ಬುಧಜನ ಸಂಪ್ರೀತ, ಸರಳ ಸಜ್ಜನ, ನವ್ಯ,ರಮ್ಯ, ಕವಿಗಣ್ಯ, ವಿಮರ್ಶಕ ವರೇಣ್ಯ ಎಂದೆಲ್ಲಾ ಆರಂಭವಾದ ಪ್ರಶಸ್ತಿ ಪತ್ರ ಅತ್ಯಾಕರ್ಷಕವಾಗಿಯೂ ಮತ್ತು ಅತ್ಯುತ್ತಮ ರೀತಿಯಲ್ಲೂ ಪ್ರಕಟಿಸಲ್ಪಟ್ಟಿತ್ತು. ಭಟ್ಟರಿಗೆ ಅರ್ಪಿಸಲ್ಪಡುವುದರೊಂದಿಗೆ ಸೇರಿದ ಐನೂರಕ್ಕೂ ಅಧಿಕ ಸಾಹಿತ್ಯಾಭಿಮಾನಿಗಳ ಕೈಗೂ ಓದುವ ಸಲುವಾಗಿ ಪ್ರತಿಗಳಾಗಿ ತಲ್ಪಿದ್ದು ಎಲ್ಲರಿಗೂ ಸಂತಸ ತಂದ ವಿಷಯ. ಯಾರಿಗೆ ಕನ್ನಡದ ಜನ ನಾವು ಕೊಟ್ಟಿದ್ದು ಕಮ್ಮಿ ಎನಿಸುತ್ತಿತ್ತೋ, ಯಾರು ಕನ್ನಡದ ಜನತೆಗೆ ಉತ್ತಮ ಭಾವಗೀತೆಗಳನ್ನೂ ಶಿಶುಗೀತೆಗಳನ್ನೂ ಕೊಟ್ಟಿದ್ದರೋ ಅಂಥವರಿಗೆ ಈ ಸನ್ಮಾನ ಸಂದಿರುವುದು ಸನ್ಮಾನಕ್ಕೇ ಸಂದ ಗೌರವ ಎಂಬುದು ತುಂಬಿದ ಸಭೆಯಲ್ಲಿ ಕೇಳಿಬಂದ ಕಲರವ! ನಾಡೋಜ, ಶತಾಯುಷಿ ಪ್ರೊ. ಜಿ.ವಿ ಅಧ್ಯಕ್ಷತೆಯಲ್ಲಿ, ಸಚಿವ ಸುರೇಶ್ ಕುಮಾರ್, ಶಾಸಕ, ವಿಜಯಕುಮಾರ್, ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಅನಕೃ ಮನೆತನದ ಅಶ್ವತ್ಥನಾರಾಯಣ ಮತ್ತು ಅನಕೃ ಅವರ ಹಿರಿಯಮಗಳು ಹೀಗೇ ಇಂತಹ ಅತಿರಥ ಮಹಾರಥರನ್ನು ಕುಳ್ಳಿರಿಸಿಕೊಂಡು ನಿರ್ಮಾಣ್ ಶೆಲ್ಟರ್ಸ್ ಸಂಸ್ಥೆಯ ಮಾಲೀಕ ವಿ.ಎನ್.ಲಕ್ಷ್ಮೀನಾರಾಯಣ ಅವರು ಅರ್ಧಾಂಗೀ ಸಹಿತರಾದ, ಕನ್ನಡದ ಹಿರಿಯ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರನ್ನು, ೨೦೧೨ ನೇ ಸಾಲಿನ ಅನಕೃ-ನಿರ್ಮಾಣ್ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಭಟ್ಟರಿಗೆ ಪ್ರಶಸ್ತಿ ಹೊಸದಲ್ಲ; ಅವರು ಸಾಕಷ್ಟು ಪ್ರಶಸ್ತಿಗಳನ್ನು ಅನಾಯಾಸವಾಗಿ[ಯಾವುದೇ ವಶೀಲಿಭಾಜಿ ಇಲ್ಲದೇ] ತಮ್ಮದಾಗಿಸಿಕೊಂಡಿದ್ದಾರೆ! ಅವರಿಗೆ ಸಂದ ಪ್ರಶಸ್ತಿಗಳ ಸಾಲಿಗೆ ಮತ್ತೊಂದು ಈ ಪ್ರಶಸ್ತಿ. ಪ್ರಶಸ್ತಿಪತ್ರ, ಪ್ರಶಸ್ತಿ ಫಲಕ, ಶಾಲು,ಹಾರ, ಫಲತಾಂಬೂಲ ಮತ್ತು ಒಂದುಲಕ್ಷದ ಒಂದು ರೂಪಾಯಿ ನಗದು ಇವಿಷ್ಟು ಈ ಪ್ರಶಸ್ತಿಯಲ್ಲಿ ಅಡಕವಾಗಿದ್ದವು. ಅನಕೃ ಸಾಹಿತ್ಯದ ಸೆರಗಿನಲ್ಲೇ ಬಹುಮುಖ ಸಾಹಿತ್ಯಕ ಕೃಷಿಯನ್ನು ನಡೆಸಿ ಹೇರಳ ಸುಂದರ ಫಲಗಳನ್ನು ಕನ್ನಡಿಗರಿಗೆ ಉಣಬಡಿಸಿದ ಭಟ್ಟರ ಬಾಲ್ಯವೇನೂ ಗುಲಾಬಿ ಹೂವಿನ ಹಂದರವಾಗಿರಲಿಲ್ಲ. ಕುಂದಾಪುರದ ಬಳಿಯ ನೈಲಾಡಿ ಶಿವರಾಮ ಭಟ್ಟರ ಮಗನಾಗಿ-ಹುಟ್ಟಿದ್ದು ಮಾತ್ರ ಶಿವಮೊಗ್ಗೆಯಲ್ಲಿ. ೨೯ ಅಕ್ಟೋಬರ್ ೧೯೨೬ ರಂದು ಶಿವರಾಮ ಭಟ್ಟ-ಮೂಕಾಂಬಿಕಾ ದಂಪತಿಗೆ ಮಗುವಾಗಿ ಜನಿಸಿದರು ಈ ನೈಶಿಲ ಭಟ್ಟರು.
