ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, January 2, 2012

ಅರಿತು ಮುಟ್ಟಿದರೂ ಅರಿಯದೇ ಮುಟ್ಟಿದರೂ ಸುಡುವುದು ಬೆಂಕಿಯ ಧರ್ಮ!


ಅರಿತು ಮುಟ್ಟಿದರೂ ಅರಿಯದೇ ಮುಟ್ಟಿದರೂ ಸುಡುವುದು ಬೆಂಕಿಯ ಧರ್ಮ!

ಈ ಲೋಕದ ಪ್ರತಿಯೊಂದು ವಸ್ತುವಿಗೂ ಜೀವಿಗೂ ಧರ್ಮ ಎಂಬುದೊಂದಿದೆ. ಧರ್ಮ ಎಂದರೆ ಮತವಲ್ಲ. ಧರ್ಮ ಮತಕ್ಕೆ ಹೊರತಾಗಿದೆ. ಮತವೆಂದರೆ ಅದಕ್ಕೊಬ್ಬ ರೂವಾರಿ ಇರುತ್ತಾನೆ, ಮತವನ್ನು ಹುಟ್ಟುಹಾಕಿ ಅದನ್ನು ಪ್ರಚಲಿತಕ್ಕೆ ತಂದು ಮುಂದುವರಿಸುವಂತೇ ಆ ಕುರಿತು ಕೆಲವು ತನ್ನದೇ ಆದ ಸಿದ್ಧಾಂತಗಳನ್ನು ಮಂಡಿಸಿರುತ್ತಾನೆ. ಮತವೆಂಬುದು ಸೀಮಿತ ಪರಿಧಿಯ ಒಂದು ಜೀವಿತ ಕ್ರಮ. ಧರ್ಮ ಎಂಬುದು ಹಾಗಲ್ಲ. ಹುಟ್ಟಿದ ಪ್ರತೀ ಜೀವಿಗೆ ಹಸಿವು ಎಂಬುದಿದೆ, ಹೊಟ್ಟೆಯಿದೆ, ಅದು ಆಹಾರ ಸ್ವೀಕರಿಸುತ್ತದೆ. ಇಲ್ಲಿ ಆಹಾರ ಸ್ವೀಕರಿಸುವುದು ಸಹಜ ಧರ್ಮ. ಮನುಷ್ಯ ಜೀವನಕ್ಕೆ ಆಹಾರ, ವಸತಿ ಮತ್ತು ಬಟ್ಟೆ [ಫುಡ್, ಶೆಲ್ಟರ್ ಅಂಡ್ ಕ್ಲೋದಿಂಗ್] ಅತೀ ಪ್ರಮುಖವಾದ ಅಂಶಗಳು. ತದನಂತರ ನಿದ್ರೆ, ಮೈಥುನ ಇವೆಲ್ಲಾ ಬರುತ್ತವೆ. ಈ ಎಲ್ಲಾ ಅಂಶಗಳು ಮನುಷ್ಯನ ಪ್ರಾಥಮಿಕ ಅವಶ್ಯಕತೆಗಳು. ಮನುಷ್ಯನಿಗೆ ಮಿಕ್ಕೆಲ್ಲಾ ಜೀವಿಗಳಿಗಿಂತ ವಿಶೇಷವಾದ ಪ್ರಾಕೃತಿಕ ಸಂಪತ್ತೊಂದಿದೆ! ಅದೇ ಹೆಚ್ಚಿನ ಶಕ್ತಿಯನ್ನು ಪಡೆದ ಮೆದುಳು. ಆ ಮೆದುಳನ್ನು ಬಳಸಿಕೊಂಡು ಮನುಷ್ಯ ಸ್ವತಂತ್ರವಾಗಿ ಯೋಚಿಸಬಲ್ಲ, ನಾನಾ ಕೆಲಸಕಾರ್ಯಗಳನ್ನು ನಿರ್ವಹಿಸಬಲ್ಲ, ಕೆಲವು ಮಟ್ಟಿಗೆ ಬೇರೇ ಜೀವಿಗಳನ್ನು ನಿಯಂತ್ರಿಸಬಲ್ಲ, ತನಗೆ ಬೇಕಾದ ಯಂತ್ರೋಪಕರಣಗಳನ್ನು ಸೃಜಿಸಿಕೊಳ್ಳುವುದರೊಂದಿಗೆ ಅವುಗಳ ಕಾರ್ಯಗಳನ್ನೂ ನಿಯಂತ್ರಿಸಬಲ್ಲ. ಇದೇ ಮನುಷ್ಯ ಮನುಷ್ಯನಾಗಿ ಹೇಗೆ ಜೀವಿಸಬೇಕು ಎಂಬುದನ್ನು ಕೆಲವೊಮ್ಮೆ ಮರೆತುಬಿಡುತ್ತಾನೆ! ಆ ಮರೆಯುವಿಕೆಯಲ್ಲಿ ತನ್ನ ಸಹಜಧರ್ಮದಿಂದ ಆತ ವಿಚಲಿತನಾಗುತ್ತಾನೆ. ಹಾಗಾದರೆ ಏನಾಗುತ್ತದೆ ಮತ್ತು ಹಾಗಾಗದಿದ್ದರೆ ಏನು ಒಳಿತಾಗುತ್ತದೆ ಎಂಬುದನ್ನು ಉದಾಹರಣೆಗಳ ಮೂಲಕ ವಿಶದಪಡಿಸುವ ಮೂಲಕ ಮಾನವ ಜೀವನ ಧರ್ಮವನ್ನು ಉತ್ಕೃಷ್ಟರೀತಿಯಲ್ಲಿ ಎತ್ತಿ ಹಿಡಿಯುವ ಭಾರತೀಯ ಪುರಾತನ ಗ್ರಂಥವೇ ಭಗವದ್ಗೀತೆ!


ಗೀತೆಯ ಬಗ್ಗೆ ಹಿಂದೊಮ್ಮೆ ಸುಮಾರು ಬರೆದಿದ್ದೇನೆ. ಮತ್ತೆ ಮತ್ತೆ ಅದನ್ನೇ ಬರೆದರೆ ಚಂದವಾಗಲಿಕ್ಕಿಲ್ಲ. ಗೀತೆಯ ಬಗೆಗಿನ ಆ ಲೇಖನವನ್ನು ಇಲ್ಲಿ ಓದಿಕೊಳ್ಳಬಹುದಾಗಿದೆ : http://nimmodanevrbhat.blogspot.com/2011/07/blog-post_24.html [|| ಅಹಂ ಏಕಂ ಶತಂ ವ್ಯಾಘ್ರಂ ಸಪ್ತದೀ ಕುಂಜರಂ ಬಲಂ||]

