ಚಿತ್ರಋಣ : ಅಂತರ್ಜಾಲ
ಜನಜೀವನಕ್ಕೆ ಯಾಕೆ ಬೇಕು ವೇದಸಾಹಿತ್ಯ? ಆದಿಶಂಕರರ ಅಧ್ಯಾಸಭಾಷ್ಯದಲ್ಲಿ ಉತ್ತರವನ್ನು ಹುಡುಕಿದೆ!
ಅನೇಕ ದಿನಗಳಿಂದ ಭಾರತದ ಪ್ರಾಗೈತಿಹಾಸ, ಇತಿಹಾಸ ಮತ್ತು ಸನಾತನ ಜೀವನಧರ್ಮ--ಇವುಗಳ ಕುರಿತೇ ಬರೆಯುತ್ತಿರುವ ನನ್ನ ಇಂತಹ ಬರಹಗಳನ್ನು ಓದುವ ಜನ ಬೆರಳೆಣಿಕೆಯಷ್ಟು ಎಂಬುದು ನನಗೂ ಗೊತ್ತು. ಆದರೂ ಯಾಕೆ ಸಮಯವ್ಯಯಿಸಿ, ಶ್ರಮಪಟ್ಟು ಇವುಗಳನ್ನು ಬರೆಯುತ್ತಿದ್ದೇನೆ ಎಂದರೆ: ಅಧ್ಯಾಸದಲ್ಲಿರುವ ನಾಲ್ಕೇ ನಾಲ್ಕು ಜನರಿಗಾದರೂ ಇವುಗಳ ಮಹತ್ವದ ಅರಿವು ಸುಲಭವಾಗಿ ಆದರೆ ನನ್ನ ಶ್ರಮಸಾರ್ಥಕವಾಗುತ್ತದೆ ಎಂಬ ಏಕೋಭಾವದಿಂದ ಮತ್ತು ಅತ್ಯುನ್ನತವಾದ ಸನಾತನಧರ್ಮದ ಮೇಲಿನ ಅತಿಶಯ ಪ್ರೀತಿಯಿಂದ. ಬರೆಯಲಿಕ್ಕೆ ರಾಜಕೀಯ, ಸಮಾಜಿಕ, ಸಾಂಸ್ಕೃತಿಕ, ಸಾಹಿತ್ಯ-ಸಂಗೀತ-ಕಲೆ ಇಂತಹ ಹಲವು ವಿಷಯಗಳ ಹೊರೆಹೊರೆ ಹಾಗೇ ಬಿದ್ದಿದೆ; ಯಾವುದನ್ನೋ ಬರೆಯುವುದಕ್ಕಿಂತಾ ಮೌಲಿಕವಾದುದನ್ನು ಬರೆದರೇ ಅದೊಂದು ಸಮಾಜಸೇವೆಯಾಗುತ್ತದೆ ಎಂದು ನಂಬಿದವ ನಾನು. ಹಸಿದ ಮನದಹೊಟ್ಟೆಯನ್ನು ಹೊತ್ತು ಹುಡುಕಿಹೊರಟಾಗ ಕಣ್ಣಿಗೆಬೀಳುವ ಪುಸ್ತಕಗಳು ಲಕ್ಷ ಲಕ್ಷ. ಅದರಲ್ಲಿ ಅನೇಕವು ನನ್ನ ಮಟ್ಟಿಗೆ ನಿರುಪಯುಕ್ತ, ಕೆಲವು ಮಧ್ಯಮ ತರಗತಿ, ಇನ್ನೂ ಕೆಲವು ಮಾತ್ರ ಉತ್ತಮ. ಉತ್ತಮ ಪುಸ್ತಕಗಳನ್ನು ಆಯ್ದುಕೊಳ್ಳುವುದೇ ಪರಿಶ್ರಮದ ಕೆಲಸ; ಯಾಕೆಂದರೆ ಅದು ನಮ್ಮ ಅನುಭೂತಿಗೆ ಬಿಟ್ಟ ವಿಷಯ. ಪುಸ್ತಕದ ಯಾವುದೋ ಪುಟದಲ್ಲೂ ಉಪಯುಕ್ತ ಮಾಹಿತಿ ಇದ್ದಿರಬಹುದು, ಅದನ್ನು ಓದಿದಾಗಲಷ್ಟೇ ಅದು ಗೊತ್ತಾಗುತ್ತದೆ. ಕೆಲವುಸರ್ತಿ ಲೇಖಕರ ವೈಯ್ಯಕ್ತಿಕ ಪರಿಚಯದ ಚರ್ಯೆ, ಅವರ ಬರಹಗಳು ಹೇಗಿರಬಹುದು ಎಂಬುದನ್ನು ಸಾಮಾನ್ಯವಾಗಿ ತಿಳಿಸಿಬಿಟ್ಟಿರುತ್ತದೆ. ಈ ಕಾಲದಲ್ಲಿ, ಕಾಲವ್ಯಯಿಸಿ ಹಣತೆತ್ತು ಕೊಂಡ ಉತ್ತಮ ಪುಸ್ತಕಗಳಲ್ಲೂ ಅತ್ಯುತ್ತಮ ಎನಿಸುವುದು ಕೆಲವೊಂದಷ್ಟು ಮಾತ್ರ. ಯಾಕೆಂದರೆ ಅನೇಕ ಬರಹಗಾರರು ಅಧ್ಯಾಸದಲ್ಲೇ ಇರುತ್ತಾರೆ; ಅವರ ಇಹಲೋಲುಪತೆಯ ತೆವಲಿನಲ್ಲೇ ಬರಹಗಳೂ ಓಲಾಡುತ್ತಿರುತ್ತವೆ. ಬಹಳ ವಿಶೇಷವೆನಿಸಿದ ಆಧ್ಯಾತ್ಮದ/ವೇದಸಾಹಿತ್ಯದ ಪುಸ್ತಕಗಳನ್ನು ಓದಲು ತೊಡಗಿದರೆ ನನ್ನನ್ನೇ ನಾನು ಕಳೆದುಕೊಳ್ಳುತ್ತೇನೆ ಎಂಬುದು ಅಕ್ಷರಶಃ ಸತ್ಯ. ಆಗಸಕ್ಕೆ ಹಾರಿಬಿಟ್ಟ ಗಗನನೌಕೆಯಲ್ಲಿರುವ ವ್ಯೋಮಯಾನಿಯಂತೇ ಓದುತ್ತಾ ಓದುತ್ತಾ ನಾನೆಲ್ಲಿದ್ದೇನೆ ಎಂಬುದರ ಪರಿವೆಯೇ ಇರದಷ್ಟು ಆಗಿಬಿಡುತ್ತದೆ. ಕ್ಲಿಷ್ಟ ಬರಹಗಳನ್ನು ಸುಲಭವಾಗಿ ಅರ್ಥವಿಸಿ ಹೇಳಲು ಪ್ರಯತ್ನಿಸುವುದು ಭೂಮಿಗೆ ಆ ನೌಕೆ ಮರಳಿದಮೇಲೇನೆ. ಎಷ್ಟೋ ಸರ್ತಿ ’ಲ್ಯಾಂಡಿಂಗ್ ಪ್ರಾಬ್ಲ್ಂ’ ಆಗಿ ಬರಹ ಒಡಮೂಡದೇ ಹೋಗಬಹುದು! ಸಹಯಾತ್ರಿಕನ ಈ ವಿಶಿಷ್ಟಯಾನವನ್ನು ದೂರದಿಂದ ವೀಕ್ಷಿಸುತ್ತಾ, ಕೊಡಮಾಡಿದ ಮಾಹಿತಿಗಳನ್ನು ಮನಸಾ ಆಸ್ವಾದಿಸಿದ ಎಲ್ಲರಿಗೂ ನನ್ನ ನಮನಗಳು.
ನಚಿಕೇತನೆಂಬ ಋಷಿಕುಮಾರನೊಬ್ಬನಿದ್ದ. ಇವನ ಕಥೆಯನ್ನು ಕೆಲವರು ಕೇಳಿಯೇ ಇರುತ್ತೀರಿ. ಒಂದರ್ಥದಲ್ಲಿ ಆತ ಧ್ರುವನಿಗಿಂತಾ ಮುಗ್ಧ. ದೇವತೆಗಳಿಂದ ಉನ್ನತ ಸ್ಥಾನ-ಮಾನವನ್ನು ಬಯಸಿ ವಾಜಶ್ರವಸ ತನ್ನಲ್ಲಿರುವ ಎಲ್ಲವನ್ನೂ, ಹಸುಗಳನ್ನೂ ದಾನಮಾಡುತ್ತಲಿದ್ದ; ದಾನನೀಡುತ್ತಿರುವ ಹಸುಗಳಲ್ಲಿ ಕೆಲವು ಮುಪ್ಪಿನವು, ಕೆಲವು ಕಣ್ಣುಕುರುಡಾದವು, ಕೆಲವು ಹಾಲು ಕೊಡದವು ಎಂಬುದನ್ನು ಮಗ ನಚಿಕೇತ ಅರಿತ. "ಅಪ್ಪಾ ನಾನೂ ನಿಮ್ಮವನೇ ಅಲ್ಲವೇ? ನನ್ನನ್ನು ಯಾರಿಗೆ ದಾನ ಕೊಡುತ್ತೀರಿ?" ಎಂದು ಮುಗ್ಧ ನಚಿಕೇತ ಪ್ರಶಿಸಿದ. ಒಂದೆರಡು ಸರ್ತಿ ಮಗ ಅದನ್ನೇ ಕೇಳಿದ್ದನ್ನು ಆಲಿಸಿದ ತಂದೆ, ಕೋಪಗೊಂಡು " ನಿನ್ನನ್ನು ಯಮನಿಗೆ ಕೊಟ್ಟಿದ್ದೇನೆ, ಹೋಗು" ಎಂದುಬಿಟ್ಟ! ತಂದೆಯ ಆಜ್ಞೆಯನ್ನು ಶಿರಸಾವಹಿಸಿದ ಬಾಲಕ ಮರುಮಾತನಾಡದೇ ಯಮನನ್ನು ಸೇರಿಕೊಳ್ಳುವುದಕ್ಕೆ ಸಿದ್ಧನಾಗಿ ನಡೆದ. ತಂದೆಗೇ ಪಶ್ಚಾತ್ತಾಪವೆನಿಸಿದರೂ ಮಗನಲ್ಲಿ ಯಾವುದೇ ಅಂತಹ ಭಾವ ಉದ್ಭವಿಸಲಿಲ್ಲ. ಯಮನೆಡೆಗೆ ಸಾಗಿ, ಯಮನ ದ್ವಾರದೆದುರು ನಿಂತಿದ್ದ ಬಾಲಕನಿಗೆ ಮೂರುದಿನಗಳಕಾಲ ಯಮ ಸಿಗಲೇ ಇಲ್ಲ! ಮೂರುದಿನಗಳ ಬಳಿಕ, ಪಾಪದ ಹಸುಳೆಯೊಂದು ತನ್ನ ದ್ವಾರದೆದುರು ನಿಂತಿದ್ದನ್ನು ತಿಳಿದು ಯಮ ಸ್ವತಃ ತಾನೇ ಖುದ್ದಾಗಿ ನಚಿಕೇರ್ತನಲ್ಲಿಗೆ ಬಂದು ಆತನನ್ನು ಮಾತನಾಡಿಸತೊಡಗಿದ. "ಮೂರುದಿನಗಳ ಕಾಲ ಯಾವುದೇ ಆತಿಥ್ಯವನ್ನು ಪಡೆಯದೇ, ಉಪವಾಸವಿದ್ದು ನನ್ನ ದರ್ಶನಕ್ಕಾಗಿ ಕಾದ ಮಗುವೇ, ನಿನಗೆ ನಾನು ಮೂರು ವರಗಳನ್ನು ಕೊಡುತ್ತಿದ್ದೇನೆ, ಕೇಳಿಕೋ" ಎಂದ.