ಭಟ್ಟರು ಒಂದೂವರೆ ವರ್ಷದ ಎಳೆಗೂಸಾಗಿರುವಾಗಲೇ ಪಿತೃವಿಯೋಗವಾಯ್ತು. ಯಾವ ಬಾಲ್ಯವನ್ನು ತನ್ನ ನೆರೆಹೊರೆಯ ಓರಗೆಯವರಲ್ಲಿ ಆಡಿ ಕಳೆದರೋ ಅದೇ ಆ ಮನೆಗಳಲ್ಲಿ ಅಡಿಗೆ ಕೆಲಸಗಳಿಗೆ ತೆರಳಿ ಅದರಿಂದ ಬಂದ ಅಲ್ಪ ಆದಾಯದಿಂದ, ಅಮ್ಮ ಮೂಕಾಂಬಿಕಾ ತಮ್ಮ ಮಕ್ಕಳನ್ನು ಬೆಳೆಸಿದ್ದೇ ಒಂದು ಆತ್ಮಯಜ್ಞ ಎಂದು ಭಟ್ಟರು ಅಭಿಮಾನಪೂರ್ವಕವಾಗಿ ಹೇಳಿಕೊಳ್ಳುತ್ತಾರೆ. ಭಟ್ಟರ ಹಿರಿಯಕ್ಕನ ಸಹಪಾಠಿಯೊಬ್ಬಳ ಮನೆಗೆ ಆ ಕಾಲಕ್ಕೆ ಹಿರಿಯ ಸಾಹಿತಿ ಅನಕೃ ಹಸ್ತಾಕ್ಷರನೀಡಿ ಉಡುಗೊರೆಯಾಗಿ ಕೊಟ್ಟ ಅನೇಕ ಕಾದಂಬರಿಗಳಿದ್ದುದು ಅಕ್ಕನ ಮೂಲಕ ಭಟ್ಟರ ಅಮ್ಮನಿಗೆ ತಿಳಿಯಿತು. ಸ್ನೇಹಿತೆಯ ಮನೆಯವರನ್ನು ಕೇಳಿ ಕಾದಂಬರಿಗಳಲ್ಲಿ ಒಂದೊಂದನ್ನೇ ತರಿಸಿಕೊಂಡು, ಇಳಿರಾತ್ರಿ ಊಟ ಮುಗಿದ ತರುವಾಯ, ಸೀಮೆ ಎಣ್ಣೆ ಬುಡ್ಡಿ ದೀಪದ ಬೆಳಕಿನಲ್ಲಿ, ಸುತ್ತ ಕುಳಿತು ಈ ಭಟ್ಟರೂ ಮತ್ತು ಭಟ್ಟರ ಅಕ್ಕ ಕಾದಂಬರಿಯ ೩೦-೪೦ ಪುಟಗಳನ್ನು ವಾಚಿಸುತ್ತಿದ್ದರೆ ಅಕ್ಷರವರಿಯದ ಅವರಮ್ಮ ಅದನ್ನು ಅರ್ಥೈಸಿಕೊಂಡು ಮಕ್ಕಳಿಗೆ ಹೇಳುತ್ತಿದ್ದರು. ಕಾದಂಬರಿಯ ದುಃಖಕರ ಸನ್ನಿವೇಶಗಳಲ್ಲಿ ಕಟ್ಟೆಯೊಡೆದು ಕಂಬನಿಯ ಕುಯಿಲೇ ನಡೆಯುತ್ತಿತ್ತು! ಅಳುತ್ತಲೇ " ಯಾಕೋ ಅಳ್ತೀಯಾ ಗಂಡು ಹುಡುಗರೆಲ್ಲಾ ಅಳ್ತಾರೇನೋ ?" ಎಂಬ ಸಾಂತ್ವನದ ನುಡಿಗಳು ಅಮ್ಮನಿಂದ ಹೊರಬರುತ್ತಿದ್ದರೆ ಬೆಳೆಯುತ್ತಿದ್ದ ಮಕ್ಕಳಿಗೆ ಅಮ್ಮನ ಆಂತರ್ಯದ ಹೊಯ್ದಾಟಗಳು, ಬೇಗುದಿಗಳು ಅರ್ಥವಾಗುತ್ತಿದ್ದವು.
