ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, October 10, 2012

ಅಚಲ ನಿರ್ಧಾರದ ತಾಕತ್ತು-ಸಾವಿಗೇ ಸವಾಲೊಡ್ಡಿ ನಿಂತು ಗೆಜ್ಜೆ ಕಟ್ಟಿ ಕುಣಿವ ಕರಾಮತ್ತು !

 ಚಿತ್ರಗಳ ಋಣ : ಅಂತರ್ಜಾಲ
ಅಚಲ ನಿರ್ಧಾರದ ತಾಕತ್ತು-ಸಾವಿಗೇ ಸವಾಲೊಡ್ಡಿ ನಿಂತು ಗೆಜ್ಜೆ ಕಟ್ಟಿ ಕುಣಿವ ಕರಾಮತ್ತು !  

ಇದೊಂದು ನೈಜ ಘಟನೆ. ಅದೊಂದು ಹಳ್ಳಿ, ಅಲ್ಲೊಂದು ಶಾಲೆ. ವಿಪರೀತ ಚಳಿಯ ವಾತಾವರಣದಲ್ಲಿ ಶಾಲೆಯಲ್ಲಿ ಚಳಿ ಓಡಿಸಲು ನಿತ್ಯ ಬೆಳಿಗ್ಗೆ ಬೊಡ್ಡೆ ಅಥವಾ ಚರಿಗೆ ಯಾನೇ ಗಡಿಗೆ ಆಕಾರದ ಕಲ್ಲಿದ್ದಲ ಒಲೆಯನ್ನು ಉರಿಸಬೇಕಾಗಿತ್ತು. ಚಿಕ್ಕ ಹುಡುಗನೊಬ್ಬ ಬೇಗನೇ ಎದ್ದು, ಶಿಕ್ಷಕರುಗಳೂ ಮತ್ತು ಸಹಪಾಠಿಗಳೂ ಬರುವುದರೊಳಗೇ ಶಾಲೆಗೆ ಬಂದು ಆ ಕೆಲಸವನ್ನು ನಿಭಾಯಿಸುತ್ತಿದ್ದ. ಹೀಗೇ ಒಂದು ಬೆಳಿಗ್ಗೆ ಅವರೆಲ್ಲಾ ಬರುವ ಹೊತ್ತಿಗೆ ಶಾಲೆ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುವುದರಲ್ಲಿತ್ತು. ಬೆಂಕಿಯಲ್ಲಿ ಬೇಯುತ್ತಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹುಡುಗನನ್ನು ಹೊರಗೆ ಎಳೆದುಕೊಂಡು ಬಂದು ನೋಡುತ್ತಾರೆ ದೇಹದ ಕೆಳಭಾಗ ಪೂರ್ಣವೇ ಎಂಬಷ್ಟು ಸುಟ್ಟುಹೋಗಿದೆ. ತಕ್ಷಣವೇ ಅವನನ್ನು ಹತ್ತಿರದ ಚಿಕ್ಕ ಆಸ್ಪತ್ರೆಗೆ ಸಾಗಿಸುತ್ತಾರೆ. ಹಾಸಿಗೆಯಲ್ಲಿ ಅರೆಜೀವವಾಗಿ ಬಿದ್ದುಕೊಂಡಿದ್ದಾಗಲೇ ವೈದ್ಯರು ತನ್ನಮ್ಮನಲ್ಲಿ ಮಾತನಾಡಿದ್ದನ್ನು ಹುಡುಗ ಕೇಳಿಸಿಕೊಳ್ಳುತ್ತಾನೆ! ಶರೀರದ ಬಹಳ ಭಾಗ ಸುಟ್ಟುಹೋಗಿರುವುದರಿಂದ ಆತ ಸತ್ತುಹೋದರೇ ಒಳ್ಳೆಯದು, ಬದುಕಿದ್ದರೂ ಆತ ಸರಿಯಾಗಿ ಜೀವಿಸಲಾರ ಎಂಬ ಅಭಿಪ್ರಾಯವನ್ನು ವೈದ್ಯರು ಆತನ ತಾಯಿಗೆ ತಿಳಿಸುತ್ತಿರುವುದು ಗೊತ್ತಾಗುತ್ತದೆ.