ನಚಿಕೇತ, ಮೊದಲನೆಯ ವರವಾಗಿ ತಂದೆಗೂ, ತನಗೂ ಮನಶ್ಶಾಂತಿಯನ್ನು ಪ್ರಾರ್ಥಿಸಿದ. ಅಗ್ನಿಹೋತ್ರವನ್ನು ಆಚರಿಸುವ ಬಗೆಗಿನ ಮಾಹಿತಿಯನ್ನು ಎರ್ರಡನೆಯದಾಗಿ ಕೇಳಿದ, ಯಮ ಎರಡನ್ನೂ ಅನುಗ್ರಹಿಸಿದ. ಸಾವಿನ ನಂತರರ ರಹಸ್ಯವನ್ನು ತಿಳಿಸು ಎಂಬುದನ್ನು ಮೂರನೆಯದಾಗಿ ಕೇಳಿದ! ಕೆಲಹೊತ್ತು ಯಮ ನಿರುತ್ತರನಾಗಿದ್ದ. ಯಾವುದು ದೇವತೆಗಳಿಗೂ ಗೊತ್ತಿರದ ರಹಸ್ಯವೋ ಅದನ್ನು ಈ ಚಿಕ್ಕ ವಟು ಕೇಳುತ್ತಿರುವುದು ಅವನ ಅಶ್ಚರ್ಯಕ್ಕೆ ಕಾರಣವಾಗಿತ್ತು. "ಅದೊಂದನ್ನುಳಿದು ಇನ್ನೇನು ಬೇಕಾದರೂ ಕೇಳು ಮೇಲಾಗಿ ನಿನಗೆ ನನ್ನಲ್ಲಿರುವ ಹಲವು ಸುವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತೇನೆ, ಅದನ್ನು ಮಾತ್ರ ಕೇಳಬೇಡ" ಎಂದು ಯಮ ತಗಾದೆ ತೆಗೆದ. "ನನಗೆ ಸುವಸ್ತುಗಳ ಭೋಗಭಾಗ್ಯದ ಅಗತ್ಯವಿಲ್ಲ, ಅದು ಕೇವಲ ಇಂದಿಗೇ ಮುಗಿದುಹೋಗುತ್ತದೆ. ಬೇರಾವ ವರಗಳೂ ಕೂಡ ಬೇಡ. ಸಾವಿನ ನಂತರ ನಾವೇನಾಗುತ್ತೇವೆಂಬ ರಹಸ್ಯವನ್ನು ಮಾತ್ರ ತಿಳಿದುಕೊಳ್ಳಬೇಕು" ಎಂದು ನಚಿಕೇತ ಪಟ್ಟುಹಿಡಿದ. ಬಾಲಕನ ಧೈರ್ಯವನ್ನು ನೋಡಿ ಯಮನಿಗೆ ಒಳಗೊಳಗೇ ಸಂತಸವಾಯ್ತು. ಸಾವಿನ ನಂತರ ಉಳಿಯುವ ನಿಜವಾದ ಆತ್ಮದ ಬಗ್ಗೆ ಯಮ ನಚಿಕೇತನಿಗೆ ತಿಳಿಸಿದ: ಪ್ರತಿಯೊಬ್ಬರಲ್ಲಿಯೂ ಅವಿತಿರುವ ಈ ಆತ್ಮನ ಬಗ್ಗೆ ಜ್ಞಾನವುಂಟಾದರೆ, ಆತ್ಮ-ಪರಮಾತ್ಮನ ಭಾಗವೇ ಎಂಬುದರ ಅರಿವು ಉಂಟಾಗುತ್ತದೆ. ನಿರ್ಗುಣ ನಿರಾಕಾರನಾದ ಪರಬ್ರಹ್ಮನೇ ಸೃಷ್ಟಿ, ಸ್ಥಿತಿ, ಲಯಕ್ಕೆ ಮೂಲನೂ ಆಗಿದ್ದು ’ ಓಂ ’ ಎಂಬುದು ಆತನಿಂದಲೇ ಹೊರಡುವ ಶಬ್ದವಾಗಿದೆ! ಓಂ ಎಂಬುದು ಆತನ ಸಂಕೇತಕೂಡಾ ಹೌದು. ಅವನು ಚಿಕ್ಕದೆಲ್ಲದಕ್ಕಿಂತಾ ಚಿಕ್ಕವನು ಮತ್ತು ದೊಡ್ಡದೆಲ್ಲದಕ್ಕಿಂತಾ ದೊಡ್ಡವನು. ಇಂದ್ರಿಯಗಳೆಂಬ ಕುದುರೆಯನ್ನು ಸವಾರಿಮಾಡುವಾತ ಆತ್ಮ. ಜೀವಾತ್ಮವಾಗಿ ಶರೀರ ಪಡೆಯುವ ಆತ, ಸಾವಿನ ನಂತರವೂ ಹಾಗೇ ಇರುತ್ತಾನೆ-ಶಾಶ್ವತನಾಗಿರುತ್ತಾನೆ. ಕೇವಲ ಹೆಚ್ಚಿನ ಓದು ಅಥವಾ ಬುದ್ಧಿಮತ್ತೆ ಆತ್ಮಸಾಕ್ಷಾತ್ಕಾರಕ್ಕೆ ದಾರಿಯಲ್ಲ. ಶರೀರವೇಂಬ ಪೀಠದಿಂದ ಆತ್ಮನನ್ನು ಬೇರ್ಪಡಿಸುವಲ್ಲಿ ಯಾರು ಯಶಸ್ವಿಯಾಗುತ್ತಾನೋ ಆತನಿಗೆ ಮಾತ್ರ ಇದನ್ನು ಅರಿಯಲು ಸಾಧ್ಯ! ಹೀಗೆ ಮಾಡಿದವ ಪರಬ್ರಹ್ಮನಲ್ಲಿ ಲೀನಾವಾಗುತ್ತಾನೆ-ಅದೇ ಮೋಕ್ಷ. ಆತ್ಮಜ್ಞಾನವನ್ನು ಪಡೆಯದವ ಹುಟ್ಟು-ಸಾವುಗಳೆಂಬ ಚಕ್ರದಲ್ಲಿ ಸುತ್ತುತ್ತಲೇ ಇರುತ್ತಾನೆ. ಈ ರೀತಿಯಾದ ಅತ್ಯುತ್ತಮ ವರದಿಂದ ನಚಿಕೇತ ಜರಾಮರಣ ಚಕ್ರದಿಂದ ಬಿಡುಗಡೆಗೊಂಡು ಪರಬ್ರಹ್ಮನಲ್ಲಿ ಐಕ್ಯನಾದ. ಇದು ವೇದಾಂತದ ಭಾಗವಾದ ಕಠೋಪನಿಷತ್ತಿನಲ್ಲಿ ಬರುವ ಕಥೆ.
ಪ್ರಪಂಚ ಮಿಥ್ಯಾವಾದವನ್ನು ಸರಿಯಾಗಿ ಅರಿಯಬೇಕಾದರೆ ಶಂಕರರ ಅಧ್ಯಾಸಭಾಷ್ಯವನ್ನು ಮೊದಲು ಸರಿಯಾಗಿ ಓದಿ ತಿಳಿದುಕೊಳ್ಳಬೇಕು. ದೇವರು ಒಬ್ಬನೇ ಎಂದು ವೇದಾಂತದಲ್ಲಿ ಹಲವೆಡೆ ಹೇಳಿದೆ. ತತ್ವಮಸಿ, ಪ್ರಜ್ಞಾನಂ ಬ್ರಹ್ಮ ಇತ್ಯಾದಿ ಹಲವು ಉಲ್ಲೇಖಗಳು ಹಾಗೆ ತಿಳಿಸುತ್ತವೆ. ಜ್ಞಾನದ ಶುದ್ಧ ರೂಪವೇ ಬ್ರಹ್ಮ, ಅಶುದ್ಧ ರೂಪವೇ ಜೀವಾತ್ಮ! ಯಾವ ಆಕಾರವೂ, ಯಾವಗುಣವೂ, ಯಾವ ಕರ್ಮಬಂಧನವೂ ಇಲ್ಲದ, ಕ್ರಿಯಾಹೀನ ಅಥವಾ ಕರ್ಮಗಳನ್ನು ಮಾಡದ ಪರಬ್ರಹ್ಮ ಜಗತ್ತನ್ನು ಹೇಗೆ ಸೃಷ್ಟಿಸಿದ ಎಂಬ ಪ್ರಶ್ನೆಯ ಉದ್ಭವ ಸಹಜ. ಅದಕ್ಕೆ ಶಂಕರರು ಅಲ್ಲಿ ಉತ್ತರವನ್ನು ಹೇಳಿದ್ದಾರೆ! ಪರಬ್ರಹ್ಮವೆಂಬುದು ಎರಡುರೂಪಗಳನ್ನು ಹೊಂದಿದೆ: ಜ್ಞಾನ ಮತ್ತು ಶಕ್ತಿ. ಇದರಲ್ಲಿ ಶಕ್ತಿ ಆತನ ಅಚ್ಛಿಕ ಭಾಗ! ಅಮೆಯೊಂದು ಬಯಸಿದಾಗ ತನ್ನ ಕವಚದ ಹೊರಗೆ ತಲೆ-ಕೈಕಾಲುಗಳನ್ನು ಚಾಚುತ್ತದೆ, ಬೇಡವಾದಾಗ ಅವುಗಳನ್ನು ಒಳಗೆ ಸೇರಿಸಿಕೊಳ್ಳುತ್ತದೆ[ಆಮೆಗೆ ಅದು ರಕ್ಷಣಾ ಕವಚ, ಪರಬ್ರಹ್ಮನಲ್ಲಿ ಅದು ಹಾಗಲ್ಲ-ಇದು ನಾನು ಕೊಟ್ಟ, ತೀರಾ ಲೌಕಿಕ ಉದಾಹರಣೆ]ಹೇಗೋ ಹಾಗೆಯೇ ಪರಬ್ರಹ್ಮ, ಶಕ್ತಿಯ ಭಾಗವನ್ನು ಪ್ರಕಟಪಡಿಸಿ, ಅದರಿಂದ ಮಾಯೆಯ ಬೀಜವನ್ನು ಸೃಜಿಸಿ ಆ ಮೂಲಕ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾಗುತ್ತಾನೆ. ಜೀವಾತ್ಮಕ್ಕೆ ಅಂಟಿಕೊಳ್ಳುವ ಕರ್ಮಬಂಧನಗಳ ವ್ಯಾಪ್ತಿಗೆ ಆತ ನಿಲುಕುವುದಿಲ್ಲ. ಯಾವಾಗ ಆತ ಶಕ್ತಿಮುಖವನ್ನು ತೆರೆಯುತ್ತಾನೆ ಎಂಬುದನ್ನು ಹೇಳಲಾಗುವುದಿಲ್ಲ. ಶಕ್ತಿಮುಖ ಇರುವಾಗಲೂ ಇಲ್ಲದಾಗಲೂ ಆತಮಾತ್ರ ಜ್ಞಾನಮಯ, ಆನಂದಮಯ.
