ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, December 7, 2011

ಧರ್ಮಸ್ಥಳ ಕೂಡ ನಂಬುಗೆಯ ಮೇಲೇ ನಿಂತಿದೆ ಹೆಗ್ಗಡೆಯವರೇ !


ಧರ್ಮಸ್ಥಳ ಕೂಡ ನಂಬುಗೆಯ ಮೇಲೇ ನಿಂತಿದೆ ಹೆಗ್ಗಡೆಯವರೇ !

ನಮ್ಮೂರ ಹತ್ತಿರದಲ್ಲಿ ಮುಗ್ವಾ ಸುಬ್ರಹ್ಮಣ್ಯ ದೇವಸ್ಥಾನ. ಬಹಳ ಪುರಾತನ ಕಾಲದಿಂದ ನಂಬಿ ನಡೆತಂದ ಆಚರಣೆ, ಸಂಪ್ರದಾಯಗಳು. ಅದೇ ನಿಂಬಿಕೆಗೆ ಇಂಬುಕೊಡುವ ಶ್ರೀಕುಮಾರ ಮಕ್ಕಳಾಗದಿದ್ದವರಿಗೂ ಸಂತಾನಫಲ ಕೊಡುವಲ್ಲಿ ಸಫಲ ! ಚಿಕ್ಕ ಚಿಕ್ಕ ಬೆಳ್ಳಿಯ ತೊಟ್ಟಿಲ ಹರಕೆ, ನಾಗರ ಹೆಡೆ ಹರಕೆ ಹೀಗೇ ಹರಕೆ ಹಲವು ವಿಧ.

|| ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ||

ಎನ್ನುವ ಗೀತೆಯೆ ಉಕ್ತಿಯಂತೇ ಯಾವರೂಪದಿಂದ ಹರಕೆ ಸಲ್ಲಿಸಿದರು ಎಂಬುದಕ್ಕಿಂತ ಭಕ್ತಿ, ಶ್ರದ್ಧೆ ಮತ್ತು ಅಚಲ ನಂಬಿಕೆಯೇ ಅಲ್ಲಿ ಪ್ರಮುಖವಾಗುತ್ತದೆ. ಸಾವಿರಾರು ನಾಗರ ಕಲ್ಲುಗಳು ಪ್ರತಿಷ್ಠಾಪಿತಗೊಂಡಿವೆ, ಎಷ್ಟೋ ಹಳೆಯ ಮುಕ್ಕಾದ ಮುರುಡಾದ ಭಿನ್ನವಾದ ನಾಗರಕಲ್ಲುಗಳು ಮುಂದಿರುವ ಪುಷ್ಕರಣಿಯಲ್ಲಿ ಜಲಾಧಿವಾಸವಾಗಿವೆ. ಮೊನ್ನೆ ಚಂಪಾ ಷಷ್ಠಿಯಂದು ಸುಮಾರು ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ಇತ್ತಿದ್ದಾರೆ; ಹುಂಡಿಗೆ ಕಾಣಿಕೆ ಹಾಕಿದ್ದಾರೆ, ಅನೇಕ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ರಥೋತ್ಸವ ನಡೆಯುವುದಿಲ್ಲ, ಯಾಕೆಂದರೆ ದೇವಸ್ಥಾನ ಇರುವಲ್ಲಿ ಬಹಳ ಅಗಲವಾದ ವಿಸ್ತಾರವಾದ ಜಾಗವಿಲ್ಲ. ಅಡಕೆ ತೋಟದ ಒಂದು ಪಾರ್ಶ್ವದಲ್ಲಿ ಇರುವ ದೇವಸ್ಥಾನಕ್ಕೆ ಮೊದಲು ಕಾಲು ದಾರಿಯಲ್ಲೇ ಹೋಗಬೇಕಿತ್ತು-ಈಗ ವಾಹನ ಹೋಗುವಂತೇ ರಸ್ತೆ ಮಾಡಿದ್ದಾರೆ. ಅಲ್ಲಿ ಮಡೆಸ್ನಾನದಂತಹ ಆಚರಣೆ ನಡೆಯುವುದಿಲ್ಲ. ಆದರೆ ವಿಜೃಂಭಣೆಯ ಪಲ್ಲಕ್ಕಿ ಉತ್ಸವ, ಅಷ್ಟಾಂಗಸೇವೆ, ಪಂಚವಾದ್ಯ, ಫಳ, ನಗಾರಿ, ಮೋರಿ [ಕಹಳೆ], ಛತ್ರ-ಚಾಮರ, ಶಂಖ-ಜಾಗಟೆ ಇವೆಲ್ಲವುಗಳ ಸೇವೆ ಆಗಾಗ ಇದ್ದೇ ಇದೆ. ತ್ರಿಕಾಲ ಆಗಮೋಕ್ತ ಪೂಜೆ ನಡೆಸಲ್ಪಡುತ್ತಡುವ ಈ ಜಾಗ ಹಿಂದೆ ನಾರದರಿಂದ ಪ್ರತಿಷ್ಠಿತವಾಗಿದ್ದ ಮೂರ್ತಿಯನ್ನು ಹೊಂದಿತ್ತು ಎಂಬುದು ಐತಿಹ್ಯ; ಮೂರ್ತಿ ಹಳೆಯದಾಗಿ ಸ್ವಲ್ಪ ಭಿನ್ನವಾಗಿದ್ದರಿಂದ ಆಡಳ್ತೆಯ ಹತ್ತುಸಮಸ್ತರ ವಿನಂತಿಯ ಮೇರೆಗೆ ಐದು ವರ್ಷಗಳ ಹಿಂದೆ ಹೊಸ ವಿಗ್ರಹವನ್ನು ಶ್ರೀರಾಮಚಂದ್ರಾಪುರ ಮಠದ ಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಪ್ರತಿಷ್ಠಾಪಿಸಿದ್ದಾರೆ.

ಇಲ್ಲಿ ಮಡಿ ಎಂದರೆ ಮಡಿ. ಸ್ವಚ್ಛತೆಯಲ್ಲಿ ಕೊರತೆಕಂಡರೂ ಅಥವಾ ಮಡಿಯಲ್ಲಿ ತುಸು ವ್ಯತ್ಯಾಸವಾದರೂ ಹಾವು ಕಾಣುವುದನ್ನು ನೋಡಬಹುದಾಗಿದೆ. ಇದಕ್ಕಿಂತಾ ವಿಶೇಷ ಎಂದರೆ ಈ ಸುಬ್ಬಪ್ಪನ ಅಭಿಷೇಕಕ್ಕೆ ಒಂದು ಬಾವಿ ಇದೆ. ಅದರ ಕತ್ತದ ಹಗ್ಗ ಸುಮಾರು ಉದ್ದದ್ದು. ಆ ಹಗ್ಗವನ್ನು ಆ ಗ್ರಾಮದ ಕ್ರೈಸ್ತ ಕುಟುಂಬವೊಂದು ಹೊಸೆದುಕೊಡುತ್ತದೆ. ಹಗ್ಗ ಲಡ್ಡಾಗುತ್ತಿರುವ ಹಾಗೇ ಆ ಕ್ರೈಸ್ತರ ಮನೆಯ ವಠಾರದಲ್ಲಿ ಬುಸ್ಸಪ್ಪ ಕಾಣಿಸಿಕೊಳ್ಳುತ್ತದೆ! " ಹೋಗಪ್ಪಾ ಅರ್ಥವಾಯ್ತು ತಂದುಕೊಡ್ತೇವೆ " ಅಂದರೆ ಸಾಕು ಹಾವು ಮಾಯ! ಅದಾದ ದಿನವೊಪ್ಪತ್ತಿನಲ್ಲಿ ಹಗ್ಗವನ್ನು ಅವರು ತಂದು ಸೇವೆ ಸಲ್ಲಿಸಿ ಹೋಗುತ್ತಾರೆ. ಇದು ಇವತ್ತಿಗೂ ನಡೆಯುತ್ತಿರುವ ಚಮತ್ಕಾರ. ಹಾಗಂತ ಇದುವರೆಗೂ ಆಲ್ಲಿನ ಸುತ್ತಮುತ್ತಲ ಜಾಗಗಳಲ್ಲಿ ಹಾವು ಕಚ್ಚಿ ಸತ್ತರು ಎಂಬ ದಾಖಲೆ ಇಲ್ಲ. ಹಾಗೆಲ್ಲಾ ಕಚ್ಚುವುದೂ ಇಲ್ಲ, ಹಾವುಗಳ ಇರುವಿಕೆಯೇ ಕಾಣಿಸುವುದಿಲ್ಲ, ಆದರೂ ಮೈಲಿಗೆಯಾದರೆ, ಅಶುಚಿಯಾದರೆ ಹಾವುಗಳ ಒಡ್ಡೋಲಗವೇ ಎದ್ದು ಬರುತ್ತದೆ! ಇದು ಯಾವ ನಂಬುಗೆ ? ಇದು ಯಾವ ಜೀವ ಅಥವಾ ರಸಾಯನ ವಿಜ್ಞಾನ ?

ಮಡೆಸ್ನಾನದ ಬಗ್ಗೆ ಒಂದೆರಡು ಮಾತು :

ಕರ್ನಾಟಕದಲ್ಲಿ ಬ್ರಾಹ್ಮಣರ ಮೇಲೆ ’ಮಡೆಸ್ನಾನ’ದ ಆರೋಪ ಹೊರಿಸುತ್ತಾ ಹಲವು ಲೇಖನಗಳು ಪ್ರಕಟಗೊಳ್ಳುತ್ತಿವೆ. ಕರ್ನಾಟಕದಲ್ಲಿ ಕೇವಲ ೯ % ಬ್ರಾಹ್ಮಣರಿದ್ದಾರೆ, ಅದೂ ದಿನಗಳೆದಂತೇ ಸಂಖ್ಯೆ ಕಮ್ಮಿಯಾಗುತ್ತಿದೆ! ನಶಿಸಿ ಹೋಗಬಹುದಾದ ಸಂತತಿಗಳಲ್ಲಿ ಬ್ರಾಹ್ಮಣರೂ ಸೇರಿದರೆ ಆಶ್ಚರ್ಯವಲ್ಲ. ಈಗೀಗ ಜಾತೀ ರಾಜಕಾರಣ ಹೆಚ್ಚಿ ಬಲಗೈಯ್ಯಲ್ಲಿ ಕೋಳೀ ತಿನ್ನುತ್ತಾ ಎಡಗೈಯ್ಯಲ್ಲಿ ಪೂಜೆ ಮಾಡುವ ಹೊಸ ಪೀಳಿಗೆಗೆ ನಾಂದಿ ಹಾಡಿ ಎಂದು ಇತರೆ ವರ್ಗದವರು ಅಧಿಕಾರವಾಣಿಯಲ್ಲಿ ಅಪ್ಪಣೆ ಕೊಡಿಸುತ್ತಿದ್ದಾರೆ; ಯಾಕೆಂದರೆ ಅಧಿಕಾರ ಅವರ ಕೈಲಿದೆ! ಮಡೆ ಸ್ನಾನ ಯಾರೋ ಬ್ರಾಹ್ಮಣರು ಹೇಳಿ ಮಾಡಿದ್ದಲ್ಲ, ಬದಲಿಗೆ ಬ್ರಾಹ್ಮಣ್ಯದ ಮೇಲಿನ ಭಕ್ತಿಯಿಂದ, ಕಳಕಳಿಯಿಂದ ಎಲ್ಲಾ ವರ್ಗದ ಭಕ್ತರು ತಾವೇ ಕಂಡುಕೊಂಡ ಮಾರ್ಗ ಅದು. ಅದು ಅಲ್ಲಿ ಬಿಟ್ಟು ಇನ್ನೆಲ್ಲೂ ಇಲ್ಲ! ಬೇಕೆಂದರೆ ನಡೆಸಲಿ ಬೇಡವೆಂದರೆ ನಿಲ್ಲಿಸಲಿ, ಅಲ್ಲಿ ಬ್ರಾಹ್ಮಣರ ಪಾತ್ರವೇನೂ ಇರುವುದಿಲ್ಲ. ಮಡೆಸ್ನಾನ ಮಾಡುವ ಕೆಲವು ಪಂಗಡಗಳಲ್ಲೇ ಕೆಲವರು ಈ ರೀತಿ ಕಿಡಿ ಹೊತ್ತಿಸುತ್ತಿದ್ದಾರೆ.