ಅನೇಕ ಪ್ರತಿಭೆಗಳು ಅತ್ಯುತ್ತಮವಾಗಿ ಹೊರಹೊಮ್ಮುವುದಕ್ಕೆ ಪ್ರಾಯಶಃ ಅವರ ಬಾಲ್ಯದ ಅಸಹಾಯಕ ವಾತಾವರಣವೂ ಕಾರಣವಾಗುತ್ತದೋ ಏನೋ. ಮನುಷ್ಯ ಉತ್ತಮ ಮನುಷ್ಯನಾಗಿ ರೂಪುಗೊಳ್ಳಲು ಬಾಲ್ಯದಲ್ಲಿ ದೊರೆತ ಉತ್ತಮ ಸಂಸ್ಕಾರಗಳೂ ಕಾರಣವಾಗುತ್ತವೆ. ಕನ್ನಡದ ಅನೇಕ ಪ್ರತಿಭೆಗಳು ಅತೀವ ಬಡತನದಲ್ಲೇ ಬೆಳೆದಿವೆ, ಬೆಳಗಿವೆ. ಹಲವರು ವಾರಾನ್ನಮಾಡಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ಇಂದಿನ ಕಾಲದಲ್ಲಿ ’ವಾರಾನ್ನ’ ಎಂದರೇನು ಎಂಬುದು ಇಂದಿನ ಯುವಪೀಳಿಗೆಗೆ ತಿಳಿದೇ ಇಲ್ಲ. ದಿನಕ್ಕೊಬ್ಬರ ಮನೆಯಂತೇ ವಾರದ ಏಳೂ ದಿನಗಳಲ್ಲಿ ಬೇರೇ ಬೇರೇ ಮನೆಗಳಲ್ಲಿ ಅವರು ಹೇಳಿದ ಕೆಲಸಗಳನ್ನು ಪೂರೈಸುತ್ತಾ ಅಶನವನ್ನು ಸ್ವೀಕರಿಸಿ, ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿಕೊಳ್ಳುವುದು ವಾರಾನ್ನ ಪದ್ಧತಿ. ಇವತ್ತು ನಗರಗಳಲ್ಲಿ ವಾರಾನ್ನ ನೀಡುವ ಉದಾರಿಗಳೂ ಇಲ್ಲ! ಮೈಸೂರಿಗೆ ತೆರಳಿದ ಭಟ್ಟರು ವಾರಾನ್ನ ಮಾಡುತ್ತಾ ತಮ್ಮ ಕಾಲೇಜು ವ್ಯಾಸಂಗವನ್ನು ಮುಗಿಸಿದರು. ಗುರು ತ.ಸು.ಶಾಮರಾಯರ ಕೃಪಾಕಟಾಕ್ಷದಲ್ಲಿ ಬಿ.ಎ.ಆನರ್ಸ್ ಮತ್ತು ಎಂ.ಎ ಪರೀಕ್ಷೆಗಳಲ್ಲಿ ರಾಂಕ್[ಕ್ಷಮಿಸಿ ಈ ಶಬ್ದವನ್ನು ಸರಿಯಾಗಿ ಪ್ರಕಟಿಸಲಾಗುತ್ತಿಲ್ಲ] ಗಳಿಸಿದರು. ತೀ.ನಂ.ಶ್ರೀಯವರ ನೇತೃತ್ವದಲ್ಲಿ ಸಂಶೋಧಕರಾಗಿ ಮುಂದೆ ಹಾ.ಮಾ.ನಾಯಕರ ನಾಯಕತ್ವದಲ್ಲಿ ’ಆಧುನಿಕ ಕನ್ನಡದಲ್ಲಿ ಪ್ರತಿಮಾ ವಿನ್ಯಾಸ’ ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪಡೆದವರು ನೈಶಿಲ ಭಟ್ಟರು.