ಅಧ್ಯಾಸ ಎಂದರೆ ಅಜ್ಞಾನ ಎಂದರ್ಥ. ನಾವು ಎಷ್ಟೆಲ್ಲಾ ಓದಿಕೊಂಡಿದ್ದೇವೆ ಎಂದರೂ ಪರಮಾತ್ಮನ ಪೂರ್ಣಜ್ಞಾನ ನಮಗೆ ಇರುವುದಿಲ್ಲ. ಪರಮಾತ್ಮನೇ ಈ ಜಗತ್ತು ಎಂಬುದೂ ಕೂಡ ಸರಿಯಲ್ಲ. ಅದು ಅಧ್ಯಾಸವೇ! ನಮ್ಮ ಶರೀರ ಜಡ ಮತ್ತು ಆತ್ಮ ಚೇತನ, ಅದರಂತೇ ಈ ಜಗತ್ತು ಜಡ ಮತ್ತು ಪರಮಾತ್ಮ ಅದರಲ್ಲಿ ಸೇರಿಕೊಳ್ಳುವ ಚೇತನ. ವಿದ್ಯುತ್ತು ಪ್ರವಹಿಸಿದಾಗ ಯಂತ್ರ ಕ್ರಿಯಾಶೀಲವಾಗುತ್ತದೆ. ಯಂತ್ರ ಕೆಟ್ಟುನಿಂತಾಗ ಹರಿಯುತ್ತಿರುವ ವಿದ್ಯುತ್ತಿನ ದೋಷ ಅದಾಗಿರುವುದಿಲ್ಲ ಅಲ್ಲವೇ?[ಇದು ಕೂಡ ಕೇವಲ ಹೋಲಿಕೆ, ಸಮರ್ಪಕ ಉದಾಹರಣೆಯಲ್ಲ] ಅದೇ ರೀತಿ ಆತ್ಮ ಹೊರಟುಹೋದಾಗ ಶರೀರ ಶವವೆನಿಸುತ್ತದೆ, ಪರಮಾತ್ಮ ಹೊರಟುನಿಂತಾಗ ಜಗತ್ತು ಪ್ರಳಯದಲ್ಲಿ ಸಮಾಪ್ತವಾಗುತ್ತದೆ! ಪರಿಸಮಾಪ್ತಿಗೊಂಡ ಜಗತ್ತನ್ನು ಆತನ ಶಕ್ತಿಮುಖ ಮತ್ತೆ ಸೃಜಿಸುತ್ತದೆ, ತನ್ನಲ್ಲಿ ವಿಲೀನವಾಗಿರದೇ ತಾನೇ ಮಾಯೆಯಿಂದ ಸೃಜಿಸಿದ ಲೋಕಾಂತರಗಳಲ್ಲಿ ಇರುವ ಆತ್ಮಗಳನ್ನು ಆತ ಮತ್ತೆ ಈ ಜಗದಲ್ಲಿ ಪುನರಪಿ ಜೀವಾತ್ಮಗಳಾಗಿ ತೇಲಿಬಿಡುತ್ತಾನೆ. ಈ ಕುರಿತು ಉಂಟಾಗುವ ಜ್ಞಾನವೇ ನಿಜವಾದ ಜ್ಞಾನವಾಗುತ್ತದೆ, ಮಿಕ್ಕಿದ್ದೆಲ್ಲಾ ಲೌಕಿಕ ವ್ಯಾವಹಾರಿಕ ಜ್ಞಾನವಾಗುತ್ತದೆಯೇ ಹೊರತು ವೇದಾಂತದ ದೃಷ್ಟಿಯಿಂದ ಅದು ಅಧ್ಯಾಸ. ಈ ಜಗತ್ತಿನಲ್ಲಿ ಪುರುಷ ಮತ್ತು ದೈವಗಳ ಅಂತರವಿಷ್ಟೇ: ದೈವತ ಎನ್ನುವ ನಿಷ್ಕಾಮ್ಯ[ಪ್ರತಿಫಲರಹಿತ]ಕರ್ಮವನ್ನು ದೇವರು ನಡೆಸುತ್ತಾನೆ. ಉದಾ: ಸೂರ್ಯ ಬೆಳಗುವುದು, ಸಮುದ್ರದ ನೀರು ಆವಿಯಾಗಿ ಮಳೆಯಾಗುವುದು, ಗಾಳಿಬೀಸುವುದು, ಭೂಮಿಯಲ್ಲಿ ಬಿತ್ತಿದ ಬೀಜಗಳು ಫಲಗಳನ್ನು ಕೊಡುವುದು. ಪೌರುಷ ಎನ್ನುವ ಕರ್ಮಗಳು ಪುರುಷ ಅಥವಾ ಮನುಷ್ಯ ಪ್ರಯತ್ನದಿಂದ ಆಗುವಂಥದ್ದು-ಅದು ಕಾಮ್ಯಕರ್ಮವಾಗಿರುತ್ತದೆ. ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸುವುದು, ಕಚ್ಚಾವಸ್ತುಗಳಿಂದ ವಸ್ತುಗಳನ್ನೂ, ಯಂತ್ರೋಪಕರಣಗಳನ್ನೂ ತಯಾರಿಸಿಕೊಳ್ಳುವುದು, ಸಂಶೋಧನೆ ನಡೆಸಿ ಯಾವುದೋ ಸಮಸ್ಯೆಗೆ ಪರಿಹಾರೋಪಾಯ ಕಂಡುಕೊಳ್ಳುವುದು--ಇಲ್ಲೆಲ್ಲಾ ಪ್ರತಿಫಲ ಬಯಸಿ ಮನುಷ್ಯ ಕೆಲಸಮಾಡುತ್ತಾನೆ. ಪೌರುಷಕ್ಕೆ ದೈವತದ ಸಹಾಯಬೇಕು; ಸೂರ್ಯ ಬೆಳಗದೇ ದಿನಮಾನ ಸಾಧ್ಯವಿಲ್ಲ, ಕಚ್ಚಾವಸ್ತುಗಳಿಲ್ಲದೇ ಮುಂದಿನ ತಯಾರಿಕೆ ಸಾಧ್ಯವಿಲ್ಲ.
ಏನೇನೂ ಅರಿಯದ ಎಡಪಂಥೀಯ ಜನ ಮಾಧ್ಯಮಗಳಲ್ಲಿ ಕೂತು ಬಡಬಡಾಯಿಸುತ್ತಾ ವೇದವಿದ್ವಾಂಸರ ವಿರುದ್ಧ ಕೆಂಡಕಾರುವುದನ್ನು ನೋಡಿದರೆ ಪಾಪ ಎನ್ನಿಸುತ್ತದೆ; ತಿನ್ನುವುದಕ್ಕಾಗಿಯೇ ಹುಟ್ಟಿದ್ದರೆ ಅದನ್ನೇ ಮಾಡುತ್ತಾರೆಯೇ ವಿನಃ ಮತ್ತೇನನ್ನೂ ಅವರು ಯೋಚಿಸುವ ಗೋಜಿಗೂ ಹೋಗುವುದಿಲ್ಲ. ’ಅಥಾತೋ ಬ್ರಹ್ಮ ಜಿಜ್ಞಾಸ’ ಎಂಬ ಸಮಯದಲ್ಲಿ ಬ್ರಹ್ಮಜಿಜ್ಞಾಸೆಗೆ ಅಧಿಕಾರ ಯಾರಿಗೆ ಎಂಬುದನ್ನೂ ಆಚಾರ್ಯರು ಹೇಳುತ್ತಾರೆ[ಪ್ರಾಯಶಃ ಇಂಥವರನ್ನು ನೋಡಿಯೇ ಆಚಾರ್ಯರು ಹೇಳಿರಬೇಕು]: ೧. ನಿತ್ಯಾನಿತ್ಯ ವಿವೇಕ, ೨. ಇಹಾ ಅಮುತ್ರ ಫಲಭೋಗ ವಿರಾಗ, ೩. ಶಮದಮಾದಿ ಸಂಪತ್ತಿ, ೪. ಮುಮುಕ್ಷುತ್ವ ಇವುಗಳ ಬಗ್ಗೆ ಸ್ಥೂಲವಾಗಿ ತಿಳಿಯೋಣ:
೧. ನಿತ್ಯಾನಿತ್ಯ ವಿವೇಕ: ಈ ಲೋಕದಲ್ಲಿ ನಿತ್ಯ[ಸತ್ಯ-ಶಾಶ್ವತ]ವಾದ ಮತ್ತು ಅನಿತ್ಯವಾದ ಪದಾರ್ಥವು ಯಾವುದೆಂಬುದನ್ನು ತಿಳಿದು ನಾವು ನಿತ್ಯದ ಪ್ರಾಪ್ತಿಗೆ ಮನಸ್ಸನ್ನು ಒಲಿಸಿಕೊಳ್ಳಬೇಕು. ಶರೀರ-ಆತ್ಮಗಳಲ್ಲಿ: ಶರೀರ ಅನಿತ್ಯ, ಆತ್ಮ ನಿತ್ಯ. ಬ್ರಹ್ಮ ಮತ್ತು ಜಗತ್ತಿನಲ್ಲಿ: ಬ್ರಹ್ಮ ನಿತ್ಯ ಜಗತ್ತು ಅನಿತ್ಯ. ಜ್ಞಾನ ಮತ್ತು ವಸ್ತುವಿನಲ್ಲಿ: ಜ್ಞಾನ ನಿತ್ಯ, ವಸ್ತು ಅನಿತ್ಯ. ಅಂದರೆ ಬ್ರಹ್ಮ, ಜ್ಞಾನ, ಜೀವಾತ್ಮ ಇವುಗಳು ನಿತ್ಯ, ಇತರೆ ಎಲ್ಲವೂ ಅನಿತ್ಯ ಎಂದಾಯ್ತು! ಇದರ ಹೊಳವೇ ಇಲ್ಲದಿರುವುದೇ ಅವಿದ್ಯೆ.
