಿಗಳು ಅಲ್ಲಲ್ಲಿ ಮಂಗಳಾಷ್ಟಕಗಳನ್ನು ಹಾಡುತ್ತಿದ್ದರೆ ಅದನ್ನು ಆಲೈಸಿದರೇ ಸಾಕು. ಉದಯರಾಗ ಭೂಪಾಲಿಯಲ್ಲಿ ಅವರು ಹಾಡುವಾಗ ಮನಸ್ಸು ಮುದಗೊಳ್ಳುತ್ತದೆ, ಎಲ್ಲಿಲ್ಲದ ಉತ್ಸಾಹ ಆವರಿಸಿಕೊಳ್ಳುತ್ತದೆ. ಮನಸ್ಸು ಆಹ್ಲಾದಕರ ಸ್ಥಿತಿಯನ್ನು ಅನುಭವಿಸುತ್ತದೆ.  


ಉಷಃಪಾನ :  ಆಯುರ್ವೇದದಲ್ಲಿ ಉಷಃಪಾನ ಎಂಬ ಕ್ರಿಯೆಗೆ ಬಹಳ ಮಹತ್ವವಿದೆ. ಚೆನ್ನಾಗಿ ತಿಕ್ಕಿ ತೊಳೆದ ತಾಮ್ರದ ಪಾತ್ರೆಯಲ್ಲಿ ಅಥವಾ ಮಣ್ಣಿನ ಮಡಿಕೆ/ಹೂಜಿಯಲ್ಲಿ ಹಿಂದಿನರಾತ್ರಿ ಸುಮಾರು ಅರ್ಧ ಲೀಟರಿನಷ್ಟು ನೀರನ್ನು ತುಂಬಿ ಇಡಬೇಕು. ಬೆಳಿಗ್ಗೆ ದೇಹಶುದ್ಧಿಯಾದ ನಂತರ ಬೇರೇ ಏನನ್ನೂ ಸ್ವೀಕರಿಸುವ ಮೊದಲು ಆ ನೀರನ್ನು ಕುಡಿಯಬೇಕು. ದೈಹಿಕ ಅನಾರೋಗ್ಯವೇನಾದರೂ ಇದ್ದರೆ ಆ ನೀರಿನ ಬದಲಿಗೆ ವೈದ್ಯರು ಹೇಳುವ ದಾಕ್ಷಿ, ಕಲ್ಲುಸಕ್ಕರೆ, ಕೊತ್ತಂಬರಿ ಬೀಜ ಇತ್ಯಾದಿ ಸೇವಿಸಬಹುದು. 


ನಂತರ ವ್ಯಾಯಾಮ ಮತ್ತು ಸ್ನಾನ--ಈ ಎರಡರಲ್ಲಿ ಯಾವುದು ಮೊದಲು?  ಮಂತ್ರ ಪಠನೆಮಾಡುತ್ತಾ ಉಪಾಸನೆಯಾಗಿ ಯೋಗಾಸನ ಮತ್ತು ಸೂರ್ಯನಮಸ್ಕಾರಗಳನ್ನು ಮಾಡುವುದಾದರೆ ಮೊದಲು ಸ್ನಾನ ನಂತರ ವ್ಯಾಯಾಮ. ವ್ಯಾಯಾಮದಿಂದ ಆಗುವ ಉಷ್ಣತೆ, ಬೆವರು, ಮೂತ್ರಗಳನ್ನು ಹೊರಹಾಕಿ ದೇಹವನ್ನು ತಂಪಾಗಿಸಿ ಶುದ್ಧಗೊಳಿಸಲು ಸ್ನಾನ ಅನುಕೂಲಿಸುತ್ತದೆ. ಅವರವರ ಅನುಕೂಲಗಳನ್ನು ನೋಡಿಕೊಂಡು ಆಚರಿಸುವ ಸ್ವಾತಂತ್ರ್ಯ ಅವರವರಿಗಿದೆ. ಸ್ನಾನ ಮಾಡಿ, ಯೋಗೋಪಾಸನೆ ಸೂರ್ಯನಮಸ್ಕಾರ ಮಾಡಿ ಮತ್ತೆ ಸ್ನಾನಮಾಡುವ ಮಂದಿಯೂ ಇದ್ದಾರೆ. ಸ್ನಾನ ಹೆಚ್ಚಿದಷ್ಟೂ ದೇಹದ ಶುದ್ಧಿ ಹೆಚ್ಚುತ್ತದೆ, ಮನ ನಿರ್ಮಲಭಾವ ತಾಳಲು ಅನುಕೂಲವಾಗುತ್ತದೆ.       
ಏಹೀ ಸೂರ್ಯ ಸಹಸ್ರಾಂಶೋ ತೇಜೋರಾಶೇ ಜಗತ್ಪತೇ |
ಅನುಕಂಪಯ ಮಾಂ ಭಕ್ತ್ಯಾ ಗೃಹಾಣಾರ್ಘ್ಯಂ ದಿವಾಕರ ||


ಈ ರೀತಿಯಾಗಿ ಹೇಳುತ್ತಾ ಜಗತ್ತಿಗೆ ಕಾಣುವ ಪ್ರತ್ಯಕ್ಷ ದೈವವಾದ ಸೂರ್ಯನಿಗೆ ಬೊಗಸೆಯಲ್ಲಿ ಶುದ್ಧಜಲವನ್ನು ತುಂಬಿಸಿಕೊಂಡು ಚೆಲ್ಲುವುದು ವಿಹಿತವಾದುದಾಗಿದೆ. [ಹೇ ಸೂರ್ಯ ಸಹಸ್ರಾಂಶು ತೇಜೋರಾಶಿಯಾದ ಜಗತ್ಪತಿಯೇ ಇದೋ ನಿನಗೆ ನನ್ನ ಅರ್ಘ್ಯ, ನನ್ನಮೇಲೆ ಅನುಕಂಪಿತನಾಗಿ ದಯಮಾಡಿ ಸ್ವೀಕರಿಸು]  ನಂತರ ಸೂರ್ಯ ನಮಸ್ಕಾರಾದಿ ಯೋಗ-ಪ್ರಾಣಾಯಾಮಗಳನ್ನು ನಡೆಸಬೇಕು[ಗುರುಮುಖೇನ ಪ್ರಮಾಣಬದ್ಧವಾಗಿ ಕಲಿತುಕೊಂಡು] ಆ ನಂತರ ಬೆಳಗಿನ ತಂಪಾದ ಹವೆಯಲ್ಲಿ ಸ್ವಲ್ಪಕಾಲ ಚುರುಕಾಗಿ ಓಡಾಡುವುದು ’ಚಂಕ್ರಮಣ’ ಎನಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಅಶ್ವತ್ಥವೃಕ್ಷ, ಬಿಲ್ವ, ಮುತ್ತುಗ, ಅಗಸೆ, ತುಳಸಿ ಈ ಗಿಡಮರಗಳ ಸಾಮೀಪ್ಯದಲ್ಲಿ ಸುತ್ತುವುದು ಆರೋಗ್ಯದಾಯಕ[ಇವೆಲ್ಲಾ ನಮ್ಮ ದೇಹಕ್ಕೆ ಬೇಕಾದ ಶುದ್ಧ ಔಷಧೀಯ ಗುಣವುಳ್ಳ ಆಮ್ಲಜನಕವನ್ನು ಹೇರಳವಾಗಿ ಹೊರಸೂಸುತ್ತವೆ  ಬೇರೇ ರೀತಿಯ ವ್ಯಾಯಾಮ ಮಾಡಲಾಗದ ಇಳಿವಯಸ್ಸಿಗರಿಗೆ ಇದು ಒಳ್ಳೆಯದು. ಮನೆಯಲ್ಲಿ ತಂದೆ-ತಾಯಿ ಮತ್ತು ಇನ್ನುಳಿದ ಹಿರಿಯರಿಗೆ [ಅಥವಾ ಅವರ ಭಾವಚಿತ್ರಗಳಿಗೆ] ತಲೆಬಾಗಿ, ಬೆನ್ನು ಬಗ್ಗಿಸಿ ಕಾಲುಮುಟ್ಟಿ ನಮಿಸುವುದು ಬೆಳಿಗ್ಗೆ ಮಾಡಬೇಕಾದ ಇನ್ನೊಂದು ಕರ್ತವ್ಯ. ಅವರು ತುಂಬಿಬಂದ ಹೃದಯದಿಂದ ಮಾಡುವ ಅಶೀರ್ವಾದಗಳು ಆ ದಿನವಿಡೀ ನಮಗೆ ಶ್ರೀರಕ್ಷೆ.   

One must remember :

Early to bed and early to rise
Makes man healthy, wealthy and wise  


and also 

A thing well-begun is half done

ಸ್ನಾನದ ಬಗ್ಗೆ ಗಮನಹರಿಸೋಣ
------------------------------
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿಸ್ತಥಾ |
ಆಗಚ್ಛಂತು ಪವಿತ್ರಾಣಿ ಸ್ನಾನಕಾಲೇ ಸದಾ ಮಮ ||

[ಪೂರ್ವದಲ್ಲಿ ನದಿಗಳು, ಸರೋವರಗಳು ಇಂದಿನ ದಿನಗಳಲ್ಲಿ ಕಾಣುವಂತೇ ಕಲ್ಮಷಗೊಂಡಿರಲಿಲ್ಲ; ಕಾರಣವಿಷ್ಟೇ ತಾನು ಬಳಸುವ ಸಾರ್ವಜನಿಕ ಸ್ವತ್ತನ್ನು ತನ್ನಂತೆಯೇ ಬಳಸಬಹುದಾದ ಇತರರಿಗೂ ಅದು ಬಳಕೆಗೆ ಯೋಗ್ಯವಾದ ರೀತಿಯಲ್ಲಿ ಉಪಲಬ್ಧವಾಗುವ ಹಾಗೇ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಪೂರ್ವಜರಿಗಿತ್ತು. ಉದ್ದಿಮೆಗಳ, ವಸಾಹತುಗಳ, ವಸತಿ ಸಮುಚ್ಛಯಗಳ ಮಲಿನ ನೀರು/ಕಲ್ಮಷ ಪದಾರ್ಥಗಳು ನದಿಯನ್ನೋ ತೊರೆಯನ್ನೋ ಸರೋವರ ಪುಷ್ಕರಣಿಗಳನ್ನೋ ಸೇರಲು ನಮ್ಮ ಜನ ಬಿಡುತ್ತಿರಲಿಲ್ಲ. ಇವತ್ತು ಯಾರಿಗೂ ಆ ಸಾಮಾಜಿಕ ಜವಾಬ್ದಾರಿ ಉಳಿದಿಲ್ಲ, ರಾಜರುಗಳಿಲ್ಲದ ಊರುಗಳಲ್ಲಿ ಅರಾಜಕತೆ ಈ ಅರ್ಥದಲ್ಲಿ ಕಾಣುತ್ತದೆ. ಇಂದಿರುವ ಪ್ರಜಾರಾಜ್ಯದಲ್ಲಿ ಖೂಳರುಗಳೇ ಆಳರಸರಾಗಿ ಆಳುವುದರಿಂದ ಮತ್ತು ಅವರೆಲ್ಲರಿಗೂ ಅವರವರ ’ಸ್ಥಾನ ಭದ್ರತೆಯನ್ನು ಕಲ್ಪಿಸಿಕೊಳ್ಳುವುದೇ ಮಹತ್ತರ ಸಾಧನೆ’ಯಾಗಿರುವುದರಿಂದ ಸಾಮಾಜಿಕ ಹಿತಾಸಕ್ತಿ ಕಡೆಗಣಿತವಾಗಿದೆ. ರಾಜಕೀಯವೂ ದುಡಿಮೆಯ ಉದ್ಯಮವಾಗಿ ಪರಿಣಮಿಸಿದ್ದರಿಂದ ಎಲ್ಲವೂ ವಿಷಮಯ ವಾತಾವರಣವಾಗಿದೆ; ಪುಣ್ಯನದಿಗಳು ಕಲುಷಿತಗೊಂಡು ದಿವ್ಯ ಸಾಧು ಸಂತರು ಅವುಗಳಲ್ಲಿ ಸ್ನಾನ ಮಾಡಲೂ ಹಿಂಜರಿಯುವ ಮಟ್ಟಕ್ಕೆ ತಲ್ಪಿರುವುದು ಅತ್ಯಂತ ಖೇದಕರ.]     

ಸ್ನಾನದ ಮಹತ್ವ: ಸ್ನಾನ ಎಂದರೆ ದೇಹವನ್ನೂ ಮನಸ್ಸನ್ನೂ ಚೆನ್ನಾಗಿ ತೊಳೆಯುವಿಕೆ, ಮಜ್ಜನ ಅಥವಾ ಜಳಕ. ಹಿಂದೂ ಜೀವನ ಪದ್ಧತಿಯಲ್ಲಿ ಒಂದು ಮುಖ್ಯವಾದ ಮತ್ತು ನಿತ್ಯವೂ ಬಿಡದೇ ಮಾಡಬೇಕಾದ ಪವಿತ್ರಕರ್ಮ. ಇತರ ಕರ್ಮಗಳಿಗೆ ಪೂರ್ವಾಂಗವಾಗಿ ಅವಶ್ಯಕವಾದ ಶುದ್ಧೀಕರಣ ಮಾತ್ರವಲ್ಲ, ಸರಿಯಾಗಿ ವಿಧಿವತ್ತಾಗಿ ಶ್ರದ್ಧೆಯಿಂದ ಅಚರಿಸಿದಾಗ, ಇದು ಇಹ ಮತ್ತು ಪರಗಳಲ್ಲಿ ಎಲ್ಲಾವಿಧವಾದ ಶ್ರೇಯಸ್ಸನ್ನೂ  ಕೊನೆಗೆ ಮುಕ್ತಿಯನ್ನೂ ಕೊಡುವಂತಹ ಪ್ರತ್ಯೇಕವಾದ ಕರ್ಮವೂ ಹೌದು.


ನಿತ್ಯವೂ ಬೆಳಿಗ್ಗೆ ಸ್ನಾನ ಮಾಡುವವನು ನೈರ್ಮಲ್ಯ, ಬಲ, ತೇಜಸ್ಸು, ಓಜಸ್ಸು, ತಪಸ್ಸು, ಮೇಧಾಶಕ್ತಿ, ಇಂದ್ರಿಯ ಚಾಪಲ್ಯದಿಂದ ಬಿಡುಗಡೆ, ಶೋಕ ಹಾಗೂ ಕೆಟ್ಟ ಸ್ವಪ್ನಗಳ ನಾಶ, ಮನಸ್ಸಿನ ಸೌಮ್ಯತೆ, ರೂಪ, ಸೌಭಾಗ್ಯ, ಆಯಸ್ಸು, ಆರೋಗ್ಯ ವೃದ್ಧಿಗಳೆಂಬ ಸುಖ-ಲಾಭಗಳನ್ನು ಪಡೆಯುತ್ತಾನೆ. ರಾತ್ರಿ ಮಲಗಿ ಬೆಳಿಗ್ಗೆ ಏಳುವ ಹೊತ್ತಿಗೆ ಮಾನವನ ದೇಹ, ಇಂದ್ರಿಯ ಮತ್ತು ಮನಸ್ಸುಗಳು ನಾನಾ ರೀತಿಯ ಕೊಳೆಗಳಿಂದ ಮಲಿನವಾಗುತ್ತವೆ. ಇವುಗಳನ್ನು ಶೋಧಿಸಲು ನಿತ್ಯವೂ ಬೆಳಿಗ್ಗೆ ಎದ್ದೊಡನೆ ಸ್ನಾನ ಮಾಡುವುದನ್ನು ಋಷಿಗಳು ತುಂಬಾ ಮೆಚ್ಚುತ್ತಾರೆ --ಎಂದು ಯೋಗಿ ಯಾಜ್ಞವಲ್ಕ್ಯ ಮತ್ತು ಎಲ್ಲಾ ಋಷಿಗಳೂ, ಶಾಸ್ತ್ರಕಾರರೂ, ಸಾಧು-ಸಂತರೂ ಹೇಳಿದ್ದಾರೆ; ಜೊತೆಗೆ ತಾವು ಆಚರಿಸಿ ನಮಗೆ ದಾರಿ ತೋರಿದ್ದಾರೆ. 