ಸ್ನಾತಕೋತ್ತರ ಜೀವನದಲ್ಲಿ ಬೆಂಗಳೂರಿನ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಭಟ್ಟರು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಕೇಂದ್ರದ ನಿರ್ದೇಶಕರಾಗಿ, ಡೀನ್ ಆಗಿ ಸಮರ್ಥವಾಗಿ ಕೆಲಸವನ್ನು ನಿಭಾಯಿಸಿದವರು ಎನ್.ಎಸ್.ಎಲ್.ಭಟ್ಟರು. ಅಮೇರಿಕಾಗೆ ತೆರಳಿ, ಅಲ್ಲಿನ ಹತ್ತಾರು ನಗರಗಳಲ್ಲಿ, ಹಲವು ಕನ್ನಡ ಸಂಘ-ಸಂಸ್ಥೆಗಳಲ್ಲಿ ಪುಸ್ತಕಪರಿಚಯ, ಭಾಷಣ, ಧ್ವನಿಮುದ್ರಿಕೆ, ಸಾಹಿತ್ಯ ಸಂಭಾಷಣೆ. ಸಂದರ್ಶನಗಳಂತಹ ಬಹುವಿಧ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯದ ಚರಿತ್ರೆಯ ಪಾಠಗಳನ್ನು ಅಲ್ಲಿನ ಕನ್ನಡ ಜನತೆಗೂ ಸೇರಿದಂತೆ ಹಲವರಿಗೆ ಹತ್ತಾರು ತಿಂಗಳು ಬೋಧಿಸಿದ ಖ್ಯಾತಿ ಕೂಡ ಭಟ್ಟರಿಗೆ ಸಲ್ಲುತ್ತದೆ.
ಕಾವ್ಯ-ನಾಟಕ-ಗೀತ-ವಿಮರ್ಶೆ-ಶಾಸ್ತ್ರಗ್ರಂಥ-ಗ್ರಂಥಸಂಪಾದನೆ-ಜೀವನಚಿತ್ರ-ವ್ಯಕ್ತಿಚಿತ್ರ-ಮಕ್ಕಳ ಸಾಹಿತ್ಯ-ಅನುವಾದ ಸಾಹಿತ್ಯ ಇವೇ ಹಲವಾರು ಮಾರ್ಗಗಳಿಂದ ಕನ್ನಡಮ್ಮನ ಶಿಖರಕ್ಕೆ ಸುಣ್ಣ ಬಣ್ಣ ಬಳಿದವರು ನಮ್ಮ ನಿಮ್ಮೆಲ್ಲರ ಪ್ರೀತಿಯ ನೈಶಿಲ ಭಟ್ಟರು. ಆಂಗ್ಲ ಕವಿಗಳಾದ ಷೇಕ್ಸಪೀಯರ್ ನ ’ಸಾನೆಟ್ ಚಕ್ರ’, ಏಟ್ಸ್ ನ ’ಚಿನ್ನದ ಹಕ್ಕಿ’, ಇಲಿಯಟ್ಟನ ’ಕಾವ್ಯಸಂಪುಟ’-ಗಳನ್ನೂ, ಸಿಂಧಿ-ಗ್ರೀಕ್-ಪೋಲಿಷ್-ಬಂಗಾಳಿ ಸಾಹಿತ್ಯಗಳ ಕೃತಿಗಳನ್ನು ಕನ್ನಡಕ್ಕೆ ತಂದು ಕೃತಜ್ಞರಾದವರೂ ಭಟ್ಟರೇ. ಠಾಗೋರರ ’ಚಿತ್ರಾಂಗದಾ-ಇಸ್ಪೇಟ್ ರಾಜ್ಯ’, ಶೂದ್ರಕನ ’ಮೃಚ್ಛಕಟಿಕಾ’, ಷೇಕ್ಸಪೀಯರ್ ನ ’ಟ್ವೆಲ್ಪ್ತ್ ನೈಟ್’ ಗಳನ್ನು ಕನ್ನಡಕ್ಕೆ ಅನುವಾದಿಸಿದ ಭಟ್ಟರು ’ಊರ್ವಶಿ’ ಎಂಬ ಗೀತನಾಟಕವನ್ನೂ ಬರೆದಿದ್ದಾರೆ. ಜಿ.ಪಿ.ರಾಜರತ್ನಂ ಅವರ ’ಬಣ್ಣದ ತಗಡಿನ ತುತ್ತೂರಿ’ಯ ನಂತರದ ಶಿಶುಗೀತೆಗಳಲ್ಲಿ ಭಟ್ಟರ ’ಭಾಳ ಒಳ್ಳೇವ್ರು ನಂಮ್ಮಿಸ್ಸು’,’ಗೇರ್ ಗೇರ್ ಮಂಗಣ್ಣ ಕಡ್ಲೆಕಾಯ್ ನುಂಗಣ್ಣ’ ಬಹಳ ಹೆಸರುವಾಸಿಯಾಗಿವೆ. ’ಭಾರತೀಯ ಗ್ರಂಥಸಂಪಾದನೆ’, ’ಶಾಸ್ತ್ರ ಭಾರತೀ’, ’ಕಾವ್ಯಪ್ರತಿಮೆ’ ಮುಂತಾದ ಕೃತಿಗಳು ಭಟ್ಟರ ವಿದ್ದತ್ತನ್ನು ತೆರೆದು ತೋರುತ್ತವೆ. ಮರೆತುಹೋಗಿದ್ದ, ಶಿಶುನಾಳ ಶರೀಫರ ಹಾಡುಗಳನ್ನು ತೆರೆತಂದು, ಧ್ವನಿಮುದ್ರಿಕೆಗಳ ಮೂಲಕ ಕನ್ನಡದ ಮನೆಮನೆಗಳಿಗೆ ಅವು ತಲ್ಪುವಂತೇ ಮಾಡಿ ಪರಿಚಿತರಿಂದ ’ಶರೀಫ್ ಭಟ್ಟ’ ಎಂದೆನಿಸಿಕೊಂಡವರೂ ಇದೇ ನಮ್ಮ ಭಟ್ಟ ಮಾಮ! ದೀಪಿಕಾ,ರಾಗಿಣಿ, ಮಾಧುರಿ, ಕವಿತಾ ಕವನಸಂಕಲನಗಳನ್ನು ಓದುತ್ತಿದ್ದರೆ ಕಾವ್ಯಲಹರಿಯಿಂದ ಆಚೆ ಬರಲು ಭಾವುಕನಿಗೆ ಕಷ್ಟವೇ ಆಗಬಹುದು. ಕೇವಲ ನೆನೆಪಿನಿಂದ ಕೆಲವನ್ನು ಇಲ್ಲಿ ಹೆಸರಿಸಿದ್ದು ಬಿಟ್ಟರೆ ಪಟ್ಟಿ ಇಷ್ಟಕ್ಕೇ ಮುಗಿಯುವುದಿಲ್ಲ.