ಆದರೆ ಆ ಹುಡುಗ ಸಾಯಲು ಸಿದ್ಧನಿರಲಿಲ್ಲ! ತಾನು ಬದುಕಿಯೇ ಬದುಕುತ್ತೇನೆ ಎಂದು ಆತ ತನ್ನೊಳಗೇ ನಿರ್ಧರಿಸುತ್ತಾನೆ. ವೈದ್ಯರಿಗೇ ಪರಮಾಶ್ಚರ್ಯ-ಆತ ಬದುಕಿ ಉಳಿಯುತ್ತಾನೆ! ಆದರೂ ಮತ್ತೆ ವೈದ್ಯರ ಮಾತು ಕೇಳಿಸುತ್ತದೆ ಏನೆಂದರೆ ದೇಹದ ಕೆಳಭಾಗದ ಮಾಂಸಖಂಡಗಳು ಸುಟ್ಟು ಕರಕಲಾಗಿರುವುದರಿಂದ ಆತ ಸಾಯುವುದೇ ಒಳ್ಳೆಯದಿತ್ತು, ಬದುಕಿದ್ದರೂ ಜೀವನಪೂರ್ತಿ ಆತ ಏನೂ ಮಾಡಲಾರದವನಾಗಿ ಪರಾವಲಂಬಿಯಾಗಿ ಬದುಕಬೇಕಾಗುತ್ತದೆ ಎಂಬುದಾಗಿ ಆತನ ಅಮ್ಮನಲ್ಲಿ ಹೇಳಿದರು. ಹೇಗೂ ಬದುಕುಳಿದಿದ್ದೇನೆ ಎಂಬುದು ಖಾತ್ರಿಯಾಗುತ್ತಿದಂತೆಯೇ ಹುಡುಗ ಮನದಲ್ಲೇ ನಿರ್ಧರಿಸುತ್ತಾನೆ: ತಾನೆಂದೂ ನಡೆಯಲಾಗದಂಥಾ ವ್ಯಕ್ತಿಯಾಗಿ, ಪರಾವಲಂಬಿಯಾಗಿ ಇರುವುದಿಲ್ಲ! ಆದರೆ ದುರ್ದೈವವಶಾತ್ ಆ ಕ್ಷಣದಲ್ಲಿ ಆತನಲ್ಲಿ ಸೊಂಟದ ಕೆಳಗಿನ ಅಂಗಾಂಗಗಳು ಕೆಲಸಮಾಡುತ್ತಿರಲಿಲ್ಲ. ಆತನ ತೆಳುವಾದ ಕಾಲುಗಳು ಅಶಕ್ತವಾಗಿ ನೇತಾಡುತ್ತಿದ್ದವು. ಅಂತೂ ಹಾಗೂ ಹೀಗೂ ಗಾಯವಾಸಿಯಾದಮೇಲೆ ಆತನನ್ನು ವೈದ್ಯರು ಮನೆಗೆ ಕಳಿಸಿಕೊಟ್ಟರು. ಆದರೆ ಆ ಕಾಲುಗಳ ಮೇಲೆ ಹುಡುಗನಿಗೆ ಯವುದೇ ಹಿಡಿತವಾಗಲೀ, ಸ್ಪರ್ಶಜ್ಞಾನವಾಗಲೀ ಇರಲೇ ಇಲ್ಲ. ಆತನ ಅಮ್ಮ ಪ್ರತಿದಿನ ಆತನ ಕಾಲುಗಳನ್ನು ಒತ್ತಿ ಮಸಾಜ್ ಮಾಡಿಕೊಡುತ್ತಿದ್ದಳು. ಪ್ರೀತಿಯಿಂದ ಮಗನನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿಡುತ್ತಿದ್ದಳು. 