ಪ್ರಸಕ್ತ ನಾನು ಹೇಳಹೊರಟಿರುವುದು ಇಸ್ಕಾನ್ ಸ್ಥಾಪನಾಚಾರ್ಯರಾದ ಪ್ರಭುಪಾದರ ಅರ್ಥವಿವರಣೆಯ ಕುರಿತು. ಪ್ರಭುಪಾದರ ಕಾಲಘಟ್ಟದಲ್ಲಿ ಅವರು ತಮಗೆ ಲಭಿಸಿದ ಆಕರಗಳ ಮೂಲಕ ಗೀತೆಯನ್ನು ಅರ್ಥವಿಸಿಕೊಂಡಿದ್ದನ್ನು ಹೇಳಿಹೋಗಿದ್ದಾರೆ; ಅದನ್ನೇ ಕನ್ನಡಕ್ಕೂ ಇನ್ನಿತರ ಹಲವು ಭಾಷೆಗಳಿಗೂ ತರ್ಜುಮೆಮಾಡಿ ಕೋಟ್ಯಂತರ ಪ್ರತಿಗಳನ್ನು ಜಗದಾದ್ಯಂತ ಹಂಚಿದ್ದೇವೆ ಎಂಬ ಹೆಗ್ಗಳಿಕೆ ಇಸ್ಕಾನ್ ಭಕ್ತರದು. ಪ್ರಭುಪಾದರು ಹೇಳಿದ್ದೇ ಎಲ್ಲವೂ ಅಲ್ಲ, ಅಲ್ಲಿ ಅರ್ಥಗ್ರಹಣದಲ್ಲಿ ಸ್ವಲ್ಪ ವಿವೇಚಿಸಬೇಕಾಗಿದೆ ಎಂಬುದು ಇಸ್ಕಾನ್ ಹೊರತಂದ ಆ ಅನುವಾದಿತ ಗೀತೆಯನ್ನು ಓದಿದವರ ಅಂಬೋಣ. ಇರಬಹುದು; ಅವರು ಅಂದು ಹೇಳಿದ್ದು ಇಂದಿಗೆ ತೀರಾ ನೂರಕ್ಕೆ ನೂರು ಸಮಂಜಸ ಎನ್ನುವುದು ಕಷ್ಟವಾಗಬಹುದು ಆದರೆ ಪ್ರಭುಪಾದರು ಹೇಳಿದ ಕೆಲವು ಅಂಶಗಳು ಈಗಾಗಲೇ ಸತ್ಯವಾಗಿ ತೋರುತ್ತವೆ! ಹೀಗಾಗಿ ಅವುಗಳನ್ನು ತೀರಾ ಅಲ್ಲಗಳೆಯಲಿಕ್ಕೂ ಆಗುವುದಿಲ್ಲ!

ಪ್ರಭುಪಾದರ ಅನುವಾದಿತ ಆ ಗೀತೆಯಲ್ಲಿ ಒಂದೆರಡು ಮುಖ್ಯ ಅಂಶಗಳು ಹೀಗಿವೆ :
* ಮೊದಲನೆಯದು ವರ್ಣಾಶ್ರಮದ ಬಗ್ಗೆ.
* ಎರಡನೆಯದು ಸಮಾಜದ ಮುಂದಿನ ಪೀಳಿಗೆಯ ಬಗ್ಗೆ.


ಯಾವುದೇ ವ್ಯಕ್ತಿ ತನ್ನ ಸಹಜ ಧರ್ಮವನ್ನು ಒತ್ತಾಯಪೂರ್ವಕವಾಗಿ ಬದಲಾಯಿಸಕೂಡದು ಎಂದು ಅವರು ಪ್ರತಿಪಾದಿಸಿದ್ದಾರೆ. ಉದಾಹರಣೆ ಹೀಗಿದೆ: ವೈಶ್ಯನೊಬ್ಬ ವ್ಯಾಪಾರ ಮಾಡುವುದು ಸಹಜ. ವ್ಯಾಪಾರದಲ್ಲಿ ಮೋಸಮಾಡುವುದೂ ಕೂಡ ಸಹಜ. ಲಾಭವನ್ನೇ ಗುರಿಯಾಗುಳ್ಳ ವ್ಯಾಪಾರಿಗೆ ಪರಹಿತದ ಚಿಂತನೆ ಸಾಧ್ಯವಾಗುವುದಿಲ್ಲ; ಹಾಗೆ ಅದನ್ನೇ ನೋಡುತ್ತಾ ಆತ ವೃತ್ತಿಯನ್ನು ಬದಲಾಯಿಸುವುದು ಸರಿಯಲ್ಲ--ಎನ್ನುತ್ತಾರೆ ಪ್ರಭುಪಾದರು. ಗೀತೆಯನ್ನು ಬೋಧಿಸಿದ ಶ್ರೀಕೃಷ್ಣ ಹೇಳಿದ್ದು : ||ಚಾತುರ್ವಣಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ || ವ್ಯಕ್ತಿ ಕೈಗೊಳ್ಳುವ ವೃತ್ತಿ ಮತ್ತು ಆತನ ಸ್ವಭಾವ ಇವೆರಡನ್ನು ಅವಲಂಬಿಸಿ ವರ್ಣಾಶ್ರಮವನ್ನು ನಾನೇ ನಿರ್ಧರಿಸಿದ್ದೇನೆ ಎನ್ನುತ್ತಾನೆ. ಹಾಗಾದರೆ ವರ್ಣಾಶ್ರಮಗಳು ಯಾವುವು ಎಂಬುದನ್ನೂ ಹೇಳಿದ್ದಾನೆ--ಅದು ತಮಗೆಲ್ಲಾ ವಿದಿತವೇ ಅಗಿದೆ. ಶರೀರವೊಂದರಲ್ಲಿ ಮುಖ ಕೈ ಕಾಲು ಹೊಟ್ಟೆ ಅಥವಾ ಹೃದಯ, ಪುಪ್ಪುಸ, ಜಠರ, ಕರುಳು ಇತ್ಯಾದಿ ಅಂಗಗಳಲ್ಲಿ ಯಾವುದು ಹೆಚ್ಚು ಯಾವುದು ಕಮ್ಮಿ ಎನ್ನಲು ಸಾಧ್ಯವಾಗುವುದಿಲ್ಲ ಹೇಗೋ ಈ ಜೀವನ ಪದ್ಧತಿಯಲ್ಲಿ ವರ್ಣಾಶ್ರಮಗಳಲ್ಲಿ ಇದೇ ಮೇಲು ಇದೇ ಕೀಳು ಎನ್ನಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮನುಷ್ಯರಾದ ನಾವು ಮನಗಾಣಬೇಕಾಗಿದೆ.

ಶರೀರವೊಂದನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ ಇಡೀ ಶರೀರದಲ್ಲಿ ಮುಖ ಅಥವಾ ತಲೆ ಬ್ರಾಹ್ಮಣನೆಂತಲೂ, ಕೈಗಳು ಕ್ಷತ್ರಿಯ ಎಂತಲೂ, ತೊಡೆಯ ಭಾಗ ವೈಶ್ಯ ಎಂತಲೂ ಪಾದದ ಭಾಗ ಶೂದ್ರ ಎಂತಲೂ ಸಾಂಕೇತಿಕವಾಗಿ ನಾವು ಹೇಳಿಕೊಳ್ಳಬಹುದಾಗಿದೆ. ಇಡೀ ಶರೀರಕ್ಕೆ ಆಧಾರಸ್ಥಂಭ ಪಾದಗಳು. ಅವುಗಳಮೇಲೆ ಶರೀರ ನಿಲ್ಲುವಂತೇ ನೋಡುವುದು ಕಾಲು/ತೊಡೆಗಳು. ಶರೀರಕ್ಕೆ ರಕ್ಷಣೆಯನ್ನೊದಗಿಸುವ ಅಥವಾ ಕೆಲಸಗಳನ್ನು ಮಾಡಿ ಆಹಾರ/ವಸ್ತುಗಳನ್ನು ಪೂರೈಕೆ ಮಾಡುವುದು ಕೈಗಳು. ಪಂಚೇಂದ್ರಿಯಗಳನ್ನು ಇರಿಸಿಕೊಂಡು ಸಂದೇಶಗಳನ್ನು ಸ್ವೀಕರಿಸುವ ಮತ್ತು ರವಾನಿಸುವ ಕೆಲಸ ಮಾಡುವುದು ತಲೆ. ಇವುಗಳಲ್ಲಿ ಯಾವುದು ಇರದಿದ್ದರೆ ಕೆಲಸ ನಡೆಯುತ್ತದೆ ? ಎಲ್ಲವೂ ಬೇಕು ಅಲ್ಲವೇ? ಹಾಗೆಯೇ ಜನಜೀವನದಲ್ಲಿ ಆಯಾಯ ವೃತ್ತಿಗಳು ಇಂತಿಂಥಾ ವರ್ಣಗಳಿಗೆ ಸಂಬಂಧಿಸಿವೆ ಎಂಬುದನ್ನೂ ಕೃಷ್ಣ ಹೇಳಿದ. ಕೇವಲ ಹುಟ್ಟಿನಿಂದ ಯಾವನೂ ಯಾವುದೇ ವರ್ಣಕ್ಕೂ ಸೇರಿದಾತ ಎಂಬುದನ್ನು ನಿರ್ಣಯಿಸಲಾಗುವುದಿಲ್ಲ; ಬದಲಾಗಿ ವ್ಯಕ್ತಿ ಕೈಗೊಳ್ಳುವ ವೃತ್ತಿ ಮತ್ತು ಆತನ ಮನೋಧರ್ಮವನ್ನು ತಿಳಿದು ಆತ ಯಾವ ವರ್ಣದವನು ಎಂಬುದನ್ನು ಅಳೆಯಬೇಕಾಗುತ್ತದೆ.

ವೇದಕಾಲದಲ್ಲಿ ವೃತ್ತಿಗಳು ವಂಶಪಾರಂಪರ್ಯವಾಗಿ ಗುರುಕುಲ ಪದ್ಧತಿಯಲ್ಲಿ ನಡೆದುಬಂದವು. ಗುರುವಿಗೆ ಶಿಷ್ಯಂದಿರು ಮಕ್ಕಳೇ ಆಗಿರುವುದೂ ಮಕ್ಕಳಿಗೆ ಮನೆಯಲ್ಲೇ ತಂದೆ ಗುರುವಾಗಿ ಪೂರಕ ವಾತಾವರಣದಲ್ಲಿ ತಾನುತಿಳಿದ ವೃತ್ತಿವಿದ್ಯೆಯನ್ನು ಧಾರೆ ಎರೆಯುವುದು ಸತತವಾಗಿ ನಡೆದುಬಂದಿತ್ತು. ಈಗ ಹಾಗಿಲ್ಲ. ಕಾಲದ ಪರಿಕ್ರಮದಲ್ಲಿ ಭಟ್ಟರೊಬ್ಬರು ಕೋಳಿಫಾರ್ಮ ಮಾಡುತ್ತಾರೆ, ಶೆಟ್ಟರೊಬ್ಬರು ಇಡೀದಿನ ಹೋಮ ಮಾಡುತ್ತಾರೆ, ದಲಿತನೊಬ್ಬ ಅನ್ಯಾಹಾರ ತೊರೆದು ತಪಸ್ಸುಮಾಡತೊಡಗುತ್ತಾನೆ ಹೀಗೇ ಯಾರ್ಯಾರೋ ಯಾವ್ಯಾವುದೋ ವೃತ್ತಿಯನ್ನು ಹಿಡಿಯುತ್ತಾರೆ; ಅದರಿಂದ ತಮ್ಮ ಉಪಜೀವನಕ್ಕೆ ಆದಾಯ ಕಂಡುಕೊಳ್ಳುತ್ತಾರೆ. ಅಂದರೆ ಗುರುಕುಲ ಪದ್ಧತಿಯಲ್ಲಿ ಬಂದಿದ್ದ ವೃತ್ತಿಧರ್ಮ ಈಗ ನಶಿಸಿಹೋಗಿದೆ. ಕಾಲಚಕ್ರದ ಹಲ್ಲುಗಳು ತಿರುಗುವಾಗ ಜಾಗತೀಕರಣ ಬಂದಮೇಲಂತೂ ಕುಂಬಾರರು, ಬಡಿಗರು, ಅಕ್ಕಸಾಲಿಗರೇ ಮೊದಲಾದ ಗುಡಿಕೈಗಾರಿಕೆಯ ವೃತ್ತಿಯವರು ದಿಕ್ಕೆಟ್ಟು ಬದುಕಿಗಾಗಿ ಸಿಕ್ಕ ಸಿಕ್ಕ ದಂಧೆಗಳನ್ನೋ ನೌಕರಿಯನ್ನೋ ಮಾಡಬೇಕಾಗಿ ಬಂತು. ತಂದೆಯ ಮನೆಯಲ್ಲಿ ಹುಟ್ಟಿನಿಂದ ಕಂಡು ಕಲಿತ ವೃತ್ತಿಯಲ್ಲಿ ಪರಿಪೂರ್ಣತೆಯನ್ನು ಅಥವಾ ಪರಿಪಕ್ವತೆಯನ್ನು ಗಳಿಸಿದ್ದ ವ್ಯಕ್ತಿಯೊಬ್ಬ ಅದನ್ನೇ ನೆಚ್ಚಿ ಬದುಕುವ ಕಾಲ ಇಲ್ಲವಾಯ್ತು. ಅಂತಹ ಸ್ಥಿತಿಯಲ್ಲಿ ವ್ಯಕ್ತಿ ತನ್ನ ಬದುಕಿಗಾಗಿ ಬೇರೇ ಬೇರೆ ವಿದ್ಯೆಗಳನ್ನು ವಿಶ್ವವಿದ್ಯಾಲಯಗಳ ಮೂಲಕ ಪಠ್ಯ ಓದಿ ಕಲಿಯಬೇಕಾಯ್ತು. ಕೇವಲ ಪಠ್ಯಮಾತ್ರದಿಂದ ಕಾರ್ಯಾನುಭವ ಸಾಲದಾದಾಗ ವ್ಯಕ್ತಿ ಮುಗ್ಗರಿಸುವ ಸಮಯವೂ ಬಂತು. ಒಟ್ಟಾರೆ ಗುರುಕುಲ ಪದ್ಧತಿ ನಶಿಸಿ ವಿಶ್ವವಿದ್ಯಾಲಯಗಳು ಬಾಗಿಲು ತೆರೆದವು.