೨. ಇಹಾ ಅಮುತ್ರ ಫಲಭೋಗ ವಿರಾಗ : ಈ ಲೋಕದ ಫಲಗಳು, ಅನೇಕ ಸುಖಸಾಧನಗಳು ಇವುಗಳಲ್ಲಿ ಆಸಕ್ತಿ ಇರುವ ಜನರಿಗೆ ಬ್ರಹ್ಮಜ್ಞಾನವು ಬರುವುದಿಲ್ಲ! ಯಜ್ಞಯಾಗಾದಿ ಕರ್ಮಗಳಿಂದ ಫಲಾಪೇಕ್ಷಿಯಾಗಿ ಇಷ್ಟಪಟ್ಟು ನಿರಂತರ ಅಂತಹ ಕರ್ಮಗಳನ್ನು ಮಾಡಿದರೂ ಸಹ ಬ್ರಹ್ಮಜ್ಞಾನ ಬರುವುದಿಲ್ಲ! ಅನಿತ್ಯವಾದ ಅಶಾಶ್ವತವಾದ ಫಲಬೇಡ, ನಿತ್ಯವೂ ಮತ್ತು ಶಾಶ್ವತವೂ ಅದ ಫಲಬೇಕು ಎಂಬ ಬಯಕೆ ಅಮುತ್ರವೆನಿಸಿದೆ. ಆದರೆ ಲೌಕಿಕವಾಗಿ, ಲೋಕಾಂತರವಾಗಿ ದೊರೆಯಬಹುದಾದ ಫಲಗಳನ್ನು ತ್ಯಜಿಸುವ ವೈರಾಗ್ಯ ಇರಬೇಕು.
ಇಲ್ಲೇ ಒಂದು ಸಣ್ಣ ಜಿಜ್ಞಾಸೆ ಇರುತ್ತದೆ: ಜೀವಾತ್ಮ ದೇಹವನ್ನು ತ್ಯಜಿಸಿ ಹೊರಟಮೇಲೆ ಆತನಿಗೆ ಲಿಂಗಶರೀರ ಪ್ರಾಪ್ತವಾಗಿರುತ್ತದೆ. ಆ ಲಿಂಗಶರೀರ ರೂಪ ಇಹದಲ್ಲಿ ಮಾಡಿದ ಕರ್ಮಫಲಗಳನ್ನು ಲೋಕಾಂತರದಲ್ಲಿ ಅನುಭವಿಸಿ [ ವಿಶೇಷ ಸುಕೃತಫಲವಾಗಿದ್ದರೆ ಸ್ವರ್ಗ ಸುಖ ಇತ್ಯಾದಿಗಳನ್ನು ಅನುಭವಿಸಿ] ಮತ್ತೆ ಭೂಮಿಗೆ ಮರಳುತ್ತಾನೆ. ಲಿಂಗಶರೀರವನ್ನೂ ಸಹ ಕಿತ್ತೊಗೆದ ಆತ್ಮವೇ ಕೇವಲಾತ್ಮ -ಅದು ಕೈವಲ್ಯ ಅಥವಾ ಮೋಕ್ಷವನ್ನು ಕಾಣುತ್ತದೆ-ಪರಮಾತ್ಮನಲ್ಲಿ ಲೀನವಾಗುತ್ತದೆ. ಕೆಲವರು ನಡೆಸುವ ಪುಣ್ಯಕಾರ್ಯಗಳಿಂದ, ಕೆಲಮಟ್ಟಿಗಿನ ತಪಸ್ಸಿದ್ಧಿಯಿಂದ ಅವರ ಆತ್ಮಗಳು ಲಿಂಗಶರೀರವನ್ನು ಪಡೆದು ಲೋಕಾಂತರದಲ್ಲಿ ಸ್ಥಾಪಿತವಾಗಿರಬಹುದು. ಸಮರ್ಪಕವಾಗಿ ಸಂನ್ಯಾಸ ದೀಕ್ಷೆ ಪಡೆದು ಸಾಧನಾಪಥದಲ್ಲಿ ಮುನ್ನಡೆದ ಸ್ವಾಮಿಗಳೂ ಸಹ ಲಿಂಗಶರೀರದಿಂದ ಬಿಡುಗಡೆಹೊಂದಲು ಇನ್ನೊಂದು ಸಂನ್ಯಾಸಜನ್ಮವನ್ನು ಎತ್ತಬೇಕಾಗಿ ಬರಬಹುದು. ಕೇವಲ ಸಂನ್ಯಾಸಿಯೆನಿಸಿದ ಮಾತ್ರಕ್ಕೆ ಮೋಕ್ಷಪ್ರಾಪ್ತವಾಗುತ್ತದೆ ಎಂಬುದು ಸುಳ್ಳು. ಶರೀರ, ಲಿಂಗಶರೀರಗಳನ್ನು ಮೊಬೈಲಿಗೆ ಹೋಲಿಸಿದರೆ ದೇಹ ಹ್ಯಾಂಡ್ ಸೆಟ್ ಎನಿಸುತ್ತದೆ, ಸಿಮ್ಮು ಜೀವಾತ್ಮವೆನಿಸುತ್ತದೆ. ಸಿಮ್ಮು ಹ್ಯಾಂಡ್ ಸೆಟ್ ನಿಂದ ಹೊರತೆಗೆಯಲ್ಪಟ್ಟರೂ ಅದಕ್ಕೊಂದು ಅಸ್ಥಿತ್ವ ಇರುತ್ತದೆ! ಸಿಮ್ಮಿಲ್ಲದ ಹ್ಯಾಂಡ್ ಸೆಟ್ ಕೆಲಸಮಾಡದು. ಸಿಮ್ಮನ್ನು ಬೇರೇ ನೂತನ ಹ್ಯಾಂಡ್ ಸೆಟ್ ಗೆ ಹಾಕಿದಮೇಲೆ ಅದು ಹೊಸಮೊಬೈಲ್ ಆಗುತ್ತದೆ! ಸಿಮ್ಮಿನ ಸಂಬಂಧೀ ಆರ್ಥಿಕ ಲೆಕ್ಕಾಚಾರ ವ್ಯವಹಾರವನ್ನು ತತ್ಸಂಬಂಧೀ ಒಡಂಬಡಿಕೆಯಿರುವ/ಪೂರೈಸಿದ ಜನ ನೋಡಿಕೊಳ್ಳುತ್ತಾರೆ, ಸಿಮ್ಮನ್ನು ಬಳಸಿ ಇಲ್ಲಸಲ್ಲದ ಕೆಟ್ಟಕರೆಗಳನ್ನೋ ದುರುಪಯೋಗವನ್ನೋ ಮಾಡಿದ್ದರೆ ಪೋಲೀಸರು ನೋಡಿಕೊಳ್ಳುತ್ತಾರೆ, ಸಿಮ್ಮಿನ ಸಹಾಯದಿಂದ ನಾವು ಎಲ್ಲರೊಟ್ಟಿಗೆ ಸಂವಹಿಸುತ್ತೇವೆ. ಒಂದೊಮ್ಮೆ ಸಿಮ್ಮನ್ನು ಬೇಡವೆಂದು ಬಿಸುಟರೂ ಸಿಮ್ಮಿನ ದಾಖಲೆಗಳು ಹೋಗುವುದಿಲ್ಲ! ಸಿಮ್ಮನ್ನು ಬೇಡಾ ಎಂದು ಸಂಬಂಧಿಸಿದ ಕಂಪನಿಗೆ ಸರ್ರೆಂಡರ್ ಮಾಡಿಬಿಟ್ಟರೆ ಅಲ್ಲಿಗೆ ಬಾಧೆ ಮುಗಿಯುತ್ತದೆ. ವಾಸ್ತವವಾಗಿ ಇಂತಹ ಹೋಲಿಕೆಗಳನ್ನು ಕೊಡುವುದು ಸಮಂಜಸವಲ್ಲ, ಆದರೂ ಸುಲಭವಾಗಿ ಅರಿಯಲು ಇದೊಂದು ಪ್ರಯತ್ನವಷ್ಟೇ.
೩. ಶಮದಮಾದಿ ಸಂಪತ್ತಿ: ಮನುಷ್ಯನ ಮನಸ್ಸು ಶಾಂತವಾಗಿರಬೇಕು, ಇಂದ್ರಿಯಗಳ ನಿಗ್ರಹವಿರಬೇಕು, ನಮ್ಮ ಶರೀರದ ಆರೋಗ್ಯಕ್ಕೂ ಬೇರೇ ಕೆಲಸಗಳಿಗೂ ಮನಸ್ಸಿನ ದೃಢತೆಯೇ ಕಾರಣವಾಗಿರುತ್ತದೆ. ಮನಸ್ಸನಮೇಲೆ ನಾವು ಆರೂಢರಾಗಬೇಕು. ಮನಸ್ಸು ಪಕ್ವವಾಗದಿದ್ದರೆ ಆರೂರುಕ್ಷುವಾಗುತ್ತೇವೆ.
ಆರೂರುಕ್ಷೋರ್ಮುನೇರ್ಯೋಗಂ ಕರ್ಮಕಾರಣ ಮುಚ್ಯತೇ |
ಯೋಗಾರೂಢಸ್ಯ ತಸ್ಯೈವ ಶಮಃ ಕಾರಣ ಮುಚ್ಯತೇ ||
----ಗೀತೆ [ಹೀಗೆ ಹೇಳಿದೆ]
೪. ಮುಮುಕ್ಷುತ್ವ : ಮೋಕ್ಷದಲ್ಲಿ ನಂಬಿಕೆಯಿರಬೇಕು. ತನಗೆ ಮೋಕ್ಷವಾಗುವುದೆಂಬುದರಲ್ಲಿ ಸಂದೇಹವಿರಬಾರದು. ಈ ಶರೀರವನ್ನು ಬಿಟ್ಟುಹೋದಮೇಲೆ ಮತ್ತೆ ಜರಾಮರಣ ಚಕ್ರದಲ್ಲಿ ಸುತ್ತುವುದನ್ನು ತಪ್ಪಿಸಿಕೊಳ್ಳುವ ಇಚ್ಛೆ ಅತೀವವಾಗಿರಬೇಕು. ಕರ್ಮಗಳಿಂದ ವಿಮುಕ್ತನಾದಾಗ ಮೋಕ್ಷವನ್ನು ಪಡೆಯಲು ಸಾಧ್ಯ ಎಂಬ ಶ್ರದ್ಧಾವಿಶೇಷವಿರಬೇಕು. ಆ ಮೋಕ್ಷಕ್ಕಾಗಿ ಸದಾ ಪ್ರಯತ್ನಿಸಬೇಕು. ಮೋಕ್ಷವೊಂದನ್ನುಳಿದು ಇನ್ನೇನನ್ನೂ ಅಪೇಕ್ಷಿಸಬಾರದು. ಈ ಲೋಕಕ್ಕೆ ತನ್ನಿಂದಾಗಬಹುದಾದ ಶ್ರೇಯಸ್ಸನ್ನು ಒದಗಿಸಿಕೊಡುವಲ್ಲಿ ಚಿಂತನೆ ನಡೆಸುತ್ತಾ ಅದ್ವೈತವನ್ನು ಅನುಭವಿಸಬೇಕು.