ತಾನು ಗಾಲಿ ಕುರ್ಚಿಯಲ್ಲಿ ಕೂತು ಬದುಕುವುದಿಲ್ಲ, ತಾನು ನಡೆಯಲೇ ಬೇಕು ಎಂದು ಹುಡುಗ ನಿರ್ಧರಿಸಿದ. ಒಂದು ಭಾನುವಾರ ಎಂದಿನಂತೇ ಗಾಲಿಕುರ್ಚಿಯಲ್ಲಿ ಮಗನನ್ನು ಕೂರಿಸಿ ಎಳೆಬಿಸಿಲಲ್ಲಿ ತಾಜಾ ಹವೆಯ ಸೇವನೆಗೆ ಅಂತ ಹಾಗೇ ಹೊರಗೆ ಅಂಗಳದಲ್ಲಿ ಬಿಟ್ಟು ಆತನ ಅಮ್ಮ ಅಲ್ಲೆಲ್ಲೋ ಕೆಲಸಕ್ಕೆ ತೆರಳಿದ್ದಳು. ನಿಧಾನವಾಗಿ ಪಕ್ಕದಲ್ಲಿರುವ ಬೇಲಿಯ ಕಡೆಗೆ ಗಾಲಿಕುರ್ಚಿ ಓಡಿಸಿಕೊಂಡು, ಬೇಲಿಯ ಗೂಟವನ್ನು ಹಿಡಿದು ಮೇಲೆದ್ದುನಿಂತ ಆ ಹುಡುಗ! ಹಾಗೇ ನಿಧಾನವಾಗಿ ಕುರ್ಚಿಯಿಂದಿಳಿದು ಒಂದೊಂದೇ ಗೂಟವನ್ನು ಹಿಡಿಯುತ್ತಾ ಶರೀರವನ್ನು ಎಳೆದುಕೊಂಡು ಕದಲಲು ಪ್ರಯತ್ನಿಸಿದ!! ಈ ಕೆಲಸವನ್ನು ಆತ ಪ್ರತಿನಿತ್ಯ ಮುಂದುವರಿಸಿದ. ಅದನ್ನು ಕಂಡ ಅಮ್ಮ ಆತನಿಗಾಗಿ ಬೇಲಿಯುದ್ದಕ್ಕೂ ನುಣುಪಾದ ನೆಲಹಾಸನ್ನು ಹಾಕಿಸಿಕೊಟ್ಟಳು. ಹೇಗಾದರೂ ಮಾಡಿ ತ್ರಾಣವಿಲ್ಲದ ತನ್ನ ಕಾಲುಗಳಲ್ಲಿ ಚೈತನ್ಯ ತುಂಬಿಸುವುದು ಆತನ ಇಚ್ಛೆಯಾಗಿತ್ತು, ನಿರ್ಧಾರವಾಗಿತ್ತು. ಪ್ರತಿನಿತ್ಯದ ಮಸಾಜು [ನೀವುವಿಕೆ] ಮತ್ತು ಅವಿರತ ಪ್ರಯತ್ನದಿಂದ ಒಂದುದಿನ ಆತ ಯಾವುದೇ ಸಹಾಯವಿಲ್ಲದೇ ಎದ್ದುನಿಂತ! ನಿಂತವನು ನಿಧಾನವಾಗಿ ಹೆಜ್ಜೆ ಎತ್ತಿಡಲು ಯತ್ನಿಸಿದ. ಹೆಜ್ಜೆ ಎತ್ತಿಡಲು ಮುಂದಾದ ಅವನು ನಿಧಾನವಾಗಿ ನಡೆಯಲು ಯತ್ನಿಸಿದ. ನಂತರ ಜೋರಾಗಿ ನಡೆಯಲು ಯತ್ನಿಸಿದ, ತದನಂತರ ಓಡಲು ಯತ್ನಿಸಿದ. ಮೊದಲಿದ್ದ ಕಾಲುಗಳು ಇಲ್ಲವಾಗಿದ್ದವು; ಹೆಸರಿಗೆ ಮಾತ್ರ ಇರುವ ಕಾಲುಗಳಲ್ಲಿ ಮತ್ತೆ ತ್ರಾಣ ಕಂಡಿತ್ತು, ಕಾಲುಗಳು ಮಾತುಕೇಳುತ್ತಿದ್ದವು-ಹಿಡಿತ ತಕ್ಕಮಟ್ಟಿಗೆ ಸಿಕ್ಕಿತ್ತು. ಹುಡುಗ ಮತ್ತೆ ಶಾಲೆಗೆ ನಡೆದ, ನಂತರ ಶಾಲೆಗೆ ಓಡಿದ. ಶಾಲೆಯಲ್ಲಿ ತನ್ನದೇ ಮುಖಂಡತ್ವದಲ್ಲಿ ಟ್ರಾಕ್ ತಂಡ ಕಟ್ಟಿಕೊಂಡು ಓಡಲು ಆರಂಭಿಸಿದ!

ಯಾವ ಹುಡುಗ ಬದುಕುವುದೇ ಇಲ್ಲಾ ಎಂದು ವೈದ್ಯರು ಭಾವಿಸಿದ್ದರೋ, ಯಾವ ಹುಡುಗ ಬದುಕಿದರೂ ಇನ್ನೊಬ್ಬರಿಗೆ ಭಾರ ಎಂದು ವೈದ್ಯರು ಬಗೆದಿದ್ದರೋ, ಯಾವ ಹುಡುಗ ಓಡುವುದಂತೂ ಕನಸಿನ ಮಾತು ಎಂದು ಮತ್ತೆ ಹೇಳಿದ್ದರೋ,  ಕಾಲಾನಂತರದಲ್ಲಿ, ಮೆಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಆ ಹುಡುಗ ಜಗತ್ತಿನಲ್ಲೇ ವೇಗದ ಓಟದಲ್ಲಿ ಮೊದಲಿಗನೆಂಬ ದಾಖಲೆ ಸೃಷ್ಟಿಸಿದ; ಆ ಹುಡುಗನೇ ಡಾ| ಗ್ಲೆನ್ ಕನ್ನಿಂಗ್ ಹಾಮ್. ೧೬ ಜೂನ್ ೧೯೩೪ರಂದು ೪:೦೬.೮ ನಿಮಿಷಗಳಲ್ಲಿ ಮೈಲು ದೂರ ಓಡಿಮುಗಿಸಿ ಹಿಂದಿನ ವಿಶ್ವದಾಖಲೆಯನ್ನು ಮುರಿದವರು ಈ ಗ್ಲೆನ್ ಕನ್ನಿಂಗ್ ಹಾಮ್.