ಬ್ರಾಹ್ಮಣರು ಮೊದಲಿನಿಂದಲೂ ಬಡವರೇ, ರಾಜಾಶ್ರಯ ಪಡೆದವರು, ಅವರಿಂದ ಅನ್ಯಾಯವಾಗಿದೆ ಎಂಬುದು ಕಪೋಲ ಕಲ್ಪಿತ ಕಥೆ! ಹಳೇಕಾಲದ ಯಾವುದೇ ಮಕ್ಕಳ ಕಥೆಯನ್ನು ತೆಗೆದುಕೊಳ್ಳಿ ’ಒಂದಲ್ಲಾ ಒಂದೂರಿನಲ್ಲಿ ಒಬ್ಬ ಬಡಬ್ರಾಹ್ಮಣನಿದ್ದನಂತೆ’ ಎಂದೇ ಆರಂಭಗೊಳ್ಳುತ್ತದೆ, ಅದಕ್ಕೆ ಅದೇ ಸಾಕ್ಷಿ! ಇದಕ್ಕೆ ಮಹಾಭಾರತದ ಕೃಷ್ಣ-ಕುಚೇಲರ ಕಥೆ ಕೂಡ ಆಧಾರವಾಗುತ್ತದೆ. ಬ್ರಾಹ್ಮಣರಲ್ಲಿ ಅಂಥಾ ಅನ್ಯಾಯದ ಬುದ್ಧಿ ಇದ್ದಿದ್ದರೆ ಕ್ಷತ್ರಿಯನಾದ ಶ್ರೀರಾಮನನ್ನೂ ಯಾದವನಾದ ಶ್ರೀಕೃಷ್ಣನನ್ನೂ ದೇವರೆಂದು ಪೂಜಿಸುತ್ತಿರಲಿಲ್ಲ. ರಾಜಕೀಯದ ಹಲವು ಸುಳಿಗಳು ಮಧ್ಯೆ ಹೆಡೆಯಾಡಿ ಕಾಲಗತಿಯಲ್ಲಿ ಕೇವಲ ವೇದ ಬೋಧಿಸಲಿಲ್ಲ ಎಂಬ ಸಿಟ್ಟಿನಿಂದ ಹುಟ್ಟಿದ ಕಥೆ ಅದು. ಇಂದಿಗೂ ಬಹುತೇಕರು ಸಂಸ್ಕೃತವನ್ನು ಹೀಗಳೆಯುತ್ತಾರೆ, " ಓದಿ ಬನ್ನಿ..." ಎಂದು ನಾವು ವೇದಸುಧೆ ಆರಂಭಿಸಿದ್ದೇವೆ, ಮುಂಜಿಮಾಡುತ್ತೇವೆ, ಆದರೆ ಪ್ರಥಮವಾಗಿ ಅವರು ನಮ್ಮ ನಿಯಮಗಳಲ್ಲಿ ಒಂದಾದ ಮಾಂಸಾಹಾರವನ್ನು ತ್ಯಜಿಸಬೇಕಾಗುತ್ತದೆ! ಇದು ಎಲ್ಲರಿಂದಲೂ ಸಾಧ್ಯವೇ ? ನಾನೇ ನನ್ನ ಎಷ್ಟೋ ಪ್ರಬಂಧಗಳಲ್ಲಿ ನಮ್ಮನೆಯಲ್ಲಿ ಆಳುಕಳುಗಳಾಗಿದ್ದ ಎಷ್ಟೋ ಜನಾಂಗಗಳ ಜನರುಗಳ ಬಗ್ಗೆ ನಮಗಿದ್ದ ಗೌರವ, ಪ್ರೀತಿಯನ್ನು ಹಂಚಿಕೊಂಡಿದ್ದೇನೆ, ಅದು ಭಗವಂತನ ಸಾಕ್ಷಿಯಾಗಿ ಸತ್ಯವಾದದ್ದೇ ಹೊರತು ನಾನು ಕಟ್ಟಿಬರೆದಿದ್ದಲ್ಲ. ನಮ್ಮಂತಹ ಅದೆಷ್ಟೋ ಜನ ಹಾಗೇ ನಡೆದರು. ಯಾರೋ ಎಲ್ಲೋ ಒಂದಿಬ್ಬರು ವಿಚಿತ್ರವಾಗಿ ನಡೆದುಕೊಂಡರೆ ಇಡೀ ಬ್ರಾಹ್ಮಣಕುಲವನ್ನೇ ವಾಚಾಮಗೋಚರವಾಗಿ ಹಿಗ್ಗಾಮುಗ್ಗಾ ಜಗ್ಗಾಡುವುದು ಖೇದಕರ. ಇದರ ಬಗ್ಗೆ ಇತರೆ ಜನಾಂಗಗಳು ತಿಳಿದು ಮಾತಾಡಬೇಕಾದ ಅಗತ್ಯ ಇದೆ.

ಮಹಾರಾಷ್ಟ್ರದ ಪಂಢರಾಪುರದಲ್ಲಿ ಮಠವೊಂದರ ಎದುರುಗಡೆ ಬಿದ್ದ ಎಂಜಲು ಎಲೆಗಳ ಮೇಲೆ ಅಳಿದುಳಿದ ಕೂಳಿನ ಕಾಳುಗಳನ್ನು ಯುವಕನೊಬ್ಬ ತಿನ್ನುತ್ತಿದ್ದ, ಬಹಳಜನ ಉತ್ಸುಕರಾಗಿ ನೋಡುತ್ತಿರುವಂತೆಯೇ ಆತ ಹಸುಗಳಿಗಾಗಿ ರಸ್ತೆಬದಿಯಲ್ಲಿಟ್ಟ ನೀರನ್ನೇ ಕುಡಿದ! ಜನ ಜಮಾಯಿಸಿದರು. ಆತ ಜಾಸ್ತಿ ಮಾತಾಡಲೊಲ್ಲ. ಹೆಸರು ಕೇಳಿದರು, ಆತ ಸ್ಪಷ್ಟವಾಗಿ ಏನನ್ನೂ ಹೇಳದೇ ಯಾರದೋ ಕೈಲಿದ್ದ ತಾಮ್ರದ ವಸ್ತುವಿನೆಡೆಗೆ ಕೈ ತೋರಿಸಿದ. ಯಾರಿಗೂ ಅರ್ಥವಾಗದಿದ್ದಾಗ ಮರಾಠಿಯಲ್ಲಿ " ನರ್ಮದಾ ನದಿಯ ಮಧ್ಯದಲ್ಲಿರುವ ಗಜಾನನ ಗುಡಿಯೊಂದರ ಹೆಸರೆಂ"ದ. ಜನ ಆತನನ್ನು ಅಲ್ಲಿಂದ ಗಜಾನನ ಮಹಾರಾಜ್ ಎಂತಲೇ ಕರೆದರು. ಆತ ಬ್ರಾಹ್ಮಣ ಕುಲದಿಂದಲೇ ಬಂದವನೆಂಬುದು ಆಮೇಲೆ ತಿಳಿದದ್ದು! ಅಂತಹ ಗಜಾನನ ಮಹಾರಾಜ್ ಬಹುದೊಡ್ಡ ಸಂತರಾಗಿ, ಅವಧೂತರಾಗಿ ಅನೇಕರ ಕಷ್ಟಗಳನ್ನು ನೀಗಿದರು. ಇದು ಇತಿಹಾಸ. ಅಂದು ಎಲ್ಲೋ ಬಿದ್ದ ಎಂಜಲೆಲೆಯ ಕೂಳನ್ನು ತಿಂದ ಅಂತಹ ಗಜಾನನ ಮಹಾರಾಜರಿಗೆ ಯಾವ ಕಾಯಿಲೆಯೂ ಅಂಟಲಿಲ್ಲ, ಇಂದು ಮಡೆಸ್ನಾನದಲ್ಲಿ ಎಂಜಲೆಲೆಯಲ್ಲಿರಬಹುದಾದ ಬ್ಯಾಕ್ಟೀರಿಯಾಗಳು ಹಾಗೆ ಮಡೆಸ್ನಾನ ಮಾಡುವವರಿಗೆ ಬಾಧಿಸಬಹುದು ಎಂಬುದು ಹಲವರ ಇರಾದೆ! ಹೊಟ್ಟೆ ಕೆಟ್ಟು ಆಪರೇಷನ್‍ಗೆ ತೆರಳಿದ್ದ ಬಾಲಕನೊಬ್ಬನಿಗೆ ವೈದ್ಯರು ಕೋಡಬೇಡವೆಂದರೂ ಆತನ ತಂದೆ ತಿರುಪತಿ ಲಾಡು ಕೊಟ್ಟಿದ್ದು ಆ ಪ್ರಸಾದದಿಂದ ಆತನಿಗೆ ಏನೂ ತೊಂದರೆಯಾಗದೇ ಸಲೀಸಾಗಿ ಆಪರೇಷನ್ ಮುಗಿಸಿ ಮನೆಗೆ ಮರಳಿದ್ದನ್ನು ನಾನೆಲ್ಲೋ ಓದಿದ್ದೇನೆ. ಹಲವಾರು ಜನ ಸ್ನಾನಮಮಾಡುವ ಪುಷ್ಕರಣಿಗಳಲ್ಲಿ ಸ್ನಾತರಾದ ಅದೆಷ್ಟೋ ಮಂದಿ ಇದ್ದಾರೆ-ಎಲ್ಲರಿಗೂ ಒಳಿತಾಗಿದೆ ವಿನಃ ಚರ್ಮರೋಗ ಬಾಧಿಸಲಿಲ್ಲ. ಅದು ಅಲ್ಲಲ್ಲಿನ ಕ್ಷೇತ್ರಾಧಿಪನ ಮಹಿಮೆ!! ಎಲ್ಲಿ ಭಕ್ತಿಯ ಪಾರಮ್ಯ ಇರುತ್ತದೋ ಅಲ್ಲಿ ದೇವರು ಭಕ್ತಾಧೀನನಾಗುತ್ತಾನೆ ಎಂಬುದಕ್ಕೆ ಇವೇ ಸಾಕ್ಷಿಗಳು.

ಕುಕ್ಕೆಯ ಸ್ಥಾನಿಕರಾದ ಮಲೆಕುಡಿ ಜನಾಂಗದವರು ಯಾವುದೋ ಕಾಲದಲ್ಲಿ ಅದನ್ನು ಆರಂಭಿಸಿದ್ದಿರಬೇಕು. ಅವರ ಭಕ್ತಿಗೆ ಅವರು ಹಾಗೆ ಮಾಡಿದ್ದನ್ನು ಕಂಡ ಮತ್ತಿನ್ಯಾರೋ ಬೇರೇ ಜನಾಂಗದ ಭಕ್ತರು ತಾವೂ ಹಾಗೇ ಆರಂಭಿಸಿದರು. ಶತಮಾನಗಳಿಂದ ನಡೆಯುತ್ತಿರುವ ಅದಕ್ಕೆ ಯಾರೋ ಒಂದಷ್ಟು ವಿರೋಧ ವ್ಯಕ್ತಪಡಿಸಿದರು. ನಾನು ಮಡೆಸ್ನಾನವನ್ನು ಯಾವ ರೀತಿಯಲ್ಲೂ ಯಾರ ಮೇಲೂ ಹೇರುವುದೂ ಇಲ್ಲ,ಸಮರ್ಥಿಸುವುದೂ ಇಲ್ಲ, ಅಲ್ಲಿನವರ ಹಕ್ಕಿಗೆ ಚ್ಯುತಿಯನ್ನೂ ತರಬಯಸುವುದೂ ಇಲ್ಲ. ಬದಲಾಗಿ ಇದು ಬ್ರಾಹ್ಮಣರ ಅವಹೇಳನದ ಕುರಿತು ಮಾಡಿದ ಒಂದು ಜಿಜ್ಞಾಸೆ. ಮಡೆಸ್ನಾನ ಮಾಡುವುದರಿಂದ ಬ್ಯಾಕ್ಟೀರಿಯಾ ಹಬ್ಬುತ್ತದಂತೆ ಎಂದು ಪತ್ರಿಕೆಗಳಲ್ಲಿ ಓದಿದ್ದಕ್ಕೆ ಕೆಲವು ನಂಬಿಕೆಯ ಉದಾರಹಣೆ ಮಂಡಿಸಿದೆ ಅಷ್ಟೇ. ನಿಶ್ಚಿತವಾಗಿ ಹೇಳುತ್ತೇನೆ ಕೇಳಿ -- ಮಡೆಸ್ನಾನ ಬ್ರಾಹ್ಮಣರು ಒತ್ತಾಯಿಸಿ ಆರಂಭಿಸಿದ್ದಲ್ಲ, ಅಲ್ಲೂ ಅಲ್ಲಿನ ಮಲೆಕುಡಿ ಎಂಬ ಜನಾಂಗದವರಿಂದ ಮೊದಲು ಆಚರಿಸಲ್ಪಟ್ಟು ಆ ನಂತರ ಬ್ರಾಹ್ಮಣಭಕ್ತರೂ ಸೇರಿದಂತೇ ಬಹಳ ಜನ ನಡೆಸಿಬಂದಿದ್ದಾರೆ.

ಧರ್ಮಸ್ಥಳದ ಹೆಗ್ಗಡೆಯವರು ಸಾರಾಸಗಾಟಾಗಿ ಕುಕ್ಕೆಯಲ್ಲಿ ನಡೆಯುತ್ತಿರುವುದೆಲ್ಲಾ ಬರೇ ಮೂಢನಂಬಿಕೆಯಮೇಲೇ ಎಂದು ಅಪ್ಪಣೆಕೊಡಿಸಿಬಿಟ್ಟರು ! ಸ್ವಾಮೀ ಹೆಗ್ಗಡೆಯವರೇ, ಧರ್ಮಸ್ಥಳದಲ್ಲಿ ಧರ್ಮದೇವತೆಗಳು ಎನಿಸಿಕೊಂಡು ನೀವು ತೋರುವ ನಾಕು ಭೂತಗಳು ಇದ್ದಾವೆ ಅವು ನಿಮಗೆ ನುಡಿಗಟ್ಟು ಕೊಡ್ತಾವೆ ಮತ್ತು ನೀವದನ್ನು ಪಾಲಿಸಬೇಕು ಎಂಬುದಾಗಿ ಹೇಳುತ್ತೀರಿ, ’ಮಹಾನಡಾವಳಿ’ ಎಂದು ನಡೆಸುತ್ತೀರಿ. ಇದೆಕ್ಕೆಲ್ಲಾ ವೈಜ್ಞಾನಿಕ ತಳಹದಿ ಇದೆಯೇ ? ಅಥವಾ ನಿಮ್ಮ ಹಾಗೂ ಭಕ್ತರ ನಂಬಿಕೆಯೇ ಇದಕ್ಕೆ ತಳಹದಿಯೆ? ಒಪ್ಪಿಕೊಳ್ಳೋಣ ಜನತೆಗೆ ನೀವು ಬಹಳಷ್ಟು ಮಾರ್ಗದರ್ಶನ ಮಾಡಿದ್ದೀರಿ, ಹಲವಾರು ರೀತಿಯ ಯೋಜನೆ-ಆಯೋಜನೆಗಳನ್ನು ಕಾರ್ಯಗತ ಗೊಳಿಸಿ ಅನೇಕರು ಅನ್ನಕಂಡುಕೊಳ್ಳುವಲ್ಲಿ ಅನುವಾಗಿದ್ದೀರಿ ಇದೆಲ್ಲಾ ಸರಿಯೇ ಇದೆ. ಆದರೆ ನಿಮ್ಮ ಬಗೆಗೂ ಅಮೃತ ಸೋಮೇಶ್ವರರು ಒಮ್ಮೆ ಅಪಸ್ವರದಲ್ಲಿ ರಾಗ ಹಾಡಿದ್ದರು ಎಂಬುದನ್ನು ನಾನು ಕೇಳಿಬಲ್ಲೆ. ಅಲ್ಲೆಲ್ಲೋ ಯಾರೋ ಹೈಸ್ಕೂಲು ಶಿಕ್ಷಕಿಯ ವಿರುದ್ಧ ನೀವು ನಡೆದುಕೊಂಡಿದ್ದು ಅದು ಮತ್ತಿನ್ನೇನೋ ಆಗಿದ್ದು ಹೀಗೇ.