ಎಲ್ಲಿಯವರೆಗೆ ನಾವು ಮೂರ್ತಿ ಪೂಜೆಯನ್ನು ಮಾಡುತ್ತೇವೋ ಅಲ್ಲೀವರೆಗೂ ದೇವರು ಬೇರೇ ನಾವು ಬೇರೇ ಎಂದೇ ಅರ್ಥ! ನಾವು ಅವನಲ್ಲಿ ಒಂದಾದಾಗ ಅದು ಅ-ದ್ವೈತವಾಗುತ್ತದೆ; ದ್ವೈತರಹಿತವಾಗುತ್ತದೆ! ಹಾಗಾದರೆ ಅದ್ವೈತದ ಸನ್ಯಾಸಿಗಳೂ ಸಾಧುಸಂತರೂ ಸಹ ಪೂಜೆ-ಪುನಸ್ಕಾರಗಳನ್ನು ಮಾಡುತ್ತಾರಲ್ಲಾ ಎಂದಿರೋ ? -ಅದು ಕೇವಲ ಲೋಕಹಿತಾರ್ಥವಾಗಿ ಮಾತ್ರ. ಸ್ವಹಿತಾರ್ಥವಾಗಿ ಅವರು ಯಾವ ಕರ್ಮವನ್ನೂ ಮಾಡುವ ಅಧಿಕಾರವನ್ನು ಹೊಂದಿರುವುದಿಲ್ಲ! ಪೂಜೆ ಕೂಡ ಕರ್ಮವೇ ಆಗುವುದರಿಂದ ಇಲ್ಲಿ ಹೇಳುತ್ತಿದ್ದೇನೆ: ಪೂಜೆಯನ್ನು ಮಾಡುವುದು ಶಿಷ್ಯಂದಿರಿಗೆ ಮಾರ್ಗಸೂಚಿಸುವ ಸಲುವಾಗಿ, ಏಕಾಗ್ರತೆ ಹುಟ್ಟದ ಜನರನ್ನು ಸಾಧನಾಪಥದೆಡೆಗೆ ಸೆಳೆಯುವ ಸಲುವಾಗಿ. ಅದ್ವೈತವನ್ನು ಸಾರುವ ಅವರೇ ದೇವರೆಂದು ಪ್ರತ್ಯೇಕ ಗುರುತಿಸಲ್ಪಟ್ಟ ವಿಗ್ರಹಗಳಿಗೆ ಪೂಜೆಮಾಡಿದ ನಂತರ ನಮಸ್ಕರಿಸುವಾಗ ಸಾಮಾನ್ಯವಾಗಿ ಅದನ್ನು ನೋಡಬಾರದು ಎಂದಿದೆ; ಯಾಕೆಂದರೆ ಅಲ್ಲಿ ದ್ವೈತಭಾವ ಬರುತ್ತದಲ್ಲಾ ಎಂಬ ಕಾರಣಕ್ಕಾಗಿ. ಶಂಕರರು ಭಕ್ತಿಮಾರ್ಗವನ್ನು ಪುರಸ್ಕರಿಸಲಿಲ್ಲ, ಯಾಕೆಂದರೆ ಅದು ಜ್ಞಾನಕ್ಕೆ ಹೇಳಿದ ಮಾರ್ಗವಲ್ಲ. ಜ್ಞಾನವೇ ಬ್ರಹ್ಮ ಎನ್ನುತ್ತದೆ ವೇದ! ಹಾಗೆ ಜ್ಞಾನಮಯವಾದುದನ್ನು ಹುಡುಕಿ ಹೊರಟವರು ಶಂಕರರು. ಅದಕ್ಕೆಂದೇ ಸಿಕ್ಕಸಿಕ್ಕವರಿಗೆಲ್ಲಾ ದೀಕ್ಷೆಕೊಟ್ಟು ಸನ್ಯಾಸಿಗಳನ್ನಾಗಿಸುವ ಪರಿಪಾಠ ಅದ್ವೈತ ಸಿದ್ಧಾಂತದಲ್ಲಿ ಇರುವುದಿಲ್ಲ.
ಸಂನ್ಯಾಸಿಗಳಾಗಲೂ ಕೂಡ ಹಲವು ಕಠಿಣತಮ ಪರೀಕ್ಷೆಗಳಿವೆ, ಅವುಗಳಲ್ಲಿ ತೇರ್ಗಡೆಯಾದರೆಮಾತ್ರ ಆ ದೀಕ್ಷೆ ನೀಡಲಾಗುತ್ತದೆ. [ಅಲ್ಲಿ ಲಂಚ,ರುಷುವತ್ತುಗಳು ಇರುವುದಿಲ್ಲ!!] ಸಂನ್ಯಾಸಿಗಳಿಗೆ ಪೂರ್ವಾಶ್ರಮದ ನಿಕಟ ಸಂಬಂಧ ಕಡಿದುಹೋಗುತ್ತದೆ, ತಮ್ಮ ಮಠಗಳಲ್ಲಿ,ಮಠಗಳ ವ್ಯವಹಾರಗಳಲ್ಲಿ ಸಂಬಂಧಿಕರನ್ನು ಹತ್ತಿರ ಬಿಟ್ಟುಕೊಳ್ಳಬಾರದು ಎಂಬ ನಿಯಮವಿದೆ. ಆದಿಶಂಕರರೇ ಸ್ವತಃ ಅದಿಷ್ಟನ್ನೂ ಹೇಳಿಬಿಟ್ಟಿದ್ದಾರೆ. ಆಮ್ನಾಯ ಮಠಗಳಲ್ಲಿ ಉತ್ತರದವರನ್ನು ದಕ್ಷಿಣಕ್ಕೂ ದಕ್ಷಿಣದವರನ್ನು ಉತ್ತರಕ್ಕೂ ಅಲ್ಲದೇ ಪೂರ್ವದವರನ್ನು ಪಶ್ಚಿಮಕ್ಕೂ ಪಶ್ಚಿಮದವರನ್ನು ಪೂರ್ವಕ್ಕೂ ಪೀಠಾಧೀಶರನ್ನಾಗಿಸಿದ್ದರು ಯಾಕೆಂದರೆ ಸಂನ್ಯಾಸಿಗಳಿಗೆ ತನ್ನ ಪ್ರಾಂತ, ತನ್ನ ಮನೆ-ಮಠ, ತಾನು ತನ್ನದು ಎಂಬ ವ್ಯಾಮೋಹ ನಿಶ್ಶೇಷವಾಗಿಬಿಡಬೇಕು ಎಂಬುದು ಅವರ ಇರಾದೆಯಾಗಿತ್ತು. ಸಂನ್ಯಾಸಿಗಳು ಮಠದಲ್ಲೇ ಇರಬೇಕೆಂಬುದೇನೂ ಇಲ್ಲ, ಸಂನ್ಯಾಸದ ಹಲವುವಿಧಗಳಲ್ಲಿ ಯೋಗ ಸಂನ್ಯಾಸವೂ ಒಂದು-ಅಲ್ಲಿ ಲೌಕಿಕ ವ್ಯವಹಾರವೆಂಬುದರ ಅಗತ್ಯತೆ ಉಂಟಾಗುವುದೇ ಇಲ್ಲ-ಇವತ್ತಿಗೂ ಹಿಮಾಲಯದಲ್ಲಿ ಇಂಥಾ ಯೋಗಿಗಳು ನೆಲೆಸಿದ್ದಾರೆ! Somthing thrown upwards will fell down in few seceonds because of the gravitational force as we know. We use rockets to reach the space, which can't be pulled down by this gravitation force! Once after we reach the space we can be there for as long as we are prepared, similarly to comeout out of the birth-death cycle we must use our Atma as a rocket, [where 'linga shareera' is gravitational force pulling us into the same cycle.] To empower the rocket before its launch, we must fill that rocket with the fuel called 'jjnaana' using 'vairaagya', once launched it must reach to the space called 'paramaatma' where we remain forever!
ಈ ಅರ್ಹತೆಗಳು ನಮ್ಮಲ್ಲಿದ್ದರೆ ನಾವು ಬ್ರಹ್ಮಸೂತ್ರದ ಪೂರ್ಣಪಾಠವನ್ನು ಸಮರ್ಪಕವಾಗಿ ಅರಿಯಲು ಸಾಧ್ಯ ಎಂಬುದಾಗಿ ಆಚಾರ್ಯರು[ಆಚರಿಸಿ ತೋರಿಸುವವರನ್ನು ಆಚಾರ್ಯರು ಎನ್ನುತೇವೆ] ತಿಳಿಸಿದ್ದಾರೆ. ಹೀಗೇ ಆಯಾಯ ಓದಿನ ಮಟ್ಟಕ್ಕೆ, ಬೆಳವಣಿಗೆಗೆ ಕೆಲವು ಅಧಿಕಾರಗಳು ಬೇಕಾಗುತ್ತವೆ. ಅಧಿಕಾರವಿಲ್ಲದೇ ಮುನ್ನುಗ್ಗಿದರೆ ಅಪಾರ್ಥವನ್ನು ಕಲ್ಪಿಸಿಕೊಳ್ಳುವ ನಮಗೆ ಇದ್ದಿದ್ದೂ ಅಧ್ವಾನವಾಗಿ ನಾವು ಭ್ರಷ್ಟರಾಗುತ್ತೇವೆ, ಎಡಪಂಥೀಯರಾಗುತ್ತೇವೆ.