ನತೋಸ್ಮಿ ತುಂಗಾಂ ವಿಲತಸ್ತರಂಗಾಂ ಅಘೌಘಭಂಗಾಂ ಹರಿಪಾದಸಂಗಾಂ |
ನತೋಸ್ಮಿ ಭದ್ರಾಂ ಹೃತಪಾಪನಿದ್ರಾಂ ವಿಮುಕ್ತಿ ಪದ್ಯಾಂ ವಿಮಲೈಕ ಸಾಧ್ಯಾಂ||
ಪಾವನೆಯರಾಕೃಷ್ಣೆ ಭೀಮೆಯರ ತಾಯ್ನಾಡು 
ಕಾವೇರಿ ಗೋದೆಯರು ಮೈದೊಳೆವ ನಲುನಾಡು 


ಎಂದು ಕವಿ ಕುವೆಂಪು ಹೇಳಿದ್ದಾರಲ್ಲವೇ?  ಭಗವಂತನಿಂದ ಸೃಷ್ಟಿಸಲ್ಪಟ್ಟ ಪುಣ್ಯನದಿಗಳೂ ಸರೋವರಗಳೂ ತಮ್ಮ ದಿವ್ಯಜಲದಿಂದ ನಮ್ಮ ದೇಹ-ಮನಗಳ ಕೊಳೆಯನ್ನು ತೊಳೆಯುತ್ತವೆ ಎಂಬುದು ಅರಿಯಬೇಕಾದ ಅಂಶ ಮತ್ತು ನದಿಗಳನ್ನೂ ಸರೋವರಗಳನ್ನೂ ಸದಾ ಶುದ್ಧವಾಗಿಡಬೇಕಾದುದು ನಮ್ಮ ಆದ್ಯ ಕರ್ತವ್ಯ.   

ಸ್ನಾನ ಕಾಲ:


ಉಷಃಕಾಲ ಅಥವಾ ಅರುಣೋದಯ ಕಾಲಗಳು ಸ್ನಾನಕ್ಕೆ ಪ್ರಶಸ್ತ. ಅದಿಲ್ಲಾ ಸೂರ್ಯೋದಯಕ್ಕೂ ಮುಂಚೆ ಅಥವಾ ಸೂರ್ಯೋದಯದ ಕಾಲದಲ್ಲಿ, ಅದೂ ಆಗದಿದ್ದರೆ ಸೂರ್ಯೋದಯದ ಅನಂತರ ಆದಷ್ಟು ಬೇಗನೇ ಸ್ನಾನಮಾಡಬೇಕು. ಬೆಳಿಗ್ಗೆ ಸ್ನಾನ ಮಾಡಲು ಅಸಾಧ್ಯ ಎನ್ನುವ ಅನಿವಾರ್ಯತೆಯಲ್ಲಿರುವವರು ಮಧ್ಯಾಹ್ನದ ಊಟಕ್ಕೂ ಮೊದಲು ಸ್ನಾನ ಮಾಡಬೇಕು. ಶ್ರಮಜೀವಿಗಳು-ರೈತರು, ಗಿರಣಿ, ಗಣಿ, ಕಾರ್ಖಾನೆ, ಉದ್ಯಮ ಮೊದಲಾದ ಕಡೆಗಳಲ್ಲಿ ದುಡಿಯುವವರು ತಮ್ಮ ದಿನದ ಕೆಲಸದ ಅನಂತರ ಸಂಜೆ ಸ್ನಾನ ಮಾಡುತ್ತಾರೆ. ಇದು ಅವರ ವೃತ್ತಿಗಳಿಗೆ ಹೊಂದಿಕೊಂಡಂತಹ ಅಚಾರ. ಅಂಥವರು ನಿತ್ಯ ಬೆಳಿಗ್ಗೆಯೂ ಸಹ ಒಮ್ಮೆ ಸ್ನಾನ ಮಾಡಿಯೇ ಕೆಲಸಕ್ಕೆ ತೊಡಗಿದರೆ ಒಳ್ಳೆಯದು. ಗ್ರಹಣಕಾಲ, ಸಂಕ್ರಾಂತಿ ಮುಹೂರ್ತಗಳು, ತೀರ್ಥಯಾತ್ರೆ, ಅಶುಚಿಯಾದ ಸ್ಥಳಗಳಿಗೆ ಹೋಗಿಬಂದ ನಂತರ, ಶಿಶುಜನನದ ವಾರ್ತೆ ಕೇಳಿದಾಗ, ಸೂತಕ, ಮೃತಕ ಮುಂತಾದ ಅಶೌಚ ಕಾಲಗಳು ಎದುರಾದಾಗ ಮಾನಸಿಕ ಹಾಗೂ ದೈಹಿಕ ನೆಮ್ಮದಿಗಾಗಿ ಅನೇಕಾವರ್ತಿ ಸ್ನಾನಗಳನ್ನು ಮಾಡಬಹುದಾಗಿದೆ. 

ಸ್ನಾನದ ದ್ರವ್ಯ ಮತ್ತು ಸ್ನಾನವಿಧಿಗಳು :


ಸ್ನಾನಕ್ಕೆ ಮುಖ್ಯವಾದ ದ್ರವ್ಯ ಶುದ್ಧವಾದ ನೀರು. ತಣ್ಣೀರೇ ಒಳ್ಳೆಯದು. ಆನಾರೋಗ್ಯದಿಂದ ಬಳಲುತ್ತಿದ್ದರೆ ತುಸು ಬಿಸಿಯಾದ ನೀರಿನಿಂದ ಸ್ನಾನ ಮಾಡಬಹುದು.ಚರ್ಮ ಸುಡುವಷ್ಟು ಬಿಸಿಯಿರುವ ನೀರಿನ ಸ್ನಾನ ಯೋಗ್ಯವಲ್ಲ. ನಿತ್ಯವೂ ತಣ್ಣೀರಿನಿಂದಲೇ ಸ್ನಾನ ಮಾಡುವವನು ಪುಷ್ಕರ ತೀರ್ಥಗಳ ಪುಣ್ಯಸ್ನಾನದ ಫಲವನ್ನು ಪಡೆಯುವನೆಂದು ಋಷಿಗಳ ಹೇಳಿಕೆಯಿದೆ.  ಆರುವಿಧವಾದ ಸ್ನಾನಗಳು ಹೇಳಲ್ಪಟ್ಟಿವೆ : ೧. ಮಂತ್ರಸ್ನಾನ, ೨. ಭೌಮಸ್ನಾನ, ೩. ಆಗ್ನೇಯಸ್ನಾನ, ೪.ವಾಯುವ್ಯಸ್ನಾನ, ೫. ದಿವ್ಯಸ್ನಾನ, ೬. ಧ್ಯಾನಸ್ನಾನ ಹೀಗೇ ಆರು ವಿಧದ ಸ್ನಾನಗಳು ಬಳಕೆಯಲ್ಲಿವೆ.   


೧. ಮಂತ್ರ ಸ್ನಾನ: ಭಗಂತನ ಸ್ತುತಿ ಮತ್ತು ಶ್ಲೋಕಗಳನ್ನು ಹೇಳುತ್ತಾ ತನ್ನ ಕಾಲಿನಿಂದ ಆರಂಭಿಸಿ ತಲೆಯವರೆಗಿನ ಎಲ್ಲಾ ಭಾಗಗಳಿಗೂ ನೀರಿನ ಹನಿಗಳನ್ನು ಪ್ರೋಕ್ಷಿಸಿಕೊಳ್ಳುವುದು.[ವೈದಿಕ ಕಾರ್ಯಕ್ರಮಗಳ ಪುಣ್ಯಾಹವಾಚನ ಸಮಯದಲ್ಲಿ ಪುರೋಹಿತರು ಈ ಸ್ನಾನವನ್ನು ಮಾಡಿಸುವುದನ್ನು ನೆನೆಪಿಸಿಕೊಳ್ಳಬಹುದು]



೨. ಭೌಮಸ್ನಾನ: ಭೂಮಿಯಲ್ಲಿ ಸಿಗುವ ಗೋಪಿಚಂದನ, ತುಳಸೀ ಗಿಡ ಮೊದಲಾದ ವನಸ್ಪತಿಗಳ ಬುಡದಲ್ಲಿಂದ ತೆಗೆದ ಮಣ್ಣು, ಪುಣ್ಯನದಿಗಳ ದಡದ ಶುದ್ಧವಾದ ಮಣ್ಣು ಇತ್ಯಾದಿ ಮೃತ್ತಿಕೆಗಳನ್ನು ನೀರಲ್ಲಿ ಕಲಸಿ ನಿರ್ದಿಷ್ಟ ಆಕಾರದಲ್ಲಿ ಶರೀರದ ನಿರ್ದಿಷ್ಟ ಭಾಗಗಳಲ್ಲಿ ಲೇಪಿಸಿಕೊಂಡು ಸ್ನಾನ ಮಾಡುವುದು.


೩. ಆಗ್ನೇಯ ಸ್ನಾನ: ವಿಧಿಪ್ರಕಾರ ತಯಾರಿಸಿದ  ವಿಭೂತಿಯನ್ನು ನಿರ್ದಿಷ್ಟ ಆಕಾರದಲ್ಲಿ, ಶರೀರದ ನಿರ್ದಿಷ್ಟ ಜಾಗಗಳಿಗೆ ಲೇಪಿಸಿಕೊಳ್ಳುವುದು. [ಭಸ್ಮವಾಗಿರುವ ದ್ರವ್ಯಕ್ಕೆ ಅಗ್ನಿಯ ಸಂಪರ್ಕ ಇದ್ದದ್ದರಿಂದ ಇದಕ್ಕೆ ಆಗ್ನೇಯಸ್ನಾನವೆಂದು ಕರೆಯುತ್ತಾರೆ.]


೪. ವಾಯುವ್ಯಸ್ನಾನ: ಇದಕ್ಕೆ ಗೋರಜಃ ಸ್ನಾನವೆಂದು ಇನ್ನೊಂದು ಹೆಸರು. ಹಸುಗಳ ಕಾಲುಗಳ ಗೊರಸುಗಳಿಂದ ಎದ್ದ ಪವಿತ್ರವಾದ ಧೂಳನ್ನು ತಲೆಯ ಮೇಲೆ ಸಿಂಪಡಿಸಿಕೊಳ್ಳುವುದು. [ಗೋವಿಗೆ ಭಾರತೀಯರಲ್ಲಿ ಎಂಥಾ ಮಹತ್ವವಿದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ]


೫. ದಿವ್ಯಸ್ನಾನ: ಬಿಸಿಲಿನಿಂದ ಕೂಡಿದ ಮಳೆಯಲ್ಲಿ ನೆನೆಯುವುದೇ ದಿವ್ಯಸ್ನಾನವೆಂಬುದು ಯಾಜ್ಞವಲ್ಕ್ಯರ ಅಭಿಮತ. ದ್ಯುಲೋಕ ಅಥವಾ ಮೇಲಿನ ಲೋಕದಿಂದ ಹನಿಸಲ್ಪಡುವ ನೀರಿನಿಂದಾಗುವ ಸ್ನಾನವಾದ ಕಾರಣ ಇದಕ್ಕೆ ದಿವ್ಯ ಸ್ನಾನವೆಂದು ಹೆಸರು. [ಉತ್ತರಭಾರತದಲ್ಲಿ ಚೈತ್ರಮಾಸದಲ್ಲಿ ವಸಂತಪಂಚಮಿಯ ಸಮಯದಲ್ಲಿ ಅನೇಕ ಕಡೆ ಮಳೆಗಳಾದಾಗ ಜನ ಉಟ್ಟಬಟ್ಟೆಯಲ್ಲಿ ಬಿಸಿಲಿನಲ್ಲಿ ಹೊರಗಡೆ ನಿಂತು ಮಳೆಯಲ್ಲಿ ನೆನೆದು ಅಲ್ಲೇ ಮೈ ಒರೆಸಿಕೊಳ್ಳುತ್ತಾರೆ. ಇದಕ್ಕೆ ದಿವ್ಯಸ್ನಾನದ ರೂಪಾಂತರ ಎನ್ನಬಹುದು]


೬. ಧ್ಯಾನಸ್ನಾನ: ಯೌಗಿಕಸ್ನಾನ ಅಥವಾ ಮಾನಸಿಕ ಸ್ನಾನ ಎಂತಲೂ ಹೇಳುತ್ತಾರೆ. 


ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಂಗತೋಪಿ ವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಭ್ಯಂತರಃ ಶುಚಿಃ ||


ಅತಿನೀಲ ಘನಶ್ಯಾಮಂ ನಳಿನಾಯತಲೋಚನಂ |
ಸ್ಮರಾಮಿ ಪುಂಡರೀಕಾಕ್ಷಂ ತೇನ ಸ್ನಾತೋ ಭವಾಮ್ಯಹಂ ||


ಸನತ್ಕುಮಾರ ಋಷಿಗಳು ಇದನ್ನೇ ಹೇಳಿದ್ದಾರೆ. ಪುಂಡರೀಕಾಕ್ಷನ ನೆನಪಿನಿಂದ ಯಾವುದೇ ಸ್ಥಿತಿಯಲ್ಲಿದ್ದರೂ ಸ್ನಾತನಾಗಿ ಶುದ್ಧನಾದೆನೆಂದು ತಿಳಿಯಬಹುದು. ಧ್ಯಾನದಲ್ಲಿ ಹೃದಯ ಕಮಲವನ್ನು ಗುರುತಿಸಿ, ಅಲ್ಲಿ ಪರಮಾತ್ಮನನ್ನು ಆವಾಹಿಸುವುದೇ ಒಂದು ಸ್ನಾನ; ಇದು ಯೋಗಿಗಳಿಗೆ ಮಾತ್ರ ಸಾಧ್ಯ, ಯೋಗದಿಂದ ಮಾತ್ರ ಸಾಧ್ಯ. ಆದ್ದರಿಂದ ಇದು ಯೌಗಿಕಸ್ನಾನವೆನಿಸಿದೆ.   


ಹಾಗಾದರೆ ಕಷ್ಟಪಟ್ಟು, ನೀರನ್ನೋ ಮಿಕ್ಕುಳಿದ ದ್ರವ್ಯ/ಸಾಮಗ್ರಿಗಳನ್ನೋ ಸಂಪಾದಿಸಿಕೊಂಡು ಸ್ನಾನ ಮಾಡುವ ಬದಲು ಕುಳಿತಲ್ಲೇ ಧ್ಯಾನಸ್ನಾನಮಾಡಿಬಿಡಬಹುದಲ್ಲವೇ? ಅದು ಸಲ್ಲ. ಎಂದೋ ಒಮ್ಮೆ, ಯಾವುದೋ ನಿಭಾಯಿಸಲಾಗದ ಸನ್ನಿವೇಶದಲ್ಲಿ, ಪ್ರವಾಹ-ಭೂಕಂಪನಾದಿ ತಲ್ಲಣದ ಸನ್ನಿವೇಶ, ನಿರಂತರ ಪ್ರಯಾಣದಲ್ಲಿ ನೀರಿನ ಅಭಾವ, ಅತೀವ ಶಾರೀರಿಕ ಅಸ್ವಾಸ್ಥ್ಯ ಇಂತಹ ಸನ್ನಿವೇಶಗಳಲ್ಲಿ ಮಾತ್ರ ಧ್ಯಾನಸ್ನಾನ ಅಥವಾ ಮಂತ್ರಸ್ನಾನವನ್ನು ಮಾಡಬಹುದಾಗಿದೆ. ಪ್ರಾಕೃತಿಕ ಮತ್ತು ಶಾರೀರಿಕ ಅನುಕೂಲವಿದ್ದೂ ಭೌತಿಕ ಸ್ನಾನವನ್ನು ಮಾಡದವರು ಸೋಮಾರಿಗಳೆನಿಸುತ್ತಾರೆ-ಅಂಥವರಿಗೆ ಸ್ನಾನದ ಫಲಗಳು ಲಭ್ಯವಾಗುವುದಿಲ್ಲ. ನೀರಿನ ಸ್ನಾನವು ಪ್ರಾಥಮಿಕ ಮತ್ತು ಸಾರ್ವಜನಿಕ. ಅದು ಸಿಗದೇ ಇದ್ದಾಗ ಹೇಳಲ್ಪಟ್ಟ ಇತರ ವಸ್ತುಗಳಿಂದ ಸ್ನಾನಮಾಡಬಹುದು. ನೀರಿನಿಂದ ಸ್ನಾತರಾದರೂ ಸಜ್ಜನರು ಪ್ರೋಕ್ಷಣೆ, ಮೃತ್ತಿಕೆ ವಿಭೂತಿ ಮೊದಲಾದವುಗಳ ಲೇಪನ, ಪರಮಾತ್ಮನ ಸ್ತುತಿ ಮತ್ತು ಚಿಂತನೆಗಳಿಂದ ಸ್ನಾನಾಚರಣೆ ಮಾಡುವ ಪರಿಪಾಟವಿದೆ. 