ಇಂತಹ ಅನೇಕರು ಭಾರತದಲ್ಲೂ ಇದ್ದಾರೆ, ಅಜ್ಞಾತವಾಗಿದ್ದಾರೆ-ಪ್ರಚಾರಕ್ಕೆ ಬಂದಿಲ್ಲ. ಅಲ್ಲಲ್ಲಿ ನಮಗೆ ಕೆಲವು ವ್ಯಕ್ತಿಗಳ ಮಾಹಿತಿ ಸಿಗುತ್ತದೆ. ಬದುಕು ಹಲವು ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುವುದು ನಿರೀಕ್ಷಿತವೇ! ಯಾರ ಬದುಕು ಯಾವಾಗ ಹೇಗೆ ತಿರುಗುತ್ತದೆ ಎಂಬುದರ ಬಗ್ಗೆ ಮಾತ್ರ ಖಚಿತತೆ ಯಾರಲ್ಲೂ ಇರುವುದಿಲ್ಲ. ಆದರೂ ಭಗವಂತ ಕೊಟ್ಟ ಕಾಲಾವಕಾಶವನ್ನು ಸದುಪಯೋಗಪಡಿಸಿಕೊಳ್ಳುವತ್ತ ನಾವು ಮುನ್ನಡೆಯಬೇಕು. ಹಾಗೆ ಮುನ್ನಡೆಯುವಾಗ ಅಚಲವಾದ, ದೃಢವಾದ ನಿರ್ಧಾರ ಬೇಕೇಬೇಕು. ನೆಪೋಲಿಯನ್ ಹಿಲ್ ಎಂಬಾತ ಬರೆದ ’ ಥಿಂಕ್ ಅಂಡ್ ಗ್ರೋ ರಿಚ್ ’ ಎಂಬ ಪುಸ್ತಕದ ಬಗ್ಗೆ ಬಹಳ ಹಿಂದೊಮ್ಮೆ ಹೇಳಿದ್ದೆ.  ಅದರಲ್ಲಿ ಲೇಖಕ ಸ್ವಾನುಭವವನ್ನು ಹಂಚಿಕೊಂಡಿದ್ದಾನೆ. ೫೦೦ ಕ್ಕೂ ಅಧಿಕ ಖ್ಯಾತನಾಮರನ್ನು ಸಂದರ್ಶಿಸಿ, ಅವರ ಯಶಸ್ಸಿನ ಹಿಂದೆ ಇರುವ ಸಾಹಸಗಾಥೆಯನ್ನು ಹುಡುಕಿದ್ದಾನೆ. ಆ ಮೂಲಕ ನ್ಯಾಯವಾಗಿ ಸಿರಿವಂತಿಕೆಯನ್ನು ಪಡೆಯಲು ಕೆಲವು ಮೂಲಭೂತ ಅಂಶಗಳನ್ನು ಆತ ಯಾದಿಮಾಡಿದ್ದಾನೆ:

೧. ಉತ್ಕಟ ಮನೋಭಿಲಾಷೆ

೨. ನಂಬಿಕೆ

೩. ಸ್ವಯಂ ಸಲಹೆ

೪. ಯಾವುದಾದರೊಂದರಲ್ಲಿ ವಿಶೇಷ ಪರಿಣತಿ

೫. ದೂರದರ್ಶಿತ್ವ

೬. ವ್ಯವಸ್ಥಿತ ಕಾರ್ಯಯೋಜನೆಗಳು

೭. ನಿರ್ಧಾರ

೮. ತಾಳ್ಮೆ

೯. ಮನೋದಾರ್ಢ್ಯತೆ

೧೦. ಲೈಂಗಿಕ ಕಾಮದ ದಾಹವನ್ನು ಪರಿವರ್ತಿಸಿ ಬೇರೇ ಉತ್ತಮ ಕೆಲಸಗಳಿಗೆ ಬಳಸಿಕೊಳ್ಳುವಿಕೆ

೧೧. ಸುಪ್ತ ಮನಸ್ಸಿನಲ್ಲಿ ನಿಲ್ಲಿಸಿಕೊಳ್ಳುವ ಸ್ತಬ್ಧ ಚಿತ್ರಗಳು

೧೨. ಸಕ್ರಿಯ ಮೆದುಳು

೧೩. ಸಿಕ್ತ ಸೆನ್ಸ್ ಅಥವಾ ಮುಂದೆ ಹೀಗೇ ಆಗುತ್ತದೆ ಎಂಬ ಯಾವುದೋ ಅನಿಸಿಕೆ, ವಿಶಿಷ್ಟ ದೂರಗ್ರಾಹಿತ್ವ. 