ಹುಚ್ಚನೊಬ್ಬನ ತಲೆಯಲ್ಲಿರುವ ವಿಷಯವನ್ನು ಪರಿಪೂರ್ಣವಾಗಿ ಬದಲಾಯಿಸಲು ನಾವು ಶಕ್ತರಲ್ಲ, ಎಷ್ಟೇ ಯತ್ನಿಸಿದರೂ ಹೋದ ಜೀವವನ್ನು ಮರಳಿ ತರಲು ನಮ್ಮಿಂದ ಸಾಧ್ಯವಿಲ್ಲ, ಪಂಚಭೂತಗಳಾದ ಆಕಾಶ-ಭೂಮಿ-ವಾಯು-ಅಗ್ನಿ-ನೀರು ಇವುಗಳನ್ನು ನಾವು ಸೃಷ್ಟಿಸಲು ಸಾಧ್ಯವಿಲ್ಲ ಮತ್ತು ಅವುಗಳ ಸೃಷ್ಟಿ ಹೇಗಾಯ್ತೆಂಬ ಮಾಹಿತಿ ನಮ್ಮಲ್ಲಿಲ್ಲ[ಮೊಂಡು ವಾದ ಮಾಡುವವರು ಕ್ಷಮಿಸಿ], ಸೂರ್ಯ-ಚಂದ್ರ-ಗ್ರಹ-ತಾರೆಗಳ ದಿಕ್ಕು-ದೆಸೆ ನಿಯಂತ್ರಣ ನಮ್ಮ ಕೈಲಿಲ್ಲ. ಬೆಟ್ಟ, ಗುಡ್ಡ, ನದಿ, ಸರೋವರ, ಕಾಡು ಇವುಗಳನ್ನು ದೈವತ ರೂಪಿಸಿದಂತೇ ರೂಪಿಸಲು ನಮ್ಮಿಂದ ಆಗುವುದಿಲ್ಲ, ವಿಜ್ಞಾನದ ನಮ್ಮೆಲ್ಲಾ ಸಂಶೋಧನೆಗಳಿಗೂ ಮೂಲವಸ್ತು ದೈವತದ ಕೊಡುಗೆಯೇ-ನಮ್ಮದಲ್ಲ ಎಂದಾಗ ನಮ್ಮ ಜ್ಞಾನಕ್ಕೆ ಮಿತಿಯಿದೆ. ಜನ್ಮಜಾತವಾಗಿ ಬಂದ ನಮ್ಮ ಜ್ಞಾನ ಸೀಮಿತವಾಗಿದೆ, ಬ್ರಹ್ಮವೆಂಬ ಜ್ಞಾನ ಅಪರಿಮಿತವಾಗಿದೆ. ಬ್ರಹ್ಮ ಎಂದರೆ ಶಿವ-ವಿಷ್ಣು-ಬ್ರಹ್ಮ ಈ ಸಾಲಿಗೆ ಸೇರ್ರಿದ ಬ್ರಹ್ಮನಲ್ಲ, ಎಲ್ಲಕ್ಕೂ ಮೂಲವಾದ ಪರಬ್ರಹ್ಮನೇ ಆಗಿದ್ದಾನೆ. ಪರಬ್ರಹ್ಮನ ಪರಮಾತ್ಮನ ತುಣುಕೊಂದು ಆತ್ಮವಾಗಿ-ಜೀವಾತ್ಮವಾಗಿ ದೇಹವನ್ನು ಪಡೆಯುತ್ತದೆ, ಕರ್ಮಬಂಧನಕ್ಕೊಳಪಟ್ಟು ಜರಾಮರಣ ಚಕ್ರದಲ್ಲಿ ಸುತ್ತತ್ತದೆ-ಮೂಲದ ಅರಿವಿಲ್ಲದೇ. ಆತ್ಮಶಕ್ತಿ ದೇಹವನ್ನು ಆಶ್ರಯಿಸಿದಾಗ ಅದಕ್ಕೆ ಮಾಯೆ ಮುಸುಕುತ್ತದೆ; ಕರ್ಮಬಂಧನಗಳಿಂದ ಶಕ್ತಿ ಪ್ರಕಟಗೊಳ್ಳಲಾಗದೇ ಕುಗ್ಗುತ್ತದೆ. ಬಂಧಿಯಾದ ಆತ್ಮ ಬಿಡುಗಡೆ ಬಯಸಿದರೆ ಅದಕ್ಕೆ ಅವಕಾಶ ಸಿಗುತ್ತದೆ, ಆ ಅವಕಾಶ ಪ್ರಾಪ್ತವಾಗಲು ಕೆಲವು ನಿಯಮಗಳು ಹೇಳಲ್ಪಟ್ಟಿವೆ. ಒಂದೇ ಜನ್ಮದಲ್ಲಿ ಆಗದಿದ್ದರೂ ಜನ್ಮಾಂತರಗಳಲ್ಲಿ ಮುಮುಕ್ಷುತ್ವವನ್ನು ಸಾಧಿಸಿಕೊಂಡು ಮೋಕ್ಷ[ಮೋಹ ಕ್ಷಯ]ವನ್ನು ಪಡೆಯಬಹುದಾಗಿದೆ; ಪೂರ್ತಿಯಾಗಿ ಮೋಹಕ್ಷಯಗೊಂಡ ಮೇಲೆ ಪರಮಾತ್ಮನೇ ನಾವಾಗಬಹುದಾಗಿದೆ! -ಆದರೆ ಅದಕ್ಕೆ ಅಚಲ ನಿರ್ಧಾರಬೇಕು, ಸಾಧನೆ ಬೇಕು. ಎಲ್ಲಿಯವರೆಗೆ ದ್ವೈತವನ್ನು ಕಾಣುತ್ತೇವೋ ಅಲ್ಲೀವರೆಗೂ ನಾವು ಪರಮಾತ್ಮನಲ್ಲಿ ಲೀನವಾಗಲು ಸಾಧ್ಯವಿಲ್ಲ, ಅ-ದ್ವೈತವಾಗುವುದಿಲ್ಲ!!
ಅಥರ್ವವೇದದಲ್ಲಿ ಬರುವ ಗಣಪತಿ ಉಪನಿಷತ್ತು ಪರಬ್ರಹ್ಮನನ್ನೇ ವರ್ಣಿಸುವ ಅತ್ಯಂತ ಶ್ರೇಷ್ಠ ಮಂತ್ರ ಎಂಬುದು ನನ್ನ ಅನುಭೂತಿ. ಗಣಪತಿ ಅಥವಾ ಗಣೇಶ ಎಂದರೆ ಶಿವ-ಪಾರ್ವತಿಯರ ಪುತ್ರ ಎಂದಷ್ಟೇ ನಾವು ತಿಳಿದುಕೊಂಡಿದ್ದೇವೆ. ಗಣಗಳಿಗೆ ಒಡೆಯ ಗಣಪತಿಯಾಗುತ್ತಾನೆ! ಈ ಜಗತ್ತಿನಲ್ಲಿ ಇರುವ ಎಲ್ಲಾ ಗಣಗಳಿಗೂ ಒಡೆಯ ಗಣಪತಿಯೇರ್ ಸರಿ; ಆತ ಪರಬ್ರಹ್ಮನೇ ಸರಿ. ಹೋಮ-ಹವನ-ಯಜ್ಞ-ಯಾಗಾದಿಗಳಲ್ಲಿ ಬ್ರಹ್ಮನಿಗೆ ಹವಿಸ್ಸನ್ನು ಸಮರ್ಪಿಸುವುದಿಲ್ಲ. ಆದರೆ ಅಂತಹ ಹೋಮಗಳಲ್ಲಿ ಬ್ರಹ್ಮಸ್ಥಾನವೆಂಬ ಜಾಗದಲ್ಲಿ ಗೌರವದಿಂದ ಬ್ರಹ್ಮನನ್ನು ಕಲ್ಪಿಸಿಕೊಂಡು, ಆಚಾರವಂತ ಬ್ರಾಹ್ಮಣ ಪುರೋಹಿತನೊಬ್ಬನನ್ನು ಕೂರಿಸಲಾಗುತ್ತದೆ! ಬ್ರಹ್ಮನ ಸಮ್ಮುಖದಲ್ಲಿ ದೇವತೆಗಳಿಗೆ ಹವಿಸ್ಸು[ಹೋಮಕ್ಕೆ ಹಾಕುವ ಸಾಮಗ್ರಿ] ಸಮರ್ಪಿಸಲಾಗುತ್ತದೆ."ಬ್ರಹ್ಮಣೇಸ್ವಾಹಾ" ಎಂಬ ಉಕ್ತಿ ಕೇಳಿಬರುವುದಿಲ್ಲ, ಒಂದೊಮ್ಮೆ ಅಪರೂಪದಲ್ಲಿ ಬಂದರೂ ಅದು ಪರಬ್ರಹ್ಮನ ಕುರಿತಾದದ್ದಲ್ಲ; ಅಜ-ಹರಿ-ಹರರ ಸಾಲಿಬಲ್ಲಿರುವ ಬ್ರಹ್ಮನ ಕುರಿತಾದದ್ದು.
ಓಂ ನಮಸ್ತೇ ಗಣಪತಯೇ |
ತ್ವಮೇವ ಪ್ರತ್ಯಕ್ಷಂ ತತ್ವಮಸಿ| ತ್ವಮೇವ ಕೇವಲಂ ಕರ್ತಾಸಿ| ತ್ವಮೇವ ಕೇವಲಂ ಧರ್ತಾಸಿ| ತ್ವಮೇವ ಕೇವಲಂ ಹರ್ತಾಸಿ| ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ | ತ್ವಂ ಸಾಕ್ಷಾದಾತ್ಮಾಸಿ ನಿತ್ಯಮ್|
ಓಂ ಎಂದು ಆತನನ್ನು ಸಂಬೋಧಿಸಿ, ನೀನೇ ತತ್ವಮಸಿ, ನೀನೇ ಕರ್ತಾ, ಧರ್ತಾ, ಹರ್ತಾ ಮತ್ತು ನಮ್ಮ ಆತ್ಮವೇ ನೀನು ಎಂಬುದನ್ನು ಗಣಪತ್ಯಥರ್ವಶೀರ್ಷದಲ್ಲಿ ಕಾಣುತ್ತೇವೆ.