ಒಂದು ಕಾಲಕ್ಕೆ ಬೆಂಗಳೂರಿನಲ್ಲಿ ಗುಬ್ಬಿ ತೋಟದಪ್ಪನವರ ಛತ್ರವನ್ನು ಬಿಟ್ಟರೆ ಅನಕೃ ಮನೆಯೇ ಅತಿದೊಡ್ಡ ಛತ್ರ ಎಂದು ಹೆಸರಾಗಿತ್ತು ಎಂದರೆ ತಪ್ಪಲ್ಲ! ಯಾರೇ ಆಗಲಿ ಬಂದರೆ ಊಟ-ತಿಂಡಿ ಮಾಡದೇ ತೆರಳಿದವರೇ ಇಲ್ಲ. ಆ ಕಾಲದ ಮಹಿಳೆಯರಲ್ಲೂ ಇಂದಿನವರಷ್ಟು ಸಂಕುಚಿತ ಮನೋಭಾವ ಇರಲಿಲ್ಲ ಅರ್ಥಾತ್ ಯಾರೇ ಬಂದರೂ ಊಟ-ತಿಂಡಿ ನೀಡಲು ಬೇಸರಿಸುತ್ತಿರಲಿಲ್ಲ. ಒಬ್ಬರ ಆದಾಯ ಅದೆಷ್ಟು ಜನರಿಗೆ ಸಾಕಾಗುತ್ತಿತ್ತೋ ಗೊತ್ತಿಲ್ಲ; ಭಗವಂತ ಸಾಹಿತಿಯ ಉದಾರ ಮನದ ಮನೆಗೆ ಅದೆಲ್ಲಿಂದ ತಂದು ತುಂಬುತ್ತಿದ್ದನೋ ತಿಳಿದಿಲ್ಲ; ಅನಕೃ ಮನೆ ಮಾತ್ರ ಬಂದವರಿಗೆ ಎಂದೂ ಬಾಗಿಲು ಮುಚ್ಚಿದ ಮನೆಯಾಗಿರಲಿಲ್ಲ. ಕಾವ್ಯ-ಸಾಹಿತ್ಯದ ಸಮಾರಾಧನೆಗಳ ಜೊತೆಜೊತೆಗೇ ಹೊಟ್ಟೆ ಸಮಾರಾಧನೆಯನ್ನೂ ಜನ ಪಡೆಯುತ್ತಿದ್ದರು ಎಂಬುದು ಮಾ| ಹಿರಣ್ಣಯ್ಯನವರಿಂದ ಹಿಡಿದು ಹಲವು ಬಾಯಿಗಳಿಂದ ತಿಳಿಯಲ್ಪಟ್ಟ ವಿಷಯ; ಯಾಕೆಂದರೆ ಅನಕೃರವರನ್ನು ಖುದ್ದಾಗಿ ನೋಡುವ ಭಾಗ್ಯ ನನ್ನ ವಯಸ್ಸಿಗರಿಗಿಲ್ಲ. ಸಾಹಿತ್ಯ ಮತ್ತು ಕಾಮಪ್ರಚೊದನೆ, ಸಾಹಿತ್ಯ ಮತ್ತು ಜೀವನ, ಪೊರಕೆ (ಹರಟೆ), ಕಾಮನ ಬಿಲ್ಲು, ನನ್ನನ್ನು ನಾನೇ ಕಂಡೆ, ಮದುವೆಯೊ ಮನೆಹಾಳೊ, ರಾಜ ನರ್ತಕಿ, ಬಣ್ಣದ ಬೀಸಣಿಗೆ, ರಸಿಕಾಗ್ರಣಿ, ಸಮರ ಸುಂದರಿ, ಅಣ್ಣ ತಂಗಿ, ಸಂಧ್ಯರಾಗ, ನಟಸಾರ್ವಭೌಮ, ನಗ್ನ ಸತ್ಯ, ಶನಿಸಂತಾನ, ಸಂಜೆಗತ್ತಲು, ಉದಯರಾಗ, ಜೀವನಯಾತ್ರೆ, ಮಂಗಳಸೂತ್ರ, ರುಕ್ಮಿಣಿ’ ಮೊದಲಾದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಕೊಟ್ಟ ಅನಕೃ ಅವರನ್ನು ನೆನಪಿಸಲಿಕ್ಕಾಗಿ ಇವತ್ತು ಹೇಳಿಕೊಳ್ಳುವಂತಹ ಯಾವ ಸ್ಮಾರಕಗಳೂ ಇಲ್ಲದಿರುವುದು ವಿಷಾದನೀಯ. ಅಂತಹ ಮೇಧಾವಿಯನ್ನು ಅಂತಹ ಕನ್ನಡದ ಕಟ್ಟಾಳುವನ್ನು ಸ್ವತಃ ನೋಡಿಬಲ್ಲ, ಅವರಿಂದ ಒಂದೇ ಪಾಠವನ್ನು ಕೇಳಿದ್ದರೂ ಅವರ ಕೃತಿಗಳ ಮೂಲಕ ಪ್ರೇರಿತರಾಗಿ ಉತ್ತಮ ಕೃತಿಗಳನ್ನು ಸೃಜಿಸಿದವರು ಎನ್ನೆಸ್ಸೆಲ್.