ಹಿಂದಿನ ಧರ್ಮದರ್ಶಿಗಳಾಗಿದ್ದ ನಿಮ್ಮ ತಂದೆ ರತ್ನವರ್ಮರ ಬಗ್ಗೆ ಬಣ್ಣಬಣ್ಣದ ಕಥೆಗಳೇ ಇವೆ. ಊರಕಡೆ ಜನ ಈಗಲೂ ಹಲವುಮಾತನಾಡುತ್ತಾರೆ, ಅದು ಬಿಡಿ. ಆದರೂ ಪ್ರಸಕ್ತ ನೀವು ಸುಧಾರಿತ ಜನಾಂಗಕ್ಕೆ ಜನರಿಂದ ಬಂದ ಹಣವನ್ನೇ ಸದುಪಯೋಗ ಪಡಿಸುತ್ತಿರುವುದರಿಂದ ಜನ ನಿಮ್ಮನ್ನು ಮೆಚ್ಚಿದ್ದಾರೆ; ಕೆಲವರು ಪೂಜಿಸಿಯೂ ಇದ್ದಾರೆ! ಅದೂ ನಿಮ್ಮ ಮೇಲಿನ ನಂಬಿಕೆಯಿಂದಲೇ. ಇವತ್ತು ಧರ್ಮಕ್ಷೇತ್ರಗಳಲ್ಲಿ ಧರ್ಮದರ್ಶಿಗಳ ಕುಟುಂಬಿಕರು ಯಾವ ಯಾವ ರೀತಿ ಅನೈತಿಕ ಚಟುವಟಿಕೆಗಳಲ್ಲಿ ಧರ್ಮದ ಮುಸುಕಿನಲ್ಲಿ ತೊಡಗಿರುತ್ತಾರೆ ಎಂಬುದನ್ನೂ ಕೆಲವು ಜನ ನನ್ನಂಥವರು ಇಣುಕಿ ನೋಡುತ್ತಾರೆ; ಬಾವಿಯ ತಳದಲ್ಲಿ ಕೆಸರಿರುವುದು ಸಹಜ ಆದರೆ ಕುಡಿಯಲು ನಮಗದು ಶುದ್ಧಜಲ ಪೂರೈಸುತ್ತಿದೆಯಲ್ಲಾ ಎಂಬುದು ನಮಗೆ ಬೇಕಾದದ್ದು.

ಜಗತ್ತು ನಡೆಯುತ್ತಿರುವುದೇ ನಂಬಿಕೆಯಮೇಲೆ. ಗಂಡ-ಹೆಂಡತಿಯನ್ನೂ ಹೆಂಡತಿ-ಗಂಡನನ್ನೂ, ಪ್ರಜೆಗಳು ಸರ್ಕಾರವನ್ನೂ, ಸರ್ಕಾರ ಪ್ರಜೆಗಳನ್ನೂ ಹೀಗೇ ಎಲ್ಲವೂ ಒಂದನ್ನೊಂದು ನಂಬಿಯೇ ನಡೆಯುವುದಾಗಿದೆ. ಯಾರಿಗೆ ಎಷ್ಟು ಆಯುಸ್ಸು, ಯಾವದಿನ ಎಷ್ಟು ಹೊತ್ತಿನವರೆಗೆ ಬದುಕುತ್ತಾರೆ ಎಂಬುದು ಗೊತ್ತಿಲ್ಲಾ ಆದರೂ ಹುಟ್ಟುತ್ತಾರೆ, ಬೆಳೆಯುತ್ತಾರೆ, ಮದುವೆ-ಮನಕಾಲ ನಡೆಯುತ್ತದೆ ಇದೆಲ್ಲಾ ಆಗುವುದು ನಂಬಿಕೆಯೆಮೇಲೆಯೇ. ನಾಳೆ ಎಲ್ಲಿ ಭೂಕಂಪವಾಗುತ್ತದೆ, ಎಲ್ಲಿ ಸುನಾಮಿ ಬರುತ್ತದೆ, ಎಲ್ಲಿ ಚಂಡಮಾರುತೆ ಬೀಸುತ್ತದೆ, ಎಲ್ಲಿ ಅಪಘಾತವಾಗುತ್ತದೆ ಎಂಬುದು ಯಾರಿಗೂ ಗೋಚರವಲ್ಲ! ಯಾವ ಹೊತ್ತಿಗೆ ಜಗತ್ತಿನ ಯಾವುದೇ ಭಾಗದಲ್ಲೊ ಏನಾದರೂ ಘಟಿಸಬಹುದು ಅಲ್ಲವೇ?

ಈ ದೃಷ್ಟಿಯಿಂದ ಹೇಳುವುದಾದರೆ ಕುಕ್ಕೆಯಲ್ಲಿ ನಡೆಯುವುದೆಲ್ಲಾ ಬರೇ ಮೂಢನಂಬುಗೆ ಎಂಬ ಮಾತು ಹಾಸ್ಯಾಸ್ಪದವಾಗುವುದಿಲ್ಲವೇ? ಮಡೆಸ್ನಾನ ಬಿಡಿ ಅದು ಮೂರುದಿನದ್ದು-ಆಗುತ್ತದೋ ಹೋಗುತ್ತದೋ ಅದು ಶಾಸ್ತ್ರೋಕ್ತವೇನಲ್ಲ, ಯಾರೋ ಬ್ರಾಹ್ಮಣರು ಹೇಳಿ ಮಾಡಿದ್ದೂ ಅಲ್ಲ. ಆದರೆ ಅಸಂಖ್ಯ ಭಕ್ತರಿಗೆ ಅತಿಕಡಿಮೆ ವೆಚ್ಚದಲ್ಲಿ ನಾಗದೋಷ ಪರಿಹಾರಕ್ಕೆ ಅಲ್ಲಿ ಆಶ್ಲೇಷಾ ಬಲಿ ನಡೆಸುತ್ತಾರೆ. ಹಲವುವಿಧದ ಸೇವೆ ನಡೆಸುತ್ತಾರೆ. ವಾಸ್ತವವಾಗಿ ನಿಮ್ಮ ಧರ್ಮಸ್ಥಳವೂ ಸೇರಿದಂತೇ ಈ ಭೂಮಿಯನ್ನು ಹೊತ್ತಿರುವುದೇ ಆದಿಶೇಷ ಎಂಬ ಕಲ್ಪನೆ ಇದೆಯಲ್ಲವೇ? ಆಗಾಗ ಭೂಮಿ ಅಲ್ಲಲ್ಲಿ ಅಲ್ಲಲ್ಲಿ ಬಿರಿಯುವುದು, ಜ್ವಾಲಾಮುಖಿ ಭೋರ್ಗರೆಯುವುದು, ಭೂಮಿಯಲ್ಲಿ ವೈಜ್ಞಾನಿಕವಾಗಿ ಗುರ್ತಿಸಲ್ಪಟ್ಟ ೭ ಪ್ಲೇಟುಗಳುಗಳಲ್ಲಿ ಸ್ಥಾನದ ಹೊಂದಾಣಿಕೆಯಲ್ಲಿ ತೊಂದರೆಯಾಗಿ ಭೂಕಂಪವಾಗುವುದು ಇವೆಲ್ಲಕ್ಕೂ ಹಿಂದೆ ಯಾವ ರಹಸ್ಯವಿದೆ ಎಂಬುದನ್ನು ನಾವು ಬಲ್ಲೆವೇನು ? ಅದಕ್ಕೆ ಸಂಪೂರ್ಣ ಪರಿಹಾರ ಕೊಡಲು ನಮ್ಮಿಂದ ಸಾಧ್ಯವೇ ? ಒಂದುಕಾಲದಲ್ಲಿ ಇಡೀ ಭೂಮಂಡಲ ನಾಗಾಧಿಪತ್ಯವನ್ನೇ ಹೊಂದಿತ್ತು, ಆಮೇಲೆ ನಾಗಗಳು ಅದನ್ನು ಮಾನವರಿಗೆ ಬಿಟ್ಟುಕೊಟ್ಟವು ಎಂದಾದಾಗ ಆ ಪೂಜ್ಯ ಭಾವನೆಯಿಂದಲಾದರೂ ಅವುಗಳನ್ನು ಆರಾಧಿಸುವುದೇ ಸರಿಯೇ ಅಲ್ಲವೇ?

ಇನ್ನೊಂದು ಮಾತು ನಂಬಿಗೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ: ನೀವು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಧರ್ಮಸ್ಥಳ ಸಂಘಗಳನ್ನು ಮಾಡಿದ್ದೀರಲ್ಲ. ಅಲ್ಲಿ ನೀವು ಕೊಡುವ ಸಾಲಕ್ಕೆ ಯಾವ ಕಾಗದಪತ್ರ ಇರಲಿ ಇಲ್ಲದಿರಲಿ -ತೆಗೆದುಕೊಂಡವ ಅದನ್ನು ನಿಮಗೆ ಪೈಸಾ ಪೈಸಾ ಚುಕ್ತಾ ಕೊಡುತ್ತಾನೆ! ಯಾಕೆ ಗೊತ್ತೇ ? ಅದು ಧರ್ಮಸ್ಥಳದ ದುಡ್ಡು, ಹಾಗೇ ಇಟ್ಟುಕೊಂಡರೆ ಅಣ್ಣಪ್ಪ ಭೂತ ಹಿಡಿದುಕೊಂಡರೆ ಕಷ್ಟ! ಧರ್ಮದೇವತೆಗಳು ಕೈಬಿಟ್ಟರೆ ಕುಟುಂಬವೇ ಸರ್ವನಾಶವಾದೀತು ಎಂಬ ಭಯದಿಂದ ! ಅದೇ ನಂಬುಗೆ ನಿಮ್ಮಲ್ಲೂ ಇರುವುದಕ್ಕೇ ಜನರಿಗೆ ಹಾಗೆ ಸಾಲದ ರೂಪದಲ್ಲಿ ಹಣವನ್ನು ಒದಗಿಸುತ್ತೀರಿ. ಇಂಥದ್ದೇ ಸಾಲಕೊಡುವ ಕೆಲಸವನ್ನು ಬೇರೇಯಾರೋ ಇನ್ಯಾವುದೋ ಸಂಘದಿಂದ ಮಾಡಿದರೆ ವಸೂಲಾಗದೇ ಒದ್ದಾಡಬೇಕಾಗುತ್ತದೆ ಮಾತ್ರವಲ್ಲ ಸಾಲಕೊಟ್ಟವ ಜೀವ ಉಳಿಸಿಕೊಳ್ಳಲೂ ಪರದಾಡಬೇಕಾಗಬಹುದು!

ಜನರೂ ಕೂಡ ಬಹಳ ವಿಚಿತ್ರವಾಗಿದ್ದಾರೆ. ಜನರಿಗೆ ಮೋಜುಮಜಾ ಮಸ್ತಿಯೂ ಬೇಕು. ಮೊದಲಿನ ಹಾಗೇ ಜನರೆಲ್ಲಾ ನೈತಿಕನಿಷ್ಠೆಯವರೇ ಎಂದು ಹೇಳಲಾಗುವುದಿಲ್ಲ. ಇದಕ್ಕೆ ಉದಾಹರಣೆ: ಶ್ರೀರಾಮುಲುವಿನ ಗೆಲುವು. ಒಂದುಕಾಲಕ್ಕೆ ಏನೂ ಇರದಿದ್ದ ಹುಡುಗರಿಬ್ಬರು ರಾಜ್ಯವನ್ನೇ ಅಥವಾ ಅರ್ಧದೇಶವನ್ನೇ ಕೊಂಡುಕೊಳ್ಳುವ ಮಟ್ಟದ ಆದಾಯವನ್ನು ಪಡೆಯುತ್ತಾರೆ ಎಂದರೆ ಅದು ಎಲ್ಲಿಂದ ಹೇಗೆ ಬಂತು? ಜನರಿಗೆ ರಕ್ತ ಪರಿಚಲನೆ ಸರಿಯಾಗಿದ್ದರೆ ಮತ್ತೆ ಆ ಜಾಗಕ್ಕೆ ಗಣಿಗಳನ್ನು ನಡೆಸುವ ಯಾರನ್ನೂ ಚುನಾಯಿಸುತ್ತಿರಲಿಲ್ಲ. ಕೆಲವರಿಗೆ ತಿಳುವಳಿಕೆ ಇಲ್ಲ, ಇನ್ನು ಕೆಲವರು ಜಾತೀ ರಾಜಕಾರಣ ಮಾಡುತ್ತಾರೆ. ಶಾಸಕನೊಬ್ಬ ತಮನ್ನು ಉತ್ತಮವಾಗಿ ನೋಡಿಕೊಳ್ಳುತ್ತಾನೆ ಎಂಬುದೂ ಕೂಡ ಒಂದು ನಂಬಿಗೆ! ಶಾಸಕನಾದವನು ರಾಜ್ಯದ/ಕ್ಷೇತ್ರದ ಜನರ ಹಕ್ಕು-ಬಾಧ್ಯತೆಗಳನ್ನು ಕಾಪಾಡುವುದರ ಜೊತೆಗೆ ಆ ಕ್ಷೇತ್ರದ ಸಂಪತ್ತಿನಲ್ಲಿ ಯಾವುದೇ ಅವ್ಯವಹಾರ ಆಗದ ಹಾಗೇ ನೋಡಿಕೊಳ್ಳುವುದು ಅವನ ಕೆಲಸವಾಗಿರುತ್ತದೆ. ಆದರೆ ಇಂದಾಗುತ್ತಿರುವುದೇನು: ಕೋಟಿ ಇದ್ದವರೇ ಚುನಾವಣೆಗೆ ನಿಲ್ಲಬೇಕು, ಅವರೇ ಗೆಲ್ಲುತ್ತಾರೆ ಮತ್ತೆ ಅವರೇ ಅಕ್ರಮವಾಗಿ ಸಂಪಾದಿಸುತ್ತಾರೆ. ನೈಸರ್ಗಿಕ ಸಂಪತ್ತನ್ನು ಲೂಟಿಹೊಡೆಯುತ್ತಾರೆ.