ಈ ಅಂಶಗಳಲ್ಲಿಯೂ ನಿರ್ಧಾರ ಎಂಬುದನ್ನು ಕಾಣುತ್ತೀರಿ. ಇದೂ ಅಲ್ಲದೇ ಹದಿನಾರು ನೀತಿಗಳನ್ನು ಹದಿನಾರು ಕಥೆಗಳ ರೂಪದಲ್ಲಿ ಲೇಖಕ ಬರೆದಿದ್ದಾನೆ. ಭಾರತವೂ ಕಮ್ಮಿಯೇನಿಲ್ಲ, ಚಾಣಕ್ಯನ ಅರ್ಥಶಾಸ್ತ್ರ ಇವೆಲ್ಲವುಗಳನ್ನೂ ಒಡಗೊಂಡೇ ಇದೆ; ಆದರೆ ನಮಗೆ ಹಿತ್ತಲಗಿಡ ಮದ್ದಲ್ಲವಲ್ಲಾ ? ಒಬ್ಬ ಚಾಣಕ್ಯ, ಮಹರ್ಷಿ ವಿದ್ಯಾರಣ್ಯ ಇವರೆಲ್ಲಾ ಏನೂ ಇಲ್ಲದವರಲ್ಲಿ ಶಕ್ತಿಯನ್ನು ಪ್ರಚುರಗೊಳಿಸಿ ಸಾಮ್ರಾಜ್ಯ ಸ್ಥಾಪಿಸಿದವರು! || ಕ್ಷಣಶಃ ಕ್ಷಣಶಶ್ಚೈವ ವಿದ್ಯಾಮರ್ಥಂ ಚ ಸಾಧಯೇತ್ || --ಎಂದಿದ್ದಾರೆ ಆದಿ ಶಂಕರರು. ವಿದ್ಯಾರ್ಜನೆ ಮತ್ತು ಧನಾರ್ಜನೆ ಎರಡಕ್ಕೂ ಕ್ಷಣ ಕ್ಷಣಕ್ಕೂ ಸಾಧನೆ ನಡೆಯುತ್ತಲೇ ಇರಬೇಕಂತೆ, ಆದರೆ ಆ ಸಾಧನೆ ನೀತಿಯುತವಾದ ಮಾರ್ಗದಲ್ಲಿರಬೇಕು ಎಂಬುದನ್ನು ಮರೆಯುವಂತಿಲ್ಲ. ನಮಗೆ ಹಣ ಬೇಕೆಂದು, ಯಶಸ್ಸು ಬೇಕೆಂದು ಯಾರಿಗೋ ಮೋಸಮಾಡುವುದು, ತಲೆ ಹೊಡೆದು ಅಪಹರಿಸುವುದು, ಹೆದರಿಸಿ/ಬೆದರಿಸಿ ಕಿತ್ತುಕೊಳ್ಳುವುದು, ಕಳ್ಳತನ-ಲೂಟಿ, ದರೋಡೆ ಮುಂತಾದವುಗಳಿಂದ ಸ್ವಾಧೀನ ಪಡಿಸಿಕೊಳ್ಳುವುದು ನಿಜವಾದ ಸಿರಿವಂತಿಕೆಯಲ್ಲ; ಹೀಗೆ ಬಂದಿದ್ದು ಶಾಶ್ವತವೂ ಅಲ್ಲ.   

ನನ್ನ ಓದಿನ ವ್ಯಾಪ್ತಿಗೆ ನಿಲುಕಿದ ಇನ್ನೂ ಕೆಲವು ಅಂಶಗಳನ್ನು ತಮ್ಮೊಡನೆ ಹಂಚಿಕೊಳ್ಳಬಯಸುತ್ತೇನೆ:

* Experience has proven that the best-educated people are often those who are known as "self-made," or selfeducated. It takes more than a college degree to make one a person of education. Any person who is educated is one who has learned to get whatever he wants in life without violating the rights of others. Education consists, not so much of knowledge, but of knowledge effectively and persistently APPLIED. Men are paid, not merely for what they know, but more particularly for WHAT THEY DO WITH THAT...?

* The whole course of things goes to teach us faith. We need only obey. There is guidance for each of us, and by lowly listening we shall hear the right word.?

* If you think you are outclassed, you are You've got to think high to rise. You've got to be sure of yourself before You can ever win the prize. Life's battles don't always go To the stronger or faster man. But sooner or later, the man who wins Is the man who thinks he can?

* The greatest achievement was at first and for a time a dream. The oak sleeps in the acorn; the bird waits in the egg; and in the highest vision of the soul a waking angel stirs. Dreams are the seedlings of realities.?

* I trust I have .long since made my peace with the King of kings. No personal consideration shall induce me to abandon the righteous cause of my country. Tell governor Gage, it is the advice of Samuel Adams to him, no longer to insult the feelings of an exasperated people.?