ಮುಂದೆ ಹೋಗುತ್ತಾ
ತ್ವಂ ಗುಣತ್ರಯಾತೀತಃ| ತ್ವಂ ದೇಹತ್ರಯಾತೀತಃ| ತ್ವಂ ಕಾಲತ್ರಯಾತೀತಃ| ತ್ವಮವಸ್ಥಾತ್ರಯಾತೀತಃ| ತ್ವಂ ಮೂಲಾಧಾರಾಸ್ಥಿತೋಸಿ ನಿತ್ಯಮ್| ತ್ವಂ ಶಕ್ತಿತ್ರಯಾತ್ಮಕಃ| ತ್ವಾಂ ಯೋಗಿನೋ ಧ್ಯಾಯಂತಿ ನಿತ್ಯಮ್|
ಎಂದು ಹೇಳಲಾಗಿದೆ. ಅಲ್ಲದೇ |ತ್ವಂ ಜ್ಞಾನಮಯೋ ವಿಜ್ಞಾನಮಯೋಸಿ| ಎಂದೂ ಹೇಳಲ್ಪಟ್ಟಿದೆ. ಹೀಗೇ ಯುಗಯುಗಗಳ ಪರ್ಯಟನೆಯಲ್ಲಿ ಅನಿತ್ಯವಾದ ಜಗತ್ತು ಸತ್ತು ಹುಟ್ಟುತ್ತಾ, ಮತ್ತೆ ಜೀವರ ಜೀವಸಖರಾಗಿ ಹುಟ್ಟುವ ಮುನಿಜನರ ಸಹಸ್ರಸಹಸ್ರವರ್ಷಗಳ ಶ್ರಮಕ್ಕೆ ಪರಮಾತ್ಮ ಜ್ಞಾನಧಾರೆಯನ್ನು ನೀಡುತ್ತಾನೆ. ಅಂತಹ ದೀರ್ಘತಮ research & develoment ನಡೆಸುವಾಗ ಋಷಿಗಳಿಗಾಗುವ ಅನುಭೂತಿ ಎಂಥಾದ್ದು ಎಂಬುದು ಮಿತ/ಪೀತಮನಸ್ಕರಾದ ನಮಗೆ ಹೇಳಲಸಾಧ್ಯ. ಹೇಗೆ ವಿಜ್ಞಾನದ ಕೃಷಿಗೆ ನಮ್ಮಲ್ಲಿ ಮಹತ್ವ ಇದೆಯೋ ಹಾಗೇ ಅಂದಿನಕಾಲಕ್ಕೆ ಭಗವಂತ ಋಷಿಗಳಿಗೆ ಅಂತಹ ಮಹತ್ವ ದೊರೆಯುವಂತೇ ಸಮಾಜವನ್ನು ಸಂಘಟಿಸಿದ್ದ-ಸಂಘಟಿಸಿದ್ದಾನೆ-ಸಂಘಟಿಸುತ್ತಾನೆ. Those who don't know the value of such Vedas, Shatras & Vedanta, tell evrything is baseless or menaningless; why becuase they can't understand meaning of such Vedic Hymns/Mantras. Leftists simply blame Brahmins telling "These Brahmins are chanting some shlokas & don't translate them into other languages, inorder to run their business[pooja-porohitya] to mint money from the general public & make the people foolish, if at all if they translate them, we could realise what they are telling. Beacuse of the faith & belief what our ancestors have created in our mind, we are following blindly whatever these Brahmins say." But foreigners have made better efforts to understand the meanings of Vedas/Shatras to find hidden tresures & pleasures. Leftists, before declaring anything is meaningless must try to get into the stemcell details of such immortal tresures, then only they can atleast sense a bit of aroma of Purity which is Divinity.
ನಾಲ್ಕು ವೇದಗಳು, ಹತ್ತು ಉಪನಿಷತ್ತುಗಳು, ಆರು ದರ್ಶನಗಳು, ಆರು ವೇದಾಂಗಗಳು, ಇವುಗಳನ್ನೆಲ್ಲಾ ಜನಸಾಮಾನ್ಯರು ಅರ್ಥವಿಸಿಕೊಳ್ಳಲು ಸಮಯ ವ್ಯಯಿಸುವುದು ಕಷ್ಟ ಎಂಬ ದೃಷ್ಟಿಯಿಂದಲೇ ವೇದವ್ಯಾಸರು ಮಹಾಭಾರತ ಮತ್ತು ಅದರ ಅಂಗವಾಗಿ ಭಗವದ್ಗೀತೆಯನ್ನು ಒದಗಿಸಿದ್ದಾರೆ. ಇವುಗಳನ್ನೆಲ್ಲಾ ಕಾಪಿಡಲು ಶ್ರಮಿಸಿದ, ಇವತ್ತಿಗೂ ಅವುಗಳನ್ನು ಉಪಾಸಿಸಿ, ಜನಸಂದೋಹಕ್ಕೆ ತಿಳಿಸಿಕೊಡುವ ಜನಸಮುದಾಯವನ್ನು ಎಡಪಂಥೀಯರು ವಿಚಿತ್ರಗತಿಯಲ್ಲಿ ಹೀಗಳೆಯುವುದನ್ನು ನೋಡಿದಾಗ ನಾನು ಹೇಳಬಯಸಿದ್ದು ಇಷ್ಟೇ: ಸನಾತನ ಪರಂಪರೆಯಲ್ಲಿ ಯಾರಮೇಲೂ ಯಾವುದೇ ಒತ್ತಡವಿಲ್ಲ. ಧರ್ಮಗ್ರಂಥವಾದ ಗೀತೆಯನ್ನು ನಿತ್ಯವೂ ಪಠಿಸಲೇಬೇಕೆಂಬ ಕಡ್ಡಾಯವನ್ನು ಧರ್ಮ ಹೇರಲಿಲ್ಲ! ಬೇಕಾದ್ದನ್ನು ಬೇಕಾದಾಗ ಓದಬಹುದಾಗಿದೆ, ತಿಳಿದುಕೊಳ್ಳಬಹುದಾಗಿದೆ. ಈ ಎಲ್ಲದರ ಅನುವಾದಗಳನ್ನೂ ಅರ್ಥಪುಸ್ತಿಕೆಗಳನ್ನೂ ನಿಸ್ಪೃಹರನೇಕರು ಪ್ರತಿಫಲಾಪೇಕ್ಷೆಯಿಲ್ಲದೇ ಬರೆದಿದ್ದಾರೆ. ಯಾವುದನ್ನೂ ಓದದೇ ಏಕಾಏಕಿ ಮಾಧ್ಯಮವಾಹಿನಿಗಳಲ್ಲಿ ಕುಳಿತು ವೈದಿಕ ವಿದ್ವಾಂಸರನ್ನು ಅವಹೇಳನ ಮಾಡುವುದು ಸನಾತನ ಧರ್ಮಕ್ಕೆ ಮಾಡುವ ಅಪಚಾರವಾಗುತ್ತದೆ. ಟಿ.ಆರ್.ಪಿ ರೇಟ್ ಜಾಸ್ತಿಮಾಡಿಕೊಳ್ಳುವ ಸಲುವಾಗಿ ಏನೂ ಗೊತ್ತಿಲ್ಲದ[ಎಣ್ಣೆಗುಡುಕ] ಎಡಪಂಥೀಯರನ್ನು ಆಹ್ವಾನಿಸಿ, ಜೊತೆಯಲ್ಲಿ ವೈದಿಕ ವಿದ್ವಾಂಸರನ್ನೂ ಕೂರಿಸಿ ಚರ್ಚೆ ನಡೆಸುವುದು ವಾಹಿನಿಗಳ ಸಂಪಾದಕರುಗಳಿಗೆ ಶೋಭೆತರುವ ಕೆಲಸವಲ್ಲ; ಒಂದೊಮ್ಮೆ ತೀರಾ ಅಪದ್ಧ ಪರಿಕ್ರಮಗಳು ನಡೆದರೆ ಅಂಥಾ ಸಂಪಾದಕರುಗಳ ವಿರುದ್ಧ ಸನಾತನಿಗಳನೇಕರು ಕ್ರಮ ಜರುಗಿಸುವಲ್ಲಿ ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನು ರವಾನಿಸಬಯಸುತ್ತೇನೆ.
ಅದ್ಭುತ... ಮೌಲಿಕ ಸಂಗತಿಗಳ ಬಗೆಗಿನ ತಮ್ಮ ಪ್ರೀತಿ ... ಅದನ್ನು ಹಂಚಬಯಸುವ ಮನಸ್ಸು... ಕ್ಲಿಷ್ಠ ತತ್ವಗಳನ್ನು ಸುಂದರ ಸರಳವಾಗಿ ಹೇಳಿದ ಪರಿ ... ಎಲ್ಲವೂ....
ReplyDeleteನಮ್ಮ-ನಿಮ್ಮಂಥಾ ಯುವಕರು ಇಂಥಾದ್ದನ್ನು ಓದುತ್ತಿರುವುದೇ ಖುಷಿಯ ವಿಷಯ, ಯಾಕೆಂದರೆ ಬಹುತೇಕರಿಗೆ ಮಥೆ-ಕಾದಂಬರಿ-ಕವನಗಳ ಹೊರತಾಗಿ ಇಂತಹ ವೇದಾಂತ ವಿಷಯಗಳ ಬಗೆಗೆ ಆಸಕ್ತಿಯಿಲ್ಲ. ಇಷ್ಟಪಟ್ಟು ಓದಿದ, ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು
Delete"ಜೀವಾತ್ಮ ದೇಹವನ್ನು ತ್ಯಜಿಸಿ ಹೊರಟಮೇಲೆ ಆತನಿಗೆ ಲಿಂಗಶರೀರ ಪ್ರಾಪ್ತವಾಗಿರುತ್ತದೆ. ಆ ಲಿಂಗಶರೀರ ರೂಪ ಇಹದಲ್ಲಿ ಮಾಡಿದ ಕರ್ಮಫಲಗಳನ್ನು ಲೋಕಾಂತರದಲ್ಲಿ ಅನುಭವಿಸಿ [ ವಿಶೇಷ ಸುಕೃತಫಲವಾಗಿದ್ದರೆ ಸ್ವರ್ಗ ಸುಖ ಇತ್ಯಾದಿಗಳನ್ನು ಅನುಭವಿಸಿ] ಮತ್ತೆ ಭೂಮಿಗೆ ಮರಳುತ್ತಾನೆ." - ಎಷ್ಟು ದಿನ ಈ ರೀತಿ ಸುಳ್ಳು ಹೇಳುತ್ತಾ ಇರಬಹುದು ನಾವು???
ReplyDeleteಸತ್ತಮೇಲೆ ದೇಹ ತ್ಯಜಿಸುವ (???) ಆತ್ಮದ ಬಗ್ಗೆ ಹೇಳಿದ್ದರೆ ನಮ್ಮ ಪುರಾತನ ಋಗ್ವೇದದ ಜನ ಎಷ್ಟು ನೆಗಾಡಬೇಡ!!!
ಸನ್ಮಾನ್ಯ ಸುಬ್ರಹ್ಮಣ್ಯ ಮಾಚಿಕೊಪ್ಪರೇ, ನಿಮ್ಮಲ್ಲಿನ ಅಧ್ಯಾಸಕ್ಕೆ ನೀವೇ ಹೋಣೆಗಾರರು! ಭಾರತದಲ್ಲಿ ನಿಮ್ಮಂತಹ ಅನೇಕರು ಸನಾತನ ಪರಂಪರೆಯನ್ನು ಸಂಶಯದ ದೃಷ್ಟಿಕೋನದಿಂದ ನೋಡಿ, ಯಾವುದನ್ನೂ ಸರಿಯಾಗಿ ಅರಿಯಲಾಗದೇ ಹೀಗೇ ವಿತಂಡವಾದಿಗಳಾಗಿ ಸಾಗುತ್ತಿದ್ದಾರೆ; ಅವರಲ್ಲಿ ಕೆಲವರು ಮತಾಂತರಗೊಂಡಿದ್ದೂ ಕೂಡ ಅದಕ್ಕೇ! ಎಲ್ಲಾ ಮತಗಳೂ ಬೇರೊಂದು ಲೋಕವನ್ನು ಹೇಳುತ್ತವೆ ಎನ್ನುವಾಗ ಅವು ತಮ್ಮಿಂದ ಇಲ್ಲಿ ಪೂರಕ ಕಾರಣಗಳನ್ನು ತೋರಲಾಗದ ಅತಿಮಾನುಷ ಶಕ್ತಿಯೊಂದನ್ನು ಗ್ರಹಿಸಿದ್ದಾವೆ ಎಂಬುದು ಸ್ಪಷ್ಟ.