ಕಟ್ಟಡಗಳನ್ನು ನಿರ್ಮಿಸುವ ಬಹುತೇಕ ಜನ ಸಾಹಿತ್ಯ-ಕಾವ್ಯ ಇವುಗಳಲ್ಲಿ ತೊಡಗಿಕೊಳ್ಳುವ ಮಂದಿ ಅಲ್ಲ; ಅವರಿಗೆ ಹಣದಥೈಲಿ ಸಿಕ್ಕರೆ ಸಾಕು ಹಾಯಾಗಿ ಕೆಲಸ ಮುಗಿಯಿತು ಎಂದುಕೊಳ್ಳುವವರೇ ಜಾಸ್ತಿ. ’ನಿರ್ಮಾಣ್ ಶೆಲ್ಟರ್ಸ್’ ನ ಮಾಲೀಕ ಲಕ್ಷ್ಮೀನಾರಾಯಣ ಅಂಥವರಲ್ಲ. ಇವರಿಗೆ ಕಾವ್ಯ-ಸಾಹಿತ್ಯ-ದಾಸರಪದಗಳು ಇವುಗಳಲ್ಲೆಲ್ಲಾ ಅತ್ಯಂತ ಆಸಕ್ತಿ. ಹಾಗಾಗಿಯೇ ಕಾವ್ಯ-ಸಾಹಿತ್ಯಕಾಗಿ ಒಂದೆರಡು ಪ್ರತಿಷ್ಠಾನಗಳನ್ನು ನಿರ್ಮಿಸಿದ್ದಾರೆ, ಆ ಮೂಲಕ ಪ್ರತಿಭೆಗಳಿಗೆ, ಕನ್ನಡದ ಸೇವೆಯಲ್ಲಿ ನಿರತರಾದ ನಿಪುಣರಿಗೆ ಗೌರವವನ್ನು ಸಲ್ಲಿಸುವುದು ಅವರ ಆಶಯಗಳಲ್ಲಿ ಒಂದು. ಸರಕಾರದಲ್ಲಿ ಬೇಡಿಕೆ ಇಟ್ಟು, ನಿವೇಶನವೊಂದನ್ನು ಕೊಡಿ ಸಾಕು ತಾವು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿ ’ಅನಕೃ ಸ್ಮಾರಕ ಸಭಾಭವನ’ವೆಂಬ ಹೆಸರಿನಲ್ಲಿ ಕನ್ನಡ ಕಾವ್ಯ-ಸಾಹಿತ್ಯಕ್ಕೆ ಭವ್ಯವಾದ ಬಂಗಲೆಯೊಂದನ್ನು ನಿರ್ಮಿಸುವುದಾಗಿ ಅವರು ಉಧ್ಘೋಷಿಸಿಕೊಂಡಿದ್ದೂ ಅಲ್ಲದೇ ಯಡ್ಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಿವೇಶನವೊಂದಕ್ಕೆ ಮಂಜೂರೀ ಪಡೆದರೂ ಆ ನಿವೇಶನದ ಪಕ್ಕದವರ ಕಾನೂನು ತಕರಾರಿನಿಂದ ಅದು ಹಾಗೇ ನಿಂತಿದೆ; ಶೀಘ್ರದಲ್ಲೇ ಅದರ ಸಮಸ್ಯೆಯನ್ನು ಬಗೆಹರಿಸಿ ನಿವೇಶನದ ಹಕ್ಕುಪತ್ರವನ್ನು ವಿತರಿಸುವುದಾಗಿ ಸಚಿವ ಸುರೇಶ್ ಕುಮಾರ್ ಇಂದು ಹೇಳಿದ್ದಾರೆ; ಬಹುಶಃ ಇದು ಬಿಜೆಪಿ ಸರಕಾರದ ಅಧಿಕಾರಾವಧಿ ಮುಗಿಯುವುದರೊಳಗೆ ಸಾಧ್ಯವಾಗಬಹುದು-ಸಾಧ್ಯವಾಗಲಿ ಎಂದು ಎಲ್ಲಾ ಕನ್ನಡಮನಗಳೂ ಬಯಸೋಣ ಅಲ್ಲವೇ?