ಇವತ್ತಿನ ಮಾನವನಲ್ಲಿ ಪ್ರತಿಯೊಬ್ಬನಲ್ಲೂ ನಾಲ್ಕೂ ವರ್ಣಗಳು ಮಿಳಿತವಾಗಿವೆ ಎಂಬುದು ನನ್ನ ಅಭಿಮತವಾಗಿದೆ. ವ್ಯಕ್ತಿಯೊಬ್ಬ ಶುಚಿರ್ಭೂತನಾಗಿ ಪೂಜೆ ಮಾಡುವಾಗ ಬ್ರಾಹ್ಮಣನಾಗುತ್ತಾನೆ, ತನ್ನನ್ನು ತಾನು ರಕ್ಷಿಸಿಕೊಳ್ಳುವಗ ಕ್ಷತ್ರಿಯನಾಗುತ್ತಾನೆ, ಚಿಕ್ಕ ಪುಟ್ಟ ವ್ಯಾಪಾರಗಳಲ್ಲಿ ಅಲ್ಲಲ್ಲಿ ತೊಡಗಿಕೊಂಡಾಗ ವೈಶ್ಯನಾಗುತ್ತಾನೆ ಮತ್ತು ಸೇವೆಯಲ್ಲಿ [ಸಲಹೆಕೊಡುವುದು, ಕೆಲಸಮಾಡಿಕೊಡುವುದು ಇವಕ್ಕೆಲ್ಲಾ ಪ್ರತಿಯಗಿ ಹಣಪಡೆಯುವುದು] ತೊಡಗಿಕೊಂಡು ಶೂದ್ರನಾಗುತ್ತಾನೆ. ಅಂದಮೇಲೆ ನಾಲ್ಕೂ ವರ್ಣಗಳು ಎಲ್ಲರಲ್ಲೂ ಇವೆ ಎಂದಾಯ್ತಲ್ಲ !

ವರ್ಣಾಶ್ರಮ ನಶಿಸಿದಾಗ ಅಥವಾ ವರ್ಣಸಂಕರವಾದಾಗ ಕೆಲಸಗಳು ಹೇಗೆ ಸಾಗಬೇಕೋ ಹಾಗೆ ಸಾಗುವುದಿಲ್ಲ; ಸಮಾಜದಲ್ಲಿ ಸ್ಥಿತ್ಯಂತರವಾಗಿ ಸ್ವೇಚ್ಛಾಚಾರ ಜಾಸ್ತಿಯಾಗುತ್ತದೆ ಎಂಬುದು ಪ್ರಭುಪಾದರ ಪ್ರತಿಪಾದನೆಯಾಗಿತ್ತು. ಇವತ್ತು ಆಗಿದ್ದೇನು ? ಸಮಾಜದಲ್ಲಿ ಯಾರನ್ನೂ ಯಾರೂ ನಿಯಂತ್ರಿಸುವ ಹಾಗಿಲ್ಲ. ಪ್ರತಿಯೊಬ್ಬನಿಗೂ ಅವನದ್ದೇ ಆದ ಹಕ್ಕುಗಳಿವೆ. ಆತ ಕದ್ದೂ ಮುಚ್ಚಿ ನೂರಾರು ಅನೈತಿಕ ಸಂಪರ್ಕ ಇಟ್ಟುಕೊಳ್ಳಬಹುದು-ಆದರೆ ಕಾಯ್ದೆಬದ್ಧವಾಗಿ ಯಾವುದಕ್ಕೂ ದಾಖಲೆ ಸಿಗದಿದ್ದರಾಯ್ತು! ಬ್ರಾಹ್ಮಣ ಎನಿಸಿಕೊಂಡವನು ಸಾರಾಯಿ ಕುಡಿಯಬಹುದು-ಮಾಂಸ ತಿನ್ನಬಹುದು-ಪರಸ್ತ್ರೀ ಸಂಗ ಮಾಡಬಹುದು; ಆದರೆ ಯಾರಿಗೂ ಗೊತ್ತಾಗದ ಹಾಗೇ ಮಾಡಿಕೊಂಡರಾಯ್ತು! ವರ್ಣಸಂಕರದಿಂದ ಪ್ರಮುಖವಾಗಿ ಏನಾಗುತ್ತದೆ ಎಂದರೆ ವ್ಯಕ್ತಿಗಳ ನ್ಯಾಚುರಲ್ ಹ್ಯಾಬಿಟಾಟ್ ಇರುತ್ತದಲ್ಲ ಅದು ಯೂನಿವರ್ಸಲ್ ಆಗುತ್ತದೆ! ಆಗ ಎಲ್ಲರ ಆಹಾರ ಕ್ರಮವೂ ಒಂದೇ, ಸ್ನಾನ ಮಾಡದೇ ತಿಂದರೂ ಸರಿ ಮಾಡಿದರೂ ಸರಿ, ಎಡಗೈಲಿ ತಿಂದರೂ ಸರಿ ಬಲಗೈಲಿ ಮುಕ್ಕಿದರೂ ಸರಿ, ಹಗಲಿಗೆ ನಿದ್ದೆಮಾಡಿ ರಾತ್ರಿ ಕೆಲಸಮಾಡಿದರೂ ಸರಿ, ಎಲ್ಲರಿಗೂ ಎಲ್ಲವುದಕ್ಕೂ ಸ್ವಾತಂತ್ರ್ಯ--ಏನು ಬೇಕಾದರೂ ಮಾಡಿಕೊಳ್ಳಿ ಎಂಬ ಅಪರಿಮಿತ ಸ್ವೇಚ್ಛೆಯ ಅನುಮತಿ! ಇದಕ್ಕೆ ಒಂದು ಚಿಕ್ಕ ಉದಾಹರಣೆ ಎಂದರೆ ಇವತ್ತಿನ ಸಮಾಜ ನಡೆದು ಮುಂದೆ ಸಾಗುವ ಸ್ಥಿತಿಯನ್ನು ಅವಲೋಕಿಸಿದರೆ ಪಾನಮತ್ತನಾದ ಚಾಲಕ ವಾಹನ ಚಲಾಯಿಸುವ ರೀತಿ ಗೋಚರವಾಗುತ್ತದೆ! ಇದು ಬೇಡವಾಗಿತ್ತು ಎಂಬುದು ಪ್ರಭುಪಾದರ ಪ್ರತಿಪಾದನೆಯಾಗಿತ್ತು.