ಕಾಯಾ, ವಾಚಾ, ಮನಸಾ ಅಥವಾ ದೇಹ, ಮಾತು ಮತು ಮನಸ್ಸು [ಶ್ರದ್ಧೆ,ಭಕ್ತಿಭಾವ ಮತ್ತು ಜ್ಞಾನ] ಇವು ತ್ರಿಕರಣಗಳು-ಕರ್ಮವನ್ನು ಮಾಡಲು ಸಮರ್ಥರಾದ ನಾವು ಬಳಸುವ ಮೂರು ಸಾಧನಗಳು. ಯಾವ ಕರ್ಮವನ್ನೇ ಆಗಲಿ ನಾವು ತ್ರಿಕರಣಗಳಿಂದ ಮಾಡಬೇಕು. ಜೊತೆಗೆ ಆಯಾ ದೇಶ, ಕಾಲ, ಸಂದರ್ಭಗಳನ್ನು ಅನುಸರಿಸಿ ಶಾಸ್ತ್ರವು ವಿಧಿಸಿರುವ ಹೊರಗಿನ ದ್ರವ್ಯಗಳನ್ನು ಸಮಯೋಚಿತವಾಗಿ ಒದಗಿಸಿಕೊಳ್ಳಬೇಕು. ಬಾವಿಯ ನೀರಿಗಿಂತ ಬುಗ್ಗೆಯ/ಚಿಲುಮೆಯ ನೀರು ಉತ್ತಮ, ಬುಗ್ಗೆಯ ನೀರಿಗಿಂತ ಕೊಳ/ಸರೋವರಗಳ ನೀರು ಉತ್ತಮ, ಕೊಳ/ಸರೋವರಗಳ ನೀರಿಗಿಂತ ಹರಿಯುವ ಹಳ್ಳ,ನದಿಗಳ ನೀರು ಉತ್ತಮ. ಇವೆಲ್ಲದಕ್ಕಿಂತಾ ಎಲ್ಲಾನದಿಗಳ ಸಂಗಮರೂಪವಾದ ಸಮುದ್ರದ ನೀರು ಉತ್ತಮ. [ಆದರೂ ವಾಡಿಕೆಯಲ್ಲಿ ಸಮುದ್ರದ ನೀರು ಉಪ್ಪೆನಿಸಿ ಮೈಗೆ ಅಂಟಿನ ಭಾವ ಪ್ರಾಪ್ತವಾಗುವುದರಿಂದ ಸಮುದ್ರ ಸ್ನಾನಾನಂತರ ಸಿಹಿನೀರಿನ ಸ್ನಾನವನ್ನು ಮಾಡುತ್ತಾರೆ]    


ಬಳಸುವ ಜಲಾಶಯವು ಸಾರ್ವಜನಿಕವಲ್ಲದೇ ಖಾಸಗಿಯವರ ಒಡೆತನಕ್ಕೊಳಪಟ್ಟಿದ್ದರೆ, ಅದು ಸುಲಭಲಭ್ಯವಿದ್ದರೂ ಸಹ, ಅನುಮತಿಯಿಲ್ಲದೇ ಅಲ್ಲಿ ಸ್ನಾನಮಾಡಬಾರದು. ಹಾಗೊಮ್ಮೆ ಅನುಮತಿ ಪಡೆಯದೇ ಅತಿಕ್ರಮಿಸಿ ಸ್ನಾನ ಮಾಡುವವರಿಗೆ ಸ್ನಾನದ ಪುಣ್ಯಫಲ ಪ್ರಾಪ್ತವಾಗುವುದಿಲ್ಲ. ಸ್ನಾನಕಾಲದಲ್ಲಿ ಸ್ನಾಮಾಡುವ ನೀರು ಪವಿತ್ರ ತೀರ್ಥವೆಂಬ ಭಾವವನ್ನು ತಳೆಯಬೇಕು. ನೀರು ಕೇವಲ ಕೊಳೆ ತೊಳೆಯುವ ಜಲವೆಂದು ಭಾವಿಸಿದರೆ ಪಶುವಿನ ಮೈತೊಳೆದಂತೇ, ವಾಹನಗಳನ್ನು ತೊಳೆದಂತೇರ್ ಸ್ನಾನವು ಮಾನಸಿಕಸ್ನಾನವನ್ನು ಜೊತೆಗೂಡುವುದಿಲ್ಲ-ಹೀಗಾಗಿ ನಿಷ್ಫಲವಾಗುತ್ತದೆ. ಕಪ್ಪೆ, ಆಮೆ, ಮೀನುಗಳು ಸದಾ ಪವಿತ್ರ ತೀರ್ಥಗಳಲ್ಲೇ ಮುಳುಗಿದ್ದರೂ ಅವುಗಳಲ್ಲಿ ಆ ಭಾವನೆಯಿಲ್ಲವಾದ ಕಾರಣ ಅವುಗಳಿಗೆ ಸ್ನಾನದ ಫಲವಿಲ್ಲ ಎಂಬುದನ್ನು ಗಮನಿಸಬೇಕು. 


ಇನ್ನು ಮಾಘ, ವೈಶಾಖ ಮತ್ತು ಕಾರ್ತಿಕ ಮಾಸಗಳಲ್ಲಿ ನದಿ ಅಥವಾ ಸರೋವರಗಳಲ್ಲಿ ಸ್ನಾನ ಮಾಡುವ ವ್ರತವನ್ನು ಶಾಸ್ತ್ರಗಳಲ್ಲಿ ವಿಶೇಷವಾಗಿ ಹೊಗಳಲಾಗಿದೆ. ಪೂರ್ತಿ ಒಂದು ತಿಂಗಳು ಸ್ನಾನ ಮಾಡಲಾಗದಿದ್ದರೆ ಕೊನೆಯ ಮೂರುದಿನಗಳಲ್ಲಾದರೂ ಸ್ನಾನಮಾಡಬೇಕೆಂದು ತಿಳಿಸಲಾಗಿದೆ. ಹಾಗೆಯೇ ಕೆಲವು ನದಿಗಳಿಗೆ ಕೆಲವು ನದಿಗಳ ಸಂಗಮಪ್ರದೇಶಗಳಿಗೆ ಕೆಲವು ವಿಶೇಷ ಕಾಲಗಳಲ್ಲಿ ಸ್ನಾನಕ್ಕೆ ಪ್ರಾಶಸ್ತ್ಯವನ್ನು ಕೊಡಲಾಗಿದೆ. ಉದಾ: ಕಾವೇರಿ ನದಿಗೆ ತುಲಾಮಾಸ. ಪ್ರಯಾಗದಲ್ಲಿನ ತ್ರಿವೇಣಿ ಸಂಗಮದಲ್ಲಿ ಮಕರಮಾಸ ಇತ್ಯಾದಿ. ಸಮುದ್ರ ಸ್ನಾನವನ್ನು ಅಮಾವಾಸ್ಯೆ ಅಥವಾ ಸಂಕ್ರಮಣದ ದಿನಗಳಂದು ಮಾಡಿದರೆ ಒಳಿತು. ನಮ್ಮ ಜೀವನದಲ್ಲಿ ಒಮ್ಮೆಯಾದರೂ ಅಖಿಲ ಭಾರತ ಯಾತ್ರೆ ಕೈಗೊಂಡು ಎಲ್ಲಾ ನದಿಗಳಲ್ಲೂ ಒಂದೊಂದು ದಿನ ಸ್ನಾನಮಾಡಿದರೆ ಅದು ಅತ್ಯುತ್ತಮ ಕರ್ಮ. ಹಿಮಾಲಯದಲ್ಲಿನ ಮಾನಸ ಸರೋವರ ಮತ್ತು ಮುಕ್ತಿನಾಥ ಕ್ಷೇತ್ರದಲ್ಲಿನ ಗಂಡಕೀನದಿ ಸ್ನಾನ ಬಹುಕಷ್ಟದ  ಕೆಲಸವಾದರೂ ಪ್ರತಿಫಲವೂ ಅಷ್ಟೇ ದೊಡ್ಡದು.[ಹಾಗಂತ ಇಲ್ಲಿಗೆ ರಾಜಕಾರಣಿಗಳು ಅನ್ಯಾಯದಿಂದ ದುಡಿದ ದುಡ್ಡನ್ನು ಬಳಸಿ, ವಿಮಾನದ ಮೂಲಕ ತಲ್ಪಿ ಸ್ನಾನಮಾಡಿ ಪೂರೈಸಿದರೂ ಅವರಿಗೆ ಪುಣ್ಯಫಲದ ಪ್ರಾಪ್ತಿ ಅಷ್ಟಕ್ಕಷ್ಟೆ] 

ಈಗ ತೀರ್ಥಸ್ನಾನದ ವಿಧಿಗಳನ್ನು ನೋಡೋಣ:


ಸ್ನಾನವನ್ನು ಒಂದು ಧಾರ್ಮಿಕ ವಿಧಿಯಾಗಿ, ಪವಿತ್ರ ಕರ್ಮವಾಗಿ ನಡೆಸುವಾಗ ಅದಕ್ಕೆ ವಿಧಿಸಲಾದ ಆರು ಅಂಗಗಳು ಇಂತಿವೆ: ೧. ಸಂಕಲ್ಪ, ೨. ಸ್ತುತಿ, ೩. ಅರ್ಘ್ಯ, ೪. ಅವಗಾಹನಸ್ನಾನ, ೫. ತರ್ಪಣ ಮತ್ತು ೬. ಪೂಜೆ


೧. ಸಂಕಲ್ಪ: ಇಂಥಾ ದೇಶ, ಇಂಥಾ ಕಾಲದಲ್ಲಿ, ಇಂಥಾ ಫಲವನ್ನು ಬಯಸಿ, ಇಂಥಾ ದೇವತೆಯ ಪ್ರೀತಿಯನ್ನು ಗಳಿಸಲು ಈ ತೀರ್ಥದಲ್ಲಿ ಅವಗಾಹನ ಸ್ನಾನ[ಮುಳುಗಿ ಸ್ನಾನ] ಮಾಡುವೆನೆಂದು ಘೋಷಿಸುವುದು.


ಯೋಗ್ಯ ಫಲವನ್ನು ಬಯಸಿ ಕರ್ಮವನ್ನು ಮಾಡುವುದು ತಪ್ಪಲ್ಲ, ಅನ್ಯಮನಸ್ಕರಾಗಿ ದುಷ್ಕರ್ಮಗಳನ್ನು ಮಾಡುವುದಕ್ಕಿಂತಾ ಫಲವನ್ನು ಬಯಸಿ ಉತ್ತಮಕರ್ಮವನ್ನು ಮಾಡುವುದು ವಿಹಿತವಾದದ್ದು-ಅದು ಸಕಾಮಕರ್ಮವೆನಿಸುತ್ತದೆ. ಯಾವ ಫಲವನ್ನೂ  ಬಯಸದೇ ಕೇವಲ ಭಗವತ್ ಪ್ರೀತಿಗಾಗಿ ಮಾಡುವ ಕರ್ಮ ಸಕಾಮಕರ್ಮಕ್ಕಿಂತಾ ಮೇಲು-ಅದು ನಿಷ್ಕಾಮಕರ್ಮವೆನಿಸುತ್ತದೆ.  ನಮಗೆ ಕಾಮನೆಯೂ ಇಲ್ಲ, ಯಾವ ಕರ್ಮವೂ ಬೇಡಾ ಎನ್ನುವುದು ತಾಮಸ ಭಾವನೆ ಎನಿಸಿಕೊಳ್ಳುತ್ತದೆ! 


೨. ಸ್ತುತಿ: ಎಲ್ಲ ನದಿಗಳಲ್ಲೂ ಗಂಗೆಯ ಸನ್ನಿಧಾನವಿದೆ. ಆದರಿಂದ ಸ್ನಾನಕ್ಕೂ ಮೊದಲು ಗಂಗಾ ಸ್ತುತಿಯ ಜೊತೆಗೆ ಇತರ ನದಿಗಳ ಕುರಿತು ಸ್ತುತಿಗಳನ್ನು ಪಠಿಸಿ ಪ್ರಾರ್ಥಿಸುವುದು ಅಗತ್ಯ. 


೩. ಅರ್ಘ್ಯ: ಪರಮಾತ್ಮ, ಇಷ್ಟದೇವತೆ, ಸೂರ್ಯ, ಗಂಗೆ ಇತ್ಯಾದಿಯಾಗಿ ದೇವರಿಗೆ ಬೊಗಸೆಯಲ್ಲಿ ನೀರನ್ನು ತುಂಬಿಕೊಂಡು ಎತ್ತಿ ಸ್ತುತಿಪೂರ್ವಕವಾಗಿ ಅರ್ಪಿಸುವುದು ಅರ್ಘ್ಯವೆನಿಸುತ್ತದೆ.

೪. ಅವಗಾಹನ ಸ್ನಾನ: ನೀರಿನಲ್ಲಿ ಮೂರಾವರ್ತಿ ಮುಳುಗುಹಾಕುವುದು ಮತ್ತು ಪ್ರಾಣಾಯಾಮ ಬಲ್ಲವರಾದರೆ ಅಲ್ಲೇ ಕುಂಭಕ ಪ್ರಾಣಾಯಾಮಮಾಡಿ ಶಕ್ತ್ಯಾನುಸಾರ ಜಪವನ್ನು ನಡೆಸುವುದು. [ಪ್ರಾಣಾಯಾಮ ಅರಿಯದವರು ಹಾಗೆ ಪ್ರಯತ್ನಿಸಬಾರದು]


೫. ತರ್ಪಣ: ನೀರಿನಲ್ಲಿಯೇ ನಿಂತು, ಋಷಿಗಳಿಗೆ, ಪಿತೃಗಳಿಗೆ ನೀರಿನಿಂದ ತರ್ಪಣ ಕೊಡುವುದು.


೬. ಪೂಜೆ: ನೀರಿನಿಂದ ಮೇಲೆದ್ದು ಹೊರಗೆಬಂದು ಮೈ ಒರೆಸಿಕೊಂಡು, ಶುದ್ಧವಸ್ತ್ರ ಧರಿಸಿ, ಸಂಕ್ಷೇಪವಾಗಿ  ಇಷ್ಟದೇವತೆಯನ್ನು ಪೂಜೆಮಾಡುವುದು, ಮಾಡಿದ ಪೊಜೆಯ ಫಲಪ್ರಾಪ್ತಿಗಾಗಿ ಫಲ-ತಾಂಬೂಲ ಮತ್ತು ದಕ್ಷಿಣೆಗಳನ್ನು ದಾನಮಾಡುವುದು. ಮಧ್ಯೆ ಮಧ್ಯೆ ಆಗಿರಬಹುದಾದ ಲೋಪದೋಷಗಳಿಗಾಗಿ ಪ್ರಾಯಶ್ಚಿತ್ತವಾಗಿ ಹೇಳಿರುವ ನಾಮ ಜಪಮಾಡುವುದು ಮತ್ತು ಅಂತ್ಯದಲ್ಲಿ ಎಲ್ಲಾ ಕರ್ಮವನ್ನೂ ಭಗವಂತನ ಪಾದಾರವಿಂದಗಳಲ್ಲಿ ಸಮರ್ಪಿಸಿ ಧನ್ಯರಾಗುವುದು. 