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ನಿರ್ಮಾಣ್ ಶೆಲ್ಟರ್ಸ್ ನ ಮಾಲೀಕ ಲಕ್ಷ್ಮೀನಾರಾಯಣ್ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿ, ವೇದಿಕೆಯಲ್ಲಿರುವ ಅಭ್ಯಾಗತರನ್ನು ಶಾಲು, ಹಾರ, ಫಲತಾಂಬೂಲ, ಸ್ಮರಣಿಕೆಗಳೊಂದಿಗೆ ಗೌರವಿಸಿದರು. ಗಣ್ಯರು ದೀಪಬೆಳಗಿದ ನಂತರ ತನ್ನ ವಿದ್ಯಾಗುರು ಭಟ್ಟರ ಬಗೆಗೂ ಮತ್ತು ಸಾಹಿತಿ ಅನಕೃ ಅವರ ಬಗೆಗೂ ಮಾರ್ಮಿಕವಾಗಿ ಮಾತನಾಡಿದವರು ನರಹಳ್ಳಿ ಬಾಲಸುಬ್ರಹ್ಮಣ್ಯ. ನಂತರ ಭಟ್ಟರನ್ನು ಅವರ ಲಕ್ಷ್ಮೀ[ಶ್ರೀಮತಿ ಜ್ಯೋತಿ ಭಟ್ಟ]ಸಹಿತ ಸನ್ಮಾನಿಸಲಾಯ್ತು. ತರುವಾಯ ಭಟ್ಟರ ವಾಗ್ಝರಿಯಲ್ಲಿ ಅನಕೃ ಜೀವನಗಾಥೆ ಕೇಳಿಬಂತು. ಮಂತ್ರಿ ಸುರೇಶ್ ಕುಮಾರ್ ಲಘುಹಾಸ್ಯ ಮಿಶ್ರಿತ ಮಾತುಗಳಿಂದ ಗಮನ ಸೆಳೆದರೆ ಶಾಸಕ ವಿಜಯಕುಮಾರ್ ಗಂಭೀರವಾಗಿ ಎರಡೇ ಮಾತನ್ನಾಡಿದರು. ಕೈಗಡಿಯಾರವನ್ನು ನೋಡಿಕೊಂಡ ೧೦೦ರ ಮುತ್ಸದ್ಧಿ ಪ್ರೊ.ಜಿ.ವಿ "ಅಧ್ಯಕ್ಷನಾಗಿ ನಾನು ಎರಡೇ ಮಾತುಗಳನ್ನಾಡುತ್ತೇನೆ. ವಿಷಯಗಳನ್ನು ಅದಾಗಲೇ ಕೇಳಿದ್ದೀರಿ, ಅಧ್ಯಕ್ಷನಾಗಿ ಸಮಯಕ್ಕೆ ನಿಮ್ಮನ್ನು ಬೀಳ್ಕೊಡುವುದು ನನ್ನ ಕರ್ತವ್ಯ ಹಾಗಾಗಿ ಈಗ ನಿಮ್ಮೆಲ್ಲರನ್ನೂ ಇದರಿಂದ ರಿಲೀಸ್ ಮಾಡ್ತಿದ್ದೇನೆ" ಎಂದಾಗ ಎಲ್ಲರಿಗೂ ದಂಗು! [ಅದಾಗಲೇ ಮಧ್ಯಾಹ್ನದ ಒಂದು ಗಂಟೆಯಾಗಿತ್ತು]-ಎಂತಹ ಸಮಯಪ್ರಜ್ಞೆ ಅಲ್ಲವೇ? ವಂದನಾರ್ಪಣೆಯೊಂದಿಗೆ ಮುಕ್ತಾಯವಾದ ಈ ಕಾರ್ಯಕ್ರಮ ನಡೆದಿದ್ದು ಬೆಂಗಳೂರಿನ ಜೆ.ಎಸ್.ಎಸ್. ವಿದ್ಯಾಪೀಠದ ಸಭಾಂಗಣದಲ್ಲಿ. ಅಪರ್ಣಾ ಅವರ ನಿರೂಪಣೆ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು. ಸಭಿಕರಲ್ಲಿ ಅ.ರಾ.ಮಿತ್ರ, ಶಿವಮೊಗ್ಗ ಸುಬ್ಬಣ್ಣ, ಡುಂಢಿರಾಜ್..............[ಹೆಸರು ನೆನಪಿಲ್ಲದ ಅನೇಕ ಗಣ್ಯರು, ಸಾಹಿತಿಗಳು] ಮಂಡಿಸಿದ್ದರು. [ಕಾರ್ಯಕ್ರಮಕ್ಕೂ ಮುನ್ನ ಉಪಾಹಾರವಿತ್ತು: ಕೇಸರೀಬಾತು, ಉಪ್ಪಿಟ್ಟು ಮತ್ತು ಬೋಂಡಾ ಗಂಟಲು ಸರಿಪಡಿಸಿಕೊಳ್ಳಲು ಬಿಸಿಬಿಸಿ ಕಾಫಿ/ಚಹಾ. ಜೊತೆಗೆ ಉಪಾಸನಾ ಮೋಹನ್ ಅವರ ತಂಡದಿಂದ ಭಟ್ಟರ ಕೆಲವು ಗೀತೆಗಳು ಹಾಡಲ್ಪಟ್ಟವು]