ಈಗ ಪುನಃ ವಿಜ್ಞಾನಕ್ಕೆ ಬರೋಣ. ವೈಜ್ಞಾನಿಕವೆನಿಸಿಕೊಂಡ ಮಾರ್ಗದಲ್ಲಿ ಹೆಣ್ಣುಮಕ್ಕಳ ಸ್ತನ ಅರ್ಬುದ ಕಾಯಿಲೆಗೆ ಆಪರೇಶನ್ನೇ ಮದ್ದು. ಅಥವಾ ಇನ್ಯಾವುದೋ ಅದೇ ತೆರನಾದ ಶಾಕ್ ಚಿಕಿತ್ಸೆ. ಸಂತಾನ ನಿರೋಧಕ ಅಲೋಪಥಿಯ ಮಾತ್ರೆಗಳ ಸತತ ಸೇವನೆಯಿಂದ ಇವತ್ತಿನ ಜನಾಂಗದ ಹೆಣ್ಣುಮಕ್ಕಳಲ್ಲಿ ಸ್ತನ ಅರ್ಬುದ ರೋಗ ಕಾಣಿಸಿಕೊಳ್ಳುತ್ತದೆ. ಈ ರೋಗಕ್ಕೆ ನನಗೆ ಗೊತ್ತಿರುವ ಆಯುರ್ವೇದ ವೈದ್ಯರೊಬ್ಬರು ಅದ್ಭುತ ಪರಿಹಾರ ನೀಡುತ್ತಾರೆ. ಕಾಯಿಲೆ ಆಪರೇಶನ್ ಇಲ್ಲದೇ ವಾಸಿಯಾಗುತ್ತದೆ. ೩೦೦೦ ವರ್ಷಗಳ ಇತಿಹಾಸವಿರುವ ಆಯುರ್ವೇದ ನಮ್ಮ ಆಧುನಿಕ ವಿಜ್ಞಾನಿಗಳು ಹುಟ್ಟುವ ಮೊದಲೇ ಇತ್ತಲ್ಲಾ ? ಅದು ಅವೈಜ್ಞಾನಿಕ ಎನ್ನುತ್ತೀರೋ ?

ನಿಜವಾಗಿಯೂ ಈಗ ಹೇಳಿ ಯಾವುದು ನಂಬಿಗೆಯೆ ಮೇಲೆ ನಡೆಯುತ್ತಿಲ್ಲ? ನಡೆಯುವ ಎಲ್ಲಾ ಕೆಲಸಕ್ಕೂ ವೈಜ್ಞಾನಿಕ ತಳಹದಿ ಇದೆಯೇ ? ಜವಾಬ್ದಾರಿಯ ಜಾಗದಲ್ಲಿದ್ದು ಬರಿದೇ ಹಾಗ್ಯಾಕೆ ಇಲ್ಲದ್ದನ್ನು ಹೇಳುತ್ತೀರಿ ? ಮಡೆಸ್ನಾನವನ್ನು ಬಿಡಿ, ಕುಕ್ಕೆಯ ಮಿಕ್ಕಿದ ಕೆಲಸಕ್ಕೂ ಸೇರಿದಂತೇ ನೀವು ಹೇಳಿದ ಮಾತು ಸ್ವೀಕಾರಾರ್ಹವಲ್ಲ. ಅದು ನನ್ನಂತಹ ಕೆಲವರ ಅನಿಸಿಕೆಯಾದರೂ ಪರವಾಗಿಲ್ಲ.


25 comments:

  1. ಭಟ್ಟರೇ, ನಿಮ್ಮ ಲೇಖನ ಸಕಾಲಿಕ. ನಾನು ಕೂಡ ಹೆಗ್ಗಡೆಯವರ ಹೇಳಿಕೆ ಪತ್ರಿಕೆಯಲ್ಲಿ ಓದಿದ್ದೆ. ಅವರು ಯಾಕೆ ಹಾಗ೦ದರು ಎ೦ಬುದು ತಿಳಿಯದು. ಅದು "slip of the tongue" statement ಇರಬಹುದು. ದೊಡ್ಡವರು, ದೊಡ್ಡ ಸ್ಥಾನದಲ್ಲಿರುವವರು ಕೆಲವೊಮ್ಮೆ ಹಾಗೆ ಮಾತನಾಡು ತ್ತಾರಲ್ಲ. ಆದರೆ ಎಲ್ಲವೂ ನ೦ಬಿಕೆಯ ನೆಲೆಯಲ್ಲಿಯೇ ನಡೆಯುವ ವಿದ್ಯಮಾನ, ಇದಕ್ಕೆ ಧರ್ಮಸ್ಥಳವೂ ಹೊರತಲ್ಲ ಎ೦ಬ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ನಿಮ್ಮ ಲೇಖನ ಚೆನ್ನಾಗಿದೆ.

    ReplyDelete
  2. Really good one.

    Nagesh

    ReplyDelete
  3. wonderful eye opener message through the article. Hats off to your straightness.

    ReplyDelete
  4. ಮುತುವರ್ಜಿಯಿಂದ, ನಾಟುವಂತೆ, ಸರಿಯಾದ ರೀತಿಯಲ್ಲಿ ವಿವರಿಸಿದ್ದೀರಿ. ಸಂತೋಷವಾಯಿತು.
    ಹೆಚ್ಚಿನ ಸಂಖ್ಯೆಯ ಜನರಿಗೆ ಈ ಮಡೆ ಮಡೆ ಸ್ನಾನ ದ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಅಂಧಕಾರತ್ವ ಕವಿದಿರುವ ಕೆಲವೇ ಜನರ ಡೊಂಬರಾಟವನ್ನೇ ನೈಜವೆಂದು ಬಗೆದ ಈ ಸಮಯ ಘಟ್ಟದಲ್ಲಿ, ನಿಮ್ಮ ಲೇಖನ, ನಿಮ್ಮ ಸಮಯ ಪ್ರಜ್ಞೆ ಹಾಗೂ ಸಾಮಾಜಿಕ ಕಾಳಜಿಯನ್ನ ಎತ್ತಿ ತೋರಿಸುತ್ತದೆ. ಅಭಿನಂದನೆಗಳು.

    ReplyDelete
  5. ನಿಜವಾಗಿ ಹೇಳಿದ್ದೀರಿ ಭಟ್ಟರೇ ... ಎಲ್ಲದಕ್ಕೂ ಒಂದೊಂದು ವೈಜ್ಞಾನಿಕ ತಳಹದಿಯಿದೆ ಹಾಗೆ ಅದು ನಂಬಿಕೆ ಯಾಗಿ , ಮೂಢನಂಬಿಕೆ ಯಾಗಿದೆ, ಯಾರೂ ಅದಕ್ಕೆ ಕಾರಣವೇನು ಎಂದು ಶೋಧಿಸಲು ಹೋಗುವುದಿಲ್ಲ ... ನಿಮ್ಮ ಈ ಲೇಖನ ಬರೀ ಬ್ಲಾಗ್ ಗಷ್ಟೇ ಸೀಮಿತವಾಗದೆ ಕನ್ನಡ ನ್ಯೂಸ್ ಪೇಪರ್ ನಲ್ಲೂ ಮೂಧಿ ಬರಲಿ ಎನ್ನುವ ಆಶಯ ,...

    ReplyDelete
  6. ಹೇಳಬೇಕಾದ್ದನ್ನು ನೇರವಾಗಿ, ದಿಟ್ಟವಾಗಿ ಹೇಳಿದ್ದೀರಿ. ತಲುಪಬೇಕಾದವರಿಗೆ ತಲುಪಿಯೇ ತಲುಪುತ್ತದೆ

    ReplyDelete
  7. ಸೂಕ್ತ ಸಮಯಕ್ಕೆ ಸರಿಯಾದ ಲೇಖನ ಒದಗಿಸಿದ್ದಕ್ಕೆ ಧನ್ಯವಾದಗಳು.

    ReplyDelete
  8. ನಂಬಿ ಕೆಟ್ಟವರಿಲ್ಲ ನಿನ್ನ ಹರಿಯೇ
    ನಂಬದೇ ಕೆಡಲು ಬಹುದು ಜಗದಿ!

    ReplyDelete
  9. ಒಳ್ಳೆಯ ಮತ್ತು ಸರಿಯಾದ ಲೇಖನ ಭಟ್ಟರೆ. ಸಂಬಧಪಟ್ಟವರಿಗೆ ಇದು ನಾಟಲಿ ! ಅಲ್ಲವೆ ?

    ReplyDelete
  10. ಮಡೆಸ್ನಾನ ಅನಾಗರೀಕ ಎಂಬುದು ನನ್ನ ಸ್ಪಷ್ಟ ಅಬಿಪ್ರಾಯ. ಕೆಲವರು ವಿದ್ಯಾವಂತರು - ಬೇರೆಬೇರೆ ಕಡೆ ಆಚರಣೆಯಲ್ಲಿರುವ ಇತರ ಮೂಡನಂಬಿಕೆಗಳನ್ನು ಪಟ್ಟಿಮಾಡಿ-ಅವೆಲ್ಲಾ ಅವರವರ ನಂಬಿಕೆ-ಆಚರಿಸಿದರೆ ತಪ್ಪೇನು?-ಎಂಬರ್ಥದಲ್ಲಿ ವಾದಸರಣಿ ಬಿಟ್ಟು ಪರೋಕ್ಷವಾಗಿ ಮಡೆಸ್ನಾನ ಬೆಂಬಲಿಸುತ್ತಿದ್ದಾರೆ!!
    ಇಂತಹ ಆಚರಣೆಗಳು ಹಿಂದೂ ಧರ್ಮಕ್ಕೆ ಶೋಭೆಯಲ್ಲ. ಮಠಾಧಿಪತಿಗಳೆ ಆ ಜನಾಂಗದವರಿಗೆ ಹಾಗೂ ಮಡೆಸ್ನಾನ ಮಾಡುವ ಇತರರಿಗೆ ಆ ಮೌಡ್ಯವನ್ನು ತ್ಯಜಿಸುವಂತೆ ಮನವೊಲಿಸಿ ಈ ಪದ್ಧತಿ ನಿಲ್ಲಿಸಬೇಕು.
    ಬದಲಾಗುತ್ತಿರುವ ವಿಶ್ವದಲ್ಲಿ ಮೂರನೆಯ ಸಹಸ್ರಮಾನಕ್ಕೆ ಕಾಲಿಡುತ್ತಿರುವ ಹಿಂದುಧರ್ಮಕ್ಕೆ ಈ ಮಡೆಸ್ನಾನ (ಹಾಗೂ ಅಂತಹ ಅನೇಕ ಆಚರಣೆಗಳು) ನಿಜಕ್ಕೂ ಒಂದು ತಡೆ!!!

    ReplyDelete
  11. ಮಡೆ ಮಡೆ ಸ್ನಾದ ಬಗ್ಗೆ ವಿ.ಆರ್. ಭಟ್ಟ ಅವರು ಬ್ರಾಹ್ಮಣಿಕೆಯ ನೆಲೆಯಲ್ಲಿಯೇ ತಮಗೆ ತೋಚಿದ್ದನ್ನು ಗೀಚಿದ್ದಾರೆ ! 'ಮಡೆ ಸ್ನಾನ ಯಾರೋ ಬ್ರಾಹ್ಮಣರು ಹೇಳಿ ಮಾಡಿದ್ದಲ್ಲ, ಬದಲಿಗೆ ಬ್ರಾಹ್ಮಣ್ಯದ ಮೇಲಿನ ಭಕ್ತಿಯಿಂದ, ಕಳಕಳಿಯಿಂದ ಎಲ್ಲಾ ವರ್ಗದ ಭಕ್ತರು ತಾವೇ ಕಂಡುಕೊಂಡ ಮಾರ್ಗ ಅದು. ಅದು ಅಲ್ಲಿ ಬಿಟ್ಟು ಇನ್ನೆಲ್ಲೂ ಇಲ್ಲ! ಬೇಕೆಂದರೆ ನಡೆಸಲಿ ಬೇಡವೆಂದರೆ ನಿಲ್ಲಿಸಲಿ, ಅಲ್ಲಿ ಬ್ರಾಹ್ಮಣರ ಪಾತ್ರವೇನೂ ಇರುವುದಿಲ್ಲ' ಅಂದಿರುವುದು ಶುದ್ಧ ಬ್ರಾಹ್ಮಣ ಯಜಮಾನಿಕೆಯ ಸಂಕೇತ. ಹಾಗಾದರೆ ದಲಿತರು ಊರ ಹೊರಗೆ ಇರುತ್ತಾರೆ ಅದು ಅವರ ಶ್ರದ್ದೆ ಎಂದರೆ ಅದು ಡಾ. ಬಾಬಾಸಾಹೇಬ ಅಂಬೇಡ್ಕರ ನೀಡಿದ ಸಂವಿಧಾನಕ್ಕೆ ವಿರುದ್ಧವಾದ ನಡೆ. ಸಂವಿಧಾನವನ್ನೇ ಒಪ್ಪಿಕೊಳ್ಳದವರು ಡಾ. ಬಾಬಾಸಾಹೇಬರನ್ನು ಒಪ್ಪಿಕೊಳ್ಳುತ್ತಾರೆಯೇ ! ಇದೊಂದು ನೇರ ಸವಾಲು ; ಹೇಳಿ ವೈದಿಕ ಸಂಪ್ರದಾಯದ ವಾರಸುದಾರರೇ ನಿಮಗೆ ಎಂದಾದರೂ ಒಬ್ಬ ದಲಿತ ಆಗಿ ಇರಲು ಸಾಧ್ಯವಾಗುತ್ತದೆಯೇ ? ಎಲ್ಲೋ ಒಂದು ದಲಿತ ಕೇರಿಗೆ ಹೋಗಿ ಪಾದ ಪೂಜೆ ಮಾಡಿಕೊಂಡಂತಲ್ಲ ಎಂಬುದನ್ನು ನೆನಪಿಡಿ ! ನಿಮಗೆ ಕಷ್ಟಕರವೆನಿಸದ್ದು, ನಿಮಗೆ ಅಸಹ್ಯ ಎನಿಸದ್ದು, ನಿಮಗೆ ಮಾನ್ಯತೆ ನೀಡುವಂಥದ್ದು ಏನೇ ಇದ್ದರೂ ಅದನ್ನು ಒಪ್ಪಿಕೊಂಡು ಬಿಡುತ್ತೀರಿ. ಯಾರೋ ಹೇಲು ಬಳೆಯುತ್ತಾರೆ ಎಂದರೆ ಅದು ಅವರ ಕರ್ಮ ಸಿದ್ಧಾಂತ ಹೇಳುತ್ತೀರಿ ! ಬಹುಶಃ ಮಲ ತಿನ್ನುವುದನ್ನು ಕೂಡ ನೀವು ಹೀಗೆ ಸ್ವಾಗತಿಸಬಹುದು ! ಹೋಗಲಿ ಒಮ್ಮೆ ಮಲ ಹೊತ್ತು ನೋಡಿ ! ರಾಮ-ಕೃಷ್ಣರ ುಲ್ಲೇಖ ಮಾಡಿದ್ದೀರಿ. ಸ್ವಾಮಿ ನೀವು ಬದುಕಲು ಅವರ ಹೆಸರನ್ನು ಬಳಿಸಿಕೊಂಡಿದ್ದೀರಿ ! ಅವರ ಹೆಸರಿನಿಂದಲೇ ನೀವು ಇಲ್ಲಿಯವರೆಗೆ ಅಧಿಕಾರ-ಆಡಳಿತ ಮಾಡಿದ್ದೀರಿ ! ಆ ಹೆಸರಿನಿಂದಲೇ ನೀವು ನಿಮ್ಮ ಬೇಳೆ ಬೇಯಿಸಿಕೊಂಡಿದ್ದೀರಿ. ನಿಮ್ಮ ರಕ್ತದಲ್ಲಿ ಬಂದಿರೋ ಈ ಪ್ರವೃತ್ತಿ ಒಂದೊಮ್ಮೆ ನಿಮ್ಮನ್ನೆ ಇಲ್ಲವಾಗಿಸುತ್ತದೆ ; ವಾಸ್ತವದ ಅರಿವು ಮೂಡಿಸುತ್ತದೆ. ಕಾಲ ಯಾವುದಕ್ಕೂ ಕಾಯುವುದಿಲ್ಲ. ಇಷ್ಟು ದಿನ ದಲಿತರ ಮೇಲೆ ಮಾಡಿದ ನಿಮ್ಮ ಕಾರ್ಯಗಳು ನಿಮಗೇ ತಗುಲಿ ಹಾಕಿಕೊಳ್ಳುವ ಕಾಲ ದೂರವಿಲ್ಲ ! ಆದಷ್ಟು ಬೇಗನೇ ನಿಮಗೆ ಅಶ್ಪೃತೆ ಪ್ರಾಪ್ತವಾಗಲಿ.