ಎರಡನೆಯದು ಮುಂದಿನ ಪೀಳಿಗೆಯ ಬಗ್ಗೆ: ಹಲವು ಬ್ಲಾಗ್ ಗಳಲ್ಲಿ ಬರಹಗಳೇನಕವುಗಳಲ್ಲಿ ನಾನು ಓದಿದ್ದು ಹೆಂಗಸರಿಗೆ ಸ್ವಾತಂತ್ರ್ಯವಿಲ್ಲ-ಮುಕ್ತಸ್ವಾತಂತ್ರ್ಯವಿಲ್ಲ ಎಂಬುದನ್ನು. ಇವತ್ತು ಹೆಂಗಸರು ಹೆಣ್ಣುಮಕ್ಕಳು ಮುಕ್ತರಾಗಿದ್ದಾರೆ. ಹೆಣ್ಣು ಎಂಬ ಶಬ್ದಕ್ಕೆ ಹಡೆಯುವುದು ಎಂಬ ಅರ್ಥವೂ ಇದೆ ಎಂದು ಭಾವಿಸುತ್ತೇನೆ. ಅಂದಮಾತ್ರಕ್ಕೆ ಹೆಣ್ಣು ಕೇವಲ ಹಡೆಯುವ ಯಂತ್ರವೇ ಎಂದು ವಿತಂಡ ವಾದ ಬೇಡ. ನೈಸರ್ಗಿಕವಾಗಿ ಹೆಣ್ಣು ಸ್ವೀಕರಿಸುವ ಗುಣವುಳ್ಳವಳು. ಗಂಡು ಬೀರುವ/ಕೊಡುವ ಗುಣವುಳ್ಳವನು. ಆತ್ಮಕ್ಕೆ ಲಿಂಗಭೇದವಿರದಿದ್ದರೂ ಮಾನವ ಜನ್ಮಕ್ಕೆ ಬಂದಮೇಲೆ ಆ ಯಾ ಲಿಂಗಕ್ಕೆ ತಕ್ಕಂತೇ ಮಾನವ ತನ್ನ ಗುಣಧರ್ಮಗಳನ್ನು ಹೊಂದಿರುವುದು ಸಹಜ. ಹೆಣ್ಣನ್ನು ಹೂವಿಗೂ ಗಂಡನ್ನು ದುಂಬಿಗೂ ಹೋಲಿಸುತ್ತಾರೆ ತಿಳಿದವರು. ದುಂಬಿ ಒಂದೆಡೆ ನಿಲ್ಲುವುದಿಲ್ಲ ಹೇಗೋ ಹಾಗೇ ಗಂಡಿಗೆ ಒಂದೆಡೆ ನಿಲ್ಲುವ ಮನೋಧರ್ಮ ಸ್ವಲ್ಪ ಕಡಿಮೆ ಇರುತ್ತದೆ; ಅವಕಾಶ ಸಿಕ್ಕಿದರೆ ದುಂಬಿ ಹಲವು ಹೂವುಗಳಿಗೆ ಹಾರುತ್ತದೆ; ಕೂರುತ್ತದೆ. ಸ್ವೀಕರಿಸುವ ಹೆಣ್ಣಿನಲ್ಲಿ ಸಂತಾನೋತ್ಫತ್ತಿಯ ಪ್ರಕ್ರಿಯೆ ನಡೆಯುತ್ತದೆ. ಹೂವು ಪರಾಗವನ್ನು ಹೀರಿ ಫಲಭರಿತವಾಗುತ್ತದೆ, ಪೀಚು ಕಾಯಿಗಳು ಕಾಣಿಸಿಕೊಳ್ಳುತ್ತವೆ. ಮಾನವನ ಸಂಶೋಧನೆಗಳಿಂದ ಹೆಣ್ಣಿನಲ್ಲಿ ಸಂತಾನೋತ್ಫತ್ತಿ ಆಗದಂತೇ ನಿಯಂತ್ರಿಸಿಕೊಳ್ಳುವ ಹಲವು ದಾರಿಗಳು ಲಭ್ಯವಾಗಿವೆ. ಓದಿದ ಹೆಣ್ಣುಮಕ್ಕಳು ಹಲವು ವೃತ್ತಿಗಳಲ್ಲಿ ಗಂಡಸರಿಗೆ ಸರಿಸಮವಾಗಿ ದುಡಿಯ ಹೊರಟು ಆರ್ಥಿಕವಾಗಿ ಸ್ವತಂತ್ರರಾಗಿದ್ದಾರೆ.

ಈ ಆರ್ಥಿಕ ಸ್ವಾತಂತ್ರದ ಜೊತೆಗೆ ಇಂದಿಗೆ ನಮಗೆ ಸಾಮಾಜಿಕ ಜಾಲತಾಣಗಳು, ಸಂವಹನಕ್ಕೆ ಜಂಗಮ ದೂರವಾಣಿಗಳು, ಮಿಂಚಂಚೆಯ ರಹ[ಸ್ಯ]ದಾರಿಗಳು ಎಲ್ಲವೂ ಲಭ್ಯವಾಗಿವೆ. ಸ್ವಾಮೀ ನಂಬಿದರೆ ನಂಬಿ ಬಿಟ್ಟರೆ ಬಿಡಿ ಹೆಣ್ಣುಮಕ್ಕಳಲ್ಲಿ ಪ್ರೇಮದ ಸಾಫ್ಟ್ ಕಾರ್ನರ್ ಮರೆಯಾಗಿ ಕಾಮದ ತೆವಲು ಜಾಸ್ತಿಯಾಗಿದೆ. ಸಮಾಜದಲ್ಲಿ ಎಲ್ಲೆಂದರಲ್ಲಿ ಬೇಕುಬೇಕಾದ ವೈಖರಿಯ ದಿರಿಸುಗಳನ್ನು ಧರಿಸಿ ಓಡಾಡುವ ಹೆಣ್ಣುಮಕ್ಕಳನ್ನು/ಹೆಂಗಸರನ್ನು ಕಂಡಾಗ ಜನಸಾಮಾನ್ಯ ಹುಡುಗ/ಗಂಡಸು ತನ್ನನ್ನೇ ತಾನು ಮರೆತು ಪುಂಗಿಯ ನಾದಕ್ಕೆ ತಲೆದೂಗುವ ಹಾವಿನಂತಾಗಿ ಅವರ ಹಿಂದೆ ಬೀಳುವುದು ನಡೆಯುತ್ತಿದೆ. ಇಲ್ಲಿ ಎರಡು ವೈಖರಿ. ಹೆಣ್ಣಿಗೆ ತನಗೆ ಬೇಕಾದವ ಸಿಕ್ಕಿದರೆ ಲಿವ್-ಇನ್, ತನಗೆ ಬೇಡದವ ಎಂದಾದರೆ ಗೆಟ್-ಔಟು! ಹೇಳಿಕೊಳ್ಳಲು ನಾಚಿಕೆಯಾಗುತ್ತದೆ ಮದುವೆಯಾದ ಹೆಂಗಸರು/ಮುದುಕಿಯರು ಫೇಸ್ ಬುಕ್ ಗಾಗಿ ನಾನಾ ಥರದ ವೇಷಗಳಲ್ಲಿ ತಾನಿನ್ನೂ ಷೋಡಶಿ ಎಂಬ ರೀತಿ ಪೋಸುಕೊಡುವ ಭಾವಚಿತ್ರಗಳನ್ನು ಪ್ರಕಟಿಸುವುದನ್ನು ತಾವೆಲ್ಲಾ ಕಾಣಬಹುದಾಗಿದೆ! ದಶಕಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ವಿವಾಹ ವಿಚ್ಛೇದನ ಬಹಳೇ ಜಾಸ್ತಿಯಾಗಿದೆ! ನನಗೆ ತಿಳಿದಿರುವಂತೇ ಕಾರಣವೇ ಇಲ್ಲದೇ ನಡೆದ ಮೂರ್ನಾಲ್ಕು ವಿಚ್ಛೇದನಗಳನ್ನು ಕಂಡಿದ್ದೇನೆ. ನಮ್ಮಲ್ಲಿ ಅಜ್ಜಿ ಗಾದೆಯೊಂದನ್ನು ಹೇಳುತ್ತಿದ್ದರು" ಗಂಡು ಕುಳಿತು ಕೆಡ್ತು; ಹೆಣ್ಣು ತಿರುಗಿ ಕೆಡ್ತು" --ಇದರ ಅರ್ಥ ಗಂಡು ಸೊಂಬೇರಿಯಾದರೆ ಆಲಸಿಯಾದರೆ ಸಂಸಾರ ನಡೆಯುವುದಿಲ್ಲ, ಹೆಣ್ಣು ಕಂಡಕಂಡಲ್ಲಿ ತಿರುಗುವಾಗ ನಾಕಾರು ಗಂಡಸರ ಕಣ್ಣು ಹೆಣ್ಣಿನಮೇಲೆ ಬೀಳುವುದರಿಂದ ಆ ಹೆಣ್ಣು ಯಾರ ಸಂಪರ್ಕಕ್ಕೂ ಮುಂದಾಗಬಹುದು, ಅಥವಾ ಅತ್ಯಾಚಾರಕ್ಕೂ ಗುರಿಯಾಗಬಹುದು ಎಂದು. ಹೌದು ಎನ್ನುತ್ತೀರಾ?