ಗಂಗೆ-ಯಮುನೆ-ಸರಸ್ವತಿಯರ ತ್ರಿವೇಣಿ ಸಂಗಮದಲ್ಲಿ ಜನ್ಮದಲ್ಲಿ ಒಮ್ಮೆಯಾದರೂ ಸ್ನಾನಮಾಡಲೇ ಬೇಕೆಂಬುದು ಭಕ್ತ-ಭಾವುಕರ ಆಸೆ. ’ಬಿಳಿ ಮತ್ತು ಕಪ್ಪು ನದಿಗಳು ಸೇರುವೆಡೆಯಲ್ಲಿ ಸ್ನಾನಮಾಡಿದರೆ ಸ್ವರ್ಗಕ್ಕೆ ಏರುವರು ಅಲ್ಲಿ ತಮ್ಮ ದೇಹಗಳನ್ನು ಬಿಡುವ ಧೀರರು ಅಮೃತತ್ವವನ್ನು ಹೊಂದುವರು ’ ಎಂದು ವೇದದಲ್ಲಿ ಹೇಳಿದೆ. ಮನುಸ್ಮೃತಿ ಅದನ್ನೇ ಹೀಗೆ ತಿಳಿಸುತ್ತದೆ : ಜಹ್ನು ಋಷಿಯ ಮಗಳಾದ ಗಂಗೆ ಬಿಳಿಯ ಬಣ್ಣದ ಅಲೆಗಳಿಂದಲೂ ಸೂರ್ಯನ ಮಗಳಾದ ಯಮುನೆ ಕಪ್ಪುಬಣ್ಣದ ಅಲೆಗಳಿಂದಲೂ ಶೋಭಿಸುತ್ತಾರೆ. ಆ ನದಿಗಳು ಎಲ್ಲಿ ಸೇರುತ್ತವೆಯೋ ಮತ್ತು ಎಲ್ಲಿ ಅಕ್ಷಯವಾದ ಆಲದಮರ ಇದೆಯೋ ಆ ಸ್ಥಳವೇ ತೀರ್ಥರಾಜ ಪ್ರಯಾಗವಾಗಿ ಮೆರೆಯುತ್ತಿದೆ. 

ಹಾಗಾದರೆ ಶೌಚ-ಯೋಗ-ಪ್ರಾಣಾಯಮ-ಸ್ನಾನಾದಿಗಳಿಗೇ ಇಷ್ಟೆಲ್ಲಾ ಸಮಯ ವ್ಯಯಿಸಿಬಿಟ್ಟರೆ ದುಡಿಯುವ ನಮಗೆ ಅರ್ಧದಿನದಷ್ಟು ಸಮಯ ಕಳೆದುಹೋಗಿಬಿಡುವುದಿಲ್ಲವೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಬೇಗನೇ ಏಳುವುದರಿಂದ ಶಾರೀರಿಕ ಕ್ರಿಯೆಗಳ ಜೊತೆಜೊತೆಗೇ ಅನೇಕ ವಾಚನಿಕ, ಮಾನಸಿಕ ಕ್ರಿಯೆಗಳನ್ನು[ಸಹಯೋಗದಲ್ಲಿ] ಮಾಡುವುದು ಸಾಧ್ಯವಾಗುತ್ತದೆ. ನಿತ್ಯವೂ ಒಂದು ಕ್ರಮವನ್ನು ಅನುಸರಿಸಿಕೊಂಡುಬಿಟ್ಟರೆ ಒಟ್ಟಾರೆಯಾಗಿ ಬೇಕಾಗುವ ಸಮಯದ ಲೆಕ್ಕ ಸಿಕ್ಕಿಬಿಡುತ್ತದೆ. ಸಮಯದ ಅಭಾವವಿದ್ದರೆ ಅಮುಖ್ಯವಾದ ಕೆಲವು ಕ್ರಿಯೆಗಳನ್ನು ದಿನದ ಉಳಿಕೆಯ ಸಮಯದಲ್ಲಿ ಅನುಕೂಲವಾದಾಗ ಮಾಡಬಹುದಾಗಿದೆ. ಈ ಎಲ್ಲಾ ಕರ್ಮಗಳಿಗೂ ಹೆಚ್ಚೆಂದರೆ ಎರಡು ಗಂಟೆಗಳು ಸಾಕು. ಚುರುಕಿನಿಂದ ತ್ವರಿತವಾಗಿ ಮುಗಿಸುವವರು ಒಂದೇ ಗಂಟೆಯಲ್ಲಿ ಅಷ್ಟನ್ನೂ ಪೂರೈಸಬಲ್ಲರು, ಕೆಲವರಿಗೆ ಒಂದೂವರೆ ಗಂಟೆ ಬೇಕು. ದೀರ್ಘಕಾಲದ ಯೋಗಾಸನಗಳು ಮತ್ತು ಧ್ಯಾನವನ್ನು ಕೈಗೊಳ್ಳುವವರಿಗೆ ಮಾತ್ರ ೩ ಗಂಟೆಗಳು ಅಥವಾ ಅದಕ್ಕೂ ಹೆಚ್ಚಿನ ಸಮಯ ಬೇಕಾಗಬಹುದು. 


ಹೊರಗೆ ಕರ್ಮವಾಗಿ ಆಚರಿಸುವ ಸ್ನಾನವನ್ನು ನಾವು ಈ ರೀತಿ ಹೋಲಿಸಬಹುದಾಗಿದೆ:ಇಡಾ ಎಂಬ ಒಂದು ನಾಡಿ ನಮ್ಮ ಮೂಗಿನ ಎಡ ಹೊಳ್ಳೆಯಿಂದ ಹೊರಟು ಶರೀರದ ಒಳಗಿಳಿದು ನೇರವಾಗಿ ಮೂಲಾಧಾರದ ವರೆಗೂ ಹೋಗುತ್ತದೆ; ಶೀತಲ ಗುಣದಿಂದ ಕೂಡಿದ ಇದನ್ನು ಚಂದ್ರನಾಡಿ ಎನ್ನುತ್ತಾರೆ. ಪಿಂಗಳಾ ಎಂಬ ಇನ್ನೊಂದು ನಾಡಿ ಮೂಗಿನ ಬಲಹೊಳ್ಳೆಯಿಂದ ಹೊರಟು ಶರೀರದಲ್ಲಿ ಸಾಗಿ ಮೂಲಾಧಾರವನ್ನು ಸೇರುತ್ತದೆ; ಉಷ್ಣಗುಣವುಳ್ಳ ಇದನ್ನು ಸೂರ್ಯನಾಡಿ ಎಂದು ಕರೆದಿದ್ದಾರೆ. ಬೆನ್ನುಮೂಳೆಯ ಒಳಗೆ ಸುಪ್ತವಾಗಿ ಸಾಗಿರುವ ನಾಡಿಯೇ ಸುಷುಮ್ನಾನಾಡಿ. ಈ ಮೂರೂ ನಾಡಿಗಳನ್ನು ಕ್ರಮವಾಗಿ ಗಂಗೆ, ಯಮುನೆ ಮತ್ತು ಸರಸ್ವತಿ ಎಂದು ಭಾವಿಸಬಹುದಾಗಿದೆ [ಮತ್ತು ಬೆನ್ನುಮೂಳೆಯನ್ನು ಮೇರುದಂಡವೆಂದು ಪರಿಭಾವಿಸಬಹುದಾಗಿದೆ]. ಈ ಮೂರೂ ಮೇರುದಂಡದ ಆರು ಚಕ್ರಗಳಲ್ಲಿ ಸಂಧಿಸುತ್ತವೆ. ಪ್ರಾಣಾಯಾಮದಿಂದ ಪ್ರಾಣವನ್ನು ಮತ್ತು ಚಿತ್ತವನ್ನು ಈ ಚಕ್ರಗಳಲ್ಲಿ ನಿಲ್ಲಿಸಿ ಧ್ಯಾನಮಾಡುವುದೇ ಸಂಗಮಸ್ನಾನವೆನಿಸುತ್ತದೆ; ಇದರ ಫಲ ಸ್ವರ್ಗ. ಸುಷುಮ್ನಾ ನಾಡಿಯ ಮೂಲಕ ಪ್ರಾಣವನ್ನು ಜೊತೆಗೆ ಚಿತ್ತವನ್ನೂ ತಲೆಯ ತುದಿಯಲ್ಲಿರುವ ಅಥವಾ ನೆತ್ತಿಯಲ್ಲಿರುವ ಬ್ರಹ್ಮರಂಧ್ರದವರೆಗೆ ಒಯ್ದು, ಅದರ ಮೂಲಕ ದೇಹವನ್ನು ಬಿಟ್ಟುಹೋಗುವುದೇ ಪ್ರಯಾಗದಲ್ಲಿ ದೇಹತ್ಯಾಗ ಮಾಡಿದಂತೆನಿಸುತ್ತದೆ-ಇದಕ್ಕೆ ಫಲ: ಮುಕ್ತಿ.     


ಮಹಾಭಾರತದ ಅರಣ್ಯಪರ್ವದಲ್ಲಿ ಧರ್ಮರಾಜನಿಗೆ ಲೋಮಶ ಎಂಬ ಮಹರ್ಷಿಯ ಪರಿಚಯವಾಗುತ್ತದೆ; ಆ ಮಹರ್ಷಿ, ವಿವಿಧ ಕ್ಷೇತ್ರಗಳ ಮತ್ತು ತೀರ್ಥಗಳ ವಿಸ್ತಾರವಾದ ವರ್ಣನೆಯನ್ನು ಮಾಡಿ, ಅವುಗಳಿಗೆ ಯಾತ್ರೆ ಹೋಗಿ ಸ್ನಾನ-ದಾನಾದಿಗಳನ್ನು ಮಡುವುದರ ಫಲಗಳನ್ನು ಪ್ರಶಂಸೆ ಮಾಡುತ್ತಾನೆ. ಪಾಂಡವರು ಋಷಿಗಳ ಜೊತೆ ಹೊರಟು ತೀರ್ಥಯಾತ್ರೆಯನ್ನೂ ಮಾಡುತ್ತಾರೆ. ಆ ಪ್ರಕರಣದಲ್ಲಿ ಋಷಿ ಹೀಗೆ ಹೇಳುತ್ತಾನೆ: 


"ನಮ್ಮ ಒಳಗೆ ಹೃದಯದಲ್ಲಿ ಆತ್ಮನೆಂಬ ನದಿಯಿದೆ, ಅಲ್ಲಿ ಸತ್ಯವೇ ಆಳವಾದ ಮಡುವು. ಸಂಯಮ ಎಂಬ ನೀರು ಅಲ್ಲಿ ತುಂಬಿಕೊಂಡಿದೆ. ಶೀಲವೇ ಆ ನದಿಯ ದಡ. ದಯೆಯೆಂಬ ಅಲೆಗಳು ಆ ನೀರಿನಲ್ಲಿ ಏಳುತ್ತಿರುತ್ತವೆ. ಪಾಂಡುಪುತ್ರ, ನೀನು ಅಲ್ಲಿ ಅಭಿಷೇಕ ಮಾಡಿಕೋ, ಅಂತರಾತ್ಮನು ಹೊರಗಿನ ನೀರಿನಿಂದ ಶುದ್ಧನಾಗನು. ಮಾನಸ ತೀರ್ಥವೆಂಬುದೊಂದಿದೆ. ಅಲ್ಲಿ ಧ್ಯಾನವೇ ನೀರು, ಜ್ಞಾನವೇ ಮಡುವು, ಅದು ರಾಗ-ದ್ವೇಷಗಳನ್ನು ತೊಳೆಯಬಲ್ಲದು. ಈ ತೀರ್ಥದಲ್ಲಿಯೇ ದೇವತೆಗಳೂ, ವೇದಗಳೂ ಪವಿತ್ರ ರೂಪದಲ್ಲಿ ಒಂದುಗೂಡಿವೆ. ಅಲ್ಲಿ ಸ್ನಾನಮಾಡಿದವನು ಅಮೃತನಾಗುವನು. ಅವನು ಪರಮಗತಿಯನ್ನು ಹೊಂದುತ್ತಾನೆ."

ಅಂತಹ ಮಾನಸತೀರ್ಥ ಸ್ನಾನಕ್ಕೆ ನಾವು ಪ್ರತಿನಿತ್ಯಮಾಡುವ ಹೊರಗಿನ ಸ್ನಾನವು ಒಂದು ಸಂಕೇತ, ಅದೊಂದು ಸೋಪಾನ, ಒಂದು ಪ್ರಾಥಮಿಕ ಹೆಜ್ಜೆ, ಒಂದು ಸ್ಥೂಲವಾದ ಕ್ರಿಯೆ. ಆದ್ದರಿಂದಲೇ ಹಿಂದೂ ಜೀವನದಲ್ಲಿ ಅದಕ್ಕೆ ಅಷ್ಟು ಹಿರಿಮೆ, ಆ ಹಿರಿಮೆ ಎಲ್ಲರಿಗೂ ಅರ್ಥವಾಗಲಿ, ಎಲ್ಲರೂ ಸದಾ ಶುಚಿರ್ಭೂತರಾಗಿ ಗಮ್ಯವನ್ನು ತಲುಪಲು ಪ್ರಯತ್ನಶೀಲರಾಗಲಿ ಎಂಬುದೇ ನನ್ನ ಶುಭ ಹಾರೈಕೆ.  [ಈ ಕೆಳಗಿನ ಶ್ಲೋಕದಲ್ಲಿ ವರಾಹತನಯಾ ಎಂದರೆ ವಾರಾಹಿ ತುಂಗಾ ಮತ್ತು ಭದ್ರಾ ಎಂಬರ್ಥ]   


ಗಂಗಾ ಸಿಂಧು ಸರಸ್ವತೀ ಚ ಯಮುನಾ ಗೋದಾವರೀ ನರ್ಮದಾ 
ಕೃಷ್ಣಾ ಭೀಮರಥೀ ಚ ಫಲ್ಗುಸರಯೂ ಶ್ರೀ ಗೋಮತೀ ಗಂಡಕೀ |
ಕಾವೇರೀ ಕಪಿಲಾ ವರಾಹತನಯಾ ನೇತ್ರಾವತೀತ್ಯಾದಯಃ 
ನದ್ಯಃ ಶ್ರೀಹರಿಪಾದಪಂಕಜ ಭವಾಃ ಕುರ್ವಂತು ನೋ ಮಂಗಳಂ || 


                     

Tuesday, January 29, 2013

ಮಣಿಸಿ ಎನ್ನೀಶಿರವ ಗದುಗಿನನಾರಣಪ್ಪನಿಗೆ


ಚಿತ್ರಋಣ : ಅಂತರ್ಜಾಲ  
ಮಣಿಸಿ ಎನ್ನೀಶಿರವ ಗದುಗಿನನಾರಣಪ್ಪನಿಗೆ  

ಪದಗಳಮೃತ ವಿಬುಧ ಜನರಿಗೆ
ಹದದೊಳೆತ್ತಿದ ಪಾಕ-ಪಕ್ವವು
ಮುದದಿ ಬರೆದನು ಗದುಗು-ಭಾರತ ಬಯಸಿ ಸುಕೃತವ |
ಚದುರನಾಕವಿ ಕುವರವ್ಯಾಸಗೆ
ಗದಗಿನೊಡೆಯಗೆ ಸಕಲಮುನಿಜನ
ಪದಗಳಿಗೆ ಪೊಡಮಟ್ಟು ಪೇಳುವೆ ಕವಿಕಥಾಮೃತವ ||