* When Henley wrote the prophetic lines, "I am the Master of my Fate, I am the Captain of my Soul," he should have informed us that we are the Masters of our Fate, the Captains of our Souls, because we have the power to control our thoughts. He should have told us that...?

* Do not wait. The time will never be "just right." Start where you stand, and work with whatever tools you may have at your command, and better tools will be found as you go along.?

* Why then do we longer delay, why still deliberate ? Let this most happy day give birth to the American republic. Let her arise, not to devastate and conquer, but to reestablish the reign of peace and of the laws. The eyes of Europe are fixed upon us ; she demands of...?

* No two minds ever come together without, thereby, creating a third, invisible, intangible force which may be likened to a third mind.?


ಸಿರಿವಂತಿಕೆ ತಮ್ಮ ಮಗಳ ಬಾಳಿನಲ್ಲಿರಲಿ ಎಂಬ ಅನಿಸಿಕೆಯಿಂದ, ಒತ್ತಾಯ ಪೂರ್ವಕವಾಗಿ, ತಂದೆಯ ವಯಸ್ಸಿನ ಗಂಡಿಗೆ ಮಗಳನ್ನು ಕೊಟ್ಟು ಈಗ ಕಳೆದುಕೊಂಡ ಘಟನೆ ನಿನ್ನೆ ವರದಿಯಾಗಿದೆ. ನಟಿ, ನಿರೂಪಕಿಯಾಗಿ ಕೆಲಸಮಾಡಿಕೊಂಡಿದ್ದ ಹೇಮಶ್ರೀ ಎಂಬಾಕೆ ಇಹಲೋಕ ತೊರೆದುಹೋಗಿದ್ದಾಳೆ; ಅದು ಕೊಲೆಯೇ ಎಂಬುದರಲ್ಲಿ ಅನುಮಾನವೇ ಇಲ್ಲ. ರೂಪವತಿಯನ್ನು ತನಗೆ ಬೇಕಾದಹಾಗೇ ಬಳಸಿಕೊಳ್ಳಲು ರಾಜಕೀಯದ ಒತ್ತಡ ಬೀರಿದ ವ್ಯಕ್ತಿ ಈಗ ಬಾಯಿ ಬಿಡಬೇಕಾಗಿದೆ. ಇಲ್ಲಿ ಹೇಮಶ್ರೀ ತೆಗೆದುಕೊಂಡ ನಿರ್ಧಾರ ತಪ್ಪಿದೆ. ಯಾರದೋ ಬಲವಂತಕ್ಕೆ ಮಣಿದು, ಅಪ್ಪ-ಅಮ್ಮ ಒತ್ತಾಯಿಸುತ್ತಾರೆ ಎಂಬ ಕಾರಣಕ್ಕಾಗಿ ತನ್ನ ಜೀವನವನ್ನು ಆಕೆ ಕಳೆದುಕೊಂಡಳು. ಹೀಗೆ ಮಾಡುವಾಗ ಮನೆಜನರ ಗೌರವಕ್ಕಾಗಿ ತಾನು ಹಾಗೆ ಒಪ್ಪಿದೆನೆಂಬ ಧರ್ಮಸಂಕಟವನ್ನು ಆಕೆ ಹೇಳಿಕೊಂಡಿದ್ದಾಳೆ. ಹಾಗೆ ನಿರ್ಧಾರಕ್ಕೆ ಬರುವ ಮೊದಲು ಆಕೆ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಸಲಹೆ ನೀಡುವ ನಿಪುಣರನ್ನು ಸಂಪರ್ಕಿಸಬಹುದಿತ್ತು. ಅಥವಾ ಸ್ವಂತ ದುಡಿಮೆಗೆ ಆಕೆಗೆ ಅವಕಾಶ ಇದ್ದುದರಿಂದ ಪರಾವಲಂಬಿಯಾಗಿ ಬದುಕಬೇಕಾದ ಹಂಗೇನೂ ಇರಲಿಲ್ಲ. ಕೇವಲ ಹಣದ ಆಸೆಗೆ ಬಲಿಯಾದ ಪಾಲಕರ ಗೊಡ್ಡು ಮನಸ್ಸಿಗೆ ಅವರ ನಿರ್ಧಾರಕ್ಕೆ ಅಸ್ತು ಎಂದಳು. ನಿರ್ಧಾರ ಸರಿಯಾಗಿರಲಿಲ್ಲ.  