DeleteChild prodigy ಎನ್ನುವುದನ್ನು ಕೇಳಿದ್ದೀರಲ್ಲವೇ? ಸಂಗೀತ, ಸಾಹಿತ್ಯ, ಕಲೆ, ಸಂಸ್ಕೃತಿ ಈ ಎಲ್ಲಾ ಕ್ಷೇತ್ರಗಳಲ್ಲೂ ಬಾಲ್ಯದಲ್ಲೇ-ಶೈಶವದಲ್ಲೇ ಪಾಂಡಿತ್ಯವನ್ನು ಪಡೆದ ಪ್ರತಿಭೆಗಳನ್ನು ಕಾಣುತ್ತೇವೆ. ಇದಕ್ಕೆ ಜ್ವಲಂತ ಉದಾಹರಣೆ: ಗಣಿತಜ್ಞ ಶ್ರೀನಿವಾಸನ್ ರಾಮಾನುಜನ್! ಕಗ್ಗಂಟಾದ ಗಣಿತದ ಗುಣಿತಗಳಿಗೆ ಹಲವು ಬಗೆಯ ಸೂತ್ರಗಳನ್ನು ಅತಿ ಸುಲಭವಾಗಿ ಬರೆದವರು, ಬರೆದು ಭಾರತಕ್ಕೊಂದು ಹೆಮ್ಮೆಯ ಗರಿಯನ್ನು ಮೂಡಿಸಿದವರು ಅವರು. ಅವರಲ್ಲಿನ ಗಣಿತ ಕೇವಲ ಪ್ರಯತ್ನದಿಂದ ಬರಲಿಲ್ಲ! ಹಾಗೊಮ್ಮೆ ಬರುತ್ತಿದ್ದರೆ ನಾವೂ ನೀವೂ ಪ್ರಯತ್ನಿಸಿದರೆ ಯಾಕೆ ಬರುವುದಿಲ್ಲ? ಅವರಲ್ಲಿನ ಆ ಜ್ಞಾನ ನಮ್ಮಲ್ಲೇಕೆ ಇಲ್ಲ? ಎಲ್ಲರ ಚಿಂತನಾ ಮಟ್ಟವೂ ಒಂದೇ ಮಟ್ಟದಲ್ಲಿವೇಕೆ? ಅನೇಕ ಬಾಲರು ತಾವು ಹಿಂದೆ ಇಂಥಾ ಕಡೆ ಹುಟ್ಟಿದ್ದೆವು ಎಂಬುದನ್ನು ಖುದ್ದಾಗಿ ಹಿರಿಯರೊಡನೆ ಹಿಂದಿನ ಜನ್ಮದ ಮನೆಗೆ ತೆರಳಿ ಸಾಬೀತುಪಡಿಸಿದ್ದಾರಲ್ಲಾ!! ಇದಕ್ಕೆಲ್ಲಾ ನಿಮ್ಮಲ್ಲಿ ಉತ್ತರವಿದೆಯೇ? ಉತ್ತರ ಸಿಗುವುದಿಲ್ಲ ಯಾಕೆಂದರೆ ನಮ್ಮ-ನಿಮ್ಮ ಜ್ಞಾನ ಸೀಮಿತವಾಗಿದೆ, ಪ್ರತಿಭೆಯುಳ್ಳವರಲ್ಲೂ ಆಯಾ ಕ್ಷೇತ್ರಗಳಿಗೆ ಸೀಮಿತವಾಗಿದೆ, ಕೊಳಲು ವಾದಕ ಚೌರಾಸಿಯಾರನ್ನು ಹೋಗಿ ವಿಚಾರಿಸಿದರೆ ರಸಾಯನ ಶಾಸ್ತ್ರದ ಬಗ್ಗೆ ಹೇಳಿಯಾರೇ? ಹೀಗಾಗಿ ನಿಮ್ಮ ವಿಚಾರ ವೈಖರಿಯನ್ನು ವಿಶಾಲವಾಗಿಸಿಕೊಂಡರೆ ಅಲ್ಲಿ ನಿಮಗೆ ದ್ವಂದ್ವಗಳು ಸಂದೇಹಗಳು ಇರುವುದಿಲ್ಲ, ಎಲ್ಲಿಯವರೆಗೆ ನಮಗೆ ಸಂದೇಹವಿರುವುದೋ ಅಲ್ಲಿಯವರೆಗೂ ನಾವು ಅಧ್ಯಾಸದಲ್ಲಿದ್ದೇವೆ ಎಂದು ಅರ್ಥ.
ಅಧ್ಯಾಸವೆಂಬ ಅಂಶವನ್ನು ರಾಮಾನುಜಾಚಾರ್ಯರೂ ಒಪ್ಪಿದ್ದಾರೆ. ತಿರುಪತಿಯ ವೆಂಕಟೇಶ್ವರನ ಅನನ್ಯ ಭಕ್ತರೆನಿಸಿದ್ದ ಅವರು ತನ್ನ ಶ್ರೀಭಾಷ್ಯ[ಬ್ರಹ್ಮಸೂತ್ರಕ್ಕೆ ಅವರು ಬರೆದ ಭಾಷ್ಯ]ದಲ್ಲಿ ಮೂರ್ತಿ ಪೂಜೆಯನ್ನು ಖಂಡಿಸುವುದರ ಮೂಲಕ ಪರೋಕ್ಷ ಅದ್ವೈತವನ್ನೇ ಸಾರಿದ್ದಾರೆ!
ಮಹರ್ಷಿ ರಮಣರಿಗೆ ಆತ್ಮಜ್ಞಾನವಿತ್ತು; ಅವರು ಪಶು-ಪಕ್ಷಿಗಳಲ್ಲೂ ಪರಮಾತ್ಮನನ್ನೇ ಕಂಡರು-ಅದ್ವೈತವನ್ನು ಅನುಭವಿಸಿದರು. ಅವರ ಲೌಕಿಕ-ಭೌತಿಕ ಕಾಯಿಲೆಗೆ ವೈದ್ಯರು ಚಿಕಿತ್ಸೆಮಾಡಲು ಬಂದಾಗ ವೈದ್ಯರ್
ಇಗೆ ಕಾಯಿಲೆ ಯಾವುದೆಂದು ತಿಳಿಯಲಿಲ್ಲ! ಕನಸಿನಲ್ಲಿ ಮತ್ತೆ ರಮಣರೇ ಕಾಣಿಸಿಕೊಂಡು ವೈದ್ಯರ ಮನೆಯ ಮುಂದಿನ ಗಿಡವೊಂದರ ಎಲೆಗಳನ್ನು ಜಜ್ಜಿ ಆ ರಸವನ್ನು ಕುಡಿಸು ಎಂದರು, ಮಾರನೇ ದಿನ ವೈದ್ಯರು ಆಶ್ರಮಕ್ಕೆ ಹೋದಾಗ "ಅದನ್ನು ತಂದೆಯಾ" ಎಂದು ಮಹರ್ಷಿಗಳು ಗೊತ್ತಿರುವ ಹಾಗೇ ಕೇಳಿದರು! ಆಮೇಲೆ ಆ ಕಾಯಿಲೆ ವಾಸಿಯಾಯ್ತು! ಶಿರಡೀ ಬಾಬಾರನ್ನು ಕಂಡ ಶ್ರೀಮಂತನೊಬ್ಬ ತಾನು ಎಲ್ಲಾ ಸಾಧುಗಳನ್ನೂ ಕಾಣುತ್ತಾ ಬಂದೆ ಆದರೆ ನಿಮ್ಮನ್ನು ಕಾಣುವ ರೀತಿಯೇ ಬೇರ್‍ಏ ಎಂದಾಗ, " ನೋಡಪ್ಪಾ ಅರುಣಾಚಲದಲ್ಲಿ ಒಬ್ಬರಿದ್ದಾರೆ, ಅವರನ್ನು ದರ್ಶನಮಾಡಿಕೊಂಡು ಬಾ" ಎಂದು ಕಳಿಸುತ್ತಾರೆ. ಅಂದರೆ ರಮಣರ ಅಂತರಂಗ ಮತ್ತು ಶಿರಡೀ ಬಾಬಾರ ಅಂತರಂಗದ ಬೆಸುಗೆ ಎಲ್ಲಿಯದು? ಇಂಥಾದ್ದಕ್ಕೆಲ್ಲಾ ಲೌಕಿಕವಗಿ ನಾವು ನೀವು ಬೆಲೆಕಟ್ಟಲು ಸಾಧ್ಯವೇ? ಪತ್ತೆ ಹಚ್ಚಲು ಸಾಧ್ಯವೇ? ಭಗವಾನ್ ಶ್ರೀಧರರ ಭೌತಿಕ ಜೀವನದಲ್ಲಿ ಇಂತಹ ಸಹಸ್ರ ಸಹಸ್ರ ಘಟನೆಗಳು ನಡೆದುಹೋಗಿವೆ; ಇಂದಿಗೂ ಜನ ಹಂಬಲಿಸಿ ಹೇಳುತ್ತಾರೆ-ಇದನ್ನೆಲ್ಲಾ ನೀವ್ಯಾಕೆ ತಿಳಿದುಕೊಳ್ಳಬಾರದು? ನಾನು ಕಂಡದ್ದೇ ಪರಮ ಸತ್ಯವೆಂಬ ಭಾವನೆ ಇಂದಿನ ಬರಹಗಾರರಲ್ಲೂ ವಿಜ್ಞಾನವಾದಿಗಳಲ್ಲೂ ಇದ್ದರೆ ಅದು ಅವರ ಅಧ್ಯಾಸವಾಗಿದೆ! ವಿಜ್ಞಾನ ಅರಿಯದ ಪರಮಜ್ಞಾನವೇ ಬ್ರಹ್ಮಜ್ಞಾನ ಎಂದು ತಿಳಿಸುತ್ತಾ ನಿಮ್ಮ ಪ್ರಶ್ನೆಗೆ ಈ ಉತ್ತರ ಸಾಕು ಎಂದುಕೊಳ್ಳುತ್ತೇನೆ, ಧನ್ಯವಾದಗಳು.