ಇವತ್ತಿನ ಅನೇಕ ಕಚೇರಿಗಳಲ್ಲಿ ಕದ್ದು ಮುಚ್ಚಿ ಯಾ ಒತ್ತಡಕ್ಕೆ ಸಿಲುಕಿ ನಡೆಯುವ ಹೆಂಗಸರ ಅನೈತಿಕ ಸಂಬಂಧಗಳು ಬಹಿರಂಗಗೊಂಡರೆ ಭಾರೆತೀಯ ಸಮಾಜದಲ್ಲಿ ಮದುವೆ ಎಂಬ ಪದಕ್ಕೆ ಹೊಸ ಅರ್ಥ ಬರೆಯಬೇಕಾಗಬಹುದೇ? ಇನ್ನು ಸಿನಿಮಾ ಅಥವಾ ರಂಗಭೂಮಿ ಕಲಾವಿದರಲ್ಲಿ ಇದರ ಬಗ್ಗೆ ಹೇಳುವುದೇ ಬೇಡ; ಅದೆಲ್ಲಾ ಅನಿವಾರ್ಯ ಅಂತಾರೆ ಅವರು! ಸಂವಹನ ಪ್ರಕ್ರಿಯೆ, ಪ್ರಚೋದಕ ಸಿನಿಮಾ, ವಿಕೃತ ಸಾಹಿತ್ಯ, ವೈಭವೀಕೃತ ಮಾಧ್ಯಮಗಳ ವರದಿ ಇವೆಲ್ಲಾ ಒದಗಿ ಪ್ರಸ್ತುತ ಪ್ರೌಢಶಾಲೆಯಲ್ಲೇ ಮಕ್ಕಳು ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದಾರೆ. ಅಪ್ಪ-ಅಮ್ಮಂದಿರಿಗೆ ಹೇಗೆ ಟೋಪಿ ಹಾಕಿ ಎಲ್ಲೆಲ್ಲಿ ಬಾಯ್ ಫ್ರೆಂಡು /ಗರ್ಲ್ ಫ್ರೆಂಡುಗಳನ್ನು ಭೇಟಿಯಾಗಬೇಕೆಂಬುದನ್ನು ಯೋಚಿಸುವಷ್ಟು ಮುಂದುವರಿದ ಜನಾಂಗ ಅವರಾಗಿದ್ದಾರೆ! ನನಗೆ ತಿಳಿದ ಬೆಂಗಳೂರಿನ ರಾಜಾಜಿನಗರದ ಒಳ್ಳೆಯ ಹೆಸರುಳ್ಳ ಶಾಲೆಯೊಂದರಲ್ಲಿನ ವಿದ್ಯಾರ್ಥಿನಿಯನ್ನು ತಾಯಿ ಗೈನಾಕಾಲಜಿಸ್ಟ್ ಹತ್ತಿರ ಪರೀಕ್ಷೆಗೆ ಕರೆದೊಯ್ದಾಗ ತಿಳಿದುಬಂದ ವಿಷಯ: ಆಕೆಯ ಸಹಪಾಠಿ ಬಾಯ್ ಫ್ರೆಂಡು ಮತ್ತು ಅವಳು ’ಅದನ್ನು’ ನಡೆಸಿದ್ದರು; ಅದರಿಂದಾಗಿ ಅವಳೀಗ ’ಇದು’ ! ಗುರುವಿಲ್ಲದ ವಿದ್ಯೆ ಜಗತ್ತಿನಲ್ಲಿ ಇದೊಂದೇ ಇರಬೇಕು!