ಎಷ್ಟೋ ಅಮ್ಮಂದಿರು ರಸ್ತೆಯಲ್ಲಿ ಚಿಕ್ಕಮಕ್ಕಳನ್ನು ಬಿಟ್ಟು ತಾವುತಾವೇ ಹರಟೆ ಹೊಡೆಯಲು ನಿಂತಿರುತ್ತಾರೆ. ವಾಹನಗಳು ರೊಯ್ಯರೊಯ್ಯನೆ ಸಾಗುತ್ತಿರುವಾಗ ಮಕ್ಕಳು ಎಲ್ಲಿಹೋದರು ಎಂಬ ಕಿಂಚಿತ್ ಪ್ರಜ್ಞೆಯೂ ಅವರಿಗಿರುವುದಿಲ್ಲ. ಗಾಡಿ ಹಾಯ್ದು ಮಗು ಘಾಸಿಗೊಂಡರೆ, ಸತ್ತರೆ ಆಗಮಾತ್ರ ಬೊಬ್ಬೆಯೋ ಬೊಬ್ಬೆ! ಗೊತ್ತಿದ್ದೂ ಹೀಗೆ ಮಾಡುವುದು ತಪ್ಪಲ್ಲವೇ? ಗೊತ್ತಿದ್ದೂ ಕೆಲವು ಪಾಲಕರು ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಕೂರಿಸಿ, ಹಾಗೇ ಬಿಟ್ಟು ರಸ್ತೆಯ ಪಕ್ಕದ ಅಂಗಡಿಗಳಿಂದ ಅದೂ ಇದೂ ಖರೀದಿಸಿಕೊಂಡು ಬರಲು ಹೋಗುತ್ತಾರೆ. ಸ್ವಲ್ಪ ಅಲುಗಾಡಿದರೆ ಗಾಡಿಯ ಸಮೇತ ಮಗು ವಾಹನನಿಬಿಡ ರಸ್ತೆಯಮೇಲೆ ಬಿದ್ದರೆ, ಆಗ ಯಾವುದಾದರೂ ವಾಹನ ವೇಗದಿಂದ ಹಾದುಹೋದರೆ ಪರಿಸ್ಥಿತಿ ಏನಾಗಬಹುದು? ಇದು ತಪ್ಪು ನಿರ್ಧಾರವಲ್ಲವೇ? ಎರಡು ನಿಮಿಷ ಹೆಚ್ಚಿನ ಕಾಲವ್ಯಯಮಾಡಿ ಮಗುವನ್ನೂ ಜೊತೆಗೆ ಕರೆದೊಯ್ದರೆ ಮಗು, ಗಾಡಿ ಎರಡೂ ಸುರಕ್ಷಿತವಾಗಿರಬಹುದಲ್ಲಾ ?  ಬಳ್ಳಾರಿಯ ಪ್ರಾಣಿ ಸಂಗ್ರಹಾಲಯದಲ್ಲಿ ಮಗುವನ್ನು ಅಲ್ಲೆಲ್ಲೋ ಬಿಟ್ಟು ಇನ್ನೊಂದು ಕಡೆ ತೆರಳಿದ ತಾಯಿಗೆ ಮಗು ಪ್ರಾಣಿಗಳನ್ನು ಸ್ಪರ್ಶಿಸುತ್ತಿದೆ ಎಂಬ ವಿವೇಚನೆ ಬೇಕಿರಲಿಲ್ಲವೇ? ಜಿಂಕೆ ಸಾಧುಪ್ರಾಣಿಯೇ ಆದರೂ ತಿಂಡಿಕೊಡುವಾಗ ಅಪ್ಪಿತಪ್ಪಿ ಚಿಕ್ಕ ಮಗುವಿನ ಬೆರಳನ್ನು ಅರಿಯದೇ ಕಚ್ಚಿಬಿಟ್ಟರೆ ಆಗ ಅನಾಹುತ ನಡೆಯಬಹುದಿತ್ತಲ್ಲಾ? ಆದರೆ ಅನಾಹುತ ಇನ್ನೂ ದೊಡ್ಡದೇ ನಡೆಯಬೇಕೆಂದು ಬರೆದಿದ್ದರೆ ಯಾರು ಬದಲಾಯಿಸಲು ಸಾಧ್ಯ? ತಾವೆಲ್ಲಾ ತಿನ್ನುವ ಚಾಕಲೇಟ್ ಹಿಡಿದು ಹುಲಿಗೆ ತನ್ನ ಪ್ರೀತಿಯನ್ನು ತೋರಿದ ಮಗುವಿನ ಮಮತೆಯನ್ನು ಹುಲಿ ಬಲ್ಲುದೇ? ಹುಲಿ ಹಸಿದಿತ್ತು, ಮಗು ಅರಿಯದಾಗಿತ್ತು, ಅಮ್ಮನಿಗೆ ಬುದ್ಧಿ ಕಮ್ಮಿ ಇತ್ತು, ಮಗು ಎಡಗೈಯ್ಯನ್ನೇ ಸಂಪೂರ್ಣ ಕಳೆದುಕೊಂಡಿತು. ಆ ಮಗು ನಾಳೆ ದೊಡ್ಡದಾದಾಗ ಅದಕ್ಕೆ ಕಷ್ಟದ ಅರಿವಾಗುತ್ತದೆ. ಹೋದ ಕೈ ಮರಳಿ ಬಾರದಲ್ಲಾ? ಇಲ್ಲಿ ಯಾವ ನಿರ್ಧಾರ ಬೇಕು? ಇಲ್ಲಿಯ ತನಕ ತನ್ನೆರಡೂ ಕೈಗಳಿಂದ ಆಡಿಕೊಂಡಿದ್ದ ಮಗುವಿಗೆ ಎಡಗೈ ಹಂಗಿಲ್ಲದೇ ಬದುಕುವ ತರಬೇತಿ ನೀಡಬೇಕು. ಜೀವನಪೂರ್ತಿ ಒಂದು ಕೈ ಇಲ್ಲದೇ ಹೋದರೂ ಅದರ ಅನಿವಾರ್ಯತೆ ಇಲ್ಲಾ ಎಂಬ ರೀತಿಯಲ್ಲಿ ಬದುಕಲು ಕಲಿಸಬೇಕಾದುದು ಮತ್ತು ಬದುಕುವ ಮಾರ್ಗವನ್ನು ಬೋಧಿಸಬೇಕಾದುದು ಪಾಲಕರ ಪ್ರಸಕ್ತ ನಿರ್ಧಾರವಾಗಬೇಕು. ಸಮಯೋಚಿತ ಮತ್ತು ಸಮರ್ಪಕ ನಿರ್ಧಾರದಿಂದ ತೆಗೆದುಕೊಂಡ ನಿಶ್ಚಿತಗುರಿಯೆಡೆಗೆ  ಅಚಲವಿಶ್ವಾಸದಿಂದ ಸಾಗುವುದು ಬದುಕಿನ ಯಶಸ್ಸಿಗೆ ಬಹಳ ಮುಖ್ಯ.  