    ReplyDelete
  12. ಕಾರಣಿಕ ಮಹಾಶಯರೇ, ತಮ್ಮ ಜಗದೋದ್ಧಾರತನ ತಮ್ಮ ಒಕ್ಕಣೆಯಲ್ಲಿ ಎಲ್ಲವನ್ನೂ ಸ್ಪಷ್ಟಮಾಡಿದೆ. ’ಬ್ರಾಹ್ಮಣ್ಯ’ ಎಂಬುದಕ್ಕೆ ಬೇರೆ ಒಂದು ರೂಪರೇಷೆ ಇದೆ ಸಾಹೇಬರೇ, ಹಲವರು ಡ್ರೈವ್ ಮಾಡಬಹುದು ಆದರೆ ಪೈಲಟ್ ಆಗಲು ಎಲ್ಲರಿಂದಲೂ ಸಾಧ್ಯವಿಲ್ಲ. ಅದು ಟ್ರೈನಿಂಗ್ ಕೊಟ್ಟರೂ ಬರುವುದಿಲ್ಲ ಅಲ್ಲವೇ? ಅವರೊಳಗೇ ಹೆದರಿಕೆಯಿದ್ದರೆ ಆಗ ಆಕಾಶಕ್ಕೆ ನೆಗೆಯುವುದಿರಲಿ ಯಾವುದೇ ಸಾಹಸವೂ ಕಷ್ಟವಾಗುತ್ತದೆ. ಲೇಖನದ ಸಮರ್ಪಕ ಅರ್ಥ ನಿಮಗಾಗಿದೆಯೇ ? ಇಲ್ಲ. ಮಡೆಸ್ನಾನ ಮಾಡಿ ಎನ್ನುವುದನ್ನು ನಾನು ಸ್ವಾಗತಿಸುತ್ತಿಲ್ಲ--ಇದನ್ನು ಲೇಖನದಲ್ಲೇ ಹೇಳಿದ್ದೇನೆ. ವಿರೋಧಿಸುವುದೂ ಇಲ್ಲ ಯಾಕೆಂದರೆ ಪ್ರತಿಯೊಬ್ಬರಿಗೂ ಅವರವರ ಹಕ್ಕು ಎಂಬುದಿರುತ್ತದೆ. ಹೀಗೆ ಮಾಡುವುದು ಸರಿಯೇ ಎಂದು ಅವರಲ್ಲಿ ಕೇಳಿ-ಹೇಳಿ ಮಾಡಬಹುದು ಅಷ್ಟೇ.

    ಒಂದು ಮಾತು ಸ್ಪಷ್ಟ: ಬ್ರಾಹ್ಮಣ್ಯ ಎಂಬುದು ಜಾತಿಗೆ ಸಂಬಂಧಿಸಿದ್ದಲ್ಲ, ಅದನ್ನು ಸಮರ್ಪಕವಾಗಿ ಆಚರಿಸುವುದು ಸುಲಭದ ಕೆಲಸವಲ್ಲ. ಜೀವನದಲ್ಲಿ ಬೇಕು ಬೇಕಾದ್ದನ್ನು ತಿನ್ನುತ್ತಾ ಕುಡಿಯುತ್ತಾ ಅಥವಾ ಹೇಗೇ ಬೇಕಾದರೂ ಇರುತ್ತಾ ತಾನು ಬ್ರಾಹ್ಮಣನಾಗಿದ್ದೇನೆ ಎನ್ನಲಾಗುವುದಿಲ್ಲ. ಪ್ರಮುಖವಾಗಿ ಇದು ಕುಲಕ್ಕೆ ಸಂಬಂಧಿದ್ದು ಎನ್ನುವುದಕ್ಕಿಂತಾ ಇದೊಂದು ಅಜೀವ ಪರ್ಯಂತದ ವೃತವಾಗಿರುತ್ತದೆ. ಸೈನಿಕನಾಗುವುದಕ್ಕೆ ಇಂತಿಂಥಾದ್ದೊಂದು ಪರಿಕ್ರಮ ಎಂದಿರುತ್ತದೆ ಹೇಗೋ ಹಾಗೇ ಇಲ್ಲೂ. ’ವೈದಿಕ ಸಂಪ್ರದಾಯದ ವಾರಸುದಾರ’ ಎಂಬ ನಿಮ್ಮ ಹಳದಿಗಣ್ಣನ್ನು ಬೆಳ್ಳಗೆಮಾಡಿಕೊಂಡರೆ ಆಗ ನಿಮಗೆ ನನ್ನ ಅನಿಸಿಕೆಯ ಅರ್ಥವಾಗುತ್ತದೆ: ಲೇಖನದಲ್ಲಿ ಇನ್ನೊಂದನ್ನೂ ಸ್ಪಷ್ಟಪಡಿಸಿದ್ದೇನೆ " " ಓದಿ ಬನ್ನಿ..." ಎಂದು ನಾವು ವೇದಸುಧೆ ಆರಂಭಿಸಿದ್ದೇವೆ, ಮುಂಜಿಮಾಡುತ್ತೇವೆ, ಆದರೆ ಪ್ರಥಮವಾಗಿ ಅವರು ನಮ್ಮ ನಿಯಮಗಳಲ್ಲಿ ಒಂದಾದ ಮಾಂಸಾಹಾರವನ್ನು ತ್ಯಜಿಸಬೇಕಾಗುತ್ತದೆ! ಇದು ಎಲ್ಲರಿಂದಲೂ ಸಾಧ್ಯವೇ ? ನಾನೇ ನನ್ನ ಎಷ್ಟೋ ಪ್ರಬಂಧಗಳಲ್ಲಿ ನಮ್ಮನೆಯಲ್ಲಿ ಆಳುಕಳುಗಳಾಗಿದ್ದ ಎಷ್ಟೋ ಜನಾಂಗಗಳ ಜನರುಗಳ ಬಗ್ಗೆ ನಮಗಿದ್ದ ಗೌರವ, ಪ್ರೀತಿಯನ್ನು ಹಂಚಿಕೊಂಡಿದ್ದೇನೆ, ಅದು ಭಗವಂತನ ಸಾಕ್ಷಿಯಾಗಿ ಸತ್ಯವಾದದ್ದೇ ಹೊರತು ನಾನು ಕಟ್ಟಿಬರೆದಿದ್ದಲ್ಲ. ನಮ್ಮಂತಹ ಅದೆಷ್ಟೋ ಜನ ಹಾಗೇ ನಡೆದರು. ಯಾರೋ ಎಲ್ಲೋ ಒಂದಿಬ್ಬರು ವಿಚಿತ್ರವಾಗಿ ನಡೆದುಕೊಂಡರೆ ಇಡೀ ಬ್ರಾಹ್ಮಣಕುಲವನ್ನೇ ವಾಚಾಮಗೋಚರವಾಗಿ ಹಿಗ್ಗಾಮುಗ್ಗಾ ಜಗ್ಗಾಡುವುದು ಖೇದಕರ. ಇದರ ಬಗ್ಗೆ ಇತರೆ ಜನಾಂಗಗಳು ತಿಳಿದು ಮಾತಾಡಬೇಕಾದ ಅಗತ್ಯ ಇದೆ." ಈ ಸಾಲುಗಳು ನಿಮಗರ್ಥವಾದವೇ?

    ರಾಮ-ಕೃಷ್ಣರನ್ನು ನಾವು ಸೃಜಿಸಿದ್ದಾದರೆ ವಾಲ್ಮೀಕಿಯನ್ನೂ ನಾವೇ ಸೃಜಿಸಿರುತ್ತೇವೆ. " ವಂದೇ ವಾಲ್ಮೀಕಿ ಕೋಕಿಲಂ " ಎನ್ನುತ್ತೇವೆ, ಕನಕರನ್ನೂ ಪೂಜಿಸುತ್ತೇವೆ ಇನ್ನೂ ಹಲವನ್ನು ಉದಹರಿಸಬಹುದಾಗಿದೆ, ಸೂಕ್ಷ್ಮವಾಗಿ ಇಷ್ಟು ಸಾಕು. ಬರಿದೇ ವಾದಕ್ಕೆ ವಾದಬೇಡ ಆಗದೇ ?

    ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ವಂದನೆಗಳು.

    ReplyDelete
  13. ಬ್ರಾಹ್ಮಣ ಎಂಬುದು ಒಂದು ಸಂಸ್ಕಾರ ಸೂಚಕ ಪದ, ಜಾತಿ ಸೂಚಕ ಅಲ್ಲ.ದಲಿತರು ಉಂಡ ಎಂಜಳಲ್ಲಿ ಬ್ರಾಹ್ಮಣರು ಹೊರಳಡ್ಲಿ ಅಂತ ಹೇಳೋ ಪೆದ್ದಗಳು ಇದನ್ನ ಅರ್ಥ ಮಾಡ್ಕೊಳ್ಳಿ.ಯಾವುದೇ ನಂಬಿಕೆ ಯಲ್ಲಿ ವೈಜ್ಞಾನಿಕ ತಳಹದಿ ಅನ್ನೋದು ಇರುತ್ತೆ,ಆ ನಂಬಿಕೆ ಸಮಾಜಕ್ಕೆ ಮಾರಕ ಅಲ್ಲ ಅಂದ್ರೆ ಅದು ಮುಂದುವರಿದರೆ ಏನು ತಪ್ಪು?ಹೆಂಡ ಸಾರಾಯಿ ಕುಡಿದು ಈ ನಂಬಿಕೆ ಗಳನ್ನ ಮೂಢನಂಬಿಕೆ ಅಂತ ಹೇಳೋರು ನಾಳೆ ದೇವಸ್ತಾನಕ್ಕೆ ಹೋಗೋದು ಕೂಡ ಮೂಢನಂಬಿಕೆ, ಅದರ ಬದಲು ಸಾರಾಯಿ ಅಂಗಡಿ ಗೆ ಹೋಗಿ ಅನ್ಬಹುದು ಎಚ್ಚರ !!!!

    ReplyDelete
  14. ಭಟ್ರೇ,ನೀವು ಭಾವುಕರಾಗುವ ಅವಶ್ಯಕತೆಯಿಲ್ಲ.ವಿಚಾರವಾದಿಗಳೆನಿಸಿಕೊಂಡವರು ಅವರ ಜಿಗುಟುತನದಿಂದಾಗಿಯೇ ಮಾನವೀಯವಾಗಿ ಸ್ಪಂದಿಸುವವರಿಂದಲೂ ದೂರವಾಗುತ್ತಿದ್ದಾರೆ. ನಿನ್ನೆ ಒಬ್ಬರು ನನ್ನೊಡನೆ ಮಾತಾಡುತ್ತಾ ಹೇಳುತ್ತಿದ್ದರು;”ಎಲ್ಲಾ ಪ್ರಗತಿಪರ ಹೋರಾಟಗಳ ಮುಂಚೂಣಿಯಲ್ಲೂ ಒಬ್ಬರಾದರೂ ಬ್ರಾಹ್ಮಣರಿರುತ್ತಿದ್ದರು, ಈಗೀಗ ಅದೂ ಕಾಣಿಸುತ್ತಿಲ್ಲ’ ಅಂದರೆ ಏನರ್ಥ? ಇನ್ನೊಬ್ಬರು ನನಗೆ ಮೆಸೇಜ್ ಮಾಡಿ ’ನಿಮ್ಮ ಲೇಖನದ ಮೊದಲ ಭಾಗವನ್ನು ನಾನು ಒಪ್ಪುವುದಿಲ್ಲ. ಕೊನೆಗೆ ಬರೆದದ್ದು ಸರಿಯಾಗಿಯೇ ಇದೆ.’ ಅಂದರು. ನಾನು ಮೊದಲು ಬರೆದದ್ದು ಗಂಭೀರವಾಗಿ. ಕೊನೆ ಕೊನೆಗೆ ಬರೆದದ್ದು ವ್ಯಂಗದಿಂದ ಎಂಬುದನ್ನು ಅರ್ಥೈಸಿಕೊಳ್ಳಲಾರದರಷ್ಟು ಮಟ್ಟಿಗೆ ಅವರು ಕಣ್ಣ ಪಟ್ಟಿಯನ್ನು ಕಟ್ಟಿಕೊಂಡಿದ್ದಾರೆ ಎಂದ ಮೇಲೆ ಅವರೊಡನೆ ಅರ್ಥಪೂರ್ಣ ಸಂವಾದವಾದರೂ ಹೇಗೆ ಸಾಧ್ಯ ಹೇಳಿ? ಕೊನೆಗೆ ನಾವು ತಿಳಿದುಕೊಳ್ಳಬಹುದಾದ್ದು ಇಷ್ಟೇ; ಅವರವರ ಬದುಕು,ಅವರವರ ನಂಭಿಕೆ ಅವರವರದೇ ಆಗಿರುತ್ತದೆ.