ಮಹಾಕವಿ ಮುಮಾರವ್ಯಾಸಗೆ ಸಾಷ್ಟಾಂಗ ನಮಸ್ಕಾರ. ನಾನು ಅನೇಕಾವರ್ತಿ ಹೇಳಿದ್ದಿದೆ: ಅಷ್ಟೆಲ್ಲಾ ಕೆಲಸಗಳ ನಡುವೆ ಹೇಗೆ ಬರೆಯುತ್ತೀರಿ ? ಎಂಬೀ ಪ್ರಶ್ನೆಗೆ ಉತ್ತರಿಸುವುದು ಕಷ್ಟ; ಅದು ಆದ್ಯತೆಯ ಐಚ್ಛಿಕ ವಿಷಯ. ಉತ್ತಮ ಕಾವ್ಯ-ಸಾಹಿತ್ಯಗಳ ಆರಾಧನೆಯೊಂದು ಸೇವೆ-ಅದು ಸಮಾಜಕ್ಕೆ ನಾವು ಸಲ್ಲಿಸಬಹುದಾದದ್ದು. ಹಿಂದಕ್ಕೆ ಕವಿಗಳಿಗೆ ರಾಜಾಶ್ರಯವಿತ್ತು, ಯಾಕೆಂದರೆ ಕವಿಗಳು ವೇದತುಲ್ಯ ಮೌಲ್ಯಗಳನ್ನು ಆಧರಿಸಿ ಕಾವ್ಯ-ಸಾಹಿತ್ಯಗಳನ್ನು ಭಗವಂತನೆ ಸೇವೆಯೆಂಬ ರೀತಿಯಲ್ಲಿ ರಚಿಸುತ್ತಿದ್ದರು. ಈಗಿನ ಕಾಲದಲ್ಲಿ ವಿಶ್ವವಿದ್ಯಾಲಯಗಳಲ್ಲಿ, ಮಹಾವಿದ್ಯಾಲಯಗಳಲ್ಲಿ ಹೆಚ್ಚಿನ ಅಧ್ಯಯನ/ಅಧ್ಯಾಪನ ವೃತ್ತಿಯಲ್ಲಿರುವ ಕೆಲವು ಜನ ಸಾಹಿತ್ಯದಲ್ಲಿ ತೊಡಗುತ್ತಾರೆ ಎಂಬುದೊಂದು ಅನಿಸಿಕೆ ಸಮಾಜದಲ್ಲಿ ನಿಂತಿದೆ; ಯಾಕೆಂದರೆ ಅವರ ಉಪಜೀವಿತಕ್ಕೆ ಬೇಕಾದ ಆರ್ಥಿಕ ಭದ್ರತೆಯೊಂದು ಅಲ್ಲಿ ಸಿಕ್ಕಿರುತ್ತದೆ ಮತ್ತು ಅಧ್ಯಾಪನಕ್ಕೆ ಮಿಕ್ಕಿ ಉಳಿದವೇಳೆಯಲ್ಲಿ, ರಜಾದಿನಗಳಲ್ಲಿ ಅವರು ಬರೆಯಲು ಸಾಧ್ಯ ಎಂಬುದು ಸಹಜ ಅನಿಸಿಕೆ. ಆದರೆ ಬರೆಯಲು ಅದೊಂದೇ ಅರ್ಹತೆ ಸಾಕಾಗದು, ಬರೆಯುವ ವ್ಯಕ್ತಿಗೆ ಬರೆಯುವುವ ಉತ್ಕಟೇಚ್ಛೆ ಇರಬೇಕಾದುದರ ಜೊತೆಗೆ ಬರವಣಿಗೆಯಲ್ಲಿ ತಾದಾತ್ಮ್ಯತೆ ಬೇಕು. ಓದುಗರು ಸ್ವೀಕರಿಸುತ್ತಾರೋ ಅಥವಾ ಪತ್ರಿಕೆಗಳು ಪ್ರಕಟಿಸಬಹುದೋ, ಪ್ರಶಸ್ತಿಗಳು ದೊರೆಯಬಹುದೋ ಎಂಬೆಲ್ಲಾ ಚಿಂತೆಗಳು ಕಾಡಬಾರದು. ಬರವಣಿಗೆಯಲ್ಲೇ ಅತೀವ ಆನಂದವನ್ನು ಅನುಭವಿಸುವ ವ್ಯಕ್ತಿ ಮಾತ್ರ ಬರೆಯಲು ಅರ್ಹನಾಗುತ್ತಾನೆ ಮತ್ತು ಹಾಗೆ ಬರೆಯುವಾತನಿಗೆ ಯಾವ ಅಡೆತಡೆಗಳೂ ಕಾಣಿಸುವುದಿಲ್ಲ. ಕನ್ನಡದ ಮಹಾಕವಿ ಕುಮಾರವ್ಯಾಸನ ಬಗೆಗೆ ಬರೆಯಬೇಕೆಂಬ ಬಹಳ ದಿನಗಳ ಅಪೇಕ್ಷೆಗೆ ಇಂದು ಅಕ್ಷರರೂಪ ಕೊಡುವಲ್ಲಿ ಮುಂದಾಗುತ್ತಿದ್ದೇನೆ. ಇದೊಂದು ಪುಟ್ಟ ಅವಲೋಕನವಷ್ಟೇ ಹೊರತು ವಿಮರ್ಶೆಯಲ್ಲ.

ಕುಮಾರವ್ಯಾಸನಂಥಾ ಕವಿ ನಮಗೆ ಸಿಕ್ಕಿದ್ದು ಕನ್ನಡಿಗರ ಅದೃಷ್ಟ, ಈ ಭುವನದ ಭಾಗ್ಯ. ಸಮೀಕ್ಷೆಯೊಂದರ ಪ್ರಕಾರ ಕ್ರಿ.ಶ. ೧೦ನೇ ಶತಮಾನಕ್ಕೂ ಮುನ್ನ ಕನ್ನಡದಲ್ಲಿ ಮಹಾಭಾರತ ಕಾವ್ಯ ಇರಲೇ ಇಲ್ಲ!! ನಂತರ ಬಂದ ಆದಿಕವಿ ಪಂಪ ಪಂಪ ಭಾರತವನ್ನು ಬರೆದ. ಪಂಪನ ಭಾರತ ಚೆನ್ನಾಗೇ ಇದ್ದರೂ ೧೪ನೇ ಶತಮಾನದಲ್ಲಿ ಇದ್ದನೆನ್ನಲಾದ ಕುಮಾರವ್ಯಾಸನ ’ಕರ್ಣಾಟ ಭಾರತ ಕಥಾಮಂಜರಿ’ಗೆ ಅದು ಸರಿಗಟ್ಟಲಿಲ್ಲ. ತನ್ನ ದೇಶ, ಊರು, ಕಾಲ, ವೃತ್ತಿ, ಮನೆತನ, ಕುಲ,ಗೋತ್ರ ಏನೊಂದನ್ನೂ ಎಲ್ಲಿಯೂ ಲಿಖಿತರೂಪದಲ್ಲಿ ದಾಖಲಿಸದ ಈ ಕವಿಯನ್ನು ಗದುಗಿನ ನಾರಣಪ್ಪ ಎಂದು ಸ್ಥಾನಿಕ ಹಿರಿಯರು ಗುರುತು ಹಿಡಿದಿದ್ದಾರೆ. ಗದುಗಿನ ಕೋಳಿವಾಡ ಗ್ರಾಮದಲ್ಲಿ ಈತ ೧೪೩೦ ರ ಸುಮಾರಿಗೆ ಇದ್ದನೆಂಬುದು ಒಂದು ಹೇಳಿಕೆ. ’ಕುಮಾರವ್ಯಾಸ’ ಎಂಬ ಕಾವ್ಯನಾಮವನ್ನು ಮಾತ್ರ ತನ್ನ ಭಾರತ ಕೃತಿಯಲ್ಲಿ ಬಳಸಿರುವುದು ಕಂಡುಬಂದಿದ್ದು ಅನೇಕರು ಆತನ ನಿಜನಾಮಧೇಯವೇ ಕುಮಾರವ್ಯಾಸ ಎನ್ನುತ್ತಾರೆ. ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಒದ್ದೆ ಪಂಚೆಯನ್ನುಟ್ಟು ಕುಳಿತು ಆಡುತ್ತಾ ಹಾಡುತ್ತಾ ಮೈಮರೆಯುತ್ತಿದ್ದನಂತೆ; ಕೆಲಕಾಲ ಈ ಪಯಣ ನಿತ್ಯವೂ ಒದ್ದೆ ಪಂಚೆ ಆರುವವರೆಗೆ ನಡೆಯುತ್ತಿದ್ದೆಂದು ಸಂಶೋಧಕರ ಅಭಿಪ್ರಾಯ. ವೀರನಾರಾಯಣನಲ್ಲಿ ಅನನ್ಯ ಶರಣತೆಯನ್ನು ಹೊಂದಿದ್ದ ಕುಮಾರವ್ಯಾಸ, ಭಕ್ತಿರಸವುಕ್ಕಿಹರಿದು ಹಾಡುವಾಗ, ಬರೆಯುವಾಗ ಜನ ಸುತ್ತಲೂ ಸೇರುತ್ತಿದ್ದರು ಎಂಬುದು ಪ್ರತೀತಿ. ಅಚ್ಚರಿಯಿಂದ ಬಾಯ್ದೆರೆದು ಕೇಳುತ್ತಿದ್ದ ಸುತ್ತಲ ಜನರಿಗೆ ಪಂಚೆ ಆರಿದಮೇಲೆ ಒಮ್ಮೆಲೇ ನಿರಾಸೆಯಾಗುತ್ತಿತ್ತು, ಮತ್ತೆ ರಸಗವಳಕ್ಕಾಗಿ ನಾಳೆಯವರೆಗೆ ಕಾಯಬೇಕಾಗುತ್ತಿತ್ತು. ಅಂತಹ ಅನೇಕ ನಾಳೆಗಳಿಗಾಗಿ ಅಂದಿನ, ಅಲ್ಲಿನ ಬುಧಜನ ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಅವರೇಕೆ ನಾವೂ ಸಹಿತ ಅಂತಹ ಕಾವ್ಯವನ್ನು ಮರೆಯಲು ಸಾಧ್ಯವೇ?

ಕವಿಯೊಬ್ಬನ ಭಾವಪರವಶತೆ ಮತ್ತು ನಿಷ್ಕಳಂಕ ಚಿತ್ತವೃತ್ತಿ ಕಾವ್ಯದ ತೋರಣನಾಂದಿಯಲ್ಲೇ ಗೋಚರವಾಗಿಬಿಡುತ್ತದೆ!  ಇಲ್ಲೂ ಸಹ ಆದಿಪರ್ವದಲ್ಲಿ ಕಥಾಪ್ರವೇಶಕ್ಕೂ ಮುನ್ನ ಈ ಕವಿಯ ವಿನಮ್ರ ನಡೆ, ಆ ಭಕ್ತಿ, ಆ ಪ್ರಾರ್ಥನೆ, ಆ ತೋಡಿಕೊಳ್ಳುವಿಕೆ, ಆ ದಾರ್ಷ್ಟ್ಯಭಾವ, ಆ ನಿರಹಂಕಾರ ಎಲ್ಲವನ್ನೂ ಕಾಣಬಹುದಾಗಿದೆ.

ಮೊದಲಾಗಿ ಕವಿ, ಗಣಪನನ್ನು ಕುರಿತು ಪ್ರಾರ್ಥಿಸಿದ್ದನ್ನು ನೋಡಿ:

ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರ ಭಾಳದ ಕುಣಿವ ಕುಂತಳದ |
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿ
ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ||


ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತ ಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ |
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ||

ಕನ್ನಡದಲ್ಲಿ ಭಾಮಿನಿ ಷಟ್ಪದಿಕಾರನೆಂಬ ಗೌರವವೂ ಕುಮಾರವ್ಯಾಸನಿಗಿದೆ. ಗಜಮುಖನನ್ನು ಇನ್ನಾವ ರೀತಿಯಲ್ಲಿ ಹೊಗಳ ಬಹುದು?  ಸಿಹಿಯಾದ ಕಬ್ಬನ್ನು ಕಚ್ಚಿ ತಿನ್ನುವಾಗ ಜಗಿದಷ್ಟೂ ಅದರ ರಸ ಹೊರಹೊಮ್ಮುತ್ತದೆ ಹೇಗೋ ಹಾಗೇ ಈ ಕವಿಯ ಕಾವ್ಯದ ಪ್ರತೀ ಸಾಲುಗಳಲ್ಲಿ ಯಾ ಪಾದಗಳಲ್ಲಿ ಪದಮಾಂತ್ರಿಕತೆ ತುಂಬಿದೆ! ರಸಭರಿತ ರಸಪೂರಿ ಮಾವಿನ ಹಣ್ಣಿನಂತೇ ಒಂದನ್ನು ಓದಿದರೆ ಅದು ಇನ್ನೊಂದರೆಡೆಗೆ ನಮ್ಮನ್ನು ಸೆಳೆಯುತ್ತದೆ. ನವರಸಗಳನ್ನೂ ತುಂಬಿಕೊಳ್ಳುತ್ತಾ ಹೋಗುವ ಈ ಭಾರತ ಕಾವ್ಯ ಹೇಗಿದೆಯಪ್ಪಾ ಎಂದರೆ  ಮನವೆಂಬ ಹಸಿದ ಹೊಟ್ಟೆಗೆ ಮೃಷ್ಟಾನ್ನ ಭೋಜನವಿದ್ದಂತೇ ಇದ್ದು ಊಟದ ನಂತರ ತೇಗುಬರುವಂತೇ ಕಾವ್ಯವನ್ನು ಸಮಗ್ರವಾಗಿ ಓದಿಪೊರೈಸಿದಾಗ ಮನಸ್ಸು ತೃಪ್ತವಾಗುತ್ತದೆ.  


ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನನಿಕರ ದಾತಾರ |
ರಾವಣಾಸುರ ಮಥನಶ್ರವಣ ಸು
ಧಾವಿನೂತನ ಕಥನಕಾರಣ
ಕಾವುದಾನತ ಜನವ ಗದುಗಿನ ವೀರ ನಾರಯಣ ||


ವೀರನಾರಾಯಣನಲ್ಲಿ ಕವಿಯ ಭಕ್ತಿಯ ಗಮ್ಯ ಎದ್ದು ಕಾಣುತ್ತದೆ. ಹರಿಹರ ಭೇದವೆಣಿಸದ ಕವಿ ಹರನಲ್ಲಿ ಹೀಗೆ ಪ್ರಾರ್ಥಿಸಿದ್ದಾನೆ:


ಶರಣ ಸಂಗವ್ಯಸನ ಭುಜಗಾ
ಭರಣನಮರ ಕಿರೀಟ ಮಂಡಿತ
ಚರಣ ಚಾರು ಚರಿತ್ರ ನಿರುಪಮ ಭಾಳ ಶಿಖಿನೇತ್ರ |
ಕರಣ ನಿರ್ಮಲ ಭಜಕರಘ ಸಂ
ಹರಣ ದಂತಿ ಚಮೂರು ಚರ್ಮಾಂ
ಬರನೆ ಸಲಹುಗೆ ಭಕುತ ಜನರನು ಪಾರ್ವತೀ ರಮಣ ||


ವಾಗ್ದೇವಿಯಲ್ಲೇ ಅಮ್ಮನವರ ಎಲ್ಲಾ ರೂಪಗಳನ್ನೂ ಕಂಡು ನುತಿಸಿದ ಪರಿ ಇಂತಿದೆ :

ವಾರಿಜಾಸನೆ ಸಕಲ ಶಾಸ್ತ್ರ ವಿ
ಚಾರ ದುದ್ಭವೆ ವಚನರಚನೋ
ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ಧಿದಾಯಕಿಯೆ |
ಶೌರಿ ಸುರಪತಿ ಸಕಲ ಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ ||


ಆದಿನಾರಾಯಣಿ ಪರಾಯಣಿ
ನಾದಮಯೆ ಗಜಲಕ್ಷ್ಮಿ ಸತ್ವ ಗು
ಣಾಧಿ ದೇವತೆ ಅಮರ ವಂದಿತ ಪಾದಪಂಕರುಹೆ |
ವೇದಮಾತೆಯೆ ವಿಶ್ವತೋಮುಖೆ
ಯೈದು ಭೂತಾಧಾರಿಯೆನಿಪೀ
ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ ||


ವೀರನಾರಾಯಣನೇ ನಿಜವಾದ ಕವಿ, ತಾನು ಕೇವಲ ಲಿಪಿಕಾರ ಎಂಬ ಕವಿಯ ವಿನಮ್ರ ಭಾವಗಳನ್ನು ಮುಂದೆ ಕಾಣುತ್ತೇವೆ :

ವೀರ ನಾರಾಯಣನೆ ಕವಿ ಲಿಪಿ
ಕಾರ ಕುಮಾರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು |
ಚಾರು ಕವಿತೆಯ ಬಳಕೆಯಲ್ಲ ವಿ
ಚಾರೊಸುವ ಡಳವಲ್ಲ ಚಿತವ
ಧಾರುಹೋ ಸರ್ವಜ್ಞರಾದರು ಸಲುಗೆ ಬಿನ್ನಪವ ||


ಶ್ರೀರಾಮ ನನ್ನು ನೆನೆಯುತ್ತಾ :

ಶ್ರೀಮದಮರಾಧೀಶ ನತಪದ
ತಾಮರಸ ಘನವಿಪುಳ ನಿರ್ಮಲ
ರಾಮನನುಪಮ ಮಹಿಮ ಸನ್ಮುನಿ ವಿನುತ ಜಗಭರಿತ |
ಶ್ರೀಮದೂರ್ಜಿತ ಧಾಮ ಸುದಯಾ
ನಾಮನಾವಹ ಭೀಮ ರಘುಕುಲ
ರಾಮ ರಕ್ಷಿಸು ವೊಲಿದು ಗದುಗಿನ ವೀರನಾರಯಣ ||


ದೇವಿ ಲಕ್ಷ್ಮಿ-ಪಾರ್ವತಿಯರನ್ನು ನೆನೆದಿದ್ದು ಹೀಗೆ :