ಕಾಟಾಚಾರಕ್ಕೆ ಮದುವೆ ಎಂಬ ’ಬಂಧನ’ಕ್ಕೆ ಒಳಗಾಗುವ ಇಂದಿನ ಹುಡುಗಿಯರು ಸಾಮಾಜಿಕ ತಾಣಗಳಲ್ಲಿ ತಮ್ಮ ಗಂಡು ಸ್ನೇಹಿತರೊಂದಿಗೆ ಸಂವಹಿಸುವ ವ್ಯಾಖ್ಯೆಗಳನ್ನು ಒಮ್ಮೆ ನೀವು ನಿಗಾ ಇರಿಸಿ ನೋಡಬೇಕು. ಸಮಾಜದಲ್ಲಿ ದಾಂಪತ್ಯದ ಪ್ರೀತಿ ಎಂಬುದು ಮರುಭೂಮಿಯ ಜಲವಾಗಿದೆ. ಹರೆಯ ಇರುವ ವರೆಗೆ, ಸೌಂದರ್ಯ ಇರುವವರೆಗೆ, ಮೈಯ್ಯಲ್ಲಿ ಕಸುವು ಇರುವವರೆಗೆ ಆದಷ್ಟೂ ’ಅನುಭವಿಸಬೇಕು’ ಎಂಬ ಹೊಸಯುಗದ ಪೀಳಿಗೆಯನ್ನು ನೋಡುತ್ತಿದ್ದರೆ ಪ್ರಭುಪಾದರು ಹೇಳಿದ್ದು ನೆನಪಿಗೆ ಬರುತ್ತದಲ್ಲವೇ? ಬಿಗ್ ಬಾಸಿಗೆ ಅವಳ್ಯಾರೋ ಸನ್ನಿ ಲಿಯಾನ್ ಬಂದು ಸುದ್ದಿ ಮಾಡಿದಳಲ್ಲ? ಅವಳೇನೋ ಪತಿವ್ರತೆ ಎಂಬಂತೇ ನಮ್ಮ ಮಂದಿ ಹೊತ್ತು ಕುಣಿದರಲ್ಲಾ ಅಂತಹ ಸಾವಿರಾರು ಘಟನೆಗಳು ಇಂದಿನ ನಮ್ಮ ಸಮಾಜದಲ್ಲಿ ಕಾಣಿಸುತ್ತಿವೆ. ಸ್ವೇಚ್ಛೆಯಿಂದ ತಿರುಗುವ ಬೇಕಾದ್ದನ್ನು ತನ್ನ ಬಾಯ್ ಫ್ರೆಂಡುಗಳ ಥೈಲಿಯಿಂದ ಖರೀದಿಸಬಲ್ಲ ಗಂಡುಬೀರಿ ಹೆಣ್ಣಿನ ಹಿಂದೆ ಅವೆಷ್ಟು ಗಂಡುಗಳು ಅಲೆಯುವುದಿಲ್ಲ? ರಾಜಕಾರಣಿಗಳಿಲ್ಲವೇ? ಸಿನಿಮಾ ಪ್ರಮುಖರಿಲ್ಲವೇ? ಮಂಚದ ಕೆಳಗೆ ಸಂಸಾರ ನಡೆಸುವ ಮತಗಳ ಅನುಯಾಯಿಗಳಿಲ್ಲವೇ ? ಇಂದಿನ ನಮ್ಮ ಮಾಧ್ಯಮಗಳು ಅಂತಹ ಗಂಡುಬೀರಿಯರ ವೃತ್ತಾಂತಗಳನ್ನೇ ಮತ್ತೆ ಮತ್ತೆ ಬಿತ್ತರಿಸಿ ಅವರನ್ನು ಎತ್ತಿ ಹುರಿದುಂಬಿಸುತ್ತಿಲ್ಲವೇ? ಲಿವ್-ಇನ್ ರಿಲೇಶನ್ ಅಥವಾ ಮದುವೆ-ವಿಚ್ಛೇದನ-ಮದುವೆ-ವಿಚ್ಛೇದನಗಳಿಂದ ನಡುವೆ ಜನಿಸುವ ಕೂಸುಗಳು ಮುಂದಿನ ವಾರಸುದಾರರಾದರೆ ಅವರನ್ನು ಅಪೇಕ್ಷೆ ಪಡಬೇಕಾದ ತಂದೆ-ತಾಯಿಗಳ ಪ್ರೀತಿ ವಾತ್ಸಲ್ಯ ಅವರುಗಳಿಗೆ ದೊರೆಯದಾದಾಗ ಆ ಮಕ್ಕಳನ್ನು ಅನಪೇಕ್ಷಿತ ಮಕ್ಕಳೆಂದರೆ ತಪ್ಪೇ? ಅಂತಹ ಮಕ್ಕಳಿಗೆ ಸರಿಯಾದ ಜೀವನ ಮಾರ್ಗದರ್ಶನವಿಲ್ಲದೇ ಮುಂದೆ ಅವರವರೇ ಉಳಿವಿಗಾಗಿ ಬಡಿದಾಡುವ ರಕ್ಕಸ ಮನೋವೃತ್ತಿ ಅವರಲ್ಲಿ ಬರದೇ ಇದ್ದೀತೇ ?

ಇದನ್ನೆಲ್ಲಾ ಕಾಣುತ್ತಾ ನನ್ನಂತಹ ಬಡಪಾಯಿಗೆ ಅಲ್ಲೆಲ್ಲೋ ಒಂದುಕಡೆ ಪ್ರಭುಪಾದರು ಹೇಳಿದ್ದರಲ್ಲಿ ತಪ್ಪು ಕಾಣಿಸುವುದಿಲ್ಲ. ಗೀತೆಯ ಅರ್ಥವ್ಯಾಪ್ತಿ ಬಹಳ ಅಗಾಧವಾಗಿದ್ದುದನ್ನು ಅವರು ಈ ತೆರನಾಗಿ ಅರ್ಥೈಸಿದ್ದರೂ ಇದರಲ್ಲಿ ಹುರುಳಿಲ್ಲ ಎನ್ನಲಾಗುವುದಿಲ್ಲ ಅಲ್ಲವೇ? ಅರಿತು ಮುಟ್ಟಿದರೂ ಅರಿಯದೇ ಮುಟ್ಟಿದರೂ ಸುಡುವುದು ಬೆಂಕಿಯ ಧರ್ಮವಾದ ಹಾಗೇ ನೀತಿಗೆಟ್ಟ ಸಮಾಜದ ಬಹಿರಂಗದಲ್ಲಿ ಗೌರವದ ಲೇಪ ಹಚ್ಚಿ ಬದುಕುವ ನಮಗೆ ಅಂತರಂಗದಲ್ಲಿ ಆಗುತ್ತಿರುವ ಅನಾಹುತಗಳ ಕಲ್ಪನೆ ಇದೆಯೇ? ಆರೋಗ್ಯಕರ ಸಮಾಜವನ್ನು ಭಾರತ ಉಳಿಸಿಕೊಳ್ಳಬೇಕಾದರೆ ಪಶ್ಚಿಮಾಗ್ರಹ ಬಂದು ಪೂರ್ಣವಾಗಿ ಒತ್ತರಿಸುವ ಮುನ್ನ ಎಚ್ಚೆತ್ತುಕೊಂಡು ಭಾರತೀಯ ಕುಟುಂಬವ್ಯವಸ್ಥೆ ಬುಡಮೇಲಾಗದಂತೇ ಕಾಪಾಡುವುದು ನಮ್ಮ ಧರ್ಮವಾಗಿದೆ; ಕರ್ತವ್ಯವಾಗಿದೆ. ಭಾರತೀಯರಿಗೆ ಸಿಗುತ್ತಿರುವ ಗೌರವ ಕೂಡಾ ಇಲ್ಲಿನ ಶಾಂತ ಸಹಜ ಸುಲಲಿತ ಕುಟುಂಬ ವ್ಯವಸ್ಥೆಯ ಮೇಲೆ, ದಾಂಪತ್ಯದ ಲಲಿತಕಲೆಯಮೇಲೆ ಅವಲಂಬಿಸಿದೆ. ಜಗತ್ತಿನಲ್ಲಿ ಅದರಲ್ಲೂ ಭಾರತದಲ್ಲಿ ಮನುಷ್ಯನಾಗಿ ಹುಟ್ಟಿದ್ದಕ್ಕೆ ಮನುಷ್ಯ ಸಹಜಧರ್ಮ ಯಾವುದು ಎಂಬುದನ್ನರಿತು ಇತರೆ ಪ್ರಾಣಿವರ್ಗಗಳಿಂದ ನಮ್ಮನ್ನು ಬೇರ್ಪಡಿಸಿಕೊಳ್ಳಬೇಕಾಗಿದೆ; ಈ ದಿಸೆಯಲ್ಲಿ ಗೀತೆ ಆದರ್ಶಗಳನ್ನು ಎತ್ತಿ ತೋರುತ್ತದೆ.

7 comments:

  1. ಧರ್ಮದಂಥಾ ಸೂಕ್ಷ್ಮವಿಷಯದ ಬಗ್ಗೆ ನಿಶ್ಚಿತ ಅಭಿಪ್ರಾಯ ತಳೆಯುವುದು ತುಸು ಕಷ್ಟ, ಅದರ ಇವತ್ತಿನ ರಾಜಕೀಯ ಕಾರಣಕ್ಕಲ್ಲ, ಧರ್ಮದ ಮೂಲಭೂತ ಸೂಕ್ಷ್ಮಗುಣದಿಂದಾಗಿಯೇ. ಆದರೂ ತಮಗನ್ನಿಸಿದ್ದನ್ನು ನಿರ್ಭಿಡೆಯಾಗಿ ಖಡಾ ಖಂಡಿತವಾಗಿ ಹೇಳುವ ತಮ್ಮ ನಿಲುವು ಮೆಚ್ಚತಕ್ಕದ್ದು.