    ReplyDelete
  15. ಮಿತ್ರರಾದ ಶ್ರೀನಿವಾಸ ಮಹೇಂದ್ರಕರರ ಒಂದು ಮಿಂಚಂಚೆ ಹಾಗೂ ಅವರ ಪ್ರಶಾವಳಿಗಳು ಮತ್ತು ನನ್ನ ಉತ್ತರಗಳನ್ನು ಓದಿ :

    ಭಟ್ಟರೇ ನಮಸ್ಕಾರ ,
    ನಿಮ್ಮ ಅನೇಕ ಲೇಖನಗಳನ್ನ ಓದಿ ಮೆಚ್ಚಿಕೊಂಡಿರುವವರಲ್ಲಿ ನಾನು ಒಬ್ಬ. ನಿಮ್ಮಂಥ ವಿಚಾರವನ್ತರಿಂದ ಈ ರೀತಿಯ ಬರಹ ನಿರೀಕ್ಷಿಸಿರಲಿಲ್ಲ. ನಾನು ಯಾವ ಜಾತಿಗೂ ಸೇರಿದವನಲ್ಲ ಅಲ್ಲದೆ ಬ್ರಾಹ್ಮಣ ವಿರೋಧಿಯೆಂತೂ ಅಲ್ಲವೇ ಅಲ್ಲ.ನಿಮ್ಮ ಲೇಖನ ಒಂದು ವರ್ಗ ವನ್ನು ಸಮರ್ಥಿಸುವ ಪ್ರಯತ್ನವಷ್ಟೇ ಆಗಿದೆ ಎಂದನ್ನಿಸುತ್ತಿದೆ ನನಗೆ .
    ದಯವಿಟ್ಟು ನನ್ನ ಪ್ರಶ್ನೆಗಳಿಗೆ ಉತ್ತರಿಸಿ. ತುಂಬಾ ಬೇಸರಿಸಿ ಬರೆಯುತ್ತಿದ್ದೇನೆ.
    ೧> ಮಗ್ವ ದ ಬಗ್ಗೆ ನೀವು ಹೇಳಿದ ಕಥೆಯನ್ನೆಲ್ಲ ನಂಬಬೇಕು ಅಂತೀರಾ? ಈ ರೀತಿಯ ಕಥೆಗಳು ಗಲ್ಲಿಗೊಂದರಂತೆ ಇವೆ ನಮ್ಮ ದೇಶದಲ್ಲಿ . ಇವೆಲ್ಲವುದರಲ್ಲಿ ಸತ್ವವಿದೆ ಎಂದು ಹೇಳುತ್ತಿರುವ ನಿಮ್ಮ ವಾದವನ್ನು ಮೆಚ್ಚುವುದು ಹೇಗೆ ? ನಿಮ್ಮಂಥವರು ಹೀಗೆ ಜನರಲ್ಲಿ ಮೌಡ್ಯತೆ ತುಂಬುವುದು ಸರಿಯೇ. ಹೆಗಡೆಯವರು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳುತ್ತಿರುವ ತಾವು , ಇಂಥಹ ಮೌಡ್ಯತೆಗಳನ್ನೂ ಸಮರ್ಥಿಸ ಬಾರದು ಅಲ್ಲವೇ ? ದೇಶದ ಕಥೆಯೇನು ?

    ೨> "ಕರ್ನಾಟಕದಲ್ಲಿ ಬ್ರಾಹ್ಮಣರ ಮೇಲೆ ’ಮಡೆಸ್ನಾನ’ದ ಆರೋಪ ಹೊರಿಸುತ್ತಾ ಹಲವು ಲೇಖನಗಳು ಪ್ರಕಟಗೊಳ್ಳುತ್ತಿವೆ. ಕರ್ನಾಟಕದಲ್ಲಿ ಕೇವಲ ೯ % ಬ್ರಾಹ್ಮಣರಿದ್ದಾರೆ, ಅದೂ ದಿನಗಳೆದಂತೇ ಸಂಖ್ಯೆ ಕಮ್ಮಿಯಾಗುತ್ತಿದೆ! ನಶಿಸಿ ಹೋಗಬಹುದಾದ ಸಂತತಿಗಳಲ್ಲಿ ಬ್ರಾಹ್ಮಣರೂ ಸೇರಿದರೆ ಆಶ್ಚರ್ಯವಲ್ಲ" ಎಂದು ಹೇಳುವಲ್ಲಿ ಬ್ರಾಹ್ಮಣರ ಮೇಲೆ ನಿಮಗಿರುವ ಕಾಳಜಿ ವ್ಯಕ್ತವಾಗಿದೆ ನಿಜ . ಅದನ್ನು ನಾನೂ ಒಪ್ಪುತ್ತೇನೆ. ಜಾತಿಗಳನ್ನು ಮೀರಿ ನಾವು ಮಾನವರಾಗಬೇಕಲ್ಲವೇ ? ಈ ರೀತಿಯ ಕಳಕಳಿ ಎಷ್ಟು ಸಮಂಜಸ ? ಈ ಕಳಕಳಿ ವ್ಯಕ್ತ ಪಡಿಸಲು "ಮಡೆ ಸ್ನಾನ ಯಾರೋ ಬ್ರಾಹ್ಮಣರು ಹೇಳಿ ಮಾಡಿದ್ದಲ್ಲ, ಬದಲಿಗೆ ಬ್ರಾಹ್ಮಣ್ಯದ ಮೇಲಿನ ಭಕ್ತಿಯಿಂದ, ಕಳಕಳಿಯಿಂದ ಎಲ್ಲಾ ವರ್ಗದ ಭಕ್ತರು ತಾವೇ ಕಂಡುಕೊಂಡ ಮಾರ್ಗ ಅದು. ಅದು ಅಲ್ಲಿ ಬಿಟ್ಟು ಇನ್ನೆಲ್ಲೂ ಇಲ್ಲ! ಬೇಕೆಂದರೆ ನಡೆಸಲಿ ಬೇಡವೆಂದರೆ ನಿಲ್ಲಿಸಲಿ, ಅಲ್ಲಿ ಬ್ರಾಹ್ಮಣರ ಪಾತ್ರವೇನೂ ಇರುವುದಿಲ್ಲ. ಮಡೆಸ್ನಾನ ಮಾಡುವ ಕೆಲವು ಪಂಗಡಗಳಲ್ಲೇ ಕೆಲವರು ಈ ರೀತಿ ಕಿಡಿ ಹೊತ್ತಿಸುತ್ತಿದ್ದಾರೆ" ಎಂದು ಹೇಳಿ ಮುಡೆ ಸ್ನಾನದಂಥಹ ಅನಿಷ್ಟ ಪದ್ದತಿಯನ್ನು ಇದ್ದರೆ ಇರಲಿ ಎನ್ನುವುದು ಅಮಾನವೀಯ. ಇದು ವಿಚರವಂತರಿಂದ ಬರಬೇಕಾದ ಮಾತು ಅಲ್ಲವೇ ಅಲ್ಲ.

    ೩> ಬ್ರಾಹ್ಮಣರು ಬಡವರಾಗುವುದಕ್ಕೂ, ಕುಕ್ಕೆ ಯಲ್ಲಿ ನಡೆದಿರುವುದು ಮೂಢನಂಬಿಕೆ ಎನ್ನುವುದಕ್ಕೂ ಏನು ಸಂಭಂಧ ? ಬಡತನ ಭಾರತದಲ್ಲಿ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ ಮಾನ್ಯರೇ.

    ೪> ಪಂಡರಿ ಪುರ ದಲ್ಲಿ ಎಂಜಲು ತಿಂದ ಗಜಾನನ ಮಹಾರಾಜ್ ರವರ ಉದಾಹರಣೆ ಇಂದ ಮುಡೆಸ್ನಾನ ಸಮರ್ಥನೆಯೇ ?

    ೫> "ಹೊಟ್ಟೆ ಕೆಟ್ಟು ಆಪರೇಷನ್‍ಗೆ ತೆರಳಿದ್ದ ಬಾಲಕನೊಬ್ಬನಿಗೆ ವೈದ್ಯರು ಕೋಡಬೇಡವೆಂದರೂ ಆತನ ತಂದೆ ತಿರುಪತಿ ಲಾಡು ಕೊಟ್ಟಿದ್ದು ಆ ಪ್ರಸಾದದಿಂದ ಆತನಿಗೆ ಏನೂ ತೊಂದರೆಯಾಗದೇ ಸಲೀಸಾಗಿ ಆಪರೇಷನ್ ಮುಗಿಸಿ ಮನೆಗೆ ಮರಳಿದ್ದನ್ನು ನಾನೆಲ್ಲೋ ಓದಿದ್ದೇನೆ. ಹಲವಾರು ಜನ ಸ್ನಾನಮಮಾಡುವ ಪುಷ್ಕರಣಿಗಳಲ್ಲಿ ಸ್ನಾತರಾದ ಅದೆಷ್ಟೋ ಮಂದಿ ಇದ್ದಾರೆ-ಎಲ್ಲರಿಗೂ ಒಳಿತಾಗಿದೆ ವಿನಃ ಚರ್ಮರೋಗ ಬಾಧಿಸಲಿಲ್ಲ. ಅದು ಅಲ್ಲಲ್ಲಿನ ಕ್ಷೇತ್ರಾಧಿಪನ ಮಹಿಮೆ!! ಎಲ್ಲಿ ಭಕ್ತಿಯ ಪಾರಮ್ಯ ಇರುತ್ತದೋ ಅಲ್ಲಿ ದೇವರು ಭಕ್ತಾಧೀನನಾಗುತ್ತಾನೆ ಎಂಬುದಕ್ಕೆ ಇವೇ ಸಾಕ್ಷಿಗಳ" ಎಂದು ತುಂಬಾ ಭಾವಪರವಶರಾಗಿ ಹೇಳಿದ್ದೀರಿ ಇದು ವಿಚಾರವನ್ತಿಕೆಯೇ ? ನೀವು ಯಾವುದನ್ನ ಭಕ್ತಿ ಭಾವ ಎಂದು ಹೇಳುತ್ತಿರುವಿರೋ ಗೊತ್ತಿಲ್ಲ . ನಿಜ ಹೇಳುತ್ತಿದ್ದೇನೆ ಇದು ಉತ್ತಮ ಸಮಾಜ ಕಟ್ಟಲು ಯೋಗ್ಯವಲ್ಲದ ಮಾತುಗಳು . ದಯವಿಟ್ಟು ಕ್ಷಮಿಸಿ. ಓದಿದವರು ತಿಳಿದವರು , ಜಗತ್ತನ್ನ ಅರಿತು ಇಂಥ ಮೂಢ ನಂಬಿಕೆಗಳಿಂದ ದೂರ ಉಳಿಯಬೇಕು ಮತ್ತು ಬೇರೆಯವರಿಗೂ ಈ ಮಾರ್ಗದಲ್ಲಿ ಸಹಾಯವಾಗಬೇಕು.

    ೬> ಧರ್ಮಸ್ಥಳದ ಹೆಗ್ಗಡೆಯವರ ವಯಕ್ತಿಕ ವಿಚಾರಗಳ ಬಗ್ಗೆ ತುಂಬಾ ಮಾಹಿತಿ ಕಲೆ ಹಾಕಿದಂತಿದೆ ತಾವು , ಅವರು ಮಾಡುತ್ತಿರುವುದು ತಪ್ಪು ಎಂದು ಹೇಳುತ್ತಿರುವಿರಿ , ಅದರ ಆಧಾರವಾಗಿರುವ ನಿಮ್ಮ ಸಮರ್ಥನೆ ತಪ್ಪಲ್ಲವೇ ?

    ReplyDelete
  16. ಮುಂದುವರಿದ ಭಾಗ ----
    ೭> "ಆದರೆ ಅಸಂಖ್ಯ ಭಕ್ತರಿಗೆ ಅತಿಕಡಿಮೆ ವೆಚ್ಚದಲ್ಲಿ ನಾಗದೋಷ ಪರಿಹಾರಕ್ಕೆ ಅಲ್ಲಿ ಆಶ್ಲೇಷಾ ಬಲಿ ನಡೆಸುತ್ತಾರೆ. ಹಲವುವಿಧದ ಸೇವೆ ನಡೆಸುತ್ತಾರೆ. ವಾಸ್ತವವಾಗಿ ನಿಮ್ಮ ಧರ್ಮಸ್ಥಳವೂ ಸೇರಿದಂತೇ ಈ ಭೂಮಿಯನ್ನು ಹೊತ್ತಿರುವುದೇ ಆದಿಶೇಷ ಎಂಬ ಕಲ್ಪನೆ ಇದೆಯಲ್ಲವೇ? ಆಗಾಗ ಭೂಮಿ ಅಲ್ಲಲ್ಲಿ ಅಲ್ಲಲ್ಲಿ ಬಿರಿಯುವುದು, ಜ್ವಾಲಾಮುಖಿ ಭೋರ್ಗರೆಯುವುದು, ಭೂಮಿಯಲ್ಲಿ ವೈಜ್ಞಾನಿಕವಾಗಿ ಗುರ್ತಿಸಲ್ಪಟ್ಟ ೭ ಪ್ಲೇಟುಗಳುಗಳಲ್ಲಿ ಸ್ಥಾನದ ಹೊಂದಾಣಿಕೆಯಲ್ಲಿ ತೊಂದರೆಯಾಗಿ ಭೂಕಂಪವಾಗುವುದು ಇವೆಲ್ಲಕ್ಕೂ ಹಿಂದೆ ಯಾವ ರಹಸ್ಯವಿದೆ ಎಂಬುದನ್ನು ನಾವು ಬಲ್ಲೆವೇನು ? ಅದಕ್ಕೆ ಸಂಪೂರ್ಣ ಪರಿಹಾರ ಕೊಡಲು ನಮ್ಮಿಂದ ಸಾಧ್ಯವೇ ? ಒಂದುಕಾಲದಲ್ಲಿ ಇಡೀ ಭೂಮಂಡಲ ನಾಗಾಧಿಪತ್ಯವನ್ನೇ ಹೊಂದಿತ್ತು, ಆಮೇಲೆ ನಾಗಗಳು ಅದನ್ನು ಮಾನವರಿಗೆ ಬಿಟ್ಟುಕೊಟ್ಟವು ಎಂದಾದಾಗ ಆ ಪೂಜ್ಯ ಭಾವನೆಯಿಂದಲಾದರೂ ಅವುಗಳನ್ನು ಆರಾಧಿಸುವುದೇ ಸರಿಯೇ ಅಲ್ಲವೇ?"
    ದಯಮಾಡಿ ಈ ಶತಮಾನದಲ್ಲಿ ಆಗಿರುವ ಖಗೋಳ ಶಾಸ್ತ್ರದ ಅನೇಕ ಅನ್ವೇಷಣೆಗಳ ಬಗ್ಗೆ ಮಾಹಿತಿ ನಿಮಗಿಲ್ಲ ಎಂದು ಮಾತ್ರ ಹೇಳಬೇಡಿ. ಈ ರೀತಿ ಅವೈಜ್ಞಾನಿಕವಾಗಿ ಮಾತಾಡುವುದು ನಿಮಗೆ ತರವಲ್ಲ .