ಶರಧಿಸುತೆ ಸನಕಾದಿ ವಂದಿತೆ
ಸುರ ನರೋರಗ ಮಾತೆ ಸುಜನರ
ಪೊರೆವ ದಾತೆ ಸುರಾಗ್ರಗಣ್ಯ ಸುಮೌನಿ ವರಸ್ತುತ್ಯೆ |
ಪರಮ ಕರುಣಾ ಸಿಂಧು ಪಾವನ
ಚರಿತೆ ಪದ್ಮಜ ಮುಖ್ಯ ಸಕಲಾ
ಮರ ಸುಪೂಜಿತೆ ಲಕ್ಷ್ಮೀ ಕೊಡುಗೆಮಗಧಿಕ ಸಂಪದವ ||

ಗಜಮುಖನ ವರಮಾತೆ ಗೌರಿಯೆ
ತ್ರಿಜಗದರ್ಚಿತ ಚಾರು ಚರಣಾಂ
ಬುಜೆಯೆ ಪಾವನ ಮೂರ್ತಿ ಪದ್ಮಜ ಮುಖ್ಯ ಸುರಪೂಜ್ಯೆ |
ಭಜಕರಘ ಸಂಹರಣೆ ಸುಜನ
ವ್ರಜ ಸುಸೇವಿತೆ ಮಹಿಷಮರ್ಧಿನಿ
ಭುಜಗಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ ||


ವೇದವ್ಯಾಸರನ್ನು ಸ್ತುತಿಸಿದ ಪದ್ಯ ಇಲ್ಲಿದೆ:

ದುರಿತ ಕುಲಗಿರಿ ವಜ್ರದಂಡನು
ಧರೆಯ ಜಂಗಮ ಮೂರ್ತಿ ಕವಿ ನಾ
ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜವಂದಿತನು |
ತರಳನನು ತನ್ನವನೆನುನತ ಪತಿ
ಕರಿಸಿ ಮಗನೆಂದೊಲಿದು ಕರುಣದಿ
ವರವನಿತ್ತನು ದೇವ ವೇದವ್ಯಾಸ ಗುರರಾಯ ||

ವಂದಿತಾಮಳ ಚರಿತನಮರಾ
ನಂದ ಯದುಕುಲ ಚಕ್ರವರ್ತಿಯ
ಕಂದನತ ಸಂಸಾರ ಕಾನನ ಘನ ದವಾನಳನು |
ನಣ್ದನಣ್ದನ ಸನ್ನಿಭನು ಸಾ
ನಂದದಿಂದಲೆ ನಮ್ಮುವನು ಕೃಪೆ
ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ ||


ಸಜ್ಜನರಲ್ಲಿ, ಬುಧಜನರಲ್ಲಿ, ಪ್ರಾಜ್ಞರಲ್ಲಿ ಮಾಡಿದ ಮನವಿ ಇಂತಿದೆ :

ತಿಳಿಯ ಹೇಳುವ ಕೃಷ್ಣಕಥೆಯನು
ಇಳೆಯಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮಶ್ರುತಿಯನೊರೆವನು ಕೃಷ್ಣಮೆಚ್ಚಲಿಕೆ |
ಹಲವುಜನ್ಮದ ಪಾಪರಾಶಿಯ
ತೊಳೆವ ಜಲವಿದು ಶ್ರೀಮದಾಗಮ
ಕುಲಕೆ ನಾಯಕ ಭಾರತಾಕೃತಿ ಮಂಚಮ ಶ್ರುತಿಯ ||

ವೇದಗಳು ನಾಲ್ಕಾಗಿ ವಿಂಗಡಿತವಾದಮೇಲೆ, ವೇದವ್ಯಾಸರಿಗೆ ಸಮತೂಕದ ಇನ್ನೊಂದು ಕಥೆಯನ್ನು ಲೋಕದ ಹಿತಾರ್ಥ ಬರೆಯಬೇಕೆಂಬ ಇಚ್ಛೆ ಒಡಮೂಡಿತಂತೆ. ಹಾಗೆ ಸಂಕಲ್ಪವಾದಾಗ ಬಹುಕಾಲ ಬಾಯಿಗೆ ಬಂದದ್ದನ್ನು ಕೃತಿಗೆ ಇಳಿಸುವ ಲಿಪಿಕಾರನೊಬ್ಬನ ಅಗತ್ಯತೆ ಇತ್ತು. ನಾರದರ ಪ್ರವೇಶದಿಂದಾಗಿ ಗಣಪನ ಪರಿಚಯವಾಗಿ, ಭಾರತಕಥೆಯನ್ನು ಗಣಪ ಶುಂಡವನ್ನೊಲೆದು ಗೀರ್ವಾಣ ಲಿಪಿಯಲ್ಲಿ ಬರೆದ ಮತ್ತು ಅರ್ಥವಿಸಿಕೊಂಡು ಪಂಚಮವೇದವೆನಿಸಲಿ ಎಂದು ಹರಸಿದ ಎಂಬುದು ಐತಿಹ್ಯ. ಭರತವಂಶದ ಕುಲ ಹುಟ್ಟಿಬೆಳೆದ ಕಥೆಯನ್ನು ವಿಸ್ತರಿಸುವುದರಿಂದ ಕಥೆ ಭಾರತವೆಂದೂ ಮಹಾಭಾರತವೆಂದೂ ಕರೆಯಲ್ಪಟ್ಟಿತು. ಸ್ವತಃ ಗಮಕಿಯಾಗಿದ್ದ ಕುಮಾರವ್ಯಾಸ ಸಂಗೀತವನ್ನೂ ಬಲ್ಲವನಾಗಿದ್ದ. ಕರಣಿಕ ರ ಮನೆತನದಲ್ಲಿ ಹುಟ್ಟಿದ ಆತನ ಮನೆತನದವರು ಕೋಳಿವಾಡ ಗ್ರಾಮದಲ್ಲಿ ಶಾನುಭೋಗರಾಗಿದ್ದರು ಎಂಬುದು ತಿಳಿದುಬರುತ್ತದೆ. ಯಾವ ರಾಜನ ಮೆಚ್ಚುಗಾಗಿಯೂ ಬರೆಯದೇ ಕೇವಲ ವೀರನಾರಾಯಣನ ಸೇವೆ ಎಂಬರ್ಥದಲ್ಲಿ ತನ್ನೊಳಗೆ ತಂತಾನೇ ಹೊಮ್ಮಿದ ಪದ್ಯಗಳನ್ನು ಬರೆದ. ವಿಜಯನಗರದ ಕೃಷ್ಣದೇವರಾಯನ  ಕಾಲದಲ್ಲಿ ಇದ್ದಾತನೆಂದು ಕೆಲವರು ಹೇಳಿದರೂ ಅದಕ್ಕೂ ಮುನ್ನವೇ ಆತ ಬದುಕಿರುವ ಕುರುಹು ಸಿಗುತ್ತದೆ. ಕಾವ್ಯದಲ್ಲಿ ಒಂದೆಡೆ ಕೃಷ್ಣರಾಯನೆಂದು ನಮೂದಿಸಿದ್ದರೂ ಅದು ಭಾರತ ಕಥೆಯಲ್ಲಿನ ಶ್ರೀಕೃಷ್ಣನನ್ನು ಕುರಿತಾದ ಸಂಬೋಧನೆಯೇ ಹೊರತು ವಿಜಯನಗರಕ್ಕೆ ಸಂಬಂಧಿಸಿದ್ದಲ್ಲ.    

ಪದದ ಪ್ರೌಢಿಮೆ ನವರಸಂಗಳ
ವುದಿತವೆನುವಭಿಧಾನ ಭಾವವ
ಬೆದಕಲಾಗದು ಬಲ್ಲ ಪ್ರೌಢರು ಮೀ ಕಥಾಂತರಕೆ |
ಇದ ವಿಚಾರಿಸೆ ಬರಿಯ ತೊಳಸಿಯ
ವುದಕದಂತಿರೆಯಿಲ್ಲಿ ನೋಳ್ಪುದು
ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು ||

ಪೌಢಿಮೆಯುಳ್ಳ ಸಜ್ಜನರೇ, ಈ ಕಥೆಯನ್ನು ಬೆದಕಿ ಕೆದಕಿ ಪದಗಳ ಪ್ರೌಢಿಮೆಯ ಬಗ್ಗೆ ಚಿಂತಿಸದೇ ಇದೊಂದು ಕೃಷ್ಣಕಥೆಯಾಗಿದ್ದು, ಪದ್ಮನಾಭನ ಪಾದದಲ್ಲಿ ಎರೆದ ತುಳಸೀ ನೀರಿನಂತಿದೆ ಎಂದು ಭಾವಿಸಿರಿ ಎಂದಿದ್ದಾನೆ. ಪದಲಾಲಿತ್ಯವನ್ನು ಮುಂದೆ ನೋಡಿ :

ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ |
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ ||

ತನ್ನಲ್ಲೂ ಒಂದು ಬಲುಹು ಒಂದು ವೈಶಿಷ್ಟ್ಯವಿದೆಯೇನೆಂದರೆ: ಪದ್ಯಗಳನ್ನು ಬರೆಯುವ ಮುನ್ನ ಹಲಗೆ-ಬಳಪ ಬಳಸಲಿಲ್ಲ, ಒಮ್ಮೆ ಬರೆದ ಪದಗಳನ್ನು ಯಾವುದೇ ಕಾರಣಕ್ಕೂ ಅಳಿಸಿದವನಲ್ಲ! ಇನ್ನೊಬ್ಬರು ಬರೆದ ಕಾವ್ಯದ ಶೈಲಿಯನ್ನೋ ಪದಗಳನ್ನೋ ಆಯ್ದುಕೊಳ್ಳಲಿಲ್ಲ, ಬರೆದ ತಾಡವೋಲೆಗಳಲ್ಲಿ[ಕಂಠಪತ್ರ] ಚಿತ್ತುಗಳು-ಹೊಡೆದುಹಾಕಿ ಹೊಸದಾಗಿ ಬರೆದ ಅವಲಕ್ಷಣಗಳು ಇರುವುದಿಲ್ಲ ಎಂಬ ಅಗ್ಗಳಿಕೆ ತನ್ನದೆಂದು ಕವಿ ಹೇಳಿಕೊಂಡಿದ್ದಾನೆ. ಮಹಾಕಾವ್ಯವನ್ನು ಬರೆಯುವಾಗ ಕವಿಗಳಿಗೆ ತಿಂಗಳಾನುಗಟ್ಟಲೆ ಸಮಯ ಹಿಡಿಯುತ್ತದೆ; ಶಿಲ್ಪಿಯ ಮನದಭಿತ್ತಿಯಲ್ಲಿ ಮೂಡಿದ ಮೂರ್ತಿ ಎದುರಿನ ಶಿಲೆಯಲ್ಲಿ ಅರಳಿ ನಿಲ್ಲುವವರೆಗೆ ಅದಕ್ಕೆ ಸಾವಿರಾರು ಚೇಣುಗಳು ಬೇಕಾಗುತ್ತವೆ-ವರ್ಷಗಟ್ಟಲೆ ಯಾ ತಿಂಗಳಾನುಗಟ್ಟಲೆ ಕಾಲವ್ಯಯವಾಗುತ್ತದೆ ಹೇಗೋ ಹಾಗೇ. ಮಹಾಕಾವ್ಯದ ರಚನೆಯಲ್ಲಿ ಒಮ್ಮೆ ಬರೆದ ಪದಗಳನ್ನು ಅಳಿಸದ, ಯಾರನ್ನೂ ಅನುಕರಿಸದ, ಹಲಗೆ-ಬಳಪದಲ್ಲಿ ಬರೆದು ತಿದ್ದಿಕೊಳ್ಳುತ್ತಾ ಅದನ್ನು ಕಂಠಪತ್ರಕ್ಕಿಳಿಸದ, ಕಂಠಪತ್ರದಲ್ಲಿ ನಡುವೆಯೆಲ್ಲೂ ಕಾಟು, ಗೀಟು ಹಾಕಿ ನಂಜಾಗಿಸದ ಕವಿಯೊಬ್ಬನಿದ್ದರೆ ಆತ ಕುಮಾರವ್ಯಾಸ!!!    

ಕೃತಿಯನವಧರಿಸುವುದು ಸುಕವಿಯ
ಮತಿಗೆ ಮಂಗಳವೀವುದಧಿಕರು
ಮಥಿಸುವುದು ತಿದ್ದುವುದು ಮರೆವುದು ಲೇಸ ಸಂಚಿಪುದು |
ನುತಗುಣರು ಭಾವುಕರು ವರಪಂ
ಡಿತರು ಸುಜನರು ಸೂಕ್ತಿಕಾರರು
ಮತಿಯನೀವುದು ವೀರ ನಾರಾಯಣನ ಕಿಂಕರಗೆ ||

ಈ ಮಹಾಕವಿ ಅದೆಷ್ಟು ವಿನಯ ಗುಣ ಸಂಪನ್ನ ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಕೃತಿಯನ್ನೋದಿದ ಪಂಡಿತರು, ಪದ ನಿಷ್ಣಾತರು, ಕವಿ-ಕಾವ್ಯ ಕೋವಿದರು, ಸೂಕ್ತಿಕಾರರು, ಭಾವುಕರು ಏನಾದರೂ ತಪ್ಪು ಕಂಡರೆ ತಿದ್ದಿ, ಕ್ಷಮಿಸಿ, ಈ ವೀರನಾರಾಯಣನ ಕಿಂಕರನಿಗೆ ಬುದ್ಧಿಹೇಳಿ ಎಂಬ ಕೋರಿಕೆಯಲ್ಲಿ ಅನನ್ಯಭಾವ ಕಾಣುತ್ತದೆ.

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ |
ಬಣಗುಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸ  ನುಳಿದವರ ||


ರಾಮಾಯಣದ ಭಾರವನ್ನು ಹೊರಲಾರದೇ ಆದಿಶೇಷ ತಿಣುಕಿದನಂತೆ. ಅಲ್ಲಿ ಕಾಲಿಡಲಾಗದಷ್ಟು ಜಾಗವಿಲ್ಲದ ಮಹಾಚರಿತೆ ಅದಾಗಿದೆ. [’ಕಾಲಿಡು’ ಎಂಬುದನ್ನು ಕೆಲವರು ವಿಚಿತ್ರವಾಗಿ ನೋಡುತ್ತಾರೆ. ನಾನು ಹಿಂದೊಮ್ಮೆ "ವೇದಗಳಿಗೆ ಕಾಲಿಡುವ ಮುನ್ನ" ಎಂದು ಬರೆದಿದ್ದನ್ನು ಯಾರೋ ಮಹಾನುಭಾವ ಆಕ್ಷೇಪಿಸಿದ್ದು ನೆನಪಿಗೆ ಬರುತ್ತಿದೆ. ಕಾಲಿಡು ಎಂದರೆ ನಮ್ಮ ಕಾಲುಹಾಕಿ ಅದನ್ನು ಮಲಿನಮಾಡುವುದು ಎಂಬರ್ಥವಲ್ಲ, ಕಾಲಿಡು ಬದಲಾಗಿ ಕೈಯಿಡು ಎಂದು ಹೇಳಬಹುದಿತ್ತಲ್ಲಾ ಎನ್ನುವವರೂ ಇರುತ್ತಾರೆ! ಕಾಲಿಡು, ಪಾದಾರ್ಪಣೆಮಾಡು ಎಂಬೆಲ್ಲಾ ಪರ್ಯಾಯ ಪದಗಳು ಕನ್ನಡದಲ್ಲಿ ಬಳಕೆಯಲ್ಲಿವೆ, ಆರಂಭಿಸುವುದಕ್ಕೆ ಕಾಲಿಡುವುದು ಎಂದು ಪರ್ಯಾಯವಾಗಿ ಹೇಳುತ್ತಾರೆ.] ರಾಮಾಯಣ ಬರೆದ ಕವಿಗಳಿಗೆ ಸುಸ್ತಾಗಿರಬಹುದು ಆದರೆ ಶುಕರೂಪನಾದ ತನಗೆ ಸಾಕೆಂದು ಯಾವಾಗಲೂ ಅನಿಸುವುದಿಲ್ಲ ಮತ್ತು ಸಾಕಾಗಿರಬೇಕೆಂದುಕೊಂಡವರನ್ನು ಕುಣಿಸಿ ನಗದಿರುತ್ತಾನೆಯೇ ಕುಮಾರವ್ಯಾಸ ? ಎಂಬುದು ಕವಿಯ ಪ್ರಶ್ನೆ.