ಭಟ್ಟರ ಪಾಕದ ಅನೇಕ ಹಾಡುಗಳನ್ನು ನೀವಿಗಾಗಲೇ ಸವಿದಿರುತ್ತೀರಿ. ಆದರೂ ಆಗಾಗ ನಾನು ಹೇಳುತ್ತಲೇ ಸ್ವತಃ ಗುನುಗುತ್ತಿರುವಂತಹ ಒಂದೆರಡು ಗೀತೆಗಳ ಹೆಸರುಗಳು ಇಲ್ಲಿವೆ: ’ಎಲ್ಲಿ ಜಾರಿತೋ ಮನವೂ ಎಲ್ಲೆ ಮೀರಿತೋ’, ’ಮಲಗೋ ಮಲಗೆನ್ನ ಮರಿಯೇ.’ ಈ ಎರಡು ಹಾಡುಗಳು ನನ್ನನ್ನು ಭಟ್ಟರ ಕಾಲಿಗೇ ಕಟ್ಟಿಹಾಕಿಬಿಟ್ಟಿವೆ! ’ಯಾವುದೀ ಹೊಸಸಂಚು ಎದೆಯಂಚಿನಲಿ ಮಿಂಚಿ’ ಎಂಬ ಹಾಡೂ ಕೂಡ ಹಾಗೇ. ಇದೇ ಹಾಡಿನ ಹೆಸರನ್ನೇ ಹೊದಿಕೆಯನ್ನಾಗಿಸಿ ಹಿಂದಕ್ಕೆ ಲೇಖನವೊಂದನ್ನು ಬರೆದಿದ್ದೆ. ಕನ್ನಡದ ರಸಋಷಿಗಳಲ್ಲಿ ಎನ್.ಎಸ್.ಎಲ್. ಭಟ್ಟರೂ ಒಬ್ಬರು ಎಂದರೆ ಹೆಚ್ಚೇ? ಬಹಳ ಉದ್ದ ಬರೆದೆ ಅನ್ನಿಸುತ್ತಿದೆಯೇ? ಸ್ವಲ್ಪತಾಳಿ ಹೇಗೂ ಇಷ್ಟು ದೂರ ಓದುತ್ತಾ ಬಂದಿದ್ದೀರಿ, ಭಟ್ಟರ ಸಾಹಿತ್ಯದ ಪನಿವಾರ ತೆಗೆದುಕೊಂಡು ಹೊರಟುಬಿಡುವಿರಂತೆ: [ಈ ಪನಿವಾರವನ್ನು ಅಂತರ್ಜಾಲದಲ್ಲಿ ಬಡಿಸಿದವರು ಸಂಗೀತ ನಿರ್ದೇಶಕ, ಯುವಸಾಹಿತಿ ಚಿನ್ಮಯ್ ಎಮ್ ರಾವ್, ಹೊನಗೋಡು ]
ಭಟ್ಟರ ಪರಿಚಯವನ್ನು ತುಂಬ ಚೆನ್ನಾಗಿ ಮಾಡಿಕೊಟ್ಟಿದ್ದೀರಿ. ಧನ್ಯವಾದಗಳು.
ReplyDeleteಭಟ್ಟರ ಪಾಕವಿಲ್ಲಿ ಪಲ್ಲವಿಸಿ ಕಂಪಬೀರಿ ಮನಸೂರೆಗೊಳ್ಳುತ್ತಿದೆ ಆ ಭಟ್ಟರಿಗೆ ಈ ಭಟ್ಟರ ಅಕ್ಕರದ ಅಭಿನಂದನೆ ಆರಾಧನೆ ಅಮೋಘವಾಗಿದೆ.
ReplyDeleteShivashankara. SAMSEVA.
ಸಮಾರ೦ಭದ ಯಥಾವತ್ ವರ್ಣನೆ, ಲೇಖನ ತು೦ಬಾ ಚೆನ್ನಾಗಿದೆ. ಬರಲಾಗದೆ ಇದ್ದುದಕೆ ಬೇಸರವಿದೆ. ನೀವಾದರೂ ಸಾಕ್ಷೀಕರಿಸಿದಿರಲ್ಲ. ನೀವು ಧನ್ಯರು.
ReplyDeleteBhattara bagge aneka maahitigalannu kottiddiri...Dhanyavadagalu...
ReplyDelete