    ದಯಮಾಡಿ ಒಮ್ಮೆ ನಿಮ್ಮ ಲೇಖನವನ್ನು ನಿಷ್ಪಕ್ಷಪಾತವಾಗಿ ವಿಮರ್ಶಿಸಿ ಮರು ಪ್ರಕಟಿಸಿ. ಇದು ನನ್ನ ಕಳಕಳೆಯ ಮನವಿ. ಅನೇಕ ಓದುಗರ ಬಳಗ ಹೊಂದಿರುವ ನಿಮ್ಮ ಜವಾಬ್ದಾರಿ ಹೆಚ್ಚಿದೆ. ನಿಮ್ಮ ನೋವು ಅರ್ಥವಾಗತ್ತೆ . ನಿಮ್ಮ ಭಾವವೂ ಅರ್ಥ ವಾಗಿದೆ. ಯಾರು ಹಿಂದೆ ಉಳಿಯಲು ಯಾರೂ ಹೊಣೆಗಾರರಲ್ಲ. ಈಗಿನ ಕ್ಷಣಾರ್ಧದಲ್ಲಿ ಬದಲಾಗುವ ಆರ್ಥಿಕವಲಯ, ಕ್ಷಣಕ್ಕೊಂದು ಅನ್ವೇಷಣೆಗಳು ಮತ್ತು ಅನೇಕ ಬದಲಾವಣೆಗಳನ್ನು ಹೊಂದುತ್ತಲೇ ಬರುತ್ತಿರುವ ನಮ್ಮ ಸಮಾಜ ದಲ್ಲಿ ಒಂದು ಪಂಗಡದ ಮೇಲೆ ಆರೋಪ ಸರಿಯಲ್ಲ. ಇದಕ್ಕೆ ನನ್ನ ಸಹಮತವೂ ಇದೆ. ಆದರೆ ನಾವುಮಾತ್ರ ಮೌಡ್ಯ ನಂಬಿಕೆಗಳನ್ನ ಸಮರ್ಥಿಸಬಾರದು. ನೀವು ಸಮರ್ಥಿಸುತ್ತಿಲ್ಲ ಒಪ್ಪುತ್ತೇನೆ. ಆದರೆ ನಿಮ್ಮ ಬರಹದಲ್ಲಿ ಜಾರುವಂಥಹ ಮಾತಿದ್ದು , ಪರೋಕ್ಷವಾಗಿ ಮುಡೆ ಸ್ನಾನ ಆದರೆ ಆಗಲಿ ನಾವು ಜವಾಬ್ದಾರರೆ ಎನ್ನುವ ಭಾವವು ವ್ಯಕ್ತವಾಗಿದೆ.
    ದಯಮಾಡಿ ಕ್ಷಮಿಸಿ ಮಾನ್ಯರೇ ಇದನ್ನು ಬರೆಯುವಾಗ ನನಗೆ ಯಾವುದೇ ವಯಕ್ತಿಕ ದ್ವೇಷವೂ ಇಲ್ಲ ಬದಲಾಗಿ ನಿಮ್ಮ ಮೇಲೆ ಗೌರವವಿದೆ ಮತ್ತು ಕಳಕಳಿ ಇದೆ . ಇದನ್ನು ನಿಮ್ಮ ಬ್ಲಾಗ್ ತಾಣದಲ್ಲಿ ಪ್ರತಿಕ್ರಿಯಿಸಲು ಇಷ್ಟವಿಲ್ಲ. ನಿಮ್ಮ ಅಭಿಪ್ರಾಯ ದಯಮಾಡಿ ಉತ್ತರಿಸಿ.

    ಧನ್ಯವಾದ
    ಶ್ರೀನಿವಾಸ ಮಹೆಂದ್ರಕರ್

    ReplyDelete
  17. ನನ್ನ ಉತ್ತರ :

    ಸನ್ಮಾನ್ಯ ಶ್ರೀನಿವಾಸ ಮಹೇಂದ್ರಕರ್ ಅವರೇ, ನಮಸ್ಕಾರ.

    ನಾನು ಮಂಡಿಸಿದ ಲೇಖನಕ್ಕೆ ಮೂರು ವಿಧದ ತಳಹದಿ ಇದೆ. ಅದು ಆದಿಭೌತಿಕ ಮತ್ತು ಆಧ್ಯಾತ್ಮಿಕ ಹಾಗೂ ಆದಿದೈವಿಕ--ಈ ಮೂರೇ ಕಾರಣಗಳಿಂದ ಪ್ರಪಂಚದ ಹಿಂದಿನ, ಇಂದಿನ ಹಾಗೂ ಮುಂದಿನ ಆಗುಹೋಗುಗಳು ನಡೆದಿವೆ, ನಡೆಯುತ್ತಿವೆ, ನಡೆಯುತ್ತವೆ. ಇವನ್ನೇ ತಾಪತ್ರಯಗಳು ಎನ್ನುತ್ತಾರೆ. ಹೀಗಾಗಿ ಸಹಜ ಮೇಲ್ನೋಟಕ್ಕೆ ಅರ್ಥವಾಗುವುದನ್ನು ಕಂಡ ನಿಮ್ಮ ಅನಿಸಿಕೆ ಕೂಡ ನನಗರ್ಥವಾಗಿದೆ. ನೀವು ಬ್ರಾಹ್ಮಣ ದ್ವೇಷಿಯೇ ಅಲ್ಲ ಎಂದೆಲ್ಲಾ ಹೇಳಿದ್ದೀರಿ, ನಾನು ಬ್ರಾಹ್ಮಣರ ಬಗ್ಗೆ ಯಾಕೆ ಹಾಗೆ ಬರೆದಿದ್ದೇನೆ ಎಂಬುದನ್ನು ಕೆಲವು ಮಾತುಗಳಿಂದ ನೀವು ಅರ್ಥವಿಸಬಹುದಿತ್ತು. ಜಾತ್ಯಾತೀತ ಸಮಾಜವೆಂಬ ಹಣೆಪಟ್ಟಿ ಹಚ್ಚಿಕೊಂಡಿರುವ ಈಗಿನ ಸಮಾಜದಲ್ಲಿ ಜಾತೀಯತೆ ಪ್ರತೀ ಚುನಾವಣೆಯಲ್ಲೂ ಎದ್ದು ಕಾಣುತ್ತದೆ, ಜಾತಿಗೊಬ್ಬ ಸ್ವಾಮಿ ಇದ್ದಾರೆ, ಮಠಮಾನ್ಯಗಳಿವೆ ಹೀಗೆಲ್ಲಾ.

    ತಲೆತಲಾಂತರದಿಂದ ವೇದವನ್ನು ಓದಿ ಆಚರಿಸಿ, ಇತರೆ ಎಲ್ಲಾ ವರ್ಗಗಳಿಗೂ ಬೇಕಾದ್ದು ಯಾವುದು ಬೇಡದ್ದು ಯಾವುದು ಎಂಬ ಮಾರ್ಗದರ್ಶನ ಮಾಡಿರುವವರು ಬ್ರಾಹ್ಮಣರು. ಉತ್ತಮವಾದ ಯಾವುದೇ ಇರಲಿ ಅದನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗುತ್ತದೆ. ಬ್ರಾಹ್ಮಣರನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ ಎಂಬುದನ್ನು ನಾನು ಎಲ್ಲಿಯೂ ಹೇಳಲು ಸಿದ್ಧನಿದ್ದೇನೆ, ಯಾಕೆಂದರೆ ನಾನು ಬ್ರಾಹ್ಮಣ ಎಂಬಕಾರಣಕ್ಕಲ್ಲ ಬದಲಾಗಿ ಜನಜೀವನದಲ್ಲಿ ಸ್ವಲ್ಪವಾದರೂ ಭಾರತೀಯತೆ /ಸನಾತನ ಪದ್ಧತಿ ಉಳಿಯಬೇಕೆಂದರೆ ಬ್ರಾಹ್ಮಣರ ಉಳಿವು ಬೇಕಾಗುತ್ತದೆ. ಸರಕಾರದಿಂದ ಅನಧಿಕೃತವಾಗಿ ಅಸ್ಪೃಶ್ಯರೆಂದು ಗುರುತಿಸಲ್ಪಡುತ್ತಿರುವ ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡುವ ವರದಿಗಳನ್ನು ಖಂಡಿಸುವುದೇ ನನ್ನ ಲೇಖನದ ಉದ್ದೇಶವಗಿತ್ತು. ಇನ್ನು ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು:

    ೧. ಮುಗ್ವಾದ ಬಗ್ಗೆ ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಅದು ಈಗಲೂ ಆಗುತ್ತಿರುವ ಸತ್ಯ. ಕಾವೇರಿಯಲ್ಲಿ ತೀರ್ಥೋದ್ಭವವನ್ನೂ ತಾವು ಅಲ್ಲಗಳೆಯುತ್ತೀರೇನೋ ?

    ೨. ಬ್ರಾಹ್ಮಣರ ಮೇಲೆ ನನಗೆ ಗುರುತರ ಕಾಳಜಿ ಇರುವುದು ಸತ್ಯ, ಆದರೆ ಮಡೆ ಸ್ನಾನವನ್ನು ನಾನು ವೈಯ್ಯಕ್ತಿಕವಾಗಿ ಸಮರ್ಥಿಸುವುದಿಲ್ಲ. ಆಗಲೇ ಹೇಳಿದ್ದೇನೆ: ಬ್ರಾಹ್ಮಣರಲ್ಲೂ ಹೊಲಸು ತಿನ್ನುವವರಿರಬಹುದು, ಕುಡುಕರಿರಬಹುದು ಆದರೆ ಅದೆಲ್ಲಾ ಅವರವರ ವೈಯ್ಯಕ್ತಿಕ ಹಕ್ಕೇ ಹೊರತು ತಿನ್ನಬೇಡಾ ಎಂದರೂ ಸಗಣಿಯೇ ಉಪ್ಪಿಟ್ಟು ಎನ್ನುವವರಿಗೆ ಇನ್ನೇನೂ ಮಾಡಲು ಸಾಧ್ಯವಾಗುವುದಿಲ್ಲ.

    ೩. ಬ್ರಾಹ್ಮಣರು ಶ್ರೀಮಂತರು, ಸ್ಥಿತಿವಂತರು ಹಾಗಾಗಿ ತಮ್ಮನ್ನು ದಬ್ಬಾಳಿಕೆ ಮಾಡಿದರು ಎಂಬ ಪ್ರಶ್ನೆಗೆ ಅದು ಉತ್ತರ.

    ೪. ಬ್ಯಾಕ್ಟೀರಿಯಾ ಇಫೆಕ್ಟ್ ಕುರಿತು ಅದನ್ನು ಉದಹರಿಸಿದ್ದೇನೆ.

    ೫. ಬೆಂಗಳೂರಿನ ಖ್ಯಾತ ಇನ್ಫರ್ಟಿಲಿಟಿ ವೈದ್ಯೆ ಪದ್ಮಿನಿ ಪ್ರಸಾದ್, ತಮಗೆ ಗೊತ್ತಿರಲು ಸಾಕು. ಅವರು ಸಾಕಷ್ಟು ಮಾಧ್ಯಮಗಳಲ್ಲಿ ಆಗಾಗ ಫೋನ್ ಇನ್ ಕಾರ್ಯಕ್ರಮ ನಡೆಸಿಕೊಡುತ್ತಾರೆ, ಪ್ರಸಕ್ತ ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ವಾರದಲ್ಲಿ ಒಂದು ರಾತ್ರಿ ೧೧-೧೨ರ ವರೆಗೆ ಪ್ರಶ್ನೋತ್ತರ ನಡೆಸುತ್ತಾರೆ ನೋಡಿ. ಅವರೇ ಒಮ್ಮೆ ಎಲ್ಲಾ ಪರೀಕ್ಷೆಗಳಲ್ಲಿ ಯಾವುದೇ ತೊಂದರೆಯಿಲ್ಲಾ ಎಂದು ವರದಿ ಪಡೆದ ಒಬ್ಬರಿಗೆ ಹೇಳಿದ್ದು: " ಹೆಣ್ಣಿನಲ್ಲಾಗಲೀ ಗಂಡಿನಲ್ಲಾಗಲೀ ಯಾವುದೇ ದೋಷವಿರದಿದ್ದರೂ ಕೆಲವೊಮ್ಮೆ ಮಕ್ಕಳಾಗುವುದಿಲ್ಲ, ಅದಕ್ಕೆ ವೈಜ್ಞಾನಿಕವಾಗಿ ಯಾವುದೇ ಕಾರಣಗಳಿಲ್ಲ, ಅದು ಸೃಷ್ಟಿಯ ನಿಯಂತ್ರಣ " ಎಂದು, ಅಂದರೆ ಇದರರ್ಥ ನೀವು ನಂಬಿದ ವಿಜ್ಞಾನದಲ್ಲಿ ಇದ್ದರೆ ಹೇಳಿ.

    ೬. ಧರ್ಮಕ್ಷೇತ್ರಗಳಲ್ಲಿ ಇದ್ದಮಾತ್ರಕ್ಕೆ ಎಲ್ಲರೂ ಸಂಭಾವಿತರು ಎಂದುಕೊಳ್ಳಬೇಕೇಕೆ? ಅಲ್ಲೂ ಗೊತ್ತಿರದ ಕಾರ್ಯಗಳು ಘಟಿಸುತ್ತಲೇ ಇರಬಹುದಲ್ಲ. ವೀರೇಂದ್ರ ಹೆಗ್ಗಡೆಯವರಬಗ್ಗೆ ವೈಯ್ಯಕ್ತಿಕವಾಗಿ ನನಗೆ ಗೌರವ ಇದ್ದೇಇದೆ, ಆದರೆ ಅವರ ಬಗ್ಗೆ ಹಿಂದೊಮ್ಮೆ ’ಅಮೃತ’ ಪತ್ರಿಕೆಯ ಸೋಮೇಶ್ವರರು ಬರೆದಿದ್ದರು, ಆಮೇಲೆ ಬಾಕಿ ಎಲ್ಲಾ ಲೇಖನದಲ್ಲಿ ಹೇಳಿದ ಹಾಗೇ.