ಹರಿಯ ಬಸಿರೊಳಗಖಿಳ ಲೋಕದ
ವಿರಡವಡಗಿಹವೋಲು ಭಾರತ
ಶರಧಿಯೊಳಡಗಿಹವನೇಕ ಪುರಾಣ ಶಾಸ್ತ್ರಗಳು |
ಪರಮ ಭಕ್ತಿಯಲೀ ಕೃತಿಯನವ
ಧರಿಸಿ ಕೇಳ್ದಾನರರ ದುರಿತಾಂ
ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ ||

ಸಕಲ ವೇದ, ಪುರಾಣ ಶಾಸ್ತ್ರಗಳನ್ನು ಸಮೀಕರಿಸಿ ಬರೆದ ಭಾರತ ಹರಿಯ ಬಸಿರಳೊಳಗೆ ಅಡಗಿದ ಬ್ರಹ್ಮಾಂಡವನ್ನು ಬಿಂಬಿಸುತ್ತದೆ. ಪರಮ ಭಕ್ತಿಯಿಂದ ಈ ಕೃತಿಯನ್ನು ಓದಿದ, ಉತ್ತಮ ಗುಣಗಳನ್ನು ನಡತೆಯನ್ನು ಅವಲಂಬಿಸಿಕೊಂಡ ಜನರಿಗೆ ದುರಿತದ ಅಂಕುರ ಬೇರನ್ನೇ ನೀಗಿಸುತ್ತದೆ ಎಂಬುದನ್ನು ವ್ಯಾಸಾರು ಹೇಳಿದ್ದಾರಾಗಿ ಕವಿ ಕುಮಾರವ್ಯಾಸ ಶ್ರುತಪಡಿಸಿದ್ದಾನೆ. ಮುಂದುವರಿಯುತ್ತಾ :

ಅರಸುಗಳಿಗಿದು ವೀರ ದ್ವಿಜರಿಗೆ
ಪರಮವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ |
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರ ವ್ಯಾಸ ಭಾರತವ ||


ರಾಜರುಗಳಿಗೆ/ಕ್ಷತ್ರಿಯರಿಗೆ  ಇದು ವೀರವೆನಿಸಿದರೆ, ಬ್ರಾಹ್ಮಣರಿಗೆ ಪರವೇದದ ಸಾರವಾಗಿ ತೋರುತ್ತದೆ, ಯೋಗಿಗಳಿಗೆ-ಮುನಿಜನರಿಗೆ ತತ್ವವಿಚಾರವಾಗಿ ತೋರುತ್ತದೆ ಮತ್ತು ಮಂತ್ರಿಗಳಿಗೆ ರಾಜನೀತಿಯ ಬುದ್ಧಿಯನ್ನು ಹೇಳುತ್ತದೆ. ಇದಲ್ಲದೇ ವಿರಹಿಗಳಿಗೆ ಶೃಂಗಾರಕಾವ್ಯವೆನಿಸಿದರೆ ಪಂಡಿತರಿಗೆ ಅಲಂಕಾರವಾಗಿ ಕಾಣುತ್ತದೆ, ಒಟ್ಟಿನಲ್ಲಿ ಕಾವ್ಯ ಪ್ರಧಾನಕಾವ್ಯವಾಗುತ್ತದೆ ಬರೆಯೆಂದು ವ್ಯಾಸರ/ವೀರನಾರಾಯಣರ ಅಪ್ಪಣೆ/ಪ್ರೇರಣೆ ದೊರತದ್ದರಿಂದ ಕುಮಾರವ್ಯಾಸ ಭಾರತವನ್ನು ಬರೆದನೆಂದು ತಿಳಿಸಿದ್ದಾನೆ. ಕಾವ್ಯದ ಫಲಶ್ರುತಿಯನ್ನು ನೋಡಿ :

ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನ ಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮ ಯಾಗ ಫಲ |
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ||


ವೇದಪಾರಾಯಣದ ಸುಕೃತ ಫಲ, ಗಂಗಾದಿ ಸಕಲ ಮಂಗಳತೀರ್ಥಸ್ನಾನ ಫಲ, ಬಂಗಾರದಿಂದ ಅಲಂಕರಿಸಿದ ಗೋದಾನಾದಿ ದಾನಗಳನ್ನು [ಕೃಚ್ಛ್ರ]ಮಾಡಿದ ಫಲ, ಯಾಗಗಳಲ್ಲೇ ಶ್ರೇಷ್ಠವೆನಿಸಿದ ಜ್ಯೋತಿಷ್ಟೋಮ ಯಾಗ ಮಾಡಿದ ಫಲ, ಭೂದಾನವನ್ನೂ-ವಸ್ತ್ರದಾನವನ್ನೂ-ಕನ್ಯಾದಾನವನ್ನೂ ಮಾಡಿದ ಫಲ ಈ ಭಾರತ ಕಥೆಯನ್ನಾದರಿಸಿ ಕೇವಲ ಒಂದೇ ಒಂದಕ್ಷರವನ್ನೋದಿದರೂ ಲಭಿಸುತ್ತದೆ ಎಂದು ಉಲ್ಲೇಖಿಸಿದ್ದಾನೆ; ಎಂದಮೇಲೆ ವೀರನಾರಾಯಣನಮೇಲೆ ಆತನಿಗೆ ಯಾವ ನಿಷ್ಠೆ ಇದ್ದೀತು ಎಂಬುದು ಗೊತ್ತಾಗುತ್ತದೆ.

ಚೋರನಿಂದಿಸಿ ಶಶಿಯ ಬೈದಡೆ
ಕ್ಷೀರವನು ಕ್ಷಯರೋಗಿ ಹಳಿದರೆ
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು |
ಭಾರತದ ಕಥನ ಪ್ರಸಂಗವ
ಕ್ರೂರ ಕರ್ಮಿಗಳೆತ್ತ ಬಲ್ಲರು
ಘೋರ ರೌರವವನ್ನು ಕೆಡಿಸುಗು ಕೇಳ ಸಜ್ಜನರ ||


ಕಳ್ಳರು ಚಂದ್ರನನ್ನು ನಿಂದಿಸಿದರೇನು, ಹಾಲನ್ನು ಕುಡಿಯಲಾರದ ಕ್ಷಯರೋಗಿ ಹಳಿದರೇನು, ನಡೆಯಲಾರದವ ವಾರಣಾಸಿಯನ್ನು ನೆನೆಸಿ ನಕ್ಕರೇನು? ಯಾವ ತೊಂದರೆಯೂ ಇರದು. ಭಾರತದ ಕಥಾ ಪ್ರಸಂಗವನ್ನು ಕ್ರೂರ ಕರ್ಮಿಗಳು ಎಲ್ಲಿ ತಿಳಿಯಬಲ್ಲರು? ಸಜ್ಜನರು ಇದನ್ನು ಶ್ರವಣಮಾಡಿದ ಮಾತ್ರಕ್ಕೆ ಘೋರ ನರಕ ತಪ್ಪುತ್ತದೆ ಎಂದು ಬಣ್ಣಿಸಿದ್ದಾನೆ. ಸಂಬಂಧಗಳ ರಹಸ್ಯ ಮತ್ತು ರಹದಾರಿಯನ್ನು ಈ ಕೆಳಗಿನ ಪದ್ಯದಲ್ಲಿ ಗಮನಿಸಿ :

ವೇದಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ರೂಪನ ನತುಳಭುಜಬಲದಿ |
ಕಾದಿಗೆಲಿದನನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿಮೂರುತಿ ಸಲಹೊ ಗದುಗಿನ ವೀರ ನಾರಯಣ ||


ಈ ಪದ್ಯ ಬಹಳ ಜನಪ್ರಿಯವೆನಿಸಿದ್ದರಿಂದ ಇದಕ್ಕೆ ಹೊಸದಾಗಿ ಅರ್ಥವಿವರಣೆ ಬೇಕಿಲ್ಲ.

ಕುಮಾರವ್ಯಾಸನೊಬ್ಬ ಸ್ವತಂತ್ರ ಕವಿ. ಆತ ಯಾರನ್ನೂ ಆಶ್ರಯಿಸಲಿಲ್ಲ. ವ್ಯಾಸರ ಮೂಲ ಕಥೆಯೊಂದೇ ಆತನಿಗೆ ಆಧಾರ. ಪಂಪನಿಗೆ ಭಾರತ ಲೌಕಿಕ ಕಾವ್ಯವಾದರೆ ಕುಮಾರವ್ಯಾಸನಿಗೆ ಭಗದ್ವಿಲಾಸವಾಗಿ ಕಂಡಿತು! ಪಂಪನಿಗೆ ತನ್ನ ಕಾವ್ಯ ಪ್ರತಿಭೆಯ ಪ್ರಕಾಶನಕ್ಕೆ ಭಾರತಕಥೆ ಕಾರಣವಾದರೆ  ಕುಮಾರವ್ಯಾಸನಿಗೆ ಆತ್ಮ ಪ್ರಕಾಶನಕ್ಕೆ ಅಡಿಗಲ್ಲು ಹಾಕಿತು. ಪಂಪ ಲೌಕಿಕ ಮತ್ತು ಧಾರ್ಮಿಕಗಳೆಂಬ ಇಮ್ಮೊಗದ ದರ್ಶನ ಮಾಡಿಸಿದರೆ ಕುಮಾರವ್ಯಾಸನ ಪರಿಪೂರ್ಣ ವ್ಯಕ್ತಿತ್ವದ ಪ್ರತಿಮಾರೂಪವಾಗಿ ಆತನನ್ನು ಕಾವ್ಯಯೋಗಿಯೆನಿಸಿತು. ಕುಮರವ್ಯಾಸ ಕಾವ್ಯದ ಒಂದೊಂದು ಪ್ರಾಸಸ್ಥಾನವೂ ರೂಪಕವನ್ನು ಕವಿಮನದಲ್ಲಿ ಮೂಡಿಸುತ್ತದೆ. ಯಾವ ಪದ್ಯವೂ ಕಥಾಭಾಗವೂ ಎಲ್ಲೂ ಅತಂತ್ರವಾಗಿಲ್ಲ, ಕುತಂತ್ರ ಸೇರಿಲ್ಲ. ಹೊಸದಾಗಿ ಓದುವ ಕನ್ನಡಿಗರಿಗೆ ಕನ್ನಡದ ಸುವಿಶಾಲ ಪದಶ್ರೇಣಿಗಳ, ಸಂಧಿ-ಸಮಾಸಗಳ ಪರಿಚಯ, ಉಪಮೆ-ಅಲಂಕಾರಗಳ ಪರಿಚಯ ಇಲ್ಲಿ ಸಾಧ್ಯ; ಈ ದೃಷ್ಟಿಯಿಂದ ಹೊಸಬರಿಗೆ ಸ್ವಲ್ಪ ಕಬ್ಬಿಣದ ಕಡಲೆ ಎನಿಸಿದರೂ ಆ ಕಾಲಕ್ಕೆ ಕವಿ ಬಳಸಿದ ಎಲ್ಲಾ ಪದಗಳೂ ಸಹಜಗತಿಯಲ್ಲಿ ಭಾಷೆಯಲ್ಲಿ ಬಳಕೆಯಲ್ಲಿದ್ದವು ಎಂಬುದನ್ನು ಮರೆಯಬಾರದು.

ಸಂಧ್ಯಾಸಮಯದ ಪಶ್ಚಿಮ ದಿಕ್ಕಿನಲ್ಲಿನ ಬಣ್ಣಗಳ ಹರಹು, ಸಾಗರದ ನೀಲವರ್ಣದ, ವಸಂತಮಾಸದಲ್ಲಿ ತುಂಬಿನಿಂತ ಮರಗಳ ಹಸಿರು ಹೀಗೇ ಆಯಾಯ ಸಂದರ್ಭದಲ್ಲಿ ಬಳಸಿದ ಪದ್ಯಗಳಲ್ಲಿ ಪದಪುಂಜಗಳು ಬರಹಗಾರನ ಶಬ್ದದಾರಿದ್ರ್ಯವನ್ನು ದೂರಮಾಡುತ್ತವೆ. ಯುದ್ಧ, ಸಾಹಸ, ಶಪಥ, ಬೈಗುಳ, ಕಿಡಿನುಡಿ, ಕಟಕಿ, ಬಿರುನುಡಿ, ಕಿರಿನುಡಿ, ಹಾಸ್ಯ, ಸರಸ, ವ್ಯಂಗ್ಯ, ವಕ್ರೋಕ್ತಿ, ಜಾಣ್ನುಡಿ, ಪರಿಹಾಸ, ಕರುಣೆ ಎಲ್ಲದರಲ್ಲೂ ಕಾಳಿದಾಸನಂತೇ ಕುಮಾರವ್ಯಾಸ ತನ್ನದೇ ಆದ ಛಾಪನ್ನು ಮೂಡಿಸಿದ್ದಾನೆ. ಪಶುವಿನಿಂದ ಹಿಡಿದು ಯೋಗಿ ಮಹಾಯೋಗಿಗಳ ವರೆಗಿನ ಪಾತ್ರ ಚಿತ್ರಣ ಅತ್ಯದ್ಭುತ, ಅನವದ್ಯ, ಹೃದ್ಯ.

ಊಹೆದೆಗೆಹಿನ ಕಂಬನಿಯ ತನಿ
ಮೋಹರದ ಘನಶೋಕವಹ್ನಿಯ
ಮೇಹುಗಾಡಿನ ಮನದ ಕೌರವನಿತ್ತನೋಲಗವ |

--ಎಂಬಲ್ಲಿ ಕೌರವ ಎಂಥವ ಎಂಬುದನ್ನು ಚಿತ್ರಿಸಿದ್ದಾನೆ. ಸನ್ನಿವೇಶಗಳಲ್ಲಿ ಪದ್ಯದಲ್ಲಿನ ಲಾಲಿತ್ಯವನ್ನು ಗಮನಿಸುವುದಾದರೆ : ಮಾಹಾಭಾರತದಲ್ಲಿ ಅಗ್ನಿಕನೆಯಂತೇ ಜ್ವಲಿಸುವ ದ್ರೌಪದಿ ತನ್ನ ಸ್ವಯಂವರದ ಸಮಯದಲ್ಲಿ ಅಣ್ಣ ದೃಷ್ಟದ್ಯುಮ್ನನಿಂದ ಶ್ರೀಕೃಷ್ಣನ ಪರಿಚಯ ಪಡೆಯುತ್ತಾಳೆ, ಆಗ ಆಕೆಯ ಮನೋಗತವೇನಿತ್ತು ಎಂಬುದನ್ನು ಹೀಗೆ ಹೇಳುತ್ತಾನೆ:

ಎನಲು ಭಕುತಿಯ ಭಾವರಸದಲಿ
ನೆನೆದು ಹೊಂಪುಳಿಯೋಗಿ ರೋಮಾಂ
ಚನದ ಮೈಯ್ಯುಬ್ಬಿನಲಿ ತನುಪುಳುಕಾಂಬು ಪೂರದಲಿ |
ಮನದೊಳಗೆ ವಂದಿಸಿದಳೆನಗೀ
ತನಲಿ ಗುರುಭಾವನೆಯ ಮತಿ ಸಂ
ಜನಿಸಿತೇನೆಂದರಿಯೆನೆಂದಳು ಕಮಲಮುಖಿ ನಗುತ ||

ಇದೇ ಕುಸುಮಕೋಮಲ ವ್ಯಕ್ತಿತ್ವದ ದ್ರೌಪದಿ ಭಾರತ ಕಥೆಯಂತ್ಯದಲ್ಲಿ ಮಕ್ಕಳನ್ನು ಕಳೆದುಕೊಂಡು ಶೋಕ ವಿಹ್ವಲಳಾಗಿದ್ದಾಗ, ತನ್ನ ಮಕ್ಕಳನ್ನು ಕೊಂದ ಅಶ್ವತ್ಥಾಮನನ್ನು ಕೊಲ್ಲಲು ನುಗ್ಗುತ್ತಿರುವ ಅರ್ಜುನ ಮತ್ತು ಭೀಮರನ್ನು ತಡೆದು ಹೇಳುವುದನ್ನು ನೋಡಿ:

ಬಂದಳಾ ದ್ರೌಪದಿಯಹಹ  ಗುರು
ನಂದನನ ಕೊಲಬಾರದಕಟೀ
ನಂದನರ ಮರಣದ ಮಹಾವ್ಯಥೆಯೀತನಳಿವಿನಲಿ |
ಕೊಂದು ಕೂಗದೆ ಕೃಪೆಯನಬಲಾ
ವೃಂದ ಸಮಸುಖ ದುಃಖಿಗಳು ಸಾ
ರೆಂದು ಭೀಮಾರ್ಜುನರ ತೆಗೆದಳು ಬಳಿಕ ಪಾಂಚಾಲಿ ||  