4 comments:

  1. ಉತ್ಸಾಹತುಂಬಿಸುವ ಈ ನಿಮ್ಮ ಅಂಕಣ ಚೆನ್ನಾಗಿದೆ....(ಅಚಲ ನಿರ್ಧಾರದ ತಾಕತ್ತು-ಸಾವಿಗೇ ಸವಾಲೊಡ್ಡಿ ನಿಂತು ಗೆಜ್ಜೆ ಕಟ್ಟಿ ಕುಣಿವ ಕರಾಮತ್ತು !)
    ಭಾಸ್ಕರ ಭಟ್ಟ್-

    ReplyDelete
  2. ಮೊದಲನೆಯ ಸಂಗತಿ ಉತ್ಸಾಹಪೂರಕವಾಗಿದೆ. ಎರಡನೆಯ ಘಟನೆ ಮನ ಕಲಕುವಂತಹದು. ಮೂರನೆಯ ವಿಷಯವಂತೂ ದುರ್ದೈವದ ಸಂಗತಿ. ಆದರೆ ಈ ಮೂರರಲ್ಲೂ ಒಂದು ಸಮಾನ ಎಳೆಯನ್ನು ತೋರಿಸಿದ್ದೀರಿ. ನಾವು ಕೈಗೊಳ್ಳುವ ನಿರ್ಧಾರಗಳು ನಮ್ಮ ಬದುಕನ್ನು ರೂಪಿಸುವ ಪರಿಯನ್ನು ತೋರಿಸಿದ್ದೀರಿ. ತುಂಬ ಉತ್ತಮ ಬರಹ.

    ReplyDelete
  3. ಶ್ರೀರಂಗ ಕಟ್ಟಿ ಯಲ್ಲಾಪುರ (ಉತ್ತರ ಕನ್ನಡ)"ಸತ್ತರೂ ಬದುಕಿರಲಿ ಆತ್ಮವಿಶ್ವಾಸ" ಎಂಬಂತೆ ಅಂಗವಿಹೀನನಾದರೂ ಛಲಬಿಡದೇ ಸಾಗುವ ಸಂದೇಶ ನೀಡುವ ಕಥೆ ಸಾಧನೆಗೆ ಪ್ರೇರಣೆ ನೀಡುವಂಥದ್ದು. ಈ ಮೂರೂ ಕಥೆಗಳಲ್ಲಿ ಬದುಕಿನಲ್ಲಿ ನಾವು ತೆಗೆದುಕೊಳ್ಳುವ ನಿಣ೵ಯಗಳು ನಮ್ಮನ್ನು ಗುರಿಯೆಡೆಗೆ ಇಲ್ಲವೇ ವಿನಾಶದೆಡೆಗೆ ಒಯ್ಯುತ್ತವೆ ಎಂಬುದನ್ನು ಬಿಂಬಿಸುತ್ತವೆ. ತುಂಬ ಮೌಲಿಕ ಬರಹ

    ReplyDelete
  4. ಓದಿದ, ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು.

    ReplyDelete