    ೭. ನೋಡಿ ಸ್ವಾಮೀ, ನಾನು ನಿಮ್ಮಲ್ಲಿ ನಾಗದೋಷ ಪರಿಹಾರ ಮಾಡಿಸಿಕೊಳ್ಳಿ ಎಂದು ಹೇಳುತ್ತಿಲ್ಲ. ನಂಬಿದವರಿಗೆ ಅದರಿಂದ ಕೊನೇಪಕ್ಷ ಏನೂ ಸಿಗದಿದ್ದರೆ ಮಾನಸಿಕ ನೆಮ್ಮದಿ ಸಿಗಬಹುದಲ್ಲ ? ಕುಕ್ಕೆಯ ಮೂಲದ ಒಂದು ಕುಟುಂಬ ಬೆಂಗಳೂರಿನಲ್ಲಿ ನಮ್ಮ ಸ್ನೇಹಿತರು. ಅವರಿಗೆ ಇದ್ದಕ್ಕಿದ್ದಲ್ಲೇ ಹುಷಾರು ತಪ್ಪುತ್ತಿತ್ತು, ಮನೆಯಲ್ಲಿ ಎಲ್ಲರಿಗೂ ಒಂದಿಲ್ಲೊಂದು ತೊಂದರೆ, ವ್ಯವಹಾರದಲ್ಲಿ ಹೋದೆಡೆಯಲ್ಲೆಲ್ಲಾ ನಷ್ಟ ಹೀಗೇ . ಆಮೇಲೆ ಒಮ್ಮೆ ಅವರು ಯಾರೋ ಅಷ್ಟಮಂಗಲದವರನ್ನು ಕೇಳಿದಾಗ ಏನನ್ನೂ ಅರಿತಿರದ ಅವರು ಹೇಳಿದರಂತೆ : " ನಿಮ್ಮ ಮೂಲ ಕುಕ್ಕೆ. ಅಲ್ಲಿ ನಿಮ್ಮ ಮುತ್ತಾತ[ಮುತ್ತಜ್ಜ] ಪುರೋಹಿತರಾಗಿದ್ದರು. ಜಮೀನಿನ ವ್ಯಾಜ್ಯಕ್ಕೆ ಬೇಸತ್ತು ಅವರು ಅಲ್ಲಿಂದ ಹೊರಟು ಶಿರಸಿಗೆ ಬಂದುಬಿಟ್ಟರು. ನಿಮ್ಮಲ್ಲಿ ಕುಕ್ಕೆಯಲ್ಲಿನ ಜಮೀನಿಗೆ ಸಂಬಂಧಿಸಿದಂತೇ ಕೆಲವು ಹಳೆಯ ಕಾಗದಪತ್ರಗಳು ಊರಮನೆಯಲ್ಲಿ ಹಳೆಯ ಒಂದು ಟ್ರಂಕ್ ನಲ್ಲಿವೆ, ಅದನ್ನು ತೆಗೆದು ನದಿಗೆ ವಿಸರ್ಜಿಸಿ ಮತ್ತು ಕುಕ್ಕೆಯಲ್ಲಿ ಸೇವೆ ಸಲ್ಲಿಸಿ " ಎಂದು. ಊರಿಗೆ ದೌಢಾಯಿಸಿ ನೋಡಿದರೆ " ಹಳೆಯ ಮನೆಯ ಅಟ್ಟದಮೇಲೊಂದು ಮುರುಕಲು ಟ್ರಂಕಿತ್ತು, ಅದರಲ್ಲಿ ಓದಲಿಕ್ಕೂ ಕಷ್ಟವಾದ ಕೈಬರಹದ ಕೆಲವು ಕಾಗದಗಳಿದ್ದವು. ಅವುಗಳನ್ನೆಲ್ಲಾ ನದಿಗೆ ಬಿಸಾಡಿದೆವು, ಕುಕ್ಕೆಗೆ ಹೋಗಿ ಸೇವೆ ಸಲ್ಲಿಸಿದೆವು. ಈಗ ಮೂರುತಿಂಗಳಿಂದ ಯಾರಿಗೂ ಏನೂ ತೊಂದರೆಯಿಲ್ಲ, ವ್ಯಾಪಾರದಲ್ಲಿ ದ್ವಿಗುಣ ಲಾಭವೂ ಬಂತು " ಎನ್ನುತ್ತಾರೆ ಈ ನನ್ನ ಸ್ನೇಹಿತರು. ಇದಕ್ಕೆಲ್ಲಾ ನಿಮ್ಮ ವಿಜ್ಞಾನ ಏನೆನ್ನುತ್ತದೆ?

    ಅನಂತಪದ್ಮನಾಭನನ್ನು ಅಗೆಯಲು ಹೊರಟ ಅವನ್ಯಾರೋ ಕಾಲವಾಗಿ ಹೋದ, ಈಗ ಸುಪ್ರೀಂ ಕೋರ್ಟ್ ಕೂಡ ’ಬಿ’ ಕೋಣೆಯನ್ನು ತೆಗೆಯುವುದು ಬೇಡಾ ಎಂದಿತು. ಅಲ್ಲಿ ಬ್ರಾಹ್ಮಣರು ನಡೆದುಕೊಳ್ಳುವದರ ಬಗ್ಗೆ ಅಲ್ಲಿನ ಪೂಜೆಯ ಬ್ರಾಹ್ಮಣರ ಬಗ್ಗೆ ಉದಯವಾಣಿಯ ದೀಪಾವಳಿ ಸಂಚಿಕೆಯಲ್ಲಿ ಬಂದಿದೆ, ಲಭ್ಯವಿದ್ದರೆ ಓದಿ-ಆಗ ನಿಮಗೆ ಬ್ರಾಹ್ಮಣ್ಯದ ಅರ್ಥವೂ ಆಗುತ್ತದೆ!

    ತುರ್ತಾಗಿ ಹೊರಡಬೇಕಿದೆ, ಮತ್ತೆ ಸಿಗೋಣ,

    ನಮಸ್ಕಾರ.

    ReplyDelete
  18. People of all castes and creeds must start a movement to stop this insulting practice. I remember when I was small, people of a particular caste will be given the leftover and they will come and eat it. But due to law and awareness, it's no more in practice. JUST STOP IT!!

    ReplyDelete
  19. ನಿಮ್ಮ ಬರವಣಿಗೆಗೆ ನನ್ನ ಸಹಮತವಿದೆ. ಕೆಲ ಜನರು ಹಾಗೆ ಹೀ ಗೆ ಕೂಪಮಂಡೂಕದಂತೆ ಪ್ರತಿಕ್ರಿಯೆ ನೀಡಿದ್ದು ಬ್ಲಾಗ್ ವಲಯಕ್ಕೆ ಸಮಂಜಸವಲ್ಲ ಎಂಬುದು ನನ್ನ ಅನಿಸಿಕೆ

    ReplyDelete
  20. ನನಗೆ ಎಲ್ಲಾ ಜನಾಂಗಗಳ ಮೇಲೂ ಅಷ್ಟಷ್ಟೇ ಗೌರವವಿದೆ. ಮೇಲು-ಕೀಳಿನ ಭಾವನೆಯಿಂದ ಈ ಲೇಖನ ಬರೆದಿಲ್ಲ. ’ಬ್ರಾಹ್ಮಣರೆಲ್ಲಾ ಹೀಗೇ’ ಎನ್ನುವುದರ ವಿರುದ್ಧ ನನ್ನ ದನಿ ಇದೆ. ನೂರಾರು ಜನ್ಮಗಳಲ್ಲಿ ಮಾನವ ಜನ್ಮ ಒಮ್ಮೆಯಂತೆ. ಜನ್ಮದಿಂದ ಯಾವುದೇ ಜಾತಿಯಾಗಿದ್ದರೂ ಆಚರಣೆಯಿಂದ ಉನ್ನತಿಗೇರಲು ಅವಕಾಶವಿದೆ. || ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮತೇಜಂ ಬಲಂ ಬಲಂ || ಎಂದು ಮಹರ್ಷಿ ವಿಶ್ವಾಮಿತ್ರರು ತಾನು ಕೌಶಿಕನಾಗಿದ್ದಾಗ ಹೇಳಿದ್ದರು. ಕೌಶಿಕ ಬ್ರಹ್ಮರ್ಷಿಯಾಗಲಿ ಎಂಬ ಇಚ್ಛೆ ಗುರು ವಶಿಷ್ಠರಿಗಿತ್ತು!-ಆದರೆ ಇದರರ್ಥ ಕೌಶಿಕರಿಗೆ ಮೊದಲು ಆಗಿರಲಿಲ್ಲ.ಛೇಡಿಸಿದವರೂ ವಶಿಷ್ಠರೇ ತಪಗೈದು ಬ್ರಹ್ಮರ್ಷಿಯಾದಾಗ ಬಂದು ಅಭಿನಂದಿಸಿದವರೂ ಅದೇ ವಶಿಷ್ಠರೇ. ತಿಂದು ಉಳಿದಿದ್ದನ್ನು ಯಾರಿಗೂ ಕೊಡಬೇಡಿ ಬದಲಾಗಿ ತಿನ್ನುವ ಮೊದಲೇ ಹಂಚಿ, ಯಾರಿಗೂ ಮಲಹೊರುವ ಕೆಟ್ಟ ಸನ್ನಿವೇಶ ಬಾರದಿರಲಿ. ಎಲ್ಲರೂ ಮಾನವರೇ ಅದನ್ನರಿತು ಪರಸ್ಪರ ಸೌಹಾರ್ದದಿಂದ ಬದುಕಲು ಕಲಿಯಬೇಕು. ಜನಜೀವನದಲ್ಲಿ ಮೀಸಲಾತಿಯನ್ನು ಹೇರಿ ಬದುಕುವ ಕಾಲ ಇದಲ್ಲ, ಅದೂ ಬದಲಾಗಬೇಕು. ಸಂಖ್ಯೆಯಲ್ಲಿ ಮೈನಾರಿಟಿಯಾಗಿದ್ದ ಉಳಿದ ಮತಗಳ ಜನ ಈಗ ಮೆಜಾರಿಟಿಗೆ ಬಂದಿದ್ದಾರೆ-ಅವರಿಗೂ ಜನಸಂಖ್ಯಾ ನಿಯಂತ್ರಣ ಕಾಯ್ದೆ ಅನ್ವಯವಾಗಬೇಕು. ಎಲ್ಲರಿಗೂ ಏಕರೂಪದ ಕಾಯ್ದೆ ಬರಲಿ ಎಂಬುದೇ ನನ್ನ ಇಚ್ಛೆ. ಪ್ರತಿಕ್ರಿಯಿಸಿದ ಹಲವರಿದ್ದೀರಿ, ಪ್ರತ್ಯೇಕ ಹೆಸರಿಸಲು ಸಮಯವಾಗುತ್ತದೆ, ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು, ಅಭಿವಂದನೆಗಳು ಮತ್ತು ಧನ್ಯವಾದಗಳು.

    ReplyDelete
  21. perfect article and reply :)
    even i wrote something on this.
    manglurmani.blogspot.com

    --
    nanda

    ReplyDelete
  22. ಭಟ್ಟರೇ ಧನ್ಯವಾದ,

    ನಿಮ್ಮ ಕೊನೆಯ ಪ್ರತಿಕ್ರಿಯ ಇಷ್ಟವಾಯಿತು. ಮತ್ತು ನನ್ನ ಸಹಮತವೂ ಇದೆ. ಮೀಸಲಾತಿ ಸಮಾನತೆಯನ್ನ ಅಳಿಸುತ್ತಿದೆ ಎನ್ನೋದು ಸತ್ಯವೇ . ಆದರೆ ಅದು ಸಂಪೂರ್ಣವಾಗಿ ಬೇರೆಯೇ ಆದ ಚರ್ಚೆ.

    "ಬ್ರಾಹ್ಮಣರೆಲ್ಲ ಹೀಗೆ " ಎನ್ನುವ ಸಮೀಕರಿಸಿದ ಹೇಳಿಕೆಗಳಿಗೆ ನನ್ನ ವಿರೋಧ ಖಂಡಿತ ಇದೆ. ನೀವು ಲೇಖನದಲ್ಲಿ ಹೇಳ ಹೊರಟಿರುವ ವಿಷಯ ಸರಿಯಾಗಿಯೇ ಇದೆ. ಆದರೆ ಅದನ್ನು ಸಮರ್ಥಿಸುವಲ್ಲಿ ಬಳಸಿರುವ ಉದಾಹರಣೆಗಳು ಜನರಲ್ಲಿ ಮೌಡ್ಯತೆಯನ್ನು ಪ್ರೋತ್ಸಾಹಿಸುವನ್ಥವುಗಳು ಎಂಬುದಷ್ಟೇ ನನ್ನ ಅನಿಸಿಕೆ. ಆ ರೀತಿಯ ಭಾವನೆಗಳಿಗೆ ಬುದ್ದಿವನ್ಥರು ಅವಕಾಶ ಕೊಡಬಾರದು. ಮೂಢ ನಂಬಿಕೆಗಳನ್ನು ವಿರೋಧಿಸಿದಾಕ್ಷಣ ದೇವರಲ್ಲಿ ನಂಬಿಕೆ ಇಲ್ಲ ಅಂತ ಅಲ್ಲ. ದೇವರಿದ್ದಾನೆ ಎಂದು ಒಪ್ಪಿದಮೇಲೆ ಅವನ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲವನ್ನೂ ನಂಬಲೇ ಬೇಕು ಎನ್ನುವ ಪ್ರತಿಪಾದನೆಯನ್ನು ನಾನು ಒಪ್ಪುವುದಿಲ್ಲ.

    ಇಲ್ಲಿಗೆ ಚರ್ಚೆ ಮುಗಿಸೋಣ. ನಿಮ್ಮ ಹೊಸ ಲೇಖನ ಆಗಲೇ ಪ್ರಕಟವಾಗಿದೆ. ಅದನ್ನಿನ್ನೂ ಓದಬೇಕು. ಹೀಗೆಯೇ ಬರೆಯುತ್ತಿರಿ ಮತ್ತು ಆರೋಗ್ಯಕರ ಚರ್ಚೆ ನಡೆಯುತ್ತಲೇ ಇರಲಿ. ಅದಿರದಿದ್ದರೆ ಬರೆಯೋದ್ಯಾಕೆ ಅಲ್ಲವೇ ?

    ReplyDelete