ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, October 16, 2012

ಶರನ್ನವರಾತ್ರಿಯ ಪ್ರಾರ್ಥನೆ

ಚಿತ್ರಕೃಪೆ : ಹರೇರಾಮ.ಇನ್ [hareraama.in]
ಶರನ್ನವರಾತ್ರಿಯ ಪ್ರಾರ್ಥನೆ

ಜಗನಾಳುವ ಶಕ್ತಿ ಮೊಗೆದು ತನ್ನನು ತೋರಿ
ಬಗೆಬಗೆಯ ರೂಪದಲಿ ಬರಲು ನಗೆ ಬೀರಿ
ಅಗರು ಕಸ್ತೂರಿ ಸಿರಿಗಂಧ ಪುಷ್ಪಗಳಿಟ್ಟು
ಮುಗುದ ಮನದಲಿ ನಮಿಸಿ ಸ್ವಾಗತವ ಕೋರಿ

ತೆಗೆದು ಮುಗಿಯದ ಗುಪ್ತ ಶಕ್ತಿಯಾಗರ ಗಹನ
ನಗದು ರಾಮನಲೊಮ್ಮೆ ಅಂಬೆ ಕಾಳಿಯಲಿ
ನಗರದೇವತೆಯಾಗಿ ಸಡಗರದಿ ನೆಲೆನಿಂದು
ಖಗವಾಹನನ ಮಡದಿ ಶಿವೆಯು ಸರಸತಿಯು !

ಮೊಗೆಯಲಿಡುವೆವು ಧೂಪ ಚಿನ್ನದಾರತಿ ಬೆಳಗಿ
ಸೊಗದ ಸಿರಿಯದು ಲಭಿಸೆ ನಿನ್ನ ಧ್ಯಾನಿಪೆವು
ನೊಗವ ಹೊತ್ತಿವೆವಿಲ್ಲಿ ನಿನ್ನ ಈ ನೆಲದಲ್ಲಿ
ಜಗದಂಬೆ ಶಕ್ತಿಕೊಡು ಶಕ್ತಿರೂಪಿಣಿಯೇ

ಮೊಗದ ಚೆಲುವನು ಕಂಡು ಮರೆತೆವೀ ಭಾರವನು
ಮಗುದೊಮ್ಮೆ ನವರಾತ್ರಿ ನವದಿನದ ಪೂಜೆ
ಮಿಗಿಲು ಮಾತೆಯ ಪ್ರೀತಿ ಅದನು ಹರಿಸುವ ರೀತಿ
ಮಗುವೆಂಬ ಮಮತೆಯಲಿ ಸಲಹು ಎಲ್ಲರನು 

ಸಗರ ಸಂತತಿಗಲ್ಲಿ ಗಂಗೆಯಾಗುತ ಹರಿದೆ
ಚಿಗರೆಕಂಗಳ ಸೊಬಗ ಶಿರಸಿ ಮಾರಿಕೆಯೇ
ಅಗಲವಿಸ್ತಾರಗಳ ಹರಹು ಬಲ್ಲವರಾರು ?
ತೊಗಲುಗೊಂಬೆಗಳಮ್ಮ ನಿನ್ನ ಮಕ್ಕಳಿವು ! 

1 comment:

  1. ಭಟ್ಟರೆ,
    ಶರನ್ನವರಾತ್ರಿಯ ಶಕ್ತಿದೇವತೆಗೆ ಸೊಗಸಾದ ಪ್ರಾರ್ಥನೆ.

    ReplyDelete