ಹೀಗೇ ಭಾರತಕಥೆಯ ಪ್ರತೀ ಪಾತ್ರವೂ ವಿಶಿಷ್ಟ ಮತ್ತು ಪದ್ಯಗಳೂ ಕೂಡ. ನಾರಣಪ್ಪನ ಭೀಮ ಬಹಳ ಕೋಲಾಹಲದವನು. ಬಾಲ್ಯದಲ್ಲೇ ನೂರುಜನವೇರಿದ ಮರವನ್ನು ಗಡಗಡನೆ ಅಲುಗಾಡಿಸಿ ಕೌರವರು ದೂರಿಟ್ಟಾಗ ತನ್ನ ಮೈಯ್ಯನ್ನು ತಾನೇ ಪರಚಿಕೊಂಡು

ಗಾಯಮಾಡಿದರೆಂದು ತೋರಿಸಿ ತಪ್ಪಿಸಿಕೊಂಡವ. ಮೈಯ್ಯಲ್ಲಿ ಶಕ್ತಿ-ಸಾಮರ್ಥ್ಯವಿದ್ದೂ ಆತ ತೋರಿದ ಸಂಯಮ ಕಾವ್ಯದಲ್ಲಿ ಢಾಳಾಗಿ ಬಿಂಬಿತವಾಗಿದೆ. ಮಹಾಪರಾಕ್ರಮಿ, ಮಹಾಬಲಶಾಲಿ ಭೀಮ, ಅರಗಿನರಮನೆಯ ಉರಿಯಿಂದ ತಪ್ಪಿಸಿಕೊಂಡು ತನ್ನವರನ್ನು ಕಾಡಿಗೆ ಎತ್ತಿಕೊಂಡೊಯ್ದು ಮಲಗಿಸಿ, ನಿದ್ರಾಭಂಗವಾದಂತೇ ಅವರ ಕಾಲೊತ್ತುತ್ತಾ, ಅವರ ಸ್ಥಿತಿಯನ್ನು ನೆನೆದು ಬಿಕ್ಕಿಬಿಕ್ಕಿ ಅಳುತ್ತಾನೆ! ಇಡೀ ಭಾರತದಲ್ಲಿ ಅಳದೇ ಇರುವ ಪಾತ್ರಗಳು ಎರಡು: ಶ್ರೀಕೃಷ್ಣ ಮತ್ತು ಅಭಿಮನ್ಯು. ಯಾರೇ ಅತ್ತರೂ ಅಳದಿದ್ದರೂ ತೀರಾ ಏನೂ ಅನ್ನಿಸದ ನಮಗೆ ದಟ್ಟಡವಿಯಲ್ಲಿ ನಡುರಾತ್ರಿಯಲ್ಲಿ ತನ್ನವರ ಹೀನಾಯ ಸ್ಥಿತಿಯನ್ನು ಕಂಡು ಮರುಗಿದ, ನರಳಿದ ಭೀಮನನ್ನು ಕುಮಾರವ್ಯಾಸ ಬಣ್ಣಿಸುವಾಗ ಕರುಳು ಚುರಕ್ ಎನ್ನುತ್ತದೆ, ಕಣ್ಣೆವೆಗಳು ಒದ್ದೆಯಾಗದೇ ಇರುವುದಿಲ್ಲ!

ಭಾರತ ಕಥೆಯಲ್ಲಿ ವ್ಯಾಸರು ಖಳ ಚತುಷ್ಟಯರನ್ನು ಹೆಸರಿಸಿದ್ದು ಅವರಲ್ಲಿ ಕರ್ಣ ಮತ್ತು ಕೌರವರು ಇಬ್ಬರು ಪ್ರಧಾನರಾಗಿದ್ದಾರೆ. ಅತಿಯಾಗಿ ಪ್ರೀತಿಸದೇ ಅತಿಯಾಗಿ ದೂಷಿಸದೇ ಮಿತಿಯಲ್ಲಿ ಕಥೆಯನ್ನು ನಡೆಸಿದ ವ್ಯಾಸರಿಗಿಂತ ತುಸು ಭಿನ್ನ ರೀತಿಯಲ್ಲಿ ಕುಮಾರವ್ಯಾಸ ಬಣ್ಣಿಸಿದರೂ ಎಲ್ಲೂ ಧರ್ಮದ ಎಲ್ಲೆಯನ್ನು ಮೀರಿಲ್ಲ. ಹಾಗಂತ ಭಾಸ,ಅ ಪಂಪ, ರನ್ನ ಇವರೆಲ್ಲಾ ಈ ಖಳರನ್ನು ಉದತ್ತೀಕರಿಸಿದ್ದಾರೆ! ಮೂಲ ಕಥೆಯ ಕರ್ತೃವಾದ ವೇದವ್ಯಾಸರೇ ಇಂತಿಂಥವರು ಖಳರು ಎಂದರೆ ಅಲ್ಲೇನೋ ಬಲವಾದ ಕಾರಣವಿರಲೇಬೇಕಲ್ಲವೇ? ಅದನ್ನರಿಯದ ಅದೆಷ್ಟೋ ಜನ ಈ ಪಾತ್ರಗಳನ್ನೂ ಪುಣ್ಯೋಪೇತರು, ಆದರ್ಶಪ್ರಾಯರು, ಸ್ವಾಭಿಮಾನಿಗಳು ಎಂದು ಬಣ್ಣಿಸುವುದು ಖೇದಕರ. ಅನೇಕಾವರ್ತಿ ವಿವಿಧ ಮಾರ್ಗಗಳಲ್ಲಿ ಸಂಧಾನಕ್ಕೆ ಪ್ರಯತ್ನಿಸಿದರೂ ಫಲಪ್ರದವಾಗದ ಕಾರಣ ಯುದ್ಧ ಸನ್ನಾಹವನ್ನು ನಡೆಸಿದ ಕೃಷ್ಣನ ಕಾರಸ್ಥಾನವನ್ನು ಅರಿತುಕೊಂಡ ಕೌರವನನ್ನು ಕುಮಾರವ್ಯಾಸ ಹೀಗೆ ಚಿತ್ರಿಸುತ್ತಾನೆ:

ಎನ್ನ ಹೃದಯದೊಳಿರ್ದು ಮುರಿವನು
ಗನ್ನದಲಿ ಸಂಧಿಯನು ರಿಪುಗಳೊ
ಳಿನ್ನು ತನ್ನವರವರೊಳಿರ್ದಾ ಹದನನಾಡಿಸುವ |
ಭಿನ್ನನಂತಿರೆ ತೋರಿ ಭಿನ್ನಾ
ಭಿನ್ನನೆನಿಸಿಯೆ ಮೆರವ ತಿಳಿಯಲ
ಭಿನ್ನನೀ ಮುರವೈರಿ ನಾವಿನ್ನಂಜಲೇಕೆಂದ ||


ಮಣಿದು ಬದುಕುವನಲ್ಲ ಹಗೆಯಲಿ
ಸೆಣಸಿ ಬಿಡುವವನಲ್ಲ ದಿಟ ಧಾ
ರುಣಿಯ ಸಿರಿಗೆಳೆಸುವನಲ್ಲಳಾಕಿಲ್ಲ ಕಾಯದಲಿ |
ರಣ ಮಹೋತ್ಸವವೆನ್ನ ಮತ ಕೈ
ದಣಿಯೆ ಹೊಯ್ದಾಡುವೆನು ಕೃಷ್ಣನ
ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲೆಂದ ||

ವೀರನಾದ, ವಿರಥನಾದ ಕರ್ಣನ ಅವಸಾನದ ಘಟ್ಟದಲ್ಲಿ ಮಾರಣಾಸ್ತ್ರವು ಆತನ ಎದೆಯನ್ನು ಭೇದಿಸಿದ್ದರೂ ಅಮೃತವಾಗಿಯೇ ಉಳಿದಿದ್ದ ಕರ್ಣನ ಬಳಿಗೆ ಬ್ರಾಹ್ಮಣ ವೇಷದಲ್ಲಿ ಬಂದು ಕರ್ಣಕುಂಡಲವನ್ನು ಎದೆಯೊಳಗಿನ ಅಮೃತೋದಕವನ್ನು ಪಡೆದುಕೊಳ್ಳುವಾಗ ಕರ್ಣನಿಗೆ ಬಂದಾತ ಶ್ರೀಕೃಷ್ಣನೆಂಬುದು ಸ್ಪಷ್ಟವಾಗುತ್ತದೆ. ಸಾವಿನ ಸನಿಹದಲ್ಲಿರುವ ಸಮಯದಲ್ಲೂ ಸಾವಿರ ದಾನಗಳೆಲ್ಲಕ್ಕಿಂತಲೂ ಶ್ರೇಷ್ಠವಾದ ತನ್ನ ಕರ್ಣಕುಂಡಲ ಮತ್ತು ಅಮೃತಕಲಶಗಳ ದಾನವನ್ನು ಕರ್ಣ ನೆರವೇರಿಸಿದ ಆ ಘಳಿಗೆಯಲ್ಲಿ ಕೃಷ್ಣ ಆತನಿಗೆ ಪರಮಪದವನ್ನು ಕರುಣಿಸುತ್ತಾನೆ:

ಪರಮ ಕರುಣಾಸಿಂಧು ಕರ್ಣಂ
ಗಿರದೆ ನಿಜಮೂರ್ತಿಯನು ತೋರಿದ
ನುರತರ ಪ್ರೇಮದಲಿ ಮುಕುತಿಯ ಪದವ ನೇಮಿಸಿದ |
ನರನನೆಚ್ಚರಿಸಿದನು ಕರುಣಿಗೆ
ಕರುಣದನುಸಂಧಾನ ಮಾಣದು
ಧರೆಯೊಳಚ್ಚರಿಯೆನುತ ಬೆರಗಿನೊಳಿದ್ದು ದಮರಗಣ ||

ವಿಸ್ತಾರವಾದ ಭಾರತಕಥೆಯ ಸೊಬಗನ್ನು ಒಂದೆರಡು ಪದ್ಯಗಳಲ್ಲಿ ತಿಳಿಸಲು ನಾನು ಶಕ್ತನಲ್ಲ. ಭಾರತಕಥೆಯನ್ನು ಪುರಾಣದ ರೂಪದಲ್ಲೇ ಆದರಿಸಿ, ಆಧರಿಸಿ ತಮ್ಮ ಜೀವಿತವನ್ನು ಕಳೆದವರು ನಮ್ಮೆಲ್ಲಾ ಪೂರ್ವಜರು. ಇಂದಿನ ನವನಾಗರಿಕತೆಯಲ್ಲಿ ಭಾರತವೇ ಅಪ್ರಸ್ತುತವೆಂತಲೂ ಗೀತೆಯೇ ಅಸಮರ್ಪಕವೆಂತಲೂ ಹೇಳತೊಡಗಿದ್ದೇವೆಂದರೆ ಅದರರ್ಥ ನೈತಿಕವಾಗಿ ನಡೆಯುವ ಜವಾಬ್ದಾರಿಯನ್ನು ನಾವು ನಿಧಾನವಾಗಿ ತೊರೆಯುತ್ತಾ ಸ್ವೇಚ್ಛಾಚಾರವನ್ನು ರೂಢಿಗೆ ತಂದುಕೊಳುತ್ತಾ ಶ್ರೇಷ್ಠ ಜೀವನಧರ್ಮವನ್ನು ಕಡೆಗಣಿಸಿ ಅಧಃಪತನಕ್ಕೆ ಇಳಿಯುತ್ತಿದ್ದೇವೆ ಎಂಬುದು ಸೂಚ್ಯ. ಇಂತಹ ಪ್ರಾಗೈತಿಹಾಸವನ್ನು ವಿಶದೀಕರಿಸುವ ಮಹಾಕಾವ್ಯಗಳನ್ನೂ ಸಹಿತ ಪೂರ್ವಜರು ವ್ಯಾಸಪೀಠದಮೇಲೆ ರೇಷ್ಮೆಬಟ್ಟೆಯಲ್ಲಿ ಸುತ್ತಿ ಇಡುತ್ತಿದ್ದರು; ಆಗಾಗ ಅದರ ಪ್ರವಚನಗಳು ನಡೆಯುವಾಗ ಪೂಜಿಸಿ ಬಳಸುವುದು ವಾಡಿಕೆಯಾಗಿತ್ತು. ಐದು ಸಹಸ್ರವರ್ಷಗಳನ್ನು ಕಲಿಯುಗದಲ್ಲಿ ಕಳೆದಿದ್ದೇವೆ ಎಂದರೆ ಅದಕ್ಕೂ ಹಿಂದಿನದೆನ್ನಲಾದ ವೇದಗಳನ್ನು ಕೇವಲ ಮೌಖಿಕವಾಗಿ ಉಚ್ಚರಿಸುತ್ತಾ ವರ್ಗಾಯಿಸಿಕೊಂಡು ಕಾಪಿಟ್ಟ ಜನರಿಗೆ, ಜ್ಞಾನ ಭಂಡಾರವನ್ನು ಹಾಗೆ ಸಲಹಿದ್ದಕ್ಕೆ ರಾಜರುಗಳು ಗೌರವವಾಗಿ ಅವರ ಉಪಜೀವಿತಕ್ಕೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದರು. ಮನದಮೂಸೆಯಲ್ಲಿ ಕಠಿಣ ಪರಿಶ್ರಮದಿಂದ ಜೋಪಾನಮಾಡಿದ ಶ್ರುತಿಗಳು ಅಥವಾ ವೇದಗಳು ಎಲ್ಲರಿಗೂ ಅರ್ಥವಾಗದ ಕಾರಣ ಅವುಗಳ ವ್ಯುತ್ಪತ್ತಿಯೆನಿಸಿದ ಭಾರತಕಥೆಯನ್ನು  ಧರ್ಮಸೂತ್ರದಂತೇ ಸುಲಭದಲ್ಲಿ ಅರಿಯಲು ಕರುಣಿಸಿದವರು ಭಗವಾನ್ ವೇದವ್ಯಾಸರು. ಕನ್ನಡಿಗರಿಗಾಗಿ ಕನ್ನಡದಲ್ಲಿ ಅದನ್ನು ಬರೆದದ್ದು ಮಹಾಕವಿ ಕುಮಾರವ್ಯಾಸ. ಪಂಪಭಾರತದಿಂದ ಇತ್ತೀಚೆಗೆ ಬಂದ ತುರಂಗಭಾರತದ ವರೆಗೆ ಇರುವ ಎಲ್ಲಾ ಭಾರತಕಥೆಗಳ ನಡುವೆ ಅಷ್ಟೇ ಅಲ್ಲ ಕನ್ನಡ ಕಾವ್ಯಪರಂಪರೆಗೇ ಅತ್ಯದ್ಭುತ ಮತ್ತು ಅತಿಶ್ರೇಷ್ಠ ಕೊಡುಗೆ ಗದುಗಿನ ನಾರಣಪ್ಪನ ಈ ’ಕರ್ಣಾಟ ಭಾರತ ಕಥಾಮಂಜರಿ.’ ಸ್ಥೂಲವಾಗಿ ಆತನ ಬಗ್ಗೆ ಹೇಳಿದೆನೆಂಬ ತೃಪ್ತಭಾವ ಮನದಲ್ಲಿ ಮೂಡುತ್ತಿದೆ. ಅದೇ ಭಾವದಲ್ಲಿ ಕವಿಗಿನ್ನೊಮ್ಮೆ ಉದ್ದಂಡ ಪ್ರಣಾಮ ಸಲ್ಲಿಸುತ್ತಿದ್ದೇನೆ:

ಎನಿಸು ಸೊಗಸಿದು ಕಾವ್ಯ ಭಾರತ
ಮಣಿಸುವುದು ಮಿಕ್ಕುಳಿದುದೆಲ್ಲವ
ತಿನಿಸು ಬಲು ಸಿಹಿ ನುತಗುಣರು ಭಾವುಕರು ಸುಜನರಿಗೆ |
ಕನಸು ಮನಸಲು ಕಂಡೆನದ್ಭುತ
ಎಣಿಕೆಯಿಲ್ಲದೆ ಮುಗಿವೆ ಕರಗಳ
ಮಣಿಸಿ ಎನ್ನೀಶಿರವ ಗದುಗಿನ ನಾರಣಪ್ಪನಿಗೆ ||