    ಧರ್ಮಸೂಕ್ಷ್ಮಗಳೇನೇ ಇರಲಿ, ಲೇಖನದಲ್ಲಿ ನೀವೆತ್ತಿರುವ ಕೆಲವು ಸಾಮಾಜಿಕ ಸಮಸ್ಯೆಗಳು ನಿಜಕ್ಕೂ ಗಂಭೀರ. "ದಾಂಪತ್ಯವೆನ್ನುವುದು ಲಲಿತ ಕಲೆ" ಎನ್ನುವ ನಿಮ್ಮ ಅಭಿಪ್ರಾಯಕ್ಕೆ ಎರಡು ಮಾತಿಲ್ಲ.

    ReplyDelete
  2. ಅಂದಹಾಗೆ ಭಟ್ಟರೆ, ದಯವಿಟ್ಟು ಕಾಮೆಂಟು ಬೇರೆ ಕಿಟಕಿಯಲ್ಲಿ ಬರುವಂತೆ ನಿಮ್ಮ settings ಮಾರ್ಪಡಿಸಿ. ಕೆಲವು browserಗಳಲ್ಲಿ ಇದು ಕೆಲಸ ಮಾಡುವುದಿಲ್ಲ. ಉದಾಹರಣೆಗೆ, Mozzilla ದಲ್ಲಿ ಕಾಮೆಂಟು ಮಾಡಲಾಗದೇ ಇದೀಗ IE ಮೂಲಕ ಕಾಮೆಂಟು ಹಾಕುತ್ತಿದ್ದೇನೆ.

    ReplyDelete
  3. ಭಟ್ಟರೇ,
    ನಿಮ್ಮ ಲೇಖನದ ಒಟ್ಟು ಆಶಯ, ಇ೦ದಿನ ಸ್ಥಿತಿಗತಿಯ ಸೂಕ್ಷ್ಮ ಅವಲೋಕನ, ಗೀತಾಸಾರದ ಪ್ರಸ್ತುತತೆ ಎಲ್ಲವೂ ಒಪ್ಪತಕ್ಕದ್ದೇ. ನಿಮ್ಮ ಮುಕ್ತ ಅಭಿಪ್ರಾಯವನ್ನು ಅಭಿವ್ಯಕ್ತಗೊಳಿಸಿದ್ದೀರಿ. ನಿಮ್ಮ ಕೆಲ ಹಳೆಯ ಬರಹಗಳನ್ನೂ ಓದುತ್ತಿದ್ದೇನೆ. ನಿಮ್ಮ ಬರಹಗಳಲ್ಲಿನ ವಿಷಯವೈವಿಧ್ಯ, ಭಾಷಾಶುದ್ಧಿ, ನಿಖರ ದೃಷ್ಟಿಕೋನ ಇಷ್ಟವಾಗುತ್ತದೆ. ಅಡ್ಡಗೋಡೆಯ ಮೇಲೆ ದೀಪವಿಟ್ಟ೦ತೆ ಮಾತನಾಡುವವರೇ ಇ೦ದು ಜಾಸ್ತಿ. ನಿಮಗೆ ಅನಿಸಿದ್ದನ್ನು (ಇತರರ ದೃಷ್ಟಿಯಲ್ಲಿ ಅದು ಸರಿಯೋ ತಪ್ಪೋ ಎ೦ಬ ಚಿ೦ತೆ ಬಿಟ್ಟು) ನೇರವಾಗಿ ಹೇಳುತ್ತಾ ಬ೦ದಿದ್ದೀರಿ. ನಾನು ಕೂಡ ಹೊಸದೊ೦ದು ಬ್ಲಾಗು ಶುರು ಮಾಡುತ್ತಿದ್ದೇನೆ, ಸದ್ಯದಲ್ಲೇ, ಸ೦ಪರ್ಕದಲ್ಲಿರೋಣ.
    www.vicharapriya.blogspot.com

    ReplyDelete
  4. ಹೆಣ್ಣುಮಕ್ಕಳಲ್ಲಿ ಪ್ರೇಮದ ಸಾಫ್ಟ್ ಕಾರ್ನರ್ ಮರೆಯಾಗಿ ಕಾಮದ ತೆವಲು ಜಾಸ್ತಿಯಾಗಿದೆ.
    Punching Bhatbhaga


    Shreekant Hegde

    ReplyDelete
  5. ಭಟ್ಟರೆ,
    ಇಂದಿನ ಸಮಾಜದ ವಿಶ್ಲೇಷಣೆಯನ್ನು ಚೆನ್ನಾಗಿ ಮಾಡಿದ್ದೀರಿ. ವರ್ಣಾಶ್ರಮ ಧರ್ಮದ ಇತಿ ಮಿತಿಗಳೇನೆ ಇರಲಿ, ಧರ್ಮಾರ್ಥಕಾಮಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು ಯಾವತ್ತಿಗೂ ಪ್ರಸ್ತುತವಾಗಿವೆ.

    ReplyDelete
  6. ಮಂಜುನಾಥರೇ, ಕಾಮೆಂಟು ಹಾಕಲು ಎಲ್ಲಾ ರೀತಿಯಿಂದ ಮುಕ್ತ ಗೊಳಿಸಿದ್ದೇನೆ-ಇದು ಈಗಲ್ಲ, ಆರಂಭದಿಂದಲೂ, ಆದರೂ ತಮ್ಮ ಮೊಜಿಲ್ಲಾ ಏಕ್ಸೆಪ್ಶನ್ಸ್ ನಲ್ಲಿ ಇದನ್ನು ಸೇರಿಸಿಕೊಳ್ಳಬೇಕಾಗಬಹುದು, ಇದರ ಹೊರತು ಬೇರೆ ಯಾವುದೇ ಪರಿಹಾರ ಕಾಣುತ್ತಿಲ್ಲ, ಇದು ಗೂಗಲ್ ದೋಷವೂ ಇರಬಹುದು,ಕಷ್ಟಪಟ್ಟಾದರೂ ಪ್ರತಿಕ್ರಿಯಿಸಿದ್ದೀರಲ್ಲ ಎಂಬುದು ಖುಷಿ ಮತ್ತು ಅದಕ್ಕೊಂದು ಎಕ್ಸ್ಟ್ರಾ ಧನ್ಯವಾದ ತಮಗೆ!


    ಓದಿದ, ಪ್ರತಿಕ್ರಿಯಿಸಿದ, ಓದಿ ಸುಮ್ಮನಾದ ಎಲ್ಲರಿಗೂ ಅನಂತ ವಂದನೆಗಳು, ಧನ್ಯವಾದಗಳು.

    ReplyDelete
  7. ನಿಮ್ಮ ನೇರ ನುಡಿ ಇಷ್ಟವಾಯಿತು.
    ಧನ್ಯವಾದಗಳು.

    ReplyDelete